Dr Ashok K R
ಮೊನ್ನೆ ಭಾನುವಾರ ಬೆಳಿಗ್ಗೆ ಹತರಾದ ಡಾ.ಎಂ.ಎಂ.ಕಲಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಲು ಬೆಂಗಳೂರಿನ ಟೌನ್ ಹಾಲ್ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಬೋಳುವಾರು ಮೊಹಮದ್ ರವರ ಪರಿಚಯವಾಯಿತು. ಹೊಸಬನೊಡನೆ ಸರಾಗವಾಗಿ ಮಾತನಾಡುತ್ತಿದ್ದರು. ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಅವರ ಧ್ವಜವನ್ನು ಹೊರತೆಗೆದಾಗ ‘ಯಾವ ಸಂಘದ ಕಾರ್ಯಕ್ರಮವೂ ಅಲ್ಲ. ಇಲ್ಲಿ ಫ್ಲ್ಯಾಗ್ ಇಟ್ಕೊಂಡು ಪ್ರಚಾರ ಮಾಡ್ಕೊಳ್ಳೋದ್ಯಾಕೆ’ ಎಂದು ರೇಗಿದರು. ಉಳಿದವರೂ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಧ್ವಜಗಳನ್ನು ಮಡಿಚಿಟ್ಟರು. ‘ಏನ್ ಕರ್ಮಾರೀ ಇವರ್ದು, ಅರವತ್ತು ವರ್ಷ ವಯಸ್ಸಾದ್ರೆ ಏನೋ ಮುತ್ಸದ್ಧಿ ಅಂತ ತೋರಿಸ್ಕೊಳ್ಳೋ ಚಟಕ್ಕೆ ಗಡ್ಡ ಬಿಟ್ಕೊಳ್ಲಿ. ಇಪ್ಪತ್ತು ವರ್ಷಕ್ಕೆ ಗಡ್ಡ ಬಿಟ್ಕೊಂಡು ಅಸಹ್ಯವಾಗಿ ಕಾಣ್ತಾರಪ್ಪ’ ಎಂದು ಗೊಣಗಿದರು. ನನ್ನ ಕುರುಚಲು ಗಡ್ಡ ಕೆರೆದುಕೊಂಡೆ. ಜಿ.ರಾಮಕೃಷ್ಣರವರನ್ನು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಬೇಕೆಂದು ಮುಂದಕ್ಕೆ ಕರೆದರು. ಆ ವಯಸ್ಸಿನಲ್ಲೂ ಸಾಹಿತಿ – ಸಂಶೋಧಕನ ಹತ್ಯೆಗೆ ಪ್ರತಿಭಟನೆ ಸೂಚಿಸಲು ಬಂದಿದ್ದ ಜಿ.ಆರ್ ಟೌನ್ ಹಾಲಿನ ಮೆಟ್ಟಲಿಳಿದು ಮೈಕ್ ಕೈಗೆತ್ತಿಕೊಳ್ಳುವಷ್ಟರಲ್ಲಿ ಗಿರೀಶ್ ಕಾರ್ನಾಡ್ ಆಗಮಿಸಿದರು. ಟಿವಿ ವಾಹಿನಿಯವರೆಲ್ಲರೂ ಮೈಕು ಕ್ಯಾಮೆರಾಗಳೊಂದಿಗೆ ಗಿರೀಶ್ ಕಾರ್ನಾಡರತ್ತ ಧಾವಿಸಿದರು. ಜಿ.ಆರ್ ಮಾತನಾಡಲಿ ಮೊದಲು ಎಂದು ಕೆಲವರು ಕೂಗಿದರೂ ವಾಹಿನಿಯವರದು ಜಾಣ ಕಿವುಡು. ಮೈಕ್ ಹಿಡಿದುಕೊಂಡ ಜಿ.ಆರ್ ಮೌನದಿಂದ ನಿಂತಿದ್ದರು. ಬಿಡಿ, ಸಾಮಾನ್ಯರಿಗೆ ಗಿರೀಶ್ ಕಾರ್ನಾಡರನ್ನಷ್ಟೇ ಗುರುತಿಸುವುದು ಸಾಧ್ಯ, ಕಾರಣ ಅವರೊಬ್ಬ ನಟರಾದ್ದರಿಂದ ಅಲ್ಲಿಲ್ಲಿ ನೋಡಿರುತ್ತೇವೆ. ಮಾಧ್ಯಮದವರಿಗಾದರೂ ಯಾರ ಮಾತಿಗೆ ನಾವು ಅಡ್ಡಿಪಡಿಸುತ್ತಿದ್ದೇವೆ, ಯಾರು ನಮ್ಮಿಂದ ಕಾಯುವಂತಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಡವೇ? ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸುವವರ ಸಂಖೈ ಹೆಚ್ಚು, ಅವರ ಮಾತಿಗೆ ಕೊನೇಪಕ್ಷ ಟಿವಿಯಲ್ಲಿ ಟಿ.ಆರ್.ಪಿ ಹೆಚ್ಚು ಎನ್ನುವುದನ್ನು ಒಪ್ಪೋಣ. ಗಿರೀಶ್ ಕಾರ್ನಾಡರದ್ದೇ ಬೈಟ್ ತೆಗೆದುಕೊಳ್ಳಲಿ; ಆದರೆ ಆ ಬೈಟಿಗಾಗಿ ಒಂದರೆಕ್ಷಣ ಕಾಯುವಷ್ಟೂ ಪುರುಸೊತ್ತಿಲ್ಲದಂತಾಯಿತೇ ನಮ್ಮ ಮಾಧ್ಯಮ ಮಿತ್ರರಿಗೆ? ಇಷ್ಟೊಂದು ಸಂವೇದನಾರಹಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯವಾದರೂ ಏನು? ‘ಆ ಟಿವಿಯವರು ಬೈಟ್ ತೆಗೆದುಕೊಂಡಿದ್ದಾರೆ. ನೀನ್ಯಾಕೆ ತೆಗೆದುಕೊಂಡಿಲ್ಲ’ ಎಂದವರ ಮಾಲೀಕರು ಬೈಯ್ಯುತ್ತಾರಾ?
ಮನೆಗೆ ವಾಪಸ್ಸಾದ ನಂತರ ಟಿವಿ ಹಾಕಿದರೆ ವಾಹಿನಿಯೊಂದರಲ್ಲಿ ಶಿವರಾಜ್ ಕುಮಾರ್ ತನ್ನ ಭಾವೀ ಅಳಿಯನಿಗೆ ಗಿಫ್ಟಾಗಿ (ಇದು ವರದಕ್ಷಿಣೆಯೇ ಅಲ್ಲವೇ?!) ಕೊಡುವ ಕಾರಿನ ಬಗೆಗಿನ ಚರ್ಚೆ! ಭಾವೀ ಅಳಿಯನ ಸಂದರ್ಶನ ಬೇರೆ... ಥೂ ಇವರ ಯೋಗ್ಯತೆಗೆ ಎಂದುಕೊಂಡೆ. ಸಹೋದ್ಯೋಗಿಯ ಬಗ್ಗೆ ಇದೇ ವಿಷಯ ಚರ್ಚಿಸುವಾಗ ‘ರೀ. ಅಳಿಯನ ಸಂದರ್ಶನವೇ ವಾಸಿ. ಅಡುಗೆ ಮಾಡೋರತ್ರ, ಡೆಕೊರೇಷನ್ ಮಾಡೋರ್ ಮುಖದ್ ಮುಂದೆ ಮೈಕಿಡ್ದು ಶಿವಣ್ಣನ ಮಗಳ ಮದುವೆ ಕೆಲಸ ಮಾಡ್ತಿದ್ದೀರಲ್ಲ ನಿಮಗೇನನ್ಸುತ್ತೆ? ಗೀತಕ್ಕ ನಿಮಗೇ ಇಂತಿಂತದೇ ಮಾಡ್ಬೇಕು ಅಂದ್ರಾ? ಅಂತೆಲ್ಲ ಕೇಳ್ತಿದ್ರು’ ಅಂದರು. ಮದುವೆ ಹಿಂದಿನ ದಿನದ ಸಮಾರಂಭ, ಮದುವೆ ದಿನದ ಸಂಪೂರ್ಣ ಲೈವ್ ಪ್ರಸಾರ....... ಮಾಧ್ಯಮ ಉದ್ಯಮವೆಂಬುದು ಸತ್ಯ, ಲಾಭದಲ್ಲಿದ್ದರಷ್ಟೇ ಮುಂದುವರೆಯಲು ಸಾಧ್ಯ ಎಂಬುದೂ ಸತ್ಯ.... ಆ ಕಾರಣಕ್ಕೆ ಇಷ್ಟೊಂದು ಕೆಳ ಮಟ್ಟಕ್ಕಿಳಿಯಬೇಕೆ?
ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ದೊಡ್ಡ ಹೆಸರು. ತಂದೆ ರಾಜ್ ಕುಮಾರ್ ಪ್ರಭಾವಳಿಯಿಂದ ಚಿತ್ರರಂಗಕ್ಕೆ ಅವರ ಮಕ್ಕಳು ಬಂದವರಾದರೂ ತಮ್ಮದೇ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ನೆಲೆನಿಂತವರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರರೆಲ್ಲರೂ ಗೌರವಕ್ಕೆ, ಆದರಕ್ಕೆ ಅರ್ಹರು. ಅವರ ಮಕ್ಕಳು ಯಾವ ರೀತಿಯ ಸಾಧಕರು? ಅವರ ಮದುವೆಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ. ಓಕ್ಕೋಳ್ಳಿ, ಮದುವೆ ಸಮಾರಂಭವನ್ನು ಬಹುತೇಕ ಪತ್ರಿಕೆಗಳು ಚಿಕ್ಕದಾಗಿ ಪ್ರಕಟಿಸಿರುವಂತೆ ಒಂದೈದು ನಿಮಿಷದ ಸುದ್ದಿ ಮಾಡಿದರೆ ಒಪ್ಕೋಬಹುದು. ದಿನವಿಡೀ ಲೈವ್ ಆಗಿ ತೋರಿಸೋ ದರ್ದೇನು ಮಾಧ್ಯಮದವರಿಗೆ? ‘ಸಿದ್ಧರಾಮಯ್ಯ ಬಂದ್ರು, ಸಿದ್ಧರಾಮಯ್ಯ ಸ್ಟೇಜ್ ಹತ್ತುದ್ರು, ಸಿದ್ಧರಾಮಯ್ಯ ಕೈ ಕೊಟ್ರು, ಸಿದ್ಧರಾಮಯ್ಯ ಕೆಳಗಿಳಿದ್ರು’ ಅಂತ ರನ್ನಿಂಗ್ ಕಾಮೆಂಟ್ರಿ ಬೇರೆ! ಹೋಗ್ಲಿ ಮದುವೆಯೇನಾದ್ರೂ ತುಂಬ ವಿಭಿನ್ನವಾಗಿ, ಸಮಾಜಕ್ಕೆ ಮಾದರಿಯಾಗಿ ನಡೆಯಿತಾ? ಇಲ್ಲವಲ್ಲ. ಅದೊಂದು ಐಷಾರಾಮಿ ಮದುವೆ. ಅವರ ದುಡ್ಡು ಅವರ ಐಷಾರಾಮಿತನ ಅವರಿಷ್ಟ. ಖಾಸಗಿ ಐಷಾರಾಮಿತನವನ್ನು ಲೈವ್ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕೊಡುತ್ತಿವೆ ಮಾಧ್ಯಮಗಳು? ಇದೆಲ್ಲಕ್ಕಿಂತಲೂ ಅಸಹ್ಯವೆಂದರೆ ‘ದೊಡ್ಮನೆ ಮದುವೆ ದೊಡ್ಮನೆ ಮದುವೆ’ ಅಂತ ಬಡಕೊಂಡಿದ್ದು. ದೊಡ್ಮನೆ ಚಿಕ್ಮನೆಗಳೆಲ್ಲವೂ ಊಳಿಗಮಾನ್ಯ ಪದ್ಧತಿಯ ಸಂಕೇತವಲ್ಲವೇ? ಯಾವ ದೊಡ್ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ಒಟ್ಟಿಗಿದೆ ಎಂಬುದನ್ನು ಅರಿಯದಷ್ಟು ದಡ್ಡರೇ ಮಾಧ್ಯಮದವರು. ‘ಲೈವ್ ಪ್ರೋಗ್ರಾಮ್ ಮಾಡಬೇಡಿ’ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಆದರೂ ‘ದೊಡ್ಡ’ತನ ತೋರಿಸಬಹುದಿತ್ತು. ಈ ಅಪಸವ್ಯಗಳೆಲ್ಲ ಮದುವೆಗೇ ಮುಗಿದು ಕ್ಯಾಮೆರಾ ಎತ್ತಿಕೊಂಡು ಹನಿಮೂನು ಪ್ರಸ್ಥದ ಮನೆ ಅಂಥ ತೋರಿಸದಿದ್ದರೆ ಕನ್ನಡಿಗರ ಪುಣ್ಯ.