Aug 30, 2016

ವೇಮುಲನ ಬದುಕನ್ನಾಧರಿಸಿದ 'ನಕ್ಷತ್ರದ ಧೂಳು'

ಡಾ. ಅಶೋಕ್. ಕೆ. ಆರ್
30/08/2016
ಏಕವ್ಯಕ್ತಿ ರಂಗಪ್ರಯೋಗವನ್ನು ನೋಡುವುದು ಎಷ್ಟು ಕಷ್ಟವೋ ಅದನ್ನು ನೋಡಿಸಿಕೊಳ್ಳುವಂತೆ ರಂಗದ ಮೇಲೆ ತರುವುದು ಅದಕ್ಕಿಂತಲೂ ಕಷ್ಟ. ರಂಗದ ಮೇಲೆ ಹತ್ತಾರು ಜನರಿದ್ದು, ಐದತ್ತು ನಿಮಿಷಕ್ಕೊಮ್ಮೆ ರಂಗದ ಮೇಲಿನ ಪರಿಕರಗಳು ಬದಲಾಗಿ, ಕ್ಷಣಕ್ಕೊಮ್ಮೆ ಬದಲಾಗುವ ಬಣ್ಣಗಳಿರುವ ನಾಟಕಗಳೇ ಕೆಲವೊಮ್ಮೆ ಆಕಳಿಕೆ ತರಿಸಿಬಿಡುತ್ತವೆ. ಇನ್ನು ಏಕವ್ಯಕ್ತಿ ರಂಗಪ್ರಯೋಗದ ಕಷ್ಟಗಳೆಷ್ಟಿರಬೇಕೆಂದು ಊಹಿಸಿಕೊಳ್ಳಿ. ನಾಟಕವನ್ನು ರಚಿಸಿದವರು, ನಿರ್ದೇಶಿಸಿದವರು, ಬೆಳಕು, ಸಂಗೀತ ನೀಡಿದವರೆಲ್ಲರಿಗಿಂತಲೂ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಕಲಾವಿದನಿಗೇ ಹೆಚ್ಚು ಪ್ರಾಮುಖ್ಯತೆ. ಉಳಿದ ನಾಟಕಗಳಲ್ಲಿ ಒಬ್ಬರ ಕಳಪೆ ನಟನೆ ಇನ್ನುಳಿದವರ ಉತ್ತಮ ನಟನೆಯ ನಡುವೆ ಮರೆಯಾಗಿಬಿಡುತ್ತದೆ ಆದರಿಲ್ಲಿ ಒಂದು ಒಂದೂವರೆ ತಾಸು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಜವಾಬುದಾರಿ ಕಲಾವಿದನದ್ದು ಮಾತ್ರ. ವ್ಯವಸ್ಥೆಯ ವ್ಯವಸ್ಥಿತ ಅವ್ಯವಸ್ಥೆಗೆ ಬಲಿಯಾಗಿ ದುರದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನ ಬದುಕನ್ನಾಧರಿಸಿದ ‘ನಕ್ಷತ್ರದ ಧೂಳೂ’ ಏಕವ್ಯಕ್ತಿ ರಂಗಪ್ರಯೋಗ ವೀಕ್ಷಕರನ್ನು ಒಂದೂವರೆ ಘಂಟೆಗಳ ಕಾಲ ಹಿಡಿದಿಟ್ಟುಕೊಂಡಿತಾ? 

ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಪತ್ರದಲ್ಲಿ ಕಾರ್ಲ್ ಸೇಗಾನ್ ನ ಕುರಿತು ಬರೆಯುತ್ತಾನೆ. 'ನಕ್ಷತ್ರದ ಧೂಳು' ನಾಟಕ ಪ್ರಾರಂಭವಾಗುವುದು ಪ್ರೊಜೆಕ್ಟರಿನಲ್ಲಿ ಕಾರ್ಲ್ ಸೇಗಾನ್‍ ನ ಮಾತುಗಳು ಬರುವುದರೊಂದಿಗೆ. ಪ್ರಯೋಗದಲ್ಲಿ ಏಕವ್ಯಕ್ತಿಯ ಅಭಿನಯವಷ್ಟೇ ಇದ್ದರೂ ಆಧುನಿಕ ತಂತ್ರಜ್ಞಾನದ ನೆರವಿನಿಂದ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಅನ್ನು ಸಮರ್ಥವಾಗಿ ಬಳಸಿ ಒಂದಷ್ಟು ಏಕತಾನತೆಯನ್ನು ದೂರ ಮಾಡುವುದೀಗ ಸಾಧ್ಯವಿದೆ. 'ನಕ್ಷತ್ರದ ಧೂಳು' ನಾಟಕದಲ್ಲೂ ಇದೇ ತಂತ್ರ ಉಪಯೋಗಿಸಲಾಗಿದೆ. ತಕ್ಕಮಟ್ಟಿಗೆ ಈ ತಂತ್ರ ಯಶಸ್ವಿಯೂ ಆಗಿದೆ. ಕಾರ್ಲ್ ಸೇಗಾನ್ ನ ಪುಸ್ತಕವನ್ನು ಓದುತ್ತಿರುವ ರೋಹಿತ್ ವೇಮುಲ (ವೇಮುಲನಾಗಿ ನಟಿಸಿರುವುದು ಕಿರಣ್ ಮಾರಶೆಟ್ಟಿಹಳ್ಳಿ) ತನ್ನ ಪರಿಚಯವನ್ನು ಹೇಳಿಕೊಳ್ಳುವುದರೊಂದಿಗೆ ನಾಟಕದ ಏಕಪಾತ್ರಾಭಿನಯದ ಪ್ರಾರಂಭವಾಗುತ್ತದೆ. ತನ್ನ ಬಾಲ್ಯದ ದುಃಖಕರ ಸಂಗತಿಗಳನ್ನು, ಯೌವನಕ್ಕೆ ಕಾಲಿಡುತ್ತಿದ್ದಾಗ ನಡೆದ ಘಟನೆಗಳನ್ನು, ಜಾತಿಯ ಕಾರಣಕ್ಕೆ ಅನುಭವಿಸಿದ ತಾರತಮ್ಯವನ್ನು, ಜಾತಿಯ ಕಾರಣಕ್ಕೆ 'ಹೊಲತಿಯ ಮಕ್ಕಳು' ಎಂದು ಅಪ್ಪನಿಂದಲೇ ಅವಮಾನಕ್ಕೀಡಾಗಿದ್ದನ್ನು, ಇದೆಲ್ಲದರ ಮಧ್ಯೆ ಓದುವುದರ ಕಡೆಗಿನ ಅತೀವ ಆಸಕ್ತಿಗಳೆಲ್ಲವೂ ಮಾತಿನ ರೂಪದಲ್ಲಿ, ಕತೆಯ ರೂಪದಲ್ಲಿ ನೋಡುಗರನ್ನು ಹಿಡಿದಿಡುತ್ತವೆ. ಮಾತಿನ ಓಘದ ನಡುವೆ ಒಂದು ವಿರಾಮದಂತೆ ರೋಹಿತ್ ವೇಮುಲ ತೆಗೆದ ಅವನ ಮನೆಯ ಚಿತ್ರಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಗಿದೆ. ಈ ಚಿತ್ರಗಳು ನೋಡುಗರ ಮನದಲ್ಲೊಂದು ವಿಷ್ಯುಯಲ್ ಇಂಪಾಕ್ಟ್ ಮೂಡಿಸುವುದರಲ್ಲಿ ಯಶಸ್ವಿಯಾಗಿವೆ. ನಂತರ ಹೈದರಾಬಾದ್ ವಿಶ್ವವಿದ್ಯಾನಿಲಯವನ್ನು ಸೇರಿದ ರೋಹಿತನ ದಿನಗಳ ಪ್ರಾರಂಭವಾಗುತ್ತದೆ. ವಿಶ್ವವಿದ್ಯಾಲಯದ ದಿನಗಳಲ್ಲಿ ರೋಹಿತ್ ವೇಮುಲನ ಜೀವನದಲ್ಲಿ ನಡೆದ ಅನೇಕ ಘಟನೆಗಳು ಬಹುತೇಕ ವೀಕ್ಷಕರಿಗೆ ಗೊತ್ತಿರುವಂತದ್ದೇ.

ವೀಕ್ಷಕರಿಗೆ ಗೊತ್ತಿರುವ ವಿಷಯಗಳು ಚೌಕಟ್ಟಿನ ರೂಪದಲ್ಲಿ ತೆರೆಯ ಮೇಲೆ ಮೂಡಿಬರುತ್ತದೆ. ಜಾತಿ ತಾರತಮ್ಯ, ಅಂಬೇಡ್ಕರ್ ಸ್ಟಡಿ ಸರ್ಕಲ್, ದೇಶದ ವಿವಿದೆಡೆ ನಡೆದ ವೈಚಾರಿಕ ಜನರ ಕಗ್ಗೊಲೆಯೆಲ್ಲವೂ ರೋಹಿತ್ ವೇಮುಲನ ಪಾತ್ರಧಾರಿಯ ಮೂಲಕ ಮತ್ತೆ ನೆನಪಾಗುತ್ತದೆ. ಕೊನೆಗೆ ಇವೆಲ್ಲವಕ್ಕೂ ಕಾರಣವಾಗುವುದು ರೋಹಿತ್ ವೇಮುಲನ ಜಾತಿ. ವೇಮುಲನ ಪಾತ್ರಧಾರಿ ಕಿರಣ್ ಮೊದಲರ್ಧದಲ್ಲಿ ಲವಲವಿಕೆಯ ಬಾಲಕನಾಗಿ, ಸಂಕಷ್ಟಗಳ ನಡುವೆಯೂ ಆಶಾಭಾವದ ಹುಡುಗನಾಗಿ ಮಾತಾಡಿ ವೇಮುಲನ ಪಾತ್ರಕ್ಕೊಂದು ನ್ಯಾಯ ಒದಗಿಸುತ್ತಾರೆ. ಮಧ್ಯ ಭಾಗದಲ್ಲಿ ಯಾಕೊ ಸಂಭಾಷಣೆಯನ್ನು ಅತಿ ವೇಗವಾಗಿ ಹೇಳಿಬಿಡುತ್ತಾರೆ. ನೋಡುಗರ ಕಿವಿ ಚುರುಕಿರದಿದ್ದರೆ ಚೂರು ಕಷ್ಟವೇ! ಅಭಿನಯದ ಈ ದುರ್ಬಲತೆ ಮತ್ತೆ ಮರೆಯಾಗುವುದು ಕೊನೆಯ ಭಾಗದಲ್ಲಿ. ಹಾಸ್ಟೆಲ್ಲಿನಿಂದ ಕ್ಷುಲ್ಲಕ ಕಾರಣಕ್ಕೆ ಹೊರದೂಡಿಸಿಕೊಂಡು ವಿಶ್ವ ವಿದ್ಯಾಲಯದ ಆವರಣದಲ್ಲೇ ಪ್ರತಿಭಟನೆಗೆ ಕುಳಿತರೂ ಯಾರೂ ಕ್ಯಾರೇ ಅನ್ನುವುದಿಲ್ಲ. ಹೊರಗಿನಿಂದ ಯಾರೂ ಬಂದು ನಿಮ್ಮೊಂದಿಗೆ ನಾವಿದ್ದೇವೆ ಎನ್ನುವುದಿಲ್ಲ ಎಂಬ ಮಾತುಗಳ ಮೂಲಕ ಮತ್ತೆ ಕಿರಣ್ ಸಶಕ್ತ ಪಾತ್ರಧಾರಿಯಾಗಿ ಇಡೀ ನಾಟಕದ ಜವಾಬುದಾರಿ ಹೊತ್ತ ನಟರಾಗಿ ಎದ್ದು ನಿಲ್ಲುತ್ತಾರೆ. ಗೆಳೆಯರ ಸಮಾಧಾನದ ಮಾತುಗಳಿಂದ ವೇಮುಲನ ನಿರಾಶಾಭಾವನೆ ಮರೆಯಾಗುವುದಿಲ್ಲ. ವ್ಯವಸ್ಥೆಯ ಅವ್ಯವಸ್ಥೆಗೆ ಸಾವಿನ ಮೂಲಕ ಪರಿಹಾರ ಹುಡುಕಲೊರಟು ಬಿಡುತ್ತಾನೆ. ರೋಹಿತ್ ವೇಮುಲ ಕೊನೆಯಲ್ಲಿ ಬರೆದ ಪತ್ರದೊಂದಿಗೆ ನಾಟಕ ಅಂತ್ಯ ಕಂಡಿದ್ದರೆ ಆತ್ಮಹತ್ಯೆಯನ್ನೇ ವೈಭವೀಕರಿಸಿಬಿಟ್ಟಂತಾಗುತ್ತಿತ್ತಾ? ನಾಟಕ ರಚಿಸಿದ ಹರ್ಷಕುಮಾರ್ ಕುಗ್ವೆ - ಸಂಜ್ಯೋತಿ ವಿ.ಕೆ ಹಾಗೂ ನಿರ್ದೇಶಿಸಿದ ಸ್ವರ ಆತ್ಮಹತ್ಯೆ ವೈಭವೀಕರಣಗೊಳ್ಳದಂತೆ ಎಚ್ಚರ ವಹಿಸಿದ್ದಾರೆ. ಆತ್ಮಹತ್ಯೆಯೊಂದಿಗೇ ನಾಟಕ ಮುಗಿದು ಹೋಗಿದ್ದರೆ ವಿಷಣ್ಣ ಭಾವವಷ್ಟೇ ಉಳಿದು ಹೋಗುತ್ತಿತ್ತೇನೋ. ಇಲ್ಲಿ ಮತ್ತೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ. ರೋಹಿತ್ ವೇಮುಲನ ಸಾವಿನ ನಂತರ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತನ ಸಹವರ್ತಿಗಳು ಮುಂದುವರೆಸಿದ ಹೋರಾಟಗಳನ್ನು ತೋರಿಸಿದ್ದಾರೆ. ಆತನ ಹೊದಿಕೆಯನ್ನು ಕೇಂದ್ರ ಬಿಂದುವಾಗಿಸಿಕೊಂಡು ಕಟ್ಟಲಾಗುತ್ತಿರುವ ಟೆಂಟಿನೊಂದಿಗೆ "ಮತ್ತೆ ಕಟ್ಟುತ್ತಿದ್ದೇವೆ" ಎಂಬ ಆಶಯದೊಂದಿಗೆ ನಾಟಕ ಮುಗಿಯುತ್ತದೆ.

ಏಕವ್ಯಕ್ತಿ ನಾಟಕದಲ್ಲಿ ಮಾತುಗಳು ಹೆಚ್ಚಿರಬೇಕಾದದ್ದು ಅಗತ್ಯವೇ. ಆದರೂ ನಾಟಕದಲ್ಲಿ ಹಲವೆಡೆ ಮೌನವೇ ಮಾತಾಗುವ ಸಾಧ್ಯತೆಯಿರುವ ಕಡೆಯೂ ಮಾತು ಬಳಸಿಬಿಟ್ಟಿರುವುದು ನಾಟಕದ ಗ್ರಹಿಕೆಗೊಂದಷ್ಟು ಅಡೆತಡೆ ಉಂಟು ಮಾಡುತ್ತದೆ. ರೋಹಿತ್ ವೇಮುಲ ತನ್ನ ಕೊನೆಯ ಪತ್ರವನ್ನು ಬರೆಯುವಾಗ ಕೂಡ ಪಾತ್ರಧಾರಿಯೇ ಮಾತನಾಡುವುದಕ್ಕಿಂತ ಮುದ್ರಿತ ದನಿ ಕೇಳಿಬಂದಿದ್ದರೆ, ಪಾತ್ರಧಾರಿ ಭಾವನೆಗಳ ಮೂಲಕವೇ ಇನ್ನಷ್ಟು ಮಾತನಾಡಿದ್ದರೆ ಮತ್ತಷ್ಟು ಮನಸ್ಸಿಗೆ ಹತ್ತಿರವಾಗುತ್ತಿತ್ತು. ಆತ್ಮಹತ್ಯಾ ಪತ್ರ ಬರೆಯುವ ಸಂದರ್ಭ ಮನಸ್ಸಿಗೆ ಹತ್ತಿರವಾಗುವಂತೆ ಮಾಡುವುದೂ ಅಷ್ಟು ಸರಿಯಲ್ಲವೇನೋ!

ಬಲಪಂಥೀಯ ಬಾಜಪದ ವಿರುದ್ದ ಸೃಷ್ಠಿಯಾಗಬೇಕಿರುವ ಒಂದು ಮಹಾ ಮೈತ್ರಿಕೂಟ: ಯಾಕೆ ಮತ್ತು ಹೇಗೆ? - ಒಂದು ಅವಲೋಕನ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
30/08/2016
ಇದೀಗ ರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಕೂತಿರುವ ಬಲಪಂಥೀಯ ಪಕ್ಷವಾದ ಬಾಜಪವನ್ನು ಮುಂದಿನ ಅಂದರೆ 2019 ರ ಸಾರ್ವತ್ರಿಕ ಚುನಾವಣೆಯ ವೇಳೆಗಾದರು ಎದುರಿಸಿ ನಿಂತು ಗೆಲ್ಲಬಲ್ಲ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಳ್ಳುವುದು ಇವತ್ತಿನ ಅನಿವಾರ್ಯವಾಗಿದೆ. ಜನಮಾನಸದಲ್ಲಿನ ಇಂತಹ ಆಶಯವನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಮನಸ್ಸು ಮಾಡುವುದು ಅಗತ್ಯವಾಗಿದೆ. ಇದು ಹೇಗೆ ಸಾದ್ಯವಾಗಬಲ್ಲದೆಂಬುದನ್ನು ಈ ಲೇಖನದಲ್ಲಿ ಚರ್ಚಿಸಲು ಯತ್ನಿಸಿದ್ದೇನೆ. ಇದಕ್ಕೆ ಪೂರಕವಾಗಿ ಬಾಜಪ ಒಂದು ಪಕ್ಷವಾಗಿ, ಮತಾಂಧ ರಾಜಕಾರಣದ ಸಂಕೇತವಾಗಿ ಬೆಳೆದು ಬಂದ ರೀತಿಯನ್ನು ಒಂದಷ್ಟು ನೆನಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದೇನೆ. ಯಾಕೆಂದರೆ ಆಗಾಗ ಇತಿಹಾಸವನ್ನು ತಿರುವಿ ಹಾಕದೇ ಹೋದರೆ ವರ್ತಮಾನದಲ್ಲಿ ಸರಿಯಾದ ಹೆಜ್ಜೆಗಳನ್ನಿಡುವಲ್ಲಿ ಕಷ್ಟವಾಗುತ್ತದೆಯೆಂಬ ಬಾವನೆಯಿಂದ. ಹೀಗಾಗಿ ಈ ಲೇಖನ ಸಾಕಷ್ಟು ದೀರ್ಘವೂ, ಮತ್ತು ಹಲವು ವಿಚಾರಗಳ ಪುನರಾವರ್ತನೆ ಎನಿಸಿದರೆ ಕ್ಷಮಿಸಬೇಕಾಗಿ ಓದುಗರಲ್ಲಿ ನನ್ನ ನಮ್ರ ವಿನಂತಿ:

ಬಹುಶ: ಇಂಡಿಯಾ ಒಂದು ದೇಶವಾಗಿ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾದ ಆತಂಕದ ದಳ್ಳುರಿಯಲ್ಲಿ ಒಳಗೊಳಗೇ ಬೇಯುತ್ತಿದೆ. ಸ್ವಾತಂತ್ರ ಸಿಕ್ಕ ಸರಿಸುಮಾರು ಏಳು ದಶಕಗಳಿಂದ ನಾವು ಜತನದಿಂದ ಕಾಪಾಡಿಕೊಂಡು ಬಂದಿದ್ದ ಜಾತ್ಯಾತೀತ ಸಮಾಜವೊಂದು ಅಪ್ಪಟ ಮತಾಂಧ ಸಮುದಾಯವಾಗಿ ಪರಿವರ್ತನೆಯಾಗುತ್ತಿರುವಂತೆ ಗೋಚರವಾಗುತ್ತಿದೆ. ಈ ತಕ್ಷಣಕ್ಕೆ ಎಚ್ಚರಗೊಂಡು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಬಲಪಂಥೀಯ ಕೋಮುಶಕ್ತಿಗಳ ರಾಜಕೀಯ ಪಡೆಯ ಜೊತೆ ಹೋರಾಡಿ ಅದನ್ನು ಹಿಮ್ಮಟ್ಟಿಸದೆ ಹೋದರೆ ಕೆಲವೇ ದಿನಗಳಲ್ಲಿ ಇಂಡಿಯಾಕೂಡ ಇನ್ನೊಂದು ಮತಾಂಧರಾಷ್ಟ್ರವಾಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಳ್ಳುವ ಸಾದ್ಯತೆ ಹೆಚ್ಚಾಗಿದೆ. ಎಂಭತ್ತರ ದಶಕದಲ್ಲಿ ಪ್ರಾರಂಭವಾದ ಬಾಜಪದ ಕೋಮುವಾದಿ ರಾಜಕಾರಣ ಅಂತಿಮವಾಗಿ ರಾಷ್ಟ್ರವನ್ನು ಆಳುವ ಅಧಿಕಾರವನ್ನು 2014ರ ಚುನಾವಣೆಯಲ್ಲಿ ಪಡೆದು, ಜಾತಿ ಧರ್ಮಗಳನ್ನು ಮೀರಿ ಬದುಕುತ್ತಿರುವ ಕೋಟ್ಯಾಂತರ ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಬಾಜಪದಂತಹ ಬಲಪಂಥೀಯ ರಾಜಕೀಯ ಪಕ್ಷವೊಂದು ಇಂಡಿಯಾದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಅಧಿಕಾರ ಪಡೆಯುವುದು ಹೇಗೆ ಸಾದ್ಯವಾಯಿತು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತ ಹೋದರೆ ಅಚ್ಚರಿಯೇನಾಗುವುದಿಲ್ಲ. ಇವತ್ತು ಅದರ ಕಾರಣಗಳನ್ನು ಹುಡುಕುತ್ತ ಹೋಗುವುದು ಹಲವರ ದೃಷ್ಠಿಯಲ್ಲಿ ಅನಗತ್ಯವೆನಿಸಿದರೂ ಭವಿಷ್ಯದಲ್ಲಿ ಮತ್ತೆ ಅಂತಹ ಪ್ರಮಾದಗಳಾಗದಂತೆ ನೋಡಿಕೊಳ್ಳಲಾದರೂ ಆ ಕಾರಣಗಳನ್ನು ನೆನಪು ಮಾಡಿಕೊಳ್ಳಲೇ ಬೇಕಾಗುತ್ತದೆ. ಬಾಜಪದ ಬೆಳವಣಿಗೆಯನ್ನು ನಾವು ಎರಡು ಹಂತದಲ್ಲಿ ಅದ್ಯಯನ ಮಾಡಬೇಕಾಗುತ್ತದೆ. 1975ರಿಂದ 2004 ರವರೆಗೆ ಅದರ ಮೊದಲ ಭಾಗವಾದರೆ 2004ರಿಂದ 2014ರವರೆಗಿನದು ಮತ್ತೊಂದು ಭಾಗ.

ಬಾಜಪದ ಬೆಳವಣಿಗೆ (1975 ರಿಂದ 2004)

1975ರಲ್ಲಿ ಅಂದಿನ ಪ್ರದಾನಮಂತ್ರಿ ಶ್ರೀಮತಿ ಇಂದಿರಾಗಾಂದಿಯವರು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಎಲ್ಲ ರಾಜಕೀಯ ಪಕ್ಷಗಳು ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಇಂದಿರಾರವರ ಸರ್ವಾಧಿಕಾರಿ ನಡವಳಿಕೆಯ ಬಗ್ಗೆ, ವಂಶಪಾರಂಪರ್ಯ ಆಡಳಿತದ ಬಗ್ಗೆ ಪ್ರತಿಭಟನೆ ನಡೆಸತೊಡಗಿದವು. ಇದಕ್ಕಾಗಿ ಅಂದಿನ ಬಹುತೇಕ ರಾಜಕೀಯ ಪಕ್ಷಗಳು ಕಾಂಗ್ರೇಸ್ಸೇತರ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಳ್ಳಲು ಸಿದ್ದವಾದವು. ಇವತ್ತಿನ ಬಾಜಪ ಅವತ್ತು ಜನಸಂಘದ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘಪರಿವಾರದ ಕಾರಣದಿಂದಾಗಿ ಅದು ಜನಮನ್ನಣೆ ಗಳಿಸುವಲ್ಲಿ ವಿಫಲ ಯತ್ನ ನಡೆಸುತ್ತಿತ್ತು. ಯಾವಾಗ ಕಾಂಗ್ರೆಸ್ಸೇತರ ವಿರೋಧಪಕ್ಷಗಳೆಲ್ಲ ಒಗ್ಗೂಡಿ ಜನತಾ ಪಕ್ಷವನ್ನು ಸ್ಥಾಪಿಸಿಕೊಂಡವೊ ಆಗ ಜನಸಂಘವು ಸಹ ಜನತಾಪಕ್ಷದೊಳಗೆ ಸೇರಿಕೊಂಡು ತನ್ನ ಅಸ್ಪೃಶ್ಯತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳಲು ಪ್ರಯತ್ನಿಸಿತು. ಹೀಗೆ ಹಲವು ಪಕ್ಷಗಳು ಸೇರಿ ರಚಿಸಿಕೊಂಡ ಜನತಾಪಕ್ಷ 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿತು. ಹೀಗೆ ತಾನು ಕನಸಿನಲ್ಲಿಯೂ ನಿರೀಕ್ಷಿಸದ ರೀತಿಯಲ್ಲಿ ಜನಸಂಘವು ಜನತಾಪಕ್ಷದ ಒಂದು ಭಾಗವಾಗಿ ಮೊಟ್ಟಮೊದಲ ಬಾರಿಗೆ ಅಧಿಕಾರದ ರುಚಿ ನೋಡಿತು. ಅವತ್ತು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅದ್ವಾನಿಯವರು ಕೇಂದ್ರದಲ್ಲಿ ಸಚಿವರುಗಳಾಗಿಯೂ ಕಾರ್ಯ ನಿರ್ವಹಿಸಿದರು. ಹೀಗೆ ಜನಸಂಘಕ್ಕೆ ಒಂದು ಮಾನ್ಯತೆ ತಂದುಕೊಡುವಲ್ಲಿ ಜಯಪ್ರಕಾಶ್ ನಾರಾಯಣರ ಮತ್ತು ಸಮಾಜವಾದಿಗಳ ಪಾತ್ರದ ಬಗ್ಗೆ ಇವತ್ತು ಯಾರೇನೇ ಸಮರ್ಥನೆ ಮಾಡಿಕೊಂಡರೂ ಚಾರಿತ್ರಿಕ ಪ್ರಮಾದವೊಂದು ಜರುಗಿ ಹೋಗಿತ್ತು. ಅದುವರೆಗು ಇಂಡಿಯಾದ ರಾಜಕಾರಣದಲ್ಲಿ ಯಾವುದೇ ಜನಮನ್ನಣೆಯನ್ನಾಗಲಿ, ಯಶಸ್ಸನ್ನಾಗಲಿ ಪಡೆಯದಿದ್ದ ಸಂಘಪರಿವಾರ ಸಮಾಜವಾದಿಗಳ ಹೆಗಲ ಮೇಲೆ ಕೂತು ತನ್ನ ಭವಿಷ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಸಾಕಷ್ಟರ ಮಟ್ಟಿಗೆ ಸಫಲವಾಯಿತೆನ್ನಬಹುದು.

ದುರಂತವೆಂದರೆ ಬೇರೆ ಪಕ್ಷಗಳ ಕೃಪೆಯಿಂದ ಯಾವ ಸಂಘಪರಿವಾರಿಗಳು ಮೊದಲ ಬಾರಿಗೆ ಅಧಿಕಾರದ ರುಚಿ ನೋಡಿದರೋ ಅದೇ ಪರಿವಾರಿಗಳು ಸರಕಾರ ಪತನಗೊಂಡು, ಜನತಾ ಪಕ್ಷ ಹೋಳಾಗಲು ಕೂಡಾ ಕಾರಣರಾದರು. ಮಧುಲಿಮಯೆ ಅಂತವರು ಎತ್ತಿದ ರಾಷ್ಟ್ರೀಯ ಸ್ವಯಂಸಂಘದ ದ್ವಿಸದಸ್ಯನೀತಿಯ ಭಿನ್ನಭಿಪ್ರಾಯಗಳಿಂದಾಗಿ ಪತನಗೊಂಡ ಜನತಾಸರಕಾರ 1980ರಲ್ಲಿ ನಡೆದ ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎದುರು ಸೋಲನ್ನಪ್ಪಿ ಮತ್ತೆ ಇಂದಿರಾಗಾಂದಿಯವರ ಕೈಗೆ ಅಧಿಕಾರ ಒಪ್ಪಿಸಬೇಕಾಯಿತು. ಜನತಾ ಪಕ್ಷದಿಂದ ಹೊರಬಂದ ಜನಸಂಘ ಬಾರತೀಯ ಜನತಾ ಪಕ್ಷ ಎನ್ನುವ ಹೊಸ ಹೆಸರಿನಲ್ಲಿ ಪುನರ್ ಸ್ಥಾಪಿತವಾಗಿ ತನ್ನ ರಾಜಕಾರಣವನ್ನು ಪ್ರಾರಂಬಿಸಿತು. ಈಗಾಗಲೇ ಅಧಿಕಾರದ ರುಚ ನೋಡಿದ್ದ ಬಾಜಪ ತನ್ನ ಹೊಸ ಅವತಾರದಲ್ಲಿ ಆಕ್ರಮಣಕಾರಿ ರಾಜಕೀಯ ಶುರು ಮಾಡಿತು. ಅಲ್ಲಿಯವರೆಗು ಗಾಂದಿ ಹತ್ಯೆಯ ಕಳಂಕದ ಹಿಂಜರಿಕೆಯಲ್ಲಿದ್ದ ಜನಸಂಘ ಬಾಜಪವಾಗಿ ಬದಲಾದ ನಂತರ ಮುಕ್ತವಾಗಿ ಹಳೆಯದನ್ನೆಲ್ಲ ಜನ ಮರೆತು ಹೋಗುವಂತೆ ತನ್ನ ಸಂಘಪರಿವಾರದ ಬಿಳಲುಗಳನ್ನು ಹೆಚ್ಚಿಸುತ್ತ ಮತ್ತಷ್ಟು ಹೊಸ ಮತೀಯ ಅಂಗಸಂಸ್ಥೆಗಳನ್ನು ಪ್ರಾರಂಬಿಸಿ ಕೋಮುವಾದಿ ರಾಜಕೀಯದಲ್ಲಿ ತೊಡಗಿತು. ಇಂದಿರಾಗಾಂದಿಯವರ ಹತ್ಯೆಯ ನಂತರ ಅಧಿಕಾರಕ್ಕೆ ಬಂದ ರಾಜೀವ್ ಗಾಂದಿಯವರ ಕಾಲದಲ್ಲಿ ದಶಕಗಳಿಂದಲು ನೆನಗುದಿಗೆ ಬಿದ್ದಿದ್ದ ಬಾಬ್ರಿ ಮಸೀಧಿಯ ವಿವಾದಕ್ಕೆ ಮತ್ತೆ ಜೀವ ತುಂಬಿ ತನ್ನ ಅಂಗಸಂಸ್ಥೆಗಳ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಹೋರಾಡತೊಡಗಿತು. ದಶಕಗಳಿಂದ ಬೀಗಮುದ್ರೆ ಹಾಕಿಸಿಕೊಂಡಿದ್ದ ಮಂದಿರದ ಬೀಗವನ್ನು ತೆಗೆದು ಪೂಜೆಗೆ ಅವಕಾಶ ಕೊಟ್ಟ ರಾಜೀವರ ಅವಿವೇಕಿ ನಿರ್ದಾರ ಕೂಡ ಬಾಜಪಕ್ಕೆ ಸುವರ್ಣಾವಕಾಶವನ್ನು ಒದಗಿಸಿತು. ನಂತರ ಜನರ ಧಾರ್ಮಿಕ ಬಾವನೆಗಳನ್ನು ಕೆರಳಿಸಿ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವ ಹೊಸ ಕಾರ್ಯಕ್ರಮವೊಂದನ್ನು ರೂಪಿಸಿದ ಬಾಜಪ ಅದ್ವಾನಿಯವರ ನೇತೃತ್ವದಲ್ಲಿ ಅಯೋದ್ಯೆಗೆ ರಥಯಾತ್ರೆಯನ್ನು ಆಯೋಜಿಸಿತು. ಗುಜರಾತಿನ ಸೋಮನಾಥದಿಂದ ಹೊರಟ ಈಯಾತ್ರೆಯ ಮೂಲಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹಿಸುವ ಹೆಸರಿನಲ್ಲಿ ಪ್ರತಿ ರಾಜ್ಯಗಳಲ್ಲೂ ಕೋಮುಸಂಘರ್ಷದ ಬೀಜಗಳನ್ನು ಬಿತ್ತುತ್ತ ಹೋಯಿತು. ಈ ರಥಯಾತ್ರೆ ಬಿಹಾರಕ್ಕೆ ಕಾಲಿಟ್ಟಾಗ ಬಿಹಾರದ ಆಗಿನ ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಯಾದವರು ಅದ್ವಾನಿಯವರನ್ನು ಬಂದಿಸಿ ರಥಯಾತ್ರೆಗೆ ವಿರಾಮವೊಂದನ್ನು ಇಟ್ಟರು. ಆದರೆ ಇಷ್ಟರಲ್ಲಾಗಲೇ ಸಂಘಪರಿವಾರದ ಗುಪ್ತ ಕಾರ್ಯಸೂಚಿಯಂತೆ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಆಂದ್ರಪ್ರದೇಶಗಳಲ್ಲಿ ಕೋಮುಗಲಭೆಗಳು ನಡೆಯ ತೊಡಗಿದ್ದವು. ಈ ಅವಧಿಯಲ್ಲಿ ಮಂಡಲ್ ಆಯೋಗದ ವರದಿ ಅನುಷ್ಠಾನ ವಿರೋಧಿಸಿ ನಡೆದ ಹೋರಾಟದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಮೇಲ್ಜಾತಿಯವರ ಪರ ನಿಂತ ಬಾಜಪ ಹಿಂದುಗಳ ಅದರಲ್ಲು ಮೇಲ್ಜಾತಿಗಳ ಮತಗಳ ದೃವೀಕರಣಕ್ಕೆ ಮುಂದಾಯಿತು. ನಂತರ 1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ 120 ಸ್ಥಾನಗಳನ್ನು ಪಡೆದ ಬಾಜಪ ತನ್ನ ಬೇರುಗಳನ್ನು ಉತ್ತರ ಭಾರತದಲ್ಲಿ ಬಿಡಲು ಪ್ರಾರಂಬಿಸಿತು. ಹೀಗೆ ಧಾರ್ಮಿಕ ಬಾವನೆಗಳನ್ನು ಕೆರಳಿಸುವುದರಿಂದ ಮತಗಳಿಸಬಹುದೆಂಬ ಸತ್ಯವನ್ನು ಅರ್ಥಮಾಡಿಕೊಂಡ ಬಾಜಪ ಅಲ್ಲಿಂದಾಚೆಗೆ ಯಾವ ಸಂಕೋಚವೂ ಇಲ್ಲದೆ ತನ್ನ ಹಿಂದೂಪರ ಬಲಪಂಥೀಯ ರಾಜಕಾರಣವನ್ನು ಮುಂದುವರೆಸತೊಡಗಿತು.

ಹೀಗೆ ಹಂತಹಂತವಾಗಿ ಬೆಳೆಯತೊಡಗಿದ ಬಾಜಪ 1999ರಲ್ಲಿ ಎನ್.ಡಿ.ಎ. ಮೈತ್ರಿಕೂಟವನ್ನು ರಚಿಸಿಕೊಂಡು ಅಧಿಕಾರಕ್ಕೆ ಬಂದಿತು. ಈ ಪ್ರಕ್ರಿಯೆಯಲ್ಲಿ ಅದುವರೆಗು ತೃತೀಯ ರಂಗದಲ್ಲಿದ್ದು ಜಾತ್ಯಾತೀತ ರಾಜಕೀಯದ ಬಗ್ಗೆ ಬೊಗಳೆ ಬಿಡುತ್ತಿದ್ದ ಅನೇಕ ಪಕ್ಷಗಳು ಬಾಜಪದ ಪರವಾಗಿ ಹೋದವು. ಕಾಂಗ್ರೆಸ್ಸಿನಲ್ಲಿನ ಸಮರ್ಥ ನಾಯಕತ್ವದ ಕೊರತೆ ಮತ್ತು ತೃತೀಯರಂಗದ ನಾಯಕರುಗಳ ಸ್ವಪ್ರತಿಷ್ಠೆಗಳು, ಅವರ ಪಾಳೆಯಗಾರಿಕೆಯ ಹಮ್ಮಿನ ಒಳಜಗಳಗಳು ಬಾಜಪದ ಬೆಳವಣಿಗೆಗೆ ನೀರು ಗೊಬ್ಬರ ಹಾಕಿ ಪೋಷಿಸಿದವು. ತದನಂತರದ ಬೆಳವಣಿಗೆಗಳು ಬಾಜಪಕ್ಕೆ ಪೂರಕವಾಗಿಯೇ ನಡೆಯುತ್ತ ಹೋಗಿದ್ದು ಇಂಡಿಯಾದ ದುರಂತವೆನ್ನಬಹುದಾದರು ನಂತರದ ಹತ್ತು ವರ್ಷಗಳ ಕಾಲ ಅದು ಕಾಂಗ್ರೇಸ್ಸಿನ ಎದುರು ಸೋಲೊಪ್ಪಿಕೊಂಡು ಸುಮ್ಮನಿರಬೇಕಾಯಿತು. ಇದು ಬಾಜಪ ಬೆಳೆದ ಮೊದಲ ಹಂತ. 

ಬಾಜಪದ ಬೆಳವಣಿಗೆ(2004 ರಿಂದ 2014)

2001 ರಿಂದ2014ರ ಮೇತಿಂಗಳವರೆಗು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರಮೋದಿಯವರ ಆಡಳಿತದಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಮತ್ತಿತರೇ ಕೋಮು ಸಂಘರ್ಷಗಳ ನಡುವೆಯೂ 2014 ರ ಹೊತ್ತಿಗೆ ಅದೇ ಮೋದಿಯವರು ಇಂಡಿಯಾದ ಯುವಜನತೆಯ ಐಕಾನ್ ಆಗಿ ತಮ್ಮದೇ ಆದ ಅಲೆಯೊಂದನ್ನು ಬಾಜಪದ ಪರವಾಗಿ ಸೃಷ್ಠಿಸುವಲ್ಲಿ ನೆರವಾದ ಅಂಶಗಳನ್ನು ನಾವು ಗಮನಿಸಬೇಕಕು. ಇದನ್ನು ನಾವು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿಯೂ ನೋಡಬೇಕಿದೆ.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯು.ಪಿ.ಎ. ಅಧಿಕಾರಕ್ಕೆ ಬಂದು ಶ್ರೀ ಮನಮೋಹನ್ ಸಿಂಗ್ ಅವರು ಪ್ರದಾನಿಯಾದರೂ ಸಹ ಅವರೆಂದೂ ಜನಸಮುದಾಯದ ನಾಯಕರಾಗಿರಲಿಲ್ಲ. ಎಂದೂ ನೇರ ಚುನಾವಣೆಯನ್ನು ಎದುರಿಸಿರದ ಅವರು ಪ್ರದಾನಿಯಾದ ನಂತರವೂ ಜನನಾಯಕರಾಗುವ ಪ್ರಯತ್ನವನ್ನು ಮಾಡಲಿಲ್ಲ. ಹಾಗೆ ಮಾಡಲು ಅವರು ಪ್ರಯತ್ನಿಸಿದ ನಿದರ್ಶನಗಳೂ ಇಲ್ಲ. ಹಾಗೆ ಪ್ರಯತ್ನಿಸಿದ್ದರೂ ಕಾಂಗ್ರೆಸ್ ಅದಕ್ಕೆ ಅವಕಾಶ ನೀಡಲೂ ಇಲ್ಲ ಎಂಬುದು ಕೂಡ ಸತ್ಯ. ಹೀಗಾಗಿ 2014ರ ಚುನಾವಣೆಯವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ ಒಬ್ಬ ಜನನಾಯಕನ್ನು ರೂಪಿಸಲು ಸಫಲವಾಗಲಿಲ್ಲ. ಸೋನಿಯಾಗಾಂದಿಯವರು ತಮ್ಮ ಪುತ್ರ ರಾಹುಲ್ ಗಾಂದಿಯನ್ನು ರಾಜಕೀಯಕ್ಕೆ ಕರೆತಂದು 2004ರಲ್ಲಿಯೇ ಸಂಸತ್ ಸದಸ್ಯರನ್ನಾಗಿ ಮಾಡಿದರೂ ಸಹ, ಅವರು ಸರಕಾರದ ಯಾವುದೇ ಹುದ್ದೆಯನ್ನೂ ನಿರ್ವಹಿಸಲು ನಿರಾಕರಿಸಿ ರಾಷ್ಟ್ರದಲ್ಲಿ ಯುವನಾಯಕರಾಗಿ ಬೆಳೆಯಬಹುದಾಗಿದ್ದ ಅವಕಾಶವೊಂದನ್ನು ಕೈಚೆಲ್ಲಿ ಕೂತರು.ಇನ್ನು ಕಾಂಗ್ರೇಸ್ ಮತ್ತು ಬಾಜಪೇತರ ಪಕ್ಷಗಳ ಯಾವ ಪ್ರಾದೇಶಿಕ ನಾಯಕರುಗಳು ಸಹ ತಮ್ಮ ರಾಜ್ಯದ ಮಿತಿಯನ್ನು ಮೀರಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸುವ ಪ್ರಯತ್ನ ಮಾಡಲೇ ಇಲ್ಲ. ಮಾಜಿ ಪ್ರದಾನಿ ಶ್ರೀ ದೇವೇಗೌಡರಂತವರು ಸಹ ಕರ್ನಾಟಕದಲ್ಲಿ ತಮ್ಮ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿಯೇ ಕಳೆದು ಹೋದರು. ಬಿಹಾರದ ಲಾಲೂ ಪ್ರಸಾದ್ ತಮ್ಮ ಮೇಲಿನ ಕೇಸುಗಳನ್ನು ನಿಬಾಯಿಸುವಲ್ಲಿ ಮಗ್ನರಾದರೆ ಮುಲಾಯಂಸಿಂಗ್ ತಮ್ಮ ಮಗನನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿಯೇ ಮುಳುಗಿ ಹೋದರು. ಇನ್ನು ಆಂದ್ರದ ಚಂದ್ರಬಾಬು ನಾಯ್ಡುರವರು ಸಹ ತಮ್ಮ ರಾಜ್ಯದಲ್ಲೆದುರಾದ ಶತ್ರುಗಳನ್ನು ಹಣಿಯುವಲ್ಲೇ ಸುಸ್ತಾದಂತೆ ಕಂಡರು ಮಾಯಾವತಿಯವರು ತಮ್ಮ ದಲಿತ ಇಮೇಜಿನಿಂದ ಹೊರಬಂದು ರಾಜಕೀಯ ಮಾಡುವಲ್ಲಿ ಸೋತರು. ಜಯಲಲಿತಾಗು ಸಹ ತಮ್ಮ ಕೇಸುಗಳನ್ನು ಬಗೆಹರಿಸಿಕೊಳ್ಳುವುದೇ ದುಸ್ತರದ ಕಾರ್ಯವಾಗಿತ್ತು. ಹೀಗೆ ಇಂಡಿಯಾದ ರಾಜಕಾರಣ ಸ್ವಪ್ರತಿಷ್ಠೆಯ ಮತ್ತು ಜಾತ್ಯಾಧಾರಿತ ಪ್ರಾದೇಶಿಕ ಪಕ್ಷಗಳಿಂದ ತುಂಬಿ ಹೋಗಿ ಒಬ್ಬನೇ ಒಬ್ಬ ಜನನಾಯಕನೂ ಸೃಷ್ಠಿಯಾಗಲಿಲ್ಲ. 

ಬರ್ಟೋಲ್ಡ್ ಬ್ರೆಕ್ಟ್ ಹೇಳಿದಂತೆ ನಾಯಕನಿಲ್ಲದ ನಾಡಿಗೆ ದುರಂತ ಖಾತ್ರಿ ಅನ್ನುವ ಮಾತು ಇಂಡಿಯಾದ ಮಟ್ಟಿಗೆ ನಿಜವಾಗುತ್ತ ಹೋಯಿತು. ನಾಯಕನಿಲ್ಲದ ಒಂದು ನಾಡಿನಲ್ಲಿ ಯಾವಾಗಲು ಶೂನ್ಯತೆಯೊಂದು ಆವರಿಸುತ್ತ ಹೋಗುತ್ತದೆ. ಆ ಶೂನ್ಯವನ್ನು ಧರ್ಮ ಮತ್ತು ಸರ್ವಾಧಿಕಾರ ಮಾತ್ರ ತುಂಬಬಲ್ಲದು. ಇದನ್ನು ಅರ್ಥಮಾಡಿಕೊಂಡಂತೆ ಬಾಜಪ ತನ್ನ ಕೋಮುವಾದದ ವಿಷವನ್ನು ನಾಡಿನಾದ್ಯಂತ ಬಿತ್ತ ತೊಡಗಿತು. ಈ ಅವಧಿಯಲ್ಲಿ ಜನತೆ ಸಿನಿಕತನದತ್ತ ವಾಲತೊಡಗಿದ್ದರು. ತಮಗೆ ಸಂಬಂದಿಸಿಲ್ಲದ ಯಾವುದೇ ಸಮಸ್ಯೆಗಳಿಗು ಸ್ಪಂದಿಸುವ ಪ್ರತಿಕ್ರಿಯಿಸುವ ಆಸಕ್ತಿ ತೋರದೆ ಸಿನಿಕತನದಿಂದ ವರ್ತಿಸತೊಡಗಿದರು. ಸಮುದಾಯಗಳಲ್ಲಿ ಚಳುವಳಿಗಳು ಹೋರಾಟಗಳು ಮಾಯವಾಗುತ್ತ ಹೋದವು.ಜನತೆ ರಾಜಕಾರಣವನ್ನು ನಿರಾಸಕ್ತಿಯಿಂದ ಅಸಡ್ಡೆಯಿಂದ ನೋಡತೊಡಗಿತು. ಹೀಗೆ ಜನ ಮೌನಕ್ಕೆ ಶರಣಾಗುತ್ತ ಹೋದಂತೆ ನಮ್ಮ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗಗಳು ಸಹ ಪಾಶ್ರ್ವವಾಯುವಿಗೆ ತುತ್ತಾದಂತೆ ವರ್ತಿಸತೊಡಗಿದವು. ರಾಷ್ಟದಲ್ಲಿ ಎಂತಹ ದುರಂತಗಳು ಸಂಭವಿಸಿದರು ಅವು ತಮಗೆ ಸಂಬಂದಿಸಿಯೇ ಇಲ್ಲವೆಂಬಂತೆ ಜನ ಮಂಪರಿನಲ್ಲಿ ಬದುಕ ತೊಡಗಿದಾಗ, ಸಣ್ಣಪುಟ್ಟ ಬಾವನಾತ್ಮಕ ವಿಚಾರಗಳಿಗು ಜನ ಬಾವೋದ್ರೇಕಗೊಳ್ಳುತ್ತ ಹೋಗುತ್ತಾರೆ. ಹೀಗೆ ನಾಯಕನಿರದ ಒಂದು ನಾಡಿನ ಜನತೆ ಒಬ್ಬ ಬಲಿಷ್ಠನಾಯಕನನ್ನು ಎದುರು ನೋಡತೊಡಗುತ್ತಾರೆ. ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಬಲ್ಲಂತಹ ಒಬ್ಬ ನಾಯಕನ ಆಗಮನವಾಗದೇ ಇದ್ದಾಗ ಅಂತಹ ಶೂನ್ಯವನ್ನು ಧರ್ಮವೊಂದು ಸಮರ್ಥವಾಗಿ ತುಂಬಿ ಜನರ ಆಶೋತ್ತರಗಳನ್ನು ತಾನು ಮಾತ್ರ ಪೂರೈಸಬಲ್ಲೆನೆಂಬ ಭರವಸೆ ನೀಡತೊಡಗಿ ನಿದಾನವಾಗಿ ಅದು ತಾನೇ ಪ್ರಭುತ್ವವಾಗುವ ದಾರಿಯಲ್ಲಿ ಸಾಗತೊಡಗುತ್ತದೆ. 2000ದ ನಂತರ ಇಂಡಿಯಾದಲ್ಲಿ ಆದದ್ದು ಇಂತಹುದೇ ಬೆಳವಣಿಗೆ: ನಾಯಕನ ಕೊರತೆಯಿದ್ದ ನಾಡಿನಲ್ಲಿ ತನ್ನ ಧರ್ಮರಾಜಕಾರಣ ಶುರು ಮಾಡಿದ ಬಾಜಪ ಬಹುಸಂಖ್ಯಾತ ಹಿಂದೂ ಧರ್ಮೀಯರನ್ನು ಓಲೈಸುತ್ತ ಅಲ್ಪಸಂಖ್ಯಾತರಿಂದ ಧರ್ಮ ನಾಶವಾಗುವ ಭಯವನ್ನು ಬಿತ್ತತೊಡಗಿ ಇತಿಹಾಸವನ್ನು ತನಗೆ ಅನುಕೂಲಕರವಾಗುವ ರೀತಿಯಲ್ಲಿ ಬಳಸಿಕೊಂಡು ಜನತೆಯಲ್ಲಿ ಮತೋನ್ಮಾದವನ್ನು ಸೃಷ್ಠಿಸುತ್ತ ಹೋಯಿತು. ಅದಕ್ಕಾಗಿ ಅದು ಕಾಶ್ಮೀರದ ಸಮಸ್ಯೆಯಿಂದ ಹಿಡಿದು ಬಾಬಾಬುಡನ್ಗಿರಿ, ಬಾಬ್ರಿಮಸೀದಿ ಮುಂತಾದವನ್ನು ತನ್ನ ಕಾರ್ಯತಂತ್ರಕ್ಕೆ ಬಳಸಿಕೊಂಡಿತು. 

ಇದಕ್ಕೆ ಪೂರಕವಾಗಿ ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಜಾಗತೀಕರಣ ಮದ್ಯಮವರ್ಗದ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿ, ಇಂಡಿಯಾದ ಸಮಾಜವನ್ನು ಒಂದು ಮಾರುಕಟ್ಟೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಯಿತು. ತೊಂಭತ್ತರ ದಶಕದ ನಂತರ ಹುಟ್ಟಿದ ಯುವಜನತೆಗೆ  ಇತಿಹಾಸವಾಗಲಿ, ಸ್ವಾತಂತ್ರ ಹೋರಾಟದ ಅರಿವಾಗಲಿ, ಸಮಾಜವಾದಿ ಚಿಂತನೆಗಳ ಸಂಪರ್ಕವಾಗಲಿ ಇಲ್ಲದೆ ಬೆಳೆಯುತ್ತ ಹೋಯಿತು. ಈ ವಯೋಮಾನದ ಯುವಕರಿಗೆ ಸಹಜವಾಗಿ ಹಿಂದೂ ಮೂಲಭೂತವಾದಿಗಳ ಮತಾಂಧ ಮಾತುಗಳು ಆಕರ್ಷಕವಾಗಿ ಕಂಡಿದ್ದರೆ ಅಚ್ಚರಿಯೇನಿಲ್ಲ. ಯುವಜನತೆಯ ಈ ದೌರ್ಬಲ್ಯವನ್ನು ಬಳಸಿಕೊಂಡ ಬಾಜಪ ಇತಿಹಾಸವನ್ನು ತಿರುಚುತ್ತ, ಅನ್ಯಧರ್ಮಗಳ ಮೇಲೆ ಇಲ್ಲಸಲ್ಲದ ಗೂಬೆಗಳನ್ನು ಕೂರಿಸುತ್ತ ಯುವಜನತೆಯಲ್ಲಿ ಮತಾಂಧತೆಯ ವಿಷವನ್ನು ಹರಡುತ್ತ ಹೋಯಿತು. ಇವತ್ತು ನೀವು ಯಾವುದೇ ಸಾಮಾಜಿಕ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿಂದೂ ಮತೀಯವಾದದ ಕುರಿತಾಗಿ ಮುವತ್ತು ವರ್ಷದೊಳಗಿನ ಯುವಕರೇ ಹೆಚ್ಚಾಗಿ ಬರೆಯುತ್ತಿರುವುದು ಮತ್ತು ತಾವು ಓದಿಕೊಂಡ ಸಂಘ ಪರಿವಾರ ಮರುಸೃಷ್ಠಿಸಿದ ಇತಿಹಾಸವನ್ನೆ ಸತ್ಯವೆಂದು ನಂಬಿರುವ ಬಲಪಂಥೀಯರ ಒಂದು ಕಾರ್ಯಪಡೆಯನ್ನೇ ಕಾಣಬಹುದು. ಹೀಗೆ ಬಾಜಪ ಮತ್ತು ಅದರ ಸಂಘಪರಿವಾರದ ಸದಸ್ಯ ಸಂಸ್ಥೆಗಳು ಯುವಜನತೆಯನ್ನು ಗುರಿಯಾಗಿಸಿಟ್ಟುಕೊಂಡು ದೇಶಭಕ್ತಿ ಮತ್ತು ಧರ್ಮ ಎರಡೂ ಒಂದೇ ಎನ್ನುವ ಹೊಸ ಸಿದ್ದಾಂತವನ್ನು ಹರಡುತ್ತ ಹೋದವು. ಹೀಗಾಗಿ ದೇಶದ ಒಟ್ಟು ಮತದಾರರ ಪೈಕಿ ಶೇಕಡಾ ಐವತ್ತಕ್ಕೂ ಹೆಚ್ಚಿರುವ ಯುವಪೀಳಿಗೆ ಸಹಜವಾಗಿ ಬಾಜಪದತ್ತ ವಾಲಿತು.

ಈ ಸಂದರ್ಭದಲ್ಲಿಯೇ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿಯವರನ್ನು ಹಿಂದೂ ಧರ್ಮ ರಕ್ಷಕನೆಂದೂ, ಅಭಿವೃದ್ದಿಯ ಹರಿಕಾರನೆಂದು ಬಿಂಬಿಸಿದ ಬಾಜಪ, ನಾಯಕನೊಬ್ಬನ ನಿರೀಕ್ಷೆಯಲಿದ್ದ ಜನತೆಗೆ ಬಲಪಂಥೀಯ ನಾಯಕನೊಬ್ಬನ್ನು ನೀಡಿತು. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಮೋದಿಯವರು ಒಬ್ಬ ಬಲಿಷ್ಠ,ಬಲಪಂಥೀಯ ನಾಯಕ ಬಳಸುವ ಬಾಷೆಯನ್ನು, ಬಾಷಣ ಮಾಡುವ ಶೈಲಿಯನ್ನು, ಅದಕ್ಕೆ ತಕ್ಕಂತಹ ದೈಹಿಕ ವರ್ತನೆಗಳನ್ನು ಆವಾಹಿಸಿಕೊಂಡು ದೇಶಭಕ್ತಿಯ ಬಗ್ಗೆ, ಹಿಂದಿನವರ ಭ್ರಷ್ಟಾಚಾರದ ಬಗ್ಗೆ, ಮುಂದೆ ತಾವು ತರಲಿರುವ ಅಮೂಲಾಗ್ರ ಬದಲಾವಣೆಗಳ ಬಗ್ಗೆ ವೀರಾವೇಶದಿಂದ ಮಾತಾಡಿ ರಾಷ್ಟ್ರ ಸುತ್ತಲು ಪ್ರಾರಂಬಿಸಿದರು. ಹೀಗೆ ಜನರ ಕನಸುಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಬಾಜಪ ಜನತೆಗೆ ಒಬ್ಬ ಬಲಪಂಥೀಯ ನಾಯಕನನ್ನು ನೀಡಿತು. ತನ್ನನ್ನು ಬೆಂಬಲಿಸುವ ಉದ್ಯಮಿಗಳನ್ನು, ಮಾಧ್ಯಮಗಳನ್ನೂ ಬಳಸಿಕೊಂಡ ಬಾಜಪ ಮೋದಿ ಪರವಾದ ಅಲೆಯೊಂದನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಯಿತು. ಮೋದಿ ಅಲೆ ಎನ್ನುವುದು ಸಮೂಹ ಸನ್ನಿಯ ರೂಪ ಪಡೆದು 2014 ರ ಹೊತ್ತಿಗೆ ಅಧಿಕಾರ ಪಡೆಯುವಲ್ಲಿಗೆ ಬಂದು ನಿಂತಿತು.

ಹೀಗೆ ಬಾಜಪ ವಿರೋಧಪಕ್ಷಗಳ ಪ್ರತಿರೋಧವಿರದೆ ಅಧಿಕಾರ ಪಡೆಯುವಲ್ಲಿ ಪೂರಕವಾದ ಅಂಶಗಳು ಈ ಕೆಳಕಂಡಂತಿವೆ: 

ಬಾಜಪದ ಮತಾಂಧರಾಜಕಾರಣ, ಸಮರ್ಥನಾಯಕನನನ್ನು ಸೃಷ್ಠಿಸಿ ಹೋರಾಡಲಾಗದ ಕಾಂಗ್ರೆಸ್ಸಿನ ದೌರ್ಬಲ್ಲ, ಒಂದಾಗಿ ರಾಜಕರಣ ಮಾಡದ ವಿರೋಧಪಕ್ಷಗಳ ಒಳಜಗಳಗಳು, ಬಂಡವಾಳಶಾಹಿ ಉದ್ಯಮಪತಿಗಳ ಹಣಕಾಸಿನ ಬೆಂಬಲ, ತಮ್ಮನ್ನು ತಾವೇ ಮಾರಿಕೊಂಡ ಬಹುತೇಕ ರಾಷ್ಟ್ರೀಯ ಮಾಧ್ಯಮಗಳೆಲ್ಲ ಸೇರಿ ಬಾಜಪದ ಪರವಾಗಿ ಕೆಲಸ ಮಾಡಿ ಅದನ್ನು ಕೇಂದ್ರದ ಗದ್ದುಗೆಯಲ್ಲಿ ಕೂರಿಸಲು ಯಶಸ್ವಿಯಾದವು. ಇಷ್ಟಾದರು ಇನ್ನೂ ಇಂಡಿಯಾದ ಹಲವು ಭಾಗಗಳು ಬಾಜಪದ ತೆಕ್ಕೆಗೆ ಬಂದಿಲ್ಲ. ಉತ್ತರದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಅಧಿಕಾರ ನಡೆಸುತ್ತಿರುವ ಬಾಜಪ ಬರಲಿರುವ ರಾಜ್ಯವಿದಾನಸಭಾ ಚುನಾವಣೆಗಳಲ್ಲಿ ಗೆಲುವು ಸಾದಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. 

ಬಾಜಪದ ಕೋಮುರಾಜಕಾರಣದ ವಿರುದ್ದ ಸೃಷ್ಠಿಯಾಗಬೇಕಿರುವ ಮಹಾಮೈತ್ರಿಕೂಟ

ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. 

ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸಬಲ್ಲವು. ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಕಾಂಗ್ರೇಸ್ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ. 2015ರಲ್ಲಿ ನಡೆದ ಬಿಹಾರ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ನಿತೀಶ್ ಲಾಲೂ ಸೇರಿ ರಚಿಸಿಕೊಂಡ ಮಹಾಘಟಬಂದನ್ ಇದಕ್ಕೊಂದು ತಾಜಾ ಉದಾಹರಣೆ.ಆದರೆ ಇದನ್ನು ಅರ್ಥ ಮಾಡಿಕೊಳ್ಳಬೇಕಾದ ಉಳಿದ ಪ್ರಾದೇಶಿಕ ಪಕ್ಷಗಳ ನಾಯಕರುಗಳಿನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳಲ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ. ಅಂದರೆ ಎಂಬತ್ತನೇ ದಶಕದ ಅಂತ್ಯದಲ್ಲಿ ರಚನೆಯಾದ ಕಾಂಗ್ರೇಸ್ ವಿರೋಧಿ ಮೈತ್ರಿಕೂಟದ ರೀತಿಯೇ ಇವತ್ತು ಬಾಜಪೇತರ ಪಕ್ಷಗಳ ಮೈತ್ರಿಕೂಟವೊಂದು ರಚನೆಯಾಗಬೇಕಿದೆ. ಆ ದಿನಗಳಲ್ಲಿ ಅಂತಹದೊಂದು ಕೂಟ ರಚನೆಗೆ ಬಾರಿ ಉತ್ಸಾಹದಿಂದ ಮತ್ತು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದು ನಮ್ಮ ಎಡಪಕ್ಷಗಳೇ.ಇವತ್ತಿನ ಸನ್ನಿವೇಶದಲ್ಲಿಯೂ ಮತ್ತೆ ಎಡಪಕ್ಷಗಳೇ ಇಂತಹದೊಂದು ವೇದಿಕೆ ರಚನೆಗೆ ಮುಂದಾಗಿ ಮುನ್ನಡಿ ಬರೆಯಬೇಕಾಗಿದೆ. ಯಾಕೆಂದರೆ ಈಗಿರುವ ಪ್ರಾದೇಶಿಕ ಪಕ್ಷಗಳ ನಾಯಕರುಗಳನ್ನು ಒಂದೇ ವೇದಿಕೆಯಡಿ ಕರೆತಂದು ಮಾತುಕತೆಗೆ ಕೂರಿಸಲು ಬೇರಾವ ಶಕ್ತಿಗಳಿಗೂ ಸಾದ್ಯವಿಲ್ಲ. ನನಗನ್ನಿಸುವಂತೆ ತನ್ನ ಕೋಮುವಾದಿ ವಿರೋಧಿ ಮತ್ತು ಬಂಡವಾಳಶಾಹಿ ವಿರೋಧಿ ತತ್ವಗಳ ಬಗ್ಗೆ ಕಿಂಚಿತ್ತೂ ರಾಜಿಯಾಗದೆ ರಾಜಕಾರಣ ಮಾಡುತ್ತಿರುವ ಎಡಪಕ್ಷಗಳಿಗೆ ಮಾತ್ರ ಅಂತಹದೊಂದು ನೈತಿಕ ಶಕ್ತಿಯಿದೆಯೆಂದು ನಾನು ನಂಬಿದ್ದೇನೆ.

ಮುಂದಿನ ವರ್ಷ ಎದುರಾಗಲಿರುವ ಚುನಾವಣೆಗಳಿಗೂ ಮುನ್ನ ಇಂತಹ ಮೈತ್ರಿ ಸಾದ್ಯವಾಗುವುದಾದರೆ?

ಮುಂದಿನ ವರ್ಷಕ್ಕೆ ಅಂದರೆ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅಷ್ಟರ ಒಳಗಾಗಿ ಆಯಾ ರಾಜ್ಯಗಳಿಗೆ ಸೀಮಿತವಾಗಿ ಇಂತಹದೊಂದು ಮಹಾ ಮೈತ್ರಿಕೂಟ ರಚನೆಯಾಗುವುದೇ ಆದರೆ ಅದು ಬಾಜಪದ ಪಾಲಿಗೆ ಕಷ್ಟಕರ ಚುನಾವಣೆಗಳಾಗಬಹುದು.ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನು ಮುನ್ನಡೆಸುತ್ತಿರುವುದಾಗಿದೆ.ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದದ ಹೋರಾಟದಲ್ಲಿ ಈ ಎರಡೂ ಪಕ್ಷಗಳ ಜೊತೆ ರಾಜ್ಯದ ಗಡಿಭಾಗದಲ್ಲಿ ಪ್ರಬಲವಾಗಿರುವ ನಿತೀಶರ ಸಂಯುಕ್ತ ಜನತಾದಳ,ಲಾಲೂ ಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ,ಅಜಿತ್ ಸಂಗ್ ರವರ ಲೋಕದಳ ಪಕ್ಷಗಳು ಸೇರಿಕೊಂಡರೆ ಬಾಜಪದ ಜಯವನ್ನು ತಡೆಯ ಬಹುದಾಗಿದೆ. ಇಲ್ಲಿ ಗಂಬೀರವಾದ ಸಮಸ್ಯೆ ಇರುವುದು ಮಾಯಾವತಿ ಮತ್ತು ಮುಲಾಯಂ ನಡುವಿನ ಜಟಾಪಟಿ. ಇವರಿಬ್ಬರೂ ರಾಷ್ಟ್ರದ ಹಿತದೃಷ್ಠಿಯಿಂದ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಮೈತ್ರಿಗೆ ಮುಂದಾದರೆ ಬಹುಶ: ಬಾಜಪ ಅತ್ಯಂತ ಹೀನಾಯವಾಗಿ ಸೋಲುವುದು ಶತಸಿದ್ದ.

ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭಸಾದ್ಯವೇನಲ್ಲ. ಇದುವರೆಗು ಕಾಂಗ್ರೇಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.

ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೇಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಅದೂ ಅಲ್ಲದೆ ಮುಖ್ಯಮಂತ್ರಿ ರಾಬತ್ ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ಬಹುಜನ ಪಕ್ಷದ ಶಾಸಕರು ಅವರಿಗೆ ಬೆಂಬಲ ನೀಡಿದ್ದರು. ಇದರ ಹೊರತಾಗಿಯು ಅಲ್ಲಿ ಸಾಕಷ್ಟು ಪ್ರಬಾವ ಹೊಂದಿರುವ ಲಾಲೂ ಪ್ರಸಾದ್, ಮುಲಾಯಂ, ಮಾಯಾವತಿಯವರು ಒಂದಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೇಸ್ ಮತ್ತು ಬಾಜಪದ ಸೋಲಿಗೆ ಕಾರಣವಾಗಬಹುದಾಗಿದೆ.ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ.ಮಣಿಪುರದಲ್ಲಿ ಕಾಂಗ್ರೇಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ..

ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ. ಆದರೆ ಇಂತಹ ಕಾರ್ಯತಂತ್ರ ಹೇಗಿರಬೇಕೆಂದರೆ ಬಾಜಪೇತರ ಪಕ್ಷಗಳು ಒಂದಾಗಿ ನಿಲ್ಲುವಂತಿರಬೇಕು

ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೇಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ. 

ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್ ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರಸಚಿವೆಯಾಗಿದ್ದು ಇಡೀರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆಇನ್ನು ಮುಲಾಯಂ ಸಿಂಗ್ ಸಹ ರಾಷ್ಟ್ರವ್ಯಾಪಿ ಗೊತ್ತಿರುವ ನಾಯಕರೇ ಆಗಿದ್ದು ಕರ್ನಾಟಕದಂತ ರಾಜ್ಯದಲ್ಲಿಯೂ ಸ್ವಲ್ಪ ಮಟ್ಟಿಗೆ ಅವರ ಪ್ರಬಾವವಿದೆ

ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರಾದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದ್ದು, ಅವುಹೀಗಿವೆ: ಬಿಜುಜನತಾದಳ (ನವೀನ್ಪಟ್ನಾಯಕ್,), ಜನತಾದಳ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್ (ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ) ಆಮ್ಆದ್ಮಿ (ಅರವಿಂದಕೇಜ್ರೀವಾಲ್), ಎನ್.ಸಿ.ಪಿ. (ಶರದಪವಾರ್), ರಾಷ್ಟ್ರೀಯ ಜನತಾದಳ (ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.ಇಷ್ಟೆಲ್ಲ ಹೇಳಿದ ಮೇಲೂ ಬಗೆಹರಿಯದೆ ಉಳಿಯುವ ಒಂದು ಪ್ರಶ್ನೆಯೆಂದರೆ ಇಂತಹ ಮೈತ್ರಿಕೂಟದ ಪ್ರದಾನಮಂತ್ರಿ ಯಾರಾಗಬೇಕೆಂಬುದಾಗಿ.ಬಹುಶ: ಅದನ್ನು ಚುನಾವಣೆಯ ನಂತರವೇ ನಿರ್ದರಿಸುವುದು ಕ್ಷೇಮವೆನಿಸುತ್ತದೆ.

ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆಕಾಂಗ್ರೇಸ್ ಇರಲಿ, ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೇಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ. ಈ ದಿಕ್ಕಿನಲ್ಲಿ ಯೋಚಿಸಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಬಲ್ಲಂತಹ ರಾಜಕೀಯ ಮುತ್ಸದ್ದಿಯೊಬ್ಬರ ಅಗತ್ಯವಿದೆ. ವ್ಯಕ್ತಿಯಾಗಲ್ಲದೆ ಪಕ್ಷವಾಗಿ ಎಡಪಕ್ಷಗಳು ಇಂತಹದೊಂದು ಮುತ್ಸದ್ದಿತನದ ಕೆಲಸ ಮಾಡಬೇಕಾಗಿದೆ. ರಾಷ್ಟ್ರದ ಕೋಮು ಸಾಮರಸ್ಯವನ್ನು ,ಬಹುಸಂಸ್ಕೃತಿಯ ನಮ್ಮ ಸಮಾಜ ವಿಚ್ಚಿದ್ರವಾಗದಂತೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಪ್ರಯತ್ನವೊಂದು ನಡೆಯದೇ ಹೋದರೆ ಭವಿಷ್ಯದಲ್ಲಿ ಬಲಪಂಥೀಯರ ಕಪಿಮುಷ್ಠಿಯಲ್ಲಿ ಸಿಲುಕುವ ರಾಷ್ಟ್ರವನ್ನು ಕಾಪಾಡಲು ಯಾರಿಂದಲೂ ಸಾದ್ಯವಿಲ್ಲ.

ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ. ಇದನ್ನು ಅರ್ಥ ಮಾಡಿಕೊಂಡೇ ಮುಂದಿನ ಹೆಜ್ಜೆ ಇಡಬೇಕಾಗಿದೆ.

(ಈ ಲೇಖನ ಬರೆಯುವ ಹೊತ್ತಿಗೆ ನನ್ನ ಮನಸಿನಲ್ಲಿದ್ದುದು ಇಂಡಿಯಾದ ಒಬ್ಬ ಸಾಮಾನ್ಯ ಮತದಾರ ಏನನ್ನು ಬಯಸುತ್ತಾನೆಂಬುದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತ್ರ. ಹಾಗಾಗಿ ಲೇಖನದ ಎರಡನೇ ಭಾಗ ಅತಿಯಾದ ನಿರೀಕ್ಷೆಯ ಆದರ್ಶದ ಅಂಶಗಳನ್ನು ಹೊಂದಿರಬಹುದಾಗಿದೆ. ಹಾಗಾಗಿ ಸಾಮಾನ್ಯನೊಬ್ಬ ಚಿಂತಿಸಬಹುದಾದ ರೀತಿಯಲ್ಲಿ ಸರಳವಾಗಿ ಬರೆದಿರುವೆ)

Aug 28, 2016

ಧಾರವಾಡದಲ್ಲಿ ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ

ಡಾ. ಕಲಬುರ್ಗಿ ಪಾನ್ಸರೆ ದಾಭೋಲ್ಕರ್ ಹತ್ಯಾವಿರೋಧಿ ಹೋರಾಟ ಸಮಿತಿ ಧಾರವಾಡ

ಡಾ. ಕಲಬುರ್ಗಿ ಪನ್ಸಾರೆ ದಾಭೋಲ್ಕರ್ ಹತ್ಯೆ ವಿರೋಧಿಸಿ
ಮತ್ತು ಸರಕಾರದ ತನಿಖಾ ವಿಳಂಭ ನೀತಿಯನ್ನು ಖಂಡಿಸಿ
ಕೋಮುವಾದಿ ಮತ್ತು ಪ್ಯಾಸಿಸ್ಟ್ ಶಕ್ತಿಗಳಿಗೆ ಉತ್ತರ ಹೇಳುವ

ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ
ಹಾಗೂ
ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ

೨೦೧೬ ಆಗಸ್ಟ್ ೩೦ ಧಾರವಾಡದಲ್ಲಿ

ಜಾಥಾ
ಕಲ್ಯಾಣನಗರದ ಡಾ. ಎಂ. ಎಂ. ಕಲಬುರ್ಗಿ ಅವರ ಮನೆ ಸೌಜನ್ಯದ ಆವರಣದಿಂದ ಮುಂಜಾನೆ ೧೦ ಗಂಟೆಗೆ ಆರಂಭ
ಸಮಾವೇಶ
ಟೌನ ಹಾಲ್ ಮೈದಾನ (ಆರ್ ಎಲ್ ಎಸ್ ಕಾಲೇಜ ಮೈದಾನ) ಮಧ್ಯಾಹ್ನ ೧೨ ಗಂಟೆಗೆ

ಪ್ರಖರ ಚಿಂತನೆಗೆ ಹೆಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಸಾಂಸ್ಕೃತಿಕರಂಗದಲ್ಲಿ ಎಷ್ಟೇ ಪ್ರತಿರೋಧ ಹುಟ್ಟಿಕೊಂಡರೂ ಅವರು ನಂಬಿಕೊಂಡ ಸತ್ಯವನ್ನು ಪ್ರತಿಪಾದಿಸುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧರಾದವರು. ಆರೋಗ್ಯವಂತ ಸಮಾಜಕ್ಕೆ ಮಾರಕವಾದ ಗೊಡ್ಡು ಸಂಪ್ರದಾಯ, ಮೂಢನಂಬಿಕೆ, ಧರ್ಮಾಂಧತೆ, ಕೋಮುವಾದ, ಮನುವಾದ ಮುಂತಾದವು ಅವರು ವಿರೋಧಿಸುವ ವಿಚಾರಗಳಾಗಿದ್ದವು. ಅಂಥ ಪ್ರಖರ ಚಿಂತನೆಯ ನಾಡು ಹೆಮ್ಮೆ ಪಡುವ ಸಂಶೋಧಕರು ಅಪ್ಪಟ ಬಸವ ಅನುಯಾಯಿಗಳೂ ಆಗಿದ್ದ ೭೭ ವರ್ಷದ ಎಂ. ಎಂ. ಕಲಬುರ್ಗಿಯವರನ್ನು ಧಾರವಾಡದಲ್ಲಿ ೨೦೧೫, ಆಗಸ್ಟ್ ೩೦ರಂದು ಗುಂಡಿಟ್ಟು ಕೊಲ್ಲಲಾಯಿತು. ಇದು ಕಲಬುರ್ಗಿಯವರ ಕೊಲೆ ಮಾತ್ರವಾಗಿರದೆ ಅದು ಮಾನವೀಯತೆ, ಪ್ರಜಾಪ್ರಭುತ್ವ, ಬಸವ ವಾದ, ನಾಗರಿಕತೆ, ವೈಚಾರಿಕತೆಯ ಕೊಲೆಯೂ ಆಗಿದೆ. ಅವರನ್ನು ಕೊಂದ ಕ್ರಿಯೆ ಸ್ಪಷ್ಟವಾಗಿ ಕರ್ನಾಟಕದಲ್ಲಿ ಮತೀಯ ಭಯೋತ್ಪಾದನೆ ಹುಟ್ಟಿಕೊಂಡಿರುವದಕ್ಕೆ ಪುರಾವೆಯಾಗಿದೆ. ಇದು ಸಾಂಸ್ಕೃತಿಕ ಭಯೋತ್ಪಾದನೆಯೂ ಆಗಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸದ ಮನಸ್ಥಿತಿಗಳು ಅದನ್ನು ಹಿಂಸೆಯಿಂದ ಎದುರಿಸಲು ಮುಂದಾಗಿರುವದರ ನಿಖರ ಸೂಚನೆಯಾಗಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕದ ಆತಂಕಕಾರಿ ಬೆಳವಣಿಗೆಗೆ.

ಹಿಂದೂ-ಲಿಂಗಾಯತ-ವೀರಶೈವ ಧರ್ಮ ಕುರಿತು ಕೆಲವು ಅಪ್ರಿಯ ವಾದಗಳ ಕಟ್ಟಾ ಪ್ರತಿಪಾದಕರಾಗಿದ್ದ; ಕನ್ನಡ ನುಡಿಯ, ಜನ ಬದುಕಿನ ದೇಸೀ ಆಕರಗಳನ್ನು ಹುಡುಕಿ, ಅರ್ಥೈಸಿ, ವಿಶ್ಲೇಷಣೆಗೆ ಒಡ್ಡುತ್ತಿದ್ದ ಸತ್ಯನಿಷ್ಠ ಸಂಶೋಧಕನ ಬದುಕನ್ನು ಅನುಚಿತ ರೀತಿಯಲ್ಲಿ ಕೊನೆಗೊಳಿಸಲಾಯಿತು. ಗುರುವೇ ಎಂದು ಒಳಬಂದವರೇ ಗುಂಡು ಹಾಕಿ ಹೋದರು. ಪ್ರಜ್ಞಾವಂತ ಜನ ದಿಗ್ಭ್ರಮೆಗೊಂಡರು, ಅವರನ್ನು ನೆನಪಿಸಿಕೊಂಡರು, ದುಃಖಗೊಂಡರು, ಆಕ್ರೋಶಗೊಂಡರು. ಹತ್ಯೆಯನ್ನು ದೇಶಾದ್ಯಂತ ಸಾಹಿತಿ-ಚಿಂತಕರು ಖಂಡಿಸಿ ಹಲವರು ತಮ್ಮ ಪ್ರಶಸ್ತಿ, ಪಾರಿತೋಷಕಗಳನ್ನು ಹಿಂತಿರುಗಿಸಿದರು.

ಕಲಬುರ್ಗಿ ಅವರ ಹತ್ಯೆ ವಿಚಾರ ವಿರೋಧಿಗಳ ಕೃತ್ಯ. ಆದರೆ ವಿಚಾರಕ್ಕೆ ವಿಚಾರ ಉತ್ತರವಾಗಬೇಕೇ ವಿನಹ ಹತ್ಯೆಯಲ್ಲ. ವಿಚಾರದ ಮೂಲಕ ಪ್ರತ್ಯುತ್ತರ ನೀಡಲಾರದ ಹೀನ ಮನಸುಗಳು ಕಲ್ಬುರ್ಗಿಯವರಂತೆಯೇ ಹಲವಾರು ಶ್ರೇಷ್ಠ ಚಿಂತಕರನ್ನು ಹತ್ಯೆ ಮಾಡಿದವು. ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹೋರಾಟಗಾರ ಡಾ. ನರೇಂದ್ರ ದಾಭೋಲ್ಕರ್,ಕೊಲ್ಲಾಪುರದ ಹೋರಾಟಗಾರ ಗೋವಿಂದ ಪಾನ್ಸರೆ ಅವರೂ ಕಲ್ಬುರ್ಗಿಯವರಿಗಿಂತ ಮೊದಲು ಅದೇರೀತಿ ಹತ್ಯೆಗೊಳಗಾಗಿದ್ದರು. ಆದರೆ ದಾಭೋಲ್ಕರ್ -ಪಾನ್ಸರೆ-ಕಲ್ಬುರ್ಗಿ ಅವರ ಹತ್ಯೆ ಸಂಭವಿಸಿ ವರ್ಷಗಟ್ಟಲೆ ಕಳೆದರೂ ಕೊಲೆಗಾರರ ಸುಳುಹು ದೊರೆತಿಲ್ಲ ಎನ್ನುವುದು ಹಂತಕ ವ್ಯವಸ್ಥೆಯ ಬೇರುಗಳು ಎಷ್ಟು ಆಳದ ತನಕ ಇಳಿದಿವೆ ಎನ್ನಲು ಸಾಕ್ಷಿಯಾಗಿವೆ.

ಇವತ್ತು ಎಲ್ಲೆಡೆ ಹಿಂಸೆಯನ್ನು ವೈಭವೀಕರಿಸುವ, ಒಪ್ಪಿಕೊಳ್ಳುವ ಉನ್ಮಾದದ ಮನಸ್ಥಿತಿ ಸೃಷ್ಟಿಸಲಾಗುತ್ತಿದೆ. ಪರಸ್ಪರರನ್ನು ಸಹಿಸಿಕೊಳ್ಳುವುದು ಅಪರೂಪದ ಮೌಲ್ಯವಾಗತೊಡಗಿದೆ. ಧರ್ಮ, ದೇವರು, ಜಾತಿ, ದೇಶ, ಭಾಷೆ ಕುರಿತ ಸಣ್ಣ ವಿಮರ್ಶೆಯೂ ತೀವ್ರ ಪ್ರತಿಕ್ರಿಯೆಗೆ ಕಾರಣವಾಗುತ್ತಿದೆ. ಅದಕ್ಕೆ ಪ್ರಸಕ್ತ ರಾಜಕೀಯ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಸೇರಿ ಹುಟ್ಟುಹಾಕಿರುವ ಹುಸಿ ಧಾರ್ಮಿಕತೆಯ ವಾತಾವರಣ ಕಾರಣವಾಗಿದೆ.

ಈಗ ದೇಶವು ಫ್ಯಾಸಿಸ್ಟರ ಕೈಯಲ್ಲಿ ಸಿಕ್ಕು ಒದ್ದಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಒಂದೆಡೆ ಕೋಮುವಾದದ ದಳ್ಳುರಿ ಇನ್ನೊಂದೆಡೆ ಭಯೋತ್ಪಾದನೆಯ ಕಿಚ್ಚು ಇವುಗಳ ನಡುವೆ ಜನಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ. ಇತ್ತೀಚೆಗೆ ಸಂಸ್ಕೃತಿ ಧರ್ಮದ ನೆಪದಲ್ಲಿ ಗೋರಕ್ಷರೆನಿಸಿಕೊಂಡಿರುವ ನರಭಕ್ಷಕರು ದಲಿತರು, ಅಲ್ಪಸಂಖ್ಯಾತರು ಮಹಿಳೆಯರು ಮತ್ತು ದುಡಿಯವ ಜನರ ಮೇಲೆ ರಣಹದ್ದಿನಂತೆ ಎರಗುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇವರ ಗೂಂಡಾಗಿರಿ ದಿನದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ ಕೋಮುವಾದಿಗಳು ತೆರೆಮರೆಯಲ್ಲಿ ತಮ್ಮ ರಾಕ್ಷಸಿತನ ಮೆರೆಯುತ್ತಿದ್ದರು. ಆದರೆ ಈಗ ಖುಲ್ಲಂಖುಲ್ಲಾ ಎಲ್ಲೆಂದರಲ್ಲಿ ಜನಸಾಮಾನ್ಯರ ಮೇಲೆ ಎರಗು ಬೀಳುತ್ತಿದ್ದಾರೆ. ಕಾರಣ ಆಳುವ ಸರಕಾರವು ಕೋಮುವಾದಿಗಳ ಕೈಗೊಂಬೆಯಾಗಿದೆ. ಅಷ್ಟೆ ಅಲ್ಲ ಉಗ್ರ ಕೋಮುವಾದಿಗಳೇ ಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ.

ಹೀಗಾಗಿಯೇ ದೇಶದಾದ್ಯಂತ ಸಮಾನತೆ ಸಾರುವ ಬುದ್ದಿಜೀವಿ, ಕಲಾವಿದರು, ಸಮಾಜಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಕೊಲ್ಲಲಾಗುತ್ತಿದೆ. ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾದ ಹುತಾತ್ಮರ ಸಂಖ್ಯೆ ಬೆಳೆಯುತ್ತಲೇ ಇದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ನರೇಂದ್ರ ದಾಬೋಲ್ಕರ್, ಗೋವಿಂದ ಪಾನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಇವರನ್ನು ಕೊಂದ ಘೋಡ್ಸೆಗಳು ಎಲ್ಲೆಲ್ಲಿಯೂ ರಾಜಾರೋಷವಾಗಿಯೇ ತಲೆಯೆತ್ತಿದ್ದಾರೆ.

ಇಷ್ಟೆಲ್ಲ ನಡೆದರೂ ಕರ್ನಾಟಕ ಸರಕಾರವು ಕಲಬುರ್ಗಿ ಹಂತಕರನ್ನು ಇನ್ನುವರೆಗೆ ಬಂಧಿಸಿಲ್ಲ. ಇದು ಖಂಡನಾರ್ಹ. 

ಈಗಾಗಲೇ ಸರಕಾರಕ್ಕೆ ಕಲಬುರ್ಗಿ ಹಂತಕರ ಸುಳಿವು ಸಿಕ್ಕ ಅಂದಾಜು ಇದೆ. ಅದಾಗ್ಯೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರ್ವಥಾ ಖಂಡನೀಯ.

ಹಾಗಾದರೆ ಕರ್ನಾಟಕ ಸರಕಾರವು ತನಗರಿವಿಲ್ಲದೆ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗುತ್ತಿದೆಯೇ? ಅಥವ ಕೇಂದ್ರದಲ್ಲಿರುವ ಕೋಮುವಾದಿ ಸರಕಾರದ ಹಿಟ್ಲರಿಜಂಗೆ ಭಯ ಬೀಳುತ್ತಿದೆಯೇ? ಎಂಬ ಪ್ರಶ್ನೆಗಳು ಕನ್ನಡಿಗರನ್ನು ಕಾಡುತ್ತಿವೆ. ಈ ದಿಸೆಯಲ್ಲಿ ಬರಲಿರುವ ಆಗಸ್ಟ್ ಮೂವ್ವತ್ತಕ್ಕೆ ಕಲಬುರ್ಗಿಯವರ ಹತ್ಯೆಯಾಗಿ ಬರೋಬ್ಬರಿ ಒಂದು ವರ್ಷ ಗತಿಸುತ್ತದೆ. ಒಂದು ವರ್ಷದ ಅವಧಿ ಸಣ್ಣದೇನಲ್ಲ. ಕನ್ನಡಿಗರ ಸಹನೆಗೂ ಒಂದು ಮಿತಿ ಇದೆ. ಈಗ ನಮ್ಮ ಮಿತಿಯ ಕಟ್ಟೆ ಒಡೆದಿದೆ. ಇನ್ನು ಕನ್ನಡ ನಾಡು ಒಳಗೊಂಡಂತೆ ದೇಶವನ್ನು ಫ್ಯಾಸಿಸಮ್ಮಿನಿಂದ ಮುಕ್ತಗೊಳಿಸಲೇಬೇಕಾಗಿದೆ.

ಆದ್ದರಿಂದ ದಿನಾಂಕ ೩೦.೮.೨೦೧೬ರಂದು ಮುಂಜಾನೆ ಹತ್ತು ಗಂಟೆಗೆ ಧಾರವಾಡದ ಎಂ.ಎಂ.ಕಲಬುರ್ಗಿಯವರ ಮನೆಯಿಂದ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆರ್ ಎಲ್ ಎಸ್ ಕಾಲೇಜ್ ಗ್ರೌಂಡಿನಲ್ಲಿ ೧೨ ಗಂಟೆಗೆ ’ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ’ ನಡೆಯಲಿದೆ. ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದಲ್ಲಿ ದೇಶದಾದ್ಯಂತ ಹೋರಾಟಗಾರಿರು, ವಿಚಾರವಾದಿಗಳು, ಸಾಹಿತಿಗಳು, ವಿಜ್ಞಾನಿಗಳೂ, ಕಲಾವಿದರು, ಚಲನಚಿತ್ರ ನಿರ್ದೇಶಕರು,ನಿರ್ಮಾಪಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತ ಸಮಾಜದ ಎಲ್ಲ ಸ್ತರದ ವಿವೇಕವಂತರು ಭಾಗವಹಿಸುತ್ತಿದ್ದಾರೆ. ೮೧ಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳುತ್ತಿವೆ. ನೀವೂ ಬನ್ನಿ ನಿಮ್ಮ ಸಂಘಟನೆಗಳ ಜೊತೆಗೆ

ಪಾಲ್ಗೊಳ್ಳುವ ಸಂಘಟನೆಗಳು:

೧) ಕರ್ನಾಟಕ ಸ್ವಾಭಿಮಾನಿ ವೇದಿಕೆ ಬೆಂಗಳೂರು
೨) ರಾಜ್ಯ ರೈತ ಸಂಘ ಕರ್ನಾಟಕ
೩) ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು
೪) ಜನವಾದಿ ಮಹಿಳಾ ಸಂಘಟನೆ ಕರ್ನಾಟಕ
೫) ಲಡಾಯಿ ಪ್ರಕಾಶನ ಗದಗ
೬) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗದಗ
೭) ಪಂಪಕವಿ ಸಾಹಿತ್ಯ ವೇದಿಕೆ ಅಣ್ಣಿಗೇರಿ
೮) ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ
೯) ಚಿಂತನ ಉತ್ತರ ಕನ್ನಡ
೧೦) ಸಮಾನತೆಗಾಗಿ ಜನಾಂದೋಲನ ಕರ್ನಾಟಕ
೧೧) ಕರ್ನಾಟಕ ಕೋಮು ಸೌಹಾರ್ಧ ವೇದಿಕೆ
೧೨) ಅಭಿಮತ ಮಂಗಳೂರು
೧೩) ಸಮುದಾಯ ಕರ್ನಾಟಕ
೧೪) ದಲಿತ ಸಂಘರ್ಷ ಸಮಿತಿ ಕರ್ನಾಟಕ
೧೫) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗೌರಿಬಿದನೂರು
೧೬) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗುಲಬುರ್ಗಾ
೧೭) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಶಿವಮೊಗ್ಗ
೧೮) ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕರ್ನಾಟಕ
೧೯) ಕರ್ನಾಟಕ ಜನಶಕ್ತಿ
೨೦) ಎ ಐ ಎಸ್ ಎಫ್ ಕರ್ನಾಟಕ
೨೧) ಎಸ್ ಎಪ್ ಐ ಕರ್ನಾಟಕ
೨೨) ಐಸಾ ಕರ್ನಾಟಕ
೨೩) ಕೆ ಎಸ್ ಎಪ್ ಕರ್ನಾಟಕ
೨೪) ಎ ಐ ಡಿ ಎಸ್ ಓ ಕರ್ನಾಟಕ
೨೫) ಬಿ ವಿ ಎಸ್ ಕರ್ನಾಟಕ
೨೬) ಹೊಸತು ಪತ್ರಿಕೆ ಬೆಂಗಳೂರು
೨೭) ಜನಶಕ್ತಿ ಪತ್ರಿಕೆ ಬೆಂಗಳೂರು
೨೮) ಕೆಂಬಾವುಟ ಪತ್ರಿಕೆ ಬೆಂಗಳೂರು
೨೯) ಸಾಕೇತ ಪತ್ರಿಕೆ ಬೆಂಗಳೂರು
೩೦) ಅಗ್ನಿ ಪತ್ರಿಕೆ ಬೆಂಗಳೂರು
೩೧) ಅವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಧಾರವಾಡ
೩೨) ಏ ಐ ಡಿ ವೈ ಓ ಕರ್ನಾಟಕ
೩೩) ದಕ್ಷಿಣಾಯನ 
೩೪) ಇಪ್ಟಾ ಕರ್ನಾಟಕ
೩೫) ಸಹಮತ ಫಿಲ್ಮ್ ಸೊಸೈಟಿ ಮಂಗಳೂರು 
೩೬) ಪಿಯುಸಿಎಲ್ ಕರ್ನಾಟಕ
೩೭) ಅಭಿನವ ಪ್ರಕಾಶನ ಬೆಂಗಳೂರು
೩೮) ಝೆನ್ ಟೀಮ್ ತುಮಕೂರು
೩೯) ಸಹಯಾನ ಕೆರೆಕೋಣ
೪೦) ಮಾನವ ಬಂಧುತ್ವ ವೇದಿಕೆ ಕರ್ನಾಟಕ
೪೧) ಭಾರತೀಯ ಮಹಿಳಾ ಒಕ್ಕೂಟ ಕರ್ನಾಟಕ
೪೨) ವಿಮಾ ನೌಕರರ ಸಂಘ ಧಾರವಾಡ
೪೩) ಉತ್ತರ ಕರ್ನಾಟಕ ಲೇಖಕಿಯರ ಸಂಘ ಧಾರವಾಡ
೪೪) ಬಸವ ಕೇಂದ್ರ ಧಾರವಾಡ
೪೫) ಕರ್ನಾಟಕ ವಿದಾವರ್ಧಕ ಸಂಘ ಧಾರವಾಡ
೪೬) ಇಂಗ್ಲೀಷ ಅದ್ಯಾಪಕರ ಸಂಘ ಕವಿವಿ ಧಾರವಾಡ
೪೭) ಡಿವೈಎಫ್‌ಐ ಕರ್ನಾಟಕ
೪೮) ಎ ವೈ ಡಿ ಎಫ್ ಐ ಕರ್ನಾಟಕ
೪೯) ಗ್ರಾಮೀಣ ಕೂಲಿಕಾರರ ಸಂಘ ಧಾರವಾಡ
೫೦) ಸಾಧನಾ ಧಾರವಾಡ
೫೧) ಚಿಲಿಪಿಲಿ ಪ್ರಕಾಶನ ಧಾರವಾಡ
೫೨) ಕವಿ ಪ್ರಕಾಶನ ಕವಲಕ್ಕಿ
೫೩) ಕರ್ನಾಟಕ ಜನ ಸಾಹಿತ್ಯ ಸಂಘಟನೆ ಧಾರವಾಡ
೫೪) ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ
೫೫) ಕ.ಸಾ.ಪ. ಜಿಲ್ಲಾ ಘಟಕ, ಹಾವೇರಿ
೫೬) ಕ.ಸಾ.ಪ. ಜಿಲ್ಲಾ ಘಟಕ, ಗದಗ
೫೭) ಕ.ಸಾ.ಪ. ಜಿಲ್ಲಾ ಘಟಕ, ಬೆಳಗಾವಿ
೫೮) ಕ.ಸಾ.ಪ. ಜಿಲ್ಲಾ ಘಟಕ, ವಿಜಯಪುರ
೫೯) ಕ.ಸಾ.ಪ. ಜಿಲ್ಲಾ ಘಟಕ, ಬಾಗಲಕೋಟೆ
೬೦) ಕ.ಸಾ.ಪ. ಜಿಲ್ಲಾ ಘಟಕ, ಧಾರವಾಡ
೬೧) ಕ.ಸಾ.ಪ. ಜಿಲ್ಲಾ ಘಟಕ, ಕಲಬುರ್ಗಿ
೬೨) ಕ.ಸಾ.ಪ. ಜಿಲ್ಲಾ ಘಟಕ, ಕೊಪ್ಪಳ
೬೩) ಕ.ಸಾ.ಪ. ಜಿಲ್ಲಾ ಘಟಕ, ಬಳ್ಳಾರಿ
೬೪) ಕ.ಸಾ.ಪ. ಜಿಲ್ಲಾ ಘಟಕ, ರಾಯಚೂರ
೬೫) ಕ.ಸಾ.ಪ. ಜಿಲ್ಲಾ ಘಟಕ, ಯಾದಗೀರ
೬೬) ಕರ್ನಾಟಕ ಥಿಂಕರ‍್ಸ್ ಪೋರಂ ಧಾರವಾಡ
೬೭) ಬಸವದಳ ಧಾರವಾಡ
೬೮) ಹೈಕೋರ್ಟ್ ವಕೀಲರ ಸಂಘ ಧಾರವಾಡ
೬೯) ಜಿಲ್ಲಾ ವಕೀಲರ ಸಂಘ ಧಾರವಾಡ
೬೯) ಎಸ್ಸಿ ಎಎಸ್ಟಿ ಸಂಶೋಧನಾ ಸಂಘಟನೆ ಕವಿವ್ರಿ ಧಾರವಾಡ
೭೦) ಸ್ವರಾಜ್ಯ ಅಭಿಯಾನ ಧಾರವಾಡ
೭೧) ಜನ ಸಂಗ್ರಾಮ ಪರಿಷತ್ ಕರ್ನಾಟಕ
೭೨) ಸಮಾಜ ಪರಿವರ್ತನಾ ಸಂಸ್ಥೆ ಕರ್ನಾಟಕ
೭೩) ಅಖಿಲ ಭಾರತ ಸಂಸ್ಕೃತಿಕ ಮಂಚ ಕರ್ನಾಟಕ
೭೪) ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ ಕರ್ನಾಟಕ 
೭೫) ಆಲ್ ಇಂಡಿಯಾ ಲಾಯರ‍್ಸ್ ಯುನಿಯನ್ ಕರ್ನಾಟಕ 
೭೬) ಕನ್ನಡ ಪರ ಸಂಘಟನೆಗಳ ಕೂಟ ಬೆಂಗಳೂರು
೭೭) ಅಖಿಲ ಭಾರತ ವಿಚಾರವಾದಿಗಳ ಸಂಘ ಬೆಂಗಳೂರು
೭೮) ಕರ್ನಾಟಕ ರಣಧೀರ ಪಡೆ ಬೆಂಗಳೂರು
೭೯) ದಲಿತ ಹಕ್ಕುಗಳ ಸಮಿತಿ ಕರ್ನಾಟಕ
೮೦) ಅರುಣೋದಯ ಕಲಾ ತಂಡ ಕೊತಬಾಳ
೮೧) ದಲಿತ ಸಂಘಟನೆಗಳ ಒಕ್ಕೂಟ ಕರ್ನಾಟಕ

(ಅಪೂರ್ಣ)
ನಿಮ್ಮ ಸಂಘಟನೆಗಳನ್ನೂ ಸೇರಿಸಿ. ನಿಮ್ಮ ಭಾಗವಹಿಸುವಿಕೆಯನ್ನು ನಮ್ಮ ಗಮನಕ್ಕೆ ತನ್ನಿ

Aug 26, 2016

ನೀನು ಬಿಟ್ಟು ಹೋದ ಭಾರ ಹೊರಲಾಗದೆ………….

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
26.08/2016
ಆಕಾಶ ಎಂದಿನಂತೆ ಬಿಳಿಚಿಕೊಂಡಿತ್ತು
ಕಳೆದ ವರ್ಷದ ಮಳೆ ಕೈಕೊಟ್ಟು ಭೂಮಿ ಬಿರಿದು ಬಿದ್ದುಕೊಂಡಿತ್ತು
ನಡೆವ ದಾರಿಯೊಳಗಿನ ಸಣ್ಣ ಮುಳ್ಳುಗಳೂ
ಮೊಳೆಗಳಂತೆ ಪಾದಗಳಿಗೆ ಚುಚ್ಚುತ್ತಿದ್ದವು.
ಅಂತಹದೊಂದು ದಿನ
ಕಾಡಿನಂಚಿನಲ್ಲಿ ನನಗೆ ವಿದಾಯ ಹೇಳಿ ಹೋದ ನೀನು 
ಮತ್ತೆ ಬರಬಹುದೆಂಬ ನಂಬಿಕೆ
ನಾಶವಾಗಿ ನಾನು ಕಾಯುವುದನ್ನೇ ನಿಲ್ಲಿಸಿಬಿಟ್ಟೆ!

ಅದೆಷ್ಟೋ ಕಾಲವಾದ ಮೇಲೆ 
ನೀನು ಇನ್ನಿಲ್ಲವೆಂಬ ಸುದ್ದಿ ಬಂದಾಗ
ನಾನು ಅದೇ ನಗರದ ಬೇವಾರ್ಸಿ ಗಲ್ಲಿಗಳಲ್ಲಿ
ಗೇಣು ಹೊಟ್ಟೆಗಾಗಿ
ಅದೆಷ್ಟು ಜನರ ಬೂಟುಗಳ ನೆಕ್ಕುತ್ತಾ
ಅವರೆಸೆದ ರೊಟ್ಟಿಯ ಚೂರುಗಳ ಹಿಡಿಯುತ್ತ
ಬದುಕುತ್ತಿದ್ದೆ ಎಂದರೆ
ನಿನಗಿಂತ ಮೊದಲೇ ನಾನು
ಸತ್ತು ಹೋಗಿದ್ದೆ.

ಇದೀಗ ನೀನು ಬಿಟ್ಟು ಹೋದ ಬೂಟುಗಳಲ್ಲಿ
ನನ್ನ ಕಾಲುಗಳು ಹಿಡಿಸುತ್ತಿಲ್ಲ…….
ನೀನು ಕೊಟ್ಟು ಹೋದ ಸಂದೇಶಗಳ ಬಾರವ ನನ್ನ
ಹೆಗಲುಗಳಿಂದ ಹೊರಲಾಗುತ್ತಿಲ್ಲ
ಸಾದ್ಯವಾದರೆ ಕ್ಷಮಿಸು! 

ಮೇಕಿಂಗ್ ಹಿಸ್ಟರಿ: ಸೈನ್ಯದ ಮುನ್ನಡೆ

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/08/2016
ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ (1) ಮೈಸೂರು ಸೈನ್ಯಕ್ಕೆ ವಸಾಹತು ವಿರೋಧಿ ಯುದ್ಧದಲ್ಲಿ ದೊಡ್ಡ ಪರಂಪರೆಯೇ ಇದೆ. ಇದರ ಕಾರಣದಿಂದಾಗಿ, ಸೈನಿಕರಲ್ಲಿ ಗಮನಾರ್ಹ ಮಟ್ಟದ ವಸಾಹತು ವಿರೋಧಿ ಪ್ರಜ್ಞೆಯಿದೆ. ಈ ವಸಾಹತು ವಿರೋಧಿ ಭಾವನೆಗಳು ಶ್ರೀರಂಗಪಟ್ಟಣ ಕುಸಿತ ಕಂಡ ಕೆಲ ದಿನಗಳಲ್ಲೇ ಗಮನಕ್ಕೆ ಬಂತು. ನಗರ ಕುಸಿದರೂ ಸಹಿತ, ಮೀರ್ ಸಾದಿಕ್ ನಂತಹ ವಿದ್ರೋಹಿಗಳನ್ನು ಶಿಕ್ಷಿಸಲಾಯಿತು. ನಂತರದಲ್ಲಿ, ಎಲ್ಲೋ ಕಮ್ರುದ್ದೀನಿನಂತಹ ಕೆಲವು ಅಧಿಕಾರಿಗಳನ್ನು ಬಿಟ್ಟರೆ ಇಡೀ ಸೈನ್ಯ ಸೋಲನ್ನು ಒಪ್ಪಿಕೊಂಡಾಗ್ಯೂ ಬ್ರಿಟಿಷರಿಗೆ ಸಹಕರಿಸಲು ನಿರಾಕರಿಸಿತ್ತು. ಸೈನಿಕರನ್ನು ವಸಾಹತು ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಬಹಿಷ್ಕರಿಸಲಾಗಿತ್ತು. ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಹೇಗೆ ಸೈನಿಕರ ಸಮೂಹ ನಿರಾಕರಿಸಿತು, ನಿರುದ್ಯೋಗಿಯಾಗಿ ಹಳ್ಳಿಗಳಿಗೆ ಬಲವಂತಾಗಿ ವಲಸೆ ಹೋಗಿ ಕೂಲಿಯಾಳಾದರೂ ಪರವಾಯಿಲ್ಲ ಬ್ರಿಟನ್ ಸೈನ್ಯ ಸೇರುವುದಿಲ್ಲ ಎಂದು ನಿರ್ಧರಿಸಿದ ಬಗ್ಗೆ ಬುಚನನ್ ನಮಗೆ ತಿಳಿಸುತ್ತಾರೆ. ಹೆಚ್ಚಿನ ಸಂಖೈ ಮುಸ್ಲಿಂ ಸೈನಿಕರಿದ್ದ ಸೈನ್ಯ, ದೊಡ್ಡ ತ್ಯಾಗಗಳನ್ನು ಮಾಡಲು ಸಿದ್ಧವಾಗಿತ್ತು; ಟಿಪ್ಪುವಿನ ಪತನದ ನಂತರ ದೇಶಭಕ್ತಿಯನ್ನು ತೋರಿದ ಮೊದಲಿಗರಿವರು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಈ ನಿಯತ್ತು ಇದ್ದಕ್ಕಿದ್ದಂತೆ ಮೂಡಿಬಿಟ್ಟಿದ್ದಲ್ಲ. ಇದು ನಾಲ್ಕು ದಶಕಗಳಿಂದ ಸುಧಾರಣೆ ಕಂಡಿದ್ದ ಮೈಸೂರು ಸೈನ್ಯದ ಪರಂಪರೆ. ಯುದ್ಧದ ಸಂಕಷ್ಟದ ಸಮಯದಲ್ಲೂ ಓಡಿಹೋಗದೆ ಬ್ರಿಟೀಷರನ್ನು ಅಚ್ಚರಿಗೊಳಿಸಿದ ಸೈನ್ಯವಿದು. ಟಿಪ್ಪುವಿನ ಹತ್ಯೆ ಸೈನಿಕರಲ್ಲಿನ ರೋಷವನ್ನು ಮತ್ತಷ್ಟು ಹೆಚ್ಚಿಸಿತ್ತಷ್ಟೇ. ವಸಾಹತು ಆಕ್ರಮಣದ ಬಗೆಗಿನ ಈ ಆಳದಲ್ಲಿನ ಸಿಟ್ಟೇ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸೈನಿಕರನ್ನು ಕ್ರೋಡೀಕರಿಸಿ ಪ್ರೇರೇಪಿಸಿದ ಪ್ರಮುಖ ಅಂಶ. ಮೈಸೂರು ಸೈನ್ಯದಲ್ಲಿ ಕುದುರೆ ಓಡಿಸುವವನಾಗಿದ್ದ, ಅತಿಯಾಸೆಗಳ ಕಾರಣಕ್ಕೆ ಟಿಪ್ಪುವಿನಿಂದ ಬಂಧನಕ್ಕೊಳಗಾಗಿದ್ದ ದೊಂಡಿಯಾ ವಾಗ್ ನಂತವರೂ ಕೂಡ ಈ ಪ್ರತಿರೋಧದಲ್ಲಿ ಸಕ್ರಿಯರಾಗಿದ್ದರು. ಹೈದರ್ ಮತ್ತು ಟಿಪ್ಪು ಕಟ್ಟಿದ್ದ ಕೇಂದ್ರೀಕೃತ ಸರಕಾರದಲ್ಲಿ ಸೈನ್ಯವೇ ಪ್ರಮುಖವಾಗಿತ್ತು. ಅದು ತನ್ನ ಸದಸ್ಯರಲ್ಲಿ ಊಳಿಗಮಾನ್ಯ ಪಾಳೇಗಾರ ಶಕ್ತಿಗಳು ಬೆಳೆಸಿದ ಪ್ರಜ್ಞೆಗಿಂತ ಬಹಳ ಭಿನ್ನವಾದ ಪ್ರಜ್ಞೆಯನ್ನು ಬೆಳೆಸಿತ್ತು. ಆಧುನಿಕ ಮತ್ತು ಕೇಂದ್ರೀಕೃತವಾಗಿದ್ದ ಮೈಸೂರು ಸೈನ್ಯ, ತನ್ನ ವಿವಿಧ ಇಲಾಖೆಗಳ ನಡುವೆ ಅತ್ಯಂತ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿತ್ತು. ಈ ಹೊಂದಾಣಿಕೆಯ ಪ್ರಯತ್ನಗಳು ಅದರ ಸದಸ್ಯರಲ್ಲೂ ಕಂಡುಬರುತ್ತಿತ್ತು ಮತ್ತು ಮಾಜಿ ಸೈನಿಕರು ಬ್ರಿಟೀಷರ ವಿರುದ್ಧ ಮುಂದಾಳತ್ವ ವಹಿಸಿ ನಡೆಸಿದ ಹೋರಾಟದಲ್ಲೂ, ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಇನ್ನಿತರೆ ಊಳಿಗಮಾನ್ಯ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಕಾಣಬಹುದು. ಮಾಜಿ ಸೈನಿಕರು – ಅದು ದೊಂಡಿಯಾ ಇರಬಹುದು ಅಥವಾ ದಕ್ಷಿಣ ಕನ್ನಡದ ಸುಬ್ಬಾ ರಾವ್ ಮತ್ತು ತಿಮ್ಮಾನಾಯಕರಿರಬಹುದು – ಪಾಳೇಗಾರರ ನಡುವಿನ ಹೊಂದಾಣಿಕೆಗೆ ಕೇಂದ್ರಬಿಂದುವಾದರು. ಮತ್ತೊಂದೆಡೆ, ಪಾಳೇಗಾರರ ಜೀವನ ಶೈಲಿ ಮತ್ತವರ ಯುದ್ಧತಂತ್ರಗಳು ಯಾವಾಗಲೂ ಮುಚ್ಚಿದ ಬಾಗಿಲಿನಿಂದೆ ಕಿರಿದಾಗಿರುತ್ತಿತ್ತು. 

1. ದೊಂಡಿಯಾ ವಾಗನ ಬಂಡಾಯ ಸೈನ್ಯ (1799 – 1800) 

ದೊಂಡಿಯಾ ಶಿವಮೊಗ್ಗದ ಚೆನ್ನಗಿರಿಯವನು. ತನ್ನ ಸೇನಾ ಸಾಮರ್ಥ್ಯವನ್ನು ಪಟವರ್ಧನರಿಗೆ, ಕೊಲ್ಲಾಪುರದ ರಾಜನಿಗೆ ಮತ್ತು ಧಾರವಾಡದ ಲಕ್ಷ್ಮೇಶ್ವರ ದೇಸಾಯಿಗೆ ಸಲ್ಲಿಸಿದ ಸೇವೆಯಲ್ಲಿ ಸಾಬೀತು ಪಡಿಸಿದ್ದ.(2) ಹೈದರ್ 1780ರಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಯೊಂದರ ಸಂದರ್ಭದಲ್ಲಿ ದೊಂಡಿಯಾನ ಸಂಪರ್ಕಕ್ಕೆ ಬಂದ ನಂತರ ಆತನನ್ನು ಮೈಸೂರು ಸೈನ್ಯಕ್ಕೆ ಕುದುರೆಸವಾರನಾಗಿ ಆಯ್ಕೆಮಾಡಿದ, ಅದೇ ಸಮಯದಲ್ಲಿ ಆತನನ್ನು ಇಸ್ಲಾಮಿಗೆ ಮತಾಂತರಿಸಿದ. 1792ರ ಮೂರನೇ ವಸಾಹತು ವಿರೋಧಿ ಯುದ್ಧದ ಸಂದರ್ಭದಲ್ಲಿ, ದೊಂಡಿಯಾ ಸೈನ್ಯವನ್ನು ತೊರೆದು ಧಾರವಾಡದಲ್ಲಿ ಸ್ವತಂತ್ರವಾಗಿ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸಿದ. 1794 ರಲ್ಲಿ ಟಿಪ್ಪು ಮತ್ತೆ ಅವನ ಮನಸ್ಸನ್ನು ಗೆದ್ದು ಸೈನ್ಯದಲ್ಲಾತನಿಗೆ ಬಡ್ತಿ ನೀಡಿದ. ಆದರೆ ಕೆಲವೇ ಸಮಯದಲ್ಲಿ, ತನ್ನದೇ ಸ್ವಂತ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ದೊಂಡಿಯಾನ ಆಸೆ, ಅವನಿಗೆ ಜೈಲಿನ ಹಾದಿ ತೋರಿಸಿತು; ಅಲ್ಲವನಿಗೆ ಸಣ್ಣ ಮೊತ್ತದ ವೇತನ ನೀಡಲಾಗುತ್ತಿತ್ತು. ಶ್ರೀರಂಗಪಟ್ಟಣದ ಕುಸಿತದೊಂದಿಗೆ, ಇತರೆ ಖೈದಿಗಳ ಜೊತೆಗೆ ದೊಂಡಿಯಾನನ್ನೂ ಬಿಡುಗಡೆ ಮಾಡಲಾಯಿತು. ಅರವತ್ತರ ವಯಸ್ಸಿನಲ್ಲಿ ಸ್ವತಂತ್ರಗೊಂಡ ದೊಂಡಿಯಾ, ಶ್ರೀರಂಗಪಟ್ಟಣವನ್ನು ತೊರೆದು ಸೈನ್ಯವನ್ನು ಕಟ್ಟಲಾರಂಭಿಸಿ ಬ್ರಿಟೀಷರನ್ನು ಸದೆಬಡಿಯಬೇಕೆಂದುಕೊಂಡಿದ್ದ ಎಲ್ಲಾ ಪಾಳೇಗಾರರನ್ನು ಸೇರಿಸಿ ಒಂದು ರಾಜಕೀಯ ಒಕ್ಕೂಟವನ್ನು ರಚಿಸಲಾರಂಭಿಸಿದ. 

ಕೆ.ರಾಜಯ್ಯಮರ South Indian Rebellion ಮತ್ತವರ Rise and fall of the Palegaras of Tamil Nadu ಪುಸ್ತಕ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಳೇಗಾರರ ಒಕ್ಕೂಟದ ಬಗ್ಗೆ ಒಂದು ಸ್ಥೂಲ ಚಿತ್ರಣವನ್ನು ನೀಡುತ್ತದೆ. ಈ ಪ್ರದೇಶಗಳನ್ನು ಒಂದಾಗಿಸಲು ದೊಂಡಿಯಾ ವಹಿಸಿದ ಪಾತ್ರ ಹಿರಿದು. ಹಾಗಾಗ್ಯೂ, ಒಂದೆಡೆ ಪ್ರದೇಶದ ವಿಸ್ತೀರ್ಣತೆ ಮತ್ತು ಒಕ್ಕೂಟದಲ್ಲಿ ಎಲ್ಲಾ ಸೈನ್ಯಗಳ ದುರ್ಬಲತೆಗಳು ಮತ್ತೊಂದೆಡೆ ಅವರಲ್ಲಿದ್ದ ವರ್ಗಾಧಾರಿತ ಮಿತಿಗಳು ಈ ಒಕ್ಕೂಟವನ್ನು ಅದಕ್ಷವನ್ನಾಗಿ ಮಾಡಿಬಿಟ್ಟಿತು, ಸಮನ್ವತೆಯಿಂದ ಏಕತೆಯಿಂದ ಕಾರ್ಯನಿರ್ವಹಿಸಲು ವಿಫಲವಾಯಿತು. 

ಶ್ರೀರಂಗಪಟ್ಟಣ ತೊರೆದ ನಂತರ, ದೊಂಡಿಯಾ ಹಾಸನದ ಮಲೆನಾಡಿನ ಐಗೂರಿಗೆ ಹೋಗಿ ಅಲ್ಲಿನ ಪಾಳೇಗಾರರೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಉತ್ತರಕ್ಕಿದ್ದ ಮರಾಠ ಪ್ರಾಂತ್ಯಕ್ಕೆ ತೆರಳಿದ. ರಾಜಯ್ಯಮ್ ಹೇಳುತ್ತಾರೆ: “ಅಲ್ಲಿಂದ ಟಿಪ್ಪುವಿನ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಸರದಾರರೊಡನೆ ಪತ್ರವ್ಯವಹಾರ ನಡೆಸಿ, ಸಶಸ್ತ್ರ ಸೈನಿಕರ ತಂಡವನ್ನು ಮತ್ತು ಮೈಸೂರು ಸೈನ್ಯದ ಉಳಿಕೆಯಿಂದ ಐದು ಸಾವಿರ ಕುದುರೆಗಳನ್ನು ಒಟ್ಟುಗೂಡಿಸಿದ….. ಹೆಚ್ಚುಕಡಿಮೆ ಮೈಸೂರಿನ ಎಲ್ಲಾ ಮುಸ್ಲಿಮರೂ ಬಂಡಾಯಗಾರರ ಜೊತೆಗೆ ಗುರುತಿಸಿಕೊಂಡರು. ದೊಂಡೋಜಿ ವಾಗ್ ಶಿವಮೊಗ್ಗವನ್ನಾಕ್ರಮಿಸಿ ತಮ್ಮನ್ನು ತಾವೇ ‘ಎರಡು ಪ್ರಪಂಚದ ರಾಜ’ನೆಂದು ಘೋಷಿಸಿಕೊಂಡರು.’ 

ಶಿವಮೊಗ್ಗದಲ್ಲಿ ಕೇಂದ್ರ ಕಛೇರಿಯನ್ನು ಸ್ಥಾಪಿಸಿದ ನಂತರ, ದೊಂಡಾಜಿ ವಾಗ್ ಮೈಸೂರಿನಿಂದ ಬ್ರಿಟೀಷ್ ಅಧಿಕಾರವನ್ನು ಕಿತ್ತೊಗೆಯಲು ತಂತ್ರಗಳನ್ನು ರೂಪಿಸಿದ. ವಾಯುವ್ಯದಲ್ಲೊಂದಷ್ಟು ಸುಲಿಗೆ ಮಾಡಿ, ಬ್ರಿಟೀಷ್ ಸಂಗ್ರಹದಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ತನ್ನದೇ ಸ್ವಂತ ಫಿರಂಗಿ ದಳವನ್ನು ರಚಿಸಿದ. ಇದರ ನಂತರ ಕಂಪನಿಯಿಂದ ನಗರ ಮತ್ತು ಬೆದನೂರನ್ನು ವಶಪಡಿಸಿಕೊಳ್ಳಲಾಯಿತು. ಬಂಡಾಯಗಾರರ ಒಂದು ತಂಡ ಪೂರ್ವಕ್ಕೆ ತೆರಳಿ ನಿಜಾಮನ ಸಾಮ್ರಾಜ್ಯದಲ್ಲಿ ಗೂಟಿಯನ್ನು ವಶಪಡಿಸಿಕೊಂಡರು. ಮೈಸೂರಿನಲ್ಲಿದ್ದ ಬ್ರಿಟೀಷ್ ಸೈನ್ಯದ ಕಮಾಂಡರ್ ಕೊಲೊನಲ್ ವೆಲ್ಲೆಸ್ಲಿಯನ್ನು ಅಪಹರಿಸಲು ಯೋಜನೆಗಳನ್ನು ಹಾಕಿದ…. ಸೋತ ಸುಲ್ತಾನನ ಉದ್ದಿಶ್ಯಗಳನ್ನು ತೊರೆದು ಹೋಗಿದ್ದ ಪೂರ್ಣಯ್ಯನನ್ನು ಕೊಲೆ ಮಾಡುವ ಸಂಚು ರೂಪಿಸಿದ….” (3) 

ಜೂನ್ 1799ರಲ್ಲಿ, ಮೈಸೂರು ಸಾಮ್ರಾಜ್ಯ ಕುಸಿದ ಎರಡೇ ತಿಂಗಳಿನಲ್ಲಿ ದೊಂಡಿಯಾ ಸೈನಿಕ ದಾಳಿಯನ್ನಾರಂಭಿಸಿ ದೊಡ್ಡ ಪ್ರದೇಶವನ್ನೇ ವಶಪಡಿಸಿಕೊಂಡಿದ್ದ; ವರುಷ ಕಳೆಯುವುದರಳೊಗೆ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ ಬಹುಭಾಗಗಳು ದೊಂಡಿಯಾನ ವಶದಲ್ಲಿತ್ತು. ಜೂನ್ 1800ರಲ್ಲಿ, ದೊಂಡಿಯಾನ ಪಡೆಗಳು ಹತ್ತು ಸಾವಿರ ಅಶ್ವಾರೋಹಿಗಳು, ಐದು ಸಾವಿರ ಕಾಲಾಳುಗಳು ಮತ್ತು ಎಂಟು ಗನ್ನುಗಳನ್ನೊಂದಿದ್ದ ಮರಾಠಾ ಕಮಾಂಡರ್ ದೊಂಡೋಜಿ ಪಂತ್ ಗೋಕಲೆಯನ್ನು ಕೊಂದು ಹಾಕಿದರು.(4) ರಾಮದುರ್ಗ, ಸೊಲ್ಲಾಪುರ, ಕೊಲ್ಲಾಪುರ, ಆನೆಗುಂದಿ ಮತ್ತು ಗ್ವಾಲಿಯರ್ರಿನ ರಾಜರ ಬೆಂಬಲವನ್ನೂ ಗಳಿಸಿಕೊಂಡ. (5) 

ಕೇವಲ ಇನ್ನೂರು ಅಶ್ವಾರೋಹಿಗಳಿಂದ ಪ್ರಾರಂಭಗೊಂಡ ದೊಂಡಿಯಾನ ಸೈನ್ಯ, (6) ಚಿಕ್ಕ ಸಮಯದಲ್ಲೇ 5,000 ಅಶ್ವಾರೋಹಿಗಳಷ್ಟಾಯಿತು ಮತ್ತು ಉತ್ತುಂಗದ ದಿನಗಳಲ್ಲಿ 70,000 ದಿಂದ 80,000 ದಷ್ಟಿತ್ತು. (7) 

ಈ ಗಮನಾರ್ಹ ಬೆಳವಣಿಗೆಗೆ ಮತ್ತು ತತ್ ಕ್ಷಣದ ನೇಮಕಕ್ಕೆ ಕಾರಣ ಮೈಸೂರಿನ ಸೈನಿಕರು ದೊಂಡಿಯಾನ ಸೈನ್ಯ ಸೇರಲು ಮೆರವಣಿಗೆ ಹೊರಟಿದ್ದು. ಶ್ರೀರಂಗಪಟ್ಟಣದ ಸೋತ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಂಡಿದ್ದರು, ಅಶ್ವಾರೋಹಿಗಳು ತಮ್ಮ ಕುದುರೆಗಳನ್ನು. ಅವರು ದೊಡ್ಡ ಸಂಖೈಯಲ್ಲಿ ವಲಸೆ ಹೋದರು ಮತ್ತು ಬ್ರಿಟೀಷರಿಗೆ ಸೋತಿಲ್ಲದ ಕೋಟೆಗಳಲ್ಲೆವೂ ತಮ್ಮ ದಿಡ್ಡಿ ಬಾಗಿಲುಗಳನ್ನು ತೆರೆದು ದೊಂಡಿಯಾನ ಸೈನ್ಯವನ್ನು ಸ್ವಾಗತಿಸಿ ಅವನೊಡನೆ ಕೈಜೋಡಿಸಿದವು. 

ಶ್ರೀರಂಗಪಟ್ಟಣ ಮೇ 1799ರಲ್ಲಿ ಕುಸಿದು ಬಿದ್ದರೂ, ಅದು ಬ್ರಿಟೀಷರಿಗೆ ಸಿಕ್ಕ ಗೆಲುವಾಗಿತ್ತೇ ಹೊರತು ಮೈಸೂರು ಸೈನ್ಯದೊಂದಿಗೆ ಯುದ್ಧ ಕೊನೆಯಾಗಿರಲಿಲ್ಲ. ಕರ್ನಾಟಕದ ದಕ್ಷಿಣಕ್ಕಿದ್ದ, ಪ್ರಮುಖ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಮತ್ತು ಬೆಂಗಳೂರನ್ನು ಬ್ರಿಟೀಷರು ವಶಪಡಿಸಿಕೊಂಡಿದ್ದರು, ಆದರೆ ಕೇಂದ್ರ ಮತ್ತು ಉತ್ತರ ಭಾಗಗಳಿನ್ನೂ ದೊಂಡಿಯಾ ಮತ್ತವನ ಮೈತ್ರಿಯ ಮರಾಠ ಸೈನ್ಯದ ವಶದಲ್ಲಿತ್ತು. 1799ರ ಜೂನ್ ತಿಂಗಳಿನಲ್ಲೇ ಬ್ರಿಟೀಷರು ತಮ್ಮ ಸೈನ್ಯವನ್ನು ದೊಂಡಿಯಾನನ್ನು ಹುಡುಕಿ ಹಿಡಿಯಲಟ್ಟಿದರು, ಮೈಸೂರಿನ ಇತರೆ ಭಾಗಗಳನ್ನೂ ತನ್ನ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ. 

ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬ್ರಿಟೀಷರು ಕಳುಹಿಸಿದ್ದು ಕೊಲೊನೆಲ್ ವೆಲ್ಲೆಸ್ಲಿಯನ್ನು. ಬ್ರಿಟೀಷ್ ಆಳ್ವಿಕೆ ಪೂರ್ಣವಾಗಿ ಸಂಯೋಜಿತಗೊಳ್ಳತೇ ಇದ್ದುದರಿಂದ ಉಂಟಾದ ಗಂಭೀರ ಪರಿಸ್ಥಿತಿಯು ಮನ್ರೋ ವೆಲ್ಲೆಸ್ಲಿಗೊಂದು ಪತ್ರ ಬರೆಯುವಂತೆ ಮಾಡುತ್ತದೆ: “ದೊಂಡಿಯಾ ಸ್ವತಂತ್ರ ಮತ್ತು ಶಕ್ತಿಶಾಲಿ ರಾಜನಾಗುವುದರಲ್ಲಿ ಮತ್ತು ಕ್ರೂರ ವಿಶ್ವಾಸಘಾತುಕ ಸುಲ್ತಾನರನ್ನೊಳಗೊಂಡ ಸಾಮ್ರಾಜ್ಯದ ಸ್ಥಾಪಕನಾಗುವುದರಲ್ಲಿ ಯಾವುದೇ ಅನುಮಾನ ಬೇಡ” (8) (ಬ್ರೀಟಿಷರೆಡೆಗೆ “ಕ್ರೂರ” ಮತ್ತು ಬ್ರಿಟೀಷರ ಆಕ್ರಮಣಶಾಲಿತನಕ್ಕೆ “ವಿಶ್ವಾಸಘಾತುಕ”ತನ ಎಂಬುದು ವಸಾಹತುಶಾಹಿಗಳ ಇಂತಹ ಹಲವಾರು ಹೇಳಿಕೆಗಳನ್ನು ಓದಿರುವ ನಮ್ಮ ಓದುಗರಿಗೆ ಇಷ್ಟೊತ್ತಿಗೆ ಅರ್ಥವಾಗಿರಬೇಕು) 

ದೊಂಡಿಯಾನ ಪಡೆಗಳ ಮುಖಂಡನನ್ನು ಏಕಾಂಗಿಯಾಗಿಸಿ ಕುಗ್ಗಿಸಬೇಕೆಂಬ ಬ್ರಿಟೀಷರ ಕಾರ್ಯತಂತ್ರದ ಕಾರಣ ಅವರು ದೊಂಡಿಯಾನ ವಿರುದ್ಧ ಜೂನ್ 1799ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಆದಾಗ್ಯೂ, ಹಲವಾರು ಕದನಗಳವರಿಗೆ ಬೇಕಾಯಿತು ಮತ್ತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ನಂತರವಷ್ಟೇ ಅವರಿಗೆ ದೊಂಡಿಯಾನ ಪಡೆಗಳನ್ನು ಸೋಲಿಸಲಾಗಿದ್ದು ಮತ್ತು ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ದೊಂಡಿಯಾನನ್ನು ಕೊನೆಗೊಳಿಸಲಾಗಿದ್ದು. 

ಬ್ರಿಟೀಷರ ಕಾರ್ಯತಂತ್ರವೆಂದರೆ, ಮನ್ರೋನ ಸಿಹಿ ತುಂಬಿದ ಶಬುದಗಳಾದ ‘ಕ್ರೂರ’ ಮತ್ತು ‘ವಿಶ್ವಾಸಘಾತುಕ’ ಪದಗಳನ್ನು ಉಪಯೋಗಿಸಿಕೊಳ್ಳುವುದು. 1799ರ ಜುಲೈ 14ರಂದು ಡಾರ್ಲಿಂಪೈಲ್ ನೇತೃತ್ವದಲ್ಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡಾಗ, ಅವರಿಗೆ ದೊಂಡಿಯಾನ ಸೈನ್ಯವೊಂದು ಎದುರಾಯಿತು, ಈ ಸೈನ್ಯವನ್ನು ಶಾಮ ರಾವ್ ಹೇಳುವಂತೆ, “ತಕ್ಷಣ ದಾಳಿ ಮಾಡಿಲಾಯಿತು, ಸೋಲಿಸಾಯಿತು ಮತ್ತು ಚದುರಿಸಲಾಯಿತು……ಬಂಧಿತರಾದ ನಲವತ್ತು ಜನರಲ್ಲಿ ಮೂವತ್ತೊಂಭತ್ತು ಮಂದಿಯನ್ನು ನೇಣಿಗೇರಿಸಲಾಯಿತು ಮತ್ತು ಒಬ್ಬನನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದಾತ ತನ್ನ ಜೊತೆಗಾರ ನೇಣಿಗೇರಿದ್ದಕ್ಕೆ ಸಾಕ್ಷಿಯಾಗಿದ್ದ, ದೊಂಡಿಯಾನ ಜನರಿಗೆ ಆದ ಈ ವಿಧಿಯನ್ನು ಊರೂರುಗಳಲ್ಲಿ ಹೇಳಿ ಭಯಭೀತಿಯ ವಾತಾವರಣ ಸೃಷ್ಟಿಸುವ ಸಲುವಾಗಿಯೇ ಆತನನ್ನು ಬಿಡುಗಡೆ ಮಾಡಲಾಗಿತ್ತು”. (9) 

ಒಂದು ವರುಷದವರೆಗೆ ರಕ್ತ ಹರಿಸಿದ ಯುದ್ಧಗಳಲ್ಲಿ ಬ್ರಿಟೀಷ್ ಸೈನ್ಯ ಭಾಗವಹಿಸಿದಾಗ್ಯೂ ಮತ್ತು ದೊಂಡಿಯಾನ ನಿಯಂತ್ರಣವಿದ್ದ ಹಲವಾರು ಕೋಟೆಗಳನ್ನು – ಉದಾಹರಣೆಗೆ ಹೊನ್ನಾಳಿ, ಶಿಕಾರಿಪುರ ಮತ್ತು ಚೆನ್ನಗಿರಿ - ವಶಪಡಿಸಿಕೊಂಡಾಗ್ಯೂ ಬ್ರಿಟೀಷರಿಗೆ ದೊಂಡಿಯಾನನ್ನು ಕೊನೆಗಾಣಿಸುವುದು ಕಷ್ಟದ ಸಂಗತಿಯಾಗಿತ್ತು. ಈ ಕಾರ್ಯಾಚರಣೆಯ ಬಗ್ಗೆ ನಡೆದ ಬ್ರಿಟೀಷ್ ಸೈನ್ಯದ ಪತ್ರವ್ಯವಹಾರವನ್ನು ಉದ್ಧರಿಸುತ್ತಾ ಶಾಮ ರಾವ್ ಹೇಳುತ್ತಾರೆ ದೊಂಡಿಯಾ “ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತ ಹುಡುಕುತ್ತಿದ್ದ ಶತ್ರುಗಳಿಂದ ಜಾರಿಕೊಳ್ಳುತ್ತಿದ್ದರು ಮತ್ತು ಕದನವನ್ನು ತಪ್ಪಿಸಿಕೊಳ್ಳುತ್ತಿದ್ದರು.” (10) 

ದೊಂಡಿಯಾ ಭೂಭಾಗವನ್ನು ವಶಪಡಿಸಿಕೊಂಡು, ತನ್ನ ಸೈನ್ಯವನ್ನು ಕೋಟೆಯಲ್ಲಿರಿಸಿದರೂ ತಮಗಿಂತ ಉನ್ನತ ಮಟ್ಟದಲ್ಲಿದ್ದ ಬ್ರಿಟೀಷ್ ಸೈನ್ಯದ ವಿರುದ್ಧ ಕೋಟೆಯೊಳಗಿಂದ ಯುದ್ಧಗೈಯಲಿಲ್ಲ. ನಿರ್ಧಾರ ಮಾಡಿಬಿಡುವ ಯುದ್ಧಗಳಲ್ಲಿ ಭಾಗವಹಿಸುವುದೇ ಸಣ್ಣ ಚಕಮಕಿಯ ನಂತರ ಹಿಂದಡಿ ಇಡುತ್ತಿದ್ದರು. ಮೇಲ್ನೋಟಕ್ಕಿದು ದೊಂಡಿಯಾ ವಸಾಹತು ದಾಳಿಯ ಸಮಯದಲ್ಲಿ ಕದನರಂಗದಿಂದ ‘ಓಡಿಹೋಗುತ್ತಿದ್ದರು’ ಎಂದು ತೋರುತ್ತದಾದರೂ, ನಿಜಾರ್ಥದಲ್ಲಿ ದೊಂಡಿಯಾ ತನ್ನ ಸೈನ್ಯ ಬಲವನ್ನು ಉಳಿಸಿಕೊಳ್ಳುತ್ತ ಹೆಚ್ಚೆಚ್ಚು ಸೈನಿಕರನ್ನು ತನ್ನ ಕಡೆಗೆ ಸೇರಿಸಿಕೊಳ್ಳುತ್ತಿದ್ದ, 200 ಅಶ್ವಾರೋಹಿಗಳಿಂದಾರಂಭವಾದ ಪಡೆ 80,000 ಸೈನಿಕರ ಶಕ್ತಿಯುತ ಸೈನ್ಯವಾಯಿತು, ಅದರಲ್ಲಿ 5000ದಷ್ಟು ಕುದುರೆಸವಾರರೇ ಇದ್ದರು. ಸಾವಿರಾರು ಚದುರ ಕಿಮಿಗಳಲ್ಲಿ ಹರಡಿಹೋಗಿದ್ದ ಅರಣ್ಯ, ಕಣಿವೆ ಮತ್ತು ಬಯಲನ್ನುಪಯೋಗಿಸಿಕೊಂಡು ದೊಂಡಿಯಾ ಜಂಗಮ ಯುದ್ಧ ತಂತ್ರವನ್ನು ಅಳವಡಿಸಿಕೊಂಡಿದ್ದ. ಕೋಟೆಯೊಳಗಿನಿಂದ ನಡೆಸುವ ಯುದ್ಧಕ್ಕಿಂತ ಬಯಲಿನ ಕಾರ್ಯಾಚರಣೆಗೆ ಪ್ರಾಮುಖ್ಯತೆ ಕೊಟ್ಟಿದ್ದ. ಶಕ್ತಿಯುತ ಕುದುರೆಸವಾರರ ತಂಡದಿಂದ ಸಬಲವಾಗಿದ್ದ ದೊಂಡಿಯಾನನ್ನು ಹುಡುಕಲು ಮತ್ತವನನ್ನು ಸುತ್ತುವರಿಯಲು ಬ್ರಿಟೀಷರಿಗೆ ಯಾವಾಗಲೂ ಕಷ್ಟವಾಗುತ್ತಿತ್ತು. 

ಆದರೆ ಕೊನೆಗೆ, ದೊಂಡಿಯಾನ ಶಕ್ತಿಯೇ ಅವನ ಸೋಲಿಗೂ ಕಾರಣವಾಗಿಬಿಟ್ಟಿತು. ಎಲ್ಲಿಯವರೆಗೆ ದೊಂಡಿಯಾನ ಪಡೆಗಳು ಚಿಕ್ಕವಾಗಿದ್ದವೋ ಅಲ್ಲಿಯವರೆಗೆ ಅವುಗಳು ವೇಗವನ್ನುಳಿಕೊಂಡಿದ್ದವು ಮತ್ತು ಮಿಂಚಿನ ವೇಗದಲ್ಲಿ ಸ್ಥಳಾಂತರ ಮಾಡುತ್ತ, ಬ್ರಿಟೀಷ್ ಸೈನ್ಯಕ್ಕೆ ಇವರನ್ನುಡುಕುವುದನ್ನು ಅಸಾಧ್ಯವಾಗಿಸಿಬಿಡುತ್ತಿದ್ದವು; ಗೆರಿಲ್ಲಾ ಯುದ್ಧದ ಚಲನಶೀಲತೆಗೆ ಉತ್ತಮ ಉದಾಹರಣೆಯಾಗಿತ್ತು. ದೊಂಡಿಯಾ ತನ್ನ ಸೈನಿಕ ಶಕ್ತಿಯನ್ನು ಹೆಚ್ಚಿಸುತ್ತಿದ್ದಂತೆ ಎಲ್ಲಾ ಪಡೆಗಳನ್ನೂ ಒಂದೇ ತುಕಡಿಯಾಗಿ ರೂಪಿಸಿದನು. ಕುದುರೆಸವಾರರು ಕಾಲಾಳುಗಳ ಜೊತೆಗೆ ಬೆರೆತಿದ್ದರು ಮತ್ತವರು ಆಡಳಿತ ನಡೆಸುತ್ತಿದ್ದವರ ಜೊತೆಗೆ. ಚಲಿಸುವ ಸೈನ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಮತ್ತಿತರೆ ವಸ್ತುಗಳನ್ನು ಪೂರೈಸಲು ಮರಾಠ ಸೈನ್ಯದ ಮಾದರಿಯನ್ನು ಉಪಯೋಗಿಸಲಾಗುತ್ತಿತ್ತು. ಈಗ ದೊಂಡಿಯಾನ ಸೈನ್ಯ ಚಲಿಸಲಾರಂಭಿಸಿದರೆ ದಟ್ಟ ಧೂಳೇಳುತ್ತಿತ್ತು ಮತ್ತವನ ಪಡೆ ಕ್ಯಾಂಪು ಮಾಡಿದಾಗ ಒಂದು ಚಿಕ್ಕ ನಗರದಂತೆ ಕಾಣುತ್ತಿತ್ತು. ಇದು ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೊಂದಾಣಿಕೆಯಾಗದೇ ದೊಂಡಿಯಾನ ಸೈನ್ಯ ಸ್ಥಿರ ಯುದ್ಧವನ್ನು ಅಳವಡಿಸಿಕೊಳ್ಳುವಂತೆ ಮಾಡಿತು. ಆದರೆ ಈ ಹೊಸ ತಂತ್ರವನ್ನು ಕಾರ್ಯರೂಪಕ್ಕೆ ತರಲು ದೊಂಡಿಯಾ ಅಸಮರ್ಥನಾಗಿದ್ದ, ಯಾಕೆಂದರೆ ದೊಂಡಿಯಾ ಪ್ರಾಂತ್ಯವನ್ನು ಏಕೀಕೃತಗೊಳಿಸಿರಲಿಲ್ಲ ಮತ್ತವನ ಬಳಿ ಮೇಲ್ ದರ್ಜೆಯ ಸೈನ್ಯವನ್ನು ಎದುರಿಸಲು ಬೇಕಾದ ಶಸ್ತ್ರಾಸ್ತ್ರಗಳೂ ಇರಲಿಲ್ಲ. ದೊಂಡಿಯಾನ ಸೈನಿಕ ಪಡೆ ಹೆಚ್ಚಾದಷ್ಟೂ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾದವು, ದೊಂಡಿಯಾನನ್ನು ಹುಡುಕುವುದು – ಗುರುತಿಸುವುದು ಸುಲಭವಾಯಿತು. ವೆಲ್ಲೆಸ್ಲಿ ಪಡೆಗಳ ನಿರಂತರ ಕಾರ್ಯಾಚರಣೆಯಿಂದಾಗಿ, ಕೊನೆಗೆ ದೊಂಡಿಯಾ ಕೃಷ್ಣಾ ನದಿಯ ದಂಡೆಗೆ ಬಂದ, ಬಿರುಸಾಗಿ ಹರಿಯುತ್ತಿರುವ ನದಿಯ ಅಂಚಿಗೆ ಬಂದುಬಿಟ್ಟ. ಒಂದೆಡೆ ಆಳ ಸಮುದ್ರ ಮತ್ತೊಂದೆಡೆ ಸೈತಾನನಿಂದ ಸುತ್ತುವರಿದಂತೆ ದೊಂಡಿಯಾನನ್ನು ಸುತ್ತುವರಿಯಲಾಯಿತು ಮತ್ತು ಮೇಲ್ ದರ್ಜೆಯ ಸೈನಿಕ ಪಡೆಯಿಂದ ಅವನನ್ನು ಮಣಿಸಲಾಯಿತು. 1800ರ ಸೆಪ್ಟೆಂಬರ್ 10ರಂದು ದೊಂಡಿಯಾ ಬ್ರಿಟೀಷರ ಎದುರಿನ ಕದನದಲ್ಲಿ ಹುತಾತ್ಮನಾದ. 

ಈ ಪರಿಸ್ಥಿತಿಗಿಂತ ಹೆಚ್ಚೇನೂ ಭಿನ್ನವಲ್ಲದ ಪರಿಸ್ಥಿತಿಯ (ದೆಹಲಿ ಸೋತ ನಂತರ ಬಂಡಾಯ ಸೈನಿಕರು ಹಳ್ಳಿಗಳ ಕಡೆಗೆ ಚದುರಿಹೋದಾಗ) ಬಗ್ಗೆ ಫ್ರೆಡರಿಕ್ ಏಂಜೆಲ್ಸ್ ಬರೆಯುತ್ತಾರೆ: “ಎಲ್ಲಿಯವರೆಗೆ ಬಂಡಾಯ ಸೈನಿಕರು ದೊಡ್ಡ ಸಂಖೈಯಲ್ಲಿದ್ದರೋ, ಎಲ್ಲಿಯವರೆಗೆ ಇದು ಆಕ್ರಮಣದ ಮತ್ತು ದೊಡ್ಡ ಮಟ್ಟದ ತೀಕ್ಷ್ಣ ಯುದ್ಧದ ಪ್ರಶ್ನೆಯಾಗಿತ್ತೋ, ಇಂಗ್ಲೀಷ್ ಪಡೆಗಳಿಗೆ ಇಂತಹ ಕಾರ್ಯಾಚರಣೆಯಲ್ಲಿದ್ದ ಉನ್ನತಿ ಅವರಿಗೆ ಅನುಕೂಲಕರವಾಗಿತ್ತು.” (11)

ಮುಂದಿನ ವಾರ:
ವೆಲ್ಲೂರಿನ ಬಂಡಾಯ

Aug 25, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1.

(ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ 'ನವ ಕರ್ನಾಟಕ ಪ್ರಕಾಶನ' ಪ್ರಕಟಿಸಿದ ಕಿರು ಪುಸ್ತಕ "ಗೋಹತ್ಯೆ - ಒಂದು ಪರಾಮರ್ಶೆ". 2010ರಲ್ಲಿ ಮೊದಲು ಪ್ರಕಟವಾಗಿದ್ದ ನಾಗೇಶ್ ಹೆಗಡೆಯವರ ಈ ಪುಸ್ತಕ ಅವತ್ತಿಗಿಂತಲೂ ಇವತ್ತಿಗೇ ಹೆಚ್ಚು ಪ್ರಸ್ತುತ. ದನದ ಹೆಸರಿನಲ್ಲಿ ಜನರನ್ನು ಸಾಯಿಸುವ ಪ್ರವೃತ್ತಿ ಅಲ್ಲೆಲ್ಲೋ ದೂರದ ಊರಿನ ಘಟನೆಯಾಗಿ ಉಳಿದಿಲ್ಲ. ನಮ್ಮ ಕರಾವಳಿಯಲ್ಲೇ ಒಂದು ಬಲಿ ಪಡೆದುಕೊಂಡಿದೆ ಈ ಗೋ - ರಾಜಕೀಯ. ಈ ಸಂದರ್ಭದಲ್ಲಿ ನಾಗೇಶ್ ಹೆಗಡೆಯವರು ವೈಜ್ಞಾನಿಕ - ಆರ್ಥಿಕ - ಸಾಮಾಜಿಕ ದೃಷ್ಟಿಕೋನದಿಂದ ಬರೆದಿರುವ "ಗೋಹತ್ಯೆ - ಒಂದು ಪರಾಮರ್ಶೆ"ಯನ್ನು ಹಿಂಗ್ಯಾಕೆಯಲ್ಲಿ ಮೂರು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಶ್ನೋತ್ತರ ರೂಪದಲ್ಲಿರುವ ಈ ಕಿರುಪುಸ್ತಕವನ್ನು ಮರುಪ್ರಕಟಿಸಲು ಅನುಮತಿ ನೀಡಿದ ನಾಗೇಶ್ ಹೆಗಡೆಯವರಿಗೆ ಧನ್ಯವಾದಗಳು - ಹಿಂಗ್ಯಾಕೆ.)
ನಾಗೇಶ್ ಹೆಗಡೆ
25/08/2016
ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂತಹ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?
ಮೊದಲನೆಯದಾಗಿ, ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು – ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ತಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು – ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೋ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೋ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗ ಕಿತ್ತುಕೊಳ್ಳುತ್ತಿದೆ. 

ಹಾಗೇನಿಲ್ಲವಲ್ಲ? ಹಸು ಅಥವಾ ಎತ್ತನ್ನು ಈಗಲೂ ಮಾರಬಹುದು. ಆದರೆ ಕಟುಕರಿಗೆ ಮಾರಬಾರದು......
ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.

ಸೆಗಣಿ – ಗಂಜಳ ಗೊಬ್ಬರವನ್ನು ಮಾರಿದರೆ ಹಣ ಬರುತ್ತದಲ್ಲ
ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಜಾಲಿಮರ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಹಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತುಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ – ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವುವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ರೋಗಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳ ಆಗುತ್ತದೆ. ಇವೆಲ್ಲವನ್ನೂ ಅನುಭವಿಸಿದ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. ‘ಜೆಸಿಬಿ ತರಿಸಿ’ ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತ ಬರುತ್ತದೆ.

ಸತ್ತ ದನವನ್ನು ಮಾರಬಹುದಲ್ಲ? ಅದಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಇದ್ದೇ ಇರುತ್ತದೆ.
ಮಾರುವುದು ಸುಲಭವೇ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ, ದನ ತಾನಾಗಿ ಸತ್ತಿದ್ದರೂ, ಪ್ರಮಾಣಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೋಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.

ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು, ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.


ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು, ಮುದಿ ದನಗಳನ್ನು ಸರಕಾರವೇ ಸಾಕಿಕೊಳ್ಳುತ್ತದಂತಲ್ಲ?
ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು – ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ ‘ಗೋಶಾಲೆ’ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?


ಮೇಲ್ವಿಚಾರಣೆಗೆ ಮಠಾಧೀಶರು, ಧರ್ಮಾಧಿಕಾರಿಗಳು, ಹಿಂದೂ ಸ್ವಯಂಸೇವಕರು ಇರುತ್ತಾರಲ್ಲ? ಗೊಡ್ಡು ಗೋವುಗಳನ್ನು ಜೋಪಾನವಾಗಿ ರಕ್ಷಿಸುತ್ತೇವೆಂದು ಮಠಗಳು ಹೇಳುತ್ತಿವೆಯಲ್ಲ?
ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.

ಗೋರಕ್ಷಣೆ ಎಂಬುದು ಹಿಂದಿನ ಕಾಲದ ಮೌಲ್ಯವೇ ಆಗಿತ್ತಲ್ಲವೇ? ಅಂಥ ಸಭ್ಯ ಪ್ರಾಣಿಗಳನ್ನು ಹಿಂಸಿಸುವುದಾಗಲೀ ಕೊಲ್ಲುವುದಾಗಲೀ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಲ್ಲವೆ?
ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ – ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಕುದುರೆಯ ಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಿಬಿಡುತ್ತಿದ್ದರಂತೆ. ಹಾಸು ಹಾಸು ಚರ್ಮಗಳು ತೇಲಾಡುವ ‘ಚರ್ಮಣ್ವತೀ’ ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದ ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದ್ದರೆ ಇನ್ನೂ ಕಷ್ಟ. ಅದರಿಂದುಂಟಾಗುವ ರೋಗರುಜಿನಗಳ ಭಯ ಇರಬಹುದು ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದುಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಡಾ. ಜಿ. ರಾಮಕೃಷ್ಣ ಹೇಳುವ ಹಾಗೆ, “ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು” ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳ ಬಂದರೆ ಮೇಲ್ಜಾತಿಯ “ದೀಕ್ಷೆ ಕೊಡಿಸುತ್ತೇನೆ” ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; “ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ” ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.

ಅದೇನೇ ಇರಲಿ, ಮಠಾಧೀಶರೆನ್ನಿಸಿಕೊಂಡವರು ಹಿಂದೂ ಧರ್ಮದ ಮೂಲತತ್ವಗಳನ್ನು ಕಾಪಾಡಿಕೊಂಡು ಬರಬೇಕಲ್ಲವೇ? ಅವರದ್ದು ತಪ್ಪೆಂದು ಹೇಗೆ ಹೇಳುತ್ತೀರಿ?
ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ – ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು.

ಮುಂದುವರೆಯುವುದು....

Aug 24, 2016

ಪ್ರಶ್ನೆಗಳಾಗೇ ಉಳಿದವನು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
24/08/2016
ರೈತ ಹಸಿದಿದ್ದಾನೆ!
ಹಾಗಾದವರನ ಅನ್ನ
ಕಸಿದುಕೊಂಡವರ್ಯಾರು?
ರೈತ ಬೆತ್ತಲಾಗಿದ್ದಾನೆ!
ಹಾಗಾದವರನ ಬಟ್ಟೆ
ಬಿಚ್ಚಿಕೊಂಡಿದ್ಯಾರು?
ರೈತ ಸಾಲಗಾರನಾಗಿದ್ದಾನೆ

ಹಾಗಾದವರನ ದುಡಿಮೆ
ಕಿತ್ತುಕೊಂಡಿದ್ಯಾರು?
ರೈತ ನೇಣು ಹಾಕಿಕೊಂಡಿದ್ದಾನೆ!
ಹಾಗಾದವರಿನಿಗೆ ಹಗ್ಗ
ಹೊಸೆದು ಕೊಟ್ಟವರ್ಯಾರು?
ರೈತನಿಗೆ ಸಂಬಂದಿಸಿದ್ದವೆಲ್ಲವೂ
ಪ್ರಶ್ನೆಗಳಾಗೇ ಉಳಿದೆವೆ, 
ಉತ್ತರ ಕೊಡಬೇಕಾದವರು

ಉಣ್ಣುತ್ತ ಕೂತಿದ್ದಾರೆ! 

ನಿಜವಾದ ದೇಶದ್ರೋಹದ ಬಗ್ಗೆ ಮೌನವೇಕೆ?

ಆನಂದ ಪ್ರಸಾದ್
24/08/2016
ಬೆಂಗಳೂರಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಕೆಲವರು ದೇಶದ್ರೋಹದ ಘೋಷಣೆ ಕೂಗಿದರೆಂದು ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ಕಾರ್ಯಕರ್ತರು ರಾಜ್ಯದಲ್ಲಿ ಭಾರೀ ರಾದ್ಧಾಂತವನ್ನೇ ಸೃಷ್ಟಿಸಲು ಯತ್ನಿಸಿದರು. ಆಮ್ನೆಸ್ಟಿ ಕಾರ್ಯಕ್ರಮದಲ್ಲಿ ದೇಶದ್ರೋಹವೆನಿಸುವ ಯಾವ ಘೋಷಣೆ ಕೂಗಲಾಯಿತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ಏನೂ ಮಾಹಿತಿ ಅಥವಾ ವಿಡಿಯೋ ದೃಶ್ಯಾವಳಿ ಕಂಡುಬರಲಿಲ್ಲ. ಹೀಗಿದ್ದರೂ ಎಬಿವಿಪಿ ಕಾರ್ಯಕರ್ತರು ರಾದ್ಧಾಂತ ಎಬ್ಬಿಸಿದ್ದು ರಾಜಕೀಯಕ್ಕೆ ಹೊರತು ಮತ್ತೇನೂ ಅಲ್ಲ ಎಂಬುದು ಕಂಡುಬರುತ್ತದೆ. ಒಂದು ಘೋಷಣೆ ಕೂಗಿದ ಕೂಡಲೇ ದೇಶದ್ರೋಹ ಎಂದು ಹೇಳುವವರು ನಮ್ಮ ದೇಶದಲ್ಲಿ ದಿನನಿತ್ಯವೂ ನಡೆಯುತ್ತಿರುವ ನಿಜವಾದ ದೇಶದ್ರೋಹದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂಬ ಬಗ್ಗೆ ಜನಸಾಮಾನ್ಯರು ವಿಚಾರ ಮಾಡಬೇಕಾಗಿದೆ.

ನಮ್ಮದೇ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಸರ್ಕಾರೀ ನೌಕರರು/ಅಧಿಕಾರಿಗಳು ನಮ್ಮ ನ್ಯಾಯಬದ್ಧ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡದೇ ಸತಾಯಿಸುವುದು ದೇಶದ್ರೋಹವಲ್ಲವೇ? ಇವರನ್ನು ಬಂಧಿಸಬೇಕು ಹಾಗೂ ಜನರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕೆಂದು ದೇಶದ್ರೋಹದ ಬಗ್ಗೆ ರಾದ್ಧಾಂತ ಎಬ್ಬಿಸುವವರು ಯಾಕೆ ಧ್ವನಿ ಎತ್ತುವುದಿಲ್ಲ? ರಾಜಕಾರಣಿಗಳು, ರಾಜಕೀಯ ಪಕ್ಷಗಳು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುವುದು ದೇಶದ್ರೋಹವಲ್ಲವೇ? ಇಂಥ ಕೃತ್ಯ ನಡೆಸುವವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುವವರು ಯಾರಾದರೂ ಇದ್ದಾರೆಯೇ? ರಾಜಕೀಯ ಪಕ್ಷಗಳು ಬಹುಮತಕ್ಕಾಗಿ ಶಾಸಕರ ಕುದುರೆ ವ್ಯಾಪಾರ ಮಾಡುವುದು ದೇಶದ್ರೋಹವಲ್ಲವೇ? ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಬೇರೆ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ ಮರುಚುನಾವಣೆ ಹೇರುವುದು ದೇಶದ್ರೋಹವಲ್ಲವೇ? ಗಣಿಧಣಿಗಳಿಂದ ಯಥೇಚ್ಛ ಹಣ ಪಡೆದು ಅಕ್ರಮ ಗಣಿಗಾರಿಕೆಗೆ ಸ್ವಚ್ಛಂದ ಅವಕಾಶ ಕೊಡುವುದು ದೇಶದ್ರೋಹವಲ್ಲವೇ? ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಕಪ್ಪು ಹಣ ಸಂಗ್ರಹಿಸಿ ಅದರ ಬಲದಿಂದ ಮಾಡಬಾರದ ಅಕ್ರಮ ವ್ಯವಹಾರ, ರಾಜಕೀಯವನ್ನು ಹೊಲಸೆಬ್ಬಿಸುವುದು ದೇಶದ್ರೋಹವಲ್ಲವೇ? ಕಾಳಸಂತೆಯಲ್ಲಿ ಸರಕುಗಳನ್ನು, ಆಹಾರ ಧಾನ್ಯಗಳನ್ನು, ಬೇಳೆಕಾಳುಗಳನ್ನು ಅಡಗಿಸಿಟ್ಟು ಹೆಚ್ಚು ಲಾಭಕ್ಕೆ ಮಾರುವವರು ದೇಶದ್ರೋಹಿಗಳಲ್ಲವೇ? ಇದರ ಬಗ್ಗೆ ಧ್ವನಿ ಎತ್ತುವವರು ಯಾರಾದರೂ ಇದ್ದಾರೆಯೇ?

ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು ಪ್ರಯತ್ನಿಸುವಾಗ ಅದನ್ನು ಪ್ರತಿಭಟಿಸಲು ನಮ್ಮ ಸಂಘಟನೆಗಳಿಗೆ ವೀರಾವೇಶ ಬಂದದ್ದು ಕಾಣಲಿಲ್ಲ. ಲೋಕಸೇವಾ ಆಯೋಗಕ್ಕೆ ಭ್ರಷ್ಟರ ನೇಮಕ ಮಾಡಿ ಇಡೀ ವ್ಯವಸ್ಥೆಯ ಉಗಮ ಸ್ಥಾನವನ್ನೇ ಕುಲಗೆಡಿಸಿದ ರಾಜ್ಯ ಸರ್ಕಾರದ ನಿರ್ಧಾರ ದೇಶದ್ರೋಹವಲ್ಲವೇ? ಇದನ್ನು ತಡೆಯಬೇಕೆಂದು ರಾದ್ಧಾಂತ ಎಬ್ಬಿಸಲು ಯಾರೂ ಇಲ್ಲ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ನ್ಯಾಯಾಧೀಶರ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಕಣ್ಣೀರು ಹಾಕಿ ಕೇಳಿಕೊಂಡರೂ ಸರ್ಕಾರ ನ್ಯಾಯಾಧೀಶರ ನೇಮಕಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದೇಶದ್ರೋಹವಲ್ಲವೇ? ಲೋಕಪಾಲ್ ವ್ಯವಸ್ಥೆ ತರಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿರುವುದು ದೇಶದ್ರೋಹವಲ್ಲವೇ? ಇದರ ಬಗ್ಗೆ ಪ್ರಶ್ನಿಸಲು ಎಬಿವಿಪಿಯವರಿಗೆ ಧೈರ್ಯ ಇಲ್ಲವೇ? ಈ ದೇಶವನ್ನು ಹಾಳುಗೆಡಹುತ್ತಿರುವ ರಾಜಕೀಯ ಪಕ್ಷಗಳೇ ಅತಿ ದೊಡ್ಡ ದೇಶದ್ರೋಹಿಗಳು ಏಕೆಂದರೆ ಚುನಾವಣಾ ಸುಧಾರಣೆ ಬಗ್ಗೆ, ಆಡಳಿತ ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಇವರಿಗೆ ಸಂವಿಧಾನಬದ್ಧವಾಗಿ ಲಭ್ಯವಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಮ್ಮ ದೇಶವು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿಯುವಂತೆ ಮಾಡಿರುವುದು ಇವರ ಸಾಧನೆ.

ಎಬಿವಿಪಿಯಂಥ ಸಂಘಟನೆಗಳಿಗೆ ನಮ್ಮ ದೇಶದ ನಿಜವಾದ ಶತ್ರುಗಳು ನಮ್ಮದೇ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಎಂಬುದು ತಿಳಿಯದೆ ಇರುವುದು ಅಥವಾ ತಿಳಿದಿದ್ದರೂ ನಿಜವಾದ ದೇಶದ್ರೋಹದ ವಿರುದ್ಧ ಪ್ರತಿಭಟಿಸದೇ ಇರುವುದು ವಿಪರ್ಯಾಸ. ಭ್ರಷ್ಟಾಚಾರ, ಅಸ್ಪೃಶ್ಯತೆ, ಧರ್ಮ ಹಾಗೂ ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದು, ಓಟಿಗಾಗಿ ನೋಟು ಕೊಡುವುದು ಹಾಗೂ ಪಡೆಯುವುದು ಇವೆಲ್ಲವೂ ನಿಜವಾಗಿ ದೇಶದ್ರೋಹಗಳೇ. ಇವುಗಳು ಯಾರೋ ಕೆಲವು ವ್ಯಕ್ತಿಗಳು ಕೂಗಿದ ಘೋಷಣೆಗಳಿಗಿಂತ ದೇಶಕ್ಕೆ ಹೆಚ್ಚು ಮಾರಕ. ವಿದ್ಯಾರ್ಥಿ ಸಮುದಾಯ ನಿಜವಾದ ದೇಶದ್ರೋಹಿಗಳ ಬಗ್ಗೆ ಆಲೋಚಿಸದೆ ರಾಜಕೀಯ ಪಕ್ಷಗಳ ಘಟಕಗಳಾಗಿ ರಾಜಕೀಯ ಕಾರ್ಯಸೂಚಿಯ ಅನುಸಾರವಾಗಿ ಪ್ರತಿಭಟನೆ ಮಾಡುವುದರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ. ವಿದ್ಯಾರ್ಥಿಗಳು ರಾಜಕೀಯರಹಿತವಾಗಿ ಪ್ರತಿಭಟನೆಗಳಲ್ಲಿ ತೊಡಗಿಕೊಂಡರೆ ಮಾತ್ರ ದೇಶಕ್ಕೆ ಏನಾದರೂ ಒಳಿತಾಗಬಹುದೇ ವಿನಃ ರಾಜಕೀಯ ಪಕ್ಷಗಳ ಕಾರ್ಯಸೂಚಿಯ ದಾಳಗಳಾಗಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುವುದು, ವಿದ್ಯಾರ್ಥಿಗಳಲ್ಲಿ ರಾಜಕೀಯದ ಹೆಸರಿನಲ್ಲಿ ಒಡಕು ಉಂಟಾಗುವುದು ದೇಶಕ್ಕೆ ಮಾರಕ. ನಮ್ಮ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸ್ವತಂತ್ರವಾಗಿ ಚಿಂತಿಸುವುದನ್ನು ಕಲಿಯಬೇಕು. ಇಲ್ಲದೇ ಹೋದರೆ ದೇಶದ ಭವಿಷ್ಯ ಉತ್ತಮವಾಗಲಾರದು.

Aug 23, 2016

ಈಶ್ವರಪ್ಪನವರ ಹಿಂದ ಚಳುವಳಿಯಲ್ಲಿ ಮಾಯವಾದ ಅ(ಅಲ್ಪಸಂಖ್ಯಾತರು)!

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್
23/08/2016
ಸರಿಸುಮಾರು ಹನ್ನೆರಡು ವರ್ಷಗಳ ನಂತರ ಮತ್ತೆ ಅಹಿಂದ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡುತ್ತಿದೆ. ವ್ಯತ್ಯಾಸವೆಂದರೆ 2005ರ ಸುಮಾರಿನ ಅಹಿಂದ ಇವತ್ತು ಇಲ್ಲವಾಗಿ ಕೇವಲ ಹಿಂದ ಮಾತ್ರ ರಾರಾಜಿಸುತ್ತಿದೆ. ಹಳೆಯ ಅಹಿಂದದಲ್ಲಿ ಅಲ್ಪಸಂಖ್ಯಾತರನ್ನು ಪ್ರನಿಧಿಸುವ ‘ಅ’ ವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಯಾಕೆಂದರೆ ಈ ಬಾರಿ ಹಿಂದ ಚಳುವಳಿಯನ್ನು ಮರು ಪ್ರಾರಂಬಿಸಲು ಹೊರಟಿರುವುದು ಸಂಘಪರಿವಾರದ ಕಟ್ಟಾಳುವೂ, ಬಾಜಪದ ಪ್ರಮುಖನಾಯಕರೂ ಆದ ಶ್ರೀ ಈಶ್ವರಪ್ಪನವರು. ಹಾಗಾಗಿ ಯಾವ ಅಲ್ಪಸಂಖ್ಯಾತ ವಿರೋಧಿ ನೀತಿಯ ಸಂಘಟನೆಗಳ ನೆರಳಲ್ಲಿಯೇ ತಮ್ಮ ತಮ್ಮ ರಾಜಕಾರಣ ಮಾಡುತ್ತಾ ಬಂದರೋ ಆ ಈಶ್ವರಪ್ಪನವರಿಂದ ಹಿಂದ ಚಳುವಳಿಯಲ್ಲಿ ಅಲ್ಪಸಂಖ್ಯಾತ ವರ್ಗವೂ ಸೇರಿರುತ್ತದೆಯೆಂದು ನಂಬುವುದು ಮೂರ್ಖತನವಾಗುತ್ತದೆ. ಹಾಗಿದ್ದರೆ ಇವತ್ತೇನು ಈಶ್ವರಪ್ಪನವರು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮೂಲಕ ಹಿಂದ ಚಳುವಳಿಯ ಬಗ್ಗೆ ಹೇಳುತ್ತಿದ್ದಾರೆಯೊ ಅದಕ್ಕೂ ಈ ಹಿಂದೆ ಜಾತ್ಯಾತೀತ ಜನತಾದಳದಲ್ಲಿದ್ದಾಗ ಶ್ರೀ ಸಿದ್ದರಾಮಯ್ಯನವರು ಅಹಿಂದ ಚಳುವಳಿಯನ್ನು ಪುನಶ್ಚೇತನಗೊಳಿಸಿದ್ದಕ್ಕೂ ಇರುವ ಮುಖ್ಯ ವ್ಯತ್ಯಾಸವನ್ನು ನಾವಿಲ್ಲಿ ಗಮನಿಸಬೇಕಾಗಿದೆ.

ಈ ಹಿಂದೆ ಶ್ರೀ ಸಿದ್ದರಾಮಯ್ಯನವರು ಅಹಿಂದವನ್ನು ಪುನಶ್ಚೇತನಗೊಳಿಸಲು ಅವರಿಗೊಂದು ರಾಜಕೀಯ ಅನಿವಾರ್ಯತೆಯಿತ್ತು. ಜಾತ್ಯಾತೀತ ಜನತಾದಳದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡದೆ ಉಪಮುಖ್ಯಮಂತ್ರಿ ಪಟ್ಟಕ್ಕೆ ಸೀಮಿತಗೊಳಿಸಿದ ಮಾಜಿ ಪ್ರದಾನಿಯೂ, ಜಾತ್ಯಾತೀತ ಜನತಾದಳದ ಅದ್ಯಕ್ಷರೂ ಆದ ಶ್ರೀ ದೇವೇಗೌಡರ ವಿರುದ್ದ ಸಿಡಿದು ನಿಂತು ತನ್ನ ರಾಜಕೀಯ ಅಸ್ಥಿತ್ವವನ್ನು ಸಾಬೀತು ಪಡಿಸುವ ಜರೂರತ್ತು ಅವತ್ತು ಸಿದ್ದರಾಮಯ್ಯನವರ ಮುಂದಿತ್ತು.ಜೊತೆಗೆ ಸರದಿಯಂತೆ ಅಧಿಕಾರ ಅನುಭವಿಸುತ್ತಿದ್ದ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದ ಪಾರುಪತ್ಯವನ್ನು ಕೊನೆಗಾಣಿಸಿ ಅಹಿಂದವನ್ನು ಅಧಿಕಾರದ ಸನಿಹಕ್ಕೆ ತರುವ ಒಂದು ಹೊಣೆಗಾರಿಕೆಯೂ ಅವರಿಗಿತ್ತು. ದುರಂತವೆಂದರೆ ಅವರು ಹೀಗೆ ಅಹಿಂದದ ಪರವಾಗಿ ನಿಂತಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಹಿಂದುಳಿದ ವರ್ಗದವರೇ ಆಗಿದ್ದ ಶ್ರೀ ಧರ್ಮಸಿಂಗ್ ಅವರು. ಆದರೆ ಅವರು ತಮ್ಮ ಅಧಿಕಾರ ನಡೆಸುವಲ್ಲಿ ಸಂಪೂರ್ಣವಾಗಿ ಜನತಾದಳದ ದೇವೇಗೌಡರ ಕಪಿಮುಷ್ಠಿಯಲ್ಲಿ ಸಿಲುಕಿಹಾಕಿಕೊಂಡಿದ್ದರು.

ಹೀಗಾಗಿ ರಾಜಕೀಯವಾಗಿ ತಮಗಿರುವ ಜನಸಮುದಾಯದ ಬೆಂಬಲವನ್ನೂ, ಅಹಿಂದ ವರ್ಗಗಳ ತಾಕತ್ತನ್ನು ತೋರಿಸಲು ಸಿದ್ದರಾಮಯ್ಯನವರಿಗೆ ಬೇಕಾಗಿದ್ದ ವೇದಿಕೆಯೊಂದನ್ನು ರಚಿಸಿಕೊಳ್ಳುವ ಕಷ್ಟ ಎದುರಾಗಲಿಲ್ಲ. ಯಾಕೆಂದರೆ ಅಲ್ಲಿಗಾಗಲೇ ಕರ್ನಾಟಕದಲ್ಲಿ ತನ್ನ ಅಸ್ಥಿತ್ವವನ್ನು ಪಡೆದಿದ್ದ ಅಹಿಂದವನ್ನು ಪುನರುಜ್ಜೀವನಗೊಳಿಸಿದ ಶ್ರೀ ಸಿದ್ದರಾಮಯ್ಯನವರು ಅದಕ್ಕೊಂದು ತಾರಾ ಮೆರುಗನ್ನು ನೀಡಿದರು. ಅದಾಗಲೇ ಕಾಂಗ್ರೆಸ್ಸಿನಿಂದ ದೂರಸರಿದಿದ್ದ ಒಕ್ಕಲಿಗ ಮತ್ತು ಲಿಂಗಾಯಿತ ರಾಜಕೀಯ ಶಕ್ತಿಗಳೆದುರು ಅಹಿಂದ ಎದ್ದುನಿಂತು ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಎಲ್ಲ ಸೂಚನೆಯನ್ನು ನೀಡಿತು. ನಂತರ ಸಿದ್ದರಾಮಯ್ಯನವರು ಕಾಂಗ್ರೆಸ್ಸಿಗೆ ಹೋದರು. 2013ರಲ್ಲಿ ನಡೆದ ರಾಜ್ಯವಿದಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಈ ಅಹಿಂದ ವರ್ಗದ ಬೆಂಬಲವೇ ಮುಖ್ಯ ಕಾರಣವಾಗಿತ್ತು.. ಅಲ್ಲಿಗೆ ಅಹಿಂದದ ಮೂಲಕ ಸಿದ್ದರಾಮಯ್ಯನವರು ಎರಡು ವಿಚಾರಗಳ್ನು ಸಾಧಿಸಿ ತೋರಿಸಿದ್ದರು. ಒಂದು, ಅಹಿಂದ ವರ್ಗಗಳು ಒಟ್ಟಾಗಿ ನಿಂತರೆ, ತಾವೇ ಒಂದು ಪ್ರಬಲ ಶಕ್ತಿಯಾಗಿ ಅಧಿಕಾರ ಹಿಡಿಯಬಹುದು ಎನ್ನುವುದು. ಎರಡನೆಯದು, ತಾವು ದೇವೇಗೌಡರು ಹಾಗು ಯಡಿಯೂರಪ್ಪನವರಂತೆ ಒಂದು ಜಾತಿಯ ನಾಯಕರಾಗಿರದೆ ಒಟ್ಟಾರೆ ಅಹಿಂದ ವರ್ಗಗಳ ನಾಯಕರಾಗಿದ್ದೇನೆಂಬುದು. ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದ ಸಿದ್ದರಾಮಯ್ಯನವರಿಗೆ ಅಹಿಂದ ಅನಿವಾರ್ಯವಾಗಿತ್ತು,ನಿಜ. ತಮ್ಮ ರಾಜಕೀಯ ಶಕ್ತಿಯ ಪ್ರದರ್ಶನಕ್ಕೆ ಅದನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದರೂ ಸಹ, ಆ ಹೊತ್ತಿಗಾಗಲೇ ಅವರಿಗಿದ್ದ ಜನಬೆಂಬಲವನ್ನು ಅಹಿಂದ ಪರವಾಗಿ ಬಳಸಿಕೊಂಡು ಅಧಿಕಾರ ಅಹಿಂಣದ ವರ್ಗಗಳಿಗೆ ಅಧಿಕಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಸಿದ್ದರಾಮಯ್ಯನವರ ಸ್ವಾರ್ಥ ರಾಜಕಾರಣದ ಹೊರತಾಗಿಯೂ ಅಹಿಂದಕ್ಕೆ ಪ್ರಾಮಾಣಿಕವಾಗಿ ದುಡಿದ ಮತ್ತು ಆ ವರ್ಗಗಳಿಗೊಂದು ರಾಜಕೀಯ ಅಧಿಕಾರ ತಂದುಕೊಟ್ಟ ಕೀರ್ತಿಯೂ ಸೇರುತ್ತದೆ.

ಇನ್ನು ಇವತ್ತು ಮಾಜಿ ಉಪಮುಖ್ಯಮಂತ್ರಿಯೂ, ಬಾಜಪದ ನಾಯಕರೂ ಆದ ಶ್ರೀ ಈಶ್ವರಪ್ಪನವರ ಹಿಂದ ಚಳುವಳಿಯ ಬಗ್ಗೆ ನೋಡೋಣ: ಯಡಿಯೂರಪ್ಪನವರು ಬಾಜಪದ ರಾಜ್ಯಾದ್ಯಕ್ಷರಾದ ತಕ್ಷಣ ಇಡೀ ಬಾಜಪವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕ್ರಿಯೆಗೆ ಚಾಲನೆ ನೀಡಿದರು. ಜೊತೆಗೆ ಈ ಹಿಂದೆ ತಾವು ಕೆಜೆಪಿ ಕಟ್ಟಿದಾಗ ತಮ್ಮೊಂದಿಗೆ ಬಾರದೆ ತಮ್ಮನ್ನು ಕಟುವಾಗಿ ಟೀಕಿಸಿದ್ದ ಬಾಜಪದ ನಾಯಕರುಗಳ ವಿರುದ್ದ ಸೇಡಿನ ಕ್ರಮಕ್ಕೆ ಮುಂದಾದರು. ಇದರ ಭಾಗವಾಗಿ ಅವರು ಪಕ್ಷದ ಪದಾಧಿಕಾರಿಗಳ ಪಟ್ಟಿ ರಚಿಸುವಾಗ ಬಾಜಪದ ಇತರೇ ಯಾವುದೇ ನಾಯಕರುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗು ತಾವು ಹಿಂದೆ ಕಟ್ಟಿದಾಗ ತಮ್ಮ ಜೊತೆಗಿದ್ದ ಕೆಜೆಪಿಯ ಬಹಳಷ್ಟು ನಾಯಕರುಗಳಿಗೆ ಬಾಜಪದ ಪದಾಧಿಕಾರಿಗಳನ್ನಾಗಿ ಮಾಡಿದ್ದರು. ಯಡಿಯೂರಪ್ಪನವರ ಆಪ್ತವಲಯಕ್ಕೆ ಮಾತ್ರ ಅನುಕೂಲಕರವಾಗಿದ್ದ ಇಂತಹದೊಂದು ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾದಾಗ ಇದನ್ನು ನಿರೀಕ್ಷಿಸಿದ್ದವರಿಗೂ ಅಚ್ಚರಿಯಾಗುವಷ್ಟು ಜನ ಯಡಿಯೂರಪ್ಪನವರ ಬೆಂಬಲಿಗರೇ ತುಂಬಿದ್ದರು. ಇದು ಬಾಜಪದೊಳಗಿನ ಯಡಿಯೂರಪ್ಪನವರ ವಿರೋಧಿಬಣಕ್ಕೆ ನುಂಗಲಾರದ ತುತ್ತಾಯಿತು. ಆದರೆ ಯಡಿಯೂರಪ್ಪನವರ ಹಟಮಾರಿ ಧೋರಣೆ ಹಾಗು ಕೋಪದ ಬಗ್ಗೆ ಅರಿವಿದ್ದ ನಾಯಕರ್ಯಾರು ಅವರ ವಿರುದ್ದ ದ್ವನಿಯೆತ್ತುವ ಧೈರ್ಯ ಮಾಡಲಿಲ್ಲ. ಆದರೆ ಬಾಜಪ ಅಧಿಕಾರದಲ್ಲಿ ಇದ್ದಾಗಲಿಂದಲೂ ಯಡಿಯೂರಪ್ಪನವರ ಬಗ್ಗೆ ನೇರಾನೇರಾ ಮಾತಾಡುತ್ತಿದ್ದ ಈಶ್ವರಪ್ಪನವರು ಮಾತ್ರ ಸುಮ್ಮನೇ ಕೂರಲಿಲ್ಲ. ಬದಲಿಗೆ ಇದರ ಬಗ್ಗೆ ಮಾಧ್ಯಮಗಳ ಎದುರೇ ಹೇಳಿಕೆ ನೀಡಿದರು. ಅವರ ಇಂತಹ ಆಕ್ರೋಶಕ್ಕೂ ಸೂಕ್ತ ಕಾರಣವಿತ್ತು. ಅದೆಂದರೆ ಕಳೆದ ವಿದಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾಗಿದ್ದ ರುದ್ರೇಗೌಡರನ್ನು ಶಿವಮೊಗ್ಗ ಜಿಲ್ಲಾ ಬಾಜಪದ ಅದ್ಯಕ್ಷರನ್ನಾಗಿ ಮಾಡಲಾಗಿತ್ತು. ಇದರಿಂದ ತಮ್ಮ ಜಿಲ್ಲೆಯಲ್ಲಿಯೇ ತಮಗೆ ಅವಮಾನ ಮಾಡಲಾಗಿದೆಯೆಂಬ ಕೋಪ ಈಶ್ವರಪ್ಪನವರನ್ನು ಉದ್ರಿಕ್ತಗೊಳಿಸಿದ್ದು ನಿಜ.

ಆದರೆ ವಾಸ್ತವ ಇದಕ್ಕಿಂತ ಭಿನ್ನವಿದೆ. ಯಾಕೆಂದರೆ ಪಕ್ಷದೊಳಗಿನ ಉಳಿದ ನಾಯಕರುಗಳ ಸಂಪೂರ್ಣ ಬೆಂಬಲವಿಲ್ಲದೆ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ದ ಈ ಮಟ್ಟದಲ್ಲಿ ದನಿಯೆತ್ತುವುದು ಕಷ್ಟದ ಮಾತು. ಇದಕ್ಕೆ ತಕ್ಕ ಹಾಗೆ ಈಗ ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ತಾವು ಹಿಂದ( ಹಿಂದುಳಿದ ಮತ್ತು ದಲಿತ) ಚಳುವಳಿಗೆ ಮರುಜನ್ಮ ನೀಡಿ ಅವರ ಅಭಿವೃದ್ದಿಗಾಗಿ ಹೋರಾಡುವ ಮಾತಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಈ ಸಮುದಾಯಗಳ ಅನೇಕ ನಾಯಕರುಗಳ ಜೊತೆ ಸಭೆಗಳನ್ನು ನಡೆಸುತ್ತಿದ್ದು, ಸಕ್ರಿಯವಾಗಿ ತಾವು ಬ್ರಿಗೇಡಿನ ಪದಾಧಿಕಾರಿಯಾಗದೇ ಹೋದರು ಹಿನ್ನೆಲೆಯಲ್ಲಿ ನಿಂತು ಅದರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ. 

ಸರಿಯಾಗಿ ವಿಶ್ಲೇಷಿಸಿ ನೋಡಿದರೆ ಈಶ್ವರಪ್ಪನವರ ಈ ನಡೆಯ ಹಿಂದೆ ಯಡಿಯೂರಪ್ಪನವರ ನಾಗಾಲೋಟಕ್ಕೆ ತಡೆಯೊಡ್ಡಲು ಸಂಘಪರಿವಾರ ನಡೆಸುತ್ತಿರುವ ಚಾಣಕ್ಯ ನಡೆಯ ಒಂದು ಭಾಗವೇ ಈಶ್ವರಪ್ಪನವರ ಹಿಂದ ಚಳುವಳಿಯ ಮಾತುಗಳು. ಯಾಕೆಂದರೆ ಲಿಂಗಾಯಿತರ ಮತಬ್ಯಾಂಕಿನ ಏಕೈಕ ಕಾರಣಕ್ಕೆ ಮತ್ತು ಮುಂದಿನ ವಿದಾನಸಭಾ ಚುನಾವಣೆಗಳಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ಯಡಿಯೂರಪ್ಪನವರಿಗೆ ರಾಜ್ಯಾದ್ಯಕ್ಷ ಪದವಿ ನೀಡಿದ ಬಾಜಪದ ಹೈಕಮ್ಯಾಂಡ್, ಇದೀಗ ಕೈ ಕೈ ಹಿಚುಕಿಕೊಳ್ಳುವ ಸನ್ನಿವೇಶ ನಿಮಾಣವಾಗಿದೆ. ಯಾಕೆಂದರೆ ಅದ್ಯಕ್ಷ ಪದವಿ ದೊರೆತ ತಕ್ಷಣವೇ ಯಡಿಯೂರಪ್ಪನವರ ರಾಜಾಕಾರಣದ ನಡೆಗಳೇ ಬದಲಾಗಿತ್ತು. ಉಳಿದೆಲ್ಲ ರಾಜ್ಯಮಟ್ಟದ ನಾಯಕರುಗಳನ್ನು ಪಕ್ಕಕ್ಕೆ ಸರಿಸಿ ತಮ್ಮ ಬೆಂಬಲಿಗರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುವ ಅವರ ಆಸೆಗೆ ಅನುಗುಣವಾಗಿಯೇ ಪದಾಧಿಕಾರಿಗಳ ಪಟ್ಟಿ ತಯಾರಾಗಿತ್ತು. ಜೊತೆಗೆ ಮುಂದಿನ ವಿದಾನಸಭೆಗೆ ಟಿಕೇಟು ನೀಡುವಾಗ ತಮ್ಮ ಬೆಂಬಲಿಗರಿಗೆ ಹೆಚ್ಚು ಸ್ಥಾನ ದೊರೆಯತುವಂತೆ ಮಾಡಲು ಸಹ ಈ ಪದಾಧಿಕಾರಿಗಳ ಪಟ್ಟಿ ಸಹಾಯಕವಾಗುವಂತಿತ್ತು. ಯಡಿಯೂರಪ್ಪನವರ ಈ ಮಹತ್ವಾಕಾಂಕ್ಷೆಯನ್ನು ಸಂಘಪರಿವಾರವಾಗಲಿ, ಬಾಜಪದ ಹೈಕಮ್ಯಾಂಡ್ ಅಮಿತ್ ಷಾ ಅಥವಾ ಪ್ರದಾನಮಂತ್ರಿ ನರೇಂದ್ರರ ಮೋದಿಯವರಾಗಲಿ ಸಹಿಸುವ ಪರಿಸ್ಥಿತಿಯಲ್ಲಿ ಇಲ್ಲ. ತನಗಿಂತ ದೊಡ್ಡದಾಗಿ ಬೆಳೆಯುವ ಯಾವ ನಾಯಕನನ್ನೂ ಸಂಘಪರಿವಾರ ಸಹಿಸುವುದಿಲ್ಲ. ಇನ್ನು ಕೇಂದ್ರದಲ್ಲಿಯೂ ಇದೇ ಮನಸ್ಥಿತಿ ಇದೆ. ಅಮಿತ್ ಷಾ ಮತ್ತು ಮೋದಿ ಜೋಡಿ ತಮಗಿಂತ ಗಟ್ಟಿಯಾಗಿ ಬೆಳೆಯುವ ಯಾವ ಪ್ರಾದೇಶಿಕ ನಾಯಕನನ್ನೂ ಅದು ಸಹನೆಯಿಂದ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಅವರು ರಾಜಸ್ಥಾನದ ಮುಖ್ಯಮಂತ್ರಿ ವಸುಂದರರಾಜ್ ಅವರ ವಿರುದ್ದ ಭಿನ್ನಮತೀಯ ದ್ವನಿಗಳನ್ನು ಬೆಂಬಲಿಸಿದ್ದರು ಆದರೆ ರಾಜ್ಯದ ಶಾಸಕರುಗಳನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದ ವಸುಂದರರಾಜೆ ಭಿನ್ನಮತವನ್ನು ಹತ್ತಿಕ್ಕಿ ಮುಂದುವರೆಯುತ್ತಿದ್ದಾರೆ, ಇನ್ನು ಮದ್ಯಪ್ರದೇಶದಲ್ಲಿ ಅದ್ವಾನಿಯವರ ಬೆಂಬಲಿಗರಾದ ಶಿವರಾಜಸಿಂಗ್ ಸಹ ಸ್ಥಳೀಯವಾಗಿ ಬಲಾಢ್ಯರಾಗಿದ್ದು ಅಲ್ಲಿ ಷಾ-ಮೋದಿ ಜೋಡಿಗೆ ಮಾನ್ಯತೆಯಿಲ್ಲದಂತಾಗಿದೆ. ಈ ಕಾರಣಗಳಿಂದಾಗಿಯೇ ಮಹಾರಾಷ್ಟ್ರ, ಗುಜರಾತ್, ಗೋವಾ, ಅಸ್ಸಾಮಿನಲ್ಲಿ ಮುಖರಹಿತವಾದ, ಹೊಸನಾಯಕರುಗಳನ್ನು, ತಮಗೆ ಬೇಕಾದವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿರುವುದು. ಹಾಗಾಗಿ ಮುಂದೆ ಯಡಿಯೂರಪ್ಪನವರು ರಾಜಕೀಯವಾಗಿ ಬಲಾಢ್ಯರಾಗಿ ಬಿಡುತ್ತಾರೆಂಬ ಕಾರಣದಿಂದಲೇ ಅವರನ್ನು, ಅವರ ಓಟವನ್ನು ತಡೆಹಿಡಿಯುವ ದೃಷ್ಠಿಯಿಂದಲೇ ಈಶ್ವರಪ್ಪನವರ ಕೈಲಿ ಹಿಂದ ಚಳುವಳಿಯ ಮಾತಾಡಿಸುತ್ತ, ಬಾಜಪಕ್ಕೆ ಹಿಂದ ವರ್ಗದವರ ಬೆಂಬಲವು ಇದ್ದು ಲಿಂಗಾಯಿತರ ಮತವಷ್ಟೇ ಅನಿವಾರ್ಯವಲ್ಲ ಎಂಬುದನ್ನು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತಿದೆ. ಇಂತಹ ಕಾರಣದಿಂದಲೇ ಸ್ವತ: ಯಡಿಯೂರಪ್ಪನವರೇ ಸಿದ್ದಪಡಿಸಿ ಕಳಿಸಿದ್ದ ಕೋರ್ ಕಮಿಟಿಯನ್ನು ಸಹ ಹೈಕಮ್ಯಾಂಡ್ ತನಗಿಷ್ಟಬಂದಂತೆ ಸರಿಪಡಿಸಿ ಕಳಿಸಿ, ಯಡಿಯೂರಪ್ಪನವರಿಗೆ ಒಂದು ಎಚ್ಚರಿಕೆಯನ್ನೂ ನೀಡಿದೆ.

ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಯಡಿಯೂರಪ್ಪನವರ ಯೋಜನೆಯನ್ನು ತಡೆಹಿಡಿಯಲು ಸಂಘಪರಿವಾರ ಇಂತಹದೊಂದು ತಂತ್ರಗಾರಿಕೆ ಹೆಣೆದಿದ್ದು, ಸದ್ಯ ಈಶ್ವರಪ್ಪನವರು ಅದರ ಯಾಗದ ಕುದುರೆಯಾಗಿದ್ದಾರೆ. ಇದನ್ನು ಅರಿತೊ ಅರಿಯದೆಯೋ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ದದ ತಮ್ಮ ಹಿಂದ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ. ಪಕ್ಷದೊಳಗಿರುವ ವಿವಿದ ಮೋರ್ಚಾಗಳನ್ನು ಬಳಸಿಕೊಂಡು ಈಶ್ವರಪ್ಪನವರು ಹೋರಾಟಮಾಡಲೆಂಬ ಯಡಿಯೂರಪ್ಪನವರ ಮಾತಿಗೆ ಈಶ್ವರಪ್ಪನವರು ತಲೆ ಕೆಡಿಸಿಕೊಳ್ಳದೆ, ಸೆಪ್ಟೆಂಬರ್ ತಿಂಗಳ 21ನೇ ತಾರೀಖು ಹಾವೇರಿಯಲ್ಲಿ ಹಿಂದ ಸಮಾವೇಶ ಮಾಡುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಇದೀಗ ಮೌನವಾಗಿರುವಂತೆ ಕಾಣುತ್ತಿರುವ ಯಡಿಯೂರಪ್ಪನವರು ಅಷ್ಟು ಸುಲಭಕ್ಕೆ ಈ ತಂತ್ರಗಳಿಗೆ ಮಣಿಯುವವರಲ್ಲ.

ಈಶ್ವರಪ್ಪನವರ ಹಿಂದ ಚಳುವಳಿಯ ತಂತ್ರಗಾರಿಕೆಯಲ್ಲಿ ಅ ಅಂದರೆ ಅಲ್ಪಸಂಖ್ಯಾತರನ್ನು ಬಿಡಲಾಗಿದ್ದು, ಇದು ಸಂಘಪರಿವರದ ಪ್ರಾಯೋಜಿತ ಚಳುವಳಿ ಎನ್ನುವುದನ್ನು ಇದೊಂದೇ ತೋರಿಸುತ್ತದೆ. ಅಲ್ಲದೆ ಸಿದ್ದರಾಮಯ್ಯನವರಷ್ಟು ಜನಬೆಂಬಲವಿರದ ಈಶ್ವರಪ್ಪನವರು ಯಡಿಯೂರಪ್ಪನವರನ್ನು ಹಣಿಯುವ ಮತ್ತು ತಮ್ಮನ್ನು ಪಕ್ಷದೊಳಗೆ ಗಟ್ಟಿ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದಲೇ ಹಿಂದವನ್ನು ಬಳಸಿಕೊಳ್ಳುತ್ತಿರುವುದು ಸ್ವತ: ಹಿಂದ ವರ್ಗಗಳಿಗೆ ಗೊತ್ತಾಗಿದೆ. ಯಾಕೆಂದರೆ ಇದೀಗ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಅವರ ಸಚಿವ ಸಂಪುಟದಲ್ಲಿ ಹಿಂದುಳಿದ ಮತ್ತು ದಲಿತ ವರ್ಗದವರುಗಳೇ ಬಹುಮುಖ್ಯವಾದ ಖಾತೆಗಳನ್ನು ಹೊಂದಿದ್ದಾರೆ. ಜೊತೆಗೆ ಅಲ್ಪಸಂಖ್ಯಾತರಿಗೂ ಸಾಠಕಷ್ಟು ಪ್ರಾತಿನಿದ್ಯ ದೊರೆತಂತಾಗಿದೆ. ಪರಿಸ್ಥಿತಿ ಹೀಗಿರುವಾಗ, ಸ್ವತ: ಅಹಿಂದ ವರ್ಗಗಳೇ ಅಧಿಕಾರ ಅನುಭವಿಸುತ್ತಿರುವಾಗ ಮತ್ತೆ ಹಿಂದ ವರ್ಗಗಳ ಅಭಿವೃದ್ದಿಗಾಗಿ ಈ ಚಳುವಬಳಿ ಎನ್ನುವ ಈಶ್ವರಪ್ಪನವರ ಮಾತು ಚಟುವಟಿಕೆಗಳು ಹಾಸ್ಯಾಸ್ಪದವಾಗಿವೆ.

Aug 22, 2016

ಆಜಾದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
22/08/2016
ಆಜಾದಿ ಬೇಕೆಂದೆ.
ಯಾವುದರಿಂದ ಎಂದು ಕೇಳಿದ್ದರೆ ಹೇಳಬಹುದಿತ್ತು:
ನಿಮ್ಮ ಸನಾತನ ಧರ್ಮದ ವರ್ಣವ್ಯವಸ್ಥೆಯಿಂದ
ನಿಮ್ಮ ಜಾತಿ ವೈಷಮ್ಯದ ಕ್ರೂರತೆಯಿಂದ
ನಿಮ್ಮ ಸಿರಿವಂತಿಕೆಯ ತೆವಲಿನ ಶೋಷಣೆಯಿಂದ
ನಿಮ್ಮ ಅಧಿಕಾರದ ಅಮಲಿನಿಂದ ನಡೆಸುವ ದಬ್ಬಾಳಿಕೆಯಿಂದ
ನಿಮ್ಮ ದೊಡ್ಡಸ್ತಿಕೆಯ ದೌರ್ಜನ್ಯದಿಂದ.
ಅವರದೇನನ್ನೂ ಕೇಳಲಿಲ್ಲ
ಮರುಮಾತಾಡದೆ ದೇಶದ್ರೋಹಿಯ ಪಟ್ಟ ಕಟ್ಟಿದರು
ಸಾರ್ವಜನಿಕ ವೃತ್ತದಲಿ ನೇಣುಗಂಬವನೊಂದ ನೆಟ್ಟು
ನಮ್ಮನ್ನೆಲ್ಲ ಸರತಿಯ ಸಾಲಲ್ಲಿ ನಿಲ್ಲಿಸಿದರು.

ಎಲ್ಲ ಮುಗಿದಾದ ಮೇಲೆ-
ನ್ಯಾಯಾಧೀಶರೊಬ್ಬರನ್ನು ಕರೆತಂದು ವಿಚಾರಣೆ ಮಾಡಿಸಲಾಯಿತು.
ಶಿಕ್ಷೆಯನ್ನು ಊರ್ಜಿತಗೊಳಿಸಲಾಗಿದೆಯೆಂದು ಷರಾ ಬರೆಯಲಾಯಿತು
ಇದೀಗ ಊರ ನೆತ್ತಿಯ ತುಂಬಾ ಹದ್ದುಗಳ ಗಸ್ತು...
ಈಗ ದೇಶಭಕ್ತಿಗೆ ಹೊಸ ವ್ಯಾಖ್ಯಾನ ಬರೆಯಲಾಗಿದೆ
ಪ್ರಶ್ನೆಗಳನ್ನು ನಿಷೇಧಿಸಲಾಗಿದೆ.

ಈ ಕವಿತೆ ಬರೆದ ಕವಿಯ ಹುಡುಕಲಾಗುತ್ತಿದೆ
ಹುಡುಕಿಕೊಡುವವರಿಗೆ ಬಹುಮಾನ ಘೋಷಿಸಲಾಗಿದೆ.
(ದೇಶದ್ರೋಹದ ಬಗ್ಗೆ ಮತ್ತೆಂದಾದರು ಬರೆಯಲಾಗುವುದು!)

Aug 19, 2016

ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಕಳಪೆ ಸಾಧನೆಯ ಹಿಂದಿನ ನಗ್ನಸತ್ಯಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
19/08/2016

ಒಲಂಪಿಕ್ಸ್ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಾಗ ನಮ್ಮ ದೇಶದ ಕ್ರೀಡಾಪಟುಗಳ ಕಳಪೆ ಸಾಧನೆಗಳ ಬಗ್ಗೆ ಜೋರುದನಿಯ ಚರ್ಚೆಗಳ ಜೊತೆಜೊತೆಗೆ ಕ್ರೀಡಾಪಟುಗಳನ್ನು, ಕ್ರೀಡಾವ್ಯವಸ್ಥೆಯನ್ನು ಟೀಕಿಸುವುದು ನಮ್ಮ ಸಂಪ್ರದಾಯವಾಗಿ ಬಿಟ್ಟಿದೆ. ಬಹುಶ: ಸ್ವಾತಂತ್ರ ದೊರೆತ ಇಷ್ಟು ವರ್ಷಗಳ ನಂತರವೂ ನಾವು ಪರಸ್ಪರ ದೋಷಾರೋಪಣೆಯಲ್ಲಿ ಮುಳುಗಿದ್ದೇವೆಯೇ ಹೊರತು ನಮ್ಮ ವೈಫಲ್ಯಗಳಿಗಿರಬಹುದಾದ ಕಾರಣಗಳನ್ನು ಹೆಕ್ಕಿ ತೆಗೆದು ಪರಿಹಾರ ಕಂಡು ಕೊಳ್ಳುವ ಪ್ರೌಢಿಮೆಯನ್ನು ತೋರಿಲ್ಲ. ಆ ನಿಟ್ಟಿನಲ್ಲಿ ನನಗೆ ಕಂಡುಬಂದ ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ:

ನಮ್ಮ ಕ್ರೀಡಾವೈಫಲ್ಯಕ್ಕೆ ಕಾರಣಗಳು:

1. ಕ್ರೀಡಾಸಂಸ್ಕೃತಿಯ ಕೊರತೆ:

ನನಗನ್ನಿಸುವಂತೆ ನಮ್ಮ ಕ್ರೀಡಾವೈಫಲ್ಯಕ್ಕೆ ಬಹುಮುಖ್ಯ ಕಾರಣವೆಂದರೆ ಇದೆ! ಯಾಕೆಂದರೆ ಬೇರೆ ಹಲವು ರಾಷ್ಟ್ರಗಳಲ್ಲಿರುವಂತೆ ಕ್ರೀಡೆಗಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆಯಲು ನಾವು ಅವಕಾಶ ಕೊಟ್ಟಿಲ್ಲ. ಮೊದಲು ಬಡರಾಷ್ಟ್ರವಾಗಿದ್ದು, ಇದೀಗ ಅಭಿವೃದ್ದಿಶೀಲರಾಷ್ಟ್ರದ ಮಿತಿಯನ್ನು ದಾಟಿ ಬಲಿಷ್ಠ ಆರ್ಥಿಕ ಶಕ್ತಿಯಾಗುವ ದಿಸೆಯಲ್ಲಿ ದಾಪುಗಾಲು ಹಾಕುತ್ತಿರುವ ನಾವಿವತ್ತಿಗೂ ಕ್ರೀಡೆಗಳನ್ನು ಸಮಯ ಕಳೆಯುವ ಮತ್ತು ವ್ಯರ್ಥ ಮನೋರಂಜನೆಯ ಭಾಗವನ್ನಾಗಿ ಮಾತ್ರ ನೋಡುತ್ತಿದ್ದೇವೆ. ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ ಎಪ್ಪತ್ತು ಜನರು ಹಳ್ಳಿಗಳಲ್ಲಿ ವಾಸವಿದ್ದು ಕೃಷಿಯನ್ನು, ಕೃಷಿಯಾಧಾರಿತ ಕಸುಬುಗಳನ್ನು ಅವಲಂಬಿಸಿಯೇ ಬದುಕುತ್ತಿದ್ದಾರೆ. ಅವರ ದೈನಂದಿನ ಚಟುವಟಿಕೆಗಳು ಶುರುವಾಗುವುದೇ ಅವತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ. ಹಾಗಾಗಿ ಅಂತಲ್ಲಿನ ಬಹುತೇಕ ಪೋಷಕರ ಮುಖ್ಯ ಗುರಿ ತಮ್ಮ ಮಕ್ಕಳನ್ನು ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸಿ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಬದುಕುತ್ತಿರುವ ಅವರಿಗೆ ಕ್ರೀಡೆಗಳು ವ್ಯರ್ಥ ಸಮಯ ಕಳೆಯುವ ಸಾದನಗಳೆಂದು ಅನಿಸಿದ್ದರೆ ಅವರ ತಪ್ಪೇನು ಇಲ್ಲ. ಇನ್ನು ನಮ್ಮ ಸರಕಾರಗಳು ಏನೇ ಬಡಾಯಿ ಕೊಚ್ಚಿಕೊಂಡರೂ ಗ್ರಾಮೀಣ ಭಾಗದ ಶೇಕಡಾ 60ರಷ್ಟು ಶಾಲೆಗಳಲ್ಲಿ ಇವತ್ತಿಗು ದೈಹಿಕ ಶಿಕ್ಷಕರುಗಳಿಲ್ಲ. ಅಕಸ್ಮಾತ್ ಇದ್ದರೂ ಮಕ್ಕಳಿಗೆ ಆಟವಾಡಲು ಬೇಕಾದ ಕ್ರೀಡಾ ಸಲಕರಣೆಗಳೇ ಇರುವುದಿಲ್ಲ. ಹಾಗಾಗಿ ಬಹುತೇಕ ಹಳ್ಳಿಗಳಲ್ಲಿ ಆಟದ ಸಮಯದಲ್ಲಿ ಜೂಟಾಟ, ಕೋಕೋಗಳನ್ನು, ಕಬಡ್ಡಿಯನ್ನು ಮಾತ್ರ ಆಡಿಸುವುದನ್ನು ಕಾಣಬಹುದಾಗಿದೆ.ನಮ್ಮ ದುರದೃಷ್ಟವೆಂದರೆ ಜೂಟಾಟ ಮತ್ತು ಖೋಖೋಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಸುವುದಿಲ್ಲವೆನ್ನುವುದಾಗಿದೆ. ಶಾಲೆಗಳಲ್ಲಿ ಹೆಚ್ಚೆಂದರೆ ನಮ್ಮ ಹೆಣ್ಣಮಕ್ಕಳಿಗೆ ಆಡಲು ಒಂದು ರಿಂಗ್ ಅನ್ನು ಅಥವಾ ಒಂದು ಥ್ರೋಬಾಲ್ ನೀಡಲಾಗಿರುತ್ತದೆ. ಇಷ್ಟಲ್ಲದೆಶಾಲೆಗಳಲ್ಲಿ ಪ್ರತಿದಿನಕ್ಕೆ ಎಂಟು ಪಿರಿಯಡ್ಗಳಿದ್ದರೆ ಆಟಕ್ಕೆಂದು ಕೇವಲ ಒಂದು ಪಿರಿಯಡ್ ಇದ್ದು ಅದನ್ನೂ ಸಂಜೆ ಶಾಲೆ ಬಿಡುವ ಮುಂಚೆ ನಿಗದಿ ಪಡಿಸಲಾಗಿರುತ್ತದೆ. ಆಗ ಎಲ್ಲಾ ತರಗತಿಯ ಮಕ್ಕಳೂ ಒಮ್ಮೆಲೆ ಮೈದಾನಕ್ಕೆ ನುಗ್ಗುವುದರಿಂದ ಯಾವ ಆಟವನ್ನೂ ಏಕಾಗ್ರತೆಯಿಂದ ಕಲಿಯಲಾಗಲಿ ಆಡಲಾಗಲಿ ಸಾದ್ಯವಿಲ್ಲ. ಇದರ ಜೊತೆಗೆ ಬೆಳೆಗ್ಗೆಯಿಂದ ಅಭ್ಯಾಸದಲ್ಲಿ ಸುಸ್ತಾಗಿ ಮನೆಗೆ ಮರಳುವ ಅವಸರದಲ್ಲಿರುವ ಮಕ್ಕಳಿಗೆ ಆಟಗಳ ಬಗ್ಗೆ ಆಟದಲ್ಲಿ ಆಸಕ್ತಿ ಇರುವುದಿಲ್ಲ. ಜೊತೆಗೆ ದೂರದ ಹಳ್ಳಿಗಳಿಂದ ಶಾಲೆಗೆ ಬರುವ ಮಕ್ಕಳು-ಮುಖ್ಯವಾಗಿ ಹೆಣ್ಣುಮಕ್ಕಳು- ಕತ್ತಲಾಗುವುದರ ಒಳಗೆ ನಡೆದುಕೊಂಡು ಮನೆ ಸೇರಬೇಕಿರುವುದರಿಂದ ಅವರುಗಳು ಸಹ ಸಕ್ರಿಯವಾಗಿ ಕ್ರೀಡೆಗಳಲ್ಲಿ ಬಾಗವಹಿಸಲಾರರು. ಪ್ರೌಢಶಾಲೆಯ ಹಂತದ ಕೊನೆಯವರೆಗೆ ಬರುವ ತನಕವೂ ನಮ್ಮ ಮಕ್ಕಳಿಗೆ ಕ್ರೀಡೆಯ ನೈಜಮಹತ್ವ ತಿಳಿಯುವುದೇ ಇಲ್ಲ. ಹಾಗೆ ಅವರಿಗೆ ತಿಳಿದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಹೊತ್ತಿಗೆ ಅವರ ಶಿಕ್ಷಣ ಮುಗಿಯುತ್ತ ಬಂದಿರುತ್ತದೆ. ಇನ್ನು ನಾನು ಮೊದಲೇ ಹೇಳಿದಂತೆ ನಮ್ಮ ಪೋಷಕರಿಗೆ ಕ್ರೀಡೆಗಿಂತ ದೈನಂದಿನ ಬದುಕೇ ಮುಖ್ಯವಾಗಿದ್ದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಬ್ಯಾಸವಿಲ್ಲವಾಗಿದೆ.

2. ಮೂಲ ಸೌಕರ್ಯಗಳ ಕೊರತೆ:

ಸರಕಾರದ ಬೇರೆಲ್ಲ ಕ್ಷೇತ್ರಗಳಂತೆಯೇ ಇಲ್ಲಿಯೂ ಮೂಲಸೌಕರ್ಯಗಳ ಕೊರತೆಯಿದೆ. ಮೊದಲೇ ಹೇಳದಂತೆ ಬಹಳಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಕರುಗಳೇ ಇರುವುದಿಲ್ಲ. ಒಂದೊಮ್ಮೆ ಇದ್ದರೂ ಮಕ್ಕಳಿಗೆ ಆಟದ ಮೈದಾನವೇ ಇರುವುದಿಲ್ಲ. ಇನ್ನು ಕ್ರೀಡಾ ಉಪಕರಣಗಳ ಬಗ್ಗೆ ನೋಡಿದರೆ ಎಷ್ಟೊ ವರ್ಷಕ್ಕೊಮ್ಮೆ ಸರಕಾರ ಪೂರೈಸುವ ಸಲಕರಣೆಗಳು ಸಹ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಇನ್ನು ಈಗಾಗಲೇ ಕರ್ತವ್ಯ ನಿರ್ವಹಿಸುವ ದೈಹಿಕ ಶಿಕ್ಷಕರುಗಳಿಗೆ ಆಧುನಿಕವಾಗಿ, ವೈಜ್ಞಾನಿಕ ರೀತಿಯಲ್ಲಿ ಕ್ರೀಡಾಳುಗಳನ್ನು ತಯಾರು ಮಾಡುವ ಕುರಿತಂತೆ ತರಬೇತಿಗಳನ್ನು ಆಗಿಂದ್ಹಾಗೆ ನೀಡಲಾಗುತ್ತಿಲ್ಲ. ಇನ್ನು ಶಾಲೆಗಳಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯೂ ಲಭ್ಯವಿರುವುದಿಲ್ಲ. ಇದಕ್ಕೆ ಪೂರಕವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ನಮ್ಮ ಮಕ್ಕಳ ದೈಹಿಕ ಶಕ್ತಿಯು ಅಷ್ಟಕ್ಕಷ್ಟೇ ಇರುತ್ತದೆ.ಇನ್ನು ನಮ್ಮ ಸರಕಾರಗಳು ಆಯವ್ಯಯದಲ್ಲಿ ಕ್ರೀಡೆಗಳಿಗಾಗಿ ಮೀಸಲಿರಿಸುವ ಅನುದಾನದ ಮೊತ್ತ ಒಟ್ಟು ಆಯವ್ಯಯದ ಶೇಕಡಾ 2 ಅನ್ನು ದಾಟುತ್ತಿಲ್ಲ.

3. ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳ, ಜೀವನ ಭದ್ರತೆಯ ಗ್ಯಾರಂಟಿ ಇಲ್ಲದಿರುವುದು.

ತನ್ನ ಮಗುವೊಂದು ಕ್ರೀಡಾಪಟುವಾಗಿ ಒಂದು ಹಂತದವರೆಗು ಯಶಸ್ಸಿನತ್ತ ಹೋದರೆ ಅವನಿಗೊಂದು ಉದ್ಯೋಗ ದೊರೆತು ಆತನ ಬದುಕು ನೆಲೆ ಕಾಣುತ್ತದೆಯೆಂಬ ಯಾವ ಭರವಸೆಯೂ ನಮ್ಮ ಪೋಷಕರಿಗೆ ಇಲ್ಲದಿರುವುದು ಸಹ ಮಕ್ಕಳನ್ನು ಕ್ರೀಡೆಗೆ ಕಳಿಸಲು ಹಿಂಜರಿಯಲಿರುವ ಒಂದು ಮುಖ್ಯ ಕಾರಣವಾಗಿದೆ. ಸರಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಈಗಿರುವ ಮೀಸಲಾತಿಯ ಪ್ರಮಾಣ ಬಹಳ ಕಡಿಮೆಯಿದ್ದು ಅದೂ ಕೂಡ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗಷ್ಟೆ ಮೀಸಲಾಗಿದೆ. ಇರುವ ಆ ಅಲ್ಪ ಮೀಸಲಾತಿಯನ್ನೂ ಕ್ರಿಕೇಟಿನಂತಹ ಜನಪ್ರಿಯ ಹಾಗು ಶ್ರೀಮಂತ ಆಟಗಳೇ ನುಂಗಿ ಹಾಕುತ್ತಿರುವುದು ಮತ್ತೊಂದು ವಿಪರ್ಯಾಸ. ಇನ್ನು ನಮ್ಮ ಖಾಸಗಿ ಉದ್ಯಮಗಳು ಕ್ರಿಕೇಟ್ ಮತ್ತು ಹಾಕಿಯನ್ನು ಹೊರತು ಪಡಿಸಿದಂತೆ ಬೇರಿನ್ನಾವ ಕ್ರೀಡೆಗಳ ಬಗ್ಗೆಯೂ ಆಸಕ್ತಿ ತೋರದೆ ಇರುವುದು. ಉಳಿದ ಕ್ರೀಡೆಗಳ ಆಟಗಾರರಿಗೆ ಕೆಲಸ ನೀಡುವ ಮಾತು ದೂರದ್ದಾಯಿತು. ಹೀಗೆ ಯಾವುದೇ ರೀತಿಯ ಬದುಕಿನ ಭದ್ರತೆಯಿಲ್ಲದ ಕ್ರೀಡೆಯನ್ನು ತಮ್ಮ ಮಕ್ಕಳು ವೃತ್ತಿಪರವಾಗಿ ತೆಗೆದುಕೊಳ್ಳುವುದನ್ನು ಯಾವ ಪೋಷಕರೂ ಆಶಿಸುವುದಿಲ್ಲ. ಇನ್ನು ಬೇರೇ ಉದ್ಯೋಗದಲ್ಲಿರುವವರು ತಮ್ಮ 60ನೇ ವಯಸ್ಸಿಗೆ ನಿವೃತ್ತರಾಗಿ ಪಿಂಚಣಿಯ ಸೌಲಭ್ಯ ಪಡೆದರೆ ಕ್ರೀಡಾಪಡುಗಳು ತಮ್ಮ 30ರಿಂದ 40ನೇ ವಯಸ್ಸಿನ ಒಳಗೇ ನಿವೃತ್ತಿಯಾಗಬೇಕಿದ್ದು ನಂತರದಲ್ಲಿ ಅವರು ಜೀವನ ಸಾಗಿಸಲು ಕ್ರೀಡೆಯ ಭಾಗವಾದ ತರಭೇತಿದಾರರ ಅಥವಾ ಸಹಾಯಕರ ಕೆಲಸ ಮಾಡಬೇಕೇ ಹೊರತು ಬೇರಿನ್ನಾವ ಕೆಲಸಗಳೂ ಅವರಿಗೆ ದೊರೆಯುವುದು ಕಷ್ಟ. ಅದೂ ಅಲ್ಲದೆ ಕ್ರೀಡಾಬ್ಯಾಸದ ನೆಪದಲ್ಲಿ ಅವರ ಶಿಕ್ಷಣವೂ ಮೊಟಕಾಗಿರುತ್ತದೆ. ತರಭೇತುದಾರರ ಹುದ್ದೆಯೂ ಪ್ರಭಾವಶಾಲಿಗಳಿಗೆ ಬಿಟ್ಟರೆ ಎಲ್ಲರಿಗೂ ದೊರೆಯುವುದು ಕಷ್ಟ.

4. ಕ್ರೀಡಾ ಸಂಸ್ಥೆಗಳಲ್ಲಿನ ಭ್ರಷ್ಟಾಚಾರಗಳು ಮತ್ತು ರಾಜಕಾರಣಿಗಳ ಆಡಳಿತ.

ಬೇರೆಲ್ಲೆಡೆಯಂತೆ ನಮ್ಮ ಕ್ರೀಡಾ ಸಂಸ್ಥೆಗಳು ಸಹ ಭ್ರಷ್ಟಾಚಾರಗಳ ಕೂಪಗಳಾಗಿ ಪರಿಣಮಿಸಿವೆ.ನಮ್ಮ ದೇಶದ ಶೇಕಡಾ 60ರಷ್ಟು ಕ್ರೀಡಾಸಂಸ್ಥೆಗಳು ರಾಜಕಾರಣಿಗಳ ಹಿಡಿತದಲ್ಲಿಯೇ ಇದ್ದು, ಕ್ರೀಡಾಪಟುಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ.ಸದಾ ಯಾವುದಾದರು ಒಂದು ಅಧಿಕಾರದ ಕುರ್ಚಿಯಲ್ಲಿ ಕೂತಿರಬೇಕೆಂದು ಬಯಸುವ ನಮ್ಮ ರಾಜಕಾರಣಿಗಳು ತಮ್ಮ ಪ್ರಭಾವ, ಸಂಪರ್ಕ, ಹಣ ಬಳಸಿ ಕ್ರೀಡಾಸಂಸ್ಥೆಗಳ ಮುಖ್ಯಸ್ಥರ ಹುದ್ದೆಯಲ್ಲಿ ಕೂರುತ್ತಾರೆ. ತಾವು ಖರ್ಚು ಮಾಡಿದ ಹಣವನ್ನು ಪಡೆಯಲು ಮತ್ತು ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ವಾಮಮಾರ್ಗಗಳನ್ನು ಅನುಸರಿಸುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ.

5. ಕ್ರೀಡೋಪಕರಣಗಳ ದುಬಾರಿ ವೆಚ್ಚ:

ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಪಯೋಗಿಸುವ ಕ್ರೀಡೋಪಕರಣಗಳು ಬಹಳ ದುಬಾರಿಯಾಗಿದ್ದು ಭಾರತೀಯ ಆಟಗಾರರಿಗೆ ಅವು ದುರ್ಲಬವಾಗಿವೆ. ಜೊತೆಗೆ ಕ್ರೀಡಾಪಡುಗಳ ದೈಹಿಕ ಶಕ್ತಿಗೆ ಬೇಕಾದ ವಿಶೇಷ ಔಷದಿಗಳು,ಪಾನೀಯಗಳು ಸಹ ನಮ್ಮ ಆಟಗಾರರಿಗೆ ಎಟುಕದ ಬೆಲೆ ಹೊಂದಿವೆ.

6.ಅಲ್ಪಸಂಬಾವನೆ:

ಇನ್ನು ಕ್ರಿಕೇಟ್ ಹೊರತು ಪಡಿಸಿದರೆ ಉಳಿದ ಕ್ರೀಡಾಪಟುಗಳಿಗೆ ದೊರೆಯುವ ಸಂಬಾವನೆಯೂ ತೀರಾ ಅಲ್ಪಪ್ರಮಾಣದ್ದಾಗಿದೆ. ಇಂಡಿಯಾವು ವಿಶಾಲವಾದ ರಾಷ್ಟ್ರವಾಗಿದ್ದು ಇಲ್ಲಿ ಒಂದು ಪ್ರದೇಶದಿಂದ ಕ್ರೀಡಾಕೂಟ ನಡೆಯುವ ಇನ್ನೊಂದು ಪ್ರದೇಶಕ್ಕೆ ದುಬಾರಿ ಪ್ರಯಾಣವೆಚ್ಚವಿದ್ದು ಬಹಳಷ್ಟು ಸರಿ ಆಟಗಾರರೇ ಭರಿಸಬೇಕಾದ ಸ್ಥಿತಿಯಿದೆ.

7. ವೈಯುಕ್ತಿಕ ಪ್ರಾಯೋಜಕರ ಕೊರತೆ:

ಬಹುತೇಕ ಕ್ರೀಡಾಪಟುಗಳಿಗೆ ವೈಯುಕ್ತಿಕವಾದ ಪ್ರಾಯೋಜಕರೇ ಸಿಗದಂತಹ ಸ್ಥಿತಿ ಇದ್ದು, ಆಸಕ್ತಿಯುಳ್ಳ ಕ್ರೀಡಾಪಟುಗಳು ಸಾಲಸೋಲ ಮಾಡಿ ಕ್ರೀಡಾಕೂಟಗಳಲ್ಲಿ ಬಾಗವಹಿಸಬೇಕಾದ ಪರಿಸ್ಥಿತಿ ಇದೆ.

8. ವೈಜ್ಞಾನಿಕ ತರಭೇತಿ ಮತ್ತು ವೈಥದ್ಯಕೀಯ ಸಹಾಯದ ಕೊರತೆ:

ಇವತ್ತು ವಿಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದ್ದು, ಕ್ರೀಡೆಗಳು ಸಹ ಅದರ ಪ್ರಭಾವಕ್ಕೆ ಒಳಗಾಗಿವೆ. ಕ್ರೀಡಾಪಟುಗಳ ತರಭೇತಿಯನ್ನು ವೈಜ್ಞಾನಿಕವಾಗಿ ನೀಡುವ ಹಲವಾರು ವಿದಾನಗಳನ್ನು ವಿಶ್ವದ ಅನೇಕ ದೇಶಗಳು ಅಳವಡಿಸಿಕೊಂಡಿವೆ. ಕ್ರೀಡಾಪಟು ಒಬ್ಬನನ್ನು ವೈಜ್ಞಾನಿಕವಾಗಿ ತಯಾರು ಮಾಡುವ ದಿಸೆಯಲ್ಲಿ ನಾವು ಅಂತಹ ತರಭೇತಿ ಸಂಸ್ಥೆಗಳನ್ನು ಹುಟ್ಟುಹಾಕಲು ಮುಂದಾಗಿಯೇ ಇಲ್ಲ. ಅದೂ ಅಲ್ಲದೆ ಕ್ರೀಡಾಪಟುಗಳಿಗೆ ಆಧುನಿಕ ವೈದ್ಯಕೀಯ ಸವಲತ್ತುಗಳನ್ನು ಒದಗಿಸುವಲ್ಲಿಯೂ ನಾವು ಹಿಂದೆ ಬಿದ್ದಿದ್ದೇವೆ. ಹಾಗೆಯೇ ಕ್ರೀಡಾಪಟುಗಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕ್ರೀಡಾ ಮನೋವಿಜ್ಞಾನಿಗಳ ಕೊರತೆಯು ನಮ್ಮಲ್ಲಿದೆ. ಇವತ್ತು ವಿಶ್ವದ ತೀರಾ ಪುಟ್ಟ ರಾಷ್ಟ್ರಗಳು ಸಹ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ತೋರುತ್ತಿದ್ದು ಅದಕ್ಕಾಗಿ ಬೇಕಾದ ಎಲ್ಲ ಆಧುನಿಕ ಅವಿಷ್ಕಾರಗಳನ್ನೂ ಬಳಸಿಕೊಳ್ಳುತ್ತಿದ್ದರೆ ನಾವು ಆ ವಿಷಯದಲ್ಲಿ ಆಸಕ್ತಿಯನ್ನೇ ತೋರಿಸದೆ ಹಿಂದೆ ಬಿದ್ದಿದ್ದೇವೆ.

9. ಕ್ರೀಡಾಪಟುಗಳಲ್ಲಿ ವೃತ್ತಿಪರತೆಯ ಕೊರತೆ:

ಇಂಡಿಯಾದಂತ ರಾಷ್ಟ್ರಗಳಲ್ಲಿ ಕ್ರೀಡಾಪಟುವೊಬ್ಬ ಮಾಡುವ ಅಲ್ಪಸಾಧನೆಯೂ ಅಗಾಧವಾಗಿ ಬಿಂಬಿಸಲ್ಪಟ್ಟು ಅವನನ್ನು ತಾರಾಪಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗೆ ಮಾಧ್ಯಮಗಳಲ್ಲಿ ತಾರಾ ಪಟ್ಟ ಪಡೆದ ಆಟಗಾರರು ನಂತರದ ದಿನಗಳಲ್ಲಿ ಅಲ್ಪತೃಪ್ತರಂತೆ ತಮ್ಮ ಕ್ರೀಡಾವೃತ್ತಿಯನ್ನು ನಿರ್ಲಕ್ಷಿಸತೊಡಗುತ್ತಾರೆ. ಮಹತ್ವಾಕಾಂಕ್ಷೆಯ ಯಾವ ಮನೋಬಾವವನ್ನೂ ಅವರಲ್ಲಿ ನಾವು ಕಾಣಲು ಸಾದ್ಯವಿಲ್ಲ. ನಮ್ಮ ಬಹುತೇಕ ಕ್ರೀಡಾಪಟುಗಳು ಕ್ರೀಡೆಯನ್ನು ಹವ್ಯಾಸಿ ಮಟ್ಟದಲ್ಲಿಯೇ ನೋಡುವುದರಿಂದ ವೃತ್ತಿಪರ ಸಾಧನೆಯ ಅಗತ್ಯ ಅವರಿಗೆ ಇರದಂತಾಗಿದೆ. ಒಂದಷ್ಟು ಜನಪ್ರಿತೆ ದೊರೆತೊಡನೆ ಅವರಿಗೆ ದೊರೆಯುವ ಜಾಹಿರಾತುಗಳು ಮತ್ತಿತರೆ ಸೌಲಭ್ಯಗಳ, ಸಿರಿವಂತಿಕೆಯಲ್ಲಿ ಮೈಮರೆಯುವ ಕ್ರೀಡಾಪಟುಗಳು ಸಾಧನೆಯ ಉತ್ತುಂಗಕ್ಕೆ ತಲುಪಲು ಬೇಕಾದ ಏಕಾಗ್ರತೆಗಳನ್ನು ಕಳೆದುಕೊಳ್ಳುವುದು ಇಂಡಿಯಾದಲ್ಲಿ ಸಾಮಾನ್ಯವಾಗಿದೆ. ಕಳೆದ ಒಲಂಪಿಕ್ಷ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಸೈನಾ ನೆಹ್ವಾಲರಿಗೆ ದೊರೆತ ಅಬ್ಬರದ ಪ್ರಚಾರ, ಜಾಹಿರಾತುಗಳು ಆಕೆಯನ್ನು ಮತ್ತಷ್ಟು ಸಾಧನೆ ಮಾಡುವತ್ತ ಕರೆದೊಯ್ಯಬೇಕಾಗಿತ್ತು, ಆದರೆ ಹಾಗಾಲಿಲ್ಲ. ಇಂಡಿಯಾದ ಬಹಳಷ್ಟು ಕ್ರೀಡಾಪಟುಗಳ ವಿಷಯದಲ್ಲಿ ಹೀಗಾಗಿದೆ. ಸಾಧನೆಯ ಒಂದು ಹಂತದ ನಂತರ ಮತ್ತಷ್ಟು ಮುಂದುವರೆದು ವಿಶ್ವಮಟ್ಟಕ್ಕೇರುವ ಛಲವಾಗಲಿ, ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಯಾಗಲಿ ನಮ್ಮ ಕ್ರೀಡಾಪಟುಗಳು ತೋರಿಸುತ್ತಿಲ್ಲವೆಂಬುದು ಸಹ ನಿಜ.

10. ವಂಶವಾಹಿನಿಗಳ ಸಮಸ್ಯೆ:

ಕ್ರೀಡೆಗಳ ಕುರಿತಾದ ಭಾರತೀಯರ ಮನೋಬಾವನೆಯೂ ಇದಕ್ಕೆ ಕಾರಣ. ಇತ್ತೀಚೆಗಿನ ವೈಜ್ಞಾನಿಕ ಸಂಶೋದನೆಗಳ ಪ್ರಕಾರ ನಮ್ಮ ದೇಹರಚನೆಗಳು ಹಾಗು ಆಹಾರ ಪದ್ದತಿಗಳು ಕ್ರೀಡೆಗಳಿಗೆ ಪೂರಕವಾಗಿಲ್ಲವೆಂದು ಹೇಳಿವೆ. ಸಾವಿರಾರು ವರ್ಷಗಳಿಂದಲೂ ನಡೆಯುತ್ತ ಬಂದಿರುವ ಸ್ವಜಾತೀಯ ಮದುವೆಗಳಿಂದಾಗಿ ಭಾರತೀಯರ ವಂಶವಾಹಿನಿಯಲ್ಲಿ ಅನ್ಯ ಗುಂಪಿನೊಂದಿಗೆ ಕೊಟ್ಟು ಪಡೆಯುವ ಕ್ರಿಯೆಗಳ ನಡೆಯದೇ ಇರುವುದು ಸಹ ಭಾರತೀಯರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಮಾನಸಿಕ ಮತ್ತು ದೈಹಿಕ ಸ್ವರೂಪಗಳ ಕೊರತೆ ಉಂಟಾಗಲು ಕಾರಣವೆಂದೂ ಇತ್ತೀಚೆಗೆ ನಡೆದ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ.

11. ಮಾಧ್ಯಮಗಳ ನಿರಾಸಕ್ತಿ:

ಯಾವುದಾದರು ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಾಗಲಷ್ಟೆ ಕ್ರೀಡೆಗಳ ಬಗ್ಗೆ ಆಸಕ್ತಿ ತೋರಿಸಿ ಅವುಗಳನ್ನು ವರದಿ ಮಾಡುವ ನಮ್ಮ ಮಾಧ್ಯಮಗಳು, ಸ್ಥಳೀಯವಾಗಿ ನಡೆಯುವ ರಾಜ್ಯ ರಾಷ್ಟ್ರೀಯ ಕ್ರೀಡಾಕೂಟಗಳನ್ನು ನಾಮಕಾವಸ್ತೆಗಷ್ಟೇ ವರದಿ ಮಾಡಿ ಕೈ ತೊಳೆದು ಕೊಳ್ಳುತ್ತಿವೆ. ಕ್ರಿಕೇಟಿಗೆ ನೀಡುವ ಪ್ರಚಾರದಲ್ಲಿ ಶೇಕಡಾ ಒಂದರಷ್ಟನ್ನೂ ಇತರೇ ಕ್ರೀಡೆಗಳಿಗೆ ನೀಡದ ಮಾಧ್ಯಮಗಳು, ಒಲಂಪಿಕ್ಸ್ ಕೂಟದಲ್ಲಿ ಪದಕ ಬಾರದೇ ಇದ್ದಾಗ ಮಾತ್ರ ನಮ್ಮ ಕ್ರೀಡಾಪಟುಗಳನ್ನು, ಕ್ರೀಡಾ ವ್ಯವಸ್ಥೆಯನ್ನು ಹಿಗ್ಗಾಮುಗ್ಗಾ ಟೀಕಿಸುವ ಚಾಳಿ ಹೊಂದಿವೆ. ಇದೀಗ ಎಲೆಕ್ಟ್ರಾನಿಕ್ ಮಾಧ್ಯಮಗಳು ಬಂದಮೇಲೂ ಚಿತ್ರಣವೇನೂ ಬದಲಾಗಿಲ್ಲ. ನಮ್ಮ ಬಹುತೇಕ ಸುದ್ದಿ ವಾಹಿನಿಗಳಲ್ಲಿ ಇವತ್ತಿಗೂ ಕ್ರೀಡಾ ಸುದ್ದಿಗೆಂದು ಒಂದು ನಿಗದಿತ ಸಮಯವನ್ನು ಕಲ್ಪಿಸಿ ಕ್ರೀಡಾ ಸುದ್ದಿಗಳನ್ನು ಹೇಳುವ-ತೋರಿಸುವ ಪರಿಪಾಠ ಬೆಳೆಸಿಕೊಂಡಿಲ್ಲ.ಕ್ರಿಕೇಟ್ ಸರಣಿಗಳು ಇದ್ದಾಗ ಮಾತ್ರ ಆಟ ಪ್ರಾರಂಭವಾಗುವುದಕ್ಕೆ ಮೊದಲಿನ ಒಂದು ಗಂಟೆ ಅದರ ಬಗ್ಗೆ ವಿಶ್ಲೇಷಣಾ ಕಾರ್ಯಕ್ರಮಗಳನ್ನು ತೋರಿಸುವ ನಮ್ಮ ವಾಹಿನಿಗಳಿಗೆ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂಬ ಅರಿವಾಗಲಿ, ಆಶಯವಾಗಲಿ ಇಲ್ಲವಾಗಿದೆ.ಹಾದಿಬೀದಿಯ ಗಂಡಹೆಂಡತಿಯರ ಜಗಳಗಳನ್ನು ತೋರಿಸುವ ವಾಹಿನಿಗಳಿಗೆ ಕ್ರೀಡೆಗಳು ಸುದ್ದಿಯೆನಿಸುವುದೇ ಇಲ್ಲ. ಹೀಗಾಗಿ ನಮ್ಮ ಕ್ರೀಡೆಗಳಿಗೆ ಸಿಗಬೇಕಾದಷ್ಟು ಪ್ರಚಾರವಾಗಲಿ, ಪ್ರಸಾರದ ಸಮಯವಾಗಲಿ ದೊರೆಯುತ್ತಿಲ್ಲ. ಇವತ್ತಿಗೂ ನಮಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳ ತಾಜಾ ಮಾಹಿತಿ ಬೇಕೆಂದರೆ ಕ್ರೀಡಾಚಾನೆಲ್ಲುಗಳಿಗೆ ಹೋಗಿ ನೋಡಬೇಕಾದ ಸ್ಥಿತಿಯಿದೆ. ಸಾರ್ವಜನಿಕವಾಗಿ ಮನ್ನಣೆ ದೊರೆಯದೆ ಇರುವ ಕ್ರೀಡೆಗಳ ಬಗ್ಗೆ ಜನರು ಆಸಕ್ತಿ ತೋರಿಸದೇ ಇರುವುದಕ್ಕೆ ಇದೂ ಒಂದು ಕಾರಣ.

ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿಫಲವಾಗಿರುವುದಕ್ಕೆ ಹಲವಾರು ಕಾರಣಗಳಿವೆ. ನಮ್ಮೀ ವಿಫಲತೆಯಲ್ಲಿ ಸರಕಾರ, ಕ್ರೀಡಾವ್ಯವಸ್ಥೆ, ಮಾಧ್ಯಮಗಳು, ಜನತೆ ಹಾಗು ಸ್ವತ: ಕ್ರೀಡಾಪಟುಗಳು ಸಹ ಕಾರಣೀಭೂತರಾಗಿದ್ದಾರೆ. ಹಾಗಾಗಿ ನಮ್ಮ ವೈಫಲ್ಯಕ್ಕೆ ಯಾರೋ ಒಬ್ಬರನ್ನು, ಒಂದು ಕ್ಷೇತ್ರವನ್ನು ಬೆರಳು ಮಾಡಿ ತೋರಿಸುವುದು ಮೂರ್ಖತನವಾಗುತ್ತದೆ. 

ಮೇಕಿಂಗ್ ಹಿಸ್ಟರಿ: ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ (1800-1857)

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
19/08/2016
ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯ ತೀವ್ರತೆ ಜನರ ಕಡೆಯಿಂದ ಆ ತೀವ್ರತೆಯನ್ನು ಸರಿಗಟ್ಟುವ ಪ್ರತಿರೋಧವನ್ನು ಬಯಸಿತು. ಈ ಸತತ ಪ್ರತಿರೋಧವನ್ನು ಮತ್ತು ತನ್ನಾಡಳಿತಕ್ಕೆ ಎದುರಾಗುವವರನ್ನು ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳಿಂದ ದಮನಿಸುವುದರಿಂದಷ್ಟೇ ಬ್ರಿಟೀಷ್ ರಾಜ್ ತನ್ನ ಲೂಟಿಯ ಆಳ್ವಿಕೆಯನ್ನು ಉಳಿಸಿಕೊಳ್ಳಬಹುದಿತ್ತು. ಅದೆಷ್ಟೇ ಪ್ರಯತ್ನಿಸಿದರೂ, ಕರ್ನಾಟಕದ ಜನರು ಬ್ರಿಟೀಷ್ ವಸಾಹತುಶಾಹಿಗೆ ತಮ್ಮನುಕೂಲಕ್ಕೆ ಮತ್ತು ಶಾಂತಿಯಿಂದ ಲೂಟಿ ಮಾಡಲು ಅವಕಾಶ ನೀಡಲಿಲ್ಲ. 

ಹೈದರ್ ಮತ್ತು ಟಿಪ್ಪು ವಿದೇಶಿಗರು ನಮ್ಮ ನೆಲದಲ್ಲಿ ಕಾಲಿಡಲು ಪ್ರಯತ್ನಿಸಿದ್ದಕ್ಕೇ ವಸಾಹತುಶಾಹಿಯ ವಿರುದ್ಧ ಧೀರೋದ್ಧಾತವಾಗಿ ಹೋರಾಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ನಲವತ್ತು ವರುಷಗಳ ವಸಾಹತುಶಾಹಿ ವಿರೋಧಿ ಮೈಸೂರು ಆಳ್ವಿಕೆಯನ್ನೊರತುಪಡಿಸಿದರೆ, 1857ರವರೆಗೆ, ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟಗಳು ಸತತವಾಗಿ ನಡೆಯುತ್ತಿದ್ದವು, ಈ ಹೋರಾಟಗಳು ಕರ್ನಾಟಕಕ್ಕೆ ಯುರೋಪ್ ಆಕ್ರಮಣಕಾರರ ವಿರುದ್ಧದ ಪ್ರತಿರೋಧದ ಶ್ರೀಮಂತ ಇತಿಹಾಸವನ್ನು ನೀಡಿತು. 1799ರಲ್ಲಿ ಟಿಪ್ಪುವಿನ ಸರಕಾರ ನಾಶಗೊಂಡ ಕೆಲವು ದಿನಗಳಲ್ಲೇ ಶುರುವಾದ ಹೋರಾಟ, 1857ರವರೆಗೆ ಮುಂದುವರೆಯಿತು; ಇಡೀ ಭಾರತದಲ್ಲಿ ಆಕ್ರಮಣಕೋರರ ವಿರುದ್ಧ ನಡೆದ ಹೋರಾಟಗಳ ಜೊತೆಗೂಡಿತು. ನಮ್ಮ ಬಳಿಯಿರುವ ದಾಖಲೆಗಳು, ಸಶಸ್ತ್ರ ಹೋರಾಟ 1799 – 1802ರಲ್ಲಿ ನಡೆಯಿತೆಂದು ತಿಳಿಸುತ್ತದೆ, 1806, 1810-11, 1819, 1820, 1824ರಲ್ಲಿ ಎರಡು, 1829-30. 1830, 1837, 1840, 1841, 1849, 1852 ಮತ್ತು 1857-58ರಲ್ಲಿ ಕೆಲವು ಹೋರಾಟಗಳು ನಡೆದವು. ನಾವೀಗ ನೋಡಿದಂತೆ, ಹೋರಾಟಗಳು ಸಮನಾಗಿ ಹರಡಿದ್ದವು ಮತ್ತು ಕೆಲವು ವರುಷಗಳ ಅಂತರದಲ್ಲಿ ಗಂಭೀರ ಹೋರಾಟ ನಡೆಯುತ್ತಿತ್ತು. 

ಈ ಹೋರಾಟಗಳಲ್ಲಿ ಮೂರು ವಿಧ. ಮೊದಲನೆಯ ಹೋರಾಟ ಟಿಪ್ಪುವಿನ ಮಾಜಿ ಸೈನ್ಯದ್ದು. ಸೈನಿಕರಲ್ಲಿದ್ದ ರಾಷ್ಟ್ರೀಯತೆ ಭಾವನೆಯನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಂಖೈಯ ಜನರನ್ನು ಒಟ್ಟುಗೂಡಿಸಿದರು. ಈ ವಿಧಾನದ ಹೋರಾಟದಲ್ಲಿ ಸೈನಿಕರೇ ಪ್ರಮುಖ ಹೋರಾಟ ಶಕ್ತಿ. ಈ ರೀತಿಯ ಸಶಸ್ತ್ರ ಹೋರಾಟ ಮೊದಲಿಗೆ ಪ್ರಾರಂಭವಾದದ್ದಷ್ಟೇ ಅಲ್ಲ, ಮೊದಲಿಗೆ ಕೊನೆಯಾಗಿದ್ದೂ ಹೌದು; ಮೈಸೂರಿನಲ್ಲಿ ವಿದೇಶಿ ಆಳ್ವಿಕೆ ಪ್ರಾರಂಭವಾದ ಮೊದಲ ದಶಕದ ಕೆಲವು ವರುಷಗಳಷ್ಟೇ ಈ ಹೋರಾಟ ಚಾಲ್ತಿಯಲ್ಲಿತ್ತು. ಹಾಗಾಗ್ಯೂ, ಈ ಹೋರಾಟದ ಕ್ಷೀಣ ಪ್ರತಿಧ್ವನಿಯನ್ನು ಆಗಷ್ಟ್ 1857ರಲ್ಲಿ ಬ್ರಿಟೀಷ್ ಇಂಡಿಯನ್ ಸೈನ್ಯದ ಬೆಳಗಾವಿ ತುಕಡಿ ಯೋಜಿಸಿದ ಬಂಡಾಯದಲ್ಲಿ ಕಾಣಬಹುದು. ಈ ಯೋಜನೆ ವಿಫಲವಾಯಿತು ಮತ್ತದರ ಮುಖಂಡರನ್ನು ಗಲ್ಲಿಗೇರಿಸಲಾಯಿತು. (1A) 

ಎರಡನೇ ವಿಧದ ಹೋರಾಟವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು. ಈ ಮಾಜಿ ಪಾಳೇಗಾರರು ತಮ್ಮಲ್ಲಿದ್ದ, ತಮ್ಮ ಸೇವೆಗೈದಿದ್ದ ಶಸ್ತ್ರದಾರಿಗಳನ್ನು ಸಜ್ಜುಗೊಳಿಸಿ ಊಳಿಗಮಾನ್ಯ ಸೈನ್ಯವನ್ನು ಕಟ್ಟಿದರು. 

ಮೂರನೇ ವಿಧದ ಹೋರಾಟ, ನಿಧಾನಕ್ಕೆ ರೂಪು ಪಡೆದುಕೊಂಡರೂ ಹೆಚ್ಚು ಕಾಲ ಉಳಿದ ಹೋರಾಟ, ಈ ಹೋರಾಟಗಳನ್ನು ಮುನ್ನಡೆಸಿದವರು ರೈತ ಸಮೂಹದ ಸದಸ್ಯರು ಮತ್ತಿವರ ಹೋರಾಟದ ಶಕ್ತಿ ಶೋಷಣೆಗೊಳಗಾದ ರೈತ – ಕಾರ್ಮಿಕರಾಗಿದ್ದರು. 

ಕೆಲವು ಇತಿಹಾಸಕಾರರು, ಉದಾಹರಣೆಗೆ ಶ್ಯಾಮ್ ಭಟ್ ರಂತವರು, ಊಳಿಗಮಾನ್ಯ ದೊರೆಗಳ ಮುಂದಾಳತ್ವದ ಹೋರಾಟಗಳನ್ನು ವಸಾಹತುಶಾಹಿ ವಿರೋಧಿ ಹೋರಾಟವಲ್ಲ ಎಂದು ಪರಿಗಣಿಸುತ್ತಾರೆ, ಯಾಕೆಂದರೆ ಇದರ ಮುಂದಾಳತ್ವ ವಹಿಸಿದ್ದವರು ಮಾಜಿ ಪಾಳೇಗಾರರು ಮತ್ತವರ ಏಕೈಕ ಗುರಿ ತಾವು ಕಳೆದುಕೊಂಡಿದ್ದ ಊಳಿಗಮಾನ್ಯತೆಯ ಸೌಕರ್ಯಗಳನ್ನು ಗಳಿಸುವುದಾಗಿತ್ತೇ ಹೊರತು ಮತ್ತೇನಲ್ಲ. ಆದ್ದರಿಂದ ಈ ಹೋರಾಟಗಳನ್ನು ಶ್ಯಾಮ್ ಭಟ್ ಪ್ರತಿಗಾಮಿ ಗುಣದ ಹೋರಾಟಗಳು ಎಂದು ಕರೆಯುತ್ತಾರೆ. 

ಭಾರತದ 1857ರ ಬಂಡಾಯವನ್ನು “ಸ್ವಾತಂತ್ರ್ಯಕ್ಕಾಗಿ ಭಾರತದ ಯುದ್ಧ” ಎಂದು ಮೊದಲು ಗುರುತಿಸಿದ್ದು ಮಾರ್ಕ್ಸ್ ಮತ್ತು ಏಂಜೆಲ್ಸ್. ಅದನ್ನವರು ತಮ್ಮದೇ ಪರಿಭಾಷೆಯಲ್ಲಿ ಹೊಗಳಿದರು. ಮಾರ್ಕ್ಸಿಸಂ ಅನ್ನು ಸ್ಥಾಪಿಸಿದವರಿಗೆ 1857ರ ಬಂಡಾಯವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು ಮತ್ತು ತಮ್ಮ ಪ್ರಾಂತ್ಯ ಮತ್ತು ಅನುಕೂಲತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಿದ್ದ ರಾಜ – ರಾಣಿಯರು ಎನ್ನುವುದರ ಅರಿವಿರಲಿಲ್ಲವೇ? ಅಂತಿಮವಾಗಿ, ಈ ಚಳುವಳಿ ಮೊಘಲರ ವ್ಯಂಗ್ಯಚಿತ್ರದಂತಿದ್ದ, ಕೊನೆಯ ಹಾಗೂ ದುರ್ಬಲ ಬಹಾದ್ದೂರ್ ಶಾ ಝಾಫರನನ್ನು ಪೀಠದ ಮೇಲೆ ಕೂರಿಸಿತು. 

ಮಾರ್ಕ್ಸಿಸಂನ ಸ್ಥಾಪಕರು ಈ ಹೋರಾಟವನ್ನು ಮುನ್ನಡೆಸುತ್ತಿದ್ದ ವರ್ಗಗಳನ್ನು ಮಾತ್ರ ನೋಡುತ್ತಿರಲಿಲ್ಲ ಅಥವಾ ಬಿರುಸಿನ ದಾಳಿ ನಡೆಸಲು ಉತ್ತೇಜಿಸಿದ ಪ್ರಜ್ಞೆಯನ್ನು ಮಾತ್ರ ಗಮನಿಸುತ್ತಿರಲಿಲ್ಲ. ಅವರು ಈ ಹೋರಾಟದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದರು. ನಿಜವಾದ ಐತಿಹಾಸಿಕ ಭೌತವಾದಿಗಳಾದ ಅವರು ಈ ಹೋರಾಟದ ನೈಜತೆ ಮತ್ತು ಗುರಿಗಳ ಪರಿಣಾಮಗಳನ್ನು ಅಂದಾಜಿಸಿದರು. 

ಒಂದು ನಿರ್ದಿಷ್ಟ ಐತಿಹಾಸಿಕ ಕಾಲಘಟ್ಟದಲ್ಲಿ ಯಾವುದು ‘ಪ್ರಗತಿ’ ಮತ್ತು ‘ಪ್ರತಿಕ್ರಿಯೆ’ಯ ಅರ್ಥವೇನು ಎನ್ನುವಂತಹ ಪ್ರಧಾನ ಪ್ರಶ್ನೆಗಳಿಗೆ ಉತ್ತರಿಸಬೇಕು. 

ಈ ಹೋರಾಟಗಳ ಸಫಲತೆ – ಅದು ಚೆನ್ನಮ್ಮಳ ಮುಂದಾಳತ್ವದಲ್ಲಿ ನಡೆದಿರಬಹುದು ಅಥವಾ ಶೋಷಕ ಊಳಿಗಮಾನ್ಯ ಪಾಳೇಗಾರ ಮುನ್ನಡೆಸಿರಬಹುದು – ಈ ಹೋರಾಟಗಳ ತಾತ್ವಿಕ ತೀರ್ಮಾನಗಳು ಬ್ರಿಟೀಷ್ ವಸಾಹತುಶಾಹಿಯನ್ನು ನಮ್ಮ ಭೂಮಿಯಿಂದ ಹೊರಗಾಕುವುದಾಗಿತ್ತೇ ಹೊರತು ಅದಕ್ಕಿಂತ ಕಡಿಮೆಯೇನಲ್ಲ. 

ವಿದೇಶಿ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಜಯವಾಗಿದ್ದರೆ, ಊಳಿಗಮಾನ್ಯ ವ್ಯವಸ್ಥೆಯ ಆಳ್ವಿಕೆಗೆ ನಾವು ಸಿಲುಕಿಕೊಂಡಿದ್ದರೂ, ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಗೆ ಪೋಷಣೆ ಸಿಗುತ್ತಿತ್ತು. 

ಮತ್ತು, ಈ ಪ್ರಜಾಪ್ರಭುತ್ವ ಕ್ರಾಂತಿ ಪ್ರಗತಿಯೇ ಅಲ್ಲವೇ, ವಸಾಹತು – ಊಳಿಗಮಾನ್ಯ ಪ್ರಾಬಲ್ಯಕ್ಕಿಂತ ರಾಷ್ಟ್ರೀಯವಾದಿ ಊಳಿಗಮಾನ್ಯ ಆಳ್ವಿಕೆ ಪ್ರಗತಿಕಾರಕವಲ್ಲವೇ? ಈ ಇತಿಹಾಸಕಾರರು ಜಪಾನಿನ ಇತಿಹಾಸದ ಪುಟಗಳನ್ನು ಓದಿಕೊಂಡರೆ ಒಳ್ಳೆಯದು ಮತ್ತು 1868ರಲ್ಲಿ ಮೈಜಿ ಸಾಮ್ರಾಜ್ಯ ಮತ್ತೆ ಅಧಿಕಾರಕ್ಕೆ ಬಂದ ಮಹತ್ವವನ್ನು ಅರಿತುಕೊಳ್ಳಬೇಕು; ಇದು ಹೇಗೆ ಜಪಾನಿನ ಸ್ಥಳೀಯ ಮಾರುಕಟ್ಟೆಯ ರಕ್ಷಣೆಯನ್ನು ನಡೆಸಿ ನಿಧಾನವಾಗಿ ದೇಶೀ ಬಂಡವಾಳಶಾಹಿತ್ವವನ್ನು ಬೆಳೆಸಿತು ಎನ್ನುವುದನ್ನು ಅರಿತುಕೊಳ್ಳಬೇಕು. ಭಾರತೀಯ ಜನಸಮೂಹ ವಸಾಹತಿನ ಬೆಂಬಲವಿಲ್ಲದ ಊಳಿಗಮಾನ್ಯ ವ್ಯವಸ್ಥೆಯನ್ನು ಇನ್ನೂ ಸುಲಭವಾಗಿ ನಾಶ ಪಡಿಸಿಬಿಡುತ್ತಿದ್ದರು. ಬ್ರಿಟೀಷರ ಬಲದ ಕಾರಣದಿಂದಾಗಿ ಸಾವಿನಿಂದೆದ್ದು ಬಂದ ಊಳಿಗಮಾನ್ಯತೆಯನ್ನು ಎದುರು ಹಾಕಿಕೊಳ್ಳುವುದಕ್ಕಿಂತ ಅದು ಸುಲಭವಾಗಿತ್ತು. ವಸಾಹತುಶಾಹಿ ಪ್ರಮುಖ ಶತ್ರು ಮತ್ತು ಅದಕ್ಕೆ ಯಾವುದೇ ಮೂಲೆಯಿಂದ ಯಾವುದೇ ಗುರಿಯಿಟ್ಟುಕೊಂಡು ಹೊಡೆದ ಏಟೂ ಸಹಿತ ಅದನ್ನು ಮತ್ತಷ್ಟು ದುರ್ಬಲಗೊಳಿಸುತ್ತಿತ್ತು. 

ಎಲ್ಲಿಯವರೆಗೂ ಈ ಹೋರಾಟಗಳೆಲ್ಲವೂ ಕರ್ನಾಟಕ ಮತ್ತು ಭಾರತದ ಪ್ರಮುಖ ವೈರಿಯಾದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧವಿದ್ದವೋ ಅಲ್ಲಿಯವರೆಗೂ ಇವು ಪ್ರಗತಿಪರ ಗುಣವನ್ನು ಹೊಂದಿದೆಯೆನ್ನಬಹುದು, ಸಮಾಜವನ್ನು ಮುನ್ನಡೆಸುವ ಗುಣ. ವಸಾಹತುಶಾಹಿಯ ವಿರುದ್ಧ ಊಳಿಗಮಾನ್ಯ ದೊರೆಗಳ ಗೆಲುವು ಸಹ ಕ್ರಾಂತಿಕಾರಕ ಸಾಧ್ಯತೆಯನ್ನು ಹೊಂದಿರುತ್ತದೆ; ಕಾರಣ ಇದು ಸ್ಥಳೀಯ ಬಂಡವಾಳಶಾಹಿಯನ್ನು ಬೆಳೆಸಿ ಮುಂದಕ್ಕೆ ಊಳಿಗಮಾನ್ಯ ಸಮಾಜವನ್ನು ಕಿತ್ತುಹಾಕುವ ಮತ್ತು ರೈತರನ್ನು ತಮ್ಮ ನೊಗದ ಭಾರದಿಂದ ಬಿಡುಗಡೆಗೊಳಿಸುತ್ತದೆ. ರಾಜ್ಯದ ಅಧಿಕಾರದ ಗುಣಮಟ್ಟದಲ್ಲಿ ಬದಲಾವಣೆಯಾಗಲೇಬೇಕಾದ ಅನಿವಾರ್ಯತೆ ಮತ್ತು ಬ್ರಿಟೀಷ್ ಆಕ್ರಮಣ ಆಳುವ ಮೈತ್ರಿಕೂಟದಲ್ಲಿ ತಂದ ಬದಲಾವಣೆಗಳನ್ನು ಮನಗಾಣದಿದ್ದರೆ, ಕುರುಡು ಮೈತ್ರಿಕೂಟಕ್ಕಷ್ಟೇ ದಾರಿಯಾಗಿಬಿಡುತ್ತದೆ. 

ಪ್ರಗತಿಪರ ಹೋರಾಟಗಳ ಬದ್ಧತೆಯನ್ನು ಕಡೆಗಣಿಸಿ ವಸಾಹತುಶಾಹಿ ವಿರೋಧಿ ಮುಂದಾಳತ್ವದಲ್ಲಿನ ವರ್ಗ ಬೇರುಗಳನ್ನಷ್ಟೇ ಹೊರತೆಗೆಯುವುದು ಅತಿಯಾದ ಮಾರ್ಕ್ಸಿಸಂ ಎಂದೆನ್ನಿಸುತ್ತದೆ. ಆದರಿದೇ ಮಾರ್ಕ್ಸಿಸಂ ಮತ್ತು ರಿವಿಷನಿಸಂ ನಡುವಿರುವ ವ್ಯತ್ಯಾಸ. ರಿವಿಷನಿಷ್ಟ್ ಇತಿಹಾಸ ಯಾಂತ್ರಿಕವಾಗಿರುತ್ತದೆ, ಮೇಲ್ಮಟ್ಟದ್ದಾಗಿರುತ್ತದೆ. ಅದರ ಕೊನೆಯ ಉದ್ದೇಶ ವಸಾಹತು ಆಕ್ರಮಣವನ್ನು ನ್ಯಾಯಬದ್ಧವೆನ್ನಿಸಿಬಿಡುವುದೇ ಆಗಿದೆ. ಮಾರ್ಕ್ಸಿಸ್ಟ್ ಇತಿಹಾಸ ವರ್ಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ಐತಿಹಾಸಿಕ ಸನ್ನಿವೇಶದಲ್ಲದನ್ನು ಇಡುತ್ತದೆ ಮತ್ತು ಜಿಜ್ಞಾಸೆಯ(dialectical) ಕಾರ್ಯವಿಧಾನಗಳನ್ನು ಪರಿಗಣಿಸುತ್ತದೆ. 

ಇವೆಲ್ಲವನ್ನೂ ನಾವು ನೆನಪಿನಲ್ಲಿಟ್ಟುಕೊಂಡಾಗ ಮಾತ್ರ, ಇತಿಹಾಸದ ದಿಕ್ಕಿನ ಗುರಿಯನ್ನು ಗ್ರಹಿಸಿದಾಗ ಮತ್ತು ಪ್ರತಿಯೊಂದು ಐತಿಹಾಸಿಕ ತಿರುವಿನಲ್ಲೂ ಆಳುವ ವರ್ಗದ ಗುಣಗಳೇನಿದ್ದವು ಎನ್ನುವುದನ್ನು ಅರ್ಥೈಸಿಕೊಂಡಾಗ, ಕೆಲವೊಮ್ಮೆ ತದ್ವಿರುದ್ಧದ ಅಭಿಪ್ರಾಯವೆನ್ನಿಸಿದರೂ ಇತಿಹಾಸವನ್ನು ನಿಶ್ಚಿತತೆಯಿಂದ ಒಪ್ಪಬಹುದು. ಬ್ರಿಟೀಷರ ನೆರವಿನಿಂದ, ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ಟಿಪ್ಪುವಿನ ವಿರುದ್ಧ ಹೋರಾಡಿದ ಪಾಳೇಗಾರರು ಇತಿಹಾಸವನ್ನು ಹಿಂದಕ್ಕೆಳೆಯಲು ಪ್ರಯತ್ನಿಸುತ್ತಿದ್ದರು; ಅದೇ ಸಂದರ್ಭದಲ್ಲಿ, ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ನಿಂತ ಪಾಳೇಗಾರರು ಇತಿಹಾಸವನ್ನು ಮುಂದೆ ತಳ್ಳುತ್ತಿದ್ದರು.

ಮುಂದಿನ ವಾರ:
ಸೈನ್ಯದ ಮುನ್ನಡೆ