Feb 17, 2018

ಹಾದಿ ತಪ್ಪುತ್ತಿರುವ ಚುನಾವಣಾ ಪ್ರಚಾರ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅಂದುಕೊಂಡಂತೆಯೇ ಕರ್ನಾಟಕ ರಾಜ್ಯದ ಬರಲಿರುವ ಚುನಾವಣಾ ಪ್ರಚಾರದ ಹಾದಿ ತಪ್ಪುತ್ತಿದೆ. ಪ್ರಜಾಸತ್ತೆಯಲ್ಲಿ ಪ್ರತಿ ಐದು(ಕೆಲವು ಅಪವಾದಗಳನ್ನು ಹೊರತು ಪಡಿಸಿ)ವರುಷಗಳಿಗೊಮ್ಮೆ ಬರುವ ಚುನಾವಣೆಗಳು ರಾಜ್ಯದ ಪ್ರಗತಿಗೆ ಮತ್ತು ತನ್ಮೂಲಕ ಜನರ ಜೀವನ ಸುದಾರಿಸುವ ನಿಟ್ಟಿನಲ್ಲಿ ಬಹುಮಹತ್ವಪೂರ್ಣವಾಗಿದ್ದು, ನಿಷ್ಪಕ್ಷಪಾತವಾದ ಹಾಗು ವಿಷಯಾಧಾರಿತ ಚುನಾವಣೆಗಳು ಜನರ ಈ ಆಶಯವನ್ನು ಯಶಸ್ವಿಗೊಳಿಸುವುದು ಸಹಜ. ಇಂತಹ ಚುನಾವಣೆಗಳಲ್ಲಿ ಬಹಳ ಮುಖ್ಯವಾದ ಹಂತವೆಂದರೆ ಚುನಾವಣ ಪ್ರಚಾರವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವೈಯುಕ್ತಿಕವಾಗಿ ಅಭ್ಯರ್ಥಿಗಳು ಮತ್ತು ಸಮಗ್ರವಾಗಿ ರಾಜಕೀಯ ಪಕ್ಷಗಳು ಕೈಗೊಳ್ಳುವ ಚುನಾವಣಾ ಪ್ರಚಾರವೇ ಮುಖ್ಯವಾಗಿದ್ದು, ಇದು ಆಡಳಿತದ ಚುಕ್ಕಾಣಿ ಹಿಡಿಯಲಿರುವ ಪಕ್ಷವೊಂದನ್ನು ಆಯ್ಕೆ ಮಾಡಲು ಜನರಿಗೆ ನೆರವಾಗುತ್ತದೆ. ಅದರಲ್ಲೂ ಸಂಪೂರ್ಣವಾಗಿ ಸಾಕ್ಷರವಾಗದ ಇವತ್ತಿಗೂ ಶೇಕಡಾ 28ರಷ್ಟು ಅನಕ್ಷರಸ್ಥರನ್ನು ಹೊಂದಿರುವ ಕರ್ನಾಟಕದಂತಹ ರಾಜ್ಯದಲ್ಲಿ ಪಕ್ಷಗಳು ನಡೆಸುವ ಬಹಿರಂಗ ಪ್ರಚಾರಗಳೇ ಕನಿಷ್ಠ ಶೇಕಡಾ ಐವತ್ತರಷ್ಟು ಮತದಾರರನ್ನು ಪ್ರಭಾವಿಸುವ ಶಕ್ತಿ ಹೊಂದಿರುತ್ತದೆ. 

ಈ ಹಿನ್ನೆಲೆಯಲ್ಲಿ ಪ್ರತಿ ರಾಜಕೀಯ ಪಕ್ಷಗಳು ನಡೆಸುವ ಸಮಾವೇಶಗಳು, ಯಾತ್ರೆಗಳು, ಬಹಿರಂಗ ಸಭೆಗಳು, ರೋಡ್ ಶೋಗಳು ಮುಖ್ಯವಾಗಿದ್ದು, ಅವುಗಳ ನಾಯಕರುಗಳು ಮಾಡುವ ಸಾರ್ವಜನಿಕ ಬಾಷಣಗಳು ಜನರನ್ನು ತಲುಪುವ ಸುಲಭ ಮಾರ್ಗಗಳಾಗಿರುತ್ತವೆ. ಪಕ್ಷಗಳು ಹೊರತರುವ ಪ್ರಣಾಳಿಕೆಗಳು ಸಹ ಪಕ್ಷಗಳ ಸಿದ್ದಾಂತಗಳನ್ನು, ಅವು ಜನಕಲ್ಯಾಣಕ್ಕಾಗಿ ಜಾರಿಗೆ ತರಲು ಉದ್ದೇಶಿಸಿರಬಹುದಾದ ಹಲವು ಯೋಜನೆಗಳ ಮಾಹಿತಿಗಳನ್ನು ಜನತೆಗೆ ತಿಳಿಸುವಲ್ಲಿ ಯಶಸ್ವಿಯಾಗುತ್ತವೆ. ಹೀಗೆ ಸಂಸದೀಯ ಪ್ರಜಾಸತ್ತೆಯಲ್ಲಿ ನಮ್ಮನ್ನು ಅಳಲು ಇಚ್ಚಿಸುವ ರಾಜಕೀಯ ಪಕ್ಷಗಳು ಅಂತಿಮವಾಗಿ ಜನರನ್ನು ತಲುಪಲು ಅಗತ್ಯವಿರಬಹುದಾದ ಎಲ್ಲಾ ಮಾರ್ಗಗಳನ್ನೂ ಬಳಸುವುದು ಸಹಜ ಕ್ರಿಯೆ.

Feb 15, 2018

ಮಿತ್ರಪಕ್ಷಗಳನ್ನು ನಿರ್ಲಕ್ಷಿಸುತ್ತಿರುವ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಾಜಪದ ಬಹುಮುಖ್ಯ ಮಿತ್ರಪಕ್ಷಗಳೆಂದರೆ ಶಿವಸೇನೆ, ಅಕಾಲಿದಳ ಮತ್ತು ತೆಲುಗುದೇಶಂ! ಇದೀಗ ಬಾಜಪದ ದೊಡ್ಡಣ್ಣನ ರೀತಿಯ ನಡವಳಿಕೆಯಿಂದ ಅದರ ಮಿತ್ರಪಕ್ಷಗಳಲ್ಲಿ ನಿದಾನವಾಗಿ ಅಸಮಾದಾನ ಹೊಗೆಯಾಡುತ್ತಿದ್ದು, 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಈ ಮೈತ್ರಿಕೂಟದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದರ ಬಗ್ಗೆ ಒಂದಿಷ್ಟು ನೋಡೋಣ:

ಚುನಾವಣೆಗಳನ್ನು ಗೆಲ್ಲಲು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಮಾಡಿಕೊಳ್ಳುವ ಮೂಲಕ, ತಮ್ಮ ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಬೇರು ಬಿಡಲು ಪ್ರಯತ್ನಿಸುವುದು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಮಾಮೂಲಿ ವರಸೆಯಾಗಿದೆ. ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡ ನಂತರದಲ್ಲಿ ಎಂಭತ್ತರ ದಶಕದಿಂದೀಚೆಗೆ ಇಂತಹ ಮೈತ್ರಿಗಳು ಸರ್ವೇಸಾದಾರಣವಾಗಿವೆ. ತೊಂಭತ್ತರ ದಶಕದಲ್ಲಿ ರಾಷ್ಟ್ರದಾದ್ಯಂತ ಬಲಿಷ್ಠ ಶಕ್ತಿಯಾಗಿ ಬೆಳೆಯುತ್ತಿದ್ದ ತೃತೀಯ ರಂಗವನ್ನು ಇಲ್ಲವಾಗಿಸಲು ಕಾಂಗ್ರೆಸ್ ಮತ್ತು ಬಾಜಪಗಳು ನಿದಾನವಾಗಿ ತಮ್ಮ ಪ್ರಯತ್ನ ಪ್ರಾರಂಭಿಸಿದವು ತೃತೀಯ ರಂಗದ ಅಂಗಪಕ್ಷಗಳನ್ನು ( ಎಡಪಕ್ಷಗಳನ್ನು ಹೊರತು ಪಡಿಸಿ) ಒಂದೊಂದಾಗಿ ತಮ್ಮ ತೆಕ್ಕೆಗೆ ಸೆಳೆಯುತ್ತ ತಾವು ಗಟ್ಟಿಯಾಗಿ ಬೆಳೆಯುತ್ತ ಹೋದವು.