May 30, 2016

ಆತಂಕದ ಸುಳಿಯಿಂದೊರಬಂದ ಬದುಕಿನ ಸುಂದರತೆ

ಡಾ. ಅಶೋಕ್. ಕೆ. ಆರ್
30/05/2016
ಮಲೆನಾಡಿನ ಮಡಿಲಲ್ಲಿರುವ ಸುಂದರ ಹಳ್ಳಿಯದು. ಒಂದಷ್ಟು ಸಾಬರಿದ್ದಾರೆ ಒಂದಷ್ಟು ಹಿಂದೂಗಳಿದ್ದಾರೆ. ಒಂದು ಮಸೀದಿಯಿದೆ ಒಂದು ಮಠವಿದೆ. ಒಬ್ಬ ಮೌಲ್ವಿಯಿದ್ದಾನೆ ಒಬ್ಬ ಮಠದಯ್ಯನಿದ್ದಾನೆ. ಇದೇ ಊರಿನಲ್ಲಿ ಜನರ ಸುಲಿಯುವ ಬಡ್ಡಿ ವ್ಯಾಪಾರಿ ಶೆಟ್ಟಿಯಿದ್ದಾನೆ. ನಗರದಿಂದ ದೂರವಿರುವ ಬೆಟ್ಟದ ಮೇಲಿರುವ ಹಳ್ಳಿಯ ಜನರಿಗೆ ಸಾಮಾನು ಸರಂಜಾಮನ್ನು ಕತ್ತೆ ಮೇಲೆ ಹೊತ್ತು ತರುವ ಅದೇ ಊರಿನ ಬುಡೇನ ಸಾಬನಿದ್ದಾನೆ. ಇಂತಿಪ್ಪ ಬುಡೇನ ಸಾಬನಿಗೆ ಮೂವರು ಹೆಣ್ಣುಮಕ್ಕಳು, ಅವರೆಲ್ಲರೂ ನಿಖಾ ವಯಸ್ಸಿಗೆ ಬಂದಿದ್ದಾರೆ. ಎರಡನೇ ಮಗಳಿಗೆ ನಿಖಾ ಗೊತ್ತಾಗಿದೆ. ಮೊದಲ ಮಗಳು ಶಬ್ಬುವಿನ ಮದುವೆಯಾಗದೆ ಎರಡನೇ ಮಗಳ ಮದುವೆ ಮಾಡಲು ಬುಡೇನ ಸಾಬನಿಗೆ ಮನಸ್ಸಿಲ್ಲ. ಮೊದಲ ಮಗಳಿಗೆ ನಿಖಾ ನಿಕ್ಕಿಯಾಗುತ್ತಿಲ್ಲ. ಕಾರಣ ಆಕೆ ಮೂಗಿ. ಮಾತು ಬರದ ಒಳ್ಳೆ ಮನಸ್ಸಿನ ಹುಡುಗಿಯ ಮದುವೆಯ ಚಿಂತೆ ಬುಡೇನ ಸಾಬನ ಜೀವನೋತ್ಸಾಹವನ್ನೇನೂ ಕಸಿದಿರುವುದಿಲ್ಲ. 

ಬೆಟ್ಟದ ಮೇಲಿನ ದರ್ಗಾಕ್ಕೆ ಹೋಗುವವರು ಮಸೀದಿಯಲ್ಲಿ ತಂಗಿ ಹೋಗುವುದು ಸಾಮಾನ್ಯ. ಹೀಗೇ ದರ್ಗಾಕ್ಕೆಂದು ಹೋಗಲು ಬಂದ ವಾಸೀಮನೆಂಬ ಅನಾಥ ಹುಡುಗ ಮಸೀದಿಯಲ್ಲೇ ಉಳಿದುಕೊಳ್ಳುತ್ತಾನೆ. ಮೌಲ್ವಿ ಸಾಹೇಬರಿಗೆ ಹುಷಾರಿಲ್ಲದಾಗ ಊರಿನ ಜನರಿಗೆ ನಮಾಜು ಮಾಡಿಸುವುದಕ್ಕೆ ಮುಂದಾಳತ್ವ ವಹಿಸುತ್ತಾನೆ. ನಮಾಜು ಮಾಡಿಸಿದರಷ್ಟೇ ಸಾಲದು, ಜನರ ಕಷ್ಟಕ್ಕೂ ನೆರವಾಗಬೇಕು ಎಂದು ಹೇಳುತ್ತಾ ಬಡ್ಡಿ ವ್ಯಾಪಾರಿ ಶೆಟ್ಟಿಯಿಂದ ಸಾಲಕ್ಕೆ ದುಡ್ಡು ತೆಗೆದುಕೊಂಡು ತೊಂದರೆಗೀಡಾಗಿದ್ದ ಮುಶ್ತಾಕನ ಕುಟುಂಬಕ್ಕೆ ನೆರವಾಗುತ್ತಾನೆ. ಮುಶ್ತಾಕನನ್ನು ಅರಬ್ಬಿಗೆ ದುಡ್ಡು ದುಡಿಯಲು ಕಳುಹಿಸುತ್ತಾನೆ. ಊರಿನ ಇತರ ಸಾಬರು ನಮ್ಮನ್ನೂ ಅರಬ್ಬಿಗೆ ಕಳುಹಿಸಿ ಪುಣ್ಯ ಕಟ್ಟಿಕೋ ಎನ್ನುತ್ತಾರೆ. ಈ ಮಧ್ಯೆ ಮೌಲ್ವಿಯ ಸಲಹೆಯಂತೆ ಬುಡೇನ ಸಾಬನ ದೊಡ್ಡ ಮಗಳ ನಿಖಾ ವಾಸೀಮನೊಂದಿಗೆ ನಡೆಯುತ್ತದೆ. ವಾಸೀಮ ಮನೆ ಅಳಿಯನಾಗಿ, ಬುಡೇನ ಸಾಬನ ಕೆಲಸಗಳನ್ನೆಲ್ಲ ಇಚ್ಛೆಯಿಂದ ಮಾಡುತ್ತ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಕಡಿಮೆ ಮಾತಿನ, ಸಹಾಯ ಮನೋಭಾವದ, ಧರ್ಮಬೀರು ವಾಸೀಮನೇ ಆತಂಕದ ಸುಳಿಯನ್ನೊತ್ತು ತರುತ್ತಾನೆ ಎಂಬ ಸುಳಿವೂ ಬುಡೇನ ಸಾಬನ ಕುಟುಂಬಕ್ಕಾಗಲೀ ಊರವರಿಗಾಗಲೀ ತಿಳಿಯುವುದೇ ಇಲ್ಲ.
ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.

ವಾಸೀಮ ಧರ್ಮಬೀರುವಲ್ಲ, ಧರ್ಮಾಂಧ ಎಂದು ಒಂದೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್. ಬುಡೇನ ಸಾಬರಿಗೆ ಮಠದಯ್ಯ ಆಪ್ತ. ಮಠದಲ್ಲಿ ಕುಳಿತು ಮಠದಯ್ಯನವರೊಡನೆ ಹರಟುತ್ತ ಕಡ್ಲೆಕಾಯಿ ಮೆಲ್ಲುತ್ತಿರುವಾಗ ವಾಸೀಮ್ ಮತ್ತು ಶಬ್ಬು ಬರುತ್ತಾರೆ. ಹಿಂದೂ ಮಠದಲ್ಲಿ ಸಾಬರು ಕುಳಿತು ಮಾತನಾಡುವುದು, ತನ್ನ ಹೆಂಡತಿ ಆ ಮಠದಯ್ಯನಿಗೆ ಬೇಕಾದ ಗಿಡಮೂಲಿಕೆಗಳನ್ನು ತಂದುಕೊಡುವುದು ವಾಸೀಮನಿಗೆ ಸರಿ ಕಾಣುವುದಿಲ್ಲ. ತಗಪ್ಪ ತಿನ್ನು ಎಂದು ಮಠದಯ್ಯ ವಾಸೀಮನಿಗೆ ಎರಡು ಬಾಳೆಹಣ್ಣು ಕೊಡುತ್ತಾನೆ. ನಾನು ಹೊರಗಿರ್ತೀನಿ ಎಂದ್ಹೇಳಿ ಬರುವ ವಾಸೀಮ್ ಅದನ್ನು ತಿನ್ನದೆ ಹಾಗೇ ಜಗುಲಿಯ ಮೇಲಿಡುತ್ತಾನೆ. ಅನ್ಯ ಮತದವರು ಕೊಟ್ಟಿದ್ದನ್ನೂ ತಿನ್ನದಷ್ಟೂ ಮತಾಂಧ ವಾಸೀಮ್. ಆತ ಈ ಕಾಡಳ್ಳಿಗೆ ಬಂದ ಉದ್ದೇಶ ನಗರದಲ್ಲಿ ಬಾಂಬು ಸ್ಪೋಟಿಸಿ ಅಮಾಯಕರನ್ನು ಹತ್ಯೆಗೈದು ಮತ್ತೆ ಕಾಡಳ್ಳಿಯಲ್ಲಿ ಸುಲಭವಾಗಿ ತಲೆಮರೆಸಿಕೊಂಡುಬಿಡಬಹುದೆಂದು. ಆಗೀಗ ಅವನ ಭಯೋತ್ಪಾದಕ ಗೆಳೆಯರೂ ಬರುತ್ತಾರೆ. ಕೊನೆಗೊಂದು ದಿನ ಬುಡೇನ ಸಾಬನಿಗೆ ತನ್ನಳಿಯನ ನಿಜರೂಪ ತಿಳಿಯುತ್ತದೆ, ಆಕಸ್ಮಿಕವಾಗಿ ಬುಡೇನ ಸಾಬನ ಕೈಯಿಂದಲೇ ವಾಸೀಮನೆಂಬ ಕ್ರಿಮಿಯ ಹತ್ಯೆಯಾಗಿಬಿಡುತ್ತದೆ. ಮನೆಯಲ್ಲಿ ಶಬ್ಬು ಗರ್ಭಿಣಿ, ಆಕೆಯ ಗಂಡ, ತನ್ನಳಿಯನನ್ನೇ ಕೊಲೆ ಮಾಡಿದ ಬುಡೇನ ಸಾಬನ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗಿ ಕೊನೆಗೇನು ಆತ ಹುಚ್ಚನಾಗುತ್ತಾನಾ? ಶಬ್ಬುವಿಗೆ ವಿಷಯ ತಿಳಿಯುತ್ತದಾ? ಊರವರ ದೃಷ್ಟಿಯಲ್ಲಿ ಎತ್ತರದ ಸ್ಥಾನದಲ್ಲಿದ್ದ ಬುಡೇನ ಸಾಬ ಅಳಿಯನ ಕೃತ್ಯದಿಂದ ಪಾತಾಳಕ್ಕಿಳಿದುಬಿಡುತ್ತಾನಾ? 

ಭಯೋತ್ಪಾದನೆಯ ಬಗೆಗಿನ ಚಿತ್ರವಿದು, ಆದರೆ ಆತಂಕದೊಂದಿಗೇ ನೋಡುವ ಚಿತ್ರವಲ್ಲ. ಇಡೀ ಚಿತ್ರದಲ್ಲೊಂದು ಲವಲವಿಕೆಯಿದೆ. ನಾಯಕ ಬುಡೇನ ಸಾಬನ ಪಾತ್ರವೇ ಹೊಸತನದ್ದು. ಕತ್ತೆ ಮೇಲೆ ಸಾಮಾನು ಹೊತ್ತು ತರುವ ಎಷ್ಟು ಪ್ರಮುಖ ಪಾತ್ರಗಳನ್ನು ನಾವು ಚಿತ್ರಗಳಲ್ಲಿ ನೋಡಿದ್ದೇವೆ ಹೇಳಿ? ಇನ್ನು ಅಕ್ಕ – ತಂಗಿಯರ ಪ್ರೀತಿ, ಮುನಿಸು, ಹಾಸ್ಯವೆಲ್ಲವೂ ಚಿತ್ರದಲ್ಲಿದೆ. ಕೋಮುಸಾಮರಸ್ಯವೆಂಬುದು ಬಲವಂತವಾಗಿ ಹೇರಿಕೊಳ್ಳುವಂತದ್ದಲ್ಲ, ಅದು ಸಹಜವಾಗಿ ಜನರ ನಡುವೆ ಅಸ್ತಿತ್ವದಲ್ಲಿರುವಂತದ್ದು ಎಂದು ತುಂಬಾ ನೈಜವಾಗಿ ತೋರಿಸಿದ್ದಾರೆ ನಿರ್ದೇಶಕರು. ಚಿತ್ರದ ಕೆಲವು ದೃಶ್ಯಗಳು, ಆಟದ ಪಿಸ್ತೂಲಿನ ಬಳಕೆ ಚಿತ್ರದ ಬಜೆಟ್ಟು ತುಂಬಾ ಕಡಿಮೆಯಿತ್ತೇನೋ ಎಂಬ ಭಾವ ಮೂಡಿಸಿದರೆ ಬಜೆಟ್ಟಿನ ಬಗ್ಗೆ ಮತ್ತಷ್ಟು ಯೋಚನೆ ಬರದಂತೆ ಮಾಡುವುದು ಛಾಯಾಗ್ರಹಣ. ಮತ್ತಿಡೀ ಚಿತ್ರಕ್ಕೊಂದು ದೃಶ್ಯಕಾವ್ಯದ ಭಾವವನ್ನು ಕೊಟ್ಟಿರುವುದು ಮಲೆನಾಡ ಹಸಿರ ಚಿತ್ರಣ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಬುಡೇನ ಸಾಬರ ಪಾತ್ರದಲ್ಲಿ ಒಂದಾಗಿಬಿಟ್ಟಿದ್ದಾರೆ. ಅವರ ಚಿತ್ರಜೀವನದಲ್ಲಿನ ಅತ್ಯುತ್ತಮ ಅಭಿನಯಗಳಲ್ಲಿ ಇದೂ ಒಂದು. ಶಬ್ಬು, ಮಠದಯ್ಯ ಮತ್ತು ಶೆಟ್ಟಿ ನೆನಪಿನಲ್ಲುಳಿಯುವಂತೆ ಅಭಿನಯಿಸಿದ್ದಾರೆ. ವಾಸೀಮನ ತಣ್ಣನೆಯ ಕ್ರೌರ್ಯ ಕಣ್ಣಲ್ಲೇ ವ್ಯಕ್ತವಾಗುವಷ್ಟು ಶಕ್ತವಾಗಿದೆ. ಇನ್ನುಳಿದ ಪಾತ್ರಗಳ ಅಭಿನಯವೂ ಚಿತ್ರಕ್ಕೆ ಪೂರಕವಾಗಿದೆ. ಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದೇನಲ್ಲ. ತಾಂತ್ರಿಕ ಲೋಪಗಳು ಹಲವಿವೆ. ಪಕ್ಕದ ನಗರದಲ್ಲೇ ಬಾಂಬು ಸ್ಪೋಟ ನಡೆದು ಅಮಾಯಕ ಮಕ್ಕಳು ಸಾವಿಗೀಡಾದರೂ ಊರಿನವರಲ್ಲಿ ಏನೊಂದೂ ಬದಲಾಗದಿರುವುದು ಕೊಂಚ ಅಚ್ಚರಿ ಮೂಡಿಸುತ್ತದೆ. ಅಲ್ಲಲ್ಲಿ ಚಿತ್ರಕತೆ ಕೊಂಚ ಬಿಗಿಯಾಗಿರಬೇಕೆಂದೆನ್ನಿಸುವುದು ಸುಳ್ಳಲ್ಲ. 

ಪ್ರಸ್ತುತ ವಿಷಯವೊಂದರ ಮೇಲೆ ಬೆಳಕು ಚೆಲ್ಲುವ ‘ಸುಳಿ’ ಸಿನಿಮಾ ಬಹುತೇಕರಿಗೆ ತಲುಪುವುದೇ ಇಲ್ಲ. ನಾನು ಸಿನಿಮಾ ಮಂದಿರಕ್ಕೆ ಹೋದಾಗ ನಮ್ಮನ್ನೂ ಸೇರಿಸಿ ಚಿತ್ರಮಂದಿರದಲ್ಲಿದ್ದದ್ದು ಎಂಟು ಮಂದಿಯಷ್ಟೇ. ಈ ಚಿತ್ರದ ಸೋಲಿಗೆ ಮೂವರು ಕಾರಣರು. ಚಿತ್ರದ ಬಗ್ಗೆ ಹೆಚ್ಚೇನು ಪ್ರಚಾರ ಕೊಡದೆ ಸಾಯಿಸಿದ ಚಿತ್ರತಂಡ, ಅನ್ಯಭಾಷೆಯ ಚಿತ್ರಗಳಿಗೆ ಸಲ್ಲದ ಪ್ರಚಾರ ಕೊಡುವ ದೃಶ್ಯವಾಹಿನಿಗಳಲ್ಲಿ ನಮ್ಮದೇ ಚಿತ್ರದೆಡೆಗಿರುವ ಅಸಡ್ಡೆ ಹಾಗೂ ಗೊತ್ತೇ ಇರದ ಭಾಷೆಯ ಉತ್ತಮ ಸಿನಿಮಾಗಳನ್ನು ಹುಡುಕುಡುಕಿ ನೋಡುವ ‘ಪ್ರಜ್ಞಾವಂತ’ ಪ್ರೇಕ್ಷಕರೂ ಈ ಚಿತ್ರವನ್ನು ನೋಡಿ ಇತರರಿಗೆ ತಿಳಿಸುವ ತೊಂದರೆ ತೆಗೆದುಕೊಳ್ಳದೇ ಇರುವುದು. ಆಮೇಲಿದ್ದೇ ಇದೆಯಲ್ಲ, ಕನ್ನಡದಲ್ಲಿ ಎಲ್ರೀ ಒಳ್ಳೆ ಸಿನಿಮಾಗಳು ಅನ್ನೋ ಹಳಹಳಿಕೆ. ಇಡೀ ಚಿತ್ರದಲ್ಲಿ ಸಾಬರ ಪಾತ್ರಗಳೇ ಇರುವುದು ಕೂಡ ಚಿತ್ರದ ಬಗ್ಗೆ ಎಲ್ಲೂ ಹೆಚ್ಚೂ ಚರ್ಚೆಯಾಗದಿರುವುದಕ್ಕೆ ಕಾರಣವೆಂದರೆ ತಪ್ಪಾಗಲಾರದು. ಕೊನೆಗೆ ಭಯೋತ್ಪಾದಕನನ್ನು ಸಾಬಿಯಲ್ಲದೇ, ಮಠದಯ್ಯನೋ ಶೆಟ್ಟಿಯೋ ಒಂದಷ್ಟು ವೀರಾವೇಶದಿಂದ ಕೊಂದುಬಿಟ್ಟಿದ್ದರೂ ಚಿತ್ರ ಗೆದ್ದುಬಿಡುತ್ತಿತ್ತೇನೋ! ಇರೋದ್ರಲ್ಲಿ ನಮ್ಮ ಕನ್ನಡ ಪತ್ರಿಕೆಗಳೇ ವಾಸಿ, ಈ ಚಿತ್ರದ ಬಗ್ಗೆ ಚೆಂದದ ವಿಮರ್ಶೆಗಳನ್ನು ಬರೆದು ಒಂದು ನಾಲಕ್ಕು ಜನರಿಗಾದರೂ ತಿಳಿಸಿವೆ. 6-5=2 ಯಿಂದ ಕನ್ನಡ ಸಿನಿಮಾರಂಗಕ್ಕೆ ಶುರುವಾದ ದೆವ್ವದ ಕಾಟ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ. ದೆವ್ವದ ಚಿತ್ರಗಳ ಸುಳಿಯಲ್ಲಿ ಸಿಲುಕಿಹಾಕಿಕೊಂಡಿರುವ ಪ್ರೇಕ್ಷಕನಿಗೆ ಮನುಷ್ಯನೇ ದೆವ್ವ ಮನುಷ್ಯನೇ ದೈವ ಎಂದು ತಿಳಿಸುವ ‘ಸುಳಿ’ ಚಿತ್ರ ಪ್ರಿಯವಾಗುವುದು ಹೇಗೆ ಸಾಧ್ಯ ಅಲ್ಲವೇ? ಚಿತ್ರಮಂದಿರದಿಂದತೂ ಸುಳಿ ಬೇಗ ಮರೆಯಾಗುತ್ತದೆ, ಟಿವಿಯಲ್ಲಿ ಬಂದಾಗಲಾದರೂ ನೋಡಿ.

May 27, 2016

ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದು ಕೊಡಿ!

bond paper congress
ಡಾ. ಅಶೋಕ್. ಕೆ. ಆರ್
27/05/2016
ಪಶ್ಚಿಮ ಬಂಗಾಳದಲ್ಲೊಂದು ಅಭೂತಪೂರ್ವ ಘಟನೆ ಸಂಭವಿಸಿದೆ. ನೆಹರೂ ಕುಟುಂಬದ ಮುಂದೆ ದೇಹಬಾಗಿಸಿ ಜೀ ಹುಜೂರ್ ಎಂಬ ಸಂಸ್ಕೃತಿಯನ್ನು ಹಾಸಿ ಹೊದ್ದಿಕೊಂಡಿರುವ ಕಾಂಗ್ರೆಸ್ಸಿನಲ್ಲಿ ಈ ಘಟನೆ ಸಂಭವಿಸುವುದರಿಂದ ಇದೇನು ತುಂಬಾ ಅಚ್ಚರಿಯ ಘಟನೆಯಲ್ಲ, ಗಾಬರಿಗೆ ಎದೆ ಹಿಡಿದುಕೊಂಡುಬಿಡುವಂತಹ ಆಘಾತದ ಘಟನೆಯೂ ಅಲ್ಲ! ಸೋನಿಯಾ ಗಾಂಧೀ ‘ಜೀ’ಗೆ, ರಾಹುಲ್ ಗಾಂಧೀ ‘ಜೀ’ಗೆ ಕೈಮುಗೀರಿ ಅಂದ್ರೆ ಕಾಲಿಗೆ ಬೀಳೋ ಜನರೇ ಹೆಚ್ಚಿರುವ ಕಾಂಗ್ರೆಸ್ಸಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ಬಾಂಡ್ ಪೇಪರ್’ ರಾಜಕಾರಣ ಶುರುವಾಗಿದೆ! 

ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉಸಿರೇ ನಿಂತು ಹೋಗಿದ್ದ ಕಾಂಗ್ರೆಸ್ಸಿಗೆ ಒಂದಷ್ಟು ಗಾಳಿ ಪಶ್ಚಿಮ ಬಂಗಾಳದಲ್ಲೂ ದಕ್ಕಿದೆ. ತೃಣಮೂಲ ಕಾಂಗ್ರೆಸ್ಸಿನ ಅಬ್ಬರದ ನಡುವೆಯೂ ನಲವತ್ತನಾಲ್ಕು ಸ್ಥಾನಗಳನ್ನು ಗಳಿಸಿಕೊಂಡು ಎಡಪಕ್ಷಗಳನ್ನು ಮೂರನೇ ಸ್ಥಾನಕ್ಕೆ ತಳ್ಳಿ ಅಧಿಕೃತ ವಿರೋಧ ಪಕ್ಷವಾಗಿದೆ. ಬಹುಶಃ ಈ ಸಾಧನೆ ಕಾಂಗ್ರೆಸ್ಸಿಗೇ ಆಶ್ಚರ್ಯ ಮೂಡಿಸಿರಬೇಕು. 2011ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗೆದ್ದ ಶಾಸಕರು ಚುನಾವಣೆ ಮುಗಿಯುತ್ತಿದ್ದಂತೆಯೇ ಗಂಟು ಮೂಟೆ ಕಟ್ಟಿಕೊಂಡು ತೃಣಮೂಲ ಕಾಂಗ್ರೆಸ್ಸಿನ ತೆಕ್ಕೆಗೆ ಬಿದ್ದುಬಿಟ್ಟಿದ್ದರು. ಈ ಸಲವೂ ಅಂತಹುದೇನಾದರೂ ನಡೆದು ಬಿಟ್ಟೀತೆಂದು ಹೆದರಿ ಬಂಗಾಳದ ಕಾಂಗ್ರೆಸ್ ಘಟಕ ಬಾಂಡ್ ಪೇಪರ್ ರಾಜಕಾರಣವನ್ನು ಪರಿಚಯಿಸಿದ್ದಾರೆ. ಬಾಂಡ್ ಪೇಪರ್ ಕಾಂಗ್ರೆಸ್ಸಿನ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ. ‘ನಾನು ಯಾವುದೇ ಪಕ್ಷವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಪಕ್ಷದ ರೀತಿ ನೀತಿಗಳು, ಪಕ್ಷದ ನಿರ್ಧಾರಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ’ ಎಂಬ ಗುಲಾಮತ್ವದ ಸಾಲುಗಳು ಎರಡು ಪುಟದ ಬಾಂಡು ಪೇಪರಿನುದ್ದಕ್ಕೂ ತುಂಬಿದೆ. ಕಾಂಗ್ರೆಸ್ಸಿನೊಳಗಿನ ಗುಲಾಮತ್ವ ಮನಸ್ಥಿತಿ ಮತ್ತೊಂದು ಮಜಲನ್ನೇ ತಲುಪಿದೆ ಎಂದು ಹೇಳಬಹುದು.

ಪಕ್ಷದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ, ಚುನಾವಣೆಗೆ ನಿಲ್ಲಲು ಟಿಕೇಟು ಕೊಟ್ಟಿದ್ದಕ್ಕೆ, ಮತ್ತು ಅಲ್ಲಿ ಇಲ್ಲಿ ಪಕ್ಷದ ಹೆಸರಿನಿಂದಲೇ ಗೆದ್ದಿದ್ದಕ್ಕೆ ಶಾಸಕರು ತಮ್ಮ ಪಕ್ಷದ ಮುಖಂಡರ ಅಣತಿಯಂತೆ ಇಂತಹುದೊಂದು ಬಾಂಡ್ ಪೇಪರ್ರಿಗೆ ಸಹಿ ಹಾಕುತ್ತಾರೆಂದ ಮೇಲೆ ಅವರಿಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದುಕೊಡುವುದು ನ್ಯಾಯಯುತವಾದುದಲ್ಲವೇ? ‘ನನಗೆ ನೀವೆಲ್ಲರೂ ಮತ ಹಾಕಿದ್ದಕ್ಕೆ ಧನ್ಯವಾದ. ನಾನು ಯಾವುದೇ ಜನವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಭ್ರಷ್ಟನಾಗುವುದಿಲ್ಲ, ನಿಮ್ಮ ಜನಪರ ಸಲಹೆಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಮತದಾರರಿಗೆ’ ಎಂಬ ಬಾಂಡು ಪೇಪರನ್ನ್ಯಾಕೆ ಶಾಸಕ – ಸಂಸದರು ಆಯ್ಕೆಯಾದ ತಕ್ಷಣ ಕೊಡುವಂತಾಗಬಾರದು?

ಮೇಕಿಂಗ್ ಹಿಸ್ಟರಿ: ಧರ್ಮದ ಪುನರುಜ್ಜೀವನ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
27/05/2016

ಈ ಸಂಪುಟದ ಪ್ರಾರಂಭದಲ್ಲಿ ನಾವೀಗಾಗಲೇ ನೋಡಿರುವಂತೆ ಬ್ರಿಟೀಷ್ ವಸಾಹತುಶಾಹಿ ಮೈಸೂರಿನಲ್ಲಿ ಕೈಗೊಂಬೆ ರಾಜನನ್ನು ಕೂರಿಸಿದ ತಕ್ಷಣ ಮಾಡಿದ ಕೆಲಸವೆಂದರೆ, ಟಿಪ್ಪು ರದ್ದುಮಾಡಿದ್ದ ಮಠ ಮತ್ತು ಬ್ರಾಹ್ಮಣರಿಗೆ ಕೊಡಲಾಗಿದ್ದ ಇನಾಮು ಮತ್ತು ದಾನಧರ್ಮದ ಹಣವನ್ನು ಮತ್ತೆ ಕೊಡುವಂತೆ ಮಾಡಿದ್ದು. ಜೊತೆಗೆ ಈ ಪ್ರತಿಗಾಮಿ ಸಂಸ್ಥೆಗಳಿಗೆ ಹೊಸದಾಗಿ ಮತ್ತಷ್ಟು ಸಹಾಯಧನವನ್ನು ನೀಡಲಾಯಿತು. ಇದು ಬ್ರಾಹ್ಮಣ ದಿವಾನನನ್ನು ನೇಮಿಸಲಾಗಿದ್ದ ಮೈಸೂರಿಗಷ್ಟೇ ಸೀಮಿತವಾಗಿದ್ದ ಪ್ರಕ್ರಿಯೆಯಾಗಿರದೆ ಉಪಖಂಡದಲ್ಲಿ ಬ್ರಿಟೀಷ್ ವಸಾಹತುಶಾಹಿ ಅಳವಡಿಸಿಕೊಂಡ ಸಾಮಾನ್ಯ ನೀತಿಗಳಲ್ಲೊಂದಾಗಿತ್ತು. ಉತ್ತರ ಕರ್ನಾಟಕ ಸುತ್ತುತ್ತಿದ್ದ ಥಾಮಸ್ ಮನ್ರೋ, 1818ರಲ್ಲಿ ಎಲ್ಫಿನ್ ಸ್ಟೋನಿಗೆ ಬರೆದ ಪತ್ರದಲ್ಲಿ ಊಳಿಗಮಾನ್ಯತೆಯ ಸಾಂಸ್ಕೃತಿಕ ಸಂಸ್ಥೆಗಳೆಡೆಗೆ ಬ್ರಿಟೀಷರ ನೀತಿಗಳೇನಿರಬೇಕೆಂದು ತಿಳಿಸುತ್ತಾನೆ: “ಎಲ್ಲಾ ದಾನ ಧರ್ಮಗಳು ಮತ್ತು ಧಾರ್ಮಿಕ ಖರ್ಚುಗಳು, ಅದೆಷ್ಟೇ ಮೊತ್ತದ್ದಾಗಿರಬಹುದು, ನನ್ನ ಯೋಚನೆಯಂತೆ ಅದನ್ನು ಮುಂದುವರಿಸಬೇಕು; ಅದರಲ್ಲಿನ ಬಹುತೇಕ ಭಾಗ ಕಾಲ ಸವೆದಂತೆ ಪ್ರತ್ಯೇಕವಾಗಿಬಿಡುತ್ತದೆ ಮತ್ತು ಖಾಸಗಿ ಹಕ್ಕುಗಳನ್ನು ಉಲ್ಲಂಘಿಸದೆ ಹಾಗೂ ಧಾರ್ಮಿಕ ಪೂರ್ವಾಗ್ರಹಗಳನ್ನು ತೊಡೆಯದೆ ಅದನ್ನು ಮುಟ್ಟಲಾಗುವುದಿಲ್ಲ. ಇದರಲ್ಲಿನ ಹೆಚ್ಚಿನ ಭಾಗ ಕೂಡ, ಅನಧಿಕೃತ ಸಹಾಯಧನ ಮತ್ತು ಮೋಸದಿಂದ ಪಡೆಯಲಾಗಿರುತ್ತದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನ ಬೇಡ. 

ನಾವು, ನನ್ನ ಯೋಚನೆಯಂತೆ ಧಾರ್ಮಿಕ ಸಂಸ್ಥೆಗಳು, ದಾನಧರ್ಮಗಳು, ಜಾಗೀರುಗಳು, ದೇಶಮುಖರು ಮತ್ತು ಇತರೆ ಸಾರ್ವಜನಿಕ ನೌಕರರನ್ನು ಇರುವಂತೆಯೇ ಉಳಿಸಬೇಕು….” (182) 

ಬುಚನನ್ನನ ತನಿಖೆಗಳು ಬ್ರಾಹ್ಮಣ ಮತ್ತು ಲಿಂಗಾಯತ ಮಠಗಳನ್ನು ಪೂರ್ಣಯ್ಯ ಮರುಸ್ಥಾಪಿಸಿದ ಅನೇಕ ದೃಷ್ಟಾಂತಗಳನ್ನು ನೀಡುತ್ತಾನೆ. ಇಕ್ಕೇರಿ ಪಾಳೇಗಾರರ ಲಿಂಗಾಯತ ಗುರುಗಳ ಉತ್ತರಾಧಿಕಾರಿಗಳಾದ ಹುಜಿನಿ ಸ್ವಾಮಿಯವರ ಉದಾಹರಣೆಯಾಗಿ ನೋಡಬಹುದು. (183) ಅದೇ ರೀತಿ ಕೋಲಾರದ ಜಾಮಗಲ್ಲಿನ ಜಂಗಮರಿಗೆ ಹೊಸದಾಗಿ ಸಹಾಯಧನವನ್ನು ನೀಡಲಾಯಿತು. (184) ಪೂರ್ಣಯ್ಯನ ಆಡಳಿತಾವಧಿಯಲ್ಲಿಯೇ ಕುಮಾರಪುರದ ಶ್ರೀವೈಷ್ಣವ ಬ್ರಾಹ್ಮಣರಿಗೆ ಬಿಳಿಗಿರಿರಂಗನಬೆಟ್ಟದ 22,300 ಎಕರೆ ದಟ್ಟ ಕಾಡನ್ನು ಸರ್ವಮಾನ್ಯವಾಗಿ ಉಡುಗೊರೆ ನೀಡಲಾಯಿತು, ಸೋಲಿಗ ಆದಿವಾಸಿಗಳ ಬದುಕನ್ನು ಆಕ್ರಮಿಸಲಾಯಿತು. (185) ಇದೇ ರೀತಿ ಶೃಂಗೇರಿ ಮಠಕ್ಕೆ 150 ಹಳ್ಳಿಗಳನ್ನು ಅಧಿಕೃತವಾಗಿ ಜಾಗೀರಾಗಿ ನೀಡಲಾಯಿತು. ಮಠದವರು ರೈತರ ಮೇಲೆ ಪರಾವಲಂಬಿಗಳಾಗಿ ಅಸ್ತಿತ್ವ ಉಳಿಸಿಕೊಂಡರು. 

ಮೈಸೂರು, ಬ್ರಿಟೀಷ್ ಆಕ್ರಮಣದ ವಿರುದ್ಧ ನಡೆಸಿದ ನಾಲ್ಕು ದಶಕದ ದೀರ್ಘ ಕದನದ ಸಮಯದಲ್ಲಿ, ವೈದಿಕ ಬ್ರಾಹ್ಮಣರ ಮತ್ತು ಮಠಾಧಿಪತಿಗಳಿಗಿದ್ದ ಸವಲತ್ತುಗಳನ್ನು ಕಿತ್ತುಕೊಂಡಿದ್ದ ಟಿಪ್ಪುವಿನ ವಿರುದ್ಧ ಪಾಳೇಗಾರರು ಮಾಡಿದಂತೆಯೇ ಈ ಬ್ರಾಹ್ಮಣರೂ ಮೋಸ ಮಾಡಿ ವಸಾಹತು ಆಕ್ರಮಣಕಾರರನ್ನು ಪ್ರೋತ್ಸಾಹಿಸಿದರು. ಧರ್ಮಸ್ಥಳದ ಹೆಗ್ಗಡೆ ಧರ್ಮಾಧಿಕಾರಿಗಳು ಉಜಿರೆಯ ಕೋಟೆಯನ್ನು ಟಿಪ್ಪು ಸುಲ್ತಾನನಿಂದ ವಶಪಡಿಸಿಕೊಳ್ಳಲು ಬ್ರಿಟೀಷರಿಗೆ ಕೊಟ್ಟ ಸಹಕಾರದ ಬಗ್ಗೆ ರಾಮಕೃಷ್ಣ ಮತ್ತು ಗಾಯಿತ್ರಿ ನಮಗೆ ತಿಳಿಸುತ್ತಾರೆ. (186) ಹಿಂದೂ ಊಳಿಗಮಾನ್ಯ ಪುರೋಹಿತರು ಬ್ರಿಟೀಷರು ಕರ್ನಾಟಕವನ್ನು ಅತಿಕ್ರಮಿಸುವುದಕ್ಕೆ ಶುಭ ಕೋರುವುದಷ್ಟೇ ಅಲ್ಲದೆ, ಜನರನ್ನು ಮತ್ತು ಸಾಮಗ್ರಿಗಳನ್ನು ಪೂರೈಸಿದರು; ಮೈಸೂರು ಸಂಪೂರ್ಣವಾಗಿ ವಿದೇಶಿ ಆಕ್ರಮಣಕಾರರ ವಶವಾಗುವುದಕ್ಕೆ ಮೊದಲೇ ವಸಾಹತುಶಾಹಿಯ ಮುಂದಾಳತ್ವದ ಪ್ರತಿಗಾಮಿ ಮೈತ್ರಿಕೂಟದ ಪ್ರಮುಖ ಭಾಗವಾದರು. 

ನಗರದ ಫೌಜದಾರಿಯೊಂದರಲ್ಲೇ ಬ್ರಾಹ್ಮಣರ 120 ಅಗ್ರಹಾರಗಳಿದ್ದವು ಎಂದು ಸಿದ್ಧಲಿಂಗಸ್ವಾಮಿ ತಿಳಿಸುತ್ತಾರೆ. (187) 

ಸೆಬಾಸ್ಟಿಯನ್ ಜೋಸೆಫರ ಗ್ರಂಥ State and the ritual in the nineteenth century Mysore ಪುಸ್ತಕ ಹೀಗೆ ಕೊನೆಯಾಗುತ್ತದೆ: “ವಸಾಹತು ಶಕ್ತಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಸಂಪ್ರದಾಯಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು, ಸಮಾಜವನ್ನು ಮೂಢನಂಬಿಕೆಯ ದಾಸ್ಯದಲ್ಲಿ, ಅಜ್ಞಾನದಲ್ಲಿ ಹಿಂದುಳಿಯುವಂತೆ ಮಾಡಲು”. (188) ಈ ಪ್ರಕ್ರಿಯೆಯ ವಿವರಗಳನ್ನು ಒದಗಿಸುತ್ತ ಸೆಬಾಸ್ಟಿಯನ್ ಹೇಳುತ್ತಾರೆ: “ಪೂರ್ಣಯ್ಯ ಬ್ರಿಟೀಷರ ಆಳ್ವಿಕೆಯಲ್ಲಿ ದಿವಾನರಾಗಿ ಅಧಿಕಾರ ವಹಿಸಿಕೊಂಡ ನಂತರ ದೊಡ್ಡ ಮಟ್ಟದಲ್ಲಿ ಹಣಕ್ಕೆ ಬದಲಾಗಿ ಭೂಮಿಯನ್ನು ವಿನಿಮಯ ಮಾಡಿಸಿದ್ದರು. ದೇವಸ್ಥಾನದ ಜಾಗಗಳನ್ನು, ಭಟ್ಟಮಾನ್ಯ ಅಥವಾ ಅಗ್ರಹಾರದ ಭೂಮಿಗಳನ್ನು ಪುನರ್ ಸ್ಥಾಪಿಸಿದರು. ಪೂರ್ಣಯ್ಯನವರ ಕೆಲವು ವರ್ಷದ ಆಳ್ವಿಕೆ ಪವಾಡದ ರೀತಿಯಲ್ಲಿ ದೇವಸ್ಥಾನಗಳ, ಛತ್ರಗಳ, ಮುಸಾಫಿರ್ ಖಾನಗಳ ಸಂಖೈಯನ್ನು ಹೆಚ್ಚಿಸಿತು. 

ಈ ಕೆಳಗಿನ ಪಟ್ಟಿ 1801ರಲ್ಲಿ ಮತ್ತು 1804ರಲ್ಲಿದ್ದ ಧಾರ್ಮಿಕ ಸಂಸ್ಥೆಗಳ ಅಂಕಿಸಂಖೈಯನ್ನು ನೀಡುತ್ತದೆ”. (188)


ಜಿ.ಹೆಚ್. ಗೋಪಾಲ್ ಊಳಿಗಮಾನ್ಯತೆಯ ಪುರೋಹಿತವರ್ಗದೆಡೆಗಿದ್ದ ಭಕ್ತಿಭಾವದ ಬಗೆಗಿನ ಮಾಹಿತಿಯನ್ನು ನೀಡುತ್ತಾರೆ. (189)ದಾನದತ್ತಿಯ ಸಂಸ್ಥೆಗಳಿಗೆ ಕೊಡುವ ಮೊತ್ತ 1810-1811ರಲ್ಲಿ 18,825 ಪಗೋಡಾಗಳಷ್ಟಿದ್ದರೆ 1829-30ರಷ್ಟೊತ್ತಿಗೆ 3,11,414 ಪಗೋಡಾ ಗಳಾಗಿತ್ತು (ಅಂದರೆ 9,34,242 ರುಪಾಯಿ). (190) ವಸಾಹತಿನ ಕೈಗೊಂಬೆ ಆಡಳಿತದ ಅರೆಊಳಿಮಾನ್ಯ ರಾಜರ ಅತ್ಯಂತ ದೊಡ್ಡ ಖರ್ಚು ಧರ್ಮದೆಡೆಗಾಗಿತ್ತು. 1829-30ರಲ್ಲಿ ಕೃಷ್ಣರಾಜ ಒಡೆಯರ್ ದಾನಕ್ಕೆಂದು ಕೊಟ್ಟ ಮೊತ್ತ, ಇದು ಧಾರ್ಮಿಕ ಕಾರ್ಯಗಳೆಡೆಗೆ ಮಾಡಿದ ಖರ್ಚಿನ ಒಂದಂಶ ಮಾತ್ರ, ಬ್ರಿಟೀಷರಿಗೆ ಕಕ್ಕುತ್ತಿದ್ದ ಮೊತ್ತದ ಮೂರನೇ ಒಂದಂಶಕ್ಕಿಂತ ಹೆಚ್ಚಿನದಾಗಿತ್ತು. ವಸಾಹತುಶಾಹಿಗಳ ಮುನ್ನಡೆ ಈ ಧಾರ್ಮಿಕ ಪ್ರತಿಗಾಮಿಗಳಿಗೆ ದೈವದತ್ತ ವರದಂತಾಯಿತು. ರಾಜ್ಯದ ಜೊತೆಗಿನ ಸಂಬಂಧ ಗಟ್ಟಿಗೊಳಿಸಿಕೊಂಡ ಈ ಧಾರ್ಮಿಕ ಪ್ರತಿಗಾಮಿಗಳು ಶತಮಾನದಿಂದ ಇಲ್ಲದಿದ್ದ ಬಲ ಪಡೆದರು ಮತ್ತು ತಮ್ಮ ಸಿದ್ಧಾಂತವನ್ನು ನೆಲೆಗೊಳಿಸಿಕೊಂಡರು.

ಈ ಧಾರ್ಮಿಕ ಪುನರುತ್ಥಾನ ಆ ಕಾಲದ ಸಾಮಾಜಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ವಸಾಹತು ಆಕ್ರಮಣದ ಅಘಾತವನ್ನು ಕಡಿಮೆಗೊಳಿಸಿದಂತೆ ಮಾಡಿತು. ವಸಾಹತು ಆಳ್ವಿಕೆ ಮತ್ತು ಊಳಿಗಮಾನ್ಯತೆಯ ಮರುಕಳಿಕೆಯ ಪರಿಣಾಮಗಳನ್ನು ತಗ್ಗಿಸುವ ಪ್ರತಿಔಷಧದಂತೆ ಕೆಲಸ ಮಾಡಿತು. ಈ ಧಾರ್ಮಿಕ ಸಂಸ್ಥೆಗಳು ಮಾರಣಾಂತಿಕ ಕರ್ಮ ಸಿದ್ಧಾಂತವನ್ನು ವೈಭವದ ಔದಾರ್ಯದೊಂದಿಗೆ ಪ್ರಸರಿಸದಿದ್ದರೆ ಕರ್ನಾಟಕವನ್ನು ವಸಾಹತುಶಾಹಿ ಶಕ್ತಿಗಳು ಇಷ್ಟು ಸುಲಭವಾಗಿ ವಶದಲ್ಲಿಟ್ಟುಕೊಳ್ಳುತ್ತಿದ್ದುದು ಅನುಮಾನವೇ.

ಟಿಪ್ಪು ಸುಲ್ತಾನನನ್ನು ದ್ರೋಹಿ ಎಂದು ಆರೋಪಿಸುವ ಹಿಂದೂ ಕೋಮುವಾದಿಗಳು ಒಡೆಯರ್ ಧಾರ್ಮಿಕ ಪ್ರತಿಗಾಮಿತನವನ್ನು ಪುನರ್ ಸ್ಥಾಪಿಸಿದ್ದರ ಬಗ್ಗೆ ಮೌನವಾಗಿದ್ದುಬಿಡುತ್ತಾರೆ. ಟಿಪ್ಪುವಿನ ವಿರುದ್ಧದ ತಮ್ಮ ದ್ವೇಷವನ್ನು ಹತ್ತಿಕ್ಕಲಾಗದೆ ಬಡಬಡಿಸುತ್ತಾರೆ.

ಮುಂದಿನ ವಾರ:
ಜಾತಿ ದೌರ್ಜನ್ಯದ ಹೆಚ್ಚಳ

May 26, 2016

ಧಾರವಾಡದಲ್ಲಿ ಮೇ ಸಾಹಿತ್ಯ ಮೇಳ 28 ಮತ್ತು 29ರಂದು

26/05/2016
ವಿಷಯ - ಸಮಕಾಲೀನ ಸವಾಲುಗಳು : ಹೊಸ ತಲೆಮಾರಿನ ಪ್ರತಿಸ್ಪಂದನೆ
೨೦೧೬, ಮೇ ೨೮ ಮತ್ತು ೨೯,
ಆಲೂರು ವೆಂಕಟರಾವ್ ಸಭಾಭವನ, ಧಾರವಾಡ
ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ

ಬೆಳಗ್ಗೆ 10 ಗಂಟೆಗೆ ಆರಂಭ. ಬನ್ನಿ ಗೆಳೆಯರೊಂದಿಗೆ.. ಹೊರಗಿನಿಂದ ಬರುವವರೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ಸಮಿತಿಯ ಸಂಚಾಲಕ ಸಮಿತಿ ಸಂಪರ್ಕಿಸಿ. ಡಾ. ಡಿ. ಬಿ ಗವಾನಿ(ಸಂಚಾಲಕರು) -9482931100
ಮೆಹಬೂಬ ನದಾಫ - 9844444826
ರಾಜಕುಮಾರ ಮಡಿವಾಳರ - 9886436020 
ಡಾ. ಶೌಕತ್ ಅಲಿ ಮೇಗಲಮನಿ -9448529867
ಪ್ರೇಮಾ ನಡುವಿನಮನಿ -9035261701 
ಬಸವರಾಜ ಮ್ಯಾಗೇರಿ-9972977789
ಮಧು ಬಿರಾದಾರ -9686645263

May 24, 2016

'ಹೊನಲಿಗೆ' ಮೂರು ವರುಷದ ಸಂಭ್ರಮ.

ಡಾ. ಅಶೋಕ್. ಕೆ. ಆರ್
ಭಾಷೆಯೊಂದು ನಿಂತ ನೀರೇ? ಅಥವಾ ಕಾಲದಿಂದ ಕಾಲಕ್ಕೆ ಅದರಲ್ಲಿ ಬದಲಾವಣೆಗಳಾಗಬೇಕಿರುವುದು ಅವಶ್ಯಕವೇ? ಇಂತಹುದೊಂದು ಪ್ರಶ್ನೆಗಳನ್ನು ಮೂಡಿಸುವುದು ನೀವು ಹೊನಲು (honalu.net ) ವೆಬ್ ಪುಟವನ್ನು ವೀಕ್ಷಿಸಿದಾಗ. ಅಲ್ಲಿ ಆಡು ಭಾಷೆಯ ಕನ್ನಡವನ್ನೇ 'ಎಲ್ಲರ ಕನ್ನಡದ' ಹೆಸರಿನಲ್ಲಿ ಹೆಚ್ಚು ಉಪಯೋಗಿಸಲಾಗಿದೆ. ಗ್ರಾಂಥಿಕ ಕನ್ನಡವನ್ನಷ್ಟೇ ಓದಿಕೊಂಡು ಬೆಳೆದವರಿಗೆ ಇದೇನಿದು ವಿಚಿತ್ರವೆಂದು ಅನ್ನಿಸುವುದು ಸಹಜ. ಇವರ ಈ ಪ್ರಯತ್ನ ಒಳ್ಳೆಯದಾ ಕೆಟ್ಟದ್ದಾ ಎಂದು ಇದಮಿತ್ಥಂ ಎಂದು ಹೇಳಿಬಿಡುವುದರ ಮೊದಲು ಹತ್ತಲವು ದಿಕ್ಕಿನಲ್ಲಿ ತೋಚಿದ ರೀತಿಯಲ್ಲಿ ಹರಿಯುವ ಭಾಷೆಗಷ್ಟೇ ಜೀವಂತಿಕೆ ಹಾಗೂ ಕಾಲದ ಮಿತಿಗಳನ್ನು ಮೀರಿ ಬೆಳೆಯುವ ಸಾಧ್ಯತೆಯಿರುವುದು ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಅತ್ಯವಶ್ಯಕ.
ಒಮ್ಮೆ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ, ಮನೆಯಲ್ಲಿ ಸ್ನೇಹಿತರೊಡನೆ ಅಷ್ಟು ಸರಾಗವಾಗಿ ಉಲಿಯುತ್ತಿದ್ದ ಕನ್ನಡ, ಶಾಲೆಗೆ ಬರುತ್ತಿದ್ದಂತೆ ಬ್ಬೆ ಬ್ಬೆ ಬ್ಬೆ ಎನ್ನಲಾರಂಭಿಸುತ್ತಿತ್ತು. ಧರಣಿ ಎಂದು ಬರೆಯುವ ಬದಲು ದರಣಿ ಎಂದು ಬರೆದುಬಿಟ್ಟರೆ ಮಹಾಪರಾಧವಾಗುತ್ತಿತ್ತು. ಇನ್ನು ಸಂಸ್ಕೃತ ಪದಗಳ ತತ್ಸಮ - ತದ್ಭವದ ಗೋಳಂತೂ ಅನುಭವಿಸಿದವರಿಗೇ ಗೊತ್ತು. ವ್ಯಾಕರಣ ಕಲಿಯಬೇಕು ಎನ್ನುವುದನ್ನು ಒಪ್ಪಬಹುದಾದರೂ ಭಾಷೆಯನ್ನು ಕಬ್ಬಿಣದ ಕಡಲೆಯನ್ನಾಗಿಸಿ, 'ಪಾಸಾದ್ರೆ ಸಾಕು, ಕನ್ನಡ ಪುಸ್ತಕ ಮುಟ್ಟಲ್ಲ' ಅನ್ನೋ ನಿರಭಿಮಾನವನ್ನೂ ಮೂಡಿಸಬಾರದಲ್ಲವೇ? ಇದಕ್ಕೆ ಉತ್ತರವಾಗಿ ಎಲ್ಲರ ಕನ್ನಡದ ಮೂಲಕ ಹೊನಲು ಎಂಬ ವೆಬ್ ಪುಟದ ಮೂಲಕ, ಅಂತರ್ಜಾಲದ ಮಟ್ಟಿಗೆ ಹೊಸ ಪ್ರಯತ್ನ ಪ್ರಾರಂಭವಾಗಿದೆ. 
ಹೊನಲು ತಂಡದ ಪ್ರಯತ್ನ ವಿಚಿತ್ರ ಎನ್ನಿಸಬಹುದು, ಅಸಹ್ಯ ಎನ್ನಿಸಬಹುದು, ಮೊನ್ನೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟಿಗೆ ಸಹೃದಯರೊಬ್ಬರು ಹೊನಲುವಿನದು ವಿಧ್ವಂಸಕ ಕೃತ್ಯ ಎಂದು ಹೇಳಿದ್ದರು. ಈ ರೀತಿಯ ಎಲ್ಲಾ ಟೀಕೆಗಳ ಹಿಂದಿರಬಹುದಾದ 'ಭಾಷಾ ಶುದ್ಧತೆ'ಯನ್ನು ನಮ್ಮ ತಲೆಗೆ ತುಂಬಿರುವುದು ಮತ್ತದೇ ನಮ್ಮ ಶಾಲಾ ದಿನಗಳು ಎಂದರೆ ತಪ್ಪಲ್ಲ. ಭಾಷೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು. ಈ ಹೊಸ ಪ್ರಯೋಗಗಳು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದಾದರೂ ಈ ಪ್ರಯೋಗಗಳೇ ಭಾಷೆಯನ್ನು ಜೀವಂತವಾಗಿಡುವ ಸಂಗತಿಗಳು ಎನ್ನುವುದು ಸತ್ಯ. ಪ್ರಯೋಗಗಳೇ ಇಲ್ಲದಿದ್ದರೆ, ನಾವಿನ್ನೂ ಹಳಗನ್ನಡದಲ್ಲೋ, ಅಥವಾ ಅದಕ್ಕೂ ಮುಂಚೆ ಇದ್ದಿರಬಹುದಾದ ಭಾಷಾಶೈಲಿಯಲ್ಲೋ ಮಾತನಾಡುತ್ತಿದ್ದೆವು, ಬರೆಯುತ್ತಿದ್ದೆವು. ಇದೇನಿದು ಹಳೆಗನ್ನಡ ಹಿಂಗಿದೆ ಎಂದೊಬ್ಬರಿಗ್ಯಾರಿಗೋ ಅನ್ನಿಸಿ ಸಿದ್ಧ ಮಾದರಿಯ ಹಾದಿಯಿಂದ ಹೊರಬಂದಿದ್ದಕ್ಕೇ ಅಲ್ಲವೇ ನಾವಿವತ್ತೂ ಬರೆಯುತ್ತಿರುವ ಕನ್ನಡ ಹಳೆಗನ್ನಡಕ್ಕಿಂತ ಸುಲಭವಾಗಿರುವುದು? ಹೊನಲುವಿನ ತಂಡದ ಸದಸ್ಯರ ಶ್ರಮ ಎಂತದ್ದು ಎಂದು ಅರಿವುದಕ್ಕೆ ಸುಮ್ಮನೆ ಒಂದು ಪುಟ ಮಾತನಾಡುವ ಕನ್ನಡದಲ್ಲಿ ಬರೆದು ನೋಡಿ! ನಾನೂ ಪ್ರಯತ್ನಿಸಿದ್ದೆ, ಟೈಪಿಸಲು ಕುಳಿತರೆ ಸಾಕು ಗ್ರಾಂಥಿಕ ಕನ್ನಡವೇ ಬೆರಳ ತುದಿಯಲ್ಲಿರುತ್ತದೆ! ಮಾತನಾಡಲಾರಂಭಿಸಿದರೆ ಗ್ರಾಂಥಿಕ ಕನ್ನಡ ಹತ್ತಿರವೂ ಸುಳಿಯುವುದಿಲ್ಲ! ಎಲ್ಲರ ಕನ್ನಡದಲ್ಲಿ ಬರೆಯುವುದು ಗ್ರಾಂಥಿಕ ಕನ್ನಡದಲ್ಲಿ ಬರೆಯುವುದಕ್ಕಿಂತ ಕಷ್ಟಕರ....(ನನ್ನ ಕಡೆಯಿಂದ ಒಂದು ತಪ್ಪೊಪ್ಪಿಗೆಯೆಂದರೆ, ಬರ್ಕೊಡ್ತೀನಿ ಬರ್ಕೊಡ್ತೀನಿ ಎಂದು ಎರಡು ಮೂರು ಸಲ ಹೇಳಿ ಹೊನಲಿಗಾಗಲೀ ಅರಿಮೆಗಾಗಲೀ ಯಾವ ಲೇಖನವನ್ನೂ ಬರೆಯದೇ ಇರುವುದು! ಇನ್ನು ಮೇಲಾದರೂ ಬರೆಯಲು ಪ್ರಯತ್ನಿಸಬೇಕು!)
ಅಂದಮಾತ್ರಕ್ಕೆ ಹೊನಲು ವೆಬ್ ಪುಟದಲ್ಲಿ ಎಲ್ಲರ ಕನ್ನಡವೇ ಶ್ರೇಷ್ಟವೆಂಬ ಅಹಂ ತುಂಬಿ ಹೋಗಿದೆ ಎಂದು ಭಾವಿಸುವುದು ಬೇಡ. ಆ ರೀತಿ ಆಗಿಹೋದರೆ, ಗ್ರಾಂಥಿಕ ಕನ್ನಡವೇ ಶ್ರೇಷ್ಟ, ಸಂಸ್ಕೃತ ಪದಗಳ ಕನ್ನಡವೇ ಶ್ರೇಷ್ಟ ಎಂದುಕೊಳ್ಳುವವರಿಗೂ ಹೊನಲು ತಂಡಕ್ಕೂ ವ್ಯತ್ಯಾಸ ಉಳಿಯುವುದಿಲ್ಲ. ಸಾಧ್ಯವಾದಷ್ಟು ಆಡು ಮಾತಿನ ಕನ್ನಡ ಉಪಯೋಗಿಸಿ ಎನ್ನುವುದಷ್ಟೇ ಅವರ ವಿನಂತಿ. ಹೊನಲುವಿನ ಈ ಪ್ರಯತ್ನಕ್ಕೆ ಈಗ ಮೂರು ವರುಷದ ಸಂಭ್ರಮ. ಎಲ್ಲರ ಕನ್ನಡವನ್ನು ಮುಂದೊಯ್ಯಲು ಇವರು ಅನುಸರಿಸಿರುವ ದಾರಿಯೂ ಮಾದರಿಯಾಗುವಂತದ್ದು. ವಿಜ್ಞಾನದಿಂದ ಹಿಡಿದು ಅಡುಗೆಯವರೆಗೆ, ಮೊಬೈಲ್ ತಂತ್ರಾಂಶದಿಂದ ಹಿಡಿದು ಕಾರು ಬೈಕುಗಳವರೆಗೆ, ಕತೆ ಕವಿತೆಗಳೆಲ್ಲವೂ ಹೊನಲುವಿನ ಒಡಲಲ್ಲಿದೆ. ಜೊತೆಗೆ ವಿಜ್ಞಾನಕ್ಕೆಂದೇ ಮೀಸಲಾದ ಅರಿಮೆ ಎಂಬ ವೆಬ್ ಪುಟವನ್ನೂ ಇತ್ತೀಚೆಗೆ ಶುರು ಮಾಡಿದ್ದಾರೆ. 
ಈ ಭಾನುವಾರ ಬಿಪಿ ವಾಡಿಯಾ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೊನಲು, ಎಲ್ಲರ ಕನ್ನಡದ ಬಗ್ಗೆ ಪ್ರೀತಿಯಿರುವವರು, ದ್ವೇಷವಿರುವವರು, ಕನ್ನಡವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಯ್ದುಕೊಳ್ಳುವವರು, ಭಾಷಾ ಬೆಳವಣಿಗೆಯ ಬಗ್ಗೆ ಆಸಕ್ತರಾಗಿರುವವರು ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬನ್ನಿ. ಮತ್ತೇನಲ್ಲದಿದ್ದರೂ ಇಂತಹ ಕಾರ್ಯಕ್ರಮಗಳಿಂದ ಒಂದಷ್ಟು ಹೊಸ ಗೆಳೆಯರ ಪರಿಚಯವಾಗುತ್ತದೆ, ಹೊಸ ವಿಚಾರಗಳು ತಿಳಿಯುತ್ತದೆ. ಭಾನುವಾರ ಸಿಗೋಣ.

May 23, 2016

ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆಯ ಹಿಂದಿನ ಫ್ಯಾಸಿಸ್ಟ್ ಧೋರಣೆ


ಕು.ಸ.ಮಧುಸೂದನ್ ರಂಗೇನಹಳ್ಳಿ
೨೦೧೬ರ ಐದು ರಾಜ್ಯಗಳ ಉಪಚುನಾವಣೆಗಳ ಪಲಿತಾಂಶ ಬಂದಾಕ್ಷಣ ಬೇರೆಲ್ಲರಿಗಿಂತ ಮೊದಲು ಸಂಭ್ರಮಾಚಾರಣೆ ಮಾಡಿದ್ದು ಇಂಡಿಯಾದ ಬಲಪಂಥೀಯ ಒಲವಿನ, ಬಂಡವಾಳಶಾಹಿ ಮತ್ತು ಮೇಲ್ವರ್ಗಗಳ ಹಿಡಿತದಲ್ಲಿರುವ ಮಾದ್ಯಮಗಳು! ಅದರಲ್ಲೂ ಅಸ್ಸಾಮಿನ ಪಲಿತಾಂಶಗಳನ್ನೇ ಹೆಚ್ಚು ಹೈಲೈಟ್ ಮಾಡುತ್ತ, ನೇರ ಪ್ರಸಾರದ ಟಾಕ್ ಶೋಗಳಲ್ಲಿ ಕೂತ ಅವರು ಸಮಾನಮನಸ್ಕ ಅತಿಥಿಗಳ ಜೊತೆ ಚರ್ಚೆ ಮಾಡಿದ ಮುಖ್ಯ ವಿಚಾರ ಕೂಡ ಕೇರಳ ಮತ್ತು ಅಸ್ಸಾಮಿನಲ್ಲಿ ಸೋತ ಕಾಂಗ್ರೆಸ್ಸಿನ ಸೋಲಿನ ಬಗ್ಗೆಯೇ ಹೆಚ್ಚು. ಬಾಜಪದ ಮತ್ತದರ ನಾಯಕರಾದ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮಾತಾದ ಕಾಂಗ್ರೆಸ್ ಮುಕ್ತ ಭಾರತ ಎನ್ನುವುದು ನಡೆಯುತ್ತಲಿದೆಯೆಂಬುದೇ ಅವರ ಚರ್ಚೆಯ ಮುಖ್ಯಾಂಶವಾಗಿತ್ತು! ಇರಲಿ ಎಲ್ಲ ಕಾಲಕ್ಕು ಮಾದ್ಯಮಗಳಲ್ಲಿ ಇಂತಹ ಶಕ್ತಿಗಳಿದ್ದೇ ಇರುತ್ತವೆ ಮತ್ತವುಗಳು ತಮಗೆ ಬೇಕಾದ ಹಾಗೆ ಸುದ್ದಿಗಳನ್ನು, ವಿಷಯಗಳನ್ನು ತಿರುಚಿ ಹೇಳುತ್ತಲೇ ಇರುತ್ತವೆ. ಆದರೆ ಹಾಗೆ ಸುಳ್ಳು ಹೇಳುವಾಗಲಾದರೂ ಸತ್ಯಕ್ಕೆ ಹತ್ತಿರವಾದ ಅಂಕಿಅಂಶಗಳನ್ನು ಕೊಡಬೇಕಾದುದು ಅವುಗಳ ಕರ್ತವ್ಯವಾಗಿರುತ್ತದೆ. ಸುಳ್ಳನ್ನೇ ಸತ್ಯವೆಂದು ಸಾದಿಸಲು ಹೊರಟ ಫ್ಯಾಸಿಸ್ಟ್ ಶಕ್ತಿಗಳಿಗೆ ಕೆಲವೊಮ್ಮೆ ಯಾವ ಅಂಕಿಸಂಖ್ಯೆಗಳೂ ಮುಖ್ಯವಾಗಿರುವುದಿಲ್ಲ. 

ಕೇರಳದಲ್ಲಿ ಕಾಂಗ್ರೆಸ್ ಸೋಲುವುದು ಮೊದಲೇ ನಿಶ್ಚಿತವಾಗಿತ್ತು. ಕಾರಣ ಮೊದಲಿನಿಂದಲೂ ಅಲ್ಲಿಯ ಮತದಾರರ ವರ್ತನೆಯೇ ಹಾಗಿತ್ತು. ಒಂದು ಅವಧಿಗೆ ಗೆಲ್ಲಿಸಿದವರನ್ನು ಮತ್ತೊಂದು ಅವಧಿಗೆ ಗೆಲ್ಲಿಸುವ ಯಾವ ಯೋಚನೆಯನ್ನೂ ಕೇರಳದ ಜನಸಮುದಾಯ ಮಾಡುವ ಸಂಭವವೇ ಇರಲಿಲ್ಲ. ದಶಕಗಳ ಹಿಂದಿನ ಈ ಸಂಪ್ರದಾಯವನ್ನು ಈ ಬಾರಿ ಮುರಿಯುತ್ತಾರೆಂದು ಕಾಂಗ್ರೆಸ್ಸಾಗಲೀ, ಬೇರ‍್ಯಾರೇ ಆಗಲಿ ನಂಬಿಕೊಂಡಿರಲು ಯಾವುದೇ ಕಾರಣಗಳೂ ಇರಲಿಲ್ಲ. ಹಾಗಾಗಿ ಕೇರಳದ ಕಾಂಗ್ರೆಸ್ಸಿನ ಸೋಲಿಗೆ ಬಾಜಪ ಮತ್ತದರ ಬೆಂಬಲಿಗರು ಸಂಭ್ರಮಿಸುವ ಅಗತ್ಯವಿರಲಿಲ್ಲ. ಇನ್ನು ತಮಿಳನಾಡು, ಪುದುಚೇರಿಗಳಲ್ಲಿ ಅದು ಖುಶಿಪಡಲು ಒಂದೇ ಸ್ಥಾನವನ್ನೂ ಪಡೆಯಲಿಲ್ಲ. ಪಶ್ಚಿಮ ಬಂಗಾಳಕ್ಕೆ ಬಂದರೆ ಗೂರ್ಖಾ ಜನಶಕ್ತಿ ಮೋರ್ಚಾದ ಜೊತೆ ಸೇರಿ ಬಾಜಪ ಪಡೆದ ಮತಗಳ ಪ್ರಮಾಣ ಶೇಕಡಾ ೧೦.೭ ಮಾತ್ರ. ಇನ್ನು ಸ್ಥಾನಗಳ ಸಂಖ್ಯೆ ೬ ಮಾತ್ರ!

ಕೊನೆಗೆ ಅಸ್ಸಾಮಿಗೆ ಬಂದರೆ ಅಲ್ಲಿ ಮಾತ್ರ ಬಾಜಪ ಗೆದ್ದು ಅಧಿಕಾರ ಹಿಡಿದಿದ್ದು, ಒಟ್ಟು ೧೨೬ ಸ್ಥಾನಗಳ ಪೈಕಿ ೬೦ ಸ್ಥಾನ ಗೆದ್ದಿದ್ದು. ಅದರ ಮತಗಳಿಕೆ ಸಹ ಶೇಕಡಾ ೨೯.೫. ಇಷ್ಟು ಪ್ರಮಾಣದ ಮತಗಳನ್ನು ಪಡೆಯಲದು ಅಸ್ಸಾಂ ಗಣ ಪರಿಷತ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣವೆಂದರೆ ತಪ್ಪಲ್ಲ.ಇದೇ ವೇಳೆಗೆ ಕಾಂಗ್ರೇಸ್ ಅಲ್ಲಿ ಶೇಕಡಾ ೩೧ ರಷ್ಟು ಪ್ರಮಾಣದಲ್ಲಿ ಮತಗಳಿಸಿ, ೨೬ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಬಾಜಪದ ಈ ಸಾಧನೆಯ ಹಿಂದೆ ನಮ್ಮ ಮಾಧ್ಯಮಗಳು ಸಂಭ್ರಮಿಸುವುದಕ್ಕೆ ಏನು ಕಾರಣವೊ ನನಗಂತು ಅರ್ಥವಾಗಿಲ್ಲ.

ಮೊಟ್ಟ ಮೊದಲ ಬಾರಿಗೆ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆ ಮೊಳಗಿಸಿದಾಗಲೇ ಬಲಪಂಥೀಯರ ಫ್ಯಾಸಿಸ್ಟ್ ಧೋರಣೆ ಜಗಜ್ಜಾಹೀರಾಗಿ ಹೋಯಿತು. ಯಾಕೆಂದರೆ ವಿರೋಧಿಗಳೇ ಇರದಂತೆ ನೋಡಿಕೊಂಡು ತಮ್ಮ ಗುಪ್ತಕಾರ್ಯಸೂಚಿಗಳನ್ನು ಜಾರಿಗೆ ತರುವುದೇ ಅವರ ಗುರಿಯಾಗಿರುತ್ತದೆ. ಈಗ ಕಾಂಗ್ರೆಸ್ ಮುಕ್ತದ ಬಗ್ಗೆ ಮಾತಾಡುವ ಇದೇ ಜನ ನಂತರದಲ್ಲಿ ವಿರೋಧಿ ಮುಕ್ತ ಭಾರತದ ಬಗ್ಗೆ ಮಾತಾಡುವುದಿಲ್ಲವೆಂದು ಯಾರು ಗ್ಯಾರಂಟಿ ನೀಡಬಲ್ಲರು? ಅಷ್ಟಕ್ಕೂ ಈ ಬಾರಿಯ ಚುನಾವಣೆಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಗಳಿಸಿರುವ ಮತಗಳಿಕೆಯ ಪ್ರಮಾಣ ಹಾಗು ಸ್ಥಾನಗಳನ್ನು ಸೂಕ್ಷ್ಮವಾಗಿ ನೋಡಿದರೆ ಕಾಂಗ್ರೆಸ್ ಮುಕ್ತ್ ಭಾರತ್ ಎಂಬ ಘೋಷಣೆಯ ಪೊಳ್ಳುತನ ಅರ್ಥವಾಗುತ್ತದೆ.

ಐದೂ ರಾಜ್ಯಗಳಿಂದ ಸೇರಿ ಕಾಂಗ್ರೆಸ್ ಒಟ್ಟು ೧೩೫ ಸ್ಥಾನಗಳನ್ನು ಗೆದ್ದಿದ್ದರೆ, ಬಾಜಪ ೬೫ ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾದ್ಯವಾಗಿದೆ. ಕಾಂಗ್ರೆಸ್ ಈ ಐದೂ ರಾಜ್ಯಗಳಲ್ಲಿ ಸ್ಥಾನಗಳನ್ನು ಗೆದ್ದಿದ್ದು ಇವತ್ತಿಗೂ ರಾಷ್ಟ್ರದಾದ್ಯಂತ ತನ್ನ ಪ್ರಸ್ತುತೆಯನ್ನು ಉಳಿಸಿಕೊಂಡಿದೆ. ಅದೇ ಬಾಜಪ ತಮಿಳುನಾಡು ಹಾಗು ಪುದುಚೇರಿಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಫಲವಾಗಿಲ್ಲ. ಇನ್ನು ಕೇರಳದಲ್ಲಿ ಏಕೈಕ ಸ್ಥಾನವನ್ನು ಮಾತ್ರ ಗೆದ್ದಿದೆ. ಇಷ್ಟೊಂದು ನಿಖರ ಅಂಕಿ ಅಂಶಗಳು ಕಣ್ಣು ಮುಂದಿದ್ದರೂ ನಮ್ಮ ಮಾದ್ಯಮಗಳು ಮಾತ್ರ ಇನ್ನೇನು ಕಾಂಗ್ರೆಸ್ ಮುಕ್ತ ಭಾರತ ಬಂದೇ ಬಿಟ್ಟಿತೆಂದು ಸಂಭ್ರಮಿಸುತ್ತಿದ್ದಾವೆ. ರಾಷ್ಟ್ರೀಯ ವಾಹಿನಿಗಳಲ್ಲಿ ಇದ್ದ ಇಂತಹ ಪೂರ್ವಾಗ್ರಹದ ವರ್ತನೆ ಇದೀಗ ನಮ್ಮ ಕನ್ನಡದ ಪ್ರಾದೇಶಿಕ ವಾಹಿನಿಗಳಿಗೂ ಅಂಟಿಕೊಂಡಿದೆ. ಇದರ ಜೊತೆಗೆ ಈ ಪಲಿತಾಂಶಗಳಿಂದ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನೇನು ಬಿದ್ದು ಹೋಗಲಿದೆಯೆಂದು ಭವಿಷ್ಯವಾಣಿ ಬೇರೆ ನುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಬಾಜಪವನ್ನು ಬೆಂಬಲಿಸಿ ಮಾತನಾಡುವ ಭರದಲ್ಲಿ ಮಾದ್ಯಮದ ಮಂದಿ ಸತ್ಯ ಸಂಗತಿಗಳನ್ನು ಜನರಿಂದ ಮರೆಮಾಚಿ ತಮ್ಮ ಬಲಪಂಥೀಯ ಧೋರಣೆಗಳನ್ನು ಪ್ರತಿಪಾದಿಸುತ್ತಿದ್ದಾರೆ

ಇಂತಹ ಸಂದರ್ಭದಲ್ಲಿ ಜನ ಇಂತಹ ಪಕ್ಷಪಾತಿ ಮಾದ್ಯಮ ಮುಕ್ತ ಕರ್ನಾಟಕ ಎಂಬ ಘೋಷಣೆಯೊಂದಿಗೆ ಬೀದಿಗಿಳಿಯುವ ಕಾಲ ಬಂದರೆ ಅಚ್ಚರಿಯೇನಿಲ್ಲ!

May 20, 2016

ಮೇಕಿಂಗ್ ಹಿಸ್ಟರಿ: ಸಂಸ್ಕೃತಿ: ಅವನತಿಯತ್ತ…

ashok k r making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
20/05/2016


ವಸಾಹತು ಆಕ್ರಮಣ ಮತ್ತು ಊಳಿಗಮಾನ್ಯ ಆಳ್ವಿಕೆಯ ಮರುಸ್ಥಾಪನೆಯೊಂದಿಗೆ ಆಳುವ ತ್ರಿಮೂರ್ತಿಗಳ ಅನುಕೂಲಕ್ಕನುಗುಣವಾಗಿ ಸಾಂಸ್ಕೃತಿಕ ಮೇಲ್ ರಚನೆಯನ್ನು ಪ್ರಜ್ಞಾಪೂರ್ವಕವಾಗಿ ಬದಲಿಸಲಾಯಿತು. ಸಿದ್ಧಾಂತಗಳ ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತ, ಪ್ರಜ್ಞಾಪೂರ್ವಕ ವರ್ಗೋದ್ದೇಶಗಳು ಹೇಗದನ್ನು ಪ್ರೇರೇಪಿಸುತ್ತದೆ ಎಂಬುದರ ಬಗ್ಗೆ ಮಶೂದ್ ದನ್ಮೋಲೆ ಗಮನ ಸೆಳೆಯುತ್ತಾರೆ. ಅವರು ಹೇಳುತ್ತಾರೆ: “ಸಿದ್ಧಾಂತಗಳು ಬಹುತೇಕ ಸಮುದಾಯಗಳ ಜೀವನ ಶೈಲಿಯ ಆತ್ಮೀಯ ಭಾಗವಾಗಿಬಿಟ್ಟಿರುತ್ತದೆ, ಅದನ್ನೊಂದು ನಿರ್ದಿಷ್ಟ ಗುರಿಯಿರುವ ಪ್ರತ್ಯೇಕ ವಿಚಾರದಂತೆ ಗುರುತಿಸಲಾಗುವುದಿಲ್ಲ.” (178) ಇಲ್ಲಿ ಗುರುತಿಸಬೇಕಾದ ಪ್ರಮುಖ ಅಂಶವೆಂದರೆ, ವಸಾಹತುಶಾಹಿಯ ಆಕ್ರಮಣದ ನಂತರ ಸಂಸ್ಕೃತಿಯನ್ನು ಪುನರ್ ನಿರ್ಮಿಸುವ ಪ್ರಯತ್ನ ನಡೆದಾಗ ಕರ್ನಾಟಕದ ಮುನ್ನಡೆಯೊಂದಿಗೆ ಕೊಳೆಯಲಾರಂಭಿಸಿದ್ದ ಊಳಿಗಮಾನ್ಯತೆಯ ಲಕ್ಷಣಗಳನ್ನು, ಹಳೆಯ ಸಂಸ್ಥೆಗಳನ್ನು ಮತ್ತೆ ಪರಿಚಯಿಸಿ ಶಕ್ತಗೊಳಿಸಲಾಯಿತು. ಆರ್ಥಿಕತೆಯಲ್ಲಿ ಊಳಿಗಮಾನ್ಯತೆಯು ಪುನರ್ ಸ್ಥಾಪಿತಗೊಂಡಂತೆಯೇ, ರಾಜಕೀಯ ಮತ್ತು ಸಂಸ್ಕೃತಿಯಲ್ಲೂ ಆಯಿತು; ಕೊಳೆಯಲಾರಂಭಿಸಿದ್ದ ಊಳಿಗಮಾನ್ಯತೆಯ ಆಳ್ವಿಕೆ ಮತ್ತೆ ಬಲಗೊಂಡಿತು. ಊಳಿಗಮಾನ್ಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ವಸಾಹತುಶಾಹಿ ಜನಸಮೂಹವನ್ನು ಗುಲಾಮರನ್ನಾಗಿಸಿತು ಮತ್ತು ಕರ್ನಾಟಕವನ್ನು ವಸಾಹತು ಬಂಡವಾಳದಡಿ ತಂದಿತು. ಹಲವು ದಶಕಗಳ ನಂತರವಷ್ಟೇ ವಸಾಹತುಶಾಹಿ ತನ್ನ ಸಂಸ್ಕೃತಿಯನ್ನು ಜನಸಮೂಹದಲ್ಲಿ ಪಸರಿಸಲಾರಂಭಿಸಿದ್ದು.
ಅ. ಕೈಗೊಂಬೆ ರಾಜನ ಸಾಂಸ್ಕೃತಿಕ ಲಕ್ಷಣ

ಮೈಸೂರು ಆಸ್ಥಾನ ಪ್ರತಿಗಾಮಿ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು. ರೆಸಿಡೆಂಟ್ ಮತ್ತು ದಿವಾನರು ನೋಡಿಕೊಳ್ಳುತ್ತಿದ್ದ ಸಾಮ್ರಾಜ್ಯದ ಆಡಳಿತದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲದೆ, ‘ದತ್ತು ಪಡೆದ’ ಬ್ರಿಟೀಷರ ರಕ್ಷಣೆಯಲ್ಲಿದ್ದ ಕಾರಣ ಹೊರಗಿನವರ ಆಕ್ರಮಣದ ಭಯವೂ ಇಲ್ಲದ ಕಾರಣ ಕೆ.ಆರ್. ಒಡೆಯರ್ ಸಾಂಸ್ಕೃತಿಕ ಗುರುತಾಗಿ ಪೋಷಿಸಲ್ಪಟ್ಟರು. ವಸಾಹತಿನ ನಿರೀಕ್ಷೆಯಂತೆ, ರಾಜ ತನ್ನನ್ನು ಅಚ್ಚರಿಗೊಳಿಸುವ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಮುಂದೆ, ಇದು ರಾಜನ ದೊಡ್ಡ ಮತ್ತು ಬಹುಶಃ ಏಕೈಕ ಖರ್ಚಾಯಿತು; ಅದರ ಭಾರವನ್ನು ರಾಜ್ಯದ ಆದಾಯದ ಮೇಲೆ ಹೊರಿಸಿದ. ರಾಜನ ಈ ಖರ್ಚುಗಳು 1831ರಲ್ಲಿ ಕರ್ನಾಟಕವನ್ನು ಅಲುಗಿಸಿದ ಆರ್ಥಿಕ ಬಿಕ್ಕಟ್ಟಿಗೆ ನೀಡಿದ ಕೊಡುಗೆ ಸಣ್ಣದೇನಲ್ಲ. ಈ ದುಂದುವೆಚ್ಚಗಳು ಆದಾಯದ ಎರಡು ಕೋಟಿಗೂ ಅಧಿಕ ಮೊತ್ತವನ್ನು ತಿಂದುಹಾಕಿದ್ದರ ಬಗ್ಗೆ ವಿವರಣೆ ಕೇಳಿದಾಗ, ಕೈಗೊಂಬೆ ರಾಜ 1831ರಲ್ಲಿ ವಿಲಿಯಂ ಬೆಂಟಿಕ್ ಗೆ ಬರೆದ ಪತ್ರದಲ್ಲಿ ತನ್ನ ಖರ್ಚನ್ನು ಸಮರ್ಥಿಸಿಕೊಳ್ಳುತ್ತ ಪೀಠಕ್ಕೆ ಏರಿದಾಗಿಲಿಂದಲೂ ಅವನತಿ ಹೊಂದುತ್ತಿದ್ದ ಸಂಸ್ಕೃತಿಯ ಭಾಗಗಳಲ್ಲಿ ಭಾಗವಹಿಸಲೇಬೇಕಾಗಿತ್ತು ಎಂದು ತಿಳಿಸುತ್ತಾನೆ. ರಾಜ ಬರೆಯುತ್ತಾನೆ: “ಈ ದೇಶಗಳಲ್ಲಿನ ರಾಜರು ರಾಜ್ಯದ ವೈಭವವನ್ನು ಉಳಿಸಲು ನಡೆಸಲೇಬೇಕಾದ ಸಂಗತಿಗಳನ್ನು ನನ್ನ ಜೀವನದ ಮೊದಲ ದಿನಗಳಲ್ಲಿ ಮಾಡಲಾಗಿರಲಿಲ್ಲ, ಆಗದರ ಅವಶ್ಯಕತೆಯೂ ಇರಲಿಲ್ಲ. ಮೇಲೆ ತಿಳಿಸಿದ ಮೊತ್ತ (ಎರಡು ಕೋಟಿ ರುಪಾಯಿ) ಸಂಗ್ರಹವಾಗಿತ್ತು. ನಂತರದಲ್ಲಿ ನಿಮ್ಮ ನೆರಳಿನ ಕೃಪೆಯಿಂದ ನಾನು ವಯಸ್ಕನಾದೆ, ಆ ಸಂಗತಿಗಳೀಗ ಅವಶ್ಯವಾಗಿದೆ ಮತ್ತು ಇತರೆ ಖರ್ಚುಗಳಿಗೂ ಸಂದರ್ಭ ಒದಗಿ ಬಂತು….

ಸಂಕ್ಷಿಪ್ತವಾಗಿ ಹೇಳುವುದಾದರೆ, ಅರಮನೆ, ಕಛೇರಿಗಳ ನಿರ್ಮಾಣ; ಮಠ ಮತ್ತು ದೇವಸ್ಥಾನಗಳ ರಿಪೇರಿ; ಸಾರ್ವಜನಿಕ ಉಪಯೋಗಕ್ಕಾಗಿ ದಾನ ಧರ್ಮ; ಮಕ್ಕಳ ವಿವಾಹ ಮಹೋತ್ಸವ, ಸ್ನೇಹಿತರ ಮತ್ತು ಸಂಬಂಧಿಕರ ಮಕ್ಕಳ ಮದುವೆ, ನೆಂಟರಿಗೆ ಬೆಂಬಲ ಕೊಡುತ್ತ ಅವರಿಗೆ ಭತ್ಯೆ ನೀಡುವುದು ಈ ಖರ್ಚುಗಳಲ್ಲಿ ಸೇರಿದೆ.” (179)

ಶ್ರೀವೈಷ್ಣವ ಬ್ರಾಹ್ಮಣರು ಮೈಸೂರು ಒಡೆಯರರೊಂದಿಗೆ ಯಾವಾಗಲೂ ಹಿತಕರ ಸಂಬಂಧವನ್ನು ಹೊಂದಿದ್ದರು. ಟಿಪ್ಪು ಸುಲ್ತಾನನ ಕಾಲದಲ್ಲಿ ಶ್ರೀ ವೈಷ್ಣವ ಸಲಹೆಗಾರರು ಹೋರಾಟಕ್ಕೆ ಮುನ್ನುಡಿ ಬರೆಯುವ ಪ್ರಯತ್ನ ನಡೆಸಿದ್ದರು, ಆ ಪ್ರತಿಭಟನೆಯನ್ನು ಹತ್ತಿಕ್ಕಲಾಗಿತ್ತು. ಅದಾದ ತಕ್ಷಣವೇ, ಶ್ರೀವೈಷ್ಣವರ ಪರ್ಕಳ ಮಠದ ಇಪ್ಪತ್ತೈದನೇ ಶ್ರೀಗಳಾದ ರಾಮಾನುಜರವರು ಶ್ರೀರಂಗಪಟ್ಟಣದ ಪೀಠವನ್ನು ತ್ಯಜಿಸಿ ತಿರುಪತಿಗೆ ಹೋಗಿ ನೆಲೆಸಿದರು, ತಿರುಪತಿ ಆಗ ಬ್ರಿಟೀಷರ ಆಳ್ವಿಕೆಯಲ್ಲಿತ್ತು. ರಾಮಾನುಜರ ವೆಬ್ ಪುಟ ಹೇಳುತ್ತದೆ: “ಮೈಸೂರಿನ ಮಹಾರಾಣಿ ಮತ್ತಲವು ಶುಭ ಕೋರುವವರ ಒತ್ತಾಯದ ಮೇರೆಗೆ, ಶ್ರೀಗಳು ತಿರುಪತಿಗೆ ತೆರಳಿದರು; ಮಠದ ದೈವಿಕ ಪರಂಪರೆಯನ್ನು ಉಳಿಸುವ ಸಲುವಾಗಿ.”(179A) ರಾಮಾನುಜರ ತಿರುಪತಿಗೆ ಓಡಿ ಹೋದ ಸಂದರ್ಭದಲ್ಲೇ ರಾಣಿ ಲಕ್ಷ್ಮಿ ಅಮ್ಮಣ್ಣಿ ಕೂಡ ಮೈಸೂರಿನಿಂದ ಓಡಿಹೋಗಿದ್ದರು, ಬ್ರಿಟೀಷರು ಅವರಿಗೆ ತಿರುಚ್ಚಿಯಲ್ಲಿ ಆಶ್ರಯ ನೀಡಿದ್ದರು. ಟಿಪ್ಪು ಸುಲ್ತಾನನ ಪತನದ ನಂತರ ರಾಣಿ ರಾಮಾನುಜರನ್ನು ಮರಳಿ ಶ್ರೀರಂಗಪಟ್ಟಣಕ್ಕೆ ಬರುವಂತೆ ಮನವಿ ಮಾಡಿಕೊಂಡರು. ಶ್ರೀಗಳು ಇದಕ್ಕೆ ನಮ್ರವಾಗಿ ಒಪ್ಪಿ, ಮೂರನೇ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕವನ್ನೂ ನಡೆಸಿಕೊಟ್ಟರು ರಾಣಿಯವರ ಮಾತಿನಂತೆ. ನಂತರದಲ್ಲಿ ಒಡೆಯರ್ ಕುಟುಂಬ ಪರ್ಕಳ ಮಠಕ್ಕೆ ಅನೇಕಾನೇಕ ಉಡುಗೊರೆಗಳನ್ನು ಕೊಟ್ಟಿತು. ಅದರಲ್ಲಿ “ಶ್ರೀ ಶ್ವೇತ – ವರಾಹ ಸ್ವಾಮಿಯ ಸುಂದರ ದೇವಸ್ಥಾನವನ್ನು ಮಠದ ಚಟುವಟಿಕಗೆಳ ಸಲುವಾಗಿ ಶ್ರೀಗಳಿಗೆ ಉಡುಗೊರೆಯಾಗಿ…..” (179B) ಕೊಟ್ಟಿದ್ದು ಪ್ರಮುಖವಾದುದು.

ಮೈಸೂರು ಆಸ್ಥಾನದ ಆಪ್ತರಾಗಿದ್ದ, ಕೈಗೊಂಬೆ ರಾಜರ ಆಶ್ರಯದ ಸದುಪಯೋಗ ಪಡೆದುಕೊಂಡ ಲಕ್ಷ್ಮಿನರಸಿಂಹಯ್ಯ ಮತ್ತು ಅದೇ ತರಹದ ಇತರೆ ಬ್ರಾಹ್ಮಣರು ಪುಸ್ತಕವೊಂದರಲ್ಲಿ ಒಡೆಯರ್ ಬಗ್ಗೆ ಈ ರೀತಿಯಾಗಿ ಹೇಳುತ್ತಾರೆ: “ಶೇಷ ಕುಟುಂಬದ (ಕಾಶಿ ಶೇಷ ಶಾಸ್ತ್ರಿ, ಅರಮನೆಯ ಮೇಲೆ ಅವಲಂಬಿತನಾಗಿದ್ದ ಬ್ರಾಹ್ಮಣ) ಪದ್ಧತಿಯ ಪ್ರಕಾರ ಮಹಾರಾಜ ಖುದ್ದಾಗಿ ವಧು ಮತ್ತು ವರರನ್ನು ಜಾತಕದ ಆಧಾರದ ಮೇಲೆ ಆಯ್ಕೆ ಮಾಡುತ್ತಿದ್ದ. ದಿನಾಂಕ ಗೊತ್ತು ಪಡಿಸುತ್ತಿದ್ದ ಮತ್ತು ಮದುವೆಯ ಸಮಯದಲ್ಲಿ ಶುಭಗಳಿಗೆಯಲ್ಲಿ ಬರುತ್ತಿದ್ದ, ದಕ್ಷಿಣೆಗಳನ್ನು ಮತ್ತು ಉಡುಗೊರೆಗಳನ್ನು ಬ್ರಾಹ್ಮಣರಿಗೆ ತನ್ನ ಜೇಬಿನಿಂದ ತೆಗೆದು ಕೈಯಾರೆ ಕೊಟ್ಟು, ನವ ದಂಪತಿಗಳಿಗೆ ಆಕರ್ಷಕ ಉಡುಗೊರೆಗಳನ್ನು ಕೊಡುತ್ತಿದ್ದ. ಇವೆಲ್ಲಕ್ಕಿಂತ ಹೆಚ್ಚಾಗಿ, ಮಹಾರಾಜ ಮದುವೆಯ ಕೊನೆಯ ದಿನ ಶೇಷ ಕುಟುಂಬದ ಯುವದಂಪತಿಗಳನ್ನು ಅರಮನೆಯ ಸಕಲ ಗೌರವಗಳೊಂದಿಗೆ ಸಾರ್ವಜನಿಕ ಮೆರವಣಿಗೆಯಲ್ಲಿ ಕರೆದೋಗಬೇಕೆಂದು ಆದೇಶಿಸಿದ್ದ. ಈ ನಿಯಮ ರಾಜನ ಸಾವಿನವರೆಗೂ ಮುಂದುವರೆಯಿತು….” (180)

ಇದೇ ಲೇಖಕರು ಹೇಗೆ ರಾಜ ಸಂಸ್ಕೃತವನ್ನು, ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತವನ್ನು ಉತ್ತೇಜಿಸಿದ ಎಂದು ನಮಗೆ ತಿಳಿಸುತ್ತಾರೆ. ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ಸಂಸ್ಕೃತ ಒಳ್ಳೆಯ ಕಾರಣಗಳಿಗಾಗಿ ಊಳಲಾಗಿತ್ತು. ಕೆ.ಆರ್.ಒಡೆಯರ್ ದೇಶದ ವಿವಿಧ ಭಾಗಗಳಲ್ಲಿರುವ ಬ್ರಾಹ್ಮಣ್ಯದ ಕೇಂದ್ರಗಳಿಗೆ ತೀರ್ಥಯಾತ್ರೆಗೆ ಹೋಗುತ್ತಿದ್ದ, ಅದನ್ನು ಸರಿಯಾದ ರೀತಿಯಲ್ಲಿ ಪ್ರಚುರ ಪಡಿಸುತ್ತಿದ್ದ. ತನ್ನನ್ನು ತಾನೇ ಸರಳ, ವಿನಯಶೀಲ, ಧರ್ಮಶ್ರದ್ಧೆಯ, ದೈವಕ್ಕೆ ತಲೆಬಾಗುವ ರಾಜನಾಗಿ ಬಿಂಬಿಸಿಕೊಳ್ಳುತ್ತಿದ್ದ. ವಿವಿಧ ದಾನಧರ್ಮದ ಕೆಲಸಗಳು ವಾರ್ಷಿಕ ನಾಲ್ಕೂ ಲಕ್ಷಕ್ಕೂ ಹೆಚ್ಚು ಹಣವನ್ನು ತಿಂದು ಹಾಕಿತು. ಮೈಸೂರಿನ ಊಳಿಗಮಾನ್ಯತೆಯಲ್ಲಿ ನರಳುತ್ತಿರುವ ಜನಸಮೂಹದಿಂದ ವಸೂಲು ಮಾಡಿದ ಹಣದ ಹೆಚ್ಚಿನ ಭಾಗವನ್ನು ರಾಜ ಹಾಳು ಮಾಡಿದ. ಅವನತಿಯಾಗುತ್ತಿದ್ದ ಹಿಮಾಲಯದ ಕೊಳಚೆ ಬೆಟ್ಟವನ್ನತ್ತುವಾಗ ರಾಜ ಪರೋಪಕಾರಿಯಂತೆ ಕಾಣಿಸಿಕೊಂಡ! 

ಮುಂದಿನ ವಾರ:
ಧರ್ಮದ ಪುನರುಜ್ಜೀವನ

May 16, 2016

ಬಿಜೆಪಿಯ ಹಿಟ್ ವಿಕೆಟ್ಟು! ಎರಡು ಸಲ.

ಮೋದಿ ಡಿಗ್ರಿಯನ್ನು ತೋರಿಸುತ್ತಿರುವ ಶಾ - ಜೈಟ್ಲಿ
ಡಾ. ಅಶೋಕ್. ಕೆ. ಆರ್
ಕರ್ನಾಟಕದಲ್ಲಿ ಕಳೆದ ಬಾರಿ ಇದ್ದ ಬಿಜೆಪಿಯ ಆಡಳಿತದ ಸಂದರ್ಭ. ಸುದ್ದಿ ವಾಹಿನಿಯೊಂದು (ವಾಹಿನಿಯ ಹೆಸರು ಮರೆತಿದೆ) ಬಿಜೆಪಿ ಸೇರಿದ್ದ ವಿ.ಸೋಮಣ್ಣರ ವಿರುದ್ಧ ಗುರುತರವಾದ ಆರೋಪವೊಂದನ್ನು ಮಾಡಿತ್ತು. ವಾಹಿನಿಯೊಂದಿಗೆ ದೂರವಾಣಿಯೊಂದಿಗೆ ವಿ. ಸೋಮಣ್ಣ ನೀವು ಆಧಾರವಿಲ್ಲದೇ ಮಾತನಾಡುತ್ತಿದ್ದೀರಿ ಎಂದಾಗ ಸುದ್ದಿವಾಹಿನಿಯ ಪ್ರತಿನಿಧಿ ‘ನಾವು ಆರೋಪ ಮಾಡಿದ್ದೀವಿ, ಅದನ್ನು ಸುಳ್ಳು ಎಂದು ಸಾಬೀತುಪಡಿಸುವುದು ನಿಮ್ಮ ಜವಾಬ್ದಾರಿ’ ಎಂದು ಜೋರು ದನಿಯಲ್ಲಿ ಹೇಳಿದ್ದ! ಇದೇ ರೀತಿಯ ಘಟನೆಯನ್ನೀಗ ದೆಹಲಿಯ ರಾಜಕಾರಣದಲ್ಲಿ ನೋಡುವ ಸದವಕಾಶ ನಮಗೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಮಾಡಿದ ಆರೋಪಗಳು ಸುಳ್ಳೋ ನಿಜವೋ ಎಂದು ಸಾಬೀತುಪಡಿಸುವ ಜವಾಬ್ದಾರಿ ಬಿಜೆಪಿಯ ತಲೆಯ ಮೇಲೆ ಬಿದ್ದಿದೆ. ಉಗುರಲ್ಲೋಗುವುದಕ್ಕೆ ಕೊಡಲಿ ಎತ್ತಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬಿಜೆಪಿ(ಉದಾಹರಣೆಯಾಗಿ ಜೆ.ಎನ್.ಯು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಘಟನೆಗಳು ಮುಂದಿವೆ) ಈ ವಿಚಾರದಲ್ಲೂ ಕೊಡಲಿಯನ್ನೇ ಕೈಗೆತ್ತಿಕೊಂಡು ತನ್ನ ಕೈಯನ್ನೇ ಘಾಸಿಕೊಳಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಓದಿದ್ದೇನನ್ನು ಎನ್ನುವುದೇ ಆಪ್ ಪಕ್ಷದ ಪ್ರಶ್ನೆ. ಈ ಪ್ರಶ್ನೆಯನ್ನು ಮಾಹಿತಿ ಹಕ್ಕು ವಿಚಾರದ ಮೂಲಕವೂ ಹಲವರು ಕೇಳಿದ್ದರು, ಅವರಿಗೆ ಉತ್ತರ ಸಿಕ್ಕಿರಲಿಲ್ಲ. ಪ್ರಧಾನಿಯಾಗಲು ಶಿಕ್ಷಣಾರ್ಹತೆ ನಮ್ಮಲ್ಲಿಲ್ಲ ಎಂದಾಗ ಪ್ರಧಾನಿಯಾದವರು ಹತ್ತನೇ ತರಗತಿ ಓದಿದ್ದರೂ, ಎರಡೆರಡು ಪದವಿ ಪಡೆದಿದ್ದರೂ, ಅಕ್ಷರವೇ ಗೊತ್ತಿಲ್ಲದಿದ್ದರೂ ವ್ಯತ್ಯಾಸವೇನಾಗುವುದಿಲ್ಲ. ಆದರಿಲ್ಲಿ ಆಪ್ ಪಕ್ಷದ ಪ್ರಶ್ನೆಯನ್ನು ಬೆಂಬಲಿಸುತ್ತಿರುವವರು ಕೇಳುತ್ತಿರುವುದು ಪ್ರಧಾನಿಯಾದವರು ಚುನಾವಣೆಗೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು. ಆ ಲೆಕ್ಕದಲ್ಲಿ ಚುನಾವಣೆಗೆ ನಿಲ್ಲುವ ಯಾರೇ ಆದರೂ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆಯಾಗಲೀ ಮತ್ತೊಂದು ಅಂಶದ ಬಗ್ಗೆಯಾಗಲೀ ಸುಳ್ಳಾಡುವುದು ಕಾನೂನಿನ ಪ್ರಕಾರ ತಪ್ಪಾಗುತ್ತದೆ. ಆಪ್ ಪಕ್ಷಕ್ಕೆ ನರೇಂದ್ರ ಮೋದಿಯವರು ಸುಳ್ಳಾಡಿದ್ದು ಅಪರಾಧ ಎಂದೆನ್ನಿಸಿದ್ದರೆ ಕಾನೂನಿನ ಪ್ರಕಾರವೇ ಹೋರಾಟ ಮಾಡಬಹುದಿತ್ತು. ಕಾನೂನಾತ್ಮಕ ಹೋರಾಟವನ್ನೂ (ಮಾಹಿತಿ ಕೇಳುವ ಮೂಲಕ) ಅವರು ಮಾಡುತ್ತಿರುವವರಾದರೂ ಈ ವಿಷಯದಿಂದ ಸಿಗುವ ಪ್ರಚಾರದಿಂದಾಗಿ ಹೆಚ್ಚು ಜೋರಿನ ದನಿಯಲ್ಲಿ ಕೇಳುತ್ತಿದ್ದಾರೆ ಎಂದು ಯಾರಿಗಾದರೂ ಅರಿವಾಗುತ್ತದೆ. ಸರಿ, ಆಪ್ ಆರೋಪ ಮಾಡಿತು. ಅದಕ್ಕೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರಬೇಕಿತ್ತು? ಒಂದೋ ಮೋದಿಯವರ ಪದವಿ ಸರ್ಟಿಫಿಕೇಟುಗಳನ್ನು ಮಾಧ್ಯಮಗಳಿಗೆ ತಲುಪಿಸಿ ಇದು ಸತ್ಯ ಎಂದಿದ್ದರೆ ಸಾಕಿತ್ತು. ಮೋದಿಯವರ ಪದವಿಯ ಬಗೆಗಿನ ಆರೋಪಗಳು ನಿಜವೇ ಆಗಿದ್ದಲ್ಲಿ, ಅದು ಕಾನೂನಿನ ಪ್ರಕಾರ ತಪ್ಪು ಎಂದು ಸಾಬೀತಾಗುವವರೆಗೆ ಸಭ್ಯನಂತೆ ಪೋಸು ಕೊಟ್ಟುಕೊಂಡು ಸುಮ್ಮಗಿರಬಹುದಿತ್ತು. ಆಗಲೇ ಹೇಳಿದೆನಲ್ಲ ಉಗುರಲ್ಲಿ ಹೋಗೋದಿಕ್ಕೆ ಕೊಡಲಿ ಎತ್ತಿಕೊಳ್ಳೋ ಖಯಾಲಿ ಈಗಿನ ಕೇಂದ್ರ ಸರಕಾರಕ್ಕೆ. ಸ್ವತಃ ಬಿಜೆಪಿಯ ಅಧ್ಯಕ್ಷರೂ ಮತ್ತು ವಿತ್ತ ಸಚಿವರು ಮೋದಿಯವರ ಡಿಗ್ರಿ ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಪತ್ರಿಕಾಗೋಷ್ಟಿಯಲ್ಲಿ ಕುಳಿತುಬಿಟ್ಟರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸಂಗತಿಗಳಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ಬಲ್ಲವರಾರು! ಆ ಸರ್ಟಿಫಿಕೇಟುಗಳ ಪೋಸ್ಟ್ ಮಾರ್ಟಮ್ ನಡೆದು ಹೋಯಿತು. ಇದು ಹೇಗೆ ಫೇಕು ಸರ್ಟಿಫಿಕೇಟು ಎಂದು ಎಳೆಯೆಳೆಯಾಗಿ ವಿವರಿಸಲಾಯಿತು; ಈ ವಿವರಣೆಯಲ್ಲಿ ಎಷ್ಟು ಸತ್ಯವಿದೆಯೋ ಬಲ್ಲವರಾರು. ಡಿಗ್ರಿ ಯಾಕೆ ಅನಿವಾರ್ಯವಲ್ಲ ಎಂದು ಮೋದಿ ಮತ್ತು ಬಿಜೆಪಿಯ ಭಕುತಗಣ ಸೃಷ್ಟಿಸಿದ ಮತ್ತಷ್ಟು ಫೋಟೋಶಾಪು ಚಿತ್ರಗಳು ಸರ್ಟಿಫಿಕೇಟು ಫೇಕೇ ಇರಬಹುದೇನೋಪ್ಪ ಎಂಬ ಭಾವನೆ ಮೂಡಿಸಿದ್ದಂತೂ ಹೌದು! ಈ ಇಡೀ ಪ್ರಹಸನದಲ್ಲಿ ಗೆದ್ದಿದ್ದು –ತಾತ್ಕಾಲಿಕವಾಗಿ - ಆಪ್. 

ಔಟ್ ಲುಕ್ ಉಪಯೋಗಿಸಿದ ಚಿತ್ರವನ್ನುಪಯೋಗಿಸಿಕೊಂಡು ಮೋದಿಯನ್ನು ಸಮರ್ಥಿಸುತ್ತಿರುವ ಅಮಿತ್ ಶಾ.
ಮೊದಲ ಬಾರಿಗೆ ಹಿಟ್ ವಿಕೆಟ್ ಆದ ನಂತರವೂ ಬಿಜೆಪಿ ಪಾಠ ಕಲಿತಂತಿಲ್ಲ. ಎರಡನೇ ಸಲ ಖುಷಿಖುಷಿಯಿಂದ ಹಿಟ್ ವಿಕೆಟ್ ಆಗಿರುವುದು ನಮ್ಮ ಪಕ್ಕದ ಕೇರಳದಲ್ಲಿ. ಕೇರಳದ ಚುನಾವಣೆ ಸಂದರ್ಭದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇರಳದ ಆದಿವಾಸಿ ಮಕ್ಕಳ ಮರಣ ಪ್ರಮಾಣ, ಅವರ ಅಪೌಷ್ಟಿಕತೆಯ ಕುರಿತು ಹೇಳುವಾಗ ಈ ಅಂಕಿಸಂಖೈಗಳು ಸೊಮಾಲಿಯಾ ದೇಶದ ಅಂಕಿಸಂಖೈಗಳಂತಿದೆ ಎಂದುಬಿಟ್ಟಿದ್ದಾರೆ. ಅದು ಸತ್ಯವೇ ಇದ್ದಿರಬಹುದು. ಮತ್ತು ನಮ್ಮ ಪತ್ರಿಕೆಗಳೇ ಅನೇಕ ಅಭಿವೃದ್ಧಿ ಸೂಚ್ಯಂಕಗಳನ್ನು ವರದಿ ಮಾಡುವಾಗ ಇತರೆ ರಾಷ್ಟ್ರಗಳಿಗಿಂತ ಅದು ಹೇಗೆ ಕಡಿಮೆಯಿದೆ ಎಂದು ಹೋಲಿಸುತ್ತಾರೆ. ಅದು ಅವಮಾನವೆಂದೇನೂ ಓದುಗನಿಗೆ ಅನ್ನಿಸುವುದಿಲ್ಲ. ಆದರೆ ಸೊಮಾಲಿಯಾಗೆ ಕೇರಳವನ್ನು ಹೋಲಿಸಿದ್ದಕ್ಕೆ (ಹೋಲಿಸಿದ್ದು ಒಂದು ನಿರ್ದಿಷ್ಟ ಪಂಗಡವನ್ನಾದರೂ ಅವರೂ ಕೇರಳಕ್ಕೇ ಸೇರುತ್ತಾರೆನ್ನುವುದೇ ವಿರೋಧಿಗಳಿಗೆ ಸಾಕಾಗಿತ್ತು) ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ #ಪೋಮೋನೆಮೋದಿ (ಹೋಗು ಮಗನೇ ಮೋದಿ) ಎಂಬ ಹ್ಯಾಷ್ ಟ್ಯಾಗ್ ವ್ಯಾಪಕವಾಗಿಬಿಟ್ಟಿತು. ಮತ್ತೇನಿಲ್ಲ, ಬಿಜೆಪಿಯವರು ಕೇರಳದ ಆದಿವಾಸಿ ಮಕ್ಕಳಲ್ಲಿರುವ ಅಪೌಷ್ಟಿಕತೆಯ, ಮರಣ ಪ್ರಮಾಣದ ಅಧಿಕೃತ ಪಟ್ಟಿಯನ್ನಿಡಿದುಕೊಂಡು (ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ಈ ಪಟ್ಟಿ ಸಿಗುವುದು ಕಷ್ಟವೇ!) ಸೊಮಾಲಿಯಾದ ಅಂಕಿಸಂಖೈಗಳನ್ನಿಟ್ಟುಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರೆ ಸಾಕಿತ್ತು. ಬಿಜೆಪಿಗೇನೂ ಈ ಹೇಳಿಕೆಯಿಂದ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ ಕೇರಳದಲ್ಲಿ, ಯಾಕೆಂದರೆ ಅಲ್ಲಿ ಬಿಜೆಪಿ ಪಕ್ಷ ಇನ್ನೂ ಅಸ್ತಿತ್ವದ ಹುಡುಕಾಟದಲ್ಲಿದೆ; ಈ ಬಾರಿ ಒಂದಷ್ಟು ಹೆಚ್ಚಿನ ಮತಗಳನ್ನು, ಕೆಲವು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಪತ್ರಿಕೆಗಳಿಗೊಂದು ಮೇಲ್ ಕಳಿಸುವ ಮೂಲಕ ಮುಗಿಸಬಹುದಾದ್ದ ಕೆಲಸಕ್ಕೆ ಅಮಿತ್ ಶಾ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು. ಅಧಿಕೃತ ಅಂಕಿಸಂಖೈಗಳನ್ನು ಪ್ರದರ್ಶಿಸದೆ ಔಟ್ ಲುಕ್ಕಿನಲ್ಲಿ ವರುಷಗಳ ಹಿಂದೆ ಪ್ರಕಟವಾಗಿದ್ದ ಲೇಖನದ ಮುಖಪುಟವನ್ನು ಹಿಡಿದುಕೊಂಡು ಪತ್ರಿಕಾಗೋಷ್ಟಿ ನಡೆಸಿದರು. ಅಮಿತ್ ಶಾ ದುರದೃಷ್ಟಕ್ಕೆ ಆ ಮುಖಪುಟದಲ್ಲಿದ್ದ ಚಿತ್ರ ಕೇರಳದ್ದಾಗಿರದೆ ಶ್ರೀಲಂಕಾದ ತಮಿಳು ನಿರಾಶ್ರಿತರದ್ದಾಗಿತ್ತು. ಅಲ್ಲಿಗೆ ಬಿಜೆಪಿ ಎರಡನೇ ಸಲವೂ ಹಿಟ್ ವಿಕೆಟ್ಟಾಗಿತ್ತು!

ಸೂಕ್ಷ್ಮವಾಗಿ ಗಮನಿಸಿದರೆ ಇದೆಲ್ಲ ವರ್ತನೆಗಳನ್ನೂ, ಪ್ರತಿಕ್ರಿಯೆಯ ರೀತಿಗಳನ್ನು ಕಲಿಸಿದ್ದೇ ಬಿಜೆಪಿ ಮತ್ತವರ ಐಟಿ ವಿಭಾಗ! ಕಳೆದ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದು ಬಿಜೆಪಿ. ಮಹಾತ್ಮ ಗಾಂಧಿಯಿಂದ ಹಿಡಿದು ಕಾಂಗ್ರೆಸ್ಸಿನ ಪುಡಿ ರಾಜಕಾರಣಿಯವರೆಗೆ ಎಲ್ಲರ ಫೋಟೋಶಾಪು ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿದಾಡುವಂತೆ ಮಾಡಲಾಗುತ್ತಿತ್ತು. ಅದು ಸತ್ಯವೋ ಸುಳ್ಳೋ ಎಂದು ಸಾಬೀತುಪಡಿಸಬೇಕಾದ ಜವಾಬ್ದಾರಿ ಇದ್ದಿದ್ದು ಚಿತ್ರ ಸೃಷ್ಟಿಸಿದವರಿಗಲ್ಲ ಬದಲಿಗೆ ಮಹಾತ್ಮ ಗಾಂಧಿಯ, ಕಾಂಗ್ರೆಸ್ಸಿನ ಬೆಂಬಲಿಗರಿಗೆ! ನಾವು ಆರೋಪ ಮಾಡ್ತೀವಿ, ಸುಳ್ಳೆಂದು ನೀವು ಸಾಬೀತು ಮಾಡ್ಕಳ್ಳಿ ಎನ್ನುವುದು ಬಿಜೆಪಿ ಮತ್ತವರ ಬೆಂಬಲಿಗರ ಧೋರಣೆಯಾಗಿತ್ತು. ನರೇಂದ್ರ ಮೋದಿಯವರ ಡಿಗ್ರಿಗೆ ಸಂಬಂಧಪಟ್ಟಂತೆಯೂ ಇದೇ ಧೋರಣೆಯಿದೆ. ಆದರೀಗ ಸಾಬೀತು ಮಾಡ್ಕಳ್ಳುವ ಜವಾಬ್ದಾರಿ ಮಾತ್ರ ಬಿಜೆಪಿಯ ಮೇಲೆ ಬಿದ್ದಿದೆ. ಯೂ – ಟರ್ನ್! ಇನ್ನು ವ್ಯಕ್ತಿಯ ದೂಷಣೆಯನ್ನು ಇಡೀ ರಾಜ್ಯದ ಸ್ವಾಭೀಮಾನಕ್ಕೆ ಸಮೀಕರಿಸುವುದನ್ನು ಕಲಿಸಿದ್ದೂ ಇದೇ ನರೇಂದ್ರ ಮೋದಿ. ಚುನಾವಣಾ ಭಾಷಣದಲ್ಲೊಮ್ಮೆ ಸೋನಿಯಾ ಗಾಂಧಿ ನರೇಂದ್ರ ಮೋದಿಯನ್ನು ‘ಸಾವಿನ ವ್ಯಾಪಾರಿ’ ಎಂದು ಬಣ್ಣಿಸಿದ್ದನ್ನು ನರೇಂದ್ರ ಮೋದಿ ‘ಗುಜರಾತಿ ಅಸ್ಮಿತೆ’ಗಾದ ಧಕ್ಕೆ ಎಂದು ಪ್ರಚುರಪಡಿಸಿಕೊಂಡಿದ್ದರು. ಮೋದಿಯವರು ಬಿಹಾರದ ನಿತೀಶ್ ಕುಮಾರರ ಡಿ.ಎನ್.ಎ ಬಗ್ಗೆ ಮಾತನಾಡಿದಾಗ ಮೋದಿ ತಂತ್ರವನ್ನೇ ಉಪಯೋಗಿಸಿದ ನಿತೀಶ್ ಕುಮಾರ್ ಇದು ಬಿಹಾರಕ್ಕೆ ಮಾಡಿದ ಅವಮಾನ ಎಂದು ಹೇಳಿದರು. ಮತ್ತದೇ ತಂತ್ರ ಕೇರಳದಲ್ಲೂ ಮೇಲ್ನೋಟಕ್ಕೆ ಯಶ ಕಂಡಿದೆ. ‘ಕೇರಳ ಅಸ್ಮಿತೆ’ ಯಶ ಕಂಡಿದೆ! ಅನವಶ್ಯಕ ವಿಚಾರಗಳಿಗೆ ಹೆಚ್ಚು ಪ್ರಚಾರ ಕೊಡುವ, ವೈಯಕ್ತಿಕ ಹೀಗಳಿಕೆಯನ್ನೇ ಹೆಚ್ಚಾಗಿ ಮಾಡುವ ಬಿಜೆಪಿಯ ತಂತ್ರಗಳು ಈಗ ಅವರಿಗೇ ತಿರುಗುಬಾಣವಾಗುತ್ತಿದೆ. ಫೋಟೋಶಾಪು ಕಲಿತವರು ಬೇರೆ ಪಕ್ಷದಲ್ಲಿ – ಆ ಪಕ್ಷದ ಬೆಂಬಲಿಗರಲ್ಲಿ, ಮತ್ತು ಆ ಪಕ್ಷಗಳನ್ನು ಬೆಂಬಲಿಸದ, ಆದರೆ ಬಿಜೆಪಿಯನ್ನು ವಿರೋಧಿಸುವವರಲ್ಲೂ ಇದ್ದಾರೆ ಎನ್ನುವುದು ಬಿಜೆಪಿಗೆ ಪದೇ ಪದೇ ಮನವರಿಕೆ ಮಾಡಿಕೊಡಲಾಗುತ್ತಿದೆ. ಈ ಫೋಟೋಶಾಪು, ಸಾಮಾಜಿಕ ಜಾಲತಾಣಗಳ ವಿಚಾರವೇನೇ ಇರಲಿ ಪೋಮೋನೆ ಮೋದಿ ಎಂದೆಲ್ಲ ಮಾತನಾಡುವುದು ಮಾತ್ರ ಸರಿಯಾದ ರೀತಿಯಲ್ಲ. ಮೋದಿ ತಪ್ಪಾಡಿದ್ದರೆ ಅದನ್ನು ವಿರೋಧಿಸಬೇಕೆ ಹೊರತು ಹೋಗು ಮಗನೆ ಮೋದಿ ಎಂದೆಲ್ಲ ಹೇಳುವುದು ಯಾವ ಸಂಪತ್ತಿಗೆ? ಮೋದಿಯ ಬಗ್ಗೆ ನಮಗೆ ಒಲವಿದೆಯೋ ವಿರೋಧವಿದೆಯೋ, ಅವರೂ ಈ ದೇಶದ ಪ್ರಜೆ, ಅವರನ್ನು ಹೋಗು ಎನ್ನುವ ಹಕ್ಕು ಯಾರಿಗೂ ಇಲ್ಲ. ಮೋದಿಯ ವಿರುದ್ಧ, ಬಿಜೆಪಿಯ ವಿರುದ್ಧ ಮಾತನಾಡಿದರೆ, ಬರೆದರೆ ‘ಹೋಗಿ ಪಾಕಿಸ್ತಾನಕ್ಕೆ’ ಎಂದಬ್ಬರಿಸುತ್ತಿದ್ದವರ ಲಿಸ್ಟಿನಲ್ಲಿ ಬಿಜೆಪಿಯ ಭಕ್ತಗಣವಷ್ಟೇ ಅಲ್ಲ ಅದರ ಮುಖಂಡರೂ ಇದ್ದರು. ಅದು ತಪ್ಪೆಂದಾದ ಮೇಲೆ ಮೋದಿಯನ್ನು ಹೋಗು ಎನ್ನುವುದು ಯಾವ ಕೋನದಿಂದ ಸರಿಯಾಗುತ್ತದೆ? ಅವರು ಮಾಡಿದರೆಂದು ಇವರು, ಇವರು ಮಾಡಿದರೆಂದು ಅವರು ಅವವೇ ತಪ್ಪುಗಳನ್ನು ಮಾಡಿಬಿಟ್ಟರೆ ಅವರಿಗೂ ಇವರಿಗೂ ವ್ಯತ್ಯಾಸಗಳೇನಿರುತ್ತವೆ?

May 14, 2016

ಸಮಾಜದ ಸಿದ್ಧಸೂತ್ರಗಳನ್ನೊಡೆಯದ ‘ತಿಥಿ’

thithi kannada movie review
ಡಾ. ಅಶೋಕ್. ಕೆ. ಆರ್.
ನೀವು ವಿದೇಶಿ ಭಾಷೆಯ ಅದರಲ್ಲೂ ಇರಾನಿ ಸಿನಿಮಾಗಳನ್ನು ನೋಡುವವರಾಗಿದ್ದರೆ ಕನ್ನಡದ ತಿಥಿ ಸಿನಿಮಾ ಇರಾನಿ ಸಿನಿಮಾದಂತೆಯೇ ಇದೆ ಎನ್ನುವ ಭಾವನೆ ಆಗಾಗ ಮೂಡುತ್ತಲೇ ಇರುತ್ತದೆ. ನೈಜತೆಗೆ ಹತ್ತಿರವಾಗಿ ತೆಗೆಯುವ ಪ್ರಯತ್ನ, ಪರಿಸರದಲ್ಲಿನ ಶಬ್ದಗಳನ್ನಷ್ಟೇ ಸಂಗೀತವಾಗಿ ಉಪಯೋಗಿಸಿರುವ ಪರಿಯೆಲ್ಲವೂ ಇರಾನಿ ಸಿನಿಮಾವನ್ನು ನೆನಪಿಸುತ್ತದೆ. ಆದರೆ ಇರಾನಿ ಸಿನಿಮಾಗಳಿಗಿರುವ ಒಂದು ಅನುಕೂಲ ತಿಥಿಗೆ ಇಲ್ಲವಾಗಿದೆ! ಇರಾನಿ ಸಿನಿಮಾದ ಪಾತ್ರಗಳ ಜಾತಿ, ಉಪಜಾತಿಯ ಬಗ್ಗೆ ನಮಗೆ ಅಷ್ಟು ಜ್ಞಾನವಿರುವುದಿಲ್ಲವಾದ್ದರಿಂದ ಸಿನಿಮಾವನ್ನು ಸಿನಿಮಾವಾಗಿ ವೀಕ್ಷಿಸಿ ಅನುಭವಿಸಿ ಎದ್ದುಬಂದುಬಿಡಬಹುದು. ಆದರೆ ನಮ್ಮದೇ ಕರ್ನಾಟಕದ ಮಂಡ್ಯದ ಹಳ್ಳಿ ನೊದೆಕೊಪ್ಪಲಿನಲ್ಲಿ ಚಿತ್ರಿತವಾದ ತಿಥಿಯಲ್ಲಿನ ಪಾತ್ರಗಳ ಜಾತಿಯೆಲ್ಲವೂ ನಮಗೆ ತಿಳಿದುಬಿಡುವುದರಿಂದ ಅಲ್ಲಲ್ಲಿ ತೋರುವ ಜಾತೀಯತೆ ಸಿನಿಮಾದ ಆಹ್ಲಾದವನ್ನು ಕಡಿಮೆ ಮಾಡಿಬಿಡುತ್ತದೆ. ತೆರೆಗೆ ಬರುವ ಮುನ್ನ ತಿಥಿ ಚಿತ್ರ ಬೆಂಗಳೂರಿನ ಅಂತರಾಷ್ಟ್ರೀಯ ಸಿನಿಮಾ ಉತ್ಸವವನ್ನೂ ಸೇರಿದಂತೆ ಅನೇಕ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು, ಅನೇಕ ಪ್ರಶಸ್ತಿಗಳನ್ನೂ ಗೆದ್ದಿತ್ತು. ಚಿತ್ರದ ಬಿಡುಗಡೆಯ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೋಡುಗರ ಪ್ರತಿಕ್ರಿಯೆಗಳೇನೇ ಇರಲಿ, ಅವಾರ್ಡು ಸಿನಿಮಾವೊಂದು ಜನರನ್ನು ಚಿತ್ರಮಂದಿರಗಳೆಡೆಗೆ ಸೆಳೆಯುತ್ತಿದೆಯೆನ್ನುವುದು (ಹೆಚ್ಚು ತೆರೆಕಂಡಿರುವುದು ಬೆಂಗಳೂರಿನಲ್ಲಿ) ಸಂತಸದ ಸಂಗತಿಯೇ. ಅಷ್ಟರಮಟ್ಟಿಗೆ ಜನರಿಗೆ ತಲುಪುವಂತೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು.

ಮೊದಲ ದೃಶ್ಯದ ನಂತರವೇ ಸತ್ತು ಹೋಗುವ ಸೆಂಚುರಿಗೌಡನ ಮಗ ಗಡ್ಡಪ್ಪ, ಗಡ್ಡಪ್ಪನ ಮಗ ತಮ್ಮಯ್ಯ, ತಮ್ಮಯ್ಯನ ಮಗ ಅಭಿಯ ಸುತ್ತ ಚಿತ್ರದ ಕತೆ ಸಾಗುತ್ತದೆ. ಸೆಂಚುರಿ ಗೌಡನ ಸಾವು ಮತ್ತವನ ತಿಥಿ ಕಾರ್ಯದ ನಡುವಿನ ಹತ್ತು ದಿನಗಳ ಕತೆಯಿದು. ಸೆಂಚುರಿ ಗೌಡ ತದನಂತರದ ದೃಶ್ಯಗಳಲ್ಲಿ ತಿಳಿಸಿದಂತೆ ಹೆಣ್ಣಿನ ಸಂಗವನ್ನು ಚಟವಾಗಿಸಿಕೊಂಡವನು. ಇನ್ನವನ ಮಗ ಗಡ್ಡಪ್ಪ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ಥಿತಪ್ರಜ್ಞ. ತಮ್ಮಯ್ಯ ಹಣ ಸಂಪತ್ತಿನ ಬೆಂಬತ್ತಿದರೆ ಹದಿಹರೆಯದ ಅಭಿಗೆ ಕುಡಿತ, ಜೂಜು, ಮತ್ತು ಇಷ್ಟವಾಗುವ ಕುರಿ ಕಾಯುವ ಹುಡುಗಿ ಕಾವೇರಿಯೊಡನೆ ಸರಸವಾಡುವ ಹಂಬಲ. ಈ ನಾಲ್ವರಲ್ಲಿ ಚಿತ್ರದ ನಾಯಕನೆಂದು ಯಾರನ್ನಾದರೂ ಕರೆಯಬಹುದಾದರೆ ಅದು ಗಡ್ಡಪ್ಪ. 

ಗಡ್ಡಪ್ಪ ಅಲೆಮಾರಿ ಪ್ರವೃತ್ತಿಯವನು. ಬೆಳಿಗ್ಗೆ ಅಲೆಯಲು ಹೋದರೆ ಸಂಜೆಗೋ ರಾತ್ರಿಗೋ ಮನೆ ಸೇರುವವನು. ಅಪ್ಪ ಸತ್ತಾಗಲೂ ‘ಸರಿ ಬಿಡು’ ಎಂದು ಹೇಳಿಬಿಡುವ ಗಡ್ಡಪ್ಪನ ವ್ಯಕ್ತಿತ್ವವನ್ನು ಮೊದಲರ್ಧದಲ್ಲಿ ನಮ್ಮನುಕೂಲಕ್ಕೆ ತಕ್ಕಂತೆ ಅನುಭಾವ ಎಂದೂ ಕರೆದುಬಿಡಬಹುದು, ಬೇಜವಾಬ್ದಾರಿತನ ಎಂದೂ ಹೆಸರಿಸಬಹುದು. ಬೇಜವಾಬ್ದಾರಿತನವಲ್ಲ ಅನುಭಾವ ಎನ್ನುವುದರಿವಿಗೆ ಬರುವುದು ಎರಡನೇ ಅರ್ಧದಲ್ಲಿ ಗಡ್ಡಪ್ಪ ಕುರುಬರಟ್ಟಿಯಲ್ಲಿ ತನ್ನಪ್ಪನೇ ತನ್ನೆಂಡತಿಯೊಂದಿಗೆ ಸಂಬಂಧ ಹೊಂದಿದ್ದ ಸಂಗತಿಯನ್ನು ವಿವರಿಸಿದಾಗ. ಗದ್ದೆಯಲ್ಲಿ ಅಪ್ಪ ಸೊಸೆಯ ಸರಸ ನೋಡಿದ ಮೇಲೆ ಗಡ್ಡಪ್ಪ ಏನೊಂದೂ ಮಾತನಾಡುವುದಿಲ್ಲ. ಮೌನವಾಗೇ ಇದ್ದುಬಿಡುತ್ತಾನೆ. ಆ ಮೌನವೇ ಕಾಡಿದ ಕಾರಣ ಅವನೆಂಡತಿ ತನ್ನಿಬ್ಬರು ಮಕ್ಕಳನ್ನೂ ಬಾವಿಗೆ ನೂಕಿ ತಾನೂ ಹಾರಿ ಬಿಡುತ್ತಾಳೆ. ಒಬ್ಬ ಮಗನನ್ನು ಉಳಿಸಿಕೊಳ್ಳಲಾಗುತ್ತದೆ, ಅವನೇ ತಮ್ಮಯ್ಯ. ಅನೈತಿಕ ಸಂಬಂಧವೊಂದು ಜಾಹೀರಾದಾಗ ಪಾಪ ಪ್ರಜ್ಞೆ ಕಾಡಿದ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಆ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದ ಗಂಡು ಸೆಂಚುರಿ ಗೌಡನಾಗಿ ಭಾಳಾ ರಸಿಕನಿದ್ದ ಕಣಯ್ಯ ಎಂದು ಹೊಗಳಿಕೆಗೆ ಒಳಗಾಗುತ್ತಾನೆ! ಗಡ್ಡಪ್ಪನಿಗೆ ಸೆಂಚುರಿ ಗೌಡನ ಸಾವು ಕಾಡದೇ ಇರುವುದಕ್ಕೆ ತಿರಸ್ಕಾರ ಮುಖ್ಯ ಕಾರಣವೇ ಹೊರತು ಅನುಭಾವವೂ ಅಲ್ಲ, ಬೇಜವಾಬ್ದಾರಿತನವೂ ಅಲ್ಲ! 

ತಮ್ಮಯ್ಯ ಇರುವ ಜಮೀನು ಮಾರಿ ಒಂದಷ್ಟು ದುಡ್ಡು ಮಾಡಿಕೊಳ್ಳುವ ಸಲುವಾಗಿ ಖಾತೆಯನ್ನು ತನ್ನ ಹೆಸರಿಗೆ ವರ್ಗ ಮಾಡಿಸಲು ಗಡ್ಡಪ್ಪನ ಬೆನ್ನು ಬೀಳುತ್ತಾನೆ, ಗಡ್ಡಪ್ಪ ಎಲ್ಲಿಗೂ ಬರುವುದಿಲ್ಲವೆಂದು ಕೈಚೆಲ್ಲಿದ ಮೇಲೆ ಗಡ್ಡಪ್ಪ ಸತ್ತು ಹೋದ ಎಂದು ನಕಲಿ ಮರಣ ಪತ್ರ ತಯಾರಿಸಿ ಜಮೀನು ಮಾರಲೊರಡುತ್ತಾನೆ. ಇನ್ನು ಅಭಿ ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಕುರುಬರ ಹುಡುಗಿಯ ಕಾವೇರಿಯ ಬೆನ್ನು ಬಿದ್ದು ಅವಳನ್ನೊಲಿಸಿಕೊಂಡು ತಾತನ ತಿಥಿಯ ಜೊತೆಗೇ ಅವಳೊಡನೆ ಕೂಡುತ್ತಾನೆ. ಅಪ್ಪನ ದುಡ್ಡು ಕದ್ದು ಜೂಜಾಡುವ, ಇಷ್ಟಪಟ್ಟ ಹುಡುಗಿಯ ಕುರಿಮಂದೆಯಿಂದಲೇ ಕುರಿ ಕದಿಯುವ ಅಭಿ ಮತ್ತವನ ಗೆಳೆಯರು ಯಾವುದೋ ದಾರಿಯಿಂದ ದುಡ್ಡು ಮಾಡಿದರೆ ಸರಿ ಎನ್ನುವ ಮನೋಭಾವದವರು. ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ಬೇಜವಾಬ್ದಾರಿ ಮನುಷ್ಯ ಎಂದು ತೋರುವ ಗಡ್ಡಪ್ಪನಿಗಿಂತ ತಮ್ಮಯ್ಯ ಮತ್ತು ಅಭಿಯೇ ಬೇಜವಾಬ್ದಾರಿ ವ್ಯಕ್ತಿತ್ವದವರು! ಗಡ್ಡಪ್ಪ ಮೇಕೆ ಸಾಕಿ ಗದ್ದೆ ನೋಡಿಕೊಂಡು ಸಂಸಾರ ಸಾಕಿದ, ತಮ್ಮಯ್ಯ ಜಮೀನು ಮಾರಿ ದುಡ್ಡು ಮಾಡಿಕೊಂಡು ನೆಲೆ ಕಂಡುಕೊಳ್ಳುವ ಯತ್ನ ಮಾಡುತ್ತಿದ್ದರೆ ತಮ್ಮಯ್ಯನ ಮಗ ಅಭಿ ಮರಳು ಕದ್ದೋ ಕಾಡಿನ ಮರ ಕದ್ದೋ ದುಡ್ಡೆಣಿಸುವ ಕೆಲಸ ಮಾಡುತ್ತಿದ್ದ!

ಹನ್ನೊಂದು ದಿನದ ಘಟನೆಯನ್ನು ಕತೆಯಾಗಿ ತೋರಿಸದೇ ಘಟನೆಯಾಗಿಯೇ ತೋರಿಸಿದ ತಿಥಿ ಚೆನ್ನಾಗಿದೆಯೇ? ಹೇಳುವುದು ಕಷ್ಟ. ಇದು ಸಿದ್ಧಸೂತ್ರದ ಸಿನಿಮಾವಲ್ಲ. ಅವಾರ್ಡು ಸಿನಿಮಾಗಳ ಸೂತ್ರವನ್ನೂ ಇದು ಪಾಲಿಸಿಲ್ಲ ಎನ್ನುವುದು ಹೆಗ್ಗಳಿಕೆಯೂ ಆಗಬಹುದು, ತೆಗಳಿಕೆಯೂ ಆಗಬಹುದು. ಕನ್ನಡದ ಮಟ್ಟಿಗೆ ಸಿನಿಮಾ ಸೂತ್ರಗಳನ್ನು ಒಡೆಯಲೆತ್ನಿಸಿ ಹೊಸ ಅಲೆಯ ಸಿನಿಮಾದಂತೆ ಕಾಣುವ ತಿಥಿ ಸಮಾಜದ ಸಿದ್ಧಸೂತ್ರಗಳನ್ನು ಪ್ರಶ್ನಿಸುವ ಕೆಲಸವನ್ನೂ ಮಾಡಿಲ್ಲ, ಗಡ್ಡಪ್ಪ ಸಾವಿನ ನಂತರದ ಆಚರಣೆಗಳ ಬಗ್ಗೆ ಹೇಳುವ ಒಂದು ಸಂಭಾಷಣೆಯ ತುಣುಕನ್ನು ಹೊರತುಪಡಿಸಿ. ಊಳಿಗಮಾನ್ಯತೆಯನ್ನೇ ಹಾಸು ಹೊದ್ದಿರುವ ಮಂಡ್ಯದ ಹಳ್ಳಿಯದು. ಬ್ಯಾಂಡು ಬಾರಿಸುವ ದಲಿತರನ್ನು 'ಬಾರಿಸಾಯ್ತಲ್ಲ ಅತ್ತಾಗೋಗಿ' ಎನ್ನುವ ದೃಶ್ಯ ಜಾತೀಯತೆಯ, ಗೌಡರ ದುರಹಂಕಾರದ ನೈಜ ದರ್ಶನವೇನೋ ಹೌದು. ಆದರೆ ಸಿನಿಮಾವೊಂದರಲ್ಲಿ ಸಮಾಜದ ಅನಿಷ್ಟಗಳನ್ನು ಪ್ರಶ್ನಿಸುವ, ವಿಮರ್ಶಿಸುವ ಯಾವ ಭಾವವೂ ಇಲ್ಲದೇ ಹೋದರೆ ಅದು ಹೊಸ ಅಲೆಯ ಸಿನಿಮಾ ಆಗುವುದು ಹೇಗೆ? ಇನ್ನು ಜೋಯಿಸ್ರು ‘ನೀವು ಗೌಡರಾದ್ದರಿಂದ ತಿಥಿಗೆ ಮಾಂಸ ಮಾಡಿಸಬೇಕು, ಹೆಚ್ಚು ಜನರನ್ನು ಕರೆಯಬೇಕು’ ಎಂದು ಹೇಳುವುದು ಮೇಲು ಕೀಳಿನ ಭಾವನೆ ತುಂಬಿ ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಪುರೋಹಿತಶಾಹಿ ಮನಸ್ಥಿತಿಯ ಪ್ರತೀಕ. ಹಣವಿಲ್ಲದಿದ್ದರೂ ಸಾಲ ಮಾಡಿ ತಿಥಿ ಮಾಡುವ ತಮ್ಮಯ್ಯ, ಜೂಜಾಡಿ ಹಣ ಕಳೆಯುವ ಅಭಿ ಮಂಡ್ಯದ ಕೆಲವು ಕುಟುಂಬಗಳ ಸರ್ವನಾಶದ ಕಾರಣಗಳನ್ನು ತಿಳಿಸಿಕೊಡುತ್ತದೆ. 

ತಿಥಿ ಚಿತ್ರದ ಕುರಿತು ಬಂದ ಸುದ್ದಿ, ವಿಮರ್ಶೆಗಳಲ್ಲೆಲ್ಲಾ ವೃತ್ತಿ ನಿರತ ಕಲಾವಿದರಿದರಲ್ಲಿಲ್ಲ, ಊರಿನವರೇ ಅಭಿನಯಿಸಿದ್ದಾರೆ, ಸಹಜಾಭಿನಯ ಎಂದು ಒಂದಷ್ಟು ಹೆಚ್ಚಾಗಿಯೇ ಹೊಗಳಿದ್ದರು. ಹಾಗೆ ನೋಡಿದರೆ ಇಡೀ ಚಿತ್ರದ ನಕಾರಾತ್ಮಕ ಅಂಶವೇ ಚಿತ್ರದಲ್ಲಿರುವವರ ಅಭಿನಯ. ಸಹಜ ಅಭಿನಯವೆಂದರೆ ವೃತ್ತಿ ನಿರತ ಕಲಾವಿದರನ್ನು ಬಳಸಿಕೊಂಡು ಅವರಿಂದ ನೈಜತೆಗೆ ಹತ್ತಿರವಾದ ಅಭಿನಯವನ್ನು ತೆಗೆಸುವುದು. ಅಭಿನಯದ ಕುರಿತು ಏನು ಗೊತ್ತಿಲ್ಲದೇ ಇರುವವರನ್ನು ಚಿತ್ರದಲ್ಲುಪಯೋಗಿಸಿದ ಮಾತ್ರಕ್ಕೆ ಅದು ಸಹಜಾಭಿನಯವಾಗಿಬಿಡುವುದಿಲ್ಲ. ಗಡ್ಡಪ್ಪನ ಅಭಿನಯ ಮನಸ್ಸಲ್ಲುಳಿಯುತ್ತದೆ; ಉಳಿದ ಮುಖ್ಯಪಾತ್ರಧಾರಿಗಳ ಅಭಿನಯದ ಬಗ್ಗೆ ಇದೇ ಮಾತನ್ನು ಹೇಳುವುದು ಕಷ್ಟ. ನೈಜತೆಯ ಚಿತ್ರದಲ್ಲಿ ಪರದೆಯ ಮೇಲೆ ಮೂಡುವ ಎಲ್ಲರ ಅಭಿನಯವೂ ಸಹಜವಾಗಿರಬೇಕು. ಅದಿಲ್ಲಿ ಮಾಯವಾಗಿದೆ. ಅನೇಕ ಸಹಪಾತ್ರಗಳ ಸಂಭಾಷಣೆ ಹೇಳುವ ಶೈಲಿ ಕಂಠಪಾಠ ಮಾಡಿ ಒಪ್ಪಿಸಿದಂತಿದೆಯೇ ಹೊರತು ಸಹಜತೆಗೆ ಹತ್ತಿರದಲ್ಲೂ ಇಲ್ಲ. ಅಭಿನಯ ಸಹಜವಲ್ಲವಾದ್ದರಿಂದ ಕಲಾವಿದರಲ್ಲದವರು ಅಭಿನಯಿಸುವುದೇ ಅಸಹಜವಾಗಿಬಿಡುತ್ತದೆಯಲ್ಲವೇ? ಸಹಜಾಭಿನಯ ನಟನೆಯ ಎಬಿಸಿಡಿ ಗೊತ್ತಿರುವವರೇ ಚೆನ್ನಾಗಿ ಮಾಡುತ್ತಾರೆ ಎಂಬ ಭಾವನೆ ಚಿತ್ರ ನೋಡಿದ ಮೇಲೆ ಮೂಡುತ್ತದೆ. ಹಳ್ಳಿಯ ಪರಿಸರದ ನೈಜತೆಯ ಸಿನಿಮಾ ಎಂದು ಹೊಗಳಿಸಿಕೊಂಡ ಸಿನಿಮಾದಲ್ಲಿ ಅಚ್ಚರಿ ಮೂಡಿಸುವುದು ಸೆಂಚುರಿ ಗೌಡ ಸತ್ತಾಗ ಒಬ್ಬರ ಕಣ್ಣಲ್ಲೂ ನೀರಾಡದೇ ಇರುವುದು, ಯಾರೊಬ್ಬರೂ ಎದೆ ಬಡಿದುಕೊಂಡು ‘ಹೋಗ್ಬಿಟ್ಯಲ್ಲೋ’ ಎಂದು ಕೂಗದೇ ಇರುವುದು! ಮಂಡ್ಯದ ಕಡೆ ಸಾಮಾನ್ಯವಾಗಿ ಕಂಡುಬರುವ ಈ ದೃಶ್ಯ ಅದು ಹೇಗೆ ಚಿತ್ರದಲ್ಲಿ ಬರಲೇ ಇಲ್ಲವೋ ಅಚ್ಚರಿಯಾಗುತ್ತದೆ. ಇಡೀ ಸಿನಿಮಾಕ್ಕೊಂಡು ಉಡಾಫೆಯ, ಹಾಸ್ಯದ ಲೇಪನ ಕೊಡುವ ಸಲುವಾಗಿ ಇದನ್ನು ಉದ್ದೇಶಪೂರ್ವಕವಾಗಿ ಮರೆತುಬಿಡಲಾಯಿತಾ?

ಮಾತಿನ ಮೂಲಕವೇ ಕತೆ ಹೆಚ್ಚು ಸಾಗುವುದರಿಂದ, ಸಂಕೇತಗಳು - ಪ್ರತಿಮೆಗಳ ಸಂಖೈ ಕಡಿಮೆಯಿರುವುದರಿಂದ ಛಾಯಾಗ್ರಹಣಕ್ಕೆ ಹೇಳಿಕೊಳ್ಳುವಂತಹ ಪ್ರಾಮುಖ್ಯತೆಯೂ ಇಲ್ಲ. ನೈಜ ಶಬ್ದಗಳನ್ನುಪಯೋಗಿಸುವ ಪ್ರಯೋಗವನ್ನು ಮಾಡಿರುವುದರಿಂದ ಸಂಗೀತವಿಲ್ಲ. ಏನೇ ಹೇಳಿ ಚಿತ್ರವೊಂದನ್ನು ನೋಡುವಾಗ ಒಂದು ಮೂಡು ಸೃಷ್ಟಿಸಲು ಸಂಗೀತವಿದ್ದರೇ ಚೆಂದ! ಚಿತ್ರ ನೋಡಿ ಮುಗಿಸಿದ ಮೇಲೆ ಕಾಡುವ ಅಂಶಗಳ್ಯಾವುವು ಎಂದು ಪಟ್ಟಿ ಮಾಡಿದರೆ ಗಡ್ಡಪ್ಪನ ಹೊರತು ಹೆಚ್ಚೇನೂ ನೆನಪಾಗುವುದಿಲ್ಲ. ಸಿನಿಮಾ ಹೊಸ ಅಲೆಯದೇ ಇರಬಹುದು, ಅಲೆ ಎಲ್ಲರಿಗೂ ತಾಕುವುದಿಲ್ಲ.

ಸಿನಿಮಾಕ್ಕೆ ಸಿಕ್ಕ ಅತಿಯಾದ ಹೊಗಳಿಕೆ ಚಿತ್ರ ನೋಡುವುದಕ್ಕೆ ಮುಂಚೆ ಒಂದು ನಿರೀಕ್ಷೆಯನ್ನು ಹುಟ್ಟಿಸಿತ್ತು. ಬಹುಶಃ ಈ ನಿರೀಕ್ಷೆಯೂ ಸಿನಿಮಾ ಹೇಳಿಕೊಳ್ಳುವಂತಿಲ್ಲ ಎನ್ನುವ ಭಾವನೆ ಮೂಡಲು ಕಾರಣವಾಗಿರಬೇಕು.

May 13, 2016

ಮೇಕಿಂಗ್ ಹಿಸ್ಟರಿ: ಸ್ಥಳೀಯ ಮಾರುಕಟ್ಟೆಯ ನಾಶ: ಎಚ್ಚರಗೊಂಡ ಕನ್ನಡ ದೇಶದ ಸಂಕಟ

saketh rajan kannada making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
13/05/2016


ಸ್ಥಳೀಯ ಮಾರುಕಟ್ಟೆಯನ್ನು ಸಬಲಗೊಳಿಸುವುದು ಮುಖ್ಯವಾಗಿತ್ತು, ಊಳಿಗಮಾನ್ಯತೆಯ ವಿರುದ್ಧ ಹೋರಾಡಲು ಮತ್ತು ಕನ್ನಡ ನಾಡಿನ ಏಳಿಗೆಗಾಗಿ ಹಾಗೂ ದೇಶ ಭಾವನೆಯನ್ನು ಅರಿತುಕೊಳ್ಳುವುದಕ್ಕಾಗಿ. ಸ್ಥಳೀಯ ಮಾರುಕಟ್ಟೆಯನ್ನು ವಸಾಹತುಶಾಹಿ ತನ್ನ ಪ್ರಾರಂಭದ ದಿನಗಳಲ್ಲಿ ತುಳಿದು ಹಾಕಿದ್ದು ಮೇಲಿನ ಪ್ರಜ್ಞೆಗಳು ಮರೆಯಾಗಿಹೋಗಲಿ ಎಂಬ ಕಾರಣದಿಂದ. (172) ಸ್ಥಳೀಯ ಮಾರುಕಟ್ಟೆಯನ್ನು ನಾಶಪಡಿಸುವುದು ಕರ್ನಾಟಕವನ್ನು ಆಕ್ರಮಿಸಿದ ಬ್ರಿಟೀಷರ ಗುರಿಗಳಲ್ಲೊಂದಾಗಿತ್ತು. ಸ್ಥಳೀಯ ಮಾರುಕಟ್ಟೆಯ ನಾಶವಾಗದೆ ಕರ್ನಾಟಕದ ಪ್ರಾಂತ್ಯದಾದ್ಯಂತ ವಸಾಹತು ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಸಾಧಿಸಲಾಗುತ್ತಿರಲಿಲ್ಲ.

ಕರ್ನಾಟಕದ ಸ್ಥಳೀಯ ಮಾರುಕಟ್ಟೆಯ ಅಸ್ತಿತ್ವವನ್ನು ನಾಶಪಡಿಸುವ ಸಲುವಾಗಿ ರಾಜಕೀಯ ಮುಖಂಡರನ್ನು ಮೊದಲು ಗುರಿಯಾಗಿಸಲಾಯಿತು. ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನಾವು ನೋಡಿದಂತೆ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯನ್ನು ಗುರಿಯಾಗಿಸಲಾಯಿತು. ಕರ್ನಾಟಕವನ್ನು ರಾಜಕೀಯವಾಗಿ ಛಿದ್ರಗೊಳಿಸಿದ್ದು ಸ್ಥಳೀಯ ಮಾರುಕಟ್ಟೆಯ ವಿಸ್ತರಣೆಯ ಮೇಲೆ ನಕರಾತ್ಮಕ ಪರಿಣಾಮ ಉಂಟುಮಾಡಿತು. ಉತ್ಪನ್ನವೊಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ತಲುಪಲು ಅನೇಕ ಕಡೆ ತೆರಿಗೆ ಮತ್ತು ಟೋಲ್ ಕಟ್ಟಬೇಕಾಯಿತು. ಇಷ್ಟೆಲ್ಲ ತೆರಿಗೆ ಕಟ್ಟಿದ ನಂತರ ಗ್ರಾಹಕನ ಕೈಸೇರುವಷ್ಟರಲ್ಲಿ ಉತ್ಪನ್ನದ ಬೆಲೆ ಹೆಚ್ಚಾಗಿಬಿಡುತ್ತಿತ್ತು ಮತ್ತು ಬ್ರಿಟೀಷ್ ಉತ್ಪನ್ನಗಳ ವಿರುದ್ಧದ ಬೆಲೆ ಸಮರದಲ್ಲಿ ಸೋತು ಮರೆಯಾಗಿಹೋದವು.

ಬ್ರಿಟೀಷ್ ವಸಾಹತುಶಾಹಿಯ ಆರ್ಥಿಕ ಗುರಿಯಾಗಿದ್ದಿದ್ದು ದೇಶೀಯ ವರ್ತಕರು, ಬಂಡವಾಳಶಾಹಿ ಉತ್ಪಾದನೆಯ ವರ್ಗ ಮಾಲೀಕರು ಮತ್ತು ವಿವಿಧತೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕಸುಬುದಾರರು. ದೇಶೀಯ ವರ್ತಕರ ಮತ್ತು ವರ್ಗ ಮಾಲೀಕರ ಪತನ ಅವರನ್ನು ಪೋಷಿಸುತ್ತಿದ್ದ ರಾಜಕಾರಣಿಗಳ ಅಂತ್ಯದೊಂದಿಗೆ ಅತಿ ಶೀಘ್ರವಾಗಿ ನಡೆದುಹೋಯಿತು. ಬ್ರಿಟೀಷ್ ಆಕ್ರಮಣದ ಕೆಲವೇ ವರುಷಗಳಲ್ಲಿ ಬಣಜಿಗ ಶೆಟ್ಟರು ಕಳಂಕದೊಂದಿಗೆ ಕುಸಿತ ಕಂಡರು. ಅವರು ಬಂಡವಾಳಶಾಹಿತನಕ್ಕೆ ಕೊಡುತ್ತಿದ್ದ ಬೆಂಬಲವೆಲ್ಲವೂ ಮರೆಯಾಗಿಹೋಯಿತು. ಎಷ್ಟರಮಟ್ಟಿಗೆ ಇದು ನಡೆಯಿತೆಂದರೆ ಜಾಗರೂಕ ಇತಿಹಾಸಕಾರರಾದ ಇರ್ಫಾನ್ ಹಬೀಬ್ ರಂತವರಿಗೂ ಕೂಡ ಇವರ ಇತಿಹಾಸದ ಬಗ್ಗೆ ಅನುಮಾನಗಳುಂಟಾಯಿತು. ಆರನೇ ಪಾವ್ಲೋವ್ ಈ ಪತನದ ಬಗ್ಗೆ ಸರಿಯಾಗಿ ತಿಳಿಸುತ್ತಾರೆ. ಅವರು ಹೇಳುತ್ತಾರೆ: “ಪ್ರತಿಯೊಬ್ಬರಿಗೂ ನಿರ್ದಿಷ್ಟ ಕೆಲಸ ಹಂಚಿದ ಕೈಗಾರಿಕೆಯ ಪತನ ಅಥವಾ ನಾಶವನ್ನು ಲೆಕ್ಕಕ್ಕೆ ತೆಗೆದುಕೊಂಡರೆ……..ಚಿಕ್ಕ ಪುಟ್ಟ ಬಂಡವಾಳಶಾಹಿಗೆ ಅಥವಾ ಉತ್ಪಾದನಾ ವಲಯಕ್ಕೆ ಭಾರತದ ಆ ಸಂದರ್ಭದಲ್ಲಿ ನೆಲೆ ಕಂಡುಕೊಳ್ಳುವ ಯಾವ ಅವಕಾಶಗಳೂ ಇರಲಿಲ್ಲ ಎನ್ನುವುದರ ಅರಿವಾಗುತ್ತದೆ.” (173)

ಬಂಡವಾಳಶಾಹಿತನದ ಬರುವಿಕೆಯಯನ್ನು ಸೂಚಿಸುವಂತಹ, ಉತ್ಪಾದನೆ ಸಂಘಟನೆಯಲ್ಲಿನ ಮುಂದುವರೆದ ರೂಪಗಳನ್ನು ತೊಡೆದು ಹಾಕಲಾಯಿತು. ಇದರೊಂದಿಗೆ, ಸ್ಥಳೀಯ ಮಾರುಕಟ್ಟೆಯನ್ನು ಒಟ್ಟಾಗಿಸಿ ಕೇಂದ್ರೀಕೃತಗೊಳಿಸಿದ ರಾಜಕೀಯ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ, ಈ ಒಗ್ಗಟ್ಟಿಗೊಂದು ಸುಭದ್ರ ಆರ್ಥಿಕ ಬುನಾದಿಯನ್ನಾಕಿದ್ದ ಸಾಮಾಜಿಕ ವರ್ಗಗಳನ್ನು ಒಡೆಯಲಾಯಿತು. ಈ ವರ್ಗಗಳ ನಾಶದೊಂದಿಗೆ, ಬ್ರಿಟೀಷ್ ವಸಾಹತುಶಾಹಿಯ ಆರ್ಥಿಕ ಗುರಿಗಳು ಹೆಚ್ಚು ಕಡಿಮೆ ಗೆದ್ದಂತಾಗಿತ್ತು. ಸಶಕ್ತ ವರ್ತಕ ವರ್ಗದ ಸೋಲು ಮತ್ತು ನಂತರ ಬಂಡವಾಳಶಾಹಿ ಉತ್ಪಾದನೆಯ ನಾಶದ ನಂತರ ಸ್ಥಳೀಯ ಮಾರುಕಟ್ಟೆಯನ್ನು ಒಟ್ಟಾಗಿಟ್ಟ ಪ್ರಮುಖ ವರ್ಗವೇ ಇಲ್ಲವಾಗಿತ್ತು. ನಂತರದ ದಿನಗಳಲ್ಲಿ ಕಸುಬುದಾರರ ಮೇಲೆ ನಡೆಸಿದ ದಾಳಿ ಅದಾಗಲೇ ಪಾರ್ಶ್ವವಾಯು ಪೀಡಿತವಾಗಿದ್ದ ಕರ್ನಾಟಕದ ಸ್ಥಳೀಯ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ನಡೆಸಿದ ಕಾರ್ಯವಾಗಿತ್ತಷ್ಟೇ. ಇದು ಬ್ರಿಟೀಷ್ ಬಂಡವಾಳಶಾಹಿತನದ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸುವುದಕ್ಕಾಗಿ ಮಾಡಿದ ಕೆಲಸವಷ್ಟೇ. ಏನಾಯಿತೆಂಬುದನ್ನು ಮಾರ್ಟಿನ್ ಕಾರ್ನಾಯ್ ಈ ರೀತಿ ವಿವರಿಸುತ್ತಾರೆ: “ಇದು ವಸಾಹತುಶಾಹಿ ಬೆಳೆಸಿದ ಮೂಲಭೂತ ಸಂಬಂಧ. ರಫ್ತು ಮಾಡುವ ದೇಶವಾಗಿದ್ದ ಭಾರತ ಆಮದು ಮಾಡಿಕೊಳ್ಳುವ ದೇಶವಾಯಿತು; ಉತ್ಪಾದಕ ರಾಷ್ಟ್ರವಾಗಿ ಚಿಗುರುತ್ತಿದ್ದ ಭಾರತ ಮತ್ತೆ ಪೂರ್ಣ ಕೃಷಿ ದೇಶವಾಗುವೆಡೆಗೆ ಮರಳಿತು, ನಗರಗಳ ಜನಸಂಖೈ ಕಡಿಮೆಯಾಗಿಬಿಟ್ಟಿತು, ರೈತರು ಚಿಕ್ಕ ಚಿಕ್ಕ ಜಮೀನುಗಳ ಮೇಲೆ ಅವಲಂಬಿತರಾದರು ಮತ್ತವರು ಉತ್ಪಾದನೆ ಹಸಿವನ್ನು ಕೊಂಚ ನೀಗಿಸುತ್ತಿತ್ತು. ಇದೆಲ್ಲವನ್ನೂ ಉಪಯೋಗಿಸಿಕೊಂಡು “ಪ್ರಗತಿಪರ” ಬ್ರಿಟನ್ನನ್ನು ಕಟ್ಟಲಾಯಿತು. 1850ರಷ್ಟರಲ್ಲಿ ಬ್ರಿಟನ್ನಿನ ಹತ್ತಿ ರಫ್ತಿನ ನಾಲ್ಕನೇ ಒಂದಂಶದಷ್ಟು ಭಾರತದ ಮಾರುಕಟ್ಟೆಗೇ ಹೋಗುತ್ತಿತ್ತು. ಇಂಗ್ಲೆಂಡಿನ ಜನಸಂಖೈಯ ಎಂಟನೇ ಒಂದಂಶದಷ್ಟು ಜನರಿಗೆ ಉದ್ಯೋಗ ನೀಡಿದ್ದ ಹತ್ತಿ ಉದ್ಯಮ ರಾಷ್ಟ್ರದ ಆದಾಯಕ್ಕೆ ಹನ್ನೆರಡನೇ ಒಂದಂಶದಷ್ಟು ಕಾಣ್ಕೆ ನೀಡುತ್ತಿತ್ತು.” (174)

ದೇಶೀಯ ವರ್ತಕರ ನಾಶ ಮತ್ತು ಬಂಡವಾಳಶಾಹಿ ಉತ್ಪಾದನೆಯ ಪ್ರಾರಂಭದಿಂದಾದ ತಕ್ಷಣದ ಪರಿಣಾಮವೆಂದರೆ ಕರ್ನಾಟಕದೊಳಗಿದ್ದ ವಿವಿಧ ಬಂಧಗಳನ್ನು ಕಡಿದುಹಾಕಿದ್ದು. ಕರ್ನಾಟಕದಲ್ಲಿ ಪ್ರದೇಶದ ಆಧಾರದಲ್ಲಿ ವಿಭಿನ್ನವಾಗಿದ್ದ ಮಾರುಕಟ್ಟೆಯನ್ನು ಕೃಷಿ ಮತ್ತು ಕೈಗಾರಿಕೆ ಒಂದುಗೂಡಿಸಿತ್ತು, ಈ ಒಗ್ಗಟ್ಟಿನ ಬಂಧವನ್ನು ಮೊದಲು ಕಡಿಯಲಾಯಿತು. ಉತ್ತರವನ್ನು ದಕ್ಷಿಣದಿಂದ ಬೇರ್ಪಡಿಸಲಾಯಿತು, ಪೂರ್ವವನ್ನು ಪಶ್ಚಿಮದಿಂದ. ಸ್ಥಳೀಯ ಮಾರುಕಟ್ಟೆಯನ್ನು ಹೀಗೆ ಛಿದ್ರಪಡಿಸಿದ್ದು ಕರ್ನಾಟಕವನ್ನು ರಾಜಕೀಯವಾಗಿ ವಿಭಾಗಿಸಿಬಿಟ್ಟ ಪ್ರತಿಧ್ವನಿಯಾಗಿತ್ತು. ಹತ್ತಿ ಬೆಳೆಗಾರರ ಮತ್ತು ನೇಕಾರರ ನಡುವಿನ ಬಂಧ, ಬೀಜೋತ್ಪಾದಕರ ಮತ್ತು ಎಣ್ಣೆ ತೆಗೆಯುವವರ ನಡುವಿನ ಬಂಧ, ಕುರಿ ಸಾಕುವವರು ಮತ್ತು ಕಂಬಳಿ ನೇಯುವವರ ನಡುವಿನ ಬಂಧವನ್ನು ಕೊನೆಗಾಣಿಸಲಾಯಿತು. ಕೆಲಸವನ್ನು ಪ್ರದೇಶದ ಆಧಾರದಲ್ಲಿ ಹಂಚಿಕೊಂಡಿದ್ದನ್ನು ಮತ್ತು ಅದರೊಂದಿಗೆ ಉತ್ಪಾನೆಯಲ್ಲಿ ಮೂಡುತ್ತಿದ್ದ ತಜ್ಞತೆಯನ್ನು ನಾಶಪಡಿಸಲಾಯಿತು; ಒಂದು ಕಾಲದಲ್ಲಿ ಆರ್ಥಿಕ ಮುನ್ನಡೆಗೆ ಕಾರಣವಾಗಿದ್ದ ಅಂಶಗಳೆಲ್ಲವೂ ಈಗಿನ ಉತ್ಪಾದಕರಿಗೆ ಶಾಪದಂತೆ ಮಾಡಲಾಯಿತು. ಉತ್ಪಾದಕತೆಗೆ ಬೇಕಿದ್ದ ಬಂಧದ ನೇಯಿಗೆ ಈಗ ನೇಣಿನ ಕುಣಿಕೆಯಂತಾಗಿ ಕತ್ತಿಗೆ ಸುತ್ತಿಕೊಂಡಿತ್ತು. ರೈತರು ಮತ್ತು ಕಸುಬುದಾರರು ಈ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಪ್ರಯತ್ನಪಟ್ಟು ಕೊನೆಗೆ ಊಳಿಗಮಾನ್ಯತೆಯನ್ನಪ್ಪಿಕೊಂಡಿದ್ದ ಹಳ್ಳಿಗಳಿಗೆ ಮರಳಿದರು.

ಸ್ಥಳೀಯ ಮಾರುಕಟ್ಟೆಯಲ್ಲಿದ್ದ ಕೃಷಿ – ಕೈಗಾರಿಕೆ – ಕೃಷಿ ಚಕ್ರದ ನಿರಂತರತೆಯನ್ನು ಮುರಿದು ಹಾಕಿದ್ದು ವಸಾಹತುಶಾಹಿಯ ಮಧ್ಯಪ್ರವೇಶದಿಂದಾದ ಮತ್ತೊಂದು ಪ್ರಮುಖ ವಿರೂಪ. ಈ ನೈಸರ್ಗಿಕ ನಿರಂತರತೆಯು ಒಂದು ವಲಯದ ಅಭಿವೃದ್ಧಿ ಮತ್ತೊಂದರ ಅಭಿವೃದ್ಧಿಯನ್ನು ಪೋಷಿಸುತ್ತಿತ್ತು. ಕೃಷಿಯಲ್ಲಿನ ಈ ಪ್ರವೃತ್ತಿ ನಿಧಾನವಾಗಿ ರೈತರ ತರ್ಕಬದ್ಧ ಎಚ್ಚರಿಕೆಗೆ ಕಾರಣವಾಗಿತ್ತು ಮತ್ತು ಕನ್ನಡ ದೇಶದ ಏಳ್ಗೆಗೆ ಕಾಣ್ಕೆ ನೀಡಿತು. ವ್ಯಾಪಾರ ಮತ್ತು ಉತ್ಪಾದನೆಯ ಮೇಲೆ ದಾಳಿ ನಡೆಸಿದ ವಸಾಹತುಶಾಹಿ ಕೃಷಿ ಮತ್ತು ಕೈಗಾರಿಕೆ ನಡುವಿನ ಈ ಸಂಬಂಧವನ್ನು ಮುರಿದು ಹಾಕಿತು. ಒಂದೆಡೆ ಪರಸ್ಪರರ ಮೇಲೆ ಅವಲಂಬಿತವಾಗಿದ್ದ ಕೃಷಿ ಮತ್ತು ಕೈಗಾರಿಕೆಯನ್ನು ಬಿಕ್ಕಟ್ಟಿಗೆ ದೂಡಿದ ವಸಾಹತುಶಾಹಿ ಮತ್ತೊಂದೆಡೆ ಈ ಮುರಿದುಹಾಕುವಿಕೆಯ ಕಾರಣದಿಂದಲೇ ವಸಾಹತುಶಾಹಿ ಕರ್ನಾಟಕದ ಮಾರುಕಟ್ಟೆಯನ್ನು ತನ್ನ ವ್ಯಾಪಾರಕ್ಕಾಗಿ ಪ್ರವೇಶಿಸುವುದು ಸಾಧ್ಯವಾಯಿತು. ನಮ್ಮ ಕೃಷಿಯನ್ನು ತಮ್ಮ ಉತ್ಪಾದನೆಯ ಆಸಕ್ತಿಗಳಿಗನುಗುಣವಾಗಿ ಗುಲಾಮನನ್ನಾಗಿಸಿಕೊಂಡಿತು.

ಸ್ಥಳೀಯ ಮಾರುಕಟ್ಟೆಯ ಮೇಲಾದ ಮತ್ತೊಂದು ಪರಿಣಾಮವೆಂದರೆ ನಗರ ಪ್ರದೇಶಗಳ ಕೊಳೆಯುವಿಕೆ. ಈ ಪರಿಣಾಮ ಎಷ್ಟು ಮಾರಣಾಂತಿಕವಾಗಿತ್ತೆಂದರೆ ನಗರೀಕರಣದ ಪ್ರಕ್ರಿಯೆ ಮತ್ತೆ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕನಿಷ್ಟ ಒಂದು ಶತಮಾನವಾದರೂ ಬೇಕಿತ್ತು. ಆದರೀ ಸಲ ಇದು ವಸಾಹತುಶಾಹಿ ಶೋಷಣೆ ಮತ್ತು ವಿರೂಪಗೊಂಡ ಬಂಡವಾಳಶಾಹೀ ಅಭಿವೃದ್ಧಿಯ ಶರತ್ತಿನ ಮೇಲೆ ನಡೆಯಬೇಕಿತ್ತು. ನಗರಗಳ ಕುಸಿತದ ರೀತಿಯನ್ನು ವಿವರಿಸಲು ನಮ್ಮಲ್ಲಿ ಅಂಕಿಸಂಖೈಗಳು ಇಲ್ಲವಾದರೂ ನಗರ ಕೇಂದ್ರಗಳು ಅತೀ ಶೀಘ್ರವಾಗಿ ವಿಸರ್ಜಿಸಿದ್ದರ ಬಗ್ಗೆ ಅನುಮಾನಗಳು ಬೇಡ.

ಟಿಪ್ಪು ಸುಲ್ತಾನನ ಸೋಲಿನ ನಂತರದ ಕೆಲವೇ ತಿಂಗಳುಗಳಲ್ಲಿ ಶ್ರೀರಂಗಪಟ್ಟಣ ಚಿತ್ರವಿಚಿತ್ರವಾಗಿ, ಅದರ ಜನಸಂಖೈ ಒಂದೂವರೆ ಲಕ್ಷದಿಂದ ಮೂವತ್ತು ಸಾವಿರಕ್ಕೂ ಕಡಿಮೆಯಾಗಿಬಿಟ್ಟಿತು ಎಂದು ಬುಚನನ್ ತಿಳಿಸುತ್ತಾನೆ. ರಾಜಕೀಯ ಮತ್ತು ಆಡಳಿತದ ಕೇಂದ್ರವಾಗಿದ್ದ ಶ್ರೀರಂಗಪಟ್ಟಣ ಇದೊಂದೇ ಉದ್ದೇಶಕ್ಕೆ ತೊಂದರೆ ಅನುಭವಿಸಲಿಲ್ಲ, ಸೈನ್ಯವನ್ನು ವಿಸರ್ಜಿಸಿದ್ದು ಸೈನಿಕರೇ ಹೆಚ್ಚಿದ್ದ ಶ್ರೀರಂಗಪಟ್ಟಣದ ಜನಸಂಖೈಯನ್ನು ಕಡಿಮೆಯಾಗಿಸಿಬಿಟ್ಟಿತು. ಗಂಜಾಂ ಶಹರ ನಗರ ಮಾರುಕಟ್ಟೆಯಾಗಿ ಬೆಳೆಯುತ್ತಿದ್ದುದಕ್ಕೆ ಸಿಗುತ್ತಿದ್ದ ಎಲ್ಲಾ ಉಲ್ಲೇಖಗಳು ಆಕ್ರಮಣದ ನಂತರದ ಕೆಲವೇ ವರುಷಗಳಲ್ಲಿ ಸಿಗದಂತಾಗಿಬಿಟ್ಟಿತು. 1852ರಲ್ಲಿ ಶ್ರೀರಂಗಪಟ್ಟಣದ ಜನಸಂಖೈ ಕೇವಲ 12,744. (175)

1834ರಲ್ಲಿ ಮೆಕಲಾಯ್ ನ ಶ್ರೀರಂಗಪಟ್ಟಣದ ಭೇಟಿಯ ಬಗ್ಗೆ ಶಾಮ ರಾವ್ ಬರೆಯುತ್ತಾರೆ: “ಇಲ್ಲಿ (ಶ್ರೀರಂಗಪಟ್ಟಣದಲ್ಲಿ) ಮೆಕಲಾಯ್ ರೆಸಿಡೆನ್ಸಿಯ ಅಧಿಕಾರಿಯನ್ನು ಭೇಟಿಯಾದ, ಈ ಅಧಿಕಾರಿ ಮೆಕಲಾಯ್ ಗೆ ನೋಡಬೇಕಾದಂತಹ ಎಲ್ಲವನ್ನೂ ತೋರಿಸಲು ನೇಮಕಗೊಂಡಿದ್ದ. ಕೋಟೆ ಸಂಪೂರ್ಣವಾಗಿದ್ದರೂ ನಗರ ಜನರಹಿತವಾಗಿತ್ತು ಎಂಬುದನ್ನಾತ ನೋಡಿದ. ನಗರವು ಮೌನವಾಗಿತ್ತು, ಪಾಳುಬಿದ್ದಿತ್ತು. ಟಿಪ್ಪುವಿನ ಅರಮನೆ ನೆಲಸಮವಾಗುವಂತಿತ್ತು. ಆವರಣಗಳನ್ನು ಕಳೆ ಮತ್ತು ಹೂವುಗಳು ಆವರಿಸಿಕೊಂಡುಬಿಟ್ಟಿದ್ದವು…..” (176)

1855ರಲ್ಲಿ ಪ್ರಕಟವಾದ ದಕ್ಷಿಣ ಭಾರತದ ಗೆಝೆಟೀರ್ ನಗರ ಸಂಪೂರ್ಣ ನಾಶವಾಗಿದ್ದರ ಬಗ್ಗೆ ಮಾತನಾಡುತ್ತದೆ. “ಒಂದು ಕಾಲದಲ್ಲಿ ಮೈಸೂರಿನ ಪಶ್ಚಿಮಘಟ್ಟದಲ್ಲಿದ್ದ ಹೆಚ್ಚು ಜನಸಂಖೈಯ ನಗರವಾಗಿತ್ತದು…….. ಆ ಜಾಗ ಶಕ್ತಿಯ ಸಂಕೇತವಾಗಿತ್ತು, ಜನಸಾಂದ್ರತೆಯ ಪ್ರದೇಶವಾಗಿತ್ತು, ಅದರ ಪಳೆಯುಳಿಕೆಗಳು ಸೂಚಿಸುವಂತೆ……ಈಗದು ಒಂದು ಸಾಧಾರಣ ಹಳ್ಳಿ.” (177)

ಈ ಚಿತ್ರಣ ಆತ್ಮಕಲಕುವಂತದ್ದು.

ಈ ಸಮಯದ ಬೆಂಗಳೂರಿಗೆ ಸಂಬಂಧಪಟ್ಟ ಅಂಕಿಸಂಖೈಗಳು ದಾರಿತಪ್ಪಿಸುವುದು ಹೆಚ್ಚು. 1849 – 50ರಲ್ಲಿ ನಡೆದ ಒಟ್ಟಾರೆ ಗಣತಿ ನಗರ ಅರ್ಧಕರ್ಧ ಕಡಿಮೆಯಾಗುವುದನ್ನು ಸೂಚಿಸಿದರೆ, ಬೆಂಗಳೂರಿಗೆ ಸಂಬಂಧಪಟ್ಟ ದಾಖಲೆಗಳು ಬ್ರಿಟೀಷ್ ಸೈನ್ಯ ಮತ್ತು ಹಳೆಯ ಪೇಟೆಯನ್ನು ಸೇರಿಸಿದರೆ ನಗರ ಮತ್ತಷ್ಟು ಹೆಚ್ಚಾಗಿರುವುದನ್ನು ಸೂಚಿಸುತ್ತಿತ್ತು. ಗಣತಿಯ ಅಂಶಗಳು ತಪ್ಪೆಂದು ತೋರಿಸುತ್ತಿತ್ತು.

ಈ ಸಮಯದಲ್ಲಿ ಜನಸಂಖೈ ಹೆಚ್ಚಾದ ಒಂದೇ ಪ್ರದೇಶವೆಂದರೆ ಅದು ಮೈಸೂರು. ಕೈಗೊಂಬೆ ರಾಜನ ಮತ್ತವನ ಆಪ್ತರ ಪೀಠವಾಗಿದ್ದ ಮೈಸೂರು ಕೀವುಗಟ್ಟಿದ ಗಾಯದಂತೆ ಬೆಳೆಯುತ್ತಿತ್ತು. 
ಮುಂದಿನ ವಾರ:
ಸಂಸ್ಕೃತಿ: ಅವನತಿಯತ್ತ…

May 12, 2016

ಪ್ರೇಮ, ಭಕ್ತಿ ಮತ್ತು ದ್ರೋಹ

ಡಾ. ಅಶೋಕ್. ಕೆ.ಆರ್.
ದೇಶಪ್ರೇಮವೆಂಬುದು ಕುರುಡು ಭಕ್ತಿಯಾಗಿ, ಕುರುಡುತನದ ವಿರುದ್ಧ ಹೊರಡುವ ದನಿಗಳೆಲ್ಲವೂ ದೇಶದ್ರೋಹದಂತೆ ಚಿತ್ರಿಸಲಾಗುತ್ತಿರುವ ದಿನಗಳಿವು.

ದೇಶಪ್ರೇಮ

ಚಿಕ್ಕಪುಟ್ಟ ಸಾಮ್ರಾಜ್ಯ, ಪ್ರಾಂತ್ಯ, ದೇಶಗಳ ಹೆಸರಿನಲ್ಲಿ ಹರಿದು ಹಂಚಿಹೋಗಿದ್ದ ಛಪ್ಪನ್ನಾರು ಪ್ರದೇಶಗಳನ್ನು ವ್ಯಾಪಾರ, ವಹಿವಾಟು ಮತ್ತು ಲೂಟಿಯ ಕಾರಣಕ್ಕೆ ಒಂದಾಗಿಸಿದ್ದು ಬ್ರಿಟೀಷರ ವಸಾಹತು ಪ್ರಜ್ಞೆ. ದೇಶಪ್ರೇಮ ಮೂಡಿಸಿದ್ದಕ್ಕೆ ಭಾರತೀಯರು ಬ್ರಿಟೀಷರಿಗೆ ಕೃತಜ್ಞರಾಗಿರಬೇಕು. ಇತಿಹಾಸದ ಹಾದಿಯಲ್ಲಿ ತಮ್ಮ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು, ಬ್ರಿಟೀಷರಿಂದ ಮತ್ತೆ ವಾಪಸ್ಸು ಪಡೆದುಕೊಳ್ಳಲು ಪ್ರಯತ್ನಿಸಿದ ರಾಜರನ್ನು ಇವತ್ತಿನ ವರ್ತಮಾನದಲ್ಲಿ ನಮ್ಮ ನಮ್ಮ ಸೈದ್ಧಾಂತಿಕ – ರಾಜಕೀಯ ಅನುಕೂಲತೆಗಳಿಗನುಗುಣವಾಗಿ ದೇಶಪ್ರೇಮಿ – ದೇಶದ್ರೋಹಿಯೆಂದು ಕರೆದುಬಿಡುವುದರಲ್ಲಿ ನಾವು ನಿಸ್ಸೀಮರು. ಟಿಪ್ಪು, ಶಿವಾಜಿಯನ್ನು ದೇಶಪ್ರೇಮಿಗಳೆಂದು ಹೊಗಳಲು ಇತಿಹಾಸ ಎಷ್ಟು ಸಾಮಗ್ರಿ ಒದಗಿಸುತ್ತದೆಯೋ ಅಷ್ಟೇ ಸಾಮಗ್ರಿಗಳನ್ನು ಅವರನ್ನು ದೇಶದ್ರೋಹಿಗಳೆಂದು ಟೀಕಿಸಲೂ ಒದಗಿಸುತ್ತದೆ! ಇವರಿಬ್ಬರು ಮತ್ತು ಇವರ ರೀತಿಯ ಇನ್ನಿತರರು ತಮ್ಮ ತಮ್ಮ ಸಾಮ್ರಾಜ್ಯಪ್ರೇಮಿಗಳಷ್ಟೇ ಎಂದು ಒಪ್ಪಿಕೊಳ್ಳುವುದು ಇತಿಹಾಸದ ಸತ್ಯಕ್ಕೆ ಹತ್ತಿರವಾದುದು. ಬ್ರಿಟೀಷರ ಸಾಮ್ರಾಜ್ಯದ ವಿಸ್ತರಣೆಯೊಂದಿಗೆ ರಾಜರ ನೇರ ಆಳ್ವಿಕೆಯ ಪ್ರದೇಶಗಳ ಸಂಖೈ ಕುಸಿಯಲಾರಂಭಿಸಿತು. ಬ್ರಿಟೀಷರ ಮಾತುಗಳಿಗೆ ತಲೆಯಾಡಿಸುತ್ತ ಬ್ರಿಟೀಷರ ಪರೋಕ್ಷ ಆಳ್ವಿಕೆಯನ್ನು ಜಾರಿಗೊಳಿಸಿದ್ದ ರಾಜರು ಒಂದೆಡೆಯಿದ್ದರೆ ಮತ್ತೊಂದೆಡೆ ನೇರವಾಗಿ ಬ್ರಿಟೀಷರ ಆಳ್ವಿಕೆಯಿದ್ದ ಪ್ರದೇಶಗಳಿದ್ದವು. ಅಲ್ಲೊಂದು ಇಲ್ಲೊಂದಿದ್ದ ಸ್ವತಂತ್ರ್ಯ ರಾಜ್ಯಗಳು ಕೂಡ ಬ್ರಿಟೀಷರಿಗೆ ಕಪ್ಪ ಕಾಣಿಕೆ ಕೊಡದೆ ಇರಲಿಲ್ಲ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾರತದ ತುಂಬೆಲ್ಲ ವಸಾಹತುಶಾಹಿ ಹರಡಿಕೊಂಡದ್ದು ತಮ್ಮ ತಮ್ಮ ಸಾಮ್ರಾಜ್ಯ ರಕ್ಷಿಸಲು ಹೋರಾಡುತ್ತಿದ್ದವರನ್ನು ಭಾರತವೆಂಬ ದೇಶಕ್ಕಾಗಿ ಹೋರಾಡುವಂತೆ ಮಾಡಿತು. ಸಹಜವಾಗಿ ಹೋರಾಟ ನಡೆಸಿದ್ದು ಬ್ರಿಟೀಷರ ವಿರುದ್ಧ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿಗಳೆಂದೇ ಗುರುತಿಸಲಾಯಿತು. ಸ್ವಾತಂತ್ರ್ಯಪೂರ್ವದ ‘ದೇಶಪ್ರೇಮಿ’ ಎದುರಿಗೊಬ್ಬ ಗುರುತಿಸಬಲ್ಲ ವೈರಿಯಿದ್ದ. ಬ್ರಿಟೀಷರ ವಿರುದ್ಧ ಸಶಸ್ತ್ರ ಕ್ರಾಂತಿಯನ್ನು ಪ್ರಯತ್ನಿಸಿದವರು, ಶಾಂತಿ ಮಂತ್ರದಿಂದ ಬ್ರಿಟೀಷರ ಎದುರು ನಿಂತು ಅವರ ಬೂಟು – ಲಾಠಿಯ ಏಟಿಗೆ ತಲೆಕೆಡಿಸಿಕೊಳ್ಳದೆ ಚಳುವಳಿಗಳಲ್ಲಿ ತೊಡಗಿಕೊಂಡವರು ದೇಶಪ್ರೇಮಿಗಳೆನ್ನಿಸಿಕೊಂಡರು. ಸ್ವಾತಂತ್ರ್ಯಪೂರ್ವದ ಈ ‘ದೇಶಪ್ರೇಮಿ’ ಗುರುತು ಸ್ವಾತಂತ್ರ್ಯೋತ್ತರದಲ್ಲಿ ಹೇಗೆ ಮುಂದುವರೆಯಿತು? 

ಸ್ವತಂತ್ರದ ಸಂದರ್ಭದಲ್ಲಿ ದೇಶ ವಿಭಜನೆಯಾಗದೆ ಉಳಿದುಬಿಟ್ಟಿದ್ದರೆ ‘ದೇಶಪ್ರೇಮಿ’ ಗುರುತನ್ನು ಮುಂದುವರೆಸುವುದು ಕಷ್ಟಕರವಾಗಿಬಿಡುತ್ತಿತ್ತೇನೋ! ಭಾರತ ಮತ್ತು ಪಾಕಿಸ್ತಾನದ ಸೃಷ್ಟಿಯಾದದ್ದು, ಸೃಷ್ಟಿಯ ಸಂದರ್ಭದಲ್ಲಿ ನಡೆದ ಹಿಂಸೆ ಎರಡೂ ದೇಶಗಳಲ್ಲಿ ‘ದೇಶಪ್ರೇಮಿ’ಯೆಂದರೆ ಯಾರು ಎನ್ನುವುದನ್ನು ಅತಿ ಸುಲಭವಾಗಿ ವ್ಯಾಖ್ಯಾನಿಸಲು ಸಹಾಯ ಮಾಡಿತು. ಪಾಕಿಸ್ತಾನವನ್ನು ದ್ವೇಷಿಸಿದರೆ ಭಾರತದಲ್ಲಿ ‘ದೇಶಪ್ರೇಮಿ’, ಭಾರತವನ್ನು ದ್ವೇಷಿಸಿದರೆ ಪಾಕಿಸ್ತಾನದಲ್ಲಿ ‘ದೇಶಪ್ರೇಮಿ’. ಮತ್ತೇನು ಮಾಡುವ ಅವಶ್ಯಕತೆಯೂ ಇಲ್ಲ.

ವೈರಿಗಳನ್ನು ನೇರವಾಗಿ ಎದುರಿಸುತ್ತ ದೇಶ ರಕ್ಷಿಸುವ ಹೊಣೆ, ವೈರಿಗಳು ನುಸುಳದಂತೆ ತಡೆಯುವ ಹೊಣೆ ನಮ್ಮ ಸೈನ್ಯದ ಮೇಲಿದೆ. ವೈರಿಗಳ ಚಲನವಲನವನ್ನು ಕಣ್ಣಾರೆ ಕಂಡು ಅವರ ನುಸುಳುವಿಕೆಯನ್ನು ತಡೆಯಲೆತ್ನಿಸುವ ಸೈನಿಕರಲ್ಲಿ ದೇಶದ ಬಗೆಗಿನ ಪ್ರೀತಿ ಹೆಚ್ಚಿರುತ್ತದೆ, ಅನುಮಾನ ಬೇಡ. ಯುದ್ಧ ಭೂಮಿಯ ಸಂಕಷ್ಟಗಳನ್ನನುಭವಿಸಿದವರಿಗೆ ನಾಡಿನೊಳಗೆ ತಣ್ಣಗೆ ಕುಳಿತು ನೆರೆದೇಶದ ಮೇಲೆ ಉರಿದುಬೀಳುವವರಿಗಿಂತ ಕಡಿಮೆ ದ್ವೇಷವಿರುತ್ತದಾ? ಇರಲಿ, ನಮ್ಮ ಸೈನಿಕರು ಸತ್ತಾಗ ಅವರನ್ನು ‘ಅಪ್ರತಿಮ ದೇಶಪ್ರೇಮಿ’, ‘ವೀರಯೋಧ’ ಎಂಬ ವಿಶೇಷಣಗಳಿಂದೆಲ್ಲ ಹೊಗಳುವ ಮೂಲಕ ನಮ್ಮಲ್ಲೂ ದೇಶಪ್ರೇಮವಿದೆ ಎಂದು ತೋರಿಸಿಕೊಳ್ಳುವ ಭರದಲ್ಲಿ ಸೈನ್ಯ ಸೇರುವವರೆಲ್ಲರೂ ‘ಚಿಮ್ಮುವ ದೇಶಪ್ರೇಮ’ದ ಕಾರಣಕ್ಕೆ ಸೇರಿಲ್ಲ, ಬದಲಿಗೆ ಹೊಟ್ಟೆಪಾಡಿಗೆ ಸೇರುತ್ತಿದ್ದಾರೆ ಎನ್ನುವ ಕಹಿ ಸತ್ಯವನ್ನು ಮರೆತುಬಿಡುತ್ತೇವೆ, ಉದ್ದೇಶಪೂರ್ವಕವಾಗಿ. ಯುದ್ಧದ ಮುಂಚೂಣಿಯಲ್ಲಿ ನಿಲ್ಲುವ, ಗುಂಡಿಗೆ ಮೊದಲು ಎದೆಯೊಡ್ಡುವ ಸೈನಿಕರಲ್ಲಿ ಬಹುತೇಕರ್ಯಾಕೆ ಪುಟ್ಟ ಹಳ್ಳಿಯ ಚಿಕ್ಕ ಮನೆಯ ಆರ್ಥಿಕವಾಗಿ ಹಿಂದುಳಿದ ಕುಟುಂಬದವರೇ ಆಗಿರುತ್ತಾರೆ? ಸೈನ್ಯ ಸೇರುವ ಯುವಕರ ಕುರಿತೊಂದು ಆರ್ಥಿಕ ಅಧ್ಯಯನ, ಜಾತಿ ಅಧ್ಯಯನ ನಡೆಸುವುದು ಉಚಿತವಲ್ಲವೇ? ಸೈನಿಕರ ರಕ್ಷಣೆಯಲ್ಲಿ ಗಡಿಯೊಳಗಿರುವ ಕೋಟ್ಯಾಂತರ ಜನರು ನಿಯತ್ತಿನಿಂದ ಬದುಕುವುದು ಕೂಡ ದೇಶಪ್ರೇಮವೇ ಅಲ್ಲವೇ? ಸೈನಿಕರ ಕುರಿತು, ನಮ್ಮ ಸೈನ್ಯದ ಕುರಿತು ಒಂದಿಷ್ಟು ಪ್ರಶ್ನೆಗಳು ಕೇಳಿಬಿಟ್ಟರೂ ‘ದೇಶಭಕ್ತಿ’ಯಿಲ್ಲದವರಂತೆ ಕಾಣಿಸಿಬಿಡುತ್ತೇನೋ?

ದೇಶಭಕ್ತಿ

ಅದ್ಯಾವುದೇ ಧರ್ಮವಿರಲಿ, ಗುರುತಿಗೊಂದು ಚಿನ್ಹೆ ಬೇಕು, ಪೂಜಿಸಲೊಂದು ಪ್ರತಿಮೆ ಬೇಕು. ಹಿಂದೂ ಧರ್ಮದಲ್ಲಿ ಪೂಜೆಗೆಂದೇ ಮುಕ್ಕೋಟಿ ದೇವತೆಗಳ ಮೂರುತಿಗಳಿದ್ದರೆ, ಪ್ರತಿಮೆಗಳ ಪೂಜೆಯನ್ನು ವಿರೋಧಿಸಿದ ಇಸ್ಲಾಂ ಧರ್ಮಕ್ಕೆ ಮಸೀದಿ ಬೇಕು, ಕ್ರೈಸ್ತ ಧರ್ಮಕ್ಕೆ ಚರ್ಚು ಬೇಕು, ಬೌದ್ಧರಿಗೆ ಬುದ್ಧ ಬೇಕು! ಧರ್ಮ ಸೃಷ್ಟಿಸಿದ ಮನುಷ್ಯನೇ ದೇಶವನ್ನು ಸೃಷ್ಟಿಸಿರುವಾಗ ‘ದೇಶಪ್ರೇಮ’ವನ್ನು ವ್ಯಕ್ತಪಡಿಸಲು ಆ ಪ್ರೇಮ ‘ಭಕ್ತಿ’ ಭಾವದಲ್ಲಿ ಹೊರಹೊಮ್ಮಲು ಒಂದಷ್ಟು ಗುರುತು ಚಿನ್ಹೆಗಳ ಅವಶ್ಯಕತೆ ಬಿತ್ತು. ದೇಶದ್ದೊಂದು ಸುಂದರ ಮ್ಯಾಪು, ಅಭಿಮಾನ ಸೂಚಿಸಲೊಂದು ಧ್ವಜ, ಭಕ್ತಿ ತೋರ್ಪಡಿಸಲೊಂದು ರಾಷ್ಟ್ರಗೀತೆ, ಇದರ ಜೊತೆ ಜೊತೆಗೆ ನಮ್ಮಲ್ಲಿ ರಾಷ್ಟ್ರೀಯ ಪಕ್ಷಿ, ಪ್ರಾಣಿ, ಆಟಗಳಿವೆ. 

ನೆರೆದೇಶವೊಂದು ಭೂಪಟವನ್ನು ಪ್ರಕಟಿಸುವಾಗ ಒಂದು ದೇಶದ ಭಾಗವನ್ನು ಪಕ್ಕದ ರಾಷ್ಟ್ರಗಳ ಭಾಗದಂತೆ ತೋರಿಸಿದರೆ ವಿದೇಶಿ ನೀತಿಗಳಲ್ಲಿ ಏರುಪೇರಾಗುತ್ತದೆ. ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ತನ್ನ ಭಾಗವನ್ನಾಗಿ ತೋರಿಸುವ ಕುತಂತ್ರಿ ಬುದ್ಧಿಯನ್ನು ಚೀನಾ ಪದೇ ಪದೇ ತೋರಿಸುತ್ತದೆ, ಅದನ್ನು ವಿರೋಧಿಸಬೇಕಿರುವುದು ಕೇಂದ್ರ ಸರಕಾರದ ಕರ್ತವ್ಯವೇ. ಕೆಲವೊಮ್ಮೆ ದೇಶದೊಳಗೇ ಪ್ರಕಟವಾಗುವ ಭೂಪಟಗಳಲ್ಲೂ ಅಲ್ಲೊಂದು ಇಲ್ಲೊಂದು ತಪ್ಪಾಗಿ ಬಿಡುತ್ತದೆ, ಚೂರು ಸುದ್ದಿಯಾಗಿ ಭೂಪಟ ಸರಿಯಾಗುವುದರೊಂದಿಗೆ ವಿವಾದ ಅಂತ್ಯವಾಗುತ್ತದೆ. ‘ಭಕ್ತಿ’ಯ ವಿಚಾರಕ್ಕೆ ಬಂದರೆ ಭೂಪಟಕ್ಕಿರುವ ಬೆಲೆ ಹೆಚ್ಚೇನೂ ಅಲ್ಲ.

ಊರಿಗೆ ಊರೇ ಹೊತ್ತಿ ಉರಿಯುವಂತೆ ಮಾಡುವ ಶಕ್ತಿಯಿರುವುದು ನಮ್ಮ ದೇಶದ ಮೂರು ಬಣ್ಣಗಳ ಧ್ವಜಕ್ಕೆ. ಒಂದು ಊರಿನ ನೆಮ್ಮದಿ ಕದಡಬೇಕೆಂದಿದ್ದರೆ ಸುಮ್ಮನೆ ಒಂದು ಬಾವುಟವನ್ನು ರಾತ್ರಿ ಹೊತ್ತು ನೆಲದ ಮೇಲೆ ಬಿಸಾಡಿ ಬಿಟ್ಟರಾಯಿತು! ಸಾಬರ ಕೇರಿಯಲ್ಲಿ ಬಿಸಾಡಿದರೆ ಬೇಗ ನೆಮ್ಮದಿ ಹಾಳಾಗುತ್ತದೆ, ವರ್ತಮಾನದ ವಿಪ್ಲವಗಳನ್ನು ಗಮನಿಸಿದರೆ ದಲಿತರ ಬೀದಿಯಲ್ಲಿ ಬಿಸಾಡಿದರೂ ಶೀಘ್ರ ಫಲಿತಾಂಶ ಸಿಗಬಹುದು. ದೇಶದ ಧ್ವಜಕ್ಕೆ ಹೆಚ್ಚು ಬೇಡಿಕೆ ಬರುವುದು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ದಿನಗಳಂದು. ಅದು ಬಿಟ್ಟರೆ ದೇಶದ ಧ್ವಜ ಹೆಚ್ಚೆಚ್ಚು ಕಾಣುವುದು ಕ್ರಿಕೇಟು ಪಂದ್ಯಗಳಲ್ಲಿ! ಪ್ಲಾಸ್ಟಿಕ್ಕು ಬಾವುಟಗಳನ್ನು ಗಾಡಿಗೆ ಸಿಕ್ಕಿಸಿ ಮಾರನೇ ದಿನ ಕಸದ ಬುಟ್ಟಿಗೆ ಎಸೆಯುವುದನ್ನು ಮರೆತುಬಿಟ್ಟರೆ ಬಾವುಟದೆಡೆಗಿನ ನಮ್ಮ ಭಕ್ತಿ ಅನನ್ಯವಾದುದು. ಕೆಲವೊಮ್ಮೆ ‘ದೇಶಪ್ರೇಮ’ವನ್ನು ವ್ಯಕ್ತಪಡಿಸಲು ಪಕ್ಕದ ಪಾಕಿಸ್ತಾನದ ಧ್ವಜ ಹಾರಿಸುವ ಭೂಪರೂ ಇದ್ದಾರೆ. ಪಾಕಿಸ್ತಾನದ ಬಾವುಟ ಹಾರಿಸುವ ಕಂತ್ರಿ ಸಾಬರೂ ಇದ್ದಾರೆ, ಸಾಬರ ಕೇರಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿ ಕೋಮುಗಲಭೆ ಹಬ್ಬಿಸುವ ಕುತಂತ್ರಿ ಹಿಂದೂಗಳು ಇದ್ದಾರೆ! 

ಇನ್ನು ರವೀಂದ್ರನಾಥ ಠಾಗೂರರು ಬರೆದಿರುವ ‘ಜನ ಗಣ ಮನ’ ಕೂಡ ಭಕ್ತಿ ವ್ಯಕ್ತಪಡಿಸಲಿರುವ ಮತ್ತೊಂದು ಗುರುತು. ಈ ಗೀತೆಯನ್ನು ಅವರು ಬರೆದಿದ್ದು ಬ್ರಿಟೀಷ್ ಯುವರಾಜನನ್ನು ಸ್ವಾಗತಿಸಲು ಎಂದು ಕೆಲವೊಮ್ಮೆ ಚರ್ಚೆಯಾಗುತ್ತದೆ. ಇರಲಿ. ಯಾವ ವ್ಯಕ್ತಿ ಬರೆದ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಸಿಕೊಂಡು ಅದರ ಬಗ್ಗೆ ಭಾವನಾತ್ಮಕವಾಗಿ ನಂಟು ಬೆಳೆಸಿಕೊಂಡಿದ್ದೇವೆಯೋ ಅದೇ ವ್ಯಕ್ತಿ ಇನ್ನೊಂದು ಪುಸ್ತಕ ಬರೆದಿದ್ದಾರೆ, ‘ರಾಷ್ಟ್ರೀಯತೆ’ ಎಂಬ ಹೆಸರಿನ ಆ ಪುಸ್ತಕ ದೇಶಪ್ರೇಮ ಮತ್ತು ದೇಶಭಕ್ತಿ ಹೇಗೆ ಮಾನವೀಯತೆಯ ಅವನತಿಗೆ ಕಾರಣವಾಗುತ್ತದೆ ಎಂದು ಎಳೆಎಳೆಯಾಗಿ ಹೇಳುತ್ತದೆ. ‘ರಾಷ್ಟ್ರವೆಂಬ ಕಲ್ಪನೆ, ಮನುಷ್ಯ ಕಂಡುಹಿಡಿದ ಅತ್ಯಂತ ಶಕ್ತಿಯುತ ಅರವಳಿಕೆ’ ಎನ್ನುವ ರವೀಂದ್ರನಾಥರ ಗೀತೆಯ ಕಾರಣದಿಂದಲೂ ನಮ್ಮಲ್ಲಿ ಗಲಭೆಗಳಾಗಿಬಿಡಬಹುದು! 

ಜೀವವಿಲ್ಲದ ಭೂಪಟ, ಧ್ವಜ ಮತ್ತು ರಾಷ್ಟ್ರಗೀತೆಯ ಕುರಿತಾಗಿ ಇರುವ ಭಕ್ತಿಭಾವ, ಅದನ್ಯಾರಾದರೂ ಉದ್ದೇಶಪೂರ್ವಕವಾಗೋ ಅಚಾತುರ್ಯದಿಂದಲೋ ಅವಮಾನಗೊಳಿಸಿದರೆ ಕ್ರುದ್ಧರಾಗಿಬಿಡುವ ನಾವು ರಾಷ್ಟ್ರದ ಜೊತೆಗೆ ಗುರುತಾಗಿರುವ ಜೀವ ಮತ್ತು ಜೀವಂತಿಕೆ ಎರಡೂ ಇರುವ ರಾಷ್ಟ್ರ ಪಕ್ಷಿ, ಪ್ರಾಣಿ ಮತ್ತು ಕ್ರೀಡೆಯ ವಿಚಾರಕ್ಕೆ ಬಂದಾಗ ಮಾತ್ರ ಶಾಂತಿ ಧೂತರಾಗಿ ಬಿಡುತ್ತೇವೆ! ರಾಷ್ಟ್ರಪಕ್ಷಿ ನವಿಲನ್ನು ಕೊಂದವರ್ಯಾರನ್ನೂ ದೇಶಭಕ್ತಿಯ ಕುರಿತು ಪ್ರಶ್ನಿಸಲಾಗುವುದಿಲ್ಲ; ಇನ್ನು ರಾಷ್ಟ್ರಪ್ರಾಣಿ ಹುಲಿಯನ್ನು ‘ಸಂರಕ್ಷಿಸಲು’ ಕೋಟಿ ಕೋಟಿ ಹಣ ಖರ್ಚಾಗಿದೆಯಾದರೂ ಹುಲಿಯ ಸಂಖೈಯಲ್ಲಿ ಗಮನಾರ್ಹ ಎನ್ನಿಸುವಂತಹ ಹೆಚ್ಚಳವೇನಾಗಿಲ್ಲ. ಅವುಗಳ ಆವಾಸ ಸ್ಥಾನವನ್ನೆಲ್ಲ ಕಬಳಿಸಿ ‘ಊರಿಗುಲಿ ಬಂತು, ಊರಿಗುಲಿ ಬಂತು’ ಎಂದು ಕೂಗೆಬ್ಬಿಸುವುದಾಗಲೀ ಹುಲಿಗಳನ್ನು ಕೊಂದಾಕುವುದಾಗಲೀ ದೇಶಭಕ್ತಿ ಇಲ್ಲದ ಕುರುಹೇನಲ್ಲ. ಇನ್ನು ರಾಷ್ಟ್ರೀಯ ಕ್ರೀಡೆ ಹಾಕಿಯ ಬಗ್ಗೆ, ಬಿಡಿ ಅದರ ಬಗ್ಗೆ ಮಾತನಾಡಿ ಏನುಪಯೋಗ. ಒಟ್ಟಿನಲ್ಲಿ ನಮ್ಮ ದೇಶಭಕ್ತಿಯೆನ್ನುವುದು ಜೀವಂತಿಕೆಯಿದ್ದರೂ ಜೀವವಿಲ್ಲದ ವಸ್ತುಗಳ ಕಡೆಗೇ ಹೊರತು, ಜೀವ – ಜೀವಂತಿಕೆ ಎರಡೂ ಇರುವ ಪ್ರಾಣಿ ಪಕ್ಷಿಗಳ ಕಡೆಗಲ್ಲ. 

ಮೂರ್ತಿ ಪೂಜೆಯನ್ನು ಜೀವನದ ಭಾಗವಾಗಿ ಮಾಡಿಕೊಂಡಿರುವ ಭಾರತದಲ್ಲಿ ಭಾರತ ದೇಶವನ್ನು ಭಾರತ ಮಾತೆಗೆ ಹೋಲಿಸಲಾಗಿದೆ. ಭಕ್ತಿ ಭಾವವನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಗಲಭೆಗಳ ಸೃಷ್ಟಿಗೂ ಈ ಭಾರತ ಮಾತೆ ಕಾರಣಳಾಗಿದ್ದಾಳೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶವನ್ನು ಲೂಟಿಮಾಡುತ್ತಿದ್ದ ಶತ್ರುಗಳಾದ ಬ್ರಿಟೀಷರ ಎದೆಯಲ್ಲಿ ಭಯ ಮೂಡಿಸುವುದಕ್ಕಿದ್ದ ‘ಭಾರತ ಮಾತಾಕೀ ಜೈ’ ಎಂಬ ಘೋಷಣೆ ಇತ್ತೀಚಿನ ದಿನಗಳಲ್ಲಿ ತಮಗಾಗದವರನ್ನು, ತಮ್ಮ ಸಿದ್ಧಾಂತ ಒಪ್ಪದವರನ್ನು ಹೊಡೆಯುವಾಗ ‘ದೇಶಭಕ್ತಿ’ಯ ಪರದೆಯ ಹಿಂದೆ ರಕ್ಷಿಸಿಕೊಳ್ಳಬಯಸುವ ಅರುಚಾಟವಾಗಿಬಿಡುತ್ತಿದೆ. ಹೊಡೆಸಿಕೊಳ್ಳುವವರು ತಪ್ಪು ಮಾಡಿರಲಿ ಮಾಡದಿರಲಿ ‘ದೇಶದ್ರೋಹಿ’ಗಳೆಂಬಂತೆ ಚಿತ್ರಿತವಾಗುತ್ತಿದ್ದಾರೆ.

ದೇಶದ್ರೋಹಿ

ನಿಜಕ್ಕೂ ನಮ್ಮಲ್ಲಿ ದೇಶದ್ರೋಹಿಯಾಗುವುದು ಕಷ್ಟದ ಸಂಗತಿಯಾಗಿತ್ತು. ಐತಿಹಾಸಿಕ ಕಾರಣಗಳಿಂದಾಗಿ ಕಾಶ್ಮೀರಿಗಳು, ಈಶಾನ್ಯ ರಾಜ್ಯದವರು ಪ್ರತ್ಯೇಕ ದೇಶದ ಬೇಡಿಕೆಯಿಟ್ಟರೆ ಅದೇನು ಭಾರತ ದೇಶಕ್ಕೆಸಗಿದ ದ್ರೋಹದಂತೆ ಕಾಣುತ್ತಿರಲಿಲ್ಲ. ಕೊಡಗಿನವರು, ಉತ್ತರ ಕರ್ನಾಟಕದವರು ಪ್ರತ್ಯೇಕ ರಾಜ್ಯದ ಬೇಡಿಕೆಯಿಡುವುದು ರಾಜ್ಯದ್ರೋಹವಲ್ಲ. ಪ್ರಜಾಪ್ರಭುತ್ವವನ್ನಪ್ಪಿಕೊಂಡ ದೇಶದಲ್ಲಿ ಅದು ಅವರ ಹಕ್ಕಿನ ಕುರಿತಾದ ಬೇಡಿಕೆಯಾಗಿತ್ತು. ಪ್ರತ್ಯೇಕತೆಯ ಬೇಡಿಕೆ ಹಿಂಸೆಗೆ ತಿರುಗಿದಾಗ ಸರಕಾರ ಪ್ರತಿಹಿಂಸೆ ನಡೆಸಿದೆ, ಕಾಶ್ಮೀರದಲ್ಲಿ ಅನೇಕ ಅಮಾಯಕರ ಬಲಿಯಾಗಿದೆ, ಸೈನಿಕರ ಹತ್ಯೆಯಾಗಿದೆ, ಸೈನಿಕರ ಗುಂಡೇಟಿಗೆ ಮನುಷ್ಯತ್ವ ಮರೆತ ಭಯೋತ್ಪಾದಕರು ಹತರಾಗಿದ್ದಾರೆ. ಮಣಿಪುರದಲ್ಲಿ ಸೈನಿಕರ ವಿರುದ್ಧ ಮಹಿಳೆಯರು ಬೆತ್ತಲಾಗಿ ನಿಂತು ‘ಬನ್ನಿ ನಮ್ಮನ್ನು ರೇಪ್ ಮಾಡಿ’ ಎಂದು ಕೂಗಿದ್ದಾರೆ, ನಮ್ಮ ದೇಶದ ಸೈನಿಕರ ವಿರುದ್ಧವೆದ್ದ ಈ ಕೂಗು ಆ ಮಹಿಳೆಯರ ಪರವಾಗಿ ಮಾತನಾಡುವಂತೆ ಮಾಡಿತ್ತೇ ಹೊರತು ಭಾರತೀಯ ಸೈನ್ಯದ ವಿರುದ್ಧ ಪ್ರತಿಭಟಿಸಿದವರು ‘ದೇಶದ್ರೋಹಿ’ಗಳು ಎಂಬಂತೇನೂ ಚಿತ್ರಿಸಿರಲಿಲ್ಲ. ಇನ್ನು ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ, ಸೈನ್ಯಕ್ಕಿರುವ ವಿಶೇಷ ಸವಲತ್ತುಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲು ವರುಷಗಳಿಂದ ಸತ್ಯಾಗ್ರಹ ಮಾಡುತ್ತಿದ್ದರೂ ಆಕೆಯೇನು ನಮ್ಮ ಕಣ್ಣಲ್ಲಿ ದೇಶದ್ರೋಹಿಯಾಗಿ ಕಂಡಿರಲಿಲ್ಲ. ಮಧ್ಯ ಭಾರತದಲ್ಲಿನ ನಕ್ಸಲರನ್ನು ಹತ್ತಿಕ್ಕಲು ಮತ್ತು ನಕ್ಸಲರ ಹೆಸರಿನಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಆದಿವಾಸಿಗಳನ್ನು ಹತ್ತಿಕ್ಕಲು ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಅನೇಕ ‘ದೇಶದ್ರೋಹಿ’ಗಳನ್ನು ಪರಿಚಯಿಸಿತು. ಇಲ್ಲೂ ದೇಶದ್ರೋಹಿಗಳಾಗಲು ಕಷ್ಟಪಡಬೇಕಿತ್ತು. ವರುಷಗಳ ಕಾಲ ಕಾಡ ಮಧ್ಯದಲ್ಲಿ ಆದಿವಾಸಿಗಳ ಏಳಿಗೆಗೆ ಶ್ರಮಿಸಬೇಕಿತ್ತು, ನಕ್ಸಲರನ್ನು ವಿರೋಧಿಸುತ್ತಲೇ ಪ್ರಜಾಪ್ರಭುತ್ವ ಕೊಡಮಾಡಿರುವ ಕಾನೂನಾತ್ಮಕ ದಾರಿಗಳಲ್ಲೇ ಆಳ್ವಿಕೆಯ ವಿರುದ್ಧ ನಿರಂತರವಾಗಿ ಹೋರಾಡಬೇಕಿತ್ತು. ಇಷ್ಟೆಲ್ಲ ಮಾಡಿದರೂ ಎಲ್ಲೋ ಅಲ್ಲೊಬ್ಬ ಡಾ.ಬಿನಾಯಕ್ ಸೇನ್, ಇಲ್ಲೊಬ್ಬ ಹಿಮಾಂಶು ಕುಮಾರ್, ಸೋನಿ ಸೂರಿಯಂತವರಿಗೆ ಮಾತ್ರ ದೇಶದ್ರೋಹದ ಪಟ್ಟ ಲಭಿಸುತ್ತಿತ್ತು. 

ಈಗ ಎಲ್ಲಾ ತುಂಬಾ ಫಾಸ್ಟ್ ನೋಡಿ! (ಎಲ್ಲಾ ಕಾಲದಲ್ಲೂ ಇದೇ ಮಾತಿರುತ್ತದೆ ಎನ್ನುವುದು ಬೇರೆ ವಿಷಯ!) ದೇಶದ್ರೋಹಿಯಾಗುವುದು ಬಹಳ ಸುಲಭವಾಗಿಬಿಟ್ಟಿದೆ. ಆಳುವ ಸರಕಾರವನ್ನು ವಿರೋಧಿಸಿದರೂ ಅದು ದ್ರೋಹವಾಗುತ್ತದೆ; ಎಡಪಂಥೀಯ ವಿಚಾರಧಾರೆ ಹೊಂದಿರಲೇಬೇಕೆಂದಿಲ್ಲ, ಸುಮ್ಮನೆ ಬೇಜಾರಾದಾಗ ಕಮ್ಯುನಿಷ್ಟ್ ಮ್ಯಾನಿಫೆಸ್ಟೋವನ್ನು ತಿರುವಿಹಾಕಿದ್ದರೂ ಸಾಕು ದ್ರೋಹಿಗಳಾಗಬಹುದು; ದಲಿತರ ಪರವಾಗಿ ಕೆಲಸ ಮಾಡುವುದು ಅತ್ಲಾಗಿರಲಿ ಅವರ ಪರವಾಗಿ ಎರಡು ಸಾಲು ಗೀಚಿ ಎರಡು ಡೈಲಾಗು ಹೊಡೆದರೂ ಸಾಕು ನೀವು ದೇಶದ್ರೋಹಿಗಳಾಗಿಬಿಡಬಹುದು. ನಾಲಿಗೆಯಲ್ಲಿ ಮುಸ್ಲಿಂ ಹೆಸರು ಬಂದರೂ ಸಾಕು, ಪಕ್ಕದ ಪಾಕಿಸ್ತಾನಕ್ಕೆ ಕಳುಹಿಸಿಬಿಡಲು ಅನೇಕರು ಉತ್ಸುಕರಾಗಿಬಿಡುತ್ತಾರೆ! ಅಷ್ಟರಮಟ್ಟಿಗೆ ಈಗ ದೇಶದ್ರೋಹಿಯಾಗಿಬಿಡುವುದು ಸುಲಭವಾಗಿಬಿಟ್ಟಿದೆ! 

ದೇಶಪ್ರೇಮವೆಂದರೆ ದ್ವೇಷಪ್ರೇಮವಲ್ಲ, ದೇಶಭಕ್ತಿಯೆಂದರೆ ಕುರುಡು ಆರಾಧನೆಯಲ್ಲ, ದೇಶದ್ರೋಹವೆಂದರೆ ಆಳ್ವಿಕೆಯ ಅನೀತಿಗಳ ವಿರುದ್ಧ ಮಾತನಾಡುವುದಲ್ಲ ಎಂಬಂಶವನ್ನು ಮರೆಯದೆ ರವೀಂದ್ರನಾಥ ಟಾಗೂರರ ಈ ಸಾಲುಗಳನ್ನೊಮ್ಮೆ ಓದಿಕೊಳ್ಳಿ ‘ದೇಶಭಕ್ತಿಯ ಹೆಸರಿನಲ್ಲಿದ್ದ ಪುರಾತನ ಗ್ರೀಸ್ ತಾನು ಬೆಳಗಿದ ಜಾಗದಲ್ಲೇ ನಂದಿಹೋಯಿತು, ರೋಮ್ ತನ್ನ ಸಾಮ್ರಾಜ್ಯದಡಿಯಲ್ಲೇ ನಿರ್ನಾಮವಾಗಿಹೋಯಿತು. ಸಮಾಜ ಮತ್ತು ಮನುಷ್ಯನ ಆಧ್ಯಾತ್ಮಿಕತೆಯ ಮೇಲೆ ನಿರ್ಮಾಣಗೊಂಡ ನಾಗರೀಕತೆಗಳು ಇನ್ನೂ ಜೀವಂತವಾಗಿವೆ, ಭಾರತದಲ್ಲಿ ಮತ್ತು ಚೀನಾದಲ್ಲಿ’. ಮನುಷ್ಯ ಸಂತತಿ ಉಳಿಯಲು ನಾಗರೀಕತೆ ಮುಖ್ಯ, ದೇಶಭಕ್ತಿಯಲ್ಲ ಎನ್ನುವ ಟಾಗೂರರ ಮಾತುಗಳು ದೇಶಭಕ್ತಿ ಮುಖ್ಯ ನಾಗರೀಕತೆಯಲ್ಲ ಎನ್ನುವ ವರ್ತಮಾನದಲ್ಲಿ ಗ್ರೀಸ್ ಮತ್ತು ರೋಮಿನ ಭೂತದ ದರ್ಶನ ಭವಿಷ್ಯದ ಭಾರತ ಮಾಡಿಸಿಬಿಡಬಹುದೇ? ಇಲ್ಲ ಎನ್ನಲಿರುವ ಕಾರಣಗಳು ಕಡಿಮೆಯಿವೆ.
(ಸಂಕಥನ ಸಾಹಿತ್ಯ ಪತ್ರಿಕೆಗೆ ಬರೆದ ಲೇಖನ)

May 10, 2016

ಹೈದರಾಬಾದ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ.

ಮಾಹಿತಿ: ಕಿರಣ್ ಗಾಜನೂರ್.
JNU ನಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಲು ಆಡಳಿತ ಮಂಡಳಿ ನೇಮಿಸಿದ್ದ ಉನ್ನತ ಹಂತದ ತನಿಖಾ ಸಮಿತಿಯು ವರದಿ ನೀಡಿದ್ದು ಯಾವುದೇ ತಪ್ಪು ಮಾಡದ ವಿದ್ಯಾರ್ಥಿಗಳ ಮೇಲೆ ಚಾಟಿ ಬೀಸಿದೆ. ಇದನ್ನು ಖಂಡಿಸಿ ಕಳೆದ ವಾರದಿಂದ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಆಚರಿಸುತ್ತಿದ್ದಾರೆ. ಆದರೂ ಆಡಳಿತ ಮಂಡಳಿ ಕುರುಡತನ ಪ್ರದರ್ಶಿಸುತ್ತಿದೆ.

ಹಾಗೆಯೇ ಕೆಲವು ತಿಂಗಳಿಂದಲೂ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರೋಹಿತ್ ವೇಮುಲಾ ತಾಯಿ ರಾಧಿಕಾ ಅವರು ರೋಹಿತ್ ವೇಮುಲ ಸಾವಿಗೆ ಕಾರಣರಾದ ಉಪಕುಲಪತಿ ಅಪ್ಪಾರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಮೇಲೆ ನಿರಂತರ ಹಲ್ಲೆ ದೌರ್ಜನ್ಯ ನಡೆಸಲಾಗಿದೆ. . . .

ಜೆ.ಎನ್. ಯು. ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ ಗಳ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟವನ್ನು ಬೆಂಬಲಿಸಿ ದಿ. 10.05.2016 ರ ಮಂಗಳವಾರ ಕರ್ನಾಟಕದ ನಾನಾ ಕಡೆಗಳ ಸಮಾನ ಮನಸ್ಕರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಕೆಳಕಂಡವರು ಭಾಗವಹಿಸುತ್ತಿದ್ದಾರೆ.

1.Prof.Purushotham Bilimale, JNU
2. Dr.Muzafar Assadi
3. Gauri Lankesh, Journalist
4. Dr.Rahamath Tarikere
5. Dr.Meti Mallikarjun, Professor,
6. Noor Shridhar, Social activist
7. Basu Sanj, Professor, BIT
8. Dr. Arun JoladaKudligi
9. Prasanna Kumar, Teacher
10. Riyaz Sagar
11, Muddu Tirthahalli, Student, Writer
12. Gulabi Bilimale, Social Activist
13. Shailaja Kanjarpane
14. Sudarshan byndagere
15. M.K Jeermuki
16. Dr D.S Poornanand,
Professor
17. Michael desoza
18. Siddayya Chikka Maadegowda, Social activist
19. Mahantesha doddamani
20. Roopa Mattikere, Lecturer
21. Chakravarthi Chandrachud, Journalist
22. Amaresh Kuri, SFI activist
23. Salim Malik K, Student
24. D Hosalli Shivu, Business
25. Shwetha, Lecturer
26. Aravind M.M, Employee
28. Anshad playa, Social activist
29. Krishnamurthi, Student
30. Veena, Student
31. Ashok chittaragi, Scholar
32. Mallikaarjun, Student
33. Venkatesh Potri, Student
34. Balabhim, Scholar
35. Narasihma Murthi, Advocate
36. DS Baabu Manase
37. Supreetha
38. Vasanth B Ishvaragere
39. Satish paaligaar, Teacher
40.Shivshankar
41. Chethana Tirthahalli, Writer
42.Bhaskar Prasad, Social Activist
43. Pranesh Bharatnur
Public prosecutor
44. M .G Krishnamurthy Indlavaadi, Student
45. Amzad pasha
46. K L Ashok, Social activist
47. Ananth Naik
Advocate, Social activist
48. Kaveridas
49. Muneer kaatipalla
50. Giridhara Karkala
51.Deepa Girish, Social Activist
52. Deepak Kumar Honnaale
53. Bharath D.R,
54. Shi ju Pasha, Journalist
55.Jayaraj Nanjappa, Social activist
56. Baabu reddy, Journalist
57. Naada Maninalkuru, Social Activist
58. Mutturaaju, Social activist
59. Pavithra, Student
60. Anjali, Student
61. Nandashree, Student
62. Mohan Samrat
63. Akash
64. Ravi mohan
65. Rajinikanth
66. Subramanya
67. Somashekar
68. Abhinandan
69. Sarovar Benkikere, Activist
70. Santosh
71. Manjunath
72. Shwetha
73. Kousalya
74. Poornima
75. Shruti Manglore, Social Activist
76. Kumar, Student
77. Ganesh, student
78. Sanjay, Social activist
79. Malikaarjuna
80. Muruli,
81.Hemantha
82. Manjunath
83.Shiva Kumar
84. Shobith Nambiyaar
85. Avinaash Kadeshivaalaya
86. Shashi, Baduku
87. Manju, Baduku
88. Dr Rashmi S, Lecturer
89. Venkatesh Prassad, Student
90. Suresh, Student
91. P. Rajanna
92. Anand N, Assistant professor
93. Manjula Telagade, Journalist
94. Padma
95. Aruna
96. Uday
97. Rekha, Social Activist
98. Sudha, Social Activist
99.Tukarama Yekkar, Social Activist
100. Swarna Bhat, Social Activist
101. Chandrakala, Social Activist
102. Vani Periyodi, Social activist
103. Shrinivas Karkala, Writer
104. Dipak Singh, Political activist
105. Anand Ramanna, Political activist
106. Nagaraj, Student
107. Manjula, Student
108. Prithvi M.G, Social activist
109. Lankesh
110. Vinod, Social activist
111. Pradeep, Student activist
112. Manjunath, Social activist
113. Vikas R Mourya, Teacher
114. Manjula, Lecturer
115. Marutish, Student
116. Manasa R, Student
117. Kavitha, Student
118. Hanumakka, Student
119. Jyoti A, Scholar
120. Gururaj Navalagunda, PDF
121. Gururaj Desai, SFI activist
122. Mahantesh, PDF
123. Vasumati U.V
124. Basu Sanj, Professor, BIT
124.Ashok Kumar, Bhadravathi
125. Dr.Kiran Gajanuru, PDF
126. Harsha Kumar Kugwe, Writer.
127. Shanthi K Appanna,
128. Cuban Cigar,
129. Imam Godekar, Bellari
130. Avinash Holemaruru, Post Master
131. Sagar, Student
132. Sanjyothi, Writer
133. Mahadev Devaiah
134. Anvitha, 6th Standard student
135. Ramya
136. Satya ES
137. Ibrahim DK
138. Giridhara Karkala
139. Khan Deshapremi
140. Narasihma Murthy, Advocate
141. K.N. Dipak
142. Vishwas Shetty
143. Anil ogennanavar
144. Sandesh Davangere
and others.

May 6, 2016

ಮೇಕಿಂಗ್ ಹಿಸ್ಟರಿ: ಕೈಗಾರಿಕೆಯ ಸ್ಥಾನ ಪಲ್ಲಟ

Making history by saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
06/05/2016


ಭಾರತ ಮತ್ತು ಇಂಗ್ಲೆಂಡಿನ ನಡುವಿನ ಮುಕ್ತ ವ್ಯಾಪಾರ ಭಾರತಕ್ಕೆ ಅನುಕೂಲಕರವಾಗಿಯೇ ಇತ್ತು. ಯುರೋಪಿನ ಕೈಗಾರಿಕಾ ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆಯಿತ್ತು. ಹದಿನೇಳನೇ ಶತಮಾನದ ಮಧ್ಯಭಾಗದಲ್ಲಿ ನಡೆದುದ್ದರ ಬಗ್ಗೆ ಪಿಜೆ ಥಾಮಸ್ ತಿಳಿಸುತ್ತಾರೆ: “ದೇಶದ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದಕ್ಕೆ ಮತ್ತು ದೇಶದ ಸಂಪನ್ಮೂಲವನ್ನು ರಕ್ಷಿಸುವುದಕ್ಕೆ ಕಂಪನಿ ಇಂಗ್ಲೆಂಡಿನ ಉತ್ಪನ್ನಗಳನ್ನು ಪೂರ್ವದ ದೇಶಗಳಿಗೆ ರಫ್ತು ಮಾಡಬೇಕೆಂದು ನಿರ್ಧರಿಸಲಾಯಿತು. ಅದರ ಪ್ರಕಾರ ಉಣ್ಣೆ ಬಟ್ಟೆ, ಕಬ್ಬಿಣ, ಸೀಸ, ಸಿಲ್ವರ್, ಕತ್ತಿ ಅಲಗುಗಳನ್ನು ಭಾರತದ ಕಾರ್ಖಾನೆಗಳಿಗೆ ರವಾನಿಸಲಾಯಿತು. ಈ ವಸ್ತುಗಳಿಗೆ ಅಲ್ಲಿ ಬೇಡಿಕೆ ಕಡಿಮೆಯಿತ್ತು. ಕಂಪನಿಯ ಕಬ್ಬಿಣ ಮತ್ತು ಟಿನ್ ಭಾರತದ ಗ್ರಾಹಕನಿಗೆ ತುಂಬಾ ದುಬಾರಿಯದ್ದಾಗಿತ್ತು ಮತ್ತು ಇತರೆ ವಸ್ತುಗಳು ತುಂಬಾ ಕಡಿಮೆ ಪ್ರಮಾಣದಲ್ಲವರಿಗೆ ಬೇಕಾಗಿತ್ತು. ಇಂಗ್ಲೆಂಡಿನ ಉಣ್ಣೆ ಬಟ್ಟೆಗಳಿಗೆ ಭಾರತದಲ್ಲಿ ವ್ಯಾಪಾರ ಕುದುರಿಸಲು ಕಂಪನಿಗೆ ಆಸಕ್ತಿಯಿತ್ತಾದರೂ ಸಿಕ್ಕ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ. ಭಾರತದ ದೊಡ್ಡ ಸಂಖೈಯ ಜನರು ಹತ್ತಿ ಬಟ್ಟೆಯನ್ನಷ್ಟೇ ಉಡುತ್ತಿದ್ದರು. ಅವರಿಗೊಂದೋ ಎರಡೋ ಕಂಬಳಿ ಬೇಕಿತ್ತು, ಆದರೆ ಭಾರತದಲ್ಲೇ ಗುಣಮಟ್ಟದ ಕಡಿಮೆ ಬೆಲೆಯ ವಸ್ತು ಸಿಗುತ್ತಿತ್ತು.

ಭಾರತದಲ್ಲಿ ಉಣ್ಣೆ ಬಟ್ಟೆಗಳ ವ್ಯಾಪಾರ ಹೆಚ್ಚಿಸಬೇಕೆಂದು ಕಂಪನಿಯ ನಿರ್ದೇಶಕರು ಪದೇ ಪದೇ ಭಾರತಕ್ಕೆ ಆದೇಶ ಕಳುಹಿಸುತ್ತಿದ್ದರು. ವ್ಯಾಪಾರ ಹೆಚ್ಚಿಸಲು ಶ್ರಮ ಹಾಕಿದರಾದರೂ ಸಿಕ್ಕ ಪ್ರತಿಫಲ ಮಾತ್ರ ತುಂಬಾನೇ ಕಡಿಮೆ.” (156)

ಫೆಬ್ರವರಿ 1818ರಲ್ಲಿ ಥಾಮಸ್ ಮನ್ರೋ ತನ್ನ ಟಿಪ್ಪಣಿ On opening the trade with india to the outposts of the great britainನಲ್ಲಿ ಹೆಚ್ಚು ಕಡಿಮೆ ಎರಡು ಶತಮಾನಗಳ ಹಿಂದೆ ಪಿಜೆ ಥಾಮಸ್ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನೇ ಪ್ರತಿಧ್ವನಿಸುತ್ತಾನೆ. “ಯಾವುದೇ ದೇಶವು ತನ್ನಲ್ಲೇ ಕಡಿಮೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಉತ್ಪಾದನೆಯಾಗುತ್ತಿರುವಾಗ ಅನ್ಯದೇಶದಿಂದ ಆಮದು ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ, ಇಲ್ಲಿನವರಿಗೆ ಬೇಕಾದ ಹೆಚ್ಚು ಕಡಿಮೆ ಪ್ರತಿಯೊಂದು ವಸ್ತುವನ್ನೂ ಕಡಿಮೆ ದುಡ್ಡಿಗೆ ಮತ್ತು ಯುರೋಪಿಗಿಂತ ಉತ್ತಮ ಗುಣಮಟ್ಟದಲ್ಲಿ ತಯಾರು ಮಾಡಲಾಗುತ್ತಿದೆ. ಇದರಲ್ಲಿ ಹತ್ತಿ ಮತ್ತು ರೇಷ್ಮೆ ಉತ್ಪಾದಕರು, ಚರ್ಮೋದ್ಯಮ, ಪೇಪರ್, ಕಬ್ಬಿಣ ಮತ್ತು ತಾಮ್ರದ ಅಡುಗೆ ಸಾಮಗ್ರಿಗಳು ಮತ್ತು ಕೃಷಿ ಉಪಕರಣಗಳು ಸೇರಿದೆ. ಅವರ ಕಂಬಳಿಗಳು, ಅಷ್ಟೇನೂ ಚೆನ್ನಾಗಿಲ್ಲದಿದ್ದರೂ, ತುಂಬಾ ಕಡಿಮೆ ಬೆಲೆಯ ಕಾರಣ ಅಸ್ತಿತ್ವ ಉಳಿಸಿಕೊಳ್ಳುತ್ತವೆ; ಅವರ ಕಂಬಳಿಗಳು ನಮ್ಮದಕ್ಕಿಂತ ಹೆಚ್ಚು ಬೆಚ್ಚಗೆ ಮಾಡುತ್ತವೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ….

ಜಾತಿ ಮತ್ತು ವಾತಾವರಣದಿಂದ ನಿರ್ದೇಶಿತವಾಗಿರುವ ಅವರ ಸರಳ ಜೀವನ ನಮ್ಮೆಲ್ಲ ಪೀಠೋಪಕರಣಗಳು ಮತ್ತು ಮನೆಯ ಅಂದ ಹೆಚ್ಚಿಸುವ ಅಲಂಕಾರಿಕ ವಸ್ತುಗಳನ್ನು ಹಿಂದೂಗಳಿಗೆ ನಿರುಪಯುಕ್ತವಾಗಿಸಿಬಿಡುತ್ತದೆ.

ಇತಿಹಾಸದಿಂದ ಭವಿಷ್ಯದ ಕಡೆಗೆ ನೋಡಿದರೆ ನಮ್ಮ ರಫ್ತು ಪ್ರಮಾಣವನ್ನು ಹೆಚ್ಚಿಸುವಂತಹ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದು ಸಾಧುವಲ್ಲ. ವಿದೇಶಿ ವಸ್ತುಗಳನ್ನು ಪರಿಚಯಿಸಬೇಕು ಎಂದು ಕೆಲವರು ಹೇಳುತ್ತಿರುವುದನ್ನು ಕೇಳಿದರೆ ಅದನ್ನು ಬಹಳಷ್ಟು ಹಿಂದೆಯೇ ಮಾಡಬಹುದಿತ್ತಲ್ಲವೇ?” (157)

ಮೇಲಿನ ಎರಡು ಹೇಳಿಕೆಗಳು ಮಿಷಿನ್ನುಗಳ ಅಭಿವೃದ್ಧಿಯಿಂದ ಹೆಚ್ಚೆಚ್ಚು ಉತ್ಪಾದನೆಯನ್ನು ಕಡಿಮೆ ವೆಚ್ಚಕ್ಕೆ ತಯಾರಿಸಲಾರಂಭಿಸಿದ ಹತ್ತೊಂಬತ್ತನೇ ಶತಮಾನದಲ್ಲಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಡಲಾಗಿತ್ತು, ಕರ್ನಾಟಕದ ಗುಡಿ ಕೈಗಾರಿಕೆಗಳ ಉತ್ಪನ್ನಕ್ಕಿಂತ ಮಿಷಿನ್ನಿನ ಉತ್ಪನ್ನದ ಬೆಲೆ ಜಾಸ್ತಿಯಿತ್ತು ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ, ಇಂಗ್ಲೆಂಡಿನ ವಸ್ತುಗಳನ್ನು ಭಾರತಕ್ಕೆ ಸಾಗಿಸುವುದಕ್ಕಾಗುವ ಖರ್ಚು ಉತ್ಪನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿಬಿಡುತ್ತಿತ್ತು. ಬೆಲೆಗಳು ಸಮನಾಗುವುದಕ್ಕೆ ಮತ್ತು ಬ್ರಿಟೀಷ್ ವಸಾಹತುಶಾಹಿಗೆ ‘ನ್ಯಾಯ’ಬದ್ಧ ಪೈಪೋಟಿ ನೀಡಲು ಮತ್ತಷ್ಟು ವರುಷಗಳು ಬೇಕಿತ್ತು.

ಮಾರ್ಕ್ಸ್ ನೀಡುವ ಅಂಕಿಅಂಶಗಳು ನಮಗೆ ಕಲಿಸುವುದೇನೆಂದರೆ: “1818ರಿಂದ 1836ರವರೆಗೆ ಬ್ರಿಟನ್ನಿನಿಂದ ಭಾರತಕ್ಕೆ ರಫ್ತಾಗುವ ಸಾಮಗ್ರಿಗಳ ಪ್ರಮಾಣ ಒಂದರಿಂದ ಐದು ಸಾವಿರದ ಎರಡು ನೂರಕ್ಕೆ ಏರಿಕೆ ಕಂಡಿತು. 1824ರಲ್ಲಿ ಭಾರತಕ್ಕೆ ರಫ್ತಾಗುತ್ತಿದ್ದ ಮಸ್ಲಿನ್ನಿನ ಪ್ರಮಾಣ 10,00,000 ಯಾರ್ಡುಗಳಿದ್ದರೆ 1837ರಲ್ಲಿ ಅದು 6,40,00,000ಯಾರ್ಡುಗಳಿಗಿಂತಲೂ ಹೆಚ್ಚಾಗಿತ್ತು. ಅದೇ ಸಮಯದಲ್ಲಿ ಡಾಕಾದ ಜನಸಂಖೈ 1,50,000ದಿಂದ 20,000ಕ್ಕೆ ಇಳಿದುಹೋಗಿತ್ತು.” (158)

ಈ ಸಾಧನೆಯನ್ನು ವಿವರಿಸುವುದೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಲೊರಟಾಗ ವಸಾಹತುಶಾಹಿಯ ತತ್ವಗಳು ಮತ್ತು ಬ್ರಿಟೀಷ್ ಕೈಗಾರಿಕೆಯ ಯಶಸ್ಸಿನಲ್ಲಿ ಭಾರತದ ಪಾತ್ರದ ಪಾತ್ರದ ಬಗ್ಗೆ ಮಾಹಿತಿ ಸಿಗುತ್ತದೆ.

ಸದ್ಯದಲ್ಲೇ ನಾವು ನೋಡುವಂತೆ, ಇಂತಹ ಅತ್ಯದ್ಭುತ ಯಶಸ್ಸಿಗೆ ತಾಟಸ್ಥ್ಯ ಧೋರಣೆ ಕಾರಣವಲ್ಲ, ಬದಲಿಗೆ ವಸಾಹತುಶಾಹಿಯನ್ನು ಭದ್ರಗೊಳಿಸಲು ಬಲ ಮತ್ತು ಹಿಂಸೆಯನ್ನು ಯಥೇಚ್ಛವಾಗಿ ಉಪಯೋಗಿಸಿದ್ದು ಮತ್ತು ವಸಾಹತು ಅಧಿಕಾರವನ್ನು ನಿರ್ಬಂಧಗಳನ್ನು ಜಾರಿಗೊಳಿಸಲು ಬಳಸಿಕೊಂಡು ದೇಶೀಯ ಗುಡಿಕೈಗಾರಿಕೆಗಳನ್ನು ನಾಶಪಡಿಸಿದ್ದು ಈ ಅತ್ಯದ್ಭುತ ಯಶಸ್ಸಿಗೆ ಕಾರಣ. ಬ್ರಿಟೀಷ್ ಕೈಗಾರಿಕೆಯ ಯಶಸ್ಸು ಅದರ ಬಂಡವಾಳಶಾಹಿ ವ್ಯಕ್ತಿತ್ವದಲ್ಲಷ್ಟೇ ಇಲ್ಲ – ಬಂಡವಾಳಶಾಹಿತನದಲ್ಲಿ ಹೆಚ್ಚೆಚ್ಚು ಉತ್ಪಾದನೆ ಮಾಡುವುದಷ್ಟೇ ಆರ್ಥಿಕ ನೀತಿ; ಜೊತೆ ಜೊತೆಗೆ ರಾಜಕೀಯ ದಾರಿಗಳಿಂದ ಹಿಂಸೆಯನ್ನನುಸರಿಸಿ ದೇಶವನ್ನು ಗುಲಾಮಸ್ಥಿತಿಗೆ ದೂಡಿದ್ದು ಮತ್ತು ನಮ್ಮ ಕೈಗಾರಿಕೆಗಳನ್ನು ಉಸಿರುಗಟ್ಟಿಸಲು ಭೀತಿ ಮತ್ತು ತೆರಿಗೆಯನ್ನು ಹೇರಿದ್ದು. ಬ್ರಿಟೀಷ್ ಉತ್ಪನ್ನಗಳ ಯಶಸ್ಸು ಸಾಧಿಸಲಾಗಿದ್ದು ಕರ್ನಾಟಕ ಮತ್ತು ಭಾರತದ ಕೈಗಾರಿಕೆಗಳನ್ನು ನಾಶ ಪಡಿಸಿದ ನಂತರ. ನಮ್ಮ ಕೈಗಾರಿಕಾ ಉಪಕರಣಗಳನ್ನು ಕಸಕ್ಕೆ ಸೇರುವಂತೆ ಮಾಡಿ, ಭಾರತದ ಕೈಗಾರಿಕೆಗಳ ಐತಿಹಾಸಿಕ ಮುನ್ನಡೆಯ ಅಂತ್ಯಸಂಸ್ಕಾರ ನಡೆಸಿದ ಮೇಲಷ್ಟೇ ರಫ್ತಾದ ಬ್ರಿಟೀಷ್ ಉತ್ಪನ್ನಗಳು ಭಾರತದಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಾಯಿತು. ಇತಿಹಾಸದ ನಂತರದ ಘಟ್ಟದಲ್ಲಷ್ಟೇ ಕಾರಣಗಳು ಪರಿಣಾಮದ ಜಾಗಕ್ಕೆ ಬಂದು, ಗುಡಿ ಕೈಗಾರಿಕೆಯ ಎಲ್ಲಾ ಉತ್ಪನ್ನಗಳನ್ನು ನಾಶಪಡಿಸಲಾರಂಭಿಸಿದ್ದು. ಮಾರ್ಕ್ಸ್ ಹೇಳಿದಂತೆ “ಬ್ರಿಟೀಷ್ ಆಕ್ರಮಣಕಾರ ಭಾರತದ ನೇಕಾರಿಕೆಯನ್ನು, ಚರಕದ ತಿರುಗುವಿಕೆಯನ್ನು ನಾಶ ಪಡಿಸಿದ. ಇಂಗ್ಲೆಂಡ್ ಭಾರತದ ಹತ್ತಿಯನ್ನು ಯುರೋಪಿನ ಮಾರುಕಟ್ಟೆಗೆ ತರಲಾರಂಭಿಸಿತು; ನಂತರ ಹತ್ತಿಯ ಮಾತೃದೇಶವಾದ ಹಿಂದೂಸ್ಥಾನಕ್ಕೇ ಹತ್ತಿಯನ್ನು ರವಾನಿಸಲಾರಂಭಿಸಿದರು!” (159)

ವಸಾಹತು ರಾಜ್ಯ ಬೆಂಗಳೂರಿನ ಸಾಂಪ್ರದಾಯಿಕ ವರ್ತಕರನ್ನು ಕಂಟೋನ್ಮೆಂಟ್ ಪ್ರದೇಶಕ್ಕೆ ಬರದಂತೆ ತಡೆದದ್ದನ್ನು ನಾವೀಗಾಗಲೇ ನೋಡಿದ್ದೇವೆ. ಬೆಂಗಳೂರು ನಗರದ ಒಂದು ಭಾಗದ ಉತ್ಪಾದಕರು ಮತ್ತೊಂದು ಭಾಗದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಅವಕಾಶ ಕೊಡದೇ ಇದ್ದದ್ದು ಆ ಭಾಗವು ಬ್ರಿಟೀಷ್ ಕೈಗಾರಿಕೆಯ ಭಾಗವನ್ನಾಗಿಸಿತು, ಬೇರೊಬ್ಬ ವ್ಯಾಪಾರಿ ಬರಲಾಗದ ಭಾಗವಾಯಿತು.

ಬ್ರಿಟೀಷ್ ಕೈಗಾರಿಕೆಗೆ ಹೊಸ ಮಾರುಕಟ್ಟೆಯನ್ನು ಬಲವಂತವಾಗಿ ತೆರೆಸಿದ ಸಂದರ್ಭದಲ್ಲಿಯೇ ನಮ್ಮ ಗುಡಿ ಕೈಗಾರಿಕೆಗಳನ್ನು ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಫಣಿ, ಆನಂದ್ ಮತ್ತು ವ್ಯಾಸುಲು ತಿಳಿಸುತ್ತಾರೆ. “ಟಿಪ್ಪು ಸುಲ್ತಾನ್ ಮಸ್ಕತ್ (musquat), ಓರ್ಮಿ (ormy) ಯಲ್ಲಿ ಸ್ಥಾಪಿಸಿದ ಕೈಗಾರಿಕೆಗಳನ್ನು 1801ರಲ್ಲಿ ಮುಚ್ಚಲಾಯಿತು ಮತ್ತು ಮೈಸೂರಿಗರು ತಮ್ಮ ತಮ್ಮ ಪಟ್ಟಣಕ್ಕೆ ವಾಪಸ್ಸು ಬಂದರು. ಇದರ ಪರಿಣಾಮವಾಗಿ ರೇಷ್ಮೆ, ಹತ್ತಿ, ಶ್ರೀಗಂಧದ ರಫ್ತು ರದ್ದಾಗಿಬಿಟ್ಟಿತು, ಇದರಲ್ಲಿ ಹೆಚ್ಚಿನ ಪಾಲು ಬೆಂಗಳೂರಿನದ್ದಾಗಿತ್ತು. ಐಷಾರಾಮಿ ಗ್ರಾಹಕರಿಗೆ ಬಟ್ಟೆ ಒದಗಿಸುತ್ತಿದ್ದ ಈ ಮಾರುಕಟ್ಟೆಯ ಬೆಲೆ ವಿಪರೀತವಾಗಿ ಕುಸಿದು ಬಿದ್ದ ಕಾರಣ ಈ ಮಾರುಕಟ್ಟೆಗೆ ಉತ್ಪನ್ನಗಳನ್ನು ಕಳುಹಿಸುತ್ತಿದ್ದವರ ಮೇಲೆ ಕೆಟ್ಟ ಪರಿಣಾಮ ಬೀರಿತು. ಬೆಂಗಳೂರಿನ ವಸ್ತ್ರೋದ್ಯಮದಲ್ಲಿದ್ದವರು ಇದರ ದುಷ್ಪರಿಣಾಮಗಳನ್ನನುಭವಿಸಿದರವರಲ್ಲಿ ಮೊದಲಿಗರು. ಈ ಲಾಭಕರ ಮಾರುಕಟ್ಟೆಗೆ ಬದಲಿ ಉದ್ಯಮ ಸೃಷ್ಟಿಸುವಲ್ಲಿ ಬ್ರಿಟೀಷರಿಗೆ ಆಸಕ್ತಿಯಿರಲಿಲ್ಲ ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ.” (160)

ಸೈನ್ಯ ಮತ್ತು ಶ್ರೀರಂಗಪಟ್ಟಣ ಬೆಂಗಳೂರಿನ ಬಟ್ಟೆ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿತ್ತು. ಸೈನ್ಯದ ವಿಸರ್ಜನೆ ಮತ್ತು ಶ್ರೀರಂಗಪಟ್ಟಣದ ಜನಸಂಖೈಯಲ್ಲಾದ ಗಣನೀಯ ಇಳಿಕೆಗಳೆರಡೂ ಬೆಂಗಳೂರಿನ ಬಟ್ಟೆ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿತು. ಬಹುಶಃ ಟಿಪ್ಪು ಸುಲ್ತಾನನ ದೇಶಪ್ರೇಮಿ ಸರಕಾರದ ಪತನದಿಂದಾ ಆರ್ಥಿಕ ಪರಿಣಾಮ ಬಟ್ಟೆ ಉದ್ಯಮದಲ್ಲಿ ಕಂಡಂತೆ ಬೇರೆಲ್ಲೂ ಕಾಣಸಿಗುವುದಿಲ್ಲ. ಬಟ್ಟೆ ಉದ್ಯಮ ಕರ್ನಾಟಕದ ಬೆಳೆಯುತ್ತಿದ್ದ ಕೈಗಾರಿಕೆಗೆ ಜೀವಧಾರೆಯಾಗಿತ್ತು.

ಟಿಪ್ಪುವಿನ ಪತನದ ಕೆಲವೇ ತಿಂಗಳ ಬಳಿಕ ಉಂಟಾದ ಪರಿಣಾಮಗಳನ್ನು ಬುಚನನ್ ವಿವರಿಸುತ್ತಾನೆ. ಬೆಂಗಳೂರಿನ ಬಟ್ಟೆ ಉದ್ಯಮದ ಉಪನಗರವಾಗಿ ಬೆಳೆಯುತ್ತಿದ್ದ ಸರ್ಜಾಪುರದ ಬಗ್ಗೆ ಆತ ಹೇಳುತ್ತಾನೆ: “ಮೊದಲಿಲ್ಲಿ ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಲಾಗುತ್ತಿತ್ತು ಆದರೀಗ ಒರಟು ಉತ್ಪನ್ನಗಳನ್ನಷ್ಟೇ ತಯಾರಿಸಲಾಗುತ್ತಿದೆ.”(161) ನಂತರ ಬೆಂಗಳೂರಿನ ಬಗ್ಗೆ ಹೇಳುತ್ತಾನೆ: “ಬೆಂಗಳೂರಿನ ನೇಕಾರರು ನೈಪುಣ್ಯ ವರ್ಗಕ್ಕೆ ಸೇರಿದ ಜನರು. ಒಂದಷ್ಟು ಪ್ರೋತ್ಸಾಹ ಸಿಕ್ಕರೆ ಅವರು ಬೇಡಿಕೆಯಿರುವ ನಯ ನಾಜೂಕಿನ ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಬಲ್ಲರು. ಅವರು ಶ್ರೀರಂಗಪಟ್ಟಣಕ್ಕೆ ಇಂತಹ ವಸ್ತುಗಳನ್ನು ತಯಾರಿಸಿಕೊಡುವುದರಲ್ಲಿ ಮುಂದಿದ್ದರು. ಆದರೀಗವರಿಗೆ ಬರೀ ಅನಾನುಕೂಲಗಳೇ ಇವೆ; ಮೈಸೂರಿನ ಬೇಡಿಕೆ ಶ್ರೀರಂಗಪಟ್ಟಣದಷ್ಟಿರುವುದು ಅನುಮಾನ, ಇಂಗ್ಲೀಷ್ ಅಧಿಕಾರಿಗಳು ಮುಸ್ಲಿಂ ಸರದಾರರಂತೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಹೈದರಿನ ಕಾಲದಲ್ಲಿ ಉತ್ಪಾದಿಸಿದಂತಹ ವಸ್ತುಗಳನ್ನು ತಯಾರಿಸುವುದನ್ನು ಈಗಿನ ಉತ್ಪಾದಕರು ನಿರೀಕ್ಷಿಸುವಂತಿಲ್ಲ, ತಮ್ಮ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದರ ಹೊರತಾಗಿ.” (162)

ಸೈತಾನನೊಬ್ಬ ರಾಕ್ಷಸನಿಗೆ ಅಮಾಯಕರನ್ನು ನ್ಯಾಯಕ್ಕೋಸ್ಕರ ನರಕಕ್ಕೆ ಕರೆದೊಯ್ಯಬೇಕೆಂದು ಸಲಹೆ ನೀಡುವಂತೆ ಬುಚನನ್ ಮುಂದುವರಿಸುತ್ತಾನೆ: “ಈ ನಗರವನ್ನು ಪುನರ್ ಸ್ಥಾಪಿಸಲು ಅಪಾರ ಆಸಕ್ತಿ ಹೊಂದಿರುವ ಪೂರ್ಣಯ್ಯ, ಸಂಗ್ರಹಿಸಿದ್ದ ಹತ್ತಿ ಮತ್ತು ರೇಷ್ಮೆಯ ಬಟ್ಟೆಗಳನ್ನು ನನಗೆ ಕಳುಹಿಸಿದ್ದಾರೆ; ಅವರ ಹೆಸರಿನಲ್ಲೇ ಮಾರ್ಕ್ವಿಸ್ ವೆಲ್ಲೆಸ್ಲಿಗೆ ಉಡುಗೊರೆಯಾಗಿ ಕೊಡಬೇಕೆಂಬ ವಿನಂತಿಯೊಂದಿಗೆ. ಇದರಿಂದ ವ್ಯಾಪಾರ ವ್ಯವಹಾರದ ನಿರ್ದೇಶಕರ ಗಮನ ಇತ್ತ ಸರಿದು, ಸಂಕಟವನ್ನುಭವಿಸಿದ ದೇಶವೊಂದನ್ನು ಪುನಃ ಕಟ್ಟಲು ವ್ಯಾಪಾರದ ಸಹಕಾರ ಸಿಗಬಹುದೆಂಬ ಕಾರಣದಿಂದ ಈ ಬೇಡಿಕೆ.” (163)

ಫಣಿ ಮತ್ತು ಸಹವರ್ತಿ ಲೇಖಕರು ಹೇಳುತ್ತಾರೆ: “….ಬಟ್ಟೆ ಉದ್ಯಮದ ಮಾರುಕಟ್ಟೆಯಲ್ಲಾದ ಈ ಏರುಪೇರುಗಳು ವರ್ತಕರು ವ್ಯಾಪಾರದ ಅಪಾಯಗಳಿಗೆ ಎದುರಾಗಲು ಹಿಂಜರಿಯುವಂತೆ ಮಾಡಿತು, ಬಂಡವಾಳ ಸುಭದ್ರವಾಗಿರುತ್ತದೆ ಎಂಬ ಭಾವನೆ ಮೂಡಿಸಿದ ಕಡೆ ಮಾತ್ರ ಅವರು ಹಿಂಜರಿಯುತ್ತಿರಲಿಲ್ಲ. ವರ್ತಕರ ಬಂಡವಾಳದ ಹರಿಯುವಿಕೆಯಲ್ಲಾದ ಈ ಅಡೆತಡೆಗಳು ಸಮೃದ್ಧ ಬಟ್ಟೆ ಉದ್ಯಮ ಬಟ್ಟೆ ತಯಾರಿಸುವುದರ ಮೇಲೆ ದುಷ್ಪರಿಣಾಮ ಬೀರಿತು. ಲೇವಾದೇವಿ ವ್ಯವಹಾರ ನಡೆಸುವವರ ಮೇಲಿನ ಅವಲಂಬನೆ ಹೆಚ್ಚಾಯಿತು.” (164)

ಇದೇ ಲೇಖಕರು ಈ ಕುಸಿತದ ರೀತಿಯನ್ನು ಮತ್ತಷ್ಟು ವಿಸ್ತಾರವಾಗಿ ವಿವರಿಸುತ್ತಾರೆ: “ಆರ್ಥಿಕತೆಯನ್ನು ಮುಕ್ತವಾಗಿಸುವ ಬ್ರಿಟೀಷರ ನೀತಿ ವ್ಯಾಪಾರವನ್ನು ವೃದ್ಧಸಿತು…. ಬ್ರಿಟೀಷರ ವ್ಯಾಪಾರವನ್ನು. ವರ್ತಕ ಬಂಡವಾಳ ಒಂದು ನಿರ್ದಿಷ್ಟ ಮಿತಿಯ ನಂತರ ಬೆಳೆಯಲಿಲ್ಲ. ಮತ್ತು ಈ ನಿಯಮಿತ ವರ್ತಕ ಬಂಡವಾಳ ಕೂಡ ಸ್ಥಳೀಯ ಬಟ್ಟೆ ಉದ್ಯಮವದ ಉತ್ಪನ್ನದ ಹೆಚ್ಚಳಕ್ಕೆ ಉಪಯೋಗವಾಗಲಿಲ್ಲ, ಅಷ್ಟೊತ್ತಿಗಾಗಲೇ ಬಟ್ಟೆ ಉದ್ಯಮಕ್ಕೆ ಹಣ ತೊಡಗಿಸುವುದು ಅನುಪಯುಕ್ತವಾಗಿತ್ತು. ಬ್ರಿಟೀಷರ ಮೊದಲ ಆರ್ಥಿಕ ನೀತಿಗಳಿಂದಾಗಿಯೇ ತೊಂದರೆ ಅನುಭವಿಸಿದ್ದ ಬೆಂಗಳೂರಿನ ಬಟ್ಟೆ ಉದ್ಯಮ ಈಗ ಮತ್ತಷ್ಟು ಕುಸಿಯಿತು. ತೊಂದರೆಗೊಳಗಾಗಿದ್ದ ಬೆಂಗಳೂರಿನ ರೇಷ್ಮೆ ಉದ್ಯಮ ವಿದೇಶಿ ರೇಷ್ಮೆ – ಕಡಿಮೆ ಹಣ ಮತ್ತು ಉತ್ತಮ ಗುಣಮಟ್ಟದ, ಹೆಚ್ಚು ಜನಪ್ರಿಯವಾಗಿದ್ದ ‘ನೂಲ್ ರೇಷ್ಮೆ’(Nool rashom) - ಯ ಆಮದಿನಿಂದ ಮತ್ತಷ್ಟು ಸಂಕಟಕ್ಕೀಡಾಯಿತು. ಅದಾಗಲೇ ಕುಸಿತದ ಹಾದಿಯಲ್ಲಿದ್ದ ರೇಷ್ಮೆ ಉದ್ಯಮಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು ವಸಾಹತು ತೆರಿಗೆ ಪದ್ಧತಿಯಿಂದ. ಮೈಸೂರಿಗೆ ಆಮದಾಗುವ ವಿದೇಶಿ ರೇಷ್ಮೆಯ ಮೇಲೆ ಯಾವುದೇ ಆಮದು ತೆರಿಗೆಯನ್ನು ವಿಧಿಸದೆ ಮೈಸೂರಿನಿಂದ ಇಂಗ್ಲೆಂಡಿಗೆ ರಫ್ತಾಗುವ ಎಲ್ಲಾ ರೀತಿಯ ರೇಷ್ಮೆ ಉತ್ಪನ್ನದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ರೇಷ್ಮೆಯ ಮೇಲಿನ ಸೇಯರ್ ತೆರಿಗೆ (sayer duty)ಯನ್ನು ರದ್ದುಪಡಿಸಿದರಾದರೂ ರೇಷ್ಮೆ ಉದ್ಯಮ ಮತ್ತೆ ಚೇತರಿಸಿಕೊಳ್ಳಲಿಲ್ಲ.

ಸ್ಥಳೀಯ ಹತ್ತಿ ಉದ್ಯಮ ಕೂಡ ಬೆಂಗಳೂರಿಗೆ ಆಮದಾಗುವ ಯುರೋಪಿನ ಹತ್ತಿ ದಾರದ ಮೇಲಿನ ಸೇಯರ್ ತೆರಿಗೆ ರದ್ದು ಮಾಡಿದ್ದರಿಂದ ಹೊಡೆತ ಅನುಭವಿಸಿತು. ಬೂರ್ಬೋನ್ (Bourbon) ಹತ್ತಿಯನ್ನು ಪರಿಚಯಿಸಿದ್ದು ಕೂಡ ಆ ಹತ್ತಿಯನ್ನು ಉಪಯೋಗಿಸಿ ನೇಯ್ಗೆ ಮಾಡುವುದು ನೇಕಾರರಿಗೆ ಹೊಸದಾಗಿದ್ದ ಕಾರಣದಿಂದ ಹತ್ತಿ ಉದ್ಯಮಕ್ಕೆ ಪೆಟ್ಟು ಕೊಟ್ಟಿತು.” (165)

ಈ ವಿನಾಶದ ಪರಿಣಾಮ 1849 – 50ರಲ್ಲಿ ನಡೆದ ಮಗ್ಗದ ಸೆನ್ಸಸ್ಸಿನಲ್ಲಿ ಪ್ರತಿಬಿಂಬಿತವಾಗಿದೆ. ಬೆಂಗಳೂರಿನಲ್ಲಿ ನಡೆದ ಗಣತಿಯಲ್ಲಿ ಇಡೀ ನಗರದಲ್ಲಿ 2,921 ಮಗ್ಗಗಳಿರುವ ಅಂಶ ತಿಳಿಯಿತು. ಇದರಲ್ಲೂ ಹಲವನ್ನು ಭಾಗಶಃ ಉಪಯೋಗಿಸಲಾಗುತ್ತಿತ್ತಷ್ಟೇ. 1800ಕ್ಕೆ ಹೋಲಿಸಿದರೆ ಮಗ್ಗಗಳ ಸಂಖೈಯಲ್ಲಿ ಅರ್ಧದಷ್ಟು ಕಡಿಮೆಯಾಗಿಬಿಟ್ಟಿತ್ತ. (166)

ಕೊಂಚ ನಂತರ ಕಾಲಘಟ್ಟದಲ್ಲಿ ಬಟ್ಟೆ ಉದ್ಯಮ ಅನುಭವಿಸಿದ ಕಷ್ಟಗಳ ಬಗ್ಗೆ ಥರ್ಸ್ಟನ್ ತಿಳಿಸುತ್ತಾರೆ, ಬಳ್ಳಾರಿಯ ದೇವಾಂಗರು ಮಾಡಿದ ಅಪಹಾಸ್ಯದ ಕುರಿತು ಹೇಳುತ್ತಾರೆ: “ಬಳ್ಳಾರಿ ಜಿಲ್ಲೆಯಲ್ಲಿ ನಾನು ಅಧ್ಯಯನ ಮಾಡಿದವರು……ನಾವು ವೃತ್ತಿಪರ ನೇಕಾರರು, ಆದರೆ ಯುರೋಪಿನ ಬಟ್ಟೆಗಳನ್ನು ಧರಿಸುವುದೇ ನಮಗೆ ಕಡಿಮೆ ಖರ್ಚಿನ ಬಾಬ್ತು ಎಂದು ನಗುತ್ತಾ ಹೇಳಿದರು.” (167)

ಬಾಂಬೆ ಪ್ರಾಂತ್ಯದ ದಕ್ಷಿಣ ಭಾಗದ ಸ್ಥಿತಿಯನ್ನು ವಿವರಿಸುತ್ತ ಆರನೇ ಪಾವ್ಲಾವ್ ಹೇಳುತ್ತಾರೆ: “ದೀರ್ಘ ಕಾಲೀನ ಯುದ್ಧಗಳಿಂದ ಮಹಾರಾಷ್ಟ್ರ ಹಾಳಾಗಿದ್ದು ಇಲ್ಲಿನ ಆರ್ಥಿಕತೆಯಲ್ಲಾದ ಕುಸಿತಕ್ಕೊಂದು ಕಾರಣ. ಸಾಮಾಜಿಕ – ಆರ್ಥಿಕ ಸಂಬಂಧಗಳು, ಮರಾಠ ರಾಜ್ಯ ವ್ಯವಸ್ಥೆಯ ರದ್ದತಿಯೊಂದಿಗೆ ಮತ್ತು ಬ್ರಿಟೀಷರ ಹೊಸ ತೆರಿಗೆ ಪದ್ಧತಿಯ ಜಾರಿಯೊಂದಿಗೆ ತನ್ನ ಅಸ್ತಿತ್ವ ಕಳೆದುಕೊಂಡಿತು. ಅರಮನೆಗೆ ಮತ್ತು ಸೈನ್ಯಕ್ಕೆ ವಸ್ತುಗಳನ್ನು ಪೂರೈಸುತ್ತಿದ್ದ ನಗರ ಕೈಗಾರಿಕೆಗಳಿಗೆ ಗ್ರಾಹಕರೇ ಇಲ್ಲದಂತಾಯಿತು. ಹಳ್ಳಿಗಳೊಂದಿಗಿದ್ದ ಸಶಕ್ತ ಮಾರುಕಟ್ಟೆ ಬಂಧವನ್ನು ಆಮದಾದ ಬ್ರಿಟೀಷ್ ವಸ್ತುಗಳು ನೀಡಿದ ಪೈಪೋಟಿ ಸಡಿಲಗೊಳಿಸಿತು. ಬ್ರಿಟೀಷ್ ವಸ್ತುಗಳಿಗೆ ಆಮದು ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು ಮತ್ತವು ಹಳ್ಳಿಯ ಮಾರುಕಟ್ಟೆಯನ್ನು ಪ್ರವೇಶಿಸಲಾರಂಭಿಸಿತ್ತು. ಬಟ್ಟೆಗಳುತ್ಪಾದನೆ ಹಳ್ಳಿಗಳಲ್ಲಿ ಚೆನ್ನಾಗಿತ್ತು ಮತ್ತಲ್ಲಿನ ನೇಕಾರರು ಬ್ರಿಟೀಷ್ ನೂಲನ್ನು ಉಪಯೋಗಿಸಲಾರಂಭಿಸಿದ್ದರು…..

ತಮ್ಮ ಪೂರ್ವಜರ ಉದ್ಯಮವನ್ನೇ ಮುಂದುವರಿಸಿದವರು ಅರೆ ಹೊಟ್ಟೆಯಿಂದ ಬಳಲುವಂತಾಯಿತು. ಬ್ರಿಟೀಷ್ ಆಡಳಿತದ ಅಂದಾಜಿನಂತೆ 1830ರ ಮೊದಲ ಭಾಗದಲ್ಲಿ ನೇಕಾರರ ಕುಟುಂಬವೊಂದು ವರುಷಕ್ಕೆ 84 ರುಪಾಯಿಗಳನ್ನು ಬೇಳೆ ಕಾಳುಗಳ ಮೇಲೆ ವ್ಯಯಿಸಬೇಕಾಗಿತ್ತು; ಅವರ ವಾರ್ಷಿಕ ಆದಾಯ 108 ರುಪಾಯಿಗಳಷ್ಟಿತ್ತು.

ಮನುಷ್ಯರಿಗೆ ಬದುಕಲು ಇನ್ನಿತರೆ ಆಹಾರ ಪದಾರ್ಥಗಳು, ಬಟ್ಟೆ, ಉರುವಲು, ಪಾತ್ರೆ ಪಗಡೆಗಳೆಲ್ಲ ಬೇಕೆನ್ನುವುದನ್ನು ಗಣನೆಗೆ ತೆಗೆದುಕೊಂಡಾಗ ನೇಕಾರರ ಸಂಕಷ್ಟಗಳೆಂತದ್ದಿರಬಹುದೆನ್ನುವುದನ್ನು ಕಲ್ಪಿಸಿಕೊಳ್ಳಬಹುದು. ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೇನೆಂದರೆ ಇದು ವಿದೇಶಿ ಆಳ್ವಿಕೆಯ ಪ್ರಾರಂಭದ ವರುಷಗಳು ಮತ್ತು ಮುಂದಿನ ದಿನಗಳಲ್ಲಿ ನೇಕಾರರ ಪರಿಸ್ಥಿತಿ ಮತ್ತಷ್ಟು ಹದ ತಪ್ಪುತ್ತಿತ್ತು. ಬೆಳಗಾವಿ ಜಿಲ್ಲೆಯ ನೇಕಾರರನ್ನು 1849ರಲ್ಲಿ ಸರ್ವೇ ಮಾಡಿದ ಬ್ರಿಟೀಷ್ ಅಧಿಕಾರಿ ನೇಕಾರರ ಆದಾಯ ಇಪ್ಪತ್ತು ವರ್ಷದ ಹಿಂದಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗಕ್ಕೆ ಇಳಿದುಬಿಟ್ಟಿತ್ತು ಎಂದು ಒಪ್ಪಿಕೊಳ್ಳುತ್ತಾನೆ. (1849ರಲ್ಲಿ ಬೆಳಗಾವಿ ಜಿಲ್ಲೆಯ ನೇಕಾರರು ದಿನಕ್ಕೆ ಎರಡು ಅನ್ನಾಗಳನ್ನಷ್ಟೇ ಗಳಿಸುತ್ತಿದ್ದರು, ವಾರ್ಷಿಕ 36 ರುಪಾಯಿಗಳಾಗುತ್ತಿತ್ತಷ್ಟೇ)

ಬಾಗಲಕೋಟೆಯ ಪರಿಸ್ಥಿತಿ ಆರ್ಥಿಕತೆಯನ್ನು ಆಕ್ರಮಿಸುವಾಸೆಯ ವಿಧ್ವಂಸಕ ಪರಿಣಾಮಗಳನ್ನು ತೋರಿಸುತ್ತದೆ…..

ಟಿ.ಮಾರ್ಷಲ್ ಪ್ರಕಾರ ಬಾಗಲಕೋಟೆಯ ಸಮೃದ್ಧಿಗೆ ಅಲ್ಲಿನ ಸ್ಥಳೀಯ ಆಡಳಿತಗಾರರ ಆಳ್ವಿಕೆಯ ಪದ್ಧತಿ ಮತ್ತು ಜನರ ಸಾಮಾನ್ಯ ಪರಿಸ್ಥಿತಿ ಕಾರಣವಾಗಿತ್ತು. ಅಲ್ಲಿನ ಜನರ ಆರ್ಥಿಕತೆ ಉತ್ತಮವಾಗಿದ್ದ ಕಾರಣ ಗುಡಿ ಕೈಗಾರಿಕೆಯ ವಸ್ತುಗಳಿಗೆ ಬೇಡಿಕೆಯಿತ್ತು. ಅಲ್ಲಿನ ಬಜಾರಿನಲ್ಲಿ ಬಿಕರಿಗಿದ್ದ ವಸ್ತುಗಳಲ್ಲಿ ದುಬಾರಿ ಬಟ್ಟೆಗಳೂ ಇದ್ದವು, 50,000 ರುಪಾಯಿ ಬೆಲೆಬಾಳುವ ವಸ್ತುವನ್ನು ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಅಂದಾಜು 1822ರಷ್ಟರಲ್ಲಿ ಉನ್ನತ ಹುದ್ದೆಯ ಜನರೂ ಕೂಡ ಎಲ್ಲಾ ರೀತಿಯ ಖರೀದಿಯನ್ನು ನಿಲ್ಲಿಸಿಬಿಟ್ಟಿದ್ದರು ಎನ್ನುತ್ತಾರೆ ಮಾರ್ಷಲ್. ದುಬಾರಿ ವಸ್ತುಗಳನ್ನು ಖರೀದಿಸುವ ಚೈತನ್ಯವಿದ್ದವರೂ ಕೂಡ ಕಡಿಮೆ ಬೆಲೆಯ ವಸ್ತುಗಳಿಗೆ ತೃಪ್ತಿ ಪಟ್ಟುಕೊಂಡರು, ಯಾಕೆಂದರೆ ಉತ್ತಮವಾಗಿ ಬಟ್ಟೆ ಧರಿಸುವುದಕ್ಕೆ ಅವರಿಗೀಗ ಯಾವುದೇ ಪ್ರೋತ್ಸಾಹ ಧನ ದಕ್ಕುತ್ತಿರಲಿಲ್ಲ, ಅವರ ಹುದ್ದೆಗಳನ್ನು ಕಿತ್ತುಕೊಳ್ಳಲಾಗಿತ್ತು ಮತ್ತಾ ದುಬಾರಿ ಧಿರಿಸುಗಳನ್ನು ಧರಿಸುವ ಸಂದರ್ಭಗಳೂ ಈಗ ಇರಲಿಲ್ಲ. ಇನ್ನೂ ಹೆಚ್ಚಿನ ಸಂಖೈಯ ಜನರ ಎಲ್ಲಾ ರೀತಿಯ ಪೋಷಣ ಶಕ್ತಿಯನ್ನು ಕಸಿಯಲಾಗಿತ್ತು. ಬ್ರಿಟೀಷರು ತೆರಿಗೆಗಳು ಬಾಗಲಕೋಟೆಯ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಮತ್ತೊಂದು ಪೆಟ್ಟು ನೀಡಿತು. ಭಾರತೀಯರ ಆಳ್ವಿಕೆಯಲ್ಲಿ ಹದಿನೆಂಟು ಉತ್ಪಾದಕ ಘಟಕಗಳು 400ರುಪಾಯಿ ತೆರಿಗೆ ಕಟ್ಟುತ್ತಿದ್ದವು, ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದ ಘಟಕ ವಾರ್ಷಿಕ 88 ರುಪಾಯಿ ಕಟ್ಟುತ್ತಿತ್ತು. ಬ್ರಿಟೀಷರ ತೆರಿಗೆ ಪದ್ಧತಿಯಡಿಯಲ್ಲಿ ಇವರು 1900 ರುಪಾಯಿ ಮತ್ತು 3000 ರುಪಾಯಿಯವರೆಗೆ ತೆರಿಗೆ ಏರಿಕೆಯಾಯಿತು. ಪರಿಣಾಮವಾಗಿ ನಗರದ ವ್ಯಾಪಾರ ಮತ್ತು ಕೈಗಾರಿಕೆಗಳು ಕುಸಿತ ಕಂಡವು.” (168)

ಸಕ್ಕರೆ ಉದ್ಯಮ ಆ ಸಮಯದ ಉತ್ಪಾದನೆ ಮತ್ತು ಸಂಘಟನೆಯಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದ್ದುದನ್ನು ನಾವು ನೋಡಿದ್ದೇವೆ. ಬ್ರಿಟೀಷ್ ಕಾನೂನುಗಳು ಸಕ್ಕರೆ ಉದ್ಯಮವನ್ನು ಕಬ್ಬನ್ನಿಂಡುವಂತೆ ಹಿಂಡಿಬಿಟ್ಟಿತು. ಶಾಮ ರಾವ್ ಹೇಳುತ್ತಾರೆ: “1843ರಲ್ಲಿ, 1839ರ ಹದಿನೈದನೇ ಕಾಯಿದೆ ಮತ್ತು 1842ರ ಹನ್ನೊಂದನೇ ಕಾಯಿದೆಗಳು ಮೈಸೂರಿನ ಆದಾಯಕ್ಕೆ ದೊಡ್ಡ ಪೆಟ್ಟು ನೀಡಿದವು. ಈ ಕಾಯಿದೆಗಳ ಪ್ರಕಾರ ಮದ್ರಾಸ್ ಪ್ರಾಂತ್ಯ ವಿದೇಶಿ ಸಕ್ಕರೆಯನ್ನು ಆಮದು ಮಾಡಿಕೊಳ್ಳುವಂತಿರಲಿಲ್ಲ, ಮೈಸೂರು ಕೂಡ ವಿದೇಶಿ ಪ್ರಾಂತ್ಯವಾದ ಕಾರಣ ಸಕ್ಕರೆ ಆಮದನ್ನು ನಿಷೇಧಿಸಲಾಯಿತು. ಮೈಸೂರಿನಲ್ಲಿ ಉತ್ಪಾದಿಸಲಾಗುವ ಯಾವುದೇ ಸಕ್ಕರೆಯನ್ನು ಪಕ್ಕದ ಕೆನರಾ ಜಿಲ್ಲೆಯವರ ಸ್ಥಳೀಯರ ಉಪಯೋಗಕ್ಕೂ ರವಾನಿಸುವಂತಿಲ್ಲ ಎಂದು ಕಾನೂನು ರೂಪಿಸಲಾಯಿತು.” (169) ಈ ನಿಯಮಗಳನ್ನು ಹೇರಿದ್ದಕ್ಕೆ ಕಾರಣ ಆಯಾ ಪ್ರಾಂತ್ಯಗಳಲ್ಲಿ ಬ್ರಿಟೀಷ್ ಉತ್ಪಾದಿಸಿದ ಸಕ್ಕರೆಗೆ ಮಾರುಕಟ್ಟೆ ಸೃಷ್ಟಿಯಾಗಲಿ ಎಂಬ ಕಾರಣದಿಂದ.

ಇದೇ ರೀತಿ ತಂಬಾಕು ಉದ್ಯಮ ಕೂಡ ಹೊಗೆ ಹಾಕಿಸಿಕೊಂಡಿದ್ದನ್ನು ನೋಡಬಹುದು. “ಇದೇ ಮಾದರಿಯಲ್ಲಿ ಮೈಸೂರಿನಿಂದ ಮಲಬಾರಿಗೆ ತಂಬಾಕನ್ನು ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಮತ್ತು ಕಾಫಿಯನ್ನು ರಫ್ತು ಮಾಡಲು ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಿತ್ತು. ಇದೆಲ್ಲವೂ ನಡೆಯುತ್ತಿರುವಾಗಲೂ ಮೈಸೂರು ಬ್ರಿಟೀಷರ ಎಲ್ಲಾ ಉತ್ಪನ್ನಗಳನ್ನೂ ಮುಕ್ತವಾಗಿ ಆಮದು ಮಾಡಿಕೊಂಡಿತು ಮತ್ತು ಕಂಪನಿಯ ಉತ್ಪನ್ನಗಳಿಗೂ ತನ್ನ ಪ್ರಾಂತ್ಯದೊಳಗಿನ ಉತ್ಪನ್ನಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನೇ ಹಾಕುತ್ತಿತ್ತು.” (170)

ಇದು ವಸಾಹತಿನ ಆರ್ಥಿಕತೆಯ ಸಾರ ಮತ್ತು ಕೆ.ಆರ್.ಒಡೆಯರ್ ಎಂಬ ಕೈಗೊಂಬೆ ರಾಜನನ್ನು ಮೈಸೂರು ಪೀಠದಲ್ಲಿ ಕೂರಿಸಿದ ಹಿಂದಿರುವ ರಾಜಕೀಯ ಉದ್ದೇಶ.

1805ರಲ್ಲಿ ರಾಜ ಉಪ್ಪಿನ ಮೇಲಿನ ಎಲ್ಲಾ ತೆರಿಗೆಯನ್ನು ರದ್ದು ಪಡಿಸಿ ಬ್ರಿಟೀಷರ ಉಪ್ಪು ಮೈಸೂರಿಗೆ ರಫ್ತಾಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರ ಕುರಿತು ಕೆ.ಎನ್.ವಿ ಶಾಸ್ತ್ರಿ ತಿಳಿಸುತ್ತಾರೆ. ಈ ನಿರ್ಣಯ ಮೈಸೂರು ಸಾಮ್ರಾಜ್ಯದ ಒಳನಾಡಿನಲ್ಲಿ ಉಪ್ಪು ತಯಾರಿಸುತ್ತಿದ್ದ ಹಲವು ಸಾವಿರ ಜನರ ಬದುಕನ್ನು ಹಾಳುಗೆಡವಿತು. ಇದು “ಸಮುದ್ರದ ಉಪ್ಪನ್ನು ಮೈಸೂರಿಗೆ ಬರುವುದನ್ನು ನಿಷೇಧಿಸಿ ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಿದ” ಟಿಪ್ಪುವಿನ ನೀತಿಗೆ ಸಂಪೂರ್ಣ ತದ್ವಿರುದ್ದವಾಗಿತ್ತು. (171)

ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅವಸ್ಥೆ ಬಟ್ಟೆ ಉದ್ಯಮಕ್ಕಿಂತ ಭಿನ್ನವಾಗಿರಲಿಲ್ಲ. ಮಳವಳ್ಳಿಯ ಕುಲುಮೆಗಳ ಬಗ್ಗೆ ಬೆಂಜಮಿನ್ ಹೇಯ್ನ್ ಅದಾಗಲೇ ವರದಿಕೊಟ್ಟಿದ್ದರು. ಹಿಂದಿನ ದೇಶಪ್ರೇಮಿ ಮೈಸೂರು ಸರಕಾರ ಕಬ್ಬಿಣವನ್ನು ಹೆಚ್ಚೆಚ್ಚು ಖರೀದಿಸುತ್ತಿತ್ತು ಮತ್ತು ಮೈಸೂರಿನ ಅಭಿವೃದ್ಧಿಗೆ ಇದು ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎನ್ನುವಂಶ ಬ್ರಿಟೀಷರಿಗೆ ದಿಗ್ಬ್ರಮೆ ಮೂಡಿಸಿರಲೇಬೇಕು.

ಹಾಗಾಗಿ ಮುನ್ನಡೆಯಲ್ಲಿದ್ದ ಬಟ್ಟೆ ಉದ್ಯಮ, ಎಣ್ಣೆ, ಕಬ್ಬಿಣ, ಸಕ್ಕರೆ ಮತ್ತು ಉಣ್ಣೆ ಉದ್ಯಮದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಲಾಯಿತು ಮತ್ತು ಇದರಿಂದಾದ ನಾಶದ ತೀವ್ರವಾಗಿತ್ತು, ಸಂಪೂರ್ಣವಾಗಿತ್ತು. 
ಮುಂದಿನ ವಾರ:
ಸ್ಥಳೀಯ ಮಾರುಕಟ್ಟೆಯ ನಾಶ: ಎಚ್ಚರಗೊಂಡ ಕನ್ನಡ ದೇಶದ ಸಂಕಟ

May 5, 2016

ಬೆಂಗಳೂರಿನ ಗಿಡಗಳ್ಳರು!

(ಸಾಂದರ್ಭಿಕ ಚಿತ್ರ)
ಡಾ. ಅಶೋಕ್. ಕೆ.ಆರ್.
ಬೆಂಗಳೂರಿನಲ್ಲಿ ಸರಗಳ್ಳರಿದ್ದಾರೆ, ಅವರ ಬಗ್ಗೆ ಎಚ್ಚರಿಕೆಯ ಪೋಸ್ಟರುಗಳು ನಗರದಾದ್ಯಂತ ತುಂಬಿಕೊಂಡಿವೆ. ಬೆಂಗಳೂರಿನಲ್ಲಿ ನೆಲಗಳ್ಳರಿದ್ದಾರೆ, ಅವರಲ್ಲಿ ಹೆಚ್ಚಿನವರು ಬಿಳಿ ಬಿಳಿ ಪೋಷಾಕು ಧರಿಸಿ ರಾಜಕೀಯದಲ್ಲೋ ಸಿನಿಮಾದಲ್ಲೋ ಬ್ಯುಸಿ ಬ್ಯುಸಿಯಾಗಿ ಸಮಾಜಸೇವೆ ಮಾಡಿಕೊಂಡಿದ್ದಾರೆ. ಇನ್ನು ಬೈಕು, ಪರ್ಸು, ಕಾರು ಕದಿಯುವವರ ಸಂಖೈ ಅವಸಾನ ಕಾಣದಿರುವಷ್ಟು ಬಲವಾಗಿಯೇ ಇದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗಿಡಗಳ್ಳರು!
ಮಂಡ್ಯದ ಮನೆ ಮುಂದಲಿದ್ದ ಮರದಿಂದ ತಂದಿದ್ದ ಹೊಂಗೆ ಬೀಜಗಳಲ್ಲೊಂದನ್ನು ಖಾಲಿಯಾದ ಒಂದು ಲೀಟರ್ ಹಾಲಿನ ಕವರ್ರಿಗೆ ಹಾಕಿದ್ದೆ. ಹೊಂಗೆ ಗಿಡ ಚಿಗುರಿ ಎರಡಡಿ ಎತ್ತರಕ್ಕೆ ಬೆಳೆದಿತ್ತು. ನಾವಿರುವ ಈ ಬಾಡಿಗೆ ಮನೆಯೆದುರಿಗೆ ಪಕ್ಕದಲ್ಲೆಲ್ಲ ಖಾಲಿ ಸೈಟುಗಳಿವೆ! (ಬೆಂಗಳೂರಿನಲ್ಲಿ ಖಾಲಿ ಸೈಟುಗಳಿರುವುದೇ ಅಚ್ಚರಿಯ ಸಂಗತಿ. ಹಂಗಾಗಿ !) ನಮ್ ಪಕ್ಕದ ಮನೆಯವರಿಗೂ ಗಿಡ ನೆಡುವ ಖಯಾಲಿ, ಖಾಲಿ ಸೈಟಿನ ಮುಂದೆ ನಾಕೈದು ಹೊಂಗೆ ಸಸಿ, ಒಂದೆರಡು ಹಳದಿ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ನಮ್ ಮನೆ ಪಕ್ಕದ ಖಾಲಿ ಸೈಟಿನ ಮುಂದೆಯೂ ಎರಡು ಹೊಂಗೆ ಸಸಿ ಒಂದು ಹೂವಿನ ಗಿಡ ನೆಟ್ಟಿದ್ದರು. ಅವರೋ ನಾನೋ ಎರಡು ಮೂರು ದಿನಕ್ಕೊಮ್ಮೆ ನೀರುಣಿಸುತ್ತಿದ್ದೆವು. ಆ ಗಿಡಗಳಲ್ಲಿ ಬಹಳಷ್ಟು ಈಗ ಅರ್ಧ ಆಳೆತ್ತರಕ್ಕೆ ಬೆಳೆದಿವೆ. ಈ ಸಲದ ಬಿರುಬೇಸಿಗೆಯಲ್ಲೂ ಅವೇನು ನೀರು ಕೇಳುವುದಿಲ್ಲ. ವಾರದವರೆಗೆ ನೀರುಣಿಸದಿದ್ದರೂ ಒಣಗದೆ ಆರೋಗ್ಯವಂತವಾಗಿಯೇ ಉಳಿದಿವೆ. ಸಂಜೆ ಹೊತ್ತು ಒಂದಷ್ಟು ತಂಪಾದ ಗಾಳಿಗೆ ಕಾರಣವಾಗಿವೆ. ಆ ಗಿಡಗಳ ನಡುವೆ ಪುಟ್ಟ ಪುಟ್ಟ ಹೂವಿನ ಗಿಡಗಳನ್ನು ನೆಟ್ಟಿದ್ದೇನೆ. ಅವಕ್ಕೆ ಎರಡು ಅಬ್ಬಬ್ಬಾ ಎಂದರೆ ಮೂರು ದಿನಕ್ಕೊಮ್ಮೆ ನೀರು ಬೇಕು.

ಪ್ಲಾಸ್ಟಿಕ್ ಕವರ್ರುಗಳಲ್ಲಿ ಹೊಂಗೆ ಗಿಡ ಬೆಳೆದಿತ್ತಲ್ಲ. ಹತ್ತು ದಿನದ ಕೆಳಗೆ ಒಂದರ್ಧ ಘಂಟೆ ಸುರಿದ ಮೊದಲ ಮಳೆಯ ಮಾರನೇ ದಿನ ಪಕ್ಕದ ಖಾಲಿ ಸೈಟಿನ ಮುಂದೆ, ಇದ್ದ ಎರಡು ಹೊಂಗೆ ಗಿಡದಿಂದ ಸ್ವಲ್ಪ ದೂರದಲ್ಲಿ ಗುಂಡಿ ತೆಗೆದು, ಕವರ್ ಹರಿದು ಹಾಕಿ ಹೊಂಗೆ ಗಿಡವನ್ನು ನೆಟ್ಟು ಸುತ್ತಲೊಂದಷ್ಟು ಒಣ ಎಲೆಗಳನ್ನು ಹಾಕಿ ಒಂದು ಚೊಂಬು ನೀರು ಸುರಿದು ಬಂದೆ. ಗಿಡ ಚೂರು ದೊಡ್ಡದಿದ್ದುದರಿಂದ ಹೊಸ ನೆಲಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಅರ್ಧ ಚೊಂಬು ನೀರು ಹಾಕಿದರೂ ಸಾಕಿತ್ತು. ಗಿಡ ನೆಟ್ಟು ವಾರ ಕಳೆದಿತ್ತು, ಹೊಸ ಎಲೆಗಳು ಚಿಗುರಿದ್ದವು. ಅವತ್ತೊಂದು ದಿನ ಬೆಳಿಗ್ಗೆ ನೀರುಣಿಸಿ ಕಾಲೇಜಿಗೆ ಹೋಗಿ ಸಂಜೆ ಬಂದು ನೋಡಿದರೆ ಗಿಡವೇ ಇಲ್ಲ! ಒಣಗಿ ಬಿದ್ದು ಹೋಯಿತಾ? ಬೆಳಿಗ್ಗೆ ಚೆನ್ನಾಗೇ ಇತ್ತುಲ್ಲ, ಯಾರಾದರೂ ಕಿತ್ತು ಬಿಸಾಡಿದರಾ? ಉಹ್ಞೂ ಹತ್ತಿರದಲ್ಲೆಲ್ಲೂ ಕಿತ್ತ ಗಿಡವಿಲ್ಲ. ಆಗೀಗ ನಮ್ ಏರಿಯಾದ ಕ್ಷೇಮಸಮಾಚಾರವನ್ನು ವಿಚಾರಿಸುವ ಹಸುಗಳೇನಾದರೂ ತಿಂದುಬಿಟ್ಟವಾ? ಹೊಂಗೆಯನ್ನವು ತಿನ್ನುವುದಿಲ್ಲ. ಏನಾಯ್ತು ಅಂತ ಸ್ಪಾಟ್ ಇನ್ಸ್ ಪೆಕ್ಷನ್ ಮಾಡಿದರೆ ಗಿಡವಿದ್ದ ಸುತ್ತಲೂ ಮಣ್ಣು ಅಗೆಯಲಾಗಿತ್ತು, ಹೆಚ್ಚು ಕಡಿಮೆ ಅರ್ಧ ಅಡಿಯಷ್ಟು ಮಣ್ಣು ಕೆರೆದು ಇಡೀ ಹೊಂಗೆ ಗಿಡವನ್ನೇ ಕಿತ್ತುಕೊಂಡು ಹೋಗಿಬಿಟ್ಟಿದ್ದರು!

ನೆಟ್ಟ ಗಿಡವನ್ನು ಕಿತ್ತುಕೊಂಡದ್ದಕ್ಕೆ ಬೇಸರವಾಗಬೇಕಾ? ಕೋಪಗೊಳ್ಳಬೇಕಾ? ಕಿತ್ಕೊಂಡು ಹೋಗಿಬಿಟ್ಟಿದ್ದಾರೆ, ಬೇರಿಗೆ ಏಟು ಮಾಡದೆ ಕಿತ್ತುಕೊಂಡಿದ್ದು, ಇನ್ನೆಲ್ಲೋ ನೆಟ್ಟರೂ ಅದು ಮತ್ತೊಂದು ಹೊಸ ಭೂಮಿಗೆ ಹೊಂದಿಕೊಂಡು ಬೆಳೆದರಷ್ಟೇ ಸಾಕೆಂದು ಸುಮ್ಮನಾಗಬೇಕಾ? ಏನೋ ಈ ಬಿರುಬೇಸಿಗೇನಾದರೂ ಒಂದಷ್ಟು ಜನರಿಗೆ ಗಿಡ ಮರ ನೆಡಲು, ಕದ್ದಾದರೂ ನೆಡಲು ಪ್ರೇರೇಪಿಸುತ್ತಿದೆಯಲ್ಲ, ಅದೇ ಪುಣ್ಯ! 

ಅಂದಹಾಗೆ ಇನ್ನೈದು ವರುಷಕ್ಕೆ ಬೆಂಗಳೂರು ವಾಸಯೋಗ್ಯವಾಗಿರುವುದಿಲ್ಲವೆಂದು ಐ.ಐ.ಎಸ್.ಸಿಯ ಅಧ್ಯಯನವೊಂದು ಭವಿಷ್ಯ ನುಡಿದಿದೆ. ಬೆಂಗಳೂರು ಸಾವು ಕಂಡರೆ ಅದಕ್ಕೆ ನಮ್ಮ ಸರಕಾರಗಳ ಕೇಂದ್ರೀಕೃತ ಯೋಜನೆಗಳು ಎಷ್ಟು ಕಾರಣವೋ ನಮ್ಮಂಥ ವಲಸಿಗರೂ ಅಷ್ಟೇ ಕಾರಣ. ಪಾಪ ಪರಿಹಾರ್ಥವಾಗಿ ವಲಸಿಗರು ಒಂದೊಂದು ಗಿಡ ನೆಟ್ಟರೂ ಸಾಕು ಹತ್ತಿರತ್ತಿರ ಕೋಟಿ ಲೆಕ್ಕದ ಗಿಡಗಳು ಬೆಂಗಳೂರಿನಲ್ಲಿ ನಳನಳಿಸುತ್ತವೆ. ಕದ್ದಾದರೂ ಗಿಡ ನೆಡಿ!

May 3, 2016

ಅಕಾಡೆಮಿ ಬಹುಮಾನ ಪಡೆವಾಗ ಆಡಿದ ಮಾತು: ಡಾ. ಅನುಪಮ. ಎಚ್. ಎಸ್.

Anupama H S
ಮನ್ನಣೆ = ಜವಾಬ್ದಾರಿ
ಒಬ್ಬ ಕವಿ, ಬರಹಗಾರ, ಕಲಾವಿದನಿಗೆ ಸಾವಿರ ಯೋಧರಿಗಿಂತ ಹೆಚ್ಚು ಶಕ್ತಿಯಿರುತ್ತದೆ. ಅದು ಅಕ್ಷರ ಕೊಟ್ಟ ಶಕ್ತಿ. ಜನಸಮುದಾಯ ತನ್ನ ಪ್ರತಿನಿಧಿಯಾಗಿ ಅವರಿಗೆ ಕೊಟ್ಟ ಶಕ್ತಿ. ಈ ಶಕ್ತಿಯ ಅರಿವಿರುವುದರಿಂದಲೇ ಅವರ ಬಾಯಿ ಮುಚ್ಚಿಸುವುದು ಸಾಂಕೇತಿಕವಾಗಿ ಸಮಾಜದ ಎಲ್ಲ ಜನರ ಬಾಯಿ ಮುಚ್ಚಿಸುವಷ್ಟು ಶಕ್ತಿಶಾಲಿ ಎಂದು ಭಾವಿಸಲಾಗಿದೆ. ಎಂದೇ ನುಡಿ, ಸಾಹಿತ್ಯ, ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಕೆಲ ಬಿಕ್ಕಟ್ಟುಗಳನ್ನು ಕಾಲಕಾಲಕ್ಕೆದುರಿಸಿವೆ. ಈಗಲೂ ಅಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಇತ್ತೀಚೆಗೆ ಮಾತು/ಬರಹ/ಅಭಿವ್ಯಕ್ತಿ ಸ್ಕ್ರುಟಿನಿಗೆ ಒಳಗಾದವು. ಪ್ರತಿಯೊಂದೂ ಸ್ಕ್ಯಾನರಿನ ಅಡಿ ಬಂತು. ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಪೊಲೀಸ್ ರಕ್ಷಣೆಯಲ್ಲಿ ನಡೆಯಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಅಷ್ಟೆ ಅಲ್ಲ,

• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಎಂದೋ ಬರೆದ ಕಾದಂಬರಿಯ ಒಂದು ಪುಟದ ಆಧಾರದ ಮೇಲೆ ಕೆಲವರು ಕೋರ್ಟು ಕಚೇರಿ ಹತ್ತಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಯುವಕವಿಯೊಬ್ಬನನ್ನು ಹಿಡಿದು ಥಳಿಸಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈ ಧಾರವಾಡ ನೆಲದ ಒಂದು ಅಮೂಲ್ಯ ಜೀವ ತನ್ನ ಪ್ರಾಣವೊಪ್ಪಿಸಬೇಕಾಯಿತು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈಗಲೂ ಪ್ರತಿದಿನವೂ ಏನೇನೋ ನಡೆಯುತ್ತಲೇ ಇದೆ.

ಅದಕ್ಕೆ ಅಕ್ಷರಲೋಕ ಸುಮ್ಮನಿರಲಿಲ್ಲ. ಅಭಿವ್ಯಕ್ತಿಯೇ ಒಂದು ಪ್ರತಿರೋಧವಾದರೂ ತನ್ನ ಪ್ರತಿಕ್ರಿಯೆಯನ್ನು ತೀವ್ರವಾಗಿಸಿ ನೀಡಿತು:

• ತಮ್ಮ ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸತೊಡಗಿದರು.
• ಕಲಾವಿದರು, ಬರಹಗಾರರು, ನಟರು, ಮತ್ತಿತರ ಸಂವೇದನಾಶೀಲ ಜೀವಗಳು ಬರಹಗಾರರಾರು ಕೊಟ್ಟ ಸಮ್ಮಾನಗಳನ್ನು ವಾಪಸು ಕೊಟ್ಟರು.
• ಹಲವು ಗೌರವಗಳನ್ನು ಬೇಡವೆನ್ನಲಾಯಿತು.

ಇವೆಲ್ಲ ಸಾಮಾಜಿಕ ಆಗುಹೋಗುಗಳ ಕುರಿತ ಅವರ ನೈತಿಕ ಸಿಟ್ಟನ್ನೂ, ಕಳಕಳಿಯನ್ನೂ ತೋರಿಸಿದವು. ಭಿನ್ನಮತದಿಂದಲೇ ನಮ್ಮನ್ನು ನಾವು ಗುರುತಿಸಿಕೊಳುವ ಕಾಲ ಎದುರಾದಾಗ ತಮಗೆ ಸಾಧ್ಯವಿದ್ದ ಎಲ್ಲ ರೀತಿಯಿಂದ ಅದನ್ನು ವ್ಯಕ್ತಪಡಿಸಿದರು.

ಅವರೆಲ್ಲರನ್ನು ಗೌರವದಿಂದ ನೆನೆಯುತ್ತಲೇ, ಎಲ್ಲವೂ ಸಾಂಕೇತಿಕ ಎನ್ನುವುದನ್ನೂ ನಾವು ನೆನಪಿಡಬೇಕು. `ಪ್ರಶಸ್ತಿ ಪಡೆಯುವುದು, ಹೊಡೆಯುವುದರ ಹಾಗೆಯೇ ಪ್ರಶಸ್ತಿ ವಾಪಸಾತಿಯೂ ಇವರಿಗೊಂದು ಗೀಳಾಗಿದೆ’ ಎಂದು ಜನಸಾಮಾನ್ಯರಿಗೆ ಅನಿಸಬಾರದು. ಏಕೆಂದರೆ ನನ್ನ ಪ್ರಕಾರ ಪ್ರಶಸ್ತಿ ಎನ್ನುವುದು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಲು, ನೆನಪಿಸಲು ಸಮಾಜ ಇಟ್ಟುಕೊಂಡ ಒಂದು ತಂತ್ರ. ಖ್ಯಾತಿ ಹುಟ್ಟಿಸುವ ಕಷ್ಟ ಎಂಥದೆಂದರೆ ಅದು ನಿಮ್ಮ ಯೋಗ್ಯತೆಯನ್ನು ನಿಮಗೆ ನೀವೇ ಮತ್ತೆಮತ್ತೆ ಸಾಬೀತುಮಾಡಿಕೊಳ್ಳುತ್ತ ಹೋಗುವಂತೆ ಮಾಡುತ್ತದೆ. ಅದಕ್ಕೇ ಈ ಕಷ್ಟಕಾಲದಲ್ಲಿ ಮನ್ನಣೆ ಪಡೆಯುವುದು ಎಂದರೆ ನಿಮ್ಮ ಬದ್ಧತೆಯನ್ನು, ಜವಾಬ್ದಾರಿಯನ್ನು ನೀವು ಗಟ್ಟಿಗೊಳಿಸಿಕೊಳ್ಳುತ್ತ ಹೋಗುವುದೇ ಆಗಿದೆ.

ಅದಕ್ಕೇ ಪ್ರಶಸ್ತಿ ಪಡೆದ ಸಂಭ್ರಮವು ಹೆಮ್ಮೆಯಾಗದಂತೆ, ಬಯೋಡೇಟಾದಲ್ಲಿ ಸೇರದಂತೆ ನೋಡಿಕೊಳ್ಳಬೇಕು. ಪ್ರಶಸ್ತಿ ಮರೆತು ಅದು ನೀಡುವ ಜವಾಬ್ದಾರಿಯನಷ್ಟೆ ಮುಂದೆ ಹೊತ್ತು ಸಾಗಬೇಕು. ಗುರುತಿಸುವಿಕೆ ನಮ್ಮ ಸಮಯ, ಶ್ರಮವನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸಿ ಜನಪರವಾಗಿಸುವಂತೆ ಆಗಬೇಕು. ಇವತ್ತು ಬರವಿದ್ದರೆ ಅದು ಕೇವಲ ನೀರಿಗಲ್ಲ, ಕೇವಲ ಆಹಾರಕ್ಕೂ ಅಲ್ಲ; ಆದರೆ ಒಂದು ಹಿಡಿ ಪ್ರೀತಿಗಾಗಿ ಇವತ್ತು ತೀವ್ರ ಬರಗಾಲವಿದೆ. ನಮ್ಮ ಸಂವೇದನೆಯು ಪ್ರೀತಿ ಹಂಚುವ, ಜೊತೆಗೆ ನೇರವಾಗಿ ದಿಟ್ಟವಾಗಿ ಜನರ ಅನಿಸಿಕೆ ವ್ಯಕ್ತಪಡಿಸುವ ಮಾರ್ಗವೂ ಆಗಬೇಕು. ಆಗಮಾತ್ರ ಯಾವುದು ಬಿಕ್ಕಟ್ಟಿಗೆ ಕಾರಣವಾಗಿದೆಯೋ ಅದೇ ಪರಿಹಾರಕ್ಕೆ ಕಾರಣವೂ ಆಗಿ ಒದಗಿಬಂದೀತು.

ಧಾರವಾಡ ನೆಲದಲ್ಲಿ ಆಡಲು ಸಾಧ್ಯವಾದ, ಸಾಧ್ಯವಾಗದ, ಮೌನವಾಗಿಸಲ್ಪಟ್ಟ ಎಲ್ಲ ಜೀವಗಳ ನೆನೆಯುತ್ತ ನನ್ನ ಜವಾಬ್ದಾರಿ ಸ್ವೀಕರಿಸುತ್ತಿದ್ದೇನೆ. ಅಂಡಮಾನ್ ಕುರಿತಷ್ಟೆ ಅಲ್ಲ ಸಕಲ ಜೀವರಾಶಿ-ಜನಜೀವನದ ಕುರಿತು ನನ್ನ ಆಸಕ್ತಿ ಕೆರಳಿಸಿದ ನನ್ನಿಬ್ಬರು ಗುರುಗಳಾದ ಪೂರ್ಣಚಂದ್ರ ತೇಜಸ್ವಿ ಹಾಗೂ ರಹಮತ್ ತರೀಕೆರೆಯವರಿಗೆ ಈ ಗೌರವವನ್ನು ಅರ್ಪಿಸಬಯಸುವೆ. ನನ್ನ ಎಲ್ಲಕ್ಕು ಬೆಂಬಲವಾಗಿ ನಿಲ್ಲುವ, ಪುಸ್ತಕ ಬಹುಮಾನ ಪಡೆದ ಈ ಪುಸ್ತಕವನ್ನು ಪ್ರಕಟಿಸಿದ ಬಸೂ; ನನ್ನ ಜೀವನಪ್ರೀತಿಯನ್ನು ಕಾಪಿಟ್ಟ ಕೃಷ್ಣ, ಪುಟ್ಟಿ, ಪವಿ, ಕನಸು, ಅಮ್ಮ, ಅಣ್ಣ, ಗೆಳೆಯರ ಬಳಗ ಇವರೆಲ್ಲರನ್ನು ಈ ಹೊತ್ತು ಪ್ರೀತಿಯಿಂದ ನೆನೆಯುತ್ತೇನೆ.

- ಅನುಪಮಾ