May 21, 2019

ಒಂದು ಬೊಗಸೆ ಪ್ರೀತಿ - 17

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

“ಅದನ್ನು ಅವತ್ತೇ ಹೇಳಿದ್ದೆ. ಅದಕ್ಕೆ ನನ್ನ ಉತ್ತರಾನೂ ಕೊಟ್ಟಿದ್ದೆ ಆಗಲೇ. ಮತ್ತೆ ಮತ್ತೆ ಅದನ್ನೇ ಹೇಳೋದಿಕ್ಕೆ ನನ್ನನ್ನು ಹುಡುಕೋ ಕಷ್ಟ ತೆಗೆದುಕೊಳ್ಳಬೇಡ. ಇನ್ನು ನೀನು ಹೋಗು”

‘ಯಾಕೋ ಹಿಂಗೆ ಹೋಗು ಹೋಗು ಅಂತೀಯ. ಫ್ರೆಂಡ್ಸಾಗಿರೋಣ ಕಣೋ ಮೊದಲಿನ ತರಾನೇ ಅನ್ನೋದ್ರಲ್ಲಿ ತಪ್ಪೇನಿದೆ. ನನಗೆ ನಿನ್ನ ಜೊತೆ ಮಾತಾಡ್ದೆ ಇದ್ರೆ ಬೇಜಾರಾಗುತ್ತೆ ಕಣೋ'

“ಮತ್ತೆ ಅದನ್ನೇ ಹೇಳ್ತೀಯಲ್ಲ! ನಾನು ನಿನ್ನ ಲವರ್ ಆಗಿ ಇರಬಲ್ಲೆ, ಫ್ರೆಂಡಾಗಲ್ಲ”

‘ಇದೇ ನಿನ್ನ ಕೊನೇ ತೀರ್ಮಾನಾನ?’

“ನನ್ನ ಮೊದಲ ತೀರ್ಮಾನವೂ ಅದೇ ಕೊನೇ ತೀರ್ಮಾನವೂ ಅದೇ”

‘ನಿನಗೆ ನನ್ನ ಜೊತೆ ಮಾತಾಡ್ದೆ ಇದ್ರೆ ಬೇಜಾರಾಗಲ್ವ?’

“ಆಗುತ್ತೆ”

‘ಮತ್ತೆ’

“ಬೇಜಾರಾಗುತ್ತೆ ಅಂತ ನಿನ್ನ ಜೊತೆ ಫ್ರೆಂಡ್ ತರ ನಾಟಕ ಮಾಡೋಕೆ ನನಗಿಷ್ಟವಿಲ್ಲ. ಇದ್ರೆ ಪ್ರೇಮಿಗಳ ತರ ಇರೋಣ. ಇಲ್ಲಾಂದ್ರೆ ಬೇಜಾರು ಮಾಡ್ಕೊಂಡೇ ಇರ್ತೀನಿ ಬಿಡು”

‘ನೋಡು ಹೆಂಗೆಲ್ಲ ಮಾತಾಡ್ತಿ. ನೀನು ಬೇಜಾರು ಮಾಡ್ಕೊಂಡು ಸಿಗರೇಟು ಸೇದ್ಕೊಂಡು ಸಪ್ಪಗೆ ಕುಳಿತಿದ್ರೆ ನನಗೆ ಖುಷಿಯೇನೋ’

“ನಾನು ಹೆಂಗಿದ್ರೆ ನಿನಗೆ ಏನಾಗ್ಬೇಕು? ನನ್ನ ಯೋಚನೆ ಬಿಡು”

‘ಅಂದ್ರೆ? ನಾನು ಇಷ್ಟಪಡೋ ಫ್ರೆಂಡ್ ಬಗ್ಗೆ ನಾನು ಇಷ್ಟೂ ಯೋಚನೆ ಮಾಡಬಾರದಾ?’

“ಇಷ್ಟಪಡ್ತೀನಿ ಅಂತೀಯ. ಆದ್ರೆ ಲವ್ ಮಾತ್ರ ಮಾಡೋಕಾಗಲ್ಲ ಅಲ್ವ. ಸಿಗರೇಟು ಸೇದ್ತಾನೆ, ಮನೆ ಕಡೆ ಪ್ರಾಬ್ಲಮ್ಮು, ಅಷ್ಟೇನು ಚೆನ್ನಾಗಿ ಓದಲ್ಲ. ಇವನನ್ನು ಲವ್ ಮಾಡಿ ಏನು ಸಿಗುತ್ತೆ ಅಂತೇನೋ?”

ಹಳೆ ಕುದುರೆ -ಹೊಸ ದೊರೆ

ಕು.ಸ.ಮಧುಸೂದನ ರಂಗೇನಹಳ್ಳಿ

ಉರಿಯುವ ಹಗಲು
ಗಡಿಯಾರಗಳ ಮುಳ್ಳುಗಳು ತೆವಳುತಿವೆ
ಎಷ್ಟು ಕತ್ತಿಗಳ ತಿವಿತ
ರಕ್ತ ಸ್ರಾವವಿರದೆ ಕೊಲ್ಲುವ ಹೊಸ ಮಾರ್ಗ
ಅನ್ವೇಷಿಸಿದ ಕೀರ್ತಿ ಪತಾಕೆ ಹೊತ್ತ
ಹಳೇ ಕುದುರೆಗಳ ಮೇಲಿನ ಹೊಸ ದೊರೆ
ಊರ ತುಂಬಾ ಭಯದ ಕಂಪನಗಳು
ನಿಟ್ಟುಸಿರನ್ನೂ ಬಿಗಿ ಹಿಡಿದು
ಬಿಲ ಸೇರಿಕೊಂಡ ಹುಳುಗಳು
ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ದೂಳಿನಬ್ಬರಕೆ
ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ
ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು ಸ್ವತ: ರಕ್ಕಸರಂತೆ
ಪರಾಕ್ರಮ ಮೆರೆಯ ತೊಡಗಿದರು
ಹಾಗೆ ಧಗಧಗಿಸಿ ಉರಿದೊಂದು ಸಂಜೆ
ಬರಬಹುದಾದ ಬಿರು ಮಳೆಗೆ ಕಾದ
ಜನ ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು
ಹುಯ್ಯೋ ಹುಯ್ಯೋ ಮಳೆರಾಯ!

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಪುಟ್ಟ ಹುಡುಗಿಯ ಬಿಟ್ಟುಬಿಡಿ!

ಪಲ್ಲವಿ ದಿವ್ಯಾ
ಆ ಪುಟ್ಟ ಹುಡುಗಿಯ ರೆಕ್ಕೆಗಳ ಕತ್ತರಿಸದಿರಿ
ಆ ಪುಟ್ಟ ಹುಡುಗಿಯ ಕಣ್ಣುಗಳಿಗೆ ಪಟ್ಟಿ ಕಟ್ಟದಿರಿ.

ಆ ಪುಟ್ಟ ಹುಡುಗಿಯ ನಾಲಿಗೆಗೆ ಲಗಾಮು ಹಾಕದಿರಿ
ಆ ಪುಟ್ಟ ಹುಡುಗಿಯ ಕಾಲುಗಳಿಗೆ ಬೇಡಿ ಹಾಕದಿರಿ.

ಅವಳೊಂದು ಹೂವಿನ ಹಾಗೆಂದು ವರ್ಣಿಸಿ
ನಿಯಮಾವಳಿಗಳ ಮುಳ್ಳುಗಳ ಕಾವಲಿಗಿಡದಿರಿ.

ಅವಳ ಬದುಕು ಅವಳದು
ನಡೆಯುತ್ತಲೊ ಓಡುತ್ತಲೊ ಹಾರುತ್ತಲೊ ಅವಳ ಗಮ್ಯವನವಳು
ತಲುಪಿಕೊಳ್ಳಲಿ
ತಡೆಯೊಡ್ಡದಿರಿ.

ಆ ಪುಟ್ಟ ಹುಡುಗಿಯ ಮುನ್ನಡೆಸುವ ಯಜಮಾನಿಕೆ ತೋರದಿರಿ
ಆ ಪುಟ್ಟ ಹುಡುಗಿ ಬೇಡುತ್ತಿಹಳು ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ

May 18, 2019

ಅವಿಸ್ಮರಣೀಯ ಅರುಣಾಚಲ ಅದರ ಚಿತ್ರ -ವಿಚಿತ್ರ ಇತಿಹಾಸ: ಪುಸ್ತಕ ವಿಮರ್ಶೆ

ನಂದಕುಮಾರ್. ಕೆ. ಎನ್
ಅರುಣಾಚಲ ಪ್ರದೇಶ ಈಗ ಭಾರತದ ಅಂಗವನ್ನಾಗಿಯೇ ನೋಡಲಾಗುತ್ತಿದೆ. ಆದರೆ ಚೀನ ಅದನ್ನು ಈಗಲೂ ಮಾನ್ಯ ಮಾಡಿಲ್ಲ. ಅದರ ಬಗ್ಗೆ ವಿವಾದಗಳು ಈಗಲೂ ಭಾರತ, ಚೀನ ನಡುವೆ ಇವೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿಸುವ ಪ್ರಕ್ರಿಯೆಗಳು ಬ್ರಿಟೀಷ್ ಭಾರತದಲ್ಲೇ ಶುರುವಾಗಿದ್ದವು. ಆದರೆ ಅದಕ್ಕೆ ಅಲ್ಲಿನ ಸ್ಥಳೀಯ ಸ್ವಯಂಮಾಡಳಿತ ಗಣ ವ್ಯವಸ್ಥೆಯ ಬುಡಕಟ್ಟು ಗುಂಪುಗಳು ಪ್ರಬಲವಾದ ಪ್ರತಿರೋಧ ಒಡ್ಡಿದ್ದವು. ಅವರು ಅನುಮತಿಸದೇ ಅವರ ಪ್ರದೇಶದೊಳಕ್ಕೆ ಯಾರೂ ಹೋಗುವಂತಿರಲಿಲ್ಲ. ಹೋದವರು ಜೀವಂತವಾಗಿ ವಾಪಾಸು ಬರಲಾಗುತ್ತಿರಲಿಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬ ಆ ಪ್ರದೇಶವನ್ನು ಗ್ರಹಿಸಿ ಬ್ರಿಟೀಷ್ ಭಾರತದ ಭಾಗವಾಗಿಸಿಕೊಳ್ಳುವ ಇರಾದೆಯಿಂದ ಯಾವುದೇ ಅನುಮತಿ ಇಲ್ಲದೇ ಅಲ್ಲಿಗೆ ತೆರಳಿ ಸಾವಿಗೀಡಾಗಿದ್ದು ಬ್ರಿಟೀಷ್ ಆಡಳಿತವನ್ನು ಕೆರಳಿಸಿತ್ತು. ಆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಗಳು ಅಲ್ಲಿಂದ ಚುರುಕುಗೊಂಡವು ಎಂದು ಹೇಳಬಹುದು. ಅಲ್ಲಿ ಸ್ವಾಯತ್ತ ಗಣ ವ್ಯವಸ್ಥೆಯಿರುವ ಬುಡಕಟ್ಟುಗಳು ಸ್ವಯಂಪೂರ್ಣವಾಗಿ ಜೀವನ ಕಟ್ಟಿಕೊಂಡಿದ್ದರೂ ಆ ಪ್ರದೇಶದ ಮೇಲೆ ಚೀನ ಹಾಗೂ ಟಿಬೆಟ್ ನ ಹಿತಾಸಕ್ತಿಗಳೂ ಇದ್ದವು. ಟಿಬೆಟ್ ನಂತರ ಚೀನಾದ ಪ್ರದೇಶವಾಯಿತು. ಇದರ ಮಧ್ಯೆ ಆ ಪ್ರದೇಶದ ಬುಡಕಟ್ಟು ಜನರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡಲಿಲ್ಲ. ಹಾಗಾಗಿ ಆ ಸಮುದಾಯಗಳಲ್ಲಿ ಹಲವು ಈಗಲೂ ಭಾರತವನ್ನೂ ಅಂಗೀಕರಿಸಲಾಗದಂತಹ ಸ್ಥಿತಿಯಲ್ಲಿಯೇ ಇವೆ.

May 14, 2019

ಒಂದು ಬೊಗಸೆ ಪ್ರೀತಿ - 16

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

‘ಅಯ್ಯೋ ಹಂಗೆಲ್ಲ ಏನಿಲ್ಲಪ್ಪ. ರಜೆಯಲ್ಲಿ ಅಜ್ಜಿ ಮನೆಗೆ ಹೋಗಿಬಿಟ್ಟಿದ್ದೆ. ಅಲ್ಲಿ ಕಸಿನ್ಸ್ ಜೊತೆಯೆಲ್ಲ ಆಟ ಸುತ್ತಾಟ. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನಲ್ಲಿನ್ನೂ ಪುರುಷೋತ್ತಮನ ಬಗ್ಗೆ ಪ್ರೀತಿ ಪ್ರೇಮದ ಭಾವನೆಗಳು ಹುಟ್ಟಿರಲಿಲ್ಲವಲ್ಲ ಹಾಗಾಗಿ ಹೆಚ್ಚೇನು ಅವನ ನೆನಪಾಗಲಿಲ್ಲ. ಅವನು ಹೇಳಿದ್ದು ನೆನಪಾದಾಗಲೆಲ್ಲ ನನಗೆ ಅಶ್ವಿನಿಯನ್ನು ಹೇಗೆ ಎದುರಿಸುವುದು ಅವಳಿಗೆ ಹೇಗೆ ಹೇಳುವುದು ಎನ್ನುವುದೇ ಹೆಚ್ಚು ಕಾಡುತ್ತಿತ್ತು. ಅವಳಿಗೆ ಊಹಿಸಲು ಸಾಧ್ಯವಾಗಿದ್ದು ನನಗಾಗಲಿಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ರಜೆಯ ಮಜದ ನಡುವೆ ಅದನ್ನೆಲ್ಲ ಜಾಸ್ತಿ ಯೋಚಿಸಲೂ ಇಲ್ಲ ಬಿಡು. ರಜೆ ಮುಗಿಸಿ ಬಂದ ಮೇಲೆ ಮನೆಯ ಬಳಿಯೇ ಅಶ್ವಿನಿ ಸಿಕ್ಕಿದಳು. ಅವಳ ಮನೆಗೇ ಹರಟಲು ಹೋದೆವು. ಮನೆಯಲ್ಯಾರೂ ಇರಲಿಲ್ಲ. ಹಾಲಿನಲ್ಲಿ ಟಿವಿ ಹಾಕಿ ಕುಳಿತೆವು. ಅದೂ ಇದೂ ಮಾತನಾಡಲು ಪ್ರಾರಂಭಿಸಿದೆವು. ನಾನು ಮುಖಕ್ಕೆ ಮುಖ ಕೊಟ್ಟು ಮಾತನಾಡದೆ ಇದ್ದುದು ಅವಳ ಗಮನಕ್ಕೆ ಬಂತು. ಜನರ ಜೊತೆ ಹೆಚ್ಚು ಬೆರೆಯದೆ ಮೂರೊತ್ತೂ ಓದ್ತಾನೇ ಕೂರ್ತಿದ್ದ ಅವಳಿಗೆ ಬೇರೆಯವರ ನಡವಳಿಕೆಯಿಂದಾನೇ ಅರ್ಧ ವಿಷಯ ಗೊತ್ತಾಗಿಬಿಡುವುದಾದರೂ ಹೇಗೆ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. “ಏನಾಯ್ತೆ?” ಎಂದು ಕೇಳಿದಳು.

May 9, 2019

ಶಕ್ತಿ ನೀಡು!

ಕು.ಸ.ಮಧುಸೂದನ ರಂಗೇನಹಳ್ಳಿ. 
ಹಿತವೆನಿಸುತ್ತಿದೆ ನಿನ್ನೀ ಮೆದು ಸ್ಪರ್ಶ
ಮೆಲು ಮಾತು
ಅಂತೂ ಬಂದೆಯಲ್ಲ ಮರಣಶಯ್ಯೆಯಡೆಗಾದರು
ಅದೇ ಸಂತಸ
ಷ್ಟು ಸನಿಹವಿದ್ದೀಯವೆಂದರೆ ದೂರದ ಪರಲೋಕವೂ ಇದೀಗ ಹತ್ತಿರವೆನಿಸುತ್ತಿದೆ
ಕ್ಷಮಿಸಿಬಿಡಿ ಹಳೆಯ ಮಾತುಗಳನ್ನೂ ಮುನಿಸುಗಳನ್ನೂ
ದಾಟಿದ ಮೇಲೂ ಹೊಳೆಯ ಅಂಬಿಗನ ನೆನಪೇಕೆ
ಏನೂ ಕೊಡಲಿಲ್ಲವೆಂಬ ಕೊರಗೇಕೆ ನಿನಗೆ
ಕೊಡುವುದು ಮುಖ್ಯ ಕೊಟ್ಟದ್ದೇನೆಂದಲ್ಲ
ಸುಖವೋ ದು:ಖವೊ
ಬೇಡಬಿಡು ಯಾಕೆ ವೃಥಾ ವಾದವಿವಾದ
ಹೋಗಿಬಿಡುವ ಸಮಯದಲ್ಲೇಕೆ ತೋರುವೆ ಇಷ್ಟೊಂದು ಪ್ರೀತಿಯ
ಸ್ವರ್ಗವೊ ನರಕವೊ
ನೀನಿರದೆಯೂಬದುಕಬಲ್ಲ ಶಕ್ತಿಯ ನೀಡು!
ಕು.ಸ.ಮಧುಸೂದನರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

May 7, 2019

ಒಂದು ಬೊಗಸೆ ಪ್ರೀತಿ - 15

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕತೆ ಅರ್ಧಕ್ಕೆ ನಿಲ್ಲಿಸಿದ ಕಾರಣ ನಿದಿರೆ ಬರಲಿಲ್ಲ. ಎಷ್ಟು ಚೆಂದದ ದಿನಗಳಲ್ವ ಅವು. ಪೂರ್ತಿಯಾಗಿ ಹೇಳಿದರಷ್ಟೇ ನನಗೂ ಸಲೀಸು. ಇವನು ನೋಡಿದರೆ ನಿದ್ರೆ ಬರುತ್ತೆ ಅಂದುಬಿಟ್ಟ. ಅದೇನು ನಿಜವಾಗ್ಲೂ ನಿದ್ರೆ ಬಂದಿತ್ತೊ ಅಥವಾ ನಾನೇ ಜಾಸ್ತಿ ಹೇಳಿ ತಲೆ ತಿಂದೆನೋ? ಫೋನಿನಲ್ಲಿ ಹೇಗೆ ಗೊತ್ತಾಗುತ್ತೆ? ಏನೇ ಅಂದ್ರೂ ಸಾಗರ್ ಸುಳ್ಳೇಳೋ ಪೈಕಿ ಅಲ್ಲ. ಬೋರಾಗಿದ್ರೂ ನಿಜಾನೇ ಹೇಳ್ತಿದ್ದ. ನಾಳೆ ಹೇಳೋದಿಕ್ಕಾಗಲ್ಲ. ನಾಡಿದ್ದು ನೈಟ್ ಡ್ಯೂಟಿ ದಿನ ಬ್ಯುಸಿ ಇದ್ದರೆ ಮತ್ತೆ ಕಷ್ಟ. ಮತ್ಯಾವಾಗ ಹೇಳ್ತೀನೋ ಹೇಳೋದೇ ಇಲ್ವೋ ನೋಡೋಣ. ಮೊಬೈಲ್ ಗುಣುಗುಟ್ಟಿತು.

“ಯಾಕೋ ನಿದ್ರೆ ಬರ್ತಿಲ್ಲ ಕಣೇ. ಪೂರ್ತಿ ಇವತ್ತೇ ಕೇಳ್ಬೇಕು ಅನ್ನಿಸ್ತಿದೆ. ನೀನು ಮಲಗಿಬಿಟ್ಟೋ ಏನೋ. ಗುಡ್ ನೈಟ್” ಎಂದು ಸಾಗರ್ ಮೆಸೇಜು ಕಳುಹಿಸಿದ್ದ. ನನಗೆ ಅನಿಸಿದ್ದೇ ಇವನಿಗೂ ಅನ್ನಿಸಿದೆ. ಹತ್ತಿರದಲ್ಲಿದ್ದಿದ್ದರೆ ತಬ್ಬಿ ಮುದ್ದಾಡುವಷ್ಟು ಖುಷಿಯಾಯಿತು. ತಕ್ಷಣವೇ ಫೋನ್ ಮಾಡಿದೆ.

‘ಹಲೋ’

“ಹಲೋ… ನಿನಗೂ ನಿದ್ದೆ ಬಂದಿಲ್ವ?”

‘ಅರ್ಧ ಕೇಳಿಸ್ಕೊಂಡ ನಿನಗೇ ನಿದ್ದೆ ಬಂದಿಲ್ಲ. ಇನ್ನು ಅರ್ಧ ಹೇಳಿದ ನನಗೆ ಎಲ್ಲಿಂದ ಬರ್ಬೇಕು’

“ಸರಿ ಮುಂದುವರಿಸು”

ಖಾಲಿಯಾಗುತ್ತೇನೆ.

ಅನಿತಾ ಗೌಡ 
ಮೌನ ಪಾಳಿ ಮುಗಿಸಿ
ಮಾತಿಗೆಡೆ ಮಾಡಿಕೊಟ್ಟ ಗಳಿಗೆಯಲ್ಲಿ
ತೂತಾದಂತೆ ಆಕಾಶ ಮಾತುಗಳ ಮಳೆ

ಕಟ್ಟಿಕೊಂಡ ಗೋಡೆಗಳನೊಡೆದು
ಮುಚ್ಚಿಕೊಂಡ ಚಿಪ್ಪುಗಳ ತೆರೆದು
ನೆಲ ಮುಗಿಲುಗಳ ಕಿವಿಗಡಚಿಕ್ಕುವಂತ
ಶಬ್ದಗಳ ದೀಪಾವಳಿ
ಕೇಳಿದ್ದಕ್ಕೆ ಉತ್ತರ
ಮತ್ತದಕ್ಕೆ ಪ್ರತಿ ಪ್ರಶ್ನೆ

May 1, 2019

ಇಂಡಿಯಾದ ಚುನಾವಣೆಗಳು: ಡಿಸ್ಕೌಂಟ್ ಸೇಲಿನ ಬಿಗ್ ಬಜಾರುಗಳು

ಕು.ಸ.ಮಧುಸೂದನ ರಂಗೇನಹಳ್ಳಿ
ಇವತ್ತು ಇಂಡಿಯಾದಲ್ಲಿನ ಸಾರ್ವತ್ರಿಕ ಚುನಾವಣೆಗಳು ತಮ್ಮ ಸಾಂಪ್ರದಾಯಿಕ ಮೌಲ್ಯ ಮತ್ತು ಮಹತ್ವವನ್ನು ಕಳೆದು ಕೊಳ್ಳುತ್ತಿವೆಯೆಂದರೆ ತಪ್ಪಾಗಲಾರದು. ಹಾಗೆಂದು ಕಳೆದ ಏಳು ದಶಕಗಳಲ್ಲಿ ನಡೆದ ಎಲ್ಲ ಚುನಾವಣೆಗಳ ಬಗ್ಗೆಯೂ ಈ ಮಾತು ಹೇಳಲಾಗದು. 

ಆದರೆ ತೊಂಭತ್ತರ ದಶಕದ ನಂತರದಲ್ಲಿ ನಡೆದ ಬಹುತೇಕ ಚುನಾವಣೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಒಂದು ಬೃಹತ್ ಸಂತೆಯ ಸ್ವರೂಪ ಪಡೆದುಕೊಂಡಿವೆ. ಬದಲಾದ ಆರ್ಥಿಕ ನೀತಿಯ ಫಲವಾಗಿ ಪ್ರವರ್ದಮಾನಕ್ಕೆ ಬಂದ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿತು. ಆಗ ನಾಯಿಕೊಡೆಗಳಂತೆ ಹುಟ್ಟಿಕೊಂಡ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳ ದೃಶ್ಯ ಮಾಧ್ಯಮಗಳು ನಮ್ಮ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಹೈಜಾಕ್ ಮಾಡಿಬಿಟ್ಟಿವೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ, ನಮ್ಮ ಸಮೂಹ ಮಾದ್ಯಮಗಳು (ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾದ್ಯಮಗಳು) ಇಡೀ ದೇಶವನ್ನು ಒಂದು ಮಾರುಕಟ್ಟೆಯನ್ನಾಗಿಸಿ (ನಗರದ ಬಾಷೆಯಲ್ಲಿ ಹೇಳುವುದಾದರೆ ಮಾಲ್ ಅನ್ನಾಗಿಸಿ) ಮತದಾರರನ್ನು ಗ್ರಾಹಕರನ್ನಾಗಿಸಿ, ರಾಜಕೀಯ ಪಕ್ಷಗಳು, ಮತ್ತವುಗಳ ನಾಯಕರುಗಳನ್ನು ಮಾರಾಟದ ಸರಕುಗಳನ್ನಾಗಿಸಿ ಬಿಟ್ಟಿವೆ. ಇದಕ್ಕೆ ಕಾರಣವೂ ಸ್ಪಷ್ಟ: ಮುಕ್ತ ಆರ್ಥಿಕ ನೀತಿಯ ನಂತರ ಪ್ರಾರಂಭವಾದ ಬಹುತೇಕ ಸುದ್ದಿವಾಹಿನಿಗಳು ಒಂದಲ್ಲಾ ಒಂದು ಕಾರ್ಪೋರೇಟ್-ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಂತಹ ಬಲಾಢ್ಯ ಶಕ್ತಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡುವ ರಾಜಕೀಯ ಪಕ್ಷಗಳ ಮತ್ತು ಅವುಗಳ ನಾಯಕರುಗಳನ್ನು ತಮ್ಮ ಮಾಧ್ಯಮಗಳ ಮೂಲಕ ಪ್ರಮೋಟ್ ಮಾಡುತ್ತ, ಚುನಾವಣೆಗಳನ್ನು, ಮತ್ತದರ ಪಲಿತಾಂಶಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬರುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿವೆ. ತಮಗೆ ಬೇಕಾದ ಪಕ್ಷಗಳು,ನಾಯಕರುಗಳನ್ನು ಬಣ್ಣಬಣ್ಣದ ಜಾಹಿರಾತುಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುತ್ತ ಮತದಾರರಿಗೆ ಮಾರುತ್ತಿದ್ದಾರೆ. ಇದರ ಕಾರ್ಯವೈಖರಿ ಹೀಗಿದೆ:

Apr 30, 2019

ಒಂದು ಬೊಗಸೆ ಪ್ರೀತಿ - 14

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಮೊದಲ ಭೇಟಿ ಅಂತೆಲ್ಲ ಏನೂ ಇಲ್ಲ ಕಣೋ. ಅವನು ನಾನು ಒಂದೇ ಶಾಲೇಲಿ ಓದಿದ್ದು. ಬೇರೆ ಬೇರೆ ಸೆಕ್ಷನ್ ಇದ್ದೋ. ಮುಖ ಪರಿಚಯ ಇದ್ದೇ ಇತ್ತು’

“ಓ! ಲವ್ ಅಟ್ ಫಸ್ಟ್ ಸೈಟ್ ಅಲ್ಲ ಅನ್ನಪ್ಪ”

‘ಮೊದಲ ನೋಟಕ್ಕೇ ಪ್ರೇಮ ಹುಟ್ಟಿಸುವಷ್ಟೇನು ಚೆನ್ನಾಗಿಲ್ಲಪ್ಪ ನಾನು’

“ನೀನೆಷ್ಟು ಚೆನ್ನಾಗಿದ್ದೀಯ ಅಂತ ನನಗೂ ಗೊತ್ತು. ಕತೆ ಮುಂದುವರಿಸು. ನಾನು ಆ ಹ್ಞೂ ಅಂತ ಏನೂ ಹೇಳಲ್ಲ. ಸುಮ್ನೆ ಕೇಳ್ತಿರ್ತೀನಿ. ಹೇಳುವಂತವಳಾಗು ಧರಣಿ”

‘ಸರಿ ಗುರುಗಳೇ’ ಎಂದ್ಹೇಳಿ ಎಲ್ಲಿಂದ ಪ್ರಾರಂಭಿಸಿವುದೆಂದು ಯೋಚಿಸಿದೆ. ಪಿಯುಸಿಯ ದಿನಗಳಿಂದಲೇ ಪ್ರಾರಂಭಿಸಬೇಕಲ್ಲ ಎಂದುಕೊಂಡು ಹೇಳಲಾರಂಭಸಿದೆ.

‘ಪುರುಷೋತ್ತಮ್ ನಾನು ಒಂದೇ ಶಾಲೇಲಿ ಇದ್ದಿದ್ದು. ಆಗ್ಲೇ ಹೇಳಿದ್ನಲ್ಲ ಬೇರೆ ಬೇರೆ ಸೆಕ್ಷನ್ ಅಂತ. ಅವನ ಗೆಳೆಯನೊಬ್ಬನಿದ್ದ ಅಶೋಕ್ ಅಂತ. ಅವನು ನಮ್ಮ ತಂದೆ ಸ್ನೇಹಿತನ ಮಗ. ಅವಾಗಿವಾಗ ಅಪ್ಪ ಅಮ್ಮನ ಜೊತೆ ಮನೆಗೆ ಬರ್ತಿದ್ದರಿಂದ ಹಾಯ್ ಹೇಗಿದ್ದೀಯ ಅನ್ನುವಷ್ಟು ಪರಿಚಯ. ಶಾಲೆ ಮುಗೀತು. ಕಾಲೇಜು ಸೇರಿದೊ. ಕಾಲೇಜಿನಲ್ಲೂ ಪುರುಷೋತ್ತಮನದು ಬೇರೆ ಸೆಕ್ಷನ್. ಅಶೋಕ್ ಕೂಡ ಅವನದೇ ಸೆಕ್ಷನ್. ಮೊದಲ ವರುಷದ ಪಿಯುಸಿ ಇನ್ನೇನು ಮುಗಿಯುತ್ತಿದ್ದ ಸಮಯ. ನಿನಗೇ ಗೊತ್ತಲ್ಲ, ಮೊದಲ ವರ್ಷ ಓದೋದೆಲ್ಲ ಕಡಿಮೆ ಇರುತ್ತೆ. ಯೂನಿಫಾರ್ಮಿನ ಶಾಲೆಯಿಂದ ಕಲರ್ ಕಲರ್ ಬಟ್ಟೆ ಹಾಕಿಕೊಂಡು ಖುಷಿ ಪಡೋ ಪಿಯುಸಿಗೆ ಸೇರಿದಾಗ ಓದುವ ಮನಸ್ಸೇ ಇರಲ್ಲ. ಈಗ ಬಿಡು ಪಿಯುಸಿಗೂ ಯೂನಿಫಾರ್ಮ್ ಮಾಡಿಬಿಟ್ಟಿದ್ದಾರೆ ಸುಮಾರು ಕಡೆ. ಪರೀಕ್ಷೆ ಹತ್ತಿರವಾದಾಗ ಭಯವಾಗಲು ಶುರುವಾಯಿತು. ಓದಿರೋದು ಇಷ್ಟೇ ಇಷ್ಟು. ಸಿಲಬಸ್ ನೋಡಿದ್ರೆ ಅಷ್ಟೊಂದಿದೆ. ಹತ್ತನೇ ಕ್ಲಾಸಲ್ಲಿ ತೊಂಭತ್ತು ಪರ್ಸೆಂಟ್ ತಗಂಡು ಈಗ ಡುಮ್ಕಿ ಹೊಡ್ದುಬಿಡ್ತೀನೇನೋ ಅಂತ ಭಯ ಆಗೋಯ್ತು. ಇನ್ನು ದೊಡ್ಡ ದೊಡ್ಡ ಪುಸ್ತಕ ಓದುವಷ್ಟಂತೂ ಸಮಯವಿಲ್ಲ. ಗೈಡುಗಳನ್ನು ತೆರೆದು ನೋಡಿದರೂ ಭಯವಾಗುತ್ತಿತ್ತು. ಸೀನಿಯರ್ಸ್ ಹತ್ತಿರ ಸಹಪಾಠಿಗಳತ್ರ ಒಂದಷ್ಟು ನೋಟ್ಸುಗಳಿತ್ತು. ಅದನ್ನೇ ಝೆರಾಕ್ಸ್ ಮಾಡಿಸಿಕೊಳ್ಳೋಣ ಅಂತ ಕಾಲೇಜಿನ ಎದುರುಗಡೆ ಬ್ಯಾಕ್ ಟು ಬ್ಯಾಕ್ ಮೂವತ್ತು ಪೈಸೆಗೆ ಸೀಮೆಎಣ್ಣೆ ಝೆರಾಕ್ಸ್ ಮಾಡಿಕೊಡುತ್ತಿದ್ದ ಅಂಗಡಿಗೆ ಹೋಗಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಒಂದೂ ಮೂವತ್ತಾಗಿತ್ತು. ಕಾಲೇಜಿನವರೆಲ್ಲ ಹೊರಟುಹೋಗಿದ್ದರು. ಅಂಗಡಿಯ ಬಳಿ ಕೂಡ ಹೆಚ್ಚು ಜನರಿರಲಿಲ್ಲ. ಝೆರಾಕ್ಸ್ ಮಾಡಲು ಕೊಟ್ಟು ಅಲ್ಲೇ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದೆ. ಮಧ್ಯೆ ಮಧ್ಯೆ ಹ್ಞೂ ಅನ್ನೋ’

Apr 28, 2019

ಚುನಾವಣಾ ನೀತಿಸಂಹಿತೆ ಎಂಬ ಪ್ರಹಸನ

ಕು.ಸ.ಮಧುಸೂದನರಂಗೇನಹಳ್ಳಿ
ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ.

ಇಲ್ಲಿನ ಮತದಾರರ ಸಂಖ್ಯೆ ತೊಂಭತ್ತು ಕೋಟಿ.ಇಪ್ಪತ್ತು ಲಕ್ಷ ಮತಯಂತ್ರಗಳು. ಒಂದೂಕಾಲು ಕೋಟಿಗೂ ಅಧಿಕ ಮತಗಟ್ಟೆಯನ್ನು ನಿರ್ವಹಿಸುವ ಸಿಬ್ಬಂದಿಗಳು, ಎರಡೂವರೆ ಕೋಟಿಗೂ ಅಧಿಕ ಭದ್ರತಾ ಸಿಬ್ಬಂದಿ. ಅಧಿಕೃತವಾಗಿ ಇಷ್ಟಲ್ಲದೆ ಚುನಾವಣೆಗಳಿಗೆ ಪರೋಕ್ಷವಾಗಿ ನೆರವಾಗುವ ಮೂರು ಕೋಟಿ ಇತರೇ ನೌಕರರು. ಇಷ್ಟು ದೊಡ್ಡ ಮಟ್ಟದ ಚುನಾವಣಾ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಇದುವರೆಗು ಬಹುತೇಕ ಚುನಾವಣೆಗಳು ಶಾಂತಿಯುತವಾಗಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಚುನಾವಣೆಗಳನ್ನು ಹೊರತು ಪಡಿಸಿದರೆ) ನಡೆದಿದ್ದು ತಮ್ಮ ವಿಸ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ.

ಅದರೆ ಈ ಬಾರಿ ನಡೆದ ಇದುವರೆಗಿನ ಮೂರು ಹಂತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿ ಬಿಟ್ಟಿದೆ. ತಾನೆ ವಿಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿಯೆಂಬ ಅನುಮಾನ ತಲೆದೋರುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾದಂತ ದತ್ತ ಅಧಿಕಾರವನ್ನು ಹೊಂದಿರುವ ಆಯೋಗ ಯಾಕೊ ಈ ಅಧಿಕಾರವನ್ನು ಉಪಯೋಗಿಸಿಕೊಳ್ಳುವಲ್ಲಿ ಆಸಕ್ತಿಯನ್ನೇನು ತೋರುತ್ತಿಲ್ಲ. ಚುನಾವಣಾ ಆಯೋಗದ ಈ ಕ್ರಿಯಾಹೀನತೆಯನ್ನು ಕಂಡ ಸುಪ್ರೀಂ ಕೋರ್ಟ ಮದ್ಯಪ್ರವೇಶಿಸಿ ನೀತಿಸಂಹಿತೆ ಉಲ್ಲಂಘಿಸಿದವರ ವಿರುದ್ದಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಸೂಚನೆ ನೀಡಬೇಕಾಗಿ ಬಂದಿತು.

Apr 23, 2019

ಒಂದು ಬೊಗಸೆ ಪ್ರೀತಿ - 13

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಬೆಳಿಗ್ಗೆ ಡ್ಯೂಟಿ ಇಲ್ಲ. ಎದ್ದು ಗಂಡನಿಗೆ ಅಡುಗೆ ಮಾಡಿಕೊಡುವ ಕೆಲಸವೂ ಇಲ್ಲ. ಸೋಮಾರಿ ತರ ಹತ್ತರವರೆಗೆ ಬಿದ್ದುಕೊಂಡಿದ್ದೆ. ಬೆಳಗಾಗೆದ್ದು ಗಂಡನನ್ನು ನೋಡ್ತೀನೋ ದೇವರನ್ನು ನೋಡ್ತೀನೋ ಗೊತ್ತಿಲ್ಲ ಮೊಬೈಲು ನೋಡುವುದು ಅಭ್ಯಾಸವಾಗಿಬಿಟ್ಟಿದೆ. ಏಳು ಮೆಸೇಜುಗಳು ಬಂದಿದ್ದವು ಸಾಗರನಿಂದ. ಒಂದು ಮೆಸೇಜು ರಾಜೀವನಿಂದ ಬಂದಿತ್ತು. “ಗುಡ್ ಮಾರ್ನಿಂಗ್ ಡಿಯರ್” ಎಂದು ರಾಜೀವ್ ಮೆಸೇಜ್ ಕಳುಹಿಸಿದ್ದ. ‘ಗುಡ್ ಮಾರ್ನಿಂಗ್ ರಾಜಿ’ ಎಂದುತ್ತರಿಸಿ ಸಾಗರನ ಮೆಸೇಜುಗಳನ್ನು ತೆರೆದೆ.
“ಇನ್ಯಾವತ್ತೂ ನನಗೆ ಮೆಸೇಜ್ ಮಾಡ್ಬೇಡ. ನಮ್ಮಿಬ್ಬರ ನಡುವೆ ಗೆಳೆತನವೂ ಬೇಡ ಪರಿಚಯವೂ ಬೇಡ”

“ಸಾರಿ ನಿನ್ನೆ ರಾತ್ರಿ ನನ್ನ ಕತೆಯೆಲ್ಲ ಹೇಳಿ ನನ್ನ ಬಗ್ಗೆ ನಿನಗೆ ಅನುಕಂಪ ಮೂಡುವಂತೆ ಮಾಡಿಬಿಟ್ಟೆ ಎನ್ನಿಸುತ್ತೆ. ಸಾರಿ ಸಾರಿ”

“ನಾವಿಬ್ಬರೂ ತಪ್ಪು ಮಾಡ್ತಿದ್ದೀವಿ”

“ಅದೇನು ರಾತ್ರಿಯ ಪರಿಣಾಮವೋ ಇಷ್ಟು ದಿನದ ಹರಟೆಯ ಪರಿಣಾಮವೋ ಗೊತ್ತಿಲ್ಲ. ನಮ್ಮಿಬ್ಬರ ನಿನ್ನೆಯ ವರ್ತನೆ ನನಗೇ ಸರಿಕಾಣುತ್ತಿಲ್ಲ”

“ನನ್ನದೇನೋ ಬಿಡು ನೀನಂತೂ ಈ ರೀತಿ ಮಾಡಬಾರದಿತ್ತು”

“ನಿನಗ್ಯಾಕೆ ಮಧು ಕಂಡರೆ ಹೊಟ್ಟೆಯುರಿಯಬೇಕು, ನನಗ್ಯಾಕೆ ಪುರುಷೋತ್ತಮ್ ಮತ್ತು ರಾಜೀವ್ ಕಂಡರೆ ಜೆಲಸಿಯಾಗಬೇಕು? ಇದೆಲ್ಲ ತಪ್ಪು ಧರಣಿ. ಇಬ್ಬರೂ ಎಲ್ಲೆ ಮೀರಿ ಹೋಗುತ್ತಿದ್ದೇವೆ ಎನ್ನಿಸುತ್ತಿದೆ. ಮತ್ತು ಈ ರೀತಿ ಎಲ್ಲೆ ಮೀರಿ ಹೋಗುವುದು ನನಗಂತೂ ಸ್ವಲ್ಪವೂ ಸರಿ ಕಾಣಿಸುತ್ತಿಲ್ಲ”

Apr 7, 2019

ಒಂದು ಬೊಗಸೆ ಪ್ರೀತಿ - 12

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
“ಓ! ಹಂಗಾದ್ರೆ ನಿನ್ದೂ ಲವ್ ಮ್ಯಾರೇಜಾ”

‘ಹೇಳೋದು ಕಷ್ಟ. ರಾಜೀವ್ ನನ್ನನ್ನು ಮುಂಚಿನಿಂದ ಇಷ್ಟಪಟ್ಟಿದ್ದರು. ಹೈಸ್ಕೂಲು ಮುಗಿಸುವವರೆಗೆ ಅವರ ಮನೆ ನಮ್ಮ ಮನೆ ಅಕ್ಕಪಕ್ಕವೇ ಇತ್ತು. ಅವರು ನಮ್ಮ ಮನೆಗೆ ಆಟವಾಡಲು ಬರುತ್ತಿದ್ದರು, ನಾನು ಅಲ್ಲಿಗೆ ಹೋಗುತ್ತಿದ್ದೆ. ನಾನು ಒಂಭತ್ತನೇ ತರಗತಿಯಲ್ಲಿದೆ ಅನ್ನಿಸುತ್ತೆ. ಕೇರಮ್ ಆಡುತ್ತಿದ್ದಾಗ ‘ಧರಣಿ ಐ ಲವ್ ಯೂ’ ಎಂದುಬಿಟ್ಟಿದ್ದರು. ‘ಏ ಹೋಗೋ’ ಎಂದುತ್ತರಿಸಿ ಎದ್ದುಬಂದಿದ್ದೆ. ಪಿಯುಸಿಗೆ ಬರುವಷ್ಟರಲ್ಲಿ ಸ್ವಂತ ಮನೆಗೆ ಬಂದುಬಿಟ್ಟಿದ್ದೊ. ನಂತರ ರಾಜೀವ್ ಹೆಚ್ಚಾಗಿ ಸಿಗುತ್ತಿರಲಿಲ್ಲ. ಮದುವೆ ನಿಶ್ಚಯವಾಗುವವರೆಗೆ’

“ಇದರಲ್ಲೇನು ಒರಟುತನವಿದೆ?”

‘ಒರಟುತನ ಇರುವುದು ಇದರಲ್ಲಲ್ಲ. ನಾನು ಪ್ರೀತಿಸಿದ್ದು ರಾಜೀವನನ್ನೂ ಅಲ್ಲ’

“ಮತ್ತೆ”

‘ನಾನು ಪ್ರೀತಿಸಿದ ಹುಡುಗನ ಹೆಸರು ಪುರುಷೋತ್ತಮ್ ಅಂತ’ ಅತ್ತ ಕಡೆಯಿಂದ ಹತ್ತು ನಿಮಿಷವಾದರೂ ಏನೂ ಪ್ರತಿಕ್ರಿಯೆ ಬರಲಿಲ್ಲ. ‘ಏನಾಯ್ತು’ ಎಂದು ಕಳುಹಿಸಿದ ಮೆಸೇಜಿಗೂ ರಿಪ್ಲೈ ಬರಲಿಲ್ಲ. ಮಲಗಿಬಿಟ್ಟನೇನೋ ಎಂದುಕೊಂಡೆ. ಇಪ್ಪತ್ತು ನಿಮಿಷದ ನಂತರ “ಸಾರಿ” ಎಂದು ಮೆಸೇಜು ಕಳುಹಿಸಿದ.

Apr 1, 2019

ಅಳಲು ಅಳುಕುತ್ತಾಳೆ

ಕು.ಸ.ಮಧುಸೂದನ್
ಜನಜಂಗುಳಿಯ ದಟ್ಟಾರಣ್ಯದಲ್ಲಿ
ಒತ್ತೊತ್ತಾಗಿ ಕಟ್ಟಿದ ಮನೆಗಳ ಓಣಿಯೊಳಗೀಗ
ನಾಚುತ್ತಾನೆ ಚಂದ್ರ ಹಣಕಲು
ಅಳುಕುತ್ತಾಳವಳು ಬಿಕ್ಕಲು.

ಬಡಿದ ಬಾಗಿಲುಗಳಿಂದಲೂ ತಲೆ ಒಳಹಾಕುತ್ತವೆ
ಮುಚ್ಚಿದ ಕಿಟಕಿಗಳಿಂದೆಯೂ ಕಿವಿಗಳಿರುತ್ತವೆ ಕದ್ದು ಕೇಳಲು
ಆತ್ಮಸಂಗಾತದ ಮಾತು ಉಸುರಿ
ಮೃದು ಮಾಂಸಖಂಡಗಳ ಗೆಬರಿ
ಉರಿಯುವ ಗಾಯಕ್ಕೆ ಸವರಿದಂತೆ ಉಪ್ಪು

Mar 28, 2019

ಒಂದು ಬೊಗಸೆ ಪ್ರೀತಿ - 11

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕರೆಂಟು ಬಂದು ಟಿವಿ ಆನ್ ಆಯಿತು. ಯಾಕಿಷ್ಟು ಖುಷಿ. ಗೊತ್ತಾಗಲಿಲ್ಲ. ಸಾಗರ್ ಇಷ್ಟವಾಗುತ್ತಿದ್ದ. ಎಂಬಿಬಿಎಸ್ ಮಾಡಿದಾಗಲೇ ಇಷ್ಟವಾಗಿದ್ದ, ಈಗ ಮತ್ತಷ್ಟು ಇಷ್ಟವಾಗುತ್ತಿದ್ದಾನೆ. ಹತ್ತಿರವೂ ಆಗುತ್ತಿದ್ದಾನೆ. ಅವನ ಬಗ್ಗೆ ಇನ್ನೂ ಹೆಚ್ಚೇನು ಗೊತ್ತಿಲ್ಲ. ನನ್ನ ಬಗ್ಗೆಯೂ ಅವನಿಗೆ ಇನ್ನೂ ಹೆಚ್ಚು ತಿಳಿದಿಲ್ಲ. ಆದರೂ ಯಾಕವನು ಇಷ್ಟವಾಗಬೇಕು? ಕಪಟ ನಾಟಕವಿಲ್ಲದ ಅವನ ಮಾತುಗಳಿಂದಲೇ ಹೆಚ್ಚು ಇಷ್ಟವಾಗುತ್ತಾನೆ. ಇದ್ದದನ್ನು ಇದ್ದಂಗೆ ಹೇಳಿಬಿಡುವ ಅವನ ಗುಣ ಕೆಲವೊಮ್ಮೆ ಕಿರಿಕಿರಿ ಉಂಟುಮಾಡುತ್ತೆ. ಕೆಲವೊಮ್ಮೆ ಮಾತ್ರ. ಅವನನ್ನು ಭೇಟಿಯಾಗಿ ಎದುರಾಎದುರು ಕುಳಿತು ಮಾತನಾಡಬೇಕು ಅನ್ನಿಸುತ್ತೆ. ನನ್ನಿಡೀ ಜೀವನದ ಕತೆಯನ್ನು ಹೇಳಿಕೊಂಡು ಹಗುರಾಗಬೇಕು ಅನ್ನಿಸುತ್ತೆ. ಏನ್ ಮಾಡೋದು ಅವನಿರೋದು ಮಂಗಳೂರಿನಲ್ಲಿ ನಾನಿರೋದು ಮೈಸೂರಿನಲ್ಲಿ. ಪರೀಕ್ಷೆಯೆಲ್ಲ ಮುಗಿಸಿಕೊಂಡ ತಕ್ಷಣ ಮೈಸೂರಿಗೆ ಬಾ ತುಂಬಾ ಮಾತನಾಡಬೇಕು ನಿನ್ನೊಟ್ಟಿಗೆ ಅಂದುಬಿಡಲಾ? ಅವನ ಪರೀಕ್ಷೆ ಮುಗಿಯೋದಿಕ್ಕೆ ತಿಂಗಳುಗಟ್ಟಲೆ ಕಾಯಬೇಕು. ಮನದ ದುಗುಡವೇನೋ ಅಲ್ಲಿಯವರೆಗೂ ಕಾಯುತ್ತೆ, ಕಾಯೋ ತಾಳ್ಮೆ ನನಗೇ ಇಲ್ಲದಂತಾಗಿದೆ. ಮೆಸೇಜಿನಲ್ಲೇ ಸಾಧ್ಯವಾದಷ್ಟು ಹೇಳಿಬಿಡಬೇಕು ಇವತ್ತೇ. ಈಗಲೇ ಹೇಳಿಬಿಡೋಣ ಎಂದು ಮೊಬೈಲು ತೆಗೆದುಕೊಂಡೆ. ಮೆಸೇಜ್ ಟೈಪು ಮಾಡಲು ಪ್ರಾರಂಭಿಸುವಷ್ಟರಲ್ಲಿ ರಾಜೀವನ ಫೋನ್ ಬಂತು.

‘ಹಲೋ ಎಲ್ರೀ ಇದ್ದೀರ. ನಾಟ್ ರೀಚೆಬಲ್ ಬರ್ತಿತ್ತು’

“ಹನುಮಂತನ ಗುಂಡಿ ಫಾಲ್ಸಿಗೆ ಬಂದಿದ್ದೋ. ಅಲ್ಲಿ ನೆಟ್ ವರ್ಕ್ ಇರಲಿಲ್ಲ. ಈಗ ಮಿಸ್ಡ್ ಕಾಲ್ ತೋರಿಸ್ತು. ಫೋನ್ ಮಾಡ್ದೆ”
‘ಫ್ರೆಂಡ್ಸ್ ಜೊತೆ ಹೋದ ಮೇಲೆ ಇರೋ ಒಬ್ಳು ಹೆಂಡ್ತೀನ ಮರೆತೇಬಿಟ್ರಲ್ಲ’

“ಹೆ ಹೆ. ಹಂಗೆಲ್ಲ ಏನೂ ಇಲ್ಲ ಡಾರ್ಲಿಂಗ್”

‘ಎಷ್ಟು ಕುಡಿದಿದ್ದೀರ’

“ಇಲ್ಲಪ್ಪ”

ವಾಸನೆಯ ಜಾಡಿನಲ್ಲಿ

ಮಾಧವಿ
ಕಾರಿರುಳು ಕಾಡಿದ ಮಳೆಗೆ
ಒದ್ದೆಯಾದ ಚಂದ್ರನೀಗ ಅವಳ ಕಣ್ಣುಗಳೊಳಗೆ
ಅವಿತಿದ್ದಾನೆ
ಅನಾಯಾಸ ಕಣ್ಣೀರು.

ಆಗಿನ್ನೂ ಬರೆಸಿಕೊಂಡ ಕವಿತೆ ಬಿಕ್ಕುತಿದೆ
ಸದ್ದಿರದೆ
ಅವಳ ದು:ಖವನ್ನು ಆವಾಹಿಸಿಕೊಂಡ ಕವಿತೆಯೀಗೆ
ಮೆಲ್ಲನೆದ್ದು
ಹೊರಬಾಗಿಲಿನತ್ತ ತೆವಳುತ್ತದೆ
ಅವನ ಪಾದಗಳ ವಾಸನೆ ಹಿಡಿದು!

ಅವನೋ ಹಲವು ವಾಸನೆಗಳ ಜಾಡು ಹಿಡಿದು ಹೊರಟವ
ಹಿಂದಿರುಗುವ ಮಾತಿಲ್ಲ.
ಅವಳಿಗದರ ನೆದರಿಲ್ಲ…..! 

Mar 18, 2019

ಒಂದು ಬೊಗಸೆ ಪ್ರೀತಿ - 10

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

“ನಮ್ ಫಾರ್ಮಸಿ ಫ್ರೆಂಡ್ಸೆಲ್ಲ ಮೂರು ದಿನ ಚಿಕ್ಕಮಗಳೂರು ಕಡೆಗೆ ಟ್ರಿಪ್ಪು ಹೊರಟಿದ್ದೀವಿ. ನಾಳೆ ರಾತ್ರಿ ಹೊರಡ್ತೀವಿ” ಮನೆಗೆ ಬರುತ್ತಿದ್ದಂತೆ ಘೋಷಿಸಿದರು ರಾಜಿ.

‘ರೀ ನನಗೂ ಈಗ ರಜೆ ಸಿಕ್ತಿತ್ತು. ನಾನೂ ಬರ್ತಿದ್ದೆನಲ್ಲ’

“ಹೇ ಹೋಗೆ. ನಾವು ಹುಡುಗರುಡುಗರು ಹೋಗ್ತಿದ್ದೀವಿ. ಅಲ್ಲಿ ನಿನ್ನ ಕರ್ಕೊಂಡು ಹೋಗೋದಿಕ್ಕಾಗುತ್ತ?”

‘ನಾನು ನೀವೇ ಎಲ್ಲದ್ರೂ ಹೋಗಿ ಬರೋಣ ನಡೀರಿ. ನನಗೂ ಅದೇ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ’

“ಅಯ್ಯೋ ನೀನು ಮುಂಚೆ ಹೇಳ್ಬಾರ್ದ. ನಮ್ ಹುಡುಗರಿಗೆ ಗ್ಯಾರಂಟಿ ಬರ್ತೀನ್ರಮ್ಮ ಅಂತ ಹೇಳ್ಬಿಟ್ಟಿದ್ದೀನಿ”

‘ಹೇಳೋಕ್ಮುಂಚೆ ನನಗೊಂದು ಮಾತು ಕೇಳಬಾರದಾ?’

“ಅಯ್ಯೋ ಹೋಗ್ಲಿ ಬಿಡು. ಮೂರು ದಿನ ಹೋಗಿ ಬಂದುಬಿಡ್ತೀನಿ. ಮುಂದಿನ ವಾರ ನಾವಿಬ್ರೂ ಝುಮ್ಮಂತ ಕಾರಿನಲ್ಲಿ ಎಲ್ಲಿಗಾದರೂ ಹೋಗಿ ಬರೋಣ. ಮತ್ತೆ ವಯನಾಡಿಗೆ ಹೋಗೋಣ್ವಾ?” ಕಣ್ಣು ಮಿಟುಕಿಸುತ್ತ ಕೇಳಿದ.

‘ಮುಂದಿನ ವಾರ ನನಗೆ ರಜೆ ಸಿಗಬೇಕಲ್ಲ. ಏನಾದ್ರೂ ಮಾಡ್ಕೊಳ್ಳಿ. ಫ್ರೆಂಡ್ಸ್ ಜೊತೆ ಹೋಗೋದು ಅಂದ್ರೆ ಎಲ್ಲಿಲ್ಲದ ಖುಷಿ ಬಂದುಬಿಡುತ್ತೆ. ಹೆಂಡತಿ ಜೊತೆ ಹೋಗ್ಬೇಕಂದ್ರೆ ಮುಖ ಸಿಂಡರಿಸಿಕೊಂಡಂಗೆ ಇರುತ್ತೆ. ಅವರ ಜೊತೆ ಇದ್ರೆ ತೂರಾಡಿ ಬೀಳುವಷ್ಟು ಕುಡೀಬೋದಲ್ಲ’

ತೆವಳುವ ಕಾಲ

ಕು.ಸ.ಮಧುಸೂದನ ರಂಗೇನಹಳ್ಳಿ
ಬೇಸಿಗೆ ಬಿಸಿಲಿಗೆ ಕಾದ ನೆಲದೊಳಗೆ 
ಉರಿಯುವ ಕಾಣದ ಕೆಂಪು 
ಮದ್ಯಾಹ್ನದ ಧಗೆಗೆ ಉಬ್ಬೆ ಹಾಕಿದಂತೆ 
ನಿಸ್ತೇಜವಾಗಿ ಬಿಳಿಚಿಕೊಂಡ ಕಣ್ಣುಗಳಿಗೆ ಜೊಂಪು 
ಹೊಲವಿದ್ದರೂ ಹಸಿರಿಲ್ಲ 
ಹಸಿರಿದ್ದರೂ ಉಸಿರಿಲ್ಲ 

ತೆವಳುವ ಮುಳ್ಳುಗಳ ಗಡಿಯಾರ ನಿಂತ ವರುಷ ಜ್ಞಾಪಕಕೆ ಬರುತಿಲ್ಲ 
ಮೊನ್ನೆ ಹಾರಿ ಹೋದ ಹಕ್ಕಿಗಳು 
ಹಿಂದಿನ ಸಾಯಂಕಾಲ ಬಾರದೆ ಇರುಳಿಡೀ ಖಾಲಿಯುಳಿದ ಗೂಡುಗಳು 
ಮೇಯಲು ಹೋದ ಹಸುವ ಹುಲಿ ಹಿಡಿಯಿತೊ 
ಹುಲಿ ಹೆಸರಲಿ ಮನುಜರೇ ಮುಕ್ಕಿದರೊ 
ಹುಡುಕುತ್ತ ಕಾಡಿಗೋದವನ ಹೆಣ ಹೊತ್ತು ತಂದರು 
ಹಾಡಿಯ ಜನ ಗೋಣಿತಾಟೊಳಗೆ ಸುತ್ತಿ 
--- 

Mar 16, 2019

ಮುಗಿದ ಕಥೆ

ಹರ್ಷಿತಾ ಕೆ.ಟಿ
ಏನೋ ಸಾಲುತ್ತಿಲ್ಲ 
ಆದರೂ ಏನೂ ಬೇಕೆನಿಸುತ್ತಿಲ್ಲ
ತೀರಾ ಖಾಲಿಯಾಗಿದೆ ಮನವು 
ಆದರೂ ಏನೋ ಭಾರವೆನಿಸಿದಂತೆ 
ನನ್ನೆಲ್ಲಾ ನೋವುಗಳು ಮಾಗಿರಬೇಕು
ಕಣ್ಣಂಚೂ ಕಟ್ಟೆಯೊಡೆಯುತ್ತಿದೆ ಗಳಿಗೆಗೊಮ್ಮೆ 

ಏನಾಗಿದೆ ನಿನಗೆ ಎಂದು 
ಹುಬ್ಬೇರಿಸಿದಾಗಲೆಲ್ಲಾ ಅವನು 
ನೀನೇ ಕಾರಣ ಎಲ್ಲದಕ್ಕೂ
ಎಂದು ಕುತ್ತಿಗೆ ಪಟ್ಟಿ ಹಿಡಿದು 
ಚೀರಿ ಹೇಳಬೇಕೆನಿಸಿತು 
ಅವನ ಕಣ್ಣಲ್ಲಿ ದಿಟ್ಟಿಸಿ 
ನಾವು ಕಟ್ಟಿದ ಕನಸುಗಳು ಈಗೆಲ್ಲಿ 
ಎಂದು ಕೇಳಬೇಕೆನಿಸಿತು 

Mar 15, 2019

ಪರಿಭ್ರಮಣ

ಹರ್ಷಿತಾ ಕೆ.ಟಿ
ನನ್ನೆಲ್ಲಾ ಕವನಗಳೂ
ಬರೀ ಅವನ ಸುತ್ತಲ್ಲೇ ಸುತ್ತುವವು
ಭ್ರಮಿತ ಜೇನುಹುಳುಗಳಂತೆ
ಕಣ್ಣಂಚು ನೀರು ಕಚ್ಚುವಂತೆ
ಮನಬಿಚ್ಚಿ ನಕ್ಕಿದ್ದು
ಕನ್ನಡಕದ ಮರೆಯಲ್ಲಿ
ಕಂಬನಿಯೆರಡ ಒರೆಸಿದ್ದು
ಚಂದಿರನತ್ತ ಬೊಟ್ಟು ಮಾಡಿ
ಬೆಳದಿಂಗಳ ತುತ್ತು ಉಣಿಸಿದ್ದು

Mar 12, 2019

ಒಂದು ಬೊಗಸೆ ಪ್ರೀತಿ - 9

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ರಾಜೀವ್ ಮದುವೆಯಾದ ಹೊಸತರಲ್ಲಿ ಸರಿಯಾಗೇ ಇದ್ದರು. ಕೇರಳದ ವಯನಾಡಿನ ಹತ್ತಿರವಿರುವ ವಿಲೇಜ್ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು ಹನಿಮೂನಿಗೆಂದು. ತುಂಬಾ ಚೆಂದದ ಜಾಗವದು. ಐದೇ ಐದು ಗುಡಿಸಲಿನಂತಹ ಮನೆ. ಒಂದು ಮೂಲೆಯಲ್ಲಿ ಊಟದ ಕೋಣೆ. ಸುತ್ತಲೂ ಅಡಿಕೆ ತೋಟ. ಅಡಿಕೆಯ ಮಧ್ಯೆ ಅಲ್ಲೊಂದಿಲ್ಲೊಂದು ಬಾಳೆಗಿಡಗಳು. ಸುತ್ತಮುತ್ತ ಎರಡು ಕಿಲೋಮೀಟರು ಯಾವ ಮನೆಯೂ ಇರಲಿಲ್ಲ. ರೂಮು ಹನಿಮೂನಿಗೆಂದು ಬರುವವರಿಗೇ ಮಾಡಿಸಿದಂತಿತ್ತು. ದೊಡ್ಡ ಮಂಚ, ಮೆದುವಾದ ಹಾಸಿಗೆ, ಮಂಚದ ಪಕ್ಕದ ಮೇಜಿನ ಮೇಲೆ ಘಮ್ಮೆನ್ನುವ ಮಲ್ಲಿಗೆ ಮತ್ತು ಸಂಪಿಗೆ ಹೂವು. ಕುಳಿತುಕೊಳ್ಳಲು ಕುರ್ಚಿಯೇ ಇಟ್ಟಿರಲಿಲ್ಲ! ಇನ್ನು ರೂಮಿಗೆ ಹೊಂದಿಕೊಂಡಿದ್ದ ಬಚ್ಚಲು ಕೋಣೆಯಲ್ಲಿ ಒಂದು ಮೂಲೆಗೆ ಕಮೋಡು. ಮತ್ತೊಂದು ಮೂಲೆಯಲ್ಲಿ ಇಬ್ಬರು ಆರಾಮಾಗಿ ಕೂರಬಹುದಾದ ಬಾತ್ ಟಬ್. ಬಿಸಿ ನೀರು ಟಬ್ಬಿನೊಳಗಡೆ ಮಾತ್ರ ಬರುತ್ತಿತ್ತು! ರಾಜಿ ಮುಂದೆ ಮೊದಲು ಬೆತ್ತಲಾಗಿದ್ದು ಬಚ್ಚಲು ಮನೆಯ ಆ ಟಬ್ಬಿನಲ್ಲೇ. ನಾನು ಪ್ಯಾಂಟು ಟಿ ಶರಟು ಧರಿಸಿದ್ದೆ, ಅವರು ಬನಿಯನ್ನು, ಚೆಡ್ಡಿ. ಇಬ್ಬರೂ ಬಟ್ಟೆಯಲ್ಲೇ ಟಬ್ಬಿನೊಳಗಡೆ ಕುಳಿತೆವು. ನಾನು ನೀರು ತಿರುಗಿಸಿದೆ. ಬೆಚ್ಚಗಿನ ನೀರು ದೇಹವನ್ನಾವರಿಸುತ್ತಿತ್ತು. ರಾಜಿ ಮುಖದ ತುಂಬ ಮುತ್ತಿನ ಮಳೆ ಸುರಿಸುತ್ತಿದ್ದರು. ನಿಧಾನಕ್ಕೆ ನನ್ನ ಬಟ್ಟೆಗಳನ್ನೆಲ್ಲ ಕಳಚಿದರು. ಇಬ್ಬರೂ ಬೆತ್ತಲಾಗುವಷ್ಟರಲ್ಲಿ ಟಬ್ಬಿನ ನೀರು ತುಂಬಿತ್ತು. ನೀರಿನೊಳಗಡೆಯೇ ನನ್ನ ದೇಹವನ್ನೆಲ್ಲ ಸ್ಪರ್ಶಿಸಿದರು. ಸತತ ಸ್ಪರ್ಶದ ಕೆಲಸದಿಂದ ಸುಸ್ತಾಗಿ ಕುಳಿತಾಗ ಅವರ ದೇಹವನ್ನು ಸ್ಪರ್ಶಿಸುವ ಕೆಲಸ ನನ್ನದಾಯಿತು. ಗಡುಸಾಗಿದ್ದರು. ಹಾಗೇ ಮೇಲೆ ಎದ್ದು ಬಂದು ಒಂದಷ್ಟು ಚೇಷ್ಟೆ ಮಾಡಿಕೊಳ್ಳುತ್ತ ಮೈ ಒರೆಸಿಕೊಂಡೆವು. ನನ್ನನ್ನು ಹಿಂದಿನಿಂದ ತಬ್ಬಿಕೊಂಡು ‘ಇದು ತುಂಬಾ ಚೆನ್ನಾಗಿದೆ’ ಎಂದು ಎರಡೂ ಮೊಲೆಗಳನ್ನು ಬಿಗಿಯಾಗಿ ಹಿಡಿದುಕೊಂಡರು. ‘ರೀ ಮೆಲ್ಲಗೆ’ ಎಂದು ಕಿರುಚಿದೆ.

Mar 11, 2019

ಹೇಗೆ ?

ಪ್ರವೀಣಕುಮಾರ್ ಗೋಣಿ
ಉಕ್ಕಲಾಡುವ ಭಾವಗಳ
ತೊರೆಗೆ ಹರಿದು ಸಾಗುವ
ಹರಿವಿಲ್ಲದಾಗಿರಲು
ಹಾಡೊಂದು ಮೂಡಿತಾದರೂ ಹೇಗೆ ?

ಸಾಗಬೇಕೆನ್ನುವ ದಾರಿಗಳೆಲ್ಲ
ಮುಂದೆ ಹಾದಿಯಿಲ್ಲದಂತೆ
ಕಂದಕವೇ ನಿಲ್ಲುತ್ತಿರಲು
ಮುನ್ನುಗ್ಗುವ ಹುಕಿ ಮೊಳೆಯುವುದಾದರೂ ಹೇಗೆ ?

Mar 5, 2019

ಸುಮಲತಾ ಅಂಬರೀಷ್ ಗೊಂದು ಪತ್ರ.

ಪ್ರೀತಿಯ ಸುಮಲತಾ ಅಂಬರೀಷ್ ರವರಿಗೆ,

ದಶಕಗಳ ಕಾಲದಿಂದ ಜೊತೆಗಿದ್ೲದ ಸಂಗಾತಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವವರಿಗೆ ಹೇಗಿದ್ದೀರಿ ಅಂತೆಲ್ಲ ಕೇಳಿ ಮುಜುಗರಕ್ಕೊಳಪಡಿಸಬಾರದೆಂಬ ಅರಿವಿದೆ. ಅಂಬರೀಷ್ ಎಂಬ ಚಿತ್ರ ನಟನ ಸಾವು ಅಭಿಮಾನಿ ಜನರ ನೆನಪಿನಿಂದ ದೂರಾಗುವ ಹೊತ್ತಿನಲ್ಲೇ ‘ಸುಮಲತಾ ಅಂಬರೀಷ್' ಎಂಬ ಹೆಸರು ಪತ್ರಿಕೆಗಳಲ್ಲಿ - ಮಾಧ್ಯಮಗಳಲ್ಲಿ ಪದೇ ಪದೇ ಪ್ರಸ್ತಾಪವಾಗುವುದರ ಮೂಲಕ ಅಂಬರೀಷ್ ಎಂಬ ರಾಜಕಾರಣಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತಿದ್ದೀರಿ. ಇನ್ನೇನು ಬರಲಿರುವ ಲೋಕಸಭಾ ಚುನಾವಣೆಗೆ ನಿಲ್ಲಲು ತಾವು ತಯಾರಿ ನಡೆಸುತ್ತಿದ್ದೀರಿ ಎಂಬ ಮಾಹಿತಿ ಪತ್ರಿಕೆಗಳ ಮೂಲಕ ಅರಿವಾಯಿತು. 

ಸುತ್ತಿಬಳಸಿ ಮಾತನಾಡುವ ಬದಲು ನೇರವಾಗಿ ಮುಖ್ಯ ವಿಷಯಕ್ಕೇ ಬರುವುದಾದರೆ ಅಂಬರೀಷ್ ರ ಮಡದಿ ಎಂಬುದೊಂದು ಅಂಶದ ಹೊರತಾಗಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಬೇರಾವ ಅರ್ಹತೆ ನಿಮ್ಮಲ್ಲಿದೆ? ಹೌದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ, ಸಹಜವಾಗಿಯೇ ಆ ಹಕ್ಕು ನಿಮಗೂ ಇದೆ. ಅಂಬರೀಷ್ ರ ಮಡದಿಯಾಗಿರದೆ ಹೋಗಿದ್ದರೂ ನೀವು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡುತ್ತಿದ್ದಿರಾ? ಅಂಬರೀಷ್ ಬದುಕಿದ್ದರೆ ಚುನಾವಣೆಗೆ ನೀವು ನಿಲ್ಲುತ್ತಿದ್ದಿರಾ? ಅಂಬರೀಷ್ ಸಾವಿನ ಸೂತಕದ ಸಂತಾಪದ ಲಾಭ ಪಡೆದು ಗೆಲುವು ಪಡೆಯುವುದಷ್ಟೇ ನಿಮ್ಮ ಉದ್ದೇಶವಾಗಿದೆ ಎಂಬ ಭಾವನೆ ಮೂಡಿದರದು ತಪ್ಪೇ? 

Mar 3, 2019

ಒಂದು ಬೊಗಸೆ ಪ್ರೀತಿ - 8

ondu bogase preeti
ಡಾ. ಅಶೋಕ್. ಕೆ. ಆರ್ 
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಸಾಗರ್ ಅವನಾಗಿದ್ದವನೇ ಮೆಸೇಜು ಮಾಡುತ್ತಿದ್ದುದು ಕಮ್ಮಿ. ನಾನಾಗೇ ‘ಹಾಯ್’ ಎಂದೋ ‘ಏನ್ ಮಾಡ್ತಿದ್ದೆ’ ಎಂದೋ ಮೆಸೇಜು ಮಾಡಿದರೆ ಪ್ರತಿಕ್ರಯಿಸುತ್ತಿದ್ದ. ಅವನಾಗೇ ಮೆಸೇಜು ಮಾಡ್ಲಿ ನೋಡೋಣ ಎಂದು ಕಾದರೆ ಎರಡು ಮೂರು ದಿನವಾದರೂ ಮೆಸೇಜು ಮಾಡುತ್ತಿರಲಿಲ್ಲ. ಕೊನೆಗೆ ನಾನೇ ಮೆಸೇಜು ಮಾಡುತ್ತಿದ್ದೆ. ಉಭಯ ಕುಶಲೋಪರಿಗಳೆಲ್ಲ ಮುಗಿದಿದ್ದವು. ದಿನ ಕಳೆದಂತೆ ವಿನಿಮಯವಾಗುತ್ತಿದ್ದ ಮೆಸೇಜುಗಳ ಸಂಖೈ ಕಡಿಮೆಯಾಗುತ್ತಿತ್ತು. ಅವತ್ತು ನನಗೆ ನೈಟ್ ಡ್ಯೂಟಿ. ಹತ್ತರ ನಂತರ ಹೆಚ್ಚೇನು ರೋಗಿಗಳಿರಲಿಲ್ಲ. ಫೇಸ್ ಬುಕ್ ನೋಡುತ್ತಿದ್ದಾಗೊಂದು ಆಕಳಿಕೆ ಬಂದು ರೂಮಿಗೆ ಹೋದೆ. ಇವನೇನು ಮಲಗಿದ್ದಾನೋ ಹೇಗೆ ಎಂದುಕೊಂಡು ‘ಆಯ್ತಾ ಊಟ’ ಎಂದು ಮೆಸೇಜಿಸಿದೆ.

ಹತ್ತು ನಿಮಿಷದ ನಂತರ ಮೊಬೈಲ್ ವೈಬ್ರೇಟ್ ಆದಾಗ ಅರೆಮಂಪರಿನಲ್ಲಿದ್ದವಳಿಗೆ ಎಚ್ಚರವಾಯಿತು.

“ಆಯ್ತು ನಿಂದು”

‘ಆಗಲೇ ಆಯ್ತು’

“ಮ್. ಏನ್ಮಾಡ್ತಿದ್ದೆ”

‘ಇವತ್ತು ನೈಟ್ ಡ್ಯೂಟಿ ಇತ್ತು. ಪೇಷೆಂಟ್ಸ್ ಕಡಿಮೆ ಇದ್ರು. ಡ್ಯೂಟಿ ಡಾಕ್ಟರ್ಸ್ ರೂಮಲ್ಲಿ ಮಲಗಿದ್ದೆ’

“ಅದೇ ಅಂದ್ಕೊಂಡೆ ಇಷ್ಟೊತ್ತಲ್ಲಿ ಮೆಸೇಜು ಮಾಡಿದ್ದಾಳೆ ಅಂದ್ರೆ ನೈಟ್ ಡ್ಯೂಟಿ ಇರಬೇಕು ಅಂತ”

‘ತಪ್ಪಾ?’

“ಹೇ ತಪ್ಪೇನಿಲ್ಲ. ನೀನು ಫ್ರೀ ಇದ್ದಾಗ ಮೆಸೇಜ್ ಮಾಡ್ತೀಯ. ನಾನು ಫ್ರೀ ಇದ್ದಾಗ ರಿಪ್ಲೈ ಮಾಡ್ತೀನಿ. ಇದರಲ್ಲಿ ತಪ್ಪೇನು ಬಂತು”

Feb 25, 2019

ಒಂದು ಬೊಗಸೆ ಪ್ರೀತಿ - 7

ondu bogase preeti
ಡಾ. ಅಶೋಕ್. ಕೆ. ಆರ್ ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕೆಲವೊಮ್ಮೆ ಮದುವೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ಎನ್ನಿಸಿಬಿಡುತ್ತೆ. ಒಂದಿಷ್ಟು ಪ್ರೀತಿಯೂ ರಾಜೀವನಿಗೆ ನನ್ನ ಮೇಲೆ ಇಲ್ಲವೇನೋ ಎನ್ನುವ ಅನುಮಾನ ಬರುವುದು ಅಪರೂಪವಾದರೂ ಬರುತ್ತದೆಯೆನ್ನುವುದು ಯಾಕೋ ಎಲ್ಲವೂ ಸರಿ ಹೋಗ್ತಿಲ್ಲದಿರುವುದರ ಸೂಚನೆಯಾ? ನಮ್ಮ ಮನೆಯ ಪಕ್ಕವೇ ಅವರ ಮನೆಯಿದ್ದಿದ್ದು. ನಾನು ಎಂಟನೇ ತರಗತಿ ಓದುತ್ತಿರುವಾಗಲೇ ಅವರಿಗೆ ನನ್ನ ಮೇಲೆ ಮನಸ್ಸಿತ್ತಂತೆ. ಆಗವರು ಹತ್ತನೇ ಕ್ಲಾಸು. ‘ಏನ್ರೀ ನಾನು ದೊಡ್ಡೋಳಾಗ್ತಿದ್ದ ವಿಷಯ ಗೊತ್ತಾಗ್ತಿದ್ದಂತೆ ಲೈನ್ ಹೊಡೆಯೋಕೆ ಶುರು ಮಾಡಿದ್ರಾ’ ಎಂದು ರೇಗಿಸುತ್ತಿರುತ್ತೇನೆ. ಮೂಡ್ ಚೆನ್ನಾಗಿದ್ರೆ ನಕ್ಕು ಒಂದು ಮುತ್ತು ಕೊಡುತ್ತಾರೆ, ಎರಡೂ ಕೆನ್ನೆಗೊಂದೊಂದು. ನನಗೇನೋ ಮುತ್ತು ಎಂದರೆ ತುಟಿಗೆ ತುಟಿಗೆ ಒತ್ತಿ ಕಳೆದುಹೋಗೋದೇ ಚೆಂದ ಅನ್ನಿಸುತ್ತೆ. ಅವರಿಗದು ಅಷ್ಟು ಇಷ್ಟವಾಗಲ್ಲ, ಎಂಜಲಾಗುತ್ತೆ ಅಂತಾರೆ! ಮೂಡ್ಸರಿ ಇರಲಿಲ್ಲವಾ ಅದೇ ನಾನು ಜೀವನದಲ್ಲಿ ಮಾಡಿದ ಮೊದಲ ಮತ್ತು ಕೊನೆಯ ತಪ್ಪು. ನಿನ್ನ ಕಟ್ಕೊಳ್ಳದೇ ಹೋಗಿದ್ರೆ ಜೀವನ ಚೆನ್ನಾಗಿರ್ತಿತ್ತು ಅಂತ ಮುಖದ ಮೇಲೆ ಹೊಡೆದಂಗೆ ಹೇಳಿಬಿಡೋರು. ಇವತ್ತು ಸಂಜೆ ಅವರ ಮೂಡು ಸ್ವಲ್ಪವೂ ಸರಿಯಿರಲಿಲ್ಲ ಎನ್ನಿಸುತ್ತೆ. ಬಾಗಿಲು ತೆಗೆಯುತ್ತಿದ್ದಂತೆ ‘ವೆಲಕಮ್ ರಾಜಿ ಡಾರ್ಲಿಂಗ್’ ಎಂದ್ಹೇಳಿ ತಬ್ಬಿಕೊಳ್ಳಲು ಕೈಚಾಚಿದೆ. ಎಷ್ಟೇ ಕೋಪವಿದ್ದರೂ ಒಮ್ಮೆ ತಬ್ಬಿ ದೂರ ತಳ್ಳುತ್ತಿದ್ದರು. ಇವತ್ಯಾಕೋ ಪೂರ್ತಿ ಅನ್ಯಮನಸ್ಕರಾಗಿಬಿಟ್ಟಿದ್ದಾರೆ. ನೆಪಕ್ಕೂ ತಬ್ಬಿಕೊಳ್ಳದೆ “ಬರೀ ಪ್ರೀತಿ ಪ್ರೇಮದಿಂದ ಹೊಟ್ಟೆ ತುಂಬಲ್ಲ ಧರಣಿ. ಮೂರೊತ್ತು ತಬ್ಕೊಂಡು ಮಲಗಿಕೊಂಡ್ರೆ ಇಂತ ಚಿಕ್ಕ ಚಿಕ್ಕ ಬಾಡಿಗೆ ಮನೆಯಲ್ಲೇ ಸತ್ತು ಹೋಗಬೇಕಾಗುತ್ತೆ” ಎಂದ್ಹೇಳಿ ನನ್ನನ್ನು ಬದಿಗೆ ಸರಿಸಿ ಚಪ್ಪಲಿಯನ್ನು ಕಳಚಿ ಸೀದಾ ರೂಮಿಗೋಗಿ ಮಲಗಿಕೊಂಡರು. ಮಧ್ಯಾಹ್ನದ ಅಡುಗೆ ಮಾಡಿ ಸ್ವಲ್ಪೇ ಸ್ವಲ್ಪ ಊಟ ಮಾಡಿದ್ದೆ. ಎರಡು ಘಂಟೆ ಮಲಗಿ ಎದ್ದಾಗ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಬೇಕೆನ್ನಿಸಿತ್ತು. ಗೀಸರ್ ಆನ್ ಮಾಡಿ ಇಪ್ಪತ್ತು ನಿಮಿಷ ಪತ್ರಿಕೆ ಓದಿ ಸ್ನಾನಕ್ಕೆ ಹೋಗಿ ಬೆತ್ತಲಾದೆ. ನೀರು ಸುಡುವಷ್ಟು ಬಿಸಿಯಿತ್ತು. ತಣ್ಣೀರು ಬೆರೆಸಿಕೊಳ್ಳಬೇಕು ಎನ್ನಿಸಲಿಲ್ಲ. ಬಿಸಿ ಬಿಸಿ ನೀರನ್ನು ಸುರಿದುಕೊಳ್ಳುತ್ತಾ ದೇಹದ ಮೇಲೆಲ್ಲಾ ಸೋಪು ಸರಿಸುತ್ತಿರಬೇಕಾದರೆ ಕಾಮನೆಗಳು ಅರಳಿದವು. ನಾನೂ ರಾಜಿ ಸೇರಿ ಹತ್ತು ದಿನದ ಮೇಲಾಗಿತ್ತು. ಇವತ್ತವರು ಆರೂವರೆಗೆಲ್ಲ ಬಂದರೆ ಸಂಜೆಯೇ ಒಮ್ಮೆ ಸೇರಿ ತಬ್ಬಿಕೊಂಡು ಮಲಗಿ ಎದ್ದು ಊಟ ಮಾಡಿ ಮತ್ತೆ ರಾತ್ರಿ ಸುಸ್ತಾಗುವವರೆಗೆ ಸೇರಿಬಿಡಬೇಕು ಎಂದುಕೊಂಡಿದ್ದೆ. ಅದೇ ಮನಸ್ಸಿನಲ್ಲಿ ಅವರನ್ನು ತಬ್ಬಿಕೊಳ್ಳಲು ಬಾಗಿಲು ತೆರೆದರೆ ಈ ರೀತಿಯ ಮಾತುಗಳು. ರೂಮಿಗೆ ಹೋಗಿ ಏನಾಯ್ತುರೀ ಎಂದು ಕೇಳಲೂ ಮನಸ್ಸಾಗಲಿಲ್ಲ. ಹಾಲಿನಲ್ಲೇ ಟಿವಿ ನೋಡುತ್ತಾ ಕುಳಿತೆ.

Feb 17, 2019

ಒಂದು ಬೊಗಸೆ ಪ್ರೀತಿ - 6

ondu bogase preeti
ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮನೆಗೆ ಹೋದರೆ ರಾಜೀವ್ ಇನ್ನೂ ಎದ್ದಿರಲಿಲ್ಲ. ರಾತ್ರಿ ಪಾರ್ಟಿ ಜೋರಾಗಿರಬೇಕು, ಬಾಗಿಲು ತೆರೆದಾಗ ವಿಸ್ಕಿಯ ವಾಸನೆ ಗಮ್ಮೆನ್ನುತ್ತಿತ್ತು. ನಿದ್ರೆಯ ಮತ್ತಲ್ಲೇ ಮುತ್ತು ಕೊಡಲು ಬಂದರು, ‘ಮೊದ್ಲು ಸ್ನಾನ ಮಾಡ್ ನಡೀರಿ. ವಾಸ್ನೆ ಹೊಡೀತಿದೀರ. ಮುತ್ತೆಲ್ಲ ಆಮೇಲೆ’ ನಗುತ್ತ ದೂರ ತಳ್ಳಿದೆ. ರಾತ್ರಿ ಅವರಿಗೆಂದು ಮಾಡಿಟ್ಟಿದ್ದ ಅನ್ನ ಬೇಳೆಸಾರನ್ನು ಅವರು ಮುಟ್ಟೇ ಇರಲಿಲ್ಲ. ಕೆಲವೊಮ್ಮೆ ಬೇಸರವಾಗುತ್ತೆ. ಹೊರಗಡೆ ಕೆಲಸ, ಮನೇಲೂ ಕೆಲಸ. ರಾಜೀವ್ ಒಂದು ಲೋಟವನ್ನೂ ಅತ್ತಿತ್ತ ಜರುಗಿಸುವವರಲ್ಲ. ಇರೋದ್ರಲ್ಲಿ ಅಡುಗೆ ಬಗ್ಗೆ ತಕರಾರು ತೆಗೆಯದೇ ತಿನ್ನುತ್ತಾರೆ. ಮಾಂಸದ ಅಡುಗೆ ಚೆನ್ನಾಗೇ ಮಾಡ್ತೀನಿ ಈ ಸೊಪ್ಪು ತರಕಾರೀದೇ ಸಮಸ್ಯೆ. ನನಗೇ ತಿನ್ನೋದಿಕ್ಕೆ ಬೇಜಾರಾಗುತ್ತೆ ಅಷ್ಟು ಕೆಟ್ಟದಾಗಿ ಮಾಡ್ತೀನಿ. ಎಷ್ಟೇ ಕೆಟ್ಟದಾಗಿ ಮಾಡಿದರೂ ದೂಸರಾ ಮಾತನಾಡದೆ ತಿಂದು ಮುಗಿಸುತ್ತಾರೆ. ನಾನೇ ಕೆಲವೊಮ್ಮೆ ‘ಯಾಕೋ ಊಟ ಮಾಡಂಗಿಲ್ಲ ಕಣ್ರೀ’ ಅಂತ್ಹೇಳಿ ಹಣ್ಣೋ ಬಿಸ್ಕೆಟ್ಟೋ ತಿಂದು ಮಲಗಿಬಿಡ್ತೀನಿ. ನಿನ್ನೆ ಬರೀ ಬೇಳೆಸಾರು ಮಾಡಿದ್ದೆ ನೀರು ನೀರಾಗಿತ್ತು. ನನ್ನದೂ ನೈಟ್ ಡ್ಯೂಟಿ ಇತ್ತಲ್ಲ ಇವರು ಹೊರಗೇ ಕುಡಿದು ಊಟಾನೂ ಮುಗಿಸಿ ಬಂದಿರಬೇಕು. ‘ಅನ್ನ ಸಾರು ತಿನ್ನದೇ ಇದ್ರೆ ಫ್ರಿಜ್ಜಿನೊಳಗಿಡೋದಿಕ್ಕೂ ಆಗಲ್ವ’ ಅಡುಗೆ ಮನೆಯೊಳಗಿಂದ ಕೂಗಿ ಹೇಳಿದೆ. ‘ಮಲ್ತುಬುಟ್ಟೆ’ ಹಲ್ಲುಜ್ಜುತ್ತ ಉತ್ತರಿಸಿದ ರಾಜೀವ. ವಾಸನೆ ನೋಡಿದೆ ಅನ್ನ ಚೆನ್ನಾಗಿತ್ತು. ಸಾರು ಹಳಸಿತ್ತು. ಸದ್ಯ ಕೆಟ್ಟಿರದಿದ್ದರೆ ಇವತ್ತು ಮಧ್ಯಾಹ್ನ ಅದನ್ನೇ ತಿನ್ನಬೇಕಿತ್ತು! ‘ನೋಡಿ ನೀವು ಮಾಡೋ ಕೆಲಸಕ್ಕೆ ಸಾರು ಕೆಟ್ಟೇ ಹೋಗಿದೆ. ಮಧ್ಯಾಹ್ನಕ್ಕೆ ಮತ್ತೆ ಮಾಡಬೇಕು’ ಎಂದು ರೇಗಿದಂತೆ ಮಾಡಿ ‘ಡ್ಯೂಟಿಗೆ ಹೋಗೋ ಮೊದಲು ಒಂದಾರು ಮೊಟ್ಟೆನಾದರೂ ತಂದಿಟ್ಟು ಹೋಗಿ ಮೊಟ್ಟೆ ಸಾರಾದ್ರೂ ಮಾಡಿಡ್ತೀನಿ’ ಎಂದೆ. ಸ್ನಾನ ಮಾಡುತ್ತಿದ್ದರೇನೋ. ಉತ್ತರಿಸಲಿಲ್ಲ. ಸ್ನಾನ ಮಾಡುವಾಗ ಮೆಲ್ಲಗಿನ ದನಿಯಲ್ಲಿ ಹಾಡು ಗುನುಗುತ್ತಿರುತ್ತಾರೆ. ಅವರದೇ ಲೋಕ. ಹೊರಗೆ ಏನು ನಡೆದರೂ ಉತ್ತರಿಸುವುದಿಲ್ಲ. ತಲೆಯಲ್ಲಿರುವ ಸಾವಿರ ಚಿಂತೆಗಳನ್ನು ಮರೆತು ಅವರು ಸುಖವಾಗಿರುವುದು ಬಚ್ಚಲುಮನೆಯಲ್ಲಿ ಮಾತ್ರ! ಈ ಬಚ್ಚಲುಮನೆಯನ್ನು ಕಂಡರೆ ನನಗೆ ಸವತಿ ಮಾತ್ಸರ್ಯ! ಸ್ನಾನ ಮುಗಿಸಿ ಸೊಂಟಕ್ಕೊಂದು ಟವೆಲ್ ಸುತ್ತಿಕೊಂಡು ಹೊರಬರುವಾಗ “ಏನೋ ಹೇಳ್ತಿದ್ದೆ?” ಎಂದರು.

Feb 14, 2019

ಚೀನಾದ ಏರ್‌ ಫಿಲ್ಟರ್ರೂ ಇಂಡಿಯಾದ ಪ್ರತಿಮೆಗಳೂ…….


ಚೀನಾದ ಏರ್‌ ಫಿಲ್ಟರ್;‌ ಚಿತ್ರಮೂಲ: ಸೌತ್‌ ಚೀನಾ ಪೋಸ್ಟ್.
ಡಾ. ಅಶೋಕ್.‌ ಕೆ. ಆರ್ 
ಮೊನ್ನೆ ಟೀ ಅಂಗಡಿಯ ಬಳಿ ಒಂದಷ್ಟು ಇಂಜಿನಿಯರ್‌ ಹುಡುಗರು ಹರಟುತ್ತಿದ್ದರು.
'ಅಲ್ಲಾ ಗುರು… ಆ ಚೀನಾದ್‌ ನನ್‌ ಮಕ್ಳು ದೊಡ್ ದೊಡ್‌ ಏರ್‌ ಫಿಲ್ಟರ್ರುಗಳನ್ನು ಕಟ್ತಾ ಇದ್ರೆ ಈ ನನ್‌ ಮಕ್ಳು ಅಷ್ಟುದ್ದದ್‌ ಸ್ಟಾಚ್ಯೂ ಕಟ್ಕಂಡ್‌ ಕುಂತವ್ರಲ್ಲ….ʼ
'ಕಾಗೆ ಹಿಕ್ಕೆ ಹಾಕೋಕೆʼ
ನಗು…
'ಹಂಗೂ ಕಟ್ಲೇ ಬೇಕೂಂತಿದ್ರೆ ಕರ್ನಾಟಕದಲ್ಲೇ ಕಟ್ಬೋದಿತ್ತಪ್ಪ….. ಗುಜರಾತ್ಗೇ ಮಾಡ್ಬೇಕಿತ್ತಾ….. ಇಲ್ಲೀನೋರೇನು ವೋಟ್‌ ಹಾಕಿರ್ನಿಲ್ವ…..ʼ
'ಎಲ್ಲಾದ್ರೂ ಸರೀನೇ…ಯಾಕ್‌ ಕಟ್ಬೇಕು….ʼ
ಸ್ಟ್ಯಾಚು ಆಫ್‌ ಯೂನಿಟಿ; 
ಚಿತ್ರಮೂಲ: ಫೈನ್ಯಾನ್ಶಿಯಲ್‌  
ಹೌದಲ್ಲ ನಮ್ಮಲ್ಲೇನು ಮಾಲಿನ್ಯಕ್ಕೆ ಕೊರತೆಯಿದೆಯೇ? ಇಲ್ಲವಲ್ಲ. ದೆಹಲಿ, ಬೆಂಗಳೂರು, ಕೊಲ್ಕೊತ್ತಾ, ಚೆನ್ನೈ, ಮುಂಬೈಯಂತಹ ಪ್ರದೇಶಗಳಲ್ಲಿ ನಮ್ಮೆಲ್ಲರ ಕೊಡುಗೆಯಾಗಿ ಅಪಾರ ಪ್ರಮಾಣದ ಗಾಳಿ ಮಲಿನಗೊಂಡಿದೆ. ಈಗಾಗಲೇ ಅನೇಕರು ಮನೆಗಳಲ್ಲಿ ಏರ್‌ ಫಿಲ್ಟರ್ರುಗಳನ್ನು ಬಳಸಲಾರಂಭಿಸುತ್ತಿದ್ದಾರೆ. ಮನೆಯಿಂದ ಹೊರಬಂದಾಗ, ರಸ್ತೆಯಲ್ಲಡ್ಡಾಡುವಾಗ ಕೂಡ ಏರ್‌ ಫಿಲ್ಟರ್ರುಗಳ ಅವಶ್ಯಕತೆ ಇದ್ದೇ ಇದೆಯಲ್ಲ. ಸಾರ್ವಜನಿಕ ಏರ್‌ ಫಿಲ್ಟರ್ರುಗಳನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವುದು ಅನಿವಾರ್ಯವಾಗುತ್ತಿರುವ ದಿನಗಳಲ್ಲೂ ನಮ್ಮಲ್ಲೇಕೆ ಇನ್ನೂ ವಿಶ್ವದ ದೊಡ್ಡ ಪ್ರತಿಮೆ, ರಾಮನ ದೊಡ್ಡ ಪ್ರತಿಮೆ, ಕಾವೇರಿ ಮಾತೆಯ ದೊಡ್ಡ ಪ್ರತಿಮೆಯ ಬಗ್ಗೆಯೇ ತಲೆಕೆಡಿಸಿಕೊಳ್ಳಲಾಗುತ್ತಿದೆ? ಸಾರ್ವಜನಿಕ ಏರ್‌ ಫಿಲ್ಟರ್ರುಗಳ ಪ್ರಾಯೋಗಿಕ ಬಳಕೆ ನಮ್ಮದೇ ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ನಡೆಯುತ್ತಿದೆ, ಅದರ ಗಾತ್ರ ಚೀನಾದ ನೂರು ಮೀಟರ್‌ ಎತ್ತರದ ಏರ್‌ ಫಿಲ್ಟರ್ಗೆ ಹೋಲಿಸಿದರೆ ತುಂಬಾ ತುಂಬಾ ಸಣ್ಣದು. ಪೂರ್ತಿ ಗಾಳಿ ಗಬ್ಬೆದ್ದು ಹೋಗಲಿ ಎಂದು ಕಾಯುತ್ತಿದ್ದೇವಾ? ಅಥವಾ ನಮಗೆ ಪ್ರತಿಮೆಗಳೇ ಮುಖ್ಯವಾ?

Feb 12, 2019

ಉತ್ತರವೆಲ್ಲಿಂದ ತರುವುದು?

ಕು.ಸ.ಮಧುಸೂದನ ರಂಗೇನಹಳ್ಳಿ
ಮೊನ್ನೆಯಿನ್ನೂ ಆ ಊರ ತಿರುವಿನಲ್ಲಿ
ಬೇಟಿಯಾಗಿದ್ದೆವು
ಹಗಲಿನಿಂದ ಒದೆಸಿಕೊಂಡ ಸಂಜೆ
ಮುನಿಸಿಕೊಂಡು
ಮಬ್ಬುಗತ್ತಲ ಜೊತೆ ಜಗಳವಾಡುತ್ತ
ಇರುಳ ಕಪ್ಪನ್ನು ತಾನು ಮೆತ್ತಿಕೊಂಡಿದ್ದಲ್ಲದೆ
ನಮಗೂ ಮೆತ್ತಿ
ಮೌನ ಮೀರಿ ಬರಲಾಗದ ಶಬುದಗಳು

Feb 11, 2019

ಮತ್ತೆ ಮತ್ತೆ ಬೇಕೆನಿಸುತ್ತದೆ

ಪ್ರವೀಣಕುಮಾರ್ ಗೋಣಿ
ಸುಖಾಸುಮ್ಮನೆ ಕಾಲವಲ್ಲದ
ಕಾಲದೊಳಗೆ ಸುರಿದು
ಸುಮ್ಮನಾಗುವ ಮಳೆಯಂತೆ
ವಿನಾಕಾರಣ ಕಂಗಳೊದ್ದೆಯಾಗುವಾಗ
ನಿನ್ನ ಅಂಗೈಯ ಬಿಸಿಯನ್ನ ಕೆನ್ನೆ ಬಯಸುತ್ತದೆ .

ಜಿಗಿ ಜಿಗಿಯೆನಿಸುವ ನಗರವೆನ್ನುವ
ನಾಗಾಲೋಟದ ಜಾತ್ರೆಯು
ಸಾಕೆನಿಸಿ ಒಬ್ಬಂಟಿಯಾಗಿ
ತಿರುಗಿ ಬರಲು ದಾರಿಯೇ ಇರದ
ದುರ್ಗಮ ಕಾಡೊಳಗೆ ಕಳೆದುಹೋಗಿಬಿಡಬೇಕೆನ್ನುವ
ಕಾಂಕ್ಷೆ ಕಾಡಿದಾಗಲೆಲ್ಲ ನನ್ನಯ
ಕಿರುಬೆರಳು ನಿನ್ನ ಹಸ್ತದ ಕೊಂಡಿಗೆ ಕಾತರಿಸುತ್ತದೆ .

Feb 10, 2019

ಒಂದು ಬೊಗಸೆ ಪ್ರೀತಿ - 5

ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೀನು ಸಾರು ತಿನ್ನದೆ ಮನೆಗೆ ವಾಪಸ್ಸಾದೆ. ತಿನ್ನಮ್ಮ ಎಂದು ಹೇಳುವ ಮನಸ್ಸು ಯಾರಿಗೂ ಇರಲಿಲ್ಲ. ತಿನ್ನುವ ಮನಸ್ಸು ನನಗೂ ಇರಲಿಲ್ಲ. ರಾಜೀವ್ ಹೊರಗೆ ಸಿಗರೇಟ್ ಸುಡಲು ಹೋಗಿದ್ದರು. ಬಾಗಿಲು ತೆರೆದು ಸೋಫಾ ಮೇಲೆ ಮಲಗಿದೆ. ರಾಜೀವ್ ಫೋನಿನಲ್ಲಿ ಯಾರೊಡನೆಯೋ ಖುಷಿಖುಷಿಯಾಗಿ ಮಾತನಾಡುತ್ತಾ ಬರುತ್ತಿದ್ದರು. ಮನೆ ಬಾಗಿಲು ತೆಗೆದಿದ್ದನ್ನು ಕಂಡು ‘ಆಮೇಲೆ ಮಾಡ್ತೀನಿ’ ಅಂತ್ಹೇಳಿ ಫೋನ್ ಕಟ್ ಮಾಡಿದರು. ನನ್ನ ಮುಂದೆ ಅವರು ಮಾತನಾಡದೇ ಇರುವುದು ಅಶ್ವಿನಿಯೊಂದಿಗೆ ಮಾತ್ರ. ಅದು ನನಗೂ ಗೊತ್ತಿತ್ತು. ಎಲ್ಲರ ವಿಷಯಾನೂ ನನ್ನ ಬಳಿ ಹೇಳ್ತಾರೆ ಆದರೆ ಅಶ್ವಿನಿ ವಿಷಯ ಮಾತ್ರ ಯಾವೊತ್ತಿಗೂ ಮಾತನಾಡುವುದಿಲ್ಲ. ಹಂಗಂತ ಅವರ ಮೇಲೆ ಅನುಮಾನವೇನೂ ಇಲ್ಲ ನನಗೆ. ಸ್ವಲ್ಪ ಜಾಸ್ತೀನೇ ಕ್ಲೋಸ್ ಫ್ರೆಂಡ್, ಬಹುಶಃ ನಮ್ಮಿಬ್ಬರ ನಡುವಿನ ಜಗಳವನ್ನೂ ಹೇಳಿಕೊಳ್ಳುವಷ್ಟು ಕ್ಲೋಸ್. ಹಾಗಾಗಿ ನನ್ನ ಮುಂದೆ ಮಾತನಾಡುವುದಿಲ್ಲವೇನೋ ಎಂದುಕೊಂಡು ಸುಮ್ಮನಾಗಿದ್ದೆ. ಕೆಣಕಲು ಹೋಗಿರಲಿಲ್ಲ. ಸೋಫಾದ ಮೇಲೆ ಮಲಗಿ ತಾರಸಿ ನೋಡುತ್ತಿದ್ದವಳನ್ನು ಗಮನಿಸಿಯೇ ಅವರಿಗೆ ವಿಷಯದ ಅರಿವಾಗಿರಬೇಕು.

“ಬಯ್ಯಿಸಿಕೊಂಡು ಬಂದ”

‘ನಿಮಗೇಗ್ ಗೊತ್ತು’

“ನಿಮ್ಮಪ್ಪ ಬಯ್ದಾಗ ಉಪ್ ಅಂತಿರೋ ನಿನ್ನ ಮುಖ ನೋಡಿದ್ರೆ ಗೊತ್ತಾಗಿಬಿಡುತ್ತೆ ಡಾರ್ಲಿಂಗ್. ಯಾವ ವಿಷಯಕ್ಕೆ ಬಯ್ದರು”

‘ಶಶಿ – ಸೋನಿಯಾ ವಿಷಯ’

Feb 3, 2019

ಒಂದು ಬೊಗಸೆ ಪ್ರೀತಿ - 4

ಡಾ. ಅಶೋಕ್. ಕೆ. ಆರ್ . 
ಕಾದಂಬರಿಯ ಹಿಂದಿನ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ನಾನ್ ಸ್ವಲ್ಪ ಅಪ್ಪನ ಮನೆಗೆ ಹೋಗಿ ಬರ್ತೀನಿ ಅಂದಾಗ ಇವರು ‘ನಾನು ಬರ್ತೀನಿರು. ಒಬ್ಬನೇ ಏನ್ ಮಾಡ್ಲಿ’ ಅಂದ್ರು. ಬೇಡಾರೀ ಸ್ವಲ್ಪೇನೋ ಮಾತನಾಡೋದಿದೆ, ನಾನು ಬಂದು ನಿಮಗೆ ಎಲ್ಲ ವಿವರಿಸಿ ಹೇಳ್ತೀನಿ ಎಂದು ಸುಮ್ಮನಾಗಿಸಿ ಹೊರಟೆ. ಶಶಿ ಏನೂ ಆಗುತ್ತಿಲ್ಲವೆಂಬಂತೆ ಗಡದ್ದಾಗಿ ತಿಂದು ಟಿವಿ ನೋಡುತ್ತ ಕುಳಿತಿದ್ದ.

“ಇದೇನಮ್ಮ. ಏನೂ ಹೇಳದೆ ಬಂದುಬಿಟ್ಟೆ. ರಾಜೀವ್ ಬರಲಿಲ್ಲವಾ?” ಟಿವಿ ನೋಡುತ್ತ ಕುಳಿತಿದ್ದ ಅಮ್ಮ ಕೇಳಿದರು.

‘ಎಲ್ಲೋ ಫ್ರೆಂಡ್ಸ್ ನೋಡೋದಿಕ್ಕೆ ಹೋಗಿದ್ದರು. ಮನೇಲಿ ಒಬ್ಳಿಗೇ ಬೇಜಾರಾಗ್ತಿತ್ತು. ಹೊರಟು ಬಂದೆ’ ಎಂದು ಬಾಯಿಗೆ ಹೊಳೆದ ಸುಳ್ಳನ್ನು ಹೇಳಿದೆ.

“ಸರಿ. ಊಟ ಮಾಡ್ ನಡಿ”

‘ಇಲ್ಲಮ್ಮ. ಊಟ ಆಯ್ತು’

“ಮೀನ್ ಸಾರು ಮಾಡಿದ್ದೆ. ಸ್ವಲ್ಪ ತಿನ್ನು”

Feb 1, 2019

ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಮೈತ್ರಿಕೂಟ ರಚನೆಯಾಗುತ್ತದೆಯೇ?

ಕು.ಸ.ಮಧುಸೂದನರಂಗೇನಹಳ್ಳಿ
ತಮಿಳುನಾಡಿನ ಅಧಿಕಾರರೂಢಪಕ್ಷ ಎ.ಐ.ಎ.ಡಿ.ಎಂ.ಕೆ. ನಿದಾನವಾಗಿ ಬಾಜಪ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದತ್ತ ಸರಿಯುತ್ತಿರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರವಾಗುತ್ತಿವೆ. ಬಾಜಪ ಸಹ ಇದಕ್ಕೆ ಪೂರಕವಾಗಿಯೇ ತನ್ನ ರಾಜಕಾರಣದ ದಾಳಗಳನ್ನು ಉರುಳಿಸುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ಕಷ್ಟವೆಂಬುದು ಬಾಜಪಕ್ಕೆ ಮನವರಿಕೆಯಾಗಿದೆ. ಕೆಲತಿಂಗಳ ಹಿಂದೆ ನಡೆದ ಮದ್ಯಪ್ರದೇಶ, ರಾಜಾಸ್ಥಾನ, ಚತ್ತೀಸಗಡ ಮೂರು ರಾಜ್ಯಗಳ ವ್ಯತಿರಿಕ್ತ ಪಲಿತಾಂಶ, ದಿನದಿಂದ ದಿನಕ್ಕೆ ಗಟ್ಟಿಯಾಗುವತ್ತ ನಡೆದಿರುವ ವಿರೋಧಪಕ್ಷಗಳ ಮಹಾಮೈತ್ರಿಯ ಮಾತುಗಳು, ಉತ್ತರಪ್ರದೇಶದಲ್ಲಿ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನಡೆದ ಸ್ಥಾನ ಹೊಂದಾಣಿಕೆಯ ಅಂತಿಮ ಪ್ರಕ್ರಿಯೆ, ಕೊಲ್ಕೊತ್ತಾದಲ್ಲಿ ತೃಣಮೂಲ ಕಾಂಗ್ರೇಸ್ಸಿನ ನಾಯಕಿ ಕುಮಾರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ವಿರೋಧಪಕ್ಷಗಳ ಬೃಹತ್ ರ್ಯಾಲಿ, ಉತ್ತರ ಪ್ರದೇಶದ ರಾಜಕಾರಣಕ್ಕೆ ಕಾಂಗ್ರೇಸ್ಸಿನ ಪ್ರಿಯಾಂಕಗಾಂದಿ ಪ್ರವೇಶಿಸಿರುವುದು ಬಾಜಪ ನಾಯಕರುಗಳ ನಿದ್ದೆಗೆಡಿಸಿರುವುದು ನಿಜ. ಇದರ ಜೊತೆಗೆ ಅದರ ಕೆಲವು ಮಿತ್ರಪಕ್ಷಗಳು ದೂರವಾಗಿವೆ. ಆಂದ್ರಪ್ರದೇಶದ ತೆಲುಗುದೇಶಂ ಹಾಗು ಜಮ್ಮು ಕಾಶ್ಮೀರದ ಪಿ.ಡಿ.ಪಿ. ಪಕ್ಷಗಳು ಈಗಾಗಲೇ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬಂದಿವೆ.ಮಹಾರಾಷ್ಟ್ರದಲ್ಲಿ ಶಿವಸೇನೆ ಬಾಜಪದ ವಿರುದ್ದ ಸ್ವತಂತ್ರವಾಗಿ ಸ್ಪರ್ದಿಸುವುದಾಗಿ ಹೇಳಿಕೊಂಡಿದೆ. ಈ ನಡುವೆ ಬಿಹಾರದ ಮುಖ್ಯಮಂತ್ರಿಗಳಾದ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ತ್ರಿವಳಿ ತಲಾಖ್ ಮತ್ತು ಪೌರತ್ವ ಮಸೂದೆಗಳ ಬಗೆಗಿನ ಕೇಂದ್ರ ಸರಕಾರದ ನೀತಿಗಳನ್ನು ನೇರವಾಗಿಯೇ ಟೀಕಿಸುತ್ತಿದ್ದಾರೆ. ಈಗಾಗಲೇ ಬಾಜಪದೊಂದಿಗೆ ಮಾಡಿಕೊಂಡಿರುವ ಸ್ಥಾನ ಹೊಂದಾಣಿಕೆಯ ಕರಾರನ್ನು ಕೊನೆಗಳಿಗೆಯಲ್ಲಿ ಅವರು ಮುರಿದರೂ ಅಚ್ಚರಿಯೇನೂ ಇಲ್ಲ.

ನೋಡೊಮ್ಮೆ ನಿನ್ನೊಳಗೇ

 ಪ್ರವೀಣಕುಮಾರ್ .ಗೋಣಿ
ಮನಸು ಬೇಸತ್ತು ಹೋದಾಗ
ತನುವ ಸತುವೆಲ್ಲ
ಆವಿಯಾದಂತಾಗಿ ಬಳಲಿದಾಗ
ಬತ್ತದಂತಿರುವ ಉಲ್ಲಾಸದ
ನಿನ್ನದೇ ಅಂತರ್ಯವನ್ನೊಮ್ಮೆ ಇಣುಕಿ ನೋಡು .

ದಾರಿಗಳೇ ಕಾಣದಾಗಿ
ಕಣ್ಣಿಗೆ ಕಗ್ಗತ್ತಲಾವರಿಸಿ ನಿಂತು
ಸಾಕೆಂದು ಕೈಚೆಲ್ಲಿ ಕೂತಾಗ
ತಗ್ಗಿಸಿದ ನೆತ್ತಿ ಇಟ್ಟುಕೊಂಡೆ
ಒಂದು ಕ್ಷಣಕ್ಕೆ ಅಂತರ್ಯವನ್ನೊಮ್ಮೆ
ಇಣುಕಿ ನೋಡು .

Jan 31, 2019

ಒಂದಿಷ್ಟು ಸಾಲುಗಳು.

ಶೀಲಾ ಭಂಡಾರ್ಕರ್.
ದೀಪ ಹಚ್ಚಿಡಬೇಕು
ಕನಸುಗಳನರಸಲು,
ಕತ್ತಲೆಯೇ ಬೇಕು
ನೆನಪುಗಳ ಕರಗಿಸಲು!

ಸಂಬಂದ ಯಾವುದೇ ಇರಲಿ
ಮನಸು ಬಯಸುವುದು
ನಿರಾಳತೆಯ ಮಾತ್ರ!

ಪಶ್ಚಿಮ ಪೂರ್ವದತ್ತ ಮುಖ ಮಾಡಿದಾಗ

ಕು.ಸ.ಮಧುಸೂದನರಂಗೇನಹಳ್ಳಿ
ಬೆಳಕಿನಲಿ ಬೆತ್ತಲಾಗಲು ನಾಚಿದವರೆಲ್ಲ
ಕಾಯುತ್ತಿದ್ದಾರೆ ಕತ್ತಲಿಗಾಗಿ
ಕಟ್ಟಿದ ಕೋಟೆಗಳ ಕೆಡವಿ
ಎತ್ತರಿಸಿದ್ದ ಗೋಡೆಗಳ ಒಡೆದು
ಇದ್ದಬದ್ದಬಾಗಿಲು ಕಿಟಿಕಿಗಳನ್ನು ತೆಗೆದೆಸೆದರು
ಬೆಳಗುತ್ತಿದ್ದ ಸೂರ್ಯನಿಗೆ ಠಾರು ಬಳಿದರು

Jan 27, 2019

ನಾನೂ-ನೀನೂ! ಎಂಬೋ ಎರಡು ಕವಿತೆಗಳು

ಕು.ಸ.ಮಧುಸೂದನರಂಗೇನಹಳ್ಳಿ
ಕವಿತೆ ಒಂದು-ನನ್ನದು!
ನಮ್ಮವಾಗಬೇಕಿದ್ದ ಅದೆಷ್ಟೋ ಇರುಳುಗಳು
ಅರಳದೆಯೇ ಇತಿಹಾಸವಾದವು
ಅರಸಿಹೊರಟ ಬೆಳಕಿನ ಕಿರಣಗಳು
ಬೆಳಗದೆಯೇ ಒರಗಿದವು.

ನಮ್ಮದೆಂದುಕೊಂಡ ಅದೆಷ್ಟೋ ಹಗಲುಗಳು
ಬೆಳಗಾಗುವ ಮೊದಲೇ ನೇಣಿಗೇರಿದವು
ಈಗ ಹುಡುಕಿ ಹೊರಟಿಹೆವು ನನ್ನ ನೀನು
ನಿನ್ನ ನಾನೂ
ಆರಿಹೋದ ದೊಂದಿ ಹಿಡಿದು
ಬೆಳಕಾಗಿ ಬರುವ ಮಿಂಚುಹುಳುಗಳ ನಂಬಿ
ನಡುವೆ ಹರಡಿದ ಕತ್ತಲ
ತೊಲಗಿಸುವಂತಹ ಮಾತೊಂದನಾಡಲು
ಕಾಯುತ್ತಿದ್ದೇವೆ

ಒಂದು ಬೊಗಸೆ ಪ್ರೀತಿ - 3

ondu bogase preethi
ಡಾ. ಅಶೋಕ್. ಕೆ. ಆರ್. 
ಕಾದಂಬರಿಯ ಹಿಂದಿನ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಡ್ಯುಟಿಯ ನಡುವೆ ಬಿಡುವಾದಾಗ ಕಂಪ್ಯೂಟರ್ ಆನ್ ಮಾಡಿ ಮೇಲ್ ತೆರೆದೆ. ಕ್ರೆಡಿಟ್ ಕಾರ್ಡ ತಗೊಳ್ಳಿ, ಸೈಟು ತಗೊಳ್ಳಿ, ಲೋನ್ ತಗೊಳ್ಳಿ, ನಿಮಗೆ ಇಪ್ಪತ್ತು ಕೋಟಿ ಡಾಲರ್ ಬಹುಮಾನ ಬಂದಿದೆ ತಕ್ಷಣ ಈ ಮೇಲಿಗೆ ಪ್ರತಿಕ್ರಿಯಿಸಿ – ಇಂತವೇ ಬೇಡದ ಮೇಲುಗಳು ತುಂಬಿತ್ತು. ಲಾಗ್ ಔಟ್ ಮಾಡಿ ಫೇಸ್ ಬುಕ್ ತೆರೆದೆ. ಪಿಯುಸಿಯಲ್ಲಿ ದಡ್ಡರೆಂದು ಬಯ್ಯಿಸಿಕೊಂಡ ಎಷ್ಟೋ ಜನ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಮೆಡಿಕಲ್ಲಿನಲ್ಲಿ ವೇಸ್ಟ್ ಬಾಡಿಗಳೆನ್ನಿಸಿಕೊಂಡವರು ಒಳ್ಳೊಳ್ಳೆ ಪಿ.ಜಿ ಸೀಟ್ ತೆಗೆದುಕೊಂಡಿದ್ದಾರೆ. ಎಲ್ಲಾ ಕಡೆ ಬುದ್ಧಿವಂತೆ ಅನ್ನಿಸಿಕೊಂಡ ನಾನು ಇದ್ಯಾವುದೋ ಕಂಪನಿ ಆಸ್ಪತ್ರೆಯಲ್ಲಿ ದುಡೀತಾ ಇದ್ದೀನಿ. ನನ್ನೀ ಪರಿಸ್ಥಿತಿಗೆ ನಾನೇ ಅಲ್ವಾ ಕಾರಣ ಎಂದು ಸ್ವಲ್ಪ ಸಮಾಧಾನ ಮಾಡಿಕೊಂಡೆ. ಈ ಫೇಸ್ ಬುಕ್ಕಿಗೂ ಗ್ಯಾಸ್ಟ್ರೈಟಿಸ್ಸಿಗೂ ಏನಾದ್ರೂ ಸಂಬಂಧವಿರಬಹುದಲ್ವಾ ಅನ್ನಿಸಿತು. ಕ್ಲಾಸ್ ಮೇಟ್ಸು, ನೆಂಟ್ರು, ಫ್ರೆಂಡ್ಸು ಅವರವರ ಸಾಧನೆಗಳ ಬಗ್ಗೆ ವಿದೇಶಿ ಟ್ರಿಪ್ಪುಗಳ ಬಗ್ಗೆ ಕೊಚ್ಕೊಂಡಿದ್ದನ್ನು ನೋಡಿದಷ್ಟೂ ಹೊಟ್ಟೆಉರಿ ಜಾಸ್ತಿಯಾಗುತ್ತೆ. ಗೆಳೆಯರ ಸಾಧನೆ ಬಗ್ಗೆ ಖುಷಿಯಾಗೋದು ಅಪರೂಪ. ಲೈಕ್ ಒತ್ತಿ ಕಮೆಂಟ್ ಕೊಟ್ಟು ಹೊಟ್ಟೆ ಉರ್ಕೊಳ್ಳೋದು ಸಾಮಾನ್ಯವಾಗಿಬಿಟ್ಟಿದೆ! ಹಂಗೇ ಫೇಸ್ಬುಕ್ ಸ್ಕ್ರಾಲ್ ಮಾಡ್ತಿರಬೇಕಾದರೆ “If you are not a marxist at 20 then you don’t have heart; if you are a marxist at 25 then you don’t have brain” ಎಂಬ ಸ್ಟೇಟಸ್ ಕಾಣಿಸಿತು. ಹಾಕಿದ್ದು ಸಾಗರ್, ಸಾಗರ್ ವಿಶಾಲ್. ಮೂರು ದಿನದ ಹಿಂದೆ ಅವನು ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ನೆನಪಾಯಿತು. ಹುಟ್ಟಿದ ಹಬ್ಬಕ್ಕೆ ವಿಷ್ ಮಾಡಲಿಲ್ಲ ಎನ್ನುವುದೂ ನೆನಪಾಯಿತು. ಇವತ್ತಾದರೂ ಇವನಿಗೊಂದು ‘ಹಾಯ್’ ಹೇಳೋಣ ಎಂದುಕೊಂಡು ಮೆಸೇಜು ಟೈಪಿಸಿ ಕಳುಹಿಸಿದೆ. ಎರಡು ನಿಮಿಷದ ನಂತರ ‘ಹಾಯ್' ಎಂದು ಕಳುಹಿಸಿದ. ಏನಾದ್ರೂ ಕೇಳ್ತಾನೇನೋ ಅವನೇ ಎಂದು ಸುಮ್ಮನಾದೆ. ಏನೂ ಕೇಳಲಿಲ್ಲ. ಇರಲಿ ನಾನೇ ಕೇಳ್ತೀನಿ ಎಂದುಕೊಂಡು ‘ಹೇಗಿದ್ದೀಯ’ ಎಂದು ಕಳುಹಿಸಿದೆ. ಅಷ್ಟರಲ್ಲಿ ರೋಗಿಯೊಬ್ಬರು ಬಂದರು. ಅವರನ್ನು ನೋಡಿ ಕಳುಹಿಸಿ ಫೇಸ್ ಬುಕ್ ನೋಡಿದೆ. ಏನೂ ಉತ್ತರ ಬಂದಿರಲಿಲ್ಲ. ಸಾಗರ್ ಆಫ್ ಲೈನ್ ಆಗಿದ್ದ. ಮೆಸೇಜು ಮಾಡಲು ಇಷ್ಟವಿರಲಿಲ್ಲವೋ ಏನೋ. ನಾನಾಗೇ ಮೆಸೇಜು ಕಳುಹಿಸಬಾರದಿತ್ತು. ‘ಡಿಸ್ಟರ್ಬ್ ಆಗಿದ್ರೆ ಸಾರಿ’ ಎಂದು ಮೆಸೇಜಿಸಿದೆ. ಲಾಗ್ ಔಟ್ ಮಾಡಿದೆ.

Jan 20, 2019

ಹೆಜ್ಜೆ

ನವೀನ ಸುರೇಶ್
ಅರೆಘಳಿಗೆಯೂ ನಿಲ್ಲದೆ
ಬಿರಬಿರನೆ ಹೋದ ಬಿರುಸಾದ
ಅವನ ಹೆಜ್ಜೆಗುರುತಿಗೆ
ಮರೆಗುಳಿಗೆ ಹಾಕಿ ಮುಚ್ಚಿದ್ದೇನೆ
ಹೋದರೆ ಹೋಗಲಿ ಬಿಡು
ನಿಡುಸುಯ್ದು
ಮೌನಕ್ಕೆ ಶರಣಾಗಿ
ಕತ್ತಲೆಯ ಗರ್ಭದೊಳಗೆ
ಏಕಾಂತ ತಬ್ಬಿ
ಮಲಗುತ್ತೇನೆ

ಒಂದು ಬೊಗಸೆ ಪ್ರೀತಿ - 2

ಡಾ. ಅಶೋಕ್. ಕೆ. ಅರ್. 
ಒಂದು ಬೊಗಸೆ ಪ್ರೀತಿ ಭಾಗ ೧ ಅನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಸತ್ಯನಾರಾಯಣ ಸ್ವಾಮಿ ಪೂಜೆಯ ಸಂಭ್ರಮಗಳನ್ನೆಲ್ಲ ಮುಗಿಸಿ ಮನೆ ತಲುಪುವಷ್ಟರಲ್ಲಿ ಸಂಜೆ ಆರಾಗಿತ್ತು. ದೇಹಕ್ಕೇನು ದಣಿವಾಗಿರಲಿಲ್ಲ; ಅಡುಗೆ ಮಾಡೋದು, ಬಡಿಸೋದು ರೇಷ್ಮೆ ಸೀರೆ ಉಟ್ಟು ಮನೆಯಲ್ಲೆಲ್ಲಾ ಸುತ್ತಾಡಿ ಬಂದವರನ್ನೆಲ್ಲಾ ನಗುನಗುತ್ತಾ ಮಾತನಾಡಿಸುವ ಕೆಲಸವೆಂದರೆ ನನಗೆ ತುಂಬಾ ಇಷ್ಟ. ಸುಸ್ತೆಲ್ಲ ಮನಸ್ಸಿಗೆ. ಗಂಡನಿಗೂ ಅದು ಗೊತ್ತಾಗಿತ್ತು. ಮನೆಗೆ ಬಂದವಳೇ ಸೀರೆ ಬಿಚ್ಚಿ ಲಂಗ ಬ್ಲೌಸಿನಲ್ಲೇ ಹಾಸಿಗೆಯ ಮೇಲೆ ಅಡ್ಡಾದೆ. ಕಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಮಲಗಿದೆ. ಒಂದು ಘಂಟೆ ಅದೂ ಇದೂ ಓದ್ಕೊಂಡು ಟಿವಿ ನೋಡ್ಕೊಂಡು ಇದ್ದ ರಾಜಿ. ಘಂಟೆ ಏಳಾದರೂ ನಾನು ಎದ್ದು ಬರದಿದ್ದುದನ್ನು ನೋಡಿ ರೂಮಿಗೆ ಬಂದು ಪಕ್ಕದಲ್ಲಿ ಮಲಗಿದ. ನಿದ್ರಿಸುವವಳಂತೆ ಬೋರಲು ಬಿದ್ದು ಮಲಗಿದ್ದ ನನ್ನ ನಟನೆ ಕೂಡ ಅವನಿಗೆ ಗೊತ್ತು. ಸೊಂಟದ ಮೇಲೆ ಕಚಗುಳಿಯಿಟ್ಟ; ಅವನ ಕೈಹಿಡಿದು ಪಕ್ಕಕ್ಕೆಸೆದೆ. ಎಡಗಿವಿಯ ಹಿಯರ್ ಫೋನ್ ತೆಗೆದ.

“ಕೋಪ ಇನ್ನೂ ಕಡಿಮೆಯಾಗಲಿಲ್ವ"

‘ಕೋಪ ಯಾಕೆ. ಹಾಗೇನೂ ಇಲ್ಲ. ಸುಸ್ತು ಅಷ್ಟೇ’

Jan 14, 2019

ಬಾಜಪದ ಬಲ ಕುಗ್ಗಿಸಬಲ್ಲ ಮೈತ್ರಿ

ಕು.ಸ.ಮಧುಸೂದನ ರಂಗೇನಹಳ್ಳಿ
ಇಂಡಿಯಾದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಲ್ಲಿ ಶಾಶ್ವತ ಶತ್ರುಗಳಾಗಲಿ, ಶಾಶ್ವತ ಮಿತ್ರರುಗಳಾಗಲಿ ಇರಲು ಸಾದ್ಯವಿಲ್ಲವೆಂಬ ಮಾತು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಮುನ್ನವೇ ಉತ್ತರ ಪ್ರದೇಶದ ಎರಡು ಬಲಿಷ್ಠ ಪ್ರಾದೇಶಿಕ ಪಕ್ಷಗಳಾದ ಶ್ರೀಅಖಿಲೇಶಯಾದವರ ಸಮಾಜವಾದಿ ಪಕ್ಷ ಮತ್ತು ಕುಮಾರಿ ಮಾಯಾವತಿಯವರ ಬಹುಜನ ಪಕ್ಷ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ! ತೊಂಭತ್ತರ ದಶಕದಲ್ಲಿ ಮಿತ್ರರಾಗಿದ್ದ ಈ ಎರಡೂ ಪಕ್ಷಗಳು ತದನಂತರ ವ್ಯಕ್ತಿಗತ ಪ್ರತಿಷ್ಠೆಯ ಪ್ರತಿಷ್ಠಾಪನೆಯಿಂದ ದೂರವಾಗಿ, ಸರದಿಯಂತೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತ ಬಂದಿದ್ದವು. ಆದರೆ 2017ರ ಹೊತ್ತಿಗೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ರಾಮಮಂದಿರದ ವಿಷಯಗಳಿಂದಾಗಿ ಬಾಜಪ ಈ ಎರಡೂ ಪಕ್ಷಗಳನ್ನು ಸೋಲಿಸಿ ಉತ್ತರ ಪ್ರದೇಶದ ಗದ್ದುಗೆ ಹಿಡಿಯಿತು. ಆ ಸೋಲಿನ ಕಾರಣಗಳನ್ನು ಅರ್ಥಮಾಡಿಕೊಂಡಂತೆ ಇದೀಗ ಬಾಜಪವನ್ನು ಸೋಲಿಸಲೇಬೇಕೆಂಬ ಕಾರಣದಿಂದ, ಸುಮಾರು ಎರಡು ದಶಕಗಳ ತಮ್ಮ ವೈಮನಸ್ಸನ್ನು ಹಿನ್ನೆಲೆಗೆ ನೂಕಿ ಮೈತ್ರಿಕೂಟವನ್ನು ರಚಿಸಿಕೊಂಡಿವೆ.

Jan 13, 2019

ಒಂದು ಬೊಗಸೆ ಪ್ರೀತಿ - 1

ಡಾ. ಅಶೋಕ್. ಕೆ. ಅರ್. 
ಅವತ್ತು ಏಪ್ರಿಲ್ ಹದಿನಾಲ್ಕು. ನನ್ನ ಹುಟ್ಟಿದ ದಿನ. ಗಂಡ ಬೆಳಿಗ್ಗೆ ಬೆಳಿಗ್ಗೆ ಕೇಕ್ ತಂದಿದ್ದ, ಜೊತೆಗೆ ಹನುಮಂತು ಹೋಟೆಲ್ಲಿನಿಂದ ನಾಟಿ ಕೋಳಿ ಪಲಾವ್. ಒಂದು ಚಿಕ್ಕ ತುಂಡು ಕೇಕ್ ತಿಂದು ಒಂದೂವರೆ ಪ್ಲೇಟ್ ನಾಟಿ ಕೋಳಿ ಪಲಾವ್ ಮುಗಿಸಿ ಉಳಿದ ಕೇಕನ್ನು ಫ್ರಿಜ್ಜಿನಲ್ಲಿಟ್ಟು ಆಸ್ಪತ್ರೆಗೆ ಹೊರಟೆ. ಅವತ್ತು ಬೆಳಗಿನ ಡ್ಯೂಟಿಯಿತ್ತು. ಭಾನುವಾರವಾದ್ದರಿಂದ ಹೆಚ್ಚೇನೂ ಕೆಲಸವಿರಲಿಲ್ಲ. ಮೈಸೂರಿನ ಆರ್.ಬಿ.ಐ ಒಳಗಿರುವ ಪುಟ್ಟ ಆಸ್ಪತ್ರೆಯದು. ಆರ್.ಬಿ.ಐ ನಿವಾಸಿಗಳಷ್ಟೇ ಬರುತ್ತಿದ್ದುದು. ಶಿಫ್ಟಿನ ಮೇಲೆ ಮೂರು ಜನ ವೈದ್ಯರು ಕೆಲಸ ಮಾಡುತ್ತಿದ್ದೆವು. ಭಾನುವಾರ ಕೆಲಸ ಮಾಡುವುದೆಂದರೆ ಯಮಹಿಂಸೆ. ಸಾಮಾನ್ಯವಾಗಿ ನಾನು ಭಾನುವಾರ ರಜೆ ತೆಗೆದುಕೊಂಡುಬಿಡುತ್ತಿದ್ದೆ. ನಾಳೆ ಅತ್ತೆ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಕೊಂಡಿದ್ದಾರೆ, ಹಾಗಾಗಿ ಭಾನುವಾರ ಬಂದಿದ್ದೆ. ಹನ್ನೊಂದರವರೆಗೆ ಒಂದಷ್ಟು ರೋಗಿಗಳಿದ್ದರು. ಮಾಮೂಲಿ ಜ್ವರ, ನೆಗಡಿ, ಕೆಮ್ಮು ಇತ್ಯಾದಿ. ಹನ್ನೊಂದರಿಂದ ಹನ್ನೆರಡರವರೆಗೆ ಯಾರೂ ಬರಲಿಲ್ಲ. ಹುಟ್ಟುಹಬ್ಬದ ಶುಭಾಷಯಗಳ ಮೆಸೇಜುಗಳು ಮೊಬೈಲು ತುಂಬಿಸಿತ್ತು. ಅವರಿಗೆಲ್ಲಾ ಒಂದು ಧನ್ಯವಾದ ಹೇಳಿದೆ. ತೀರ ಫೋನು ಮಾಡಿ ಶುಭಾಶಯ ಹೇಳುವಂತಹ ಗೆಳೆಯರ್ಯಾರು ಇರಲಿಲ್ಲ. ಅಪ್ಪ, ಅಮ್ಮ, ತಮ್ಮ ಬೆಳಿಗ್ಗೆಯೇ ಫೋನ್ ಮಾಡಿದ್ದರು. ಮಧ್ಯಾಹ್ನ ಅಲ್ಲಿಗೇ ಊಟಕ್ಕೆ ಹೋಗಬೇಕು. ಊಟ ಮುಗಿಸಿ ಅತ್ತೆ ಮನೆಗೆ. ಮೆಸೇಜು ಕಳುಹಿಸಿದವರಲ್ಲಿ ಅನೇಕರು ನಮ್ಮ ಮೇನ್ ಆಸ್ಪತ್ರೆಯವರು. ಒಂದು ವರುಷ ಅಲ್ಲಿ ಕೆಲಸ ಮಾಡಿದ್ದಾಗ ಪರಿಚಿತರಾಗಿದ್ದವರು. ಮೆಸೇಜು ಕಳುಹಿಸಿದ್ದೆಲ್ಲ ಮುಗಿದ ಮೇಲೆ ಆನ್ ಆಗಿದ್ದ ಕಂಪ್ಯೂಟರಿನಲ್ಲಿ ಒಪೆರಾ ಬ್ರೌಸರ್ ತೆರೆದು ಫೇಸ್ ಬುಕ್ ಪುಟವನ್ನು ತೆರೆದೆ. ಒಂದು ಮೂವತ್ತು ಜನ ಶುಭಾಶಕೋರಿದ್ದರು! ಬಹುತೇಕರು ಎಂಬಿಬಿಎಸ್ ಓದುವಾಗ ಸಹಪಾಠಿಗಳಾಗಿದ್ದವರು. ಲೈಕ್ ಒತ್ತಿ, ಥ್ಯಾಂಕ್ ಯೂ ಎಂದು ಕಮೆಂಟಿಸಿದೆ. ಶುಭಾಶಕೋರಿದವರಲ್ಲಿ ಅನೇಕರೊಡನೆ ಕಾಲೇಜು ದಿನಗಳಲ್ಲಿ ಮಾತನಾಡಿಯೇ ಇರಲಿಲ್ಲ. ನಿಟ್ಟುಸಿರುಬಿಟ್ಟು ಇನ್ನೇನು ಫೇಸ್ ಬುಕ್ಕಿನಿಂದ ಲಾಗ್ ಔಟ್ ಆಗಬೇಕೆಂದುಕೊಳ್ಳುವಷ್ಟರಲ್ಲಿ ಪರದೆಯ ಎಡಭಾಗದಲ್ಲಿ Sagar ವಿಶಾಲ sent you a friend request ಎಂದು ಕಾಣಿಸಿತು. ಯಾರಿದು ಸಾಗರ್ ವಿಶಾಲ್? ನನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಅಲ್ಲಾ ತಾನೇ? ಎಂದು ಸಂಶಯಿಸುತ್ತಾ ಆ ಹೆಸರಿನ ಮೇಲೆ ಕ್ಲಿಕ್ಕಿಸಿದೆ. ಓದಿದ್ದು ಜೆಎಸ್ಎಸ್ ಊರು ಬೆಂಗಳೂರು ಎಂದಿತ್ತು. ಓ ಅವನೇ ಇರಬೇಕು ಎಂದುಕೊಂಡೆ; ಆದರೆ ಅವನ ಹೆಸರು ಬರೀ ಸಾಗರ್ ಅಲ್ಲವಾ? ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ಕಿಸಿದೆ. ಸಮುದ್ರ ತೀರದಲ್ಲಿ ಅಲೆಗಳಿಗೆ ಮುಖವೊಡ್ಡಿ ಕುಳಿತಿದ್ದಾನೆ, ಎದುರಿಗಿನ ಸೂರ್ಯದೋಯ ನೋಡುತ್ತ. ಇಂಥಹ ಫೋಟೋನ ಪ್ರೊಫೈಲಿಗೆ ಹಾಕಿಕೊಂಡಿದ್ದಾನೆಂದರೆ ಇದು ಅವನೇ ಎಂದು ನಗು ಬಂತು. ಮನಸಾರೆ ನಕ್ಕೆ. ‘ರಿಕ್ವೆಸ್ಟ್ ಕಳುಹಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಮೆಸೇಜ್ ಟೈಪು ಮಾಡಿದೆ; ಕಳುಹಿಸಲಿಲ್ಲ. ಹುಟ್ಟಿದ ಹಬ್ಬಕ್ಕೆ ಶುಭಾಷಯ ತಿಳಿಸುತ್ತಾನೇನೋ ನೋಡೋಣ ಅಂದುಕೊಂಡು ಟೈಪಿಸಿದ್ದನ್ನು ಅಳಿಸಿಹಾಕಿದೆ. ಕಳೆದ ವಾರದಿಂದ ಚಿಕನ್ ಗುನ್ಯಾದಿಂದ ನರಳುತ್ತಿದ್ದ ರೋಗಿಯೊಬ್ಬರು ಒಳಬಂದರು. ಮೆಸೇಜು ಕಳುಹಿಸುತ್ತಾನೇನೋ ನೋಡೋಣ ಅಂದುಕೊಂಡು ಲಾಗ್ ಔಟ್ ಮಾಡದೆ ರೋಗಿಯ ಕಡೆ ಗಮನಕೊಟ್ಟೆ. ಎರಡು ಘಂಟೆಯವರೆಗೆ ರೋಗಿಗಳು ಬರುತ್ತಲೇ ಇದ್ದರು. ಭಾನುವಾರ ಡಾಕ್ಟರ್ ಇರ್ತಾರಲ್ಲ ಸುಮ್ನೆ ತೋರಿಸಿಕೊಂಡು ಹೋಗೋಣ ಎಂದು ಬಂದವರೇ ಹೆಚ್ಚು. ಎರಡು ಘಂಟೆಗೆ ಬರಬೇಕಿದ್ದ ಡಾ. ರವಿ ಎರಡೂ ಕಾಲಾದರೂ ಬರಲಿಲ್ಲ. ಈ ರವೀದು ಯಾವಾಗ್ಲೂ ಇದೇ ಗೋಳು. ಬರೋದು ಲೇಟು ಹೋಗೋದು ಬೇಗ. ನಾವೇನಾದರೂ ಐದು ನಿಮಿಷ ಲೇಟ್ ಬಂದುಬಿಟ್ರೆ ಆಕಾಶ ಭೂಮಿ ಒಂದು ಮಾಡ್ಬಿಡ್ತಾನೆ. ಹೆಚ್ ಆರ್ ಮ್ಯಾನೇಜರ್ರಿಗೆ ಫೋನು ಮಾಡಿ ದೂರು ನೀಡಿಬಿಡ್ತಾನೆ. ಇವತ್ತು ನಾನೂ ದೂರು ಕೊಟ್ಟುಬಿಡಬೇಕು ಎಂದುಕೊಂಡು ಕಂಪ್ಯೂಟರ್ ನೋಡಿದೆ. ಸಾಗರ್ ಆನ್ ಲೈನ್ ಇದ್ದ. ಯಾವ ಮೆಸೇಜೂ ಕಳುಹಿಸಿರಲಿಲ್ಲ. ಲಾಗ್ ಔಟ್ ಮಾಡಿದೆ. ಡಾ. ರವಿ ಒಳಬಂದ. “ಸಾರಿ ಧರಣಿ. ಸ್ವಲ್ಪ ಲೇಟ್ ಆಗೋಯ್ತು. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಇದನ್ನು ತರೋದಿಕ್ಕೆ ಲೇಟ್ ಆಗಿದ್ದು” ಎಂದ್ಹೇಳಿ ಹೂವಿನ ಬೊಕ್ಕೆ ಕೊಟ್ಟ. ಇವತ್ತು ಕಂಪ್ಲೇಂಟ್ ಮಾಡೋದು ಬೇಡ ಎಂದುಕೊಳ್ಳುತ್ತಾ ‘ಥ್ಯಾಂಕ್ಸ್ ರವಿ ಸರ್’ ಎಂದ್ಹೇಳಿ ಬೊಕ್ಕೆ ತೆಗೆದುಕೊಂಡು ಹೊರಟೆ.