Nov 28, 2021

ನೀಟ್ ಪರೀಕ್ಷೆಯ ಸುತ್ತ.

ವರುಷಕ್ಕೊಂದು ಸಲ ನೀಟ್‌ ಪರೀಕ್ಷೆಯಿಂದಾಗುವ (ಯುಜಿ ನೀಟ್)‌ ʼಅನಾಹುತʼಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಚರ್ಚೆಗಳಲ್ಲಿ ಕಂಡುಬರುವ ಹೆಚ್ಚಿನ ವಿಚಾರಗಳೆಂದರೆ:

೧. ನೀಟ್‌ ಪರೀಕ್ಷೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗದಂತೆ ನೀಟ್‌ ಮಾಡಿಬಿಟ್ಟಿದೆ.

೨. ನೀಟ್‌ ಪರೀಕ್ಷೆಯಿಂದ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಸೀಟು ಕಬಳಿಸುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.

೩. ಪರೀಕ್ಷೆಗಳು ರಾಜ್ಯಗಳ ನಿಯಂತ್ರಣದಲ್ಲಿರಬೇಕೆ ಹೊರತು ಒಕ್ಕೂಟ ಸರಕಾರದ ನಿಯಂತ್ರಣದಲ್ಲಿರಬಾರದು.

ಕಳೆದ ಇಪ್ಪತ್ತು ವರುಷಗಳಿಂದ ವೈದ್ಯಕೀಯ ಕಾಲೇಜುಗಳಲ್ಲಿ ಓದು ಮತ್ತು ಕೆಲಸದ ಸಲುವಾಗಿ ಇರುವ ಅನುಭವದ ಆಧಾರದ ಮೇಲೆ ಹೇಳುವುದಾದರೆ ಪರೀಕ್ಷೆಗಳು ರಾಜ್ಯಗಳ ನಿಯಂತ್ರಣದಲ್ಲಿರುವ ಅಂಶವನ್ನು ಹೊರತುಪಡಿಸಿದರೆ ಮೇಲೆ ತಿಳಿಸಿದ ಮಿಕ್ಕ ಎರಡೂ ವಿಚಾರಗಳ ಕುರಿತು ನಡೆಯುವ ಚರ್ಚೆಗಳು ದಾರಿ ತಪ್ಪಿಸುವಂತಿದೆ.

ನಮ್ಮ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡು ನೀಟ್‌ ಪರೀಕ್ಷೆಯ ಸಾಧಕ ಭಾದಕಗಳೇನು ಎನ್ನುವುದನ್ನು ನೋಡುವ.

ಮೊದಲಿಗೆ ನೀಟ್‌ ಎನ್ನುವುದು ಒಂದು ಪರೀಕ್ಷೆಯಷ್ಟೇ ಎನ್ನುವುದು ನೆನಪಿಡಬೇಕಿದೆ. ನೀಟ್‌ ಬರುವುದಕ್ಕೆ ಮುಂಚೆ ನಮ್ಮ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿತ್ತು. ಕೆಲವು ವರುಷಗಳ ನಂತರ ಖಾಸಗಿ ಕಾಲೇಜುಗಳ ಕೆಲವು ಸೀಟುಗಳಿಗೆ ಕಾಮೆಡ್‌ ಕೆ ಪ್ರಾರಂಭವಾಯಿತು.  ವರುಷಗಳು ಉರುಳಿದಂತೆ ಹತ್ತಲವು ವೈದ್ಯಕೀಯ ಕಾಲೇಜುಗಳು ಡೀಮ್ಡ್‌ ಆಗಲಾರಂಭಿಸಿದ ಮೇಲೆ ಆ ಕಾಲೇಜುಗಳು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾರಂಭಿಸಿದವು.

ಸಿಇಟಿ ಪರೀಕ್ಷೆಯ ಬದಲಾದ ವಿಧಾನವನ್ನೇ ಗಮನಿಸುವುದಾದರೆ ನಾನು ವೈದ್ಯಕೀಯ ಕಾಲೇಜಿಗೆ ಸೇರುವ ಸಮಯದಲ್ಲಿ (೨೦೦೧) ಸಿಇಟಿ ರ್‍ಯಾಂಕ್ ನಿರ್ಧರಿತವಾಗುತ್ತಿದ್ದಿದ್ದು ಪಿಯುಸಿಯಲ್ಲಿ ಗಳಿಸಿದ ಅಂಕಗಳು ಮತ್ತು ಸಿಇಟಿಯಲ್ಲಿ ಗಳಿಸಿದ ಅಂಕಗಳ ಮೇಲೆ. ೫೦ ಪ್ರತಿಶತಃ ಪಿಯುಸಿಯ ಅಂಕಗಳು ಮತ್ತು ೫೦ ಪ್ರತಿಶತಃ ಸಿಇಟಿಯ ಅಂಕಗಳನ್ನು ಲೆಕ್ಕ ಹಾಕಿ ರ್‍ಯಾಂಕ್ ಘೋಷಿತವಾಗುತ್ತಿತ್ತು. ನಾನು ಪಿಯುಸಿ ಓದಿದ್ದು ಮಂಡ್ಯದಲ್ಲಿ. ಪಿಯುಸಿ ಲೆಕ್ಕಕ್ಕೆ ಮಂಡ್ಯದಲ್ಲಿ ಉತ್ತಮ ಶಿಕ್ಷಣ ದೊರಕುತ್ತಿತ್ತು (ಕಾಲೇಜು ಮತ್ತು ಟ್ಯೂಷನ್ನಿನಲ್ಲಿ). ಆದರೆ ಸಿಇಟಿ ಶಿಕ್ಷಣ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಜೊತೆಗೆ ಸಿಇಟಿ ಕುರಿತು ನನ್ನ ಆಸಕ್ತಿಯೂ ಕಡಿಮಯೇ ಇತ್ತು. ಸಿಇಟಿಯಲ್ಲಿ ಕಡಿಮೆ ಅಂಕ ಗಳಿಸಿದರೂ ಪಿಯುಸಿಯ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಿದ್ದ ಕಾರಣದಿಂದಾಗಿ ಉತ್ತಮ ರ್‍ಯಾಂಕ್ ಬಂದು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿತು.

ಕೆಲವು ವರುಷಗಳ ನಂತರ ಸಿಇಟಿ ರ್‍ಯಾಂಕ್ ನಿರ್ಧರಿಸುವ ಮಾನದಂಡಗಳು ಬದಲಾಯಿತು. ಪಿಯುಸಿಯಲ್ಲಿ ತೆಗೆಯುವ ಮಾರ್ಕ್ಸುಗಳು ಅರ್ಹತೆಗೆ ಮಾತ್ರ ಎಂದು ಸೀಮಿತಗೊಳಿಸಲಾಯಿತು (೫೦% ತೆಗೆದರೆ ಅರ್ಹತೆ). ಸಿಇಟಿಯಲ್ಲಿ ತೆಗೆಯುವ ಅಂಕಗಳ ಆಧಾರದ ಮೇಲೆ ಸಿಇಟಿ ರ್‍ಯಾಂಕ್ ನಿರ್ಧರಿತವಾಗುತ್ತಿತ್ತು. ಯಾವಾಗ ಈ ಮಹತ್ತರ ಬದಲಾವಣೆಯಾಯಿತೋ ಅವತ್ತಿನಿಂದಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು (ಹಾಗು ಸಿಇಟಿಗೆ ಹೆಚ್ಚು ಒತ್ತು ಕೊಡದ ಪ್ರದೇಶಗಳಲ್ಲಿ ಓದುವ ವಿದ್ಯಾರ್ಥಿಗಳು) ವೈದ್ಯಕೀಯ ಕಾಲೇಜುಗಳ ಪ್ರವೇಶ ಪಡೆಯುವುದು ಕಡಿಮೆಯಾಗುತ್ತ ಸಾಗಿತು (ಕಡೇ ಪಕ್ಷ ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ). ನೀಟ್‌ ಬಂದ ಮೇಲೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಕಠಿಣವಾಯಿತು ಎನ್ನುವುದು ನಿಜವಲ್ಲ. ಸಿಇಟಿ ರ್‍ಯಾಂಕ್‍ನ ಬದಲಾದ ಮಾನದಂಡಗಳೇ ಇದಕ್ಕೆ ಕಾರಣ. 

ನೀಟ್‌ ಪರೀಕ್ಷೆಯಿಂದ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಸೀಟು ಕಬಳಿಸುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ವಾದವೂ ನಿಜವಲ್ಲ. ಮೊದಲೇ ಹೇಳಿದಂತೆ ನೀಟ್‌ ಒಂದು ಪರೀಕ್ಷೆಯಷ್ಟೇ. ಇಡೀ ದೇಶಕ್ಕೆ ಪರೀಕ್ಷೆ ಒಂದೇ ಆದರೂ ರಾಜ್ಯವಾರು ಲೆಕ್ಕದಲ್ಲಿ ರ್‍ಯಾಂಕ್ ಘೋಷಣೆಯಾಗುತ್ತದೆ. ಕರ್ನಾಟಕದಲ್ಲಿ ಆರ್.ಜಿ.ಯು.ಹೆಚ್.ಎಸ್‌ ವೈದ್ಯಕೀಯ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳಲ್ಲಿ ಈ ಮುಂಚೆ ಇದ್ದಂತೆಯೆ ಸೀಟುಗಳ ಹಂಚಿಕೆ ನಡೆಯುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ೪೦% ಸೀಟುಗಳು ಸರಕಾರಿ ಕೋಟಾದಲ್ಲಿ (ಅಂದಾಜು ಒಂದು ಲಕ್ಷ ಫೀಸು ಪ್ರತಿ ವರ್ಷಕ್ಕೆ; ಈ ಎಲ್ಲಾ ಸೀಟುಗಳೂ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ), ೪೦% ಸೀಟುಗಳು ಪ್ರೈವೇಟ್‌ ಕೋಟಾದಲ್ಲಿ - ಈ ಮುಂಚಿನ ಕಾಮೆಡ್‌ ಕೆ ಕೋಟಾ ಎಂದು ಪರಿಗಣಿಸಬಹುದು (ಅಂದಾಜು ಆರರಿಂದ ಏಳು ಲಕ್ಷದಷ್ಟು ಫೀಸು ಪ್ರತಿ ವರ್ಷಕ್ಕೆ), ಇನ್ನುಳಿಕೆ ೨೦% ಸೀಟುಗಳು ಪ್ರೈವೇಟ್‌ ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ (ಇದರ ಫೀಸು ಎಲ್ಲದಕ್ಕಿಂತ ಹೆಚ್ಚಿದೆ. ಕಾಲೇಜಿಂದ ಕಾಲೇಜಿಗೆ ವ್ಯತ್ಯಾಸವಿದೆ; ಈ ಸೀಟುಗಳು ಎಲ್ಲಾ ರಾಜ್ಯದವರಿಗೂ ಲಭ್ಯ). ಸರಕಾರಿ ಕಾಲೇಜುಗಳಲ್ಲಿ ಹದಿನೈದರಿಂದ ಇಪ್ಪತ್ತು ಪ್ರತಿಶತಃದಷ್ಟು (ಸರಿಯಾದ ಪ್ರಮಾಣ ನನಗೆ ತಿಳಿದಿಲ್ಲ) ಸೀಟುಗಳು ಸೆಂಟ್ರಲ್‌ ಕೋಟಾಗೆ ಮೀಸಲಾಗಿರುತ್ತವೆ, ಉಳಿದ ಎಲ್ಲಾ ಸೀಟುಗಳೂ ರಾಜ್ಯದ ವಿದ್ಯಾರ್ಥಿಗಳಿಗೆ. ನೀಟ್‌ ಪರೀಕ್ಷೆ ಬಂದ ಮೇಲೂ ಸಹ ಸೀಟು ಹಂಚಿಕೆ ಇದೇ ರೀತಿಯಾಗಿ ನಡೆಯುತ್ತಿದೆ. ಕಾಮೆಡ್‌ ಕೆ ಇದ್ದಾಗ ಅದರ ಪರೀಕ್ಷೆಯ ಮೂಲಕ ನಾ ಕೆಲಸ ಮಾಡುವ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಹೆಚ್ಚಿನ ವಿದ್ಯಾ‍ರ್ಥಿಗಳು ಹೊರರಾಜ್ಯದವರೇ ಆಗಿರುತ್ತಿದ್ದರು. ನೀಟ್‌ ಪರೀಕ್ಷೆ ಪ್ರಾರಂಭವಾದ ಮೇಲೆ ನಮ್ಮ ಕಾಲೇಜಿನಲ್ಲಿ ಪ್ರೈವೇಟ್‌ ಕೋಟಾ ಮತ್ತು ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಸೇರುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳ ಸಂಖೈ ಬೆರಳೆಣಿಕೆಯಷ್ಟು ಮಾತ್ರವಿದೆ. ಮುಂಚೆಯೇ ತಿಳಿಸಿದಂತೆ ಸರಕಾರೀ ಕೋಟಾದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗಷ್ಟೇ ಅವಕಾಶ. 

ನೀಟ್‌ ಇಂದ ತೊಂದರೆಗಳೇ ಆಗಿಲ್ಲವಾ? ಆಗಿದೆ. ನೀಟ್‌ ಮಾದರಿಯ ಪರೀಕ್ಷೆಗಳಿಗೆ ತಯಾರಿ ನಡೆಸುವುದು ದುಬಾರಿಯಿದೆ, ಎಲ್ಲಾ ಊರುಗಳಲ್ಲೂ ನೀಟ್‌ ತಯಾರಿ ಒಂದೇ ಸಮನಾಗಿಲ್ಲ. ಆದರೆ ಈ ಸಮಸ್ಯೆ ನೀಟ್‌ಗೆ ಮುಂಚಿನ ಸಿಇಟಿ ಇದ್ದಾಗಲೂ ಇತ್ತು. ಆಗಲೂ ಸಿಇಟಿ ಕೋಚಿಂಗ್‌ಗೆಂದು ಮಂಡ್ಯದಿಂದ ಮಂಗಳೂರಿಗೆ ಹೋಗುತ್ತಿದ್ದವರ ಸಂಖೈ ಕಡಿಮೆಯೇನಿರಲಿಲ್ಲ. ಸಮಸ್ಯೆ ಹೆಚ್ಚಾಗಿದ್ದು ಪಿಯು ಅಂಕಗಳನ್ನು ಪರಿಗಣಿಸದೇ ಹೋದ ಕಾರಣಕ್ಕೇ ಹೊರತು ನೀಟ್‌ ಪರೀಕ್ಷೆಯ ಕಾರಣಕ್ಕಲ್ಲ. 

ನೀಟ್‌ ಇಂದಾಗಿರುವ ಬಹುದೊಡ್ಡ ಪ್ರಯೋಜನವೆಂದರೆ ವಿದ್ಯಾರ್ಥಿಗಳು ಯಾವ ಕಾಲೇಜಿಗೇ ಸೇರಬೇಕೆಂದಿದ್ದರೂ ಒಂದೇ ಪರೀಕ್ಷೆ ಬರೆದರೆ ಸಾಕು. ನೀಟ್‌ ಬರುವುದಕ್ಕೆ ಮುಂಚೆ ಕರ್ನಾಟಕದಲ್ಲೇ ವಿದ್ಯಾರ್ಥಿಗಳು ಬರೆಯಬೇಕಿದ್ದ ಪರೀಕ್ಷೆಗಳು ಹತ್ತಲವಿದ್ದವು - ಸಿಇಟಿ, ಕಾಮೆಡ್‌ಕೆ ಜೊತೆಗೆ ಹತ್ತಾರು ಡೀಮ್ಡ್‌ ಕಾಲೇಜುಗಳ ಪರೀಕ್ಷೆಗಳನ್ನು ಬರೆಯಬೇಕಿತ್ತು. ಜೊತೆಗೆ ಆಲ್‌ ಇಂಡಿಯಾ ಮಟ್ಟದ ಪರೀಕ್ಷೆಗಳೂ ಹಲವಿದ್ದವು. ಈಗ ಈ ಎಲ್ಲಾ ಪರೀಕ್ಷೆಗಳ ಬದಲಿಗೆ ಒಂದೇ ಪರೀಕ್ಷೆಯಿದೆ. ಆ ಪರೀಕ್ಷೆಯಲ್ಲಿ ಸಿಕ್ಕ ರ್‍ಯಾಂಕ್ ಆಧಾರದ ಮೇಲೆ ವಿವಿಧ ಕಾಲೇಜುಗಳಿಗೆ ಸೇರಬಹುದಾಗಿದೆ.

ಗ್ರಾಮೀಣ ಭಾಗದ ಹಾಗು ನೀಟ್ ಮಾದರಿಗೆ ಹೆಚ್ಚು ತಯಾರಿ ಸಿಗದ ಊರುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂದರೆ ಮುಂಚಿನ ಹಾಗೆ ಅರ್ಧ ಪಿಯು ಅಂಕಗಳು, ಇನ್ನರ್ಧ ನೀಟ್ ಅಂಕಗಳನ್ನು ಪರಿಗಣಿಸಿ ರ್‍ಯಾಂಕ್ ಘೋಷಿಸಬೇಕು. ಅದಾಗದೇ ಹೋದರೆ ನೀಟ್ ಹೋಗಿ ಸಿಇಟಿ ಉಳಿಯುವುದರಿಂದ ಯಾವುದೇ ರೀತಿಯ ಪ್ರಯೋಜನವೂ ಆಗದು. 

Objective ಪರೀಕ್ಷೆಗಳಿಗೆ ಹೆಚ್ಚು ಒತ್ತು ಕೊಡುವ ಪದ್ಧತಿ ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಾಗಿ ಕಾಣುತ್ತಿರುವ ದಿನಗಳಲ್ಲಿ ಹಳೆಯ ರ್‍ಯಾಂಕಿಂಗ್ ಪದ್ಧತಿಗೆ ಮರಳುವುದು ಸಾಧ್ಯವಿಲ್ಲ. ಎಲ್ಲಾ ಕಾಲೇಜುಗಳಲ್ಲೂ ನೀಟ್‍ ಮಾದರಿಗೆ ಒತ್ತು ಕೊಡುವಂತೆ ಶಿಕ್ಷಕರನ್ನು ತರಬೇತುಗೊಳಿಸುವುದೊಂದೇ ಇದಕ್ಕೆ ಪರಿಹಾರ.

ಡಾ. ಅಶೋಕ್.ಕೆ. ಆರ್.