Jul 29, 2015

ಸಂಕಟದ ಸ್ವಾತಂತ್ರ್ಯ

Dr Ashok K R
ಕಾರಣವೇನೋ ಗೊತ್ತಿಲ್ಲ Freedom at Midnight ಪುಸ್ತಕ ನೆಹರೂ ಬರೆದ ಪುಸ್ತಕವೆಂದೇ ವರುಷಗಳಿಂದ ನಂಬಿದ್ದೆ. ಆಂಗ್ಲ ಪುಸ್ತಕವನ್ನು ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವ ಎಚ್.ಆರ್.ಚಂದ್ರವದನ ರಾವರ ಪುಸ್ತಕವನ್ನು ಕೈಗೆತ್ತಿಕೊಂಡಾಗಲೇ ಅರಿವಾಗಿದ್ದು Freedom at Midnight ಬರೆದವರು ಎಲ್.ಕಾಲಿನ್ಸ್ ಮತ್ತು ಡಿ.ಲ್ಯಾಪೈರ್ ಎಂದು! ಇದು ಅನುವಾದದ ಪುಸ್ತಕವೆಂದು ತಿಳಿಯದಷ್ಟು ಸಶಕ್ತವಾಗಿದೆ. ಭಾರತದ ಸ್ವಾತಂತ್ರ್ಯದ ಮತ್ತು ವಿಭಜನೆಯ ಹಿಂದು ಮುಂದಿನ ಘಟನೆಗಳ ಪುಸ್ತಕವಿದು.

ಪುಸ್ತಕ ಪ್ರಾರಂಭವಾಗುವುದು ಇಂಗ್ಲೆಂಡಿನಲ್ಲಿ ಭಾರತಕ್ಕೆ ಹೊಸ ವೈಸ್ ರಾಯ್ ಆಗಿ ಮೌಂಟ್ ಬ್ಯಾಟನ್ ನೇಮಕವಾಗುವುದರೊಂದಿಗೆ. ಇಂಗ್ಲೆಂಡಿನವರ ಮನದಲ್ಲಿ ಅತಿ ದೊಡ್ಡ ದೇಶವಾದ ಭಾರತದ ವೈಸ್ ರಾಯ್ ಆಗುವುದೆಂದರೆ ಹೆಮ್ಮೆಯ, ಸಂತಸದ ಸಂಗತಿ. ಮೌಂಟ್ ಬ್ಯಾಟನ್ನಿನಲ್ಲಿ ಆ ಸಂಭ್ರಮವಿಲ್ಲ. ಕಾರಣ ಆತ ನಿಯತಿಗೊಂಡಿರುವುದು ಭಾರತವನ್ನು ಮತ್ತಷ್ಟು ವರುಷಗಳ ಕಾಲ ಆಳುವುದಕ್ಕಾಗಲ್ಲ; ಭಾರತವನ್ನು ಸ್ವತಂತ್ರಗೊಳಿಸಿ ಬ್ರಿಟೀಷ್ ಸಾಮ್ರಾಜ್ಯವನ್ನು ಕೊನೆ ಮಾಡಲು. ಬ್ರಿಟೀಷರ ಒಡೆದು ಆಳುವ ನೀತಿಯ ಕಾರಣದಿಂದಾಗಿ ಭಾರತವೆಂಬುದು ಒಂದೇ ದೇಶವಾಗಿ ಉಳಿಯುವ ಸಾಧ್ಯತೆಗಳು ಕ್ಷೀಣವಾಗಿತ್ತು. ಮುಸ್ಲಿಂ ನಾಯಕತ್ವ ಪ್ರತ್ಯೇಕ ದೇಶಕ್ಕಾಗಿ ಪಟ್ಟು ಹಿಡಿದರೆ ಮೊದಮೊದಲಿಗೆ ವಿಭಜನೆಯನ್ನು ಒಪ್ಪದ ಕಾಂಗ್ರೆಸ್ಸಿಗರು ಅನಿವಾರ್ಯವಾಗಿ ಒಪ್ಪಿಬಿಟ್ಟರು, ಒಬ್ಬ ಗಾಂಧಿಯ ಹೊರತಾಗಿ.

ಬೂಟಾಸಿಂಗನೆಂಬ ಅಮರ ಪ್ರೇಮಿ

ನಡುರಾತ್ರಿಯಲ್ಲಿ ಸ್ವಾತಂತ್ರ್ಯದಲ್ಲಿ ರಾಜಕೀಯ ನಾಟಕಗಳು, ಗಾಂಧಿ, ಜಿನ್ನಾ, ನೆಹರೂ, ಸರ್ದಾರ್ ಪಟೇಲರ ವ್ಯಕ್ತಿ ಚಿತ್ರಣಗಳು, ಸ್ವಲ್ಪ ಹೆಚ್ಚೇ ಎನ್ನಿಸುವಂತಹ ಮೌಂಟ್ ಬ್ಯಾಟನ್ ಮತ್ತಾತನ ಪತ್ನಿಯ ಹೊಗಳಿಕೆ, ರಾಜ ಮಹಾರಾಜರ ಚಿತ್ರ ವಿಚಿತ್ರವೆನ್ನಿಸುವ ಅಭ್ಯಾಸಗಳೆಲ್ಲವೂ ದಾಖಲಾಗಿವೆ. ರಾಂಪುರದ ನವಾಬ ವರುಷಕ್ಕಿಷ್ಟು ಕನ್ಯೆಯ ಕನ್ಯಾಪೊರೆ ಕಳಚುತ್ತೇನೆ ಎಂದು ಪಂದ್ಯ ಕಟ್ಟುತ್ತಿದ್ದನಂತೆ, ಕಾಶ್ಮೀರದ ಮಹಾರಾಜ ಹರಿಸಿಂಗ್ ಲಂಡನ್ನಿನ ಸ್ತ್ರೀ ಸಹವಾಸದಿಂದ ಬೊಕ್ಕಸದ ಹಣ ಖಾಲಿ ಮಾಡಿದನಂತೆ, ಮಾತು ಕೇಳದ ಕುದುರೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಆಳ್ವರ್ ಮಹಾರಾ….. ಇಂತಹ ರಾಜಮಹಾರಾಜರಿದ್ದ ಭಾರತವನ್ನು ಕೆಲವು ಸಾವಿರ ಸಂಖೈಯ ಬ್ರಿಟೀಷರು ಶತಮಾನಗಳ ಕಾಲ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದು ಅಚ್ಚರಿ ಪಡಬೇಕಾದ ವಿಷಯವೇನಲ್ಲ.

ಸ್ವಾತಂತ್ರ್ಯಕ್ಕೆ ಮುನ್ನವೇ ಉತ್ತರ ಭಾರತದಲ್ಲಿ ಹಿಂದೂ – ಮುಸ್ಲಿಂ ಕೋಮುದಳ್ಳುರಿ ಹಬ್ಬಲಾರಂಭಿಸಿತ್ತು. ಕಲ್ಕತ್ತಾದ ಕೋಮುಗಲಭೆಯನ್ನು ಶಮನಗೊಳಿಸಲು ಗಾಂಧಿ ಬರಬೇಕಾಯಿತು. ಗಾಂಧೀಜಿಯವರ ವ್ಯಕ್ತಿತ್ವದ ದಿಗ್ದರ್ಶನವಾಗುವುದು ಇಂತಹ ಸಂದರ್ಭದಲ್ಲೇ. ಯಾರಿಂದಲೂ ನಿಯಂತ್ರಿಸಲಾಗದು ಎನ್ನಿಸುವ ಸನ್ನಿವೇಶಗಳಲ್ಲೂ ತಮ್ಮ ಅಹಿಂಸೆಯ ತತ್ವದಿಂದಲೇ ನಿಯಂತ್ರಿಸಿಬಿಡುವ, ಜನರ ಮನಃಪರಿವರ್ತನೆ ಮಾಡುವ ಮತ್ತೊಬ್ಬ ನಾಯಕನನ್ನು ಕಾಣುವುದು ಕಷ್ಟ. ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ಗಾಂಧೀಜಿಯವರ ಹುಳುಕುಗಳನ್ನು ತೋರಿಸುತ್ತದೆ, ಹಿರಿಮೆಯನ್ನೂ ಚಿತ್ರಿಸುತ್ತದೆ. ಈ ಪುಸ್ತಕ ಓದಿದ ನಂತರ ಗಾಂಧಿಯನ್ನು ಮತ್ತಷ್ಟು ಪ್ರೀತಿಸಲು ಕಾರಣ ಸಿಗುತ್ತದೆ, ಮಗದಷ್ಟು ದ್ವೇಷಿಸಲೂ ನೆಪಗಳು ಸಿಗುತ್ತವೆ!

ವಿಭಜನೆಯೇ ಕೊನೆಯ ತೀರ್ಮಾನವಾದ ನಂತರ ಅದು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಗಡಿಯ ಭಾಗದಲ್ಲಿ ನಡೆದಿದ್ದು ಹಿಂಸೆ ಹಿಂಸೆ ಮತ್ತು ಹಿಂಸೆ. ರೈಲುಗಳು ನಿರಾಶ್ರಿತರ ದುಃಖ ದುಮ್ಮಾನಗಳನ್ನು ಹೊತ್ತು ತರುತ್ತಿದ್ದಂತೆ ಗಡಿಯಿಂದ ದೂರವಿದ್ದ ಪಟ್ಟಣಗಳಲ್ಲೂ ಹಿಂಸೆ ತಾಂಡವವಾಡತೊಡಗಿತು. ನಿರಾಶ್ರಿತರ ಶಿಬಿರದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ನಡುವೆ ನಿಂತು ಅಹಿಂಸಾಧರ್ಮದ ಬಗ್ಗೆ ತಿಳಿಹೇಳುವ ಆತ್ಮಸ್ಥೈರ್ಯ ಗಾಂಧೀಜಿಗಷ್ಟೇ ಇರಲು ಸಾಧ್ಯ. ನಿರಾಶ್ರಿತರ, ದೇಶವಾಸಿಗಳ ಟೀಕಾಸ್ತ್ರಗಳು ಅವರ ಸತ್ಯವನ್ನು ಮಾರ್ಪಡಿಸಲಿಲ್ಲ.

ವಿಭಜನೆಯ ಸಮಯದಲ್ಲಿ ಮನುಷ್ಯರೆಂಬುದನ್ನೇ ಮರೆತು ವರ್ತಿಸಿದ ಜನರ ನಡುವೆ ಪ್ರಾಣದ ಹಂಗು ತೊರೆದು ಅನ್ಯಧರ್ಮದವರನ್ನು ಕಾಪಾಡಿದವರ ಕಥೆಯಿದೆ. ಅಂತಹವರ ಸಂಖೈ ಕಡಿಮೆಯಿತ್ತಷ್ಟೇ. ಹುಟ್ಟುತ್ತಲೇ ಭಾರತದ ಮೇಲೆ ದ್ವೇಷ ಸಾಧಿಸಲಾರಂಭಿಸಿದ ಪಾಕಿಸ್ತಾನದ ಕುತಂತ್ರಗಳು, ಇಸ್ಲಾಂ ಮೂಲಭೂತವಾದಿಗಳ ಮತಿಗೇಡಿತನ ಇಂದಿಗೂ ಕೊನೆಗೊಂಡಿಲ್ಲ. ಹಿಂದೂ ಮೂಲಭೂತವಾದಿಗಳು ಜಿನ್ನಾನನ್ನು ಕೊಲ್ಲಲು ಪಾಕಿಸ್ತಾನಕ್ಕೆ ತೆರಳಿ ಕಾರ್ಯ ಸಫಲವಾಗದೇ ವಾಪಸ್ಸಾಗುವ ಘಟನೆಯ ವಿವರಗಳಿವೆ. ಕೊನಗೆ ಅದೇ ಮೂಲಭೂತವಾದಿ ಮನಸ್ಸುಗಳು ಗಾಂಧಿಯನ್ನು ಹತ್ಯೆಗೈಯ್ಯಲು ನಡೆಸಿದ ಸಿದ್ಧತೆಯ ವಿವರಗಳೆಲ್ಲವೂ ಪುಸ್ತಕದಲ್ಲಿದೆ. ಗಾಂಧಿ ಸತ್ತು ಅರವತ್ತೇಳು ವರುಷಗಳಾಗುವಷ್ಟರಲ್ಲಿ ಗಾಂಧಿ ಹಂತಕರನ್ನೇ ಪೂಜಿಸುವ ಹಂತಕ್ಕೆ ನಾವು ತಲುಪಿದ್ದೇವೆ! ವಿಭಜನೆಯ ಸಮಯದ ಘಟನೆಗಳನ್ನು ಮನಕಲುಕುವಂತಹ, ಚಿಂತನೆಗೆ ಹಚ್ಚುವಂತಹ, ಅಳಿದುಳಿದ ಮಾನವೀಯತೆಯನ್ನು ಬಡಿದೆಬ್ಬಿಸುವಂತಹ ಕತೆಯ ರೂಪದಲ್ಲಿ ಬರೆದಿದ್ದು ಸದತ್ ಹಸನ್ ಮಾಂಟೋ. ಅಷ್ಟೇ ಸಶಕ್ತವಾಗಿ ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ವಿಭಜನೆಯ ನೋವುಗಳನ್ನು ನಮಗೆ ದಾಟಿಸುತ್ತದೆ. ಪುಸ್ತಕ ಓದಿ ಮುಗಿಸುವಾಗ ಸ್ವತಂತ್ರಗೊಂಡ ಭಾರತದ ಸಂಭ್ರಮದ ನೆನಪಿಗಿಂತ ಸಂಕಟಗಳೇ ಕಾಡುತ್ತವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಹದಿನಾಲ್ಕರ ಮಧ್ಯರಾತ್ರಿ ಯಾವುದೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲವಂತೆ. ಸಂಕಟದ ಸ್ವಾತಂತ್ರ್ಯದಲ್ಲಿ ಸಂಭ್ರಮವೆಲ್ಲಿ?

No comments:

Post a Comment