Dec 31, 2015

2015ರ ರಾಜಕೀಯ ಪ್ರಮುಖಾಂಶ.

Dr Ashok K R
ಮತ್ತೊಂದು ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಹಳೆಯ ವರ್ಷದ ಆಗುಹೋಗುಗಳ ಬಗ್ಗೆ ಒಂದು ಪುಟ್ಟ ಅವಲೋಕನ. ಅಂತರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯ ವರ್ಚಸ್ಸು ಏರಿದರೆ ರಾಷ್ಟ್ರದೊಳಗಿನ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡು ಮೋದಿ ಅಲೆಯೆಂಬುದು ಕ್ಷೀಣವಾಗುತ್ತಿದೆ ಎಂಬ ವಾದವನ್ನು ಬಲಗೊಳಿಸುತ್ತಿದೆ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವರ್ಚಸ್ಸು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದರೂ ಚುನಾವಣೆಗಳಲ್ಲಿ ಗೆಲುವು ಕಾಣುವುದರಲ್ಲಿ ಹಿಂದೆ ಬಿದ್ದಿಲ್ಲ. ಮನಸ್ಸು ಮಾಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬಂಶವನ್ನು ದೆಹಲಿ ಮತ್ತು ಬಿಹಾರದ ಚುನಾವಣೆಗಳು ತೋರಿಸಿಕೊಟ್ಟರೆ ಮುಳುಗುತ್ತಿರುವ ಹಡಗಾದ ಕಾಂಗ್ರೆಸ್ಸನ್ನು ಉಳಿಸಲು ನಾವಿಕ ಸ್ಥಾನದಲ್ಲಿ ಅಲುಗಾಡದಂತೆ ಕುಳಿತಿರುವ ಸೋನಿಯಾ ಗಾಂಧಿ ಮತ್ತು ಬಲವಂತವಾಗಿ ಕೂರಿಸಲ್ಪಟ್ಟಿರುವ ರಾಹುಲ್ ಗಾಂಧಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಮಾಡುವ ಸೂಚನೆಗಳೂ ಇಲ್ಲ. ಪರ್ಯಾಯ ರಾಜಕೀಯ ಶಕ್ತಿಯೊಂದರ ಉದಯಕ್ಕಿದು ಸಕಾಲ ಎನ್ನುವಂತೆ ಕಂಡರೂ ಅಂತಹ ಶಕ್ತಿ ಸದ್ಯದ ಮಟ್ಟಿಗೆ ಗೋಚರವಾಗುತ್ತಿಲ್ಲ.

ಅಪಾರ ನಿರೀಕ್ಷೆಗಳನ್ನು ಮೂಡಿಸಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಕಾರ್ಯವೈಖರಿ ಹೇಗಿದೆ ಎಂದರೆ ಉತ್ತರಕ್ಕೆ ಬಿಜೆಪಿಯ ಬೆಂಬಲಿಗರೂ ತಡವರಿಸಬಹುದು. ಎರಡನೇ ಅವಧಿಯ ಯು.ಪಿ.ಎ ಸರಕಾರಕ್ಕೆ ಹೋಲಿಸಿದರೆ ಈಗಿನ ಸರಕಾರ ಉತ್ತಮವಾಗಿದೆಯಾ? ಭ್ರಷ್ಟಾಚಾರದ ಲೆಕ್ಕಾಚಾರದಲ್ಲಿ ನೋಡಿದರೆ ಈಗಿನ ಸರಕಾರವೇ ಉತ್ತಮ. ಯಾವುದೇ ದೊಡ್ಡ ಭ್ರಷ್ಟಾಚಾರದ ಕಳಂಕ ಈಗಿನ ಸರಕಾರದವಧಿಯಲ್ಲಿ ನಡೆದಿಲ್ಲ. ಭ್ರಷ್ಟರಹಿತ ಸರಕಾರವೆಂಬ ಇಮೇಜಿಗೆ ಒಂದಷ್ಟು ಪೆಟ್ಟು ಕೊಟ್ಟಿದ್ದು ಡಿಡಿಸಿಎ ಹಗರಣ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಡಿಸಿಎಯಲ್ಲಿ ಭ್ರಷ್ಟತೆ ನಡೆಸಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಅಬ್ಬರಿಸಲಾರಂಭಿಸಿದ್ದು ಬಿಜೆಪಿಯ ವರ್ಚಸ್ಸಿಗೆ ಒಂದಷ್ಟು ಧಕ್ಕೆ ತಂದಿತು. ಹಾಗೆ ನೋಡಿದರೆ ಅರವಿಂದ್ ಕೇಜ್ರಿವಾಲ್ ಇದರ ಬಗ್ಗೆ ಮಾತನಾಡಿದ್ದು ಅವರ ಮುಖ್ಯ ಕಾರ್ಯದರ್ಶಿಯ ಕಛೇರಿಯ ಮೇಲೆ ಸಿಬಿಐ ದಾಳಿ ನಡೆಸಿದ ನಂತರ. ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಮೂಲಕ ಬುದ್ಧಿ ಕಲಿಸಲೋದ ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಡಿಡಿಸಿಎ ಹಗರಣದ ಮೂಲಕ ಕೊಟ್ಟ ತಪರಾಕಿಯಿಂದ ಸುಧಾರಿಸಿಕೊಳ್ಳಲು ಸಮಯ ಬೇಕು. ಕೇವಲ ಕೇಜ್ರಿವಾಲ್ ಮಾತನಾಡಿದ್ದರೆ ಅದು ರಾಜಕೀಯ ವೈಷಮ್ಯವೆಂದು ಮುಚ್ಚಿಹೋಗುತ್ತಿತ್ತೋ ಏನೋ. ಮಾಜಿ ಕ್ರಿಕೇಟಿಗ ಮತ್ತು ಹಾಲಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಕೂಡ ಕೇಜ್ರಿವಾಲ್ ಮಾತಿಗೆ ಸಹಮತ ವ್ಯಕ್ತಿಪಡಿಸಿ ನೇರವಾಗಿ ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡಲಾರಂಭಿಸಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ಯುಪಿಎ ಅವಧಿಯ ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಯ ವರ್ತನೆ ಯಾವ ರೀತಿ ಇರಬೇಕಿತ್ತು? ಅರುಣ್ ಜೇಟ್ಲಿಯವರ ರಾಜೀನಾಮೆ ಪಡೆದು ಅವರು ಆರೋಪ ಮುಕ್ತರಾದ ಪಕ್ಷದಲ್ಲಿ ಮತ್ತೆ ಸೇರಿಸಿಕೊಳ್ಳಬಹುದಿತ್ತು. ಭ್ರಷ್ಟರಹಿತ ಸರಕಾರ ಎಂಬ ಹೇಳಿಕೆಗೊಂದು ಅರ್ಥ ಸಿಗುತ್ತಿತ್ತು. ಅಂತಹದ್ದೇನನ್ನೂ ಮಾಡದ ಬಿಜೆಪಿ ತಾನೂ ಕೂಡ ಇತರ ಪಕ್ಷದಂತೆಯೇ ಭ್ರಷ್ಟತೆಯ ಆರೋಪ ಹೊತ್ತವರ ಪರ ಎಂದು ತೋರಿಸಿಬಿಟ್ಟಿತು. ಮಂತ್ರಿಯ ವಿರುದ್ಧ ಮಾತನಾಡಿದ ಕೀರ್ತಿ ಆಜಾದ್ ರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ತಮಾಷೆಯೆಂದರೆ ತನ್ನ ವಿರುದ್ಧ ಮಾತನಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿದ್ದ, ರಾಜೀನಾಮೆ ಕೊಟ್ಟು ತೊಲಗುವಂತೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ‘ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ ನೋಡ್ರಿ’ ಎಂದು ಟ್ವಿಟರಿನಲ್ಲಿ ಅಲವತ್ತುಕೊಂಡಿದ್ದು. ಭ್ರಷ್ಟರ ಗೂಡಾಗಿರುವ ಕಾಂಗ್ರೆಸ್ ಕೀರ್ತಿ ಆಜಾದ್ ಪಕ್ಷಕ್ಕೆ ಸೇರಬಯಸಿದರೆ ಸ್ವಾಗತಿಸುತ್ತೇವೆ ಎಂದು ಘೋಷಿಸಿದ್ದು! ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ ಎನ್ನುವ ವದಂತಿ ಕೀರ್ತಿ ಆಜಾದರ ವಿಷಯದಲ್ಲಿ ಮತ್ತೆ ಸಾಬೀತಾಯಿತು. ಅವರ ವಿರುದ್ಧ ಬಹಿರಂಗವಾಗಿ ಮಾತನಾಡಿ, ಕೀರ್ತಿ ಆಜಾದರ ಬೆಂಬಲಕ್ಕೆ ನಿಂತು ದಕ್ಕಿಸಿಕೊಂಡಿದ್ದು ಮಾತ್ರ ಶತ್ರುಘ್ನ ಸಿನ್ಹ. ಬಿಹಾರ ಚುನಾವಣೆಯ ಸೋಲಿಗೆ ಸ್ಥಳೀಯರ ನಂಬುಗೆ ಗಳಿಸದಿರುವುದೂ ಕಾರಣ ಎಂದು ಗಟ್ಟಿ ದನಿಯಲ್ಲಿ ಹೇಳಿದವರವರು. 

ಬಿಹಾರ ಚುನಾವಣೆ ದೆಹಲಿ ಚುನಾವಣೆಯ ನಂತರ ರಾಜಕೀಯವಾಗಿ ಅತ್ಯಂತ ಪ್ರಮುಖವಾದುದು. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ವರುಷಗಳ ಕಾಲ ಅಧಿಕಾರವಿಡಿದಿದ್ದ ಕಾಂಗ್ರೆಸ್ ಸ್ಪರ್ಧೆಯ ಲಿಸ್ಟಿನಲ್ಲೇ ಇರಲಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ, ಹಾಗಾಗಿ ಕೇಂದ್ರಸ್ಥಾನ ದೆಹಲಿಯಲ್ಲಿ ಬಿಜೆಪಿ ಸರಳ ಬಹುಮತದಿಂದ ಆರಿಸಿ ಬರುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು. ಚುನಾವಣಾ ಸಮೀಕ್ಷೆಗಳಲ್ಲಿ ಬಹಳಷ್ಟು ಬಿಜೆಪಿಗೆ ಬಹುಮತವೆಂದಿದ್ದರೆ, ಕೆಲವು ಆಮ್ ಆದ್ಮಿಗೆ ಸರಳ ಬಹುಮತ ಸಿಗುತ್ತದೆ ಎಂದು ತಿಳಿಸಿದ್ದವು. ಪ್ರಚಾರದ ಅಬ್ಬರವೂ ಬಿಜೆಪಯದ್ದೇ ಹೆಚ್ಚಿತ್ತು. ಮಾಧ್ಯಮಗಳ ಪ್ರಚಾರದ ಬಗ್ಗೆ ಹೆಚ್ಚು ಗಮನ ಕೊಡದ ಆಮ್ ಆದ್ಮಿ ಪಕ್ಷ ಸದ್ದೇ ಇಲ್ಲದೆ ಮನೆ ಮನೆಯನ್ನೂ ತಲುಪುವ ಕೆಲಸ ಮಾಡಿತ್ತು. ಇದರ ಫಲ ಗೊತ್ತಾಗಿದ್ದು ಫಲಿತಾಂಶ ಹೊರಬಂದಾಗ. ಎಪ್ಪತ್ತು ಸ್ಥಾನಗಳಲ್ಲಿ ಅರವತ್ತೇಳು ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷ ತನ್ನ ಗೆಲುವಿಗೆ ತಾನೇ ಅಚ್ಚರಿಪಟ್ಟಿತು. ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆಯ ಸಾಧನೆಯೊಂದಿಗೆ ಬೀಗಿತು! ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಧಾನ ಮಂತ್ರಿಯನ್ನೂ ಸೇರಿಸಿ ಕೇಂದ್ರ ಸಚಿವರೇ ಹೆಚ್ಚು ಪ್ರಚಾರ ಮಾಡಿದ್ದರು. ಸ್ಥಳೀಯ ನಾಯಕರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ ಎಂಬ ಅಪಸ್ವರ ಕ್ಷೀಣ ದನಿಯಲ್ಲಿ ಕೇಳಿಬಂತಷ್ಟೇ. ಆಗಿನ್ನೂ ಮೋದಿ ಅಲೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿತ್ತು. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯ ಗೆಲುವಿನ ಮಾನದಂಡಗಳು ಬೇರೆ ಬೇರೆ ಎಂದು ಮರೆಯಲಾಗಿತ್ತು. ಜೊತೆಗೆ ದೆಹಲಿಯೆಂಬುದು ಪೂರ್ಣ ರಾಜ್ಯವೇನಲ್ಲವಲ್ಲ ಎಂಬ ಅಸಡ್ಡೆಯೂ ಸೇರಿತ್ತೇನೋ. ಇನ್ನು ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಸತತವಾಗಿ ಕೇಂದ್ರದೊಡನೆ, ಲೆಫ್ಟಿನೆಂಟ್ ಗವರ್ನರೊಡನೆ ಸಂಘರ್ಷಕ್ಕಿಳಿದರು. ಆಸ್ಪತ್ರೆ, ಶಿಕ್ಷಣಕ್ಕೆ ಅವರು ಕೊಟ್ಟ ಮಹತ್ವ ಪ್ರಶಂಸಾರ್ಹವಾದರೂ ಅವರ ರಾಜಕೀಯ ನಡೆಗಳು ಮತ್ತೊಬ್ಬ ರಾಜಕಾರಣಿಯ ಜನನವಾಗಿದೆಯಷ್ಟೇ ಎಂದು ಸಾಬೀತುಪಡಿಸಿದವು. ದೆಹಲಿಯಲ್ಲಿ ಮಾಡಿದ ತಪ್ಪುಗಳೇ ಬಿಹಾರದಲ್ಲೂ ಪುನರಾವರ್ತನೆಯಾದವು.

ಬಿಹಾರ ಚುನಾವಣೆಯ ಸಮಯದಲ್ಲೇ ದಾದ್ರಿಯಲ್ಲಿ ಇಖ್ಲಾಕನ ಹತ್ಯೆಯ ಘಟನೆಯೂ ನಡೆದುಹೋಯಿತು. ಮನೆಯಲ್ಲಿ ದನದ ಮಾಂಸವನ್ನಿಟ್ಟುಕೊಂಡಿದ್ದಾನೆ ಎಂಬ ‘ವದಂತಿಯೇ’ ಆತನ ಹತ್ಯೆಗೆ ಕಾರಣವಾಗಿಬಿಟ್ಟಿತು. ಇವತ್ತಿಗೂ ನಮ್ಮ ಮುಖ್ಯವಾಹಿನಿಯ ಕಾರ್ಯಕ್ರಮಗಳಲ್ಲಿ ‘ಅದು ದನದ ಮಾಂಸವಲ್ಲವಂತೆ ಕಣ್ರೀ’ ಎನ್ನುವ ಧಾಟಿಯ ಹೆಡ್ಡಿಂಗುಗಳು, ಚರ್ಚೆಗಳು ಚಾಲ್ತಿಯಲ್ಲಿವೆ. ದನದ ಮಾಂಸವೇ ಆಗಿದ್ದರೆ ಹತ್ಯೆ ಸಮರ್ಥನೀಯವಾಗುತ್ತಿತ್ತಾ? ದಾದ್ರಿಯ ಘಟನೆ ಹಿಂದುತ್ವದ ಅಪಾಯಕಾರಿ ಶಕ್ತಿಗಳ ಹೆಚ್ಚಳದ ಬಗ್ಗೆ ತಿಳಿಸಿ ಹೇಳಿತ್ತು. ತುಂಬಾನೇ ಮಾತನಾಡುವ ಪ್ರಧಾನಿ ಅನೇಕ ವಿಷಯಗಳಲ್ಲಿ ಜಾಣ ಮೌನ ವಹಿಸಿಬಿಡುವಂತೆ ಈ ವಿಷಯದಲ್ಲೂ ಮೌನ ವಹಿಸಿಬಿಟ್ಟರು. ಆದರಿದು ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರಿತು. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ‘ಬಿಹಾರದಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹೊಡೆಯುತ್ತಾರೆ’ ಎಂದು ಹೇಳಿದ್ದು, ಆರ್.ಎಸ್.ಎಸ್ ಮೀಸಲಾತಿಯನ್ನು ತೆಗೆದುಬಿಡಬೇಕು ಎಂಬರ್ಥದಲ್ಲಿ ಮಾತನಾಡಿದ್ದು, ನರೇಂದ್ರ ಮೋದಿ ನಿತೀಶ್ ಕುಮಾರರ ಡಿ.ಎನ್.ಎ ಸರಿಯಿಲ್ಲ ಎಂದು ಹೇಳಿದ್ದನ್ನು ನಿತೀಶ್ ಕುಮಾರ್ ಬುದ್ಧಿವಂತಿಕೆಯಿಂದ ಬಿಹಾರದ ಅಸ್ಮಿತೆಯ ಪ್ರಶ್ನೆಯನ್ನಾಗಿ ಮಾಡಿದ್ದೆಲ್ಲವೂ ಬಿಜೆಪಿಯ ಸೋಲಿಗೆ ಕಾರಣವಾಯಿತು. ಜೊತೆಗೆ ದೆಹಲಿಯಲ್ಲಾದಂತೆ ಬಿಹಾರದಲ್ಲೂ ಬಿಜೆಪಿ ಸ್ಥಳೀಯ ನಾಯಕರಿಗಿಂತ ಕೇಂದ್ರ ನಾಯಕರ ಮೇಲೆ ಹೆಚ್ಚಿನ ನಂಬುಗೆ ಇಟ್ಟಿತು, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ. ಎದುರಾಳಿಗಳು ಅಭಿವೃದ್ಧಿಯ ಹರಿಕಾರನೆಂದು ಪ್ರಸಿದ್ಧಿಯಾದ ನಿತೀಶ್ ಕುಮಾರರ ಹೆಸರನ್ನು ಘೋಷಿಸಿದ್ದಾಗಲೂ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ. ಇವೆಲ್ಲಕ್ಕಿಂತಲೂ ಬಿಜೆಪಿಯ ಸೋಲಿಗೆ ಬಹುಮುಖ್ಯವಾದ ಕಾರಣ ಮಹಾಘಟಬಂಧನದ ಹೆಸರಿನಲ್ಲಿ ಜೆಡಿಯು, ಆರ್.ಜೆ.ಡಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿದ್ದು. ತಮ್ಮೊಳಗೆ ಹಂಚಿಹೋಗಬಹುದಿದ್ದ ಮತಗಳ ಕ್ರೋಡಿಕರಣವಾಗುತ್ತದೆಂಬ ಅವರ ನಂಬಿಕೆ ಹುಸಿಯಾಗಲಿಲ್ಲ. ಬಿಜೆಪಿ ಇದನ್ನು ಅರಿಯುವಲ್ಲಿ ವಿಫಲವಾಯಿತೆಂದೇ ಹೇಳಬಹುದು. ಜೊತೆಗೆ ಬಿಹಾರದ ಚುನಾವಣೆ ಭಾರತದಲ್ಯಾವ ಚುನಾವಣೆಯನ್ನೂ ಜಾತಿಯ ಬೆಂಬಲವಿಲ್ಲದೆ ಗೆಲ್ಲುವುದು ಕಷ್ಟ ಎನ್ನುವುದನ್ನೂ ತೋರಿಸಿಕೊಟ್ಟಿತು. ಬಿಜೆಪಿ ಸೋತಿತು ಎನ್ನುವುದರ ಜೊತೆಜೊತೆಗೇ ಈ ಚುನಾವಣೆ ಜನರ ಮರೆವನ್ನು ಸ್ಪಷ್ಟವಾಗಿ ತೋರಿಸಿತು. ಇಲ್ಲವಾದರೆ ಹಲವು ಹಗರಣಗಳ ಸರದಾರ, ಕುಟುಂಬಕ್ಕೆ ಪಕ್ಷವನ್ನು ಜೀತವನ್ನಾಗಿಸಿದ ಲಾಲೂ ಪ್ರಸಾದ್ ಯಾದವರ ಆರ್.ಜೆ.ಡಿ ಪಕ್ಷ ಮತ್ತೆ ಗೆಲ್ಲುವುದೇಗೆ ಸಾಧ್ಯವಿತ್ತು?

ಇನ್ನು ಕರ್ನಾಟಕದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಕೊಟ್ಟ ಗಮನವನ್ನು ಆಡಳಿತದ ಕಡೆಗೂ ಕೊಟ್ಟಿದ್ದರೆ ಮತ್ತಷ್ಟು ಹೆಸರು ಮಾಡುತ್ತಿದ್ದರು. ‘ಭಾಗ್ಯ’ ಹೆಸರಿನ ಯೋಜನೆಗಳು ಮಾತ್ರ ಹೆಸರು ತಂದುಕೊಡುತ್ತವೆ ಎಂಬವರ ನಂಬಿಕೆ ಈ ವರ್ಷವೂ ಮುಂದುವರೆಯಿತು. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಇಳಿಸುತ್ತಲೇ ಇರುವ ಸರಕಾರ ಶೂ ಭಾಗ್ಯದಂತಹ ಹೊಸ ಹೊಸ ಯೋಜನೆಗಳನ್ನು ಘೋಷಿಸುವುದ್ಯಾಕೆ? ಹಳೆಯ ಯೋಜನೆಯನ್ನೇ ಸರಿಯಾಗಿ ನಿಭಾಯಿಸಲಾಗದೆ ಹೊಸ ಯೋಜನೆಗಳನ್ನು ಘೋಷಿಸುವುದು ಪ್ರಚಾರಕ್ಕಾಗಿಯಷ್ಟೇ ಎಂದು ಕಾಣುತ್ತದೆ. ಡಿ.ಕೆ.ರವಿಯವರ ಸಾವಿನ ಪ್ರಕರಣದಲ್ಲಿ ಅತ್ಯಂತ ಅಸಮರ್ಥವಾಗಿ ಕಾರ್ಯನಿರ್ವಹಿಸಿತು. ತನ್ನ ತಪ್ಪಿಲ್ಲದಿದ್ದರೂ ಕಾರಣವಿಲ್ಲದೆ ಹೆಸರನ್ನೆಲ್ಲಾ ಹಾಳುಮಾಡಿಕೊಂಡ ಮೇಲೆ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿತು. ಸಿಬಿಐ ಕೂಡ ನಮ್ಮ ಪೋಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದ ಅಂಶಗಳನ್ನೇ ಹೇಳಿದರು. ಡಿ.ಕೆ.ರವಿಯವರದ್ದು ಕೊಲೆ ಕೊಲೆ ಎಂದು ಅಬ್ಬರಿಸಿದ್ದ ಮಾಧ್ಯಮಗಳು ಕೊನೆಗದು ಆತ್ಮಹತ್ಯೆ ಎಂದು ತನಿಖಾ ವರದಿ ಬಂದ ಮೇಲಾದರೂ ಒಂದು ಕ್ಷಮಾಪಣೆ ಕೇಳುವ ನೈತಿಕತೆ ಪ್ರದರ್ಶಿಸಲಿಲ್ಲ. ಕರ್ನಾಟಕ ಮತ್ತು ದೇಶದ ಸಾಹಿತ್ಯಕ ವಲಯವನ್ನು ಬೆಚ್ಚಿ ಬೀಳಿಸಿದ್ದು ಎಂ.ಎಂ.ಕಲಬುರ್ಗಿಯವರ ಹತ್ಯೆ. ವೈಚಾರಿಕ ಸಂಘರ್ಷವನ್ನು ಬಂದೂಕಿನಿಂದ ಎದುರಿಸಬೇಕು ಎಂಬಂತಹ ಸಂಸ್ಕೃತಿ ಹೆಚ್ಚುತ್ತಿರುವುದು ಗೋವಿಂದ ಪನ್ಸಾರೆ, ದಾಬೋಲ್ಕರ್ ರವರ ಹತ್ಯೆಯ ಸಂದರ್ಭದಲ್ಲೇ ಬೆಳಕಿಗೆ ಬಂದಿತ್ತು. ಕಲಬುರ್ಗಿಯವರಿಗೂ ಬೆದರಿಕೆಯಿತ್ತು. ರಕ್ಷಣೆಯನ್ನೂ ನೀಡಲಾಗಿತ್ತು. ಕಲಬುರ್ಗಿಯವರೇ ಹತ್ಯೆಯ ಕೆಲವು ದಿನಗಳ ಮೊದಲು ಪೋಲೀಸ್ ರಕ್ಷಣೆಯನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ರಕ್ಷಣೆ ಹಿಂದೆಗೆದುಕೊಂಡಮೇಲೂ ಪೋಲೀಸರು ಒಂದಷ್ಟು ನಿಗಾ ವಹಿಸಿದ್ದರೆ ಹಿರಿಯ ಸಂಶೋಧಕರೊಬ್ಬರು ಗುಂಡಿಗೆ ತಲೆಯೊಡ್ಡುವ ದುರಂತ ಸಂಭವಿಸುತ್ತಿರಲಿಲ್ಲ. ಹತ್ಯೆ ನಡೆದು ಹಲವು ತಿಂಗಳು ಕಳೆದುಹೋಗಿದ್ದರೂ ಹಂತಕರ ಪತ್ತೆಯಾಗಿಲ್ಲದಿರುವುದು ಸಿದ್ಧರಾಮಯ್ಯ ಸರಕಾರದ ವೈಫಲ್ಯ. ಕಲಬುರ್ಗಿಯವರ ಹತ್ಯೆ ದೇಶದಲ್ಲಿ ಸಹಿಷ್ಣುತೆ – ಅಸಹಿಷ್ಣುತೆಯ ಬಗೆಗಿನ ಚರ್ಚೆಯನ್ನು ತೀರ್ವಗೊಳಿಸಿತು, ಪ್ರಶಸ್ತಿ ವಾಪಸ್ ಚಳುವಳಿ ನಡೆದು ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿತು.

ಭ್ರಷ್ಟತೆಯ ವಿಷಯದಲ್ಲಿ ಸಿದ್ಧು ಸರಕಾರ ತುಂಬಾ ಹೆಸರು ಕೆಡಿಸಿಕೊಂಡಿಲ್ಲ ಎನ್ನುವುದು ಸತ್ಯ. ಮಂತ್ರಿ ಆಂಜನೇಯರವರ ಪತ್ನಿ ಲಕ್ಷ ಲಕ್ಷ ರುಪಾಯಿಗಳನ್ನು ತೆಗೆದುಕೊಳ್ಳುವುದು ದೃಶ್ಯಮಾಧ್ಯಮದ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಯಿತಾದರೂ ಅದು ತನಿಖೆಯ ಹಂತದಲ್ಲಿದೆ ಎಂದು ಸರಕಾರ ಮೌನವಾಗಿಬಿಟ್ಟಿತು. ಯಾಕೋ ವಿರೋಧ ಪಕ್ಷಗಳೂ ಇದರ ಬಗ್ಗೆ ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ. ಸಿದ್ಧರಾಮಯ್ಯನವರ ಖುರ್ಚಿ ಅಲುಗಾಡಿದಂತೆ ಕಾಣಿಸಿದ್ದು, ಮೂಲ ಕಾಂಗ್ರೆಸ್ಸಿನ ಹಿರಿಯರು ಸಿದ್ಧರಾಮಯ್ಯನವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಬಿಬಿಎಂಪಿ ಚುನಾವಣೆಯ ನಂತರ ಕಾಂಗ್ರೆಸ್ಸಿನಲ್ಲಿ ದೊಡ್ಡ ಬದಲಾವಣೆ ನಡೆದುಬಿಡುತ್ತದೆ ಎಂದು ನಂಬಿದ್ದವರೆಲ್ಲರಿಗೂ ನಿರಾಸೆಯಾಯಿತು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟು, ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೆ ಜೆಡಿಎಸ್ ಎಂದಿನಂತೆ ಮೂರನೇ ಸ್ಥಾನದಲ್ಲಿತ್ತು. ನೈತಿಕವಾಗಿ ನೋಡಿದರೆ ಬಿಜೆಪಿ ಅಧಿಕಾರವಿಡಿಯಬೇಕಿತ್ತು. ಅಧಿಕರಾವಿಡಿಯುವ ಖುಷಿಯಲ್ಲಿ ಬಿಜೆಪಿ ಬಿಬಿಎಂಪಿಯ ಗೆಲುವನ್ನು ಸಂಭ್ರಮಿಸಿತ್ತು. ತೆರೆಯ ಹಿಂದೆ ನಡೆದ ಹೀನ ರಾಜಕೀಯದ ಸುಳಿವು ಬಿಜೆಪಿಗೆ ಸಿಗುವಷ್ಟರಲ್ಲಿ ಕಾಲ ಮಿಂಚಿತ್ತು. ಶರಂಪರ ಕಿತ್ತಾಡುತ್ತಿದ್ದ ಸಿದ್ಧರಾಮಯ್ಯ ಮತ್ತು ಜೆ.ಡಿ.ಎಸ್ ನಡುವೆ ಮೈತ್ರಿ ನಡೆದುಬಿಟ್ಟಿತ್ತು. ಯಾವ ಸಂಧಾನದ ಮಾತುಕತೆಯಲ್ಲೂ ಸಿದ್ಧರಾಮಯ್ಯ ನೇರವಾಗಿ ಪಾಲ್ಗೊಳ್ಳದಿರುವ ಬುದ್ಧಿವಂತಿಕೆಯನ್ನು ತೋರಿಸಿದ್ದರೂ ಹೀಗೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಮೂಲಕ ಅವರು ಸಾಧಿಸಿದ್ದೇನು? ಹಿಂಬಾಗಿಲ ಮೂಲಕ ಅಧಿಕಾರವಿಡಿಯುವ ಮೂಲಕ ರಾಜಕೀಯ ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ಎಂದವರು ತೋರಿಸಿದರು. ಆಪರೇಷನ್ ಕಮಲವನ್ನು ವಿರೋಧಿಸಿದ್ದ ಸಿದ್ಧರಾಮಯ್ಯ ಇಲ್ಲಿ ಮಾಡಿದ್ದೇನನ್ನು? ಅನೈತಿಕತೆಯೆಂಬುದು ರಾಜಕೀಯದ ಬಿಡಿಸಲಾಗದ ಭಾಗವಾಗಿಬಿಟ್ಟಿದೆಯಾ? 

ವರುಷದ ಕೊನೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ಸಿನ ಸ್ಥಾನ ಕರ್ನಾಟಕದಲ್ಲಿ ಇನ್ನು ಭದ್ರವಾಗಿದೆ ಎಂದು ತೋರಿಸಿಕೊಟ್ಟಿತು. ಇಪ್ಪತ್ತೈದು ಸ್ಥಾನಗಳಲ್ಲಿ ಹದಿಮೂರರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಈ ಚುನಾವಣೆಯಲ್ಲಿ ಯಾರು ಗೆದ್ದರೋ ಬಿಟ್ಟರೋ ಸೋತಿದ್ದು ಮಾತ್ರ ವಿಧಾನ ಪರಿಷತ್. ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ ಮುಖ್ಯ ಕಾರಣ ವಿಧಾನಸಭೆಯ ಚುನಾವಣಾ ರಾಜಕೀಯದಲ್ಲಿ ಗೆಲ್ಲಲಾಗದ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಪರಿಷತ್ತಿಗೆ ಆಯ್ಕೆ ಆಗಿ ರಾಜ್ಯದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂಬ ಸದುದ್ದೇಶದಿಂದ. ಆದರೆ ಈಗ ಆಗುತ್ತಿರುವುದೇನು? ಕೋಟಿ ಕೋಟಿ ಹಣ ಚೆಲ್ಲುವವರಿಗೆ ಮಾತ್ರ ಪರಿಷತ್ ಸ್ಥಾನ ಎನ್ನುವಂತಾಗಿದೆ. ಅಲ್ಲಿಗೆ ವಿಧಾನಸಭೆಗೂ ಪರಿಷತ್ತಿಗೂ ಏನು ವ್ಯತ್ಯಾಸ ಉಳಿಯಿತು? ಇಂತಹುದೊಂದು ಸಂಭ್ರಮಕ್ಕೆ ಪರಿಷತ್ತಿನ ಅವಶ್ಯಕತೆಯಾದರೂ ಏನಿದೆ? 

ಅಧಿಕಾರದಲ್ಲಿದ್ದವರು ಒಂದಷ್ಟು ಒಳ್ಳೆಯ ಕೆಲಸ ಮಾಡಿ ಒಂದಷ್ಟು ಕೆಟ್ಟ ಕೆಲಸ ಮಾಡಿ ಬಹಳಷ್ಟು ಬಾರಿ ಏನೂ ಮಾಡದೆ ಉಳಿದುಬಿಟ್ಟರು. ಅಧಿಕಾರಸ್ಥರಿಗಿಂತ ಹೆಚ್ಚು ವೈಫಲ್ಯಕಂಡಿದ್ದು ವಿರೋಧ ಪಕ್ಷಗಳು. ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ವಿರೋಧ ಪಕ್ಷವೊಂದು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದರ ಅರಿವೇ ಇಲ್ಲವೇನೋ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದೇ ವಿರೋಧ ಪಕ್ಷದ ಕೆಲಸ ಎಂದು ನಂಬಿದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾಪ ನಡೆಯದಂತೆ ಮಾಡುವುದೂ ಕೂಡ ಪ್ರಜಾಪ್ರಭುತ್ವದ ಒಂದು ಲಕ್ಷಣವೇ ಆದರೂ ಯಾವುದೂ ಅತಿಯಾಗಬಾರದಲ್ಲವೇ? ಹೋಗಲಿ ಇವರು ಕಲಾಪಕ್ಕೆ ಅಡ್ಡಿಪಡಿಸುವುದಕ್ಕೆ ಸರಿಯಾದ ಕಾರಣವಾದರೂ ಇದೆಯಾ? ತಮ್ಮ ಕೊರಳಿನ ಹಾರವಾದ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ ಕಲಾಪವನ್ಯಾಕೆ ಅಡ್ಡಿಪಡಿಸಬೇಕು? ಇನ್ನು ಜಿ.ಎಸ್.ಟಿ ಜಾರಿಯಾಗಲು ಬಿಡದಿರುವುದಕ್ಕೆ ರಾಜಕೀಯವನ್ನೊರತುಪಡಿಸಿದ ಕಾರಣಗಳಿವೆಯಾ ಕಾಂಗ್ರೆಸ್ಸಿಗೆ? ಜಿ.ಎಸ್.ಟಿ ಜಾರಿಯಾಗಬೇಕೆಂದು ಕನಸಿದ್ದೇ ಅವರ ಯು.ಪಿ.ಎ ಸರಕಾರ. ಆಗ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ. ಈಗ ಸ್ಥಾನಪಲ್ಲಟವಾಗಿರುವುದರಿಂದ ಬಿಜೆಪಿ ಜಿ.ಎಸ್.ಟಿ ಪರವಾಗಿ ಮಾತನಾಡುತ್ತಿದ್ದರೆ, ಕಾಂಗ್ರೆಸ್ ನೇರ ವಿರೋಧ ವ್ಯಕ್ತಪಡಿಸದಿದ್ದರೂ ಅದು ಜಾರಿಯಾಗಲು ಅವಕಾಶ ನೀಡಲಿಲ್ಲ. ರಾಜಕೀಯ ಪಕ್ಷದವರ ಮಾತುಗಳು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿದ್ದಾಗ ಹೇಗೆಲ್ಲಾ ಬದಲಾಗುತ್ತವೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ. ಹೆಚ್ಚುತ್ತಿರುವ ಬೇಳೆ ತರಕಾರಿಗಳ ಬೆಲೆಗಿಂತ ಒಳ್ಳೆಯ ವಿಷಯ ಬೇಕಿತ್ತೇ ಕಾಂಗ್ರೆಸ್ಸಿಗೆ ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯ ತೋರಿಸಲು? ಇದೇ ರೀತಿಯ ನಿಷ್ಕ್ರಿಯತೆ ಕರ್ನಾಟಕದ ವಿರೋಧ ಪಕ್ಷಗಳಲ್ಲೂ ಕಂಡು ಬಂತು. ಧಾರ್ಮಿಕ ವಿಚಾರಗಳನ್ನೊರತುಪಡಿಸಿ ಮತ್ಯಾವ ವಿಷಯದಲ್ಲೂ ಬಿಜೆಪಿ ಶಕ್ತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸದಿರುವುದು ಕರ್ನಾಟಕದ ದುರಂತ. ಟಿಪ್ಪು ಜಯಂತಿಯನ್ನು ಸರಕಾರ ಘೋಷಿಸಿದಾಗ ಅದನ್ನವರು ವಿರೋಧಿಸಿದ ರೀತಿಯಿಂದ ಸರಿಯಾದ ಕಾರಣಕ್ಕೆ ವಿರೋಧಿಸಿದ್ದರೆ ಒಂದು ಗೌರವವನ್ನಾದರೂ ಗಳಿಸುತ್ತಿತ್ತು. ಟಿಪ್ಪು ಜಯಂತಿಯ ಹೆಸರಿನಲ್ಲಿ ವಿನಾಕಾರಣದ ರಾಜಕೀಯ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಜನರ ಹತ್ಯೆ ಮಾಡಿದವು. ಬಿಜೆಪಿಯ ಆಡಳಿತಾವಧಿಯಲ್ಲಿ ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದ ಜೆ.ಡಿ.ಎಸ್ಸಿನ ಕುಮಾರಸ್ವಾಮಿಯವರ್ಯಾಕೋ ಈಗ ಸುಮ್ಮನಾಗಿಹೋಗಿದ್ದಾರೆ. ಒಂದು ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ಮತ್ತೊಂದು ಕಡೆ ಕಾಂಗ್ರೆಸ್ಸಿನ ಚುಂಗು ಹಿಡಿಯುವುದು, ಜೆ.ಡಿ.ಎಸ್ ತನ್ನ ಸಾವನ್ನು ತಾನೇ ತೋಡಿಕೊಳ್ಳುತ್ತಿದೆ. ಪಕ್ಷವನ್ನು ಬಲಪಡಿಸುವ ಉದ್ದೇಶ ಯಾರಿಗೂ ಇದ್ದಂತಿಲ್ಲ. ಇಪ್ಪತ್ತು ತಿಂಗಳಿನ ಮುಖ್ಯಮಂತ್ರಿಯ ಅವಧಿಯಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಜನರು ಮರೆತಿದ್ದಾರೆ ಎನ್ನುವುದರ ಅರಿವು ಕುಮಾರಸ್ವಾಮಿಯವರಿಗಾಗಬೇಕು ಮತ್ತು ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದ ಪಕ್ಷವನ್ನು ಬಿಡಿಸದೆ ಇದ್ದರೆ ಭವಿಷ್ಯತ್ತಿನಲ್ಲಿ ಕಷ್ಟವಿದೆ ಎನ್ನುವುದನ್ನು ತಿಳಿಯಬೇಕು. ಸದ್ಯಕ್ಕಂತೂ ಅದನ್ನೆಲ್ಲ ತಿಳಿಯುವ ಸಾಧ್ಯತೆ ಕಾಣುತ್ತಿಲ್ಲ.

ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಸುವುದನ್ನು ನಖಶಿಖಾಂತ ವಿರೋಧಿಸುತ್ತಿದ್ದ ಬಿಜೆಪಿ ಮತ್ತದರ ಬೆಂಬಲಿಗರಿಗೆ ವರುಷದ ಕೊನೆಯಲ್ಲಿ ಬಹುದೊಡ್ಡ ಆಘಾತ ಕೊಟ್ಟಿದ್ದು ಇದ್ದಕ್ಕಿದ್ದಂತೆ ದಾರಿ ಮಧ್ಯೆ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನರೇಂದ್ರ ಮೋದಿ. ಇದು ನರೇಂದ್ರ ಮೋದಿಯವರ ಚಾಣಾಕ್ಷ ನಡೆಯಾಗಿತ್ತು ಮತ್ತು ಸರಿಯಾದ ಹೆಜ್ಜೆಯಾಗಿತ್ತು. ನೆರೆಹೊರೆಯೊಂದಿಗೆ ಎಷ್ಟೇ ಕಷ್ಟನಷ್ಟವಾದರೂ ಸಹಬಾಳ್ವೆ ನಡೆಸುವ ಪ್ರಯತ್ನವನ್ನಾದರೂ ಮಾಡಬೇಕು. ಪಾಕಿಸ್ತಾನದೆಡೆಗೆ ಸ್ನೇಹದ ಹಸ್ತ ಚಾಚುತ್ತಲೇ ಅವರ ಕುತಂತ್ರಗಳ ಬಗ್ಗೆ ಎಚ್ಚರಿಕೆಯೂ ಇರಬೇಕು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಸ್ನೇಹದಿಂದಿರಬಾರದು ಎಂದು ಬಯಸುವವರ ಸಂಖೈ ಎರಡೂ ದೇಶಗಳಲ್ಲಿ ದಂಡಿಯಾಗಿದೆ. ಅಂತವರ ಕಿತಾಪತಿಯನ್ನು ತಡೆಯುವ ಪ್ರಯತ್ನವನ್ನು ನಿಲ್ಲಿಸಲೇಬಾರದು. ಪ್ರಧಾನಿಯವರ ಬಹಳಷ್ಟು ವಿದೇಶಿ ಪ್ರವಾಸಗಳಿಂದ ಆ ದೇಶಗಳ ಬಂಡವಾಳಶಾಹಿಗಳಿಗೆ ನೇರ ಅನುಕೂಲವಿದೆ. ಮೇಕ್ ಇನ್ ಇಂಡಿಯಾ ಎಂಬುದು ಭಾರತವನ್ನು ಮತ್ತೊಂದು ಚೀನಾವಾಗಿ ಪರಿವರ್ತಿಸುವ, ಉಸಿರಾಡಲೂ ಆಗದಷ್ಟು ಪರಿಸರವನ್ನು ಮಲಿನಗೊಳಿಸುವ ಯೋಜನೆ. ಕೇಂದ್ರ ಸರಕಾರದ ಹನಿಮೂನ್ ಸಮಯ ಮುಗಿದಿದೆ. ನೀಡಿದ ಭರವಸೆಗಳಲ್ಲಿ ಕೆಲವನ್ನಾದರೂ ಈಡೇರಿಸುವ ಜವಾಬ್ದಾರಿಯಿದೆ. ಕಾಂಗ್ರೆಸ್ ಪಕ್ಷವನ್ನು, ಹಿಂದಿನ ಸರಕಾರಗಳನ್ನು ಟೀಕಿಸುತ್ತ ಇನ್ನೂ ಸ್ವಲ್ಪ ಸಮಯ ಕೊಡಿ ಸಮಯ ಕೊಡಿ ಎಂದು ಹೇಳುವುದು ಇನ್ನು ಕರ್ಣಾನಂದಕರವಾಗಿರದು. ಬಂಡವಾಳಶಾಹಿತನಕ್ಕೆ ಕೆಂಪು ಹಾಸು ಹಾಕುವ ಸರಕಾರದ ನಿರ್ಧಾರಗಳು ಎಷ್ಟರಮಟ್ಟಿಗೆ ಎಲ್ಲರ ಅಭಿವೃದ್ಧಿಗೆ ಪೂರಕವಾಗುತ್ತವೆ? ಭಾರತವನ್ನು ಚೀನಾದ ರೀತಿ ಅಮೆರಿಕಾದ ರೀತಿ ಬೆಳೆಸುವ ಬದಲು ಭಾರತದ ರೀತಿಯಲ್ಲೇ ಉತ್ತಮಗೊಳಿಸಬಹುದಿತ್ತಾ? ಭವಿಷ್ಯವೇ ಉತ್ತರ ಹೇಳಬೇಕು. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ ಈಗ ಕೆಲಸ ಮಾಡುತ್ತಿರುವ ರೀತಿಯಲ್ಲೇ ಕೆಲಸ ಮಾಡಿದರೆ ಸಾಕು, ಮುಂದಿನ ಚುನಾವಣೆಯನ್ನು ಸಲೀಸಾಗಿ ಸೋತುಬಿಡಬಹುದು…. ಕ್ಯಾಲೆಂಡರ್ ಬದಲಾದರೆ ಭವಿಷ್ಯ ಬದಲಾಗುವುದಿಲ್ಲ, ಇರಲಿ, ಹೊಸ ವರುಷದ ಶುಭಾಷಯಗಳು.

Dec 26, 2015

'ಹಿಂದೂ ಹೃದಯ ಸಾಮ್ರಾಟ್' ಮೋದಿ ಇಂತ ಕೆಲ್ಸ ಮಾಡ್ಬೋದಾ?!

modi shariff
ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ದೊಡ್ಡ ಅಚ್ಚರಿಯನ್ನು ಭಾರತೀಯರೆಲ್ಲರಿಗೂ ನೀಡಿಬಿಟ್ಟಿದ್ದಾರೆ. ಯಾವೊಂದು ಸುಳಿವೂ ನೀಡದೆ ಪಾಕಿಸ್ತಾನಕ್ಕೆ ಒಂದು ಚಿಕ್ಕ ಭೇಟಿ ಕೊಟ್ಟು ಬಂದಿದ್ದಾರೆ. ಕಾಬೂಲಿನಿಂದ ಬರುವ ದಾರಿಯಲ್ಲಿ ಲಾಹೋರಿಗೂ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫರೊಡನೆ ಒಂದು ಚಿಕ್ಕ ಚರ್ಚೆ ನಡೆಸಿ ಬಂದಿದ್ದಾರೆ. ಕೊನೆಯ ಕ್ಷಣದಲ್ಲಿ ನಿರ್ಧಾರ ಮಾಡಲಾಗಿತ್ತಂತೆ. ಪ್ರಧಾನಿಯವರ ಈ ದಿಡೀರ್ ಭೇಟಿ ಹಲವರಿಗೆ ನುಂಗಲಾರದ ತುತ್ತಾಗಿಬಿಟ್ಟಿದೆ! ಅದರಲ್ಲೂ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಅಖಂಡ ಭಾರತದ ಪುನರ್ ನಿರ್ಮಾತೃರು ಎಂದು ನಂಬಿಕೊಂಡಿದ್ದವರಿಗೆ ಆಘಾತ ಸಹಿಸಿಕೊಳ್ಳಲಾಗುತ್ತಿಲ್ಲ! ಆಘಾತ ಮೂಡಿಸಿದ ಕೋಪದಿಂದ ಮೋದಿಯವರಿಗೆ ಬಯ್ಯುವಂತೆಯೂ ಇಲ್ಲ, ಕಾರಣ ಮೋದಿ 'ಹಿಂದೂ ಹೃದಯ ಸಾಮ್ರಾಟ್' ಎಂದೇ ಮೆಚ್ಚಿದ್ದರವರು! ಅವರಿವರು ಬಿಡಿ ಸ್ವತಃ ಮೋದಿ ಮತ್ತು ಬಿಜೆಪಿಯೇ ಹಿಂದಿನ ಸರಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದನ್ನು ಶತಾಯಗತಾಯ ವಿರೋಧಿಸುತ್ತಿತ್ತು. ಕುಹಕವಾಡುತ್ತಿತ್ತು. ಇನ್ನವರ ಬೆಂಬಲಿಗರೋ ಉಗ್ರರನ್ನು ಕಳುಹಿಸುವ ಶತ್ರುದೇಶದೊಂದಿಗೆ ಎಂತಹ ಮಾತುಕತೆ? ಯುದ್ಧ ಮಾಡಿ ಅವರನ್ನು ತರಿದು ಬಿಸಾಕಬೇಕು ಎಂದು ಅಬ್ಬರಿಸಿದ್ದೋ ಅಬ್ಬರಿಸಿದ್ದು. ಒಂದು ತಲೆಗೆ ಎರಡು ತಲೆ ತರಬೇಕೆಂದು ಅರಚಿದ ಕೂಗುಮಾರಿಗಳಿಗೂ ಬರವಿರಲಿಲ್ಲ. ಇನ್ನೇನು ಮೋದಿ ಪ್ರಧಾನಿಯಾದರು, ಪಾಕಿಸ್ತಾನದ ಕತೆ ಮುಗಿಯಿತು ಎಂದು ನಂಬಿಕೊಂಡಿದ್ದವರಿಗೆಲ್ಲ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದೇ ತಳಮಳ ಶುರುವಾಗಿಬಿಟ್ಟಿತು. ಮುಂಚೆ ಏನೋ ಕಾಂಗ್ರೆಸ್ ಸರಕಾರವಿತ್ತು. ಅವರನ್ನು ಖಾನ್ ಗ್ರೇಸ್ ಎಂದು ಟೀಕಿಸಿ, ಮನಮೋಹನಸಿಂಗರನ್ನು ಮೌನಮೋಹನಸಿಂಗ್ ಎಂದು ಜರೆದು, ಸೋನಿಯಾರನ್ನು ಇಟಲಿಯ ಏಜೆಂಟ್ ಎಂದು ಕರೆದು 'ದೇಶಭಕ್ತಿ'ಯ ಪ್ರದರ್ಶನ ಮಾಡಿದವರಿಗೆಲ್ಲ ಅಪ್ಪಟ ಭಾರತೀಯ ಸಂಸ್ಕೃತಿಯ ಹೆಣ್ಣುಮಗಳಾದ ಸುಷ್ಮಾ ಸ್ವರಾಜರನ್ನು ಟೀಕಿಸುವುದು ಹೇಗೆ ಎಂದೇ ತಿಳಿಯಲಿಲ್ಲ! 
ಸುಷ್ಮಾ ಸ್ವರಾಜರನ್ನು ಟೀಕಿಸುವುದಕ್ಕೆ ಪದಗಳನ್ನು ಹುಡುಕುತ್ತಿದ್ದವರಿಗೆ ಈಗ ಮೋದಿ ಅತಿ ದೊಡ್ಡ ಅಚ್ಚರಿ ನೀಡಿಬಿಟ್ಟಿದ್ದಾರೆ. ಹೋಗುವ ಕ್ಷಣಗಳ ಮುಂಚೆ ಟ್ವಿಟರಿನಲ್ಲಿ ಬರೆದುಕೊಂಡಾಗಷ್ಟೇ ಮೋದಿಯವರ ಪಾಕಿಸ್ತಾನ ಭೇಟಿ ಎಲ್ಲರಿಗೂ ತಿಳಿದಿದ್ದು. ಯುದ್ಧೋತ್ಸಾಹದಲ್ಲಿದ್ದವರಿಗೆ ನಿರಾಸೆಯಾಗಿರಬೇಕು! ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ನಡೆಯಬಾರದೆಂದವರು, ಪಾಕಿಸ್ತಾನಿ ಕಲಾವಿದರ, ಲೇಖಕರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರಿಗೆಲ್ಲ ಈ ಭೇಟಿಯಿಂದ ಎಷ್ಟೆಲ್ಲ ತಳಮಳಗಳು ಸೃಷ್ಟಿಯಾಗಿರಬಹುದು! ಮೋದಿ ವಿರುದ್ಧ, ಬಿಜೆಪಿಯ ವಿರುದ್ಧ ಮಾತನಾಡಿದವರನ್ನೆಲ್ಲ ಪಾಕಿಸ್ತಾನಕ್ಕೆ ಹೋಗಿ, ಪಾಕಿಸ್ತಾನದ ಟಿಕೆಟ್ ಕೊಡಿ ಎಂದು ಅಬ್ಬರಿಸಿದವರಿಗೆ ಸ್ವತಃ ಮೋದಿಯೇ ಪಾಕಿಸ್ತಾನಕ್ಕೆ ಹೋಗಿಬಿಟ್ಟಿರುವುದು ಎಷ್ಟೆಲ್ಲ ಯಾತನೆ ಕೊಟ್ಟಿರಬಹುದು. ಸುಳ್ಸುದ್ದಿ ಮೂಲದ ಪ್ರಕಾರ ತನ್ನ ಭಕ್ತರು ಅಸಂಖ್ಯಾತ ಜನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿರುವುದರಿಂದ 'ಹಾಗೆ ಯಾರಾದರೂ ಬಂದುಬಿಟ್ಟರೆ ಅವರ ಬಗ್ಗೆ ಎಚ್ಚರಿಕೆಯಿಂದಿರಿ. ಆಡಳಿತದಲ್ಲಿನ ಹುಳುಕುಗಳನ್ನೆಲ್ಲ ಎತ್ತಿ ತೋರಿಸುವ ಡೇಂಜರಸ್ ಗ್ಯಾಂಗ್ ಅದು' ಎಂದು ಹೇಳಲೆಂದೇ ಹೋಗಿದ್ದರಂತೆ.
ಭಕ್ತರ ಸುದ್ದಿ ಅತ್ಲಾಗಿರಲಿ, ಪ್ರಧಾನಿಯಾಗುವುದಕ್ಕೆ ಮುಂಚೆ ಸ್ವತಃ ಮೋದಿಯೇ ಇಂತಹುದ್ದನ್ನು ವಿರೋಧಿಸುತ್ತಿದ್ದರೇನೋ. ಈಗ ಕಾಂಗ್ರೆಸ್ ಅಪಸ್ವರ ಎತ್ತುತ್ತಿರುವಂತೆ. ಅದೆಲ್ಲ ದೇಶದೊಳಗಡೆ ಮತವನ್ನರಸುವ ರಾಜಕೀಯ. ಪ್ರಧಾನಿ ಸ್ಥಾನಕ್ಕೆ ಬಂದ ಮೇಲೆ ಈ ಆಧುನಿಕ ಕಾಲದಲ್ಲಿ ಯಾವ ಯುದ್ಧಗಳನ್ನೂ ಗೆಲ್ಲಲಾಗುವುದಿಲ್ಲ, ಶಾಂತಿ ಉಳಿಸಿಕೊಳ್ಳಲು ಸಾಧ್ಯವಾಗುವುದು ಮಾತುಕತೆಯಿಂದಲೇ ಹೊರತು ಯುದ್ಧದಿಂದಲ್ಲ ಎನ್ನುವುದರ ಅರಿವೂ ಆಗಲೇಬೇಕು. ಸುಷ್ಮಾ ಸ್ವರಾಜರ ಪಾಕಿಸ್ತಾನ ಭೇಟಿ, ಈಗ ಮೋದಿಯವರ ಪಾಕಿಸ್ತಾನ ಭೇಟಿಯೆಲ್ಲವೂ ಇದಕ್ಕೆ ಪೂರಕವಾಗಿಯೇ ಇದೆ. ಈ ಭೇಟಿಯಿಂದ ಪಾಕಿಸ್ತಾನ ಶಾಂತಿ ಪ್ರೇಮ ರಾಷ್ಟ್ರವಾಗಿಬಿಡುತ್ತದೆ ಎಂದೆಲ್ಲ ನಂಬಿಬಿಟ್ಟರೆ ವಾಜಪೇಯಿ ಪಾಕಿಗೆ ಭೇಟಿ ಕೊಟ್ಟ ನಂತರ ಪಾಕಿಗಳು ಉಡುಗೊರೆಯಾಗಿ ಕೊಟ್ಟ ಕಾರ್ಗಿಲ್ ಯುದ್ಧದ ಮರುಕಳಿಸಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸದಾ ಕಾಲ ದ್ವೇಷವಷ್ಟೇ ಇರಬೇಕು ಎಂದು ಬಯಸುವವರ ಸಂಖೈ ಎರಡೂ ದೇಶದಲ್ಲಿ ದೊಡ್ಡದಿದೆ. ಒಂದಷ್ಟು ಶಾಂತಿಯ ಕೆಲಸ ನಡೆಯುತ್ತಿರುವಂತೆಯೇ ಆ ಶಾಂತಿ ಕದಡಲು ನಡೆಯುವ ಪ್ರಯತ್ನಗಳು ಹೆಚ್ಚಾಗುವ ಅಪಾಯವನ್ನು ಎರಡೂ ದೇಶದವರು ಗ್ರಹಿಸಿದರಷ್ಟೇ ಇಂತಹ ಸೌಹಾರ್ದಯುತ ಭೇಟಿಗಳಿಗೆ ಮಹತ್ವ.

Dec 25, 2015

ಧರ್ಮ ರಕ್ಷಕರ ಅಮೋಘ 'ಸಂಸ್ಕ್ರತಿ'!

ಈ ಯಮ್ಮನ ಫೋಟೋ ಎರಡು ಮೂರು ದಿನದಿಂದ ಫೇಸ್ ಬುಕ್ಕಿನ ಸ್ನೇಹಿತರ ಗೋಡೆಯಲ್ಲೆಲ್ಲಾ ಕಾಣಿಸಿಕೊಂಡಾಗ ಎಲ್ಲೋ ನೋಡಿದ ನೆನಪು ಕಾಡುತ್ತಿತ್ತು. ಕೊನೆಗೆ ಹೊಳೆಯಿತು. ಪತ್ರಕರ್ತ ನವೀನ್ ಸೂರಿಂಜೆ ಬಂಧನವಾಗಿದ್ದಾಗ ಮಂಗಳೂರು ನ್ಯಾಯಾಲಯದ ಬಳಿ ವಕೀಲರೊಂದಿಗೆ ಕೇಸಿನ ಬಗ್ಗೆ ಚರ್ಚಿಸುತ್ತ ಲವಲವಿಕೆಯಿಂದ ಓಡಾಡುತ್ತಿದ್ದರು ವಿದ್ಯಾ ದಿನಕರ್. ಫೇಸ್ ಬುಕ್ಕಿನಲ್ಲಿ ಹಲವು ಜನರ ಅವಹೇಳನಕಾರಿ ಹೇಳಿಕೆಗಳಿಗೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗೆ ಒಳಗಾಗಿದ್ದಾರೆ ವಿದ್ಯಾ ದಿನಕರ್. ಕಾರಣ? ದಿಲ್ವಾಲೆ ಸಿನಿಮಾದ ಪ್ರದರ್ಶನಕ್ಕೆ ಮಂಗಳೂರಿನ 'ದೇಶಪ್ರೇಮಿ'ಗಳು ಅಡ್ಡಿಪಡಿಸಿದ್ದರ ಬಗ್ಗೆ ದೂರು ದಾಖಲಿಸಿದ್ದು. ವಿದ್ಯಾ ದಿನಕರ್ ಹಿನ್ನೆಲೆಯೇನು, ಅವರ ಹೋರಾಟದ ಹಾದಿಯೇನು ಎನ್ನುವುದರ ಬಗ್ಗೆ ಕಿಂಚಿತ್ತೂ ಗೊತ್ತಿರದ (ಅಥವಾ ಗೊತ್ತಿದ್ದರೂ ಮಾಡುತ್ತಾರೋ?) ವೀರ ಕೇಸರಿ ಎಂಬ ಫೇಸ್ ಬುಕ್ ಗೋಡೆಯಲ್ಲಿ ವಿದ್ಯಾ ದಿನಕರ್ ರನ್ನು ಟೀಕಿಸಿ ಒಂದು ಪೋಸ್ಟ್ ಹಾಕಲಾಗುತ್ತದೆ. (ಚಿತ್ರ ನೋಡಿ) ಆ ಪೋಸ್ಟಿನಲ್ಲಿ ಟೀಕೆಯಿತ್ತು, ಅದು ಸತ್ಯವೋ ಅಸತ್ಯವೋ ಬಿಟ್ಟು ಬಿಡಿ ಟೀಕಿಸುವ ಹಕ್ಕು ಎಲ್ಲರಿಗೂ ಇರುತ್ತದೆ. 'ದೇಶಪ್ರೇಮಿ' ಭಜರಂಗದಳದವರ ಘನಂದಾರಿ ಕೆಲಸದ ಬಗ್ಗೆ ದೂರು ನೀಡಿದ ಕಾರಣಕ್ಕೆ ಪಾಕಿಸ್ತಾನದವಳು ಎಂದೆಲ್ಲ ಟೀಕಿಸುವುದು ಯಾವ ಕಾರಣಕ್ಕೋ? ಅದಕ್ಕೆ ಬಂದ ಕಮೆಂಟುಗಳು ನಾಗರೀಕವೆನ್ನಿಸಿಕೊಳ್ಳುವ ಸಮಾಜ ಬೆಚ್ಚಿ ಬೀಳುವಂತಿತ್ತು. ಕಮೆಂಟುಗಳನ್ನು ನೋಡಿದ ಮೇಲೆ ಹೋಗ್ಲಿ ಬಿಡಿ ಪೋಸ್ಟೇ ವಾಸಿ ಎನ್ನಿಸಿದರೆ ಸುಳ್ಳಲ್ಲ!
ಬೇವರ್ಸಿ, ನಾಯಿ, ಪಾಕಿಸ್ತಾನದವರಿಗೆ ಹುಟ್ಟಿದೋಳು, ಬಿಚ್ ತರಹದ ಸಾಮನ್ಯ ಪದಪುಂಜಗಳು 'ದೇಶಪ್ರೇಮಿ'ಗಳ ಕಮೆಂಟುಗಳಲ್ಲಿ ಎದ್ದು ಕಾಣಿಸುವುದು ಅಚ್ಚರಿಯ ವಿಷಯವೇನಲ್ಲ. ಈ ಕಮೆಂಟುಗಳ ನಡುವೆ ಮಧುಪ್ರಸಾದ್ ಎಂಬ ವ್ಯಕ್ತಿ 'ಇಂತವಳನ್ನು ರೇಪ್ ಮಾಡಿ ಕೊಲೆ ಮಾಡಬೇಕು' ಎಂದು ಉದ್ಗರಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟಿಸುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಏನೋ ಹುಡುಗ ಬಾಯಿಗೆ ಬಂದಂತೆ ಬೊಗಳುತ್ತಿದ್ದಾನೆ ಎಂದು ಸುಮ್ಮನಿದ್ದುಬಿಡಬಹುದಿತ್ತೋ ಏನೋ. ಆದರೆ ಇತ್ತೀಚಿನ ವಿದ್ಯಮಾನಗಳು ಸುಮ್ಮನಿರುವುದು ಎಷ್ಟರಮಟ್ಟಿಗೆ ಅಪಾಯಕಾರಿ ಎಂದು ತಿಳಿಸಿ ಹೇಳುತ್ತಿವೆ. ಕಲಬುರ್ಗಿಯವರ ಹತ್ಯೆಯಾದಾಗ ಭುವಿತ್ ಶೆಟ್ಟಿ ಎಂಬ ಯುವಕ ಹತ್ಯೆಯನ್ನು ಸಂಭ್ರಮಿಸುವ ಪೋಸ್ಟ್ ಹಾಕಿ ಮುಂದಿನ ಸರದಿ ನಿನ್ನದೇ ಕಣೋ ಭಗವಾನ್ ಎಂದು ಬರೆದುಕೊಂಡಿದ್ದ. ದೂರು ದಾಖಲಾಗಿ ಅವನನ್ನು ಬಂಧಿಸಲಾಯಿತು. ಏನೋ ಬಾಯಿಗೆ ಬಂದಿದ್ದು ಬರ್ಕೊಂಡಿದ್ದಾನೆ ಎಂದು ಪೋಲೀಸರು ಅವನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಲಿಲ್ಲವಾ? ಬಂಧನವಾದಷ್ಟೇ ವೇಗದಲ್ಲಿ ಬಿಡುಗಡೆಯೂ ಆಯಿತು. ಕೆಲವು ದಿನಗಳ ನಂತರ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಸೃಷ್ಟಿಸಲಾದ ಕೋಮು ಗಲಭೆಯ ಸಂದರ್ಭದಲ್ಲಿ ಹರೀಶ್ ಎಂಬ ಯುವಕನ ಹತ್ಯೆಗೆ ಸಂಬಂಧಪಟ್ಟಂತೆ ಭುವಿತ್ ಶೆಟ್ಟಿ ಬಂಧಿತನಾದ. ಮುಸ್ಲಿಮನನ್ನು ಕೊಲ್ಲಲು ಹೋಗಿ 'ಮಿಸ್ಟೇಕಿ'ನಿಂದ ಹರೀಶನನ್ನು ಕೊಂದುಹಾಕಿದ್ದರು ಭುವಿತ್ ಮತ್ತು ಗೆಳೆಯರು. ಸಾಮಾಜಿಕ ಜಾಲತಾಣದ ಬೆದರಿಕೆಗಳು ನಿಜವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾ ದಿನಕರ್ ರವರನ್ನು ರೇಪ್ ಮಾಡಿ ಕೊಲೆ ಮಾಡಬೇಕು ಎಂಬ ಕಮೆಂಟಿನ ಬಗ್ಗೆ ನಕ್ಕು ಸುಮ್ಮನಾಗುವುದು ಸಾಧ್ಯವೇ? 
ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲಿನ ಎದುರು ವಿದ್ಯಾ ದಿನಕರ್ ರವರಿಗೆ ಬೆಂಬಲ ಸೂಚಿಸುತ್ತ ಬೆದರಿಕೆ ಹಾಕಿದವರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆಯಿದೆ.

ಅಬ್ಬರದ ವೈಭವಕ್ಕೆ ಬೆದರಿದ ಕತೆ

ಯಶ್ ಅಭಿನಯದ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ‘ಮಾಸ್ಟರ್ ಪೀಸ್’ ಚಿತ್ರ ಇಂದು ತೆರೆಕಂಡಿದೆ. ಬುಕ್ ಮೈ ಶೋನಲ್ಲಿ ಒಂದು ದಿನ ಮೊದಲೇ ಏಳು ಸಾವಿರ ಟಿಕೇಟುಗಳು ಮಾರಾಟವಾದ ದಾಖಲೆ, ಕರ್ನಾಟಕದಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ, ಸಂಭಾಷಣೆಕಾರನಾಗಿ ಖ್ಯಾತಿ ಪಡೆದಿದ್ದ ಮಂಜು ಮಾಂಡವ್ಯ ನಿರ್ದೇಶನದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಮಾಸ್ಟರ್ ಪೀಸ್ ಹೇಗಿದೆ? ಚಿತ್ರದ ನಿರೀಕ್ಷೆ ಹೆಚ್ಚಲು ಯಶ್ ಅಭಿನಯದ ಚಿತ್ರಗಳು ಸಾಲು ಸಾಲು ಗೆದ್ದಿದ್ದು, ಮಾಸ್ಟರ್ ಪೀಸ್ ಚಿತ್ರದ ಮೊದಲ ಟ್ರೇಲರಿನಲ್ಲಿ ಭಗತ್ ಸಿಂಗ್ ವೇಷದಲ್ಲಿ ಯಶ್ ಮಿಂಚಿದ್ದು, ಮಾಸ್ಟರ್ ಪೀಸ್ ಚಿತ್ರದ ಅಣ್ಣಂಗೇ ಲವ್ ಆಗಿದೆ ಹಾಡಿನ ಯಶಸ್ಸು ಕಾರಣ. ಚಿತ್ರ ನಿರೀಕ್ಷಿತ ಮಟ್ಟ ಮುಟ್ಟುತ್ತದೆಯಾ?

ಹೊಸ ನಿರ್ದೇಶಕನ ಮೊದಲ ಸಿನಿಮಾದಲ್ಲಿ ಕತೆಯಲ್ಲಿ ಹೊಸತನವನ್ನು ನಿರೀಕ್ಷಿಸುವುದು ಸಹಜ. ತುಂಬ ಹೊಸತನವಿಲ್ಲದ ಕತೆಯನ್ನು ಆಯ್ದುಕೊಂಡಿದ್ದಾರೆ ನಿರ್ದೇಶಕರು. ಒಬ್ಬ ಉಡಾಳ ಹುಡುಗ, ರೌಡಿ ಎಲಿಮೆಂಟೆಂದು ಕರೆಸಿಕೊಳ್ಳಬೇಕೆಂಬ ಹಪಾಹಪಿ ಇರುವಾತ. ಬಹಳಷ್ಟು ಹುಡುಗರಿಗೆ ಒಂದು ಹಂತದಲ್ಲಿ ರೌಡಿ ಎಲಿಮೆಂಟು, ಅಣ್ಣ, ಭಾಯ್ ಅಂತೆಲ್ಲ ಕರೆಸಿಕೊಳ್ಳುವ ಚಟವಿರುತ್ತದೆ. ಕೆಲವರಿಗೆ ಆ ಚಟ ಶಾಲೆ ಮುಗಿಸುವಷ್ಟರಲ್ಲಿ ಮುಗಿದರೆ ಹಲವರಿಗೆ ಪಿಯುಸಿಯಲ್ಲಿ ಮುಗಿಯುತ್ತದೆ. ಎಲ್ಲೋ ಕೆಲವರಿಗೆ ಡಿಗ್ರಿಗೆ ಸೇರಿದರೂ ರೌಡಿಯಾಗುವ ಆಸೆ ಬತ್ತಿರುವುದಿಲ್ಲ. ಅಂತಹ ವ್ಯಕ್ತಿತ್ವ ಚಿತ್ರದ ನಾಯಕ ‘ಯುವ’ನದ್ದು. ಅಣ್ಣನೆನ್ನಿಸಿಕೊಳ್ಳುವ ಭರದಲ್ಲಿ ನಾಯಕನೆದುರಿಸುವ ಸವಾಲುಗಳು, ಮಗನನ್ನು ದೇಶಪ್ರೇಮಿ ಮಾಡಬೇಕೆನ್ನುವ ನ್ಯಾಯಾಲಯದಲ್ಲಿ ಕೆಲಸ ಮಾಡುವ ತಾಯಿ (ಸುಹಾಸಿನಿ) ರೌಡಿ ಮಗನ ಬಗ್ಗೆ ಬೆಳೆಸಿಕೊಳ್ಳುವ ದ್ವೇಷ ಮತ್ತು ಆ ದ್ವೇಷ ಹೇಗೆ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಹಲವು ಸಾಧ್ಯತೆಗಳಿದ್ದ ಕತೆ ಹೀರೋಯಿಸಮ್ಮಿನ ಸೂತ್ರಕ್ಕೆ ಸಿಲುಕಿ ನಲುಗಿ ಹೋಗಿದೆ. ಒಂದು ಲವ್ ಸ್ಟೋರಿ ಇಲ್ಲದಿದ್ದರೆ ಸಿನಿಮಾ ಪೂರ್ಣವಾಗುವುದಿಲ್ಲ ಎನ್ನುವ ಕಾರಣಕ್ಕೆ ಹೀರೋಯಿನ್ ಇದ್ದಾಳೆ, ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿ ಮನಗೆಲ್ಲುತ್ತಾಳೆ ನಾಯಕಿ ಶಾನ್ವಿ ಶ್ರೀವಾಸ್ತವ್. ಯಶ್ ನ ಪ್ರಭಾವಳಿಯನ್ನು ಮೀರಿ ಬೆಳೆವ ಪಾತ್ರದಲ್ಲಿ ಚಿಕ್ಕಣ್ಣ. ರೌಡಿ ಎಲಿಮೆಂಟಿನ ಸಹಾಯದಿಂದ ಗೆಲ್ಲುವ ನೂರ್ ಅಹಮದ್ ಪಾತ್ರದಲ್ಲಿ ಅಚ್ಯುತ್; ಅಚ್ಯುತ್ ಅಭಿನಯದ ಬಗ್ಗೆ ಕಮೆಂಟಿಸುವ ಅಗತ್ಯವಿಲ್ಲ. ಮೊದಲಾರ್ಧವಿಡೀ ನಾಯಕನೊಳಗಿನ ರೌಡಿ ಎಲಿಮೆಂಟನ್ನು ವಿಜ್ರಂಭಿಸುವ ಕೆಲಸ. ನನ್ನ ಫೋಟೋ ದೊಡ್ಡದಾಗಿ ಹಾಕಿಲ್ಲ ಎಂದು ಸಂಪಾದಕನ ಕೈಚುಚ್ಚುವ ನಾಯಕ, ರಾಜಕಾರಣಿಯೊಬ್ಬನ ಗೆಲುವಿಗೆ ಹಣ ಹಂಚುವ ಐಡಿಯಾ ಕೊಡವ ನಾಯಕ, ಹಣ ಮಾಡಲು ಶಾರ್ಟು ಕಟ್ಟುಗಳನ್ನುಡುಕುವ ನಾಯಕ – ಒಟ್ಟಾರೆ ಮೊದಲಾರ್ಧದಲ್ಲಿ ಯಶ್ ನೇ ಖಳನಾಯಕ! ಮೊದಲಾರ್ಧದ ಖಳನಾಯಕನನ್ನು ಎರಡನೇ ಅರ್ಧದಲ್ಲಿ ನಾಯಕನನ್ನಾಗಿ ಮಾಡಲು ಡ್ರಗ್ ಮಾಫಿಯಾದ ಬಾಸ್ ರವಿಶಂಕರ್ ಪ್ರವೇಶವಾಗುತ್ತದೆ. 

ರವಿಶಂಕರನ ಸಾಮ್ರಾಜ್ಯವನ್ನು ಮಟ್ಟ ಹಾಕಲು ನಂತರದ ಚಿತ್ರ ಮೀಸಲು. ಮಾಸ್ ಪಿಚ್ಚರುಗಳಲ್ಲೂ ಮೊದಲರ್ಧ ಬಿಲ್ಡಪ್ಪು ನಂತರ ಕತೆ ಎನ್ನುವ ಸೂತ್ರವಿರುತ್ತದೆ. ಇಲ್ಲಿ ಎರಡನೇ ಅರ್ಧವೂ ಬಿಲ್ಡಪ್ಪುಗಳಿಂದಲೇ ತುಂಬಿ ಹೋಗಿದೆ. ಫೈಟಿನ ಮೇಲೆ ಫೈಟುಗಳಿವೆ, ಒಂದೆರಡು ವಿಭಿನ್ನವಾಗಿವೆ. ಆದರೂ ಎಷ್ಟೂಂತ ಬಿಲ್ಡಪ್ಪುಗಳನ್ನು ನೋಡುವುದು. ಚಿಕ್ಕಣ್ಣ ಇಲ್ಲದಿದ್ದರೆ ಯಶ್ ನನ್ನು ತಡೆದುಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು! ರೌಡಿ ಎಲಿಮೆಂಟು ಬದಲಾಗುವುದಿಲ್ಲ, ತನ್ನ ರೌಡಿ ಎಲಿಮೆಂಟಿನಿಂದಲೇ ಒಳ್ಳೆಯವನೆಂಬ ಹೆಸರು ಗಳಿಸಿಬಿಡುತ್ತಾನೆ! ರೌಡಿಯ ಬೆಂಬಲಿಗರನ್ನು ಕಂಡ ತಾಯಿ ಅದನ್ನು ಭಗತ್ ಸಿಂಗ್ ಗೆ ಸಿಕ್ಕ ಬೆಂಬಲ ಎಂಬಂತೆ ಕಲ್ಪಿಸಿಕೊಳ್ಳುವುದು ಕಾಮಿಡಿಯಾ ಟ್ರ್ಯಾಜಿಡಿಯಾ ಗೊತ್ತಾಗುವುದಿಲ್ಲ. ಹಾಡುಗಳು ಚಿತ್ರದ ವೇಗಕ್ಕೆ ಪೂರಕವಾಗಿವೆ, ಮೂರು ತಿಂಗಳುಗಳಿಗಿಂತ ಹೆಚ್ಚಾಗಿ ತಲೆಯಲ್ಲುಳಿಯುವುದಿಲ್ಲ. ಚಿತ್ರದ ವೈಭವಕ್ಕೆ ಯಾವುದೇ ಕೊರತೆಯುಂಟುಮಾಡಿಲ್ಲ ನಿರ್ಮಾಪಕರಾದ ವಿಜಯ್ ಕಿರಗಂದೂರು. ಸಂಭಾಷಣೆಕಾರ ನಿರ್ದೇಶಕನಾಗಿರುವುದರಿಂದ ಪಂಚಿಂಗ್ ಡೈಲಾಗುಗಳು ಬಹಳಷ್ಟಿವೆ, ಕೆಲವೊಂದೆಡೆ ಮೌನದ ಜಾಗವನ್ನೂ ಮಾತು ಆವರಿಸಿಕೊಂಡುಬಿಟ್ಟಿದೆ. ಮೌನಕ್ಕಿರುವ ಬೆಲೆ ಚಿತ್ರದ ಪ್ರಾರಂಭದಲ್ಲಿ ಒಂದು ಪುಟ್ಟ ತುಣುಕಾಗಿ ಬರುವ ಭಗತ್ ಸಿಂಗ್ ನ ಕತೆಯಲ್ಲಿ ಗೋಚರವಾಗುತ್ತದೆ. ನಂತರ ಮಾತಿನದ್ದೇ ಅಬ್ಬರ.

ಚಿತ್ರದ ಬಹುಮುಖ್ಯ ಕೊರತೆಯೆಂದರೆ ಬಿಲ್ಡಪ್ಪುಗಳು! ಚಿತ್ರಕ್ಕೆ ಸಂಬಂಧಪಟ್ಟಂತ ಅನೇಕ ಸಂದರ್ಶನಗಳಲ್ಲಿ ಯಶ್ ಪದೇ ಪದೇ Involvementನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ನ ‘ಇನ್ವಾಲ್ವ್ ಮೆಂಟ್’ ಎದ್ದು ಕಾಣುತ್ತದೆ. ಮೊದಲರ್ಧದ ಅನೇಕ ದೃಶ್ಯಗಳು ಅವರ ಹಿಂದಿನ ಚಿತ್ರ ರಾಮಾಚಾರಿಯನ್ನು ನೆನಪಿಸುತ್ತದೆ! ಮಾಧ್ಯಮವನ್ನು ಅವಹೇಳನ ಮಾಡಲು ಆ ಚಿತ್ರದಲ್ಲಿ ಕಾವೇರಿ – ಸುವರ್ಣ ಎಂಬ ಪಾತ್ರವಿತ್ತು. ಈ ಚಿತ್ರದಲ್ಲಿ ಮಾಧ್ಯಮವನ್ನು ಹೀಗಳೆಯುವ ಹತ್ತಲವು ಡೈಲಾಗುಗಳು ಬಂದು ಹೋಗುತ್ತವೆ. ಇಡೀ ಚಿತ್ರವನ್ನು ಯಶ್ ಆವರಿಸಿಕೊಂಡುಬಿಟ್ಟಿರುವುದೇ ಚಿತ್ರಕ್ಕೆ ದೊಡ್ಡ ಶಾಪ. ಬಹುಶಃ ಇದು ಅವರ ಇನ್ವಾಲ್ವ್ ಮೆಂಟಿನ ಕಾರಣಕ್ಕಾಯಿತಾ? ನಟನ ಇನ್ವಾಲ್ವ್ ಮೆಂಟ್ ನಟನೆಯಲ್ಲಿರಬೇಕು, ನೃತ್ಯ ನಿರ್ದೇಶಕನ ಇನ್ವಾಲ್ವ್ ಮೆಂಟ್ ನೃತ್ಯದಲ್ಲಿರಬೇಕು, ಎಲ್ಲದರಲ್ಲೂ ಇನ್ವಾಲ್ವ್ ಆಗುವ ಹಕ್ಕಿರುವುದು ನಿರ್ದೇಶಕರಿಗೆ ಮಾತ್ರ ಎನ್ನುವ ಅಂಶ ಯಶ್ ನ ನೆನಪಿನಲ್ಲಿರದಿದ್ದರೆ ಮುಂದೆ ಅವರು ನಟಿಸುವ ಚಿತ್ರಗಳನ್ನು ನೋಡುವ ಪ್ರೇಕ್ಷಕರಲ್ಲಿ ಅವರ ಅಭಿಮಾನಿಗಳು ಮಾತ್ರ ಇರುತ್ತಾರೆ. ಉಳಿದ ಪ್ರೇಕ್ಷಕರು ಇನ್ ವಾಲ್ವ್ ಆಗುವುದಿಲ್ಲ!
Masterpiece (Kannada movie)
Direction: Manju Mandavya
Starcast: Yash, Shanvi srivastav, chikkanna, suhasini, achyut, avinash, ravishankar
Producer: Vijay kiragandur

Dec 22, 2015

ಪ್ರಭುತ್ವದ ಅಸಹಿಷ್ಣುತೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಈ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ದ ದಿನೇದಿನೇ ಪ್ರತಿಭಟನೆ ಹೆಚ್ಚಾಗುತ್ತಿದೆ. ಸಾಹಿತಿಗಳು,ಕಲಾವಿದರು,ವಿಜ್ಞಾನಿಗಳು ಮತ್ತು ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅಸಹಿಷ್ಣುತೆಯ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿ ತಮ್ಮ ಪ್ರತಿಭಟನೆಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂತಹ ಪ್ರತಿಭಟನೆಗೆ ಎರಡು ನೆಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿವೆ. ಮೊದಲನೆಯದರ ಪ್ರಕಾರ ಇಂಡಿಯಾದಲ್ಲಿ ಅಸಹಿಷ್ಣುತೆಯೆನ್ನುವುದೇ ಇಲ್ಲ, ಇದ್ದರೂ ಅದು ಹಿಂದೂ ಧರ್ಮದ ವಿರುದ್ದ ಇತರೇ ಧರ್ಮದವರ ಮತ್ತು ಪ್ರಗತಿಪರರ ಅನಗತ್ಯ ಅಹನೆಯಷ್ಟೆ ಅನ್ನುವುದಾಗಿದೆ. ಇನ್ನು ಎರಡನೇಯದರ ಪ್ರಕಾರ ಇಂಡಿಯಾದಲ್ಲಿ ಅಸಹನೆಯಿರುವುದು ಹೊಸದೇನಲ್ಲ. ಸಾವಿರಾರು ವರ್ಷಗಳಿಂದಲೂ ಇಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಆದರೆ ಇಷ್ಟು ವರ್ಷಗಳÀ ಕಾಲ ಅದನ್ನು ವಿರೋಧಿಸದೇ ಸುಮ್ಮನಿದ್ದವರು ಈಗ ಬಾಜಪ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ವಿರೋಧಿಸುವುದು ಬಾಜಪದ ಬಗ್ಗೆ ಮತ್ತು ಅದರ ನೀತಿಗಳ ಬಗ್ಗೆ ಅವರಿಗಿರುವ ಅಸಹನೆಯನ್ನು ತೋರುತ್ತದೆ ಅನ್ನುವುದಾಗಿದೆ!

ಈ ಎರಡೂ ವಾದಗಳನ್ನು ಆಲಿಸಿದಾಗ ಒಂದಂತು ಸ್ಪಷ್ಟವಾಗುತ್ತದೆ. ಅದು ಅಸಹಿಷ್ಣುತೆಯ ವಿರುದ್ದದ ಪ್ರತಿಭಟನೆ ಎಂದಾಕ್ಷಣ ಯಾರು ಹೇಳದಿದ್ದರೂ ಅದು ತನ್ನ ವಿರುದ್ದವೇ ಎಂದು ಬಾಜಪ ಮತ್ತದರ ಸಂಘಪರಿವಾರ ಅರ್ಥಮಾಡಿಕೊಳ್ಳುವ ಮಟ್ಟಿಗಾದರು ಅದಕ್ಕೆ ತನ್ನ ಅಸಹನೆಯ ಬಗ್ಗೆ ಅರಿವಿದೆಯೆನ್ನುವುದು. 

ನಾನು ಎರಡನೆಯ ವಾದವನ್ನು ಭಾಗಶ: ಒಪ್ಪುತ್ತೇನೆ: ಯಾಕೆಂದರೆ ಐದು ಸಾವಿರ ವರ್ಷಗಳ ಇತಿಹಾಸವಿರುವ ಈ ನಾಡಿಗೆ ಅಸಹಿಷ್ಣುತೆ ಹೊಸತೇನಲ್ಲ! ಆದರದು ಸಾಂಪ್ರದಾಯಿಕ ಭಾರತೀಯ ಸಮಾಜದ ಕೊಡುಗೆಯಾಗಿತ್ತು. ಸನಾತನವೇ ಶ್ರೇಷ್ಠವೆಂದು ನಂಬಿಕೊಂಡು ಬಂದ ಸಮಾಜವೊಂದು ಅದೇ ಸಮಾಜದ ಕೆಳಸ್ತರದ ಜಾತಿ-ಜನಾಂಗಗಳ ಮೇಲೆ ತೋರಿಸುತ್ತಲೇ ಬಂದ ಅಸಹನೆಯದು. ಭಾರತೀಯ ಸಮಾಜದ ನ್ಯಾಯದ ಪರಿಕಲ್ಪನೆಯಲ್ಲೇ ಇದ್ದ ತಾರತಮ್ಯಗಳು, ಮೇಲುಕೀಳುಗಳು ಸಮಾಜದೊಳಗಿನ ಅಸಹಿಷ್ಣುತೆಗೆ ಕಾರಣವಾಗಿದ್ದವು. ಸನಾತನ ಸಮಾಜ ಒಪ್ಪಿಕೊಂಡ ಮೌಲ್ಯಗಳೇ ಶ್ರೇಷ್ಠವೆಂದು ಬಾವಿಸಿದಾಗ ಅದನ್ನು ಮೀರಲು ಯಾರೂ ಪ್ರಯತ್ನಿಸಬಾರದೆಂಬ ದೂರಾಲೋಚನೆಯಿಂದ ಹುಟ್ಟಿಕೊಂಡ ಅಸಹನೆ ಹಾಗೆ ಮೀರಬಹುದೆಂದು ಬಾವಿಸಿದ ವರ್ಗಗಳ ಮೇಲೆ ಮೇಲು ವರ್ಗಗಳು ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗಳನ್ನು ಹೇರತೊಡಗಿದ್ದವು. ಜೊತೆಗೆ ದೈಹಿಕವಾಗಿ ಹಲ್ಲೆಗಳೂ ನಡೆಯುತ್ತಿದ್ದವು. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ನ್ಯಾಯದ ಕಲ್ಪನೆಯೆನ್ನುವದು ಯಾವತ್ತಿಗೂ ಮೇಲ್ವರ್ಗಗಳ ಸ್ವತ್ತಾಗಿತ್ತು. ಹಾಗಾಗಿ ಮೇಲ್ಜಾತಿಗಳು ಸದಾ ದಲಿತರ ವಿರುದ್ದ ಒಂದು ಅಸಹನೆಯನ್ನು ತೋರುತ್ತಲೇ ಬಂದಿದ್ದವು. ಭಾರತೀಯ ಸಮಾಜ ಒಪ್ಪಿಕೊಂಡ ನ್ಯಾಯವ್ಯವಸ್ಥೆಯಲ್ಲಿ ಈ ನೆಲದ ಕೆಳಜಾತಿÀಗಳಿಗೆ ಯಾವುದೇ ಹಕ್ಕಾಗಲಿ ಅವಕಾಶವಾಗಲಿ ಇರಲಿಲ್ಲ. ಆದರೆ ಇಂತಹ ಅಸಹನೆಯಿಂದಾಗುತ್ತಿದ್ದ ಹಲ್ಲೆಗಳು ತೀರಾ ವೈಯುಕ್ತಿಕ ನಲೆಗಟ್ಟಿನಲ್ಲಿ ನಡೆಯುತ್ತಿದ್ದವು.

ಹೀಗಾಗಿಯೇ ಸಾಂಪ್ರದಾಯಿಕ ಭಾರತೀಯ ಸಮಾಜ ಒಪ್ಪಿಕೊಂಡ ಮೌಲ್ಯಗಳು ಯಾವತ್ತಿಗೂ ಕೆಳಜಾತಿಗಳ ಮತ್ತು ಅಲ್ಪಸಂಖ್ಯಾತರ ಮಟ್ಟಿಗೆ ಅನ್ಯವಾಗಿದ್ದವು ಮತ್ತು ಅವು ಅಂತಹ ಅಸಹಿಷ್ಣುತೆಯನ್ನು ವ್ಯಕ್ತಿಗತವಾಗಿಯೇ ಎದುರಿಸಬೇಕಾಗಿತ್ತು. ಎಲ್ಲಿಯವರೆಗು ಅಸಹಿಷ್ಣುತೆಯೆನ್ನುವುದು ವೈಯುಕ್ತಿಕ ನೆಲೆಯಲ್ಲಿ ನಡೆಯುತ್ತಿತ್ತೋ ಅಲ್ಲಿಯವರೆಗು ಅದನ್ನು ವೈಯಕ್ತಿಕ ನೆಲೆಗಟ್ಟಿಲ್ಲಿಯೇ ವಿರೋಧಿಸಲಾಗುತ್ತಿತ್ತು. ಹಾಗಾಗಿಯೇ ಬಲಪಂಥೀಯರು ಹೇಳುವಂತೆ ಹಿಂದೆಯೂ ಅಸಹಿಷ್ಣುತೆ ಇದ್ದರೂ ಜನರು ವೈಯುಕ್ತಿಕ ಮಟ್ಟದಲ್ಲಿ ಮಾತ್ರ ತೆಗೆದುಕೊಳ್ಳುತ್ತಿದ್ದರು ಅನಿಸುತ್ತೆ. ಹಾಗಾಗಿಯೇ ವೈಯುಕ್ತಿಕ ನೆಲೆಯಲ್ಲಿನ ಹಲ್ಲೆ ಅವಮಾನಗಳನ್ನು ನಾವಗಳು ಕೂಡ ವೈಯುಕ್ತಿಕವಾಗಿಯೇ ತೆಗೆದುಕೊಂಡು ಸಹಿಸಿಕೊಳ್ಳುತ್ತಿದ್ದೆವು.

ಆದರೆ ಇವತ್ತಿನ ಅಸಹಿಷ್ಣುತೆಯ ಬಗೆಯಗಲಿ ಹಗೆಯಾಗಲಿ ಬೇರೆ ತೆರನಾದ್ದು. ಸಾಂಪ್ರದಾಯಿಕ ಸಮಾಜದ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಧರ್ಮವೊಂದು ಹೇಗೆಲ್ಲ ತನ್ನ ಅಸಹನೆ ತೋರಬಹುದೊ ಅಂತಹದೊಂದು ಅಸಹಿಷ್ಣುತೆ ಇವತ್ತು ಇಂಡಿಯಾದಲ್ಲಿ ಗೋಚರಿಸುತ್ತಿದೆ. ಜೊತೆಗೆ ತನ್ನ ಮೂಲ ಸಿದ್ದಾಂತಗಳನ್ನು ಮತ್ತು ತಾನು ಯಾವುದನ್ನು ಶ್ರದ್ದೆ ಎನ್ನುತ್ತೇನೆಯೊ ಅದನ್ನು ಮೂಢನಂಬಿಕೆಯೆಂದು ಪ್ರತಿರೋಧಿಸುವ ಮನಸುಗಳ ವಿರುದ್ದವೂ ಅದು ಇನ್ನಿಲ್ಲದ ಅಸಹಿಷ್ಣುತೆ ಹೊರಹಾಕುತ್ತಿದೆ. ಧರ್ಮವೊಂದು ಪ್ರಭುತ್ವವಾಗುವಾಗ ತನ್ನ ಹಾದಿಗೆ ಅಡ್ಡಬಂದವರನ್ನು ಇನ್ನಿಲ್ಲವಾಗಿಸಿ ಭಯವನ್ನು ಸೃಷ್ಠಿಸುವ ರೀತಿ ಇದಾಗಿದೆ. ತಾನು ಪ್ರಭುತ್ವವಾಗದಿದ್ದರೂ ತನ್ನ ಹಿತ ಕಾಯುವ ಪ್ರಭುತ್ವವೊಂದು ಇದೆಯೆಂಬ ಅದರ ನಂಬಿಕೆಯೇ ಇವತ್ತು ಇಂಂಡಿಯಾದಲ್ಲಿ ಇಷ್ಟೊಂದು ಅಸಹಿಷ್ಣುತೆ ಹುಟ್ಟು ಹಾಕಲು ಕಾರಣವಾಗಿದೆ

ಪ್ರಭುತ್ವದ ಬೆಂಬಲವಿದ್ದಾಗ ನಡೆಯುವ ಹಲ್ಲೆಗಳು ಮಾರಣಾಂತಿಕವಾಗಿರುತ್ತವೆ. ಹೀಗಾಗಿಯೇ ದಾಬೋಲ್ಕರ್ ಮತ್ತು ಕಲಬುರ್ಗಿಯವರ ಹತ್ಯೆಗಳು ಬಹಳ ಸುಲಭವಾಗಿ ನಡೆದು ಹೋಗುತ್ತವೆ. ಯಾವಾಗ ಪ್ರಭುತ್ವದ ಪ್ರಾಯೋಜಿತ ಅಹಿಷ್ಣುತೆ ಜಾಸ್ತಿಯಗುತ್ತದೆಯೊ ಆಗದನ್ನು ವಿರೋಧಿಸುವುದು ಸಾಮೂಹಿಕವಾಗಿಯೇ ಅನಿವಾರ್ಯವಾಗುತ್ತದೆ. ಮತ್ತು ಇಂತಹ ವಿರೋಧ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡು ತೀವ್ರವಾಗುತ್ತದೆ. ಇವತ್ತು ಇಂಡಿಯಾದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆಯ ವಿರುದ್ದದ ಹೋರಾಟ ತೀವ್ರವಾಗಿರುವುದು ಈ ಕಾರಣಕ್ಕೇನೆ. ಹಿಂದೆ ಇದ್ದ ಅಸಹಿಷ್ಣುತೆಯ ವಿರುದ್ದ ಯಾಕೆ ಪ್ರತಿಭಟಿಸಲಿಲ್ಲ ಎಂದು ಕೇಳುವವರಿಗೆ ಇದು ಸಮಂಜಸ ಉತ್ತರವೆಂದು ನಾನಂತು ಬಾವಿಸುತ್ತೇನೆ.

Dec 21, 2015

ಮಹಾದೇವರು ಹೇಳಿದ ಮೇಕೆಯ ಕತೆ

devanooru mahadeva
ಜನನುಡಿ 2015ರ ಮೊದಲ ದಿನ ರಾತ್ರಿ ಊಟವಾದ ಮೇಲೆ ‘ಅಭಿಮತ’ ತಂಡದ ದಿಡೀರ್ ವಿಮರ್ಶಾತ್ಮಕ ಸಭೆ ನಡೆಯುತ್ತಿದ್ದಾಗ ಅವತ್ತು ರಾತ್ರಿಯೇ ಮೈಸೂರಿಗೆ ಹೊರಟಿದ್ದ ದೇವನೂರು ಮಹಾದೇವರವರು ಬಂದರು. ಜನನುಡಿಯನ್ನು ವ್ಯವಸ್ಥಿತವಾಗಿ ಆಯೋಜಿಸಿದ ಕಿರಿಯರನ್ನುದ್ದೇಶಿಸಿ ನೀವೆರಡು ಮಾತುಗಳನ್ನಾಡಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದಾಗ ‘ಓ ಮತ್ತೆ ಮತ್ತೆ ನನ್ನನ್ನು ನೀವು ಹಿರಿಯರು ಮಾಡಿಬಿಡ್ತಿದ್ದೀರಿ’ ಎಂದು ನಗುತ್ತ ಮಾತುಗಳನ್ನಾರಂಭಿಸಿದ ದೇವನೂರು ‘ಇಲ್ಲಿ ನಿಮಗೆಲ್ಲ ಧನ್ಯವಾದ ಹೇಳೋ ಅವಶ್ಯಕತೆಯೆಲ್ಲಾ ಇಲ್ಲವೇ ಇಲ್ಲ. ಇದನ್ನು ನೀವು ನಿಮಗಾಗಿ ಮಾಡಿದ್ದೀರಿ. ಯಾವಾಗಲೂ ನಾನು ನನಗಾಗಿ ಈ ಕೆಲಸ ಮಾಡ್ತಿದ್ದೀನಿ ಅಂದ್ಕೊಂಡೇ ಮಾಡಬೇಕು. ಸಮಾಜಕ್ಕಾಗಿ, ಉದ್ಧಾರಕ್ಕಾಗಿ ಮಾಡ್ತಿದ್ದೀನಿ ಅನ್ನೋ ಮಾತುಗಳನ್ನೆಲ್ಲಾ ಮರೆತು ನನಗಾಗಿ ಮಾಡ್ತಿದ್ದೀನಿ ಅಂದ್ಕೊಂಡು ಮಾಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಒಂದು ಮೇಕೆಯ ಕತೆ ಹೇಳ್ತೀನಿ ಕೇಳಿ. ಅಬ್ರಹಾಂ ಲಿಂಕನ್ ತನ್ನ ಗೆಳೆಯ ಸಚಿವನೊಂದಿಗೆ ಪಯಣಿಸುತ್ತಿರುತ್ತಾನೆ. ಜೋರು ಮಳೆ ಬರುತ್ತಿರುತ್ತೆ. ಚರ್ಚೆಯ ಸಂದರ್ಭದಲ್ಲಿ ಗೆಳೆಯನಿಗೆ ‘ನಾನು ಎಲ್ಲಾ ಕೆಲಸವನ್ನೂ ನನಗಾಗಿ ನನ್ನ ನೆಮ್ಮದಿ ಸುಖಕ್ಕಾಗಿಯಷ್ಟೇ ಮಾಡ್ತೇನೆ’ ಎನ್ನುತ್ತಾರೆ. ಇವರ ಮಾತುಗಳನ್ನು ಒಪ್ಪದ ಗೆಳೆಯ ಬಹಳಷ್ಟು ಕೆಲಸಗಳನ್ನು ನಾವು ಇತರರ ಖುಷಿಗಾಗಿ ಮಾಡುತ್ತೇವೆ ಎಂದೇ ವಾದಿಸುತ್ತಾರೆ. ದಾರಿಯಲ್ಲಿ ಮೇಕೆಯೊಂದು ಕೆಸರಿನ ಹಳ್ಳದಲ್ಲಿ ಸಿಲುಕಿ ಹೊರಬರಲಾರದೆ ಮ್ಯಾ ಮ್ಯಾ ಎಂದು ಕಿರುಚಾಡುತ್ತಿರುತ್ತದೆ. ಇದನ್ನು ನೋಡಿದ ಲಿಂಕನ್ನರು ಮತ್ತೊಂದು ಕ್ಷಣ ಯೋಚಿಸದೆ ಬಿರುಸು ಮಳೆಯಲ್ಲಿ ನಡೆದು ಹೋಗಿ ಕೆಸರಿನಲ್ಲಿ ಸಿಲುಕಿದ್ದ ಮೇಕೆಯನ್ನು ಎತ್ತಿ ತಮ್ಮ ಎದೆಗೆ ಒತ್ತಿ ಹಿಡಿದು ಮೂತಿ ಮೇಲಿನ ಕೆಸರು ಒರೆಸಿ ನೆಲಕ್ಕೆ ಬಿಟ್ಟು ಅಂಡಿನ ಮೇಲೊಂದು ಒಡೆದು ಕಳುಹಿಸುತ್ತಾರೆ. ಲಿಂಕನ್ನರ ಶರ್ಟು ಸೂಟುಗಳೆಲ್ಲ ಕೆಸರುಮಯ. ಪಯಣ ಮತ್ತೆ ಪ್ರಾರಂಭವಾದಾಗ ಗೆಳೆಯ ನಗುತ್ತಿರುತ್ತಾನೆ. ‘ನೋಡಿದ್ರಾ ನನ್ನ ವಾದವೇ ಗೆದ್ದಿತು. ಮೇಕೆಯನ್ನು ನೀವು ಬದುಕಿಸಿಬಿಟ್ಟಿರಿ. ಇದನ್ನು ನೀವು ಮೇಕೆಗಾಗಿ ಮಾಡಿದಿರೇ ಹೊರತು ನಿಮಗಾಗಿ ಅಲ್ಲ’. ಲಿಂಕನ್ ‘ಖಂಡಿತವಾಗಿ ಈ ಕಾರ್ಯವನ್ನು ನಾನು ಮಾಡಿದ್ದು ನನಗಾಗಿ, ಮೇಕೆಗಾಗಿ ಅಲ್ಲ’ ಎಂದ್ಹೇಳಿ ಮುಗುಳ್ನಗುತ್ತಾರೆ. ಅದು ಹೇಗೆ ಎಂಬ ಪ್ರಶ್ನೆಗೆ ‘ನೋಡಿ ನಾನದನ್ನು ಬದುಕಿಸದಿದ್ದರೆ ಅದರ ಮ್ಯಾ ಮ್ಯಾ ಎಂಬ ಕೂಗು ನನ್ನ ಕಿವಿಯಲ್ಲಿ, ತಲೆಯಲ್ಲಿ ಉಳಿದುಹೋಗುತ್ತಿತ್ತು. ಆ ಕೂಗಿನ ನೆನಪಿನಿಂದ ನನಗೆ ಹತ್ತಲವು ರಾತ್ರಿಗಳು ನಿದ್ರೆ ಬರುತ್ತಿರಲಿಲ್ಲ. ನನ್ನ ನೆಮ್ಮದಿಯ ನಿದ್ರೆಗಾಗಿ ಅದನ್ನು ಬದುಕಿಸಿದೆ. ನನಗಾಗಿ ಅದನ್ನು ಬದುಕಿಸಿದೆ’!
ನಿರೂಪಣೆ: ಡಾ. ಅಶೋಕ್. ಕೆ. ಆರ್

Dec 17, 2015

ಈಗ ಗಾಳಿಗೂ ಭರ್ಜರಿ ಬೆಲೆ!

vitality air
ಚೀನಾದ ಬೀಜಿಂಗಿನಲ್ಲಿ ಈ ಬಾರಿಯೂ 'ರೆಡ್ ಅಲರ್ಟ್' ಘೋಷಿಸಲಾಗಿತ್ತು. ಕಾರಣ ಹೊಗೆ ಮತ್ತು ಮಂಜು (ಹೊಂಜು) ವಿಪರೀತವೆನ್ನಿಸುವಷ್ಟು ಜಾಸ್ತಿಯಾಗಿ ಜನರ ಉಸಿರಾಟಕ್ಕೆ ಓಡಾಟಕ್ಕೆ ತೊಂದರೆಯುಂಟುಮಾಡಿತ್ತು. ಮಂಜು ಪ್ರಾಕೃತಿಕವಾದರೆ ಹೊಂಜು ಮನುಷ್ಯ ನಿರ್ಮಿತ. ಇಡೀ ಪರಿಸರದ ಉಸಿರುಗಟ್ಟಿಸುವಲ್ಲಿ ಮನುಷ್ಯ ಹೆಸರುವಾಸಿಯಲ್ಲವೇ. ಬರ ಇರಲಿ ನೆರೆ ಬರಲಿ ಹೊಂಜು ಮುಸುಕಲಿ ಹಣ ಮಾಡುವ ನವನವೀನ ವಿಧಾನಗಳ ಆವಿಷ್ಕಾರ ಮಾಡುವುದು ವ್ಯಾಪಾರಿಗಳು. ಕೆನಡಾದ ವ್ಯಾಪಾರಿಗಳು ಮತ್ತು ಚೀನಾದ ವ್ಯಾಪಾರಿಗಳು ಈ ಹೊಂಜಿನ ನಡುವೆ ಯಾವ ವ್ಯಾಪಾರ ಮಾಡುವುದೆಂದು ತಲೆಕೆರೆದುಕೊಂಡಾಗ ಹೊಳೆದಿದ್ದು ಶುದ್ಧ ಗಾಳಿ! ಹೌದು ಹೊಂಜಿನ ವಾತಾವರಣದಲ್ಲಿ ಉಸಿರಾಡುವುದೇ ಕಷ್ಟಕರವಾದಾಗ ಒಂದಷ್ಟು ಶುದ್ಧ ಗಾಳಿ ನೀಡುವ ಕಂಪನಿಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಇದೆ.

ಗಾಳಿ ಮಾರುವ ಕಂಪನಿಗಳು ಹೇಳಿಕೊಳ್ಳುವ ಪ್ರಕಾರ ಶಿಖರ ಪರ್ವತಗಳನ್ನು ಏರಿ ಶುದ್ಧ ಗಾಳಿಯನ್ನು ತುಂಬಿಸಿಕೊಂಡು ಬಂದು ಚಿಕ್ಕ ಚಿಕ್ಕ ಕ್ಯಾನುಗಳೊಳಗೆ ತುಂಬಿ ಮಾರಲಾಗುತ್ತಿದೆ. ಗಾಳಿಯ ಪರಿಶುದ್ಧತೆಯ ಲೆಕ್ಕಾಚಾರದಲ್ಲಿ ಒಂದು ಕ್ಯಾನಿಗೆ 19ರಿಂದ 32 ಕೆನಡಾ ಡಾಲರ್ರುಗಳವರೆಗೆ ಬೆಲೆಯಿದೆ (ಅಂದಾಜು 750 ರಿಂದ 1500 ರುಪಾಯಿ!). ಎರಡೆರಡು ಬಾಟಲುಗಳನ್ನು ಜೊತೆಗೆ ಖರೀದಿಸಿದರೆ ಡಿಸ್ಕೌಂಟ್ ಕೂಡ ಸಿಗುತ್ತೆ! ಚೀನಾದಲ್ಲೀಗ ಇಂತಹ ಕ್ಯಾನುಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಸೃಷ್ಟಿಯಾಗಿದೆ. ಇದರ ಜೊತೆಗೆ ಕೆಲವು ಹೋಟೆಲ್ಲುಗಳಲ್ಲಿ 'ಗಾಳಿ ಶುದ್ಧಗೊಳಿಸಲು' ತೆರಿಗೆ ವಿಧಿಸಲು ಪ್ರಾರಂಭಿಸಿದ್ದಾರಂತೆ! ಒಟ್ಟಿನಲ್ಲಿ ಮನುಷ್ಯನ 'ಅಭಿವೃದ್ಧಿ' ಮಾದರಿಯಿಂದ ಶೇಖರಣೆಗೊಂಡ ಹಣವನ್ನು ವ್ಯಯಿಸಲು ನಾನಾ ರೀತಿಯ ದಾರಿಗಳು ಸೃಷ್ಟಿಯಾಗುತ್ತಿವೆ. ಭಾರತ 'ಅಭಿವೃದ್ಧಿ'ಯ ಪಥದಲ್ಲಿ ಮುನ್ನುಗ್ಗಿ ನುಗ್ಗುವ ಬಗ್ಗೆಯೇ ನಮ್ಮ ನಾಯಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿರುವ ಈ ದಿನಗಳಲ್ಲಿ ಚೀನಾದ 'ಅಭಿವೃದ್ಧಿ' ಮಾದರಿ ನಮಗೆ ಪಾಠವಾಗಬೇಕಲ್ಲವೇ? ಅಯ್ಯೋ ಚೀನಾದಲ್ಲಾಗಿದೆ ಅಷ್ಟೇ, ನಾವು ಇನ್ನೂ ಸೇಫು ಬುಡ್ರಿ ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆಯೇ?

ದೆಹಲಿಯಲ್ಲಾಗಲೇ ಹೊಂಜಿನ ಅಟ್ಟಹಾಸ ಶುರುವಾಗಿದೆ. ದೆಹಲಿ ಸರಕಾರ ಜನವರಿ ಒಂದರಿಂದ ಸಮ - ಬೆಸ ಸಂಖೈಯ ವಾಹನಗಳು ದಿನ ಬಿಟ್ಟು ದಿನ ರೋಡಿಗಿಳಿಯುವಂತೆ ಮಾಡುವಲ್ಲಿ ಉತ್ಸುಕವಾಗಿದೆ. ಟೀಕೆಗಳೇನೇ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಉತ್ತಮ ನಡೆಯೇ ಹೌದು. ಅನುಷ್ಟಾನ ಕಷ್ಟವೆಂಬುದೂ ಸತ್ಯ. ನ್ಯಾಯಾಲಯ ಇನ್ನೂ ಮೂರು ತಿಂಗಳವರೆಗೆ 2000 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ನೋಂದಾಯಿಸುವಂತಿಲ್ಲ ಎಂದು ಆದೇಶಿಸಿದೆ. ಈ ನಿರ್ಧಾರಗಳೆಲ್ಲವೂ ಭಾರತದ ದೆಹಲಿ ಕೂಡ ಬೀಜಿಂಗ್ ಆಗುವತ್ತ ಸಾಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಎರಡು ಮೂರು ಕಿಲೋಮೀಟರ್ ಮೈಲೇಜು ಕೊಡುವ ಕಾರಿನಲ್ಲಿ ದಿನವಿಡೀ ತಿರುಗಿ ಹೊಗೆಯುಗುಳುವವರೇನೋ ಮನೆಯಲ್ಲಿ 'ಗಾಳಿ ಶುದ್ಧ'ಗೊಳಿಸುವ ಮಿಷೀನನ್ನು ಖರೀದಿಸಿಬಿಡಬಹುದು ಕಾರೂ ಇಡದೆ ಬೈಕೂ ತೆಗೆದುಕೊಳ್ಳದೆ ಸಾರ್ವಜನಿಕ ಸಾರಿಗೆಯನ್ನಷ್ಟೇ ಉಪಯೋಗಿಸುವವರ್ಯಾಕೆ ವಿಷಗಾಳಿಯನ್ನು ಸೇವಿಸಬೇಕು? ಹತ್ತಕ್ಕಿಂತ, ಹದಿನೈದಕ್ಕಿಂತ ಕಡಿಮೆ ಮೈಲೇಜ್ ಕೊಡುವ ಕಾರುಗಳನ್ನು, ನಲವತ್ತಕ್ಕಿಂತ ಕಡಿಮೆ ಮೈಲೇಜು ಕೊಡುವ ಬೈಕು - ಸ್ಕೂಟರುಗಳನ್ನು ಭಾರತದಲ್ಲಿ ಉತ್ಪಾದಿಸಬಾರದು, ಮಾರಬಾರದು ಎಂದೊಂದು ನಿರ್ಣಯ ತೆಗೆದುಕೊಳ್ಳುವುದು ಅಷ್ಟೊಂದು ಕಷ್ಟವೇ? ಅಭಿವೃದ್ಧಿಯ ವೇಗದ ಭರದಲ್ಲಿ ಪರಿಸರಕ್ಕೇನಾದರೇನು ಬಿಡಿ.

ಹೆಚ್ಚೇನಲ್ಲ ಹತ್ತು ವರುಷದ ಹಿಂದೆ ಹೋಟೆಲ್ಲಿಗೋ ಡಾಬಾಗೋ ಹೋದಾಗ ಗೆಳೆಯರ್ಯಾರಾದೂ ಬಾಟಲ್ ನೀರು ಕೇಳಿದರೆ ಆಡಿಕೊಳ್ಳುತ್ತಿದ್ದೋ. 'ನೋಡ್ದಾ ಇವನ ಕೊಬ್ಬಾ. ಮಿನರಲ್ ವಾಟರ್ ಬೇಕಂತೆ' ಎಂದು ರೇಗಿಸುತ್ತಿದ್ದೊ. ನೀರಿಗೆ ದುಡ್ಡು ಕೊಟ್ಟು ಖರೀದಿಸಿ ಕುಡಿಯುವುದು ನಗೆಪಾಟಲಿನ ಸಂಗತಿಯಾಗಿತ್ತು. ಈಗ? ಬಾಟಲ್ ನೀರು ಖರೀದಿಸುವುದು ಸಹಜವಾಗಿಬಿಟ್ಟಿದೆ. ಭಾರತದ ಅತ್ಯುತ್ತಮ ಬ್ಯುಸಿನೆಸ್ಸುಗಳಲ್ಲಿ ಅದೂ ಒಂದು. ಇನ್ನತ್ತು ವರುಷದಲ್ಲಿ ಭಾರತದ ಮುಖ್ಯ ನಗರಗಳಲ್ಲಿ ಚೀನಾದ ಬೀಜಿಂಗಿನಲ್ಲಾದಂತೆಯೇ ಗಾಳಿಯ ಬ್ಯುಸಿನೆಸ್ಸು ಪ್ರಾರಂಭವಾದರೆ ಅಚ್ಚರಿಯಿಲ್ಲ. ನಮ್ಮ ಅಭಿವೃದ್ಧಿಯ ಮಾದರಿಗಳು ಹೇಗಿರುತ್ತವೋ ನೋಡಿ. ಶುದ್ಧ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ, ಶುದ್ಧ ಗಾಳಿಯನ್ನು ಮೆಟಲ್ ಕ್ಯಾನುಗಳಲ್ಲಿ ತುಂಬಿಸುತ್ತೇವೆ. ಪ್ಲಾಸ್ಟಿಕ್ ಬಾಟಲುಗಳನ್ನು ಮೆಟಲ್ ಕ್ಯಾನುಗಳನ್ನು ತಯಾರಿಸಲು ಮತ್ತಷ್ಟು ಪರಿಸರ ನಾಶವಾಗುತ್ತದೆ, ಆ ನಾಶದ ಪರಿಣಾಮಗಳಿಂದ ಜನರನ್ನು - ಹಣವಂತ ಜನರನ್ನು 'ರಕ್ಷಿಸಲು' ಮತ್ತೊಂದು ಹೊಸ ವ್ಯಾಪಾರ ಶುರುವಾಗುತ್ತದೆ, ಆ ವ್ಯಾಪಾರದಿಂದ ಉಂಟಾಗುವ ಪರಿಸರ ನಾಶದಿಂದ........ ಅಭಿವೃದ್ಧಿಯ ಸಮಯದಲ್ಲಿ ಪರಿಸರದ ಬಗ್ಗೆ ಮಾತನಾಡುವುದೇ ಪಾಪ.

Dec 16, 2015

ಹೊಸ ವರ್ಷದಿಂದ ಸ್ನ್ಯಾಪ್ ಡೀಲಿನಲ್ಲಿ ಕನ್ನಡದಲ್ಲೇ ವ್ಯವಹರಿಸಿ!

snapdeal in 12 languages
ಭಾರತದ ಭಾಷಾ ವೈವಿಧ್ಯತೆಯನ್ನು ಕಡೆಗಣಿಸುವ ಕಂಪನಿಗಳೇ ಅಧಿಕ. ಕಂಪನಿಗಳ ಲೆಕ್ಕದಲ್ಲಿ ಭಾರತವೆಂದರೆ ಇಂಗ್ಲೀಷ್ ತಪ್ಪಿದರೆ ಹಿಂದಿ. ಬೆಂಗಳೂರಲ್ಲೇ ನೆಲೆಯೂರಿರುವ ಫ್ಲಿಪ್ ಕಾರ್ಟಿನಂತಹ ಸಂಸ್ಥೆ ಕೂಡ ಬೆಂಗಳೂರಿನಲ್ಲಿ ಹಾಕುವ ಬ್ಯಾನರುಗಳಲ್ಲಿ ಹಿಂದಿ ಬಳಸಿಬಿಡುತ್ತದೆ. ತೆಗೆದುಕೊಂಡಿರುವ ವಸ್ತುವಿನಲ್ಲಿ ಏನಾದರೂ ದೋಷವಿದ್ದು ಇ-ಕಾಮರ್ಸ್ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿದಾಗಲೂ ಇಂಗ್ಲೀಷ್ ಅಥವಾ ಹಿಂದಿಯಲ್ಲೇ ಮಾತನಾಡಬೇಕಾದ ಕರ್ಮ. ಇನ್ನು ಅಂತರ್ಜಾಲ ಪುಟಗಳಂತೂ ಸಂಪೂರ್ಣ ಆಂಗ್ಲಮಯವೇ ಆಗಿರುತ್ತದೆ. ಅಂತರ್ಜಾಲದಲ್ಲಿ ಇಂಗ್ಲೀಷ್ ಅನಿವಾರ್ಯವೆಂಬುದು ಎಷ್ಟು ಸತ್ಯವೋ ಗೂಗಲ್, ಫೇಸ್ ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ಭಾರತದ ವಿವಿಧ ಭಾಷೆಗಳಲ್ಲಿ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಮರೆಯಬಾರದು. ಇ-ಕಾಮರ್ಸ್ ಕಂಪನಿಗಳು ನಿಧಾನಕ್ಕಾದರೂ ವಿವಿಧ ಭಾರತೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಸದ್ಯಕ್ಕೆ ಸ್ನ್ಯಾಪ್ ಡೀಲ್ ತನ್ನ ಮೊಬೈಲ್ ಆ್ಯಪ್ ಗಳನ್ನು ಬಹುಭಾಷೆಯಲ್ಲಿ ನೀಡಲು ತೀರ್ಮಾನಿಸಿದೆ. 
ಸದ್ಯಕ್ಕೆ ಸ್ನ್ಯಾಪ್ ಡೀಲನ್ನು ಇಂಗ್ಲೀಷಿನ ಜೊತೆಗೆ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನೀಡಲಾರಂಭಿಸಿದೆ. 2016ರ ಜನವರಿ 26ರಿಂದ ಕನ್ನಡ, ತಮಿಳು, ಗುಜರಾತಿ, ಮರಾಠಿ, ಬೆಂಗಾಲಿ, ಮಲಯಾಳಂ, ಒರಿಯಾ, ಅಸ್ಸಾಮಿ ಮತ್ತು ಪಂಜಾಬಿ ಭಾಷೆಯಲ್ಲಿ ಸ್ನ್ಯಾಪ್ ಡೀಲ್ ಲಭ್ಯವಿರುತ್ತದೆ. ಮಾರಾಟಗಾರರು ಮತ್ತು ಗ್ರಾಹಕರ ನಿರಂತರ ಒತ್ತಾಯದ ಕಾರಣದಿಂದ ಮತ್ತು ಸ್ಥಳೀಯ ಭಾಷೆ ಉಪಯೋಗಿಸುವವರಿಗೆ ಮತ್ತಷ್ಟು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಂತಹ ನಿರ್ಧಾರವನ್ನು ಕೈಗೊಂಡಿರುವುದಾಗಿ ಸ್ನ್ಯಾಪ್ ಡೀಲ್ ತಿಳಿಸಿದೆ. ಕನ್ನಡದಲ್ಲಿ ಸೇವೆ ಕೊಡಿ ಎಂದು ನಿರಂತರವಾಗಿ ಒತ್ತಾಯಿಸುವುದರಿಂದ ಖಂಡಿತವಾಗಿಯೂ ಉಳಿದ ಕಂಪನಿಗಳೂ ಸ್ನ್ಯಾಪ್ ಡೀಲ್ ನ ಹಾದಿ ಹಿಡಿದು ಭಾರತದ ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ಕೊಡುವ ದಿನಗಳು ದೂರವಿಲ್ಲ.

ಈ ನಿಯತ್ತಿಗೆ ಮೂವತ್ತು ಸಾವಿರ ವರ್ಷ!

ನಿಯತ್ತಿಗೆ ಮತ್ತೊಂದು ಹೆಸರು ನಾಯಿ! ತೋಳಗಳ ಪ್ರಪಂಚದಿಂದ ಹೊರಜಿಗಿದು ಮನುಷ್ಯನ ಸಹವಾಸಕ್ಕೆ ನಾಯಿಗಳು ಬಿದ್ದು ಎಷ್ಟು ವರುಷಗಳಾಗಿರಬಹುದು, ನಾಯಿಗಳ ಜನನ ಮೊದಲು ಪ್ರಾರಂಭವಾದದ್ದೆಲ್ಲಿ ಎನ್ನುವುದನ್ನು ತಿಳಿಯಲು ಚೀನಾದ ವಿಜ್ಞಾನಿಗಳು ಶ್ರಮಿಸಿದ್ದಾರೆ. ಇದಮಿತ್ಥಮಂ ಇಂತಹ ಜಾಗವೇ ನಾಯಿಗಳ ಉಗಮಸ್ಥಾನ ಎಂದು ಹೇಳಲು ಸಂಪೂರ್ಣ ಸಾಧ್ಯವಾಗಿಲ್ಲವಾದರೂ ತಳಿಶಾಸ್ತ್ರದ ಅಧ್ಯಯನದ ಮೂಲಕ ದಕ್ಷಿಣ ಏಷ್ಯಾ ಖಂಡದಲ್ಲಿ ಮನುಷ್ಯ ಮತ್ತು ನಾಯಿಯ ಸಹಬಾಳ್ವೆ ಪ್ರಾರಂಭವಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹನ್ನೆರಡು ತೋಳ, ಏಷ್ಯಾ ಮತ್ತು ಆಫ್ರಿಕಾದ ಇಪ್ಪತ್ತೇಳು ಪುರಾತನ ನಾಯಿಗಳು, ಈಗ ಪ್ರಸ್ತುತದಲ್ಲಿ ಇರುವ ಹತ್ತೊಂಭತ್ತು ವಿವಿಧ ತಳಿಯ ನಾಯಿಗಳ ತಳಿ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಮೂವತ್ತು ಸಾವಿರ ವರುಷಗಳ ಹಿಂದೆ ತೋಳದಿಂದ ನಾಯಿ ಬೇರ್ಪಟ್ಟಿತು.

ಈ ನಾಯಿಯ ಉಗಮದ ಹಿಂದಿನ ಸ್ವಾರಸ್ಯಕರ ಕತೆಯನ್ನು ಡಿಸ್ಕವರಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತೋರಿಸಿದ್ದರು. ಬೇಟೆಯಾಡಲು ಶಕ್ತವಲ್ಲದ ಕೆಲವು ತೋಳಗಳು ಮನುಷ್ಯ ವಾಸವಿದ್ದ ಜಾಗದ ಸುತ್ತಮುತ್ತ ತಿರುಗುತ್ತಿದ್ದವಂತೆ. ಮನುಷ್ಯ ಎಸೆದಿದ್ದ ಆಹಾರ ಪದಾರ್ಥವನ್ನು ತಿನ್ನುತ್ತ ಜೀವ ಉಳಿಸಿಕೊಳ್ಳುತ್ತಿದ್ದವಂತೆ. ದಿನವಿಡೀ ತಮ್ಮ ಸುತ್ತಲೇ ಸುತ್ತುತ್ತಿದ್ದ ನಿರುಪದ್ರವಿ ತೋಳಗಳ ಬಗ್ಗೆ ಮನುಷ್ಯನಿಗೂ ಅನುಕಂಪ ಮೂಡಿರಬೇಕು. ತಾನು ತಿನ್ನುತ್ತಿದ್ದ ಆಹಾರದಲ್ಲೇ ಒಂದು ತುಣುಕನ್ನು ನಾಯಿಯ ಕಡೆಗೆ ಎಸೆಯುತ್ತಿದ್ದ. ಸೌಮ್ಯ ತೋಳಗಳಿಗೆ ಒರಟು ತೋಳಗಳಿಗಿಂತ ಹೆಚ್ಚಿನ ಆಹಾರ ಸಿಗುತ್ತಿತ್ತು. ಆಹಾರಕ್ಕೋಸ್ಕರ ತೋಳಗಳು ಸೌಮ್ಯವಾದವು. ನೋಡಲು ಮುದ್ದುಮುದ್ದಾಗಿದ್ದ ತೋಳಗಳಿಗೆ ಹೆಚ್ಚು ಆಹಾರ ದಕ್ಕುತ್ತಿತ್ತು. ಮುದ್ದುಮುದ್ದಾಗಿದ್ದ ತೋಳಗಳು ಪುಷ್ಕಳ ಭೋಜನದ ಪ್ರಭಾವದಿಂದ ಚೆನ್ನಾಗಿ ಬೆಳೆದು ನಿಂತವು. ಉಳಿದ ತೋಳಗಳು ಅಪೌಷ್ಟಿಕತೆಯಿಂದ ಬಳಲಿದವು. ಪರಿಸರ ಕೂಡ ತಳಿಯ ಮೇಲೆ ಪ್ರಭಾವ ಬೀರುವುದರಿಂದ ಸಹಜವಾಗಿ ಮುಂದಿನ ತಲೆಮಾರಿನ ತೋಳಗಳು ಮತ್ತಷ್ಟು ಸೌಮ್ಯವಾಗಿ ಸುಂದರವಾಗಿ ನಾಯಿಗಳಾಗಿ ಪರಿವರ್ತನೆಗೊಂಡವು! 

ಚೀನಾದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ದಕ್ಷಿಣ ಏಷ್ಯಾದ ಪುರಾತನ ನಾಯಿಗಳ ತಳಿ ತೋಳಕ್ಕೆ ಅತ್ಯಂತ ಸಮೀಪದಲ್ಲಿದೆ, ಸಾಮ್ಯತೆಗಳು ಹೆಚ್ಚಿವೆ. ಇವುಗಳ ಆಧಾರದ ಮೇಲೆ ಪ್ರಪಂಚದ ಮೊದಲ ನಾಯಿಗಳ ಉಗಮ ಮೂವತ್ತು ವರುಷಗಳ ಹಿಂದೆ ನಡೆದಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹದಿನೈದು ಸಾವಿರ ವರುಷಗಳ ತನಕ ದಕ್ಷಿಣ ಏಷ್ಯಾದಲ್ಲೇ ಮೊಕ್ಕಾಮು ಹೂಡಿದ್ದ ನಾಯಿಗಳು ನಂತರದಲ್ಲಿ ಮಧ್ಯ ಪ್ರಾಚ್ಯ ಏಷ್ಯಾದ ಕಡೆಗೆ ಹೆಜ್ಜೆ ಹಾಕಿದವು. ಜನರ ವಲಸೆಯ ಜೊತೆಗೆ ನಾಯಿಗಳೂ ವಲಸೆ ಪ್ರಾರಂಭಿಸಿದವು. ಹತ್ತು ಸಾವಿರ ವರುಷಗಳ ಕೆಳಗೆ ಯುರೋಪು ಖಂಡಕ್ಕೆ ಭೇಟಿ ನೀಡಿ ಮತ್ತಷ್ಟು ತಳಿ ಸಂಕರವಾಗಿ ಮತ್ತೆ ಉತ್ತರ ಚೀನಾದ ಕಡೆಗೆ ನಡೆದವು ಎನ್ನುತ್ತದೆ ಈ ಸಂಶೋಧನೆ. ನೇಚರ್ ಜರ್ನಲ್ಲಿನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯ ಲೇಖನವು ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯದ ಇತಿಹಾಸವನ್ನು ಅರಿಯಲು ಸಹಕಾರಿಯಾಗಿದೆ.

ನಮ್ಮ ಮೆಟ್ರೋಗೆ ವ್ಯಕ್ತಿಯ ಹೆಸರೇಕೆ?

ನಾಯಂಡನಹಳ್ಳಿ ಮತ್ತು ಮಾಗಡಿ ರಸ್ತೆಯ ಮಧ್ಯದ ಮೆಟ್ರೋ ರೈಲಿನ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೆಟ್ರೋಗೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ಮೆಟ್ರೋಗೆ ವಿಶ್ವೇಶ್ವರಯ್ಯನವರ ಹೆಸರನ್ಯಾಕೆ ಇಡಬಾರದು ಎಂಬ ಚರ್ಚೆಯಾಯಿತು. ಲಿಂಗಾಯತ ಸಂಘಟನೆಗಳು ಬಸವಣ್ಣನ ಹೆಸರನ್ನು ಮೆಟ್ರೋಗೆ ಇಡಬೇಕು ಎಂದು ಮನವಿ ಸಲ್ಲಿಸಿದರು. ಇವುಗಳ ಮಧ್ಯೆ ಮೆಟ್ರೋ ಯೋಜನೆಯ ಬಗ್ಗೆ ದಶಕಗಳ ಹಿಂದೆ ರೂಪುರೇಷೆ ನಿರ್ಮಿಸಿ ಕನಸು ಕಂಡಿದ್ದು ಶಂಕರ್ ನಾಗ್ ಆದ್ದರಿಂದ ಬೆಂಗಳೂರು ಮೆಟ್ರೋಗೆ ಶಂಕರನಾಗರ ಹೆಸರನ್ಯಾಕೆ ಇಡಬಾರದು ಎಂಬ ಪ್ರಶ್ನೆಯೂ ಕೇಳಿಬಂತು. ಇಂತಹುದೊಂದು ಅನವಶ್ಯಕ ಚರ್ಚೆಯನ್ನು ಹುಟ್ಟುಹಾಕಿದ ಸಿದ್ಧರಾಮಯ್ಯನವರು ನಂತರ ಮೌನವಾಗಿದ್ದುಬಿಟ್ಟರು. 
ಸಿದ್ಧರಾಮಯ್ಯ ಮೆಟ್ರೋಗೆ ಕೆಂಪೇಗೌಡರ ಹೆಸರನ್ನಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದ್ದಕ್ಕೂ ಕಾರಣವಿತ್ತು. ಕೆಲವು ದಿನಗಳ ಹಿಂದೆ ಸರಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನ ಬದಲು ಟಿಪ್ಪುವಿನ ಹೆಸರನ್ನಿಡಬಹುದಿತ್ತು ಎಂದಿದ್ದು ವಿವಾದವಾಗಿ ಒಕ್ಕಲಿಗರ ಸಂಘಟನೆಗಳು ಕೆಂಪೇಗೌಡರಿಗೆ ಮಹಾನ್ ಅವಮಾನವಾದವರಂತೆ ಬೀದಿಗಿಳಿದು ಪ್ರತಿಭಟಿಸಿದ್ದರು. ಸಿದ್ಧರಾಮಯ್ಯನವರನ್ನು ಕಂಡರೆ ಒಕ್ಕಲಿಗರಿಗೆ ಮೊದಲೇ ಆಗುವುದಿಲ್ಲ, ಅಂತಹದ್ದರಲ್ಲಿ ಗಿರೀಶ್ ಕಾರ್ನಾಡರ ಹೇಳಿಕೆ ಒಕ್ಕಲಿಗರಲ್ಲಿ ಸಿದ್ಧು ಬಗ್ಗೆ ಇರುವ ಅಸಹನೆಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿರಲಿಲ್ಲ. ಮೂರು ದಿನದ ನಂತರ ಸಿದ್ಧು ಏನೋ ಸಮಜಾಯಿಷಿ ಕೊಟ್ಟರಾದರೂ ಅದು ಸಾಕಾಗಲಿಲ್ಲ. ಈ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಕೆಂಪೇಗೌಡ ಮೆಟ್ರೋ ಎಂಬ ಹೆಸರನ್ನು ತೇಲಿಬಿಟ್ಟರು. ಬೇರೆ ಹೆಸರುಗಳ ಚರ್ಚೆಯನ್ನು ಪ್ರಾರಂಭಿಸಿಬಿಟ್ಟರು!
ಅವರಿವರ ಹೆಸರ್ಯಾಕೆ ಬೇಕು? ಸದ್ಯಕ್ಕೆ ಅದಕ್ಕೆ 'ನಮ್ಮ ಮೆಟ್ರೋ' ಎಂದು ಹೆಸರಿಸಲಾಗಿದೆ. ನಮ್ಮದು ಅಂದರೆ ಎಲ್ಲರದೂ ಆಯಿತಲ್ಲ? ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಎಂದು ಹೆಸರಿಸಿದಂತೆ ಬೆಂಗಳೂರು ಮೆಟ್ರೋ ಅಂದಿದ್ದರೂ ಸಾಕಾಗಿತ್ತು. ಯಾವುದೋ ಸಮುದಾಯವನ್ನು 'ತೃಪ್ತಿ'ಪಡಿಸುವ ಸಲುವಾಗಿ ಒಂದು ಹೆಸರಿಡುವುದು, ಮತ್ತೊಂದು ಸಮುದಾಯ ನಮ್ಮ ನಾಯಕನ ಹೆಸರನ್ಯಾಕೆ ಇಡಲಿಲ್ಲ ಎಂದು ಮುನಿಸಿಕೊಳ್ಳುವುದು ಹೆಸರಿಟ್ಟು ವರುಷಗಳು ಕಳೆದ ನಂತರ 'ಈ ಹೆಸರು ಬದಲು ಆ ಹೆಸರು ಇಡಬಹುದಿತ್ತು ಕಣ್ರೀ' ಎಂದು ಪ್ರಚಾರಪ್ರಿಯರು ವಿನಾಕಾರಣ ವಿವಾದವೆಬ್ಬಿಸುವುದು. ಇವೆಲ್ಲ ಬೇಕಾ? ತೆವಳುತ್ತ ಸಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ಚುರುಕುಗೊಳಿಸಿದ್ದರೆ ಜನರಿಗಾದರೂ ಅನುಕೂಲವಾಗುತ್ತಿತ್ತು. ಒಂದೇ ಪುಣ್ಯ ಅಂದರೆ ಇಂದಿರಾ ಹೆಸರನ್ನೋ ರಾಜೀವ್ ಹೆಸರನ್ನೋ ಇಡುವ ಬಗ್ಗೆ ಸಿದ್ಧು ಹೇಳಲಿಲ್ಲ! ಓಹ್, ಅವರು ವಲಸಿಗರಲ್ಲವೇ!

Nov 30, 2015

ಜನತಾದಳವೆಂಬ ದಿಕ್ಕೆಟ್ಟ ಪಕ್ಷ

JDS Logo
ಕು.ಸ.ಮಧುಸೂದನ್‍ ರಂಗೇನಹಳ್ಳಿ 
ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬಹುಶ: ಜನತಾದಳ(ಜಾತ್ಯಾತೀತ)ದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರಲಾರದು. ರಾಷ್ಟ್ರ ರಾಜಕಾರಣದಲ್ಲಾಗಲಿ ಇಲ್ಲ ರಾಜ್ಯ ರಾಜಕಾರಣದಲ್ಲಾಗಲಿ ಅದಕ್ಕೊಂದು ನಿಶ್ಚಿತವಾದ ಗುರಿಯೆಂಬುದಿಲ್ಲದೆ ಅವಕಾಶವಾದಿ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗಿ ಪರಿಣಮಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಲೇ ಹುಟ್ಟಿದ ಎಪ್ಪತ್ತರ ದಶಕದ ಜನತಾಪಕ್ಷದ ಪಳೆಯುಳಿಕೆಯಾಗಿರುವ ಜನತಾದಳವಿಂದು ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡು ಬಹಳ ವರ್ಷಗಳೇ ಆದವು. ತೊಂಭತ್ತರ ದಶಕದ ನಂತರ ಬಾಜಪದ ಕೋಮುವಾದವನ್ನು ವಿರೋಧಿಸುತ್ತ ಜಾತ್ಯಾತೀತ ತತ್ವದಡಿ ರಾಜಕೀಯ ಮಾಡುವ ಭರವಸೆಯನ್ನು ನೀಡಿದ್ದು ಸಹ ದೊಡ್ಡ ಸುಳ್ಳೆಂದು ಇವತ್ತು ಸಾಬೀತಾಗಿದೆ. ಹೀಗೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ದ ಮಾತಾಡುತ್ತಲೇ ತಾನೂ ಅದರ ಒಂದು ಭಾಗವಾಗಿ ತನ್ನೆಲ್ಲ ಮೌಲ್ಯಗಳನ್ನು ಗಾಳಿಗೆ ತೂರಿ ದಿಕ್ಕೆಟ್ಟು ನಿಂತಿರುವಂತೆ ಕಾಣುತ್ತಿರುವ ಜನತಾದಳದ ಮುಂದಿನ ನಡೆಗಳ ಬಗೆ ಜನತೆಗೆ ಮುಖ್ಯವಾಗಿ ಕರ್ನಾಟಕದ ಜನರಿಗೆ ಕುತೂಹಲವಿರುವುದು ಸಹಜವಾದರೂ ಇದೀಗ ಅದರ ಪಾಳಯದಲ್ಲಿ ನಡೆಯುತ್ತಿರುವ ಆಂತರೀಕ ವಿದ್ಯಾಮಾನಗಳನ್ನು ಮತ್ತು ಅದರ ರಾಜ್ಯಾದ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿಯವರ ಮತ್ತು ಮಾಜ ಪ್ರಧಾನಿಗಳು ಮತ್ತು ರಾಷ್ಟ್ರಾದ್ಯಕ್ಷರೂ ಆದ ಶ್ರೀ ದೇವೇಗೌಡರ ಒಗಟಿನಂತ ಮಾತುಗಳನ್ನು ಕೇಳುತ್ತಿದ್ದರೆ ಜನತಾದಳ ತನ್ನ ಹಿಂದಿನ ಎಲ್ಲ ಸಿದ್ದಾಂತಗಳನ್ನೂ ಗಾಳಿಗೆ ತೂರಿ ಅಧಿಕಾರದ ಹಪಾಹಪಿಗೆ ಬಿದ್ದಿರುವುದು ಸ್ಪಷ್ಟವಾಗುತ್ತದೆ. 

ಈ ಹಿನ್ನೆಲೆಯಲ್ಲಿ ಜನತಾದಳದ ಹುಟ್ಟಿನ ಮೂಲದ ಬಗ್ಗೆ ಒಂದಿಷ್ಟು ನೋಡಬೇಕಾಗುತ್ತದೆ. ಎಪ್ಪತ್ತರ ದಶಕದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂದಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹುಟ್ಟಿದ್ದೇ ಅವತ್ತಿನ ಜನತಾ ಪಕ್ಷ. ಅದರ ಜನ್ಮದಲ್ಲಿಯೇ ವಿಪರ್ಯಾಸಗಳಿದ್ದವು. ಯಾಕೆಂದರೆ ಅಂದಿನ ದಿನಮಾನದ ಸಮಾಜವಾದಿಗಳು, ಜನಸಂಘದ ಬಲಪಂಥೀಯರು ಮತ್ತು ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದ ಉದಾರವಾದಿಗಳೆಲ್ಲ ಸೇರಿ ಸೃಷ್ಠಿಯಾಗಿದ್ದೇ ಈ ಜನತಾ ಪಕ್ಷ! ಇಂದಿರಾರವರ ಕುಟುಂಬ ರಾಜಕಾರಣವನ್ನು ಶತಾಯಗತಾಯ ವಿರೋಧಿಸುತ್ತ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಪಕ್ಷ ಬಹಳ ಕಾಲ ಉಳಿಯಲಿಲ್ಲ. ತನ್ನ ಆಂತರಿಕ ವೈರುದ್ಯಗಳ ಸುಳಿಗೆ ಸಿಲುಕಿದ ಪಕ್ಷ ಹೋಳಾಯಿತು. ಮೊದಲಿಗೆ ಜನತಾಪಕ್ಷದೊಳಗೆ ಸೇರಿ ಹೋಗಿದ್ದ ಜನಸಂಘ ತನ್ನ ಸಂಘಪರಿವಾರದ ಸೆಳೆತವನ್ನು ಬಿಡಲಾರದೆ ಅದರಿಂದ ಹೊರಬಂದು ಇವತ್ತಿನ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ತರುವಾಯ 1980ರ ಚುನಾವಣೆಯಲ್ಲಿ ಇಂದಿರಾಗಾಂದಿಯವರು ಮರಳಿ ಅಧಿಕಾರ ಪಡೆಯುವುದರೊಂದಗೆ ಜನತಾ ಪಕ್ಷ ಅನೇಕ ಹೋಳುಗಳಾಗಿ ಒಡೆದು ಹೋಯತು. ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳಿಕೊಳ್ಳುತ್ತಾ ಬಂದ ಪ್ರಾದೇಶಿಕ ನಾಯಕರುಗಳ ಅಹಂಕಾರ ಮತ್ತು ಅಧಿಕಾರದ ಆಸೆ ಹೆಚ್ಚಾಗುತ್ತ, ವಿ.ಪಿ.ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೂ ಅದಕ್ಕಾಗಿ ಅದು ಮತ್ತೆ ಮತೀಯವಾದಿ ಬಾಜಪದ ಬೆಂಬಲ ಪಡೆಯಬೇಕಾಯಿತು. ನಂತರ ನಡೆದದ್ದು ಇತಿಹಾಸ. ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಅಪಹಾಸ್ಯ ಮಾಡುತ್ತಲೇ ರಾಜಕಾರಣ ಮಾಡುತ್ತ ಬಂದ ಜನತಾಪಕ್ಷದ ನಾಯಕರುಗಳಿಗೆ ಹೊಸದೊಂದು ಶತ್ರು ಹುಟ್ಟಿಕೊಂಡಿದ್ದು ಬಾಜಪದ ರೂಪದಲ್ಲಿ. ಹಿಂದೂ ಮತಗಳ ದೃವೀಕರಣಕ್ಕಾಗಿ ಅದು ಎಲ್.ಕೆ.ಅದ್ವಾನಿಯವರ ನೇತೃತ್ವದಲ್ಲಿ ಬಾಬರಿ ಮಸೀದಿಯ ವಿವಾದವನ್ನು ಕೈಗೆತ್ತಿಕೊಂಡು ದೇಶದಾದ್ಯಂತ ರಥಯಾತ್ರೆ ನಡೆಸಿತು. ತದನಂತರ ಅದರ ಕರಸೇವಕರು ಬಾಬರಿ ಮಸೀದಿಯನ್ನು ದ್ವಂಸ ಮಾಡುವುದರ ಮೂಲಕ ತಾನೂ ಒಂದು ಬಲಾಢ್ಯ ರಾಷ್ಟ್ರೀಯ ಪಕ್ಷವಾಗುವತ್ತ ಹೆಜ್ಜೆ ಹಾಕತೊಡಗಿತು. ಆಗ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನವಾಗಿ ವಿರೋಧಿಸುತ್ತ ಬಂದ ಜನತಾಪಕ್ಷದ ಹಲವು ಹೋಳುಗಳು ಸೇರಿ ತೃತೀಯ ವೇದಿಕೆ ರಚಿಸಿಕೊಂಡ ಜನತಾಪಕ್ಷದ ನಾಯಕರುಗಳು ಅಧಿಕಾರ ಹಿಡಿಯುವುದರಲ್ಲಿ ಯಶಸ್ವಿಯೂ ಆದರು. ಆದರೆ ತಮ್ಮ ಅವಧಿಯಲ್ಲಿ ಅವರುಗಳು ನಡೆದುಕೊಂಡ ರೀತಿಯಿಂದಾಗಿ ಮುಂದೆ ಶಾಶ್ವತವಾಗಿ ಅಧಕಾರವಂಚಿತರಾಗಬೇಕಾಗಿ ಬಂತು. ಈ ತೃತೀಯರಂಗ ಅಧಿಕಾರಕ್ಕೆ ಬಂದಾಗಲೇ ಶ್ರೀದೇವೇಗೌಡರು ಪ್ರದಾನಿಯಾಗಿದ್ದು. ನಂತರದ ದಿನಗಳಲ್ಲಿ ತಮ್ಮ ಆಂತರಿಕ ಕಚ್ಚಾಟ, ಮೇಲಾಟಗಳಿಂದಾಗಿ ಬಲಿಷ್ಠ ಪ್ರಾದೇಶಿಕ ನಾಯಕರುಗಳು ಜನತಾಪಕ್ಷವನ್ನು ಒಡೆದು ಚೂರು ಚೂರು ಮಾಡಿದರು. ಹಾಗೆ ಅಂದು ಒಡೆದ ಒಂದು ಚೂರೇ ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಅನೇಕ ಹೆಸರುಗಳನ್ನು ಬದಲಾಯಿಸುತ್ತ, ಕೊನೆಗಿವತ್ತು ಜಾತ್ಯಾತೀತ ಜನತಾದಳವಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಟ್ಟಕ್ಕೆ ಬೆಳೆದುನಿಂತಿದೆ.

2004ರವರೆಗೂ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನ ಶತೃಗಳೆಂದು ಪರಿಗಣಿಸಿ ರಾಜಕಾರಣ ಮಾಡುತ್ತಾ ಬಂದ ಜನತಾದಳ 2004ರಲ್ಲಿ ಕೋಮುವಾದಿ ಬಾಜಪವನ್ನು ಅಧಿಕಾರದಿಂದ ದೂರವಿಡುವ ಅನಿವಾರ್ಯತೆಯ ಹೆಸರಲ್ಲಿ ಮೊದಲಬಾರಿ ಕಾಂಗ್ರೆಸ್ಸಿನ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು ತನ್ನ ಪಕ್ಷದ ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ 2006 ರಲ್ಲಿ ದೇವೇಗೌಡರ ಪುತ್ರ ಹೆಚ್,ಡಿ.ಕುಮಾರಸ್ವಾಮಿಯವರು ರಹಸ್ಯವಾಗಿ ಬಾಜಪದ ಯಡಿಯೂರಪ್ಪನವರ ಜೊತೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿ ಪಟ್ಟಕ್ಕೇರಿದರು. ಜೊತೆಗೆ ಅಲ್ಲಿಯವರೆಗು ಅಧಿಕಾರದ ಹತ್ತಿರಕ್ಕೂ ಬರಲಾಗದೆ ಹತಾಶವಾಗಿದ್ದ ಬಾಜಪಕ್ಕೆ ಅಧಿಕಾರದ ರುಚಿಯನ್ನು ಹತ್ತಿಸಿದರು. ಈ ಮೈತ್ರಿಯ ಬಗ್ಗೆ ತನಗೇನು ಗೊತ್ತಿಲ್ಲ ಮತ್ತು ತನ್ನ ಸಮ್ಮತಿಯಿಲ್ಲವೆನ್ನುತ್ತಲೇ ಬಂದ ದೇವೇಗೌಡರು ತದನಂತರದಲ್ಲಿ ಮೌನಕ್ಕೆ ಶರಣಾದರು. ಇಪ್ಪತ್ತು ತಿಂಗಳ ನಂತರ ಅಧಿಕಾರ ಹಂಚಿಕೆಯ ಸೂತ್ರದಂತೆ ಬಾಜಪಕ್ಕೆ ಅಧಿಕಾರ ಬಿಟ್ಟು ಕೊಡದ ಜನತಾದಳ ರಾಜ್ಯದ ಜನತೆಯ ದೃಷ್ಠಿಯಲ್ಲಿ ವಚನಭಂಗ ಮಾಡಿದ ಖಳನಾಯಕನ ಪಟ್ಟಗಿಟ್ಟಿಸಿಕೊಂಡಿತು..

ಇದನ್ನೇ ಬಂಡವಾಳ ಮಾಡಿಕೊಂಡ ಬಾಜಪದ ಯಡಿಯೂರಪ್ಪನವರು ದಳ ಮಾಡಿದ ವಚನಭಂಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಅದು ಎಸಗಿದ ದ್ರೋಹವನ್ನು ಚುನಾವಣೆಯ ವಿಷಯವನ್ನಾಗಿಸಿ ಅಧಿಕಾರಕ್ಕೇರುವಲ್ಲಿ ಸಫಲರಾದರು. ಹೀಗೆ ಜನತಾದಳದ ತಪ್ಪಿನಿಂದಾಗಿ ಕರ್ನಾಟಕದ ಮಟ್ಟಿಗೆ ನಗಣ್ಯವಾಗಿದ್ದ ಬಾಜಪ ಇವತ್ತು ಕಾಂಗ್ರೆಸ್ ಮತ್ತು ಜನತಾದಳವನ್ನು ಮೀರಿಸುವಂತೆ ಬಳೆದು ನಿಂತಿದೆ. ಜಾತ್ಯಾತೀತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕವನ್ನು ಮತೀಯ ಶಕ್ತಿಗಳ ಕೈಗೊಪ್ಪಿಸಿದ ಜನತಾದಳವನ್ನು ಇತಿಹಾಸವೆಂದು ಕ್ಷಮಿಸುವುದಿಲ್ಲ.

ಇವತ್ತು ಕಾಂಗ್ರೆಸ್ ಮತ್ತು ಬಾಜಪದ ನಂತರ ಮೂರನೇ ಸ್ಥಾನದಲ್ಲಿರುವ ಜನತಾದಳ ಕವಲುದಾರಿಯಲ್ಲಿ ನಿಂತಿದೆ. ಅದರೊಳಗಿನ ಗೊಂದಲಗಳಿಂದಾಗಿ ಅದು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ಸಿನ ಕುಟುಂಬ ರಾಜಕಾರಣವನ್ನು ವಿರೋಧಿಸುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡಿರುವ ಅದೀಗ ಇತ್ತ ಬಾಜಪದ ಕೋಮುವಾದದ ಬಗ್ಗೆ ಮಾತಾಡುವ ಅರ್ಹತೆಯನ್ನು ಕಳೆದುಕೊಡಿದೆ

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಎರಡು ತಿಂಗಳ ಹಿಂದೆ ನಡೆದ ಬೆಂಗಳೂರಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಾಜಪವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡ ಅದು, ಇದೀಗ ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ನಗರಪಾಲಿಕೆಯಲ್ಲಿ ಕಾಂಗ್ರೆಸ್ಸನ್ನು ದೂರವಿಡಲು ಬಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ವಿಷಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಡುವೆ ಭಿನ್ನಾಭಿಪ್ರಾಯವಿರಬಹುದಾದರೂ ಕಾರ್ಯಕರ್ತರಿಗೆ ಗೊಂದಲ ಉಂಟಾಗಿರುವುದು ಸುಳ್ಳಲ್ಲ. ಇದೆಲ್ಲದರ ಜೊತೆಗೆ ಬಿಹಾರಕ್ಕೆ ಹೋಗುವ ದೇವೇಗೌಡರು ಬಾಜಪವನ್ನು ಮಣಿಸಲು ಬಿಹಾರದ ಮಾದರಿಯಲ್ಲೇ ಮಹಾಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ. ಇದನ್ನು ಬರೆಯುತ್ತಿರುವಾಗಲೇ ದೇವೇಗೌಡರ ಆಣತಿಯಂತೆ ಪರಿಷತ್ತಿನ ಚನಾವಣೆಗಾಗಿ ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಳ್ಳಲು ದಳದ ಎರಡನೇ ಸಾಲಿನ ನಾಯಕರುಗಳು ಮಾತುಕತೆ ನಡೆಸುತ್ತಿದ್ದಾರೆ. ತನಗಿದು ಗೊತ್ತಿಲ್ಲವೆಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಾರೆ. 

ನನಗನ್ನಿಸುವಂತೆ ಜನತಾದಳವಿಂದು ದ್ವಂದ್ವಮಯವಾದ ಕವಲುದಾರಿಯಲ್ಲಿ ನಿಂತಿದೆ. ಸಾಂಪ್ರದಾಯಿಕ ಎದುರಾಳಿಯಾದ ಕಾಂಗ್ರೆಸ್ಸಿನ ಜೊತೆ ಹೋಗುವುದೋ, ಇಲ್ಲ ಕೋಮುವಾದಿ ಬಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುವುದೋ ಇಲ್ಲ ಎರಡೂ ಪಕ್ಷಗಳನ್ನು ಸಮಾನ ಅಂತರದಲ್ಲಿಟ್ಟು ತನ್ನ ರಾಜಕೀಯ ಐಡೆಂಟಿಟಿಯನ್ನು ಉಳಿಸಿಕೊಳ್ಳುವುದೊ ಎಂಬ ಗೊಂದಲದ ಪರಿಸ್ಥಿತಿಯಲ್ಲಿ ನಿಂತಿದೆ. ದೇವೇಗೌಡರಿಗೆ ಕಾಂಗ್ರೆಸ್ಸಿನ ಜೊತೆ ಹೆಜ್ಜೆ ಹಾಕುವ ಮನಸ್ಸಿರುವಂತೆ ಕಂಡರೆ, ಕುಮಾರಸ್ವಾಮಿಯವರಿಗೆ ಬಾಜಪದ ಮೇಲೆ ಒಲವಿರುವಂತೆ ತೋರುತ್ತದೆ. ಹೀಗೇ ಜನತಾದಳವಿಂದು ಸ್ಪಷ್ಟವಾಗಿ ಯಾವ ನಿರ್ದಾರವನ್ನೂ ತೆಗೆದುಕೊಳ್ಳಲಾರದೆ ದಿಕ್ಕೆಟ್ಟ ಸ್ಥಿತಿಯಲ್ಲಿ ನಿಂತಿದೆ.

ರಾಜ್ಯದ ಅಭಿವೃದ್ದಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ತೋರಿಸದ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಬೇಸರಗೊಂಡಿರುವ ಕರ್ನಾಟಕದ ಜನತೆಗೆ ಇದುವರೆಗೂ ಇದ್ದ ಭರವಸೆಯೆಂದರೆ ಜನತಾದಳ ಮಾತ್ರ. ಜನತೆಯ ಆ ನಂಬುಗೆಯನ್ನು ಉಳಿಸಿಕೊಳ್ಳುವುದು ಬಿಡುವುದೂ ಸದ್ಯಕ್ಕೆ ಜನತಾದಳದ ನಾಯಕರುಗಳ ಕೈಲಿದೆ. ಸಮಾಜವಾದಿ ನೆಲೆಯಿಂದ ಬಂದ ದೇವೇಗೌಡರು ಇದನ್ನು ಅರ್ಥ ಮಾಡಿಕೊಂಡರೂ ಶಕ್ತಿರಾಜಕಾರಣದ ನಡೆಗಳನ್ನು ಮಾತ್ರ ನಂಬಿಕೊಂಡ ಕುಮಾರಸ್ವಾಮಿಯವರಿಗೆ ಇದು ಸುಲಭವಾಗಿ ಅರ್ಥವಾಗುವಂತಹುದ್ದಲ್ಲ!

ಇದೀಗ ತಮ್ಮ ಪಕ್ಷದ ರಾಜಕೀಯ ನಿಲುವುಗಳ ಬಗ್ಗೆ ಗಟ್ಟಿಯಾದ ನಿಲುವೊಂದನ್ನ ತೆಗೆದುಕೊಂಡು ಜನರ ಮುಂದೆ ಬರುವುದು ಜನತಾದಳಕ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್ಸಿನ ಜಡತೆಯಿಂದ ಹಾಗು ಬಾಜಪದ ಮತೀಯವಾದದಿಂದ ಜಿಗುಪ್ಸೆಗೊಂಡಿರುವ ಕರ್ನಾಟಕದ ಜನರ ಹಿತದೃಷ್ಠಿಯಿಂದ ಸ್ಪಷ್ಟವಾದ ರಾಜಕೀಯ ನಿಲುವೊಂದನ್ನು ತಳೆಯುವುದು ಜನತಾದಳದ ರಾಜಕೀಯ ಭವಿಷ್ಯದ ದೃಷ್ಠಿಯಿಂದಲೂ ಅಗತ್ಯವಾಗಿದೆ. ಇದನ್ನು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಅರ್ಥಮಾಡಿಕೊಳ್ಳಬೇಕಾಗಿದೆ.

Nov 27, 2015

ಪತ್ರಕರ್ತೆಯ ವಿರುದ್ಧ ಮುಸ್ಲಿಂ ಮತಾಂಧರ ಅಟ್ಟಹಾಸ.

ಕೇರಳದ ಮಾಧ್ಯಮಂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತೆ ವಿ.ಪಿ.ರಜೀನಾ ಕೆಲವು ದಿನಗಳ ಕೆಳಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮದರಾಸಾಗಳ ಬಗ್ಗೆ ಒಂದು ಪೋಸ್ಟನ್ನು ಹಾಕುತ್ತಾರೆ. ಸುಮಾರು ಇಪ್ಪತ್ತು ವರುಷಗಳ ಹಿಂದೆ ಮದರಾಸದಲ್ಲಿದ್ದಾಗ ನೋಡಿದ್ದ ಸಂಗತಿಗಳನ್ನು ಹಾಕುತ್ತಾರೆ. ಫೇಸ್ ಬುಕ್ಕಿನ ಮುಸ್ಲಿಂ ಮತಾಂಧರು ಆ ಪೋಸ್ಟಿಗೆ ರಣಭಯಂಕರವಾಗಿ ಕಮೆಂಟು ಮಾಡಿ, ಎಂದಿನಂತೆ ಪತ್ರಕರ್ತೆಯನ್ನು ನೀಚಾತಿ ನೀಚ ಭಾಷೆಯಲ್ಲೆಲ್ಲ ನಿಂದಿಸಿ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆಯನ್ನೇ ಬ್ಲಾಕ್ ಮಾಡಿಸಿಬಿಡುತ್ತಾರೆ. ಒಂದಷ್ಟು ಪ್ರಯತ್ನದ ನಂತರ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆ ಮತ್ತೆ ಚಾಲ್ತಿಗೆ ಬಂದಿದೆ. ಇಷ್ಟಕ್ಕೂ ರಜೀನಾ ಬರೆದಿದ್ದಾದರೂ ಏನನ್ನು?
ಒಂದನೇ ತರಗತಿಯ ಮೊದಲ ದಿನದಂದು ಉಸ್ತಾದ್ ಶಾಲೆಯ ಹುಡುಗರನ್ನೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಮುಟ್ಟಬಾರದ ಜಾಗದಲ್ಲೆಲ್ಲಾ ಮುಟ್ಟಿ ಕಳುಹಿಸುತ್ತಿದ್ದುದರ ಬಗ್ಗೆ ರಜೀನಾ ಬರೆದುಕೊಂಡಿದ್ದರು. ಅದರ ಜೊತೆಗೆ ನಾಲ್ಕನೇ ತರಗತಿಯಲ್ಲಿದ್ದ ರಾತ್ರಿ ಶಾಲೆಯ ಮಾಸ್ತರು ಹುಡುಗಿಯರನ್ನು ಸವರುತ್ತಿದ್ದ, ಒಂದು ಹುಡುಗಿ ಜೋರಾಗಿ ಕಿರುಚಿ ದೊಡ್ಡ ಮಾಸ್ತರರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ ನಂತರ ಆ ನೀಚ ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರಂತೆ. ಇದಿಷ್ಟು ರಜೀನಾ ಬರೆದ ಪೋಸ್ಟಿನ ಸಾರಾಂಶ. ಇದು ನಡೆದಿದ್ದು ರಜೀನಾ ಓದುತ್ತಿದ್ದಾಗ, ಹೆಚ್ಚು ಕಡಿಮೆ ಇಪ್ಪತ್ತು ವರುಷಗಳ ಕೆಳಗೆ. ಇವತ್ತಿನ ಮದರಾಸಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಿವೆಯಾ? ನಡೆಯುತ್ತಿದ್ದರೆ ಸ್ವಸ್ಥ ಸಮಾಜದ ನಾಗರೀಕರು ಯಾವ ರೀತಿಯಿಂದ ಇದನ್ನು ತಡೆಯಬೇಕು? ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಿತ್ತು. ಆದರೆ ಫೇಸ್ ಬುಕ್ಕಿನ ಅವರ ಪೋಸ್ಟುಗಳಲ್ಲಿರುವ ಕಮೆಂಟುಗಳನ್ನು ನೋಡಿದರೆ ಸಮಾಜದ ಅಸ್ವಸ್ಥ ಮುಖಗಳ ದರ್ಶನವಾಗುತ್ತದೆ. ಮೂರ್ತಿ ಪೂಜೆಯನ್ನು ಒಪ್ಪದ ಮುಸ್ಲಿಮರಿಗೆ ಮದರಾಸ ಕಟ್ಟಡವೇ ಮೂರ್ತಿಯಂತೆ ಕಂಡುಬಿಟ್ಟಿತೋ ಏನೋ?! ಮದರಾಸಾದ ಬಗ್ಗೆ ಬರೆದ ರಜೀನಾರವರನ್ನು ಇಲ್ಲಸಲ್ಲದ ಮಾತುಗಳಿಂದೆಲ್ಲ ಟೀಕಿಸಲಾಗಿದೆ. ಬೆದರಿಕೆ ಹಾಕಲಾಗಿದೆ. ಚಿಕ್ಕಂದಿನ ಅನುಭವವನ್ನು ಬರೆದುದಕ್ಕೆ 'ಅದಕ್ಕೆ ಪುರಾವೆ ಏನು?' ಎಂದು ಕೇಳುವ ಮುತ್ಸದ್ಧಿಗಳೂ ಇದ್ದಾರೆ! ಬಹಳಷ್ಟು ಮತಾಂಧರು ರಜೀನಾರವರ ಖಾತೆಯನ್ನು ಬ್ಲಾಕ್ ಮಾಡಲು ಸಲಹೆ ನೀಡಿದ ಕಾರಣ ಫೇಸ್ ಬುಕ್ ಅವರ ಖಾತೆಯನ್ನು ಬ್ಲಾಕ್ ಮಾಡಿಬಿಟ್ಟಿತ್ತು. ಈಗ ಮತ್ತೆ ರಜೀನಾರವರ ಖಾತೆ ಚಾಲ್ತಿಯಲ್ಲಿದೆ. ನನ್ನ ಮಾತುಗಳಿಗೆ ನಾನು ಬದ್ಧ ಎಂಬ ಅವರ ಪೋಸ್ಟಿಗೂ ಕೆಟ್ಟ ಕಮೆಂಟುಗಳ ಸುರಿಮಳೆಯಾಗಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು 'ನೀವೇಳಿದ್ದು ನಿಜ. ಮದರಾಸಾಗೆ ಮಕ್ಕಳನ್ನು ಕಳಿಸಬಾರದು' ಎಂದು ಬರೆದಿದ್ದಾರಷ್ಟೇ.

Nov 25, 2015

Tolerant India’s Intolerant Responses

Dr Ashok K R
Scene 1: Well known Actor ‘A’ was irritated by the opposition to his movie by religious group ‘X’. Frustrated by the opposition actor ‘threatened’ to leave India and move to some foreign country.

Scene 2: Well known Actor ‘B’ was irritated by the opposition to his movie by religious group ‘Y’. He didn’t speak anything about that issue. Months later in an interview he told that his wife is ‘suggesting’ to leave India and move to some foreign country.

According to Present days Tolerant India’s logic Actor ‘A’ and ‘B’ should be considered anti – national and traitors. Wait a minute….

Actor ‘A’ = Kamal Hassan; Religious group ‘X’ = Muslim fundamentalists.
Actor ‘B’ = Aamir Khan; Religious group ‘Y’ = Hindu fundamentalists.

Do you still think both Actor ‘A’ and ‘B’ are anti – national traitors? If your opinion changes once you know the names of actors then it indicates your love and hate for particular religion. Nothing patriotic in that!

Discussing Intolerance in the society based on Aamir Khan’s Wife’s comments is absurd. With the rise of 24x7 news channels and social media most of the discussions will be on these absurd and mundane issues. The ruling parties will be very happy to see people fighting over trivial issues and forgetting the government’s failures! Aamir Khan and Kamal Hassan are actors, have directed few movies and that’s it. Our love or hate to those persons should be limited to their movies. Why should someone consider them as real life heroes and give undue prominence to them? Aamir Khan can’t be called patriotic because of his role in Sarfarosh and Mangal Pandey; at the same time he can’t be named anti hindu because of his role in PK!

Even people who are speaking up against growing intolerance have not branded india as intolerant. Growing intolerance is not equivalent to Intolerant India. But can one deny the fact that growth of intolerance is on the rise? Congress ruled this country for a long long time. Were there not any protests against the Congress? There were protests, and most of the pro – people protests were organized and carried forward by the progressives, dalits intellectuals and leftists. The Hindu rightists and their supporting political parties protested only when there was some religious element in it. In Karnataka at present there is Congress government. Progressives, dalits, intellectuals and leftists have protested against Siddaramaiah’s government. But I have never heard anyone from this state government asking the protestors to leave the state or country, they have never called these protestors against state government anti – national traitors. But is it same with Modi’s BJP government in the centre?

Speak a word against BJP or Modi, you will be named as Congress chamcha! You will be named anti national! You will be named traitor! Responsible ministers say that these people are paid by congress to make such statements! The Politicians of BJP will ask those who oppose BJP or Modi to leave India and move to Pakistan! I have a doubt that these Politicians of BJP are actually funded by Pakistan Tourism Department! Social media will be buzzed with all type of images and posts condemning the statement! And our people who not even a single time protested against any government, show their patriotism by sharing half baked and half truth posts without thinking. Their minds are probably blocked by the words of our great leaders. If this is not growing intolerance what is?

The writers, academicians, scientists, directors and even the army personnel have returned the awards as a form of protest to various issues. They are named Congresswalas, they are named traitors, they were called undeserving candidates for those awards. Even there was a protest headed by Anupam Kher against this award wapsi. Eminent Kannada writer S.L. Bhyrappa and director Nagabharana spoke against this award wapsi. By the way Anupam Kher’s wife is BJP member. Does it make Anupam Kher BJP chamcha? Does S.L. Bhyrappa and Nagabharana paid by the BJP to speak against this award wapsi?

Nov 22, 2015

ತುಂಬೆ ಗಿಡದ ಕನಸ ಕಾಣುತ್ತ..........

ಕು.ಸ.ಮಧುಸೂದನ್‍ ರಂಗೇನಹಳ್ಳಿದಶದಿಕ್ಕುಗಳಲ್ಲಿಯೂ
ದಂಡುಗಟ್ಟಿದ ಮೋಡಗಳ
ಮರೆಯೊಳಗವಿತ ಸೂರ್ಯನ
ಕಂಡು ನಾಚಿದ
ಪೂರ್ವ ಪಶ್ಚಿಮ
ಉತ್ತರ ದಕ್ಷಿಣಗಳೆಲ್ಲ
ಅಡ್ಡಾದಿಡ್ಡಿಯಾಗಿ
ಜಾಗ ಬದಲಿಸಿ ದೆಸೆ ಬದಲಿಸುವವರ ನಾಲಿಗೆಗಳ
ಕತ್ತರಿಸಿದವು
ಹಿಮಚ್ಛಾದಿತ ಕಾಶ್ಮೀರದ ಕಣಿವೆಗಳಲ್ಲಿ ಚೆಲ್ಲಿದ ರಕ್ತ
ಕಲೆಗಳನೊರೆಸಲು ಸಮವಸ್ತ್ರದಾರಿಗಳು
ಕೋವಿ ಹಿಡಿದು ಅಡ್ಡಾಡಿದರು
ಜಾರ್ಖಂಡಿನ ಕಾಡಿನೊಳಗಿನ ಕಚ್ಚಾ ದಾರಿಯಲಿ
ನೆಲಬಾಂಬನಿಟ್ಟು ಸ್ಪೋಟಿಸಿದ ನಕ್ಸಲರ ಕಣ್ಣುಗಳಲ್ಲಿ
ದಿಗ್ವಿಜಯದ ಉನ್ಮಾದ
ಸತ್ತ ಪೋಲಿಸರ ಮನೆಯೊಳಗೆ
ಹಚ್ಚಿಟ್ಟ ದೀಪ ಆರಿ ಸುಟ್ಟ ಬತ್ತಿಯ ಕಮಟು ವಾಸನೆಯ ನಡುವೆ
ಸೂತಕದ ಛಾಯೆ
ಸಿಕ್ಕ ಪರಿಹಾರವನು ಹಂಚಿಕೊಳ್ಳುವ ವ್ಯಾಜ್ಯಕೆ
ಸಾಲು ನಿಂತ ವಕೀಲರುಗಳ ದಂಡು
ಸಿರಿಯಾದ ಬಂಡುಕೋರರ ಬಂದೂಕುಗಳಿಗೆ ಎದೆಯೊಡ್ಡಿ
ಸತ್ತವರ ನೆತ್ತರು ಸೇರಿದ ಸಾಗರದಾಳದೊಳಗೆ ಉಕ್ಕುವ
ತೈಲ ಸಂಪತ್ತನ್ನು ದೋಚಲು ನಿಂತ ಆಧುನಿಕ ಕಡಲ್ಗಳ್ಳರ ಸಾಲಲ್ಲಿ ಪಶ್ಚಿಮದ ದೊಡ್ಡಣ್ಣನ
ಆಜ್ಞೆಯ ಪಾಲಿಸಲು ಕಾದು ಕೂತ ನಮ್ಮ ನೆಲದ ನೆಂಟರು
ತೆರೆಗಳಬ್ಬರಕ್ಕೆ ದಡಕೆ ತೇಲಿಬಂದ ಅಯ್ಲಾನನ ಹೆಣದ
ಪೋಟೊಶಾಪ್ ಚಿತ್ರದಡಿಯಲಿ ಕವಿಗಳು ಬರೆದ ನೂರಾರು ಕವಿತೆಗಳು
ಮೆಚ್ಚುಗೆ ಪಡೆದು
ಧನ್ಯವಾದವು!
ಜಗದಷ್ಟೂ ಘನಘೋರ ಪಾತಕಗಳಿಗೆ
ಬಲಿಪಶುವಾಗಿ ನಿಂತ ನನ್ನ
ಕಾಲುಗಳು ನಡೆದವು ಊರ ಹೊರಗಿನ ಕಲ್ಲು ಮಾರಮ್ಮನ ಗುಡಿಯಂಗಳಕೆ
ಬಿದ್ದು ಬೊಕ್ಕಬೋರಲು
ಬೇಡಿಕೊಂಡೆ
ಕೊಡೆನಗೆ ಅವ್ವ ಒಂದಿಷ್ಟಾದರು ತಾವ ನಿನ್ನ ಮಡಿಲೊಳಗೆ
ಹಾಗೇನೆ ಕೇಳಿಸು ಹೆತ್ತವಳು ಹಾಡುತಿದ್ದ ಹಳೆಯ ಜೋಗುಳವನ್ನ
ತಟ್ಟು ನೆತ್ತಿಯ ಮೇಲೆ ಸದ್ದಾಗದಂತೆ
ಕಣ್ಮುಚ್ಚಿ ಮಲಗಿ ಬಿಡುತ್ತೇನೆ
ಒಂದು ಯುಗದ ಕಾಲ ಜಗದರಿವಿರದ ಹಾಗೆ
ಪಾಪಿಗಳ ಅಂತ್ಯವಾಗಿ
ಪಾಪಗಳು ಇಲ್ಲವಾಗಿ
ಕತ್ತರಿಸಿ ಬಿಸಾಕಿದ ಕಣಗಿಲೆ ಗಿಡಗಳ ಜಾಗದೊಳು
ಮುಕ್ಕಣ್ಣನಿಗೆ ಪ್ರಿಯವಾದ ತುಂಬೆ ಹೂವಿನ
ಗಿಡ ಚಿಗುರೊಡೆಯುವವರೆಗೂ!

Nov 21, 2015

ಬೊಗಸೆ ಎಣ್ಣೆ

ಕು.ಸ.ಮಧುಸೂದನ್
ಒಳ್ಳೆಯದನೆಲ್ಲಿ ಹುಡುಕುವುದು?
ನದಿಗಳು ಮಲೀನವಾಗಿವೆ
ಬೆಟ್ಟಗಳು ಕೊರೆಯಲ್ಪಟ್ಟಿವೆ
ಭೂಭಾಗಗಳು ತೂತು ಮಾಡಲ್ಪಟ್ಟಿವೆ
ಕಾಡುಗಳು ಬಯಲಾಗಿವೆ
ಮರುಭೂಮಿಗಳು ಮಸಣಗಳಾಗಿವೆ
ದೀಪ ಹಚ್ಚುವವರು ಸಿಕ್ಕರೂ
ಸಿಗುತಿಲ್ಲ ಮಣ್ಣ ಹಣತೆ
ಬೊಗಸೆಯಷ್ಟು ಎಣ್ಣೆ!


Nov 20, 2015

ಮಿಸ್ಟೇಕ್!

harish mangalore
ಕತೆಗಳ ಪುಸ್ತಕವನ್ನು ನೂರಾರು ಓದಿದ್ದೇನೆ. ನನ್ನನ್ನು ತುಂಬಾ ಕಾಡಿದ ಕತೆಗಳನ್ನು ಬರೆದಿದ್ದು ಸದತ್ ಹಸನ್ ಮಾಂಟೋ. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಕಾರಣದಿಂದ, ಮನೆಯವರ ಒತ್ತಡದ ಕಾರಣದಿಂದ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ದಾರಿಯುದ್ದಕ್ಕೂ ಕಂಡ ಧರ್ಮಾಧಾರಿತ ಹಿಂಸಾಚಾರ ಸದತ್ ಹಸನ್ ಮಾಂಟೋನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತದೆ. ಆ ಹುಚ್ಚುತನದಲ್ಲೇ ಆತ ಬರೆದ ಕತೆಗಳನ್ನು ಓದುತ್ತಿದ್ದರೆ ಮನುಷ್ಯ ಇಷ್ಟೊಂದು ಅಮಾನವೀಯವಾಗಿ ವರ್ತಿಸಬಲ್ಲನಾ ಎಂಬ ಅನುಮಾನ ಮೂಡುತ್ತಿತ್ತು. ಆ ಕತೆಗಳಲ್ಲಿನ ಅಮಾನವೀಯತೆಯನ್ನು ಮೀರಿಸುವಂತಹ ಘಟನೆಗಳು ವರ್ತಮಾನದಲ್ಲಿ ನಡೆಯುತ್ತಿರುವಾಗ ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಗಳಾಗಿದ್ದರೂ ತಾಂತ್ರಿಕವಾಗಿ ಮೇಲ್ಮೆ ಸಾಧಿಸಿ, ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿ ಮನುಷ್ಯನ ಕ್ರೂರಿ ಮನಸ್ಸನ್ನು ಅಲ್ಲೇ ನಿಲ್ಲಿಸಿಬಿಟ್ಟಿದ್ದೇವೆಯಾ? ಎಂಬ ಪ್ರಶ್ನೆ ಮೂಡುತ್ತದೆ. ಕೋಮುಗಲಭೆಯ ಸಂದರ್ಭದಲ್ಲೆಲ್ಲ ಸದತ್ ಹಸನ್ ಮಾಂಟೋನ ಪುಟ್ಟ ಕತೆಯೊಂದು ನನ್ನನ್ನು ಬಹಳವಾಗಿ ಕಾಡುತ್ತದೆ. ಕತೆಯ ಹೆಸರು ಮಿಸ್ಟೇಕ್. ಗಲಭೆಯ ಸಂದರ್ಭ. ಕತ್ತಿ ಹಿಡಿದು ಬಂದವರು ದಾರಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬನ ಹೊಟ್ಟೆಗೆ ತಿವಿಯುತ್ತಾರೆ. ತಿವಿಯುವಾಗ ಕತ್ತಿ ಆತನ ಲಾಡಿಯನ್ನು ಕತ್ತರಿಸಿಹಾಕುತ್ತದೆ. ಪ್ಯಾಂಟು ಕೆಳಗೆ ಜಾರುತ್ತದೆ. ಸತ್ತ ವ್ಯಕ್ತಿಯ ಶಿಶ್ನ ನೋಡಿದ ಕತ್ತಿವೀರ 'ಮಿಸ್ಟೇಕ್' ಎಂದುದ್ಗರಿಸಿ ಮತ್ತೊಬ್ಬನನ್ನು ಕೊಲ್ಲಲು ಹೊರಡುತ್ತಾನೆ. ಸದತ್ ನ ಮೂರು ಸಾಲಿನ ಈ ಕತೆ ಧರ್ಮಾಂಧರಲ್ಲಿನ ಕ್ರೌರ್ಯ, ಅವರಿಗೆ ಅಂತಿಮ ಸುಖ ಸಿಗುವುದು ಕೊಲ್ಲುವ ಹಿಂಸೆಯಿಂದಷ್ಟೇ ಎನ್ನುವ ವಾಸ್ತವವನ್ನು ತಿಳಿಸಿ ಹೇಳುತ್ತದೆ. 
ಮಿಸ್ಟೇಕ್ ಕತೆಯ ರೀತಿಯ ಘಟನೆಯೇ ಮಂಗಳೂರಿನಲ್ಲಿ ನಡೆದುಹೋಗಿದೆ. ಸ್ನೇಹಿತರಾದ ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. ಈ ಕೊಲೆಗೆ ಸಂಬಂಧಪಟ್ಟಂತೆ ಮಂಗಳೂರು ಪೋಲೀಸರು ಭುವಿತ್ ಶೆಟ್ಟಿ ಮತ್ತು ಅಚ್ಯುತ್ ಎನ್ನುವವರನ್ನು ಬಂಧಿಸಿದ್ದಾರೆ. ಈ ಭುವಿತ್ ಶೆಟ್ಟಿ ಕಲಬುರಗಿಯ ಹತ್ಯೆಯಾದ ಸಂದರ್ಭದಲ್ಲಿ ಹತ್ಯೆಯನ್ನು ಸಮರ್ಥಿಸಿ ಹಾಕಿದ ಟ್ವೀಟುಗಳ ಕಾರಣದಿಂದ ಬಂಧಿತನಾಗಿದ್ದ. ಭುವಿತನಿಗೆ ಇಪ್ಪತ್ತೈದು ವರ್ಷ, ಅಚ್ಯುತನಿಗೆ ಇಪ್ಪತ್ತೆಂಟು ವರುಷವಷ್ಟೇ. ಇನ್ನು ಸತ್ತ ಹರೀಶನೂ ಅದೇ ವಯಸ್ಸಿನವನು. ಬಡ ಕುಟುಂಬದಿಂದ ಬಂದವನು. ಕುಟುಂಬಕ್ಕೆ ಆಸರೆಯಾಗಿದ್ದವನು. ಧರ್ಮಾಂಧರ ಕ್ರೌರ್ಯ ಒಂದಿಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದೆ. ಧರ್ಮಾಂದತೆಯನ್ನು ತುಂಬಿದವರ ತಣ್ಣನೆಯ ಕ್ರೌರ್ಯದಿಂದ ಭುವಿತ್ ಅಚ್ಯುತನಂತಹ ಸಾವಿರ ಕುಟುಂಬಗಳು ನಾಶವಾಗುತ್ತಿವೆ. ಹಿಂದೂ ಸಂಘಟನೆಯ ಭುವಿತ್ ಮತ್ತು ಅಚ್ಯುತ್ ಗುರಿ ಹರೀಶನಾಗಿರಲಿಲ್ಲ. ಸಮೀವುಲ್ಲಾ ಎಂಬ ಸಾಬಿಯಾಗಿದ್ದ. ಸಾಬಿಗೊಬ್ಬ ಹಿಂದೂ ಗೆಳೆಯನಿರುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದು ಈ ಯುವಕರ ತಲೆಗೆ ತುಂಬಿಬಿಟ್ಟಿರುತ್ತಾರೆ. ಸಮೀವುಲ್ಲಾನನ್ನು ರಕ್ಷಿಸಲು ಬಂದ ಹುಡುಗ ಕೂಡ ಮುಸಲ್ಮಾನನೇ ಎಂದು ಹತ್ಯೆ ಮಾಡಿದ್ದಾರೆ. ಸದತ್ ಹಸನ್ ಮಾಂಟೋನ ಕತೆಯ ಲೆಕ್ಕದಲ್ಲಿ ಮಿಸ್ಟೇಕಾಗಿದೆ. ಹತ್ಯೆ ಮಾಡಿದವರು ಕತ್ತಿ ಹಿಡಿದು ಮತ್ತೊಬ್ಬನನ್ನು ಮಗದೊಬ್ಬನನ್ನು ಕೊಲ್ಲಲು ಹೊರಟುಬಿಡುತ್ತಾರೆ.

ಮೀಸಲಾತಿಯ ಬಗೆಗಿನ ಪ್ರಶ್ನೆಗಳು ಮತ್ತು ಉತ್ತರಗಳು.

ಇಂಗ್ಲೀಷ್ ಮೂಲ:  ದ್ವಾರಕನಾಥ್ ಚೊಕ್ಕ
ಕನ್ನಡಕ್ಕೆ: ಕು.ಸ.ಮಧುಸೂದನ್ 
1. ಮೀಸಲಾತಿ ಎಂದರೇನು?
ಮೀಸಲಾತಿ ಎಂಬ ಪದಪ್ರಯೋಗವೇ ತಪ್ಪು! ಸಂವಿದಾನದಲ್ಲಿ ಇದಕ್ಕಾಗಿ ಬಳಸಿರುವ ಪದ ಪ್ರಾತಿನಿದ್ಯ. ವೈಯುಕ್ತಿಕ ನೆಲೆಗಟ್ಟಿನಲ್ಲಿ ಇದನ್ಯಾರಿಗು ನೀಡಲಾಗಿಲ್ಲ. ವೈಯುಕ್ತಿಕವಾಗಿ ನೀಡಿರುವುದು ಸಹ ಅವರು ಪ್ರತಿನಿಧಿಸುವ ಶೋಷಿತ ಸಮುದಾಯಗಳ ಕಾರಣದಿಂದ. ಈ ಅವಕಾಶವನ್ನು ಪಡೆದವರು ತಮ್ಮ ಸಮುದಾಯದ ಇತರೇ ಜನರಿಗೆ ಸಹಾಯಕವಾಗಲೆಂಬ ಕಾರಣದಿಂದ.

2. ಮೀಸಲಾತಿ ಏಕೆ?
ಸಮುದಾಯಗಳ ನಡುವಿನ ತಾರತಮ್ಯ ಹೋಗಲಾಡಿಸಿ,ಅವಕಾಶ ವಂಚಿತ ಸಮುದಾಯಗಳಿಗೆ ಸಹಾಯ ಮಾಡುವುದು ಮೀಸಲಾತಿಯ ಉದ್ದೇಶ. ಸಮಾಜದ ಹಲವಾರು ಸಮುದಾಯಗಳು ಅಸ್ಪ್ರ್ಯಶ್ಯತೆಯ ಕಾರಣದಿಂದಾಗಿ ಶಿಕ್ಷಣದ ಹಕ್ಕು, ಸಂಪತ್ತಿನ ಹಕ್ಕು, ವ್ಯಾಪಾರದ ಹಕ್ಕು ಸೇರಿದಂತೆ ಅನೇಕ ನಾಗರೀಕ ಹಕ್ಕುಗಳಿಂದ ವಂಚಿತವಾಗಿವೆ. ಇತಿಹಾಸದಲ್ಲಿನ ಇಂತಹ ತಾರತಮ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ಸಂರಕ್ಷಿಸಲು ಈ ಮೀಸಲಾತಿಯನ್ನು ಕಲ್ಪಿಸಲಾಗಿದೆ.

3.ಸಂವಿದಾನಕರ್ತರು ಮೀಸಲಾತಿಯನ್ನು ಕೇವಲ ಹತ್ತು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿರಲಿಲ್ಲವೆ?
ಕೇವಲ ರಾಜಕೀಯ ಮೀಸಲಾತಿಯನ್ನು ಮಾತ್ರ ಹತ್ತು ವರ್ಷಗಳವರೆಗೆ ನಿಗದಿ ಪಡಿಸಲಾಗಿದ್ದು, ತದನಂತರ ಅದನ್ನು ಪುನರ್ ಪರಿಶೀಲಿಸಲಾಯಿತು. ಹಾಗಾಗಿಯೇ ಎಲ್ಲ ರಾಜಕೀಯ ಮೀಸಲಾತಿಗಳನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಪುನರ್ ನಿಗದಿ ಪಡಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗೆ ಹತ್ತು ವರ್ಷಗಳ ಮಿತಿ ಹಾಕಲಾಗಿಲ್ಲ. ಆದ್ದರಿಂದ ರಾಜಕೀಯ ಮೀಸಲಾತಿಯ ರೀತಿಯಲ್ಲಿ ನಾವು ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲ.

4. ಜಾತಿಯ ಆಧಾರದ ಮೇಲೆ ಮೀಸಲಾತಿ ಏಕೆ?
ಇದಕ್ಕೆ ಉತ್ತರಿಸುವ ಮುಂಚೆ ನಾವು ಮೀಸಲಾತಿಯ ಅನಿವಾರ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.ಸಾವಿರಾರು ವರ್ಷಗಳಿಂದ ಜಾತಿಯ ಕಾರಣಕ್ಕೆ ಹಲವು ಹಕ್ಕುಗಳನ್ನು,ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕೆಳವರ್ಗಗಳಿಗೆ ನಿರಾಕರಿಸುತ್ತ ಬರಲಾಗಿದೆ. ಆದ್ದರಿಂದ ಕೆಳಜಾತಿಗಳ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ಅನ್ಯಾಯ, ಶೋಷಣೆ, ತಾರತಮ್ಯ ವಂಚನೆಗಳಿಗೆ ಮುಖ್ಯ ಕಾರಣ ಜಾತಿಪದ್ದತಿಯೇ ಆಗಿದೆ. ಜಾತಿಯ ಕಾರಣಕ್ಕೆ ಅವಕಾಶಗಳಿಂದ ವಂಚಿತರಾದ ಬಹುಜನ ಸಮಾಜಕ್ಕೆ ಅದೇ ಜಾತಿಯ ಆಧಾರದಲ್ಲೆ ಅವಕಾಶಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ.

5. ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿ ಏಕಿಲ್ಲ?
ಯಾವತ್ತಿಗು ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವುದು ಸಾದ್ಯವಿಲ್ಲ. ಯಾಕೆಂದರೆ:
(ಅ) ಬಹುಜನಸಮಾಜದ ಇವತ್ತಿನ ಬಡತನಕ್ಕೆ ಮೂಲಕಾರಣವಾಗಿರುವುದೇ ಅವರ ಜಾತಿಯಾಗಿದೆ. ಬಡತನ ಒಂದು ಪರಿಣಾಮವಾದರೆ, ಜಾತಿ ಒಂದು ಕಾರಣವಾಗಿದೆ. ಆದ್ದರಿಂದ ನಾವು ಪರಿಣಾಮದ ಬಗ್ಗೆ ನೋಡದೆ ಕಾರಣವನ್ನು ಇಲ್ಲವಾಗಿಸಬೇಕಿದೆ.

(ಆ)ವೈಯುಕ್ತಿಕವಾಗಿ ಒಬ್ಬನ ಆದಾಯ ಬದಲಾಗಬಹುದು.ಆದರೆ ಹಣದ ಕೊಳ್ಳುವ ಶಕ್ತಿ ಇಂಡಿಯಾದಲ್ಲಿ ಅವನ ಜಾತಿಯನ್ನು ಆಧರಿಸಿರುತ್ತದೆ. ಉದಾಹರಣೆಗೆ ಬಹಳ ಕಡೆ ದಲಿತನೊಬ್ಬ ದುಡ್ಡಿದ್ದರೂ ಒಂದು ಕಪ್ ಚಹಾವನ್ನು ಕೊಳ್ಳಲಾಗದ ಪರಿಸ್ಥಿತಿಯಿದೆ.

(ಇ) ತನ್ನ ಆರ್ಥಿಕ ಸ್ಥಿತಿಯನ್ನು ಸಾಬೀತು ಪಡಿಸುವುದು ನಮ್ಮ ವ್ಯವಸ್ಥೆಯ ಲೋಪದೋಷಗಳಿಂದಾಗಿ ನಿಖರವಾಗಿರಲು ಸಾದ್ಯವಿಲ್ಲ. ಇದರಿಂದಾಗಿ ಮತ್ತೆ ವಂಚಿತರೇ ವಂಚನೆಗೊಳಗಾಗುತ್ತಾರೆ.

(ಈ) ಜಾತೀಯತೆಯಿಂದ ನರಳುತ್ತಿರುವ ಇಂಡಿಯಾದಲ್ಲಿ ಬದಲಾಗದೆ ಇರುವ ಒಂದು ವಿಷಯವೆಂದರೆ ಅದು ಜಾತಿಯಾಗಿದೆ. ಇಲ್ಲಿನ ಭ್ರಷ್ಟ ವ್ಯವಸ್ಥೆಯಲ್ಲಿ ಹಣ ನೀಡಿ ಜಾತಿಯ ಪ್ರಮಾಣಪತ್ರವನ್ನು ಪಡೆಯಬಹುದಾಗಿದ್ದು, ವರಮಾನದ ಪ್ರಮಾಣ ಪತ್ರವನ್ನು ಪಡೆಯುವುದು ಇನ್ನೂ ಸುಲಭವಾದ ವಿಷಯವಾಗಿದೆ. ಹಾಗಾಗಿ ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿಯನ್ನು ನೀಡುವುದು ವ್ಯಾವಹಾರಿಕವಾಗಿ ಆಗದ ಮಾತು. ಹಣ ಕೊಟ್ಟು ಪಡೆಯಬಲ್ಲಂತಹ ಎರಡು ಪ್ರಮಾಣಪತ್ರಗಳನ್ನಿಟ್ಟುಕೊಂಡು ಮೀಸಲಾತಿಯ ಬಗ್ಗೆ ಚರ್ಚೆ ನಡೆಸುದು ಅನಗತ್ಯವೆನಿಸುತ್ತೆ. ಅದೂ ಅಲ್ಲದೆ ಈ ನೆಲದಲ್ಲಿ ಹಣ ಕೊಟ್ಟು ಆದಾಯ ಪ್ರಮಾಣಪತ್ರ ಪಡೆಯುವುದು ಬಹಳ ಸುಲಭ, ಆದರೆ ಜಾತಿಯ ಪ್ರಮಾಣಪತ್ರ ಪಡೆಯುವುದು ಕಷ್ಟಕರ.

(ಉ) ಮೀಸಲಾತಿಯೇ ಅಂತಿಮ ಗುರಿಯಲ್ಲ. ಬದಲಿಗೆ ಅಂತ್ಯದತ್ತ ಒಂದು ದಾರಿಯಷ್ಟೆ! ಮೀಸಲಾತಿಯ ಮುಖ್ಯ ಉದ್ದೇಶ: ಮುಖ್ಯವಾಹಿನಿಯಿಂದ ಹೊರಗಿರುವವರಿಗೆ ಸರ್ವಕ್ಷೇತ್ರಗಳಲ್ಲಿಯು ಅವಕಾಶಗಳ ಬಾಗಿಲುಗಳನ್ನು ತೆರೆಯುವುದಾಗಿದೆ. ಆದ್ದರಿಂದಲೆ ಮೀಸಲಾತಿ ಶಾಶ್ವತವೂ ಅಲ್ಲ ಜಾತಿ ಪದ್ದತಿಗೆ ದಿವ್ಯೌಷದಿಯೂ ಅಲ್ಲ. ಎಲ್ಲಯವರೆಗು ರಾಷ್ಟ್ರದ ಪತ್ರಿಕೆಗಳ ಜಾಹಿರಾತುಗಳಲ್ಲಿ ಜಾತಿಯ ಪ್ರಸ್ತಾಪವಿರುತ್ತದೆಯೊ ಅಲ್ಲಿಯವರೆಗು ಇದು ಸಾಗಬೇಕಾಗುತ್ತದೆ.

6. ಮೀಸಲಾತಿಯಲ್ಲಿ ಕೆನೆಪದರ ಇರಬೇಕೇ ಬೇಡವೇ?
ಮೀಸಲಾತಿಯಲ್ಲಿ ಕೆನೆಪದರದ ಅಗತ್ಯವನ್ನು ಎತ್ತಿ ಹೇಳುತ್ತಿರುವವರ ಮುಖ್ಯ ಉದ್ದೇಶವೇ ಮೀಸಲಾತಿಯ ಮೂಲ ಗುರಿಯನ್ನು ಮಣ್ಣುಪಾಲು ಮಾಡುವುದಾಗಿದೆ.ಉದಾಹರಣೆಗೆ ಈಗಲೂ ಐ.ಐ.ಟಿ.ಯಂತಹ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಶೇಕಡ 25 ಕ್ಕಿಂತ ಹೆಚ್ಚು ಸ್ಥಾನಗಳು ಸೂಕ್ತ ಅಭ್ಯರ್ಥಿಗಳಿಲ್ಲದ ಕಾರಣಕ್ಕೆ ಖಾಲಿ ಉಳಿದಿವೆ.ಅಕಸ್ಮಾತ್ ನೀವು ಕೆನೆಪದರವನ್ನು ಜಾರಿಗೆ ತಂದರೆ ಆರ್ಥಿಕವಾಗಿ ಪರಿಶಿಷ್ಟರಿಗಿಂತ ಸ್ವಲ್ಪ ಬಲಾಢ್ಯವಾಗಿರುವ ಕೆಳ ಮತ್ತು ಮದ್ಯವರ್ಗದವರು ಪರಿಶಿಷ್ಟರ ಎಲ್ಲ ಸ್ಥಾನಗಳನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ.ಹೀಗೆ ಕೆನೆಪದರದ ವಿದ್ಯಾರ್ಥಿಗಳ ಜೊತೆ ಸ್ಪರ್ದೆ ಮಾಡಲು ಪರಿಶಿಷ್ಟರಿಗೆ ಸಾದ್ಯವಾಗುವುದಿಲ್ಲ.

7.ಮೀಸಲಾತಿ ಎಷ್ಟು ಕಾಲ ಮುಂದುವರೆಯಬೇಕು?
ಮೀಸಲಾತಿಯನ್ನು ವಿರೋಧಿಸುವ ಎಲ್ಲರೂ ಸಹಜವಾಗಿ ಕೇಳುವ ಪ್ರಶ್ನೆ ಇದು. ಎಲ್ಲಿಯವರೆಗು ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಎಲ್ಲ ವಿಭಾಶಗಗಳಲ್ಲಿಯೂ ಮೇಲ್ಜಾತಿಯವರೇ ತುಂಬಿಕೊಂಡಿದ್ದು ,ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೊ ಅಲ್ಲಿಯವರಗು ಇದು ಮುಂದುವರೆಯುತ್ತದೆ. ನಮ್ಮ ಮೇಲ್ಜಾತಿಗಳು ಸುಮಾರು ಮೂರುಸಾವಿರ ವರ್ಷಗಳಿಂದಲೂ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತ ಬಂದಿದ್ದು,ಇದೀಗ ಇಪ್ಪತ್ತನೆಯ ಶತಮಾನದಲ್ಲಿಯು ಎಲ್ಲ ಧಾರ್ಮಿಕ ಸ್ಥಾನಗಳಲ್ಲಿಯು ತನ್ನದೇ ಪಾರುಪತ್ಯವನ್ನು ನಡೆಸುತ್ತಿದೆ. ಇದೀಗ ಅವರೇ ಮೀಸಲಾತಿ ಎಲ್ಲಿಯವರೆಗೆ ಎನ್ನು ಪ್ರಶ್ನೆ ಕೇಳುತ್ತಿದ್ದಾರೆ.ಅವರು ತಮ್ಮನ್ನು ತಾವೇ ಕೇಳಿಕೊಳ್ಳಲಿ: ಇನ್ನು ಎಷ್ಟು ವರ್ಷಗಳ ಕಾಲ ಅವರೇ ಎಲ್ಲ ಧಾರ್ಮಿಕ ಸ್ಥಾನಗಳಲ್ಲಿ ಇರುತ್ತಾರೆಂದು?ಮೂರು ಸಾವಿರ ವರ್ಷಗಳ ತಾರತಮ್ಮವನ್ನು ನಿವಾರಸಲು ಎಪ್ಪತ್ತು ವರ್ಷಗಳು ಸಾಕಾಗಿಬಿಡುತ್ತದೆಯೇ ಎಂದು ಅವರೇ ಕೇಳಿಕೊಳ್ಳಲಿ?

8.ಮೀಸಲಾತಿ ವ್ಯವಸ್ಥೆ ಸಮಾಜನ್ನು ಒಡೆಯುವುದಿಲ್ಲವೆ?
ಈ ಪ್ರಶ್ನೆಯೇ ಅಸಂಬದ್ದವಾದುದು. ಈಗಾಗಲೇ ಚಾಲ್ತಿಯಲ್ಲಿಯಲಿರುವ ಜಾತಿ ಪದ್ದತಿ ಸಮಾಜವನ್ನು ಛಿದ್ರಗೊಳಿಸಿಯಾಗಿದೆ. ಆದರೆ ಮೀಸಲಾತಿ ಅದನ್ನು ಸರಿಪಡಿಸುವ ದಿಸೆಯಲ್ಲಿ ಸಾಗಿದೆ. ನಮ್ಮ ಪರಿಶಿಷ್ಠ ಜಾತಿ,ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾತಿಗಳಿವೆ, ಅವನ್ನೆಲ್ಲ ಸೇರಿಸಿ ಎಸ್.ಸಿ, ಎಸ್.ಟಿ.ಮತ್ತು ಓಬಿಸಿ ಎಂಬ ಕೊಡೆಯ ಅಡಿಯಲ್ಲಿ ತಂದಿರುವುದು ಜಾತಿ ವಿನಾಶದತ್ತ ದೊಡ್ಡ ಹೆಜ್ಜೆಯಾಗಿದೆ. ಆದ್ದರಿಂದ ಮೀಸಲಾತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಾತಿಪದ್ದತಿಯನ್ನು ನಿವಾರಿಸಲು ಮೇಲ್ಜಾತಿಗಳು ಪ್ರಾಮಾಣಿಕ ಪ್ರಯತ್ಮ ನಡೆಸಬೇಕಿದೆ. ಮೀಸಲಾತಿಯನ್ನು ವಿರೋಧಿಸುವವರು ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೆ? ಎಂದರೆ ಅದಕ್ಕೆ ಉತ್ತರ: ಇಲ್ಲ! ಇವತ್ತು ಮೀಸಲಾತಿಯನ್ನು ವಿರೋಧಿಸುತ್ತಿರುವವರೆಲ್ಲ. ಜಾತಿ ತಮಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವವರೇ ಆಗಿದ್ದಾರೆ. ಜಾತಿಯ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುತ್ತಲೆ ಜಾತಿಯಾಧಾರಿತ ಮೀಸಲಾತಿಯನ್ನು ವಿರೋಧಿಸುವವರ ಆತ್ಮವಂಚನೆ ಇದರಿಂದ ಗೊತ್ತಾಗುತ್ತದೆ.

9.ಮೀಸಲಾತಿಯು ಅರ್ಹತೆಯನ್ನು ನಾಶ ಮಾಡುತ್ತಿಲ್ಲವೆ?
ನಾವು ಅರ್ಹತೆ ಎಂಬುದರ ವ್ಯಾಖ್ಯೆಯನ್ನೆ ಸರಿಯಾಗಿ ಅರ್ಥೈಸಿಕೊಂಡಿಲ್ಲವೆನಿಸುತ್ತೆ. ಕಾನ್ಪುರದ ಐ.ಐ.ಟಿ.ಯ ಪ್ರೊಫೆಸರ್ ರಾಹುಲ್ ಬರ್ಮನ್ ರವರ ಪ್ರಕಾರ: ಮೆರಿಟ್ ಎಂದರೇನು? ಕೇವಲ ಪರೀಕ್ಷೆಗಳನ್ನು ಪಾಸು ಮಾಡುವುದೇ? ಪಾಸ್ ಎನ್ನುವುದು ಒಂದು ದಾರಿಯೆ ಹೊರತು ಅದೇ ಅಂತ್ಯವಲ್ಲ. ಪರೀಕ್ಷೆಗಳು ಒಬ್ಬ ವೈದ್ಯನನ್ನೊ ಒಬ್ಬ ಎಂಜಿನಿಯರ್‍ನನ್ನೊ ಮಾಡುವುದಷ್ಟೇ ಆಗಿದ್ದರೆ, ಹಾಗೆ ಮಾಡಲು ಪರೀಕ್ಷೆಗಳಿಗಿಂತ ಉತ್ತಮ ಮಾರ್ಗಗಳು ಇವೆ. ನನ್ನ ಕಾಲೇಜಿನ ದಿನಗಳಲ್ಲಿಹೀಗೆ ಹೇಳಲಾಗುತ್ತಿತ್ತು: ಒಬ್ಬ ಒಳ್ಳೆಯ ಇಂಜಿನಿಯರ್ ಅಂದರೆ ಕಡಿಮೆ ಸಂಪನ್ಮೂಲಗಳಲ್ಲಿ ಉತ್ತಮವಾದುದ್ದನ್ನು ಮಾಡುವವನು. ಮ್ಯಾನೇಜ್ ಮೆಂಟ್ ಕೂಡ ಅಷ್ಟೆ ಇರುವ ಸಂಪನ್ಮೂಲಗಳನ್ನೇ ಬಳಸಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಯೂ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಬಲ್ಲವನು ಎಂದು!. ಆದರೆ ನಾನು ನೋಡಿದ ಹಾಗೆ ಬಹುತೇಕ ಆದಿವಾಸಿಗಳು, ದಲಿತರು,ಹಿಂದುಳಿದವರೆ ನಡೆಸುವ ಮೊರಾದಾಬಾದಿನ ಹಿತ್ತಾಳೆ, ವಾರಣಾಸಿಯ ರೇಶ್ಮೆ, ಕಾನ್ಪುರದ ಚರ್ಮದ ಸಣ್ಣ ಕೈಗಾರಿಕೆಗಳು ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಬಳಿಸಿ ಅತ್ಯತ್ತಮವಾದ ಉತ್ಪನ್ನಗಳನ್ನು ತಯಾರಿಸುತ್ತಿವೆ. ಅವು ನಿಮ್ಮ ಐ.ಟ. ಬಿ.ಟಿ. ಕೈಗಾರಿಕೆಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗವಕಾಶಗಳನ್ನು ಒದಗಿಸಿವೆ ಮತ್ತು ಹೆಚ್ಚು ರಫ್ತು ವ್ಯವಹಾರವನ್ನೂ ಸಹ ಮಾಡುತ್ತಿವೆ. ಇವರುಗಳು ಅತ್ಯಂತ ಕಡಿಮೆ ಬಂಡವಾಳ ಹೂಡಿದ್ದು,ಸಮರ್ಪಕವಾದ ಶಿಕ್ಷಣವಿಲ್ಲದೆ, ಸಾಕಷ್ಟು ವಿದ್ಯುತ್ ಇಲ್ಲದೆ, ಸರಿಯಾದ ಸಾರಿಗೆ ವ್ಯವಸ್ಥೆಯಿರದೆ ತುಂಬಾ ಸೀಮಿತ ಸಂಪನ್ಮೂಲಗಳ ಸಹಾಯದಿಂದ ಇಂತಹ ಅದ್ಬುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರೂ ನಿಮ್ಮ ಸಾಂಪ್ರದಾಯಿಕ ಶಿಕ್ಷಣ ಪಡೆದು ಇಂಜಿನಿಯರುಗಳಾದವರು ಇಲ್ಲ. ಇದರ ನಿರ್ವಹಣೆ ಮಾಡುತ್ತಿರುವವರ್ಯಾರು ಎಂ.ಬಿ.ಎ. ಪದವಿ ಪಡೆದವರಲ್ಲ.ಅದೂ ಅಲ್ಲದೇ ಇವ್ಯಾವ ಕೈಗಾರಿಗೆಳು ದೊಡ್ಡ ಕೈಗಾರಿಕೆಗಳೊಂದಿಗೆ ಯಾವ ಸಮಪರ್ಕವನ್ನು ಹೊಂದಿಲ್ಲ.

ದಕ್ಷಿಣದ ನಾಲ್ಕು ರಾಜ್ಯಗಳು ಮಾತ್ರ ಶೇಕಡಾ 60ರಷ್ಟು ಮೀಸಲಾತಿಯನ್ನು ಕಲ್ಪಿಸಿವೆ. ಇನ್ನು ಉತ್ತರದ ಬಹುತೇಕ ರಾಜ್ಯಗಳು ಕೇವಲ ಶೇಕಡಾ15 ರಷ್ಟು ಮಾತ್ರ ಮೀಸಲಾತಿಯನ್ನು ಕಲ್ಪಿಸಿ ಉಳಿದೆಲ್ಲವನ್ನು ಮೇಲ್ವರ್ಗಗಳಿಗೆ ಬಿಟ್ಟು ಕೊಟ್ಟಿವೆ. ಹೀಗಾಗಿಯೆ ಇವತ್ತು ದಕ್ಷಿಣದ ರಾಜ್ಯಗಳು ಬಹುತೇಕ ಕ್ಷೇತ್ರಗಳಲ್ಲ್ಲಿ ಪ್ರಗತಿ ಸಾದಿಸಿವೆಯೆಂದು ವಿಶ್ವ ಬ್ಯಾಂಕಿನ ಅದ್ಯಯನವೇ ಹೇಳಿದೆ. ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದಕ್ಷಿಣದ ರಾಜ್ಯಗಳು ಸಾಕಷ್ಟು ಅಭಿವೃದ್ದಿಯನ್ನು ಸಾದಿಸಿವೆ.

10. ಈಗಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿರುವ ಮೀಸಲಾತಿ ಪರಿಣಾಮಕಾರಿಯಾಗಿದೆಯೆ?
ಸಾರ್ವಜನಿಕ ಉದ್ದಿಮೆಗಳಲ್ಲಿರುವ ಮೀಸಲಾತಿಯಿಂದ ಸಾಕಷ್ಟು ಅನುಕೂಲವಾಗಿದೆ. ಕೇಂದ್ರ ಸರಕಾರದಲ್ಲಿಯೆ 14 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರ ಹೊರತಾಗಿ ಒಂದನೇ ಮತ್ತು ಎರಡನೆ ದರ್ಜೆಯ ನೌಕರರರಲ್ಲಿ ಕೇವಲ ಶೇಕಡಾ 8ರಿಂದ 10 ರಷ್ಟು ಮಾತ್ರ ಎಸ್.ಸಿ. ಮತ್ತು ಎಸ್.ಟಿ.ಗಳಿದ್ದಾರೆ. ಇವತ್ತು ಬಹುಜನ ಸಮಾಜವೇನಾದರು ದೆಹಲಿಯನ್ನು ಮುಟ್ಟಲು ಸ್ವಲ್ಪವಾದರು ಸಾದ್ಯವಾಗಿದ್ದರೆ ಅದು ಮೀಸಲಾತಿಯ ಸೌಲಭ್ಯದಿಂದ ಮಾತ್ರ. ಮೀಸಲಾತಿಯೇ ಇಲ್ಲದಿದ್ದರೆ ಉದ್ಯೊಗಗಳಿರಲಿ, ಶಿಕ್ಷಣ ಕ್ಷೇತ್ರಕ್ಕೂ ಬಹುಜನರು ಪ್ರವೇಶಿಸಲು ಸಾದ್ಯವಿರುತ್ತಿರಲಿಲ್ಲ.

ಆದ್ದರಿಂದ ಮೀಸಲಾತಿ ಇವತ್ತಿಗೂ ಪ್ರಸ್ತುತವಾಗಿದೆ.

Nov 19, 2015

ಅಸ್ವಸ್ಥ ಸಮಾಜದ ಹುಚ್ಚು ಮುಖಗಳು

Dr Ashok K R
ನಾನಾಗ ಪಿಯುಸಿ ಓದುತ್ತಿದ್ದೆ. ಗುರುಶ್ರೀ ಥಿಯೇಟರಿನ ಎದುರಿಗಿದ್ದ ಪಿ.ಇ.ಎಸ್ ಕಾಲೇಜಿನಿಂದ ಸಂಜಯ ಥಿಯೇಟರ್ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿ ನಾಲ್ಕೆಜ್ಜೆ ನಡೆದರೆ ಬಲಕ್ಕೆ ಸಿದ್ಧಾರ್ಥ ಥಿಯೇಟರ್ರಿದೆ. ಅದರ ಎದುರುಗಡೆ ಪೋಲೀಸ್ ಠಾಣೆ. ಒಮ್ಮೊಮ್ಮೆ ಸೈಕಲ್ ತಳ್ಕೊಂಡು ನಡ್ಕೊಂಡು ಹೋಗುವಾಗ ಸಿದ್ದಾರ್ಥ ಥಿಯೇಟರಿನ ಬಳಿಯೋ ಅಥವಾ ಅದರ ಹಿಂದೆಯೋ ಒಬ್ಬ ವ್ಯಕ್ತಿ ಎದುರಾಗುತ್ತಿದ್ದ. ತಲೆಗೆ ಎಣ್ಣೆ ಹಾಕಿ ಕ್ರಾಪು, ಕಣ್ಣಿಗೊಂದು ಕಪ್ಪು ಚೌಕಟ್ಟಿನ ಸೋಡಾ ಗ್ಲಾಸು, ಇಸ್ತ್ರಿ ಮಾಡಿದ್ದ ಕೆಂಚಗಾಗಿದ್ದ ಬಿಳಿ ಶರ್ಟು, ಕಪ್ಪು ಪ್ಯಾಂಟು, ಹೊಳಪು ಮಾಸಿದ ಚಪ್ಪಲಿ ಧರಿಸಿರುತ್ತಿದ್ದ ವ್ಯಕ್ತಿ ಎರಡು ಹೆಜ್ಜೆಗೊಮ್ಮೆ ನಿಂತು ನೆನಪಾದವರಿಗೆಲ್ಲ ಬಯ್ದು ಮತ್ತೆರಡು ಹೆಜ್ಜೆ ಹಾಕಿ ಇನ್ನೊಂದಷ್ಟು ಬಯ್ದು ಮತ್ತೆರಡು ಹೆಜ್ಜೆ ಹಾಕುತ್ತಿದ್ದ. ಬಯ್ಯಿಸಿಕೊಳ್ಳುವವರ ಲಿಸ್ಟಿನಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಿಂದ ಹಿಡಿದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗರಿಂದ ಹಿಡಿದು ಪಕ್ಕದ ಮನೆಯವರು, ಮಕ್ಕಳು, ಪೋಲೀಸರೆಲ್ಲರೂ ಇದ್ದರು. ಯಾರಾದರೂ ಆತನನ್ನು ಗಮನಿಸುತ್ತಾ ಹತ್ತಿರದಲ್ಲೇ ನಿಂತುಬಿಟ್ಟರೆ ದನಿಯೇರುತ್ತಿತ್ತು ಬಯ್ಯುವ ಅವಧಿಯೂ ಜಾಸ್ತಿಯಾಗುತ್ತಿತ್ತು. ಯಾರೂ ಗಮನಿಸದಿದ್ದರೆ ಎರಡು ಹೆಜ್ಜೆಗೆ ಒಂದು ಬಯ್ಗುಳ. ಮುಂದೆ ಮೆಡಿಕಲ್ ಓದಲು ಮೈಸೂರಿಗೆ ತೆರಳಿದ ಮೇಲೆ ಆ ವ್ಯಕ್ತಿಯ ಕತೆ ಏನಾಯಿತೋ ತಿಳಿಯಲಿಲ್ಲ. ಕಳೆದೊಂದು ವಾರದಿಂದ 'ರಾಷ್ಟ್ರೀಯ ದುರಂತವಾದ' ವೆಂಕಟನ ಸುತ್ತಲಿನ ಸಂಕಟಗಳ ಬಗ್ಗೆ ಆಗೀಗ ಚೂರು ಚೂರು ನೋಡಿ ಕೇಳಿ ತಿಳಿದುಕೊಂಡಾಗ ನನಗೆ ನೆನಪಾಗಿದ್ದು ಮಂಡ್ಯದ ಆ ವ್ಯಕ್ತಿ.

ಒಬ್ಬ ಮಾನಸಿಕ ಅಸ್ವಸ್ಥನನ್ನು (ಆತ ನಟನೆಯನ್ನೂ ಮಾಡುತ್ತಿರಬಹುದು) ಹೇಗೆ ನಡೆಸಿಕೊಳ್ಳಬೇಕೆಂದು ಮರೆತುಹೋದ ಸಮಾಜವನ್ನು ಯಾವ ಕೋನದಿಂದ ನಾಗರೀಕವೆಂದು ಕರೆಯಬಹುದು? ಆದಿವಾಸಿಗಳನ್ನು ಅವರ ರೀತಿ ನೀತಿಗಳನ್ನು ಅನಾಗರೀಕವೆಂದು ಕರೆದುಬಿಡುವ ನಾವಿರುವ ನಾಗರೀಕತೆ ಇಷ್ಟೊಂದು ವಿಷಮಯವಾಗಿದೆಯೆಂದರೆ ಅನಾಗರೀಕರಾಗುವುದೇ ಉತ್ತಮವಲ್ಲವೇ? ಅದೆಷ್ಟೇ ವೈಯಕ್ತಿಕವೆಂದರೂ ಸುದೀಪ್ ವಿಚ್ಛೇದನ ಪಡೆದುಕೊಂಡಿರುವುದು ಸತ್ಯ. ವಿಚ್ಛೇದನ ಪಡೆದುಕೊಂಡಿರುವ ವ್ಯಕ್ತಿಯೊಬ್ಬ ‘ರಿಯಾಲಿಟಿ ಶೋ’ ಒಂದರಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುವುದನ್ನು ನಮ್ಮ ಕರ್ನಾಟಕದ ಕುಟುಂಬಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತವೆ! ಮಾನಸಿಕ ಅಸ್ವಸ್ಥನೆಂದೇ ಹೆಸರುವಾಸಿಯಾದ ವೆಂಕಟೇಶನನ್ನು ರಿಯಾಲಿಟಿ ಶೋಗೆ ಸೇರಿಸಿಕೊಳ್ಳುವ ವಾಹಿನಿಯವರು ಅವನಿಂದ ಎಷ್ಟು ಟಿ.ಆರ್.ಪಿ ಪಡೆಯಬೇಕೋ ಅಷ್ಟನ್ನು ಪಡೆದುಬಿಟ್ಟರು. ಆತನ ಹುಚ್ಚಾಟದಿಂದ ವೆಂಕಟನನ್ನು ಬಿಗ್ ಬಾಸ್ ರಿಯಾಲಿಟಿ ಶೋದಿಂದ ಹೊರಹಾಕಿದ್ದೂ ಆಯಿತು. ಅಲ್ಲಿಗಾದರೂ ವೆಂಕಟೇಶನ ಮಹಿಮೆ ಮುಗಿಯಬೇಕಿತ್ತು. ಮುಗಿಯುವುದಕ್ಕೆ ಸುದ್ದಿ ವಾಹಿನಿಗಳು ಬಿಡಲಿಲ್ಲ.

ದಿನದ ಇಪ್ಪತ್ತನಾಲ್ಕು ತಾಸು ತೋರಿಸುವುದಕ್ಕೆ ಸುದ್ದಿಯಾದರೂ ಎಲ್ಲಿರುತ್ತದೆ? ಸುದ್ದಿಯಲ್ಲದ ಇಂತವುಗಳನ್ನು ಮಾಡದಿದ್ದರೆ ವಾಹಿನಿಯವರ ಹೊಟ್ಟೆ ತುಂಬಬೇಕಲ್ಲ. ನೂರಿನ್ನೂರು ಜನರ ಹೊಟ್ಟೆ ತುಂಬಿಸುವುದಕ್ಕೆ ಟಿವಿ ವೀಕ್ಷಕರ ಮನಸ್ಥಿತಿಯನ್ನೇ ಹಾಳುಗೆಡವುವ ಕೆಲಸವನ್ನು ಮಾಡುವುದನ್ನು ವಾಹಿನಿಗಳು ಯಾವಾಗಲೋ ಪ್ರಾರಂಭಿಸಿಬಿಟ್ಟಿವೆ. ಕನ್ನಡಪ್ರಭದಲ್ಲಿ ಸುವರ್ಣ ವಾಹಿನಿಯ ಸುಗುಣ ಎನ್ನುವವರು ಹೇಗೆ ತಾವು ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗಿನ ಜಾವ ನಾಲ್ಕರವರೆಗೆ ವೆಂಕಟನ ಮನೆಯ ಬಳಿಯೇ ಕಾದು ಕುಳಿತಿದ್ದೆ ಎನ್ನುವುದರ ‘ರೋಚಕ’ ವಿವರಗಳನ್ನು ಬರೆದುಕೊಳ್ಳುತ್ತಾರೆ! ವಾಹಿನಿಯಲ್ಲಿ ಲೈವ್ ಆಗಿ ಕೂರಿಸಿ ವೆಂಕಟನನ್ನು ಕಿಚಾಯಿಸಿ ಥೇಟ್ ಮಂಡ್ಯದ ಆ ವ್ಯಕ್ತಿಯಂತೆ ಬಡಬಡಿಸುವಂತೆ ಮಾಡಿ ಅವನ ನೆನಪಿಗೆ ಬಂದವರಿಗೆಲ್ಲ ಬಯ್ಯುವಂತೆ ಮಾಡಿಬಿಟ್ಟರು. ಕೊನೆಗೆ ಪಬ್ಲಿಕ್ ಟಿವಿಯಲ್ಲಿ ಆತ ಯಾರ ಮೇಲೋ ಕೈ ಮಾಡಲು ಹೋಗಿ ಪಬ್ಲಿಕ್ ವಾಹಿನಿಯ ಪತ್ರಕರ್ತರು ಸ್ಟುಡಿಯೋದಲ್ಲಿನ ಜಗಳ ಬಿಡಿಸಿದರು. ವಾಹಿನಿಯಲ್ಲಿ ಯಾರಾದರೂ ಪರಿಚಯವಿದ್ದರೆ ಕೇಳಿ ನೋಡಿ ‘ನಾವೇನ್ ಮಾಡಾಣ? ಇಂತ ಕಾರ್ಯಕ್ರಮಕ್ಕೇ ಟಿ.ಆರ್.ಪಿ ಜಾಸ್ತಿ. ಟಿ.ಆರ್.ಪಿ ಬರುತ್ತೆ ಮಾಡ್ತೀವಿ’ ಎಂದೇ ಹೇಳುತ್ತಾರೆ. ಆಗ ತಪ್ಪು ಇಂತಹ ಕಾರ್ಯಕ್ರಮಗಳನ್ನು ಮಾಡುವ ವಾಹಿನಿಗಳದ್ದಾ ಅಥವಾ ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರದ್ದಾ? ಎಂಬ ಪ್ರಶ್ನೆ ಮೂಡದೇ ಇರದು. 

ಮಾಲ್ಗುಡಿ ಡೇಸ್, ಗುಡ್ಡದ ಭೂತದಂತಹ ಉತ್ತಮ ಧಾರವಾಹಿಗಳನ್ನು ನೋಡಿದ ಜನರೇ ಇವತ್ತು ದ್ವೇಷ ತುಂಬಿದ ಹೆಂಗಸರ ಕಿತ್ತಾಟದ ಧಾರವಾಹಿಗಳನ್ನು ನೋಡುತ್ತಿದ್ದಾರೆ, ಅರ್ಥವಿಲ್ಲದ ರಿಯಾಲಿಟಿ ಶೋಗಳನ್ನು ನೋಡುತ್ತಿದ್ದಾರೆ. ಅಂದಿನ ನಿರ್ದೇಶಕರಿಗೆ ಯಾರೂ ಉತ್ತಮ ಅಭಿರುಚಿಯ ಧಾರವಾಹಿಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿರಲಿಲ್ಲ, ಇಂದಿನ ನಿರ್ದೇಶಕರಿಗೂ ಯಾರೂ ಕಿತ್ತಾಟದ ಕಾರ್ಯಕ್ರಮಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿಲ್ಲ. ಕಲಾವಿದನಿಗೆ, ನಿರ್ದೇಶಕನಿಗೆ, ವಾಹಿನಿಯ ಮುಖ್ಯಸ್ಥನಿಗೆ ಡಿಫಾಲ್ಟಾಗಿ ಒಂದು ಸಾಮಾಜಿಕ ಬದ್ಧತೆ ಕಾಳಜಿ ಇರಲೇಬೇಕು. ಅದಿಲ್ಲವಾಗಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ. ಬಿಗ್ ಬಾಸಿನ ಮೊದಲನೇ ಸರಣಿ ಮುಗಿದ ಮೇಲೆ ಎರಡನೇ ಸರಣಿ ಮಾಡಿ ಮೂರನೇ ಸರಣಿ ಮಾಡಿ ಎಂದೇನಾದರೂ ಜನರು ವಾಹಿನಿಯ ಮುಂದೆ ಅಲವತ್ತುಕೊಂಡಿದ್ದರೆ? 

ಇನ್ನು ಈ ಎಲ್ಲಾ ಸಂಭ್ರಮದ ನಡುವೆ ದಲಿತ ಸೇನೆಯವರು ದರಿದ್ರ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಅವಮಾನಕರವಾಗಿ ಮಾತನಾಡಿದ ಎಂಬ ಕಾರಣಕ್ಕೆ ವೆಂಕಟನ ಮೇಲೆ ಮಸಿ ಬಳಿದಿದ್ದಾರೆ. ಆತನ ಮಾನಸಿಕ ಸ್ಥಿತಿಯನ್ನು ಗಮನಿಸಿದ ಮೇಲೂ ಈ ಕೆಲಸ ಮಾಡಬೇಕಿತ್ತಾ? ವಾಹಿನಿಗಳಿಗೇನೋ ಟಿ.ಆರ್.ಪಿ ಹುಚ್ಚು. ವೆಂಕಟನ ಪಟದ ಮೇಲೆ ಹಾಲು ಸುರಿಯುವ ‘ಅಭಿಮಾನಿ’ಗಳು ಮತ್ತು ಮಸಿ ಬಳಿದ ದಲಿತ ಸೇನೆಯವರಿಗೆ ಸುದ್ದಿಯಾಗುವ ಹುಚ್ಚಷ್ಟೇ ಇಲ್ಲಿ ಕಾಣಿಸುತ್ತಿದೆ. ಒಬ್ಬ ಮಾನಸಿಕ ಅಸ್ವಸ್ಥನಿಗೆ ಅಗತ್ಯವಾಗಿ ಬೇಕಾಗಿರುವುದು ಚಿಕಿತ್ಸೆ. ಅಂತಹ ವ್ಯಕ್ತಿಯನ್ನು ಕೂರಿಸಿಕೊಂಡು ಇಲ್ಲಸಲ್ಲದ ಚೇಷ್ಟೆಗಳನ್ನು ಮಾಡುತ್ತ ಕುಳಿತಿರುವ ವಾಹಿನಿಗಳು ಮತ್ತದಕ್ಕೆ ಪೂರಕವಾಗಿ ಸ್ಪಂದಿಸುತ್ತ ವಿಕೃತ ಆನಂದವನ್ನನುಭವಿಸುತ್ತ ಹಾಲು ಸುರಿದು ಮಸಿ ಬಳಿದು ಸಂಭ್ರಮಿಸುತ್ತಿರುವ ಸಮಾಜ! ಇಲ್ಲಿ ನಿಜಕ್ಕೂ ಮಾನಸಿಕ ಅಸ್ವಸ್ಥತೆ ಇರುವುದು ಯಾರಿಗೆ?

ಭೀಕರ

ಕು.ಸ.ಮಧುಸೂದನ್
ವರ್ತಮಾನ ಕಷ್ಟವಾದಾಗ
ಇತಿಹಾಸ ಇಷ್ಟವಾಗುತ್ತದೆ
ತಾಳೆಗರಿಗಳ ಮೇಲೆ ಬರೆಸಲ್ಪಟ್ಟ
ವಿಷಯಗಳೇ ಸಂವಿಧಾನದ ಪರಿಚ್ಛೇದಗಳಾಗಿ
ಅಳತೊಡಗುತ್ತವೆ
ಆಗಿನ್ನೂ ಹುಟ್ಟಿದ ಮಗುಕಿಟಾರನೆ ಕಿರುಚುತ್ತದೆ ಬೆಚ್ಚಿ!
ಕಗ್ಗಂತಲ ಖಂಡದ ಕನಸುಗಳೇ
ನಿಜವಾಗತೊಡಗಿ
ಪುರಾಣ ವರ್ತಮಾನವಾಗತೊಡಗುತ್ತದೆ
ಭವಿಷ್ಯ ಮಂಕಾಗುತ್ತದೆ!

Nov 18, 2015

ಯಥಾ ಪ್ರಧಾನಿ ತಥಾ ವಿರೋಧಿ!

ಕಾಂಗ್ರೆಸ್ಸಿನ ಇಬ್ಬರು ಬೃಹಸ್ಪತಿಗಳು ಭಾರತದ ಮಾನವನ್ನು ವಿದೇಶದಲ್ಲಿ, ಅದೂ ಭಾರತದ ಕೆಡುಕನ್ನೇ ಸದಾ ಬಯಸುವ ಪಾಕಿಸ್ತಾನದಲ್ಲಿ ಕಳೆದು ಬಂದಿದ್ದಾರೆ. ಹೆಸರಿಗೆ ಅವರು ಕಳೆದುಹಾಕಿರುವುದು ನರೇಂದ್ರ ಮೋದಿಯವರ ಮಾನವನ್ನಾದರೂ ಮೋದಿಯವರು ಭಾರತದ ಪ್ರಧಾನಿಯಾಗಿರುವುದರಿಂದ ಇದು ಭಾರತದ ಮಾನಹಾನಿಯೇ ಅಲ್ಲವೇ?! ಇಸ್ಲಮಾಬಾದಿನ ಜಿನ್ನಾ ಸಂಸ್ಥೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರದ ಮಾಜಿ ಸಚಿವ ಸಲ್ಮಾನ್ ಖುರ್ಷಿದರಿಗೆ ಇದ್ದಕ್ಕಿದ್ದಂತೆ ನವಾಜ್ ಷರೀಫರ ಮೇಲೆ ಭಯಂಕರ ಪ್ರೀತಿ ಹುಟ್ಟಿ ಅವರನ್ನು ವಾಚಮಾಗೋಚರವಾಗಿ ಹೊಗಳಿ ನರೇಂದ್ರ ಮೋದಿಯವರನ್ನು ತೆಗಳಿದ್ದಾರೆ. ಏನೋ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿಯೇ ಇದ್ದುಕೊಂಡು ಅಲ್ಲಿನ ಪ್ರಧಾನಿಯನ್ನು ತೆಗಳುವುದು ಸರಿಯಾಗುವುದಿಲ್ಲ ಎಂದು ನವಾಜ್ ಷರೀಫರನ್ನು ಹೊಗಳಿದ್ದರೆ ಸುಮ್ಮನಾಗಬಹುದಿತ್ತು. ವಿದೇಶಿ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಹೀಗಳೆಯುವ ಕೆಲಸವನ್ಯಾಕೆ ಮಾಡಬೇಕು? ಮಂತ್ರಿ ಪದವಿಯ ಜೊತೆಗೆ ಬುದ್ಧಿಯನ್ನೂ ಮರಳಿಸಿಬಿಟ್ಟರೆ?

ಇನ್ನೂ ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ 'ದುನಿಯಾ ಟಿವಿ'ಗೆ ಕೊಟ್ಟ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ವೃದ್ಧಿಯಾಗಬೇಕಾದರೆ ಮೋದಿ ತೊಲಗಿ ಕಾಂಗ್ರೆಸ್ ಮರಳಿ ಬರಬೇಕು ಎಂದಿದ್ದಾರೆ. ಮೊದಲೇ ಭಾರತವನ್ನು ವೈರಿಯಾಗಿಯೇ ನೋಡುವ ಪಾಕಿಸ್ತಾನದಲ್ಲಿ ಮೋದಿ ನಿಮ್ಮ ಮೊದಲ ವೈರಿ ಎಂಬರ್ಥದ ಮಾತುಗಳನ್ನಾಡಿ ಬಂದಿದ್ದಾರೆ. ಇವರಿಗೇನ್ ಬುದ್ಧಿ ಇಲ್ಲವಾ? ಅಥವಾ ಇವರ ದ್ವೇಷವನ್ನು ತೋರ್ಪಡಿಸಲು ಭಾರತದಲ್ಲಿ ವಾಹಿನಿಗಳಿಲ್ಲವಾ? ನಮ್ಮಲ್ಲೇ 24x7 ವಾಹಿನಿಗಳು ಸುದ್ದಿಯಿಲ್ಲದೇ ಬಣಗುಟ್ಟುತ್ತಿರುವಾಗ ವಿದೇಶಿ ವಾಹಿನಿಗಳಲ್ಲಿ ದೇಶದ ಮರ್ಯಾದೆಯನ್ನು ಮೂರುಕಾಸಿಗೆ ಮಾರುವ ಪ್ರವೃತ್ತಿಯನ್ನು ವಿರೋಧಿಸಲೇಬೇಕು.

ಇವರಿಬ್ಬರು ಈ ರೀತಿಯೆಲ್ಲ ಮಾತನಾಡಿರುವುದಕ್ಕೆ ಸ್ಪೂರ್ತಿ ಯಾರಿರಬಹುದೆಂದು ಹುಡುಕಿದರೆ ಅದು ಮತ್ಯಾರೂ ಅಲ್ಲ ಭಕ್ತಾಸುಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮಲ್ಲೆರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು! ವಿರೋಧಿಗಳ ವಿರುದ್ಧ ಮೊನಚಿನ ಭಾಷಣ ಮಾಡುವುದರಲ್ಲಿ ಮೋದಿಯವರದು ಎತ್ತಿದ ಕೈ. ಅವರ ಭಾಷಣ ಕುಟ್ಟುವ ಉಮೇದಿ ಎಷ್ಟರವರೆಗಿದೆಯೆಂದರೆ ವಿದೇಶಿ ನೆಲದಲ್ಲಿ ನಿಂತಾಗಲೂ ಭಾರತದಲ್ಲಿನ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡುತ್ತಾರೆ. ವಿದೇಶದಲ್ಲಿ ದೇಶದ ಮಾನ ತೆಗೆಯುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ನೆಹರೂ ಬಗ್ಗೆ, ಅವರ ಕುಟುಂಬದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆಯೆಲ್ಲ ಅನವಶ್ಯಕವಾಗಿ ಮಾತನಾಡಿ ಬಂದಿದ್ದಾರೆ. ಜಪಾನಿನಲ್ಲಿ ಭಗವದ್ಗೀತೆಯನ್ನು ಕೊಡುವಾಗ, ವಿದೇಶದಲ್ಲಿ ಸಂಸ್ಕೃತ ಶ್ಲೋಕ ಹಾಡಿದ ಮಕ್ಕಳನ್ನು ಹೊಗಳುವಾಗ ಭಾರತದ ಜಾತ್ಯತೀತರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ದೇಶದ ಮಾನ ತೆಗೆಯುವುದಕ್ಕೆ ಏನೆಲ್ಲ ಒದರಬೇಕೋ ಅದರ ಬಗ್ಗೆ ಒದರಿದ್ದಾರೆ. 

ಭಾರತವೀಗ 'ಸೂಪರ್ ಪವರ್' ಆಗುತ್ತಿರುವ ಕಾರಣ ದೇಶದೊಳಗಿನ ರಾಜಕೀಯ ದ್ವೇಷವನ್ನು ವಿದೇಶದಲ್ಲೂ ತೋರ್ಪಡಿಸಬೇಕು ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಹಾದಿಯಲ್ಲೇ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಸಾಗುತ್ತಿದ್ದಾರೆ. ಭಾರತದ ಮಾನ? ಅಯ್ಯೋ ಬುಡಿ ಮಾನ ಮರ್ಯಾದೆ ಎಲ್ಲಾ ಕಟ್ಕೊಂಡು ಏನ್ ಮಾಡ್ತೀರ... ಪಬ್ಲಿಸಿಟಿ ಮುಖ್ಯ.

Nov 17, 2015

ಮಾತು ಬೇಕಾಗಿಲ್ಲ

ಕು.ಸ.ಮಧುಸೂದನ್
ಮೌನವಾಗಿದ್ದ ಬುದ್ದ
ಮಾತಾಡಲಿಲ್ಲ
ನಾಲ್ಕು ಮನೆಗಳ ಬಗ್ಗೆ
ಎರಡು ದಾರಿಗಳ ಬಗ್ಗೆ
ಕಾಯುತ್ತಾ ಕೂತಿದ್ದರು ಶಿಷ್ಯರು
ಮಳೆಗೆ ಕಾದಿದ್ದ ಇಳೆಯ ಹಾಗೆ
ಮುಗುಳ್ನಕ್ಕ
ಬುದ್ದ
ಎದ್ದ
ಅರ್ಥವಾಯಿತೇ?
ಎಲ್ಲರಿಗೂ
ಎಂದ
ಎಲ್ಲ ಅಡಗಿರುವುದಿಲ್ಲಿ
ಹೂವು ಅರಳುವ ಗಳಿಗೆಯಲ್ಲಿ
ಎಲ್ಲವೂ ಚಣಮಾತ್ರ ಎನ್ನುವ ಸತ್ಯದಲ್ಲಿ
ಹೇಳಬೇಕಾದ್ದನ್ನು
ಹೇಳದೆಯೇ ಹೇಳಿದ
ಅರ್ಥ ಮಾಡಿಸಿದ.

ಅಸಹಿಷ್ಣುತೆಯ ವಿರುದ್ದ ಪ್ರಗತಿಪರರ ಗೆಲುವು!

ಕು.ಸ.ಮಧುಸೂದನ್
ಅಂತೂ ನರೇಂದ್ರಮೋದಿಯ ನಾಯಕತ್ವದಲ್ಲಿ ಮತಾಂಧತೆಯಿಂದ ಹೂಂಕರಿಸುತ್ತಿದ್ದ ಬಾಜಪ, ಬಿಹಾರದ ವಿದಾನಸಭಾ ಚುನಾವಣೆಯಲ್ಲಿ ಬಾರೀ ಸೋಲು ಕಂಡಿದೆ. ಬಿಹಾರದ ವಿದಾನಸಭಾ ಚುನಾವಣೆಯಲ್ಲಿನ ಬಾಜಪದ ಸೋಲು,ದೇಶದಾದ್ಯಂತ ತೀವ್ರಗೊಂಡಿದ್ದ ಅಸಹಿಷ್ಣುತೆಯ ವಿರುದದ್ದ ಚಳುವಳಿಗೆ ದೊರೆತ ದೊಡ್ಡ ಗೆಲುವು ಎಂದು ಬಣ್ಣಿಸಿದರೆ ತಪ್ಪೇನಿಲ್ಲವೆನಿಸುತ್ತೆ. ಬಿಹಾರದ ವಿದಾನಸಭೆಗೆ ಚುನಾವಣಾ ಪ್ರಕ್ರಿಯೆ ಶುರುವಾದ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಅಸಹಿಷ್ಣುತೆಯ ವಿರುದ್ದದ ಚಳುವಳಿ ಚುನಾವಣಾ ಪಲಿತಾಂಶ ಬಂದ ದಿನಕ್ಕೆ ಸರಿಯಾಗಿ ಗೆಲುವಿನ ಮೊದಲ ಮೆಟ್ಟಿಲನ್ನು ಏರಿದೆ.

ಈ ಚಳುವಳಿಯ ಭಾಗವಾಗಿ ಪ್ರಾರಂಭವಾದ ಪ್ರಶಸ್ತಿ ವಾಪಾಸು ಮಾಡುವ ನಮ್ಮ ಲೇಖಕರ, ಕಲಾವಿದರ, ವಿಜ್ಞಾನಿಗಳ ಮತ್ತು ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿಟ್ಟ ಬಹುತೇಕ ಪ್ರಗತಿಪರರ ನಿಲುವುಗಳು, ವಿಚಾರಗಳು ಬಿಹಾರದ ಜನರನ್ನು ತಲುಪಿರುವುದರಲ್ಲಿ ಅನುಮಾನವೇನಿಲ್ಲ. ಕರ್ನಾಟಕದ ಕಲಬುರ್ಗಿಯವರ ಹತ್ಯೆಯಿಂದ ಶುರುವಾದ ಅಸಹಿಷ್ಣುತೆಯ ಘಟನೆಗಳಲ್ಲಿ ಬಹಳಷ್ಟು ಬಿಹಾರಕ್ಕೆ ತುಂಬಾ ಹತ್ತಿರದಲ್ಲ್ಲಿಯೇ ನಡೆದವು. ದಾದ್ರಿಯ ಹತ್ಯೆ, ಹರಿಯಾಣದಲ್ಲಿ ದಲಿತ ಮಕ್ಕಳನ್ನು ಜೀವಂತ ಸುಟ್ಟ ಪ್ರಕರಣಗಳನ್ನು ಬಿಹಾರದ ಜನ ತುಂಬಾ ಆಸಕ್ತಿಯಿಂದ, ಆತಂಕದಿಂದ ಗಮನಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಜಪ ಅಧಿಕಾರಕ್ಕೇರಿದ ಮರುಗಳಿಗೆಯಿಂದಲೇ ಆರಂಭಗೊಂಡ ಅಸಹಿಷ್ಣುತೆಯ ಘಟನಾವಳಿಗಳು ಆರ್ಥಿಕವಾಗಿ ತೀರಾ ಹಿಂದುಳಿದ ಬಿಹಾರದ ಜನತೆಯನ್ನು ಕಂಗೆಡಿಸಿದ್ದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಈ ಪ್ರಶಸ್ತಿಯ ವಾಪಸಾತಿ ಚಳುವಳಿಯ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬಾಜಪದ ನಿಜವಾದ ಮುಖವಾದ ಸಂಘಪರಿವಾರವು ಮೀಸಲಾತಿಯನ್ನು ಪುನರ್ ಪರಿಶೀಲನೆಗೊಳಿಸುವ ಬಗ್ಗೆ ಮಾತಾಡಿತ್ತು. ಅತ್ಯಂತ ಹಿಂದುಳಿದ ಜಾತಿಗಳಿರುವ ಬಿಹಾರದ ಜನತೆಯ ಮಟ್ಟಿಗೆ ಮೀಸಲಾತಿಯ ಹಿಂತೆಗೆತ ಎಂದರೆ ಅದು ಅವರ ಇತಿಶ್ರೀ ಇದ್ದಂತೆ ಎನ್ನುವುದು ಬಿಹಾರದ ಜನತೆಗೆ ಮನವರಿಕೆಯಾಗಿತ್ತು. ಇದರ ಜೊತೆಗೆ ಚುನಾವಣೆಯ ಪ್ರಚಾರದಲ್ಲಿ ಬಾಜಪ ಅನವಶ್ಯಕವಾಗಿ ಹಿಂದುಳಿದ ಜಾತಿಯವರನ್ನು, ಮುಸ್ಲಿಮರನ್ನು ಓಲೈಸುವ ನಾಟಕವಾಡುತ್ತ ಮೇಲ್ಜಾತಿಯ ಮತಗಳನ್ನು ದ್ರುವೀಕರಿಸುವ ಕೆಲಸಕ್ಕೆ ಕೈ ಹಾಕಿತ್ತು. 

ಬಹುಶ: ಇಂತಹದೊಂದು ಸನ್ನಿವೇಶದಲ್ಲಿ ಬಿಹಾರದ ಮತದಾರರು ಸಂಪೂರ್ಣವಾಗಿಯಲ್ಲದಿದ್ದರೂ ಒಂದಿಷ್ಟಾದರು, ಪ್ರಶಸ್ತಿ ವಾಪಸಾತಿ ಚಳುವಳಿಯ ಹಿಂದಿನ ವಿಚಾರವಾದಿಗಳ ನೈಜ ಕಾಳಜಿಯ ಬಗ್ಗೆ ಅರ್ಥ ಮಾಡಿಕೊಂಡು ಬಾಜಪದ ವಿರುದ್ದ ತಮ್ಮ ಮತ ಚಲಾಯಿಸಿದ್ದಾರೆ ಅನಿಸುತ್ತೆ.

ಏನೇ ಆಗಲಿ ಒಂದಂತೂ ಈ ಚುನಾವಣೆಯ ಪಲಿತಾಂಶ ಸ್ಪಷ್ಟ ಪಡಿಸಿದೆ: ಅದೆಂದರೆ ಅಸಹಿಷ್ಣುತೆಯ ವಿರುದದ್ದ ಚಳುವಳಿಯ ಭಾಗವಾಗಿ, ಲೇಖಕರು ತಮ್ಮ ಪ್ರಶಸ್ತಿಯನ್ನು ವಾಪಾಸು ಮಾಡಲು ತೊಡಗಿದಾಗ ವಿರೋಧಿಸಿದ ಬಲಪಂಥೀಯ ಶಕ್ತಿಗಳಿಗೆ ಈ ಚಳುವಳಿಯ ಪರಿಣಾಮ ಎಷ್ಟು ತೀವ್ರವಾಗಿರಬಹುದೆಂಬುದು ಅರ್ಥವಾಗಿರುತ್ತದೆಯೆಂದು ನಂಬಿರುತ್ತೇನೆ. 

Nov 14, 2015

ಈ ಸಾವಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ?

ಸಾಬಿ ಸತ್ತರೆ ಹಿಂದೂ ಸಂಘಟನೆಗಳ ಕೃತ್ಯ, ಹಿಂದೂ ಸತ್ತರೆ ಮುಸ್ಲಿಂ ಸಂಘಟನೆಗಳ ಕೃತ್ಯ ಎಂದು ಕಣ್ಣುಮುಚ್ಚಿ ಶರಾ ಬರೆದುಬಿಡುವವರಿಗೆ ಈ ಪ್ರಕರಣವೊಂದು ಒಗಟಾಗಿಬಿಟ್ಟಿದೆ. ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. 
ಮುಸ್ಲಿಂ ಮತ್ತು ಹಿಂದೂಗಳಿಬ್ಬರ ಮೇಲೆಯೂ ಹಲ್ಲೆಯಾಗಿಬಿಟ್ಟಿದೆ. ಹಲ್ಲೆ ನಡೆಸಿದ್ದು ಹಿಂದೂ ಸಂಘಟನೆಯೋ ಮುಸ್ಲಿಂ ಸಂಘಟನೆಯೋ ಇನ್ನೂ ಗೊತ್ತಾಗಿಲ್ಲ. ಹರೀಶನ ಮನೆಯೀಗ ಅನಾಥವಾಗಿದೆ. 
ಅಂದಹಾಗೆ ಉಳಿದೆಲ್ಲೆಡೆ ಟಿಪ್ಪು ಸಂಬಂಧಿತ ಗಲಭೆಗಳು ಕಡಿಮೆಯಾಗುತ್ತಿದ್ದರೆ ದಕ್ಷಿಣ ಕನ್ನಡದಲ್ಲಿ ಬಿಗುವಿನ ವಾತಾವರಣವೇ ಇದೆಯಂತೆ. ನೆನಪಿರಲಿ ದಕ್ಷಿಣ ಕನ್ನಡದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಬಿಟ್ಟು ಬೇರೆಲ್ಲ ಕಡೆಯೂ ಬಿಜೆಪಿ ಸೋಲನ್ನನುಭವಿಸಿತ್ತು. ಅವರಿಗಿದು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಮಾರ್ಗ. ಮೃದು ಹಿಂದುತ್ವವನ್ನಾಚರಿಸುವ ಕಾಂಗ್ರೆಸ್ಸಿಗರು ಮೌನವಾಗೇ ಈ ಘಟನೆಗಳನ್ನು ಒಪ್ಪಿಬಿಡುತ್ತಾರೆ. ಇವರ ಜೊತೆಗೆ ಇವರಿಗಿಂತಲೂ ಹೀನವಾಗಿ ವರ್ತಿಸುವುದಕ್ಕೆ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳಿವೆ. ಅವರಿಗೆ ಮುಸ್ಲಿಂ ಮತಗಳನ್ನು ಒಟ್ಟುಗೂಡಿಸುವ ಕೆಲಸ. ಮತಗಳ ಒಟ್ಟುಗೂಡುವಿಕೆಯ ಸಮಯದಲ್ಲಿ ಮಾನವೀಯತೆ ಮೂರಾಬಟ್ಟೆಯಾದರೆ ಯಾರಿಗೇನಾಗಬೇಕು ಹೇಳಿ.

Nov 12, 2015

ಕುಂವಿ ಮತ್ತು ಬಂಜಗೆರೆಯವರ ಪ್ರತಿಕ್ರಿಯೆ.

ನವೀನ್ ನಿಮ್ಮಂಥ ಪ್ರಗತಿಪರ ಯುವಮನಸ್ಸುಗಳ ಆತಂಕ ಅರ್ಥಾಗುತ್ತೆ, ನಾನು ಅಕಸ್ಮಾತ್ ಆ ದಿವಸ ಉಪನ್ಯಾಸ ನೀಡಿದರೆ ಅದು ನಾಡಿನ ಸಹಸ್ರ ವಿವಿಧ ಜಾಯಮಾನದ ಹಾಗೂ ಅಭಿರುಚಿಯ ಜನರನ್ನುದ್ದೇಶಿಸಿ, ಆದರೆ ಮೋಹನ್ ಆಳ್ವಾ ಕುಟುಂಬ ಸದಸ್ಯರನ್ನುದ್ದೇಶಿಸಿ ಖಂಡಿತ ಅಲ್ಲ, ಅದು ಮಾತಾಡಲು.ತಿದ್ದಲು. ಪ್ರತಿಭಟಿಸಲು ಸೂಕ್ತ ಜಾಗ, ನನ್ನಂಥೋರು ಭಾಗವಹಿಸದಿದ್ದಲ್ಲಿ ಮೂಲಭೂತವಾದಿಗಳಾದ ಬೇರೆಯವರು ಮಾತಾಡ್ತಾರೆ. ಆತ್ಮಸಾಕ್ಷಿ ಕಳೆದುಕೊಳ್ಳುವುದಿಲ್ಲ, ರಾಜಿಯಾಗೋದಿಲ್ಲ, ನೇರ ದಿಟ್ಟ ನಿರಂತರ, ಆತಂಕ ಬೇಡ.
- ಕುಂವೀ

ಇದನ್ನೂ ಓದಿ: ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ


ಸಾಕಷ್ಟು ಪರ್ಯಾಲೋಚಿಸದೆ, ಸಾಮಾಜಿಕ ನ್ಯಾಯದ ಹೊಸ ಹುಡುಕಾಟಗಳು ಎಂಬ ವಿಷಯವನ್ನಷ್ಟೆ ನೋಡಿಕೊಂಡು ಒಪ್ಪಿಕೊಂಡಿದ್ದೆ. ಈಗ ನಮ್ಮ ಬಂಧು-ಬಳಗಕ್ಕೆ ನಾನು ಹಾಗೇ ಹೋಗುವುದು ಸರಿಯಲ್ಲ ಅನಿಸಿದರೆ ನಾನು 'ನುಡಿಸಿರಿ'ಗೆ ಹೋಗುವುದಿಲ್ಲ. ಸಂಗಾತಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದ್ದಕ್ಕೆ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೆನೆ. ನಾವೆಲ್ಲರೂ ಒಂದೇ. ನಾವೆಲ್ಲರೂ ಕೈಗೆ ಕೈಜೋಡಿಸಿ ಸಾಂಸ್ಕೃತಿಕ ಯುದ್ಧವನ್ನು ಗೆಲ್ಲಬೇಕಾದ ಸಂಗಾತಿಗಳು. ನಾನು ನಿಮ್ಮೊಡನೆ ಇರುತ್ತೇನೆ, ಎಲ್ಲರಿಗೂ ವಂದನೆಗಳು.
-ಬಂಜಗೆರೆ ಜಯಪ್ರಕಾಶ.

ಸತ್ತವರ ಹೆಸರಲ್ಲಿ ಸಾವಿನ ಆಚರಣೆ.

Dr Ashok K R
ಟಿಪ್ಪು ಬಗೆಗಿನ ಚರ್ಚೆ ಅನವಶ್ಯಕ ಎಂದೇ ನಂಬಿದ್ದವನು ನಾನು. ನಾವು ದಿನನಿತ್ಯ ವ್ಯವಹರಿಸುವ, ಸಂವಹಿಸುವ ಜನರ ಒಳ್ಳೆಯತನದ ಬಗ್ಗೆಯೇ ನಮಗೆ ಅರಿವಾಗದಿರುವಾಗ ಇನ್ನೂರು ಮುನ್ನೂರು ವರ್ಷದ ಹಿಂದೆ ಸತ್ತು ಹೋದ ವ್ಯಕ್ತಿಯೊಬ್ಬ ದೇವರಷ್ಟೇ ಒಳ್ಳೆಯವನು ದೆವ್ವದಷ್ಟೇ ಕೆಟ್ಟವನು ಎಂದು ವಾದಿಸುವುದು ಇವತ್ತಿನ ವರ್ತಮಾನಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ? ಟಿಪ್ಪುವಿನ ಹೆಸರಲ್ಲಿ ಸಾವು ನಡೆದುಹೋಗಿದೆ. ಸಾವಿನ ನೆಪದಲ್ಲಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವವರ ಸಂಖೈಯೂ ಹೆಚ್ಚಾಗಿಬಿಟ್ಟಿದೆ. ಜನರನ್ನು ಉದ್ರೇಕಗೊಳಿಸುವಂತಹ ಬರಹಗಳು ಫೇಸ್ ಬುಕ್ ತುಂಬ ರಾರಾಜಿಸುತ್ತಿವೆ. ಈಗಲೂ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯದಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಬರಹ. ಮೊದಲು ಟಿಪ್ಪು ಜಯಂತಿಯ ವಿರೋಧಿಗಳ ವಾದದಲ್ಲಿರುವ ದ್ವಂದ್ವಗಳನ್ನು ಗುರುತಿಸೋಣ.

ಇದನ್ನೂ ಓದಿ: ಟಿಪ್ಪು ಎಂಬ ಅನವಶ್ಯಕ ಚರ್ಚೆ

ಟಿಪ್ಪು ಒಬ್ಬ ಧರ್ಮದ್ರೋಹಿ, ಸಾವಿರಾರು ಹಿಂದೂಗಳನ್ನು ಕೊಂದು ಸಾವಿರಾರು ಜನರನ್ನು ಮತಾಂತರಿಸಿದ, ಅವನ ಕೈಯೆಲ್ಲ ರಕ್ತಮಯ: ಟಿಪ್ಪು ವಿರೋಧಿಗಳು ಹೇಳಿರುವುದೆಲ್ಲವೂ ಸತ್ಯ. ಆತ ಸಾವಿರಾರು ಜನರನ್ನು ಕೊಂದಿರುವುದೂ ಹೌದು, ಮತಾಂತರಿಸಿರುವುದೂ ಹೌದು. ಟಿಪ್ಪು ಪ್ರಜಾಪ್ರಭುತ್ವ ರೀತಿಯಿಂದ ಆಯ್ಕೆಯಾದ ‘ರಾಜ’ನಲ್ಲ ಎನ್ನುವುದನ್ನು ನೆನಪಿಡಬೇಕು. ಆತ ಅರಮನೆಯ ಸುಖದೊಳಗೆ ಬಂಧಿಯಾಗಿದ್ದ ರಾಜನೂ ಅಲ್ಲ. ಹೆಚ್ಚಿನ ದಿನಗಳನ್ನು ಯುದ್ಧಗಳಲ್ಲೇ ಕಳೆದ; ಯುದ್ಧದ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ರಕ್ಷಣೆ. ಯುದ್ಧವೆಂದ ಮೇಲೆ ಸಾವಿರುವುದು ಸತ್ಯವಲ್ಲವೇ. ಇಡೀ ದೇಶದ ರಾಜರೆಲ್ಲ ಯುದ್ಧವನ್ನು ‘ಶಾಂತಿ’ಯಿಂದ ನಡೆಸಿಬಿಟ್ಟಿದ್ದರೆ ಟಿಪ್ಪು ಅಪರಾಧಿಯಾಗಿಬಿಡುತ್ತಿದ್ದ. ಯುದ್ಧದಲ್ಲಿದ್ದ ಯಾವ ರಾಜ ಶಾಂತಿಯಿಂದ ಕಾರ್ಯನಿರ್ವಹಿಸಿದ? ನಮ್ ದೇಶದ ಬಾವುಟದಲ್ಲಿ ಮಧ್ಯದಲ್ಲೊಂದು ನೀಲಿ ಚಕ್ರವಿದೆಯಲ್ಲ, ಅಶೋಕ ಚಕ್ರ, ಆ ಅಶೋಕನೇನು ಶಾಂತಿಯ ದೂತನೇ? ಸಾವಿರಾರು ಜನರನ್ನು ಕಳಿಂಗ ಯುದ್ಧದಲ್ಲಿ ಕೊಂದ ನಂತರವಷ್ಟೇ ಆತ ಬೌದ್ಧ ಧರ್ಮ ಸ್ವೀಕರಿಸಿದ್ದು ಅಲ್ಲವೇ. ಅವನಿಂದ ಹತರಾದ ಜನರ ವಂಶಜರು ಅಶೋಕ ಚಕ್ರವನ್ನು ಬಾವುಟದಿಂದ ಕಿತ್ತು ಹಾಕಿ ಎಂದರದು ಒಪ್ಪಿತವೇ? ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳೇ ಹಿಂಸೆಯನ್ನು ಬೆಂಬಲಿಸಿದ ಅನೇಕ ನಿದರ್ಶನಗಳನ್ನು ಸ್ವತಂತ್ರ ಭಾರತದಲ್ಲಿ ನಾವು ಕಂಡಿರುವಾಗ ರಾಜರು ಶಾಂತಿ ಪಾಲಿಸಿದರೆಂದರೆ ನಂಬಲು ಸಾಧ್ಯವೇ?

ಇನ್ನು ಟಿಪ್ಪು ಮತಾಂತರ ಮಾಡಿದ ಎನ್ನುವುದರ ಬಗ್ಗೆ. ಅದು ರಾಜರ ಕಾಲ. ರಾಜನ ಧರ್ಮವನ್ನು ಜನರ ಮೇಲೆ ‘ಹೇರುತ್ತಿದ್ದ’ ಕಾಲ. ಹಿಂದೂ ಧರ್ಮದ ಜಾತಿ ಪದ್ಧತಿಯೂ ಮತಾಂತರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಕೇರಳದಲ್ಲಿ ಟಿಪ್ಪು ಮತಾಂತರಿಸಿದ ಎಂದು ಅರ್ಧ ಸತ್ಯ ಹೇಳುವವರೆಲ್ಲ ಮತ್ತರ್ಧವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಕೇರಳದಲ್ಲಿ ದಲಿತರು ಮೊಳಕಾಲಿನ ಕೆಳಗೆ ಮತ್ತು ಸೊಂಟದ ಮೇಲೆ ಬಟ್ಟೆಯನ್ನೇ ಧರಿಸುವಂತಿರಲಿಲ್ಲ. ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ ಮಗುವಿಗೆ ಹಾಲು ಕುಡಿಸುವ ಮೊದಲು ಮೇಲ್ಜಾತಿಯ ಜನರ ಮುಂದೆ ಬಂದು ನಿಲ್ಲಬೇಕಿತ್ತು. ಮೇಲ್ಜಾತಿಯ ಬ್ರಹಸ್ಪತಿಗಳು ಆಕೆಯ ಮೊಲೆಯನ್ನು ಅಳೆದು ‘ಮೊಲೆ ತೆರಿಗೆ’ ವಿಧಿಸುತ್ತಿದ್ದರು. ಮೊಲೆ ತೆರಿಗೆ ಕಟ್ಟಿದ ನಂತರವಷ್ಟೆ ಮಗುವಿಗೆ ಹಾಲು ಕುಡಿಸುವ ಅನುಮತಿ ಸಿಕ್ಕುತ್ತಿತ್ತು. ಒಬ್ಬ ದಲಿತ ಹೆಣ್ಣುಮಗಳು ಪ್ರತಿಭಟನೆಯ ರೂಪದಲ್ಲಿ ತನ್ನೆರಡೂ ಮೊಲೆಗಳನ್ನೇ ಕಡಿದು ಇದನ್ನೇ ನಿಮ್ಮ ತೆರಿಗೆಗೆ ವಜಾ ಮಾಡಿಕೊಳ್ಳಿ ಎಂದು ಹೇಳಿಬಿಟ್ಟಳು. ಮತಾಂತರಕ್ಕೆ ಟಿಪ್ಪು ಎಷ್ಟು ಕಾರಣನೋ ಈ ಶೋಷಣೆಯೂ ಅಷ್ಟೇ ಕಾರಣವಲ್ಲವೇ? ವಾದಕ್ಕೆ ಕೇಳ್ತೀನಿ, ಮತಾಂತರ ನಡೆಸಿದ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸಬಾರದು ಎನ್ನುತ್ತೀರಲ್ಲ ಬ್ರಾಹ್ಮಣ, ಕುರುಬ, ದಲಿತ ಸಮುದಾಯದಿಂದ ಲಿಂಗಾಯತ ಧರ್ಮಕ್ಕೆ ಮತಾಂತರಿಸಿದ ಬಸವಣ್ಣನ ಜಯಂತಿಯನ್ನು ಸರಕಾರವೇ ಆಚರಿಸುತ್ತದೆಯಲ್ಲವೇ? ಅದು ಸರಿಯಾದರೆ ಇದು ಹೇಗೆ ತಪ್ಪಾಯಿತು?

ಇನ್ನು ಟಿಪ್ಪು ಕನ್ನಡ ವಿರೋಧಿ ಎಂಬ ವಾದ. ಹೌದು ಆತ ಪಾರ್ಸಿ ಭಾಷೆಯನ್ನೋ ಮತ್ತೊಂದು ಭಾಷೆಯನ್ನೋ ಉಪಯೋಗಿಸುತ್ತಿದ್ದ. ರಾಜನ ಆಳ್ವಿಕೆಯ ಕಾನೂನುಗಳನ್ನು ಇವತ್ತಿನ ದೃಷ್ಟಿಯಿಂದ ಅಳೆಯುವುದೇ ತಪ್ಪಲ್ಲವೇ? ಶ್ರೀ ಕೃಷ್ಣದೇವರಾಯ ತೆಲುಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅನ್ನುವುದು ಇತಿಹಾಸದಲ್ಲಿದೆ. ಆ ಕಾರಣಕ್ಕೆ ಹಂಪಿ ಉತ್ಸವವನ್ನು ವಿರೋಧಿಸಬೇಕೆ? ಹಿಂದಿ ಹೇರಿಕೆಯನ್ನು ಕಂಡೂ ಕಾಣದಂತಿರುವ, ಹಿಂದಿ ಹೇರಿಕೆಯನ್ನು ಸಮರ್ಥಿಸುವ, ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಸುಳ್ಳೇ ಜನರನ್ನು ನಂಬಿಸುವ ಜನರಿಗೆಲ್ಲ ಇದ್ದಕ್ಕಿದ್ದಂತೆ ಕನ್ನಡ ಪ್ರೇಮ ಮೂಡಿಬಿಟ್ಟಿರುವುದು ಸೋಜಿಗ! 

ಟಿಪ್ಪುವನ್ನು ವಿರೋಧಿಸಲು ಇವ್ಯಾವುದೂ ನೈಜ ಕಾರಣವಲ್ಲ. ಇವೆಲ್ಲ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ಉಪಯೋಗಿಸುತ್ತಿರುವ ನೆಪಗಳಷ್ಟೆ. ಟಿಪ್ಪು ಸುಲ್ತಾನ್ ಮುಸ್ಲಿಂ ಅದಕ್ಕೆ ನಮಗವನನ್ನ ಕಂಡರೆ ಆಗಲ್ಲ ಎಂದು ಬಹಿರಂಗವಾಗಿ ಹೇಳಲಾಗದವರು ಹುಡುಕುವ ನೆಪಗಳಷ್ಟೇ. 

ವೈಯಕ್ತಿಕವಾಗಿ ನನಗೆ ಈ ಯಾವ ಜಯಂತಿ, ಉತ್ಸವಗಳಲ್ಲಿಯೂ ನಂಬಿಕೆಯಿಲ್ಲ. ಸುಖಾಸುಮ್ಮನೆ ನಮ್ಮ ನಿಮ್ಮಂತೆಯೇ ಒಳಿತು ಕೆಡುಕುಗಳಿದ್ದ ಮನುಷ್ಯರನ್ನು ಆಕಾಶದೆತ್ತರಕ್ಕೆ ಏರಿಸುವ, ರಣಭಯಂಕರವಾಗಿ ಹೊಗಳುವ ಇಂತಹ ಜಯಂತಿಗಳು ಇರದಿದ್ದರೆ ಪ್ರಪಂಚವೇನು ಮುಳುಗಲಾರದು. ಇದರ ಜೊತೆಜೊತೆಗೆ ವ್ಯಕ್ತಿ ಮತ್ತು ಮೂರ್ತಿ ಪೂಜೆಯಿಂದ ಹೊರಬರಲಾರದ ನಮ್ಮ ಜನರಿಗೆ ಇಂತಹ ಜಯಂತಿಗಳು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎನ್ನುವುದೂ ಸತ್ಯ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿಗಳೆಲ್ಲವೂ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿಬಿಡುವ ಕೆಟ್ಟ ಕೆಲಸವನ್ನು ಮಾಡುತ್ತಲೇ ಆ ಸಮುದಾಯದ ಜನರ ಮನೋಸ್ಥೈರ್ಯವನ್ನು ಹಿಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಸುಳ್ಳಲ್ಲ. ಟಿಪ್ಪು ಜಯಂತಿ ಕೂಡ ಮುಸ್ಲಿಮರಲ್ಲಿ ಅಂತದೊಂದು ಸ್ಥೈರ್ಯ ತುಂಬುತ್ತಿತ್ತೋ ಏನೋ? ತುಂಬಬಾರದು ಎನ್ನುವುದು ವಿರೋಧಿಗಳ ಉದ್ದೇಶ. ಇಂತಹುದೊಂದು ಸರಕಾರ ಪ್ರಾಯೋಜಿತ ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿ.ಎಚ್.ಪಿಯ ಮುಖಂಡ ಕುಟ್ಟಪ್ಪ, ರಾಜು ಮತ್ತು ಸಾವುಲ್ ಹಮೀದ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಕುಟ್ಟಪ್ಪ ಮತ್ತು ರಾಜುನನ್ನು ಸಾಬರು ಕಲ್ಲು ಹೊಡೆದು ಕೊಂದರು ಎನ್ನುವುದು ಹಿಂದೂ ಸಂಘಟನೆಗಳ ವಾದವಾದರೆ ಸಾವುಲ್ ಹಮೀದನನ್ನು ಹಿಂದೂಗಳು ಗುಂಡಿಟ್ಟು ಕೊಂದಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಪೋಲೀಸರ ಪ್ರಕಾರ ಕುಟ್ಟಪ್ಪ ಓಡುವಾಗ ಹತ್ತಡಿ ಎತ್ತರದ ಕಾಂಪೌಂಡು ಗೋಡೆಯಿಂದ ಬಿದ್ದು ಸತ್ತಿದ್ದು. ಇನ್ನು ರಾಜು ಆಸ್ಪತ್ರೆಯಲ್ಲಿದ್ದ ರೋಗಿ. ಗಲಭೆಯನ್ನು ವೀಕ್ಷಿಸುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದು ಸತ್ತಿದ್ದು. ಸಾವುಲ್ ಹಮೀದನ ಮೇಲೆ ಯಾರೂ ಗುಂಡು ಹಾರಿಸಿಲ್ಲ. ಲಾಠಿ ಚಾರ್ಜಿನ ಸಮಯದಲ್ಲಿ ಬಿದ್ದ ಪೆಟ್ಟಿನಿಂದ ಸತ್ತಿದ್ದು. ಸಾವು ಯಾವ ರೀತಿಯಿಂದಲೇ ಆಗಿರಲಿ, ಪರೋಕ್ಷವಾಗಿ ಎಲ್ಲಾ ಸಾವುಗಳು ಟಿಪ್ಪು ಜಯಂತಿಯ ಕಾರಣಕ್ಕೇ ಆಗಿದೆ. 

ಪೋಲೀಸ್ ಚಾರ್ಜ್ ಶೀಟು ರೀತಿಯಲ್ಲೇ ಈ ಸಾವುಗಳಿಗೆ ಯಾರು ಹೊಣೆ ಎಂದರೆ ಎ1 ಸ್ಥಾನದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್, ಎ2 ಆಗಿ ಪ್ರತಾಪಸಿಂಹ ಮತ್ತು ಬಿಜೆಪಿ, ಎ3 ಆಗಿ ಪೋಲೀಸರನ್ನು ನಿಲ್ಲಿಸಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ವೋಟ್ ಬ್ಯಾಂಕ್ ರಾಜಕೀಯದ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಎಲ್ಲರೂ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ ಇದರಲ್ಲೇನು ತಪ್ಪು ಎಂಬ ಪ್ರಶ್ನೆಯನ್ನು ಖಂಡಿತವಾಗಿ ಕಾಂಗ್ರೆಸ್ಸಿನವರ ಕೇಳುತ್ತಾರೆ. ವೋಟಿನ ನೆಪದಲ್ಲಿ ಮೂವರ ಹತ್ಯೆಯ ಹೊಣೆಯನ್ನು ಹೊತ್ತಿಕೊಳ್ಳುತ್ತಾರ? ಮುಸ್ಲಿಮರ ಮತಕ್ಕಾಗಿಯಷ್ಟೇ ಈ ಜಯಂತಿ ಮಾಡಿದ್ದು ಎಂದು ಸರಕಾರ ಎಷ್ಟು ನಿಖರವಾಗಿ ಹೇಳಿದೆ ಗೊತ್ತೆ? ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೋ ಪ್ರವಾಸೋದ್ಯಮ ಖಾತೆಯ ವತಿಯಿಂದಲೋ ಮಾಡಿಸಿಲ್ಲ ಮಾಡಿಸಿರುವುದು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ. ಅದರಲ್ಲೇ ಗೊತ್ತಾಗುವುದಿಲ್ಲವೇ ಇವರ ಯೋಗ್ಯತೆ. ಟಿಪ್ಪು ಜಯಂತಿಯನ್ನು ಘೋಷಿಸಿದರೆ ಅದಕ್ಕೆ ಮತ್ತದೆ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಬಿಜೆಪಿಯವರು ವಿರೋಧಿಸುತ್ತಾರೆ ಎನ್ನುವುದನ್ನು ತಿಳಿಯದಷ್ಟು ಅಮಯಾಕರೇನಲ್ಲವಲ್ಲ ಸಿದ್ಧರಾಮಯ್ಯನವರು. ವಿರೋಧ ವ್ಯಕ್ತವಾಗಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಬಿಜೆಪಿಯವರು ವಿರೋಧಿಸಿದಷ್ಟೂ ಮುಸ್ಲಿಮರ ವೋಟುಗಳು ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ ಎನ್ನುವುದರ ಅರಿವೂ ಇತ್ತು. ಎಲ್ಲವೂ ಅವರಂದುಕೊಂಡಂತೆಯೇ ಆಯಿತು; ಮೂವರ ಹೆಣದ ಮೇಲೆ. 

ಇನ್ನು ಎ2 ಸ್ಥಾನದಲ್ಲಿರುವ ಪ್ರತಾಪಸಿಂಹ ಮತ್ತು ಬಿಜೆಪಿ ಕೂಡ ಎ1 ಆರೋಪಿಗಳಷ್ಟೇ ಅಪಾಯಕಾರಿಯಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಜಾಗ್ರತವಾಗಿ ಗೌಡ ಗೌಡ ಎಂದುಕೊಂಡು ಓಟು ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಈಗ ಧರ್ಮದ್ವೇಷದ ಆಧಾರದಲ್ಲಿ ‘ಹಿಂದೂ ಹೃದಯ ಸಾಮ್ರಾಟ್’ ಎಂದು ಕರೆಸಿಕೊಳ್ಳುವ ಹಪಾಹಪಿ. ಟಿಪ್ಪು ಜಯಂತಿಯನ್ನು ನಖಶಿಖಾಂತ ವಿರೋಧಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಮಡಿಕೇರಿ. ಕಾರಣ ಅಲ್ಲಿ ಬಿಜೆಪಿಗೆ ಬೆಂಬಲವೂ ಇದೆ, ಟಿಪ್ಪುವನ್ನು ದ್ವೇಷಿಸಲು ಕಾರಣವೂ ಇದೆ. ಲೋಕಸಭಾ ಸದಸ್ಯರ ಘನತೆಗೆ ತಕ್ಕದಲ್ಲದ ‘ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ರೂ ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡುತ್ತಿದ್ದರಾ?’ ಎಂಬಂತಹ ವಿಚ್ಛಿದ್ರಕಾರಿ ಹೇಳಿಕೆಗಳೂ ಅವರ ಬಾಯಿಂದ ಉದುರಿದವು. ಜನರನ್ನು ಧರ್ಮದ ಹೆಸರಿನಲ್ಲಿ ಉದ್ರಿಕ್ತಗೊಳಿಸಿ ಪ್ರತಿಭಟಿಸುವಂತೆ ಮಾಡಿ, ಸಾಯುವಂತೆ ಮಾಡಿ ಅವರು ಬಹುಶಃ ಮೈಸೂರಿನ ತಮ್ಮ ಮನೆಯಲ್ಲಿ ಬೆಚ್ಚಗೆ ಕುಳಿತಿರಬೇಕು. ಚಳಿಗಾಲ ಬೇರೆ ಶುರುವಾಗಿದೆಯಲ್ಲ.

ಎ3 ಸ್ಥಾನದಲ್ಲಿರುವ ಪೋಲೀಸರನ್ನು ಬಯ್ಯುವುದಾದರೂ ಹೇಗೆ? ಒಂದು ಕಡೆ ಆಡಳಿತ ಪಕ್ಷ, ಇನ್ನೊಂದು ಕಡೆ ಮುಂದೆ ಆಡಳಿತಕ್ಕೆ ಬರಬಹುದಾದ ವಿರೋಧ ಪಕ್ಷ, ಈ ಪಕ್ಷಗಳ ತಾಳಕ್ಕೆ ಕುಣಿಯುವುದೇ ಕಸುಬಾಗಿಬಿಟ್ಟಿರುವಾಗ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ಮಡಿಕೇರಿಯಲ್ಲಿ ನಡೆಯುವ ಗಲಭೆಯ ಬಗ್ಗೆ ಅವರಿಗೆ ಮಾಹಿತಿಯಿತ್ತು. ಗುಪ್ತಚರ ಮಾಹಿತಿಯೇನು ಬೇಕಿರಲಿಲ್ಲ, ಸಂಘಟನೆಗಳ ಮುಖಂಡರ ಮಾತುಗಳೇ ಸಾಕಿತ್ತು ಗಲಭೆಗೆ ಹೇಗೆ ಎರಡೂ ಗುಂಪುಗಳು ತಯಾರಾಗಿವೆ ಎಂದು ಅರಿಯುವುದಕ್ಕೆ. ಕೆಲವು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಟಿಪ್ಪು ಸಮಾಧಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಮಾಹಿತಿಯೂ ಅವರಲ್ಲಿತ್ತು (ಈ ಘಟನೆ ಯಾವ ಮಾಧ್ಯಮದಲ್ಲೂ ಪ್ರಸಾರವೇ ಆಗಲಿಲ್ಲ). ಶ್ರೀರಂಗಪಟ್ಟಣ ಮತ್ತು ಮಂಡ್ಯದಲ್ಲಿ ಶಾಂತಿಯುತವಾಗಿ ಜಯಂತೋತ್ಸವ ನಡೆದಿರುವಾಗ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಸುವ ಸ್ಥೈರ್ಯವನ್ನು ಪೋಲೀಸರು ತೋರಿಸಬೇಕಿತ್ತು. ದುರದೃಷ್ಟವಶಾತ್ ಇವರ ಈ ವೈಫಲ್ಯಕ್ಕೆ ಮೂರು ಹೆಣಗಳುರುಳಿವೆ.

ಒಂದು ಗಮನಿಸಿದಿರೋ ಇಲ್ಲವೋ. ಈ ರೀತಿಯ ಗಲಭೆ ನಡೆಯಬಹುದೆನ್ನುವ ಅನುಮಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಇತ್ತು. ಕುಳಿತು ಮಾತನಾಡಿ ಶಾಂತಿ ಕಾಪಿಡುವಂತೆ ಮಾಡಬೇಕಿದ್ದ ಮುಖಂಡರು ಗಲಭೆ ಮತ್ತಷ್ಟು ಹೆಚ್ಚಾಗುವಂತಹ ಮೂರ್ಖತನದ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿಬಿಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ತಮ್ಮ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಲಭೆ ಮತ್ತು ಹತ್ಯೆಗಳು ಅವಶ್ಯಕವೆನ್ನಿಸಿರಬೇಕು. ಇಬ್ಬರೂ ತಮ್ಮ ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದಾರೆ ಮೂವರ ಹೆಣದ ಮೇಲೆ.