Aug 4, 2016

ರೈತರ ಆತ್ಮಹತ್ಯೆಯ ನೈಜ ಕಾರಣಗಳು ಮತ್ತು ಪರಿಹಾರಗಳು

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್
04/08/2016
ನಮ್ಮ ಶಾಲಾಕಾಲೇಜುಗಳ ಪಠ್ಯಪುಸ್ತಕಗಳಿಂದ ಹಿಡಿದು, ಕತೆ ಕಾದಂಬರಿಗಳ ಯಾವುದೇ ಪುಸ್ತಕಗಳನ್ನು ತೆರೆದು ನೋಡಿದರೂ ನಿಮಗೆ ಮೊದಲಿಗೆ ಕಂಡು ಬರುವುದು, ಇಂಡಿಯಾ ಒಂದು ಕೃಷಿ ಪ್ರಧಾನ ರಾಷ್ಟ್ರವೆಂಬ ಹಳಸಲು ಮಾತೇ! ಅದನ್ನೇನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಇಲ್ಲ ವಿಷಾದದಿಂದ ಹೇಳಿಕೊಳ್ಳುತ್ತೇವೆಯೊ ನನಗಂತು ತಿಳಿದಿಲ್ಲ. ಆದರೆ ಇತ್ತೀಚೆಗೆ ಯಾವತ್ತಿಗಾದರು ನಮ್ಮದು ಕೃಷಿ ಪ್ರಧಾನ ದೇಶವೆಂದು ಹೇಳಿಕೊಳ್ಳುವ ಸಂದರ್ಭ ಬಂದಾಗೆಲ್ಲ ನಾನು ವಿಷಾದ ಮತ್ತು ನೋವನ್ನು ಅನುಭವಿಸುತ್ತೇನೆ. ಅಂಕಿಸಂಖ್ಯೆಗಳ ದೃಷ್ಠಿಯಿಂದ ಇದು ನಿಜವೂ ಹೌದು: ಇವತ್ತಿಗೂ ಇಂಡಿಯಾದ ಪ್ರತಿಶತ ಶೇಕಡಾ 68ಕ್ಕಿಂತ ಹೆಚ್ಚು ಜನ ತಮ್ಮ ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ತೊಂಭತ್ತರ ದಶಕದ ಜಾಗತೀಕರಣದ ನಂತರ ದೇಶದಲ್ಲಿ ಕೈಗಾರಿಕೋದ್ಯಮಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳು ತಮ್ಮ ಸರಕು ಸೇವೆಗಳನ್ನು ಗುರಿಯಾಗಿಸಿಕೊಂಡಿರುವುದು ಈ ಶೇಕಡಾ 68 ಮಂದಿಯನ್ನೇ.

ಸ್ವಾತಂತ್ರ ಸಿಕ್ಕ ನಂತರದ ಪಂಚವಾರ್ಷಿಕ ಯೋಜನೆಗಳ ಮುಖ್ಯ ಆಧ್ಯತಾ ಕ್ಷೇತ್ರ ಕೃಷಿಯಾಗಿದ್ದು, ಹಸಿರು ಕ್ರಾಂತಿಯ ದುಷ್ಪರಿಣಾಮಗಳೇನೇ ಇದ್ದರು ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಸಾದ್ಯವಾಯಿತು. ಆದರೆ ಆ ಆಹಾರವನ್ನು ಉತ್ಪಾದಿಸುವ ರೈತನ ಬದುಕು ಸ್ವಾವಲಂಬನತೆಯತ್ತ ಸಾಗಿತೇ ಎಂದು ಕೇಳಿದರೆ ಸಿಗುವ ಉತ್ತರ: ಇಲ್ಲ! ನಂತರದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಒಂದಿಷ್ಟು ಬದಲಾವಣೆಗಳಾಗಿ ಆಧುನಿಕ ಯಂತ್ರಗಳ ಪ್ರವೇಶವಾದರೂ ಅದು ದೊಡ್ಡ ರೈತರಿಗೆ ಮಾತ್ರ ಸೀಮಿತವಾಗಿತ್ತು. ಬದಲಿಗೆ 1990ರ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗ ತೊಡಗಿದವು. ಇತ್ತೀಚೆಗಂತು ಇದು ಸರಣಿ ಆತ್ಮಹತ್ಯೆಗಳ ದಾರಿಯನ್ನು ಹಿಡಿಯಿತು. ಈ ನಿಟ್ಟಿನಲ್ಲಿ ನಾವು ನಮ್ಮ ರೈತರ ಆತ್ಮಹತ್ಯೆಗಳಿಗಿರಬಹುದಾದ ಕಾರಣಗಳನ್ನೂ, ಕಂಡುಕೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆಯೂ ಒಂದಷ್ಟು ಗಂಬೀರವಾಗಿ ಚಿಂತಿಸಬೇಕಾದುದು ಅನಿವಾರ್ಯವೆನಿಸುತ್ತದೆ:

1.ನೀರಾವರಿ ಸೌಲಭ್ಯಗಳ ಕೊರತೆ:

ಸಾಂದರ್ಭಿಕ ಚಿತ್ರ
ನಾವು ಕೃಷಿಗೆ ನಿಜವಾಗಿಯೂ ಆಧ್ಯತೆ ನೀಡುವುದೇ ಆಗಿದ್ದರೆ ನಮ್ಮ ಮೊದಲ ಆಧ್ಯತೆಯಾಗಬೇಕಿದ್ದುದು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿತ್ತು. 

ಈ ನಿಟ್ಟಿನಲ್ಲಿ ನಮ್ಮ ಪಂಚವಾರ್ಷಿಕ ಯೋಜನೆಗಳು ಹೆಜ್ಜೆ ಇಟ್ಟರೂ ಅದು ಕೂಡ ಇನ್ನೊಂದು ತಪ್ಪು ಹೆಜ್ಜೆಯಾಗಿತ್ತು. ಕೃಷಿಗೆ ನೀರಾವರಿ ಕಲ್ಪಿಸುವುದೆಂದರೆ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದು ಮಾತ್ರವೆಂದು ನಂಬಿಕೊಂಡಿದ್ದ ಅವತ್ತಿನ ರಾಜಕಾರಣಿಗಳು, ಯೋಜನಾ ತಜ್ಞರುಗಳು ಬಾರೀ ಅಣೆಕಟ್ಟುಗಳನ್ನು ನಿರ್ಮಿಸಿ ಕೈ ಬಿಟ್ಟರು. ಅವರುಗಳಿಗೆ ಸಣ್ಣ ನೀರಾವರಿ ಯೋಜನೆಗಳಾದ ಚೆಕ್ ಡ್ಯಾಂ ನಿರ್ಮಾಣ, ಹನಿ ನೀರಾವರಿ, ಏತ ನೀರಾವರಿ, ಕೆರೆಗಳ ಕಾಯಕಲ್ಪದಂತಹ ವಿಷಯಗಳು ಮುಖ್ಯವೆನಿಸಲೇ ಇಲ್ಲ. ಯಾಕೆಂದರೆ ಗುತ್ತಿಗೆದಾರರಿಗೆ ಮತ್ತು ರಾಜಕಾರಣಿಗಳಿಗೆ ಬಾರೀ ಯೋಜನೆಗಳು ತಂದು ಕೊಡುವ ಲಾಭದ ಪ್ರಮಾಣದ ಮುಂದೆ ಸಣ್ಣಪುಟ್ಟ ಯೋಜನೆಗಳು ನಿರುಪಯುಕ್ತವೆನಿಸಿದ್ದವು. ಹೀಗಾಗಿ ಬಾರೀ ನೀರಾವರಿ ಯೋಜನೆಗಳ ನಂತರವೂ ದೇಶದ ಶೇಕಡಾ 60 ಕ್ಕಿಂತ ಹೆಚ್ಚು ಕೃಷಿಭೂಮಿ ಮಳೆಯನ್ನೇ ಅವಲಂಬಿಸಿ ನಡೆಯಬೇಕಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಮಳೆಯೆನ್ನುವುದು ಅದೃಷ್ಟದಾಟವಾದಂತಾಗಿದೆ. ಬದಲಾಗುತ್ತಿರುವ ಭೂಮಿಯ ಉಷ್ಣಾಂಶ, ಪರಿಸರದಲ್ಲಾಗುತ್ತಿರುವ ಏರುಪೇರುಗಳು ಮಳೆ ಬರುವ ಸಮಯ ಮತ್ತು ಪ್ರಮಾಣವನ್ನು ನಿಶ್ಚಯಿಸುವಂತಾಗಿ, ಒಂದು ವರ್ಷ ತೀವ್ರ ಅತಿವೃಷ್ಠಿಯಾದರೆ, ಇನ್ನೊಂದು ವರ್ಷ ತೀವ್ರ ಅನಾವೃಷ್ಠಿ ತಲೆದೋರುತ್ತಿದೆ. ಮಳೆಯನ್ನು ನಂಬಿ ಕೃಷಿ ಮಾಡುತ್ತಿರುವ ರೈತನಿಗೆ ಇದು ಬಹಳ ಮುಖ್ಯವಾದ ಸಮಸ್ಯೆಯಾಗಿದೆ. ಅದರಲ್ಲೂ ಕೃಷಿಯೇ ಬಹುಮುಖ್ಯ ಕಸುಬಾಗಿರುವ ಮದ್ಯಭಾರತದಲ್ಲಂತು ನೀರಾವರಿಯ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಬಿತ್ತನೆ ಮಾಡಲಾಗದೆ, ಸರಿಯಾದ ಸಮಯದಲ್ಲಿ ಕಟಾವು ಮಾಡಲಾಗದೆ ರೈತ ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾನೆ.

ಪರಿಹಾರ:

ಮಳೆಯ ವಿಚಾರದಲ್ಲಿ ಮಾನವ ಅಸಹಾಯಕನಾಗಿದ್ದು ಬೀಳುವ ಮಳೆಯ ನೀರನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದನ್ನೇ ನಾವು ಕೃಷಿ ನೀರಾವರಿ ಎನ್ನುತ್ತೇವೆ. ನಾನು ಮೊದಲಿಗೆ ಹೇಳಿದಂತೆ ಇಂಡಿಯಾದಂತಹ ವಿಶಾಲವಾದ ಕೃಷಿ ದೇಶದಲ್ಲಿ ಬಾರೀ ನೀರಾವರಿ ಯೋಜನೆಗಳು ಉಪಯೋಗಕ್ಕೆ ಬರುವುದಿಲ್ಲ. ಈಗಾಗಲೇ ಕಟ್ಟಲಾಗಿರುವ ದೊಡ್ಡ ಅಣೆಕಟ್ಟುಗಳ ಅನೇಕ ಕಾಲುವೆಗಳ ಕೊನೆಯವರೆಗು ನೀರು ತಲುಪದಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದೊಂದೆ ನಮಗಿರುವ ದಾರಿ. ನದಿಗಳಿಗೆ ಸಣ್ಣಸಣ್ಣ ಚೆಕ್ ಡ್ಯಾಂಗಳನ್ನು ಕಟ್ಟುವುದು, ಏತ ನೀರಾವರಿ, ಹನಿ ನೀರಾವರಿಯಂತಹ ಯೋಜನೆಗಳನ್ನು ಜಾರಿಗೆ ತರುವುದು, ಕೆರೆಗಳಲ್ಲಿ ಹೂಳು ತೆಗೆದು ಅವುಗಳಲ್ಲಿ ಸಾಕಷ್ಟು ನೀರು ಸಂಗ್ರಹಿಸಿ ಕೆರೆ ಅಚ್ಚುಕಟ್ಟು ಪ್ರದೇಶಗಳನ್ನು ಗುರುತಿಸಿ ಅವು ಒತ್ತುವರಿಯಾಗದಂತೆ ನೋಡಿಕೊಳ್ಳುವುದನ್ನು ಮಾಡಬೇಕಾಗಿದೆ. ಇದರ ಜೊತೆಗೆ ಮಳೆ ನೀರು ಸಂಗ್ರಹಿಸುವ ವೈಜ್ಞಾನಿಕ ವಿಧಾನಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು. ಪ್ರತಿ ಹಳ್ಳಿಗಳಲ್ಲಿಯೂ ಸಾಮಾಜಿಕ ಅರಣ್ಯಗಳನ್ನು ಬೆಳೆಸುವುದು( ಈಗ ಇರುವ ಈ ಯೋಜನೆಯಲ್ಲಿ ಅರಣ್ಯ ಇಲಾಖೆಯವರು ಕೇವಲ ನೀಲಗಿರಿ ಅಕೇಶಿಯಾಗಳನ್ನು ಬೆಳೆಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿರುವುದನ್ನು ತಡೆಯಬೇಕಾಗಿದೆ)

2. ಗುಣಮಟ್ಟದ ಬೀಜ, ಗೊಬ್ಬರ, ನ್ಯಾಯಯುತ ಬೆಲೆಯಲ್ಲಿ ಲಭ್ಯವಾಗದೇ ಇರುವುದು:

ಸಾಂದರ್ಭಿಕ ಚಿತ್ರ
ನೀರಾವರಿಯ ನಂತರದಲ್ಲಿ ನಮ್ಮ ರೈತರು ಎದುರಿಸುತ್ತಿರುವ ಬಹುಮುಖ್ಯವಾದ ಸಮಸ್ಯೆಯೆಂದರೆ ಉತ್ತಮ ಗುಣಮಟ್ಟದ ಬೀಜ ಮತ್ತು ಗೊಬ್ಬರಗಳು ನಿಗದಿತ ಸಮಯಕ್ಕೆ ದೊರೆಯದೆ ಇರುವುದಾಗಿದೆ. ಇವತ್ತು ದೇಶದಲ್ಲಿ ಹಲವಾರು ಬೀಜೋತ್ಪಾದನೆಯ ಕಂಪನಿಗಳಿದ್ದು ಅವು ಒಳ್ಳೆಯ ಬೀಜಗಳನ್ನು ಸರಬರಾಜು ಮಾಡುವ ಯಾವ ಭರವಸೆಯೂ ಇಲ್ಲದಂತಾಗಿದೆ ಉತ್ತರ ಕರ್ನಾಟಕದಲ್ಲಿ ಕಳಪೆ ಬೀಜಗಳಿಂದಲೇ ನೂರಾರು ರೈತರು ಬೆಳೆನಷ್ಟ ಮಾಡಿಕೊಂಡು ಸಾಲಕ್ಕೆ ತುತ್ತಾಗಿರುವುದನ್ನು ನಾವು ಪ್ರತಿವರ್ಷವೂ ಕೇಳುತ್ತಿದ್ದೇವೆ. ನಮ್ಮ ಸರಕಾರಗಳು ಇಂತಹ ಬೀಜೋತ್ಪಾದಕ ಕಂಪನಿಗಳ ಮೇಲೆ ಯಾವ ನಿಯಂತ್ರಣವನ್ನು ಹೇರದೆ ಬೀಜ ಉತ್ಪಾದನೆಯಲ್ಲಿ ಯಾವ ಅನುಭವಗಳು ಇರದ ಕಂಪನಿಗಳೆಲ್ಲ ಬೀಜ ತಯಾರಿಸಿ ಬಾರಿ ಜಾಹಿರಾತುಗಳೊಂದಿಗೆ ಮಾರುಕಟ್ಟೆಗೆ ಬಿಡುತ್ತಿವೆ. ತೀರಾ ವಿದ್ಯಾವಂತರಲ್ಲದ ರೈತರು ಹಿಂದೆಮುಂದೆ ನೋಡದೆ ಇಂತಹ ಬೀಜಗಳನ್ನು ಖರೀದಿಸಿ ಮೂರ್ಖರಾಗುತ್ತಿದ್ದಾರೆ. ಅದೇ ರೀತಿ ಗೊಬ್ಬರದಲ್ಲೂ ಇತ್ತೀಚೆಗೆ ಗುಣಮಟ್ಟ ಕಡಿಮೆಯಾಗುತ್ತಿದೆ. ಇನ್ನೇನು ಬಿತ್ತನೆ ಮಾಡುವ ಸಮಯಕ್ಕೆ ಮಾರುಕಟ್ಟೆಯಲ್ಲಿ ಬೀಜಗಳ ಅಭಾವ ಸೃಷ್ಠಿಸುವ ಕಾಳಸಂತೇಕೋರರು ಹೆಚ್ಚಾಗಿದ್ದಾರೆ. ಬಿತ್ತನೆಗೆ ನೆಲ ಹದಗೊಳಿಸುವ ಕೆಲಸವನ್ನು ಬಿಟ್ಟು ರೈತ ಪೇಟೆಗಳಲ್ಲಿ ಬೀಜ ಮತ್ತು ಗೊಬ್ಬರಗಳಿಗಾಗಿ ದಿನಗಟ್ಟಲೆ ಅಲೆಯುವ ಸ್ಥಿತಿಯಿದೆ. ಇಂತಹ ಸನ್ನಿವೇಶದಲ್ಲಿ ವರ್ತಕರು ಒಂದಕ್ಕೆರಡು ಬೆಲೆಯಲ್ಲಿ ಕಾಳಸಂತೆಯ ದಂದೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಸರಕಾರದ ಇಲಾಖೆಗಳು ಭ್ರಷ್ಟರಿಂದ ತುಂಬಿದ್ದು ಅವರ ತಿಜೋರಿಗಳು ಮಾತ್ರ ಭರ್ತಿಯಾಗುತ್ತಿವೆ.

ಪರಿಹಾರಗಳು:

ಸರಕಾರ ಬೀಜೋತ್ಪನ್ನ ಕಂಪನಿಗಳನ್ನು ನಿಯಂತ್ರಿಸುವ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಅಕಸ್ಮಾತ್ ಕಳಪೆ ಬೀಜಗಳಿಂದ ಬೆಳೆನಷ್ಟ ಉಂಟಾದರೆ ಸದರಿ ಕಂಪನಿಗಳೇ ರೈತರಿಗೆ ಪರಿಹಾರ ಕೊಡಬಲ್ಲಂತಹ ಕಾನೂನುಗಳನ್ನು ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಬೀಜ ಮತ್ತು ಗೊಬ್ಬರ ತಯಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿ ತಾನೇ ನೇರವಾಗಿ ರೈತರಿಗೆ ಸುಲಭದರದಲ್ಲಿ ತಲುಪಿಸುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕು. ಯಾವ ಪ್ರದೇಶ ಯಾವ ಬೆಳೆಗೆ ಅನುಕೂಲಕರವಾಗಿದೆಯೊ ಅಂತಹ ಬೆಳೆಯ ಬೀಜಗಳನ್ನು ಆಯಾ ಪ್ರದೇಶಗಳಲ್ಲಿ ಸರಕಾರವೇ ಒದಗಿಸುವ ವ್ಯವಸ್ಥೆಯೊಂದನ್ನು ಮಾಡಿದರೆ ರೈತರು ಖಾಸಗಿಯವರಿಂದ ಮೋಸ ಹೋಗುವ ಸಂದರ್ಭಗಳು ಕಡಿಮೆಯಾಗುತ್ತವೆ. ಕೃಷಿಬಜೆಟ್ ಎನ್ನುವ ನಾಟಕ ಮಾಡುತ್ತ ಲಕ್ಷಾಂತರ ರೂಪಾಯಿಗಳನ್ನು ಕೃಷಿಗೆ ನೀಡಲಾಗಿದೆಯೆಂದು ಜನರನ್ನು ನಂಬಿಸಿ ಕತ್ತು ಕುಯ್ಯುವ ನೀತಿಯನ್ನು ಬಿಟ್ಟು ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ನಮ್ಮ ರೈತರಿಗೆ ಉತ್ತಮ ಬೀಜ, ಗುಣಮಟ್ಟದ ಗೊಬ್ಬರಗಳು ದೊರೆಯಬಲ್ಲವು.

3.ಬೆಳೆದ ಬೆಳೆಗೆ ಸಿಗದ ನ್ಯಾಯಯುತ ಬೆಲೆ:

ಬಹುಶ: ನಮ್ಮ ರೈತರು ನಿಜವಾಗಿಯೂ ಎದುರಿಸುತ್ತಿರುವ ಬೀಕರ ಸಮಸ್ಯೆ ಎಂದರೆ ಇದೇ ಇರಬೇಕು. ಮೇಲೆ ನಾನು ಹೇಳಿದ ಎಲ್ಲ ಸಮಸ್ಯೆಗಳನ್ನು ಎದುರಿಸಿಯೂ ಒಂದಷ್ಟು ಬೆಳೆ ಕೈಗೆ ಬಂದರೆ ಅದನ್ನು ಮಾರುವಲ್ಲಿ ಆತ ಎದುರಿಸಬೇಕಾದ ತೊಂದರೆಗಳು ಅಗಾಧ ಮತ್ತು ಕ್ರೂರವೆನ್ನಬಹುದು. ಯಾಕೆಂದರೆ ಒಬ್ಬ ಸಣ್ಣ ಉದ್ಯಮಿ ಕೂಡ ತಾನು ಉತ್ಪಾದಿಸಿದ ಉತ್ಪನ್ನಕ್ಕೆ ತಾನೇ ಬೆಲೆ ಕಟ್ಟುವ ಕಾನೂನು ಬದ್ದ ಅಧಿಕಾರ ಹೊಂದಿದ್ದಾನೆ. ಇಡೀ ದೇಶದಲ್ಲಿ ಇಂತಹದೊಂದು ಹಕ್ಕು ಇಲ್ಲದಿರುವುದು ನಮ್ಮ ರೈತನಿಗೆ ಮಾತ್ರ.. ರೈತನೊಬ್ಬ ತಾನು ಬೆಳೆದ ಬೆಳೆಗೆ ತಾನು ಖರ್ಚು ಮಾಡಿರುವ ಹಣವನ್ನು, ತಾನು ನೀಡಿದ ಶ್ರಮವನ್ನು ಲೆಕ್ಕ ಹಾಕಿ ಬೆಲೆ ನಿಗದಿಪಡಿಸುವಷ್ಟು ವಿದ್ಯಾವಂತನು ಬುದ್ದಿವಂತನೂ ಆಗಿಲ್ಲ. ಹೋಗಲಿ ಆಯಾ ಪ್ರದೇಶಗಳ ಕೃಷಿ ಅಧಿಕಾರಿಗಳಾದರು ಇದನ್ನು ಮಾಡುತ್ತಾರೆ ಎಂದರೆ ಇಲ್ಲ. ಉದಾಹರಣೆಗೆ ಕಬ್ಬಿನ ಬೆಲೆ ನಿಗದಿ ಮಾಡುವವರು ಸಕ್ಕರೆ ಕಾರ್ಖಾನೆಯವರು ಇಲ್ಲ ಆಲೆಮನೆಯವರು. ಇನ್ನು ಬತ್ತದ ಬೆಲೆ ನಿಗದಿ ಮಾಡುವವರು ರೈಸ್ ಮಿಲ್ ಮಾಲೀಕರು ಇಲ್ಲ ಬತ್ತದ ವ್ಯಾಪಾರಿಗಳು. ಹೀಗೆ ರೈತ ಬೆಳೆಯುವ ಎಲ್ಲ ಬೆಳೆಗಳ ಬೆಲೆಯನ್ನೂ ಯಾವುದೇ ಶ್ರಮ ಹಾಕದ ಬಿಳಿ ಬಟ್ಟೆಯ ವರ್ತಕರು ನಿಗದಿ ಮಾಡುವುದರಿಂದ ರೈತನಿಗೆ ದೊರೆಯಬೇಕಾದ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಇನ್ನು ಸರಕಾರ ರಚಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಗಳ ಹಣೇಬರಹವೂ ಇದೇ ಆಗಿದೆ. ಅಲ್ಲಿ ಠಳಾಯಿಸುವ ಮದ್ಯವರ್ತಿಗಳು ರೈತರ ಬೆಳೆಗೆ ಕಡಿಮೆ ಬೆಲೆ ಕಟ್ಟಿ ಖರೀಧಿಸಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆ. ಒಬ್ಬ ದಲ್ಲಾಳಿ ಕಟ್ಟಿದ ಬೆಲೆಯನ್ನು ಮೀರಿ ಇನ್ನೊಬ್ಬ ದಲ್ಲಾಳಿ ಬೆಲೆ ಕಟ್ಟುವುದಿಲ್ಲ. ಅಂತಹದೊಂದು ಮಾಫಿಯಾ ರಚಿಸಿಕೊಂಡಿರುವ ವರ್ತಕರು ಮತ್ತು ದಲ್ಲಾಳಿಗಳು ರೈತರನ್ನು ನಿರಂತರವಾಗಿ ಸುಲಿಗೆಗೆ ಒಳಪಡಿಸುತ್ತಿದ್ದಾರೆ. ಹೀಗೆ ತಾನು ಕಷ್ಟಪಟ್ಟು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರಲಾಗದ ರೈತ ನಷ್ಟವನ್ನನುಭವಿಸುತ್ತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. 

ಪರಿಹಾರ:

ತಾನು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರುವ ಹಕ್ಕು ರೈತನಿಗೆ ದೊರೆಯುವವರೆಗೂ ರೈತನ ಈ ಬವಣೆ ತಪ್ಪಿದ್ದಲ್ಲ. ಆದ್ದರಿಂದ ರೈತನೊಬ್ಬ ಬೆಳೆದ ಬೆಳೆಗೆ ಆ ವರ್ಷದ ಮಾರುಕಟ್ಟೆಯ ಸೂಚ್ಯಂಕವನ್ನು ಆಧರಿಸಿ, ರೈತ ಖರ್ಚು ಮಾಡಿರಬಹುದಾದ ಹಣ ಮತ್ತು ಶ್ರಮವನ್ನು ಲೆಕ್ಕ ಹಾಕಿ ಸರಕಾರವೇ ಒಂದು ನ್ಯಾಯಯುತ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ತಾನೇ ಪ್ರಾರಂಭಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಯಲ್ಲಿನ ದಲ್ಲಾಳಿಗಳನ್ನು ಹೊರ ಹಾಕಿ, ಇತ್ತೀಚೆಗೆ ಕೆಲವು ಕಡೆ ಜಾರಿಗೆ ತಂದಿರುವ ಆನ್ ಲೈನ್ ಮಾರುಕಟ್ಟೆಯ ವ್ಯವಸ್ಥೆಯನ್ನು ರೂಪಿಸಬೇಕು. ಹೀಗಾದಾಗ ಮಾತ್ರ ರೈತನಿಗೆ ನ್ಯಾಯಯುತ ಬೆಲೆ ದೊರೆಯುವ ಸಾದ್ಯತೆ ಇದೆ.

4. ದಾಸ್ತಾನುಗಾರಗಳ ಕೊರತೆ.

ಇನ್ನು ರೈತರು ಬೆಳೆದ ಹಲವು ಬೆಳೆಗಳು ಬೇಗನೇ ಹಾಳಾಗುವ ಸಾದ್ಯತೆಗಳಿದ್ದು( ಉದಾಹರಣೆಗೆ ತರಕಾರಿ,ಹಣ್ಣುಗಳು) ಅವನ್ನು ಸಂಗ್ರಹಿಸಿಡಲು ಶಾಶ್ವತವಾದ ಶೈತ್ಯಾಗಾರಗಳಾಗಲಿ ದಾಸ್ತಾನುಮಳಿಗೆಗಳಾಗಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ರೈತರು ಬೆಳೆದ ಹೆಚ್ಚುವರಿ ಬೆಳೆಯನ್ನು ಅವನೇ ಸ್ವತ: ನಾಶ ಮಾಡಬೇಕಾದ ಪರಿಸ್ಥಿತಿ ಇದೆ. ಸರಕಾರದ ಅಂಕಿಅಂಶಗಳೇ ಹೇಳುವಂತೆ ರೈತರು ಬೆಳೆದ ಶೇಕಡಾ 40ರಿಂದ 45 ರಷ್ಟು ಬೆಳೆಗಳು ಸಾಕಷ್ಟು ಶೈತ್ಯಾಗಾರಗಳ ಕೊರತೆಯಿಂದಲೇ ನಾಶವಾಗುತ್ತಿವೆ.ಕೆಲವು ಹೆಚ್ಚು ಬತ್ತ ಬೆಳೆಯುವ ಪ್ರದೇಶಗಳಲ್ಲಿರುವ ಸರಕಾರಿ ಗೊಡೌನುಗಳು ವ್ಯಾಪಾರಿಗಳ ಮಾಲುಗಳ ಸಂಗ್ರಹಣೆಗಾಗಿ ಮಾತ್ರ ಬಳಕೆಯಾಗುತ್ತಿದ್ದು ಸಣ್ಣ ರೈತರ ಬೆಳೆಗಳನ್ನು ಸಂಗ್ರಹಿಸಿಡಲು ದೊರೆಯುತ್ತಿಲ್ಲ

ಪರಿಹಾರಗಳು:

ಸರಕಾರಗಳು ಪ್ರತಿ ತಾಲ್ಲೂಕಿನಲ್ಲೂ ಅಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ದಾಸ್ತಾನು ಮಳಿಗೆಗಳನ್ನೂ ಶೈತ್ಯಾಗಾರಗಳನ್ನೂ ಕಟ್ಟಿ ಕಡಿಮೆದರದಲ್ಲಿ ರೈತರಿಗೆ ನೀಡುವ ಕಾರ್ಯ ಮಾಡಬೇಕಿದೆ. ಉದಾಹರಣೆಗೆ ಹೆಚ್ಚಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಶೈತ್ಯಾಗಾರಗಳನ್ನು, ಕೊಳೆತುಹೋಗದ ಬೆಳೆಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಗೋಡೌನುಗಳನ್ನು ನಿರ್ಮಾಣ ಮಾಡಬೇಕು.

4. ಕೃಷಿಗೆ ಪೂರಕವಾದ ಉದ್ದಿಮೆಗಳು:

ನಮ್ಮ ದೇಶದ ದೊಡ್ಡ ದುರಂತವೆಂದರೆ ಕೃಷಿಗೆ ಪೂರಕವಾದ ಉದ್ಯಮಗಳ ಸಂಖ್ಯೆ ತೀರಾ ಅಲ್ಪಪ್ರಮಾಣದಲ್ಲಿರುವುದು. ಡೆನ್ಮಾರ್ಕ ಅಂತಹ ದೇಶಗಳಲ್ಲಿ ಹಾಲು ಉತ್ಪಾದನೆಗೆ ಪೂರಕವಾದ ಹಲವಾರು ಡೈರಿ ಉದ್ಯಮಗಳಿದ್ದು, ಅದೇ ದೊಡ್ಡ ಉದ್ಯಮವಾಗಿ ಇಂದು ಬೆಳೆದು ನಿಂತಿದೆ. ಆದರೆ ಇಂಡಿಯಾದಲ್ಲಿ ವಿಮಾನ ತಯಾರಿಕಾ ಉದ್ಯಮಗಳಿಗೆ, ಕಂಪ್ಯೂಟರ್ ಉದ್ಯಮಗಳಿಗೆ ಆಧ್ಯತೆ ನೀಡಲಾಗಿದೆಯೇ ಹೊರತು ಕೃಷಿಗೆ ಪೂರಕವಾದ ಯಾವುದೇ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸರಕಾರಗಳು ವಿಫಲವಾಗಿವೆ.

ಪರಿಹಾರಗಳು:

ಸರಕಾರಗಳು ಇನ್ನಾದರು ಮನಸ್ಸು ಮಾಡಿ ನಮ್ಮ ಕೃಷಿಗೆ ಸಹಾಯಕವಾಗಬಲ್ಲಂತಹ ಉದ್ದಿಮೆಗಳನ್ನು ಸ್ಥಾಪಿಸಬೇಕಿದೆ. ಹೆಚ್ಚು ಟೊಮೋಟೊ ಬೆಳೆಯುವ ತಾಲ್ಲೂಕಿನಲ್ಲಿ ಜಾಮ್ ತಯಾರಿಸಬಲ್ಲಂತಹ ಘಟಕಗಳನ್ನೂ, ಹೆಚ್ಚು ಹಣ್ಣುಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಹಣ್ಣಿನರಸ ತಯಾರಿಸುವ ಉದ್ದಿಮೆಗಳನ್ನು ಸ್ಥಾಪಿಸಬೇಕು. ತನ್ಮೂಲಕ ಹೆಚ್ಚುವರಿಯಾದ ಈ ಬೆಳೆಗಳನ್ನು ಕಾರ್ಖಾನೆಗಳು ಖರೀಧಿಸಿ ರೈತರಿಗೆ ಸಹಾಯಕವಾಗಬಲ್ಲವು. ಇಂತಹ ಉದ್ದಿಮೆಗಳನ್ನು ಪ್ರಾರಂಬಿಸಲು ಮುಂದೆ ಬರುವ ಖಾಸಗಿಯವರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವುದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹವೂ ರೈತರಿಗೆ ಆರ್ಥಿಕ ಲಾಭವೂ ಆಗುವುದು ಖಚಿತ.

5. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಕೃಷಿಭೂಮಿ:

ಇವತ್ತು ಜನಸಂಖ್ಯೆ ಜಾಸ್ತಿಯಾದಂತೆ ಭೂಮಿಗಾಗಿ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹೀಗಾಗಿ ನಗರಗಳ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ರಿಯಲ್ ಎಸ್ಟೇಟ್ ದಂದೇ ಕೋರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕು ಕೇಂದ್ರಗಳ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಗಳು ಅನ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತ ರೈತರು ಭೂರಹಿತರಾಗಿ ಕೃಷಿ ಉತ್ಪಾದನೆ ದಿನೇ ದಿನೇ ಕುಸಿಯುತ್ತಿದೆ. 

ಪರಿಹಾರ:

ಆದ್ದರಿಂದ ಪ್ರತಿ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟ್ಟಿಯನ್ನು ಗುರುತಿಸಿ ಅದರಿಂದ ಹೊರಗಿರುವ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗದಂತೆ ಕಾನೂನು ರಚಿಸಬೇಕು. ಇದರಿಂದ ವ್ಯಾಪ್ತಿ ಮೀರಿ ನಗರಗಳು ಬೆಳೆಯುವುದನ್ನು ಹಾಗು ಕೃಷಿ ಭೂಮಿಯ ದುರ್ಬಳಕೆಯನ್ನೂ ತಡೆದಂತಾಗುತ್ತದೆ. 

ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸರಕಾರಗಳು ಇಂತಹ ಯೋಜನೆಗಳನ್ನು ನಾಳೆ ಬೆಳಿಗ್ಗೆಯೇ ಜಾರಿಗೆ ತರುತ್ತವೆಯೆಂಬ ನಂಬಿಕೆ ನನಗಿಲ್ಲ. ಆದರೆ ಆ ದಿಕ್ಕಿನಲ್ಲಿ ಯೋಚಿಸಿ ಹೋರಾಟ ನಡೆಸಬಹುದಾದ ರೈತಪರ ಸಂಘಟನೆಗಳು ಇಂತಹ ನಿರ್ದಿಷ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಲು ಇದು ಸಹಕಾರಿಯಾಗಬಲ್ಲೆದೆಂಬುದು ನನ್ನ ಆಶಯ.

2 comments:

  1. ನೀರಿನ ನಿರ್ವಹಣೆಗೆ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಮಾದರಿಯನ್ನು ಅವರವರ ಗ್ರಾಮಗಳಲ್ಲಿ ಅನುಸರಿಸಲು/ಅಳವಡಿಸಲು ಯಾವುದೇ ದೊಣ್ಣೆನಾಯಕನ/ರಾಜ್ಯದ/ನ್ಯಾಯಾಧಿಕರಣದ ಅಪ್ಪಣೆಯನ್ನೂ ಕಾಯಬೇಕಾಗಿಲ್ಲ ಮತ್ತು ಇದನ್ನು ಅಳವಡಿಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಾಲೇಗಾವ್ ಸಿದ್ಧಿ ವಾರ್ಷಿಕ ೪೦೦-೫೦೦ ಮಿ.ಮೀ. ಮಾತ್ರ ಮಳೆ ಪಡೆಯುವ ಒಣ ಪ್ರದೇಶ. ಇಂಥ ಪ್ರದೇಶದಲ್ಲಿ ಮಳೆನೀರು ಕೊಯ್ಲು, ನೀರಿಂಗಿಸುವಿಕೆ, ತಡೆಗಟ್ಟ ನಿರ್ಮಾಣ, ಕೆರೆಗಳ ಹೂಳು ಎತ್ತಿ ನೀರು ಸಂಗ್ರಹ, ಇಂಗು ಗುಂಡಿಗಳ ರಚನೆ, ಮಳೆ ನೀರು ಹರಿದು ಹೋಗದಂತೆ ಬಂದು/ಕಣಿಗಳ ರಚನೆ ಮೊದಲಾದ ವಿಧಾನಗಳಿಂದ ವಾರ್ಷಿಕ ೩೦೦-೩೫೦ ಎಕರೆಯಲ್ಲಿ ಒಂದು ಬೆಲೆ ತೆಗೆಯುತ್ತಿದ್ದಲ್ಲಿ ಇಂದು ವಾರ್ಷಿಕ ೧೫೦೦ ಎಕರೆಯಲ್ಲಿ ಎರಡು ಬೆಳೆ ತೆಗೆಯುವಷ್ಟು ನೀರು ಲಭ್ಯವಾಗುತ್ತಿದೆ. ಮೊದಲು ದೈನಿಕ ೩೦೦ ಲೀ. ಹಾಲು ಉತ್ಪಾದನೆಯಾಗುತ್ತಿದ್ದ ಗ್ರಾಮದಲ್ಲಿ ಇಂದು ೪೦೦೦ ಲೀ. ದೈನಿಕ ಹಾಲು ಉತ್ಪಾದನೆ ಸಾಧ್ಯವಾಗಿದೆ. ಇದರಿಂದ ರೈತರ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಸಾಧ್ಯವಾಗಿದೆ.

    ಹೀಗಿದ್ದರೂ ಈ ವರ್ಷದ ಭೀಕರ ಬರಗಾಲದಲ್ಲಿ ರಾಲೇಗಾವ್ ಸಿದ್ಧಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕಾಗಿ ಬಂದಿದೆ ಎಂಬ ವರದಿ ಇದೆ. ಇದರಿಂದ ಚಿಂತಿತರಾದ ಅಣ್ಣಾ ಹಜಾರೆ ಇದರ ಕಾರಣಗಳನ್ನು ಹುಡುಕಿದಾಗ ಗ್ರಾಮದಲ್ಲಿ ಹಲವಾರು ಖಾಸಗಿ ಕೊಳವೆಬಾವಿ ತೋಡಿ ನೀರನ್ನು ಅತಿಯಾಗಿ ಉಪಯೋಗಿಸಿದ್ದೇ ಕಾರಣ ಎಂದು ಕಂಡುಕೊಂಡು ಈ ವರ್ಷ ಗ್ರಾಮದಲ್ಲಿರುವ ಎಲ್ಲಾ ಕೊಳವೆಬಾವಿಗಳನ್ನು ಸಿಮೆಂಟ್ ಕಾಂಕ್ರೀಟ್ ತುಂಬಿಸಿ ಮುಚ್ಚುವ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ವರದಿ ಇದೆ. ಈ ಕ್ರಮದಿಂದ ಮುಂಬರುವ ವರುಷಗಳಲ್ಲಿ ಬರ ಬಂದರೂ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದು ಎಂದು ಅಣ್ಣಾ ಹಜಾರೆ ಆತ್ಮವಿಶ್ವಾಸದಿಂದ ಹೇಳುತ್ತಾರೆ.

    ರಾಲೇಗಾವ್ ಸಿದ್ಧಿಯ ಯಶಸ್ಸನ್ನು ಕರ್ನಾಟಕದ ಮಳೆ ಕಡಿಮೆ ಬೀಳುವ ಎಲ್ಲ ಗ್ರಾಮಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಇದಕ್ಕೆ ಸಂಘಟನೆಗಳಲ್ಲಿ ಜಾಗೃತಿ ಮೂಡಬೇಕಾಗಿದೆ.

    ReplyDelete