Nov 24, 2019

ಒಂದು ಬೊಗಸೆ ಪ್ರೀತಿ - 41

ಡಾ. ಅಶೋಕ್.‌ ಕೆ. ಆರ್.‌
"ಇದು ನನ್ನ ಕೈಲಾಗೋ ಕೆಲಸವಲ್ಲ" ರಾಜೀವನ ಬಾಯಲ್ಲೀ ಮಾತುಗಳು ಬರೋಕೆ ಒಂದು ತಿಂಗಳ ಸಮಯವಾಗಿದ್ದು ಅಚ್ಚರಿಯೇ ಹೊರತು ಅವರ ಮಾತುಗಳಲ್ಲ. ಇಷ್ಟೊಂದ್ ದಿನ ತುರ್ತಿನಲ್ಲಿ ಹಣ ಬರದ ಯೋಜನೆಯೊಂದರಲ್ಲಿ ಅವರು ಶ್ರದ್ಧೆಯಿಂದ ಕೆಲಸ ಮಾಡಿದ್ದೇ ಅಪನಂಬುಗೆ ಮೂಡಿಸುವ ಸಂಗತಿ. ನನ್ನ ನಿರೀಕ್ಷೆಯನ್ನು ಮೀರಿ ಅವರು ನಡೆದುಕೊಳ್ಳಲಿಲ್ಲ ಎಂದು ಸಂಭ್ರಮಿಸಬೇಕೋ, ಯಾವ ಕೆಲಸವನ್ನೂ ಗಮನಕೊಟ್ಟು ಮಾಡದ ಅವರ ಬೇಜವಾಬ್ದಾರಿತನಕ್ಕೆ ಕನಿಕರಿಸಬೇಕೋ ತಿಳಿಯಲಿಲ್ಲ. ತೀರ ಕೆಟ್ಟಾನುಕೆಟ್ಟ ಪದಗಳನ್ನು ಬಳಸಿಕೊಂಡು ಅವರನ್ನು ಹೀಯಾಳಿಸಬೇಕೆಂದು ಹಾತೊರೆಯುತ್ತಿದ್ದ ಮನಸ್ಸಿಗೆ ಸುಳ್ಳು ಸುಳ್ಳೇ ಸಮಾಧಾನ ಮಾಡಿ 'ಹೋಗ್ಲಿ ಬಿಡಿ. ಇದಾಗಲಿಲ್ಲ ಅಂದ್ರೆ ಮತ್ತೇನಾದರೂ ಮಾಡಿದರಾಯಿತು. ಪ್ರಯತ್ನವನ್ನಂತೂ ಮಾಡಿದ್ರಲ್ಲ' 

“ನೀ ಬಂದ್ ಸಂಜೆ ಎರಡ್ ಘಂಟೆ ಕ್ಲಿನಿಕ್ಕಿನಲ್ಲಿ ಕುಳಿತಿದ್ದರೆ ಅದರ ಕತೆಯೇ ಬೇರೆಯಿರ್ತಿತ್ತು" ಇದವರ ಎಂದಿನ ಶೈಲಿ, ಸುತ್ತಿಬಳಸಿ ಕೊನೆಗೆ ಅವರ ವೈಫಲ್ಯಕ್ಕೆ ನಾ ಹೊಣೆಯೇ ಹೊರತು ಅವರಲ್ಲ ಎಂದನ್ನಿಸಿಬಿಡುವುದು. ಸಂಸಾರ ಹಳತಾಗುತ್ತಿದ್ದಂತೆ ಹೇಗೆ ಇಬ್ಬರ ವರ್ತನೆಯೂ ನಿರೀಕ್ಷಿತವಾಗಿಬಿಡ್ತದಲ್ಲ. ಆದರೆ ದೊಡ್ಡ ಜಗಳಗಳಾಗಬೇಕೆ ಹೊರತು ಸಣ್ಣ ಪುಟ್ಟ ಕಿರಿಪಿರಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಬಿಡ್ತದೆ. ನಾ ಏನ್ ಮಾಡಿದಾಗ ಅವರು ಕೋಪಗೊಳ್ಳುತ್ತಾರೆಂದು ನನಗೆ, ಅವರು ಏನು ಮಾಡಿದಾಗ ನನಗೆ ಕೋಪ ಬರ್ತದೆಂದು ಅವರಿಗೆ ತಿಳಿದುಬಿಟ್ಟಿದೆ. ಏನೋ ಜೊತೆಯಲ್ಲಿದ್ದೀವಿ ಅಷ್ಟೇ ಅನ್ನುವ ಭಾವನೆ ನನ್ನಲ್ಲಿ ಬಂದು ಎಷ್ಟು ತಿಂಗಳಾಯಿತು? 

'ಮ್. ಅದ್ ಆಗ್ತಿರಲಿಲ್ಲವಲ್ಲ. ಏನೋ ಪಿಜಿ ಮುಗಿದ ಮೇಲೆ ನೋಡಬಹುದು ಅಷ್ಟೇ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 20, 2019

ಪಕ್ಷಿ ಪ್ರಪಂಚ: ಕೆಂಪು ಟಿಟ್ಟಿಭ.

ಚಿತ್ರ ೧: ಎರೆಹುಳುವಿನ ಬೇಟೆಯಲ್ಲಿ ಕೆಂಪು ಟಿಟ್ಟಿಭ.
ಡಾ. ಅಶೋಕ್. ಕೆ. ಆರ್. 
ನಿನಗಾಗದೇ ಇರೋ ಪಕ್ಷಿ ಯಾವ್ದು ಅಂತ ಯಾರಾದ್ರೂ ಕೇಳಿದ್ರೆ, ನನ್ನ ಮನಸಲ್ಲಿ ಪಟ್ಟಂತ ಮೂಡೋ ಪಕ್ಷಿ ಹೆಸರು ಕೆಂಪು ಟಿಟ್ಟಿಭ! ನನಗೆ ಈ ಪಕ್ಷಿ ಕಂಡರಾಗೋದಿಲ್ಲ ಅನ್ನುವುದಕ್ಕಿಂತಲೂ ಈ ಟಿಟ್ಟಿಭಗಳಿಗೆ ನಮ್ಮನ್ನು ಕಂಡರಾಗೋದಿಲ್ಲ ಅನ್ನೋದು ಸತ್ಯ. ಮನುಷ್ಯರನ್ನು ಕಂಡಾಗ ಪಕ್ಷಿಗಳಿಗೆ ಭಯವಾಗೋದು ಸಹಜವೇ, ಭಯ ಆದರೆ ದೂರ ಹಾರಿ ಹೋಗಲಿ ಬೇಕಿದ್ರೆ! ಆದರೀ ಟಿಟ್ಟಿಭಗಳು ಜೋರು ದನಿಯಲ್ಲಿ ಗಲಾಟೆ ಎಬ್ಬಿಸುತ್ತಾ ಸುತ್ತಮುತ್ತಲಿರುವ ಇನ್ನಿತರೆ ಪಕ್ಷಿಗಳೂ ದೂರ ದೂರಕ್ಕೆ ಹಾರುವಂತೆ ಮಾಡಿಬಿಡುತ್ತವೆ. ಅದಕ್ಕೂ ಕಾರಣವಿದೆ ಅನ್ನಿ.

ಆಂಗ್ಲ ಹೆಸರು: Red wattled lapwing (ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್)

ವೈಜ್ಞಾನಿಕ ಹೆಸರು: Vanellu Indicus (ವ್ಯಾನೆಲಸ್ ಇಂಡಿಕಸ್)

ಉದ್ದ ನೀಳ ಹಳದಿ ಕಾಲುಗಳನ್ನು ಹೊಂದಿರುವ ಟಿಟ್ಟಿಭಗಳು ಕೆರೆ, ನದಿಯಂಚಿನಲ್ಲಿ, ಗದ್ದೆಯಂಚಿನಲ್ಲಿ ಹೆಚ್ಚಿನ ಸಮಯ ಕಾಣಿಸಿಕೊಳ್ಳುತ್ತವೆ. ಕಂದು ಬಣ್ಣದ ರೆಕ್ಕೆಗಳು ಹರಡಿಕೊಂಡಾಗ ಬಿಳಿ - ಕಪ್ಪು ಬಣ್ಣಗಳನ್ನೂ ಕಾಣಬಹುದು. ಕೆಂಪು ಕೊಕ್ಕು, ಕಣ್ಣಿನ ಮುಂದಿನ ಕೆಂಪಿನ ಸಹಾಯದಿಂದ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಕೊಕ್ಕಿನಿಂದ ಕೆಳಗೆ ಶುರುವಾಗುವ ಕಪ್ಪು ಬಣ್ಣ ಎದೆಯವರೆಗೂ ಚಾಚಿಕೊಳ್ಳುತ್ತದೆ. ಟೋಪಿ ಹಾಕಿದಂತೆ ತಲೆಯ ಮೇಲಷ್ಟು ಕಪ್ಪು ಬಣ್ಣ, ಅದರ ಎರಡು ಬದಿಯಲ್ಲಿ ಬಿಳಿ ಪಟ್ಟಿ. ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.

Nov 17, 2019

ಒಂದು ಬೊಗಸೆ ಪ್ರೀತಿ - 40

ಡಾ. ಅಶೋಕ್.‌ ಕೆ. ಆರ್.‌
ಹಿಂಗಿಂಗಾಯ್ತು ಅಂತ ಮೆಸೇಜ್ ಮಾಡಿದೆ. “ಮ್" ಎಂದೊಂದು ಪ್ರತಿಕ್ರಿಯೆ ಕಳಿಸಿದನಷ್ಟೇ. ಅವನಾದರೂ ಏನು ಹೇಳಿಯಾನು? ಏನು ಹೇಳಿದರೂ ಅದರಿಂದ ನನಗುಪಯೋಗವಾಗುವುದು ಅಷ್ಟರಲ್ಲೇ ಇದೆ. ಮೆಸೇಜುಗಳಿಂದ ಸುಳ್ಳು ಸುಳ್ಳೇ ಸಮಾಧಾನ ಆಗಬಹುದೇನೋ ಅಷ್ಟೇ. “ಜಾಸ್ತಿ ತಲೆ ಕೆಡಿಸಿಕೊಳ್ಳಬೇಡವೇ. ಆದಂಗ್ ಆಗ್ತದೆ. ಒಂದೆರಡು ತಿಂಗಳು ಹೆಂಗೋ ನಿಮ್ಮ ಮನೆಯಲ್ಲೋ ನಿನ್ನ ತಮ್ಮನ ಹತ್ತಿರವೋ ಒಂದಷ್ಟು ದುಡ್ಡು ತೆಗೆದುಕೊಂಡು ಸಂಭಾಳಿಸು. ನೋಡುವ, ಅಷ್ಟರಲ್ಲಿ ನಿನ್ ಗಂಡನ ಫಾರ್ಮಸಿಯಿಂದ ಲಾಭ ಬರ್ತದೆ ಅನ್ಸುತ್ತೆ. ಅಷ್ಟರೊಳಗೆ ನಾನೂ ಕೆಲಸಕ್ಕೆ ಸೇರಿರ್ತೀನಿ. ಕೊಡ್ತೀನಿ" ಎಂದು ಮೆಸೇಜ್ ಮಾಡಿದ. 

'ಇಲ್ವೋ. ನಮ್ಮಿಬ್ಬರ ಸಂಬಂಧದಲ್ಲಿ ಹಣ ಬರೋದು ನನಗಿಷ್ಟವಿಲ್ಲ. ದುಡ್ಡು ಹೆಂಗೋ ಹೊಂಚಿಕೊಳ್ಳಬಹುದು ಬಿಡು. ನೀನೇ ಹೇಳಿದಂಗೆ ಅವರ ಮನೆಯವರು ನಮ್ಮ ಮನೆಯವರು ಇದ್ದೇ ಇದ್ದಾರಲ್ಲ. ಬೇಜಾರ್ ಅಂದ್ರೆ ಕೆಲಸ ಬಿಡೋ ದೊಡ್ಡ ನಿರ್ಧಾರವನ್ನು ಕೂಡ ನನಗೆ ತಿಳಿಸದೇ ಹೋದರಿವರು. ಅಷ್ಟೊಂದು ದೂರದವಳಾಗಿಬಿಟ್ಟೆ ನೋಡು. ನೀ ಇವರಂಗೆ ಆಗಬೇಡ್ವೋ. ನಿನ್ನ ಹೆಂಡತಿ ಒಪ್ತಾಳೋ ಬಿಡ್ತಾಳೋ ಅವಳಿಗೊಂದು ಮಾತು ಎಲ್ಲದರ ಬಗ್ಗೆಯೂ ಹೇಳು... ನೀ ಹೇಳ್ತಿ ಬಿಡು' 

“ಹ ಹ. ಅದೆಂಗೆ ಅಷ್ಟು ಖಡಕ್ಕಾಗಿ ಹೇಳ್ತಿ" 

'ಮ್. ನೀ ಚೆಂದ ಅರ್ಥ ಮಾಡ್ಕೋತಿ ಅದಿಕ್ಕೆ ಹೇಳ್ದೆ' 

“ಏನೋ ನೋಡುವ ಬಿಡು. ನೀ ಜಾಸ್ತಿ ಬೇಸರ ಮಾಡಬೇಡ್ವೆ. ನಂಗೂ ದುಃಖವಾಗ್ತದೆ" 

'ಹು ಕಣೋ. ಅದ್ಸರಿ ಪರೀಕ್ಷೆ ಹೆಂಗ್ ಆಯ್ತು. ನನ್ನ ಚಿಂತೆಯಲ್ಲೇ ಪರೀಕ್ಷೆ ಕೆಟ್ಟದಾಗಿ ಮಾಡಲಿಲ್ಲ ತಾನೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 10, 2019

ಒಂದು ಬೊಗಸೆ ಪ್ರೀತಿ - 39

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ನಂತರ ನಮ್ಮ ಮೆಡಿಕಲ್ ಸೂಪರಿಂಟೆಂಡೆಂಟ್ ಫೋನು ಮಾಡಿದ್ದರು. ಬೆಳಗಿನ ಡ್ಯೂಟಿಯಲ್ಲಿದ್ದೆ ಅವರ ಫೋನು ಬಂದಾಗ. ಪುರುಷೋತ್ತಮನ ಜೊತೆ ಗಲಾಟೆ ನಡೆಯುವಾಗ ನನಗೆ ಬಹಳಷ್ಟು ಮಾನಸಿಕ ಬೆಂಬಲ ಕೊಟ್ಟು ಆರ್.ಬಿ.ಐಗೆ ವರ್ಗ ಮಾಡಿಕೊಟ್ಟಿದ್ದರವರು. ಹಿಂಗಾಗಿ ಒಂಚೂರು ಹೆಚ್ಚೇ ಗೌರವವೆಂದರೂ ತಪ್ಪಾಗಲಾರದು. ಸರ್ ಫೋನು ಮಾಡಿದವರೇ ನನಗೆ ಹಲೋ ಎನ್ನಲೂ ಪುರುಸೊತ್ತು ನೀಡದೆ "ನೋಡಮ್ಮ ಧರಣಿ. ನಮ್ಮಲ್ಲಿ ಒಂದ್ ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಸೀಟು ಖಾಲಿ ಉಳಿದುಕೊಂಡಿದೆ ಈ ವರ್ಷ. ನಾ ಮ್ಯಾನೇಜುಮೆಂಟಿನವರಿಗೆ ಹೇಳಿಟ್ಟಿದ್ದೀನಿ. ನಮ್ಮಲ್ಲೇ ಕೆಲಸ ಮಾಡೋ ಧರಣೀಗೇ ಆ ಸೀಟು ಕೊಡಬೇಕೆಂದು. ಇಲ್ಲೇ ಕೆಲಸ ಮಾಡ್ತಿರೋ ಒಳ್ಳೆ ಹುಡುಗಿ. ಫೀಸೆಲ್ಲಾ ಏನೂ ತಗೋಬೇಡಿ ಅಂತಾನೂ ಹೇಳಿದ್ದೀನಿ. ಒಪ್ಪಿಕೊಂಡಿದ್ದಾರೆ. ಈ ಸಲ ಯಾವುದೇ ನೆಪ ಹೇಳದೆ ಬಂದು ಸೇರ್ತಿದ್ದಿ ಅಷ್ಟೇ. ಇವತ್ತು ಸಂಜೆ ಐದರ ಸುಮಾರಿಗೆ ಆಸ್ಪತ್ರೆಯ ಹತ್ತಿರ ಬಂದು ಅದೇನೇನೋ ಫಾರಮ್ಮುಗಳಿದ್ದಾವೆ, ಅವನ್ನ ಫಿಲ್ ಮಾಡಿ ಹೋಗಬೇಕು ಅಷ್ಟೇ. ಆಯ್ತ. ಸರಿ ಇಡ್ತೀನಿ" ಎಂದವರೇ ಫೋನಿಟ್ಟೇ ಬಿಟ್ಟರು. 

ಒಳ್ಳೆ ಕತೆಯಲ್ಲ ಇವರದು. ನನ್ನಭಿಪ್ರಾಯ ಏನೂ ಅಂತಾನೂ ಕೇಳದೆ ಫೋನಿಟ್ಟುಬಿಟ್ಟರಲ್ಲ. ನನ್ನ ಕಷ್ಟ ಇವರಿಗೆ ಹೇಗೆ ಅರ್ಥ ಮಾಡಿಸೋದು. ನಂಗೇನೋ ಈ ಡಿ.ಎನ್.ಬಿಗಿಂತ ಮೇಲ್ಮಟ್ಟದ್ದು ಅಂತಲೆ ಪರಿಗಣಿಸೋ ಎಂ.ಡಿ ಮಾಡೋಕೇ ಹೆಚ್ಚು ಆಸೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಎಂ.ಡಿಗೆ ಪರೀಕ್ಷೆ ಕಟ್ಟಿ, ಅದಕ್ಕೆ ಬಹಳಷ್ಟನ್ನು ಓದಿ, ಕೊನೆಗೆ ಸೀಟು ಗಿಟ್ಟಿಸಿದರೂ ವರುಷ ವರುಷ ಕಟ್ಟಬೇಕಾದ ಫೀಸಿನ ದುಡ್ಡಿಗೆ, ಬೇರೆ ಊರಿನಲ್ಲಿ ಸೀಟು ದೊರೆತರೆ ಹಾಸ್ಟಲ್ ಫೀಸು ಮತ್ತೊಂದಕ್ಕೆ ಪುನಃ ಅಪ್ಪ ಅಮ್ಮನ ಮುಂದೆ ಕೈಚಾಚಬೇಕಾಗ್ತದೆ. ಜೊತೆಗೆ ಪ್ರೈವೇಟ್ ಕಾಲೇಜಲ್ಲಿ ಸೀಟು ಸಿಕ್ಕಿದರೆ ಸ್ಟೈಪೆಂಡೂ ನಾಸ್ತಿ. ರಾಜೀವನ ಸಂಬಳ ನೆಚ್ಚಿಕೊಂಡು ಅಂತಹ ರಿಸ್ಕು ತೆಗೆದುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಆ ಲೆಕ್ಕಕ್ಕೆ ಡಿ.ಎನ್.ಬಿ ವಾಸಿ. ನಮ್ಮ ಆಸ್ಪತ್ರೆಯಲ್ಲೇ ಇರೋದು. ಇದರ ಫೀಸೂ ವರುಷಕ್ಕೆ ಐವತ್ತು ಸಾವಿರದಷ್ಟಿರಬೇಕಷ್ಟೇ. ಅದನ್ನೂ ಮಾಫಿ ಮಾಡಿಸ್ತೀನಿ ಅಂದಿದ್ದಾರೆ ಸರ್ರು. ಮಾಫಿ ಅಂದರೆ ಬಹುಶಃ ಒಂದು ವರುಷಕ್ಕೋ ಎರಡು ವರುಷಕ್ಕೋ ಬಾಂಡ್ ಬರೆಸಿಕೊಳ್ಳಬಹುದು. ತೊಂದರೆಯಿಲ್ಲ. ಗೊತ್ತಿರೋ ಜಾಗವೇ ಅಲ್ಲವೇ ಇದು. ಕೆಲಸ ಮಾಡುವುದಕ್ಕೆ ತಕರಾರಿಲ್ಲ. ಎಲ್ಲ ಸರಿ ಕಾಣ್ತದೆ ಅನ್ನುವಾಗ ಹಣದ ಕೊರತೆಯದ್ದೇ ಚಿಂತೆ. ಈಗ ಬರುವ ಸಂಬಳದಲ್ಲಿ ಅರ್ಧದಷ್ಟು ಸ್ಟೈಪೆಂಡ್ ಬಂದರೆ ಅದೇ ಪುಣ್ಯ. ಎಲ್ಲಾ ಸೇರಿ ಇಪ್ಪತ್ತು ಇಪ್ಪತ್ತೈದು ಸಾವಿರ ಬರ್ತದೇನೋ ಅಷ್ಟೇ. ನಲವತ್ತೈದು ಸಾವಿರದಿಂದ ತಟ್ಟಂತ ತಿಂಗಳಾ ತಿಂಗಳು ಬರೋದ್ರಲ್ಲಿ ಇಪ್ಪತ್ತು ಸಾವಿರ ಕಡಿಮೆಯಾಗಿಬಿಟ್ಟರೆ? ಕಾರು ಲೋನು, ಮನೆ ಬಾಡಿಗೆ, ಮನೆ ಖರ್ಚು......ಇದನ್ನೆಲ್ಲ ಹೇಗೆ ಸರಿದೂಗಿಸೋದು? ಉಹ್ಞೂ. ಸದ್ಯಕ್ಕೆ ಯಾವ ಡಿ.ಎನ್.ಬಿ ಕೂಡ ಬೇಡ. ಸಂಜೆ ಸರ್‍‍ನ ಭೇಟಿಯಾಗಲು ಹೋಗಲೇಬೇಕು. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರಿಗೊಂದು ಸಶಕ್ತ ಕಾರಣವನ್ನೇಳದೆ ಹೋದರೆ ಬೇಸರಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರಿಗೆ, ಈಗಲೂ ನನ್ನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಹಾಯ ಮಾಡುತ್ತಿರುವವರಿಗೆ ಬೇಸರ ಮಾಡುವುದು ಕೂಡ ಸರಿಯಲ್ಲ. ಹಿಂಗಿಂಗೆ ಹಣದ ಸಮಸ್ಯೆಯ ಕಾರಣದಿಂದಾಗಿ ಸೇರಲಾಗುತ್ತಿಲ್ಲ ಅಂತ ನಿಜ ಹೇಳುವುದೇ ಒಳ್ಳೆಯದೇನೋ. ಯಾವೊಂದು ನಿರ್ಧಾರಕ್ಕೂ ಬರಲಾಗಲಿಲ್ಲ. ಇಂತಹ ಗೊಂದಲದ ಸಮಯದಲ್ಲಿ ಸಾಗರನಿಗಲ್ಲದೇ ಮತ್ಯಾರಿಗೆ ಫೋನು ಮಾಡುವುದು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 3, 2019

ಒಂದು ಬೊಗಸೆ ಪ್ರೀತಿ - 38

ಡಾ. ಅಶೋಕ್.‌ ಕೆ. ಆರ್.‌
“ಹೇಳಪ್ಪ ಏನ್ ಬಂದಿದ್ದು ಇಷ್ಟೊತ್ತಿನಲ್ಲಿ" ಅಪ್ಪನ ದನಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ತಾಳ್ಮೆಯಿತ್ತು. 

“ಅದೇ ಅಂಕಲ್. ಧರಣಿಗೆ ಮದುವೆ ಗೊತ್ತು ಮಾಡಿದ್ರಿ ಅಂತ ಗೊತ್ತಾಯ್ತು....” 

“ಯಾರ್ ಹೇಳಿದ್ರು?” ಪುರುಷೋತ್ತಮ ನನ್ನ ಕಡೆಗೆ ನೋಡಿದ. ಅಪ್ಪ ಅಮ್ಮನ ಸಿಟ್ಟಿನ ಕಣ್ಣುಗಳು, ತಮ್ಮನ ಅಸಹಾಯಕ ಕಣ್ಣುಗಳು ನನ್ನತ್ತ ಚಲಿಸಿದವು. 

“ಹೂನಪ್ಪ. ಗೊತ್ತು ಮಾಡಿದ್ವಿ. ನಮ್ಮ ಬಲವಂತವೇನೂ ಇಲ್ಲ. ಅವಳು ಒಪ್ಪಿಗೆ ನೀಡಿದ ಮೇಲೆಯೇ ಗೊತ್ತು ಮಾಡಿದ್ದು" 

“ಅದೂ ಗೊತ್ತಿದೆ ಅಂಕಲ್. ನಿಮ್ಮದೂ ಲವ್ ಮ್ಯಾರೇಜೇ ಅಂತಿದ್ಲು ಧರಣಿ. ಆರು ವರ್ಷದ ಲವ್ ಅಂಕಲ್....ಕಷ್ಟವಾಗ್ತದೆ" 

“ನನ್ನ ನಿರ್ಧಾರ ನಿಂಗೆ ಗೊತ್ತೇ ಇರಬೇಕಲ್ಲಪ್ಪ. ನಿಮ್ಮಮ್ಮನನ್ನು ಒಪ್ಪಿಸಿ ಕರೆದುಕೊಂಡು ಬಾ. ಧಾಂ ಧೂಂ ಅಂತ ಮದುವೆ ಮಾಡಿಕೊಡೋ ಜವಾಬ್ದಾರಿ ನಂದು. ನಮ್ಮ ಮನೆಯಲ್ಲಿ ಇನ್ಯಾರೂ ಒಪ್ಪದಿದ್ರೂ ಚಿಂತೆಯಿಲ್ಲ" 

“಻ಅಪ್ಪ ಮಗಳು ಅದೇ ಕಿತ್ತೋದ ಡೈಲಾಗ್ ಹೇಳಿ ಹೇಳಿ ನನ್ನ ಸಾಯಿಸ್ತೀರ. ನಿಮ್ಮ ಮಗಳಿಗೆ ನನ್ನ ಜೊತೆ ಲವ್ ಮಾಡ್ಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ನನ್ನ ಕೈಲಿ ಪಾರ್ಟಿ ಕೊಡಿಸ್ಕೊಂಡು, ಚಾಕಲೇಟು ಐಸ್ಕ್ರೀಮು ಕೊಡಿಸ್ಕೊಂಡು ದುಡ್ಡು ಖರ್ಚು ಮಾಡಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ಆವಾಗ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ ಇವ್ಳು.....” ಕತ್ತೆತ್ತಿ ನನ್ನ ಕಡೆಗೆ ನೋಡಿದ. ಮನಸಲ್ಲೇ ಚಿನಾಲಿ ಎಂದು ಉಗಿದ. ಕಣ್ಣು ನನ್ನ ಬೆನ್ನ ಹಿಂದಿದ್ದ ಶೋಕೇಸಿನತ್ತ ಸರಿಯಿತು. ಅದರೆಡೆಗೆ ಕೈ ತೋರುತ್ತಾ "ಆ ನಿಮ್ ಶೋಕೇಸಿನಲ್ಲಿರೋ ಮುಕ್ಕಾಲು ಗಿಫ್ಟುಗಳು ನಾ ಕೊಟ್ಟಿರೋದು. ಅದನ್ನೆಲ್ಲ ತೆಗೆದುಕೋಬೇಕಾದ್ರೆ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ .....” ಅವನ ಮಾತು ಮುಗಿಯುವ ಮುನ್ನವೇ ಅಪ್ಪ ದಡಕ್ಕನೆ ಮೇಲೆದ್ದು ನನ್ನ ಕಡೆಗೆ ನಡೆದು ಬಂದರು. ಬಿತ್ತು ಏಟು ಕೆನ್ನೆಗೆ ಎಂದುಕೊಂಡೆ. ನನ್ನನ್ನು ಬದಿಗೆ ತಳ್ಳಿ ಶೋಕೇಸಿನ ಬಾಗಿಲು ತೆಗೆದು "ಅದ್ಯಾವ್ಯಾವ ಗಿಫ್ಟು ಕೊಡಿಸಿದ್ದೆ ತಗಳಪ್ಪ. ಲೋ ಶಶಿ ಒಳಗೋಗಿ ಒಂದು ದೊಡ್ಡ ಕವರ್ ತಗಂಡ್ ಬಾ" ಅಂದುಬಿಟ್ಟರು. ನಮ್ಮೆಲ್ಲರಿಗಿಂತ ಹೆಚ್ಚು ಆಘಾತಕ್ಕೊಳಗಾದವನು ಪುರುಷೋತ್ತಮ. ಅಪ್ಪ ಹಿಂಗೆಲ್ಲ ವರ್ತಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಹೇಳಿದ್ದಾಗೋಗಿದೆ. ಇನ್ನೇನು ಮಾಡೋದು ಎನ್ನುವವನಂತೆ ಎದ್ದು ಬಂದು ಒಂದೊಂದಾಗಿ ಗಿಫ್ಟುಗಳನ್ನೆಲ್ಲ ಎತ್ತಿಕೊಳ್ಳುತ್ತಿದ್ದ. ಐದು ವ್ಯಾಲೆಂಟೈನ್ಸ್ ಡೇಗೆ ಕೊಟ್ಟಿದ್ದು, ಆರು ನನ್ನುಟಿದಬ್ಬಕ್ಕೆ ಕೊಟ್ಟಿದ್ದು, ಎರಡು ಅವನ ಹುಟ್ಟಿದ ಹಬ್ಬದಂದು ಕೊಡಿಸಿದ್ದು, ಹೊಸ ವರ್ಷದಂದು ಕೊಡಿಸಿದ್ದ ನಾಲಕ್ಕು, ಯುಗಾದಿಗೆ ಕೊಡಿಸಿದ್ದ ಎರಡು, ಸುಮ್ಮನೆ ನನಗಿಷ್ಟವಾಯ್ತು ಅಂತ ಕೊಡಿಸಿದ್ದ ಐದು ಗಿಫ್ಟುಗಳನ್ನೂ ನೆನಪಿಟ್ಟುಕೊಂಡು ಎತ್ತಿಕೊಂಡ. ಅಂತಹ ಗಂಭೀರ ಸನ್ನಿವೇಶದಲ್ಲೂ ನನಗಿವರ ಮಕ್ಕಳಾಟ ನಗು ಮೂಡಿಸುತ್ತಿತ್ತು. ಜೋರು ನಗಲಿಲ್ಲ ಅಷ್ಟೇ. ಕವರ್ರಿಗಾಕಿಕೊಂಡವನಿಗೆ ಇನ್ನೇನು ಮಾತನಾಡಬೇಕೆಂದು ತೋಚಲಿಲ್ಲ. ಅಪ್ಪನೇ ಮಾತನಾಡಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.