Nov 14, 2015

ಈ ಸಾವಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ?

ಸಾಬಿ ಸತ್ತರೆ ಹಿಂದೂ ಸಂಘಟನೆಗಳ ಕೃತ್ಯ, ಹಿಂದೂ ಸತ್ತರೆ ಮುಸ್ಲಿಂ ಸಂಘಟನೆಗಳ ಕೃತ್ಯ ಎಂದು ಕಣ್ಣುಮುಚ್ಚಿ ಶರಾ ಬರೆದುಬಿಡುವವರಿಗೆ ಈ ಪ್ರಕರಣವೊಂದು ಒಗಟಾಗಿಬಿಟ್ಟಿದೆ. ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. 
ಮುಸ್ಲಿಂ ಮತ್ತು ಹಿಂದೂಗಳಿಬ್ಬರ ಮೇಲೆಯೂ ಹಲ್ಲೆಯಾಗಿಬಿಟ್ಟಿದೆ. ಹಲ್ಲೆ ನಡೆಸಿದ್ದು ಹಿಂದೂ ಸಂಘಟನೆಯೋ ಮುಸ್ಲಿಂ ಸಂಘಟನೆಯೋ ಇನ್ನೂ ಗೊತ್ತಾಗಿಲ್ಲ. ಹರೀಶನ ಮನೆಯೀಗ ಅನಾಥವಾಗಿದೆ. 
ಅಂದಹಾಗೆ ಉಳಿದೆಲ್ಲೆಡೆ ಟಿಪ್ಪು ಸಂಬಂಧಿತ ಗಲಭೆಗಳು ಕಡಿಮೆಯಾಗುತ್ತಿದ್ದರೆ ದಕ್ಷಿಣ ಕನ್ನಡದಲ್ಲಿ ಬಿಗುವಿನ ವಾತಾವರಣವೇ ಇದೆಯಂತೆ. ನೆನಪಿರಲಿ ದಕ್ಷಿಣ ಕನ್ನಡದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಬಿಟ್ಟು ಬೇರೆಲ್ಲ ಕಡೆಯೂ ಬಿಜೆಪಿ ಸೋಲನ್ನನುಭವಿಸಿತ್ತು. ಅವರಿಗಿದು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಮಾರ್ಗ. ಮೃದು ಹಿಂದುತ್ವವನ್ನಾಚರಿಸುವ ಕಾಂಗ್ರೆಸ್ಸಿಗರು ಮೌನವಾಗೇ ಈ ಘಟನೆಗಳನ್ನು ಒಪ್ಪಿಬಿಡುತ್ತಾರೆ. ಇವರ ಜೊತೆಗೆ ಇವರಿಗಿಂತಲೂ ಹೀನವಾಗಿ ವರ್ತಿಸುವುದಕ್ಕೆ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳಿವೆ. ಅವರಿಗೆ ಮುಸ್ಲಿಂ ಮತಗಳನ್ನು ಒಟ್ಟುಗೂಡಿಸುವ ಕೆಲಸ. ಮತಗಳ ಒಟ್ಟುಗೂಡುವಿಕೆಯ ಸಮಯದಲ್ಲಿ ಮಾನವೀಯತೆ ಮೂರಾಬಟ್ಟೆಯಾದರೆ ಯಾರಿಗೇನಾಗಬೇಕು ಹೇಳಿ.

2 comments:

 1. ಈ ಸಾವಿನ ಹೊಣೆಯನ್ನು ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ಹಾಗೂ ಅವುಗಳನ್ನು ಬೆಳೆಸಿದ ಸಮಾಜವೇ ಹೊರಬೇಕು. ಜನ ಇಂಥ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಬೆಂಬಲ ಕೊಟ್ಟು ಬೆಳೆಸಿದ ಕಾರಣ ತಾನೇ ಇವುಗಳು ಇಂದು ಬ್ರಹ್ಮರಾಕ್ಷಸನಂತೆ ಬೆಳೆದು ತಮ್ಮ ಅಧಿಕಾರದ ಗದ್ದುಗೆ ಹಿಡಿಯುವ ಸ್ವಾರ್ಥ ಸಾಧನೆಗಾಗಿ ಅಮಾಯಕರನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿರುವುದು. ಜನ ಇಂಥ ಮೂಲಭೂತವಾದಿ ಸಂಘಟನೆಗಳಿಗೆ ಬೆಂಬಲ ಕೊಡದಿದ್ದರೆ ಅವುಗಳು ಬೆಳೆಯಲು ಸಾಧ್ಯವೇ ಇರಲಿಲ್ಲ. ಬೇವಿನ ಗಿಡ ನೆಟ್ಟು ಮಾವಿನ ಫಸಲು ಪಡೆಯಲು ಸಾಧ್ಯವಿಲ್ಲ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಇಂಥ ರಾಕ್ಷಸ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ಬೆಂಬಲ ಕೊಟ್ಟು ಬೆಳೆಸಿದ ಜನರೇ ಅದರ ಕಹಿಫಲವನ್ನು ಉಣ್ಣಲೇಬೇಕಾಗಿದೆ ಹೊರತು ಬೇರೆ ದಾರಿಯಿಲ್ಲ. ಇಷ್ಟಾದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತದೆಯೇ ಎಂದರೆ ಅದೂ ಇಲ್ಲ. ಇಂಥ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಅಡಿಯಾಳಾಗಿ ಬಾಳುವುದರಲ್ಲಿಯೇ ಜೀವನದ ಸಾರ್ಥ್ಯಕ್ಯ ಕಾಣುವ ಜನರ ನಡುವೆ ಸೌಹಾರ್ದ ಎಂಬುದು ಮರೀಚಿಕೆಯೇ ಸರಿ.

  ರಾಜ್ಯದಲ್ಲಿಯೇ ಸಾಕ್ಷರತೆಯಲ್ಲಿ ಮುಂದೆ ಇರುವ ದಕ್ಷಿಣ ಕನ್ನಡ ಜಿಲ್ಲೆ ವೈಚಾರಿಕತೆಯಲ್ಲಿ ಮುಂದೆ ಇಲ್ಲ, ಬಹಳ ಹಿಂದೆ ಇದೆ. ಇಲ್ಲಿ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ನಾಯಿಕೊಡೆಗಳಂತೆ ಬೆಳೆದಿವೆಯೇ ಹೊರತು ಒಂದೇ ಒಂದು ವೈಚಾರಿಕತೆ ಬೆಳೆಸುವ ಸಂಘಟನೆ ಬೆಳೆಯಲಿಲ್ಲ. ಇದರ ಫಲವಾಗಿ ಜನ ಬೇಡದ ವಿಚಾರಗಳಿಗೆ ಬಂದ್ ಕರೆ ಕೊಡುವುದು ಮತ್ತು ಪ್ರತಿಭಟನೆ ಮಾಡುವುದು ನಡೆಯುತ್ತದೆ. ಇಡೀ ಕರ್ನಾಟಕವು ನಾಡು ನುಡಿಯ ವಿಚಾರಕ್ಕೆ ಬಂದ್ ಆಚರಿಸಿದರೆ ದಕ್ಷಿಣ ಕನ್ನಡವು ಏನೂ ಆಗಿಲ್ಲ ಎಂಬಂತೆ ಯಥಾಸ್ಥಿತಿಯಲ್ಲಿರುತ್ತದೆ. ಇಲ್ಲಿ ಧರ್ಮದ ಹೆಸರಿನಲ್ಲಿ ಕೊಟ್ಟ ಬಂದ್ ಕರೆ ಮಾತ್ರವೇ ಯಶಸ್ವಿಯಾಗುತ್ತದೆ.

  ಗಿರೀಶ್ ಕಾರ್ನಾಡ್ ಅವರು ತಮ್ಮ ಒಂದು ಅಭಿಪ್ರಾಯವನ್ನು ಟಿಪ್ಪು ವಿಚಾರದಲ್ಲಿ ಸಾಮಾನ್ಯ ಭಾಷೆಯಲ್ಲಿ ಹೇಳಿದರೂ ನಮ್ಮ ಜನರಿಗೆ ಅದು ಪ್ರಚೋದನಕಾರಿಯಾಗಿ ಕಾಣುತ್ತದೆ ಹಾಗೂ ಅದಕ್ಕಾಗಿ ಅವರನ್ನು ಗಡಿಪಾರು ಮಾಡಬೇಕೆಂದು ಒಂದು ಪಕ್ಷದವರು ಹೇಳುತ್ತಾರೆ. ಅದೇ ವೇಳೆ ನಾಲಿಗೆ ಕತ್ತರಿಸಬೇಕು, ರುಂಡ ಚೆಂಡಾಡಬೇಕು ಎಂದು ಅದೇ ಪಕ್ಷದವರು ಹೇಳಿದರೂ ಅದು ಅವರಿಗೆ ಪ್ರಚೋದನಕಾರಿಯಾಗಿ ಕಾಣುವುದಿಲ್ಲ, ಅವರನ್ನು ಗಡಿಪಾರು ಮಾಡಬೇಕು ಎಂದು ಅವರು ಬೊಬ್ಬೆ ಹಾಕುವುದಿಲ್ಲ. ಇಂಥ ರಾಜಕೀಯ ಪಕ್ಷಗಳನ್ನು ಬೆಳೆಸುತ್ತಿರುವ ಕನ್ನಡ ನಾಡು ಧನ್ಯ.

  ReplyDelete
  Replies
  1. ಧರ್ಮದ ಹೆಸರಿನಲ್ಲಿ ಜನರನ್ನು ಉತ್ತೇಜಿಸುವುದು ಸುಲಭವಾಗಿಬಿಟ್ಟಿದೆ. ಧರ್ಮವೆಂದರೆ ಅಫೀಮು ಎಂಬ ಕಾರ್ಲ್ ಮಾರ್ಕ್ಸನ ಮಾತು ಪದೇ ಪದೇ ನೆನಪಾಗುತ್ತದೆ.

   Delete