May 22, 2015

ವಾಡಿ ಜಂಕ್ಷನ್ .... ಭಾಗ 11

wadi junction
Dr Ashok K R
“ಹಲೋ ಹಲೋ….” ಜಯಂತಿಯೆಂದು ಕೂಗಬೇಕೆಂದೂ ಗೊತ್ತಾಗಲಿಲ್ಲ. ದನಿ ಕೇಳಿ ಆಕೆ ನಡಿಗೆ ನಿಲ್ಲಿಸಿ ಹಿಂದೆ ತಿರುಗಿ ನೋಡಿದಾಗ ರಾಘವ ಅವಳ ಸಮೀಪವೇ ಬಂದಿದ್ದ.

“ನನ್ನ ಹೆಸರು ಹಲೋ ಅಲ್ಲ” ಸಿಡಿಲಿನ ಮೊರೆತ ಒಂದಷ್ಟು ಕಡಿಮೆಯಾಗಿತ್ತು.

“ಅದು ನನಗೂ ಗೊತ್ತು. ಆ ವಿಷಯ ಅತ್ಲಾಗಿರಲಿ. ನಮ್ಮ ಮನೆಯವರೇ ತಿಂಗಳ ಖರ್ಚಿಗೆ ಸಿಗರೇಟಿನ ಬೆಲೆಯನ್ನು ಲೆಕ್ಕಾ ಹಾಕಿ ಕೊಡ್ತಾರೆ. ಅವರೇ ನನ್ನನ್ನು ಕೇಳಲ್ಲ. ನೀನ್ಯಾರು ಕೇಳ್ಲಿ….. ಅದೂ ಹೋಗ್ಲಿ ನೀನ್ಯಾಕೆ ಕೇಳ್ತಾ ಇದ್ದೀಯಾ” ಜೋರಾಗಿದ್ದ ದನಿ ‘ಇದ್ದೀಯಾ’ಗೆ ಬರುವಷ್ಟರಲ್ಲಿ ಮೆದುವಾಗಿದ್ದಕ್ಕೆ ಅವಳ ಮುಖಾರವಿಂದ ವಹಿಸಿದ ಪಾತ್ರವನ್ನು ನಿರಾಕರಿಸುವಂತಿಲ್ಲ.

“ನಿನಗೆಲ್ಲಿ ಗೊತ್ತಾಗುತ್ತೆ. ಯಾಕೆ ಕೇಳ್ತಿದ್ದೀಯಾ ಅಂತೆ. ಮನುಷ್ಯರಿಗೆ ಅರ್ಥವಾಗುವ ವಿಷಯ. ನಿನಗೆಲ್ಲಿ ಗೊತ್ತಾಗುತ್ತೆ ಬಿಡು. ಬಾಯ್” ಎಂದ್ಹೇಳಿ ಹೊರಟುಹೋದವಳ ಕಣ್ಣು ತೇವಗೊಂಡಿದ್ದದ್ದು ಜ್ವರದ ತೀರ್ವತೆಗೋ ಅಥವಾ…. ತಲೆಕೊಡವಿ ರೂಮಿನೆಡೆಗೆ ನಡೆದಿದ್ದ ರಾಘವ.
‘ಅಬ್ಬಾ…. ಜಯಂತಿ!’ ಮತ್ತೊಮ್ಮೆ ಉಸಿರೆಳೆದುಕೊಂಡ.

ಎಂದಿಗಿಂತ ಅವತ್ತು ಹೆಚ್ಚೇ ಸಿಗರೇಟು ಸುಟ್ಟಿದ್ದ ರಾಘವ. ಎಲ್ಲಾ ಅಯೋಮಯ. “ಏನಾಯ್ತಲೇ ನಿನಗೆ?” ಎಂದು ಕೇಳಿದ ಅಭಯನಿಗೆ “ಹಿಂಗೆ ಸುಮ್ಮನೆ ಬೇಜಾರು” ಎಂದ್ಹೇಳಿ ತೇಲಿಸಿದ್ದ. ಅವಳೊಡನೆ ಮಾತಾಡಿದ್ದೂ ಇಲ್ಲ. ಅಪರೂಪಕ್ಕೆ ನೋಡಿದಾಗಲೊಮ್ಮೆ ಚೆನ್ನಾಗಿದ್ದಾಳಲ್ವಾ ಎಂದನ್ನಿಸಿದ್ದು ನಿಜವಾದರೂ ಅದರಾಚೆಗೆ ಯಾವ ಯೋಚನೆಗಳೂ ಹೊಳೆದಿರಲಿಲ್ಲ. ತಲೆಯಲ್ಲಿದ್ದ ನೂರಾರು ರೀತಿಯ ಚಿಂತೆ – ಚಿಂತನೆಗಳು, ಸುತ್ತಲಿದ್ದ ಗೆಳೆಯರ ಚಿತ್ರ ವಿಚಿತ್ರ ವಿಚಾರಗಳು, ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿಹೋಗಿದ್ದವನಿಗೆ ಬೇರೆ ವಿಷಯಗಳೆಡೆಗೆ ಅನಾದಾರವಿರದಿದ್ದರೂ ಆಸಕ್ತಿಯಂತೂ ಇರಲಿಲ್ಲ. ನಮ್ಮ ತರಗತಿಯ ಅಸ್ಪೃಶ್ಯ ಹುಡುಗರಲ್ಲೊಬ್ಬನಾದ ನನ್ನನ್ನು ಮಾತನಾಡಿಸಿದ್ದೂ ಅಲ್ಲದೆ ಮೊದಲ ದಿನವೇ ಸಿಗರೇಟು ಸೇದಿದ್ದಕ್ಕೆ ಬಯ್ದು ಹೋದಳಲ್ಲ. …. ಎಷ್ಟು ಧಿಮಾಕು ಅವಳಿಗೆ ಎಂದು ಕೋಪ, ಖುಷಿ, ಅಚ್ಚರಿ ಇವುಗಳೆಲ್ಲವನ್ನು ಮೀರಿದ ಭಾವ ಆವರಿಸಿ ಹಾಗೇ ಕಣ್ಣು ಮುಚ್ಚಿದ.

ಈ ಘಟನೆಯಾದ ನಂತರ ಜಯಂತಿ ಎದುರಿಗೆ ಸಿಕ್ಕರೆ ರಾಘವ ಗಲಿಬಿಲಿಗೊಳ್ಳುತ್ತಿದ್ದ. ತಲೆತಗ್ಗಿಸಿ ಹೋಗುತ್ತಿದ್ದ ಆಕೆ ಇವನತ್ತಲೇ ನೋಡುತ್ತಿದ್ದಾಗ್ಯೂ ಇವನೇ ತಲೆಬಗ್ಗಿಸಿಯೋ ಬೇರೆತ್ತಲೋ ನೋಡುವಂತೆ ನಟಿಸುತ್ತಿದ್ದನಾದರೂ ಕಣ್ಣು ಅಂಚಿಗೆ ಸರಿದು ಅವಳೆಡೆಗೆ ಹರಿಯುತ್ತಿದ್ದುದು ಸುಳ್ಳಲ್ಲ. ಅಂದೊಮ್ಮೆ ಅದೇ ಅಂಗಡಿಗೆ ನಾಲ್ಕೂ ಗೆಳೆಯರು ಹೋಗಿದ್ದಾಗ ಜಯಂತಿಯೂ ಅಲ್ಲೇ ಇದ್ದಳು. ಅಭಯ ಅಂಗಡಿಯವನಿಗೆ ನಾಲ್ಕು ಸಿಗರೇಟ್ ತರುವಂತೆ ಕೈಸನ್ನೆ ಮಾಡಿದ. ಇವನಿಗೋ ಉಭಯಸಂಕಟ, ಯಾಕೋ ಅವಳ ಮುಂದೆ ಸಿಗರೇಟು ಸೇದಲೂ ಮನಸ್ಸಿಲ್ಲ. ಸೇದೋದಿಲ್ಲ ಅಂದರೆ ಯಾಕೆ ಅಂತ ಇವರು ಪ್ರಶ್ನೆ ಮಾಡ್ತಾರೆ. ಏನು ಮಾಡೋದು ಅಂತ ಯೋಚಿಸುತ್ತಲೇ ಜಯಂತಿಯೆಡೆಗೆ ನೋಡಿದ. ಅವಳು ಇವನತ್ತಲೇ ಗಮನವಿರಿಸಿದ್ದಳು. ಪಕ್ಕದಲ್ಲಿ ಕುಳಿತಿದ್ದ ಅವಳ ಗೆಳತಿ ಪ್ರೇರಣಾ ಇವಳನ್ನೇನೋ ರೇಗಿಸಿ ಇವಳು ಹುಸಿಮುನಿಸು ತೋರಿಸಿ ನಕ್ಕು – ನನ್ನ ಬಗ್ಗೆಯೇ ಮಾತನಾಡಿದ್ರಾ? ಅಥವಾ ಇದೆಲ್ಲಾ ನನ್ನ ಭ್ರಮೆಯಾ? ಒಂದೂ ತಿಳಿಯದಂತಾದವನಿಗೆ ಅಭಯ “ತಗೊಳ್ಳೋ ಸಿಗರೇಟು” ಎಂದಾಗಲೇ ವಾಸ್ತವಕ್ಕೆ ಬಂದಿದ್ದು. “ಇಲ್ಲ. ನನಗೆ ಬೇಡ” ಎಂದ. “ಯಾಕಪ್ಪಾ ಸಿಗರೇಟ್ ಬಿಟ್ಬಿಟ್ಟಾ ಹೆಂಗೆ? ನಮಗೆಲ್ಲಾ ಸೀನಿಯರ್ ನೀನು. ನೀನೇ ಸಿಗರೇಟು ಬಿಟ್ಟುಬಿಟ್ಟರೆ ತಂಬಾಕು ಬೆಳೆಯೋ ರೈತರೆಲ್ಲಾ ಏನು ಮಾಡಬೇಕು?” ನಗುತ್ತಾ ಕೇಳಿದ. “ಇಲ್ಲೋ ಮಾರಾಯ. ಯಾಕೋ ಹೊಟ್ಟೆ ಉರಿ ಉರಿ. ಸದ್ಯಕ್ಕೆ ಬೇಡ ಅಷ್ಟೇ” ಎಂದ. ಅಭಯ ತಲೆಯಾಡಿಸಿ ಒಂದು ಸಿಗರೇಟನ್ನು ಜೇಬಿನೊಳಗೆ ಹಾಕಿಕೊಂಡು ಇನ್ನೆರಡು ಸಿಗರೇಟನ್ನು ತುಷಿನ್ ಮತ್ತು ಕ್ರಾಂತಿಗೆ ಕೊಟ್ಟು ತಾನೂ ಒಂದನ್ನು ಹಚ್ಚಿಕೊಂಡ. ಎರಡು ದಿನದ ಹಿಂದೆ ಮೈಸೂರು ಫಿಲ್ಮ್ ಸೊಸೈಟಿಯಲ್ಲಿ ನೋಡಿದ ಖಾಮೋಷ್ ಪಾನಿ ಎಂಬ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು ತುಷಿನ್ ಮತ್ತು ಕ್ರಾಂತಿ. ಅಭಯ್ ಅವರ ಮಾತುಗಳನ್ನು ಮೌನವಾಗಿ ಆಲಿಸುತ್ತಾ ಕುಳಿತಿದ್ದ. ಇಸ್ಲಾಂ ಹೆಸರಿನ ಭಯೋತ್ಪಾದನೆಯ ಬಗ್ಗೆ ಇದ್ದ ಆ ಚಿತ್ರ ಕ್ರಾಂತಿಗೆ ಬಹುವಾಗಿ ಇಷ್ಟವಾಗಿತ್ತು. ಧರ್ಮಿಷ್ಠರಾಗಿ, ಧರ್ಮಾಂಧರಾಗಿರದ ಒಂದಿಡೀ ಹಳ್ಳಿ ಹೇಗೆ ಕೆಲವೇ ಕೆಲವು ಮೂಲಭೂತವಾದಿಗಳ ವಿಚಾರಗಳಿಂದ ತಳಮಳಕ್ಕೊಳಗಾಗಿ ಬಹುತೇಕರು ವಿರೋಧಿಸಿದರೂ, ಒಂದಷ್ಟು ಯುವಕರು ಅವರ ವಿಚಾರಗಳ ಪ್ರಭಾವಕ್ಕೊಳಗಾಗಿ ಇಡೀ ಹಳ್ಳಿಯೇ ಅಧಃಪತನದತ್ತ ಸಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದರು. ತುಷಿನ್ ಹಿಂದೊಮ್ಮೆ ಟಿ.ವಿಯಲ್ಲಿ ನೋಡಿದ್ದ The Partition ಚಿತ್ರದ ಬಗ್ಗೆ ಹೇಳುತ್ತಿದ್ದ. ರಾಘವ ಅವರ ಮಾತುಗಳನ್ನು ಆಲಿಸುವಂತೆ ಮಾಡುತ್ತಾ ಜಯಂತಿಯತ್ತಲೇ ನೋಡುತ್ತಿದ್ದ. ಉಳಿದ ಮೂವರೂ ಅವಳಿಗೆ ಬೆನ್ನು ಮಾಡಿ ಕುಳಿತಿದ್ದರಿಂದ ಇವನ ನಟನೆ ಅವರಿಗೆ ತಿಳಿಯಲಿಲ್ಲ. ಜಯಂತಿ ಮತ್ತು ಪ್ರೇರಣಾ ದುಡ್ಡು ಕೊಟ್ಟು ಹೊರನಡೆದರು. ಜಯಂತಿಯ ಕಣ್ಣಿನಲ್ಲಿ ‘ಥ್ಯಾಂಕ್ಸ್ ಸಿಗರೇಟು ಸೇದದೇ ಇದ್ದುದಕ್ಕೆ’ ಎಂಬ ಭಾವವಿತ್ತು. ಅವರಿಬ್ಬರೂ ಮುಖ್ಯರಸ್ತೆಯಿಂದ ಎಡಕ್ಕೆ ಹಾಸ್ಟೆಲ್ಲಿನ ಕಡೆಗೆ ಹೊರಳುತ್ತಿದ್ದಂತೆ ರಾಘವ ಅಭಯನ ಜೇಬಿಗೆ ಕೈಹಾಕಿ ಸಿಗರೇಟು ತೆಗೆದುಕೊಂಡ. “ಯಾಕಪ್ಪಾ ಇಷ್ಟು ಬೇಗ ಹೊಟ್ಟೆ ಉರಿ ಕಡಿಮೆಯಾಗಿ ಹೋಯ್ತ?” ಚಿತ್ರದ ಗುಂಗಿನಿಂದ ಹೊರಬರುತ್ತಾ ಕೇಳಿದ ಕ್ರಾಂತಿ. “ಬಿಡೊಲೋ. ಒಂದು ಮಾತ್ರೆ ನುಂಗಿದ್ರೆ ಸರಿಯಾಗುತ್ತೆ. ಹೊಟ್ಟೆ ಉರಿಗೆ ಹೆದರ್ಕೊಂಡು ಸಿಗರೇಟು ಸೇದದಿರೋ ಪಾಪ ಮಾಡಲಿಕ್ಕಾಗುತ್ತಾ?” ಎನ್ನುತ್ತಾ ಸಿಗರೇಟು ಹಚ್ಚಿಕೊಂಡ.

“ಒಂದ್ನಿಮಿಷ ತಡಿ ಬಂದೆ” ಎಂದ್ಹೇಳಿ ಪ್ರೇರಣ ಹಿಂದಕ್ಕೆ ತಿರುಗಿ ಕಳ್ಳಹೆಜ್ಜೆಯನ್ನಿಡುತ್ತಾ ಮುಖ್ಯರಸ್ತೆಯ ಅಂಚಿಗೆ ಬಂದು ನೋಡಿದಳು. ರಾಘವ ಆನಂದವಾಗಿ ಹೊಗೆಯ ಜೊತೆ ನಲಿದಾಡುತ್ತಿದ್ದ. ಜೋರಾಗಿ ನಗುತ್ತಾ ಜಯಂತಿಯೆಡೆಗೆ ಓಡಿಬಂದು “ನಾನಂದುಕೊಂಡಂತೆ ಆಯ್ತು ಕಣೇ. ನೀನೀಕಡೆ ಬರುತ್ತಿದ್ದಾಗೆ ಸಿಗರೇಟು ಹಚ್ಚಿ ಕುಳಿತಿದ್ದಾನೆ ಭೂಪ” ಎಂದಳು. ಜಯಂತಿಗೆ ಒಂದಷ್ಟು ಬೇಸರವಾದರೂ ತೋರ್ಪಡಿಸಿಕೊಳ್ಳದೆ “ಇರ್ಲಿ ಬಿಡು. ಕೊನೇಪಕ್ಷ ನನ್ಮುಂದೇನಾದರೂ ಸೇದಲಿಲ್ಲವಲ್ಲ” ಎಂದು ತನಗೇ ಸಮಾಧಾನ ಹೇಳಿಕೊಂಡಳು. “ಹೌದಮ್ಮ. ನಿನ್ನ ಹುಡುಗನನ್ನು ಎಲ್ಲಿ ಬಿಟ್ಟುಕೊಡ್ತೀಯ. ಆದ್ರೂ ಜಯಂತಿ ಒಂದು ಮಾತು. ನಿನಗೆ ಹೋಲಿಸಿದರೆ ಅವನು ತುಂಬಾ ಚೆನ್ನಾಗೇನೂ ಇಲ್ಲ. ಸಾರಿ ಸಾರಿ, ಚೆನ್ನಾಗೇ ಇದ್ದಾನೆ ಅಂತಿಟ್ಕೋ. ಜೊತೆಗೆ ಹುಡುಗೀರಿಗೆ ಕಾಮನ್ನಾಗಿ ಇಷ್ಟವಾಗೋ ಗುಣಗಳೂ ಅವನಿಗೆ ಇರೋದು ಡೌಟು. ಅಂಥವನನ್ನು ನೀನು ಇಷ್ಟಪಟ್ಟಿದ್ದಾದರೂ ಯಾಕೆ ಅಂತ”. ಕಾಲೇಜಿನ ಗೇಟು ತಲುಪುವವರೆಗೆ ಸುಮ್ಮನೆಯೇ ಇದ್ದಳು ಜಯಂತಿ. “ಯಾಕೆ ಅನ್ನೋದು ನನಗೂ ಸರಿಯಾಗಿ ತಿಳಿದಿಲ್ಲ ಕಣೇ. ಅವನನ್ನು ನೋಡಿದ ದಿನಾನೇ ಏನೋ ಆಕರ್ಷಿಸಿತು. ಯಾರಿಗೂ ಕೇರ್ ಮಾಡದಿರುವ ಹಾಗಿರುವ ಅವನ ಕಣ್ಣುಗಳೋ…. ಏನೋಪ್ಪಾ ಇಂಥಾದ್ದೇ ಕಾರಣ ಅಂಥ ನನಗೂ ಗೊತ್ತಿಲ್ಲ. ಯಾರಿಗೆ ಗೊತ್ತು. ಅವನೆಡೆಗೆ ಈಗಿರೋ ಆಕರ್ಷಣೆ ಅಪ್ಪಿತಪ್ಪಿ ನಾಳೆ ಆತ ಪರಿಚಿತನಾದ ನಂತರ ಕಡಿಮೆಯಾಗಿಬಿಡಬಹುದೋ ಏನೋ ಅದಿಕ್ಕೆ ಒಮ್ಮೊಮ್ಮೆ ಅನ್ನಿಸುತ್ತೆ, ಆತನ ಬಗ್ಗೆ ಕನಸುಗಳೇ ಇರಲಿ, ಆ ಕನಸುಗಳು ನನಸಾಗೋದೇ ಬೇಡ ಅಂತ. ಕನಸು ನನಸಾಗೋ ಭರದಲ್ಲಿ ಭ್ರಮನಿರಸನಾಗಿಬಿಡುತ್ತೋ ಅನ್ನೋ ಭಯ” ಮಾತು ಮುಂದುವರಿಸುತ್ತಾ “ಈ ನಾಲ್ಕೂ ಜನರ ಬಗ್ಗೆ ನಿನಗೇನನ್ನಿಸುತ್ಯೇ ಪ್ರೇರಣ”

“ಹುಚ್ ನನ್ ಮಕ್ಳು ಅನ್ಸುತ್ತೆ” ನಕ್ಕಳು. ಜಯಂತಿಯ ಮುಖದಲ್ಲಿದ್ದ ಗಂಭೀರತೆಯನ್ನು ನೋಡಿ “ಇನ್ನೇನು ಹೇಳೋದೆ ಜಯಂತಿ. ಕ್ಲಾಸಿನ ಬಹುತೇಕರು ಫಿಲಮ್ಮೂ, ಟ್ರಿಪ್ಪೂ, ಸುತ್ತಾಟ, ಶಾಪಿಂಗೂ ಅಂತ ತಿರುಗಾಡ್ತಾ ಲೈಫ್ ನ ಎಂಜಾಯ್ ಮಾಡ್ತೀವಿ. ಇನ್ನೊಂದಷ್ಟು ಜನ ಓದ್ಲಿಕ್ಕೇ ಹುಟ್ಟಿದ್ದಾರೇನೋ ಎಂಬಂತೆ ಪಠ್ಯಪುಸ್ತಕಗಳಿಂದಾಚೆಗೆ ಬರೋದೇ ಇಲ್ಲ. ಇವರು ಅಲ್ಲೂ ಸಲ್ಲದೆ ಇಲ್ಲೂ ಇಲ್ಲದೆ ಏನು ಮಾಡ್ತಿದ್ದೀವಿ ಅನ್ನೋದನ್ನು ಸರಿಯಾಗಿ ತೋರ್ಪಡಿಸದೆ ಇರುತ್ತಾರಲ್ಲ. ಈ ರೀತಿಯಾಗೂ ಸ್ಟೂಡೆಂಟ್ಸಿರಬಹುದು ಅನ್ನೋ ಕಲ್ಪನೇನೆ ನನಗೆ ಬರಲ್ಲ. ನಮ್ಮ ಬ್ಯಾಚಷ್ಟೇ ಅಲ್ಲ. ಪ್ರತಿ ಬ್ಯಾಚಲ್ಲೂ ಇಂಥ ಕೆಲವು ಹುಡುಗ್ರು ಇದ್ದೇ ಇರ್ತಾರೆ. ಆದ್ರೂ ನಿಜ ಹೇಳಬೇಕೂ ಅಂದ್ರೆ ನಮ್ಮ ಬ್ಯಾಚಿನ ಕೆಲವು ಹುಡುಗ್ರು ಯಾವಾಗಲೂ ಅವರು ನಾಲ್ಕೂ ಜನ ಸರಿ ಇಲ್ಲ ಸರಿಯಿಲ್ಲ ಅಂತ ಬಾಯಿ ಬಡಕೋತಾರೆ. ನನಗಂತೂ ಅವರಲ್ಲಿ ಯಾವ ಕೆಟ್ಟತನಾನೂ ಕಂಡಿಲ್ಲಪ್ಪ. Ofcourse ಸಿಗರೇಟ್ ಸೇದ್ತಾರೆ, ಕುಡೀಲೂಬಹುದು….ಅಷ್ಟಕ್ಕೇ ಕೆಟ್ಟೋರಾಗಿಬಿಡೋದಿಲ್ಲ ಅಲ್ವಾ. ಅವರು – ಡಿಸೆಕ್ಷನ್ನಿನಲ್ಲಿ ನನ್ನ ಟೇಬಲ್ಲಿನಲ್ಲಿರೋ ರಾಘವನ ಬಗ್ಗೆಯಷ್ಟೇ ಹೇಳಬಲ್ಲೆ ಬೇರೆಯವರ ಬಗ್ಗೆ ಕೆಟ್ಟದಾಗಿ, atleast ನಮ್ಮ ಮುಂದೆ ಮಾತನಾಡಿದ್ದು ನೋಡಿಲ್ಲ. ನಾನೇ ಏನಾದ್ರೂ ಕೇಳಿದ್ರೆ ಎಷ್ಟು ಹೇಳಬೇಕೋ ಅಷ್ಟೇ. ತೂಕಕ್ಕೆ ಹಾಕಿದಂತೆ ಮಾತು. ಅವರು ಒಳ್ಳೆಯವರಾ ಗೊತ್ತಿಲ್ಲ. ಕೆಟ್ಟವರಂತೂ ಇರಲಿಕ್ಕಿಲ್ಲ”

“ಥ್ಯಾಂಕ್ಸ್”…. “ನನ್ನ ಟೇಬಲ್ಲಲ್ಲಿರೋ ಕ್ರಾಂತೀನೂ ಅಷ್ಟೇ. ಮಾತು ಕಡಿಮೇನೆ. ಆದರೆ ಅವತ್ತೊಂದಿನ ಟೇಬಲ್ಲಲ್ಲಿ ಮಾತು ಪಾಠ ಬಿಟ್ಟು ಎತ್ತೆತ್ತಲೋ ಹರಿದು ಕಥೆ ಕಾದಂಬರಿಗಳ ಕಡೆಗೆ ಹರೀತು. ಸಿಡ್ನಿ ಶೆಲ್ಡನ್, ರಾಬಿನ್ ಕುಕ್, ಚೇತನ್ ಭಗತ್ – ಹೀಗೆ ಒಬ್ಬೊಬ್ಬರು ಒಂದೊಂದು ಪುಸ್ತಕದ ಬಗ್ಗೆಯೋ ಲೇಖಕನ ಬಗ್ಗೆಯೋ ಮಾತನಾಡ್ತಿದ್ವಿ. ನಾನೇ ಕೇಳಿದ್ನೋ ಇನ್ಯಾರು ಕೇಳಿದ್ರೋ ನೆನಪಿಲ್ಲ ನೀನು ಪುಸ್ತಕಳನ್ನು ಓದಲ್ವಾ ಕ್ರಾಂತಿ ಎಂದು ಕೇಳಿದಾಗ. ‘ಓದ್ತೀನಿ’ ಅಂದ. ‘ನಿನ್ನ ಫೇವರೇಟ್ ಲೇಖಕ’ ಅಂತ ಕೇಳಿದ್ದಕ್ಕೆ ‘ಸದ್ಯಕ್ಕೆ ವ್ಯಾಸರಾಯ ಬಲ್ಲಾಳರು’ ಅಂದಿದ್ದಕ್ಕೆ ಆ ಜ್ಯೋತಿ ಜೋರಾಗಿಯೇ ‘ಓ ಕನ್ನಡ ಪುಸ್ತಕ ಓದ್ತೀಯಾ ನೀನು’ ಎಂದು ಒಂದಷ್ಟು ವ್ಯಂಗ್ಯವಾಗಿ ಹೇಳಿದಳು ನೋಡು. ಆ ಕ್ರಾಂತಿ ಇರಿಯೋ ಕಣ್ಣಿನಿಂದ ಅವಳೆಡೆಗೆ ನೋಡುತ್ತಾ ‘ನೀವುಗಳು ಓದೋ ರೀತಿಯ ಇಂಗ್ಲೀಷ್ ಪುಸ್ತಕಗಳನ್ನು ಓದಿದ್ದೀನಿ ಒಂದೆರಡು. ಒಂದಷ್ಟು ತಿರುವುಗಳು, ಬಹಳಷ್ಟು ಸೆಕ್ಸೂ…. ಇದಕ್ಕಿಂತ ಹೆಚ್ಚಾಗಿ ಅವುಗಳಲ್ಲಿ ತಿಳಿದುಕೊಳ್ಳಬಹುದಾದ್ದೇನೂ ಇರಲಿಲ್ಲ. ಸೆಕ್ಸ್ ಬಗ್ಗೇನೆ ಓದಬೇಕು ಅಂದ್ರೆ ಲ್ಯಾಂಡ್ಸ್ ಡೌನ್ ಬಿಲ್ಡಿಂಗ್ ಎದುರಿಗೆ ಸೆಕೆಂಡ್ ಹ್ಯಾಂಡಿನಲ್ಲಿ ಐದು ರುಪಾಯಿಗೆ ಒಂದು ಮೋಜು ಗೋಜು ಸಿಗುತ್ತೆ’ ಅಂದದ್ದಕ್ಕೆ ಜ್ಯೋತಿ ಅಲ್ಲೇ ಕಣ್ಣೀರಾದಳು. ಇವನು ಸಮಾಧಾನ ಮಾಡೋದಿರಲಿ ಅವಳೆಡೆಗೆ ತಿರುಗಿಯೂ ನೋಡಲಿಲ್ಲ. ನಾವೆಲ್ಲಾ ಶೋಕಿಗೋ, ಪ್ರೆಸ್ಟೀಜಂತ ತಿಳ್ಕೊಂಡೋ ಇಂಗ್ಲೀಷ್ ಪುಸ್ತಕದ ಹೆಸರು ಹೇಳಿದ್ದೆವೇನೋ ಅಂತ ನನಗೇ ಅನ್ನಿಸ್ತು. ಇನ್ನೂ ವಿಚಿತ್ರ ಅಂದ್ರೆ ಇನ್ನೇನು ಕ್ಲಾಸಿನಿಂದ ಹೊರಡಬೇಕಾದರೆ ‘ಜ್ಯೋತಿ’ ಎಂದು ಕೂಗಿದ. ಸಾರಿ ಕೇಳೋದಿಕ್ಕಿರಬೇಕು ಅಂದುಕೊಂಡೆ. ಅವಳ ಕೈಗೊಂದು ಎಂಟುನೂರು ಪುಟದ ಪುಸ್ತಕ ಕೊಟ್ಟು ‘ನೀವು ಹೇಳೋ ಪುಸ್ತಕಗಳು ಆ ಕ್ಷಣದ ಮಟ್ಟಿಗಷ್ಟೇ ತೃಪ್ತಿ ಕೋಡೋದು. ಓದಿ ಮುಗಿಸಿ ಎರಡು ದಿನ ಕಳೆಯುವಷ್ಟರಲ್ಲಿ ಪಾತ್ರಗಳು, ಕಥೆ ಯಾವುದೂ ನೆನಪಿನಲ್ಲಿರೋದಿಲ್ಲ. ಈ ಪುಸ್ತಕ ಓದಿ. ವ್ಯತ್ಯಾಸ ನಿಮಗೇ ಗೊತ್ತಾಗುತ್ತೆ’ ಎಂದ್ಹೇಳಿ ಹೊರಟು ಹೋದ. The Fountain Head ಅಂತ ಪುಸ್ತಕದ ಹೆಸರು. ಜ್ಯೋತೀನೂ ತಿರುಗಿಸಿಯೇ ತಿರುಗಿಸಿದಳು. ‘ಇಂಗ್ಲೀಷ್ ಪುಸ್ತಕ ಓದ್ತೀವಿ ಅನ್ನೋ ಕೊಬ್ಬಿತ್ತು. ಮೊದಲ ಓದಿಗೆ ಅರ್ಥ ಮಾಡಿಕೊಳ್ಳುವುದೇ ಕಷ್ಟವಾದ ಪುಸ್ತಕ ಕೊಟ್ಟು ಸರಿಯಾಗೇ ಬುದ್ಧಿ ಕಲಿಸಿದ’ ಎಂದು ನಗುತ್ತಲೇ ಸೋಲು ಸ್ವೀಕರಿಸಿ ಒಂದು ವಾರಕ್ಕೇ ವಾಪಸ್ಸು ಮಾಡಿದಳು. ಅವನು ಏನೂ ಮಾತನಾಡಲಿಲ್ಲ. ನಂತರವೂ ಅವಳ ಜೊತೆ ಮಾತನಾಡಿದ್ದು ನೋಡಿಲ್ಲ”

“ಇವರು ನಿಜಕ್ಕೂ ವಿಚಿತ್ರವೋ ಅಥವಾ ವಿಚಿತ್ರ ನಾವು ಅನ್ನುವ ಹಾಗೆ ನಟಿಸುತ್ತಾರೋ? ಹೇಳೋದು ಕಷ್ಟಾನೇ. ಅವರು ಇಷ್ಟು ನಿಗೂಢವಾಗಿರೋದಿಕ್ಕೇ ಅಲ್ವಾ ಅವರೆಡೆಗೆ ನಮಗೆ ಕುತೂಹಲ” ಎಂದು ಕೇಳಿದಳು ಪ್ರೇರಣ. ಹೌದೆಂಬಂತೆ ತಲೆಯಾಡಿಸಿದಳು ಜಯಂತಿ.

No comments:

Post a Comment