 |
ಸಾಂದರ್ಭಿಕ ಚಿತ್ರ |
S Abhi Hanakere
11/07/2016
ನನ್ನ ತಮಿಳು ಚಿತ್ರದ ಕೆಲಸದ ನಿಮಿತ್ತ ನಾನು ಚೆನ್ನೈನಲ್ಲಿದ್ದೆ. ಕಾಲ್ ಬಂತು. ಮೈಸೂರಿನ ಗೆಳೆಯ ಕರೆ ಮಾಡಿದ್ದ. ಮಾತನಾಡಬಹುದ, ಫ್ರೀ ಇದ್ದೀರಾ ಅಂದ. ಅದು ಎಷ್ಟು ಕ್ಲೋಸ್ ಫ್ರೆಂಡ್ ಆದರೂ ಪಾರ್ಮಲಿಟಿಸ್ ಫಾಲೋ ಮಾಡೋ ವಿನಯದ ಬುದ್ಧಿ, ಮತ್ತಾತ ಮುಗ್ದ ಕೂಡ.
ಈ ಕಡೆಯಿಂದ "ಬ್ಯುಸಿ ಇದ್ದೀನಿ, ಚೆನ್ನೈನಲ್ಲಿದ್ದೀನಿ ಬೆಳಿಗ್ಗೆ ಮಾಡ್ಲಾ" ಅಂದೆ. "ಸ್ವಲ್ಪ ಅರ್ಜೆಂಟು ಮಿಸ್ ಮಾಡ್ದೆ ಮಾಡಿ" ಎಂದು ಕಾಲ್ ಕಟ್ ಮಾಡಿದ. ಯಾಕೋ ಮನಸ್ಸು ತಡಿಲಿಲ್ಲ. ನಾನಿದ್ದ ರಜಿನಿಕಾಂತರ ಕಬಾಲಿ ಡೈರೆಕ್ಟರ್ ಪರಂಜೀತ್‍ನ ಆಫೀಸ್‍ನಿಂದ ಈಚೆ ಬಂದು ಮತ್ತೆ ಕಾಲ್ ಮಾಡಿದೆ. “ಸಾರ್ ಏನಿಲ್ಲ ಪುನೀತ್ ರಾಜ್‍ಕುಮಾರ್ ಕಾಂಟೆಕ್ಟ್ ಮಾಡಬೇಕಿತ್ತು. ನಮ್ಮ ಫ್ರೆಂಡ್ಸ್ ಎಲ್ಲಾ ಸೇರಿ ಒಂದು ಎನ್‍ಜಿಓ ಮಾಡಿಕೊಂಡಿದ್ದಾರೆ. ಅದಕ್ಕೆ ಬ್ರಾಂಡ್ ಅಂಬಾಸಿಡರಾಗಿ ಪುನೀತ್‍ನ ಹಾಕಬೇಕು ಅಂತಾ, ಯಾಕಂದ್ರೆ ಎನ್‍ಜಿಓದು ತುಂಬಾ ಒಳ್ಳೆ ಉದ್ದೇಶ, ಈ ಸ್ಟಾರ್ ಹೋಟ್ಲು ಮತ್ತೆ ಮದುವೆ, ರಿಸೆಪ್ಷನ್ ಅಲ್ಲಿ ಊಟ ಉಳಿದು ಬಿಡುತ್ತಲ್ಲಾ ಅದ್ನ ತಕ್ಕೊಂಡ್ ಹೋಗಿ ಬಡವರಿಗೆ ಕೊಡೋದು, ತುಂಬ ಪುಣ್ಯದ ಕೆಲಸ’’ ಅಂದ. ನನಗೆ ಸರ್ರನೆ ಕೋಪ ಬಂದ್ ಬಿಡ್ತು, ಕಂಟ್ರೋಲ್ ಮಾಡಿಕೊಂಡು ಸಾರಿ, ನಂಗೆ ಪುನೀತ್ ರಾಜ್‍ಕುಮಾರ್ ಲಿಂಕ್ ಇಲ್ಲಾ ಎಂದು ತಪ್ಪಿಸಿಕೊಳ್ಳಲು ನೋಡಿದೆ, ಇಲ್ಲಾ ಅವರ ಮ್ಯಾನೇಜರ್ ಅಥವಾ ಯಾರ ಮುಖಾಂತರನಾದ್ರು ಕಾಂಟೆಕ್ಟ್ ಮಾಡ್ಸಿ ತುಂಬಾ ಒಳ್ಳೇ ಉದ್ದೇಶ ಅಂದು ಬಿಟ್ಟ ಮತ್ತೆ, ನನಗೆ ಕೋಪ ಜಾಸ್ತಿಯಾಗಿ ಬಾಯಿ ಬಿಡುವ ಮುನ್ನವೆ ಮಣ್ಣಿವಣ್ಣನ್ ಅಂತವರೆಲ್ಲಾ ಸಪೋರ್ಟ್ ಮಾಡ್ತಿದ್ದಾರೆ ಅಂದ..
ಓಹೋ ಇದ್ಯಾವುದೋ ಆಗಲೇ ಬೆಳೆದು - ಬಲಿತು ಬಿಟ್ಟಿರುವ ಎನ್.ಜಿ.ಓ. ಗುಂಪೇ ಇರಬೇಕು, ಸುಮ್ಮನ್ನೆ ನಮಗ್ಯಾಕೆ ಅಂತ ನನಗೆ ಆಗದ್ದನ್ನ ಸಹಿಸಿಕೊಳ್ಳುವುದ ಕಲಿಯುವ ಅವಶ್ಯಕತೆಯಿಲ್ಲ ಅನ್ನಿಸಿ "ಅಲ್ಲಾ ಇದು ಯಾವ ಒಳ್ಳೇ ಕೆಲಸ, ಯಾವ ಪುಣ್ಯದ ಕೆಲಸ, ಇವರಿಗೆ ಅಷ್ಟೊಂದು ಕಾಳಜಿ ಇದ್ರೆ ಫಂಕ್ಷನ್ ನಲ್ಲಿ ಉಳಿದ ದವಸ ಧಾನ್ಯವನ್ನು ಕೊಡಲಿ, ಇಲ್ಲಾಂದ್ರೆ ಆ ರೀತಿ ತಮ್ಮ ಧಿಮಾಕಿಗಾಗಿ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಾಡುವವರಿಗೆ ಶಿಕ್ಷೆ ಕೊಡಸಲಿ, ಅದ್ ಬಿಟ್ಟು ಈ ರೀತಿ ಉಳಿದ ಆಹಾರವನ್ನು ಬಡವರಿಗೆ ಕೊಟ್ಟು ಅವರನ್ನು ಇನ್ನು ಮಾನಸಿಕವಾಗಿ ಗುಲಾಮಗಿರಿಗೆ ತಳ್ಳ ಬೇಡಿ" ಅಂದೆ. ಆ ಕಡೆ ಯಿಂದ ಅವನು "ಸ್ವಾಭಿಮಾನ ಇರೋರು ಈಸ್ ಕೊಳ್ಳಲ್ಲ ಸರ್" ಅಂದ. ಇಷ್ಟೊತ್ತು ನನ್ನ ಆಡು ಭಾಷೆ ತಡೆದುಕೊಂಡೆ ಮಾತಾಡ್ತಿದ್ದೆ. "ಲೋ, ನೀನೆ ಹೇಳ್ತಿದೀಯಾ, ಸ್ವಾಭಿಮಾನ ಇರೋರು ಈಸಿಕೊಳ್ಳಲ್ಲ ಅಂತ. ಯೋಚನೆ ಮಾಡು ಆ ರೀತಿ ನೀವು ತಕೊಂಡ್ ಹೋಗಿ ಕೊಟ್ರೆ ಸ್ವಾಭಿಮಾನ ಕುಂದುತ್ತೆ ಹೊರತು ಬೆಳೆಯೋ ಮಾತೆಲ್ಲಿ, ಒಂದ್ ಕೆಲಸ ಮಾಡಿ ಯಾರು ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡಿ ಈ ರೀತಿ ವೇಸ್ಟ್ ಮಾಡ್ತರೋ ಆ ಬೋಳಿ ಮಕ್ಳಿಗೆ ಚಪ್ಪಲೀಲಿ ಹೋಡೀರಿ ಫಸ್ಟ್" ಅಂದೆ. ಮಂಡ್ಯ ಸ್ಟೈಲ್ ಅಲ್ಲಿ ಕೋಪದಿಂದ, ಮೃದು ಸ್ವಭಾವದ ಅವನು ಬೇಜಾರ್ ಮಾಡಿ ಕೊಂಡ, ಏನೇನೋ ಸಮಜಾಯಿಸಿ ಕೊಟ್ಟ, ಆ ಮೇಲೆ "ನೀವೇಳಿದ್ದು ಸರಿ. ಆದ್ರೆ ಎಲ್ಲಾ ಒಂದೆ ದಿನಕ್ಕೆ ಸರಿ ಮಾಡೋಕೆ ಆಗಲ್ಲ- ನಾವ್ ಒಬ್ಬರೆ ಏನು ಮಾಡೋಕೆ ಆಗಲ್ಲ". ಇಂಥವೆ ಸೋಗಲಾಡಿತನದ ಡೈಲಾಗ್ ಹೇಳಿದ.
ನೀನು ಅವರನ್ನ ಸಪೋರ್ಟ್ ಮಾಡ್ ಬೇಡ ಅವರನ್ನ ನಾನ್ ಹೇಳಿದ ರೀತಿ ಹೇಳಿ ಎಜುಕೇಟ್ ಮಾಡು. ಅವರೇನಾದ್ರು ನಿಜವಾಗ್ಲು ಬಡವರ ಬಗ್ಗೆ ಕಾಳಜಿ ಇದ್ರೆ ಕೇಳ್ತಾರೆ, ಇಲ್ಲಾ ಸುಮ್ನೆ ಅವರು ಸಮಾಜ ಸೇವಕರು ಅನ್ನೋ ಬಿಲ್ಡ್ ಅಪ್ ತಕೋಳ್ಳೋಕೆ ಮಾಡೋರಾದ್ರೆ ಕೇಳಲ್ಲ. ಆ ರೀತಿ ಅವರೇನಾದ್ರು ಮುಂದುವರಿದರೆ ಪುನೀತ್ ರಾಜ್‍ಕುಮಾರ್‍ನ ತಲುಪೋದು ಅವರಿಗೂ ನಾವು ಪುಣ್ಯದ ಕೆಲಸ ಮಾಡ್ತಿದಿವಿ ಅಂತ ಭ್ರಮೆ ಹುಟ್ಟಿಸೋದು ಏನು ಕಷ್ಟ ಅಲ್ಲಾ.
ಯಾಕೆಂದರೆ ನಾನು ಕೂಡ ಮೊದಲು ಅದೇ ರೀತಿ ಯೋಚಿಸಿದ್ದೆ ಅಂತ ಮನಸ್ಸಿನಲ್ಲಿ ಅಂದುಕೊಂಡು ಅಪ್ಪಿ-ತಪ್ಪಿ ಪುನೀತ್ ಒಪ್ಪಿ ಬ್ರಾಂಡ್ ಅಂಬಾಸಿಟರ್ ಆಗ್ ಬಿಟ್ರೆ ದೇಶ ದ್ರೋಹಿಗಳು ಇನ್ನು ಆಹಾರ ಜಾಸ್ತಿ ವೇಸ್ಟ್ ಮಾಡಿ ಬಡವರನ್ನ ನಾಯಿ ಥರ ನೋಡಿ ಅವರ ಸ್ವಾಭಿಮಾನವನ್ನ ಇನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾರೆ. ನಿಮ್ಮ ಮಾತ್ ಕೇಳಲಿಲ್ಲ ಅಂದ್ರೆ ನನಗೆ ಆ ಎನ್‍ಜಿಓ ಹೆಸರು ಹೇಳಿ ಪ್ಲೀಸ್ ಕನ್ವಿನ್ಸ್ ಮಾಡ್ತಿನಿ ಅಂದೆ. ಮಾತು ಬದಲಿಸಿ ಕ್ಯಾಷುವಲ್ ಆಗಿ ಮಾತನಾಡಿ ಕಾಲ್ ಕಟ್ ಮಾಡಿದ. ನನಗೆ ನನ್ನ ಸ್ನೇಹಿತನ ಮೇಲೆ ನಂಬಿಕೆ ಇದೆ. ಆತ ಅವರನ್ನ ಎಜುಕೇಟ್ ಮಾಡ್ತನೆ ಅಂತ. ಈ ವಿಚಾರದಲ್ಲಿ ನನ್ನ ಯೋಚನ ಲಹರಿ ಬದಲಿಸಿದ ಎರಡು ಸನ್ನಿವೇಶಗಳನ್ನ ಹೇಳ್ತಿನಿ.
ಮೊದಲ ಸನ್ನಿವೇಶ- ಸ್ಲಂ ಅಲ್ಲೇ ಹುಟ್ಟಿ ಬೆಳೆದು, ಈಗ ಒಂದು ಒಳ್ಳೇ ಹುದ್ದೇಲಿ ಇರುವ ನನ್ನ ಸ್ನೇಹಿತ ಸಂತೋಷ್ ಹೇಳಿದ್ದ: 'ಒಮ್ಮೆ ಚಿಕ್ಕಂದಿನಲ್ಲಿ ನನಗೆ ಮುದ್ದೆ ತಿನ್ನುವ ಆಸೆ ಆಗಿತ್ತು. ಒಂದು ದಿನ ನಿಮ್ಮಂಥ ಸಾಹುಕಾರರ ಮನೇಲಿ ಏನೋ ಫಂಕ್ಷನ್ ಅಂತ ಅನ್ನ, ಬಾತು, ಪಲ್ಯ ಎಲ್ಲಾ ಉಳಿದು ಬಿಟ್ಟಿತ್ತು. ಅದು ನೇರವಾಗಿ ನಮ್ಮ ಸ್ಲಂಗೆ ನಮ್ಮ ಮನೆಗೆ ತಲುಪಿತ್ತು, ನಮ್ಮವ್ವ ಊಟಕ್ಕೆ ಕೊಟ್ಲು ನಾನು ಬೇಡ ಇದು ಅಂದೆ, ಅದ್ಕೆ ನಮ್ಮವ್ವ ಯಾರೋ ಪುಣ್ಯಾತ್ಮರು ಕೊಟ್ಟವರೆ ತಿನ್ನು ಅಂದ್ಲು, ಅವ್ವ ಅವರು ನಮ್ಮ ಮೇಲಿನ ಕಾಳಜಿಯಿಂದ ಕೊಟ್ಟಿಲ್ಲ ಅವರ ಪ್ರತಿಷ್ಠೆಗೆ ಇದ್ನ ಮಾಡಿ, ನಾಯಿಗಳು ತಿನ್ನೊಲ್ಲ ಎಂದು ನನಗೆ ಕೊಟ್ಟಿದ್ದಾರೆ ಅಂದೆ ಅದ್ಕೆ ನಮ್ಮವ್ವ ವಿದ್ಯೆ ಕಲಿತಿದಿನಿ ಅಂತ ನಿಂಗೆ ಕೊಬ್ಬು ಅಂದ್ಲು. ನನ್ನ ಮನಸ್ಸಿನಲ್ಲಿ ಇದ್ಕೆ ಅಲ್ಲವೆ ನಮಗೆ ವಿದ್ಯೆ ಸಿಗಬಾರ್ದು ಅಂತ ಸಂಚು ಮಾಡೋದು, ನಿಮ್ಮ ವೇಸ್ಟ್ ನ ತಿನ್ನೋರಿಲ್ಲ ಬಳಿಯೋರಿಲಲ್ಲ ಎಂದು' ಅಂದ. ನಾನು ಮೌನಕ್ಕೆ ಶರಣಾಗಿದ್ದೆ. ಅವನು ಮುಂದುವರಿಸಿದ 'ಅವತ್ತು ನನ್ನ ಮುದ್ದೆ ತಿನ್ನುವ ಆಸೆಗೆ ಕಲ್ಲು ಬಿತ್ತು, ಹಸಿವು ನೀಗಿಸಲು ಆ ಕ್ರಿಮಿನಲ್ ಸಾಹುಕಾರರ ವೇಸ್ಟ್ ನೆ ತಿಂದೆ'. ಅಂದು ಬಿಟ್ಟ ಪುಣ್ಯದ ಕೆಲಸ ಅಂತಿದ್ದ ಭಾವನೆ ಒಂದೇ ಏಟಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡುವುದು ದೇಶದ್ರೋಹ ಮತ್ತೆ ಆ ರೀತಿ ಪ್ರತಿಷ್ಟೆಗಾಗಿ ವೇಸ್ಟ್ ಮಾಡೋರು ಮತ್ತು ಬಡವರಿಗೆ ಹಂಚುವವರು ದೇಶ ದ್ರೋಹಿಗಳು ಅಂತ ಬದಲಾಯ್ತು.
ಎರಡನೆ ಸನ್ನಿವೇಶ- ಭಾರತದ ಶ್ರೀಮಂತ ಕುಟುಂಬ ಒಂದು ಯಾವುದೋ ದೇಶದಲ್ಲಿ ಮೆನುಲಿ ಇರೋ- ಬರೋದ್ನೆಲ್ಲಾ ಆರ್ಡರ್ ಮಾಡಿ ಸ್ವಲ್ಪ ತಿಂದು, ಪ್ಲೇಟ್ ಅಲ್ಲೇ ಜಾಸ್ತಿ ಬಿಟ್ಟು ಬಿಲ್ ಕೇಳಿದಾಗ ಹೋಟ್ಲಿನವನು ಎಲ್ಲವನ್ನು ತಿನ್ನಿ ಆ ಮೇಲೆ ಕೊಡ್ತಿನಿ ಅಂದನಂತೆ, ಅದ್ಕೆ ಸಾಲಗಾರ ಭಾರತ ದೇಶದ ಶ್ರೀಮಂತ ಕುಟುಂಬದವರು ದುಡ್ಡು ನಮ್ದು ನಮಗೆ ಇಷ್ಟ ಬಂದಷ್ಟು ತಿಂತಿವಿ ಅಂದ್ರಂತೆ. ಹೋಟೆಲ್ ನವನು ಯಾರಿಗೋ ಕಾಲ್ ಮಾಡಿದ್ನಂತೆ 10 ನಿಮಿಷದಲ್ಲಿ ಗ್ರೀನ್ ಪೋಲೀಸ್‍ನವರು ಅಂತ ಬಂದು ಭಾರತೀಯ ಶ್ರೀಮಂತರಿಗೆ ದುಡ್ಡು ನಿಮ್ಮದೆ ಇರಬಹುದು ಸಂಪನ್ಮೂಲ ಎಲ್ಲರದು ಈ ರೀತಿ ವೇಸ್ಟ್ ಮಾಡ ಬಾರದು ಅಂತ ಹೇಳಿ 50 ಸಾವಿರ ರೂಪಾಯಿ ದಂಡ ಹಾಕಿ 3 ದಿನ ಜೈಲಿಗೆ ಹಾಕಿದ್ರಂತೆ. ಈ ಕಥೆ ಕೇಳಿದ ಮೇಲೆ, ಪುಣ್ಯದ ಕೆಲಸ ಅಂತಿದ್ದ ಭಾವನೆ ದೇಶ ದ್ರೋಹ ಅಂತ ಬದಲಾಗಿದ್ದು ಇನ್ನೂ ಬಲವಾಯ್ತು.
ನಿಮಗು ಈ ಪುಣ್ಯದ ಕೆಲಸ ಅಂತಿರೋ ಭಾವನೆ, ದೇಶ ದ್ರೋಹ ಅಂತೆನಿಸಿದರೆ, ಈ ಬರಹವನ್ನು ಬೇರೆಯವರಿಗೂ ಓದುವಂತೆ ಪ್ರೇರೇಪಿಸಿ ಅಥವಾ ನಿಮ್ಮದೆ ರೀತಿಯಲ್ಲಿ ಈ ವಿಚಾರವನ್ನು ಸ್ಪ್ರೆಡ್ ಮಾಡಿ ಎಜುಕೇಟ್ ಮಾಡಿ…
ಕಡೆಯಾದಾಗಿ ಕುವೆಂಪುರವರ ಕೆಲವು ಸಾಲುಗಳನ್ನು ನೆನಪು ಮಾಡಲು ಇಚ್ಚಿಸುತ್ತೀನಿ.,.. ಪ್ರತಿಯೊಬ್ಬನ ಜೀವನದಲ್ಲಿಯೂ ಒಂದು ಸಂಧಿಕಾಲ ಬರುತ್ತದೆ. ಚಿಕ್ಕಂದಿನಲ್ಲಿ ತಂದೆತಾಯಿಗಳಿಂದಲೂ ಇತರರಿಂದಲೂ ವಿಮರ್ಶೆಯಿಲ್ಲದೆ- ವಿಚಾರವಿಲ್ಲದೆ- ಸಂಶಯವಿಲ್ಲದೆ ಸ್ವೀಕರಿಸಿದ ಭಾವನೆ, ಆಲೋಚನೆ, ಶ್ರದ್ಧೆ, ಕಥೆ, ನಂಬುಗೆ ಇತ್ಯಾದಿಗಳ ಶ್ರುತಿ (ಹೇಳಿದೊಡನೆ ನಂಬುವುದು)ಗೂ ತರುವಾಯ ತಾರುಣ್ಯದಲ್ಲಿ ಬುದ್ಧಿ ಪ್ರಬುದ್ಧವಾದ ಮೇಲೆ ಮೂಡುವ ವಿಮರ್ಶೆಯ- ವಿಚಾರದ- ಸಂಶಯದ ಪ್ರತಿಭಟನೆಯ ಮತಿಗೂ (ಹೇಳಿದ್ದು ಸಕಾರಣವಾಗಿದ್ದರೆ ಮಾತ್ರ ನಂಬುವುದು) ಗದಾಯುದ್ಧವಾಗುವ ಕ್ರಾಂತಿಕಾಲದಿಂದ ಬುದ್ಧಿಯಿರುವವರು ಯಾರೂ ತಪ್ಪಿಸಿಕೊಳ್ಳಲಾರರು. ಅಂತಹ ಮಾನಸಿಕ ಕ್ರಾಂತಿ ಹೊಸ ಬಾಳಿಗೆ ಕಾರಣವಾಗುತ್ತದೆ ಹಾಗೆ ಎರಡನೆಯ ಸಾರಿ ಹೊಸತಾಗಿ ಹುಟ್ಟಿದವರೆಲ್ಲರೂ ನಿಜವಾಗಿ ದ್ವಿಜರಾಗುತ್ತಾರೆ.
ಪ್ರತಿಷ್ಟೆಗಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನ ತಯಾರಿಸಿ, ಉಳಿದ ಮೇಲೆ ಅದನ್ನು ಬಡವರಿಗೆ ಹಂಚುವುದು ದೇಶದ್ರೋಹದ ಕೆಲಸವೆಂದು ನಾವೆಲ್ಲರು ಪರಿಗಣಿಸ ಬೇಕಾದ ಅನಿವಾರ್ಯತೆ ಇದೆ ಮತ್ತು ಸರ್ಕಾರ ಈ ವಿಚಾರವಾಗಿ strict ಆಗಿ ಕಾನೂನು ಮಾಡೋವರೆಗೆ ನಾವೆಲ್ಲರು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.