Aug 28, 2019

ಸಮ್ಮಿಶ್ರ ಸರಕಾರದ ಪತನ: ನಾಯಕರುಗಳ ಆರೋಪ-ಪ್ರತ್ಯಾರೋಪ!

ಕು.ಸ.ಮಧುಸೂದನ 
ಮಾಜಿ ಪ್ರದಾನಿ ಶ್ರೀದೇವೇಗೌಡರ ಮತ್ತು ಮಾಜಿಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನಡುವಿನ ಆರೋಪ ಪ್ರತ್ಯಾರೋಪಗಳು,ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಅವಲೋಕಿಸುತ್ತಿರುವವರಿಗೆ ಅಚ್ಚರಿಯನ್ನೇನು ಉಂಟು ಮಾಡಿಲ್ಲ. ಬದಲಿಗೆ ಕಳೆದ ಹದಿನಾರು ತಿಂಗಳ ಹಿಂದೆ ರಚನೆಯಾದ ಸಂಮಿಶ್ರ ಸರಕಾರದ ರಚನೆಯ ವಿಷಯಕ್ಕಾಗಿ ಮುನಿಸು ಮರೆತು ಒಂದಾಗಿದ್ದು ಬಾಜಪವನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕೆಂದು ಬಯಸಿದ್ದವರಿಗೆ ಸಂತೋಷವನ್ನುಂಟು ಮಾಡಿತ್ತು. ಆದರೆ ಶ್ರೀ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗುವುದರೊಂದಿಗೆ ಜಾತ್ಯಾತೀತ ಮತದಾರರಿಗೆ ಭ್ರಮನಿರಸನವಾಗಿದೆ. ಮತ್ತು ಸ್ವಪ್ರತಿಷ್ಠೆಯೇ ಮುಖ್ಯವೆಂದುಕೊಂಡಿರುವ ನಾಯಕರುಗಳ ನಡೆಯ ಬಗ್ಗೆ ಜನ ಬೇಸರಗೊಂಡಿದ್ದಾರೆ. 

ಒಂದು ಕಡೆ ಜಾತ್ಯಾತೀತ ಜನತಾದಳದ ರಾಷ್ಟ್ರಾದ್ಯಕ್ಷರಾದ ದೇವೇಗೌಡರು ಕಾಂಗ್ರೆಸ್ಸಿನ ಕಿರುಕುಳಕ್ಕೆ ಕುಮಾರಸ್ವಾಮಿ ರೋಸಿಹೋಗಿದ್ದರು ಎಂದು ಹೇಳುತ್ತಲೇ ಸಮ್ಮಿಶ್ರ ಸರಕಾರ ಪತನವಾಗಲು ಸಿದ್ದರಾಮಯ್ಯನವರೇ ಕಾರಣ ಎಂಬ ಮಾತನ್ನೂ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದರಾಮಯ್ಯನವರು ಸಮ್ಮಿಶ್ರ ಸರಕಾರ ಬೀಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ದಾರಗಳನ್ನು ತೆಗೆದುಕೊಳ್ಳುತ್ತಿದ್ದುದು, ದೇವೇಗೌಡರ ಕುಟುಂಬ ಅದರಲ್ಲೂ ರೇವಣ್ಣನವರು ಸರಕಾರದ ಆಡಳಿತದಲ್ಲಿ ಮೂಗುತೂರಿಸಿದ್ದೇ ಕಾರಣವೆಂದು ಹೇಳಿದ್ದಾರೆ. ಸಮ್ಮಿಶ್ರ ಸರಕಾರದ ಹದಿನಾಲ್ಕು ತಿಂಗಳ ಆಡಳಿತವನ್ನು, ಅದರ ಆಂತರಿಕ ಕಿತ್ತಾಟಗಳನ್ನು ಸೂಕ್ಷ್ಮವಾಗಿ ನೋಡಿದವರಿಗೆ ಇಬ್ಬರೂ ನಾಯಕರುಗಳ ಮಾತುಗಳೂ ಅರ್ದಸತ್ಯವೆಂಬುದು ಗೊತ್ತಾಗುತ್ತದೆ. 

Aug 25, 2019

ಒಂದು ಬೊಗಸೆ ಪ್ರೀತಿ - 28

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ಮೇಲೆ ಇವತ್ತು ರಜೆಯಿತ್ತು. ಮಧ್ಯಾಹ್ನ ಊಟದ ನಂತರ ನಿದ್ರೆ ಹೋಗಿದ್ದವಳಿಗೆ ಎಚ್ಚರವಾಗಿದ್ದು ನಾಲ್ಕರ ಸುಮಾರಿಗೆ ಕಾಲಿಂಗ್ ಬೆಲ್ ಬಹಳಷ್ಟು ಹೊತ್ತು ಬಡಿದುಕೊಂಡಾಗ. ರಾಜಿ ಕೂಡ ಇಷ್ಟು ಬೇಗ ಬರೋರಲ್ಲ. ಅವರೇನಿದ್ರೂ ಆರೂ ಆರೂವರೆಯ ನಂತರವೇ ಬರೋದು. ಇನ್ನು ಈ ತಿಂಗಳ ಕೇಬಲ್ ಬಿಲ್ಲು, ಪೇಪರ್ ಬಿಲ್ಲೆಲ್ಲ ಕೊಟ್ಟಾಗಿದೆ. ಅವರೂ ಇರಲಿಕ್ಕಿಲ್ಲ. ಇನ್ಯಾರಿರಬಹುದು ಇಷ್ಟೊತ್ತಿನಲ್ಲಿ ಅಂತ ಯೋಚಿಸುತ್ತಾ ಕೆದರಿಹೋಗಿದ್ದ ಕೂದಲನ್ನು ಒಟ್ಟು ಮಾಡಿ ಕ್ಲಿಪ್ ಹಾಕಿಕೊಳ್ಳುತ್ತಾ ಹೊರಬಂದು ಬಾಗಿಲು ತೆರೆದೆ. ರಾಜಿಯ ಅಮ್ಮ ಅಕ್ಕ ಬಾಗಿಲ ಬಳಿ ನಿಂತಿದ್ದರು. ಇದೇ ಮೊದಲ ಬಾರಿಗೆ ಇವರು ಈ ಮನೆಯ ಕಡೆಗೆ ಬಂದಿರೋದು. ಇದ್ದಕ್ಕಿದ್ದಂತೆ ಯಾವ ಮುನ್ಸೂಚನೆಯೂ ಇಲ್ಲದಂತೆ ಮನೆಗೆ ಬಂದವರನ್ನು ಕಂಡು ದಿಗಿಲಾಯಿತು. ದಿಗಿಲನ್ನು ಆದಷ್ಟೂ ಮರೆಮಾಚಲೆತ್ನಿಸುತ್ತಾ 'ಬನ್ನಿ ಅತ್ತೆ ಬನ್ನಿ ಅಕ್ಕ' ಎಂದಕ್ಕರೆಯ ಮಾತುಗಳನ್ನಾಡುತ್ತಾ ಒಳ ಕರೆದೆ. ಇಬ್ಬರೂ ಕಷ್ಟದಿಂದ ಒಂದಷ್ಟು ಮುಗುಳ್ನಕ್ಕು ಒಳಹೊಕ್ಕರು. ಮನೆಯ ಕುಬ್ಜ ಗಾತ್ರವನ್ನು ಪರಿವೀಕ್ಷಿಸುತ್ತಾ ವ್ಯಂಗ್ಯದ ನಗೆ ನಕ್ಕು ತಮ್ಮ ಮನದ ಕುಬ್ಜತನವನ್ನು ಜಾಹೀರುಗೊಳಿಸಿದರು. ಅಡುಗೆ ಮನೆ ಸೇರಿದೆ. ರಾಜಿಯ ಮನೆಯಲ್ಯಾರೂ ಟೀ ಕುಡಿಯುವುದಿಲ್ಲ, ಕಾಫಿಯಷ್ಟೇ ಅವರಿಗೆ ಪ್ರಿಯ. ಮೂರು ಲೋಟ ಕಾಫಿಗಿಟ್ಟೆ. ಹೊರಗಡೆ ಅಮ್ಮ ಮಗಳಿಬ್ಬರು ಗುಸು ಗುಸು ಮಾತನಾಡುತ್ತಿದ್ದಿದ್ದು ಕೇಳುತ್ತಿತ್ತು. ಏನ್ ವಿಷಯವಿರಬಹುದು? ಇಬ್ಬರೂ ಹೀಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿಬಿಟ್ಟಿದ್ದಾರಲ್ಲ? ಎಂದು ಪ್ರಶ್ನಿಸಿಕೊಳ್ಳುತ್ತಲೇ ಕಾಫಿಯೊಡನೆ ಬಂದು ಕುಳಿತೆ. ಕಾಫಿ ಹೀರುತ್ತಾ ಅತ್ತೆ "ಮತ್ತೆ ಎಲ್ಲಾ ಆರಾಮ....ಡ್ಯೂಟಿ ಇಲ್ವಾ ನಿಂಗಿವತ್ತು" 

'ಇಲ್ಲ ಇವತ್ತು ನನಗೆ ವೀಕ್ಲಿ ಆಫ್ ಇತ್ತು ಅತ್ತೆ. ನೀವೆಲ್ಲ ಆರಾಮ. ಮಾವ ಹುಷಾರಾಗಿದ್ದಾರ' 

“ಮ್. ಏನೋ ಇಲ್ಲಿಗೆ ಬಂದಾಗ್ಲಾದ್ರೂ ವಿಚಾರಿಸಿಕೊಳ್ತೀಯಲ್ಲ ಸಂತೋಷವಮ್ಮ" ಅವರ ವ್ಯಂಗ್ಯಕ್ಕೆ ನನ್ನ ಮೌನವೇ ಉತ್ತರವಾಗಿತ್ತು. 

“ರಾಜೀವ?” ಅಕ್ಕ ಕೇಳಿದರು. 

'ಅವರು ಬರೋದು ಆರೂವರೆ ಏಳಾಗುತ್ತೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಹೀಗೊಂದು ಹಗಲು

ಕು.ಸ.ಮಧುಸೂದನ

ಒಂದು:
ಅಡ್ಡಾದಿಡ್ಡಿ ಬೆಳೆದ ನಗರಗಳು
ಅನಾಥವಾದ ಹಳ್ಳಿಗಳು
ಪೂರ್ವದ ಮೇಲೆ ಹಲ್ಲೆ ಮಾಡಿ
ಒಸರಿದ ರಕ್ತ ನೆಕ್ಕುತಿಹ ಪಶ್ಚಿಮದ ಸೂರ್ಯ
ತಂದ ಕಡ ತೀರಿಸಲಾಗದೆ
ಕರಿಯ ತೊಗಲುಗಳನ್ನು ಮಾರಾಟಕ್ಕಿಟ್ಟ ವಂಚಕ ಪಡೆ
ಕಣ್ಣಿದ್ದರೂ ಕಾಣುತ್ತಲ್ಲ
ಕಿವಿಯಿದ್ದರೂ ಕೇಳುತ್ತಿಲ್ಲ
ಕಾಲಿದ್ದರೂ ನಡೆಯಲಾಗುತ್ತಿಲ್ಲ
ಇರುವೆರಡು ಕುಷ್ಠ ಹಿಡಿದ ಕೈಗಳಲಿ
ಅವರದೇ ಹರಿಕಥೆ ಭಜನೆ

Aug 24, 2019

ನೈತಿಕತೆಯ ಬಗೆಗೆ ಕೆಲವು ಮೂರ್ಖ ಪ್ರಶ್ನೆಗಳು!

ಕು.ಸ.ಮಧುಸೂದನ ರಂಗೇನಹಳ್ಳಿ 

ಅಂತೂ 'ಆಪರೇಷನ್ ಕಮಲ' ಅನ್ನುವ ರಾಕ್ಷಸೀಆಯುಧವನ್ನು ಬಳಸಿ,ಮೈತ್ರಿ ಸರಕಾರವನ್ನು ಉರುಳಿಸಿ ತನ್ನದೇ ಸರಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಆಂತರಿಕ ಭಿನ್ನಮತೀಯ ಚಟುವಟಿಕೆಗಳಲ್ಲಿ ತನ್ನ ಪಾತ್ರವಿಲ್ಲವೆನ್ನುತ್ತಲೇ ನಾಟಕವಾಡುತ್ತ ಬಂದ ಬಿಜೆಪಿಯ ನಾಯಕರುಗಳ ಮಾತುಗಳನ್ನು ಜನ ನಂಬದೇ ಹೋದರೂ, ಈ ಕ್ಷಣಕ್ಕೂ ಬಿಜೆಪಿ ತಾನು ಪರಮಪವಿತ್ರವೆಂಬ ಮುಖವಾಡದಲ್ಲಿ ಸರಕಾರ ರಚಿಸಿ. ಗೆಲುವಿನ ವಿಕೃತ ನಗು ಬೀರುತ್ತಿದೆ 

ಆದರೆ ಪ್ರಜಾಸತ್ತೆಯಲ್ಲಿನ ಈ ಕಪಟನಾಟಕ ಇಲ್ಲಿಗೇ ಮುಗಿಯುವುದಿಲ್ಲ. ಅಕಸ್ಮಾತ್ ಅತೃಪ್ತ ಶಾಸಕರುಗಳ(ಆತ್ಮಗಳ) ಅನರ್ಹತೆ ಬಗ್ಗೆ ನ್ಯಾಯಾಲಯದ ತೀರ್ಪೇನೆ ಬರಲಿ, ಇನ್ನು ಆರುತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಅವರುಗಳಿಗೆ ತನ್ನ 'ಬಿ'ಫಾರಂ ಕೊಟ್ಟು ಮತಬಿಕ್ಷೆಗೆ ಜನರ ಮುಂದೆ ಬರಲೇಬೇಕಾಗುತ್ತದೆ. ಆಗ ಜನ ಕೆಳಗಿನ ಪ್ರಶ್ನೆಗಳನ್ನು ಅವರಿಗೆ ಕೇಳಬೇಕಾಗುತ್ತದೆ: 

ಮೊದಲಿಗೆ, ಆಡಳಿತ ಪಕ್ಷಗಳ ಶಾಸಕರುಗಳ ರಾಜಿನಾಮೆಯಲ್ಲಿ ನನ್ನ ಪಾತ್ರವಿಲ್ಲ ಎನ್ನುವ ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂಇಲ್ಲ. ಯಾಕೆಂದರೆ ಕಳೆದ ವರ್ಷ ವಿದಾನಸಭೆಯ ಚುನಾವಣಾ ಪಲಿತಾಂಶಗಳು ಬಂದಾಗ ತನಗೆ ಬಹುಮತವಿಲ್ಲವೆಂಬ ಸಂಗತಿ ಗೊತ್ತಿದ್ದರೂ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರ ಹಿನ್ನೆಲೆಯಲ್ಲಿ ಇದ್ದುದು, ಅನ್ಯಪಕ್ಷಗಳಿಂದ ಹಲವು ಶಾಸಕರುಗಳ ರಾಜಿನಾಮೆ ಕೊಡಿಸಿ, ಉಪಚುನಾವಣೆಗಳಲ್ಲಿ ಅವರನ್ನು ಗೆಲ್ಲಿಸಿಕೊಂಡು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಗುಪ್ತ ಕಾರ್ಯತಂತ್ರವೇ ಅಲ್ಲವೇ? ಅದೊಂದನ್ನು ಹೊರತು ಪಡಿಸಿದಂತೆ ವಿಶ್ವಾಸ ಮತ ಸಾಬೀತು ಪಡಿಸಲು ನಿಮಗೆ ಅನ್ಯ ಮಾರ್ಗವೇನಾದರು ಇತ್ತೆ? ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಒಂದು ಆಡಿಯೊ ಕ್ಲಿಪಿಂಗಿನಲ್ಲಿ ತಾವು ಈ ವ್ಯವಹಾರದ ಬಗ್ಗೆ ಮಾತಾಡಿದ್ದೂ ಇದೆ. 

Aug 18, 2019

ಒಂದು ಬೊಗಸೆ ಪ್ರೀತಿ - 27

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಮೂರರ ಸಮಯಕ್ಕೆ ಒಂದು ಆಕ್ಸಿಡೆಂಟ್ ಕೇಸ್ ಬಂದಿತ್ತು. ಇಷ್ಟೊತ್ತಿಗೆಲ್ಲ ಈ ಆರ್.ಬಿ.ಐ ಕ್ಯಾಂಪಸ್ಸಿನಲ್ಲಿ ಓಡಾಡುವವರ ಸಂಖೈ ಕಡಿಮೆ, ಕಡಿಮೆಯೇನು ಇಲ್ಲವೇ ಇಲ್ಲ ಻ಅಂತ ಹೇಳಬಹುದು. ನಾನಂತೂ ಇದುವರೆಗೂ ಇಲ್ಲಿ ಆಕ್ಸಿಡೆಂಟ್ ಕೇಸನ್ನು ನೋಡಿರಲಿಲ್ಲ, ಉಪಚರಿಸಿರಲಿಲ್ಲ. ಯಾರೋ ಟ್ರಿಪ್ಪಿಗೆ ಹೋಗಿ ವಾಪಸ್ಸಾಗ್ತಿದ್ರಂತೆ ನಿದ್ರೆಯ ಮತ್ತಲ್ಲಿದ್ರೋ ಏನೋ ಗಾಡಿ ಹಿಡಿತ ತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ಗುದ್ದಿಬಿಟ್ಟಿದ್ದಾರೆ. ಪುಣ್ಯಕ್ಕೆ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಹಿಂದೆ ಕುಳಿತಿದ್ದ ತಾಯಿ ಮಗುವಿಗೆ ಚೂರೂ ಪೆಟ್ಟಾಗಿರಲಿಲ್ಲ. ಗಾಡಿ ಓಡಿಸುತ್ತಿದ್ದವರಿಗೆ ಮಾತ್ರ ಅಲ್ಲಲ್ಲಿ ಚರ್ಮದೊಳಗೆ ರಕ್ತ ಹೆಪ್ಪುಗಟ್ಟುವಂತೆ ಗಾಯಗಳಾಗಿವೆ. ಸಾಮಾನ್ಯ ಇಂತಹ ಸಮಯದಲ್ಲಿ ತಲೆ ಸ್ಟೀರಿಂಗ್ ವೀಲಿಗೆ ತಗುಲಿ ಪೆಟ್ಟಾಗಿರ್ತದೆ, ಗಾಡಿ ಓಡಿಸುತ್ತಿದ್ದವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದಾಗಿ ಅಂತದ್ದೇನೂ ಆಗಿರಲಿಲ್ಲ. ಒಂದಷ್ಟು ನೋವಿನ ಮಾತ್ರೆ ಕೊಟ್ಟು ಕಳುಹಿಸಿ ರೂಮಿಗೆ ವಾಪಸ್ಸಾದೆ. ಇವನಿಗೊಂದು ಗುಡ್ ಮಾರ್ನಿಂಗ್ ಹೇಳೋಣ ಅಂತನ್ನಿಸಿತು. 'ಸುಸ್ತು ಕಡಿಮೆಯಾಯಿತಾ? ಗುಡ್ ಮಾರ್ನಿಂಗ್' ಅಂತೊಂದು ಮೆಸೇಜು ಕಳುಹಿಸಿದೆ. ಮೆಸೇಜು ತಲುಪಿತ್ತೋ ಇಲ್ಲವೋ "ಗುಡ್ ಮಾರ್ನಿಂಗ್. ಸುಸ್ತ್ಯಾಕೆ?” ಅಂತ ಉತ್ತರ ರೂಪದ ಪ್ರಶ್ನೆ ಬಂತು. 

'ಓಯ್! ಇಷ್ಟು ಬೇಗ ಎದ್ದು ಬಿಟ್ಟಿದ್ದಿ. ಓದ್ಕೋತಿದ್ದ' 

“ಇಲ್ಲ. ಬೇಗ ಎದ್ದಿರೋದಲ್ಲ. ಇನ್ನೂ ನಿದ್ರೇನೇ ಮಾಡಿಲ್ಲ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Aug 11, 2019

ಒಂದು ಬೊಗಸೆ ಪ್ರೀತಿ - 26

ಡಾ. ಅಶೋಕ್.‌ ಕೆ. ಆರ್.‌
ನಾನೂ ಸಾಗರ ಲವ್ ಯು ಲವ್ ಯು ಟೂ ಅಂತೇಳಿಕೊಂಡ ಮೇಲೆ ಬರುತ್ತಿರುವ ಮೊದಲ ನೈಟ್ ಡ್ಯೂಟಿ ಇದು. ಬೆಳಿಗ್ಗೆ ಡ್ಯೂಟಿಯಿದ್ದಾಗ ಆಗೊಮ್ಮೆ ಈಗೊಮ್ಮೆ ಮೆಸೇಜು ಮಾಡಲಷ್ಟೇ ಸಾಧ್ಯವಾಗಿತ್ತು, ಸಾಗರನ ಮನವಿನ್ನೂ ಪೂರ್ಣ ತಿಳಿಯಾಗಿಲ್ಲವೇನೋ ಎಂದೇ ನನಗನ್ನಿಸುತ್ತಿತ್ತು. ಹಂಗೇನಿಲ್ವೇ, ಓದೋದ್ರಲ್ಲಿ ಸ್ವಲ್ಪ ಬ್ಯುಸಿ. ನೀ ಬಿಡುವಾದಾಗ ಫೋನ್ ಮಾಡು ಮಾತಾಡುವ ಅಂತೇಳಿದ್ದ. ಮಾತಿನಲ್ಲಿ ಉದಾಸೀನತೆಯಿರಲಿಲ್ಲವಾದರೂ ಹೊಸತಾಗಿ ಪ್ರೀತಿಗೆ ಬಿದ್ದವರಲ್ಲಿದ್ದ ಉತ್ಸಾಹವೂ ಇರಲಿಲ್ಲ. ಸರಿ ಅವನ ಮನದ ಗೊಂದಲಗಳೂ ಪೂರ್ಣ ತಪ್ಪೇನಲ್ಲವಲ್ಲ. ಎಷ್ಟು ಸಮಯ ಬೇಕೋ ಅಷ್ಟನ್ನು ಆತ ತೆಗೆದುಕೊಳ್ಳಲಿ ಎಂದುಕೊಂಡು ನಾನೂ ಹೆಚ್ಚು ಮೆಸೇಜು ಮಾಡುವುದಕ್ಕೆ ಹೋಗಲಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದರೆ ಮನೆ ಕೆಲಸದ ಸುಸ್ತು. ಜೊತೆಗೆ ಅಪ್ಪ ಅಮ್ಮ ಶಶಿ ಒಂದೇ ಸಮ ಫೋನ್ ಮಾಡಿಕೊಂಡು ಏನಂದ್ರು ಏನಂದ್ರು ಒಪ್ತಾರಂತ ಒಪ್ಪಬಹುದು ಅಂತ ನಿನಗನ್ನಿಸುತ್ತ ಅಂತ ಪಟ್ಟು ಬಿಡದೆ ಪ್ರಶ್ನೆ ಕೇಳಿ ಕೇಳಿ ಮತ್ತಷ್ಟು ಸುಸ್ತು ಮಾಡಿಸೋರು. 

ರಾತ್ರಿ ಹತ್ತರವರೆಗೆ ರೋಗಿಗಳಿದ್ದರು. ಹತ್ತಕ್ಕೆ ಬಿಡುವಾದಾಗ ಸಾಗರನಿಗೆ ಮೆಸೇಜು ಮಾಡಿದೆ. 

'ಏನ್ ಮಾಡ್ತಿದ್ಯೋ' 

"ಊಟ ಮುಗಿಸಿ ಸಿಗರೇಟು ಹಚ್ಚಿದ್ದೆ" 

'ಅಷ್ಟೊಂದೆಲ್ಲ ಸಿಗರೇಟು ಸೇದಬೇಡ್ವೋ' 

"ಯಾಕೋ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Aug 6, 2019

ನನ್ನವನ ನಿರೀಕ್ಷೆಯಲ್ಲಿ....

ಸ್ಪೂರ್ತಿ.
ನನ್ನೆದೆಯಲ್ಲಿ ನಡೆದಿದೆ ನಿನ್ನಯ
ಪ್ರೀತಿಯ ಕಾರುಬಾರು...
ವ್ಯಕ್ತಪಡಿಸು ಬಂದು ನಿನ್ನ
ಪ್ರೀತಿಯ ನನ್ನ ಬಳಿ ಒಂಚೂರು....
ನೆನೆದರೆ ನಮ್ಮಿಬ್ಬರ ಮೊದಲ ಬೇಟಿಯ,
ಮನಸಲ್ಲಿ ಇಂದಿಗೂ ಅವತ್ತಿನ ಅದೇ ತಳಮಳ
ಆ ನೆನಪುಗಳು ಮೂಡಿಸುತ್ತಿವೆ ನನ್ನ
ಮುಖದಲ್ಲಿ ರೋಮಾಂಚನದ ಫಳಫಳ....
ಈ ಎಲ್ಲ ನೆನಪುಗಳು ಒಟ್ಟಿಗೆ ಹರಿಸುತ್ತಿವೆ
ಕಣ್ಣಂಚಲ್ಲಿ ನೀರನ್ನು ಗಳಗಳ...
ಸಾಕಾಗಿದೆ ಅತ್ತು-ಅತ್ತು ನಿನ್ನ ನೆನೆದು...
ಬೇಗ ಬಂದು ಸೇರಿಬಿಡಬಾರದೆ ನಿನ್ನವಳ......

ಇಂತಿ ನಿನ್ನವಳು

Aug 5, 2019

ಒಂದು ಬೊಗಸೆ ಪ್ರೀತಿ - 25

ಡಾ. ಅಶೋಕ್.‌ ಕೆ. ಆರ್.‌
“ಬೇಗ ತಯಾರಾಗು. ಸೋನಿಯಾ ಮನೆಗೆ ಹೋಗಿ ಬರೋಣ" ಎಂದರು ರಾಜಿ. 

ಬೆಳಿಗ್ಗೆ ನಾ ಬಂದಾಗ ಶಶಿ ಜೊತೆಗೆ ಮಾತನಾಡಿದ ಬಗ್ಗೆ ಏನನ್ನೂ ತಿಳಿಸಿರಲಿಲ್ಲ ರಾಜಿ. ಸಂಜೆ ಬರಲಿ ಮನೆಗೆ ಒಂದ್ ಸುತ್ತು ಜಗಳವಾಡ್ತೀನಿ ಎಂದುಕೊಂಡಿದ್ದವಳಿಗೆ ಜಗಳವಾಡುವ ಮನಸ್ಸೂ ಇರಲಿಲ್ಲ. ಹುಂಗುಟ್ಟಿ ಹೋಗಿ ತಯಾರಾದೆ. ರಾಜಿ ಹಿಂದಿನಿಂದ ಬಂದು ಅಪ್ಪಿಕೊಂಡು "ಯಾಕೆ ಡಾರ್ಲಿಂಗ್ ಸಪ್ಪಗಿದ್ದಿ. ಅವರೇನೇನೋ ಮಾತನಾಡ್ತಾರೆ ಅಂತ ತಲೆ ಕೆಡಿಸಿಕೋಬೇಡ. ನಾನಿರ್ತೀನಲ್ಲ. ಮಾತಾಡ್ತೀನಿ" ಎಂದ್ಹೇಳುತ್ತ ಕತ್ತಿಗೊಂದು ಮುತ್ತನಿತ್ತರು. ಬೇಸರ ದೂರವಾಯಿತು. 'ಹು...ನೀವೇ ಮಾತಾಡಿ. ಅವರ ಬಾಯಲ್ಲಿ ಏನೇನು ಮಾತು ಕೇಳ್ಬೇಕೋ ಏನೋ' ಕತ್ತು ತಿರುಗಿಸಿ ಅವರ ಕೆನ್ನೆಗೊಂದು ಮುತ್ತು ಕೊಟ್ಟೆ. ಸೋನಿಯಾಗೆ ಬರುತ್ತಿರುವುದಾಗಿ ಒಂದು ಮೆಸೇಜು ಹಾಕಿದೆ. 

ಸೋನಿಯಾಳ ಮನೆ ತಲುಪಿದಾಗ ಏಳರ ಹತ್ತಿರವಾಗಿತ್ತು. ಅವರ ತಂದೆ ತಾಯಿ ಮನೆಯಲ್ಲೇ ಇದ್ದರು. ನಮ್ಮಿಬ್ಬರನ್ನು ಕಂಡು ಅವರಿಬ್ಬರಿಗೂ ಅಚ್ಚರಿಯಾಯಿತು. ಪಕ್ಕದ ಮನೆಯಲ್ಲೇ ಇದ್ದರೂ ನಾನು ಅವರ ಮನೆಗೆ ಹೋಗಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಗೇಟಿನ ಬಳಿ ಕಂಡಾಗ ಕುಶಲೋಪರಿ ವಿಚಾರಿಸಿಕೊಂಡಿದ್ದೆಷ್ಟೋ ಅಷ್ಟೇ. ನಮ್ಮ ಮನೆಯಲ್ಲೇನೋ ಫಂಕ್ಷನ್ ಗಿಂಕ್ಷನ್ ಇರಬೇಕು, ಅದಕ್ಕೆ ಕರೆಯೋಕೆ ಬಂದಿದ್ದಾರೆ ಅಂದುಕೊಂಡಿರುತ್ತಾರೆ. ನಮ್ಮ ಅವರ ಮನೆಯವರು ಸೇರಿ ನಡೆಸೋ ಫಂಕ್ಷನ್ ಬಗ್ಗೆ ಮಾತನಾಡೋಕೆ ಬಂದಿದ್ದೀವಿ ಅನ್ನುವುದರ ಕಲ್ಪನೆ ಕೂಡ ಅವರಿಗಿರಲಿಕ್ಕಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.