Apr 16, 2012

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ!


ಮೂಲ
ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!
          ಭಾರತದಲ್ಲಿ ಗೋಮಾಂಸ ಸೇವನೆಯ ಬಗ್ಗೆ ಇರುವ ಇತಿಹಾಸ ಆಸಕ್ತಿಕರವಾಗಿದೆ. ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು. ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ (ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ’ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ). ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ ತತ್ವವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ. ಮಾಂಸದ ಸವಿಯಾದ ರುಚಿಯನ್ನುಂಡವರು ಅಷ್ಟು ಸುಲಭವಾಗಿ ಬಿಟ್ಟಾರೆಯೇ?! ಬ್ರಾಹ್ಮಣರು ಎಲ್ಲ ಮಾಂಸ ತೊರೆದು ಉಳಿದ ಕೆಲವರು ಗೋಮಾಂಸ ತೊರೆಯುತ್ತಾರೆ. ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ.
ಗೋಸಂತತಿ ಪೂಜ್ಯನೀಯವೇ?
          ಹೌದು ಪೂಜ್ಯನೀಯ. ಕೃಷಿಯೇ ಮೂಲಕಸುಬಾಗಿದ್ದ ಭಾರತದಲ್ಲಿ ಗೋವು ದೇವರ ಸ್ಥಾನ ಪಡೆದಿದ್ದರಲ್ಲಿ ಅಚ್ಚರಿಯಿಲ್ಲ. ವ್ಯವಸಾಯಕ್ಕೆ, ಹಾಲಿಗೆ, ಗೊಬ್ಬರಕ್ಕೆ ಉಪಯೋಗಕ್ಕೆ ಬರುತ್ತಿದ್ದ ಗೋವು ಕಾಮಧೇನುವೇ ಸರಿ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಇವುಗಳನ್ನೇ ನೆಪವಾಗಿಟ್ಟುಕೊಂಡು ಇವತ್ತಿನ ಸಾಮಾಜಿಕ ಪರಿಸರದ ಅಧ್ಯಯನ ನಡೆಸದೆ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರುವಲ್ಲಿ ಬಹಳಷ್ಟು ರಾಜ್ಯ ಸರ್ಕಾರಗಳು ಆಸಕ್ತಿ ತೋರುತ್ತಿರುವುದು ಎಷ್ಟರಮಟ್ಟಿಗೆ ಸರಿ? ಈ ಮಸೂದೆಯನ್ನು ಬೆಂಬಲಿಗರಲ್ಲಿ ವಿದ್ಯಾವಂತರು ಅದರಲ್ಲೂ ನಗರವಾಸಿಗಳು ಮುಂದಿದ್ದಾರೆ. ನಗರಗಳಲ್ಲಿ ಸೆಗಣಿ ಕಂಡರೆ ಮೂಗು ಮುರಿಯುವ, ಹಸುವನ್ನೆಂದಿಗೂ ಸಾಕಿ ಅಭ್ಯಾಸವಿಲ್ಲದ, ಪ್ಯಾಕೆಟ್ ಹಾಲನ್ನವಲಂಭಿಸಿದ ನಾವುಗಳು ಗೋಹತ್ಯೆ ನಿಷೇಧದ ಪರವಾಗಿ ಮಾತನಾಡುವುದು ಅಪಹಾಸ್ಯದ ಸಂಗತಿಯಲ್ಲವೇ?
          ನಗರೀಕರಣದ ಫಲವಾಗಿ ಹಳ್ಳಿಯಲ್ಲಿರುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ. ಇನ್ನು ಹಸು, ಎತ್ತು ಸಾಕುವವರ ಸಂಖ್ಯೆಯಂತೂ ಮತ್ತಷ್ಟು ಕಡಿಮೆ. ವ್ಯವಸಾಯಕ್ಕಿಂತ ಹೆಚ್ಚಾಗಿ ಹಾಲಿಗಾಗಿ ಹಸುವನ್ನು ಸಾಕುವವರ ಸಂಖ್ಯೆ ಹೆಚ್ಚಿದೆ. ಒಂದೆರಡು ಹಸುಗಳನ್ನು ಸಾಕಿ ಹಾಲು ಮಾರಿ ಜೀವನೋಪಾಯ ನಡೆಸುವ ವ್ಯಕ್ತಿಗೆ “ಹಸುವಿಗೆ ವಯಸ್ಸಾದರೂ ಹಾಲು ಕೊಡದಿದ್ದರೂ ನೀನದನ್ನು ಸಾಕಲೇಬೇಕು. ಆ ಮೂಲಕ ಹಿಂದೂ ಧರ್ಮದ ಉಳಿವಿಗೆ ಕಾರಣಕರ್ತನಾಗಬೇಕು. ಅಪ್ಪಿತಪ್ಪಿ ಮಾಂಸಕ್ಕೋಸ್ಕರ ದುಡ್ಡಿಗೋಸ್ಕರ ಮಾರಿದರೆ ಜೈಲಿಗಾಗ್ತೀವಿ ನೋಡು” ಎಂದು ಹೇಳುವುದು ಕ್ರೌರ್ಯವಲ್ಲವೇ?
          ವಯಸ್ಸಾದ ಹಸುಗಳನ್ನು ಮಾಂಸಕ್ಕಾಗಿ ಸಾಯಿಸಿದರೆ ಏನು ತಪ್ಪು? ಎಂದು ಕೇಳಿದಾಕ್ಷಣ ಗೋಹತ್ಯೆ ವಿರೋಧಿಗಳು ಅಕಟಕಟಾ ಎಂದು ಮುರಕೊಂಡು ಬೀಳುತ್ತಾರೆ. “ವಯಸ್ಸಾಯಿತು ಅಂತ ನಿಮ್ಮ ತಂದೆತಾಯಿಯನ್ನೂ ಸಾಯಿಸಿಬಿಟ್ತೀರೇನ್ರೀ?” ಅನ್ನೋ ಅಸಂಬದ್ಧ ಪ್ರಶ್ನೆ ಕೇಳ್ತಾರೆ. ಹಸು ಸಾಕೋದು ವ್ಯವಹಾರಿಕ, ತಂದೆ ತಾಯಿ ವ್ಯಾಪಾರದ ವಸ್ತುಗಳಲ್ಲ ಅನ್ನೋದು ಅವರಿಗೆ ತಿಳಿಯೋದೇ ಇಲ್ಲವೇ? ಕೃಷಿಯಿಂದ ನಾವೆಲ್ಲ ವಿಮುಖರಾಗಿರುವ ಈ ಹೊತ್ತಿನಲ್ಲಿ ಇಂಥ ಕಾಯ್ದೆಗಳಿಂದ ಇರೋ ಚೂರೂ ಪಾರೂ ಕೃಷಿಕರನ್ನೂ ಅಲ್ಲಿಂದ ಓಡಿಸುತ್ತಿದ್ದೀವಷ್ಟೇ.
          ಬರ ಬಿದ್ದಿರುವ ಉತ್ತರ ಕರ್ನಾಟಕದಲ್ಲಿ ಹಾಲು ಕೊಡುವ ಹಸುಗಳಿಗೇ ಮೇವು ಸಿಗುವುದು ದುಸ್ತರ. ಇನ್ನು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಹಸುಗಳನ್ನು ಮಾರಲೂ ಆಗದೆ ಮೇವು ದೊರಕಿಸಲೂ ಆಗದೆ ದನ ಮತ್ತು ಜನ ಒಟ್ಟಿಗೆ ಉಪವಾಸ ಬೀಳಬೇಕೆ? ಭಾರತದಲ್ಲಿ ಮಾಂಸಕ್ಕಾಗಿ ಯಾರೂ ಹಸುಗಳನ್ನು ಸಾಕಿ ಬೆಳೆಸುವುದಿಲ್ಲ. ವಯಸ್ಸಾದ ದನಗಳನ್ನು ಸಾಕುವುದು ಕಷ್ಟವೆನ್ನಿಸಿದಾಗ ಮಾರುತ್ತಾರಷ್ಟೇ. ಅವರಿಗೂ ತಮ್ಮ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧಗಳಿದೆ. ಭಾವನೆ ಮತ್ತು ಜೀವನದ ಪ್ರಶ್ನೆ ಬಂದಾಗ ಅವರು ಯಾವುದನ್ನು ಆರಿಸಿಕೊಳ್ಳಬೇಕು?
          ನಾಳೆ ಒಬ್ಬ ಕಟ್ಟರ್ ಮುಸ್ಲಿಮ್ ಅಧಿಕಾರವಿಡಿದು ಹಂದಿ ಮಾಂಸ ನಿಷೇಧಿಸಬಹುದು ಅಥವಾ ಒಬ್ಬ ಕಟ್ಟರ್ ಬ್ರಾಹ್ಮಣನೋ ಲಿಂಗಾಯಿತನೋ ಅಧಿಕಾರಕ್ಕೆ ಬಂದು ಎಲ್ಲ ಮಾಂಸ ನಿಷೇಧಿಸುವ ಕಾನೂನು ಮಾಡಬಹುದು ಅಥವಾ ಕಟ್ಟರ್ ಮಾಂಸಪ್ರಿಯನೊಬ್ಬ ಎಲ್ಲರೂ ಎಲ್ಲ ಮಾಂಸವನ್ನೂ ಸೇವಿಸಲೇಬೇಕು, ಇಲ್ಲವಾದರೆ ಶಿಕ್ಷಿಸುತ್ತೇವೆ ಎಂಬ ಕಾನೂನು ಮಾಡಿಬಿಡಬಹುದು. ಅವುಗಳನ್ನೂ ಒಪ್ಪಿಕೊಳ್ಳಬೇಕಾ?
          ಇವೆಲ್ಲ ಅತ್ಲಾಗಿರಲಿ ಬಿಡಿ. ನಮ್ಮ ಮನೆಯಲ್ಲಿ ಕೋಳಿ, ಕುರಿ, ಮೀನು ಮಾತ್ರ ಬೇಯಿಸೋದು. ದನದ ಮಾಂಸದ ನಿಷೇಧದಿಂದಾಗಿ ಕುರಿ ರೇಟು ಮುನ್ನೂರು ರುಪಾಯಿ ದಾಟಿದೆ. ನಮ್ಮಂಥೋರಿಗೇನಾದ್ರೂ ಸಬ್ಸಿಡಿ ಕೊಡ್ತಾರಾ ಈ ಧರ್ಮ ರಕ್ಷಕರು?!!

2 comments:

 1. Dear ashok sir before you write about brhmin eating
  cow meat i would like to refer MANUSMRATI-bhaga 3

  and yajurveda >smyukta >bhaga 2

  both tells that brhmin dont eat meat. and if one person do wrong do tell that every one do same.

  then you have to blame that if one muslim is terrorist all muslim are terrorist ?

  not like that isn't it ?

  and i agree still 3 group of Brahmin eat meat (not cows its fish and see food) for after death rituals (APARAKARMAS) in that another one is "APATRA" who is only called brhamin not real brahmin. coz cast is come by work not by birth

  a humble request sir please go through vedas and scripters then write please .

  ReplyDelete
 2. i think that hinduism is not just brahminism.
  there are various sects in hindu religion who eat beaf....
  my concern in the article is we should not interfere in others food habits[unless and until they are killing some endangered species]

  ReplyDelete