Aug 29, 2020

ಒಂದು ಬೊಗಸೆ ಪ್ರೀತಿ - 77

"ಯಾಕ್ ನಿಂಗೂ ಸೋನಿಯಾಗೂ ಏನಾದ್ರೂ ಜಗಳ ಆಯ್ತಾ ಅವಳು ಆಸ್ಪತ್ರೆಯಲ್ಲಿದ್ದಾಗ?" ಬೆಳಿಗ್ಗೆ ಶೇವ್ ಮಾಡಿಕೊಳ್ಳುವಾಗ ರಾಜೀವ್ ಕೇಳಿದ ಪ್ರಶ್ನೆ ಕೈಲ್ಲಿದ್ದ ಕಾಫಿ ಲೋಟ ಕೆಳಕ್ಕೆ ಬೀಳುವಂತೆ ಮಾಡಿತು. ಪುಣ್ಯಕ್ಕೆ ನಿನ್ನೆ ಸಂಜೆಯ ಪಾತ್ರೆಗಳನ್ನು ತೊಳೆದಿರದ ಕಾರಣ ಗಾಜಿನ ಲೋಟ ಸಿಂಕಿನಲ್ಲೇ ಇತ್ತು, ಕೈಯಲ್ಲಿದ್ದ ಸ್ಟೀಲಿನ ಲೋಟದ ಕಾಫಿ ಚೆಲ್ಲಿತಷ್ಟೆ. ʻಹೇಳೇಬಿಟ್ಟಳಾ ಸೋನಿಯಾ?' ಎಂಬ ಅನುಮಾನ ಮೂಡದೆ ಇರಲಿಲ್ಲ. ರಾಜೀವ ತುಂಬಾ ಸಹಜವಾಗಿ ಕೇಳಿದಂತಿತ್ತೇ ಹೊರತು ಅವರ ದನಿಯಲ್ಲಿ ಕೋಪ ಅಸಹನೆಗಳು ಕಾಣಲಿಲ್ಲ. ಯಾರಿಗೆ ಗೊತ್ತು ನಿಧಾನಕ್ಕೆ ತಮಾಷೆಯಾಗೇ ಕೇಳಿ ಜಗಳಕ್ಕೊಂದು ಬುನಾದಿ ಹಾಕುತ್ತಿದ್ದಾರೋ ಏನೋ? 

ʻಹಂಗೇನಿಲ್ಲವಲ್ಲ ಯಾಕೆ?' ಮನದ ಉದ್ವೇಗ ಆದಷ್ಟು ದನಿಯಲ್ಲಿ ಪ್ರತಿಫಲನಗೊಳ್ಳದಂತೆ ಪ್ರಯತ್ನಿಸಿದೆ. 

"ಓ ಓ! ಏನ್ ದಡ್ಡನ ತರ ಕಾಣಿಸ್ತೀನೇನು! ನನ್ ಕಣ್ಣಿಗ್ ಏನೂ ಗೊತ್ತಾಗೋದಿಲ್ಲ ಅಂತ ಎಣಿಸಿದ್ದೀಯೇನು?" 

ಕನ್ಫರ್ಮ್! ಹೇಳಿಬಿಟ್ಟಿದ್ದಾಳೆ ಸೋನಿಯಾ...ಅನುಮಾನವೇ ಇಲ್ಲ. 

ʻಅಂತದ್ದೇನ್‌ ಕಾಣಿಸ್ತು ನಿಮಗೆʼ ಆದಷ್ಟು ನಗುಮುಖವನ್ನು ಆರೋಪಿಸಿಕೊಳ್ಳುವ ಪ್ರಯತ್ನ ಮುಂದುವರೆದಿತ್ತು. 

"ಕಾಣೋದಿಲ್ಲೇನು! ನಾನೂ ನೋಡ್ತಾನೇ ಇದ್ದೀನಲ್ಲ ಕಳೆದ ಹದಿನೈದು ದಿನದಿಂದ. ಬೆಳಿಗ್ಗೆಯಿಂದ ನನ್ನ ಜೊತೆ, ರಾಧ ಜೊತೆ, ನಿಮ್ಮಮ್ಮನ ಜೊತೆ ಅಚ್ಚುಕಟ್ಟಾಗೇ ಮಾತಾಡಿಕೊಂಡು ಇರ್ತಾಳೆ. ನಿಮ್ಮಪ್ಪನ ಜೊತೆ ಮಾತು ಕಮ್ಮೀನೇ ಅನ್ನು. ಸಂಜೆ ನೀ ಬರ್ತಿದ್ದ ಹಾಗೆ ಮುಗುಮ್ಮಾಗಿಬಿಡ್ತಾಳೆ. ಅದೂ ನೀ ಅಲ್ಲೇ ಹಾಲಲ್ಲೇ ಕುಳಿತುಬಿಟ್ಟರಂತೂ ನಮ್ಮಗಳ ಜೊತೆಗೂ ಮಾತಾಡಲ್ಲಪ್ಪ" 

ಉಫ್‌! ಸೋನಿಯಾ ಇನ್ನೂ ಹೇಳಿಲ್ಲ ಅನ್ನೋದು ತಿಳಿದೇ ಅರ್ಧ ಜೀವ ವಾಪಸ್ಸಾದಂತಾಯ್ತು. 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ನಿನಗ್‌ ಅನ್ನಿಸಿರೋಲ್ವ? ಮುಂಚೆಯಿಂದಾನೂ ಇಬ್ಬರ ನಡುವೆ ಮಾತು ಕಡಿಮೆ ಅಂದ್ರೆ ಬೇರೆ ಪ್ರಶ್ನೆ. ಮುಂಚೆ ತಲೆಚಿಟ್ಟಿಡಿಯುವಷ್ಟು ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿಬಿಟ್ಟಂತೆ ಕಾಣಿಸ್ತದೆ ನಂಗೆ. ಅದೂ ಕರೆಕ್ಟಾಗಿ ಅವಳು ಆಸ್ಪತ್ರೆಯಲ್ಲಿ ಸೇರಿದ ಮೇಲೆ" 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ಹೋಗ್ಲಿ ಬಿಡು. ನಿನಗ್‌ ಹೇಳೋಕ್‌ ಇಷ್ಟವಿಲ್ವೋ ಏನೋ" 

Aug 22, 2020

ಒಂದು ಬೊಗಸೆ ಪ್ರೀತಿ - 76

ರಾತ್ರಿಯೆಲ್ಲ ಕನಸುಗಳು. ಪರಶು, ಸಾಗರ ಕನಸುಗಳನ್ನಾಳಿಬಿಟ್ಟರು. ನನ್ನವೇ ಮಾತುಗಳನ್ನು ತಿರುಗಿಸಿ ಮುರುಗಿಸಿ ನನಗೇ ಹೇಳುತ್ತಿದ್ದುದನ್ನು ಬಿಟ್ಟರೆ ಅವರವೇ ಮಾತುಗಳನ್ನು ಹೇಳಲೇ ಇಲ್ಲ. ಹೇಳಿದ್ದೆಲ್ಲವೂ ನನ್ನದೇ ದನಿಯಲ್ಲಿ ಕೇಳಿ ಮತ್ತಷ್ಟು ಹಿಂಸೆ. ನೀನ್‌ ಸರಿಯಿಲ್ಲ ಅಂತ ಹೇಳಿದವರೇ ಸರಿಯಾ? ನನ್ನ ಮನಸ್ಸು ಅಷ್ಟೊಂದು ಚಂಚಲವಾ? ನನಗೇ ಅನುಮಾನ ಮೂಡಿಸಿಬಿಟ್ಟ ಶಶಿ. ಎಷ್ಟೇ ವಿಶ್ಲೇಷಿಸಿದರೂ ರಾಮ್‌ ಬಗ್ಗೆ ನನ್ನಲ್ಲಿ ಯಾವತ್ತಿಗೂ ಸ್ನೇಹದ ಭಾವನೆ ಬಿಟ್ಟು ಮತ್ತೊಂದು ಮೂಡಲಿಲ್ಲ. ಸರಿಯಾಗಿ ನೆನಪಿಗೆ ತಂದುಕೊಂಡರೆ ಅವರ ಕುರಿತು ಸ್ನೇಹದ ಭಾವನೆ ಹುಟ್ಟಿದ್ದು ಕೂಡ ಅನಿವಾರ್ಯ ಕಾರಣಗಳಿಂದಾಗಿ. ರಾಜೀವ್‌ ಮನೆಯಿಂದ ದೂರವಿದ್ದಾಗ, ನಮ್ಮ ಮನೆಯವರೆಲ್ಲರೂ ಟ್ರಿಪ್ಪಿಗೆ ಹೋಗಿದ್ದಾಗ ಮಗಳು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ರಾಮ್‌ ಮಾಡಿದ ಸಹಾಯದಿಂದಲ್ಲವೇ ಅವರೊಡನೆ ಸ್ನೇಹ ಹಸ್ತ ಚಾಚಿದ್ದು. ಆ ಘಟನೆ ನಡೆಯದೇ ಹೋಗಿದ್ದಲ್ಲಿ ನಾ ರಾಮ್‌ ಜೊತೆಗೆ ಇನ್ನೂ ಅವರು ನಮ್ಮ ಮನೆಯಲ್ಲಿ ಬಂದು ಕುಡಿದ ಕಾರಣವನ್ನಿಟ್ಟುಕೊಂಡೇ ಮುನಿಸು ಸಾಧಿಸುತ್ತಿದ್ದುದೌದು. ರಾಮ್‌ ಇಸ್‌ ಸ್ಮಾರ್ಟ್‌, ಹ್ಯಾಂಡ್ಸಮ್....‌ ಇಲ್ಲ ಅನ್ನಲ್ಲ. ಆದರೆ ಅವರೊಟ್ಟಿಗೆ ಸಂಬಂಧ ಬೆಳೆಸಬೇಕು ಅಂತೆಲ್ಲ ಯಾವತ್ತೂ ಯೋಚನೆಯೂ ಸುಳಿದಿಲ್ಲ. ಇನ್ನೂ..... ಈಗಲ್ಲ...... ರಾಧ ಹುಟ್ಟುವ ಮುನ್ನ..... ಸಾಗರ ಪರಿಚಯವಾಗುವುದಕ್ಕೆ ಮೊದಲು......ಅಲ್ಲೆಲ್ಲೋ ಒಬ್ಬ ಅಪರಿಚಿತ ಕಂಡಾಗ ಪಟ್ಟಂತ ಇಷ್ಟವಾಗಿಬಿಟ್ಟರೆ...... ಅವನೊಡನೆ ಕಾಮಿಸಿದಂತೆ ಕಲ್ಪನೆ ಮೂಡುತ್ತಿತ್ತು......ಆ ಕಲ್ಪನೆ ಕೂಡ ನಿಜವಾಗಬೇಕೆಂಬ ಅನ್ನಿಸಿಕೆಯೇನೂ ಇರುತ್ತಿರಲಿಲ್ಲ.....ರಾಜೀವನೊಡನೆ ಮಲಗುವಾಗಲೂ ಆ ಅಪರಿಚಿತ ವ್ಯಕ್ತಿ ಸ್ಮೃತಿಪಟಲದಲ್ಲಿ ಮೂಡುತ್ತಿರಲಿಲ್ಲ. ಅದು ಸಹಜವಾಗಿ ಎಲ್ಲರಲ್ಲೂ ಮೂಡುವ ಭಾವನೆಗಳೇ ಹೌದು ಎಂದು ನಂಬಿದ್ದೆ. ಅಂತ ಯಾವ ಕಲ್ಪನೆ ಕೂಡ ರಾಮ್‌ ಬಗ್ಗೆ ನನಗಿದುವರೆಗೂ ಬಂದಿಲ್ಲ. ಆತನಿಗೆ ಬಂದಿರಬಹುದಾ? ಬಂದಿರಬಹುದು. ಬಂದಿದ್ದರೂ ಅದೇನೂ ತಪ್ಪಲ್ಲವಲ್ಲ. ಅವರೇ ಏನಾದರೂ ಆಸ್ಪತ್ರೆಯಲ್ಲಿ ಗುಲ್ಲೆಬ್ಬಿಸಲು ಸಹಕರಿಸಿಬಿಟ್ಟರಾ? ಗೆಳೆಯರ ಬಳಿ ಮಾತನಾಡುತ್ತಾ "ನಾನೂ ಅವ್ಳೂ ತುಂಬಾ ಕ್ಲೋಸು" ಅಂತೇಳಿ ಕಣ್ಣು ಹೊಡೆದುಬಿಟ್ಟರೂ ಸಾಕು.....ದೊಡ್ಡ ಸುದ್ದಿಯಾಗ್ತದೆ. ಆದರೆ ನನಗೆ ಗೊತ್ತಿರುವಂತೆ ರಾಮ್‌ ಅಂತಹ ಕೆಲಸ ಮಾಡುವವರಲ್ಲ. ಕಲ್ಪನೆಯಲ್ಲಿ ನನ್ನೊಡನೆ ಕಾಮಿಸಿದ್ದರೂ ಇರಬಹುದೇನೋ ಆದರೆ ಆ ಕಲ್ಪನೆ ನಿಜವಾಗಲಿ ಎಂಬುದ್ದೇಶ ಅವರಿಗೂ ಇದ್ದಿರಲಾರದು. ಮತ್ಯಾಕೆ ಜನರೀ ರೀತಿ ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಾರೆ? ನಾ ಸುಮಾಳೊಡನೆ ಹೋಗಿ ಕಾಫಿ ಕುಡಿದು ಹರಟೋದು ಎಷ್ಟು ಸಹಜವೋ ರಾಮ್‌ ಜೊತೆಗೆ ಹೋಗಿ ಕಾಫಿ ಕುಡಿದು ಹರಟೋದು ಕೂಡ ಅಷ್ಟೇ ಸಹಜ ಅಂತ ಇವರ್ಯಾಕೆ ಅರ್ಥೈಸಿಕೊಳ್ಳುವುದಿಲ್ಲ? ಕೆಲಸಕ್ಕೆ ಹೋಗಲೇ ಮನಸ್ಸು ಬಾರದಷ್ಟು ತಲೆ ನೋವು. ಕೆಲಸಕ್ಕೆ ಹೋಗಲಲ್ಲ ತಲೆ ನೋವು, ಕೆಲಸಕ್ಕೆ ಹೋದರೆ ಸೋನಿಯಾಳನ್ನು ಕಾಣಬೇಕಾಗುತ್ತದೆ ಎನ್ನುವ ಕಾರಣಕ್ಕೆ ತಲೆ ನೋವು. ಅವಳ ಮನದಲ್ಲೀಗ ನಾ ಕೆಟ್ಟವಳಾಗಿ ಹೋಗಿದ್ದೀನಿ. ಇವತ್ತಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ಮತ್ತೊಂದು ದಿನ ಅವಳನ್ನು ಎದುರಿಸಲೇಬೇಕಲ್ಲ ಎಂದು ಧೈರ್ಯ ತಂದುಕೊಳ್ಳುತ್ತಾ ಮೇಲೆದ್ದು ತಯಾರಾದೆ. 

ಆಸ್ಪತ್ರೆಗೆ ಹೋಗಿ ನನ್ನ ಬೆಳಗಿನ ವಾರ್ಡ್‌ ಕೆಲಸಗಳನ್ನೆಲ್ಲ ಮುಗಿಸಿ ಸೋನಿಯಾಳ ರೂಮಿನ ಬಳಿ ಹೋದೆ. ನಿನ್ನೆಯ ಮುನಿಸು ಇವತ್ತಿಗೂ ಮುಂದುವರೆದಿತ್ತು. ಶಶಿಯ ಕಡೆಗೆ ನೋಡಿದೆ. ಅವನ ಕಣ್ಣುಗಳಲ್ಲೂ ನಾನು ಚಿಕ್ಕವಳಾಗಿ, ಎಲ್ಲಾ ರೀತಿಯ ಅನುಮಾನಗಳಿಗೆ ಅರ್ಹಳಾದ ರೀತಿಯಲ್ಲಿ ಕಂಡು ಕಸಿವಿಸಿಯಾಯಿತು. ಕೊನೇಪಕ್ಷ ಅವನಿಗಾದರೂ ನಾ ಯಾಕೆ ಪರಶುನನ್ನು ಬಿಟ್ಟು ರಾಜೀವನನ್ನು ಮದುವೆಯಾದೆ ಎನ್ನುವುದರ್ಥವಾಗಿದೆ ಎಂದುಕೊಂಡಿದ್ದೆ. ನಾವು ನಂಬಿದ್ದೆಲ್ಲವೂ ಸುಳ್ಳೆಂದು ಸಾಬೀತಾಗುವವರೆಗಷ್ಟೇ ಅದು ಸತ್ಯ. ನಮ್ಮ ಮೂವರ ನಡುವೆ ಉಸಿರುಕಟ್ಟಿಸುವಂತಿದ್ದ ಮೌನಕ್ಕೆ ಪರಿಹಾರವೆಂಬಂತೆ ಅಂದು ಜಯಂತಿ ಮೇಡಂ ಎಂದಿಗಿಂತ ಮುಂಚಿತವಾಗಿಯೇ ರೌಂಡ್ಸಿಗೆ ಬಂದರು. ಮೇಡಂ ಆಗಮನದೊಂದಿಗೆ ಸ್ಮಶಾನ ಕಳೆಯನ್ನೊತ್ತುಕೊಂಡಿದ್ದ ಮೂವರ ಮುಖದಲ್ಲೂ ಕಪಟ ನಗು ವಿಜೃಂಭಿಸಿತು. 

Aug 15, 2020

ಒಂದು ಬೊಗಸೆ ಪ್ರೀತಿ - 75

"ನೀವ್‌ ಹೋಗಿ ಅಕ್ಕ. ಇವರಿರ್ತಾರೆ ರಾತ್ರಿಗೆ" ಸೋನಿಯಾಳ ದನಿ ಎಂದಿನಂತಿರಲಿಲ್ಲ ಎನ್ನುವುದೇನೋ ಅರಿವಿಗೆ ಬಂತು. ಆಸ್ಪತ್ರೆ ವಾಸ, ಅದರಲ್ಲೂ ಗರ್ಭ ನಿಲ್ಲದೇ ಹೋದರೆ ಅನ್ನೋ ಟೆನ್ಶನ್ನು ಎಲ್ಲಾ ಸೇರಿದಾಗ ದನಿ ಮಾಮೂಲಿನಂತಿರಲು ಸಾಧ್ಯವಿಲ್ಲವಲ್ಲ. ಗಂಡ ಇದ್ರೆ ಧೈರ್ಯ ಜಾಸ್ತಿಯಿರ್ತದೋ ಏನೋ. 

ʻಪರವಾಗಿಲ್ಲ ಬಿಡು ಸೋನಿಯಾ. ನಾನೇ ಇರ್ತೀನಿʼ 

"ಹೇಳಿದ್ನಲ್ಲಕ್ಕ. ಇವರಿರ್ತಾರೆ ಅಂತ. ನೀವಿದ್ದು ನನ್ನ ನೋಡೋದೇನು ಬೇಡ. ನೀವ್‌ ದಯವಿಟ್ಟು ಹೋಗಿ" ಎಂದವಳು ಖಂಡತುಂಡವಾಗಿ ಹೇಳಿದಾಗ ಎಲ್ಲೋ ಏನೋ ತಪ್ಪಾಗಿದೆ, ಏನಂತ ಗೊತ್ತಾಗದ ಪರಿಸ್ಥಿತಿಯಲ್ಲಿ ನಾನಿದ್ದೀನಿ ಅನ್ನುವುದರ ಅರಿವಾಯಿತು. ಅವಳಿಷ್ಟು ಕಟುವಾಗಿ ಹೇಳಿದ ಮೇಲೆ ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ ನನಗೆ. ʻಟೇಕ್‌ ಕೇರ್‌ʼ ಎಂದ್ಹೇಳಿದಾಗಲೂ ಅವಳ ಮುಖದಲ್ಲೊಂದು ನಗು ಮೂಡಲಿಲ್ಲ. ಹೊರಬಿದ್ದೆ. ನಿನ್ನೆ ರಾತ್ರಿಯೆಲ್ಲ ಚೆಂದವಾಗಿ ಮಾತನಾಡುತ್ತಾ ಗರ್ಭದ ದಿನಗಳ ಭಯ ಸಂತಸ ಖುಷಿ ಆತಂಕದ ಬಗ್ಗೆಯೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದವಳಿಗೆ ಒಂದೇ ದಿನದಲ್ಲಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವಂತದ್ದೇನಾಯಿತು? ತಿಳಿಯಲಿಲ್ಲ. ನನ್ನಿಂದೇನಾದರೂ ತಪ್ಪಾಯಿತಾ? ನನ್ನ ಪ್ರಜ್ಞೆಗೆ ಬಂದಂತೆ ಯಾವ ತಪ್ಪೂ ಆಗಿಲ್ಲ. ರಾತ್ರಿ ಮಾತನಾಡುತ್ತಾ ಮಲಗಿದ್ದು ಹನ್ನೊಂದೂವರೆಯ ಮೇಲಾಗಿತ್ತು. ಬೆಳಿಗ್ಗೆ ಎದ್ದಾಗ ಮತ್ತೊಂದಷ್ಟು ರಕ್ತಸ್ರಾವವಾಗಿತ್ತು. ಜಯಂತಿ ಮೇಡಮ್ಮಿಗೆ ಫೋನ್‌ ಮಾಡಿದ್ದೆ. "ತೊಂದರೆಯೇನಿರಲ್ಲಮ್ಮ. ಕೆಲವರಿಗೆ ವಾರದವರೆಗೆ ರಕ್ತ ಹೋಗ್ತದೆ. ಬಂದು ನೋಡ್ತೀನಿ. ನೋಡುವ. ಬೇಕಿದ್ರೆ ನಿಮ್ಮ ಸಮಾಧಾನಕ್ಕೆ ಮತ್ತೊಂದು ಸ್ಕ್ಯಾನ್‌ ಮಾಡಿಸುವ" ಎಂದರು. 

Aug 8, 2020

ಒಂದು ಬೊಗಸೆ ಪ್ರೀತಿ - 74

“ಹೇಳಿದ್ನಪ್ಪ. ಬರಲಿಲ್ಲ ನಿಮ್ಮಮ್ಮ” ಮೂರು ಪದ ಜೊತೆಗೂಡಿಸಲು ಮೂರು ನಿಮಿಷದಷ್ಟು ಸಮಯ ತೆಗೆದುಕೊಂಡು ರಾಮೇಗೌಡ ಅಂಕಲ್‌ ಹೇಳುವಾಗ ಆಸ್ಪತ್ರೆಯ ರೂಮಿನೊಳಗಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತ್ತು. ಸೋನಿಯಾಳನ್ನೊಬ್ಬಳನ್ನ ಹೊರತುಪಡಿಸಿ. 

"ಆ ಪಾಪಿ ಪಿಂಡ ಹೋದ್ರೆ ಹೋಗ್ಲಿ ಬಿಡಿ" ಅಂದಿರಬೇಕಲ್ಲ ಎಂದು ವ್ಯಂಗ್ಯದಿಂದ ಕೇಳಿದ್ದಕ್ಕೆ ಅಂಕಲ್‌ ಪ್ರತಿಯಾಡಲಿಲ್ಲ. ಸೋನಿಯಾಳ ವ್ಯಂಗ್ಯದಲ್ಲಿ ಸತ್ಯವಿದ್ದಿರಲೇಬೇಕು. ಅಲ್ಲ, ತೀರ ತಾಯಿ ಆದವಳಿಗೆ ಇಷ್ಟರಮಟ್ಟಿಗೆ ದ್ವೇಷ ಇರೋದಕ್ಕಾದರೂ ಹೇಗೆ ಸಾಧ್ಯ? ಮಗಳೂ ತಾಯಿಯಾಗುವುದರಲ್ಲಿದ್ದಾಳೆ. ಅದೇನೋ ರಕ್ತ ಹೋಗ್ತಿದ್ಯಂತೆ. ಅಬಾರ್ಷನ್‌ ಆದರೂ ಆಗಿಬಿಡಬಹುದು. ಮಗಳೂ ಅಂತ ಬೇಡ, ಗೊತ್ತಿರೋ ಒಬ್ಬ ಹೆಣ್ಣುಮಗಳು ಅಂತಾದರೂ ಮನ ಕರಗಲಾರದಾ? ಕರಗಬಾರದಾ? ಸೋನಿಯಾಳ ಕಣ್ಣಲ್ಲಿ ಮೂಡದ ಕಣ್ಣೀರು ಮುಂದಿನ ದಿನಗಳಲ್ಲಿ ಅವಳು ಅವರಮ್ಮನ ಜೊತೆ ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತಿತ್ತು. 

ಅಂಕಲ್‌ ಮತ್ತು ಸೋನಿಯಾಳನ್ನು ಮಾತನಾಡಿಕೊಳ್ಳಲು ಬಿಟ್ಟು ನಾನೂ, ಶಶಿ, ಅಪ್ಪ, ಅಮ್ಮ ಹೊರಬಂದೆವು. ಮೌನ ಅಸಹನೀಯವಾಗಿತ್ತು. ಮೌನ ಮುರಿಯುತ್ತ ಅಮ್ಮ "ರಾತ್ರಿ ನಾನೇ ಉಳಿದುಕೊಳ್ಳಲಾ ಇಲ್ಲಿ?" ಎಂದು ಕೇಳಿದರು. 

"ಏನ್‌ ಬೇಡ. ನಾನೇ ಇರ್ತೀನಿ ಬಿಡಿ" ಎಂದ ಶಶಿ. 

"ಹಂಗಲ್ವೋ.... ನಾವ್ಯಾರಾದ್ರೂ ಹೆಂಗಸ್ರು ಇದ್ರೆ ಉತ್ತಮ ಅಲ್ವ" 

"ಯಾಕ್‌ ಗಂಡಸ್ರು ಇಂಥ ವಿಷಯ ಎಲ್ಲಾ ನೋಡ್ಕೋಬಾರ್ದು ಅಂತಾನಾ?" 

Aug 1, 2020

ಒಂದು ಬೊಗಸೆ ಪ್ರೀತಿ - 73

ಮೆಸೇಜ್ ಮಾಡ್ಲೋ ಬೇಡ್ವೋ ಮಾಡ್ಲೋ ಬೇಡ್ವೋ ಅನ್ನೋ ಆಲೋಚನೆಗಳಲ್ಲೇ ಅರ್ಧ ದಿನ ಕಳೆದು ಹೋಯಿತು. ಎಫ್.ಬೀಲಿ ಅನ್ ಫ್ರೆಂಡ್ ಮಾಡಿದ್ದ, ಬ್ಲಾಕ್ ಮಾಡಿರಲಿಲ್ಲ. ವಾಟ್ಸಪ್ ಅಲ್ಲೇನೂ ಬ್ಲಾಕ್ ಮಾಡಿರಲಿಲ್ಲ. ಮೆಸೇಜ್ ಗಿಸೇಜ್ ಬೇಡ ಒಟ್ಗೇ ಫೋನೇ ಮಾಡಿಬಿಟ್ಟರೆ? ಧೈರ್ಯ ಸಾಲಲಿಲ್ಲ. ಪೂರ್ತಿ ದಿನ ಹೀಗೇ ಕಳೆದುಹೋದರೆ ಎಂದು ದಿಗಿಲಾಯಿತು. ಏನಾಗಿಬಿಡ್ತದೆ? ಎಂತದೂ ಆಗೋದಿಲ್ಲ. ಸುಮ್ಮನೆ ನಾ ಅನಾವಶ್ಯಕ ಗಾಬರಿ ಬಿಳ್ತಿದೀನಿ ಅಷ್ಟೇ ಎಂದುಕೊಂಡು ಮೊಬೈಲ್ ಕೈಗೆತ್ತಿಕೊಂಡು ವಾಟ್ಸಪ್ ತೆರೆದೆ. ಉಹ್ಞೂ... ವಾಟ್ಸಪ್ ಅಲ್ ಬೇಡ. ಅವ ಯಾವಾಗಲೋ ನೋಡಿ ಏನೇನೋ ರಿಪ್ಲೈ ಮಾಡಿಬಿಟ್ಟರೆ? ಮನೆಗೋದ ಮೇಲೆ ಮಗಳ ದೇಖರೇಖಿಯಲ್ಲಿ ಮೊಬೈಲು ನೋಡುವುದ್ಯಾವಾಗಲೋ. ರಾಜೀವನೋ ನಮ್ಮಮ್ಮನಿಗೋ ಮೆಸೇಜು ಕಂಡು ಗಬ್ಬೆಬ್ಬಿಬಿಟ್ಟರೆ? ಎಫ್.ಬಿ ಮೆಸೆಂಜರ್ ಆದ್ರೆ ಪರವಾಗಿಲ್ಲ.‌ ಹೆಂಗಿದ್ರೂ ನೋಟಿಫಿಕೇಶನ್ ಆಫ್ ಮಾಡಿಟ್ಟಿದ್ದೀನಿ. ಪಟ್ಟಂತ ಮೆಸೇಜು ಯಾರ ಕಣ್ಣಿಗೂ ಕಾಣೋದಿಲ್ಲ. ಥೂ! ಇದೇನಾಗಿದೆ ನಂಗೆ. ಸಾಗರನ ಹುಟ್ಟುಹಬ್ಬಕ್ಕೊಂದು ವಿಶಸ್ ಕಳಿಸೋದಿಕ್ಕೆ ಇಷ್ಟೆಲ್ಲ ಅತಿರೇಕದಿಂದ ಯೋಚಿಸೋ ಅಗತ್ಯವಾದರೂ ಏನಿದೆ? ಯಾಕೀ ರೇ ಪ್ರಪಂಚದಲ್ಲಿ ಇಲ್ಲದಿರುವುದನ್ನೆಲ್ಲ ಯೋಚಿಸುತ್ತಾ ಕುಳಿತಿದ್ದೀನಿ. ಎಫ್.ಬಿ ತೆರೆದು ಸಾಗರನ ಪ್ರೊಫೈಲ್ ತೆರೆದು ʻಹ್ಯಾಪಿ ಬರ್ತ್ ಡೇ ಕಣೋ' ಎಂದು ಮೆಸೇಜು ಕಳುಹಿಸಿದೆ. ಅವನ ಮೆಸೆಂಜರ್ನಲ್ಲಿ ಅದರ್ಸ್ ಫೋಲ್ಡರಿಗೆ ಹೋಗಿರ್ತದೆ ಮೆಸೇಜು. ಇನ್ಯಾವಾಗ ನೋಡ್ತಾನೋ ಏನೋ ಎಂದುಕೊಂಡವಳಿಗೆ ಸಾಗರ್ ಇಸ್ ಟೈಪಿಂಗ್ ಅನ್ನೋದು ಕಾಣಿಸಿ ಖುಷಿಯಾಯಿತು. ಏನ್ ಟೈಪಿಸುತ್ತಿರಬಹುದು? ಸದ್ಯ, ಇನ್ನೂ ಮರೆತಿಲ್ಲವಲ್ಲ ನನ್ನ ಅಂತ ಕಾಲೆಳಿಯಬಹುದು.... ಯಾರಿದು ಅಂತ ರೇಗಿಸಬಹುದು ಅಥವಾ ಎಂತದೂ ಬೇಡ ಅಂತ ಸುಮ್ಮನೊಂದು ಥ್ಯಾಂಕ್ಯು ಹೇಳಿ ಮಾತುಕತೆ ಮುಗಿಸಬಹುದು ಎಂಬ ನಿರೀಕ್ಷೆಯಲ್ಲೇ ಕಣ್ಣನ್ನು ಮೊಬೈಲಿನ ಸ್ಕ್ರೀನಿಗೆ ನೆಟ್ಟು ಕುಳಿತಿದ್ದೆ. ಒಂದಷ್ಟೇನೋ ಟೈಪ್ ಮಾಡಿದವನು ಮತ್ತೆ ಡಿಲೀಟು ಮಾಡಿದನೇನೋ.... ಕ್ಷಣ ಕಾಲ ಸುಮ್ಮನಿದ್ದ ಆ್ಯಪು ಮತ್ತೊಮ್ಮೆ ಸಾಗರ್ ಇಸ್ ಟೈಪಿಂಗ್ ಅಂತ ತೋರಿಸಿತು. ಒಂದು ನಿಮಿಷದ ಟೈಪಿಂಗಿನ ನಂತರ ಮೆಸೇಜು ಕಾಣಿಸಿತು "ನನ್ನ ಹುಟ್ಟುಹಬ್ಬಕ್ಕಲ್ಲ, ನಾ ಸತ್ರೂ ಮೆಸೇಜು ಮಾಡಬೇಡ. ಅಪ್ಪಿತಪ್ಪಿ ನಾ ಸತ್ತ ವಿಷ್ಯ ಗೊತ್ತಾದ್ರೂ ನೋಡೋಕ್ ಬರಬೇಡ. ಅಷ್ಟು ನಡೆಸಿಕೊಡು ಸಾಕು". 

ನಿಟ್ಟುಸಿರುಬಿಡುವುದನ್ನೊರತುಪಡಿಸಿದರೆ ಮತ್ತೇನು ತಾನೇ ಮಾಡಲು ಸಾಧ್ಯವಿತ್ತು ನನಗೆ. ಸಾಮಾನ್ಯವಾಗಿ ಈ ರೀತಿ ಮೆಸೇಜು ಮಾಡಿದ ತಕ್ಷಣವೇ ಸಾರಿ ಯಾವ್ದೋ ಮೂಡಲ್ಲಿದ್ದೆ, ಎಷ್ಟೆಲ್ಲ ಕಾಟ ಕೊಡ್ತಿ ನನಗೆ ಅಂತಂದು ಒಂದಷ್ಟಾದರೂ ಮಾತನಾಡುತ್ತಿದ್ದ. ಕೊನೇಪಕ್ಷ ವ್ಯಂಗ್ಯವನ್ನಾಡುತ್ತ ಚುಚ್ಚು ಮಾತುಗಳನ್ನಾದರೂ ಆಡುತ್ತಿದ್ದ. ಇವತ್ತೂ ಹಂಗೇ ಆಗಬಹುದೇನೋ ಅಂದುಕೊಂಡು ಕಾದೆ. ಉಹ್ಞೂ. ಯಾವ ಮೆಸೇಜೂ ಬರಲಿಲ್ಲ. ನಾನೇ ಮೆಸೇಜು ಮಾಡಲಾ? ಸತ್ರೂ ಮೆಸೇಜು ಮಾಡಬೇಡ ಅಂದುಬಿಟ್ಟಿದ್ದಾನಲ್ಲ. ಆದರೇನಂತೆ? ಮುಂಚೆ ಎಷ್ಟು ಸಲ ಈ ರೀತಿಯಾಗಿ ಮೆಸೇಜು ಮಾಡಿದ ಮೇಲೆ ನಾನೇ ದುಃಖ ತೋಡಿಕೊಂಡಿಲ್ಲ. ಮತ್ತೇನಿಲ್ಲದಿದ್ದರೂ ನನ್ನ ದುಃಖಕ್ಕಂತೂ ಹುಡುಗ ಕರಗಿಬಿಡ್ತಾನೆ. ನಿನ್ನ ದುಃಖದ ಕತೆಗಳನ್ನು ಕೇಳೋಕೊಂದು ಕಿವಿ ಬೇಕಷ್ಟೇ ನಿನಗೆ ಅಂತ ಎಷ್ಟು ಸಲ ಆಡಿಕೊಂಡಿದ್ದಾನೆ.‌ ಕೇಳುವದಕ್ಕೊಂದಷ್ಟು ಕಿವಿಗಳು ಎಲ್ಲರಿಗೂ ಬೇಕೇ ಬೇಕಲ್ಲ. ಮತ್ತೊಂದು ರೌಂಡು ಬಯ್ದರೂ ಪರವಾಗಿಲ್ಲ ಮೆಸೇಜು ಮಾಡೇಬಿಡುವ ಎಂದು ಧೃಡ ನಿರ್ಧಾರ ಮಾಡಿ ಫೋನ್ ಕೈಗೆತ್ತಿಕೊಂಡರೆ ಅಮ್ಮನ ಫೋನು ಬಂತು.‌ ನಂತರ ಮೆಸೇಜಿಸುವ ಅಂದುಕೊಂಡು ಫೋನೆತ್ತಿಕೊಂಡೆ.