Sep 19, 2020

ಒಂದು ಬೊಗಸೆ ಪ್ರೀತಿ - 80

"ಇದ್ಯಾಕೆ? ಪರೀಕ್ಷೆ ಮುಗಿದ ಮೇಲೆ ಓದೋಕೇನೂ ಇಲ್ಲ ಅಂತ ತುಂಬಾ ಬೇಸರಕ್‌ ಹೋಗ್ಬಿಟ್ಟಂಗಿದ್ದಿ" ಬೆಳಗಿನ ರೌಂಡ್ಸು ಮುಗಿಸಿ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಒಳಬಂದ ಸುಮಾ ಕೇಳಿದ ಪ್ರಶ್ನೆಗೆ ಮುಗುಳ್ನಕ್ಕೆ, ಉತ್ತರಿಸಲಿಲ್ಲ. ಇವತ್ತಿಗೆ ಇಪ್ಪತ್ತು ದಿನವೇ ಆಯಿತು ಮನೆಯಲ್ಲಿ ಗಲಾಟೆ ನಡೆದು. ಅವತ್ತಿನಿಂದ ಇವತ್ತಿನವರೆಗೂ ಮನಸ್ಸು ಸರಿ ಹೋಗಿಲ್ಲ. ಯಾಂತ್ರಿಕವಾಗಿ ಬೆಳಿಗ್ಗೆ ಮಗಳನ್ನು ಅಪ್ಪನ ಮನೆಗೆ ಬಿಟ್ಟು ಕೆಲಸಕ್ಕೆ ಬಂದು ಸಂಜೆ ಹೋಗುವಾಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀನಷ್ಟೇ. ಅಪ್ಪನ ಮನೆಯೊಳಗೂ ಕಾಲಿಟ್ಟಿಲ್ಲ ಅಷ್ಟು ದಿನದಿಂದ. ಬೆಳಿಗ್ಗೆ ಹೋಗಿ ಮನೆ ಮುಂದೆ ನಿಂತು ಹಾರ್ನ್‌ ಹೊಡೆದ್ರೆ ಅಪ್ಪನೋ ಅಮ್ಮನೋ ಶಶೀನೋ ಹೊರಬಂದು ಮಗಳನ್ನು ಕರೆದುಕೊಂಡು ಹೋಗುತ್ತಾರೆ, ಸಂಜೆ ಮತ್ತೊಂದು ಸುತ್ತು ಹಾರ್ನ್‌ ಹೊಡೆದ್ರೆ ಅಮ್ಮ ಒಳಗಡೆ ಬಾಗಿಲು ತೆರೆಯುತ್ತಾರೆ. ರಾಧ ಹೊರಬರುತ್ತಾಳೆ. ಅಮ್ಮ ಹೊರಬಂದು ನನ್ನನ್ನು ಮಾತನಾಡಿಸುವುದಿಲ್ಲ, ನಾನು ಒಳಗೋಗಿ ಅವರನ್ನು ವಿಚಾರಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಸಂಜೆ ಅಪ್ಪ ಮನೆಯಲ್ಲೇ ಇದ್ದರೆ "ಬಾ ಒಳಗೆ" ಎನ್ನುತ್ತಾರೆ. ʻಇರ್ಲಿ ಪರವಾಗಿಲ್ಲ ಕೆಲಸವಿದೆʼ ಎಂದ್ಹೇಳಿ ನಾ ಹೊರಟುಬಿಡುತ್ತೇನೆ. ಅಪ್ಪನಿಗೂ ನನ್ನ ಮನಸ್ಥಿತಿಯ ಅರಿವಿದೆಯಲ್ಲ, ಬಲವಂತಿಸುವುದಿಲ್ಲ. ಇನ್ನು ಮನೆಗೆ ಬಂದು ಅಡುಗೆ ಪಾತ್ರೆ ಕ್ಲೀನಿಂಗು ಅಂತ ಸಮಯ ಹೋಗುವುದು ತಿಳಿಯುವುದಿಲ್ಲ. ರಾಜೀವ ಬರೋದು ತಡವಾಗಿ, ಹತ್ತು ಹತ್ತೂವರೆಯ ಸುಮಾರಿಗೆ. ಅಷ್ಟೊತ್ತಿಗೆ ಹೆಚ್ಚಿನ ದಿನ ನಾನೂ ಮಗಳು ಮಲಗಿ ಬಿಟ್ಟಿರುತ್ತೇವೆ. ಅವರ ಬಳಿ ಇರುವ ಕೀಯಿಂದ ಬಾಗಿಲು ತೆಗೆದುಕೊಂಡು ಒಳಬಂದು ಹಾಲಿನಲ್ಲೇ ಮಲಗಿಬಿಡುತ್ತಾರೆ. ಬೆಳಿಗ್ಗೆ ನಾ ಎದ್ದ ಮೇಲೆ ರೂಮಿನೊಳಗೆ ಬಂದು ಮಗಳ ಪಕ್ಕ ಮಲಗಿದರೆ ನಾನೂ ಮಗಳು ಹೊರಗೆ ಕಾಲಿಡುವವರೆಗೂ ಎದ್ದೇಳುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವರಿಗೇನೋ ಮುಂಚೆಯಿಂದಾನೂ ಹೆಚ್ಚು ಮಲಗುವ ಅಭ್ಯಾಸವಿರುವುದು ಹೌದು. ಆದರೆ ತೀರ ಇಷ್ಟೊಂದೆಲ್ಲ ಅಲ್ಲ. ನನ್ನ ಜೊತೆ ಯಾವುದೇ ಮಾತುಕತೆ ನಡೆಸಬಾರದೆಂಬ ಕಾರಣಕ್ಕಷ್ಟೇ ಈ ರೀತಿಯ ವರ್ತನೆ. ನಾನೂ ಪ್ರಶ್ನಿಸಲೋಗಲಿಲ್ಲ. "ನಿನಗೆ ಬೇಕಾಗುವವರೆಗೆ, ನಿನಗೆ ಅವಶ್ಯಕತೆ ಇರುವವರೆಗೆ ನೀನು ನಾ ಕೋಪಗೊಂಡರೂ, ಸಿಟ್ಟುಗೊಂಡರೂ, ನಿನ್ನನ್ನು ಹಿಗ್ಗಾಮುಗ್ಗಾ ಬಯ್ದರೂ ಮತ್ತೆ ಮೆಸೇಜು ಮಾಡಿಕೊಂಡು ಫೋನ್‌ ಮಾಡಿಕೊಂಡು ಗೋಳಾಡಿ ಮುದ್ದಾಡಿ ಸಮಾಧಾನ ಪಡಿಸುತ್ತಿದ್ದೆ. ಇವಾಗ ನಾ ನಿನಗೆ ಬೇಡ, ಹಂಗಾಗಿ ನಾ ಚೂರು ಸಿಡುಕಿದರೂ ಸುಮ್ಮನಾಗಿಬಿಡುತ್ತಿ. ನನ್ನನ್ನು ಸಮಾಧಾನ ಪಡಿಸುವ ಅನಿವಾರ್ಯತೆ ನಿನಗೀಗಿಲ್ಲ" ಎಂದಿದ್ದ ಸಾಗರ. ಒಟ್ರಾಸಿ, ನೀ ಮನುಷ್ಯರನ್ನು ಬಳಸಿ ಬಿಸಾಡುವುದರಲ್ಲಿ ಪ್ರವೀಣೆ ಎಂದು ತಿಳಿಸಿಕೊಟ್ಟಿದ್ದ. ಇರಬಹುದು. ನನ್ನನ್ನು ಸಾಗರನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾರಿದ್ದಾರೆ. ಅವನ ಸ್ನೇಹವನ್ನೂ ಉಳಿಸಿಕೊಳ್ಳಲಿಲ್ಲ ನಾನು. ಇವತ್ತಿನ ಪರಿಸ್ಥಿತಿಯಲ್ಲಿ ಅವನ ಜೊತೆ ಮಾತನಾಡಿದ್ದರೆ, ಕಷ್ಟ ಹಂಚಿಕೊಂಡಿದ್ದರೆ ಅರ್ಧಕ್ಕರ್ಧ ಸಮಾಧಾನವಾಗಿಬಿಡುತ್ತಿತ್ತು. ಯಾವ ಮುಚ್ಚುಮರೆಯಿಲ್ಲದೆಯೇ ಇದ್ದುದೆಲ್ಲವನ್ನೂ ಇದ್ದಂತೆಯೇ ಹೇಳಿಕೊಳ್ಳಲು ಸಾಧ್ಯವಾಗೋದು ಅವನ ಜೊತೆ ಮಾತ್ರ. ಒಂದು ಫೋನ್‌ ಮಾಡೇಬಿಡಲಾ? ಅಥವಾ ಅದಕ್ಕೂ ಮುಂಚೆ ಒಂದು ಮೆಸೇಜ್‌ ಕಳಿಸಿಯೇಬಿಡಲಾ? ಎಂದಂದುಕೊಂಡು ಕೈಗೆ ಫೋನೆತ್ತಿಕೊಂಡಿದ್ದಕ್ಕೆ ಲೆಕ್ಕವಿಲ್ಲ. "ನಿನಗೆ ಬೇಸಿಕಲಿ ನಿನ್ನ ದುಃಖ ಹಂಚಿಕೊಳ್ಳೋಕೆ ಒಂದು ಜೊತೆ ಕಿವಿಗಳು ಬೇಕಿತ್ತಷ್ಟೇ. ಬೇರೆಯವರ ದುಃಖ ಕೇಳಿಸಿಕೊಳ್ಳೋ ತಾಳ್ಮೆ ನಿನ್ನಲ್ಲಿಲ್ಲ. ತುಂಬಾ ಸೆಲ್ಫ್‌ ಸೆಂಟರ್ಡ್‌ ಪರ್ಸನ್‌ ನೀನು" "ನನ್ನ ಹುಟ್ಟಿದಹಬ್ಬಕ್ಕಲ್ಲ, ನಾನು ಸತ್ತರೂ ನನಗೆ ಮೆಸೇಜು ಮಾಡಬೇಡ" ಅವನ ಮಾತುಗಳು ನೆನಪಾಗುತ್ತಿತ್ತು. ಫೋನನ್ನು ಪಕ್ಕಕ್ಕಿಡುತ್ತಿದ್ದೆ. ಕಾಲೇಜು ದಿನಗಳೇ ಚೆಂದಿದ್ದವಪ್ಪ. ಇನ್ನೇನಿಲ್ಲ ಅಂದ್ರೂ ಕಷ್ಟ ಸುಖ ಹಂಚಿಕೊಳ್ಳೋಕೆ ಅಂತಾನೇ ಗೆಳತಿಯರಿದ್ದರು. ದುಃಖಕ್ಕೆ ಹೆಗಲು ಬೇಡೋ, ಹೆಗಲಾಗೋ ಗೆಳೆಯರೂ ಇರ್ತಿದ್ರೇನೋ, ಪುರುಷೋತ್ತಮ ನನ್ನ ಜೀವನದಲ್ಲಿ ಇಲ್ಲದೇ ಹೋಗಿದ್ದರೆ. ಈಗ್ಯಾರಿದ್ದಾರೆ? ಈಗಿರಲಿ ನಾ ಮೆಡಿಕಲ್‌ ಮುಗಿಸಿದ ಮೇಲೆ ಯಾರೊಬ್ಬರಾದರೂ ನನ್ನ ಗೆಳೆಯರಾಗಿದ್ದಾರಾ? ಸಾಗರ ಗೆಳೆಯನ ಗಡಿಗಳನ್ನು ದಾಟಿ ಹತ್ತಿರಾದವನು. ಸುಮ ಒಬ್ಬಳಿದ್ದಳು, ನನ್ನ ರಾಮ್‌ಪ್ರಸಾದ್‌ ಬಗ್ಗೆ ಕೇಳಿದ ವದಂತಿಗಳನ್ನೇ ಬಳಸಿಕೊಂಡು ನೋವುಂಟು ಮಾಡಿದಳು. ಅವತ್ತಿನ ನಂತರ ಸುಮಾಳೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು. ಅವಳೇನೋ ಪಾಪ ರೇಗಿಸಲೇ ಹೇಳಿರಬಹುದು, ಆದರದು ಮನಸ್ಸು ಮುರಿದು ಹಾಕಿತು. ರಾಜೀವನ ಗೆಳೆಯರನೇಕರು ಪರಿಚಯ, ಅದು ಪರಿಚಯದ ಮಿತಿ ದಾಟಲಿಲ್ಲ. ರಾಮ್‌ಪ್ರಸಾದ್‌ ಒಬ್ಬನನ್ನು ಹೊರತುಪಡಿಸಿ. ತೀರ ಖಾಸಗಿ ವಿಷಯಗಳನ್ನೇನೂ ರಾಮ್‌ ಜೊತೆಗೆ ಇಲ್ಲಿಯವರೆಗೆ ಹಂಚಿಕೊಂಡವಳಲ್ಲ ನಾನು, ಆದರೆ ಗೆಳೆತನ ದೃಡವಾಗುತ್ತಿದ್ದ ಎಲ್ಲಾ ಸೂಚನೆಗಳು ಸ್ಪಷ್ಟವಾಗಿದ್ದವು. ಈ ವಿಷಯದಲ್ಲಿ ರಾಮ್‌ಪ್ರಸಾದ್‌ ಕೂಡ ನನ್ನ ಜೊತೆಗೆ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಬೇರೆ ಯಾರೋ ಆಗಿದ್ದರೂ ರಾಮ್‌ ಜೊತೆ ಒಮ್ಮೆ ಚರ್ಚಿಸಬಹುದಿತ್ತೋ ಏನೋ. ಹೇಗೆ ಇದನ್ನು ಸರಿ ಮಾಡೋದು, ಹೇಗೆ ರಾಜೀವನಿಗೆ ನಮ್ಮ ಮನೆಯವರಿಗೆ ನನ್ನ ಅವರ ಮಧ್ಯೆ ಸಂಬಂಧ ಇಲ್ಲ ಅಂತ ವಿವರಿಸೋದು ಅಂತಲಾದರೂ ಸಲಹೆ ಪಡೆಯಬಹುದಿತ್ತು. ಅದೀಗ ಸಾ‍ಧ್ಯವಿಲ್ಲ. ಎಷ್ಟೇ ಆದ್ರೂ ಸುಮಾ ಗುಡ್‌ ಫ್ರೆಂಡು. ಅವಳ ಹತ್ತಿರವೇ ಹೇಳಿಕೊಂಡುಬಿಡಲಾ ಅನ್ನೋ ಯೋಚನೆಯೂ ಸುಳಿಯದೆ ಇರಲಿಲ್ಲ. ಅವಳತ್ತಿರ ಹೇಳುವುದೋ ಬೇಡವೋ ತಿಳಿಯುತ್ತಿಲ್ಲ. ಒಟ್ಟಾರೆ ಯಾವ ಸಣ್ಣ ಪುಟ್ಟ ನಿರ್ಧಾರಗಳನ್ನೂ ಖಚಿತವಾಗಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. 

Sep 12, 2020

ಒಂದು ಬೊಗಸೆ ಪ್ರೀತಿ - 79

ಒಂದರ್ಧ ಘಂಟೆ ಕಾಲ ಮಾತ್ರ ಯೋಚನೆಗಳು ಬಿಡುವು ಕೊಟ್ಟಿತ್ತು. 

ನನ್ನ ರಾಮ್‌ಪ್ರಸಾದ್‌ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ರಾಜೀವನಲ್ಲಿ ನಂಬುಗೆ ಮೂಡಿಸುವುದೇಗೆ? ಯಾರೋ ಯಾವ ಕಾರಣಕ್ಕೋ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂದು ಸುಳ್ಳುಸುಳ್ಳೇ ಆರೋಪ ಮಾಡಿಬಿಟ್ಟರು. ಅದು ನಿಜವಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯ ಕರ್ಮ ನನ್ನ ಹೆಗಲೇರಿಬಿಟ್ಟಿದೆ. ರಾಮ್‌ಪ್ರಸಾದ್‌ ಜೊತೆ ಹಿಂಗಿಂಗೆ ಅಂತೇಳಿ ಅವರೇ ಸಮಜಾಯಿಷಿ ಕೊಡುವಂತೆ ಹೇಳಲಾ? ಪಾಪ! ಅವರಿಗಾದರೂ ಈ ರೀತಿಯೆಲ್ಲ ನಮ್ಮ ಬಗ್ಗೆ ಆಸ್ಪತ್ರೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಎನ್ನುವುದು ಗೊತ್ತೋ ಇಲ್ಲವೋ.... ಒಂದು ವೇಳೆ ಗೊತ್ತಿದ್ದರೂ ಸುಮ್ಮನಿದ್ದುಬಿಟ್ಟಿದ್ದರೆ? ಆ ಮಾತುಗಳೇ ಅವರಿಗೂ ಪ್ರಿಯವಾಗಿಬಿಟ್ಟಿದ್ದರೆ? ಅವರೇ ಈ ಗಾಳಿ ಸುದ್ದಿಗಳನ್ನು ಹಬ್ಬಿಸಿದ್ದರೆ? ಇಲ್ಲಿಲ್ಲ. ಅವರ ವರ್ತನೆ ಒಂದು ದಿನಕ್ಕೂ ನನಗೆ ಅನುಮಾನ ಮೂಡಿಸಿಲ್ಲ. ಆದರೂ ಅವರ ಮೂಲಕ ರಾಜೀವನಿಗೆ ಸಮಜಾಯಿಷಿ ಕೊಡುವುದು ಸರಿಯಾಗಲಾರದು. ನಮ್ಮಿಬ್ಬರ ನಡುವಿನ ವಿಷಯ, ನಮ್ಮ ಮನೆಯಲ್ಲಿ ನಡೆದ ವಿಷಯಗಳನ್ನೆಲ್ಲ ಅವನತ್ರ ತಗೊಂಡು ಹೋಗಿ ಹೇಳ್ಕೋತೀಯ ಅಂತ ಮತ್ತೊಂದು ಸುತ್ತು ಜಗಳ ಶುರುವಾಗಿಬಿಡಬಹುದು. ಅಲ್ಲ, ನನಗೆ ನಿಜಕ್ಕೂ ಒಂದು ಅನೈತಿಕ.... ಅನೈತಿಕವಲ್ಲ.... ಮದುವೆಯಾಚೆಗಿನ ಸಂಬಂಧ ಅಂಥ ಇದ್ದದ್ದು ಸಾಗರನೊಟ್ಟಿಗೆ ಮಾತ್ರ. ಸಾಗರ ನಮ್ಮ ಮನೆಗೆ ಬಂದು ರಾಜೀವನನ್ನು ಭೇಟಿಯಾದಾಗ, ನಾವವನ ಮದುವೆಗೆಂದು ಹೋಗಿದ್ದಾಗ ನಮ್ಮಿಬ್ಬರ ಮುಖಚರ್ಯೆಯನ್ನು ಗಮನಿಸಿಬಿಟ್ಟಿದ್ದರೇ ಸಾಕಿತ್ತು ಇಬ್ಬರ ನಡುವೆ ಸಂಬಂಧವಿದೆ ಎನ್ನುವುದು ತಿಳಿದು ಹೋಗುತ್ತಿತ್ತು. ನನ್ನ ಸಾಗರನ ಸಂಬಂಧವನ್ನು ಸ್ನೇಹವೆಂದೇ ಇವತ್ತಿಗೂ ನಂಬಿರುವ - ಆ ಸ್ನೇಹ ಸತ್ತು ಎಷ್ಟು ತಿಂಗಳುಗಳಾಯಿತು? - ರಾಜೀವ ನನ್ನ ರಾಮ್‌ನ ಸ್ನೇಹವನ್ನು, ಅದೂ ಅವರಿಂದಾಗಿಯೇ ಬಲವಂತವಾಗೆಂಬಂತೆ ಹುಟ್ಟಿದ ಸ್ನೇಹವನ್ನು ಅನುಮಾನಿಸುತ್ತಿದ್ದಾರಲ್ಲ? ಸಾಗರನ ಜೊತೆಗಿದ್ದಾಗಲೇ ಈ ಅನುಮಾನ ಇವರಲ್ಲಿ ಬಂದುಬಿಟ್ಟಿದ್ದರೆ ಅಚ್ಚುಕಟ್ಟಾಗಿ ಡೈವೋರ್ಸ್‌ ತೆಗೆದುಕೊಂಡು ಸಾಗರನನ್ನು ಮದುವೆಯಾಗಿಬಿಡಬಹುದಿತ್ತು. ಸಾಗರ ಕೂಡ ಒಂದಷ್ಟು ಪೊಸೆಸಿವ್ವೇ ಹೌದು. ತೀರ ಪುರುಷೋತ್ತಮನಷ್ಟಲ್ಲ, ಆದರೂ ಪೊಸೆಸಿವ್ವೇ. ಜೊತೆಗೆ ನನ್ನ ಮೇಲೆ ಬೆಟ್ಟದಷ್ಟು ಅನುಮಾನ ಬೇರೆ ಇದೆ ಅವನಿಗೆ. ಮದುವೆಯಾಗಿ ಬೇರೆ ಕಡೆ ಸಂಬಂಧ ಬೆಳೆಸುವವರ ಮೇಲೆ ಇಂತಹ ಅನುಮಾನ ಸಹಜವೋ ಏನೋ. ಯೋಚನೆಗಳಿಗೆ ತಡೆಹಾಕಿದ್ದು ಶಶಿಯ ಆಗಮನ. ಮನೆಯಲ್ಲಿನ ಮೌನದಲ್ಲಿದ್ದ ಅಸಹಜತೆಯ ವಾಸನೆ ಅವನಿಗೂ ಬಡಿಯಲೇಬೇಕಲ್ಲ. 

"ಏನಾಯ್ತು? ಎಲ್ಲಿ ಎಲ್ಲ" 

ʻಎಲ್ರೂ ಅವರವರ ರೂಮುಗಳಲ್ಲಿ ಸೇರಿಕೊಂಡಿದ್ದಾರೆʼ