Jun 30, 2016

ಖುಲಾಸೆಗೊಂಡ ‘ಬಾಂಬ್ ಎಸ್.ಐ’ ನೆನಪಿಸಿದ ದಿನಗಳು

ಡಾ. ಅಶೋಕ್. ಕೆ. ಆರ್.
ಆಗಿನ್ನೂ ಎರಡನೇ ವರುಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ. ಮಾವೋವಾದದ ಎಬಿಸಿಡಿಯಾಗಲೀ ನಕ್ಸಲ್ ವಾದದ ಅಆಇಈಯಾಗಲೀ ಸರಿಯಾಗಿ ಗೊತ್ತಿರಲಿಲ್ಲವಾದರೂ ನಿಧಾನಕ್ಕೆ ಮನಸ್ಸು ಅವೆರಡೂ ವಾದಗಳೆಡೆಗೆ ಆಕರ್ಷಿತವಾಗುತ್ತಿದ್ದ ದಿನಗಳವು. ಚುನಾವಣೆ ಪ್ರಕ್ರಿಯೆಗಳಿಂದಾಗಲೀ, ಮತದಾನದ ಮೂಲಕವಾಗಲೀ ಯಾವುದೇ ಬದಲಾವಣೆ ಸಾಧ್ಯವೇ ಇಲ್ಲ ಎಂದು ಧೃಡವಾಗಿ ನಂಬಿದ್ದ ದಿನಗಳವು. ಕ್ರಾಂತಿಯೆಂಬುದು ಬಂದೂಕಿನ ನಳಿಕೆಯ ಮೂಲಕವೇ ಆಗುವಂತದ್ದು ಎಂಬ ನಂಬಿಕೆ ಕಚ್ಚಿಕೊಂಡಿತ್ತು. ಸಿದ್ಧಾಂತಗಳ ಗಾಢ ಪ್ರಭಾವಗಳೇನು ಇರದಿದ್ದ ಹೊತ್ತಿನಲ್ಲಿ ಬಂದೂಕಿನ ಮೂಲಕ ಕ್ರಾಂತಿಯೆಂಬುದು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಗುಂಡಿಟ್ಟು ಕೊಂದುಬಿಟ್ಟರೆ ಸಾಕು, ಕ್ರಾಂತಿ ಸಫಲವಾಗಿ ದೇಶ ಫಳ ಫಳ ಹೊಳೆಯುತ್ತ ನಳನಳಿಸುತ್ತದೆ ಎಂಬುದಷ್ಟೇ ಯೋಚನೆ. ಬಂದೂಕೆಲ್ಲಿ ಹೊಂದಿಸೋದು, ಯಾವ ರಾಜಕಾರಣಿಯನ್ನು – ಅಧಿಕಾರಿಯನ್ನು ಮೊದಲು ಮುಗಿಸೋದು ಎನ್ನುವ ಕನಸುಗಳಲ್ಲಿ ತೇಲುತ್ತಿದ್ದಾಗಲೇ ರೋಮಾಂಚನಗೊಳಿಸುವಂತ ಸುದ್ದಿ ಬೆಂಗಳೂರಿನಿಂದ ಬಂತಲ್ಲ: “ಶಾಸಕರ ಭವನದಲ್ಲಿ ಬಾಂಬ್ ಪತ್ತೆ!”. ಆ ಸುದ್ದಿ ಓದಿದ ನಂತರ ಮೂಡಿದ ಒಂದೇ ಬೇಸರವೆಂದರೆ ಆ ಬಾಂಬ್ ಸ್ಪೋಟಗೊಳ್ಳುವ ಮೊದಲೇ ಪತ್ತೆಯಾಗಿಬಿಟ್ಟಿದ್ದು. ಎರಡೋ ಮೂರೋ ದಿನದ ನಂತರ ಬಾಂಬ್ ಇಟ್ಟವನ ಪತ್ತೆಯೂ ಆಯಿತು, ಪೋಲೀಸ್ ಇಲಾಖೆಯಲ್ಲೇ ಇದ್ದ ಎಸ್.ಐ ಆಗಿ ಕಾರ್ಯವನಿರ್ವಹಿಸುತ್ತಿದ್ದ ಗಿರೀಶ್ ಮಟ್ಟೆಣ್ಣನವರ್ ಬಾಂಬ್ ಇಟ್ಟಿದ್ದು.

ಆಗಿನ್ನೂ ಕೈಯಲ್ಲಿ ಮೊಬೈಲಿರಲಿಲ್ಲ. ಸ್ಮಾರ್ಟ್ ಫೋನುಗಳ ಭರಾಟೆಯೂ ಇರಲಿಲ್ಲ. ಗೂಗಲಿಸಿ ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ಸೆಂಟರ್ರಿಗೆ ಹೋಗಬೇಕಿತ್ತು. ಘಂಟೆಗೆ ಇಪ್ಪತ್ತು ರುಪಾಯಿ ತೆತ್ತು ಇಂಟರ್ನೆಟ್ಟಿನಲ್ಲಿ ಹುಡುಕುವುದಕ್ಕಿಂತ ಮಾರನೇ ದಿನದ ಎಲ್ಲಾ ಪತ್ರಿಕೆಗಳನ್ನು ತೆಗೆದುಕೊಂಡರೆ ಹೆಚ್ಚಿನ ವಿಷಯಗಳು ತಿಳಿಯುತ್ತವೆ ಎಂಬುದರ ಅರಿವಿತ್ತು. ಒಂದು ದಿನ ತಡೆದು ಕನ್ನಡದ ಅಷ್ಟೂ ದಿನಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತೆ. ಪ್ರಾಮಾಣಿಕ ಅಧಿಕಾರಿ, ವ್ಯವಸ್ಥೆಯಿಂದ ಬೇಸತ್ತು ಇಂತಹ ಕೆಲಸ ಮಾಡಿದ್ದಾನೆ ಎಂಬ ವರದಿ ಎಲ್ಲಾ ಪತ್ರಿಕೆಗಳಲ್ಲೂ ಇತ್ತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಒಂದಷ್ಟು ಅನುಕಂಪದಿಂದಲೇ ಬರೆದಿದ್ದರು. ವರದಿಯ ಕೊನೆಗೆ ಆದರೂ ಬಾಂಬಿಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಕೆಲಸವಲ್ಲ, ಹೋರಾಡಲು ಪ್ರಜಾಪ್ರಭುತ್ವದಲ್ಲಿ ಅನೇಕಾನೇಕ ದಾರಿಗಳಿವೆ ಎಂಬರ್ಥದ ಸಾಲುಗಳಿರುತ್ತಿದ್ದವು. ಥೂತ್ತೇರಿಕೆ ಇಂತಹ ಪತ್ರಿಕೆಗಳಿರೋವರ್ಗೂ ಕ್ರಾಂತಿಯಾಗಲ್ಲ ಅಂತ ಬಯ್ಕೊಂಡು ಇನ್ನೊಂದು ಸುತ್ತು ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಓದಿಕೊಂಡಿದ್ದಾಯಿತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಅಭಿಮಾನ ಮೂಡಿತು.

ಕೆಲವು ದಿನಗಳಲ್ಲಿ ಗಿರೀಶ್ ಮಟ್ಟೆಣ್ಣನವರ್ ಜಾಮೀನಿನ ಮೇಲೆ ಬಿಡುಗಡೆಗೊಂಡರು. ವಾರಕ್ಕೊಮ್ಮೆ ಹಾಯ್ ಬೆಂಗಳೂರ್, ಲಂಕೇಶ್ ಪತ್ರಿಕೆ ಓದುವ ಹವ್ಯಾಸವಿತ್ತಲ್ಲ. ಹಾಯ್ ಬೆಂಗಳೂರಿನ ಸಂಪಾದಕೀಯ ‘ಹಲೋ’ದಲ್ಲಿ ಗಿರೀಶ್ ಮಟ್ಟೆಣ್ಣನವರ್ ಎಂಬ ಪ್ರಾಮಾಣಿಕನ ಪ್ರಾಮಾಣಿಕತೆ ಹೀಗೆ ಬಾಂಬು ಇಡುವಂತಹ ದುಸ್ಸಾಹಸದಲ್ಲಿ ಕಳೆದುಹೋಗಬಾರದು, ಜನರ ದನಿಯಾಗುವಂತಹ ವ್ಯಕ್ತಿಯಾಗಿ ಆತ ಬೆಳೆಯಬೇಕು ಎಂದು ತುಂಬಾ ಕಕ್ಕುಲಾತಿಯಿಂದ ರವಿ ಬೆಳೆಗೆರೆ ಬರೆದುಕೊಂಡಿದ್ದರು. ಜೊತೆಗೆ ಹಾಯ್ ಬೆಂಗಳೂರ್ ಕಛೇರಿಯಿಂದಲೇ ಗಿರೀಶ್ ಮಟ್ಟೆಣ್ಣನವರ್ ನೇತೃತ್ವದಲ್ಲಿ ‘ನಿಮ್ಮೊಂದಿಗೆ’ ಎಂಬ ಸಂಘಟನೆ ಮಾಡುವ, ನೀವು ಬನ್ನಿ ಕೈ ಜೋಡಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಂಬ ಕರೆಯೂ ಇತ್ತು. ಒಂದು ಸಂಜೆ ಆರಕ್ಕೆ ಹಾಯ್ ಬೆಂಗಳೂರ್ ಕಛೇರಿಯಲ್ಲಿ ಸಭೆ ಕರೆಯಲಾಗಿತ್ತು. ಕ್ರಾಂತಿ ಆಗೋ ಸಮಯದಲ್ಲಿ ಸುಮ್ನೆ ಕೂರೋಕ್ಕಾಗುತ್ಯೇ? ಕಾಲೇಜಿಗೆ ಬಂಕ್ ಹೊಡೆದು, ಮೈಸೂರು ಬಸ್ ಸ್ಟ್ಯಾಂಡಿಗೆ ಹೋಗಿ ‘ಮೈಸೂರು ಮಲ್ಲಿಗೆ – 180’ ಹತ್ತಿದೆ. ಒಂದರಷ್ಟೊತ್ತಿಗೆ ನಾಯಂಡನಹಳ್ಳಿಯಲ್ಲಿ ಇಳಿದು ಅಲ್ಲೇ ರಸ್ತೆ ಬದಿಯಿದ್ದ ಹೋಟೆಲ್ಲೊಂದರಲ್ಲಿ ಅನ್ನ ಸಾಂಬಾರ್ ತಿಂದು ದೇವೇಗೌಡ ಪೆಟ್ರೋಲ್ ಬಂಕಿನ ಕಡೆಗೋಗುವ ಬಿಎಂಟಿಸಿ ಹತ್ತಿದೆ. ಪೆಟ್ರೋಲ್ ಬಂಕ್ ಸ್ಟಾಪಿನಲ್ಲಿ ಇಳಿದು ಅವರಿವರನ್ನು ಹಾಯ್ ಬೆಂಗಳೂರ್ ಆಫೀಸಿನ ವಿಳಾಸ ಕೇಳಿಕೊಂಡು ಅದರ ಹತ್ತಿರ ಹೋದಾಗ ಎರಡೂವರೆಯಾಗಿತ್ತು. ಸಭೆಗಿನ್ನೂ ಸಾಕಷ್ಟು ಸಮಯವಿತ್ತು. ಅಲ್ಲಿಲ್ಲಿ ಅಡ್ಡಾಡುತ್ತ, ಯಾವುದೋ ಪಾರ್ಕಿನಲ್ಲಿ ಕುಳಿತು ಬ್ಯಾಗಿನಲ್ಲಾಕಿಕೊಂಡು ಬಂದಿದ್ದ ಪುಸ್ತಕವನ್ನೋದುತ್ತಾ ಕಾಲ ಕಳೆದು ಸಭೆಯ ಸಮಯಕ್ಕೆ ಹಾಯ್ ಬೆಂಗಳೂರು ಆಫೀಸಿಗೆ ಬಂದೆ. ಟೆರೇಸಿನಲ್ಲಿ ಸಭೆಯಿತ್ತು. ಇನ್ನೂರು ಮುನ್ನೂರು ಜನ ಸೇರಿದ್ದರು. ದೂರದ ಬೀದರ್ರಿನಿಂದಲೂ ಜನರು ಬಂದಿದ್ದರು; ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ಮಂಗಳೂರು ಹೀಗೆ ಹತ್ತಲವು ಜಿಲ್ಲೆಗಳಿಂದ ಜನರು ಬಂದಿದ್ದರು. ಯುವಕರೇ ಹೆಚ್ಚಿದ್ದದ್ದು, ನಿವೃತ್ತರಾಗಿದ್ದ ಆಯುರ್ವೇದಿಕ್ ವೈದ್ಯರೊಬ್ಬರೂ ಬಂದಿದ್ದರು. ಒಂದಷ್ಟೊತ್ತು ರವಿ ಬೆಳಗೆರೆ ಮಾತನಾಡಿದರು. ನಂತರ ಗಿರೀಶ್ ಮಟ್ಟೆಣ್ಣನವರ್ ಮಾತನಾಡಿದರು. ಸಂಘಟನೆ ಯಾವ ರೀತಿ ಇರಬೇಕು, ಯಾವ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಮೊದಲಿಗೆ ಪ್ರತಿ ಜಿಲ್ಲೆಯಲ್ಲಿ, ನಂತರ ಪ್ರತಿ ತಾಲ್ಲೂಕಿನಲ್ಲಿ ಐದಾರು ಜನರ ಪುಟ್ಟ ಪುಟ್ಟ ತಂಡಗಳನ್ನು ಮಾಡಿಕೊಂಡು ಹೋರಾಡಬೇಕಾದ ರೀತಿಯ ಬಗ್ಗೆ ಮಾತನಾಡಿದರು. ಒಂದು ಒಂದೂವರೆ ಘಂಟೆಯ ನಂತರ ಕಾರ್ಯಕ್ರಮ ಮುಗಿಯಿತು. ಬಂದೂಕಿನ ನಳಿಕೆಯ ಮೂಲಕ ಬರುವ ಕ್ರಾಂತಿಯಷ್ಟು ಪ್ರಖರವಾಗಿರುವುದಿಲ್ಲ, ಆದರೂ ಇದ್ದುದರಲ್ಲೇ ವಾಸಿ ಎಂದುಕೊಳ್ಳುತ್ತ ಜೇಬಿನಲ್ಲಿದ್ದ ಚಿಕ್ಕ ಪುಸ್ತಕಕ್ಕೆ ಗಿರೀಶ್ ಮಟ್ಟೆಣ್ಣನವರ ಆಟೋಗ್ರಾಫ್ ಪಡೆದುಕೊಂಡೆ. ನಾನು ಪಡೆದುಕೊಂಡ ಮೊಟ್ಟಮೊದಲ ಹಾಗೂ ಕಟ್ಟಕಡೆಯ ಆಟೋಗ್ರಾಫದು! ಆ ಪುಸ್ತಕ ಎಲ್ಲಿದೆಯೋ ಈಗ ಮರೆತುಹೋಗಿದೆ. ಮತ್ತೆ ನಾಯಂಡನಹಳ್ಳಿಗೆ ಬಂದು ಮೈಸೂರಿನ ಬಸ್ ಹತ್ತಿ ರೂಮು ಸೇರಿದಾಗ ಮಧ್ಯರಾತ್ರಿಯಾಗಿತ್ತು. ಇನ್ನೇನು ನಾಳೆಯಿಂದ ಕ್ರಾಂತಿ ಶುರುವಾಯ್ತಲ್ಲ ಎಂದುಕೊಂಡು ಮಲಗಿದೆ.

ನಿಮ್ಮೊಂದಿಗೆ ಸಂಘಟನೆಯ ಹೋರಾಟ ಯಾವ ರೀತಿ ಇರುತ್ತದೆ, ಯಾವ ರೀತಿ ಇರಬೇಕು ಎಂದು ಹಗಲುಗನಸು ಕಾಣುವುದೂ ಸರಿಯಾಗಿ ಪ್ರಾರಂಭವಾಗಿರಲಿಲ್ಲ, ಗಿರೀಶ್ ಮಟ್ಟೆಣ್ಣನವರ್ ‘ನಿಮ್ಮೊಂದಿಗೆ’ ಇರುವುದಿಲ್ಲ ಎಂದು ನಿರ್ಧರಿಸಿ ಬಿಜೆಪಿ ಪಕ್ಷಕ್ಕೆ ಹಾರಿಬಿಟ್ಟರು! ಅಲ್ಲಿಗೆ ಶಾಸಕರ ಭವನಕ್ಕೆ ಬಾಂಬಿಟ್ಟಿದ್ದು ಪ್ರಚಾರಕ್ಕೇ ಹೊರತು ಬೇರೆ ಕಾರಣಕ್ಕಲ್ಲ ಎಂದರಿವಾಗಿ ಪಿಗ್ಗಿ ಬಿದ್ದಿದ್ದಕ್ಕೆ ಬಯ್ದುಕೊಂಡು ಸುಮ್ಮನಾದೆ. ಮುಂದೆ ಬರೆದ ‘ಆದರ್ಶವೇ ಬೆನ್ನು ಹತ್ತಿ’ ಕಾದಂಬರಿಯಲ್ಲಿ ಒಂದು ಪಾತ್ರಕ್ಕೆ ಪ್ರೇರಣೆಯಾದರು ಗಿರೀಶ್ ಮಟ್ಟೆಣ್ಣನವರ್. ಇಷ್ಟೆಲ್ಲ ನೆನಪಾಗಿದ್ದು ಮೊನ್ನೆ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಗಿರೀಶ್ ಮಟ್ಟೆಣ್ಣನವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದಾಗ.

ಉತ್ತರಪ್ರದೇಶ: ಮಾಯಾವತಿ ಮತ್ತು ಮುಸ್ಲಿಂ ಸಮುದಾಯ!

ಕು.ಸ.ಮಧುಸೂದನ ನಾಯರ್

ದೇಶದ ಹಿಂದಿ ಹೃದಯಭಾಗವಾದ ಬಿಹಾರವನ್ನು ಕಳೆದುಕೊಂಡ ನಂತರದಲ್ಲಿ ಉತ್ತರಪ್ರದೇಶ ರಾಜ್ಯವನ್ನು ಗೆಲ್ಲಲೇಬೇಕಾಗಿರುವುದು ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿಬಿಟ್ಟಿದೆ. ಈ ದಿಸೆಯಲ್ಲವರು ಹಲವು ಚುನಾವಣಾ ಪೂರ್ವ ತಂತ್ರಗಳನ್ನು ಹೆಣೆಯುತ್ತ ಸಾದ್ಯವಿರಬಹುದಾದ ಎಲ್ಲ ನಡೆಗಳನ್ನೂ ನಡೆಸಲು ಪ್ರಾರಂಬಿಸಿದ್ದಾರೆ. ಮೊದಲಿನಿಂದಲೂ ಉತ್ತರಪ್ರದೇಶ ಜಾತಿಯಾಧಾರಿತ ರಾಜಕಾರಣಕ್ಕೆ ಹೆಸರು ವಾಸಿಯಾಗಿದ್ದು, ತೊಂಬತ್ತರ ದಶಕದ ನಂತರ ಜಾತಿ ರಾಜಕಾರಣದ ಜೊತೆಗೆ ಧರ್ಮ ರಾಜಕಾರಣವೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತರಪ್ರದೇಶದಲ್ಲಿರುವ ಶೇಕಡಾ 28 ರಷ್ಟು ಮುಸ್ಲಿಂ ಮತದಾರರು ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದಾರೆಂಬುದು ಖಚಿತ. ಅದೂ ಅಲ್ಲದೆ ಸುಮಾರು 73 ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವೂ ಆಗಿದೆ. ಹಾಗಾಗಿ ಈ 28ರಷ್ಟು ಮತವನ್ನು ಯಾವ ಪಕ್ಷ ಹೆಚ್ಚು ಸೆಳೆಯುತ್ತದೆಯೊ ಆ ಪಕ್ಷ ಬಹುಮತ ಪಡೆಯುವುದು ಸಾದ್ಯವಾಗುತ್ತದೆಯೆಂಬುದು ಒಂದು ಲೆಕ್ಕಾಚಾರ. ಈ ದೃಷ್ಠಿಯಿಂದ ಎಲ್ಲ ಪಕ್ಷಗಳು ಮುಸ್ಲಿಂ ಮತದಾರರನ್ನು ಓಲೈಸುವ ಮಾತುಗಳನ್ನಾಡುತ್ತಿವೆ.

ಇದುವರೆಗೂ ಬಹುತೇಕ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದರು. ಕಳೆದ ವಿದಾನಸಭಾ ಚುನಾವಣೆಯಲ್ಲಿ ಅಂದರೆ 2012ರಲ್ಲಿ ಸಮಾಜವಾದಿ ಪಕ್ಷವು ಶೇಕಡಾ 54ರಷ್ಟು ಮುಸ್ಲಿಂ ಮತಗಳನ್ನು ಪಡೆದು ನಿಚ್ಚಳ ಬಹುಮತ ಪಡೆದಿತ್ತು. ಆದರೆ 2014ರ ಲೋಕಸಭಾ ಚುನಾವಣೆಗಳ ನಂತರ ಈ ಸಮೀಕರಣ ಬಹಳಷ್ಟು ಬದಲಾದಂತೆ ಕಾಣುತ್ತಿದೆ. ಈ ಹಿಂದಿನಂತೆ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಜೊತೆಗಿಲ್ಲ. ಅದು ಕಳೆದ ನಾಲ್ಕೂವರೆ ವರುಷಗಳ ಅಖಿಲೇಶ್ ಯಾದವ್ ಆಳ್ವಿಕೆಯಿಂದ ಭ್ರಮನಿರಸವಗೊಂಡಿದೆ. ಸಮಾಜವಾದಿ ಪಕ್ಷವು ಮುಜಾಫರ್ ನಗರದ ಗಲಬೆಗಳನ್ನು, ಮತ್ತು ದಾದ್ರಿ ಪ್ರಕರಣವನ್ನು ನಿರ್ವಹಿಸಿದ ರೀತಿ ಮುಸ್ಲಿಂ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಮುಜಾಫರ್ ನಗರದ ಗಲಬೆಗಳಾದ ಸುಮಾರು ಆರು ತಿಂಗಳ ನಂತರ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಅಲ್ಲಿಗೆ ಬೇಟಿ ನೀಡುವ ಮನಸ್ಸು ಮಾಡಿದ್ದರು, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಹೀಗಾಗಿ ಗಲಬೆಯಾದ ತಕ್ಷಣ ಸ್ಥಳಕ್ಕೆ ದಾವಿಸದ ಸಮಾಜವಾದಿ ಪಕ್ಷದ ತಂದೆ ಮಕ್ಕಳ ಬಗ್ಗೆ ಮುಸ್ಲಿಂ ಸಮುದಾಯ ತೀವ್ರ ಅಸಮಾದಾನಗೊಂಡಿದೆ. ನಂತರದಲ್ಲಿ ನಡೆದ ದಾದ್ರಿ ಪ್ರಕರಣವನ್ನು ಬಾಜಪಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಿಸಿದ ಉತ್ತರಪ್ರದೇಶದ ಸರಕಾರದ ಬಗ್ಗೆ ಆ ಸಮುದಾಯ ಮತ್ತಷ್ಟು ಕೋಪಗೊಂಡು ದೂರ ಸರಿಯುವಲ್ಲಿ ಕಾರಣವಾಯಿತು. ಇದರ ಜೊತೆಗೆ ಬಿಹಾರದಲ್ಲಿ ನಡೆದ ಮಹಾಘಟಬಂದನ್ ಜೊತೆ ಸೇರದೆ ಬಾಜಪಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆದುಕೊಂಡ ಮುಲಾಯಂ ಸಿಂಗ್ ಅವರ ನಡವಳಿಕೆ ಮುಸ್ಲಿಂ ಸಮುದಾಯಕ್ಕೆ ಸಮಾಜವಾದಿ ಪಕ್ಷದ ಬಗ್ಗೆ ದಶಕಗಳಿಂದ ಇದ್ದ ನಂಬಿಕೆ ಕುಸಿಯುವಂತೆ ಮಾಡಿತು.

ಇಂತಹ ಪರಿಸ್ಥಿತಿಯಲ್ಲ್ಲಿ ಬಾಜಪವನ್ನು ಸೋಲಿಸಬಲ್ಲ ಒಂದು ಪಕ್ಷವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವ ಯೋಚನೆಯಲ್ಲಿದೆ ಮತ್ತು ಅಂತಹ ಪಕ್ಷದ ಹುಡುಕಾಟದಲ್ಲಿ ತೊಡಗಿರುವಾಗಲೇ ಬಹುಜನ ಪಕ್ಷದ ಮಾಯಾವತಿಯವರು ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಪೂರ್ವಬಾವಿಯಾಗಿಯೇ ಅವರು ಉತ್ತರಕಾಂಡದಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ತಮ್ಮ ಪಕ್ಷದ ಶಾಸಕರುಗಳು ಕಾಂಗ್ರೆಸ್ಸಿಗೆ ಮತಚಲಾಯಿಸುವಂತೆ ನೋಡಿಕೊಂಡರು. ಹೀಗೆ ತಾನು ಕಾಂಗ್ರೆಸ್ಸಿನ ಪರವಾಗಿರುವುದನ್ನು ಸಾರ್ವಜನಿಕವಾಗಿ ತೋರಿಸಿಕೊಡುವುದರ ಮೂಲಕ ತಮ್ಮ ಪಕ್ಷ ಭವಿಷ್ಯದಲ್ಲಿ ಬಾಜಪವನ್ನು ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವಲ್ಲಿ ಯಶಸ್ವಿಯಾದರು. ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿರುವ ಮುಸ್ಲಿಂ ಸಮುದಾಯವನ್ನು ಸೆಳೆಯಲು ನಿರ್ದರಿಸಿರುವ ಮಾಯಾವತಿಯವರು ತಾವು ಹಿಂದೆ ಪ್ರಯೋಗಿಸಿದ ದಲಿತ ಮತ್ತು ಮುಸ್ಲಿಂ ಸಮೀಕರಣವನ್ನು ಮತ್ತೊಮ್ಮೆ ಪ್ರಯೋಗಿಸಲು ಸಿದ್ದತೆ ನಡೆಸಿದ್ದಾರೆ. 2007ರಲ್ಲಿ ಅವರು 206 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗಲು ಸಹಾಯ ಮಾಡಿದ್ದೇ ಈ ದಲಿತ-ಮುಸ್ಲಿಂ-ಬ್ರಾಹ್ಮಣ ಸಮೀಕರಣ. ಈಗಾಗಲೇ ಟಿಕೇಟ್ ಹಂಚಿಕೆಯನ್ನು ಪ್ರಾರಂಬಿಸಿರುವ ಬಹುಜನ ಪಕ್ಷವು ಸುಮಾರು 100 ಸ್ಥಾನಗಳನ್ನು ಮುಸ್ಲಿಮರಿಗು, 50 ಸ್ಥಾನಗಳನ್ನು ಬ್ರಾಹ್ಮಣರಿಗೂ ಮೀಸಲಿಟ್ಟಿದ್ದು ಒಟ್ಟು ಸ್ಥಾನಗಳ ಪೈಕಿ ಶೇಕಡಾ ಇಪ್ಪತ್ತೈದರಷ್ಟನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟು , ತಾನು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತಹ ಸೂಚನೆಯನ್ನು ನೀಡಿದ್ದಾರೆ. 

ಈ ದಿಸೆಯಲ್ಲಿ ಅವರು ಬಾಜಪವನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ. ಇಂತಹ ಮೈತ್ರಿಯ ವಿಚಾರದಲ್ಲಿ ಕಾಂಗ್ರೆಸ್ ತಗೆದುಕೊಳ್ಳಬಹುದಾದ ನಿರ್ದಾರ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಮುಂದಿನ ವಿದಾನಸಭಾ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದ ಜೊತೆಜೊತೆಗೆ ಧಾರ್ಮಿಕ ಧ್ರವೀಕರಣಗಳೂ ನಡೆಯುವುದು ಖಂಡಿತಾ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲವಾದರೂ, ಇಂಡಿಯಾದ ರಾಜಕಾರಣ ನಡೆಯುತ್ತಿರುವುದೇ ಇಂತಹ ಜಾತಿ ಧರ್ಮಗಳ ಆಧಾರದ ಮೇಲೆ ಎನ್ನುವುದು ವಿಷಾದದ ವಿಷಯವಾಗಿದೆ.

Jun 25, 2016

2017ರ ಪಂಜಾಬ್ ವಿದಾನಸಭಾ ಚುನಾವಣೆಗಳು ಊರಿಗೆ ಮುಂಚೆಯೇ ಸಿದ್ದಗೊಳ್ಳುತ್ತಿರುವ ರಾಜಕೀಯ ಪಕ್ಷಗಳು!

punjab elections
ಕು.ಸ.ಮಧುಸೂದನ ನಾಯರ್
25/06/2016
ಪಂಜಾಬ್ ವಿದಾನಸಭಾ ಚುನಾವಣೆಗಳು ನಡೆಯುವುದು ಮುಂದಿನ ವರ್ಷದಲ್ಲಾದರು (2017) ಅದು ಸೃಷ್ಠಿಸಿರುವ ಕುತೂಹಲ ಮಾತ್ರ ಅಗಾಧ. ಯಾಕೆಂದರೆ ಉತ್ತರಪ್ರದೇಶದಂತೆ ಇಲ್ಲಿಯೂ ತಾನು ಗೆಲ್ಲಲೇ ಬೇಕು ಮತ್ತು ತನ್ಮೂಲಕ ಇಡೀ ಉತ್ತರ ಭಾರತದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡಲೇಬೇಕೆಂಬ ಹಟಕ್ಕೆ ಬಿದ್ದ ಬಾಜಪ ಆ ನೆಲೆಯಲ್ಲಿಯೇ ತನ್ನ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳದ ಜೊತೆ ಸೇರಿ ಚುನಾವಣಾ ತಯಾರಿಮಾಡಿಕೊಳ್ಳುತ್ತಿತ್ತು. ಇಷ್ಟಲ್ಲದೆ ಕಾಂಗ್ರೆಸ್ ಕೂಡಾ ತನ್ನ ಮುಂದಿನ ನಡೆಗಳ ಕುರಿತು ಲೆಕ್ಕಾಚಾರ ಹಾಕುತ್ತಿತ್ತು.  ಆದರೆ ಈ ಎರಡೂಪಕ್ಷಗಳಿಗೆ ಆಘಾತಕಾರಿಯಾಗವಂತಹ ಸುದ್ದಿಯೊಂದೀಗ ಹೊರಬಿದ್ದಿದೆ: ಹಫ್ ಪೋಸ್ಟ್-ಸಿ-ವೋಟರ್ ಒಂದು ಸಮೀಕ್ಷೆಯನ್ನು ನಡೆಸಿದ್ದು ಅದರ ಪ್ರಕಾರ ಮುಂದಿನ ಚುನಾವಣೆಯಲ್ಲಿ  ದೆಹಲಿಯ ಮುಖ್ಯಮಂತ್ರಿಯಾದ ಶ್ರೀ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ ಒಟ್ಟು 117 ಸ್ಥಾನಗಳ ಪೈಕಿ 94ರಿಂದ100 ಸ್ಥಾನಗಳನ್ನು ಗಳಿಸುತ್ತದೆಯೆಂಬ ಪಲಿತಾಂಶ ಬಿಡುಗಡೆ ಮಾಡಿದೆ. ಇಷ್ಟಲ್ಲದೆ ಪಂಜಾಬಿ ಜನ ತಮ್ಮ ಮುಖ್ಯಮಂತ್ರಿಯನ್ನಾಗಿ ಕೇಜ್ರಿವಾಲರನ್ನು ಮೊದಲ ಸ್ಥಾನದಲ್ಲಿಯೂ, ಕಾಂಗ್ರೆಸ್ಸಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಎರಡನೇ ಸ್ಥಾನದಲ್ಲಿಯೂ ನೋಡಲು ಬಯಸಿದ್ದಾರೆಂಬ ಮಾಹಿತಿಯನ್ನೂ ನೀಡಿದೆ. ಶೇಕಡಾ 51ರಷ್ಟು ಜನ ಕೇಜ್ರಿವಾಲರನ್ನು, ಶೇಕಡಾ35 ರಷ್ಟು ಜನ ಅಮರಿಂದರ್ ಸಿಂಗ್ ಅನ್ನು ಆರಿಸುವ ಬಯಕೆ ಹೊಂದಿರುವುದು  ಸಮೀಕ್ಷೆಯಲ್ಲಿ ಗೊತ್ತಾಗಿದ್ದು  ಈ ಪಟ್ಟಿಯಲ್ಲಿ ಬಾಜಪದ ಅಥವಾ ಅಕಾಲಿದಳದ ಯಾವೊಬ್ಬ ನಾಯಕನೂ ಇಲ್ಲದಿರುವುದೇ ಬಾಜಪದ ತಲೆನೋವಿಗೆ ಕಾರಣವಾಗಿದೆ.
       ಈ ಬೆಳವಣಿಗೆಗಳಿಂದ ಕಂಗೆಟ್ಟಂತಾಗಿರುವ ಬಾಜಪ ಪಂಜಾಬ್ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೊಂದು ತಂತ್ರಗಾರಿಕೆ ಅನುಸರಿಸಲು ಸಿದ್ದವಾಗಿ ನಿಂತಿದೆ. ಪಂಜಾಬ್ ಬಾಜಪದ ರಾಜ್ಯಾದ್ಯಕ್ಷರಾದ ಕಮಲ್ ಶರ್ಮಾ ಮತ್ತು ಇತರೇ ಸ್ಥಳೀಯ ನಾಯಕರುಗಳು ಅಕಾಲಿದಳದೊಂದಿಗಿನ ಮೈತ್ರಿ ಮುರಿದುಕೊಂಡು ಬಾಜಪ ಏಕಾಂಗಿಯಾಗಿ ಚುನಾವಣೆ ಎದುರಿಸುವುದರಿಂದ  ಮೋದಿಯವರ ಅಭಿವದ್ದಿಯ ಮಂತ್ರ ಮತ್ತು ಅವರ ವರ್ಚಸ್ಸಿನಿಂದ ಚುನಾವಣೆ ಗೆಲ್ಲಲು ಸಾದ್ಯವೆಂದು ರಾಷ್ಟ್ರೀಯ ಅದ್ಯಕ್ಷರಾದ ಅಮಿತ್ ಷಾಗೆ ಮನವಿ ಸಲ್ಲಿಸಿದ್ದಾರೆ.  ಈ ವರ್ಷ ಅದ್ಯಕ್ಷ ಶರ್ಮಾರವರ ಅವಧಿ ಮುಗಿಯಲಿದ್ದು ಸಂಸತ್ ಸದಸ್ಯ ಮತ್ತು ಮಾಜಿ ಕ್ರಿಕೇಟಿಗ ಶ್ರೀ ನವಜೋತ್ ಸಿಂಗ್ ಸಿದ್ದುರವರನ್ನು ಪಕ್ಷಾದ್ಯಕ್ಷರನ್ನಾಗಿ ಮಾಡಲು ಸಹ  ಒಂದುವರ್ಗ ಕೋರಿಕೆಯನ್ನಿಟ್ಟಿದೆ. ಇಷ್ಟು ದಿನ ಪಂಜಾಬಿನಲ್ಲಿ ನೆಲೆ ಕಂಡುಕೊಳ್ಳಲು ಮತ್ತು ಅಧಿಕಾರ ನಡೆಸಲು ಸಹಾಯ ಮಾಡಿದ ಅಕಾಲಿದಳಕ್ಕೆ ಕೈಕೊಡುವುದು ಮಾತ್ರವಲ್ಲದೆ, ಇಷ್ಟು ದಿನದ ದುರಾಡಳಿತಕ್ಕೆ ಮತ್ತೆಲ್ಲ ಕೆಡುಕುಗಳಿಗೂ ಅಕಾಲಿದಳವನ್ನೇ ಹೊಣೆಯಾಗಿಸಿ ತಾನು ಸ್ಪಟಿಕದಂತೆ ಸ್ವಚ್ಚ ಎಂಬ  ಘೊಷಣೆಯೊಂದಿಗೆ ಜನತೆಯ ಮುಂದೆ ಹೋಗುವುದು ಬಾಜಪದ ಸದ್ಯದ ಲೆಕ್ಕಾಚಾರವಾಗಿದೆ. ಕಳೆದ ಹತ್ತು ವರ್ಷಗಳಿಂದ ಪಂಜಾಬಿನ ಅಧಿಕಾರದ ಗದ್ದುಗೆಯನ್ನು ಹಿಡಿದಿರುವ ಬಾಜಪ-ಅಕಾಲಿದಳದ ಮೈತ್ರಿಕೂಟ ಈಗಾಗಲೆ ಜನರಿಂದ ದೂರವಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ  ಸೋಲುವ ಬೀತಿಯಲ್ಲಿದ್ದು, ತಾನು ಗೆಲ್ಲಲು ಸಾದ್ಯವಿಲ್ಲವೆಂಬ ಅಂಶವನ್ನು ತಿಳಿದೇ ಅಕಾಲಿದಳವನ್ನು  ದೂರ ಮಾಡಿ ಆಗಿರುವ ಅನಾಹುತಕ್ಕೆಲ್ಲ ಅದೇ ಹೊಣೆ ತಾನಲ್ಲ ಎಂಬ ಅಂಶವನ್ನು ಜನರಿಗೆ ರವಾನಿಸಲು ಸಿದ್ದವಾಗಿ ನಿಂತಿದೆ.
ಇದೆಲ್ಲದರ ನಡುವೆ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಬಹುದಾಗಿದ್ದ ಕಾಂಗ್ರೆಸ್ ಅನಾಹುತವೊಂದನ್ನು ಮಾಡಿಕೊಂಡಿತು. ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿದ ಕಾಂಗ್ರೆಸ್ ಪಂಜಾಬಿನ ಉಸ್ತುವಾರಿಯನ್ನು  ಶ್ರೀ ಕಮಲ್‍ನಾಥ್ ಅವರಿಗೆ ನೀಡಿತು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ನೇಮಕವನ್ನು ಸಮರ್ಥಿಸಿಕೊಂಡರೂ ಪಂಜಾಬಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿಬಿಟ್ಟಿತು. ಯಾಕೆಂದರೆ 1984 ರಲ್ಲಿ ನಡೆದ ಸಿಖ್  ನರಮೇಧದ ಹಿಂದೆ ಕಮಲ್‍ನಾಥ್ ಕೈವಾಡವಿದೆಯೆಂಬ ಆರೋಪವಿದ್ದು ಪಂಜಾಬಿನ ಜನತೆ ಅದನ್ನಿನ್ನೂ ಮರೆತಿಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ನಾಯಕರುಗಳ ಅಭಿಪ್ರಾಯವನ್ನು ಕೇಳಿಲ್ಲವೆಂಬ ಅಸಮಧಾನ ಅಲ್ಲಿನ ನಾಯಕರಲ್ಲಿ ಮೂಡಿದ್ದು ಸುಳ್ಳಲ್ಲ. ಯಾಕೆಂದರೆ ಈ ಹಿಂದೆ ಕಮಲ್ ನಾಥ್ ಅಮೇರಿಕಾ ಪ್ರವಾಸ ಕೈಗೊಂಡಾಗಲೂ ಅಲ್ಲಿನ ಸಿಖ್ ಜನತೆ ಅವರ ವಿರುದ್ದ ಪ್ರತಿಭಟನೆ ನಡೆಸಿದ್ದರು.  ಇದನ್ನು ಅರಿತ ಕಮಲ್ ನಾಥ್ ಕೇವಲ ಮೂರೇ ದಿನಕ್ಕೆ ತಮ್ಮ ಹುದ್ದೆಗೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದರು. ನಂತರದಲ್ಲಿ ಶ್ರೀ ಗುಲಾಂನಬಿ ಆಜಾದ್ ಅವರನ್ನು ಆ ಹುದ್ದೆಗೆ ನೇಮಿಸಲಾಯಿತು. ಹೀಗೆ ಸಿಖ್ ಜನಾಂಗದವರ ಬಾವನಾತ್ಮಕ ವಿಚಾರವನ್ನು ಪರಿಗಣಿಸದೆ ಮಾಡಿದ ಒಂದು ನೇಮಕ ಒಂದಷ್ಟು ದಿನಗಳ ಕಾಲ ಕಾಂಗ್ರೆಸ್ಸಿಗೆ ಇರುಸುಮುರುಸನ್ನು ಉಂಟು ಮಾಡಿತು.
 ಇನ್ನು ಅಕಾಲಿದಳ ಎಂದಿನಂತೆ  ಬಾಜಪ ಜೊತೆಗಿನ ಮೈತ್ರಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಮ್‍ಆದ್ಮಿಪಕ್ಷ ಮಾತ್ರ  ಮುಂದಿನ ಚುನಾವಣೆಯನ್ನು ಎದುರಿಸಲು ಸರ್ವಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಅದು ಎಲ್ಲ 117 ಕ್ಷೇತ್ರಗಳಲ್ಲಿಯೂ ತನ್ನ ಕಾರ್ಯಕರ್ತರ ಪಡೆ ಸಿದ್ದಗೊಳಿಸಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕರ್ತರ ಹೊಣೆಗಾರಿಕೆಗಳ ಬಗ್ಗೆ ಕೈಪಿಡಿಯೊಂದನ್ನು ಸಿದ್ದಪಡಿಸಿ ಅವನ್ನು ಕಾರ್ಯಕರ್ತರಿಗೆ ತಲುಪಿಸುವ ಯತ್ನವನ್ನೂ ಅದು ಮಾಡುತ್ತಿದೆ.
ಎಂದಿನಂತೆ ಬಾಜಪ ತನ್ನ ಹಳೆಯ ಚಾಳಿಯನ್ನು ಇಲ್ಲಿಯೂ ಮಂದುವರೆಸುವಂತೆ ಕಾಣುತ್ತಿದೆ. ಈ ಹಿಂದೆ ಅದು ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುಂಚೆ  ಶಿವಸೇನೆಯಿಂದ ಮೈತ್ರಿ ಕಡಿದುಕೊಂಡು ಹಿಂದಿನ ಎಲ್ಲ ತಪ್ಪುಗಳಿಗೂ ಅದನ್ನು ಹೊಣೆಯಾಗಿಸಿ ತಾನು ಮಾತ್ರ ಸರ್ವಸಂಪನ್ನ ಪಕ್ಷವೆಂಬಂತೆ ಜನರ ಮುಂದೆ ಹೋಗಿ ನಿಂತು ಸರಳ ಬಹುಮತದತ್ತ ಹೋಗುವಲ್ಲಿ ಯಶಸ್ವಿಯಾಗಿತ್ತು. ಆಡಳಿತ ವಿರೋಧಿ ಅಲೆಯ ಭಯವಿರುವುದರಿಂದ ಪಂಜಾಬಿನಲ್ಲಯೂ ಅದು ಅಕಾಲಿದಳದೊಂದಿಗಿನ ಮೈತ್ರಿಗೆ ತಿಲಾಂಜಲಿ ಬಿಟ್ಟು ಹೊಸ ಮುಖವಾಡದೊಂದಿಗೆ ಚುನಾವಣೆ ಎದುರಿಸುವ ನಿರೀಕ್ಷೆಯಲ್ಲಿರುವಂತೆ ಕಾಣುತ್ತಿದೆ.  ಬಾಜಪ ಹೈಕಮ್ಯಾಂಡಿನ ಈ ನಿರ್ದಾರಕ್ಕೆ ಮೂಲ ಕಾರಣ ಸ್ಥಳೀಯ ಬಾಜಪ ನಾಯಕರ ಮನವಿ ಎಂದು ಸಾರ್ವಜನಿಕರಿಗೆ ತೋರಿಸಲು ಅದು ರಾಜ್ಯ ನಾಯಕರುಗಳು ಈ ಬಗ್ಗೆ ಅಮಿತ್‍ ಷಾಗೆ ಮನವಿ ಮಾಡಿಕೊಂಡಂತಹ ಒಂದು ಪೂರ್ವನಿಯೋಜಿತ ನಾಟಕವನ್ನು ಈಗಾಗಲೇ ಮಾಡಿ ಮುಗಿಸಿದೆ.
ಇವೆಲ್ಲವನ್ನೂ ನೋಡಿದರೆ ಯಾವಾಗಲು ಕಾಂಗ್ರೆಸ್ ಮತ್ತು ಬಾಜಪ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಸ್ಪರ್ದೆಯ ಬದಲಿಗೆ ಈ ಬಾರಿ  ಚತುಷ್ಕೋನ ಸ್ಪರ್ದೆ ನಡೆಯುವ ಸಾದ್ಯತೆ ಹೆಚ್ಚಾಗಿದೆ. ಇದರಿಂದ ಯಾವ ಪಕ್ಷ ಶೇಕಡಾ 30ರಷ್ಟು ಮತ ಪಡೆಯುತ್ತದೆಯೊ ಅದು ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೂ ಈ ಬಗ್ಗೆ ನಾವು ಅಧಿಕೃತವಾಗಿ ಏನನ್ನೂ ನುಡಿಯಲು ಸಾದ್ಯವಿಲ್ಲ. ಮತ್ತು ನುಡಿಯಲೂಬಾರದು.

Jun 24, 2016

ಮೇಕಿಂಗ್ ಹಿಸ್ಟರಿ: ಸಾಮಾಜಿಕ ಕುಸಿತ ಮತ್ತು ಅರೆಊಳಿಗಮಾನ್ಯ – ವಸಾಯತು ಆಳ್ವಿಕೆಯಲ್ಲಿನ ಬಿಕ್ಕಟ್ಟು

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
24/06/2016

ಕರ್ನಾಟಕವನ್ನಾಳಲು ಜೊತೆಯಾದ ಹೊಸ ಮೈತ್ರಿಕೂಟ ವೇಗವಾಗಿ ಜನರನ್ನು ಬಡತನಕ್ಕೆ ನೂಕಿ ಭೂಮಿಯನ್ನು ಪಾಳು ಬೀಳಿಸಿತು. ತನ್ನಾಳ್ವಿಕೆಯ ಸ್ವಲ್ಪ ಸಮಯದಲ್ಲೇ ಕೆಟ್ಟದಾಗಿ ನಿರ್ವಹಿಸಿದ ಸಾಮಾಜಿಕತೆಯ ಮೇಲೆ ಗೂಡು ಕಟ್ಟಿರುವುದನ್ನರಿತು, ತೀರ್ವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ತನ್ನನ್ನು ತಾನೇ ಬಚಾಯಿಸಿಕೊಳ್ಳಲು ಪ್ರಯತ್ನಪಟ್ಟಿತು. ಇಂತಹ ಉದಾಹರಣೆಯನ್ನು ಶತಮಾನಗಳುದ್ದಕ್ಕೂ ಕರ್ನಾಟಕದ ಇತಿಹಾಸ ಕಂಡಿರಲಿಲ್ಲ. ವಸಾಹತುಶಾಹಿಯ ಸರಪಳಿಗಳಿಂದ ಬಂಧಿಸಲ್ಪಟ್ಟು ನಾಲ್ಕು ದಶಕಗಳು ಕಳೆಯುವಷ್ಟರಲ್ಲಿ, ಕರ್ನಾಟಕದ ಜನರ ಸಹನೆಯ ಕಟ್ಟೆ ಒಡೆದಿತ್ತು ಮತ್ತು ಶತ್ರುವನ್ನು ಒಡೆದೋಡಿಸಲು ಬೇಕಿದ್ದ ರಾಜಕೀಯ ವಿಸ್ತೀರ್ಣತೆಯನ್ನು ಪಡೆದುಕೊಳ್ಳಲಾರಂಭಿಸಿತ್ತು. 1830ರ ದಶಕದ ಮೊದಲರ್ಧವನ್ನು ಕರ್ನಾಟಕದ ಭವ್ಯ 1857 ಎಂದು ಪರಿಗಣಿಸಬಹುದು.

ನಾವೀಗಾಗಲೇ ನೋಡಿರುವಂತೆ, ಊಳಿಗಮಾನ್ಯತೆ – ವಸಾಹತುಶಾಹಿಯ ಆಳ್ವಿಕೆಯ ಬಿಕ್ಕಟ್ಟು ಆಕ್ರಮಣ ಮಾಡಿದ ಕೆಲವೇ ದಿನಗಳಲ್ಲಿ ಪ್ರಾರಂಭವಾಗಿತ್ತು, ಮೈಸೂರು ಸೈನ್ಯದ ವಿಸರ್ಜನೆಯೊಂದಿಗೆ. ಸಾಮಾಜಿಕ ರಚನೆ ವಸಾಹತುಶಾಹಿಯ ಲೂಟಿಗೆ ಪ್ರತಿಕ್ರಿಯಿಸಲಾರಂಭಿಸಿತ್ತು ಮತ್ತು ಒಂದು ದಶಕದೊಳಗೆ ಪ್ರತಿಕ್ರಿಯೆಗಳು ಆಳ ಪಡೆದುಕೊಳ್ಳಲಾರಂಭಿಸಿತ್ತು (ಗಹನತೆ ಪಡೆದುಕೊಳ್ಳಲಾರಂಭಿಸಿತ್ತು). 1820ರಷ್ಟರಲ್ಲಿ, ಬಿಕ್ಕಟ್ಟು ತೀರ್ವವಾಯಿತು ಮತ್ತು ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿತ್ತು. 1820ರ ದಶಕದುದ್ದಕ್ಕೂ ಕ್ರಾಂತಿಯ ಕಿಡಿಗಳು ಅಲ್ಲಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿತ್ತು, ದಶಕ ಮುಗಿಯುವಷ್ಟರಲ್ಲಿ ಎಲ್ಲೆಡೆಯೂ ಕ್ರಾಂತಿಯ ಬೆಂಕಿ ಹೊತ್ತಿಕೊಳ್ಳುವುದರ ಸೂಚನೆಯಾಗಿ.

ವಸಾಹತುಶಾಹಿ ಕರ್ನಾಟಕಕ್ಕೆ ಹತ್ತೊಂಬತ್ತನೇ ಶತಮಾನದು ಆದಿಭಾಗದಲ್ಲಿ ಪರಿಚಯಿಸಿದ ಬಿಕ್ಕಟ್ಟು ಇವತ್ತಿನವರೆಗೂ ಮುಂದುವರೆದಿದೆ. ರಾಜ್ಯಕ್ಕೆ ಅಂಟಿಕೊಂಡ ಈ ಮೊದಲ ಬಿಕ್ಕಟ್ಟು, ಕೆಲವೊಂದು ಸಾಮ್ಯತೆಗಳಿದ್ದಾಗ್ಯೂ, ಭವಿಷ್ಯದಲ್ಲಿ ಇಂಪೀರಿಯಲಿಸಂ ವಿರುದ್ಧ ಏಕೀಕೃತಗೊಂಡ ಹೋರಾಟಗಳಿಗೆ ಹೋಲಿಸಿದರೆ ಬಹಳಷ್ಟು ಭಿನ್ನವಾಗಿತ್ತು. ಈ ಬಿಕ್ಕಟ್ಟಿನ ವೈಶಿಷ್ಟ್ಯತೆಯೆಂದರೆ ಆಕ್ರಮಣಕಾರಿ ದೇಶವಾದ ಬ್ರಿಟನ್ನಿನಲ್ಲಿ ಕೈಗಾರಿಕಾ ಬಂಡವಾಳ ವರ್ತಕ ಬಂಡವಾಳಕ್ಕಿಂತ ಮೇಲುಗೈ ಪಡೆಯುವ ಪ್ರಕ್ರಿಯೆಯಿನ್ನೂ ನಡೆದಿರುವಾಗಲೇ ಕರ್ನಾಟಕದಲ್ಲಿ ವಸಾಹತುಶಾಹಿಯ ಸುದೀರ್ಘ ಇನ್ನಿಂಗ್ಸ್ ಪ್ರಾರಂಭವಾಗಿಬಿಟ್ಟಿತ್ತು. ಇದರಿಂದಾಗಿ ವಿವಿಧ ಬಗೆಯ ಲೂಟಿಗಳು ಮತ್ತು ಆ ಲೂಟಿಗೆ ಪ್ರತಿಕ್ರಿಯೆಯಾಗಿ ಬಿಕ್ಕಟ್ಟಿನ ಉದ್ಭವವಾಗುತ್ತಿತ್ತು; ಬಂಡವಾಳದಲ್ಲಿ ಬದಲಾವಣೆಯಾದಾಗ ಅಥವಾ ಮತ್ತೊಂದು ಬಗೆಯಲ್ಲಿ ಹೇಳುವುದಾದರೆ ಕೊಳ್ಳೆ ಹೊಡೆಯುವವರ ಸಾಮಾಜಿಕ ಅಸ್ತಿತ್ವದಲ್ಲಿ ಬದಲಾವಣೆಯಾದಾಗ ಬಿಕ್ಕಟ್ಟಿನ ರೂಪವೂ ಬದಲಾಗುತ್ತಿತ್ತು.

ಕರ್ನಾಟಕಕ್ಕೆ ಹೊರೆಯಾದ ವಸಾಹತುಶಾಹಿ ಮಾಡಿದ ಒಂದು ದೊಡ್ಡ ವಿಧ್ವಂಸಕ ಕೃತ್ಯವೆಂದರೆ ಕೃಷಿ ಕಂದಾಯ ಪದ್ಧತಿಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿಬಿಟ್ಟಿದ್ದು. ಆಕ್ರಮಿಸಿದ ಮೊದಲ ಹಲವು ದಶಕಗಳಲ್ಲಿ ಈ ತೆರಿಗೆ ವಸಾಹತಿಗೆ ದೊಡ್ಡ ಮಟ್ಟದ ಆದಾಯ ಮೂಲವಾಗಿಬಿಟ್ಟಿತ್ತು.

ಅ. ಕೃಷಿ ಕಂದಾಯ ಮತ್ತದರ ಶೋಷಕ ಶರಾತ್ (Revenue farming and its oppressive sharat)

ಕರಾವಳಿ ಮತ್ತು ಮಲೆನಾಡು ಭಾಗದಿಂದ ಸಾಂಬಾರ ಪದಾರ್ಥ ಹಾಗು ಉತ್ತರದ ಜಿಲ್ಲೆಗಳಿಂದ ಹತ್ತಿಯನ್ನು ತೆಗೆದುಕೊಳ್ಳುವುದನ್ನು ಬಿಟ್ಟರೆ ಬ್ರಿಟೀಷರು ಮೊದಲ ಐದು ದಶಕ ಕೃಷಿಯ ಬಗ್ಗೆ ತುಂಬಾ ಕಡಿಮೆ ಆಸಕ್ತಿ ತೋರಿಸುತ್ತಿತ್ತು. ಆದರೂ ರಾಜ್ಯವನ್ನಾಕ್ರಮಿಸಿದ ಕೆಲವೇ ವರ್ಷಗಳಲ್ಲಿ ಈ ಭಾಗದ ಕೃಷಿಯನ್ನಷ್ಟೇ ಅಲ್ಲದೇ ನಮ್ಮ ಭೂಮಿಯ ಇಂಚಿಂಚು ಭೂಮಿಯಲ್ಲೂ ಕೃಷಿಯನ್ನು ಹಾಳುಗೆಡವಿತು. ವಸಾಹತುಶಾಹಿ ಕೃಷಿಯನ್ನು ಹಾಳುಗೆಡವಿದ್ದಕ್ಕೆ ಮುಖ್ಯ ಕಾರಣ ಇಂಬಳದಂತೆ ರೈತರ ಶಕ್ತಿಯನ್ನೆಲ್ಲ ಹೀರಿ ಬಿಸಾಕಿದ ಕಂದಾಯ ಆಡಳಿತ. ಲಾಭವನ್ನು ಎಷ್ಟು ಕಾರುಣ್ಯರಹಿತವಾಗಿ ಹೀರಿಬಿಡಲಾಗುತ್ತಿತ್ತೆಂದರೆ ಮತ್ತೆ ಕೃಷಿ ಮಾಡಲು ಬಂಡವಾಳವೇ ಇರುತ್ತಿರಲಿಲ್ಲ. ಲಾಭದಾಯಕ ಕೃಷಿಯನ್ನು ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುವ ಕೃಷಿಯನ್ನಾಗಿ ಮಾಡಿಬಿಡಲಾಯಿತು ಮತ್ತಲ್ಲಿಂದ ಅದು ಸಂಪೂರ್ಣ ನಾಶದ ಹಾದಿ ಹಿಡಿಯಿತು. ವಸಾಹತುಶಾಹಿಯೊಂದಿಗೆ ರೈತ ಸಮೂಹಕ್ಕಾದ ಮೊದಲ ಕಹಿ ಅನುಭವವೆಂದರೆ ಬ್ರಿಟೀಷರ ಪರಾವಲಂಬಿ ಕೃಷಿ ಕಂದಾಯ ಪದ್ಧತಿ. ಈ ಲೂಟಿ ಕಂಪನಿಗೆ ಎಷ್ಟೊಂದು ಉಪಯುಕ್ತವಾಗಿತ್ತೆಂದರೆ, ಭೂಮಿಗಾಕುವ ತೆರಿಗೆಯಿಂದ ಕಂಪನಿಗೆ ಬರುವ ಆದಾಯ ಉಳಿದೆಲ್ಲ ಆದಾಯ ಮೂಲಕ್ಕಿಂತಲೂ ಅಧಿಕವಾಗಿತ್ತು ಮತ್ತು ಪರಿಚಯಿಸಿದ ದಶಕದಲ್ಲಿ ವಸಾಹತು ಪ್ರದೇಶದಿಂದ ಬ್ರಿಟಿಷರಿಗೆ ಸಿಗುತ್ತಿದ್ದ ಆದಾಯ ಮೂಲವಾಗಿತ್ತು. ಈ ಕೃಷಿ ಕಂದಾಯದ ಅಗಾಧತೆಯನ್ನು ನಾವು ಗಮನಿಸೋಣ, ಅದರ ವಿವಿಧ ರೂಪ ಮತ್ತು ಈ ಲೂಟಿಯಲ್ಲಿದ್ದ ಕ್ರೌರ್ಯತೆಯೊಂದಿಗೆ; ಇದನ್ನು ಅರಿಯುವ ಮೂಲಕ ಊಳಿಗಮಾನ್ಯ – ವಸಾಹತು ಆಳ್ವಿಕೆ ಮೂಡಿಸಿದ ಬಿಕ್ಕಟ್ಟಿನ ಸ್ವರೂಪಗಳನ್ನು ತಿಳಿಯಬಹುದು. 

ನಾವೀಗಾಗಲೇ ಗಮನಿಸಿರುವಂತೆ, ಸಹಕಾರಿ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ತಮಗೆ ಶರಣಾದ ರಾಜರು ಮತ್ತು ಪಾಳೇಗಾರರಿಗೆ ಬ್ರಿಟೀಷರು ಹಾಕಿದ ಮೊದಲ ಶರತ್ತು ವಾರ್ಷಿಕ ಕಾಣ್ಕೆಯ ಕುರಿತಾಗಿತ್ತು. ವಾರ್ಷಿಕ ಕಾಣ್ಕೆಯನ್ನು ತಿಂಗಳ ಕಂತುಗಳಲ್ಲಿ ಬ್ರಿಟೀಷ್ ಸಾಮ್ರಾಜ್ಯಕ್ಕೆ ಉಡುಗೊರೆಯಂತೆ ನೀಡಬೇಕಿತ್ತು. ತಮ್ಮ ನೇರ ಆಡಳಿತವಿದ್ದ ಪ್ರದೇಶಗಳಲ್ಲಿ ಈ ಮೊತ್ತವನ್ನು ತಮ್ಮದೇ ತೆರಿಗೆ ಪದ್ಧತಿಯಿಂದ ಪಡೆಯುತ್ತಿದ್ದರು; ಅಧಿಕಾರಶಾಹಿಗೆ ಇಷ್ಟು ಮೊತ್ತವನ್ನು ಸಂಗ್ರಹಿಸಬೇಕೆಂದು ಗುರಿ ನೀಡಲಾಗುತ್ತಿತ್ತು. ಕರ್ನಾಟಕದಲ್ಲಿದ್ದ ಈ ಹೆಚ್ಚಿನ ತೆರಿಗೆ ಪದ್ಧತಿಯ ಕುರಿತು ಸೆಬಾಸ್ಟಿಯನ್ ಜೋಸೆಫ್ ತಿಳಿಸುತ್ತಾರೆ: “1799ರ ಸಹಕಾರಿ ಒಪ್ಪಂದದ ಎರಡನೇ ಆರ್ಟಿಕಲ್ಲಿನನುಸಾರ ಮೈಸೂರಿನ ಮೇಲೆ 24.5 ಲಕ್ಷ ರುಪಾಯಿಗಳಷ್ಟು ಕಪ್ಪ ಕಾಣ್ಕೆಯನ್ನು ವಿಧಿಸಲಾಯಿತು…ನಂತರ 1881ರಲ್ಲಿ ಇದನ್ನು ಹತ್ತೂವರೆ ಲಕ್ಷದಷ್ಟು ಏರಿಸಿ, ಒಟ್ಟು ಮೂವತ್ತೈದು ಲಕ್ಷವನ್ನು ಮುಂದಿನ 32 ವರುಷಗಳವರೆಗೆ ನಿಯಮಿತವಾಗಿ ಪಡೆಯಲಾಯಿತು, 1896ರಿಂದ 1928ರವರೆಗೆ. 1928ರಲ್ಲಿ ಮತ್ತೆ ಈ ಮೊತ್ತವನ್ನು 24.5 ಲಕ್ಷ ರುಪಾಯಿಗಳಿಗೆ ಇಳಿಸಲಾಯಿತು, ಮೂಲ ಒಪ್ಪಂದದಲ್ಲಿದ್ದಂತೆ. ಈ ಪದ್ಧತಿ 136 ವರುಷಗಳಿಗಿಂತ ಹೆಚ್ಚು ಮುಂದುವರಿಯಿತು…. ಮೈಸೂರಿನ ಈ ಕಾಣ್ಕೆ ವಸಾಹತಿಗೆ ಕಾಣ್ಕೆ ನೀಡುತ್ತಿದ್ದ 198 ರಾಜ್ಯಗಳ ಒಟ್ಟು ಮೊತ್ತದ 50 ಪರ್ಸೆಂಟಿನಷ್ಟಿತ್ತು.” (208) ಮೈಸೂರು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿಬಿಟ್ಟಿತ್ತು.

ಈ ಕಾಣ್ಕೆ ಎಷ್ಟು ಅಗಾಧವಾಗಿತ್ತು ಎಂದರಿವಾಗಲು ಸಾಮ್ರಾಜ್ಯದ ತೆರಿಗೆ ಸಂಗ್ರಹದ ಬಗ್ಗೆ ಗಮನ ಹರಿಸಬೇಕು. 1809-10 ರಲ್ಲಿ ಸಂಗ್ರಹವಾದ ತೆರಿಗೆ 28,24,646 ರುಪಾಯಿ, 1811-12ರಲ್ಲಿ ತೆರಿಗೆ ಸಂಗ್ರಹ ಹೆಚ್ಚಿ 37,18,633 ರುಪಾಯಿಗೆ ತಲುಪಿದರೆ ಮತ್ತೆ 1825-26ರಷ್ಟೊತ್ತಿಗೆ 28,64,950 ರುಪಾಯಿಗಳಿಗೆ ನಿಧಾನಕ್ಕೆ ಕುಸಿಯಿತು. (209)

ಹಾಗಾಗಿ ಕೆಲವೊಮ್ಮೆ ಸಂಗ್ರಹವಾದ ತೆರಿಗೆಯ ಮೊತ್ತ ಬ್ರಿಟೀಷರಿಗೆ ಕೊಡಬೇಕಾದ ಕಾಣ್ಕೆಯ ಮೊತ್ತ ಮತ್ತು ಕಮಿಷನ್ ರೂಪದಲ್ಲಿ ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಸಿಗುತ್ತಿದ್ದ ಮೊತ್ತಕ್ಕಿಂತಲೂ ಕಡಿಮೆಯಿರುತ್ತಿತ್ತು. 

ಆದಾಗ್ಯೂ, 1831-32ರಲ್ಲಿ, ತೆರಿಗೆ ಸಂಗ್ರಹ 43,97,035 ರುಪಾಯಿಗೆ ಏರಿಕೆಯಾಯಿತು ಮತ್ತು 1848-49ರಲ್ಲಿ ಹೆಚ್ಚು ಕಡಿಮೆ ದ್ವಿಗುಣವಾಗಿ 80,08,339 ರುಪಾಯಿ ಸಂಗ್ರಹವಾಯಿತು. ಮೂರನೇ ದಶಕದವರೆಗಿನ ತೆರಿಗೆ ಸಂಗ್ರಹದ ವಿವರವನ್ನು ಜಾಳು ಜಾಳಾದ ಲೆಕ್ಕಾಚಾರ ಎಂದು ತಪ್ಪು ತಿಳುವಳಿಕೆ ಬರಬಾರದು. ತಪ್ಪು ತಿಳುವಳಿಕೆಗೆ ವ್ಯತಿರಿಕ್ತವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಟಿಪ್ಪುವಿನ ತೆರಿಗೆ ಪದ್ಧತಿಯನ್ನು ನಿಂದಿಸುವುದಕ್ಕೆ ಮೈಸೂರು ಇತಿಹಾಸದ ಮೇಲಿನ ತನ್ನ ಮೂರು ಸಂಪುಟಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ವಿಲ್ಕ್ಸ್ ತನ್ನ ವರದಿಗಳಲ್ಲಿ ಬ್ರಿಟೀಷರ ಲೂಟಿ ಮಾಡಿದ ಅಂಕಿಸಂಖೈಗಳ ಬಗ್ಗೆ ವಿವರ ಒದಗಿಸುತ್ತಾನೆ.

1792ರಲ್ಲಿ, ಟಿಪ್ಪು ಸುಲ್ತಾನನ ಆಳ್ವಿಕೆಯಿದ್ದ ಕಾಲದಲ್ಲಿ, ಮುಂದಿನ ದಿನಗಳಲ್ಲಿ ಮೈಸೂರು ಸಂಸ್ಥಾನವನ್ನು ಸೇರಿದ ಜಿಲ್ಲೆಗಳು ಒಟ್ಟು 14,12,533 ಕಾಂತರೇಯ ಪಗೋಡಾಗಳನ್ನು ತೆರಿಗೆ ರೂಪದಲ್ಲಿ ನೀಡಿತ್ತು. 1802-03ನೇ ಸಾಲಿನಲ್ಲಿ ಇದು ದ್ವಿಗುಣವಾಗಿ 25,41,571 ಕಾಂತರೇಯ ಪಗೋಡಾಗಳಷ್ಟಾಗಿತ್ತು. (210) ಈ ಹೆಚ್ಚಳ ನಡೆದ ಕಾಲದಲ್ಲಿ ಆರ್ಥಿಕತೆ ದುಸ್ಥಿತಿಯಲ್ಲಿತ್ತು ಮತ್ತು ಉತ್ಪಾದನೆ ಗಣನೀಯವಾಗಿ ಕುಸಿದುಹೋಗಿತ್ತು.

ರೈತರನ್ನು ಎಷ್ಟು ಸುಲಿಗೆ ಮಾಡಲಾಗಿತ್ತೆಂದರೆ 1811ರಲ್ಲಿ ಪೂರ್ಣಯ್ಯ ಬ್ರಿಟೀಷರ ಸೇವೆಯಿಂದ ನಿವೃತ್ತಿಯೊಂದುವಷ್ಟರಲ್ಲಿ ರಾಜ್ಯದ ಬೊಕ್ಕಸದಲ್ಲಿ ಎರಡು ಕೋಟಿ ರುಪಾಯಿಯಷ್ಟು ಅಧಿಕ ಹಣ ಸಂಗ್ರಹವಾಗಿತ್ತು! ಇದರ ಬಗ್ಗೆ ಲಿವಿಸ್ ರೈಸ್ ಹೇಳುತ್ತಾನೆ: “ಪೂರ್ಣಯ್ಯನವರ ಆಡಳಿತ ವೈಖರಿ ನಿರಂಕುಶವಾಗಿತ್ತು ಅನುಮಾನವಿಲ್ಲ; ಮತ್ತು, ಫೈನಾನ್ಶಿಯರ್ ಆಗಿ, ಅಧಿಕ ಆದಾಯವನ್ನು ಸಂಗ್ರಹಿಸುವುದು ಅವರ ಗುರಿಯಾಗಿತ್ತು. ಜನರ ಸಂಪನ್ಮೂಲಕ್ಕೆ ಕೈಇಟ್ಟು ರಾಜ್ಯದ ವೆಚ್ಚದಲ್ಲಿ ಖಜಾನೆಯನ್ನು ಭರ್ತಿ ಮಾಡಿದ್ದಾರಲ್ವಾ ಎಂದು ಪ್ರಶ್ನಿಸಬಹುದು. 1811ರಷ್ಟರಲ್ಲಿ ಸಾರ್ವಜನಿಕ ಗೋರಿಗಳಲ್ಲಿ ಎರಡು ಕೋಟಿ ರುಪಾಯಿಗಳನ್ನು ಕೂಡಿಹಾಕಿದ್ದರು”. (211)

ಎಂ.ಹೆಚ್.ಗೋಪಾಲ್ ಹೇಳುತ್ತಾರೆ: “ಪೂರ್ಣಯ್ಯನವರ ಆಡಳಿತ ಒಂದು ದೊಡ್ಡ ಟೀಕೆಗೆ ಒಳಗಾಗಿದೆ. 1815ರಷ್ಟು ಮೊದಲೇ ಮಹಾರಾಜ ಬರೆಯುತ್ತಾರೆ: ‘ಮಾಜಿ ದಿವಾನ್ ಪೂರ್ಣಯ್ಯ, ತೆರಿಗೆ ಸಂಗ್ರಹದಲ್ಲಷ್ಟೇ ಪ್ರತಿಭೆ ಹೊಂದಿದ್ದ ಪೂರ್ಣಯ್ಯ, ಹಣವನ್ನು ಸಂಗ್ರಹಿಸುವುದರೆಡೆಗೇ ಗಮನ ಹರಿಸಿದ್ದು ಆಡಳಿತದ ಈ ವಿಭಾಗದಲ್ಲಿ ತಮಗಿರುವ ಆಸಕ್ತಿಯನ್ನು ಪ್ರದರ್ಶಿಸುವ ಸಲುವಾಗಿ. ಹನ್ನೆರಡು ವರುಷಗಳಲ್ಲಿ ಪ್ರತ್ಯೇಕ ನಿಧಿಯನ್ನೇ ಇದಕ್ಕಾಗಿ ಸ್ಥಾಪಿಸಿದ್ದರು. ಆದರೆ ಪೂರ್ಣಯ್ಯ ಜನರ ವಿಚಾರಗಳೆಡೆಗೆ ನಿರಾಸಕ್ತರಾಗಿದ್ದರು ಮತ್ತು ಪ್ರಾಂತ್ಯದ ಜನರನ್ನು ವಿಪರೀತದ ಕಷ್ಟ ನಷ್ಟಗಳಿಗೆ ದೂಡಿಬಿಟ್ಟರು’. ಈ ಟೀಕೆಯನ್ನು 1832-33ರಲ್ಲಿ ಮೈಸೂರಿನ ದಂಗೆಯ ಬಗ್ಗೆ ತನಿಖೆ ನಡೆಸಿದ ಸಮಿತಿಯೂ ಪ್ರತಿಧ್ವನಿಸಿತು. ಸಮಿತಿಯ ವರದಿ ಹೇಳುತ್ತದೆ: ‘ದೇಶದ ಸಂಪತ್ತು ಪೂರ್ಣಯ್ಯನವರ ಆಡಳಿತದಲ್ಲಿ ಹೆಚ್ಚಾಯಿತೆಂದು ತೋರುವುದಿಲ್ಲ. ತೂಕದ ಹೇಳಿಕೆಯೆಂದು ಪರಿಗಣಸಿಸಬಹುದಾದ ಒಬ್ಬ ಸಾಕ್ಷಿದಾರ ಸಮಿತಿಗೆ, ಈ ಅವಧಿಯಲ್ಲಿ ರೈತರ ಪರಿಸ್ಥಿತಿ ತೀರ ಹದಗೆಟ್ಟು ಹೋಯಿತೆಂದು ತಿಳಿಸುತ್ತಾನೆ. ಅವನ ತೀಕ್ಷ್ಣ ಮಾತುಗಳನ್ನೇ ಉಲ್ಲೇಖಿಸುವುದಾದರೆ, ‘ಹೆಚ್ಚಿನ ಸಂಖೈಯ ರೈತರು ಈ ಆಡಳಿತದ ಶುರುವಿನಲ್ಲಿ ಆರಾಮಾಗೇ ಇದ್ದರು ಮತ್ತು ಅವರಲ್ಲಿ ಅರ್ಧದಷ್ಟು ಮಂದಿ ಆಡಳಿತಾವಧಿ ಮುಗಿಯುವಷ್ಟರಲ್ಲಿ ಬಡತನದ ಹತ್ತಿರಕ್ಕೆ ತಳ್ಳಲ್ಪಟ್ಟಿದ್ದರು’.” (212)

ಈ ಸುಲಿಯುವಿಕೆಯ ಮೊದಲ ನೋಟಗಳು ಬುಚನನ್ನಿನ ವಾಸದ ಸಮಯದಲ್ಲೇ ಕಾಣಿಸಲಾರಂಭಿಸಿತ್ತು. ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳುಗಳಲ್ಲೇ ಕೈಗೊಂಬೆ ಸರಕಾರದ ಕುರಿತು ರೈತರ ಮನಸ್ಥಿತಿ ಬದಲಾಗಿದ್ದನ್ನು ಬುಚನನ್ ಗಮನಿಸುತ್ತಾನೆ. ಇದು ತ್ರಿಮೂರ್ತಿ ಆಳ್ವಿಕೆ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸನ್ನಿವೇಶಗಳನ್ನು ಸೂಚಿಸುತ್ತಿತ್ತು. ಕೋಲಾರದ ಬೆತ್ತಮಂಗಲದ ರೈತರ ಅಭಿಪ್ರಾಯಗಳನ್ನು ದಾಖಲಿಸಿದ ಬುಚನನ್ ಹೇಳುತ್ತಾನೆ “ಇಲ್ಲಿನ ಜನರು….. ಮೈಸೂರು ಸರಕಾರದ ಅಮಲ್ದಾರರು ಟಿಪ್ಪು ಆಡಳಿತಾವಧಿಯಲ್ಲಿ ತೆಗೆದುಕೊಳ್ಳುತ್ತಿದ್ದ ಹಣಕ್ಕಿಂತ ಹೆಚ್ಚು ತೆಗೆದುಕೊಳ್ಳುತ್ತಾರೆ ಎಂದು ದೂರು ನೀಡಿದರು….” (213)

ಒಂದೆಡೆ ಕೃಷ್ಣರಾಜ ಒಡೆಯರ್, ಮತ್ತೊಂದೆಡೆ ಬ್ರಿಟೀಷ್ ಆಡಳಿತ ಇಷ್ಟೊತ್ತಿಗಾಗಲೇ ಸತ್ತು ಹೋಗಿದ್ದ ಪೂರ್ಣಯ್ಯನವರನ್ನು ದುಷ್ಟನೆಂದು ಚಿತ್ರಿಸಲು ಪ್ರಯತ್ನಿಸುತ್ತಿತ್ತು. ಆದರೆ ಪೂರ್ಣಯ್ಯನವರ ಕುಟಿಲತೆಯನ್ನು ಮೌನದಿಂದ ಒಪ್ಪಿ ಮತ್ತು ಬ್ರಿಟೀಷರು ಆ ಕುಟಿಲ ನೀತಿಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು!

ಕೃಷಿ ಕಂದಾಯ ರೈತರ ಮೇಲೆ ಗಮನ ಕೇಂದ್ರೀಕರಿಸಿತು. ಕಾಲ ಸರಿದಂತೆ ಇದರ ವ್ಯಾಪ್ತಿ ಇನ್ನುಳಿದ ಜನರನ್ನೂ ಒಳಗೊಂಡಿತು. ಯಾವ ಯಾವ ವಸ್ತುಗಳ ಮೇಲೆ ಬ್ರಿಟೀಷರು ತೆರಿಗೆ ವಿಧಿಸಿದರೆಂದರೆ, ಬ್ರಿಟೀಷರ ಈ ತೆರಿಗೆ ಪದ್ಧತಿ ಹದಿನೇಳನೇ ಶತಮಾನದ ಕೊನೆಯ ಭಾಗದಲ್ಲಿ ಚಿಕ್ಕದೇವರಾಜ ಒಡೆಯರರ ಮೋಸದ ತೆರಿಗೆಯನ್ನೂ ಮೀರಿಸಲಾರಂಭಿಸಿತ್ತು. ರೈಸ್ ಪ್ರಕಾರ ಮೊದಲ ಮೂರು ದಶಕಗಳಲ್ಲಿ “769 ಸಣ್ಣಪುಟ್ಟ ವಸ್ತುಗಳಿಗೂ ತೆರಿಗೆ ಹೇರಲಾಯಿತು”. “ಇದರಲ್ಲಿ ಮದುವೆಗೆ, ಮಗು ಹುಟ್ಟಿದ್ದಕ್ಕೆ, ಅದರ ನಾಮಕರಣಕ್ಕೆ ಮತ್ತು ತಲೆ ಬೋಳಿಸಿದ್ದಕ್ಕೂ ತೆರಿಗೆ ವಿಧಿಸಲಾಯಿತು. ಒಂದು ಹಳ್ಳಿಯಲ್ಲಿ, ಅಲ್ಲಿನ ಜನರ ಪೂರ್ವಿಕರು ಪಾಳೇಗಾರರ ಕುದುರೆಯನ್ನು ಪತ್ತೆ ಹಚ್ಚಿರಲಿಲ್ಲ ಎಂಬ ಕಾರಣಕ್ಕೆ ತೆರಿಗೆ ವಿಧಿಸಲಾಗಿತ್ತು. ನಗರದ ಒಂದು ನಿರ್ದಿಷ್ಟ ಸ್ಥಳವನ್ನು ದಾಟುವ ಜನರು ತಮ್ಮ ಕೈಗಳನ್ನು ದೇಹಕ್ಕಂಟಿಕೊಂಡಂತೆ ಇಟ್ಟುಕೊಂಡು ನಡೆಯದಿದ್ದರೆ ತೆರಿಗೆ ಕಟ್ಟಬೇಕಿತ್ತು. ಈ ಎಲ್ಲಾ ತೆರಿಗೆಗಳ ಬಗ್ಗೆಯೂ ಅಧಿಕೃತವಾಗಿ ಸರಕಾರದ ದಾಖಲೆಗಳಲ್ಲಿ ರಾಜ್ಯದ ಸಂಪನ್ಮೂಲದ ಭಾಗವೆಂದು ನಮೂದಾಗಿದೆ”. (214)

ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ರೈತರು ಬೆಳೆದ ಬೆಳೆಯ ಆರನೇ ಒಂದಂಶದಷ್ಟು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಯಾಗುತ್ತಿದ್ದುದನ್ನು ನಾವು ನೋಡಿದ್ದೇವೆ; ಎಂ.ಹೆಚ್.ಗೋಪಾಲ್ ಕೈಗೊಂಬೆ ಸರಕಾರದ ಆಳ್ವಿಕೆಯಲ್ಲಿನ ತೆರಿಗೆಯನ್ನು ಅಂದಾಜಿಸುತ್ತಾ “ಒಟ್ಟು ಉತ್ಪನ್ನದ ಐದನೇ ಎರಡರಷ್ಟು ಭಾಗ ಸರಕಾರದ ಪಾಲಾಗುತ್ತಿತ್ತು” ಎಂದು ತಿಳಿಸುತ್ತಾರೆ. (215)

ಮದ್ರಾಸಿನ ಗವರ್ನರ್ ಲಷಿಂಗ್ಟನ್ ತಮ್ಮ ಟಿಪ್ಪಣಿಯೊಂದರಲ್ಲಿ ಮೈಸೂರಿನ ಬಗ್ಗೆ ಈ ರೀತಿಯಾಗಿ ಬರೆದುಕೊಂಡಿದ್ದಾರೆ: “ಬೇರೆ ಸರಕಾರವನ್ನು ರಚಿಸಿಕೊಂಡ ದೇಶಗಳು ವಿಭಜನೆಯ ಸಮಯದಲ್ಲಿ ಮಾಡಿಕೊಂಡ ಒಪ್ಪಂದದಲ್ಲಿದ್ದ ಆದಾಯಕ್ಕಿಂತ ದ್ವಿಗುಣದಷ್ಟು ಆದಾಯವನ್ನು ಪಡೆದುಕೊಳ್ಳಲಾರಂಭಿಸಿದವು”. (216) 1791ರಲ್ಲಿ ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ಮೈಸೂರು ಸರಕಾರದ ಒಟ್ಟು ತೆರಿಗೆ ಆದಾಯ 42 ಲಕ್ಷ ರುಪಾಯಿಗಳಷ್ಟಿದ್ದರೆ, 1809ರಷ್ಟರಲ್ಲಿ ದ್ವಿಗುಣಗೊಂಡು 93 ಲಕ್ಷ ರುಪಾಯಿಗಳಾಯಿತು; ನಗರದ ದಂಗೆ ಮತ್ತು ಆಡಳಿತ ಯಂತ್ರದ ಕುಸಿತದ ಕಾರಣದಿಂದ 1831ರಲ್ಲಿ ಇದು ಕುಸಿತಗೊಂಡು 76ಲಕ್ಷ ರುಪಾಯಿಗಳಷ್ಟಾಯಿತು. (217)

ಆರ್.ಡಿ.ಚೋಕ್ಸಿ ಹೇಳುತ್ತಾರೆ: “ವಿವಿಧ ತೆರಿಗೆಗಳ ಹೊರತಾಗಿ, ಅದರಲ್ಲೂ ದಕ್ಷಿಣ ಕೆನರಾದಲ್ಲಿ, ಸರಕಾರ ಒಟ್ಟು ಉತ್ಪನ್ನದ ಮೂವತ್ತರಿಂದ ಐವತ್ತು ಪರ್ಸೆಂಟಿನಷ್ಟನ್ನು ತೆಗೆದುಕೊಂಡುಬಿಡುತ್ತಿತ್ತು”. (218)

ಆಡಳಿತದ ಮೊದಲ ಹಂತದಲ್ಲಿ ತುಳುನಾಡಿನ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮಗಳ ಬಗ್ಗೆ ಶ್ಯಾಮ್ ಭಟ್ ವಿವರಣಾತ್ಮಕ ಚಿತ್ರಣವನ್ನು ಕೊಡುತ್ತಾರೆ. ಅವರು ಹೇಳುತ್ತಾರೆ: “ಭೂ ಕಂದಾಯ ಆಡಳಿತವನ್ನು ಅಭ್ಯಸಿಸಿದ ನಂತರ ತಿಳಿದು ಬರುವ ಅಂಶವೆಂದರೆ ಸರಕಾರಕ್ಕೆ ಬರುತ್ತಿದ್ದ ಆದಾಯದ ಪಾಲು ಆಡಳಿತಗಾರರು ಅಂದಾಜಿಸಿದ್ದಕ್ಕಿಂತ ಹೆಚ್ಚಿರುತ್ತಿತ್ತು. ಭೂ ಕಂದಾಯವನ್ನು ಎಷ್ಟು ಸಾಧ್ಯವೋ ಅಷ್ಟು ಗರಿಷ್ಟ ಮಟ್ಟದಲ್ಲಿ ಇಡುವುದು ಬ್ರಿಟೀಷ್ ರಾಜ್ ವ್ಯವಸ್ಥೆ ಮುಂದುವರಿಯಲಿದ್ದ ಒಂದು ಶಕ್ತಿಯಾಗಿದ್ದನ್ನು ದಕ್ಷಿಣ ಕೆನರಾದಲ್ಲಿ ಕಾಣಬಹುದೆಂದು ಇರ್ಫಾನ್ ಹಬೀಬ್ ಗುರುತಿಸಿದ್ದರು”. (219)

ಅದೇ ಸಮಯದಲ್ಲಿ ಕರಾವಳಿಯಲ್ಲಿ ನಡೆಯುತ್ತಿದ್ದ ಕಂದಾಯ ಕೃಷಿಯ ಬಗ್ಗೆ ತಿಳಿಸುತ್ತ ಅವರೆನ್ನುತ್ತಾರೆ: “ಭೂ ಕಂದಾಯದಲ್ಲಾದ ಹೆಚ್ಚಳಕ್ಕೆ ಸರಕಾರ ಪಡೆಯುತ್ತಿದ್ದ ಭಾಗದಲ್ಲಾದ ಹೆಚ್ಚಳವು ಕಾರಣವೇ ಹೊರತು ಕರಾಬು ಭೂಮಿಯಲ್ಲಿ ಕೃಷಿ ಮಾಡಿದ್ದಾಗಲೀ ಅಥವಾ ಇಡೀ ಪ್ರದೇಶ ಸಮೃದ್ಧಿಯಾಗಿದ್ದಾಗಲೀ ಕಾರಣವಲ್ಲ.

ರೈತನೊಬ್ಬ ತನ್ನ ಕಂದಾಯ ಬಾಕಿಯನ್ನು ನಾಲ್ಕೈದು ವರುಷಗಳಾದರೂ ಕಟ್ಟದೇ ಇದ್ದ ಪಕ್ಷದಲ್ಲಿ ಅವನ ಆಸ್ತಿಯನ್ನು ಸರಕಾರ ಹರಾಜು ಹಾಕುತ್ತಿತ್ತು, ಬರಬೇಕಿದ್ದ ಬಾಕಿಯನ್ನು ವಸೂಲು ಮಾಡುವ ಸಲುವಾಗಿ. ಆದಾಗ್ಯೂ, ಬಾಕಿ ಮೊತ್ತ ತುಂಬ ಕಡಿಮೆಯಾಗಿದ್ದರೆ, ಅಧಿಕಾರಿಗಳು ಆ ಬಾಕಿಯನ್ನು ಮನ್ನಾ ಮಾಡುತ್ತಿದ್ದರು. ಈ ರೀತಿಯಾಗಿ ರೈತರ ಬಾಕಿಯನ್ನು ಮನ್ನಾ ಮಾಡುವುದರಲ್ಲಿ ಒಂದು ಪ್ರಮುಖ ದೋಷವಿತ್ತು. ಬಾಕಿ ಮನ್ನಾ ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದವರಿಗೆ ಅನ್ವಯವಾಗದೆ ಭೂಮಾಲೀಕರಿಗಷ್ಟೇ ಅನ್ವಯಿಸುತ್ತಿತ್ತು. ಸ್ವತಃ ಕೃಷಿ ನಡೆಸದೆ ಗುತ್ತಿಗೆ ಕೊಟ್ಟ ಭೂಮಾಲೀಕರಿಗೂ ಸರಕಾರ ಬಾಕಿ ಮನ್ನಾ ಮಾಡುತ್ತಿತ್ತು. ಹಾಗಾಗಿ ಇದು ನಿಜವಾಗಿ ಕೃಷಿ ಮಾಡುತ್ತಿದ್ದ ಕೃಷಿಕನಿಗೆ ಅನುಕೂಲಕರವಾಗಿರಲಿಲ್ಲ, ಕೃಷಿಕನೇ ಭೂಮಾಲೀಕನಾಗಿದ್ದರಷ್ಟೇ ಅನುಕೂಲವಾಗುತ್ತಿತ್ತು. ಇದು ತತ್ ಕ್ಷಣದ ಮಟ್ಟಿಗೆ ಕೃಷಿಯ ಹಿತಾಸಕ್ತಿಗಳಿಗೆ ಪೂರಕವಾಗಿರಲಿಲ್ಲ…

ಮುಂದಿನ ವಾರ
ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 2

Jun 23, 2016

ಮೂವರು ನಾಯಕರು ಮೂರು ದಾರಿಗಳು....

ಕು.ಸ.ಮಧುಸೂದನ ನಾಯರ್
23/06/2017
ಒಂದು ರಾಜ್ಯದ ವಿದಾನಸಬಾ ಚುನಾವಣೆಯನ್ನು ಗೆಲ್ಲಲು ರಾಜಕೀಯ ಪಕ್ಷವೊಂದು ತನ್ನ ಸಿದ್ದಾಂತಗಳ ಪರಿಧಿಯಲ್ಲಿ ತಂತ್ರಗಳನ್ನು ಹೆಣೆಯುವುದು ಸಹಜ ಕ್ರಿಯೆ. ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಅಂತಹ ಕಸರತ್ತುಗಳನ್ನು ಮಾಡುವುದು ಅನಿವಾರ್ಯವೂ ಹೌದು. ಆದರೆ ತಂತ್ರಗಾರಿಕೆಯೇ ರಾಜಕಾರಣವಾಗಿಬಿಟ್ಟರೆ ಅದು ಅಪಾಯಕಾರಿಯೂ ಆಗಿಬಿಡುವುದುಂಟು. ಯಾಕೆಂದರೆ ವಾಸ್ತವದ ರಾಜಕಾರಣ ಯಾವುದು, ಚುನಾವಣಾ ತಂತ್ರಗಾರಿಕೆ ಯಾವುದು ಎನ್ನುವ ಗೊಂದಲದಲ್ಲಿ ಬೀಳುವ ಮತದಾರ ರಾಜಕೀಯದ ತಂತ್ರಗಾರಿಕೆಯೇ ನಿಜವಾದ ರಾಜನೀತಿಯೆಂದು ಭ್ರಮಿಸುತ್ತಾನೆ. ಇವತ್ತು ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹ ತಂತ್ರಗಾರಿಗಳನ್ನು ನಂಬಿಯೇ ರಾಜಕಾರಣ ಮಾಡುತ್ತಿವೆ. ಈ ಮಾತನ್ನು ನಾನೀಗ ಹೇಳಲು ಕಾರಣ ಉತ್ತರಪ್ರದೇಶದ ಮುಂದಿನ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಈಗಿನಿಂದಲೆ ಕಸರತ್ತು ಆರಂಬಿಸಿದೆ. ಈಗ ಅದು ಇನ್ನೂ ಮುಂದೆ ಹೋಗಿ, ತನ್ನ ಮೂರು ಮುಖ್ಯ ನಾಯಕರನ್ನು ಮೂರು ರೀತಿಯಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿ ಅದರಂತೆ ಚುನಾವಣಾ ಸಿದ್ದತೆ ನಡೆಸುತ್ತಿದೆ.

ಈ ತಂತ್ರಗಾರಿಕೆಯಲ್ಲಿ ಬಹುಮುಖ್ಯವಾದ ಮೂರು ಪಾತ್ರ ವಹಿಸಲಿರುವ ನಾಯಕರುಗಳೆಂದರೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹಸಚಿವರಾದ ಶ್ರೀ ರಾಜನಾಥ್ ಸಿಂಗ್, ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾ ಅವರುಗಳಾಗಿದ್ದಾರೆ. ಈಗಾಗಲೆ ರಾಜಕೀಯ ರ್ಯಾಲಿಗಳ ಮೂಲಕ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ಬಾಜಪ ಆ ಸಭೆಗಳಲ್ಲಿ ಈ ಮೂವರಲ್ಲಿ ಯಾರು ಯಾವ ವಿಷಯವನ್ನು ಮಾತನಾಡಬೇಕೆಂಬುದನ್ನು ನಿರ್ದರಿಸಿ ತನ್ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗೆ ಮಾತನಾಡುವ ವಿಷಯಗಳನ್ನು ಹಂಚಿಕೊಂಡಿರುವ ಈ ನಾಯಕತ್ರಯರುಗಳು ಉತ್ತರ ಪ್ರದೆಶದ ಜನರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರುಗಳಿಗೆ ನಿಗದಿ ಮಾಡಲ್ಪಟ್ಟಿರುವ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ:

ಮೊದಲನೆಯದಾಗಿ, ಶ್ರೀ ನರೇಂದ್ರ ಮೋದಿಯವರ ಮಾತುಗಳು ಕೇವಲ ಅಭಿವೃದ್ದಿಯ ಕುರಿತಾಗಿ ಮಾತ್ರವಿರುತ್ತವೆ. ರಾಷ್ಟ್ರದ ಆರ್ಥಿಕ ಪ್ರಗತಿ, ಕೈಗಾರಿಕೆಗಳ ಸಬಲೀಕರಣ, ವಿದೇಶಿ ಬಂಡವಾಳ ತರುವ ಬಗ್ಗೆ ಮತ್ತು ಜನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತ್ರ ತಮ್ಮ ಬಾಷಣವನ್ನು ಸೀಮಿತಗೊಳಿಸಿಕೊಳ್ಳುವ ಮೋದಿಯವರು ಇವುಗಳ ಜೊತೆಗೆ ಆಗಾಗ ವಿದೇಶದಲ್ಲಿರುವ ಕಪ್ಪು ಹಣವನ್ನು ಇಂಡಿಯಾಗೆ ತರುವಲ್ಲಿ ತಾವು ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಮಜಾಯಿಷಿ ನೀಡುತ್ತಾ, ಜನರನ್ನು ಮರುಳುಗೊಳಿಸುವಂತಹ ಬಾಷಣಗಳನ್ನು ಮಾಡುತ್ತಾರೆ. ಅಲ್ಲಿಗೆ ಮೋದಿಯವರ ವ್ಯಕ್ತಿತ್ವಕ್ಕೆ ಹಿಂದುತ್ವದ ಪರವಾದ ಮನುಷ್ಯನೆಂಬ ಹಣೆಪಟ್ಟಿ ಬೀಳದಂತೆ ನೋಡಿಕೊಳ್ಳುವ ಕೆಲಸವಾಗುತ್ತದೆ. ಜನರು ನಮ್ಮ ಪ್ರದಾನಿಯವರು ಕೇವಲ ಜನರ ಜೀವನಮಟ್ಟ ಸುಧಾರಣೆಯ ಬಗ್ಗೆ ಮತ್ತು ದೇಶದ ಪ್ರಗತಿಯ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯೆಂದು ಪರಿಗಣಿಸುವಂತೆ ಮಾಡುವ ಒಂದು ತಂತ್ರಗಾರಿಕೆ ಇದಾಗಿದೆ. ಮೋದಿ ಅಪ್ಪಿ ತಪ್ಪಿಯೂ ಆಯೋದ್ಯೆಯ ವಿವಾದದ ಬಗ್ಗೆಯಾಗಲಿ ಹೆಚ್ಚುತ್ತಿರುವ ದಲಿತ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆಯಾಗಲಿ, ಇತ್ತೀಚೆಗೆ ವಿಷಾದನೀಯ ಘಟನೆಗಳು ನಡೆದ ಹೈದರಾಬಾದ್ ಮತ್ತು ಜವಹರಲಾಲ್ ನೆಹರು ವಿಶ್ವ ವಿದ್ಯಾನಿಲಯಗಳ ಘಟನೆಗಳ ಬಗ್ಗೆಯಾಗಲಿ ಸೊಲ್ಲೆತ್ತುವುದಿಲ್ಲ. ಅವರದೇನಿದ್ದರು ಅಭಿವೃದ್ದಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ವಿದೇಶಿ ರಾಷ್ಟ್ರಗಳೊಂದಿಗಿನ ಸಂಬಂದ ಸುಧಾರಣೆಯ ದೊಡ್ಡ ದೊಡ್ಡ ಮಾತುಗಳು ಮಾತ್ರ. ಅಲ್ಲಿಗೆ ಬಾಜಪದ ಸಾಂಸ್ಕೃತಿಕ ರಾಜಕಾರಣವಾಗಲಿ, ಪಕ್ಷದ ಎರಡನೇ ಸಾಲಿನ ನಾಯಕರುಗಳು ನೀಡುವ ಮತಾಂಧತೆಯ ಹೇಳಿಕೆಗಳಾಗಲಿ ಮೋದಿಯವರದಲ್ಲ ಮತ್ತು ಅವುಗಳ ಹೊಣೆಗಾರಿಕೆಯೂ ಅವರದಲ್ಲವೆಂಬ ಸಂದೇಶವನ್ನು ಜನತೆಗೆ ನೀಡುವ ಬಾಜಪದ ಉದ್ದೇಶ ಸಫಲವಾಗುತ್ತದೆ.

ಇನ್ನು ಪಕ್ಷದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರು ತಮ್ಮ ಬಾಷಣದ ಉದ್ದಕ್ಕೂ ಖೈರಾನದಲ್ಲಿನ ಹಿಂದೂ ಕುಟುಂಬಗಳ ವಾಪಸಾತಿ ಬಗ್ಗೆ, ಅಲ್ಪಸಂಖ್ಯಾತರಿಂದ ಬಹುಸಂಖ್ಯಾತ ಹಿಂದುಗಳಿಗಿರುವ ಆತಂಕಗಳ ಬಗ್ಗೆ ಘಂಟಾಘೋಷವಾಗಿ ಮಾತನಾಡುತ್ತಾರೆ. ಜೊತೆಗೆ ಈಗಿರುವ ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷವು ಮುಸ್ಲಿಮರನ್ನು ಓಲೈಸುವ ಕೆಲಸದಲ್ಲಿ ತೊಡಗಿದೆಯೆಂದೂ ಕಾಂಗ್ರೆಸ್ ಕೂಡ ಅದನ್ನು ಸಮರ್ಥಿಸುವ ಹಾದಿಯಲ್ಲಿ ಕೆಲಸ ಮಾಡುತ್ತಿದೆಯೆಂಬ ಅರ್ಥದಲ್ಲಿ ಮಾತಾಡುತ್ತ ಜನರ ಬಾವನೆಗಳನ್ನು ಬಡಿದೆಬ್ಬಿಸುವ ಬಾಷಣ ಮಾಡುತ್ತಾರೆ. ಜೊತೆಗೆ ಸಂಘ ಪರಿವಾರದ ಮುಖವಾಣಿಯಂತೆ, ವಿಶ್ವ ಹಿಂದೂಪರಿಷತ್ತಿನ ದ್ವನಿಯಲ್ಲಿ ಮಾತಾಡುತ್ತಾರೆ. ಅಲ್ಲಿಗೆ ಜನರ ಬಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಅವನ್ನು ಹಿಂದೂ ಸಮುದಾಯಕ್ಕೆ ತಲುಪಿಸುವ ಬಾಜಪದ ಎರಡನೇ ಗುರಿಯೂ ಸಫಲವಾದಂತಾಗುತ್ತದೆ.

ಉಳಿದಂತೆ ಬಾಜಪದ ಮಾಜಿ ಅದ್ಯಕ್ಷರೂ, ಕೇಂದ್ರದ ಹಾಲಿ ಗೃಹ ಸಚಿವರೂ ಆಗಿರುವ ಶ್ರೀ ರಾಜನಾಥ್ ಸಿಂಗ್ ಅವರು ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಬಾಷಣ ಮಾಡುತ್ತಾರೆ. ಅವರ ಪ್ರಕಾರ ಸಮಾಜವಾದಿ ಪಕ್ಷದ ಮುಖ್ಯಮಂತ್ರಿಯಾದ ಶ್ರೀ ಅಖಿಲೇಶ್ ಯಾದವರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಜನತೆ ಇದರಿಂದ ಬೇಸತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಮುಜಾಫರ್ ನಗರದ ಕೋಮುಗಲಭೆಗಳನ್ನು ಮತ್ತು ಇತ್ತೀಚೆಗೆ ನಡೆದ ಮಥುರಾ ಹಿಂಸಾಚಾರವನ್ನು ಉಲ್ಲೇಖಿಸುತ್ತಾರೆ. ಉತ್ತರ ಪ್ರದೇಶವು ಜಂಗಲ್ ರಾಜ್ಯವಾಗುತ್ತಿದೆಯೆಂದು ಜನರಲ್ಲಿ ಸರಕಾರದ ಉದ್ದೇಶಗಳ ಬಗ್ಗೆ ಅನುಮಾನ ಹುಟ್ಟಿಸುವ ಮಾತಾಡುತ್ತಿದ್ದಾರೆ. 

ಕಳೆದ ವಾರ ಅಹಮದಾಬಾದಿನಲ್ಲಿ ನಡೆದ ಬೃಹತ್ ರ್ಯಾಲಿಯೊಂದರಲ್ಲಿ ಈ ಮೂವರು ಸಹ ಇಂತಹುದೇ ಬಾಷಣ ಮಾಡಿದ್ದು, ಈ ವರ್ಷದ ಕೊನೆಯ ವೇಳೆಗೆ ಉತ್ತರ ಪ್ರದೇಶದಾದ್ಯಂತ ಇನ್ನೂ ಇಪ್ಪತ್ತು ರ್ಯಾಲಿಗಳನ್ನು ಆಯೋಜಿಸುವ ಯೋಜನೆಯನ್ನು ಬಾಜಪ ಹೊಂದಿದೆಯೆಂದು ಅದರ ವಕ್ತಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬಾಜಪ ಇವತ್ತಿನವರೆಗು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಬಾಜಪದ ಒಂದು ವರ್ಗ ರಾಜನಾಥ್ ಸಿಂಗ್ ಅವರೇ ಸೂಕ್ತವೆಂದು ಹೇಳುತ್ತಾ ಬಂದಿದ್ದರೂ ಸ್ವತ: ರಾಜನಾಥ್ ಅದನ್ನು ನಿರಾಕರಿಸಿ ತಮಗೆ ರಾಜ್ಯದ ಮುಖ್ಯಮಂತ್ರಿಯ ಪಟ್ಟ ಇಷ್ಟವಿಲ್ಲವೆಂದು ಹೇಳಿಕೊಂಡಿದ್ದಾರೆ. ಇನ್ನುಪಕ್ಷದ ಇನ್ನೊಂದುವರ್ಗ ಯುವನಾಯಕ ವರುಣ್ ಗಾಂದಿಯವರನ್ನು ಮುಖ್ಯಮಂತ್ರಿ ಗಾದಿಗೆ ಹೆಸರಿಸುವಂತೆ ಒತ್ತಡ ಹೇರುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದರು ಬಾಜಪ ಯಾವ ನಿರ್ದಾರವನ್ನೂ ಪ್ರಕಟಿಸಿಲ್ಲ.

ಬಹುಶ: ಈ ವಿಚಾರದಲ್ಲಿ ಮಾಯಾವತಿಯವರ ಬಹುಜನ ಪಕ್ಷದ ಮುಂದಿನ ನಡೆಯನ್ನು ಬಾಜಪ ಕಾದು ನೋಡುತ್ತಿದೆ. ಯಾಕೆಂದರೆ ಇವತ್ತಿನವರೆಗು ಮಾಯಾವತಿಯವರು ಮುಂದಿನ ಚುನಾವಣೆಯ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸದ್ಯದ ಪರಿಸ್ಥಿತಿಯಲ್ಲ್ಲಿ ಮಾಯಾವತಿಯವರು ದಲಿತ ಮತ್ತು ಮುಸ್ಲಿಂ ಮತ ಬ್ಯಾಂಕಿನ ಮೇಲೆ ಹಿಡಿತ ಹೊಂದಿರುವಂತೆ ಕಂಡುಬರುತ್ತಿದ್ದು ಕಾಂಗ್ರೆಸ್ ಜೊತೆ ಅದು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಾದ್ಯತೆಗಳು ಗೋಚರಿಸುತ್ತಿವೆ. ಈ ದೃಷ್ಠಿಯಿಂದಲೇ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ವಿರುದ್ದ ಹರಿಹಾಯುತ್ತಿರುವ ಬಾಜಪ ಬಹುಜನ ಪಕ್ಷದ ಬಗ್ಗೆ ಚಕಾರವೆತ್ತುತ್ತಿಲ್ಲ. ತನ್ನ ವಿರುದ್ದವಿರುವ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ದಿಸಿದರೆ ಆಗುವ ಅನುಕೂಲವನ್ನು ಮನಗಂಡಿರುವ ಬಾಜಪ ಆ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಸದ್ಯದ ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿಯೇ ಇದೆ. ಆದರೆ ಮಾಯಾವತಿಯವರ ಕಾರ್ಯವೈಖರಿಯೇ ಹಾಗೆ. ಅವರು ಬಾಯಿ ಬಿಟ್ಟು ಹೇಳದೆ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಸದ್ದಿರದೆ ಮಾಡುತ್ತಿದ್ದಾರೆ. ಇದನ್ನು ಅರಿತಿರುವ ಬಾಜಪ ಮಾಯಾವತಿಯವರ ಕಾರ್ಯಾಚರಣೆ ಬಹಿರಂಗವಾಗುವ ಸಂದರ್ಭಕ್ಕಾಗಿ ಕಾಯುತ್ತಿದೆ.

ಒಟ್ಟಿನಲ್ಲಿ ಬಾಜಪ 1999ರಲ್ಲಿ ಮಾಜಿ ಪ್ರದಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ತೊಡಿಸಿದ ಜಾತ್ಯಾತೀತ ಮುಖವಾಡವನ್ನು ಮೋದಿಯವರಿಗೆ ತೊಡಿಸಿ ಉತ್ತರ ಪ್ರದೇಶದ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ.

Jun 21, 2016

ಕಾಂಗ್ರೆಸ್ ಮತ್ತು ನೆಹರು ಕುಟುಂಬ: ಯಾರು ಯಾರಿಗೆ ಅನಿವಾರ್ಯ?

ಕು.ಸ.ಮಧುಸೂದನ ನಾಯರ್
21/06/2016
ಕಳೆದ ನಾಲ್ಕೂವರೆ ದಶಕಗಳಿಂದಲೂ ಕಾಂಗ್ರೆಸ್ಸೇತರ ಪಕ್ಷಗಳು ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುತ್ತ, ಕುಟುಂಬ ರಾಜಕಾರಣವನ್ನು ಕೆಲವೊಮ್ಮೆ ತೀರಾ ಕೀಳುಬಾಷೆಯಲ್ಲಿ ಲೇವಡಿ ಮಾಡುತ್ತಲೆ ಬರುತ್ತಿವೆ. ಆದರೀಗ ನೋಡಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಎಲ್ಲ ಯೋಗ್ಯತೆಗಳನ್ನೂ ಇಂಡಿಯಾದ ಬಹಳಷ್ಟು ರಾಜಕೀಯ ಪಕ್ಷಗಳು ಕಳೆದುಕೊಂಡಿವೆಯೆನಿಸುತ್ತೆ. ಯಾಕೆಂದರೆ ನೆಹರು ಕುಟುಂಬವನ್ನು ವಿರೋದಿಸುತ್ತಲೇ ರಾಜಕೀಯ ಮಾಡಿದ ನಾಯಕರುಗಳು, ಪಕ್ಷಗಳು ಕೂಡ ಕುಟುಂಬ ರಾಜಕಾರಣದ ಬಲೆಯಲ್ಲಿ ಬಿದ್ದಿವೆ. ಹೀಗಾಗಿ ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಯಾರಾದರು ಮಾತಾಡಿದರೆ ಅದನ್ನು ಜನತೆ ಗಂಬೀರವಾಗಿ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕೆಲವರು ಕಾಂಗ್ರೆಸ್ ಮತ್ತೆ ಸುದಾರಿಸಿಕೊಳ್ಳಬೇಕಾದರೆ ಆ ಪಕ್ಷ ಸೋನಿಯಾಗಾಂದಿ ಮತ್ತು ರಾಹುಲಗಾಂದಿಯವರ ಹಿಡಿತದಿಂದ ಹೊರಬರಬೇಕೆಂದು ಕಿರುಚುತಿದ್ದಾರೆ. ನೆಹರು ಕುಟುಂಬದ ಹೊರತಾದ ಕಾಂಗ್ರೆಸ್ ಭವಿಷ್ಯ ಏನಾಗಬಹುದೆಂಬುದನ್ನು ಈಗ ಒಂದಿಷ್ಟು ನೋಡೋಣ:

ಇವತ್ತು ನೂರು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಅಸ್ತಿತ್ವ ಅಂತೇನಾದರು ಉಳಿಸಿಕೊಂಡು ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ನೆಹರು ಕುಟುಂಬದ ಆಕರ್ಷಣೆ ಕಾರಣವೇ ಹೊರತು ಬೇರೆಯೇನಲ್ಲ. ಇದು ಸತ್ಯವಾದ ಸಂಗತಿ. ನೆಹರು ಕುಟುಂಬದಾಚೆಗೆ ಪಕ್ಷ ಬಂದು ನಿಂತರೆ ಕೆಲವೆ ವರ್ಷದಲ್ಲಿ ಅದು ತನ್ನ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದು ಕೊಂಡು ಹತ್ತಾರೇನು, ನೂರಾರು ಚೂರುಗಳಾಗಿ ಒಡೆದು ಛಿದ್ರಗೊಳ್ಳುವುದು ಖಚಿತ. ಯಾಕೆಂದರೆ ಎಲ್ಲಿಯವರೆಗು ನೆಹರು ಕುಟುಂಬದ ಸದಸ್ಯರು ಅದನ್ನು ಮುನ್ನಡೆಸುತ್ತಾರೊ ಅಲ್ಲಿಯವರೆಗೂ ಅದರ ಒಗ್ಗಟ್ಟು ಬಲವಾಗಿರುತ್ತದೆ. ಆ ಕುಟಂಬವೇ ಅದಕ್ಕೆ ಶಕ್ತಿಕೇಂದ್ರವಾಗಿದೆ. ಅದು ನಾಶವಾದರೆ ಪಕ್ಷವೂ ನಾಶವಾಗುವುದರಲ್ಲಿ ಅನುಮಾನವೇನಿಲ್ಲ. ಇದಕ್ಕೆ ಬಹಳ ಜನ ರಾಜಕೀಯ ಪಂಡಿತರುಗಳು, ನಾಯಕರುಗಳು ಕಾಂಗ್ರೆಸ್ ಬೇರೆ ನಾಯಕರನ್ನು ಬೆಳೆಸಲಿಲ್ಲವೆಂದು ಆರೋಪಿಸುತ್ತಾರೆ. ಆದರೆ ಇಂಡಿಯಾದಂತಹ ವಿಶಾಲ ರಾಷ್ಟ್ರದಲ್ಲಿ ನಾಲ್ಕೂ ದಿಕ್ಕುಗಳಿಗೂ ಒಪ್ಪಿತವಾಗುವಂತ ನಾಯಕನನ್ನು ಯಾರೂ ಬೆಳೆಸಲಾಗುವುದಿಲ್ಲ. ಹಾಗೆ ಬೆಳಸುವ ನಾಯಕ ಬಹಳ ದಿನ ಬಾಳಿಕೆ ಬರಲಾರ. ನಾಯಕನಾದವನು ಸ್ವಯಂ ಸೃಷ್ಠಿಯಾಗಬೇಕು. ಬೇಕಾದರೆ ನೀವೇ ನೋಡಿ; ನರೇಂದ್ರ ಮೋದಿಯವರನ್ನು ಬಾಜಪವೇನು ಬೆಳೆಸಲಿಲ್ಲ, ಬದಲಿಗೆ ಬೆಳೆದ ಮೋದಿಯವರನ್ನು ಬಾಜಪ ಬಳಸಿಕೊಂಡಿತಷ್ಟೇ! ಪ್ರಾದೇಶಿಕ ನಾಯಕರುಗಳು ಬೆಳೆಯಬಹುದೆ ಹೊರತು ರಾಷ್ಟ್ರನಾಯಕರುಗಳನ್ನು ಯಾರೂ ಬೆಳೆಸಲಾಗುವುದಿಲ್ಲ. ಇವತ್ತು ನಿತೀಶ್ ಕುಮಾರ್ ಅವರನ್ನೇ ನೋಡಿ ಅವರೆಷ್ಟೇ ದೊಡ್ಡ ನಾಯಕರಾದರು ದಕ್ಷಿಣದಲ್ಲಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಇಂಡಿಯಾದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಒಬ್ಬ ನಾಯಕ ಬಾವನಾತ್ಮಕವಾಗಿ ಜನರನ್ನು ಒಲಿಸಿಕೊಂಡು ಬೆಳೆಯಬಹುದೇ ಹೊರತು ಬೇರ್ಯಾವ ಶಕ್ತಿಗಳು ಅಂತಹ ನಾಯಕನನ್ನು ಸೃಷ್ಟಿಸಲಾರವು. ಹೀಗಾಗಿಯೇ ನಾನು ಹೇಳುವುದು ಸೋನಿಯ ಆಗಲಿ ರಾಹುಲ್ ಆಗಲಿ ಕಾಂಗ್ರೆಸ್ಸಿನ ನಾಯಕತ್ವವನ್ನು ಬಿಟ್ಟುಕೊಟ್ಟರೆ ಅದು ಬಾಜಪದಂತಹ ಪಕ್ಷಗಳಿಗೆ ಹಾಸಿಕೊಡುವ ಕೆಂಪುಹಾಸಿನ ಸ್ವಾಗತವಾಗುತ್ತದೆ. ಜೊತೆಗೆ ಏಕ ಪಕ್ಷದ ಸರ್ವಾಧಿಕಾರಿ ಆಡಳಿತಕ್ಕೂ ಹಾದಿಯಾಗುತ್ತದೆ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇದು ಒಳ್ಳೆಯದಲ್ಲದಿದ್ದರೂ ಪ್ರಜಾಪ್ರಭುತ್ವ ಬದುಕಿರಲಾದರೂ ಕಾಂಗ್ರೆಸ್ ಜೀವಂತವಾಗಿರುವ ಅಗತ್ಯವಿದೆ. ಹಾಗೇನಾದರು ನಾಳೆ ಸೋನಿಯಾ ಮತ್ತು ರಾಹುಲ್ ಕಾಂಗ್ರೆಸ್ಸಿನ ಅಧಿಕಾರ ಬಿಟ್ಟುಕೊಟ್ಟು ಹೊರಬಂದರೆ ಬಹುಶ: ಕರ್ನಾಟಕದಲ್ಲಿಯೇ ಸಿದ್ದರಾಮಯ್ಯನವರ ಕಾಂಗ್ರೆಸ್, ಪರಮೇಶ್ವರ್ ಕಾಂಗ್ರೆಸ್, ವೀರಪ್ಪ ಮೊಯ್ಲಿ ಕಾಂಗ್ರೆಸ್ ಎಂಬಂತಹ ಹತ್ತಾರು ಕಾಂಗ್ರೆಸ್ಸುಗಳು ಜನಿಸುವುದು ಗ್ಯಾರಂಟಿ. ಉದಾಹರಣೆಗಾಗಿ ಇತಿಹಾಸವನ್ನೊಮ್ಮೆ ತಿರುವಿ ಹಾಕಿ ನೋಡಿ. ಎಪ್ಪತ್ತರ ದಶಕದಿಂದ ಇದುವರೆಗೂ ಯಾರ್ಯಾರು ಕಾಂಗ್ರೆಸ್ ತೊರೆದು ಮರಿ ಕಾಂಗ್ರೆಸ್ ಪಕ್ಷಗಳನ್ನು ಕಟ್ಟಿದರೋ ಅವರೆಲ್ಲ ರಾಜಕೀಯದಲ್ಲಿ ಮೇಲೆರಲು ಸಾದ್ಯವೇ ಆಗಿಲ್ಲ. ಜೊತೆಗೆ ಅವರಲ್ಲಿ ಬಹಳಷ್ಟು ಜನ ಮತ್ತೆ ಕಾಂಗ್ರೆಸ್ಸಿನ ತೆಕ್ಕೆಗೆ ಹೋಗಿದ್ದಾರೆ. 

ಇವೆಲ್ಲವನ್ನೂ ನೋಡುತ್ತಿದ್ದರೆ ಸೋನಿಯಾ ಗಾಂದಿಯೊ, ರಾಹುಲ್ ಗಾಂದಿಯೊ ಮಾತ್ರ ಕಾಂಗ್ರೆಸ್ಸನ್ನು ಕಾಪಾಡಬಲ್ಲರೆನಿಸುತ್ತೆ. ನೆಹರೂ ಕುಟುಂಬದವರ ಬಗ್ಗೆ ಪೂರ್ವಗ್ರಹವಿಲ್ಲದೆ ನೋಡಿದರೆ ಮಾತ್ರ ಈ ಸತ್ಯ ಅರ್ಥವಾಗುತ್ತದೆ. 
ಎರಡು ಕಾರಣಗಳಿಗಾಗಿ ಕಾಂಗ್ರೆಸ್ ಮುಂದೆಯೂ ಅಸ್ಥಿತ್ವವನ್ನು ಉಳಿಸಿಕೊಂಡಿರಬೇಕು:

ಮೊದಲನೆಯದು, ಕಾಂಗ್ರೆಸ್ ನಮ್ಮ ಸ್ವಾತಂತ್ರ ಹೋರಾಟದ ನೆನಪಾಗಿದ್ದು ಅದು ನಮ್ಮ ಜೊತೆ ಬಾವನಾತ್ಮಕವಾಗಿ ಥಳುಕು ಹಾಕಿಕೊಂಡಿದೆ (ಈ ಪೀಳಿಗೆಯನ್ನ ಹೊರತುಪಡಿಸಿ). 
ಎರಡನೆಯದು, ಕಾಂಗ್ರೆಸ್ ಇಲ್ಲವಾಗಿ ಬಿಟ್ಟರೆ ಬಾಜಪ ಏಕೈಕ ರಾಷ್ಟ್ರೀಯ ಪಕ್ಷವಾಗಿ ಹಿಂದೆ ಕಾಂಗ್ರೆಸ್ ಹೇಗೆ ಆರು ದಶಕಗಳವರೆಗು ನಮ್ಮನ್ನು ಆಳಿತೊ ಅದೇ ರೀತಿ ಬಾಜಪವೂ ಸಹ ಆಗಿಬಿಡುವ ಸಾದ್ಯತೆಯಿದೆ. ಬಾಜಪಕ್ಕೊಂದು ಪರ್ಯಾಯ ರಾಜಕೀಯಶಕ್ತಿಯನ್ನು ಕಂಡುಕೊಳ್ಳಲಾಗದೆ ಭಾರತೀಯ ಮತದಾರ ಅಸಹಾಯಕನಾಗಬೇಕಾಗುತ್ತದೆ.

ಆದ್ದರಿಂದಲೇ ಕಾಂಗ್ರೆಸ್ಸಿನ ಉಳಿವು ಈ ನೆಲದ ಪ್ರಜಾತಂತ್ರದ ಉಳಿವಿಗೂ ಸಂಬಂದವಿದೆಯೆಂಬುದನ್ನು ಕಾಂಗ್ರೆಸ್ಸಿಗರು ಮರೆಯಬಾರದು.

Jun 18, 2016

ಬಲಪಂಥೀಯ ಕೊಲೆಗಡುಕರ ಬಗ್ಗೆ ಸರ್ಕಾರಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಮಮಕಾರವೇಕೆ?

vinayak baliga
ವಿನಾಯಕ ಬಾಳಿಗ
ಆನಂದ್ ಪ್ರಸಾದ್
18/06/2016
ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾರ ಬರ್ಬರ ಕೊಲೆ ನಡೆದು ಮೂರು ತಿಂಗಳುಗಳು ಆಗುತ್ತಾ ಬಂದವು ಆದರೆ ಕೊಲೆಯ ಸೂತ್ರಧಾರಿಗಳ ಬಂಧನ ಇನ್ನೂ ಆಗಿಲ್ಲ. ಪೊಲೀಸರು ಇಂಥ ಬರ್ಬರ ಕೊಲೆಯ ಸೂತ್ರಧಾರರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸದೆ ಹೋದರೆ ಸಮಾಜದಲ್ಲಿರುವ ದುಷ್ಟ ಶಕ್ತಿಗಳಿಗೆ ಹಣ ಹಾಗೂ ರಾಜಕೀಯ ಬೆಂಬಲ ಇದ್ದರೆ ಎಷ್ಟು ಕೊಲೆಯನ್ನಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಎಂಬ ತಪ್ಪು ಸಂದೇಶ ಹೋಗಿ ಇಂಥ ಘಟನೆಗಳು ಹೆಚ್ಚಿ ಸಮಾಜದಲ್ಲಿ ಅನ್ಯಾಯ ಹಾಗೂ ಅಕ್ರಮಗಳು ಹೆಚ್ಚಲಿವೆ. ವಿನಾಯಕ ಬಾಳಿಗಾರ ಕೊಲೆಯ ವಿಷಯದಲ್ಲಿ ರಾಜ್ಯದ ಮುಖ್ಯ ವಾಹಿನಿಯ ಮಾಧ್ಯಮಗಳು ಬಾಯಿ ಮುಚ್ಚಿ ಕುಳಿತಿರುವುದು ಪರಮಾಶ್ಚರ್ಯವೇ ಸರಿ. ಇನ್ನೂ ಆಶ್ಚರ್ಯದ ವಿಷಯವೆಂದರೆ ಬಿಜೆಪಿ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತ ಹಾಗೂ ಪರಮ ಧಾರ್ಮಿಕ ಮನೋಭಾವದ ವ್ಯಕ್ತಿಯು ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಹೋರಾಡಿ ಬಲಿದಾನ ಮಾಡಿದರೂ ಅದೇ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಈ ಭೀಕರ ಕೊಲೆಯ ವಿಷಯದಲ್ಲಿ ಮೌನ ವಹಿಸಿರುವುದು. ರಾಜಕೀಯದಲ್ಲಿ ವಿರುದ್ಧ ಪಕ್ಷದ ವ್ಯಕ್ತಿಗಳ ಕೊಲೆ ಕೆಲವು ರಾಜ್ಯಗಳಲ್ಲಿ ನಡೆಯುತ್ತದೆ ಆದರೆ ತಮ್ಮದೇ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಕೊಲ್ಲುವುದು ಬಹಳ ವಿರಳ ಅಥವಾ ಇಲ್ಲವೆಂದೇ ಹೇಳಬಹುದು. ಧರ್ಮದ ವಿಷಯದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿಯುವ ಧಾರ್ಮಿಕ ನಾಯಕರು, ಸ್ವಾಮೀಜಿಗಳು ಮೊದಲಾದವರು ಈ ಕೊಲೆಯ ವಿಷಯದಲ್ಲಿ ಚಕಾರ ಎತ್ತುವುದು ಕಂಡುಬರಲಿಲ್ಲ. ಇದನ್ನೆಲ್ಲಾ ನೋಡುವಾಗ ಧರ್ಮಗ್ಲಾನಿಯಾಗಿದೆ ಎಂದು ಯಾರಿಗಾದರೂ ಅನಿಸುತ್ತದೆ.

ಮಂಗಳೂರಿನಂಥ ಸುಶಿಕ್ಷಿತರ ನಗರದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಭೀಕರವಾಗಿ ಕೊಲೆಯಾದರೂ ಹೆಚ್ಚಿನ ಪ್ರತಿಭಟನೆ ರೂಪುಗೊಳ್ಳಲಿಲ್ಲ. ಯಾವುದೇ ಧಾರ್ಮಿಕರು, ದೇವಭಕ್ತರು ಇಂಥ ಅನ್ಯಾಯ ನಡೆದರೂ ದನಿ ಎತ್ತಲಿಲ್ಲ. ಇದರ ವಿರುದ್ಧ ದನಿ ಎತ್ತಿ ಮಂಗಳೂರಿನ ಮಾನ ಕಾಪಾಡಿದ್ದು ದೇವರನ್ನು ನಂಬದ ವಿಚಾರವಾದಿ ನರೇಂದ್ರ ನಾಯಕರು ಹಾಗೂ ಕೆಲ ಎಡ ಪಕ್ಷಗಳವರು ಮಾತ್ರ. ಇವರು ಎರಡು ಸಲ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟಿಸಿ ಇಡೀ ಮಂಗಳೂರಿನ ಮಾನ ಉಳಿಸಿದ್ದಾರೆ. ವಿನಾಯಕ ಬಾಳಿಗಾರನ್ನು ಕೊಲೆಗೈದ ಬಲಪಂಥೀಯ ಕೊಲೆಗಡುಕರು ನಿರೀಕ್ಷಣಾ ಜಾಮೀನಿಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ಹೈಕೋರ್ಟ್ ಮಟ್ಟದಲ್ಲಿ ಅರ್ಜಿ ಸಲ್ಲಿಸಿದರೂ ನ್ಯಾಯಾಂಗ ಇವುಗಳನ್ನು ತಿರಸ್ಕರಿಸಿದೆ. ಹೀಗಿದ್ದರೂ ಕೊಲೆಯ ಸೂತ್ರಧಾರರನ್ನು ಬಂಧಿಸುವಲ್ಲಿ ಪೋಲೀಸರ ಕೈಯನ್ನು ಕಟ್ಟಲಾಗಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಈ ಕೊಲೆಯ ಸೂತ್ರಧಾರರು ಯಾರು ಎಂಬುದು ಬಹುತೇಕ ಪೊಲೀಸರಿಗೆ ಗೊತ್ತಿದೆ ಮತ್ತು ಜನಸಾಮಾನ್ಯರಿಗೂ ಗೊತ್ತಿದೆ. ಇವರೇನು ನಕ್ಸಲರಂತೆ ಕಾಡಿನಲ್ಲಿ ಇಲ್ಲ. ಬಲಪಂಥೀಯ ಸಂಘಟನೆಗಳ ಸಹಕಾರದಿಂದ ಎಲ್ಲೋ ಅಡಗಿ ಕುಳಿತಿದ್ದಾರೆ. ನಕ್ಸಲರ ವಿಷಯದಲ್ಲಿ ಅತ್ಯಂತ ಕಠಿಣವಾಗಿ ವರ್ತಿಸಿ ಎನ್ಕೌಂಟರ್ ಮಾಡಿ ಕೊಲ್ಲುವ ಪೊಲೀಸರು ಬಲಪಂಥೀಯ ಕೊಲೆಗಡುಕರನ್ನು ತಪ್ಪಿಸಿಕೊಳ್ಳಲು ಬಿಟ್ಟಿರುವುದು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು ಎಂಬ ಬಗ್ಗೆ ರಾಜ್ಯದ ಮಾಧ್ಯಮಗಳು ಪ್ರಶ್ನಿಸಬೇಕಾಗಿತ್ತು. ಕೆಲವೇ ಕೆಲವು ಪತ್ರಿಕೆಗಳನ್ನು ಬಿಟ್ಟರೆ ಮುಖ್ಯ ವಾಹಿನಿಯ ಟಿವಿ ಮಾಧ್ಯಮಗಳು ಈ ವಿಚಾರದಲ್ಲಿ ಮೌನವಾಗಿವೆ. ಮಾಧ್ಯಮಗಳ ಈ ಮೌನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಮಧ್ಯಮ ಧರ್ಮಕ್ಕೆ ವಿರುದ್ಧವಾದದ್ದು.

ಪೊಲೀಸರು ಕೊಲೆಯಂಥ ಘೋರ ಅಪರಾಧದಲ್ಲಿ ಪರಾರಿಯಾದ, ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನಿನ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ ರಚಿಸಬೇಕಾಗಿತ್ತು. ಆದರೆ ವಿನಾಯಕ ಬಾಳಿಗಾರ ಕೊಲೆ ತನಿಖೆ ವಿಷಯದಲ್ಲಿ ಪೋಲೀಸರು ಇಂಥ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಪರಾರಿಯಾಗಿ ತಲೆಮರೆಸಿಕೊಂಡ ಆರೋಪಿಗಳ ಎಲ್ಲ ಆಸ್ತಿಪಾಸ್ತಿಗಳನ್ನು ಪೊಲೀಸರು ಮುಟ್ಟುಗೋಲು ಹಾಕುವ ಮೂಲಕ ಆರೋಪಿ ಕಾನೂನಿನ ಮುಂದೆ ಶರಣಾಗುವಂತೆ ಮಾಡುವ ಅವಕಾಶ ಇದೆ ಎಂದು ನರೇಂದ್ರ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಕೂಡ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ನಕ್ಸಲೀಯರ ವಿರುದ್ಧ ಕಠಿಣವಾಗಿ ವರ್ತಿಸುವ ಪೊಲೀಸರು ಬಲಪಂಥೀಯ ಕೊಲೆಗಡುಕರ ಬಗ್ಗೆ ಯಾಕೆ ಮೃದು ಧೋರಣೆ ತಳೆದಿದ್ದಾರೆ ಎಂದು ರಾಜ್ಯದ ಪ್ರಜ್ಞಾವಂತರು ಪ್ರಶ್ನಿಸುವ ಅಗತ್ಯ ಇದೆ.

ಕಾಂಗ್ರೆಸ್ ಪಕ್ಷದ ಪುನಶ್ಚೇತನ: ಕಾಂಗ್ರೆಸ್ಸಿನ ರಾಷ್ಟ್ರೀಯ ಅದ್ಯಕ್ಷರಾಗಲಿರುವ ರಾಹುಲ್‍ಗಾಂಧಿ?

ಕು. ಸ. ಮಧುಸೂದನ್
18/06/2016
ಚುನಾವಣೆಯ ಸೋಲಿನ ಹೊಣೆ ಹೊತ್ತುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು: ಶ್ರೀಮತಿ ಸೋನಿಯಾ ಗಾಂಧಿ, ಅದ್ಯಕ್ಷರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನವದೆಹಲಿ, 19-05-2016.

ರಾಜಕೀಯ ಪಕ್ಷವೊಂದು ಸತತವಾಗಿ ಚುನಾವಣೆಗಳನ್ನು ಸೋಲುತ್ತಾ ಬಂದಾಗ, ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ತಳ ಪಟ್ಟದಿಂದ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂಬ ಹಳಸಲು ಹೇಳಿಕೆಯನ್ನು ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಇದು ಸಹಜವೂ ಕೂಡ. ಆದರೆ ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಸಾರಿ ಇಂತಹ ಹೇಳಿಕೆಗಳನ್ನು ನೀಡಿದ್ದು, ಪುನಶ್ಚೇತನದ ಯಾವುದೇ ಲಕ್ಷಣಗಳು ಕಂಡುಬರದೇ ಇರುವುದರಿಂದ ಜನರಿರಲಿ, ಆ ಪಕ್ಷದ ಕಾರ್ಯಕರ್ತರೇ ಈ ಮಾತನ್ನು ಗಂಬೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದು ಆ ಪಕ್ಷದ ದುರಂತ ಮಾತ್ರವಲ್ಲ ಪ್ರಜಾಸತ್ತೆಯಲ್ಲಿ ನಂಬುಗೆಯಿಟ್ಟ ಭಾರತೀಯರ ದುರಂತವೂ ಹೌದು! 2011ರ ಕೆಲವು ರಾಜ್ಯಗಳ ವಿದಾನಸಭಾ ಚುನಾವಣೆಗಳ ನಂತರ ಸೋನಿಯಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರುಗಳು ಇಂತಹುದೇ ಮಾತುಗಳನ್ನಾಡಿದ್ದರು. ಆದರೆ ನಂತರದ ದಿನದಲ್ಲಿ ಪಕ್ಷದಲ್ಲಾದ ಏಕೈಕ ಬದಲಾವಣೆ ಎಂದರೆ 2013ರ ಜವರಿಯಲ್ಲಿ ರಾಹುಲ್ ಗಾಂದಿಯವರನ್ನು ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷರನ್ನಾಗಿ ನೇಮಕ ಮಾಡಿದ್ದು  ಮಾತ್ರ. ಆದರೆ ಈ ಬಾರಿಯಾದರೂ ಕಾಂಗ್ರೆಸ್ ತನ್ನ ಮಾತುಗಳನ್ನು ಗಂಬೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳಬಹುದೆಂಬ ಭಾವನೆ ಮೂಡಿರುವುದು, ಅದು ಪಕ್ಷಾದ್ಯಕ್ಷರನ್ನು ಬದಲಾಯಿಸಲು ತೆಗೆದುಕೊಂಡಿದೆಯೆಂದು ಹೇಳಲಾಗುತ್ತಿರುವ ತೀರ್ಮಾನದ ಕಾರಣದಿಂದ. 

ಕೊನೆಗೂ ಪಕ್ಷವನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಯವರ ಕೈಗಿಡಲು ಕಾಂಗ್ರೆಸ್ ಪಕ್ಷ ನಿರ್ದರಿಸಿದಂತಿದೆ. ಇದು ಮೊನ್ನೆತಾನೆ ಮುಗಿದ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳ ಪಲಿತಾಂಶಗಳ ಪರಿಣಾಮವೆಂದರೆ ತಪ್ಪಾಗಲಾರದು. ಸೋನಿಯಾಗಾಂಧಿ ಪಕ್ಷದ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸರಿಸುಮಾರು ಹದಿನೆಂಟು ವರ್ಷಗಳ ನಂತರ ಮೊದಲ ಬಾರಿಗೆ ಅವರ ಸ್ಥಾನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಪಕ್ಷ ಸಿದ್ಧವಾದಂತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಎದುರು ಅನುಭವಿಸಿದ ಹೀನಾಯ ಸೋಲು, ಮತ್ತದರ ನಂತರವೂ ಅನೇಕ ದೊಡ್ಡ ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಸೋತಿದ್ದು, ಮತ್ತೀಗ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿ ಅಧಿಕಾರದಲ್ಲಿದ್ದ ಎರಡೂ ರಾಜ್ಯಗಳನ್ನು ಕಳೆದುಕೊಂಡು ಮುಂದೇನು ಎನ್ನುವ ಗೊಂದಲದಲ್ಲಿರುವ ಕಾಂಗ್ರೆಸ್ಸಿಗೆ ಒಂದಷ್ಟು ಪುನಶ್ಚೇಚೇತನ ನೀಡುವುದು ಅಗತ್ಯವೂ, ಅನಿವಾರ್ಯವೂ ಆಗಿತ್ತು. ಪಕ್ಷದಾಚೆಗಿನ ರಾಜಕೀಯ ಪಂಡಿತರುಗಳು, ರಾಜಕೀಯ ವಿಶ್ಲೇಷಕರು ಇಂತಹ ಮಾತುಗಳನ್ನಾಡಿದಾಗ ಕುಟುಂಬ ರಾಜಕಾರಣದ ಭಟ್ಟಂಗಿತನಕ್ಕೆ ಒಗ್ಗಿ ಹೋಗಿರುವ ಕಾಂಗ್ರೆಸ್ ನಾಯಕರುಗಳಿಗೆ, ಇದು ಆಳದಲ್ಲಿ ಸರಿಯೆನಿಸಿದರು, ಬಹಿರಂಗವಾಗಿ ಇದನ್ನು ಒಪ್ಪುವ ಮನಸ್ಥಿತಿಯಿರಲಿಲ್ಲ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ರಾಜಕಾರಣ ಮಾಡುವ ಕೆಲವೇ ಕೆಲವು ಪ್ರಾದೇಶಿಕ ನಾಯಕರುಗಳನ್ನು ಹೊರತು ಪಡಿಸಿ ಉಳಿದವವರಿಗೆ ಸೋನಿಯಾ ನಾಯಕತ್ವ ಅಗತ್ಯವಾಗಿದ್ದಕ್ಕೆ ಕಾರಣ ಇಂದಲ್ಲಾ ನಾಳೆ ಅವರ ವರ್ಚಸ್ಸಿನಿಂದ ಮತ್ತೆ ಅಧಿಕಾರ ಹಿಡಿಯಬಹುದೆಂಬ ನಂಬಿಕೆ.

ಹಾಗೆ ನೋಡಿದರೆ ಕಾಂಗ್ರೆಸ್ಸಿನ ನಾಯಕರುಗಳಿಗೆ ಅದನ್ನು ಬಿಟ್ಟರೆ ಇವತ್ತಿಗೂ ಬೇರೆ ದಾರಿ ಇರುವಂತೆ ಕಾಣುತ್ತಿಲ್ಲ. ಇಂಡಿಯಾದ ರಾಜಕಾರಣದ ಮಟ್ಟಿಗೆ ವಾಸ್ತವತೆ ಏನೆಂದರೆ ಗಾಂಧಿ ಕುಟುಂಬದ ನಿಯಂತ್ರಣ ತಪ್ಪಿದೊಡನೆ ಕಾಂಗ್ರೆಸ್ ತನ್ನೆಲ್ಲ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದುಕೊಂಡು ಚೂರು ಚೂರಾಗುತ್ತದೆ ಎಂಬ ಭ್ರಮೆ! 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾದ ನಂತರ ನರಸಿಂಹರಾಯರು ಪ್ರದಾನಿಯಾದರೂ, ಕಾಂಗ್ರೆಸ್ಸಿನ ಮೇಲೆ ಗಾಂಧಿ ಕುಟುಂಬದ ಹಿಡಿತ ತೆರೆಮರೆಯಲ್ಲಿ ಇದ್ದುದರಿಂದ ಮತ್ತು ಇಂದಲ್ಲ ನಾಳೆ ಸೋನಿಯಾ ಮುಂಚೂಣಿಗೆ ಬಂದು ಪಕ್ಷವನ್ನು ಮುನ್ನಡೆಸುತ್ತಾರೆಂಬ ನಂಬಿಕೆ ಕಾಂಗ್ರೆಸ್ಸಿಗರಿಗೆ ಇದ್ದುದರಿಂದಲೇ 1998 ರವರೆಗು ಶ್ರೀ ನರಸಿಂಹರಾಯರು ಮತ್ತು ಶ್ರೀ ಸೀತಾರಾಂ ಕೇಸರಿಯವರು ಅದ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಾದ್ಯವಾಯಿತು. ಆದರೆ 1996ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಾಕ್ಷಣ ಯಥಾ ಪ್ರಕಾರ ಕಾಂಗ್ರೆಸ್ ನಾಯಕನಿರದ ನಾವೆಯಂತಾಗಿ ಗುಂಪುಗಾರಿಕೆಗಳು ಶುರುವಾದವು. ಅಂದಿನ ಅದ್ಯಕ್ಷ ಸೀತಾರಾಂ ಕೇಸರಿಯವರ ವಿರುದ್ದ ತಾರೀಖ್ ಅನ್ವರ್, ಕುಮಾರಮಂಗಳಂ ಮುಂತಾದವರು ಬಂಡೆದ್ದು ಸೋನಿಯಾರವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಒತ್ತಾಯಿಸತೊಡಗಿದರು. ಆದರೆ ಸೋನಿಯಾರವರು ಸುಲಭವಾಗಿ ಈ ಮಾತಿಗೆ ಒಪ್ಪದೆ, ಸೀತಾರಾಂ ಕೇಸರಿಯವರು ತಾವಾಗಿಯೇ ಅದ್ಯಕ್ಷ ಗಾದಿ ತೊರೆದು ತಮ್ಮನ್ನು ಆಹ್ವಾನಿಸಿದರೆ ಮಾತ್ರ ಪಕ್ಷಾದ್ಯಕ್ಷರ ಜವಾಬ್ದಾರಿಯನ್ನು ಹೊರುವುದಾಗಿ ಹೇಳಿದರು. ಆದರೆ ಕೇಸರಿಯವರು ಈ ಮಾತಿಗೆ ಮಣಿಯಲಿಲ್ಲ. ಈ ಸಂದರ್ಭದಲ್ಲಿ ಜಿತೇಂದ್ರಪ್ರಸಾದ್, ಏ.ಕೆ.ಆಂಟೋನಿ ಮತ್ತು ಪ್ರಣಬ್ ಮುಖರ್ಜಿಯವರು ರಹಸ್ಯ ಸಭೆಗಳ ಮೂಲಕ ಕೇಸರಿಯವರನ್ನುಇಳಿಸುವ ಕಾರ್ಯತಂತ್ರ ರೂಪಿಸತೊಡಗಿದರು. ಆಗ ಶರದ್ ಪವಾರ್ ಅವರು ಸಹ ಕೇಸರಿಯವರನ್ನು ಇಳಿಸಲು ಮುಂದಾದರು. ಎಲ್ಲಿಯವರೆಗೆ ಕೇಸರಿಯವರು ಅದ್ಯಕ್ಷರಾಗಿರುತ್ತಾರೊ ಅಲ್ಲಿಯವರೆಗು ಉದ್ಯಮಿಗಳ ಬೆಂಬಲ ಪವಾರ್ ಅವರಿಗೆ ಸಿಗಲಾರದೆಂಬ ಉದ್ಯಮಿಗಳ ಎಚ್ಚರಿಕೆಯ ಮಾತು ಪವಾರರು ಕಣಕ್ಕಿಳಿಯಲು ಕಾರಣವಾಯಿತು. ನಂತರ 1998 ರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿಗೆ ಕೆಲವೊಂದು ತಿದ್ದುಪಡಿ ತರುವುದರ ಮೂಲಕ ಲೋಕಸಭಾ ಸದಸ್ಯೆಯೂ ಆಗಿರದ ಶ್ರೀಮತಿ ಸೋನಿಯಾ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡಲಾಯಿತು.

ನಂತರ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 21 ಪಕ್ಷಗಳ ಬಾಜಪ ನೇತೃತ್ವದ ಎನ್.ಡಿ.ಎ. ಗೆದ್ದರೂ 140 ಸ್ಥಾನ ಗಳಿಸಲು ಶಕ್ತವಾದ ಕಾಂಗ್ರೆಸ್ ತನ್ನ ಮತಬ್ಯಾಂಕು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ, ಗೌರವ ಉಳಿಸಿಕೊಂಡಿತ್ತು. ಆಮೇಲೆ ಸುಮಾರು ಹದಿನಾಲ್ಕು ವರ್ಷಗಳ ಕಾಲ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ತನಕವೂ ಸೋನಿಯಾರವರು ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಆಡಳಿತ ನಡೆಸಿದರು. 2004ರಲ್ಲಿ ಪ್ರದಾನಿಯಾಗಬಹುದಾಗಿದ್ದ ಅವಕಾಶವನ್ನು ನಿರಾಕರಿಸಿದ ಸೋನಿಯಾರವರು ಸಾಮಾನ್ಯ ಭಾರತೀಯರ ದೃಷ್ಠಿಯಲ್ಲಿ ತ್ಯಾಗಮಯಿಯಂತೆ ಕಂಡಿದ್ದರು. ತದ ನಂತರದ ಯು.ಪಿ.ಎ. ಎರಡರ ಅವಧಿಯಲ್ಲಿ ನಡೆದ ಅಗಾಧವಾದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಬಾಜಪದ ಆಕ್ರಮಣಕಾರಿ ಮತಾಂಧ ರಾಜಕಾರಣದಿಂದಾಗಿ ಹಾಗು ಬಲಪಂಥೀಯ ಮತ್ತು ಬಂಡವಾಳಶಾಹಿ ಹಿಡಿತದಲ್ಲಿದ್ದ ಮಾದ್ಯಮಗಳ ಬಾಜಪ ಪರವಾದ ಪ್ರಚಾರ ತಂತ್ರಗಳಿಂದಾಗಿ 2013ರಲ್ಲಿ ಕಾಂಗ್ರೆಸ್ ತೀರಾ ಅವಮಾನಕಾರಿಯಾಗಿ ಸೋಲುಂಡಿತಲ್ಲದೆ. ಅದರ ಜೊತೆ ಜೊತೆಗೆ ನಡೆದ ಕೆಲವು ರಾಜ್ಯ ವಿದಾನಸಭಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ವಿಫಲವಾಯಿತು. ತೀರಾ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿಯು ಕಾಂಗ್ರೆಸ್ ಸೋಲನ್ನಪ್ಪಿ ಪಕ್ಷದ ಕೆಲ ವಲಯಗಳಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬಂದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬದಲಾವಣೆ ಎಂದರೆ ಅದ್ಯಕ್ಷರ ಹುದ್ದೆಯ ಬದಲಾವಣೆ ಮಾತ್ರ. ಅದೂ ಸೋನಿಯಾರವರಿಂದ ರಾಹುಲರಿಗೆ ಎಂದಷ್ಟೆ ಆಗಿದೆ.

ಮೊನ್ನೆಯ ಚುನಾವಣೆಗಳನ್ನು ಸೋತ ಕೂಡಲೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ರೀ ದಿಗ್ವಿಜಯಸಿಂಗ್ ಮತ್ತು ಕಮಲನಾಥ್ ಅವರುಗಳು ಮೊದಲ ಬಾರಿಗೆ ರಾಹುಲ್ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪ ಮಾಡಿದರು. ಈ ಬಗ್ಗೆ ಕಾಂಗ್ರೆಸ್ಸಿನ ಬಹುತೇಕ ನಾಯಕರುಗಳಿಗೆ ಅಭ್ಯಂತರವಿರದೇ ಹೋದರು, ಕೆಲವು ಹಳೆಯ ತಲೆಗಳಿಗಳಿಗೆ ಮತ್ತು ಸೋನಿಯಾರವರಿಗೆ ಬಹಳ ಆಪ್ತರಾಗಿರುವ ಕೆಲವರಿಗೆ ಮಾತ್ರ ಸೋನಿಯಾರವರೆ ಮುಂದುವರೆಯಬೇಕೆಂಬ ಬಯಕೆಯಿದೆ. ರಾಹುಲರನ್ನು ಅದ್ಯಕ್ಷರನ್ನಾಗಿಸಲು ತೀರ್ಮಾನಿಸುವುದರ ಹಿಂದೆ ಸ್ವತ: ರಾಹುಲರ ಬಯಕೆಯೂ ಕಾಣವಿದೆಯೆಂದು ನಂಬಲಾಗುತ್ತಿದೆ. ಯಾಕೆಂದರೆ ಅವರು ಉಪಾದ್ಯಕ್ಷರಾದ ನಂತರದ ಎಲ್ಲ ಸೋಲುಗಳಿಗೂ ಅವರನ್ನೇ ಗುರಿಯನ್ನಾಗಿಸಲಾಗುತ್ತಿದೆ. ಚುನಾವಣೆಗಳ ಕಾರ್ಯತಂತ್ರಗಳ ನಿರ್ದಾರ ತಮ್ಮದಲ್ಲವಾದರೂ, ಸೋಲಿಗೆ ಮಾತ್ರ ತಾವು ತಲೆಕೊಡಬೇಕಾಗಿ ಬಂದಿರುವುದು ರಾಹುಲರಿಗೆ ಬೇಸರ ಮೂಡಿಸಿರುವುದಂತು ಸತ್ಯ. ಈ ಕಾರಣಕ್ಕಾಗಿಯೇ ಅವರ ಅನುಮತಿಯಿಂದಲೇ ನಾಯಕರುಗಳು ಅವರಿಗೆ ಅದ್ಯಕ್ಷ ಸ್ಥಾನ ನೀಡಬೇಕೆಂದು ಧೈರ್ಯವಾಗಿ ಹೇಳುತ್ತಿರುವುದು. ರಾಹುಲರ ಅನಿಸಿಕೆಯಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಚುನಾವಣೆಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಮತ್ತು ಟಿಕೇಟ್ ಹಂಚುವಲ್ಲಿ ನಿರ್ದಾರಗಳನ್ನು ತಗೆದುಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು ರಾಹುಲ್ ಗಾಂದಿಯವರ ಅಭಿಪ್ರಾಯಗಳಿಗೆ ಸಾಕಷ್ಟು ಮನ್ನಣೆ ನೀಡುತ್ತಿರಲಿಲ್ಲವೆಂಬುದಂತು ನಿಜ. ಉದಾಹರಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿಯವರ ಜೊತೆ ಸುಮಧುರ ಬಾಂದವ್ಯ ಹೊಂದಿರುವ ರಾಹುಲರಿಗೆ ಅವರ ಜೊತೆ ಮೈತ್ರಿಮಾಡಿಕೊಳ್ಳುವ ಇಚ್ಚೆಯಿದ್ದರೂ ಸ್ಥಳೀಯ ನಾಯಕರುಗಳ ಒತ್ತಾಯದ ಮೇಲೆ ಎಡರಂಗದ ಜೊತೆ ಹೋಗಿ ಸೋಲಬೇಕಾಯಿತು. ಅದೇ ರೀತಿ ಅಸ್ಸಾಮಿನಲ್ಲಿ ಎ.ಐ.ಡಿ.ಯಿ.ಎಫ್. ಜೊತೆ ಮೈತ್ರಿಗೆ ರಾಹುಲ್ ಸಿದ್ದರಿದ್ದರೂ ಗೋಗೋಯ್ ಅವರ ನಿರಾಕರಣೆಯಿಂದ ಅಲ್ಲಿಯೂ ಪಕ್ಷ ಸೋಲಬೇಕಾಯಿತು. ಇದು ಇತ್ತೀಚೆಗೆ ರಾಹುಲ್ ಗಾಂದಿಯವರಲ್ಲಿ ಅಸಮಾದಾನ ಮೂಡಿಸಿದ್ದನ್ನು ಅವರ ನಾಯಕರುಗಳೇ ಒಪ್ಪಿ ಕೊಳ್ಳುತ್ತಾರೆ. ಪಕ್ಷದಲ್ಲಿನ ಎರಡು ಅಧಿಕಾರ ಕೇಂದ್ರಗಳ ಪರಿಣಾಮವನ್ನು ಈಗ ಅರಿತಂತಿರುವ ಕಾಂಗ್ರೆಸ್ಸಿಗರಿಗೆ ರಾಹುಲರಿಗೆ ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ಕೊಟ್ಟು ಪಕ್ಷ ಕಟ್ಟುವ ಆಸೆ ಬಂದಿದ್ದರೆ ತಪ್ಪೇನಲ್ಲ. ಅದೂ ಅಲ್ಲದೆ ಒಂದು ಪಕ್ಷದಲ್ಲಿ ಎರಡು ಅಧಿಕಾರ ಕೇಂದ್ರಗಳಿರುವುದರಿಂದ ಆಗಬಹುದಾದ ಮತ್ತು ಈಗಾಗಲೇ ಆಗಿರುವ ಅನಾಹುತಗಳ ಬಗ್ಗೆ ಕಾಂಗ್ರೆಸ್ ನಾಯಕರುಗಳಿಗೆ ಮನವರಿಕೆಯಾಗಿರುವುದು ಸಹ ಇಂತಹದೊಂದು ನಿರ್ದಾರಕ್ಕೆ ಕಾರಣವೆನ್ನಲಾಗುತ್ತಿದೆ. ಇದು ವಾಸ್ತವವೂ ಹೌದು. ಉದಾಹರಣೆಗೆ ಸೋನಿಯಾ ತೆಗೆದುಕೊಳ್ಳು ನಿರ್ಣಯಗಳ ರೀತಿ ಒಂದು ತರನದ್ದಾದರೆ ರಾಹುಲರ ರಾಜಕೀಯ ತೀರ್ಮಾನಗಳೇ ಬೇರೆ ರೀತಿಯಲ್ಲಿ ಇರುತ್ತಿದ್ದವು. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಸೋನಿಯಾರ ನಿರ್ದಾರಗಳೇ ಜಾರಿಯಾದರೂ ಅದರ ವೈಫಲ್ಯದ ಹೊಣೆಗಾರಿಕೆ ಮಾತ್ರ ರಾಹುಲರ ಹೆಗಲೇರುತ್ತಿತ್ತು. ಬಹಳಷ್ಟು ಬಾರಿ ಇಂತಹ ಮುಜುಗರಗಳಿಂದ ಪಾರಾಗಲೆಂದೇ ರಾಹುಲರು ಯಾರಿಗೂ ಮಾಹಿತಿ ನೀಡದೆ ವಿದೇಶಗಳಿಗೆ ತರಳಿ ಬಿಡುತ್ತಿದ್ದರು. ಇತ್ತೀಚೆಗೆ ಇದನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಸೋನಿಯಾರವರು ತಮ್ಮ ಏರುತ್ತಿರುವ ವಯಸ್ಸು ಮತ್ತು ಅನಾರೋಗ್ಯಗಳ ಕಾರಣದಿಂದ ಇದಕ್ಕೆ ಹಸಿರು ನಿಶಾನೆ ತೋರಿಸಿದಂತಿದೆ.

ಆದರೆ ಕಾಂಗ್ರೆಸ್ಸಿನ ನಿಜವಾದ ಸಮಸ್ಯೆ ಇರುವುದೇ ಇಲ್ಲಿ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವನ್ನು ನಿಬಾಯಿಸುವಷ್ಟು ಶಕ್ತಿ ಮತ್ತು ರಾಜಕೀಯ ಚಾಣಾಕ್ಷತೆ ರಾಹುಲರಿಗಿದೆಯೇ ಎನ್ನುವುದಾಗಿದೆ. ಯಾಕೆಂದರೆ ಸೋನಿಯಾರವರಿಗಾದರೆ ತನ್ನ ಅತ್ತೆ ಮಾಜಿ ಪ್ರದಾನಿ ಶ್ರೀಮತಿ ಇಂದಿರಾಗಾಂದಿಯವರ ಕಾಲದಿಂದಲೂ ತೀರಾ ಹತ್ತಿರದಿಂದ ಕಾಂಗ್ರೆಸ್ಸಿನ ಬೆಳವಣಿಗೆಗಳನ್ನು ನೋಡಿದ ಅನುಭವವಿತ್ತು. ತದನಂತರ ತಮ್ಮ ಪತಿಯ ನಿಧನಾ ನಂತರವೂ ಪಕ್ಷದಲ್ಲಿ ಯಾವುದೇ ಅಧಿಕಾರ ಸ್ಥಾನವನ್ನು ಹಿಡಿಯದೇ ಇದ್ದರೂ ಪಕ್ಷದ ಆಗುಹೋಗುಗಳನ್ನು ಅವರ ಗಮನಕ್ಕೆ ತಂದು ಸೂಕ್ತ ಸಲಹೆ ಪಡೆಯುವ ಒಂದು ಅನಧಿಕೃತ ವ್ಯವಸ್ಥೆಯು ಪಕ್ಷದಲ್ಲಿತ್ತು. ಇದು ಮುಂದೆ ಸೋನಿಯಾರವರಿಗೆ ಅನುಕೂಲಕರವಾಗಿ ಪರಿಣಮಿಸಿತು. ಹೀಗಾಗಿಯೇ ಸುಮಾರು ಹದಿನೆಂಟು ವರ್ಷಗಳ ಕಾಲ ಅವರು ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದರು. ಬಹಳ ಜನ ಸೋನಿಯಾರವರು ಪಕ್ಷವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು ಎನ್ನುವ ಮಾತನ್ನು ಒಪ್ಪದೇ ಇರಬಹುದು. ಹಲವು ಚುನಾವಣೆಗಳನ್ನು ಅವರು ಸೋತಿರಬಹುದು. ಆದರೆ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವೊಂದನ್ನು ಹದಿನೆಂಟು ವರ್ಷಗಳ ಕಾಲ ಒಗ್ಗೂಡಿಸಿ ಇಟ್ಟುಕೊಳ್ಳುವುದೇ ಒಂದು ಸಾಧನೆಯಾಗುವುದರ ನಡುವೆ, ಬಾಜಪದ ಮತಾಂಧ ರಾಜಕಾರಣವನ್ನು, ಪ್ರಾದೇಶಿಕ ಪಕ್ಷಗಳ ಪಾಳೇಗಾರಿಕೆಯ ಐಲುತನಗಳನ್ನು ಏಕಕಾಲಕ್ಕೆ ನಿಬಾಯಿಸುವುದು ನಿಜಕ್ಕೂ ಒಂದು ಸವಾಲೇ ಸರಿ. ಈಗ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸಿನಂತಹ ರಾಷ್ಟ್ರೀಯ ಪಕ್ಷದ ಆಗುಹೋಗುಗಳನ್ನು ನಿಬಾಯಿಸುವಷ್ಟು ಪ್ರೌಢಿಮೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ರಾಹುಲರು ಅವರ ತಂದೆ ರಾಜೀವ್ ಗಾಂದಿಯವರಂತೆಯೇ ಸಂಕೋಚದ ಸ್ವಬಾವದವರು. ಅಷ್ಟು ಸುಲಭವಾಗಿ ಒಂದು ನಾಯಕತ್ವವನ್ನು ಒಪ್ಪಿಕೊಂಡು ಮುನ್ನಡೆಸುವ ತೆರೆದ ಮನಸ್ಸಿನ ಸ್ವಬಾವದವರೇನಲ್ಲ. ಆದರೆ ರಾಜೀವ್ ಗಾಂದಿಯವರು ಅಂದಿನ ಸನ್ನಿವೇಶವನ್ನು ಬೇಗ ಅರ್ಥಮಾಡಿಕೊಂಡು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದು ನಾಯಕತ್ವದ ಹೊಣೆ ನಿಬಾಯಿಸಿದ್ದರು. ಇದರ ಜೊತೆಗೆ ಅವತ್ತು ರಾಜೀವ್ ಗಾಂದಿಗೆ ಸವಾಲಾಗಿ ನಿಲ್ಲಬಲ್ಲ ವಿರೋದ ಪಕ್ಷಗಳಲ್ಲಿ ಯಾರದೇ ನಾಯಕತ್ವವೂ ಇರಲಿಲ್ಲ. ಹೀಗಾಗಿ ರಾಜೀವರು ಸುಲಭವಾಗಿ ರಾಜಕಾರಣದ ಕೇಂದ್ರಬಿಂದುವಾಗಿ ಎದ್ದು ನಿಲ್ಲಲು ಸಾದ್ಯವಾಗಿತ್ತು. ಆದರೆ ರಾಹುಲ್ ಗಾಂದಿಗೆ ತಕ್ಷಣಕ್ಕೆ ಅದ್ಯಕ್ಷತೆಯ ಯಾವ ಅನಿವಾರ್ಯತೆಯೂ ಇಲ್ಲವಾಗಿದೆ. ಜೊತೆಗೆ 2004ರಲ್ಲಿ ರಾಜಕೀಯ ಪ್ರವೇಶಿಸಿದಾಗಿನಿಂದಲೂ ಅವರು ಒಂದು ಹೆಜ್ಜೆ ಮುಂದಿಡಲೂ ಮೀನಾಮೇಷ ಎಣಿಸುತ್ತಲೇ ಬಂದಿದ್ದಾರೆ. ಅವರು ನಿಜಕ್ಕೂ ನಾಯಕತ್ವದ ಲಕ್ಷಣಗಳನ್ನು ತೋರಿಸುವವರಾಗಿದ್ದರೆ ಯು.ಪಿ.ಎ. ಸರಕಾರದಲ್ಲಿ ಯಾವುದಾದರು ಸಚಿವಗಿರಿಯನ್ನು ವಹಿಸಿಕೊಂಡು ಆಡಳಿತದ ಒಂದಿಷ್ಟು ಪಾಠಗಳನ್ನು ಕಲಿಯುತ್ತ ಜನರ ನಡುವೆ ಕೆಲಸ ಮಾಡಬಹುದಿತ್ತು. ಆದರೆ ತಮ್ಮ ಸರಕಾರದ ಎರಡು ಅವಧಿಯಲ್ಲೂ ಅವರು ಸರಕಾರಿ ಯಂತ್ರದ ಒಂದು ಭಾಗವಾಗಲೇ ಇಲ್ಲ. ಚುನಾವಣೆ ಬಂದಾಗ ಪ್ರಚಾರ ಮಾಡುವಷ್ಟಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಬಿಟ್ಟರು. ಅದೂ ಅಲ್ಲದೆ ರಾಹುಲರು ರಾಜಕಾರಣಕ್ಕೆ ಪ್ರವೇಶಿಸುವ ಹೊತ್ತಿಗಾಗಲೇ ಶ್ರೀ ಎಲ್.ಕೆ. ಅದ್ವಾನಿ ಅಂತವರು ಬಹು ಎತ್ತರದ ನಾಯಕರಾಗಿ ಬೆಳೆದು ನಿಂತಿದ್ದರು. ತದ ನಂತರದಲ್ಲೂ ಇಂದಿನ ಪ್ರದಾನಿಗಳಾದ ಶ್ರೀ ನರೇಂದ್ರಮೋದಿಯವರು ಬಲಿಷ್ಠ ರಾಷ್ಟ್ರೀಯ ನಾಯಕರಾಗಿ ಬಳೆದು ನಿಂತು ರಾಹುಲ್ ಗಾಂದಿಯನ್ನು ರಾಷ್ಟ್ರೀಯ ನಾಯಕರದು ಒಪ್ಪಿಕೊಳ್ಳಲು ಜನ ಹಿಂದೆ ಮುಂದೆ ನೋಡುವಂತಹ ಸನ್ನಿವೇಶ ಸೃಷ್ಠಿಯಾಗಿತ್ತು. ಜೊತೆಗೆ ಮತಾಂಧ ರಾಜಕಾರಣದ ಆವೇಶದ ನಡುವೆ ರಾಹುಲರಂತ ಸೌಮ್ಯ ಸ್ವಬಾವದ ನಾಯಕರು ಎದ್ದು ನಿಲ್ಲುವುದು ದುಸ್ತರವಾಗುವಂತ ಪರಿಸ್ಥಿತಿ ಬಂದು ನಿಂತಿತ್ತು. ಈಗಲೂ ಸಹ ರಾಹುಲರು ಅಧ್ಯಕ್ಷರಾದ ತಕ್ಷಣ ಕಾಂಗ್ರೆಸ್ಸಿನ ಕಷ್ಟಗಳೆಲ್ಲ ಬಗೆಹರಿಯುತ್ತವೆಯೆಂಬ ಭ್ರಮೆಯನ್ನು ಯಾರೂ ಇಟ್ಟುಕೊಳ್ಳಲು ಸಾದ್ಯವಿಲ್ಲ. ಯಾಕೆಂದರೆ ಸೋನಿಯಾರವರಿಗಿದ್ದ ಪಕ್ಷದ ಮೇಲಿನ ಹಿಡಿತವನ್ನು ಸಾಧಿಸಲು ರಾಹುಲರು ಶಕ್ತರಾಗಿದ್ದಾರೆಯೇ ಎಂಬುದಿನ್ನು ಸಾಬೀತಾಗಿಲ್ಲ. ಜೊತೆಗೆ ರಾಹುಲರ ಸಮೀಪವರ್ತಿಗಳೇ ಹೇಳುವಂತೆ ಅವರು ಪೂರ್ವನಿಗದಿತ ವೇಳಾ ಪಟ್ಟಿಯ ಪ್ರಕಾರ ಕೆಲಸ ಮಾಡುವಲ್ಲಿ ಆಸಕ್ತಿ ತೋರುವುದಿಲ್ಲ. ಜೊತೆಗೆ ಯಾವುದೇ ನಾಯಕರುಗಳನ್ನು, ಅವರ ಹೆಸರುಗಳನ್ನು ನೆನಪಿಟ್ಟಿಕೊಂಡು ಅವರುಗಳು ಬಂದಾಗ ಬೇಟಿಯಾಗುವ ಸೌಜನ್ಯವನ್ನು ತೋರುವಲ್ಲಿಯೂ ಅವರು ನಿರ್ಲಕ್ಷ್ಯ ವಹಿಸುತ್ತಾರೆಂಬ ಮಾತಿದೆ. ಅದೂ ಅಲ್ಲದೆ ರಾಹುಲರಿಗೆ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳ ಮಾತಿಗಿಂತ ತಮ್ಮ ಜೊತೆಯೇ ರಾಜಕಾರಣಕ್ಕೆ ಬಂದ ಯುವಪೀಳಿಗೆಯ ಜ್ಯೋತಿರಾದಿತ್ಯ ಸಿಂದಿಯಾ, ಸಚಿನ್ ಪೈಲಟ್ ಮುಂತಾದವರ ಅಪಕ್ವ, ಅನನುಭವಿ ಸಲಹೆಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಪದೇ ಪದೆ ಹೇಳದೆ ಕೇಳದೆ ವಿದೇಶಗಳಿಗೆ ಅನಧಿಕೃತವಾಗಿ ಹೋಗಿ ಪಕ್ಷದವರಲ್ಲಿ ಗೊಂದಲ ಸೃಷ್ಠಿಸುವುದು ಸಹ ರಾಹುಲರ ಅಬ್ಯಾಸವಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಹುಲರು ಅದ್ಯಕ್ಷರಾಗಲಿ ಎಂದು ಬಯಸುವವರಿಗೇನೆ ಅವರ ಸಫಲತೆಯ ಬಗ್ಗೆ ಸಂಶಯವಿದೆ, ಇರಲಿ.

ಇದೀಗ ರಾಹುಲರನ್ನು ಪಕ್ಷದ ಅದ್ಯಕ್ಷ ಸ್ಥಾನಕ್ಕೆ ತಂದು ಪಕ್ಷದ ಸಂಘಟನೆಯಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಲು ತಯಾರಾಗಿರುವ ಮೂಲಕ ಕಾಂಗ್ರೆಸ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಮತ್ತೊಂದು ಹೊಸ ಅದ್ಯಾಯ ಬರೆಯಲು ಹೊರಟಿದೆ. ಆದರೆ ಪಕ್ಷದ ಅದ್ಯಕ್ಷತೆಯನ್ನು ರಾಹುಲ್ ಗಾಂದಿಯವರಿಗೆ ನೀಡುವುದರಿಂದ ಮಾತ್ರಕ್ಕೆ ಕಾಂಗ್ರೆಸ್ಸಿನ ಕಷ್ಟಗಳು ಇಲ್ಲವಾಗುತ್ತವೆಯೇ? ಎಂಬುದೆ ಎಲ್ಲರನ್ನೂ ಕಾಡುತ್ತಿರುವ ಮುಖ್ಯ ಪ್ರಶ್ನೆಯಾಗಿದೆ.  ಕೇವಲ ಪಕ್ಷದ ಅದ್ಯಕ್ಷರನ್ನು ಬದಲಾಯಿಸುವುದರಿಂದ ಪಕ್ಷದ ಬಲವರ್ದನೆ ಸಾದ್ಯವಿಲ್ಲ. ತಳಮಟ್ಟದಿಂದಲೂ ಈ ಬದಲಾವಣೆ ಪ್ರಾರಂಭವಾಗ ಬೇಕಾಗಿದೆ. ಜೊತೆಗೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅದು ತನ್ನ ಒಟ್ಟು ಸ್ವರೂಪದಲ್ಲಿಯೇ ಭಿನ್ನತೆಯತ್ತ ಸಾಗಬೇಕಿದೆ. ಇದು ಕೇವಲ ಕಾಂಗ್ರೆಸ್ ಎನ್ನುವ ಪಕ್ಷದ ಲಾಭದ ದೃಷ್ಠಿಯಿಂದ ಮಾತ್ರವಲ್ಲ, ರಾಷ್ಟ್ರ ರಾಜಕೀಯದ ಒಳಿತಿಗಾಗಿಯೂ ಆಗಬೇಕಾದ ಕಾರ್ಯವಾಗಿದೆ. ಯಾಕೆಂದರೆ ಇವತ್ತಿನ ರಾಜಕೀಯ ಪರಿಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲ. ಬಾಜಪ ಪ್ರಬಲವಾದ ಒಂದು ಶಕ್ತಿಯಾಗಿ ಬೆಳೆದು ಮತಾಂಧತೆ ಮತ್ತು ಖಾಸಗಿ ಬಂಡವಾಳಶಾಹಿ ಎಂಬೆರಡು ಶಕ್ತಿಗಳ ಅಭೂತ ಪೂರ್ವ ಬೆಂಬಲದೊಂದಿಗೆ ದೈತ್ಯಾಕಾರವಾಗಿ ಬೆಳೆದು ನಿಂತಿದ್ದರೆ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ನಾಯಕರುಗಳು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದವರಂತೆ ಮೆರೆಯುತ್ತಿದ್ದಾರೆ. ಇವೆರಡೂ ಶಕ್ತಿಗಳನ್ನು ಎದುರಿಸಿ ನಿಂತು ಜನಪರ ರಾಜಕೀಯ ಮಾಡುತ್ತ ಚುನಾವಣೆಗಳನ್ನುಗೆಲ್ಲುವುದು ಅಂದು ಕೊಂಡಷ್ಟು ಸುಲಭವಲ್ಲ. ಹೊಸತನದ ರಾಜಕಾರಣವನ್ನು ಕಾಂಗ್ರೆಸ್ ಶುರು ಮಾಡುವುದೇ ಆದಲ್ಲಿ 2019 ಅದರ ಗುರಿಯಾಗುವುದಕ್ಕಿಂತ 2024 ಅದರ ನೈಜ ಗುರಿಯಾಗಬೇಕು. ಯಾಕೆಂದರೆ ಅಸಾದ್ಯವಾದ ಸಮೀಪದ ಗುರಿಗಿಂತ ಸಾದ್ಯವಾಗಬಹುದಾದ ದೀರ್ಘಕಾಲೀನ ಗುರಿ ಅತ್ಯುತ್ತಮವಾದುದು.

ಈ ದಿಸೆಯಲ್ಲಿ ಆದಷ್ಟು ಬಗ ಕಾಂಗ್ರೆಸ್ ತನ್ನ ಬದಲಾವಣೆಯ ಕಾರ್ಯವನ್ನು ಪ್ರಾರಂಬಿಸುವುದು ಉತ್ತಮ!

Jun 17, 2016

ಮೇಕಿಂಗ್ ಹಿಸ್ಟರಿ: ಪುರುಷ ಸಮಾಜದ ದಬ್ಬಾಳಿಕೆ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
17/06/2016

ಟಿಪ್ಪುವಿನ ನಿಯಮಗಳು ವೇಶ್ಯಾವಾಟಿಕೆ ಮತ್ತು ಮಹಿಳೆಯರ ಮಾರಾಟವನ್ನು ನಿಷೇಧಿಸಿತ್ತು. ಚಾಮುಂಡಿ ದೇವಸ್ಥಾನಕ್ಕೆ ನರಹತ್ಯೆಯ ನೆಪದಲ್ಲಿ ಕನ್ಯೆಯರ ಜೀವಹರಣವಾಗುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಆತ ತೆಗೆದುಕೊಂಡಿದ್ದ ಎನ್ನುವ ವರದಿಗಳೂ ಇವೆ. (204)

ವಸಾಹತುಶಾಹಿ ಮತ್ತವರ ಕೈಗೊಂಬೆ ಸರಕಾರದ ಅಧಿಕಾರಕ್ಕೆ ಬರುವುದರೊಂದಿಗೆ ಇಂತಹ ಹೇಯ ಆಚರಣೆಗಳು ಮತ್ತೆ ಪ್ರಾರಂಭವಾದವು, ಮಹಿಳೆಯರಿಗೆ ವಿಪರೀತದ ಉಪದ್ರ ಕೊಡುವ ಕಾಲವಾಯಿತು. ಕೈಗೊಂಬೆ ಸರಕಾರ ಮಹಿಳೆಯರನ್ನು ಶೋಷಿಸಿದ ಬಗ್ಗೆ ಸೆಬಾಸ್ಟಿಯನ್ ಜೋಸೆಫ್ ಹೇಳುತ್ತಾನೆ: “ಮಹಿಳೆಯರ ಸ್ಥಾನಮಾನ ತುಂಬ ಚರ್ಚೆಗೆ ಒಳಗಾಗಿದೆ, ಆದರೆ, ಕರ್ನಾಟಕದ ಇತಿಹಾಸದ ಶೋಧದಲ್ಲಿ ತುಂಬ ಕಡಿಮೆ ಸ್ಥಳವನ್ನು ಪಡೆದಿದೆ. ಪರೋಕ್ಷವಾಗಿಯಾದರೂ ಈ ವಿಷಯದ ಬಗ್ಗೆ ಮಾತನಾಡಿರುವ ಪ್ರತಿಯೊಬ್ಬ ವಿದ್ವಾಂಸರೂ ನವಯುಗ ಪೂರ್ವ ಕರ್ನಾಟಕದಲ್ಲಿ ಮಹಿಳೆಯ ಸ್ಥಾನಮಾನವನ್ನು ವೈಭವೀಕರಿಸಿಯೇ ಚಿತ್ರಿಸಿದ್ದಾರೆ. ಒಬ್ಬರಾದ ನಂತರ ಒಬ್ಬರು ವಿದ್ವಾಂಸರು ಇದೇ ವಾದವನ್ನು ಒಂದೇ ರೀತಿಯಲ್ಲಿ ಮಂಡಿಸಿರುವುದು, ಚಿಕಿತ್ಸಕ ದೃಷ್ಟಿಯ ಓದುಗನಿಗೆ ಈ ಯೋಚನಾ ಲಹರಿಯಲ್ಲಿಯೇ ಏನೋ ಒಂದು ದೋಷವಿರಬೇಕೆಂಬ ಅನುಮಾನ ಮೂಡಿಸುತ್ತದೆ. ಬಹಳ ಸಲ, ಸಮಾಜದಲ್ಲಿ ಮಹಿಳೆಯ ಸ್ಥಾನವನ್ನಳೆಯಲು ಅಲ್ಲೊಂದಿಲ್ಲೊಂದು ರಾಣಿ ಅಥವಾ ನರ್ತಕಿಯ ಉದಾಹರಣೆಯನ್ನು ಬಳಸಲಾಗುತ್ತದೆ. ಆದರೆ, ಒಬ್ಬ ಅಕ್ಕಾದೇವಿ (ಅಕ್ಕಮಹಾದೇವಿ?) ಅಥವಾ ಲಕ್ಷ್ಮಿದೇವಿಯ ಉದಾಹರಣೆಯೊಂದಿಗೆ ಸಾಮಾಜಿಕ ಗತಿಯನ್ನು ಗುರುತಿಸಲು ಅಥವಾ ಐತಿಹಾಸಿಕ ಸತ್ಯಗಳನ್ನು ಸಮರ್ಥಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ನೆನಪಿರಬೇಕು.

ಶೃಂಗೇರಿ ಧರ್ಮಸ್ಥಾನದಲ್ಲಿರುವ ದಾಖಲೆಗಳಲ್ಲಿ ಮಹಿಳೆಯ ಸ್ಥಾನಮಾನದ ಬಗ್ಗೆಯಿರುವ ಮಾಹಿತಿಯನ್ನು ಗಮನಿಸಿದಾಗ ಅಘಾತವಾಗುತ್ತದೆ. ಶೃಂಗೇರಿ ಮಠದ ಕಡತಗಳು ಅನಾಥ ಮಹಿಳೆ, ಬಡ – ಅಸಹಾಯಕ ಮಹಿಳೆ, ಜಾರಿದ ನೀತಿಗೆಟ್ಟ ಮಹಿಳೆಯರ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆ. ಮನುಷ್ಯನ ಆಧ್ಯಾತ್ಮಿಕ ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸುವ ಧರ್ಮಸಂಸ್ಥಾನದೊಳಗೆ ಇಷ್ಟೊಂದು ವಿಭಾಗದ ಮಹಿಳೆಯರು ಹೆಚ್ಚಿನ ಸಂಖೈಯಲ್ಲಿರುವುದೇ ಅಚ್ಚರಿ, ಮಠಕ್ಕೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಅವರನ್ನು ಇನ್ನಿತರೆ ವಸ್ತುಗಳಂತೆ ಮಾರಿಬಿಡುವ ಹಕ್ಕಿತ್ತು ಎನ್ನುವುದು ಮತ್ತಷ್ಟು ವಿಚಲಿತರನ್ನಾಗಿ ಮಾಡುತ್ತದೆ. ಕಡತಗಳ ಪ್ರಕಾರ, ಇಂತಹ ಮಹಿಳೆಯರು ತಾವಾಗಿಯೇ ಚಾವಡಿಗೆ (ಹಳ್ಳಿಯ ನ್ಯಾಯಕಟ್ಟೆ) ಬರಬೇಕಿತ್ತು ಅಥವಾ ಬೇರೆಯವರು ಅವರನ್ನು ಎಳೆತರಬಹುದಿತ್ತು. ನಂತರ ಅವರ ಬಗ್ಗೆ ಮಠ ‘ಕಾಳಜಿ’ ತೆಗೆದುಕೊಳ್ಳುತ್ತಿತ್ತು.

ನಂತರ ಆ ಮಹಿಳೆಯರಿಂದ ಮಠದ ಚಾಕರಿ ಮಾಡಿಸುವುದು ಸಾಮಾನ್ಯ ಕ್ರಮವಾಗಿತ್ತು. ಕೆಲವೊಮ್ಮೆ ಈ ಮಹಿಳೆಯರನ್ನು ಇತರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ, ಬಹುಶಃ ಅವರೂ ಕೂಡ ಈ ಮಹಿಳೆಯರಿಗೆ ಕೈತೋಟದಲ್ಲಿ ಕೆಲಸಕ್ಕೆ ಹಚ್ಚುತ್ತಿದ್ದರು. 1818ರಲ್ಲಿ, ಶೃಂಗೇರಿ ಮಠದ ಪಾರುಪತ್ತೇಗಾರರಾದ ವೆಂಕಟಾಚಲ ಶಾಸ್ತ್ರಿ ವಿಧವೆ ಮಂಜು ಎನ್ನುವವರನ್ನು ಮೂರು ವರಹಗಳಿಗೆ ಅಹೋಬಲ ಸೋಮಯಾಜಿ ಎನ್ನುವವರಿಗೆ ಮಾರಾಟ ಮಾಡಿದ್ದರ ಬಗ್ಗೆ ದಾಖಲೆಗಳಾಧಾರವಿದೆ.

ಮೈಸೂರಿನ ರಾಜ ಕೃಷ್ಣರಾಜ ಒಡೆಯರ್ 1826 – 27ರಲ್ಲಿ ಮಹಿಳೆಯರನ್ನು ವಶಪಡಿಸಿಕೊಂಡು ಮಾರಾಟ ಮಾಡುವುದರಲ್ಲಿ ಭಾಗಿಯಾದ. ಎಲ್ಲಾ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ಭಕ್ತರ ಕುಟುಂಬದಲ್ಲಿ ‘ಜಾರಿದ’/ ಸೋತ ಹೆಣ್ಣುಮಕ್ಕಳನ್ನು ಮಠಕ್ಕೆ ಒಪ್ಪಿಸಬೇಕೆಂದು ರಾಜನು ಆದೇಶ ಹೊರಡಿಸುತ್ತಾನೆ! ಬದಲಿಗೆ, ಮಠ ‘ಜಾರಿದ’ ಹೆಣ್ಣುಮಕ್ಕಳನ್ನು ತನಗೊಪ್ಪಿಸಿದ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ರಸೀದಿಗಳನ್ನು ಕೊಡುವ ಇಚ್ಛೆ ವ್ಯಕ್ತಪಡಿಸುತ್ತದೆ. ಈ ಮಹಿಳೆಯರ ಮನಪರಿವರ್ತನೆ ಮಾಡುವುದರಲ್ಲಿ ಮಠ ಆಸಕ್ತವಾಗಿದೆಯೆಂದು ಹೇಳಲಾಗುತ್ತದೆ. ಇರಲಿ, ನಂಬದವರ ಮನಸ್ಸಿನಲ್ಲಿ ಒಂದು ಅನುಮಾನ ಉಳಿದುಬಿಡುತ್ತದೆ. ಯಾಕೆ ಮಹಿಳೆಯನ್ನಷ್ಟೇ ‘ಜಾರಿದ’ವರೆಂದು ಪರಿಗಣಿಸಬೇಕು? ‘ಜಾರಿದ’ ಗಂಡಸರ ಗತಿಯೇನು? ಅವರನ್ನೂ ಮಠ ಪರಿವರ್ತಿಸಬೇಕಿತ್ತಲ್ಲವೇ? ಅವರನ್ನೂ ಪರಿವರ್ತನೆಯ ಹೆಸರಿನಲ್ಲಿ ವರ್ತಕರಿಗೆ ನಿಗದಿತ ಬೆಲೆಗೆ ಮಾರಾಟಬೇಕಿತ್ತಲ್ಲವೇ?

1834ರಲ್ಲಿ ಬ್ರಿಟೀಷ್ ಕಮಿಷನರ್ರಿನ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದ ನಗರದ ಫೌಜುದಾರ ತಿಮ್ಮಪ್ಪ ರಾವ್ ‘ಜಾರಿದ’ ಮಹಿಳೆಯರ ಚಲನವಲನಗಳ ಮೇಲೆ ಕಣ್ಣಿಡಬೇಕೆಂದು ತನ್ನ ಕೈಕೆಳಗಿನ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ಸುತ್ತೋಲೆ ಕಳುಹಿಸುತ್ತಾನೆ. ಇಲ್ಲಿ ಲಭ್ಯವಿರುವ ದಾಖಲೆಗಳು ಯಾವ ಯಾವ ಕಾರಣಕ್ಕೆ ಮಹಿಳೆಯನ್ನು ‘ಜಾರಿಣಿ’ ಎಂದು ಕರೆಯಬಹುದು ಎನ್ನುವುದಕ್ಕೆ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತದೆ. ಬಹಳಷ್ಟು ಸಲ ನೈತಿಕತೆಯನ್ನು ಮರೆತದ್ದಾಗಲೀ, ಪರಿಶುದ್ಧತೆಯನ್ನು ಕಳೆದುಕೊಂಡದ್ದಾಗಲೀ ಮಹಿಳೆಯರನ್ನು ಮಠದ ದೈವದತ್ತ ಕೈಗಳ ವಶಕ್ಕೆ ಕೊಡುವುದಕ್ಕೆ ಕಾರಣವಾಗುತ್ತಿರಲಿಲ್ಲ. ಬದಲಿಗೆ, ಕಿಲ್ಲೇದಾರ ಅಥವಾ ಅಮಲುದಾರರಿಗೆ ಒಂದು ಹೆಂಗಸು ತನ್ನ ಜಾತಿಯ ನಿಯಮಗಳನ್ನು ಮೀರಿದ್ದು ಕಂಡುಬಂದರೆ, ಅವಳನ್ನು ಬಲವಂತವಾಗಿ ಮಠಕ್ಕೆ ಮನಪರಿವರ್ತನೆಯ ಸಲುವಾಗಿ ಕಳುಹಿಸಿಬಿಡುತ್ತಿದ್ದರು. ಪರಿವರ್ತನೆಯ ಕ್ರಮದಲ್ಲಿ ಮೊದಲಿಗೆ ಮಠದ ಚಾಕರಿಗಳನ್ನು ಮಾಡಿಸಿದರೆ, ನಂತರ ‘ಪರಿವರ್ತಕರಾದ’ ಅಹೋಬಲ ಸೋಮಯಾಜಿ ಅಂತವರಿಗೆ ಮಾರಿಬಿಡಲಾಗುತ್ತಿತ್ತು. ಇದೆಲ್ಲವೂ 1834ರಲ್ಲಿ ಕಮಿಷನರ್ ಬ್ರಿಗ್ಸ್ ಹೊರಡಿಸಿದ ಆದೇಶಕ್ಕೆ ಅನುಗುಣವಾಗಿಯೇ ಇತ್ತು.

ಬ್ರಿಟೀಷ್ ಆಡಳಿತ ವಿಧಿಸಿದ ಒಂದೇ ಒಂದು ಶರತ್ತೆಂದರೆ ಮಹಿಳೆಯರನ್ನು ಖರೀದಿಸುವುದಕ್ಕೂ ಅಥವಾ ಮಾರುವುದಕ್ಕೂ ಮೊದಲು ಮಠ ಸರಕಾರೀ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು.

‘ಜಾರಿದ’ ಹೆಣ್ಣುಮಕ್ಕಳ ಮನಪರಿವರ್ತನೆಗಾಗಿ ಅವರನ್ನು ವಶಪಡಿಸಿಕೊಳ್ಳುವುದರಲ್ಲಿ ಶೃಂಗೇರಿ ಮಠದ ಜೊತೆಗೆ ಬೇರೆ ಮಠಗಳೂ ಇದ್ದವು ಎನ್ನುವ ಅಂಶ ಕೆಲವು ದಾಖಲೆಗಳಿಂದ ತಿಳಿಯುತ್ತದೆ. ಪಂಚಗ್ರಾಮಕ್ಕೆ ಸೇರಿದ, ತಮ್ಮ ಜಾತಿಯನ್ನು ಕಳೆದುಕೊಂಡಿದ್ದ ಮಹಿಳೆಯರನ್ನು ಬಲವಂತವಾಗಿ ಬೇರೆ ಮಠದ ಜನರು ಕರೆದುಕೊಂಡು ಹೋಗಿಬಿಡುತ್ತಿದ್ದರು. ಹಾಗಾಗಿ ಈ ಮಹಿಳೆಯರ ಮೇಲಿನ ತನ್ನ ಹಕ್ಕನ್ನು ಅಮಲ್ದಾರರು ಮತ್ತು ಇತರೆ ಅಧಿಕಾರಿ ವರ್ಗದ ಮುಂದೆ ಶೃಂಗೇರಿ ಮಠ ಪ್ರತಿಪಾದಿಸಿತು. ಧರ್ಮಸಂಸ್ಥಾನದೊಳಗೆ, ಪುರುಷ ನಿರ್ಮಿತ ಜಾತಿಯ ನೀತಿಗಳಿಂದ ದೌರ್ಜನ್ಯಕ್ಕೊಳಗಾದ ಮುಗ್ಧ ಹುಡುಗಿಯರನ್ನು ಮಾರಾಟದ ಸರಕಾಗಿ ಬದಲಿಸಬಹುದಿತ್ತು. ಅವರನ್ನು ಮಠ ತಿರಸ್ಕರಿಸಲಾಗದ ಹಕ್ಕೆಂಬಂತೆ ವಶಕ್ಕೆ ಪಡೆಯಬಹುದಿತ್ತು. ಮತ್ತು ಇತರರು ಅವರನ್ನು ಪ್ರಾಣಿಗಳಂತೆ ಕೊಂಡು ಮಾರಾಟ ಮಾಡಬಹುದಿತ್ತು.

ಮೈಸೂರಿನ ನಗರ ವಿಭಾಗದ ವರದಿಯಲ್ಲಿ ಹೆಚ್.ಸ್ಟೋಕ್ಸ್ ಬರೆಯುತ್ತಾನೆ:

‘ಶುದ್ಧತೆ ಕಳೆದುಕೊಂಡ ನೆಪದಿಂದ ವಿಧವೆಯರನ್ನು ಮಾರಾಟ ಮಾಡುವ ಪದ್ಧತಿಯನ್ನು ಸರ್ಕಾರ ರದ್ದು ಮಾಡಿದೆ, ಆದರದನ್ನು ಮಠಗಳು ಕೆಲವೊಮ್ಮೆ ಬಲವಂತದಿಂದ ಹೇರುತ್ತಿವೆ. ಎಲ್ಲೋ ಕೆಲವೊಮ್ಮೆ ಮಹಿಳೆಯರನ್ನು ಅವರ ಸಂಬಂಧಿಕರೇ ಖರೀದಿಸುತ್ತಾರೆ, ಮೂರರಿಂದ ಹನ್ನೆರಡು ಪಗೋಡಾಗಳ ಮಾಮೂಲಿ ಮೊತ್ತವನ್ನು ಕಟ್ಟಿ. ಬೇಲಿ ಅನ್ನವನ್ನು ತಿನ್ನುವ ಮಹಿಳೆಯರು ತಮ್ಮ ಕೆಳಜಾತಿಯನ್ನು ಕೆಲವು ಪಗೋಡಾಗಳಿಗೆ ಕಳೆದುಕೊಳ್ಳುತ್ತಾರೆ ಮತ್ತು ಪಗೋಡಾದಿಂದ ರಕ್ಷಣೆ ಪಡೆಯುತ್ತಾರೆ. ಅವರು ನಂತರ ಅಲ್ಲೇ ಉಳಿದು ಚಿಕ್ಕಪುಟ್ಟ ಚಾಕರಿ ಮಾಡಿಕೊಂಡಿರಬೇಕು ಅಥವಾ ಬೇರೆಡೆ ಬದುಕುವ ಇಚ್ಛೆಯಿದ್ದರೆ ವಾರ್ಷಿಕ ಇಷ್ಟೆಂದು ದುಡ್ಡು ನೀಡಬೇಕು. ಅವರಲ್ಲಿನ ಅನೇಕರು ಸೂಳೆಯರಾಗುತ್ತಾರೆ’.” (205)

ಮಹಿಳೆಯರನ್ನು ಗುಲಾಮರನ್ನಾಗಿಸುವುದು ಮಠಗಳಿಗಷ್ಟೇ ಸೀಮಿತವಾಗಿರಲಿಲ್ಲ, ಕೃಷ್ಣರಾಜ ಒಡೆಯರರ ಆಳ್ವಿಕೆಯಲ್ಲಿ ಅದು ವಾಡಿಕೆಯಂತಾಗಿ ಹೋಗಿತ್ತು. ಈ ಭಯಾನಕ ಸಂಸ್ಕೃತಿಯ ಪ್ರಾಬಲ್ಯದ ಬಗ್ಗೆ ರೈಸ್ ತಿಳಿಸುತ್ತಾರೆ:

“ಹಿಂದಿನ ಆಡಳಿತದ ಅವಧಿಯಲ್ಲಿ, ಅದರಲ್ಲೂ ಹಿಂದೂ ರಾಜರ ಆಳ್ವಿಕೆಯಲ್ಲಿ ಮಹಿಳೆಯರ ಸ್ಥಿತಿ ಮತ್ತವರನ್ನು ನೋಡಿಕೊಳ್ಳುತ್ತಿದ್ದ ರೀತಿ ಶೋಚನೀಯವಾಗಿತ್ತು. ಸತತ ಮೂದಲಿಕೆಯಲ್ಲಿ ಬದುಕುವುದು, ವಿಪರೀತದ ಅವಮಾನಗಳನ್ನೆದುರಿಸುವುದು, ಅನುಮಾನಸ್ಪದ ಮಾಹಿತಿದಾರರ ಹೀನ ಆರೋಪಗಳಿಗೆ ಬಲಿಯಾಗುವುದು, ಗುಲಾಮರಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುವುದು, ನಂತರದಲ್ಲಿ ಸೇವಕಿಯಾಗಿ ಸುದೀರ್ಘ ಕಾಲ ನರಳುವುದು. ದೊಡ್ಡ ನಗರಗಳಲ್ಲಿ ಸರಕಾರದ ಆದಾಯದ ಮೂಲವಾಗಿದ್ದ ‘ಸಮಯಾಚಾರಿ’ನ ಲಾಭದ ಭಾಗದಲ್ಲಿ ಅಶುದ್ಧತೆಯ ಹೆಸರಿನಲ್ಲಿ ಮಹಿಳೆಯರನ್ನು ಮಾರುವುದರಿಂದ ಬರುವ ಹಣ ಅಥವಾ ಅಶುದ್ಧತೆಯ ಕಾರಣಕ್ಕೆ ವಿಧಿಸಲಾಗುವ ದಂಡದ ಹಣವಿರುತ್ತಿತ್ತು. ಅಪರಾಧ ಎಸಗಿದವರ ನೇರ ಬೆಂಬಲವನ್ನು ಪಡೆಯುವ ಸ್ಥಿತಿಯಲ್ಲಿತ್ತು ಸರಕಾರ, ಇನ್ನೂ ದುರಂತವೆಂದರೆ ಮಾಹಿತಿದಾರರ ಜೊತೆಗೆ ಸೇರಿ ಈ ಹೀನ ಲೂಟಿಯನ್ನು ಹಂಚಿಕೊಳ್ಳುತ್ತಿದ್ದರು.

ಈ ವ್ಯವಸ್ಥೆಯಲ್ಲಿನ ನೀತಿ ನಿಯಮಗಳು ಅಪಾದಿತೆಯ ಜಾತಿಯ ಆಧಾರದಲ್ಲಿ ನಿರ್ಧರಿತವಾಗುತ್ತಿದ್ದವು. ಬ್ರಾಹ್ಮಣರಲ್ಲಿ ಮತ್ತು ಕೊಮ್ಟಿಗಳಲ್ಲಿ, ಮಹಿಳೆಯರನ್ನು ಮಾರಲಾಗುತ್ತಿರಲಿಲ್ಲ ಆದರೆ ತಮ್ಮ ಜಾತಿಯಿಂದ ಹೊರಹಾಕಿಬಿಡುತ್ತಿದ್ದರು ಮತ್ತವರಿಗೆ ಸೂಳೆ ಪಟ್ಟ ಕಟ್ಟಿಬಿಡುತ್ತಿದ್ದರು; ನಂತರ ಈ ಮಹಿಳೆಯರು ಜೀವಿತಾವಧಿಯುದ್ದಕ್ಕೂ ಇಜಾರುದಾರರಿಗೆ ವರುಷಾ ವರುಷ ದುಡ್ಡು ಕಟ್ಟಬೇಕಿತ್ತು. ಮಹಿಳೆ ಸತ್ತಾಗ, ಅವಳ ಆಸ್ತಿಯೆಲ್ಲ ಇಜಾರುದಾರರ ಪಾಲಾಗುತ್ತಿತ್ತು. ಇನ್ನಿತರೆ ಹಿಂದೂ ಜಾತಿಯ ಮಹಿಳೆಯರನ್ನು ಯಾವೊಂದು ಪಶ್ಚಾತ್ತಾಪವೂ ಇಲ್ಲದೆ ಇಜಾರುದಾರರ ಮಾರಿಬಿಡುತ್ತಿದ್ದ; ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಯಾರಾದರೂ ಇಜಾರುದಾರ ಮುಂದೆ ಬಂದರೆ ಮಾರಾಟ ನಡೆಯುತ್ತಿರಲಿಲ್ಲ. ಕಳ್ಳನ ಹೆಂಡತಿ ಮತ್ತು ಕುಟುಂಬವನ್ನೂ ಬಂಧಿಸಿ ಗಂಡನ ಜೊತೆಗೆ ಜೈಲಿಗೆ ನೂಕಿಬಿಡುತ್ತಿದ್ದರು. ಅವರನ್ನು ಬಂಧಿಸಲು ಯಾವುದೇ ಕಾರಣಗಳು ಇಲ್ಲದಿದ್ದಾಗ್ಯೂ. ಈ ಮಾರಾಟಗಳು ಅಂದುಕೊಂಡಂತೆ ಕಳ್ಳತನದಲ್ಲಾಗಲೀ, ಸಾಮಾನ್ಯರ ಕಣ್ಣು ತಪ್ಪಿಸಿ ದೂರದ ಸ್ಥಳದಲ್ಲಾಗಲೀ ನಡೆಯುತ್ತಿರಲಿಲ್ಲ; ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ, ಯುರೋಪಿಯನ್ನರ ಕಣ್ಣಳತೆಯೊಳಗೆ ದೊಡ್ಡ ದೊಡ್ಡ ಕಟ್ಟಡಗಳನ್ನು ಇಂತಹ ದುರದೃಷ್ಟದ ಮಹಿಳೆಯರ ವಸತಿಗೆ ಉಪಯೋಗಿಸಿಕೊಂಡು ಅಲ್ಲೇ ಮಾರಲಾಗುತ್ತಿತ್ತು…..”(206)

ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಒಡೆಯರರ ಆಳ್ವಿಕೆಯ ಕಾಲದಲ್ಲಿದ್ದ ಸತಿ ಪದ್ಧತಿಯ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ. ಇದರ ಬಗ್ಗೆ ಪ್ರತಿಕ್ರಯಿಸುವುದಿರಲಿ, ಪ್ರತಿಕ್ರಯಿಸುವ ಬಗ್ಗೆ ಯೋಚಿಸುವುದೂ ಯೋಗ್ಯವಲ್ಲ ಎಂದು ರಾಜ ಅಂದುಕೊಂಡಿದ್ದ. ಮುಂದುವರಿಸುತ್ತಾ ರೈಸ್ ಹೇಳುತ್ತಾನೆ: “ಮೊರಲು ವಕ್ಕಲಿಗರ ಒಂದು ವರ್ಗದಲ್ಲಿ ವಿಚಿತ್ರ ಆಚರಣೆಯೊಂದು ಚಾಲ್ತಿಯಲ್ಲಿತ್ತು; ಮಹಿಳೆಯರ ಬಲಗೈಯಲ್ಲಿನ ಉಂಗುರ ಬೆರಳು ಮತ್ತು ಕಿರುಬೆರಳನ್ನು ತೆಗೆದುಬಿಡಲಾಗುವ ಆಚರಣೆ. ದೊಡ್ಡ ಮಗಳನ್ನು ಮದುವೆಗೆ ತಯಾರಾಗಿಸಲು ಕಿವಿ ಚುಚ್ಚುವ ಮುನ್ನ ಪ್ರತಿ ಮಹಿಳೆಯೂ ಈ ಅಂಗಹೀನತೆಯ ಪ್ರಕ್ರಿಯೆಗೆ ಒಳಗಾಗಲೇಬೇಕಿತ್ತು. ಹಳ್ಳಿಯ ಅಕ್ಕಸಾಲಿಗ ಈ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಒರಟೊರಟಾಗಿ ಮಾಡಿಬಿಡುತ್ತಿದ್ದ, ನಿರ್ದಿಷ್ಟ ಮೊತ್ತವನ್ನು ಕಟ್ಟಿಸಿಕೊಂಡು. ತೆಗೆಯಲಾಗುವ ಬೆರಳನ್ನು ಕಲ್ಲಿನ ಮೇಲಿರಿಸಿ, ಅಕ್ಕಸಾಲಿಗ ಉಳಿಯನ್ನು ಕೀಲಿನ ಮೇಲಿಟ್ಟು ಒಂದೇ ಹೊಡೆತಕ್ಕೆ ಬೆರಳನ್ನು ಬೇರೆ ಮಾಡಿಬಿಡುತ್ತಿದ್ದ. ಮದುವೆಗೆ ಸಿದ್ಧವಾಗಿರುವ ಹುಡುಗಿಗೆ ಅಮ್ಮನಿಲ್ಲದಿದ್ದರೆ, ಆಕೆಯೇ ಈ ತ್ಯಾಗಕ್ಕೆ ಸಿದ್ಧವಾಗಬೇಕಾಗುತ್ತಿತ್ತು.” (207) ಇಂತಹ ಪದ್ಧತಿಗಳನ್ನು ವಿರೋಧಿಸುವುದನ್ನು ಬಿಟ್ಟು, ಸರಕಾರ ಮೌನವಾಗುಳಿದಿತ್ತು ಅಥವಾ ತನ್ನ ಬೆಂಬಲವನ್ನು ನೀಡಿ ಮಹಿಳೆಯರ ಜೀವನವನ್ನು ಬರ್ಬರವನ್ನಾಗಿಸಿತ್ತು.

ಪುರುಷ ಪ್ರಧಾನ ಸಮಾಜ ಊಳಿಗಮಾನ್ಯತೆಯ ಕೈಕೆಳಗೆ ಅನೇಕ ಕುರೂಪಗಳನ್ನು ಪಡೆದುಕೊಂಡಿತು. ಊಳಿಗಮಾನ್ಯತೆಯ ಪೌರುಷತ್ವ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲೂ ಸಶಕ್ತವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾದರೂ, ಇಂತಹ ಅಮಾನವೀಯ ಪದ್ಧತಿಗಳಲ್ಲಿ ಕೆಲವನ್ನಾದರೂ ತಡೆಯಲು ನಡೆದಂತಹ ಪ್ರಯತ್ನಗಳನ್ನು ಗಮನಿಸಬಹುದು. ಕನ್ಯೆಯರನ್ನು ಬಲಿಕೊಡುವುದನ್ನು ನಿಷೇಧಿಸಲಾಯಿತು, ಸೂಳೆಗಾರಿಕೆಯನ್ನು ಬಹಿಷ್ಕರಿಸಲಾಯಿತು ಮತ್ತು ವಯನಾಡು ಹಾಗೂ ಮಲಬಾರಿನಲ್ಲಿ ಮೊಲೆ ತೋರಿಸಿಕೊಂಡೇ ಓಡಾಡಬೇಕಿದ್ದ ಮಹಿಳೆಯರಿಗೆ ಬಟ್ಟೆ ಹಾಕಿಕೊಳ್ಳಲು ಸೂಚಿಸಲಾಯಿತು. ಆದರೆ ವಸಾಹತಿನ ಮೇಲುಗೈ ಈ ಪ್ರಗತಿಪರತೆಯನ್ನು ತಡೆಹಿಡಿಯಿತು ಮತ್ತು ಬ್ರಾಹ್ಮಣ ಧಾರ್ಮಿಕ ಸಂಸ್ಥೆಗಳು ಹಾಗೂ ಪ್ರತಿಗಾಮಿ ಊಳಿಗಮಾನ್ಯತೆಯ ಆಸಕ್ತಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದಕ್ಕೆ ನೆರವಾಯಿತು. ಕರ್ನಾಟಕ ವಸಾಹತು ಆಳ್ವಿಕೆಗೆ ಒಳಪಟ್ಟಿದ್ದರಿಂದ ಉಂಟಾದ ಪರಿಣಾಮಗಳಲ್ಲಿ ಪುರುಷ ಸಮಾಜ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯದ ಹೆಚ್ಚಳವೂ ಒಂದು ಎಂದರದು ತಪ್ಪಾಗಲಾರದು.

ಮುಂದಿನ ವಾರ:
ಸಾಮಾಜಿಕ ಕುಸಿತ ಮತ್ತು ಅರೆಊಳಿಗಮಾನ್ಯ – ವಸಾಯತು ಆಳ್ವಿಕೆಯಲ್ಲಿನ ಬಿಕ್ಕಟ್ಟು

Jun 16, 2016

ಕರ್ನಾಟಕಕ್ಕೊಂದು ಮೂರನೆ ರಾಜಕೀಯ ಶಕ್ತಿಯ ಅನಿವಾರ್ಯತೆ: ಜನತಾದಳ ಆ ಸ್ಥಾನ ತುಂಬ ಬಲ್ಲುದೆ?

jds logo
ಕು.ಸ.ಮಧುಸೂದನ್ ನಾಯರ್
16/06/2016
ಅನೇಕ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನೂ ಮೀರಿ ಇವತ್ತು ಬಾಜಪ ಪ್ರಬಲ ರಾಜಕೀಯ ಶಕ್ತಿಯಾಗಿ ರಾಷ್ಟ್ರದಾದ್ಯಂತ ಬೆಳೆಯುತ್ತಿದ್ದು, ಇನ್ನೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ರಾಜ್ಯದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತ ದುರ್ಬಲವಾಗುತ್ತ ಬರುತ್ತಿದೆ. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಜಾತ್ಯಾತೀತ ಮನೋಬಾವನೆಯ ಮತದಾರರಿಗೆ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕುವ ಯಾವ ದಾರಿಯೂ ಕಾಣದಂತಾಗಿ ಗೊಂದಲದಲ್ಲಿದ್ದಾರೆ. ಮತಾಂಧ ರಾಜಕಾರಣವನ್ನು ಬಗ್ಗು ಬಡಿಯಲು ಶಕ್ತವಾದ ಪಕ್ಷಗಳ ಹುಡುಕಾಟದಲ್ಲಿ ಜನತೆ ಇದ್ದರೆ, ಕೆಲವೊಂದು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಾಜಪದ ಓಟಕ್ಕೆ ತಡೆಗೋಡೆಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿವೆ. ಉದಾಹರಣೆಗೆ: ಬಿಹಾರದಲ್ಲಿ ನಿತೀಶ್ ಕುಮಾರರ ಸಂಯುಕ್ತ ಜನತಾದಳ, ಲಲ್ಲೂಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ, ತಮಿಳುನಾಡಲ್ಲಿ ಜಯಲಲಿತಾರವರ ಎ.ಐ.ಎ.ಡಿ.ಎಂ.ಕೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಒಡಿಸ್ಸಾದಲ್ಲಿ ನವೀನ್ ಪಟ್ನಾಯಕರ ಬಿಜು ಜನತಾದಳ, ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನಪಕ್ಷ, ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷಗಳು ಇದುವರೆಗೂ ಬಾಜಪವನ್ನು ತಮ್ಮ ರಾಜ್ಯದಲ್ಲಿ ಬೆಳೆಯಲು ಬಿಡದೆ ಗಟ್ಟಿಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿವೆ, ರಾಷ್ಟ್ರಮಟ್ಟದಲ್ಲಿ ಬಾಜಪಕ್ಕೆ ಇಂತಹ ಪ್ರತಿರೋಧ ತೋರಬಲ್ಲ ಶಕ್ತಿ ಹೊಂದಿರುವ ಪ್ರಾದೇಶಿಕ ಪಕ್ಷಗಳು ಕರ್ನಾಟಕದ ಜನತೆಯ ಮಟ್ಟಿಗೂ ಒಂದಿಷ್ಟು ಆಶಾವಾದ ಹುಟ್ಟು ಹಾಕಿದ್ದರೆ ಅದರಲ್ಲಿ ತಪ್ಪೇನು ಇಲ್ಲ. ಕಾಂಗ್ರೆಸ್ಸಿನ ಭ್ರಷ್ಟತೆ, ಜಡತೆ, ಬಾಜಪದ ಮತಾಂಧ ರಾಷ್ಟ್ರೀಯತೆಯ ರಾಜಕಾರಣಗಳೆರಡನ್ನೂ ನಿಯಂತ್ರಿಸುವ, ಹಾಗು ಸ್ಥಳೀಯ ನೆಲ-ಜಲದ ಹಿತಾಸಕ್ತಿಗಳನ್ನು ಕಾಪಾಡಬಲ್ಲ ಪ್ರಾದೇಶಿಕ ರಾಜಕೀಯ ಶಕ್ತಿಯೊಂದರ ಅನಿವಾರ್ಯತೆಯನ್ನು ಕರ್ನಾಟಕದ ಜನತೆ ಎಂಭತ್ತರ ದಶಕದ ಪೂರ್ವಾರ್ದದಲ್ಲಿಯೇ ಅರಿತು ಜನತಾ ಪರಿವಾರವನ್ನು ಅಧಿಕಾರಕ್ಕೆ ತರಲು ಸಫಲರಾಗಿದ್ದರು. ತದನಂತರದ ದಿನಗಳಲ್ಲಿ ಸ್ಪಷ್ಟ ಸಿದ್ದಾಂತಗಳ ಅರಿವೆಯಿರದೆ ಜನತಾ ಪರಿವಾರ ಚೂರುಗಳಾಗಿ ಒಡೆಯುತ್ತ ಇವತ್ತು ಶ್ರೀ ಹೆಚ್. ಡಿ.ದೇವೇಗೌಡರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳದ ಹೆಸರಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ.

ಇವತ್ತು ಇಡೀ ರಾಷ್ಟ್ರದಲ್ಲಿ ತನ್ನ ಬೇರುಗಳನ್ನು ಬಿಡುತ್ತಾ, ರಾಜ್ಯಗಳನ್ನು ಒಂದೊಂದಾಗಿ ಗೆಲ್ಲುತ್ತಾ ಹೋಗುತ್ತಿರುವ ಬಾಜಪ ತನ್ನ ಪ್ರತ್ಯಕ್ಷ ಕೋಮುವಾದಿ ರಾಜಕಾರಣವನ್ನು ಬದಿಗಿಟ್ಟು ಅದರ ಇನ್ನೊಂದು ಮುಖವಾದ ರಾಷ್ಟ್ರೀಯತೆ-ದೇಶಭಕ್ತಿಯೆಂಬ ಸಾಂಸ್ಕೃತಿಕ ರಾಜಕಾರಣ ಮಾಡುವಲ್ಲಿ ಯಶಸ್ವಿಯಾಗುತ್ತ ಹೋಗುತ್ತಿದೆ. ಅದರ ನಾಯಕತ್ವದ ಹೇಳಿಕೆ ನಡವಳಿಕೆಗಳನ್ನು ನೋಡಿದರೆ ಒಂದೇ ಪಕ್ಷದ ಸರ್ವಾಧಿಕಾರಿ ಆಳ್ವಿಕೆಯತ್ತ ಅದು ಸಾಗುತ್ತಿರುವಂತೆ ಕಾಣುತ್ತಿದೆ. ಇನ್ನು ಬಹುತೇಕ ರಾಜ್ಯಗಳಲ್ಲಿ ಸೋತು ಏದುಸಿರು ಬಿಡುವಂತೆ ಕಾಣುತ್ತಿರುವ ಕಾಂಗ್ರೇಸ್ ೨೦೧೯ರ ವೇಳೆಗೆ ಸುದಾರಿಸಿಕೊಂಡು ಚುನಾವಣೆಯನ್ನು ಎದುರಿಸುವ ಶಕ್ತಿ ಮತ್ತು ಉತ್ಸಾಹ ಹೊಂದಿರುತ್ತದೆಯೇ ಎನ್ನುವುದು ಅನುಮಾನದ ವಿಷಯವಾಗಿದೆ. ಇನ್ನು ಅದಕ್ಕೂ ಮುಂಚೆಯೇ ೨೦೧೮ರಲ್ಲಿ ಕರ್ನಾಟಕವು ವಿದಾನಸಭಾ ಚುನಾವಣೆಗಳಿಗೆ ಹೋಗಲಿರುವುದರಿಂದ ರಾಜ್ಯದ ಜನತೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಬಯಸುತ್ತಿದೆ. ಹೀಗೆ ಕಾಂಗ್ರೆಸ್ ಮತ್ತು ಬಾಜಪ ಹೊರತು ಪಡಿಸಿ ಮೂರನೇ ಆಯ್ಕೆಯೊಂದನ್ನು ಕನ್ನಡದ ಜನತೆ ಬಯಸುತ್ತಿರುವ ಸಂದರ್ಭದಲ್ಲಿಯೇ ಜನತಾದಳ ತೀವ್ರವಾದ ಬಿಕ್ಕಟ್ಟಿಗೆ ಸಿಲುಕಿ ಕೊಂಡಿದೆ. ಬಲಾಢ್ಯ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬಲ್ಲ ಶಕ್ತಿ ಹೊಂದಿದ್ದ ಅದು ತನ್ನ ಆಂತರಿಕ ಕಿತ್ತಾಟಗಳಿಂದ ಒಣಪ್ರತಿಷ್ಠೆಗಳಿಂದಾಗಿ ದುರ್ಬಲವಾಗಿರುವಂತೆ ಕಾಣುತ್ತಿದೆ. ಹೀಗಾಗಿ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳನ್ನೂ ಸೋಲಿಸಿ ಅಧಿಕಾರ ಹಿಡಿಯಬಲ್ಲದೆಂಬ ನಂಬಿಕೆಯಲ್ಲಿ ಜನತಾ ದಳಕ್ಕೆ ಮತಹಾಕುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸನ್ನಿವೇಶದಲ್ಲಿ ಪಕ್ಷವನ್ನು ಕಟ್ಟುವ ಹೊಣೆಗಾರಿಕೆ ದಳದ ನಾಯಕರುಗಳಿಗಿದೆ.

ಹೀಗಾಗಿ ಜನತಾದಳ ಒಂದಿಷ್ಟು ಚಿಂತನೆ ನಡೆಸಿ ತನ್ನ ಸಿದ್ದಾಂತಗಳ ಪುನರ್ ವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲದು ಕಾಂಗ್ರೆಸ್ ಮತ್ತು ಬಾಜಪಗಳೆರಡನ್ನೂ ಸಮಾನಾಂತರ ದೂರದಲ್ಲಿಟ್ಟು ರಾಜಕಾರಣ ಮಾಡಬೇಕಿದೆ. ತಾತ್ಕಾಲಿಕ ಅಧಿಕಾರಕ್ಕೆ ಆಸೆ ಪಡುವ ನಾಯಕರುಗಳು ಮತ್ತು ಕಾರ್ಯಕರ್ತರುಗಳನ್ನು ಕಳದುಕೊಂಡರು ಪರವಾಗಿಲ್ಲ, ಉಳಿದೆರಡು ವರ್ಷಗಳಲ್ಲಿ ಹೊಸ ನಾಯಕ ಮತ್ತು ಕಾರ್ಯಕರ್ತರ ಪಡೆಯನ್ನು ಸಿದ್ದಪಡಿಸುತ್ತೇವೆಂಬ ಹಟತೊಟ್ಟು ಎಲ್ಲೆಲ್ಲಿ ಅದು ಬಾಜಪ ಮತ್ತು ಕಾಂಗ್ರೆಸ್ನ ಜೊತೆ ಮೈತ್ರಿ ಮಾಡಿಕೊಂಡಿದೆಯೊ ಆ ಮೈತ್ರಿಯನ್ನು ಮುರಿದುಕೊಂಡು ಹೊರಬೇಕಾಗಿದೆ. ಇದರಿಂದ ಒಂದಷ್ಟು ಹಿನ್ನಡೆಯಾಗಿ ಕೆಲವು ನಾಯಕರು ಕಾರ್ಯಕರ್ತರುಗಳು ದೂರ ಹೋದರೂ, ಪಕ್ಷದ ನಿಷ್ಠಾವಂತರು ಪಕ್ಷದಲ್ಲಿ ಉಳಿದೇ ಉಳಿಯುತ್ತಾರೆ. ಇದರಿಂದಾಗಿ ಎರಡು ಲಾಭಗಳಾಗಲಿವೆ. ಮೊದಲಿಗೆ ಬಾಜಪದಿಂದ ದೂರಬರುವುದರಿಂದ ಅಲ್ಪಸಂಖ್ಯಾತರ ಬೆಂಬಲ ಪಡೆಯಬಹುದಾಗಿದೆ. ಇನ್ನು ಕಾಂಗ್ರೆಸ್ನಿಂದ ದೂರ ಸರಿಯುವುದರಿಂದ ಕಾಂಗ್ರೆಸ್ನ ಭ್ರಷ್ಟತೆಯ ಬಗ್ಗೆ ಮಾತಾಡುವ ನೈತಿಕ ಶಕ್ತಿ ಗಳಿಸಿಕೊಳ್ಳುವ ಪಕ್ಷ ಜನರ ಮನಸ್ಸನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಖಂಡಿತಾ ಜನತಾದಳಕ್ಕೆ ತಾತ್ಕಾಲಿಕ ಹಿನ್ನಡೆಯುಂಟಾಗುವುದು ನಿಶ್ಚಿತವಾಗುವುದಾದರು ಮುಂದಿನ ದಿನಗಳಲ್ಲಿ ಒಳ್ಳೆಯ ಪಲಿತಾಂಶ ಪಡೆಯಬಹುದಾಗಿದೆ. ಇನ್ನು ಪಕ್ಷವನ್ನು ದೇವೇಗೌಡರು ಮತ್ತಷ್ಟು ಪ್ರಜಾಸತ್ತಾತ್ಮಕವಾಗಿ ನಡೆಸುವತ್ತ ಮನಸ್ಸು ಮಾಡಬೇಕಿದೆ. ಜನತಾ ಪರಿವಾದ ಅಧಿಕಾರ ವಿಕೇಂದ್ರಿಕರಣ ಸಿದ್ದಾಂತವನ್ನು ಪಕ್ಷದಲ್ಲಿಯೂ ಜಾರಿಗೆ ತಂದಲ್ಲಿ ಎರಡನೆ ಸಾಲಿನ ನಾಯಕರುಗಳಿಗೆ ಪಕ್ಷ ಕಟ್ಟುವ ಹುಮ್ಮಸ್ಸು ದೊರೆತಂತಾಗುತ್ತದೆ. ಇನ್ನು ಮುಂದಿನ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿನ ವಿವಿಧ ಜನಪರ ಸಂಘಟನೆಗಳೊಂದಿಗೆ ಮೈತ್ರಿ ಮಾತುಕತೆ ನಡೆಸಿ ಆದಷ್ಟು ಬೇಗ ಒಂದು ಜನಪರ ವೇದಿಕೆಯನ್ನು ರಚಿಸಿಕೊಳ್ಳಬೇಕಿದೆ. ಕರ್ನಾಟಕದ ಮಟ್ಟಿಗೆ ಮೂರನೇ ಶಕ್ತಿಯಾಗಬಹುದಾದ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಸೃಷ್ಠಿಸುವಷ್ಟು ಶಕ್ತಿ ಇವತ್ತಿಗೂ ದೇವೇಗೌಡರಿಗಿದ್ದು, ಈ ಕುರಿತು ಅವರು ರೈತ, ದಲಿತ, ಕನ್ನಡಪರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ಉದಾರ ಹೃದಯದಿಂದ ಸಿದ್ದವಾಗಬೇಕಿದೆ. ಕನ್ನಡದ ನೆಲ-ಜಲಗಳ ರಕ್ಷಣೆಗಾಗಿ ಎಂಬ ಘೋಷವಾಕ್ಯದೊಂದಿಗೆ ಕಟಿಬದ್ದರಾಗಿ ಹೋರಾಟ ಮಾಡಿದೆ ೨೦೧೮ರ ಹೊತ್ತಿಗೆ ಜನತಾದಳ ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ. ಈ ವಿಚಾರದಲ್ಲಿ ಶ್ರೀಕುಮಾರಸ್ವಾಮಿಯವರೂ ಸಹ ತಮ್ಮ ಬಾಜಪ ಪರವಾದ ಒಲವನ್ನು ತೊರೆದು ನಿಂತರೆ ಮಾತ್ರ ಇದು ಸಾದ್ಯವಾಗುತ್ತದೆ. ಇಲ್ಲದೆ ಇದ್ದಲ್ಲಿ ಜನತಾದಳ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡರೂ, ಆ ಪಕ್ಷಗಳು ಜನತಾದಳವನ್ನು ಮುಗಿಸುವ ದಷ್ಠಿಯಿಂದಲೇ ರಾಜಕೀಯ ಮಾಡುತ್ತವೆಯೆಂಬುದನ್ನು ಮರೆಯಬಾರದು.

ಪ್ರಾದೇಶಿಕ ಪಕ್ಷಗಳನ್ನು ಇಲ್ಲವಾಗಿಸಲು ನಡೆಸುವ ಕುತಂತ್ರಗಳ ವಿಷಯಕ್ಕೆ ಬಂದರೆ ಕಾಂಗ್ರೆಸ್ ಮತ್ತು ಬಾಜಪ ಒಂದೇ ನಾಣ್ಯದ ಎರಡು ಮುಖಗಳೆಂಬುದನ್ನು ಕುಮಾರಸ್ವಾಮಿಯವರು ಮನಗಾಣಬೇಕು. ಕೇಂದ್ರದ ಜನವಿರೋಧಿ ನಡೆಗಳ ವಿರುದ್ದ ಮತ್ತು ರಾಜ್ಯಸರಕಾರದ ಜಡ ಸರಕಾರದ ವಿರುದ್ದ ನಡೆಸುವ ಹೋರಾಟಮಾತ್ರ ಜನತೆಯ ನಂಬಿಕೆ ಗಳಿಸುತ್ತದೆಯೆಂಬುದನ್ನು ಜನತಾದಳದ ನಾಯಕರುಗಳು ಅರ್ಥಮಾಡಿಕೊಳ್ಳಬೇಕು

ಇಂತಹದೊಂದು ಬೆಳವಣಿಗೆ ಬೇಕಾಗಿರುವುದು ಜನತಾದಳದ ಪುನಶ್ಚೇತನಕ್ಕೆ ಮಾತ್ರವಲ್ಲ. ಬದಲಿಗೆ ಕನ್ನಡನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಕನ್ನಡಿಗರ ಹಿತಕಾಪಾಡಲು ಸಹ ಎಂಬುದನ್ನು ಅವರುಗಳು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದೆ ಜನತಾದಳ ತೆಗೆದುಕೊಳ್ಳುವ ನಿರ್ದಾರಗಳು ಕರ್ನಾಟಕರಾಜ್ಯದ ಜನತೆಯ ಬದುಕಿನ ಮೇಲೆ ದೀರ್ಘಕಾಲಿನ ಪ್ರಬಾವ ಬೀರುತ್ತವೆ. 

ಹೀಗಾಗಿ ಇವತ್ತು ದೇವೇಗೌಡರ, ಕುಮಾರಸ್ವಾಮಿಯವರ ಮುಂದಿನ ರಾಜಕೀಯ ತೀರ್ಮಾನಗಳನ್ನು ಕನ್ನಡದ ಜನತೆ ಅತೀವ ಕುತೂಹಲದಿಂದ ನೋಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ಮತದಾರರ ಸಂಖ್ಯೆ ಜನತಾದಳವನ್ನು ಅಧಿಕಾರಕ್ಕೆ ತರುವಷ್ಟಂತು ಇದೆ.ಇಷ್ಟು ವರ್ಷ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯಕ್ಕೇನು ಮಾಡಿದರು ಎಂಬುದು ಮುಖ್ಯವಲ್ಲ. ಬದಲಿಗೆ ಮುಂದೇನು ಮಾಡಲಿದ್ದಾರೆ ಎಂಬುದು ಮಾತ್ರ ಇತಿಹಾಸವಾಗಲಿದೆ ಎನ್ನುವುದನ್ನು ಅವರು ಮರೆಯಬಾರದು.

Jun 15, 2016

ನಕ್ಷತ್ರದ ಧೂಳು

rohit vemula
15/06/2016
ಭಾರತದಲ್ಲಿ ತಳಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಹಂತದವರಗೆ ತಲುಪುವುದೇ ಒಂದು ಸಾಹಸ. ಬದುಕಿನ ಸಂಕಷ್ಟಗಳ ಜೊತೆಯಲ್ಲಿ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಗಳು ಅಡಿಗಡಿಗೂ ಅವರನ್ನು ಜಗ್ಗುತ್ತಿರುತ್ತವೆ. ಆದರೆ ಎಲ್ಲಾ ಅಡೆತಡೆಗಳ ನಡುವೆಯೂ ಅದಮ್ಯ ಉತ್ಸಾಹ ಮತ್ತು ಕನಸುಗಳಿಂದ ಇಂತಹ ವಿದ್ಯಾರ್ಥಿಗಳು ಅಲ್ಲಿಗೆ ಪ್ರವೇಶಿಸುತ್ತಾರೆ. ಆದರೆ, ನಮ್ಮ ಜಾತಿ ಪೂರ್ವಗ್ರಹಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಟ್ಟವಾಗಿರುವುದರಿಂದ ಅಲ್ಲಿ ಇಂತಹ ವಿದ್ಯಾರ್ಥಿಗಳನ್ನು ಸಂದಿಗ್ಧತೆಗೆ ತಳ್ಳಿಬಿಡುತ್ತವೆ.

ಈ ಸಂಗತಿಯನ್ನು ನಕ್ಷತ್ರದ ಧೂಳು ನಾಟಕ ಪ್ರತಿಫಲಿಸುತ್ತದೆ. ಇತ್ತೀಚೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಬದುಕಿನ ಕಥೆಯನ್ನಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ರೋಹಿತನ ಅದಮ್ಯ ಕನಸುಗಳು, ಸಾಮಾಜಿಕ ತುಡಿತಗಳನ್ನು ನಾಟಕ ಪ್ರತಿಫಲಿಸುತ್ತದೆ. ರೋಹಿತ್‌ನ ಬದುಕಿನಲ್ಲಿ ಸಮಾಜ, ಸಿದ್ಧಾಂತ, ಶಿಕ್ಷಣವ್ಯವಸ್ಥೆ ಮತ್ತು ರಾಜಕೀಯಗಳು ವಹಿಸಿದ ಪಾತ್ರಗಳನ್ನು ಇಲ್ಲಿ ತೆರೆದಿಡಲಾಗಿದೆ. ರೋಹಿತ್ ಬದುಕಿ‌ನ ಹೋರಾಟ, ಚಿಂತನೆ ಹಾಗೂ ಆಶಯಗಳನ್ನು ಅರಿಯುವ ಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಲಾಗಿದೆ.

ಒಂದು ಸಮಾಜವಾಗಿ, ಒಂದು ವ್ಯವಸ್ಥೆಯಾಗಿ ರೋಹಿತ್ ನಂತಹ, ಕನಸುಗಣ್ಣಿನ, ಉತ್ಸಾಹಿ, ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಇಲ್ಲದಂತೆ ಮಾಡುವ ಬಗ್ಗೆ, ಕಳೆದುಕೊಂಡು ಬಿಡುವ ಬಗ್ಗೆ ನಮ್ಮನ್ನು ಚಿಂತಿಸಲು, ಮರುಚಿಂತಿಸಲು ಈ ನಾಟಕ ಪ್ರೇರೇಪಿಸುತ್ತದೆ.

Jun 14, 2016

ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೂ ಎಷ್ಟೊಂದು ಕೆಂಪು ಪಟ್ಟಿಯ ನಿಯಮಗಳು!

ಸಾಂದರ್ಭಿಕ ಚಿತ್ರ
ಶಂಕರನಾರಾಯಣ ಪುತ್ತೂರು
14/06/2016
ಕರ್ನಾಟಕದಲ್ಲಿ ಕೃಷಿಕರು ತಮ್ಮ ಸ್ವಂತ ಪಟ್ಟಾ ಜಾಗದಲ್ಲಿ ತಮ್ಮ ಸ್ವಂತ ವಾಸಕ್ಕೆ ತಮ್ಮ ಸ್ವಂತ ಹಣದಲ್ಲಿ ಮನೆ ಕಟ್ಟಿಸಬೇಕಾದರೆ ಎಷ್ಟೊಂದು ಸಲ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕು, ಅದಕ್ಕಾಗಿ ಎಷ್ಟೊಂದು ಸಮಯ ಕಾಯಬೇಕು ಎಂಬುದನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವೇ ಎಂಬ ಅನುಮಾನ ಮೂಡುತ್ತದೆ. ಇದನ್ನು ನೋಡಿದಾಗ ಎಲ್ಲಿಗೆ ಬಂತು, ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯಎಂದು ಕೇಳಬೇಕಾಗಿದೆ. ಕೃಷಿಕರು ತಮ್ಮ ಸ್ವಂತ ಜಾಗದಲ್ಲಿ ತಮ್ಮ ಸ್ವಂತ ವಾಸಕ್ಕೆ ಮನೆ ಕಟ್ಟಿಸಬೇಕಾದರೂ ಆ ಜಾಗವನ್ನು ಭೂಪರಿವರ್ತನೆ ಮಾಡಿಸಬೇಕು ಎಂಬ ಕೆಂಪು ಪಟ್ಟಿಯ ಅಧಿಕಾರಶಾಹೀ ನಿಯಮವಿದೆ. ಕೃಷಿಯೇತರ ವ್ಯಕ್ತಿಗಳು ಕೃಷಿಯೇತರ ಉದ್ದೇಶಗಳಿಗೆ ಉದಾಹರಣೆಗೆ ಉದ್ಯಮ, ವಾಣಿಜ್ಯ, ವಸತಿ ಸಮುಚ್ಚಯ ನಿರ್ಮಾಣ, ವಸತಿ ಬಡಾವಣೆ ನಿರ್ಮಾಣ, ಕೃಷಿಯಲ್ಲದ ಬೇರೆ ಬೇರೆ ಉದ್ಯೋಗದಲ್ಲಿ ಇರುವವರು ಮನೆ ಕಟ್ಟಿಸುವಾಗ ಸಂಬಂಧಪಟ್ಟ ಭೂಮಿಯ ಭೂಪರಿವರ್ತನೆ ಮಾಡಿಸಬೇಕು ಎಂಬ ನಿಯಮದಲ್ಲಿ ಅರ್ಥವಿದೆ ಆದರೆ ಕೃಷಿಕನು ತನ್ನ ಸ್ವಂತ ವಾಸಕ್ಕೆ ತನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿಸುವುದು ಹೇಗೆ ಕೃಷಿಯೇತರ ಉದ್ದೇಶ ಆಗುತ್ತದೆ? ಕೃಷಿಕನು ಕೃಷಿ ಮಾಡಬೇಕಾದರೆ ಆ ಜಾಗದಲ್ಲಿ ತನ್ನ ಸ್ವಂತ ವಾಸಕ್ಕಾಗಿ ಮನೆ ಕಟ್ಟಿಸುವುದು ಅನಿವಾರ್ಯ. ಇದು ಕೃಷಿಯ ಅವಿಭಾಜ್ಯ ಅಂಗ. ಹೀಗಿರುವಾಗ ಇದನ್ನು ಕೃಷಿಯೇತರ ಎಂದು ವರ್ಗೀಕರಿಸಿ ಕೃಷಿಕರಿಗೆ ತೊಂದರೆ ಕೊಡುವ ಭೂಪರಿವರ್ತನೆ ಮಾಡಿಸಬೇಕಾಗಿರುವುದು ಕಡ್ಡಾಯ ಎಂಬ ಕಾನೂನು ಕರ್ನಾಟಕದಲ್ಲಿ ಜಾರಿಯಲ್ಲಿರುವುದಕ್ಕೆ ಯಾವುದೇ ವೈಜ್ಞಾನಿಕ ಸಮರ್ಥನೆ ಇರುವಂತೆ ಕಾಣುವುದಿಲ್ಲ. ಇಂಥ ಜನಪೀಡಕ ಕಾನೂನುಗಳನ್ನು ಯಾಕಾಗಿ ಯಾರು ಜಾರಿಗೆ ತಂದಿದ್ದಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂಬುದು ಗೊತ್ತಿಲ್ಲ ಆದರೆ ವಿಚಾರ ಮಾಡಿ ನೋಡಿದರೆ ಇಂಥ ಕೃಷಿಕಪೀಡಕ ಕಾನೂನಿನ ಅಗತ್ಯ ಇಲ್ಲ. ಇಂಥ ಕೃಷಿಕಪೀಡಕ ಕಾನೂನುಗಳಿಂದ ಕೃಷಿಕರಿಗೆ ವಿನಾಯತಿ ನೀಡಿದರೆ ತಮ್ಮ ಸ್ವಂತ ವಾಸಕ್ಕಾಗಿ ಮನೆ ಕಟ್ಟಿಸುವ ಕೃಷಿಕರು ಅನಾವಶ್ಯಕವಾಗಿ ಸರಕಾರಿ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಿದೆ.

ಭೂಪರಿವರ್ತನೆ ಮಾಡಿಸಬೇಕಾದರೆ ಹಲವು ದಾಖಲೆಗಳನ್ನು ಸರ್ಕಾರಿ ಕಛೇರಿಗಳಿಂದ ಪಡೆಯಬೇಕಾಗುತ್ತದೆ. ಇವುಗಳಲ್ಲಿ ಮೊದಲನೆಯದು ಭೂಮಾಪನ ಇಲಾಖೆಯಿಂದ ಭೂಪರಿವರ್ತನೆ ಮಾಡಿಸಬೇಕಾದ ಜಾಗದ ಅಳತೆ ಮಾಡಿಸಿ ನಕ್ಷೆ ಪಡೆಯುವುದು. ಇದಕ್ಕಾಗಿ ಭೂಮಾಪನ ಇಲಾಖೆಗೆ ಭೂಮಿಯ ಪಹಣಿಪತ್ರ ಇಟ್ಟು ಅರ್ಜಿ ಕೊಟ್ಟು ನಿಗದಿಪಡಿಸಿದ ಹಣ ಕಟ್ಟಬೇಕು. ಭೂಮಾಪಕರು ಕೂಡಲೇ ಬರುವುದಿಲ್ಲ. ಬರಲು ಅರ್ಜಿ ಕೊಟ್ಟು ಹತ್ತಿಪ್ಪತ್ತು ದಿವಸ ಕಾಯಿಸುತ್ತಾರೆ. ಇದಕ್ಕಾಗಿ ಅವರನ್ನು ಪುನಃ ಹೋಗಿ ಕಾಣಬೇಕು. ಪುನಃ ಹೋಗಿ ವಿಚಾರಿಸದಿದ್ದರೆ ಅವರು ಬರುವುದಿಲ್ಲ. ಭೂಮಾಪಕರು ಜಾಗಕ್ಕೆ ಬಂದು ಅಳತೆ ಮಾಡಿದ ನಂತರ ನಕ್ಷೆ ಮಾಡಿಕೊಡಲು ಮತ್ತೆ ಕೆಲವು ದಿನ ಬಿಟ್ಟು ಬರಲು ಹೇಳುತ್ತಾರೆ. ಹೀಗೆ ನಕ್ಷೆ ಸಿಗುವಾಗ ಅರ್ಜಿ ಕೊಟ್ಟು 15-20 ದಿನವಾದರೂ ಆಗುತ್ತದೆ. ಭೂಪರಿವರ್ತನೆಗೆ ಬೇಕಾದ ಎರಡನೇ ದಾಖಲೆ ಟೆನೆನ್ಸಿ ಸರ್ಟಿಫಿಕೇಟ್ (ಗೇಣಿರಹಿತ ದೃಢಪತ್ರ). ಇದಕ್ಕೆ ತಾಲೂಕು ಆಫೀಸಿನಲ್ಲಿ ಅರ್ಜಿ ಕೊಡಬೇಕು. ಅರ್ಜಿ ಕೊಟ್ಟು ಒಂದು ವಾರದ ನಂತರ ವಿಚಾರಿಸಲು ಹೇಳುತ್ತಾರೆ. ಒಂದು ವಾರ ಬಿಟ್ಟು ಹೋದರೆ ಇದು ಆಗಿರುವುದಿಲ್ಲ. ಮತ್ತೆ ಕೆಲವು ದಿನ ಬಿಟ್ಟು ಹೋಗಿ ವಿಚಾರಿಸಬೇಕು. ಹೀಗೆ ಇದು ಸಿಗಲು 10-15 ದಿವಸ ಆಗುತ್ತದೆ. ಭೂಪರಿವರ್ತನೆಗೆ ಬೇಕಾದ ಮೂರನೇ ದಾಖಲೆ ನೋ ಪಿಟಿಸಿಎಲ್ ಸರ್ಟಿಫಿಕೇಟ್ (ಪ್ರೋಹಿಬಿಶನ್ ಆಫ್ ಟ್ರಾನ್ಸ್ಫರ್ ಆಫ್ ಸರ್ಟನ್ ಲ್ಯಾಂಡ್ಸ್). ಇದಕ್ಕಾಗಿ ತಾಲೂಕು ಆಫೀಸಿನಲ್ಲಿ ಅರ್ಜಿ ಕೊಡಬೇಕು. ಅಲ್ಲಿ ಕೊಟ್ಟ ಅರ್ಜಿ ಕಂದಾಯ ನಿರೀಕ್ಷಕರ ಕಛೇರಿಗೆ ರವಾನೆಯಾಗುತ್ತದೆ. ಈ ಅರ್ಜಿ ಕೊಟ್ಟು ಸರ್ಟಿಫಿಕೇಟ್ ಕೊಡಲು ಅವರಿಗೆ 21 ದಿನದ ಗಡುವು ಇದೆ ಎಂದು ತಾಲೂಕು ಆಫೀಸಿನಲ್ಲಿ ಹೇಳುತ್ತಾರೆ. ಇದು ಯಾವಾಗ ಸಿಗುತ್ತದೆ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ನಾಲ್ಕು ದಿನ ಬಿಟ್ಟು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಿ ಎಂದು ಹೇಳುತ್ತಾರೆ. ಇದಕ್ಕಾಗಿ ಪುನಃ ಗ್ರಾಮದಿಂದ ಕಂದಾಯ ಇಲಾಖೆ ಕಛೇರಿಗೆ ಅಲೆದು ವಿಚಾರಿಸಬೇಕು. ಅಲ್ಲಿ ಹೋಗಿ ಒಂದೆರಡು ಸಲ ವಿಚಾರಿಸಿದ ನಂತರ ಕಂದಾಯ ನಿರೀಕ್ಷಕರು ಸಂಬಂಧಪಟ್ಟ ದಾಖಲೆಗಳನ್ನು ನೋಡಿ ಟಿಪ್ಪಣಿ ಬರೆದು ಅರ್ಜಿಯನ್ನು ತಾಲೂಕು ಕಛೇರಿಗೆ ಕಳುಹಿಸುತ್ತಾರೆ. ಪುನಃ ಈ ಅರ್ಜಿಯ ಗತಿ ಏನಾಯಿತು ಎಂದು ತಾಲೂಕು ಆಫೀಸಿನಲ್ಲಿ ವಿಚಾರಿಸಬೇಕು. ಹೀಗೆ ತಾಲೂಕು ಆಫೀಸಿಗೆ ಒಂದೆರಡು ಸಲ ಅಲೆಸಿ ಸಂಬಂಧಪಟ್ಟ ಗುಮಾಸ್ತರು ನೋ ಪಿಟಿಸಿಎಲ್ ಸರ್ಟಿಫಿಕೇಟ್ ಕೊಡುತ್ತಾರೆ.

ಭೂಪರಿವರ್ತನೆಗೆ ಬೇಕಾದ ನಾಲ್ಕನೆಯ ದಾಖಲೆ ಭೂಪರಿವರ್ತನೆ ಮಾಡಿಸಬೇಕಾದ ಜಾಗದ ಸರ್ವೇ ನಂಬರ್ ಹೆಸರಿನಲ್ಲಿ ಯಾವುದಾದರೂ ಋಣ ಬಾಧೆ ಇದೆಯೇ ಎಂಬುದರ ಬಗ್ಗೆ ನೋಂದಣಿ ಇಲಾಖೆಯಿಂದ ದೃಢ ಪತ್ರ. ಇದಕ್ಕಾಗಿ ನೋಂದಣಿ ಇಲಾಖೆಗೆ ಜಾಗದ ಸರ್ವೇ ನಂಬರಿನ ಪಹಣಿ ಪತ್ರದ ಜೊತೆಗೆ ಅರ್ಜಿ ಕೊಟ್ಟು ಹುಡುಕುವ ವೆಚ್ಚ ಎಂದು 150 ರೂಪಾಯಿ ಕಟ್ಟಬೇಕು. ಅರ್ಜಿ ಕೊಟ್ಟ ಒಂದು ವಾರದ ನಂತರ ಇದು ಸಿಗುತ್ತದೆ. ಭೂಪರಿವರ್ತನೆಗೆ ಬೇಕಾದ ಐದನೇ ದಾಖಲೆ ಗ್ರಾಮಪಂಚಾಯತಿಯಿಂದ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್. ಇದಕ್ಕಾಗಿ ಗ್ರಾಮಪಂಚಾಯತಿಗೆ ಜಾಗದ ಪಹಣಿ ಪತ್ರ ಹಾಗೂ ಗ್ರಾಮಕರಣಿಕರ ವರದಿ ಲಗತ್ತಿಸಿ ಅರ್ಜಿ ಕೊಡಬೇಕು. ಗ್ರಾಮಕರಣಿಕರ ವರದಿಯಲ್ಲಿ ಅರ್ಜಿಕೊಡುವ ವ್ಯಕ್ತಿ ಗ್ರಾಮಕರಣಿಕರ ಕಛೇರಿಗೆ ಯಾವುದೇ ಭೂಕಂದಾಯ ಇತ್ಯಾದಿ ಕೊಡಲು ಬಾಕಿ ಇಲ್ಲ ಎಂದು ಗ್ರಾಮಕರಣಿಕರು ಬರೆದು ಕೊಡಬೇಕು. ಗ್ರಾಮ ಪಂಚಾಯತಿಯಲ್ಲಿ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್ ಅರ್ಜಿ ಕೊಟ್ಟ ಕೂಡಲೇ ಕೊಡುವುದಿಲ್ಲ. ಮಾಮೂಲಿ ಸರ್ಕಾರೀ ಕಛೇರಿಗಳ ಜನಸಾಮಾನ್ಯರನ್ನು ಅಲೆದಾಡಿಸುವ ಅಲಿಖಿತ ನಿಯಮದ ಪ್ರಕಾರ ಎರಡು ದಿನ ಬಿಟ್ಟು ಬರಲು ಹೇಳುತ್ತಾರೆ. ಭೂಪರಿವರ್ತನೆಗೆ ಬೇಕಾದ ಐದನೆಯ ದಾಖಲೆ ಗ್ರಾಮಕರಣಿಕರು ಭೂಮಾಪಕರು ಮಾಡಿಕೊಟ್ಟ ನಕ್ಷೆಯ ಹಿಂಭಾಗದಲ್ಲಿ ಇಂಡೆಕ್ಸ್ ಹಾಕಿ ಕೊಡಬೇಕು. ಇಂಡೆಕ್ಸ್ ಎಂದರೆ ಭೂಪರಿವರ್ತನೆ ಆಗಬೇಕಾದ ಜಾಗದ ಸುತ್ತಮುತ್ತ ಯಾವೆಲ್ಲ ವ್ಯಕ್ತಿಗಳ ಜಮೀನು ಇದೆ ಅವುಗಳ ಸರ್ವೇ ನಂಬರ್ ಹಾಗೂ ವಿಸ್ತೀರ್ಣವನ್ನು ಒಂದು ಕಾಲಮ್ಮಿನಲ್ಲಿ ಪಟ್ಟಿ ಮಾಡಿ ಕೊಡುವುದು. ಭೂಪರಿವರ್ತನೆ ಮಾಡಿಸಲು ಬೇಕಾದ ಆರನೆಯ ದಾಖಲೆ ಜಾಗದ ಪಹಣಿ ಪತ್ರ ಹಾಗೂ ಏಳನೆಯ ದಾಖಲೆ ಮ್ಯುಟೇಶನ್. ಇವೆರಡೂ ತಾಲೂಕು ಆಫೀಸಿನ ಪಹಣಿ ಪತ್ರ ನೀಡುವ ಕೌಂಟರಿನಲ್ಲಿ ದೊರೆಯುತ್ತವೆ.

ಈ ಎಲ್ಲ ದಾಖಲೆಗಳು ಸಿಕ್ಕಿದ ನಂತರ ನೂರು ರೂಪಾಯಿಯ ಸ್ಟ್ಯಾಂಪ್ ಪೇಪರ್ ಹಾಗೂ ಅರ್ಜಿಯ ಜೊತೆ ಎಲ್ಲಾ ದಾಖಲೆಗಳನ್ನು ಜೊತೆಗಿರಿಸಿ ತಾಲೂಕು ಕಛೇರಿಯಲ್ಲಿ ಭೂಪರಿವರ್ತನೆಗಾಗಿ ಅರ್ಜಿ ಕೊಡಬೇಕು. ಈ ಅರ್ಜಿಯನ್ನು ಕಂದಾಯ ನಿರೀಕ್ಷಕರ (ರೆವೆನ್ಯೂ ಇನ್ಸ್ಪೆಕ್ಟರ್) ಕಛೇರಿಗೆ ತನಿಖೆಗಾಗಿ ಕಳುಹಿಸಿಕೊಡಲಾಗುತ್ತದೆ. ನಾಲ್ಕು ದಿನ ಬಿಟ್ಟು ಆ ಅರ್ಜಿಯ ಕುರಿತು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲು ಹೇಳುತ್ತಾರೆ. ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಿದರೆ ಅವರು ತಾನು ಭೂಪರಿವರ್ತನೆ ಮಾಡಬೇಕಾದ ಜಾಗಕ್ಕೆ ಬಂದು ತನಿಖೆ ಮಾಡಬೇಕೆಂದು ಕಾನೂನಿನಲ್ಲಿ ಇದೆ, ಹೀಗಾಗಿ ತಾನು ತಾನು ಮುಂದಿನ ಬಾರಿ ಗ್ರಾಮದ ಕಡೆ ಬರುವಾಗ ಜಾಗದ ತನಿಖೆ ಮಾಡುತ್ತೇನೆ ಎಂದು ಹೇಳುತ್ತಾರೆ ಅಥವಾ ನಿಮಗೆ ಕೆಲಸ ಬೇಗನೆ ಆಗಬೇಕಿದ್ದರೆ ಅವರನ್ನು ನಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ತಾಲೂಕು ಕೇಂದ್ರದಿಂದ ಕರೆದುಕೊಂಡು ಹೋಗಲು ಹೇಳುತ್ತಾರೆ. ಹೀಗೆ ಕಂದಾಯ ನಿರೀಕ್ಷಕರು ಅರ್ಜಿ ಕೊಟ್ಟು ಜಾಗದ ತನಿಖೆಗೆ ಬರಲು ಒಂದು ತಿಂಗಳು ಅಥವಾ ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ. ಇವರು ಜಾಗಕ್ಕೆ ಬಂದು ಮಾಡುವುದು ಏನೂ ಇಲ್ಲ, ಭೂಮಾಪನ ಇಲಾಖೆಯವರು ಕೊಟ್ಟ ಜಾಗದ ನಕ್ಷೆ ಸರಿಯಾಗಿದೆ ಎಂದು ಒಂದು ಟಿಪ್ಪಣಿ ಬರೆದು ಅದನ್ನು ಅವರು ತಾಲೂಕು ಆಫೀಸಿಗೆ ಕಳುಹಿಸಬೇಕು ಅಷ್ಟೇ. ಹೀಗೆ ತಾಲೂಕು ಆಫೀಸಿಗೆ ಬಂದ ಅರ್ಜಿ ಏನಾಯಿತು ಎಂದು ಮತ್ತೆ ವಿಚಾರಿಸಲು ತಾಲೂಕು ಆಫೀಸಿಗೆ ಅರ್ಜಿ ಕೊಟ್ಟ ವ್ಯಕ್ತಿ ಅಲೆಯಬೇಕು. ತಾಲೂಕು ಆಫೀಸಿನ ಗುಮಾಸ್ತರು ನಂತರ ಅರ್ಜಿಗೆ ಸೆಂಟ್ಸ್ ಜಾಗಕ್ಕೆ ಇಂತಿಷ್ಟು ಎಂದು ಲೆಕ್ಕ ಹಾಕಿ ಹಣವನ್ನು ಚಲನ್ ತೆಗೆದು ಬ್ಯಾಂಕಿನಲ್ಲಿ ಕಟ್ಟಲು ಹೇಳುತ್ತಾರೆ. ಹೀಗೆ ಹಣ ಕಟ್ಟಿದ ನಂತರ ಭೂಪರಿವರ್ತನೆಗೆ ಕೊಟ್ಟ ಅರ್ಜಿಯಲ್ಲಿ ತಹಶೀಲ್ದಾರರು ಸಹಿ ಹಾಕಿ ಕೊಡಬೇಕು. ಇದು ಯಾವಾಗ ಸಿಗುತ್ತದೆ ಎಂದು ವಿಚಾರಿಸಿದರೆ ಗುಮಾಸ್ತರು ಸರಿಯಾದ ಉತ್ತರ ಹೇಳುವುದಿಲ್ಲ. ಎರಡು ದಿವಸ ಬಿಟ್ಟು ಬರಲು ಹೇಳುತ್ತಾರೆ. ಜನಸಾಮಾನ್ಯರನ್ನು ಅಲೆಸದೆ ಕೆಲಸ ಶೀಘ್ರವಾಗಿ ಮಾಡಿಕೊಡುವ ವ್ಯವಸ್ಥೆ ತಾಲೂಕು ಆಫೀಸಿನಲ್ಲಿ ಇಲ್ಲ.

ತಾಲೂಕು ಆಫೀಸಿನಲ್ಲಿ ಯಾರಿಗೆ ಯಾವ ವಿಷಯಗಳಿಗೆ ಅರ್ಜಿ ಕೊಡಬೇಕು ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ತಾಲೂಕು ಆಫೀಸಿನಲ್ಲಿ ಕೆಲಸ ಮಾಡುವ ಗುಮಾಸ್ತರ ಯಾವ ವಿಷಯಕ್ಕೆ ಸಂಬಂಧಪಟ್ಟವರು, ಅವರು ಹೆಸರು, ಪದನಾಮ ಇತ್ಯಾದಿ ಯಾವೊಂದು ಫಲಕಗಳೂ ತಾಲೂಕು ಆಫೀಸಿನಲ್ಲಿ ಇಲ್ಲ. ಅಲ್ಲಿ ಇಲ್ಲಿ ವಿಚಾರಿಸಿಯೇ ಜನ ತಿಳಿದುಕೊಳ್ಳುವಂಥ ಅವ್ಯವಸ್ಥೆ ತಾಲೂಕು ಕಚೇರಿಯಲ್ಲಿದೆ. ಗುಮಾಸ್ತರ ಪದನಾಮ, ಹೆಸರು, ಅವರು ಯಾವ ಕೆಲಸಕ್ಕೆ ಸಂಬಂಧಪಟ್ಟ ಅರ್ಜಿ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಫಲಕ ಹಾಕಲೂ ಸರಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಸಾಧ್ಯವಿಲ್ಲವೇ? ತಾಲೂಕು ಆಫೀಸಿನಲ್ಲಿ ಹತ್ತಿಪ್ಪತ್ತು ಜನ ಒಟ್ಟಿಗೆ ಒಂದೇ ಕಡೆ ಕುಳಿತು ಕೆಲಸ ಮಾಡುವಾಗ ಜನಸಾಮಾನ್ಯರು ತಮಗೆ ಸಂಬಂಧಪಟ್ಟ ವಿಷಯದ ಕೆಲಸಕ್ಕೆ ಯಾರಿಗೆ ಅರ್ಜಿ ಕೊಡಬೇಕು, ಯಾರನ್ನು ವಿಚಾರಿಸಬೇಕು ಎಂಬ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಲು ಸೂಕ್ತ ಫಲಕಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಸರಕಾರ ಜಾರಿಗೆ ತರಲು ಏನು ತೊಂದರೆ?

ಭೂಪರಿವರ್ತನೆಗಾಗಿ ನಾನು ಒಟ್ಟಿನಲ್ಲಿ 22 ಸಲ ನನ್ನ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ನನ್ನ ದೈನಂದಿನ ಕೆಲಸ ಬಿಟ್ಟು ಅಲೆಯಬೇಕಾಗಿ ಬಂತು. ಒಟ್ಟಿನಲ್ಲಿ ಇದಕ್ಕೆ ತಗಲಿದ ಸಮಯ ಎರಡೂವರೆ ತಿಂಗಳು. ಗ್ರಾಮೀಣ ಭಾಗಗಳಲ್ಲಿ ಮನೆ ಕಟ್ಟಿಸಲು ಕೂಡ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆಯುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿರುವ ಕಾರಣ ಗ್ರಾಮ ಪಂಚಾಯತಿಗೆ ಅಲೆಯಬೇಕಾದ ಪರಿಸ್ಥಿತಿಯನ್ನು ಕೂಡ ಕೃಷಿಕರು ಎದುರಿಸಬೇಕಾಗುತ್ತದೆ. ಹಿಂದೆ ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ 9/11 ಎಂಬ ಕಾನೂನನ್ನು ಜಾರಿಗೆ ತಂದಿದ್ದು ಇದರಿಂದಾಗಿ ಮನೆ ಕಟ್ಟಿಸಲು ಪರವಾನಗಿ ಪಡೆಯಬೇಕಾದರೆ ಕೃಷಿಕರು ಮನೆ ಕಟ್ಟಿಸುವ ಜಾಗದ 9/11 ಎಂಬ ದಾಖಲೆಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಗ್ರಾಮ ಪಂಚಾಯತಿಗೆ ಜಾಗದ ಪಹಣಿ ಪತ್ರ, ಭೂಪರಿವರ್ತನೆಯ ಆದೇಶದ ಪ್ರತಿ, ಜಾಗದ ಫೋಟೋ (ಮನೆ ಕಟ್ಟಿಸುವ ವ್ಯಕ್ತಿ ಜಾಗದಲ್ಲಿ ನಿಂತು ತೆಗೆಸಿದ ಫೋಟೋ), ಮನೆ ಕಟ್ಟಿಸುವ ವ್ಯಕ್ತಿಯ ಫೋಟೋ, ಜಾಗದ ದಾಖಲೆ ಪತ್ರದ ಪ್ರತಿ, ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತು ಪತ್ರದ ಪ್ರತಿ, 100 ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ನೋಟರಿಯವರಿಂದ ದೃಡೀಕೃತ ಅಫಿದವಿತ್, ಸಿವಿಲ್ ಇಂಜಿನಿಯರ್ ಮೊಹರು ಹಾಗೂ ಸಹಿ ಇರುವ ಅವರು ಮಾಡಿಕೊಟ್ಟ ಮನೆಯ ಪ್ಲಾನ್ ಹಾಗೂ ನಕ್ಷೆ, ಬಡಾವಣೆ ನಕ್ಷೆಗಳ ನಾಲ್ಕು ಪ್ರತಿಗಳನ್ನು ನೋಟರಿಯವರ ಸಹಿ ಹಾಗೂ ಮೊಹರು ಸಹಿತ ಇಟ್ಟು ಅರ್ಜಿ ಕೊಡಬೇಕು. ಅರ್ಜಿಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಸಂಬಂಧಪಟ್ಟ ವಾರ್ಡಿನ ಗ್ರಾಮಪಂಚಾಯತ್ ಸದಸ್ಯರ ಸಹಿ ಹಾಕಿಸಿಕೊಳ್ಳಬೇಕು. ಹೀಗೆ ಕೊಟ್ಟ ಅರ್ಜಿಯನ್ನು ತಿಂಗಳಿಗೊಮ್ಮೆ ನಡೆಯುವ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮೋದನೆ ಪಡೆಯಬೇಕು. 9/11 ದಾಖಲೆಗೆ ಪಂಚಾಯತಿಗೆ ಜಾಗದ ವಿಸ್ತೀರ್ಣದ ಆಧಾರದಲ್ಲಿ ಹಣ ಕಟ್ಟಬೇಕು. 5 ಸೆಂಟ್ಸ್ ಜಾಗಕ್ಕೆ 500 ರೂಪಾಯಿ ತೆಗೆದುಕೊಳ್ಳುತ್ತಾರೆ. ಒಬ್ಬ ಕೃಷಿಕ ತನ್ನ ಖಾಸಗಿ ಜಾಗದಲ್ಲಿ ಮನೆ ಕಟ್ಟಿಸಲು ಪಂಚಾಯತಿನ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯಬೇಕು ಎಂಬ ನಿಯಮದ ಅಗತ್ಯವೇ ಇಲ್ಲ. ಇಂಥ ಕೆಂಪು ಪಟ್ಟಿಯ ಅಸಂಬದ್ಧ ನಿಯಮವನ್ನು ಕಾನೂನು ನಿರ್ಮಾಪಕರು ಜಾರಿಗೆ ತಂದು ಕೃಷಿಕರಿಗೆ ಯಾಕೆ ತೊಂದರೆ ಕೊಡಬೇಕು? ಇದರಿಂದಾಗಿ ಹಲವಾರು ದಿವಸ ಕೃಷಿಕರು ಕಾಯಬೇಕಾಗುತ್ತದೆ. ನಾನು ಅರ್ಜಿ ಕೊಟ್ಟು 9/11 ದಾಖಲೆಯನ್ನು ಪಂಚಾಯತಿನಲ್ಲಿ ಮಾಡಿ ಕೊಡಲು ಎರಡೂವರೆ ತಿಂಗಳು ತೆಗೆದುಕೊಂಡರು. ಇದಕ್ಕಾಗಿ ವಿಚಾರಿಸಲು ಹತ್ತು ಸಲ ಗ್ರಾಮ ಪಂಚಾಯತಿಗೆ ಅಲೆಯಬೇಕಾಯಿತು. ಈ ಸಂಬಂಧ ನಾನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ, ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಸಚಿವರಿಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ, ಮುಖ್ಯಮಂತ್ರಿಗಳಿಗೆ ಮಿಂಚಂಚೆ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇವರ್ಯಾರೂ ಮಿಂಚಂಚೆಗಳನ್ನು ನೋಡುವುದೇ ಇಲ್ಲ ಎಂದು ಕಾಣುತ್ತದೆ. ಮಿಂಚಂಚೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ಇವರು ನೀಡುವುದಿಲ್ಲ. ಕರ್ನಾಟಕದ ಅಂತರ್ಜಾಲ ಆಧಾರಿತ ದೂರು ದಾಖಲೆ ವೆಬ್ ಸೈಟ್ ಇ-ಜನಸ್ಪಂದನದಲ್ಲಿ ದೂರು ದಾಖಲಿಸಿದರೂ ಪ್ರಯೋಜನ ಆಗುವುದಿಲ್ಲ. ಕೇಂದ್ರ ಸರ್ಕಾರದ ದೂರು ದಾಖಲೆ ವೆಬ್ ಸೈಟಿನಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಇವುಗಳು ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕರ್ನಾಟಕದ ಹಾಗೂ ಕೇಂದ್ರ ಸರ್ಕಾರದ ಅಧಿಕಾರಶಾಹೀ ವ್ಯವಸ್ಥೆ ಬ್ರಿಟಿಷರ ಸರಕಾರದಂತೆ ಕೃಷಿಕರ ಶೋಷಣೆ ಮಾಡುವ ಅನವಶ್ಯಕ ಕೆಂಪು ಪಟ್ಟಿಯ ಕಾನೂನುಗಳನ್ನು ಮಾಡಿ ಕೃಷಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಯುವಂತೆ ಮಾಡುತ್ತಿವೆಯೇ ವಿನಃ ವೈಜ್ಞಾನಿಕವಾಗಿ ಚಿಂತಿಸಿ ಅನವಶ್ಯಕ ಪೀಡಕ ಕಾನೂನುಗಳನ್ನು ತೆಗೆದುಹಾಕುವ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಹುತೇಕ ನಾಶವಾಗಿದೆ. ಜನಸಾಮಾನ್ಯರಿಗೆ ಮತ ಹಾಕುವ ಒಂದು ಹಕ್ಕು ಮಾತ್ರ ಇದೆಯೇ ಹೊರತು ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುವ ವ್ಯವಸ್ಥೆ ಸರಿಯಾಗಿ ಕೆಲಸಮಾಡುತ್ತಾ ಇಲ್ಲ. ಒಂದು ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ದೂರುಗಳಿಗೆ ಕೂಡಲೇ ಸ್ಪಂದಿಸುವ, ಉತ್ತರಿಸುವ ವ್ಯವಸ್ಥೆ ಇರಬೇಕು. ನನ್ನ ಅನುಭವದ ಪ್ರಕಾರ ನಮ್ಮ ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಇಂಥ ವ್ಯವಸ್ಥೆ ಹೆಸರಿಗೆ ಮಾತ್ರ ಇದೆ. ಜನಸಾಮಾನ್ಯರ ಮಿಂಚಂಚೆಗಳಿಗೆ ಉತ್ತರಿಸುವ ಸೌಜನ್ಯವಾಗಲಿ, ಕಾಳಜಿಯಾಗಲಿ ಇಡೀ ದೇಶದ ಹಾಗೂ ರಾಜ್ಯದ ಅಧಿಕಾರಶಾಹೀ ವ್ಯವಸ್ಥೆಯಲ್ಲಿ ಇಲ್ಲ.

ಗ್ರಾಮ ಪಂಚಾಯತಿಯಲ್ಲಿ 9/11 ದಾಖಲೆ ಮಾಡಿಕೊಡಲು ಏಕೆ ಇಷ್ಟು ವಿಳಂಬ ಎಂದು ಕೇಳಿದರೆ ಅಲ್ಲಿ ಅವರಿಗೆ ಕೆಲಸದ ಹೊರೆ ಇದೆ ಎಂದು ಹೇಳುತ್ತಾರೆ. ಪಂಚಾಯತಿಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲ. ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸರಕಾರ ನೇಮಕ ಮಾಡುವುದಿಲ್ಲ. ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಎರಡೆರಡು ಗ್ರಾಮ ಪಂಚಾಯತಿಗೆ ನೇಮಕ ಮಾಡಿದೆ ಎಂದು ಹೇಳುತ್ತಾರೆ. ಸರ್ಕಾರವು ಜನರಿಗೆ ತೊಂದರೆದಾಯಕವಾದ ಯಾವ ಘನ ಉದ್ದೇಶವನ್ನೂ ಸಾಧಿಸದ 9/11 ದಾಖಲೆಯನ್ನು ಕಡ್ಡಾಯ ಮಾಡುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ತಿಳಿಯುವುದಿಲ್ಲ. ಈ 9/11 ಎಂಬ ದಾಖಲೆ ಅಗತ್ಯವೇ ಇಲ್ಲ. ಹಿಂದೆ ನನ್ನ ತಂದೆಯವರು ಮನೆ ಕಟ್ಟಿಸಿದಾಗ 9/11 ಎಂಬ ದಾಖಲೆ ಆಗಬೇಕು ಎಂದು ಇರಲೇ ಇಲ್ಲ. ಆದರೂ ಅದು ಇಲ್ಲವೆಂದು ಯಾವುದೇ ತೊಂದರೆ ಆಗಿಲ್ಲ. ನೆರೆಯ ಕೇರಳ ರಾಜ್ಯದಲ್ಲಿ 9/11 ದಾಖಲೆ ಅಗತ್ಯ ಎಂಬ ಕಾನೂನು ಇಲ್ಲ. ಹಾಗೆಂದು ಅಲ್ಲಿ ಯಾವುದೇ ತೊಂದರೆ ಆಗಿಲ್ಲ. ಹೀಗಿರುವಾಗ ಕರ್ನಾಟಕವು ಯಾಕೆ ಜನರಿಗೆ ಅದರಲ್ಲೂ ಗ್ರಾಮೀಣ ಕೃಷಿಕರನ್ನು ಅನಾವಶ್ಯಕವಾಗಿ ಸರ್ಕಾರೀ ಕಛೇರಿಗಳಿಗೆ ಅಲೆದಾಡಿಸುವ ಕಾನೂನು ಮಾಡಿ ಜನಸಾಮಾನ್ಯರನ್ನು ಪೀಡಿಸುತ್ತಿದೆ? 9/11 ಕಾನೂನು ಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆಯೇ? ಅಂಥ ಕಾನೂನು ಬೇಕೆಂದು ಜನರು ಒತ್ತಾಯ ಮಾಡಿಲ್ಲ. ಹೀಗಿದ್ದರೂ ಜನರ ಮೇಲೆ ಅನವಶ್ಯಕ ಕಾನೂನುಗಳನ್ನು ಹೇರುವುದು ಹೇಗೆ ಪ್ರಜಾಪ್ರಭುತ್ವ ಆಗುತ್ತದೆ?

ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿಯೂ ಮನೆ ಕಟ್ಟಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯ ಎಂಬ ಕಾನೂನನ್ನು ಕಡ್ಡಾಯ ಮಾಡಿದೆ. ಪರವಾನಗಿ ಕೊಡಬೇಕಾದರೆ 9/11 ದಾಖಲೆ ಮಾಡಿಸಬೇಕಾಗಿರುವುದು ಕಡ್ಡಾಯ. ಮನೆ ಕಟ್ಟಿಸಲು ಪರವಾನಿಗೆಗೆ ಪಹಣಿ ಪತ್ರ, 9/11 ದಾಖಲೆ, ಮನೆ ಕಟ್ಟಿಸುವ ಜಾಗದ ದಾಖಲೆಯ ಪ್ರತಿ, ಗುರುತು ಪತ್ರದ ಪ್ರತಿ (ಆಧಾರ್ ಅಥವಾ ಇನ್ನಿತರ), ಸಿವಿಲ್ ಇಂಜಿನಿಯರ್ ಮಾಡಿಕೊಟ್ಟ ಮನೆಯ ಪ್ಲಾನಿನ ನಕ್ಷೆ, ಮನೆಯ ಅಂದಾಜು ಖರ್ಚಿನ ಪಟ್ಟಿ ಇತ್ಯಾದಿಗಳ ಪ್ರತಿಯನ್ನು ಪಂಚಾಯತಿಗೆ ಕೊಡಬೇಕು. ಇದಕ್ಕೆ ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ವಿವರಗಳನ್ನು ತುಂಬಿ ಸಿವಿಲ್ ಇಂಜಿನಿಯರ್ ಮೊಹರು ಹಾಗೂ ಸಹಿಯನ್ನು ಹಾಕಿಸಿ ಕೊಡಬೇಕು. ಮನೆ ವಿಸ್ತೀರ್ಣಕ್ಕೆ ಅನುಸಾರವಾಗಿ ಹಾಗೂ ಮನೆಯಲ್ಲಿ ಅಳವಡಿಸುವ ನೆಲ ಸಾರಣೆಯೋ ಅಥವಾ ಟೈಲ್ ಅಳವಡಿಸುದೋ ಎಂಬುದನ್ನು ಹೊಂದಿಕೊಂಡು ಕಟ್ಟಡ ಪರವಾನಿಗೆಗೆ ಪಂಚಾಯತಿಗೆ ಹಣ ಕಟ್ಟಬೇಕು. ಪಂಚಾಯತಿನವರು ಅರ್ಜಿ ಕೊಟ್ಟು ಪರವಾನಗಿ ಕೊಡಲು ಒಂದು ಒಂದೂವರೆ ತಿಂಗಳು ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ವಿಚಾರಿಸಲು ನಾನು ಪಂಚಾಯತಿಗೆ ನಾಲ್ಕೈದು ಸಲ ಅಲೆಯಬೇಕಾಯಿತು. ಈ ಅರ್ಜಿಯನ್ನು ಪಂಚಾಯತಿನ ತಿಂಗಳಿಗೊಮ್ಮೆ ಜರಗುವ ಸಾಮಾನ್ಯ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆದು ನಂತರ ಪರವಾನಗಿ ಕೊಡುವುದು ಎಂಬ ಕೆಂಪು ಪಟ್ಟಿಯ ನಿಯಮವನ್ನು ಮಾಡಿ ಅರ್ಜಿಗಳನ್ನು ಅನಾವಶ್ಯಕವಾಗಿ ವಿಳಂಬಿಸುವ ಕಾನೂನು ಅಗತ್ಯವೇನಿದೆ? ಕೃಷಿಕರು ಖಾಸಗಿ ಪಟ್ಟಾ ಜಮೀನಿನಲ್ಲಿ ಮನೆ ಕಟ್ಟಿಸುವಾಗ ಗ್ರಾಮದ ಇತರರ ಒಪ್ಪಿಗೆ ಬೇಕೆಂಬ ಅನವಶ್ಯಕ ಕಾನೂನು ತಂದು ಪರವಾನಗಿ ನೀಡುವುದನ್ನು ತಿಂಗಳುಗಳ ಕಾಲ ವಿಳಂಬ ಮಾಡಿ ಜನರಿಗೆ ಪೀಡೆ ಕೊಡುವ ಅಗತ್ಯವೇನು? ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ದೇಶದಲ್ಲಿ ಇಂಥ ಅಂಧ ಕಾನೂನುಗಳ ಅಗತ್ಯ ಇದೆಯೇ? ಇಂಥ ಕಾನೂನು ಬೇಕು ಎಂದು ಜನ ಒತ್ತಾಯ ಮಾಡಿದ್ದಾರೆಯೇ? ಇಂಥ ಒತ್ತಾಯವನ್ನು ಜನರು ಮಾಡಿಲ್ಲ. ಹೀಗಿದ್ದರೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರಕಾರ ಕೃಷಿಕಪೀಡಕ ಕಾನೂನುಗಳನ್ನು ಯಾಕೆ ಹೇರುತ್ತಿದೆ ಎಂದರೆ ನಾವು ಯಾವುದನ್ನೂ ಪ್ರಶ್ನಿಸುವ ಮನೋಭಾವ ಹೊಂದಿಲ್ಲ, ಕುರಿಗಳಂತೆ ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಜನರ ಮೇಲೆ ಅನವಶ್ಯಕ ಕಾನೂನುಗಳನ್ನು ಹಿಂದೆ ಬ್ರಿಟಿಷರು ಹೇರುತ್ತಿದ್ದಂತೆ ಇಂದು ನಮ್ಮದೇ ಸರ್ಕಾರ ಹೇರುತ್ತಿದೆ. ಒಟ್ಟಿನಲ್ಲಿ ಭೂಪರಿವರ್ತನೆ, 9/11 ದಾಖಲೆ ಮಾಡಿಸುವುದು, ಮನೆ ಕಟ್ಟಿಸಲು ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆಯಲು ನಾನು 35 ಸಲ ಅಲೆಯಬೇಕಾಯಿತು ಹಾಗೂ ಇದಕ್ಕೆ ತೆಗೆದುಕೊಂಡ ಸಮಯ ಐದು ತಿಂಗಳು.

ನೆರೆಯ ಕೇರಳದಲ್ಲಿ ಇಂಥ ಪ್ರಜಾಪೀಡಕ ಕಾನೂನುಗಳು ಇಲ್ಲ. ಕೇರಳದಲ್ಲಿ ಕೃಷಿಕರು ತಮ್ಮ ಸ್ವಂತ ಪಟ್ಟಾ ಜಾಗದಲ್ಲಿ ಮನೆ ಕಟ್ಟಿಸಬೇಕಾದರೆ ಅದನ್ನು ಭೂಪರಿವರ್ತನೆ ಮಾಡಿಸಬೇಕು ಎಂಬ ನಿಯಮವಿಲ್ಲ, ಜಾಗದ 9/11 ದಾಖಲೆ ಆಗಬೇಕು ಎಂಬ ಕಾನೂನು ಇಲ್ಲ. 1000 ಚದರ ಅಡಿ ವಿಸ್ತೀರ್ಣಕ್ಕಿಂಥ ದೊಡ್ಡದಾದ ಮನೆ ಕಟ್ಟಿಸಬೇಕಾದರೆ ಮಾತ್ರ ಪಂಚಾಯತಿನಿಂದ ಪರವಾನಗಿ ಪಡೆಯಬೇಕು ಎಂಬ ನಿಯಮ ಕೇರಳದಲ್ಲಿ ಇದೆ. ಇದಕ್ಕಿಂತ ಕಡಿಮೆ ವಿಸ್ತೀರ್ಣದ ಮನೆ ಕಟ್ಟಿಸಬೇಕಾದರೆ ಕೃಷಿಕರು ಯಾವುದೇ ಪರವಾನಗಿ ಪಡೆಯಬೇಕಾದ ಅಗತ್ಯವೂ ಅಲ್ಲಿ ಇಲ್ಲ. ಅಲ್ಲಿ ಇಂಥ ಕಾನೂನು ಇಲ್ಲವೆಂದು ಯಾವುದೇ ತೊಂದರೆ ಆಗಿಲ್ಲ. ಹೀಗಿರುವಾಗ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೆ ಜನರಿಗೆ ತೊಂದರೆದಾಯಕವಾದ ಕಾನೂನುಗಳನ್ನು ಹೇರಿ ಕೃಷಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಸುವುದು ಏಕೆ? ಸರಕಾರಕ್ಕೆ ಹಣ ಸಂಗ್ರಹ ಮಾಡಬೇಕಿದ್ದರೆ ಪರವಾನಗಿ ಶುಲ್ಕ ಎಂದು ಹಣ ನಿಗದಿಪಡಿಸಿ ಕೂಡಲೇ ಪರವಾನಗಿ ಪಂಚಾಯತಿನಲ್ಲಿ ನೀಡುವ ಸರಳ ಪದ್ಧತಿ ತಂದರೆ ಸಾಕಾಗುವುದಿಲ್ಲವೇ? ಕರ್ನಾಟಕದ ಆಡಳಿತ ವ್ಯವಸ್ಥೆ ನನ್ನ ಅನುಭವದ ಪ್ರಕಾರ ಅತ್ಯಂತ ನಿಧಾನಗತಿಯ ನಿರ್ಲಜ್ಜ ವ್ಯವಸ್ಥೆಯಾಗಿದ್ದು ಈ ವ್ಯವಸ್ಥೆಯಲ್ಲಿ ಯಾರೂ ಯಾರಿಗೂ ಜವಾಬ್ದಾರಿಯಲ್ಲ ಎಂಬ ಪರಿಸ್ಥಿತಿ ಇದೆ. ಸರಕಾರ ಎಂಬುದು ಪ್ರಜೆಗಳಿಗೆ ತಾಯಿಯ ಸ್ಥಾನದಲ್ಲಿರಬೇಕು. ಪ್ರಜೆಗಳ ಬೇಕುಬೇಡಗಳಿಗೆ ಸರಕಾರ ಸ್ಪಂದಿಸಬೇಕು. ಹೀಗಾಗಬೇಕಾದರೆ ಪ್ರಜೆಗಳು ತನ್ನವರು ಎಂಬ ಕಾಳಜಿ ಆಡಳಿತ ವ್ಯವಸ್ಥೆಗೆ ಇರಬೇಕು. ಕರ್ನಾಟಕದಲ್ಲಿ ಆಡಳಿತಶಾಹಿ ಪ್ರಜೆಗಳನ್ನು ತನ್ನವರು ಎಂದು ತಿಳಿದು ಕಾನೂನುಗಳನ್ನು ರೂಪಿಸುವ ಮನೋಭಾವ ಹೊಂದಿಲ್ಲ. ಇಡೀ ಆಡಳಿತ ವ್ಯವಸ್ಥೆ ಪ್ರಜೆಗಳನ್ನು ಪರಕೀಯರು ಎಂದು ತಿಳಿದು ಕಾನೂನುಗಳನ್ನು ರೂಪಿಸಿರುವುದು ಕಂಡುಬರುತ್ತದೆ. ಇಲ್ಲದಿದ್ದರೆ ಯಾವ ದೇಶದಲ್ಲಿಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಬೇಕಾದರೆ ಕರ್ನಾಟಕದಲ್ಲಿ ಇರುವಂಥ ಅನವಶ್ಯಕ, ಅವೈಜ್ಞಾನಿಕ, ಅರ್ಥವಿಲ್ಲದ ಕಾನೂನುಗಳು ಇರಲು ಸಾಧ್ಯವೇ ಇಲ್ಲ.

Jun 10, 2016

ಮೇಕಿಂಗ್ ಹಿಸ್ಟರಿ: ಸಮಾಜದ ನೋವಿಗೆ ಔಷಧ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
10/06/2016
ಊಳಿಗಮಾನ್ಯತೆ – ವಸಾಹತು ಸಿದ್ಧಾಂತ ಜನಸಮೂಹವನ್ನು ಹದ್ದುಬಸ್ತಿನಲ್ಲಿಡಲು ಜಾತಿ ಮತ್ತು ಧರ್ಮವನ್ನು ಕೊರಳಪಟ್ಟಿಯಂತೆ ಬಳಸಿತು. ಪ್ರತಿಗಾಮಿ ಸರಕಾರ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ಸಾರಾಯಿಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದುಕೊಂಡಿತು, ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಾರಾಯಿಯನ್ನು ಉತ್ಪಾದಿಸಲು ಮತ್ತು ಸೇವಿಸಲಿದ್ದ ಎಲ್ಲಾ ಅಡಚಣೆಗಳನ್ನು ತೆಗೆದುಹಾಕಿತು. ಈ ನಿರ್ಧಾರ, ರಾಜ್ಯಕ್ಕೆ ಆದಾಯ ಮೂಲವಾಗುವುದರ ಜೊತೆಗೆ ಶೇಂದಿ ಗುತ್ತಿಗೆದಾರರಿಗೆ ಒಳ್ಳೆ ವ್ಯಾಪಾರವೂ ಆಗುವುದಕ್ಕೆ ಅನುಕೂಲವಾಯಿತು. ನಿಷೇಧವನ್ನು ಹಿಂಪಡೆಯಲು ಇವಷ್ಟೇ ಕಾರಣವಲ್ಲ. ಬಹು ಮುಖ್ಯವಾಗಿ, ಧರ್ಮ ಮತ್ತು ಜಾತಿ ಶೋಷಣೆಯಿಂದ ಹೊರಬರಲಿಚ್ಛಿಸುವ ಜನಸಮೂಹವನ್ನು ಭ್ರಮೆಯ ಲೋಕಕ್ಕೆ ತಳ್ಳಿ ನಿದ್ರಾಹೀನ ಸ್ಥಿತಿಗೆ ನೂಕುವ ಸಂಸ್ಕೃತಿಯನ್ನು ಬೆಳೆಸಬೇಕಿತ್ತು. ಶೇಂದಿ ಉದ್ರಿಕ್ತ ಜನಸಮೂಹವನ್ನು ತಣ್ಣಗಾಗಿಸಿತು ಮತ್ತು ಊಳಿಗಮಾನ್ಯ ದೊರೆಗಳ ಹಾಗೂ ಬ್ರಿಟೀಷ್ ಸಾಮ್ರಾಜ್ಯದ ಆಳ್ವಿಕೆಯನ್ನು ಉಳಿಸಿ ಬೆಳೆಸಿತು. ಹಾಗಾಗಿ ಬ್ರಾಹ್ಮಣರು ಮತ್ತು ಲಿಂಗಾಯತರು ಕುಡಿಯದೇ ಇದ್ದರು, ಅವರದೇ ಪ್ರಾಬಲ್ಯವಿದ್ದ ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ತಮ್ಮ ವರ್ಗದ ಆಳ್ವಿಕೆ ಅಭಾದಿತವಾಗಿ ಮುಂದುವರೆಯಲಿ ಎಂಬ ಕಾರಣದಿಂದ.

ಈ ಸಾಂಸ್ಕೃತಿಕ ಎಳೆತದಿಂದಾದ ಪರಿಣಾಮವೆಂದರೆ ಬೆಂಗಳೂರು ನಗರವೊಂದರಲ್ಲೇ “1799 – 1800ರಲ್ಲಿ 487 ಕಾಂತರೇಯ ಪಗೋಡಾಗಳಷ್ಟು ಆದಾಯ ತರುತ್ತಿದ್ದ ಶೇಂದಿ ಮತ್ತು ಮದ್ಯ ವ್ಯವಹಾರ, 1800 – 1801ರಲ್ಲಿ 808 ಕಾಂತರೇಯ ಪಗೋಡಾಗಳಿಗೆ ಏರಿಕೆಯಾಯಿತು.” (202)

ವಸಾಹತು ಆಳ್ವಿಕೆಯ ಮೊದಲ ನಾಲಕ್ಕು ವರ್ಷ ಮೈಸೂರು ಆಡಳಿತದಲ್ಲಿದ್ದ ವಿಲ್ಕ್ಸ್ ಕೊಡುವ ಅಂಕಿಸಂಖೈಗಳು ಸಾರಾಯಿ ವ್ಯಾಪಾರದಿಂದ ರಾಜ್ಯಕ್ಕೆ ಬರುತ್ತಿದ್ದ ಆದಾಯದಲ್ಲಾದ ಏರಿಕೆಯ ಬಗ್ಗೆ ತಿಳಿಸುತ್ತದೆ. ಶೇಂದಿ ಮತ್ತು ಮದ್ಯದಿಂದ ಬಂದ ಒಟ್ಟು ಆದಾಯ 1799-1800ರ ಅವಧಿಯಲ್ಲಿ ಒಟ್ಟು 28,845 ಕಾಂತರೇಯ ಪಗೋಡಾಗಳಷ್ಟಿದ್ದರೆ ಮೂರು ವರ್ಷದೊಳಗೇ ಇದು 44,290 ಪಗೋಡಾಗಳಷ್ಟು ಜಾಸ್ತಿಯಾಯಿತು; ತಂಬಾಕಿನ ನಂತರ ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತರುವ ಮೂಲವಾಯಿತು ಸಾರಾಯಿ. (203)


ಮುಂದಿನ ವಾರ: 
ಪುರುಷ ಸಮಾಜದ ದಬ್ಬಾಳಿಕೆ

Jun 4, 2016

ಪ್ರಾದೇಶಿಕ ಹಿತಾಸಕ್ತಿಗಳನ್ನು ಮಣ್ಣುಪಾಲು ಮಾಡುತ್ತಿರುವ ರಾಜ್ಯಸಭಾ ಚುನಾವಣೆಗಳು

ಕು.ಸ.ಮಧುಸೂದನರಂಗೇನಹಳ್ಳಿ
04/06/2016
ರಾಜ್ಯಸಭಾ ಚುನಾವಣೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯಸಭೆಯ ಅಸ್ಥಿತ್ವದ ಬಗ್ಗೆ ಮತ್ತು ಅದರ ಉಪಯುಕ್ತತೆಯ ಬಗ್ಗೆ ಹಾಗು ಅದಕ್ಕೆಸದಸ್ಯರುಗಳನ್ನು ಆಯ್ಕೆ ಮಾಡುವ ವಿದಾನಗಳ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುವ ಅನಿವಾರ್ಯತೆ ಇವತ್ತು ಎಂದಿಗಿಂತ ಹೆಚ್ಚಾಗಿದೆ. 

ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ವಿದ್ವತ್‍ಪೂರ್ಣವಾಗಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪ್ರತಿ ರಾಜ್ಯದಿಂದಲೂ ಅಲ್ಲಿನ ಜನಸಂಖ್ಯೆಗನುಗುಣವಾಗಿ ಮತ್ತು ನೇರ ಚುನಾವಣೆಯಲ್ಲಿ ಗೆಲ್ಲಲಾಗದಂತಹವರನ್ನು ಲೋಕಸಬೆಗೆ ಸಮಾನಾಂತರವಾದ ರಾಜ್ಯಸಭೆಗೆ ಆಯ್ಕೆ ಮಾಡಿ ತರುವುದೇ ರಾಜ್ಯಸಭೆಯ ಮೂಲ ಉದ್ದೇಶವಾಗಿತ್ತು. ಹಾಗಾಗಿ ಪ್ರಾರಂಭದಲ್ಲಿ ಆಯಾ ರಾಜ್ಯದವರೆ ಆಯ್ಕೆಯಾಗಿ ಲೋಕಸಭೆಯಲ್ಲಿ ಪ್ರಸ್ತಾಪಿತವಾಗದಂತಹ ಹಲವಾರು ವಿಷಯಗಳನ್ನು ರಾಹ್ಯಸಭೆಯ ಸದಸ್ಯರುಗಳು ಚರ್ಚಿಸಿ ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯೊಂದನ್ನು ತಾವು ಚರ್ಚಿಸಿ ಪುನರ್ ಪರಿಶೀಲನೆಗೆ ಕಳಿಸುವ ಹಿರಿಯಣ್ನನ ಅಧಿಕಾರವೂ ಈ ಸದಸ್ಯರಿಗೆ ಇರುತ್ತದೆ. 

ಆದರೆ ಯಾವಾಗ ಶಕ್ತಿ ರಾಜಕಾರಣವು ದೇಶದ ಹಿತಾಸಕ್ತಿಯನ್ನೂ ಮೀರಿ ಬೆಳೆದು ನಿಂತಿತೊ ಆಗಿನಿಂದ ರಾಜ್ಯಸಭೆಗೆ ಸದಸ್ಯರನ್ನು ಆರಿಸುವ ರಾಜಕೀಯ ಪಕ್ಷಗಳ ಕಾರ್ಯವೈಖರಿ ಬದಲಾಗುತ್ತ ಹೋಗಿ ಅದಕ್ಕೆ ತಕ್ಕ ಹಾಗೆ ಕಾನೂನಿನಲ್ಲಿಯು ಬದಲಾವಣೆಗಳನ್ನು ತರಲಾಯಿತು. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳದೂ ಒಂದೇ ನಿಲುವು. ನಾನು ಮೊದಲಿಗೆ ಹೇಳಿದಂತೆ ಆಯಾ ರಾಜ್ಯದವರೆ ರಾಜ್ಯಸಭೆಯ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕಿತ್ತು. ಆದರೆ ತದನಂತರದಲ್ಲಿ ಯಾವುದೇ ರಾಜ್ಯದ ವ್ಯಕ್ತಿಯೊಬ್ಬ ಇನ್ನೊಂದು ರಾಜ್ಯದ ಅಭ್ಯರ್ಥಿಯಾಗಿ ಸ್ಪರ್ದಿಸಬಲ್ಲ ಅವಕಾಶವನ್ನು ಕಾನೂನಿನ ಮೂಲಕ ತರಲಾಯಿತು. ಆದರದಕ್ಕೆ ಆತ ತಾನು ಸ್ಪರ್ದಿಸಲಿರುವ ರಾಜ್ಯದಲ್ಲಿ ವಾಸ ಮಾಡುತ್ತಿದ್ದೇನೆಂದು ಒದು ಪೂರಕ ವಿಳಾಸ ನೀಡಬೇಕಾಗಿತ್ತು ಅಷ್ಟೆ. ಈ ಹಿಂದೆ ರಾಂಜೇಠ್ಮಾಲಾನಿಯವರು ಕರ್ನಾಟಕದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದಾಗ ಮದ್ಯದ ವ್ಯಾಪಾರಿಯೊಬ್ಬರ ಅತಿಥಿ ಗೃಹದ ವಿಳಾಸವನ್ನು ನೀಡಿದ್ದನ್ನು ನಾವು ಸ್ಮರಿಸಬಹುದಾಗಿತ್ತು. ತದನಂತರ ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅಸ್ಸಾಮಿನಿಂದ ಸ್ಪರ್ದಿಸಿದಾಗ ನೀಡಿದ ಯಾವುದೋ ಅಪರಿಚಿತ ವಿಳಾಸ ಸಾಕಷ್ಟು ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ವಿಳಾಸ ನೀಡುವ ಪದ್ದತಿಯಿಂದ ಮುಜುಗರ ಎದುರಿಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡ ರಾಜಕೀಯ ಪಕ್ಷಗಳು ವಿಳಾಸ ನೀಡುವ ಔಪಚಾರಿಕತೆಯ ಅಗತ್ಯವೂ ಇಲ್ಲವೆಂಬ ಕಾನೂನು ಜಾರಿಗೆ ತಂದು ಯಾರು ಯಾವ ರಾಜ್ಯದಲ್ಲಿ ಬೇಕಾದರು ಸ್ಪÀರ್ದಿಸಲು ಬಹಳ ಸುಲಭವಾದ ಮಾರ್ಗವನ್ನು ಕಲ್ಪಿಸಿಕೊಟ್ಟವು. ಹಾಗಾಗಿ ಆಯಾ ರಾಜ್ಯದವರೇ ಸ್ಪರ್ದಿಸಬೇಕೆಂಬ ಯಾವ ಕಾನೂನು ಇವತ್ತು ಇಲ್ಲವಾಗಿದ್ದು, ಅದೀಗ ಕೇವಲ ರಾಜಕೀಯ ಪಕ್ಷಗಳ ನೈತಿಕತೆಯ ಪ್ರಶ್ನೆಯಾಗಿದೆ. ಆದರೆ ನಮ್ಮ ರಾಜಕೀಯ ಪಕ್ಷಗಳಿಂದ ನೈತಿಕತೆಯನ್ನು ನಿರೀಕ್ಷಿಸುವುದು ಮತದಾರರ ಮೂರ್ಖತನವೆಂಬುದನ್ನು ಇದೀಗ ನಡೆಯಲಿರುವ ರಾಜ್ಯಸಭಾ ಚುನಾವಣೆ ಸಾಬೀತು ಮಾಡಿದೆ.

ಇವತ್ತು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಾಜಪ ನಿಲ್ಲಿಸಿರುವ ಅಭ್ಯರ್ಥಿಗಳನ್ನೂ ಮತ್ತು ಅವರುಗಳ ಮೂಲರಾಜ್ಯಗಳು ಹಾಗು ಸ್ಪರ್ದಿಸಿರುವ ರಾಜ್ಯಗಳತ್ತ ಒಂದಿಷ್ಟು ಕಣ್ಣು ಹಾಯಿಸಿದರೆ ಸಾಕು ನಮ್ಮ ರಾಜ್ಯಸಭಾ ಚುನಾವಣೆಗಳ ಹಣೇ ಬರಹ ಗೊತ್ತಾಗುತ್ತದೆ ಮೊದಲಿಗೆ ಅಧಿಕಾರರೂಢ ಬಾಜಪದ ಪಟ್ಟಿ ನೋಡಿ: ಆಂದ್ರಪ್ರದೇಶದ ವೆಂಕಯ್ಯನಾಯ್ಡುರವರು ರಾಜಾಸ್ಥಾನದಿಂದಲೂ, ನಿರ್ಮಲಾ ಸೀತಾರಾಮ್ ತಮಿಳುನಾಡಿನವರಾಗಿದ್ದು ಕರ್ನಾಟಕದಿಂದ ಸ್ಪರ್ದಿಸಿದ್ದಾರೆ. ಇನ್ನು ಕಾಂಗ್ರೇಸ್ ಸಹ ಇದರಿಂದ ಹೊರತಾದ್ದೇನಲ್ಲ: ಕಳೆದ ಬಾರಿ ಆಂದ್ರಪ್ರದೇಶದಿಂದ ಸ್ಪರ್ದಿಸಿದ್ದ ಜಯರಾಂರಮೇಶ್ ಈಗ ಕರ್ನಾಟಕದಿಂದ. ತಮಿಳುನಾಡು ಮೂಲದ ಪಿ.ಚಿದಂಬರಂ ಮಹಾರಾಷ್ಟದಿಂದಲೂ,ಪಂಜಾಬಿನ ಕಪಿಲ್ ಸಿಬಾಲ್ ಉತ್ತರಪ್ರದೇಶದಿಂದಲೂ ಸ್ಪರ್ದಿಸುತ್ತಿದ್ದಾರೆ. ಇನ್ನುಳಿದಂತೆ ಬಾಪದ ಪಿಯೂಶ್ ಗೋಯಲ್,ಮುಖ್ತಾರ್ ಅಬ್ಬಾಸ್ ನಕ್ವಿ ಮುಂತಾದವರು ಸಹ ಒಂದೊಂದು ಬಾರಿ ಒಂದೊಂದು ರಾಜ್ಯಗಳಿಗೆ ವಲಸೆ ಹೋಗಿ ಗೆದ್ದವರೆ ಆಗಿದ್ದಾರೆ.

ಹಾಗಿದ್ದರೆ ಹೀಗೆ ಬೇರೆ ರಾಜ್ಯಗಳಿಂದ ಗೆದ್ದು ಹೋದವರು ತಾವು ಪ್ರತಿನಿಧಿಸುವ ರಾಜ್ಯದ ಹಿತಾಸಕ್ತಿಯನ್ನು ಎಷ್ಟರ ಮಟ್ಟಿಗೆ ರಾಜ್ಯಸಭೆಯಲ್ಲಿ ಎತ್ತಿ ಹಿಡಿಯುತ್ತಾರೆಂಬುದೇ ನಮ್ಮ ಪ್ರಶ್ನೆಯಾಗಿದೆ. ತಾವು ಪ್ರನಿಧಿಸುವ ರಾಜ್ಯಗಳ ಬಾಷೆಯನ್ನೇ ಕಲಿಯದ ಅವರುಗಳು ಅದೆಷ್ಟರ ಮಟ್ಟಿಗೆ ಆ ರಾಜ್ಯದ ಸಂಸ್ಕøತಿಯನ್ನು ಪ್ರತಿನಿಧಿಸಬಲ್ಲರೊ ಅರ್ಥವಾಗದ ವಿಷಯವಾಗಿದೆ. ಇದಕ್ಕೊಂದಿಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ. ಬಾಜಪದಿಂದ ಕರ್ನಾಟಕವನ್ನು ನಾÀಲ್ಕುಬಾರಿ ಪ್ರತಿನಿದಿಸಿದ್ದ ಶ್ರೀ ವೆಂಕಯ್ಯನಾಯ್ಡುರವರು ಹದಿನೆಂಟು ವರ್ಷಗಳ ನಂತರವೂಕನ್ನಡ ಕಲಿತು ಮಾತನಾಡಲೇ ಇಲ್ಲ ಅದು ಹೋಗಲಿ ತಮಿಳು ನಾಡಿನ ಜೊತೆಕಾವೇರಿವಿವಾದ ತಾರಕಕ್ಕೇರಿದಾಗಲಾಗಲಿ, ಗೋವಾದೊಂದಿಗಿನ ಕಳಸಾ ಬಂಡೂರಿ ವಿವಾದದ ಬಗ್ಗೆ ಯಾಗಲಿ, ಆಂದ್ರದ ಜೊತೆಗಿನ ಕೃಷ್ಣಾ ನೀರು ಹಂಚಿಕೆಯ ವಿಷಯದಲ್ಲಾಗಲಿ ಅವರು ತಾವು ಪ್ರತಿನಿದಿಸುವ ರಾಜ್ಯಸಭೆಯಲ್ಲಿ ಒಂದೇ ಒಂದು ಮಾತನ್ನಾಡಲಿಲ್ಲ. ಇದರ ಬಗ್ಗೆ ಬಾಜಪವನ್ನು ಕೇಳಿದರೆ ಅವರು ರಾಷ್ಟ್ರೀಯ ನಾಯಕರು, ರಾಷ್ಟ್ರದ ಒಟ್ಟಾರೆ ಹಿತಾಸಕ್ತಿಯೇಅವರ ಮುಖ್ಯವೆಂದುಸಬೂಬು ಹೇಳುತ್ತಾರೆ. ಇನ್ನು ಬಹಳ ಹಿಂದೆ ಕರ್ನಾಟಕದಿಂದ ಆಯ್ಕೆಯಾಗಿದ್ದ ರಾಂಜೇಠ್ಮಾಲಿನಿಯವರುಸಹ ಒಂದೇ ಒಂದು ದಿನವೂ ಎದ್ದು ನಿಂತು ಕರ್ನಾಟಕದ ಪರ ಮಾತನಾಡಲಿಲ್ಲ.ಕಳೆದಬಾರಿ ಜನತಾದಳದ ಬೆಂಬಲದಿಂದ ಆಯ್ಕೆಯಾಗಿದ್ದ ತಮಿಳುನಾಡಿನ ರಾಮಸ್ವಾಮಿಯವರು ಕಾವೇರಿಯ ವಿವಾದ ಭುಗಿಲೆದ್ದಾಗ ಮಾಯವಾದವರು ಮತ್ತೆಂದೂ ಕಾಣಿಸಿಕೊಳ್ಳಲೇ ಇಲ್ಲ. ಕರ್ನಾಟಕವನ್ನು ಹಿಂದೆ ಬಾಜಪದ ಪರವಾಗಿ ಪ್ರತಿನಿದಿಸಿದ್ದ ಹೇಮಾ ಮಾಲಿನಿಯ ಮುಖವನ್ನು ಟಿ.ವಿ.ಜಾಹಿರಾತುಗಳಲ್ಲಿ ನೋಡಿದ್ದನ್ನು ಬಿಟ್ಟರೆ ಆಕೆಯೆಂದೂ ಕಾರ್ನಾಟಕದ ಒಳನಾಡಿಗೆ ಬರಲೇ ಇಲ್ಲ. ನೇರ ಚುನಾವಣೆಯಲ್ಲಿ ಗೆಲ್ಲಲಾಗದಂತಹ ಮುಖರಹಿತ ವ್ಯಕ್ತಿಗಳಿಗೆ ಮಣೆ ಹಾಕುತ್ತ ಪ್ರಜಾಸತ್ತೆಯ ನಿಜವಾದ ಆಶಯವನ್ನು ಗಾಳಿಗೆ ತೂರುತ್ತಿವೆ.ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದವರಿಗೆ ರಾಜಕೀಯವಾಗಿ ಮರುಜನ್ಮ ನೀಡುವುದಕ್ಕೂ ಈ ಚುನಾವಣೆಗಳು ನೆರವಾಗುತ್ತಿವೆ. ಜೊತೆಗೆ ಬಂಡವಾಳಶಾಹಿ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಸುಸೂತ್ರವಾಗಿ ನಡೆಸಿಕೊಂಡುಹೋಗಲು ಈ ಸದಸ್ಯತ್ವದ ದುರುಪಯೋಗವೂ É ನಡೆಯುತ್ತಿದೆ ಈ ಹಿಂದೆ ಗೆದ್ದ ವಿಜಯ ಮಲ್ಯ ಮತ್ತು ರಾಮಸ್ವಾಮಿಯವರ ಉದ್ದೇಶವೇ ತಮ್ಮ ವ್ಯಾಪಾರ ಉದ್ದಿಮೆಗಳಿಗೆ ಈ ಸದಸ್ಯತ್ವನೆರವಾಗಲಿಯೆಂಬುದಾಗಿತ್ತು.

ಆದ್ದರಿಂದ ಯಾವುದೋ ರಾಜ್ಯದವರನ್ನು ಇನ್ಯಾವುದೊ ರಾಜ್ಯದಿಮದ ಆರಿಸಿ ಕಳಿಸಿದರೆ ಆವ್ಯಕ್ತಿಯ ಆ ಪಕ್ಷದ ಹಿತಾಸಕ್ತಿ ಕಾಪಾಡಲ್ಪಡುತ್ತದೆಯೇ ಹೊರತು ಆ ರಾಜ್ಯದ ಹಿತಾಸಕ್ತಿಯಲ್ಲ. ತಾವುಆಯ್ಕೆಯಾದ ರಾಜ್ಯದ ನೆಲಜಲಗಳ ಬಗ್ಗೆ ದನಿಯೆತ್ತಬೇಕಾದ ಸದಸ್ಯರುಗಳು ತಮ್ಮ ಮೂಲರಾಜ್ಯಕ್ಕೆ ನಿಷ್ಠರಾಗಿರುತ್ತಾರೆ ಮತ್ತು ಪಕ್ಷದ ಹಿತದೃಷ್ಠಿಯಿಂದ ಮಾತ್ರ ಕೆಲಸ ನಿರ್ವಹಿಸಬಲ್ಲರು. ಕನಿಷ್ಠ ಪ್ರಾದೇಶಿಕ ಪಕ್ಷಗಳಾದರು ಇಂತಹ ಬೆಳವಣಿಗೆಗಳನ್ನು ವಿರೋದಿಸುತ್ತವೆಯೆಂದರೆ ಅವೂ ಸಹ ವಿವಿದ ಆಮೀಷಗಳಿಗೊಳಗಾಗಿ ಅನ್ಯರಾಜ್ಯದ ಉದ್ದಿಮೆದರರನ್ನು ಆರಿಸುವ ಕೆಟ್ಟಚಾಳಿಗೆ ಬಿದ್ದಿವೆ.

ವಿಪರ್ಯಾಸ ನೋಡಿ; ಕರ್ನಾಟಕದ ಜನತೆ ಅನ್ಯರಾಜ್ಯದ ಅಭ್ಯರ್ಥಿಗಳ ಬಗ್ಗೆ ಇಷ್ಟೊಂದು ವಿರೋಧ ವ್ಯಕ್ತ ಪಡಿಸುತ್ತಿರುವಾಗಲೇ ಪ್ರಾದೇಶಿಕ ಪಕ್ಷವಾದ (ಈ ಸತ್ಯ ಹೇಳಿದರೆ ದೇವೇಗೌಡರಿಗೆ ಕೋಪ ಬರಬಹುದು!)ಜನತಾದಳದ ಹೆಚ್.ಡಿ.ಕುಮಾರಸ್ವಾಮಿಯವರು ಬಾಜಪದ ನಾಯಕರಾದ ಶ್ರೀ ಆರ್ ಅಶೋಕ್ ಅವರೊಂದಿಗೆ ಚರ್ಚಿಸಿ ನಿರ್ಮಲಾ ಸೀತಾರಾಮ್ ಗೆಲ್ಲಬೇಕೆಂದು ಆಶಿಸಿದ್ದಾರೆ. ಕೇವಲ 40ಸ್ಥಾನಗಳನ್ನು ಇಟ್ಟುಕೊಂಡೇ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎದೆಗಾರಿಕೆ ತೋರಿಸಿದ ಕುಮಾರಸ್ವಾಮಿಯವರೀಗ ಬಾಜಪಕ್ಕೆ ಕೊರತೆಯಾಗಬಲ್ಲ ಮತಗಳನ್ನು ತುಂಬಿ ಕೊಡುವ ಹಾದಿಯಲ್ಲಿದ್ದಾರೆ. ಕೊನೆಗೂ ಅವರಿಗೆ ತಮ್ಮ ಪಕ್ಷ ಅಧಿಕಾರದ ಹತ್ತಿರಕ್ಕೆ ಹೋಗುವುದು ಬೇಕಾಗಿದೆÀಯೇ ಹೊರತು ರಾಜ್ಯದಹಿತಾಸಕ್ತಿಯಲ್ಲ ಎಂಬುದನ್ನುಸಾಬೀತು ಮಾಡಿದ್ದಾರೆ

ಆದ್ದರಿಂಲೇ ಇವತ್ತು ರಾಜ್ಯಸಬೆಯ ಚುನಾವಣೆಗಳನ್ನು ಗಂಬೀರವಾಗಿ ತೆಗೆದುಕೊಂಡು, ಚಿರ್ಚಿಸಬೇಕಾದ ಪ್ರಮೇಯವಿದೆ. ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆ ಬರದಂತೆ ಮತ್ತು ರಾಜ್ಯಗಳ ಹಿತಾಸಕ್ತಿಗಳಿಗೂ ತೊಂದರೆಯಾಗದಂತೆ ರಾಜ್ಯಸಭಾಸದಸ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕಾಗಿದೆ. ಲೋಕಸಭೆಯಷ್ಟೆ ಪ್ರಬಾವಶಾಲಿಯಾಗಿರುವ ಮತ್ತು ಹಿರಿಯರ ಪ್ರತಿಭಾವಂತರ ಮನೆಯೆಂದು ಖ್ಯಾತಿ ಪಡೆದಿರುವ ರಾಜ್ಯಸಭೆಯ ಘನತೆಯನ್ನು ಕಾಪಾಡಲು ಹಾಗು ಪ್ರಜಾಸತ್ತೆಯ ಆಶಯವನ್ನು ಸಾಕಾರಗೊಳಿಸಲು ಹಾಲಿಇರುವ ಕಾನೂನುನ್ನು ತಿದ್ದುಪಡಿ ಮಾಡಿ, ರಾಜ್ಯಸಭಾ ಚುನಾವಣೆಯನ್ನು ಇನ್ನಷ್ಟು ಪಾರದರ್ಶಕವಾಗಿಯೂ, ರಾಜ್ಯಗಳ ಹಿತಕಾಪಾಡುವ ನಿಟ್ಟಿನಲ್ಲಿ ನಡೆಯುವಂತೆಯೂ ಮಾಡುವುದು ನಮ್ಮ ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕಿದೆ. ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸಂಸ್ತೆಗಳ ಮೌಲ್ಯ ಕಡಿಮೆಯಾಗುತ್ತ ಹೋಗುವುದು ನಿಶ್ಚಿತ!