Oct 24, 2020

ಒಂದು ಬೊಗಸೆ ಪ್ರೀತಿ - 85 - ಕೊನೆಯ ಅಧ್ಯಾಯ.

ಡಾ. ಅಶೋಕ್.‌ ಕೆ. ಆರ್.
ರಾಜೀವ್‌ಗೆ ಡೈವೋರ್ಸ್‌ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್‌ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್‌ ಹತ್ರ ಹೊಸ ಮಾಲ್‌ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್‌ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು. 

ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್‌ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ. 

ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್‌ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ. 

Oct 17, 2020

ಒಂದು ಬೊಗಸೆ ಪ್ರೀತಿ - 84

ಬದುಕು ಬದಲಾಗಲು ತುಂಬ.... ತುಂಬ ಅಂದರೆ ತುಂಬಾ ಕಡಿಮೆ ಸಮಯ ಬೇಕು. ನಿನ್ನೆಯವರೆಗೂ ಜೊತೆಯಲ್ಲಿದ್ದವರು, ಜೊತೆಯಲ್ಲಿದ್ದು ಹರಟಿದವರು, ಹರಟಿ ಕಷ್ಟ ಸುಖಕ್ಕಾದವರು, ಕಷ್ಟ ಸುಖಕ್ಕಾಗುತ್ತಾ ಜೀವನ ಪೂರ್ತಿ ಜೊತೆಯಲ್ಲಿಯೇ ಇರುತ್ತೀವಿ ಅಂತ ನಂಬಿಕೆ ಚಿಗುರಿಸಿದವರು, ಚಿಗುರಿದ ನಂಬುಗೆಯನ್ನು ಮರವಾಗಿಸಿದವರು ಇದ್ದಕ್ಕಿದ್ದಂತೆ ದೊಡ್ಡದೊಂದು ಜೆ.ಸಿ.ಬಿ ಹೊತ್ತು ತಂದು ಮುಲಾಜೇ ಇಲ್ಲದೆ ಬೇರು ಸಮೇತ ಆ ಮರವನ್ನು ಉರುಳಿಸಿಬಿಟ್ಟರೆ ಅದನ್ನು ತಡೆದುಕೊಳ್ಳುವುದು ಮನುಷ್ಯ ಮಾತ್ರರಿಗೆ ಸಾಧ್ಯವೇ? ನಾ ತಡೆದುಕೊಂಡೆ. ಸಾಗರ ಹೇಳ್ತಾನೇ ಇರ್ತಾನಲ್ಲ ನೀ ದೇವತೆ ಅಂತ! ಇದ್ರೂ ಇರಬಹುದೇನೋ ಅಂತಂದುಕೊಂಡು ನಕ್ಕೆ. 

ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಡೈವೋರ್ಸ್ ಬಗ್ಗೆ ಯೋಚನೆ ಮಾಡಿದಾಗೆಲ್ಲ ಮದುವೆಯ ದಿನಗಳ ನೆನಪಾಗುತ್ತಿತ್ತು. ಪುರುಷೋತ್ತಮ ಎಷ್ಟೆಲ್ಲ ತೊಂದರೆ ಕೊಟ್ಟರೂ ಅದನ್ನೆಲ್ಲ ಗಮನಕ್ಕೇ ತೆಗೆದುಕೊಳ್ಳದಂತೆ ಪ್ರಬುದ್ಧರಾಗಿ ವರ್ತಿಸಿದ್ದರು ರಾಜೀವ್. ಪುರುಷೋತ್ತಮನನ್ನು ಬಿಡುವುದು ಎಷ್ಟು ಕಷ್ಟದ ಸಂಗತಿಯಾಗಿತ್ತೋ ರಾಜೀವನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಷ್ಟೇ ಸಂತಸವಾಗಿತ್ತು. ತುಂಬಾ ಸರಿಯಾದ ಆಯ್ಕೆ ಅನ್ನಿಸಿತ್ತು. ಎಲ್ಲಾ ನಿರ್ಧಾರಗಳೂ ಹಿಂಗೇ ಒಂದಷ್ಟು ವರುಷಗಳ ನಂತರ ತಪ್ಪು ಅನ್ನಿಸಲು ಶುರುವಾಗಿಬಿಡುತ್ತಾ? ಯಪ್ಪ! ಆ ತರವಾಗಿಬಿಟ್ಟರೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ಅವತ್ತಿಗೆ ಆ ನಿರ್ಧಾರ ಸರಿ ಇವತ್ತಿಗೆ ಈ ನಿರ್ಧಾರ ಸರಿಯಾ? ಡೈವೋರ್ಸ್ ತೆಗೆದುಕೊಳ್ಳುತ್ತಿರುವುದು ರಾಜೀವ ನನ್ನ ಮೇಲೆ ಅನುಮಾನ ಪಟ್ಟ, ಅನುಮಾನ ಪಟ್ಟು ಮನೆಯಲ್ಲಿ ಅಸಹ್ಯದ ವಾತಾವರಣ ಸೃಷ್ಟಿಸಿದ ಅನ್ನುವುದು ಮಾತ್ರ ಕಾರಣವಾ? ಕ್ಷಮೆ ಕೇಳು, ಜೊತೆಯಲ್ಲಿರಿ ಅಂತೇಳಿದ್ರಲ್ಲ ಅವರ ಮನೆಯವರು. ಯಾರೋ ದೂರದವರಲ್ಲವಲ್ಲ ರಾಜೀವು, ಒಂದು ಕ್ಷಮೆ ಬಿಸಾಕಿ ಸರಿ ಮಾಡಿಕೊಳ್ಳಬಹುದಿತ್ತಲ್ಲ. ಯಾಕೆ ಕ್ಷಮೆಯ ದಾರಿಯನ್ನು ನಾ ಆಯ್ದುಕೊಳ್ಳಲಿಲ್ಲ? ಯಾಕೆ ಆಯ್ದುಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ರಾಧ ಅಂದರೆ ತಪ್ಪಲ್ಲ. 

ಹೌದು. ರಾಜೀವ್ ದೊಡ್ಡ ಸಂಬಳದ ಕೆಲಸ ಹಿಡಿಯುವುದು ನನಗೆ ಬೇಕಿರಲಿಲ್ಲ, ನಾ ಅದನ್ನು ಯಾವತ್ತಿಗೂ ನಿರೀಕ್ಷೆಯೂ ಮಾಡಿರಲಿಲ್ಲ. ಹೋಗಲಿ ಅಪ್ಪನ ಮನೆಯಲ್ಲಿ ದಂಡಿಯಾಗಿ ದುಡ್ಡು ಬಿದ್ದಿದೆಯಲ್ಲ, ಹೋಗಿ ಈಸ್ಕೊಂಡು ಬನ್ನಿ ಅಂತ ಗೋಗರೆದಿರಲಿಲ್ಲ, ಅತ್ತು ರಂಪಾಟ ಮಾಡಿರಲಿಲ್ಲ. ಬರೋ ಸಂಬಳದಲ್ಲಿ ಆರಾಮಾಗಿ ಇರುವ ಬಿಡಿ ಅಂತ ಹೇಳುತ್ತಲೇ ಇದ್ದರೂ ಅವರಿಗೇ ವಾಸ್ತವದ ಜೀವನ ಶೈಲಿ ರುಚಿಸುತ್ತಿರಲಿಲ್ಲ. ಮತ್ತಾ ಜೀವನವನ್ನು ಸರಿಪಡಿಸುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅದನ್ನೂ ತಡೆದುಕೊಳ್ಳಬಹುದಿತ್ತು. ಆದರೆ ರಾಧಳೆಡೆಗೆ ಅವರು ತೋರುತ್ತಿದ್ದ ಅಸಡ್ಡೆ, ಅಸಡ್ಡೆ ವ್ಯಕ್ತಪಡಿಸಲು ಅವರು ಬಳಸುತ್ತಿದ್ದ ಕೀಳಾದ ಭಾಷೆ, ಆ ಕೀಳಾದ ಭಾಷೆಯನ್ನು ಶತ್ರುವಿನ ಮಕ್ಕಳಿಗೂ ಬಳಸಬಾರದು, ಬಳಸಬಾರದ ಭಾಷೆಯನ್ನು ಬಳಸಿ ಬಳಸಿ ನನ್ನಲ್ಲೂ ಅವರೆಡೆಗೊಂದು ಅಸಹ್ಯ ಮೂಡಿಸಿಬಿಟ್ಟರು. ಅವರ ಬಗ್ಗೆಯಿದ್ದ ಗೌರವ ದಿನೇ ದಿನೇ ಚೂರ್ಚೂರೇ ಕಮ್ಮಿಯಾಗಿದ್ದು ನನಗೂ ಗೊತ್ತಾಗಲಿಲ್ಲ. ರಾಮ್ ಮತ್ತು ನನ್ನ ಕಲ್ಪಿತ ಸಂಬಂಧದ ಬಗೆಗಿನ ಜಗಳ ನನ್ನೊಳ ಮನಸ್ಸಿನಲ್ಲಿದ್ದ ಡೈವೋರ್ಸ್ ತಗೊಂಡ್ ಹೋಗಿಬಿಟ್ಟರೆ ಹೇಗೆ ಅನ್ನೋ ದೂರದ ಬೆಟ್ಟವನ್ನು ಹತ್ತಿರವಾಗಿಸಿಬಿಟ್ಟಿತು. ಇದು ಹತ್ತಲಾರದ ಬೆಟ್ಟವೇನಲ್ಲ ಎಂದು ಅರಿವಾದ ಮೇಲೆ ತಿರುಗಿ ನೋಡುವ ಪ್ರಮೇಯ ಮೂಡಲಿಲ್ಲ. 

Oct 10, 2020

ಒಂದು ಬೊಗಸೆ ಪ್ರೀತಿ - 83

"ಅಲ್ಲಾ ನಾನೇನೋ ಗೂಬ್‌ ನನ್ಮಗ.... ಸರಿ ಇಲ್ಲ. ನೀ ಆದ್ರೂ ಸರಿ ಇದ್ದೀಯಲ್ಲ.... ಬದುಕಿದ್ದೀನೋ ಸತ್ತಿದ್ದೀನೋ ಅಂತಾದ್ರೂ ವಿಚಾರಿಸ್ಬೇಕು ಅಂತ ಕೂಡ ಅನ್ನಿಸಲಿಲ್ಲವಲ್ಲ ನಿನಗೆ..... ಯಾವ್ದೋ ಸಿಟ್ಟಲ್ಲಿ ಬೇಸರದಲ್ಲಿ ನಿನ್‌ ನಂಬರ್‌ ಕೂಡ ಡಿಲೀಟ್‌ ಮಾಡ್ಬಿಟ್ಟಿದ್ದೀನಿ ಕಣವ್ವ.... ಮುಚ್ಕಂಡ್‌ ಫೋನ್‌ ಮಾಡು ಬಿಡುವಾದಾಗ". ಸಾಗರನ ಮೆಸೇಜು. ಎಫ್.ಬಿ ಮೆಸೆಂಜರಿನಲ್ಲಿ. ಸಾಗರನ ಮೆಸೇಜು ಮುಖದ ಮೇಲೊಂದು ನಗು ಮೂಡಿಸದೇ ಇದ್ದೀತೆ. ಒಂಚೂರೇ ಚೂರು ನಗು ಮೂಡಿತು. ಬೇಸರದಿಂದಿದ್ದ ಮನಸ್ಸಿಗೆ ಸಾಗರನ ಮೆಸೇಜು ಒಂದಷ್ಟು ಲವಲವಿಕೆ ತರಿಸಿದ್ದು ಸುಳ್ಳಲ್ಲ. 

ʻಇಲ್ಲಪ್ಪ. ಅದ್ಯಾರೋ ಒಬ್ರು ನಾ ಸತ್ತಾಗ್ಲೂ ಮೆಸೇಜ್‌ ಮಾಡ್ಬೇಡ ಅಂದಿದ್ರುʼ ವ್ಯಂಗ್ಯ ಮಾತಾಡೋ ಅವಕಾಶ ಬಿಡುವುದು ಸಾಧುವೇ. 

"ಆಯ್ತಾಯ್ತು. ತಪ್‌ ನಂದೇ. ನಿಂದೂ ತಪ್ಪಿಲ್ಲ ಅಂತಲ್ಲ. ನಾ ತುಂಬಾ ಇಮೆಚ್ಯೂರ್‌ ಆಗಿ ವರ್ತಿಸಿದ್ದೌದು. ಫೋನ್‌ ಮಾಡ್ತೀಯಾ ಇಲ್ವಾ?" 

ʻಮಾಡ್ತೀನಿ ಕಣೋ. ಮಾಡ್ದೇ ಇರ್ತೀನಾ. ಎಷ್ಟ್‌ ಸಲ ಫೋನ್‌ ಮಾಡ್ಬೇಕು ಮಾಡ್ಬೇಕು ಅಂತಂದುಕೊಳ್ಳುತ್ತಲೇ ಇದ್ದೆ. ಅದರಲ್ಲೂ ಕಳೆದೊಂದು ತಿಂಗಳಿನಿಂದʼ 

"ಸುಮ್ನೆ ಡವ್‌ ಕಟ್ತಿ. ಅಷ್ಟೊಂದೆಲ್ಲ ಅಂದುಕೊಂಡಿದ್ರೆ ಮಾಡಿರ್ತಿದ್ದೆ ಬಿಡು" 

ʻಮ್.‌ ಹೋಗ್ಲಿ ಬಿಡು. ನಾ ಏನ್‌ ಹೇಳಿದ್ರೂ ನಂಬಲ್ಲ ನೀನು. ನಂಬಿಕೆ ಕಮ್ಮಿ ಆಗಿರುವ ದಿನಗಳಲ್ಲಿ ಮೌನವಾಗಿರೋದೇ ಒಳ್ಳೇದುʼ 

"ಇದ್ಯಾಕವ್ವ? ಏನೇನೋ ಮಾತಾಡ್ತಿದ್ದಿ. ಏನ್‌ ಆಯ್ತೇ. ಇಸ್‌ ಎವೆರಿತಿಂಗ್‌ ಆಲ್‌ರೈಟ್?"‌ 

ʻಬಿಡೋ. ಫೋನಲ್‌ ಹೇಳ್ತೀನಿ. ಈಗ ಒಪಿಡಿಗೆ ಹೋಗಬೇಕು. ಐದರಷ್ಟೊತ್ತಿಗೆ ಮುಗಿಯುತ್ತೆ. ಆಮೇಲ್‌ ಫೋನ್‌ ಮಾಡ್ತೀನಿ. ನೀ ಬಿಡುವಾಗಿರ್ತೀಯಲ್ಲ?ʼ 

"ನಿಂಗೋಸ್ಕರ ಯಾವಾಗ್ಲೂ ಬಿಡುವಾಗೇ ಇರ್ತೀನಿ ಬಿಡ" 

Oct 3, 2020

ಒಂದು ಬೊಗಸೆ ಪ್ರೀತಿ - 82

ರಾಮ್‌ಪ್ರಸಾದ್‌ ಮುಜುಗರದಿಂದ ಮುದುಡಿ ಕುಳಿತಿದ್ದರು. ಬಿಯರ್‌ ಬಾಟಲಿನ ಮುಚ್ಚಳದಂಚಿದ ಕೆಳಗೆ ಜಾರಿ ಬೀಳುತ್ತಿದ್ದ ನೀರ ಹನಿಗಳನ್ನೊಮ್ಮೆ ನೋಡ್ತಾರೆ, ಬಾಗಿಲ ಕಡೆಗೊಮ್ಮೆ ನೋಡ್ತಾರೆ, ನಂತರ ಟಿವಿಯ ಕಡೆ ಕಣ್ಣಾಡಿಸಿ ಮತ್ತೆ ಬಿಯರ್ರು ಬಾಟಲುಗಳೆಡೆಗೆ ಕಣ್ಣೋಟ ಹರಿಸಿಬಿಡುತ್ತಾರೆ. ಅವರಿಗೇನು! ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ! ಮನೇಲ್ಯಾರೂ ಇಲ್ಲ, ಕುಡಿದೋಗುವ ಅಂತ ಬಂದಿದ್ದಾರೆ ಅಷ್ಟೇ! ಮೇಲ್ನೋಟಕ್ಕೆ ಶಾಂತವಾಗಿ ಕುಳಿತಿದ್ದವಳ ಮನದಲ್ಲಿದ್ದ ಚಿಂತೆಯ ಆಳ ಅಗಲವ್ಯಾವೂ ರಾಮ್‌ಗೆ ಗೊತ್ತೇ ಇಲ್ಲ! ಟೇಬಲ್‌ ಮೇಲೇನೋ ಎರಡೇ ಬಿಯರ್‌ ಇದೆ. ಇವರೊಂದು ಅವರೊಂದು ಕುಡಿದು ಅಲ್ಲಿಗೆ ಮುಗಿಸಿದರೆ ಸರಿ. ಇದರೊಟ್ಟಿಗೆ ಮತ್ತೊಂದಷ್ಟು ಬಿಯರನ್ನು ರಾಜೀವ ಗಂಟಲೊಳಗಿಳಿಸಿದರೆ ಮುಗೀತು ಕತೆ. ನಶೆಯೇರಿದ ಮೇಲೆ ಅವರ ಮಾತುಗಳು ಎತ್ತೆತ್ತಲಿಗೋ ಹೋಗುವುದು ಅಪರೂಪವೇನಲ್ಲ. ಏನಾಗ್ತದೋ ಏನಾಗ್ತದೋ ಅನ್ನೋ ಚಿಂತೆಯಲ್ಲೇ ನನ್ನ ನಿದ್ರೆ ಹಾರಿ ಹೋಗಿತ್ತು. ನಿಮಿಷಕ್ಕೆರಡೆರಡು ಬಾರಿ ರಾಮ್‌ ಕಡೆಗೊಮ್ಮೆ, ಬಾಗಿಲು ಕಡೆಗೊಮ್ಮೆ, ಟಿವಿ ಕಡೆಗೊಮ್ಮೆ ನೋಡುತ್ತಾ ಕುಳಿತೆ. 

ಕೊನೆಗೂ ರಾಜೀವ್‌ ಬಂದರು. ಅದೇನು ಎರಡೇ ನಿಮಿಷಕ್ಕೆ ಬಂದರೋ ಹತ್ತು ನಿಮಿಷಕ್ಕೆ ಬಂದರೋ ಅರ್ಧ ಘಂಟೆಯ ನಂತರ ಬಂದರೋ ಒಂದೂ ತಿಳಿಯಲಿಲ್ಲ ನನಗೆ. ಒಂದು ಯುಗವೇ ಕಳೆದುಹೋದಂತನ್ನಿಸಿತು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡು ಮುಖ ಕಿವುಚಿಕೊಂಡರು. ಥೂ ಅನಿಷ್ಟವೇ ಯಾಕ್‌ ಬಂದೆ ಇವತ್ತು ಅಂದಂತಾಯಿತು. ಅಷ್ಟೆಲ್ಲ ಮುಖ ಕಿವುಚಿಕೊಂಡು ಸಿಟ್ಟು ತೋರಿಬಿಟ್ಟು ನಾ ಅವರಿಬ್ಬರಿಗೂ ಕುಡಿಯುವುದಕ್ಕೇ ಅವಕಾಶ ಕೊಡದಂತೆ ಓಡಿಸಿಬಿಟ್ಟರೆ! ಮುಳುಗುವ ಸೂರ್ಯ ಕೂಡ ಅಷ್ಟು ವೇಗವಾಗಿ ಮೋಡಗಳ ಮೇಲೆ ಬಣ್ಣವನ್ನೆರಚಿರಲಾರ. ಅಷ್ಟು ವೇಗವಾಗಿ ಮುಖದ ಮೇಲೊಂದು ನಗು ಎರಚಿಕೊಂಡು "ಅರೆರೆ... ಇದೇನ್‌ ಬಂದುಬಿಟ್ಟಿದ್ದಿ. ಸುಮಾರ್‌ ಲೇಟಾಯ್ತಲ್ಲ. ಬರೋಲ್ಲವೇನೋ ನೀನು ಅಂದುಕೊಂಡೆ" ಎಂದರು. 

ʻಅಂದುಕೊಳ್ಳೋ ಬದಲು ಫೋನ್‌ ಮಾಡಿದ್ರಾಗಿರೋದುʼ ಎಂದುಕೊಳ್ಳುತ್ತಾʼ ಪಾಪು ಮಲಗಿಬಿಟ್ಟಿದ್ದಳು. ಹಂಗಾಗಿ ತಡವಾಯ್ತುʼ ಎಂದೆ. 

"ಹೌದಾ.... ಹೋಗ್ಲಿ ಬಿಡು. ಒಳ್ಳೇದೇ ಆಯ್ತು. ರಾಮ್‌ ಸಿಕ್ಕಿ ಸುಮಾರು ದಿನಗಳಾಗಿದ್ದವಲ್ಲ. ಇವತ್ಯಾಕೋ ನೆನಪಾಯಿತು. ನೀನೂ ಬರೋ ಹಂಗೆ ಕಾಣಿಸಲಿಲ್ಲವಲ್ಲ. ಫೋನ್‌ ಮಾಡಿ ಕರೆಸಿಕೊಂಡೆ ಅಷ್ಟೇ" 

ʻಮ್.‌ ಏನೇನ್‌ ತಂದ್ರಿ ಪಾರ್ಸಲ್ಲುʼ 

"ಜಾಸ್ತಿ ಇಲ್ಲ. ಒಂದ್‌ ಪ್ಲೇಟ್‌ ಕಬಾಬು, ಒಂದ್‌ ಚಿಲ್ಲಿ ಪೋರ್ಕು, ಎರಡ್‌ ಬಿರಿಯಾನಿ ಅಷ್ಟೇ. ಹೋಗ್ಲಿ ಬಿಡು. ಫ್ರಿಜ್ಜಲ್ಲಿರ್ತದೆ. ನಾಳೆಗಾಗುತ್ತೆ" 

ʻಫ್ರಿಜ್ಜಲ್ಲಿ? ಯಾಕ್‌ ತಿನ್ನಲ್ವ ಈಗʼ 

"ಹೇ... ನೀ ಬರಲ್ಲ ಅಂದ್ಕಂಡು ಮನೇಲೇ ಕೂರೋಣ ಅಂದ್ಕಂಡಿದ್ದೆ. ನೀ ಬಂದುಬಿಟ್ಟಿದ್ದೀಯಲ್ಲ. ಹೊರಗೆ ಎಲ್ಲಾದ್ರೂ ಹೋಗಿ ಕೂರ್ತೀವಿ"