Oct 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

Oct 13, 2019

ಒಂದು ಬೊಗಸೆ ಪ್ರೀತಿ - 35

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಬೆಳಿಗ್ಗೆ ಆರೂವರೆಗೆದ್ದು ಮೊಬೈಲ್ ನೋಡಿದಾಗ ಸಾಗರನ ಮೆಸೇಜು ಕಂಡಿತು. ಐದೂವರೆಯಷ್ಟೊತ್ತಿಗೆ "ಗುಡ್ ಮಾರ್ನಿಂಗ್. ತಲುಪಿದೆ" ಅಂತ ಮೆಸೇಜು ಮಾಡಿದ್ದ. ಪ್ರತಿಯಾಗಿ 'ಗುಡ್ ಮಾರ್ನಿಂಗ್' ಅಂತ ಕಳಿಸಿ ತಿಂಡಿ ಮಾಡಲು ಮೇಲೆದ್ದೆ. ರಾಜೀವ ತಿಂಡಿ ತಿಂದುಕೊಂಡು ಏಳೂಕಾಲಷ್ಟೊತ್ತಿಗೆ ಹೊರಟರು. ಆಗಲೇ ಫೋನ್ ಮಾಡುವ ಸಾಗರನಿಗೆ ಎಂದುಕೊಂಡವಳಿಗೆ ನಾನಿನ್ನೂ ಸ್ನಾನ ಕೂಡ ಮಾಡಿಲ್ಲ ಎನ್ನುವುದು ನೆನಪಾಯಿತು. ದಡಬಡಾಯಿಸಿ ಸ್ನಾನ ಮಾಡಿಕೊಂಡು ಹೊರಬಂದು ಸಾಗರನಿಗೆ ಫೋನ್ ಮಾಡಿದೆ. ಮೊದಲ ರಿಂಗಿಗೇ ಫೋನೆತ್ತಿಕೊಂಡ. 

'ಏನ್ ಮಾಡ್ತಿದ್ಯೋ'

“ಏನಿಲ್ಲ. ನಿನ್ನ ಫೋನಿಗೇ ಕಾಯ್ತಿದ್ದೆ"

'ಅಲ್ಲ ಫ್ರೆಂಡ್ ಮುಂದೇನೇ ಮಾತಾಡಿದ್ರೆ ಯಾರಂತ ಕೇಳೋಲ್ವ'

“ಹ ಹ. ರೂಮಿನೊರಗಿದ್ದೀನಿ ಹೇಳು"

'ಹೇಳೋಕೇನಿದೆಯೋ ಗೂಬೆ. ಒಂಟಿಕೊಪ್ಪಲು ದೇವಸ್ಥಾನದ ಹತ್ತಿರ ಬಂದು ಫೋನ್ ಮಾಡು. ಗಾಡೀಲ್ ಬರ್ತೀಯಾ ಹೆಂಗೆ?'

“ಹು ಕಣೆ. ಬೈಕಿದೆ ಫ್ರೆಂಡ್ದು"

'ಸರಿ ಬಂದ್ ಫೋನ್ ಮಾಡು. ದೇವಸ್ಥಾನದಿಂದ ದಾರಿ ಹೇಳ್ತೀನಿ'

ಫೋನಿಟ್ಟು ಕನ್ನಡಿಯ ಎದುರಿಗೆ ನಿಂತೆ. ಸುತ್ತಿಕೊಂಡಿದ್ದ ಟವಲನ್ನು ತೆಗೆದುಹಾಕಿದೆ. ಅಲ್ಲಲ್ಲಿ ಇನ್ನೂ ನೀರಿತ್ತು, ಬಿಸಿಯಿತ್ತು. ಚೆಂದ ಒರೆಸಿಕೊಂಡು ಹಾಗೇ ದೇಹವನ್ನು ನೋಡ್ತಾ ನಿಂತುಕೊಂಡೆ. ಅಯ್ಯಪ್ಪ ಎಷ್ಟು ದೊಡ್ಡದಿದೆ ನನ್ನ ಮೊಲೆಗಳು ಎಂದು ನನಗೇ ಅನ್ನಿಸಿತು. ಎದುರು ಹೋಗುವ ಗಂಡಸರೆಲ್ಲ ಒಮ್ಮೆ ಅದರತ್ತ ನೋಡದೇ ಇರೋದಿಲ್ಲ. ಎಷ್ಟು ಮುಜುಗರವಾಗ್ತದೆ ಆಗ. ಇಷ್ಟವಾದವರು ನೋಡ್ದಾಗ ಖುಷಿಯಾಗೋದೂ ಹೌದು. ಇವತ್ತಿಗೆ ಈ ಬೆತ್ತಲನ್ನು ನೋಡಿದವರ ಸಂಖೈ ಮೂರು ಎಂಬ ಯೋಚನೆ ಬಂದು ಬೆಚ್ಚಿ ಬಿದ್ದೆ. ಇದೆಂತ ಯೋಚನೆ? ಪುರುಷೋತ್ತಮನ ಎದುರಿಗೆ ಯಾವತ್ತಿಗೂ ಪೂರ್ತಿ ಬೆತ್ತಲಾಗಿರಲಿಲ್ಲ. ಅವನಾಗೇ ಕೇಳಿಕೊಂಡಿದ್ದಾಗಲೂ ಆಗಿರಲಿಲ್ಲ. 'ಹೆಂಗಿದ್ರೂ ಸೆಕ್ಸ್ ಮಾಡಲ್ಲವಲ್ಲ ಮತ್ಯಾಕೆ ಪೂರ್ತಿ ಬೆತ್ತಲಾಗೋದು ಅನ್ನುತ್ತಿದ್ದೆ' ಸುಮ್ಮನಾಗುತ್ತಿದ್ದ. ರಾಜೀವನೊಡನೆ ಶುರುವಿನಲ್ಲಿದ್ದಷ್ಟು ದೇಹದುಡುಕಾಟ ಈಗಿಲ್ಲ. ಮದುವೆಯಾಗಿ ಸುಮಾರು ವರುಷಗಳು ಉರುಳಿ ಹೋದ ಮೇಲೆ ಎಲ್ಲರ ಸಂಸಾರದಲ್ಲೂ ಹೀಗೆಯೋ ಏನೋ.

Oct 7, 2019

ಒಂದು ಬೊಗಸೆ ಪ್ರೀತಿ - 34

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ರಾತ್ರಿ ಇವ್ರು ಎಷ್ಟು ಘಂಟೆಗೆ ಬಂದು ಮಲಗಿದರೋ ಗೊತ್ತಾಗದಷ್ಟು ನಿದ್ರೆ. ಬೆಳಿಗ್ಗೆ ಎದ್ದಾಗ ಅವರ ಬಾಯಿಂದಷ್ಟೇ ಅಲ್ಲ ಇಡೀ ದೇಹದಿಂದಲೇ ರಮ್ಮಿನ ವಾಸನೆ ಬರುವಂತಿತ್ತು. ನಾ ಡ್ಯೂಟಿಗೆ ಹೋಗಲು ತಯಾರಾಗುತ್ತಿರುವಾಗ ಎಚ್ಚರವಾಗಿದ್ದರು. 'ಇದ್ಯಾಕೆ ಮಲಗೇ ಇದ್ದೀರ. ಹೋಗಲ್ವ ಕೆಲಸಕ್ಕೆ' ಎಂದು ಕೇಳಿದೆ. 

“ಆ ದರಿದ್ರ ಕೆಲಸಕ್ಕೆ ಯಾರ್ ಹೋಗ್ತಾರೆ ಬಿಡು" ಮಲಗಿದ್ದಲ್ಲಿಂದಲೇ ಹೇಳಿದ. 

'ಮಾಡೋ ಕೆಲಸಾನ ದರಿದ್ರ ಅಂದ್ರೆ ಆಗ್ತದಾ?' 

“ಓಹೋ. ನನಗಿಂತ ಜಾಸ್ತಿ ದುಡೀತೀನಿ ಅನ್ನೋ ಅಹಂಕಾರದಲ್ಲಿ ಬುದ್ಧಿವಾದ ಹೇಳೋಕೆಲ್ಲ ಬರಬೇಡಿ ಮೇಡಂ. ನನಗ್ ಗೊತ್ತು ಯಾವುದು ಒಳ್ಳೇದು ಯಾವುದು ದರಿದ್ರದ್ದು ಅಂತ.....” 

'ಸರಿ ನಿಮ್ಮಿಷ್ಟ' ಬೆಳಿಗ್ಗೆ ಬೆಳಿಗ್ಗೆ ಜಗಳವಾಡುವ ಮನಸ್ಸಿರಲಿಲ್ಲ ನನಗೆ. ಇಡೀ ದಿನ ಹಾಳಾಗ್ತದೆ. 

“ಇಷ್ಟೇ ಅಲ್ವ ಜೀವನ. ಮೊದಲೆಲ್ಲ ಕೆಲಸದ ವಿಷಯಕ್ಕೆ ನಾ ಗೋಳಾಡ್ವಾಗ ಮುದ್ದುಗರೆದು ಸಮಾಧಾನ ಮಾಡ್ತಿದ್ದೆ. ಈಗ ಸರಿ ನಿಮ್ಮಿಷ್ಟ ಅಂತಂದು ಸುಮ್ಮನಾಗ್ತಿ" 

'ಬೆಳಿಗ್ಗೆ ಬೆಳಿಗ್ಗೆ ಮಾತಿಗೆ ಮಾತು ಬೆಳೆದು ಜಗಳವಾಡುವ ಮನಸ್ಸಿಲ್ಲ ರೀ...' 

Oct 4, 2019

ಗಾಂಧಿ ಜಯಂತಿಯ ದಿನ ಪ್ರಧಾನಿ ಹೇಳಿದ ಸುಳ್ಳು.

ಡಾ. ಅಶೋಕ್. ಕೆ. ಆರ್. 
ಗಾಂಧಿ ಜಯಂತಿಯ ದಿನ ಸಾಬರಮತಿ ಆಶ್ರಮದಲ್ಲಿ ನಡೆದ 'ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಈಗ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ೬೦ ತಿಂಗಳುಗಳಲ್ಲಿ ಹನ್ನೊಂದು ಕೋಟಿ ಶೌಚಾಲಯಗಳು ನಿರ್ಮಾಣವಾಗಿರುವುದನ್ನು ನೆಪವಾಗಿಟ್ಟುಕೊಂಡು ಪ್ರಧಾನಿಯವರು ಬಯಲು ಶೌಚ ಮುಕ್ತ ರಾಷ್ಟ್ರದ ಘೋಷಣೆ ಮಾಡಿದ್ದಾರೆ. ನಿಜಕ್ಕೂ ವಾಸ್ತವದಲ್ಲಿ, ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆಯಾ? 

ನಮ್ಮ ರಾಜಕಾರಣಿಗಳು - ಅದು ಮುಖ್ಯಮಂತ್ರಿಯಾದರೂ ಸರಿ, ಪ್ರಧಾನಮಂತ್ರಿಯಾದರೂ ಸರಿ - ಚುನಾವಣೆಯ ಸಂದರ್ಭದಲ್ಲಿ ಸುಳ್ಳುಗಳನ್ನೇಳುವುದು ಅಥವಾ ಇರುವ ಸತ್ಯವನ್ನೇ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ವೈಭವೀಕರಿಸಿ ಹೇಳುವುದು ಸಹಜ ಸಂಗತಿಯಂತೇ ಆಗಿ ಹೋಗಿದೆ. My experiments with truth ಅನ್ನೋ ಹೆಸರಿನ ಆತ್ಮಚರಿತ್ರೆ ಬರೆದ, ಸತ್ಯಕ್ಕಾಗಿ ಆಗ್ರಹಿಸುವ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಗಾಂಧೀಜಿಯ ಜನ್ಮದಿನವೇ ಅನಾವಶ್ಯಕ ಸುಳ್ಳೇಳುವ ಅನಿವಾರ್ಯತೆಯಾದರೂ ಪ್ರಧಾನಿಗೇನಿತ್ತು? ಅಥವಾ ನಿಜಕ್ಕೂ ಯಾರೋ ಒಬ್ಬ ಅಧಿಕಾರಿಯೋ ಮತ್ತೊಬ್ಬರೋ ವೈಭವೀಕರಿಸಿ ಕೊಟ್ಟ ವರದಿಯನ್ನೇ ನಂಬಿಬಿಡುವಷ್ಟು ನಮ್ಮ ಪ್ರಧಾನಿ ಮುಗ್ದರೇ? 

ಈ ಮುಂಚೆ ಇದ್ದ ನಿರ್ಮಲ ಭಾರತ ಯೋಜನೆಯಡಿ, ತದನಂತರ ಬಂದ ಸ್ವಚ್ಛ ಭಾರತ ಯೋಜನೆಯಡಿ ಬಹಳಷ್ಟು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿರುವುದು ಎದ್ದು ಕಾಣಿಸುತ್ತದೆ (ಕೊನೇ ಪಕ್ಷ ಕರ್ನಾಟಕದ ಹಳ್ಳಿಗಳಲ್ಲಿ), ಅದರಲ್ಲೇನೂ ಅನುಮಾನವಿಲ್ಲ. ಅಷ್ಟಿದ್ದರೂ ಹಳ್ಳಿಯಂಚಿನ ಕೆರೆ ಬದಿಗಳಲ್ಲಿ, ಗದ್ದೆ ಹೊಲದ ಬದುವಿನಲ್ಲಿ, ಕಾಲುವೆಯಂಚಿನಲ್ಲಿ, ಹಳ್ಳಗಳತ್ತಿರ ಬಯಲು ಶೌಚ ಯಥಾಸ್ಥಿತಿಯಲ್ಲೇ ಮುಂದುವರೆದಿರುವುದಂತೂ ಹೌದು. ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದರೂ ಬಯಲು ಶೌಚ ಯಾಕೆ ಮುಂದುವರೆಯುತ್ತಿದೆ?

Oct 2, 2019

ಬಲಾಡ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡ ಭಾಷಿಕ ಸಮುದಾಯ

ಕು.ಸ.ಮಧುಸೂದನ ರಂಗೇನಹಳ್ಳಿ 
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ 

ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಕೆಲವರ್ಷಗಳ ಹಿಂದೆ ನಡೆದ ಕಳಸಾ ಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ. 

ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ ಕನ್ನಡ ಬಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಬಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು ಕೇವಲ ಬಾಷಿಕ ಚಳುವಳಿಗಳಾಗಿ: ಆಡಳಿತ ಬಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ. 

Sep 29, 2019

ಒಂದು ಬೊಗಸೆ ಪ್ರೀತಿ - 33

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ರಾತ್ರಿ ಮಲಗಲೋಗುವಷ್ಟರಲ್ಲಿ ಪುರುಷೋತ್ತಮ ಮತ್ತೈದು ಬಾರಿ ಕರೆ ಮಾಡಿದ್ದ. ನಾ ತೆಗೆಯಲಿಲ್ಲ. ಕೊನೆಗೆ "ಇನ್ನೂ ಕೋಪ ಹೋಗಿಲ್ವೇನೇ ಧರು" ಎಂದು ಮೆಸೇಜು ಮಾಡಿದ. 

'ಕೋಪಾನಾ? ಹಂಗೇನಿಲ್ಲಪ್ಪ' ಒಂದು ಸುಳ್ಳನ್ನ ಹಂಗೇ ವಗಾಯಿಸಿದೆ. 

“ಮತ್ಯಾಕೆ ಫೋನ್ ರಿಸೀವ್ ಮಾಡ್ಲಿಲ್ಲ" 

'ಹಂಗೇನಿಲ್ವೋ. ಮನೆಗ್ಯಾರೋ ಬಂದಿದ್ರು. ಅದಿಕ್ಕೆ ನೋಡಲಿಲ್ಲ ಫೋನ್ ನ' 

“ಓಹೋ! ಅಪ್ಪ ಅಮ್ಮ ಹೊರಗೋಗಿದ್ರೇನೋ....ನನ್ ತರ ಇನ್ಯಾವುದೋ ಬಕ್ರಾನ ಮನೆಗೆ ಕರೆಸಿಕೊಂಡಿದ್ದೇನೋ ತೆವಲು ತೀರಿಸಿಕೊಳ್ಳೋಕೆ....” ಕೆಟ್ಟ ಕೆಟ್ಟ ಪದಗಳನ್ನೆಲ್ಲ ಬಳಸಿ ಬಯ್ಯಬೇಕೆನ್ನಿಸಿತು. ಬಯ್ಯಲಿಲ್ಲ. 

'ಓ! ನಿನ್ನನ್ನು ಮನೆಗೆ ಕರೆದುಕೊಂಡು ಬರ್ತಿದ್ದದ್ದು ತೆವಲು ತೀರಿಸಿಕೊಳ್ಳೋಕೆ ಅಂತ ಗೊತ್ತಿರಲಿಲ್ಲ. ಥ್ಯಾಂಕ್ಸ್ ತಿಳಿಸಿಕೊಟ್ಟಿದ್ದಕ್ಕೆ. ಬಾಯ್' ಎಂದು ಮೆಸೇಜು ಮಾಡಿದೆ. 

“ಹಂಗಲ್ವೇ.... ಸಾರಿ” ಅಂತ ಆರು ಸಲ ಕಳುಹಿಸಿದ. ಪ್ರತಿಕ್ರಿಯಿಸಲಿಲ್ಲ. ಕೊನೆಗೆ "ಸರಿ ನಾಳೆ ಸಿಗುವ" ಎಂದ್ಹೇಳಿದ. ಮೊಬೈಲನ್ನು ಬದಿಗಿಟ್ಟು ಮಲಗಲು ಹೋದಾಗ ಮತ್ತೊಮ್ಮೆ ಮೊಬೈಲ್ ಶಬ್ದ ಮಾಡಿತು. ಇವನದೇ ಮತ್ತೊಂದು ಮೆಸೇಜು ಬಂದಿರ್ತದೆ ಅಂತ ನೋಡಿದವಳಿಗೆ "ಹಾಯ್. ಊಟ ಆಯ್ತ" ಎಂಬ ಮೆಸೇಜು ಕಾಣಿಸಿತು. ರಾಜೀವನದು! 

'ಹು. ಆಯ್ತು. ನಿಮ್ಮದು'

Sep 24, 2019

ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಬೃಹತ್ ಪ್ರಹಸನ!

ಕು.ಸ.ಮಧುಸೂದನ ರಂಗೇನಹಳ್ಳಿ
ದೇಶ ಮತ್ತು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ತೀವ್ರ ಆರ್ಥಿಕ ಹಿಂಜರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ರಾಜ್ಯದ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮತ್ತೊಂದು ಸುತ್ತಿನ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. 

2013ರಿಂದ 2018ರವರೆಗು ಅಂದಿನ ಕಾಂಗ್ರೆಸ್ ಸರಕಾರ ನಡೆಸಿದ್ದ ಬಂಡವಾಳ ಹೂಡಿಕೆಯ ಸಮಾವೇಶಗಳು ಪಡದುಕೊಂಡಿದ್ದ ಪ್ರಚಾರವನ್ನು, ತಂದುಕೊಟ್ಟ ಪಲಿತಾಂಶವನ್ನು ವಿಶ್ಲೇಷಿಸಿದರೆ ಈ ಸಮಾವೇಶಗಳ ನಿಜಬಣ್ಣ ಬಯಲಾಗುತ್ತ ಹೋಗುತ್ತದೆ. ಈ ಹಿಂದಿನ ಕೈಗಾರಿಕಾ ಮಂತ್ರಿಗಳು ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸುವುದರ ಜೊತೆಜೊತೆಗೆ ವಿದೇಶಗಳಲ್ಲಿಯೂ ರೋಡ್ ಶೋಗಳನ್ನು ನಡೆಸಿ ತಮ್ಮ ಪ್ರಯತ್ನ ಶೇಕಡಾ ನೂರರಷ್ಟು ಫಲಪ್ರದವಾಗಿದೆಯೆಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಸ್ತು ಸ್ಥಿತಿ ಬೇರೆಯದೆ ಇದೆ! 

ಕಳೆದ ಐದು ವರ್ಷಗಳಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕೋಟಿ ಮೊತ್ತದ ಒಂದು ಸಾವಿರದ ನೂರೈವತ್ತು ಯೋಜನೆಗಳಿಗೆ ಸರಕಾರದ ಉನ್ನತಾಧಿಕಾರದ ಸಮಿತಿ ಮಂಜೂರಾತಿ ನೀಡಿತ್ತು. ಆದರೆ ಈವರೆಗು ಕೇವಲ ನೂರಾ ನಲವತ್ತೆರಡು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಹೂಡಿಕೆಯಾದ ಬಂಡವಾಳ ಕೇವಲ ಒಂಭತ್ತು ಸಾವಿರ ಕೋಟಿಯಷ್ಟು ಮಾತ್ರ..ಇನ್ನುಳಿದ ಹಣ ಹೂಡಿಕೆಯಾಗುವ ಭರವಸೆಯಂತು ಸದ್ಯಕ್ಕೆ ಯಾರಿಗೂ ಇಲ್ಲ. ಯಾಕೆಂದರೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಿರಾಶಾದಾಯಕ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಲು ಯಾರೂ ಮುಂದೆಬರುವುದಿಲ್ಲವೆಂಬುದು ಸತ್ಯ. 

Sep 22, 2019

ಒಂದು ಬೊಗಸೆ ಪ್ರೀತಿ - 32

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಇಬ್ಬರೂ ರೂಮಿನಿಂದ ಖುಷಿಖುಷಿಯಾಗಿ ಹೊರಬಂದೋ. ನಾ ಅಪ್ಪನ ತೋಳಿನಲ್ಲಿದ್ದೆ. ಅಮ್ಮ ಇಬ್ಬರನ್ನೂ ನೋಡಿ ಮುಸಿನಕ್ಕರು. ತಮ್ಮ ಕೂಡ ಒಮ್ಮೆ ನಕ್ಕ. ತಮ್ಮ ಮೊದಲೇ ಹೆಚ್ಚು ಮಾತನಾಡುವವನಲ್ಲ. ಈಗಂತೂ ಮೂಗನಂತಾಗಿಬಿಟ್ಟಿದ್ದ. “ನಿಮ್ಮ ಸಂಭ್ರಮ ಸಡಗರವೆಲ್ಲ ಮುಗಿದಿದ್ರೆ ಬನ್ನಿ ಊಟಕ್ಕೆ" ಅಮ್ಮ ಕರೆದಳು. 

“ಏನ್ ಮಾಡಿದ್ದಿ?” ಅಪ್ಪನ ಪ್ರಶ್ನೆ. 

“ಅವರೆಕಾಳು ಉಪ್ಸಾರು" 

“ಥೂ ಥೂ. ಅಷ್ಟು ದಿನದಿಂದ ಅದೇ ಉಪ್ಸಾರು, ತಿಳಿಸಾರು ಬಿಟ್ರೆ ಬೇಳೆಸಾರು. ಬಾಯಿ ಕೆಟ್ಟೋಗದೆ. ನೀವದನ್ನೇ ತಿಂದುಕೊಳ್ಳಿ. ನಾನೂ ನನ್ನ ಮಗಳು ಬಾಯ್ರುಚಿಗೇನಾದ್ರೂ ತಿಂದ್ಕೊಂಡು ಬರ್ತೀವಿ" ಅಂದರು ಅಪ್ಪ. 

“ನಮ್ ಬಾಯಿಯೇನು ರುಚಿಗೆ ಹಂಬಲಿಸೋದಿಲ್ಲಾಂತಾನಾ? ನಾವೇನ್ ಪಾಪ ಮಾಡಿದ್ದೊ. ನಾವೂ ಬರ್ತೀವಿ" ಅಮ್ಮ ಅಂದರು. ನಾಲ್ಕೂ ಮಂದಿ ಹೊರಗೆ ಊಟಕ್ಕೆ ಹೋದೋ' 

“ಹೆಂಗೋ ಕೊನೇಪಕ್ಷ ನಿಮ್ಮ ಮನೆಯವರಾದ್ರೂ ಸರಿ ಹೋದ್ರಲ್ಲ ಬಿಡು" ಸಾಗರ ನಿಟ್ಟುಸಿರುಬಿಟ್ಟ. 

'ಅ‍ಯ್ಯೋ ಅಷ್ಟು ಬೇಗ ನಿರ್ಧಾರ ಮಾಡಿಬಿಡಬೇಡಪ್ಪ. ಇನ್ನೂ ಬಹಳಷ್ಟು ನಡೆದಿದೆ' 

“ಒಳ್ಳೆ ಮೆಗಾಸೀರಿಯಲ್ ಆಯ್ತಲ್ಲೇ ನಿನ್ನ ಕತೆ" 

'ಅಲ್ವ! ಈಗ ಯೋಚಿಸಿದ್ರೆ ನಂಗೂ ಹಂಗೇ ಅನ್ಸುತ್ತೆ. ಎಷ್ಟೆಲ್ಲ ನಡೆದುಹೋಯ್ತಲ್ಲ ಅಂತ. ಬೋರಾಯ್ತೇನೋ? ಬೋರಾಗಿದ್ರೆ ಇನ್ನೊಂದಿನ ಹೇಳ್ತೀನಿ ಬಿಡು' 

“ಹಂಗೇನಿಲ್ವೇ. ಇದೆಲ್ಲ ಹೇಳಿ ಮುಗಿಸಾಗಬೇಕಿತ್ತು ಇಷ್ಟೊತ್ತಿಗೆ. ಎಲ್ಲಿ.... ನಾವಿಬ್ರು ಇತ್ತೀಚೆಗೆ ಮಾತು ಶುರು ಮಾಡಿದಾಗೆಲ್ಲ ಸೆಕ್ಸು ಕಡೆಗೇ ಹೋಗಿಬಿಡ್ತಿದ್ದೋ ಪಟ್ಟಂತ. ಎಷ್ಟೋ ದಿನದ ಮೇಲೆ ಸೆಕ್ಸ್ ಬಿಟ್ಟು ಬೇರೆ ವಿಷಯ ಮಾತಾಡ್ತಿರೋದು ನಾವಿಬ್ರು. ಐ ಯ್ಯಾಮ್ ಹ್ಯಾಪಿ ಫಾರ್ ದಟ್" ಅಂದ. ಹುಡುಗ್ರು ಹಿಂಗೂ ಇರ್ತಾರಾ! ಇದ್ದಾನಲ್ಲ ನನ್ನ ಸಾಗರ....... 

“ನಿನ್ ಹಸ್ಬಂಡ್ ಇನ್ನೂ ಬರಲಿಲ್ಲವೇನೇ?” 

Sep 20, 2019

ಪ್ರೇಮದೊಂದು ಕವಿತೆ.


ಕು.ಸ.ಮಧುಸೂದನ 
ಆಕಾಶದಡಿಯ ಕತ್ತಲು 
ಭೂಮಿ ಮುತ್ತಲು 
ಬೆಳಕಿನೊಂದು ಕನಸು ಕಂಡ ಮಗು 
ನಿದ್ದೆಯಿಂದೆದ್ದು ಕೂತಿತು 
ಅಮ್ಮನ ತೋಳುಗಳ ಹಾಸಿಗೆ ದಾಟಿ 
ಅಂಗಳಕ್ಕಿಳಿಯಿತು. 
ಮಿಂಚುಹುಳುವೊಂದು ಕಣ್ಣ ಮುಂದೆ ಮಿನುಗಿ 
ದಾರಿಯ ಹೊಳೆಸಿತು 
ಅರ್ದಕ್ಕೆ ನಿಂತ ಹಾಡಿಗೆ ಮರುಜೀವ ಬಂದು 
ಬಿಕ್ಕಿಬಿಕ್ಕಿ ಸುಸ್ತಾಗಿದ್ದ ಚುಕ್ಕಿಗಳಿಗೆ 
ಹೊಸ ಹುರುಪು ಬಂದು 
ಬೆಳಗಿನತ್ತ ನಡೆದವು 
ಮರುದಿನದ ಸೂರ್ಯೋದಯದೊಳಗೆ 
ಲೋಕದೊಳಗೆಲ್ಲ ಪ್ರೇಮ 
ತುಂಬಿ ತುಳುಕಿತು!. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Sep 19, 2019

ಹಡೆಯುವ ಬಯಕೆಗೆ


ಕು.ಸ.ಮಧುಸೂದನ 
ಸಂಜೆ ಹುಯ್ಯುವ ಬಿಸಿಲು ಮಳೆ 
ಕೃತಕವೆನಿಸಿ 
ಕಾಮನಬಿಲ್ಲೂ ಕ್ಷಣಭಂಗುರವೆನಿಸಿ 
ತಳಮಳಿಸಿದ ಮನಸು 
ಹೊಕ್ಕುಳಾದಳದೊಳಗೆಲ್ಲೊ 
ಕಡೆಗೋಲು 
ಮಜ್ಜಿಗೆ ಕಡೆದಂತಾಗಿ 
ಬಿಟ್ಟ ಉಸಿರು ನೀಳವಾಗಿ ಎದೆಬಡಿತ ಜೋರಾಗಿ 
ನಿಂತರೆ ಸಾಕು ಮಳೆ 
ಬಂದರೆ ಮತ್ತೆ ರವಷ್ಟು ಬಿಸಿಲು 
ಮೈಕಾಯಿಸಿಕೊಳ್ಳಬೇಕು. 

ಸ್ಖಲಿಸಿಕೊಳ್ಳದೆ 
ಬಸುರಾಗದೆ 
ಹಡೆಯಲಾಗದೆ 
ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು 
ಉಳಿಸಿಕೊಳ್ಳಬೇಕು.