ಜನ 7, 2016

ಮಲ್ಡಾದ ಮತಿಗೆಟ್ಟ ಮುಸ್ಲಿಮರು…

Dr Ashok K R
ಈ ದೇಶದಲ್ಲಿ ಬೇಳೆ ಬೆಲೆ ಇನ್ನೂರು ದಾಟುದ್ರೂ ಪ್ರತಿಭಟನೆ ನಡೆಯೋಲ್ಲ, ತರಕಾರಿ ಬೆಲೆ ಗಗನ ಮುಟ್ಟಿದ್ರೂ ತಲೆ ಕೆಡಿಸಿಕೊಳ್ಳೋರಿಲ್ಲ, ಪಂಚಾಯತ್ ಚುನಾವಣೆಯ ಮೇಲೆ ಕಣ್ಣಿಟ್ಟು ಹಾಲು ಮೊಸರಿನ ದರವನ್ನು ಏಕಾಏಕಿ ಏರಿಸಿಬಿಟ್ಟರೂ ಕೇಳೋರಿಲ್ಲ ಅದೇ ದೇವರ ಬಗ್ಗೆ, ದೇವದೂತನ ಬಗ್ಗೆ ಯಾರೋ ಒಬ್ಬ ಮನಸ್ಸಿಗೆ ತೋಚಿದ ಹೊಲಸನ್ನು ಹೇಳಿಬಿಟ್ಟರೆ ಪ್ರಪಂಚವೇ ಮುಳುಗಿಹೋದಂತೆ ಪ್ರತಿಭಟಿಸೋದಕ್ಕೆ ನಾಮುಂದು ತಾಮುಂದು ಎಂದು ಓಡೋಡಿ ಬರುವ ಮತಿಗೆಟ್ಟ ಜನರ ಸಂಖೈಗಂತೂ ಇಲ್ಲಿ ಕೊರತೆಯಿಲ್ಲ. ಮತ್ತಿವರನ್ನು ಬೆಂಬಲಿಸುವುದಕ್ಕೆ ಮತಬ್ಯಾಂಕಿನ ಮೇಲೆ, ಹತ್ತಿರದಲ್ಲಿರುವ ಚುನಾವಣೆಗಳ ಮೇಲೆ ಕಣ್ಣಿಡುವ ರಾಜಕಾರಣಿಗಳ ಸಂಖೈಯಂತೂ ಭಾರತದಲ್ಲಿ ಬೇಕಾದಷ್ಟಿದೆ. 

ಅದೇನು ಈ ಅಜಂ ಖಾನೆಂಬ ಉತ್ತರಪ್ರದೇಶದ ಸಚಿವರೆಂಬ ಬ್ರಹಸ್ಪತಿಯ ನಾಲಿಗೆಯಲ್ಲೇ ಹೊಲಸಿದೆಯೋ ಗೊತ್ತಿಲ್ಲ, ಮಾತನಾಡಿದ್ದೆಲ್ಲವೂ ವಿವಾದಾತ್ಮಕವಾಗಿರುತ್ತದೆ; ಅಥವಾ ವಿವಾದಾತ್ಮಕವಾಗಿರಲೆಂದೇ ಮಾತನಾಡುತ್ತಾರೇನೋ. ಆರ್.ಎಸ್.ಎಸ್ಸಿನಲ್ಲಿರುವವರು ಬಹಳಷ್ಟು ಜನ ಮದುವೆಯಾಗುವುದಿಲ್ಲವಲ್ಲ, ಅದಕ್ಕೇ ಅವರು ಸಲಿಂಗಕಾಮಿಗಳಾಗಿರುತ್ತಾರೆ ಎಂದೊಂದು ಹೇಳಿಕೆಯನ್ನು ಒಗಾಯಿಸಿಬಿಟ್ಟರು. ಆರ್.ಎಸ್.ಎಸ್ಸಿನವರು ಸಲಿಂಗಕಾಮಿಗಳಾಗಿದ್ದರೇನು ಬಿಟ್ಟರೇನು? ಕಾಮವೆಂಬುದು ಅವರವರ ವೈಯಕ್ತಿಕ ಬದುಕು. ಉಳಿದವರಿಗೆ ತೊಂದರೆ ಕೊಡದಿದ್ದರಾಯಿತು. ಈ ಅಜಂ ಖಾನ್ ಹುಟ್ಟಿದಾರಾಭ್ಯ ಆರ್.ಎಸ್.ಎಸ್ ಕಾರ್ಯಕರ್ತರ ಬೆಡ್ ರೂಮಿನೊಳಗೆ ಕುಳಿತು ಎಲ್ಲವನ್ನೂ ನೋಡಿದ್ದಾರೆಯೇ? ಮತ್ತೇನಿಲ್ಲ, ಸುಮ್ನೆ ಸುದ್ದಿಯಲ್ಲಿರೋಕೆ ಒಂದು ಹೇಳಿಕೆಯದು ಅಷ್ಟೇ. ಇಲ್ಯಾರೋ ಸುದ್ದಿಯಲ್ಲಿದ್ದಾರೆಂದರೆ ಅಲ್ಲಿನ್ಯಾರೋ ಸುದ್ದಿ ಮಾಡುವುದು ತಪ್ಪಲ್ಲವಲ್ಲ. ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯ (ತದನಂತರ ಆ ಸಂಘಟನೆ ಈತ ನಮ್ಮ ಸದಸ್ಯನಲ್ಲ ಎಂದು ಕೈತೊಳೆದುಕೊಂಡಿತು) ಕಮಲೇಶ್ ತಿವಾರಿ ಎಂಬ ‘ಇತಿಹಾಸಕಾರ’ ಪ್ರಪಂಚದ ಮೊದಲ ಸಲಿಂಗಿ ಪ್ರವಾದಿ ಮೊಹಮ್ಮದ್ ಎಂದು ಪ್ರಚಾರಪ್ರಿಯ ಹೇಳಿಕೆ ನೀಡಿಬಿಟ್ಟರು. ಅದ್ಯಾವಾಗ ಈ ಪುಣ್ಯಾತ್ಮ ಸೌದಿ ಅರೇಬಿಯಾಗೆ ಹೋಗಿ ಸಂಶೋಧನೆ ನಡೆಸಿದರೋ, ಅಥವಾ ಪ್ರವಾದಿಗಳ ಬಗ್ಗೆ ಬಂದಿರುವ ಸಂಶೋಧನಾತ್ಮಕ ಲೇಖನಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಯಾವಾಗ ಓದಿದರೋ ಪ್ರವಾದಿಗಳೇ ಹೇಳಬೇಕು. ಪ್ರಚಾರಪ್ರಿಯರ ಅಸಂಬದ್ಧ ಮಾತುಗಳನ್ನು ವಿರೋಧಿಸಲು ಪ್ರಜಾಪ್ರಭುತ್ವದಲ್ಲಿ ಕಾನೂನಿನ ಮಾರ್ಗವಿದೆ. ಅಜಂ ಖಾನರ ವಿರುದ್ಧ, ಕಮಲೇಶ್ ತಿವಾರಿಯ ವಿರುದ್ಧ ಪೋಲೀಸರಲ್ಲಿ ದೂರು ನೀಡಬಹುದು. ಮಿಕ್ಕ ಕೆಲಸವನ್ನು ಪೋಲೀಸರು ಕಾನೂನಿನ ಪ್ರಕಾರ ಮಾಡುತ್ತಾರೆ. ಆ ಹೇಳಿಕೆಗಳನ್ನು ವಿರೋಧಿಸಲು ಪ್ರತಿಭಟನೆಯ ಮಾರ್ಗವೂ ಇದ್ದೇ ಇದೆ. ಪೋಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಪ್ರತಿಭಟನೆಯನ್ನು ಸತತವಾಗಿ ಮಾಡಿ ಒತ್ತಡ ಹಾಕುವ ಮಾರ್ಗವೂ ಉಂಟು. ತಲೆಕೆಟ್ಟವರ ಮಾತುಗಳನ್ನು ವಿರೋಧಿಸುವವರಿಗೆ ತಲೆ ಸರಿಯಿರಬೇಕೆಂದು ನಂಬಲಾದೀತೇ?

ಪಶ್ಚಿಮ ಬಂಗಾಳದ ಮಲ್ಡಾದಲ್ಲಿ ಕಮಲೇಶ್ ತಿವಾರಿಯ ಹೇಳಿಕೆಯನ್ನು ವಿರೋಧಿಸಿ ಲಕ್ಷದ ಲೆಕ್ಕದಲ್ಲಿ ಮುಸ್ಲಿಮರು ಬೀದಿಗಿಳಿದಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ಎಲ್ಲರ ಹಕ್ಕು ಸರಿ, ಆದರೆ ಕಮಲೇಶ್ ತಿವಾರಿಯನ್ನು ನೇಣಿಗಾಕಿ ಎಂದೆಲ್ಲ ಪ್ರತಿಭಟಿಸುವುದು ಯಾವ ಪುರುಷಾರ್ಥಕ್ಕೆ? ಅದು ಅತ್ಲಾಗಿರಲಿ, ಪ್ರತಿಭಟನೆಯ ನೆಪದಲ್ಲಿ ಈ ಮತಿಗೆಟ್ಟ ಮುಸ್ಲಿಮರು ಹಿಂದೂ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಇಕ್ಕಿದ್ದಾರೆ; ಪೋಲೀಸರ ವಾಹನಗಳಿಗೆ ಕೊನೆಗೆ ನಮ್ಮ ಗಡಿ ಕಾಯುವ ಬಿ.ಎಸ್.ಎಫ್ ವಾಹನಗಳಿಗೂ ಬೆಂಕಿ ಹಚ್ಚಿ ಇಡೀ ಊರನ್ನು ಕೋಮುಗಲಭೆಗೆ ನೂಕಿಬಿಟ್ಟಿದ್ದಾರೆ. ಶತಮಾನಗಳ ಹಿಂದೆ ಸತ್ತ ಪ್ರವಾದಿಯ ಬಗ್ಗೆ ಪ್ರಚಾರಪ್ರಿಯನೊಬ್ಬ ನೀಡಿದ ಹೇಳಿಕೆಗೆ ಈ ಪಾಟಿ ಪ್ರತಿಭಟಿಸುವವರು ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಇದೇ ರೀತಿ ಬೀದಿಗಿಳಿಯುವ ಮನಸ್ಸು ಮಾಡಿದ್ದಿದ್ದರೆ ದೇಶ ಯಾವಾಗ್ಲೋ ಉದ್ಧಾರವಾಗಿಬಿಟ್ಟಿರೋದು. ಇಷ್ಟೆಲ್ಲ ಗಲಾಟೆಗಳಾದ ಮೇಲೆ ರಾಜಕೀಯವಿರದೆ ಇದ್ದರೆ ಹೇಗೆ? ಅದೂ ಈ ವರುಷವೇ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆಗಳು ನಡೆಯುವಾಗ ರಾಜಕೀಯವಿರಲೇಬೇಕಲ್ಲ. ಪಶ್ಚಿಮ ಬಂಗಾಳದಲ್ಲಿರುವುದು ತೃಣಮೂಲ ಕಾಂಗ್ರೆಸ್ಸಿನ ಸರಕಾರ; ಗಲಭೆಗೆ ಸಂಬಂಧಪಟ್ಟಂತೆ 130ಜನರ ಮೇಲೆ ಕೇಸುಗಳು ಬಿದ್ದಿವೆ. ಬಂಧನವಾಗಿರುವುದು ಕೇವಲ ಹತ್ತು ಜನರು, ಅದರಲ್ಲೂ ಕೆಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ತೃಣಮೂಲ ಕಾಂಗ್ರೆಸ್ ಸರಕಾರ ಒಂದಷ್ಟು ಮೆದುವಾಗಿಬಿಟ್ಟಿದೆ ಈ ಮತಿಗೆಟ್ಟವರ ವಿರುದ್ಧ. ಇನ್ನು ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಕಂಡುಕೊಳ್ಳುವ ದಾರಿಯಲ್ಲಿರುವ ಬಿಜೆಪಿಗೆ ಹಿಂದೂ ರಕ್ಷಕ ನಾನೊಬ್ಬನೇ ಎಂದು ತೋರಿಸಿಕೊಳ್ಳುವ ಹಪಾಹಪಿ, ಸಿಪಿಎಂ ಮತ್ತು ಅಸ್ತಿತ್ವನ್ನಾಗಲೇ ಕಳೆದುಕೊಂಡಿರುವ ಕಾಂಗ್ರೆಸ್ಸಿಗೆ ಮಲ್ಡಾದಲ್ಲಿ ಹೆಚ್ಚಿನ ಸಂಖೈಯಲ್ಲಿರುವ ಮುಸ್ಲಿಮರ ಮತಗಳನ್ನು ಸುಖಾಸುಮ್ಮನೆ ಅದೂ ಇದೂ ಹೇಳಿಕೆ ನೀಡಿ ಕಳೆದುಕೊಳ್ಳಬೇಕೆ ಎಂಬ ಚಿಂತೆ. ಒಟ್ನಲ್ಲಿ ಮತಿಗೆಟ್ಟ ಜನರನ್ನು ಆಳಲು ತಲೆಕೆಟ್ಟ ಜನರೇ ಸರಿ ಬಿಡಿ. ‘ಅದ್ಯಾರೋ ಏನೋ ಮಾತಾಡುದ್ರೆ ನಿಮ್ದೇನ್ರಯ್ಯಾ ಹಾಳಾಗಿದ್ದು, ಮುಚ್ಕೊಂಡು ನಿಮ್ ನಿಮ್ ಕೆಲ್ಸ ಮಾಡೋಗ್ರಯ್ಯ’ ಎಂದು ಈ ಮತಿಗೆಟ್ಟವರಿಗೆ ಹೇಳುವಂತಹ ನಾಯಕ ಧರ್ಮದೊಳಗಿನ ಸಮುದಾಯದಲ್ಲೂ ಇಲ್ಲ, ರಾಜಕಾರಣಿಗಳಲ್ಲೂ ಇಲ್ಲ. ಹೇಳಿದರೂ ಕೇಳುವಷ್ಟು ಬುದ್ಧಿವಂತರೇ ನಾವು? ‘ಧರ್ಮವೆಂಬುದು ಅಫೀಮಿದ್ದ ಹಾಗೆ’ ಎಂಬ ಕಾರ್ಲ್ ಮಾರ್ಕ್ಸನ ಮಾತುಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತಲೇ ಇರಬೇಕು.

ನವೆಂ 27, 2015

ಪತ್ರಕರ್ತೆಯ ವಿರುದ್ಧ ಮುಸ್ಲಿಂ ಮತಾಂಧರ ಅಟ್ಟಹಾಸ.

ಕೇರಳದ ಮಾಧ್ಯಮಂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತೆ ವಿ.ಪಿ.ರಜೀನಾ ಕೆಲವು ದಿನಗಳ ಕೆಳಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮದರಾಸಾಗಳ ಬಗ್ಗೆ ಒಂದು ಪೋಸ್ಟನ್ನು ಹಾಕುತ್ತಾರೆ. ಸುಮಾರು ಇಪ್ಪತ್ತು ವರುಷಗಳ ಹಿಂದೆ ಮದರಾಸದಲ್ಲಿದ್ದಾಗ ನೋಡಿದ್ದ ಸಂಗತಿಗಳನ್ನು ಹಾಕುತ್ತಾರೆ. ಫೇಸ್ ಬುಕ್ಕಿನ ಮುಸ್ಲಿಂ ಮತಾಂಧರು ಆ ಪೋಸ್ಟಿಗೆ ರಣಭಯಂಕರವಾಗಿ ಕಮೆಂಟು ಮಾಡಿ, ಎಂದಿನಂತೆ ಪತ್ರಕರ್ತೆಯನ್ನು ನೀಚಾತಿ ನೀಚ ಭಾಷೆಯಲ್ಲೆಲ್ಲ ನಿಂದಿಸಿ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆಯನ್ನೇ ಬ್ಲಾಕ್ ಮಾಡಿಸಿಬಿಡುತ್ತಾರೆ. ಒಂದಷ್ಟು ಪ್ರಯತ್ನದ ನಂತರ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆ ಮತ್ತೆ ಚಾಲ್ತಿಗೆ ಬಂದಿದೆ. ಇಷ್ಟಕ್ಕೂ ರಜೀನಾ ಬರೆದಿದ್ದಾದರೂ ಏನನ್ನು?
ಒಂದನೇ ತರಗತಿಯ ಮೊದಲ ದಿನದಂದು ಉಸ್ತಾದ್ ಶಾಲೆಯ ಹುಡುಗರನ್ನೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಮುಟ್ಟಬಾರದ ಜಾಗದಲ್ಲೆಲ್ಲಾ ಮುಟ್ಟಿ ಕಳುಹಿಸುತ್ತಿದ್ದುದರ ಬಗ್ಗೆ ರಜೀನಾ ಬರೆದುಕೊಂಡಿದ್ದರು. ಅದರ ಜೊತೆಗೆ ನಾಲ್ಕನೇ ತರಗತಿಯಲ್ಲಿದ್ದ ರಾತ್ರಿ ಶಾಲೆಯ ಮಾಸ್ತರು ಹುಡುಗಿಯರನ್ನು ಸವರುತ್ತಿದ್ದ, ಒಂದು ಹುಡುಗಿ ಜೋರಾಗಿ ಕಿರುಚಿ ದೊಡ್ಡ ಮಾಸ್ತರರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ ನಂತರ ಆ ನೀಚ ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರಂತೆ. ಇದಿಷ್ಟು ರಜೀನಾ ಬರೆದ ಪೋಸ್ಟಿನ ಸಾರಾಂಶ. ಇದು ನಡೆದಿದ್ದು ರಜೀನಾ ಓದುತ್ತಿದ್ದಾಗ, ಹೆಚ್ಚು ಕಡಿಮೆ ಇಪ್ಪತ್ತು ವರುಷಗಳ ಕೆಳಗೆ. ಇವತ್ತಿನ ಮದರಾಸಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಿವೆಯಾ? ನಡೆಯುತ್ತಿದ್ದರೆ ಸ್ವಸ್ಥ ಸಮಾಜದ ನಾಗರೀಕರು ಯಾವ ರೀತಿಯಿಂದ ಇದನ್ನು ತಡೆಯಬೇಕು? ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಿತ್ತು. ಆದರೆ ಫೇಸ್ ಬುಕ್ಕಿನ ಅವರ ಪೋಸ್ಟುಗಳಲ್ಲಿರುವ ಕಮೆಂಟುಗಳನ್ನು ನೋಡಿದರೆ ಸಮಾಜದ ಅಸ್ವಸ್ಥ ಮುಖಗಳ ದರ್ಶನವಾಗುತ್ತದೆ. ಮೂರ್ತಿ ಪೂಜೆಯನ್ನು ಒಪ್ಪದ ಮುಸ್ಲಿಮರಿಗೆ ಮದರಾಸ ಕಟ್ಟಡವೇ ಮೂರ್ತಿಯಂತೆ ಕಂಡುಬಿಟ್ಟಿತೋ ಏನೋ?! ಮದರಾಸಾದ ಬಗ್ಗೆ ಬರೆದ ರಜೀನಾರವರನ್ನು ಇಲ್ಲಸಲ್ಲದ ಮಾತುಗಳಿಂದೆಲ್ಲ ಟೀಕಿಸಲಾಗಿದೆ. ಬೆದರಿಕೆ ಹಾಕಲಾಗಿದೆ. ಚಿಕ್ಕಂದಿನ ಅನುಭವವನ್ನು ಬರೆದುದಕ್ಕೆ 'ಅದಕ್ಕೆ ಪುರಾವೆ ಏನು?' ಎಂದು ಕೇಳುವ ಮುತ್ಸದ್ಧಿಗಳೂ ಇದ್ದಾರೆ! ಬಹಳಷ್ಟು ಮತಾಂಧರು ರಜೀನಾರವರ ಖಾತೆಯನ್ನು ಬ್ಲಾಕ್ ಮಾಡಲು ಸಲಹೆ ನೀಡಿದ ಕಾರಣ ಫೇಸ್ ಬುಕ್ ಅವರ ಖಾತೆಯನ್ನು ಬ್ಲಾಕ್ ಮಾಡಿಬಿಟ್ಟಿತ್ತು. ಈಗ ಮತ್ತೆ ರಜೀನಾರವರ ಖಾತೆ ಚಾಲ್ತಿಯಲ್ಲಿದೆ. ನನ್ನ ಮಾತುಗಳಿಗೆ ನಾನು ಬದ್ಧ ಎಂಬ ಅವರ ಪೋಸ್ಟಿಗೂ ಕೆಟ್ಟ ಕಮೆಂಟುಗಳ ಸುರಿಮಳೆಯಾಗಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು 'ನೀವೇಳಿದ್ದು ನಿಜ. ಮದರಾಸಾಗೆ ಮಕ್ಕಳನ್ನು ಕಳಿಸಬಾರದು' ಎಂದು ಬರೆದಿದ್ದಾರಷ್ಟೇ.

ನವೆಂ 20, 2015

ಮಿಸ್ಟೇಕ್!

harish mangalore
ಕತೆಗಳ ಪುಸ್ತಕವನ್ನು ನೂರಾರು ಓದಿದ್ದೇನೆ. ನನ್ನನ್ನು ತುಂಬಾ ಕಾಡಿದ ಕತೆಗಳನ್ನು ಬರೆದಿದ್ದು ಸದತ್ ಹಸನ್ ಮಾಂಟೋ. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಕಾರಣದಿಂದ, ಮನೆಯವರ ಒತ್ತಡದ ಕಾರಣದಿಂದ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ದಾರಿಯುದ್ದಕ್ಕೂ ಕಂಡ ಧರ್ಮಾಧಾರಿತ ಹಿಂಸಾಚಾರ ಸದತ್ ಹಸನ್ ಮಾಂಟೋನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತದೆ. ಆ ಹುಚ್ಚುತನದಲ್ಲೇ ಆತ ಬರೆದ ಕತೆಗಳನ್ನು ಓದುತ್ತಿದ್ದರೆ ಮನುಷ್ಯ ಇಷ್ಟೊಂದು ಅಮಾನವೀಯವಾಗಿ ವರ್ತಿಸಬಲ್ಲನಾ ಎಂಬ ಅನುಮಾನ ಮೂಡುತ್ತಿತ್ತು. ಆ ಕತೆಗಳಲ್ಲಿನ ಅಮಾನವೀಯತೆಯನ್ನು ಮೀರಿಸುವಂತಹ ಘಟನೆಗಳು ವರ್ತಮಾನದಲ್ಲಿ ನಡೆಯುತ್ತಿರುವಾಗ ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಗಳಾಗಿದ್ದರೂ ತಾಂತ್ರಿಕವಾಗಿ ಮೇಲ್ಮೆ ಸಾಧಿಸಿ, ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿ ಮನುಷ್ಯನ ಕ್ರೂರಿ ಮನಸ್ಸನ್ನು ಅಲ್ಲೇ ನಿಲ್ಲಿಸಿಬಿಟ್ಟಿದ್ದೇವೆಯಾ? ಎಂಬ ಪ್ರಶ್ನೆ ಮೂಡುತ್ತದೆ. ಕೋಮುಗಲಭೆಯ ಸಂದರ್ಭದಲ್ಲೆಲ್ಲ ಸದತ್ ಹಸನ್ ಮಾಂಟೋನ ಪುಟ್ಟ ಕತೆಯೊಂದು ನನ್ನನ್ನು ಬಹಳವಾಗಿ ಕಾಡುತ್ತದೆ. ಕತೆಯ ಹೆಸರು ಮಿಸ್ಟೇಕ್. ಗಲಭೆಯ ಸಂದರ್ಭ. ಕತ್ತಿ ಹಿಡಿದು ಬಂದವರು ದಾರಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬನ ಹೊಟ್ಟೆಗೆ ತಿವಿಯುತ್ತಾರೆ. ತಿವಿಯುವಾಗ ಕತ್ತಿ ಆತನ ಲಾಡಿಯನ್ನು ಕತ್ತರಿಸಿಹಾಕುತ್ತದೆ. ಪ್ಯಾಂಟು ಕೆಳಗೆ ಜಾರುತ್ತದೆ. ಸತ್ತ ವ್ಯಕ್ತಿಯ ಶಿಶ್ನ ನೋಡಿದ ಕತ್ತಿವೀರ 'ಮಿಸ್ಟೇಕ್' ಎಂದುದ್ಗರಿಸಿ ಮತ್ತೊಬ್ಬನನ್ನು ಕೊಲ್ಲಲು ಹೊರಡುತ್ತಾನೆ. ಸದತ್ ನ ಮೂರು ಸಾಲಿನ ಈ ಕತೆ ಧರ್ಮಾಂಧರಲ್ಲಿನ ಕ್ರೌರ್ಯ, ಅವರಿಗೆ ಅಂತಿಮ ಸುಖ ಸಿಗುವುದು ಕೊಲ್ಲುವ ಹಿಂಸೆಯಿಂದಷ್ಟೇ ಎನ್ನುವ ವಾಸ್ತವವನ್ನು ತಿಳಿಸಿ ಹೇಳುತ್ತದೆ. 
ಮಿಸ್ಟೇಕ್ ಕತೆಯ ರೀತಿಯ ಘಟನೆಯೇ ಮಂಗಳೂರಿನಲ್ಲಿ ನಡೆದುಹೋಗಿದೆ. ಸ್ನೇಹಿತರಾದ ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. ಈ ಕೊಲೆಗೆ ಸಂಬಂಧಪಟ್ಟಂತೆ ಮಂಗಳೂರು ಪೋಲೀಸರು ಭುವಿತ್ ಶೆಟ್ಟಿ ಮತ್ತು ಅಚ್ಯುತ್ ಎನ್ನುವವರನ್ನು ಬಂಧಿಸಿದ್ದಾರೆ. ಈ ಭುವಿತ್ ಶೆಟ್ಟಿ ಕಲಬುರಗಿಯ ಹತ್ಯೆಯಾದ ಸಂದರ್ಭದಲ್ಲಿ ಹತ್ಯೆಯನ್ನು ಸಮರ್ಥಿಸಿ ಹಾಕಿದ ಟ್ವೀಟುಗಳ ಕಾರಣದಿಂದ ಬಂಧಿತನಾಗಿದ್ದ. ಭುವಿತನಿಗೆ ಇಪ್ಪತ್ತೈದು ವರ್ಷ, ಅಚ್ಯುತನಿಗೆ ಇಪ್ಪತ್ತೆಂಟು ವರುಷವಷ್ಟೇ. ಇನ್ನು ಸತ್ತ ಹರೀಶನೂ ಅದೇ ವಯಸ್ಸಿನವನು. ಬಡ ಕುಟುಂಬದಿಂದ ಬಂದವನು. ಕುಟುಂಬಕ್ಕೆ ಆಸರೆಯಾಗಿದ್ದವನು. ಧರ್ಮಾಂಧರ ಕ್ರೌರ್ಯ ಒಂದಿಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದೆ. ಧರ್ಮಾಂದತೆಯನ್ನು ತುಂಬಿದವರ ತಣ್ಣನೆಯ ಕ್ರೌರ್ಯದಿಂದ ಭುವಿತ್ ಅಚ್ಯುತನಂತಹ ಸಾವಿರ ಕುಟುಂಬಗಳು ನಾಶವಾಗುತ್ತಿವೆ. ಹಿಂದೂ ಸಂಘಟನೆಯ ಭುವಿತ್ ಮತ್ತು ಅಚ್ಯುತ್ ಗುರಿ ಹರೀಶನಾಗಿರಲಿಲ್ಲ. ಸಮೀವುಲ್ಲಾ ಎಂಬ ಸಾಬಿಯಾಗಿದ್ದ. ಸಾಬಿಗೊಬ್ಬ ಹಿಂದೂ ಗೆಳೆಯನಿರುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದು ಈ ಯುವಕರ ತಲೆಗೆ ತುಂಬಿಬಿಟ್ಟಿರುತ್ತಾರೆ. ಸಮೀವುಲ್ಲಾನನ್ನು ರಕ್ಷಿಸಲು ಬಂದ ಹುಡುಗ ಕೂಡ ಮುಸಲ್ಮಾನನೇ ಎಂದು ಹತ್ಯೆ ಮಾಡಿದ್ದಾರೆ. ಸದತ್ ಹಸನ್ ಮಾಂಟೋನ ಕತೆಯ ಲೆಕ್ಕದಲ್ಲಿ ಮಿಸ್ಟೇಕಾಗಿದೆ. ಹತ್ಯೆ ಮಾಡಿದವರು ಕತ್ತಿ ಹಿಡಿದು ಮತ್ತೊಬ್ಬನನ್ನು ಮಗದೊಬ್ಬನನ್ನು ಕೊಲ್ಲಲು ಹೊರಟುಬಿಡುತ್ತಾರೆ.

ಅಕ್ಟೋ 1, 2015

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ...

mohammad akhlaq
ಈ ಲೇಖನದ ಹೆಡ್ಡಿಂಗು ಇವತ್ತಿನದಲ್ಲ. ಬರೋಬ್ಬರಿ ಮೂರು ವರುಷದ ಹಿಂದೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೀಫ್ ಫೆಸ್ಟಿವಲ್ ಎಂಬ ಊಟದ ಹಬ್ಬದ ಸಂದರ್ಭದಲ್ಲಿ ಆ ಫೆಸ್ಟಿವಲ್ಲಿನ ಪರವಾಗಿದ್ದ ಹುಡುಗನೊಬ್ಬನಿಗೆ ಹಬ್ಬವನ್ನು ವಿರೋಧಿಸುವವರು ಚೂರಿ ಹಾಕಿಬಿಟ್ಟಿದ್ದರು. ಆಗ ಬರೆದ ಲೇಖನ ಇವತ್ತು ಮತ್ತೆ ನೆನಪಾಗಿದ್ದು ಉತ್ತರಪ್ರದೇಶದ ದಾದ್ರಿಯ ಬಿಸಾರ ಎಂಬಲ್ಲಿ 'ಬೀಫ್' ತಿಂದರು ಎಂಬ ಅನುಮಾನದ ಮೇಲೆ ಒಂದಿಡೀ ಕುಟುಂಬವನ್ನು ಥಳಿಸಲಾಗಿದೆ. ಮನೆಯ ಹಿರಿಯ ಮೊಹಮದ್ ಅಕ್ಲಾಖನನ್ನು ಹೊಡೆದು ಬಡಿದು ಸಾಯಿಸಲಾಗಿದೆ. ಅವರ ಮಗ ಡ್ಯಾನಿಷ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಮೂರು ವರ್ಷದ ಕೆಳಗೆ ಚೂರಿ ಚುಚ್ಚುವವರೆಗಿದ್ದ ಮನಸ್ಥಿತಿ ಈಗ ಸಾಯಿಸಿಯೇಬಿಡುವಷ್ಟು ಹಾಳಾಗಿಬಿಟ್ಟಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವು ಹಿಂದೂ ಉಗ್ರರನ್ನು ಬಂಧಿಸಲಾಗಿದೆ. ಯಾವ ಉಗ್ರಗಾಮಿ ಸಂಘಟನೆಗೂ ಅಧಿಕೃತವಾಗಿ ಸೇರಿದವರಲ್ಲ ಎಂದು ಪೋಲೀಸರು ಹೇಳಿದ್ದಾರೆ.


ಒಂದು ಕರು ಕಾಣೆಯಾಗುತ್ತದೆ. ಅದರ ಮಾಂಸವನ್ನು ಮೊಹಮದ್ ಅಕ್ಲಾಖ್ ತೆಗೆದುಕೊಂಡು ಹೋಗುತ್ತಿದ್ದ'ನಂತೆ' ಎಂದು ಸುದ್ದಿಯಾಗುತ್ತದೆ. ಅವರ ಮನೆಯವರು ದನದ ಮಾಂಸವನ್ನು ತಿಂದ'ರಂತೆ' ಎಂದು ಸ್ಥಳೀಯ ದೇವಸ್ಥಾನದಲ್ಲಿ 'ಘೋಷಿಸಲಾಗುತ್ತದೆ'. ಧರ್ಮರಕ್ಷಣೆಯ ಹೊಣೆ ಹೊತ್ತ ಹಿಂದೂ ಉಗ್ರರು ಅಕ್ಲಾಖನ ಮನೆಗೆ ನುಗ್ಗಿ ಸಾಯುವವರೆಗೂ ಬಡಿಯುತ್ತಾರೆ. ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಪೋಲೀಸರು ಪರೀಕ್ಷೆಗೆ ಲ್ಯಾಬಿಗೆ ಕಳುಹಿಸುತ್ತಾರೆ! ಅಕ್ಲಾಖನ ಮಗಳು ಸಾಜ್ದಾಳ 'ಅದು ದನದ ಮಾಂಸವೇ ಅಲ್ಲ. ದನದ ಮಾಂಸ ಅಲ್ಲವೆಂದು ಲ್ಯಾಬ್ ರಿಪೋರ್ಟ್ ಹೇಳಿದರೆ ನನ್ನ ತಂದೆಯನ್ನು ವಾಪಸ್ಸು ಕೊಡುತ್ತಾರೆಯೇ?' ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಅದು ದನದ ಮಾಂಸವೋ ಮತ್ತೊಂದೋ ಮನೆಗೆ ನುಗ್ಗಿ ಸಾಯ ಬಡಿಯುವಂತಹ 'ಹಕ್ಕನ್ನು' ಈ ಉಗ್ರರಿಗೆ ನೀಡಿದ್ದಾದರೂ ಯಾರು? ಮೊಹಮದ್ ಅಕ್ಲಾಖ್ ಕರುವನ್ನು ಕದ್ದಿದ್ದೇ ಹೌದಾದರೆ ಅದನ್ನು ವಿಚಾರಿಸಲು ಪೋಲೀಸರಿಲ್ಲವೇ? ಏನು ಊಟ ಮಾಡಬೇಕೆಂದು ಆದೇಶಿಸಲು ಇವರ್ಯಾರು? ಇವತ್ತು ದನದ ಮಾಂಸದ ಹೆಸರಿನಲ್ಲಿ ಹಿಂದೂ ಉಗ್ರರು ಸಾಬರ ಮನೆಗೆ ನುಗ್ಗಿದ್ದಾರೆ, ಸಾಬರ ಮನೆಗೆ ತಾನೇ ಎಂದು ನಾವು ಸುಮ್ಮನಿರುತ್ತೀವಿ; ನಾಳೆ ಮಾಂಸ ತಿನ್ನುವ ಹಿಂದೂಗಳ ಮನೆಗೆ ನುಗ್ಗಿ ಬಡಿಯುತ್ತಾರೆ.... ಈಗ ಸುಮ್ಮನಿದ್ದವರು ಆಗ ಮಾತನಾಡುತ್ತೀವಾ?
ದನಕ್ಕಿರುವ ಬೆಲೆ ಮನುಷ್ಯನಿಗಿಲ್ಲವೇ? ಅಂದಹಾಗೆ ಬಿಹಾರ ಚುನಾವಣೆ ಹತ್ತಿರದಲ್ಲಿದೆ....

ಸೆಪ್ಟೆಂ 22, 2015

ಅರ್ಧ ಸತ್ಯಗಳನ್ನು ಮೊದಲು ನಿಷೇಧಿಸಬೇಕು.

ಡಾ.ಅಶೋಕ್. ಕೆ. ಆರ್.
(ಪ್ರಜಾವಾಣಿಗೆ ಪ್ರತಿಕ್ರಿಯೆಯಾಗಿ ಬರೆದ ಪ್ರಕಟಿತ ಪತ್ರ)
ಮಾಂಸ ನಿಷೇಧದ ಬಗ್ಗೆ ಪರ ವಿರೋಧದ ಚರ್ಚೆಯಲ್ಲಿ (ಪ್ರಜಾವಾಣಿ, ಶನಿವಾರ 19/09/2015) ಡಾ. ವಿಜಯಲಕ್ಷ್ಮಿಯವರು ಬರೆದಿರುವ ಅಭಿಪ್ರಾಯಗಳಿಗೆ ಪ್ರತಿಯಾಗಿ ಈ ಪತ್ರ. ವೈದ್ಯರು ತಮ್ಮ ಲೇಖನದ ಪ್ರಾರಂಭದಿಂದಲೇ ಮಾಂಸಾಹಾರಿಗಳನ್ನು ಕೀಳಾಗಿ ಕಾಣುವಂತೆ ವಿವಿಧ ಧರ್ಮಗ್ರಂಥಗಳ ನೆರವು ಪಡೆದುಕೊಂಡಿದ್ದಾರೆ. ಅಥರ್ವ ವೇದ, ಮನುಸ್ಮೃತಿಯಲ್ಲಿ ಮಾಂಸಾಹಾರಿಗಳನ್ನು ನಾಶ ಮಾಡಬೇಕೆಂಬ ಅಭಿಪ್ರಾಯವನ್ನು, ಮಾಂಸಹಾರಿಗಳೆಂದರೆ ಕೊಲೆಗಡುಕರು, ಅಪಾಯಕಾರಿ ಮನಸ್ಥಿತಿಯವರು ಎನ್ನುವುದನ್ನು ಉಲ್ಲೇಖಿಸುತ್ತಾರೆ. ಮುಸ್ಲಿಮರು ಹಲಾಲ್ ಮಾಂಸವನ್ನು ತಿನ್ನುವುದು ಕೂಡ ಅವರ ಕಣ್ಣಿಗೆ ಮಾಂಸಹಾರಿ ವಿರೋಧಿ ಮನಸ್ಥಿತಿಯಂತೆಯೇ ಕಾಣುತ್ತದೆ. ಮುಂದುವರೆಯುತ್ತಾ ಹೇಗೆ ಪಾಕಿಸ್ತಾನದ ಮುಸ್ಲಿಮ್ ಮಹಿಳೆಯರು ವಿದೇಶದಲ್ಲಿ ಸಸ್ಯಾಹಾರವನನ್ನು ಸೇವಿಸಿ ‘ಧರ್ಮರಕ್ಷಣೆ’ ಮಾಡುತ್ತಿದ್ದರು, ಭಾರತದ ಹಿಂದೂಗಳು ಅಲ್ಲಿ ಸಿಕ್ಕ ಸಿಕ್ಕ ಮಾಂಸವನ್ನು ತಿಂದು ‘ಧರ್ಮ’ ಮರೆತರು ಎಂದು ತಿಳಿಸುವುದರ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಆ ವಿದೇಶದಲ್ಲಿ ಅದೇ ಮಾಂಸವನ್ನು ತಿಂದುಕೊಂಡು ಬದುಕುವ ಜನರಿದ್ದಾರೆ, ಅವರದೂ ಒಂದು ಸಂಸ್ಕೃತಿಯಿದೆ ಎನ್ನುವುದನ್ನು ಕಡೆಗಣಿಸಿ ಅದನ್ನು ಹೀಯಾಳಿಸುವುದು ಎಷ್ಟರ ಮಟ್ಟಿಗೆ ಸರಿ? ತಮ್ಮ ವೈಯಕ್ತಿಕ ಮಾಂಸ ವಿರೋಧವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕ್ರಿಶ್ಚಿಯನ್ ಧರ್ಮಗ್ರಂಥಗಳನ್ನೂ ಉಪಯೋಗಿಸಿಕೊಳ್ಳುತ್ತಾರೆ. ಕೊನೆಗೆ ಅವರ ಲೇಖನ ಸಮರ್ಥಿಸುವುದು ಮಾಂಸಹಾರಿಗಳು ವಿಕೃತರು, ಕೊಲೆಗಡುಕರು, ಸಮಾಜಕ್ಕೆ ಅಪಾಯಕಾರಿಗಳು, ಸಸ್ಯಾಹಾರಿಗಳು ‘ಸಾತ್ವಿಕರು’ ಎಂಬ ಮನುವಾದವನ್ನೇ. 

ವೈದ್ಯರಾಗಿರುವುದರಿಂದ ತಮ್ಮ ವಾದಕ್ಕೆ ವೈದ್ಯಕೀಯ ಸಮರ್ಥನೆಯನ್ನು ಕೊಡುವ ಅನಿವಾರ್ಯತೆಗೆ ಬಿದ್ದು ಹೇಗೆ ಮಾಂಸಾಹಾರ ಸೇವಿಸುವುದರಿಂದ ದೇಹದ ಎಲ್ಲಾ ಅಂಗಾಂಗಗಳೂ ನಾಶವಾಗುತ್ತವೆ ಎಂದು ಭಯ ಹುಟ್ಟಿಸುವ ರೀತಿಯಲ್ಲಿ ಬರೆದಿರುವುದರಲ್ಲೆಲ್ಲಾ ಅರ್ಧ ಸತ್ಯವಿದೆ. ಮಾಂಸಾಹಾರಿಗಳು ವರುಷದ ಮುನ್ನೂರೈವತ್ತು ದಿನವೂ ದಿನದ ಮೂರೊತ್ತು ಒಂಚೂರೂ ತರಕಾರಿ – ಸೊಪ್ಪನ್ನು ತಿನ್ನದೆ ಮಾಂಸವನ್ನೇ ಸೇವಿಸುತ್ತಾರೆನ್ನುವುದಾದರೆ ಅವರು ಬರೆದ ಹಾಗೆ ಮನುಷ್ಯನ ದೇಹ ಅನೇಕ ರೋಗ ರುಜಿನಗಳಿಗೆ ‘ಮಾಂಸ’ದ ಕಾರಣದಿಂದಲೇ ತುತ್ತಾಗುತ್ತದೆ. ಆದರೆ ಆ ರೀತಿ ತಿನ್ನುವವರಿದ್ದಾರೆಯೇ? ವಾರದ ಕೆಲವೊಂದು ದಿನವಷ್ಟೇ ಮಾಂಸ ತಿನ್ನುವವರಿಗೆ ಅವರು ಹೇಳಿದಂತೆ ಹೃದ್ರೋಗ, ಮೂತ್ರಪಿಂಡದ ರೋಗ, ಯಕೃತ್ತಿನ ರೋಗವ್ಯಾವುದೂ ಮಾಂಸ ತಿನ್ನುವ ಕಾರಣಕ್ಕೆ ಬರಲಾರದು. ಮತ್ತು ಆ ರೋಗಗಳಿಗೆಲ್ಲ ಇನ್ನೂ ಅನೇಕಾನೇಕ ಕಾರಣಗಳಿರುವುದು ವೈದ್ಯರಾಗಿ ಅವರಿಗೂ ಗೊತ್ತಿರುತ್ತದೆ. ಉದ್ದೇಶಪೂರ್ವಕವಾಗಿ ಹೇಳಿಲ್ಲವಷ್ಟೇ. ಇನ್ನು ಮಾಂಸ ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ, ಅದು ಕೊಳೆತು ವಿಷವನ್ನು ಹೊರಹಾಕುತ್ತದೆ ಎಂದಿದ್ದಾರೆ; ಬೇಯಿಸಿದ ಮಾಂಸ ಜೀರ್ಣವೇ ಆಗದಿದ್ದಲ್ಲಿ ಮಾಂಸ ಸೇವನೆಯಿಂದ ದೇಹಕ್ಕೆ ವಿವಿಧ ಪ್ರೋಟೀನು, ವಿಟಮಿನ್ನುಗಳು ಸಿಗಬಾರದಿತ್ತಲ್ಲವೇ? ಮನುಷ್ಯ ಸಸ್ಯಾಹಾರಿಯಾಗಿ ‘ಸಾತ್ವಿಕ’ರಾಗಬೇಕೆಂದು ಬಯಸುವ ಅವರು ಸಸ್ಯಾಹಾರಿಗಳು ಹಸಿ ಸೊಪ್ಪು – ಹುಲ್ಲನ್ನು ತಿಂದರೆ ಅದೂ ಕೂಡ ಜೀರ್ಣವಾಗುವುದಿಲ್ಲ ಎನ್ನುವುದನ್ನು ಬೇಕಂತಲೇ ಮರೆಯುತ್ತಾರೆ. ಸುಟ್ಟ ಮಾಂಸ ಒಳ್ಳೆಯದಲ್ಲ ಎನ್ನುವ ಅವರು ಸುಟ್ಟ ಯಾವ ಪದಾರ್ಥವೂ (ರೊಟ್ಟಿ, ಜೋಳ) ಹೊಟ್ಟೆಗೆ ಒಳ್ಳೆಯದಲ್ಲ ಎನ್ನುವುದನ್ನು ಬರೆಯುವುದಿಲ್ಲ. ಮೇಲಾಗಿ ಯಾರೂ ದಿನಾ ಸುಟ್ಟ ಪದಾರ್ಥವನ್ನು (ಮಾಂಸವೋ ಸಸ್ಯಾಹಾರವೋ ವ್ಯತ್ಯಾಸವಿಲ್ಲ) ತಿನ್ನುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿಲ್ಲವೇ? ಕೇವಲ ಸಸ್ಯಾಹಾರ ತಿನ್ನುವುದರಿಂದಲೂ ಅನೇಕಾನೇಕ ಪ್ರೋಟೀನು, ವಿಟಮಿನ್ನುಗಳ ಕೊರತೆಯಾಗಿಬಿಡುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲವೇ?. ಪ್ರಾಣಿಜನ್ಯ ಹಾಲನ್ನು ಸೇವಿಸುವುದು ಕೂಡ ಈ ಕೊರತೆಯನ್ನು ನೀಗಿಸುವುದಕ್ಕಾಗಿ ತಾನೇ?

ವೈದ್ಯರೊಬ್ಬರು ಆಹಾರ ಪದ್ಧತಿಯ ಬಗ್ಗೆ ಬರೆವ ಲೇಖನದಲ್ಲಿ ಸಸ್ಯಾಹಾರ ಶ್ರೇಷ್ಟವೆಂಬ ಭ್ರಮೆಯನ್ನು ಬಿತ್ತುವ ಕೆಲಸವಾಗಬಾರದು. ಸಮತೋಲನ ಆಹಾರವೆಂದರೆ ಏನು ಎನ್ನುವುದರ ಕುರಿತು ಬೆಳಕು ಚೆಲ್ಲಬೇಕಿತ್ತು. ಸಸ್ಯಾಹಾರ, ಮಾಂಸಾಹಾರವೆಲ್ಲವೂ ಹೇಗೆ ಕಲುಷಿತವಾಗುತ್ತಿವೆ ಎನ್ನುವುದರ ಕುರಿತು ಅವರ ಕಾಳಜಿಯಿರಬೇಕಿತ್ತು. ಕೋಳಿಗಳು ಶೀಘ್ರವಾಗಿ ಬೆಳೆಯಲು ಹಾರ್ಮೋನುಗಳ ಬಳಕೆ, ತರಕಾರಿ ಸೊಪ್ಪುಗಳು ದಿಡೀರ್ ಅಂತ ಬೆಳೆಯಲು ಬಳಕೆಯಾಗುತ್ತಿರುವ ಕೆಮಿಕಲ್ಲುಗಳು, ವಿದೇಶಿ ತಳಿಯ ಹಸುಗಳಿಗೆ ನೀಡುವ ಹಾರ್ಮೋನುಗಳು ಹಾಲನ್ನು ಸೇರುತ್ತಿರುವ ಬಗ್ಗೆ – ಈ ಹಾರ್ಮೋನು, ಕೆಮಿಕಲ್ಲುಗಳು ಮನುಷ್ಯ ದೇಹವನ್ನು ಸೇರಿ ಹೇಗೆ ವಿವಿಧ ಖಾಯಿಲೆಗಳಿಗೆ ಕಾರಣವಾಗುತ್ತಿವೆ ಎನ್ನುವುದರ ಕುರಿತು ಬರೆದಿರುತ್ತಾರೆ ಎಂದುಕೊಂಡು ಲೇಖನವನ್ನು ಓದಿದರೆ ನಿರಾಸೆಯಾಗುತ್ತದೆ. ಪ್ರಪಂಚದ ಬಹುಸಂಖ್ಯಾತರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವ ಮನಸ್ಥಿತಿ ಇಡೀ ಲೇಖನದ ತುಂಬ ತುಂಬಿಕೊಂಡಿದೆ. ವಿವಿಧ ಧರ್ಮಗ್ರಂಥಗಳನ್ನು ಉಲ್ಲೇಖಿಸಿ ತಮ್ಮ ‘ತಪ್ಪು’ ವಾದವನ್ನು ಸಮರ್ಥಿಸಿಕೊಳ್ಳುವುದು ಬಲಪಂಥೀಯತೆಯ ರೋಗ. ಅಂತದೇ ರೋಗಿಷ್ಟ ಮನಸ್ಥಿತಿಯಿಂದ ವೈಜ್ಞಾನಿಕವಾಗಿ ಅರ್ಧ ಸತ್ಯಗಳಂತಿರುವ ವಾಕ್ಯಗಳಿಂದ ತುಂಬಿಹೋಗಿರುವ ಅವರ ಲೇಖನ ಪ್ರಜಾವಾಣಿಯಂತಹ 
ಪತ್ರಿಕೆಯಲ್ಲಿ ಪ್ರಕಟವಾಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿತು.

ಸೆಪ್ಟೆಂ 15, 2015

ಕೆಂಪ್ ಶರ್ಟು ನೀಲಿ ಚೆಡ್ಡಿ ಮೂರು ವರ್ಷ....

Dr Ashok K R
ಬದುಕು ಮುಗಿಸಿದ ಮಗುವೊಂದು ಮನುಕುಲವನ್ನು ಕಲಕಿದ ದೃಶ್ಯವದು. ಸಾವಿರ ಸಾವಿರ ಪದಗಳ ಲೇಖನಗಳು, ಪ್ರತಿಭಟನೆಗಳು, ನಿರಾಶ್ರಿತರ ಕೂಗುಗಳ್ಯಾವುದೂ ಮಾಡದ ಕಾರ್ಯವನ್ನು ಒಂದು ಫೋಟೋ ಮಾಡಿಸುತ್ತಿದೆ. ಲಕ್ಷ ಲಕ್ಷ ಸಂಖೈಯಲ್ಲಿ ಬರುತ್ತಿದ್ದ ಸಿರಿಯಾ ನಿರಾಶ್ರಿತರಿಗೆ ಮುಚ್ಚಿಹೋಗಿದ್ದ ಯುರೋಪ್ ದೇಶದ ಗಡಿಗಳು ಇದೊಂದು ಫೋಟೋದಿಂದ ತೆರೆದುಕೊಂಡಿದೆ. ನಿರಾಶ್ರಿತರಿಗೆ ಆಶ್ರಯ ಕೊಡುವುದಕ್ಕೆ ಅನೇಕ ಹಳೆಯ ಒಪ್ಪಂದಗಳನ್ನು ಬದಿಗೆ ಸರಿಸಿರುವ ಜರ್ಮನಿ ದೇಶ ಇತರೆ ದೇಶಗಳಿಗೂ ಅದೇ ಮಾದರಿ ಅನುಸರಿಸುವಂತಹ ವಾತಾವರಣ ನಿರ್ಮಿಸಿದೆ. ಈ ಮಾನವೀಯ ನೆಲೆಗಳ ನಡುವೆಯೇ ನಿರಾಶ್ರಿತರಿಗೆ ಆಶ್ರಯ ಕೊಡುವುದಕ್ಕೆ ದೇಶವಾಸಿಗಳಿಂದ, ವಿವಿಧ ಪಕ್ಷಗಳಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಆ ವಿರೋಧ ಕೂಡ ಸಂಪೂರ್ಣ ನಿರಾಧಾರವಾದುದೇನಲ್ಲ. ಏನಿದು ಸಿರಿಯಾ ಬಿಕ್ಕಟ್ಟು? ಯಾಕೆ ನಾಲ್ಕು ಲಕ್ಷಕ್ಕೂ ಅಧಿಕ ಜನರು ಸಿಕ್ಕ ಸಿಕ್ಕ ದಾರಿಗಳಲ್ಲಿ, ಸಿಕ್ಕ ಸಿಕ್ಕ ಬೋಟುಗಳಲ್ಲಿ ಜೀವದ ಹಂಗು ತೊರೆದು ದೇಶ ಬಿಡುತ್ತಿದ್ದಾರೆ. ಓಡುವಿಕೆಯ ಹಾದಿಯಲ್ಲಿ ಕುಟುಂಬಸ್ಥರು ಸತ್ತು ಹೋದರೂ ಓಡುವವರ ವೇಗ ಕುಂದಿಲ್ಲ. ಇನ್ನು ದೇಶದೊಳಗಡೆಯೇ ನಿರಾಶ್ರಿತರಾಗಿರುವವರ ಸಂಖೈ ಅಂದಾಜಿಗೇ ಸಿಗದಷ್ಟು ಏರಿಕೆಯಾಗುತ್ತಿದೆ. ಅಧಿಕೃತವಾಗಿ ಪ್ರಪಂಚ ನೋಡಿರುವುದು ಎರಡು ವಿಶ್ವ ಯುದ್ಧ. ನಿರಾಶ್ರಿತರ ಗೋಳುಗಳನ್ನು ಓದುತ್ತಿದ್ದರೆ, ನೋಡುತ್ತಿದ್ದರೆ ಯುದ್ಧಗಳು ಮುಗಿದಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಮೂಡುತ್ತಲೇ ವಿಶ್ವ ಯುದ್ಧ ನಿರಂತರ ಎಂಬ ಕಹಿ ಸತ್ಯದ ದರ್ಶನವನ್ನೂ ಮಾಡಿಸುತ್ತಿದೆ.

ಮಧ್ಯಪ್ರಾಚ್ಯದ ದೇಶಗಳಲ್ಲಿ ನಡೆಯುವ ಆಂತರಿಕ ಯುದ್ಧಗಳೆಲ್ಲ ಒಂದಷ್ಟು ಸಂಗತಿಗಳು ಸಾಮಾನ್ಯವಾಗಿಬಿಟ್ಟಿದೆ. ಅದು ಯೆಮೆನ್ ಇರಬಹುದು, ಇಜಿಪ್ಟ್ ಇರಬಹುದು, ಲಿಬಿಯಾ, ಇರಾಕ್ ಇರಬಹುದು ಈ ದೇಶದೊಳಗೆ ನಡೆದ – ನಡೆಯುತ್ತಿರುವ ಯುದ್ಧಗಳಲ್ಲೆಲ್ಲಾ ಕೆಲವು ಪದಗಳನ್ನು ಬಳಸಲೇಬೇಕು. ಸರ್ವಾಧಿಕಾರ, ಶಿಯಾ, ಸುನ್ನಿ, ತೈಲ ಸಂಪತ್ತು, ಇರಾನ್, ಸೌದಿ ಅರೇಬಿಯಾ, ಅಮೆರಿಕ, ಜಿಹಾದಿ ಉಗ್ರರು, ಮತ್ತೀಗ ಹೊಸದಾಗಿ ಐ.ಎಸ್.ಐ.ಎಸ್ ಇವಿಷ್ಟೂ ಎಲ್ಲ ಗಲಭೆಗಳಲ್ಲೂ ಪ್ರಮುಖ ಪಾತ್ರ ವಹಿಸಿವೆ. ಕೆಲವೆಡೆ ಪ್ರಭುತ್ವದ ಪರವಾಗಿ, ಕೆಲವೆಡೆ ಪ್ರಭುತ್ವದ ವಿರುದ್ಧ ಹೋರಾಡುತ್ತಿರುವವರ ಪರವಾಗಿ. ಯೆಮೆನ್ನಿನಲ್ಲಿ ಪ್ರಭುತ್ವದ ಪರವಾಗಿ ಸೌದಿ ಅರೇಬಿಯಾ ನಿಂತರೆ, ಪ್ರಭುತ್ವದ ವಿರುದ್ಧ ಹೋರಾಡಲು ಬಂದೂಕು ಹಿಡಿದಿದ್ದ ಅಲ್ ಹುತಿ ಉಗ್ರರಿಗೆ ನೆರವಾಗಿದ್ದು ಇರಾನ್. ಇಂತಹ ‘ನೆರವಿಗೆ’ ಸತ್ಯ - ಅಸತ್ಯ, ನ್ಯಾಯ - ಅನ್ಯಾಯ, ಧರ್ಮ – ಅಧರ್ಮಗಳು ಪ್ರಮುಖ ಪಾತ್ರವಹಿಸಿಲ್ಲ. ಪ್ರಮುಖ ಪಾತ್ರ ವಹಿಸಿರುವುದು ಶಿಯಾ ಮತ್ತು ಸುನ್ನಿ ಮುಸ್ಲಿಮರಿಗೆ ನೆರವು ನೀಡಿ, ಅದರಿಂದ ತಮ್ಮ ಪಂಗಡದ ಜನರ ಪ್ರಾಬಲ್ಯ ಮಧ್ಯಪ್ರಾಚ್ಯದಲ್ಲಿರುವಂತೆ ನೋಡಿಕೊಳ್ಳುವುದೇ ಆಗಿದೆ. ಸಿರಿಯಾದ ಆಂತರಿಕ ಯುದ್ಧದಲ್ಲೂ ಮೇಲೆ ತಿಳಿಸಿದ ಎಲ್ಲಾ ಅಂಶಗಳೂ ಇವೆ. ಕೆಲವಷ್ಟು ಮುಖಗಳು ಬದಲಾಗಿವೆ, ಯಾರು ಯಾರ ಪರವಾಗಿದ್ದಾರೆ ಎಂಬುದು ಕೊಂಚ ಬದಲಾಗಿದೆ. ಅಷ್ಟು ಬಿಟ್ಟರೆ ಎಲ್ಲೆಡೆ ಹಿಂಸೆಯನ್ನು ಪ್ರಚೋದಿಸುವವರ ಸಂಖೈಯೇ ಜಾಸ್ತಿಯಿದೆ.

2011ರ ಇಸವಿ ಅರಬ್ ದೇಶಗಳನ್ನು ಬೆಚ್ಚಿಬೀಳಿಸಿದ ವರುಷ. ಬಹುತೇಕ ಅರಬ್ ದೇಶಗಳಲ್ಲಿರುವುದು ಏಕವ್ಯಕ್ತಿಯ ಸರಕಾರ. ಕುಟುಂಬದಿಂದ ಕುಟುಂಬಕ್ಕೆ ಇಡೀ ದೇಶವನ್ನೇ ಬಳುವಳಿಯಾಗಿ ಪಡೆದವರೇ ಇಲ್ಲಿ ಅಧ್ಯಕ್ಷರು. ಹೆಸರಿಗೆ ಬೇರೆಯವರು ಇರುತ್ತಾರಾದರೂ ಕೊನೆಗೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಅಧ್ಯಕ್ಷರೇ. ಯಾರೂ ಪ್ರಶ್ನಿಸಲಾರದ ಅಧ್ಯಕ್ಷತೆ ಸಿಕ್ಕಾಗ ಸಹಜವಾಗಿ ಅದು ಅಧ್ಯಕ್ಷ ಸ್ಥಾನದಲ್ಲಿರುವವರ ಅಹಂ ಅನ್ನು ಹೆಚ್ಚಿಸಿ ಸರ್ವಾಧಿಕಾರಕ್ಕೆ ದಾರಿ ಮಾಡಿಬಿಡುತ್ತದೆ. ಸರ್ವಾಧಿಕಾರವೆಂಬುದು ಒಳ್ಳೆಯದ್ದಾಗಿರುವ ಸಾಧ್ಯತೆಗಳು ತುಂಬಾನೇ ಕಡಿಮೆ. ಒಳ್ಳೆಯದಾದವರಿಗದು ಅದೇ ಒಳಿತೆಂಬ ಭಾವನೆ ಮೂಡಿಸುತ್ತದಾದರೂ ಸರ್ವಾಧಿಕಾರದಿಂದ ನೊಂದವರು ಖಂಡಿತವಾಗಿಯೂ ಅದರ ಪರವಾಗಿರುವುದಿಲ್ಲ. ನೊಂದವರ ಸಂಖೈ ಹೆಚ್ಚುತ್ತಿದ್ದಂತೆ ಅರಬ್ ದೇಶಗಳಲ್ಲಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ಪರವಾಗಿ ಹೋರಾಟಗಳು ರೂಪುಗೊಳ್ಳುತ್ತವೆ. ಹೀಗೆ ರೂಪುಗೊಂಡ ಹೋರಾಟಗಳನ್ನು ಹೈಜಾಕ್ ಮಾಡಿಕೊಳ್ಳುವವರ ಸಂಖೈ ಹೆಚ್ಚಿದಂತೆ ಹೋರಾಟದ ಮೂಲ ಆಶಯವೇ ಮರೆತು ಹೋಗಿ ಎಲ್ಲೆಡೆ ಹಿಂಸಾಚಾರವೇ ತಾಂಡವವಾಡತೊಡಗಿತು. Arab Spring ಹೆಸರಿನಲ್ಲಿ ಶುರುವಾದ ಜನರ ಹೋರಾಟ ಅರಬ್ಬಿನ ಅನೇಕ ದೇಶಗಳಿಗೆ ವ್ಯಾಪಿಸಿತು. ಈ ಹೋರಾಟದಲ್ಲಿ ಪಾಲ್ಗೊಂಡ ದೇಶಗಳಲ್ಲಿ ಸಿರಿಯಾ ಕೂಡ ಒಂದು. ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಸಿರಿಯಾದ ನಾಗರೀಕರು ದೊಡ್ಡ ಸಂಖೈಯಲ್ಲಿ ಪ್ರತಿಭಟನೆಗೆ ಇಳಿದರು. ಅಂತರ್ಯುದ್ಧಕ್ಕೆ ಸಿರಿಯಾ ಹೋಗುವಷ್ಟರ ಮಟ್ಟಿಗೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದಾದರೂ ಯಾಕೆ?

ಬಶರ್ ಅಲ್ ಅಸ್ಸದ್
ಬಶರ್ ಅಲ್ ಅಸ್ಸಾದ್ ತಮ್ಮ ತಂದೆಯ ಸಾವಿನ ನಂತರ 2000ದಿಂದ ಅಧ್ಯಕ್ಷರಾಗಿ ಸ್ವ – ಆಯ್ಕೆಗೊಂಡರು. ಬಶರ್ ಅಲ್ ಅಸ್ಸಾದ್ ಶಿಯಾ ಪಂಗಡಕ್ಕೆ ಸೇರಿದವರು. ಸಿರಿಯಾದ ಹೆಚ್ಚಿನ ಮುಸ್ಲಿಮರು ಸುನ್ನಿ ಪಂಗಡಕ್ಕೆ ಸೇರಿದವರು. ಸುನ್ನಿ ಶಿಯಾ ಹೊರತುಪಡಿಸಿದರೆ ಕುರ್ದಿ ಪಂಗಡಕ್ಕೆ ಸೇರಿದವರು ಸಿರಿಯಾದಲ್ಲಿ ಹೆಚ್ಚಿದ್ದರು. ಶಿಯಾ ಪಂಗಡಕ್ಕೆ ಸೇರಿದ ಬಶರ್ ಅಲ್ ಅಸ್ಸಾದರ ಸರಕಾರ ಹೆಸರಿಗೆ ಜಾತ್ಯತೀತವಾದರೂ ಶಿಯಾ ಪಂಗಡಕ್ಕೆ ಅನುಕೂಲಕರವಾಗಿ ಕಾರ್ಯನಿರ್ವಹಿಸಿ ಸುನ್ನಿ ಪಂಗಡದ ಜನರಲ್ಲೊಂದು ಅಸಹನೆಯನ್ನು ಸೃಷ್ಟಿಸುತ್ತಲೇ ಇತ್ತು. ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಸ್ಸಾದ್ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ದೇಶವನ್ನು ಕೊಂಡೊಯ್ಯುವುದರ ಬಗ್ಗೆ ಕೆಲವು ಚರ್ಚೆಗಳನ್ನು ಹುಟ್ಟಿಹಾಕಿದರಾದರೂ, ತಾವೇ ಹುಟ್ಟುಹಾಕಿದ ಚರ್ಚೆಯನ್ನು ತಾವೇ ಮೊಟಕುಮಾಡಿಬಿಟ್ಟರು. ಪ್ರಜಾಪ್ರಭುತ್ವ ಹೋರಾಟಗಾರರನ್ನು ಬಂಧಿಸುವುದೆಲ್ಲ ಯಥೇಚ್ಛವಾಗಿ ನಡೆಯಿತು. ಇನ್ನು ಕುರ್ದ್ ಜನಾಂಗದವರಿಗೆ ದಶಕಗಳ ಕಾಲ ಸಿರಿಯಾದ ಪೌರತ್ವವೇ ದಕ್ಕಿರಲಿಲ್ಲ. ತಮ್ಮದೇ ಊರಿನಲ್ಲಿ ತಮ್ಮದೇ ದೇಶದಲ್ಲಿ ಅವರು ಪರದೇಸಿಗಳಾಗಿದ್ದರು. ಸುತ್ತಮುತ್ತಲ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರವಾಗಿ ಶುರುವಾದ ಹೋರಾಟಗಳು ಸಿರಿಯಾಗೂ ಹಬ್ಬಲು ಹೆಚ್ಚು ಕಾಲ ಹಿಡಿಯಲಿಲ್ಲ. 2011ರ ಇಸವಿಯ ಮಾರ್ಚಿ 15ರಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತದೆ, ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ರಾಜಕೀಯ ಖೈದಿಗಳ ಬಿಡುಗಡೆಗೆ ಒತ್ತಾಯಿಸಿ. ಪೋಲೀಸರು ಗುಂಡು ಹಾರಿಸಿ ಮೂವರನ್ನು ಹತ್ಯೆಗೈಯುತ್ತಾರೆ. ಪ್ರತಿಭಟನೆ ಕಾವು ಪಡೆದುಕೊಳ್ಳುತ್ತದೆ. ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ಸರಕಾರದ ವಿರುದ್ಧ ಗೋಡೆಬರಹ ಬರೆದ ಶಾಲಾ ಹುಡುಗರನ್ನು ಪೋಲೀಸರು ಬಂಧಿಸಿದಾಗ. ರೊಚ್ಚಿಗೆದ್ದ ಪ್ರತಿಭಟನಕಾರರು ಏಳು ಜನ ಪೋಲೀಸರನ್ನು ಹತ್ಯೆಗೈಯುವುದರೊಂದಿಗೆ ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟ ಹಿಂಸೆಯ ಮಾರ್ಗವನ್ನು ಆಯ್ದುಕೊಂಡಿತು. ಹಿಂಸೆ – ಪ್ರತಿಹಿಂಸೆಯ ವಿಷವರ್ತುಲದಲ್ಲಿ ಸಿರಿಯಾ ಸಿಲುಕಿಕೊಂಡಿತು. ಸಿರಿಯಾದ ದಂಗೆಗೆ 2007ರಲ್ಲಿ ಸಿರಿಯಾ ಎದುರಿಸಿದ ಭೀಕರ ಬರಗಾಲ ಕೂಡ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಬರದ ಕಾರಣದಿಂದ ಲಕ್ಷಾಂತರ ಜನರು ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಬಂದರು. ವಲಸೆ ಹೆಚ್ಚಿ, ನಿರುದ್ಯೋಗಿಗಳ ಸಂಖೈ ಹೆಚ್ಚಿ ಆರ್ಥಿಕತೆಯಲ್ಲಿ ಉಂಟಾದ ಏರುಪೇರುಗಳು ಸಿರಿಯಾದ ಬಿಕ್ಕಟ್ಟಿಗೆ ತನ್ನದೇ ರೀತಿಯಲ್ಲಿ ಕ್ರಾಂತಿ ಪ್ರಕ್ರಿಯೆಯೆ ಕಾರಣವಾಯಿತು. ಆದರೆ ಕ್ರಾಂತಿಯೆಂಬುದೀಗ ಕೇವಲ ಹಿಂಸೆಯಾಗಿ ಪರಿವರ್ತನೆಯಾಗಿಬಿಟ್ಟಿದೆ.

ಸ್ವತಂತ್ರ ಸಿರಿಯಾ ಸೇನೆ
ಪ್ರತಿಭಟನೆ ಹಿಂಸೆಯ ರೂಪ ತಾಳಿದಾಗ ಬಶರ್ ಅಲ್ ಅಸ್ಸಾದ್ ಶಾಂತಿ ಕಾಪಾಡುವ ಯೋಚನೆ ಮಾಡಲಿಲ್ಲ. ಅರಬ್ ದೇಶಗಳಲ್ಲಾದ ಬೆಳವಣಿಗೆಗಳು, ಸರ್ವಾಧಿಕಾರದ ಪತನವಾಗಿದ್ದೆಲ್ಲವೂ ಅವರ ಗಮನದಲ್ಲಿತ್ತಲ್ಲ. ಹಾಗಾಗಿ ಶಾಂತಿಗಾಗಿ ಅವರ ಕಾರ್ಯಕ್ರಮಗಳಿರದೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರತಿಭಟನೆಯನ್ನು ಹತ್ತಿಕ್ಕುವ ಆತುರಕ್ಕೆ ಬಿದ್ದರು. ಪ್ರತಿಭಟನಾಕಾರರ ಹತ್ಯೆಗಳಾದವು. ಮತ್ತೆ ಇಲ್ಲಿ ಹೋರಾಟ ಶಿಯಾ ಮತ್ತು ಮುಸ್ಲಿಂ ಪಂಗಡದ ಮಧ್ಯೆ ಎಂದು ಬದಲಾಗಿಬಿಟ್ಟಿತು. ಶಿಯಾ ಮುಸ್ಲಿಮ್ ಪಂಗಡಕ್ಕೆ ಸೇರಿದ ಸರ್ವಾಧಿಕಾರಿ ಅಸ್ಸಾದ್ ಗೆ ಶಿಯಾ ಪ್ರಾಬಲ್ಯ ಹೆಚ್ಚಿಸುವುದಕ್ಕೆ ಸದಾ ಬೆಂಬಲ ನೀಡುವ ಇರಾನಿನ ಬೆಂಬಲ ದೊರೆಯಿತು. ಶಸ್ತ್ರಾಸ್ತ್ರ, ಯುದ್ಧ ತರಬೇತಿಯೆಲ್ಲವೂ ಇರಾನ್ ನೀಡಿತು. ದೀರ್ಘ ಕಾಲದ ಗೆಳೆಯನೆಂಬ ನೆಪದಿಂದ ರಷ್ಯಾ ಕೂಡ ಅಸ್ಸಾದ್ ನ ಬೆಂಬಲಕ್ಕೆ ನಿಂತಿತು. ಇನ್ನು ಸ್ವತಂತ್ರ ಸಿರಿಯಾ ಸೈನ್ಯ ಕಟ್ಟಿದ ಪ್ರತಿಭಟನಕಾರರ ಗುಂಪಗೆ ಸಿರಿಯಾ ಸೇನೆಯನ್ನು ತೊರೆದು ಪ್ರತಿಭಟನೆಗೆ ಇಳಿದವರ ಮಾರ್ಗದರ್ಶನ ಸಿಕ್ಕಿತು. ಪ್ರತಿಭಟನಕಾರರಲ್ಲಿ ಹೆಚ್ಚಿನವರು ಸುನ್ನಿ ಪಂಗಡಕ್ಕೆ ಸೇರಿದವರಾದ್ದರಿಂದ ಇರಾನಿನ ಶಿಯಾ ಪ್ರಾಬಲ್ಯವನ್ನು ಮುರಿಯಲಿಚ್ಛಿಸುವ ಸೌದಿ ಅರೇಬಿಯಾದ ಬೆಂಬಲ ದಕ್ಕಿತು. ಅಮೆರಿಕಾದಂತಹ ದೇಶಗಳು ಪ್ರತಿಭಟನಕಾರರ ಗುಂಪಿಗೆ ಸಹಾಯ ಮಾಡಲಾರಂಭಿಸಿತು. ಶಸ್ತ್ರಾಸ್ತ್ರಗಳನ್ನೊರತುಪಡಿಸಿ ಇನ್ನಿತರ ಸಾಮಗ್ರಿಗಳಿಗೆ ಲಕ್ಷಾಂತರ ಡಾಲರ್ ನೆರವು ನೀಡಿತು. ಅಲ್ಲಿಗೆ ಬಾಹುಬಲ ಪ್ರದರ್ಶಿಸಲು ಪ್ರಬಲ ದೇಶಗಳಿಗೆ ಮತ್ತೊಂದು ಯುದ್ಧಭೂಮಿ ದಕ್ಕಿದಂತಾಯಿತು.

ಸಿರಿಯಾದಲ್ಲಿ ಐ.ಎಸ್.ಐ.ಎಸ್
ಒಂದಷ್ಟು ದೇಶಗಳ ನೆರವನ್ನು ಅಸ್ಸಾದ್ ಕಳೆದುಕೊಂಡಿದ್ದು ತನ್ನದೇ ದೇಶದ ಪ್ರಜೆಗಳ ಮೇಲೆ ಕೆಮಿಕಲ್ ಯುದ್ಧವನ್ನು ಸಾರಿದಾಗ. ತಾವು ಸಾವನ್ನು ಉಸಿರಾಡುತ್ತಿದ್ದೇವೆ ಎನ್ನುವುದು ಅರಿವಾಗುವುದರೊಳಗಾಗಿ ವ್ಯಕ್ತಿ ಮೃತಪಟ್ಟಿರುತ್ತಾನೆ. ಸರೀನ್ (Sarine) ಎಂಬ ವಿಷಯುಕ್ತ ಅನಿಲವನ್ನು ಈ ಕಾರ್ಯಕ್ಕೆ ಬಳಸಲಾಯಿತು. ಸಾವಿರಕ್ಕೂ ಅಧಿಕ ಜನರು ಮೃತಪಟ್ಟರು. ಅಸ್ಸಾದ್ ಸರಕಾರದ ಈ ಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಗಾಗಿ ಅಸ್ಸಾದ್ ಸರಕಾರಕ್ಕೆ ಬೆಂಬಲ ಕೊಡುತ್ತಿದ್ದವರನ್ನು ಮತ್ತೆ ತಮ್ಮ ನಿರ್ಧಾರವನ್ನು ಯೋಚಿಸುವಂತೆ ಮಾಡಿತು. ಸ್ವತಂತ್ರ ಸಿರಿಯಾ ಸೇನೆಯ ಜೊತೆಜೊತೆಗೆ ಆಲ್ ಖೈದಾ ಬೆಂಬಲಿತ ಸಂಘಟನೆಗಳೂ ಸರಕಾರದೊಂದಿಗೆ ಯುದ್ಧಕ್ಕೆ ಇಳಿದವು. ಕುರ್ದ್ ಜನಾಂಗದ ಜನರಿಗೆ ಈ ಗಲಭೆಗಳ ಮಧ್ಯೆ ಅಸ್ಸಾದ್ ಸರಕಾರ ಪೌರತ್ವ ನೀಡಿಬಿಟ್ಟಿತು. ಸುನ್ನಿಗಳ ಜೊತೆಗೆ ಕುರ್ದ್ ಗಳು ಸೇರುವುದು ಅವರಿಗೆ ಬೇಕಿರಲಿಲ್ಲ. ಕುರ್ದ್ ಜನರು ಮೊದಮೊದಲು ಈ ಪ್ರತಿಭಟನೆಗಳಿಗೆ ಇಳಿಯಲಿಲ್ಲವಾದರೂ, ಸರಕಾರೀ ಸೈನಿಕರು ಕುರ್ದ್ ಪ್ರದೇಶದ ಮೇಲೂ ದಾಳಿ ನಡೆಸಲು ಪ್ರಾರಂಭಿಸಿದ ನಂತರ ತಮ್ಮದೇ ಸೈನ್ಯವನ್ನು ಕಟ್ಟಿಕೊಂಡಿತು. ಸಿರಿಯಾದ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರು ಸರಕಾರೀ ಸೈನ್ಯವನ್ನು ಸೇರಿದರು. ರೆಬೆಲ್ಲುಗಳಿಗಿಂತ ಸರಕಾರೀ ಸೈನ್ಯವೇ ಹೆಚ್ಚು ಜಾತ್ಯತೀತ ಮನೋಭಾವ ಹೊಂದಿದೆ ಎಂದವರ ಅಭಿಪ್ರಾಯ. ಒಂದು ದಿನ ಪ್ರತಿಭಟನಕಾರರು ಮೇಲುಗೈ ಸಾಧಿಸಿದರೆ, ಶಸ್ತ್ರಾಸ್ತ್ರಗಳನ್ನು ಹೆಚ್ಚು ಹೊಂದಿರುವ ಸರಕಾರೀ ಸೈನ್ಯ ಮತ್ತೊಂದು ದಿನ ಮೇಲುಗೈ ಸಾಧಿಸುತ್ತಿತ್ತು. ಹಿಂಸೆಯೇ ಪ್ರಮುಖ ಸ್ಥಾನ ಪ್ರಜಾಪ್ರಭುತ್ವವಕ್ಕಾಗಿ ಪ್ರಾರಂಭವಾದ ಹೋರಾಟ ತನ್ನ ಉದ್ದೇಶವನ್ನಾಗಲೇ ಕಳೆದುಕೊಳ್ಳಲು ಪ್ರಾರಂಭಿಸಿತ್ತು. ವೈಯಕ್ತಿಕ ಹಿತಾಸಕ್ತಿಗಾಗಿ ಅನ್ಯದೇಶದವರು ನಡೆಸಿದ ಹಸ್ತಕ್ಷೇಪವೂ ಇದಕ್ಕೆ ಕಾರಣವಾಗಿತ್ತು. ಕೊನೆಗೆ ಸಿರಿಯಾದ ಇಡೀ ಚಿತ್ರಣ ಬದಲಾಗಿ ಹೋಗಿದ್ದು ಐ.ಎಸ್.ಐ.ಎಸ್ ಎಂಬ ಉಗ್ರ ಇಸ್ಲಾಂ ಸಂಘಟನೆಯ ಆಗಮನದೊಂದಿಗೆ.

ಇಸ್ಲಾಮಿನ ರಕ್ಷಕನೆಂಬ ಹಣೆಪಟ್ಟಿಯೊಂದಿಗೆ Islamic State ಅಸ್ತಿತ್ವಕ್ಕೆ ಬಂದಿದ್ದು ಇರಾಕಿನಲ್ಲಿ. ಇಷ್ಟರಲ್ಲಾಗಲೇ ಪ್ರಾಮುಖ್ಯತೆ ಕಳೆದುಕೊಂಡಿದ್ದ ಆಲ್ ಖೈದಾ ಸಂಘಟನೆಯ ಮುಂದುವರೆದ ರೂಪದಂತೆ ಇಸ್ಲಾಮಿಕ್ ಸ್ಟೇಟ್ ಹುಟ್ಟಿಕೊಂಡಿತು. ಐ.ಎಸ್ ಕ್ರೌರ್ಯ ಅಲ್ ಖೈದಾ ಸಂಘಟನೆಯವರನ್ನೇ ಬೆಚ್ಚಿ ಬೀಳಿಸಿತು. ಮತಾಂಧ ಮನಸ್ಸುಗಳು ಹೆಚ್ಚು ಕ್ರೌರ್ಯದ ಐ.ಎಸ್ ಕಡೆಗೆ ಆಕರ್ಷಿತರಾದರು. ಇರಾಕಿನಲ್ಲಿ ಸದ್ದಾಂ ಹುಸೇನ್ ಹತ್ಯೆಯೊಂದಿಗೆ ಇಸ್ಲಾಮಿಕ್ ಸ್ಟೇಟ್ ನ ಪ್ರಾರಂಭವಾಗುತ್ತದೆ. ಸದ್ದಾಂ ಹುಸೇನ್ ಹತ್ಯೆಗೆ, ಇರಾಕ್ ಯುದ್ಧಕ್ಕೆ ಅಮೆರಿಕಾ ನೇರ ಕಾರಣ. ಇರಾಕಿನಲ್ಲಿ ಕೆಮಿಕಲ್ ವೆಪನ್ನುಗಳಿವೆ ಎಂಬ ನೆಪ ಕೊಟ್ಟು ಯುದ್ಧವಾರಂಭಿಸಿತ್ತು ಅಮೆರಿಕ. ಕೊನೆಗೆ ಲಕ್ಷ ಲಕ್ಷ ಜನರ ಹತ್ಯೆಯಾದರೂ ಯಾವೊಂದು ಕೆಮಿಕಲ್ ವೆಪನ್ನುಗಳೂ ಸಿಗಲಿಲ್ಲ. ಸದ್ದಾಂ ಹುಸೇನ್ ಆಡಳಿತ ಕೊನೆಗೊಂಡಿತು, ತನಗೆ ಬೇಕಾದ ಸರಕಾರವನ್ನು ಅಮೆರಿಕಾ ಇರಾಕಿನಲ್ಲಿ ಪ್ರತಿಷ್ಟಾಪಿಸಿತು. ಜನಾಂಗೀಯ ಘರ್ಷಣೆಗಳು ಜರುಗುತ್ತಿದ್ದ ಇರಾಕಿನಿಂದ ತನ್ನ ಸೈನಿಕರನ್ನು ವಾಪಸ್ಸು ಕರೆಸಿಕೊಂಡಿತು. ಇಲ್ಲಿ ಇರಾಕಿನಲ್ಲಿ ಇಸ್ಲಾಮಿಕ್ ಸ್ಟೇಟ್ ಜನ್ಮ ತಾಳಿತು. ಅದು ಅಲ್ ಖೈದಾ ಇರಬಹುದು, ಐ.ಎಸ್ ಇರಬಹುದು ಅನೇಕನೇಕ ಉಗ್ರಗಾಮಿ ಸಂಘಟನೆಗಳ ಹುಟ್ಟಿನಲ್ಲಿ ಬೆಳವಣಿಗೆಯಲ್ಲಿ ಅಮೆರಿಕಾದ ನೇರ ಪಾತ್ರವಿದೆ. ಮತ್ತೀ ಪಾತ್ರಕ್ಕೆ ಪ್ರಮುಖ ಕಾರಣವಾಗಿ ಈ ದೇಶಗಳಲ್ಲಿ ಅಪಾರ ಪ್ರಮಾಣ ತೈಲ ಸಂಗ್ರಹವಿದೆ. ಇರಾಕಿನಿಂದ ಪ್ರಾರಂಭವಾದ ಐ.ಎಸ್ ನ ಪ್ರಾಬಲ್ಯ ಸಿರಿಯಾದತ್ತಲೂ ಸಾಗಿತು. ಐ.ಎಸ್ ಎಂಬ ಹೆಸರು ಐ.ಎಸ್.ಐ.ಎಸ್ (Islamic State of Iraq and Syria) ಎಂದು ಬದಲಾಯಿತು; ಆಂತರಿಕ ಯುದ್ಧದ ಪರಿಸ್ಥಿತಿ ಮೂಡಿದ ಸಿರಿಯಾದಲ್ಲಿ ಐ.ಎಸ್.ಐ.ಎಸ್ ನ ಪ್ರವೇಶ ಸಿರಿಯಾದ ಚಿತ್ರವನ್ನು ಹೇಗೆ ಬದಲಿಸಿತು?

ಐ.ಎಸ್.ಐ.ಎಸ್ ಸಂಘಟನೆಯಲ್ಲಿ ಸುನ್ನಿಗಳ ಪ್ರಾಬಲ್ಯವೇ ಅಧಿಕ. ಅದರಲ್ಲೂ ಸುನ್ನಿ ಪಂಗಡದೊಳಗಿರುವ ಕಟ್ಟರ್ ಇಸ್ಲಾಮಿನ ಪ್ರತಿಪಾದಕರಾದ ವಹಾಬಿ ಪಂಥದವರೇ ಅಧಿಕ. ಸಿರಿಯಾದ ಶಿಯಾ ಸರಕಾರದ ವಿರುದ್ಧ ಅಲ್ಲಿನ ಜನರು, ಅದರಲ್ಲೂ ಹೆಚ್ಚಿನ ಸುನ್ನಿ ಪಂಗಡದವರು ಬಂದೂಕು ಹಿಡಿದು ಹೋರಾಡುವಾಗ ತನ್ನ ಉದ್ದೇಶಗಳನ್ನು ಈಡರಿಸಿಕೊಳ್ಳದೇ ಬಿಟ್ಟೀತೆ? ಐ.ಎಸ್.ಐ.ಎಸ್ ನ ಪ್ರವೇಶ ಸರಕಾರೀ ಸೈನ್ಯದ ಪ್ರಾಬಲ್ಯವನ್ನು ಕಡಿಮೆ ಮಾಡಿತು. ಅನೇಕ ಕಡೆ ಸರಕಾರವನ್ನು ಐ.ಎಸ್.ಐ.ಎಸ್ ಮಣಿಸಲಾರಂಭಿಸಿತು. ಐ.ಎಸ್.ಐ.ಎಸ್ ನ ಉಗ್ರ ರೀತಿಗಳಿಂದ ಬೆಚ್ಚಿ ಬಿದ್ದ ಸ್ವತಂತ್ರ ಸಿರಿಯಾ ಸೇನೆ ಕೂಡ ಕೆಲವು ದಿನಗಳ ನಂತರ ಐ.ಎಸ್.ಐ.ಎಸ್ ವಿರುದ್ಧ ಹೋರಾಡಲಾರಂಭಿಸಿತು. ವಹಾಬಿ ಪಂಥ ಒಪ್ಪದ ಕುರ್ದ್ ಜನಾಂಗದವರ ಮೇಲೂ ಐ.ಎಸ್.ಐ.ಎಸ್ ಯುದ್ಧ ಸಾರಿತು. ಒಟ್ಟಿನಲ್ಲಿ ಇಡೀ ಸಿರಿಯಾ ಗೋಜಲುಗಳ ನಾಡಾಗಿಬಿಟ್ಟಿತು. ಸರಕಾರೀ ಸೈನ್ಯದ ವಿರುದ್ಧ ಸ್ವತಂತ್ರ ಸಿರಿಯಾ ಸೇನೆ, ಕುರ್ದ್ ಸೇನೆ, ಅಲ್ ಖೈದಾ ಮತ್ತು ಐ.ಎಸ್.ಐ.ಎಸ್ ಉಗ್ರರು; ಐ.ಎಸ್.ಐ.ಎಸ್ ಉಗ್ರರ ವಿರುದ್ಧ ಸ್ವತಂತ್ರ ಸಿರಿಯಾ ಸೇನೆ, ಕುರ್ದ್ ಸೇನೆ, ಸರಕಾರೀ ಸೇನೆ! ಯಾರು ಯಾರೊಡನೆ ಯಾಕೆ ಹೋರಾಡುತ್ತಿದ್ದಾರೆ ಎಂಬುದೇ ಮರೆಯುವ ಸ್ಥಿತಿ. ನೆನಪಿರಲಿ ಈ ಎಲ್ಲಾ ಹೋರಾಟ ಪ್ರಾರಂಭವಾಗಿದ್ದು ಪ್ರಜಾಪ್ರಭುತ್ವಕ್ಕಾಗಿ; ಆದರೀಗ ತನ್ನ ಮಾತಿಗೆ ಎದುರಾಡುವವರನ್ನು ಕೊಂದೇ ಬಿಡುವ ಇಸ್ಲಾಮಿನ ರಕ್ಷಕನೆಂದು ಹೇಳಿಕೊಳ್ಳುವ ಐ.ಎಸ.ಐ.ಎಸ್ ಸಿರಿಯಾದ ಬಹುಭಾಗವನ್ನು ನಿಯಂತ್ರಿಸುತ್ತಿದೆ. ಐ.ಎಸ್.ಐ.ಎಸ್ಸಿಗೆ ಶಸ್ತ್ರಾಸ್ತ್ರಗಳಿಗೆ ಬರವಿಲ್ಲ, ಅನೇಕ ದೇಶಗಳ ಮತಾಂಧ ಮುಸ್ಲಿಮರು ಐ.ಎಸ್ ಸೇರಲು ಹವಣಿಸುತ್ತಿರುವ ಕಾರಣ ಅವರಿಗೆ ಸೈನಿಕರ ಕೊರತೆಯೂ ಇಲ್ಲ.

ಈ ಎಲ್ಲಾ ಹೊಡೆದಾಟ ಬಡಿದಾಟಗಳಿಂದ ಹಾನಿಯಾಗಿರುವುದು ಯುದ್ಧದಲ್ಲಿ ನೇರವಾಗಿ ಭಾಗಿಯಾಗದ ಜನರಿಗೆ. ಈ ಜನರಲ್ಲಿ ಪ್ರಜಾಪ್ರಭುತ್ವ ಹೋರಾಟಕ್ಕೆ ಬೆಂಬಲ ಕೊಟ್ಟ ಜನರೂ ಇದ್ದಿರಲೇಬೇಕು. ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟ ಈ ರೀತಿಯಾಗಿ ಹಾಳುಗೆಟ್ಟುಹೋಗುತ್ತದೆ ಎಂದು ಅವರೂ ನಿರೀಕ್ಷಿಸರಲಿಕ್ಕಿಲ್ಲ. ಇರುವ ಭೂಮಿಯಲ್ಲಿ ಬದುಕುವುದು ದುಸ್ತರವಾದಾಗ ಹೆಚ್ಚು ಕಡಿಮೆ ನಾಲ್ಕು ಲಕ್ಷ ಜನರು ದೇಶದ ಗಡಿ ದಾಟಿ ಲೆಬನಾನ್, ಟರ್ಕಿ, ಗ್ರೀಸ್, ಜರ್ಮನಿಯಂತಹ ದೇಶಗಳಿಗೆ ಪಲಾಯನ ಮಾಡಲಾರಂಭಿಸಿದರು. ಬೆನ್ನ ಹಿಂದೆಯೂ ಸಾವು ಪಲಾಯನದ ಹಾದಿಯಲ್ಲಿಯೂ ಸಾವು. ಚಿಕ್ಕ ಚಿಕ್ಕ ಬೋಟುಗಳಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತ ಪರದೇಶಗಳಿಗೆ ಆಶ್ರಯಕ್ಕಾಗಿ ಮೊರೆಯಿಟ್ಟರು. ಸಾವಿರ ಸಾವಿರ ಜನರು ಸಮುದ್ರದಲ್ಲೇ ನೀರುಪಾಲಾದರು. ನಿರಾಶ್ರಿತರಿಗೆ ಆಶ್ರಯ ಕೊಟ್ಟ ದೇಶದವರಿಗೂ ಈ ನಿರಾಶ್ರಿತರು ತಲೆ ನೋವಾದರು. ಅವರಿಗೆ ಸಹಾಯ ಮಾಡುವಷ್ಟು ಆರ್ಥಿಕ ಚೈತನ್ಯ ಕೂಡ ಅನೇಕ ದೇಶಗಳಿಗೆ ಇಲ್ಲವಾಯಿತು. ತಮ್ಮ ದೇಶದ ಆರ್ಥಿಕತೆಯೇ ಅಲುಗಾಡುವ ಪರಿಸ್ಥಿತಿ ನಿರ್ಮಾಣವಾದಾಗ ದೇಶವಾಸಿಗಳು ಕೂಡ ಈ ನಿರಾಶ್ರಿತರ ಬಗ್ಗೆ ಕೆಂಡಕಾರಲಾರಂಭಿಸಿದರು. ತಮ್ಮ ಆರ್ಥಿಕತೆ ಈ ನಿರಾಶ್ರಿತರಿಂದ ನಾಶವಾಗುತ್ತದೆ ಎಂಬ ಭಯದ ಜೊತೆಗೆ ಅನ್ಯಧರ್ಮದ ಅನ್ಯಸಂಸ್ಕೃತಿಯ ಜನರ ಆಗಮನದಿಂದಾಗಿ ತಮ್ಮ ಸಂಸ್ಕೃತಿ ನಾಶವಾಗಿಬಿಡಬಹುದೆಂಬ ಆತಂಕ ಕಾಡಿದರೆ ಅದು ಸಹಜ. ಭಯ ಮತ್ತಷ್ಟು ಹೆಚ್ಚಾಗಲು ಇಸ್ಲಾಮೋಫೋಬಿಯಾ ಕೂಡ ಕಾರಣ. ಪಂಗಡ ಯಾವುದೇ ಇದ್ದರೂ ಕೊನೆಗೆ ನಿರಾಶ್ರಿತರಾಗಿ ಬರುತ್ತಿರುವವರಲ್ಲಿ ಮುಸ್ಲಿಮರೇ ಹೆಚ್ಚು. ಐ.ಎಸ್.ಐ.ಎಸ್ ತನ್ನವರನ್ನು ಈ ನಿರಾಶ್ರಿತರ ಜೊತೆಗೆ ಕಳುಹಿಸಿದ್ದರೇನು ಗತಿ ಎಂಬ ಯೋಚನೆ ಕೂಡ ಸರಕಾರಕ್ಕಿದೆ. ಈ ಎಲ್ಲಾ ಭಯಗಳ ಜೊತೆಗೆ ವಲಸೆಗಾರರಿಗೂ ನಿರಾಶ್ರಿತರಿಗೂ ವ್ಯತ್ಯಾಸವಿದೆ; ವಲಸೆ ತಡೆಯೋಣ ನಿರಾಶ್ರಿತರಿಗೆ ಆಶ್ರಯ ಕೊಡೋಣ ಎನ್ನುವ ಜರ್ಮನಿಯಂತಹ ದೇಶಗಳೂ ಇವೆ. ಕಡಿಮೆಯಿದ್ದ ಇಂತಹ ದೇಶಗಳ ಸಂಖೈಯನ್ನು ಹೆಚ್ಚಿಸಿದ್ದು ಮೂರು ವರುಷದ ಹುಡುಗನ ಶವ.

ಶವವನ್ನೆತ್ತಿದ ಮೆಹಮತ್ ಸಿಪ್ಲಾಕ್
ಸಿರಿಯಾದಿಂದ ತಪ್ಪಿಸಿಕೊಂಡ ಅಯ್ಲಾನ್ ಕುರ್ದಿಯ ಕುಟುಂಬ ಗ್ರೀಕಿನ ಕೋಸ್ ದ್ವೀಪದತ್ತ ಹೊರಟಿದ್ದ ದೋಣಿ ಅಲೆಗಳೊಡೆತಕ್ಕೆ ಸಿಕ್ಕಿಬೀಳುತ್ತದೆ. ದೋಣಿಯ ಕ್ಯಾಪ್ಟನ್ ಮುಳುಗುವ ದೋಣಿಯನ್ನು ಬಿಟ್ಟು ತನ್ನ ಜೀವ ಉಳಿಸಿಕೊಂಡುಬಿಡುತ್ತಾನೆ. ಅಯ್ಲಾನ್ ಕುರ್ದಿಯ ತಂದೆಯೇ ದೋಣಿಯನ್ನು ಮುನ್ನಡೆಸಲು ಪ್ರಯತ್ನ ಪಡುತ್ತಾನಾದರೂ ದೋಣಿ ಮಗುಚಿ ಬಿದ್ದು ಅವನ ಹೆಂಡತಿ ಮಕ್ಕಳೇ ಸತ್ತು ಹೋಗುತ್ತಾರೆ. ಸಮುದ್ರ ದಂಡೆಯಲ್ಲಿ ಮಗುವೊಂದ ಮಲಗಿರುವ ರೀತಿಯಲ್ಲಿ ಸತ್ತು ಬಿದ್ದಿರುವುದು ಸತ್ತು ಬಿದ್ದಿರುವ ನಮ್ಮ ಮಾನವೀಯತೆಯನ್ನು ಬಡಿದೆಬ್ಬಿಸುತ್ತದೆ. ಅದರ ಫೋಟೋ ತೆಗೆದ ಪತ್ರಕರ್ತೆ ನಿಲುಫರ್ ಡೆಮಿರಳ ಮಾನವೀಯತೆಯ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ಮಗು ಬದುಕಿದೆಯಾ ಸತ್ತಿದೆಯಾ ನೋಡುವುದು ಬಿಟ್ಟು ಈ ರೀತಿ ಫೋಟೋ ತೆಗೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ಹುಟ್ಟಿತ್ತು. ‘ಮಗು ಬದುಕಿರಲಿಲ್ಲ. ನಿರಾಶ್ರಿತರ ಗೋಳನ್ನು ಕೇಳಿಸುವಂತೆ ಮಾಡಲು ಫೋಟೋ ತೆಗೆದೆ’ ಎಂದು ಹೇಳುವ ನಿಲುಫರ್ ಕಳೆದ ಹದಿನೈದು ವರುಷಗಳಿಂದ ನಿರಾಶ್ರಿತರಾಗಿ ಬರುವವರ ಬಗ್ಗೆ ವರದಿ ಮಾಡುತ್ತಿದ್ದಾರೆ. ಪೋಲೀಸ್ ಅಧಿಕಾರಿಯ ಕಣ್ಣಿಗೆ ಮಗುವಿನ ಶವ ಕಾಣಿಸುತ್ತದೆ. ಆತ ಅದನ್ನು ಎತ್ತಿಕೊಳ್ಳುವುದಕ್ಕೆ ಕ್ಷಣ ಮುಂಚೆ ಫೋಟೋ ಕ್ಲಿಕ್ಕಿಸಲಾಗಿದೆ. ಆ ಪೋಲೀಸ್ ಅಧಿಕಾರಿ ಮೆಹಮತ್ ಸಿಪ್ಲಾಕ್ ಗೂ ಇದೇ ವಯಸ್ಸಿನ ಮಗನಿದ್ದಾನಂತೆ. ನಂತರದ ಫೋಟೋಗಳಲ್ಲಿ ದುಃಖ ಭರಿತನಾದ ಅಧಿಕಾರಿಯ ಚಿತ್ರಣವಿದೆ.
ಮುಂಬೈ ಬಾಂಬ್ ಬ್ಲಾಸ್ಟ್

ಪ್ಯಾಲೇಸ್ತೇನ್

ಭೋಪಾಲ್ ಗ್ಯಾಸ್ ದುರಂತ

ಗುಜರಾತ್ ಗಲಭೆ

ಚಿತ್ರಗಳು ಮಾನವೀಯತೆಯನ್ನು ಬಡಿದೆಬ್ಬಿಸುವುದು ಹೊಸತೇನಲ್ಲ. ನಾಜಿ ಕ್ಯಾಂಪಿನ ಚಿತ್ರಗಳು, ಭೋಪಾಲದಲ್ಲಿ ಹೂತು ಹಾಕುವ ಮಗುವಿನ ವಿಕಾರ ಮುಖದ ಚಿತ್ರ, ಹಸಿದ ಮಗುವಿನ ಹಿಂದೆ ರಣಹದ್ದೊಂದು ಕುಳಿತಿರುವ ಚಿತ್ರ, ಎದುರಿಗಿನ ಕ್ಯಾಮೆರಾವನ್ನು ಬಂದೂಕೆಂದು ತಿಳಿದು ಕೈ ಮೇಲೆತ್ತಿದ ಮಗುವಿನ ಚಿತ್ರ, ಪ್ಯಾಲೇಸ್ತೀನಿನ ಚಿತ್ರಗಳು, ಬಾಂಬ್ ಸ್ಪೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಜನರ ಅಂಗಾಂಗಗಳು – ವಸ್ತುಗಳ ಚಿತ್ರ, ಸಾಯಿಸಿದ ನಕ್ಸಲನನ್ನು ಪ್ರಾಣಿಯಂತೆ ಕೋಲಿಗೆ ಕಟ್ಟಿ ತೆಗೆದುಕೊಂಡ ಹೋಗುವ ಚಿತ್ರ, ನೆಲಬಾಂಬ್ ಸ್ಪೋಟದಿಂದ ಸತ್ತ ಸಿ.ಆರ್.ಪಿ.ಎಫ್ ಯೋಧರ ಚಿತ್ರ, ಗೋದ್ರೋತ್ತರ ಗಲಭೆಯಲ್ಲಿ ಕೈ ಮುಗಿದು ಬೇಡಿಕೊ‍ಳ್ಳುವ ವ್ಯಕ್ತಿಯ ಕಣ್ಣಲ್ಲಿನ ನೀರು – ಇವೆಲ್ಲವೂ ಮನುಷ್ಯನ ಮಾನವೀಯತೆಯನ್ನು ಬಡಿದೆಬ್ಬಿಸಿವೆ. ಒಂದರೆಕ್ಷಣವಾದರೂ ತತ್ವ ಸಿದ್ಧಾಂತಗಳನ್ನು ಮರೆತು ಮನುಷ್ಯ ಮಾನವೀಯತೆಯನ್ನು ತೋರ್ಪಡಿಸುವಲ್ಲಿ ‘ಛೇ ಛೇ’ ಎಂದು ಉದ್ಗರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರಾ ಮಾನವೀಯತೆ ಶಾಶ್ವತವಾಗಿ ಉಳಿಯುವುದಿಲ್ಲವೆಂಬುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಯುದ್ಧ ಪಿಪಾಸು ರಾಷ್ಟ್ರಗಳು, ಶಸ್ತ್ರಾಸ್ತ್ರ ಕಂಪನಿಗಳ ದುರಾಸೆಗಳು, ಶ್ರೇಷ್ಟ ಧರ್ಮದ ವ್ಯಸನ.......... ಸತ್ತವರೊಂದಿಗೆ ಮಾನವೀಯತೆಯೂ ಸಾಯುತ್ತಿದೆ.

ಮೂಲ : ವಿಕಿಪೀಡಿಯ, vox, mercycorps, mirror, theglobeandtimess

ಸೆಪ್ಟೆಂ 9, 2015

ಮಂಗಳೂರಿನ ಮತಿಗೆಟ್ಟ 'ಯುವಕರು'


Ashok K R
ದಕ್ಷಿಣ ಕನ್ನಡದಲ್ಲಿ ಬಿಜೆಪಿಯದೇ ಪಾರುಪತ್ಯವಿತ್ತು. ಬಿಜೆಪಿ ಬೆಂಬಲಿತ ಸಂಘಪರಿವಾರದ ವಿವಿಧ ಶಾಖೆಗಳ ಆಟೋಟಾಪಗಳು, ಸಾಮಾನ್ಯ ಜನರಿಗೆ ವಿನಾಕಾರಣವಾಗಿ ಅವರು ನೀಡಿದ ತೊಂದರೆ, ಅದರ ಜೊತೆಜೊತೆಗೇ ಬೆಳೆದ ಮುಸ್ಲಿಂ ಮೂಲಭೂತವಾದಿಗಳ ಕಾಟವೆಲ್ಲವೂ ಸೇರಿ ಜನರನ್ನು ಜಿಗುಪ್ಸೆಗೆ ತಳ್ಳಿತ್ತು. ಆ ಜಿಗುಪ್ಸೆಯ ಫಲವೆಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಸುಳ್ಯ ಕ್ಷೇತ್ರವೊಂದನ್ನು ಹೊರತುಪಡಿಸಿ. ಓ! ಕಾಂಗ್ರೆಸ್ ಬಂತು, ಅದರಲ್ಲೂ ಸಿದ್ಧರಾಮಯ್ಯನಂತಹ 'ಸಮಾಜವಾದಿ' 'ಅಹಿಂದ' ನಾಯಕ ಈಗ ಮುಖ್ಯಮಂತ್ರಿ. ಇನ್ನೇನು ಇಡೀ ದಕ್ಷಿಣ ಕನ್ನಡ ಶಾಂತಿಯ ಬೀಡಾಗಿಬಿಡುತ್ತದೆ ಎಂದುಕೊಂಡಿರಾದರೆ ಅದು ಖಂಡಿತ ತಪ್ಪು. ತಪ್ಪೆಂದು ನಿರೂಪಿಸಲು ಮತ್ತೆ ಮತ್ತೆ ಅನೈತಿಕ ಪೋಲೀಸ್ ಗಿರಿಯಂತಹ ಕಾರ್ಯಗಳು ನಡೆಯುತ್ತಲೇ ಇವೆ. 
ಮುಸ್ಲಿಮನೊಬ್ಬ ಪರಿಚಯದ ಹಿಂದೂ ಹುಡುಗಿಯೊಂದಿಗೆ ಹೋಗುವುದು, ಹಿಂದೂವೊಬ್ಬ ಪರಿಚಯದ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುವುದು ಇಲ್ಲಿ ಧರ್ಮದ್ರೋಹದ ಅಪರಾಧ! ಇಂತವರ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹಕ್ಕೆ ಸಮ! ನಿನ್ನೆ ದಿನ ಹಿಂದೂ ಯುವಕೊನೊಬ್ಬನನ್ನು ನಡುಬೀದಿಯಲ್ಲಿ ಹೊಡೆಯಲಾಗಿದೆ. ಕಾರಣ ಆತ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುತ್ತಿದ್ದ. ಹೆಣ್ಣುಮಕ್ಕಳ 'ರಕ್ಷಣೆಯ' ನೆಪದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಇಂತಹ ಕೃತ್ಯವೆಸಗಿದ್ದಾರೆ! ಸಹಪಾಠಿಗಳೂ ಮಾತನಾಡದಂತಹ ಸ್ಥಿತಿಗೆ ಮಂಗಳೂರು ತಲುಪಿರುವುದಾದರೂ ಯಾಕೆ?
ಮೇಲಿನ ಚಿತ್ರ ಗಮನಿಸಿ, ಆ ಹಿಂದೂ ಹುಡುಗನ ಎದುರಿಗೆ ನಿಂತು ಬಹುಶಃ 'ಸಂಸ್ಕೃತಿ'ಯ ಪಾಠ ಮಾಡುತ್ತಿರುವವರೆಲ್ಲರೂ ಯುವಕರು. ಇಂತಹ ಯುವಕರಿಗೆ ಕೋಮುನಂಜನ್ನು ತುಂಬುತ್ತಿರುವವರಾರು? ಆ ಕೋಮು ವಿಷವನ್ನು ತುಂಬುವ ವ್ಯಕ್ತಿಗಳು ದೊಡ್ಡ ದೊಡ್ಡ ಭಾಷಣ ಬಿಗಿದು ಬೆಚ್ಚಗೆ ಮನೆ ಸೇರುತ್ತಾರೆ. ವಿಷದ ನಂಜೇರಿದ ಈ ಯುವಕರು ಬೀದಿಯಲ್ಲಿ ಓಡಾಡುತ್ತಿದ್ದ ಗೆಳೆಯರಿಬ್ಬರನ್ನೂ ಹಿಡಿದು ಚಚ್ಚುತ್ತಾರೆ. ಕೊನೆಗೆ ಜೈಲು ಪಾಲಾಗುವ ಸಂದರ್ಭ ಬಂದರೆ ಅದು ಈ ಹುಡುಗರಿಗೇ ಹೊರತು ಭೀಕರ ಭಾಷಣ ಕುಟ್ಟುವವರಿಗಲ್ಲ.
ಅಂದಹಾಗೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಇದು ಯಾಕೆ ನಡೆಯುತ್ತಿದೆ ಎಂದಿರಾ? ಬಿಜೆಪಿ ಮಂಗಳೂರಿನಲ್ಲಿ ಉಗ್ರ ಹಿಂದೂ ಮೂಲಭೂತವಾದ ನಡೆಸಿದರೆ ಕಾಂಗ್ರೆಸ್ ನಡೆಸುವುದು ಸೌಮ್ಯ ಹಿಂದೂ ಮೂಲಭೂತವಾದ.... ಹಿಂದೂ ಮೂಲಭೂತ ಅಸ್ತಿತ್ವದಲ್ಲಿರಬೇಕಾದರೆ ಮುಸ್ಲಿಂ ಮೂಲಭೂತವಿಲ್ಲದಿದ್ದರೆ 'ಇಸ್ಲಾಮಿಗೆ' ಅವಮಾನವೆಂದು ಈ ಯುವಕರು ತಿಳಿದಿರಬೇಕು! ತನ್ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಮಂಗಳೂರು ಮತಿಗೆಟ್ಟವರ ಕಾರಣದಿಂದಲೇ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ.

ಈ ಇಡೀ ಲೇಖನವನ್ನು ಹೊಸದಾಗಿ ಬರೆದಿಲ್ಲ. ಅತ್ತಾವರದಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ದಾಂಧಲೆಯ ಸಂದರ್ಭದಲ್ಲಿ ಬರೆದ "ಮಂಗಳೂರಿನ ಮತಿಗೆಟ್ಟ ಹುಡುಗರು "ಲೇಖನವನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ! ಹಿಂದೂ ಎನ್ನುವ ಜಾಗದಲ್ಲಿ ಮುಸ್ಲಿಂ ಎಂದು ಮುಸ್ಲಿಂ ಎಂದು ಬರೆದಿದ್ದ ಜಾಗದಲ್ಲಿ ಹಿಂದೂ ಎಂದು ತಿದ್ದಿದರೆ ಈ ಲೇಖನ ಸಿದ್ಧವಾಗಿಬಿಟ್ಟಿತು. ಮೂಲಭೂತವಾದಿಗಳ ಕಾರ್ಯವೈಖರಿಯಲ್ಲಿ ಅಷ್ಟರಮಟ್ಟಿಗೆ ಹೋಲಿಕೆಗಳಿವೆ.

ಸೆಪ್ಟೆಂ 5, 2015

ಸಂಶೋಧಕನ ಹತ್ಯೆ ಕಾಣಿಸಿದ ಸತ್ಯಗಳು

Dr Ashok K R
ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆ ತಲ್ಲಣ ಮೂಡಿಸಿದೆ ಜೊತೆಜೊತೆಗೆ ಅನೇಕ ಗೊಂದಲಗಳನ್ನೂ ಸೃಷ್ಟಿಸಿಬಿಟ್ಟಿದೆ. ಜನ, ಮಾಧ್ಯಮ ಒಟ್ಟಾರೆಯಾಗಿ ಇಡೀ ಸಮಾಜ ಕಲಬುರ್ಗಿಯವರ ಹತ್ಯೆಗೆ ಪ್ರತಿಕ್ರಿಯಿಸಿದ ರೀತಿ ನಿರಾಶೆಯನ್ನು ಮೂಡಿಸುತ್ತದೆ. ಕಲಬುರ್ಗಿಯವರ ಸಾವು ಮನಕಲಕಲು ಒಂದು ಹಿರಿಯ ಜೀವಿಯ ಹತ್ಯೆ ಎಂಬ ಕಾರಣವೇ ಸಾಕಿತ್ತು. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ತಾತ್ವಿಕ ವಿರೋಧಗಳು ಸಾವನ್ನೂ ಸಂಭ್ರಮಿಸುವ ಸರಕಾಗಿಸಿಬಿಟ್ಟಿದೆ. ಅನಂತಮೂರ್ತಿಯವರ ಸಾವಿನ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿದ ಮನಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಿದೆ. ವಿರೋಧಗಳಿಲ್ಲದೆ ಯಾವ ಧರ್ಮ ತಾನೇ ಉತ್ತಮಗೊಂಡಿದೆ? ಯಥಾಸ್ಥಿತಿವಾದಿಗಳಷ್ಟೇ ಪ್ರತಿರೋಧವನ್ನು ವಿರೋಧಿಸುತ್ತಾರೆ. ಇದರ ನಡುವೆ ಅರ್ಧ ಸತ್ಯವನ್ನಾಡುವವರು ಸಮಾಜದ ಬಗ್ಗೆಯೇ ರೇಜಿಗೆ ಹುಟ್ಟಿಸುವಂತೆ ಮಾಡುತ್ತಾರೆ.

ಒಂದು ಹತ್ಯೆ ನಡೆದ ತಕ್ಷಣ ಅದು ಇಂತವರದ್ದೇ ಕೃತ್ಯ ಎಂದು ಇದಮಿತ್ಥಂ ಹೇಳಿಬಿಡುವುದು ತನಿಖೆಯ ದಾರಿ ತಪ್ಪಿಸುವುದರ ಜೊತೆಗೆ ಜನರನ್ನೂ ತಪ್ಪು ದಾರಿಗೆ ಎಳೆದುಬಿಡುತ್ತದೆ. ಡಾ.ಎಂ.ಎಂ.ಕಲಬುರ್ಗಿಯವರಿಗಿದ್ದ ಜೀವ ಬೆದರಿಕೆಗಳು, ಅವರ ಮೇಲಾಗಿದ್ದ ಕಲ್ಲು ತೂರಾಟಗಳನ್ನೆಲ್ಲಾ ಗಮನಿಸಿದ್ದ ಕೆಲವು ಪ್ರಗತಿಪರರು ಅವರು ಹತರಾದ ದಿನ ಇದು ಬಲಪಂಥೀಯರದೇ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟುಬಿಟ್ಟರು. ಬಹುತೇಕ ಪ್ರಗತಿಪರರೇ ಅದನ್ನು ವಿರೋಧಿಸಿ ಒಂದೆರಡು ದಿನ ತಾಳ್ಮೆಯಿಂದ ಕಾಯುವ ಕೆಲಸವಾಗಬೇಕೀಗ, ಆತುರದ ತೀರ್ಮಾನಗಳೇಕೆ ಎಂದು ಪ್ರಶ್ನಿಸಿದರು. ನನ್ನದೂ ವೈಯಕ್ತಿಕವಾಗಿ ಅದೇ ಅಭಿಪ್ರಾಯವಾಗಿತ್ತು. ಬಲಪಂಥೀಯರಾಗಲೇ ಕೆಲವು ಪ್ರಗತಿಪರರ ಹೇಳಿಕೆಗಳನ್ನಿಡಿದುಕೊಂಡು ‘ನೋಡಿ ನೋಡಿ. ಹಿಂದೂ ಸಂಘಟನೆಯ ಮೇಲೆ ಗೂಬೆ ಕೂರಿಸಿಬಿಡ್ತಾರೆ’ ಎಂದು ಹೇಳುವುದೂ ಪ್ರಾರಂಭವಾಯಿತು. ಹಿರಿಯ ಸಾಹಿತಿ – ಸಂಶೋಧಕರೊಬ್ಬರ ಹತ್ಯೆ ಇತರೆ ಸಾಹಿತಿ ಸಂಶೋಧಕರಿಗೆ ಭಯ ಮೂಡಿಸಿದರೆ ಅದು ಸಹಜ. ಆ ರೀತಿಯೆಲ್ಲ ಭಯಪಡಬೇಡಿ ಎಂದು ಹೇಳಬೇಕಾದ ಸಮಾಜ, ಆ ಭಯ ವ್ಯಕ್ತಪಡಿಸಿದವರನ್ನೇ ಗೇಲಿ ಮಾಡುವ ಮಟ್ಟಕ್ಕೆ ಇಳಿದುಬಿಟ್ಟಿರುವುದು ಬೇಸರ ಮೂಡಿಸುತ್ತದೆ. 

ಅವರ ಹತ್ಯೆಯಾದ ದಿನ ರಾಜ್ಯದ ವಿವಿದೆಡೆ ಚಿಕ್ಕ ಪುಟ್ಟ ಸಂತಾಪ ಸಭೆಗಳು, ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸುವ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲೂ ಟೌನ್ ಹಾಲ್ ಎದುರಿಗೆ ಅಂತಹುದೊಂದು ಸಭೆ ನಡೆಯಿತು. ಆ ಸಭೆಯನ್ನು ಬಲಪಂಥೀಯರಿಂದ ಹಿಡಿದು ಪ್ರಗತಿಪರರೆನ್ನಿಸಿಕೊಂಡ ಕೆಲವರೂ ಆಡಿಕೊಂಡರು. ಅವರ ಪ್ರಕಾರ ಅದು ಕಲಬುರ್ಗಿಯವರ ಹತ್ಯೆಯನ್ನು ಬಲಪಂಥೀಯರ ತಲೆಗೆ ವಿನಾಕಾರಣ ಕಟ್ಟುವ ಪ್ರಯತ್ನವಾಗಿತ್ತಂತೆ! ಸಿಂಪಥಿ ಬರಲೆಂಬ ಕಾರಣಕ್ಕೆ ಪ್ರಗತಿಪರರೇ ಯಾಕೆ ಈ ಕೊಲೆ ಮಾಡಿಸಿರಬಾರದು ಎಂದು ಕಥೆ ಹೆಣೆಯುವುದರಲ್ಲೂ ಅನೇಕರು ಬ್ಯುಸಿಯಾಗಿಬಿಟ್ಟರು! ನಿಲುಮೆಯೆಂಬ ವೆಬ್ ಪುಟದಲ್ಲಿ, ಅಗ್ನಿ ಪತ್ರಿಕೆಯ ಸಂಪಾದಕೀಯದಲ್ಲಿ ಅಂದು ಸೇರಿದ್ದ ಜನರನ್ನೇ ಹೀಗಳೆಯುವ ಕೆಲಸ ನಡೆದಿದೆ. ಅವರುಗಳು ಬರೆದಿರುವುದರಲ್ಲಿ ಬಹುತೇಕ ಸುಳ್ಳೇ ಸೇರಿದೆ! ಅನೇಕರು ಬರೆದಂತೆ ಅದು ಪ್ರತಿಭಟನಾ ಸಭೆಯೇನು ಆಗಿರಲಿಲ್ಲ. ನಾಲ್ಕೂ ಮೂವತ್ತರ ಸಮಯಕ್ಕೆ ನಿಗದಿಯಾಗಿದ್ದ ಸಭೆಗೆ ನಾಲ್ಕು ಘಂಟೆಯಿಂದಲೇ ಜನರು ಬರಲಾರಂಭಿಸಿದ್ದರು. ಅದು ಯಾವ ಸಂಘಟನೆಯೂ ಸೇರಿಸಿದ ಸಭೆಯಾಗಿರಲಿಲ್ಲ. ವಾಟ್ಸಪ್ಪಿನಲ್ಲಿ, ಫೇಸ್ ಬುಕ್ಕಿನಲ್ಲಿ ನಾಲ್ಕೂವರೆಗೆ ಟೌನ್ ಹಾಲ್ ಬಳಿ ಹೀಗೊಂದು ಸಂತಾಪ ಸೂಚಕ ಸಭೆ ನಡೆಸೋಣ ಎಂಬ ಮೆಸೇಜು ಹರಿದಾಡಿ ಇನ್ನೂರೈವತ್ತು ಮುನ್ನೂರು ಜನರು ಅಲ್ಲಿ ನೆರೆದಿದ್ದರು. ಬರಗೂರು, ಸುರೇಂದ್ರನಾಥ್, ಜಿ.ರಾಮಕೃಷ್ಣ, ಬೋಳುವಾರು, ಗೌರಿ ಲಂಕೇಶ್, ವಡ್ಡಗೆರೆ ನಾಗರಾಜಯ್ಯ, ಗಿರೀಶ್ ಕಾರ್ನಾಡ್, ಅನಂತ ನಾಯಕ್, ಕುಮಾರ ರೈತ ಹೀಗೆ ಅನೇಕರು ಅಲ್ಲಿ ಸೇರಿದ್ದರು. ವಿವಿಧ ಸಂಘಟನೆಗಳಿಗೆ ಸೇರಿದವರೂ ನೆರೆದಿದ್ದರು, ಯಾವ ಸಂಘಟನೆಗೂ ಸೇರದ ನನ್ನಂತವರ ಸಂಖೈ ಅಲ್ಲಿ ಜಾಸ್ತಿ ಇತ್ತು. ತಾಂತ್ರಿಕವಾಗಿ ಸರಕಾರದ ಭಾಗವೇ ಆಗಿರುವ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದರು. ಅದು ಸಂತಾಪ ಸೂಚಕ ಸಭೆಯೆಂದು ಭಾಗವಹಿಸಿದವರ ಸಂಖೈ ಹೆಚ್ಚಿತ್ತೇ ಹೊರತು ಅದು ಪ್ರತಿಭಟನೆಯ ಸಭೆಯೆಂದಲ್ಲ. ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದು ತಪ್ಪೇ?. ಹಿರಿಯರೊಬ್ಬರ ಸಾವಿಗೆ ಸಂಭ್ರಮ ಸೂಚಿಸುವ, ಪಟಾಕಿ ಹೊಡೆಯುವ ಮನಸ್ಥಿತಿ ಇರುವವರ ಸಂಖೈ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂತಾಪ ಸೂಚಿಸುವವರೇ ಅಪರಾಧಿಗಳೇನೋ?

ಕಲಬುರ್ಗಿಯವರ ಹತ್ಯೆ ನಡೆದ ನಂತರ ಟ್ವಿಟರಿನಲ್ಲಿ ಭುವಿತ್ ಶೆಟ್ಟಿ ಎಂಬ ಯುವಕ ಆಗ ಅನಂತಮೂರ್ತಿ ಈಗ ಕಲಬುರ್ಗಿ ಕೆ.ಎಸ್.ಭಗವಾನ್ ಮುಂದಿನ ಸರದಿ ನಿನ್ನದು ಎಂಬ ದಾಟಿಯ ಬೆದರಿಕೆ ಒಡ್ಡುತ್ತಾನೆ. ಆತನ ಮೇಲೆ ಪೋಲೀಸರು ಕೇಸು ದಾಖಲಿಸಿಕೊಂಡು ಬಂಧಿಸುತ್ತಾರೆ. ನಂತರ ಏನು ನಡೆಯುತ್ತದೆ ಎನ್ನುವುದು ಸಮಾಜ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ನೀಡುತ್ತದೆ. ಹೆಚ್ಚೇನಿಲ್ಲ ಕಳೆದ ಡಿಸೆಂಬರಿನಲ್ಲಿ ಪೋಲೀಸರು ಮೆಹದಿಯೆಂಬ ವ್ಯಕ್ತಿಯನ್ನು ಬಂಧಿಸುತ್ತಾರೆ. ಕಾರಣ? ಆತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಪರವಾಗಿ ಟ್ವೀಟುಗಳನ್ನು ಮಾಡುತ್ತಿದ್ದ. ಅವರ ಉಗ್ರಗಾಮಿತವನ್ನು ಬೆಂಬಲಿಸುತ್ತಿದ್ದ. ನೇರವಾಗಿ ಆತನೇನೂ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಕಾರ್ಯನಿರ್ವಹಿಸುತ್ತಿರಲಿಲ್ಲ ಆದರೆ ಅವರ ತತ್ವ ಸಿದ್ಧಾಂತಗಳನ್ನು ಬೆಂಬಲಿಸುತ್ತಿದ್ದ. ಬೆಂಬಲದ ಟ್ವೀಟುಗಳನ್ನು ಹಂಚಿಕೊಳ್ಳುತ್ತಿದ್ದ, ಜನರನ್ನು ಆ ತತ್ವ ಸಿದ್ಧಾಂತಗಳೆಡೆಗೆ ಆಕರ್ಷಿತರಾಗುವಂತೆ ಮಾಡುತ್ತಿದ್ದ. ಅವನನ್ನು ಬಂಧಿಸಿದ ಪೋಲೀಸರು ‘Waging war against Asiatic Powers’ – ‘ಏಷಿಯಾ ದೇಶಗಳ ವಿರುದ್ಧ ಯುದ್ಧ ಸಾರಿದಾತ’ ಎಂಬ ಆರೋಪ ಹೊರಿಸುತ್ತದೆ. ಹತ್ತು ತಿಂಗಳ ನಂತರವೂ ಆತ ಜೈಲಿನಲ್ಲಿದ್ದಾನೆ. ಈಗ ಮತ್ತೆ ಭುವಿತ್ ಶೆಟ್ಟಿಯ ಪ್ರಕರಣ ಗಮನಿಸಿದರೆ ಆತನೇನು ಅನಂತಮೂರ್ತಿಯವರ ಸ್ವಾಭಾವಿಕ ಮೃತ್ಯುವಿಗೆ ಕಾರಣಕರ್ತನಲ್ಲ, ಕಲಬುರ್ಗಿಯವರನ್ನು ಕೊಂದವನೂ ಅಲ್ಲ; ಆದರೆ ಆ ಕೊಲ್ಲುವ ಉಗ್ರ ಸಿದ್ಧಾಂತದ ಸಮರ್ಥಕ, ಆ ಕೊಲ್ಲುವಿಕೆಯ ಸಮರ್ಥಕ, ಮುಂದೆ ಇತರರನ್ನೂ ಕೊಲ್ಲುವುದಕ್ಕೆ ಪ್ರೇರೇಪಿಸುವಂತಹ ಟ್ವೀಟುಗಳನ್ನು ಹಾಕಿದಾತ. ತಾಂತ್ರಿಕವಾಗಿ ನೋಡಿದರೆ ಭುವಿತ್ ಶೆಟ್ಟಿಯ ಮೇಲೂ ಕಠಿಣ ಕಾಯ್ದೆಗಳನ್ನು ಹಾಕಬೇಕಿತ್ತು, ಆತ ಇನ್ನೂ ಜೈಲಿನಲ್ಲಿರಬೇಕಿತ್ತು. ಕ್ಷಮಿಸಿ, ಆತ ಮುಸ್ಲಿಮನಲ್ಲ; ದಿನದೊಳಗೇ ಜಾಮೀನು ಪಡೆದು ಹಿಂದಿರುಗಿದ್ದಾನೆ. ಸದ್ಯದ ಭವಿಷ್ಯದಲ್ಲಿ ಮಂಗಳೂರಿನ ಹಿಂದೂ ಸಂಘಟನೆಗಳು ಆತನಿಗೆ ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ. ಜೈಭಜರಂಗಿ ಹೆಸರಿನಲ್ಲಿ ಉಗ್ರ ಹೇಳಿಕೆಗಳನ್ನು ಕೊಟ್ಟ, ಅನೇಕ ಕೇಸುಗಳಲ್ಲಿ ಆರೋಪಿಯಾಗಿರುವ ಪ್ರಸಾದ್ ಅತ್ತಾವರನನ್ನು ಕಲಬುರ್ಗಿಯವರ ಹತ್ಯೆ ಸಂಬಂಧ ವಿಚಾರಣೆಗಾಗಿ ಬಂಧಿಸುತ್ತಾರೆ. ಆತನೂ ಜಾಮೀನಿನ ಮೇಲೆ ಹೊರಬರುತ್ತಾನೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹೆಸರಿಸಲಾಗದ ಮೂಲಗಳಿಂದ ಒಂದು ಸುದ್ದಿ ಪ್ರಕಟಿಸುತ್ತಾರೆ. ಪ್ರಸಾದ್ ಅತ್ತಾವರನ ಬಂಧನದಿಂದ ಪೋಲೀಸರಿಗೆ ಹೊಸ ವಿಷಯ ತಿಳಿದಿದೆ. ಕೆ.ಎಸ್.ಭಗವಾನರನ್ನು ಹತ್ಯೆ ಮಾಡಲು ಇಬ್ಬರು ಮೈಸೂರಿಗೆ ಬಂದಿದ್ದರು, ಆದರೆ ವಿವಿಧ ಕಾರಣಗಳಿಂದ ಅವರು ವಾಪಸ್ಸಾದರು ಎಂದು. ಟೈಮ್ಸ್ ಬಿಟ್ಟು ಬೇರೆ ಯಾವ ಪತ್ರಿಕೆಯಲ್ಲೂ ಈ ಸುದ್ದಿ ಬರುವುದಿಲ್ಲ. ಸುಮ್ಮನೆ ಯೋಚಿಸಿ, ಮುಸ್ಲಿಂ ಸಾಹಿತಿಯೊಬ್ಬ ಹತನಾಗಿ ಮುಸ್ಲಿಂ ಮೂಲಭೂತವಾದಿಯೊಬ್ಬ ಈ ರೀತಿಯಾಗಿ ಟ್ವೀಟಿಸಿದ್ದರೆ ಪೋಲೀಸರ ಸಮಾಜದ ಮಾಧ್ಯಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಇದೊಂದೇ ಪ್ರಕರಣವಲ್ಲ, ಧರ್ಮಾಧಾರಿತವಾಗಿ ಪೋಲೀಸರು ಕಾರ್ಯನಿರ್ವಹಿಸುವ ಅನೇಕ ಸಂದರ್ಭಗಳನ್ನು ಪದೇ ಪದೇ ಕಾಣುತ್ತೇವೆ. ಕಳೆದ ದಸರೆಯ ಸಮಯದಲ್ಲಿ ಮೈಸೂರು ಪೋಲೀಸರಿಗೆ ಕರೆ ಮಾಡಿ ಅರಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ, ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದವನೆಂದು ಹೇಳಿಕೊಂಡಿದ್ದ. ಮೈಸೂರಿನ ಮೇಲೆ ಉಗ್ರರ ದಾಳಿ ಎಂದೇ ಸುದ್ದಿ ಬಿತ್ತರವಾಗಿತ್ತು. ಮೈಸೂರು ಪೋಲೀಸರ ಶೀಘ್ರ ಕಾರ್ಯಾಚರಣೆಯಿಂದ ಕರೆ ಮಾಡಿದ್ದವನ ಬಂಧನವೂ ಆಯಿತು. ‘ಉಗ್ರನ ಬಂಧನ’ ಎಂದು ದೊಡ್ಡ ಸುದ್ದಿಯಾಯಿತಾ? ದಿನಗಟ್ಟಲೇ ಚರ್ಚೆ ನಡೆಯಿತಾ? ಪತ್ರಿಕೆಗಳು ಮುಖಪುಟದಲ್ಲಿ ಆ ಸುದ್ದಿ ಪ್ರಕಟಿಸಿದವಾ? ಸಾಮಾಜಿಕ ಜಾಲತಾಣಗಳಲ್ಲಿ ಆ ‘ಉಗ್ರನನ್ನು’ ಹೀನಾಮಾನ ಟೀಕಿಸಲಾಯಿತಾ? ಇಲ್ಲ. ಯಾಕೆಂದರೆ ಕರೆ ಮಾಡಿ ಬೆದರಿಸಿದ್ದು ಮುಸ್ಲಿಮನಾಗದೇ ಹಿಂದೂ ಆಗಿದ್ದ! ಹಿಂದೂವೊಬ್ಬ ಉಗ್ರನಾಗಲು ಹೇಗೆ ಸಾಧ್ಯ?! ಮಾನಸಿಕ ಸ್ಥಿಮಿತವಿಲ್ಲದ ಬಾಲಕನಾಗಿ ಆ ಹಿಂದೂ ವರದಿಯಾಗಿದ್ದ! ಅದೂ ನಿಜವೇ ಇರಬಹುದು. ಆದರೆ ಮಾನಸಿಕ ಸ್ಥಿಮಿತವಿಲ್ಲದ ಮುಸ್ಲಿಂ ಹುಡುಗನೊಬ್ಬ ಇದೇ ರೀತಿ ಮಾಡಿದ್ದರೂ ಸಮಾಜ ಹೀಗೆಯೇ ಪ್ರತಿಕ್ರಿಯಿಸುತ್ತಿತ್ತಾ? ಉತ್ತರ ನಿಮ್ಮಲ್ಲೇ ಇದೆ.

ಒಂದು ವಾರ ಕಳೆದಿದೆ ಕಲಬುರ್ಗಿಯವರ ಹತ್ಯೆಯಾಗಿ. ಹೆಚ್ಚಿನ ಸುಳಿವುಗಳೇನೂ ದಕ್ಕಿಲ್ಲ. ಪತ್ರಿಕಾ ವರದಿಗಳ ಪ್ರಕಾರ ಪೋಲೀಸರೇನೋ ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರವಾಗಿ ಗಲಾಟೆಗಳಿತ್ತಾ, ವೈಯಕ್ತಿಕ ಜೀವನದಲ್ಲಿ ತೊಂದರೆಗಳಿತ್ತಾ, ಇವತ್ತಿನ ವರದಿಯಂತೆ ಬಸವರಾಜ ಕಟ್ಟೀಮನಿ ಪ್ರತಿಷ್ಟಾಪನೆಯ ಸಂಬಂಧ ತೊಂದರೆಯಿತ್ತಾ, ಹಿಂದೂ ಬಲಪಂಥೀಯರ ಕೃತ್ಯವಾ ಇದು, ಲಿಂಗಾಯತ ಮೂಲಭೂತವಾದಿಗಳ ಕೃತ್ಯವಾ ಇದು ಎಂದು ಅನೇಕ ದಿಕ್ಕುಗಳಲ್ಲಿ ತನಿಖೆ ಸಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ಧತೆ ಮಾಡಿಕೊಂಡಿದೆ. ನಿಜವಾದ ಕಾರಣ ಏನೂ ಇರಬಹುದು, ಆದರೆ ಆ ಕಾರಣ ತಿಳಿಯುತ್ತದಾ ಎಂದು ಗಮನಿಸಿದಾಗ ಒಂದಷ್ಟು ಬೇಸರವಾಗುತ್ತದೆ, ಜೊತೆಗೊಂದಷ್ಟು ಭಯವೂ. ಇದೇ ರೀತಿ ಹತ್ಯೆಯಾದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಕಮ್ಯುನಿಷ್ಟ್ ಮುಖಂಡ ಗೋವಿಂದ ಪನ್ಸಾರೆಯ ಹಂತಕರು ಇದುವರೆಗೆ ಪತ್ತೆಯಾಗಿಲ್ಲ. ಅವರನ್ನು ಸಾಯಿಸಿದ ರೀತಿಗೂ ಕಲಬುರ್ಗಿಯವರನ್ನು ಸಾಯಿಸಿದ ರೀತಿಗೂ ತುಂಬಾ ಸಾಮ್ಯತೆಯಿದೆ. ದಾಬೋಲ್ಕರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ, ಪ್ರಕರಣದ ತನಿಖೆ ಅಷ್ಟೇನೂ ವೇಗದಲ್ಲಿ ನಡೆಯದಿರುವುದಕ್ಕೆ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಸಾಲಿಗೇ ಕಲಬುರ್ಗಿಯವರ ಹತ್ಯೆಯೂ ಸೇರಿಹೋಗುತ್ತದಾ ಎಂಬ ಭೀತಿ ಕಾಡಿದರದು ತಪ್ಪೇ?

ಕಲಬುರ್ಗಿಯವರು ಸಾವಿನಲ್ಲಿ ನಿಜಕ್ಕೂ ಅನಾಥರಾಗಿಬಿಟ್ಟರು ಎಂದರೆ ತಪ್ಪಲ್ಲ. ಅವರನ್ನು ಬೆಂಬಲಿಸಿ ಮಾತನಾಡಿದವರ ಪ್ರಗತಿಪರರ ಸಂಖೈ ಎಷ್ಟಿತ್ತೋ, ಯಾರು ಸಾಯಿಸಿದರೋ ಏತಕ್ಕೆ ಸಾಯಿಸಿದರೋ ಸುಖಾಸುಮ್ಮನೆ ಅವರನ್ನು ಬೆಂಬಲಿಸಿ ಸಮಾಜದ ಪ್ರಮುಖ ವಾಹಿನಿಯ ವಿರೋಧವನ್ನು ಯಾಕೆ ಕಟ್ಟಿಕೊಳ್ಳಬೇಕು ಎಂದು ಮೌನ ವಹಿಸಿದ ಪ್ರಗತಿಪರರ ಸಂಖೈಯೂ ಹೆಚ್ಚಿದೆ. ಇಂತಹ ಅಪಾಯಗಳನ್ನು ಎದುರಿಸಲು ಒಂದು ಸ್ಟ್ರ್ಯಾಟಜಿ ಇರಬೇಕು ಎಂದ ಮಾತುಗಳನ್ನು ತಿರುಚಿ ‘ಸಾವಿನಲ್ಲೂ ಸ್ಟ್ರ್ಯಾಟಜಿ’ ಹುಡುಕುವವರು ಎಂದು ನಟರಾಜ್ ಹುಳಿಯಾರರಂತವರೂ ಬರೆದುಬಿಡುತ್ತಾರೆ! ಅರ್ಧ ಸತ್ಯಗಳಿಗೆ ಅವರೂ ತಲೆದೂಗಲಾರಂಭಿಸುತ್ತಾರೆ! ಕಲಬುರ್ಗಿಯವರು ಹಿಂದೂ ಧರ್ಮದ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಹಿಂದೂ ಬಲಪಂಥೀಯ ಸಂಘಟನೆಯವರು ಅವರ ಹತ್ಯೆಯನ್ನು ಖಂಡಿಸುವುದಿಲ್ಲ, ಬದಲಿಗೆ ಸಂಭ್ರಮಿಸುತ್ತಾರೆ. ಲಿಂಗಾಯತವೆಂಬುದು ಪ್ರತ್ಯೇಕ ಧರ್ಮ, ಹಿಂದೂ ಧರ್ಮದ ಭಾಗವಲ್ಲ ಅದು ಎಂಬುದು ಕಲಬುರ್ಗಿಯವರ ನಿಲುವಾಗಿತ್ತು. ಹಿಂದೂ ಧರ್ಮಪದ್ಧತಿಯಲ್ಲಿದ್ದ ಅನಾಚಾರಗಳನ್ನು ವಿರೋಧಿಸಿ ಮೂಡಿದ್ದೇ ಲಿಂಗಾಯತ ಧರ್ಮವಲ್ಲವೇ? ಇದೇ ರೀತಿ ಹಿಂದೂ ಧರ್ಮದಿಂದ ಸಿಡಿದೆದ್ದ ಬುದ್ಧನ ಹಾದಿ ಬೌದ್ಧ ಧರ್ಮದ ಹುಟ್ಟಿಗೆ ಕಾರಣವಾಗಿರಬೇಕಾದರೆ, ಬಸವಣ್ಣನ ಹಾದಿ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣವೆಂದು ಅವರು ಹೇಳಿದ್ದು ಸರಿ ಅಲ್ಲವೇ. ಲಿಂಗಾಯತ ಧರ್ಮದೊಳಗಿನ ವೈದಿಕ ಪರಂಪರೆಯನ್ನು ವಿರೋಧಿಸಿದ ಕಾರಣಕ್ಕೆ ಲಿಂಗಾಯತರ ಬೆಂಬಲವೂ ಅವರಿಗಿರಲಿಲ್ಲ. ಒಟ್ಟಿನಲ್ಲಿ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ವಾದಿಸುವವರ ಸಂಖೈ ಕ್ಷೀಣವಾಗಿದೆ. ಪ್ರವಾಹದ ವಿರುದ್ಧ ಈಜುವವರಲ್ಲಿ ಸತ್ಯವಿದ್ದರೂ ಆ ಸತ್ಯವನ್ನು ಸಮಾಜ ಒಪ್ಪುವುದಿಲ್ಲವೆನ್ನುವುದು ಕಲಬುರ್ಗಿಯವರ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 

ಹಿಂದೂ ಎಂಬುದು ಧರ್ಮವೇ ಅಲ್ಲ ಎನ್ನುವ ಕಲಬುರ್ಗಿ, ಭಗವಾನರ ಮಾತುಗಳು ಎಷ್ಟು ಸರಿ, ಒಂದು ಬಹುಸಂಖ್ಯಾತ ಮನಸ್ಥಿತಿಯನ್ನು ಟೀಕಿಸಿ ನೋಯಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತದೆ. ಬಹುತೇಕ ಪತ್ರಿಕೆಗಳೂ ಅದೇ ದಾಟಿಯಲ್ಲಿ ಬರೆಯುತ್ತವೆ. ನೀವು ನಂಬದಿದ್ದರೆ ಬೇಡ, ಹೀಗಳೆಯುವುದ್ಯಾಕೆ ಎಂದು ಪ್ರಶ್ನಿಸುವವರು ಯಥಾಸ್ಥಿತಿವಾದಿಗಳು. ಧರ್ಮ ಹೇಗಿದೆಯೋ ಹಾಗೆಯೇ ಇರಲಿ, ಸಾಧ್ಯವಾದರೆ ಉತ್ತಾಮ ಉತ್ತಮ ಸನಾತನ ಧರ್ಮಕ್ಕೆ ಹೋಗೋಣ, ಧರ್ಮಾಚರಣೆಗಳನ್ನು ಪ್ರಶ್ನಿಸದಿರೋಣ ಎನ್ನುವ ಅಭಿಪ್ರಾಯ ಹೆಚ್ಚುತ್ತಿದೆ. ಒಂದು ಧರ್ಮದೊಳಗೆ ಪ್ರಶ್ನೆಗಳೇಳದಿದ್ದರೆ ಆ ಧರ್ಮ ಸತ್ತಂತಾಗುತ್ತದೆ. ಗಾಂಧೀಜಿ, ಅಂಬೇಡ್ಕರ್ ಹಿಂದೂ ಧರ್ಮದ ಆಚರಣೆಗಳ, ಅವಮಾನಕರ ಶ್ರೇಣೀಕೃತ ಪದ್ಧತಿಯ ವಿರುದ್ಧ ದನಿಯೆತ್ತದಿದ್ದರೆ, ನೆನಪಿರಲಿ ಇವತ್ತು ಯಾವ ಸಮುದಾಯಗಳು ‘ಹಿಂದೂ’ ಧರ್ಮದ ಪರ ಪುಂಖಾನುಪುಂಖವಾಗಿ ಬರೆಯುತ್ತಿವೆಯೋ ಅವುಗಳಲ್ಲನೇಕ ಸಮುದಾಯಗಳಿಗೆ ಶಿಕ್ಷಣದ ಹಕ್ಕೂ ಸಿಗುತ್ತಿರಲಿಲ್ಲ. ಹಿಂದೂ ಧರ್ಮವನ್ನು ಉಗ್ರವಾಗಿ ಟೀಕಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಂಬೇಡ್ಕರ್ ಕೂಡ ಇವತ್ತಿನ ಮನಸ್ಥಿತಿಯ ಪ್ರಕಾರ ಹತ್ಯೆಗೊಳಗಾಗಲು ಅರ್ಹರು. ಧರ್ಮದ ಯಥಾಸ್ಥಿತಿಯನ್ನೇ ಕಾದುಕೊಳ್ಳಬೇಕೆಂದು ಕೊಳ್ಳುವವರ ಪ್ರಕಾರ ಸತಿ ಪದ್ಧತಿಯನ್ನು ವಿರೋಧಿಸಿದ, ದೇವದಾಸಿ ಪದ್ಧತಿಯನ್ನು ವಿರೋಧಿಸಿದವರೆಲ್ಲರ ಸಾವಿಗೂ ಸಂಭ್ರಮ ಪಡಬೇಕು! ಟೀಕೆಯನ್ನೊಪ್ಪಿಕೊಳ್ಳದ ಧರ್ಮ ಮುಂದೆ ಸಾಗಲಾರದು. ಈ ಅನಂತಮೂರ್ತಿ, ಭಗವಾನ್, ಕಲಬುರ್ಗಿಯವರ ಮೇಲೆ ದ್ವೇಷ ಹೆಚ್ಚಿಸುವುದರಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಇಡೀ ಭಾಷಣದಲ್ಲಿ ಬರುವ ಒಂದೋ ಎರಡೋ ಸಾಲುಗಳನ್ನಿಟ್ಟುಕೊಂಡು ಅದನ್ನೇ ಪ್ರಮಖವಾಗಿಸಿ ಉದ್ವಿಗ್ನ ಭಾವನೆಗಳನ್ನು ಪ್ರೇರೇಪಿಸುತ್ತವೆ. ಕಲಬುರ್ಗಿಯವರು ಅನಂತಮೂರ್ತಿಯವರ ವಿರುದ್ಧ ಮಾತನಾಡುತ್ತಾ ದೈವದ ಮೂರ್ತಿಗೆ ಉಚ್ಛೆ ಹುಯ್ದಿದ್ದ ಎಂದಿದ್ದರು. ಅದು ಅನೇಕ ದಿನಗಳ ಕಾಲ ಚರ್ಚೆಯ ವಿಷಯವಾಗಿತ್ತು. ಅನಂತಮೂರ್ತಿಯವರು ಪುಸ್ತಕವೊಂದರಲ್ಲಿ ದೆವ್ವ ಬಂದಾಗ ಸುತ್ತಲೂ ಉಚ್ಛೆ ಹುಯ್ದರೆ ದೆವ್ವ ಹತ್ತಿರ ಸುಳಿಯುವುದಿಲ್ಲ ಎಂದು ಬರೆದಿದ್ದರು. ಅದನ್ನು ಯಾವ ಮಾಧ್ಯಮದವರೂ ಸುದ್ದಿ ಮಾಡಲಿಲ್ಲ. ಅವರಿಗೆ ಸೆನ್ಶೇಷನ್ ಮೂಡಿಸುವುದು ಬೇಕಾಗಿತ್ತು. ಅದನ್ನವರು ಮಾಡಿದರು. ನಿಜ ವಿಷಯವನ್ನು ತಿಳಿಸದೆ ದ್ವೇಷದ ಭಾವನೆಯನ್ನು ಬೆಳೆಸುವಲ್ಲಿ ಸಹಕರಿಸಿದರು. ಕಲಬುರ್ಗಿಯವರು ಸತ್ತಾಗ ಫೇಸ್ ಬುಕ್ಕಿನ ಪೇಜೊಂದರಲ್ಲಿ ಅವರೇ ದೇವರ ಮೂರ್ತಿಯ ಮೇಲೆ ಉಚ್ಛೆ ಹುಯ್ದಿದ್ದರು ಎಂಬ ಸಾಲುಗಳು ಕಾಣಿಸಿದವು. ಅದನ್ನು ನೂರಾರು ಜನ ಲೈಕ್ ಮಾಡಿ ನೂರಾರು ಜನ ಶೇರ್ ಮಾಡಿದ್ದರು. ಮತ್ತೊಂದು ಸುಳ್ಳು ಸತ್ತ ಕಲಬುರ್ಗಿಯ ಮೇಲೆ ದ್ವೇಷ ಸಾಧಿಸಲು ನೆರವಾದವು. ಸುಳ್ಳಿನ ಜಾತ್ರೆಯಲ್ಲಿ ಸತ್ಯದ ಮೆರವಣಿಗೆ ಮಾಡುವುದೇ ತಪ್ಪೇನೋ?

ದಿನೇಶ್ ಅಮೀನ್ ಮಟ್ಟು ವಿವಿಧ ಜಾಲತಾಣಗಳಲ್ಲಿ ಬಂದ ಬೆದರಿಕೆಯ ಸಂದೇಶಗಳನ್ನು ಪರಿಗಣಿಸಿ ನನ್ನ ಹೆಸರೂ ಲಿಸ್ಟಿನಲ್ಲಿದೆ ಎಂದು ಹೇಳಿಕೊಂಡಿದ್ದೂ ಅಪಹಾಸ್ಯದ ವಿಷಯವಾಯಿತು. ನಮ್ಮ ದೇಶದ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ, ಈ ರೀತಿಯ ಹತ್ಯೆಗಳು ಪದೇ ಪದೇ ನಡೆಯುವುದಿಲ್ಲ ಎಂದು ನಂಬಬಯಸಿದರೂ ಹತ್ಯೆಯನ್ನು ಸಂಭ್ರಮಿಸುವ ಜನರಿರುವಾಗ ಏನೂ ಕೂಡ ಇಲ್ಲಿ ಸಾಧ್ಯ ಎನ್ನುವುದು ಸತ್ಯ. ದಿನೇಶ್ ಅಮೀನರಿಗೆ ಬೆದರಿಕೆಯ ಕರೆಗಳು ಪುಂಖಾನುಪುಂಖವಾಗಿ ಬರುತ್ತಿದ್ದುದು ಸುಳ್ಳಲ್ಲವಲ್ಲ. ಬೆದರಿಕೆಯ ಕರೆಗಳನ್ನು ಉಪೇಕ್ಷಿಸಿ, ಇದ್ದ ಪೋಲೀಸ್ ಬೆಂಗಾವಲನ್ನು ವಾಪಸ್ಸು ಕಳುಹಿಸಿದ ಕಾರಣಕ್ಕೇ ತಾನೇ ಕಲಬುರ್ಗಿಯವರ ಹತ್ಯೆಯಾಗಿರುವುದು. ಪೋಲೀಸ್ ಬೆಂಗಾವಲು ಇದ್ದಿದ್ದರೆ ಹತ್ಯೆ (ಮಾಡಿದವರ್ಯಾರೇ ಇರಲಿ) ನಡೆಯುತ್ತಿರಲಿಲ್ಲ. ದಿನೇಶ್ ಅಮೀನ್ ಪ್ರಗತಿಪರರೋ ವಿಚಾರವಂತರೋ ಮತ್ತೊಂದೋ ಮಗದೊಂದೋ ಮೊದಲಿಗೆ ಅವರೂ ಮನುಷ್ಯ, ಮನುಷ್ಯನಲ್ಲಿ ಸಹಜವಾಗಿರುವ ಭಯದ ಯೋಚನೆ ಅವರಲ್ಲೂ ಇದೆ. ಬೆದರಿಕೆಯ ಕರೆ ಸ್ವೀಕರಿಸುತ್ತಿದ್ದ, ಹಲ್ಲೆ ಎದುರಿಸಿದ್ದ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಅದೇ ರೀತಿಯ ಬೆದರಿಕೆಗಳನ್ನು, ಹಲ್ಲೆಯನ್ನು ಎದುರಿಸಿದ ದಿನೇಶ್ ಅಮೀನ್ ಮಟ್ಟುರವರಿಗೆ ನಾನು ಇದೇ ರೀತಿ ಹತ್ಯೆಯಾಗಿಬಿಡಬಹುದಾ ಎಂಬ ಯೋಚನೆ ಬಂದರೆ ಅದು ಯಾರ ತಪ್ಪು? ಆ ಯೋಚನೆಯನ್ನೂ ಅಪಹಾಸ್ಯ ಮಾಡಬೇಕೆ?

ದೂರದ ಬಾಂಗ್ಲಾದೇಶದಲ್ಲಿ ನಡೆದ ಪ್ರಗತಿಪರ ಬ್ಲಾಗರುಗಳನ್ನು ಮುಸ್ಲಿಂ ಮೂಲಭೂತವಾದಿಗಳು ಸಾಯಿಸುತ್ತಿದ್ದಾರೆ, ಆ ಹತ್ಯೆಗಳು ನಮ್ಮನ್ನು ವಿಚಲಿತಗೊಳಿಸುವುದಿಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿ ವಿಚಾರವಾದಿಯ ಹತ್ಯೆಯಾಗುತ್ತದೆ, ಎರಡು ವರುಷವಾದರೂ ಕೊಲೆಗಾರರ ಸುಳಿವು ಸಿಗುವುದಿಲ್ಲ. ಅದೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ನಮ್ಮ ಪಕ್ಕದ ಊರಿನ ವಿಚಾರವಾದಿಯ ಕೊಲೆಯೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ ಎಂದರೆ ನಮ್ಮನ್ನು ವಿಚಲಿತಗೊಳಿಸುವ ಸಂಗತಿ ಯಾವುದು? ನಮ್ಮ ವಿಚಾರಗಳನ್ನು ಒಪ್ಪದ ವ್ಯಕ್ತಿ ಮನೆಗೆ ನುಗ್ಗಿ ನಮ್ಮ ಹಣೆಗೇ ಗುರಿಯಿಟ್ಟಾಗಲಾದರೂ ನಾವು ವಿಚಲಿತಗೊಳ್ಳುತ್ತೇವಾ? ಸಮಾಜದ ಆತ್ಮಸಾಕ್ಷಿಯನ್ನು ಪ್ರತಿದಿನ ಕೊಲೆ ಮಾಡಲಾಗುತ್ತಿದೆ.……

ಸೆಪ್ಟೆಂ 3, 2015

ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

Muzaffarnagar baaqi hai
Dr Ashok K R
ದೃಶ್ಯ 1: 
ಪುಟ್ಟ ಹುಡುಗನನ್ನು ಸಂದರ್ಶನಕಾರರು ಮಾತನಾಡಿಸುತ್ತಿರುತ್ತಾರೆ. ಬಾಗಿಲ ಹೊರಗೆ ಗೋಡೆಗೊರಗಿಕೊಂಡು ನಿಂತಿರುತ್ತಾನೆ ಹುಡುಗ. ನಿಮ್ಮ ಊರು ಬಿಟ್ಟು ಇಲ್ಲಿಗ್ಯಾಕೆ ಬಂದೆ ಎನ್ನುತ್ತಾನೆ ಸಂದರ್ಶಕ. ‘ನಮ್ಮ ಮನೆ ಅಂಗಡಿಗೆಲ್ಲ ಬೆಂಕಿ ಹಚ್ಚಿಬಿಟ್ಟಿದ್ದರು. ಅದಕ್ಕೆ ಇಲ್ಲಿಗೆ ಬಂದೆ’.
‘ಶಾಲೆಗೆ ಹೋಗುತ್ತಿದ್ದಾ ಅಲ್ಲಿ’
‘ಹ್ಞೂ’
‘ಈಗ ಹೋಗ್ತಿಲ್ವಾ ಶಾಲೆಗೆ’
‘ಇಲ್ಲ’
‘ಯಾಕೆ’
ಹುಡುಗ ಒಂದರೆಕ್ಷಣ ಯೋಚಿಸುತ್ತಾನೆ ‘ಹೋಗ್ತೀನಿ ಇನ್ಮೇಲೆ’ ಎಂದ್ಹೇಳಿ ಒಳಗೋಡುತ್ತಾನೆ. ಒಂದೇ ಕೋಣೆಯ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ ಅಮ್ಮ. ‘ಅಮ್ಮ ಅಮ್ಮ ನಾನು ಶಾಲೆಗೆ ಹೋಗ್ತೀನಲ್ವಾ’ ಎಂದು ಕೇಳುತ್ತಾನೆ. ಅಮ್ಮನ ಬಳಿ ಸರಿಯಾದ ಉತ್ತರವಿರುವುದಿಲ್ಲ.
ದೃಶ್ಯ 2:
ರೈತರ ಸಂಘಟನೆಯ ಮುಖಂಡನೊಡನೆ ಮಾತುಕತೆ. ‘ಕಬ್ಬಿಗೆ ಬೆಲೆ ಸಿಕ್ಕಿಲ್ಲವಲ್ಲ ಯಾಕೆ?’
‘ಪ್ರತಿ ವರ್ಷ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಹೋರಾಟ ಮಾಡುತ್ತಿದ್ದೋ. ಕಾರ್ಖಾನೆಯವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದ್ದರು’
‘ಈಗ’
‘ಈಗೆಲ್ಲಿ ಗಲಭೆ ನಡೆದ ನಂತರ ರೈತರೆಲ್ಲ ಮುಸ್ಲಿಂ ಜಾಟ್, ಹಿಂದೂ ಜಾಟ್ ಆಗಿಬಿಟ್ಟಿದ್ದಾರೆ. ರೈತ ಹೋರಾಟ ಹಳ್ಳಹಿಡಿದಿದೆ. ಮೊದಲು ಮುಸ್ಲಿಮರು ಅಲ್ಲಾಹೋ ಅಕ್ಬರ್ ಅಂದ್ರೆ ಹಿಂದೂ ಹರಹರ ಮಹಾದೇವ್ ಅಂತ ಪ್ರತಿಕ್ರಿಯಿಸುತ್ತಿದ್ದ. ಈಗ ಹರಹರ ಮಹಾದೇವ್ ಅಷ್ಟೇ ಉಳಿದಿದೆ. ಅದೂ ಇಲ್ಲ ಹರಹರ ಮೋದಿ ಅಷ್ಟೇ ಉಳಿದಿದೆ.
Muzaffarnagar baaqi hai
ಗಲಭೆಗೆ ಬಲಿಯಾದ ಬಾಲ್ಯ
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ನಕುಲ್ ಸಿಂಗ್ ಸಾಹ್ನಿ ತೆಗೆದಿರುವ ‘ಮುಜಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಎರಡು ದೃಶ್ಯಗಳಿವು. ಇಡೀ ಕೋಮುಗಲಭೆಯಿಂದ ಅನ್ಯಾಯಕ್ಕೊಳಗಾದವರಾರೆಂದು ಈ ಎರಡೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ. ಬಾಲ್ಯ ಕಳೆದುಕೊಂಡ ಮಕ್ಕಳು, ಹಕ್ಕಿನ ಹೋರಾಟ ಕಳೆದುಕೊಂಡ ರೈತರು ಇಡೀ ಕೋಮುಗಲಭೆಯೆಂಬ ಪೂರ್ವನಿಯೋಜಿತ ಹಿಂಸಾ ನಾಟಕದಿಂದ ನೊಂದವರು. ಕೋಮುಗಲಭೆಯ ಸಂದರ್ಭವನ್ನನುಸರಿಸಿ ತೆಗೆಯುವ ಸಾಕ್ಷ್ಯಚಿತ್ರಗಳು ಒಂದು ಧರ್ಮದ ಪರವಾಗಿ ಮತ್ತೊಂದು ಧರ್ಮದ ವಿರುದ್ಧವಾಗಿ ವಾದ ಮಂಡಿಸಿಬಿಡುವ ಸಾಧ್ಯತೆಗಳೇ ಹೆಚ್ಚು. ತಮಗೆ ಬೇಕಾದವರ ಮಾತುಗಳನ್ನಷ್ಟೇ ಚಿತ್ರೀಕರಿಸಿಕೊಂಡು ತಮ್ಮಲ್ಲಿರುವ ಸ್ಥಾಪಿತ ಸತ್ಯಕ್ಕೆ ಮತ್ತಷ್ಟು ಪುರಾವೆಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸ. ಮನಸ್ಸಿನಲ್ಲಿ ಸ್ಥಾಪಿತವಾದ ಸತ್ಯಗಳನ್ನೆಲ್ಲ ತೊಡೆದುಹಾಕಿ ಹೊಡೆದವರ ಹೊಡೆಸಿಕೊಂಡವರನ್ನೆಲ್ಲಾ ಚಿತ್ರಿಸಿ ಕಣ್ಣಿಗೆ ಕಾಣಿಸುವ ಸತ್ಯದ ಹಿಂದಿರುವ ಸತ್ಯಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ. 
Muzaffarnagar riots documentary
ಧರ್ಮ ರಕ್ಷಿಸುವ ಕೆಲಸ...

ಮುಜಾಫರ್ ನಗರ ಗಲಭೆಯಲ್ಲಿ ಹಿಂದೂಗಳು ಹೊಡೆಯುವವರಾಗಿದ್ದರು, ಮುಸ್ಲಿಮರು ಹೊಡೆಸಿಕೊಂಡವರಾಗಿದ್ದರು. ಬಹುತೇಕ ಎಲ್ಲಾ ನಿರಾಶ್ರಿತರ ಶಿಬಿರಗಳು ಮುಸ್ಲಿಮರದೇ ಆಗಿತ್ತು. ಒಂದೇ ಒಂದು ನಿರಾಶ್ರಿತ ಶಿಬಿರ ಹಿಂದೂಗಳಿಗಿತ್ತು. ಅಲ್ಲಿಗೆ ಮುಸ್ಲಿಮರು ತಮ್ಮ ಕೈಲಾದ ಮಟ್ಟಿಗೆ ಹಿಂಸೆಯಲ್ಲಿ ಪಾಲ್ಗೊಂಡಿದ್ದು ನಿಚ್ಚಳವಾಗಿತ್ತು. ಆ ಹಿಂದೂ ನಿರಾಶ್ರಿತ ಶಿಬಿರದಲ್ಲಿದ್ದವರೆಲ್ಲ ಕೂಲಿ ನಾಲಿ ಮಾಡುತ್ತಿದ್ದ ದಲಿತರು. ಇನ್ನು ಮುಸ್ಲಿಂ ನಿರಾಶ್ರಿತ ಶಿಬಿರಗಳಲ್ಲೂ ಹೆಚ್ಚಿನ ಸಂಖೈಯಲ್ಲಿದ್ದಿದ್ದು ಕೂಲಿ ಕಾರ್ಮಿಕರೇ. ಐವತ್ತು ಚಿಲ್ಲರೆ ಬಾಗಿಲಿದ್ದ ಮನೆಯ ಒಡೆಯರು, ಸಣ್ಣ ಪುಟ್ಟ ಅಂಗಡಿ ನಡೆಸುತ್ತಿದ್ದವರು ಕೂಡ ಬೀದಿಗೆ ಬಿದ್ದಿದ್ದರು. ಒಂದು ಕೋಮುಗಲಭೆಗೆ ಎರಡೂ ಕೋಮಿನ ಜನರ ತಪ್ಪುಗಳಿರುವುದೇ ಅಧಿಕ. ಮುಜಾಫರ್ ನಗರದಲ್ಲೂ ಹಾಗೆಯೇ ಆಗಿತ್ತೆ? 

ಎಳೆಎಳೆಯಾಗಿ ಕೋಮುರಾಜಕಾರಣದ ಬಿಡಿಸುತ್ತಾ ಸಾಗುತ್ತದೆ ಸಾಕ್ಷ್ಯಚಿತ್ರ. ಮುಜಾಫರ್ ನಗರದ ಗಲಭೆಗೆ ಆರು ತಿಂಗಳ ಹಿಂದೆಯವರೆಗೂ ಆ ಪ್ರದೇಶದಲ್ಲಿನ ಪ್ರಮುಖ ಪತ್ರಿಕೆಗಳು ರಾಜಕೀಯದ, ಸಮಾಜದ ಸಂಕಟಗಳ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುತ್ತಿರುತ್ತವೆ. ಆರು ತಿಂಗಳಿನಿಂದ ಬಹುತೇಕ ಪತ್ರಿಕೆಗಳಲ್ಲಿ ‘ಒಂದು ಕೋಮಿನ ಹುಡುಗ ಮತ್ತೊಂದು ಕೋಮಿನ ಹುಡುಗಿಯನ್ನು ಚುಡಾಯಿಸಿದ’ ಎನ್ನುವುದೇ ವಿವಿಧ ರೀತಿಯಲ್ಲಿ ಮರುಪ್ರಕಟವಾಗುತ್ತಿರುತ್ತದೆ. ಅಷ್ಟೊಂದು ಪ್ರಕರಣಗಳು ನಡೆದವಾ ಎಂದು ಗಮನಿಸಿದರೆ ಇಲ್ಲವೆಂಬ ಉತ್ತರ ಸಿಗುತ್ತದೆ. ಇದರ ಜೊತೆಜೊತೆಗೆ ಲವ್ ಜಿಹಾದ್ ಎಂಬ ಭೂತವನ್ನು ತೋರಿಸಿ ಬೆದರಿಸಲಾಗುತ್ತದೆ. ಹಿಂದೂ ಸಂಘಟನೆಯೊಂದರ ಮುಖಂಡನನ್ನು ಇದರ ಬಗ್ಗೆ ಸಂದರ್ಶಿಸಿದಾಗ ಆತ ಲವ್ ಜಿಹಾದ್ ಇದೆ ಎನ್ನುತ್ತಾನೆ. ‘ಸರಿ. ಲವ್ ಜಿಹಾದ್ ಇಂದ ತೊಂದರೆಗೊಳಗಾದ ಒಂದು ಹುಡುಗಿಯ ಕುಟುಂಬವನ್ನು ಪರಿಚಯಿಸಿ’ ಎಂದು ಸಂದರ್ಶನಕಾರ ಕೇಳಿಕೊಂಡಾಗ ತನ್ನ ಶಿಷ್ಯರಿಗೆ ಹಲವು ಫೋನ್ ಮಾಡುತ್ತಾನೆ. ಆ ಹುಡುಗಿ ಈಗ ಇಲ್ಲ, ಅವರ ಕುಟುಂಬ ಊರು ಬಿಟ್ಟಿದೆ, ಅವರು ಮಾತನಾಡಲು ತಯಾರಿಲ್ಲ ಎಂಬಂತಹ ಉತ್ತರಗಳೇ ದೊರಕುತ್ತವೆ. ಒಟ್ಟಿನಲ್ಲಿ ಒಂದು ಗಲಭೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಮುಜಾಫರ್ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ರಾಜಕೀಯ ಭಾಷಣಗಳಲ್ಲಿ ಎಲ್ಲರೂ ಪರಧರ್ಮ ನಿಂದನೆಯನ್ನೇ ಪ್ರಮುಖವಾಗಿಸಿಕೊಂಡುಬಿಡುತ್ತಾರೆ. ಕೊನೆಗೆ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದನ್ನು ನೆಪವಾಗಿಸಿಕೊಂಡು ಮುಸ್ಲಿಂ ಹುಡುಗನನ್ನು ಸಾಯುವವರೆಗೆ ಹೊಡೆಯುತ್ತಾರೆ. ಇತ್ತ ಮುಸ್ಲಿಮರು ಆ ಹಿಂದೂ ಹುಡುಗರಲ್ಲಿಬ್ಬರನ್ನು ಹೊಡೆದು ಸಾಯಿಸುತ್ತಾರೆ. ಕೋಮುಗಲಭೆ ಹೊತ್ತಿಕೊಳ್ಳಲು ಇದಕ್ಕಿಂತ ಹೆಚ್ಚು ಕಾರಣ ಬೇಕೆ? ಅದೂ ಗಲಭೆಯ ಆಟವಾಡಲು ಭೂಮಿಕೆ ಸಿದ್ಧವಾಗಿರುವಾಗ? ಕೋಮುಗಲಭೆಯ ಜ್ವಾಲೆಗಳು ಎಲ್ಲೆಡೆ ಹರಡಲು ವಾಟ್ಸಪ್ಪು ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗರಿಬ್ಬರನ್ನು ಸಾಯಿಸಿದ ವೀಡಿಯೋ ಕೂಡ ಪ್ರಮುಖ ಕಾರಣ. ಬಿಜೆಪಿಯ ನಾಯಕರೂ ಈ ವೀಡಿಯೋವನ್ನು ಹಂಚುತ್ತಾರೆ. ಅಸಲಿಗೆ ಆ ವೀಡಿಯೋ ಪಾಕಿಸ್ತಾನದಲ್ಯಾವಗಲೋ ಚಿತ್ರಿತವಾಗಿದ್ದು ಎಂಬ ಸಂಗತಿ ತಿಳಿಯುವುದರೊಳಗೆ ಹಿಂಸೆ ವ್ಯಾಪಕವಾಗಿ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಒಂದು ಊರಿನ ಬೀದಿಯಲ್ಲಿನ ಎರಡು ಅಂಗಡಿಯ ಮೇಲೆ ಹಿಂದೂ ಹೆಸರಿದೆ. ಮಧ್ಯದ ಅಂಗಡಿಯ ಮೇಲೆ ಮುಸ್ಲಿಂ ಹೆಸರಿದೆ. ಹಿಂದೂ ಅಂಗಡಿಗಳು ಸುರಕ್ಷಿತವಾಗಿದ್ದರೆ ಮುಸ್ಲಿಂ ಅಂಗಡಿ ಸುಟ್ಟು ಕರಕಾಲಗಿರುವ ದೃಶ್ಯ ಇಡೀ ಮುಜಾಫರ್ ನಗರ ಗಲಭೆಯಲ್ಲಿ ಹಾನಿಗೀಡಾದವರು ಯಾರು ಎನ್ನುವುದನ್ನು ತಿಳಿಸಿಬಿಡುತ್ತದೆ. 
muzaffarnagar baaqi hai
ಒಂದು ಬದಲಾವಣೆಗೆ ಪ್ರಯತ್ನಿಸುವವರು.....
ಸಂತ್ರಸ್ತರ ಗೋಳು, ರಾಜಕಾರಣಿಗಳ ಕಪಟ ಮಾತುಗಳು, ಮತಾಂಧ ಸಂಘಟನೆಯ ಕಾರ್ಯಕರ್ತರ ಅಟ್ಟಹಾಸದ ನಡುವೆ ಅಲ್ಲಲ್ಲಿ ಇದ್ದಕ್ಕಿದ್ದಂತೆ ರೈತ, ಕಬ್ಬು, ಆಲೆಮನೆ, ಸಕ್ಕರೆ ಕಾರ್ಖಾನೆಗಳನ್ನು ತೋರಿಸುತ್ತಾರೆ. ಕೋಮುಗಲಭೆಯಲ್ಲಿ ರೈತನ ಚಿತ್ರಣವ್ಯಾಕೆ ಎನ್ನುವುದಕ್ಕೆ ಉತ್ತರ ಸಾಕ್ಷ್ಯಚಿತ್ರ ಸಾಗಿದಂತೆ ತಿಳಿಯುತ್ತದೆ. ರೈತನಾಗಿದ್ದ ರೈತನಲ್ಲಿ ಮುಸ್ಲಿಂ ರೈತ ಹಿಂದೂ ರೈತ ಎಂಬ ಭಿನ್ನಾಭಿಪ್ರಾಯ ಮೂಡುತ್ತದೆ. ಜೊತೆಜೊತೆಯಾಗಿದ್ದವರೇ ಹೊಡೆದಾಡಿಕೊಳ್ಳುತ್ತಾರೆ. ಧರ್ಮಭೇದವಿಲ್ಲದೇ ಒಂದಾಗಿದ್ದ ರೈತ ಸಂಘಟನೆಗಳು ಧರ್ಮಾಧಾರಿತವಾಗಿ ವಿಭಜಿತವಾಗಿ ಬಿಟ್ಟ ಮೇಲೆ ಎಲ್ಲಿಯ ರೈತ ಹೋರಾಟ? ‘ಗಲಭೆಯಿಂದ ಹೆಚ್ಚು ಲಾಭ ಪಡೆದುಕೊಂಡಿದ್ದು ಸಕ್ಕರೆ ಕಾರ್ಖಾನೆಗಳು. ಅವರು ಕೊಟ್ಟಷ್ಟೇ ದುಡ್ಡಿಗೆ ನಾವೀಗ ಕಬ್ಬು ಹೊಡೆಯಬೇಕು. ಯಾಕೆಂದರೆ ನಮ್ಮಲ್ಲೀಗ ಹೋರಾಟವಿಲ್ಲ. ಮುಸ್ಲಿಂ ರೈತ ಬಂದರೆ ಹಿಂದೂ ಬರೋದಿಲ್ಲ, ಹಿಂದೂ ಬಂದರೆ ಮುಸ್ಲಿಂ ಬರೋದಿಲ್ಲ’ ಎಂದೊಬ್ಬ ಬೆಳೆಗಾರ ಹೇಳುವ ದೃಶ್ಯ ಒಂದು ಗಲಭೆಯ ದುರ್ಬಾಹುಗಳು ಎಲ್ಲಿಯವರೆಗೆ ಚಾಚಲು ಸಾಧ್ಯ ಎಂದು ತಿಳಿಸುತ್ತದೆ. ಅಯೋಧ್ಯಾ ಗಲಭೆಯ ಸಂದರ್ಭದಲ್ಲೂ ಶಾಂತವಾಗಿದ್ದ ಹಳ್ಳಿಗಳಲ್ಲಿ ಈ ಬಾರಿ ಗಲಭೆ ನಡೆಯಿತು. ಇದೆಲ್ಲದರ ಲಾಭ ಪಡೆದಿದ್ಯಾರು? 

ಇವೆಲ್ಲದರ ಆಯೋಜಕ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಎಂದು ನಿಸ್ಸಂಶಯವಾಗಿ ಹೇಳಬಹುದು. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಪ್ರಾಮುಖ್ಯತೆ ಜಾಸ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹತ್ತು ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಎಲ್ಲ ಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಬರೋಬ್ಬರಿ ಎಪ್ಪತ್ತು ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದು ನಡೆಸಿದ ಕೋಮುಗಲಭೆಯ ರಾಜಕೀಯ ಧರ್ಮಾಧಾರಿತವಾಗಿ ಹಿಂದೂಗಳೆಲ್ಲರೂ ಬಿಜೆಪಿಗೆ ಮತ ಹಾಕುವಂತೆ ಮಾಡಿತು. ಮುಸ್ಲಿಮರ ಪರ ಎಂಬ ಸೋಗಿನ ಸಮಾಜವಾದಿ ಪಕ್ಷ ನಿರಾಶ್ರಿತ ಶಿಬಿರಗಳಲ್ಲಿರುವ ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವುದನ್ನು ಬಿಟ್ಟು ನಿರಾಶ್ರಿತ ಶಿಬಿರಗಳನ್ನೇ ರಾತ್ರೋರಾತ್ರಿ ಬೀಳಿಸಿ ನಿರಾಶ್ರಿತರನ್ನು ಮತ್ತೊಮ್ಮೆ ಬೀದಿಗೆ ತಳ್ಳಿದರು. ‘ದೀದಿ ಒಮ್ಮೆ ಗಲಭೆಯಲ್ಲಿ ತೊಂದರೆಗೊಳಗಾದವರನ್ನು ಭೇಟಿಯಾಗಿಬಿಟ್ಟಿದ್ದರೆ ಎಲ್ಲೆಡೆಯೂ ಅವರೇ ಗೆಲ್ಲುತ್ತಿದ್ದರು. ಅವರ ಸುತ್ತಲಿರುವ ಮೂವರು ಬ್ರಾಹ್ಮಣರು ನಮ್ಮನ್ನವರು ಭೇಟಿಯಾಗಲು ಬಿಡಲಿಲ್ಲ’ ಎಂದು ಮಾಯವತಿಯ ಬಿ.ಎಸ್.ಪಿಯ ಸೋಲನ್ನು ಅಲ್ಲಿಯವರು ವಿಶ್ಲೇಷಿಸುತ್ತಾರೆ. ಒಂದು ಅಪಾಯಕಾರಿ ಗಲಭೆಯನ್ನು ಪ್ರಾಯೋಜಿಸಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗುತ್ತದೆ ಬಿಜೆಪಿ. ಈ ಎಲ್ಲಾ ರಾಜಕಾರಣಿಗಳ ನಡುವೆ ಭಗತ್ ಸಿಂಗನ ಒಂದು ಫೋಟೋ ಹಿಡಿದುಕೊಂಡು ಐದು ಹುಡುಗರು ಹಳ್ಳಿ ಹಳ್ಳಿ ತಿರುಗುತ್ತಾರೆ. ವಸ್ತುಸ್ಥಿತಿಯನ್ನು ವಿವರಿಸುತ್ತಾರೆ. ಗಲಭೆಯ ದೆಸೆಯಿಂದ, ಕೋಮು ರಾಜಕಾರಣದ ದೆಸೆಯಿಂದ ಹೇಗೆ ಊರಿನ ನಿಜವಾದ ಸಮಸ್ಯೆಗಳು ಚರ್ಚೆಗೇ ಬರದೆ ಹೋಗುತ್ತಿದೆ ಎಂದು ವಿವರಿಸಿ ಹೇಳುತ್ತಾರೆ. ಹೌದೆಂದು ತಲೆಯಾಡಿಸುವ ಜನ ಧರ್ಮಾಧಾರಿತವಾಗಿ ಮತ ಚಲಾಯಿಸುತ್ತಾರೆ....... ಉಳುವುದಕ್ಕೆ ಭೂಮಿಗೆ ಕಾಲಿಟ್ಟ ರೈತನಿಗೆ ಧರ್ಮವಿಲ್ಲ; ಕೋಮುಗಲಭೆಯ ದೆಸೆಯಿಂದ ಈಗಾತ ಒಬ್ಬಂಟಿ......

ಒಂದು ಸಶಕ್ತ ಸಾಕ್ಷ್ಯಚಿತ್ರವಿದು. ಪ್ರಮುಖ ಅಂಶಗಳ ಬಗ್ಗೆಯಷ್ಟೇ ಇಲ್ಲಿ ಬರೆದಿದ್ದೇನೆ. ಇಡೀ ಸಾಕ್ಷ್ಯಚಿತ್ರದಲ್ಲಿ ಸತ್ಯದ ಮಾತನಾಡುವವರು ಮಹಿಳೆಯರು. ಗಂಡಸರ ದ್ವಂದ್ವಗಳನ್ನವರು ಈಚೆಗೆಳೆಯುತ್ತಾರೆ! ಭಯೋತ್ಪಾದನೆ, ಉಗ್ರತೆಗಳೆಲ್ಲವೂ ಮುಸ್ಲಿಮರದೇ ಕೃತ್ಯ, ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು, ಉಗ್ರಗಾಮಿಗಳಾಗಲು ಸಾಧ್ಯವೇ ಇಲ್ಲ ಎಂದಿನ್ನೂ ನಂಬುವವರು ಈ ಸಾಕ್ಷ್ಯಚಿತ್ರವನ್ನು ನೋಡಲೇಬೇಕು. ಕೈಯಲ್ಲಿ ಬಂದೂಕು ಹಿಡಿದವ ಮಾತ್ರ ಭಯೋತ್ಪಾದಕನಲ್ಲ, ಮನಸ್ಸಿನ ತುಂಬ ನಂಜು ತುಂಬಿಕೊಂಡು ಅನ್ಯಧರ್ಮದವನ ಮನೆ ಸುಡಲೆಂದೇ ಜೇಬಿನಲ್ಲೊಂದು ಬೆಂಕಿಪಟ್ಟಣ ಇಟ್ಟುಕೊಂಡವನೂ ಭಯೋತ್ಪಾದಕನೇ ಎಂಬ ಸತ್ಯದ ಅರಿವಾಗುತ್ತದೆ.
ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಆಗ 26, 2015

ಹಲ್ಲೆಗೊಳಗಾದ ಶಾಕೀರನ ವಿರುದ್ಧ ಯುವತಿಯ ದೂರು.

mangalore-fanaticism
ಎರಡು ದಿನದ ಹಿಂದೆ ಮಂಗಳೂರಿನಲ್ಲಿ ನಡೆದ ‘ಅನೈತಿಕ ಪೋಲೀಸ್ ಗಿರಿ’ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಸ್ಲಿಂ ಯುವಕ ಜೊತೆಗಿದ್ದ ಹುಡುಗಿ ಆ ಯುವಕನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಶಾಕೀರನ (ಈಗವನು ಆರೋಪಿಯ ಸ್ಥಾನದಲ್ಲಿರುವುದರಿಂದ ಹೆಸರು ಬರೆಯಲಾಗಿದೆ) ಮೇಲೆ ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ. ಕಲಂ 354 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಸ್ಕೃತಿ ಭಕ್ಷಕರು ಪ್ರಕರಣ ನಡೆದ ದಿನ ಯುವಕನ ಜೊತೆಗೆ ಯುವತಿಗೂ ಎರಡೇಟು ಬಿಗಿದಿದ್ದರು. ಅದು ಎರಡು ಸೆಕೆಂಡಿನ ವೀಡಿಯೋದಲ್ಲೂ ಸೆರೆಯಾಗಿದೆ. ಹಿಂದೂ ಸಂಘಟನೆಗಳ ಹುಡುಗರನ್ನು ಪೋಲೀಸರು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು ಯುವತಿಯ ಮೇಲೆ, ಅವರ ಮನೆಯವರ ಮೇಲೆ ಒತ್ತಡ ಹಾಕಿಸಿ ಈ ರೀತಿಯ ದೂರನ್ನು ನೀಡಿಸಿರಬಹುದು ಎಂದು ಶಂಕಿಸಬಹುದಾದರೂ ದೂರಿನಲ್ಲಿರುವ ದೌರ್ಜನ್ಯದ ಆರೋಪಗಳನ್ನು ಗಮನಿಸಿದಾಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು ತೊಂದರೆಗೀಡಾದ ಯುವತಿಗೆ ನ್ಯಾಯ ದೊರಕಲಿ ಎಂದು ಆಶಿಸಬೇಕು. ಮೊಬೈಲು ಮೆಸೇಜುಗಳ ಬಗ್ಗೆ, ವೀಡಿಯೋಗಳ ಬಗ್ಗೆ ಯುವತಿ ತಿಳಿಸಿರುವುದರಿಂದ ಸತ್ಯಾಂಶ ಹೊರಬರಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಯಾರ ಕಡೆಯ ಒತ್ತಡಗಳಿಗೂ ತಲೆಬಾಗದೆ ಮಂಗಳೂರಿನ ಪೋಲೀಸರು ಕಾರ್ಯನಿರ್ವಹಿಸದರದೇ ಪುಣ್ಯ. 

Also Read: ಮಂಗಳೂರಿನ ಮತಿಗೆಟ್ಟ ಹುಡುಗರು

ದೂರಿನ ಪ್ರತಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಪೋಲೀಸರೇ ದೂರಿನ ಪ್ರತಿಯ ಫೋಟೋ ತೆಗೆದು ವಾಟ್ಸಪ್ಪಿಗೆ ಬಿಟ್ಟರೋ ಅಥವಾ ಪತ್ರಕರ್ತರು ತಮ್ಮ informerಗಳ ಮೂಲಕ ಈ ಕೆಲಸ ಮಾಡಿಸಿದರೋ ಗೊತ್ತಿಲ್ಲ. ಆ ಹೆಣ್ಣುಮಗಳ ಹೆಸರು, ವಿಳಾಸ, ಫೋನ್ ನಂಬರುಗಳೆಲ್ಲವೂ ನಮೂದಾಗಿರುವ ಪತ್ರ ಸಾವಿರಾರು ಜನರನ್ನು ತಲುಪುತ್ತಿದೆ. ಆ ಫೋಟೋ ತೆಗೆದ ಅನಾಮಧೇಯರಿಗೆ ಕೊಂಚ ವಿವೇಕ ಬೇಡವೇ?

ಗೆ,
ಪೋಲೀಸ್ ಇನ್ಸ್ ಪೆಕ್ಟರ್,
ಮಹಿಳಾ ಪೋಲೀಸ್ ಠಾಣೆ,
ಮಂಗಳೂರು.

ಇಂದ, 
ಕಲ್ಪನ (ಹೆಸರು ಬದಲಿಸಲಾಗಿದೆ),
ಮಂಗಳೂರು.

ವಿಷಯ:- ಶಾಕೀರ್ ಎಂಬುವವನು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ.

ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಪನ ಆದ ನಾನು ನನ್ನ ವಿದ್ಯಾಭ್ಯಾಸವನ್ನು ನನ್ನ ಹುಟ್ಟೂರಾದ ಬೇಲೂರಿನಲ್ಲಿ ಮುಗಿಸಿ ಕೆಲಸಕ್ಕಾಗಿ ಮಂಗಳೂರಿಗೆ 2 ವರ್ಷದ ಹಿಂದೆ ಬಂದು ನನ್ನ ತಾಯಿಯ ಅಕ್ಕ ಲತಾ ಅವರ ಮನೆಯಲ್ಲಿ _ _ ನಗರದಲ್ಲಿ ವಾಸವಾಗಿದ್ದೇನೆ. ಈಗ ಸುಮಾರು 3 ತಿಂಗಳ ಹಿಂದೆ ಅತ್ತಾವರದ _ _ _ಯಲ್ಲಿ ಆಪೋರೇಷನ್ ಡಿಪಾರ್ಟ್ಮೆಂಟ್ (Recieving Grossary Products)ನಲ್ಲಿ ಕೆಲಸಕ್ಕೆ ಸೇರಿರುತ್ತೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದ ಶಾಕೀರ್ ನನಗೆ ಪರಿಚಯನಾಗಿದ್ದ. ಕೆಲಸದ ವಿಚಾರದಲ್ಲಿ ನಾವು ಮಾತನಾಡುತ್ತಿದ್ದೆವು, ಆ ಸಂದರ್ಭದಲ್ಲಿ ನನ್ನ ಮೊಬೈಲ್ ನಂಬರನ್ನು ಅವನು ಕೇಳಿ ತೆಗೆದುಕೊಂಡಿದ್ದ. ನಂತರ ನನಗೆ ಸಂದೇಶಗಳನ್ನು ಕಳಿಸುತ್ತಿದ್ದ. ಅವಕ್ಕೆ ನಾನು ಸಹ Reply ಮಾಡಿರುತ್ತೇನೆ. ಯಾಕೆಂದರೆ ಅವನು ನನಗಿಂತಲೂ ಮೇಲಿನ ಹುದ್ದೆಯಲ್ಲಿದ್ದಾನೆ. ನಾನು ಬಡತನದ ಕುಟುಂಬದಿಂದ ಬಂದವಳಾಗಿದ್ದು ಕಷ್ಟಪಟ್ಟು ಕೆಲಸ ಹುಡುಕಿದ್ದೇನೆ. ಇವನಿಗೆ ಉತ್ತರ ಕೊಡದಿದ್ದರೆ ಅವನು ನನ್ನ ಕೆಲಸಕ್ಕೇನಾದರೂ ತೊಂದರೆ ಕೊಡುತ್ತಾನೆಂದು ಅವನ ಮೆಸೇಜ್ ಗಳಿಗೆ ಉತ್ತರ ನೀಡಿರುತ್ತೇನೆ. ಒಂದು ದಿನ ನಾನು ಆಫೀಸಿನಿಂದ ಮನೆಗೆ ಹೋಗುವಾಗ ನಂದಿಗುಳಿ ಬಸ್ ಸ್ಟ್ಯಾಂಡಿನವರೆಗೆ ಡ್ರಾಪ್ ಮಾಡುವುದಾಗಿ ಕರೆದ. ನಾನು ಅವನ ಕಾರಿನಲ್ಲಿ ಆಫೀಸಿನ ಸ್ವಲ್ಪ ಮುಂದೆ ಹತ್ತಿದೆ. ಹೋಗುವಾಗ ದಾರಿಯಲ್ಲಿ ಅವನ ವರ್ತನೆ ಅಸಹ್ಯಕರವಾಗಿದ್ದು ನಾನು ಹಾಗೆ ಮಾಡಬೇಡ ಎಂದು ಹೇಳಿದರೂ ಕೂಡ ಮೈಕೈಗೆ ಕೈ ಹಾಕುತ್ತಲೇ ಇದ್ದ. ಆಗ ನಾನು ಬಿಕರ್ನಕಟ್ಟೆಯಲ್ಲಿ ಇಳಿಸಲು ಹೇಳಿದೆ. ಇದಾದ ನಂತರ ಅವನು ನನಗೆ ಪದೇ ಪದೇ ಎದುರು ಸಿಕ್ಕಾಗಲೆಲ್ಲ ನನ್ನೊಟ್ಟಿಗೆ ಬಾ ಹಣ ಕೊಡುತ್ತೇನೆ ಎಂದು ಹೇಳುತ್ತಿದ್ದ. ಅದೇ ಪ್ರಕಾರ ಈ ದಿನ 24/08/2015ರಂದು ಸಂಜೆ 5 ಗಂಟೆಗೆ ನಾನು ಆಫೀಸಿನಲ್ಲಿರುವಾಗ ನನಗೆ ಡ್ರಾಪ್ ಕೊಡುವುದಾಗಿ ಮೆಸೇಜ್ ಮಾಡಿದ. ಕೆಲಸದ ಒತ್ತಡದಲ್ಲಿದ್ದ ನಾನು ಆಯ್ತು ಎಂದು Reply ಮಾಡಿದೆ. ನಾನು ಆಫೀಸಿನಿಂದ ಹೊರಗೆ ಬರುವಾಗ ಅವನು ಕೆ.ಎಂ.ಸಿಯ ಮುಂದೆ ಕಾರಿನಲ್ಲಿ ಕಾಯುತ್ತಿದ್ದ ನನ್ನನ್ನು ನೋಡಿ ಬಾ ಎಂದು ಬಲವಂತವಾಗಿ ಕೈಹಿಡಿದು ಎಳೆದ. ಆಗ ನಾನು ಕೂಗಿದೆ. ಆಗ ಅಲ್ಲಿ ಇದ್ದ ಕೆಲವರು ಬಂದು ಅವನಿಂದ ನನ್ನನ್ನು ಬಿಡಿಸಿದರು. ನಾನು ಆ ವಿಚಾರವನ್ನು ನನ್ನ ಅಣ್ಣನಿಗೆ ಕರೆ ಮಾಡಿ ತಿಳಿಸಿದೆ.

ಈ ಮೂಲಕ ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ ಮುಂದೆ ನನಗೆ ಶಾಕೀರನಿಂದ ಯಾವುದೇ ರೀತಿಯ ತೊಂದರೆ ಬರದ ಹಾಗೆ ಹಾಗೂ ನನ್ನ ಜೊತೆ ಅಶ್ಲೀಲವಾಗಿ ವರ್ತಿಸಿದ ಶಾಕೀರನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂದು ನನಗೆ ನ್ಯಾಯ ಒದಗಿಸಿ ಜೀವ ರಕ್ಷಣೆ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಹಾಗೂ ನಾನು ಅವನ ಕಾರಿನಲ್ಲಿ ಕುಳಿತ ವೀಡಿಯೋ ಇದೆ ಎಂದು ಹೆದರಿಸುತ್ತಾನೆ. ಅದನ್ನು ತಾವು ನಾಶ ಮಾಡಬೇಕಾಗಿ ವಿನಂತಿ.

ಇಂತಿ ನಿಮ್ಮ ವಿಧೇಯ,
ಕಲ್ಪನ.

ಆಗ 25, 2015

ಮಂಗಳೂರಿನ ಮತಿಗೆಟ್ಟ ಹುಡುಗರು.

Ashok K R
ದಕ್ಷಿಣ ಕನ್ನಡದಲ್ಲಿ ಬಿಜೆಪಿಯದೇ ಪಾರುಪತ್ಯವಿತ್ತು. ಬಿಜೆಪಿ ಬೆಂಬಲಿತ ಸಂಘಪರಿವಾರದ ವಿವಿಧ ಶಾಖೆಗಳ ಆಟೋಟಾಪಗಳು, ಸಾಮಾನ್ಯ ಜನರಿಗೆ ವಿನಾಕಾರಣವಾಗಿ ಅವರು ನೀಡಿದ ತೊಂದರೆ, ಅದರ ಜೊತೆಜೊತೆಗೇ ಬೆಳೆದ ಮುಸ್ಲಿಂ ಮೂಲಭೂತವಾದಿಗಳ ಕಾಟವೆಲ್ಲವೂ ಸೇರಿ ಜನರನ್ನು ಜಿಗುಪ್ಸೆಗೆ ತಳ್ಳಿತ್ತು. ಆ ಜಿಗುಪ್ಸೆಯ ಫಲವೆಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಸುಳ್ಯ ಕ್ಷೇತ್ರವೊಂದನ್ನು ಹೊರತುಪಡಿಸಿ. ಓ! ಕಾಂಗ್ರೆಸ್ ಬಂತು, ಅದರಲ್ಲೂ ಸಿದ್ಧರಾಮಯ್ಯನಂತಹ 'ಸಮಾಜವಾದಿ' 'ಅಹಿಂದ' ನಾಯಕ ಈಗ ಮುಖ್ಯಮಂತ್ರಿ. ಇನ್ನೇನು ಇಡೀ ದಕ್ಷಿಣ ಕನ್ನಡ ಶಾಂತಿಯ ಬೀಡಾಗಿಬಿಡುತ್ತದೆ ಎಂದುಕೊಂಡಿರಾದರೆ ಅದು ಖಂಡಿತ ತಪ್ಪು. ತಪ್ಪೆಂದು ನಿರೂಪಿಸಲು ಮತ್ತೆ ಮತ್ತೆ ಅನೈತಿಕ ಪೋಲೀಸ್ ಗಿರಿಯಂತಹ ಕಾರ್ಯಗಳು ನಡೆಯುತ್ತಲೇ ಇವೆ. 
ಮುಸ್ಲಿಮನೊಬ್ಬ ಪರಿಚಯದ ಹಿಂದೂ ಹುಡುಗಿಯೊಂದಿಗೆ ಹೋಗುವುದು, ಹಿಂದೂವೊಬ್ಬ ಪರಿಚಯದ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುವುದು ಇಲ್ಲಿ ಧರ್ಮದ್ರೋಹದ ಅಪರಾಧ! ಇಂತವರ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹಕ್ಕೆ ಸಮ! ನಿನ್ನೆ ದಿನ ಮುಸ್ಲಿಂ ಯುವಕೊನೊಬ್ಬನನ್ನು ನಡುಬೀದಿಯಲ್ಲಿ ಬಟ್ಟೆ ಕಳಚಿ ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಕಾರಣ ಆತ ಹಿಂದೂ ಹುಡುಗಿಯೊಟ್ಟಿಗೆ ಹೋಗುತ್ತಿದ್ದ. ಲವ್ ಜಿಹಾದ್ ಎಂಬ ಅದೃಶ್ಯ ಭೀತಿಯನ್ನು ನೈಜವಾಗಿಸಲು ಹಿಂದೂ ಮೂಲಭೂತವಾದಿಗಳು ಇಂತಹ ಕೃತ್ಯಕ್ಕೆ ಕೈಹಾಕುತ್ತಾರಾ? ಸಹಪಾಠಿಗಳೂ ಮಾತನಾಡದಂತಹ ಸ್ಥಿತಿಗೆ ಮಂಗಳೂರು ತಲುಪಿರುವುದಾದರೂ ಯಾಕೆ?
ಮೇಲಿನ ಚಿತ್ರ ಗಮನಿಸಿ, ಆ ಮುಸಲ್ಮಾನನನ್ನು ಹಿಡಿದುಕೊಂಡಿರುವ ವ್ಯಕ್ತಿ ಮತ್ತವನ ಹಿಂದೆ ನಿಂತು ಮೊಬೈಲಿನಲ್ಲಿ ಅದನ್ನು ಸೆರೆಹಿಡಿಯುತ್ತಿರುವ ವ್ಯಕ್ತಿಯನ್ನು ನೋಡಿ. ಸರಿಯಾಗಿ ಮೀಸೆಯೂ ಚಿಗುರದ ಎಳೆಯ ಹುಡುಗರವರು. ಅಬ್ಬಬ್ಬಾ ಎಂದರೆ ಯಾವುದೋ ಕಾಲೇಜಿನಲ್ಲಿ ಓದುತ್ತಿರುವವರು. ಇಂತಹ ಹುಡುಗರಿಗೆ ಕೋಮುನಂಜನ್ನು ತುಂಬುತ್ತಿರುವವರಾರು? ಆ ಕೋಮು ವಿಷವನ್ನು ತುಂಬುವ ವ್ಯಕ್ತಿಗಳು ದೊಡ್ಡ ದೊಡ್ಡ ಭಾಷಣ ಬಿಗಿದು ಬೆಚ್ಚಗೆ ಮನೆ ಸೇರುತ್ತಾರೆ. ವಿಷದ ನಂಜೇರಿದ ಈ ಯುವಕರು - ಯುವಕರೂ ಅಲ್ಲ ಹುಡುಗರು - ಬೀದಿಯಲ್ಲಿ ಓಡಾಡುತ್ತಿದ್ದ ಗೆಳೆಯರಿಬ್ಬರನ್ನೂ ಹಿಡಿದು ಚಚ್ಚುತ್ತಾರೆ. ಕೊನೆಗೆ ಜೈಲು ಪಾಲಾಗುವ ಸಂದರ್ಭ ಬಂದರೆ ಅದು ಈ ಹುಡುಗರಿಗೇ ಹೊರತು ಭೀಕರ ಭಾಷಣ ಕುಟ್ಟುವವರಿಗಲ್ಲ.
ಅಂದಹಾಗೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಇದು ಯಾಕೆ ನಡೆಯುತ್ತಿದೆ ಎಂದಿರಾ? ಬಿಜೆಪಿ ಮಂಗಳೂರಿನಲ್ಲಿ ಉಗ್ರ ಹಿಂದೂ ಮೂಲಭೂತವಾದ ನಡೆಸಿದರೆ ಕಾಂಗ್ರೆಸ್ ನಡೆಸುವುದು ಸೌಮ್ಯ ಹಿಂದೂ ಮೂಲಭೂತವಾದ.... ತನ್ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಮಂಗಳೂರು ಮತಿಗೆಟ್ಟವರ ಕಾರಣದಿಂದಲೇ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ.

ಆಗ 6, 2015

Yakub’s death and diseased Society.


Ashok. K. RThousands gathered to watch, see and mourn his death. Times of India reported that almost 15,000 people gathered in his funeral. Almost all of them were Muslims. If you think that someone who worked restlessly for the wellbeing of Muslim was expired then you are wrong! Court had ruled him guilty in 1993 Mumbai serial bomb explosion case. Yakub memon was hanged to death after 23 years of judiciary proceedings. Accusations against him were not severe when compared to his bother Tiger Memon and Dawood Ibrahim – both absconding. But it’s difficult to deny the role of Yakub Memon. Many involved in the serial bomb case have witnessed against Yakub.
yakub memon
Yakub Memon
Judiciary works on the basis of evidence and witness. According to the witness and police reports judiciary granted him the extreme punishment which is allowed by Indian law, hang till death. Yakub approached all levels of judiciary and even the President through his lawyers. He lost the case at all levels. Judiciary is not free from mistakes, but it’s not right to blame them completely when the judgement is not in our favour. Keeping aside all those judicial matters what’s frightening in this case is the turnout at Yakub’s funeral. Moral support for an extremist activity is a threat to the society.

Coincidentally I had finished reading Kannada version of ‘Freedom at Midnight’ last week. The book which runs around 1947 bursts the myth of ‘Peace loving’ India. It describes the ‘peace’fulness of Hindu – Muslim – Sikh people. Can we relate rise of fanaticism to the violence involved in the birth of two nations? Is there any evidence either in India or Pakistan of punishing the culprits involved in rape, murder, extortion, abduction during partition? Birth of two nations sent a strong and wrong message – ‘it’s difficult to punish criminals of mass riots’.

The violence of partition can be brushed aside by blaming the British. We will look at the mass riots post independence. Unfortunately the first mass riot of Independent India is associated with Mahatma Gandhi. A person who preached and lived non violence was killed violently by Hindu terrorist Nathuram Godhse. Godhse was hanged till death. Even Gandhi would have opposed his hanging as it is state sponsored violence. Many who were involved in Gandhi’s murder belonged to Chitpavana Brahmin community. Chitpavana Brahmins were attacked in various parts of the country. Is it right to attack and torture an entire community for an individual’s mistake? Were the rioters punished?


The next mass riot was after Indira Gandhi’s assassination. Indira was killed by Sikh bodyguards who sympathized with terrorists. Followers of Indira and Congress found this as an opportunity to show their affection towards Indira. Innocent Sikh were the victims. ‘When a big tree falls, these type of incidents are common’ was Rajiv Gandhi’s irreresponsible statement. Even after many investigations the real perpetrators of Sikh massacre were not punished; courtesy: lack of evidence.

BJP was directly responsible for next major riot. In the name of Hinduism, BJP under the leadership of L.K. Advani started rathayathra. They needed a climax which can be memorized for many more decades. The climax was destruction of Babri Masjid and oath of constructing the Ram temple at the same place. With the demolition of the Masjid attacks over Muslims spread all over the country. BJP leaders who instigated this mass violence are still roaming free.

And the recent mass riot occurred in 2002 in Gujarat. In response to Godhra train incident where Hindu sanyasis were burnt thousands of Muslims were killed. Were the criminals punished? Some investigations are still under trial, cases deliberately weakened by the state. Some have got life imprisonment for heinous crimes. At present they are out on bail.

What do these incidents suggest? If you hate a community it’s better to turn that hatred into a mass riot instead of attacking individually. It’s easy to escape the clutches of law in mass violence. It’s still easier to escape if you belong to a majority community and your foe is minority. If we observe mass riots of India, in many people who suffered belonged to Sikh, Muslim community whereas the attackers were Hindus, the majority. It saddens when we see what happened to those instigators. Rajiv Gandhi who carelessly supported attack on Sikhs enjoyed the Prime Minister post. His name shines in innumerable roads, airport, and government projects even today. BJP’s Atal Bihari Vajpayee becomes Prime Minister. All mistakes of BJP are selectively forgotten. Today we consider Atal as one of the farsighted leader of Independent India! Advani who was the master mind of 1992 Rathayathra becomes Deputy PM. Don’t be surprised if Advani is considered as far sighted leader and awarded ‘Bharat Ratna’ in future. Both Rajiv and Atal are ‘Bharat Ratna’ awardees! Muruli Manohar Joshi, Umabharathi have enjoyed various posts in their political career. Narendra Modi who was Gujarat’s chief minister during 2002 massacre is now Prime Minister of India! At present he is considered as strongest PM. Many more superlatives will be added in future!

Thousands who participated in the Yakub’s funeral reminded Nathuram Godhse. Many ‘liked’ Godhse as he killed Gandhi. Reason? He killed Gandhi who ‘cheated’ Hindus. People used to praise Godhse secretly. Now the secret element is missing. Godhse temple, Godhse road are discussed openly. Don’t be surprised if you see them in reality in near future. BJP which believes in many ideologies of Godhse is in power today. One can’t deny the fact that the praise of Godhse is related to BJP’s electoral victory. Followers of Godhse have an advantage. Society doesn’t label them as antinational, terrorists. Because they are Hindus. By default, Hindu is patriotic just because of his birth religion! Only Muslims, Sikhs, Christians have to repeatedly prove their patriotism. LTTE who killed Rajiv Gandhi receives wide support in Tamilnadu. There were many worthy reasons for LTTE’s fight but those reasons shouldn’t make us to justify Rajiv Gandhi’s murder. Religious fanaticism has made people to support Godhse, Yakub; regional fanaticism has made people to support criminal activities of LTTE. Tamilnadu legislative assembly takes a decision in favour of Rajiv Gandhi’s assassins. Are you still surprised about the huge crowd at Yakub’s funeral?

Bal Thackeray's funeral
1993 Mumbai serial blast was in response to 1992 riots which killed thousands of Muslims. Does Yakub appear to those attended the funeral as their savior? Protector of Muslim community? The answers to these dangerous questions are yes and it reflects the bad state of our society. Those people who attended the funeral are projected as terrorists, antinational because they are Muslims. Thousands attended Bal Thackeray’s funeral. Bal Thackeray was accused in 1992 riots by Shree Krishna committee. But these people are portrayed as patriotic not terrorists!

Questioning the judicial trial of Yakub at this juncture is futile. Judiciary works on evidence and witness. One can’t deny the fact that Police and to a certain extent Judiciary is influenced by the religious dramas and political pressure. The zeal shown by Police in cases involving Muslim terrorists is seriously missing when it confronts Hindu terrorists. Accused in Gujarat riots Maya Kodnani and Babu Bajrangi were granted bail when Yakub was hanged. Babu Bajrangi has ‘proudly’ narrated his killings in front of Tehelka’s spy cameras. But still he is awarded with life imprisonment not execution. The delay in Malegaon and Ajmer blast investigations shows the vested interests of government and investigating agencies. ‘When Hindu terrorist is not punished why Yakub should be punished?’ is the most idiotic question. Yakub is a criminal, he should be punished. At the same time other criminals should also be punished. Though it is not happening supporting a criminal just because the other one is roaming free is not the right path.

Netizens are equally dangerous! They selectively support few and oppose few. And they give publicity according to their own liking in extreme way. Those who opposed Yakub, those who shared photos of Yakub’s funeral with “shame on them” tag appear patriotic. But you observe their older posts; they showed their full support to Godhse, Sadhvi! Those who strongly talked against Sadhvi in older posts now post updated supportive of Yakub. These kind of bi – tongued people play a major role in creating Yakub, Godhse and the likes.

The discussion of rights and wrongs of judicial execution takes place when an execution is nearing. The discussion fades away after execution. Demand for ban of judicial execution should be done when there is no execution.

ಆಗ 2, 2015

ಯಾಕೂಬನ ಸಾವು ಮತ್ತು ನೇಣಿಗೆ ಬಿದ್ದ ಸಮಾಜದ ಮನಸ್ಥಿತಿ.

yakub memon funeral
Ashok K R
ಆತನ ಶವವನ್ನು ನಾಗಪುರದಿಂದ ಮುಂಬಯಿಗೆ ತಂದಾಗ ಶವವನ್ನು ‘ವೀಕ್ಷಿಸಲು’ ಸಾವಿರಾರು ಜನರು (ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ ಹದಿನೈದು ಸಾವಿರದಷ್ಟು ಜನರು) ನೆರೆದಿದ್ದರು. ನೆರೆದವರಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮುಸ್ಲಿಮರು. ಸತ್ತವನು ಯಾರೋ ಪುಣ್ಯಾತ್ಮ ಮುಸ್ಲಿಂ ಜನಾಂಗದ ಜನರ ಓದಿಗೆ, ಬರಹಕ್ಕೆ, ಜೀವನಕ್ಕೆ ಹೊಡೆದಾಡಿದ ಮಹಾನುಭಾವ ಎಂದುಕೊಂಡಿರಾದರೆ ಅದು ಖಂಡಿತವಾಗಿಯೂ ತಪ್ಪು! ಸತ್ತ ವ್ಯಕ್ತಿ ಮುಂಬಿಯಯಲ್ಲಿ 1993ರಲ್ಲಿ ನಡೆದ ಪೈಶಾಚಿಕ ಸರಣಿ ಬಾಂಬ್ ಸ್ಪೋಟಕ್ಕೆ ಸಹಾಯ ಮಾಡಿದವನು ಎಂಬ ಆರೋಪ ಹೊತ್ತಾತ. ಯಾಕೂಬ್ ಮೆಮೊನ್ ಎಂಬ ವ್ಯಕ್ತಿಗೆ ಇಪ್ಪತ್ತಮೂರು ವರುಷಗಳ ವಿಚಾರಣೆಯ ನಂತರ, ಭಾರತದ ಕಾನೂನಿನ ಎಲ್ಲಾ ಹಂತಗಳನ್ನೂ ದಾಟಿದ ನಂತರ ಜುಲೈ ಮೂವತ್ತರಂದು ಗಲ್ಲಿಗೇರಿಸಲಾಯಿತು. ಆತನ ವಿರುದ್ಧದ ಅಪರಾಧಗಳು ಅದೇ ಬಾಂಬ್ ಸ್ಪೋಟದ ರುವಾರಿಗಳಾದ, ನಂತರದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಯಾಕೂಬನ ಸಹೋದರ ಟೈಗರ್ ಮೆಮೊನ್ ನಷ್ಟು ಇರಲಿಲ್ಲ; ಆದರೆ ಇನ್ನೂರಕ್ಕೂ ಅಧಿಕ ಜನರು ಸಾಯುವುದರಲ್ಲಿ ಯಾಕೂಬ್ ಮೆಮನ್ನಿನ ಪಾತ್ರವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಬಾಂಬ್ ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದ ಬಹುತೇಕರು ಯಾಕೂಬ್ ಮೆಮೊನ್ನಿನ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಸರಣಿ ಸ್ಪೋಟದ ಪ್ರಮುಖ ರುವಾರಿ ಟೈಗರ್ ಮೆಮೊನನಿಗೆ ಹಣ ನೀಡಿದ ಆರೋಪ, ಇಂತಹುದೊಂದು ದುಷ್ಕೃತ್ಯವನ್ನೆಸಗಲು ತರಬೇತಿ ಪಡೆದುಕೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ ಹದಿನೈದು ಯುವಕರ ತಂಡಕ್ಕೆ ಹಣಕಾಸು ನೆರವು ನೀಡಿದ ಆರೋಪ, ಸ್ಪೋಟಕಗಳನ್ನು ಸಂಗ್ರಹಿಸಿಟ್ಟ ಆರೋಪಗಳೆಲ್ಲವೂ ಯಾಕೂಬ್ ಮೆಮೊನ್ ನ ಮೇಲಿದ್ದವು.
yakub memon
ಯಾಕೂಬ್ ಮೆಮೊನ್
ನ್ಯಾಯಾಲಯ ಕಾರ್ಯನಿರ್ವಹಿಸುವುದೇ ಸಾಕ್ಷ್ಯಾಧಾರಗಳ ಆಧಾರದಿಂದ, ಆ ಸಾಕ್ಷ್ಯಾಧಾರಕ್ಕನುಗುಣವಾಗಿ ಯಾಕೂಬ್ ಮೆಮನ್ನಿಗೆ ಭಾರತದ ಕಾನೂನಿನಲ್ಲಿರುವ ಅತ್ಯುಗ್ರ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಿತು. ಇವತ್ತು ಮರಣದಂಡನೆ ವಿಧಿಸಿ ನಾಳೆ ನೇಣಿಗಾಕುವ ದಿಡೀರ್ ನ್ಯಾಯ ಭಾರತದಲ್ಲಿಲ್ಲ, ಇರಲೂಬಾರದು. ಉನ್ನತ ಕೋರ್ಟುಗಳು, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟಿನವರೆಗೆ ಯಾಕೂಬ್ ಮೆಮೊನ್ ಪರವಾಗಿ ವಕೀಲರು ದಾವೆ ಹೂಡಿದರು, ಎಲ್ಲೆಡೆಯೂ ದಾವೆಗೆ ಸೋಲಾಯಿತು; ಅರ್ಥಾತ್ ಸಾಕ್ಷ್ಯಾಧಾರಗಳು ಯಾಕೂಬನ ವಿರುದ್ಧವಾಗಿದ್ದವು. ನ್ಯಾಯಾಲಯದಲ್ಲೂ ತಪ್ಪುಗಳಾಗುತ್ತಾವಾದರೂ ನಮಗೆ ಅಪ್ರಿಯವೆನ್ನಿಸಿದ ತೀರ್ಪುಗಳು ಬಂದಾಗ ಸಾರಾಸಗಟಾಗಿ ನ್ಯಾಯಾಲಯವನ್ನು ಟೀಕಿಸುವುದು ವಿವೇಚನೆಯಲ್ಲ. ಈ ಪ್ರಕರಣದಲ್ಲಿರುವ ಅನೇಕ ಚರ್ಚಾಸ್ಪದ ವಿಷಯಗಳ ನಡುವೆ ಗಮನಿಸಲೇಬೇಕಾದ ವಿಷಯವೆಂದರೆ ಯಾಕೂಬನ ಶವಸಂಸ್ಕಾರದ ಸಮಯದಲ್ಲಿ ಸಹಸ್ರ ಜನರು ಹಾಜರಿದ್ದುದು. ಒಂದು ಮೂಲಭೂತವಾದಿ ಕೃತ್ಯಕ್ಕೆ ನೈತಿಕ ಬೆಂಬಲ ಕೊಡುವಂತಹ ಮನಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು.

ಕಾಕತಾಳೀಯವೆಂಬಂತೆ ಕಳೆದ ವಾರವಷ್ಟೇ ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ ಪುಸ್ತಕ ಓದಿ ಮುಗಿಸಿದ್ದೆ. ನಮ್ಮ ಭವ್ಯ ಭಾರತ ದೇಶದ ಬಗ್ಗೆ ಹೊಗಳಿಕೊಳ್ಳುವಾಗ ನಾವು ಶಾಂತಿ ಪ್ರಿಯರು, ಯಾವೊಂದು ದೇಶದ ಮೇಲೂ ದಂಡೆತ್ತಿ ಹೋದವರಲ್ಲ ಎನ್ನುವ ಸಾಲುಗಳನ್ನು ಸಾಮಾನ್ಯವಾಗಿ ಹೇಳುತ್ತಿರುತ್ತೇವೆ - ಕೇಳುತ್ತಿರುತ್ತೇವೆ. ಭಾರತದ ಸ್ವಾತಂತ್ರ್ಯ ಮತ್ತು ದೇಶವಿಭಜನೆಯ ಹಿಂಚುಮುಂಚಿನಲ್ಲಿ ನಡೆದ ಭೀಕರ ಹಿಂಸಾಕೃತ್ಯಗಳ ವಿವರಗಳನ್ನು ಓದುವಾಗ ಈ ಹಿಂದೂ – ಇಸ್ಲಾಂ – ಸಿಖ್ಖರ ‘ಶಾಂತಿ’ ಹೇಗಿತ್ತೆನ್ನುವುದು ತಿಳಿದು ಬಿಡುತ್ತದೆ. ಇವತ್ತಿನ ಭಾರತ ಮತ್ತು ಪಾಕಿಸ್ತಾನ ಹುಟ್ಟಿದ್ದೇ ಹಿಂಸೆಯ ಕೂಪದಿಂದ ಎಂಬ ಅಂಶ ಇವತ್ತಿನ ಮೂಲಭೂತವಾದಿ ಮನಸ್ಥಿತಿಯ ಹೆಚ್ಚಳಕ್ಕೆ ಇರುವ ಹತ್ತಲವು ಕಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾ? ವಿಭಜನೆಯ ಸಮಯದಲ್ಲಿ ಅಮಾಯಕರನ್ನು ಹತ್ಯೆ ಮಾಡಿದವರಿಗೆ, ಅತ್ಯಾಚಾರವೆಸಗಿದವರಿಗೆ, ಲೂಟಿ ಮಾಡಿದವರಿಗೆ ಭಾರತ ಅಥವಾ ಪಾಕಿಸ್ತಾನ ಸರಕಾರಗಳು ಶಿಕ್ಷೆ ವಿಧಿಸಿದ ಕುರಿತಾಗಿ ಯಾವುದಾದರೂ ದಾಖಲೆ – ಬರಹಗಳಿವೆಯಾ? ನನ್ನ ಓದಿನ ಪರಿಮಿತಿಯಲ್ಲಂತೂ ಅಂತಹದ್ದು ನಡೆದಿರುವ ಸೂಚನೆ ಸಿಕ್ಕಿಲ್ಲ. ಅಲ್ಲಿಗೆ ಎರಡು ದೇಶಗಳ ಜನ್ಮದೊಡನೆಯೇ ‘ಗಲಭೆ’ಗಳಲ್ಲಿ ನಡೆಸುವ ಹತ್ಯಾಕಾಂಡಕ್ಕೆ, ಅನಾಚಾರಕ್ಕೆ ಶಿಕ್ಷೆ ಕೊಡುವುದು ಕಷ್ಟ ಎಂಬ ಬಹುದೊಡ್ಡ ತಪ್ಪು ಸಂದೇಶವೊಂದು ಸೃಷ್ಟಿಯಾಗಿ ಹೋಯಿತು. 

gandhi and godhse
ಗಾಂಧಿ ಮತ್ತು ಗೋಡ್ಸೆ
ಬಿಡಿ, ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆಲ್ಲ ಕುತಂತ್ರಿ ಬ್ರಿಟೀಷರೇ ಕಾರಣ ಎಂದು ನೆಪ ಹೇಳಿಬಿಡಬಹುದು. ವಿಭಜನೆಯ ನಂತರ ನಡೆದ ಹಿಂಸಾಚಾರಗಳತ್ತ ಗಮನಹರಿಸೋಣ. ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಮೊದಲ ಹಿಂಸಾಚಾರ ಅಹಿಂಸಾ ತತ್ವ ಭೋದಿಸಿದ ಗಾಂಧೀಜಿಯೊಂದಿಗೆ ತಳುಕುಹಾಕಿಕೊಂಡಿದೆ! ವೈರುಧ್ಯಗಳು ಹೇಗಿರುತ್ತವೆ ನೋಡಿ, ಜೀವನವಿಡೀ ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿಯ ಹತ್ಯೆ ಹಿಂಸಾ ಮಾರ್ಗದಲ್ಲಾಗುತ್ತದೆ. ನಾಥೂರಾಮ್ ಗೋಡ್ಸೆ ಎಂಬ ಹಿಂದೂ ಉಗ್ರವಾದಿ ಸಾರ್ವಜನಿಕವಾಗಿ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲುತ್ತಾನೆ. ಬಹುಶಃ ಗಾಂಧೀಜಿ ಕೂಡ ನಾಥೂರಾಮ್ ಗೋಡ್ಸೆಗೆ ನೇಣಾಗುವುದನ್ನು ಒಪ್ಪುತ್ತಿರಲಿಲ್ಲವೇನೋ, ನೇಣಿಗಾಕುವುದು ಸರಕಾರಿ ಹಿಂಸೆ ಎಂಬ ಕಾರಣಕ್ಕೆ. ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರು ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ಗಾಂಧಿ ಹತ್ಯೆಯ ನಂತರ ದೇಶದ ವಿವಿದೆಡೆ ಚಿತ್ಪಾವನ ಬ್ರಾಹ್ಮಣರ ಮನೆಗಳ ಮೇಲೆ ದಾಳಿಗಳು ನಡೆದವು. ಅಹಿಂಸೆ ಭೋದಿಸಿದ ವ್ಯಕ್ತಿಯ ಸಾವಿನಿಂದ ಹಿಂಸೆ ಪ್ರಾರಂಭವಾಯಿತು! ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಗುರಿ ಮಾಡಿಕೊಂಡು ನಡೆಸಿದ ದುಷ್ಕ್ರತ್ಯ ಎಷ್ಟರಮಟ್ಟಿಗೆ ಸರಿ? ಸಾಮೂಹಿಕ ದಾಳಿ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಲಾಯಿತಾ? 

1984 sikh riots
1984ರ ಸಿಖ್ ಹತ್ಯಾಕಾಂಡ
ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ದಾಂಧಲೆ ನಡೆದದ್ದು ಇಂದಿರಾ ಗಾಂಧಿ ಹತ್ಯೆಯಾದ ನಂತರ. 1984ರಲ್ಲಿ ಇಂದಿರಾ ಗಾಂಧಿಯನ್ನು ಆಕೆಯ ಸಿಖ್ ಅಂಗರಕ್ಷಕರು ಹತ್ಯೆ ಮಾಡಿಬಿಡುತ್ತಾರೆ. ಇಂದಿರಾ ಬೆಂಬಲಿಗರಿಗೆ, ಕಾಂಗ್ರೆಸ್ಸರಿಗೆ ತಮ್ಮ ನಾಯಕಿಯನ್ನು ತಾವೆಷ್ಟು ಆರಾಧಿಸುತ್ತಿದ್ದೆವು ಎಂದು ತೋರ್ಪಡಿಸುವ ಹಪಾಹಪಿ. ಅದಕ್ಕೆ ಬಲಿಯಾಗಿದ್ದು ಮಾತ್ರ ಅಮಾಯಕ ಸಿಖ್ಖರು. ‘ಒಂದು ದೊಡ್ಡ ಆಲದ ಮರ ಬಿದ್ದಾಗ ಇಂತವೆಲ್ಲ ಸಹಜ’ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದು ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿ. ಹತ್ತಾರು ತನಿಖೆಗಳು, ವಿಚಾರಣೆ ಆಯೋಗಗಳ ಪ್ರಹಸನಗಳೆಲ್ಲ ಮುಗಿದವಾದರೂ ಸಿಖ್ಖರನ್ನು ಮುಗಿಸಿಬಿಡಲು ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕರಾರಿಗೂ ಶಿಕ್ಷೆಯಾಗಲಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದಾಗಿ.

1992ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಮತ್ತೊಂದು ಸುತ್ತಿನ ಸಾಮೂಹಿಕ ಹಿಂಸೆಗೆ ಮೂಕಸಾಕ್ಷಿಯಾಯಿತು. ಹಿಂದೂ ಭಾವನೆಗಳನ್ನು ಉದ್ರೇಕಗೊಳಿಸುತ್ತ, ಹಿಂದೂಗಳ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎನ್ನುತ್ತಾ ರಥಯಾತ್ರೆ ಪ್ರಾರಂಭಿಸಿದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆಯ ಮುಂದಾಳತ್ವ ವಹಿಸಿದ್ದರು. ರಥಯಾತ್ರೆ ನಡೆದ ವಿಷಯವನ್ನು ಜನರು ಮರೆತು ಬಿಡಬಾರದು ಎಂಬ ಕಾರಣಕ್ಕೆ ಒಂದು ದೊಡ್ಡ ಕ್ಲೈಮಾಕ್ಸ್ ಸಿದ್ಧಪಡಿಸಿದ್ದರು. ಅದು ಬಾಬರಿ ಮಸೀದಿಯ ಧ್ವಂಸ ಮತ್ತಾ ಜಾಗದಲ್ಲಿ ರಾಮಮಂದಿರ ನಿರ್ಮಿಸುವ ಪ್ರಮಾಣ. ಬಾಬರಿ ಮಸೀದಿಯ ಧ್ವಂಸದೊಂದಿಗೇ ದೇಶಾದ್ಯಂತ ಮುಸ್ಲಿಮರ ಮೇಲೆ ಹಲ್ಲೆಗಳು ಪ್ರಾರಂಭವಾದವು. ಬಾಬರನಿಗೂ ಬಾಬರಿ ಮಸೀದಿಗೂ ಸಂಬಂಧವೇ ಇರದ ಸಾವಿರಾರು ಮುಸ್ಲಿಮರು ಹತ್ಯೆಗೊಳಗಾದರು. ಈ ಘಟನೆಗಳಿಗೆಲ್ಲ ಕಾರಣಕರ್ತರಾದ ಬಿಜೆಪಿಯ ನಾಯಕರುಗಳಿಗೆ ಶಿಕ್ಷೆಯಾಯಿತಾ? ಅವರೆಲ್ಲರೂ ಆರಾಮವಾಗಿ ಓಡಾಡಿಕೊಂಡೇ ಇದ್ದಾರೆ.

2002 gujrat riots
2002ರ ಗುಜರಾಜ್ ಹತ್ಯಾಕಾಂಡ
ಇನ್ನು ತೀರ ಇತ್ತೀಚೆಗೆ ನಡೆದಿದ್ದು 2002ರ ಗುಜರಾತ್ ಹತ್ಯಾಕಾಂಡ. ಗೋದ್ರದ ರೈಲಿನಲ್ಲಿ ನಡೆದ ಹಿಂದೂ ಸನ್ಯಾಸಿಗಳ ಹತ್ಯೆಗೆ ಪ್ರತೀಕಾರವಾಗಿ ಇಡೀ ಗುಜರಾತಿನಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಲಾಗುತ್ತದೆ. ಇಲ್ಲಿನ ಆರೋಪಿಗಳಿಗೆ ಶಿಕ್ಷೆಯಾಯಿತಾ? ಇನ್ನೂ ಅನೇಕವು ವಿಚಾರಣೆಯಲ್ಲಿವೆ, ಕೆಲವೊಂದರಲ್ಲಿ ಜೀವಾವಧಿ ಶಿಕ್ಷೆಯಾಗಿದೆ ಕೆಳ ಹಂತದ ನ್ಯಾಯಾಲಯದಲ್ಲಿ; ಆ ಶಿಕ್ಷೆಯಾದವರೂ ಕೂಡ ಜಾಮೀನಿನ ಮೇಲೆ ತಿರುಗಾಡಿಕೊಂಡಿದ್ದಾರೆ!

ಈ ಘಟನೆಗಳನ್ನೆಲ್ಲಾ ಏನನ್ನು ಸೂಚಿಸುತ್ತವೆ? ನಿಮಗೆ ಒಂದು ಸಮುದಾಯದ ಮೇಲೆ ಕೋಪವಿದ್ದರೆ ದ್ವೇಷವಿದ್ದರೆ ಅದನ್ನು ಸಾಮೂಹಿಕವಾಗಿ ತೀರಿಸಿಕೊಳ್ಳಿ, ವೈಯಕ್ತಿಕವಾಗಲ್ಲ. ಸಾಮೂಹಿಕ ಅಪರಾಧದಲ್ಲಿ ತಪ್ಪಿಸಕೊಳ್ಳುವುದು ಸುಲಭ. ಅದರಲ್ಲೂ ನೀವು ಬಹುಸಂಖ್ಯಾತರಾಗಿದ್ದು ನೀವು ಹತ್ಯೆ ಮಾಡಿದವರು ಅಲ್ಪಸಂಖ್ಯಾತರಾಗಿದ್ದರೆ ತಪ್ಪಿಸಿಕೊಳ್ಳುವುದು ಮತ್ತೂ ಸುಲಭ. ಭಾರತದ ಪ್ರಮುಖ ಸಾಮೂಹಿಕ ಹತ್ಯಾಕಾಂಡವನ್ನು ಗಮನಿಸಿ ನೋಡಿ, ಸಿಖ್, ಮುಸ್ಲಿಂ ಸಮುದಾಯ ಹೆಚ್ಚು ಹಾನಿ ಅನುಭವಿಸಿದೆ. ಹಾನಿ ಮಾಡಿದ್ದು ಹಿಂದೂ ಸಮುದಾಯ. ಆ ಪ್ರಕರಣಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಯಾದವರೆಲ್ಲಾ ನಂತರದ ದಿನಗಳಲ್ಲಿ ಏನಾದರು ಎಂಬುದನ್ನು ಗಮನಿಸಿದರೆ ಇಡೀ ಸಮಾಜದ ಮನಸ್ಥಿತಿಯ ಬಗ್ಗೆಯೇ ಮರುಕವುಂಟಾಗುತ್ತದೆ. ದೊಡ್ಡಾಲದ ಮರ ಬಿದ್ದಾಗ ಇಂತವೆಲ್ಲ ಸಹಜ ಎಂದು ಸಿಖ್ಖರ ಜೀವವನ್ನು ತುಚ್ಛವಾಗಿ ಕಂಡ ರಾಜೀವ್ ಗಾಂಧಿ ಅನುಕಂಪದ ಆಧಾರದಲ್ಲಿ ಅತಿ ಹೆಚ್ಚು ಸೀಟುಗಳನ್ನು ಪಡೆದ ಕಾಂಗ್ರೆಸ್ಸಿನ ಮೂಲಕ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ಸಿನ ಬಕೆಟ್ ರಾಜಕೀಯದ ಕಾರಣದಿಂದಾಗಿ ದೇಶದೆಲ್ಲೆಡೆ ರಾಜೀವ್ ಗಾಂಧಿ ಹೆಸರು ಇವತ್ತಿಗೂ ರಾರಾಜಿಸುತ್ತಿದೆ. ಇನ್ನು 1992ರ ಗಲಭೆಗೆ ಕಾರಣಕರ್ತರಾದ ಬಿಜೆಪಿಯವರು ಲೋಕಸಭೆಯಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಿಜೆಪಿಯ ಭಾಗವೇ ಆಗಿದ್ದ, ಬಿಜೆಪಿಯ ನಾಯಕನಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗುತ್ತಾರೆ. ನಂತರದ ದಿನಗಳಲ್ಲಿ ಅವರು ಮುತ್ಸದ್ಧಿ ನಾಯಕನಾಗಿ, ಅಜಾತ ಶತ್ರುವಾಗಿ ಬಿಂಬಿತವಾಗುತ್ತಾರೆ. ರಾಜೀವ್ ಗಾಂಧಿಗೆ ಸಿಕ್ಕ ಭಾರತ ರತ್ನ ಅಟಲ್ ಗೂ ಸಿಗುತ್ತದೆ! ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರವಾದ್ದರಿಂದ ಯೋಜನೆಗಳಿಗೆ ಅಟಲ್ ಹೆಸರು ಇಡುವ ಪರಿಪಾಟ ಪ್ರಾರಂಭವಾಗಿದೆ! ಇನ್ನು ರಥಯಾತ್ರೆಯ ನಾಯಕರಾಗಿದ್ದ ಅಡ್ವಾಣಿ ಉಪಪ್ರಧಾನಿಯಾಗುತ್ತಾರೆ. ಈಗ ಸದ್ಯಕ್ಕೆ ಅವರು ಮುತ್ಸದ್ಧಿ ನಾಯಕರಾಗಿದ್ದಾರೆ, ಅಜಾತ ಶತ್ರುವಾಗಿ ‘ಭಾರತ ರತ್ನ’ ಪಡೆದರೆ ಅಚ್ಚರಿಪಡಬೇಕಾಗಿಲ್ಲ. ಮುರಳಿ ಮನೋಹರ ಜೋಶಿ, ಉಮಾಭಾರತಿಯಂತಹ ನಾಯಕರೆಲ್ಲ ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ಗುಜರಾತಿನ ಹತ್ಯಾಕಾಂಡಕ್ಕೆ ಪ್ರೇರಣೆ ನೀಡಿದವರು ಎಂದು ಆರೋಪಿಸಲಾದ (ನ್ಯಾಯಾಲಯದಲ್ಲೇನೂ ಸಾಬೀತಾಗಿಲ್ಲ) ನರೇಂದ್ರ ಮೋದಿ ಒಂದಾದ ಮೇಲೊಂದರಂತೆ ಚುನಾವಣೆಗಳನ್ನು ಗೆಲ್ಲುತ್ತಾರೆ. ಗುಜರಾತ್ ಹತ್ಯಾಕಾಂಡ ನಡೆದು ಹನ್ನೆರಡು ವರುಷಗಳ ನಂತರ ಪ್ರಧಾನಿಯಾಗುತ್ತಾರೆ. ಭಾರತ ಕಂಡ ಶಕ್ತಿಶಾಲಿ ಪ್ರಧಾನಿ ಎಂದು ಸದ್ಯಕ್ಕೆ ಹೇಳಲಾಗುತ್ತದೆ, ಇನ್ಯಾವ ಗುಣವಿಶೇಷಣಗಳು ಸೇರಿಕೊಳ್ಳುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು!

ಸಾಮೂಹಿಕ ಹತ್ಯಾಕಾಂಡಕ್ಕೆ ಪ್ರತಿಕ್ರಿಯಿಸುವ ನಮ್ಮ ಸಮಾಜದ ಮನಸ್ಥಿತಿಯ ಇತಿಹಾಸವನ್ನು ಸ್ವಲ್ಪ ನೋಡಿದ್ದಾಯಿತು. ಇನ್ನು ಮತ್ತೆ ಯಾಕೂಬ್ ಮೆಮೊನ್ ಶವಸಂಸ್ಕಾರದಲ್ಲಿ ಸೇರಿದ್ದ ಅಪಾರ ಜನಸಂಖ್ಯೆಯ ಮನಸ್ಥಿತಿ ಏನಿರಬಹುದು ಎಂದು ಯೋಚಿಸಿದಾಗ ತಟ್ಟನೆ ನೆನಪಾಗಿದ್ದು ನಾಥೂರಾಮ್ ಗೋಡ್ಸೆ. ಗಾಂಧಿಯನ್ನು ಹತ್ಯೆ ಮಾಡಿದ ಕಾರಣಕ್ಕೆ ಆತನನ್ನು ಆರಾಧಿಸುವ ಮನಸ್ಥಿತಿಗಳು ಮುಂಚಿನಿಂದಲೂ ಇದ್ದವು. ಕಾರಣ? ಗೋಡ್ಸೆ ಹಿಂದೂವಾದಿ, ಹಿಂದೂಗಳಿಗೆ ‘ದ್ರೋಹ’ ಮಾಡಿದ ಗಾಂಧೀಜಿಯನ್ನು ಕೊಂದದ್ದಕ್ಕಾಗಿ ಗೋಡ್ಸೆ ಹೀರೋ! ಮುಂಚೆ ಕದ್ದು ಮುಚ್ಚಿ ಆರಾಧಿಸುತ್ತಿದ್ದವರು ಈಗ ಬಹಿರಂಗವಾಗಿಯೇ ಗೋಡ್ಸೆಯನ್ನು ಆರಾಧಿಸುತ್ತಿದ್ದಾರೆ. ಗೋಡ್ಸೆ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸುತ್ತೇವೆ, ರಸ್ತೆಗೆ ಹೆಸರಿಡುತ್ತೇವೆ ಎನ್ನುವವರ ಸಂಖೈ ದಿನೇ ದಿನೇ ಹೆಚ್ಚುತ್ತಿದೆ. ಗೋಡ್ಸೆ ನಂಬಿದ ಸಿದ್ಧಾಂತಗಳಿಂದಲೇ ಬೆಳೆದು ಬಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಈ ಗೋಡ್ಸಾರಾಧನೆಗೂ ಸಂಬಂಧವಿಲ್ಲ ಎಂದರೆ ನಂಬಲಾದೀತೆ? ಗೋಡ್ಸೆ ಆರಾಧಕರಿಗೆ ಇರುವ ಒಂದು ಅನುಕೂಲವೆಂದರೆ ಅವರ್ಯಾರನ್ನೂ ಸಮಾಜ ರಾಷ್ಟ್ರದ್ರೋಹಿ ಉಗ್ರಗಾಮಿ ಭಯೋತ್ಪಾದಕ ಎಂಬ ವಿಶೇಷಣಗಳಿಂದ ಗುರುತಿಸುವುದಿಲ್ಲ. ಕಾರಣ ಈ ಆರಾಧಕರು ಹಿಂದೂಗಳು. ಹಿಂದೂ ಆಗಿ ಹುಟ್ಟಿದವನು ಆ ಕಾರಣಕ್ಕಾಗಿಯೇ ರಾಷ್ಟ್ರಪ್ರೇಮಿಯಾಗಿಬಿಡುತ್ತಾನೆ! ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂಬ ಅಘೋಷಿತ ಕಾನೂನೊಂದು ನಮ್ಮಲ್ಲಿ ಜಾರಿಯಲ್ಲಿದೆ! ರಾಷ್ಟ್ರಪ್ರೇಮವನ್ನು ಸಾಬೀತುಪಡಿಸುವ ಕರ್ಮವೆಲ್ಲ ಮುಸ್ಲಿಮರಿಗೆ, ಸಿಖ್ಖರಿಗೆ, ಕ್ರಿಶ್ಚಿಯನ್ನರಿಗೆ ಸೀಮಿತ. ಇನ್ನು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಎಲ್.ಟಿ.ಟಿ.ಐ ಉಗ್ರರಿಗೆ ತಮಿಳುನಾಡಿನಲ್ಲಿ ಸಿಗುವ ಬೆಂಬಲ ಕೂಡ ಆಘಾತ ಮೂಡಿಸುತ್ತದೆ. ಎಲ್.ಟಿ.ಟಿ.ಐ ಹೋರಾಟಕ್ಕೆ ಅನೇಕಾನೇಕ ಕಾರಣಗಳಿರಬಹುದು ಆದರೆ ಆ ಕಾರಣಗಳ್ಯಾವುವೂ ರಾಜೀವ್ ಗಾಂಧಿಯ ಹತ್ಯೆಯನ್ನು ಸಮರ್ಥಿಸುವಂತೆ ಮಾಡಬಾರದು. ಗೋಡ್ಸೆಯ ವಿಚಾರದಲ್ಲಿ ಯಾಕೂಬ್ ನ ವಿಚಾರದಲ್ಲಿ ಧರ್ಮ ಅಮಲೇರಿಸಿದರೆ, ಎಲ್.ಟಿ.ಟಿ.ಐ ವಿಷಯದಲ್ಲಿ ಪ್ರದೇಶಾಭಿಮಾನ, ಭಾಷಾಭಿಮಾನ ಹಂತಕರನ್ನು ಬೆಂಬಲಿಸುವಂತಹ, ಆರಾಧಿಸುವಂತಹ ವಾತಾವರಣವನ್ನು ಸೃಷ್ಟಿಸಿತು. ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ನೀಡಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯಗಳಾಗುತ್ತವೆಂದರೆ ನಮ್ಮ ಜನರ ಹಂತಕ ಪ್ರೇಮತನ ಯಾವ ಮಟ್ಟಿಗಿರಬೇಕು ನೀವೇ ಲೆಕ್ಕಹಾಕಿ. ಹಂತಕರನ್ನು ಆರಾಧಿಸುವ ಗುಣ ದೇಶಾದ್ಯಂತ ಹರಡಿರುವಾಗ ಯಾಕೂಬನ ಶವಸಂಸ್ಕಾರದಲ್ಲಿ ಮುಸ್ಲಿಮರು ಭಾಗವಹಿಸಿದ್ದು ಅಚ್ಚರಿ ಮೂಡಿಸದೇ ಹೋಗುವ ಕೆಟ್ಟ ಮನಸ್ಥಿತಿಗೆ ದೂಡುತ್ತದೆ.
bal thackeray funeral
ಬಾಳಾ ಠಾಕ್ರೆ ಸತ್ತಾಗ ಸೇರಿದ ಜನತೆ
1992ರಲ್ಲಿ ನಡೆದ ಮುಸ್ಲಿಂ ಹತ್ಯೆಗಳಿಗೆ ಪ್ರತೀಕಾರದ ಹೆಸರಿನಲ್ಲಿ 1993ರಲ್ಲಿ ಮುಂಬಯಿಯಲ್ಲಿ ಸರಣಿ ಸ್ಪೋಟ ನಡೆಸಲು ನೆರವಾಗಿ ಅನೇಕ ಅಮಾಯಕರನ್ನು ಹತ್ಯೆ ಮಾಡಿದ ಯಾಕೂಬ್ ಮುಸ್ಲಿಮರಿಗೆ ಶಕ್ತಿಯ ಸಂಕೇತವಾಗಿ ಕಂಡುಬಿಡುತ್ತಾನಾ? ನಮ್ಮ ಮೇಲೆ ನಡೆದ ಅನ್ಯಾಯಕ್ಕೆ ಪ್ರತಿಯಾಗಿ ಅನ್ಯಾಯ ಮಾಡಿ ನ್ಯಾಯ ಕೊಡಿಸಿದವನಂತೆ ಕಂಡುಬಿಡುತ್ತಾನಾ? ಇಂತಹ ಅಪಾಯಕಾರಿ ಪ್ರಶ್ನೆಗಳಿಗೆ ಉತ್ತರ ಹೌದೆಂದು ಆಗಿಬಿಟ್ಟಿರುವುದೇ ನಮ್ಮ ಸಮಾಜದ ದುರಂತ. ಇಲ್ಲಿ ಭಾಗವಹಿಸಿದ್ದವರು ಮುಸ್ಲಿಮರಾದ್ದರಿಂದ ದೇಶದ್ರೋಹಿಗಳಂತೆ, ಉಗ್ರಗಾಮಿಗಳಂತೆ ಗೋಚರಿಸುತ್ತಾರಷ್ಟೇ. ಶ್ರೀಕೃಷ್ಣ ವರದಿಯಲ್ಲಿ ಅಪರಾಧಿಯಾಗಿ ಗುರುತಿಸಲ್ಪಟ್ಟ ಬಾಳ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು, ಠಾಕ್ರೆಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರಲಿಲ್ಲ, ಹಾಗಾಗಿ ದ್ವೇಷವನ್ನೇ ಬಿತ್ತಿದ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಹಿಂದೂಗಳು ದೇಶಪ್ರೇಮಿಗಳಾಗಿ ಗುರುತಿಸಲ್ಪಡುತ್ತಾರೆಯೇ ಹೊರತು ದೇಶದ್ರೋಹಿಗಳಾಗಿ ಅಲ್ಲ!

ಇದನ್ನೂ ಓದಿ: ಸತ್ತ ನಂತರ ಒಳ್ಳೆಯವರಾಗಿಬಿಡುವ ಪರಿಗೆ ಅಚ್ಚರಿಗೊಳ್ಳುತ್ತಾ

ಯಾಕೂಬನ ವಿಚಾರಣೆ ಸರಿಯಾಗಿ ನಡೆಯಲಿಲ್ಲ ಎಂದು ಈಗ ಹೇಳಿದರೆ ಅದಕ್ಯಾವ ಅರ್ಥವೂ ಇರುವುದಿಲ್ಲ. ನ್ಯಾಯಲಯಗಳು ಸಾಕ್ಷ್ಯಾಧಾರಗಳ ಮೇಲೆ ಕಾರ್ಯನಿರ್ವಹಿಸುತ್ತವೆ, ಆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕಾದ ಪೋಲೀಸರು ಧರ್ಮದಾಟಕ್ಕೆ, ರಾಜಕೀಯಕ್ಕೆ ಒಳಪಟ್ಟಿರುತ್ತಾರೆ ಎನ್ನುವುದು ಸುಳ್ಳಲ್ಲ. ಮುಸ್ಲಿಂ ಉಗ್ರರ ವಿಷಯವಾಗಿ ತೋರುವ ಉತ್ಸಾಹ ಹಿಂದೂ ಉಗ್ರರ ಬಗ್ಗೆ ತೋರಿಸುವುದಿಲ್ಲ ಎನ್ನುವುದು ಸತ್ಯ. ಯಾಕೂಬ್ ಗಲ್ಲಿಗೇರಿದ ದಿನವೇ ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಾಬು ಭಜರಂಗಿ ಜಾಮೀನಿನ ಮೇಲೆ ಹೊರಬರುತ್ತಾರೆ. ಬಾಬು ಭಜರಂಗಿ ತೆಹೆಲ್ಕಾ ಸಂಸ್ಥೆಯ ಕಳ್ಳ ಕ್ಯಾಮೆರಾಗಳ ಮುಂದೆಯೇ ಹತ್ಯಾಕಾಂಡ ನಡೆಸಿದ್ದನ್ನು ಒಪ್ಪಿಕೊಂಡಿದ್ದ. ಆತನಿಗೆ ಸಿಕ್ಕಿದ್ದು ಜೀವಾವಧಿ ಶಿಕ್ಷೆಯೇ ಹೊರತು ಮರಣದಂಡನೆಯಲ್ಲ. ಸರಕಾರೀ ಯಂತ್ರ ಅಪರಾಧಿಗಳ ಪರ ವಹಿಸಿದರೆ ನ್ಯಾಯದಾನದಲ್ಲಿ ಏರುಪೇರಾಗುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಮಲೇಗಾಂವ್, ಅಜ್ಮೀರದಲ್ಲಿ ಬಾಂಬ್ ಸ್ಪೋಟಿಸಿದ ಹಿಂದೂ ಉಗ್ರರಿದ್ದಾರೆ. ‘ನೋಡಿ ನೋಡಿ ಹಿಂದೂ ಉಗ್ರರಿಗೆ ಶಿಕ್ಷೆಯೇ ಆಗಿಲ್ಲ. ಯಾಕೂಬನಿಗೆ ಯಾಕೆ ಶಿಕ್ಷೆಯಾಗಬೇಕು?’ ಎಂಬ ಪ್ರಶ್ನೆ ಕೇಳುವುದು ಕೂಡ ಮೂರ್ಖತನ. ಯಾಕೂಬ್ ಅಪರಾಧಿ, ಅವನಿಗೆ ಶಿಕ್ಷೆಯಾಗಲಿ; ಉಳಿದ ಅಪರಾಧಿಗಳಿಗೂ ಶಿಕ್ಷೆಯಾಗಲಿ ಎನ್ನುವುದು ನ್ಯಾಯಪರ. ಆ ರೀತಿ ಆಗುತ್ತಿಲ್ಲ ಎನ್ನುವುದು ಸತ್ಯವೇ ಆದರೂ ಒಬ್ಬ ಅಪರಾಧಿಗೆ ಶಿಕ್ಷೆಯಾಗದ ಕಾರಣಕ್ಕೆ ಮತ್ತೊಬ್ಬನ ಅಪರಾಧವನ್ನು ಸಮರ್ಥಿಸುವುದು ಸಲ್ಲದು.

ಈ ಗೋಡ್ಸೆ, ಅಫ್ಜಲ್, ಯಾಕೂಬ್, ಸಾಧ್ವಿ ಪ್ರಜ್ಞಾ, ಲೆ. ಶ್ರೀಕಾಂತ್ ಕುಲಕರ್ಣಿಯಷ್ಟೇ ಅಪಾಯಕಾರಿಯಾದ ಜನರೆಂದರೆ ಇಂತಹ ಅಪರಾಧಿಗಳಲ್ಲಿ ಕೆಲವರನ್ನು ಬೆಂಬಲಿಸಿ ಕೆಲವರನ್ನು ವಿರೋಧಿಸಿ ಅತ್ಯುಗ್ರ ರೀತಿಯಲ್ಲಿ ಪ್ರಚಾರ ಕೊಡುವ ನೆಟ್ಟಿಗರು. ಸುಮ್ಮನೆ ಗಮನಿಸುತ್ತಾ ಹೋದರೆ ಯಾಕೂಬನನ್ನು ವಿರೋಧಿಸುವವರು, ಅವನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಫೋಟೋಗಳನ್ನು ಹಂಚಿಕೊಂಡು shame on them ಎಂದು ಅಬ್ಬರಿಸಿದವರು ಅಪ್ಪಟ ದೇಶಪ್ರೇಮಿಗಳಂತೆ ಪೋಸು ಕೊಡುತ್ತಾರೆ, ಅವರ ಹಿಂದಿನ ಪೋಸ್ಟುಗಳನ್ನು ನೋಡಿದರೆ ಗೋಡ್ಸೆ, ಸಾಧ್ವಿಯನ್ನು ಸಮರ್ಥಿಸಿಕೊಂಡಿರುತ್ತಾರೆ! ಇನ್ನು ಸಾಧ್ವಿಯಂತವರಿಗೆ ಶಿಕ್ಷೆಯಾಗಲೇಬೇಕು ಎಂದು ನ್ಯಾಯಪರವಾಗಿ ಕೂಗುತ್ತಿದ್ದವರು ಇದ್ದಕ್ಕಿದ್ದಂತೆ ಯಾಕೂಬನ ಪರವಾಗಿ ಮಾತನಾಡಿಬಿಡುತ್ತಾರೆ! ಗೋಡ್ಸೆ ಯಾಕೂಬನಂತಹ ಅಪರಾಧಿಗಳು ಹುಟ್ಟುವುದಕ್ಕೆ ಇಂತಹ ಎರಡಲಗಿನ ನಾಲಗೆಯ ಜನರೂ ಕಾರಣ ಎಂಬುದನ್ನು ಮರೆಯಬಾರದು.

ಇನ್ನು ಮರಣದಂಡನೆ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಒಂದು ಮರಣದಂಡನೆ ಜಾರಿಯಾದಾಗಲೆಲ್ಲ ಹುಟ್ಟುತ್ತದೆ. ಕಸಬ್ ನನ್ನು ನೇಣಿಗೇರಿಸಿದಾಗ ಮರಣದಂಡನೆಯೆಂಬ ಶಿಕ್ಷೆಯಿಂದ ಅಪರಾಧಗಳು ಕಡಿಮೆಯಾಗುತ್ತದೆಯಾ ಎಂದು ಬರೆದಿದ್ದ ನೆನಪು. ಅದು ಬರೆದು ಮುಗಿಸುತ್ತಿದ್ದಂತೆ ಆ ರೀತಿಯ ದಿಢೀರ್ ಬರವಣಿಗೆಯ ನಿರರ್ಥಕತೆಯ ಅರಿವಾಗಿತ್ತು. ಮರಣದಂಡನೆ ಜಾರಿಯಾಗುವಾಗ ಅದರ ಅನುಪಯೋಗದ ಬಗ್ಗೆ ಚರ್ಚೆ ಮಾಡಿ ನಂತರ ಮತ್ತೆ ಮರೆತುಬಿಡುವುದು ಯಾವ ಸಂಭ್ರಮಕ್ಕೆ? ಮರಣದಂಡನೆ ಬಗ್ಗೆ ಚರ್ಚೆಯಾಗಬೇಕಾಗಿರುವುದು ಯಾವ ಮರಣದಂಡನೆಯೂ ನಡೆಯದ ಸಂದರ್ಭದಲ್ಲಿ ಈಗಲ್ಲ ಅಲ್ಲವೇ?

ಕೊಂಚ ದೀರ್ಘವಾಗಿರುವ ಲೇಖನವನ್ನು ಕೊನೆಯವರೆಗೂ ಓದಿರುವಿರಾದರೆ ಧನ್ಯವಾದ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.