Dec 5, 2009

ಅಹಂ.

ಅಹಮ್ಮಿನ
ಕೋಟೆಯಲ್ಲಿ
ಅಧಿಪತಿಯಾಗಿ ಮೆರೆವಾಗ
ಸಂಬಂಧಗಳಿಗೆ ಬೆಲೆಸಿಗುವುದೇ?
- ಅಭಿ ಹನಕೆರೆ.

ಸಾವಿನಾಚೆ.

ಸಾವಿನಾಚೆಗೊಂದು
ಬದುಕು ಕಟ್ಟಿಕೊಳ್ಳಿ,
ಅಲ್ಲಿ ಸಾವಿನ ಭಯವಿರುವುದಿಲ್ಲ!!
- ಪ್ರಶಾಂತ್ ಅರಸ್ 

ಉತ್ತರಗಳಿಲ್ಲದ ಪ್ರಶ್ನೆ.

ನದಿ ಹರಿದು
ಸಾಗರ ಸೇರೋದು
ಕಳೆದುಹೊಗೋದು
ಪ್ರೀತಿಯಿಂದಲೋ
ಅಥವಾ
ಅಂತ್ಯ ಸಂಸ್ಕಾರಕ್ಕೋ?
- ವಿನಯ್ ಬಿ. ಎಸ್

ಪರಿಹಾರ.

ನನ್ನ
ಸಾವು ಮಾತ್ರ
ನನ್ನ ಕಾಡದ
ನೋವಾಗಬಹುದು. - ಅವಿನಾಶ್ ಹನಕೆರೆ.

ಪ್ರೇರಕ.

ಬದುಕುವ ಆಸೆಗೆ
ಸಾವೇ ಪ್ರೇರಣೆ!
-ಅಶೋಕ್. ಕೆ.ಅರ್

ಕನಸು - ಭ್ರಮೆ.

ಕನಸುಗಲಿರಲಿ ಭ್ರಮೆಯಲ್ಲ
ಕಷ್ಟದ ಸಂಗತಿ ಎಂದರೆ
ಬಹಳಷ್ಟು ಬಾರಿ
ಅವೆರಡಕ್ಕೂ
ವ್ಯತ್ಯಾಸವೇ ತಿಳಿಯುವುದಿಲ್ಲ.
-ಅಶೋಕ್. ಕೆ.ಅರ್

ಅರ್ಥ.

ವ್ಯವಸ್ಥಿತವಾಗಿ
ಅವ್ಯವಸ್ಥೆಯ ಕಡೆಗೆ ಸಾಗುವುದೇ ಜೀವನ.
-ಅಶೋಕ್. ಕೆ.ಅರ್

ಕನಸು.

ವಾಸ್ತವಕ್ಕೆ
ಬಣ್ಣ ತುಂಬಲು
ಕನಸುಗಳಿರಬೇಕು.
-ಅಶೋಕ್. ಕೆ.ಅರ್

ಮುಖವಾಡ 2

ಮುಖವಾಡಗಳ ಮರೆಯಲ್ಲಿ
ಮರೆಯಾದವರು ನಾವು
ಮುಖವಾಡ
ಕಳಚೋಣವೆಂದರೆ
ಅಸಲಿ ಮುಖದ
ಕುರುಹೇ ಇಲ್ಲ!!
-ಅಶೋಕ್. ಕೆ.ಅರ್

ಮುಖವಾಡ

ಇಲ್ಲಿರುವವರು
ನಾವಲ್ಲ,
ನಮ್ಮ
ಮುಖವಾಡಗಳಷ್ಟೇ
-ಅಶೋಕ್. ಕೆ.ಅರ್

Jun 12, 2009

ಅವಳು.

ಮರೆತೆನೆಂದುಕೊಂಡರು
ಮತ್ತೆ ಮತ್ತೆ
ಮರುಕಳಿಸುವ ನೆನಪೇ
ಪ್ರೀತಿ.
- ಪ್ರಶಾಂತ್ ಅರಸ್.

ಛೇ ಛೇ

ನಮ್ಮ ಜನಗಳೇ ಇಷ್ಟು
ಬದುಕಿರೋ ಅಷ್ಟು ದಿನ
ಸಾಯೋದೆ ಇಲ್ವೇನೋ ಅಂಥ
ಬದುಕ್ತಾರೆ;
ಸಾಯೋ ಟೈಮಲ್ಲಿ
ಬದುಕಲೇ ಇಲ್ಲ ಅಂಥ
ಪಶ್ಚಾತಾಪದಿಂದ
ಸಾಯ್ತಾರೆ.
- ಪ್ರಶಾಂತ್ ಅರಸ್.

ಪಾಪಿಯ ಭಾಗ್ಯ.

ಪ್ರೀತಿಯ ಪರದಾಟದಲ್ಲಿ
ಪೇಚಾಡುವುದಕ್ಕಿಂತ
ಪ್ರೀತಿಯೇ ದಕ್ಕದ
ಪಾಪಿಯೇ
ಭಾಗ್ಯವಂತ!!
- ಪ್ರಶಾಂತ್ ಅರಸ್.

ಮರೀಚಿಕೆ.

ತಿಳಿದಷ್ಟೂ ತಿಳಿಯಾಗುವುದು
ತಿಳಿವು;
ದೂರವಿದ್ದಷ್ಟೂ ಹತ್ತಿರವಾಗುವುದು
ಒಲವು;
ಬಚ್ಚಿಕೊಂಡಷ್ಟೂ ಹೆಚ್ಚುವುದು
ಚೆಲುವು;
ತಾಳ್ಮೆಯಿಂದ ಕಾದವನಿಗೆ ಸಿಕ್ಕೇ ಸಿಗುವುದು
ಗೆಲುವು.
- ಪ್ರಶಾಂತ್ ಅರಸ್.

ಪ್ರೇಮಪಾಶ.

ಕಲ್ಪನೆಗೆ ಮೀರಿದ
ಊಹೆಗೂ ನಿಲುಕದ
ಎಂದು ಮುಗಿಯದ
ಭಾವನೆಗಳ ಪಾಶವೇ
ಪ್ರೇಮ!!
- ಪ್ರಶಾಂತ್ ಅರಸ್.

ತೆರೆ ಸರಿದಾಗ.

ನಗುವ ಗುಲಾಬಿ
ಹೂವಿನ ಹಿಂದೆ
ನೋವೆಂಬ ಮುಳ್ಳಿರುತ್ತೆ;
ನಗಿಸುವವರ
ಹೃದಯದಲ್ಲಿ
ನಗಲಾರದಷ್ಟು ನೋವಿರುತ್ತೆ.
- ಪ್ರಶಾಂತ್ ಅರಸ್.

ಇರುಳು.

ಕಾಣದ ಕೈಗಳು
ಕರೆದಾಗ
ಹೊರಟವನು,
ಕಾರಣವಿಲ್ಲದೆ ಅಲೆಯುತಿಹೆನು;
ಗುರಿ ಏನೆಂದು ಅರಿಯದ ನಾನು
ಎಲ್ಲಿಗೆ ತಲುಪುವೆನು?
- ಪ್ರಶಾಂತ್ ಅರಸ್.

ನಿರೀಕ್ಷೆ.

ನಿನ್ನೆ
ಬರಿದಾದರು
ನಾಳೆ
ಬೆಳಕಿಲ್ಲವೇ?
- ಪ್ರಶಾಂತ್ ಅರಸ್.

ವ್ಯಸನ.

ಮರೆಯದ ಮನಸಿನ
ಮಾತು
ಮತ್ತೆ ಮತ್ತೆ ಕರೆದಿದೆ;
ಹೃದಯದ ಕೋಟೆಯ
ಇಂಚು ಇಂಚು
ಕೊರೆಯುತ್ತಲಿದೆ.
- ಪ್ರಶಾಂತ್ ಅರಸ್.

ಲಹರಿ.

ನೀರಿನ ಮೇಲೆ ಮುನಿಸಿಕೊಂಡರೆ
ನಾರುವವರು ನಾವು ತಾನೆ!!
- ಪ್ರಶಾಂತ್ ಅರಸ್.

circle.

ಓಡಿದೆ ಓಡಿದೆ
ಕೊನೆ ಮುಟ್ಟುವ
ತನಕ
ಎಲ್ಲಿಯೂ ನಿಲ್ಲದೆ;
ಕೊನೆಗೂ ಕೊನೆ
ಸಿಗಲಿಲ್ಲ,
ಜೀವನದ circle ಅದುವೇ!!
-ಪ್ರಶಾಂತ್ ಅರಸ್ 

ಅವಳೇ ಕಾರಣ.

ನೆನಪಿನಂಗಳದಿ
ಚಂದಿರನ
ಬೆಳದಿಂಗಳು
ಅವಳ ನಗು;
ವಾಸ್ತವದಲ್ಲಿ ನನ್ನನ್ನು
ಆವರಿಸಿದ
ಅಂಧಕಾರದ
ಅಮಾವಾಸ್ಯೆಯ ಕತ್ತಲು
ಕೂಡ ಅವಳೇ!!
- ಪ್ರಶಾಂತ್ ಅರಸ್ 
- ಪ್ರಶಾಂತ್ ಅರಸ್.

May 5, 2009

ಮರೀಚಿಕೆ.

ಕಾಡುವ ಕನಸು ಕಂಗಳಲ್ಲಿ
ಬೇಡುವ ಬಯಕೆ ಮನದ
ಮೂಲೆಯಲ್ಲಿ,
ಸಿಗಲಾರದು ಎನ್ನುವ
ಕಟು ವಾಸ್ತವದಲ್ಲಿ
ದಿನಗಳು ಉರುಳುತಿದೆ
ಶರವೇಗದಲ್ಲಿ.

- ಅರಸ್ .

Apr 13, 2009

ಭಾವ.

ಭಾವನೆಗಳೇ ಹೀಗೆ

ಭಾವುಕನೇ ಹೀಗೆ

ಒಮ್ಮೆ ಭಾವನೆಗಳ

ಸುಳಿಯಲ್ಲಿ ಜಾರುವ;

ಒಮ್ಮೆ ನಲಿವ;

ಜಾರಿದರೂ

ನಲಿದರೂ

ಭಾವವೇ ಜೀವಾಳ

ಇದೇ ನನ್ನ

ಬದುಕು.

-ವಿನಯ್ ಬಿ ಎಸ್

ನೆರಳು.

ಇಲ್ಲ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚಿಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿದ್ದಾಗ ಕಾರು ಕೆಟ್ಟು ನಿಂತಿತ್ತು. ಈ ಬಾರಿ ಯಾಕೋ ಪ್ರಚಂಡ ಬಿಸಿಲು. ಕಾರಿನ ಎ.ಸಿಯೂಬಂದಾಗಿತ್ತು. 'ಅಲ್ಲೇ ಮರದ ನೆರಳಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ' ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಎರಡಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ!!. ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ಗಾಬರಿಯಾಗಿದ್ದು ತನ್ನ ನೆರಳು ಕಾಣದಿದ್ದಾಗ!

ಅಂದಿನಿಂದ ರಾಜೀವ ಹುಡುಕುತ್ತಲೇ ಇದ್ದಾನೆ. ನೆರಳೇ ಕಾಣಸಿಗುತ್ತಿಲ್ಲ. ದೂರದಲ್ಲೆಲ್ಲೋ ಜನ ಮರದ ಕೆಳಗೆ ನಿಂತಿದ್ದರೆ ಆಸೆಗಣ್ಣುಗಳಿಂದ ಹತ್ತಿರ ಹೋಗುತ್ತಾನೆ ,ನೆರಳಿನ ಗುರುತಿಲ್ಲ. ಯಾರೊಡನೆ ಹೇಳಿಕೊಳ್ಳುವುದೆಂದು ತಿಳಿಯಲಿಲ್ಲ. ತಿಂಗಳ ಹಿಂದೆ ಹೆಂಡತಿಯೊಡನೆ ಜಗಳವಾಡಿದ್ದ. ಮಾತಿನ ನಡುವೆ 'ನನ್ನ ನೆರಳನ್ನೇ ನಂಬೋದಿಲ್ಲ ನಾನು, ಇನ್ನು ನಿನ್ನನ್ನು ನಂಬ್ತೀನಾ?' ಎಂದಿದ್ದ. ಕೋಪಗೊಂಡು ತವರಿಗೆ ಹೋದವಳು ಇನ್ನು ತಿರುಗಿ ಬಂದಿಲ್ಲ. ಸೈಕಿಯಾಟ್ರಿಸ್ಟನಾದರೂ ನೋಡೋಣವೆನ್ದುಕೊನ್ಡ, ಭಯವಾಯಿತು. ಕಾಲೇಜಿನ ದಿನಗಳಲ್ಲಿ ಓದಿದ್ದ ಜೋಗಿಯ ಕಥೆ ನೆನಪಾಯಿತು. ಅ ಕಥೆಯಲ್ಲಿ ಪಾತ್ರವಾಗಿದ್ದ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವುದಿಲ್ಲ. ಅದು ಸಾವಿನ ಮುನ್ಸೂಚನೆಯಾಗಿತ್ತು ಅದರಲ್ಲಿ. ನನಗೂ.....ತಲೆ ಕೊಡವಿದ.

ರಾತ್ರಿ ಸರಿಯಾಗಿ ನಿದ್ರೆಯಾಗಿರಲಿಲ್ಲ. ಡ್ರೈವರ್ ರಜೆಯಿದ್ದ ಕಾರಣ ಕಾರನ್ನು ತೆಗೆದುಕೊಂಡು ಜೆ.ಎಸ್.ಎಸ್. ಕಾಲೇಜಿನ ಹಿಂದಿನ ರಸ್ತೆಯಲ್ಲಿ ಸಯ್ಯಾಜಿರಾವ್ ರಸ್ತೆಯೆಡೆಗೆ ಹೊರಟಿದ್ದ. ಬಲಭಾಗದಲ್ಲಿದ್ದ ಮಸಣದಲ್ಲಿ ಮರದ ಬುಡದಲ್ಲಿ ಮೈಚಾಚಿ ಮಲಗಿತ್ತು ನೆರಳು. ಖುಷಿ ತಡೆಯಲಾಗದೆ ಕಿಟಕಿಯ ಗಾಜಿಳಿಸಿ ಕತ್ತು ಹೊರಹಾಕಿದ; ಸ್ಟೀರಿಂಗ ಕೈ ತಪ್ಪಿತು.....ಎದುರಿಗೆ ದೊಡ್ಡ ಲಾರಿ.......

- ಅಶೋಕ್.

Apr 10, 2009

ಹಿಂಗ್ಯಾಕೆ?

ನನಗೆ ಬೆಳಕಾಗಿದ್ದು
ಅವಳಿಗೆ
ಬಿಸಿಲಾಯಿತು;
ನನಗೆ ನೆರಳಾಗಿದ್ದು
ಅವಳಿಗೆ
ಕತ್ತಲಾಯಿತು;
ನಮ್ಮಿಬ್ಬರಲ್ಲಿ
ಹೊಂದಾಣಿಕೆಎಂಬುದು
ಮರಿಚಿಕೆಯಾಯಿತು.
- ಅಭಿ ಹನಕೆರೆ.

Mar 27, 2009

ನೆಪ

ಉಸಿರು ನೀನೆ,
ಜೀವವು ನೀನೆ
ಅವೆರಡರ ಮಿಲನಕ್ಕೆ ಇರೋ
ನಾನು
ಬರಿ ನೆಪ ಮಾತ್ರ ,
ನೀನಿಲ್ಲದಿರೆ ನಾನಿಲ್ಲ ,,,,
- ವಿನಯ್ ಬಿ ಎಸ್

Feb 28, 2009

ಒಂದು ಪ್ರೀತಿಯ ಹಿಂದಿನ ಹುನ್ನಾರ.

ಆಕೆ ನನ್ನ ಕೊಲೀಗ್. ಬ್ಯಾಂಕಿಗೆ ಬರುವ ಪ್ರತಿ ಗ್ರಾಹಕನೊಟ್ಟಿಗೂ ನಗುನಗುತ್ತಾ ಮಾತಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಕೆ. ತುಂಬಾ ಲವಲವಿಕೆಯಾಗಿರುತ್ತಿದ್ದಳು ಕೂಡ. ಮೈಸೂರಿನಲ್ಲಿ ವಾಸ. ಹುಣಸೂರಿನ ಬ್ಯಾಂಕಿಗೆ ದಿನಾ ಬಂದು ಹೋಗುತ್ತಿದ್ದಳು. ಇಂಟರೆಸ್ಟಿಂಗ್ ಅಂದ್ರೆ , ಪ್ರತಿ ದಿನ ಆಕೆ ಬರುವಾಗ ಅವರಪ್ಪ ಜೊತೆಗೆ ಬರುತ್ತಿದ್ದರು. ಇಡೀ ದಿನ ಅಲ್ಲಿ ಇಲ್ಲಿ ಕಾಲ ಕಳೆದು ಸಂಜೆ ಮಗಳೊಟ್ಟಿಗೆ ವಾಪಸಾಗುತ್ತಿದ್ದರು.

Feb 12, 2009

ಸಮಾಧಿ ಹೋಟ್ಲು.

ಪುಟ ೦೪ [ ಕೊನೆಯ ಪುಟ]
ಊರಲ್ಲಿಳಿದವನಿಗೆ ಅಲ್ಲಿನ ಸುಸಜ್ಜಿತ ಬಸ್ ನಿಲ್ದಾಣ, ನಿಮಿಷಕ್ಕೊಂದರಂತೆ ಸಾಗುವ ಐಷಾರಾಮಿ ವಾಹನಗಳು, ವಾಹನಗಳಿಂದ ಬರುವ ಪಾನಮತ್ತರ ಕೇಕೆ - ಎಲ್ಲವೂ ಅಯೋಮಯ. ತನ್ನ ಮನೆಯ ಕಡೆ ಕಾಲುಹಾಕಿದ. ಹಸಿರು ಹುಲ್ಲ ನಡುವಿದ್ದ ಕಾಲುದಾರಿಯ ಜಾಗದಲ್ಲಿ ಐದಡಿಯ ಡಾಂಬರು ರಸ್ತೆಯಿತ್ತು. 'ಸುಭೋದ್ ಜಂಗಲ್ ರೆಸಾರ್ಟ್ಸ್ ' ಎಂಬ ಫಲಕ ಕಣ್ಣಿಗೆ ಬಿತ್ತು. ತನ್ನ ಮನೆಯ ಕಡೆಗೆ ತಿರುಗಿದವನಿಗೆ ಕಂಡಿದ್ದು ಆಳೆತ್ತರದ ಗೇಟು. ಗೇಟಿನ ಬಳಿ ಒಬ್ಬ ಕಾವಲುಗಾರ ನಿಂತಿದ್ದ. ಈತನನ್ನು ನೋಡಿ ಆತ ಪರಿಚಯದ ನಗೆ ನಕ್ಕು ಹತ್ತಿರ ಬಂದ. ' ಅರೆರೆ ಈತ ಪ್ರಕಾಶನ ಚಿಕ್ಕಪ್ಪನ ಮಗ ಶಂಕರನಲ್ಲವೇ?' ಎಂದುಕೊಳ್ಳುತ್ತಾ ಆತನ ಬಳಿ ಬಂದ. ಕುಶಲೋಪರಿಯೆಲ್ಲಾ ಮುಗಿದ ಮೇಲೆ "ಇದೇನಿದು, ನಮ್ಮ ಮನೆಯ ಜಾಗದಲ್ಲಿ ಯಾವುದೋ ಹೋಟ್ಲಿದ್ದ ಹಾಗಿದೆ?" ಎಂದು ಕೇಳಿದ. ಶಂಕರ ಅಲ್ಲಿ ನಡೆದದ್ದನ್ನು ಹೇಳಿದ. ಉಳಿದ ಊರಿನವರಂತೆ ಪ್ರತಿರೋಧ ತೋರಿಸದೇ ಈ ಊರಿನವರೆಲ್ಲಾ ಹೊರಟುಹೋದ ಮೇಲೆ ಮೊದಲು ಉತ್ತಮ ರಸ್ತೆಗಳನ್ನು ಮಾಡಿದರಂತೆ . ನಂತರ ಯಾರ್ಯಾರೋ ಬಂದು ಸರಕಾರ ಅವರಿಗೆ ಮಂಜೂರು ಮಾಡಿದ ಜಾಗಗಳಿಗೆ ಬೇಲಿ ಸುತ್ತಿ ನಿಧಾನಕ್ಕೆ ಐಶಾರಾಮಿ ಹೋಟೆಲುಗಳನ್ನು ಕಟ್ಟಿದರಂತೆ. ಕಾಡ ನಡುವಿನ ಬಂದುಕುಧಾರಿಗಳಿಂದ ಭಯಪಟ್ಟಿದ್ದ ನಗರದ ಜನ ಮೊದಮೊದಲು ಅಲ್ಲಿಗೆ ಬರಲಿಲ್ಲವಂತೆ. ಎಸ್. ಟಿ. ಎಫ.ನವರು ನಮ್ಮಿಡೀ ಊರಿಗೆ ಸರ್ಪಗಾವಲಾಕಿ ಕಾಯಲಾರಂಭಿಸಿದ ಮೇಲೆ ನಿಧಾನವಾಗಿ ಜನರು ಬರಲಾರಂಭಿಸಿದರು. ಇಂಥಹುದೇ ಇನ್ನು ಹತ್ತು ರೆಸಾರ್ಟ್ಸ್ ಕಟ್ಟಿದ್ದಾರೆ ಉರಿನಲ್ಲಿ " ನಿನ್ನ ಜಾಗದಲ್ಲೇ ನೀನೊಂದು ರಾತ್ರಿ ಇರಬೇಕಾದರೂ ಮುರು ಸಾವಿರ ಕೊಡಬೇಕು ರಾಮಣ್ಣ" ಎಂದ.
"ನಾನೊಮ್ಮೆ ಒಳಗೆ ನೋಡಬೇಕಲ್ಲಾ ಶಂಕರ." ಎಂದು ರಾಮೇಗೌಡ ಕೇಳಿದಾಗ ಶಂಕರ ಮ್ಲಾನವದನನಾದ. ಬೇಸರವನ್ನು ಮರೆಮಾಚಲು ಮುಖದ ಮೇಲೆ ನಗು ತಂದುಕೊಂಡು " ಒಳಗೆ ಏನು ನೋಡ್ತಿ ರಾಮಣ್ಣ. ನನ್ನದು ಇನ್ನೇನು ಡ್ಯುಟಿ ಮುಗೀತು. ಇಲ್ಲೇ ಹತ್ತಿರದಲ್ಲೇ ನನಗೂ ಒಂದು ಮನೆ ಅಂಥ ಕೊಟ್ಟಿದ್ದಾರೆ. ಅಲ್ಲಿಗೆ ಹೋಗೋಣ ನಡಿ." ಎಂದ. ಆತನ ಮುಖದ ಭಾವ ನೋಡಿದ ಮೇಲೆ ಒಳಗೆ ಹೋಗಬೇಕೆಂಬ ಹಂಬಲ ಮತ್ತಷ್ಟು ಹೆಚ್ಚಾಯಿತು.
ನಾನು ನೋಡಲೇಬೇಕು ಎನ್ನುತ್ತಾ ಗೇಟಿನ ಬಳಿ ನಡೆದ. ಡಾಂಬರು ರಸ್ತೆ ಗೇಟಿನ ಒಳಗೂ ಹೋಗಿ ನಾಲ್ಕೈದು ಕವಲೊಡೆದಿತ್ತು. ತನ್ನ ಮನೆಯಿದ್ದ ಜಾಗವನ್ನು ಅಂದಾಜಿನ ಮೇಲೆ ಗುರುತಿಸುತ್ತಾ ನಡೆದ. ಶಂಕರ ಅವನನ್ನು ಹಿಂಬಾಲಿಸಿದ. ಮನೆಯಿದ್ದ ಜಾಗವನ್ನು ಕೆಡವಿ ಅಲ್ಲೊಂದು ಕುಟಿರದಂಥ ಕಟ್ಟಡವಿರುವುದು ಗಮನಕ್ಕೆ ಬಂತು. ಯುವಜೋಡಿಯೊಂದು ಕುಟೀರದ ಎದುರು ಕುಳಿತು ಹರಟುತ್ತಿದ್ದರು. ರಾಮೇಗೌಡ ಗಕ್ಕನೆ ನಿಂತ. " ಇಲ್ಲದಿರೋ ಮನೇನ ಏನು ನೋಡುವುದು" ಎಂದು ತನಗೆ ತಾನೆ ಹೇಳಿಕೊಳ್ಳುತ್ತಾ ಸಮಾಧಿಯ ಕಡೆ ಹೆಜ್ಜೆ ಹಾಕಿದ.
ನೆಲ್ಲಿಮರಗಳನ್ನುರುಳಿಸಿ ಐಶಾರಾಮಿ ವಾಹನಗಳ ನಿಲ್ದಾಣವನ್ನಾಗಿ ಮಾಡಿರುವುದು ಕಾಣಿಸಿತು. ನೆಲ್ಲಿಕಾಯಿ ಕೀಳೋದು ಅಪರಾಧ ಆದರೆ ಮರ ಕಡಿಯೋದು....
ಸಮಾಧಿಯ ಹತ್ತಿರತ್ತಿರ ಬಂದವನಿಗೆ ದುಖ ಉಮ್ಮಳಿಸಿ ಬಂತು, ಯಾರೋ ತಡೆ ಒಡ್ಡಿದಂತೆ ಅಳಲು ಆಗಲಿಲ್ಲ. ಸಮಾಧಿಯ ಅಕ್ಕಪಕ್ಕವಿದ್ದ ತೆಂಗಿನ ಮರಗಳಿಗೆ ಬಿಗಿದ್ದಿದ್ದ ತೂಗುಯ್ಯಾಲೆಯಲ್ಲಿ ಮಲಗಿದ್ದ ಅರೆನಗ್ನ ಯುವತಿಯೊಬ್ಬಳು ಸಿಗರೇಟು ಸೇದುತ್ತಿದ್ದಳು. ಸಮಾಧಿಯ ಸುತ್ತ ಕುರ್ಚಿಗಳಿದ್ದವು. ಪಕ್ಕದಲ್ಲಿ ಪುಟ್ಟ ಶರಾಬಂಗಡಿ. ಅದರ ಮೇಲೆ ಇಂಗ್ಲೀಷಿನಲ್ಲಿ ಏನೋ ಬರೆದಿದ್ದರು. ಬಾರ್ ಎಂಬುದನ್ನು ಓದಿದನಾದರೂ ಅದರ ಹಿಂದಿದ್ದ ಪದದ ಅರ್ಥವಾಗಲಿಲ್ಲ. " ಅದೇನದು ಹೆಸರು" ಪಸೆ ಆರಿತ್ತು."ಅದು ಅದು ...." ಎಂದಾತ ತೊದಲುತ್ತಿದ್ದಂತೆ " ಸಮಾಧಿ ಹೋಟ್ಲು ಅಂತಾನಾ .....?" ಶಂಕರ ತಲೆಯಾಡಿಸಿದ. ಮಂಜಾಗಿದ್ದ ಕಣ್ಣುಗಳಿಂದಲೇ ಸಮಾಧಿಯೆಡೆಗೆ ನೋಡಿ ಹಿಂತಿರುಗಿ ನಡೆಯಲಾರಂಭಿಸಿದ.
'ನಿಮ್ಮ ತಾಯಿ ಸ್ವರ್ಗ ಸೇರೋದು ಖಂಡಿತ'.... ಹುಟ್ಟಿದರೆ ಇಂಥ ಮಗ ಹುಟ್ಬೇಕು ನೋಡು '.................. ತಾಯಿಯ ಶ್ರಾಧ್ಧದ ದಿನ ಅವರಿವರು ಹೇಳಿದ್ದು ಕಿವಿಯಲ್ಲಿ ಗುಂಯ್ಗುಡತೊಡಗಿದವು. ಶಂಕರನಾಡುತ್ತಿದ್ದ ಸಮಾಧಾನದ ಮಾತುಗಳು ಗಾಳಿಯಲ್ಲಿ ಲೀನವಾಗುತ್ತಿತ್ತು.
ಸಮಾಧಿಯ ನೆಪದಲ್ಲಿ ನೀರಾ ಇಳಿಸುವುದನ್ನು ಬಿಟ್ಟ ಜಾಗದಲ್ಲೀಗ.......................... ಗೇಟನ್ನು ರಭಸದಿಂದ ದೂಡಿ ಹೊರನಡೆದ..........

ಘಟ್ಟದ ತಪ್ಪಲಲ್ಲೆಲ್ಲೋ ಮೊರೆದ ಗುಂಡಿನ ಶಬ್ದಕ್ಕೆ ಹಕ್ಕಿಗಳ ಚಡಪಡಿಕೆಯ ಕೂಗು.

ಅಂದಿನಿಂದ ದೇವರು , ಶ್ರಾಧ್ಧ , ಸಮಾಧಿ, ಸರಕಾರಗಳ ಬಗ್ಗೆ ರಾಮೇಗೌಡನಿಗೆ....................

ಮುಕ್ತಾಯ.

Feb 7, 2009

ಸಮಾಧಿ ಹೋಟ್ಲು

ಪುಟ ೦೩
ರಾಮೇಗೌಡನ ಮನೆಗೂ ಭೇಟಿ ನೀಡಿ 'ಯಾವುದೇ ಕಾರಣಕ್ಕೂ ನೀವಿಲ್ಲಿಂದ ತೆರಳಬೇಡಿ. ನಾವು ನಿಮಗಾಗಿ ಹೋರಾಡುತ್ತೇವೆ. ಸರಕಾರದ ಬೂಟಾಟಿಕೆಯ ಮಾತಿಗೆ ಮರುಳಾಗಬೇಡಿ.' ಎಂದೇಳಿ ಒಂದಷ್ಟು ದಿನಸಿಯನ್ನೂ ಪಡೆದು ಹೋಗಿದ್ದರು. ಊರ ಹೈಕಳ ಬಾಯಲ್ಲೆಲ್ಲಾ ಕಾಣದ ಚೀನಾದ ಮಾವೋನ ಹೆಸರು, ನಕ್ಸಲ್ಬಾರಿ ಎಂಬ ಊರಿನ ಹೆಸರು ನಲಿಯಲಾರಂಭಿಸಿತು. ಅವಳ ಮಗ, ಇನ್ನೊಬ್ಬನ ತಂಗಿ, ಮಗದೊಬ್ಬರು ಕೂಡ ಅವರ ಗುಂಪಿಗೆ ಸೇರಿ ಬಂದೂಕಿನೊಡನೆ ಹಳ್ಳಿಗಳಲ್ಲಿ ಓಡಾಡುತ್ತಿದ್ದಾರಂತೆ ಎಂಬ ವಾರ್ತೆ ಕೇಳಿ ಬರುತ್ತಿತ್ತು. ರಾಮೇಗೌಡನ ಮಿತ್ರ ಪ್ರಕಾಶ ಕೂಡ ಅವರೊಡನೆ ಹೋಗಿದ್ದನ್ನು ಕೇಳಿ ವಿಚಲಿತಗೊಂಡಿದ್ದ. ಈ ಮಧ್ಯೆ ಆಗಾಗ ಕಾಡಿನ ನಡುಮಧ್ಯದಿಂದ ಗುಂಡಿನ ಮೊರೆತ ಕೇಳಿಬರುತ್ತಿತ್ತು. ಶತಮಾನಗಳಿಂದ ರಸ್ತೆ ಕಾಣದಿದ್ದ ಪ್ರದೇಶಗಳಲ್ಲೂ ಪೋಲಿಸಿನವರ ವಾಹನಗಳು ಓಡಾಡಲನುಕೂಲವಾಗುವಂತೆ ಮಣ್ಣಿನ ರಸ್ತೆಗಳು ಉಧ್ಭವವಾದವು. ಮೈಲಿಗಳಾಚೆಯ ಊರಲ್ಲಿ ಎರಡೂ ಕಡೆಯ ಜನರ ಹೆಣ ಬಿದ್ದ ಮೇಲೆ ಇನ್ನು ಈ ಉರಿನಲ್ಲಿ ಇರುವುದು ಸರಿಯಲ್ಲವೆಂಬ ಭಾವ ಬಂದು ಅಧಿಕಾರಿಗಳನ್ನು ಭೇಟಿಯಾದ. "ಎಲ್ಲಾ ಸೇರಿ ನಿನಗೆ ಎರಡು ಲಕ್ಷ ಪರಿಹಾರ " ಅಂದರು.
ಮನೆಗೆ ಬಂದು ಹೆಂಡತಿ, ತಂದೆಗೆ ವಿಷಯ ತಿಳಿಸಿದ. ತಂದೆಗೆ ಒಂದಷ್ಟು ಬೇಸರವಾದರೂ ವಾಸ್ತವವನ್ನು ಅರಿತು ಸರಿ ಎಂದರು. 'ಎಲ್ಲಿಗೆ ಹೋಗೋದು' ಎಂಬ ಪ್ರಶ್ನೆ ಮೂಡಿತು. ರಾಮೇಗೌಡನ ತಾತ ಆ ಕಾಲದಲ್ಲಿ ದೂರದ ದುಗ್ಗಳ್ಳಿ ಎಂಬಲ್ಲಿ ತೆಗೆದುಕೊಂಡಿದ್ದ ಮೂರೆಕೆರೆಯ ಜಮೀನಿನ ನೆನಪಾಯಿತು ರಾಮೇಗೌಡನ ತಂದೆಗೆ. "ಆ ಊರಿಗೆ ಹೋಗಿ ಬರುವ ದುಡ್ಡಿನಿಂದ ಇನ್ನೊಂದೆರಡು ಎಕರೆ ಜಮೀನು ತೆಗೆದುಕೊಂಡು ವ್ಯವಸಾಯ ಆರಂಭಿಸೋಣ "ಎಂದರು ತಂದೆ. ಇವನೂ ಒಪ್ಪಿದ. ಎಲ್ಲರ ಕೈದಾಟಿ ರಾಮೇಗೌಡನ ಕೈಗೆ ಒಂದೂವರೆ ಲಕ್ಷ ಬಂತು. ಹೋಗುವ ಮುನ್ನ ತಾಯಿಯ ಸಮಾಧಿಯ ಬಳಿ ನಿಂತವನಿಗೆ ಅಳು ತಡೆಯಲಾಗಲಿಲ್ಲ. ಸುತ್ತಮುತ್ತ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಒಂದಷ್ಟು ನೆಲ್ಲಿ ಕಿತ್ತುಕೊಂಡು ಜೇಬಿಗಿಳಿಸಿದ.

ಕಾಲಿಟ್ಟಲ್ಲೆಲ್ಲಾ ಹಸಿರೇ ಕಂಡವನಿಗೆ ಅಲ್ಲೊಂದಿಲೊಂದು ಮರವಿರುವ ದುಗ್ಗಳ್ಳಿ ಮರುಭುಮಿಯಂತೆಯೇ ಕಂಡಿತ್ತು.ನಿಧಾನಕ್ಕೆ ಆ ಭಾಗದ ಹವಾಮಾನಕ್ಕೆ ಆರಂಭ ಪದ್ಧತಿಗೆ ಹೊಂದಿಕೊಂಡರು. ಘಟ್ಟದ ಹಸಿರು ರಕ್ತದಿಂದ ತೊಯ್ದುಹೊಗುತ್ತಿದ್ದುದನ್ನು ಕೇಳಿ ಬೇಸರಗೊಳ್ಳುತ್ತಿದ್ದ. ರಾಮೇಗೌಡನ ಊರಿನ ಬಹುತೇಕ ಮಂದಿ ಸಿಕ್ಕಷ್ಟು ಪರಿಹಾರ ತೆಗೆದುಕೊಂಡು ಊರು ತೊರೆದಿದ್ದರು. ಪ್ರಕಾಶನ ಛಿದ್ರಗೊಂಡ ದೇಹವನ್ನು ಪತ್ರಿಕೆಯಲ್ಲಿ ನೋಡಿದ ಮೇಲೆ ಮನಸ್ಸು ಅಸ್ತವ್ಯಸ್ತಗೊಂಡಿತ್ತು.
ದುಗ್ಗಳ್ಳಿಗೆ ಬಂದು ಎರಡು ವರ್ಷವಾಗಿತ್ತು. ಸಂಬಂಧಿಕರೊಬ್ಬರು ಸತ್ತಿದ್ದ ಕಾರಣ ಘಟ್ಟಕ್ಕೆ ಹೋಗಬೇಕಾಗಿ ಬಂತು. ಅವನ ಊರಿನಿಂದ ಇಪ್ಪತ್ತು ಮೈಲಿಯೀಚೆಯ ಊರದು. ಪಟ್ಟಣಕ್ಕೆ ಬಂದು ಘಟ್ಟಕ್ಕೆ ಹೋಗುವ ಬಸ್ಸನೇರಿದ. ಊರು ತಲುಪುವ ಮೊದಲು ಮೂರೂ ಬಾರಿ ಎಸ್.ಟಿ.ಎಫ ನವರು ಬಸ್ಸು ತಡೆದು ಎಲ್ಲರನ್ನೂ ಎಲ್ಲವನ್ನು ಪರೀಕ್ಷಿಸಿದ್ದರು, ಹೈರಾಣಾಗಿದ್ದ. ಸಾವಿನ ಕಾರ್ಯವೆಲ್ಲಾ ಮುಗಿಯುವ ವೇಳೆಗೆ ಸಂಜೆಯಾಗಿತ್ತು. ತಾಯಿಯ ಸಮಾಧಿಯ ಬಳಿ ಹೋಗುವ ಮನಸ್ಸಾಯಿತು. 'ಉರಲ್ಲ್ಯಾರಾದರೂ ಇದ್ದಾರಾ ಹೇಗೆ?' ಎಂದು ವಿಚಾರಿಸಿದ. ' ಹೋಗೋದು ಬೇಡ ಸರಿಯಿಲ್ಲ ಅಲ್ಲಿ ಈಗ' ಎಂದರು. ಅವರ ಮಾತನ್ನು ಕೇಳಿಸಿಕೊಳ್ಳದವನಂತೆ ಊರಿನ ಬಸ್ಸಿಡಿದ. ಕಲ್ಲು ಜಲ್ಲಿ ಇದ್ದ ಜಾಗದಲ್ಲಿ ನುಣುಪಾದ ರಸ್ತೆ ಮೈ ಚಾಚಿಕೊಂಡಿತ್ತು. ಉರ ಜನರನ್ನೆಲ್ಲಾ ಸ್ಥಳಾಂತರಿಸಿದ ಮೇಲೆ ಇಷ್ಟು ಚೆಂದದ ರಸ್ತೆಯಾಕೋ ಅಂದುಕೊಂಡ.
ಉರಿಗಿನ್ನೊಂದು ಮೈಲಿಯಿರುವಾಗ " ನಿಸರ್ಗ ಪ್ರವಾಸೋದ್ಯಮ ವಲಯಕ್ಕೆ ಸ್ವಾಗತ " ಎಂಬ ಬೋರ್ಡು ಕಾಣಿಸಿತು...
[ಮುಂದುವರೆಯುವುದು...]

Jan 30, 2009

ಸಮಾಧಿ ಹೋಟ್ಲು...

ಪುಟ ೦೨
ರಾಮೇಗೌಡ ಆಗಿನ್ನೂ ಮಲೆನಾಡಿನಲ್ಲಿದ್ದ. ಘಟ್ಟದ ಮೇಲೆ. ಆಸ್ತಿಯೆಂಬೋದು ಬಹಳವಿರಲಿಲ್ಲವಾದರೂ ಮನೆಯವರೆಲ್ಲಾ ಮೈಮುರಿದು ದುಡಿಯುತ್ತಿದ್ದುದರಿಂದ ಊಟ ಬಟ್ಟೆಗೆ ಕೊರತೆಯಿರಲಿಲ್ಲ, ದುಂದುವೆಚ್ಚ ಮಾಡುತ್ತಿರಲಿಲ್ಲವಾಗಿ ದುಡ್ಡನ್ನೂ ಹೊಂದಿಸಿಟ್ಟಿದ್ದರು. ಐದು ವರ್ಷದ ಹಿಂದೆ ರಾಮೇಗೌಡನ ತಾಯಿ ಅಕಾಲ ಮರಣಕ್ಕೆ ತುತ್ತಾದಾಗ ತಂದೆ 'ವೃಥಾ ಖರ್ಚು' ಎಂದರೂ ಲೆಕ್ಕಿಸದೆ ಹಳ್ಳಿಗೆ ಹಳ್ಳಿಯೇ ನಿಬ್ಬೆರಗಾಗುವಂತೆ ಶ್ರಾದ್ಧ ಕಾರ್ಯ ಮಾಡಿದ್ದ. ಊರವರೆಲ್ಲಾ ಸಂತ್ರ. ತಾಯಿಗೊಂದು ಸಮಾಧಿಯನ್ನೂ ಕಟ್ಟಿಸಿ ಸಿರಿವಂತರ ಹೊಟ್ಟೆ ಉರಿಸಿದ್ದ. ಮುಂಜಾನೆ ಎದ್ದಾಗೊಮ್ಮೆ ತಾಯಿಯ ಸಮಾಧಿಯ ಬಳಿ ಹೋಗಿ ಎರಡು ನಿಮಿಷ ಕುಳಿತು ಬರುವುದು ಆತನ ದಿನಚರಿಯಲ್ಲೊಂದಾಯಿತು. ಇದ್ದೆರಡು ತೆಂಗಿನ ಮರದಿಂದ ನೀರಾ ಇಳಿಸಿ ಕುಡಿಯುತ್ತಿದ್ದವನು ಸಮಾಧಿ ಕಟ್ಟಿಸಿದ ಮೇಲೆ ಅದನ್ನೂ ನಿಲ್ಲಿಸಿಬಿಟ್ಟ. ವಾರಕ್ಕೋ ತಿಂಗಳಿಗೊಮ್ಮೆಯೋ ಸಾರಾಯಿ ಅಂಗಡಿಯಗೆ ಹೋಗಿ ಒಂದೆರಡು ಪಾಕೀಟು ಹಾಕುತ್ತಿದ್ದನಷ್ಟೇ.
ಎಲ್ಲವೂ ಸುಸೂತ್ರವಾಗಿ ಸರಾಗವಾಗಿ ನಡೆಯುತ್ತಿದೆ ಎನ್ನುವಾಗಲೇ 'ರಾಷ್ಟೀಯ ಉದ್ಯಾನವನ ಯೋಜನೆ' ಎಂಬ ಭೂತ ಕೇಳಿಬಂತು. ನಮ್ಮನ್ನೆಲ್ಲಾ ಓದ್ದೋಡಿಸುತ್ತಾರಂತೆ ಅನ್ನೋ ವದಂತಿಗಳೂ ಹಬ್ಬಿದವು. ಇರೋದು ಪ್ರಜಾ ಸರಕಾರ , ಕಾಲಾಂತರದಿಂದ ಇಲ್ಲೇ ಇರೋರಿಗೆ 'ಇದು ನೀವಿರುವ ಜಾಗವಲ್ಲ, ನಡೀರಿ ಆಚೆಗೆ' ಎಂದೇಳಲಾರರು ಎಂದೇ ನಂಬಿದ್ದ ರಾಮೇಗೌಡ. ಭೂತದ ನೆರಳಿನಂತೆ ಸಾಲು ಸಾಲು ವಾಹನಗಳು, ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಸರ್ವೇ ಮಾಡುತ್ತಿರುವ ಅಧಿಕಾರಿಗಳನ್ನು ನೋಡಿದ ಮೇಲೇ ಏನೋ ಆಗಲಿದೆ ಎಂಬ ಭಯದ ಭಾವನೆ. ಹೆಚ್ಚಿನ ಜನರು ವ್ಯವಸಾಯ ಮಾಡುತ್ತಿದ್ದ ಜಾಗವೆಲ್ಲಾ ಕಾಡಿನ ಭಾಗ ಎಂದು ಮಾಡಿ ಅವರಿಗೆ ಯಾವುದೇ ಪರಿಹಾರವಿಲ್ಲವೆಂದು ಹೇಳುತ್ತಿದ್ದಾರೆಂಬ ಸುದ್ದಿ ಹಬ್ಬಿತು. ಕಾಡು ಮರದ ನೆಲ್ಲಿ ಕೀಳುವುದೂ ಅಪರಾಧವಂತೆ ಎಂದರು. ಮರಿ ಪುಢಾರಿಗಳ ನೇತ್ರತ್ವದಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳೂ ನಡೆದವು. ಅಧಿಕಾರಿಗಳದೊಂದು ತಂಡ ಹಳ್ಳಿಹಳ್ಳಿಗೂ ಬಂದು ಕಾಡಿನ ಪರಿಸರದ ಮಹತ್ವ, ಆ ಪರಿಸರದಲ್ಲಿ ಮಾನವನ ವಾಸ ಕಾಡು ಪ್ರಾಣಿಗಳಿಗೆ ಎಷ್ಟು ಹಾನಿ ಉಂಟುಮಾಡಬಲ್ಲದು ಎಂಬುದನ್ನು ಚಿತ್ರಸಹಿತ ವಿವರಿಸಿದರು. ' ನಾವೂ ಪರಿಸರದ ಒಂದು ಭಾಗವಲ್ಲವಾ?' ಎಂಬ ಪ್ರಶ್ನೆ ಮನದಲ್ಲಿ ಮೂಡಿತಾದರೂ ಡಿಗ್ರಿ ಪಡೆದವರಿಗಿಂತ ನನಗೆಂತ ತಿಳಿದೀತು ಎಂದು ಸುಮ್ಮನಾದ. ರಾಮೇಗೌಡನ ವ್ಯವಸಾಯದ ಒಂದಷ್ಟು ಪಾಲು ಭೂಮಿಯನ್ನೂ ಕಾಡಿನ ಭಾಗವೆಂದು ಗುರುತಿಸಿದ್ದರು, ಪರಿಹಾರ ಕಡಿಮೆಯಾಗುವುದೆಂಬ ಚಿಂತೆಯಾಯಿತು.
ಇವೆಲ್ಲಾ ಘಟನೆಗಳ ನಡುವೆಯೇ ಹೆಗಲಿಗೆ ಎರಡಡಿ ಬಂದೂಕು ನೇತುಹಾಕಿಕೊಂಡವರು ಘಟ್ಟದಲ್ಲೆಲ್ಲಾ ಕಾಣಿಸಲಾರಂಭಿಸಿದರು.
ಮುಂದುವರೆಯುವುದು...

Jan 28, 2009

ಸಾವು.

ಸಾವು!
ದೂರವಿದ್ದಷ್ಟೂ
ಸಹಜ;
ಸನಿಹವಾದಷ್ಟೂ
ಕಠಿಣ.

Jan 25, 2009

ಸಮಾಧಿ ಹೋಟ್ಲು.

ಪುಟ ೧
ಕಪ್ಪು ಮೋಡಗಳನ್ನು ನೋಡಿದವನಿಗೆ ಯಾವುದೋ ಭರವಸೆ, ಇವತ್ತಾದರೂ ಮಳೆ ಸುರಿದೀತೆಂಬ ಆಶಯ. ವಾರದಿಂದ ಸೇರುತ್ತಿದ್ದವಾದರೂ ತಮ್ಮಲ್ಲೇ ಜಗಳವಾಡಿಕೊಂಡಂತೆ ದೂರಾಗಿಬಿಡುತ್ತಿದ್ದವು. ಇಂದಲ್ಲ ನಾಳೆ ಮಳೆ ಬಂದೇ ಬರುವುದೆಂಬ ನಿರೀಕ್ಷೆಯಿಂದ ಉಳುಮೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ರಾಮೇಗೌಡ. ಮಲೆನಾಡಿನಲ್ಲೇ ಹುಟ್ಟಿ ಬೆಳೆದವನಿಗೆ ಮಳೆಗಾಗಿ ಕಾಯುವುದು ವಿಚಿತ್ರವೆಂಬಂತೆ ತೋರುತ್ತಿತ್ತು. ನಾಲ್ಕು ವರ್ಷದ ಹಿಂದೆ ಬಯಲುಸೀಮೆಗೆ ಬಂದಿದ್ದಾನೆ. ಹಿಂದಿನ ವರ್ಷಗಳಲ್ಲಿ ಮಳೆ ಚೆನ್ನಾಗಿತ್ತು. 'ಈ ವರ್ಷ ಯಾಕೋ ಅದ್ರುಷ್ಟವಿದ್ದಂತಿಲ್ಲ ಎಂದುಕೊಂಡು ಮನೆಗೆ ಬಂದವನಿಗೆ ಹೆಂಡತಿಯ ಗೊಣಗಾಟ ಕೇಳಿತು, ಈಗದು ಅಭ್ಯಾಸವಾಗಿದ್ದರಿಂದ ಬೇಸರವೆನಿಸಲಿಲ್ಲ. ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೈಸವರಿ ಒಂದಷ್ಟು ಒಣಹುಲ್ಲು ಹಾಕಿ ಬಂದ. ಜನರಿಗೇ ಉಣ್ಣಲು ಕಷ್ಟವಾಗಿರುವಾಗ ಎತ್ತುಗಳು ಬಡಕಲಾಗಿರುವುದರಲ್ಲಿ ಯಾವುದೇ ವಿಶೇಷ ಕಾಣಲಿಲ್ಲ. ಕೈ ಕಾಲು ತೊಳೆದುಕೊಂಡು ಹೋಗಿ ತಂದೆ ತಾಯಿಯ ಫೊಟೊಗೊಮ್ಮೆ ಕೈ ಮುಗಿದು ಚಾಪೆ ಹಾಸಿಕೊಂಡು ಅಡ್ಡಾದ. ಅಡುಗೆ ಮನೆಯಿಂದ ಹೊರಬಂದ ಹೆಂಡತಿ " ಊರವರೆಲ್ಲಾ ಆಡಿಕೊಳ್ತಿದ್ದಾರೆ. ದುಡ್ಡು ಉಳಿಸೋದಿಕ್ಕೆ ಈ ಗೌಡ ಅಪ್ಪನ ಶ್ರಾದ್ಧ ಕಾರ್ಯಾನು ಮಾಡ್ತಿಲ್ಲ ಅಂತ. ದೇವರೆಡೆಗೆ ಅಸಡ್ಡೆ ತೋರೋದಿಕ್ಕೆ ಇವರಿಗೆ ಮಕ್ಕಳಾಗಿಲ್ಲ ಅಂತಾ..." ಕಣ್ಣೀರಾದಳು, ಆಕೆ ಕಣ್ಣೀರಾಕಿದ್ದು ಮಕ್ಕಳಿಲ್ಲ ಎಂಬುದಕ್ಕೋ ಅಥವಾ ಶ್ರಾದ್ಧ ಮಾಡ್ತಿಲ್ಲವೆಂಬೋದಕ್ಕೋ ಅಂದಾಜಿಸಲಾಗಲಿಲ್ಲ ಗೌಡನಿಗೆ. " ನೋಡು ಕಮಲ ಜನ ಸಾವಿರ ಹೇಳಲಿ, ನಮ್ಮ್ಹತ್ರ ಇರೋದೇ ಸ್ವಲ್ಪ ದುಡ್ಡು. ಅದನ್ನೂ ಶ್ರಾದ್ಧಕ್ಕೆಂತ ಅವರಿವರ ಬಾಯಿಗೆ ಹಾಕಿಬಿಟ್ಟರೆ ನಮ್ಮ ಬಾಯಿಗೆ ..." ಮಗ್ಗುಲು ಬದಲಿಸಿದ

ಇನ್ನು ಮಾತನಾಡಿ ಉಪಯೋಗವಿಲ್ಲವೆಂದು ಅರಿತು ಮತ್ತೆ ಗೊಣಗುತ್ತಾ ಅಡುಗೆಮನೆ ಸೇರಿದಳು.
[ಮುಂದುವರೆಯುವುದು . . . .]

ಪುರಾವೆ.

ನಾವೆಲ್ಲ ಕಡಲಿಂದ
ಬಂದವರು;
ಮೇಲೆ ನಗುವಿನ ಅಲೆಗಳು,
ಒಳಗೆ
ಅಗ್ನಿ ಪರ್ವತಗಳು.
( ವರುಷಗಳ ಹಿಂದೆ ಓ ಮನಸೇಯಲ್ಲಿ ಪ್ರಕಟವಾಗಿದ್ದು)