Jan 27, 2018

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದ ಹಾಗೆ ಬೆಕ್ಕು ಎಲ್ಲಿದೆ?

ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ
ರಾಜ್ಯ ರಾಜಕಾರಣದಲ್ಲಿ ಇಂತಹದೊಂದು ಸನ್ನಿವೇಶ ಎದುರಾಗಬಹುದೆಂದು ಜನರಿರಲಿ, ನಮ್ಮ ಯಾವುದೇ ರಾಜಕೀಯ ಪಕ್ಷಗಳಾಗಲಿ ಅದರ ನಾಯಕರುಗಳೇ ಆಗಲಿ ನಿರೀಕ್ಷಿಸಿರಲಿಲ್ಲ. ಎಂಭತ್ತರ ದಶಕದ ನಂತರ ಮೊತ್ತಮೊದಲಬಾರಿಗೆ, ರಾಜ್ಯದ ವಿದಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆ ಮತ್ತು ರಾಜ್ಯ ರೈತರ ಸ್ವಾಭಿಮಾನದ ಪ್ರಶ್ನೆಯೊಂದು ಚುನಾವಣಾ ವಿಷಯವಾಗುವ ಸುವರ್ಣ ಅವಕಾಶವೊಂದು ಎದುರಾಗಿದೆ.

ಹಾಗಂತ ಈ ವಿಷಯಗಳು ಚುನಾವಣೆಯಲ್ಲಿ ಪ್ರಸ್ತಾಪವಾಗಲೇ ಬೇಕೆಂದೇನು ನಮ್ಮ ರಾಜಕೀಯ ಪಕ್ಷಗಳು ಬಯಸುತ್ತಿಲ್ಲ. ಆಕಸ್ಮಿಕವಾಗಿ ಜರುಗಿದ ಹಲವು ವಿದ್ಯಾಮಾನಗಳು ಕನ್ನಡದ ಮತ್ತು ರೈತರ ಸಮಸ್ಯೆಗಳನ್ನು ಹೆಚ್ಚೂ ಕಡಿಮೆ ಚುನಾವಣಾ ಪ್ರಚಾರದ ಕೇಂದ್ರಬಿಂದುವನ್ನಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಲೂ ನಮ್ಮ ರಾಜಕೀಯ ಪಕ್ಷಗಳು ಇವನ್ನು ಚುನಾವಣಾ ಪ್ರಚಾರದಿಂದ ದೂರವಿಡಲು ಪ್ರಯತ್ನಿಸುವುದು ಖಚಿತ. ಹಾಗಾಗಿ ಈಗ ಮುನ್ನೆಲೆಗೆ ಬಂದಿರುವ ಈ ವಿಚಾರಗಳನ್ನು ಚುನಾವಣೆಯ ಮುಖ್ಯ ವಿಚಾರಗಳನ್ನಾಗಿಸಿ ಮತದಾನ ಮಾಡಿಸಬೇಕಿರುವುದು ನಮ್ಮ ಕನ್ನಡಪರ ಸಂಘಟನೆಗಳ ಮತ್ತು ರೈತ ಸಂಘಟನೆಗಳ ಆದ್ಯ ಕರ್ತವ್ಯವಾಗಬೇಕಿದೆ.