Jan 30, 2009

ಸಮಾಧಿ ಹೋಟ್ಲು...

ಪುಟ ೦೨
ರಾಮೇಗೌಡ ಆಗಿನ್ನೂ ಮಲೆನಾಡಿನಲ್ಲಿದ್ದ. ಘಟ್ಟದ ಮೇಲೆ. ಆಸ್ತಿಯೆಂಬೋದು ಬಹಳವಿರಲಿಲ್ಲವಾದರೂ ಮನೆಯವರೆಲ್ಲಾ ಮೈಮುರಿದು ದುಡಿಯುತ್ತಿದ್ದುದರಿಂದ ಊಟ ಬಟ್ಟೆಗೆ ಕೊರತೆಯಿರಲಿಲ್ಲ, ದುಂದುವೆಚ್ಚ ಮಾಡುತ್ತಿರಲಿಲ್ಲವಾಗಿ ದುಡ್ಡನ್ನೂ ಹೊಂದಿಸಿಟ್ಟಿದ್ದರು. ಐದು ವರ್ಷದ ಹಿಂದೆ ರಾಮೇಗೌಡನ ತಾಯಿ ಅಕಾಲ ಮರಣಕ್ಕೆ ತುತ್ತಾದಾಗ ತಂದೆ 'ವೃಥಾ ಖರ್ಚು' ಎಂದರೂ ಲೆಕ್ಕಿಸದೆ ಹಳ್ಳಿಗೆ ಹಳ್ಳಿಯೇ ನಿಬ್ಬೆರಗಾಗುವಂತೆ ಶ್ರಾದ್ಧ ಕಾರ್ಯ ಮಾಡಿದ್ದ. ಊರವರೆಲ್ಲಾ ಸಂತ್ರ. ತಾಯಿಗೊಂದು ಸಮಾಧಿಯನ್ನೂ ಕಟ್ಟಿಸಿ ಸಿರಿವಂತರ ಹೊಟ್ಟೆ ಉರಿಸಿದ್ದ. ಮುಂಜಾನೆ ಎದ್ದಾಗೊಮ್ಮೆ ತಾಯಿಯ ಸಮಾಧಿಯ ಬಳಿ ಹೋಗಿ ಎರಡು ನಿಮಿಷ ಕುಳಿತು ಬರುವುದು ಆತನ ದಿನಚರಿಯಲ್ಲೊಂದಾಯಿತು. ಇದ್ದೆರಡು ತೆಂಗಿನ ಮರದಿಂದ ನೀರಾ ಇಳಿಸಿ ಕುಡಿಯುತ್ತಿದ್ದವನು ಸಮಾಧಿ ಕಟ್ಟಿಸಿದ ಮೇಲೆ ಅದನ್ನೂ ನಿಲ್ಲಿಸಿಬಿಟ್ಟ. ವಾರಕ್ಕೋ ತಿಂಗಳಿಗೊಮ್ಮೆಯೋ ಸಾರಾಯಿ ಅಂಗಡಿಯಗೆ ಹೋಗಿ ಒಂದೆರಡು ಪಾಕೀಟು ಹಾಕುತ್ತಿದ್ದನಷ್ಟೇ.
ಎಲ್ಲವೂ ಸುಸೂತ್ರವಾಗಿ ಸರಾಗವಾಗಿ ನಡೆಯುತ್ತಿದೆ ಎನ್ನುವಾಗಲೇ 'ರಾಷ್ಟೀಯ ಉದ್ಯಾನವನ ಯೋಜನೆ' ಎಂಬ ಭೂತ ಕೇಳಿಬಂತು. ನಮ್ಮನ್ನೆಲ್ಲಾ ಓದ್ದೋಡಿಸುತ್ತಾರಂತೆ ಅನ್ನೋ ವದಂತಿಗಳೂ ಹಬ್ಬಿದವು. ಇರೋದು ಪ್ರಜಾ ಸರಕಾರ , ಕಾಲಾಂತರದಿಂದ ಇಲ್ಲೇ ಇರೋರಿಗೆ 'ಇದು ನೀವಿರುವ ಜಾಗವಲ್ಲ, ನಡೀರಿ ಆಚೆಗೆ' ಎಂದೇಳಲಾರರು ಎಂದೇ ನಂಬಿದ್ದ ರಾಮೇಗೌಡ. ಭೂತದ ನೆರಳಿನಂತೆ ಸಾಲು ಸಾಲು ವಾಹನಗಳು, ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಸರ್ವೇ ಮಾಡುತ್ತಿರುವ ಅಧಿಕಾರಿಗಳನ್ನು ನೋಡಿದ ಮೇಲೇ ಏನೋ ಆಗಲಿದೆ ಎಂಬ ಭಯದ ಭಾವನೆ. ಹೆಚ್ಚಿನ ಜನರು ವ್ಯವಸಾಯ ಮಾಡುತ್ತಿದ್ದ ಜಾಗವೆಲ್ಲಾ ಕಾಡಿನ ಭಾಗ ಎಂದು ಮಾಡಿ ಅವರಿಗೆ ಯಾವುದೇ ಪರಿಹಾರವಿಲ್ಲವೆಂದು ಹೇಳುತ್ತಿದ್ದಾರೆಂಬ ಸುದ್ದಿ ಹಬ್ಬಿತು. ಕಾಡು ಮರದ ನೆಲ್ಲಿ ಕೀಳುವುದೂ ಅಪರಾಧವಂತೆ ಎಂದರು. ಮರಿ ಪುಢಾರಿಗಳ ನೇತ್ರತ್ವದಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳೂ ನಡೆದವು. ಅಧಿಕಾರಿಗಳದೊಂದು ತಂಡ ಹಳ್ಳಿಹಳ್ಳಿಗೂ ಬಂದು ಕಾಡಿನ ಪರಿಸರದ ಮಹತ್ವ, ಆ ಪರಿಸರದಲ್ಲಿ ಮಾನವನ ವಾಸ ಕಾಡು ಪ್ರಾಣಿಗಳಿಗೆ ಎಷ್ಟು ಹಾನಿ ಉಂಟುಮಾಡಬಲ್ಲದು ಎಂಬುದನ್ನು ಚಿತ್ರಸಹಿತ ವಿವರಿಸಿದರು. ' ನಾವೂ ಪರಿಸರದ ಒಂದು ಭಾಗವಲ್ಲವಾ?' ಎಂಬ ಪ್ರಶ್ನೆ ಮನದಲ್ಲಿ ಮೂಡಿತಾದರೂ ಡಿಗ್ರಿ ಪಡೆದವರಿಗಿಂತ ನನಗೆಂತ ತಿಳಿದೀತು ಎಂದು ಸುಮ್ಮನಾದ. ರಾಮೇಗೌಡನ ವ್ಯವಸಾಯದ ಒಂದಷ್ಟು ಪಾಲು ಭೂಮಿಯನ್ನೂ ಕಾಡಿನ ಭಾಗವೆಂದು ಗುರುತಿಸಿದ್ದರು, ಪರಿಹಾರ ಕಡಿಮೆಯಾಗುವುದೆಂಬ ಚಿಂತೆಯಾಯಿತು.
ಇವೆಲ್ಲಾ ಘಟನೆಗಳ ನಡುವೆಯೇ ಹೆಗಲಿಗೆ ಎರಡಡಿ ಬಂದೂಕು ನೇತುಹಾಕಿಕೊಂಡವರು ಘಟ್ಟದಲ್ಲೆಲ್ಲಾ ಕಾಣಿಸಲಾರಂಭಿಸಿದರು.
ಮುಂದುವರೆಯುವುದು...

Jan 28, 2009

ಸಾವು.

ಸಾವು!
ದೂರವಿದ್ದಷ್ಟೂ
ಸಹಜ;
ಸನಿಹವಾದಷ್ಟೂ
ಕಠಿಣ.

Jan 25, 2009

ಸಮಾಧಿ ಹೋಟ್ಲು.

ಪುಟ ೧
ಕಪ್ಪು ಮೋಡಗಳನ್ನು ನೋಡಿದವನಿಗೆ ಯಾವುದೋ ಭರವಸೆ, ಇವತ್ತಾದರೂ ಮಳೆ ಸುರಿದೀತೆಂಬ ಆಶಯ. ವಾರದಿಂದ ಸೇರುತ್ತಿದ್ದವಾದರೂ ತಮ್ಮಲ್ಲೇ ಜಗಳವಾಡಿಕೊಂಡಂತೆ ದೂರಾಗಿಬಿಡುತ್ತಿದ್ದವು. ಇಂದಲ್ಲ ನಾಳೆ ಮಳೆ ಬಂದೇ ಬರುವುದೆಂಬ ನಿರೀಕ್ಷೆಯಿಂದ ಉಳುಮೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ರಾಮೇಗೌಡ. ಮಲೆನಾಡಿನಲ್ಲೇ ಹುಟ್ಟಿ ಬೆಳೆದವನಿಗೆ ಮಳೆಗಾಗಿ ಕಾಯುವುದು ವಿಚಿತ್ರವೆಂಬಂತೆ ತೋರುತ್ತಿತ್ತು. ನಾಲ್ಕು ವರ್ಷದ ಹಿಂದೆ ಬಯಲುಸೀಮೆಗೆ ಬಂದಿದ್ದಾನೆ. ಹಿಂದಿನ ವರ್ಷಗಳಲ್ಲಿ ಮಳೆ ಚೆನ್ನಾಗಿತ್ತು. 'ಈ ವರ್ಷ ಯಾಕೋ ಅದ್ರುಷ್ಟವಿದ್ದಂತಿಲ್ಲ ಎಂದುಕೊಂಡು ಮನೆಗೆ ಬಂದವನಿಗೆ ಹೆಂಡತಿಯ ಗೊಣಗಾಟ ಕೇಳಿತು, ಈಗದು ಅಭ್ಯಾಸವಾಗಿದ್ದರಿಂದ ಬೇಸರವೆನಿಸಲಿಲ್ಲ. ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೈಸವರಿ ಒಂದಷ್ಟು ಒಣಹುಲ್ಲು ಹಾಕಿ ಬಂದ. ಜನರಿಗೇ ಉಣ್ಣಲು ಕಷ್ಟವಾಗಿರುವಾಗ ಎತ್ತುಗಳು ಬಡಕಲಾಗಿರುವುದರಲ್ಲಿ ಯಾವುದೇ ವಿಶೇಷ ಕಾಣಲಿಲ್ಲ. ಕೈ ಕಾಲು ತೊಳೆದುಕೊಂಡು ಹೋಗಿ ತಂದೆ ತಾಯಿಯ ಫೊಟೊಗೊಮ್ಮೆ ಕೈ ಮುಗಿದು ಚಾಪೆ ಹಾಸಿಕೊಂಡು ಅಡ್ಡಾದ. ಅಡುಗೆ ಮನೆಯಿಂದ ಹೊರಬಂದ ಹೆಂಡತಿ " ಊರವರೆಲ್ಲಾ ಆಡಿಕೊಳ್ತಿದ್ದಾರೆ. ದುಡ್ಡು ಉಳಿಸೋದಿಕ್ಕೆ ಈ ಗೌಡ ಅಪ್ಪನ ಶ್ರಾದ್ಧ ಕಾರ್ಯಾನು ಮಾಡ್ತಿಲ್ಲ ಅಂತ. ದೇವರೆಡೆಗೆ ಅಸಡ್ಡೆ ತೋರೋದಿಕ್ಕೆ ಇವರಿಗೆ ಮಕ್ಕಳಾಗಿಲ್ಲ ಅಂತಾ..." ಕಣ್ಣೀರಾದಳು, ಆಕೆ ಕಣ್ಣೀರಾಕಿದ್ದು ಮಕ್ಕಳಿಲ್ಲ ಎಂಬುದಕ್ಕೋ ಅಥವಾ ಶ್ರಾದ್ಧ ಮಾಡ್ತಿಲ್ಲವೆಂಬೋದಕ್ಕೋ ಅಂದಾಜಿಸಲಾಗಲಿಲ್ಲ ಗೌಡನಿಗೆ. " ನೋಡು ಕಮಲ ಜನ ಸಾವಿರ ಹೇಳಲಿ, ನಮ್ಮ್ಹತ್ರ ಇರೋದೇ ಸ್ವಲ್ಪ ದುಡ್ಡು. ಅದನ್ನೂ ಶ್ರಾದ್ಧಕ್ಕೆಂತ ಅವರಿವರ ಬಾಯಿಗೆ ಹಾಕಿಬಿಟ್ಟರೆ ನಮ್ಮ ಬಾಯಿಗೆ ..." ಮಗ್ಗುಲು ಬದಲಿಸಿದ

ಇನ್ನು ಮಾತನಾಡಿ ಉಪಯೋಗವಿಲ್ಲವೆಂದು ಅರಿತು ಮತ್ತೆ ಗೊಣಗುತ್ತಾ ಅಡುಗೆಮನೆ ಸೇರಿದಳು.
[ಮುಂದುವರೆಯುವುದು . . . .]

ಪುರಾವೆ.

ನಾವೆಲ್ಲ ಕಡಲಿಂದ
ಬಂದವರು;
ಮೇಲೆ ನಗುವಿನ ಅಲೆಗಳು,
ಒಳಗೆ
ಅಗ್ನಿ ಪರ್ವತಗಳು.
( ವರುಷಗಳ ಹಿಂದೆ ಓ ಮನಸೇಯಲ್ಲಿ ಪ್ರಕಟವಾಗಿದ್ದು)