ಜುಲೈ 2, 2015

ನಾಳೆಯಿಂದ 'ಆರಂಭ'

ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದು ಕನ್ನಡ ಸಿನಿಮಾ ನೋಡಿ ರೂಮಿಗೆ ಬಂದಾಗ ಅಲ್ಲೇ ಇದ್ದ ಸಿನಿ ತಂತ್ರಜ್ಞ ಗೆಳೆಯನೊಬ್ಬ 'ಹೆಂಗಿದೆ ಸಿನಿಮಾ?' ಎಂದು ಕೇಳಿದ. 'ಚೆನ್ನಾಗಿಲ್ಲ ಗುರು. ತಲೆ ನೋವ್ ಬಂತು' ಎಂದೆ. 'ಎಷ್ಟು ಕಷ್ಟ ಪಟ್ಟು ಮಾಡಿರ್ತಾರೆ ಗೊತ್ತಾ ಒಂದು ಫಿಲಮ್ ನಾ? ಸುಮ್ನೆ ಒಂದೇ ಮಾತಲ್ಲಿ ಚೆನ್ನಾಗಿಲ್ಲ ಅಂದ್ಬುಟ್ರೆ' ಕೋಪ ಮಾಡ್ಕಂಡ. 'ಗುರುವೇ, ಎಂಬಿಬಿಎಸ್ ಓದೋರೆಲ್ಲ ಕಷ್ಟಪಟ್ಟೇ ಪಾಸಾಗಿರ್ತಾರೆ. ಹಂಗಂದ್ಬುಟ್ಟು ಟ್ರೀಟ್ ಮೆಂಟ್ ಸರಿಯಾಗಿ ಕೊಡದೇ ಇದ್ರೆ ಬಯ್ಯದೆ ಇರ್ತೀವಾ? ಹಂಗೆ ಫಿಲಮ್ಮು. ಎಷ್ಟಾದ್ರೂ ಕಷ್ಟಪಟ್ಟಿರ್ಲಿ ಕೊನೆಗೆ ಒಂದು ವರ್ಡ್ ರೆಸ್ಪಾನ್ಸೇ ಸಿಗೋದು' ಎಂದಾಗ ಗೆಳೆಯ ಸುಮ್ಮನಾದ. 
ಈ ಘಟನೆ ನೆನಪಾಗಿದ್ದು ಇವತ್ತು ಪಾಲಿಮರ್ ಕನ್ನಡದಲ್ಲಿ 'ಸಿನಿಮಾ ಚೆನ್ನಾಗಿತ್ತಾ ಹತ್ತು ಜನಕ್ಕೆ ಹೇಳಿ, ಚೆನ್ನಾಗಿಲ್ವಾ ಫಿಲಮ್ಮಿಗೆ ಹೋಗೋರನ್ನೂ ವಾಪಸ್ ಕಳಿಸಿ' ಎಂದು ಕಡ್ಡಿತುಂಡುಮಾಡಿದಂತೆ ಗೆಳೆಯ ಅಭಿ ಹನಕೆರೆ ಹೇಳಿದಾಗ.
ಚರ್ಚೆಗೆ ಕನಸಿಗೆ ಅಪರೂಪಕ್ಕೊಮ್ಮೆ ಸಣ್ಣ ಪುಟ್ಟ ಜಗಳಕ್ಕೆ S Abhi Hanakere ಜೊತೆಯಾಗಿ ವರುಷಗಳೇ ಕಳೆದಿವೆ. ಹೊಸಬರನ್ನೇ ಇಟ್ಟುಕೊಂಡು ತರಬೇತಿ ಕೊಟ್ಟು 'ಆರಂಭ' ಸಿನಿಮಾವನ್ನು ಮಾಡಲು ಪಟ್ಟ ಕಷ್ಟವನ್ನು ನೋಡಿದ್ದೇನೆ. 
ಪ್ರೀತಿ, ಜಾತಿ, ಜಾತಿ ಪ್ರೀತಿಯ ಅಭಿಯ ಕನಸಿನ ಒಂದು ಭಾಗವಾದ ಆರಂಭ ನಾಳೆ ತೆರೆಮೇಲೆ ಮೂಡಲಿದೆ.
ಅಭಿ ಕಷ್ಟಪಟ್ಟ ಕಾರಣಕ್ಕೆ ಸಿನಿಮಾ ನೋಡೋದು ಬೇಡ! ಹೊಸತನದ ಸಿನಿಮಾ ಎಂದು ನೋಡಿ, ಅವನ ಮಾತಿನಲ್ಲೇ ಹೇಳೋದಾದರೆ ಸಿನಿಮಾ ಚೆನ್ನಾಗಿದ್ದರೆ ಹತ್ತು ಜನಕ್ಕೆ ನೋಡಲು ಹೇಳಿ.
ಸಿನಿಮಾದ ಬಗ್ಗೆ ನಾಳೆ ಮಾತನಾಡೋಣ. 

ಜೂನ್ 27, 2015

ಜುಲೈ ಮೂರರಿಂದ 'ಅಭಿ'ಯ ಆರಂಭ!

ಹೊಸಬರ ತಂಡ ಕಟ್ಟಿ ಸತತ ಎರಡು ವರುಷ ಚಿತ್ರದ ನಟ ನಟಿಯರಿಗೆ ತರಬೇತಿ ನೀಡಿ ನೈಜತೆಗೆ ಒತ್ತು ನೀಡಿ ಚಿತ್ರೀಕರಿಸಿರುವ ಆರಂಭ ಚಿತ್ರ ಜುಲೈ ಮೂರರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಸೆನ್ಸಾರಿನ ಬಾಹು ಬಂಧನದಿಂದ ಹೊರಬರಲು ಕೊಂಚ ತಡವಾಯಿತು ಎಂಬುದು ಚಿತ್ರತಂಡದ ಮಾತು! 
'ಹಾರ್ಟ್ ಟಚಿಂಗ್' ಟೀಸರ್, ಕಣಗಾಲಿನಲ್ಲಿ ಪುಟ್ಟಣ್ಣರ ನೆನಪಿಗೊಂದು ಪ್ರದರ್ಶನ, 'ಇದುವರೆಗೆ ಇದ್ದಿಲ್ಲ' ಎಂಬ ನವೀನ ಮಾದರಿಯ ಹಾಡಿನ ಮೂಲಕ ಸದ್ದು - ಸುದ್ದಿ ಮಾಡಿದ್ದ 'ಆರಂಭ' ನಿನ್ನೆ 'ಹೆಣ್ಣಿಂದ ಹಾಳಾದ ಕುಮಾರ'ನ ಟ್ರೇಲರ್ ಬಿಡುಗಡೆ ಮಾಡಿದೆ. ಜಾತಿ, ಮಹಿಳಾ ದೌರ್ಜನ್ಯದ ಎಳೆಗಳು ಟ್ರೇಲರ್ರಿನಲ್ಲಿ ಕಾಣಿಸುತ್ತಿದೆ. 

ಗೆಳೆಯ ಎಸ್.ಅಭಿ ಹನಕೆರೆ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ಗಣೇಶ್ ವಿ ನಾಗೇನಹಳ್ಳಿ. ಗುರಕಿರಣ್ ಸಂಗೀತವಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಥುನ್ ಪ್ರಕಾಶ್, ಅಭಿರಾಮಿ, ರಸಗವಳ ನಾರಾಯಣ, ಅಭಿರಾಜು, ಬಳ್ಳಾರಿ ರಾಘವೇಂದ್ರ, ನಂದೀಶ್, ರಾಜೇಗೌಡ, ಚಂದ್ರು, ಹಾಸಿನಿ, ಪ್ರಥ್ವಿ ಮತ್ತಿತರಿದ್ದಾರೆ.

ಏಪ್ರಿ 30, 2015

ಬೋರಾಗದ ಹಾಡು ಪಡಿಮೂಡಿದ ಬಗೆ!

hadi hadi kannada song
ಆರಂಭ ಚಿತ್ರದ ನಿರ್ದೇಶಕರಾದ ಎಸ್ ಅಭಿ ಹನಕೆರೆಯವ್ರು, ತಮ್ಮ ಚಿತ್ರದ ಹಾಡುಗಳು ಹುಟ್ಟಿದ ಬಗ್ಗೆ ಈ ಮೊದಲೇ ಹಂಚಿಕೊಂಡಿದ್ದರು. ಅವರ ಚಿತ್ರದ ಇನ್ನೊಂದು ಸೂಪರ್ ಹಿಟ್ ಆದ ಹಾಡಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಲಾಂಗು, ಮಚ್ಚು ಹಿಡಿದುಕೊಂಡು ಓಡಾಡಿದ್ದನ್ನ, ಅನಾಥ ಮಕ್ಕಳ ಸೇವೆ ಮಾಡೋದನ್ನ, ರೇಪ್ ನಡೆಯುವಾಗ, ದಿಡೀರನೆ ಬಂದು ಕಾಪಾಡುವ, ಇನ್ನೂ ಏನೇನೋ ರೀತಿಯಲ್ಲಿ ತೋರಿಸೋದು ಹೀರೋಯಿಸಂ ಅಲ್ಲ. ಎಂತಹ ಕಷ್ಟ ಪರಿಸ್ಥಿತಿಯಲ್ಲೂ, ಪಾಸಿಟಿವ್ ಅಗಿರೋದನ್ನ ತೋರಿಸೋದು ಹೀರೋಯಿಸಂ! ಎಂಬ ಸಂದರ್ಭಕ್ಕೆ ಹಾಡೊಂದು ಬೇಕು, ಅನ್ನೋದನ್ನ ಗುರುಕಿರಣ್ ಹತ್ತಿರ ಚರ್ಚಿಸಿದಾಗ, ಅವರು ಯಾವತ್ತೋ, ಇವರ ಮುಂದೆ ಗುನುಗಿದ್ದ ಹಾಡಿನ ಪಲ್ಲವಿ "ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ, ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೋದಿಲ್ಲ" ಪಾಸಿಟಿವ್ ಲೈನ್ಸ್ ಚೆನ್ನಾಗಿವೆ. ಇದನ್ನು ಕಂಪೋಸ್ ಮಾಡಿ, ಚೆನ್ನಾಗಿ ಇರುತ್ತೆ, ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ ಅಭಿಯವ್ರಿಗೆ, "ಅದು ಯಾವತ್ತೋ ಮಾಡಿದ್ದ ಹಾಡಿನ ಸಾಲು, ಯಾರಿಗೂ ಇಷ್ಟ ಆಗಿರ್ಲಿಲ್ಲ, ಹಾಗಾಗಿ ಅದನ್ನ ಡೆವೆಲಪ್ ಮಾಡಿರ್ಲಿಲ್ಲ, ಅದರಲ್ಲೂ ನಾನು ಇದುವರೆಗೂ, ಲವ್ ಹಾಡಿನ ಬಗ್ಗೆ, ಪಾಸಿಟಿವ್ ಆಗಿ ಬರೆದಿಲ್ಲ, ಅದು ಬೇಡ" ಎಂದರು. 
sandeep dance master
ನಮ್ಮ ಆರಂಭ ಚಿತ್ರದಲ್ಲಿ, ನಿಮ್ಮ ಬಿನ್ನವಾದ ಆ ಹಾಡು ಕೂಡ ಆರಂಭ ಆಗಲಿ, ಈ ಹಾಡನ್ನು ನೀವೇ ಬರೆದು, ಹಾಡಬೇಕು ಎಂದು ಪಟ್ಟು ಹಿಡಿದು ಕುಳಿತಾಗ, ಗುರುಕಿರಣ್ ಹಾಡನ್ನು ಬರೆದು, ಹಾಡಿದರು. ಗುರುಕಿರಣ್ ಮೊದಲ ಬಾರಿಗೆ ಬರೆದಂತಹ ಲವ್ ಹಾಡು ಇದಾಗಿದೆ.
ಈ ಹಾಡನ್ನು, ತುಂಬಾ ಸ್ಟೈಲಿಶ್ ಆಗಿ, ಮತ್ತು ಕಲರ್ ಫುಲ್ ಆಗಿ ಚಿತ್ರೀಕರಿಸುವ ದೃಷ್ಟಿಯಿಂದ, ಈ ಹಾಡಿನ ಡ್ಯಾನ್ಸ್ ಮಾಸ್ಟರ್ ಸಂದೀಪ್ ರವರನ್ನ ಬೇಟಿ ಮಾಡಿ, ಸಹ ನೃತ್ಯಗಾರ್ತಿಯರ ಆಯ್ಕೆ ಮಾಡಿ, ಅವ್ರಿಗೆಲ್ಲ ಪ್ರ್ಯಾಕ್ಟೀಸ್ ಮಾಡಿಸಿ, ಶೂಟಿಂಗ್ ಸ್ಪಾಟ್ಗೆ ಕರೆದೊಯ್ದುರು. ಇದಕ್ಕೆ ಬೇಕಾದ ರೇಡಿಯೋ ಪ್ರತಿಕೃತಿಗಳನ್ನು ಆರೋಗ್ಯ ಸ್ವಾಮಿಯವ್ರು ಅದ್ಬುತವಾಗಿ ಮಾಡಿಕೊಟ್ಟಿದ್ದರು. ಹಾಡಿನಲ್ಲಿ ಎಲ್ಲ ನೃತ್ಯಗಾರ್ತಿಯರ ಕೈಯಲ್ಲಿ ಎಲ್‌ಸಿಡಿ ಟೀವೀ ಹಿಡಿಸಿ, ಅದರಲ್ಲಿ ನಾಯಕಿಯ ಚಿತ್ರ ಬರುವಂತೆ ಚಿತ್ರಿಸುವ ಉಪಾಯ ಹೊಳೆದಿದ್ದ ಅಭಿಯವ್ರಿಗೆ, ನಿರ್ಮಾಪಕರ ಸಹಕಾರ ಸಿಗಲಿಲ್ಲ. ಆ ಬೇಸರದಲ್ಲಿ ಇದ್ದಾಗ, ಅದಕ್ಕೆ ತಕ್ಷಣ ಅವ್ರಿಗೆ ಹೊಳೆದಿದ್ದು, ಬಿಸಿಲಲ್ಲೂ ಹೊಳೆಯುತ್ತಿದ್ದ, ನೃತ್ಯಗಾರ್ತಿಯರ ಬಿಳಿ ಸೊಂಟದ ಮೇಲೇನೇ, ಟಿವಿ ಚಾನೆಲ್ಲಿನ ಲೋಗೋ ಬಿಡಿಸಿ ತೋರಿಸೋದು ಅಂತಾ!
aarogya swamy
ಅದಕ್ಕೆ ನೃತ್ಯಗಾರ್ತಿಯರು ಒಪ್ಪಲಿಲ್ಲ "ಚಿತ್ರ ಮಾಡುವುದು ನಟ ನಟಿಯರಿಗೆ ಸಂಭಾವನೆ ಕೊಡೋಕೆ ಅಲ್ಲ, ಜನಗಳಿಗೆ ಮನರಂಜನೆ ನೀಡುವುದಕ್ಕೆ, ಜೊತೆಗೆ ಸಾಧ್ಯವಾದರೆ ಒಂದಷ್ಟು ಒಳ್ಳೇ ಸಂದೇಶ ತಲುಪಿಸೋದಿಕ್ಕೆ" ಎಂದು ಅಭಿಯವ್ರು ಹೇಳಿ ಒಪ್ಪಿಸಿ, ಆರೋಗ್ಯ ಸ್ವಾಮಿ ಎಲ್ಲರ ಸೊಂಟದ ಮೇಲೆ ಟಿವಿ ಚ್ಯಾನೆಲ್ ಗಳ ಲೋಗೋ ಚಿತ್ತಾರ ಬಿಡಿಸಿದರು, ನಂತರ ಎಲ್ಲರೂ ಸಂತೋಷವಾಗಿ ಹಾಡಿನ ಚಿತ್ರೀಕರಣಕ್ಕೆ ಸಹಕರಿಸಿದರು ಹಾಡಿನ ಕೊನೆಯಲ್ಲಿ ಬಾಟಲ್ ಹೊಡೆಯುವ ದೃಶ್ಯದಲ್ಲಿ ಕೆಲ ನೃತ್ಯಗಾರ್ತಿಯರಿಗೆ ಗಾಯಗಳು ಸಹ ಆಯಿತಂತೆ.
ಕೊನೆಗೆ ಹಾಡಿನ ವೀಡಿಯೋ ನೋಡಿ ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ ತುಂಬಾ ಖುಷಿಪಟ್ಟ ಅಭಿಯವರು ತಮ್ಮ ಅನುಭವ ಮೆಲುಕು ಹಾಕಿದ್ದಾರೆ.
ಗುರುಕಿರಣ್ ತಮ್ಮ ಶೋಗಳಲ್ಲಿ ಈ ಹಾಡನ್ನು ಹಾಡುವುದರ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಹೊಸಬರೊಂದಿಗೆ ಗುರುಕಿರಣ್ ಹೆಚ್ಚು ಉತ್ಸಾಹದಿಂದ, ಒಂಚೂರು ಬೇಧವಿಲ್ಲದೆ, ಸಂಗೀತ ಸಂಯೋಜನೆ ಮಾಡಿ ಕೊಟ್ಟಿದ್ದಕ್ಕೆ ತುಂಬಾ ಖುಷಿಯಿದೆ ಎಂದು ಅಭಿ ಹೇಳುತ್ತಾರೆ.
"ಹೊಸಬರೊಂದಿಗೆ ನಾನು ಹೊಸಬನಾಗಿ ಕೆಲಸ ಮಾಡಲು ಇಚ್ಚಿಸುವುದರಿಂದ, ಹೊಸತನ ತುಂಬಾ ಖುಷಿ ಕೊಡುತ್ತೆ"ಅಂತಾ ಗುರುಕಿರಣ್ ಸಹ ಕಣ್ಣು ಮಿಟುಕಿಸಿ ಹೇಳುತ್ತಾರೆ..!
ಹಾಡಿನ ವೀಡಿಯೋ ನೋಡಿದ ಯಾರೋ ಪತ್ರಿಕಾ ಸಿಬ್ಬಂದಿ,"ಏನ್ರೀ ಟೀವೀ ಚ್ಯಾನೆಲ್ನವರನ್ನ, ಸೊಂಟದ ಮೇಲೆ ಕೂರಿಸಿದಿರಾ?" ಎಂದು ಛೇಡಿಸಿದ್ದನ್ನ ನೆನಪು ಮಾಡಿಕೊಂಡ್ರು. ಹಾಡನ್ನು ನೋಡಿದವ್ರೆಲ್ಲ ತಮ್ಮ ಮನೆಯಲ್ಲಿದ್ದ ಹಳೆಯ ರೇಡಿಯೋಗಳನ್ನು ನೆನಪು ಮಾಡಿಕೊಳ್ಳೋದು ಗ್ಯಾರೆಂಟೀ....ನೀವು ಸಾಂಗ್ ನೋಡಿಲ್ಲ ಅಂದ್ರೆ, ಒಂದ್ಸಲ ನೋಡ್ಕೊಂಡು ಅಭಿಪ್ರಾಯ ತಿಳಿಸಿ. ಚಿತ್ರ ಡಿ.ಟಿ.ಎಸ್ ಮುಗಿಸಿ ಸೆನ್ಸಾರ್ ಬೋರ್ಡಿನ ಮುಂದೆ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.
ಹಾಡು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಏಪ್ರಿ 14, 2015

ಲವ್ ಮೂಡಿತಣ್ಣ!.....ಹೀಗೆ ಮೂಡಿತಣ್ಣ!

iduvarege iddilla
ಆರಂಭ ಚಿತ್ರದ ‘ಲವ್ ಮೂಡಿತಣ್ಣ’ ಹಾಡು ಹುಟ್ಟಿದ ರೀತಿಯ ಬಗ್ಗೆ ಚಿತ್ರದ ನಿರ್ದೇಶಕ ಎಸ್. ಅಭಿ ಹನಕೆರೆ ಅವರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೀತಿ ಮೂಡುವ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡಿಗೆ ಟ್ಯೂನ್ ಹಾಕಲು ಗುರುಕಿರಣ್ ಅವರ ಜೊತೆ ಕುಳಿತುಕೊಂಡಾಗ ಗುರುಕಿರಣ್ ಅನೇಕ ಟ್ಯೂನುಗಳನ್ನು ಮಾಡಿದರು. ಅದರಲ್ಲಿ ಒಂದು ಇಷ್ಟವಾಗಿ, ಅದರ ಮೇಲೆ ಎರಡು ತಿಂಗಳು ಕೆಲಸ ಮಾಡಿದರು. ಇದ್ದಕ್ಕಿದ್ದಂತೆ ಗುರುಕಿರಣ್ ಅವರಿಗೆ, ಈ ಚಿತ್ರ ಬೇರೆ ರೀತಿಯೆ ಇದೆ, ಇದಕ್ಕೆ ಇನ್ನೂ ವಿಭಿನ್ನವಾದ ಟ್ಯೂನ್ ಮಾಡೋಣವೆಂದು ಅಲ್ಲಿಯವರೆಗೆ ಮಾಡಿದ್ದ ಟ್ಯೂನುಗಳನ್ನೆಲ್ಲಾ ತೆಗೆದು ಹಾಕಿದರು, ಇಷ್ಟವಾದ ಟ್ಯೂನನ್ನೂ ತೆಗೆದುಹಾಕಿದರು. ಬೇರೆ ಆಲೋಚನೆಗೆ ತಡಕಾಡುವಾಗ , ಒಂದು ದಿನ ಬೆಳಿಗ್ಗೆ ಎಂಟರಿಂದ ಮಧ್ಯರಾತ್ರಿ ಎರಡು ಮೂವತ್ತರ ತನಕ ಗುರುಕಿರಣ್ ಮತ್ತು ಅಭಿ ಲೋಕಾರೂಢಿ ಮಾತುಗಳನ್ನು ಆಡುತ್ತ ಕಾಲ ಕಳೆದರು.
abhi hanakere
ಅಭಿಯವರು ಮನೆಗೆ ಹೋಗಿ ಇನ್ನೇನು ಮಲಗಬೇಕು, ಆಗ ಕರೆ ಮಾಡಿದ ಗುರುಕಿರಣ್ ಒಂದು ಸಾಲು ಹೊಳೆದಿದೆ ಎನ್ನುತ್ತ ಟ್ಯೂನ್ ಜೊತೆಗೆ ’ಲವ್ ಮೂಡಿತಣ್ಣ' ಎಂದರು (ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ). ಅಭಿಯವರು, ಚೆನ್ನಾಗಿದೆ; ಮೂರು ದಿನದ ನಂತರ ಮತ್ತೆ ಕಾಡುತ್ತಾ ನೋಡೋಣ ಎಂದರು. ಒಂದು ವಾರದ ನಂತರ ಗುರುಕಿರಣ್ ಭೇಟಿಯಾಗಿ , ಸಂಗೀತ ಮಾಡಲು ಕುಳಿತಾಗಲು, ಆ ಟ್ಯೂನ್ ಕಾಡಿತು. ಆದ್ದರಿಂದ ಅದನ್ನು ಅಂತಿಮ ಆಯ್ಕೆ ಮಾಡಿದರು. ಆ ಟ್ಯೂನ್‍ಗೆ ಗೊಟೂರಿಯವರ ಕೈಯಲ್ಲಿ ಸಾಹಿತ್ಯ ಬರೆಸಿದರೆ ಚೆನ್ನಾಗಿರುತ್ತೆ ಎಂದು ಗುರುಕಿರಣ್ ಸಲಹೆ ನೀಡಿದರು. ಅದರಂತೆ ಅಭಿಯವರು, ಗೊಟೂರಿಯವರನ್ನು ಭೇಟಿ ಮಾಡಿ, ಅವರ ಜೊತೆ ಕಾರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ , ಬೆಂಗಳೂರಿನ ಸುತ್ತಮುತ್ತಾ ಓಡಾಡುತ್ತ ಹಾಡಿನ ಸಂದರ್ಭವನ್ನು ವಿವರಿಸಿ, ಆಮೇಲೆ ಕಾಡುಹರಟೆ ಹೊಡೆಯುತ್ತ ಕಾಲ ತಳ್ಳಿದರು. ನಂತರ, ಗುರುಕಿರಣ್ ಮನೆಗೆ ಬಂದು ಮತ್ತೆ ಮೂರು ಗಂಟೆ ಹರಟೆ! ಹರಟೆ ಮುಗಿದ ಮೇಲೆ ಕೇವಲ ಹತ್ತು ನಿಮಿಷದಲ್ಲಿ, ಗೊಟೂರಿಯವರು ಲವ್ ಮೂಡಿತಣ್ಣ ಹಾಡನ್ನು ಬರೆದು ಅಭಿಯವರ ಕೈಗಿತ್ತು, “ಇದು ದೈವ ಪ್ರೇರಣೆ, ನನ್ನಿಂದ ಈ ಹಾಡು ಬರೆಯುವಂತಾಗಿದೆ. ಈ ಹಾಡಿನಲ್ಲಿ ನೀವು ಯಾವ ಒಂದು ಪದವನ್ನೂ ಬದಲಾಯಿಸದೆ, ಸಂಗೀತಕ್ಕೆ ಅಳವಡಿಸುತ್ತೀರ ಎನ್ನುವ ನಂಬಿಕೆ ನನಗಿದೆ” ಎಂದು ಹೇಳಿ ಹೊರಟು ಹೋದರು. ಈ ಸಾಹಿತ್ಯಕ್ಕೆ ಮಾಲ್ಗುಡಿ ಶುಭ ಅವರ ಧ್ವನಿ ಹೊಂದುತ್ತದೆ ಎಂದ ಗುರುಕಿರಣ್ ಮಾಲ್ಗುಡಿ ಶುಭಾರನ್ನು ಕರೆಸಿ, ಹಾಡಿಸಿದಾಗ, ಅವರು ಸಹ, ಹಾಡುವುದರಲ್ಲಿ ತಲ್ಲೀನರಾಗಿ “ಈ ಹಾಡು, ನಾನು ಹಾಡಿದ, ಅತ್ಯುತ್ತಮ ಹಾಡುಗಳಲ್ಲಿ ಒಂದಾಗಲಿದೆ” ಎಂದು ಸಂತಸ ವ್ಯಕ್ತಪಡಿಸುತ್ತ “ಶುಭವಾಗಲಿ” ಎಂದು ಹಾರೈಸಿದರು.

gurukiran
ಹಾಡು ಸಿದ್ಧವಾದ ನಂತರ, ಅಭಿಯವರಿಗೆ ಭಯ ಕಾಡುವುದಕ್ಕೆ ಶುರುವಾಗಿತ್ತಂತೆ, ಚಿತ್ರದಲ್ಲಿ ಈ ಹಾಡೇ ಹೈಲೈಟ್ ಆಗಿಬಿಟ್ಟು, ಉಳಿದಿದ್ದೆಲ್ಲಾ ಸಪ್ಪೆಯಾಗಬಹುದು ಎಂಬುದೇ ಆ ಭಯ.

ಇನ್ನು ಹಾಡಿನ ಚಿತ್ರೀಕರಣವನ್ನು ಮೂವತ್ತು ದಿನಗಳ ಕಾಲ ಪ್ರತಿನಿತ್ಯ, ಬೆಳಗ್ಗೆ ಮತ್ತು ಸಂಜೆ, ಹೊಂಬಣ್ಣದ ಬೆಳಕಿನಲ್ಲಿ (ಗೋಲ್ಡನ್ ಅವರ್ಸ್) ಒಂದೊಂದೆ ದೃಶ್ಯವನ್ನು ನೃತ್ಯ ಸಂಯೋಜಕರಿಲ್ಲದೆ, ಸ್ವತಃ ಅಭಿಯವರೇ ಚಿತ್ರೀಕರಣ ಮಾಡಿ ಮುಗಿಸಿದರು. ಹಾಡು ಕೇಳಿದವರೆಲ್ಲ, ಗುರುಕಿರಣ್ ಇಲ್ಲಿಯವರೆಗು ಕಂಪೋಸ್ ಮಾಡಿದ ಅತ್ಯುತ್ತಮ ಹಾಡುಗಳಲ್ಲಿ, ಲವ್ ಮೂಡಿತಣ್ಣ ಹಾಡು ಕೂಡ ಒಂದು ಎಂದು ಹೇಳುತ್ತಾರೆ.

ಈಗಾಗಲೇ, ಈ ಚಿತ್ರದ ಹಾಡುಗಳು, ಭಾರಿ ಸದ್ದು ಮಾಡಿವೆ. ಅದರಲ್ಲೂ ಲವ್ ಮೂಡಿತಣ್ಣ ಹಾಡು ತುಂಬಾ ಜನರ ಪ್ರೀತಿಗೆ ಪಾತ್ರವಾಗಿದೆ. ಡಿ.ಟಿ.ಎಸ್ ಹಂತದಲ್ಲಿರುವ ಆರಂಭ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲು ಸಿದ್ಧವಾಗುತ್ತಿದೆ.

ಮಾರ್ಚ್ 26, 2015

ಆರಂಭ ಚಿತ್ರಕ್ಕೆ ಎಮ್ಮೆ ಬಲಿ!

ರಸಗವಳ ನಾರಾಯಣ
ಇದು ಪಟ್ಟು ಬಿಡದ ನಿರ್ದೇಶಕ ಮತ್ತು ನಟನೊಬ್ಬನ ಕಲಾನಿಷ್ಠೆಯ ಪರಿ! ಆರಂಭ ಚಿತ್ರದ ಹಾಡುಗಳು ಮತ್ತು ಟೀಸರ್ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಚಿತ್ರದಲ್ಲಿ ಸದ್ದು ಮಾಡುವ ತಮಟೆಯೊಂದರ ಹಿಂದಿನ ಕಥೆಯಿದು! ಕಥೆಯಲ್ಲ, ನೈಜ ಘಟನೆ! ಎಸ್. ಅಭಿ ಹನಕೆರೆ ನಿರ್ದೇಶನದ ‘ಆರಂಭ ಚಿತ್ರದ ಒಂದು ಪ್ರಮುಖ ಪಾತ್ರ ಕುಂಟು ಬೋರನದು. ಚಿತ್ರದ ಹಲವೆಡೆ ಕುಂಟು ಬೋರ ತಮಟೆ ಬಡಿಯುವ ದೃಶ್ಯಗಳಿತ್ತು. ತಮಟೆ ಮೇಲೆ ಕೈ ಆಡಿಸುವ ರೀತಿಯನ್ನು, ದೇಹಭಾಷೆಯ ವ್ಯತ್ಯಾಸವನ್ನು ಅಧ್ಯಯನ ಮಾಡಲು ಕುಂಟು ಬೋರನ ಪಾತ್ರ ನಿರ್ವಹಿಸಿರುವ ‘ರಸಗವಳ ನಾರಾಯಣ’ರವರನ್ನು ತಮಟೆ ಬಡಿಯುವವರ ಹತ್ತಿರವೇ ಕಳುಹಿಸಿದ್ದರಂತೆ.

ಕಲಿತು ವಾಪಸ್ಸಾದ ರಸಗವಳ ನಾರಾಯಣರಿಗೆ ‘ಎಲ್ಲಾದ್ರೂ ಹುಡುಕಿಕೊಂಡು ಒಂದು ಚರ್ಮದ ತಮಟೆಯನ್ನೇ ತರಬೇಕು’ ಎಂದು ನಿರ್ದೇಶಕರು ತಾಕೀತು ಮಾಡಿದ್ದರು. ಎಲ್ಲೆಡೆಯೂ ಪ್ಲಾಸ್ಟಿಕ್ಕು, ಫೈಬರ್ರಿನ ತಮಟೆಯನ್ನೇ ನೋಡಿ ಕಂಗೆಟ್ಟರು ರಸಗವಳ ನಾರಾಯಣ! ಅಲ್ಲೊಂದಿಲ್ಲೊಂದಿದ್ದ ಚರ್ಮದ ತಮಟೆಯನ್ನು ಕೊಡಲು ಅದರ ಯಜಮಾನರು ಒಪ್ಪುತ್ತಿರಲಿಲ್ಲ! ಕೊನೆಗೆ ಕುಂಟು ಬೋರ ಒಂದು ಎಮ್ಮೆಯನ್ನು ಬಲಿಕೊಟ್ಟು ಅದರ ಚರ್ಮದಿಂದ ಹೊಸತೊಂದು ತಮಟೆಯನ್ನೇ ಮಾಡಿಸಿಕೊಂಡು ಚಿತ್ರೀಕರಣಕ್ಕೆ ಹಾಜರಾದರು!

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ, ಹಿನ್ನೆಲೆ ಸಂಗೀತ ನುಡಿಸುವಾಗ ನೈಜತೆಗಾಗಿ ಆ ಚರ್ಮದ ತಮಟೆಯನ್ನೇ ಬಳಸಿದರೆ ಒಳ್ಳೆಯದು ಎಂದು ತಮ್ಮ ಹಂಬಲವನ್ನು ಸಂಗೀತನಿರ್ದೇಶಕರಾದ ಗುರುಕಿರಣ್ ಹತ್ತಿರ ಅಭಿ ಹನಕೆರೆ ಹೇಳಿಕೊಂಡಾಗ, ಮತ್ತೆ ಅದೇತಮಟೆಯನ್ನು ತರಿಸಿ, ಲೈವ್ ರೆಕಾರ್ಡ್ ಮಾಡಿಸಿದ್ದಾರೆ.

ರಸಗವಳ ನಾರಾಯಣನಿಗೆ ಮತ್ತೆ,ತಮಟೆ ತರಲು ಹೇಳಿದಾಗೆ,"ಮನೆಯಲ್ಲಿ ತಮಟೆಯನ್ನುಇಟ್ಟುಕೊಂಡರೆ,ಕೆಟ್ಟಾದಾಗಬಹುದು ಎಂದು ಭಾವಿಸಿ, ಮದ್ದೂರಿನ ದೇವಸ್ತಾನದಲ್ಲಿಇರಿಸಿದ್ದನ್ನು ಕೇಳಿ,ನಿರ್ದೇಶಕರು "ಚಿತ್ರ ಚೆನ್ನಾಗಿ ಮೂಡಿಬರಲು,ನಮ್ಮ ಕೈಯಲ್ಲಿ ಎಷ್ಟುಸಾಧ್ಯ,ಅಷ್ಟು ನೈಜವಾಗಿ ಮಾಡ್ಬೇಕು,ಇಲ್ಲಿ ಎಲ್ಲಾನೂ ಒಳ್ಳೇದಾಗುತ್ತೆ,ಕೆಟ್ಟದಾಗೋ ಮಾತೆಇಲ್ಲ"ಅಂತ ಅವರಿಗೆ ಹೇಳಿ,ಅವರಿಗೆ ಅದೇ ತಮಟೆಯಿಂದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಮಾಡೋಣವೆಂದು,ಮತ್ತೆ ಅದೇ ತಮಟೆ ತರಿಸಿದ್ದಾರೆ.

ಚಿತ್ರದಲ್ಲಿ ಉಪಯೋಗಿಸಿದ ಚರ್ಮದ ತಮಟೆಯನ್ನೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕಿನಲ್ಲೂ ಉಪಯೋಗಿಸಿರುವುದಕ್ಕೆ ಗುರುಕಿರಣ್ ಹರ್ಷ ವ್ಯಕ್ತ ಪಡಿಸುತ್ತಾ ಈ ರೀತಿಯ ಅನುಭವ ಇದೇ ಮೊದಲು ಎಂದಿದ್ದಾರೆ. ಕುಂಟು ಬೋರನ ಪಾತ್ರದ ಅಭಿನಯಕ್ಕೆ ‘ರಸಗವಳನಾರಾಯಣ’ರಿಗೆ ಪ್ರಶಸ್ತಿಗಳ ಸುರಿಮಳೆಯೇ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಅಭಿಹೇಳುತ್ತಾರೆ.

ಹಿನ್ನೆಲೆ ಸಂಗೀತವನ್ನು ಮುಗಿಸಿರುವ ಚಿತ್ರವು ಸೆನ್ಸಾರಿಗೆ ತೆರಳಲು ತಯಾರಾಗಿದ್ದು,ಶೀಘ್ರದಲ್ಲೇ ತೆರೆ ಕಾಣಲಿದೆ.

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.

ಜನ 9, 2015

ಕಣಗಾಲಿನಲ್ಲಿ 'ಆರಂಭ' ಚಿತ್ರದ ಪ್ರೀಮಿಯರ್ ಶೋ!

ಚಲನಚಿತ್ರ ನಿರ್ದೇಶಕನಾಗುವುದೆಂದರೆ ಹತ್ತು ಸರ್ಕಸ್ಸು ಕಂಪನಿಗಳನ್ನು ನಡೆಸಿದಂತೆ ಎಂದು ಬರೆದಿದ್ದು ರವಿ ಬೆಳಗೆರೆ! ಒಂದು ಚಿತ್ರಕ್ಕೆ ನಾಯಕ ನಾಯಕಿ ಸಂಗೀತ ತಾಂತ್ರಿಕ ತಂಡದ್ದು ಒಂದು ತೂಕವಾದರೆ ನಿರ್ದೇಶಕ ಸ್ಥಾನದ್ದೇ ಒಂದು ತೂಕ. Director is Captain of the Ship ಎಂಬ ಮಾತು ಸುಖಾಸುಮ್ಮನೆ ಹುಟ್ಟಿದ್ದಲ್ಲ. ಪ್ರಪಂಚದ ಅತಿ ಉತ್ತಮ ಚಿತ್ರಗಳ ಹೆಸರು ಕೇಳಿದಾಗಲೆಲ್ಲ ನೆನಪಾಗುವುದು ಅದರ ನಿರ್ದೇಶಕರು. ಅಕಿರಾ ಕುರಸೋವಾ, ಮಾಜಿದ್ ಮಾಜಿದಿ ನೆನಪಲ್ಲಿರುವಷ್ಟು ಅವರ ಚಿತ್ರಗಳ ಕಲಾವಿದರು ನೆನಪಿನಲ್ಲಿರುವುದಿಲ್ಲ. ಕಥೆಯಾಧಾರಿತ ಚಿತ್ರಗಳಲ್ಲಿ ನಿರ್ದೇಶಕರು ಮಿಂಚಿದರೆ ಭಾರತದ ಬಹುತೇಕ ಚಲನಚಿತ್ರಗಳಲ್ಲಿ ಮಿಂಚುವುದು ಕಲಾವಿದರು. ಇದಕ್ಕೆ ಬಹುಮುಖ್ಯ ಕಾರಣ ಭಾರತದ ಮನೋರಂಜನಾತ್ಮಕ ಚಿತ್ರಗಳು ಕಲಾವಿದನ ಅದರಲ್ಲೂ ನಾಯಕನಟನ ಸುತ್ತ ಸುತ್ತುವುದು. ಕಥೆಗಾಗಿ ತಮ್ಮ ಇಮೇಜನ್ನು ಮೀರುವ ನಟರ ಸಂಖೈ ಕಡಿಮೆಯೆಂದೇ ಹೇಳಬೇಕು. ಇಮೇಜಿರುವ ಕಲಾವಿದರ ಆರಾಧಕರ ಸಂಖೈಯೂ ಹೆಚ್ಚಿರುವುದು ಇದೇ ಕಾರಣಕ್ಕೆ. 

ಡಿಸೆಂ 18, 2014

ಆರಂಭ ಚಿತ್ರದ ಹಾಡುಗಳ ವೀಡಿಯೋ ಯೂಟ್ಯೂಬಿನಲ್ಲಿ ಲಭ್ಯ

ಶರ ಪ್ರೊಡಕ್ಷನ್ಸ್ ಬ್ಯಾನರ್ರಿನಡಿಯಲ್ಲಿ ಡಿ.ಗಣೇಶ್ ವಿ. ನಾಗೇನಹಳ್ಳಿ ನಿರ್ಮಿಸುತ್ತಿರುವ ಎಸ್. ಅಭಿ ಹನಕೆರೆ ನಿರ್ದೇಶನದ  "ಆರಂಭ - The Last Chance" ಚಿತ್ರದ ಹಾಡುಗಳ ವೀಡಿಯೋ, ಟ್ರೇಲರ್ ಮತ್ತು ಟೀಸರ್ ಆಲ್ಫಾ ಡಿಜಿಟೆಕ್ ಮೂಲಕ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಒಂದು ಭಾಗವಾಗಿ 'ಹಿಂಗ್ಯಾಕೆ'ಯೂ ಇರುವುದರಿಂದ ಹಾಡುಗಳ ವಿಮರ್ಶೆಯನ್ನು ನಾವೇ ಮಾಡುವುದು ಸಾಧುವಲ್ಲವಲ್ಲವೇ? ಕೇಳಿ ಕಮೆಂಟಿಸಿ ಇಷ್ಟವಾದರೆ ನಿಮ್ಮ ಸ್ನೇಹಿತರ ವಲಯದಲ್ಲಿ ಹಂಚಿಕೊಳ್ಳಿ. ಥೂ ಸರಿಯಿಲ್ಲ ಎನ್ನಿಸುವಂತಹ ದೃಶ್ಯಗಳೂ ಇದ್ದರೆ ಹೇಳಿ ನಿರ್ದೇಶಕರಿಗೆ ತಲುಪಿಸುತ್ತೇವೆ.

ಸ್ಟೋರಿ ಇದ್ರೂ ಮತ್ತೊಂದಿದ್ರು ಈ ರೀತಿ ಪೋಲಿ ಕಮರ್ಷಿಯಲ್ ಇರಲೇ ಬೇಕಾ?
https://www.youtube.com/watch?v=WCe6uecDZY0&authuser=0

ನವೆಂ 30, 2014

ಗೋವಾದಲ್ಲಿ ಆರಂಭ ಚಿತ್ರದ ದ್ವನಿಸುರುಳಿ ಬಿಡುಗಡೆ.

aarambha goa publicity
ಪತ್ರಿಕಾ ಪ್ರಕಟಣೆ 
ಅಖಿಲ ಗೋವಾ ಕನ್ನಡ ಮಹಾ ಸಂಘ ಅಧ್ಯಕ್ಷರಾದ ಸಿದ್ದಣ್ಣ ಮೀಟಿಯವರು, ಎಸ್ ಅಭಿ ಹನಕೆರೆ ನಿರ್ದೇಶನದ  ಆಡಿಯೋ ಸೀಡಿಯನ್ನು ಗೋವಾ ಬೀಚಿನಲ್ಲಿ ಬಿಡುಗಡೆಗೊಳಿಸಿದರು.

ನವೆಂ 18, 2014

ಡಬ್ಬಿಂಗ್ ಮುಗಿಸಿದ 'ಆರಂಭ'

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಗಣೇಶ್ ವಿ.ನಾಗೇನಹಳ್ಳಿ ನಿರ್ಮಿಸುತ್ತಿರುವ 'ಆರಂಭ' ಚಿತ್ರ ಡಬ್ಬಿಂಗ್ ಪೂರ್ಣಗೊಳಿಸಿ ರೀರೆಕಾರ್ಡಿಂಗಿಗೆ ಸಿದ್ಧವಾಗಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮಿಥುನ್ ಪ್ರಕಾಶ್, ರಸಗವಳ ನಾರಾಯಣ,ಬೇಬಿ ಹಾಸಿನಿ,ಅಭಿರಾಮಿ,ಡಿಸ್ಕೊ ಪೃಥ್ವಿ,ಬಳ್ಳಾರಿ ರಾಘವೇಂದ್ರ,ಪ್ರವೀಣ್,ಬ್ಯಾಂಕ್ ಜನಾರ್ಧನ,ಪಾಂಡು ಕುಮಾರ್,ಅಭಿರಾಜ್ ಅಭಿನಯಿಸುತ್ತಿದ್ದಾರೆ. ಎಸ್. ಅಭಿ ಹನಕೆರೆ ನಿರ್ದೇಶನದ ಚಿತ್ರಕ್ಕೆ ಸಂಗೀತ ನೀಡಿರುವುದು ಗುರುಕಿರಣ್.
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಊರಾದ ಕಣಗಾಲಿನಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಆರಂಭ ಚಿತ್ರತಂಡದ್ದು. ಚಿತ್ರರಂಗದ ಗಣ್ಯರನ್ನು ಮತ್ತು ಸಿನಿಮಾಸಕ್ತರನ್ನು ಕಣಗಾಲಿಗೆ ಆಹ್ವಾನಿಸಿ ಪುಟ್ಟಣ್ಣ ಕಣಗಾಲರ ನೆನಪಿನಲ್ಲಿ 'ಆರಂಭ' ಚಿತ್ರದ ಪ್ರೀಮಿಯರ್ ಶೋ ನಡೆಸುವ ಉದ್ದೇಶ ನಿರ್ದೇಶಕರಿಗಿದೆ. 
ಜಿ.ಮ್ಯೂಸಿಕ್ ಲಾಂಛನದಲ್ಲಿ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದು ಜನರ ಮನಗೆದ್ದಿದೆ.

ಸೆಪ್ಟೆಂ 10, 2014

ಆರಂಭ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ


ಮಧುಗಿರಿಯಲ್ಲಿ ಸೇರಿದ್ದ ಜನಸ್ತೋಮ
ಚಿತ್ರವೊಂದರ ಹಾಡುಗಳು ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ನಂತರದಲ್ಲಿ ಆ ಹಾಡುಗಳು ಅನೇಕ ವರುಷಗಳ ಕಾಲ ಜನಮಾನಸದಲ್ಲಿ ಉಳಿಯಲು ಚಿತ್ರದ ಗುಣಮಟ್ಟ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಚಿತ್ರದ ಹಾಡುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರರಂಗ ಅನೇಕ ಯೋಜನೆಗಳನ್ನಾಕುತ್ತವೆ. ಅಂತರ್ಜಾಲದ ಲಭ್ಯತೆ ಹೆಚ್ಚುತ್ತಿದ್ದಂತೆ ಮತ್ತು ಬ್ಲೂಟೂಥ್ ಆಧಾರಿತ ಮೊಬೈಲ್ಗಳು ಹೆಚ್ಚಾದ ನಂತರ ಕ್ಯಾಸೆಟ್ಟುಗಳನ್ನಾಗಲೀ ಸಿಡಿಗಳನ್ನಾಗಲೀ ಕೊಳ್ಳುವವರು ಇಲ್ಲವೇ ಇಲ್ಲ ಎಂದು ಹೇಳಬಹುದು. ರೇಡಿಯೋ ಮುಖಾಂತರ, ಟಿ.ವಿ. ಮುಖಾಂತರ ಜನರಿಗೆ ತಲುಪಲು ಪ್ರಯತ್ನಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ನೇರವಾಗಿ ಜನರಿಗೇ ತಲುಪಿಸುವ ಹೊಸ ಪ್ರಯತ್ನ ಮಾಡುತ್ತ ನಿಧಾನವಾಗಿಯಾದರೂ ಗೆಲುವು ಕಾಣುತ್ತಿರುವುದು ‘ಆರಂಭ’ ಚಿತ್ರತಂಡ.

ಸೆಪ್ಟೆಂ 2, 2014

ಆರಂಭ – The Last Chance ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ


Audio release
ಆರಂಭ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ
Press Release
ಯುಗಾದಿ ಹಬ್ಬದ ದಿನದಂದು ಜನನಿಬಿಡ ಕೆ.ಜಿ ರಸ್ತೆಯಲ್ಲಿನ ಮುಹೂರ್ತ ಸಮಾರಂಭ ನೆರವೇರಿಸಿದ್ದ, ಜನರನ್ನು ತಲುಪಲು ಹೊಸ ವರುಷದ ಮುನ್ನಾದಿನದಂದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿದ್ದ ಆರಂಭ – The Last Chance ಚಿತ್ರತಂಡವು ಈಗ ಸಂಪೂರ್ಣ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಿನ ಕೊನೆಯ ಹಂತದಲ್ಲಿದೆ. ಗುರುಕಿರಣ್ ಸಂಗೀತ ಚಿತ್ರಕ್ಕಿದ್ದು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನೂ ವಿಭಿನ್ನವಾಗಿ ಆಯೋಜಿಸಿದೆ ಚಿತ್ರತಂಡ.

ಆಗ 29, 2014

Aarambha Songs

Download all songs in zip click here
Adda.mp3
Hadi Hadi.mp3
Iduvarege iddilla.mp3
Swarga Nisarga.mp3
ಎಸ್ ಅಭಿ ಹನಕೆರೆ ನಿರ್ದೇಶಿಸುತ್ತಿರುವ ಆರಂಭ - The Last Chance ಚಿತ್ರದ ಎಲ್ಲಾ ನಾಲ್ಕೂ ಹಾಡುಗಳು ಇಂದಿನಿಂದ ಉಚಿತವಾಗಿ ಲಭ್ಯ. ಶರ ಪ್ರೊಡಕ್ಷನ್ ಲಾಂಛನದಲ್ಲಿ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ಗುರುಕಿರಣ್, ಗೋಟೂರಿ, ವಿ.ಮನೋಹರ್, ಅಭಿ ಹನಕೆರೆ, ಕವಿರಾಜ್ ಬರೆದಿರುವ ಹಾಡುಗಳಿಗೆ ಧ್ವನಿಯಾಗಿರುವುದು ಗುರುಕಿರಣ್, ಮುರುಳಿ ಮೋಹನ್, ಗುರುರಾಜ್ ಹೊಸ್ಕೋಟೆ, ಮಾಲ್ಗುಡಿ ಶುಭ.
"ಇದುವರೆಗೆ ಇದ್ದಿಲ್ಲ........................ಲವ್ ಮೂಡಿತಣ್ಣ" (ಈ ಹಾಡು ಈ ವರ್ಷದ ಹಿಟ್ ಸಾಲಿಗೆ ಸೇರುವುದರಲ್ಲಿ ನನಗಂತೂ ಸಂಶಯವಿಲ್ಲ - ಸಂ)
"ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ"

ಮನೆಮುರಿಯೋ ಐಡಿಯಾಗಳು ಎಲ್ಲಿ ಸಿಗುತ್ತೆ ಗೊತ್ತಾ? ಈ ಹಾಡು ಕೇಳಿ

"ಸ್ವರ್ಗ ನಿಸರ್ಗ"
Summary - Aarambha - The Last Chance, Kannada movie audio released. Songs are available for free download. Music by Gurukiran. Produced by D Ganesh V Nagenahalli

ಆಗ 28, 2014

ಅತಿ ಶೀಘ್ರದಲ್ಲಿ ಸಂಗೀತದ "ಆರಂಭ"

aarambha
"ಆರಂಭ"
ಹೊಸಬರ ತಂಡವನ್ನು ಕಟ್ಟಿ ಚಿತ್ರ ನಿರ್ಮಿಸುವುದು ಕಷ್ಟಕರವಾದ ಕೆಲಸ. ಹೊಸತೇನನ್ನಾದರೂ ಕೊಡಲೇಬೇಕೆಂಬ ತುಡಿತದಿಂದ ಬಹುತೇಕ ಹೊಸಬರನ್ನೇ ಸೇರಿಸಿ ರೂಪಿಸಿ "ಆರಂಭ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಸ್. ಅಭಿ ಹನಕೆರೆ. ಚಿತ್ರ ಶೂಟಿಂಗ್ ಮುಗಿಸಿ ಈಗ ಡಬ್ಬಿಂಗಿನ ಕೊನೆಯ ಹಂತದಲ್ಲಿದೆ. ಚಿತ್ರದ ಹಾಡುಗಳನ್ನು ಶೀಘ್ರದಲ್ಲೇ ಜನರ ಮುಂದಿಡುವುದಾಗಿ ಚಿತ್ರ ತಂಡ ತಿಳಿಸಿದೆ. 
ಹೊಸಬರ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿ ಸಂಗೀತ ನೀಡಿರುವುದು ಹೊಸಬರಿಗೆ ಹೊಸ ಆಲೋಚನೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹಿಸುತ್ತ ಬಂದಿರುವ ಗುರುಕಿರಣ್. ಗುರುಕಿರಣ್, ಅಭಿ ಹನಕೆರೆ, ವಿ.ಮನೋಹರ್, ಗೊಟೂರಿ ಮತ್ತು ಕವಿರಾಜ್ ರಚಿಸಿರುವ ಸಾಹಿತ್ಯಕ್ಕೆ ದನಿ ನೀಡಿರುವವರು ಮುರುಳಿ ಮೋಹನ್, ಗುರುರಾಜ್ ಹೊಸಕೋಟೆ, ಮಾಲ್ಗುಡಿ ಶುಭ ಮತ್ತು ಗುರುಕಿರಣ್.