Apr 26, 2020

ಒಂದು ಬೊಗಸೆ ಪ್ರೀತಿ - 62

ಪ್ರಶಾಂತ್‌ ನರ್ಸಿಂಗ್‌ ಹೋಮ್‌ ತಲುಪುವಷ್ಟರಲ್ಲಿ ರಾಜೀವ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ತನ್ನ ಗೆಳೆಯನಿಗೆ ನಾ ಬರುವ ವಿಷಯ ತಿಳಿಸಿದ್ದರು. ನಾ ಅಡ್ಮಿಶನ್‌ ಮಾಡಿಸುವಾಗ ಆದರ್ಶ್‌ ಹೆಸರಿನ ಆ ವ್ಯಕ್ತಿ ಬಂದು "ಔಷಧಿ ದುಡ್ಡೆಲ್ಲ ಆಮೇಲ್‌ ಕೊಡೂರಿ ಮೇಡಂ. ಸದ್ಯ ಅಡ್ಮಿಷನ್‌ ದುಡ್ಡು ಕೊಟ್ಟುಬಿಡಿ. ಇಲ್ಲಾಂದ್ರೆ ಸುಮ್ನೆ ತರ್ಲೆ ಮಾಡ್ತಾರೆ ಇಲ್ಲಿ" ಎಂದು ಬಿಟ್ಟಿ ಸಲಹೆ ನೀಡಿದರು. ಅಡ್ಮಿಷನ್ನಿಗೆ ಐದು ಸಾವಿರ ಕಟ್ಟಬೇಕೆಂದರು. ನನ್ನ ಪರ್ಸಿನಲ್ಲಿದ್ದಿದ್ದು ಒಂದೂವರೆ ಸಾವಿರ ರುಪಾಯಿ ಮಾತ್ರ. ಹಿಂಗಿಂಗೆ, ನಾನೂ ಡಾಕ್ಟರ್ರೇ. ಅರ್ಜೆಂಟಲ್ಲಿ ಕಾರ್ಡೆಲ್ಲ ತರೋದು ಮರೆತೆ. ನನ್ನ ಹಸ್ಬೆಂಡು ಬಂದು ಕಟ್ತಾರೆ ಅಂದೆ. ಡಾಕ್ಟರ್‌ ಅಂತ ತಿಳಿದ ಮೇಲೆ ಮುಖದ ಮೇಲೆ ನಗು ತಂದುಕೊಂಡು "ಓಕೆ ಮೇಡಂ. ಟ್ರೀಟ್ಮೆಂಟ್‌ ಹೇಗಿದ್ರೂ ಶುರುವಾಗಿದ್ಯಲ್ಲ. ಆಮೇಲ್‌ ಬಂದ್‌ ಕಟ್ಟಿ. ಸದ್ಯ ಇರೋದನ್ನ ಕಟ್ಟಿರಿ ಸಾಕು ಎಂದರು" 

ರಾಧಳ ಕೈಯಿಗೆ ವ್ಯಾಸೋಫಿಕ್ಸ್‌ ಹಾಕಿ ಐ.ವಿ ಫ್ಲೂಯಿಡ್ಸ್‌ ಶುರು ಮಾಡಿದರು. ಇನ್ನೇನು ವಾಂತಿ ಭೇದಿಗೆ ಹೆಚ್ಚು ಔಷಧಿಯಿಲ್ಲವಲ್ಲ. ದೇಹದ ನೀರಿನಂಶ ಅಪಾಯ ಮಟ್ಟಕ್ಕೆ ಕುಸಿಯದಂತೆ ನೋಡಿಕೊಂಡರೆ ಸಾಕು. ಜ್ವರ ಇದ್ದಿದ್ದರಿಂದ ಒಂದು ಯಾಂಟಿಬಯಾಟಿಕ್‌, ವಾಂತಿಗೊಂದು ಇಂಜೆಕ್ಷನ್‌ ನೀಡಿದರು. ಸುಸ್ತಿನಿಂದ ನಿದ್ರೆ ಹೋಗಿದ್ದಳು ರಾಧ. ಅಲ್ಲಿಂದಲೇ ರಾಜೀವನಿಗೊಂದು ಫೋನು ಮಾಡಿದೆ ಸುಮಾರೊತ್ತು ರಿಂಗಾದ ಬಳಿಕ ಫೋನೆತ್ತಿಕೊಂಡರು. 

ʼಎಲ್ಲಿದ್ದೀರಾ?ʼ 

"ಇಲ್ಲೇ" 

ʼಬಂದ್ರಾʼ 

"ಇಲ್ಲ" 

ʼಯಾಕೆ?ʼ 

"ಯಾಕೋ ಕುಡಿದಿದ್ದು ಜಾಸ್ತಿ ಆದಂಗಿದೆ. ಬರೋಕಾಗಲ್ಲ" 

Apr 19, 2020

ಒಂದು ಬೊಗಸೆ ಪ್ರೀತಿ - 61

ಊಟಿ, ಕೊಡೈ, ಮುನ್ನಾರ್‌, ಕೊಡಗು ನೋಡಿದ್ದ ನನಗಾಗಲೀ ರಾಜೀವನಿಗಾಗಲೀ ಯರ್ಕಾಡು ಅಷ್ಟೇನೂ ಆಕರ್ಷಣೀಯವೆನ್ನಿಸಲಿಲ್ಲ. ಇಲ್ಲೆಲ್ಲ ಇರುವಷ್ಟು ದಟ್ಟ ಕಾಡುಗಳಾಗಲೀ ಕಣ್ಣು ಚಾಚುವವರೆಗೂ ಹರಡಿಕೊಂಡಿರುವ ಟೀ ಕಾಫಿ ಎಸ್ಟೇಟುಗಳಾಗಲೀ ಯರ್ಕಾಡಿನಲ್ಲಿರಲಿಲ್ಲ. ನಮಗೆ ರುಚಿಸದ ಯರ್ಕಾಡು ಮಗಳಿಗೆ ವಿಪರೀತ ಇಷ್ಟವಾಯಿತು. ಕಿರಿಯೂರು ಜಲಪಾತವನ್ನು ಅಚ್ಚರಿಯ ಕಂಗಳಿಂದ ನೋಡಿದಳು, ಅದಕ್ಕಿಂತ ಹೆಚ್ಚು ಇಷ್ಟವಾಗಿದ್ದು ಎಮೆರಾಲ್ಡ್‌ ಕೆರೆಯಲ್ಲಿ ಬೋಟಿಂಗ್‌ ಹೋಗಿದ್ದು. ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು. ಸಾಗರನ ಮದುವೆ ಮೂಡಿಸಿದ ಮಿಶ್ರಭಾವಗಳನ್ನು ರಾಧಳ ಖುಷಿ ದೂರಾಗಿಸಿತು. ಅದಕ್ಕಿಂತ ಖುಷಿ ರಾಜೀವ ರಾಧಳೊಡನೆ ಖುಷಿಖುಷಿಯಾಗಿ ಆಟವಾಡಿದ್ದು. ಅಪ್ಪ ಮಗಳು ಹಿಂಗೇ ಇರಬಾರದಾ? 

ಯರ್ಕಾಡಿನಿಂದ ಹೊರಟಾಗ ಮಧ್ಯಾಹ್ನ ಮೂರರ ಮೇಲಾಗಿತ್ತು. 'ಬೆಂಗಳೂರು ತಲುಪೋದೆ ಸುಮಾರೊತ್ತಾಗ್ತದೆ ನಡೀರಿ ನನ್ನ ಕಸಿನ್ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಹೋಗುವ' ಅಂದಿದ್ದೇ ತಡ ರಾಜೀವನ ಗೊಣಗಾಟ ಸಣ್ಣದಾಗಿ ಶುರುವಾಯಿತು. ತೀರ ಅನಿರೀಕ್ಷಿತವೇನಲ್ಲ! ನಮ್ಮ ಕಡೆಯವರ ಮನೆಗೆ ಹೋಗುವ ಸಂದರ್ಭ ಬಂದಾಗೆಲ್ಲ ರಾಜೀವ ಹಿಂಗಾಡೋದು ಸಾಮಾನ್ಯ! ನಾ ಅವರ ಮನೆಯವರ ಕಡೆಗೆ ಹೋಗುವಾಗ ಆಡ್ತೀನಲ್ಲ ಥೇಟ್ ಹಂಗೆ! ನನ್ನ ಕಸಿನ್ ಮನೆಯಿದ್ದಿದ್ದು ಮಲ್ಲೇಶ್ವರದಲ್ಲಿ. ಹೊಸೂರುವರೆಗೇನೋ ಆರಾಮಾಗಿ ತಲುಪಿಬಿಟ್ಟೊ. ಅಲ್ಲಿಂದ ವಿಪರೀತ ಟ್ರಾಫಿಕ್ಕು. ಎಲೆಕ್ಟ್ರಾನಿಕ್ ಸಿಟಿಗೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ಮಲ್ಲೇಶ್ವರಕ್ಕೆ ಹೋಗುವಷ್ಟರಲ್ಲಿ ಮತ್ತಷ್ಟು ಸುಸ್ತಾಗ್ತದೆ. ನೈಸ್ ರೋಡಲ್ ಮೈಸೂರ್ ರಸ್ತೆ ತಲುಪಿ ಮನೆಗೆ ಹೋಗುವ ಅಂತ ರಾಜೀವ ಹೇಳಿದಾಗ ನನಗೂ ಹೌದೆನ್ನಿಸಿತು. ಕಸಿನ್ನಿಗೆ ಫೋನ್ ಮಾಡಿ 'ಸಡನ್ನಾಗಿ ಯಾವ್ದೋ ಅರ್ಜೆಂಟ್ ಕೆಲಸ ಬಂದಿದೆ. ಊರಿಗೆ ಹೊರಟುಬಿಟ್ಟೊ. ಇನ್ನೊಂದ್ಸಲ ಬರ್ತೀವಿ' ಅಂತೊಂದು ನೆಪ ಹೇಳಿ ಅವಳಿಂದ ಒಂದೈದು ನಿಮಿಷ ಬಯ್ಯಿಸಿಕೊಂಡಿದ್ದಾಯಿತು. 

'ಖುಷಿಯೇನಪ್ಪ ಈಗ' ಅಂತ ಕಿಚಾಯಿಸಿದೆ. 

"ಹು. ಡಾರ್ಲಿಂಗ್" ಅಂತ ಕೆನ್ನೆ ಗಿಲ್ಲಿದರು. 

Apr 12, 2020

ಒಂದು ಬೊಗಸೆ ಪ್ರೀತಿ - 60

ಡಾ. ಅಶೋಕ್.‌ ಕೆ. ಆರ್.‌
ರಾಜೀವ ಮೊದಲು ನಾನ್ಯಾಕೆ ಮದುವೆಗೆ? ನೀ ಬೆಳಿಗ್ಗೆ ಹೋಗಿ ಬಂದುಬಿಡು ಸಂಜೆಯಷ್ಟೊತ್ತಿಗೆ ಎಂದು ರಾಗ ಎಳೆದನಾದರೂ ʼನಡೀರಿ. ಹಂಗೆ ಒಂದೆರಡ್‌ ದಿನ ಸುತ್ತಾಡ್ಕಂಡ್‌ ಬರೋಣ. ಅದೇ ಕೆಲಸ ಅದೇ ಮನೆ ಅದದೇ ಜಗಳಗಳು ಬೋರಾಗೋಗಿದೆʼ ಅಂದಿದ್ದಕ್ಕೆ ನಕ್ಕು "ಬೆಂಗಳೂರಿನವರೇ ಇತ್ಲಾಕಡೆಗೆ ಬರ್ತಾರೆ ಸುತ್ತೋಕೆ. ನಾವಿನ್ನೆಲ್ಲಿ ಅಲ್ಲಿ ಸುತ್ತೋದು?" ಎಂದರು. 

ʼಬೆಂಗಳೂರಿಂದ ಇನ್ನೂರ್‌ ಇನ್ನೂರೈವತ್ ಕಿಲೋಮೀಟ್ರು ದೂರದಲ್ಲಿ ಯರ್ಕಾಡ್‌ ಅಂತ ಯಾವ್ದೋ ಜಾಗ ಇದ್ಯಂತೆ. ಚೆನ್ನಾಗಿದೆ ಅಂತಿದ್ರು. ಮದುವೆ ಮುಗ್ಸಿ ಮಧ್ಯಾಹ್ನ ಹೊರಟರೆ ರಾತ್ರಿ ತಲುಪಬಹುದು. ರಾತ್ರಿ ಇದ್ದು ಮಾರನೇ ದಿನ ಅಲ್ಲೇನೇನಿದ್ಯೋ ನೋಡಿಕೊಂಡು ಸಂಜೆಯಂಗೊರಡೋಣ. ಆದ್ರೆ ಅವತ್ತೇ ಮೈಸೂರು ತಲುಪೋಣ. ಇಲ್ಲ ಬೆಂಗಳೂರಲ್ಲಿ ನನ್‌ ಕಸಿನ್‌ ಮನೇಲಿದ್ದು ಮಾರನೇ ದಿನ ಹೊರಟರಾಯಿತುʼ 

"ಅಷ್ಟೆಲ್ಲ ರಜ ಸಿಗುತ್ತಾ ನಿನಗೆ" 

ʼಎಲ್ರೀ! ರಜಾನೇ ಹಾಕಿಲ್ಲ ನಾನು. ಅಕಸ್ಮಾತ್‌ ರಾಧ ಹುಷಾರು ತಪ್ಪಿದರೆ ಅಂತ ಇರೋ ಚೂರುಪಾರು ರಜೆಗಳನ್ನೆಲ್ಲ ಹಂಗೇ ಇಟ್ಟುಕೊಂಡಿದ್ದೀನಿ. ನಿಮಗೆ ಸಿಗುತ್ತಾ?ʼ 

"ನಂದೇನ್‌ ಲಾರ್ಡ್‌ ಲಬಕ್‌ ದಾಸ್‌ ಕೆಲಸ ನೋಡು. ರಜ ಸಿಗದೇ ಹೋದ್ರೆ ರಾಜೀನಾಮೆ ಬಿಸಾಕ್‌ ಬರೋದಪ್ಪ" 

ʼಈ ಅದದೇ ಮಾತುಗಳು ಮರೆಯಾಗ್ಲಿ ಅಂತಲೇ ಈ ಚಿಕ್ಕ ಟ್ರಿಪ್ಪು. ಅಪ್ಪಿ ತಪ್ಪಿ ರಾಜೀನಾಮೆ ಕೊಟ್ಬಿಟ್ಟೀರಾ ಮತ್ತೆ ಈಗ. ನನ್‌ ಪಿಜಿ ಮುಗಿಯೋವರ್ಗಾದ್ರೂ ಕಾಯಿರಿʼ 

"ಅದಕ್ಕೇ ಕಾಯ್ತಿರೋದು ನಾನು" ಅಂತ ಕಣ್ಣು ಹೊಡೆದರು. 

Apr 5, 2020

ಒಂದು ಬೊಗಸೆ ಪ್ರೀತಿ - 59

ʼಏನ್‌ ನಡೀತಿದೆ ಅಂತಲೇ ಗೊತ್ತಾಗ್ತಿಲ್ಲ ಕಣೋʼ ಸಾಗರನಿಗೆ ಬಹಳ ದಿನಗಳ ನಂತರ ನಾನೇ ಮೊದಲಾಗಿ ಮೆಸೇಜು ಮಾಡಿದೆ. ಬ್ಯುಸಿ ಇದ್ನೋ ಏನೋ ಸುಮಾರೊತ್ತು ಮೆಸೇಜಿಗೆ ಪ್ರತಿಕ್ರಿಯೆ ಬರಲಿಲ್ಲ. ಎರಡು ಮೂರು ಘಂಟೆಯೇ ಆಗಿಹೋಯಿತೇನೋ. ನಾ ಕೂಡ ಆಸ್ಪತ್ರೆಯ ಕೆಲಸದಲ್ಲಿ ತೊಡಗಿಕೊಂಡುಬಿಟ್ಟಿದ್ದೆ. ಊಟದ ಸಮಯದಲ್ಲಿ ಮೊಬೈಲು ಆಚೆ ತೆಗೆದಾಗ "ಏನಾಯ್ತೇ?" ಎಂದವನ ಮೆಸೇಜು ಬಂದಿತ್ತು. ಆನ್‌ ಲೈನ್‌ ಇದ್ದ. 

ರಾಜೀವ ಮಗಳ ಜೊತೆ ನಡೆದುಕೊಳ್ಳುವ ರೀತಿಯನ್ನೆಲ್ಲ ಹೇಳಿಕೊಂಡೆ. ಅವನಿಗೋ ಅಚ್ಚರಿ. "ಅಲ್ವೇ ಇಬ್ರೂ ಮಗು ಬೇಕು ಅಂತಂದುಕೊಂಡು ತಾನೇ ಮಕ್ಕಳು ಮಾಡಿಕೊಂಡಿದ್ದು, ಮಕ್ಕಳು ಮಾಡಿಕೊಳ್ಳಲು ಟ್ರೀಟ್ಮೆಂಟ್‌ ತೆಗೆದುಕೊಂಡಿದ್ದು. ಈಗೇನಂತೆ?" 

ʼಮ್.‌ ಏನಂತ ಹೇಳಲಿ. ಅವರಿಗೆ ಮೈಸೂರಲ್ಲಿರೋದೇ ಇಷ್ಟವಿಲ್ಲ. ಬೆಂಗಳೂರಿಗೆ ಹೋಗುವ ಬೆಂಗಳೂರಿಗೆ ಹೋಗುವ ಅಂತ ಒಂದೇ ಸಮನೆ ಗೋಳು ಮದುವೆಯಾದಾಗಿಂದʼ 

"ಅಲ್ಲಾ ಅವರಿಗೆ ಅಷ್ಟೊಂದು ಇಷ್ಟ ಇದ್ರೆ, ಬೆಂಗಳೂರಿಗೆ ಬರದೇ ಇರುವುದರಿಂದಲೇ ಈ ತೊಂದರೆ ಎಲ್ಲಾ ಅಂದರೆ ಬಂದೇ ಬಿಡಿ ಬೆಂಗಳೂರಿಗೆ" 

ʼಬರಬಾರದು ಅಂತ ನನಗೂ ಇಲ್ಲ ಕಣೋ. ಬರೀ ಎಂಬಿಬಿಎಸ್‌ ಡಿಗ್ರಿ ಇಟ್ಕಂಡು ಬರೋ ಮನಸ್ಸು ನನಗಿರಲಿಲ್ಲ. ಈಗ ಡಿ.ಎನ್.ಬಿ ಸೇರಾಗಿದೆ. ಇನ್ನೇನು ಮುಗಿದೇ ಹೋಗುತ್ತೆ. ಅದಾದ ಮೇಲೆ ಹೋಗುವ ಅಂತ ಹೇಳಿದ್ದೆ. ಸರಿ ಅಂತಲೂ ಅಂದಿದ್ದರು. ಈಗ ನೋಡಿದ್ರೆ ಹಿಂಗೆ. ಮೂರೊತ್ತೂ ಕುಡಿತ, ತುಂಬಾನೇ ಜಾಸ್ತಿ ಮಾಡ್ಕೊಂಡಿದ್ದಾರೆ ಕುಡಿಯೋದನ್ನ. ಅದೆಂಗಾದ್ರೂ ಹಾಳಾಗೋಗ್ಲಿ ಅಂದರೆ ಬಾಯಿಗೆ ಬಂದಂಗೆ ಮಾತುʼ