Nov 20, 2012

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ....


ಡಾ ಅಶೋಕ್ ಕೆ ಆರ್
 
‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

          ‘ಮರಾಠಿ ಮಾನೂಸ್’ ಸೃಷ್ಟಿಸಿ ಅದರ ಬೆಂಕಿಯಲ್ಲೇ ರಾಜಕೀಯದಾಟವಾಡಿದ, ಹಿಂದೂ ಮುಸ್ಲಿಮರ ದ್ವೇಷ ಹೆಚ್ಚಳಕ್ಕೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಯೊಬ್ಬ ಇಂದು ರಾಷ್ಟ್ರನಾಯಕರಂತೆ, ದೇಶಭಕ್ತನಂತೆ ಚಿತ್ರಿಸಲ್ಪಡುತ್ತಿದ್ದಾರೆ. ಶಿವಸೇನೆಯ ಕಟ್ಟರ್ ಹಿಂದುತ್ವದ ಬೆಂಬಲಿಗರು ಠಾಕ್ರೆಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ತೋರಿಸುತ್ತ ಆತ ಒಬ್ಬ ಮಹಾನ್ ನಾಯಕನೇ ಹೌದು ಎಂದ್ಹೇಳಬಹುದು. ಹಿಟ್ಲರನಿಗೂ ಅಪಾರ ಸಂಖ್ಯೆಯ ಬೆಂಬಲಿಗರಿದ್ದರು ಮತ್ತು ಬಾಳ ಠಾಕ್ರೆ ಸಂದರ್ಶನಗಳಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದೂ ಇದೆ!

          ಇರಲಿ; ಕೊನೇ ಪಕ್ಷ ಬಾಳ ಠಾಕ್ರೆಯ ಶವಯಾತ್ರೆಯಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕೆ ಸಶಕ್ತ ಕಾರಣವಾದರೂ ಇದೆ. ಮರಾಠಿಗರಿಗೇ ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೆಲಸ ಸಿಗಬೇಕು ಎಂದು ಹೋರಾಟ ಮಾಡುವಲ್ಲಿ ಶಿವಸೇನೆಯ ಪಾತ್ರ ಹಿರಿದು[ತಮ್ಮ ಪಕ್ಷವೇ ಅಧಿಕಾರದಲ್ಲಿದ್ದಾಗ ‘ಮರಾಠಿಗರಿಗಷ್ಟೇ ಕೆಲಸ’ ಎಂಬ ತತ್ವವನ್ನು ಮರೆತ ಆರೋಪವೂ ಶಿವಸೇನೆಗಿದೆ]. ಅಂತರ್ಜಾಲದಲ್ಲಿ ಅನೇಕ ಕನ್ನಡಿಗರು ಠಾಕ್ರೆಯನ್ನು ಹಿಂದೂ ಧರ್ಮ ರಕ್ಷಕನೆಂದು ಹೊಗಳುತ್ತ, ‘ಅಯ್ಯೋ ಇಂಥ ವ್ಯಕ್ತಿ ಸತ್ತುಹೋದರಲ್ಲ’ ಎಂದು ವಿಷಾದಿಸುತ್ತಿದ್ದಾರೆ. ಇಂಥ ಒಬ್ಬ ನಾಯಕ ನಮ್ಮ ಕರ್ನಾಟಕದಲ್ಲಿ ಇಲ್ಲವಲ್ಲ ಎಂದು ಹಲಬುತ್ತಿರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಹೋಗಲಿ ಈ ನೆಟ್ಟಿಗರಿಗೆ ಠಾಕ್ರೆ ಕನ್ನಡಿಗರ – ಕರ್ನಾಟಕದ ವಿಚಾರವಾಗಿ ಯಾವ ಮನಸ್ಥಃತಿ ಹೊಂದಿದ್ದರು ಎಂಬುದು ತಿಳಿದಿಲ್ಲವೇನೋ ಎಂದುಕೊಳ್ಳಬಹುದು. ಆದರೆ ‘ಏಕ್ ಥಾ ಟೈಗರ್, ವಿಶ್ರಮಿಸಿದ ಹುಲಿ’ ಎಂದೆಲ್ಲ ಹೆಡ್ಡಿಂಗುಗಳನ್ನು ನೀಡುವ ಅನಿವಾರ್ಯತೆಯೇನಿತ್ತು ನಮ್ಮ ಕನ್ನಡ ಪತ್ರಿಕೆಗಳಿಗೆ? ಬಾಳ ಠಾಕ್ರೆಯ ಶಿವಸೇನೆ ಮೊದಮೊದಲು ಪ್ರವರ್ಧಮಾನಕ್ಕೆ ಬಂದಿದ್ದೇ ಗುಜರಾತಿ ವ್ಯಾಪಾರಿಗಳು ಮತ್ತು ಕನ್ನಡಿಗ ಕೆಲಸಗಾರರ ಮೇಲೆ ಹಲ್ಲೆ ನಡೆಸುವ ಮೂಲಕ. ಅದೆಲ್ಲ ಅರವತ್ತು ಎಪ್ಪತ್ತರ ದಶಕದ ಮಾತಾಯಿತು ಬಿಡಿ ಎಂದು ತಳ್ಳಿಹಾಕುವ ಹಾಗೂ ಇಲ್ಲ. ಬೆಳಗಾವಿ ವಿಷಯವಾಗಿ ಪದೇ ಪದೇ ವಿಷಕಾರುವುದರಲ್ಲಿ ಠಾಕ್ರೆಯದು ಎತ್ತಿದ ಕೈ. ಕನ್ನಡಿಗರನ್ನು ಹಾವುಗಳೆಂದು ಕರೆದು, ಮರಾಠಿಗರಿಗೆ ಕರ್ನಾಟಕದಲ್ಲಿ ಬದುಕುವ ಅವಕಾಶವೇ ಇಲ್ಲ ಎಂದು ಹುಯಿಲೆಬ್ಬಿಸುತ್ತ, ಕರ್ನಾಟಕ ಸರಕಾರವನ್ನು ವಜಾ ಮಾಡಬೇಕೆಂದು ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳುವವರೆಗೆ ಅವರಿಗೆ ಕರ್ನಾಟಕದ ಬಗ್ಗೆ ಅಸಹನೆಯಿತ್ತು. ಇಂಥ ವ್ಯಕ್ತಿಯನ್ನು ದೇವರನ್ನಾಗಿಸುತ್ತಿರುವ ಕನ್ನಡಿಗರ ಮನಸ್ಥಃತಿಗೆ ಅಚ್ಚರಿಪಡದಿರಲಾದೀತೆ?

ಮರಾಠಿಗರನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯದ ಜನರನ್ನು ದ್ವೇಷಿಸುತ್ತಿದ್ದ ಬಾಳ ಠಾಕ್ರೆಯವರನ್ನು ‘ದೇಶಭಕ್ತ’ನೆಂಬಂತೆ ಚಿತ್ರಿಸುವುದಾದರೂ ಯಾಕೆ? ಮುಂಬೈಗೆ ಇತರ ರಾಜ್ಯಗಳ ಜನರು ವೀಸಾ ಪಡೆದು ಬರುವಂತಾಗಬೇಕು ಎಂದು ಹೇಳಿದ, ಒಂದು ಕಾಲದಲ್ಲಿ ಪರರಾಜ್ಯದ ವರ್ತಕರಿಂದ ‘protection money’ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಾಷ್ಟ್ರನಾಯಕನೆಂದು ಕರೆಯಲಾದೀತೆ? ಸತ್ತವರು ಯಾರೇ ಇರಲಿ, ಅವರ ಮತ – ಪಂಥ – ತತ್ವ ಸಿದ್ದಾಂತಗಳನ್ನು ನೋಡದೆ ವಿಷಾದಿಸಬೇಕಿರುವುದು ಮನುಷ್ಯ ಧರ್ಮ. ಅಷ್ಟರಮಟ್ಟಿಗಿನ ವಿಷಾದ ಠಾಕ್ರೆಯ ಸಾವಿನೆಡೆಗೂ ಇರಲಿ. ಆದರೆ ಈ ಪರಿಯ ಹೊಗಳಿಕೆ?! ‘ಹುಲಿ’ ಕೂಡ ನಗುತ್ತಿರಬೇಕು.
article that was published in nilume

1 comment:

 1. ಸ್ವಾಮಿ ನಿಮ್ಮ ವಿಷಾದಕ್ಕೆ ಖಂಡಿತ ಅರ್ಥವಿದೆ ! ಸ್ವಲ್ಪ ನಿಧಾನವಾಗಿ ನನ್ ಮಾತ್ನ ಓದಿ !

  'ಆಪ್ ನೆ ಮೇರಿ ಮುಹ್ ಕಿ ಬಾತ್ ಛೀನ್ಲಿ', ಎನ್ನುವ ಹಿಂದಿ ಭಾಷೆಯ ಸಾಲನ್ನು/ಮಾತನ್ನು ಸ್ಮರಿಸೋಣ ! ಆದರೆ ಇದರ ಹಿನ್ನೆಲೆಯಲ್ಲಿ ನಾವು ಪಾಠ ಕಲಿಯಬೇಕಾದ ಸಮಯ ಬಂದಿದೆ !

  1. ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.
  ನನ್ನ ಉತ್ತರ :
  ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಅದಕ್ಕಾಗಿಯೆ ನಾವು ಮತ್ತು ಮಹಾತ್ಮರೂ ಹೋರಾಡಿದ್ದು ; ನೀವೂ ಹೇಳಿ ನಾವೂ ಹೇಳೋಣ !
  ಜರ್ಮನಿ ಜನ ಹಿಟ್ಲರ್ ಮಾತ್ನ ಒಪ್ಪಕ್ಕಿಟ್ ಕೊಂಡು ಮೆರೆದರು. ಜರ್ಮನಿ ಚಿಂದಿ ಎದ್ದು, ಪ್ರಪಂಚಾನೆ ಅವರ್ನ ದ್ವೇಷ ಮಾಡಿದಮೇಲೆ ಮಣ್ಣು ಮುಕ್ಕಿದಾಗ ಅವ್ರಿಗೆ ಅದರ ಅರ್ಥ ಆಗಿ ಈಗ ಹಿಟ್ಲರ್ ಹೆಸರ್ ಕೂಡ ಹೇಳಲ್ಲ ಅಲ್ವೇ ?
  2. ಬಾಳ ಠಾಕ್ರೆಯ ಶಿವಸೇನೆ ಮೊದಮೊದಲು ಪ್ರವರ್ಧಮಾನಕ್ಕೆ ಬಂದಿದ್ದೇ ಗುಜರಾತಿ ವ್ಯಾಪಾರಿಗಳು ಮತ್ತು ಕನ್ನಡಿಗ ಕೆಲಸಗಾರರ ಮೇಲೆ ಹಲ್ಲೆ ನಡೆಸುವ ಮೂಲಕ. ಅದೆಲ್ಲ ಅರವತ್ತು ಎಪ್ಪತ್ತರ ದಶಕದ ಮಾತಾಯಿತು ಬಿಡಿ ಎಂದು ತಳ್ಳಿಹಾಕುವ ಹಾಗೂ ಇಲ್ಲ. ಬೆಳಗಾವಿ ವಿಷಯವಾಗಿ ಪದೇ ಪದೇ ವಿಷಕಾರುವುದರಲ್ಲಿ ಠಾಕ್ರೆಯದು ಎತ್ತಿದ ಕೈ. ಕನ್ನಡಿಗರನ್ನು ಹಾವುಗಳೆಂದು ಕರೆದು, ಮರಾಠಿಗರಿಗೆ ಕರ್ನಾಟಕದಲ್ಲಿ ಬದುಕುವ ಅವಕಾಶವೇ ಇಲ್ಲ ಎಂದು ಹುಯಿಲೆಬ್ಬಿಸುತ್ತ, ಕರ್ನಾಟಕ ಸರಕಾರವನ್ನು ವಜಾ ಮಾಡಬೇಕೆಂದು ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳುವವರೆಗೆ ಅವರಿಗೆ ಕರ್ನಾಟಕದ ಬಗ್ಗೆ ಅಸಹನೆಯಿತ್ತು. ಇಂಥ ವ್ಯಕ್ತಿಯನ್ನು ದೇವರನ್ನಾಗಿಸುತ್ತಿರುವ ಕನ್ನಡಿಗರ ಮನಸ್ಥಃತಿಗೆ ಅಚ್ಚರಿಪಡದಿರಲಾದೀತೆ?
  ನನ್ನ ಉತ್ತರ :
  ಇನ್ನ ಮೇಲೆ ಬೆಳಗಾವಿ ವಿಷಯ ಬರೋದೆ ಇಲ್ಲ. ಇದರ ಬಗ್ಗೆ ಯಾವ ಮರಾಠಿ ಮನುಷ್ಯನಿಗೂ ಗೊತ್ತಿಲ್ಲ. ಬಾಳ್ ಠಾಕ್ರೆ ತನ್ನ ಜೋಬ್ನಲ್ಲಿ ಈ ಮುದ್ದೆನ ಇಟ್ಕೊಂಡಿದ್ದ. ಬೇರೆ ಯೇನು ಇಲ್ಲದಿದ್ದಾಗ ಈ ವಿಷ್ಯ ತೊಗೊಂಡು ಬೆಳಗಾಂ ಜನನ ಭಡಕಾಯ್ಸ್ತಿದ್ದ ! ಇದರ ಚಿಂತೆ ಇನ್ನು ಮುಂದೆ ಬೇಡ !
  ಮರಾಠಿಗರಲ್ಲಿ ಯಾರು ಸಹಾಯ ಪಡೆದರೋ ಅವರು ತಮ್ಮ ಕೃತಜ್ಞತೆಯನ್ನು ಹೀಗೆ ತೋರಿಸುತ್ತಿದ್ದಾರೆ. ಅದು ಸರಿಯಲ್ಲವೇ ? ಕನ್ನಡದೊರ್ನ ಹಸುಗಳು ಅಂತ ಕರಿಬೋದು. ಏಟು ತಿನ್ನಕ್ಕೆ ಹುಟ್ಟಿದಾರೆ. ಈಗ ಅವರು ತಮಿಳ್ನೋರ ದೇಶಪ್ರೇಮ, ಮರಾಠಿಗರ ಜಗಳಗಂಟಿತನ, ಬಂಗಾಲಿಗಳ ಜಾಣತನ, ಕೆರಳದೋರ ಸ್ವಂತ ಉರ್ಬಿಟ್ಟು ಎಲ್ಲಂದ್ರಲ್ಲಿ ಜೀವನ ಮಾಡೋ ಗಟ್ಟಿತನ ಕೊನೆಗೆ ಎಲ್ಲಾ ಸರಿಹೊದ್ಮೇಲೆ ನಮಗ್ಯಾಕ್ ಬೇಕಪ್ಪ ನಾನಾಯ್ತು ನಮ್ಮ ಮನೆಆಯ್ತು ಅನ್ನೋ ತಂಪುತನ ಇದ್ರೆ ಬದಕ್ತಾರೆ (ಇದು ಕನ್ನಡದ್ದೋರ ತನ) ಅನ್ನಬಹುದೇ ?

  3.ಮರಾಠಿಗರನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯದ ಜನರನ್ನು ದ್ವೇಷಿಸುತ್ತಿದ್ದ ಬಾಳ ಠಾಕ್ರೆಯವರನ್ನು ‘ದೇಶಭಕ್ತ’ನೆಂಬಂತೆ ಚಿತ್ರಿಸುವುದಾದರೂ ಯಾಕೆ? ಅದು ಖಂಡಿತ ತಪ್ಪು ಅದನ್ನು ಪುರಸ್ಕರಿಸಿದರೆ ಹುಲಿಯನ್ನು ಮನೆಗೆ ಆಹ್ವಾನಿಸಿದಂತೆ. ಅದನ್ನು ದೂರ ಇದುವುದರಲ್ಲೇ ಕ್ಷೇಮ. ಅಲ್ಲವೇ ?
  ನನ್ನ ಉತ್ತರ :
  ಇದು ತಪ್ಪು ; ಮಹಾತಪ್ಪು. ಖಂಡಿತ ಮರಾಥಿ ಜನ ಇದನ್ನ ಹೇಗೆ ಹೇಳಿಯಾರು ? ನಾವೇ ನೋಡೋಣ 55 ವರ್ಷಗಳ ಹಿಂದೆ ನಾನು ಮುಂಬೈ ಗೆ ಬಂದಾಗ ಮರಾಥಿ ಜನ ಮಿಲ್ ನಲ್ಲಿ ಕಾರ್ಮಿಕರು ಮತ್ತು ಎಲ್ಲರ ಮನೆ ಪಾತ್ರೆ ತೊಳಿಯೋ ಕೆಲಸ ಮಾಡ್ತಿದ್ರು. ಇಂದು ಬಾಲಥಾಕ್ರೆ ಪ್ರಕಾದನೆಯಿಮ್ದ ಒಳ್ಳೊಳ್ಳೆ ಕೆಲಸಗಳಲ್ಲಿ ಮುಮ್ದುವರಿತಿದಾರೆ ಅದು ಸರಿಯಲ್ಲವೇ. ಈ ನಿಟ್ಟಿನಲ್ಲಿ ಯಾರು ನಮಗೆ ಸಹಾಯ ಮಾಡ್ತಿದಾರಪ್ಪ ? ವಾಥಾಲ್ ನಾಗರಾಜ್ ಎಲ್ಲಿದ್ದಾನೆ ಎನ್ಮಾಡ್ತಾನೆ ದೇವ್ರೇ ಬಲ್ಲ. ಇದನ್ನ ಅರ್ಥ ಮಾಡ್ಕೊಂಡು, ತಿಳ್ಕೊಳ್ಳೋ ಬುದ್ಧಿ ಅವನಿಗಿದೆಯೇ ?
  4. ಅಷ್ಟರಮಟ್ಟಿಗಿನ ವಿಷಾದ ಠಾಕ್ರೆಯ ಸಾವಿನೆಡೆಗೂ ಇರಲಿ. ಆದರೆ ಈ ಪರಿಯ ಹೊಗಳಿಕೆ?! ‘ಹುಲಿ’ ಕೂಡ ನಗುತ್ತಿರಬೇಕು.
  ನನ್ನ ಉತ್ತರ :
  ಸರಿ. ನಮ್ಮ ಕನ್ನಡಿಗರಿಗೆ ಇದರಿಂದ ನಮ್ಮಂತಹ ಮೂರ್ಖ ಬುದ್ಧಿ ಬಂದರೆ ಒಳ್ಳೆಯದು.

  ReplyDelete