Jul 30, 2016

ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು.

ಡಾ. ಅಶೋಕ್. ಕೆ. ಆರ್
30/07/2016
ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ, 7.56 ಟಿ.ಎಂ.ಸಿ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕೆಂದಿದ್ದ ಕರ್ನಾಟಕದ ಆಸೆಗೆ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ತಣ್ಣೀರೆರಚಿದೆ. ಮಧ್ಯಂತರ ತೀರ್ಪು ಕರ್ನಾಟಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಬಂದಿರುವುದಕ್ಕೆ ಅಚ್ಚರಿ ಪಡುವ ಅವಶ್ಯಕತೆಯಿದೆಯಾ? ಈ ತೀರ್ಪಿಗೆ ಕಾಂಗ್ರೆಸ್ ಕಾರಣವಾ? ಬಿಜೆಪಿ ಕಾರಣವಾ? ‘ನಿಮ್ಮ ತಪ್ಪು, ನಿಮ್ದೇ ತಪ್ಪು’ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಡುತ್ತಿವೆ. ನಿಜವಾಗಿ ತಪ್ಪು ಯಾರದ್ದು?

ಜಲದ ವಿಷಯದಲ್ಲಿ ನಮ್ಮಲ್ಲಿರುವ ರಾಜಕೀಯ ಪಕ್ಷಗಳಷ್ಟೇ ಅಲ್ಲ ಜನರಿಗೂ ಭರ್ಜರಿ ಆಲಸ್ಯ. ಜನರ ಆಲಸ್ಯ ರಾಜಕೀಯದಲ್ಲಿ ಪ್ರತಿಫಲಿಸುತ್ತಿದೆಯೋ ರಾಜಕಾರಣಿಗಳ ಆಲಸ್ಯ ಜನರಲ್ಲಿ ಪ್ರತಿಫಲಿಸುತ್ತಿದೆಯೋ ಹೇಳುವುದು ಕಷ್ಟ. ಪರರಾಜ್ಯಗಳ ರಾಜಕಾರಣಿಗಳು ಕೇಂದ್ರದಲ್ಲಿ ‘ಪವರ್ಫುಲ್’ ಎಂದು ಉದ್ಗರಿಸುವ ನಾವು ನಮ್ಮ ಸಂಸದರ್ಯಾಕೆ ಕೇಂದ್ರದಲ್ಲಿ ‘ವೀಕು’ ಎಂಬ ಪ್ರಶ್ನೆಯನ್ನೇ ಕೇಳುವುದಿಲ್ಲ. ನಮ್ಮ ಸಂಸದರು ಕರ್ನಾಟಕದ ವಿಷಯವಾಗಿ ಅದೆಷ್ಟು ಸಲ ಪಕ್ಷಭೇದ ಮರೆತು ಸಂಸತ್ತಿನಲ್ಲಿ ದನಿಯೆತ್ತಿದ್ದಾರೆ ಎಂದು ಗಮನಿಸುವುದಿಲ್ಲ. ಕರ್ನಾಟಕದಲ್ಲೊಂದು ಸಶಕ್ತ ಪ್ರಾದೇಶಿಕ ರಾಜಕೀಯ ಪಕ್ಷವಿಲ್ಲದಿರುವುದು ಇದಕ್ಕೊಂದು ಕಾರಣ. ಗೋವಾದಲ್ಲೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇರುವುದರಿಂದ ಪ್ರಾದೇಶಿಕ ಪಕ್ಷದ ಕೊರತೆಯಷ್ಟೇ ಕಾರಣವೆಂದೂ ಹೇಳಲಾಗದು. ಇರುವ ರಾಷ್ಟ್ರೀಯ ಪಕ್ಷಗಳ ನಾಯಕರಿಗೂ ಇಚ್ಛಾಶಕ್ತಿ ಕಡಿಮೆ. ನಮ್ಮಲ್ಲಿರುವ ರಾಜಕೀಯ ನೇತಾರರು / ಸರಕಾರಗಳು ಬೀದಿಯಲ್ಲಿ ನಿಂತು ಕರ್ನಾಟಕದ ಪರವಾಗಿ, ಇಲ್ಲಿನ ನದಿಗಳ ಪರವಾಗಿ ವೀರಾವೇಷದ ಮಾತುಗಳನ್ನಾಡುವ ಅವಶ್ಯಕತೆಯೇನೂ ಇಲ್ಲ. ಕಾರಣ ಕಾವೇರಿಯಿರಲಿ, ಕಳಸಾ ಬಂಡೂರಿಯಿರಲಿ ಬೀದಿಯಲ್ಲಿ ನಿಂತು ಗೆಲ್ಲುವ ಸಂಗತಿಗಳಲ್ಲ. ಈ ಸಂಗತಿಗಳನ್ನು ಗೆಲ್ಲುವುದಕ್ಕಿರುವುದು ಎರಡೇ ದಾರಿ, ಒಂದು ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವುದು; ರಾಜಕೀಯ ಕಾರಣಗಳಿಗಾಗಿ ಅದನ್ನಂತೂ ನಮ್ಮ ಸಂಸದರಿಂದ ನಿರೀಕ್ಷಿಸುವುದು ಬೇಡ. ಎರಡು ನ್ಯಾಯಾಧೀಕರಣದ ಮೆಟ್ಟಿಲೇರಿದ ಪ್ರಕರಣಗಳಲ್ಲಿ ಕರ್ನಾಟಕದ ವಾದವನ್ನು ಸಮರ್ಥವಾಗಿ ಮಂಡಿಸುವಂತೆ ಮಾಡುವುದು. ನ್ಯಾಯಾಲಯಗಳಲ್ಲಿ ಕರ್ನಾಟಕದ ಹಿತಾಸಕ್ತಿಯ ವಿರುದ್ಧ ತೀರ್ಪು ಬರುವುದು ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸದೇ ಇರುವುದರಿಂದ, ಸರಕಾರಗಳು ನ್ಯಾಯಾಲಯ ಕೇಳಿದ ದಾಖಲೆಗಳನ್ನು ಸರಿಯಾಗಿ ನೀಡದೇ ಇರುವುದರಿಂದ ಎಂದು ತಮ್ಮ ಎಫ್.ಬಿ ಪೋಸ್ಟಿನಲ್ಲಿ ಬರೆದಿದ್ದಾರೆ ಸಿ.ಎಸ್.ದ್ವಾರಕಾನಾಥ್. ಕರ್ನಾಟಕದ ನೆಲ ಜಲದ ವಿಷಯದಲ್ಲಿ ಪರರಾಜ್ಯದ ವಕೀಲರನ್ನೇ ಎಲ್ಲಾ ಸರಕಾರಗಳೂ ನೇಮಿಸುವುದ್ಯಾಕೆ ಎಂದವರು ಪ್ರಶ್ನಿಸುತ್ತಾರೆ. ಮಹದಾಯಿಯ ಸಂದರ್ಭದಲ್ಲೂ ನಮ್ಮ ವಾದಕ್ಕೆ ಸೋಲಾಗಿದ್ದಕ್ಕೆ ದಾಖಲೆಗಳನ್ನು ಸರಿಯಾಗಿ ಮಂಡಿಸದೇ ಇರುವುದು ಕಾರಣ, ನಮ್ಮ ಹುಳುಕುಗಳನ್ನು ಮರೆತು ನ್ಯಾಯಾಧೀಕರಣವನ್ನು ದೂರುವುದರಲ್ಲಿ ಪ್ರಯೋಜನವಿದೆಯೇ? ಕರ್ನಾಟಕ ಸರಕಾರಗಳ ನಡೆಗಳು, ಸರಕಾರ ನೇಮಿಸುವ ವಕೀಲರು, ನ್ಯಾಯಾಲಯದಲ್ಲಿ ನಮ್ಮವರು ನಡೆಸುವ ದುರ್ಬಲ ವಾದಗಳಿಗೆಲ್ಲ ದೊಡ್ಡ ಇತಿಹಾಸವೇ ಇರುವಾಗ ಕಳಸಾ ಬಂಡೂರಿ ನಾಲೆಯ ವಿಷಯದಲ್ಲಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಪು ಬಂದಿರುವುದರ ಬಗ್ಗೆ ಅಚ್ಚರಿ ಪಡುವ ಅವಶ್ಯಕತೆ ಖಂಡಿತ ಇಲ್ಲ.

ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ‘ನಿಮ್ಮಿಂದಾಯ್ತು’ ‘ನಿಮ್ಮಿಂದಾಯ್ತು’ ಎಂದು ಕೆಸರೆರಚಾಟದಲ್ಲಿ ತೊಡಗಿರುವುದು ಮುಂದಿನ ಚುನಾವಣೆಗಳ ದೃಷ್ಟಿಯಿಂದಷ್ಟೇ ಹೊರತು ಮತ್ತೇನಕ್ಕೂ ಅಲ್ಲ. ‘ನೀವು ಗೋವಾದ ಕಾಂಗ್ರೆಸ್ಸಿಗರನ್ನು ಒಪ್ಪಿಸಿ, ನಾವು ಬಿಜೆಪಿಯವರನ್ನು ಒಪ್ಪಿಸುತ್ತೇವೆ’ ‘ನೀವು ಗೋವಾದ ಬಿಜೆಪಿಯವರನ್ನು ಒಪ್ಪಿಸಿ, ನಾವು ಕಾಂಗ್ರೆಸ್ಸಿಗರನ್ನು ಒಪ್ಪಿಸುತ್ತೇವೆ’ ಎಂಬ ಬೂಟಾಟಿಕೆಯ ಮಾತುಗಳೂ ಕೂಡ ಇವರ ರಾಜಕಾರಣದ ಭಾಗವಷ್ಟೇ. ಎರಡೂ ಪಕ್ಷದವರ ರಾಜಕಾರಣ ನಮಗರ್ಥವಾಗಿಬಿಟ್ಟಿದೆ, ಮುಂದಿನ ಸಲ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಆವೇಶದ ಮಾತುಗಳು ಚುನಾವಣೆ ಬರುತ್ತಿದ್ದಂತೆಯೇ ನಮ್ಮೆಲ್ಲರಿಗೂ ಖಂಡಿತವಾಗಿ ಮರೆತುಹೋಗಿರುತ್ತದೆ, ಮತ್ತದೇ ಜಾತಿಯ ಮುಖ ನೋಡಿಕೊಂಡು ಹೈಕಮ್ಯಾಂಡಿನಲ್ಲಿರುವ ನಾಯಕರ ಮುಖ ನೋಡಿಕೊಂಡು ಮತ ಹಾಕುತ್ತೇವೆ, ಆಮೇಲೆ ಕೈಕೈ ಹಿಸುಕಿಕೊಳ್ಳೋಣ ಬಿಡಿ.

ಇವೆಲ್ಲಾ ರಾಜಕೀಯ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೆ ‘ಕಳಸಾ ಬಂಡೂರಿಯ’ ಹೆಸರಿನಲ್ಲಿ ಭಾವನಾತ್ಮಕವಾಗಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತದೆ. (ಕಳಸಾ ಬಂಡೂರಿಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಮುನ್ನೋಟದಲ್ಲಿ ಓದಿ). ಕಳಸಾ ಬಂಡೂರಿ ಯೋಜನೆ 1978ರಲ್ಲೇ ರೂಪುಗೊಂಡಿತ್ತು, 2002ರಲ್ಲಿ ಅದಕ್ಕೆ ಚಾಲನೆ ಕೊಡಬೇಕೆಂದು ನಿರ್ಧರಿಸಲಾಯಿತು. ಈಗ 2016ರಲ್ಲಿದ್ದೇವೆ. ಅಂದರೆ ಹತ್ತಿರತ್ತಿರ ನಲವತ್ತು ವರುಷಗಳಿಂದ ಕಳಸಾ ಬಂಡೂರಿ ಯೋಜನೆ ಕಾರ್ಯಗತವಾಗದೆಯೇ ಉಳಿದಿದೆ. ಇಷ್ಟು ದೀರ್ಘ ವರುಷಗಳಿಂದ ನಿದ್ರಾವಸ್ಥೆಯಲ್ಲಿರುವ ಯೋಜನೆಯಿಂದಷ್ಟೇ ಕುಡಿಯುವ ನೀರು ಸಿಗಲು ಸಾಧ್ಯ ಎಂದ್ಯಾಕೆ ಜನರನ್ನು ನಂಬಿಸಲಾಗಿದೆ. ಸ್ಥಳೀಯ ಮಟ್ಟದ ಯೋಜನೆಗಳನ್ಯಾಕೆ ನಮ್ಮ ಸರಕಾರ ರೂಪಿಸಲಿಲ್ಲ? ಅಥವಾ ರೂಪಿಸಿ ಅವುಗಳು ವಿಫಲವಾದವೇ? ಒಂದೆಡೆ ಕರ್ನಾಟಕದೊಳಗೇ ಎರಡು ಪ್ರದೇಶಗಳ ನಡುವೆ ನೀರಿಗಾಗಿ ಮುನಿಸು ಶುರುವಾಗಿದೆ. ನೇತ್ರಾವತಿ ನದಿ ಸೇರುವ ಎತ್ತಿನಹೊಳೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ‘ಕುಡಿಯುವ ನೀರಿನ’ ಸಲುವಾಗಿ ತಿರುಗಿಸುವ ಸಾಹಸಕ್ಕೆ ಕರ್ನಾಟಕ ಸರಕಾರ ಕೈ ಹಾಕಿದೆ. ಈ ರೀತಿ ಹಳ್ಳವೊಂದನ್ನು ತಿರುಗಿಸುವುದು ಪ್ರಕೃತಿಗೆ ಮಾರಕ, ಪಶ್ಚಿಮಘಟ್ಟಕ್ಕೆ ಮಾರಕ ಎಂದು ದಕ್ಷಿಣ ಕನ್ನಡದಲ್ಲಿ ವಿರೋಧಗಳೆದ್ದವು. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮಳೆಗೇನು ತುಂಬಾ ಕೊರತೆಯಿಲ್ಲ, ಮಳೆನೀರಿನ ನಿರ್ವಹಣೆ ಸರಿಯಾಗಿ ಮಾಡಿದರೆ, ಕೆರೆ ಕಟ್ಟೆಗಳನ್ನು ತುಂಬಿಸುವತ್ತ ಆಸಕ್ತಿ ತೋರಿಸಿದರೆ ನದಿ ತಿರುಗಿಸುವ ದುಸ್ಸಾಹಸ ಮಾಡುವುದೇ ಬೇಕಿಲ್ಲ ಎಂಬ ವಾದಗಳಿವೆ. ಕೆರೆ ಕಟ್ಟೆಗಳನ್ನು ನುಂಗಲಷ್ಟೇ ಆಸಕ್ತಿ ತೋರಿಸುವ ನಮಗೆ ಸ್ಥಳೀಯ ಮಟ್ಟದ ಪರಿಹಾರಗಳೆಡೆಗೆ ತುಂಬಾ ಆಸಕ್ತಿಯೇನಿಲ್ಲ. ಮಂಡ್ಯ ಮದ್ದೂರಿನ ಕೆರೆಗಳೆಲ್ಲ ನೀರಿಲ್ಲದೇ ಭಣಗುಡುತ್ತಿರುವಾಗ, ನೀರಿಲ್ಲದ ಕೆರೆಗಳು ಚಿಕ್ಕದಾಗುತ್ತಿರುವಾಗ ಅದು ಹೇಗೆ ಚನ್ನಪಟ್ಟಣದ ಕೆರೆಗಳಲ್ಲಿ ನೀರಿರುತ್ತದೆ ಎಂದು ನಾವು ಯೋಚಿಸುವುದಿಲ್ಲ. ಚನ್ನಪಟ್ಟಣದ ಶಾಸಕ ಯೋಗೇಶ್ವರ್ ಅದೇನು ಮಾಡಿದರೋ ಬಿಟ್ಟರೋ ಅವರಿಗೆ ನೀರಿನ ಮಹತ್ವದ ಅರಿವಾಗಿದೆ, ಕೆರೆಗಳು ತುಂಬುವುದರಿಂದ ಅಂತರ್ಜಲದ ವೃದ್ಧಿಯಾಗುತ್ತದೆ ಎಂದರಿವಾಗಿದೆ. ಬೆಂಗಳೂರಿನ ಉದಾಹರಣೆಯನ್ನೇ ನೋಡಿ. ಇಲ್ಲಿ ನೀರು ಬರುವುದಕ್ಕಿಂತ ವೇಗವಾಗಿ ಜನರು ಬಂದು ಸೇರುತ್ತಿದ್ದೇವೆ. ನಮಗೆಲ್ಲರಿಗೂ ನೀರು ಒದಗಿಸಲು ಕಾವೇರಿಯೇ ಬೇಕಾಗಿದೆ. ಇಲ್ಲಿನ ಕೆರೆ ಕಟ್ಟೆಗಳು ಜೀವಂತವಾಗಿದ್ದರೆ ಅಂತರ್ಜಲದಿಂದಾದರೂ ನಗರದ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಬಹುದಿತ್ತು. ಆದರಿಲ್ಲಿ ಆಗುವುದೇನು? ಮೊದಲು ‘ಲೇಕ್ ವ್ಯೀವ್ ಅಪಾರ್ಟ್ ಮೆಂಟ್’ ತಲೆಯೆತ್ತುತ್ತೆ, ಕೆರೆಗೆ ತಲುಪಬೇಕಾದ ನೀರಿನ ಹಾದಿಗಳನ್ನೆಲ್ಲ ಮುಚ್ಚಲಾಗುತ್ತೆ. ನೀರು ಖಾಲಿಯಾದ ಕೆರೆಗೆ ಮಣ್ಣು ಸುರಿದು ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತೆ. ಹೀಗೇ ಆದರೆ ಈಗ ಕಾವೇರಿ ನದಿಯಿಂದ ಪೈಪಿನಲ್ಲಿ ಬೆಂಗಳೂರಿಗೆ ನೀರು ಸಾಗಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇಡೀ ಕಾವೇರಿ ನದಿಯನ್ನೇ ಬೆಂಗಳೂರಿನ ಕಡೆಗೆ ತಿರುಗಿಸಿದರೂ ಬೆಂಗಳೂರು ವಾಸಿಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲಾಗುವುದಿಲ್ಲ. 

ಎತ್ತಿನಹೊಳೆ ಯೋಜನೆಯ ವಿರೋಧಕ್ಕೆ ಸಹಮತ ವ್ಯಕ್ತಪಡಿಸುತ್ತಾ ನದಿಗೆ ಸೇರುವ ಹೊಳೆಯನ್ನು ತಿರುಗಿಸುವ ಕಳಸಾ ಬಂಡೂರಿ ಯೋಜನೆಗೆ ಬೆಂಬಲ ವ್ಯಕ್ತಪಡಿಸುವುದು ಸರಿಯಾಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಅನೇಕ ಸಲ ನನ್ನನ್ನು ಕಾಡಿದೆ. ಈ ಯೋಜನೆಯಿಂದ ‘ಕುಡಿಯುವ ನೀರು’ ತಲುಪುವ ಜಿಲ್ಲೆಗಳಲ್ಲಿ ನಾನು ಓಡಾಡಿಲ್ಲ. ಎತ್ತಿನಹೊಳೆ ಮತ್ತು ಕಳಸಾ ಬಂಡೂರಿ ಯೋಜನೆಗಳ ರೂಪುರೇಷೆಗಳು ಬೇರೆಯೇ ಇರಬಹುದು, ಅದು ನನ್ನರಿವಿಗೆ ಬಾರದೇ ಹೋಗಿರಬಹುದು. ಆದರೆ ನನ್ನ ಪ್ರಶ್ನೆಯೆಂದರೆ ಕಳೆದ ನಲವತ್ತು ವರುಷಗಳಿಂದ ಈ ಯೋಜನೆಗೆ ಬದಲಿಯಾಗಿ ಮತ್ತೊಂದು ಕುಡಿಯುವ ನೀರಿನ ಯೋಜನೆಯನ್ನು ಯಾಕೆ ನಮ್ಮ ಘನ ಸರಕಾರಗಳು ರೂಪಿಸಿಲ್ಲ? ಕುಡಿಯುವ ನೀರು ತಲುಪುತ್ತದೆ ಎನ್ನಲಾದ ಹುಬ್ಬಳ್ಳಿ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಕಳೆದ ನಲವತ್ತು ವರುಷಗಳಲ್ಲಿ ಎಷ್ಟು ಕೆರೆಗಳು ನಿರ್ಮಾಣಗೊಂಡಿವೆ? ಇದು ಮಳೆಯೇ ಆಗದ ಮರುಭೂಮಿ ಪ್ರದೇಶವಾ? ಬೀಳುತ್ತಿರುವ ಮಳೆಯನ್ನು ಹಿಡಿದಿಡಲಾಗದೇ ಈ ತಾಪತ್ರಯವಾ? ಎತ್ತಿನಹೊಳೆಯನ್ನು ತಿರುಗಿಸಿದರೂ ಸರಕಾರಗಳು ಹೇಳುವಷ್ಟು ನೀರು ಸಿಗುವುದಿಲ್ಲ ಎನ್ನಲಾಗುತ್ತದೆ, ಮುಂದೆ ನ್ಯಾಯಾಧೀಕರಣದ ಅಂತಿಮ ತೀರ್ಪು ನಮ್ಮ ಪರವಾಗಿ ಬಂದು ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬಂದಾಗ ಸರಕಾರ ಹೇಳುವಷ್ಟು ನೀರು ಸಿಗುತ್ತದಾ? ಹಳ್ಳದ ನೀರನ್ನು ಇತ್ಲಾಕಡೆ ತಿರುಗಿಸಿದ ನಂತರ ಅತ್ಲಾಕಡೆ ಮಳೆಯೇ ಆಗದಿದ್ದರೆ ಗತಿಯೇನು? ಈ ಪ್ರಶ್ನೆಗಳನ್ಯಾಕೆ ನಾವು ಕೇಳಿಕೊಳ್ಳುತ್ತಿಲ್ಲ? ‘ಕುಡಿಯುವ ನೀರೆಂಬುದು’ ಭಾವನಾತ್ಮಕ ವಿಚಾರ, ಮಾನವೀಯತೆಯ ವಿಷಯ. ‘ಮನುಷ್ಯರಿಗೇ ಕುಡಿಯಲು ನೀರಿಲ್ಲದಾಗ ಯಾವ ಪ್ರಕೃತಿಯ ಬಗ್ಗೆ ಮಾತಾಡ್ತಿ ಎದ್ದು ನಡಿಯಯ್ಯಾ’ ಎಂದು ಬಯ್ಯಸಿಕೊಳ್ಳುವ ಸಾಧ್ಯತೆಗಳು ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೆಚ್ಚಿರುತ್ತವೆ. ಬೆಂಗಳೂರಿನಲ್ಲಿ ಕುಳಿತು ದೂರದ ಕಾವೇರಿ ನದಿಯಿಂದ ಬರುವ ನೀರನ್ನು ಕುಡಿದು ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸುಲಭವಲ್ಲವೇ ಎಂಬ ಪಾಪಪ್ರಜ್ಞೆಯೂ ನನ್ನನ್ನು ಕಾಡುತ್ತದೆ. ಭಾವನಾತ್ಮಕ ವಿಚಾರದಲ್ಲಿ ಸ್ಥಳೀಯ ಪರಿಹಾರಗಳ ಬಗ್ಗೆ ಜನರಿಗೆ ಪ್ರಶ್ನೆಗಳು ಮೂಡದಿದ್ದರೂ ಬೇಡ, ಯೋಜನೆ ರೂಪಿಸುವ ಅಧಿಕಾರಿಗಳಿಗೆ, ಸರಕಾರದವರಿಗಾದರೂ ಈ ಪ್ರಶ್ನೆಗಳು ಮೂಡಬೇಕಲ್ಲವೇ? ಕಳಸಾ ಬಂಡೂರಿ ಯೋಜನೆಯ ತೀರ್ಪು ನಮ್ಮ ಪರವಾಗಿ ಬರದೇ ಹೋದ್ರೆ ಅಷ್ಟೇ ಹೋಯ್ತು, ಅದರ ಹತ್ತರಷ್ಟು ನೀರನ್ನು ಸ್ಥಳೀಯವಾಗಿ ಉಳಿಸಿಕೊಳ್ಳುವ ನೂರು ಯೋಜನೆಗಳು ನಮ್ಮಲ್ಲಿವೆ, ಬನ್ನಿ ಮೊದ್ಲು ಕೆರೆ ಕಟ್ಟೋಣ ಎಂದು ಒಬ್ಬನಾದರೂ ರಾಜಕಾರಣಿ ಕನಿಷ್ಟ ಪಕ್ಷ 2002ರಲ್ಲಿ ಹೇಳಿದ್ದರೂ ಕಳಸಾ ಬಂಡೂರಿಯ ವಿಚಾರವಾಗಿ ನಮ್ಮ ಜನರು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಬೇಕಿರಲಿಲ್ಲ ಎಂದನ್ನಿಸುವುದು ತಪ್ಪೇ?

ಬಾಜಪದ ಓಟಕ್ಕೆ ಕಡಿವಾಣ ಹಾಕಲಿರುವ ಕಾಂಗ್ರೆಸ್ಸೇತರ ಪಕ್ಷಗಳು

ಕು.ಸ.ಮಧುಸೂದನರಂಗೇನಹಳ್ಳಿ
30/07/2016
ರಾಜಕಾರಣದಲ್ಲಿ ಸತತ ಗೆಲುವೆಂಬುದಾಗಲಿ, ಸೋಲೆಂಬುದಾಗಲಿ ಇರುವುದಿಲ್ಲ. ಅದರಲ್ಲೂ ಇಂಡಿಯಾದಂತಹ ಬಹುಸಂಸ್ಕೃತಿಯ, ಬಹುಬಾಷೆಯ, ವಿಶಾಲ ರಾಷ್ಟ್ರದಲ್ಲಿ ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಜನರ ರಾಜಕೀಯ ಒಲವುಗಳು ಬದಲಾಗುತ್ತಲೇ ಇರುತ್ತವೆ. ಇಲ್ಲಿ ಒಬ್ಬ ರಾಜಕಾರಣಿಯನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಲು ಜನ ರಾಜಕಾರಣದ ಒಂದೇ ಮಾನದಂಡವನ್ನು ಅನುಸರಿಸುವುದಿಲ್ಲ. ಬದಲಿಗೆ ಜನಪ್ರತಿನಿದಿಯೊಬ್ಬನ ಆಯ್ಕೆಯ ಮೆಲೆ ಆತನ ಜಾತಿ, ಧರ್ಮ, ಆರ್ಥಿಕ ಹಿನ್ನೆಲೆಗಳೂ ಪ್ರಬಾವ ಬೀರುವುದರಿಂದ ಎಲ್ಲವೂ ಪೂರ್ವನಿರ್ದಾರಿತವಾಗಿ ನಡೆಯುವುದು ಕಷ್ಟ. ಹಾಗಾಗಿಯೇ ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುವ ಪಕ್ಷಗಳು ಅವಮಾನಕಾರಿಯಗಿ ಸೋಲನ್ನಪ್ಪುವುದು, ಸೋಲುತ್ತವೆಯೆಂದು ನಾವು ತೀರ್ಮಾನಿಸಿದ ಪಕ್ಷಗಳು ಬಾರಿ ಗೆಲುವು ಸಾದಿಸುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಾಗಿದೆ. ಅದರ ಎಲ್ಲ ದೌರ್ಬಲ್ಯಗಳ ಹೊರತಾಗಿಯೂ ಇಂಡಿಯಾದ ಪ್ರಜಾಪ್ರಭುತ್ವದ ಸೌಂದರ್ಯ ಅಡಗಿರುವುದೆ ಇಂತಹ ಆಕಸ್ಮಿಕಗಳಲ್ಲಿ. 2015ರ ಮೊದಲಿಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗಳಿಸಿದ ಅಭೂತಪೂರ್ವ ಗೆಲುವು ಅಂತಹ ಅಚ್ಚರಿಗಳಲ್ಲಿ ಒಂದು, ಇರಲಿ.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಇಡೀ ದೇಶ ನರೇಂದ್ರ ಮೋದಿಯವರ ಜಪ ಮಾಡುವಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಬಾಜಪೇತರ ಪಕ್ಷಗಳ ನಾಯಕರುಗಳು ಸಹ ಮೋದಿ ಅಲೆಯ ಪ್ರಬಾವವನ್ನು ತಳ್ಳಿ ಹಾಕಲಾಗದಷ್ಟು ಬಲವಾಗಿ ಮೋದಿ ಪರ ಗಾಳಿ ಬೀಸ ತೊಡಗಿತ್ತು. ಆದರೆ ಚುನಾವಣೆಯ ಪಲಿತಾಂಶ ಬಂದಾಗ ಚಿತ್ರಣವೇ ಬೇರೆಯಾಗಿತ್ತು. ಕಾರಣ, ಸುಮಾರು 200 ರಿಂದ 240 ಸ್ಥಾನಗಳನ್ನು ಗೆಲ್ಲಬುದೆಂದು ಅಂದಾಜು ಮಾಡಲಾಗಿದ್ದ ಬಾಜಪ ಸ್ಪಷ್ಟ ಬಹುಮತ ಪಡೆದು ಒಂದು ರೀತಿಯ ಅಚ್ಚರಿಗೆ ಕಾರಣವಾಗಿತ್ತು. ಇನ್ನೊಂದೆಡೆ ದೇಶದಾದ್ಯಂತ ಬಾಜಪದ ಪರ ಒಲವಿದೆಯೆಂದು ಊಹಿಸಿದ್ದವರಿಗೆ ಅಚ್ಚರಿಯಾಗುವಂತೆ ಬಾಜಪ ದೇಶದ ಕೆಲವು ಪ್ರದೇಶಗಳಲ್ಲಿ ಶೂನ್ಯ ಸಾಧನೆ ಮಾಡಿ ಇನ್ನೊಂದು ತೆರನಾದ ಅಚ್ಚರಿಗೆ ಕಾರಣವಾಯಿತು. ದೇಶದ ಉತ್ತರ ಮತ್ತು ಪಶ್ಚಿಮದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಹುಮತ ಪಡೆದಿದ್ದ ಬಾಜಪ ದೇಶದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ-ಕರ್ನಾಟಕ ಹೊರತು ಪಡಿಸಿ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಲಿಲ್ಲ. ಬಾಜಪದ ಬೆಂಬಲಿಗರು ಏನೇ ಹೇಳಿಕೊಂಡರೂ ಬಾಜಪ ಪಕ್ಷ ಹಿಂದಿ ಮಾತನಾಡುವ ಹೃದಯ ಭಾಗದಲ್ಲಿ ಮಾತ್ರವೇ ಮನ್ನಣೆ ಪಡೆದ ಪಕ್ಷವೆಂಬುದನ್ನು ಸದರಿ ಚುನಾವಣೆ ಸಾಬೀತು ಮಾಡಿತು.

ಇದಕ್ಕೆ ಪೂರಕವೆಂಬಂತೆ ದಕ್ಷಿಣದ ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ, ಆಂದ್ರ ಪ್ರದೇಶಗಳಲ್ಲಿ ಬಾಜಪದ ಸಾಧನೆಯೇನು ಹೇಳಿ ಕೊಳ್ಳುವಂತಿರಲಿಲ್ಲ. ಅದೇ ರೀತಿ ಪೂರ್ವದ ಪಶ್ಚಿಮ ಬಂಗಾಳ, ಒಡಿಸ್ಸಾ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮುಂತಾದೆಡೆಗಳಲ್ಲಿ ಬಾಜಪ ಯಾವ ಪ್ರಬಾವವನ್ನೂ ಬೀರಲಾಗಿರಲಿಲ್ಲ. ಇದರಿಂದ ಅರ್ಥವಾಗುವುದೇನೆಂದರೆ ಲೋಕಸಭೆಯಲ್ಲಿ ಬಹುಮತ ಪಡೆದ ಬಾಜಪ ಒಂದು ರಾಷ್ಟ್ರೀಯ ಪಕ್ಷವಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸುವಲ್ಲಿಯಂತು ವಿಫಲವಾಯಿತು.

ಬಾಜಪದ ಈ ಭಾಗಶ: ಯಶಸ್ಸಿಗೆ ಕಾರಣವೇನೇ ಇದ್ದರೂ ಅದು 2019ರ ಚುನಾವಣೆಯ ವೇಳೆಗೆ ರಾಷ್ಟ್ರದಾದ್ಯಂತ ವ್ಯಾಪಿಸಿ ಎಲ್ಲ ರಾಜ್ಯಗಳಲ್ಲಿಯೂ ಗೆಲುವು ಸಾಧಿಸುತ್ತದೆಯೆಂಬ ಅಭಿಪ್ರಾಯವನ್ನು ಅದರ ರಾಷ್ಟ್ರಾದ್ಯಕ್ಚರಾದಿಯಾಗಿ ಬಹುತೇಕ ನಾಯಕರುಗಳು ವ್ಯಕ್ತ ಪಡಿಸಿದರೂ ಅದು ಅಷ್ಟು ಸುಲಭದ ಕೆಲಸವೇನು ಅಲ್ಲ. ಬಾಜಪದ ಯಶಸ್ಸಿನಲ್ಲಿಯೇ ಅದರ ವಿಫಲತೆಯ ಕಾರಣಗಳೂ ಇವೆಯೆಂಬುದನ್ನು ನಾವು ಮರೆಯಬಾರದು. ಬಾಜಪದ ಗೆಲುವಿನ ಓಟ ಶಾಶ್ವತವೂ ಅಲ್ಲ, ನಿರಂತರವೂ ಅಲ್ಲ ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ನಡೆದ ರಾಜ್ಯಗಳ ವಿದಾನಸಭೆಯ ಚುನಾವಣೆಗಳು ತೋರಿಸಿಕೊಟ್ಟಿವೆ, ಬಾಜಪ ಮಾತೆತ್ತಿದರೆ ಕಾಂಗ್ರೆಸ್ ಮುಕ್ತ ಭಾರತದ ಅಹಮ್ಮಿನ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ಸನ್ನು ಜೀವಂತವಾಗಿಡುತ್ತಿದೆ. ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷವೊಂದು ಇನ್ನೊಂದು ಪಕ್ಷವನ್ನು ಮುಗಿಸಿ ಬಿಡುವ ಮಾತಾಡತೊಡಗಿದೊಡನೆ ಮತದಾರರ ಮನಸಿನಲ್ಲಿ ಅನುಮಾನವೊಂದು ಹೆಡೆಯೆತ್ತುದೆ. ಸರ್ವಾಧಿಕಾರಿ ಧೋರಣೆಯನ್ನು ಸಹಿಸಿಕೊಳ್ಳದ ಭಾರತೀಯ ಮನಸ್ಥಿತಿ ಇಂತಹ ಹೇಳಿಕೆಗಳನ್ನು ನೀಡುವ ಪಕ್ಷವನ್ನು ದೀರ್ಘಕಾಲದಲ್ಲಿ ತಿರಸ್ಕರಿಸಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಮುಕ್ತ ಭಾರತದ ಮಾತಾಡುವ ಬಾಜಪದ ಬಗ್ಗೆ ಪ್ರಾದೇಶಿಕ ಪಕ್ಷಗಳಿಗೂ ಸಹಜವಾದ ಭಯ ಪ್ರಾರಂಭವಾಗಿ ಅವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ತಯಾರಾಗತೊಡಗುತ್ತವೆ. ಯಾಕೆಂದರೆ ಇವತ್ತು ಒಂದು ರಾಷ್ಟ್ರೀಯ ಪಕ್ಷವನ್ನೇ ಇಲ್ಲವಾಗಿಸಲು ಪ್ರಯತ್ನಿಸುವ ಪಕ್ಷವೊಂದು ಪ್ರಾದೇಶಿಕ ಪಕ್ಷಗಳನ್ನು ಉಳಿಯಲು ಬಿಡುವುದಿಲ್ಲ ಎಂಬ ಸತ್ಯ ಅವುಗಳಿಗೂ ಮನವರಿಕೆಯಾಗುತ್ತ ಹೋಗುತ್ತದೆ. ಇಂತಹ ಅಹಮ್ಮಿನ ಮಾತುಗಳ ಪ್ರಬಾವ ಈಗಾಗಲೇ ಆಗತೊಡಗಿರುವುದನ್ನು ಕೆಲವು ರಾಜ್ಯಗಳಲ್ಲಿ ನಾವು ನೋಡಿಯಾಗಿದೆ. ಸ್ವಲ್ಪ ಅವುಗಳತ್ತ ಗಮನ ಹರಿಸೋಣ:

2014ರ ಲೋಕಸಭಾ ಚುನಾವಣೆಗಳು ಮುಗಿದ ಕೆಲವೇ ತಿಂಗಳುಗಳಲ್ಲಿ ದೆಹಲಿ ವಿದಾನಸಭೆಗೆ ನಡೆದ ಚುನಾವಣೆಗಳು ಮೊಟ್ಟ ಮೊದಲಬಾರಿಗೆ ಮೋದಿಯ ಅಲೆಗೆ, ಬಾಜಪದ ನಾಗಾಲೋಟಕ್ಕೆ ಕಡಿವಾಣ ಹಾಕಿದವು. ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷ ಒಟ್ಟು 70ಸ್ಥಾನಗಳ ಪೈಕಿ 67ನ್ನು ಗೆಲ್ಲುವ ಮೂಲಕ ಮೋದಿ ಅಲೆಯ ಮಿಥ್ಯೆಯನ್ನು ಜಗಜ್ಜಾಹೀರು ಮಾಡಿತು. ಕೇವಲ 3 ಸ್ಥಾನಗಳನ್ನು ಗೆಲ್ಲುವ ಮೂಲಕ ಬಾಜಪ ದೆಹಲಿಯಲ್ಲಿ ಸೋಲು ಕಾಣುವುದರ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಆದರೆ ಹಾಗಾಗಲಿಲ್ಲ, ನಂತರ ನಡೆದ ಬಿಹಾರ ವಿದಾನಸಭಾ ಚುನಾವಣೆಯಲ್ಲಿಯೂ ಬಾಜಪ ಮೈತ್ರಿಕೂಟ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ಸಿನ ಜೊತೆ ಸೇರಿ ರಚಿಸಿಕೊಂಡ ಮಹಾಘಟಬಂದನ್ ವಿರುದ್ದ ಸೋಲನ್ನಪ್ಪಬೇಕಾಯಿತು. ಖುದ್ದು ಮೋದಿಯವರೇ ಅಖಾಡಕ್ಕಿಳಿದು ಪ್ರಚಾರ ಮಾಡಿದರೂ ಅಲ್ಲಿ ತೀವ್ರವಾದ ಮುಖಭಂಗ ಅನುಭವಿಸಿತು. ಅಲ್ಲಿಗೆ ಮೋದಿಯ ಅಲೆಯೆಂಬುದು ಬಾಜಪವು ಮಾಧ್ಯಮಗಳನ್ನು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸೃಷ್ಠಿಸಿದ ಹುಸಿ ಅಲೆಯೆಂಬುದು ಕಣ್ಣಿಗೆ ರಾಚ ತೊಡಗಿತ್ತು. ಇದಾದ ನಂತರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಾಜಪ ಸೋಲು ಕಂಡಿತು.

ಇನ್ನು ಮೊನ್ನೆಮೊನ್ನೆ ನಡೆದ ಐದು ರಾಜ್ಯಗಳ ವಿದಾನಸಭೆಯ ಚುನಾವಣೆಯಲ್ಲಿಯೂ ವೈಯುಕ್ತಿಕವಾಗಿ ಬಾಜಪದ ಸಾಧನೆ ಮಹತ್ತರವಾದುದೇನಲ್ಲ. ಐದು ರಾಜ್ಯಗಳ ಪೈಕಿ ಅಸ್ಸಾಮಿನಲ್ಲಿ ಅದು ಅಧಿಕಾರಕ್ಕೆ ಬಂದರೂ ಅದೇನು ಅದರ ಸ್ವಂತ ಬಲದಿಂದಲ್ಲ. ಬದಲಿಗೆ ಅಸ್ಸಾಂ ಗಣಪರಿಷತ್ ಮತ್ತು ಬೋಡೋ ಪೀಪಲ್ಸ್ ಪಕ್ಷಗಳ ಮೈತ್ರಿಯಿಂದಾಗಿ ಅದು ಅಧಿಕಾರ ಪಡೆಯುವಲ್ಲಿ ಸಫಲತೆ ಸಾದಿಸಿತು. ಅಲ್ಲಿ ಅದು ಕಾಂಗ್ರೆಸ್ಸಿಗಿಂತ ಕಡಿಮೆ ಮತಗಳನ್ನು ಪಡೆದಿತ್ತು. ಅಕಸ್ಮಾತ್ ಕಾಂಗ್ರೆಸ್ ಏ.ಐ.ಯು.ಡಿ.ಎಫ್. ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಬಾಜಪ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಿತ್ತು. ಇನ್ನು ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡುಗಳಲ್ಲಿ ಗಣನೀಯ ಸಾಧನೆಯನ್ನೇನು ಬಾಜಪ ಮಾಡಲಗಲಿಲ್ಲ. ಹಾಗೆ ನೋಡಿದರೆ ಐದೂ ರಾಜ್ಯಗಳಿಂದ ಅದು ಪಡೆದ ಒಟ್ಟು ಸ್ಥಾನಗಳು ಕೇವಲ 66 ಮಾತ್ರ, ಆದರೆ ಕಾಂಗ್ರೆಸ್ 145 ಸ್ಥಾನಗಳನ್ನು ಪಡೆದು ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸಿಕೊಟ್ಟಿದೆ.

ಇದರಿಂದ ಅರ್ಥವಾಗುವುದೇನೆಂದರೆ ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸುತ್ತಿವೆ. ಕಾಂಗ್ರೆಸ್ ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ.. ಸ್ಥಳೀಯವಾಗಿ ಬಿಹಾರದ ನಿತೀಶ್ ಕುಮಾರ್ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರು ಸಹ ಹಿಂದೆ ರೈಲ್ವೇ ಮಂತ್ರಿಯಾಗಿ ರಾಷ್ಟ್ರೀಯ ಐಡೆಂಟಿಟಿಯನ್ನು ಪಡೆದವರಾಗಿದ್ದಾರೆ. ಹಾಗೆಯೇ ತಮಿಳುನಾಡಿನ ಕುಮಾರಿ ಜಯಲಲಿತಾರವರು ಸಹ ರಾಷ್ಟ್ರದ ರಾಜಕಾರಣದಲ್ಲಿ ಚಿರಪರಿಚಿತರೇ ಆಗಿದ್ದಾರೆ. ಇನ್ನು ದೆಹಲಿಯ ಅರವಿಂದ್ ಕೇಜ್ರೀವಾಲ್ ಸಹ ರಾಷ್ಟ್ರ ಮಟ್ಟದ ನಾಯಕರಾಗಿ ಗುರುತಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ.

ಈ ಸಾಲಿನಲ್ಲಿ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸುತ್ತಿರುವುದಾಗಿದೆ. ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದ ಈ ಎರಡೂ ಪಕ್ಷಗಳ ಜಾತಿ ಸಮೀಕರಣದ ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಿದೆ.

ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭ ಸಾದ್ಯವೇನಲ್ಲ. ಇದುವರೆಗು ಕಾಂಗ್ರೆಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.

ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೆಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ. ಮಣಿಪುರದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ. ಅಲ್ಲಿ ಬಾಜಪ ಏನಾದರು ಮಾಡಬೇಕಿದ್ದಲ್ಲಿ ಸ್ಥಳೀಯ ಪಕ್ಷಗಳ ನೆರವನ್ನು ಪಡೆಯ ಬೇಕಾಗುತ್ತದೆ.

ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ.

ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೆಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ.

ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊ ಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್‍ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂ ಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾ ಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರ ಸಚಿವೆಯಾಗಿದ್ದು ಇಡೀ ರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆ. ಈ ಪಟ್ಟಿಗೆ ನಾನು ಮುಲಾಯಂಸಿಂಗವರನ್ನು ಸೇರಿಸಲು ಹಿಂಜರಿಯುತ್ತೇನೆ. ಏಕೆಂದರೆ ಅವರ ಇತ್ತೀಚೆಗಿನ ನಡವಳಿಕೆ ಚಂಚಲವಾಗಿದೆ. ಬಾಜಪವನ್ನು ವಿರೋಧಿಸುವ ಮಾತಾಡುತ್ತಲೇ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಗೆ ಅಡ್ಡಗಾಲು ಹಾಕುತ್ತಾರೆ. ಬಿಹಾರದ ಮಹಾಘಟಬಂದನ್ ಸಮಯದಲ್ಲಿ ನಿತೀಶರಿಗೆ ಕೊನೆ ಗಳಿಗೆಯಲ್ಲಿ ಕೈಕೊಟ್ಟು ನಡೆದದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದೆ. ಅವು ಯಾವುವೆಂದರೆ ಒಡಿಸ್ಸಾದ ಬಿಜುಜನತಾದಳ (ನವೀನ್‍ಪಟ್ನಾಯಕ್), ಜನತಾದಳ ಜಾತ್ಯಾತೀತ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್(ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರ ರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ), ಆಮ್ ಆದ್ಮಿ (ಅರವಿಂದ್‍ಕೇಜ್ರೀವಾಲ್), ಎನ್.ಸಿ.ಪಿ (ಶರದ್‍ಪವಾರ್), ರಾಷ್ಟ್ರೀಯ ಜನತಾದಳ್(ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.

ಅಕಸ್ಮಾತ್ ಇಂತಹ ಮಹಾಮೈತ್ರಿ ಸಾಕಾರಗೊಳ್ಳುವುದಾದಲ್ಲಿ ಅದರ ಪ್ರದಾನಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದು ತೀವ್ರವಾಗಿ ಚರ್ಚೆಯಾಗುವ ವಿಷಯವಾಗಿದೆ. ಈ ಸಾಲಿನಲ್ಲಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿಯವರ ಹೆಸರುಗಳು ಬಹುಮುಖ್ಯವಾಗಿ ಕೇಳಿ ಬರಲಿವೆ. ಈ ನಾಲ್ವರಲ್ಲಿ ರಾಷ್ಟ್ರವ್ಯಾಪಿಯಾಗಿ ಜನ ಸ್ವೀಕರಿಸಬಹುದಾದ ಹೆಸರ್ಯಾವುದು ಎಂಬುದೇ ಕುತೂಹಲಕಾರಿಯಾದುದು. ಈ ನಾಲ್ಕೂ ಜನಗಳ ಬಗ್ಗೆ ಒಂದಿಷ್ಟು ನೋಡುವುದಾದರೆ:

ನಿತೀಶ್ ಕುಮಾರ್ ಬಿಹಾರದಲ್ಲಿ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಡೆಸಿದ ಸ್ವಚ್ಚ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ನಿತೀಶರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಅವರ ವಿರೋಧಿಗಳೂ ಅಲ್ಲಗೆಳೆಯುವುದಿಲ್ಲ. ಉಳಿದಂತೆ ಕೇಂದ್ರದ ರೈಲ್ವೆ ಮಂತ್ರಿಯಾಗಿ ಜನರಿಗೆ ಚಿರಪರಿಚಿತರಾಗಿದ್ದಾರೆ. 2014ರ ಚುನಾವಣಾ ಪ್ರಚಾರಕ್ಕೆ ಬಿಹಾರಕ್ಕೆ ನರೇಂದ್ರ ಮೋದಿಯವರು ಬರುವ ಅಗತ್ಯವಿಲ್ಲವೆಂದು ನೇರವಾಗಿ ಬಾಜಪಕ್ಕೆ ಹೇಳಿದ್ದು ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿದೆ ಮತ್ತು ಕೋಮುವಾದವನ್ನು ವಿರೋಧಿಸುವ ಜನರ ದೃಷ್ಠಿಯಲ್ಲಿ ಗಟ್ಟಿನಾಯಕರಾಗಿ ಹೊರಹೊಮ್ಮಿದವರು. ಇವೆಲ್ಲವೂ ಅವರನ್ನು ಮುಂದಿನ ಪ್ರದಾನಿ ಎಂದು ಬಿಂಬಿಸವುದಕ್ಕೆ ಪೂರಕವಿಷಯಗಳಾಗಿವೆ.

ಇನ್ನು ಮಮತಾಬ್ಯಾನರ್ಜಿಯ ವಿಷಯಕ್ಕೆ ಬಂದರೆ ಅವರು ಕಾಂಗ್ರೆಸ್ ನಲ್ಲಿದ್ದಾಗಿನಿಂದಲೂ ತಮ್ಮ ಬಂಡಾಯದ ಗುಣಕ್ಕೆ, ನೇರಾನೇರಾ ಮಾತುಗಳಿಗೆ ಹೆಸರಾದವರು. ಕೆಲವು ಕಪ್ಪು ಚುಕ್ಕಿಗಳ ಹೊರತಾಗಿಯೂ ಎಡರಂಗದವರೆದುರು ಶಕ್ತಿಯುತವಾಗಿ ನಿಂತು ಐದು ವರ್ಷಗಳ ಕಾಲ ಬಂಗಾಳವನ್ನು ಮುನ್ನಡೆಸಿದ ಕೀರ್ತಿ ಆಕೆಗಿದೆ. ಅವರೂ ಕೇಂದ್ರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದು ರಾಷ್ಟ್ರವ್ಯಾಪಿಯಾಗಿ ಪರಿಚಿತವಾದ ಹೆಸರಾಗಿದೆ. ಆಕೆಗಿರುವ ಒಂದು ಹಿನ್ನಡೆಯ ವಿಷಯವೆಂದರೆ ಕೆಲವೊಮ್ಮೆ ಆಕೆ ತೀರಾ ಹಟಮಾರಿಯಂತೆ ವರ್ತಿಸಿ, ಮಿತ್ರ ಪಕ್ಷಗಳಿಗೆ ಕಿರಿಕಿರಿ ಉಂಟುಮಾಡುತ್ತಾರೆಂಬುದಾಗಿದೆ.

ಜಯಲಲಿತಾರವರು ಒಬ್ಬಂಟಿ ಹೆಣ್ಣುಮಗಳಾಗಿ ರಾಜಕೀಯ ಮಾಡುತ್ತಾ ಒಂದಿಡೀ ಪಕ್ಷವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ತಮಿಳುನಾಡಂತಹ ರಾಜ್ಯವನ್ನು ಎರಡನೇ ಅವಧಿಯಲ್ಲೂ ಮುನ್ನಡೆಸುವ ಎದೆಗಾರಿಕೆಯುಳ್ಳ ಹೆಣ್ಣುಮಗಳು. ರಾಷ್ಟ್ರಮಟ್ಟದಲ್ಲಿ ಯಾವ ಅಧಿಕಾರವನ್ನೂ ಹೊಂದಿ ಕೆಲಸ ಮಾಡದೇ ಇದ್ದರೂ ನಿಪುಣ ಆಡಳಿತಗಾರ್ತಿಯೆಂದು ಹೆಸರು ಮಾಡಿರುವ ಜನಪ್ರಿಯ ನಾಯಕಿ. ಅವರಿಗಿರುವ ಒಂದು ಕೊರತೆಯೆಂದರೆ ರಾಷ್ಟ್ರ ಮಟ್ಟದಲ್ಲಿ ಅವರ ಹೆಸರನ್ನು ಜನತೆ ಕೇಳದೇ ಇರುವುದಾಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಾಯಾವತಿಯವರು ಸಹ ಏಕಾಂಗಿಯಾಗಿ ಒಂದು ಪಕ್ಷವನ್ನು ಮುನ್ನಡೆಸುತ್ತಿದ್ದು ಗಟ್ಟಿ ನಾಯಕತ್ವದ ಹೆಣ್ಣು ಮಗಳು. ದಲಿತೆಯಾಗಿರುವುದರಿಂದ ಇಡೀ ರಾಷ್ಟ್ರದ ದಲಿತರ ಒಲವು ಅವರಿಗೆ ಸಿಗುವ ಸಾದ್ಯತೆಯಿದೆ. ಉಳಿದಂತೆ ಈಗಾಗಲೇ ಬಹುಜನ ಪಕ್ಷ ಅನೇಕ ರಾಜ್ಯಗಳಲ್ಲಿ ಚುನಾವಣಾ ರಾಜಕೀಯ ಮಾಡುತ್ತ ಸಾಕಷ್ಟು ಬೆಂಬಲಿಗರನ್ನು ಹೊಂದಿದೆ. ಆದರೆ ಅವರ ಮೇಲಿರವ ಸಿ.ಬಿ.ಐ ಕೇಸುಗಳು ಅವರ ಪ್ರದಾನಿಯ ಕನಸಿಗೆ ಸಂಚಕಾರ ತರಬಲ್ಲವು ಎಂಬುದಂತು ಸತ್ಯ.

ಈ ಪಟ್ಟಿಗೆ ಸೇರಿಸಬಹುದಾದ ಇನ್ನೊಂದು ಹೆಸರು ಒಡಿಸ್ಸಾದ ಬಿಜು ಜನತಾಪಕ್ಷದ ನವೀನ್ ಪಟ್ನಾಯಿಕ್ ಅವರದು. ಉತ್ತಮ ಆಡಳಿತಗಾರರಾಗಿ ಹೆಸರು ಮಾಡಿ ಯಾವುದೇ ವಿವಾದಗಳಿಂದ ದೂರವಿದ್ದು ರಾಜ್ಯಬಾರ ನಡೆಸುತ್ತಿರುವ ನವೀನ್ ಪಟ್ನಾಯಿಕ್ ಸೂಕ್ತ ವ್ಯಕ್ತಿಯಾದರೂ ಅಖಿಲ ಭಾರತ ಮಟ್ಟದಲ್ಲಿ ಅವರ ಪರಿಚಯವಿಲ್ಲದಿರುವುದು ಅವರ ಹಿನ್ನಡೆಗೆ ಕಾರಣವಾಗುವುದು ನಿಜ.

ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮಾತುಕತೆ ಶುರುವಾದರೆ ಪ್ರದಾನಿ ಹುದ್ದೆಯ ಅಭ್ಯರ್ಥಿಯ ಹೆಸರು ಬಂದಾಗ ನಾನು ಉಲ್ಲೇಖಿಸಿದವರನ್ನು ಬಿಟ್ಟು ಸರ್ವಸಮ್ಮತವಾದ ವ್ಯಕ್ತಿಯೊಬ್ಬರ ಹೆಸರು ಕಂಡು ಬಂದರೂ ಆಶ್ಚರ್ಯವೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆ ಕಾಂಗ್ರೆಸ್ ಇರಲಿ ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆ ಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘಪರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೆಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪ ರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ.

ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ.

ಮೂರನೇ ರಾಜಕೀಯ ರಂಗದ ಅನಿವಾರ್ಯತೆಯ ಹಿಂದಿರುವ

ನೈಜ ಕಾರಣಗಳು!

ಕಾಂಗ್ರೆಸ್ ಮತ್ತು ಬಾಜಪಗಳ ಹೊರತಾಗಿ ರಚನೆಯಾಗಬಹುದಾದ ಒಂದು ವಿಶಾಲ ರಾಜಕೀಯ ವೇದಿಕೆಯ ಸಾದ್ಯತೆಗಳ ಕುರಿತಾಗಿ ಮಾತನಾಡಿದ ಮೇಲೂ ನಮ್ಮಲ್ಲಿ ಉಳಿಯುವ ಪ್ರಶ್ನೆ: ಇಂತಹದೊಂದು ರಾಜಕೀಯ ಶಕ್ತಿಯ ಅಗತ್ಯವೇನಿದೆ? ಎಂಬುದಾಗಿದೆ. ಈ ಪ್ರಶ್ನೆಗೆ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ಕಂಡುಕೊಂಡು ಜನರಿಗೆ ತಲುಪಿಸದ ಹೊರತು ಇಂತಹ ನಡೆ ಯಶಸ್ವಿಯಾಗಲಾರದು!

ಇವತ್ತು ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ತನ್ನ ಅಗಾಧಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳಿಂದ, ಜಡಗಟ್ಟಿದ ನಾಯಕರುಗಳಿಂದ, ತಳ ಮಟ್ಟದಲ್ಲಿ ಜನಸಂಪರ್ಕ ಹೊಂದಿರದ ಭಟ್ಟಂಗಿ ರಾಜಕಾರಣಿಗಳ ಕಾರಣದಿಂದಾಗಿ ದಿನೇದಿನೇ ದುರ್ಬಲಗೊಳ್ಳುತ್ತ ಬರುತ್ತಿದೆ. ಇವೆಲ್ಲದರಿಂದ ಅದು ಬಾಜಪಕ್ಕೆ ಪರ್ಯಾಯವಾಗಿ ನಿಲ್ಲುವ ತ್ರಾಣ ಕಳೆದುಕೊಂಡಂತೆ ಕಾಣುತ್ತಿದೆ. ಅದರ ಅದ್ಯಕ್ಷರಾದ ಶ್ರೀಮತಿ ಸೋನಿಯಾಗಾಂದಿಯವರು ಸಹ ಆಯಾಸಗೊಂಡವರಂತೆ ಕಾಣುತ್ತಿದ್ದಾರೆ. ಅವರ ಸ್ಥಾನ ತುಂಬಲು ಸಿದ್ದವಾಗಿರುವ ಕಾಂಗ್ರೆಸ್ಸಿನ ಉಪಾದ್ಯಕ್ಷರಾದ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸನ್ನು ಸಶಕ್ತವಾಗಿ ಮುನ್ನಡೆಸಬಲ್ಲ ಸಾಮರ್ಥ್ಯವಿದೆಯೆಂಬುದನ್ನು ಅವರು ತೋರಿಸಿಕೊಟ್ಟಿಲ್ಲ. ಸೋನಿಯಾರ ತಂತ್ರಗಾರಿಕೆಯಾಗಲಿ, ಖಡಕ್ ನಿರ್ದಾರ ತೆಗದುಕೊಳ್ಳಬಹುದಾದ ಪ್ರಬುದ್ದತೆಯನ್ನು ಅವರಿಲ್ಲಿಯವರೆಗೂ ತೋರಿಸಿಲ್ಲ. ಅಕಸ್ಮಾತ್ ಸೋನಿಯಾರವರೇನಾದರು ರಾಹುಲರ ಕೈಗೆ ಪಕ್ಷವನ್ನು ನೀಡಿದರೆ ಇವತ್ತಿರುವ ಕಾಂಗ್ರೆಸ್ ಇನ್ನಷ್ಟು ದುರ್ಬಲಗೊಳ್ಳಬಹುದಾದ ಸಾದ್ಯತೆಯೇ ಹೆಚ್ಚು. ಇಂತಹ ಸನ್ನಿವೇಶವೊಂದು ಎದುರಾದರೆ ಬಾಜಪದ ಮುಂದಿನ ಹಾದಿ ಸುಗಮವಾಗಲಿದ್ದು, ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಎದುರಾಳಿಯೇ ಇಲ್ಲದಂತಾಗಿ ಬಿಡುತ್ತದೆ. ಇದು ಬಾಜಪ ನಾಯಕತ್ವವನ್ನು ಸರ್ವಾಧಿಕಾರದತ್ತ ಕರೆದೊಯ್ದರೆ ಅಚ್ಚರಿಯೇನಿಲ್ಲ. ಸದ್ಯದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ನಡವಳಿಕೆಗಳು ಅಂತಹದೊಂದು ಅನುಮಾನಕ್ಕೆ ಪುಷ್ಠಿ ಕೊಡುವಂತೆಯೇ ಇವೆ.

ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವ ಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದ ಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿvರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಬಾಜಪ ಸಹ ಪ್ರಜಾಪ್ರಭತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿಯಲು ಸಹ ಇದು ಸಹಕಾರಿಯಾಗುತ್ತದೆ.

ಆದರೆ ಇದು ಸಾದ್ಯವಾಗಲು ಪ್ರಾದೇಶಿಕ ಪಕ್ಷಗಳ ನಾಯಕರುಗಳು ತಮ್ಮ ಪಾಳೆಗಾರಿಕೆಯ ಅಹಮ್ಮನ್ನು ಬದಿಗೊತ್ತಿ, ಒಳಜಗಳಗಳನ್ನು ಕೈಬಿಟ್ಟು ಮುಕ್ತ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.

Jul 29, 2016

ಮೇಕಿಂಗ್ ಹಿಸ್ಟರಿ: ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/07/2016
ಬಿಕ್ಕಟ್ಟಿಗೆ ಕಾರಣವಾದ ಮತ್ತೊಂದು ಪ್ರಮುಖ ಅಂಶವೆಂದರೆ ಗೊತ್ತುಗುರಿಯಿಲ್ಲದೆ ನಡೆಯುತ್ತಿದ್ದ ರಾಜ್ಯದ ಖರ್ಚುಗಳು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ, ಹತ್ತಿರತ್ತಿರ ಮೈಸೂರು ಸರಕಾರದ ಅರ್ಧದಷ್ಟು ಆದಾಯ ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪ ಕಾಣಿಕೆಗೇ ಹೋಗಿಬಿಡುತ್ತಿತ್ತು. ಮತ್ತವರು ಮೈಸೂರಿನ ತೆಗೆದುಕೊಂಡದ್ದನ್ನು ಮತ್ತೆ ವಾಪಸ್ಸು ತಂದದ್ದಿಲ್ಲ. ಹಾಗಾಗಿ ಅರ್ಧದಷ್ಟು ಮೊತ್ತ ಪರಿಗಣನೆಗೇ ಬರುವುದಿಲ್ಲ. ರಾಜನಿಗೆ ಐದು ಪ್ರತಿಶತಃದಷ್ಟು ಮತ್ತು ದಿವಾನನಿಗೆ ಒಂದು ಪ್ರತಿಶತಃದಷ್ಟು ನೀಡುವ ಕಮಿಷನ್ನಿನಿಂದ ಕೆಲವು ಲಕ್ಷ ರುಪಾಯಿಗಳು ಸಾರ್ವಜನಿಕ ಉಪಯೋಗಕ್ಕೆ ಬರದೇ ಹೋಗಿಬಿಡುತ್ತಿತ್ತು. ಇನ್ನುಳಿದ ನಲವತ್ತು ಚಿಲ್ಲರೆ ಪ್ರತಿಶತಃದಷ್ಟು ಹಣದಲ್ಲಿ, ಒಂದು ದೊಡ್ಡ ಮೊತ್ತ ಕೆ.ಆರ್.ಒಡೆಯರರ ರಾಜಸ್ವವನ್ನು ಉಳಿಸಲಿಕ್ಕೆ ಸುಟ್ಟು ಹೋಗುತ್ತಿತ್ತು, ಅದರಲ್ಲಲವನ್ನು ಹಿಂದಿನ ಪುಟಗಳಲ್ಲಿ ಹೀಗಾಗಲೇ ನಾವು ನೋಡಿದ್ದೇವೆ. ಮೈಸೂರಿನ ರೆಸೆಡೆಂಟಾಗಿದ್ದ ಕಾಸಾಮೈಯೂರ್, ಫೋರ್ಟ್ ಸೆಂಟ್ ಜಾರ್ಜಿನ ಕಾರ್ಯದರ್ಶಿಯಾಗಿದ್ದ ರಿಚರ್ಡ್ ಕ್ಲೈವ್ ಗೆ 1831ರಲ್ಲಿ ಬರೆದ ಪತ್ರದಲ್ಲಿ ರಾಜನ ಈ ವೈಭವೋಪೇತ ಖರ್ಚುಗಳ ಬಗ್ಗೆ ಬರೆಯುತ್ತಾನೆ. ರಾಜ ರಾಜ್ಯದ ಹಣವನ್ನು ಉಪಯೋಗಿಸುವುದರ ಜೊತೆಗೆ ವಿಪರೀತವಾಗಿ ಸಾಲ ಮಾಡಿಕೊಂಡು “ಅನಗತ್ಯ ಮತ್ತು ದುಬಾರಿ ವಸ್ತುಗಳನ್ನು ಸಾಹುಕಾರರಿಂದ ಖರೀದಿಸಿ ಬ್ರಾಹ್ಮಣ ವಿಧಿವಿಧಾನಗಳಲ್ಲಿ ಪೋಲುಮಾಡಿಬಿಡುತ್ತಾನೆ….ರಾಜ ಮತ್ತೆ ತನ್ನ ಹಿಂದಿನ ಅಭ್ಯಾಸವಾದ ಅನವಶ್ಯಕ ಪ್ರದರ್ಶನಕಾರಕ ವೈಭವಕ್ಕೆ ಮರಳುತ್ತಿದ್ದಾನೆ” ಎಂದು ಬರೆಯುತ್ತಾನೆ ಕಾಸಾಮೈಯೂರ್. (252) 

ಮತ್ತೆ, ಕೆಲವು ದಿನಗಳ ನಂತರ, ಮೈಸೂರು ಸಾಮ್ರಾಜ್ಯದಲ್ಲಿ ಕಂಪನಿಯ ನೇರ ಆಡಳಿತವನ್ನು ಹೇರಿದಾಗ, ಮದ್ರಾಸಿನ ಗವರ್ನರ್ ಲಷಿಂಗ್ಟನ್, ಕೈಗೊಂಬೆ ರಾಜನಿಗೆ ಬರೆದ ಪತ್ರದಲ್ಲಿ ಅವನ ತಪ್ಪುಗಳನ್ನು ತೋರಿಸುತ್ತ ಎಚ್ಚರಿಸುತ್ತಾನೆ: “ಘನತೆವೆತ್ತ ನಿಮ್ಮ ಸಮಸ್ಯೆಯ ಮೂಲವೆಂದರೆ ನೀವು ಹೊಂದಿರುವ ಖಜಾನೆಯ ಹಣವನ್ನು ಪೋಲು ಮಾಡುತ್ತಿರುವ ನಿಮ್ಮ ದುಬಾರಿ ಖರ್ಚುವೆಚ್ಚಗಳು; ಸರಿಯಾದ ಅಧಿಕಾರಿಗಳನ್ನು ನೇಮಿಸಿ ಖಜಾನೆಯ ಹಣವನ್ನು ದೇಶದ ಒಳಿತಿಗಾಗಿ ಉಪಯೋಗಿಸದ ನಿಮ್ಮ ನಿರ್ಧಾರಗಳು…. 

….ನೀವು ಸಾಹುಕಾರರ ಬಳಿ ಮಾಡಿರುವ ಸಾಲದ ಮೊತ್ತವನ್ನು ಸರಿಪಡಿಸಲಿಕ್ಕಾಗಿ, ನನಗೆ ತಿಳಿದಂತೆ ನಿಮ್ಮ ಆದಾಯವನ್ನು ಬಹಳಷ್ಟು ಸಂದರ್ಭದಲ್ಲಿ ಅದರ ಮೂಲ ಉದ್ದೇಶದಿಂದ ತಿರುಗಿಸಿಬಿಡುತ್ತೀರಿ. ನಿಮ್ಮ ಸೈನ್ಯಕ್ಕೆ ಕೊಡಬೇಕಾಗಿರುವ ಹಣಕ್ಕೆ, ನಿಮ್ಮ ಖಾಸಗಿ ಖರ್ಚುವೆಚ್ಚಗಳಿಗೆ ಯಾವಾಗೆಲ್ಲ ಹಣದ ಅಭಾವ ಉಂಟಾಗುತ್ತದೋ ಆಗೆಲ್ಲ ನೀವು ಸಾಹುಕಾರರಿಗೆ ಭೂಮಿಯನ್ನು ದಾನವಾಗಿ ನೀಡೋ ಮತ್ತೊಂದು ಮಾಡಿಯೋ ಹಣ ಪಡೆದುಬಿಡುತ್ತೀರಿ. ನಿಮ್ಮಾದಾಯದ ಹೆಚ್ಚಿನ ಭಾಗವನ್ನು ವಿಪರೀತವಾಗಿ ಇನಾಮು ಕೊಡುತ್ತ ಕಳೆದಿದ್ದೀರಿ, ಬಹಳಷ್ಟು ಸಂದರ್ಭದಲ್ಲಿ ಇಂತಹ ಇನಾಮು ಪಡೆದ ವ್ಯಕ್ತಿ ನಿಮ್ಮಿಂದ ಅದನ್ನು ಪಡೆಯಲು ಯೋಗ್ಯನಾಗಿಯೇ ಇರುವುದಿಲ್ಲ. 

ವಿಪರೀತವಾಗಿ ಇನಾಮು ಭೂಮಿಯನ್ನು ಕೊಟ್ಟಿದ್ದು ಘನತೆವೆತ್ತವರ ಆರ್ಥಿಕ ಬಿಕ್ಕಟ್ಟಿಗೆ ಮತ್ತೊಂದು ಕಾರಣ; ಇದು ಹೆಚ್ಚು ಎಚ್ಚರಿಕೆಯ ವಿಷಯ ಯಾಕೆಂದರೆ ವಾರ್ಷಿಕ ಆದಾಯದಲ್ಲಾಗುವ ಕುಸಿತವನ್ನು ಇದು ಹೆಚ್ಚು ಮಾಡುತ್ತದೆ. ದಿವಾನ್ ಪೂರ್ಣಯ್ಯನವರ ಸಮಯದಲ್ಲಿ ಇನಾಮಿನ ಮೊತ್ತ 1,84,766, 3.14 3/4 ಕಾಂತರೇಯ ಪಗೋಡಾದಷ್ಟಿತ್ತು. 1828ರಲ್ಲಿ ಅದು 3,53,165 ರಷ್ಟಾಗಿದೆ, ಪೂರ್ಣಯ್ಯನವರ ಸಮಯಕ್ಕೆ ಹೋಲಿಸಿದರೆ 1,68,998, 3.9 ಜಾಸ್ತಿಯಾಗಿದೆ. 1828 ಮತ್ತು 1830 ನಡುವೆ ಇದು ಮತ್ತಷ್ಟು ಹೆಚ್ಚಾಗಿ 4,34,346, 5.4 ಕಾಂತರೇಯ ಪಗೋಡಾದಷ್ಟಾಗಿದೆ. ಇದು ರಾಜ್ಯದ ಸಂಪತ್ತಿನಿಂದ ತೆಗೆದುಕೊಂಡ ಸಂಪತ್ತು. 

ಭೂಮಿಯನ್ನು ದಾನ ನೀಡುವುದರಿಂದ ನಿಮ್ಮಾದಾಯದಲ್ಲಾದ ಕುಸಿತ, ನಿಮ್ಮ ಮತ್ತು ಕಂಪನಿಯ ಸರಕಾರದ ನಡುವೆ ನಡೆದ ಪರಸ್ಪರ ಒಪ್ಪಂದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ನಿಮಗೆ ತುಂಬ ನೋವಿನೊಡನೆ ತಿಳಿಸಬೇಕಾಗಿದೆ ಮತ್ತು ನಾನು ಘನತೆವೆತ್ತವರಿಗೆ ನೀಡುವ ಸಲಹೆಯಂದರೆ……ಭವಿಷ್ಯದಲ್ಲಿ ಇಂತಹ ಅನುದಾನ ನೀಡುವುದರಿಂದ ದೂರವಿದ್ದುಬಿಡಿ….” (253) 

ಮತ್ತು ಕೊನೆಯಲ್ಲಿ ಲಷಿಂಗ್ಟನ್ ಬ್ರಿಟೀಷರು ದತ್ತು ಪಡೆದ ಮಗನಿಗೆ ತಂದೆ ನೀಡುವ ಸಲಹೆಯನ್ನು ಕಾಠಿಣ್ಯದಿಂದ ತಿಳಿಸುತ್ತಾರೆ: “…..ನೀವು ನಿಮ್ಮ ದಿನದ ಒಂದಷ್ಟು ಸಮಯವನ್ನು ನಿಗದಿತವಾಗಿ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಮೀಸಲಿಡಬೇಕಾಗಿರುವುದು ಅತ್ಯವಶ್ಯಕವಾಗಿದೆ, ಆಗ ನಿಮ್ಮ ಆರ್ಥಿಕತೆ ಒಂದು ಉತ್ತಮ ರೂಪಕ್ಕೆ ಮರಳುತ್ತದೆ….” (254) 

ಮೈಸೂರು ಸಾಮ್ರಾಜ್ಯದ ಪ್ರಮುಖ ಖರ್ಚುಗಳಲ್ಲಿ ವಸಾಹತು ದೊರೆಯ ಸೈನ್ಯದ ನಿರ್ವಹಣೆಯೂ ಒಂದು ಎಂದು ಮೀರಾ ನಮಗೆ ತಿಳಿಸುತ್ತಾರೆ. 1830ರಲ್ಲೇ, ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಚಿಕ್ಕ ಸೈನ್ಯದ ನಿರ್ವಹಣೆಗೆ 1,50,156 ರುಪಾಯಿಗಳು ಬೇಕಾಗಿತ್ತು. ಹೀಗಾಗಿ “ರಾಜನಿಗೆ ಹತ್ತಲವು ರೂಪದ ಜವಾಬ್ದಾರಿಗಳಿತ್ತು, ಮತ್ತಿದರಿಂದ ದೇಶ ಅಭಿವೃದ್ಧಿವಂಚಿತವಾಯಿತು”. (255) 

ಇಡೀ ಮೂವತ್ತು ವರುಷಗಳ ಅವಧಿಯಲ್ಲಿ ಬ್ರಿಟೀಷರು ಅತ್ಯಮೂಲ್ಯ ಸಂಪತ್ತನ್ನು ದೋಚಿದರು, ಇಡೀ ಭಾರತವನ್ನು ಆಕ್ರಮಿಸುವ ಸಲುವಾಗಿ ಇಲ್ಲಿಂದಲೇ ಹತ್ತಾರು ಲಕ್ಷ ರುಪಾಯಿಗಳನ್ನು ಲೂಟಿ ಹೊಡೆದರು. ಮೀರಾ ಸೆಬಾಸ್ಟಿಯನ್ ಹೇಳುತ್ತಾರೆ: “ವೆಲ್ಲೆಸ್ಲಿ ನಡೆಸಿದ ಸತತ ಯುದ್ಧಗಳಲ್ಲಿ ಮೈಸೂರು ಸಾಮ್ರಾಜ್ಯವನ್ನು ಎಳೆದ ಕಾರಣದಿಂದಾಗಿ ರಾಜ್ಯದ ಬೊಕ್ಕಸದ ಹಣ ಪೋಲಾಯಿತು. ಹಾಗಾಗಿ ದಿವಾನ್ ಪೂರ್ಣಯ್ಯನವರ ಆಡಳಿತಾವಧಿಯಲ್ಲಿ, ಆರ್ಥಿಕತೆಯನ್ನುಳಿಸುವ ಅವರ ತೀವ್ರವಾದ ಪ್ರಯತ್ನಗಳ ನಡುವೆಯೂ ಸೈನ್ಯದ ಖರ್ಚಿಗೆ 1809-10ರಲ್ಲಿ 20.7 ಲಕ್ಷ ರುಪಾಯಿಗಳಷ್ಟು ಖರ್ಚಾಗಿತ್ತು. ಈ ದುಬಾರಿ ನಿರ್ವಹಣೆಯ ಕಾರಣದಿಂದಾಗಿ ಮಹಾರಾಜರ ನೇರ ಆಳ್ವಿಕೆಯ ಸಮಯದಲ್ಲಿ ಸೈನ್ಯಕ್ಕೆ ಕೊಡಬೇಕಾದ ಮೊತ್ತ ಬಾಕಿ ಉಳಿಯುತ್ತಿತ್ತು ಎನ್ನುವುದರ ಕುರಿತು ಯಾವುದೇ ಅನುಮಾನಗಳಿಲ್ಲ. ಕಂದಾಚಾರದ ಗುಮಾಸ್ತರಿಗೆ 1824-25ರಲ್ಲಿ ಕೊಡಬೇಕಿದ್ದ ಮೊತ್ತವೇ 7,03,181 ರುಪಾಯಿಗಳಷ್ಟಿತ್ತು. ಈ ನಿರಂತರ ಯುದ್ಧಗಳ ಕಾರಣದಿಂದಾಗಿ ಸೊವಾರ್ ಕಛೇರಿಗಳಿಗೆ ಮತ್ತು ಬರ್ಗೀರಿಗೆ 10.5 ಲಕ್ಷ ರುಪಾಯಿ ವೆಚ್ಚವಾಗಿತ್ತು, 1824-25ರಲ್ಲಿ”. (256) 

ಮೈಸೂರಿಗೆ ಭೇಟಿ ಕೊಟ್ಟ ಬ್ರಿಟೀಷ್ ವರ್ತಕರು ಮತ್ತು ಅಧಿಕಾರಿಗಳ ಹತ್ತಿರ ತನ್ನ ಉದಾರತನ ತೋರಿದ ಮೈಸೂರು ರಾಜ. ಬ್ರಿಟಿಷ್ ಕಮಿಷನರ್ರುಗಳು ಲೆಕ್ಕಹಾಕಿದಂತೆ 1830ರ ದಶಕದಲ್ಲಿ ಬ್ರಿಟನ್ನಿಗೆ ವಾರ್ಷಿಕವಾಗಿ 20 ಲಕ್ಷ ರುಪಾಯಿಗಳಷ್ಟು ಮೌಲ್ಯದ ಉಡುಗೊರೆಗಳು ಮೈಸೂರಿನ ವಿದೂಷಕನಿಂದ ತಲುಪುತ್ತಿದ್ದವು. (257) 

ಆ ಕಾಲದಲ್ಲಿದ್ದ ಪ್ರಮುಖ ಖರ್ಚುಗಳೆಂದರೆ, ಬ್ರಿಟೀಷ್ ರಾಜ್ ಗೆ ಕೊಡಬೇಕಿದ್ದ ಕಪ್ಪಕಾಣಿಕೆ, ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಕೊಡಬೇಕಿದ್ದ ಕಮಿಷನ್, ತಿಕ್ಕಲು ರಾಜನ ಊಳಿಗಮಾನ್ಯ ಖರ್ಚುಗಳಾದ ಬ್ರಿಟೀಷ್ ವರ್ತಕರಿಗೆ, ಅಧಿಕಾರಿಗಳಿಗೆ, ಮಠಗಳಿಗೆ, ದೇವಸ್ಥಾನಗಳಿಗೆ ಕೊಡುವ ಉಡುಗೊರೆ ಮತ್ತು ಕೊನೆಯದಾಗಿ ಭಾರತವನ್ನು ಮತ್ತಷ್ಟು ದುರ್ಬಲಗೊಳಿಸಲು ಬ್ರಿಟೀಷ್ ಸೈನ್ಯಕ್ಕೆ ನೀಡುವ ಮೊತ್ತ. ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲೂ ಈ ನಾಲ್ಕು ತಲೆಗಳಿಗೆ ಮತ್ತಷ್ಟು ಮಗದಷ್ಟು ಹಣದ ಅವಶ್ಯಕತೆ ಬೀಳುತ್ತಿತ್ತು. ಪರಿಣಾಮವಾಗಿ, 1822ರಲ್ಲಿ, ತಿಂಗಳು ತಿಂಗಳು ಕಟ್ಟಬೇಕಿದ್ದ ಕಪ್ಪಕಾಣಿಕೆಯಲ್ಲಿ ವ್ಯತ್ಯಾಸವಾಗುತ್ತಿತ್ತು, ಮತ್ತು ಹಲವು ಸಂದರ್ಭದಲ್ಲಿ, ಮೈಸೂರು ರಾಜನಡಿಯಿದ್ದ ಸೈನಿಕರ ಸಂಬಳ ಬಾಕಿಯುಳಿಯುತ್ತಿತ್ತು, ಇದು ಸೈನಿಕರಲ್ಲೂ ಬಿಕ್ಕಟ್ಟನ್ನು ಹೆಚ್ಚಿಸಿತು. 

ರಾಜ್ಯದ ಖರ್ಚು ವೆಚ್ಚಗಳನ್ನು ಗಮನಿಸುವುದು ಅಂತಿಮವಾಗಿ ಒಂದಷ್ಟು ಆಘಾತಕಾರಿ ಮಾಹಿತಿಗಳನ್ನು ಹೊರಹಾಕುತ್ತದೆ. ಅರೆ ಊಳಿಗಮಾನ್ಯ ಮತ್ತು ವಸಾಹತು ಅಚ್ಚಿನಿಂದ ತಯಾರಾದ ಅಸಹ್ಯ ಮೂಡಿಸುವ ಕೈಗೊಂಬೆ ರಾಜನ ಸರಕಾರ ಸಾಮಾಜಿಕ ಕಾರ್ಯಗಳಿಗೆ ಮಾಡಬೇಕಾದ ಖರ್ಚುಗಳೆಡೆಗೆ ಅಪಾರ ನಿರ್ಲಕ್ಷ್ಯ ತೋರಿಸುತ್ತದೆ. ಈ ದಿಕ್ಕಿನಲ್ಲಿ ಖರ್ಚು ಮಾಡಿದ ಚಿಕ್ಕ ಪುಟ್ಟ ಮೊತ್ತ ಕೂಡ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿದ್ದ ಪರಂಪರೆಯ ಮುಂದುವರಿಕೆಯಷ್ಟೇ. ಹೈದರ್ ಮತ್ತು ಟಿಪ್ಪು ಸರಕಾರ ಸಂಪನ್ಮೂಲ ಮತ್ತು ಸಾಮಾಜಿಕ ಆಸ್ತಿಯನ್ನು ಸೃಷ್ಟಿಸುವ ಸಲುವಾಗಿ ಹೂಡಿದ ದೊಡ್ಡ ಮೊತ್ತದ ಬಂಡವಾಳವನ್ನು ಕಾಪಿಡುವ ಸಲುವಾಗಿ ಅದನ್ನು ಮುಂದುವರೆಸಲೇಬೇಕಿತ್ತು. ಹಿಂದಿನ ಕಾಲದ ಊಳಿಗಮಾನ್ಯ ಸರಕಾರದಲ್ಲಿದ್ದಂತೆ, ವಸಾಹತುಶಾಹಿ ಮಧ್ಯಯುಗದ ಕಾಲಕ್ಕೆ ಸಮಾಜ ಜಾರಿಹೋಗಲು ಅನುವು ಮಾಡಿಕೊಟ್ಟಿತು. ಬ್ರಿಟೀಷ್ ಕೈಗೊಂಬೆ ಪರಾವಲಂಬತನ ಒರಟಾಗಿತ್ತು, ಪರಿಪೂರ್ಣವಾಗಿತ್ತು.

ಮುಂದಿನ ವಾರ
ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ

Jul 28, 2016

ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು: ಮೋದಿಯವರ ಮೌನ ಮತ್ತು ರಾಜಧರ್ಮ! ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
28/07/2016
ಇತ್ತೀಚೆಗೆ ಗುಜರಾತಿನಲ್ಲಿ ಸತ್ತ ದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತ ಯುವಕರ ಮೇಲೆ ಸವರ್ಣಿಯರು ನಡೆಸಿದ ಅಮಾನುಷ ಹಲ್ಲೆಗಳ ಬಗ್ಗೆ ಹಾಗು ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ದಲಿತರ-ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆ ಪ್ರದಾನಿ ನರೇಂದ್ರಮೋದಿಯವರು ಮೌನ ಮುರಿದು ಮಾತಾಡಬೇಕೆಂದು ಬಹುಜನ ಪಕ್ಷದ ನಾಯಕಿ ಮಾಯಾವತಿಯವರು ಒತ್ತಾಯಿಸಿದ್ದಾರೆ. ಇದು ಕೇವಲ ಮಾಯಾವತಿಯವರ ಒತ್ತಾಯ ಮಾತ್ರವಾಗಿರದೆ ಈ ರಾಷ್ಟ್ರದ ಎಲ್ಲ ದಲಿತರ ಒತ್ತಾಯವೂ ಆಗಿದೆ. ಚುನಾವಣಾ ರ್ಯಾಲಿಗಳ ಬಾಷಣಗಳಲ್ಲಿ, ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ, ಅನಿವಾಸಿ ಭಾರತೀಯರ ಸಭೆಗಳಲ್ಲಿ ಉಸಿರು ಎಳೆದುಕೊಳ್ಳಲು ಬಿಡುವು ಸಿಗದಂತೆ ಪುಂಕಾನುಪುಂಖವಾಗಿ ಮಾತಾಡುವ ಪ್ರದಾನಿಯವರದು ರಾಷ್ಟ್ರದ ಆಂತರಿಕ ವಿಚಾರಗಳಲ್ಲಿ, ಅದೂ ತಳ ಮಟ್ಟದವರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳ ವಿಚಾರದಲ್ಲಿ ಮಾತ್ರ ದಿವ್ಯಮೌನ. ಇಂತಹ ವಿಷಯಗಳಲ್ಲಿ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಮತ್ತು ವಿರೋಧಪಕ್ಷಗಳ ಆರೋಪಗಳನ್ನು ನಿರಾಕರಿಸುವ ಸಂಪೂರ್ಣ ಹೊಣೆಗಾರಿಕೆ ಬಾಜಪದ ಎರಡನೇ ಸಾಲಿನ ನಾಯಕರುಗಳಿಗೆ ನೀಡಿರುವ ಪ್ರದಾನಿಯವರು ಮಾತ್ರ ಯಾವ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಶರಣಾಗುವುದನ್ನು ಅವರ ಅಭಿಮಾನಿ ದೇವರುಗಳು ಪ್ರದಾನಿಯವರದು ಮೌನ ಮಾತ್ರವಲ್ಲ ದೇಶದ ಅಭಿವೃದ್ದಿಯ ಬಗೆಗಿನ ಏಕಾಗ್ರಚಿತ್ತದ ದ್ಯಾನವೆಂದು ಇನ್ನೂ ವರ್ಣಿಸದಿರುವುದು ನಮ್ಮ ಪುಣ್ಯ!

ದಲಿತರ ಮೇಲಾಗುತ್ತಿರುವ ಹಲ್ಲೆಗಳಿಗಿರುವ ಕಾರಣಗಳ ಬಗ್ಗೆ ಅದ್ಯಯನ ಮಾಡಿದರೆ ಸವರ್ಣಿಯರ ಕ್ರೂರತೆ ಮತ್ತು ಪ್ರಭುತ್ವದ ಮೌನದ ಹಿಂದಿರುವ ತಣ್ಣಗಿನ ಕ್ರೌರ್ಯ ಅರಿವಾಗುತ್ತದೆ. ಕೆಳಗಿನ ಕೆಲ ಘಟನೆಗಳನ್ನು ನೀವು ಓದಿದರೆ ದೌರ್ಜನ್ಯಗಳಿಗೆ ಕಾರಣವಾಗಿರುವ ತೀರಾ ಬಾಲೀಶ ಕಾರಣಗಳು ಗೊತ್ತಾಗುತ್ತವೆ:

ಮೇಲ್ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ದಲಿತ ಯುವಕನನ್ನು ತುಂಡುತುಂಡಾಗಿ ಕತ್ತರಿಸಿ ಎಸೆಯಲಾಗುತ್ತದೆ.

ದಲಿತ ಕುಟುಂಬದ ಮೇಕೆಯೊಂದು ಸವರ್ಣಿಯರ ಜಮೀನಿನಲ್ಲಿ ಓಡಾಡಿದ ಕಾರಣಕ್ಕೆ ಆಡು ಕಾಯುವ ದಲಿತ ಹುಡುಗನನ್ನು ಜೀವಂತವಾಗಿ ಸುಡಲಾಗುತ್ತದೆ.

ದಲಿತ ಅಪ್ರಾಪ್ತೆಯನ್ನು ಅತ್ಯಚಾರ ಮಾಡಿ, ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಾಗದಂತೆ ನೋಡಿಕೊಳ್ಳಲಾಗುತ್ತದೆ.

ಭೂಮಾಲೀಕನ ಬಂಧನದಲ್ಲಿದ್ದ ಇಬ್ಬರು ದಲಿತ ಜೀತದಾಳುಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಕ್ಕೆ ಅವರಿಬ್ಬರ ಕೈಗಳನ್ನು ಕತ್ತರಿಸಿ ಎಸೆಯಲಾಗುತ್ತದೆ.

ದೇವಸ್ಥಾನದ ಪ್ರಸಾದವನ್ನು ಕೇಳಿದ್ದಕ್ಕೆ ಎಂಟು ವರ್ಷದ ದಲಿತ ಬಾಲಕನಿಗೆ ರಕ್ತಸ್ರಾವವಾಗುವಂತೆ ಥಳಿಸಲಾಗುತ್ತದೆ.

ಹೀಗೆ ನಾಗರೀಕ ಸಮಾಜವೊಂದರಲ್ಲಿ ತೀರಾ ಕ್ಷುಲ್ಲಕವಾದ ಕಾರಣಗಳಿಗಾಗಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಗಳ ಹಿಂದೆ ಮೇಲ್ಜಾತಿಗಳ ಶತಮಾನಗಳ ಕ್ರೌರ್ಯವಿರುವಂತೆ ಪ್ರಭುತ್ವದ ಮೌನ ಸಮ್ಮತಿಯ ಕಾರಣವೂ ಅಡಗಿದೆಯೆಂಬುದನ್ನು ನಾವು ಮರೆಯಬಾರದು. ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಬಹಳ ಸುಲಭವಾಗಿ ತುತ್ತಾಗಿ ಸಿಕ್ಕಿ ಬೀಳುವವರು ದಲಿತ ಮಹಿಳೆಯರು. ಅತ್ಯಾಚಾರಗಳಂತಹ ಕ್ರೂರ ಕೃತ್ಯಗಳು ಬಹಳಷ್ಟು ಸಾರಿ ಬೆಳಕಿಗೆ ಬಾರದಂತೆ ತಡೆಯಲು ಮೇಲ್ಜಾತಿಗಳ ರಾಜಕೀಯ ಶಕ್ತಿಗಳು ತಾವು ಬೆಂಬಲಿಸುವ ಪ್ರಭುತ್ವದ ನೆರವನ್ನು ಪಡೆಯುವುದು ಮಾಮೂಲಿಯಾಗಿದೆ. ಯಾವುದೇ ಪಕ್ಷದ ಯಾವುದೇ ಸರಕಾರಗಳಿದ್ದರು ಪ್ರಭುತ್ವದ ಮೇಲಿನ ತಮ್ಮ ಪರೋಕ್ಷ ಹಿಡಿತವನ್ನು ಸಡಿಲಿಸದ ಮೇಲ್ಜಾತಿಗಳು ದಲಿತರ ದಮನಕಾರ್ಯವನ್ನು ಯಾವುದೆ ಎಗ್ಗಿಲ್ಲದೆ ಮುಂದುವರೆಸುತ್ತ ಬರುತ್ತಿವೆ.

ಈ ಹಿನ್ನೆಲೆಯಲ್ಲಿಯೇ ನಾವು ದಲಿತರ ಮೇಲಿನ ಹಲ್ಲೆಗಳನ್ನು ನೋಡಬೇಕಾಗುತ್ತದೆ. ಬಲಿಷ್ಠ ಶಾಸಕಾಂಗ ಮತ್ತು ಕಾರ್ಯಾಂಗಗಳ ಜಂಟಿ ಕಾರ್ಯಾಚರಣೆಗಳ ಮೂಲಕ ದಲಿತರನ್ನು ಹತ್ತಿಕ್ಕುವ ಕಾರ್ಯ ಮುಂದುವರೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ.

ಅದರಲ್ಲೂ 2014ರ ನಂತರವಂತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2014ರಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಶೇಕಡಾ 19 ರಷ್ಟು ಹೆಚ್ಚಾಗಿದ್ದು, 2013ರಲ್ಲಿ ದಲಿತರ ಕೊಲೆಗಳು 676 ಆಗಿದ್ದರೆ, 2014ರಲ್ಲಿ ಅದು 744 ಕ್ಕೆ ಏರಿವೆ. ಉತ್ತರ ಇಂಡಿಯಾದ ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದ್ದರೆ, ದಕ್ಷಿಣದಲ್ಲಿ ತಮಿಳುನಾಡು ಇಂತಹ ದೌರ್ಜನ್ಯಗಳಗೆ ಹೆಸರಾಗಿದೆ.

ವಿಷಾದವೆಂದರೆ, ಹಿಂದೂಗಳೆಲ್ಲ ಒಂದು ಎಂಬ ಹುಸಿಘೋಷಣೆಯೊಂದಿಗೆ, ಹಿಂದೂ ಮತಗಳ ದೃವೀಕರಣದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದು ಆಡಳಿತ ನಡೆಸುವಾಗ ಹೆಚ್ಚಾಗುತ್ತಿರುವ ಇಂತಹ ದಲಿತ ದೌರ್ಜನ್ಯ ಪ್ರಕರಣಗಳು ಹಿಂದುತ್ವದ ಪೊಳ್ಳುತನವನ್ನು ಬಯಲು ಮಾಡುತ್ತಿವೆ, ಈಗಾಗಲೇ ಬಾಹ್ಯದ ಭಯೋತ್ಪಾದಕ ಶಕ್ತಿಗಳು ನಮ್ಮ ರಾಷ್ಟ್ರವನ್ನು ವಿಭಜಿಸಲು ಯತ್ನಿಸುತ್ತಿವೆ. ಜಾತ್ಯಾತೀತವಾಗಿ ಬದುಕುತ್ತಿರುವ ಬಹುಸಂಸ್ಕೃತಿಯ ಈ ರಾಷ್ಟ್ರವನ್ನು ಅದರ ಉದಾತ್ತತೆಯನ್ನು ಸರ್ವನಾಶಗೊಳಿಸಲು ಹೊರಗಿನ ಶಕ್ತಿಗಳು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಜಾತಿಯ ಹೆಸರಲ್ಲಿ ನಡೆಯುವ ಇಂತಹ ದೌರ್ಜನ್ಯಗಳು ನಮ್ಮ ಸಮಾಜವನ್ನು ವಿಚ್ಛಿದ್ರಗೊಳಿಸುತ್ತ ಹೋಗುತ್ತವೆ. ದೇಶದ ಜಾತಿಗಳ ನಡುವಿನ ಸೌಹಾರ್ದತೆ, ಕೋಮುಸೌಹಾರ್ದತೆಗೆ ಭಂಗ ತರುವ ಇಂತಹ ಘಟನೆಗಳ ಬಗ್ಗೆ ಗಟ್ಟಿಯಾಗಿ ಮಾತಾಡಿ ಅವನ್ನು ಖಂಡಿಸುವುದು ಈ ರಾಷ್ಟ್ರದ ಜನತೆಯ ಕರ್ತವ್ಯವಾಗಿದೆ. ಅದರಲ್ಲೂ ಒಂದು ದೇಶದ ಪ್ರದಾನಿಯಾಗಿ ಮೋದಿಯವರು ಇಂತಹ ಪ್ರಕರಣಗಳನ್ನು ಖಡಾಖಂಡಿತವಾಗಿ ಖಂಡಿಸಿ ದಲಿತರಲ್ಲಿ ಆತ್ಮವಿಶ್ವಾಸವನ್ನು ತುಂಬ ಬೇಕಿರುವುದು ಅಗತ್ಯವಾಗಿದೆ. ಆದರೆ ನಮ್ಮ ಪ್ರದಾನಿಯವರದು ಮಾತ್ರ ದೀರ್ಘ ಮೌನ.

ಹಿಂದೆ ಅವರು ಗುಜರಾತಿನ ಪ್ರದಾನಿಯಾಗಿದ್ದಾಗ, ಅಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಮಾತಾಡುತ್ತ ಅಂದಿನ ಪ್ರದಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ರಾಜಧರ್ಮ ಪಾಲಿಸುವ ಸಲಹೆ ನೀಡಿದ್ದರು. ಈಗ ಅದೇ ಕುರ್ಚಿಯಲ್ಲಿ ಕುಳಿತಿರುವ ಮೋದಿಯವರು ತಮ್ಮ ಮೌನವನ್ನು ತೊರೆದು ರಾಜಧರ್ಮವನ್ನು ಪಾಲಿಸಬೇಕಾಗಿದೆ. ಇಲ್ಲದೇ ಹೋದರೆ ಮೋದಿಯವರ ಮೌನಕ್ಕೆ ಅಪಾರ್ಥಗಳು ಸೃಷ್ಠಿಯಾಗುವ ಸಾದ್ಯತೆಗಳಿವೆ.

ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತು ಅವರಿಗೂ ತಿಳಿದಿರಬಹುದೆಂದು ಬಾವಿಸುತ್ತೇನೆ!

Jul 26, 2016

ಮುಗಿದ ಮಧುಚಂದ್ರದ ಅವಧಿ: ಬಾಜಪಕ್ಕೆ ಸಿದ್ದು ಬೈ! ಸರತಿಯಲ್ಲಿ ಕೀರ್ತಿ ಆಜಾದ್, ಶತ್ರುಘ್ನಸಿನ್ಹಾ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
26/07/2016
ತಾನು ಬಹಳ ಶಿಸ್ತಿನ ಪಕ್ಷವೆಂದೂ, ತನ್ನೆಲ್ಲ ಸದಸ್ಯರುಗಳೂ ಪಕ್ಷದ ಸಿದ್ದಾಂತಗಳಿಗೆ ಬದ್ದವಾಗಿದ್ದು ಪಕ್ಷಾಂತರದಂತಹ ಕೆಲಸಗಳನ್ನು ಮಾಡಲಾರರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬಾಜಪದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಇಂಡಿಯಾದ ಮತ್ತೆಲ್ಲ ಪಕ್ಷಗಳಂತೆ ಅದರ ಸದಸ್ಯರುಗಳು ಸಹ ಅಧಿಕಾರದ ಹಸಿವು ನೀಗಿಸಿಕೊಳ್ಳಲೆಂದೇ ರಾಜಕಾರಣ ಮಾಡುತ್ತಿರುವವರು ಹಾಗು ಅಂತಹ ಅವಕಾಶ ಸಿಗದೇ ಹೋದಾಗ ಸಿದ್ದಾಂತಗಳ ಮುಖವಾಡ ಕಿತ್ತೆಸೆದು ಅನ್ಯ ಪಕ್ಷಗಳಿಗೆ ಪಲಾಯನ ಮಾಡುವವರೆಂದು ಅದರೊಳಗೆ ನಡೆಯುತ್ತಿರುವ ವಿದ್ಯಾಮಾನಗಳು ತೋರಿಸಿಕೊಡುತ್ತಿವೆ. ಅದರಲ್ಲಿ ಪಂಜಾಬಿನ ಹಿರಿಯ ಸಂಸದ ಶ್ರೀ ನವಜೋತ್ ಸಿಂಗ್ ಮೊನ್ನೆ ಬಾಜಪದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟದ್ದೂ ಒಂದು. ಇತ್ತೀಚೆಗಷ್ಟೇ ಬಾಜಪ ರಾಜ್ಯಸಭೆಗೆ ಸಿದ್ದೂರವರನ್ನು ಆರಿಸಿ ಕಳಿಸಿದಾಗ ಅಂತೂ ಸಿದ್ದೂರವರಿಗು ಬಾಜಪದಲ್ಲಿ ಮನ್ನಣೆ ದೊರೆತಂತಾಯಿತೆಂದು ಎಲ್ಲರೂ ನಂಬಿದ್ದರು. ಹಾಗು ಬಾಜಪದ ಹೈಕಮ್ಯಾಂಡ್ ಜೊತೆಗಿನ ಅವರ ಭಿನ್ನಾಭಿಪ್ರಾಯಗಳು ಮುಕ್ತಾಯವಾದವೆಂದೇ ಜನ ಬಾವಿಸಿದ್ದರು. ಯಾಕೆಂದರೆ 2004ರಿಂದ 2014ರವರೆಗೆ ಪಂಜಾಬಿನ ಅಮೃತಸರದಿಂದ ಸತತವಾಗಿ ಸಂಸದರಾಗಿ ಆಯ್ಕೆಯಾಗಿ ಬರುತ್ತಿದ್ದ ನವಜೋತ್ ಸಿಂಗ್ ಅವರನ್ನು ಬಾಜಪ ಮನಸ್ಸು ಮಾಡಿದ್ದರೆ ಪಂಜಾಬಿನ ರಾಜ್ಯ ರಾಜಕೀಯದಲ್ಲಿ ತನ್ನ ಮುಖ್ಯ ದಂಡನಾಯಕನನ್ನಾಗಿ ಬಿಂಬಿಸಿ ಬೆಳೆಸಿ ಅಕಾಲಿದಳದ ನೆರಳಿಂದ ಹೊರಬಂದು ಸ್ವತಂತ್ರವಾಗಿ ರಾಜಕಾರಣ ಮಾಡಬಹುದಿತ್ತು. ಆದರೆ ಸಿದ್ದುವನ್ನು ಕಂಡರಾಗದ ಅಕಾಲಿದಳದ ಒತ್ತಡಕ್ಕೆ ಮಣಿದ ಬಾಜಪ ಸಿದ್ದುರವರಿಗೆ ರಾಜ್ಯ ರಾಜಕೀಯದಲ್ಲಿ ಪ್ರಮುಖಪಾತ್ರ ವಹಿಸುವ ಯಾವ ಅವಕಾಶವನ್ನೂ ನೀಡಲೇ ಇಲ್ಲ. ಈ ಬಗ್ಗೆ ಸಿದ್ದೂರವರಿಗೆ ಆಂತರೀಕವಾಗಿ ತೀವ್ರ ಅಸಮಾದಾನವಿದ್ದುದು ಸುಳ್ಳಲ್ಲ. 

ಗಾಯದ ಮೇಲೆ ಬರೆ ಎಳೆದಂತೆ 2014ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸಿದ್ದೂಗೆ ಪಕ್ಷದ ಟಿಕೇಟ್ ನೀಡದೆ ಅರುಣ್ ಜೈಟ್ಲಿಯವರಿಗೆ ಟಿಕೇಟ್ ನೀಡಲಾಯಿತು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎದುರು ಸೋತ ಜೇಟ್ಲಿಯನ್ನು ತದನಂತರ ಸಂಪುಟದ ಅತ್ಯಂತ ಪ್ರಮುಖವಾದ ಹಣಕಾಸು ಖಾತೆಗೆ ಸಚಿವರನ್ನಾಗಿ ಮಾಡಲಾಯಿತು. ಪಕ್ಷದ ಇಂತಹ ನಡೆಗಳಿಂದ ತೀವ್ರ ಅಸಮಾದಾನಗೊಂಡಿದ್ದ ಸಿದ್ದೂರವರನ್ನು ಸಮಾದಾನ ಮಾಡಲು ಇತ್ತೀಚೆಗೆ ಅವರನ್ನು ರಾಜ್ಯಸಭೆಗೆ ಕಳಿಸಲಾಯಿತು. ಆದರೆ ಪಂಜಾಬಿನ ರಾಜ್ಯ ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಸಿದ್ದೂರವರಿಗೆ ಇದರಿಂದ ತೃಪ್ತಿಯೇನೂ ಆಗಲಿಲ್ಲ. ಯಾಕೆಂದರೆ ಅವರ ಆಪ್ತರು ಹೇಳುವಂತೆ, ಮೊದಲಿನಿಂದಲು ಸಿದ್ದೂರವರಿಗೆ ರಾಜ್ಯ ರಾಜಕಾರಣದಲ್ಲಿಯೇ ಆಸಕ್ತಿಯಿದ್ದು ಪಂಜಾಬಿನ ಮುಖ್ಯಮಂತ್ರಿಯಾಗುವ ಹಂಬಲ ಹೊಂದಿದ್ದರು. ಹಾಗಾಗಿಯೇ ಅವರು ಅರುಣ್ ಜೇಟ್ಲಿಯ ಪರವಾಗಿ ಚುನಾವಣಾ ಪ್ರಚಾರವನ್ನೂ ಮಾಡಲಿಲ್ಲ. ಜೊತೆಗೆ ಒಂದಷ್ಟು ಕಾಲ ಸಕ್ರಿಯ ರಾಜಕಾರಣದಿಂದ ದೂರವಿದ್ದು ಎಂದಿನಂತೆ ಕ್ರಿಕೇಟ್ ವೀಕ್ಷಕ ವಿವರಣೆಯಲ್ಲಿ ಮತ್ತು ಕಪಿಲ್ ಶರ್ಮಾರವರ ಜನಪ್ರಿಯ ಕಾಮೆಡಿ ಶೋನಲ್ಲಿ ನಿರತರಾಗಿ ಬಿಟ್ಟರು.

ಆದರೆ ಮತ್ತೆ ಸಿದ್ದೂರವರನ್ನು ರಾಜ್ಯಸಭೆಗೆ ನೇಮಕ ಮಾಡಿದಾಗ ಎಲ್ಲವೂ ಸರಿಯಾಯಿತೆಂದು ಜನತೆ ಬಾವಿಸಿದ್ದರು. ಅದಕ್ಕೆ ತಕ್ಕ ಹಾಗೆ ಪಂಜಾಬಿನ ರಾಜಕಾರಣದ ಮಟ್ಟಿಗೆ ಸಿದ್ದೂರವರ ಅಗತ್ಯವನ್ನು ಮನಗಂಡಿತೇನೋ ಎಂಬಂತೆ ಅವರನ್ನು ರಾಜ್ಯ ಬಾಜಪದ ಕೋರ್ ಕಮಿಟಿಗೆ ಸೇರಿಸಲಾಯಿತು. ಇದು ಸಿದ್ದುರವರು ರಾಜ್ಯ ರಾಜಕೀಯಕ್ಕೆ ಎಷ್ಟು ಅನಿವಾರ್ಯವೆಂಬುದನ್ನು ಬಾಜಪ ಅರ್ಥ ಮಾಡಿಕೊಂಡಿದೆಯೆಂದು ಜನ ಬಾವಿಸಿದ್ದರು. ಸ್ವತ: ಸಿದ್ದು ಸಹ ಹಾಗೇ ಅಂದುಕೊಂಡಿದ್ದರು. ಆದರೆ ಮುಂದಿನ ವರ್ಷ ನಡೆಯಲಿರುವ ವಿದಾನಸಭೆಯ ಚುನಾವಣೆಗಳಿಗೆ ಪಕ್ಷದೊಳಗೆ ನಡೆಯುತ್ತಿರುವ ಸಿದ್ದತೆಗಳಲ್ಲಿ ಸಿದ್ದೂರವರನ್ನು ಸೇರಿಸಿಕೊಳ್ಳುವ ಯಾವ ಕ್ರಮವನ್ನು ಬಾಜಪ ಮಾಡಲಿಲ್ಲ. ಹೀಗಾಗಿ ಸಿದ್ದೂರವರು ಅನಿವಾರ್ಯವಾಗಿ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಇದನ್ನೇ ಕಾದು ಕೂತಂತೆ ಕಂಡ ಬಾಜಪದ ನಾಯಕರುಗಳು ಸಿದ್ದೂರವರನ್ನು ಸಂಪರ್ಕಿಸುವ ಯಾವ ಪ್ರಯತ್ನವನ್ನೂ ಮಾಡದೆ ತಕ್ಷಣವೇ ಅವರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸುವಂತೆ ನೋಡಿಕೊಂಡರು.

ತನ್ನ ರಾಜೀನಾಮೆಯ ಬಗ್ಗೆ ವಿವರಣೆ ನೀಡಿದ ಸಿದ್ದು ಪಂಜಾಬಿನ ಅಭಿವೃದ್ದಿಯ ಕಿಟಕಿಗಳನ್ನು ಮುಚ್ಚಿದವರ ಜೊತೆಗೆ ತಾವು ಇರಲು ಸಾದ್ಯವಿಲ್ಲ. ಮನುಷ್ಯ ಸರಿ ತಪ್ಪುಗಳ ನಡುವೆ ಆಯ್ಕೆ ಬಂದಾಗ ಸರಿಯನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು, ತಟಸ್ಥವಾಗಿರುವುದು ಸರಿಯಲ್ಲ. ನಾನು ಸ್ವಪ್ರತಿಷ್ಠೆಗಿಂತ ಪಂಜಾಬಿನ ಕಲ್ಯಾಣವೇ ಮುಖ್ಯವೆಂದು ಬಾವಿಸಿದವನು ಎಂದಿದ್ದಾರೆ. ಆದರೆ ಬಾಜಪದ ನಾಯಕರುಗಳು ಮಾತ್ರ ಸಿದ್ದುವಿನ ಈ ನಡೆ ಅವಕಾಶವಾದಿತನದಿಂದ ಕೂಡಿದ್ದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸಿದ್ದು ಆಮ್‍ಆದ್ಮಿ ಪಕ್ಷವನ್ನು ಸೇರುತ್ತಾರೆಂಬ ವದಂತಿಗಳಿಂದ ಸಂತಸಗೊಂಡಿರುವ ಆಪ್ ಮಾತ್ರ ರಾಜ್ಯದ ಹಿತದೃಷ್ಠಿಗಾಗಿ ತನ್ನÀ ಸಂಸತ್ ಸ್ಥಾನವನ್ನು ತೊರೆದಿರುವ ಸಿದ್ದುರವರ ನಡೆ ನಿಜಕ್ಕೂ ಹೊಗಳಿಕೆಗೆ ಅರ್ಹವಾದುದೆಂದು ಹೇಳಿದೆ. ಆದರೆ ಬಾಜಪ ಮತ್ತು ಅಕಾಲಿದಳದ ಮೈತ್ರಿಕೂಟ ಮಾತ್ರ ಸಿದ್ದುರವರ ಈ ನಡೆಯನ್ನು ವಿಶ್ವಾಶಘಾತುಕತನವೆಂದು ಬಣ್ಣಿಸಿದ್ದಾರೆ.

ಒಟ್ಟಿನಲ್ಲಿ ಸಿದ್ದುರವರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಪಂಜಾಬಿನಲ್ಲಿ ಬಾಜಪದ ಶಾಸಕಿಯಾಗಿರುವ ಅವರ ಪತ್ನಿ ಶ್ರೀಮತಿ ನವಜೋತ್ ಕೌರ್ ಅವರು ಕೂಡ ಬಾಜಪವನ್ನು ತೊರೆಯುತ್ತಾರೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕೌರ್ ಅವರು ಹಿಂದಿನಿಂದಲೂ ತಮ್ಮದೇ ಮೈತ್ರಿ ಸರಕಾರದ ಹಲವು ತಪ್ಪು ನಡೆಗಳ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿ ಪಕ್ಷದ ಕೆಂಗಣ್ಣಿಗೆ ತುತ್ತಾದವರಾಗಿದ್ದಾರೆ. ಸಿದ್ದು ರಾಜಿನಾಮೆಯ ನಂತರ ಆಕೆಯೂ ಪಕ್ಷವನ್ನು ತೊರೆಯಬಹುದೆಂಬ ನಿರೀಕ್ಷೆ ಸದ್ಯಕ್ಕಂತು ಹುಸಿಯಾಗಿದೆ. ಬಾಜಪದ ನಾಯಕರುಗಳು ಕೌರ್ ಜೊತೆ ಕೆಲವು ಸುತ್ತುಗಳ ಮಾತುಕತೆ ನಡೆಸಿದ ನಂತರ ತಾನಿನ್ನು ಪಕ್ಷ ತೊರೆದಿಲ್ಲ, ಬಾಜಪ ಅಕಾಲಿದಳದೊಂದಿಗಿನ ಮೈತ್ರಿಗಾಗಿ ಸಿದ್ದುವನ್ನು ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿದು ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದೆಂದು ಸೂಚ್ಯವಾಗಿ ಹೇಳಿದ್ದಾರೆ.ಸಿದ್ದು ಯಾವತ್ತಿಗೂ ತಮ್ಮ ನಿರ್ದಾರವನ್ನು ಬದಲಾಯಿಸುವುದಿಲ್ಲವೆಂದೂ ಅಭಿಪ್ರಾಯ ನೀಡಿದ್ದಾರೆ.

ಇಲ್ಲಿ ನಿಜವಾದ ಲಾಭವಾಗುತ್ತಿರುವುದು ಆಪ್ ಪಕ್ಷಕ್ಕೆ. ಈ ನಿಟ್ಟಿನಲ್ಲಿ ಅರವಿಂದ್ ಕೇಜ್ರೀವಾಲ್ ಸಿದ್ದುರವರೊಂದಿಗೆ ಹಲವು ಸುತ್ತುಗಳ ರಹಸ್ಯ ಮಾತುಕತೆಯನ್ನು ನಡೆಸಿದ್ದಾರೆಂಬ ವದಂತಿ ಹಬ್ಬಿದ್ದು ಮುಂದಿನ ವಿದಾನಸಭಾ ಚುನಾವಣೆ ಎದುರಿಸಲು ಕ್ಲೀನ್ ಇಮೇಜ್ ಇರುವ ಮತ್ತು ಗ್ರಾಮೀಣ ಪಂಜಾಬಿನಲ್ಲಿ ಜನಪ್ರಿಯತೆ ಪಡೆದಿರುವ ಸಿದ್ದುರವರಿಂದ ಆಪ್ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆಯೆಂದು ಹೇಳಲಾಗುತ್ತಿದೆ.

ಇದರಿಂದ ಈಗಾಗಲೇ ಆಡಳಿತ ವಿರೋದಿ ಅಲೆಯ ನಡುವೆಯೇ ಚುನಾವಣೆ ಎದುರಿಸಬೇಕಾಗಿ ಬಂದಿರುವ ಬಾಜಪ ಮತ್ತು ಅಕಾಲಿದಳದ ಮೈತ್ರಿಕೂಟಕ್ಕೆ ನವಜೋತ್ ಸಿಂಗ್ ಸಿದ್ದುರವರ ರಾಜಿನಾಮೆಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿರುವುದಂತು ಸತ್ಯ.

======

ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಇನ್ನೊಂದು ಸ್ಪೋಟಕ ಸುದ್ದಿಯನ್ನು ಬಹಿರಂಗ ಗೊಳಿಸಿದ್ದಾರೆ: ಈಗ ಬಾಜಪದಿಂದ ಅಮಾನತಾಗಿರುವ ಮಾಜಿ ಕ್ರಿಕೇಟಿಗ  ಕೀರ್ತಿ ಆಜಾದ್ ಮತ್ತು ಶತ್ರುಘ್ನ ಸಿನ್ಹಾ ರವರು ಸಹ ಆದಷ್ಟು ಬೇಗ ಬಾಜಪ ತೊರೆದು ಆಪ್ ಸೇರಲಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಮುಖ್ಯವಾಗಿರುವುದು ಕೀರ್ತಿ ಆಜಾದ್ ಅವರ ಮುಂದಿನ ನಡೆ. ಯಾಕೆಂದರೆ ದೆಹಲಿ ಕ್ರಿಕೇಟ್ ಸಂಸ್ಥೆಯ ಆಡಳಿತಕ್ಕೆ ಸಂಬಂದಿಸಿದಂತೆ ಕೀರ್ತಿಯವರು ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರ ವಿರುದ್ದ ಹಣ ದುರುಪಯೋಗದ ಆರಂಭ ಮಾಡಿದ್ದರು. ಈ ಕಾರಣಕ್ಕಾಗಿ ಕೀರ್ತಿಯವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಇದೀಗ ಅವರ ಪತ್ನಿ ಶ್ರೀಮತಿ ಪೂನಂ ಆಜಾದ್ ಸಹ ಪಕ್ಷ ತೊರೆದು ಆಪ್ ಸೇರಲಿದ್ದಾರೆಂಬುದು ಸುದ್ದಿಯಾಗಿದೆ. ಪೂನಂ ಸಹ ಬಾಜಪ ದೆಹಲಿ ಘಟಕದ ಮಾಜಿ ಉಪಾದ್ಯಕ್ಷೆಯಾಗಿದ್ದು ಮೂರು ಬಾರಿ ಬಾಜಪದ ರಾಷ್ಟ್ರೀಯ ಕಾರ್ಯಕಾರಿಯ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದು ಇದೀಗ ದೆಹಲಿಯ ಬಾಜಪದ ವಕ್ತಾರರಾಗಿ ಕೆಲಸ ಮಾಡುತ್ತಿದ್ದು ದೆಹಲಿಯ ಬಾಜಪದ ಮಹಿಳಾ ಕಾರ್ಯಕರ್ತರಲ್ಲಿ ಜನಪ್ರಿಯರಾಗಿದ್ದಾರೆ. ಕೀರ್ತಿ ಆಜಾದರ ಅಮಾನತಿನ ನಂತರ ಪೂನಂ ಅವರನ್ನು ಸಹ ಪಕ್ಷ ಕಡೆಗಣಿಸುತ್ತಿದೆಯೆಂಬ ಆರೋಪ ಬಾಜಪ ನಾಯಕರ ಮೇಲಿದ್ದು ಇದರಿಂದ ಬೇಸರಗೊಂಡಿರುವ ಪೂನಂ ಬಾಜಪ ತೊರೆದು ಆಪ್ ಸೇರುವ ಸಾದ್ಯತೆ ಹೆಚ್ಚಿದೆ. 

ಇನ್ನು ಮಾಜಿ ಸಿನಿಮಾ ನಟರೂ ಬಾಜಪದ ಬಿಹಾರದ ಮುಖ್ಯ ನಾಯಕರೂ ಆದ ಶತ್ರುಘ್ನಸಿನ್ಹಾರವರು ಸಹ ಬಾಜಪದ ನಾಯಕರುಗಳಿಂದ ನಿಲ್ರ್ಯಕ್ಷಕ್ಕೆ ಗುರಿಯಾಗಿದ್ದಾರೆ. ಕಳೆದ ಬಾರಿ ನಡೆದ ಬಿಹಾರದ ವಿದಾನಸಭಾ ಚುನಾವಣೆಗಳಲ್ಲಿ ಸಿನ್ಹಾರವರನ್ನು ಸರಿಯಾಗಿ ಬಳಸಿಕೊಳ್ಳದೆ ಪ್ರಚಾರದಿಂದ ದೂರವಿಟ್ಟು ಅದಕ್ಕೆ ಪ್ರತಿಯಾಗಿ ಸೋಲನ್ನಪ್ಪಿತು. ನಂತರವೂ ಸಿನ್ಹಾರವರಿಗೆ ಸೂಕ್ತವಾದ ಸ್ಥಾನಮಾನಗಳನ್ನು ಬಾಜಪ ನೀಡಿಲ್ಲವೆಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಕ್ಷದ ಚಟುವಟಿಕೆಗಳಿಂದ ದೂರವಿರುವ ಅವರು ಸಹ ಕೆಲವೇ ದಿನಗಳಲ್ಲಿ ಆಪ್ ಸೇರಲಿದ್ದಾರೆಂಬ ಮಾತು ಕೇಳಿ ಬರುತ್ತಿದ್ದು, ಬಾಜಪದ ಮಟ್ಟಿಗಿದು ಸಿಹಿ ಸುದ್ದಿಯೇನಲ್ಲ.

ಒಟ್ಟಿನಲ್ಲಿ 2014 ರಲ್ಲಿ ಅಭೂತಪೂರ್ವ ಜಯಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಾಜಪದ ಮಧುಚಂದ್ರದ ದಿನಗಳು ಮುಗಿಯುತ್ತಿರುವಂತೆ ಕಾಣುತ್ತಿವೆ. ಆಡಳಿತ ಪಕ್ಷವೊಂದು ಎದುರಿಸಬೇಕಾದ ಎಲ್ಲ ರೀತಿಯ ಆಂತರೀಕ ಬಿರುಕುಗಳೂ ಆಪಕ್ಷದಲ್ಲಿ ಕಾಣತೊಡಗಿವೆ. ಆದರೆ ಇಂತಹ ಬಿರುಕುಗಳು ಮುಂದಿನ ವರ್ಷ ನಡೆಯಲಿರುವ ಹಲವು ರಾಜ್ಯವಿದಾನಸಭಾ ಚುನಾವಣೆಗಳ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮಗಳು ಬೀರಬಹುದೆನ್ನುವುದನ್ನು ನಾವು ಕಾದು ನೋಡ ಬೇಕಾಗಿದೆ,

Jul 25, 2016

ಮಧುಸೂದನ್ ನಾಯರ್ ಕವಿತೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
25/07/2016
ಯಾರೂ ಅಷ್ಟು ಸುಲಭವಾಗಿ ಅಪರಿಚಿತರ
ಸಾಯಿಸುವುದಿಲ್ಲ,ನಿಮ್ಮ ಹಾಗೆ!
ನೀವು ನಂಬಿದ ದೇವರೂ ನಿಮ್ಮನ್ನು
ಕ್ಷಮಿಸಲಾರ ನೆನಪಿಡಿ.
ಅಮಾಯಕರ ಗುಂಡಿಗೆಗೆ ಹೊಡೆದ ಪ್ರತಿ ಗುಂಡೂ
ತಾಯಿಯೊಬ್ಬಳ ಎದೆಗೇನೇ ತಗುಲುವುದು
ಅಸಂಖ್ಯಾತ ಅನಾಥ ಹಸುಗೂಸುಗಳನ್ನು ಬೀದಿಯಲ್ಲಿ ಬಿಡುವುದು
ನಿಮಗೂ ಗೊತ್ತಿದೆ ಯಾವ ಧರ್ಮವೂ ಕೊಲ್ಲುವುದ ಅನುಮತಿಸುವುದಿಲ್ಲ
ಯಾವ ಗ್ರಂಥವೂ ರಕ್ತದ ಶಾಯಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ
ನೀವು ಕೊಂದ ಪ್ರತಿಯೊಬ್ಬನಿಗೂ
ಒಂದು ಗೂಡು
ಅದರೊಳಗಷ್ಟು ಅವನ ನಂಬಿದ ಜನರು
ಇದ್ದರು
ಸತ್ತವನೆದೆಯಲ್ಲಿ ಉಕ್ಕಿದ ನೆತ್ತರು
ತರುತ್ತದೆ ಬದುಕಿದವರ ಕಣ್ಣೊಳಗೆ ಕಣ್ಣೀರು
ಯಾವ ಹತ್ಯೆಯೂ ನಿಮ್ಮನ್ನು ಸ್ವರ್ಗದತ್ತ ಕರೆದೊಯ್ಯುವುದಿಲ್ಲ
ಯಾವ ಪ್ರಾರ್ಥನೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ
ನಡೆದ ಹತ್ಯೆಗಳಿಗೆ ಪ್ರತಿಯಾಗಿ ನಿಮ್ಮನ್ನು ಕೊಲ್ಲುವುದು ಕಷ್ಟವೇನಲ್ಲ
ವ್ಯತ್ಯಾಸವಿಷ್ಟೆ ಕೊಲ್ಲುವವನನ್ನೂ ಕ್ಷಮಿಸುವ ನನ್ನ ನೆಲದಲ್ಲಿ
ನಿಮ್ಮಂತವರ ರಕ್ತ ಚೆಲ್ಲುವುದು ಬೇಡ
ಹಾಗೆ ನೋಡಿದರೆ ನಿಮ್ಮನ್ನು ಮನುಷ್ಯರೆಂದೇ ನಾವು ತಿಳಿದಿಲ್ಲ

Jul 22, 2016

ಮೇಕಿಂಗ್ ಹಿಸ್ಟರಿ: ಉತ್ಪಾದನೆಯ ನಾಶ

ಸಾಕೇತ್ ರಾಜನ್
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/07/2016
ನಾವೀಗಾಗಲೇ ನೋಡಿರುವಂತೆ, ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಲಾಯಿತು. ಇಡೀ ನೀರಾವರಿ ವ್ಯವಸ್ಥೆ, ಕೃಷಿ ಉತ್ಪನ್ನವನ್ನು ಸಂಸ್ಕರಿಸಲಿದ್ದ ನವೀನ ಉಪಕರಣಗಳು, ಶಸ್ತ್ರಾಸ್ತ್ರ ತಯಾರಿಸಲಿದ್ದ ಆಧುನಿಕ ಯಂತ್ರಗಳು, ನೂರಾರು ನೇಕಾರಿಕೆಗಳು, ಹಲವಾರು ಕುಲುಮೆಗಳು, ಅಸಂಖ್ಯಾತ ಭಟ್ಟಿಗಳು, ಅಸಂಖ್ಯಾತ ಎಣ್ಣೆ ಉತ್ಪಾದನಾ ಕೇಂದ್ರಗಳು – ಶತಮಾನಗಳಿಂದ ಜನಸಮೂಹದ ಶ್ರಮದಿಂದ ರೂಪಿಸಲ್ಪಟ್ಟ ವ್ಯವಸ್ಥೆಯನ್ನು ವಸಾಹತು ಚಂಡಮಾರುತ ಸೀಳಿ ಹಾಕಿತು. ಕನ್ನಡ ದೇಶದ ಸಂಪತ್ತಾಗಿದ್ದ ಈ ಉತ್ಪಾದನಾ ಮೂಲಗಳು ನಾಶವಾದವು. ಕಾರ್ಮಿಕರ, ಕಸುಬುದಾರರ, ರೂಪುಗೊಳ್ಳುತ್ತಿದ್ದ ಬಂಡವಾಳಶಾಯಿಗಳು ಮತ್ತು ವರ್ತಕರ ಕಾರ್ಯಕ್ಷೇತ್ರ, ಕಾರ್ಖಾನೆ ಮತ್ತು ವ್ಯಾಪಾರಸ್ಥಳಗಳೆಲ್ಲವೂ ಲೂಟಿಯಾದವು, ಗುಜರಿ ಸೇರಿದವು. ರೈತರ ಭೂಮಿ ಬಡ್ಡಿವ್ಯಾಪಾರಸ್ಥರ ಕೈವಶವಾಯಿತು ಮತ್ತವರು ಹೊಸ ಮಾಲೀಕರಾದರು. ಈ ಕಾಲಘಟ್ಟದಲ್ಲಿ ಉತ್ಪಾದನೆ ಕುಸಿತ ಕಂಡಿತು. ಸಾಮಾಜಿಕ ಸಂಪತ್ತಿನ ಈ ವ್ಯಾಪಕ ನಾಶ, ವಸಾಹತುಶಾಹಿ ಉದ್ಘಾಟಿಸಿದ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. ಕಾರ್ಲ್ ಮಾರ್ಕ್ಸ್ ಈ ವಿನಾಶ ಉಂಟುಮಾಡುವ ಪರಿಣಾಮಗಳನ್ನು ಗ್ರಹಿಸಿದ್ದ. ತನ್ನ ಕಣ್ಣಮುಂದೆ ತೆರೆದುಕೊಂಡ ಅಪಾರ ಹಿಂಸೆಗೆ ಸಾಕ್ಷಿಯಾಗಿದ್ದ ಕಾರ್ಲ್ ಮಾರ್ಕ್ಸ್ ಬರೆಯುತತಾರೆ: “ಇಂಗ್ಲೆಂಡ್ ಭಾರತ ಸಮಾಜದ ಚೌಕಟ್ಟನ್ನು ಸಂಪೂರ್ಣವಾಗಿ ಮುರಿದು ಹಾಕಿದೆ. ಪುನರ್ ನಿರ್ಮಿಸುವ ಯಾವುದೇ ಚಿನ್ಹೆಯೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂಚಿನ ದಿನಗಳ ಸರ್ವನಾಶ ಮತ್ತು ಹೊಸತೇನೂ ಸೃಷ್ಟಿಯಾಗದ ಕಾರಣ, ತನ್ನಳೆಯ ಪರಂಪರೆಯನ್ನು ಕಳೆದುಕೊಂಡ ಮತ್ತು ತನ್ನಡೀ ಇತಿಹಾಸವನ್ನು ಕಳೆದುಕೊಂಡ ಬ್ರಿಟನ್ನಿನ ಆಳ್ವಿಕೆಯಲ್ಲಿರುವ ಹಿಂದೂಸ್ತಾನದಲ್ಲಿ ಪ್ರಸ್ತುತ ದುಃಖದ ಜೊತೆಗೆ ವ್ಯಾಕುಲತೆಯೂ ಸೇರಿಕೊಂಡಿದೆ. 

ಬ್ರಿಟೀಷರು ಹಿಂದೂಸ್ಥಾನದ ಮೇಲೆ ಹೇರಿರುವ ಈ ದುಃಖಾವಸ್ಥೆ, ವಿಭಿನ್ನವಾಗಿದೆ ಮತ್ತು ಇದುವರೆಗೆ ಹಿಂದೂಸ್ಥಾನ ಅನುಭವಿಸಿದ ಎಲ್ಲಾ ದುಃಖಕ್ಕಿಂತಲೂ ಭೀಕರವಾಗಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನವಿಲ್ಲ”. (248) 

ಈ ವಿನಾಶದ ಒಂದು ಪ್ರಮುಖ ಪರಿಣಾಮವೆಂದರೆ ಉತ್ಪಾದನೆಗೊಂಡ ವಸ್ತುಗಳ ಬೆಲೆ ಕುಸಿತ ಕಂಡಿದ್ದು, ಇದು ಉತ್ಪಾನೆಯಲ್ಲಿದ್ದ ಎಲ್ಲಾ ವರ್ಗದವರ ಮೇಲೂ ಗಂಭೀರ ಪರಿಣಾಮ ಉಂಟುಮಾಡಿತು ಮತ್ತು ಅಗತ್ಯವಸ್ತುಗಳ ಉತ್ಪಾದನೆಯ ಹೋರಾಟಕ್ಕೆ ತಡೆ ಹಾಕಿತು. ಶಾಮ ರಾವ್ ಈ ಬಿಕ್ಕಟ್ಟಿನ ಒಂದು ವಾಸ್ತವವನ್ನು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಕೆಲವು ಆರ್ಥಿಕ ವಿಚಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ್ದು ಕೂಡ ಈ ಸಮಯದಲ್ಲಿ ಮುಜುಗರ ಮೂಡಿಸಲು ಕಾರಣವಾಯಿತು. ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ದೊಡ್ಡ ಮಟ್ಟದ ಸೈನ್ಯವನ್ನು ನಿರ್ವಹಿಸಲಾಗುತ್ತಿತ್ತು, ಇವರ ಸಲುವಾಗಿ ಹೆಚ್ಚಿನ ಪ್ರಮಾಣದ ಧಾನ್ಯ ಕಾಳುಗಳು ಮತ್ತು ಇತರೆ ವಸ್ತುಗಳಿಗೆ ಬೇಡಿಕೆಯಿರುತ್ತಿತ್ತು. ದೇಶದಲ್ಲಲ್ಲಿ ಶಾಂತಿಯ ವಾತಾವರಣ ಇಲ್ಲದೇ ಹೋದರೂ ನಿರುದ್ಯೋಗದ ಕುರಿತು ದೂರುಗಳಿರಲಿಲ್ಲ, ಹಣ ಖರ್ಚಾಗುತ್ತಿತ್ತು, ಎಲ್ಲ ವರ್ಗದ ಜನರಿಗೆ ಅನುಕೂಲಕರವಾಗುತ್ತಿತ್ತು. ಪೂರ್ಣಯ್ಯರ ದಿನಗಳಲ್ಲೂ ಕೂಡ ದೊಡ್ಡ ಬ್ರಿಟೀಷ್ ಸೈನ್ಯವಿತ್ತು, ರಾಜ್ಯದ ವಿವಿಧ ಭಾಗಗಳಲ್ಲಿ ಚಿಕ್ಕ ಚಿಕ್ಕ ತುಕಡಿಗಳಾಗಿ ಕಾರ್ಯನಿರ್ವಹಿಸುತ್ತಿತ್ತು, ಇದೇ ರೀತಿ ಹಂಚಿಹೋಗಿದ್ದ ದೊಡ್ಡ ಸಂಖೈಯ ಮೈಸೂರು ಸೈನ್ಯದ ಕಾರಣದಿಂದ, ಕೃಷಿಕರು, ಉತ್ಪಾದಕರು, ಕಲಾವಿದರು, ವರ್ತಕರು ಮತ್ತು ಇತರೆ ವರ್ಗದವರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಿತ್ತು. ಆದರೆ 1810ರಷ್ಟರಲ್ಲಿ, ಬ್ರಿಟೀಷ್ ಸೈನ್ಯವಿದ್ದ ಪ್ರದೇಶಗಳ ಸಂಖೈ ಗಣನೀಯವಾಗಿ ಕಡಿಮೆಯಾಯಿತು ಮತ್ತು ಬ್ರಿಟೀಷ್ ಸೈನಿಕರ ಸಂಖೈಯೂ ಕಡಿಮೆಯಾಯಿತು. ತತ್ಪರಿಣಾಮವಾಗಿ, ಉತ್ಪನ್ನಗಳಿಗಿದ್ದ ಬೇಡಿಕೆಯೂ ಕಡಿಮೆಯಾಯಿತು, ವೆಚ್ಚವಾಗುವ ಹಣದಲ್ಲೂ ಕುಸಿತವಾಯಿತು. ಜೊತೆಜೊತೆಗೆ, ಉತ್ಪನ್ನಗಳಿಗಿದ್ದ ಬೇಡಿಕೆ ಕಡಿಮೆಯಾದಾಗ ಕೃಷಿಯಲ್ಲಿ ಹೆಚ್ಚಳವಾಯಿತು, ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಹೆಚ್ಚೆಚ್ಚು ಲಗ್ಗೆಯಿಟ್ಟಂತೆ ಅವುಗಳ ಬೆಲೆಯಲ್ಲೂ ಇಳಿತವಾಯಿತು. ವಾರ್ಷಿಕ ಸಬ್ಸಿಡಿಯನ್ನು ಮಾಸಿಕ ಕಂತುಗಳಲ್ಲಿ ಕಟ್ಟಬೇಕಿದ್ದದ್ದು ಕೂಡ ಈ ಬೆಲೆ ಕುಸಿತಕ್ಕೆ ಕಾರಣ…. 

ಮೈಸೂರು ಸರಕಾರ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರವೇ ನಿಯಮಿತವಾಗಿ ದುಡ್ಡು ಕಟ್ಟಲು ಯೋಗ್ಯವಾಗಿದೆಯಾ ಎಂದು ಗಮನಿಸುವುದು ಬ್ರಿಟೀಷ್ ರೆಸಿಡೆಂಟರಿಗಿದ್ದ ಆತಂಕವಾಗಿತ್ತು. ವ್ಯಾಪಾರದ ಇಳಿಮುಖದಿಂದಾಗಿ ಕಂದಾಯದ ಮೂಲವಾದ ಸೇಯರ್, ಅಬಕಾರಿ ಮತ್ತಿತರೆ ಆದಾಯ ಮೂಲಗಳಲ್ಲೂ ಕುಸಿತವಾಯಿತು ಮತ್ತು ಉಳಿದ ಏಕೈಕ ಮೂಲವೆಂದರೆ ಅದು ಭೂಮಿ….”(249) 

ಬೆಲೆ ಕುಸಿತದ ಕಾರಣದಿಂದಾಗಿ ಬಾಕಿಯಾದ ಮೊತ್ತವನ್ನು ತುಂಬುವ ಸಲುವಾಗಿ ಶರಾತ್ ವ್ಯವಸ್ಥೆ ಹೊರಹೊಮ್ಮಿತು ಎಂದು ಶಾಮ ರಾವ್ ಅಭಿಪ್ರಾಯ ಪಡುತ್ತಾರೆ. 

ಉತ್ಪಾದನೆಯ ಮೂಲಗಳಿಗಾದ ಹಾನಿ ಮತ್ತದರ ಜೊತೆಜೊತೆಗೆ ಕುಸಿದ ಬೆಲೆಗಳು ಉತ್ಪಾದನಾ ವರ್ಗವನ್ನು ಹೆಚ್ಚುಕಡಿಮೆ ಇಲ್ಲವಾಗಿಸಿಬಿಟ್ಟಿತ್ತು. ಸಾಲ ಮಾಡುವುದು, ವಸಾಹತು ಪೂರ್ವ ದಿನಗಳಲ್ಲೂ ಇದ್ದ ಸಂಗತಿಯೇ ಆಗಿತ್ತು; ಆದರೆ ಬಡತನ ಮತ್ತು ಉತ್ಪಾದನೆಯಿಂದ ದೂರ ಉಳಿಯುವಿಕೆಯ ಕಾರಣದಿಂದ ಈಗದ ಪೈಶಾಚಿಕ ರೂಪ ಪಡೆದುಕೊಂಡಿತ್ತು, ದಿವಾಳಿಯಾಗುವುದು ದ್ವಿಗುಣಗೊಂಡುಬಿಟ್ಟಿತ್ತು. ನಗರ ಮತ್ತು ಹಳ್ಳಿಯ ದೊಡ್ಡ ಜನಸಮೂಹ ಮೊದಲ ಬಾರಿಗೆ ಬಡ್ಡಿವ್ಯಾಪಾರಿಗಳ ಮತ್ತು ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರವಾಡಿ, ಸಿಂಧಿಯಾ ಮತ್ತು ಬನಿಯಾಗಳ ಕಾಲಿಗೆ ಸಿಕ್ಕ ಚೆಂಡಿನಂತಾದರು. ಅಮಿನಾ ಘೋಷ್ ಹೇಳುವಂತೆ “ಬ್ರಿಟೀಷರು ಹೇರಿದ ಹೊಸ ಪರಿಸ್ಥಿತಿಯಲ್ಲಿ…..ಬಡ್ಡಿವ್ಯಾಪಾರಿಗಳ ಬೆಳವಣಿಗೆ ಗಮನಾರ್ಹವಾಗಿತ್ತು”. (250) 

ಈ ಪರವಾಲಂಬಿ ಬಂಡವಾಳಶಾಹಿಗಳನ್ನು ಮೈಸೂರಿನ ಕಮಿಷನರ್ ಆಗುತ್ತಿದ್ದಂತೆ ಮಾರ್ಕ್ ಕಬ್ಬನ್ ಪ್ರೋತ್ಸಾಹ ನೀಡಿದರು, ಈ ಬೇಟೆಗಾರ ಸಮಾಜಕ್ಕೆ ರಾಜ್ಯವೇ ಬೆನ್ನೆಲುಬಾಗುವಂತೆ ನೋಡಿಕೊಂಡರು. ಫಣಿ ಮತ್ತಿತರರು ಕಬ್ಬನ್ ಪರಿಚಯಿಸಿದ ಈ ವಿಧಾನವನ್ನು ಮತ್ತು ತೆಗೆದುಕೊಂಡ ದುರಾಡಳಿತದ ಕ್ರಮಗಳನ್ನು ವಿವರಿಸಿದರು. 

“…..ಸಾಲ ಮಾಡುವುದು ಮತ್ತು ಸಾಲಗಾರರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಅಪಾರ ಬದಲಾವಣೆಗಳಾಯಿತು… 

ಸರಕಾರದ ಹೊಸ ಕಾನೂನು ಹೇಳುತ್ತದೆ: ‘ಪೇಶ್ಕಾರ್ ಬಂದ ಅರ್ಜಿಯ ಆಧಾರದ ಮೇಲೆ ಒಂದು ಪುಸ್ತಕದಲ್ಲಿ ಸಾಲ ವಸೂಲಾತಿಗಾಗಿ ಅರ್ಜಿ ಹಾಕಿದವನ ಹೆಸರು ಬರೆದುಕೊಂಡು, ಸಾಲಗಾರನ ಹೆಸರು, ಸಾಲದ ಮೊತ್ತ, ಯಾವಾಗ ಮತ್ತು ಯಾಕಾಗಿ ಸಾಲ ನೀಡಲಾಗಿತ್ತು ಎನ್ನುವುದನ್ನು ನಮೂದಿಸಿಕೊಂಡ ನಂತರ ವಿಚಾರಣೆಗೆ ಒಂದು ದಿನವನ್ನು ಗೊತ್ತು ಮಾಡಬೇಕು. ವಿಚಾರಣೆಯನ್ನು ದೂರು ಸ್ವೀಕರಿಸಿದ ಎಂಟನೇ ದಿನಕ್ಕೆ ನಿಗದಿಪಡಿಸಲಾಗುತ್ತಿತ್ತು ಮತ್ತು ತೀರ್ಪು ಹೇಳಿದ ನಂತರ ತೀರ್ಪು ಜಾರಿಗೆ ಬರಲು 35 ದಿನಗಳ ಕಾಲಾವಕಾಶವಿರುತ್ತಿತ್ತು’. ಸಾಲ ಮರುಪಾವತಿಸಲಾಗದವರನ್ನು ಜೈಲಿಗೆ ನೂಕುವ ಕಾನೂನನ್ನು ಪ್ರಥಮ ಬಾರಿಗೆ ಪರಿಚಯಿಸಲಾಯಿತು ಮತ್ತು ಮುಂದಿನ ಹೆಜ್ಜೆಯಂತೆ, ‘ಸಾಲಗಾರ ಒಂದಾದರೂ ಕಂತನ್ನು ಕಟ್ಟಲು ವಿಫಲನಾದರೆ, ಸಾಲ ನೀಡಿದವನ ಅರ್ಜಿಯ ಆಧಾರದ ಮೇಲೆ ಸಾಲಗಾರನ ಆಸ್ತಿಯನ್ನು ಜಫ್ತಿ ಮಾಡಿ ನ್ಯಾಯಾಲಯದ ಮೂಲಕ ಹರಾಜು ಹಾಕಲಾಗುವುದು’. ನಿರೀಕ್ಷೆಯಂತೆ ಇದಕ್ಕೆ ಹೆಚ್ಚಿನ ವಿರೋಧವಿತ್ತು…..ಪ್ರತಿಭಟನೆಯ ನಡುವೆಯೂ ಸಾಲ ಮಾಡಿದ್ದಕ್ಕಾಗಿ ಜೈಲಿಗೆ ಹಾಕುವ ವ್ಯವಸ್ಥೆಯನ್ನು ಬ್ರಿಟೀಷರು ಪರಿಚಯಿಸಿದರು”. (251) 

ಈ ರೀತಿಯಾಗಿ ಕರ್ನಾಟಕದ ನ್ಯಾಯ ಮತ್ತು ಕಾನೂನು ವ್ಯವಸ್ಥೆ ಜಾರಿಗೆ ಬಂತು. ಕಾನೂನಿನ ರಚನೆ ನಡೆದಿದ್ದು ತೀರ್ವವಾದ ಬಿಕ್ಕಟ್ಟಿನ ನಡುವೆ, ಪ್ರತಿಭಟನೆಯ ನಡುವೆ ಮತ್ತು ಬಡವರು, ಸಾಲಗಾರ ಸಮೂಹದ ಆಸಕ್ತಿಗಳಿಗೆ ವಿರುದ್ಧವಾಗಿ. ರಕ್ತ ಹೀರುವ ಜೊತೆಗಾರರಿಗೆ ಅನುಕೂಲಕರವಾಗುವಂತಹ ವ್ಯವಸ್ಥೆಯನ್ನು ವಸಾಹತುಶಾಹಿ ಸ್ಥಾಪಿಸಿತು. 

ಕಾನೂನು ಭವನದೊಂದಿಗೆ ಗುರಿಯೂ ಬಂತು. ಕರಿ ಕೋಟು ಧರಿಸಿ ನ್ಯಾಯ ನೀಡಲು ಕುಳಿತ ವ್ಯಕ್ತಿ, ಜನಸಮೂಹದ ದೃಷ್ಟಿಯಿಂದ ತಮ್ಮನ್ನು ಸೆರೆಮನೆಗೆ ದೂಡುವ ಜೈಲರ್ ಮಾತ್ರ.

ಮುಂದಿನ ವಾರ
ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

Jul 17, 2016

ಉತ್ತರ ಪ್ರದೇಶ: ಬ್ರಾಹ್ಮಣ ಸಮುದಾಯದ ಓಲೈಕೆಯಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ಜಾತಿ ರಾಜಕಾರಣದ ಪರಾಕಾಷ್ಠೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/07/2016
ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗಳಿಗೆ ಪೂರ್ವಬಾವಿಯಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕಿಯು, ಕೇಂದ್ರದ ಮಾಜಿ ಸಚಿವೆಯೂ, ದೆಹಲಿ ರಾಜ್ಯದ ಮೂರು ಅವಧಿಯ ಮಾಜಿ ಮುಖ್ಯಮಂತ್ರಿಯೂ ಆದ ಶ್ರೀಮತಿ ಶೀಲಾದೀಕ್ಷಿತ್ ಅವರನ್ನು ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುವುದರ ಮೂಲಕ ಅದರ ಆಂತರಿಕ ತೊಳಲಾಟಕ್ಕೊಂದು ಅಂತ್ಯ ಹಾಡಿದೆ. ಇದು ಚುನಾವಣಾ ತಂತ್ರಗಾರಿಕೆಯ ನಿಪುಣನೆಂದು ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಅವರ ಸಲಹೆಯೆಂದು ಹೇಳಲಾಗುತ್ತಿದೆ. ದೆಹಲಿಯ ಮುಖ್ಯಮಂತ್ರಿಯಾಗಿ ದೀಕ್ಷಿತ್ ಅವರು ಮಾಡಿದ ಅಭಿವೃದ್ದಿ ಪರ ಕೆಲಸಗಳನ್ನು ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರ ಇದೆಂದು ಹೇಳಲಾಗುತ್ತಿದೆಯಾದರು, ನಿಜವಾದ ವಿಷಯವೇ ಬೇರೆ ಇದೆ. ಎಂತ್ತರ ದಶಕದ ಉತ್ತರಾರ್ದದ ನಂತರ ಕಾಂಗ್ರೆಸ್ಸಿನಿಂದ ದೂರ ಹೋಗಿದ್ದ ಬ್ರಾಹ್ಮಣ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಉದ್ದೇಶವೇ ಈ ನಿರ್ದಾರದ ಹಿಂದಿನ ಕಾರಣವೆಂದು ಪಕ್ಷದ ಕೆಲವು ಮೂಲಗಳು ತಿಳಿಸಿವೆ. ಇದು ಬಹುತೇಕ ಸತ್ಯಕ್ಕೆ ಹತ್ತಿರವಾದ ವಿಚಾರವೆನಿಸುತ್ತದೆ. ಯಾಕೆಂದರೆ ತೊಂಭತ್ತರ ದಶಕದವರೆಗು ಕಾಂಗ್ರೆಸ್ಸಿನ ಬೆಂಬಲಿಗ ಸಮುದಾಯವಾಗಿದ್ದ ಬ್ರಾಹ್ಮಣ ಸಮುದಾಯ ೧೯೮೯ ರಿಂದ ೧೯೯೧ ರವರೆಗೆ ನಡೆದ ಮಂಡಲ ವರದಿ ವಿರೋಧಿ ಚಳುವಳಿ ಮತ್ತು ಬಾಬ್ರಿ ಮಸೀದಿಯ ವಿವಾದದ ನಂತರ ಬಾಜಪದತ್ತ ಮುಖ ಮಾಡಿತು. ಅಲ್ಲಿಂದ ಶುರುವಾದ ಕಾಂಗ್ರೆಸ್ಸಿನ ಸೋಲಿನ ಸರಮಾಲೆ ಉತ್ತರಪ್ರದೇಶದಲ್ಲಿ ಇಂದಿಗೂ ಮುಂದುವರೆಯುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣರು ಸುಮಾರು ನಲವತ್ತರಿಂದ ಐವತ್ತು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಬ್ರಾಹ್ಮಣ ಮತಗಳನ್ನು ತನ್ನತ್ತ ಸೆಳೆಯಲು ಶೀಲಾ ದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದೆ.

ಪಂಜಾಬಿನಲ್ಲಿ ಜನಿಸಿದ ಶ್ರೀಮತಿ ಶೀಲಾ ದೀಕ್ಷಿತ್ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕರೂ, ಕೇಂದ್ರದ ಮಾಜಿ ಸಚಿವರೂ, ರಾಜ್ಯಪಾಲರೂ ಆಗಿದ್ದ ಉತ್ತರಪ್ರದೇಶದ ದಿವಂಗತ ಉಮಾಶಂಕರ ದೀಕ್ಷಿತ್ ಅವರ ಸೊಸೆ. ಉಮಾಶಂಕರ ದೀಕ್ಷಿತರು ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ರಾಜಕಾರಣಿಯಾಗಿ ಹೆಸರು ಮಾಡಿದ್ದವರು.ಇಂತವರ ಸೊಸೆಯಾಗಿರುವ ದೀಕ್ಷಿತರು ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ೨೦೧೩ರಲ್ಲಿ ಆಮ್ ಆದ್ಮಿಯ ಅಲೆಯಲ್ಲಿ ಸೋತವರು. ದೆಹಲಿಯ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿ ಜನಪ್ರಿಯರಾಗಿದ್ದ ಅವರ ಬಗ್ಗೆ ಅವರ ವಿರೋಧಿಗಳು ತೀರಾ ಕ್ಷುಲ್ಲಕವಾಗಿ ಮಾತಾಡುತ್ತಿರಲಿಲ್ಲ. ನೆಹರೂ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಶೀಲಾರವರು ಆಡಳಿತದ ವಿಚಾರದಲ್ಲಿ ಪರಿಣಿತರೆಂಬ ಮಾತು ಸಹ ಉತ್ತರಪ್ರದೇಶದ ಚುನಾವಣೆಯಲ್ಲಿ ಪ್ರಬಾವ ಬೀರಬಹುದಾಗಿದೆ. ಆದರೆ ಇತ್ತೀಚೆಗೆ ಅವರ ಮೇಲೆ ಮಾಡಲಾಗಿರುವ ವಾಟರ್ ಟ್ಯಾಂಕರ್ ಹಗರಣವನ್ನು ವಿರೋಧಪಕ್ಷಗಳು ಅದರಲ್ಲೂ ಬಾಜಪದವರು ಚುನಾವಣೆಯ ವಿಷಯವನ್ನಾಗಿ ಮಾಡುವ ನಿರೀಕ್ಷೆಯಿದೆ. ಆದರೆ ಕೆಲವು ಸ್ಥಳೀಯ ಕಾಂಗ್ರೆಸ್ಸಿಗರ ಪ್ರಕಾರ, ಬ್ರಾಹ್ಮಣರನ್ನೇ ಮುಖ್ಯಮಂತ್ರಿ ಅಭ್ಯಥಿಯನ್ನಾಗಿ ಘೋಷಿಸಲೇ ಬೇಕೆಂದಿದ್ದರೆ ಎಪ್ಪತ್ತು ವರ್ಷದ ಶೀಲಾದೀಕ್ಷಿತರಿಗಿಂತ ನಲವತ್ತೆರಡು ವರ್ಷದ ಜಿತೇಂದ್ರ ಪ್ರಸಾದ ಉತ್ತಮ ಆಯ್ಕೆಯಾಗುವುದು ಸಾದ್ಯವಿತ್ತು. ಈ ಬಗ್ಗೆ ಕಾಂಗ್ರೆಸ್ಸಿನ ಆಂತರಿಕ ವಲಯದಲ್ಲಿ ಒಂದಷ್ಟು ಪಿಸುಮಾತುಗಳೂ ಕೇಳಿ ಬರುತ್ತಿರುವುದು ನಿಜವಾದರು, ಅನುಭವ, ದಕ್ಷತೆಯ ವಿಚಾರದಲ್ಲಿ ಶೀಲಾರವರೆ ಮೇಲುಗೈ ಸಾದಿಸಿದ್ದಾರೆ. ಹಾಗಾದರೆ ತನ್ನ ಮಾಮೂಲಿ ಸಂಪ್ರದಾಯವನ್ನು ಮುರಿದು ಕಾಂಗ್ರೆಸ್ ಯಾಕೆ ಶೀಲಾದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತು ಎಂದು ನೋಡಿದರೆ ಹಲವು ಕಾರಣಗಳು ಕಂಡು ಬರುತ್ತವೆ.

ಮೊದಲನೆಯದಾಗಿ ಮೋದಿಯವರನ್ನು ಮತ್ತು ನಿತೀಶ್ ಕುಮಾರ್ ಯಾದವರನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ತಂತ್ರಗಳನ್ನು ಹೆಣೆದರು ಎನ್ನಲಾದ ಪ್ರಶಾಂತ್ ಕಿಶೋರ್ ಅವರನ್ನು ಈ ಬಾರಿ ತನ್ನ ಬೆನ್ನಿಗಿಟ್ಟುಕೊಂಡ ಕಾಂಗ್ರೆಸ್ ಅವರ ಸಲಹೆಯಂತೆಯೇ ಶೀಲಾರನ್ನು ಆಯ್ಕೆ ಮಾಡಿದ್ದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಇನ್ನು ಎರಡನೆಯದಾಗಿ ಶೀಲಾದೀಕ್ಷಿತರ ಬ್ರಾಹ್ಮಣ ಜಾತಿ ಅವರ ಆಯ್ಕೆಯಲ್ಲಿ ಕೆಲಸ ಮಾಡಿದೆ. ಮೂರನೆಯದಾಗಿ ಉತ್ತರಪ್ರದಶದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ನಾಯಕರಾದ ಉಮಾಶಂಕರ ದೀಕ್ಷಿತರ ಕುಟುಂಬದ ಸೊಸೆ ಎಂಬುದು ಸಹ ಶೀಲಾರವರ ಆಯ್ಕೆಯಲ್ಲಿ ಪ್ರದಾನ ಪಾತ್ರ ವಹಿಸಿದೆ. ನಾಲ್ಕನೆಯದಾಗಿ ಉತ್ತರಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆಯಾಗಿ ೧೯೮೪ರಲ್ಲಿ ಆಕೆ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದು ಉತ್ತರ ಪ್ರದೇಶದ ರಾಜಕೀಯ ಸ್ಥಿತಿಗತಿಗಳು ಮತ್ತು ಕಾರ್ಯಕರ್ತರು ಆಕೆಗೆ ಚಿರಪರಿಚಿತವಾಗಿರುವುದು. ಐದನೆಯದಾಗಿ ಆಕೆಯನ್ನು ಉತ್ತರಪ್ರದೇಶಕ್ಕೆ ಕಳಿಸುವುದರಿಂದ ದೆಹಲಿ ಕಾಂಗ್ರೆಸ್ಸಿನ ನಾಯಕತ್ವವನ್ನು ಇನ್ನೊಬ್ಬ ದೆಹಲಿಯ ನಾಯಕ ಅಜಯ್ ಮಕ್ವಾನರಿಗೆ ಹಸ್ತಾಂತರಿಸುವುದು ಸುಲಭದ ಕಾರ್ಯವಾಗಿದೆ. ಆರನೆಯದು ತೀರಾ ಇತ್ತೀಚೆಗೆ ಅವರ ಮೇಲೆ ಮಾಡಲಾದ ವಾಟರ್ ಟ್ಯಾಂಕರ್ ಹಗರಣದ ಹೊರತಾಗಿ ಅವರ ಮೇಲೆ ಇನ್ಯಾವ ಆಪಾದನೆಯೂ ಇಲ್ಲವಾಗಿದ್ದು ದೆಹಲಿಯಲ್ಲಿ ಸತತವಾಗಿ ಮೂರು ಬಾರಿ ಪಕ್ಚವನ್ನು ಗೆಲ್ಲಿಸಿದ ಕೀರ್ತಿ ಅವರ ಬೆನ್ನಿಗಿರುವುದಾಗಿದೆ. 

ಇನ್ನು ಈ ಬಾರಿ ಉತ್ತರಪ್ರದೇಶದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಬ್ರಾಹ್ಮಣರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ, ಬಹುಶ: ತೊಂಭತ್ತರ ದಶಕದ ನಂತರ ಇದೇ ಮೊದಲಬಾರಿಗೆ ಬ್ರಾಹ್ಮಣ ಸಮುದಾಯಕ್ಕೆ ಈ ಮಟ್ಟಿಗಿನ ಪ್ರಾದಾನ್ಯತೆ ನೀಡಲಾಗುತ್ತಿದೆಯೆನ್ನಬಹುದು. ಈಗಾಗಲೇ ಬಹುಜನ ಪಕ್ಷದ ಮಾಯಾವತಿಯವರು ಐವತ್ತಕ್ಕು ಅಧಿಕ ಸ್ಥಾನಗಳಿಗೆ ಬ್ರಾಹ್ಮಣ ಅಭ್ಯರ್ಥಿಗಳನ್ನು ಘೋಷಣೆ ಮಾಡಿಯಾಗಿದ್ದು, ಈ ಸಮುದಾಯದ ಓಲೈಕೆಯಲ್ಲಿ ಮುಂದಿದ್ದಾರೆ. ಮೊನ್ನೆ ತಾನೇ ಬಾಜಪವು ಉತ್ತರಪ್ರದೇಶದ ಬ್ರಾಹ್ಮಣ ನಾಯಕರಾದ ಶ್ರೀ ಶಿವಪ್ರಕಾಶ್ ಶುಕ್ಲಾರವರನ್ನು ರಾಜ್ಯಸಭೆಗೆ ಕಳಿಸಿ, ಬ್ರಾಹ್ಮಣರ ಓಲೈಕೆಗೆ ತನ್ನ ಕಾಣಿಕೆಯನ್ನೂ ನೀಡಿದೆ. ಬಹಳ ಹಿಂದೆ ಕಲ್ಯಾಣ್ ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದು ನಂತರ ಅಜ್ಞಾತವಾಸದಲ್ಲಿದ್ದ ಶುಕ್ಲಾರವರನ್ನು ಪುನ: ಸಕ್ರಿಯ ರಾಜಕಾರಣಕ್ಕೆ ತರುವುದರ ಹಿಂದೆ ಬಾಜಪದ ಬ್ರಾಹ್ಮಣ ಓಲೈಕೆಯ ತಂತ್ರವೇ ಅಡಗಿದೆ. ಇದೇ ರೀತಿ ಸಮಾಜವಾದಿ ಪಕ್ಷವು ಸಹ ಮೂರು ಜನ ಬ್ರಾಹ್ಮಣರನ್ನು ರಾಜ್ಯಸಬೆಗೆ ಕಳಿಸುವ ಮೂಲಕ ತಾವೇನು ಹಿಂದೆ ಬಿದ್ದಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೀಗೆ ಉತ್ತರಪ್ರದೇಶದಲ್ಲಿನ ನಾಲ್ಕೂ ಪಕ್ಷಗಳು ಬ್ರಾಹ್ಮಣ ಮತದಾರರನ್ನು ಓಲೈಸುವ ದಾರಿ ಹಿಡಿದಿದ್ದು ಅದು ಎಷ್ಟರ ಮಟ್ಟಿಗೆ, ಯಾವ ಪಕ್ಷಕ್ಕೆ ಸಫಲತೆಯನ್ನು ತಂದು ಕೊಡುತ್ತದೆಯೆಂಬವುದನ್ನು ನಾವು ಕಾದು ನೋಡಬೇಕಿದೆ.

Jul 15, 2016

ಮೇಕಿಂಗ್ ಹಿಸ್ಟರಿ: ತೆರಿಗೆ ವಸೂಲು ಮಾಡಲು ನಡೆಸಿದ ಶೋಷಣೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
15/07/2016

ವಿಪರೀತದ ತೆರಿಗೆಯನ್ನು ಸಂಗ್ರಹಿಸುವ ಸಲುವಾಗಿ, ಫೌಜುದಾರನಿಂದ ಪಟೇಲ, ಶಾನುಭೋಗರವರೆಗಿನ ಎಲ್ಲ ಕಂದಾಯ ಅಧಿಕಾರಿಗಳು ಜನಸಮೂಹವನ್ನು ಶೋಷಣೆಗೊಳಪಡಿಸುವುದು ಸಾಮಾನ್ಯವಾಗಿಬಿಟ್ಟಿತು, ಕಾನೂನಾತ್ಮಕವಾಗಿಬಿಟ್ಟಿತು. 

ರೈತವಾರಿ ಪದ್ಧತಿಯಲ್ಲಿ ರೈತರು ನೇರವಾಗಿ ಅಧಿಕಾರಶಾಹಿಯೊಂದಿಗೆ ಸಂಪರ್ಕದಲ್ಲಿದ್ದರು. ಬಹಳಷ್ಟು ಸಲ ಹಳ್ಳಿಯ ಮಟ್ಟದಲ್ಲಿ ಭೂಮಾಲೀಕರಾದ ಮತ್ತು ತೆರಿಗೆ ಕಟ್ಟುವವರಾದ ಪಟೇಲರು ಮತ್ತು ಶಾನುಭೋಗರ ಅರ್ಜಿಯನ್ನು ಪರಿಶೀಲಿಸುವಾಗ ಖುದ್ದು ಶಿರಸ್ತೇದಾರರು ತಮ್ಮ ಪಡೆಯೊಂದಿಗೆ ಹಾಜರಿರುತ್ತಿದ್ದರು. ಶರಾತ್ ವ್ಯವಸ್ಥೆಯಲ್ಲಿ, ಶೋಷಣೆಯು ಸಾರ್ವತ್ರಿಕವಾಗಿಬಿಟ್ಟಿತು. ಶೋಷಣೆ ಮತ್ತು ದಬ್ಬಾಳಿಕೆಯ ಕತೆಗಳು ಸಹಜವೆಂಬಂತಾಗಿ, ಋತು ಬದಲವಾವಣೆಯೊಂದಿಗೆ ನಡೆಯುವ ವಾರ್ಷಿಕ ಸಂಗತಿಯಾಯಿತು. 

1832ರಲ್ಲಿ ರೈತವಾರಿ ಪದ್ಧತಿಯ ಲಕ್ಷಣಗಳ ಬಗ್ಗೆ ಬರೆಯುತ್ತ, ಆರ್. ರಿಚರ್ಡ್ ಹೇಳುತ್ತಾನೆ: “ಭೂಕಂದಾಯ ಸಂಗ್ರಹಿಸಲು ನೇಮಕವಾಗಿದ್ದ ಪ್ರತಿಯೊಬ್ಬ ಕಿರಿಯ ಅಧಿಕಾರಿಯೂ ಪೋಲೀಸ್ ಅಧಿಕಾರಿಯಂತಾಗಿದ್ದ; ತನ್ನಾಡಳಿತವಿದ್ದ ಪ್ರದೇಶದ ಯಾವುದೇ ವ್ಯಕ್ತಿಗೆ ದಂಡ ಹಾಕುವ ಅಧಿಕಾರವಿತ್ತು, ಬಂಧಿಸುವ, ಛಡಿ ಏಟು ಹೊಡೆಸುವ ಅಧಿಕಾರವಿತ್ತು. ಪ್ರಕರಣದ ಬಗ್ಗೆ ದಾಖಲಾದ ಯಾವ ಸಾಕ್ಷಿಯೂ ಇರದಿದ್ದರೂ, ಆಪಾದಿತನ ಯಾವೊಂದು ಹೇಳಿಕೆ ಇರದಿದ್ದರೂ ಶಿಕ್ಷೆಗೆ ಒಳಗಾಗಬಹುದಿತ್ತು” ಮುಂದುವರಿಸುತ್ತ, ಇದನ್ನು ನಂಬದವರಿಗಾಗಿ ಎಂಬಂತೆ ರಿಚರ್ಡ್ಸ್ ಹೇಳುತ್ತಾರೆ ಇದು “ಅತಿರಂಜಿತ” ಚಿತ್ರವಲ್ಲ. (342) 

ಬ್ರಿಟೀಷರಾಳ್ವಿಕೆಯ ಮೊದಲ ದಶಕ ಮುಗಿಯುತ್ತಿದ್ದಂತೆ ಮತ್ತು ಶರಾತ್ ವ್ಯವಸ್ಥೆ ಕಂದಾಯ ಸಂಗ್ರಾಹ ವ್ಯವಸ್ಥೆಯ ಮಾದರಿಯಾದಾಗ, ಶೋಷಣೆಗೆ ರೈತ ಸಮೂಹ ನೀಡಿದ ಮೊದಲ ಪ್ರತಿಕ್ರಿಯೆಗಳನ್ನು ನೋಡಬಹುದು. ಥಾಮಸ್ ಮನ್ರೋ ಮತ್ತವನ ಪಟಾಲಂ (ಬಿಳಿ ತೊಗಲಿನವರು ಅಥವಾ ಕಂದು ಚರ್ಮದವರು) ಮೈಸೂರಿನ ರೈತರು ಹವಾಮಾನ ವೈಪರೀತ್ಯದ ವರುಷಗಳಲ್ಲಿ ಹೇಗೆ ಗುಂಪು ಗುಂಪಾಗಿ ತಮ್ಮಳ್ಳಿಗಳಿಂದ ಬೆಳೆ ಕಟಾವಿನ ಸಮಯಕ್ಕೆ ಗುಳೇ ಹೋಗಿಬಿಡುತ್ತಿದ್ದರು ಎಂದು ಶ್ರಮವಹಿಸಿ ಹೇಳಿದ್ದಾರೆ. ಮತ್ತಿದರಿಂದಾಗಿ ಕಲೆಕ್ಟರುಗಳ ಮಾಡಬೇಕಿದ್ದ ವಾಕರಿಕೆ ಬರಿಸುವ ಕೆಲಸದ ಬಗ್ಗೆ ತಿಳಿಸಿದ್ದಾರೆ, ಈ ರೀತಿ ಓಡಿಹೋಗುತ್ತಿದ್ದವರನ್ನು ಕಷ್ಟಪಟ್ಟು ಹಿಡಿದು ಮತ್ತೆ ಅವರ ಹಳೆಯ ‘ಪ್ರೀತಿಪೂರ್ವಕ’ ಮಾಲೀಕರಿಗೆ ಒಪ್ಪಿಸುವ ಕೆಲಸ ಅವರದಾಗಿತ್ತು. 

ಆದರೆ ಈ ನಿರ್ಭಾಗ್ಯ ಆತ್ಮಗಳು ಯಾರಿಂದ ಮತ್ತು ಯಾಕಾಗಿ ಓಡುತ್ತಿದ್ದವು? ಬಾಕಿ ವಸೂಲಾಗುವ ಸಲುವಾಗಿ ಶರಾತ್ ವ್ಯವಸ್ಥೆ ಮುಂದಿನ ಹಂತವನ್ನು ಅನ್ವೇಷಿಸಿತು. “ಸಬಲ ರೈತರನ್ನು” – ಶ್ರೀಮಂತ ರೈತರನ್ನು – ಗುತ್ತಿಗೆದಾರರು ಮತ್ತು ಬಡ – ಮಧ್ಯಮ ರೈತರ ಜಾಮೀನಾಗಿರುವಂತೆ ಅದು ಕೇಳಿಕೊಂಡಿತು. 

ಆದರೆ ಈ ನಿಯಮವೂ ಆದಾಯ ತರುವಲ್ಲಿ ವಿಫಲವಾದಾಗ, ಊಳಿಗಮಾನ್ಯ ಅಧಿಕಾರಶಾಹಿ ಈ ವರ್ಗದ ಜನರನ್ನೂ ಶೋಷಿಸಿದರು, ಅವರ ಭೂಮಿಯನ್ನೂ ಕಿತ್ತುಕೊಳ್ಳಲಾರಂಭಿಸಿದರು. 1820ರ ಕೊನೆಯ ಭಾಗದಲ್ಲಿ ಈ ಕಟು ವಾಸ್ತವ ಸಂಗತಿಯನ್ನು ಸರಕಾರಕ್ಕೆ ಬಂದಿದ್ದ ಎಷ್ಟೋ ಅರ್ಜಿಗಳು ಧೃಡಪಡಿಸುತ್ತವೆ. 

1857ರ ಬಂಡಾಯ ಮುಗಿದ ತಕ್ಷಣವೇ, ಬ್ರಿಟೀಷ್ ಸರಕಾರ ಸಮಿತಿಯೊಂದನ್ನು ರಚಿಸಿ “ಕಂದಾಯ ಕಟ್ಟಿಸಿಕೊಳ್ಳುವ ಸಲುವಾಗಿ ಸಾಮಾನ್ಯವಾಗಿ ನಡೆದಿದೆಯೆನ್ನಲಾದ ಶೋಷಣೆಯನ್ನು” ತನಿಖೆ ಮಾಡಲು ಆದೇಶಿಸಿತು. 

ಈ ಶೋಷಣಾ ಸಮಿತಿ, ಬ್ರಿಟೀಷರ ಪೂರ್ವಾಗ್ರಹಪೀಡಿತ ಮನಸ್ಸಿನಂತೆಯೇ “ಒಂದಲ್ಲ ಒಂದು ರೀತಿಯಲ್ಲಿ ಕೆಳ ಹಂತದ ಅಧಿಕಾರಿಗಳು ಬ್ರಿಟೀಷರ ಪ್ರತಿ ಪ್ರಾಂತ್ಯದಲ್ಲೂ ಶೋಷಣೆ ನಡೆಸಿದ್ದಾರೆ” ಎಂದು ಒಪ್ಪಿಕೊಂಡಿತು. 

ಈ ಸಾಲುಗಳಿಗೆ ಪ್ರತಿಕ್ರಯಿಸುತ್ತ ಮಾರ್ಕ್ಸ್, ಸಭ್ಯ ನಾಗರೀಕನಂತಿದ್ದವನು ಅಸಲಿಗೆ ಬೆತ್ತಲೆ ಬೇಟೆಗಾರ ಎಂಬುದನ್ನು ಸಾಬೀತುಮಾಡುತ್ತ ಹೀಗೆ ಹೇಳಿದ: “ಶೋಷಣೆಯು ಬ್ರಿಟೀಷ್ ಇಂಡಿಯಾದಲ್ಲಿ ಸರ್ವವ್ಯಾಪಿಯಾಗಿದ್ದ ಆರ್ಥಿಕ ವ್ಯವಸ್ಥೆಯಾಗಿತ್ತು ಎನ್ನುವುದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಗಿದೆ.” (246) 

ನ್ಯಾಯಾಲಯದ ಇತಿಹಾಸಕಾರರಾದ ಶಾಮ ರಾವ್ ಮತ್ತು ಹಯವದನ ರಾವ್ ಹಾಗು ನಗರದ ಬಂಡಾಯವನ್ನು ತನಿಖೆ ಮಾಡಿದ ಬ್ರಿಟೀಷ್ ತನಿಖಾ ಸಮಿತಿ ಇದೇ ಮಾದರಿಯಲ್ಲಿ ರಾಜನನ್ನು ಮೈಸೂರು ರೇಷ್ಮೆ ಸೀರೆಯಲ್ಲಿ ಅಲಂಕರಿಸಿದರು. ಆದರೆ ಈ “ಆರ್ಥಿಕ ವ್ಯವಸ್ಥೆಯ” ಮೈಸೂರಿನ ಪ್ರಮುಖ ದಲ್ಲಾಳಿಯಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಬೆತ್ತಲಾಗಿ ನಿಂತರು, ಮಿಥ್ಯಾಕಥೆಗಳ ‘ಬಟ್ಟೆಯಿಲ್ಲದ ರಾಜನಂತೆ’. 

ಶೋಷಣೆಯ ಎಲ್ಲಾ ರೀತಿಯ ಮಾದರಿಗಳನ್ನೂ ಪಾಲಿಸಲಾಗುತ್ತಿತ್ತು. ಬೆನ್ನ ಮೇಲೆ ಮಣಭಾರದ ಕಲ್ಲನ್ನು ಹೇರಿ ಉರಿವ ಬಿಸಿಲಲ್ಲಿ ನಿಲ್ಲಿಸುವುದು ಹೆಚ್ಚು ಖ್ಯಾತವಾಗಿತ್ತು ಮತ್ತು ಮದ್ರಾಸ್ ಪ್ರಾಂತ್ಯದಲ್ಲೂ ಪಾಲಿಸಲಾಗುತ್ತಿತ್ತು. ಕಿತ್ತೂರು ಪ್ರದೇಶದಲ್ಲಿನ ಅಸಂಖ್ಯಾತ ಜನಪದ ಹಾಡುಗಳು ರಾಯಣ್ಣನ ಹೆತ್ತವರನ್ನು ಶೋಷಿಸಿದ್ದನ್ನು ತಿಳಿಸುತ್ತದೆ. ಒಬ್ಬ ಬಾಕಿದಾರನನ್ನು ಮತ್ತೊಬ್ಬ ಕಿವಿ ಹಿಡಿದು ಎತ್ತುವುದು, ಛಡಿ ಏಟು ನೀಡುವುದು, ಉರಿಬಿಸಿಲಿನಲ್ಲಿ ಮೊಣಕಾಲೂರಿ ನಿಲ್ಲುವುದು ಮತ್ತು ಶೋಷಕರ ಪುರುಷಹಂಕಾರವನ್ನು ತಣಿಸುವ ಸಲುವಾಗಿ ಮಹಿಳೆಯರ ಎದೆಯ ಮೇಲೆ ಭಾರವನ್ನೇರಲಾಗುತ್ತಿತ್ತು. ಇವೆಲ್ಲವೂ ಕಡಿಮೆ ಪ್ರಮಾಣದ ಶಿಕ್ಷೆಗಳಷ್ಟೇ. ಶಿಕ್ಷೆಗೊಳಪಟ್ಟ ವ್ಯಕ್ತಿ ಒಂದಷ್ಟು ದಿಟ್ಟತನ ತೋರಿದಾಗ ಶಿಕ್ಷೆಯ ರೀತಿ ಗಂಭೀರವಾಗಿರುತ್ತಿತ್ತು, ಇನ್ನಷ್ಟು ಹಿಂಸಾತ್ಮಕವಾಗುತ್ತಿತ್ತು. ಮುಖಕ್ಕೆ ಬೆಂಕಿಯಿಡುವುದು, ಕಿವಿ, ಮೂಗು, ಮೊಲೆಯನ್ನು ಹರಿದು ಹಾಕುವುದು. 

ಈ ಎಲ್ಲಾ ಕಾರಣದಿಂದ ಹಳ್ಳಿಗಳ ಪಟೇಲರು ಮತ್ತು ಶಾನುಭೋಗರು, ಅವರ ಕೈಗೊಂಬೆ ರಾಜ, ರಾಜನಾಸ್ಥಾನದ ಆಪ್ತರು ಮತ್ತೀ ಪ್ರತಿಗಾಮಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದ ವಸಾಹತು ದೊರೆಗಳು ಜನರ ದ್ವೇಷಕ್ಕೆ ಗುರಿಯಾಗಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ. ಕರ್ನಾಟಕದ ಶೋಷಿತರು ಈ ಶೋಷಕರಿಗೆ ಬಿಸಿ ಮುಟ್ಟಿಸಲು ಕಾಯುತ್ತಿದ್ದದ್ದು ಹೌದು. ಅವರಿಗೆ ರಕ್ತ ಬೇಕಿತ್ತು ಮತ್ತು ತಮ್ಮ ಬಾಕಿಯನ್ನು ವಸೂಲಿ ಮಾಡಬೇಕಿತ್ತು. 

ನಗರದ ಬಂಡಾಯ ರೈತರು, ಹೊಸಂತೆಯಲ್ಲಿನ ತಮ್ಮ ಸಮಾವೇಶದ ನಂತರ “ಎಲ್ಲಾ ರೈತ ಕಾರ್ಮಿಕರು ಶೋಷಣೆಯ ವಿರುದ್ಧ ಒಂದಾಗಬೇಕು” ಎಂದು ಘೋಷಿಸಿದ್ದನ್ನು ಅರ್ಥ ಮಾಡಿಕೊಳ್ಳಬಹುದು. (247) ಮತ್ತು, ರೈತರು ಹೆಚ್ಚೆಚ್ಚು ಬಂಡಾಯವೆದ್ದಷ್ಟು, ತಮ್ಮ ಮೆರವಣಿಗೆಯಲ್ಲಿ ಒಬ್ಬ ನಿರ್ದಿಷ್ಟ ಅಮಲ್ದಾರ ಅಥವಾ ಶಿರಸ್ತೇದಾರನನ್ನು ತಮ್ಮ ಕೈವಶಕ್ಕೆ ಒಪ್ಪಿಸಬೇಕು ಎಂದು ಕೇಳುವುದು ಸಾಮಾನ್ಯವಾಯಿತು. ಜನರ ಗುಂಪೀಗ ಸಮೂಹವಾಗಿ ಬದಲಾಗಿತ್ತು. ಇಂಗ್ಲೀಷರ ಭಾಷೆ ಈ ರೀತಯ ಸೂಕ್ಷ್ಮತೆಗಳನ್ನೇ ತುಂಬಿಕೊಂಡಿದೆ. ಹೌದು, ಅವರು ತಮ್ಮ ಹಸಿ ಕೈಗಳನ್ನುಪಯೋಗಿಸಿ ಈ ಜನರನ್ನು ಸೀಳಿ ಸಾರ್ವಜನಿಕವಾಗಿ ನೇಣಿಗಾಕಬೇಕಿತ್ತು.

ಮುಂದಿನ ವಾರ
ಉತ್ಪಾದನೆಯ ನಾಶ

Jul 11, 2016

ದೇಶ ದ್ರೋಹವೂ ಇಲ್ಲಿ ಪುಣ್ಯದ ಕೆಲಸ!

ಸಾಂದರ್ಭಿಕ ಚಿತ್ರ
S Abhi Hanakere
11/07/2016
ನನ್ನ ತಮಿಳು ಚಿತ್ರದ ಕೆಲಸದ ನಿಮಿತ್ತ ನಾನು ಚೆನ್ನೈನಲ್ಲಿದ್ದೆ. ಕಾಲ್ ಬಂತು. ಮೈಸೂರಿನ ಗೆಳೆಯ ಕರೆ ಮಾಡಿದ್ದ. ಮಾತನಾಡಬಹುದ, ಫ್ರೀ ಇದ್ದೀರಾ ಅಂದ. ಅದು ಎಷ್ಟು ಕ್ಲೋಸ್ ಫ್ರೆಂಡ್ ಆದರೂ ಪಾರ್ಮಲಿಟಿಸ್ ಫಾಲೋ ಮಾಡೋ ವಿನಯದ ಬುದ್ಧಿ, ಮತ್ತಾತ ಮುಗ್ದ ಕೂಡ.

ಈ ಕಡೆಯಿಂದ "ಬ್ಯುಸಿ ಇದ್ದೀನಿ, ಚೆನ್ನೈನಲ್ಲಿದ್ದೀನಿ ಬೆಳಿಗ್ಗೆ ಮಾಡ್ಲಾ" ಅಂದೆ. "ಸ್ವಲ್ಪ ಅರ್ಜೆಂಟು ಮಿಸ್ ಮಾಡ್ದೆ ಮಾಡಿ" ಎಂದು ಕಾಲ್ ಕಟ್ ಮಾಡಿದ. ಯಾಕೋ ಮನಸ್ಸು ತಡಿಲಿಲ್ಲ. ನಾನಿದ್ದ ರಜಿನಿಕಾಂತರ ಕಬಾಲಿ ಡೈರೆಕ್ಟರ್ ಪರಂಜೀತ್‍ನ ಆಫೀಸ್‍ನಿಂದ ಈಚೆ ಬಂದು ಮತ್ತೆ ಕಾಲ್ ಮಾಡಿದೆ. “ಸಾರ್ ಏನಿಲ್ಲ ಪುನೀತ್ ರಾಜ್‍ಕುಮಾರ್ ಕಾಂಟೆಕ್ಟ್ ಮಾಡಬೇಕಿತ್ತು. ನಮ್ಮ ಫ್ರೆಂಡ್ಸ್ ಎಲ್ಲಾ ಸೇರಿ ಒಂದು ಎನ್‍ಜಿಓ ಮಾಡಿಕೊಂಡಿದ್ದಾರೆ. ಅದಕ್ಕೆ ಬ್ರಾಂಡ್ ಅಂಬಾಸಿಡರಾಗಿ ಪುನೀತ್‍ನ ಹಾಕಬೇಕು ಅಂತಾ, ಯಾಕಂದ್ರೆ ಎನ್‍ಜಿಓದು ತುಂಬಾ ಒಳ್ಳೆ ಉದ್ದೇಶ, ಈ ಸ್ಟಾರ್ ಹೋಟ್ಲು ಮತ್ತೆ ಮದುವೆ, ರಿಸೆಪ್ಷನ್ ಅಲ್ಲಿ ಊಟ ಉಳಿದು ಬಿಡುತ್ತಲ್ಲಾ ಅದ್ನ ತಕ್ಕೊಂಡ್ ಹೋಗಿ ಬಡವರಿಗೆ ಕೊಡೋದು, ತುಂಬ ಪುಣ್ಯದ ಕೆಲಸ’’ ಅಂದ. ನನಗೆ ಸರ್ರನೆ ಕೋಪ ಬಂದ್ ಬಿಡ್ತು, ಕಂಟ್ರೋಲ್ ಮಾಡಿಕೊಂಡು ಸಾರಿ, ನಂಗೆ ಪುನೀತ್ ರಾಜ್‍ಕುಮಾರ್ ಲಿಂಕ್ ಇಲ್ಲಾ ಎಂದು ತಪ್ಪಿಸಿಕೊಳ್ಳಲು ನೋಡಿದೆ, ಇಲ್ಲಾ ಅವರ ಮ್ಯಾನೇಜರ್ ಅಥವಾ ಯಾರ ಮುಖಾಂತರನಾದ್ರು ಕಾಂಟೆಕ್ಟ್ ಮಾಡ್ಸಿ ತುಂಬಾ ಒಳ್ಳೇ ಉದ್ದೇಶ ಅಂದು ಬಿಟ್ಟ ಮತ್ತೆ, ನನಗೆ ಕೋಪ ಜಾಸ್ತಿಯಾಗಿ ಬಾಯಿ ಬಿಡುವ ಮುನ್ನವೆ ಮಣ್ಣಿವಣ್ಣನ್ ಅಂತವರೆಲ್ಲಾ ಸಪೋರ್ಟ್ ಮಾಡ್ತಿದ್ದಾರೆ ಅಂದ..

ಓಹೋ ಇದ್ಯಾವುದೋ ಆಗಲೇ ಬೆಳೆದು - ಬಲಿತು ಬಿಟ್ಟಿರುವ ಎನ್.ಜಿ.ಓ. ಗುಂಪೇ ಇರಬೇಕು, ಸುಮ್ಮನ್ನೆ ನಮಗ್ಯಾಕೆ ಅಂತ ನನಗೆ ಆಗದ್ದನ್ನ ಸಹಿಸಿಕೊಳ್ಳುವುದ ಕಲಿಯುವ ಅವಶ್ಯಕತೆಯಿಲ್ಲ ಅನ್ನಿಸಿ "ಅಲ್ಲಾ ಇದು ಯಾವ ಒಳ್ಳೇ ಕೆಲಸ, ಯಾವ ಪುಣ್ಯದ ಕೆಲಸ, ಇವರಿಗೆ ಅಷ್ಟೊಂದು ಕಾಳಜಿ ಇದ್ರೆ ಫಂಕ್ಷನ್ ನಲ್ಲಿ ಉಳಿದ ದವಸ ಧಾನ್ಯವನ್ನು ಕೊಡಲಿ, ಇಲ್ಲಾಂದ್ರೆ ಆ ರೀತಿ ತಮ್ಮ ಧಿಮಾಕಿಗಾಗಿ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಾಡುವವರಿಗೆ ಶಿಕ್ಷೆ ಕೊಡಸಲಿ, ಅದ್ ಬಿಟ್ಟು ಈ ರೀತಿ ಉಳಿದ ಆಹಾರವನ್ನು ಬಡವರಿಗೆ ಕೊಟ್ಟು ಅವರನ್ನು ಇನ್ನು ಮಾನಸಿಕವಾಗಿ ಗುಲಾಮಗಿರಿಗೆ ತಳ್ಳ ಬೇಡಿ" ಅಂದೆ. ಆ ಕಡೆ ಯಿಂದ ಅವನು "ಸ್ವಾಭಿಮಾನ ಇರೋರು ಈಸ್ ಕೊಳ್ಳಲ್ಲ ಸರ್" ಅಂದ. ಇಷ್ಟೊತ್ತು ನನ್ನ ಆಡು ಭಾಷೆ ತಡೆದುಕೊಂಡೆ ಮಾತಾಡ್ತಿದ್ದೆ. "ಲೋ, ನೀನೆ ಹೇಳ್ತಿದೀಯಾ, ಸ್ವಾಭಿಮಾನ ಇರೋರು ಈಸಿಕೊಳ್ಳಲ್ಲ ಅಂತ. ಯೋಚನೆ ಮಾಡು ಆ ರೀತಿ ನೀವು ತಕೊಂಡ್ ಹೋಗಿ ಕೊಟ್ರೆ ಸ್ವಾಭಿಮಾನ ಕುಂದುತ್ತೆ ಹೊರತು ಬೆಳೆಯೋ ಮಾತೆಲ್ಲಿ, ಒಂದ್ ಕೆಲಸ ಮಾಡಿ ಯಾರು ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡಿ ಈ ರೀತಿ ವೇಸ್ಟ್ ಮಾಡ್ತರೋ ಆ ಬೋಳಿ ಮಕ್ಳಿಗೆ ಚಪ್ಪಲೀಲಿ ಹೋಡೀರಿ ಫಸ್ಟ್" ಅಂದೆ. ಮಂಡ್ಯ ಸ್ಟೈಲ್ ಅಲ್ಲಿ ಕೋಪದಿಂದ, ಮೃದು ಸ್ವಭಾವದ ಅವನು ಬೇಜಾರ್ ಮಾಡಿ ಕೊಂಡ, ಏನೇನೋ ಸಮಜಾಯಿಸಿ ಕೊಟ್ಟ, ಆ ಮೇಲೆ "ನೀವೇಳಿದ್ದು ಸರಿ. ಆದ್ರೆ ಎಲ್ಲಾ ಒಂದೆ ದಿನಕ್ಕೆ ಸರಿ ಮಾಡೋಕೆ ಆಗಲ್ಲ- ನಾವ್ ಒಬ್ಬರೆ ಏನು ಮಾಡೋಕೆ ಆಗಲ್ಲ". ಇಂಥವೆ ಸೋಗಲಾಡಿತನದ ಡೈಲಾಗ್ ಹೇಳಿದ.

ನೀನು ಅವರನ್ನ ಸಪೋರ್ಟ್ ಮಾಡ್ ಬೇಡ ಅವರನ್ನ ನಾನ್ ಹೇಳಿದ ರೀತಿ ಹೇಳಿ ಎಜುಕೇಟ್ ಮಾಡು. ಅವರೇನಾದ್ರು ನಿಜವಾಗ್ಲು ಬಡವರ ಬಗ್ಗೆ ಕಾಳಜಿ ಇದ್ರೆ ಕೇಳ್ತಾರೆ, ಇಲ್ಲಾ ಸುಮ್ನೆ ಅವರು ಸಮಾಜ ಸೇವಕರು ಅನ್ನೋ ಬಿಲ್ಡ್ ಅಪ್ ತಕೋಳ್ಳೋಕೆ ಮಾಡೋರಾದ್ರೆ ಕೇಳಲ್ಲ. ಆ ರೀತಿ ಅವರೇನಾದ್ರು ಮುಂದುವರಿದರೆ ಪುನೀತ್ ರಾಜ್‍ಕುಮಾರ್‍ನ ತಲುಪೋದು ಅವರಿಗೂ ನಾವು ಪುಣ್ಯದ ಕೆಲಸ ಮಾಡ್ತಿದಿವಿ ಅಂತ ಭ್ರಮೆ ಹುಟ್ಟಿಸೋದು ಏನು ಕಷ್ಟ ಅಲ್ಲಾ.

ಯಾಕೆಂದರೆ ನಾನು ಕೂಡ ಮೊದಲು ಅದೇ ರೀತಿ ಯೋಚಿಸಿದ್ದೆ ಅಂತ ಮನಸ್ಸಿನಲ್ಲಿ ಅಂದುಕೊಂಡು ಅಪ್ಪಿ-ತಪ್ಪಿ ಪುನೀತ್ ಒಪ್ಪಿ ಬ್ರಾಂಡ್ ಅಂಬಾಸಿಟರ್ ಆಗ್ ಬಿಟ್ರೆ ದೇಶ ದ್ರೋಹಿಗಳು ಇನ್ನು ಆಹಾರ ಜಾಸ್ತಿ ವೇಸ್ಟ್ ಮಾಡಿ ಬಡವರನ್ನ ನಾಯಿ ಥರ ನೋಡಿ ಅವರ ಸ್ವಾಭಿಮಾನವನ್ನ ಇನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾರೆ. ನಿಮ್ಮ ಮಾತ್ ಕೇಳಲಿಲ್ಲ ಅಂದ್ರೆ ನನಗೆ ಆ ಎನ್‍ಜಿಓ ಹೆಸರು ಹೇಳಿ ಪ್ಲೀಸ್ ಕನ್ವಿನ್ಸ್ ಮಾಡ್ತಿನಿ ಅಂದೆ. ಮಾತು ಬದಲಿಸಿ ಕ್ಯಾಷುವಲ್ ಆಗಿ ಮಾತನಾಡಿ ಕಾಲ್ ಕಟ್ ಮಾಡಿದ. ನನಗೆ ನನ್ನ ಸ್ನೇಹಿತನ ಮೇಲೆ ನಂಬಿಕೆ ಇದೆ. ಆತ ಅವರನ್ನ ಎಜುಕೇಟ್ ಮಾಡ್ತನೆ ಅಂತ. ಈ ವಿಚಾರದಲ್ಲಿ ನನ್ನ ಯೋಚನ ಲಹರಿ ಬದಲಿಸಿದ ಎರಡು ಸನ್ನಿವೇಶಗಳನ್ನ ಹೇಳ್ತಿನಿ.

ಮೊದಲ ಸನ್ನಿವೇಶ- ಸ್ಲಂ ಅಲ್ಲೇ ಹುಟ್ಟಿ ಬೆಳೆದು, ಈಗ ಒಂದು ಒಳ್ಳೇ ಹುದ್ದೇಲಿ ಇರುವ ನನ್ನ ಸ್ನೇಹಿತ ಸಂತೋಷ್ ಹೇಳಿದ್ದ: 'ಒಮ್ಮೆ ಚಿಕ್ಕಂದಿನಲ್ಲಿ ನನಗೆ ಮುದ್ದೆ ತಿನ್ನುವ ಆಸೆ ಆಗಿತ್ತು. ಒಂದು ದಿನ ನಿಮ್ಮಂಥ ಸಾಹುಕಾರರ ಮನೇಲಿ ಏನೋ ಫಂಕ್ಷನ್ ಅಂತ ಅನ್ನ, ಬಾತು, ಪಲ್ಯ ಎಲ್ಲಾ ಉಳಿದು ಬಿಟ್ಟಿತ್ತು. ಅದು ನೇರವಾಗಿ ನಮ್ಮ ಸ್ಲಂಗೆ ನಮ್ಮ ಮನೆಗೆ ತಲುಪಿತ್ತು, ನಮ್ಮವ್ವ ಊಟಕ್ಕೆ ಕೊಟ್ಲು ನಾನು ಬೇಡ ಇದು ಅಂದೆ, ಅದ್ಕೆ ನಮ್ಮವ್ವ ಯಾರೋ ಪುಣ್ಯಾತ್ಮರು ಕೊಟ್ಟವರೆ ತಿನ್ನು ಅಂದ್ಲು, ಅವ್ವ ಅವರು ನಮ್ಮ ಮೇಲಿನ ಕಾಳಜಿಯಿಂದ ಕೊಟ್ಟಿಲ್ಲ ಅವರ ಪ್ರತಿಷ್ಠೆಗೆ ಇದ್ನ ಮಾಡಿ, ನಾಯಿಗಳು ತಿನ್ನೊಲ್ಲ ಎಂದು ನನಗೆ ಕೊಟ್ಟಿದ್ದಾರೆ ಅಂದೆ ಅದ್ಕೆ ನಮ್ಮವ್ವ ವಿದ್ಯೆ ಕಲಿತಿದಿನಿ ಅಂತ ನಿಂಗೆ ಕೊಬ್ಬು ಅಂದ್ಲು. ನನ್ನ ಮನಸ್ಸಿನಲ್ಲಿ ಇದ್ಕೆ ಅಲ್ಲವೆ ನಮಗೆ ವಿದ್ಯೆ ಸಿಗಬಾರ್ದು ಅಂತ ಸಂಚು ಮಾಡೋದು, ನಿಮ್ಮ ವೇಸ್ಟ್ ನ ತಿನ್ನೋರಿಲ್ಲ ಬಳಿಯೋರಿಲಲ್ಲ ಎಂದು' ಅಂದ. ನಾನು ಮೌನಕ್ಕೆ ಶರಣಾಗಿದ್ದೆ. ಅವನು ಮುಂದುವರಿಸಿದ 'ಅವತ್ತು ನನ್ನ ಮುದ್ದೆ ತಿನ್ನುವ ಆಸೆಗೆ ಕಲ್ಲು ಬಿತ್ತು, ಹಸಿವು ನೀಗಿಸಲು ಆ ಕ್ರಿಮಿನಲ್ ಸಾಹುಕಾರರ ವೇಸ್ಟ್ ನೆ ತಿಂದೆ'. ಅಂದು ಬಿಟ್ಟ ಪುಣ್ಯದ ಕೆಲಸ ಅಂತಿದ್ದ ಭಾವನೆ ಒಂದೇ ಏಟಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡುವುದು ದೇಶದ್ರೋಹ ಮತ್ತೆ ಆ ರೀತಿ ಪ್ರತಿಷ್ಟೆಗಾಗಿ ವೇಸ್ಟ್ ಮಾಡೋರು ಮತ್ತು ಬಡವರಿಗೆ ಹಂಚುವವರು ದೇಶ ದ್ರೋಹಿಗಳು ಅಂತ ಬದಲಾಯ್ತು.

ಎರಡನೆ ಸನ್ನಿವೇಶ- ಭಾರತದ ಶ್ರೀಮಂತ ಕುಟುಂಬ ಒಂದು ಯಾವುದೋ ದೇಶದಲ್ಲಿ ಮೆನುಲಿ ಇರೋ- ಬರೋದ್ನೆಲ್ಲಾ ಆರ್ಡರ್ ಮಾಡಿ ಸ್ವಲ್ಪ ತಿಂದು, ಪ್ಲೇಟ್ ಅಲ್ಲೇ ಜಾಸ್ತಿ ಬಿಟ್ಟು ಬಿಲ್ ಕೇಳಿದಾಗ ಹೋಟ್ಲಿನವನು ಎಲ್ಲವನ್ನು ತಿನ್ನಿ ಆ ಮೇಲೆ ಕೊಡ್ತಿನಿ ಅಂದನಂತೆ, ಅದ್ಕೆ ಸಾಲಗಾರ ಭಾರತ ದೇಶದ ಶ್ರೀಮಂತ ಕುಟುಂಬದವರು ದುಡ್ಡು ನಮ್ದು ನಮಗೆ ಇಷ್ಟ ಬಂದಷ್ಟು ತಿಂತಿವಿ ಅಂದ್ರಂತೆ. ಹೋಟೆಲ್ ನವನು ಯಾರಿಗೋ ಕಾಲ್ ಮಾಡಿದ್ನಂತೆ 10 ನಿಮಿಷದಲ್ಲಿ ಗ್ರೀನ್ ಪೋಲೀಸ್‍ನವರು ಅಂತ ಬಂದು ಭಾರತೀಯ ಶ್ರೀಮಂತರಿಗೆ ದುಡ್ಡು ನಿಮ್ಮದೆ ಇರಬಹುದು ಸಂಪನ್ಮೂಲ ಎಲ್ಲರದು ಈ ರೀತಿ ವೇಸ್ಟ್ ಮಾಡ ಬಾರದು ಅಂತ ಹೇಳಿ 50 ಸಾವಿರ ರೂಪಾಯಿ ದಂಡ ಹಾಕಿ 3 ದಿನ ಜೈಲಿಗೆ ಹಾಕಿದ್ರಂತೆ. ಈ ಕಥೆ ಕೇಳಿದ ಮೇಲೆ, ಪುಣ್ಯದ ಕೆಲಸ ಅಂತಿದ್ದ ಭಾವನೆ ದೇಶ ದ್ರೋಹ ಅಂತ ಬದಲಾಗಿದ್ದು ಇನ್ನೂ ಬಲವಾಯ್ತು.

ನಿಮಗು ಈ ಪುಣ್ಯದ ಕೆಲಸ ಅಂತಿರೋ ಭಾವನೆ, ದೇಶ ದ್ರೋಹ ಅಂತೆನಿಸಿದರೆ, ಈ ಬರಹವನ್ನು ಬೇರೆಯವರಿಗೂ ಓದುವಂತೆ ಪ್ರೇರೇಪಿಸಿ ಅಥವಾ ನಿಮ್ಮದೆ ರೀತಿಯಲ್ಲಿ ಈ ವಿಚಾರವನ್ನು ಸ್ಪ್ರೆಡ್ ಮಾಡಿ ಎಜುಕೇಟ್ ಮಾಡಿ…

ಕಡೆಯಾದಾಗಿ ಕುವೆಂಪುರವರ ಕೆಲವು ಸಾಲುಗಳನ್ನು ನೆನಪು ಮಾಡಲು ಇಚ್ಚಿಸುತ್ತೀನಿ.,.. ಪ್ರತಿಯೊಬ್ಬನ ಜೀವನದಲ್ಲಿಯೂ ಒಂದು ಸಂಧಿಕಾಲ ಬರುತ್ತದೆ. ಚಿಕ್ಕಂದಿನಲ್ಲಿ ತಂದೆತಾಯಿಗಳಿಂದಲೂ ಇತರರಿಂದಲೂ ವಿಮರ್ಶೆಯಿಲ್ಲದೆ- ವಿಚಾರವಿಲ್ಲದೆ- ಸಂಶಯವಿಲ್ಲದೆ ಸ್ವೀಕರಿಸಿದ ಭಾವನೆ, ಆಲೋಚನೆ, ಶ್ರದ್ಧೆ, ಕಥೆ, ನಂಬುಗೆ ಇತ್ಯಾದಿಗಳ ಶ್ರುತಿ (ಹೇಳಿದೊಡನೆ ನಂಬುವುದು)ಗೂ ತರುವಾಯ ತಾರುಣ್ಯದಲ್ಲಿ ಬುದ್ಧಿ ಪ್ರಬುದ್ಧವಾದ ಮೇಲೆ ಮೂಡುವ ವಿಮರ್ಶೆಯ- ವಿಚಾರದ- ಸಂಶಯದ ಪ್ರತಿಭಟನೆಯ ಮತಿಗೂ (ಹೇಳಿದ್ದು ಸಕಾರಣವಾಗಿದ್ದರೆ ಮಾತ್ರ ನಂಬುವುದು) ಗದಾಯುದ್ಧವಾಗುವ ಕ್ರಾಂತಿಕಾಲದಿಂದ ಬುದ್ಧಿಯಿರುವವರು ಯಾರೂ ತಪ್ಪಿಸಿಕೊಳ್ಳಲಾರರು. ಅಂತಹ ಮಾನಸಿಕ ಕ್ರಾಂತಿ ಹೊಸ ಬಾಳಿಗೆ ಕಾರಣವಾಗುತ್ತದೆ ಹಾಗೆ ಎರಡನೆಯ ಸಾರಿ ಹೊಸತಾಗಿ ಹುಟ್ಟಿದವರೆಲ್ಲರೂ ನಿಜವಾಗಿ ದ್ವಿಜರಾಗುತ್ತಾರೆ.

ಪ್ರತಿಷ್ಟೆಗಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನ ತಯಾರಿಸಿ, ಉಳಿದ ಮೇಲೆ ಅದನ್ನು ಬಡವರಿಗೆ ಹಂಚುವುದು ದೇಶದ್ರೋಹದ ಕೆಲಸವೆಂದು ನಾವೆಲ್ಲರು ಪರಿಗಣಿಸ ಬೇಕಾದ ಅನಿವಾರ್ಯತೆ ಇದೆ ಮತ್ತು ಸರ್ಕಾರ ಈ ವಿಚಾರವಾಗಿ strict ಆಗಿ ಕಾನೂನು ಮಾಡೋವರೆಗೆ ನಾವೆಲ್ಲರು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

Jul 10, 2016

ಹಿಜ್ಡಾಗಳಿಗೊಂದು ಪ್ರತ್ಯೇಕ ಟಾಯ್ಲೆಟ್ಟು.

ಸಾಂದರ್ಭಿಕ ಚಿತ್ರ
10/07/2016
ಹಿಜ್ಡಾಗಳ ಬದುಕೇ ವಿಚಿತ್ರ ವಿಕ್ಷಿಪ್ತವಾಗಿ ಕಾಣುತ್ತದೆ. ನಗರಗಳು ದೊಡ್ಡದಾದಷ್ಟೂ ಇವರು ಹೆಚ್ಚು ಕಾಣುತ್ತಾರೆ. ಅಂಗಡಿ ಮುಂಗಟ್ಟುಗಳಿಂದ, ರೈಲುಗಳಲ್ಲಿ ಭಿಕ್ಷೆ ಪಡೆಯುತ್ತಿದ್ದವರು ಟ್ರಾಫಿಕ್ ಸಿಗ್ನಲ್ಲುಗಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದಾರೆ. ಹಲವು ಮದುವೆಗಳಲ್ಲಿ ಇವರನ್ನು ಕರೆಸಿ ದುಡ್ಡು ಕೊಟ್ಟು ಕಳುಹಿಸುವುದು ಸಂಪ್ರದಾಯದಂತೆ ನಡೆಯಲಾರಂಭಿಸಿದೆ. ಹಲವೆಡೆ ಇವರೇ ಮದುವೆ ಮನೆಗೆ ಬಂದು ದುಡ್ಡು ಪಡೆದು ಹೋಗುವುದೂ ನಡೆಯುತ್ತಿದೆ. ಈ ಕಾರಣಕ್ಕೇ ಏನೋ ಇವರನ್ನು ಸೌಜನ್ಯದ ರೂಪದಲ್ಲಿ 'ಮಂಗಳಮುಖಿ' ಎಂದು ಬರೆಯುವುದು ಹೆಚ್ಚೆಚ್ಚು ನಡೆಯುತ್ತಿದೆ. ಮುಖದಲ್ಯಾವ ಮಂಗಳ ಅಮಂಗಳ? ಮಾತನಾಡುವಾಗ ಹಿಜ್ಡಾ ಚಕ್ಕಾ ಎಂದು ಹೇಳಿದರೂ ಬರೆಯುವಾಗ ಅದೇಕೆ ಮಂಗಳಮುಖಿ ಎಂದು ಬರೆಯುತ್ತಾರೋ? ತೃತೀಯಲಿಂಗಿಗಳು ಎಂದು ಕರೆಯುವುದು ಹೆಚ್ಚು ಸೂಕ್ತವೇನೋ.

ಮುಂಚೆಲ್ಲ ಹಿಜ್ಡಾಗಳು ಹಣ ಕೇಳಿದ ತಕ್ಷಣ ಕೊಡದೇ ಹೋದರೆ ದುಡ್ಡು ಕೊಡುವವರೆಗೂ ಪೀಡಿಸುತ್ತಿದ್ದರು, ಈಗ ಪರವಾಯಿಲ್ಲ ಮುಂದೆ ಹೋಗಿ ಎಂದ ತಕ್ಷಣ ಹೊರಟುಹೋಗುತ್ತಾರೆ. ಆ ಕ್ಷಣಕ್ಕೆ 'ಏನ್ ಬದುಕಪ್ಪ ಇವರ್ದು' ಎಂದು ಬಯ್ದುಕೊಂಡರೂ ಮತ್ಯಾವ ಬದುಕನ್ನು ಸಮಾಜ ಇವರಿಗೆ ಕೊಟ್ಟಿದೆ ಎಂಬ ಪ್ರಶ್ನೆಯೂ ಉತ್ತರ ಸಿಗದಂತೆ ಕಾಡುತ್ತದೆ. ಅಲ್ಲೆಲ್ಲೋ ಒಬ್ಬರು ಪದ್ಮಿನಿ ಪ್ರಕಾಶ್ ಎನ್ನುವ ತೃತೀಯಲಿಂಗಿ ಸುದ್ದಿ ಓದುವವರಾಗಿ ಕೆಲಸಕ್ಕೆ ಸೇರಿದರು. ಮತ್ತೆಲ್ಲೋ ಅಪರೂಪಕ್ಕೆ ತೃತೀಯಲಿಂಗಿಗಳು ಚುನಾವಣೆಗೆ ನಿಂತರು ಎನ್ನುವ ವರದಿಗಳು ಆಗೀಗ ಕಾಣಿಸಿಕೊಳ್ಳುತ್ತವೆಯಾದರೂ ಹೆಚ್ಚಿನಂಶ ತೃತೀಯಲಿಂಗಿಗಳೆಂದರೆ ಹಣಕ್ಕಾಗಿ ಪೀಡಿಸುವವರು ಮತ್ತು ವೇಶ್ಯಾವಾಟಿಕೆಯಲ್ಲಿರುವವರು ಎನ್ನುವುದೇ ನಮಗೆ ತೋಚುವ ಸತ್ಯ.

ಪಶ್ಚಿಮ ಬಂಗಾಳ ಸರಕಾರ ತೃತೀಯಲಿಂಗಿಗಳಿಗೆ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಕಟ್ಟಬೇಕೆಂದು ನಿರ್ಧರಿಸಿರುವುದರ ಬಗೆಗಿನ ಸುದ್ದಿ ಓದಿದಾಗ ಭಾರತ ಹತ್ತು ವರುಷದ ನಂತರ ಏನನ್ನು ಯೋಚಿಸುತ್ತದೋ ಅದನ್ನು ಬಂಗಾಳ ಇವತ್ತು ಯೋಚಿಸುತ್ತದೆ ಎನ್ನುವ ಮಾತು ನೆನಪಾಯಿತು. ಅಲ್ಲಿನ ಉನ್ನತ ಶಿಕ್ಷಣ ಇಲಾಖೆ ಸರಕಾರಿ ಶಾಲಾ ಕಾಲೇಜುಗಳ ಪ್ರಿನ್ಸಿಪಾಲರಿಗೆ ತೃತೀಯಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ಕಟ್ಟುವಂತೆ ಆದೇಶ ಕಳುಹಿಸಿದೆ. ಕೊಲ್ಕತ್ತಾದ ಲಾಲ್ ಬಜಾರಿನ ಪೋಲೀಸ್ ಠಾಣೆಯಲ್ಲೀಗಾಗಲೇ ತೃತೀಯಲಿಂಗಿಗಳಿಗೊಂದು ಶೌಚಾಲಯ ಕಟ್ಟಲಾಗುತ್ತಿದೆ ಎಂದು ಇಂಡಿಯನ್ ಎಕ್ಷ್ ಪ್ರೆಸ್ ವರದಿ ಮಾಡಿದೆ. ತೃತೀಯಲಿಂಗಿಗಳು ಶಾಲಾ ಕಾಲೇಜುಗಳಲ್ಲಿ ಓದುತ್ತಾರೆ ಎನ್ನುವುದೇ ನಮ್ಮ ಯೋಚನಾಲಹರಿಗೆ ದಕ್ಕದೇ ಇರುವಾಗ, ಅವರನ್ನು ಮನುಷ್ಯರೆಂದು ಪರಿಗಣಿಸುವುದೇ ನಮಗೆ ಕಷ್ಟಕರವಾಗಿರುವಾಗ ಪಶ್ಚಿಮ ಬಂಗಾಳದ ನಿರ್ಧಾರ ತೃತೀಯಲಿಂಗಿಗಳ ಬದುಕಿಗೊಂದು ಘನತೆ ಕೊಡುವಂತೆ ಮಾಡಿದೆ. ತೃತೀಯಲಿಂಗಿಗಳ ಬದುಕೂ ಬದಲಾಗಲಿ.

Jul 8, 2016

ಮೇಕಿಂಗ್ ಹಿಸ್ಟರಿ: ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 3

ashok k r saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
08/07/2016
ಬಾಂಬೆ ಪ್ರಾಂತ್ಯದಲ್ಲಿ, ಈ ಆರ್ಥಿಕ ಸಂಕಷ್ಟಗಳು ಭೂ ಕಂದಾಯ ಪದ್ಧತಿಯ ಕಾರಣದಿಂದ ಮತ್ತಷ್ಟು ಹೆಚ್ಚಾಯಿತು, ಅದರಲ್ಲೂ 1820ರ ಕೊನೆಯ ಭಾಗ ಮತ್ತು 1830ರ ದಶಕದ ಪ್ರಿಂಗಲ್ ವಸಾಹತಿನಲ್ಲಿ ಇದನ್ನು ಗಮನಿಸಬಹುದು. ಪ್ರಿಂಗಲ್ ಅವಾಸ್ತವಿಕವಾಗಿ ಬೆಳೆಯಿಂದ ಬರುವ ಲಾಭದ ಅಂದಾಜಿನ ಮೇಲೆ ಭೂಕಂದಾಯವನ್ನು ನಿರ್ಧರಿಸಿದ್ದ. ಜೊತೆಗೆ, ಇವು ಮತ್ತಿತರ ವಸಾಹತುಗಳಲ್ಲಿ ಮಾಡಿದ ಮತ್ತೊಂದು ತಪ್ಪೆಂದರೆ, ಕೊನೆಯ ಪೇಶ್ವೆಗಳು ನಿಗದಿಪಡಿಸಿದ್ದ ಭೂಕಂದಾಯವನ್ನು ಮೂಲಾಧಾರವಾಗಿಟ್ಟುಕೊಂಡು ಬ್ರಿಟೀಷರು ಕಂದಾಯವನ್ನು ನಿಗದಿಪಡಿಸಿದ್ದು. ಪರಿಣಾಮವಾಗಿ, ವಿಪರೀತದ ಭೂಕಂದಾಯ ನಿಗದಿಯಾಗಿಬಿಟ್ಟಿತು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಅಧಿಕಾರಿಯೊಬ್ಬ 1846ರಲ್ಲಿ, ‘ಬಂಕಾಪುರ ನಮ್ಮಾಡಳಿತದ ಅವಧಿಯುದ್ದಕ್ಕೂ ವಿಪರೀತದ ಭೂಕಂದಾಯದಿಂದ ನರಳಿತ್ತು’ ಎಂದು ಹೇಳಿರುವುದು ದಕ್ಷಿಣದಲ್ಲಿರುವ ಒಂದು ಉದಾಹರಣೆ. ಶೋಷಣೆ ಮತ್ತು ಹೆಚ್ಚಿನ ಕಂದಾಯ ಕೃಷಿಯನ್ನು ನರಳಿಸಿತು. ನಾವು ಗಮನಿಸಿರುವಂತೆ, ಡೆಕ್ಕನ್ನಿನ ಭೂಮಿ ಅದರ ಜನಸಂಖೈಗೆ ಹೋಲಿಸಿದರೆ ಸಾಕಷ್ಟಿದೆ, ಆದರೆ ಈಗ ಕೃಷಿ ಯೋಗ್ಯ ಭೂಮಿಯ ಬಹಳಷ್ಟು ಪಾಲು ಬೇಡಿಕೆಯಲ್ಲಿನ ಕುಸಿತ ಮತ್ತು ಭೂಕಂದಾಯದ ಕಾರಣದಿಂದಾಗಿ ಉಳುಮೆಯೇ ಆಗದೆ ಕರಾಬು ಬಿದ್ದಿದೆ. ಹತ್ತಿ ಬೆಳೆಯಲು ಉತ್ತಮ ಭೂಮಿ ಹೊಂದಿರುವ ಬಂಕಾಪುರದಲ್ಲಿ, 1846ರ ಸಮಯದಲ್ಲಿ ನಡೆದ ಕೃಷಿ ಹಿಂದೆಂದಿಗಿಂತಲೂ ಕಡಿಮೆಯಾಗಿದೆ, ಕಳೆದ ಮೂವತ್ತು ವರುಷಗಳ ಶಾಂತಿ ಮತ್ತು ಭದ್ರತೆಯ ಕಾರಣದಿಂದ ಇಲ್ಲಿ ಸಹಜವಾಗಿ ಕೃಷಿ ಚಟುವಟಿಕೆಗಳಲ್ಲೂ ಹೆಚ್ಚಳವಾಗಬೇಕಿತ್ತು, ಆದರದು ಸಾಧ್ಯವಾಗಿಲ್ಲ’. ಇದೇ ಸಮಯದಲ್ಲಿ, ಬ್ರಿಟೀಷರ ತೆರಿಗೆ ಬೇಡಿಕೆಗಳು ಬಹಳಷ್ಟು ಸಲ ಕಟ್ಟಲಾಗದಷ್ಟಿತ್ತು ಮತ್ತು ಶೋಷಕವಾಗಿತ್ತು. ಬಂಕಾಪುರದಲ್ಲಿ, ಕೃಷಿ ಭೂಮಿಗೆ ಎಕರೆಗೆ ನಲವತ್ತು ರುಪಾಯಿಯಷ್ಟು ನಿಗದಿಪಡಿಸಲಾಗಿತ್ತು ಮತ್ತಿದರ ಪರಿಣಾಮವಾಗಿ, ‘ಭೂಮಿಯೊಡೆಯ ದಿವಾಳಿಯಾಗುತ್ತಿದ್ದ, ಆದರೆ ತಾಲ್ಲೂಕಿನ ಇತರೆ ಭಾಗದಲ್ಲಿರುವ ದೊಡ್ಡ ದೊಡ್ಡ ಭೂಮಾಲೀಕರು ಏನನ್ನೂ ಕಟ್ಟದೆ ಅಥವಾ ಚೂರೇ ಚೂರು ಮೊತ್ತವನ್ನು ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದರು; ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚವನ್ನು ಕೊಡುತ್ತಿದ್ದರೆಂಬುದು ಸತ್ಯ. 1830ರ ದಶಕದಲ್ಲಿ ವಿನ್ ಗೇಟ್ ಎಂಬ ಅಧಿಕಾರಿಯ ದಿನಚರಿಯ ಪುಸ್ತಕದಲ್ಲಿ ಇಂತಹ ಹತ್ತಲವು ಉದಾಹರಣೆಗಳಿರುವುದು ಬಂಕಾಪುರದ ಅನುಭವಗಳು ವಿಶೇಷವಾದದ್ದೇನಲ್ಲ ಎನ್ನುವುದನ್ನು ತಿಳಿಸುತ್ತದೆ. 

ಇವೆಲ್ಲವೂ ಉಂಟುಮಾಡಿದ ಸಾಮಾಜಿಕ ಪರಿಣಾಮಗಳು ಮುಖ್ಯವಾದವು. ಹೆಚ್ಚಿನ ಭೂಕಂದಾಯವು ಈಗಾಗಲೇ ಅಸ್ತಿತ್ವದಲ್ಲಿ ಭೂಮಿಯೊಡೆಯರ ಗುಂಪುಗಳನ್ನು ನಿಶ್ಯಕ್ತಗೊಳಿಸಿತು ಅಥವಾ ನಾಶಗೊಳಿಸಿತು. ಇದೇ ಸಮಯದಲ್ಲಿ ಕೃಷಿ ಯೋಗ್ಯ ಭೂಮಿಯು ಕೃಷಿ ಕಾಣದೆ ಕರಾಬಾಯಿತು, ಹೊಸಬರು ಪ್ರವೇಶಿಸಲು ಅನುವು ಮಾಡಿಕೊಟ್ಟಿತು. ಮತ್ತೊಂದೆಡೆ, ಬಹಳಷ್ಟು ಭೂ ಮಾಲೀಕರು, ಬಂಕಾಪುರದ ತೆರಿಗೆ ಕಳ್ಳರಂತೆ, ಪರಿಸ್ಥಿತಿಯನ್ನು ತಮ್ಮನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡರು….” (230) 

ಸರಕಾರದ ಈ ದುಬಾರಿ ಕಂದಾಯದ ಬಗ್ಗೆ ದಕ್ಷಿಣ ಮರಾಠ ಪ್ರದೇಶದ ಕಲೆಕ್ಟರ್ ಥಾಕ್ರೆಯೇ ಚೆಂದವಾಗಿ ಒಪ್ಪಿಕೊಳ್ಳುತ್ತಾನೆ. ನಿರ್ಬಿಡೆಯಿಂದ ಅವನು ಹೇಳುತ್ತಾನೆ: “ತನ್ನ ಸಲಹೆಗಳೇ ಮುಖ್ಯವೆಂದೆಣಿಸುವ ಕಲೆಕ್ಟರ್ ದೊಡ್ಡ ಮೊತ್ತವನ್ನು ನಿಗದಿಪಡಿಸುತ್ತಾನೆ, ಮತ್ತವನ ಅಮಲ್ದಾರರು, ಅವನ ಉದಾಹರಣೆಯನ್ನು ತೆಗೆದುಕೊಂಡು, ಕುರುಡಾಗಿ ಮತ್ತು ಗಡುಸಾಗಿ ಪೂರ್ತಿ ಮೊತ್ತ ಕಟ್ಟಿಸಿಕೊಳ್ಳುತ್ತಾರೆ. ಒಂದು ಕೆಟ್ಟ ಹವಾಮಾನದ ಪರಿಸ್ಥಿತಿಯಲ್ಲಿ ಇದು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ; ಆದರೆ ಕಲೆಕ್ಟರ್ ಅಸಂತುಷ್ಟಗೊಂಡುಬಿಡಬಹುದೆಂದು ಹೆದರುವ ಮತ್ತು ಮನ್ನಾ ಮಾಡುವ ಬಗ್ಗೆ ಖಚಿತತೆ ಇಲ್ಲದ ಅಮಲ್ದಾರರು ಈ ಬಡತನಕ್ಕೆ ತಾನು ಕಾರಣಕರ್ತನಾಗಬಹುದೆಂಬುದನ್ನು ಯೋಚಿಸುವ ಮೊದಲೇ ರೈತರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಹಿಂಜಿ ಬಿಡುತ್ತಾರೆ. ಬೇಡಿಕೆಯನ್ನು ಸರಿಯಾಗಿ ಅವನು ಜಾರಿಗೊಳಿಸುವಂತೆ ಮಾಡುವುದೇ ನಮ್ಮ ಸರಕಾರದ ಶಕ್ತಿ….” (231) 

ಚಾರ್ಲ್ಸ್ ವರ್ಥ್ ಪದೇ ಪದೇ ವೈಯಕ್ತಿಕ ಆಯಾಮಗಳನ್ನು ಕೊಟ್ಟು ವಸಾಹತು ಲೂಟಿಗೆ ಮಾನವೀಯ ಮುಖವಾಡ ತೊಡಿಸುವಂತೆ, ಇದು ಅಮಲ್ದಾರ ಮತ್ತು ಕಲೆಕ್ಟರ್ ನಡುವೆ ಇತ್ಯರ್ಥವಾಗಿಬಿಡಬಹುದಾದ ಪ್ರಶ್ನೆಯಲ್ಲ. ಬದಲಿಗಿದು ಆಕ್ರಮಣಕಾರಿ ವಸಾಹತುಶಾಹಿ ತನ್ನಿಬ್ಬರು ದಲ್ಲಾಳಿಗಳನ್ನು ರೈತರ ಮೇಲೆ ಯಾವುದೇ ಅಡೆತಡೆಯಿಲ್ಲದ ಶೋಷಣೆ ಮಾಡಲು ಪ್ರೋತ್ಸಾಹ ಕೊಟ್ಟ ಪ್ರಶ್ನೆಯಾಗಿದೆ. 

ಎಲ್ಲಾ ವಿಧಾನಗಳಲ್ಲೂ, ಬಹುಶಃ, ಈ ಭೂಕಂದಾಯಕ್ಕಿಂತಲೂ ಹೆಚ್ಚಿನ ವಿನಾಶಕಾರಿ ಪದ್ಧತಿಯೆಂದರೆ ಮೈಸೂರಿನ ಕೈಗೊಂಬೆ ಸರಕಾರ ಇಡಿ ಇಡೀ ತಾಲ್ಲೂಕುಗಳನ್ನೇ ಅಮಲ್ದಾರರಿಗೆ ವಾರ್ಷಿಕ ಹರಾಜಿನಲ್ಲಿ ಕೊಟ್ಟುಬಿಡುತ್ತಿದ್ದುದು. ಇದು ಶರಾತ್ ವ್ಯವಸ್ಥೆ ಎಂಬೆಸರಿನಲ್ಲಿ ವ್ಯಾಪಕವಾಯಿತು. ಶಾಂತ ದೇಹದ ಮೇಲಿನ ಸೋಮಾರಿ ಗಾಯವಾದ ಈ ಶರಾತ್ ವ್ಯವಸ್ಥೆ, ವಸಾಹತು ಬಿರುಗಾಳಿಯ ಕಣ್ಣಿನಂತಿತ್ತು, ಇದು ಕರ್ನಾಟಕವನ್ನು ಪುನಶ್ಚೇತನಗೊಳ್ಳಲಾಗದ ಬಿಕ್ಕಟ್ಟಿಗೆ ದೂಡಿಬಿಟ್ಟಿತು. 

ಶರಾತ್ ವ್ಯವಸ್ಥೆಯನ್ನು ಪರಿಚಯಿಸಿದ್ದು ಇನ್ನೇನು ಪೂರ್ಣಯ್ಯನವರು ನಿವೃತ್ತರಾಗುತ್ತಾರೆ ಎನ್ನುವಾಗ, 1811ರಲ್ಲಿ. ರೈಸ್ ನಮಗೆ ಹೇಳುತ್ತಾರೆ: “ಎಲ್ಲಾ ರೀತಿಯ ಪ್ರಯತ್ನಗಳೂ ರಾಜನ ಕುಸಿತವನ್ನು ತಡೆಯುವಲ್ಲಿ ವಿಫಲವಾಗಿದ್ದವು. ರಾಜ್ಯದ ಉನ್ನತ ಕಛೇರಿಗಳನ್ನು ಹೆಚ್ಚಿನ ಮೊತ್ತ ಕೂಗಿದ ಹರಾಜುದಾರನಿಗೆ ಮಾರಿಬಿಡಲಾಗುತ್ತಿತ್ತು; ಪೂರ್ಣಯ್ಯನವರ ಆಡಳಿತಾವಧಿಯಲ್ಲಿ ಹುಟ್ಟಿಕೊಂಡ ಶರಾತ್ ವ್ಯವಸ್ಥೆಯಿಂದ ಜನರನ್ನು ಶೋಷಿಸಲಾಗುತ್ತಿತ್ತು. ಶರಾತ್ ಎಂಬುದು ಅಮಲ್ದಾರ ಮಾಡಿಕೊಳ್ಳುವ ಗುತ್ತಿಗೆ, ಸರಕಾರಕ್ಕೆ ಒಂದು ನಿರ್ದಿಷ್ಟ ಮೊತ್ತದ ಆದಾಯವನ್ನು ತರುತ್ತೇನೆಂಬ ಒಪ್ಪಿಗೆಯ ಗುತ್ತಿಗೆಯದು; ಅಷ್ಟು ಮೊತ್ತವನ್ನು ಸಂಗ್ರಹಿಸುವಲ್ಲಿ ವಿಫಲವಾದರೆ ಉಳಿಕೆ ಮೊತ್ತವನ್ನು ತನ್ನ ಕೈಯಿಂದಲೇ ಕಟ್ಟಿ ಮೊತ್ತವನ್ನು ಸರಿಪಡಿಸಬೇಕಿತ್ತು, ಮತ್ತು ಹೇಳಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹವಾದರೆ ಅಧಿಕ ಮೊತ್ತವನ್ನು ಸರಕಾರಕ್ಕೆ ಕಟ್ಟಬೇಕಿತ್ತು. ಅಮಲ್ದಾರರು ಸಂಗ್ರಹಿಸಬೇಕಿದ್ದ ಮೊತ್ತ ಸಾಮಾನ್ಯವಾಗಿ ಹಿಂದಿನ ವರುಷ ಸಂಗ್ರಹಿಸಿದ ಮೊತ್ತಕ್ಕಿಂತ ಅಧಿಕವಾಗಿರುತ್ತಿತ್ತು. ಮುಚ್ಚಳಿಕೆಯಲ್ಲಿ, ಅಮಲ್ದಾರ ರೈತರನ್ನು ಶೋಷಣೆಗೆ ಒಳಪಡಿಸುವುದಿಲ್ಲ, ಹೊಸ ಹೊಸ ತೆರಿಗೆಗಳನ್ನು ವಿಧಿಸುವುದಿಲ್ಲ, ಸರಕಾರೀ ಶೇರುಗಳನ್ನು ಕೊಳ್ಳಲು ಒತ್ತಾಯಿಸುವುದಿಲ್ಲ ಎಂದು ಬರೆದುಕೊಡಬೇಕಿತ್ತು; ಆದರಿದು ಕೇವಲ ಹೆಸರಿಗೆ ಮಾತ್ರ. ಈ ಅಂಶಗಳನ್ನು ಅಮಲ್ದಾರರು ಮೀರಿದರು ಎಂಬ ಯಾವುದೇ ದೂರನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಪರಿಣಾಮವಾಗಿ ರೈತರು ಬಡವರಾದರು….ಈ ಪರಿಸ್ಥಿತಿಯಿಂದ ಬಿಕ್ಕಟ್ಟು ಸೃಷ್ಟಿಯಾಯಿತು…..ಬಿಕ್ಕಟ್ಟು ರೈತರ ಮೇಲೆ ಬಿತ್ತು, ಸರ್ವಾಧಿಕಾರಿ ಶರಾತಿ ಫೌಜಿದಾರ ಮತ್ತು ಅಮಲ್ದಾರರ ಕಾರಣದಿಂದ ಅವರು ನರಳಲಾರಂಭಿಸಿದರು.” (232) 

ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಕಾಸಾಮೈಯೂರ್ (casamaijor) ಶರಾತ್ ವ್ಯವಸ್ಥೆಯ ಮತ್ತೊಂದು ವಿನಾಶಕಾರಿ ಲಕ್ಷಣವನ್ನು ವಿವರಿಸಿದರು: “ಸರಕಾರವು ಬೆಳೆಯ ವಿಷಯದಲ್ಲಿ ಭದ್ರತೆಯನ್ನೂ ಕೇಳುವ ಅಭ್ಯಾಸ ಮಾಡಿಕೊಂಡಿತ್ತು, ಒಂದು ಪಕ್ಷ ರೈತ ಸತ್ತರೆ ಅಥವಾ ವಲಸೆ ಹೋದರೆ ಕಂದಾಯದಲ್ಲುಂಟಾಗುತ್ತಿದ್ದ ಕೊರತೆಯನ್ನು ಸ್ವಇಚ್ಛೆಯಿಂದ ಇತರೆ ರೈತರಿಗೆ ಅಥವಾ ಇಡೀ ಊರಿಗೆ ಭದ್ರತೆ ಕೊಟ್ಟ ರೈತರು ತಮ್ಮ ಕೈಯಿಂದ ತುಂಬಬೇಕಿತ್ತು….” (233) 

ಶರಾತ್ ವ್ಯವಸ್ಥೆ ಕೆಲಸ ಮಾಡಿದ ಬಗೆ ಮತ್ತದರ ಪರಿಣಾಮಗಳನ್ನು ವಿವರಿಸುತ್ತಾ ಎಂ.ಎಚ್.ಗೋಪಾಲ್ ಬರೆಯುತ್ತಾರೆ: “ನಗರ ವಿಭಾಗದಲ್ಲಿ ಕೃಷಿಕ ತೆರಿಗೆಯನ್ನು ನೇರವಾಗಿ ಸರಕಾರಕ್ಕೆ ಕಟ್ಟುತ್ತಿರಲಿಲ್ಲ. ಕೆಲವು ತಾಲ್ಲೂಕುಗಳಲ್ಲಿ (ಶಿವಮೊಗ್ಗ, ತರೀಕರೆ, ಹೋಲಿ ಹೊನ್ನೂರು, ಅಜ್ಜಂಪುರ, ಹೊನ್ನಾಳಿ, ಚಂದಗೆರೆ, ಶಿಕಾರಿಪುರ, ಬಸವಾಪಟ್ಟಣ, ಕುಂಸಿ, ಲಕ್ಕವಳ್ಳಿ, ಮಂದಗಟ್ಟಿ ಮತ್ತು ಅನವಟ್ಟಿಯಂತಹ ತಾಲ್ಲೂಕುಗಳಲ್ಲಿ) ಬಾಡಿಗೆಯನ್ನು ಹಳ್ಳಿಗಳ ಪಟೇಲರಿಗೆ ಕೊಡಲಾಗುತ್ತಿತ್ತು, ಅವರು ಅಮಲ್ದಾರರೊಂದಿಗೆ ಲೆಕ್ಕಾ ಪಕ್ಕಾ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವು ತಾಲ್ಲೂಕುಗಳಲ್ಲಿ (ನಗರ, ಅನಂತಪುರ, ಕವಲೆದುರ್ಗ, ಕೊಪ್ಪ, ಸಾಗರ, ಚಂದ್ರಗುತ್ತಿ ಮತ್ತು ಸೊರಬ) ಬಾಡಿಗೆಯನ್ನು ಗುತ್ತಿಗೆದಾರರೆಂಬ ವರ್ಗದ ಜನರ ಮೂಲಕ ಕೊಡಲಾಗುತ್ತಿತ್ತು. ಇನ್ನುಳಿದ ಭಾಗಗಳಲ್ಲಿ, ಪಟೇಲರ ಮೂಲಕ ದುಡ್ಡು ಕೊಡುವುದು ಮತ್ತು ನೇರವಾಗಿ ರೈತರು ಅಮಲ್ದಾರರಿಗೇ ಕೊಡುವುದು ಚಾಲ್ತಿಯಲ್ಲಿತ್ತು. ಅಮಲ್ದಾರರು, ಒಂದು ಹಳ್ಳಿಯ ಕಂದಾಯವನ್ನು ತಮ್ಮಾಲೋಚನೆಯ ಸಾಮರ್ಥ್ಯದನುಸಾರ ನಿರ್ಧರಿಸುತ್ತಿದ್ದರು ಮತ್ತು ಪಟೇಲರು ಹಾಗೂ ಗುತ್ತಿಗೆದಾರರಿಗೆ ಅಷ್ಟು ಮೊತ್ತವನ್ನು ಸಂಗ್ರಹಿಸುವಂತೆ ಒತ್ತಾಯಿಸುತ್ತಿದ್ದರು. ಮುಂದೆ ಪಟೇಲ ಅಥದಾ ಗುತ್ತಿಗೆದಾರ ಭಾರವನ್ನು ರೈತರ ಮೇಲೆ ವರ್ಗಾಯಿಸುತ್ತಿದ್ದರು. ಕೆಲವೊಮ್ಮೆ ಪಟೇಲ ಮತ್ತು ಅಮಲ್ದಾರ ಜೊತೆಯಾಗಿ ರೈತರನ್ನು ಸುಲಿಯಲು ಸಂಚು ರೂಪಿಸುತ್ತಿದ್ದರು. ರೈತರೊಂದಿಗೆ ಅಮಲ್ದಾರ ನೇರ ಸಂಪರ್ಕದಲ್ಲಿದ್ದಾಗ ಮೊತ್ತವನ್ನು ರೈತರ ಭೂಮಿಯ ಆಧಾರದ ಮೇಲೆ ನಿರ್ಧರಿಸುತ್ತಿದ್ದರು. ಬೆಳೆಯನ್ನು ಸರಕಾರ ಮತ್ತು ಕೃಷಿಕನ ನಡುವೆ ಭಾಗ ಮಾಡುವಾಗ, ದೊಡ್ಡ ಮೊತ್ತದ ಬೇಳೆ ಕಾಳುಗಳನ್ನು ಸರಕಾರಕ್ಕಾಗಿ ತೆಗೆದುಕೊಳ್ಳಲಾಗುತ್ತಿತ್ತು. ಅಮಲ್ದಾರರು ಸರಕಾರೀ ಭಾಗದ ಬೇಳೆಕಾಳುಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ತೆಗೆದುಕೊಳ್ಳುವಂತೆ ರೈತರನ್ನು ಒತ್ತಾಯಿಸುತ್ತಿದ್ದರು. ಈ ಧಾನ್ಯಗಳು, ಸರಕಾರೀ ಖಜಾನಗೆ ಹೋಗದೆ ಅಮಲ್ದಾರರ ಜೇಬಿಗೆ ಸೇರುತ್ತಿತ್ತಷ್ಟೇ. 

….ಕೃಷಿಕ ಕಟ್ಟದಿದ್ದರೆ, ಬಹುಶಃ ಅವನ ಅಸಹಾಯಕತೆಯಿಂದ, ಅವನ ವಸ್ತುಗಳು ಮತ್ತು ಆಕಳುಗಳನ್ನು ವಶಪಡಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು, ಅವನ ಹೆಂಡತಿ ಮಕ್ಕಳನ್ನು ಬಂಧನದಲ್ಲಿಡಲಾಗುತ್ತಿತ್ತು. ಪರಿಣಾಮವಾಗಿ ರೈತ ದಿವಾಳಿಯಾದ ಮತ್ತು ಕೃಷಿ ಕಡಿಮೆಯಾಯಿತು”. (234) 

ಶರಾತ್ ವ್ಯವಸ್ಥೆ ರೂಪುಗೊಂಡಿದ್ದು ಮತ್ತು ಅಸ್ತಿತ್ವದಲ್ಲುಳಿದದ್ದು ನಿರ್ದಿಷ್ಟ ಐತಿಹಾಸಿಕ ಕಾರಣಗಳಿಂದ. ಮುಖ್ಯ ಕಾರಣ ವಸಾಹತುಶಾಹಿ. ನಿಯಂತ್ರಣವಿಲ್ಲದ ಬ್ರಿಟೀಷ್ ವಸಾಹತಿನ ದುರಾಸೆಯೆ ಈ ಕ್ಯಾನ್ಸರ್ರಿಗೆ ಮೂಲ ಕಾರಣ. ಬ್ರಿಟೀಷ್ ರಾಜ್ ಊಳಿಗಮಾನ್ಯತೆಯ ಏಜೆಂಟನನ್ನು ರಾಜನೆಂದು ಪೀಠಾರೋಹಣ ಮಾಡಿಸಿತು. ರಾಜನ ಕಮಿಷನ್ ಏಜೆಂಟ್ ದಿವಾನ. ಫೌಜಿದಾರರು ದಿವಾನನ ಏಜೆಂಟರು. ಅವರಿಗೆ ಅಮಲ್ದಾರರು ಏಜೆಂಟರು. ಮತ್ತು ಕೊನೆಗೆ ಪಟೇಲ್ ಮತ್ತು ಶಾನುಭಾಗರು ಊಳಿಗಮಾನ್ಯತೆಯ ದಲ್ಲಾಳಿಗಳಾಗಿ ಕೃಷಿಕರನ್ನು ಮತ್ತು ಕಸುಬುದಾರರನ್ನು ಹಿಂಡಿ ಹಿಪ್ಪೆ ಮಾಡಿದರು. ಶರಾತ್ ವ್ಯವಸ್ಥೆ ಬ್ರಿಟೀಷರ ಸೃಷ್ಟಿ. ಕೆಳಗಿನಿಂದ ಮೇಲಿನವರೆಗೆ, ಈ ವ್ಯವಸ್ಥೆ ಸಜೀವವಾಗಿ ಕಾರ್ಯನಿರ್ವಹಿಸಿದ್ದು ಒಂದೇ ಒಂದು ಪ್ರೋತ್ಸಾಹದಿಂದ: ಹೆಚ್ಚಿನ ಕಂದಾಯ ತನ್ನಿ, ಹೆಚ್ಚಿನ ಆದಾಯ ಪಡೆದುಕೊಳ್ಳಿ. ಈಸ್ಟ್ ಇಂಡಿಯಾ ಕಂಪನಿ ಮೈಸೂರು ಸಾಮ್ರಾಜ್ಯವನ್ನು ಒಂದು ದಲ್ಲಾಳಿ ಸಂಸ್ಥೆಯಂತೆ ನಡೆಸಿತು. ರಾಜನಿಗೆ 1830ರಲ್ಲಿ ನಿವೃತ್ತಿ ವೇತನ ಕೊಟ್ಟ ಸಂದರ್ಭದಲ್ಲಿ ಮಾರ್ಕ್ಸ್ ವ್ಯಂಗ್ಯವಾಗಿ ಹೇಳುತ್ತಾನೆ “ಅರ್ಧ ಬ್ರಿಟೀಷ್ ರಾಜ್ ನಲ್ಲಿ ದಂಗೆಯ ಪರಿಸ್ಥಿತಿಯಿದ್ದಾಗ, ನಲವತ್ತು ಸಾವಿರ ಪೌಂಡು ಸಂಗ್ರಹಿಸಿ ಮತ್ತು ದೇಶದ ವರಮಾನದ ಐದನೇ ಒಂದಂಶಷ್ಟನ್ನು ಸಂಗ್ರಹಿಸಲಾಗಿದೆ (ಮೈಸೂರು ಸಾಮ್ರಾಜ್ಯದಲ್ಲಿ). ತೆರಿಗೆಯಲ್ಲಿನ ಹೆಚ್ಚಳ ಬಹಳವೇ ಪ್ರಾಮುಖ್ಯತೆ ಉಳ್ಳದ್ದು.” ಮತ್ತು ಕೊನೆಯಲ್ಲವನು ಹೇಳುತ್ತಾನೆ: “ಹಾಗಾಗಿ ಅವರಿಗೆ ನಿವೃತ್ತಿ ವೇತನ ಕೊಡುವ ಮೂಲಕ…. ಇಂಗ್ಲೀಷರು ಬಡ ಹಿಂದೂಗಳ ಮೇಲೆ ಭಾರವನ್ನಾಕಿದ್ದಾರೆ, ಅವರ ರಾಜರು ಮತ್ತು ರಾಜವಂಶಸ್ಥರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ.” (235) 

1830ರಷ್ಟರಲ್ಲಿ ನಗರದ ರೈತರು ಸರಕಾರಕ್ಕೆ ಕೊಡಬೇಕಿದ್ದ ಬಾಕಿ ಕಂದಾಯದ ಮೊತ್ತು ಹದಿಮೂರು ಲಕ್ಷ ರುಪಾಯಿಗಳಷ್ಟಾಗಿತ್ತು. (236) ನಗರದ ರೈತರು ಅದೇ ವರ್ಷ ರೆಸೆಡೆಂಟರಿಗೆ ತಮ್ಮ ಕಷ್ಟಗಳನ್ನೇಳಿಕೊಂಡು ಭಿನ್ನಹ ಮಾಡಿದರು: “ಟಿಪ್ಪು ಸುಲ್ತಾನ್ ಈ ದೇಶದ ಸಾಮ್ರಾಟನಾಗಿದ್ದಾಗ, ಅವರೆಲ್ಲರೂ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಬದುಕುತ್ತಿದ್ದರು. ಆದರೆ ರಾಜನ ಸರಕಾರದ (ಮೈಸೂರು ರಾಜ) ಅಧಿಕಾರಿಗಳು ನಡೆಸುವ ಶೋಷಣೆ ಮತ್ತು ಕ್ರೌರ್ಯ ಎಷ್ಟರ ಮಟ್ಟಿಗೆ ಇದೆಯೆಂದರೆ ಅವರು ಇನ್ನೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವುದೇ ಕಷ್ಟಕರವಾಗಿಬಿಟ್ಟಿದೆ. ಅಧಿಕಾರಿಗಳ ಕಿರುಕುಳ ಎಷ್ಟಿರುತ್ತಿತ್ತೆಂದರೆ ಕೆಲವೊಮ್ಮ ತಮ್ಮ ಮಕ್ಕಳನ್ನೇ ಮಾರಾಟ ಮಾಡಲು ಸಹಮತಿಸುವಷ್ಟು.” (237) 

ಆ ಸಮಯದಲ್ಲಿನ ಅಂದಾಜುಗಳು, ಮೈಸೂರು ಪ್ರಾಂತ್ಯಕ್ಕೆ ಹೊರಗಿನವರಾದ ಮರಾಠಾ ಬ್ರಾಹ್ಮಣರು, ಹೆಚ್ಚು ಕಡಿಮೆ ಮೂವತ್ತು ಪ್ರತಿಶತಃದಷ್ಟು ಅಧಿಕಾರಶಾಹಿಯನ್ನು ಆಕ್ರಮಿಸಿಕೊಂಡಿತ್ತೆಂದು ತಿಳಿಸುತ್ತವೆ. ಈ ಮುಂಚಿನ ಅಧ್ಯಾಯದಲ್ಲಿ (ಜಾತಿ ದೌರ್ಜನ್ಯದ ಹೆಚ್ಚಳ) ಪ್ರಸ್ತಾಪಿಸಿದ ಕುಟುಂಬಗಳೆಲ್ಲವೂ ಈ ವರ್ಗಕ್ಕೆ ಸೇರಿದವರು. ಒಡೆಯರ್ ಗಳ ಸಮ್ಮುಖದಲ್ಲಿ ತಾಲ್ಲೂಕುಗಳನ್ನು ವಾರ್ಷಿಕ ಗುತ್ತಿಗೆಗೆ ಹರಾಜು ಕೂಗುವ ಪದ್ಧತಿ ಸ್ಮಾರ್ಥ ಬ್ರಾಹ್ಮಣರ ಏಕಸ್ವಾಮ್ಯತೆ ಹೆಚ್ಚಲು ಪ್ರಮುಖ ಕಾರಣವಾಯಿತು. ಸೆಬಾಸ್ಟಿಯನ್ ಜೋಸೆಫ್ ತನ್ನ ಪ್ರಬಂಧ A Service Elite Against the Peasantsನಲ್ಲಿ ಹೇಳುತ್ತಾನೆ: “ಪೂರ್ಣಯ್ಯನ ನಿರ್ಗಮನದ ನಂತರದ ವರುಷಗಳಲ್ಲಿ ಆರ್ಥಿಕ ಗೊಂದಲಗಳು ಮೂಡಿದ್ದಕ್ಕೆ ಪ್ರಮುಖ ಕಾರಣ ಜನರ ಮೇಲಾಗುವ ಪರಿಣಾಮಗಳನ್ನು ಯೋಚಿಸದೆ ತಾಲ್ಲೂಕುಗಳನ್ನು ಹೆಚ್ಚು ಮೊತ್ತ ಕೂಗುವ ಹರಾಜುದಾರನಿಗೆ ಬಾಡಿಗೆಯಾಗಿ ನೀಡಿಬಿಟ್ಟಿದ್ದು. ಅಮಲ್ದಾರಿಯಷ್ಟೇ ಮಾರಾಟವಾಗುತ್ತಿರಲಿಲ್ಲ. ಎಲ್ಲಾ ಸರಕಾರೀ ಕಛೇರಿಗಳು ಮಾರಾಟವಾಗುತ್ತಿದ್ದವು; ಫೌಜುದಾರನ ಕಛೇರಿಯನ್ನು ಹತ್ತು ಸಾವಿರ ರುಪಾಯಿಗೆ ಮಾರಾಟ ಮಾಡಿದರೆ, ಶೇಕ್ ದಾರನ ಕಛೇರಿ ನೂರು ರುಪಾಯಿಗೆ ಮಾರಾಟವಾಗುತ್ತಿತ್ತು. 

ಈ ರೀತಿಯ ಮಾರಾಟದ ಪುನರಾವರ್ತನೆ ಮತ್ತು ಫಲವತ್ತಾದ ಈ ಕಛೇರಿಗಳ ಅಧಿಕಾರಿಗಳನ್ನು ಸಲಾಸಲ ತೆಗೆದುಬಿಡುತ್ತಿದ್ದುದು ಉಳಿದ ಅಧಿಕಾರಿಗಳಿಗೆ ಪಾಠ ಕಲಿಸಿತು. ಅವರು ಕೊಡಬೇಕಾದ ಮೊತ್ತವನ್ನು ಸುದೀರ್ಘ ಕಾಲದವರೆಗೆ ಕೊಡದೆ ಸತಾಯಿಸುತ್ತಿದ್ದರು. ಒಂದೇ ಬಾರಿ ಕೊಡದೆ ಕಂತುಗಳಲ್ಲಿ ಕೊಡಲಾರಂಭಿಸಿದರು. ಮತ್ತು ಕೊನೆಗೆ ವಾರ್ಷಿಕವಾಗಿ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿಕೊಂಡರು. 

ಪ್ರತಿಯೊಬ್ಬ ಹೊಸ ಗುತ್ತಿಗೆದಾರ ತನ್ನ ಕಛೇರಿಯನ್ನು ಉಳಿಸಿಕೊಳ್ಳಲೇ ಪ್ರಯತ್ನಿಸಬೇಕಿತ್ತು. ಮತ್ಯಾರೋ ಇನ್ನೂ ಹೆಚ್ಚಿನ ಮೊತ್ತವನ್ನು ಕೊಡುವುದಾಗಿ ಹೇಳಿಬಿಟ್ಟರೆ ಹಳೆಯ ಬಾಡಿಗೆದಾರನನ್ನು ಅವನ ಆಡಳಿತ ವೈಖರಿ ಮೇಲಿನ ‘ದೂರುಗಳ’ ಕಾರಣದಿಂದ ತೆಗೆದುಹಾಕಲಾಗುತ್ತಿತ್ತು; ಸಾಮ್ರಾಜ್ಯ ಅನುಕೂಲಕ್ಕೆ ತಕ್ಕಂತೆ ಇಂತಹ ದೂರುಗಳನ್ನು ರೂಪಿಸಿ ಮುಂದೆ ಮಾಡುವುದು ಕಷ್ಟದ ಕೆಲಸವೇನಾಗಿರಲಿಲ್ಲ”. (238) 

ಹೀಗಾಗಿ ಕೊಳ್ಳಲು ಮತ್ತು ಮಾರಾಟ ಮಾಡಲು ವಿಪರೀತ ಜನಸಂದಣಿ ಇರುತ್ತಿತ್ತು, ತಾಲ್ಲೂಕಿನದ್ದಷ್ಟೇ ಅಲ್ಲ, ಸರಕಾರೀ ಕೆಲಸಗಳದ್ದೂ ಕೂಡ. ಮೈಸೂರನ್ನು ಬ್ರಿಟೀಷ್ ವಸಾಹತು ಹರಾಜು ಹಾಕಿಬಿಟ್ಟಿತ್ತು. 

ಆಗ ಮೈಸೂರಿನ ರೆಸಿಡೆಂಟಾಗಿದ್ದ, ಬ್ರಿಟೀಷ್ ವಸಾಹತುಶಾಹಿಯ ಸ್ಥಳೀಯ ಪ್ರತಿನಿಧಿಯಾಗಿದ್ದ ಕಾಸಾಮೈಯೂರ್, ಬಹಳಷ್ಟು ಸಲ ರಾಜನ ಬಳಿಗೆ ಹೋಗಿ ಕಂದಾಯ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು, ಬೃಹತ್ ಮೊತ್ತದ ಹಣದ ದುರುಪಯೋಗದ ಕುರಿತು ತಿಳಿಸುತ್ತಿದ್ದ. ಈ ದೂರುಗಳು, ಸಹಜವಾಗಿ ಕಡೆಗಣಿಸಲ್ಪ್ಟವು. 1831ರಲ್ಲಿ ಬ್ರಿಟೀಷರ ನೇರ ಆಡಳಿತ ಜಾರಿಗೆ ಬಂದ ಮೇಲಷ್ಟೇ ರೆಸೆಡೆಂಟ್ ತನ್ನ ತಪ್ಪುಗಳಿರಲಿಲ್ಲವೆಂದು ತೋರಿಸಿಕೊಳ್ಳುವುದಕ್ಕೆ, ಸರಕಾರ ಅಕ್ಷರಶಃ ಮಾರಾಟವಾಗಿಬಿಡುತ್ತಿದ್ದುದನ್ನು ತಡೆಯಲು ಯಾವ್ಯಾವ ಪ್ರಯತ್ನಗಳನ್ನು ಮಾಡಲಾಯಿತು ಎಂದು ತಿಳಿಸಿದ್ದು. ಅವನದೇ ಮಾತುಗಳ ಪ್ರಕಾರ ನೋಡಿದರು, ಕಾಸಾಮೈಯೂರ್ ತೆರಿಗೆ ಹಣವನ್ನು ಅಮಲ್ದಾರರು ಮತ್ತು ಪೌಜುದಾರರು ದುರುಪಯೋಗ ಪಡಿಸಿಕೊಂಡ ಹಲವಾರು ಪ್ರಕರಣಗಳನ್ನು ರಾಜನ ಗಮನಕ್ಕೆ ತಂದಿದ್ದ “ಕ್ರಮ ಕೈಗೊಳ್ಳಲು ರಾಜನ ಗಮನಕ್ಕೆ ತರಲಾಗಿದೆ”. ತದನಂತರ 1828,1829 ಮತ್ತು 1830ರಲ್ಲಿ ತನ್ನ ಪ್ರಾಮಾಣಿಕತೆ ಹೇಗೆಲ್ಲ ಇತ್ತು ಎಂದೊಂದು ಪಟ್ಟಿ ಕೊಡುತ್ತಾನೆ. (239) 

ಸೆಬಾಸ್ಟಿಯನ್ ಬರೆಯುತ್ತಾರೆ: “ಈ ಕುಲಗೆಟ್ಟ ಅಧಿಕಾರಶಾಹಿಯ ಸೇವೆಯ ಮೇಲೆ ಮಹಾರಾಜ ಅವಲಂಬಿತವಾದ ಕಾರಣ ಅವರ ಭ್ರಷ್ಟ ವಿಧಾನಗಳನ್ನು ಪಾಲಿಸುವಂತಾಯಿತು. ಒಂದು ಹಂತದಲ್ಲಿ, ಬ್ರಿಟೀಷ್ ರೆಸಿದೆಂಟ್, ಮಹಾರಾಜರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಹೊರಿಸಿದ್ದ; ಮಹಾರಾಜ ತಾನು ನೇಮಿಸಿದ ಅಧಿಕಾರಿಗಳಿಗೆ ನಿಮ್ಮ ಹಣವನ್ನು ನೀವು ಪಡೆದುಕೊಳ್ಳಲು ನಿಮಗೆ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದ. ತಾಲ್ಲೂಕುಗಳಲ್ಲಿ ಅಮಲ್ದಾರರು ದಾಖಲೆಗಳನ್ನು ತಿದ್ದುವುದು ಕೂಡ ನಡೆದಿತ್ತು, ಅಮಲ್ದಾರರು ಲಾಭ ಮಾಡಿಕೊಂಡರೆ ಸರಕಾರಕ್ಕೆ ನಷ್ಟವಾಗುತ್ತಿತ್ತು. ವರುಣ ತಾಲ್ಲೂಕಿನಲ್ಲಿ ಬೆಳೆಯನ್ನು ಸರಕಾರ ಮತ್ತು ಕೃಷಿಕರ ನಡುವೆ ಭಾಗ ಮಾಡಲಾಗುತ್ತಿತ್ತು, ಅಮಲ್ದಾರರು ಕೈಯಾಡಿಸಿ ಸರಕಾರದ ಭಾಗದ ಧಾನ್ಯಗಳನ್ನು ಮಂಗಮಾಯ ಮಾಡಿಬಿಡುತ್ತಿದ್ದರು. 1832ರಲ್ಲಿ ಹಿರಿಯ ಕಮಿಷನರ್ರಾದ ಲೆಫ್ಟಿನೆಂಟ್ ಕಲೋನಲ್ ಬ್ರಿಗ್ಸ್ ಹೇಳುತ್ತಾರೆ ‘…ಕಳೆದ ಕೆಲವು ವರುಷಗಳಿಂದ ಅಮಲ್ದಾರರ ಆಫೀಸಿನಲ್ಲಿರುವವರು ಮತ್ತು ಎಂಟತ್ತು ತಿಂಗಳಿಗೊಮ್ಮೆ ಕೆಲಸದಿಂದ ತೆಗೆಯಲ್ಪಟ್ಟವರ ಬಗ್ಗೆಯೆಲ್ಲ ನಾನು ನಡೆಸಿದ ವಿಚಾರಣೆಯು ನನಗೇನನ್ನು ತಿಳಿಸಿತೆಂದರೆ, ಇವರೆಲ್ಲರೂ ಭ್ರಷ್ಟಾತಿಭ್ರಷ್ಟರಷ್ಟೇ ಅಲ್ಲ, ಜೊತೆಗೆ ಸರಕಾರಕ್ಕೆ ಈ ಕ್ಷಣದಲ್ಲಿ ಬಹಳಷ್ಟು ದುಡ್ಡನ್ನು ಕಟ್ಟಬೇಕಿದೆ, ಅದನ್ನು ದಾಖಲೆಗಳಲ್ಲೂ ನಮೂದಿಸಿಲ್ಲ ಮತ್ತು ಈಗ ಕಛೇರಿಯನ್ನಲಂಕರಿಸಿರುವವರೂ ಕೂಡ ಇದೇ ರೀತಿಯ ಸಂಕಟದಲ್ಲಿದ್ದಾರೆ.’” (240) 

ಅಮಲ್ದಾರರ ಉನ್ನತ ಮತ್ತದೇ ಸಮಯಕ್ಕೆ ನಿರಂಕುಶ ನಿಲುವುಗಳ ಬಗ್ಗೆ ಬರೆಯುತ್ತಾ ಸೆಬಾಸ್ಟಿಯನ್ ಹೇಳುತ್ತಾರೆ: “ಅವನು ತನ್ನಧಿಕಾರವನ್ನು ಹಳ್ಳಿ ಮತ್ತು ಪಟ್ಟಣಗಳೆರಡರಲ್ಲೂ ನಡೆಸಿದ…..ಸ್ಥಳೀಯ ಮಟ್ಟದಲ್ಲಿ ಅಮಲ್ದಾರ ಅಧಿಕಾರಶಾಹಿಯ ಮುಖ್ಯಸ್ಥನೂ ಹೌದು, ಉನ್ನತ ನ್ಯಾಯಾಧೀಶನೂ ಹೌದು. ಅವನ ಮೂಲಕವಷ್ಟೇ ರೈತನು ಸರಕಾರೀ ಶಕ್ತಿಗೆ ಎದುರಾಗಬೇಕಿತ್ತು. ಅಮಲ್ದಾರ ಸರಕಾರಕ್ಕೂ ಸ್ಥಳೀಯರಿಗೂ ಮಧ್ಯೆ ಕೊಂಡಿಯಾಗಿದ್ದ. ಸಹಜವಾಗಿ, ಅಮಲ್ದಾರರೇ ಕುಲಗೆಟ್ಟು ಶೋಷಕರಾಗಿ ಬದಲಾದಾಗ, ಅದರ ನೇರ ಮತ್ತು ತತ್ ಕ್ಷಣದ ಪರಿಣಾಮವಾಗಿದ್ದು ರೈತರ ಮೇಲೆ. ಅಮಲ್ದಾರ ತನ್ನ ಅಧಿಕಾರವನ್ನು ಬಳಸಿ, ಶರಾತ್ ವ್ಯವಸ್ಥೆಯ ಅನ್ವಯ ಸಂಗ್ರಹವಾಗಬೇಕಿದ್ದ ನಿಗದಿಯಾದ ವಾರ್ಷಿಕ ಮೊತ್ತವನ್ನು ಸಂಗ್ರಹಿಸಲು ಎಲ್ಲಾ ನಿರಂಕುಶ ರೀತಿಗಳನ್ನೂ ಬಳಸಬಹುದಿತ್ತು. ಆದರೆ ಕೃಷಿಕನಿಗೆ ತನ್ನ ಮೇಲಾಗುತ್ತಿದ್ದ ದೌರ್ಜನ್ಯ ಮತ್ತು ಅನ್ಯಾಯವನ್ನು ಪ್ರಶ್ನಿಸಲು ಸೂಕ್ತ ವೇದಿಕೆಯೇ ಇರಲಿಲ್ಲ; ಕಾರಣ ಅಮಲ್ದಾರನ ವಿರುದ್ಧದ ದೂರುಗಳನ್ನು ಪರಿಶೀಲಿಸಲಿದ್ದ ನ್ಯಾಯಾಧಿಕರಣದ ಮುಖ್ಯಸ್ಥ ಕೂಡ ಅದೇ ಅಮಲ್ದಾರನಾಗಿರುತ್ತಿದ್ದ. 

ಸೇವೆಯಲ್ಲಿದ್ದ ಗಣ್ಯರ ಈ ಶಕ್ತಿಯುತ ವರ್ಗ ತನ್ನ ಮೋಸ ಮತ್ತು ದೋಚುವಿಕೆಯ ಜೊತೆ ಜೊತೆಗೆ ದರೋಡೆಕೋರರೊಂದಿಗೆ ಸೇರಿ ರೈತರನ್ನು ಲೂಟಿ ಮಾಡುತ್ತಿದ್ದರು. ಮೇಜರ್ ಜೆನರಲ್ ಹಾಕ್ಸ್ ಮೊರಿಸನ್, ಮೆಕ್ ಲಿಯಾಡ್ ಮತ್ತು ಮಾರ್ಕ್ ಕಬ್ಬನ್ 1830 – 32ರ ನಗರದ ಬಂಡಾಯದ ಬಗ್ಗೆ ಮಾಡಿದ ತನಿಖೆಯಲ್ಲಿ ಹೇಳುತ್ತಾರೆ ‘ನಗರದ ಫೌಜುದಾರರಾದ ಸರ್ವೋತ್ತಮ ರಾವ್ ಮತ್ತು ಕಿಷೆನ್ ರಾವ್ ತುಂಬು ವಿಶ್ವಾಸದಿಂದ ಕಳ್ಳರ ನಾಯಕ ಗೂಂಡಾನನ್ನು ನೇಮಿಸಿಕೊಂಡಿದ್ದರು, ಲೂಟಿ ಮಾಡುವ ಸಲುವಾಗಿ. ನಂತರದ ದಿನಗಳಲ್ಲಿ ಬಂಧನಕ್ಕೊಳಗಾದ ಕಳ್ಳರೇ ವಿಚಾರಣೆಯ ವೇಳೆ ಫೌಜಿದಾರ ಸರ್ವೋತ್ತಮ ರಾವ್ ಆಗಮನದ ನಂತರ 73 ಮನೆಗಳನ್ನು ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ; ಫೌಜಿದಾರರ ಸೂಚನೆಯಂತೆ ಅವರು ಅ ಮನೆಗಳಿಗೆ ಹೋಗುತ್ತಿದ್ದರು ಮತ್ತು ದೋಚಿದ ಸಂಪತ್ತನ್ನೆಲ್ಲ ಫೌಜಿದಾರನಿಗೆ ತಲುಪಿಸುತ್ತಿದ್ದರು. ಅಚ್ಚರಿಯೆಂದರೆ, ರೈತರನ್ನು ಲೂಟಿ ಮಾಡಿದ ಇದೇ ಜನ, ಪ್ರಾರಂಭದ ಹಂತದಲ್ಲಿ ರೈತರು ಬಂಡಾಯ ಹೇಳಲು ಪ್ರೋತ್ಸಾಹಿಸಿದರು, ತಮ್ಮ ಗುರಿಗಳನ್ನು ಸಾಧಿಸಿಕೊಳ್ಳಲು”. (241) 

ಬಿಕ್ಕಟ್ಟು ಆಳವಾಗಿ, ಅಧಿಕಾರಶಾಹಿ – ಊಳಿಗಮಾನ್ಯ ಆಸಕ್ತಿಗಳು ಎಷ್ಟು ದೃಡವಾಗಿ ಬೇರೂರಿತ್ತೆಂದರೆ, ಆಳುವ ವರ್ಗದೊಳಗೇ ಶಾಂತಿಯುತ ದೋಚುವಿಕೆ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿತ್ತು.

ಮುಂದಿನ  ವಾರ
ತೆರಿಗೆ ವಸೂಲು ಮಾಡಲು ನಡೆಸಿದ ಶೋಷಣೆ

Jul 2, 2016

ಸಮಾಜವಾದಿ ಪಕ್ಷದಿಂದ ದೂರಸರಿಯುತ್ತಿರುವ ಮುಸ್ಲಿಂ ಸಮುದಾಯ: ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್
ಈ ದೇಶದ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಎಲ್ಲಾ ರಾಜಕೀಯ ಪಕ್ಷಗಳು ಮತಬ್ಯಾಂಕನ್ನಾಗಿ ಮಾತ್ರ ನೋಡುತ್ತಿವೆಯೆಂಬ ಮಾತನ್ನು ನಾವು ಒಪ್ಪಿಕೊಳ್ಳುತ್ತಲೇ ಉತ್ತರಪ್ರದೇಶದ ರಾಜಕೀಯ ಲೆಕ್ಕಾಚಾರಗಳನ್ನು, ಮತ್ತು ಅಲ್ಲಿನ ಮುಸ್ಲಿಮರ ರಾಜಕೀಯ ನಡವಳಿಕೆಯನ್ನು ವಿಶ್ಲೇಷಣೆಗೊಳಪಡಿಸಬೇಕಾದುದು ಅಗತ್ಯವೆಂದು ನನ್ನ ಬಾವನೆ. ಉತ್ತರ ಪ್ರದೇಶದ ಒಟ್ಟು ಮತದಾರರ ಪೈಕಿ ಶೇಕಡಾ ೨೮ರಷ್ಟು ಮತದಾರರು ಮುಸ್ಲಿಂ ಸಮುದಾಯದವರಾಗಿದ್ದು ಸುಮಾರು ೭೫ ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವಾಗಿರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ೨೦೧೭ರಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಒಂದು ಸಂಘಟಿತ ಗುಂಪಾಗಿ ಮತ ಚಲಾಯಿಸುವುದೇ ಆದರೆ, ಯಾವ ಪಕ್ಷವನ್ನು ಯಾಕೆ ಬೆಂಬಲಿಸಬಹುದೆಂಬುದನ್ನೂ ನಾವೊಂದಿಷ್ಟು ನೋಡೋಣ.

ಕಳೆದ ವಿದಾನಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ ಶೇಕಡಾ ೫೮ ರಷ್ಟು ಮುಸ್ಲಿಂ ಮತದಾರರ ಬೆಂಬಲನ್ನು ಗಳಿಸಿದ್ದರ ಪರಿಣಾಮವಾಗಿ ಆ ಪಕ್ಷ ಬಹುಮತ ಪಡೆದು ಅದಿಕಾರದ ಗದ್ದುಗೆ ಹಿಡಿದಿತ್ತು. ಆದರೆ ತದನಂತರದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್, ಬಹುಜನ ಪಕ್ಷ, ಸಮಾಜವಾದಿ ಪಕ್ಷಗಳ ನಡುವೆ ಹಂಚಿ ಹೋಗಿದ್ದರಿಂದಾಗಿ ಬಾಜಪದ ಹಿಂದು ಮತಗಳನ್ನು ದೃವೀಕರಣಗೊಳಿಸಿ ಗೆಲ್ಲಲು ಸಾದ್ಯವಾಗಿತ್ತು. ಇದೀಗ ಪರಿಸ್ಥಿತಿ ಬಹಳ ಬದಲಾವಣೆಗಳನ್ನು ಕಂಡಿದೆ. ಹಿಂದಿನ ಹಾಗೆ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಂ ಸಮುದಾಯವು ಸಮಾಜವಾದಿ ಪಕ್ಷದ ವಿರುದ್ದ ಮುನಿಸಿಕೊಳ್ಳುವಂತಹ ಹಲವಾರು ಘಟನೆಗಳು ನಡೆದು ಹೋಗಿದ್ದು, ಆ ಸಮುದಾಯ ಅಖಿಲೇಶ್ ಆಳ್ವಿಕೆಯಿಂದ ಭ್ರಮನಿರಸನಗೊಂಡಿದೆ. ಹಾಗಾದರೆ ಯಾಕೆ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ವಿರುದ್ದ ಮತ ಚಲಾಯಿಸುತ್ತಾರೆಂಬುದನ್ನು ಒಂದಿಷ್ಟು ವಿಶ್ಲೇಷಿಸೋಣ:

1.ಮುಸ್ಲಿಂ ಮತವಿಭಜನೆ ತಡೆಯಲು:

ಮುಸ್ಲಿಮರು ಯಾವಾಗಲೂ ಒಂದು ಸಂಘಟಿತ ಗುಂಪಾಗಿ ಒಂದೇ ಪಕ್ಷಕ್ಕೆ ಮತಚಲಾಯಿಸತ್ತಾರೆಂಬ ಜನಪ್ರಿಯ ಅನಿಸಿಕೆಯನ್ನೂ ಮೀರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಹುಜನಪಕ್ಷ, ಬಾಜಪ ಮತ್ತು ಸಮಾಜವಾದಿ ಪಕ್ಷಗಳಿಗೆ ಬಿಡಿಬಿಡಿಯಾಗಿ ಮತಚಲಾಯಿಸಿದ್ದರು. ಬಾಜಪ ಮುಸ್ಲಿಂ ಮತ ಪಡೆಯುವಲ್ಲಿ ಸಮಾಜವಾದಿ ಪಕ್ಷದ ನಂತರದ ಸ್ಥಾನದಲ್ಲಿತ್ತು. ಹೀಗಾಗಿಯೇ ಮುಸ್ಲಿಂ ಮತದಾರರೇ ನಿರ್ಣಾಯಕವಾದ ಸ್ಥಾನಗಳ ಪೈಕಿ ಬಾಜಪ ಶೇಕಡಾ ೨೩ರಷ್ಟನ್ನು ಗೆಲ್ಲುವಂತಾಗಿತ್ತು. ಹಾಗಾಗಿ ಈ ಬಾರಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷವನ್ನು ಬೆಂಬಲಿಸಲು ಹಿಂದೆ ಮುಂದೆ ನೋಡುವುದೇ ಆದರೆ, ಅದರ ಬದಲಿಗೆ ಅವರ ಕಣ್ಮುಂದಿರುವ ಮತ್ತೊಂದು ಪಕ್ಷವೆಂದರೆ ಬಹುಜನ ಪಕ್ಷ ಮಾತ್ರ.

2. ಸಮಾಜವಾದಿ ಪಕ್ಷದಿಂದಾದ ಭ್ರಮನಿರಸನ:

ಮುಜಾಫರ್ ನಗರದ ಕೋಮುಗಲಭೆಗಳ ನಂತರ ಸಮಾಜವಾದಿ ಪಕ್ಷದ ಬಗ್ಗೆ ಮುಸ್ಲಿಮರಿಗಿದ್ದ ಒಲವು ಕಡಿಮೆಯಾಗಿದೆ. ಅಧಿಕಾರದಲ್ಲಿರುವ ಸಮಜವಾದಿ ಪಕ್ಷ ಕೋಮುಗಲಭೆಯ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಲಿಲ್ಲವೆಂದು ಅವರು ಬಾವಿಸಿದ್ದಾರೆ. ಜೊತೆಗೆ ಗಲಭೆಗಳು ತೀವ್ರಸ್ವರೂಪ ಪಡೆದುಕೊಂಡ ನಂತರವೂ ಸ್ಥಳಕ್ಕೆ ಪಕ್ಷದ ಮುಖ್ಯ ನಾಯಕರಾದ ಶ್ರೀ ಮುಲಾಯಂ ಸಿಂಗ್ ಯಾದವರಾಗಲಿ, ಮುಖ್ಯಮಂತ್ರಿ ಅಖಿಲೇಶ್ ಯಾದವರಾಗಲಿ ದಾವಿಸಲಿಲ್ಲವೆಂಬುದು ಮುಸ್ಲಿಮರ ಮುಖ್ಯ ಆರೋಪ. ಮುಲಾಯಂ ಮತ್ತು ಅಖಿಲೇಶ್ ಮುಜಾಫರ್ ನಗರಕ್ಕೆ ಬೇಟಿ ನೀಡಿದ್ದು ಗಲಭೆಗಳಾದ ಆರು ತಿಂಗಳ ನಂತರ, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಇದು ರಾಜ್ಯದ ಬಹುತೇಕ ಮುಸ್ಲಿಂ ನಾಯಕರುಗಳನ್ನು ಕೆರಳಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ನಂತರ ನಡೆದ ದಾದ್ರಿ ಪ್ರಕರಣ ಮುಸ್ಲಿಮರನ್ನು ಇನ್ನಷ್ಟು ಕೆರಳಿಸಿತು. ಸಮಾಜವಾದಿ ಪಕ್ಷವು ದಾದ್ರಿ ಪ್ರಕರಣವನ್ನು ನಿಬಾಯಿಸಿದ ರೀತಿ ಬಾಜಪದ ಪರವಾಗಿತ್ತೆಂಬ ಅನುಮಾನವೂ ಮುಸ್ಲಿಮರಲ್ಲಿ ಮೂಡಿತ್ತು. ಇತ್ತೀಚಗೆ ಎಬಿಪಿ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ ೬೫ ರಷ್ಟು ಮುಸ್ಲಿಮರು ಸಮಾಜವಾದಿ ಪಕ್ಷವನ್ನು ಈ ವಿಷಯಗಳಲ್ಲಿ ಟೀಕಿಸಿದ್ದಾರೆ.

3. ಬಾಜಪವನ್ನು ಅಧಿಕಾರದಿಂದ ದೂರವಿಡಲು:

ಉತ್ತರ ಪ್ರದೇಶದ ಮುಸ್ಲಿಂ ಮತದಾರರು ವಿದಾನಸಭಾ ಚುನಾವಣೆಗಳಲ್ಲಿ ಬಾಜಪ ಕೇಂದ್ರಿತವಾದ ನಕಾರಾತ್ಮಕ ಮತಚಲಾವಣೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಬಾಜಪವನ್ನು ಸೋಲಿಸಲು ಶಕ್ತಿ ಹೊಂದಿರಬಹುದಾದ ಪಕ್ಷಕ್ಕವರು ಮತ ಚಲಾಯಿಸುವುದು ಹಿಂದಿನಿಂದ ನಡೆದುಬಂದ ರೀತಿ. ಈಗ ಸಮಾಜವಾದಿ ಪಕ್ಷದ ವಿರುದ್ದ ಅವರಿಗಿರುವ ಮುನಿಸು, ಜೊತೆಗೆ ಅದಕ್ಕಿರುವ ಆಡಳಿತ ವಿರೋಧಿ ಅಲೆಯಲ್ಲಿ ಸಮಾಜವಾದಿ ಪಕ್ಷ ಬಾಜಪವನ್ನು ಸೋಲಿಸುವುದು ಸಾದ್ಯವಿಲ್ಲವೆಂಬ ನೆಲೆಯಲ್ಲಿ ಉತ್ತರ ಪ್ರದೇಶದ ಮುಸ್ಲಿಮರು ಬಹುಜನ ಪಕ್ಷದತ್ತ ವಾಲುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಿರುವ ಮಾಯಾವತಿ ಈಗಾಗಲೇ ಸುಮಾರು ೧೦೦ ಸ್ಥಾನಗಳನ್ನು ಮುಸ್ಲಿಮರಿಗೆ ಮೀಸಲಿಟ್ಟು ಅವರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಜೊತೆಗೆ ತಾವು ಯಾವತ್ತಿಗೂ ಬಾಜಪವನ್ನು ಬೆಂಬಲಿಸುವುದಿಲ್ಲವೆಂಬ ಘೋಷಣೆಯನ್ನೂ ಮಾಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದ ಮಟ್ಟಿಗೆ ಕಾಂಗ್ರೆಸ್ ತೀರಾ ದುರ್ಬಲವಾಗಿದ್ದು ಅದನ್ನು ಬೆಂಬಲಿಸುವುದರಲ್ಲಿ ಪ್ರಯೋಜನವಿಲ್ಲವೆಂಬ ಅಭಿಪ್ರಾಯಕ್ಕೆ ಮುಸ್ಲಿಮರು ಬಂದಿದ್ದಾರೆ.

4.ಮುಸ್ಲಿಮರ ಶೋಚನೀಯ ಸ್ಥಿತಿಗತಿಗಳು.

ಹಾಗೆ ನೋಡಿದರೆ ಕಳೆದ ಎರಡೂವರೆ ದಶಕಗಳಿಂದ ಅಂದರೆ ೧೯೯೦ರಿಂದ ಅರ್ದಕ್ಕಿಂತ ಹೆಚ್ಚು ಅವಧಿಯಲ್ಲಿ ಮುಸ್ಲಿಮರ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರ ಅನುಭವಿಸಿರುವ ಸಮಾಜವಾದಿ ಪಕ್ಷ ಆ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸಿಲ್ಲವೆಂಬುದು ಆ ಸಮುದಾಯದ ಜನರ ಆಕ್ರೋಶವಾಗಿದೆ. ಬಹಳ ಮಟ್ಟಿಗೆ ಅದು ನಿಜವೂ ಆಗಿದೆ. ಇಡೀ ರಾಷ್ಟ್ರದಲ್ಲಿ ಮುಸ್ಲಿಂ ಮಕ್ಕಳ ಶಾಲಾ ದಾಖಲಾತಿ ಪ್ರಮಾಣ ಶೇಕಡಾ ೧೨.೮ ಇದ್ದರೆ ಉತ್ತರ ಪ್ರದೇಶದಲ್ಲಿ ಕೇವಲ ಶೇಕಡಾ ೯.೬೪ ಮಾತ್ರವಿದೆ. ಕೇಂದ್ರದ ಮಾನವ ಸಂಪನ್ಮೂಲ ಖಾತೆಯೇ ನೀಡಿರುವ ಅಂಕಿಅಂಶಗಳ ಪ್ರಕಾರ ಮುಸ್ಲಿಮರ ಸಾಕ್ಷರತಾ ಪ್ರಮಾಣ ಇಡೀ ದೇಶಕ್ಕೆ ಹೋಲಿಸಿದರೆ ತೀರಾ ಕೆಳಮಟ್ಟದಲ್ಲಿದ್ದು ಸರಕಾರಿ ನೌಕರಿಗಳಲ್ಲು ಅವರದು ತೀರಾ ಶೋಚನೀಯ ಪರಿಸ್ಥಿತಿ. ಇನ್ನು ಮುಸ್ಲಿಂ ಮಹಿಳೆಯರ ಸಾಮಾಜಿಕ ಸ್ಥಾನಮಾನವಂತು ಇತರೇ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ತಳಮಟ್ಟದಲ್ಲಿದೆ.ಇನ್ನು ಸಾಮಾಜಿಕವಾಗಿ ಕೋಮುಗಲಭೆಗಳ ಪ್ರಮಾಣವೂ ಬೇರೆ ರಾಜ್ಯಗಳಿಗಿಂತ ಹೆಚ್ಚಿದ್ದು ಇದು ಮುಸ್ಲಿಮರಲ್ಲಿ ಸದಾ ಅಭದ್ರತೆಯ ಬಾವ ಮೂಡಿಸಿರುತ್ತದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ ಚುನಾವಣೆಯ ಹೊತ್ತಿಗೆ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷದಿಂದ ದೂರ ಸರಿಯುವುದರಲ್ಲಿ ಸಂದೇಹವೇ ಇಲ್ಲ. ಒಂದು ಸಮುದಾಯವಾಗಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅದು ಬಾಜಪ ಕೇಂದ್ರಿತ ನಕಾರಾತ್ಮಕವಾಗಿಯೇ ಮತ ಚಲಾವಣೆ ಮಾಡುವುದೇ ಆದರೆ ಅದರ ಮುಂದಿರುವ ಉತ್ತಮ ಆಯ್ಕೆಯೆಂದರೆ ಬಹುಜನ ಪಕ್ಷ ಮಾತ್ರವೆನಿಸುತ್ತದೆ.