Apr 17, 2014

ಪ್ರಜಾಪ್ರಭುತ್ವದ ಆರೋಗ್ಯದ ಮಾಪಕ ಪತ್ರಿಕೋದ್ಯಮಡಾ ಅಶೋಕ್ ಕೆ ಆರ್

ಪ್ರಜಾಪ್ರಭುತ್ವ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಆ ಕಾರಣದಿಂದಲೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಮೂರು ಆಧಾರ ಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಂಗದ ಜೊತೆಗೆ ಸಮೀಕರಿಸಿ ನಾಲ್ಕನೇ ಸ್ಥಂಭವಾಗಿ ಗುರುತಿಸಲಾಗಿದೆ. ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪತ್ರಿಕೋದ್ಯಮದ ಕೊಡುಗೆ ಅಪಾರ. ಪತ್ರಿಕೋದ್ಯಮಕ್ಕಿರುವ ಸ್ವಾತಂತ್ರ್ಯ ಮತ್ತು ಪತ್ರಕರ್ತರಿಗಿರುವ ರಕ್ಷಣೆಯ ಆಧಾರದ ಮೇಲೆ ಆ ಸಮಾಜದ ಆರೋಗ್ಯವನ್ನಳೆಯುವುದೂ ಇದೆ. Reporters without borders ಸಂಸ್ಥೆಯ ಅಧ್ಯಯನದ ಅನ್ವಯ ಭಾರತ ಪತ್ರಿಕೋದ್ಯಮದ ವಿಷಯದಲ್ಲಿ ಗಳಿಸಿರುವುದು 143ನೇ ಸ್ಥಾನ! ಇತ್ತೀಚಿನ ವರುಷಗಳಲ್ಲಿ ಭಾರತದಲ್ಲಿ ಪತ್ರಿಕೋದ್ಯಮಿಗಳ ಮೇಲೆ ಪತ್ರಕರ್ತರ ಮೇಲಿನ ಹಲ್ಲೆಯ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. 2013ರಲ್ಲಿ ಭಾರತದ ಎಂಟು ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗುತ್ತದೆ. ಈ ಸಂಖ್ಯೆ ಪತ್ರಕರ್ತರಿಗೆ ಅಪಾಯಕಾರಿ ದೇಶವೆನ್ನಿಸಿಕೊಂಡಿರುವ ಪಾಕಿಸ್ತಾನಕ್ಕಿಂತಲೂ ಹೆಚ್ಚು ಎಂಬುದು ಭಾರತದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನೆನಪಿಸುತ್ತದೆ.

ಚುನಾವಣೆಯ ಸಂದರ್ಭದಲ್ಲಿ ಪತ್ರಿಕೋದ್ಯಮದ ಜವಾಬುದಾರಿಯೂ ಹೆಚ್ಚು. ಪತ್ರಿಕೆಗಳು ಅಭಿಪ್ರಾಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುವುದು ಸುಳ್ಳಲ್ಲ. ಸ್ವಾತಂತ್ರ್ಯ ಸಿಕ್ಕಿದ ನಂತರ ನಡೆದ ಚುನಾವಣೆಗಳೆಲ್ಲವುಗಳಲ್ಲೂ ಆಡಳಿತಾರೂಢ ಪಕ್ಷಗಳ ಕಾರ್ಯವೈಖರಿಯನ್ನು ವಿಶ್ಲೇಷಿಸುತ್ತಾ, ಅವುಗಳ ದೌರ್ಬಲ್ಯಗಳನ್ನು ಎತ್ತಿ ತೋರಿಸುತ್ತಾ ಹೊಸ ಮುಖಗಳ, ಹೊಸ ಪಕ್ಷಗಳ ಬೆಳವಣಿಗೆಗೂ ಸಹಕರಿಸುತ್ತ ಬಂದಿದೆ ಪತ್ರಿಕೋದ್ಯಮ. ವರುಷಗಳುರುಳಿದಂತೆ ಪತ್ರಿಕೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ದಿನಕ್ಕೆ ಹದಿನೈದು ನಿಮಿಷ ಪ್ರಸಾರವಾಗುತ್ತಿದ್ದ ಸರಕಾರಿ ಒಡೆತನದ ದೂರದರ್ಶನದ ಜಾಗದಲ್ಲೀಗ ದಿನದ ಇಪ್ಪತ್ತನಾಲ್ಕು ಘಂಟೆಯೂ ಸುದ್ದಿ ಪ್ರಸಾರ ಮಾಡುವ ಖಾಸಗಿ ವಾಹಿನಿಗಳ ಆಗಮನವಾಗಿದೆ. ಪತ್ರಿಕೋದ್ಯಮದಲ್ಲಿ ಹಣ ಹೂಡುವವರ ಸಂಖೈ ಹೆಚ್ಚಿ ಲಾಭದಾಯಕ ‘ಉದ್ಯಮ’ದ ರೂಪು ಪಡೆದು, ಸಾವಿರಾರು ಜನರ ಉದ್ಯೋಗಕ್ಕೂ ಕಾಣ್ಕೆ ನೀಡುತ್ತಿರುವ ಪತ್ರಿಕೋದ್ಯಮ ಮುಂಚಿನ ದಿನಗಳಂತೆ ಒಂದು ಹೊಸ ಚಿಂತನೆ ರೂಪಿಸುವ ಗುಣವನ್ನು ಇನ್ನೂ ಉಳಿಸಿಕೊಂಡಿದೆಯಾ? ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪತ್ರಿಕೆಗಳು, ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿರುವ ರೀತಿ ನೋಡಿದರೆ ಹೊಸ ಚಿಂತನೆ ರೂಪಿಸುವುದಿರಲಿ ಇರುವ ಕೆಲವೇ ಕೆಲವು ಜನಪರ ಚಿಂತನೆಗಳನ್ನೂ ನಾಶ ಪಡಿಸದಿದ್ದರೆ ಸಾಕು ಎಂಬ ಭಾವನೆ ಹುಟ್ಟಿಸುತ್ತದೆ. ಎಲ್ಲವೂ ಹಾಳಾಗಿ ಹೋಗಿದೆಯೆಂಬ ಸಿನಿಕತನ ಮೂಡುವುದನ್ನು ತಪ್ಪಿಸುವುದೂ ಕೂಡ ನಮ್ಮ ಪತ್ರಿಕೋದ್ಯಮವೇ ಎಂಬ ವಾಸ್ತವ ಪತ್ರಿಕೋದ್ಯಮದ ಮಹತ್ವವನ್ನು ತಿಳಿಸುತ್ತದೆ.


ಒಂದು ಪತ್ರಿಕೆ ಅಥವಾ ವಾಹಿನಿ ಯಾವ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು. ಅದನ್ನು ನಡೆಸುವ ಮಾಲೀಕರ ಮರ್ಜಿಯ ಮೇಲೋ, ಸಂಪಾದಕರ ಒಲವು ನಿಲುವುಗಳ ಮೇಲೋ, ಪತ್ರಕರ್ತರ ವೈಯಕ್ತಿಕ ಚಿಂತನೆಗಳ ಮೇಲೋ? ಅಪರೂಪಕ್ಕೆ ಮಾಲೀಕರ, ಸಂಪಾದಕರ, ಪತ್ರಕರ್ತರ ಅಭಿಪ್ರಾಯಗಳು ಒಂದೇ ಆಗಿರುವುದು ಕಂಡು ಬರುತ್ತದಾದರೂ ಬಹಳಷ್ಟು ಸಲ ಭಿನ್ನ ಅಭಿಪ್ರಾಯಗಳೇ ಅಧಿಕವಾಗಿರುತ್ತದೆ. ಪತ್ರಕರ್ತನ, ಅಂಕಣಕಾರನ ಭಿನ್ನ ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಒಪ್ಪದಿದ್ದರೂ ಸಂಪಾದಕ ಅದನ್ನು ಪ್ರಕಟಿಸುತ್ತಾರಾ? ಮಾಲೀಕ ಅದನ್ನು ಪ್ರಕಟಿಸುವುದಕ್ಕೆ ಅವಕಾಶ ಕೊಡುತ್ತಾನಾ ಎಂಬುದರ ಮೇಲೆ ಒಂದು ಪತ್ರಿಕೆಯ ಆರೋಗ್ಯದ ಬಗೆಗೆ ನಿರ್ಧರಿಸಬಹುದು. ಸ್ವಾತಂತ್ರ್ಯ ಪೂರ್ವದಿಂದ ಚಾಲ್ತಿಯಲ್ಲಿರುವ ಪತ್ರಿಕೆಗಳಿರಬಹುದು, ನಂತರ ಪ್ರಾರಂಭವಾದ ಪತ್ರಿಕೆಗಳಿರಬಹುದು ಕನ್ನಡ ಬಹುತೇಕ ಪತ್ರಿಕೆಗಳು ಮೇಲ್ನೋಟಕ್ಕಾದರೂ ಒಂದು ಸಿದ್ಧಾಂತದ ನಂಬುಗೆಯ ಮೇಲೆ ನಡೆಯುತ್ತಿವೆ. ಆ ಪತ್ರಿಕೆಯ ವರದಿಗಳು, ಅಂಕಣಗಳು ಆ ಸಿದ್ಧಾಂತದ ಚೌಕಟ್ಟಿನೊಳಗೇ ರೂಪುಗೊಳ್ಳುತ್ತವೆ. ಕೆಲವೊಮ್ಮೆ ಸಿದ್ಧಾಂತದ ಚೌಕಟ್ಟನ್ನು ಮೀರುವ ಕೆಲಸವನ್ನೂ ಮಾಡುತ್ತವೆ. ಒಂದು ಸಿದ್ಧಾಂತದೆಡೆಗಿನ ನಿಷ್ಠೆ, ಆ ಸಿದ್ಧಾಂತದಿಂದ ರೂಪಿತವಾದ ರಾಜಕೀಯ ಪಕ್ಷವೊಂದರ ಬಗೆಗಿನ ನಿಷ್ಠೆಯಾಗಿಯೂ ಪರಿವರ್ತೆನೆಗೊಳ್ಳುವ ಅಪಾಯವನ್ನೂ ಕಾಣುತ್ತಿದ್ದೇವೆ. ಯಾವುದೇ ಸಿದ್ಧಾಂತ ರಾಜಕೀಯ ಪಕ್ಷದ ಬುನಾದಿಯಾದಾಗ ರಾಜಕೀಯ ಕಾರಣಗಳಿಗಾಗಿ, ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ಧಾಂತದಿಂದ ಆಚೀಚೆ ಸರಿಯುವುದು ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಗಳಿಗೆ ಅನಿವಾರ್ಯ ಕೂಡ. ಕೆಲವೊಮ್ಮೆ ಸಿದ್ಧಾಂತದಿಂದಾಚೆ ಯೋಚಿಸುವುದು ಸಮಾಜಕ್ಕೆ ಉಪಯೋಗಿಯಾಗುವುದು, ಕೆಲವೊಮ್ಮೆ ಅಪಾಯಕಾರಿಯಾಗಿಯೂ ಪರಿವರ್ತನೆಗೊಳ್ಳುವುದು. ಅಂತಹ ಸಂದರ್ಭಗಳಲ್ಲೂ ಕೂಡ ಪತ್ರಿಕೆಗಳು ಅದೇ ರಾಜಕೀಯ ಪಕ್ಷಗಳನ್ನು ರಾಜಕಾರಣಿಗಳನ್ನು ಬೆಂಬಲಿಸುತ್ತ ಲೇಖನಗಳನ್ನು ಪ್ರಕಟಿಸಿದರೆ ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆ ಬರುವುದಿಲ್ಲವೇ?

ಸಿದ್ಧಾಂತ ಮತ್ತು ರಾಜಕೀಯ ಪಕ್ಷಕ್ಕೆ ನೀಡುವ ಬೆಂಬಲ ಕೆಲವೊಮ್ಮೆ ಮಿತಿ ಮೀರಿ ಆ ಪಕ್ಷದ ನಾಯಕರು ಮಾಡಿದ ಅನಾಚಾರ ದುರಾಚಾರಗಳನ್ನು ವರದಿ ಮಾಡದಿರುವ ಕೆಲಸವೂ ಸುಸೂತ್ರವಾಗಿ ನಡೆಯುತ್ತದೆ. ಅದೊಂದೇ ಪತ್ರಿಕೆಯನ್ನು ಓದುವವರು ಅಥವಾ ಅದೊಂದೇ ವಾಹಿನಿ ವೀಕ್ಷಿಸುವವರಿಗೆ ಪೂರ್ಣ ಸತ್ಯದ ಅರಿವೇ ಆಗದಿರುವ ಸಾಧ್ಯತೆಗಳೂ ಇದೆ. ಸಿದ್ಧಾಂತವೊಂದಕ್ಕೆ ಬದ್ಧವಾಗಿರುವ ಏಕೈಕ ಕಾರಣದಿಂದ ನಡೆದ ಘಟನೆಗಳನ್ನು ವರದಿ ಮಾಡದಿರುವುದು ತಪ್ಪಾಗುವುದಿಲ್ಲವೇ? ಕರ್ನಾಟಕದ ಪ್ರಮುಖ ದೈನಿಕಗಳಾದ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯ ವಾಣಿ, ಕನ್ನಡ ಪ್ರಭ, ಉದಯವಾಣಿ, ವಾರ್ತಾ ಭಾರತಿ, ಹೊಸ ದಿಗಂತ ಪತ್ರಿಕೆಗಳೂ ಕೂಡ ಸಿದ್ಧಾಂತದ ಭಾರಕ್ಕೆ ಕೆಲವೊಮ್ಮೆ ಸೋಲೊಪ್ಪಿಕೊಂಡುಬಿಡುತ್ತದೆ. ಬಿಜೆಪಿಗೋ ಕಾಂಗ್ರೆಸ್ಸಿಗೋ ನಡೆದ ಒಂದು ಘಟನೆ ಮಾರನೆಯ ದಿನದ ಕನ್ನಡದ ವಿವಿಧ ದಿನಪತ್ರಿಕೆಗಳಲ್ಲಿ ಯಾವ ರೀತಿ ಪ್ರಕಟವಾಗಿರುತ್ತದೆ, ಯಾವ ಪತ್ರಿಕೆಯಲ್ಲಿ ಅದು ಮುಖಪುಟ ವರದಿಯಾಗಿರುತ್ತದೆ, ಯಾವ ಪತ್ರಿಕೆಯಲ್ಲಿ ಆ ಸಂಗತಿಗೆ ಪ್ರಾಮುಖ್ಯತೆ ನೀಡಿರುವುದಿಲ್ಲ ಎಂಬುದನ್ನು ಸುಲಭವಾಗಿ ಊಹೆ ಮಾಡಿಬಿಡಬಹುದು. ನಮ್ಮ ಊಹೆ ಬಹಳಷ್ಟು ಸಲ ನಿಜವಾಗಿಬಿಡುವುದು ಪತ್ರಿಕೋದ್ಯಮ ತಲುಪಿರುವ ದುಸ್ಥಿತಿಗೆ ಸಾಕ್ಷಿ. ಆಂಗ್ಲ ಭಾಷಾ ಪತ್ರಿಕೆಗಳು, ಸುದ್ದಿ ವಾಹಿನಿಗಳೂ ಇದಕ್ಕೆ ಹೊರತಲ್ಲ. ಅನ್ಯ ಭಾಷಾ ಪತ್ರಿಕೆಗಳ ಸ್ಥಿತಿಯೂ ಹೆಚ್ಚು ಕಡಿಮೆ ಇದೇ ರೀತಿ ಇದ್ದಿರಬಹುದು.

ಸಮಾಜದ ರೂಪುರೇಷೆ, ಚಿಂತನೆಯ ವಿಧಾನವನ್ನೇ ಬದಲಿಸಿದ ಖ್ಯಾತಿಯ ಬಂಡವಾಳಶಾಹಿತನದ ಜಾಗತೀಕರಣ ಪತ್ರಿಕೋದ್ಯಮದ ಚಹರೆಯನ್ನೂ ಬದಲಿಸಿಬಿಟ್ಟಿದೆ. ಪತ್ರಿಕೆ ನಡೆಸುವುದೆಂದರೆ ಸಮಾಜಕ್ಕೆ ಸಲ್ಲಿಸುವ ಸೇವೆ ಎಂಬ ಭಾವ ಸಂಪೂರ್ಣ ಮರೆಯಾಗಿ ಪತ್ರಿಕೆ ನಡೆಸುವುದೂ ಕೂಡ ಒಂದು ಮಾದರಿಯ ಉದ್ಯಮ, ನಾನು ಹಾಕಿರುವ ಬಂಡವಾಳವಿಷ್ಟು, ಒಂದು ವರುಷದಲ್ಲಿ ಇಷ್ಟು ಮೊತ್ತ ಹಿಂದಿರುಗಿ ಬರಬೇಕು, ನಂತರ ಪ್ರತಿ ವರ್ಷ ಇಂತಿಷ್ಟು ಲಾಭ ಮಾಡಬೇಕು ಎಂಬಂತಹ ಅನಿಸಿಕೆಗಳೇ ಹೆಚ್ಚಾಗಿದೆ. ಪತ್ರಿಕೋದ್ಯಮವನ್ನು ಸೇವೆಯೆಂದು ಪರಿಗಣಿಸಿದರೂ ನಷ್ಟ ಬಾಬತ್ತಾದರೆ ಪತ್ರಿಕೆಯನ್ನು ನಡೆಸುವುದು ಸಾಧ್ಯವಿಲ್ಲ. ಒಂದಷ್ಟು ಲಾಭದಲ್ಲಿ, ಕೊನೇ ಪಕ್ಷ ನಡೆಸುವವರಿಗೆ ನಷ್ಟವಾಗದ ರೀತಿಯಲ್ಲಿ ಪತ್ರಿಕೆ ನಡೆಯಬೇಕೆಂಬುದೇನೋ ಸತ್ಯ. ಆದರೆ ಲಾಭವೇ ಪ್ರಮುಖವಾಗಿ ಪತ್ರಿಕೋದ್ಯಮದ ನೀತಿ ನಿಯಮಗಳು ದಿನೇ ದಿನೇ ದೂರಾಗುತ್ತಿದೆ. ಬಂಡವಾಳ ಹೂಡುವವರಿಗೆ ಪತ್ರಿಕೆಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಗಲಾರಂಭಿಸಿದೆ. ಪ್ರಜಾವಾಣಿಯ ಪ್ರಮುಖ ಪತ್ರಕರ್ತರಾಗಿದ್ದ ಅಪರೂಪದ ವಿಶಿಷ್ಟ ಲೇಖನಗಳಿಂದಲೇ ಅಪಾರ ಅಭಿಮಾನಿ ಬಳಗಗಳಿಸಿರುವ ದಿನೇಶ್ ಅಮೀನ್ ಮಟ್ಟು ಸಹಿತ ಒಂದು ಸಂದರ್ಭದಲ್ಲಿ ಪತ್ರಿಕೆ ಮೂರುವರೆ ರುಪಾಯಿಯ ಓದುಗನಿಗೆ ನಿಷ್ಠವಾಗಿರಬೇಕೋ ಅಥವಾ ಆರೂವರೆ ರುಪಾಯಿಯ ಜಾಹೀರಾತುದಾರನಿಗೆ ನಿಷ್ಠನಾಗಿರಬೇಕೋ ಎಂಬ ಪ್ರಶ್ನೆಯೆತ್ತಿದ್ದರು (ಬಹುಶಃ ಪ್ರಜಾವಾಣಿ ಬಳಗದಿಂದ ವ್ಯಂಗ್ಯಚಿತ್ರಕಾರ ಪಿ.ಮಹಮದ್ ಹೊರನಡೆದ ಸಂದರ್ಭದಲ್ಲಿ ಹೇಳಿದ್ದೆಂದು ನೆನಪು). ಆ ಪ್ರಶ್ನೆಯ ನೆಪದಲ್ಲಿ ಅನೇಕ ಚರ್ಚೆಗಳೂ ನಡೆದಿತ್ತು. ಮೂರುವರೆ ರುಪಾಯಿ ಕೊಟ್ಟು ಓದುಗ ಪತ್ರಿಕೆ ಕೊಂಡುಕೊಳ್ಳುದಿದ್ದರೆ ಆರೂವರೆ ರುಪಾಯಿಯ ಜಾಹೀರಾತುದಾರ ಜಾಹೀರಾತು ನೀಡಲಾರ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯವಾದರೂ ಅನೇಕ ದಿನಪತ್ರಿಕೆಗಳು ಪತ್ರಿಕೆಗೆ ಸಿಗುವ ಜಾಹೀರಾತುಗಳ ಬಗೆಗೆ ತೋರಿಸುವ ಆಸಕ್ತಿ ಪತ್ರಿಕೆಯ ಪ್ರಸರಣ ಹೆಚ್ಚಿಸುವುದರ ಕಡೆಗೆ ನೀಡುವುದಿಲ್ಲ. ಪತ್ರಿಕೆಯ ಪ್ರಸರಣ ಹೆಚ್ಚಬೇಕಿರುವುದು ಜಾಹೀರಾತು ಸಿಗುವವರೆಗೆ ಮಾತ್ರ. ಜಾಹೀರಾತುಗಳು ನಿಯಮಿತವಾಗಿ ದೊರೆಯಲಾರಂಭಿಸಿದ ಮೇಲೆ ಪತ್ರಿಕೆಯ ಪ್ರಸರಣ ಕಡಿಮೆಯಿದ್ದಷ್ಟೂ ಪತ್ರಿಕೆಯ ಮಾಲೀಕನಿಗೆ ಲಾಭ!

ಪತ್ರಿಕೆಗಳ ದಿನವಹಿ ವರದಿಗಳ ಸತ್ಯಾನಿಷ್ಟತೆ ವಿಮರ್ಶಾರ್ಹವಾದರೂ ಚುನಾವಣೆಯ ಸಂದರ್ಭದ ವರದಿಗಳನ್ನು ಪತ್ರಿಕೆಗಳ ಗುಣಮಟ್ಟವನ್ನು ಅಳೆಯುವ ಮಾಪಕವಾಗಿ ಪರಿಗಣಿಸಿದರೆ ಕನ್ನಡ ಪತ್ರಿಕೆಗಳ ಮೇಲಿನ ನಂಬುಗೆ ಕಳೆದುಕೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಅಂಕಣಗಳು ಆಯಾ ಪತ್ರಿಕೆಯ ಸಿದ್ಧಾಂತ, ಅಂಕಣಕಾರನ ಚಿಂತನೆಗಳ ಪ್ರಕಾರವಾಗಿ ಪ್ರಕಟವಾದರೂ ಬಹುತೇಕ ಪತ್ರಿಕೆಗಳಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ಬಗೆಗಿನ ಪತ್ರಕರ್ತನ ವರದಿಗಳಲ್ಲಿ ಹೆಚ್ಚಿನಂಶ ಸತ್ಯಕ್ಕೆ ಹತ್ತಿರವಾಗೇ ಇರುತ್ತದೆ. ವಿಜಯ ಕರ್ನಾಟಕ ವಿಜಯ ಸಂಕೇಶ್ವರರ ಒಡೆತನದಲ್ಲಿದ್ದಾಗ ವಿಜಯ ಸಂಕೇಶ್ವರರೇ ಆರಂಭಿಸಿದ್ದ ಪಕ್ಷದ ಪರವಾಗಿ ಅಸತ್ಯಗಳನ್ನು ಪ್ರಕಟಿಸಿದ್ದ ಸಂದರ್ಭ ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಅಂತಹ ಅಪಸವ್ಯ ಕಾಣುತ್ತಿಲ್ಲ. ಮೋದಿ ಮೋದಿ ಎಂದು ಜಪಿಸುವ ಪತ್ರಿಕೆಗಳಲ್ಲೂ ನಿರ್ದಿಷ್ಟ ಕ್ಷೇತ್ರದ ವಿಷಯ ಬಂದಾಗ ವಸ್ತುನಿಷ್ಟವಾಗೇ ವರದಿ ಮಾಡುತ್ತಿವೆ. ಹಿಂದಿನ ದಿನದ ಸುದ್ದಿ ನೀಡುವ ಪತ್ರಿಕೆಗಳು ‘ನ್ಯೂಸನ್ನೇ ಬ್ರೇಕ್’ ಮಾಡುವ ದೃಶ್ಯ ಮಾಧ್ಯಮದ ಹೊಡೆತಕ್ಕೆ ಸಿಲುಕಿ ನಶಿಸಿಹೋಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ ಅನೇಕ ಸುದ್ದಿ ಸಂಸ್ಥೆಗಳು ಪ್ರಕಟಿತ ಆವೃತ್ತಿಯನ್ನು ನಿಲ್ಲಿಸಿಬಿಡುವುದಕ್ಕೆ ದೃಶ್ಯ ಮಾಧ್ಯಮ ಮತ್ತು ಅಂತರ್ಜಾಲ ಕಾರಣವಾಗಿತ್ತು. ಆದರೆ ಭಾರತದಲ್ಲಿ ಇವತ್ತಿಗೂ ಜನರಲ್ಲಿ ಪತ್ರಿಕೆಗಳ ಬಗೆಗಿರುವ ನಂಬುಗೆ ದೃಶ್ಯಮಾಧ್ಯಮದ ಮೇಲಿಲ್ಲ. ಇಪ್ಪತ್ತನಾಲ್ಕು ತಾಸು ಸುದ್ದಿ ನೋಡಿದರೂ ತಮ್ಮ ನೆಚ್ಚಿನ ಪತ್ರಿಕೆಯಲ್ಲಿ ಆ ಘಟನೆಯ ಬಗ್ಗೆ ಯಾವ ರೀತಿಯ ವರದಿ ಬಂದಿರಬಹುದು ಎಂಬ ಕುತೂಹಲ ಇನ್ನೂ ನಶಿಸಿಲ್ಲ. ಅಂತರ್ಜಾಲ ಪತ್ರಿಕೆಯಾಗಿ ಪ್ರಾರಂಭವಾದ ತೆಹಲ್ಕಾ ನಂತರದ ದಿನಗಳಲ್ಲಿ ಮುದ್ರಿತ ರೂಪದಲ್ಲಿ ಹೊರಬರಲಾರಂಭಿಸಿದ್ದು ಅಂತರ್ಜಾಲ ಪ್ರಮುಖ ಮಾಧ್ಯಮವಾಗುತ್ತಿರುವ ಕಾಲದಲ್ಲಿ ಒಂದು ವಿಸ್ಮಯವಾಗಿ ಕಾಣಬಹುದು. ತಮ್ಮೆಲ್ಲಾ ಹುಳುಕುಗಳ ಹೊರತಾಗಿಯೂ ನಂಬುಗೆ ಉಳಿಸಿಕೊಂಡಿರುವ ಮುದ್ರಣ ಮಾಧ್ಯಮದ ಅರ್ಧದಷ್ಟೂ ನಂಬುಗೆಯನ್ನು ದೃಶ್ಯಮಾಧ್ಯಮಗಳು ಪಡೆಯಲಾಗುತ್ತಿಲ್ಲ. ಕಾರಣವೇನು?

ಒಂದಿಡೀ ದಿನ ಸಮಾಜದ ಚಲನೆಗೆ ಕಾರಣವಾಗುವ ಎಷ್ಟು ಘಟನೆಗಳು ನಡೆಯಬಹುದು? ಅವಷ್ಟೂ ಘಟನೆಗಳನ್ನು ಜನರ ಮುಂದಿಡುವುದಕ್ಕೆ ಎಷ್ಟು ಸಮಯ ಮೀಸಲಿರಿಸಬೇಕಾಗಬಹುದು? ಆ ಘಟನೆಗಳ ಮೇಲಿನ ಚರ್ಚೆಗೆ ಎಷ್ಟು ಸಮಯ ಬೇಕಾಗಬಹುದು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಯಾಕೆ ದೃಶ್ಯ ಮಾಧ್ಯಮಗಳು ನಂಬುಗೆ ಗಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿವೆ ಎಂಬುದರ ಅರಿವಾಗುತ್ತದೆ. ಮೊದಲು ಕೇವಲ ದೂರದರ್ಶನವಿದ್ದಾಗ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿ ಹದಿನೈದು ನಿಮಿಷಗಳು ಮಾತ್ರ. ನಂತರ ಖಾಸಗಿ ಮನೋರಂಜನಾ ಮಾಧ್ಯಮಗಳು ಕನ್ನಡಲೋಕವನ್ನು ಪ್ರವೇಶಿಸಿದಾಗ ಅರ್ಧ ಘಂಟೆಯ ಸುದ್ದಿ ಪ್ರಸಾರವಾಗುತ್ತಿತ್ತು. ಈ ಟಿವಿ ವಾಹಿನಿ ರಾಜ್ಯ ಸುದ್ದಿಗಳಿಗೆ ಅರ್ಧ ಘಂಟೆ ಮತ್ತು ರಾಷ್ಟ್ರ ಸುದ್ದಿಗಳಿಗೆ ಅರ್ಧ ಘಂಟೆ ಮೀಸಲಿರಿಸಿತ್ತು. ಘಂಟೆಗೊಮ್ಮೆ ಐದು ನಿಮಿಷ ಪ್ರಮುಖ ಸುದ್ದಿಗಳನ್ನೂ ತಿಳಿಸುತ್ತಿತ್ತು. ನಂತರ ಬಂದಿದ್ದೂ ದಿನದ ಇಪ್ಪತ್ತನಾಲ್ಕು ಘಂಟೆಯೂ ಸುದ್ದಿ ಪ್ರಸಾರ ಮಾಡುವ ವಾಹಿನಿಗಳು. ಈ ವಾಹಿನಿಗಳು ಬಂದ ನಂತರವೂ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನ್ಯೂಸ್ ನೋಡಲು ಜನ ಇಷ್ಟಪಡುತ್ತಿದ್ದರು. ಇಪ್ಪತ್ತನಾಲ್ಕು ಘಂಟೆಯೂ ಪ್ರಸಾರ ಮಾಡುವುದಕ್ಕೆ ಸುದ್ದಿಯೆಲ್ಲಿರುತ್ತದೆ? ಒಂದೇ ಸುದ್ದಿಯನ್ನು ಮತ್ತೆ ಮತ್ತೆ ಪ್ರಸರಿಸಲಾರಂಭಿಸಿದರು. ಕೆಲವೊಮ್ಮೆ ಸುದ್ದಿಯ ನಿರ್ಮಾತೃಗಳೂ ಆಗಿಹೋದರು! ಸುದ್ದಿ ಸೃಷ್ಟಿಸಲು ಹೋಗಿ ಪೇಚಿಗೆ ಸಿಲುಕಿಕೊಂಡ ಪತ್ರಕರ್ತರೂ ಇದ್ದಾರೆ! ಅದದೇ ಸುದ್ದಿಯ ಪುನರಾವರ್ತನೆ, ಅನಗತ್ಯ ಸುದ್ದಿಗಳ ವೈಭವೀಕರಣ, ಸಂಪಾದಕರ – ಮಾಲೀಕರ ಸೈದ್ಧಾಂತಿಕ ತಳಹದಿಯನ್ನು ಅವಶ್ಯಕತೆಗಿಂತ ಹೆಚ್ಚಾಗಿ ಪ್ರಚುರಪಡಿಸುವ ಆತುರಗಳೆಲ್ಲವೂ ಸೇರಿ ನಿಜವಾಗಿಯೂ ಸಮಾಜಮುಖಿಯಾದ ವರದಿಗಳನ್ನು, ಅರ್ಥಪೂರ್ಣ ಚರ್ಚೆಗಳನ್ನೂ ಮನೋರಂಜನೆಯನ್ನಾಗಿ ನೋಡುವಂತೆ ಮಾಡಿಬಿಟ್ಟಿದ್ದು ದೃಶ್ಯ ಮಾಧ್ಯಮ ಕಂಡ ಬಹುದೊಡ್ಡ ವೈಫಲ್ಯವೆಂದರೆ ತಪ್ಪಲ್ಲ. ಸಿನಿಮಾಗಳನ್ನು, ನಗೆ ದೃಶ್ಯಗಳನ್ನು, ಹಾಡು, ಧಾರವಾಹಿಯನ್ನು ಮನೋರಂಜನೆಗಾಗಿ ನೋಡುತ್ತಿದ್ದ ಜನ ‘ಭಿನ್ನ’ ಮನೋರಂಜನೆಗಾಗಿ ದೃಶ್ಯ ಮಾಧ್ಯಮವನ್ನು ನೋಡುವಂತಾಯಿತು. ವೈಪರೀತ್ಯಕ್ಕೆ ಇತ್ತೀಚಿನ ಸಾಕ್ಷಿ ಕನ್ನಡದ ದೃಶ್ಯ ವಾಹಿನಿಯೊಂದು ತನ್ನ ಸಮಯ ತುಂಬುವ ಸಲುವಾಗಿ ಮೋದಿ ಸರಕಾರದಲ್ಲಿ ಯಾರು ಯಾರು ಕೇಂದ್ರ ಸಚಿವರಾಗುತ್ತಾರೆ ಎಂದು ಭಿತ್ತರಿಸಿದ ವರದಿ! ಮೋದಿ ಅಲೆಯನ್ನು ಒಪ್ಪಿಕೊಂಡರೂ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸಂಪೂರ್ಣ ಬಹುಮತ ಪಡೆಯುವುದು ಸಮೀಕ್ಷೆಗಳ ಆಧಾರದ ಮೇಲೂ ಕಷ್ಟವೆಂದೇ ತೋರುತ್ತಿದೆ. ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಏಕಪಕ್ಷ ಆಡಳಿತದ ದಿನಗಳು ಹೆಚ್ಚೂ ಕಡಿಮೆ ಮುಗಿದಂತಾಗಿರುವಾಗ ಯಾವ್ಯಾವ ಪಕ್ಷಗಳು ಆಡಳಿತಾರೂಢ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂಬ ವಿಷಯ ಚುನಾವಣೆಯ ನಂತರದ ದಿನಗಳಲ್ಲಷ್ಟೇ ನಿರ್ಧರಿತವಾಗುವಾಗ ಇಂತಹುದೊಂದು ಕಾರ್ಯಕ್ರಮದ ಅವಶ್ಯಕತೆ ಎಷ್ಟಿದೆ? ಇಂತಹ ಅಸಂಬದ್ಧ ಕಾರ್ಯಕ್ರಮಗಳಿಂದ ಮತ್ತಷ್ಟು ಅಪನಂಬುಗೆಗೆ ಒಳಗಾಗುತ್ತೀವೆಂದು ಅನ್ನಿಸುವುದಿಲ್ಲವೇ? ರಂಗನಾಥ್ ನೇತೃತ್ವದ ಪಬ್ಲಿಕ್ ಟಿವಿಯೊಂದನ್ನು ಹೊರತುಪಡಿಸಿ ಉಳಿದೆಲ್ಲವೂ ಪೂರ್ವಗ್ರಹಪೀಡಿತರಾಗಿಯೇ ಸುದ್ದಿ ಪ್ರಸರಿಸುತ್ತಾರೆ ಎಂದೆನ್ನಿಸುವುದು ಸುಳ್ಳಲ್ಲ. ರಂಗನಾಥರ ಬುದ್ಧಿಮತ್ತೆ, ವಿಶ್ಲೇಷಿಸುವ ಗುಣದಿಂದಾಗಿ ಪಬ್ಲಿಕ್ ಟಿವಿ ಇನ್ನೂ ಜನರ ನಂಬುಗೆ ಉಳಿಸಿಕೊಂಡಿದೆಯಾದರೂ ಕೆಲವೊಮ್ಮೆ ಅತಿಯಾಗಿಬಿಡುವ ಪಬ್ಲಿಕ್ ಟಿವಿಯವರ ಮಾತುಗಳು ವಿಷಯವನ್ನು ಅತಿರಂಜಿತವಾಗಿ ಮಾಡಿ ಅವುಗಳನ್ನು ಅಪಮೌಲ್ಯಗೊಳಿಸಿಬಿಡುತ್ತವೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡಕ್ಕೂ ಬಿಸಿ ಮುಟ್ಟಿಸಿ ಅಸೀಮ ವೇಗದಲ್ಲಿ ಬೆಳೆಯುತ್ತ ಬೆಳೆದ ವೇಗದಲ್ಲೇ ಪಾತಾಳಕ್ಕೂ ತಲುಪಿಬಿಡುವ ಸಾಧ್ಯತೆಯಿರುವುದು ಅಂತರ್ಜಾಲ ಮಾಧ್ಯಮಕ್ಕೆ.

ಕೇವಲ ಹತ್ತು ಹದಿನೈದು ವರುಷಗಳ ಹಿಂದೆ ಅಂತರ್ಜಾಲ, ಕಂಪ್ಯೂಟರುಗಳು ವೈಭವದ ಸಂಗತಿಗಳಾಗಿದ್ದವು. ಘಂಟೆಗೆ ಮೂವತ್ತು ನಲವತ್ತು ರುಪಾಯಿ ತೆತ್ತು ಸೈಬರ್ ಸೆಂಟರ್ ಒಳಹೊಕ್ಕರೆ ಒಂದು ಈಮೇಲ್ ತೆರೆಯಲೂ ಅರ್ಧ ಘಂಟೆ ಕಾಯಬೇಕಿತ್ತು. ಈಗ ಅಂತರ್ಜಾಲದ ವೇಗವೂ ಅಧಿಕಗೊಂಡಿದೆ, ಸ್ಮಾರ್ಟ್ ಫೋನುಗಳ ಹೆಚ್ಚಳದಿಂದ ಅಂತರ್ಜಾಲ ಬಳಸುವವರ ಸಂಖೈಯೂ ಭಾರತದಲ್ಲಿ ಹೆಚ್ಚಾಗುತ್ತಿದೆ. ಶುರುವಿನ ದಿನಗಳಲ್ಲಿ ಅಂತರ್ಜಾಲದ ಬಳಕೆಯನ್ನು ಅತಿ ಹೆಚ್ಚು ಮಾಡಿದ ಭಾರತದ ರಾಜಕೀಯ ಪಕ್ಷ ಅವತ್ತಿಗೂ ಇವತ್ತಿಗೂ ಭೂಗತವಾಗಿ ಕಾರ್ಯನಿರ್ವಹಿಸುತ್ತಿರುವ ನಕ್ಸಲ್ ಸಂಘಟನೆಗಳು! ಆಶ್ಚರ್ಯವೆನ್ನಿಸಿದರೂ ಇದು ಸತ್ಯ. ಪೀಪಲ್ಸ್ ಮಾರ್ಚ್ ಎಂಬ ವೆಬ್ ಸೈಟ್, ನಕ್ಸಲ್ ಬೆಂಬಲಿತ ಅನೇಕ ಬ್ಲಾಗುಗಳು ಚಾಲ್ತಿಯಲ್ಲಿದ್ದವು. ನಕ್ಸಲ್ ಸಂಬಂಧಿತ ವೆಬ್ ಪುಟಗಳನ್ನು, ಬ್ಲಾಗುಗಳನ್ನು ಸರಕಾರಗಳು ವೀಕ್ಷಿಸಿ ಅವುಗಳನ್ನು ಬ್ಲಾಕ್ ಮಾಡಿಸುತ್ತಿದ್ದವು. ಪೀಪಲ್ಸ್ ಮಾರ್ಚ್ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿಯೂ ಇದ್ದರು! ಅಂತರ್ಜಾಲದ ಮೇಲಿನ ಅತಿಯಾದ ಅವಲಂಬನೆ ಅನೇಕ ನಕ್ಸಲ್ ನಾಯಕರ ಸಾವಿಗೆ ಬಂಧನಕ್ಕೆ ಕಾರಣವಾಗಿದ್ದೂ ಇದೆ. ಬ್ಲಾಗುಗಳ ರೀತಿಯಲ್ಲಿಯೂ ಕಾರ್ಯನಿರ್ವಹಿಸುತ್ತ ಸ್ನೇಹಿತರೊಂದಿಗೂ ಇಷ್ಟಪಡುವ ಲೇಖಕ, ರಾಜಕಾರಣಿ, ಸಮಾಜ ಸೇವಕರೊಂದಿಗೂ ನಂಟು ಬೆಸೆಯುವ ಸೋಷಿಯಲ್ ನೆಟ್ವರ್ಕಿಂಗ್ ಸೈಟುಗಳು ಖ್ಯಾತಗೊಳ್ಳಲಾರಂಭಿಸಿದವು. ಆರಂಭದ ದಿನಗಳಲ್ಲಿ ಆರ್ಕುಟ್ ಪ್ರಖ್ಯಾತಿಗೊಂಡಿತ್ತು. ಈಗ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖ್ಯಾತವಾಗಿವೆ. ಈ ಖ್ಯಾತಿ ಎಷ್ಟರ ಮಟ್ಟಿಗೆಂದರೆ ಈ ಬಾರಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿ ಅರ್ಜಿಯಲ್ಲಿ ತಮ್ಮ ಅಧಿಕೃತ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಯ ವಿವರಗಳನ್ನೂ ನೀಡುವುದನ್ನೂ ಕಡ್ಡಾಯ ಮಾಡಲಾಗಿದೆ! ಅಂತರ್ಜಾಲ ಇಷ್ಟರ ಮಟ್ಟಿಗೆ ಖ್ಯಾತವಾಗಲು ಕಾರಣವೇನು? ಅತಿ ಕಡಿಮೆ ಖರ್ಚಿನಲ್ಲಿ ನಮ್ಮದೇ ಸ್ವಂತ ಬ್ಲಾಗ್ ಅಥವಾ ಮತ್ತಷ್ಟು ಹಣ ನೀಡಿದರೆ ನಮ್ಮದೇ ಸ್ವಂತ ವೆಬ್ ಸೈಟ್ ಸೃಷ್ಟಿಸುವುದು ಸುಲಭವಾಯಿತು. ಇದಕ್ಕಿಂತಲೂ ಹೆಚ್ಚಾಗಿ ಒಂದು ಘಟನೆಯ ಬಗೆಗೋ, ಲೇಖನದ ಬಗೆಗೋ ತಮ್ಮಲ್ಲಿ ಮೂಡಿದ ಅಭಿಪ್ರಾಯವನ್ನು ತತ್ ಕ್ಷಣ ವ್ಯಕ್ತಪಡಿಸುವುದು ಸಾಧ್ಯವಾಯಿತು. ತಮ್ಮ ಅಭಿಪ್ರಾಯ ಪ್ರಕಟವಾಗಲು ಸಂಪಾದಕರ ಮರ್ಜಿ ಕಾಯಬೇಕಾದ ಪ್ರಸಂಗ ತಪ್ಪಿತು. ಇವೆಲ್ಲ ಕಾರಣಗಳಿಂದ ಅಂತರ್ಜಾಲ ಮಾಧ್ಯಮ ಖ್ಯಾತವಾಗುತ್ತಿದೆಯಾದರೂ ಖಾಸಗಿಯಾಗಿ ಅವರಿವರನ್ನು ಬಯ್ದಾಡುತ್ತಿದ್ದ ಮಾತುಗಳೂ ಯಥಾವತ್ತಾಗಿ ಚರ್ಚೆಯ ಹಂಗಿಲ್ಲದೆ ಹಂಗಿಸುವ ಏಕೈಕ ಉದ್ದೇಶದಿಂದ ಪ್ರಕಟವಾಗುತ್ತಿರುವುದರಿಂದ ಅಂತರ್ಜಾಲ ಬರಹಗಳಲ್ಲಿ ಜೊಳ್ಳೇ ಜಾಸ್ತಿಯಾಗುತ್ತಿದೆ. ವಿಷಯಾಧಾರಿತ ಚರ್ಚೆಗಳು ಹಿಂದಾಗಿ ವೈಯಕ್ತಿಕ ನಿಂದನೆಗಳೇ ಪ್ರಮುಖವಾಗುತ್ತಿದೆ. ಒಂದಷ್ಟು ಜನರನ್ನು ನೇರವಾಗಿ ತಲುಪುವ, ವಿಚಾರಗಳ ಚರ್ಚೆಗಳು ಶೀಘ್ರವಾಗಿ ನಡೆಯು ಸಾಧ್ಯತೆಯಿರುವ ಅಂತರ್ಜಾಲವೆಂದರೆ ನಮ್ಮ ರಾಜಕಾರಣಿಗಳಿಗೂ ಪ್ರೀತಿ. ಫೇಸ್ ಬುಕ್ಕಿನಲ್ಲಿ, ಟ್ವಿಟ್ಟರಿನಲ್ಲಿರುವ ಹಿಂಬಾಲಕರ, ಅನುಯಾಯಿಗಳ ಸಂಖೈಯೆಷ್ಟು; ಸಿಗುವ ಲೈಕು ಕಮೆಂಟುಗಳೆಷ್ಟು ಎಂಬುದರ ಮೇಲೆ ಒರ್ವ ನಾಯಕನ ಬಗೆಗಿರುವ ಅಭಿಮಾನವೆಷ್ಟು ಎಂಬುದನ್ನೂ ನಿರ್ಧರಿಸಲಾಗುತ್ತಿದೆ. ಬೇಸರದ ಸಂಗತಿಯೆಂದರೆ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಇಂತಹ ಅನುಯಾಯಿಗಳ ಸಂಖ್ಯೆಯನ್ನೂ ಸಾಫ್ಟುವೇರುಗಳ ಮುಖಾಂತರ ಹೆಚ್ಚಿಸಬಹುದಂತೆ. ಅಂತರ್ಜಾಲದಲ್ಲಿ ನಕಲಿ ದಂಧೆ ಜೋರಾಗಿಯೇ ನಡೆಯುತ್ತಿದೆ. ನಕಲಿಗಳ ಸಂಖೈ ಹೆಚ್ಚಿದಷ್ಟೂ ಅಸಲಿ ವಿಚಾರಗಳು ತೆರೆಮರೆಗೆ ಸರಿದುಬಿಡುತ್ತವೆ. ಪ್ರಾಯೋಜಿತ ವರದಿಗಳ ಸಂಖೈಯೂ ಹೆಚ್ಚುತ್ತಿದೆ. ಬಿಜೆಪಿಯ 272+ ಇರಬಹುದು, ನಂದನ್ ನಿಲೇಕಣಿ, ರಾಜೀವ್ ಚಂದ್ರಶೇಖರರ ನಿರಂತರ ಜಾಹೀರಾತುಗಳು ಅಂತರ್ಜಾಲ ಕೂಡ ಮುಂದೊಂದು ದಿನ ಹಣ ನೀಡುವ ಜಾಹೀರಾತುದಾರರ ಪರವಷ್ಟೇ ಕಾರ್ಯನಿರ್ವಹಿಸುವಂತೆ ಮಾಡಿಬಿಡಬಹುದು.

ಟಿ.ಆರ್.ಪಿ ಕೇಂದ್ರಿತ ಮಾಧ್ಯಮಗಳು ದಿನಕ್ಕೊಬ್ಬರಂತೆ ಆದರ್ಶವಾದಿಯನ್ನು ಸೃಷ್ಟಿಸುತ್ತವೆ, ದಿನಕ್ಕೊಬ್ಬರನ್ನು ಸಾಯಿಸುತ್ತವೆ! ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲರನ್ನು ಅವರ ಯೋಗ್ಯತೆಗೆ ಮೀರಿ ಹೊಗಳಿ ಅಟ್ಟಕ್ಕೇರಿಸಿ ನಂತರ ಅಷ್ಟೇ ಹರಿತವಾಗಿ ಟೀಕಿಸಿ ಒಂದಿಡೀ ಚಳುವಳಿಯನ್ನೇ ಹಳ್ಳ ಹಿಡಿಸಿದ್ದು ಮಾಧ್ಯಮದ ಸಾಧನೆ. ವಾಸ್ತವಾಂಶಗಳನ್ನು ಆಧಾರವಾಗಿಟ್ಟುಕೊಂಡು ಟೀಕಿಸದೆ ಅತಿರಂಜಿತವಾಗಿ ಟೀಕಿಸಿ ಮೋದಿಯನ್ನು ಭಾರತದಾದ್ಯಂತ ಪರಿಚಯಿಸಿದ ಕೀರ್ತಿಯೂ ವಾಹಿನಿಗಳದ್ದೇ. ಈಗ ಒಂದು ಸುತ್ತು ತಿರುಗಿ ಟೀಕೆಗಳು ಮಾಯವಾಗಿ ಮೋದಿಗೆ ಅವಶ್ಯಕತೆಗಿಂತ ಹೆಚ್ಚಾಗಿ ಪ್ರಚಾರ ನೀಡಲಾಗುತ್ತಿದೆ. ಮತ್ತೊಂದು ಸುತ್ತು ತಿರುಗಿದಾಗ ಮೋದಿ ಕೆಳಗ್ಹೋಗಿ ಮತ್ತೊಬ್ಬ ಮಗದೊಬ್ಬ ಪ್ರಚಾರದ ತುತ್ತತುದಿಯಲ್ಲಿರುತ್ತಾನೆ. ಈ ರೀತಿಯ ಆತುರದ ಆರೋಹಣ ಅವರೋಹಣಗಳು ಒಟ್ಟಾರೆಯಾಗಿ ಪ್ರಜಾಪ್ರಭುತ್ವಕ್ಕೇ ಮಾರಕವೆಂಬುದು ಟಿ.ಆರ್.ಪಿ ಕೇಂದ್ರಿತ ಮಾಧ್ಯಮಗಳಿಗೂ ಮನದಟ್ಟಾಗುತ್ತಿಲ್ಲ ಸಮಾಜದ ಆಗುಹೋಗುಗಳೆಲ್ಲವನ್ನೂ ಮನರಂಜನೆಯನ್ನಾಗಿ ವೀಕ್ಷಿಸುವ ಮನಸ್ಥಿತಿ ಬೆಳೆಸುಕೊಂಡುಬಿಟ್ಟಿರುವ ನಮಗೂ ಮನದಟ್ಟಾಗುತ್ತಿಲ್ಲ.

ಪ್ರಜಾಸಮರ ಪಾಕ್ಷಿಕಕ್ಕೆ ಬರೆದ ಲೇಖನ

No comments:

Post a Comment