Dec 17, 2015

ಈಗ ಗಾಳಿಗೂ ಭರ್ಜರಿ ಬೆಲೆ!

vitality air
ಚೀನಾದ ಬೀಜಿಂಗಿನಲ್ಲಿ ಈ ಬಾರಿಯೂ 'ರೆಡ್ ಅಲರ್ಟ್' ಘೋಷಿಸಲಾಗಿತ್ತು. ಕಾರಣ ಹೊಗೆ ಮತ್ತು ಮಂಜು (ಹೊಂಜು) ವಿಪರೀತವೆನ್ನಿಸುವಷ್ಟು ಜಾಸ್ತಿಯಾಗಿ ಜನರ ಉಸಿರಾಟಕ್ಕೆ ಓಡಾಟಕ್ಕೆ ತೊಂದರೆಯುಂಟುಮಾಡಿತ್ತು. ಮಂಜು ಪ್ರಾಕೃತಿಕವಾದರೆ ಹೊಂಜು ಮನುಷ್ಯ ನಿರ್ಮಿತ. ಇಡೀ ಪರಿಸರದ ಉಸಿರುಗಟ್ಟಿಸುವಲ್ಲಿ ಮನುಷ್ಯ ಹೆಸರುವಾಸಿಯಲ್ಲವೇ. ಬರ ಇರಲಿ ನೆರೆ ಬರಲಿ ಹೊಂಜು ಮುಸುಕಲಿ ಹಣ ಮಾಡುವ ನವನವೀನ ವಿಧಾನಗಳ ಆವಿಷ್ಕಾರ ಮಾಡುವುದು ವ್ಯಾಪಾರಿಗಳು. ಕೆನಡಾದ ವ್ಯಾಪಾರಿಗಳು ಮತ್ತು ಚೀನಾದ ವ್ಯಾಪಾರಿಗಳು ಈ ಹೊಂಜಿನ ನಡುವೆ ಯಾವ ವ್ಯಾಪಾರ ಮಾಡುವುದೆಂದು ತಲೆಕೆರೆದುಕೊಂಡಾಗ ಹೊಳೆದಿದ್ದು ಶುದ್ಧ ಗಾಳಿ! ಹೌದು ಹೊಂಜಿನ ವಾತಾವರಣದಲ್ಲಿ ಉಸಿರಾಡುವುದೇ ಕಷ್ಟಕರವಾದಾಗ ಒಂದಷ್ಟು ಶುದ್ಧ ಗಾಳಿ ನೀಡುವ ಕಂಪನಿಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಇದೆ.

ಗಾಳಿ ಮಾರುವ ಕಂಪನಿಗಳು ಹೇಳಿಕೊಳ್ಳುವ ಪ್ರಕಾರ ಶಿಖರ ಪರ್ವತಗಳನ್ನು ಏರಿ ಶುದ್ಧ ಗಾಳಿಯನ್ನು ತುಂಬಿಸಿಕೊಂಡು ಬಂದು ಚಿಕ್ಕ ಚಿಕ್ಕ ಕ್ಯಾನುಗಳೊಳಗೆ ತುಂಬಿ ಮಾರಲಾಗುತ್ತಿದೆ. ಗಾಳಿಯ ಪರಿಶುದ್ಧತೆಯ ಲೆಕ್ಕಾಚಾರದಲ್ಲಿ ಒಂದು ಕ್ಯಾನಿಗೆ 19ರಿಂದ 32 ಕೆನಡಾ ಡಾಲರ್ರುಗಳವರೆಗೆ ಬೆಲೆಯಿದೆ (ಅಂದಾಜು 750 ರಿಂದ 1500 ರುಪಾಯಿ!). ಎರಡೆರಡು ಬಾಟಲುಗಳನ್ನು ಜೊತೆಗೆ ಖರೀದಿಸಿದರೆ ಡಿಸ್ಕೌಂಟ್ ಕೂಡ ಸಿಗುತ್ತೆ! ಚೀನಾದಲ್ಲೀಗ ಇಂತಹ ಕ್ಯಾನುಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಸೃಷ್ಟಿಯಾಗಿದೆ. ಇದರ ಜೊತೆಗೆ ಕೆಲವು ಹೋಟೆಲ್ಲುಗಳಲ್ಲಿ 'ಗಾಳಿ ಶುದ್ಧಗೊಳಿಸಲು' ತೆರಿಗೆ ವಿಧಿಸಲು ಪ್ರಾರಂಭಿಸಿದ್ದಾರಂತೆ! ಒಟ್ಟಿನಲ್ಲಿ ಮನುಷ್ಯನ 'ಅಭಿವೃದ್ಧಿ' ಮಾದರಿಯಿಂದ ಶೇಖರಣೆಗೊಂಡ ಹಣವನ್ನು ವ್ಯಯಿಸಲು ನಾನಾ ರೀತಿಯ ದಾರಿಗಳು ಸೃಷ್ಟಿಯಾಗುತ್ತಿವೆ. ಭಾರತ 'ಅಭಿವೃದ್ಧಿ'ಯ ಪಥದಲ್ಲಿ ಮುನ್ನುಗ್ಗಿ ನುಗ್ಗುವ ಬಗ್ಗೆಯೇ ನಮ್ಮ ನಾಯಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿರುವ ಈ ದಿನಗಳಲ್ಲಿ ಚೀನಾದ 'ಅಭಿವೃದ್ಧಿ' ಮಾದರಿ ನಮಗೆ ಪಾಠವಾಗಬೇಕಲ್ಲವೇ? ಅಯ್ಯೋ ಚೀನಾದಲ್ಲಾಗಿದೆ ಅಷ್ಟೇ, ನಾವು ಇನ್ನೂ ಸೇಫು ಬುಡ್ರಿ ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆಯೇ?

ದೆಹಲಿಯಲ್ಲಾಗಲೇ ಹೊಂಜಿನ ಅಟ್ಟಹಾಸ ಶುರುವಾಗಿದೆ. ದೆಹಲಿ ಸರಕಾರ ಜನವರಿ ಒಂದರಿಂದ ಸಮ - ಬೆಸ ಸಂಖೈಯ ವಾಹನಗಳು ದಿನ ಬಿಟ್ಟು ದಿನ ರೋಡಿಗಿಳಿಯುವಂತೆ ಮಾಡುವಲ್ಲಿ ಉತ್ಸುಕವಾಗಿದೆ. ಟೀಕೆಗಳೇನೇ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಉತ್ತಮ ನಡೆಯೇ ಹೌದು. ಅನುಷ್ಟಾನ ಕಷ್ಟವೆಂಬುದೂ ಸತ್ಯ. ನ್ಯಾಯಾಲಯ ಇನ್ನೂ ಮೂರು ತಿಂಗಳವರೆಗೆ 2000 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ನೋಂದಾಯಿಸುವಂತಿಲ್ಲ ಎಂದು ಆದೇಶಿಸಿದೆ. ಈ ನಿರ್ಧಾರಗಳೆಲ್ಲವೂ ಭಾರತದ ದೆಹಲಿ ಕೂಡ ಬೀಜಿಂಗ್ ಆಗುವತ್ತ ಸಾಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಎರಡು ಮೂರು ಕಿಲೋಮೀಟರ್ ಮೈಲೇಜು ಕೊಡುವ ಕಾರಿನಲ್ಲಿ ದಿನವಿಡೀ ತಿರುಗಿ ಹೊಗೆಯುಗುಳುವವರೇನೋ ಮನೆಯಲ್ಲಿ 'ಗಾಳಿ ಶುದ್ಧ'ಗೊಳಿಸುವ ಮಿಷೀನನ್ನು ಖರೀದಿಸಿಬಿಡಬಹುದು ಕಾರೂ ಇಡದೆ ಬೈಕೂ ತೆಗೆದುಕೊಳ್ಳದೆ ಸಾರ್ವಜನಿಕ ಸಾರಿಗೆಯನ್ನಷ್ಟೇ ಉಪಯೋಗಿಸುವವರ್ಯಾಕೆ ವಿಷಗಾಳಿಯನ್ನು ಸೇವಿಸಬೇಕು? ಹತ್ತಕ್ಕಿಂತ, ಹದಿನೈದಕ್ಕಿಂತ ಕಡಿಮೆ ಮೈಲೇಜ್ ಕೊಡುವ ಕಾರುಗಳನ್ನು, ನಲವತ್ತಕ್ಕಿಂತ ಕಡಿಮೆ ಮೈಲೇಜು ಕೊಡುವ ಬೈಕು - ಸ್ಕೂಟರುಗಳನ್ನು ಭಾರತದಲ್ಲಿ ಉತ್ಪಾದಿಸಬಾರದು, ಮಾರಬಾರದು ಎಂದೊಂದು ನಿರ್ಣಯ ತೆಗೆದುಕೊಳ್ಳುವುದು ಅಷ್ಟೊಂದು ಕಷ್ಟವೇ? ಅಭಿವೃದ್ಧಿಯ ವೇಗದ ಭರದಲ್ಲಿ ಪರಿಸರಕ್ಕೇನಾದರೇನು ಬಿಡಿ.

ಹೆಚ್ಚೇನಲ್ಲ ಹತ್ತು ವರುಷದ ಹಿಂದೆ ಹೋಟೆಲ್ಲಿಗೋ ಡಾಬಾಗೋ ಹೋದಾಗ ಗೆಳೆಯರ್ಯಾರಾದೂ ಬಾಟಲ್ ನೀರು ಕೇಳಿದರೆ ಆಡಿಕೊಳ್ಳುತ್ತಿದ್ದೋ. 'ನೋಡ್ದಾ ಇವನ ಕೊಬ್ಬಾ. ಮಿನರಲ್ ವಾಟರ್ ಬೇಕಂತೆ' ಎಂದು ರೇಗಿಸುತ್ತಿದ್ದೊ. ನೀರಿಗೆ ದುಡ್ಡು ಕೊಟ್ಟು ಖರೀದಿಸಿ ಕುಡಿಯುವುದು ನಗೆಪಾಟಲಿನ ಸಂಗತಿಯಾಗಿತ್ತು. ಈಗ? ಬಾಟಲ್ ನೀರು ಖರೀದಿಸುವುದು ಸಹಜವಾಗಿಬಿಟ್ಟಿದೆ. ಭಾರತದ ಅತ್ಯುತ್ತಮ ಬ್ಯುಸಿನೆಸ್ಸುಗಳಲ್ಲಿ ಅದೂ ಒಂದು. ಇನ್ನತ್ತು ವರುಷದಲ್ಲಿ ಭಾರತದ ಮುಖ್ಯ ನಗರಗಳಲ್ಲಿ ಚೀನಾದ ಬೀಜಿಂಗಿನಲ್ಲಾದಂತೆಯೇ ಗಾಳಿಯ ಬ್ಯುಸಿನೆಸ್ಸು ಪ್ರಾರಂಭವಾದರೆ ಅಚ್ಚರಿಯಿಲ್ಲ. ನಮ್ಮ ಅಭಿವೃದ್ಧಿಯ ಮಾದರಿಗಳು ಹೇಗಿರುತ್ತವೋ ನೋಡಿ. ಶುದ್ಧ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ, ಶುದ್ಧ ಗಾಳಿಯನ್ನು ಮೆಟಲ್ ಕ್ಯಾನುಗಳಲ್ಲಿ ತುಂಬಿಸುತ್ತೇವೆ. ಪ್ಲಾಸ್ಟಿಕ್ ಬಾಟಲುಗಳನ್ನು ಮೆಟಲ್ ಕ್ಯಾನುಗಳನ್ನು ತಯಾರಿಸಲು ಮತ್ತಷ್ಟು ಪರಿಸರ ನಾಶವಾಗುತ್ತದೆ, ಆ ನಾಶದ ಪರಿಣಾಮಗಳಿಂದ ಜನರನ್ನು - ಹಣವಂತ ಜನರನ್ನು 'ರಕ್ಷಿಸಲು' ಮತ್ತೊಂದು ಹೊಸ ವ್ಯಾಪಾರ ಶುರುವಾಗುತ್ತದೆ, ಆ ವ್ಯಾಪಾರದಿಂದ ಉಂಟಾಗುವ ಪರಿಸರ ನಾಶದಿಂದ........ ಅಭಿವೃದ್ಧಿಯ ಸಮಯದಲ್ಲಿ ಪರಿಸರದ ಬಗ್ಗೆ ಮಾತನಾಡುವುದೇ ಪಾಪ.

No comments:

Post a Comment