Feb 25, 2020

ಒಂದು ಬೊಗಸೆ ಪ್ರೀತಿ - 54

ಡಾ. ಅಶೋಕ್.‌ ಕೆ. ಆರ್.‌
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‘ಇಷ್ಟು ಬೇಗ ಮದುವೆ ಬಂದ್ಬಿಡ್ತೇನೆ ನಿಂದು! ನಿನ್ನೆ ಮೊನ್ನೆ ಫಿಕ್ಸ್ ಆದಂಗ್ ಇತ್ತು’ ಸುಮ ಮದುವೆಯ ಮೊದಲ ಕಾರ್ಡನ್ನು ಕೊಟ್ಟಾಗ ಅಚ್ಚರಿಯಿಂದ ಹೇಳಿದೆ. 

“ಅಲ್ವ! ಇನ್ ಇಪ್ಪತ್ ದಿನ ಇದೆ ಅಷ್ಟೇ. ಶಾಪಿಂಗ್ ಮಾಡಿಲ್ಲ. ಬಟ್ಟೆ ತಗಂಡಿಲ್ಲ……. ಒಡವೆ ತಗೋಬೇಕು. ಉಫ್ ಇನ್ನೂ ಎಷ್ಟೊಂದು ಕೆಲಸ ಬಾಕಿ ಇದೆ! ಅದಿಕ್ಕೆ ಮದುವೆಗೆ ಹತ್ ದಿನ ಇರೋವಾಗ್ಲೇ ರಜಾ ಹಾಕ್ತಿದ್ದೀನಿ” ಸುಮಳ ತಲೆಯಲ್ಲಿ ಥರಾವರಿ ಬಣ್ಣದ ಸೀರೆಗಳು ವಿವಿಧ ಡಿಸೈನಿನ ಒಡವೆಗಳೇ ಸುಳಿದಾಡುತ್ತಿದ್ದವು. 

‘ಮದ್ವೆ ಆದ ಮೇಲೆ ಜಾಸ್ತಿ ದಿನ ರಜಾ ಹಾಕೋಬೇಕು ಕಣೇ' ಕಣ್ಣು ಮಿಟುಕಿಸಿದೆ. 

“ಆಗ್ಲೂ ಹಾಕಿದ್ದೀನ್ ಬಿಡು” ಕೀಟಲೆಯ ದನಿಯಲ್ಲಿ ಹೇಳುತ್ತಾ “ಲೇ ಬಾಸು. ನಿನ್ ಹಬ್ಬಿ ಎಷ್ಟ್ ಘಂಟೆಗ್ ಬರ್ತಾರೆ ನಿಮ್ಮಮ್ಮನ ಮನೆಗೆ” 

‘ಆಗ್ತದೆ ಏಳು ಎಂಟರ ಮೇಲೆ. ಯಾಕೆ’ 

“ಸರಿ ಹಾಗಿದ್ರೆ. ಇವತ್ ರಾತ್ರಿ ಫೋನ್ ಮಾಡ್ಕಂಡ್ ಬರ್ತೀನಿ ಬಿಡು. ನಾನ್ ವೆಜ್ ಏನಾದ್ರೂ ಮಾಡ್ಸಿರು. ನಿಮ್ಮ ಮನೆಯವರನ್ನೆಲ್ಲ ಕರಿಯೋಕ್ ಬರ್ತೀನಿ” 

‘ಅಲ್ಲಿಗೆಲ್ಲ ಬಂದು ಏನ್ ಕೊಡೋದ್ ಬಿಡೆ. ನನಗ್ ಕೊಟ್ಟಿದ್ದೀಯಲ್ಲ ಸಾಕು. ನಾನು ನನ್ ಗಂಡ ಬರ್ತೀವಿ. ನೋಡುವ, ಅಮ್ಮ ಒಪ್ಪಿದ್ರೆ ಮಗಳನ್ನೂ ಕರ್ಕಂಡ್ ಬರ್ತೀವಿ’ ರಾಜೀವ ಬರಲ್ಲವೆಂದು ಗೊತ್ತಿತ್ತು. 

“ಅಲ್ಲ ಏನೋ ಇನ್ವಿಟೇಶನ್ ಕೊಡೋ ನೆಪದಲ್ಲಿ ಒಂದ್ ನಾನ್ ವೆಜ್ ಊಟ ಬಾರ್ಸೋಣ ಅಂದ್ಕಂಡ್ರೆ ಮನೆಗೇ ಬರ್ಬೇಡ ಅನ್ನೋರೆಲ್ಲ ನಮ್ ಫ್ರೆಂಡ್ಸು….. ಕರ್ಮ" 

‘ಹೆ... ಹೆ…. ಹಂಗಲ್ವೇ! ಬಾ ಬಾ. ನಿನಗ್ ಊಟ ಇಲ್ಲ ಅನ್ನೋಕಾಗ್ತದಾ…..’ 

ಆ ಕೂಡಲೆ ಅವಳ ಮುಂದೆಯೇ ಅಪ್ಪನಿಗೆ ಫೋನ್ ಮಾಡಿ ಸಂಜೆ ಚಿಕನ್ನೋ ಮಟನ್ನೋ ಅಥವಾ ಎರಡೂ ತಗಂಡ್ ಬನ್ನಿ ಮನೆಗೆ ಬರುವಾಗ ಅಂತೇಳಿ ಸುಮಳ ಕಡೆಗೆ ತಿರುಗಿ ‘ಹ್ಯಾಪಿ’ ಎಂದೆ. ಮುಖ ಊರಗಲವಾಗಿತ್ತು. 

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Feb 17, 2020

ಒಂದು ಬೊಗಸೆ ಪ್ರೀತಿ - 53

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮದುವೆಯ ಸಂಭ್ರಮವೆಲ್ಲ ಮುಗಿಸಿ ಮನೆಗೆ ಬಂದಾಗ ಐದೂವರೆ. ಶಶಿ – ಸೋನಿಯಾ ಇಬ್ಬರೂ ಹಿಂದಿನ ರಾತ್ರಿ ರಿಸೆಪ್ಶನ್‌ ಬೇಡ, ಹೇಗಿದ್ರೂ ಭಾನುವಾರ ಅಲ್ವ ಮದುವೆ, ಮುಹೂರ್ತ ಕೂಡ ಬೆಳಿಗ್ಗೆ ಏಳಕ್ಕೇ ಇದೆ. ರಾತ್ರಿ ರಿಸೆಪ್ಶನ್‌ ಮುಗಿಸಿ ಬೆಳಿಗ್ಗೆ ಅಷ್ಟೊತ್ತಿಗೆ ಏಳೋದು ಎಲ್ಲರಿಗೂ ತಲೆ ನೋವು. ಭಾನುವಾರವೇ ಹತ್ತೂವರೆಯಿಂದ ಹನ್ನೆರಡು ಒಂದರವರೆಗೆ ರಿಸೆಪ್ಶನ್‌ ಇಟ್ಟುಕೊಂಡರೆ ಸಾಕು ಅಂದಿದ್ದರು. ಇರೋ ಒಬ್ಬಳು ಮಗಳ ಮದುವೆಯಲ್ಲಿ ರಾತ್ರಿ ರಿಸೆಪ್ಶನ್‌ ಇಟ್ಟುಕೊಳ್ಳದಿದ್ದರೆ ಹೇಗೆಂದು ಮೊದಮೊದಲಿಗೆ ರಾಮೇಗೌಡ ಅಂಕಲ್‌ ಗೊಣಗಾಡಿದರು…. ಕೊನೆಗೆ ಒಪ್ಪಿಕೊಂಡರು. ಬೆಳಿಗ್ಗೆ ಮುಹೂರ್ತ ಏಳಕ್ಕಿದ್ದಿದ್ದರಿಂದ ಐದೂವರೆಗೆಲ್ಲ ಎದ್ದು ತಯಾರಾಗಿ ಧಾರೆ ಮುಗಿದ ನಂತರ ಮತ್ತೊಂದು ಸುತ್ತು ಬಟ್ಟೆ ಬದಲಿಸಿ ರಿಸೆಪ್ಶನ್ನಿನಲ್ಲಿ ನಿಂತು ಓಡಾಡಿ ಮಾತನಾಡಿ ಎಲ್ಲರಿಗೂ ಸುಸ್ತಾಗಿತ್ತು. ಮಧ್ಯೆ ಮಧ್ಯೆ ಮಗಳನ್ನು ಎತ್ತಿಕೊಂಡು ಸಮಾಧಾನಿಸಿ ಹಾಲುಣಿಸಲು ಖಾಲಿಯಿದ್ದ ರೂಮಿಗೆ ಓಡಾಡಿ……ನನಗಂತೂ ಉಳಿದವರಿಗಿಂತ ಒಂದು ಕೈ ಜಾಸ್ತಿಯೇ ಸುಸ್ತಾಗಿತ್ತು. ಸೋನಿಯಾ ಕಡೆ ಜನರು ಜಾಸ್ತಿ. ʼಲವ್‌ ಮ್ಯಾರೇಜಂತೆ, ಹುಡುಗ ಎಸ್ಸಿಯಂತೆʼ ಅನ್ನುವ ಗುಸುಗುಸುಗಳ ನಡುವೆಯೂ ಜನರು ಜಾಸ್ತಿಯೇ ಇದ್ದರು. "ಹುಡುಗ ನಮ್ಮೋನೆ ಅಂದ್ರೆ ಇದರ ನಾಲ್ಕು ಪಟ್ಟು ಜನ ಇರ್ತಿದ್ರು” ಅಂತ ಸೋನಿಯಾಳ ಸಂಬಂಧಿಕೊಬ್ಬರು ಹೇಳಿದ ಮಾತು ಕಿವಿಗೆ ಬಿದ್ದರೂ ಬೀಳದಂತೆ ನಟಿಸಿದೆ. ಸೋನಿಯಾರ ಮನೆಯವರಿರಲಿ, ಮದುವೆಗೆ ಮುನ್ನ ನಮ್ಮತ್ತೆ ಮನೆಯವರನ್ನು ಸಂಭಾಳಿಸುವುದೇ ಶ್ರಮದ ಕೆಲಸವಾಗಿಬಿಟ್ಟಿತ್ತು. ಮದುವೆಗೆ ಕರೆಯುವುದರಿಂದಲೇ ಕೊಂಕು ಮಾತು ಶುರುವಾಗಿತ್ತು. “ಯಾಕ್‌ ನಮ್‌ ಪೈಕಿ ಯಾರೂ ಇರಲಿಲ್ವೇನೋ” ಎಂದು ಮದುವೆಗೆ ಕರೆಯಲು ಹೋಗಿದ್ದ ನಮ್ಮಮ್ಮ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ದರಂತೆ. ಅಪ್ಪನಿಗೆ ಅಮ್ಮ ಈ ವಿಷಯ ತಿಳಿಸಿರಲಿಲ್ಲ. ತಿಳಿದ ಮೇಲೆ ಇವರೊಂದು ಹೇಳಿ ಅದಕ್ಕವರೊಂದು ಹೇಳಿ…..ಜಗಳವಾಗೋದ್ಯಾಕೆ. ʼಅವರಿರೋದೇ ಹಂಗೆ ಬಿಡಮ್ಮʼ ಅಂತ ಸಮಾಧಾನಿಸಿದ್ದೆ. ಅವರನ್ನು ಸಮಾಧಾನಿಸಿದ್ದೆ. ನನ್ನಲ್ಲಿ ಕೋಪ ಮೂಡಿತ್ತು. ರಾಜೀವ ರಾತ್ರಿ ಊಟಕ್ಕೆ ಬಂದಾಗ ಆ ವಿಷಯವನ್ನೆತ್ತಿಕೊಂಡು ಕೆಣಕದೆ ಇರಲಿಲ್ಲ.

ʼಲಗ್ನಪತ್ರಿಕೆ ಕೊಡೋಕ್‌ ಹೋದವರತ್ರ ಎಷ್ಟ್‌ ಬೇಕೋ ಅಷ್ಟ್‌ ಮಾತಾಡೋದ್‌ ಬಿಟ್ಟು ಅದೇನಲ್ಲ ಅಧಿಕಪ್ರಸಂಗ ಮಾಡಿದ್ದಾರೆ ನಿಮ್ಮಮ್ಮʼ ಸಿಟ್ಟಲ್ಲೇಳಬೇಕೆಂದುಕೊಂಡವಳು ವ್ಯಂಗ್ಯಕ್ಕೆ ದನಿಯನ್ನು ಸೀಮಿತಗೊಳಿಸಿಕೊಂಡೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Feb 13, 2020

ಒಂದು ಬೊಗಸೆ ಪ್ರೀತಿ - 52

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಒಳ್ಳೆದಿನ ಕೂಡಿ ಬಂದಿಲ್ಲವಿನ್ನು ಎಂಬ ನೆಪದಿಂದ ಮುಂದೂಡುತ್ತಲೇ ಹೋಗಲಾಗಿದ್ದ ಶಶಿ ಸೋನಿಯಾಳ ಮದುವೆ ಅಂತೂ ಇಂತೂ ಇನ್ನೊಂದು ತಿಂಗಳಿಗೆ ನಿಕ್ಕಿಯಾಗಿತ್ತು. ಪ್ರೀತಿ ಹುಟ್ಟಲನವಶ್ಯಕವಾದ ಮುಹೂರ್ತ ಮದುವೆಗಾಗಿ ಅನಿವಾರ್ಯವಾಗಿದ್ಯಾಕೆ ಅಂತ ಯಾರಿಗೂ ತಿಳಿದಿರಲಿಲ್ಲ. ಪ್ರೀತಿ ಹುಟ್ಟಿದ್ದೂ ಒಂದು ಸುಮುಹೂರ್ತದಲ್ಲೇ, ಅದು ನಮ್ಮರಿವಿನ ಪರಿಧಿಯಲ್ಲಿರಲಿಲ್ಲ ಎಂಬ ಉತ್ತರ ಸಿಗುತ್ತಿತ್ತೋ ಏನೋ. ಬಹುಶಃ ನನ್ನ ಪುರುಷೋತ್ತಮನ ಪ್ರೀತಿ ಯಾವುದೋ ದುರ್ಮುಹೂರ್ತದಲ್ಲಿ ಜನಿಸಿದ್ದಿರಬೇಕು. ಒಂದು ಮಟ್ಟಿಗೆ ಶಶಿ ಸೋನಿಯಾರ ಮದುವೆ ತಡವಾಗಿದ್ದೇ ಒಳಿತಾಯಿತು. ಯಾರಿಗಲ್ಲದಿದ್ದರೂ ಸೋನಿಯಾಳ ತಾಯಿಗೆ ಈ ಮದುವೆಯನ್ನು ಮನಸಾರೆ – ಪೂರ್ಣವಾಗಲ್ಲದಿದ್ದರೂ ಅಪೂರ್ಣವಾಗಿಯಾದರೂ ಒಪ್ಪಿಕೊಳ್ಳುವುದಕ್ಕೆ – ಈ ಸಮಯದಲ್ಲಿ ಸಾಧ್ಯವಾಯಿತು. ಬಯ್ಕಂಡು ಬಯ್ಕಂಡೇ ಅವರ ಹತ್ತಿರದ ನೆಂಟರೂ ʼಏನಾದ್ರೂ ಮಾಡ್ಕಂಡು ಹಾಳಾಗೋಗಿʼ ಎಂದು ಹರಸಲೂ ಈ ಕಾಲಾವಧಿ ಸಹಾಯ ಮಾಡಿತು. ನಮ್ಮಪ್ಪ ಅಮ್ಮನದೇ ಲವ್‌ ಮ್ಯಾರೇಜ್‌ ಆಗಿದ್ದರಿಂದ ನಮ್ಮ ಮನೆಯ ಕಡೆ ಯಾರದೂ ಅಂತಹ ವಿರೋಧವೇನಿರಲಿಲ್ಲ. ʼಮತ್ತೊಂದ್‌ ಗೌಡ್ರುಡಿಗೆಗೆ ಈ ಗತಿ ಬಂತಾʼ ಅಂತ ನಮ್ಮಮ್ಮನ ಕಡೆಯ ಜಾತಿನಿಷ್ಠ ಬಂಧುಗಳು ಒಂದಷ್ಟು ಲೊಚಗುಟ್ಟಿರಬಹುದು. ಮನೆಯಲ್ಲಿ ಮದುವೆಯ ತಯಾರಿ ಜೋರಾದಷ್ಟು ಅಮ್ಮನ ಓಡಾಟ ಜಾಸ್ತಿಯಾಗಿ ರಾಧಳನ್ನು ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನನ್ನ ತಲೆಯ ಮೇಲೇ ಬೀಳುತ್ತಿತ್ತು. ಎಷ್ಟು ಬೇಗ ಈ ಮದುವೆ ಮುಗಿದು ನಾ ಹೆಚ್ಚು ಓದಲು ಪ್ರಾರಂಭಿಸುತ್ತೀನೋ ಎನ್ನಿಸಲಾರಂಭಿಸಿತ್ತು.

ಮದುವೆಗಿನ್ನು ಇಪ್ಪತ್ತು ದಿನಗಳಿರುವಾಗ ಸಾಗರನಿಗೆ ಮೆಸೇಜು ಮಾಡಿದ್ದೆ. ʼಮುಂದಿನ ತಿಂಗಳ ಹತ್ತನೇ ತಾರೀಖು, ಭಾನುವಾರ ಬಿಡುವು ಮಾಡಿಕೋʼ

“ಯಾಕೆ? ನಿಮ್ಮನೇಲ್ಯಾರೂ ಇರೋದಿಲ್ವಾ? ಬಂದು ನಿನ್ನ ಸೆಕ್ಸ್‌ ನೀಡ್ಸ್‌ ಪೂರೈಸಬೇಕಿತ್ತಾ? ಈ ಸಲ ದುಡ್ಡಾಗ್ತದೆ” ಸಾಗರ ಮೆಸೇಜು ನೋಡಿ ಜಿಗುಪ್ಸೆಯಾಯಿತು, ಅಸಹ್ಯ ಮೂಡಿತು. ಅವನ ಮೇಲಲ್ಲ. ನನ್ನ ಮೇಲೆ. ಇಷ್ಟೊಂದು ಕೆಟ್ಟ ವ್ಯಕ್ತಿತ್ವವಾ ನನ್ನದು? ಬೇಸರವಾಯಿತು. ಯಾರೇ ನನ್ನನ್ನು ಅಪಾರ್ಥ ಮಾಡಿಕೊಂಡರೂ ಸಾಗರ ನನ್ನನ್ನು, ನನ್ನ ಮನಸ್ಸಿನ ಏರಿಳಿತಗಳನ್ನು ಸೂಕ್ತ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾನೆ ಏನೋ ನನ್ನ ಜೊತೆ ಅವನು ಜಗಳವಾಡಿದರೂ ಹೆಚ್ಚಿನಂಶ ಆ ಜಗಳ ನಾ ಅವನಿಗೆ ಸಿಗಲಿಲ್ಲ, ಪೂರ್ಣವಾಗಿ ಅವನವಳಾಗಲಿಲ್ಲ ಅನ್ನೋ ಸಿಟ್ಟಿಗೆ ಅಂತಂದುಕೊಂಡಿದ್ದು ಇವತ್ತಿನವನ ಮೆಸೇಜಿನಿಂದ ನುಚ್ಚುನೂರಾಯಿತು. ನನ್ನ ತಾಳ್ಮೆಗೂ ಒಂದು ಮಿತಿ ಇರಲೇಬೇಕಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Feb 6, 2020

ಒಂದು ಬೊಗಸೆ ಪ್ರೀತಿ - 51

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಬಿಡುವಿನ ಭಾನುವಾರ ವಾರ್ಡುಗಳಲ್ಲಿ ರೋಗಿಗಳೆಚ್ಚಿರಲಿಲ್ಲ. ಓಪಿಡಿ ಡ್ಯೂಟಿ ಕೂಡ ನನ್ನದಿರಲಿಲ್ಲ. ರೌಂಡ್ಸು ಮುಗಿಸಿ ಹತ್ತು ಘಂಟೆಗೆಲ್ಲ ಮನೆ ಸೇರಿಬಿಟ್ಟಿದ್ದೆ. ಕೆಲಸ ಓದು ಮಗಳು ಕೆಲಸ ಓದು ಮಗಳು… ದಿನಚರಿ ಏಕತಾನತೆ ಮೂಡಿಸಿಬಿಟ್ಟಿತ್ತು. ಇವತ್ತು ಸುಮ್ಮನೆ ಮಗಳನ್ನು ಹಾಲಿನಲ್ಲಿ ಸೋಫಾದ ಮೇಲೆ ಮಲಗಿಸಿಕೊಂಡು ದಿನಪೂರ್ತಿ ಟಿವಿ ನೋಡ್ತಾ ಕೂತುಬಿಡಬೇಕು. ಎಷ್ಟು ದಿನವಾಗೋಯ್ತು ಟಿವಿ ಎಲ್ಲಾ ನೋಡಿ ಅಂದ್ಕೊಂಡು ಮಗಳಿಗೆ ರೂಮಿನಲ್ಲಿ ಹಾಲು ಕುಡಿಸುತ್ತಿರುವಾಗ ಗೇಟು ತೆರೆದ ಸದ್ದಾಯಿತು. ಇಷ್ಟೊತ್ತಿಗ್ಯಾರು? ರಾಜೀವನೇ ಇರಬೇಕು. ಭಾನುವಾರ ಅವರು ಎದ್ದೇಳೋದು ಲೇಟು. ತಿಂಡಿಗೆ ಬಂದ್ರೂ ಬಂದ್ರೆ ಇಲ್ಲಾಂದ್ರೆ ಇಲ್ಲ. ಇವತ್ತೇನೋ ಅಪರೂಪಕ್ಕೆ ತಿಂಡಿಗೆ ಬಂದುಬಿಟ್ಟಿದ್ದಾರೆ. ನಿನ್ನೆ ಪಾರ್ಟಿ ಮಾಡಿರಲಿಲ್ಲವೇನೋ. ಏನ್‌ ಗಂಡಸರೋ ಏನೋಪ, ದಿನಾ ಇಲ್ಲೇ ಇದ್ದು, ಕೊನೇಪಕ್ಷ ರಾತ್ರಿ ಇಲ್ಲೇ ಇದ್ದು ಕಷ್ಟಪಟ್ಟು ಹುಟ್ಟಿರೋ ಮಗಳನ್ನ ಇಷ್ಟಪಟ್ಟು ನೋಡಿಕೊಳ್ಳೋದು ಬಿಟ್ಟು ಪುಸಕ್ಕಂತ ಉಂಡು ವಾಪಸ್ಸಾಗಿಬಿಡುತ್ತಾರೆ. ಹೋಗಲ್ಲೇನ್‌ ಮಾಡ್ತಾರೆ. ಹೋಗ್ತಾ ದಾರೀಲೊಂದು ಸಿಗರೇಟು ಸೇದ್ಕಂಡು ಫ್ರೆಂಡ್ಸ್‌ ಜೊತೆ ಒಂದಷ್ಟು ಹರಟೆ ಹೊಡ್ಕಂಡು ಮನೆಗೋಗಿ ಹನ್ನೆರಡರವರೆಗೆ ಯಾವ್ದಾದ್ರೂ ಇಂಗ್ಲೀಷ್‌ ಪಿಚ್ಚರ್‌ ನೋಡ್ಕಂಡು ಮಲಗಿಬಿಡ್ತಾರೆ. 

ಸೀದಾ ರೂಮಿಗೇ ಬಂದರು. ʼತಿಂಡಿ ತಿನ್ನೋಗಿʼ ಎಂದೆ. 

“ಇಲ್ಲ. ಮನೆಯತ್ರ ಒಂದ್ಕಡೆ ಮಲ್ಲಿಗೆ ಇಡ್ಲಿ ಚಟ್ನಿ ಚೆನ್ನಾಗ್‌ ಮಾಡ್ತಾರೆ. ಅಲ್ಲೇ ತಿಂದ್ಕಂಡ್‌ ಬಂದೆ" 

ʼನಂಗೂ ತರೋದಲ್ವ! ಮಲ್ಲಿಗೆ ಇಡ್ಲಿ ಅಂದ್ರೆ ಇಷ್ಟ ನಂತೆ ಅಂತ ಗೊತ್ತಲ್ಲ. ಎರಡ್‌ ವರ್ಷದಿಂದೆ ಎಕ್ಸಿಬಿಷನ್‌ನಲ್ಲಿ ತಿಂದದ್ದೇ ಕೊನೆʼ 

“ತರೋಣ ಅಂತಾನೇ ಹೋಗಿದ್ದು. ಇದೇ ಕೊನೇ ಒಬ್ಬೆ. ಪಾರ್ಸೆಲ್‌ಗಿಲ್ಲ ಸರ್.‌ ಇಲ್ಲಿ ಬರೋರಿಗೆ ಮಾತ್ರ ಅಂದ್ಬಿಟ್ಟ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.