ಅಕ್ಟೋ 2, 2019

ಬಲಾಡ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡ ಭಾಷಿಕ ಸಮುದಾಯ

ಕು.ಸ.ಮಧುಸೂದನ ರಂಗೇನಹಳ್ಳಿ 
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ 

ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಕೆಲವರ್ಷಗಳ ಹಿಂದೆ ನಡೆದ ಕಳಸಾ ಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ. 

ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ ಕನ್ನಡ ಬಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಬಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು ಕೇವಲ ಬಾಷಿಕ ಚಳುವಳಿಗಳಾಗಿ: ಆಡಳಿತ ಬಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ. 

ಸೆಪ್ಟೆಂ 24, 2019

ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಬೃಹತ್ ಪ್ರಹಸನ!

ಕು.ಸ.ಮಧುಸೂದನ ರಂಗೇನಹಳ್ಳಿ
ದೇಶ ಮತ್ತು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ತೀವ್ರ ಆರ್ಥಿಕ ಹಿಂಜರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ರಾಜ್ಯದ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮತ್ತೊಂದು ಸುತ್ತಿನ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. 

2013ರಿಂದ 2018ರವರೆಗು ಅಂದಿನ ಕಾಂಗ್ರೆಸ್ ಸರಕಾರ ನಡೆಸಿದ್ದ ಬಂಡವಾಳ ಹೂಡಿಕೆಯ ಸಮಾವೇಶಗಳು ಪಡದುಕೊಂಡಿದ್ದ ಪ್ರಚಾರವನ್ನು, ತಂದುಕೊಟ್ಟ ಪಲಿತಾಂಶವನ್ನು ವಿಶ್ಲೇಷಿಸಿದರೆ ಈ ಸಮಾವೇಶಗಳ ನಿಜಬಣ್ಣ ಬಯಲಾಗುತ್ತ ಹೋಗುತ್ತದೆ. ಈ ಹಿಂದಿನ ಕೈಗಾರಿಕಾ ಮಂತ್ರಿಗಳು ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸುವುದರ ಜೊತೆಜೊತೆಗೆ ವಿದೇಶಗಳಲ್ಲಿಯೂ ರೋಡ್ ಶೋಗಳನ್ನು ನಡೆಸಿ ತಮ್ಮ ಪ್ರಯತ್ನ ಶೇಕಡಾ ನೂರರಷ್ಟು ಫಲಪ್ರದವಾಗಿದೆಯೆಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಸ್ತು ಸ್ಥಿತಿ ಬೇರೆಯದೆ ಇದೆ! 

ಕಳೆದ ಐದು ವರ್ಷಗಳಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕೋಟಿ ಮೊತ್ತದ ಒಂದು ಸಾವಿರದ ನೂರೈವತ್ತು ಯೋಜನೆಗಳಿಗೆ ಸರಕಾರದ ಉನ್ನತಾಧಿಕಾರದ ಸಮಿತಿ ಮಂಜೂರಾತಿ ನೀಡಿತ್ತು. ಆದರೆ ಈವರೆಗು ಕೇವಲ ನೂರಾ ನಲವತ್ತೆರಡು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಹೂಡಿಕೆಯಾದ ಬಂಡವಾಳ ಕೇವಲ ಒಂಭತ್ತು ಸಾವಿರ ಕೋಟಿಯಷ್ಟು ಮಾತ್ರ..ಇನ್ನುಳಿದ ಹಣ ಹೂಡಿಕೆಯಾಗುವ ಭರವಸೆಯಂತು ಸದ್ಯಕ್ಕೆ ಯಾರಿಗೂ ಇಲ್ಲ. ಯಾಕೆಂದರೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಿರಾಶಾದಾಯಕ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಲು ಯಾರೂ ಮುಂದೆಬರುವುದಿಲ್ಲವೆಂಬುದು ಸತ್ಯ. 

ಸೆಪ್ಟೆಂ 20, 2019

ಪ್ರೇಮದೊಂದು ಕವಿತೆ.


ಕು.ಸ.ಮಧುಸೂದನ 
ಆಕಾಶದಡಿಯ ಕತ್ತಲು 
ಭೂಮಿ ಮುತ್ತಲು 
ಬೆಳಕಿನೊಂದು ಕನಸು ಕಂಡ ಮಗು 
ನಿದ್ದೆಯಿಂದೆದ್ದು ಕೂತಿತು 
ಅಮ್ಮನ ತೋಳುಗಳ ಹಾಸಿಗೆ ದಾಟಿ 
ಅಂಗಳಕ್ಕಿಳಿಯಿತು. 
ಮಿಂಚುಹುಳುವೊಂದು ಕಣ್ಣ ಮುಂದೆ ಮಿನುಗಿ 
ದಾರಿಯ ಹೊಳೆಸಿತು 
ಅರ್ದಕ್ಕೆ ನಿಂತ ಹಾಡಿಗೆ ಮರುಜೀವ ಬಂದು 
ಬಿಕ್ಕಿಬಿಕ್ಕಿ ಸುಸ್ತಾಗಿದ್ದ ಚುಕ್ಕಿಗಳಿಗೆ 
ಹೊಸ ಹುರುಪು ಬಂದು 
ಬೆಳಗಿನತ್ತ ನಡೆದವು 
ಮರುದಿನದ ಸೂರ್ಯೋದಯದೊಳಗೆ 
ಲೋಕದೊಳಗೆಲ್ಲ ಪ್ರೇಮ 
ತುಂಬಿ ತುಳುಕಿತು!. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಸೆಪ್ಟೆಂ 19, 2019

ಹಡೆಯುವ ಬಯಕೆಗೆ


ಕು.ಸ.ಮಧುಸೂದನ 
ಸಂಜೆ ಹುಯ್ಯುವ ಬಿಸಿಲು ಮಳೆ 
ಕೃತಕವೆನಿಸಿ 
ಕಾಮನಬಿಲ್ಲೂ ಕ್ಷಣಭಂಗುರವೆನಿಸಿ 
ತಳಮಳಿಸಿದ ಮನಸು 
ಹೊಕ್ಕುಳಾದಳದೊಳಗೆಲ್ಲೊ 
ಕಡೆಗೋಲು 
ಮಜ್ಜಿಗೆ ಕಡೆದಂತಾಗಿ 
ಬಿಟ್ಟ ಉಸಿರು ನೀಳವಾಗಿ ಎದೆಬಡಿತ ಜೋರಾಗಿ 
ನಿಂತರೆ ಸಾಕು ಮಳೆ 
ಬಂದರೆ ಮತ್ತೆ ರವಷ್ಟು ಬಿಸಿಲು 
ಮೈಕಾಯಿಸಿಕೊಳ್ಳಬೇಕು. 

ಸ್ಖಲಿಸಿಕೊಳ್ಳದೆ 
ಬಸುರಾಗದೆ 
ಹಡೆಯಲಾಗದೆ 
ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು 
ಉಳಿಸಿಕೊಳ್ಳಬೇಕು. 

ಆಗ 28, 2019

ಸಮ್ಮಿಶ್ರ ಸರಕಾರದ ಪತನ: ನಾಯಕರುಗಳ ಆರೋಪ-ಪ್ರತ್ಯಾರೋಪ!

ಕು.ಸ.ಮಧುಸೂದನ 
ಮಾಜಿ ಪ್ರದಾನಿ ಶ್ರೀದೇವೇಗೌಡರ ಮತ್ತು ಮಾಜಿಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನಡುವಿನ ಆರೋಪ ಪ್ರತ್ಯಾರೋಪಗಳು,ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಅವಲೋಕಿಸುತ್ತಿರುವವರಿಗೆ ಅಚ್ಚರಿಯನ್ನೇನು ಉಂಟು ಮಾಡಿಲ್ಲ. ಬದಲಿಗೆ ಕಳೆದ ಹದಿನಾರು ತಿಂಗಳ ಹಿಂದೆ ರಚನೆಯಾದ ಸಂಮಿಶ್ರ ಸರಕಾರದ ರಚನೆಯ ವಿಷಯಕ್ಕಾಗಿ ಮುನಿಸು ಮರೆತು ಒಂದಾಗಿದ್ದು ಬಾಜಪವನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕೆಂದು ಬಯಸಿದ್ದವರಿಗೆ ಸಂತೋಷವನ್ನುಂಟು ಮಾಡಿತ್ತು. ಆದರೆ ಶ್ರೀ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗುವುದರೊಂದಿಗೆ ಜಾತ್ಯಾತೀತ ಮತದಾರರಿಗೆ ಭ್ರಮನಿರಸನವಾಗಿದೆ. ಮತ್ತು ಸ್ವಪ್ರತಿಷ್ಠೆಯೇ ಮುಖ್ಯವೆಂದುಕೊಂಡಿರುವ ನಾಯಕರುಗಳ ನಡೆಯ ಬಗ್ಗೆ ಜನ ಬೇಸರಗೊಂಡಿದ್ದಾರೆ. 

ಒಂದು ಕಡೆ ಜಾತ್ಯಾತೀತ ಜನತಾದಳದ ರಾಷ್ಟ್ರಾದ್ಯಕ್ಷರಾದ ದೇವೇಗೌಡರು ಕಾಂಗ್ರೆಸ್ಸಿನ ಕಿರುಕುಳಕ್ಕೆ ಕುಮಾರಸ್ವಾಮಿ ರೋಸಿಹೋಗಿದ್ದರು ಎಂದು ಹೇಳುತ್ತಲೇ ಸಮ್ಮಿಶ್ರ ಸರಕಾರ ಪತನವಾಗಲು ಸಿದ್ದರಾಮಯ್ಯನವರೇ ಕಾರಣ ಎಂಬ ಮಾತನ್ನೂ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದರಾಮಯ್ಯನವರು ಸಮ್ಮಿಶ್ರ ಸರಕಾರ ಬೀಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ದಾರಗಳನ್ನು ತೆಗೆದುಕೊಳ್ಳುತ್ತಿದ್ದುದು, ದೇವೇಗೌಡರ ಕುಟುಂಬ ಅದರಲ್ಲೂ ರೇವಣ್ಣನವರು ಸರಕಾರದ ಆಡಳಿತದಲ್ಲಿ ಮೂಗುತೂರಿಸಿದ್ದೇ ಕಾರಣವೆಂದು ಹೇಳಿದ್ದಾರೆ. ಸಮ್ಮಿಶ್ರ ಸರಕಾರದ ಹದಿನಾಲ್ಕು ತಿಂಗಳ ಆಡಳಿತವನ್ನು, ಅದರ ಆಂತರಿಕ ಕಿತ್ತಾಟಗಳನ್ನು ಸೂಕ್ಷ್ಮವಾಗಿ ನೋಡಿದವರಿಗೆ ಇಬ್ಬರೂ ನಾಯಕರುಗಳ ಮಾತುಗಳೂ ಅರ್ದಸತ್ಯವೆಂಬುದು ಗೊತ್ತಾಗುತ್ತದೆ. 

ಆಗ 25, 2019

ಹೀಗೊಂದು ಹಗಲು

ಕು.ಸ.ಮಧುಸೂದನ

ಒಂದು:
ಅಡ್ಡಾದಿಡ್ಡಿ ಬೆಳೆದ ನಗರಗಳು
ಅನಾಥವಾದ ಹಳ್ಳಿಗಳು
ಪೂರ್ವದ ಮೇಲೆ ಹಲ್ಲೆ ಮಾಡಿ
ಒಸರಿದ ರಕ್ತ ನೆಕ್ಕುತಿಹ ಪಶ್ಚಿಮದ ಸೂರ್ಯ
ತಂದ ಕಡ ತೀರಿಸಲಾಗದೆ
ಕರಿಯ ತೊಗಲುಗಳನ್ನು ಮಾರಾಟಕ್ಕಿಟ್ಟ ವಂಚಕ ಪಡೆ
ಕಣ್ಣಿದ್ದರೂ ಕಾಣುತ್ತಲ್ಲ
ಕಿವಿಯಿದ್ದರೂ ಕೇಳುತ್ತಿಲ್ಲ
ಕಾಲಿದ್ದರೂ ನಡೆಯಲಾಗುತ್ತಿಲ್ಲ
ಇರುವೆರಡು ಕುಷ್ಠ ಹಿಡಿದ ಕೈಗಳಲಿ
ಅವರದೇ ಹರಿಕಥೆ ಭಜನೆ

ಆಗ 24, 2019

ನೈತಿಕತೆಯ ಬಗೆಗೆ ಕೆಲವು ಮೂರ್ಖ ಪ್ರಶ್ನೆಗಳು!

ಕು.ಸ.ಮಧುಸೂದನ ರಂಗೇನಹಳ್ಳಿ 

ಅಂತೂ 'ಆಪರೇಷನ್ ಕಮಲ' ಅನ್ನುವ ರಾಕ್ಷಸೀಆಯುಧವನ್ನು ಬಳಸಿ,ಮೈತ್ರಿ ಸರಕಾರವನ್ನು ಉರುಳಿಸಿ ತನ್ನದೇ ಸರಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಆಂತರಿಕ ಭಿನ್ನಮತೀಯ ಚಟುವಟಿಕೆಗಳಲ್ಲಿ ತನ್ನ ಪಾತ್ರವಿಲ್ಲವೆನ್ನುತ್ತಲೇ ನಾಟಕವಾಡುತ್ತ ಬಂದ ಬಿಜೆಪಿಯ ನಾಯಕರುಗಳ ಮಾತುಗಳನ್ನು ಜನ ನಂಬದೇ ಹೋದರೂ, ಈ ಕ್ಷಣಕ್ಕೂ ಬಿಜೆಪಿ ತಾನು ಪರಮಪವಿತ್ರವೆಂಬ ಮುಖವಾಡದಲ್ಲಿ ಸರಕಾರ ರಚಿಸಿ. ಗೆಲುವಿನ ವಿಕೃತ ನಗು ಬೀರುತ್ತಿದೆ 

ಆದರೆ ಪ್ರಜಾಸತ್ತೆಯಲ್ಲಿನ ಈ ಕಪಟನಾಟಕ ಇಲ್ಲಿಗೇ ಮುಗಿಯುವುದಿಲ್ಲ. ಅಕಸ್ಮಾತ್ ಅತೃಪ್ತ ಶಾಸಕರುಗಳ(ಆತ್ಮಗಳ) ಅನರ್ಹತೆ ಬಗ್ಗೆ ನ್ಯಾಯಾಲಯದ ತೀರ್ಪೇನೆ ಬರಲಿ, ಇನ್ನು ಆರುತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಅವರುಗಳಿಗೆ ತನ್ನ 'ಬಿ'ಫಾರಂ ಕೊಟ್ಟು ಮತಬಿಕ್ಷೆಗೆ ಜನರ ಮುಂದೆ ಬರಲೇಬೇಕಾಗುತ್ತದೆ. ಆಗ ಜನ ಕೆಳಗಿನ ಪ್ರಶ್ನೆಗಳನ್ನು ಅವರಿಗೆ ಕೇಳಬೇಕಾಗುತ್ತದೆ: 

ಮೊದಲಿಗೆ, ಆಡಳಿತ ಪಕ್ಷಗಳ ಶಾಸಕರುಗಳ ರಾಜಿನಾಮೆಯಲ್ಲಿ ನನ್ನ ಪಾತ್ರವಿಲ್ಲ ಎನ್ನುವ ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂಇಲ್ಲ. ಯಾಕೆಂದರೆ ಕಳೆದ ವರ್ಷ ವಿದಾನಸಭೆಯ ಚುನಾವಣಾ ಪಲಿತಾಂಶಗಳು ಬಂದಾಗ ತನಗೆ ಬಹುಮತವಿಲ್ಲವೆಂಬ ಸಂಗತಿ ಗೊತ್ತಿದ್ದರೂ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರ ಹಿನ್ನೆಲೆಯಲ್ಲಿ ಇದ್ದುದು, ಅನ್ಯಪಕ್ಷಗಳಿಂದ ಹಲವು ಶಾಸಕರುಗಳ ರಾಜಿನಾಮೆ ಕೊಡಿಸಿ, ಉಪಚುನಾವಣೆಗಳಲ್ಲಿ ಅವರನ್ನು ಗೆಲ್ಲಿಸಿಕೊಂಡು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಗುಪ್ತ ಕಾರ್ಯತಂತ್ರವೇ ಅಲ್ಲವೇ? ಅದೊಂದನ್ನು ಹೊರತು ಪಡಿಸಿದಂತೆ ವಿಶ್ವಾಸ ಮತ ಸಾಬೀತು ಪಡಿಸಲು ನಿಮಗೆ ಅನ್ಯ ಮಾರ್ಗವೇನಾದರು ಇತ್ತೆ? ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಒಂದು ಆಡಿಯೊ ಕ್ಲಿಪಿಂಗಿನಲ್ಲಿ ತಾವು ಈ ವ್ಯವಹಾರದ ಬಗ್ಗೆ ಮಾತಾಡಿದ್ದೂ ಇದೆ. 

ಜುಲೈ 11, 2019

ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ

ಕು.ಸ.ಮಧುಸೂದನ
ಕತ್ತಲಾಗಲೆಂದೆ ಬೆಳಗಾಗುವುದು 
ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು 
ಕಮರಲೆಂದೆ ಕನಸು ಹುಟ್ಟುವುದು 
ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು 
ಬರಲಿರುವ ಸಖನಿಗಾಗಿ. 

ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು 
ಬರಲಿರುವ ಸಖನ ಮೂಗಿಗೆ ಘಮಿಸಲೆಂದು 
ಬರಡು ಎದೆಗೆ ವಸಂತನ ಕನವರಿಸಿ 
ಹೊಸ ಕನಸು ಚಿಗುರಿಸಿಕೊಂಡಳು 
ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು 

ಜುಲೈ 9, 2019

ಶಬ್ದವೊಂದು ಕವಿತೆಯಾಗುವ ಮೊದಲು!

ಕು.ಸ.ಮಧುಸೂದನ
ಶಬ್ದವೊಂದು ಕವಿತೆಯಾಗುವ ಮೊದಲು 
ಕಣ್ಣುಗಳಿಗೆ ಕನಸಿನ ಪಾಠ ಮಾಡಿ ಹೋಯಿತು

ಕವಿತೆಯೊಂದು ಹಾಳೆಗಿಳಿಯುವ ಮೊದಲು
ಕನಸೊಂದ ಕಣ್ಣಿಗಿಳಿಸಿ ಹೋಯಿತು. 

ಹಕ್ಕಿಯೊಂದು ಬಾನೊಳಗೆ ಹಾರುವ ಮೊದಲು 
ಭುವಿಗೆ ವಿದಾಯದ ಅಪ್ಪುಗೆಯನೊಂದ ನೀಡಿ ಹೋಯಿತು 

ಮರಣವೊಂದು ಮನುಜನ ತಬ್ಬುವ ಮೊದಲು 
ಜೀವನದ ಗುಟ್ಟೊಂದ ಕಿವಿಯಲುಸುರಿ ಹೋಯಿತು. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಜುಲೈ 2, 2019

ಗುರುತು!

ಕು.ಸ.ಮಧುಸೂದನ
ನಾನು 
'ಅವಳು' 
ಎಂದು ಬರೆದಾಗೆಲ್ಲ
ನೀವು ಅನುಮಾನದಿಂದ ಅವಳತ್ತ ತಿರುಗಿ ನೋಡದಿರಿ.

ಇದ್ದಿದ್ದು ನಿಜ, ಅವಳಿಗೊಂದು ಹೆಸರು
ಅವರ ಮನೆಯವರು ಇಟ್ಟಿದ್ದು.
ಆ ಹೆಸರಿನಾಚೆ ಅವಳಿಗೇನೂ ಗುರುತಿರಲಿಲ್ಲ ಎಂಬುದೂ ನಿಜ.
ಯಾರದೊ ಮಗಳಾಗಿ ತಂಗಿಯಾಗಿ ಅಕ್ಕನಾಗಿ
ಇದ್ದವಳು ನನ್ನ ಗೆಳತಿಯಾಗಿದ್ದು ಆಕಸ್ಮಿಕವೇ ಸರಿ
ಅವೆಲ್ಲ ದಾಟಿ 
ಅವಳು
ಪತ್ನಿಯಾದಳು,
ತಾಯಾದಳು
ತನ್ನ ಹೆಸರಿನಾಚೆಯೊಂದು ಗುರುತಿಗೆಂದೂ ಹಂಬಲಿಸದೆಯೆ.
ಇದೀಗ ಬಿಟ್ಟು ಬಿಡಬೇಕಾಗಿದೆ ಅವಳ
ನಾವಿಟ್ಟ ಹೆಸರಿನಿಂದಾಚೆಗೊಂದು ಗುರುತು
ತಾನೇ ಕಂಡುಕೊಳ್ಳಲು.
ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಜೂನ್ 29, 2019

ಗೋರಿಯ ಮೇಲೆ.

ಕು.ಸ.ಮಧುಸೂದನ ರಂಗೇನಹಳ್ಳಿ 
ಬರುತ್ತೇನೆಂದಿದ್ದೆ ಬರಲಿಲ್ಲ 
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ 
ಹಗಲ ಬೇಗೆಯಲಿ ಅಸ್ವಸ್ಥನಂತೆ. 

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ 
ಬೀಸಿಬಂದ ಗಾಳಿ ನನ್ನ ವಾಸನೆ ಹೊತ್ತು ತರಲಿಲ್ಲ 
ಹಗಲ ಬೆನ್ನೇರಿ ಬಂದಿರುಳಿಗೆ 
ಉಸಿರು ನೀಳವಾಯಿತು

ಜೂನ್ 28, 2019

'ಏಕಕಾಲಕ್ಕೆ ಚುನಾವಣೆ' ಬಾಜಪದ ಹಳೆಯಜೆಂಡಾ

ಕು.ಸ.ಮಧುಸೂದನ ರಂಗೇನಹಳ್ಳಿ 
ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೆಹಲಿಯ ಗದ್ದುಗೆ ಹಿಡಿದಾಕ್ಷಣ ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳುವುದರೊಂದಿಗೆ ಬಾಜಪದ ಹಳೆಯ ಗುಪ್ತ ಕಾರ್ಯಸೂಚಿಗೆ ಮತ್ತೆ ಜೀವ ತುಂಬಿದ್ದಾರೆ. 

ಬಾಜಪದ ಈ ಕಾರ್ಯತಂತ್ರ ಹೊಸತೇನಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರದಾನಮಂತ್ರಿಗಳಾದ ಕೆಲವೆ ತಿಂಗಳಲ್ಲಿ ಕೇಂದ್ರ ಕಾನೂನು ಸಚಿವಾಲಯ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತವೆಂಬ ಸಲಹೆನೀಡಿತ್ತು. ನಂತರದ ಕೆಲವೆ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಸಹ ಕಾನೂನು ಇಲಾಖೆಯ ಈ ಸೂಚನೆಗೆ ಸಹಮತ ಸೂಚಿಸುತ್ತ, ಸರಕಾರ ಕಾನೂನು ತಿದ್ದುಪಡಿ ಮಾಡಿ ಹಸಿರು ನಿಶಾನೆ ತೋರಿಸಿದಲ್ಲಿ ತನಗೇನು ಅಭ್ಯಂತರವಿಲ್ಲವೆಂದು ಹೇಳಿತ್ತು. ನಂತರದಲ್ಲಿ ಪ್ರದಾನಿಯವರು ಸಹ ಏಕಕಾಲಕ್ಕೆ ಚುನಾವಣೆ ನಡೆಸಲು ತಾವು ಇಚ್ಚಿಸುವುದಾಗಿ ಸಾರ್ವಜನಿಕವಾಗಿ ಹೇಳುವುದರೊಂದಿಗೆ ಒಂದಷ್ಟು ಚರ್ಚೆಗೆ ನಾಂದಿ ಹಾಡಿದ್ದರು. 

ಜೂನ್ 14, 2019

ಈ ಸೂರ್ಯಾಸ್ತದೊಳಗೆ

ಕು.ಸ.ಮಧುಸೂದನನಾಯರ್
ನೀಲಿ ಹೂವಿನಂತೆ ನಳನಳಿಸಿ 
ಬೆಳದಿಂಗಳ ನಗುವ ಚೆಲ್ಲಿದವಳು 
ನಕ್ಷತ್ರ ಕಣ್ಣುಗಳಲಿ ಬೆಳದಿಂಗಳ ಬೆಳಕ 
ಹರಡಿದಾಗ ಅವನ ಕತ್ತಲ ಜಗಕೆ ಹಗಲು 
ಬಂದಂತಾಗಿ 
ಸಾವಿರ ಕನಸುಗಳು ಸೃಷ್ಠಿಯಾದವು 
ಕನಸುಗಳೊಳಗೆ ಅವಳ 
ಕೆನ್ನೆ ಗಲ್ಲ ತುಟಿಕಟಿಗಳ 
ಗಲ್ಲ ಕುತ್ತಿಗೆಯ ಇಳಿಜಾರು 
ಗರಿಗೆದರಿದವು, 

ಜೂನ್ 12, 2019

ಊರೆಂದರೆ ಹೀಗೇನೆ!

ಕು.ಸ.ಮಧುಸೂದನ ರಂಗೇನಹಳ್ಳಿ 
ಊರೆಂದರೆ ಹೀಗೆ 
ಮನೆಗಳ ಸಾಲುಗಳು 
ಅವುಗಳ ಕಾಯಲು ನಾಯಿಗಳು 
ವಾಕಿಂಗ್ ಕರೆದುಕೊಂಡು ಹೋಗುವ ಕೈಗಳು 
ಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರು 
ತಮಗು ಅದೇ ಬೇಕೆಂದು ಹಟ ಹಿಡಿಯುವ ಮಕ್ಕಳು 
ಇದನೆಲ್ಲ ಕವಿತೆಯಾಗಿಸುವ ಹೆಂಗರುಳಿನ ಕವಿಗಳು 
ಒಳ್ಳೆಯವರ ನಡುವೆಯೂ ಒಂದಿಬ್ಬರಾದರೂ ಕಳ್ಳರು 
ಹಿಡಿಯಲಷ್ಟು ಪೋಲೀಸರು 

ಜೂನ್ 10, 2019

ಬರುತ್ತೇನೆಂದು ಬರಲಿಲ್ಲ

ಕು.ಸ.ಮದುಸೂದನರಂಗೇನಹಳ್ಳಿ
ಬರುತ್ತೇನೆಂದಿದ್ದೆ ಬರಲಿಲ್ಲ
ಕಾಯುತ್ತಿದ್ದೆ 
ಇರುಳ ತಂಪಿನಲಿ ಸ್ವಸ್ಥನಂತೆ
ಹಗಲ ಭೇಗೆಯಲಿ ಅಸ್ವಸ್ಥನಂತೆ.

ಬೀಸು ಬಿದ್ದ ಹಾದಿ ನಿನ್ನ ಬರುವ ತೋರಲಿಲ್ಲ
ಬೀಸಿಬಂದ ಗಾಳಿ ನಿನ್ನ ವಾಸನೆ ಹೊತ್ತು ತರಲಿಲ್ಲ.

ಮೇ 30, 2019

ದಕ್ಷಿಣವನ್ನು ಬಾಜಪ ಯಾಕೆ ಗೆಲ್ಲಲಾಗಲಿಲ್ಲ?

ಕು.ಸ.ಮಧುಸೂದನ
ದೇಶದ ಉದ್ದಗಲಕ್ಕೂ ತನ್ನ ಪ್ರಭಾವಳಿಯನ್ನು ವಿಸ್ತರಿಸಿ ಮುನ್ನೂರಕ್ಕೂ ಅಧಿಕಸ್ಥಾನಗಳನ್ನು ಗೆದ್ದ ಬಾಜಪ ದಕ್ಷಿಣ ಭಾರತದಲ್ಲಿ ಮಾತ್ರ ಬಹುತೇಕ ವಿಫಲವಾಗಿದೆ. ಕರ್ನಾಟಕ ಒಂದನ್ನು ಹೊರತು ಪಡಿಸಿದರೆ ಮಿಕ್ಕಂತೆ ಆಂದ್ರಪ್ರದೇಶ, ತಮಿಳುನಾಡು, ಪುದುಚೇರಿ, ಕೇರಳಗಳಲ್ಲಿ ಕನಿಷ್ಠ ಖಾತೆ ತೆರೆಯಲೂ ಅದು ವಿಫಲವಾಗಿದ್ದು ತೆಲಂಗಾಣದಲ್ಲಿ ಮಾತ್ರ ಕಷ್ಟ ಪಟ್ಟು ನಾಲ್ಕು ಸ್ಥಾನಗಳನ್ನು ಗೆದ್ದಿದೆ.

ಯಾವತ್ತಿಗೂ ಬಾಜಪ ಖಾತೆ ತೆರೆಯಲೇ ಅಸಾದ್ಯವೆಂಬ ಬಲವಾದ ಅನಿಸಿಕೆಯಿದ್ದ ಈಶಾನ್ಯಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಅದು ದಕ್ಷಿಣದಲ್ಲಿ ನೆಲೆ ಕಂಡುಕೊಳ್ಳಲು ಏದುಸಿರು ಬಿಡುತ್ತಿರುವುದಾದರೂ ಯಾಕೆಂದು ವಿಶ್ಲೇಷಿಸುತ್ತ ಹೋದರೆ ಹಲವು ಐತಿಹಾಸಿಕ ಕಾರಣಗಳು ಕಂಡುಬರುತ್ತವೆ.

ಮೇ 21, 2019

ಹಳೆ ಕುದುರೆ -ಹೊಸ ದೊರೆ

ಕು.ಸ.ಮಧುಸೂದನ ರಂಗೇನಹಳ್ಳಿ

ಉರಿಯುವ ಹಗಲು
ಗಡಿಯಾರಗಳ ಮುಳ್ಳುಗಳು ತೆವಳುತಿವೆ
ಎಷ್ಟು ಕತ್ತಿಗಳ ತಿವಿತ
ರಕ್ತ ಸ್ರಾವವಿರದೆ ಕೊಲ್ಲುವ ಹೊಸ ಮಾರ್ಗ
ಅನ್ವೇಷಿಸಿದ ಕೀರ್ತಿ ಪತಾಕೆ ಹೊತ್ತ
ಹಳೇ ಕುದುರೆಗಳ ಮೇಲಿನ ಹೊಸ ದೊರೆ
ಊರ ತುಂಬಾ ಭಯದ ಕಂಪನಗಳು
ನಿಟ್ಟುಸಿರನ್ನೂ ಬಿಗಿ ಹಿಡಿದು
ಬಿಲ ಸೇರಿಕೊಂಡ ಹುಳುಗಳು
ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ದೂಳಿನಬ್ಬರಕೆ
ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ
ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು ಸ್ವತ: ರಕ್ಕಸರಂತೆ
ಪರಾಕ್ರಮ ಮೆರೆಯ ತೊಡಗಿದರು
ಹಾಗೆ ಧಗಧಗಿಸಿ ಉರಿದೊಂದು ಸಂಜೆ
ಬರಬಹುದಾದ ಬಿರು ಮಳೆಗೆ ಕಾದ
ಜನ ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು
ಹುಯ್ಯೋ ಹುಯ್ಯೋ ಮಳೆರಾಯ!

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೇ 9, 2019

ಶಕ್ತಿ ನೀಡು!

ಕು.ಸ.ಮಧುಸೂದನ ರಂಗೇನಹಳ್ಳಿ. 
ಹಿತವೆನಿಸುತ್ತಿದೆ ನಿನ್ನೀ ಮೆದು ಸ್ಪರ್ಶ
ಮೆಲು ಮಾತು
ಅಂತೂ ಬಂದೆಯಲ್ಲ ಮರಣಶಯ್ಯೆಯಡೆಗಾದರು
ಅದೇ ಸಂತಸ
ಷ್ಟು ಸನಿಹವಿದ್ದೀಯವೆಂದರೆ ದೂರದ ಪರಲೋಕವೂ ಇದೀಗ ಹತ್ತಿರವೆನಿಸುತ್ತಿದೆ
ಕ್ಷಮಿಸಿಬಿಡಿ ಹಳೆಯ ಮಾತುಗಳನ್ನೂ ಮುನಿಸುಗಳನ್ನೂ
ದಾಟಿದ ಮೇಲೂ ಹೊಳೆಯ ಅಂಬಿಗನ ನೆನಪೇಕೆ
ಏನೂ ಕೊಡಲಿಲ್ಲವೆಂಬ ಕೊರಗೇಕೆ ನಿನಗೆ
ಕೊಡುವುದು ಮುಖ್ಯ ಕೊಟ್ಟದ್ದೇನೆಂದಲ್ಲ
ಸುಖವೋ ದು:ಖವೊ
ಬೇಡಬಿಡು ಯಾಕೆ ವೃಥಾ ವಾದವಿವಾದ
ಹೋಗಿಬಿಡುವ ಸಮಯದಲ್ಲೇಕೆ ತೋರುವೆ ಇಷ್ಟೊಂದು ಪ್ರೀತಿಯ
ಸ್ವರ್ಗವೊ ನರಕವೊ
ನೀನಿರದೆಯೂಬದುಕಬಲ್ಲ ಶಕ್ತಿಯ ನೀಡು!
ಕು.ಸ.ಮಧುಸೂದನರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೇ 1, 2019

ಇಂಡಿಯಾದ ಚುನಾವಣೆಗಳು: ಡಿಸ್ಕೌಂಟ್ ಸೇಲಿನ ಬಿಗ್ ಬಜಾರುಗಳು

ಕು.ಸ.ಮಧುಸೂದನ ರಂಗೇನಹಳ್ಳಿ
ಇವತ್ತು ಇಂಡಿಯಾದಲ್ಲಿನ ಸಾರ್ವತ್ರಿಕ ಚುನಾವಣೆಗಳು ತಮ್ಮ ಸಾಂಪ್ರದಾಯಿಕ ಮೌಲ್ಯ ಮತ್ತು ಮಹತ್ವವನ್ನು ಕಳೆದು ಕೊಳ್ಳುತ್ತಿವೆಯೆಂದರೆ ತಪ್ಪಾಗಲಾರದು. ಹಾಗೆಂದು ಕಳೆದ ಏಳು ದಶಕಗಳಲ್ಲಿ ನಡೆದ ಎಲ್ಲ ಚುನಾವಣೆಗಳ ಬಗ್ಗೆಯೂ ಈ ಮಾತು ಹೇಳಲಾಗದು. 

ಆದರೆ ತೊಂಭತ್ತರ ದಶಕದ ನಂತರದಲ್ಲಿ ನಡೆದ ಬಹುತೇಕ ಚುನಾವಣೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಒಂದು ಬೃಹತ್ ಸಂತೆಯ ಸ್ವರೂಪ ಪಡೆದುಕೊಂಡಿವೆ. ಬದಲಾದ ಆರ್ಥಿಕ ನೀತಿಯ ಫಲವಾಗಿ ಪ್ರವರ್ದಮಾನಕ್ಕೆ ಬಂದ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿತು. ಆಗ ನಾಯಿಕೊಡೆಗಳಂತೆ ಹುಟ್ಟಿಕೊಂಡ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳ ದೃಶ್ಯ ಮಾಧ್ಯಮಗಳು ನಮ್ಮ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಹೈಜಾಕ್ ಮಾಡಿಬಿಟ್ಟಿವೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ, ನಮ್ಮ ಸಮೂಹ ಮಾದ್ಯಮಗಳು (ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾದ್ಯಮಗಳು) ಇಡೀ ದೇಶವನ್ನು ಒಂದು ಮಾರುಕಟ್ಟೆಯನ್ನಾಗಿಸಿ (ನಗರದ ಬಾಷೆಯಲ್ಲಿ ಹೇಳುವುದಾದರೆ ಮಾಲ್ ಅನ್ನಾಗಿಸಿ) ಮತದಾರರನ್ನು ಗ್ರಾಹಕರನ್ನಾಗಿಸಿ, ರಾಜಕೀಯ ಪಕ್ಷಗಳು, ಮತ್ತವುಗಳ ನಾಯಕರುಗಳನ್ನು ಮಾರಾಟದ ಸರಕುಗಳನ್ನಾಗಿಸಿ ಬಿಟ್ಟಿವೆ. ಇದಕ್ಕೆ ಕಾರಣವೂ ಸ್ಪಷ್ಟ: ಮುಕ್ತ ಆರ್ಥಿಕ ನೀತಿಯ ನಂತರ ಪ್ರಾರಂಭವಾದ ಬಹುತೇಕ ಸುದ್ದಿವಾಹಿನಿಗಳು ಒಂದಲ್ಲಾ ಒಂದು ಕಾರ್ಪೋರೇಟ್-ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಂತಹ ಬಲಾಢ್ಯ ಶಕ್ತಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡುವ ರಾಜಕೀಯ ಪಕ್ಷಗಳ ಮತ್ತು ಅವುಗಳ ನಾಯಕರುಗಳನ್ನು ತಮ್ಮ ಮಾಧ್ಯಮಗಳ ಮೂಲಕ ಪ್ರಮೋಟ್ ಮಾಡುತ್ತ, ಚುನಾವಣೆಗಳನ್ನು, ಮತ್ತದರ ಪಲಿತಾಂಶಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬರುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿವೆ. ತಮಗೆ ಬೇಕಾದ ಪಕ್ಷಗಳು,ನಾಯಕರುಗಳನ್ನು ಬಣ್ಣಬಣ್ಣದ ಜಾಹಿರಾತುಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುತ್ತ ಮತದಾರರಿಗೆ ಮಾರುತ್ತಿದ್ದಾರೆ. ಇದರ ಕಾರ್ಯವೈಖರಿ ಹೀಗಿದೆ:

ಏಪ್ರಿ 28, 2019

ಚುನಾವಣಾ ನೀತಿಸಂಹಿತೆ ಎಂಬ ಪ್ರಹಸನ

ಕು.ಸ.ಮಧುಸೂದನರಂಗೇನಹಳ್ಳಿ
ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ.

ಇಲ್ಲಿನ ಮತದಾರರ ಸಂಖ್ಯೆ ತೊಂಭತ್ತು ಕೋಟಿ.ಇಪ್ಪತ್ತು ಲಕ್ಷ ಮತಯಂತ್ರಗಳು. ಒಂದೂಕಾಲು ಕೋಟಿಗೂ ಅಧಿಕ ಮತಗಟ್ಟೆಯನ್ನು ನಿರ್ವಹಿಸುವ ಸಿಬ್ಬಂದಿಗಳು, ಎರಡೂವರೆ ಕೋಟಿಗೂ ಅಧಿಕ ಭದ್ರತಾ ಸಿಬ್ಬಂದಿ. ಅಧಿಕೃತವಾಗಿ ಇಷ್ಟಲ್ಲದೆ ಚುನಾವಣೆಗಳಿಗೆ ಪರೋಕ್ಷವಾಗಿ ನೆರವಾಗುವ ಮೂರು ಕೋಟಿ ಇತರೇ ನೌಕರರು. ಇಷ್ಟು ದೊಡ್ಡ ಮಟ್ಟದ ಚುನಾವಣಾ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಇದುವರೆಗು ಬಹುತೇಕ ಚುನಾವಣೆಗಳು ಶಾಂತಿಯುತವಾಗಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಚುನಾವಣೆಗಳನ್ನು ಹೊರತು ಪಡಿಸಿದರೆ) ನಡೆದಿದ್ದು ತಮ್ಮ ವಿಸ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ.

ಅದರೆ ಈ ಬಾರಿ ನಡೆದ ಇದುವರೆಗಿನ ಮೂರು ಹಂತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿ ಬಿಟ್ಟಿದೆ. ತಾನೆ ವಿಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿಯೆಂಬ ಅನುಮಾನ ತಲೆದೋರುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾದಂತ ದತ್ತ ಅಧಿಕಾರವನ್ನು ಹೊಂದಿರುವ ಆಯೋಗ ಯಾಕೊ ಈ ಅಧಿಕಾರವನ್ನು ಉಪಯೋಗಿಸಿಕೊಳ್ಳುವಲ್ಲಿ ಆಸಕ್ತಿಯನ್ನೇನು ತೋರುತ್ತಿಲ್ಲ. ಚುನಾವಣಾ ಆಯೋಗದ ಈ ಕ್ರಿಯಾಹೀನತೆಯನ್ನು ಕಂಡ ಸುಪ್ರೀಂ ಕೋರ್ಟ ಮದ್ಯಪ್ರವೇಶಿಸಿ ನೀತಿಸಂಹಿತೆ ಉಲ್ಲಂಘಿಸಿದವರ ವಿರುದ್ದಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಸೂಚನೆ ನೀಡಬೇಕಾಗಿ ಬಂದಿತು.