Jul 9, 2015

ಬೂಟಾಸಿಂಗನೆಂಬ ಅಮರ ಪ್ರೇಮಿ...

freedom at midnight
ಇತ್ತೀಚೆಗಷ್ಟೇ ಓದಿ ಮುಗಿಸಿದ ಫ್ರೀಡಂ ಅಟ್ ಮಿಡ್ ನೈಟ್ ಪುಸ್ತಕದ ಕನ್ನಡಾನುವಾದ ನಡುರಾತ್ರಿಯಲ್ಲಿ ಸ್ವಾತಂತ್ರ್ಯಪುಸ್ತಕದಲ್ಲಿ ಮನಕಲಕಿದ ಪ್ರೇಮ ಕಥೆಯಿದು....
ಪ್ರೀತಿ ಎರಡು ವಿರುದ್ಧ ಮತಗಳ ಹಗೆತನವನ್ನು ಮೀರಬಲ್ಲದು ಎಂಬುದಕ್ಕೆ ಬೂಟಾಸಿಂಗ್ ನ ಜೀವನವೇ ಸಾಕ್ಷಿ.
ನಿರಾಶ್ರಿತರ ಶಿಬಿರದಿಂದ ಹಾರಿಸಿಕೊಂಡು ಬಂದಿದ್ದ ಜೆನಿಬ್ ಳನ್ನು ಒಂದು ಸಾವಿರದ ಐದು ನೂರು ರುಪಾಯಿಗೆ ಕೊಂಡು ಬೂಟಾಸಿಂಗ್ ಮದುವೆಯಾಗಿದ್ದ. ಹನ್ನೊಂದು ತಿಂಗಳ ನಂತರ ಅವರಿಗೆ ಒಂದು ಹೆಣ್ಣು ಮಗುವಾಯಿತು. ಸಿಖ್ ಸಂಪ್ರದಾಯದಂತೆ ಸಿಖ್ಖರ ಪವಿತ್ರಗ್ರಂಥ 'ಗ್ರಂಥ್ ಸಾಹೀಬ್' ಅನ್ನು ನೋಡಿ 'ತ'ಯಿಂದ ಶುರುವಾಗುವ ಹೆಸರಿಡಬೇಕೆಂದು ತನ್ನ ಮಗಳಿಗೆ 'ತನ್ವೀರ್' ಎಂದು ಹೆಸರಿಟ್ಟ ಬೂಟಾಸಿಂಗ್.
ಕೆಲವು ವರ್ಷಗಳು ಕಳೆಯಿತು. ಬೂಟಾಸಿಂಗ್ ನ ಇಬ್ಬರು ಸೋದರಳಿಯಂದಿರಿಗೆ ಆಸ್ತಿ ತಮಗೆ ಬಾರದೆ ಜೆನಿಬ್ ಳ ಪಾಲಾಯಿತೆಂದು ಹೊಟ್ಟೆಕಿಚ್ಚು ಬಂತು. ನಿರಾಶ್ರಿತರು ವಲಸೆ ಹೋಗುತ್ತಿರುವಾಗ ಹೆಂಗಸರನ್ನು ಅಪಹರಿಸಿಕೊಂಡು ಬಂದು ಅವರನ್ನು ಮಾರುತ್ತಲೋ ಮದುವೆಯಾಗುತ್ತಲೋ ಇದ್ದ ವಿಷಯ ಎರಡು ಸರ್ಕಾರಕ್ಕೂ ಗೊತ್ತಾಯಿತು. ಹೀಗೆ ಅಪಹರಿಸಿದ ಹೆಂಗಸರನ್ನು ಮದುವೆಯಾಗಿರಲಿ ಅಥವಾ ಆಗದೇ ಇರಲಿ ಅವರವರ ಸಂಸಾರಕ್ಕೆ ಹಿಂದಿರುಗಿಸಬೇಕೆಂದು ಎರಡು ರಾಷ್ಟ್ರಗಳು ಕರಾರು ಮಾಡಿಕೊಂಡವು. ಬೂಟಾಸಿಂಗನ ಹೆಂಡತಿ ಅಪಹರಿಸಲ್ಪಟ್ಟ ಮಹಿಳೆಯೆಂದು ಬೂಟಾಸಿಂಗನ ಸೋದರಳಿಯಂದಿರು ಸರ್ಕಾರಕ್ಕೆ ವರದಿ ಮಾಡಿದರು. ಅವಳನ್ನು ಪಾಕಿಸ್ತಾನದಲ್ಲಿರುವ ಅವಳ ಸಂಸಾರಕ್ಕೆ ಹಿಂದಿರುಗಿಸಬೇಕೆಂಬ ಒತ್ತಡ ಜಾಸ್ತಿಯಾಯಿತು. ಜೆನಿಬ್ ಳನ್ನು ಬೂಟಾಸಿಂಗನ ಮನೆಯಿಂದ ಎಳೆದುಕೊಂಡು ಹೋಗಿ, ಶಿಬಿರದಲ್ಲಿಟ್ಟು, ಪಾಕಿಸ್ತಾನಕ್ಕೆ ಕಳುಹಿಸುವ ಏರ್ಪಾಡು ಮಾಡಿದರು.
ಬೂಟಾ ಸಿಂಗ್ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ. ಅವಳನ್ನು ಕಳೆದುಕೊಳ್ಳುವುದಕ್ಕೆ ಅವನಿಗೆ ಸ್ವಲ್ಪವೂ ಇಷ್ಟವಿಲ್ಲ. ಸಿಖ್ಖರಿಗೆ ದುಷ್ಕರ ಎನಿಸುವ ಕೂದಲನ್ನು ಬೂಟಾಸಿಂಗ್ ಕತ್ತರಿಸಿಕೊಂಡ. ಇಸ್ಲಾಂ ಮತಕ್ಕೆ ಸೇರಿ ಜಮೀಲ್ ಅಹಮದ್ ಎಂದು ಹೆಸರಿಟ್ಟುಕೊಂಡ. ಮಗಳಿಗೆ 'ಸುಲ್ತಾನಾ' ಎಂದು ಹೆಸರು ಬದಲಾಯಿಸಿದ. ನಂತರ ಪಾಕಿಸ್ತಾನದ ಹೈಕಮಿಷನರ್ ಬಳಿ ಹೋಗಿ ತನ್ನ ಹೆಂಡತಿಯನ್ನು ತನಗೆ ಕೊಡಿಸಬೇಕಾಗಿ ಪ್ರಾರ್ಥಿಸಿದ. ಆದರೆ ಅವನ ಕೋರಿಕೆಯನ್ನು ಅಧಿಕಾರಿಗಳು ಮನ್ನಿಸಲಿಲ್ಲ. ಆರು ತಿಂಗಳು ಬೂಟಾಸಿಂಗ್ ತನ್ನ ಹೆಂಡತಿಯನ್ನು, 'ತಪ್ಪಿಸಿಕೊಂಡವರ ಶಿಬಿರಕ್ಕೆ' ನಿತ್ಯವೂ ಹೋಗಿ ನೋಡಿಕೊಂಡು ಬರುತ್ತಿದ್ದ. ಅವಳ ಪಕ್ಕ ಕುಳಿತು, ಅಳುತ್ತಾ ಸುಖದ ಕನಸು ಕಾಣುತ್ತಿದ್ದ.
ಪಾಕಿಸ್ತಾನದಲ್ಲಿ ಜೆಬಿಬ್ ಳ ಸಂಬಂಧಿಕರು ಎಲ್ಲಿದ್ದಾರೆಂದು ಗೊತ್ತಾಯಿತು. ಅವಳು ಅಲ್ಲಿಗೆ ಹೊರಟಳು. ಹೋಗುವುದಕ್ಕೆ ಮುಂಚೆ, 'ನಾನು ವಾಪಸ್ಸು ಬರುತ್ತೇನೆ. ನಿಮ್ಮ ಜೊತೆ ಇರುತ್ತೇನೆ' ಎಂದು ಹೇಳಿ ಅಳುತ್ತಾ 'ನಿಮ್ಮನ್ನು ಮರೆಯುವುದಿಲ್ಲ' ಎಂದು ಪ್ರತಿಜ್ಞೆ ಮಾಡಿ ಅವಳು ವಿದಾಯ ಹೇಳಿದಳು.
ಮುಸ್ಲಿಮನಾದ ಬೂಟಾ ಪಾಕಿಸ್ತಾನಕ್ಕೆ ವಲಸೆ ಹೋಗಲು ಅರ್ಜಿ ಸಲ್ಲಿಸಿದ. ಅದು ತಿರಸ್ತಾರವಾಯಿತು. ಪ್ರವಾಸಿಯಾಗಿ ಹೋಗಲೂ ಅವನಿಗೆ ಪರವಾನಗಿ ಸಿಗಲಿಲ್ಲ. ತನ್ನ ಮಗಳು ಸುಲ್ತಾನಳೊಡನೆ ಅವನು ಅನಧಿಕೃತವಾಗಿ ಗಡಿದಾಟಿದ. ಲಾಹೋರಿನಲ್ಲಿ ಮಗಳನ್ನು ಬಿಟ್ಟು ಹೆಂಡತಿ ಜೆನಿಬ್ ಇದ್ದ ಹಳ್ಳಿಗೆ ಹೋದ. ಅಲ್ಲಿ ಅವನಿಗೆ ಒಂದು ಆಘಾತ ಕಾದಿತ್ತು. ಅವನ ಹೆಂಡತಿ ಅವಳ ಬಂಧುವೊಬ್ಬರನ್ನು ಆಗಲೇ ಮದುವೆಯಾಗಿದ್ದಳು. ಬೂಟಾಸಿಂಗ್ ಅಳುತ್ತಾ ತನ್ನ ಪತ್ನಿಯನ್ನು ತನಗೆ ವಾಪಸ್ಸು ಮಾಡಿ ಎಂದ. ಜೆನಿಬ್ ಳ ಸಹೋದರರು ಇತರ ಸಂಬಂಧಿಗಳು ಅವನನ್ನು ಥಳಿಸಿ, ಪೋಲೀಸರಿಗೆ ಅವನೊಬ್ಬ ನ್ಯಾಯಬಾಹಿರ ವಲಸೆಗಾರನೆಂದು ತಿಳಿಸಿದರು.
ನ್ಯಾಯಾಲಯದಲ್ಲಿ ಬೂಟಾಸಿಂಗ್ ತಾನು ಮುಸ್ಲಿಮನೆಂದೂ, ತನ್ನ ಹೆಂಡತಿಯನ್ನು ತನಗೆ ಕೊಡಿಸಬೇಕೆಂದೂ ನ್ಯಾಯಾಧೀಶರನನ್ನು ಬೇಡಿದ. ಕಡೇ ಪಕ್ಷ ಹೆಂಡತಿಯನ್ನು ನೋಡಿ ಅವಳು ಭಾರತಕ್ಕೆ ವಾಪಸ್ಸು ಬರುತ್ತಾಳೆಯೇ ಎಂದು ಕೇಳಲಾದರೂ ಅವಕಾಶ ಕೊಡಿ ಎಂದು ಕೇಳಿದ.
ನ್ಯಾಯಾಧೀಶರು ಒಪ್ಪಿದರು. ಜೆನಿಬ್ ಳನ್ನು ಅವಳ ಸಂಬಂಧಿಕರು ನ್ಯಾಯಾಲಯಕ್ಕೆ ಕರೆದುಕೊಂಡು ಬಂದರು. ನ್ಯಾಯಾಧೀಶರು ಬೂಟಾಸಿಂಗ್ ನ ಕಡೆ ಬೆರಳುತೋರಿಸಿ ಅವಳನ್ನು ಕೇಳಿದರು-
"ನಿನಗೆ ಇವನು ಗೊತ್ತೇ?"
"ಗೊತ್ತು. ಅವನು ಬೂಟಾಸಿಂಗ್, ನನ್ನ ಮೊದಲನೇ ಪತಿ" ಎಂದು ನಡುಗುತ್ತಾ ಹೇಳಿದಳು. ತನ್ನ ಮಗಳನ್ನೂ ಗುರುತಿಸಿದಳು.
"ನೀನು ಅವನೊಡನೆ ಭಾರತಕ್ಕೆ ಹೋಗುತ್ತೀಯಾ?"
ಬೂಟಾಸಿಂಗ್ ಬೇಡುವ ಕಣ್ಣುಗಳಲ್ಲಿ ಅವಳನ್ನೇ ನೋಡುತ್ತಿದ್ದರೆ, ಅವಳ ಸಂಬಂಧಿಕರು ಆಕೆಯನ್ನು ಕೆಂಗಣ್ಣುಗಳಿಂದ ದುರುಗುಟ್ಟಿಕೊಂಡು ನೋಡುತ್ತಿದ್ದರು. ಅವಳು ಹೆದರಿ 'ಇಲ್ಲ' ಎಂದು ಮೆಲು ದನಿಯಲ್ಲಿ ಹೇಳಿದಳು.
ಬೂಟಾಸಿಂಗ್ ಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಅವನು ಮಾತನಾಡದೆ ಹಾಗೆ ಕೆಲವು ನಿಮಿಷ ನಿಂತ. ನಂತರ ಮಗಳನ್ನು ಕೊಠಡಿಯ ಒಳಗೆ ಕರೆದು, 'ಜೆನಿಬ್, ನಿನ್ನ ಮಗಳನ್ನು ನಿನ್ನಿಂದ ಬೇರ್ಪಡಿಸುವ ಇಚ್ಛೆ ಇಲ್ಲ. ಅವಳನ್ನು ನಿನ್ನ ಬಳಿಯೇ ಬಿಡುತ್ತೇನೆ' ಎಂದು ಹೇಳಿ ಜೋಬಿನಿಂದ ನೋಟಿನ ಕಂತೆಯನ್ನು ತೆಗೆದು ಮಗಳೊಡನೆ ಕೊಟ್ಟ. 'ನನ್ನ ಜೀವನ ಇಲ್ಲಿಗೆ ಮುಗಿಯಿತು' ಎಂದ.
ಜೆನಿಬ್ ಳನ್ನು ನ್ಯಾಯಾಧೀಶರು, 'ಮಗುವನ್ನು ನಿನ್ನ ವಶಕ್ಕೆ ತೆಗೆದುಕೊಳ್ಳುವ ಇಚ್ಛೆ ಇದೆಯೇ?' ಎಂದು ಕೇಳಿದರು. ನ್ಯಾಯಾಲಯದಲ್ಲಿದ್ದ ಅವಳ ಪುರುಷ ಸಂಬಂಧಿಕರು ಕೋಪದಿಂದ ತಲೆ ಅಲ್ಲಾಡಿಸಿದರು. ಅವರಿಗೆ ಅವರ ವಂಶದಲ್ಲಿ ಸಿಖ್ ನ ರಕ್ತ ಸೇರುವುದು ಇಷ್ಟವಿರಲಿಲ್ಲ. ನಿರಾಶೆ ಕಣ್ಣುಗಳಿಂದ ನೋಡುತ್ತಾ ಅವಳು 'ಬೇಡ, ಮಗು ಬೇಡ' ಎಂದಳು. ಬೂಟಾಸಿಂಗ್ ನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಜೆನಿಬ್ ಳ ಕಣ್ಣುಗಳಲ್ಲೂ ನೀರು, ಮಗಳನ್ನು ಕರೆದುಕೊಂಡು ಬೂಟಾಸಿಂಗ್ ನ್ಯಾಯಾಲಯ ಬಿಟ್ಟ.
ದುಃಖಗೊಂಡ ಬೂಟಾಸಿಂಗ್ ಅಳುತ್ತಾ ಮಗಳೊಡನೆ ಮುಸ್ಲಿಂ ಸಂತ ಗಂಗ್ ಭಕ್ಷನ ಸ್ಮಾರಕಕ್ಕೆ ಬಂದು ಮಲಗಿದ. ಬೆಳಿಗ್ಗೆ ಮಗಳನ್ನು ಅಂಗಡಿಗೆ ಕರೆದುಕೊಂಡು ಹೋಗಿ ಅವಳಿಗೆ ಹೊಸಬಟ್ಟೆ ಮತ್ತು ಜರಿಯಲ್ಲಿ ಕಸೂತಿ ಮಾಡಿದ ಪಾದರಕ್ಷೆಗಳನ್ನು ಕೊಂಡುಕೊಟ್ಟ. ನಂತರ ಅವರು ಷಾಧರ್ ರೈಲ್ವೆ ಸ್ಟೇಷನ್ನಿಗೆ ಬಂದರು. ಮಗಳಿಗೆ ಇನ್ನು ಅವಳು ತನ್ನ ತಾಯಿಯನ್ನು ನೋಡಲು ಆಗುವುದಿಲ್ಲವೆಂದು ತಿಳಿಸಿದ. ಅವಳನ್ನು ಎತ್ತಿಕೊಂಡು ಮುತ್ತಿಟ್ಟ. ಅವರು ಫ್ಲಾಟ್ ಫಾರಂನ ಅಂಚಿನಲ್ಲಿ ಬರುತ್ತಿದ್ದರು. ಹಳಿಗಳ ಮೇಲೆ ವೇಗವಾಗಿ ರೈಲು ಬರುತ್ತಿತ್ತು. ರೈಲು ಹತ್ತಿರ ಬಂದೊಡನೆ ಬೂಟಾಸಿಂಗ್ ಮಗಳ ಕೈ ಹಿಡಿದುಕೊಂಡು ಹಳಿಗಳ ಮೇಲೆ ಬಿದ್ದ. ಬೂಟಾಸಿಂಗ್ ಮೇಲೆ ರೈಲು ಹರಿದು ಅಂಗಾಂಗಗಳು ಕತ್ತರಿಸಿ ಹೋಗಿ ಅವನು ತಕ್ಷಣವೇ ಸತ್ತು ಹೋದ. ಆದರೆ ಆಶ್ಚರ್ಯವೆನ್ನುವಂತೆ ಮಗಳು ದುರಂತದಿಂದ ಪಾರಾದಳು.
ಬೂಟಾಸಿಂಗನ ಅಂಗಿಯಲ್ಲಿ ಅವನು ಹೆಂಡತಿಗೆ ಬರೆದ ಕಾಗದವಿತ್ತು. 'ಪ್ರೀತಿಯ ಜೆನಿಬ್, ನೀನು ನಿನ್ನ ಜನರ ಮಾತಿಗೆ ಓಗೊಟ್ಟು ನನ್ನೊಡನೆ ಬರಲಿಲ್ಲ. ನ್ಯಾಯಾಲಯದಲ್ಲಿ ನೀನು ಹೇಳಿದ ಮಾತುಗಳು ಮನಃಪೂರ್ವಕವಾಗಿ ಹೇಳಿದ ಮಾತುಗಳಲ್ಲ. ನನಗೆ ನಿಜವಾಗಿಯೂ ನಿನ್ನೊಡನೆ ಇರಬೇಕೆಂಬುದೇ ನನ್ನ ಕಡೆಯ ಆಸೆ. ನನ್ನನ್ನು ನಿಮ್ಮ ಹಳ್ಳಿಯಲ್ಲಿಯೇ ಹೂತು ಹಾಕಿ. ಆಗಾಗ್ಗೆ ನೀನು ಬಂದು ನನ್ನ ಸಮಾಧಿ ಮೇಲೆ ಹೂವನ್ನಿಡು'
ಬೂಟಾಸಿಂಗನ ಆತ್ಮಹತ್ಯೆ ಪಾಕಿಸ್ತಾನದಲ್ಲಿ ಒಂದು ತರಂಗ ಎಬ್ಬಿಸಿತು. ಅವನ ಸಂಸ್ಕಾರ ರಾಷ್ಟ್ರೀಯ ಪ್ರಾಮುಖ್ಯ ಪಡೆಯಿತು. ಜೆನಿಬ್ ಳ ಸಂಸಾರ ಬೂಟಾಸಿಂಗನ ದೇಹವನ್ನು ಅವರ ಹಳ್ಳಿಯಲ್ಲಿ ಹೂಳಲು ಅವಕಾಶ ಕೊಡಲಿಲ್ಲ. ಶವವನ್ನು ಹಳ್ಳಿಗೆ ತರುವುದಕ್ಕೂ ಅವಳ ಎರಡನೇ ಪತಿ ಅಡ್ಡಬಂದ. ಅಧಿಕಾರಿಗಳು ಶವವನ್ನು ಲಾಹೋರಿಗೆ ಕಳುಹಿಸಿದರು. ಅಲ್ಲಿ ಅದನ್ನು ಹೂವುಗಳಿಂದ ಅಲಂಕರಿಸಿ ಗೌರವದಿಂದ ಹೂಳಲಾಯಿತು. ಸತ್ತ ಬೂಟಾಸಿಂಗ್ ಗೆ ದೊರೆತ ಗೌರವ ಕಂಡು ಜೆನೀಬ್ ಳ ಕುಟುಂಬಕ್ಕೆ ಅಸೂಯೆ ಬಂದು ಕೆಲವರು ಲಾಹೋರಿಗೆ ಹೋಗಿ ಅವನ ದೇಹವನ್ನು ಗೋರಿಯಿಂದ ಈಚೆ ತೆಗೆದು ಹೊರಗೆ ಹಾಕಿ ಅವಮರ್ಯಾದೆ ಮಾಡಿದರು. ಇದರಿಂದ ಉದ್ರಿಕ್ತರಾದ ನಗರದ ಜನತೆ ಪುನಃ ಹೂವುಗಳ ರಾಶಿಯಲ್ಲಿ ಅವನ ದೇಹವನ್ನು ಹೂತರು. ನೂರಾರು ಸ್ವಯಂ ಸೇವಕರು ಸಮಾಧಿಯನ್ನು ಕಾಯಲು ನಿಂತುಕೊಂಡರು.
ಬೂಟಾಸಿಂಗನ ಮಗಳು ಸುಲ್ತಾನಳನ್ನು ಒಂದು ಮುಸ್ಲಿಂ ಸಂಸಾರ ದತ್ತು ತೆಗೆದುಕೊಂಡು ಲಾಹೋರಿನಲ್ಲಿ ಸಾಕಿತು. ಈಗ ಆಕೆ ಲಿಬಿಯಾದಲ್ಲಿದ್ದಾಳೆ. ಗಂಡ ಇಂಜಿನಿಯರ್. ದಂಪತಿಗಳಿಗೆ ಮೂವರು ಮಕ್ಕಳು.
ಆಂಗ್ಲ ಮೂಲ: L. Collins & D. Lapierre.
ಕನ್ನಡಕ್ಕೆ: ಎಚ್.ಆರ್.ಚಂದ್ರವದನರಾವ್.
ಪ್ರಕಾಶನ: ಸಂವಹನ, ಮೈಸೂರು
ಚಿತ್ರಮೂಲ: ವಿಕಿಪೀಡಿಯಾ

No comments:

Post a Comment