Sep 29, 2019

ಒಂದು ಬೊಗಸೆ ಪ್ರೀತಿ - 33

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಮಲಗಲೋಗುವಷ್ಟರಲ್ಲಿ ಪುರುಷೋತ್ತಮ ಮತ್ತೈದು ಬಾರಿ ಕರೆ ಮಾಡಿದ್ದ. ನಾ ತೆಗೆಯಲಿಲ್ಲ. ಕೊನೆಗೆ "ಇನ್ನೂ ಕೋಪ ಹೋಗಿಲ್ವೇನೇ ಧರು" ಎಂದು ಮೆಸೇಜು ಮಾಡಿದ. 

'ಕೋಪಾನಾ? ಹಂಗೇನಿಲ್ಲಪ್ಪ' ಒಂದು ಸುಳ್ಳನ್ನ ಹಂಗೇ ವಗಾಯಿಸಿದೆ. 

“ಮತ್ಯಾಕೆ ಫೋನ್ ರಿಸೀವ್ ಮಾಡ್ಲಿಲ್ಲ" 

'ಹಂಗೇನಿಲ್ವೋ. ಮನೆಗ್ಯಾರೋ ಬಂದಿದ್ರು. ಅದಿಕ್ಕೆ ನೋಡಲಿಲ್ಲ ಫೋನ್ ನ' 

“ಓಹೋ! ಅಪ್ಪ ಅಮ್ಮ ಹೊರಗೋಗಿದ್ರೇನೋ....ನನ್ ತರ ಇನ್ಯಾವುದೋ ಬಕ್ರಾನ ಮನೆಗೆ ಕರೆಸಿಕೊಂಡಿದ್ದೇನೋ ತೆವಲು ತೀರಿಸಿಕೊಳ್ಳೋಕೆ....” ಕೆಟ್ಟ ಕೆಟ್ಟ ಪದಗಳನ್ನೆಲ್ಲ ಬಳಸಿ ಬಯ್ಯಬೇಕೆನ್ನಿಸಿತು. ಬಯ್ಯಲಿಲ್ಲ. 

'ಓ! ನಿನ್ನನ್ನು ಮನೆಗೆ ಕರೆದುಕೊಂಡು ಬರ್ತಿದ್ದದ್ದು ತೆವಲು ತೀರಿಸಿಕೊಳ್ಳೋಕೆ ಅಂತ ಗೊತ್ತಿರಲಿಲ್ಲ. ಥ್ಯಾಂಕ್ಸ್ ತಿಳಿಸಿಕೊಟ್ಟಿದ್ದಕ್ಕೆ. ಬಾಯ್' ಎಂದು ಮೆಸೇಜು ಮಾಡಿದೆ. 

“ಹಂಗಲ್ವೇ.... ಸಾರಿ” ಅಂತ ಆರು ಸಲ ಕಳುಹಿಸಿದ. ಪ್ರತಿಕ್ರಿಯಿಸಲಿಲ್ಲ. ಕೊನೆಗೆ "ಸರಿ ನಾಳೆ ಸಿಗುವ" ಎಂದ್ಹೇಳಿದ. ಮೊಬೈಲನ್ನು ಬದಿಗಿಟ್ಟು ಮಲಗಲು ಹೋದಾಗ ಮತ್ತೊಮ್ಮೆ ಮೊಬೈಲ್ ಶಬ್ದ ಮಾಡಿತು. ಇವನದೇ ಮತ್ತೊಂದು ಮೆಸೇಜು ಬಂದಿರ್ತದೆ ಅಂತ ನೋಡಿದವಳಿಗೆ "ಹಾಯ್. ಊಟ ಆಯ್ತ" ಎಂಬ ಮೆಸೇಜು ಕಾಣಿಸಿತು. ರಾಜೀವನದು! 

'ಹು. ಆಯ್ತು. ನಿಮ್ಮದು'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 24, 2019

ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಬೃಹತ್ ಪ್ರಹಸನ!

ಕು.ಸ.ಮಧುಸೂದನ ರಂಗೇನಹಳ್ಳಿ
ದೇಶ ಮತ್ತು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ತೀವ್ರ ಆರ್ಥಿಕ ಹಿಂಜರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ರಾಜ್ಯದ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮತ್ತೊಂದು ಸುತ್ತಿನ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. 

2013ರಿಂದ 2018ರವರೆಗು ಅಂದಿನ ಕಾಂಗ್ರೆಸ್ ಸರಕಾರ ನಡೆಸಿದ್ದ ಬಂಡವಾಳ ಹೂಡಿಕೆಯ ಸಮಾವೇಶಗಳು ಪಡದುಕೊಂಡಿದ್ದ ಪ್ರಚಾರವನ್ನು, ತಂದುಕೊಟ್ಟ ಪಲಿತಾಂಶವನ್ನು ವಿಶ್ಲೇಷಿಸಿದರೆ ಈ ಸಮಾವೇಶಗಳ ನಿಜಬಣ್ಣ ಬಯಲಾಗುತ್ತ ಹೋಗುತ್ತದೆ. ಈ ಹಿಂದಿನ ಕೈಗಾರಿಕಾ ಮಂತ್ರಿಗಳು ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸುವುದರ ಜೊತೆಜೊತೆಗೆ ವಿದೇಶಗಳಲ್ಲಿಯೂ ರೋಡ್ ಶೋಗಳನ್ನು ನಡೆಸಿ ತಮ್ಮ ಪ್ರಯತ್ನ ಶೇಕಡಾ ನೂರರಷ್ಟು ಫಲಪ್ರದವಾಗಿದೆಯೆಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಸ್ತು ಸ್ಥಿತಿ ಬೇರೆಯದೆ ಇದೆ! 

ಕಳೆದ ಐದು ವರ್ಷಗಳಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕೋಟಿ ಮೊತ್ತದ ಒಂದು ಸಾವಿರದ ನೂರೈವತ್ತು ಯೋಜನೆಗಳಿಗೆ ಸರಕಾರದ ಉನ್ನತಾಧಿಕಾರದ ಸಮಿತಿ ಮಂಜೂರಾತಿ ನೀಡಿತ್ತು. ಆದರೆ ಈವರೆಗು ಕೇವಲ ನೂರಾ ನಲವತ್ತೆರಡು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಹೂಡಿಕೆಯಾದ ಬಂಡವಾಳ ಕೇವಲ ಒಂಭತ್ತು ಸಾವಿರ ಕೋಟಿಯಷ್ಟು ಮಾತ್ರ..ಇನ್ನುಳಿದ ಹಣ ಹೂಡಿಕೆಯಾಗುವ ಭರವಸೆಯಂತು ಸದ್ಯಕ್ಕೆ ಯಾರಿಗೂ ಇಲ್ಲ. ಯಾಕೆಂದರೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಿರಾಶಾದಾಯಕ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಲು ಯಾರೂ ಮುಂದೆಬರುವುದಿಲ್ಲವೆಂಬುದು ಸತ್ಯ. 

Sep 22, 2019

ಒಂದು ಬೊಗಸೆ ಪ್ರೀತಿ - 32

ಡಾ. ಅಶೋಕ್.‌ ಕೆ. ಆರ್.‌
ಇಬ್ಬರೂ ರೂಮಿನಿಂದ ಖುಷಿಖುಷಿಯಾಗಿ ಹೊರಬಂದೋ. ನಾ ಅಪ್ಪನ ತೋಳಿನಲ್ಲಿದ್ದೆ. ಅಮ್ಮ ಇಬ್ಬರನ್ನೂ ನೋಡಿ ಮುಸಿನಕ್ಕರು. ತಮ್ಮ ಕೂಡ ಒಮ್ಮೆ ನಕ್ಕ. ತಮ್ಮ ಮೊದಲೇ ಹೆಚ್ಚು ಮಾತನಾಡುವವನಲ್ಲ. ಈಗಂತೂ ಮೂಗನಂತಾಗಿಬಿಟ್ಟಿದ್ದ. “ನಿಮ್ಮ ಸಂಭ್ರಮ ಸಡಗರವೆಲ್ಲ ಮುಗಿದಿದ್ರೆ ಬನ್ನಿ ಊಟಕ್ಕೆ" ಅಮ್ಮ ಕರೆದಳು. 

“ಏನ್ ಮಾಡಿದ್ದಿ?” ಅಪ್ಪನ ಪ್ರಶ್ನೆ. 

“ಅವರೆಕಾಳು ಉಪ್ಸಾರು" 

“ಥೂ ಥೂ. ಅಷ್ಟು ದಿನದಿಂದ ಅದೇ ಉಪ್ಸಾರು, ತಿಳಿಸಾರು ಬಿಟ್ರೆ ಬೇಳೆಸಾರು. ಬಾಯಿ ಕೆಟ್ಟೋಗದೆ. ನೀವದನ್ನೇ ತಿಂದುಕೊಳ್ಳಿ. ನಾನೂ ನನ್ನ ಮಗಳು ಬಾಯ್ರುಚಿಗೇನಾದ್ರೂ ತಿಂದ್ಕೊಂಡು ಬರ್ತೀವಿ" ಅಂದರು ಅಪ್ಪ. 

“ನಮ್ ಬಾಯಿಯೇನು ರುಚಿಗೆ ಹಂಬಲಿಸೋದಿಲ್ಲಾಂತಾನಾ? ನಾವೇನ್ ಪಾಪ ಮಾಡಿದ್ದೊ. ನಾವೂ ಬರ್ತೀವಿ" ಅಮ್ಮ ಅಂದರು. ನಾಲ್ಕೂ ಮಂದಿ ಹೊರಗೆ ಊಟಕ್ಕೆ ಹೋದೋ' 

“ಹೆಂಗೋ ಕೊನೇಪಕ್ಷ ನಿಮ್ಮ ಮನೆಯವರಾದ್ರೂ ಸರಿ ಹೋದ್ರಲ್ಲ ಬಿಡು" ಸಾಗರ ನಿಟ್ಟುಸಿರುಬಿಟ್ಟ. 

'ಅ‍ಯ್ಯೋ ಅಷ್ಟು ಬೇಗ ನಿರ್ಧಾರ ಮಾಡಿಬಿಡಬೇಡಪ್ಪ. ಇನ್ನೂ ಬಹಳಷ್ಟು ನಡೆದಿದೆ' 

“ಒಳ್ಳೆ ಮೆಗಾಸೀರಿಯಲ್ ಆಯ್ತಲ್ಲೇ ನಿನ್ನ ಕತೆ" 

'ಅಲ್ವ! ಈಗ ಯೋಚಿಸಿದ್ರೆ ನಂಗೂ ಹಂಗೇ ಅನ್ಸುತ್ತೆ. ಎಷ್ಟೆಲ್ಲ ನಡೆದುಹೋಯ್ತಲ್ಲ ಅಂತ. ಬೋರಾಯ್ತೇನೋ? ಬೋರಾಗಿದ್ರೆ ಇನ್ನೊಂದಿನ ಹೇಳ್ತೀನಿ ಬಿಡು' 

“ಹಂಗೇನಿಲ್ವೇ. ಇದೆಲ್ಲ ಹೇಳಿ ಮುಗಿಸಾಗಬೇಕಿತ್ತು ಇಷ್ಟೊತ್ತಿಗೆ. ಎಲ್ಲಿ.... ನಾವಿಬ್ರು ಇತ್ತೀಚೆಗೆ ಮಾತು ಶುರು ಮಾಡಿದಾಗೆಲ್ಲ ಸೆಕ್ಸು ಕಡೆಗೇ ಹೋಗಿಬಿಡ್ತಿದ್ದೋ ಪಟ್ಟಂತ. ಎಷ್ಟೋ ದಿನದ ಮೇಲೆ ಸೆಕ್ಸ್ ಬಿಟ್ಟು ಬೇರೆ ವಿಷಯ ಮಾತಾಡ್ತಿರೋದು ನಾವಿಬ್ರು. ಐ ಯ್ಯಾಮ್ ಹ್ಯಾಪಿ ಫಾರ್ ದಟ್" ಅಂದ. ಹುಡುಗ್ರು ಹಿಂಗೂ ಇರ್ತಾರಾ! ಇದ್ದಾನಲ್ಲ ನನ್ನ ಸಾಗರ....... 

“ನಿನ್ ಹಸ್ಬಂಡ್ ಇನ್ನೂ ಬರಲಿಲ್ಲವೇನೇ?”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 20, 2019

ಪ್ರೇಮದೊಂದು ಕವಿತೆ.


ಕು.ಸ.ಮಧುಸೂದನ 
ಆಕಾಶದಡಿಯ ಕತ್ತಲು 
ಭೂಮಿ ಮುತ್ತಲು 
ಬೆಳಕಿನೊಂದು ಕನಸು ಕಂಡ ಮಗು 
ನಿದ್ದೆಯಿಂದೆದ್ದು ಕೂತಿತು 
ಅಮ್ಮನ ತೋಳುಗಳ ಹಾಸಿಗೆ ದಾಟಿ 
ಅಂಗಳಕ್ಕಿಳಿಯಿತು. 
ಮಿಂಚುಹುಳುವೊಂದು ಕಣ್ಣ ಮುಂದೆ ಮಿನುಗಿ 
ದಾರಿಯ ಹೊಳೆಸಿತು 
ಅರ್ದಕ್ಕೆ ನಿಂತ ಹಾಡಿಗೆ ಮರುಜೀವ ಬಂದು 
ಬಿಕ್ಕಿಬಿಕ್ಕಿ ಸುಸ್ತಾಗಿದ್ದ ಚುಕ್ಕಿಗಳಿಗೆ 
ಹೊಸ ಹುರುಪು ಬಂದು 
ಬೆಳಗಿನತ್ತ ನಡೆದವು 
ಮರುದಿನದ ಸೂರ್ಯೋದಯದೊಳಗೆ 
ಲೋಕದೊಳಗೆಲ್ಲ ಪ್ರೇಮ 
ತುಂಬಿ ತುಳುಕಿತು!. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Sep 19, 2019

ಹಡೆಯುವ ಬಯಕೆಗೆ


ಕು.ಸ.ಮಧುಸೂದನ 
ಸಂಜೆ ಹುಯ್ಯುವ ಬಿಸಿಲು ಮಳೆ 
ಕೃತಕವೆನಿಸಿ 
ಕಾಮನಬಿಲ್ಲೂ ಕ್ಷಣಭಂಗುರವೆನಿಸಿ 
ತಳಮಳಿಸಿದ ಮನಸು 
ಹೊಕ್ಕುಳಾದಳದೊಳಗೆಲ್ಲೊ 
ಕಡೆಗೋಲು 
ಮಜ್ಜಿಗೆ ಕಡೆದಂತಾಗಿ 
ಬಿಟ್ಟ ಉಸಿರು ನೀಳವಾಗಿ ಎದೆಬಡಿತ ಜೋರಾಗಿ 
ನಿಂತರೆ ಸಾಕು ಮಳೆ 
ಬಂದರೆ ಮತ್ತೆ ರವಷ್ಟು ಬಿಸಿಲು 
ಮೈಕಾಯಿಸಿಕೊಳ್ಳಬೇಕು. 

ಸ್ಖಲಿಸಿಕೊಳ್ಳದೆ 
ಬಸುರಾಗದೆ 
ಹಡೆಯಲಾಗದೆ 
ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು 
ಉಳಿಸಿಕೊಳ್ಳಬೇಕು. 

Sep 15, 2019

ಒಂದು ಬೊಗಸೆ ಪ್ರೀತಿ - 31

ಡಾ. ಅಶೋಕ್.‌ ಕೆ. ಆರ್.‌
ಮುಂದೇನು ಅನ್ನೋ ಪ್ರಶ್ನೆ ಭೂತಾಕಾರದ ರೂಪ ಪಡೆದಿತ್ತು. ಮಾರನೇ ದಿನವೇ ಪರಶುನನ್ನು ಭೇಟಿ ಮಾಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದವನಿಗೆ ಅರಿವಾಯಿತು. ಮನೇಲಿ ಮಾತಾಡ್ತೀನಿ. ಯಾವಾಗ ಬರ್ತೀವಿ ಅಂತ ತಿಳಿಸ್ತೀನಿ ಅಂತೇಳಿದ. ಖುಷಿಯಾಯಿತು. ಅಪ್ಪ ಮತ್ತೊಂದು ಮಗದೊಂದು ಗಂಡು ತೋರಿಸುವ ಮುಂಚೆಯೇ ಪರಶುವಿನ ಮನೆಯವರು ಬಂದರೆ ಸಾಕಾಗಿತ್ತು ನನಗೆ. 

ಪರಶು ಮೊದಲು ಅವನ ಅಕ್ಕನ ಜೊತೆಗೆ ಮಾತನಾಡಿದ್ದ. ವಿಷಯ ಇಲ್ಲಿಯವರೆಗೆ ಮುಟ್ಟಿದೆಯೆಂದು ಅವರಕ್ಕನಿಗೂ ತಿಳಿದಿರಲಿಲ್ಲ. ತಿಳಿಯುತ್ತಿದ್ದಂತೆಯೇ ನನಗೆ ಫೋನ್ ಮಾಡಿದ್ದಳು. 

'ಹೇಳಿ ಅಕ್ಕ' ಅಂದೆ. 

“ನಾನೇನಮ್ಮ ಹೇಳೋದು. ಇಷ್ಟೆಲ್ಲ ಯಾಕ್ ಸೀರಿಯಸ್ಸಾಗಿ ಲವ್ ಮಾಡೋಕೋದ್ರಿ" 

'ಲವ್ ನ ಕಾಮಿಡಿಯಾಗೆಲ್ಲ ಕೂಡ ಮಾಡ್ಬೋದಾ?' ಆ ಮನಸ್ಥಿತಿಯಲ್ಲೂ ಅಕ್ಕನ ಮಾತುಗಳು ನಗು ತರಿಸಿತು. 

“ನೋಡು ಧರಣಿ. ಇರೋ ವಿಷಯ ಹೇಳಬೇಕಲ್ಲ ನಾನು. ನನ್ನ ಮದುವೆಗೆ ಮುಂಚೆ ಪರಶುವಿನ ಮದುವೆ ಮಾಡುವುದಕ್ಕೆ ಅಮ್ಮನಂತೂ ಒಪ್ಪುವುದಿಲ್ಲ. ....ಅದು ನಿನಗೂ ಗೊತ್ತಿರ್ತದೆ....” 

'ಈಗ್ಲೇ ಮದುವೆಯಾಗ್ಲಿ ಅನ್ನೋದು ನಮ್ಮ ಮನಸ್ಸಿನಲ್ಲೂ ಇಲ್ಲ ಅಕ್ಕ. ಒಮ್ಮೆ ಬಂದು ಮಾತಾಡಿಕೊಂಡು ಹೋಗಲಿ ಅಂತಷ್ಟೇ ಹೇಳ್ತಿರೋದು....' 

“ಹು. ಅದ್ ಸರಿ ಅನ್ನು. ಪರಶುಗೆ ಇನ್ನೂ ಕೆಲಸ ಬೇರೆ ಸಿಕ್ಕಿಲ್ಲ.....ನಿಂಗೇ ಗೊತ್ತಿರ್ತದಲ್ಲ.....ಇನ್ನೂ ಪೋಲಿ ಅಲ್ಕೊಂಡೇ ನಿಂತಿದ್ದಾನೆ....ನೀನು ನೋಡಿದ್ರೆ ಡಾಕ್ಟ್ರು....”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 8, 2019

ಒಂದು ಬೊಗಸೆ ಪ್ರೀತಿ - 30

ಡಾ. ಅಶೋಕ್.‌ ಕೆ. ಆರ್.‌
'ಅದೊಂದ್ ದೊಡ್ ಕತೆ. ದೀಪಾವಳಿ ಹಬ್ಬದ ದಿನ. ನನಗೆ ಅರ್ಧ ದಿನ ಡ್ಯೂಟಿಯಿತ್ತು. ಡ್ಯೂಟಿ ಮುಗಿಸಿ ಬರಬೇಕಾದರೆ ಎಂದಿನಂತೆ ಪರಶು ಜೊತೆಯಾಗಿದ್ದ. ಆಸ್ಪತ್ರೆಯ ಹತ್ತಿರ ಅಗ್ರಹಾರ ಸರ್ಕಲ್ಲಿನ ಬಳಿ ನಿಂತು ಮಾತನಾಡ್ತಿದ್ದೊ. ಒಂದರ್ಧ ಘಂಟೆಯ ಮಾತುಕತೆಯ ನಂತರ ಹೊರಡುವಾಗ ಅವನ ಗಾಡಿ ಸ್ಟಾರ್ಟೇ ಆಗಲಿಲ್ಲ. ಹಬ್ಬದ ದಿನ, ಹತ್ತಿರದ ಮೆಕ್ಯಾನಿಕ್ಕುಗಳ್ಯಾರೂ ಅಂಗಡಿ ತೆರೆದಿರಲಿಲ್ಲ. ಹತ್ತಿರದಲ್ಲೇ ಅವನ ಸ್ನೇಹಿತನ ಮನೆಯಿತ್ತು. ಅಲ್ಲಿ ಬೈಕನ್ನು ನಿಲ್ಲಿಸಿ ನನ್ನ ಸ್ಕೂಟರ್ ಹತ್ತಿಕೊಂಡ. ರಸ್ತೆಗಳು ಖಾಲಿಯಿದ್ವು. ವೇಗವಾಗಿ ಗಾಡಿ ಓಡಿಸ್ತಿದ್ದೆ. ಆತ ಬಲಗೈಯನ್ನು ನನ್ನ ತೊಡೆಯ ಮೇಲಿಟ್ಟಿದ್ದ, ಎಡಗೈ ನನ್ನ ಸೊಂಟವನ್ನು ಬಳಸಿತ್ತು. ತಲೆಯನ್ನು ನನ್ನ ಕತ್ತಿನ ಮೇಲಿಟ್ಟು ಮಾತನಾಡುತ್ತಿದ್ದ. ನೋಡಿದವರಿಗೆ ಯಾರಿಗೇ ಆದರೂ ಪ್ರೇಮಿಗಳೆಂದು ತಿಳಿಯುವಂತಿತ್ತು. ಅವನನ್ನು ಮನೆಗೆ ಬಿಟ್ಟು ಮನೆ ತಲುಪಿದೆ. ನಮ್ಮ ದೊಡ್ಡಪ್ಪ ಮನೆಗೆ ಬಂದಿದ್ದರು. ಅವರು ಹಂಗೆಲ್ಲ ಬರೋರಲ್ಲ, ಅವರಿಗೂ ನಮಗೂ ಅಷ್ಟಕಷ್ಟೇ. ಅದರಲ್ಲೂ ಹಬ್ಬದ ದಿನವೇ ಬಂದಿದ್ದಾರೆಂದ ಮೇಲೆ ಏನೋ ವಿಶೇಷವಿರಲೇಬೇಕು ಅಂದುಕೊಂಡೆ. ಅಪ್ಪ ಅಮ್ಮನ ಕಡೆ ನೋಡಿದೆ, ಇಬ್ಬರ ಮೊಗದಲ್ಲೂ ಬೀದಿಗೆಲ್ಲ ಹಂಚುವಷ್ಟು ಸಿಟ್ಟಿತ್ತು. ಓಹೋ ಇದು ನಂದೇ ವಿಷಯ ಅಂದುಕೊಂಡೆ. 'ನಿಮ್ ದೊಡ್ಡಪ್ಪ ಒಂದ್ ಸುದ್ದಿ ತಗಂಡ್ ಬಂದವ್ರೆ' ಅಂದ್ರು ಅಪ್ಪ. ಏನು ಅಂದೆ. 'ಯಾವ್ದೋ ಹುಡುಗನ್ನ ಕೂರಿಸಿಕೊಂಡು ಹೋಗ್ತಿದ್ಯಂತಲ್ಲ ಯಾರದು' ಅಪ್ಪ ಅವರ ಮುದ್ದಿನ ಮಗಳೊಡನೆ ಈ ರೀತಿ ಮಾತಾಡಬಲ್ಲರು ಅನ್ನೋ ಕಲ್ಪನೆ ಕೂಡ ಅವತ್ತಿನವರೆಗೆ ನನಗಿರಲಿಲ್ಲ. ಅವನಾ, ಪುರುಷೋತ್ತಮ್ ಅಂತ. ಅವನ ಗಾಡಿ ಕೆಟ್ಟಿತ್ತು. ಅವನನ್ನು ಮನೆಗೆ ಬಿಟ್ಟು ಬಂದೆ. 'ಫ್ರೆಂಡು ಅಂತೆಲ್ಲ ಹೇಳ್ಬೇಡ. ನೀವಿಬ್ರೂ ಅದೆಷ್ಟು ಕೆಟ್ಟದಾಗಿ ಕುಳಿತುಕೊಂಡು ಹೋಗ್ತಿದ್ರಿ ಅಂತ ನೋಡಿದ್ದೀನಿ ನಾನು' ದೊಡ್ಡಪ್ಪ ಗೇಲಿಯ ದನಿಯಲ್ಲಿ ಹೇಳಿದರು. ಅವರ ಕಡೆಗೊಮ್ಮೆ ದುರುಗುಟ್ಟಿ ನೋಡಿ ನಾನೆಲ್ಲಿ ಹೇಳಿದೆ ಅವನು ನನ್ನ ಫ್ರೆಂಡು ಅಂತ? ಅವನು ನನ್ನ ಲವರ್ರು. ಅಂದಹಾಗೆ ನಾವಿಬ್ರೂ ಕೆಟ್ಟದಾಗಿ ಕುಳಿತುಕೊಂಡು ಹೋಗ್ತಿರಲಿಲ್ಲ. ಆತ್ಮೀಯವಾಗಿ ಕುಳಿತುಕೊಂಡಿದ್ದೋ ಅಷ್ಟೇ ಎಂದೆ. ಅಷ್ಟು ಧೈರ್ಯವಾಗಿ ಹೇಗೆ ಹೇಳಿದೆ ಅಂತ ಇವತ್ತಿಗೂ ಅಚ್ಚರಿ ನನಗೆ. ನಾನೇ ಬಾಯಿಬಿಟ್ಟು ಸತ್ಯ ಹೇಳಿದಮೇಲೆ ದೊಡ್ಡಪ್ಪನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಹುಷಾರು ಕಣಪ್ಪ ಅಂತ ನನ್ನಪ್ಪನಿಗೆ ಹೇಳಿ ಹೊರಟುಬಿಟ್ಟರು. ನಂಗಿವತ್ತಿಗೂ ದೊಡ್ಡಪ್ಪನ ಮೇಲಿರೋ ಸಿಟ್ಟೆಂದರೆ ಹಬ್ಬ ಮುಗಿಯೋವರೆಗಾದರೂ ಕಾಯಬಹುದಿತ್ತು. ಪಟಾಕಿ ಹಚ್ಚೋದೆಂದರೆ ನನಗೆ ಪ್ರಾಣ. ಅವತ್ತು ದೀಪ ಕೂಡ ಹಚ್ಚಲಿಲ್ಲ. ರೂಮಿಗೋಗಿ ಬಾಗಿಲಾಕಿಕೊಂಡು ಪರಶುಗೆ ಫೋನ್ ಮಾಡಿ ಹಿಂಗಿಗಾಯ್ತು ಅಂತ ಹೇಳಿದೆ' 

ಸಾಗರ ಜೋರಾಗಿ ನಕ್ಕುಬಿಟ್ಟ. 'ಯಾಕೋ ಏನಾಯ್ತು' ಅಂದೆ. 

“ಅಲ್ವೆ. ಆಗಷ್ಟೇ ಸಿಕ್ಕಾಕಂಡಿದ್ದಿ. ಅಷ್ಟು ಅವಸರದಲ್ಲಿ ಹೋಗಿ ಫೋನ್ ಮಾಡಿದರೆ ಮನೆಯವರಿಗೆ ಕೇಳಿಸಿ ಇನ್ನೂ ರಾದ್ಧಾಂತ ಆಗೋದಿಲ್ವ!”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 1, 2019

ಒಂದು ಬೊಗಸೆ ಪ್ರೀತಿ - 29

ಡಾ. ಅಶೋಕ್.‌ ಕೆ. ಆರ್.‌
ಬಾಗಿಲ ಚಿಲುಕ ಹಾಕಿ ಬಂದು ಹಾಸಿಗೆಯಲ್ಲಿ ಅಡ್ಡಾದೆ. ಕಣ್ಣಂಚಿನಲ್ಲಿ ನೀರು ಸುರಿದು ಯಾವಾಗ ಒಣಗಿತೋ ಯಾವಾಗ ನನಗೆ ನಿದ್ರೆ ಆವರಿಸಿತೋ ನನಗೂ ತಿಳಿಯದು. ಸಮಯ ನೋಡಿದರೆ ಏಳೂವರೆ ಆಗಿತ್ತು. ರಾಜೀವ ಇನ್ನೂ ಬಂದಿರಲಿಲ್ಲ. ಫೋನ್ ಮಾಡಿದೆ. ಕಟ್ ಮಾಡಿದರು. ಮತ್ತೊಮ್ಮೆ ಮಾಡುವಷ್ಟರಲ್ಲಿ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅಪ್ಪನ ಮನೆಗಾದರೂ ಹೋಗಿಬಿಡುವ ಎಂದುಕೊಳ್ಳುವಷ್ಟರಲ್ಲಿ ಸಾಗರನ ಫೋನ್ ಬಂದಿತ್ತು. ಕರೆ ಸ್ವೀಕರಿಸಿ ಹಲೋ ಅನ್ನುವಷ್ಟರಲ್ಲಿ "ಯಾಕೋ ಭಯಂಕರ ಬೇಸರವಾಗ್ತಿದೆ ಕಣೇ" ಅಂದ. ದನಿಯಲ್ಲಿ ದುಃಖವಿತ್ತು. 

'ಸೇಮ್ ಹಿಯರ್ ಕಣೋ. ನಾನೂ ಒಂದ್ ರೌಂಡು...ಒಂದೇನಾ?? ಎಷ್ಟೋ ರೌಂಡು ಅತ್ತು ಮುಗಿಸಿದೆ ಈಗಷ್ಟೇ' 

“ಯಾಕೋ ಪುಟ್ಟಾ. ಏನಾಯ್ತೋ? ನಾನೇನಾದ್ರೂ ತಪ್ಪಾಗ್ ನಡ್ಕಂಡ್ನ? ಅಥವಾ ಅವತ್ತು ನಾನೇನೋ ಗೀಚಿದ್ದು ಓದಿ ಹೇಳಿದ್ದಕ್ಕೆ ಬೇಜಾರ್ ಮಾಡ್ಕಂಡ್ಯ?” 

಻಻ಅಯ್ಯೋ ಅದನ್ನೆಲ್ಲ ಯೋಚಿಸುವಷ್ಟು ಪುರುಸೊತ್ತಾದರೂ ನನಗೆಲ್ಲಿದೆ ಅನ್ನೋ ವಾಕ್ಯ ಬಾಯಿಗೆ ಬಂತಾದರೂ ಬೇಸರಗೊಳ್ಳುತ್ತಾನೆ ಅಂತ ಹೇಳಲಿಲ್ಲ. ಹೆಸರಿಗಷ್ಟೇ ಸೋಲ್ ಮೇಟು, ಆತ್ಮಸಂಗಾತಿ..... ಅದ್ಯಾರೇ ಆದ್ರೂ ಮನದ ಭಾವನೆಗಳನ್ನು ಪೂರ್ಣವಾಗಿ ಹಂಚಿಕೊಳ್ಳೋದಿಕ್ಕಾಗೋದಿಲ್ಲ ಻ಅನ್ನುವುದಷ್ಟೇ ಅಂತಿಮ ಸತ್ಯ. 

'ಹೇ. ಇಲ್ವೋ. ಅದಕ್ಯಾಕ್ ಬೇಸರ ಮಾಡಿಕೊಳ್ಳಲಿ. ಗೊತ್ತಲ್ವ ನಿಂಗ್ಯಾಕೆ ಹಂಗೆಲ್ಲ ಻ಅನ್ನಿಸ್ತದೆ ಅಂತ' 

“ಮತ್ತೆ ಇನ್ನೇನಾಯ್ತೆ" 

'ನೀ ಯಾಕ್ ಭಯಂಕರ ಬೇಸರದಲ್ಲಿದ್ದೆ?' 

“ಏನಿಲ್ವೇ ಮಾಮೂಲಿ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.