Dec 31, 2015

2015ರ ರಾಜಕೀಯ ಪ್ರಮುಖಾಂಶ.

Dr Ashok K R
ಮತ್ತೊಂದು ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಹಳೆಯ ವರ್ಷದ ಆಗುಹೋಗುಗಳ ಬಗ್ಗೆ ಒಂದು ಪುಟ್ಟ ಅವಲೋಕನ. ಅಂತರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯ ವರ್ಚಸ್ಸು ಏರಿದರೆ ರಾಷ್ಟ್ರದೊಳಗಿನ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡು ಮೋದಿ ಅಲೆಯೆಂಬುದು ಕ್ಷೀಣವಾಗುತ್ತಿದೆ ಎಂಬ ವಾದವನ್ನು ಬಲಗೊಳಿಸುತ್ತಿದೆ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವರ್ಚಸ್ಸು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದರೂ ಚುನಾವಣೆಗಳಲ್ಲಿ ಗೆಲುವು ಕಾಣುವುದರಲ್ಲಿ ಹಿಂದೆ ಬಿದ್ದಿಲ್ಲ. ಮನಸ್ಸು ಮಾಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬಂಶವನ್ನು ದೆಹಲಿ ಮತ್ತು ಬಿಹಾರದ ಚುನಾವಣೆಗಳು ತೋರಿಸಿಕೊಟ್ಟರೆ ಮುಳುಗುತ್ತಿರುವ ಹಡಗಾದ ಕಾಂಗ್ರೆಸ್ಸನ್ನು ಉಳಿಸಲು ನಾವಿಕ ಸ್ಥಾನದಲ್ಲಿ ಅಲುಗಾಡದಂತೆ ಕುಳಿತಿರುವ ಸೋನಿಯಾ ಗಾಂಧಿ ಮತ್ತು ಬಲವಂತವಾಗಿ ಕೂರಿಸಲ್ಪಟ್ಟಿರುವ ರಾಹುಲ್ ಗಾಂಧಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಮಾಡುವ ಸೂಚನೆಗಳೂ ಇಲ್ಲ. ಪರ್ಯಾಯ ರಾಜಕೀಯ ಶಕ್ತಿಯೊಂದರ ಉದಯಕ್ಕಿದು ಸಕಾಲ ಎನ್ನುವಂತೆ ಕಂಡರೂ ಅಂತಹ ಶಕ್ತಿ ಸದ್ಯದ ಮಟ್ಟಿಗೆ ಗೋಚರವಾಗುತ್ತಿಲ್ಲ.

ಅಪಾರ ನಿರೀಕ್ಷೆಗಳನ್ನು ಮೂಡಿಸಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಕಾರ್ಯವೈಖರಿ ಹೇಗಿದೆ ಎಂದರೆ ಉತ್ತರಕ್ಕೆ ಬಿಜೆಪಿಯ ಬೆಂಬಲಿಗರೂ ತಡವರಿಸಬಹುದು. ಎರಡನೇ ಅವಧಿಯ ಯು.ಪಿ.ಎ ಸರಕಾರಕ್ಕೆ ಹೋಲಿಸಿದರೆ ಈಗಿನ ಸರಕಾರ ಉತ್ತಮವಾಗಿದೆಯಾ? ಭ್ರಷ್ಟಾಚಾರದ ಲೆಕ್ಕಾಚಾರದಲ್ಲಿ ನೋಡಿದರೆ ಈಗಿನ ಸರಕಾರವೇ ಉತ್ತಮ. ಯಾವುದೇ ದೊಡ್ಡ ಭ್ರಷ್ಟಾಚಾರದ ಕಳಂಕ ಈಗಿನ ಸರಕಾರದವಧಿಯಲ್ಲಿ ನಡೆದಿಲ್ಲ. ಭ್ರಷ್ಟರಹಿತ ಸರಕಾರವೆಂಬ ಇಮೇಜಿಗೆ ಒಂದಷ್ಟು ಪೆಟ್ಟು ಕೊಟ್ಟಿದ್ದು ಡಿಡಿಸಿಎ ಹಗರಣ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಡಿಸಿಎಯಲ್ಲಿ ಭ್ರಷ್ಟತೆ ನಡೆಸಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಅಬ್ಬರಿಸಲಾರಂಭಿಸಿದ್ದು ಬಿಜೆಪಿಯ ವರ್ಚಸ್ಸಿಗೆ ಒಂದಷ್ಟು ಧಕ್ಕೆ ತಂದಿತು. ಹಾಗೆ ನೋಡಿದರೆ ಅರವಿಂದ್ ಕೇಜ್ರಿವಾಲ್ ಇದರ ಬಗ್ಗೆ ಮಾತನಾಡಿದ್ದು ಅವರ ಮುಖ್ಯ ಕಾರ್ಯದರ್ಶಿಯ ಕಛೇರಿಯ ಮೇಲೆ ಸಿಬಿಐ ದಾಳಿ ನಡೆಸಿದ ನಂತರ. ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಮೂಲಕ ಬುದ್ಧಿ ಕಲಿಸಲೋದ ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಡಿಡಿಸಿಎ ಹಗರಣದ ಮೂಲಕ ಕೊಟ್ಟ ತಪರಾಕಿಯಿಂದ ಸುಧಾರಿಸಿಕೊಳ್ಳಲು ಸಮಯ ಬೇಕು. ಕೇವಲ ಕೇಜ್ರಿವಾಲ್ ಮಾತನಾಡಿದ್ದರೆ ಅದು ರಾಜಕೀಯ ವೈಷಮ್ಯವೆಂದು ಮುಚ್ಚಿಹೋಗುತ್ತಿತ್ತೋ ಏನೋ. ಮಾಜಿ ಕ್ರಿಕೇಟಿಗ ಮತ್ತು ಹಾಲಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಕೂಡ ಕೇಜ್ರಿವಾಲ್ ಮಾತಿಗೆ ಸಹಮತ ವ್ಯಕ್ತಿಪಡಿಸಿ ನೇರವಾಗಿ ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡಲಾರಂಭಿಸಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ಯುಪಿಎ ಅವಧಿಯ ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಯ ವರ್ತನೆ ಯಾವ ರೀತಿ ಇರಬೇಕಿತ್ತು? ಅರುಣ್ ಜೇಟ್ಲಿಯವರ ರಾಜೀನಾಮೆ ಪಡೆದು ಅವರು ಆರೋಪ ಮುಕ್ತರಾದ ಪಕ್ಷದಲ್ಲಿ ಮತ್ತೆ ಸೇರಿಸಿಕೊಳ್ಳಬಹುದಿತ್ತು. ಭ್ರಷ್ಟರಹಿತ ಸರಕಾರ ಎಂಬ ಹೇಳಿಕೆಗೊಂದು ಅರ್ಥ ಸಿಗುತ್ತಿತ್ತು. ಅಂತಹದ್ದೇನನ್ನೂ ಮಾಡದ ಬಿಜೆಪಿ ತಾನೂ ಕೂಡ ಇತರ ಪಕ್ಷದಂತೆಯೇ ಭ್ರಷ್ಟತೆಯ ಆರೋಪ ಹೊತ್ತವರ ಪರ ಎಂದು ತೋರಿಸಿಬಿಟ್ಟಿತು. ಮಂತ್ರಿಯ ವಿರುದ್ಧ ಮಾತನಾಡಿದ ಕೀರ್ತಿ ಆಜಾದ್ ರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ತಮಾಷೆಯೆಂದರೆ ತನ್ನ ವಿರುದ್ಧ ಮಾತನಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿದ್ದ, ರಾಜೀನಾಮೆ ಕೊಟ್ಟು ತೊಲಗುವಂತೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ‘ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ ನೋಡ್ರಿ’ ಎಂದು ಟ್ವಿಟರಿನಲ್ಲಿ ಅಲವತ್ತುಕೊಂಡಿದ್ದು. ಭ್ರಷ್ಟರ ಗೂಡಾಗಿರುವ ಕಾಂಗ್ರೆಸ್ ಕೀರ್ತಿ ಆಜಾದ್ ಪಕ್ಷಕ್ಕೆ ಸೇರಬಯಸಿದರೆ ಸ್ವಾಗತಿಸುತ್ತೇವೆ ಎಂದು ಘೋಷಿಸಿದ್ದು! ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ ಎನ್ನುವ ವದಂತಿ ಕೀರ್ತಿ ಆಜಾದರ ವಿಷಯದಲ್ಲಿ ಮತ್ತೆ ಸಾಬೀತಾಯಿತು. ಅವರ ವಿರುದ್ಧ ಬಹಿರಂಗವಾಗಿ ಮಾತನಾಡಿ, ಕೀರ್ತಿ ಆಜಾದರ ಬೆಂಬಲಕ್ಕೆ ನಿಂತು ದಕ್ಕಿಸಿಕೊಂಡಿದ್ದು ಮಾತ್ರ ಶತ್ರುಘ್ನ ಸಿನ್ಹ. ಬಿಹಾರ ಚುನಾವಣೆಯ ಸೋಲಿಗೆ ಸ್ಥಳೀಯರ ನಂಬುಗೆ ಗಳಿಸದಿರುವುದೂ ಕಾರಣ ಎಂದು ಗಟ್ಟಿ ದನಿಯಲ್ಲಿ ಹೇಳಿದವರವರು. 

ಬಿಹಾರ ಚುನಾವಣೆ ದೆಹಲಿ ಚುನಾವಣೆಯ ನಂತರ ರಾಜಕೀಯವಾಗಿ ಅತ್ಯಂತ ಪ್ರಮುಖವಾದುದು. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ವರುಷಗಳ ಕಾಲ ಅಧಿಕಾರವಿಡಿದಿದ್ದ ಕಾಂಗ್ರೆಸ್ ಸ್ಪರ್ಧೆಯ ಲಿಸ್ಟಿನಲ್ಲೇ ಇರಲಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ, ಹಾಗಾಗಿ ಕೇಂದ್ರಸ್ಥಾನ ದೆಹಲಿಯಲ್ಲಿ ಬಿಜೆಪಿ ಸರಳ ಬಹುಮತದಿಂದ ಆರಿಸಿ ಬರುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು. ಚುನಾವಣಾ ಸಮೀಕ್ಷೆಗಳಲ್ಲಿ ಬಹಳಷ್ಟು ಬಿಜೆಪಿಗೆ ಬಹುಮತವೆಂದಿದ್ದರೆ, ಕೆಲವು ಆಮ್ ಆದ್ಮಿಗೆ ಸರಳ ಬಹುಮತ ಸಿಗುತ್ತದೆ ಎಂದು ತಿಳಿಸಿದ್ದವು. ಪ್ರಚಾರದ ಅಬ್ಬರವೂ ಬಿಜೆಪಯದ್ದೇ ಹೆಚ್ಚಿತ್ತು. ಮಾಧ್ಯಮಗಳ ಪ್ರಚಾರದ ಬಗ್ಗೆ ಹೆಚ್ಚು ಗಮನ ಕೊಡದ ಆಮ್ ಆದ್ಮಿ ಪಕ್ಷ ಸದ್ದೇ ಇಲ್ಲದೆ ಮನೆ ಮನೆಯನ್ನೂ ತಲುಪುವ ಕೆಲಸ ಮಾಡಿತ್ತು. ಇದರ ಫಲ ಗೊತ್ತಾಗಿದ್ದು ಫಲಿತಾಂಶ ಹೊರಬಂದಾಗ. ಎಪ್ಪತ್ತು ಸ್ಥಾನಗಳಲ್ಲಿ ಅರವತ್ತೇಳು ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷ ತನ್ನ ಗೆಲುವಿಗೆ ತಾನೇ ಅಚ್ಚರಿಪಟ್ಟಿತು. ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆಯ ಸಾಧನೆಯೊಂದಿಗೆ ಬೀಗಿತು! ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಧಾನ ಮಂತ್ರಿಯನ್ನೂ ಸೇರಿಸಿ ಕೇಂದ್ರ ಸಚಿವರೇ ಹೆಚ್ಚು ಪ್ರಚಾರ ಮಾಡಿದ್ದರು. ಸ್ಥಳೀಯ ನಾಯಕರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ ಎಂಬ ಅಪಸ್ವರ ಕ್ಷೀಣ ದನಿಯಲ್ಲಿ ಕೇಳಿಬಂತಷ್ಟೇ. ಆಗಿನ್ನೂ ಮೋದಿ ಅಲೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿತ್ತು. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯ ಗೆಲುವಿನ ಮಾನದಂಡಗಳು ಬೇರೆ ಬೇರೆ ಎಂದು ಮರೆಯಲಾಗಿತ್ತು. ಜೊತೆಗೆ ದೆಹಲಿಯೆಂಬುದು ಪೂರ್ಣ ರಾಜ್ಯವೇನಲ್ಲವಲ್ಲ ಎಂಬ ಅಸಡ್ಡೆಯೂ ಸೇರಿತ್ತೇನೋ. ಇನ್ನು ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಸತತವಾಗಿ ಕೇಂದ್ರದೊಡನೆ, ಲೆಫ್ಟಿನೆಂಟ್ ಗವರ್ನರೊಡನೆ ಸಂಘರ್ಷಕ್ಕಿಳಿದರು. ಆಸ್ಪತ್ರೆ, ಶಿಕ್ಷಣಕ್ಕೆ ಅವರು ಕೊಟ್ಟ ಮಹತ್ವ ಪ್ರಶಂಸಾರ್ಹವಾದರೂ ಅವರ ರಾಜಕೀಯ ನಡೆಗಳು ಮತ್ತೊಬ್ಬ ರಾಜಕಾರಣಿಯ ಜನನವಾಗಿದೆಯಷ್ಟೇ ಎಂದು ಸಾಬೀತುಪಡಿಸಿದವು. ದೆಹಲಿಯಲ್ಲಿ ಮಾಡಿದ ತಪ್ಪುಗಳೇ ಬಿಹಾರದಲ್ಲೂ ಪುನರಾವರ್ತನೆಯಾದವು.

ಬಿಹಾರ ಚುನಾವಣೆಯ ಸಮಯದಲ್ಲೇ ದಾದ್ರಿಯಲ್ಲಿ ಇಖ್ಲಾಕನ ಹತ್ಯೆಯ ಘಟನೆಯೂ ನಡೆದುಹೋಯಿತು. ಮನೆಯಲ್ಲಿ ದನದ ಮಾಂಸವನ್ನಿಟ್ಟುಕೊಂಡಿದ್ದಾನೆ ಎಂಬ ‘ವದಂತಿಯೇ’ ಆತನ ಹತ್ಯೆಗೆ ಕಾರಣವಾಗಿಬಿಟ್ಟಿತು. ಇವತ್ತಿಗೂ ನಮ್ಮ ಮುಖ್ಯವಾಹಿನಿಯ ಕಾರ್ಯಕ್ರಮಗಳಲ್ಲಿ ‘ಅದು ದನದ ಮಾಂಸವಲ್ಲವಂತೆ ಕಣ್ರೀ’ ಎನ್ನುವ ಧಾಟಿಯ ಹೆಡ್ಡಿಂಗುಗಳು, ಚರ್ಚೆಗಳು ಚಾಲ್ತಿಯಲ್ಲಿವೆ. ದನದ ಮಾಂಸವೇ ಆಗಿದ್ದರೆ ಹತ್ಯೆ ಸಮರ್ಥನೀಯವಾಗುತ್ತಿತ್ತಾ? ದಾದ್ರಿಯ ಘಟನೆ ಹಿಂದುತ್ವದ ಅಪಾಯಕಾರಿ ಶಕ್ತಿಗಳ ಹೆಚ್ಚಳದ ಬಗ್ಗೆ ತಿಳಿಸಿ ಹೇಳಿತ್ತು. ತುಂಬಾನೇ ಮಾತನಾಡುವ ಪ್ರಧಾನಿ ಅನೇಕ ವಿಷಯಗಳಲ್ಲಿ ಜಾಣ ಮೌನ ವಹಿಸಿಬಿಡುವಂತೆ ಈ ವಿಷಯದಲ್ಲೂ ಮೌನ ವಹಿಸಿಬಿಟ್ಟರು. ಆದರಿದು ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರಿತು. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ‘ಬಿಹಾರದಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹೊಡೆಯುತ್ತಾರೆ’ ಎಂದು ಹೇಳಿದ್ದು, ಆರ್.ಎಸ್.ಎಸ್ ಮೀಸಲಾತಿಯನ್ನು ತೆಗೆದುಬಿಡಬೇಕು ಎಂಬರ್ಥದಲ್ಲಿ ಮಾತನಾಡಿದ್ದು, ನರೇಂದ್ರ ಮೋದಿ ನಿತೀಶ್ ಕುಮಾರರ ಡಿ.ಎನ್.ಎ ಸರಿಯಿಲ್ಲ ಎಂದು ಹೇಳಿದ್ದನ್ನು ನಿತೀಶ್ ಕುಮಾರ್ ಬುದ್ಧಿವಂತಿಕೆಯಿಂದ ಬಿಹಾರದ ಅಸ್ಮಿತೆಯ ಪ್ರಶ್ನೆಯನ್ನಾಗಿ ಮಾಡಿದ್ದೆಲ್ಲವೂ ಬಿಜೆಪಿಯ ಸೋಲಿಗೆ ಕಾರಣವಾಯಿತು. ಜೊತೆಗೆ ದೆಹಲಿಯಲ್ಲಾದಂತೆ ಬಿಹಾರದಲ್ಲೂ ಬಿಜೆಪಿ ಸ್ಥಳೀಯ ನಾಯಕರಿಗಿಂತ ಕೇಂದ್ರ ನಾಯಕರ ಮೇಲೆ ಹೆಚ್ಚಿನ ನಂಬುಗೆ ಇಟ್ಟಿತು, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ. ಎದುರಾಳಿಗಳು ಅಭಿವೃದ್ಧಿಯ ಹರಿಕಾರನೆಂದು ಪ್ರಸಿದ್ಧಿಯಾದ ನಿತೀಶ್ ಕುಮಾರರ ಹೆಸರನ್ನು ಘೋಷಿಸಿದ್ದಾಗಲೂ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ. ಇವೆಲ್ಲಕ್ಕಿಂತಲೂ ಬಿಜೆಪಿಯ ಸೋಲಿಗೆ ಬಹುಮುಖ್ಯವಾದ ಕಾರಣ ಮಹಾಘಟಬಂಧನದ ಹೆಸರಿನಲ್ಲಿ ಜೆಡಿಯು, ಆರ್.ಜೆ.ಡಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿದ್ದು. ತಮ್ಮೊಳಗೆ ಹಂಚಿಹೋಗಬಹುದಿದ್ದ ಮತಗಳ ಕ್ರೋಡಿಕರಣವಾಗುತ್ತದೆಂಬ ಅವರ ನಂಬಿಕೆ ಹುಸಿಯಾಗಲಿಲ್ಲ. ಬಿಜೆಪಿ ಇದನ್ನು ಅರಿಯುವಲ್ಲಿ ವಿಫಲವಾಯಿತೆಂದೇ ಹೇಳಬಹುದು. ಜೊತೆಗೆ ಬಿಹಾರದ ಚುನಾವಣೆ ಭಾರತದಲ್ಯಾವ ಚುನಾವಣೆಯನ್ನೂ ಜಾತಿಯ ಬೆಂಬಲವಿಲ್ಲದೆ ಗೆಲ್ಲುವುದು ಕಷ್ಟ ಎನ್ನುವುದನ್ನೂ ತೋರಿಸಿಕೊಟ್ಟಿತು. ಬಿಜೆಪಿ ಸೋತಿತು ಎನ್ನುವುದರ ಜೊತೆಜೊತೆಗೇ ಈ ಚುನಾವಣೆ ಜನರ ಮರೆವನ್ನು ಸ್ಪಷ್ಟವಾಗಿ ತೋರಿಸಿತು. ಇಲ್ಲವಾದರೆ ಹಲವು ಹಗರಣಗಳ ಸರದಾರ, ಕುಟುಂಬಕ್ಕೆ ಪಕ್ಷವನ್ನು ಜೀತವನ್ನಾಗಿಸಿದ ಲಾಲೂ ಪ್ರಸಾದ್ ಯಾದವರ ಆರ್.ಜೆ.ಡಿ ಪಕ್ಷ ಮತ್ತೆ ಗೆಲ್ಲುವುದೇಗೆ ಸಾಧ್ಯವಿತ್ತು?

ಇನ್ನು ಕರ್ನಾಟಕದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಕೊಟ್ಟ ಗಮನವನ್ನು ಆಡಳಿತದ ಕಡೆಗೂ ಕೊಟ್ಟಿದ್ದರೆ ಮತ್ತಷ್ಟು ಹೆಸರು ಮಾಡುತ್ತಿದ್ದರು. ‘ಭಾಗ್ಯ’ ಹೆಸರಿನ ಯೋಜನೆಗಳು ಮಾತ್ರ ಹೆಸರು ತಂದುಕೊಡುತ್ತವೆ ಎಂಬವರ ನಂಬಿಕೆ ಈ ವರ್ಷವೂ ಮುಂದುವರೆಯಿತು. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಇಳಿಸುತ್ತಲೇ ಇರುವ ಸರಕಾರ ಶೂ ಭಾಗ್ಯದಂತಹ ಹೊಸ ಹೊಸ ಯೋಜನೆಗಳನ್ನು ಘೋಷಿಸುವುದ್ಯಾಕೆ? ಹಳೆಯ ಯೋಜನೆಯನ್ನೇ ಸರಿಯಾಗಿ ನಿಭಾಯಿಸಲಾಗದೆ ಹೊಸ ಯೋಜನೆಗಳನ್ನು ಘೋಷಿಸುವುದು ಪ್ರಚಾರಕ್ಕಾಗಿಯಷ್ಟೇ ಎಂದು ಕಾಣುತ್ತದೆ. ಡಿ.ಕೆ.ರವಿಯವರ ಸಾವಿನ ಪ್ರಕರಣದಲ್ಲಿ ಅತ್ಯಂತ ಅಸಮರ್ಥವಾಗಿ ಕಾರ್ಯನಿರ್ವಹಿಸಿತು. ತನ್ನ ತಪ್ಪಿಲ್ಲದಿದ್ದರೂ ಕಾರಣವಿಲ್ಲದೆ ಹೆಸರನ್ನೆಲ್ಲಾ ಹಾಳುಮಾಡಿಕೊಂಡ ಮೇಲೆ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿತು. ಸಿಬಿಐ ಕೂಡ ನಮ್ಮ ಪೋಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದ ಅಂಶಗಳನ್ನೇ ಹೇಳಿದರು. ಡಿ.ಕೆ.ರವಿಯವರದ್ದು ಕೊಲೆ ಕೊಲೆ ಎಂದು ಅಬ್ಬರಿಸಿದ್ದ ಮಾಧ್ಯಮಗಳು ಕೊನೆಗದು ಆತ್ಮಹತ್ಯೆ ಎಂದು ತನಿಖಾ ವರದಿ ಬಂದ ಮೇಲಾದರೂ ಒಂದು ಕ್ಷಮಾಪಣೆ ಕೇಳುವ ನೈತಿಕತೆ ಪ್ರದರ್ಶಿಸಲಿಲ್ಲ. ಕರ್ನಾಟಕ ಮತ್ತು ದೇಶದ ಸಾಹಿತ್ಯಕ ವಲಯವನ್ನು ಬೆಚ್ಚಿ ಬೀಳಿಸಿದ್ದು ಎಂ.ಎಂ.ಕಲಬುರ್ಗಿಯವರ ಹತ್ಯೆ. ವೈಚಾರಿಕ ಸಂಘರ್ಷವನ್ನು ಬಂದೂಕಿನಿಂದ ಎದುರಿಸಬೇಕು ಎಂಬಂತಹ ಸಂಸ್ಕೃತಿ ಹೆಚ್ಚುತ್ತಿರುವುದು ಗೋವಿಂದ ಪನ್ಸಾರೆ, ದಾಬೋಲ್ಕರ್ ರವರ ಹತ್ಯೆಯ ಸಂದರ್ಭದಲ್ಲೇ ಬೆಳಕಿಗೆ ಬಂದಿತ್ತು. ಕಲಬುರ್ಗಿಯವರಿಗೂ ಬೆದರಿಕೆಯಿತ್ತು. ರಕ್ಷಣೆಯನ್ನೂ ನೀಡಲಾಗಿತ್ತು. ಕಲಬುರ್ಗಿಯವರೇ ಹತ್ಯೆಯ ಕೆಲವು ದಿನಗಳ ಮೊದಲು ಪೋಲೀಸ್ ರಕ್ಷಣೆಯನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ರಕ್ಷಣೆ ಹಿಂದೆಗೆದುಕೊಂಡಮೇಲೂ ಪೋಲೀಸರು ಒಂದಷ್ಟು ನಿಗಾ ವಹಿಸಿದ್ದರೆ ಹಿರಿಯ ಸಂಶೋಧಕರೊಬ್ಬರು ಗುಂಡಿಗೆ ತಲೆಯೊಡ್ಡುವ ದುರಂತ ಸಂಭವಿಸುತ್ತಿರಲಿಲ್ಲ. ಹತ್ಯೆ ನಡೆದು ಹಲವು ತಿಂಗಳು ಕಳೆದುಹೋಗಿದ್ದರೂ ಹಂತಕರ ಪತ್ತೆಯಾಗಿಲ್ಲದಿರುವುದು ಸಿದ್ಧರಾಮಯ್ಯ ಸರಕಾರದ ವೈಫಲ್ಯ. ಕಲಬುರ್ಗಿಯವರ ಹತ್ಯೆ ದೇಶದಲ್ಲಿ ಸಹಿಷ್ಣುತೆ – ಅಸಹಿಷ್ಣುತೆಯ ಬಗೆಗಿನ ಚರ್ಚೆಯನ್ನು ತೀರ್ವಗೊಳಿಸಿತು, ಪ್ರಶಸ್ತಿ ವಾಪಸ್ ಚಳುವಳಿ ನಡೆದು ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿತು.

ಭ್ರಷ್ಟತೆಯ ವಿಷಯದಲ್ಲಿ ಸಿದ್ಧು ಸರಕಾರ ತುಂಬಾ ಹೆಸರು ಕೆಡಿಸಿಕೊಂಡಿಲ್ಲ ಎನ್ನುವುದು ಸತ್ಯ. ಮಂತ್ರಿ ಆಂಜನೇಯರವರ ಪತ್ನಿ ಲಕ್ಷ ಲಕ್ಷ ರುಪಾಯಿಗಳನ್ನು ತೆಗೆದುಕೊಳ್ಳುವುದು ದೃಶ್ಯಮಾಧ್ಯಮದ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಯಿತಾದರೂ ಅದು ತನಿಖೆಯ ಹಂತದಲ್ಲಿದೆ ಎಂದು ಸರಕಾರ ಮೌನವಾಗಿಬಿಟ್ಟಿತು. ಯಾಕೋ ವಿರೋಧ ಪಕ್ಷಗಳೂ ಇದರ ಬಗ್ಗೆ ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ. ಸಿದ್ಧರಾಮಯ್ಯನವರ ಖುರ್ಚಿ ಅಲುಗಾಡಿದಂತೆ ಕಾಣಿಸಿದ್ದು, ಮೂಲ ಕಾಂಗ್ರೆಸ್ಸಿನ ಹಿರಿಯರು ಸಿದ್ಧರಾಮಯ್ಯನವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಬಿಬಿಎಂಪಿ ಚುನಾವಣೆಯ ನಂತರ ಕಾಂಗ್ರೆಸ್ಸಿನಲ್ಲಿ ದೊಡ್ಡ ಬದಲಾವಣೆ ನಡೆದುಬಿಡುತ್ತದೆ ಎಂದು ನಂಬಿದ್ದವರೆಲ್ಲರಿಗೂ ನಿರಾಸೆಯಾಯಿತು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟು, ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೆ ಜೆಡಿಎಸ್ ಎಂದಿನಂತೆ ಮೂರನೇ ಸ್ಥಾನದಲ್ಲಿತ್ತು. ನೈತಿಕವಾಗಿ ನೋಡಿದರೆ ಬಿಜೆಪಿ ಅಧಿಕಾರವಿಡಿಯಬೇಕಿತ್ತು. ಅಧಿಕರಾವಿಡಿಯುವ ಖುಷಿಯಲ್ಲಿ ಬಿಜೆಪಿ ಬಿಬಿಎಂಪಿಯ ಗೆಲುವನ್ನು ಸಂಭ್ರಮಿಸಿತ್ತು. ತೆರೆಯ ಹಿಂದೆ ನಡೆದ ಹೀನ ರಾಜಕೀಯದ ಸುಳಿವು ಬಿಜೆಪಿಗೆ ಸಿಗುವಷ್ಟರಲ್ಲಿ ಕಾಲ ಮಿಂಚಿತ್ತು. ಶರಂಪರ ಕಿತ್ತಾಡುತ್ತಿದ್ದ ಸಿದ್ಧರಾಮಯ್ಯ ಮತ್ತು ಜೆ.ಡಿ.ಎಸ್ ನಡುವೆ ಮೈತ್ರಿ ನಡೆದುಬಿಟ್ಟಿತ್ತು. ಯಾವ ಸಂಧಾನದ ಮಾತುಕತೆಯಲ್ಲೂ ಸಿದ್ಧರಾಮಯ್ಯ ನೇರವಾಗಿ ಪಾಲ್ಗೊಳ್ಳದಿರುವ ಬುದ್ಧಿವಂತಿಕೆಯನ್ನು ತೋರಿಸಿದ್ದರೂ ಹೀಗೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಮೂಲಕ ಅವರು ಸಾಧಿಸಿದ್ದೇನು? ಹಿಂಬಾಗಿಲ ಮೂಲಕ ಅಧಿಕಾರವಿಡಿಯುವ ಮೂಲಕ ರಾಜಕೀಯ ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ಎಂದವರು ತೋರಿಸಿದರು. ಆಪರೇಷನ್ ಕಮಲವನ್ನು ವಿರೋಧಿಸಿದ್ದ ಸಿದ್ಧರಾಮಯ್ಯ ಇಲ್ಲಿ ಮಾಡಿದ್ದೇನನ್ನು? ಅನೈತಿಕತೆಯೆಂಬುದು ರಾಜಕೀಯದ ಬಿಡಿಸಲಾಗದ ಭಾಗವಾಗಿಬಿಟ್ಟಿದೆಯಾ? 

ವರುಷದ ಕೊನೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ಸಿನ ಸ್ಥಾನ ಕರ್ನಾಟಕದಲ್ಲಿ ಇನ್ನು ಭದ್ರವಾಗಿದೆ ಎಂದು ತೋರಿಸಿಕೊಟ್ಟಿತು. ಇಪ್ಪತ್ತೈದು ಸ್ಥಾನಗಳಲ್ಲಿ ಹದಿಮೂರರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಈ ಚುನಾವಣೆಯಲ್ಲಿ ಯಾರು ಗೆದ್ದರೋ ಬಿಟ್ಟರೋ ಸೋತಿದ್ದು ಮಾತ್ರ ವಿಧಾನ ಪರಿಷತ್. ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ ಮುಖ್ಯ ಕಾರಣ ವಿಧಾನಸಭೆಯ ಚುನಾವಣಾ ರಾಜಕೀಯದಲ್ಲಿ ಗೆಲ್ಲಲಾಗದ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಪರಿಷತ್ತಿಗೆ ಆಯ್ಕೆ ಆಗಿ ರಾಜ್ಯದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂಬ ಸದುದ್ದೇಶದಿಂದ. ಆದರೆ ಈಗ ಆಗುತ್ತಿರುವುದೇನು? ಕೋಟಿ ಕೋಟಿ ಹಣ ಚೆಲ್ಲುವವರಿಗೆ ಮಾತ್ರ ಪರಿಷತ್ ಸ್ಥಾನ ಎನ್ನುವಂತಾಗಿದೆ. ಅಲ್ಲಿಗೆ ವಿಧಾನಸಭೆಗೂ ಪರಿಷತ್ತಿಗೂ ಏನು ವ್ಯತ್ಯಾಸ ಉಳಿಯಿತು? ಇಂತಹುದೊಂದು ಸಂಭ್ರಮಕ್ಕೆ ಪರಿಷತ್ತಿನ ಅವಶ್ಯಕತೆಯಾದರೂ ಏನಿದೆ? 

ಅಧಿಕಾರದಲ್ಲಿದ್ದವರು ಒಂದಷ್ಟು ಒಳ್ಳೆಯ ಕೆಲಸ ಮಾಡಿ ಒಂದಷ್ಟು ಕೆಟ್ಟ ಕೆಲಸ ಮಾಡಿ ಬಹಳಷ್ಟು ಬಾರಿ ಏನೂ ಮಾಡದೆ ಉಳಿದುಬಿಟ್ಟರು. ಅಧಿಕಾರಸ್ಥರಿಗಿಂತ ಹೆಚ್ಚು ವೈಫಲ್ಯಕಂಡಿದ್ದು ವಿರೋಧ ಪಕ್ಷಗಳು. ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ವಿರೋಧ ಪಕ್ಷವೊಂದು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದರ ಅರಿವೇ ಇಲ್ಲವೇನೋ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದೇ ವಿರೋಧ ಪಕ್ಷದ ಕೆಲಸ ಎಂದು ನಂಬಿದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾಪ ನಡೆಯದಂತೆ ಮಾಡುವುದೂ ಕೂಡ ಪ್ರಜಾಪ್ರಭುತ್ವದ ಒಂದು ಲಕ್ಷಣವೇ ಆದರೂ ಯಾವುದೂ ಅತಿಯಾಗಬಾರದಲ್ಲವೇ? ಹೋಗಲಿ ಇವರು ಕಲಾಪಕ್ಕೆ ಅಡ್ಡಿಪಡಿಸುವುದಕ್ಕೆ ಸರಿಯಾದ ಕಾರಣವಾದರೂ ಇದೆಯಾ? ತಮ್ಮ ಕೊರಳಿನ ಹಾರವಾದ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ ಕಲಾಪವನ್ಯಾಕೆ ಅಡ್ಡಿಪಡಿಸಬೇಕು? ಇನ್ನು ಜಿ.ಎಸ್.ಟಿ ಜಾರಿಯಾಗಲು ಬಿಡದಿರುವುದಕ್ಕೆ ರಾಜಕೀಯವನ್ನೊರತುಪಡಿಸಿದ ಕಾರಣಗಳಿವೆಯಾ ಕಾಂಗ್ರೆಸ್ಸಿಗೆ? ಜಿ.ಎಸ್.ಟಿ ಜಾರಿಯಾಗಬೇಕೆಂದು ಕನಸಿದ್ದೇ ಅವರ ಯು.ಪಿ.ಎ ಸರಕಾರ. ಆಗ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ. ಈಗ ಸ್ಥಾನಪಲ್ಲಟವಾಗಿರುವುದರಿಂದ ಬಿಜೆಪಿ ಜಿ.ಎಸ್.ಟಿ ಪರವಾಗಿ ಮಾತನಾಡುತ್ತಿದ್ದರೆ, ಕಾಂಗ್ರೆಸ್ ನೇರ ವಿರೋಧ ವ್ಯಕ್ತಪಡಿಸದಿದ್ದರೂ ಅದು ಜಾರಿಯಾಗಲು ಅವಕಾಶ ನೀಡಲಿಲ್ಲ. ರಾಜಕೀಯ ಪಕ್ಷದವರ ಮಾತುಗಳು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿದ್ದಾಗ ಹೇಗೆಲ್ಲಾ ಬದಲಾಗುತ್ತವೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ. ಹೆಚ್ಚುತ್ತಿರುವ ಬೇಳೆ ತರಕಾರಿಗಳ ಬೆಲೆಗಿಂತ ಒಳ್ಳೆಯ ವಿಷಯ ಬೇಕಿತ್ತೇ ಕಾಂಗ್ರೆಸ್ಸಿಗೆ ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯ ತೋರಿಸಲು? ಇದೇ ರೀತಿಯ ನಿಷ್ಕ್ರಿಯತೆ ಕರ್ನಾಟಕದ ವಿರೋಧ ಪಕ್ಷಗಳಲ್ಲೂ ಕಂಡು ಬಂತು. ಧಾರ್ಮಿಕ ವಿಚಾರಗಳನ್ನೊರತುಪಡಿಸಿ ಮತ್ಯಾವ ವಿಷಯದಲ್ಲೂ ಬಿಜೆಪಿ ಶಕ್ತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸದಿರುವುದು ಕರ್ನಾಟಕದ ದುರಂತ. ಟಿಪ್ಪು ಜಯಂತಿಯನ್ನು ಸರಕಾರ ಘೋಷಿಸಿದಾಗ ಅದನ್ನವರು ವಿರೋಧಿಸಿದ ರೀತಿಯಿಂದ ಸರಿಯಾದ ಕಾರಣಕ್ಕೆ ವಿರೋಧಿಸಿದ್ದರೆ ಒಂದು ಗೌರವವನ್ನಾದರೂ ಗಳಿಸುತ್ತಿತ್ತು. ಟಿಪ್ಪು ಜಯಂತಿಯ ಹೆಸರಿನಲ್ಲಿ ವಿನಾಕಾರಣದ ರಾಜಕೀಯ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಜನರ ಹತ್ಯೆ ಮಾಡಿದವು. ಬಿಜೆಪಿಯ ಆಡಳಿತಾವಧಿಯಲ್ಲಿ ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದ ಜೆ.ಡಿ.ಎಸ್ಸಿನ ಕುಮಾರಸ್ವಾಮಿಯವರ್ಯಾಕೋ ಈಗ ಸುಮ್ಮನಾಗಿಹೋಗಿದ್ದಾರೆ. ಒಂದು ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ಮತ್ತೊಂದು ಕಡೆ ಕಾಂಗ್ರೆಸ್ಸಿನ ಚುಂಗು ಹಿಡಿಯುವುದು, ಜೆ.ಡಿ.ಎಸ್ ತನ್ನ ಸಾವನ್ನು ತಾನೇ ತೋಡಿಕೊಳ್ಳುತ್ತಿದೆ. ಪಕ್ಷವನ್ನು ಬಲಪಡಿಸುವ ಉದ್ದೇಶ ಯಾರಿಗೂ ಇದ್ದಂತಿಲ್ಲ. ಇಪ್ಪತ್ತು ತಿಂಗಳಿನ ಮುಖ್ಯಮಂತ್ರಿಯ ಅವಧಿಯಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಜನರು ಮರೆತಿದ್ದಾರೆ ಎನ್ನುವುದರ ಅರಿವು ಕುಮಾರಸ್ವಾಮಿಯವರಿಗಾಗಬೇಕು ಮತ್ತು ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದ ಪಕ್ಷವನ್ನು ಬಿಡಿಸದೆ ಇದ್ದರೆ ಭವಿಷ್ಯತ್ತಿನಲ್ಲಿ ಕಷ್ಟವಿದೆ ಎನ್ನುವುದನ್ನು ತಿಳಿಯಬೇಕು. ಸದ್ಯಕ್ಕಂತೂ ಅದನ್ನೆಲ್ಲ ತಿಳಿಯುವ ಸಾಧ್ಯತೆ ಕಾಣುತ್ತಿಲ್ಲ.

ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಸುವುದನ್ನು ನಖಶಿಖಾಂತ ವಿರೋಧಿಸುತ್ತಿದ್ದ ಬಿಜೆಪಿ ಮತ್ತದರ ಬೆಂಬಲಿಗರಿಗೆ ವರುಷದ ಕೊನೆಯಲ್ಲಿ ಬಹುದೊಡ್ಡ ಆಘಾತ ಕೊಟ್ಟಿದ್ದು ಇದ್ದಕ್ಕಿದ್ದಂತೆ ದಾರಿ ಮಧ್ಯೆ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನರೇಂದ್ರ ಮೋದಿ. ಇದು ನರೇಂದ್ರ ಮೋದಿಯವರ ಚಾಣಾಕ್ಷ ನಡೆಯಾಗಿತ್ತು ಮತ್ತು ಸರಿಯಾದ ಹೆಜ್ಜೆಯಾಗಿತ್ತು. ನೆರೆಹೊರೆಯೊಂದಿಗೆ ಎಷ್ಟೇ ಕಷ್ಟನಷ್ಟವಾದರೂ ಸಹಬಾಳ್ವೆ ನಡೆಸುವ ಪ್ರಯತ್ನವನ್ನಾದರೂ ಮಾಡಬೇಕು. ಪಾಕಿಸ್ತಾನದೆಡೆಗೆ ಸ್ನೇಹದ ಹಸ್ತ ಚಾಚುತ್ತಲೇ ಅವರ ಕುತಂತ್ರಗಳ ಬಗ್ಗೆ ಎಚ್ಚರಿಕೆಯೂ ಇರಬೇಕು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಸ್ನೇಹದಿಂದಿರಬಾರದು ಎಂದು ಬಯಸುವವರ ಸಂಖೈ ಎರಡೂ ದೇಶಗಳಲ್ಲಿ ದಂಡಿಯಾಗಿದೆ. ಅಂತವರ ಕಿತಾಪತಿಯನ್ನು ತಡೆಯುವ ಪ್ರಯತ್ನವನ್ನು ನಿಲ್ಲಿಸಲೇಬಾರದು. ಪ್ರಧಾನಿಯವರ ಬಹಳಷ್ಟು ವಿದೇಶಿ ಪ್ರವಾಸಗಳಿಂದ ಆ ದೇಶಗಳ ಬಂಡವಾಳಶಾಹಿಗಳಿಗೆ ನೇರ ಅನುಕೂಲವಿದೆ. ಮೇಕ್ ಇನ್ ಇಂಡಿಯಾ ಎಂಬುದು ಭಾರತವನ್ನು ಮತ್ತೊಂದು ಚೀನಾವಾಗಿ ಪರಿವರ್ತಿಸುವ, ಉಸಿರಾಡಲೂ ಆಗದಷ್ಟು ಪರಿಸರವನ್ನು ಮಲಿನಗೊಳಿಸುವ ಯೋಜನೆ. ಕೇಂದ್ರ ಸರಕಾರದ ಹನಿಮೂನ್ ಸಮಯ ಮುಗಿದಿದೆ. ನೀಡಿದ ಭರವಸೆಗಳಲ್ಲಿ ಕೆಲವನ್ನಾದರೂ ಈಡೇರಿಸುವ ಜವಾಬ್ದಾರಿಯಿದೆ. ಕಾಂಗ್ರೆಸ್ ಪಕ್ಷವನ್ನು, ಹಿಂದಿನ ಸರಕಾರಗಳನ್ನು ಟೀಕಿಸುತ್ತ ಇನ್ನೂ ಸ್ವಲ್ಪ ಸಮಯ ಕೊಡಿ ಸಮಯ ಕೊಡಿ ಎಂದು ಹೇಳುವುದು ಇನ್ನು ಕರ್ಣಾನಂದಕರವಾಗಿರದು. ಬಂಡವಾಳಶಾಹಿತನಕ್ಕೆ ಕೆಂಪು ಹಾಸು ಹಾಕುವ ಸರಕಾರದ ನಿರ್ಧಾರಗಳು ಎಷ್ಟರಮಟ್ಟಿಗೆ ಎಲ್ಲರ ಅಭಿವೃದ್ಧಿಗೆ ಪೂರಕವಾಗುತ್ತವೆ? ಭಾರತವನ್ನು ಚೀನಾದ ರೀತಿ ಅಮೆರಿಕಾದ ರೀತಿ ಬೆಳೆಸುವ ಬದಲು ಭಾರತದ ರೀತಿಯಲ್ಲೇ ಉತ್ತಮಗೊಳಿಸಬಹುದಿತ್ತಾ? ಭವಿಷ್ಯವೇ ಉತ್ತರ ಹೇಳಬೇಕು. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ ಈಗ ಕೆಲಸ ಮಾಡುತ್ತಿರುವ ರೀತಿಯಲ್ಲೇ ಕೆಲಸ ಮಾಡಿದರೆ ಸಾಕು, ಮುಂದಿನ ಚುನಾವಣೆಯನ್ನು ಸಲೀಸಾಗಿ ಸೋತುಬಿಡಬಹುದು…. ಕ್ಯಾಲೆಂಡರ್ ಬದಲಾದರೆ ಭವಿಷ್ಯ ಬದಲಾಗುವುದಿಲ್ಲ, ಇರಲಿ, ಹೊಸ ವರುಷದ ಶುಭಾಷಯಗಳು.

No comments:

Post a Comment