Jul 31, 2015

ಏರಿಳಿದ ಕನ್ನಡ ಮಾಧ್ಯಮ ಲೋಕ.

ವಿಜಯ್ ಗ್ರೋವರ್, ತೆಹೆಲ್ಕಾ.
ಮೂವತ್ತನಾಲ್ಕು ವರುಷದ ಸುನಿಲ್ ಶಿರಸಂಗಿ ಒರ್ವ ಪತ್ರಕರ್ತ. ಕಳೆದ ಕೆಲವು ತಿಂಗಳುಗಳಿಂದ ಕಾರ್ಮಿಕ ನ್ಯಾಯಾಲಯ ಮತ್ತು ಕಾರ್ಮಿಕ ಅಧಿಕಾರಿಯ ಕಛೇರಿಗೆ ಅಲೆಯುತ್ತಲೇ ಸುಸ್ತಾಗಿ ಹೋಗಿದ್ದಾನೆ. ಐದು ವರುಷಗಳ ಹಿಂದೆ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಸುನಿಲ್ ಹೊರಳಿಕೊಂಡಾಗ ಈ ರೀತಿಯ ದಿನಮಾನಗಳನ್ನು ನೋಡಬೇಕಾಗಬಹುದೆಂದು ಊಹಿಸಿರಲಿಲ್ಲ. ಸುನಿಲ್ ತನ್ನೊಬ್ಬನ ಹಕ್ಕಿಗಾಗಿ ನ್ಯಾಯಾಲಯಕ್ಕೆ ಅಲೆಯುತ್ತಿಲ್ಲ, ಜನಶ್ರೀ ವಾಹಿನಿಯಲ್ಲಿ ತನ್ನೊಡನೆ ಕೆಲಸ ಹಂಚಿಕೊಳ್ಳುತ್ತಿದ್ದ ಅರವತ್ತು ಸಹೋದ್ಯೋಗಿಗಳಿಗಾಗಿ ಹೋರಾಡುತ್ತಿದ್ದಾನೆ.

ಸರಿಯಾಗಿ ಸಂಬಳ ಸಿಗುತ್ತಿಲ್ಲವೆಂದು ವಾಹಿನಿಯ ಮಾಲೀಕರ ಬಳಿ ಕೇಳಿದ್ದೇ ಸುನಿಲ್ ಮತ್ತವರ ಸಹೋದ್ಯೋಗಿಗಳ ಕೆಲಸಕ್ಕೆ ಎರವಾಯಿತು. ಸುನಿಲ್ ನೆನಪಿಸಿಕೊಳ್ಳುವಂತೆ ಡಿಸೆಂಬರ್ 2014ರ ಒಂದು ದುರ್ದಿನ ಅರವತ್ತೈದು ಜನರನ್ನು ಕಛೇರಿಯ ಒಳಗಡೆ ಕಾಲಿಡಲು ಬಿಡಲಿಲ್ಲ. “ಕೆಲಸ ನಿರ್ವಹಿಸಿದ್ದಕ್ಕೆ ಸಂಬಳ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು. ಗುಂಪಾಗಿ ಹೋಗಿ ಸಂಬಳ ಕೇಳಿದ್ದು ಮಾಲೀಕರ ತಂಡಕ್ಕೆ ಮೆಚ್ಚುಗೆಯಾಗಲಿಲ್ಲವಂತೆ” ಎನ್ನುತ್ತಾರೆ ಸುನಿಲ್.

ಏಳು ತಿಂಗಳ ನಂತರ ಕಾರ್ಮಿಕ ನ್ಯಾಯಾಲಯದಲ್ಲಿ ನೌಕರರ ಪರ ತೀರ್ಪು ಬರುವ ಸಂಭವ ಹೆಚ್ಚಿದೆ. ಬಾಕಿ ಇರುವ ಸಂಬಳವನ್ನು ನೀಡುವಂತೆ ನ್ಯಾಯಾಲಯ ಆದೇಶಿಸುವುದೆಂಬ ಆಶಯದಲ್ಲಿರುವ ಅರವತ್ತು ಜನ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ.

“ನ್ಯಾಯಕ್ಕಾಗಿ ಸವೆಸಿದ ಹಾದಿ ಕಠಿಣವಾಗಿತ್ತು. ಜೀವನ ಕಷ್ಟಕರವಾಗಿತ್ತು. ಏಳು ತಿಂಗಳು ಸಂಬಳವಿಲ್ಲದೆ ಮನೆ ಕಟ್ಟಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿಲ್ಲ; ಕಷ್ಟಗಳು ಹೆಂಡತಿಯ ಒಡವೆಗಳನ್ನು ಒತ್ತೆ ಇಡುವಂತೆ ಮಾಡಿಬಿಟ್ಟವು” ಹೆಸರು ಹೇಳಲಿಚ್ಛಿಸದ ದೃಶ್ಯ ವಾಹಿನಿಯ ಪತ್ರಕರ್ತರೊಬ್ಬರ ದುಗುಡವಿದು.

ಈ ರೀತಿಯ ದುರ್ವಿಧಿ ಜನಶ್ರೀ ವಾಹಿನಿಯಲ್ಲಿ ಕೆಲಸ ಮಾಡಿದ ಅರವತ್ತೂ ಚಿಲ್ಲರೆ ಪತ್ರಕರ್ತರದ್ದು ಮಾತ್ರವಲ್ಲ. ಕರ್ನಾಟಕದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೃಶ್ಯ ವಾಹಿನಿ ಪತ್ರಕರ್ತರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕನ್ನಡ ವಾಹಿನಿಗಳ ಆರ್ಥಿಕ ಸ್ಥಿತಿ ದಯನೀಯವಾಗುತ್ತಿರುವುದು ಸಿಲಿಕಾನ್ ವ್ಯಾಲಿಯೆಂದೇ ಹೆಸರಾದ ಬೆಂಗಳೂರಿನ ಅನೇಕ ಪತ್ರಕರ್ತರ ಜೀವನವನ್ನು ದುರ್ಬರವಾಗಿಸಿದೆ; ಸಿಲಿಕಾನ್ ಸಿಟಿ ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಂಶ ಈ ಪತ್ರಕರ್ತರಿಗೆ ಅಪಹಾಸ್ಯದಂತೆ ಕಂಡರೆ ಅಚ್ಚರಿಯಿಲ್ಲ!

2007ರಲ್ಲಿ ಕನ್ನಡ ದೃಶ್ಯ ವಾಹಿನಿಗಳಲ್ಲಿದ್ದ ಉತ್ಸಾಹದ ಬೆಳವಣಿಗೆಗೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ.

2007ರಲ್ಲಿ ಜೆಡಿಎಸ್ಸಿನ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕರ್ನಾಟಕ ‘ಸುದ್ದಿಗ್ರಸ್ಥ’ ರಾಜ್ಯವಾಗಿ ಹೆಸರು ಮಾಡಿತು. ಇಪ್ಪತ್ತಿಪ್ಪತ್ತು ತಿಂಗಳ ಅಧಿಕಾರ ಹಂಚಿಕೆ, ತಂದೆಯ ಮಾತು ಕೇಳಿ ವಚನಭ್ರಷ್ಟರಾದ ಕುಮಾರಸ್ವಾಮಿ, ದಿನಕ್ಕತ್ತು ಸುದ್ದಿ ಕೊಡುತ್ತಿದ್ದ ಯಡಿಯೂರಪ್ಪನವರ ಆಡಳಿತಾವಧಿ, ಬಿಜೆಪಿಯ ಆಂತರಿಕ ಕಚ್ಚಾಟದಿಂದ ಮುಖ್ಯಮಂತ್ರಿಗಳು ಬದಲಾಗಿದ್ದು, ಬಳ್ಳಾರಿಯ ರೆಡ್ಡಿ ಸಹೋದರರ ಅನ್ಯಾಯದ ಗಣಿಗಾರಿಕೆ, ಆಗ ಲೋಕಾಯುಕ್ತದ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಗಣಿ ಮಾಫಿಯಾದ ವಿರುದ್ಧ ಅಂಜದೆ ಕಾರ್ಯನಿರ್ವಹಿಸಿದ್ದೆಲ್ಲವೂ ಕರ್ನಾಟಕದ ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಬಿಡುವನ್ನೇ ನೀಡಿರಲಿಲ್ಲ.

ಕನ್ನಡದ ಮಾಧ್ಯಮದ ದೃಷ್ಟಿಯಿಂದ 2007ರಿಂದ 2013ರವರೆಗೆ ಸುವರ್ಣ ಸಮಯ ನಡೆಯುತ್ತಿತ್ತು. ಬರೋಬ್ಬರಿ ಆರು ಹೊಸ ಕನ್ನಡ ಸುದ್ದಿವಾಹಿನಿಗಳು ಶುರುವಾಯಿತು. ಉದ್ದಿಮೆದಾರರು, ರಾಜಕಾರಣಿಗಳು ಕೋಟಿ ಕೋಟಿ ರುಪಾಯಿಯನ್ನು ದೃಶ್ಯ ಮಾಧ್ಯಮವೆಂಬ ಉದ್ದಿಮೆಗೆ ಸುರಿದರು. 2007ರಲ್ಲಿ ಆಂಧ್ರ ಮೂಲದ ಟಿವಿ 9 ಕನ್ನಡದಲ್ಲಿ ವಾಹಿನಿ ಪ್ರಾರಂಭಿಸಿದ ನಂತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುವರ್ಣ ವಾಹಿನಿಯನ್ನು ಹುಟ್ಟು ಹಾಕಿದರು. ರೆಡ್ಡಿ ಸಹೋದರರು ಜನಶ್ರೀ ವಾಹಿನಿಯನ್ನು ಪ್ರಾರಂಭಿಸಿದರೆ ಜಾರಕಿಹೊಳಿ ಕುಟುಂಬ ಸಮಯ ವಾಹಿನಿಯನ್ನು ಶುರುಮಾಡಿದರು.

ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ವಾಹಿನಿಗಳು ಪ್ರಾರಂಭಗೊಂಡಿದ್ದೇ ತಡ, ದೃಶ್ಯ ಮಾಧ್ಯಮದಲ್ಲಿ ಅನುಭವ ಇದ್ದವರು, ಇಲ್ಲದವರಿಗೆಲ್ಲ ಅಲ್ಲಿಯವರೆಗೆ ಪತ್ರಿಕೋದ್ಯಮ ಕಂಡು ಕೇಳರಿಯದ ರೀತಿಯಲ್ಲಿ ಅವಕಾಶಗಳು ಸಿಗಲಾರಂಭಿಸಿತು. ಬೇಕಾಬಿಟ್ಟಿ ನೇಮಕಗಳಿಂದ, ತರಬೇತಿಯ ಕೊರತೆಯಿಂದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಕಾರ್ಯಕ್ರಮಗಳ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. ರಾಜಕೀಯ ನಾಟಕಗಳು ಪರಾಕಾಷ್ಟೆಯಲ್ಲಿದ್ದ ಸುದ್ದಿ ಹಸಿವಿನ ರಾಜ್ಯ ಇದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಮಾಧ್ಯಮಕ್ಕೆ ಹಣ ಹರಿಯುತ್ತಲೇ ಇತ್ತು, 2013ರ ವಿಧಾನಸಭಾ ಚುನಾವಣೆಯವರೆಗೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜಕೀಯದ ನಾಟಕಗಳು ಪರದೆಯ ಹಿಂದೆ ಸರಿದವು. ರಾಜಕಾರಣಿಗಳ ನಾಟಕಾಭಿನಯ ಕಡಿಮೆಯಾಗುತ್ತಿದ್ದಂತೆ ಸುದ್ದಿ ವಾಹಿನಿಗಳೆಡೆಗೆ ಜನರಿಗಿದ್ದ ಆಸಕ್ತಿಯೂ ಕಡಿಮೆಯಾಯಿತು. ಕುಸಿಯುತ್ತಿದ್ದ ಆದಾಯ, ಟಿ.ಆರ್.ಪಿ ಅನೇಕ ವಾಹಿನಿಗಳ ಅಸ್ತಿತ್ವಕ್ಕೇ ಸಂಚಕಾರ ತಂದಿತು.

ಸಮಯ ವಾಹಿನಿ ಮಾಲೀಕತ್ವದಲ್ಲಿ ಎರಡಕ್ಕೂ ಹೆಚ್ಚು ಬಾರಿ ಬದಲಾವಣೆಗಳಾಗಿದ್ದರೆ, ಜನಶ್ರೀ ತನ್ನನ್ನು ಉಳಿಸಿಕೊಳ್ಳಬಲ್ಲ ಹಣವಂತರಿಗಾಗಿ ಕಾಯುತ್ತಿದೆ. ಸುವರ್ಣ ಮತ್ತು ಪಬ್ಲಿಕ್ ಟಿವಿ ಏದುಸಿರುಬಿಡುತ್ತಾ ವೆಚ್ಚಗಳನ್ನು ಕಡಿಮೆ ಮಾಡುವುದರತ್ತ ಗಮನಹರಿಸುತ್ತಿವೆ. ಇವುಗಳ ನಡುವೆ ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿಯಾದ ಉದಯ ನ್ಯೂಸ್ ಕನಿಷ್ಟ ಬಂಡವಾಳ ಮತ್ತು ಕಡಿಮೆ ಉದ್ಯೋಗಿಗಳ ಕಾರಣದಿಂದಾಗಿ ಇನ್ನೂ ಉಳಿದುಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಎರಡು ಹೊಸ ಕನ್ನಡ ಸುದ್ದಿ ವಾಹಿನಿಗಳು ಪ್ರಾರಂಭವಾಗಿವೆಯಾದರೂ ವೀಕ್ಷಕರ ಮೇಲಿನ್ನೂ ಪರಿಣಾಮ ಬೀರಲಾಗಿಲ್ಲ. ಈ ಎರಡೂ ವಾಹಿನಿಗಳಿಗೆ ರಿಯಲ್ ಎಸ್ಟೇಟಿನ ಹಣ ಹರಿದು ಬರುತ್ತಿದೆಯಾದರೂ ಅವುಗಳ ಗೆಲುವು ಸುಲಭವಲ್ಲ. “ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಂತಸ್ತು ಹೆಚ್ಚಿಸುವಲ್ಲಿ ವಾಹಿನಿಗಳು ಸಹಾಯ ಮಾಡುತ್ತವೆ ಎನ್ನುವ ನಂಬುಗೆಯಿಂದ ಅನೇಕ ಬಂಡವಾಳಗಾರರು ಸುದ್ದಿವಾಹಿನಿಯಲ್ಲಿ ಹಣ ತೊಡಗಿಸುತ್ತಾರೆ. ಕೆಲವು ಸಮಯದ ನಂತರ ಸುದ್ದಿ ವಾಹಿನಿಯೆಂಬುದು 24 x 7 ದುಡ್ಡು ಸೆಳೆಯುವ ಸುಳಿಯೆಂದು ಅರಿವಾಗುತ್ತದೆ; ಬರುವ ಆದಾಯ ತುಂಬಾನೇ ಕಡಿಮೆ ಎಂದು ಅರಿತುಕೊಳ್ಳುತ್ತಾರೆ” ಎನ್ನುತ್ತಾರೆ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ನಜರ್ ಅಲಿ.

ಬಂಡವಾಳ ಹಾಕುವವರು ದೂರ ಸರಿಯುತ್ತ, ದೃಶ್ಯ ವಾಹಿನಿಗಳ ಬೆಳವಣಿಗೆಯೂ ಕುಂಠಿತಗೊಂಡಿರುವ ಸಂಗತಿ ಇನ್ನೂರೈವತ್ತು ಪತ್ರಕರ್ತರಿಗೆ ಎಷ್ಟು ತಲೆಬೇನೆ ತರುತ್ತಿದೆಯೋ 29 ಪತ್ರಿಕೋದ್ಯಮ ಕಾಲೇಜುಗಳಿಂದ ಪ್ರತೀ ವರುಷ ಹೊರಬರುವ ಏಳುನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೂ ಭವಿಷ್ಯದ ಭೀತಿ ಹುಟ್ಟಿಸುತ್ತಿದೆ. ಕನ್ನಡ ಸುದ್ದಿ ವಾಹಿನಿಗಳಿಗೆ ಮತ್ತೆ ಒಳ್ಳೆಯ ದಿನಗಳು ಬರುವವರೆಗೆ ಈ ಪ್ರತಿಭಾವಂತ ವಿದ್ಯಾರ್ಥಿಗಳು ಈಗಿನ ಸಂದರ್ಭದಲ್ಲಿ ಸಿಗುವ ಕೆಲವೇ ಕೆಲವು ಅವಕಾಶಗಳಿಗೆ ಬಡಿದಾಡಲೇಬೇಕಾಗಿದೆ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.

Jul 29, 2015

ಸಂಕಟದ ಸ್ವಾತಂತ್ರ್ಯ

Dr Ashok K R
ಕಾರಣವೇನೋ ಗೊತ್ತಿಲ್ಲ Freedom at Midnight ಪುಸ್ತಕ ನೆಹರೂ ಬರೆದ ಪುಸ್ತಕವೆಂದೇ ವರುಷಗಳಿಂದ ನಂಬಿದ್ದೆ. ಆಂಗ್ಲ ಪುಸ್ತಕವನ್ನು ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವ ಎಚ್.ಆರ್.ಚಂದ್ರವದನ ರಾವರ ಪುಸ್ತಕವನ್ನು ಕೈಗೆತ್ತಿಕೊಂಡಾಗಲೇ ಅರಿವಾಗಿದ್ದು Freedom at Midnight ಬರೆದವರು ಎಲ್.ಕಾಲಿನ್ಸ್ ಮತ್ತು ಡಿ.ಲ್ಯಾಪೈರ್ ಎಂದು! ಇದು ಅನುವಾದದ ಪುಸ್ತಕವೆಂದು ತಿಳಿಯದಷ್ಟು ಸಶಕ್ತವಾಗಿದೆ. ಭಾರತದ ಸ್ವಾತಂತ್ರ್ಯದ ಮತ್ತು ವಿಭಜನೆಯ ಹಿಂದು ಮುಂದಿನ ಘಟನೆಗಳ ಪುಸ್ತಕವಿದು.

ಪುಸ್ತಕ ಪ್ರಾರಂಭವಾಗುವುದು ಇಂಗ್ಲೆಂಡಿನಲ್ಲಿ ಭಾರತಕ್ಕೆ ಹೊಸ ವೈಸ್ ರಾಯ್ ಆಗಿ ಮೌಂಟ್ ಬ್ಯಾಟನ್ ನೇಮಕವಾಗುವುದರೊಂದಿಗೆ. ಇಂಗ್ಲೆಂಡಿನವರ ಮನದಲ್ಲಿ ಅತಿ ದೊಡ್ಡ ದೇಶವಾದ ಭಾರತದ ವೈಸ್ ರಾಯ್ ಆಗುವುದೆಂದರೆ ಹೆಮ್ಮೆಯ, ಸಂತಸದ ಸಂಗತಿ. ಮೌಂಟ್ ಬ್ಯಾಟನ್ನಿನಲ್ಲಿ ಆ ಸಂಭ್ರಮವಿಲ್ಲ. ಕಾರಣ ಆತ ನಿಯತಿಗೊಂಡಿರುವುದು ಭಾರತವನ್ನು ಮತ್ತಷ್ಟು ವರುಷಗಳ ಕಾಲ ಆಳುವುದಕ್ಕಾಗಲ್ಲ; ಭಾರತವನ್ನು ಸ್ವತಂತ್ರಗೊಳಿಸಿ ಬ್ರಿಟೀಷ್ ಸಾಮ್ರಾಜ್ಯವನ್ನು ಕೊನೆ ಮಾಡಲು. ಬ್ರಿಟೀಷರ ಒಡೆದು ಆಳುವ ನೀತಿಯ ಕಾರಣದಿಂದಾಗಿ ಭಾರತವೆಂಬುದು ಒಂದೇ ದೇಶವಾಗಿ ಉಳಿಯುವ ಸಾಧ್ಯತೆಗಳು ಕ್ಷೀಣವಾಗಿತ್ತು. ಮುಸ್ಲಿಂ ನಾಯಕತ್ವ ಪ್ರತ್ಯೇಕ ದೇಶಕ್ಕಾಗಿ ಪಟ್ಟು ಹಿಡಿದರೆ ಮೊದಮೊದಲಿಗೆ ವಿಭಜನೆಯನ್ನು ಒಪ್ಪದ ಕಾಂಗ್ರೆಸ್ಸಿಗರು ಅನಿವಾರ್ಯವಾಗಿ ಒಪ್ಪಿಬಿಟ್ಟರು, ಒಬ್ಬ ಗಾಂಧಿಯ ಹೊರತಾಗಿ.

ಬೂಟಾಸಿಂಗನೆಂಬ ಅಮರ ಪ್ರೇಮಿ

ನಡುರಾತ್ರಿಯಲ್ಲಿ ಸ್ವಾತಂತ್ರ್ಯದಲ್ಲಿ ರಾಜಕೀಯ ನಾಟಕಗಳು, ಗಾಂಧಿ, ಜಿನ್ನಾ, ನೆಹರೂ, ಸರ್ದಾರ್ ಪಟೇಲರ ವ್ಯಕ್ತಿ ಚಿತ್ರಣಗಳು, ಸ್ವಲ್ಪ ಹೆಚ್ಚೇ ಎನ್ನಿಸುವಂತಹ ಮೌಂಟ್ ಬ್ಯಾಟನ್ ಮತ್ತಾತನ ಪತ್ನಿಯ ಹೊಗಳಿಕೆ, ರಾಜ ಮಹಾರಾಜರ ಚಿತ್ರ ವಿಚಿತ್ರವೆನ್ನಿಸುವ ಅಭ್ಯಾಸಗಳೆಲ್ಲವೂ ದಾಖಲಾಗಿವೆ. ರಾಂಪುರದ ನವಾಬ ವರುಷಕ್ಕಿಷ್ಟು ಕನ್ಯೆಯ ಕನ್ಯಾಪೊರೆ ಕಳಚುತ್ತೇನೆ ಎಂದು ಪಂದ್ಯ ಕಟ್ಟುತ್ತಿದ್ದನಂತೆ, ಕಾಶ್ಮೀರದ ಮಹಾರಾಜ ಹರಿಸಿಂಗ್ ಲಂಡನ್ನಿನ ಸ್ತ್ರೀ ಸಹವಾಸದಿಂದ ಬೊಕ್ಕಸದ ಹಣ ಖಾಲಿ ಮಾಡಿದನಂತೆ, ಮಾತು ಕೇಳದ ಕುದುರೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಆಳ್ವರ್ ಮಹಾರಾ….. ಇಂತಹ ರಾಜಮಹಾರಾಜರಿದ್ದ ಭಾರತವನ್ನು ಕೆಲವು ಸಾವಿರ ಸಂಖೈಯ ಬ್ರಿಟೀಷರು ಶತಮಾನಗಳ ಕಾಲ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದು ಅಚ್ಚರಿ ಪಡಬೇಕಾದ ವಿಷಯವೇನಲ್ಲ.

ಸ್ವಾತಂತ್ರ್ಯಕ್ಕೆ ಮುನ್ನವೇ ಉತ್ತರ ಭಾರತದಲ್ಲಿ ಹಿಂದೂ – ಮುಸ್ಲಿಂ ಕೋಮುದಳ್ಳುರಿ ಹಬ್ಬಲಾರಂಭಿಸಿತ್ತು. ಕಲ್ಕತ್ತಾದ ಕೋಮುಗಲಭೆಯನ್ನು ಶಮನಗೊಳಿಸಲು ಗಾಂಧಿ ಬರಬೇಕಾಯಿತು. ಗಾಂಧೀಜಿಯವರ ವ್ಯಕ್ತಿತ್ವದ ದಿಗ್ದರ್ಶನವಾಗುವುದು ಇಂತಹ ಸಂದರ್ಭದಲ್ಲೇ. ಯಾರಿಂದಲೂ ನಿಯಂತ್ರಿಸಲಾಗದು ಎನ್ನಿಸುವ ಸನ್ನಿವೇಶಗಳಲ್ಲೂ ತಮ್ಮ ಅಹಿಂಸೆಯ ತತ್ವದಿಂದಲೇ ನಿಯಂತ್ರಿಸಿಬಿಡುವ, ಜನರ ಮನಃಪರಿವರ್ತನೆ ಮಾಡುವ ಮತ್ತೊಬ್ಬ ನಾಯಕನನ್ನು ಕಾಣುವುದು ಕಷ್ಟ. ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ಗಾಂಧೀಜಿಯವರ ಹುಳುಕುಗಳನ್ನು ತೋರಿಸುತ್ತದೆ, ಹಿರಿಮೆಯನ್ನೂ ಚಿತ್ರಿಸುತ್ತದೆ. ಈ ಪುಸ್ತಕ ಓದಿದ ನಂತರ ಗಾಂಧಿಯನ್ನು ಮತ್ತಷ್ಟು ಪ್ರೀತಿಸಲು ಕಾರಣ ಸಿಗುತ್ತದೆ, ಮಗದಷ್ಟು ದ್ವೇಷಿಸಲೂ ನೆಪಗಳು ಸಿಗುತ್ತವೆ!

ವಿಭಜನೆಯೇ ಕೊನೆಯ ತೀರ್ಮಾನವಾದ ನಂತರ ಅದು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಗಡಿಯ ಭಾಗದಲ್ಲಿ ನಡೆದಿದ್ದು ಹಿಂಸೆ ಹಿಂಸೆ ಮತ್ತು ಹಿಂಸೆ. ರೈಲುಗಳು ನಿರಾಶ್ರಿತರ ದುಃಖ ದುಮ್ಮಾನಗಳನ್ನು ಹೊತ್ತು ತರುತ್ತಿದ್ದಂತೆ ಗಡಿಯಿಂದ ದೂರವಿದ್ದ ಪಟ್ಟಣಗಳಲ್ಲೂ ಹಿಂಸೆ ತಾಂಡವವಾಡತೊಡಗಿತು. ನಿರಾಶ್ರಿತರ ಶಿಬಿರದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ನಡುವೆ ನಿಂತು ಅಹಿಂಸಾಧರ್ಮದ ಬಗ್ಗೆ ತಿಳಿಹೇಳುವ ಆತ್ಮಸ್ಥೈರ್ಯ ಗಾಂಧೀಜಿಗಷ್ಟೇ ಇರಲು ಸಾಧ್ಯ. ನಿರಾಶ್ರಿತರ, ದೇಶವಾಸಿಗಳ ಟೀಕಾಸ್ತ್ರಗಳು ಅವರ ಸತ್ಯವನ್ನು ಮಾರ್ಪಡಿಸಲಿಲ್ಲ.

ವಿಭಜನೆಯ ಸಮಯದಲ್ಲಿ ಮನುಷ್ಯರೆಂಬುದನ್ನೇ ಮರೆತು ವರ್ತಿಸಿದ ಜನರ ನಡುವೆ ಪ್ರಾಣದ ಹಂಗು ತೊರೆದು ಅನ್ಯಧರ್ಮದವರನ್ನು ಕಾಪಾಡಿದವರ ಕಥೆಯಿದೆ. ಅಂತಹವರ ಸಂಖೈ ಕಡಿಮೆಯಿತ್ತಷ್ಟೇ. ಹುಟ್ಟುತ್ತಲೇ ಭಾರತದ ಮೇಲೆ ದ್ವೇಷ ಸಾಧಿಸಲಾರಂಭಿಸಿದ ಪಾಕಿಸ್ತಾನದ ಕುತಂತ್ರಗಳು, ಇಸ್ಲಾಂ ಮೂಲಭೂತವಾದಿಗಳ ಮತಿಗೇಡಿತನ ಇಂದಿಗೂ ಕೊನೆಗೊಂಡಿಲ್ಲ. ಹಿಂದೂ ಮೂಲಭೂತವಾದಿಗಳು ಜಿನ್ನಾನನ್ನು ಕೊಲ್ಲಲು ಪಾಕಿಸ್ತಾನಕ್ಕೆ ತೆರಳಿ ಕಾರ್ಯ ಸಫಲವಾಗದೇ ವಾಪಸ್ಸಾಗುವ ಘಟನೆಯ ವಿವರಗಳಿವೆ. ಕೊನಗೆ ಅದೇ ಮೂಲಭೂತವಾದಿ ಮನಸ್ಸುಗಳು ಗಾಂಧಿಯನ್ನು ಹತ್ಯೆಗೈಯ್ಯಲು ನಡೆಸಿದ ಸಿದ್ಧತೆಯ ವಿವರಗಳೆಲ್ಲವೂ ಪುಸ್ತಕದಲ್ಲಿದೆ. ಗಾಂಧಿ ಸತ್ತು ಅರವತ್ತೇಳು ವರುಷಗಳಾಗುವಷ್ಟರಲ್ಲಿ ಗಾಂಧಿ ಹಂತಕರನ್ನೇ ಪೂಜಿಸುವ ಹಂತಕ್ಕೆ ನಾವು ತಲುಪಿದ್ದೇವೆ! ವಿಭಜನೆಯ ಸಮಯದ ಘಟನೆಗಳನ್ನು ಮನಕಲುಕುವಂತಹ, ಚಿಂತನೆಗೆ ಹಚ್ಚುವಂತಹ, ಅಳಿದುಳಿದ ಮಾನವೀಯತೆಯನ್ನು ಬಡಿದೆಬ್ಬಿಸುವಂತಹ ಕತೆಯ ರೂಪದಲ್ಲಿ ಬರೆದಿದ್ದು ಸದತ್ ಹಸನ್ ಮಾಂಟೋ. ಅಷ್ಟೇ ಸಶಕ್ತವಾಗಿ ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ವಿಭಜನೆಯ ನೋವುಗಳನ್ನು ನಮಗೆ ದಾಟಿಸುತ್ತದೆ. ಪುಸ್ತಕ ಓದಿ ಮುಗಿಸುವಾಗ ಸ್ವತಂತ್ರಗೊಂಡ ಭಾರತದ ಸಂಭ್ರಮದ ನೆನಪಿಗಿಂತ ಸಂಕಟಗಳೇ ಕಾಡುತ್ತವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಹದಿನಾಲ್ಕರ ಮಧ್ಯರಾತ್ರಿ ಯಾವುದೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲವಂತೆ. ಸಂಕಟದ ಸ್ವಾತಂತ್ರ್ಯದಲ್ಲಿ ಸಂಭ್ರಮವೆಲ್ಲಿ?

ಭೂಮಿಗೀತ ತಂಡದ ಹಾಡುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭೂಮಿಗೀತ ತಂಡದ ಹಾಡುಗಳು






Jul 27, 2015

ಲಕ್ಷ್ಮಣ್ ಹೂಗಾರ್ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಲಕ್ಷ್ಮಣ್ ಹೂಗಾರ್ ಮಾತುಗಳು.


ಎಂ.ಎಸ್.ಆಶಾದೇವಿಯವರ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಎಂ.ಎಸ್.ಆಶಾದೇವಿಯವರ ಮಾತುಗಳು.

ಕೋಟಗಾನಹಳ್ಳಿ ರಾಮಯ್ಯನವರ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕೋಟಗಾನಹಳ್ಳಿ ರಾಮಯ್ಯನವರ ಮಾತುಗಳು.

Jul 24, 2015

ಪತ್ರಕರ್ತರ ಅಧ್ಯಯನ ಕೇಂದ್ರದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ.

ಇದೇ ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ವಿವರಗಳನ್ನು ಕೆಳಗಿನ ಪಟಗಳಲ್ಲಿ ನೀಡಲಾಗಿದೆ.



Jul 21, 2015

Learn Photography in Facebook!

Ashok K R
With the advent of Digital SLR's 'photography' became much cheaper when compared to the good old 'film' photography days. The competition between the makers made entry level equipment affordable. Social platforms like facebook, flickr, 500px provided opportunity for the photographers to publicize and share their work with friends and general public. Now in facebook you can see even a novice who has still not understood the basics of photography starting a “XYZ Photography” page! There are many professionals with their “Photography” page where they put their best photos, which can help amateurs to understand the basics. If not all most of these pages restrict themselves to exhibit their best pictures and the photographers use these pages as advertisement for their workshops, lectures. Very few of them share their knowledge of photography, technicality involved in the image making, post processing, equipment in free platforms like facebook. And still very few of them will reply to the questions asked by the viewers. Most commonly the photographers response to the questions of the viewers is to just like that without replying! 

Here is a photography page with a difference. “Sudhir Shivaram Nature and Wildlife Photography” page gives a rare opportunity for the viewers to enjoy the beauty of photography and at the same time it teaches a lot many things of photography! Sudhir Shivaram conducts various workshops, lectures, phototour workshops. Sudhir could have easily restricted his photography page to publicize his photos to get more and more people for workshops. But surprisingly he shares each and every detail of the photography technique in almost all the photos that he regularly adds to the page. He replies to most of the questions asked by the viewers, silly to serious! I have not attended his workshop because by the time I liked his page I was aware of some of the basics of photography, thanks to my photography friends Akshara Raxidi, Pramod Pailoor, Vinyasa Ubaradka and various websites. 

Just a year back Sudhir Shivaram’s photography page had less likes. Now it is increased to a hopping 9,37,000! Recently he has given a rare opportunity for those who can’t afford his workshops to learn the basics of photography from the comfort of home in facebook. Sudhir Shivaram has beautifully rearranged all his photographs under various subheadings. Just go to his photography page, click photos – albums, you will appreciate the different topics shown in the images below. 

You can learn most of the basic things from those posts and enjoy the images of Sudhir Shivaram. Have a question? Just search his other posts as he has covered most of the topics related to photography. Didn’t find an answer? Ask him and chances of getting an answer is 100%!

Disclaimer: I don’t know him personally, and this post is not to promote his paid workshops (though I recommend a novice who wants to be professional photographer to join his workshop!). I admire his work and more than that as a teacher I admire his way of teaching photography.

Jul 20, 2015

ವ್ಯಾಪಕ ವ್ಯಾಪಂ

vyapam scam
Ashok K R
ಭಾರತದಲ್ಲಿ ಹಗರಣಗಳೇನೂ ಹೊಸದಲ್ಲ. ವರುಷಕ್ಕೊಂದೂ ದೊಡ್ಡ ಹಗರಣಗಳಿಲ್ಲದೇ ಹೋಗುವುದು ಅಪರೂಪ. ಹಾಗೆ ನೋಡಿದರೆ 2014ರಲ್ಲಿ ಹಗರಣಗಳ ಸಂಖೈ ಒಂದಷ್ಟು ಕಡಿಮೆಯಿತ್ತು. 2015 ಅರ್ಧ ಮುಗಿಯುತ್ತಿದ್ದಂತೆಯೇ ಹಗರಣಗಳ ಮೇಲೆ ಹಗರಣಗಳು ಕೇಂದ್ರದಲ್ಲಿ, ರಾಜ್ಯದಲ್ಲಿ ಹೊರಬರುತ್ತಿವೆ. ಹಾಸಿಗೆ ದಿಂಬು ಖರೀದಿ ಹಗರಣ ರಾಜ್ಯದಲ್ಲಿ ಒಂದಷ್ಟು ಸದ್ದು ಮಾಡಿದರೆ, ಹೆಚ್ಚು ಸುದ್ದಿ ಮಾಡುತ್ತಿರುವುದು ಲೋಕಾಯುಕ್ತ ಹಗರಣ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರ ಪುತ್ರ ಅಶ್ವಿನ್ ರಾವ್ ಲೋಕಾಯುಕ್ತ ಕಛೇರಿಯಲ್ಲಿ ವಿಪರೀತ ಭ್ರಷ್ಟಾಚಾರ ನಡೆಸಿರುವ ಬಗ್ಗೆ ದೂರುಗಳಿವೆ. ನೈತಿಕತೆಯ ಹೊಣೆ ಹೊತ್ತು ಭಾಸ್ಕರರಾವ್ ರಾಜೀನಾಮೆ ನೀಡಬೇಕಿತ್ತು. ಅದಾಗಿಲ್ಲ. ಪ್ರತಿಭಟನೆ ಜೋರಾಗುತ್ತಿದೆ. ದಿನಕ್ಕೊಂದು ಹೊಸ ವಿಷಯಗಳು ಹೊರಬರುತ್ತಲೇ ಇವೆ. ಭ್ರಷ್ಟನಲ್ಲ ಎಂದು ತೋರ್ಪಡಿಸಿಕೊಳ್ಳುವ ಸಿದ್ಧರಾಮಯ್ಯ ಲೋಕಾಯುಕ್ತದ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಪರಸ್ಪರ ಸಹಕಾರವಿರುವಂತೆ ತೋರುತ್ತದೆ. ಇನ್ನು ಕೇಂದ್ರದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನೇಕ ಅಪರಾಧಗಳಲ್ಲಿ ಹೆಸರಿಸಲಾದ ಲಲಿತ್ ಮೋದಿಗೆ ಪಾಸ್ ಪೋರ್ಟ್ ದೊರಕಲು ಸಹಾಯ ಮಾಡಿರುವುದು ಸುದ್ದಿಯಾಯಿತು. ಲಲಿತ್ ಮೋದಿಯವರ ಅನಿಯಮಿತ ಟ್ವೀಟುಗಳ ಪರಿಣಾಮದಿಂದ ಸುಷ್ಮಾ ಸ್ವರಾಜರಿಂದ ಸಹಾಯ ಮಾಡಿದ ಆರೋಪ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇಯವರ ಕೊರಳಿಗೂ ಸುತ್ತಿಕೊಂಡಿತು. ಈ ಈರ್ವರು ಮಹಿಳಾ ರಾಜಕಾರಣಿಗಳ ಸಂಬಂಧಿಕರು ಲಲಿತ್ ಮೋದಿಯ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವುದೆಲ್ಲ ಬಹಿರಂಗವಾಯಿತು. ವಿಪರೀತ ಮಾತನಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಹಗರಣದ ಬಗ್ಗೆ ಸಂಪೂರ್ಣ ಮೌನಕ್ಕೆ ಶರಣಾದರು. ಜಾಣ ಮೌನವಿದು. ಇಂಥ ಹಗರಣಗಳ ಬಗ್ಗೆ ಪ್ರತಿಕ್ರಿಯೆ ನೀಡಿದಷ್ಟೂ ಚರ್ಚೆ ಹೆಚ್ಚಾಗಿ ಜನರ ಮನಸ್ಸಲ್ಲಿ ಹಗರಣಗಳು ಉಳಿದು ಬಿಡುತ್ತವೆ; ನಿರ್ಲಕ್ಷ್ಯ ಮಾಡಿದರೆ ಕೆಲವು ದಿನಗಳ ನಂತರ ಮಾಧ್ಯಮಗಳು ಮತ್ತೊಂದು ಚರ್ಚೆಗೆ ತೊಡಗಿಕೊಳ್ಳುತ್ತಾರೆ, ಈ ಹಗರಣ ಮರೆಯಾಗಿ ಹೋಗುತ್ತದೆ ಎಂಬ ಕಾರಣದಿಂದ ಪ್ರಧಾನಿಗಳು ಮೌನ ವಹಿಸಿದ್ದಾರೆ. ಒಂದು ರೀತಿಯಲ್ಲಿ ಇದು ಚಾಣಾಕ್ಷತನವೇ. ಆದರೆ ಹಗರಣಗಳ ಬಗ್ಗೆ ಮಾತನಾಡದೆ ಮೌನವಾಗಿ ಉಳಿದು ಹೋಗಿದ್ದಕ್ಕೆ ಕಳೆದ ಯು.ಪಿ.ಎ ಸರಕಾರ ತೆತ್ತ ಬೆಲೆಯೆಷ್ಟು ಎಂಬುದರರಿವು ಪ್ರಧಾನಿಗಳಿಗಿದ್ದರೆ ಸಾಕು! ಈ ಎಲ್ಲಾ ಹಗರಣಗಳಿಗಿಂತ ದೇಶವನ್ನು ಬೆಚ್ಚಿ ಬೀಳಿಸಿದ್ದು ಮಧ್ಯ ಪ್ರದೇಶದ ವ್ಯಾಪಂ ಹಗರಣ. ಹಗರಣದ ವ್ಯಾಪ್ತಿಯಿಂದ ಇದು ಬೆಚ್ಚಿ ಬೀಳಿಸಲಿಲ್ಲ. ಇದಕ್ಕಿಂತ ದೊಡ್ಡ ಪ್ರಮಾಣದ ಹಗರಣಗಳನ್ನು ದೇಶ ಕಂಡಿದೆ. ಆದರೆ ಹಗರಣಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳು ಒಬ್ಬರಾದ ನಂತರ ಒಬ್ಬರು ಅಸಹಜ ರೀತಿಯಿಂದ, ಅನುಮಾನಾಸ್ಪದ ರೀತಿಯಲ್ಲಿ ಸಾಯುತ್ತಿರುವುದು ಆಘಾತ ಮೂಡಿಸಿದೆ. ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟ, ಅದರ ತನಿಖೆ ಮಾಡಿದ, ಅದರಲ್ಲಿ ಸಾಕ್ಷಿಯಾಗಿದ್ದ, ಅದನ್ನು ವರದಿ ಮಾಡಲು ಹೋದ ಪತ್ರಕರ್ತ- ಹೀಗೆ ಸಾಯುತ್ತಿರುವವರ ಸಂಖೈ ಹೆಚ್ಚಾಗುತ್ತಲೇ ಇದೆ.

ಏನಿದು ವ್ಯಾಪಂ ಹಗರಣ?

akshay singh vyapam
ಪತ್ರಕರ್ತ ಅಕ್ಷಯ್ ಸಿಂಗ್
ಆತನ ಹೆಸರು ಅಕ್ಷಯ್ ಸಿಂಗ್. ಆಜ್ ತಕ್ ವಾಹಿನಿಯ ವರದಿಗಾರ. ಸರಿಸುಮಾರು ಐದಾರು ವರುಷಗಳಿಂದ ತನಿಖೆಯಲ್ಲಿರುವ ವ್ಯಾಪಂ ಹಗರಣದ ಸತ್ಯಾಸತ್ಯತೆಯ ಬೆನ್ನು ಬಿದ್ದವನು. ಜನವರಿ 2012ರಲ್ಲಿ ನಮ್ರತಾ ದಾಮೋರ್ ಎಂಬ ಪ್ರಥಮ ವರುಷದ ವೈದ್ಯಕೀಯ ವಿದ್ಯಾರ್ಥಿನಿ ರೈಲಿನಡಿ ಬಿದ್ದು ಸತ್ತು ಹೋಗಿರುತ್ತಾಳೆ. ಮರಣೋತ್ತರ ವರದಿಯಲ್ಲಿ ರೈಲಿನಡಿ ನಜ್ಜುಗುಜ್ಜಾಗುವುದಕ್ಕೆ ಮುಂಚೆ ನಮ್ರತಾಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ನಮೂದಿಸಲಾಗುತ್ತದೆ. ಪೋಲೀಸರು ಅಂತಹ ಸಾಧ್ಯತೆಗಳನ್ನು ತಳ್ಳಿಹಾಕಿ, ಇಲ್ಲ ಇದು ಆತ್ಮಹತ್ಯಾ ಪ್ರಕರಣ, ನಮ್ರತಾ ರೈಲಿಗೆ ಸಿಲುಕಿ ಸತ್ತಿದ್ದಾಳೆ ಎಂದು ಶರಾ ಬರೆಯುತ್ತಾರೆ. ಮೂರು ವರುಷದ ನಂತರ ನಮ್ರತಾಳ ತಂದೆ ಮೆಹ್ತಾಬ್ ಸಿಂಗ್ ರನ್ನು ಸಂದರ್ಶಿಸಲು ಅಕ್ಷಯ್ ಸಿಂಗ್ ಅವರ ಮನೆಗೆ ಹೋಗುತ್ತಾರೆ. ಮೂವತ್ತೆಂಟು ವರುಷದ ಅಕ್ಷಯ್ ಮೆಹ್ತಾಬ್ ಸಿಂಗರ ಮನೆಯಲ್ಲೇ ಕೆಮ್ಮುತ್ತಾ ಬಾಯಲ್ಲಿ ನೊರೆ ಸೂಸುತ್ತಾ ತೀವ್ರವಾಗಿ ಅಸ್ವಸ್ಥ್ಯನಾಗುತ್ತಾನೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪುತ್ತಾನೆ. ನಮ್ರತಾ ದಾಮೋರ್ ವ್ಯಾಪಂ ಹಗರಣದಿಂದ ಲಾಭ ಮಾಡಿಕೊಂಡಿದ್ದಾಕೆ. ಅಸಹಜ ಸಾವನ್ನಪ್ಪುತ್ತಾಳೆ. ಅದರ ಬಗ್ಗೆ ತನಿಖಾ ವರದಿ ಮಾಡಲೊರಟ ಅಕ್ಷಯ್ ಸಿಂಗ್ ಅಸಹಜ ಸಾವನ್ನಪ್ಪುತ್ತಾನೆ. ಅಕ್ಷಯ್ ಸಿಂಗ್ ನ ಸಾವು ವೈದ್ಯಕೀಯ ಪ್ರಾಥಮಿಕ ವರದಿಗಳ ಪ್ರಕಾರ ಅದು ಹೃದಯ ಸಂಬಂಧಿ ಖಾಯಿಲೆಯಿಂದ ಆದ ಸಾವು. ದೇಹದ ಅಂಗಾಂಗಗಳ ಮಾದರಿಯನ್ನು ಉನ್ನತ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ. ಅಕ್ಷಯ್ ಸಿಂಗ್ ನ ಸಾವು ಈ ಹಗರಣವನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ತಂದಿತು. ಸಹೋದ್ಯೋಗಿಯೊಬ್ಬನ ಸಾವು ಮಾಧ್ಯಮಗಳು ಈ ವಿಷಯವನ್ನು ಮತ್ತೆ ಚರ್ಚೆಗೆ ತೆಗೆದುಕೊಳ್ಳುವಂತೆ ಮಾಡಿತು. ಮಾಧ್ಯಮಗಳ ವರದಿಗಳ ಪ್ರಕಾರ ನಲವತ್ತಕ್ಕೂ ಹೆಚ್ಚು ಜನರು ಈ ಹಗರಣದ ಕಾರಣದಿಂದ ಅಸಹಜ ಸಾವನ್ನಪ್ಪಿದ್ದಾರೆ. ಒಂದಷ್ಟು ಜನರು ಕುಡಿತದ ಕಾರಣದಿಂದ, ಕ್ಯಾನ್ಸರಿನ ಕಾರಣದಿಂದ ಮರಣವನ್ನಪ್ಪಿದ್ದಾರೆ ಎಂಬುದು ಸತ್ಯವಾದರೂ ಹಗರಣಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಪಟ್ಟ ಯುವಕ – ಯುವತಿಯರು ಅಸಹಜ ರೀತಿಯಲ್ಲಿ ಸಾಯುತ್ತಿರುವುದು ವ್ಯವಸ್ಥೆಯ ಬಗ್ಗೆ ಭೀತಿ ಹುಟ್ಟಿಸುತ್ತದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಒಳಗಾಗಿರುವ ಮಧ್ಯಪ್ರದೇಶದ ರಾಜ್ಯಪಾಲರಾದ ರಾಮ್ ನರೇಶ್ ಯಾದವರ ಮಗ ಶೈಲೇಶ್ ಯಾದವ್ ಕೂಡ ಅಸಹಜವಾಗಿ, ಇಂತದ್ದೇ ನಿರ್ದಿಷ್ಟ ಕಾರಣದಿಂದ ಸತ್ತರು ಎಂದು ಅರಿಯಲಾಗದ ರೀತಿಯಿಂದ ಸಾವನ್ನಪ್ಪಿರುವುದು ಹಗರಣದ ವ್ಯಾಪ್ತಿಯ ಸಂಕೇತ.

MadhyaPradesh Professional Examination Boardನ ಹಿಂದಿ ರೂಪ ವ್ಯಾಪಂ, ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿ. ವಿವಿಧ ಸರಕಾರಿ ಇಲಾಖೆಗಳ ನೇಮಕಾತಿಯ ಪರೀಕ್ಷೆಗಳನ್ನು ಈ ವ್ಯಾಪಂ ನಡೆಸುತ್ತದೆ. ಜೊತೆ ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಕೂಡ ವ್ಯಾಪಂ ಮುಂದಾಳತ್ವದಲ್ಲಿ ನಡೆಯುತ್ತದೆ. ಒಂದು ರೀತಿಯಲ್ಲಿ ನಮ್ಮ ಕರ್ನಾಟಕದ ಕೆ.ಪಿ.ಎಸ್.ಸಿ ಮತ್ತು ಸಿಇಟಿ ಕೇಂದ್ರಗಳೆರಡನ್ನೂ ಸೇರಿಸಿದರೆ ಮಧ್ಯಪ್ರದೇಶದ ವ್ಯಾಪಂ ಸೃಷ್ಟಿಯಾಗುತ್ತದೆ. ಕೆ.ಪಿ.ಎಸ್.ಸಿ ಮತ್ತು ಸಿಇಟಿಗಳೆರಡರ ಹಗರಣಗಳನ್ನು ಸೇರಿಸಿದರೆ ಎಷ್ಟಾಗುತ್ತದೋ ಅಷ್ಟನ್ನೂ ವ್ಯಾಪಂ ಮಾಡುತ್ತಿದೆ, ವ್ಯಾಪಕವಾಗಿ ಮಾಡುತ್ತಿದೆ. ಸಬ್ ಇನ್ಸ್ ಪೆಕ್ಟರ್, ಪೋಲೀಸ್ ಪೇದೆ, ಫುಡ್ ಇನ್ಸ್ ಪೆಕ್ಟರ್ ಹುದ್ದೆಗಳ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದೆ. ಎಲ್ಲಕ್ಕಿಂತ ಹೆಚ್ಚು ಹಗರಣಗಳಾಗಿರುವುದು ವೈದ್ಯಕೀಯ ಪದವಿ ಮತ್ತು ಸ್ನಾತಕ್ಕೋತ್ತರ ವೈದ್ಯ ಪದವಿಗೆ ಸಂಬಂಧಪಟ್ಟ ಪರೀಕ್ಷೆಗಳಲ್ಲಿ. 

ಹಾಗೆ ನೋಡಿದರೆ ವೈದ್ಯ ಪರೀಕ್ಷೆಗಳಲ್ಲಿ ನಡೆಯುವ ಹಗರಣಗಳು ಹೊಸದೇನಲ್ಲ. ಕರ್ನಾಟಕದ್ದೇ ಉದಾಹರಣೆಗಳನ್ನು ನೋಡುವುದಾದರೆ ಇಂತಹ ಪರೀಕ್ಷೆಗಳಲ್ಲಿ, ಅದರಲ್ಲೂ ಸ್ನಾತಕ್ಕೋತ್ತರ ವೈದ್ಯ ಪರೀಕ್ಷೆಗಳಲ್ಲಿ ಮೋಸ ನಡೆಯುತ್ತಲೇ ಇದೆ. ಮೊದಮೊದಲು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಹಳೆಯ ವಿಧಾನ ಚಾಲ್ತಿಯಲ್ಲಿತ್ತು. ಅದನ್ನು ತಡೆದ ನಂತರ ನಕಲಿ ಅಭ್ಯರ್ಥಿಯನ್ನು ಕರೆತಂದು ಪರೀಕ್ಷೆ ಬರೆಸುವ ಪರಿಪಾಟವಿತ್ತು. ಪಕ್ಕದಲ್ಲಿ ಜಾಣ ವಿದ್ಯಾರ್ಥಿಯನ್ನು ಕೂರಿಸಿಕೊಳ್ಳಲು ದುಡ್ಡು ಚೆಲ್ಲಲಾಗುತ್ತಿತ್ತು. ಈ ಪರೀಕ್ಷೆಗಳಲ್ಲಿ ಎಲ್ಲರಿಗೂ ಒಂದೇ ಪ್ರಶ್ನೆಗಳಿದ್ದರು ಪ್ರಶ್ನೆಗಳ ಕ್ರಮಸಂಖೈಯಲ್ಲಿ ವ್ಯತ್ಯಾಸವಿರುತ್ತದೆ. ಒಬ್ಬಾತನಿಗೆ ಮೊದಲ ಕ್ರಮಸಂಖೈಯಲ್ಲಿರುವ ಪ್ರಶ್ನೆ ಅವನ ಪಕ್ಕದಲ್ಲಿ ಕುಳಿತವನಿಗೆ ಇಪ್ಪತ್ತೊಂದನೇ ಕ್ರಮಸಂಖೈಯಲ್ಲಿರುತ್ತದೆ, ಅವನ ಹಿಂದೆ ಕುಳಿತವನಿಗೆ ನಲವತ್ತೊಂದನೇ ಕ್ರಮಸಂಖೈಯಲ್ಲಿರುತ್ತದೆ. ನಂತರದ ಪ್ರಶ್ನೆಗಳು ಅದೇ ಆರ್ಡರ್ರಿನಲ್ಲಿರುತ್ತವೆ. ಈ ಸಂಗತಿ ತಿಳಿದುಕೊಂಡ ನಂತರ ನಕಲು ಮಾಡುವುದು ಸುಲಭವಾಗಿಬಿಡುತ್ತದೆ. ಇದಕ್ಕಿಂತಲೂ ಸುಲಭ ಮೋಸದ ಮಾರ್ಗವೆಂದರೆ ಪರೀಕ್ಷೆಯಲ್ಲಿ ಒ.ಎಮ್.ಆರ್ ಉತ್ತರ ಪತ್ರಿಕೆಯ ಮೇಲೆ ಏನನ್ನೂ ಬರೆಯದೆ ಖಾಲಿ ಹಾಳೆಯನ್ನು ವಾಪಸ್ಸು ಕೊಟ್ಟು ನಂತರದಲ್ಲಿ ಸರಿ ಉತ್ತರಗಳನ್ನು ತುಂಬಿಸುವುದು. ಇಷ್ಟೆಲ್ಲ ಕಷ್ಟಪಟ್ಟು ಏತಕ್ಕೆ ನಕಲು ಮಾಡುತ್ತಾರೆಂದರೆ ಮ್ಯಾನೇಜ್ ಮೆಂಟ್ ಪಿ.ಜಿ ಸೀಟುಗಳು ಕೋಟಿ ಕೋಟಿ ಲೆಕ್ಕಕ್ಕೆ ಹರಾಜಾಗುತ್ತವೆ. ನಕಲು ಮಾಡಲು ಲಕ್ಷಗಳ ಲೆಕ್ಕದಲ್ಲಿ ಹಣ ಖರ್ಚು ಮಾಡಿದರೆ ಸಾಕು. ಇನ್ನು ಎಂ.ಬಿ.ಬಿ.ಎಸ್ ಸೀಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಮೆಡ್ ಕೆ ಕೌನ್ಸಲಿಂಗ್ನಲ್ಲಿ ಸೀಟುಗಳನ್ನು ಬ್ಲಾಕ್ ಮಾಡಿ ಅದನ್ನು ಹೆಚ್ಚು ದುಡ್ಡಿಗೆ ಮಾರಿಕೊಳ್ಳಲಾಗುತ್ತದೆ. ಇಂತಹ ನಕಲು ಪ್ರಕರಣಗಳು ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದರಂತೆ ನಡೆದು, ಅಪರೂಪಕ್ಕೆ ಪತ್ತೆಯಾದರೆ ಮಧ್ಯಪ್ರದೇಶದಲ್ಲಿ ಇದು ಹೆಚ್ಚಿನ ಸಂಖೈಯಲ್ಲಿ ನಡೆಯಲಾರಂಭಿಸಿತ್ತು. 1995ರಿಂದಲೇ ಮಧ್ಯಪ್ರದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿದ್ದ ಬಗ್ಗೆ ವರದಿಗಳಾಗುತ್ತಿದ್ದವಾದರೂ ಮೊದಲ ಎಫ್.ಐ.ಆರ್ ದಾಖಲಾಗಿದ್ದು 2000 ಇಸವಿಯಲ್ಲಿ. ಕರ್ನಾಟಕದಲ್ಲಾಗುವಂತೆ ಅಲ್ಲೊಂದು ಇಲ್ಲೊಂದು ಎಂದು ವರದಿಯಾಗುತ್ತಿದ್ದ ಅಕ್ರಮಗಳವು. ಇಂದೋರಿನ ವೈದ್ಯ ಡಾ. ಆನಂದ್ ರಾಯ್ ವ್ಯಾಪಂ ಮೂಲಕ ಅಕ್ರಮವಾಗಿ ವೈದ್ಯಕೀಯಕ್ಕೆ ಪ್ರವೇಶ ಪಡೆದವರ ಬಗ್ಗೆ ವಿಸ್ತೃತವಾದ ತನಿಖೆಯಾಗಬೇಕು ಎಂದು ಕೋರ್ಟಿನ ಮೊರೆ ಹೋಗುತ್ತಾರೆ. 2009ರಲ್ಲಿ ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶಿಸುತ್ತಾರೆ.

anand rai vyapam
ಡಾ. ಆನಂದ್ ರಾಯ್
ತನಿಖೆ ಪ್ರಾರಂಭವಾದ ನಂತರ ಒಬ್ಬರ ನಂತರ ಒಬ್ಬರು ಈ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳತೊಡಗುತ್ತಾರೆ. ವ್ಯಾಪಂನ ಅಧಿಕಾರಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು, ಪೋಷಕರು, ಮತ್ತಿವರ ಮಧ್ಯೆ ಕಾರ್ಯನಿರ್ವಹಿಸುವ ದಲ್ಲಾಳಿಗಳ ಹೆಸರುಗಳೆಲ್ಲ ಹಗರಣದ ವ್ಯಾಪ್ತಿಗೆ ಬರತೊಡಗುತ್ತಾರೆ. ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟಂತೆ ನಡೆದ ತನಿಖೆಯಲ್ಲಿ ಮೇಲ್ನೋಟಕ್ಕೆ ಲೋಪಗಳಿವೆ ಎಂದೆನ್ನಿಸುವುದಿಲ್ಲ, ಕಾರಣ ಆರು ವರುಷಗಳ ಅವಧಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿಯನ್ನು ತನಿಖಾ ತಂಡಗಳು ಹಗರಣದಲ್ಲಿ ಭಾಗಿಯಾದ ಕಾರಣಕ್ಕಾಗಿ ಬಂಧಿಸಿವೆ! ಬಂಧಿತರಲ್ಲಿ ಬಿಜೆಪಿಯ ಶಿಕ್ಷಣ ಮಂತ್ರಿಯಾಗಿದ್ದ ಲಕ್ಷ್ಮಿಕಾಂತ್ ಶರ್ಮಾ ಕೂಡ ಇದ್ದರು ಎಂಬ ಸಂಗತಿ ಮಧ್ಯಪ್ರದೇಶದ ಬಿಜೆಪಿ ಸರಕಾರ ಇದ್ದುದರಲ್ಲಿ ನಿಷ್ಪಕ್ಷಪಾತವಾಗಿಯೇ ತನಿಖೆಯನ್ನು ನಡೆಸುತ್ತಿದೆ ಎಂದೆನ್ನಿಸುವಂತೆ ಮಾಡಿತ್ತು. ಆದರೂ ಸರಕಾರಕ್ಕೆ ವ್ಯಾಪಂ ಹಗರಣ ಮಸಿ ಬಳಿದಿದ್ಯಾಕೆ?

ಮೇಲ್ನೋಟಕ್ಕೆ ಸರ್ಕಾರದ ಕ್ರಮಗಳು ಸರಿದಿಕ್ಕಿನಲ್ಲಿವೆ ಎನ್ನಿಸಿದರೂ ಹಗರಣ ಕೊನೆಗೆ ಮುಖ್ಯಮಂತ್ರಿ ಶಿವರಾಜ್ ಚೌಹಾಣರನ್ನು ಕಾಡಿದ್ದ್ಯಾಕೆ ಎಂದು ನೋಡಿದಾಗ ಸಾಲು ಸಾಲು ಹೆಣಗಳು ಕಾಣಿಸುತ್ತವೆ. ಒಂದಷ್ಟು ಸ್ವಾಭಾವಿಕ ಮೃತ್ಯುಗಳು, ಕುಡಿತದ ದುಷ್ಪರಿಣಾಮದಿಂದಾದ ಸಾವುಗಳನ್ನು ಹೊರತುಪಡಿಸಿದರೂ ವ್ಯಾಪಂ ಹಗರಣಕ್ಕೆ ಸಂಬಂಧಿಸಿದವರ ಅನಿರೀಕ್ಷಿತ, ಅಸ್ವಾಭಾವಿಕ ಮರಣ ಆಘಾತ ಮೂಡಿಸುತ್ತದೆ. ಮೂವತ್ತು ವರುಷವೂ ದಾಟದ ಅನೇಕರು ಹೃದಯಾಘಾತದಿಂದ ಸಾವನ್ನಪ್ಪುವುದು ಸಹಜವೆನ್ನಿಸುವುದಿಲ್ಲ. ಇದೇ ಜುಲೈ ಆರರಂದು ವ್ಯಾಪಂ ಹಗರಣದ ಮೂಲಕ ಕೆಲಸ ಗಿಟ್ಟಿಸಿಕೊಂಡ ಸಬ್ ಇನ್ಸ್ ಪೆಕ್ಟರ್ ಅನಾಮಿಕ ಕುಶ್ವಾಹ ಮೃತದೇಹ ಕೆರೆಯೊಂದರ ಬಳಿ ಪತ್ತೆಯಾಗಿತ್ತು. ವಿಚಾರಣೆಗೊಳಪಟ್ಟಿದ್ದ ಪೇದೆ ರಮಾಕಾಂತ್ ಪಾಂಡೆ ಅದೇ ಆರನೇ ತಾರೀಖಿನಂದು ಡೆತ್ ನೋಟುಗಳನ್ನೇನೂ ಬರೆಯದೆ ನೇಣು ಬಿಗಿದುಕೊಳ್ಳುತ್ತಾನೆ. ಒಂದು ದಿನಕ್ಕೆ ಮುಂಚೆ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಅರುಣ್ ಶರ್ಮ ದೆಹಲಿಯ ಹೋಟೆಲೊಂದರಲ್ಲಿ ಹೆಣವಾಗಿ ಸಿಗುತ್ತಾರೆ, ತನಿಖೆಗೆ ಸಹಕರಿಸುತ್ತಿದ್ದ ವ್ಯಕ್ತಿ ಅರುಣ್ ಶರ್ಮ. ಅದೇ ಕಾಲೇಜಿನಲ್ಲಿ ಅರುಣ್ ಶರ್ಮರವರಿಗೆ ಮುಂಚೆ ಡೀನ್ ಆಗಿದ್ದ ಡಿ.ಕೆ.ಸಾಕಲೆ ಬೆಂಕಿ ಹಚ್ಚಿಕೊಂಡು ಸತ್ತರು. ಅದು ಆತ್ಮಹತ್ಯೆಯೋ ಹತ್ಯೆಯೋ ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಹೀಗೆ ಒಂದಾದ ನಂತರ ಒಂದು ‘ಹತ್ಯೆ’ಗಳೆಂದು ಅನುಮಾನಿಸಬಹುದಾದ ಸಾವುಗಳು ವ್ಯಾಪಂ ಹಗರಣದ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಇವೆಲ್ಲದರ ಮಧ್ಯೆ ಹಗರಣ ಹೊರಬರಲು ಕಾರಣರಾದ ಡಾ. ಆನಂದ್ ರಾಯ್ ತಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಸರಕಾರದ ಮೊರೆ ಹೋದರೆ ಐವತ್ತು ಸಾವಿರ ಪ್ರತೀ ತಿಂಗಳು ಕಟ್ಟಿದರೆ ಪೋಲೀಸ್ ರಕ್ಷಣೆ ಕೊಡುವುದಾಗಿ ಹೇಳುತ್ತದೆ. ಆಗ ಡಾ.ಆನಂದ್ ರಾಯರ ಮಾಸಿಕ ಆದಾಯ ಮೂವತ್ತೆಂಟು ಸಾವಿರ! ಕೊನೆಗೆ ಕೋರ್ಟಿನ ನಿರ್ದೇಶನದ ಮೇರೆಗೆ ಡಾ.ಆನಂದ್ ರಾಯ್ ಗೆ ಪೋಲೀಸ್ ಸೆಕ್ಯುರಿಟಿ ನೀಡಲಾಗುತ್ತದೆ. ಸ್ವತಃ ಕಣ್ಣಿನ ತಜ್ಞರಾದ ಆನಂದ್ ರಾಯ್ ತಮಗೆ ರಕ್ಷಣೆ ಕೊಡಲು ಬಂದಿದ್ದ ಪೋಲೀಸಪ್ಪನ ಕಣ್ಣು ಪರೀಕ್ಷಿಸಿದಾಗ ಅಚ್ಚರಿಯಾಗುತ್ತದೆ. ಕೊಲೆ ಬೆದರಿಕೆ ಇರುವ ವ್ಯಕ್ತಿಯ ರಕ್ಷಣೆಗೆಂದು ನೇಮಕಗೊಂಡಿದ್ದ ಪೋಲೀಸಪ್ಪನಿಗೆ ಸರಿಯಾಗಿ ಕಣ್ಣೇ ಕಾಣಿಸುವುದಿಲ್ಲ! 

ಸರಕಾರ ಹತ್ಯೆಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯ, ಸೀಟಿಯೂದುಗರ ಬಗ್ಗೆ ತೋರಿದ ಅನಾದಾರ ಅವರ ನಡೆಯ ಬಗ್ಗೆ ಸಂಶಯ ಮೂಡಿಸುತ್ತದೆ. ಮಧ್ಯಪ್ರದೇಶದ ಪೋಲೀಸರಲ್ಲನೇಕರು ಕೂಡ ವ್ಯಾಪಂ ಮೂಲಕವೇ ನೇಮಕಗೊಂಡಿರುವ ಕಾರಣ ಅವರೇ ತನಿಖೆ ನಡೆಸಿದರೆ ಉಪಯೋಗವಾದೀತೆ? ಕಿಂಗ್ ಪಿನ್ನುಗಳನ್ನು ಬಂಧಿಸಿದ್ದೇವೆ ಎಂದವರು ಹೇಳುತ್ತಿದ್ದರೂ ನಡೆಯುತ್ತಿರುವ ಸಾವಿನ ಸರಣಿಯನ್ನು ನೋಡಿದರೆ ಕಿಂಗ್ ಪಿನ್ನುಗಳನ್ನು ನಿಯಂತ್ರಿಸುತ್ತಿದ್ದವರು ಇನ್ನೂ ಉನ್ನತ ಸ್ಥಾನದಲ್ಲಿರುವ ಅನುಮಾನ ಮೂಡಿಸುತ್ತದೆ. ಮಧ್ಯಪ್ರದೇಶದ ಹೈಕೋರ್ಟ್ ಸಿಬಿಐ ನಿರ್ದೇಶನಕ್ಕೆ ಆದೇಶಿಸಿಲ್ಲ ಎಂಬ ನೆಪವನ್ನೇ ಇಷ್ಟು ದಿವಸ ಸರಕಾರ ಬಳಸಿಕೊಳ್ಳುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಸಿಬಿಐ ತನಿಖೆ ಪ್ರಾರಂಭವಾಗಿದೆ. ಇನ್ನಾದರೂ ನಿಜವಾದ ಸತ್ಯಗಳು ಹೊರಬರಲಿ ಎಂದು ಆಶಿಸೋಣ.
ಆಧಾರ: ವಿಕಿಪೀಡಿಯಾ, ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ.

Jul 14, 2015

ಭೈರಪ್ಪನವರ ಜಾಣ್ಮೆಗೆ ಉಘೇ ಎನ್ನುತ್ತ…

Ashok K R
ನೀವೇನೇ ಹೇಳಿ ಈ ಬಲಪಂಥೀಯರ ಚಾಣಾಕ್ಷತನ ಎಡಪಂಥೀಯರಿಗೆ, ನಡುಪಂಥೀಯರಿಗೆ, ಅಪಂಥೀಯರಿಗೆ ಇಲ್ಲವೇ ಇಲ್ಲ! ಇದು ಮತ್ತೆ ಅರಿವಾಗಿದ್ದು ಎಸ್.ಎಸ್.ಭೈರಪ್ಪನವರು ಕಳೆದ ವಾರ ಪತ್ರಿಕೆಗಳಿಗೆ ಬರೆದ ದೀರ್ಘ ಪತ್ರ ಓದಿದ ಮೇಲೆ. ಅನ್ನಭಾಗ್ಯ ವಿರೋಧಿಸಿ ಅವರು ಹಿಂದೊಮ್ಮೆ ನೀಡಿದ್ದ ಹೇಳಿಕೆ ಅನೇಕ ಚರ್ಚೆಗಳಿಗೆ ನಾಂದಿ ಹಾಡಿತ್ತು. ಆ ವಿರೋಧಿ ಹೇಳಿಕೆಗಳಿಗೆ ಉತ್ತರವಾಗಿ ಭೈರಪ್ಪನವರು ಈ ಪತ್ರವನ್ನು ಬರೆದಿದ್ದಾರೆ. ಆ ಪತ್ರ ಯಥಾವತ್ತಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮತ್ತೊಂದು ಸುತ್ತಿನ ಚರ್ಚೆಯನ್ನಾರಂಭಿಸಿದೆ. It is one of the most beautifully ‘crafted’ letter that I have read in recent times! ಸತ್ಯ, ಅರೆ ಸತ್ಯ, ಸುಳ್ಳುಗಳೆಲ್ಲವನ್ನೂ ಮಿಳಿತವಾಗಿಸಿ ಬರೆದಿರುವ ‘ಸತ್ಯವೆಂದೇ’ ತೋರುವ ಪತ್ರವದು.

ಪತ್ರದ ಪ್ರಾರಂಭದಲ್ಲಿಯೇ ಇಡೀ ಪ್ರಕರಣವನ್ನು ಪತ್ರಕರ್ತರ ತಲೆಗೆ ಕಟ್ಟಿಬಿಡುತ್ತಾರೆ! ನನ್ನ ಆಸಕ್ತಿಯೇನಿದ್ದರೂ ಸಾಹಿತ್ಯ, ರಾಜಕೀಯವಲ್ಲ; ಪತ್ರಕರ್ತರೇ ಬಲವಂತ ಮಾಡಿದ್ದರಿಂದ ಸಿದ್ಧರಾಮಯ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡಿದೆ. ಇಲ್ಲವಾದರೆ ರಾಜಕೀಯದಿಂದ ದೂರ ಎನ್ನುತ್ತಾರೆ. ಇದೇ ಭೈರಪ್ಪನವರೇ ಅಲ್ಲವೇ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರ ಪರ ಮಾತನಾಡಿದ್ದು? ಅದೂ ಕೂಡ ರಾಜಕೀಯದ ಒಂದು ಭಾಗವಲ್ಲವೇ? ಸಾಹಿತಿಯೊಬ್ಬರು ರಾಜಕೀಯದ ಬಗೆಗಿನ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ. ಅದನ್ನು ಕದ್ದು ಮುಚ್ಚಿ ಮಾಡುವ ಅಗತ್ಯವೇನಿಲ್ಲ. ಸಿದ್ಧರಾಮಯ್ಯ ಸರಕಾರ ಕಳೆದೆರಡು ವರುಷದಿಂದ ಉದ್ಯೋಗ ಸೃಷ್ಟಿಸುವ ಕೆಲಸವನ್ನೇ ಮಾಡಿಲ್ಲ ಎಂದೇಳುತ್ತಾ ಹ್ಯುಂಡಾಯ್ ಕಂಪನಿ (ಅಸಲಿಗದು ಹೋಂಡಾ ಕಂಪನಿಯಾಗಬೇಕಿತ್ತು. ಎರಡು ಪತ್ರಿಕೆಗಳಲ್ಲಿ ಹ್ಯುಂಡಾಯ್ ಎಂದು ಪ್ರಕಟವಾಗಿದೆ, ಒಂದರಲ್ಲಿ ಹೋಂಡಾ ಎಂದು ಬರೆದಿದೆ. ತಪ್ಪು ಭೈರಪ್ಪನವರದೋ ಪತ್ರಿಕೆಯವರದೋ ತಿಳಿದಿಲ್ಲ) ಕರ್ನಾಟಕದಿಂದ ಆಂಧ್ರಕ್ಕೆ ವಲಸೆ ಹೋಗಿದ್ದನ್ನು ನೆನಪಿಸುತ್ತಾರೆ. ಅದಕ್ಕೆ ಸಿದ್ಧರಾಮಯ್ಯ ಸರಕಾರವನ್ನು ಹೊಣೆಯಾಗಿಸುತ್ತಾರೆ. ಕರ್ನಾಟಕ ಕೊಡುವುದಾಗಿ ಹೇಳಿದ ಸೌಕರ್ಯಕ್ಕಿಂತ ಹೆಚ್ಚಿನ ಸೌಕರ್ಯ ಸೀಮಾಂಧ್ರ ಘೋಷಿಸಿತ್ತು, ಕಾರಣ ಹೊಸದಾಗಿ ರಚನೆಯಾದ ರಾಜ್ಯಕ್ಕೆ ಉದ್ದಿಮೆಗಳ ಅಗತ್ಯವಿದೆಯೆಂದು ಅಲ್ಲಿನ ಚಂದ್ರಬಾಬು ನಾಯ್ಡು ನಂಬಿದ್ದಾರೆ. ಆ ಕಾರಣದಿಂದ ಆ ಕಂಪನಿ ವಲಸೆ ಹೋಗಿದೆಯೇ ಹೊರತು ಕರ್ನಾಟಕ ಯಾವ ಸೌಲಭ್ಯವನ್ನೂ ಕೊಡಲಿಲ್ಲ ಎಂಬುದಕ್ಕಾಗಿಯಲ್ಲ. ಏನೇ ಕಾರಣ ನೀಡಿದರೂ ಇದು ಸಿದ್ಧರಾಮಯ್ಯ ಸರಕಾರದ ವೈಫಲ್ಯವೇ ಹೌದು. ಒಂದು ದೊಡ್ಡ ಉದ್ದಿಮೆಯಿಂದ ಏನೆಲ್ಲ ಅನುಕೂಲಗಳಾಗುತ್ತವೆ ಎಂಬ ಸಾಮಾನ್ಯ ವಿಷಯವನ್ನು ತಿಳಿಸುತ್ತಾರೆ ಭೈರಪ್ಪ. ಸಕಾರಾತ್ಮಕ ಅಂಶಗಳ ಕಡೆಗಷ್ಟೇ ಗಮನ ಸೆಳೆಯುತ್ತಾರೆ. 

ಭೈರಪ್ಪನವರು ಬಿಜೆಪಿಯ ಬೆಂಬಲಿಗರು. ಆದರೆ ಪತ್ರದಲ್ಲಿ ಬಿಜೆಪಿಯ ಬಗ್ಗೆ, ಅದರ ನಾಯಕರ ಬಗ್ಗೆ ಏನನ್ನೂ ಬರೆಯದೆ ರಾಜಕೀಯ ವಿರೋಧದ ಲೇಖನವಲ್ಲ ಇದು ಎಂಬ ಭಾವನೆ ಮೂಡಿಸುತ್ತಾರೆ. ಸಿದ್ಧರಾಮಯ್ಯನವರನ್ನು ಟೀಕಿಸಲು ಅವರು ಕಾಂಗ್ರೆಸ್ಸಿನವರೇ ಆದ ಎಸ್.ಎಂ.ಕೃಷ್ಣರನ್ನು ಹೊಗಳಲಾರಂಭಿಸುತ್ತಾರೆ. ರಾಜಧಾನಿಯನ್ನು ಸಿಲಿಕಾನ್ ವ್ಯಾಲಿಯಾಗಿ ಮಾಡಿದ್ದರ ಬಗ್ಗೆ, ಎಲೆಕ್ಟ್ರಾನಿಕ್ ಸಿಟಿ ಮಾಡಿದ್ದರ ಬಗ್ಗೆ ಹೊಗಳುತ್ತಾರೆ. ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿದ್ದ ಕಾರಣಕ್ಕಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಯಿತು. ಅದರಲ್ಲಿ ಎರಡು ಮಾತಿಲ್ಲ. ಎಲ್ಲ ಐಟಿ ಕಂಪನಿಗಳೂ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದಕ್ಕಾಗಿ ಬೆಂಗಳೂರಿನ ಪರಿಸರದ ಮೇಲೆ ಸಂಸ್ಕೃತಿ ಮೇಲಾಗಿರುವ ಹಾನಿಯ ಬಗ್ಗೆ ಮಾತ್ರ ಬರೆಯುವುದಿಲ್ಲ! ಪ್ರವಾಸಿ ತಾಣವಾಗಬೇಕಿದ್ದ ಬೆಂಗಳೂರೆಂಬ ಸುಂದರ ನಗರವನ್ನು ನಾವೆಲ್ಲರೂ ಗುಳೇ ಬಂದು ಹಾಳು ಮಾಡಿರುವುದು, ಹಸಿರ ನಗರಿಯನ್ನು ಕೆಂಪಾಗಿರಿಸಿರುವುದಕ್ಕೂ ಈ ಐಟಿಯೇ ಕಾರಣ ಎಂಬುದನ್ನು ಮರೆಯುತ್ತಾರೆ. ಎಸ್.ಎಂ.ಕೃಷ್ಣರವರು ಜಾತಿ ರಾಜಕೀಯ ಮಾಡಲೇ ಇಲ್ಲ, ಅವರೊಬ್ಬ ಮೇಧಾವಿ ರಾಜಕಾರಣಿ ಎಂದು ಭೈರಪ್ಪನಂತಹ ಹಿರಿಯರು ಬರೆಯುತ್ತಾರೆ ಎಂದರೆ ಅದಕ್ಕೇನನ್ನೋಣ? ಯಾವ ಎಸ್.ಎಂ.ಕೃಷ್ಣರವರನ್ನು ಇವರು ಭಯಂಕರವಾಗಿ ಹೊಗಳುತ್ತಿದ್ದಾರೋ ಅದೇ ಎಸ್.ಎಂ.ಕೃಷ್ಣ ಅಧಿಕಾರವಧಿ ಮುಗಿದ ಮೇಲೆ ಮದ್ದೂರಿನಲ್ಲಿ ಚುನಾವಣೆಗೆ ನಿಲ್ಲಲು ಭಯಪಟ್ಟು ಬೆಂಗಳೂರಿನಲ್ಲಿ ನಿಂತಿದ್ದಕ್ಕೆ ಕಾರಣವೇನು? ಅಭಿವೃದ್ಧಿ ಎಂದರೆ ಎಲ್ಲರನ್ನೂ ಒಳಗೊಳ್ಳಬೇಕು, ಒಂದು ಪ್ರದೇಶಕ್ಕೆ ಸೀಮಿತವಾಗಬಾರದು ಎಂಬ ಅಂಶವನ್ನು ಕಾಂಗ್ರೆಸ್ಸನ್ನು ಸೋಲಿಸುವ ಮೂಲಕ ಜನರು ತಿಳಿಸಿಕೊಟ್ಟರು. ಪಕ್ಕದ ಆಂಧ್ರದಲ್ಲೂ ಹೈದರಾಬಾದ್ ಅಭಿವೃದ್ಧಿಗಷ್ಟೇ ಒತ್ತು ಕೊಟ್ಟ ಚಂದ್ರಬಾಬು ನಾಯ್ಡುರವರನ್ನೂ ಜನರು ಸೋಲಿಸಿದರು. ಎಸ್.ಎಂ.ಕೃಷ್ಣರವರನ್ನು ಹೊಗಳುವ ಮೂಲಕ ನಾನು ಕಾಂಗ್ರೆಸ್ ವಿರೋಧಿಯಲ್ಲ ಎಂಬ ಪ್ರಭೆಯನ್ನು ಬೆಳೆಸಿದ ಭೈರಪ್ಪನವರು ನಂತರ ತಮ್ಮ ಬಲಪಂಥೀಯತೆಯ ಹಾದಿಗೆ ಹೊರಳುತ್ತಾರೆ.

ಬಲಪಂಥೀಯರ ಗುಣಲಕ್ಷಣವೆಂದರೆ ಮೊದಲು ಒಂದು ದೊಡ್ಡ ಭೂತವನ್ನು ಸೃಷ್ಟಿಸುತ್ತಾರೆ. ಭಾರತದಲ್ಲಿ ಹಿಂದೂ ಬಲಪಂಥೀಯರು ಸೃಷ್ಟಿಸಿರುವ ದೊಡ್ಡ ಭೂತವೆಂದರೆ ಮುಸ್ಲಿಂ ವಿರೋಧ. ಅದೇ ಹಾದಿಯಲ್ಲಿ ಸಾಗುವ ಭೈರಪ್ಪನವರ ಪತ್ರ ಮೊದಲಿಗೆ ಮುಸ್ಲಿಮರಿಗೆ ಸೀಮಿತವಾಗಿದ್ದ ಶಾದಿ ಭಾಗ್ಯದ ಬಗ್ಗೆ ಬರೆಯುತ್ತಾರೆ. ಬಲಪಂಥೀಯರೋ ಅಲ್ಲವೋ ಅನೇಕ ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಂ ದ್ವೇಷವೆಂಬುದು ರವಷ್ಟಾದರೂ ಇದ್ದೇ ಇದೆ. ಅಂಥವರನ್ನು ಸೆಳೆಯಲು ಶಾದಿಭಾಗ್ಯದ ವಿರೋಧಿ ಹೇಳಿಕೆ ಸಾಕು. ನಂತರದ ವಾಕ್ಯದಲ್ಲಿ ಅಹಿಂದ ವರ್ಗದ ವಿರುದ್ಧ ಬರೆಯುತ್ತಾರೆ. ಯೋಜನೆಯ ಹಂತದಲ್ಲಿದ್ದ , ವಿರೋಧದಿಂದಾಗಿ ನಿಂತುಹೋದ ಅಹಿಂದ ಮಕ್ಕಳ ಪ್ರವಾಸದ ಬಗ್ಗೆ ಬರೆದು ಇನ್ನಿತರೆ ಹಿಂದೂ ಓದುಗರನ್ನು ಸೆಳೆದುಬಿಡುತ್ತಾರೆ! ಒಮ್ಮೆ ಸೆಳೆದುಕೊಂಡರೆಂದರೆ ನಂತರ ಹೇಳಿದ್ದೆಲ್ಲವೂ ಸತ್ಯವೆಂದೇ ತೋರುತ್ತದೆ! ಈ ಎರಡು ಉದಾಹರಣೆಗಳನ್ನು ಅವರು ನೀಡಿರುವುದು ಆ ಯೋಜನೆಗಳು ತಪ್ಪೆಂಬ ಭಾವನೆಗಿಂತ ಹೆಚ್ಚಾಗಿ ಸಿದ್ಧರಾಮಯ್ಯನವರು ಮುಸ್ಲಿಮರನ್ನು ಓಲೈಸುವ ರಾಜಕಾರಣ ಮಾಡುತ್ತಾರೆ, ಅವರು ಅಹಿಂದ ವರ್ಗಕ್ಕಷ್ಟೇ ಸೀಮಿತ ಎಂಬುದನ್ನು ನಿರೂಪಿಸುವುದಕ್ಕಾಗಿ. ‘ಅವರು ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು’ ಎಂಬ ಭೈರಪ್ಪನವರ ಮಾತು ಅವರ ಉದಾಹರಣೆಗಳ ಸತ್ಯದರ್ಶನ ಮಾಡಿಸುತ್ತದೆ. ಎಸ್.ಎಂ.ಕೃಷ್ಣರವರು ಜಾತಿ ರಾಜಕಾರಣ ಮಾಡಲಿಲ್ಲ ಎನ್ನುವ ಭೈರಪ್ಪನವರಿಗೆ ಈ ಅನ್ನಭಾಗ್ಯ ಯೋಜನೆ ಜಾತಿ ಧರ್ಮಗಳ ಎಲ್ಲೆ ಮೀರಿದ್ದು ಎಂಬುದು ತಿಳಿದಿದೆ. ಅಹಿಂದ ನಾಯಕನೊಬ್ಬ ಎಲ್ಲರಿಗೂ ಉಪಯೋಗವಾಗುವಂತಹ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಓದುಗರಿಗೆ ಅನ್ನಿಸಿಬಿಟ್ಟರೆ ಎಂಬ ಆತಂಕದಿಂದ, ಬುದ್ಧಿವಂತಿಕೆಯಿಂದ ‘ಶಾದಿಭಾಗ್ಯ’ ‘ಅಹಿಂದ ಪ್ರವಾಸ’ದ ಉದಾಹರಣೆಯನ್ನು ನೀಡುತ್ತಾರೆ. ನಂತರ ಅನ್ನಭಾಗ್ಯ ಯೋಜನೆಗಿಂತ ಉದ್ಯೋಗ, ಶಿಕ್ಷಣ ನೀಡುವ ಯೋಜನೆಗಳು ಬರಬೇಕು, ಜನರನ್ನು ಸೋಮಾರಿಗಳನ್ನಾಗಿಸುವ ಕೆಲಸಗಳು ನಡೆಯಬಾರದು ಎಂದು ಹಿಂದೆ ನೀಡಿದ್ದ ಹೇಳಿಕೆಗಳ ಬಗ್ಗೆ ಬರೆಯುತ್ತಾರೆ. 

ಆ ಹೇಳಿಕೆಗೆ ಉತ್ತರವೆಂಬಂತೆ ಬರೆದಿದ್ದ ‘ಅನ್ನವೆಂಬ ಭಾಗ್ಯವೂ ಮನುಜನೆಂಬ ಆಲಸಿಯೂ’ ಲೇಖನದಲ್ಲಿ ಅನ್ನಭಾಗ್ಯ ಯೋಜನೆ ಯಾಕೆ ಅವಶ್ಯಕ ಎಂಬುದನ್ನು ವಿವರಿಸಿದ್ದೆ. ಅನ್ನಭಾಗ್ಯ ಯೋಜನೆಯ ಜೊತೆಜೊತೆಗೇ ಕೆಲಸ ಸೃಷ್ಟಿಸುವ ಯೋಜನೆಗಳೂ ಅವಶ್ಯಕವೇ ಹೊರತು ಅನ್ನಭಾಗ್ಯ ಯೋಜನೆ ತಪ್ಪಲ್ಲ.

ಪತ್ರದ ಮುಂದಿನ ಭಾಗದಲ್ಲಿ ಅನ್ನಭಾಗ್ಯದ ದುಷ್ಪರಿಣಾಮದ ಬಗ್ಗೆ ಉದಾಹರಣೆ ಕೊಡುತ್ತಾ ತಮ್ಮ ಮನೆ ಹತ್ತಿರದ ಹೇರ್ ಕಟಿಂಗ್ ಸೆಲೂನಿನ ಬಗ್ಗೆ ಬರೆಯುತ್ತಾರೆ. ಇಲ್ಲಿ ಅನ್ನಭಾಗ್ಯದ ದುಷ್ಪರಿಣಾಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಗಟ್ಟಿಗೊಳಿಸುವುದಕ್ಕಿಂತ ಸೋಷಿಯಲಿಸಂ ಅನ್ನು ಹೀಗಳೆಯುವ ಉತ್ಸಾಹವೇ ಹೆಚ್ಚು ಕಾಣುತ್ತದೆ! ಬಡವನಾಗಿದ್ದ ಸೋಷಿಯಲಿಷ್ಟ್ ಚಿಂತನೆಯ ಮಾಲೀಕ, ಸಾಲ ಸೋಲ ಮಾಡಿ ಕನ್ನಡಿಗಳನ್ನೆಲ್ಲ ಹಾಕಿ ಝಗಮಗಿಸುವ ದೊಡ್ಡ ಅಂಗಡಿ ಮಾಡಿ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಅವರೇ ಬರೆಯುವ ಹಾಗೆ ಪ್ರತೀ ಹುಡುಗನೂ ಅರ್ಧದಷ್ಟು ದುಡ್ಡನ್ನು ಮಾಲೀಕನಿಗೆ ನೀಡುತ್ತಿದ್ದರು. ಅದನ್ನು ಕೊಟ್ಟ ನಂತರವೂ ಇನ್ನೂರೈವತ್ತು ಮುನ್ನೂರು ರುಪಾಯಿ ದುಡಿಯುತ್ತಿದ್ದರು. ಮಾಲೀಕರು ಕೆಲಸ ಮಾಡುತ್ತಿದ್ದರು. ಅನ್ನಭಾಗ್ಯ ಯೋಜನೆ ಬಂದ ನಂತರ ಹುಡುಗರು ವಾರಕ್ಕೆ ಎರಡು ಮೂರು ದಿನವಷ್ಟೇ ಬರುತ್ತಾರಂತೆ! ತಿನ್ನಲು ದುಡಿಯಬೇಕಾದ ಅಗತ್ಯವಿಲ್ಲ ಎನ್ನುತ್ತಾರಂತೆ. ಸೋಷಿಯಲಿಷ್ಟ್ ಮಾಲೀಕರು ಅನ್ನಭಾಗ್ಯ ಯೋಜನೆಯನ್ನು ಬಯ್ಯುತ್ತಿದ್ದಾರಂತೆ! ಮನುಷ್ಯ ದುಡಿಯುವುದು ತಿನ್ನುವುದಕ್ಕೆ ಮಾತ್ರವಾ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ಭೈರಪ್ಪನವರನ್ನು ರಾಷ್ಟ್ರೀಯ ಪ್ರೊಫೆಸರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭೈರಪ್ಪನವರಿಗೆ ಈ ಸ್ಥಾನ ಸಿಕ್ಕಿರುವುದು ಲಾಬಿಯ ಸಂಕೇತ ಎಂದು ಮಾತನಾಡಬೇಡಿ; ದೇಶಭಕ್ತರಿಗೆ ಕೋಪ ಬಂದೀತು. ಆ ಸ್ಥಾನದಲ್ಲಿ ದಿನನಿತ್ಯದ ಕೆಲಸವೇನಿರುವುದಿಲ್ಲ, ಸಂಬಳ ಎಪ್ಪತ್ತು ಸಾವಿರದಷ್ಟಿರುತ್ತದೆ. ತುಂಬಾ ಕೆಲಸ ಮಾಡದೆ ಅಷ್ಟು ದುಡ್ಡು ಭೈರಪ್ಪನವರಿಗೆ ಸಿಗುತ್ತಿರುವಾಗ ಅವರು ಭಯಂಕರ ಸೋಮಾರಿಗಳಾಗಿ ಹಾಸಿಗೆ ಬಿಟ್ಟೇಳದೆ ಇರಬೇಕಿತ್ತಲ್ಲವೇ? ಅವರ್ಯಾಕೆ ಇನ್ನೂ ಇಂಥ ಪತ್ರ ಬರೆಯುತ್ತಾ, ಅನೇಕ ಸಮಾರಂಭಗಳಲ್ಲಿ ಭಾಗವಹಿಸುತ್ತಾ, ಚರ್ಚಿಸುತ್ತಾ ಚಟುವಟಿಕೆಯಿಂದಿದ್ದಾರೆ? ಮನುಷ್ಯನ ದುಡಿಮೆ ತಿನ್ನುವುದಕ್ಕೆ ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ. ತಿಂಗಳಿಗೆ ಐದು ಕೆಜಿ ಅಕ್ಕಿ ಉಚಿತವಾಗಿ ಸಿಗುವ ಕಾರಣಕ್ಕೆ ಜನರು ಸೋಮಾರಿಗಳಾಗಿಬಿಡುವ ಹಾಗಿದ್ದರೆ ಅನಿಲ ಭಾಗ್ಯ, ಪೆಟ್ರೋಲ್ ಭಾಗ್ಯ, ಡೀಸೆಲ್ ಭಾಗ್ಯ, ಟ್ಯಾಕ್ಸ್ ಭಾಗ್ಯ ಪಡೆಯುವ ಮಧ್ಯಮವರ್ಗಗಳೆಲ್ಲ ಸೋಮಾರಿಗಳಾಗಿ ಎಷ್ಟೋ ವರುಷಗಳಾಗಿರಬೇಕಿತ್ತು. ತಿನ್ನುವುದರ ಹೊರತಾಗಿ ಮನುಷ್ಯನಿಗೆ ಬೇರೆ ಖರ್ಚೇ ಇರುವುದಿಲ್ಲ ಎಂಬ ಭಾವನೆ ಪುಸ್ತಕಗಳಿಗೆ, ಸುತ್ತಾಟಕ್ಕೆ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುವ ಸಾಹಿತಿಯೊಬ್ಬರಿಗೆ ಮೂಡಿರುವುದು ಅಚ್ಚರಿ ಮೂಡಿಸುತ್ತದೆ. 

ಮೈಸೂರಿನ ಹೇರ್ ಕಟಿಂಗ್ ಸಲೂನಿನಿಂದ ಇದ್ದಕ್ಕಿದ್ದಂತೆ ಅಮೆರಿಕಾದ ಗ್ರೇಟ್ ಡಿಪ್ರೆಷನ್ ಕಡೆಗೆ ನಡೆದುಬಿಡುತ್ತಾರೆ ಭೈರಪ್ಪನವರು. ಭಾರತಕ್ಕೂ, ಅಮೆರಿಕಾಕ್ಕೂ ಸ್ಥಳದಲ್ಲಿ, ಜನರ ಸಂಖೈಯಲ್ಲಿ, ಪೌಷ್ಟಿಕತೆಯಲ್ಲಿ ಇರುವ ಅಪಾರ ವ್ಯತ್ಯಾಸವನ್ನು ಗುರುತಿಸುವ ಗೋಜಿಗೆ ಹೋಗದೆ ರೂಸ್ ವೆಲ್ಟ್ ಮಾಡಿದ್ದೇ ಸರಿ ಎಂದುಬಿಡುತ್ತಾರೆ. ವಿಪರ್ಯಾಸ ನೋಡಿ ಭಾರತೀಯ ಸಂಸ್ಕೃತಿ, ಭಾರತೀಯ ಪರಂಪರೆ ಎಂದು ಇರುವುದಕ್ಕಿಂತಲೂ ಹೆಚ್ಚು ವೈಭವೀಕರಿಸುತ್ತಾ ಉಳಿದೆಲ್ಲವನ್ನೂ ಹೀಗಳೆಯುವ ಸಂಸ್ಕೃತಿಗೆ ಸೇರಿರುವ ಭೈರಪ್ಪನವರು ಕೊನೆಗೆ ಅಮೆರಿಕಾದ ಉದಾಹರಣೆ ನೀಡುತ್ತಾರೆ! ಅಮೆರಿಕಾದ ಸಂಸ್ಕೃತಿಯನ್ನು ಹೀಗಳೆಯುವವರೂ ಇವರೇ ಎನ್ನುವುದನ್ನು ತಮ್ಮ ಪದಪುಂಜದಿಂದ ಮರೆಸಿಬಿಡುತ್ತಾರೆ. ಐಟಿಯನ್ನು ಹೊಗಳುತ್ತಾರೆ, ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ, ಕೊನೆಗೆ ತಮ್ಮ ಕಾದಂಬರಿಗಳಲ್ಲಿ ಪದೇ ಪದೇ ಓದಿದ ಜನರಿಂದಾಗುವ ಸಂಸ್ಕೃತಿ ನಾಶದ ಬಗ್ಗೆ ಭಾವನಾತ್ಮಕವಾಗಿ ಬರೆದು ಹೆಸರು ಮಾಡುತ್ತಾರೆ! ಪಶ್ಚಿಮದ್ದೆಲ್ಲವೂ ಬೇಕು, ಆದರೆ ಸಂಸ್ಕೃತಿ ಮಾತ್ರ ಭಾರತೀಯದ್ದೇ ಆಗಿರಬೇಕು ಎಂದರದು ಸಾಧ್ಯವೇ? 

ಭೈರಪ್ಪನವರ ಪತ್ರದಲ್ಲಿ ಅನೇಕ ಒಪ್ಪಿತ ಅಂಶಗಳಿವೆ. ಉದ್ಯೋಗ ಸೃಷ್ಟಿ, ಕೊಳ್ಳುವ ಸಾಮರ್ಥ್ಯದ ಹೆಚ್ಚಳವೆಲ್ಲವೂ ಅಗತ್ಯವಾಗಿ ಎಲ್ಲಾ ಸರಕಾರಗಳು ದೂರದೃಷ್ಟಿಯಿಟ್ಟು ಮಾಡಲೇಬೇಕಾಗಿರುವ ಕೆಲಸ. ಬೇಸರದ ಸಂಗತಿಯೆಂದರೆ ಈಗಿರುವ ಎಲ್ಲಾ ಪಕ್ಷಗಳು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಷ್ಟೇ ಕೆಲಸ ಮಾಡುತ್ತವೆ. ಭೈರಪ್ಪನವರು ಜಾಣ್ಮೆ ಚಾಣಾಕ್ಷತನವನ್ನು ಬದಿಗಿಟ್ಟು ಟೀಕಿಸುವ ಮನಸ್ಸು ಮಾಡಿದ್ದರೆ ಸಿದ್ಧರಾಮಯ್ಯನವರ ಸರಕಾರದ ಕಾರ್ಯವೈಖರಿಯನ್ನು ಟೀಕಿಸುವುದಕ್ಕೆ ಬೇಕಾದಷ್ಟು ವಿಷಯಗಳಿತ್ತು. ಕಳೆದೆರಡು ತಿಂಗಳಿನಿಂದ ನಲವತ್ತರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಷ್ಟೇ ಸಾಲದೆ ಈಗಿರುವ ಸರಕಾರದ ನಿಷ್ಕ್ರಿಯತೆಯನ್ನು ತೋರಿಸಲು. ಮುಸ್ಲಿಂ ದ್ವೇಷ, ಅಹಿಂದದೆಡೆಗೆ ಅಸಹನೆಗಳನ್ನೆಲ್ಲಾ ಸೇರಿಸಿಬಿಟ್ಟರೆ ಲೇಖನವನ್ನು ಮತ್ತು ಲೇಖಕರನ್ನು ಇಷ್ಟ ಪಡುವ ಜನರ ಸಂಖೈಯನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು ಲೇಖನದಿಂದೇನೂ ಪರಿಣಾಮವಾಗುವುದಿಲ್ಲ.

ತಮ್ಮ ಬಗ್ಗೆ, ಬಾಲ್ಯದಲ್ಲಿ ಅವರು ಮಾಡಿದ ವಾರಾನ್ನದ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದು ಭೈರಪ್ಪನವರಿಗೆ ಬೇಸರ ಮೂಡಿಸಿದೆ. ಅದರ ಬಗ್ಗೆ ನನ್ನದೂ ಸಹಮತವಿದೆ. ಟೀಕೆಗಳು ವೈಯಕ್ತಿಕವಾಗಿಬಿಟ್ಟಾಗ ವಿಷಯ ಮರೆತುಹೋಗುತ್ತದೆ. ತಮಾಷೆ ಎಂದರೆ ವೈಯಕ್ತಿಕ ಟೀಕೆ ತಪ್ಪು ಎನ್ನುವ ಭೈರಪ್ಪನವರು ಅದೇ ಓಘದಲ್ಲಿ ತಮ್ಮನ್ನು ಟೀಕಿಸಿದವರನ್ನೆಲ್ಲಾ ‘ಆಳುವ ಧಣಿಗಳ ಬಂಟರು’ ಎಂದುಬಿಡುತ್ತಾರೆ. ಇದೂ ವೈಯಕ್ತಿಕ ಟೀಕೆಯೇ ಅಲ್ಲವೇ! 

ಎಲ್ಲದಕ್ಕಿಂತ ಅಚ್ಚರಿ ಮೂಡಿಸಿದ್ದು ‘ನಾನು ಚಿಕ್ಕಮಗಳೂರಿನಲ್ಲಿ ಆಡಿದ್ದು ಗಂಭೀರವಾದ ವಿಷಯ. ಇದನ್ನು ದೇಶದ ಆರ್ಥಿಕ ತಜ್ಞರು ವಿಶ್ಲೇಷಿಸಬೇಕಾಗಿತ್ತು’ ಎಂಬ ಅವರ ಸಾಲು! ಇಂತಹ ಗಂಭೀರವಾದ ವಿಷಯದ ಬಗ್ಗೆ ಮಾತನಾಡಿರುವ ಭೈರಪ್ಪನವರು ಆರ್ಥಿಕ ತಜ್ಞರೇ?
ಭೈರಪ್ಪನವರ ಪತ್ರ ಮೂಲ: ವಿಜಯಕರ್ನಾಟಕ

Jul 10, 2015

ಅಂಬಣ್ಣನಿಗೊಂದು ಬಹಿರಂಗ ಪತ್ರ....

ambareesh
ಮಾನ್ಯ ಸಚಿವರಾದ ಅಂಬರೀಷರವರಿಗೆ,

ಬಹಳ ದಿನಗಳ ನಂತರ ನಿಮ್ಮ ಮಾತುಗಳನ್ನು ಪತ್ರಿಕೆಗಳ ಮುಖಪುಟದಲ್ಲಿ ಕಂಡು ಸಂತಸವಾಯಿತು. ತೀರ ಇತ್ತೀಚೆಗೆ ಮಂಡ್ಯ ಜಿಲ್ಲೆಯ ರೈತ ಸಮುದಾಯದಲ್ಲಿ ತಲ್ಲಣ ಮೂಡಿದೆ. ಸಕ್ಕರೆ ನಾಡೆಂದೇ ಹೆಸರಾದ ಮಂಡ್ಯದಲ್ಲಿ ಕಬ್ಬಿಗೆ ಸಿಗುವ ದರದಲ್ಲಿ ವಿಪರೀತ ಇಳಿಕೆಯಾಗಿರುವ ಕಾರಣ, ಕಾರ್ಖಾನೆಗಳು ಹಣವನ್ನು ಸರಿಯಾಗಿ ಪಾವತಿಸದ ಕಾರಣ ಸಾಲದ ಸುಳಿಗೆ ಸಿಕ್ಕ ರೈತರು ಒಬ್ಬರ ಬೆನ್ನ ಹಿಂದೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರಣಿ ಸರಕಾರೀ ಹತ್ಯೆಗಳು ರಾಜ್ಯದೆಲ್ಲೆಡೆ ಹಬ್ಬುತ್ತಿದೆ. ಮಂಡ್ಯದ ಶ್ರೀರಂಗಪಟ್ಟಣದ ಚೆನ್ನೇನಹಳ್ಳಿಯ ರೈತ ರಾಜೇಂದ್ರ ನೇರವಾಗಿ ಸರ್ಕಾರಕ್ಕೆ ಡೆತ್ ನೋಟ್ ಬರೆದಿಟ್ಟು ಸತ್ತು ಹೋದರು. ಬೆಳಗಾವಿ ಅಧಿವೇಶನದಲ್ಲೂ ಇದರ ಬಗೆಗೆ ಚರ್ಚೆ ನಡೆದವು. ಪರಿಹಾರ ಪೂರ್ಣವಾಗಿ ಕಂಡಿಲ್ಲ. ಮಂಡ್ಯದ ಉಸ್ತುವಾರಿ ಸಚಿವರಾಗಿರುವ ತಾವು ರಾಜ್ಯದೆಲ್ಲಾ ರೈತರ ಪರವಾಗಿಯಲ್ಲದಿದ್ದರೂ ಮಂಡ್ಯದ ರೈತರ ಪರವಾಗಿ ಮಾತನಾಡಿದ್ದೀರ ಎಂದುಕೊಂಡೆ. ಉಹ್ಞೂ ಅದರ ಬಗ್ಗೆ ಪತ್ರಿಕೆಯಲ್ಲಿ ಏನೂ ಇರಲಿಲ್ಲ. ವಸತಿ ಸಚಿವರಾದ ತಾವು ತಮ್ಮ ಖಾತೆಗೆ ಸಂಬಂಧಪಟ್ಟಂತಹ ಲೋಪದೋಷಗಳ ಬಗ್ಗೆ ಮಾತನಾಡಿದ್ದೀರ ಎಂದುಕೊಂಡೆ. ಮತ್ತೆ ನನ್ನ ಊಹೆ ತಪ್ಪಾಯಿತು. ನೀವದೆಲ್ಲಾ ಮಾತನಾಡುತ್ತೀರ ಎಂದು ಊಹಿಸುವುದೇ ತಪ್ಪೆಂದು ಅರಿವಾಗಿದೆ.

ಆದರೆ ನೀವು ಮಾತನಾಡಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವುದು ಮಂಡ್ಯ ಜಿಲ್ಲೆಯ ಸ್ಥಳೀಯ ರಾಜಕಾರಣದಲ್ಲಿ ನಡೆದ ಅನೇಕ ನಿಗಮ ಮಂಡಳಿಗಳ ನೇಮಕ ನಡೆಸುವಾಗ ನಿಮ್ಮ ಮಾತನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಳಲಿಲ್ಲವೆಂದು. ರಾಜಕಾರಣವೆಂದರೆ ಪ್ರಬಲವಾಗಿರುವವರು ಎಲ್ಲೆಡೆಯೂ ತಮ್ಮ ಮಾತೇ ನಡೆಯಬೇಕೆಂದು ಬಯಸುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಅದಕ್ಕೇನೂ ಹೊರತಲ್ಲ. ಪಕ್ಕದ ಜಿಲ್ಲೆಯ ರಾಜಕಾರಣಿಯ ಪ್ರಭಾವ ಕಡಿಮೆಯಿರಬೇಕೆಂದು ಅವರು ಬಯಸುವುದು, ಅವರ ಪ್ರಭಾವಕ್ಕಿಂತ ನಿಮ್ಮ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚಿರಬೇಕೆಂದು ನೀವು ಬಯಸುವುದೆಲ್ಲವೂ ಸರಿ. ಅದರ ಬಗ್ಗೆ ನಿಮ್ಮ ಅಸಹನೆ ವ್ಯಕ್ತಪಡಿಸಿದ್ದು ಪ್ರಜಾಪ್ರಭುತ್ವದ ಆರೋಗ್ಯದ ಲಕ್ಷಣ. ಇಂದು ಟಿವಿಯಲ್ಲಿ ಮತ್ತೆ ಅದರ ಬಗ್ಗೆಯೇ ಮಾತನಾಡಿದ್ದೀರಿ. ಅಪೆಕ್ಸ್ ಬ್ಯಾಂಕಿಗೆ ಅಮರಾವತಿ ಹೋಟೆಲಿನ ಮಾಲೀಕರನ್ನೋ ಅವರ ತಮ್ಮನನ್ನೋ ನೇಮಿಸಲಿಲ್ಲ ಎಂದು ಅಸಹನೆ ವ್ಯಕ್ತ ಪಡಿಸಿದ್ದೀರಿ. ತಮ್ಮ ಎಂದಿನ ವ್ಯಂಗ್ಯ, ಉಡಾಫೆಯ ದಾಟಿಯಲ್ಲಿ ಪತ್ರಕರ್ತರನ್ನು ಕಿಚಾಯಿಸಿದ್ದೀರಿ. ಪತ್ರಿಕಾಗೋಷ್ಟಿ ಮುಗಿದ ಮೇಲೆ ಅವರನ್ನು ಬಾಯಿಗೆ ಬಂದಂತೆ ಬಯ್ದಿರುತ್ತೀರಿ ಎಂಬುದೂ ಗೊತ್ತು. ನಿಮ್ಮ ಶಿಷ್ಯಂದಿರನ್ನು, ಪಟಾಲಂ ಅನ್ನು ಬೆಳೆಸಲು ಇರುವ ರೋಷಾಸಕ್ತಿಯಲ್ಲಿ ಕೊಂಚವಾದರೂ ನಿಮ್ಮ ರಾಜಕೀಯ ಕಾರ್ಯಕಲಾಪಗಳ ಕಡೆಗೆ ಇದ್ದಿದ್ದರೆ ಚೆನ್ನಾಗಿತ್ತು.

ಚಿಕ್ಕಂದಿನಿಂದ ನಿಮ್ಮ ಸಿನಿಮಾಗಳನ್ನು ನೋಡಿಯೇ ಬೆಳೆದವನು ನಾನು. ನಾಗರಹಾವು, ಅಂತ, ಪೂರ್ಣಚಂದ್ರ, ಒಲವಿನ ಉಡುಗೊರೆ, ಚಕ್ರವ್ಯೂಹ, ಮಸಣದ ಹೂವು, ರಂಗನಾಯಕಿ, ಶುಭಮಂಗಳ, ಪಡುವಾರಳ್ಳಿ ಪಾಂಡವರು…. ಒಂದಾ ಎರಡಾ ನಿಮ್ಮ ಅದ್ಭುತ ಅಭಿನಯದ ಯಶಸ್ವಿ ಚಿತ್ರಗಳ ಸಂಖೈ. ಮಂಡ್ಯದ ಗಂಡು ಸಿನಿಮಾ ಮಾಡಿ ಒಂದಷ್ಟು ಮಂಡ್ಯಕ್ಕೇ ಸೀಮಿತರಾದಿರೇನೋ. ಕಲ್ಬುರ್ಗಿಗೆ ಓದಲೋದಾಗ ‘ಊರು ಮಂಡ್ಯ’ ಎಂದಾಕ್ಷಣ ‘ಓ ನಮ್ ಅಂಬರೀಷ್ ಊರು’ ಎನ್ನುತ್ತಿದ್ದರು. ಅಷ್ಟರಮಟ್ಟಿಗೆ ನೀವು ಖ್ಯಾತರಾಗಿದ್ದಿರಿ. ಕರ್ನಾಟದಕದನೇಕ ಕಡೆ ‘ನಮ್ಮ’ವರಾಗಿದ್ರಿ. ನಿಮ್ಮ ಉಡಾಫೆ, ಸ್ನೇಹ, ಪ್ರೀತಿ, ಕಾಲೆಳೆಯುವಿಕೆ, ಬಯ್ಗುಳ, ಕುಡಿತ, ಇಸ್ಪೀಟು, ರೇಸುಗಳೆಲ್ಲವೂ ನಿಮ್ಮ ವ್ಯಕ್ತಿತ್ವವನ್ನು ಮೆಚ್ಚುವ, ಅಸೂಯೆ ವ್ಯಕ್ತಪಡಿಸುವ ಕಾರ್ಯಗಳೇ ಆಗಿದ್ದವು. ನೀವು ರಾಜಕಾರಣಕ್ಕೆ ಬರುವವರೆಗೆ…

ಕರ್ಣನೆಂದೇ ಫೇಮಸ್ಸು ನೀವು. ರಾಜಕಾರಣಿಯಾದಿರಿ. ಮಂಡ್ಯದಲ್ಲಿ ನಿಮ್ಮ ಖ್ಯಾತಿ ಜಾಸ್ತಿಯಿದ್ದ ಕಾರಣ ಅಲ್ಲಿಂದಲೇ ಚುನಾವಣೆಗೆ ನಿಂತಿರಿ. ಲೋಕಸಭೆಗೂ ಹೋದಿರಿ, ವಿಧಾನಸಭೆಗೂ ಹೋದಿರಿ ಅಲ್ಲಿ ಇಲ್ಲಿ ಎಲ್ಲಾ ಕಡೆ ಸಚಿವರೂ ಆಗಿದ್ದಿರಿ. ನಿಮಗಿದ್ದ ಖ್ಯಾತಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯಾದರೂ ಅಚ್ಚರಿಯಾಗುತ್ತಿರಲಿಲ್ಲ. ಆದರೆ ನೀವು ಮಾಡಿದ್ದಾದರೂ ಏನು? ರಾಜಕಾರಣಕ್ಕೆ ಬರುವುದಕ್ಕೆ ಮುಂಚೆ ನಿಮ್ಮ ಜೀವನಶೈಲಿ ಏನಿತ್ತೋ ಅದನ್ನೇ ನಂತರವೂ ಮುಂದುವರೆಸಿದಿರಿ. ನಿಮ್ಮ ಕುಡಿತ, ಇಸ್ಪೀಟು, ರೇಸು ಮತ್ತದಕ್ಕೆ ಜೊತೆ ಕೊಡುವ ಜನರಿಂದ ನಿಮ್ಮ ರಾಜಕೀಯ ವರ್ಚಸ್ಸನ್ನು ಆರಂಭದಿಂದಲೇ ಇಷ್ಟಿಷ್ಟೇ ಕೊಂದು ಹಾಕಿದಿರಿ. ನೀವು ಮಂಡ್ಯಕ್ಕೆ ಹೆಚ್ಚೇನು ಕೆಲಸ ಮಾಡದಿದ್ದರೂ ಕೇಳೋರಿರಲಿಲ್ಲ, ಮಂಡ್ಯಕ್ಕೆ ಬಂದು ಜನರೊಡನೆ ಬೆರೆತು ಅವರ ಕಷ್ಟ ಸುಖ ವಿಚಾರಿಸಿದರೂ ಸಾಕಿತ್ತು. ಬೇರೆಯವರ ಮುಂದೆ ‘ನನ್ನ ಮಾತು ನಡೆಯುತ್ತಿಲ್ಲ’ ಎಂದು ಅವಲತ್ತುಕೊಳ್ಳುವ ಹಾಗಿರಲಿಲ್ಲ. ಆರಂಭಿಕ ದಿನಗಳಲ್ಲಿ ಪಕ್ಷ ಬದಲಿಸಿದರೂ ಗೆದ್ದು ಬಿಟ್ಟಿರಿ. ಮಂಡ್ಯದವರು ನಮ್ಮನ್ನು ಎಲ್ಲಿ ಸೋಲಿಸುತ್ತಾರೆ ಎಂಬ ಅಹಂ ಬೆಳೆದುಬಿಟ್ಟಿತ್ತು ನಿಮ್ಮಲ್ಲಿ. ಬಹುಶಃ ಅರಕೆರೆ ಗ್ರಾಮದಲ್ಲೇ ಅಲ್ಲವೇ ಊರಿನವರು ‘ಏನಯ್ಯಾ ಕೆಲಸ ಮಾಡ್ಕೊಟ್ಟಿದ್ದೀಯ’ ಅಂತ ಅಟ್ಟಿಸಿಕೊಂಡು ಬಂದು ನೀವು ಕಾರ್ಯಕರ್ತರೊಬ್ಬರ ಬೈಕತ್ತಿ ಬಚಾವಾಗಿದ್ದು. ನಂತರ ಸೋಲು ಕಂಡಿರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಟ್ಟಿರಿ. ನಿಮ್ಮ ಕೆಲಸದಿಂದಲ್ಲ, ಕಾರ್ಯದಿಂದಲ್ಲ; ನಿಮಗೆ ಹೆಚ್ಚೆಚ್ಚು ಓಟು ಬಿದ್ದಿದ್ದು ‘ಮುಂದಿನ ಎಲೆಕ್ಷನ್ನಿಗೆ ನಿಲ್ಲೋಕೆ ನಾನಿರ್ತೀನೋ ಹೋಗೇಬಿಡ್ತೀನೋ’ ಎಂದು ನೀವು ಕಣ್ಣೀರಾಕಿದ್ದು ನಿಮ್ಮನ್ನು ಗೆಲ್ಲಿಸಿತು. ನಮ್ ಅಣ್ಣಂಗೆ ಹುಷಾರೇ ಇಲ್ಲಪ್ಪೋ. ಈ ಸಲ ಗೆಲ್ಲಿಸಿಬಿಡೋಣ ಅಂತ ನಿಮಗೆ ಓಟು ಹಾಕಿದವರೇ ಜಾಸ್ತಿ. ಗೆದ್ದಿರಿ, ವಸತಿ ಸಚಿವರೂ ಆದಿರಿ.

ಈ ಬಾರಿಯಾದರೂ ಕೆಲಸ ಮಾಡುತ್ತೀರೆಂದು ಕೆಲವರಾದರೂ ಜನರು ನಂಬಿದ್ದರು. ಆಗ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ರಮ್ಯಾ ನಿಂತಿದ್ದರು. ನಿಮ್ಮ ಬೆಂಬಲವೂ ಇತ್ತು. ಗೆದ್ದು ಎಂ.ಪಿಯಾದರು. ಗೆದ್ದ ಮೇಲೆ ಜನರ ನಿರೀಕ್ಷೆಯನ್ನು ಹುಸಿಗೊಳಿಸಿ ರಮ್ಯಾ ಊರೂರು ಸುತ್ತಲಾರಂಭಿಸಿದರು. ಅದರ ಬಗ್ಗೆಯೂ ನಿಮಗೆ ಅಸಹನೆ ಉಂಟಾಯಿತು. ಗೆದ್ದ ಮೇಲೆ ನಿಮ್ಮ ಮಾತನ್ನು ಕೇಳುತ್ತಿರಲಿಲ್ಲವೋ ಏನೋ. ಸಚಿವರಾದ ನೀವು ಮಂಡ್ಯದ ಹೊರವಲಯದಲ್ಲಿರುವ ಅಮರಾವತಿ ಹೋಟೆಲಿನಲ್ಲಿ ಕುಳಿತು ಕುಡಿದು ರಮ್ಯಾ ಬಗ್ಗೆ ಆಡಬಾರದ ಮಾತುಗಳನ್ನು ಆಡುತ್ತೀರೆಂಬ ವದಂತಿಗಳು ಅಮರಾವತಿಯ ಕೆಲಸಗಾರರಿಂದ ಊರೆಲ್ಲಾ ಹಬ್ಬಿ ನಿಮ್ಮ ಹೆಸರನ್ನು ಮತ್ತಷ್ಟು ಕೆಡಿಸಿತು. ಆ ವದಂತಿಗಳಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ನೀವೇ ಹೇಳಬೇಕು. ಮುಂದಿನ ಲೋಕಸಭಾ ಚುನಾವಣೆ ನಡೆಯಬೇಕಾದ ಸಮಯದಲ್ಲಿ ನೀವು ಹುಷಾರು ತಪ್ಪಿ ಫಾರಿನ್ನಿಗೆಲ್ಲಾ ಹೋಗಿ ಚಿಕಿತ್ಸೆ ಪಡೆದುಕೊಂಡ್ರಿ. ಕಾರಣ ಮತ್ತದೇ ಕುಡಿತ, ಜೊತೆಗೆ ವಯಸ್ಸು. ನಿಮ್ಮ ಚಟಗಳಿಂದ ಆರೋಗ್ಯ ಹದಗೆಟ್ಟು ಅದಕ್ಕೆ ಜನರ ಕೋಟಿ ಹಣ ಖರ್ಚಾಯಿತು. ಬಹುಶಃ ನೀವು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕಲಾವಿದನ ಆರೋಗ್ಯ ಸರಕಾರ ನೋಡಿಕೊಳ್ಳಬೇಕು ಎನ್ನುತ್ತಿದ್ದೆವು. ರಾಜಕಾರಣಿಯಾಗಿದ್ದಕ್ಕೆ ಟೀಕೆ ಎದುರಿಸಿದಿರಿ. ಆರೋಗ್ಯ ಸರಿಪಡಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಬಂದಿರಿ. ಇಷ್ಟೊತ್ತಿಗಾಗಲೇ ನಿಮಗೆ ರಮ್ಯಾ ಸೋಲಬೇಕೆಂದೆನ್ನಿಸಿತ್ತು. ಬಹಿರಂಗವಾಗಿಯೇ ವಿರೋಧ ಮಾಡಿದಿರಿ. ನಿಮ್ಮ ಮತ್ತು ನಿಮ್ಮ ಬೆಂಬಲಿಗರ ಅಪಪ್ರಚಾರದ ನಡುವೆಯೂ ರಮ್ಯಾ ಸೋತಿದ್ದು ಕಡಿಮೆ ಅಂತರದಿಂದ. ನಿಜವಾದ ಸೋಲು ನಿಮ್ಮದಾಗಿತ್ತು. ಆ ರೀತಿ ಮಾಡಿದ ನೀವು ಈಗ ಜಿಲ್ಲಾ ರಾಜಕೀಯದಲ್ಲಿ ನಿಮ್ಮ ಮಾತು ನಡೆಯುತ್ತಿಲ್ಲವೆಂದು ಪತ್ರ ಬರೆದರೆ ಅದಕ್ಕಿರುವ ಬೆಲೆಯಾದರೂ ಏನು ಸ್ವಾಮಿ?

ಅಂತೂ ಏನೋ ಒಂದು ಮಾತನಾಡಿದಿರಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವುದಷ್ಟೇ ನಮಗಿರುವ ಭಾಗ್ಯ. ಇದಕ್ಕೆ ಮುಂಚೆ ನೀವ್ಯಾವಾಗ ಮಾತನಾಡಿದ್ದು ಎಂದು ನೆನಪಿನ ಪುಟ ತಿರುವಿದವನಿಗೆ ಕಂಡಿದ್ದು ಬೆಂಗಳೂರಿನ ರೇಸ್ ಕೋರ್ಸನ್ನು ಬೇರೆಡೆಗೆ ಸ್ಥಳಾಂತರಿಸಬಾರದೆಂದು ನೀವು ಗುಡುಗಿದ್ದು! ರೇಸು, ನಿಮ್ಮ ಶಿಷ್ಯ ಪಟಾಲಂ, ಕುಡಿತ, ಇಸ್ಪೀಟುಗಳೆಲ್ಲವನ್ನು ಬಿಟ್ಟೂ ಸಮಾಜವಿದೆ ಎಂಬುದನ್ನು ಮರೆಯಬೇಡಿ. ಅಂಬರೀಷ್ ಭ್ರಷ್ಟಾಚಾರ ಮಾಡೋದಿಲ್ಲ ಎನ್ನುವುದು ಎಷ್ಟು ಜನಜನಿತವೋ ಅಂಬರೀಷ್ ಹಿಂದೆ ಓಡಾಡೋರು ಸರೀ ದುಡ್ ಮಾಡ್ಕೋತಾರೆ ಅನ್ನೋದು ಅಷ್ಟೇ ಜನಜನಿತ. 

ಇತ್ತೀಚೆಗೆ ಮತ್ತೆ ತಪಾಸಣೆಗೆ ಆಸ್ಪತ್ರೆಗೆ ಹೋಗಿದ್ದನ್ನು ಕೇಳಿದೆ. ಆರೋಗ್ಯದ ಕಡೆ ಗಮನ ಕೊಡಿ. ಸಾಧ್ಯವಾದರೆ ಕ್ಷೇತ್ರಕ್ಕೆ, ನಿಮ್ಮ ಇಲಾಖೆಗೆ ಒಳ್ಳೆಯದನ್ನು ಮಾಡಿ, ಆಗಲಿಲ್ಲವಾ ಕೆಟ್ಟವರ ದಂಡನ್ನಂತೂ ಮಂಡ್ಯದಲ್ಲಿ ಬೆಳೆಸಬೇಡಿ.

ಇಂತಿ,
ನಟ ಅಂಬರೀಷನ ಅಭಿಮಾನಿ.
ಡಾ. ಅಶೋಕ್. ಕೆ. ಆರ್

Jul 9, 2015

ಬೂಟಾಸಿಂಗನೆಂಬ ಅಮರ ಪ್ರೇಮಿ...

freedom at midnight
ಇತ್ತೀಚೆಗಷ್ಟೇ ಓದಿ ಮುಗಿಸಿದ ಫ್ರೀಡಂ ಅಟ್ ಮಿಡ್ ನೈಟ್ ಪುಸ್ತಕದ ಕನ್ನಡಾನುವಾದ ನಡುರಾತ್ರಿಯಲ್ಲಿ ಸ್ವಾತಂತ್ರ್ಯಪುಸ್ತಕದಲ್ಲಿ ಮನಕಲಕಿದ ಪ್ರೇಮ ಕಥೆಯಿದು....
ಪ್ರೀತಿ ಎರಡು ವಿರುದ್ಧ ಮತಗಳ ಹಗೆತನವನ್ನು ಮೀರಬಲ್ಲದು ಎಂಬುದಕ್ಕೆ ಬೂಟಾಸಿಂಗ್ ನ ಜೀವನವೇ ಸಾಕ್ಷಿ.
ನಿರಾಶ್ರಿತರ ಶಿಬಿರದಿಂದ ಹಾರಿಸಿಕೊಂಡು ಬಂದಿದ್ದ ಜೆನಿಬ್ ಳನ್ನು ಒಂದು ಸಾವಿರದ ಐದು ನೂರು ರುಪಾಯಿಗೆ ಕೊಂಡು ಬೂಟಾಸಿಂಗ್ ಮದುವೆಯಾಗಿದ್ದ. ಹನ್ನೊಂದು ತಿಂಗಳ ನಂತರ ಅವರಿಗೆ ಒಂದು ಹೆಣ್ಣು ಮಗುವಾಯಿತು. ಸಿಖ್ ಸಂಪ್ರದಾಯದಂತೆ ಸಿಖ್ಖರ ಪವಿತ್ರಗ್ರಂಥ 'ಗ್ರಂಥ್ ಸಾಹೀಬ್' ಅನ್ನು ನೋಡಿ 'ತ'ಯಿಂದ ಶುರುವಾಗುವ ಹೆಸರಿಡಬೇಕೆಂದು ತನ್ನ ಮಗಳಿಗೆ 'ತನ್ವೀರ್' ಎಂದು ಹೆಸರಿಟ್ಟ ಬೂಟಾಸಿಂಗ್.
ಕೆಲವು ವರ್ಷಗಳು ಕಳೆಯಿತು. ಬೂಟಾಸಿಂಗ್ ನ ಇಬ್ಬರು ಸೋದರಳಿಯಂದಿರಿಗೆ ಆಸ್ತಿ ತಮಗೆ ಬಾರದೆ ಜೆನಿಬ್ ಳ ಪಾಲಾಯಿತೆಂದು ಹೊಟ್ಟೆಕಿಚ್ಚು ಬಂತು. ನಿರಾಶ್ರಿತರು ವಲಸೆ ಹೋಗುತ್ತಿರುವಾಗ ಹೆಂಗಸರನ್ನು ಅಪಹರಿಸಿಕೊಂಡು ಬಂದು ಅವರನ್ನು ಮಾರುತ್ತಲೋ ಮದುವೆಯಾಗುತ್ತಲೋ ಇದ್ದ ವಿಷಯ ಎರಡು ಸರ್ಕಾರಕ್ಕೂ ಗೊತ್ತಾಯಿತು. ಹೀಗೆ ಅಪಹರಿಸಿದ ಹೆಂಗಸರನ್ನು ಮದುವೆಯಾಗಿರಲಿ ಅಥವಾ ಆಗದೇ ಇರಲಿ ಅವರವರ ಸಂಸಾರಕ್ಕೆ ಹಿಂದಿರುಗಿಸಬೇಕೆಂದು ಎರಡು ರಾಷ್ಟ್ರಗಳು ಕರಾರು ಮಾಡಿಕೊಂಡವು. ಬೂಟಾಸಿಂಗನ ಹೆಂಡತಿ ಅಪಹರಿಸಲ್ಪಟ್ಟ ಮಹಿಳೆಯೆಂದು ಬೂಟಾಸಿಂಗನ ಸೋದರಳಿಯಂದಿರು ಸರ್ಕಾರಕ್ಕೆ ವರದಿ ಮಾಡಿದರು. ಅವಳನ್ನು ಪಾಕಿಸ್ತಾನದಲ್ಲಿರುವ ಅವಳ ಸಂಸಾರಕ್ಕೆ ಹಿಂದಿರುಗಿಸಬೇಕೆಂಬ ಒತ್ತಡ ಜಾಸ್ತಿಯಾಯಿತು. ಜೆನಿಬ್ ಳನ್ನು ಬೂಟಾಸಿಂಗನ ಮನೆಯಿಂದ ಎಳೆದುಕೊಂಡು ಹೋಗಿ, ಶಿಬಿರದಲ್ಲಿಟ್ಟು, ಪಾಕಿಸ್ತಾನಕ್ಕೆ ಕಳುಹಿಸುವ ಏರ್ಪಾಡು ಮಾಡಿದರು.
ಬೂಟಾ ಸಿಂಗ್ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ. ಅವಳನ್ನು ಕಳೆದುಕೊಳ್ಳುವುದಕ್ಕೆ ಅವನಿಗೆ ಸ್ವಲ್ಪವೂ ಇಷ್ಟವಿಲ್ಲ. ಸಿಖ್ಖರಿಗೆ ದುಷ್ಕರ ಎನಿಸುವ ಕೂದಲನ್ನು ಬೂಟಾಸಿಂಗ್ ಕತ್ತರಿಸಿಕೊಂಡ. ಇಸ್ಲಾಂ ಮತಕ್ಕೆ ಸೇರಿ ಜಮೀಲ್ ಅಹಮದ್ ಎಂದು ಹೆಸರಿಟ್ಟುಕೊಂಡ. ಮಗಳಿಗೆ 'ಸುಲ್ತಾನಾ' ಎಂದು ಹೆಸರು ಬದಲಾಯಿಸಿದ. ನಂತರ ಪಾಕಿಸ್ತಾನದ ಹೈಕಮಿಷನರ್ ಬಳಿ ಹೋಗಿ ತನ್ನ ಹೆಂಡತಿಯನ್ನು ತನಗೆ ಕೊಡಿಸಬೇಕಾಗಿ ಪ್ರಾರ್ಥಿಸಿದ. ಆದರೆ ಅವನ ಕೋರಿಕೆಯನ್ನು ಅಧಿಕಾರಿಗಳು ಮನ್ನಿಸಲಿಲ್ಲ. ಆರು ತಿಂಗಳು ಬೂಟಾಸಿಂಗ್ ತನ್ನ ಹೆಂಡತಿಯನ್ನು, 'ತಪ್ಪಿಸಿಕೊಂಡವರ ಶಿಬಿರಕ್ಕೆ' ನಿತ್ಯವೂ ಹೋಗಿ ನೋಡಿಕೊಂಡು ಬರುತ್ತಿದ್ದ. ಅವಳ ಪಕ್ಕ ಕುಳಿತು, ಅಳುತ್ತಾ ಸುಖದ ಕನಸು ಕಾಣುತ್ತಿದ್ದ.
ಪಾಕಿಸ್ತಾನದಲ್ಲಿ ಜೆಬಿಬ್ ಳ ಸಂಬಂಧಿಕರು ಎಲ್ಲಿದ್ದಾರೆಂದು ಗೊತ್ತಾಯಿತು. ಅವಳು ಅಲ್ಲಿಗೆ ಹೊರಟಳು. ಹೋಗುವುದಕ್ಕೆ ಮುಂಚೆ, 'ನಾನು ವಾಪಸ್ಸು ಬರುತ್ತೇನೆ. ನಿಮ್ಮ ಜೊತೆ ಇರುತ್ತೇನೆ' ಎಂದು ಹೇಳಿ ಅಳುತ್ತಾ 'ನಿಮ್ಮನ್ನು ಮರೆಯುವುದಿಲ್ಲ' ಎಂದು ಪ್ರತಿಜ್ಞೆ ಮಾಡಿ ಅವಳು ವಿದಾಯ ಹೇಳಿದಳು.
ಮುಸ್ಲಿಮನಾದ ಬೂಟಾ ಪಾಕಿಸ್ತಾನಕ್ಕೆ ವಲಸೆ ಹೋಗಲು ಅರ್ಜಿ ಸಲ್ಲಿಸಿದ. ಅದು ತಿರಸ್ತಾರವಾಯಿತು. ಪ್ರವಾಸಿಯಾಗಿ ಹೋಗಲೂ ಅವನಿಗೆ ಪರವಾನಗಿ ಸಿಗಲಿಲ್ಲ. ತನ್ನ ಮಗಳು ಸುಲ್ತಾನಳೊಡನೆ ಅವನು ಅನಧಿಕೃತವಾಗಿ ಗಡಿದಾಟಿದ. ಲಾಹೋರಿನಲ್ಲಿ ಮಗಳನ್ನು ಬಿಟ್ಟು ಹೆಂಡತಿ ಜೆನಿಬ್ ಇದ್ದ ಹಳ್ಳಿಗೆ ಹೋದ. ಅಲ್ಲಿ ಅವನಿಗೆ ಒಂದು ಆಘಾತ ಕಾದಿತ್ತು. ಅವನ ಹೆಂಡತಿ ಅವಳ ಬಂಧುವೊಬ್ಬರನ್ನು ಆಗಲೇ ಮದುವೆಯಾಗಿದ್ದಳು. ಬೂಟಾಸಿಂಗ್ ಅಳುತ್ತಾ ತನ್ನ ಪತ್ನಿಯನ್ನು ತನಗೆ ವಾಪಸ್ಸು ಮಾಡಿ ಎಂದ. ಜೆನಿಬ್ ಳ ಸಹೋದರರು ಇತರ ಸಂಬಂಧಿಗಳು ಅವನನ್ನು ಥಳಿಸಿ, ಪೋಲೀಸರಿಗೆ ಅವನೊಬ್ಬ ನ್ಯಾಯಬಾಹಿರ ವಲಸೆಗಾರನೆಂದು ತಿಳಿಸಿದರು.
ನ್ಯಾಯಾಲಯದಲ್ಲಿ ಬೂಟಾಸಿಂಗ್ ತಾನು ಮುಸ್ಲಿಮನೆಂದೂ, ತನ್ನ ಹೆಂಡತಿಯನ್ನು ತನಗೆ ಕೊಡಿಸಬೇಕೆಂದೂ ನ್ಯಾಯಾಧೀಶರನನ್ನು ಬೇಡಿದ. ಕಡೇ ಪಕ್ಷ ಹೆಂಡತಿಯನ್ನು ನೋಡಿ ಅವಳು ಭಾರತಕ್ಕೆ ವಾಪಸ್ಸು ಬರುತ್ತಾಳೆಯೇ ಎಂದು ಕೇಳಲಾದರೂ ಅವಕಾಶ ಕೊಡಿ ಎಂದು ಕೇಳಿದ.
ನ್ಯಾಯಾಧೀಶರು ಒಪ್ಪಿದರು. ಜೆನಿಬ್ ಳನ್ನು ಅವಳ ಸಂಬಂಧಿಕರು ನ್ಯಾಯಾಲಯಕ್ಕೆ ಕರೆದುಕೊಂಡು ಬಂದರು. ನ್ಯಾಯಾಧೀಶರು ಬೂಟಾಸಿಂಗ್ ನ ಕಡೆ ಬೆರಳುತೋರಿಸಿ ಅವಳನ್ನು ಕೇಳಿದರು-
"ನಿನಗೆ ಇವನು ಗೊತ್ತೇ?"
"ಗೊತ್ತು. ಅವನು ಬೂಟಾಸಿಂಗ್, ನನ್ನ ಮೊದಲನೇ ಪತಿ" ಎಂದು ನಡುಗುತ್ತಾ ಹೇಳಿದಳು. ತನ್ನ ಮಗಳನ್ನೂ ಗುರುತಿಸಿದಳು.
"ನೀನು ಅವನೊಡನೆ ಭಾರತಕ್ಕೆ ಹೋಗುತ್ತೀಯಾ?"
ಬೂಟಾಸಿಂಗ್ ಬೇಡುವ ಕಣ್ಣುಗಳಲ್ಲಿ ಅವಳನ್ನೇ ನೋಡುತ್ತಿದ್ದರೆ, ಅವಳ ಸಂಬಂಧಿಕರು ಆಕೆಯನ್ನು ಕೆಂಗಣ್ಣುಗಳಿಂದ ದುರುಗುಟ್ಟಿಕೊಂಡು ನೋಡುತ್ತಿದ್ದರು. ಅವಳು ಹೆದರಿ 'ಇಲ್ಲ' ಎಂದು ಮೆಲು ದನಿಯಲ್ಲಿ ಹೇಳಿದಳು.
ಬೂಟಾಸಿಂಗ್ ಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಅವನು ಮಾತನಾಡದೆ ಹಾಗೆ ಕೆಲವು ನಿಮಿಷ ನಿಂತ. ನಂತರ ಮಗಳನ್ನು ಕೊಠಡಿಯ ಒಳಗೆ ಕರೆದು, 'ಜೆನಿಬ್, ನಿನ್ನ ಮಗಳನ್ನು ನಿನ್ನಿಂದ ಬೇರ್ಪಡಿಸುವ ಇಚ್ಛೆ ಇಲ್ಲ. ಅವಳನ್ನು ನಿನ್ನ ಬಳಿಯೇ ಬಿಡುತ್ತೇನೆ' ಎಂದು ಹೇಳಿ ಜೋಬಿನಿಂದ ನೋಟಿನ ಕಂತೆಯನ್ನು ತೆಗೆದು ಮಗಳೊಡನೆ ಕೊಟ್ಟ. 'ನನ್ನ ಜೀವನ ಇಲ್ಲಿಗೆ ಮುಗಿಯಿತು' ಎಂದ.
ಜೆನಿಬ್ ಳನ್ನು ನ್ಯಾಯಾಧೀಶರು, 'ಮಗುವನ್ನು ನಿನ್ನ ವಶಕ್ಕೆ ತೆಗೆದುಕೊಳ್ಳುವ ಇಚ್ಛೆ ಇದೆಯೇ?' ಎಂದು ಕೇಳಿದರು. ನ್ಯಾಯಾಲಯದಲ್ಲಿದ್ದ ಅವಳ ಪುರುಷ ಸಂಬಂಧಿಕರು ಕೋಪದಿಂದ ತಲೆ ಅಲ್ಲಾಡಿಸಿದರು. ಅವರಿಗೆ ಅವರ ವಂಶದಲ್ಲಿ ಸಿಖ್ ನ ರಕ್ತ ಸೇರುವುದು ಇಷ್ಟವಿರಲಿಲ್ಲ. ನಿರಾಶೆ ಕಣ್ಣುಗಳಿಂದ ನೋಡುತ್ತಾ ಅವಳು 'ಬೇಡ, ಮಗು ಬೇಡ' ಎಂದಳು. ಬೂಟಾಸಿಂಗ್ ನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಜೆನಿಬ್ ಳ ಕಣ್ಣುಗಳಲ್ಲೂ ನೀರು, ಮಗಳನ್ನು ಕರೆದುಕೊಂಡು ಬೂಟಾಸಿಂಗ್ ನ್ಯಾಯಾಲಯ ಬಿಟ್ಟ.
ದುಃಖಗೊಂಡ ಬೂಟಾಸಿಂಗ್ ಅಳುತ್ತಾ ಮಗಳೊಡನೆ ಮುಸ್ಲಿಂ ಸಂತ ಗಂಗ್ ಭಕ್ಷನ ಸ್ಮಾರಕಕ್ಕೆ ಬಂದು ಮಲಗಿದ. ಬೆಳಿಗ್ಗೆ ಮಗಳನ್ನು ಅಂಗಡಿಗೆ ಕರೆದುಕೊಂಡು ಹೋಗಿ ಅವಳಿಗೆ ಹೊಸಬಟ್ಟೆ ಮತ್ತು ಜರಿಯಲ್ಲಿ ಕಸೂತಿ ಮಾಡಿದ ಪಾದರಕ್ಷೆಗಳನ್ನು ಕೊಂಡುಕೊಟ್ಟ. ನಂತರ ಅವರು ಷಾಧರ್ ರೈಲ್ವೆ ಸ್ಟೇಷನ್ನಿಗೆ ಬಂದರು. ಮಗಳಿಗೆ ಇನ್ನು ಅವಳು ತನ್ನ ತಾಯಿಯನ್ನು ನೋಡಲು ಆಗುವುದಿಲ್ಲವೆಂದು ತಿಳಿಸಿದ. ಅವಳನ್ನು ಎತ್ತಿಕೊಂಡು ಮುತ್ತಿಟ್ಟ. ಅವರು ಫ್ಲಾಟ್ ಫಾರಂನ ಅಂಚಿನಲ್ಲಿ ಬರುತ್ತಿದ್ದರು. ಹಳಿಗಳ ಮೇಲೆ ವೇಗವಾಗಿ ರೈಲು ಬರುತ್ತಿತ್ತು. ರೈಲು ಹತ್ತಿರ ಬಂದೊಡನೆ ಬೂಟಾಸಿಂಗ್ ಮಗಳ ಕೈ ಹಿಡಿದುಕೊಂಡು ಹಳಿಗಳ ಮೇಲೆ ಬಿದ್ದ. ಬೂಟಾಸಿಂಗ್ ಮೇಲೆ ರೈಲು ಹರಿದು ಅಂಗಾಂಗಗಳು ಕತ್ತರಿಸಿ ಹೋಗಿ ಅವನು ತಕ್ಷಣವೇ ಸತ್ತು ಹೋದ. ಆದರೆ ಆಶ್ಚರ್ಯವೆನ್ನುವಂತೆ ಮಗಳು ದುರಂತದಿಂದ ಪಾರಾದಳು.
ಬೂಟಾಸಿಂಗನ ಅಂಗಿಯಲ್ಲಿ ಅವನು ಹೆಂಡತಿಗೆ ಬರೆದ ಕಾಗದವಿತ್ತು. 'ಪ್ರೀತಿಯ ಜೆನಿಬ್, ನೀನು ನಿನ್ನ ಜನರ ಮಾತಿಗೆ ಓಗೊಟ್ಟು ನನ್ನೊಡನೆ ಬರಲಿಲ್ಲ. ನ್ಯಾಯಾಲಯದಲ್ಲಿ ನೀನು ಹೇಳಿದ ಮಾತುಗಳು ಮನಃಪೂರ್ವಕವಾಗಿ ಹೇಳಿದ ಮಾತುಗಳಲ್ಲ. ನನಗೆ ನಿಜವಾಗಿಯೂ ನಿನ್ನೊಡನೆ ಇರಬೇಕೆಂಬುದೇ ನನ್ನ ಕಡೆಯ ಆಸೆ. ನನ್ನನ್ನು ನಿಮ್ಮ ಹಳ್ಳಿಯಲ್ಲಿಯೇ ಹೂತು ಹಾಕಿ. ಆಗಾಗ್ಗೆ ನೀನು ಬಂದು ನನ್ನ ಸಮಾಧಿ ಮೇಲೆ ಹೂವನ್ನಿಡು'
ಬೂಟಾಸಿಂಗನ ಆತ್ಮಹತ್ಯೆ ಪಾಕಿಸ್ತಾನದಲ್ಲಿ ಒಂದು ತರಂಗ ಎಬ್ಬಿಸಿತು. ಅವನ ಸಂಸ್ಕಾರ ರಾಷ್ಟ್ರೀಯ ಪ್ರಾಮುಖ್ಯ ಪಡೆಯಿತು. ಜೆನಿಬ್ ಳ ಸಂಸಾರ ಬೂಟಾಸಿಂಗನ ದೇಹವನ್ನು ಅವರ ಹಳ್ಳಿಯಲ್ಲಿ ಹೂಳಲು ಅವಕಾಶ ಕೊಡಲಿಲ್ಲ. ಶವವನ್ನು ಹಳ್ಳಿಗೆ ತರುವುದಕ್ಕೂ ಅವಳ ಎರಡನೇ ಪತಿ ಅಡ್ಡಬಂದ. ಅಧಿಕಾರಿಗಳು ಶವವನ್ನು ಲಾಹೋರಿಗೆ ಕಳುಹಿಸಿದರು. ಅಲ್ಲಿ ಅದನ್ನು ಹೂವುಗಳಿಂದ ಅಲಂಕರಿಸಿ ಗೌರವದಿಂದ ಹೂಳಲಾಯಿತು. ಸತ್ತ ಬೂಟಾಸಿಂಗ್ ಗೆ ದೊರೆತ ಗೌರವ ಕಂಡು ಜೆನೀಬ್ ಳ ಕುಟುಂಬಕ್ಕೆ ಅಸೂಯೆ ಬಂದು ಕೆಲವರು ಲಾಹೋರಿಗೆ ಹೋಗಿ ಅವನ ದೇಹವನ್ನು ಗೋರಿಯಿಂದ ಈಚೆ ತೆಗೆದು ಹೊರಗೆ ಹಾಕಿ ಅವಮರ್ಯಾದೆ ಮಾಡಿದರು. ಇದರಿಂದ ಉದ್ರಿಕ್ತರಾದ ನಗರದ ಜನತೆ ಪುನಃ ಹೂವುಗಳ ರಾಶಿಯಲ್ಲಿ ಅವನ ದೇಹವನ್ನು ಹೂತರು. ನೂರಾರು ಸ್ವಯಂ ಸೇವಕರು ಸಮಾಧಿಯನ್ನು ಕಾಯಲು ನಿಂತುಕೊಂಡರು.
ಬೂಟಾಸಿಂಗನ ಮಗಳು ಸುಲ್ತಾನಳನ್ನು ಒಂದು ಮುಸ್ಲಿಂ ಸಂಸಾರ ದತ್ತು ತೆಗೆದುಕೊಂಡು ಲಾಹೋರಿನಲ್ಲಿ ಸಾಕಿತು. ಈಗ ಆಕೆ ಲಿಬಿಯಾದಲ್ಲಿದ್ದಾಳೆ. ಗಂಡ ಇಂಜಿನಿಯರ್. ದಂಪತಿಗಳಿಗೆ ಮೂವರು ಮಕ್ಕಳು.
ಆಂಗ್ಲ ಮೂಲ: L. Collins & D. Lapierre.
ಕನ್ನಡಕ್ಕೆ: ಎಚ್.ಆರ್.ಚಂದ್ರವದನರಾವ್.
ಪ್ರಕಾಶನ: ಸಂವಹನ, ಮೈಸೂರು
ಚಿತ್ರಮೂಲ: ವಿಕಿಪೀಡಿಯಾ

Jul 8, 2015

ವಾಡಿ ಜಂಕ್ಷನ್ .... ಭಾಗ 14

wadi junction
Ashok K R
ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಕಾಲಿಟ್ಟ ಮೊದಲ ದಿನ ಆಶ್ರಮದ ವಾತಾವರಣದಿಂದ ಉಲ್ಲಸಿತನಾದ. ಹೊಸ ಆಶ್ರಮವಿದು, ಹಣದ ಅಭಾವವಿರಬೇಕು. ಹೆಚ್ಚೆಚ್ಚು ಹಣ ಸೇರಿದಂತೆಲ್ಲಾ ಉಳಿದ ಆಶ್ರಮದ ವೈಭೋಗ, ಐಷಾರಾಮಿತನ ಇಲ್ಲಿಗೂ ಬಂದುಬಿಡಬಹುದೆಂಬ ಅನುಮಾನವೂ ಇತ್ತು. ಧ್ಯಾನದ ಸಮಯ ಮುಗಿದ ನಂತರ ಪ್ರತೀ ದಿನ ಸಂಜೆ ಭಕ್ತರಿಗೂ ಸ್ವಾಮಿಗೂ ಚರ್ಚೆ ನಡೆಯುತ್ತಿತ್ತು. ಬಹಳಷ್ಟು ಚರ್ಚೆಗಳು ಆಧ್ಯಾತ್ಮದ ಬಗ್ಗೆ, ದೇವರ ಬಗ್ಗೆ, ಧ್ಯಾನ – ಜಪ – ತಪ – ಮಂತ್ರಗಳ ಬಗ್ಗೆ. ಲೌಕಿಕದ ಚರ್ಚೆಗೂ ಸ್ವಾಮಿಗಳು ತೆರೆದುಕೊಂಡಿದ್ದರು. ತಮ್ಮ ಪೂರ್ವಾಶ್ರಮದ ನೆನಪುಗಳನ್ನು ಅಗತ್ಯ ಬಿದ್ದಾಗ ಹೇಳುತ್ತಿದ್ದರು. ಕ್ರಾಂತಿ ಭೇಟಿ ಕೊಟ್ಟ ಎರಡನೆಯ ದಿನ ರಾಜಕೀಯದ ಚರ್ಚೆ ನಡೆದಿತ್ತು. ಅನ್ಯ ಧರ್ಮ ದ್ವೇಷ, ಏಕಪಕ್ಷವಾದ ಸ್ವಾಮಿಗಳ ಮಾತಿನಲ್ಲಿರಲಿಲ್ಲ. ಯಾವುದೇ ವಿಷಯವಾದರೂ ಅದರಲ್ಲಿನ ಒಳಿತು – ಕೆಡುಕುಗಳೆರಡರ ಮುಖವನ್ನು ಬಣ್ಣಿಸುತ್ತಿದ್ದರು. ನೂರು ಪ್ರತಿಶತಃ ಒಳ್ಳೆಯತನ ಹೇಗೆ ಸಾಧ್ಯವಿಲ್ಲವೋ ನೂರು ಪ್ರತಿಶತಃ ಕೆಡುಕೂ ಸಾಧ್ಯವಿಲ್ಲ ಎಂದವರ ನಿಲುವಾಗಿತ್ತು. ಎರಡು ಭೇಟಿಯಲ್ಲೇ ಆಶ್ರಮದ ಪರಿಸರ, ಸ್ವಾಮಿಗಳ ಮಾತುಗಳೊಂದಿಗಿನ ಒಡನಾಟ ಕ್ರಾಂತಿಗೆ ಪ್ರಿಯವಾಗಿತ್ತು. ಆದರೆ ಇಂದವರು ಜ್ಞಾನಿಯನ್ನು ಮಕ್ಕಳ ಮನಸ್ಥಿತಿಗೆ ಹೋಲಿಸಿದ್ದು ಒಪ್ಪಿಗೆಯಾಗಲಿಲ್ಲ. ಪ್ರಶ್ನೆ ಕೇಳೇಬಿಡೋಣ ಎಂದುಕೊಂಡವನಿಗೆ ಪ್ರಶ್ನೋತ್ತರ ಅವಧಿ ಮುಗಿದಿದ್ದು ಬೇಸರ ಮೂಡಿಸಿತು. ತನ್ನೊಳಗೆ ಮೂಡಿದ ಪ್ರಶ್ನೆಯನ್ನೇ ಮನನ ಮಾಡುತ್ತ ಆ ಪ್ರಶ್ನೆ ಸರಿಯಿದೆಯಾ ಎಂದು ಯೋಚಿಸುತ್ತಾ ಕುಳಿತವನನ್ನು ಸ್ವಾಮಿಗಳ ದೀಕ್ಷೆ ಪಡೆಯದ ಶಿಷ್ಯನೊಬ್ಬ ಬಂದು ಎಚ್ಚರಿಸಿದ. ಬಾಗಿಲು ಹಾಕುವ ಸಮಯವಾಯಿತು, ಹೊರಡಬೇಕು ಎಂದು ಸೂಚಿಸಿದ.
“ಸ್ವಾಮಿಗಳಲ್ಲಿ ನನ್ನ ಸಂಶಯ ಪರಿಹರಿಸಿಕೊಳ್ಳಬೇಕು”

“ಇವತ್ತಿನ ಭೇಟಿಯ ಸಮಯ ಮುಗಿಯಿತಲ್ಲ. ನಾಳೆ ಕೇಳಿದರಾಗದೆ”

“ಇಲ್ಲ. ಇವತ್ತವರು ಜ್ಞಾನಿಯ ಬಗ್ಗೆ ಹೇಳಿದ ಮಾತಿನಿಂದಲೇ ನನ್ನಲ್ಲಿ ಪ್ರಶ್ನೆಗಳುಟ್ಟಿವೆ. ನಾಳೆಯಷ್ಟೊತ್ತಿಗೆ ಆ ಪ್ರಶ್ನೆಯೇ ಅರ್ಥವಿಲ್ಲದ್ದು ಎನ್ನಿಸಿಬಿಡಬಹುದು. ಹಾಗಾಗಿ ಇವತ್ತೇ ಕೇಳಬೇಕು”

“ಮ್. … ಸರಿ. ಒಂದು ಕೆಲಸ ಮಾಡಿ. ದೇವಾಲಯದ ಹಿಂದಿರುವ ಕೈದೋಟದ ಬಳಿ ಬನ್ನಿ. ಸ್ವಾಮಿಗಳನ್ನೊಮ್ಮೆ ಕೇಳಿ ನೋಡುತ್ತೇನೆ. ಅವರು ಅನುಮತಿ ಕೊಟ್ಟರೆ ಅಲ್ಲೇ ಭೇಟಿಯಾಗಿ ಪ್ರಶ್ನೆ ಕೇಳಬಹುದು”

ಇಬ್ಬರೂ ಕೈದೋಟದ ಬಳಿ ಬಂದರು. ಆಗಲೇ ಕತ್ತಲಾಗಿತ್ತು. ತೋಟದ ಮಧ್ಯೆ ಮಧ್ಯೆ ಸೋಲಾರ್ ದೀಪಗಳು ಉರಿಯುತ್ತಿದ್ದವು. ಸ್ವಾಮಿಗಳು ಗಿಡಗಳೊಡನೆ ಸಂವಾದಿಸುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದರು. ‘ನೀವಿಲ್ಲೇ ಇರಿ’ ಎಂದು ಹೇಳಿದ ಶಿಷ್ಯ ಸ್ವಾಮಿಗಳ ಬಳಿಗೆ ಹೋಗಿ ವಿಷಯ ತಿಳಿಸಿದ. ಸ್ವಾಮಿಗಳು ಕ್ರಾಂತಿಯೆಡೆಗೆ ನೋಡಿ ಬರುವಂತೆ ಕೈಸನ್ನೆ ಮಾಡಿದರು. ಶಿಷ್ಯ ದೇವಸ್ಥಾನದ ಕಡೆಗೆ ತೆರಳಿದ.

ಗಿಡಗಳ ಮೈದಡವುತ್ತಾ “ಹೇಳಿ” ಎಂದರು ಸ್ವಾಮಿಗಳು.

“ಇಂದು ನೀವು ಜ್ಞಾನಿಗಳ ಬಗ್ಗೆ ಹೇಳಿದ್ದು ನನಗೆ ಸಮಾಧಾನ ತರಲಿಲ್ಲ”

“ಯಾಕೆ? ಉತ್ತರ ಅಪೂರ್ಣವೆನ್ನಿಸಿತೆ”

“ಪೂರ್ಣವೋ ಅಪೂರ್ಣವೋ ತಿಳಿಯಲಿಲ್ಲ. ಆದರೆ ಭೂತವನ್ನು ಮರೆತು ವರ್ತಮಾನದಲ್ಲೇ ಇರಬೇಕು ಎಂದಿದ್ದು ಸರಿ ಕಾಣಲಿಲ್ಲ. ನಿಮ್ಮ ಮಾತಿನ ಪ್ರಕಾರವೇ ಹೋದರೆ ನೀವಿವತ್ತು ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಅದನ್ನು ಇಂದೇ ಅಳವಡಿಸಿಕೊಳ್ಳಬೇಕು. ಏಕೆಂದರೆ ನಾಳೆಯೆಂಬ ವರ್ತಮಾನದಲ್ಲಿ ಇಂದೆಂಬ ಭೂತದ ಯಾವುದೇ ನೆನಪೂ ಇರುವುದಿಲ್ಲವಲ್ಲ; ಇರಬಾರದೆಂದು ನೀವು ಹೇಳುತ್ತೀರ”

ಪ್ರಶ್ನೆ ಕೇಳಿದವನ ಜಾಣ್ಮೆಗೆ ಮೆಚ್ಚಿ ಗಿಡಗಳ ಬಳಿ ಮೊಣಕಾಲಿನಲ್ಲಿ ಕುಳಿತಿದ್ದ ಸ್ವಾಮಿಗಳು ಮೇಲೆದ್ದು ಕ್ರಾಂತಿ ಸಂಭವನನ್ನು ನೋಡಿದರು. 

“ಏನ್ ಓದ್ತಾ ಇದ್ದೀರಾ ನೀವು”

“ಫಸ್ಟ್ ಇಯರ್ ಎಂಬಿಬಿಎಸ್”

“ಸಂತೋಷ. ನಿಮ್ಮ ಪ್ರಶ್ನೆ ಸಮಂಜಸವಾಗಿದೆ. ಈ ರೀತಿ ಪ್ರಶ್ನೆ ಮಾಡುವವರ ಸಂಖೈ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆ” ತಾವು ಧರಿಸಿದ ಖಾವಿಯನ್ನೊಮ್ಮೆ ದಿಟ್ಟಿಸಿ “ಈ ಯುನಿಫಾರ್ಮನ್ನು ಧರಿಸಿದವರು ಏನು ಮಾತನಾಡಿದರೂ, ಒದರಿದರೂ ಅದು ಸರಿಯಾಗೇ ಇರುತ್ತದೆ ಎಂಬ ಮೌಡ್ಯ ನಮ್ಮ ಜನರಲ್ಲಿ. ಕಾಲ ಸವೆದಂತೆ ಆ ಮೌಡ್ಯವೂ ಹೆಚ್ಚುತ್ತಿರುವುದು ವಿಷಾದನೀಯ. ಜ್ಞಾನಿಯಾದವನಿಗೆ ಮಕ್ಕಳ ಮನಸ್ಥಿತಿ ಇರಬೇಕೆಂದು ಹೇಳಿದ್ದು ಭೂತದಲ್ಲಿ ನಡೆದ ಕಷ್ಟಗಳಿಗೆ – ದುರ್ಘಟನೆಗಳಿಗೆ ಮಾತ್ರ ಅನ್ವಯ ಮಾಡಿಕೊಳ್ಳಬೇಕು. ಭೂತದಲ್ಲಿನ ಒಳ್ಳೆಯ ವಿಚಾರಗಳಿಗಲ್ಲ! ಒಳ್ಳೆಯ ವಿಚಾರಗಳನ್ನು ನೆನಪಿಟ್ಟುಕೊಂಡು ಕೆಟ್ಟ ಸಂಗತಿಗಳನ್ನು ಮರೆತಾಗ ಕೊನೆಗೆ ನಮ್ಮಲ್ಲಿ ಒಳ್ಳೆ ಸಂಗತಿ, ವಿಚಾರಗಳು ಮಾತ್ರ ಉಳಿಯುತ್ತವೆ. ಜನರಿಗೆ ಸುಲಭವಾಗಿ ಅರ್ಥವಾಗಲೆಂದು ಮಕ್ಕಳ ಉದಾಹರಣೆಯನ್ನು ಹೇಳಿದ್ದು”

“ಸರಿ. ಚರ್ಚೆಯ ಸಂದರ್ಭದಲ್ಲೂ ನೀವು ಪೂರ್ತಿಯಾಗಿ ಹೇಳಬೇಕಿತ್ತಲ್ಲವೇ?”

“ನಿಜ. ಉದಾಹರಣೆಯ ಜೊತೆಗೆ ಹೇಳಿದರೂ ಪೂರ್ಣವಾಗಿ ಬಿಡಿಸಿ ತಿಳಿಸಬೇಕಿತ್ತು. ಕೆಲವರು ಅರ್ಧ ಕೇಳಿಸಿಕೊಂಡು ಪೂರ್ತಿ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪೂರ್ತಿ ಕೇಳಿಸಿಕೊಂಡು ಏನನ್ನೂ ಅರ್ಥೈಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಸರ್ವಸಂಗ ಪರಿತ್ಯಾಗಿಗಳೆನ್ನಿಸಿಕೊಂಡ ನಮಗೂ ಬೌದ್ಧಿಕ ಅಹಂಕಾರ ಕೆರಳಿದಂತಾಗಿ ‘ಈ ದಡ್ಡರಿಗೆ ಎಷ್ಟು ಹೇಳಿದರೂ ಅಷ್ಟೇ’ ಎಂಬ ಭಾವನೆಯಿಂದ ಅರ್ಧಕ್ಕೇ ಉಪನ್ಯಾಸವನ್ನು ಮೊಟಕುಗೊಳಿಸಿಬಿಡುತ್ತೇವೆ” ಇಬ್ಬರೂ ಜೋರಾಗಿಯೇ ನಕ್ಕರು.

“ಸರಿ ಸ್ವಾಮೀಜಿ. ನಾನಿನ್ನು ಬರುತ್ತೇನೆ”

“ಸಂತೋಷ. ಬರ್ತಾ ಇರಿ ಆಗಾಗ. ಅಂದಹಾಗೆ ನಿಮ್ಮ ಹೆಸರು”

“ಕ್ರಾಂತಿ ಸಂಭವ್ ಅಂಥ. ಹೋಗಿ ಬರ್ತೀನಿ ಸ್ವಾಮೀಜಿ” ಎಂದ್ಹೇಳಿ ಹೊರಟ.

ದೇವಾಲಯದ ಹಿಂದೆ ನಿಂತಿದ್ದ ಶಿಷ್ಯನೊಬ್ಬ ಕ್ರಾಂತಿಯನ್ನು ನಿಲ್ಲಿಸಿ “ಸ್ವಾಮಿಗಳಿಂದ ಬೀಳ್ಕೊಡುವಾಗ ಅವರ ಪಾದಕ್ಕೆ ನಮಸ್ಕರಿಸಬೇಕೆಂಬುದೂ ತಿಳಿಯದೆ?” ಕೋಪದಿಂದ ಹೇಳಿದ.



“ಹೌದೇ ಗೊತ್ತಿರಲಿಲ್ಲ” ಗುರುವೊಬ್ಬ ಸಿಕ್ಕ ಸಂತಸದಲ್ಲಿ ಶಿಷ್ಯನ ಕೋಪದ ಅರಿವಾಗಲಿಲ್ಲ ಕ್ರಾಂತಿ ಸಂಭವನಿಗೆ.

Jul 7, 2015

ಪೈಪಿನೊಳಗಿಂದ ವಿದ್ಯುತ್!

ವಿದ್ಯುತ್ ಇಂದು ಅನಿವಾರ್ಯ. ವಿದ್ಯುತ್ ಉತ್ಪಾದನೆಯೆಂದರೆ ಅದು ಪರಿಸರಕ್ಕೆ ಮಾರಕವೆಂದೇ ಅರ್ಥವಾಗುತ್ತಿದ್ದ ಕಾಲ ನಿಧಾನಕ್ಕೆ ಬದಲಾಗುತ್ತಿದೆ. ಸೌರ ವಿದ್ಯುತ್ತಿನ ಬೆಲೆ ನಿಧಾನಕ್ಕಾದರೂ ನಮಗೆ ಅರಿವಾಗುತ್ತಿದೆ. ಕರ್ನಾಟಕ ಸರಕಾರ ಮನೆ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್ ಉತ್ಪಾದಿಸಲು ಕೊಡುತ್ತಿರುವ ಪ್ರೋತ್ಸಾಹ ಕೂಡ ಸೌರ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಗೆ ಬರಲು ಸಹಕಾರಿಯಾಗುತ್ತಿದೆ. ಪೋರ್ಟ್ ಲ್ಯಾಂಡಿನಲ್ಲಿ ಲ್ಯುಸಿಡ್ ಎನರ್ಜಿ ಎಂಬ ಸಂಸ್ಥೆ ವಿದ್ಯುತ್ ಉತ್ಪಾದಿಸಲು ಹೊಸತೊಂದು ದಾರಿ ಕಂಡುಕೊಂಡಿದೆ. ಪರಿಸರದ ಮೇಲೆ ಕಡಿಮೆ ಮಟ್ಟದ ಹಾನಿಯುಂಟುಮಾಡುವ ಇಂಥಹ ಯೋಜನೆಗಳು ಭವಿಷ್ಯಕ್ಕೆ ಅತ್ಯವಶ್ಯಕ.


ಎತ್ತರದ ಭೂಭಾಗದಿಂದ ಕೆಳಪ್ರದೇಶಕ್ಕೆ ನೀರು ಹರಿಯುವಾಗ ಆ ನೀರಿನ ಒತ್ತಡ ಟರ್ಬೈನ್ ತಿರುಗಿಸುವಂತೆ ಮಾಡಿ ವಿದ್ಯುತ್ ಉತ್ಪಾದಿಸುವ ವಿಧಾನ ನಮಗೆಲ್ಲರಿಗೂ ತಿಳಿದಿರುವಂತದ್ದೇ. ಶಿವನಸಮುದ್ರ, ಲಿಂಗನಮಕ್ಕಿಯಲ್ಲಿ ಈ ರೀತಿಯ ವಿದ್ಯುತ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆದರೆ ಮಲೆನಾಡು ಪ್ರದೇಶದಲ್ಲಿ ಚಿಕ್ಕ ಪ್ರಮಾಣದಲ್ಲಿ ನಡೆಯುತ್ತದೆ. ಲ್ಯುಸಿಡ್ ಎನರ್ಜಿ ಸಂಸ್ಥೆಯ ಯೋಚನೆಯ ತಳಹದಿ ಇದೇ ಆದರೂ ಒತ್ತಡದಲ್ಲಿರುವ ನೀರು ಪೈಪಿನೊಳಗಡೆ ಹರಿಯುವಾಗಲೇ ವಿದ್ಯುತ್ ಉತ್ಪಾದನೆ ನಡೆಯುತ್ತದೆ. 


ಈ ಯೋಜನೆಯಿಂದ ವಿದ್ಯುತ್ ಉತ್ಪಾದಿಸಲು ಶುದ್ಧ ನೀರೇ ಬೇಕೆಂದಿಲ್ಲ, ಒತ್ತಡದಲ್ಲಿ ಹರಿಯುತ್ತಿರುವ ನಗರದ ಕೊಳಚೆ ನೀರಾದರೂ ನಡೆಯುತ್ತದೆ. ಪೈಪಿನ ಗಾತ್ರ 24 ಇಂಚುಗಳಷ್ಟಿರಬೇಕು, ಟರ್ಬೈನುಗಳನ್ನು ತಿರುಗಿಸುವಷ್ಟು ಒತ್ತಡದಲ್ಲಿ ನೀರು ಹರಿಯುತ್ತಿರಬೇಕು. ನೀರಿನ ಒತ್ತಡ ಹೆಚ್ಚಿದ್ದಷ್ಟೂ ಹೆಚ್ಚೆಚ್ಚು ಟರ್ಬೈನುಗಳನ್ನು ಅಳವಡಿಸಬಹುದು. ಕೆಳ ಎತ್ತರದಲ್ಲಿರುವ ನಗರಕ್ಕೆ ಎತ್ತರದಲ್ಲಿರುವ ಜಲಾಶಯದಿಂದ ನೀರು ಹರಿಯುತ್ತಿರುವ ಕಡೆಯಲ್ಲೆಲ್ಲ ಇದನ್ನು ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ಭೂ ಸ್ವಾಧೀನದ ಅಗತ್ಯವಿಲ್ಲ, ಟರ್ಬೈನಿನ ಗಾತ್ರ ಚಿಕ್ಕದಾಗಿರುವುದರಿಂದ ಸಾಧಾರಣ ಪೈಪುಗಳ ಅಳವಡಿಕೆಗೆ ಎಷ್ಟು ಜಾಗ ಬೇಕೋ ಅಷ್ಟೇ ಜಾಗ ಇದಕ್ಕೂ ಸಾಕು. ಪೈಪಿನೊಳಗೆ ಟರ್ಬೈನುಗಳನ್ನು ಅಳವಡಿಸುವುದರಿಂದ ನೀರಿನ ಹರಿವಿಗೇನು ತೊಂದರೆಯಾಗುವುದಿಲ್ಲ .ಈ ಟರ್ಬೈನಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣ ಸದ್ಯಕ್ಕೆ ಕಡಿಮೆಯೇ ಇರಬಹುದು. ಮುಂದಿನ ದಿನಗಳಲ್ಲಿ ಟರ್ಬೈನುಗಳ ಕಾರ್ಯಕ್ಷಮತೆಯಲ್ಲಿ ಸುಧಾರಣೆಗಳಾದಾಗ ವಿದ್ಯುತ್ ಉತ್ಪಾದನೆಯಲ್ಲೂ ಏರಿಕೆಯಾಗುತ್ತದೆ, ಸಣ್ಣ ಪೈಪುಗಳಲ್ಲಿ, ಕಡಿಮೆ ಒತ್ತಡದ ಪೈಪುಗಳಲ್ಲಿ ಕೂಡ ಸ್ಥಳೀಯ ಅಗತ್ಯಗಳನ್ನು ಪೂರೈಸುವ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ.
ಚಿತ್ರಗಳು ಮತ್ತು ಮಾಹಿತಿ: lucidenergy.com

ಜೈಪುರದಲ್ಲಿ ದೇಗುಲಗಳ 'ನಾಶ' ಮತ್ತು ಸಂಘಿಗಳ ಜಾಣ ಮೌನ!

ಬಹಳ ವರುಷಗಳ ಹಿಂದೆ ಪತ್ರಿಕೆಗಳಲ್ಲಿ ಓದಿದ್ದ ವರದಿ. ಬೆಂಗಳೂರಿನ ಫುಟ್ ಪಾತ್ ವೊಂದರಲ್ಲಿ ದಿಡೀರ್ ದೇವಸ್ಥಾನವೊಂದು ಉದ್ಭವವಾಗಿತ್ತು. ಆಗ ಬಿಬಿಎಂಪಿ ಇತ್ತೋ ಬರೀ ಬಿಎಂಪಿಯಿತ್ತೋ ಗೊತ್ತಿಲ್ಲ ಅದನ್ನು ತೆರವು ಮಾಡಬೇಕೆಂದುಕೊಂಡಿದ್ದರು. ಅಕಟಕಟಾ ಮಸೀದಿ ಚರ್ಚು ಮುಟ್ಟಲಾಗದ ನೀವು ದೇವಸ್ಥಾನ ತೆರವುಗೊಳಿಸುತ್ತೀರಾ ಎಂದು ಹಲ್ಲು ಮಸೆಯುತ್ತಾ ಕೆಲವು ಹಿಂದೂ ಪರ ಎನ್ನಿಸಿಕೊಂಡ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದೇವಾಲಯಗಳನ್ನು ಕಾರಣಾಂತರಗಳಿಂದ ಸರಕಾರವೊಂದು ಉರುಳಿಸುತ್ತದೆ ಎಂದಾಗಲೆಲ್ಲ ಹಿಂದೂ ಪರ ಸಂಘಟನೆಗಳು ರೊಚ್ಚಿಗೇಳುತ್ತವೆ, ಹಿಂದೂ ದೇವರ ರಕ್ಷಣೆ ಮಾಡುತ್ತವೆ ಎಂಬ ನನ್ನ ಅಭಿಪ್ರಾಯ ಜೈಪುರದ ವರದಿಗಳನ್ನು ನೋಡಿದಾಗ ಸಂಪೂರ್ಣವಾಗಿ ಬದಲಾಗಿದೆ. ಹಿಂದೂ ಪರ ಸಂಘಟನೆಗಳು ತಮಗಾಗದ ರಾಜಕೀಯ ಪಕ್ಷವೊಂದು ಅಧಿಕಾರದಲ್ಲಿದ್ದಾಗ ಮಾತ್ರ ಹಿಂದೂ ಪರವಾಗಿರುತ್ತವೆ, ಕೋಮುಗಲಭೆಗಳನ್ನು ಶುರುಮಾಡಲು ಉತ್ಸುಕವಾಗಿರುತ್ತವೆ, ಅದೇ ತನಗಾಗುವ ಬಿಜೆಪಿ ಅಧಿಕಾರದಲ್ಲಿದ್ದಾಗ ಜಾಣ ಮೌನ ವಹಿಸಿಬಿಡುತ್ತದೆ! 
ಜೈಪುರದಲ್ಲಿ ಮೆಟ್ರೋ ರೈಲು ಕಟ್ಟುವ ಸಲುವಾಗಿ ಅನೇಕ ದೇವಾಲಯಗಳನ್ನು ನಾಶ ಮಾಡಲಾಗಿದೆ. ರೈಲು ಕಟ್ಟುವ ಸಮಯದಲ್ಲಿ ಅನೇಕ ಕಟ್ಟಡಗಳು ನಾಶವಾಗಲೇಬೇಕು, ಅದರಲ್ಲಿ ದೇವಸ್ಥಾನಗಳು ಸೇರಿಕೊಂಡಿರುತ್ತವೆ; ಅದು ಸಹಜ ಕೂಡ. ಒಂದು ಅಂದಾಜಿನಂತೆ ನೂರಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ. ಕಾಂಗ್ರೆಸ್ಸೋ ಮತ್ತೊಂದೋ ಪಕ್ಷವೋ ಅಧಿಕಾರದಲ್ಲಿದ್ದಾಗ ಈ ರೀತಿ ಆಗಿದ್ದರೆ ಆರ್.ಎಸ್.ಎಸ್ ಮತ್ತದರ ಅಂಗಸಂಸ್ಥೆಗಳು ಮೌನದಿಂದಿರುತ್ತಿದ್ದರೇ? ಇದನ್ನೇ ನೆಪ ಮಾಡಿಕೊಂಡು ಹಿಂದೂಗಳ ಭಾವನೆಗಳನ್ನು ಯದ್ವಾ ತದ್ವಾ ಕೆರಳಿಸದೆ ಇರುತ್ತಿದ್ದರೇ? ಚಿಕ್ಕ ಪುಟ್ಟ ಪ್ರತಿಭಟನೆ ನಡೆಯಿತೆಂಬುದನ್ನು ಬಿಟ್ಟರೆ ಎಲ್ಲಾ ದೇವಸ್ಥಾನಗಳೂ ನೆಲಕ್ಕುರುಳಿವೆ. ದೇವಾಲಯಗಳು ಮಣ್ಣು ಸೇರಿದ ಮೇಲೆ ದೊಡ್ಡ ಪ್ರತಿಭಟನೆ ಮಾಡುವ ಮನಸ್ಸು ಮಾಡಿದೆ ಅಲ್ಲಿನ 'ಹಿಂದೂ' ಪರ ಸಂಘಟನೆಗಳು! ಇದಕ್ಕೆಲ್ಲ ಕಾರಣ ಆರ್.ಎಸ್.ಎಸ್ಸಿನ ರಾಜಕೀಯ ಅಂಗವಾದ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರದಲ್ಲಿದೆ! ಹಿಂದೂ ಸಂಘಟನೆಗಳು 'ಹಿಂದೂ ಪರವಾಗಿ' ಕೆಲಸ ಮಾಡುವುದು ಯಾವಾಗ ಎಂದೀಗ ಅರಿವಾಗಿರಬೇಕಲ್ಲ. 
ನಾಟಕದ ಸಂಘಟನೆಗಳ ಮಾತು ಬಿಡಿ. ಬೇಸರದ ಸಂಗತಿಯೆಂದರೆ ಇನ್ನೂರು ವರುಷಗಳಷ್ಟು ಹಳೆಯದಾದ ದೇವಾಲಯಗಳನ್ನೂ ನಾಶಪಡಿಸಲಾಗಿದೆ. ಬ್ಯುಸಿನೆಸ್ಸನ್ನೇ ಮುಖ್ಯ ಗುರಿಯಾಗಿಸಿಕೊಂಡು ಕಟ್ಟಲ್ಪಡುವ ಹೊಸ ದೇವಸ್ಥಾನಗಳ ಕಥೆ ಬಿಡಿ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಮುಖ್ಯವಾದ ದೇವಸ್ಥಾನಗಳನ್ನು ಈಗಿರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ರಕ್ಷಿಸುವ ಕೆಲಸವನ್ನು 'ಹಿಂದೂ ಧರ್ಮ ರಕ್ಷಕ' ಪಕ್ಷ ಅಧಿಕಾರದಲ್ಲಿರುವ ಸರಕಾರ ಮಾಡಬೇಕಿತ್ತಲ್ಲವೇ? ಮೆಟ್ರೋದ ಸಲುವಾಗಿ ಪರಂಪರೆಯ ಸಂಕೇತವಾದ ದೇಗುಲವೊಂದನ್ನು ನಾಶಪಡಿಸಿದ್ದು ತಪ್ಪು. 

Jul 3, 2015

ಉಗ್ರಾಂಧತೆ!

white supremacy
2001ರ ಸೆಪ್ಟೆಂಬರ್ 11ರಂದು ಅಮೆರಿಕಾದ ವರ್ಲ್ಡ್ ಟ್ರೇಡ್ ಕೇಂದ್ರದ ಮೇಲೆ ನಡೆದ ಉಗ್ರರ ಪೈಶಾಚಿಕ ದಾಳಿಯ ನಂತರ ಅಲ್ಲಿನ ಭದ್ರತಾ ವ್ಯವಸ್ಥೆ ತುಂಬಾ ಬಿಗಿಗೊಂಡಿದೆ. ಮುಸ್ಲಿಮರೆಲ್ಲರನ್ನು ಅನುಮಾನಸ್ಪದವಾಗಿ ನೋಡುವುದರಿಂದಲೇ ಅಲ್ಲೀಗ ಉಗ್ರರ ದಾಳಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಬಿಟ್ಟಿದೆ ಎಂಬಂತಹ ಮಾತುಗಳನ್ನು ಪದೇ ಪದೇ ಭಾರತದಲ್ಲಿ ಪುನರುಚ್ಛಿಸಲಾಗುತ್ತದೆ.

ಅಮೆರಿಕಾ ಸಂಶೋಧನಾ ಕೇಂದ್ರ ಅಚ್ಚರಿಯ ವಿವರಗಳನ್ನು ಹೊರಹಾಕಿದೆ. ಉಗ್ರತೆ ತುಂಬಿದ ಘಟನೆಗಳು ಅಮೆರಿಕದಲ್ಲಿ ನಿಯಮಿತವಾಗಿ ನಡೆಯುತ್ತಲೇ ಇವೆ. ಜಿಹಾದಿಗಳೆಂದು ಹೇಳಿಕೊಳ್ಳುವ ಮುಸ್ಲಿಂ ಉಗ್ರರಿಂದ ಸೆಪ್ಟೆಂಬರ್ 2001ರ ನಂತರ ಹತರಾದವರ ಸಂಖೈ 26. ಇದೇ ಕಾಲಘಟ್ಟದಲ್ಲಿ ಉಗ್ರತೆಯಿಂದಾಗಿ 48 ಮಂದಿ ಬಲಿಯಾಗಿದ್ದಾರೆ. ಆದರಾ ಘಟನೆಗಳು ‘ಉಗ್ರರ ಅಟ್ಟಹಾಸ’ವಾಗಿ ಪ್ರಚುರವಾಗುವುದಿಲ್ಲ! ಕಾರಣ ಮುಸ್ಲಿಮೇತರರ ಕೃತ್ಯವದು!!

ಬಿಳಿ ತೊಗಲಿನ ಅಹಂ ತುಂಬಿಕೊಂಡಿರುವ ಉಗ್ರರ ಕೃತ್ಯದ ಬಗ್ಗೆ ಜಾಣಮೌನ ವಹಿಸುವುದರಲ್ಲಿ ಅಲ್ಲಿನ ಮಾಧ್ಯಮಗಳೂ ಭಾಗಿಯಾಗಿವೆ. ದೇಶೀ ಬಲಪಂಥೀಯ ಉಗ್ರತೆ ವಿದೇಶಿ ಮುಸ್ಲಿಂ ಬಲಪಂಥೀಯ ಉಗ್ರರಿಗಿಂತ ಹೆಚ್ಚಿದೆಯೆಂಬುದು ಈ ಅಧ್ಯಯನದಲ್ಲಿ ಭಾಗಿಯಾದವರ ಉವಾಚ. ಮುಸ್ಲಿಮನೋರ್ವ ಅಪರಾಧ ಕೃತ್ಯದಲ್ಲಿ, ಹತ್ಯೆಯಲ್ಲಿ ಭಾಗಿಯಾದಾಗ, ಧರ್ಮದ ಕಾರಣದಿಂದಾಗಿ ಅದನ್ನು ಭಯೋತ್ಪಾದಕ ಕೃತ್ಯ ಎಂದು ಹಿಂದುಮುಂದು ನೋಡದೆ ನಿರ್ಧರಿಸಿಬಿಡುವ ಮಾಧ್ಯಮಗಳು ಮತ್ತು ಮುಸ್ಲಿಮೇತರನೊಬ್ಬ ಉಗ್ರತೆ ತೋರಿದಾಗ ಆ ಅಪರಾಧಕ್ಕೆ ಹತ್ತಲವು ಕಾರಣಗಳನ್ನುಡುಕುವ ಚಾಳಿ ಭಾರತದಲ್ಲಿರುವಂತೆ ಅಮೆರಿಕಾದಲ್ಲೂ ಇದೆ. ಅಥವಾ ಅಮೆರಿಕಾದಿಂದ ಭಾರತಕ್ಕೆ ಆಮದಾಗಿದೆ! ದಸರೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಕರೆ ಮಾಡಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಿದ್ದ. ಆತನನ್ನು ಬಂಧಿಸಿದ ತಕ್ಷಣ ಉಗ್ರಗಾಮಿ ಎಂದು ಘೋಷಿಸಲಿಲ್ಲ. ಜಿಹಾದಿ ಸಾಹಿತ್ಯ, ಭಯೋತ್ಪಾದಕ ನಾಯಕರ ವೀಡಿಯೋ ತುಣುಕುಗಳು ಸಿಕ್ಕಿದವು ಎಂದು ಪ್ರಚಾರವಾಗಲಿಲ್ಲ. ಆತ ಒಬ್ಬ ಮಾನಸಿಕ ಅಸ್ವಸ್ಥ್ಯ ಎಂದು ಹೇಳಲಾಯಿತು. ಕಾರಣ ಆತ ಮುಸ್ಲಿಮೇತರನಾಗಿದ್ದ. ನಿಜವಾಗಿಯೂ ಮಾನಸಿಕ ಅಸ್ವಸ್ಥ್ಯನಾಗಿರಲೂಬಹುದು. ಮುಸ್ಲಿಮನೊಬ್ಬ ಆ ರೀತಿ ಮಾಡಿದ್ದರೆ (ಮಾನಸಿಕ ಅಸ್ವಸ್ಥ್ಯನಾಗಿದ್ದುಕೊಂಡು) ನಮ್ಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು?

ಉಗ್ರರನ್ನು ಮಟ್ಟ ಹಾಕುವುದರಲ್ಲಿ ಹಿಂದೇಟು ಹಾಕಬಾರದು. ಜೊತೆಜೊತೆಗೆ ನಮ್ಮ ಸಮಾಜದ ಒಳಗಿಂದಲೇ ಹುಟ್ಟಿಕೊಂಡ ಬಲಪಂಥೀಯ ಕೋಮುವಾದವನ್ನು ತಡೆಗಟ್ಟದಿದ್ದರೆ ಅಮೆರಿಕಾದ ಪರಿಸ್ಥಿತಿಯೇ ಭಾರತದಲ್ಲೂ ಮೂಡಿಬಿಟ್ಟೀತು….


ಮೂಲ:www.nytimes.com

Jul 2, 2015

ನಾಳೆಯಿಂದ 'ಆರಂಭ'

ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದು ಕನ್ನಡ ಸಿನಿಮಾ ನೋಡಿ ರೂಮಿಗೆ ಬಂದಾಗ ಅಲ್ಲೇ ಇದ್ದ ಸಿನಿ ತಂತ್ರಜ್ಞ ಗೆಳೆಯನೊಬ್ಬ 'ಹೆಂಗಿದೆ ಸಿನಿಮಾ?' ಎಂದು ಕೇಳಿದ. 'ಚೆನ್ನಾಗಿಲ್ಲ ಗುರು. ತಲೆ ನೋವ್ ಬಂತು' ಎಂದೆ. 'ಎಷ್ಟು ಕಷ್ಟ ಪಟ್ಟು ಮಾಡಿರ್ತಾರೆ ಗೊತ್ತಾ ಒಂದು ಫಿಲಮ್ ನಾ? ಸುಮ್ನೆ ಒಂದೇ ಮಾತಲ್ಲಿ ಚೆನ್ನಾಗಿಲ್ಲ ಅಂದ್ಬುಟ್ರೆ' ಕೋಪ ಮಾಡ್ಕಂಡ. 'ಗುರುವೇ, ಎಂಬಿಬಿಎಸ್ ಓದೋರೆಲ್ಲ ಕಷ್ಟಪಟ್ಟೇ ಪಾಸಾಗಿರ್ತಾರೆ. ಹಂಗಂದ್ಬುಟ್ಟು ಟ್ರೀಟ್ ಮೆಂಟ್ ಸರಿಯಾಗಿ ಕೊಡದೇ ಇದ್ರೆ ಬಯ್ಯದೆ ಇರ್ತೀವಾ? ಹಂಗೆ ಫಿಲಮ್ಮು. ಎಷ್ಟಾದ್ರೂ ಕಷ್ಟಪಟ್ಟಿರ್ಲಿ ಕೊನೆಗೆ ಒಂದು ವರ್ಡ್ ರೆಸ್ಪಾನ್ಸೇ ಸಿಗೋದು' ಎಂದಾಗ ಗೆಳೆಯ ಸುಮ್ಮನಾದ. 
ಈ ಘಟನೆ ನೆನಪಾಗಿದ್ದು ಇವತ್ತು ಪಾಲಿಮರ್ ಕನ್ನಡದಲ್ಲಿ 'ಸಿನಿಮಾ ಚೆನ್ನಾಗಿತ್ತಾ ಹತ್ತು ಜನಕ್ಕೆ ಹೇಳಿ, ಚೆನ್ನಾಗಿಲ್ವಾ ಫಿಲಮ್ಮಿಗೆ ಹೋಗೋರನ್ನೂ ವಾಪಸ್ ಕಳಿಸಿ' ಎಂದು ಕಡ್ಡಿತುಂಡುಮಾಡಿದಂತೆ ಗೆಳೆಯ ಅಭಿ ಹನಕೆರೆ ಹೇಳಿದಾಗ.
ಚರ್ಚೆಗೆ ಕನಸಿಗೆ ಅಪರೂಪಕ್ಕೊಮ್ಮೆ ಸಣ್ಣ ಪುಟ್ಟ ಜಗಳಕ್ಕೆ S Abhi Hanakere ಜೊತೆಯಾಗಿ ವರುಷಗಳೇ ಕಳೆದಿವೆ. ಹೊಸಬರನ್ನೇ ಇಟ್ಟುಕೊಂಡು ತರಬೇತಿ ಕೊಟ್ಟು 'ಆರಂಭ' ಸಿನಿಮಾವನ್ನು ಮಾಡಲು ಪಟ್ಟ ಕಷ್ಟವನ್ನು ನೋಡಿದ್ದೇನೆ. 
ಪ್ರೀತಿ, ಜಾತಿ, ಜಾತಿ ಪ್ರೀತಿಯ ಅಭಿಯ ಕನಸಿನ ಒಂದು ಭಾಗವಾದ ಆರಂಭ ನಾಳೆ ತೆರೆಮೇಲೆ ಮೂಡಲಿದೆ.
ಅಭಿ ಕಷ್ಟಪಟ್ಟ ಕಾರಣಕ್ಕೆ ಸಿನಿಮಾ ನೋಡೋದು ಬೇಡ! ಹೊಸತನದ ಸಿನಿಮಾ ಎಂದು ನೋಡಿ, ಅವನ ಮಾತಿನಲ್ಲೇ ಹೇಳೋದಾದರೆ ಸಿನಿಮಾ ಚೆನ್ನಾಗಿದ್ದರೆ ಹತ್ತು ಜನಕ್ಕೆ ನೋಡಲು ಹೇಳಿ.
ಸಿನಿಮಾದ ಬಗ್ಗೆ ನಾಳೆ ಮಾತನಾಡೋಣ. 

Jul 1, 2015

ವಾಡಿ ಜಂಕ್ಷನ್ .... ಭಾಗ 13

wadi junction
Dr Ashok K R
ಜ್ಞಾನಿ ಎಂದರ್ಯಾರು? ಭಕ್ತರೊಬ್ಬರು ಪ್ರಶ್ನಿಸಿದರು. ಸ್ವಾಮಿಗಳು ಆವರಣದಲ್ಲಿ ಬೆಳೆಸಿದ್ದ ಗಿಡಗಳ ಮಧ್ಯೆ ಆಟವಾಡುತ್ತಿದ್ದ ಇಬ್ಬರು ಮಕ್ಕಳೆಡೆಗೆ ದೃಷ್ಟಿ ಹರಿಸಿದರು. ಸಂಪಿಗೆ ಮರದಿಂದ ಉದುರಿ ಬಿದ್ದಿದ್ದ ಹೂವುಗಳನ್ನು ಸಂಗ್ರಹಿಸಿ ನಂದಿ ವಿಗ್ರಹದ ಮುಂದೆ ಹಾಕುತ್ತಿದ್ದರು. ಬಿದ್ದಿದ್ದ ಹೂವುಗಳು ಖಾಲಿಯಾಯಿತು. ಹೂವಿಂದ ಹೂವಿಗೆ ಹಾರಿ ಆಹಾರ ಸಂಗ್ರಹಿಸುತ್ತಿದ್ದ ಚಿಟ್ಟೆಗಳ ಬೆನ್ನುಬಿದ್ದರು. ಅವರ ಆಟಗಳನ್ನು ನೋಡಿ ಮೆಲುನಗುತ್ತಾ ಪ್ರಶ್ನೆ ಕೇಳಿದ ಭಕ್ತರೆಡೆಗೆ ನೋಡಿದರು.

“ಜ್ಞಾನಿ ಎಂದರೆ ಮಕ್ಕಳ ಮನಸ್ಥಿತಿಯುಳ್ಳವನು”

“ಅಂದರೆ”
“ಒಂದು ಆಟ – ಘಟನೆಯಿಂದ ಮತ್ತೊಂದು ಆಟಕ್ಕೆ ಮುಂದುವರೆದಾಗ ಮಕ್ಕಳ ಮನದಲ್ಲಿ ಹಳೆಯ ಆಟದ ಭಾರವಿರುವುದಿಲ್ಲ. ಹಳೆಯ ಘಟನೆಯ ಭಾರವಿರುವುದಿಲ್ಲ. ಭೂತದಲ್ಲಿ ನಡೆದ ಘಟನೆಯ ಅಂತ್ಯದೊಂದಿಗೇ ಅದನ್ನವರು ಮರೆತುಬಿಡುವ ಕಾರಣ ವರ್ತಮಾನದಲ್ಲವರು ಸಂತಸದಿಂದಿರುತ್ತಾರೆ. ಬೇಸರ ಮೂಡಿಸಿದ, ಅಳು ತರಿಸಿದ ಘಟನೆಯನ್ನೂ ಮಕ್ಕಳು ಬಹು ಸುಲಭವಾಗಿ ಮರೆತುಬಿಡುತ್ತಾರೆ. ದೊಡ್ಡವರಾಗುತ್ತಿದ್ದ ಹಾಗೆ ಭೂತದ ಸಂಗತಿಗಳಿಗೆ ಮಹತ್ವಕೊಟ್ಟು, ಅವುಗಳ ಬಗೆಗೇ ಚಿಂತಿಸಿ ಮಂಥಿಸಿ ವರ್ತಮಾನದಲ್ಲಿನ ಸಂತೋಷವನ್ನು ಅನುಭವಿಸುವುದಕ್ಕೆ ಮರೆತುಬಿಡುತ್ತಾರೆ. ಸೇಡು, ದ್ವೇಷಗಳೆಲ್ಲ ಮನಸ್ಸಲ್ಲಿ ಉಳಿದು ಬೆಳೆಯುವುದಕ್ಕೆ ಭೂತದ ಮೇಲಿನ ಅತಿಯಾದ ಅವಲಂಬನೆಯೇ ಕಾರಣ. ದೊಡ್ಡವರಾದ ಮೇಲೂ ಯಾರು ಭೂತದ ಭಾರವಿಲ್ಲದೆ ವರ್ತಮಾನದಲ್ಲಿ ಖುಷಿಯಾಗಿರುವ ಮಕ್ಕಳ ಮನಸ್ಥಿತಿಯನ್ನುಳಿಸಿಕೊಳ್ಳುತ್ತಾರೋ ಅವರೇ ಜ್ಞಾನಿಗಳು” ಸ್ವಾಮಿಗಳ ಉತ್ತರ ಪ್ರಶ್ನೆ ಕೇಳಿದ ಭಕ್ತರಿಗೆ ತೃಪ್ತಿ ನೀಡಿತು. ಅವತ್ತಿನ ಪ್ರಶ್ನೋತ್ತರ ವೇಳೆ ಮುಗಿದ ಕಾರಣ ಸ್ವಾಮಿಗಳು ಅವರೇ ಆರೈಕೆ ಮಾಡುತ್ತಿದ್ದ ಕೈದೋಟದ ಕಡೆಗೆ ಹೊರಟರು. ಇದ್ದ ಹದಿನೈದು ಮಂದಿ ಭಕ್ತರಲ್ಲಿ ಎಲ್ಲರೂ ಹೊರಟರು, ಕ್ರಾಂತಿ ಸಂಭವನ ಹೊರತಾಗಿ. ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಬರುತ್ತಿದ್ದುದು ಇದು ಮೂರನೇ ಬಾರಿ. ಗೆಳೆಯರಿಗೆ ತಿಳಿಯದಂತೆ ಬೇಸರವಾದಾಗಲೆಲ್ಲ ಆತ ಮೈಸೂರಿನಲ್ಲಿರುವ ಆಶ್ರಮಗಳಿಗೆ ಭೇಟಿ ನೀಡುತ್ತಿದ್ದ. ಧ್ಯಾನದಲ್ಲಿ, ಸ್ವಾಮಿಗಳ ಭಾಷಣ, ಆಶೀರ್ವಚನಗಳಲ್ಲಿ ಭಾಗವಹಿಸುತ್ತಿದ್ದ. ತಿಂಗಳೊಪ್ಪತ್ತಿನಲ್ಲಿ ಧ್ಯಾನ – ಆಧ್ಯಾತ್ಮವೆಲ್ಲವೂ ವ್ಯಾಪಾರದ ಸರಕಾಗಿರುವುದನ್ನು ಅರಿತುಕೊಂಡ. ಶಾಂತಿ ದೊರಕಿಸಬೇಕಾದ ಆಶ್ರಮಗಳಲ್ಲಿ ವೈಭವಕ್ಕೇ ಹೆಚ್ಚು ಪ್ರಾಮುಖ್ಯತೆ. ಸರಳತೆ ಭೋದಿಸುವ ಆಶ್ರಮಗಳಲ್ಲಿ ನೆಲಹಾಸಿಗೆಗೆ ಮಾರ್ಬಲ್ಲು, ಗ್ರಾನೈಟು; ಬಾಗಿಲು, ಕಂಬಗಳಲ್ಲಿ ತೇಗ. ಮುಖ್ಯಮೂರುತಿಯ ಬಾಗಿಲಿಗೆ ಶ್ರೀಗಂಧದ ಉಪಯೋಗವೂ ಇದ್ದೀತು. ಶಾಂತಿ ಬೋಧಿಸುವ ಆಶ್ರಮಗಳಲ್ಲಿ ಸ್ವಾಮೀಜಿ ಎನ್ನಿಸಿಕೊಂಡವರಿಂದಲೇ ಕೇಳುಗರನ್ನು ಉದ್ವೇಗಕ್ಕೊಳಪಡಿಸಿ ಹಿಂಸೆಗೆ ಪ್ರಚೋದಿಸುವಂತಹ ಪರಧರ್ಮ ನಿಂದನೆ. ಭಾರತದ ಗತವೈಭವವನ್ನು ಅಗತ್ಯಕ್ಕಿಂತ ಹೆಚ್ಚಿಗೆ ಹೊಗಳುತ್ತಾ ಇಂದಿನ ಸರ್ವಸಂಕಷ್ಟಗಳಿಗೂ ಭಾರತದ ಮೇಲೆ ದಂಡೆತ್ತಿ ಬಂದ ಸಾಬರು ಮತ್ತು ಕ್ರೈಸ್ತರನ್ನೇ ಹೊಣೆಯಾಗಿಸುವ ಮಾತುಗಳನ್ನು ಹೆಣೆಯುವಲ್ಲಿ ಸಿದ್ಧ ಹಸ್ತರು. ಆಧ್ಯಾತ್ಮಕ್ಕೆ ಮನಶ್ಯಾಂತಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದರೆ ‘ಅದರ ಬಗ್ಗೆ ನಾನೊಂದು ಪುಸ್ತಕ ಬರೆದಿದ್ದೇನೆ. ನಮ್ಮ ಆಫೀಸಿನಲ್ಲೇ ದೊರೆಯುತ್ತದೆ. ಕೊಂಡು ಓದಿ’ ಎಂದು ಬಿಡುತ್ತಿದ್ದರು! ಪುಸ್ತಕದ ಬೆಲೆ ವಿದ್ಯಾರ್ಥಿಗಳ ಕೈಗೆಟುಕದಂತಿತ್ತು. ಕೆಲವರ ಮಾತುಗಳಲ್ಲಿ ಸತ್ವವಿದೆ ಎನ್ನಿಸುತ್ತಿತ್ತಾದರೂ ಸಂಸ್ಕೃತವನ್ನು ಜಾಸ್ತಿ ಬಳಸಿ ಪೂರ್ಣವಾಗಿ ಅರ್ಥವಾಗದಂತೆ ಮಾಡಿಬಿಡುತ್ತಿದ್ದರು. ಮನದ ಗೊಂದಲಗಳನ್ನು ನಿವಾರಿಸಿಕೊಂಡು ನೆಮ್ಮದಿಯನ್ನರಸಿ ಆಶ್ರಮದ ಕಡೆಗೆ ಮುಖಮಾಡಿದ ಕ್ರಾಂತಿಗೆ ಇರುವ ಗೊಂದಲಗಳ ಜೊತೆಜೊತೆಗೆ ಆಶ್ರಮ – ಸನ್ಯಾಸಿ – ಸ್ವಾಮೀಜಿ – ಆಧ್ಯಾತ್ಮದ ಬಗೆಗಿನ ಗೊಂದಲಗಳು ಸೇರಿಕೊಂಡವು. ಒಂದು ಘಂಟೆ ಆಶ್ರಮದಲ್ಲಿ ಕಳೆಯಬೇಕೆಂದು ಬಂದು ಐದತ್ತು ನಿಮಿಷಕ್ಕೇ ಎದ್ದು ಹೋಗಿಬಿಡುತ್ತಿದ್ದ. ಆಗಷ್ಟೇ ಕಲಿತಿದ್ದ ಸಿಗರೇಟನ್ನು ಹತ್ತಿರದ ಅಂಗಡಿಯಲ್ಲಿ ಸೇದಿ ಕಾಲುಗಳು ಕರೆದುಕೊಂಡು ಹೋದ ಕಡೆಗೆ ತಿರುಗುತ್ತಿದ್ದ. ಹಾಗೆ ಅಲೆಯುವಾಗೊಮ್ಮೆ ಸಂತೋಷಾನಂದ ಸ್ವಾಮಿಗಳ ಆಶ್ರಮ ಕಣ್ಣಿಗೆ ಬಿತ್ತು. ಒಂಟಿಕೊಪ್ಪಲಿನಿಂದ ಕೆ.ಆರ್.ಎಸ್ ಕಡೆಗೆ ಹೋಗುವ ರಸ್ತೆಯಲ್ಲಿ ಒಂದು ಕಿಮಿ ಸಾಗಿ ಎಡಕ್ಕೆ ತಿರುಗಿ ಇಳಿಜಾರು ರಸ್ತೆಯಲ್ಲಿ ಮತ್ತೆ ಅರ್ಧ ಕಿಮಿ ನಡೆದು ಬಲಕ್ಕಿರುವ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಕೊನೆಯಲ್ಲಿದೆ ಸಂತೋಷಾನಂದ ಸ್ವಾಮಿಗಳ ಆಶ್ರಮ. ಒಂದೂವರೆ ಎಕರೆ ಪ್ರದೇಶದಲ್ಲಿ ಆಶ್ರಮ ವಿಸ್ತರಿಸಿಕೊಂಡಿದೆ. ಗೇಟು ದಾಟಿ ಹತ್ತು ಹೆಜ್ಜೆ ಹಾಕಿದರೆ ಬಲಗಡೆಗೆ ಧ್ಯಾನ ಮಂದಿರವಿದೆ. ಬೆಳಿಗ್ಗೆ ಐದರಿಂದ ಆರು ಮತ್ತು ಸಂಜೆ ಆರರಿಂದ ಏಳರವರೆಗೆ ಸ್ವತಃ ಸ್ವಾಮೀಜಿಗಳು ಧ್ಯಾನದಲ್ಲಿ ಭಾಗವಹಿಸುತ್ತಾರೆ ದೀಕ್ಷೆ ಪಡೆದುಕೊಂಡ ಮತ್ತು ಪಡೆದುಕೊಳ್ಳದ ತಮ್ಮೈದು ಶಿಷ್ಯರೊಂದಿಗೆ. ಬೆಳಕಿನ ಕಿರಣಗಳು ನಿರ್ಗಮಿಸುವ ಮುನ್ನ ಧ್ಯಾನವೂ ಮುಗಿಯಬೇಕೆಂಬ ಉದ್ದೇಶದಿಂದ ಸಂಜೆಯ ಧ್ಯಾನದ ಸಮಯ ಐದರಿಂದ ಆರರವರೆಗಿತ್ತು. ನಗರದೊಳಗೆ ಕೆಲಸಕ್ಕೋಗುವ ಕೆಲವು ಭಕ್ತಾದಿಗಳಿಗೆ ಆ ಸಮಯ ಹೊಂದುತ್ತಿರಲಿಲ್ಲವಾದ ಕಾರಣ ಸಮಯ ಬದಲಿಸಿದ್ದರು. ಧ್ಯಾನ ಮಂದಿರದ ಹಿಂದೆಯೇ ಸ್ವಾಮಿಗಳ ಕೋಣೆಯಿತ್ತು. ಧ್ಯಾನಮಂದಿರದ ಎದುರಿಗಿರುವ ಆವರಣದಲ್ಲಿ ಭಕ್ತರೊಬ್ಬರು ಕೊಟ್ಟ ನಂದಿ ವಿಗ್ರಹವಿತ್ತು. ವಿಗ್ರಹಗಳನ್ನು ಕೊಡುಗೆಯಾಗಿ ಸ್ವಾಮಿಗಳು ಸ್ವೀಕರಿಸುತ್ತಿರಲಿಲ್ಲ; ಒಂದೂವರೆ ಎಕರೆಯನ್ನು ಆಶ್ರಮದ ಸಲುವಾಗಿ ಒಂದು ರುಪಾಯಿಗೆ ಬರೆದುಕೊಟ್ಟ ಭಕ್ತರು ಆ ವಿಗ್ರಹವನ್ನು ನೀಡಿದ್ದರಿಂದಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಕಚ್ಚಾ ರಸ್ತೆಯಲ್ಲಿ ಮತ್ತಷ್ಟು ಒಳ ಸರಿದರೆ ದೇವಸ್ಥಾನವಿತ್ತು. ದೇವರಿಲ್ಲದ ದೇವಸ್ಥಾನವದು. ದೇವಾಲಯದ ಒಳಗೆ ಆಳೆತ್ತರದ ಏಕಶಿಲೆಯಿತ್ತು. ಯಾವುದೇ ಕೆತ್ತನೆಗಳಿರಲಿಲ್ಲ. ಆ ಶಿಲೆಗೆ ಅರಿಶಿಣ – ಕುಂಕುಮ ಹಚ್ಚುತ್ತಿರಲಿಲ್ಲ, ಹೂವು ಮುಡಿಸುತ್ತಿರಲಿಲ್ಲ. ಬೆಳಿಗ್ಗೆ ಮತ್ತು ಸಂಜೆ ಧ್ಯಾನದ ನಂತರ ಸ್ವಾಮಿಗಳ ಶಿಷ್ಯರೊಬ್ಬರು ಏಕಶಿಲೆಗೆ ಪೂಜೆ ಸಲ್ಲಿಸುತ್ತಿದ್ದರು, ಮಂಗಳಾರತಿ ಬೆಳಗುವುದರ ಮೂಲಕ ಮತ್ತು ನಾಲ್ಕು ಸುಗಂಧದ ಕಡ್ಡಿಯನ್ನು ಶಿಲೆಯ ಬುಡದಲ್ಲಿಡುವುದರ ಮೂಲಕ. ಸಂತೋಷಾನಂದ ಸ್ವಾಮಿಗಳು ವಿಗ್ರಹಾರಾಧಕರಲ್ಲ. ಪೂಜೆಯ ಅಂಶವಿರದಿದ್ದರೆ, ಪ್ರಸಾದದ ಆಕರ್ಷಣೆಯಿರದಿದ್ದರೆ ಭಕ್ತಾದಿಗಳನ್ನು ಸೆಳೆಯುವುದು ಕಷ್ಟ ಎಂಬ ಟ್ರಸ್ಟಿಗಳೆಂಬ ಹಿತೈಷಿಗಳ ಮಾತಿಗೆ ಕಟ್ಟುಬಿದ್ದು ದೇವಾಲಯವನ್ನು ಕಟ್ಟಿಸಿದರು. ಯಾವ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ಟ್ರಸ್ಟಿಗಳ ಮಧ್ಯೆಯೇ ಜೋರು ಗಲಾಟೆಯಾಯಿತು. ವಿಗ್ರಹಾರಾಧನೆಯನ್ನು ಇಷ್ಟಪಡದ ಸ್ವಾಮಿಗಳಿಗೆ ಇದರಿಂದ ಅನುಕೂಲವೇ ಆಯಿತು. ಒಂದು ದೊಡ್ಡ ಏಕಶಿಲೆಯನ್ನು ಪ್ರತಿಷ್ಠಾಪಿಸೋಣ, ಯಾವ ಮೂರ್ತಿಯನ್ನು ಕೆತ್ತಬೇಕೆಂದು ನಂತರ ನಿರ್ಧರಿಸಿದರಾಯಿತು ಎಂದು ಹೇಳಿದರು. ಮೊದಲು ದೇವಾಲಯ ಪ್ರಾರಂಭವಾಗಲಿ ನಂತರ ಮಿಕ್ಕಿದ್ದು ಎಂದು ಟ್ರಸ್ಟಿಗಳೂ ಸಮಾಧಾನ ಪಟ್ಟುಕೊಂಡರು. ದೇವಾಲಯದ ಹಿಂದೆ ಇನ್ನುಳಿದ ಜಾಗದಲ್ಲಿ ಕೈತೋ ಮಾಡಿಕೊಂಡಿದ್ದರು. ಆಶ್ರಮದಲ್ಲಿರುವವರ ನಿತ್ಯಾಹಾರಕ್ಕೆ ಬೇಕಾದ ತರಕಾರಿಗಳನ್ನು ಅಲ್ಲೇ ಸ್ವಾಮಿಗಳ ಮುಂದಾಳತ್ವದಲ್ಲಿ ಬೆಳೆಯಲಾಗುತ್ತಿತ್ತು. ಸೀಮಿತ ಸ್ಥಳದಲ್ಲಿ ಬೆಳೆಯಲಾಗದ ವಸ್ತುಗಳನ್ನು ಮಾತ್ರ ಹೊರಗಿನಿಂದ ತರುತ್ತಿದ್ದರು. ಆಶ್ರಮ ಪ್ರಾರಂಭವಾಗಿ ಮೂರು ವರುಷಗಳಾಗಿತ್ತಷ್ಟೇ. ಭಕ್ತರ ಸಂಖ್ಯೆಯಲ್ಲಿ ತುಂಬಾ ಏರಿಕೆಯೇನೂ ಇರಲಿಲ್ಲ. ದೇವಾಲಯದಲ್ಲಿ ವಿಶೇಷ ಪೂಜಾ ದಿನಗಳು ಇರದಿದ್ದುದೂ ಜನರು ಬರದಿರಲು ಕಾರಣ. ಬರುವ ಭಕ್ತರು ಮತ್ತೆ ಬೇರೆ ಆಶ್ರಮದೆಡೆಗೆ ಹೋಗುತ್ತಿರಲಿಲ್ಲ ಎಂಬುದೂ ಸತ್ಯ.