Jul 4, 2012

ಜೆನರೇಷನ್ ಗ್ಯಾಪಿನ “ಪ್ರೀತಿ ಮೃತ್ಯು ಭಯ”


ಡಾ. ಅಶೋಕ್. ಕೆ. ಆರ್
ಯು.ಆರ್. ಅನಂತಮೂರ್ತಿಯವರು 1959ರಲ್ಲಿ ಬರೆದ ಮೊದಲ ಕಾದಂಬರಿ ಪ್ರೀತಿ ಮೃತ್ಯು ಭಯ ಬರೋಬ್ಬರಿ ಐವತ್ತಮೂರು ವರ್ಷದ ನಂತರ ಪ್ರಕಟಣೆಗೊಂಡಿದೆ. ಪುಸ್ತಕದಂಗಡಿಯಲ್ಲಿ ನೋಡಿದ ಕೂಡಲೇ ಗಮನಸೆಳೆಯುವ ಮುಖಪುಟವಿದೆ. ಯಾವುದೇ ಕಲಾವಿದನ ವಿನ್ಯಾಸದ ಮುಖಪುಟವಲ್ಲ; ಕಂದು ಬಣ್ಣದ ‘ವಿಸ್ಡಂ’ ಪುಸ್ತಕದ ಮೇಲೆ ಮೂಡಿರುವ ಅನಂತಮೂರ್ತಿಯವರ ಕೈಬರಹವೇ ಮುಖಪುಟವಾಗಿದೆ. ಮುಖಪುಟವಷ್ಟೇ ಅಲ್ಲ ಕಾದಂಬರಿಯ ಓದೂ ಗಮನ ಸೆಳೆಯುತ್ತದೆ. ಚಿಂತನೆಗೆ ಹಚ್ಚಿ ಪಾತ್ರಧಾರಿಗಳಲ್ಲಿ ನಮ್ಮನ್ನೂ ಹುಡುಕುವಂತೆ ಪ್ರೇರೇಪಿಸುತ್ತದೆ.

ಅನಂತಮೂರ್ತಿಯವರ ಕಾದಂಬರಿಗಳಾದ ಸಂಸ್ಕಾರ, ಭಾರತೀಪುರದಂತೆ ಇಲ್ಲಿ ಸಾಮಾಜಿಕ ಚಿತ್ರಣವಿಲ್ಲ, ವೈಯಕ್ತಿಕ ದೃಷ್ಟಿಕೋನದ ಆಳದಲ್ಲಿ ಸಮಾಜವಿದೆ. ಲೇಖಕರೇ ತಿಳಿಸಿರುವಂತೆ ಅವರ ತಮ್ಮ ವೆಂಕಟೇಶಮೂರ್ತಿ ಸತ್ತ ತರುವಾಯ ಬರೆದ ಪುಸ್ತಕವಿದು. ಕಾದಂಬರಿಯಲ್ಲಿ ಕಲ್ಪನೆಯ ಕಥೆಯೆಷ್ಟು ಅನಂತಮೂರ್ತಿಯವರ ಸ್ವಂತದ ಅನುಭವಗಳೆಷ್ಟು ಎಂಬ ಪ್ರಶ್ನೆ ಓದಿನುದ್ದಕ್ಕೂ ಕಾಡುತ್ತಲೇ ಸಾಗುವುದಕ್ಕೆ ಇಂದಿನ ‘ಜ್ಞಾನಪೀಠ ವಿಜೇತ’ ಅನಂತಮೂರ್ತಿ ಕಾರಣರೇ ಹೊರತು ಅಂದಿನ ನವ ಕಾದಂಬರಿಗಾರನಲ್ಲ.

ವ್ಯಕ್ತಿಯೊಬ್ಬನ ಸ್ವಗತದಂತೆ ಇರುವ ಕಾದಂಬರಿ ಮುಖ್ಯ ಪಾತ್ರಧಾರಿ ಶೇಖರನ ದುಗುಡ, ತುಮುಲ, ಬಹಿರಂಗದಲ್ಲಿ ಗಟ್ಟಿಗನಾಗಿ ಕಾಣಿಸುವವನ ಬಲಹೀನತೆ, ಎಲ್ಲವನ್ನೂ ಎಲ್ಲರನ್ನೂ ವಿರೋಧಿಸುವ ಮನಸ್ಥಿತಿ ನಮ್ಮೊಳಗೂ ಇಳಿದು ಕಾಡುವಲ್ಲಿ ಯಶಸ್ವಿಯಾಗುತ್ತದೆ. ಒಂದು ಕಾದಂಬರಿಯ ಯಶಸ್ಸು ಅದು ಎಲ್ಲ ಕಾಲಕ್ಕೂ ಸಲ್ಲಬಲ್ಲುದೇ ಎಂಬುದರ ಮೇಲೆ ನಿರ್ಧರಿತವಾಗಬೇಕು. ಐದು ದಶಕಗಳ ಹಿಂದಿನ ಪ್ರೀತಿ ಮೃತ್ಯು ಭಯ ಇವತ್ತಿನ ಭಯವಾಗಿಯೂ ವಾಸ್ತವವಾಗಿಯೂ ನಮಗೆ ತಲುಪಲು ಸಫಲವಾಗುವುದು ಕಾದಂಬರಿಯ ಯಶಸ್ಸು.

ಕಾದಂಬರಿಯ ಒಂದು ಚಿಕ್ಕ ಪಾಠ –
“ಇವನಿಗೆ ಹೇಳಿದರೆ ಅರ್ಥವಾಗಲ್ಲ. ಲೋಕರೂಢಿಯಾಗಿ ಯೋಚಿಸುತ್ತಾನೆ. ನಿಜ. ಹೇಳಬೇಕಾದರೆ ನನ್ನ ಬಾಳನ್ನು ನನ್ನ ಅಪ್ಪ ಅಮ್ಮನಿಗೆ ಕೊಡಬೇಕೆಂದು ನನಗೆ ಅನ್ನಿಸುವುದಿಲ್ಲ. ಅವರಿಂದ ಒಡೆದುಕೊಂಡು ಬೇರೆಯಾಗಬೇಕು ಎನ್ನಿಸುತ್ತೆ. ದುಡ್ಡು ಕಾಸಿನ ವಿಷಯವಲ್ಲ ಮುಖ್ಯ. ಇನ್ನಷ್ಟು ಹಣ ನನ್ನ ಕೈಯಲ್ಲಿದ್ದರೆ ಇಕೊ ಇದನ್ನು ತೆಗೆದುಕೊಂಡು ನಿಮ್ಮಷ್ಟಕ್ಕೆ ನೀವು ಸುಖವಾಗಿರಿ ಎನ್ನುತ್ತಿದ್ದೆ. ನಾನು ಅವರನ್ನು ಬಿಟ್ಟರೆ ಮತ್ತೆ ಬಡತನದ  ಕೂಪಕ್ಕೆ ನೂಕಿದಂತಾಗುತ್ತದೆ. ಚಿಕ್ಕ ಎರಡು ತಮ್ಮಂದಿರಿದ್ದಾರೆ. ಅವರನ್ನು ಬಾಳಿಸಿಕೊಂಡು ಅಪ್ಪ ಒಬ್ಬರೇ ಹೆಣಗುವುದನ್ನು ನಾನು ಊಹಿಸಲಾರೆ. ಹಾಗೆ ಮಾಡೋದು ಅಲ್ಪತನವೆನ್ನಿಸತ್ತೆ. ಧೈರ್ಯವಾಗಿ ಯಾವ ತೀರ್ಮಾನಕ್ಕೆ ಬರೋದು ಆಗುತ್ತಿಲ್ಲ. ಹೇಳಿದರೆ ವಿಟ್ಟಲನಿಗೆ ಅರ್ಥವಾದೀತು. ಆದರೆ ಅವನಿಗೆ ತಂದೇ ತನಗಾಗಿದೆ. ಚಂದ್ರು ಸತ್ತು ಎಲ್ಲ ತೊಡಕಾಯಿತೆಂದು ಇವರೆಲ್ಲ ಭಾವಿಸುತ್ತಾರೆ. ಒಂದು ದೃಷ್ಟಿಗೆ ಅದು ನಿಜ. ಇನ್ನೊಂದು ದೃಷ್ಟಿಗೆ ಚಂದ್ರು ಸತ್ತು ಒಟ್ಟು ಪ್ರಶ್ನೆಯನ್ನೇ ತಿಳಿಯಾಗಿ ನೋಡುವ ಕಣ್ಣನ್ನು ನನಗೆ, ನನ್ನ ಅಪ್ಪನಿಗೆ ಕೊಟ್ಟಿದ್ದಾನೆ. ಆದರೆ ಅನುಭವದಿಂದ ನಾವು ಏನನ್ನೂ ಕಲಿಯುವುದಿಲ್ಲ. ಅದಕ್ಕಾಗಿ ಮತ್ತೆ ಮತ್ತೆ ನಾನು ಚಂದ್ರು ಸತ್ತದ್ದನ್ನು ನೆನೆಯುತ್ತೇನೆ. ಅಲ್ಲೇನೋ ನನ್ನ, ಅಪ್ಪನ ಬಾಳಿಗೆ ಉತ್ತರವಿದೆಯೆಂದು ಭಾವಿಸುತ್ತೇನೆ. ಏನದು, ನಾನು ಹುಡುಕಬೇಕು. ಬರೀಬೇಕು. ಆ ಘಳಿಗೆ ನನ್ನ ಜೀವನ ಹೊರಳಿತು. ದೇವರೆ ನನ್ನನ್ನು ಸಾಧಾರಣ ಮಾಡಬೇಡ. ಜೀವ ತಡೆಯಲಾರದ ಅನುಭವಕ್ಕೆ ಸಿಕ್ಕಿಸಿ ನನ್ನ ಬೇಯಿಸಿ ಹದಮಾಡು ಎಂದು ಪ್ರಾರ್ಥಿಸಿದ್ದುಂಟು. ತುಮಕೂರಿನಲ್ಲಿದ್ದಾಗ ಶ್ರೋತ್ರೀಯರಾದ ಬ್ರಾಹ್ಮಣನ ಮಗಳು ಕಮಲ ನನ್ನನ್ನು ಪ್ರೀತಿಸಿದಳು. ನಾನೂ ಅಷ್ಟು ದಿನ ಹುಡುಗಾಟವಾಡಿದೆ. ದುಂಡು ದುಂಡಾದ ಹುಡುಗಿ. ಅಚ್ಚ ಕೆಂಪು ಬಣ್ಣದವಳು. ನಾನು ಯಾಕೆ ಅವಳನ್ನು ಮದುವೆಯಾಗಲಿಲ್ಲ. ಜೀವನ ಅವಳ ಜೊತೆ ತೀರಾ ಸುಗಮವಾಗಿ ಬಿಡುತ್ತದೆಂದು ಹೆದರಿದೆ. ಅವಳ ಅಮ್ಮ – ಅಪ್ಪ ನನ್ನ ಅಪ್ಪ – ಅಮ್ಮ ಸುಲಭವಾಗಿ ಒಪ್ಪಿಬಿಡುತ್ತಿದ್ದರು. ನನ್ನ ಅಮ್ಮನಿಗಂತೂ ಅವಳು ಅಚ್ಚುಮೆಚ್ಚಾಗಿ ಬಿಡುತ್ತಿದ್ದಳು. ಹೇಸಿಗೆ ಎನ್ನಿಸಿತು ಯಾಕೆ. ನನ್ನ ಅಪ್ಪ ಅಮ್ಮ ಒಪ್ಪುವ ಹುಡುಗೀನ ಮದುವೆಯಾಗಲೇಬಾರದು ಎನ್ನಿಸುತ್ತದೆ ಯಾಕೆ. ಕಮಲ ಕಾನ್ವೋಕೇಷನ್ನಿಗೆಂದು ಬಂದಿದ್ದಳು. ನಮ್ಮ ಮನೆಗೆ ಬಂದಳು. ಅಮ್ಮನಿಗೆ ಅವಳನ್ನು ನೋಡಿ ಬಹಳ ಸಂತೋಷವಾಯಿತು. ಇನ್ನೂ ಮದುವೆಯಾಗಿಲ್ಲ ಅವಳಿಗೆ. ಅಮ್ಮನಿಗೆ ನಮ್ಮಿಬ್ಬರ ಹಿಂದಿನ ಸಂಬಂಧ ಗೊತ್ತಿರಬೇಕು. ನನ್ನನ್ನ ಅವಳನ್ನ ಮಾತಾಡಲು ಬಿಟ್ಟು ದೋಸೆ ಹಿಟ್ಟು ರುಬ್ಬಲು ಹೊರಟು ಹೋದಳು. ಕಮಲ ತುಂಬ ಹತ್ತಿರ ಕೂತು ಶ್ಯಾಮಲ ಮತ್ತು ನನ್ನ ಬಗ್ಗೆ ಎದ್ದಿರುವ ಸುದ್ದಿ ನಿಜವೇ ಎಂದಳು. ನಿಮ್ಮ ಪ್ರಭಾವ ನನ್ನ ಮೇಲೆ ಈಗಲೂ ಇದೆ ಎಂದಳು. ಸರಿಯೋ ತಪ್ಪೋ ಅವಳ ಕೈಯನ್ನು ಹಿಂದಿನಂತೆ ಮೃದುವಾಗಿ ಹಿಡಿದು ನನ್ನ ಕತೆ ಹೇಳಿಕೊಂಡೆ. ತಾಯಿ ಬಂದ ಕೂಡಲೆ ಕೈ ಬಿಟ್ಟೆ. ಕಮಲ ಕೆಂಪಾದದ್ದು ಅಮ್ಮ ನೋಡಿರಬೇಕು. ಅಮ್ಮನಿಗೆ ನಮ್ಮ ಮನಸ್ಸು ಬದಲಾಗಬಹುದೆಂದು ಆಸೆಯಾಗಿರಬೇಕು. ಇವತ್ತು ಇಲ್ಲೇ ಇರು ಕಮಲ ಎಂದಳು. ಬೇಡವೆಂದು ಕಮಲ ಹೊರಟುನಿಂತಳು. ಹೋಗುವಾಗ ಬರೆಯಿರಿ ಎಂದಳು. ಅವಳಿಗೆ ಅಸೂಯೆಯಿಲ್ಲವೆ ಎಂದು ನನಗೆ ಆಶ್ಚರ್ಯವಾಯಿತು. ನಿನ್ನ ವಿಷಯ ಎಂದು ಕೇಳಿದೆ. ಮುಂದಿನ ಕಾರ್ತಿಕಕ್ಕೆ ಆಗುತ್ತದೆ, ನಿಶ್ಚಯವಾಗಿದೆ ಎಂದಳು. ಶ್ಯಾಮಲನಿಗೆ ಈ ವಿಷಯ ಹೇಳಬೇಕು. ಅವತ್ತು ಸಾಯಂಕಾಲ ನಾನು ಬಾರಿಗೆ ಹೋಗಿ ಕುಡಿದೆ”

ಕಾದಂಬರಿಯ ಮೇಲಿನ ಸಾಲುಗಳು ನಿಮ್ಮಲ್ಲಿ ಆಸಕ್ತಿ ಮೂಡಿಸಿದ್ದರೆ ಪುಸ್ತಕ ಖರೀದಿಸಿ ಪೂರ್ಣವಾಗಿ ಓದಿ! ಓದಿ ಮುಗಿಸಿದ ನಂತರವೂ ಅಪೂರ್ಣತೆ ಕಾಡುತ್ತದೆ! ಕಾರಣ ಕಥೆಗೊಂದು ಅಂತ್ಯವಿಲ್ಲ..... ಅಂತ್ಯವಿದ್ದಿದ್ದರೆ ಪುಸ್ತಕ ಅಪೂರ್ಣವಾಗುತ್ತಿತ್ತು!!

No comments:

Post a Comment