Jul 25, 2020

ಒಂದು ಬೊಗಸೆ ಪ್ರೀತಿ - 72

ಭಾನುವಾರ ಹತ್ತೂವರೆಗೆಲ್ಲ ರೆಡಿಯಾಗಿರಲು ಹೇಳಿದ್ದರು ರಾಮ್.‌ ಅವರ ಕಾರಿನಲ್ಲೇ ಹುಡುಗಿ ಮನೆಗೆ ಹೊರಟೆವು. ನಮ್ಮ ಮನೆಯಿಂದ ಒಂದಿಪ್ಪತ್ತು ನಿಮಿಷದ ಹಾದಿ ಹುಡುಗಿಯ ಮನೆ. ಟೆರಿಶಿಯನ್‌ ಕಾಲೇಜಿನ ಬಳಿಯಿತ್ತು ಅವರ ಮನೆ. ಸ್ವಂತ ಮನೆ; ಮೊದಲ ಫ್ಲೋರಿನಲ್ಲಿ ಅವರಿದ್ದರು, ಕೆಳಗೊಂದು ಮನೆ ಬಾಡಿಗೆಗೆ ಕೊಟ್ಟಿದ್ದರು. 

ʻಇನ್ನೇನು ಮದುವೆಯಾದ ಮೇಲೆ ಕೆಳ್ಗಡೆ ಮನೇಲೇ ಇರ್ಬೋದು ಬಿಡ್ರಿʼ ಅಂತ ರೇಗಿಸಿದೆ ಮನೆಯೊಳಗೋಗುವಾಗ. 

"ಸುಮ್ನಿರಿ. ಮೊದಲು ಹುಡುಗಿ ನೋಡೋ ಶಾಸ್ತ್ರ ಮುಗಿಸಿ ಪಟ್ಟಂತ ಹೊರಟುಬಿಡುವ. ಫುಲ್‌ ಟೆನ್ಶನ್‌ ಆಗ್ತಿದೆ. ಯಾರಿಗ್‌ ಬೇಕ್‌ ಈ ಕರ್ಮವೆಲ್ಲ" ಎಂದೇಳುತ್ತಾ ಪ್ಯಾಂಟಿನ ಎಡಜೇಬಿನಲ್ಲಿದ್ದ ಕರ್ಚೀಫು ಹೊರತೆಗೆದು ಹಣೆ ಒರೆಸಿಕೊಂಡು ಬೆವೆತುಹೋಗಿದ್ದ ಹಸ್ತ ಒರೆಸಿಕೊಂಡರು. ನಮ್ಮಿಂದೆಯೇ ರಾಜೀವ್‌ ರಾಧಳನ್ನು ಎತ್ತಿಕೊಂಡು ಒಳಬಂದರು. ಬನ್ನಿ ಬನ್ನಿ ಕೂತ್ಕೊಳ್ಳಿ ಕೂತ್ಕೊಳ್ಳಿ ಅನ್ನೋ ಶಾಸ್ತ್ರವೆಲ್ಲ ಮುಗಿದು ನಾವು ಕುಳಿತುಕೊಂಡ ನಂತರ ಇವರ್ಯಾರು ಅನ್ನುವಂತ ಪ್ರಶ್ನೆಯನ್ನು ರಾಮ್‌ ಕಡೆಗೆಸೆದರು. ನನ್ನೆಡೆಗೆ ಕೈತೋರುತ್ತಾ "ಇವರು ನನ್‌ ಫ್ರೆಂಡ್ಸು. ಇವ್ರು ಧರಣಿ ಅಂತ, ನಮ್‌ ಆಸ್ಪತ್ರೆಯಲ್ಲೇ ಮಕ್ಕಳ ಡಾಕ್ಟರ್ರು. ಇವರವರ ಹಸ್ಬೆಂಡು, ರಾಜೀವ್‌ ಅಂತ. ಅವರ ಮಗಳು ರಾಧ ಪುಟ್ಟಿ". ಸರಿ ಸರಿಯೆಂಬಂತೆ ತಲೆಯಾಡಿಸಿದರು ಎಲ್ಲರೂ. 

"ನೀವೆಲ್ಲಿ ಕೆಲಸ ಮಾಡೋದು" ಎಂದವರು ಹುಡುಗಿಯ ಚಿಕ್ಕಪ್ಪನೋ ಮಾವನೋ ಇರಬೇಕು. 

ʻನಾನು ಇಲ್ಲೇ ಫಸ್ಟ್‌ ಹೆಲ್ತ್‌ನಲ್ಲಿದ್ದೀನಿʼ ಮಕ್ಕಳ ಡಾಕ್ಟರ್‌ ಆಗಿಲ್ಲ ಇನ್ನೂ ಓದ್ತಿದ್ದೀನಿ ಅಂತೆಲ್ಲ ಹೇಳಬೇಕೆಂದುಕೊಂಡವಳು ಅಷ್ಟೆಲ್ಲ ಪುರಾಣ ಇಲ್ಯಾಕೆ ಎಂದು ಸುಮ್ಮನಾದೆ. 

Jul 15, 2020

ಒಂದು ಬೊಗಸೆ ಪ್ರೀತಿ - 71

ಸುಮ ಮೂಡಿಸಿದ ಬೇಸರವನ್ನು ಮರೆಯಲನುವು ಮಾಡಿಕೊಟ್ಟದ್ದು ಮಗಳೊಂದಿಗಿನ ಒಡನಾಟ. ಮಗಳೊಂದಿಗೆ ನೆಟ್ಟಗೆ ಮಾತನಾಡಿ, ಆಟವಾಡಿ ತಿಂಗಳ ಮೇಲಾಗಿತ್ತು. ತಿಂಗಳ್ಯಾಕೆ, ಎರಡು ತಿಂಗಳೇ ಆಗಿಹೋಯಿತು. ಮಾತನಾಡಿ ಆಟವಾಡಿದರೂ ಅದೆಲ್ಲಾ ಯಾಂತ್ರಿಕತೆಯಿಂದ ಕೂಡಿತ್ತಷ್ಟೆ. ಎರಡ್ ತಿಂಗಳಲ್ಲಿ ಮಗಳು ಎಷ್ಟೊಂದೆಲ್ಲ ಹೊಸ ಹೊಸ ಪದ ಕಲಿತುಬಿಟ್ಟಿದ್ದಾಳೆ ಅಂತ ಅಚ್ಚರಿ. ಅಮ್ಮ, ಅಪ್ಪ, ಪಪ್ಪ, ಮಮ್ಮ, ತಾತ, ಅಜ್ಜಿ, ಮಾಮ, ಅತ್ತೆ ಎಲ್ಲಾ ಸಲೀಸು ಪದಗಳೀಗ. ಇಷ್ಟು ದಿನ ಅವಳನ್ನು ನೋಡಿಕೊಂಡಿದ್ದೇ ಒಂದು ತೂಕವಾದರೆ ಈಗ ಪುಟಪುಟನೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಚಿಮ್ಮುವ ಅವಳ ಉತ್ಸಾಹದ ಸರಿಸಮಕ್ಕೆ ನಾವು ದೊಡ್ಡವರು ನಿಲ್ಲುವುದಕ್ಕೆಲ್ಲಿ ಸಾಧ್ಯ! ಮಗಳ ಆಟೋಟಗಳನ್ನು ನೋಡುತ್ತಾ ಒಂದು ಒಂದೂವರೆ ಘಂಟೆ ಕಳೆದಿದ್ದೇ ತಿಳಿಯಲಿಲ್ಲ. ಫೋನು ರಿಂಗಣಿಸಿತು. ರಾಮ್ ಫೋನ್ ಮಾಡಿದ್ರು. ಮಗಳನ್ನು ಅವರಪ್ಪನ ಕೈಗೊಪ್ಪಿಸಿ ಫೋನ್ ಎತ್ತಿಕೊಂಡು ಹೊರಬಂದೆ. 

ʻಹೇಳಿ ರಾಮ್' 

"ಏನ್ರೀ ಹೇಗಾಯ್ತು ಎಕ್ಸಾಮ್ಸ್ ಎಲ್ಲ?" 

ʻಏನೋ ತಕ್ಕಮಟ್ಟಿಗೆ ಆಗಿದೆ. ನೋಡ್ಬೇಕು ರಿಸಲ್ಟ್ಸ್ ಏನಾಗುತ್ತೋ' 

"ನಿಮ್ಮಂತೋರೇ ಪಾಸಾಗದಿದ್ದರೆ ಇನ್ಯಾರು ಪಾಸಾಗ್ತಾರೆ ಹೇಳಿ...." 

ʻಬೇರೆ ಡೈಲಾಗ್ ಹೇಳೀಪ. ಈ ಡೈಲಾಗ್ ಕೇಳಿ ಕೇಳಿ ಸಾಕಾಗಿದೆ' 

"ಹ ಹ.... ಹೊಸ ಕಾರ್ ತಗಂಡೆ ರೀ" 

ʻಓ ಸೂಪರ್ ಅಲ್ಲ…. ಕಂಗ್ರಾಟ್ಸ್' 

"ಥ್ಯಾಂಕ್ಯು ಥ್ಯಾಂಕ್ಯು" 

ʻಬರೀ ಥ್ಯಾಂಕ್ಸ್ ಹೇಳಿಬಿಟ್ರೆ! ಪಾರ್ಟಿ ಗೀರ್ಟಿ ಕೊಡ್ಸಿ' 

"ನಿಜ ಹೇಳ್ಬೇಕು ಅಂದ್ರೆ ಅದಿಕ್ಕೇ ಫೋನ್ ಮಾಡಿದ್ದು" 

ʻಆಹಾ! ಪಟ್ಟಂತ ಚೆನ್ನಾಗಿ ಸುಳ್ಳೇಳ್ತೀರ' 

"ಇಲ್ಲ ರೀ ನಿಜವಾಗ್ಲೂ. ರಾಜೀವ್ ಹೇಳಲಿಲ್ವ?" 

ʻಇಲ್ವಲ್ಲ' 

Jul 8, 2020

ಒಂದು ಬೊಗಸೆ ಪ್ರೀತಿ - 70

ಕೊನೆಯ ಪರೀಕ್ಷೆ ಮುಗಿಸಿ ಹೊರಬರುವ ಸಂತಸ ವರ್ಣಿಸುವುದು ಕಡು ಕಷ್ಟದ ಕೆಲಸ. ಥಿಯರಿ ಪಾಸಾಗೋದು ಗ್ಯಾರಂಟಿ ಅನ್ನೋ ಖುಷಿಯಲ್ಲಿ ಹೊರಬಂದವಳಿಗೆ ಕಿವಿಯಿಂದ ಕಿವಿಯವರೆಗೆ ನಗು ಹರಡಿಕೊಂಡು ಬಂದ ಸುಮಾ ಜೊತೆಯಾದಳು. 

ಹತ್ತಿರ ಬಂದು ಕೈ ಹಿಡಿದುಕೊಂಡವಳು "ಹೆಂಗಾಯ್ತೆ" ಎಂದು ಕೇಳಿದವಳು ನಾ ಉತ್ತರಿಸುವ ಮೊದಲೇ "ನೀ ಬಿಡು ಚೆನ್ನಾಗೇ ಮಾಡಿರ್ತಿ" ಎಂದು ಅವಳೇ ಉತ್ತರಿಸಿಕೊಂಡಳು. 

ʻಹು. ಕಣವ್ವ. ಪೇಪರ್ ಸೆಟ್ ಮಾಡಿದ್ದು ನಮ್ ಸಂಬಂಧಿಕರೇ ನೋಡು. ಎಲ್ಲಾ ಗೊತ್ತಿರೋದೇ ಕೊಟ್ಬಿಟ್ಟಿದ್ರು' 

"ಹ ಹ. ನಿಂಗ್ ಗೊತ್ತಿಲ್ಲದಿರೋದು ಏನಾದ್ರೂ ಇತ್ತಾ" 

ʻಹೆ ಹೆ. ಇಲ್ಲ. ಎಲ್ಲಾ ಗೊತ್ತಿತ್ತು!' 

"ಹಂಗಾದ್ರೆ ನಿನ್ ಸಂಬಂಧಿಕರೇ ಸೆಟ್ ಮಾಡಿರ್ಬೇಕು ಬಿಡು" 

ʻಸರಿ ಕಣವ್ವ. ನಾನೇ ಸೋತೆ. ಥಿಯರಿ ಪಾಸಾಗೋದ್ರಲ್ಲಿ ಅನುಮಾನ ಇಲ್ಲ ಬಿಡೆ. ಇನ್ ಕ್ಲಿನಿಕ್ಸ್ ಹೆಂಗ್ ಆಗ್ತದೋ ನೋಡ್ಬೇಕು' 

"ನೀ ಓದಿರೋದಿಕ್ಕೆ ಫೇಲಾಗೋದಿಕ್ಕೆ ಸಾಧ್ಯವೇ ಇಲ್ಲ ಬಿಡು" 

ʻಡಿ.ಎನ್.ಬಿ ಕ್ಲಿನಿಕ್ಸಿನಲ್ಲಿ ಪಾಸಾಗೋದಿಕ್ಕೆ ಓದಿರೋದ್ರ ಜೊತೆಗೆ ಅದೃಷ್ಟ ಕೂಡ ಇರ್ಬೇಕಲ್ಲ' 

"ನಿನಗಿಂತ ಅದೃಷ್ಟವಂತೆ ಯಾರಿದ್ದಾರೆ ಬಿಡವ್ವ. ಪ್ರತೀ ಸಲ ಥಿಯರಿ ಎಕ್ಸಾಮು ಬೆಂಗಳೂರಲ್ಲೋ ಚೆನ್ನೈಯಲ್ಲೋ ಮುಂಬೈಯಲ್ಲೋ ಇರೋದಪ್ಪ. ಇದೇ ಮೊದಲ ಸಲ ಮೈಸೂರಲ್ಲಿ ಆಗಿರೋದು. ಅದೃಷ್ಟ ಅಲ್ಲದೇ ಮತ್ತೇನಿದು?" 

Jul 1, 2020

ಒಂದು ಬೊಗಸೆ ಪ್ರೀತಿ - 69

"ಇಲ್ಲೇ ಇದ್ದು ಓದ್ಕೋಬಾರ್ದಾ? ಪಾಪು ನನ್ಜೊತೆ ಮಲಗಿರುತ್ತಪ್ಪ, ನಿನ್ನ ಪಾಡಿಗೆ ನೀನು ಓದ್ಕೊಂಡ್ರಾಗದಾ?" ಅಮ್ಮ ಹೇಳುವಾಗ ಬಾಯಲ್ಲಿದ್ದದ್ದನ್ನು ಗಬಗಬನೆ ತಿನ್ನುತ್ತಾ ತೊಡೆಯಮೇಲಿಟ್ಟುಕೊಂಡಿದ್ದ ಪುಸ್ತಕವನ್ನು ತಿರುವಿಹಾಕುತ್ತಿದ್ದೆ. ಅಮ್ಮನ ಮಾತು ಕೇಳಿಸಿದ್ದೌದು. ಉತ್ತರಿಸಿದರೆಲ್ಲಿ ಎರಡು ಸಾಲು ಓದುವುದು ತಪ್ಪಿಹೋಗ್ತದೋ ಅಂತ ಸುಮ್ಮನಿದ್ದೆ. 

"ನಾನೇಳಿದ್ದು ಕೇಳಿಸ್ತಾ ಇಲ್ವಾ?" ನನ್ನ ಮೌನಕ್ಕೆ ಅಮ್ಮನ ಜೋರಿನ ಮಾತುಗಳು. 

"ಶ್.‌ ಮೆಲ್ಲಗೆ. ಪಾಪು ನಿದ್ರೆ ಮಾಡ್ತಿದೆ" ಅಪ್ಪನ ಗದರಿಕೆ. 

"ನನಗೆ ಮಾತ್ರ ರೇಗಿ. ಅವಳು ನಾ ಕೇಳಿದ್ರೆ ಬದಲೂ ಹೇಳ್ತಿಲ್ಲ. ಕಾಣಲ್ವ ನಿಮಗೆ" ಅಮ್ಮನ ಗೋಳಾಟ. 

ʻಅಯ್ಯೋ ಅಮ್ಮ. ಸುಮ್ನಿರಿ. ಇಲ್ಲೇನೋ ಓದ್ತಿಲ್ವ! ಇಷ್ಟು ದಿನ ಮಗಳನ್ನೂ ಜೊತೆಗೇ ಕರೆದುಕೊಂಡು ಹೋಗ್ತಿರಲಿಲ್ವ? ಇನ್ನೊಂದೇ ವಾರ ಇರೋದು. ಈಗಷ್ಟೇ ರಿವಿಷನ್‌ ಶುರು ಹಚ್ಕೊಂಡಿದ್ದೀನಿ. ಓದೋಕೆ ಇನ್ನೂ ಬೆಟ್ಟದಷ್ಟಿದೆ. ಎರಡ್‌ ತಿಂಗಳಿಂದ ಓದಿರೋದು ಅದೆಷ್ಟು ನೆನಪಿದೆಯೋ ಏನೋ ಅನ್ನೋದು ಗೊತ್ತಿಲ್ಲ. ಸುಮ್ನೆ ಟೆನ್ಶನ್‌ ಕೊಡ್ಬೇಡಿ ಈಗ. ನಾ ಪಾಸಾಗ್ಬೇಕೋ ಬೇಡ್ವೋ?ʼ 

"ಪಾಸಾಗ್ದೇ ಫೇಲ್‌ ಆಗ್ಲಿ ಅಂತ ಬಯಸ್ತೀನಾ? ಇಲ್ಲೆ ಇನ್ನೊಂದ್‌ ರೂಮಲ್‌ ಓದ್ಕೋ. ನಿನ್ನತ್ರ ಮಗಳನ್ನ ಮಲಗಿಸಿಕೋ ಅಂತೇನೂ ಹೇಳ್ತಿಲ್ಲವಲ್ಲ ನಾನು" ಅಮ್ಮನದೂ ಮತ್ತದೇ ಸಾಲುಗಳು. ಏನಾದ್ರೂ ಮಾತಾಡ್ಕೊಳ್ಳಲಿ, ನನ್ನ ಪಾಡಿಗೆ ನಾ ತಿಂದು ಮುಗಿಸಿ ಎದ್ದು ಹೋಗ್ತೀನಿ ಅಂತ ಸುಮ್ಮನಾದೆ.