Nov 9, 2015

ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ.

kum veerabhadrappa
ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹಾರ್ಧತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು. 

ನೀವು ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ. ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ? 

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

banjagere jayaprakash
ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು. ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದ ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ ``ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ’’ ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ. ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? 

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರುವ ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿಯ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ. ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ. ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ? 

"ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ’’ ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು. ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ? 

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ. ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಂiÀiನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ? 

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ. ಇದರಿಂದಾಗಿ ಬಲಪಂಥೀಯ ಗುಂಪು ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ. ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ, ಬಸವರಾಜ್ ಪೂಜಾರ್.

No comments:

Post a Comment