Apr 30, 2016

ಪಿ.ಎಫ್. ಕಾನೂನು ತಿದ್ದುಪಡಿಯ ವಿರುದ್ಧದ ಬೆಂಗಳೂರಿನ ಚಳುವಳಿ ಮತ್ತು ಕಾರ್ಮಿಕ ಸಂಘಟನೆಗಳ ಮುಂದಿನ ಹೆಜ್ಜೆ: ಒಂದು ಟಿಪ್ಪಣಿ

pf protest at bangalore
ಕು.ಸ.ಮಧುಸೂದನ ರಂಗೇನಹಳ್ಳಿ
30/04/2016

ಯಾವುದೇ ಸಮಾಜ ಜೀವಂತವಾಗಿದೆ ಎಂದು ನಂಬುವುದಕ್ಕೆ ಸಾಕ್ಷಿಯಾಗಿ ಕೆಲಸ ಮಾಡುವುದು ಆ ಸಮಾಜದಲ್ಲಿನ ಸಾಮಾಜಿಕ ಕಳಕಳಿಯ ಚಳುವಳಿಗಳು. ಒಂದು ಸಮುದಾಯದ ಸಾಕ್ಷಿ ಪ್ರಜ್ಞೆಯಾದ ಹೋರಾಟಗಳು ಇರುವಲ್ಲಿ ಮಾತ್ರ ಸದಾ ಹೊಸತನದ ತುಡಿತವೊಂದನ್ನು, ಬದಲಾವಣೆಯ ಕನಸನ್ನು ಕಾಣಬಹುದಾಗಿದೆ. ನಿಷ್ಕ್ರಿಯವಾದ ಜನಸಮುದಾಯವೊಂದು ಯಥಾ ಸ್ಥಿತಿಯನ್ನು ಒಪ್ಪಿಕೊಂಡು ಬದುಕಿದೆಯೆಂದರೆ ಅದು ಪ್ರತಿಭಟಿಸುವ ತನ್ನ ಗುಣವನ್ನು ಕಳೆದುಕೊಂಡಿದೆಯೆಂದೂ, ಬದಲಾವಣೆ ಬಯಸುವ ಆಕಾಂಕೆಯನ್ನು ಬಿಟ್ಟು ಕೊಟ್ಟಿದೆಯೆಂದು ಅರ್ಥ.

ಕಳೆದೊಂದು ದಶಕದಿಂದಲೂ ಕರ್ನಾಟಕವೂ ಸಹ ಇಂತಹ ಕ್ರಿಯಾಹೀನತೆಯ ಸ್ಥಿತಿಯನ್ನು ತಲುಪಿದೆ. ಜಾಗತೀಕರಣದ ನಂತರ ನಮ್ಮ ಸಾಮಾಜಿಕ ಬದುಕಿನಲ್ಲಿ ಉಂಟಾದ ಆರ್ಥಿಕ ಪಲ್ಲಟಗಳು ಇದಕ್ಕೆ ಬಹಳಷ್ಟು ಮಟ್ಟಿಗೆ ಕಾರಣ. ಖಾಸಗಿ ಕ್ಷೇತ್ರದಲ್ಲಿ ದೊರೆತ ಉದ್ಯೋಗಾವಕಾಶಗಳು, ಹೆಚ್ಚಾದ ಮದ್ಯಮ ವರ್ಗದ ಕೊಳ್ಳುವ ಶಕ್ತಿ, ದಿಡೀರನೆ ನಮ್ಮ ಮದ್ಯಮವರ್ಗದ ಚಿಂತನೆಯ ದಿಕ್ಕುಗಳನ್ನೇ ಬದಲಾಯಿಸಿಬಿಟ್ಟಿತು. ಯಾಕೆಂದರೆ ತೊಂಭತ್ತರ ದಶಕದವರೆಗೂ ನಮ್ಮ ಬಹುತೇಕ ಚಳುವಳಿಗಳ ಮೂಲ ಶಕ್ತಿಯೇ ಈ ಮದ್ಯಮವರ್ಗವಾಗಿತ್ತು. ಅಕ್ಷರಸ್ಥ ಮದ್ಯಮವರ್ಗ ತಾವು ಓದಿಕೊಂಡ ಎಡಪಂಥೀಯ ಮತ್ತು ಸಮಾಜವಾದಿ ಧೋರಣೆಗಳಿಂದ ಪ್ರೇರೇಪಿತರಾಗಿದ್ದು, ಸಮುದಾಯದ ಯಾವುದೇ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿತ್ತು. ಅದು ದಲಿತ ಚಳುವಳಿಯಿರಲಿ, ರೈತ ಚಳುವಳಿಯಿರಲಿ, ಕನ್ನಡಪರ ಹೋರಾಟವಿರಲಿ, ಕಾರ್ಮಿಕ ಸಂಘಟನೆಗಳ ಮುಷ್ಕರಗಳಿರಲಿ ಇಲ್ಲ ಸರಕಾರಗಳ ಜನವಿರೋಧಿ ಕ್ರಮಗಳ ವಿರುದ್ಧದ ಚಳುವಳಿಯೇ ಇರಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಲ್ಗೊಂಡು ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಿತ್ತು. ಶಿವಮೊಗ್ಗದಂತಹ ಪುಟ್ಟ ನಗರಗಳಲ್ಲಿ ಹೋಟಲಿನವರು ಇಡ್ಲಿ ಬೆಲೆಯನ್ನು 5 ಪೈಸೆ ಹೆಚ್ಚಿಸಿದರೂ ಜನ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಅಂದಿನ ವಿದ್ಯಾರ್ಥಿ ಸಂಘಟನೆಗಳು ಸಹ ಸಕ್ರಿಯವಾಗಿದ್ದು ತಮಗೆ ಸಂಬಂದಿಸಿರದ ಹಲವು ಸಾಮಾಜಿಕ ಹೋರಾಟಗಳಲ್ಲಿ ಬಾಗವಹಿಸುತ್ತಿತ್ತು. ನಂತರ ಪಶ್ಚಿಮ ಮಾದರಿಯ ಅಭಿವೃದ್ದಿಯೇ ಶ್ರೇಷ್ಠವೆಂದು ಭಾವಿಸಿದ ನಮ್ಮ ಸರಕಾರಗಳು ನಿರಂತರವಾಗಿ ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯ ಫಲವಾಗಿ ಸಮಾಜದ ಅಕ್ಷರಸ್ಥ ಮದ್ಯಮವರ್ಗ ಉಳಿದ ವರ್ಗಗಳಿಂದ ದೂರ ಸರಿಯತೊಡಗಿತು. ಮಾರುಕಟ್ಟೆ ನೀತಿಯಿಂದಾಗಿ ಸೃಷ್ಠಿಯಾದ ಖಾಸಗಿ ಕ್ಷೇತ್ರದ ಬಹುಪಾಲು ಉದ್ಯೋಗಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ ಅದು ತನ್ನ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿಕೊಂಡ ಕೂಡಲೇ ತನ್ನ ಸಮಾಜವಾದಿ ಮತ್ತು ಎಡಪಂಥೀಯ ಚಿಂತನೆಗಳಿಂದ ದೂರಾಗಿ ಮಾರುಕಟ್ಟೆಯ ಗುಲಾಮಗಿರಿಯಲ್ಲಿ ತೊಡಗಿಸಿಕೊಂಡಿತು. ಹೀಗೆ ಇಂಡಿಯಾದೊಳಗೆ ಕಾಲಿಟ್ಟ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಗಳ ಮಾತೇ ಇರಲಿಲ್ಲ. ನಮ್ಮ ಸರಕಾರಗಳು ಸಹ ನಿದಾನವಾಗಿ ಶಬ್ದವೇ ಆಗದಂತೆ ನಮ್ಮ ಸಾರ್ವಜನಿಕ ಉದ್ಯಮಗಳ ಕತ್ತು ಹಿಚುಕ ತೊಡಗಿತು. ಗ್ರಾಹಕ ಸಂಸ್ಕೃತಿಯಲ್ಲಿ ಮೈಮರೆತ ಇಡೀ ಸಮಾಜ ತನ್ನ ಹಕ್ಕುಗಳನ್ನು ಕೇಳುವುದಕ್ಕಿಂತ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದುಡ್ಡು ಮಾಡುವ ಸುಲಭೋಪಾಯಕ್ಕೆ ಶರಣಾಯಿತು. ಹೀಗಾಗಿ ಕಳೆದೆರಡು ದಶಕಗಳು ಯಾವುದೇ ಚಳುವಳಿಗಳಾಗಲಿ ಹೋರಾಟಗಳಾಗಲಿ ಇರದೆ ಆಳುವ ಶೋಷಕ ಶಕ್ತಿಗಳ ಕೈ ಮೇಲಾಗ ತೊಡಗಿತು. ಹೀಗಾಗಿಯೇ ಕೇಂದ್ರ ಸರಕಾರ ಅಮೇರಿಕಾದಂತಹ ರಾಷ್ಟ್ರದ ಜೊತೆ ನಾಗರೀಕ ಅಣ್ವಸ್ತ್ರ ನೀತಿಯಂತಹ ಒಪ್ಪಂದಕ್ಕೆ ಸಹಿ ಹಾಕಿತು. ನಂತರ ಜನವಿರೋಧಿಯಾದ ಹಲವು ಒಡಂಬಡಿಕೆಗಳಿಗೆ ಸಹಿ ಹಾಕುತ್ತಾ ಇವತ್ತಿಗೆ ಇಡೀ ದೇಶವನ್ನು ಬಂಡವಾಳಶಾಹಿ ಶಕ್ತಿಗಳ ಕೈಲಿಟ್ಟು ತಾವು ನೆಪ ಮಾತ್ರಕ್ಕೆ ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದಾರೆ.
 
ಹೀಗಾಗಿ ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಬಜೆಟ್ಟುಗಳು ಸಹ ಇವೇ ಬಂಡವಾಳಶಾಹಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಮಂಡಿಸಲ್ಪಡುವುದನ್ನು ನಾವು ಕಾಣಬಹುದಾಗಿದೆ. ಇದಕ್ಕೆ ನಮ್ಮ ಎಡಪಕ್ಷಗಳ ಪಾತ್ರವೂ ಕೆಲಮಟ್ಟಿಗೆ ಕಾರಣವೆನ್ನಬಹುದು. ಅವೂ ಸಹ ಸತತವಾಗಿ ನಡೆಯಲ್ಪಡುತ್ತಿರುವ ಶಕ್ತಿ ರಾಜಕಾರಣದ ಸುಳಿಯೊಳಗೆ ಸಿಲುಕಿ ಚುನಾವಣೆಗಳಲ್ಲಿಯೇ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾ ಸಂಘಟನೆಯ ಕಡೆ ಗಮನ ಕೊಡುತ್ತಿಲ್ಲ. ಹಲವಾರು ಅಸಂಘಟಿತ ಕ್ಷೇತ್ರಗಳಿದ್ದು ಅಲ್ಲಿಯಾದರು ತಮ್ಮ ಸಂಘಟನೆಗಳನ್ನು ಶುರು ಮಾಡಿ ತಮ್ಮ ಸಿದ್ದಾಂತಗಳನ್ನು ಪ್ರಚಾರ ಪಡಿಸುವಲ್ಲಿ ವಿಫಲವಾಗುತ್ತಿವೆ. ಈಗಾಗಲೇ ಅಸ್ಥಿತ್ವದಲ್ಲಿರುವ ಒಂದಷ್ಟು ಸಾರ್ವಜನಿಕ ವಲಯವನ್ನು ಬಿಟ್ಟರೆ ಉಳಿದಂತೆ ಅದು ಕೃಷಿಯಂತಹ ಅಸಂಘಟಿತ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಒಂದು ಪೀಳಿಗೆಯ ಯುವಜನತೆಗೆ ಎಡಪಂಥೀಯ ಧೋರಣೆಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದಂತಾಗಿದೆ. ಇಂತಹ ಅವಕಾಶವನ್ನು ಬಳಸಿಕೊಂಡ ಸಂಘ ಪರಿವಾರದಂತಹ ಬಲಪಂಥೀಯ ಸಂಘಟನೆಗಳು ಧರ್ಮ, ದೇಶಭಕ್ತಿಯಂತಹ ಬಾವನಾತ್ಮಕ ವಿಷಯಗಳನ್ನು ಅವರುಗಳ ತಲೆಗೆ ತುಂಬುತ್ತಾ, ಅವರನ್ನು ದಾರಿತಪ್ಪಿಸುತ್ತಿವೆ. ಇದರಿಂದಾಗಿ ನಮ್ಮ ಯುವ ಪೀಳಿಗೆ ಮತಾಂಧತೆಯತ್ತ ವಾಲುತ್ತಿದ್ದಾರೆ.
 
ಇವೆಲ್ಲ ಕಾರಣಗಳಿಂದಾಗಿ ಇಂದಿನ ಸರಕಾರಗಳು ಕಾರ್ಮಿಕ ಸಂಘಟನೆಗಳ, ಜನಸಮುದಾಯದ ಸಂಘಟಿತ ಹೋರಾಟದ ಬಗ್ಗೆ ಯಾವುದೇ ಭಯ ಹೊಂದಿಲ್ಲ. ತಮಗಿನ್ಯಾವ ಪ್ರತಿರೋಧವೂ ಇಲ್ಲವೆಂದುಕೊಂಡ ಅವು ಕಾರ್ಪೋರೇಟ್ ವಲಯದ ಪರವಾಗಿ ತಮಗೆ ಬೇಕಾದ ಹಾಗೆ ಹಳೆಯ ಕಾನೂನುಗಳನ್ನುತಿದ್ದುಪಡಿ ಮಾಡುತ್ತಾ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಾ ನಡೆಯುತ್ತಿವೆ. ಇಂತಹದೊಂದು ಅಹಂಕಾರದ ಫಲವಾಗಿಯೇ ಈ ವರ್ಷ ಎರಡು ಕಾನೂನುಗಳಿಗೆ ತಿದ್ದುಪಡಿ ತರಲಾಯಿತು.

ಮೊದಲನೆಯದು, ಅಂಚೆಕಛೇರಿಗಳಲ್ಲಿ ಮದ್ಯಮವರ್ಗ ಮಾಡುವ ಅಲ್ಪಾವಧಿ ಮತ್ತು ದೀರ್ಘಾವಧಿ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿತು. ಬಹು ದೊಡ್ಡ ಪ್ರತಿರೋಧವನ್ನು ಒಡ್ಡ ಬೇಕಾಗಿದ್ದ ಸಮುದಾಯ ಯಾವುದೇ ಸಂಘಟನೆಯೂ ಇಲ್ಲದೆ ಸುಮ್ಮನೆ ಅದನ್ನು ಒಪ್ಪಿಕೊಳ್ಳಬೇಕಾಯಿತು.
 
ಇನು ಎರಡನೆಯದು, ನೌಕರರ ಪ್ರಾವಿಡೆಂಟ್ ಫಂಡ್ ಬಗೆಗಿನ ಕಾನೂನು ತಿದ್ದು ಪಡಿಯ ವಿಚಾರ. ಈ ತಿದ್ದುಪಡಿಗೆ ಮುನ್ನುಡಿ ಬರೆದ ವಾರಗಳ ನಂತರವೂ ನಮ್ಮ ಸಂಘಟನೆಗಳು ಹೋರಾಟದ ರೂಪು ರೇಷೆಯ ಬಗ್ಗೆ ಚರ್ಚೆಯಲ್ಲಿಯೇ ಮುಳುಗಿ ಹೋಗಿ ತಕ್ಷಣದ ಯಾವುದೇ ಪ್ರತಿರೋಧ ಒಡ್ಡಲು ವಿಫಲವಾದವು. ಆದರೆ ಬೆಂಗಳೂರಿನ ಅಸಂಖ್ಯಾತ ಗಾರ್ಮೆಂಟ್ಸ್ ಮತ್ತು ಇತರೇ ಅಸಂಘಟಿತ ಉದ್ಯಮಗಳ ನೌಕರರು ಸುಮ್ಮನೇ ಕೂರಲಿಲ್ಲ. ಅಧಿಕೃತವಾಗಿ ಅವರಿಗ ತಮ್ಮದೇ ಆದ ಯೂನಿಯನ್ ಎಂಬುದಿಲ್ಲದಿದ್ದರೂ, ಸ್ಥಳೀಯವಾಗಿಯೇ ಒಂದು ನಾಯಕತ್ವವನ್ನು ರೂಪಿಸಿಕೊಂಡು ಕಳೆದ ವಾರ ದಿಡೀರನೆ ಮುಷ್ಕರಕ್ಕೆ ಇಳಿದು ಬಿಟ್ಟರು. ಬಹಳ ವರ್ಷಗಳ ನಂತರ ಬೆಂಗಳೂರಿನ ಬೀದಿಗಳಲ್ಲಿ ಸರಕಾರದ ವಿರುದ್ದ ಘೋಣೆಗಳು ಮೊಳಗಿದವು. ಯಾವ ಒತ್ತಡಕ್ಕೂ ಮಣಿಯದೆ, ಪೋಲಿಸರ ಬಲಪ್ರಯೋಗಕ್ಕೂ ಬಾಗದೆ ಎರಡು ದಿನಗಳ ಕಾಲ ಇಡೀ ನಗರವನ್ನು ತಮ್ಮ ವಶಕ್ಕೆ ಪಡೆದು ಆಡಳಿತ ಯಂತ್ರವನ್ನೇ ಕಂಗಾಲು ಮಾಡಿಬಿಟ್ಟರು. ಈ ಹೋರಾಟ ಇತರೇ ನಗರಗಳಿಗೂ ವಿಸ್ತರಿಸುವ ಭಯದಿಂದ ಕೇಂದ್ರ ಸರಕಾರ ತನ್ನ ನಿರ್ದಾರವನ್ನು ಹಿಂಪಡೆಯಬೇಕಾಯಿತು. ಗಾರ್ಮೆಂಟ್ಸ್ ಮಹಿಳೆಯರೇ ಹೆಚ್ಚಿದ್ದ ಈ ಹೋರಾಟಕ್ಕೆ ಯಾವ ಸಂಘಟನೆಯ ಬೆಂಬಲವಿಲ್ಲದ್ಯಾಗು ಸಹ ತಮ್ಮ ಚಳುವಳಿಯನ್ನು ಯಾಶಸ್ವಿಗೊಳಿಸುವಲ್ಲಿ ಸಫಲರಾದರು. ಬಹುಶ: ಕಾರ್ಮಿಕರು ಗುಡುಗಿದರೆ ಸರಕಾರ ನಡುಗುತ್ತದೆ ಎನ್ನುವ ಹಳೆಯ ಮಾತು ಮತ್ತೊಂದು ಬಾರಿ ಸಾಭೀತಾಯಿತು. ಈ ಹೋರಾಟ ನಮ್ಮ ಎಡಪಂಥೀಯ ಸಂಘಟನೆಗಳೂ ಸೇರಿದಂತೆ ಉಳಿದೆಲ್ಲ ಅಂದರೆ ರೈತ ಸಘಟನೆಗಳಿಗೆ, ಕನ್ನಡಪರ ಸಂಘಟನೆಗಳಿಗೆ, ದಲಿತ ಸಂಘಟನೆಗಳಿಗೆ ಪಾಠವಾಗಬೇಕು. ಎಲ್ಲ ನಿಷೇಧಗಳ ನಡುವೆಯೂ ಒಂದು ಚಳುವಳಿಯನ್ನು ಹುಟ್ಟು ಹಾಕಿ ಹೋರಾಡಬಹುದೆಂಬುದನ್ನು ಅರ್ಥ ಮಾಡಿಕೊಂಡು ಮುಂದಿನ ನಡೆಗಳನ್ನು ಇಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಜಾಗತೀಕರಣದ ಪ್ರಭಾವದಿಂದ ಜನವಿರೋಧಿಯಾಗುತ್ತಿರುವ ಸರಕಾರಗಳನ್ನು ಬಗ್ಗಿಸಬಹುದಾಗಿದೆ. ಇಲ್ಲದೇ ಹೋದಲ್ಲಿ ಬಂಡವಾಳಶಾಹಿಗಳ ಜೊತೆ ಸೇರಿಕೊಳ್ಳುವ ಮತೀಯ ಶಕ್ತಿಗಳು ಈ ನಾಡಿನ ಜಾತ್ಯಾತೀತ ಚಿತ್ರಣವನ್ನು, ದುಡಿಯುವ ವರ್ಗಗಳ ಬದುಕನ್ನು ನಾಶ ಮಾಡುವುದು ಖಂಡಿತಾ!

Apr 29, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 3

Making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/04/2016

ಈ. ಕೆರೆಗಳ ನಾಶ

ಕೃಷಿಯ ಬೆಳವಣಿಗೆಯಲ್ಲಿ ಕೆರೆಗಳು ಮತ್ತು ನದಿ ನೀರಾವರಿ ಪಾತ್ರದ ಪ್ರಾಮುಖ್ಯತೆಯನ್ನು ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ನೋಡಿದ್ದೇವೆ. ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಈ ಕೆರೆಗಳು ವ್ಯಾಪಾರ ವಹಿವಾಟಿಗೆ ಸಹಕಾರಿಯಾಗಿದ್ದನ್ನು, ಪಟ್ಟಣ ಮತ್ತು ನಗರಗಳು ಈ ನೀರ ನಾಗರೀಕತೆಯ ಮೇಲೆ ಅವಲಂಬಿತವಾಗಿದ್ದನ್ನು ಕಂಡಿದ್ದೇವೆ. ಆದರೆ ಕೊಳ್ಳೆ ಹೊಡೆಯುವುದೇ ಉದ್ದಿಶ್ಯವಾಗಿದ್ದ ವಸಾಹತುಶಾಹಿ, ಇಡೀ ವ್ಯವಸ್ಥೆಯನ್ನೇ ಹಾಳುಗೆಡವಿತು; ಪರಿಣಾಮವಾಗಿ ನೀರಾವರಿ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿಬಿಟ್ಟಿತು.

ಶ್ವಾರ್ಟ್ರ್ಝ್ (Schwartz) ಎಂಬ ಪಾದ್ರಿ ಹೈದರನ ಮೈಸೂರು ಬ್ರಿಟೀಷ್ ಆಳ್ವಿಕೆಯ ಮದ್ರಾಸಿನಲ್ಲಿದ್ದ ವ್ಯತ್ಯಾಸಗಳ ಬಗ್ಗೆ ಬರೆಯುತ್ತಾನೆ: “ಪ್ರತಿ ಮಳೆಯ ನಂತರವೂ, ಆ ಭಾಗದ ಅಮಲ್ದಾರ ತನ್ನ ಜನರನ್ನು ಕಳುಹಿಸಿ ಕೊಚ್ಚಿಹೋದ ಮಣ್ಣಿನ ಜಾಗಕ್ಕೆ ಮತ್ತೆ ಮಣ್ಣು ತುಂಬಿಸಬೇಕಿತ್ತು. ಹೈದರನ ಆರ್ಥಿಕ ನೀತಿಯಲ್ಲಿ, ಎಲ್ಲಾ ತರಹದ ಹಾನಿಗಳನ್ನು ಅತಿ ಶೀಘ್ರವಾಗಿ ಸಮಯ ಕಳೆಯದೆ ಸರಿಮಾಡಿಬಿಡಬೇಕಿತ್ತು, ಕಡಿಮೆ ಖರ್ಚಿನಲ್ಲಿ ಉತ್ತಮ ಸ್ಥಿತಿಗೆ ತರಬೇಕಿತ್ತು. ಆದರೆ ಯುರೋಪಿಯನ್ನರು ಕರ್ನಾಟಿಕ್ ನಲ್ಲಿ ಎಲ್ಲವನ್ನೂ ಪಾಳು ಬೀಳಲು ಬಿಟ್ಟುಬಿಟ್ಟರು.” (145)

ಹಳೇ ಮೈಸೂರಿನ ನೀರಾವರಿಯ ಬಗ್ಗೆ ಅಧ್ಯಯನ ನಡೆಸಿದ ಶಾಮ ರಾವ್, ವಿಲ್ಕ್ಸ್ 1804ರಲ್ಲಿದ್ದ ನೀರಾವರಿ ಜಮೀನು 1789ರಲ್ಲಿ ಇದ್ದಿದ್ದಕ್ಕಿಂತ ಕಡಿಮೆ ಎಂಬ ತೀರ್ಮಾನಕ್ಕೆ ಬಂದಿದ್ದರ ಬಗ್ಗೆ ತಿಳಿಸುತ್ತಾರೆ.(146)

ಒಂದೆಡೆ ವಸಾಹತು ಆಳ್ವಿಕೆ ಜಾರಿಗೆ ಬಂದ ಐದು ವರುಷದೊಳಗೆ ನೀರಾವರಿ ಭೂಮಿಯ ವ್ಯಾಪ್ತಿಯಲ್ಲಿ ಅಗಾಧ ಕಡಿತವಾಗಿದ್ದರೆ (ಇದು ಕೈಗೊಂಬೆ ರಾಜರು ಈ ವಿಷಯಕ್ಕೆ ಕೊಟ್ಟ ಆಸಕ್ತಿಯ ಉದಾಹರಣೆಯೂ ಹೌದು); ಮತ್ತೊಂದೆಡೆ ಅರಮನೆಗೆ ಮತ್ತರಮನೆಗೆ ಜೋತು ಬಿದ್ದವರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಸಾಗರಕಟ್ಟೆಯಿಂದ ಮೈಸೂರಿಗೆ ಒಂದು ಚಾನೆಲ್ಲು ಕೊರೆಯುವ ಪ್ರಯತ್ನ (ಅದು ವಿಫಲವಾಯಿತು) ಬಿಟ್ಟರೆ ಮತ್ತಿನ್ಯಾವ ನೀರಾವರಿ ಯೋಜನೆಗಳ ರೂಪುಗೊಳ್ಳುವಿಕೆಯೂ ನಡೆಯಲಿಲ್ಲ.

ಕಡೆಗಣನೆ ಸ್ಪಷ್ಟವಾಗಿತ್ತು, ಪೂರ್ಣವಾಗಿತ್ತು. ಕೆಳಗಿನ ಅಂಕಿಅಂಶಗಳು ಹನ್ನೊಂದು ಹನ್ನೆರಡನೇ ಶತಮಾನದಿಂದಲೂ ಸ್ಥಳೀಯವಾಗಿ ಅಭಿವೃದ್ಧಿ ಕಂಡಿದ್ದ ನೀರಾವರಿಯ ವ್ಯವಸ್ಥೆಯೆಡೆಗೆ ತೋರಿದ ನಿರ್ಲಕ್ಷ್ಯದಿಂದ ಹೇಗದು ಪತನ ಕಂಡಿತು ಎಂಬುದನ್ನು ಸೂಚಿಸುತ್ತದೆ. ಆಂತರಿಕ ಆಡಳಿತದ ಬಗ್ಗೆ ವಿಲ್ಕ್ಸ್ ನ ವರದಿಯಲ್ಲಿ ಈ ಕೆಳಗಿನ ಅಂಕಿಅಂಶಗಳು ಲಭಿಸುತ್ತವೆ. 


ನಂತರ ಆತ ವಸಾಹತುಶಾಹಿ ಸಾಮಾನ್ಯವಾಗಿ ಉಪಯೋಗಿಸುವ ಎಲ್ಲಾ ನೆಪಗಳ ಬಗ್ಗೆಯೂ ಹೇಳುತ್ತಾನೆ. “ಮೈಸೂರು ದೇಶ ಉಬ್ಬುತಗ್ಗಿನ ಪ್ರದೇಶವಾಗಿದೆ. ಇದರ ಪರಿಣಾಮವಾಗಿ ಕೆರೆಕಟ್ಟೆಗಳಲ್ಲಿ ನೀರಿನ ಜೊತೆಗೆ ಹೂಳೂ ಸೇರಿಬಿಡುತ್ತದೆ. ಹೂಳನ್ನು ಮತ್ತೆ ಮತ್ತೆ ತೆಗೆಯಬೇಕಾಗಿರುವುದು, ಸಮತಟ್ಟು ಪ್ರದೇಶಗಳಲ್ಲಿನ ಕೆರೆಕಟ್ಟೆಗಳಿಗೆ ಹೋಲಿಸಿದರೆ ಇಲ್ಲಿನವನ್ನು ನಿರ್ವಹಣೆ ಮಾಡುವುದು ಕಷ್ಟವಾಗಿಬಿಡುತ್ತದೆ.

ಅಪರೂಪಕ್ಕೆ ನಡೆಯುವ ದುರ್ಘಟನೆಗಳು ಈ ಖರ್ಚನ್ನು ಹೆಚ್ಚು ಮಾಡುತ್ತದೆ. ಈ ವರ್ಷ (1804) ಅಕ್ಟೋಬರಿನ ಮೊದಲ ಭಾಗದಲ್ಲಿ ಬಂದ ಅನಿರೀಕ್ಷಿತ ಪ್ರಮಾಣದ ಮಳೆಯಿಂದಾಗಿ ಹೆಚ್ಚು ಕಡಿಮೆ ನಾಲ್ಕು ನೂರು ಕೆರೆಗಳ ಕಟ್ಟೆ ಒಡೆದು ಹೋಯಿತು. ಅದರ ರಿಪೇರಿಗೆ ಒಂದು ಲಕ್ಷ ಪಗೋಡಾವಾದರೂ (ಮೂರು ಲಕ್ಷ ರುಪಾಯಿ) ಬೇಕೇ ಬೇಕು. ಮತ್ತಿದು ನಿಗದಿತ ಮೊತ್ತದ ಮೇಲಿನ ಖರ್ಚು.”(148)

ವಾಸ್ತವವೆಂದರೆ ಮೈಸೂರು ದೇಶದ ಉಬ್ಬುತಗ್ಗುಗಳೇ ಕೆರೆಕಟ್ಟೆಗಳನ್ನು ಕಟ್ಟುವುದಕ್ಕೆ ಕಾರಣವಾಗಿದ್ದು!

ವಿಲ್ಕ್ಸ್ ನ ಅಂಕಿಅಂಶಗಳನ್ನು ಮತ್ತಷ್ಟು ವಿಸ್ತರಿಸುವ ಎಂ.ಹೆಚ್.ಗೋಪಾಲ್ 1829ರಷ್ಟರಲ್ಲಿ ಕೆರೆಗಳ ನಿರ್ವಹಣೆಗೆ ಮಾಡುವ ಖರ್ಚು 1,28,115 ರುಪಾಯಿಗಳಿಗೆ ಇಳಿದುಬಿಟ್ಟಿತ್ತು ಎಂದು ತಿಳಿಸುತ್ತಾರೆ. (149) ಸ್ವತಃ ಸಾಕ್ಷೀಕರಿಸುವ ಇಂತಹ ಅಂಶಗಳು ಇರುವಾಗಲೂ, ಸಿದ್ಧಲಿಂಗ ಸ್ವಾಮಿ ಹೇಳುತ್ತಾರೆ: “ಕೆರೆಗಳ ನಿರ್ಮಾಣಕ್ಕೆ ಮತ್ತು ರಿಪೇರಿಗೆ, ಚಾನೆಲ್ಲುಗಳಿಗೆ, ರಸ್ತೆ – ಸೇತುವೆಗಳಿಗೆ ಮತ್ತು ಕೃಷಿಯ ಅಭಿವೃದ್ಧಿ ಮತ್ತು ಉನ್ನತಿಗೆ ಬೇಕಾದ ಇತರೆ ಕೆಲಸಗಳಿಗೆ ದಿವಾನರು ಹಣ ಲಭ್ಯವಾಗುವಂತೆ ಮಾಡುತ್ತಿದ್ದರು.” (150) ಈ ರೀತಿಯ ಪೂರ್ವಾಗ್ರಹ ಪೀಡಿತ ಬರವಣಿಗೆಗಳು ಬ್ರಿಟೀಷ್ ವಸಾಹತುಶಾಹಿ ಮತ್ತವರ ಸ್ಥಳೀಯ ಪ್ರತಿಗಾಮಿಗಳ ಮುಖಕ್ಕಂಟಿದ ಕಳಂಕವನ್ನು ಮರೆಯಾಗಿಸುವ ಪ್ರಯತ್ನವಷ್ಟೇ.

ದೂರದ ಲಂಡನ್ನಿನಲ್ಲಿ, ಈ ಬೆಳವಣಿಗೆಗಳನ್ನು ಗಮನಿಸಿದ ಕಾರ್ಲ್ ಮಾರ್ಕ್ಸ್, 1853ರಲ್ಲಿ ಬರೆದ The British Rule in India ಲೇಖನದಲ್ಲಿ ಏಷ್ಯಾದ ಸರಕಾರಗಳ ಸಾರ್ವಜನಿಕ ಕೆಲಸಗಳು ಹೇಗೆ ಹಳ್ಳ ಹಿಡಿದವು ಎಂದು ಬರೆಯುತ್ತಾನೆ. “ಇಲ್ಲಿನ ವಾತಾವರಣ ಮತ್ತು ಭೌಗೋಳಿಕ ಪರಿಸ್ಥಿತಿ, ಅದರಲ್ಲೂ ಸಹಾರ, ಅರೇಬಿಯಾ, ಪರ್ಷಿಯಾ, ಭಾರತ ಮತ್ತು ಟರ್ತಾರಿಯ ಉದ್ದಕ್ಕೂ ಹರಡಿರುವ ಮರುಭೂಮಿಯಿಂದ ಹಿಡಿದು ಏಷಿಯಾದ ಎತ್ತರೆತ್ತರದ ಪ್ರದೇಶದವರೆಗೂ ನೀರಾವರಿ ಕಾಲುವೆಗಳು ಮತ್ತು ನೀರಿನ ಕೆಲಸಗಳೇ ಪೂರ್ವದ ಕೃಷಿಗೆ ಪೂರಕವಾಗಿದ್ದಂತವು. ಭಾರತ ಮತ್ತು ಇಜಿಪ್ಟಿನಂತೆಯೇ, ಮಿಸೊಪೊಟೋಮಿಯಾ, ಪರ್ಷಿಯಾ ಇತರೆಡೆಗಳಲ್ಲಿ ನೀರು ಹರಿಸಿ ಭೂಮಿಯನ್ನು ಫಲವತ್ತಾಗಿ ಉಳಿಸಿಕೊಳ್ಳಲಾಗುತ್ತಿತ್ತು. ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಎತ್ತರದ ಪ್ರದೇಶಗಳಿದ್ದದ್ದು ಅನುಕೂಲಕರವಾಗಿತ್ತು. ಈ ಕೃತಕ ಫಲವತ್ತತೆಯ ಸೃಷ್ಟಿ ಕೇಂದ್ರ ಸರಕಾರದ ಮೇಲೆ ಅವಲಂಬಿತವಾಗಿತ್ತು. ನೀರಾವರಿಯೆಡೆಗಿನ ನಿರ್ಲಕ್ಷ್ಯದಿಂದಾಗಿ ಒಂದು ಕಾಲದಲ್ಲಿ ಫಲವತ್ತತೆಯಿಂದ ತುಂಬಿತುಳುಕುತ್ತಿದ್ದ ಪಾಲ್ಮೈರಾ, ಪೆಟ್ರಾ, ಯೆಮೆನ್ ಮತ್ತು ಇಜಿಪ್ಟ್, ಪರ್ಷಿಯಾ ಹಾಗೂ ಹಿಂದುಸ್ಥಾನದ ಬಹುಭಾಗಗಳು ಇಂದು ಬಂಜರಾಗಿ ಮರುಭೂಮಿಯಾಗಿದೆ. ವಿನಾಶದ ಒಂದು ಯುದ್ಧ ಹೇಗೆ ಒಂದಿಡೀ ದೇಶದ ಜನರು ಶತಮಾನಗಳ ಕಾಲ ತೊರೆದುಬಿಡುವಂತೆ ಮಾಡುತ್ತದೆ ಎನ್ನುವುದನ್ನೂ ಇದು ವಿವರಿಸುತ್ತದೆ; ಆ ದೇಶದ ಎಲ್ಲಾ ನಾಗರೀಕತೆಯನ್ನು ನಾಶ ಪಡಿಸುತ್ತದೆ.

ಈಗ ಭಾರತದಲ್ಲಿರುವ ಬ್ರಿಟೀಷರು ಸಾರ್ವಜನಿಕ ಕೆಲಸಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬ್ರಿಟೀಷರ ತಾಟಸ್ಥ್ಯ ಧೋರಣೆಯ ಆಧಾರದಲ್ಲಿ ನಡೆಯಲಾಗದ ಕೃಷಿ ಪತನ ಕಂಡಿತು…..”(151)

ಈ. ಟಕವಿ ಕೊನೆ ಕಂಡಿತು
 
ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ಹೆಚ್ಚುತ್ತಿದ್ದಂತೆ ಟಕವಿ ಅನುಪಯುಕ್ತವಾಯಿತು. 1810ರ ನಂತರ ತುಳು ನಾಡಿನ ಕಡತಗಳಲ್ಲಿ ಸರಕಾರ ನೀಡುವ ಟಕವಿ ಸಾಲದ ಬಗ್ಗೆ ಪ್ರಸ್ತಾಪಗಳೇ ಇಲ್ಲ ಎಂದು ತಿಳಿಸುತ್ತಾರೆ ಶ್ಯಾಮ್ ಭಟ್. (152)

ಆದಾಗ್ಯೂ, ಹಳೆ ಮೈಸೂರಿನಲ್ಲಿ ಈ ಪದ್ಧತಿ ಮತ್ತಷ್ಟು ವರುಷಗಳ ಕಾಲ ಮುಂದುವರಿಯಿತು. ಅಪಾರ ಹಸಿವಿನ ಬಡ್ಡಿದಾರ ‘ಕ್ಷೇಮ ವಿಚಾರಿಸಿದಾಗೆಲ್ಲ’ ಶೋಷಿತ ರೈತ ಕಾರ್ಮಿಕರಿಗೆ ಟಕವಿಯ ಕನಸು ಬೀಳುತ್ತಿತ್ತು!

ಮೇಲಿನ ಪಟ್ಟಿಯಿಂದ ಸ್ಪಷ್ಟವಾಗುವ ಅಂಶವೆಂದರೆ 1836-37 ರಿಂದ 1860-61ರವರೆಗೆ ರೈತರಿಗೆ ಕೊಟ್ಟ ಒಟ್ಟು ಸಾಲದ ಮೊತ್ತ 8,76,100 ರುಪಾಯಿಗಳಾದರೆ ಅದೇ ಸಮಯದಲ್ಲಿ ವಸೂಲಾದ ಮೊತ್ತ 9,49,250. ವಸಾಹತು ಸರಕಾರದ ಕಮಿಷನರ್ರುಗಳು, ರಕ್ತ ಹೀರುವ ಲೇವಾದೇವಿಯವರಂತೆಯೇ ರೈತರಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಮೊತ್ತವನ್ನು ವಸೂಲು ಮಾಡಿದರು. ಟಕವಿ ಪದ್ಧತಿಯ ಪತನದ ಪರಿಣಾಮವಾಗಿ ಹಳ್ಳಿಗಳ ಕಡೆ ಕೃಷಿ ಉತ್ಪಾದನೆಯೂ ಕುಂಠಿತಗೊಂಡಿತು.
 
ಉ. ವಾಣಿಜ್ಯ ಕೃಷಿಯ ವಿನಾಶ

ಕೃಷಿಯನ್ನು ಊಳಿಗಮಾನ್ಯತೆಯ ಕೈಗೆ ಕೊಟ್ಟಿದ್ದು ಮತ್ತು ನೀರಾವರಿಯನ್ನು ಹಾಳುಗೆಡವಿದ್ದು ಹಾಗೂ ನಗರದಲ್ಲಿ ಉತ್ಪಾದನೆಯ ಕುಸಿತ ಮತ್ತು ನಗರದ ಜನರು ಹಳ್ಳಿಗಳೆಡೆಗೆ ಗುಳೇ ಹೋದದ್ದು ವಾಣಿಜ್ಯ ಕೃಷಿಯನ್ನು ನಾಶಪಡಿಸಿತು. ಹತ್ತಿ, ಭತ್ತ, ಕಬ್ಬು, ಎಣ್ಣೆ ಬೀಜಗಳು ಮತ್ತು ಅಡಿಕೆಯ ಕೃಷಿಯನ್ನು ಹಾಳುಗೆಡವುವಲ್ಲಿ ಮೇಲಿನ ಎಲ್ಲಾ ಅಂಶಗಳೂ ಕಾರಣ, ಇದರಿಂದುಟಾದ ನಾಶದ ಪರಿಣಾಮ ಎಷ್ಟಿತ್ತಿಂದರೆ ಮತ್ತೆ ಈ ಕೃಷಿ ಚಿಗುರಲು ಕಷ್ಟವಾಗುವಷ್ಟು. ವಾಣಿಜ್ಯ ಬೆಳೆಗಳಿಂದ ಬೇಳೆ ಕಾಳುಗಳನ್ನು ಬೆಳೆಯುವುದರ ಕಡೆಗೆ ಕೃಷಿ ಕ್ಷೇತ್ರ ಹೊರಳಿದ್ದು ಮತ್ತೆ ಹಳ್ಳಿಗಳು ಊಳಿಗಮಾನ್ಯತೆಯ ಕಡೆಗೆ ಸಾಗುವಂತೆ ಮಾಡಿದವು.

ಈ ಕಾರಣಗಳಿಂದಾಗಿ, ಬ್ರಿಟೀಷ್ ಆಕ್ರಮಣ ನಡೆಸಿದ ಕೆಲವೇ ವರುಷಗಳಲ್ಲಿ ಮತ್ತು ಪೀಠದಲ್ಲಿ ಪ್ರತಿಗಾಮಿ ಕೈಗೊಂಬೆ ರಾಜನೊಬ್ಬ ಕೂತ ನಂತರ ಕೃಷಿ ಕ್ಷೇತ್ರಕ್ಕೆ ಪಾರ್ಶ್ವವಾಯು ಹೊಡೆಯಿತು.

ಸುಮಿತ್ ಗುಹಾ, ತಮ್ಮ The Agrarian economy of the Bombay deccan, 1818-1941 ಪುಸ್ತಕದಲ್ಲಿ ಬಾಂಬೆ ಕರ್ನಾಟಕ ಭಾಗದಲ್ಲಿ ಕೃಷಿ ಕೆಲಸಗಳು ಸ್ಥಗಿತವಾಗಿದ್ದರ ಬಗ್ಗೆ ಬರೆಯುತ್ತಾನೆ. “ಸಿಕ್ಕಿರುವ ಮಾಹಿತಿ ಇಡೀ ಕೃಷಿ ವಲಯವೇ 1840ರ ಮುಂಚೆ ಸ್ಥಗಿವಾಗಿದ್ದನ್ನು ತೋರಿಸುತ್ತದೆ. ಈ ಅಂಕಿ ಅಂಶಗಳು ಹೆಚ್ಚು ಕಡಿಮೆ ಇಡೀ ಡೆಕ್ಕನ್ನಿನಿಂದ ತೆಗೆದುಕೊಂಡದ್ದು. ಧಾರವಾಡದ ಫಲವತ್ತ ಮತ್ತು ಸುಭದ್ರ ತಾಲ್ಲೂಕುಗಳ ಅಂಕಿಅಂಶಗಳು ಬರಪೀಡಿತ ಸೊಲ್ಲಾಪುರ ತಾಲ್ಲೂಕಿನ ಅಂಕಿಅಂಶಗಳಿಗಿಂತ ಉತ್ತಮವಾಗೇನಿಲ್ಲ. ಇದು ಕೃಷಿ ಯೋಗ್ಯ ಭೂಮಿಯ ಕೊರತೆಯಿಂದಾದದ್ದಲ್ಲ. ವಿಸ್ತಾರದ ಕೃಷಿ ಭೂಮಿ ಅನುಪಯುಕ್ತವಾಗಿ ಬಿದ್ದಿತ್ತು ಎಂದು ವರದಿಗಳು ತಿಳಿಸುತ್ತದೆ.” (155)

ಮುಂದಿನ ವಾರ
ಕೈಗಾರಿಕೆಯ ಸ್ಥಾನ ಪಲ್ಲಟ

Apr 26, 2016

ಬರಗಾಲದ ಭೂತವೂ ಪರಿಹಾರವೆಂಬ ನಾಟಕವೂ!

(ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನರಂಗೇನಹಳ್ಳಿ
26/04/2016
ಇವತ್ತು ಇಡೀ ರಾಜ್ಯ ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸುತ್ತಿದೆ. ಜಾನುವಾರುಗಳಿಗೆ ಮೇವಿರಲಿ, ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಜನ ಪರದಾಡುವ ಸ್ಥಿತಿ ತಲೆದೋರಿದೆ. ಬಹುತೇಕ ಮಳೆಯನ್ನೇ ನಂಬಿ ಬದುಕುವ ರೈತಾಪಿ ಮತ್ತು ಕೃಷಿಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ನಿಗದಿತ ಸಮಯಕ್ಕೆ ಮಳೆಬಾರದೆ ಎರಡು ಮೂರು ವರ್ಷಗಳಿಗೊಮ್ಮೆ ಬರಗಾಲದ ಸುಳಿಗೆ ಸಿಕ್ಕಿ ನರಳುವುದು ಕರ್ನಾಟಕದ ಜನತೆಗೆ ಮಾಮೂಲಾಗಿ ಬಿಟ್ಟಿದೆ. ರಾಜ್ಯದ ಒಟ್ಟು ಅರಣ್ಯಪ್ರದೇಶ ನಾಶವಾಗುತ್ತಾ ಬಂದ ಪರಿಣಾಮವಾಗಿ ಕಾಡುತ್ತಿರುವ ಈ ಬರಗಾಲದ ಭೀಕರ ಚಕ್ರದ ಸುಳಿಯ ಬಗ್ಗೆ ಅರಿವಿದ್ದರೂ ಅರಿವಿಲ್ಲದಂತೆ ವರ್ತಿಸುವ ನಮ್ಮ ಪ್ರಭುತ್ವ ತನ್ನ ಎಂದಿನ ನಿದಾನಗತಿಯ ಧೋರಣೆಗಳಿಂದ ಪರಿಸ್ಥಿತಿಯನ್ನು ಇನ್ನಷ್ಟು ಘೋರಗೊಳಿಸುತ್ತಿದೆ. ಇಂತಹ ಸಮಯದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ರಾಜಾಕಾರಣಿಗಳು, ಆತ್ಮಸಾಕ್ಷಿಯನ್ನು ಕಳೆದುಕೊಂಡ ಅಧಿಕಾರಶಾಹಿಗಳ ಆಟಾಟೋಪಗಳು ಜನತೆಯನ್ನು ರೊಚ್ಚಿಗೇಳಿಸುವ ಮಟ್ಟಿಗೆ ನಿರ್ಲಜ್ಜ ನಿಶ್ಯಕ್ತಿಯನ್ನು ಪ್ರದರ್ಶಿಸುತ್ತಿವೆ.
ಹೀಗೆ ಸರದಿಯಂತೆ ಬಂದೆರಗುತ್ತಿರುವ ಬರಗಾಲಗಳೆಲ್ಲ ಬಹುತೇಕ ಮಾನವ ನಿರ್ಮಿತವಾದವೆಂಬುನ್ನು ನಾವು ಅರ್ಥಮಾಡಿಕೊಳ್ಳಬೇಕು. ಬರಗಾಲದ ಮೂಲ ಕಾರಣ ಮಳೆ ಬಾರದೆ ಇರುವುದಾದರೂ, ಮಳೆ ಬಾರದೇ ಇರುವುದಕ್ಕೆ ಕಾರಣ ಮಾತ್ರ ಮನುಷ್ಯನ ಆಧುನಿಕ ಬದುಕಿನ ಶೈಲಿಯಾಗಿದೆ. ಆದರೆ ಹೀಗೆ ಬರದ ಕಾರಣ ಹುಡುಕುತ್ತಾ ಅದರ ಪರಿಹಾರಕ್ಕೆ ಹೊರಡುವುದು ಸದ್ಯಕ್ಕೆ ಆಗದ ಮಾತು. ಈಗಿನ ತುರ್ತಿರುವುದು ಬಂದೆರಗಿದ ಬರಗಾಲವನ್ನೆದರಿಸಲು ನಾವು ಅಂದರೆ ಸರಕಾರ ಏನು ಮಾಡಬೇಕೆಂಬುದಾಗಿದೆ. ಆದ್ದರಿಂದ ಕಳೆದ ವರ್ಷ ಬಿದ್ದ ಅತಿ ಕಡಿಮೆ ಮಳೆಯ ಪ್ರಮಾಣದಿಂದಾಗಿ ಈ ವರ್ಷ ಬರಗಾಲ ಎದುರಾಗುವುದು ಎಲ್ಲರಿಗೂ ಮೊದಲೇ ಗೊತ್ತಾಗಿತ್ತು. ಹಾಗಾಗಿ ನಮ್ಮ ಸರಕಾರಗಳು ಇದನ್ನು ಎದುರಿಸಿ,ಬರನಿರ್ವಹಣೆ ಮಾಡಲು ಹಾಕಿಕೊಂಡಿರಬಹುದಾದ ಕಾರ್ಯಕ್ರಮಗಳ ಸ್ವರೂಪವನ್ನು ಅವಲೋಕಿಸುವುದು ನನ್ನ ಉದ್ದೇಶವಾಗಿದೆ.
ಮೊದಲಿಗೆ ನಾವು ಕರ್ನಾಟಕ ರಾಜ್ಯದೊಳಗಿನ ಬರಗಾಲದ ವ್ಯಾಪ್ತಿ ಎಷ್ಟು, ಎಷ್ಟು ಜನ ಮತ್ತು ಜಾನುವಾರುಗಳು ಬರದಿಂದ ಸಂಕಷ್ಟಕ್ಕೀಡಾಗಿವೆ ಎಂಬುದನ್ನು ಅದ್ಯಯನ ಮಾಡಿ ನಂತರ ಸರಕಾರ ರೂಪುಗೊಳಿಸಿದ ಯೋಜನೆಗಳನ್ನು ಮತ್ತು ಅವನ್ನು ಕಾರ್ಯರೂಪಕ್ಕಿಳಿಸಿದ ಬಗೆಗಿನ ವಿವರಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಕಳೆದ ವರ್ಷದ ಸೆಪ್ಟೆಬಂರ್ ಅಂತ್ಯದ ಹೊತ್ತಿಗೆ ಸ್ವತ: ಕರ್ನಾಟಕ ಸರಕಾರವೇ 30 ಜಿಲ್ಲೆಗಳ ಒಟ್ಟು 98 ತಾಲೂಕುಗಳು ಬರಪೀಡಿತವೆಂದು ಅಧಿಕೃತವಾಗಿ ಘೋಷಿಸಿತ್ತು. ಜೊತೆಗೆ ಬರದ ನಿರ್ವಹಣೆಗಾಗಿ ಕೇಂದ್ರಸರಕಾರವು ಸುಮಾರು 3050 ಕೋಟಿ ರೂಪಾಯಿಗಳ ಸಹಾಯಧನ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿತ್ತು. ತಾಂತ್ರಿಕವಾಗಿ ನೋಡಿದರೆ ಕರ್ನಾಟಕದ ಸುಮಾರು 12 ಜಿಲ್ಲೆಗಳು ತೀರಾ ಕನಿಷ್ಠ ಮಳೆಯನ್ನು ಪಡೆದಿದ್ದು ಬರದ ಛಾಯೆ ಅಂದೇ ಆವರಿಸತೊಡಗಿತ್ತು. ವಿವಿಧ ಸಚಿವಾಲಯದ ಜಂಟಿ ಸಮಿತಿಗಳು ಪರಿಸ್ಥಿತಿಯ ಅಧ್ಯಯನಕ್ಕೆ ಬೇಟಿಯನ್ನೂ ನೀಡಿದವು. ಕಳೆದ ನಲವತ್ತು ವರ್ಷಗಳಲ್ಲೇ ಅತ್ಯಂತ ಬೀಕರ ಬರಗಾಲ ಬಂದೆರಗುವ ಮುನ್ಸೂಚನೆ ಅಂದೇ ಸಿಕ್ಕಿತ್ತು. ಇವತ್ತು ರಾಜ್ಯದ ಜಲಾಶಯಗಳ ನೀರಿನ ಮಟ್ಟವನ್ನು ನಾವು ಸುಮ್ಮನೆ ಗಮನಿಸಿದರೂ ಸಾಕು ಇದರ ಅರಿವಾಗುತ್ತದೆ. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳು ಬರ ಪರಿಹಾರಕ್ಕಾಗಿ ಕೇಂದ್ರ ನೆರವು ನೀಡಬೇಕೆಂದು ಕೇಳಿ ಪತ್ರವನ್ನೂ ಬರೆದಿದ್ದಾಯಿತು. ಹಾಗು ತಕ್ಷಣಕ್ಕೆ200 ಕೋಟಿರೂಪಾಯಿಗಳನ್ನು ರಾಜ್ಯ ಸರಕಾರ ಬಿಡುಗಡೆಯನ್ನೂ ಮಾಡಿತು. ನಂತರದಲ್ಲಿ ಜನವರಿಯ ಹೊತ್ತಿಗೆ ಕೇಂದ್ರ ಸರಕಾರ ಬರಪರಿಹಾರಕ್ಕೆಂದು 1450 ಕೋಟಿರೂಪಾಯಿಗಳನ್ನು ಬಿಡುಗಡೆ ಮಾಡಿತು.ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವೂ 300 ಕೋಟಿರೂಪಾಯಿಗಳನ್ನು ಬಿಡುಗಡೆ ಮಾಡಿತು. ಈ ಹಣವನ್ನು ರೈತರಿಗೆ ಬೆಳೆ ನಷ್ಟದ ಪರಿಹಾರವಾಗಿ ನೀಡಿ ,ಉಳಿದ ಹಣವನ್ನು ಕುಡಿಯುವ ನೀರಿನ ತುರ್ತು ಯೋಜನೆಗಳಿಗೆ ಬಳಸುವುದಾಗಿ ಕಂದಾಯ ಸಚಿವ ಶ್ರೀ ಶ್ರೀನಿವಾಸ್ ಪ್ರಸಾದ್ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೂ ಆಯಿತು. ಆದರೆ ಈ ಹಣ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ರೈತರನ್ನು ಕೂಲಿ ಕಾರ್ಮಿಕರನ್ನು ತಲುಪಿತೆಂಬುದರ ಬಗ್ಗೆ ಸರಕಾರ ನೀಡುವ ಅಂಕಿಅಂಶಗಳು ನಂಬುವ ಅರ್ಹತೆ ಹೊಂದಿಲ್ಲ.
ನಾನಿಲ್ಲಿ ಬಿಡುಗಡೆಯಾದ ಹಣವೆಷ್ಟು? ಖರ್ಚು ಮಾಡಿದ ಹಣವೆಷ್ಟು? ಮತ್ತು ಅದನ್ನು ಹೇಗೆ ಯಾಕೆ ಖರ್ಚು ಮಾಡಿದರೆಂದು ಅಂಕಿಸಂಖ್ಯೆಗಳನ್ನು ನೀಡುತ್ತಾ ರೆವಿನ್ಯೂ ಇಲಾಖೆಯ ಗುಮಾಸ್ತನ ರೀತಿಯಲ್ಲಿ ವರದಿ ಬರೆಯಲು ಕೂತಿಲ್ಲ. ಬದಲಿಗೆ ನಮ್ಮ ಸರಕಾರಗಳ ಬರ ಪರಿಹಾರ ನಿರ್ವಃಹಣೆಯ ಕಾರ್ಯವೈಖರಿ ಎಂತಹುದು ಮತ್ತು ವೈಜ್ಞಾನಿಕವಾಗಿ ಅದು ವಿಪತ್ತು ನಿರ್ವಹಣೆಗೆ ಬಳಸುತ್ತಿರುವ ಕಾರ್ಯಕ್ರಮಗಳಾದರು ಎಂತವು ಎಂಬುದನ್ನು ವಿಶ್ಲೇಷಿಸಲು ಬಯಸುತ್ತೇನೆ. ಸರಕಾರ ಖರ್ಚು ಮಾಡಿರುವ ಒಟ್ಟು ಹಣವನ್ನೂ ಹಾಗು ಸಂತ್ರಸ್ತರ ಜನಸಂಖ್ಯೆಯನ್ನು ತಾಳೆ ಹಾಕಿ ನೋಡಿದರೆ ಒಬ್ಬ ವ್ಯಕ್ತಿಗೆ ದಿನಕ್ಕೆ ತಲಾ ನೂರೈವತ್ತು ರೂಪಾಯಿಗಳನ್ನೂ ಜಾನುವಾರುಗಳ ಮೇವಿಗೆ ಹತ್ತು ರೂಪಾಯಿಗಳನ್ನು ಖರ್ಚು ಮಾಡಿದ್ದಾರೆಂದು ಲೆಕ್ಕ ಹಾಕಬಹುದು( ಇದರಲ್ಲಿ ಒಂದೆರಡು ರೂಪಾಯಿಗಳ ವ್ಯತ್ಯಾಸವಿರುವುದು ಸಹಜವಿರಬಹುದು!)
ಇನ್ನೂ ಮುಂದುವರೆದು ನೋಡಿದರೆ ರಾಜ್ಯದ ಮುಕ್ಕಾಲುಭಾಗ ಬರದಿಂದ ತತ್ತರಿಸುತ್ತಿರುವಾಗ ನಾವು ಅದರ ನಿರ್ವಹಣೆಗೆ ಖರ್ಚು ಮಾಡಿರುವುದು ನಮ್ಮ ಒಟ್ಟು ವಹಿವಾಟಿನ ಶೇಕಡಾ 12ರಷ್ಟನ್ನು ಮಾತ್ರ. ಇದು ನಿಜಕ್ಕೂ ಸಮರ್ಥನೀಯವೇ?ಭೀಕರ ಬರಗಾಲದ ಸಮಯದಲ್ಲಾದರು ನಾವು ನಮ್ಮ ಎಂದಿನ ಸಾಂಪ್ರದಾಯಿಕ ವೆಚ್ಚಗಳನ್ನು ನಿಯಂತ್ರಿಸಿ ಆ ಹಣವನ್ನು ಬರಪರಿಹಾರಕ್ಕೆ ವೆಚ್ಚ ಮಾಡುವುದು ನಮ್ಮ ಸರಕಾರಗಳ ನೈತಿಕ ಕ್ರಿಯೆಯಾಗಬೇಕಿತ್ತೆಂಬುದನ್ನು ವ್ಯವಸ್ಥೆಯ ಒಳಗಿನ ಯಾರೂ ಒಪ್ಪಲು ತಯಾರಿಲ್ಲ. ಇದರ ಜೊತೆಗೆ ಸರಕಾರ ಬರಪರಿಹಾರ ನಿಧಿಯನ್ನು ಖರ್ಚು ಮಾಡಲು ಯಾವ ಮಾನದಂಡವನ್ನು ಅನುಸರಿಸುತ್ತಿದೆಯೆಂಬುದನ್ನು ನೋಡಿದರೆ ಎದೆದಸಕ್ಕೆನ್ನುತ್ತದೆ. ಬೆಳೆನಾಶ ಪರಿಹಾರವಾಗಿ ರೈತನಿಗೆ ನೀಡಿದ ಮೊತ್ತ ಆತನ ಒಟ್ಟು ವಾರ್ಷಿಕ ಉತ್ಪಾದನೆಯ ಶೇಕಡಾ 20ರಷ್ಟು ಸಹ ಇಲ್ಲ.ಇನ್ನು ಕುಡಿಯುವ ನೀರಿಗೆ ಖರ್ಚು ಮಾಡುವ ಹಣದಿಂದ ಯಾವುದೇ ಶಾಶ್ವತ ಪರಿಹಾರದ ವ್ಯವಸ್ಥೆಯಂತು ಆಗುವುದೇ ಇಲ್ಲ. ಜಲಕ್ಷಾಮವಿರುವ ಹಳ್ಳಿಗಳಿಗೆ ಪಟ್ಟಣಗಳಿಗೆ ಖಾಸಗಿಯವರ ಟ್ಯಾಂಕರುಗಳಿಂದ ನೀರು ಪೂರೈಸಲು ಖರ್ಚು ಮಾಡುವ ಹಣದಿಂದ ಪ್ರತಿ ಊರಿಗೂ ಶಾಶ್ವತ ವ್ಯವಸ್ಥೆ ಮಾಡುವಷ್ಟಾಗಿರುತ್ತದೆ. ಯಾಕೆಂದರೆ ಹೀಗೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ದರ ನಿಗದಿಗೆ ಯಾವುದೇ ವೈಜ್ಞಾನಿಕ ಮಾನದಂಡವಿರುವುದಿಲ್ಲ.
ಇನ್ನುಳಿದಂತೆ ನಮ್ಮ ರಾಜಕೀಯ ಪ್ರಭೃತಿಗಳಿಗೆ ಮತ್ತು ನೌಕರಶಾಹಿಗೆ ಒಂದು ಕಲ್ಪನೆಯಿದೆ: ಬರಪರಿಹಾರವೆಂದರೆ, ಕೆರೆಗಳ ಹೂಳೆತ್ತುವುದು, ಶಾಲೆ ಅಂಗನವಾಡಿ, ಸಮುದಾಯ ಭವನಗಳನ್ನು ರಿಪೇರಿ ಮಾಡಿ ಸುಣ್ಣ ಬಣ್ನ ಹೊಡೆಸುವುದು, ಜಿಲ್ಲಾ ಹೆದ್ದಾರಿಗಳ ಗುಂಡಿಗಳಿಗೆ ಮಣ್ಣು ಹಾಕುವುದು, ಮಾತ್ರವೆಂದಾಗಿದೆ. ವಿಪರ್ಯಾಸವೆಂದರೆ ಇವತ್ತು ಇವೇ ಕೆಲಸಗಳು ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿಯೂ ನಡೆಯುತ್ತಿದ್ದು, ಯಾವ ಕಾಮಗಾರಿ ಯಾವ ಹಣದಲ್ಲಿ ಆಗುತ್ತಿದೆಯೆಂಬ ಮಾಹಿತಿ ಸರಕಾರಿ ಅಧಿಕಾರಿಗಳಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ ಈ ಯೋಜನೆಗಳ ಅಡಿಯಲ್ಲಿಯೂ ಜನರಿಗೆಸಂಪೂರ್ಣ ಉದ್ಯೋಗ ದೊರೆಯುತ್ತಿಲ್ಲವೆಂಬುದು ಸಹ ವಾಸ್ತವವಾಗಿದೆ. ಜೊತೆಗೆ ಇಂತಹ ಕಾಮಗಾರಿಗಳು ಸಹ ಆಯಾ ಊರಿನ ಬಲಿಷ್ಠ ವರ್ಗಗಳಿಗೆ ಮಾತ್ರ ದೊರೆಯುತ್ತಿದ್ದು ತೀರಾ ಕೆಳಸ್ಥರದ ಕೂಲಿಕಾರ್ಮಿಕರಿಗೆ ಇದರ ಲಾಭವೂ ಸಿಗುತ್ತಿಲ್ಲ. ಆಯಾ ಹಳ್ಳಿಯ ಬಲಾಢ್ಯ ಜಾತಿಗಳು ತಮ್ಮ ರಾಜಕೀಯ ಶಕ್ತಿ ಮತ್ತು ಪ್ರಭಾವಗಳನ್ನು ಬಳಸಿಕೊಂಡು ಬರಪರಿಹಾದ ದೊಡ್ಡ ಮೊತ್ತವನ್ನು ತಮ್ಮ ಉಡಿಗೆ ಹಾಕಿಕೊಳ್ಳುವುದು ಸಹ ಇದರ ವೈಫಲ್ಯತೆಯ ಇನ್ನೊಂದು ಮುಖವಾಗಿದೆ.
ಪ್ರತಿ ವರ್ಷವೂ ಬರಗಾಲ ಬಂದಾಗ ರಾಜ್ಯ ಸರಕಾರಗಳು ಒಂದಷ್ಟು ಹಣ ಬಿಡುಗಡೆ ಮಾಡುವುದು, ಕೇಂದ್ರ ಸರಕಾರದ ನೆರವು ಕೇಳುವುದು, ಅದು ರಾಜ್ಯ ಕೇಳಿದ್ದರಲ್ಲಿ ಅರ್ದದಷ್ಟನ್ನು ನೀಡಿ ಕೈತೊಳೆದುಕೊಳ್ಳುವುದು ನಿತ್ಯ ಪೂಜೆಯಂತೆ ನಡೆಯುತ್ತಿದೆ. ಇವತ್ತಿನವರೆಗೂ ಬರಪರಿಹಾರದ ಹಣ ಹೇಗೆಲ್ಲ ಖರ್ಚಾಯಿತೆಂದು ಸಾರ್ವಜನಿಕರಿಗೆ ತಿಳಿಯಪಡಿಸುವ ಒಂದು ಆಡಿಟ್ ಸಹ ನಡೆದಿಲ್ಲ. ಈ ವಿಷಯದಲ್ಲಿ ಎಲ್ಲ ಪಕ್ಷಗಳ, ಎಲ್ಲ ನಾಯಕರುಗಳ ಸರಕಾರಗಳೂ ಗುಪ್ತ್ ಗುಪ್ತ್!
ಆದ್ದರಿಂದ ಬರಪರಿಹಾರದ ಎಲ್ಲ ಕಾರ್ಯಕ್ರಮಗಳೂ ಸಮಗ್ರ ಹಳ್ಳಿಯನ್ನು, ಎಲ್ಲ ಸಮುದಾಯವನ್ನು ಒಳಗೊಂಡು ನಡೆಸುವಂತಿರಬೇಕು. ಜೊತೆಗೆ ಬರಪರಿಹಾರದ ಕಾರ್ಯಕ್ರಮಗಳು ದೀರ್ಘಾವಧಿಯ ಗುರಿಗಳನ್ನು ಹೊಂದಿರಬೇಕಾಗುತ್ತದೆ. ಪ್ರತಿವರ್ಷವೂ ನಾವು ಬರಗಾಲ ಬರುವುದನ್ನು ಕಾದವರಂತೆ ಕೂತಿದ್ದು ಸಂಕಷ್ಟ ಎದುರಾದ ತಕ್ಷಣ ಒಂದಷ್ಟು ಕೋಟಿಗಳನ್ನು ಖರ್ಚು ಮಾಡಿ ರಾಜಕೀಯ ಮತ್ತು ಅಧಿಕಾರಶಾಹಿಯ ಜೇಬು ತುಂಬಿಸುವ ಕೆಲಸವನ್ನು ಮೊದಲು ಕೈಬಿಡಬೇಕಿದೆ. ಬದಲಿಗೆ ಬರಗಾಲದ ತಕ್ಷಣದ ಕಾರಣವಾದ ಕನಿಷ್ಠ ಮಳೆಯ ಪರಿಸ್ಥಿತಿಯನ್ನು ಎದುರಿಸಲು ಶಾಶ್ವತ ನೀರಾವರಿ ವ್ಯವಸ್ಥೆಯ ಕಡೆ ಗಮನ ಕೊಡಬೇಕಿದೆ. ಇಲ್ಲಿ ಇನ್ನೊಂದು ತೊಡಕಿದೆ: ನೀವು ಯಾರಿಗಾದರು ಆಳುವವರ ಎದುರು ಶಾಶ್ವತ ನೀರಾವರಿ ಎಂದು ಹೇಳಿದ ಕೂಡಲೇ ಅವರು ಹೇಳುವುದು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವ ಬಗ್ಗೆ ಮತ್ತು ನದಿಜೋಡಣೆಯಂತಹ ಬೃಹತ್ ವಿಚಾರಗಳ ಬಗ್ಗೆ. ಯಾಕೆಂದರೆ ಅಂತಹ ಯೋಜನೆಗಳು ಮಾತ್ರ ಅವರಿಗೂ ಅವರನ್ನು ನಂಬಿದ ಅಧಿಕಾರಶಾಹಿಗೂ, ಗುತ್ತಿಗೆದಾರರಿಗೂ ಲಾಭದಾಯಕವಾಗಿರುತ್ತದೆ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಿರು ನೀರಾವರಿ ಯೋಜನೆಗಳು, ಕೆರೆಗಳ ಪುನಶ್ಚೇತನದಂತಹ ಕಡಿಮೆ ಬಂಡವಾಳದ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಪ್ರತಿ ಗ್ರಾಮಗಳ ಸುತ್ತ ಸಾಮಾಜಿಕ ಅರಣ್ಯಗಳನ್ನು ಬೆಳೆಸಿ ನಿರ್ವಹಿಸುವಂತ ಕಾರ್ಯಕ್ರಮಗಳ ಮೂಲಕ ಬರಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸ ಬೇಕಾಗಿದೆ.
ಆದರೆ ಸದ್ಯಕ್ಕಿರುವ ನಮ್ಮ ರಾಜಕೀಯ ವ್ಯವಸ್ಥೆ ಹಾಗು ಜಡಗಟ್ಟಿರುವ ಅಧಿಕಾರಶಾಹಿಯಿಂದ ಇಂತಹ ಕ್ರಮಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಅಧಿಕಾರಶಾಹಿಯ ಹಿಡಿತದಿಂದ ಹೊರಬರಲಾಗದೆ ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಕಳೆದುಕೊಂಡ ರಾಜಕೀಯನಾಯಕರುಗಳು ಮನಸ್ಸು ಮಾಡಿದರೆ ಮಾತ್ರ ಇಂತಹದೊಂದು ಬದಲಾವಣೆಯನ್ನು ತರಲು ಸಾದ್ಯ ಇದಾಗದೇ ಹೋದಲ್ಲಿ ಜನರೇ ಹೊಸ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವತ್ತ ಯೋಚಿಸುವ ದಿನಗಳು ಬರುತ್ತವೆ. ಅಂತಹದೊಂದು ನಿರೀಕ್ಷೆ ತಪ್ಪೇನು ಅಲ್ಲವೆನಿಸುತ್ತದೆ.

Apr 22, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 2

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/04/2016


ಇ. ಮರುಕಳಿಸಿದ ಊಳಿಗಮಾನ್ಯತೆ

ವಸಾಹತುಶಾಹಿ ಪಿತೃವಾತ್ಸಲ್ಯದಿಂದ ಊಳಿಗಮಾನ್ಯತೆಯನ್ನು ರಕ್ಷಿಸಿದ ಬಗೆಯನ್ನು ನಾವು ನೋಡಿದ್ದೇವೆ. ಇದರ ಪರಿಣಾಮವಾಗಿ ಮುಳುಗುವ ಹಂತದಲ್ಲಿದ್ದ ಈ ಪ್ರತಿಗಾಮಿ ವ್ಯವಸ್ಥೆ ಒಟ್ಟಾಯಿತು, ಬಲಗೊಂಡಿತು. ಇರಲಿ, ವಸಾಹತು – ಊಳಿಗಮಾನ್ಯ ಮೈತ್ರಿಯ ಮೊದಲರ್ಧ ಶತಮಾನ ಐತಿಹಾಸಿಕ ಚಳುವಳಿ ಹಿಮ್ಮುಖವಾಗಿ ಚಲಿಸುವಂತೆ ಮಾಡಿತು. ಅಸ್ತಿತ್ವದಲ್ಲಿದ್ದ ಊಳಿಗಮಾನ್ಯತೆಯನ್ನೇ ಹೊಸದಾಗಿ ಕಟ್ಟುವ ಪ್ರಕ್ರಿಯೆಯೂ ಚಾಲ್ತಿಯಲ್ಲಿತ್ತು. ವಸಾಹತುಶಾಹಿಗೆ ಕರ್ನಾಟಕದ ಸಾಮಾಜಿಕ ರಚನೆ ಕೊಟ್ಟ ತತ್ ಕ್ಷಣದ ಪ್ರತಿಕ್ರಿಯೆಯಿದು. ಈ ಐತಿಹಾಸಿಕ ಪ್ರಕ್ರಿಯೆಗೆ ಎರಡು ಅಂಶಗಳು ಕಾರಣವಾದವು. ಪ್ರಜ್ಞಾಪೂರ್ವಕ ಉದ್ದೇಶದ ಪರಿಣಾಮ ಮೊದಲಂಶವಾದರೆ ನಮ್ಮ ನಾಡಿನಲ್ಲಿ ವಸಾಹತು ವ್ಯವಸ್ಥೆಯನ್ನು ನೆಟ್ಟು ಬೆಳೆಸಿದ ಪರಿಣಾಮ ಎರಡನೇ ಅಂಶ. ಮೊದಲ ಅಂಶದಲ್ಲಿ, ಕೈಗೊಂಬೆ ಊಳಿಗಮಾನ್ಯತೆ ವಸಾಹತುಶಾಹಿಯ ನಂಬುಗೆಯನ್ನು ತನ್ನನುಕೂಲಕ್ಕೆ ಬಳಸಿಕೊಂಡಿತು. ಈ ಹಿಮ್ಮುಖದ ಚಳುವಳಿ ವಸಾಹತು ಆಕ್ರಮಣದ ಮೊದಲ ಮೂರು ದಶಕಗಳಿಗೂ ವ್ಯಾಪಿಸಿತು. ಎರಡನೇ ಅಂಶದಲ್ಲಿ ಬ್ರಿಟೀಷರು ವಸಾಹತು ಪೂರ್ವ ಸಂಸ್ಥೆಗಳನ್ನೆಲ್ಲಾ ಬುಡಮೇಲು ಮಾಡಿದ್ದರಿಂದ ಅನಿರೀಕ್ಷಿತವಾಗಿ ನಿರುದ್ಯೋಗಿಗಳ ದೊಡ್ಡ ಸಮುದಾಯವೊಂದರ ಸೃಷ್ಟಿಯಾಯಿತು. ಈ ನಿರುದ್ಯೋಗಿಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದ್ದ ಒಂದೇ ಒಂದು ದಾರಿಯೆಂದರೆ ಹಳ್ಳಿಗಳಿಗೆ ವಲಸೆ ಹೋಗಿ ಕೃಷಿ ಚಟುವಟಿಕೆಯ ಭಾಗವಾಗುವುದು. ಇದರಿಂದ ಆರ್ಥಿಕತೆಯಲ್ಲಿ ಊಳಿಗಮಾನ್ಯತೆ ಮತ್ತಷ್ಟು ಬಲಶಾಲಿಯಾಯಿತು. ಈ ಚಲನೆಯನ್ನು ಹದಿನೆಂಟನೇ ಶತಮಾನದ ದ್ವಿತೀಯಾರ್ಧದಲ್ಲೂ ಕಾಣಬಹುದು. ವಸಾಹತು – ಊಳಿಗಮಾನ್ಯತೆಯ ಬಂಧ ಮುಂದೆ ಚಲಿಸುತ್ತಿದ್ದ ಸಮಾಜದ ಚಲನೆಗೆ ಅಡ್ಡಿಯಾಗುವುದರ ಜೊತೆಗೆ ತಾತ್ಕಾಲಿಕವಾದ ಹಿಮ್ಮುಖ ಚಲನೆಗೂ ಕಾರಣವಾಯಿತು.

ಮೊದಲ ಏಳು ವರ್ಷ ಬ್ರಿಟೀಷರು ಜಾತಿಯಿಂದ ಬ್ರಾಹ್ಮಣನಾದ ಪೂರ್ಣಯ್ಯನ ಸೇವೆಯನ್ನು ಖರೀದಿಸಿದರು. ಪೂರ್ಣಯ್ಯ ಟಿಪ್ಪುವಿನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ. ಪೂರ್ಣಯ್ಯನಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಇದ್ದ ಸಂಪೂರ್ಣ ಜ್ಞಾನ ಮತ್ತು ಮುಖ್ಯವಾಗಿ ಮೈಸೂರಿನ ತೆರಿಗೆ ಆಡಳಿತದ ಬಗ್ಗೆ ಇದ್ದ ತಿಳಿವು ಬ್ರಿಟೀಷರಾತನನ್ನು ನೇಮಿಸಿಕೊಳ್ಳಲು ಕಾರಣವಾಯಿತು. ಮೊಲದ ಜೊತೆಗೋಡುತ್ತಲೇ ಬೇಟೆನಾಯಿಯೊಡಗೂಡಿ ಬೇಟೆಯಲ್ಲಿ ತೊಡಗಿಸಿಕೊಂಡಂತಿದ್ದರು ಪೂರ್ಣಯ್ಯ. ಬ್ರಿಟೀಷರು ಶ್ರೀರಂಗಪಟ್ಟಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೂರ್ಣಯ್ಯ ಬ್ರಿಟೀಷರಿಗೆ ಪ್ರೋತ್ಸಾಹ ನೀಡಿದರು ಎಂಬ ‘ಜನಪ್ರಿಯ’ ನಂಬಿಕೆಯೂ ಇದೆ. ಈ ಮೋಸದ ಕೆಲಸಕ್ಕೆ ಪೂರ್ಣಯ್ಯನವರಿಗೆ ಚೆಂದದ ಮರ್ಯಾದೆಯನ್ನೇ ಮಾಡಲಾಯಿತು. ಅವರ ವಾರ್ಷಿಕ ಆದಾಯ 18,000 ರುಪಾಯಿಗಳೆಂದು ನಿಗದಿಪಡಿಸಲಾಗಿತ್ತು. ಸಾಮ್ರಾಜ್ಯಕ್ಕೆ ಬರುವ ಒಟ್ಟು ಆದಾಯದಲ್ಲಿ ಒಂದು ಪರ್ಸೆಂಟನ್ನು ಕೂಡ ಅವರಿಗೆ ನೀಡಲಾಗುತ್ತಿತ್ತು. ಇದು ವಾರ್ಷಿಕವಾಗಿ 62,000 ರುಪಾಯಿಗಳಷ್ಟಾಗುತ್ತಿತ್ತು. (121)

1807ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾಮ್ಯಾಜ್ಯದ ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಪೂರ್ಣಯ್ಯನವರು ನಿವೃತ್ತರಾದರು. ನಿವೃತ್ತರಾಗುವುದಕ್ಕೂ ಮೂರು ವರುಷಗಳ ಹಿಂದೆ ಪೂರ್ಣಯ್ಯನವರ ಮೇಲೆ ಬ್ರಿಟೀಷರು ಹೊಗಳಿಕೆಯ ಸುರಿಮಳೆಯನ್ನೇ ಸುರಿದರು; ಸಾಮ್ರಾಜ್ಯದ ಆಗುಹೋಗುಗಳನ್ನು ಅಚ್ಚುಕಟ್ಟಾಗಿ ತಮ್ಮ ಆಸಕ್ತಿಯಂತೆ ನಡೆಸಿಕೊಂಡು ಹೋಗಿದ್ದಕ್ಕೆ ಮತ್ತದಕ್ಕಿಂತ ಹೆಚ್ಚಾಗಿ ಅತ್ಯುತ್ಸಾಹದಿಂದ ಜನರ – ಮಧ್ಯವರ್ತಿ ಊಳಿಗಮಾನ್ಯತೆಯ ಪ್ರಮುಖ ಆದಾಯ ಮೂಲವಾದ - ರೈತರ ಬಳಿ ಹಣವನ್ನೀರಿ ತಮಗೆ ಕೊಟ್ಟಿದ್ದಕ್ಕೆ. ಪೂರ್ಣಯ್ಯ ದಿವಾನರ ಕಛೇರಿಯನ್ನು ವಂಶಪಾರಂಪರ್ಯ ಆಸ್ತಿಯನ್ನಾಗಿ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದಾಗ ಅದನ್ನು ಬ್ರಿಟೀಷರು ನಯವಾಗಿಯೇ ತಿರಸ್ಕರಿಸಿದರು. ಆದರೂ ಪೂರ್ಣಯ್ಯನ ನಿಷ್ಠೆಗೆ ಸೋತು ತನಗಿಷ್ಟವಾದ, ಸಾಮ್ಯಾಜ್ಯದ ಯಾವುದಾದರೂ ತಾಲ್ಲೂಕನ್ನು ಜಾಗೀರಾಗಿ ಪಡೆದುಕೊಳ್ಳಬಹುದು, ಮತ್ತದು ಅವರ ವಂಶದಲ್ಲೇ ಉಳಿಯುತ್ತದೆ ಎಂದು ತಿಳಿಸಿದ್ದರು. (122) ಪೂರ್ಣಯ್ಯ ಯಳಂದೂರನ್ನು ಆಯ್ದುಕೊಂಡದ್ದರ ಕುರಿತು ಪೂರ್ಣಯ್ಯನಿಂದ ಉಪಕೃತರಾದ ನರಸಿಂಹ ಮೂರ್ತಿ ಬರೆಯುತ್ತಾರೆ: “ಪೂರ್ಣಯ್ಯನವರು ತಮ್ಮ ಜಾಗೀರಿಗೆ ಆಯ್ದುಕೊಂಡ ಯಳಂದೂರು ತಾಲ್ಲೂಕು ಚಿಕ್ಕದಾದರೂ ಸಂಪನ್ಮೂಲಭರಿತವಾಗಿದೆ. ಮೈಸೂರಿನಲ್ಲಿ ಅತಿ ದಟ್ಟ ಜನಸಂದಣಿಯಿರುವ ಮತ್ತು ಅತ್ಯಂತ ಫಲವತ್ತಾದ ತಾಲ್ಲೂಕಿನಲ್ಲೊಂದಾಗಿದೆ.….. ಬೆಟ್ಟದ ಮೇಲಿರುವ ಕಾಡುಗಳಲ್ಲಿ ಹೊನ್ನೆ, ಶ್ರೀಗಂಧ, ತೇಗ ಮತ್ತು ಇತರೆ ಅತ್ಯಮೂಲ್ಯ ಮರಗಳು ಹೇರಳ ಸಂಖೈಯಲ್ಲಿವೆ, ಇವೆಲ್ಲವೂ ಜಾಗೀರಿಗೆ ಆದಾಯ ತಂದು ಕೊಡುವ ಮೂಲಗಳು. ತಾಲ್ಲೂಕಿನ ಹೆಚ್ಚಿನ ಭಾಗದಲ್ಲಿ ಸಮತಟ್ಟಾದ ಭೂಮಿಯಿದೆ. ಸುವರ್ಣಾವತಿ ನದಿ ಇಲ್ಲಿ ಹಾದು ಹೋಗುತ್ತದೆ, ಇಲ್ಲಿನ ನೀರಾವರಿಗೆ ಇದೇ ಮೂಲ ನದಿ. ಇಲ್ಲಿನ ಫಲವತ್ತಾದ ಭೂಮಿ ವೀಳ್ಯದೆಲೆ, ಅಡಿಕೆ ಮತ್ತು ತೆಂಗಿನ ತೋಟಗಳನ್ನು ಮಾಡಲು ಹೇಳಿಮಾಡಿಸಿದಂತಿದೆ. ನೇರಳೆ ಹಣ್ಣನ್ನಿಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತದೆ ಮತ್ತು ಭಾರೀ ಪ್ರಮಾಣದಲ್ಲಿ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ.” (123) ತಾಲ್ಲೂಕಿನ ವಾರ್ಷಿಕ ತೆರಿಗೆಯ ಆದಾಯ 30,000 ರುಪಾಯಿಗಳಷ್ಟಿತ್ತು. ಆದರೆ ಅಂಟಿಕೊಂಡಿದ್ದ ಕಾಡಿನ ಅತ್ಯಮೂಲ್ಯ ಸಂಪತ್ತು ಜಾಗೀರುದಾರರ ಆದಾಯಕ್ಕಿಂತಲೂ ಹೆಚ್ಚಿನ ಆದಾಯವನ್ನು ತರಬಲ್ಲುದಾಗಿತ್ತು. (124)

1807ರ ಡಿಸೆಂಬರಿನಲ್ಲಿ ರಾಜನ ಪರವಾಗಿ ರೆಸೆಡೆಂಟ್ ಜಾನ್ ಮಾಲ್ಕಮ್ ಹೊರಡಿಸಿದ ಸನ್ನದಿನಲ್ಲಿ ಈ ರೀತಿ ಇತ್ತು: “…… ನಮ್ಮ ಆಸೆಗಳನ್ನು ಪೂರೈಸುವ ಸಲುವಾಗಿ, ಸಕಲ ಅಧಿಕಾರವೊಂದಿದ ಮಂತ್ರಿಯೊಬ್ಬನನ್ನು ನೇಮಿಸುವುದು ಅನಿವಾರ್ಯವಾಗಿತ್ತು. ಈ ಮಂತ್ರಿಯ ಪ್ರಾಮಾಣಿಕತೆ ಮತ್ತು ಅಧಿಕಾರ ನಡೆಸುವ ಸಾಮರ್ಥ್ಯದ ಮೇಲೆ ನಂಬುಗೆ ಇಡಬೇಕಿತ್ತು. ಗೌರವಾನ್ವಿತ ಪೂರ್ಣಯ್ಯನವರ ನೇರವಂತಿಕೆ, ಸಚ್ಚಾರಿತ್ಯ ಮತ್ತು ಪ್ರಾಮಾಣಿಕತೆಯನ್ನು ಗಮನಿಸಿದ್ದೇವೆ. ಅವರ ಸಾಮರ್ಥ್ಯ ಮತ್ತು ವ್ಯವಹಾರಿಕತೆ ಸಾಬೀತಾಗಿದೆ. ಆದ್ದರಿಂದ ನಂಬಿಕೆಯ ಮತ್ತು ಗೌರವಾನ್ವಿತ ಹುದ್ದೆಯಾದ ಮಂತ್ರಿ ಪದವಿಯನ್ನು ಮೇಲೆ ತಿಳಿಸಿದ ಗೌರವಾನ್ವಿತರಿಗೆ ನೀಡುತ್ತಿದ್ದೇವೆ. (ಹುದ್ದೆಯ ಘನತೆ ಈಗ ದ್ವಿಗುಣಗೊಂಡಿದೆ) ಮತ್ತು ಅವರು ತಮ್ಮ ಕರ್ತವ್ಯದಲ್ಲಿ ತೋರಿದ ನೇರವಂತಿಕೆ, ಪ್ರಾಮಾಣಿಕತೆ ಮತ್ತು ಸ್ವಾಮಿಭಕ್ತಿ ಮತ್ತು ಇಂಗ್ಲೀಷ್ ಕಂಪನಿ ಸರಕಾರಕ್ಕೆ ಅವರು ತೋರಿದ ನಿಷ್ಠೆಗಳೆಲ್ಲವೂ ಅವರಿಗೆ ಈ ಪದವಿ ಸಿಕ್ಕಿರುವುದಕ್ಕಿರುವ ಕಾರಣಗಳು.

ಈ ಗೌರವಾನ್ವಿತ ವ್ಯಕ್ತಿ ನಮಗೆ ನೀಡಿದ ಸೇವೆಗಳು ಮತ್ತು ಮಾಡಿದ ಕೆಲಸಗಳು ಕಾಲದ ಪುಟಗಳಿಂದ ಅಳಿಸಿಹೋಗಬಾರದು ಮತ್ತು ಈ ಗೌರವಾನ್ವಿತ ವ್ಯಕ್ತಿಯ ಮಕ್ಕಳು ಸರ್ವಕಾಲಕ್ಕೂ ಆರಾಮವಾಗಿ, ಸುಲಭದಿಂದ ಬದುಕಲು ಸಾಧ್ಯವಾಗಬೇಕು. ಹಾಗಾಗಿ ಬ್ರಿಟೀಷ್ ಸರಕಾರದ ಸಲಹೆ ಮತ್ತು ಒಪ್ಪಿಗೆಯ ಮೇರೆಗೆ ನಾವು ಯಳಂದೂರು ತಾಲ್ಲೂಕನ್ನು ಮೇಲೆ ಹೆಸರಿಸಿದ ಗೌರವಾನ್ವಿತ ವ್ಯಕ್ತಿಯ ವಂಶಕ್ಕೆ ಇನಾಂ ಆಗಿ ನೀಡುತ್ತಿದ್ದೇವೆ. ಜಗತ್ತು ಬೆಳಗುವ ಸೂರ್ಯ ಚಂದ್ರರಿರುವರೆಗೂ ಈ ಇನಾಂ ಅವರದಾಗಿರುತ್ತದೆ.

ಯಳಂದೂರನ್ನು ಮೈಸೂರಿನ ದಿವಾನರಾದ ಪೂರ್ಣಯ್ಯನವರಿಗೆ ಮೈಸೂರಿನ ರಾಜ ಜಾಗೀರಾಗಿ ನೀಡಿರುತ್ತಾರೆ, ಬ್ರಿಟೀಷ್ ಸರಕಾರದ ಶಿಫಾರಸ್ಸಿನ ಮೇರೆಗೆ. ಪೂರ್ಣಯ್ಯನವರ ನಿಷ್ಠಾವಂತ ಸೇವೆಗೆ ಪ್ರತಿಯಾಗಿ ಈ ಜಾಗೀರು ನೀಡಲು ಮೈಸೂರಿನಲ್ಲಿ ಬ್ರಿಟೀಷ್ ರೆಸೆಡೆಂಟಾದ ನಾನು ಪೂರ್ಣ ಸಮ್ಮತಿಯೊಂದಿಗೆ ಅನುಮೋದಿಸುತ್ತ ಈ ಒಪ್ಪಂದಕ್ಕೆ ಸಹಿ ಹಾಕಿ ನನ್ನ ಹೆಸರು ಬರೆದಿರುತ್ತೇನೆ.” (125)

ನಿವೃತ್ತರಾಗುವ ಸಮಯದಲ್ಲಿ ಪೂರ್ಣಯನವರು ಸರಕಾರಕ್ಕೆ 14,15,729 ಕಂತಾರೇಯ ಪಗೋಡಾಗಳನ್ನು ಪಾವತಿಸಬೇಕಾಗಿತ್ತು (1 ಕಂತಾರೇಯ ಪಗೋಡ = 2.86 ರುಪಾಯಿ). ಈ ಮೊತ್ತವನ್ನು ಕಟ್ಟುವಂತೆ ಪೂರ್ಣಯ್ಯನವರಿಗೆ ಕೇಳಿದಾಗ, 6,69,750 ಕಂತಾರೇಯ ಪಗೋಡಾಗಳನ್ನು ಹಣದ ರೂಪದಲ್ಲಿ ನೀಡಿ, ಅವನ ನೆಂಟರು ಟ್ರೆಷರಿಯಿಂದ ಕದ್ದಿದ್ದ 1,14,00 ಕಂತಾರೇಯ ಪಗೋಡಾಗಳಷ್ಟು ಬೆಲೆ ಬಾಳುತ್ತಿದ್ದ ಒಡವೆಗಳನ್ನು ಹಿಂದಿರುಗಿಸಿದರು. ಉಳಿಕೆ 6,31,978 ಕಂತಾರೇಯ ಪಗೋಡಾಗಳನ್ನು ಕಟ್ಟಲು ನಿರಾಕರಿಸಿದರು. (126) ಮೈಸೂರು ಸಾಮ್ರಾಜ್ಯ ಬ್ರಿಟೀಷರಿಗೆ ವಾರ್ಷಿಕವಾಗಿ ಕೊಡುತ್ತಿದ್ದ ಹಣದಷ್ಟು ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದ ಪೂರ್ಣಯ್ಯ, ಹಣ ಕೊಡಲಾಗುವುದಿಲ್ಲವೆಂದು ಒಂದೇ ಏಟಿಗೆ ನಿರಾಕರಿಸಿಬಿಟ್ಟರು!

ಪೂರ್ಣಯ್ಯ ಸರಕಾರಕ್ಕೆ ಕೊಡಬೇಕಿದ್ದ ಬಾಕಿ ಹಣವನ್ನು ಎಲ್ಲೆಲ್ಲಿ ಖರ್ಚು ಮಾಡಿದ್ದನೆಂಬ ಈ ಲೆಕ್ಕ, ಲೂಟಿ ಹೊಡೆದ ಹಣವನ್ನು ಬ್ರಾಹ್ಮಣರಿಗೆ ಕೊಟ್ಟು ಅತಿಯಾಗಿ ಮುದ್ದಿಸಿ ಹಾಳು ಮಾಡಿದ್ದನ್ನು ತೋರಿಸಿಕೊಡುತ್ತದೆ. 
 

ಯಳಂದೂರಿನಲ್ಲಿ ಕುಸಿತದ ಹಂತದಲ್ಲಿರುವ ಪೂರ್ಣಯ್ಯನವರ ಅರಮನೆಯಂತಹ ಮನೆಯಲ್ಲಿ ಚಿನ್ನ ತುಂಬಿದ ಮಡಿಕೆಗಳು ಆಗಾಗ್ಗೆ ದೊರಕುತ್ತಿದ್ದವು ಎಂಬುದು ಆಸಕ್ತಿಕರ. ತೀರ ಇತ್ತೀಚೆಗೆ 1980ರಲ್ಲೂ ಚಿನ್ನದ ಮಡಿಕೆಗಳು ಸಿಕ್ಕಿದ್ದವು.

‘ಗೌರವಾನ್ವಿತ’ ‘ನೇರವಂತಿಕೆ’ಯ ‘ಘನತೆಯುಳ್ಳ’ ವ್ಯಕ್ತಿಯ ಬಗ್ಗೆ ಇಷ್ಟು ಸಾಕೇನೋ!?!

ಸನ್ನದ್ ಕೊಡುವ ಒಂದು ತಿಂಗಳ ಮುಂಚೆ ಮದ್ರಾಸಿನ ಬ್ರಿಟೀಷ್ ಸರಕಾರಕ್ಕೆ ಬರೆದ ಪತ್ರವೊಂದರಲ್ಲಿ ಮಾಲ್ಕಮ್: “ಪೂರ್ಣಯ್ಯನವರು ಕೇಳಿದ ವಿಪರೀತದ ಬೇಡಿಕೆಗಳಿಗೆ ಹೋಲಿಸಿದರೆ ನಾವು ಕೊಟ್ಟ ಉಡುಗೊರೆಯ ಮೊತ್ತ ಒಪ್ಪತಕ್ಕದ್ದು. ಅದು ದೊಡ್ಡದಲ್ಲ ಮತ್ತಷ್ಟು ಸಾಕು. ಮೈಸೂರು ಸರಕಾರ ಅಸ್ತಿತ್ವದಲ್ಲಿರುವವರೆಗೆ ಪೂರ್ಣಯ್ಯನ ಕುಟುಂಬವನ್ನು ಸಾಕಲು ಇಷ್ಟು ಸಾಕು. ಇಷ್ಟೆಲ್ಲವನ್ನೂ ಕೊಟ್ಟ ಹಿಂದಿನ ಕಾರಣಗಳು ಅದನ್ನನುಭವಿಸುವ ಮುಂದಿನ ಜನಾಂಗದವರಲ್ಲೂ ಗೌರವ ಮೂಡಿಸುತ್ತದೆ.” (128)

ಮತ್ತೆ ಮುಂದಕ್ಕೆ ಇದೇ ರೀತಿಯ ‘ಬಹುಮಾನ’ಗಳನ್ನು ಕೊಟ್ಟುಬಿಟ್ಟರೆ ಎಂಬ ಅನ್ನಿಸಿಕೆಯಿಂದ ಗವರ್ನರ್ ಜೆನರಲ್ ತತ್ ಕ್ಷಣ ಇಂತಹ ವಿಷಯಗಳ ಬಗ್ಗೆ ಯಾವ ನೀತಿಯನ್ನನುಸರಿಬೇಕೆಂದು ಸೂಚನೆ ನೀಡಿದರು: “ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಕೊಡುವಿಕೆಗೆ ಮುಂದೆ ಅನುಸರಿಸಬೇಕಾದ ನೀತಿಗಳನ್ನು ಗೊತ್ತುಪಡಿಸುವುದು ಸೂಕ್ತವಾದ ಕೆಲಸ. ಮೈಸೂರು ಸರಕಾರಕ್ಕೆ ಈ ಪ್ರಕರಣದಲ್ಲಿ ಸ್ವಲ್ಪ ಸ್ವಾತಂತ್ರ್ಯವಿದ್ದರೆ, ಬಲಹೀನ ನಾಮಕಾವಸ್ಥೆ ರಾಜ ಅಥವಾ ಮಂತ್ರಿ ಕೊಟ್ಟುಬಿಡಬಹುದಾದ ಉಡುಗೊರೆಗಳು ಆ ರಾಜ್ಯ ಬ್ರಿಟೀಷ್ ಸರಕಾರದೊಂದಿಗೆ ಮಾಡಿಕೊಂಡಂತಹ ಒಪ್ಪಂದಗಳ ಅಸ್ತಿತ್ವಕ್ಕೇ ಸಂಚಕಾರ ಉಂಟುಮಾಡಿಬಿಡಬಹುದು. ಮತ್ತೊಂದೆಡೆ ಈ ರೀತಿಯ ಕೊಡುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ಬುದ್ಧಿವಂತಿಕೆಯ ನಡೆಯಲ್ಲ. ಅತ್ಯಮೂಲ್ಯ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸಲು, ಉಡುಗೊರೆ ನೀಡಲು ಅಲ್ಲಿನ ಸ್ಥಳೀಯ ಸರಕಾರಗಳಿಗೆ ಅಧಿಕಾರವಿರಲೇಬೇಕು. ನಮ್ಮ ಪ್ರಕಾರ ಒಂದು ನಿರ್ದಿಷ್ಟ ಮೊತ್ತವನ್ನು/ ಜಾಗವನ್ನು ನಿಗದಿಪಡಿಸಬೇಕು, ಮೈಸೂರು ಸಾಮ್ರಾಜ್ಯದ ಒಳಗಿನ ಜಾಗವನ್ನು ಸೇವೆ ಸಲ್ಲಿಸಿದಾತ ಜೀವಿತವಿರುವವರೆಗೆ ಅಥವಾ ವಂಶಪಾರಂಪರ್ಯ ಗುತ್ತಿಗೆಯ ಮೇಲೆ ನೀಡಬೇಕು ಮತ್ತಿದಕ್ಕೆ ಕಂಪನಿ ಸರಕಾರದ ಒಪ್ಪಿಗೆ ಕೊಡುವಂತಿರಬಾರದು.” (129)

ಮಾಲ್ಕಮ್ ಮದ್ರಾಸಿಗೆ ಬರೆದ – ಈಗಾಗಲೇ ನಾವು ಉಲ್ಲೇಖಿಸಿರುವ – ಪತ್ರದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುವುದು ಹೀಗೆ: “ಪೂರ್ಣಯ್ಯನವರಿಗೆ ಕೊಟ್ಟ ಈ ಜಾಗೀರನ್ನು ನಿದರ್ಶನವನ್ನಾಗಿ ಬಳಸಿಕೊಳ್ಳಬಾರದು. ಯಾಕೆಂದರೆ ಈ ರಾಜ್ಯದ ಸೇವೆಯಲ್ಲಿರುವ ಯಾವುದೇ ವ್ಯಕ್ತಿಗೂ ಇಂತಹುದೊಂದು ಅವಕಾಶ ಲಭಿಸುವುದಿಲ್ಲ, ಪೂರ್ಣಯ್ಯನವರಿಗೆ ಕೊಟ್ಟಂತೆ ಮತ್ಯಾರಿಗೂ ಕೊಡುವ ಪರಿಸ್ಥಿತಿ ಉದ್ಭವಿಸುವುದಿಲ್ಲ.” (130)

ಹಾಗಾಗಿ ಇದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟ ಮೊದಲ ಉದಾಹರಣೆ ಮತ್ತದನ್ನವರು ಕೊನೆಯ ಉದಾಹರಣೆಯಾಗಿಸಬಯಸಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅವರಿಗೆ ಸಾಮ್ರಾಜ್ಯವನ್ನು, ಹದಿನೇಳನೇ ಶತಮಾನಕ್ಕೂ ಮುಂಚಿದ್ದ ಹಳೆಯ ಊಳಿಗಮಾನ್ಯತೆಯ ದಿನಗಳಿಗೆ ತಳ್ಳಲ್ಪಡುವುದನ್ನು ನೋಡುವ ಇಚ್ಛೆಯಿರಲಿಲ್ಲ. ಆದರೆ ಕೃಷ್ಣರಾಜ ಈ ಕೊಡುವಿಕೆಯಿಂದ ಗತಕಾಲದ ಚಕ್ರವರ್ತಿಗಳಂತೆ ಉತ್ಸುಕನಾಗಿದ್ದ ಮತ್ತಿದನ್ನು ಪುನರಾವರ್ತಿಸಲು ಆಸಕ್ತನಾಗಿದ್ದ. ಈ ರೀತಿಯ ಬಹುಮಾನಗಳ ಕೊಡುವಿಕೆ ರಾಜನೆಂಬ ಗುರುತನ್ನು ಪ್ರಕಾಶಮಾನವಾಗಿಸುತ್ತಿತ್ತು. ಇದು 1810ರ ನಂತರದ ಲಕ್ಷಣವಷ್ಟೇ ಆಗಿರದೆ, 1799ರಲ್ಲೇ ಶುರುವಾಗಿತ್ತು.

ಪೂರ್ಣಯ್ಯನ ಆರಂಭಿಕ ಕಾರ್ಯದ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ. “ಜನರನ್ನು ಒಲಿಸಿಕೊಳ್ಳುವ ಸಲುವಾಗಿ” ಪೂರ್ಣಯ್ಯ “ಟಿಪ್ಪುವಿನ ಕೊನೆಯ ದಿನಗಳಲ್ಲಿ ಸರಕಾರ ವಶಪಡಿಸಿಕೊಂಡಿದ್ದ ಎಲ್ಲಾ ಇನಾಂ ಭೂಮಿ ಮತ್ತು ಹಣವನ್ನು ಆಯಾ ದೇವಸ್ಥಾನ, ಮಠ, ದರ್ಗಾ ಮತ್ತು ಇತರೆ ಪೂಜಾ ಸ್ಥಳಗಳು ಹಾಗು ದಾನಧರ್ಮದ ಸಂಸ್ಥೆಗಳಿಗೆ ಹಿಂದಿರುಗಿಸಬೇಕೆಂಬುದಾಗಿತ್ತು.” (131) ಮುಂದುವರೆಸುತ್ತಾ ಶಾಮ ರಾವ್ ಹೇಳುತ್ತಾರೆ: “ದೇಶದ ವಿವಿಧ ಭಾಗಗಳಲ್ಲಿನ ಪಾಳೇಗಾರರು, ನಕಲಿ ಪಾಳೇಗಾರರು ಸಾಮ್ರಾಜ್ಯದ ಎಲ್ಲಾ ಭಾಗದ ಮೇಲೂ ತಮ್ಮ ಹಕ್ಕಿದೆ ಎಂದು ಹೇಳಲಾರಂಭಿಸಿದರು. ಪಟೇಲರು, ಪೋಲೀಸ್ ಅಧಿಕಾರಿಗಳು ಮತ್ತು ಲಂಚ ಕೊಡುವ ತಾಕತ್ತಿರುವ ರೈತರೂ ಸಹಿತ ತಮ್ಮಳ್ಳಿಯ ಜಾಗವನ್ನು ತಮ್ಮದೆಂದು ಹೇಳತೊಡಗಿದರು, ಅವರದಾಗಿಲ್ಲದೇ ಹೋದರೂ ಸಹ…..”(132)

ಪೂರ್ಣಯ್ಯ ಜನರನ್ನು ಅದರಲ್ಲೂ ವೈದಿಕ ಬ್ರಾಹ್ಮಣರನ್ನು “ಒಲಿಸಿಕೊಳ್ಳಲು” ತೆಗೆದುಕೊಂಡ ಕ್ರಮಗಳ ಬಗ್ಗೆ ವಿಲ್ಕ್ಸ್ ಬರೆಯುತ್ತಾನೆ: “1778ರಲ್ಲಿ ಟಿಪ್ಪು ಸುಲ್ತಾನ್ ಈ ಜಮೀನುಗಳನ್ನು ವಾಪಸ್ಸು ಪಡೆದುಕೊಳ್ಳಬೇಕೆಂದು ಸೂಚಿಸುತ್ತ, ಅದರಿಂದ ಬರುವ ಹಣವನ್ನು ಜುಮ್ಮಾಬಂದಿಗೆ ಸೇರಿಸಬೇಕು ಎಂದು ಆದೇಶಿಸುತ್ತಾನೆ. ದಿವಾನರಾಗುತ್ತಿದ್ದಂತೆ ಪೂರ್ಣಯ್ಯ ಮಾಡಿದ ಮೊದಲ ಕೆಲಸ ಈ ಭತ್ಯೆಗಳನ್ನು ಮತ್ತೆ ಮರುಸ್ಥಾಪಿಸಿದ್ದು…..”(133)

ಇದರಲ್ಲಿ ಹಳ್ಳಿಯ ದೇವಸ್ಥಾನಗಳು, ಜ್ಯೋತಿಷಿಗಳಿಗೆ ಮಠಗಳಿಗೆ ಮಠಗಳ ಗುರುಗಳಿಗೆ ಕೊಟ್ಟಿದ್ದ ಭೂಮಿ, ಕೆರೆ ಕಟ್ಟಲು ಭೂಮಾಲೀಕರಿಗೆ ಕೊಟ್ಟಿದ್ದ ಜಾಗ, ಉದ್ಯಾನವನ ನಿರ್ಮಿಸಲು ಜಾಗೀರುದಾರರಿಗೆ ಕೊಟ್ಟಿದ್ದ ಜಾಗ ಮತ್ತು ರಾಜರ ಸ್ವಂತ ಉದ್ಯಾನಕ್ಕೆ ಕೊಟ್ಟಿದ್ದ ಜಾಗವೆಲ್ಲವೂ ಸೇರಿತ್ತು. ಇವೆಲ್ಲದರ ಒಟ್ಟು ಮೊತ್ತ 2,68,467 ರುಪಾಯಿಗಳಷ್ಟಿತ್ತು. (134)

ಇನಾಮುದಾರರಿಗೆ ವಿವಿಧ ಕಾಲಘಟ್ಟದಲ್ಲಿ ಕೊಟ್ಟ ಇನಾಮುಗಳ ಬಗ್ಗೆ ಲುವಿಸ್ ರೈಸ್ ಆಸಕ್ತಿಕರ ಮಾಹಿತಿಗಳನ್ನು ನಮಗೆ ಕೊಡುತ್ತಾರೆ. (135)


ರೈಸಿನ ಟೇಬಲ್ಲಿನಿಂದ ಒಂದಂಶ ಸ್ಪಷ್ಟವಾಗುತ್ತದೆ, ಒಟ್ಟು 15,90,539 ರುಪಾಯಿಗಳಷ್ಟಾಗಿದ್ದ ಇನಾಮಿನಲ್ಲಿ ಹೆಚ್ಚಿನಂಶವನ್ನು ಮೊದಲ ದಶಕದಲ್ಲಿ ಕೊಡಲಾಗಿತ್ತು. ಊಳಿಗಮಾನ್ಯ ಸ್ಥಿತಿಗೆ ಮರಳಿಸುವುದಕ್ಕೆ ಹೆಚ್ಚು ಪ್ರಯತ್ನ ಪಡಲಾಗಿತ್ತು. ಕೈಗೊಂಬೆ ರಾಜನಡಿಯಲ್ಲಿ ಇನಾಮು ಕೊಡುವ ಪದ್ಧತಿ ಕಡಿಮೆಯಾಯಿತು, 1831ರ ನಂತರ ಅದು ಸಂಪೂರ್ಣ ಮಾಯವಾಯಿತು. 1831ರಷ್ಟರಲ್ಲಿ ಬ್ರಿಟೀಷ್ ಸರಕಾರ ಇದರ ಕುರಿತು ಸ್ಪಷ್ಟ ಹೆಜ್ಜೆ ಇಟ್ಟಿದ್ದನ್ನು ರೆಸಿಡೆಂಟ್ ಮತ್ತು ಗವರ್ನರ್ ನಡುವೆ ನಡೆದ ಪತ್ರ ವಿನಿಮಯದಲ್ಲಿ ಕಾಣಬಹುದು. ಕೃಷ್ಣರಾಜರು “ಭೂಮಿಯನ್ನು ಸನ್ನದಾಗಿ ನೀಡುವುದನ್ನು” ತಡೆಯುವ ಪ್ರಯತ್ನ ಈ ವಿನಿಮಯದಲ್ಲಿತ್ತು. (136)

ರಾಷ್ಟ್ರೀಯತೆಯ ಸೋಗಿನಲ್ಲಿ ಮಧ್ಯವರ್ತಿ ಅಧಿಕಾರಶಾಹಿಯು ಯೋಚಿಸುತ್ತಿದ್ದ ಬಗೆಯನ್ನು ಸಂಗ್ರಹಿಸಿ ಬರೆದಿರುವ ವೆಂಕಟಸುಬ್ಬ ಶಾಸ್ತ್ರಿ ಈ ರೀತಿಯ ಇನಾಂಗಳ ಗುಣಸ್ವರೂಪ ಮತ್ತು ಅದು ಉಂಟು ಮಾಡಿದ ಪರಿಣಾಮಗಳ ಬಗ್ಗೆ ಇನ್ನಷ್ಟು ಒಳನೋಟಗಳನ್ನು ನೀಡುತ್ತಾರೆ. ಅವರು ಹೇಳುತ್ತಾರೆ: “ಇನಾಮಿನ ಹೆಚ್ಚಿನ ಭಾಗ ಕಾವೇರಿ ಮತ್ತು ಹೇಮಾವತಿ ತಟದ ಫಲವತ್ತ ಹಳ್ಳಿಗಳಲ್ಲಿರುತ್ತಿತ್ತು ಅಥವಾ ಉದ್ಯಾನನಗರಿ ಬೆಂಗಳೂರಿನಲ್ಲಿರುತ್ತಿತ್ತು. ಇದರ ಬಗ್ಗೆ ಸರಿಯಾದ ದಾಖಲೆಗಳನ್ನು ಇಟ್ಟಿರಲಿಲ್ಲವಾಗಿ ಇನಾಂ ಆಗಿ ಕೊಟ್ಟ ಭೂಮಿಗಿಂತ ಹೆಚ್ಚನ್ನು ಆಕ್ರಮಿಸಿಕೊಂಡರು. ಜಿಲ್ಲೆಯೊಳಗೆ ಫೌಜಿದಾರರು ಮತ್ತು ಅಮಲ್ದಾರರ ಪ್ರಾಬಲ್ಯದ ಕಾರಣದಿಂದ ಈ ಇನಾಂ ಭೂಮಿ ಮತ್ತಷ್ಟು ವಿಸ್ತಾರಗೊಂಡಿತು. ಪರಿಣಾಮವಾಗಿ ಸರಕಾರಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆದಾಯ ಕೈತಪ್ಪಿಹೋಯಿತು.

ಈ ಅರಾಜಕ ಪರಿಸ್ಥಿತಿಯಲ್ಲಿ ಕೃಷಿ ಸಂಕಟಕ್ಕೊಳಗಾಯಿತು. ಕೃಷಿಕ ತನಗುತ್ತಮವೆನ್ನಿಸಿದ ಬೆಳೆಯನ್ನು ಬೆಳೆದುಕೊಳ್ಳಲು ಸ್ವತಂತ್ರನಾಗಿದ್ದ ಮತ್ತು ತನ್ನ ತ್ಯಾಗದ ಫಲವನ್ನು ಪಡೆದುಕೊಳ್ಳಬಲ್ಲವನಾಗಿದ್ದ. ಆದರೆ ವಾಸ್ತವದಲ್ಲಿ ಈ ಬೆಳೆಯಷ್ಟೇ ಅವನ ಸ್ವತ್ತಾಗಿತ್ತು. ಸರಕಾರದ ಬೇಡಿಕೆಗಳ ಜೊತೆಗೆ, ಕಳೆದ ವರ್ಷದ ತೆರಿಗೆ ಕಟ್ಟಲು, ಬೀಜ ಮತ್ತು ಎತ್ತು ಕೊಳ್ಳಲು ಸಹಾಯ ಮಾಡಿದ್ದ ಬಡ್ಡಿ ವ್ಯಾಪಾರಿ ಹೆಚ್ಚಿನ ಬೆಳೆಯನ್ನು ಕಬಳಿಸಿಬಿಡುತ್ತಿದ್ದ. ಮತ್ತೆ ಹೊಚ್ಚ ಹೊಸ ಕರಾರಿನ ಮೇಲೆ ಸಾಲ ನೀಡುತ್ತಿದ್ದ.” (137)

ತುಳುನಾಡಿನ ಆರ್ಥಿಕತೆಯ ಬಗ್ಗೆ ಅಧ್ಯಯನ ನಡೆಸಿದ ಶ್ಯಾಮ್ ಭಟ್ 1830ರಲ್ಲಿನ ಅಲ್ಲಿನ ಬೆಳವಣಿಗೆಗಳ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅವರು ಬರೆಯುತ್ತಾರೆ: “ಸರಕಾರದ ಕಂದಾಯ ನೀತಿಗಳು ಹಳೆ ಊಳಿಗಮಾನ್ಯ ಮುಖ್ಯಸ್ಥರ ಜಾಗದಲ್ಲಿ ಹೊಸ ಭೂಮಾಲೀಕರ ವರ್ಗವನ್ನು ಸೃಷ್ಟಿಸಿತು. ಜೊತೆಯಲ್ಲಿ ವರ್ತಕ ಬಡ್ಡಿ ವ್ಯಾಪಾರಿಗಳು ಮತ್ತವರ ಸಹವರ್ತಿಗಳ ವರ್ಗವನ್ನು ಈ ಹೊಸ ಪದ್ಧತಿ ಸೃಷ್ಟಿಸಿತು”. (138) ಇವರು ಮುಂದಿನ ದಿನಗಳಲ್ಲಿ ಕೃಷಿಕರ ಭೂಮಿಯ ಒಡೆತನ ತಮ್ಮದೆಂದು ಹೇಳಿಕೊಳ್ಳಲಾರಂಭಿಸಿದರು.

ಕರಾವಳಿಯ ವ್ಯಾಪಾರದ ಬಗ್ಗೆ ಬರೆಯುತ್ತ ಮಾಲತಿ ಕೆ ಮೂರ್ತಿ ಹೀಗೆ ನಿರ್ಧರಿಸುತ್ತಾರೆ: “ಬ್ರಿಟೀಷ್ ಆಳ್ವಿಕೆಯಲ್ಲಿ ಸಂಪನ್ನತೆ ಹೆಚ್ಚಿಬಿಟ್ಟಿತ್ತು ಎನ್ನುವುದನ್ನು ನಂಬಲಾಗುವುದಿಲ್ಲ ಎನ್ನುವುದಕ್ಕೆ ಈ ಭಾಗದ ಆರ್ಥಿಕ ಇತಿಹಾಸವೇ ಸಾಕ್ಷಿ ಒದಗಿಸುತ್ತದೆ. ಕೊನೇಪಕ್ಷ ಹತ್ತೊಂಬತ್ತನೇ ಶತಮಾನದ ಮೊದಲ ಎರಡು ಮೂರು ದಶಕಗಳಲ್ಲಿ.”(139)

ತನ್ನ ಪುಸ್ತಕ Peasants and Imperial Ruleನಲ್ಲಿ ನ್ಹೀಲ್ ಚಾರ್ಲ್ಸ್ ವರ್ಥ್, ಬಾಂಬೆ ಕರ್ನಾಟಕ ಭಾಗದಲ್ಲಿ ಊಳಿಗಮಾನ್ಯತೆಯ ಮರಳುವಿಕೆಯೊಂದಿಗೆ ಸರಕಾರದ ಆದಾಯ ಕಡಿಮೆಯಾಗಿದ್ದನ್ನು ವಿವರಿಸುತ್ತಾನೆ. ಅವನು ಬರೆಯುತ್ತಾನೆ: “ಹದಿನೆಂಟನೇ ಶತಮಾನದ ಕೊನೆಯಲ್ಲಿ ಮತ್ತು ಹತ್ತೊಂಭತ್ತನೇ ಶತಮಾನದ ಪ್ರಾರಂಭದಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಸರಕಾರದ ಕಣ್ಣಿಂದ ಪ್ರತ್ಯೇಕವಾದ ಭೂಮಿ ಮತ್ತು ಆದಾಯ ಬಹಳಷ್ಟಿತ್ತು. ಇಡೀ ಹಳ್ಳಿಗಳು, ಹತ್ತಲವು ಹಳ್ಳಿಗಳ ಗುಂಪುಗಳನ್ನು ಜಾಗೀರು ಮತ್ತು ಇನಾಮು ಮಾಡಲಾಗಿತ್ತು; ಇದರ ಜೊತೆಗೆ ಪ್ರತಿ ಹಳ್ಳಿಯ ಭೂಮಿಯಲ್ಲೂ ಮಹತ್ತರ ಭಾಗವನ್ನು ಪ್ರತ್ಯೇಕಗೊಳಿಸಿಬಿಡಲಾಗಿತ್ತು. 1850ರಲ್ಲಿ ನಡೆದ ಅಧಿಕೃತ ಅಂದಾಜಿನ ಪ್ರಕಾರ ಬಾಂಬೆಯಲ್ಲಿ ಈ ರೀತಿಯಲ್ಲಿ ಪ್ರತ್ಯೇಕಗೊಂಡ ಆದಾಯ ಪ್ರಾಂತ್ಯದ ಒಟ್ಟು ಆದಾಯದ ಮೂರನೇ ಒಂದಂಶದಷ್ಟಿತ್ತು. 82 ಲಕ್ಷ ಬೆಲೆಬಾಳುವ ಭೂಮಿಯಿತ್ತು. ಶತಮಾನದ ಮಧ್ಯಭಾಗದಲ್ಲಿ ಸರಕಾರದ ಆದಾಯ ಇಡೀ ಪ್ರಾಂತ್ಯದಲ್ಲಿ ಕೃಷಿ ಮಾಡಲ್ಪಟ್ಟ ಭೂಮಿಯ 20 ರಿಂದ 30 %ನಷ್ಟು ಮಾತ್ರ ಇತ್ತು ಎಂದು ಸುಲಭವಾಗಿ ಊಹಿಸಿಬಿಡಬಹುದು. ಇದರಲ್ಲಿ ಹೆಚ್ಚಿನಂಶ ಬಹುಶಃ ಗುಜರಾತಿನಲ್ಲಿತ್ತು, ಆದರೆ ದಖ್ಖನಿ ಮತ್ತು ದಕ್ಷಿಣ ಮರಾಠ ದೇಶಗಳಲ್ಲೂ ಇಂತಹ ಪ್ರತ್ಯೇಕಗೊಂಡ ಭೂಮಿಗಳು ಬಹಳಷ್ಟಿದ್ದವು. 1828ರಲ್ಲಿ ಸೈಕ್ಸ್ ಪೂನಾ, ಅಹಮದನಗರ, ಖಂದೇಶ್ ಮತ್ತು ಧಾರವಾಡದಲ್ಲಿ ಐದನೇ ಒಂದಂಶದಷ್ಟು ಪಟ್ಟಣಗಳು ಮತ್ತು ಹಳ್ಳಿಗಳು ಪ್ರತ್ಯೇಕಗೊಂಡಿದ್ದನ್ನು ಗುರುತಿಸುತ್ತಾನೆ; ಜೊತೆಗೆ ಹೆಚ್ಚುಕಡಿಮೆ ಪ್ರತಿ ಹಳ್ಳಿಯಲ್ಲೂ ಪಟೇಲರು, ಕುಲಕರ್ಣಿಗಳು, ಮಹರ್ ಗಳು ಬಾಡಿಗೆ ರಹಿತ ಭೂಮಿಯನ್ನು ಹೊಂದಿದ್ದರು.(140) ಪ್ರಾಂತ್ರದೊಳಗೆ ಈ ರೀತಿಯ ಪ್ರತ್ಯೇಕತೆ ಪುಣೆಯಿಂದ ಮುಂದಕ್ಕೋದರೆ ಮತ್ತಷ್ಟು ಹೆಚ್ಚಾಗಿರುವುದು ತಿಳಿಯುತ್ತಿತ್ತು. ದಕ್ಷಿಣದಲ್ಲಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮರಾಠ ಸೈನ್ಯದ ಮುಖ್ಯಸ್ಥರು ಮತ್ತವರ ವಂಶಸ್ಥರು ಅಗಾಧ ಎಸ್ಟೇಟುಗಳನ್ನು ಹೊಂದಿದ್ದರು, ಅನೇಕ ಹಳ್ಳಿಗಳನ್ನು ಜಾಗೀರಾಗಿ ಅಥವಾ ಸುರಿಂಜಮ್ (surinjam) ಆಗಿ ಪಡೆದುಕೊಂಡಿದ್ದರು. ಇಲ್ಲಿನ ಸರಕಾರೀ ಹಳ್ಳಿಗಳಲ್ಲೂ ಹೆಚ್ಚಿನ ಭೂಮಿ ಇನಾಂದಾರರ ನಿಯಂತ್ರಣದಲ್ಲಿತ್ತು. ಒಂದು ಅಂದಾಜಿನಂತೆ 1848ರಲ್ಲಿ ಸರಿಸುಮಾರು 60,000 ಸಣ್ಣ ಪುಟ್ಟ ಭೂಮಿ ಪ್ರತ್ಯೇಕವಾಗಿತ್ತು. ದಕ್ಷಿಣದಲ್ಲಿ ಅಧ್ಯಯನ ನಡೆಸಲು ಬೆಳಗಾವಿ ಜಿಲ್ಲೆಯ ಬಾದಾಮಿ ತಾಲ್ಲೂಕು ಉತ್ತಮವಾದುದು. ಇಲ್ಲಿ 76 ಹಳ್ಳಿಗಳು ಸಂಪೂರ್ಣವಾಗಿ ಪ್ರತ್ಯೇಕಗೊಂಡಿದ್ದವು ಮತ್ತು 151 ಹಳ್ಳಿಗಳಲ್ಲಿ ಸರಕಾರ ಹಕ್ಕು ಸಾಧಿಸಿತ್ತು ಎಂದು 1852ರಲ್ಲಿ ಗಮನಿಸುತ್ತಾರೆ ವಿನ್ ಗೇಟ್. ಸರಕಾರದ ಹಕ್ಕಿದ್ದ ಹಳ್ಳಿಗಳಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ 42%ನಷ್ಟು ಇನಾಂ ಭೂಮಿಯಾಗಿತ್ತು ಅಥವಾ ಒಂದು ಸಣ್ಣ ಮೊತ್ತದ ಬಾಡಿಗೆ ಕಟ್ಟಿದರೆ ಮುಗಿದುಹೋಗುತ್ತಿತ್ತು.” (141)

ಮುಂದುವರೆಸುತ್ತಾ ಚಾರ್ಲ್ಸ್ ವರ್ಥ್: “ಪ್ರತ್ಯೇಕಗೊಂಡ ಭೂಮಿಯಲ್ಲಿ ಅನೇಕವು ಸರಕಾರದ ಉಡುಗೊರೆಯಿಂದಲೇ ಸೃಷ್ಟಿಯಾಗಿತ್ತಾದರೂ ಅಧಿಕಾರಶಾಹಿಗೆ, ಅದನ್ನು ಮಿತಿಗೊಳಿಸಬೇಕೆಂಬ ಆಸಕ್ತಿಯೂ ಗಣನೀಯ ಪ್ರಮಾಣದಲ್ಲಿತ್ತು.”(142)

ಈ ಮೇಲಿನ ಎಲ್ಲಾ ಮಾಹಿತಿಯಿಂದ ಸ್ಪಷ್ಟವಾಗುವ ಅಂಶವೆಂದರೆ ವಸಾಹತು ಆಳ್ವಿಕೆಯ ಮೊದಲ ಕೆಲವು ದಶಕಗಳು ಊಳಿಗಮಾನ್ಯತೆಯನ್ನು ಶಕ್ತಗೊಳಿಸುವುದರ ಜೊತೆಗೆ ಕರ್ನಾಟಕದ ಉದ್ದಗಲಕ್ಕೂ ಊಳಿಗಮಾನ್ಯತೆ ಹೊಸ ಹೊಸತಾಗಿ ಚಿಗುರಿಕೊಳ್ಳುವ ಅವಕಾಶವನ್ನೂ ಒದಗಿಸಿತು. ಈ ಅಂಶಕ್ಕೆ ಪೂರಕವಾಗಿ ನಾವು ಒದಗಿಸಿರುವ ಇತಿಹಾಸದ ಪುರಾವೆಗಳು ಸರಕಾರ – ಧಾರ್ಮಿಕ, ಭೂಮಾಲೀಕ, ರಾಜಸ್ವ, ಮಿಲಿಟರಿ – ಜನರಿಗೆ ಭೂಮಿ ಮತ್ತು ಹಳ್ಳಿಯನ್ನು ದೇಣಿಗೆಯಾಗಿ ನೀಡಿ ಊಳಿಗಮಾನ್ಯತೆಯ ಆಸಕ್ತಿಯನ್ನು ಕಾಪಿಡಿದರು. ಈ ಹಿಮ್ಮುಖ ಚಲನೆಯಿಂದಾಗಿ ದೊಡ್ಡ ಮಟ್ಟದ ಜನಸಂಖ್ಯೆ ಮತ್ತೆ ಕೃಷಿಯೆಡೆಗೆ ಹೆಜ್ಜೆ ಹಾಕಿದರು. ಮೈಸೂರೊಂದಲ್ಲೇ ಸುಮಾರು ಮೂರು ಲಕ್ಷ ಜನರು (ಒಟ್ಟು ಜನಸಂಖೈಯ 12%ನಷ್ಟು) ಈ ಹಿಮ್ಮುಖ ಚಲನೆಯ ಭಾಗವಾದರು. ಈಗಾಗಲೇ ಉಲ್ಲೇಖಿಸಿರುವ ಬುಚನನ್ ನ ಮಾಹಿತಿಯಂತೆ ಈ ಹಿಮ್ಮುಖ ಚಲನೆಗೆ ಕಾರಣ ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಯಲ್ಲುಂಟಾದ ಬಿರುಕುಗಳು ಮತ್ತು ಸೈನ್ಯವನ್ನು ವಿಸರ್ಜಿಸಿದ್ದು. ಬಂಡವಾಳಶಾಹಿತನದ ಉದಯದ ಲಕ್ಷಣವೆಂದರೆ ಕೈಗಾರಿಕೆಯನ್ನು ಕೃಷಿಯಿಂದ ಬೇರ್ಪಡಿಸುವುದು ಮತ್ತು ಪಟ್ಟಣ ಹಾಗೂ ನಗರಗಳ ಶೀಘ್ರ ಬೆಳವಣಿಗೆ; ಹದಿನೆಂಟನೇ ಶತಮಾನದ ಮೊದಲರ್ಧದಲ್ಲಿ ನಡೆದದ್ದು ಇದಕ್ಕೆ ಸಂಪೂರ್ಣ ವಿರುದ್ಧವಾದ ಪ್ರಕ್ರಿಯೆ – ಕೈಗಾರಿಕೆ ಕೃಷಿಯೊಂದಿಗೆ ಕೈಜೋಡಿಸಿತು, ನಗರದ ಜನರು ಹಳ್ಳಿಗಳ ಕಡೆಗೆ ಗುಳೇ ಹೋದರು. ಈ ಐತಿಹಾಸಿಕ ಹಿಮ್ಮುಖ ಚಲನೆ ಕಾರ್ಮಿಕರ ವೇತನವನ್ನು ಗಣನೀಯವಾಗಿ ಕಡಿಮೆ ಮಾಡಿತು ಮತ್ತು ಕಾರ್ಮಿಕರನ್ನು ಭೂಮಾಲೀಕ ವರ್ಗದ ಕೃಪಾಕಟಾಕ್ಷಕ್ಕೆ ನೂಕಿ ಬಿಟ್ಟಿತು. ಈ ಪ್ರಕ್ರಿಯೆಯನ್ನು ಭೂಮಾಲೀಕರು ತಮ್ಮನುಕೂಲಕ್ಕೆ ಬಳಸಿಕೊಂಡರು; ಕೂಲಿಯನ್ನು ಕಡಿಮೆ ಮಾಡಿ ಎಂದು ಬುಚನನ್ನ ತಿಳಿಸುತ್ತಾರೆ. ಬ್ರಿಟೀಷ್ ವಸ್ತುಗಳು ಕೊಟ್ಟ ಪೈಪೋಟಿಯಿಂದಾಗಿ ಪತನ ಕಂಡ ಬಾಂಬೆ ಕರ್ನಾಟಕ ಭಾಗದಲ್ಲಿನ ಕಸುಬುದಾರರು(ನೇಕಾರರು) ಬರ್ಬಾದಾದ ಬಗ್ಗೆ ಡಿಕೆ ಚೋಕ್ಸಿ ಬರೆಯುತ್ತಾರೆ: “ನೇಕಾರರು ತಮ್ಮ ಕೈಮಗ್ಗ ತೊರೆದು ಉಳುವುದಕ್ಕೆ ಹೊರಟರು, ಸೈನಿಕರಂತೆ ಹೊರಟರು, ಭೂಮಿಗೆ ಭಾರವಾದರು. ಅವರು ಉತ್ತ ಭೂಮಿ ಮ್ಯಾಂಚೆಸ್ಟರ್ರಿನ ದೈತ್ಯ ವಸ್ತ್ರ ತಯಾರಿಕಾ ಕಂಪನಿಗಳಿಂತ ಕಚ್ಛಾ ವಸ್ತುಗಳನ್ನು ಪೂರೈಸುತ್ತಿತ್ತು. ಭಾರತದ ಮಿಲಿಯನ್ನುಗಟ್ಟಲೆ ಜನರು ತಮ್ಮ ಹೊಸ ಮಾಲೀಕರ ದುರಾಸೆಗಳನ್ನು ಈಡೇರಿಸಲು ಉಳುಮೆ ಮಾಡುತ್ತಿದ್ದರು, ಹೊಸ ಮಾಲೀಕರ ಲಾಭದಿಂದ ಇಂಗ್ಲೆಂಡ್ ಪ್ರಪಂಚದ ಶ್ರೀಮಂತ ರಾಷ್ಟ್ರವಾದರೆ ಭಾರತದ ರೈತ ಬಡತನದ ಬೇಗೆಯಲ್ಲಿ ಬೆಂದು ಮತ್ತೊಂದು ದಾರಿಯನ್ನು ಹುಡುಕುವುದಕ್ಕೂ ಕಷ್ಟಪಡಬೇಕಾದ ಸ್ಥಿತಿಗೆ ಬಂದು ನಿಂತ.”(143)

Historical Premises for India’s transition to capitalismನಲ್ಲಿ ಆರನೇ ಪಾವ್ಲಾವ್ ಈ ಪ್ರಕ್ರಿಯೆಯನ್ನು “ನಿರಂತರ ಅ-ಕೈಗಾರೀಕರಣ”(progressive deindustrialization) ಎಂದು ಕರೆಯುತ್ತಾನೆ. ಅವನು ಹೇಳುತ್ತಾನೆ: “ಮಹಾರಾಷ್ಟ್ರದ ಕಾರ್ಮಿಕ ಶಕ್ತಿ ಕೈಗಾರಿಕೆಗಳಿಂದ ಕೃಷಿಯ ಕಡೆಗೆ ಹೊರಳಿದ್ದನ್ನು ಬ್ರಿಟೀಷ್ ಆಡಳಿತಾಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ. ಅವರಲ್ಲೊಬ್ಬರು 1830ರಲ್ಲಿ ಅನೇಕ ನೇಕಾರರು ಅಸ್ತಿತ್ವದ ಹುಡುಕಾಟದಲ್ಲಿ ಮರಳಿ ಕೃಷಿ ಕ್ಷೇತ್ರಕ್ಕೆ ತೆರಳಿದರು ಎಂದು ಬರೆಯುತ್ತಾರೆ. ಈಗಾಗಲೇ ಭೂಮಿಯ ಮೇಲಿದ್ದ ಅವಲಂಬನೆಯ ಭಾರ, ಅವನ ಅಭಿಪ್ರಾಯದಂತೆ ಬಹಳಷ್ಟು ಹೆಚ್ಚಿತ್ತು.”(144)

ಈ ಹಿಮ್ಮುಖ ಚಲನೆಯಿಂದಾಗಿ ಗುಳೇ ಹೋದವರು ಅನೇಕ ವಿಧದ ಬಂಧಕ್ಕೊಳಗಾಗಿದ್ದರ ಬಗ್ಗೆ ಅನುಮಾನವೇ ಬೇಡ. ಈ ಪ್ರಕ್ರಿಯೆಯಿಂದಾಗಿ ಅತಿ ಹೆಚ್ಚಿನ ಹೊಡೆತ ಅನುಭವಿಸಿದ್ದು ಆಗಷ್ಟೇ ಶತಶತಮಾನಗಳ ಬಂಧನವನ್ನು ಕಳಚಿಕೊಳ್ಳಲಾರಂಭಿಸಿದ್ದ ದಲಿತ ಜೀತದಾಳುಗಳು. ಹಾಗಾಗಿ ಇದು ಇಡೀ ಕರ್ನಾಟಕದಲ್ಲಿ ಕಾಣಿಸಿಕೊಂಡ ಊಳಿಗಮಾನ್ಯತೆಯ ಪ್ರತಿಗಾಮಿ ಅಲೆ. ದಿನನಿತ್ಯದ ಉಪಯೋಗದ ವಸ್ತುಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದ ಹಳೆ ಮೈಸೂರು ಪ್ರಾಂತ್ಯದಲ್ಲಿ ಇದರ ಪರಿಣಾಮಗಳು ಹೆಚ್ಚಾಗಿ ಕಂಡವು. ಕ್ರೂರ ಅಟ್ಲಾಂಟಿಕ್ ಸಾಗರದ ಅಲೆಯ ಕಾರಣದಿಂದ ಊಳಿಗಮಾನ್ಯತೆಯ ದಡಕ್ಕೆ ಬಂದು ಬಿದ್ದ ನಿಸ್ಸಹಾಯಕ ಗಂಡಸು, ಹೆಂಗಸು, ಮಕ್ಕಳನ್ನು ‘ಮೊತ್ತವಾಗಿ’ ಪರಿವರ್ತಿಸಿಕೊಳ್ಳುವುದಕ್ಕೆ ಭೂಮಾಲೀಕರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿತು. 
 
ಮುಂದಿನ ವಾರ
ಕೃಷಿಗೆ ಲಕ್ವ ಹೊಡೆದದ್ದು ಭಾಗ 3

Apr 20, 2016

ಮಾಹಿತಿ ಹಕ್ಕು ಕಾಯಿದೆ ಮತ್ತು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ!

ಕು.ಸ.ಮಧುಸೂದನ ರಂಗೇನಹಳ್ಳಿ
20/04/2016
೨೦೦೫ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾನೂನಿಗೆ ಮೊದಮೊದಲು ರಾಜಕಾರಣಿಗಳಿಂದ ಮತ್ತು ಅಧಿಕಾರಶಾಹಿಯಿಂದ ತೀವ್ರ ವಿರೋಧ ವ್ಯಕ್ತವಾದರೂ ಬಹುತೇಕ ಮಾಧ್ಯಮಗಳು ಮತ್ತು ಸಾರ್ವಜನಿಕರು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಯಾಕೆಂದರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಹೊಣೆಗಾರಿಕೆಯನ್ನು ಹೇರಲು ಈ ಕಾನೂನನ್ನು ರೂಪಿಸಲಾಗಿತ್ತು. ತನ್ಮೂಲಕ ಜನತೆಯ ಕೈಗೆ ಮಹತ್ತರ ಆಯುಧವೊಂದನ್ನು ನೀಡುವ ಉದ್ದೇಶ ಸರಕಾರಕ್ಕಿತ್ತು. ಸರಕಾರದ ಪ್ರತಿ ಚಟುವಟಿಕೆಗಳ ಮಾಹಿತಿಯೂ ಜನರಿಗೆ ಗೊತ್ತಿರಬೇಕೆಂಬುದೇ ಕಾಯಿದೆಯ ಮೂಲ ಮಂತ್ರವಾಗಿತ್ತು.

ಕಳೆದ ಹನ್ನೊಂದು ವರ್ಷಗಳಲ್ಲಿ ಈ ಮಾಹಿತಿಹಕ್ಕು ಕಾಯಿದೆ ಹಲವು ರೀತಿಯಲ್ಲಿ ಕ್ರಾಂತಿಯನ್ನುಂಟು ಮಾಡಿರುವುದು ನಿಜವಾದರೂ, ಸದರಿ ಕಾಯಿದೆಯ ಸದುಪಯೋಗ ಮತ್ತು ದುರುಪಯೋಗಗಳು ಸಮಾನವಾಗಿ ನಡೆದಿದ್ದು ಕಾಯಿದೆಯ ಮೂಲ ಉದ್ದೇಶವನ್ನಿನ್ನೂ ಸಾದಿಸಲಾಗಿಲ್ಲವೆಂಬುದೇ ವಿಷಾದದ ಸಂಗತಿ. ಹತ್ತು ವರ್ಷಗಳ ಹಿಂದೆ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆ ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳ ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಗೊಳಿಸಿದೆ. ದೇಶದಾದ್ಯಂತ ಸೃಷ್ಠಿಯಾದ ನೂರಾರು ಆರ್.ಟಿ.ಐ. ಕಾರ್ಯಕರ್ತರು ಇದನ್ನು ಬಳಸಿ ಹಲವು ರಾಜಕಾರಣಿಗಳ ಮತ್ತು ಅಧಿಕಾರಿಗಳ ನಿದ್ದೆಗೆಡಿಸುತ್ತಿದ್ದಾರೆ. ಆದರೆ ದುರಂತವೆಂದರೆ ಮಾಹಿತಿ ಹಕ್ಕು ಕಾಯಿದೆ ಹಲವು ಕ್ಷೇತ್ರಗಳಿಗೆ ಅನ್ವಯವಾಗದಿರುವುದು. ಹೀಗಾಗಿ ಈ ಕಾಯಿದೆಯ ಮೂಲಮಂತ್ರವಾದ ಸಂಪೂರ್ಣ ಮಾಹಿತಿ ಎನ್ನುವುದು ಹುಸಿಯಾಗಿದೆ.

ಸಾರ್ವಜನಿಕ ಹಣದಲ್ಲಿ ನಡೆಯುವ ಎನ್.ಜಿ.ಒ.ಗಳನ್ನು, ಖಾಸಗಿ ಟ್ಟಸ್ಟ್‌ಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಮತ್ತು ಸರಕಾರದ ಪರೋಕ್ಷ ಹಿಡಿತದಲ್ಲಿರುವ ಹಲವು ಕ್ರೀಡಾ ಪ್ರಾಧಿಕಾರಗಳನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಾಹಿತಿ ಪಡೆಯುವ ಜನತೆಯ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಶದ ಆರ್ಥಿಕ ನೀತಿಯನ್ನೇ ನಿರ್ದೇಶಿಸುವ ಮಟ್ಟಕ್ಕೆ ಬೆಳೆದು ನಿಂತಿರುವ ಕಾರ್ಪೋರೇಟ್ ಕಂಪನಿಗಳನ್ನು ಈ ಕಾಯಿದೆಯಿಂದ ಹೊರಗಿಟ್ಟು ಇದರ ಮೂಲ ಆಶಯವನ್ನೇ ಮಣ್ಣುಪಾಲು ಮಾಡಲಾಗಿದೆ.

ಇವೆಲ್ಲದರ ಹೊರತಾಗಿಯೂ ಈ ಕಾಯಿದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ನಮ್ಮ ಸರಕಾರಗಳು ಅದರ ಕಾರ್ಯಾಂಗದ ಭಾಗವಾಗಿರುವ ಅಧಿಕಾರಿಗಳು ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತ ವಾಮಮಾರ್ಗಗಳನ್ನು ಅನುಸರಿಸುತ್ತಿವೆ. ಇದಕ್ಕಾಗಿಯೇ ಸರಕಾರ ಮತ್ತು ಖಾಸಗಿ ಸಹಬಾಗಿತ್ವ ಎನ್ನುವ ಹೆಸರಿನಡಿಯಲ್ಲಿ ಹೊಸಯೋಜನೆಗಳನ್ನು ಜಾರಿಗೆ ತರುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯದಲ್ಲಿ ತೊಡಗಿವೆ. ಹೀಗೆ ಸರಕಾರ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿಗಳನ್ನು ಮತ್ತು ರೈತರ ನೂರಾರು ಏಕರೆ ಭೂಮಿಯನ್ನು ಟೋಲ್ ರಸ್ತೆಗಳ ನಿರ್ಮಾಣಕ್ಕೆ, ರೈಲು, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರಕಾರಿ-ಖಾಸಗಿ ಸಹಬಾಗಿತ್ವದ ಹೆಸರಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುತ್ತಿವೆ. ಇದರಲ್ಲಿ ರಾಜಕೀಯ ನಾಯಕರುಗಳು ಮತ್ತು ಸರಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮಾಡುವ ಭ್ರಷ್ಟತೆಯ ವಿಷಯ ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯಿದೆಯು ಇಂತಹ ಯೋಜನೆಗಳಿಗೆ ಅನ್ವಯವಾಗುವುದಿಲ್ಲವಾದ್ದರಿಂದ ಇದರ ಬಗ್ಗೆ ಜನತೆಗೆ ಯಾವುದೇ ಸಣ್ಣ ಮಾಹಿತಿಯೂ ಅಧಿಕೃತವಾಗಿ ದೊರೆಯುತ್ತಿಲ್ಲ.

ಇದೆಲ್ಲಕ್ಕೂ ಕಳಸವಿಟ್ಟಂತೆ ನಮ್ಮ ರಾಜಕೀಯ ಪಕ್ಷಗಳನ್ನು ಸಹ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟು ದೊಡ್ಡ ಪ್ರಮಾದವೊಂದನ್ನು ಎಸಗಲಾಗಿದೆ. ಹೀಗಾಗಿ ಪ್ರತಿ ರಾಜಕೀಯ ಪಕ್ಷವೂ ಖಾಸಗಿ ಕಾರ್ಪೋರೇಟ್ ಕಂಪನಿಗಳಿಂದ ಕೋಟ್ಯಾಂತರ ರೂಪಾಯಿಗಳ ದೇಣಿಗೆಯನ್ನು ಪಡೆದರೂ, ಅದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ. ಹೀಗೆ ಖಾಸಗಿ ಕಂಪನಿಗಳು ಕೊಡುವ ಹಣದ ಬಗ್ಗೆ ಅವರಾಗಲಿ, ಪಡೆಯುವ ರಾಜಕೀಯ ಪಕ್ಷಗಳಾಗಲಿ ಸಾರ್ವಜನಿಕರಿಗೆ ಅಧಿಕೃತ ಮಾಹಿತಿ ನೀಡಬೇಕಾದ ಕಟ್ಟುಪಾಡಿಗೆ ಒಳಪಡದೇ ಇರುವುದರಿಂದ ಅಲ್ಲಿಯೂ ಸ್ವಹಿತಾಸಕ್ತಿಗಳೇ ಕೆಲಸ ಮಾಡುತ್ತಿವೆ. ಹೀಗಾಗಿಯೇ ಎಲ್ಲ ರಾಜಕೀಯ ಪಕ್ಷಗಳೂ ಸಹ ಚುನಾವಣೆಯ ಸಂದರ್ಭದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾ ನಮ್ಮ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿಬಿಟ್ಟಿವೆ. ಹೀಗಾಗಿಯೇ ಅಧಿಕಾರಕ್ಕೇರಿದ ಎಲ್ಲ ರಾಜಕೀಯ ಪಕ್ಷಗಳೂ ಕಾರ್ಪೋರೇಟ್ ಕಂಪನಿಗಳ ಹಿತ ಕಾಯುವಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತವೆ.

ವಿಷಾದವೆಂದರೆ ೨೦೦೫ರಲ್ಲಿ ಯು.ಇ.ಎ. ಸರಕಾರ ಈ ಕಾಯಿದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ರಾಜಕೀಯ ಪಕ್ಷಗಳನ್ನು ಕೈಬಿಟ್ಟ ಬಗ್ಗೆ ದೊಡ್ಡ ಗಲಾಟೆ ಮಾಡಿದ ಬಾಜಪ ಇವತ್ತು ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದರೂ ಈ ಕಾಯಿದೆಯನ್ನು ತಿದ್ದುಪಡಿ ಮಾಡಿ ಇದರ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನೂ, ಕಾರ್ಪೋರೇಟ್ ಕಂಪನಿಗಳನ್ನೂ ತರುವ ಯಾವ ಪ್ರಯತ್ನವನ್ನೂ ಮಾಡಲು ಮನಸ್ಸು ಮಾಡುವಂತೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಷಯಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ರೀತಿಯಲ್ಲಿ ಆಲೋಚಿಸುತ್ತವೆ ಮತ್ತುಒಂದೇ ದಿಕ್ಕಿನಲ್ಲಿ ನಡೆಯುತ್ತವೆ ಎನ್ನುವುದು ಖಾತ್ರಿಯಾಗುತ್ತದೆ.