Jun 3, 2015

ವಾಡಿ ಜಂಕ್ಷನ್ .... ಭಾಗ 12

wadi junction
Dr Ashok K R
ಜಯಂತಿಯ ಬಗೆಗಿನ ನೆನಪುಗಳಲ್ಲಿ ಮುಳುಗಿಹೋದವನು ಇದ್ದಕ್ಕಿದ್ದಂತೆ “ಅರೆರೆ” ಎಂದು ಉದ್ಗರಿಸಿ ಹಾಸಿಗೆಯ ಮೇಲೆ ಎದ್ದು ಕುಳಿತ. ನಿನ್ನೆ ಮತ್ತು ಇವತ್ತಿನ ನಡವಳಿಕೆಯ ಬಗ್ಗೆ ರಾಘವನಿಗೇ ನಗು ಬಂತು. ‘ಅಲ್ಲಾ ಎಲ್ರೂ ಗುಟ್ಟು ಮಾಡ್ತಾ ಇದ್ದಿರಾ ಮಕ್ಳಾ ಅಂತ ನಿನ್ನೆಯಲ್ಲಾ ಬೊಬ್ಬಿರಿದೆನಲ್ಲಾ. ನಾನು ಮಾಡಿರೋದಾದ್ರೂ ಅದೇ ತಾನೇ! ಜಯಂತಿ ಇಷ್ಟವಾಗ್ತಾಳೆ ಅಂತ ಹೇಳಿದ್ದಿದೆ; ಅವತ್ತು ಕಾಲೇಜ್ ಡೇ ದಿನ ಸೀರೆ ಉಟ್ಟು ಬಂದಿದ್ದವಳನ್ನು ನೋಡಿ ಒಂದಷ್ಟು ಹೆಚ್ಚೇ ತಲೆಕೆಡಿಸಿಕೊಂಡು ಇವರಿಗೂ ತಲೆ ತಿಂದಿದ್ದಿದೆ. ಆದರೆ ಅವಳ ಬಗ್ಗೆ ತಲೆಕೆಡಿಸಿಕೊಂಡಿದ್ದಕ್ಕೆ ಕಾರಣ – ಅವಳು ನನ್ನೊಡನೆ ಮಾತನಾಡಿದ್ದಕ್ಕೆ …. ಅಲ್ಲಲ್ಲ ನನ್ನನ್ನು ಗದರಿದ್ದಕ್ಕೆ – ಅನ್ನೋದನ್ನು ನಾನು ಕೂಡ ಮೂವರಲ್ಯಾರಿಗೂ ಹೇಳಿಲ್ಲ ಅಲ್ವ!!’ ಇಷ್ಟು ಯೋಚನೆ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಮಗುಚಿ ಬಿದ್ದಿದ್ದ ಮನಸ್ಸು ನಿರಾಳವಾಯಿತು. ನಾನೂ ಇವರಿಂದ ವಿಷಯ ಮುಚ್ಚಿಟ್ಟಿದೀನಿ, ಎಲ್ಲವನ್ನೂ ಬಡಬಡಿಸಿಬಿಟ್ಟಿಲ್ಲ ಎಂಬುದಕ್ಕೆ ಸಮಾಧಾನವಾಯಿತು. ಇದರೊಟ್ಟಿಗೆ ಜಯಂತಿಯ ನೆನಪುಗಳೂ ಒತ್ತರಿಸಿ ಬಂದು ಉಲ್ಲಾಸ ಮೂಡಿತು. ಸಮಯ ನೋಡಿದ. ನಾಲ್ಕಕ್ಕೆ ಹತ್ತು ನಿಮಿಷವಿತ್ತು. ಬೆಳಿಗ್ಯೆಯಿಂದ ಏನೂ ಮಾಡಿರಲಿಲ್ಲ, ಏನನ್ನೂ ತಿಂದಿರಲಿಲ್ಲ. ಲಗುಬಗನೇ ಹಲ್ಲುಜ್ಜಿ ಸ್ನಾನ ಮಾಡಿ, ಟೀ ಶರ್ಟು ಪ್ಯಾಂಟು ಧರಿಸಿ ಹೊರಬಿದ್ದಾಗ ಗಡಿಯಾರ ನಾಲ್ಕು ತೋರಿಸುತ್ತಿತ್ತು. ಅಫ್ರೋಜ್ ಭಾಯ್ ಅಂಗಡಿಯ ಬಳಿಗೆ ತೆರಳಿದ. ಗೆಳೆಯರನ್ನು ಭೆಟ್ಟಿಯಾಗಲು. ಅವರಾಗಲೇ ಅಲ್ಲಿ ಸೇರಿದ್ದರು. ಮುಗುಳ್ನಗುತ್ತಾ ಅವರ ಬಳಿಗೆ ಹೋಗಿ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾ “ನಿನ್ನೆ ನಾ ನಡೆದುಕೊಂಡ ರೀತಿಗೆ ಸಾರಿ ಕಣ್ರಪ್ಪಾ. ನಾನು ಬೆಳಿಗ್ಗೆಯಿಂದ ರೂಮಲ್ಲಿ ಯೋಚಿಸುತ್ತಾ ಮಲಗಿದ್ದೆ. ಯೋಚನೆಗಳು ಎತ್ತೆತ್ತಲೋ ಹರಿದವು. ಕೊನೆಗೆ ಹೊಳೆದದ್ದೆಂದರೆ ನಾನು ಕೂಡ ಒಂದಷ್ಟು ಮುಖ್ಯವಾದ ವಿಷಯಗಳನ್ನೇ ನಿಮ್ಮ ಬಳಿ ಹೇಳಿಲ್ಲ. ನೀವುಗಳು ಹೇಳಿದ್ದೇ ಸತ್ಯ. ತೀರ ನೂರಕ್ಕೆ ನೂರರಷ್ಟು ಎಲ್ಲಾ ವಿಷಯಗಳನ್ನು ಯಾರೊಡನೆಯೂ ಹೇಳಿಕೊಳ್ಳಲಾಗುವುದಿಲ್ಲ. ನಿಮ್ಮ ಮಾತಿಗೆ ನನ್ನದೂ ಸಂಪೂರ್ಣ ಸಹಮತವಿದೆ” ಎಂದ್ಹೇಳಿ ಮೂವರನ್ನೂ ನೋಡಿದ. ‘ಕ್ಷಮೆ ಕೇಳೋ ಅವಶ್ಯಕತೆಯೇನಿರಲಿಲ್ಲ’ ಎಂಬಂತೆ ಅವರೂ ನಕ್ಕರು.
“ಕೊನೆಗೂ ಜ್ಞಾನೋದಯ ಆಯ್ತು ಸಾಹೇಬರಿಗೆ” ಅಭಯನ ಮಾತಿಗೆ ತಲೆಯಾಡಿಸಿದ ರಾಘವ. “ಮತ್ತೆ ಜ್ಞಾನೋದಯವಾಗಿದ್ದಕ್ಕೆ ಇವತ್ತು ನಮ್ಮ ಬಿಲ್ಲನ್ನೂ ನೀನೇ ಕೊಟ್ಟುಬಿಡು” ಎಂದು ಅಭಯ ಅಂದಾಗ “ಹೋಗ್ರೋ ಬಡ್ಡೆತ್ತವ” ಎಂದು ರೇಗಿದ. ಎಲ್ಲರೂ ಮನಸಾರೆ ಜೋರಾಗಿ ನಕ್ಕರು. ತುಷಿನ್ ರಾಘವನ ಹೆಗಲ ಮೇಲೆ ಕೈಹಾಕಿದ.

* * *

“ಅವಳನ್ನ ಅವಳು ಏನಂದುಕೊಂಡುಬಿಟ್ಟಿದ್ದಾಳೆ. ಇಂಥವರನ್ನು ಎಷ್ಟು ಜನನ್ನ ನೋಡಿಲ್ಲ ನಾನು. ಅವಳ ಯೋಗ್ಯತೆಗೆ ಇಲ್ಲದಿರೋ ಕಡೆಯೆಲ್ಲಾ ಧಿಮಾಕು ಅವಳಿಗೆ. ಬಿಡಲ್ಲ ತಮ್ಮ. ಅವಳಿಗೆ ತೊಂದರೆ ಕೊಟ್ಟೇ ತೀರ್ತೀನಿ. ಗೊತ್ತಾಗಲಿ ಅವಳಿಗೆ ನಾನು ಯಾರು ಅಂತ. ನನ್ನ ನಿಜವಾದ ಮುಖ ಗೊತ್ತಿಲ್ಲ ಅವಳಿಗೆ. ಈ ಅನೂಜ್ ಅಂದ್ರೆ ಯಾರೂಂತ ತೋರಿಸ್ತೀನಿ ಅವಳಿಗೆ” ಚಿಗುರಲು ಕಷ್ಟಪಡುತ್ತಿದ್ದ ಮೀಸೆಯ ಮೇಲೆ ಕೈಯಾಡಿಸುತ್ತಾ ಕಣ್ಣನ್ನು ಕಿಟಕಿಯಿಂದಾಚೆಗೆ ಕಾಣುತ್ತಿದ್ದ ತೆಂಗಿನ ಮರದ ಮೇಲೆ ನೆಟ್ಟು ಹೇಳಿದ ಅನೂಜ್. ಅಭಯ ಇವನ ಮಾತಿಗೆ ಏನೂ ಪ್ರತಿಕ್ರಿಯಿಸದೆ ರೆಕಾರ್ಡ್ ಬರೆಯುವುದರಲ್ಲಿ ಮಗ್ನನಾಗಿದ್ದ. ಆಗಷ್ಟೇ ಮೂರು ಚಪಾತಿ, ಹಾಫ್ ರೈಸು, ಡಬಲ್ ಆಮ್ಲೆಟ್ ತಿಂದು ಬಂದಿದ್ದ ರಾಘವನಿಗೆ ಕಣ್ಣೆಳೆಯುತ್ತಿತ್ತು. ಒಂದರ್ಧ ಘಂಟೆ ಮಲಗೆ ಎರಡಕ್ಕಿರುವ ಪ್ರಾಕ್ಟಿಕಲ್ಸಿಗೆ ಹೋದರಾಯಿತು ಎಂದುಕೊಳ್ಳುತ್ತಿದ್ದ. ಅನೂಜನ ವಟಗುಟ್ಟುವಿಕೆಯ ನಡುವೆ ನಿದ್ದೆ ಹತ್ತುವುದು ಕಷ್ಟವಲ್ಲ ಅಸಾಧ್ಯವೇ ಆಗಿತ್ತು. ರಾಘವನಿಗೆ ಅನೂಜನ ಪರಿಚಯ ಅಷ್ಟಾಗಿ ಇರಲಿಲ್ಲ. ಅನೂಜ್ ಮತ್ತು ಅಭಯ್ ಪ್ರಾಕ್ಟಿಕಲ್ಸ್ ನಲ್ಲಿ ಒಟ್ಟಿಗೇ ಇರುತ್ತಿದ್ದರಾದ್ದರಿಂದ ಒಂದಷ್ಟು ಪರಿಚಯ ಬೆಳೆದಿತ್ತು. ಅನೂಜನ ಮೇಲೆ ಬರುತ್ತಿದ್ದ ಸಿಟ್ಟನ್ನು ಅಭಯನ ಕಡೆಗೆ ತಿರುಗಿಸಿದ. 

“ಅಲ್ಲಲೋ ಅಭಿ. ಇವನನ್ನು ಯಾಕೆ ಕರ್ಕೊಂಡು ಬರ್ತೀಯಾ ರೂಮಿಗೆ”. ಅಭಯ ‘ಹಿಂದೆ ಬಂದ್ರೆ ನಾನೇನೋ ಮಾಡ್ಲಿ’ ಎಂಬಂತೆ ನೋಡಿದ. ನಿಧಾನಕ್ಕೆ ತೆಂಗಿನಮರದಿಂದ ದೃಷ್ಟಿ ತೆಗೆದು ಕತ್ತು ತಿರುಗಿಸುತ್ತಾ ಟೇಬಲ್ಲಿನ ಮೇಲಿಟ್ಟಿದ್ದ ಮೂಳೆ, ಅದರ ಪಕ್ಕಕ್ಕಿದ್ದ ಎರಡು ಪುಸ್ತಕ, ಪುಸ್ತಕದ ಮೇಲಿದ್ದ ಸಿಗರೇಟ್ ಪ್ಯಾಕು, ಎಲ್ಲವನ್ನೂ ಸಾವಕಾಶವಾಗಿ ನೋಡುತ್ತಾ ರಾಘವನ ಮುಖದ ಮೇಲೆ ದೃಷ್ಟಿಯನ್ನು ಸ್ಥಿರಪಡಿಸಿದ. ಒಂದು ಕ್ಷಣ ಹಾಗೇ ದಿಟ್ಟಿಸಿ “ಲೋ ರಾಘವ ನಾನು ಬರೋದು ಇಷ್ಟವಿಲ್ಲ ಅಂದ್ರೆ ನೇರಾನೇರ ಹೇಳಿಬಿಡು” ಎಂದ ಗಂಭೀರವಾಗಿ. “ಹಂಗಲ್ಲ ಕಣೋ ಅನೂಜ್….ಅದು”. 

“ಹಂಗೂ ಇಲ್ಲ, ಹಿಂಗೂ ಇಲ್ಲ. ಬರೋದು ಇಷ್ಟವಿಲ್ಲ ಅಂತ ಗೊತ್ತು ನನಗೆ. ಆದರೆ ನೀನ್ಯಾರ್ಗುರೂ ನನಗೆ ಬರ್ಬೇಡ ಅನ್ನಕ್ಕೆ. ನೀವಿಬ್ರೂ ನನಗೆ ಕ್ಲಾಸ್ ಮೇಟ್ಸ್. ಇದು ನನ್ನ ಕ್ಲಾಸ್ ಮೇಟ್ಸ್ ರೂಮು. ಬರಬೇಡ ಅನ್ನಕ್ಕೆ ನಿನಗೆ….ನಿನಗಷ್ಟೇ ಅಲ್ಲ ನಿಮ್ಮಿಬ್ಬರಿಗೂ ಏನು ಹಕ್ಕಿದೆ?”

ಈ ಪ್ರಶ್ನೆಗೆ ರಾಘವ, ಅಭಯ ಇಬ್ಬರ ಬಳಿಯೂ ಉತ್ತರವಿರಲಿಲ್ಲ. ಸುಮ್ಮನೆ ಕುಳಿತಿದ್ದರು. ಅನೂಜನೇ ಮಾತು ಮುಂದುವರೆಸುತ್ತಾ “ಅಲ್ಲ ಅಷ್ಟಕ್ಕೂ ನನ್ನಿಂದ ಏನು ತೊಂದರೆ ಆಗಿದೆ ನಿಮಗೆ? ನಿಜ ಹೇಳ್ಬೇಕು ಅಂದ್ರೆ ನಿಮ್ಮಿಬ್ರಿಂದಾನೇ ನನಗೆ ತೊಂದರೆ. ಇಬ್ಬರೂ ಆ ಸಿಗರೇಟ್ ಹೋಗೇನಾ ಮಿಕ್ಸ್ ಪೆಟ್ರೋಲ್ ಹಾಕ್ಸಿ ಓಡೋ ಆಟೋದ ಥರ ಬಿಡ್ತೀರ. ನನಗೆ ಕೆಮ್ಮು ಕಿತ್ಕೊಂಡು ಬಂದ್ರೂ ಒಂದು ವಾರದಿಂದ ಯಾವತ್ತಾದ್ರೂ ದೂರು ಹೇಳಿದ್ದೀನಾ? ಮುಚ್ಕೊಂಡು ಹೊಗೆ ಕುಡೀತಿಲ್ವಾ? ನನ್ನಿಂದ ಏನು ತೊಂದರೆ ಆಯ್ತು ಹೇಳು” 

‘ಇದು ನಮ್ಮ ರೂಮೋ ಅವನದೋ’ ಎಂದು ಅನುಮಾನವಾಯಿತು ರಾಘವನಿಗೆ. ಸುತ್ತಮುತ್ತ ನೋಡಿದ. ಕಿಟಕಿಯ ಕಂಬಿಯಿಂದ ಎದುರು ಗೋಡೆಯ ಮೊಳೆಗೆ ಕಟ್ಟಿದ್ದ ನೈಲಾನ್ ಹಗ್ಗದ ಮೇಲೆ ಮುದುರಿದಂತೆ ಬಿದ್ದಿದ್ದ ಸ್ಯಾಂಟ್ರೋ ಜಾದೂ ಕಂಪನಿಯ ಕೆಂಪನೆಯ ಒಳಚಡ್ಡಿ, ಪಕ್ಕಕ್ಕೆ ಹಳದಿ ಬಣ್ಣಕ್ಕೆ ತಿರುಗಿದ್ದ ರೂಪಾ ಬನಿಯನ್ನು ‘ಇದು ನಿನ್ನದೇ ರೂಮು ಕಂದಾ’ ಎಂದು ರಾಘವನಿಗಷ್ಟೇ ಕೇಳುವಂತೆ ಚೀರಿ ಹೇಳಿತು.

“ಏನು ಸುಮ್ನೆ ಕುಳಿತ್ಬಿಟ್ಟೆ. ನನ್ನಿಂದಾದ ತೊಂದರೆ ಏನು ಅಂತಾನಾದ್ರೂ ಹೇಳು ನೋಡಾಣ” ರಾಘವನ ಮುಖದಿಂದಾಚೆಗೆ ಅನೂಜನ ದೃಷ್ಟಿ ಕದಲಲಿಲ್ಲ.

“ನೋಡನೂಜ್. ನಿನ್ನಿಂದಾಗೋ ದೊಡ್ಡ ತೊಂದರೆ ಅಂದ್ರೆ ನಿನ್ನ ಮಾತು. ಏನೂಂತ ಮಾತನಾಡ್ತೀಯೋ ಮಾರಾಯ. ನಿನ್ನೆಯಷ್ಟೇ ಅವಳನ್ನ…..ಅವಳ ಹೆಸರೇನಂದೆ”

“ಅವಳ ಹೆಸರು ಹೇಳೋದಿಕ್ಕೂ ಬೇಸರವಾಗುತ್ತೆ ನನಗೆ. ಅಮೃತ ಅಂತ”

“ಹ್ಞಾ ಅಮೃತ. ನಿನ್ನೆಯಷ್ಟೇ ಅವಳನ್ನ ಸಿಕ್ಕಾಪಟ್ಟೆ ಹೊಗಳುತ್ತಿದ್ದೆ. ಅವಳು ತುಂಬಾ ಒಳ್ಳೆಯವಳು. ನೋಡೋದಿಕ್ಕಂತೂ ಥೇಟ್ ದೇವತೆ; ನಕ್ಕಾಗ ಕೆನ್ನೆಯಲ್ಲಿ ಮೂಡೋ ಪುಟ್ಟ ಪುಟ್ಟ ಗುಳಿ ನೋಡಿಬಿಟ್ಟರಂತೂ ಮುಗಿದೇ ಹೋಯಿತು. ಆ ಗುಳೀಲೇ ಮುಳುಗಿ ಸತ್ತುಬಿಡೋಣಾಂತ ಅನ್ನಿಸುತ್ತೆ. ಒಂಚೂರು ಅಹಂಕಾರವಿಲ್ಲ ಹುಡುಗಿಗೆ. ಇದರೊಟ್ಟಿಗೆ ಇನ್ನೂ ಏನೇನೋ ಹೇಳ್ದೆ. ನಾನೂ ಕೇಳ್ದೆ. ಇವತ್ತಾಗಲೇ ಪೂರ್ತಾ ಉಲ್ಟಾ ಮಾತನಾಡ್ತಿದ್ದೀಯ. ಇದನ್ನೂ ಕೇಳೋ ಕರ್ಮ ಏನಿದೆ ನಮಗೆ. ನಿನ್ನ ಹುಚ್ಚುಚ್ಚು ಮಾತುಗಳಿಂದ ನಮಗೆಷ್ಟು ಬೇಸರವಾಗುತ್ತೆ ಅನ್ನೋದನ್ನಾದ್ರೂ ಯೋಚಿಸಬಾರದಾ ನೀನು” ಇಷ್ಟು ಹೇಳಿ ಅಭಯನ ಕಡೆಗೆ ನೋಡಿದ. ಅವನು ರೆಕಾರ್ಡಿನಿಂದ ತಲೆ ಮೇಲೆತ್ತಿರಲಿಲ್ಲ. ಅನೂಜನೂ ಮಾತನಾಡದೆ ಸುಮ್ಮನಿದ್ದ. ಕೈಗಡಿಯಾರದ ಕಡೆ ಕಣ್ಣಾಡಿಸಿದ. ಎರಡಕ್ಕೆ ಐದು ನಿಮಿಷವಿತ್ತು. “ಕಾಲೇಜಿಗೆ ಟೈಮಾಯ್ತು ನಡೀರಿ” ಅಂದ. ಹೊರಟರು. ದಾರಿಯಲ್ಲಿ ಯಾರೂ ಮಾತನಾಡಲಿಲ್ಲ. ಅಭಯ ಒಳಗೊಳಗೇ ನಗುತ್ತಿದ್ದ. ತಮ್ಮ ತಮ್ಮ ಪ್ರಾಕ್ಟಿಕಲ್ಸಿಗೆ ಹೆಜ್ಜೆ ಹಾಕುವ ಮೊದಲು ಅನೂಜ್ ರಾಘವನ ಕಡೆ ನೋಡಿ “ನೋಡು ರಾಘವ ಮಾತನಾಡೋದು ನನ್ನ ಹಕ್ಕು. ಅದರಿಂದ ನಿಮಗೆ ಬೇಸರವಾಗುತ್ತೆ ಅಂದ್ರೆ ಅದು ನಿಮ್ಮಗಳ ಸಮಸ್ಯೇನೆ ಹೊರತು ನನ್ನದಲ್ಲ. ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಬೇಕು” ಗಂಭೀರವಾಗಿ ಹೇಳಿದ. ಅವನ ಗಾಂಭೀರ್ಯವನ್ನು ನೋಡಿ ರಾಘವನಿಗೆ ನಗು ತಡೆಯಲಾಗಲಿಲ್ಲ. “ಥೂ ಹಲ್ಕಾ ನನ್ಮಗನೇ. ಉದ್ಧಾರವಾಗಲ್ಲ ನೀನು. ಬರ್ತೀನಿ ಟೈಮಾಯ್ತು. ನಾಳೆ ಜಗಳವಾಡೋಣ” ಎಂದ್ಹೇಳಿ ನಗುತ್ತಾ ಲ್ಯಾಬಿನ ಕಡೆಗೆ ಹೊರಟ.

No comments:

Post a Comment