May 30, 2016

ಆತಂಕದ ಸುಳಿಯಿಂದೊರಬಂದ ಬದುಕಿನ ಸುಂದರತೆ

ಡಾ. ಅಶೋಕ್. ಕೆ. ಆರ್
30/05/2016
ಮಲೆನಾಡಿನ ಮಡಿಲಲ್ಲಿರುವ ಸುಂದರ ಹಳ್ಳಿಯದು. ಒಂದಷ್ಟು ಸಾಬರಿದ್ದಾರೆ ಒಂದಷ್ಟು ಹಿಂದೂಗಳಿದ್ದಾರೆ. ಒಂದು ಮಸೀದಿಯಿದೆ ಒಂದು ಮಠವಿದೆ. ಒಬ್ಬ ಮೌಲ್ವಿಯಿದ್ದಾನೆ ಒಬ್ಬ ಮಠದಯ್ಯನಿದ್ದಾನೆ. ಇದೇ ಊರಿನಲ್ಲಿ ಜನರ ಸುಲಿಯುವ ಬಡ್ಡಿ ವ್ಯಾಪಾರಿ ಶೆಟ್ಟಿಯಿದ್ದಾನೆ. ನಗರದಿಂದ ದೂರವಿರುವ ಬೆಟ್ಟದ ಮೇಲಿರುವ ಹಳ್ಳಿಯ ಜನರಿಗೆ ಸಾಮಾನು ಸರಂಜಾಮನ್ನು ಕತ್ತೆ ಮೇಲೆ ಹೊತ್ತು ತರುವ ಅದೇ ಊರಿನ ಬುಡೇನ ಸಾಬನಿದ್ದಾನೆ. ಇಂತಿಪ್ಪ ಬುಡೇನ ಸಾಬನಿಗೆ ಮೂವರು ಹೆಣ್ಣುಮಕ್ಕಳು, ಅವರೆಲ್ಲರೂ ನಿಖಾ ವಯಸ್ಸಿಗೆ ಬಂದಿದ್ದಾರೆ. ಎರಡನೇ ಮಗಳಿಗೆ ನಿಖಾ ಗೊತ್ತಾಗಿದೆ. ಮೊದಲ ಮಗಳು ಶಬ್ಬುವಿನ ಮದುವೆಯಾಗದೆ ಎರಡನೇ ಮಗಳ ಮದುವೆ ಮಾಡಲು ಬುಡೇನ ಸಾಬನಿಗೆ ಮನಸ್ಸಿಲ್ಲ. ಮೊದಲ ಮಗಳಿಗೆ ನಿಖಾ ನಿಕ್ಕಿಯಾಗುತ್ತಿಲ್ಲ. ಕಾರಣ ಆಕೆ ಮೂಗಿ. ಮಾತು ಬರದ ಒಳ್ಳೆ ಮನಸ್ಸಿನ ಹುಡುಗಿಯ ಮದುವೆಯ ಚಿಂತೆ ಬುಡೇನ ಸಾಬನ ಜೀವನೋತ್ಸಾಹವನ್ನೇನೂ ಕಸಿದಿರುವುದಿಲ್ಲ. 

ಬೆಟ್ಟದ ಮೇಲಿನ ದರ್ಗಾಕ್ಕೆ ಹೋಗುವವರು ಮಸೀದಿಯಲ್ಲಿ ತಂಗಿ ಹೋಗುವುದು ಸಾಮಾನ್ಯ. ಹೀಗೇ ದರ್ಗಾಕ್ಕೆಂದು ಹೋಗಲು ಬಂದ ವಾಸೀಮನೆಂಬ ಅನಾಥ ಹುಡುಗ ಮಸೀದಿಯಲ್ಲೇ ಉಳಿದುಕೊಳ್ಳುತ್ತಾನೆ. ಮೌಲ್ವಿ ಸಾಹೇಬರಿಗೆ ಹುಷಾರಿಲ್ಲದಾಗ ಊರಿನ ಜನರಿಗೆ ನಮಾಜು ಮಾಡಿಸುವುದಕ್ಕೆ ಮುಂದಾಳತ್ವ ವಹಿಸುತ್ತಾನೆ. ನಮಾಜು ಮಾಡಿಸಿದರಷ್ಟೇ ಸಾಲದು, ಜನರ ಕಷ್ಟಕ್ಕೂ ನೆರವಾಗಬೇಕು ಎಂದು ಹೇಳುತ್ತಾ ಬಡ್ಡಿ ವ್ಯಾಪಾರಿ ಶೆಟ್ಟಿಯಿಂದ ಸಾಲಕ್ಕೆ ದುಡ್ಡು ತೆಗೆದುಕೊಂಡು ತೊಂದರೆಗೀಡಾಗಿದ್ದ ಮುಶ್ತಾಕನ ಕುಟುಂಬಕ್ಕೆ ನೆರವಾಗುತ್ತಾನೆ. ಮುಶ್ತಾಕನನ್ನು ಅರಬ್ಬಿಗೆ ದುಡ್ಡು ದುಡಿಯಲು ಕಳುಹಿಸುತ್ತಾನೆ. ಊರಿನ ಇತರ ಸಾಬರು ನಮ್ಮನ್ನೂ ಅರಬ್ಬಿಗೆ ಕಳುಹಿಸಿ ಪುಣ್ಯ ಕಟ್ಟಿಕೋ ಎನ್ನುತ್ತಾರೆ. ಈ ಮಧ್ಯೆ ಮೌಲ್ವಿಯ ಸಲಹೆಯಂತೆ ಬುಡೇನ ಸಾಬನ ದೊಡ್ಡ ಮಗಳ ನಿಖಾ ವಾಸೀಮನೊಂದಿಗೆ ನಡೆಯುತ್ತದೆ. ವಾಸೀಮ ಮನೆ ಅಳಿಯನಾಗಿ, ಬುಡೇನ ಸಾಬನ ಕೆಲಸಗಳನ್ನೆಲ್ಲ ಇಚ್ಛೆಯಿಂದ ಮಾಡುತ್ತ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಕಡಿಮೆ ಮಾತಿನ, ಸಹಾಯ ಮನೋಭಾವದ, ಧರ್ಮಬೀರು ವಾಸೀಮನೇ ಆತಂಕದ ಸುಳಿಯನ್ನೊತ್ತು ತರುತ್ತಾನೆ ಎಂಬ ಸುಳಿವೂ ಬುಡೇನ ಸಾಬನ ಕುಟುಂಬಕ್ಕಾಗಲೀ ಊರವರಿಗಾಗಲೀ ತಿಳಿಯುವುದೇ ಇಲ್ಲ.
ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.

ವಾಸೀಮ ಧರ್ಮಬೀರುವಲ್ಲ, ಧರ್ಮಾಂಧ ಎಂದು ಒಂದೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್. ಬುಡೇನ ಸಾಬರಿಗೆ ಮಠದಯ್ಯ ಆಪ್ತ. ಮಠದಲ್ಲಿ ಕುಳಿತು ಮಠದಯ್ಯನವರೊಡನೆ ಹರಟುತ್ತ ಕಡ್ಲೆಕಾಯಿ ಮೆಲ್ಲುತ್ತಿರುವಾಗ ವಾಸೀಮ್ ಮತ್ತು ಶಬ್ಬು ಬರುತ್ತಾರೆ. ಹಿಂದೂ ಮಠದಲ್ಲಿ ಸಾಬರು ಕುಳಿತು ಮಾತನಾಡುವುದು, ತನ್ನ ಹೆಂಡತಿ ಆ ಮಠದಯ್ಯನಿಗೆ ಬೇಕಾದ ಗಿಡಮೂಲಿಕೆಗಳನ್ನು ತಂದುಕೊಡುವುದು ವಾಸೀಮನಿಗೆ ಸರಿ ಕಾಣುವುದಿಲ್ಲ. ತಗಪ್ಪ ತಿನ್ನು ಎಂದು ಮಠದಯ್ಯ ವಾಸೀಮನಿಗೆ ಎರಡು ಬಾಳೆಹಣ್ಣು ಕೊಡುತ್ತಾನೆ. ನಾನು ಹೊರಗಿರ್ತೀನಿ ಎಂದ್ಹೇಳಿ ಬರುವ ವಾಸೀಮ್ ಅದನ್ನು ತಿನ್ನದೆ ಹಾಗೇ ಜಗುಲಿಯ ಮೇಲಿಡುತ್ತಾನೆ. ಅನ್ಯ ಮತದವರು ಕೊಟ್ಟಿದ್ದನ್ನೂ ತಿನ್ನದಷ್ಟೂ ಮತಾಂಧ ವಾಸೀಮ್. ಆತ ಈ ಕಾಡಳ್ಳಿಗೆ ಬಂದ ಉದ್ದೇಶ ನಗರದಲ್ಲಿ ಬಾಂಬು ಸ್ಪೋಟಿಸಿ ಅಮಾಯಕರನ್ನು ಹತ್ಯೆಗೈದು ಮತ್ತೆ ಕಾಡಳ್ಳಿಯಲ್ಲಿ ಸುಲಭವಾಗಿ ತಲೆಮರೆಸಿಕೊಂಡುಬಿಡಬಹುದೆಂದು. ಆಗೀಗ ಅವನ ಭಯೋತ್ಪಾದಕ ಗೆಳೆಯರೂ ಬರುತ್ತಾರೆ. ಕೊನೆಗೊಂದು ದಿನ ಬುಡೇನ ಸಾಬನಿಗೆ ತನ್ನಳಿಯನ ನಿಜರೂಪ ತಿಳಿಯುತ್ತದೆ, ಆಕಸ್ಮಿಕವಾಗಿ ಬುಡೇನ ಸಾಬನ ಕೈಯಿಂದಲೇ ವಾಸೀಮನೆಂಬ ಕ್ರಿಮಿಯ ಹತ್ಯೆಯಾಗಿಬಿಡುತ್ತದೆ. ಮನೆಯಲ್ಲಿ ಶಬ್ಬು ಗರ್ಭಿಣಿ, ಆಕೆಯ ಗಂಡ, ತನ್ನಳಿಯನನ್ನೇ ಕೊಲೆ ಮಾಡಿದ ಬುಡೇನ ಸಾಬನ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗಿ ಕೊನೆಗೇನು ಆತ ಹುಚ್ಚನಾಗುತ್ತಾನಾ? ಶಬ್ಬುವಿಗೆ ವಿಷಯ ತಿಳಿಯುತ್ತದಾ? ಊರವರ ದೃಷ್ಟಿಯಲ್ಲಿ ಎತ್ತರದ ಸ್ಥಾನದಲ್ಲಿದ್ದ ಬುಡೇನ ಸಾಬ ಅಳಿಯನ ಕೃತ್ಯದಿಂದ ಪಾತಾಳಕ್ಕಿಳಿದುಬಿಡುತ್ತಾನಾ? 

ಭಯೋತ್ಪಾದನೆಯ ಬಗೆಗಿನ ಚಿತ್ರವಿದು, ಆದರೆ ಆತಂಕದೊಂದಿಗೇ ನೋಡುವ ಚಿತ್ರವಲ್ಲ. ಇಡೀ ಚಿತ್ರದಲ್ಲೊಂದು ಲವಲವಿಕೆಯಿದೆ. ನಾಯಕ ಬುಡೇನ ಸಾಬನ ಪಾತ್ರವೇ ಹೊಸತನದ್ದು. ಕತ್ತೆ ಮೇಲೆ ಸಾಮಾನು ಹೊತ್ತು ತರುವ ಎಷ್ಟು ಪ್ರಮುಖ ಪಾತ್ರಗಳನ್ನು ನಾವು ಚಿತ್ರಗಳಲ್ಲಿ ನೋಡಿದ್ದೇವೆ ಹೇಳಿ? ಇನ್ನು ಅಕ್ಕ – ತಂಗಿಯರ ಪ್ರೀತಿ, ಮುನಿಸು, ಹಾಸ್ಯವೆಲ್ಲವೂ ಚಿತ್ರದಲ್ಲಿದೆ. ಕೋಮುಸಾಮರಸ್ಯವೆಂಬುದು ಬಲವಂತವಾಗಿ ಹೇರಿಕೊಳ್ಳುವಂತದ್ದಲ್ಲ, ಅದು ಸಹಜವಾಗಿ ಜನರ ನಡುವೆ ಅಸ್ತಿತ್ವದಲ್ಲಿರುವಂತದ್ದು ಎಂದು ತುಂಬಾ ನೈಜವಾಗಿ ತೋರಿಸಿದ್ದಾರೆ ನಿರ್ದೇಶಕರು. ಚಿತ್ರದ ಕೆಲವು ದೃಶ್ಯಗಳು, ಆಟದ ಪಿಸ್ತೂಲಿನ ಬಳಕೆ ಚಿತ್ರದ ಬಜೆಟ್ಟು ತುಂಬಾ ಕಡಿಮೆಯಿತ್ತೇನೋ ಎಂಬ ಭಾವ ಮೂಡಿಸಿದರೆ ಬಜೆಟ್ಟಿನ ಬಗ್ಗೆ ಮತ್ತಷ್ಟು ಯೋಚನೆ ಬರದಂತೆ ಮಾಡುವುದು ಛಾಯಾಗ್ರಹಣ. ಮತ್ತಿಡೀ ಚಿತ್ರಕ್ಕೊಂದು ದೃಶ್ಯಕಾವ್ಯದ ಭಾವವನ್ನು ಕೊಟ್ಟಿರುವುದು ಮಲೆನಾಡ ಹಸಿರ ಚಿತ್ರಣ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಬುಡೇನ ಸಾಬರ ಪಾತ್ರದಲ್ಲಿ ಒಂದಾಗಿಬಿಟ್ಟಿದ್ದಾರೆ. ಅವರ ಚಿತ್ರಜೀವನದಲ್ಲಿನ ಅತ್ಯುತ್ತಮ ಅಭಿನಯಗಳಲ್ಲಿ ಇದೂ ಒಂದು. ಶಬ್ಬು, ಮಠದಯ್ಯ ಮತ್ತು ಶೆಟ್ಟಿ ನೆನಪಿನಲ್ಲುಳಿಯುವಂತೆ ಅಭಿನಯಿಸಿದ್ದಾರೆ. ವಾಸೀಮನ ತಣ್ಣನೆಯ ಕ್ರೌರ್ಯ ಕಣ್ಣಲ್ಲೇ ವ್ಯಕ್ತವಾಗುವಷ್ಟು ಶಕ್ತವಾಗಿದೆ. ಇನ್ನುಳಿದ ಪಾತ್ರಗಳ ಅಭಿನಯವೂ ಚಿತ್ರಕ್ಕೆ ಪೂರಕವಾಗಿದೆ. ಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದೇನಲ್ಲ. ತಾಂತ್ರಿಕ ಲೋಪಗಳು ಹಲವಿವೆ. ಪಕ್ಕದ ನಗರದಲ್ಲೇ ಬಾಂಬು ಸ್ಪೋಟ ನಡೆದು ಅಮಾಯಕ ಮಕ್ಕಳು ಸಾವಿಗೀಡಾದರೂ ಊರಿನವರಲ್ಲಿ ಏನೊಂದೂ ಬದಲಾಗದಿರುವುದು ಕೊಂಚ ಅಚ್ಚರಿ ಮೂಡಿಸುತ್ತದೆ. ಅಲ್ಲಲ್ಲಿ ಚಿತ್ರಕತೆ ಕೊಂಚ ಬಿಗಿಯಾಗಿರಬೇಕೆಂದೆನ್ನಿಸುವುದು ಸುಳ್ಳಲ್ಲ. 

ಪ್ರಸ್ತುತ ವಿಷಯವೊಂದರ ಮೇಲೆ ಬೆಳಕು ಚೆಲ್ಲುವ ‘ಸುಳಿ’ ಸಿನಿಮಾ ಬಹುತೇಕರಿಗೆ ತಲುಪುವುದೇ ಇಲ್ಲ. ನಾನು ಸಿನಿಮಾ ಮಂದಿರಕ್ಕೆ ಹೋದಾಗ ನಮ್ಮನ್ನೂ ಸೇರಿಸಿ ಚಿತ್ರಮಂದಿರದಲ್ಲಿದ್ದದ್ದು ಎಂಟು ಮಂದಿಯಷ್ಟೇ. ಈ ಚಿತ್ರದ ಸೋಲಿಗೆ ಮೂವರು ಕಾರಣರು. ಚಿತ್ರದ ಬಗ್ಗೆ ಹೆಚ್ಚೇನು ಪ್ರಚಾರ ಕೊಡದೆ ಸಾಯಿಸಿದ ಚಿತ್ರತಂಡ, ಅನ್ಯಭಾಷೆಯ ಚಿತ್ರಗಳಿಗೆ ಸಲ್ಲದ ಪ್ರಚಾರ ಕೊಡುವ ದೃಶ್ಯವಾಹಿನಿಗಳಲ್ಲಿ ನಮ್ಮದೇ ಚಿತ್ರದೆಡೆಗಿರುವ ಅಸಡ್ಡೆ ಹಾಗೂ ಗೊತ್ತೇ ಇರದ ಭಾಷೆಯ ಉತ್ತಮ ಸಿನಿಮಾಗಳನ್ನು ಹುಡುಕುಡುಕಿ ನೋಡುವ ‘ಪ್ರಜ್ಞಾವಂತ’ ಪ್ರೇಕ್ಷಕರೂ ಈ ಚಿತ್ರವನ್ನು ನೋಡಿ ಇತರರಿಗೆ ತಿಳಿಸುವ ತೊಂದರೆ ತೆಗೆದುಕೊಳ್ಳದೇ ಇರುವುದು. ಆಮೇಲಿದ್ದೇ ಇದೆಯಲ್ಲ, ಕನ್ನಡದಲ್ಲಿ ಎಲ್ರೀ ಒಳ್ಳೆ ಸಿನಿಮಾಗಳು ಅನ್ನೋ ಹಳಹಳಿಕೆ. ಇಡೀ ಚಿತ್ರದಲ್ಲಿ ಸಾಬರ ಪಾತ್ರಗಳೇ ಇರುವುದು ಕೂಡ ಚಿತ್ರದ ಬಗ್ಗೆ ಎಲ್ಲೂ ಹೆಚ್ಚೂ ಚರ್ಚೆಯಾಗದಿರುವುದಕ್ಕೆ ಕಾರಣವೆಂದರೆ ತಪ್ಪಾಗಲಾರದು. ಕೊನೆಗೆ ಭಯೋತ್ಪಾದಕನನ್ನು ಸಾಬಿಯಲ್ಲದೇ, ಮಠದಯ್ಯನೋ ಶೆಟ್ಟಿಯೋ ಒಂದಷ್ಟು ವೀರಾವೇಶದಿಂದ ಕೊಂದುಬಿಟ್ಟಿದ್ದರೂ ಚಿತ್ರ ಗೆದ್ದುಬಿಡುತ್ತಿತ್ತೇನೋ! ಇರೋದ್ರಲ್ಲಿ ನಮ್ಮ ಕನ್ನಡ ಪತ್ರಿಕೆಗಳೇ ವಾಸಿ, ಈ ಚಿತ್ರದ ಬಗ್ಗೆ ಚೆಂದದ ವಿಮರ್ಶೆಗಳನ್ನು ಬರೆದು ಒಂದು ನಾಲಕ್ಕು ಜನರಿಗಾದರೂ ತಿಳಿಸಿವೆ. 6-5=2 ಯಿಂದ ಕನ್ನಡ ಸಿನಿಮಾರಂಗಕ್ಕೆ ಶುರುವಾದ ದೆವ್ವದ ಕಾಟ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ. ದೆವ್ವದ ಚಿತ್ರಗಳ ಸುಳಿಯಲ್ಲಿ ಸಿಲುಕಿಹಾಕಿಕೊಂಡಿರುವ ಪ್ರೇಕ್ಷಕನಿಗೆ ಮನುಷ್ಯನೇ ದೆವ್ವ ಮನುಷ್ಯನೇ ದೈವ ಎಂದು ತಿಳಿಸುವ ‘ಸುಳಿ’ ಚಿತ್ರ ಪ್ರಿಯವಾಗುವುದು ಹೇಗೆ ಸಾಧ್ಯ ಅಲ್ಲವೇ? ಚಿತ್ರಮಂದಿರದಿಂದತೂ ಸುಳಿ ಬೇಗ ಮರೆಯಾಗುತ್ತದೆ, ಟಿವಿಯಲ್ಲಿ ಬಂದಾಗಲಾದರೂ ನೋಡಿ.

No comments:

Post a Comment