Dec 31, 2015

2015ರ ರಾಜಕೀಯ ಪ್ರಮುಖಾಂಶ.

Dr Ashok K R
ಮತ್ತೊಂದು ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಹಳೆಯ ವರ್ಷದ ಆಗುಹೋಗುಗಳ ಬಗ್ಗೆ ಒಂದು ಪುಟ್ಟ ಅವಲೋಕನ. ಅಂತರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯ ವರ್ಚಸ್ಸು ಏರಿದರೆ ರಾಷ್ಟ್ರದೊಳಗಿನ ಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡು ಮೋದಿ ಅಲೆಯೆಂಬುದು ಕ್ಷೀಣವಾಗುತ್ತಿದೆ ಎಂಬ ವಾದವನ್ನು ಬಲಗೊಳಿಸುತ್ತಿದೆ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವರ್ಚಸ್ಸು ಆರಕ್ಕೇರದೆ ಮೂರಕ್ಕಿಳಿಯದೆ ಇದ್ದರೂ ಚುನಾವಣೆಗಳಲ್ಲಿ ಗೆಲುವು ಕಾಣುವುದರಲ್ಲಿ ಹಿಂದೆ ಬಿದ್ದಿಲ್ಲ. ಮನಸ್ಸು ಮಾಡಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬಂಶವನ್ನು ದೆಹಲಿ ಮತ್ತು ಬಿಹಾರದ ಚುನಾವಣೆಗಳು ತೋರಿಸಿಕೊಟ್ಟರೆ ಮುಳುಗುತ್ತಿರುವ ಹಡಗಾದ ಕಾಂಗ್ರೆಸ್ಸನ್ನು ಉಳಿಸಲು ನಾವಿಕ ಸ್ಥಾನದಲ್ಲಿ ಅಲುಗಾಡದಂತೆ ಕುಳಿತಿರುವ ಸೋನಿಯಾ ಗಾಂಧಿ ಮತ್ತು ಬಲವಂತವಾಗಿ ಕೂರಿಸಲ್ಪಟ್ಟಿರುವ ರಾಹುಲ್ ಗಾಂಧಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಮಾಡುವ ಸೂಚನೆಗಳೂ ಇಲ್ಲ. ಪರ್ಯಾಯ ರಾಜಕೀಯ ಶಕ್ತಿಯೊಂದರ ಉದಯಕ್ಕಿದು ಸಕಾಲ ಎನ್ನುವಂತೆ ಕಂಡರೂ ಅಂತಹ ಶಕ್ತಿ ಸದ್ಯದ ಮಟ್ಟಿಗೆ ಗೋಚರವಾಗುತ್ತಿಲ್ಲ.

ಅಪಾರ ನಿರೀಕ್ಷೆಗಳನ್ನು ಮೂಡಿಸಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಕಾರ್ಯವೈಖರಿ ಹೇಗಿದೆ ಎಂದರೆ ಉತ್ತರಕ್ಕೆ ಬಿಜೆಪಿಯ ಬೆಂಬಲಿಗರೂ ತಡವರಿಸಬಹುದು. ಎರಡನೇ ಅವಧಿಯ ಯು.ಪಿ.ಎ ಸರಕಾರಕ್ಕೆ ಹೋಲಿಸಿದರೆ ಈಗಿನ ಸರಕಾರ ಉತ್ತಮವಾಗಿದೆಯಾ? ಭ್ರಷ್ಟಾಚಾರದ ಲೆಕ್ಕಾಚಾರದಲ್ಲಿ ನೋಡಿದರೆ ಈಗಿನ ಸರಕಾರವೇ ಉತ್ತಮ. ಯಾವುದೇ ದೊಡ್ಡ ಭ್ರಷ್ಟಾಚಾರದ ಕಳಂಕ ಈಗಿನ ಸರಕಾರದವಧಿಯಲ್ಲಿ ನಡೆದಿಲ್ಲ. ಭ್ರಷ್ಟರಹಿತ ಸರಕಾರವೆಂಬ ಇಮೇಜಿಗೆ ಒಂದಷ್ಟು ಪೆಟ್ಟು ಕೊಟ್ಟಿದ್ದು ಡಿಡಿಸಿಎ ಹಗರಣ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಡಿಸಿಎಯಲ್ಲಿ ಭ್ರಷ್ಟತೆ ನಡೆಸಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಅಬ್ಬರಿಸಲಾರಂಭಿಸಿದ್ದು ಬಿಜೆಪಿಯ ವರ್ಚಸ್ಸಿಗೆ ಒಂದಷ್ಟು ಧಕ್ಕೆ ತಂದಿತು. ಹಾಗೆ ನೋಡಿದರೆ ಅರವಿಂದ್ ಕೇಜ್ರಿವಾಲ್ ಇದರ ಬಗ್ಗೆ ಮಾತನಾಡಿದ್ದು ಅವರ ಮುಖ್ಯ ಕಾರ್ಯದರ್ಶಿಯ ಕಛೇರಿಯ ಮೇಲೆ ಸಿಬಿಐ ದಾಳಿ ನಡೆಸಿದ ನಂತರ. ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಮೂಲಕ ಬುದ್ಧಿ ಕಲಿಸಲೋದ ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಡಿಡಿಸಿಎ ಹಗರಣದ ಮೂಲಕ ಕೊಟ್ಟ ತಪರಾಕಿಯಿಂದ ಸುಧಾರಿಸಿಕೊಳ್ಳಲು ಸಮಯ ಬೇಕು. ಕೇವಲ ಕೇಜ್ರಿವಾಲ್ ಮಾತನಾಡಿದ್ದರೆ ಅದು ರಾಜಕೀಯ ವೈಷಮ್ಯವೆಂದು ಮುಚ್ಚಿಹೋಗುತ್ತಿತ್ತೋ ಏನೋ. ಮಾಜಿ ಕ್ರಿಕೇಟಿಗ ಮತ್ತು ಹಾಲಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಕೂಡ ಕೇಜ್ರಿವಾಲ್ ಮಾತಿಗೆ ಸಹಮತ ವ್ಯಕ್ತಿಪಡಿಸಿ ನೇರವಾಗಿ ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡಲಾರಂಭಿಸಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ಯುಪಿಎ ಅವಧಿಯ ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಯ ವರ್ತನೆ ಯಾವ ರೀತಿ ಇರಬೇಕಿತ್ತು? ಅರುಣ್ ಜೇಟ್ಲಿಯವರ ರಾಜೀನಾಮೆ ಪಡೆದು ಅವರು ಆರೋಪ ಮುಕ್ತರಾದ ಪಕ್ಷದಲ್ಲಿ ಮತ್ತೆ ಸೇರಿಸಿಕೊಳ್ಳಬಹುದಿತ್ತು. ಭ್ರಷ್ಟರಹಿತ ಸರಕಾರ ಎಂಬ ಹೇಳಿಕೆಗೊಂದು ಅರ್ಥ ಸಿಗುತ್ತಿತ್ತು. ಅಂತಹದ್ದೇನನ್ನೂ ಮಾಡದ ಬಿಜೆಪಿ ತಾನೂ ಕೂಡ ಇತರ ಪಕ್ಷದಂತೆಯೇ ಭ್ರಷ್ಟತೆಯ ಆರೋಪ ಹೊತ್ತವರ ಪರ ಎಂದು ತೋರಿಸಿಬಿಟ್ಟಿತು. ಮಂತ್ರಿಯ ವಿರುದ್ಧ ಮಾತನಾಡಿದ ಕೀರ್ತಿ ಆಜಾದ್ ರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ತಮಾಷೆಯೆಂದರೆ ತನ್ನ ವಿರುದ್ಧ ಮಾತನಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿದ್ದ, ರಾಜೀನಾಮೆ ಕೊಟ್ಟು ತೊಲಗುವಂತೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ‘ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ ನೋಡ್ರಿ’ ಎಂದು ಟ್ವಿಟರಿನಲ್ಲಿ ಅಲವತ್ತುಕೊಂಡಿದ್ದು. ಭ್ರಷ್ಟರ ಗೂಡಾಗಿರುವ ಕಾಂಗ್ರೆಸ್ ಕೀರ್ತಿ ಆಜಾದ್ ಪಕ್ಷಕ್ಕೆ ಸೇರಬಯಸಿದರೆ ಸ್ವಾಗತಿಸುತ್ತೇವೆ ಎಂದು ಘೋಷಿಸಿದ್ದು! ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅರುಣ್ ಜೇಟ್ಲಿಯವರ ವಿರುದ್ಧ ಮಾತನಾಡುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ ಎನ್ನುವ ವದಂತಿ ಕೀರ್ತಿ ಆಜಾದರ ವಿಷಯದಲ್ಲಿ ಮತ್ತೆ ಸಾಬೀತಾಯಿತು. ಅವರ ವಿರುದ್ಧ ಬಹಿರಂಗವಾಗಿ ಮಾತನಾಡಿ, ಕೀರ್ತಿ ಆಜಾದರ ಬೆಂಬಲಕ್ಕೆ ನಿಂತು ದಕ್ಕಿಸಿಕೊಂಡಿದ್ದು ಮಾತ್ರ ಶತ್ರುಘ್ನ ಸಿನ್ಹ. ಬಿಹಾರ ಚುನಾವಣೆಯ ಸೋಲಿಗೆ ಸ್ಥಳೀಯರ ನಂಬುಗೆ ಗಳಿಸದಿರುವುದೂ ಕಾರಣ ಎಂದು ಗಟ್ಟಿ ದನಿಯಲ್ಲಿ ಹೇಳಿದವರವರು. 

ಬಿಹಾರ ಚುನಾವಣೆ ದೆಹಲಿ ಚುನಾವಣೆಯ ನಂತರ ರಾಜಕೀಯವಾಗಿ ಅತ್ಯಂತ ಪ್ರಮುಖವಾದುದು. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ವರುಷಗಳ ಕಾಲ ಅಧಿಕಾರವಿಡಿದಿದ್ದ ಕಾಂಗ್ರೆಸ್ ಸ್ಪರ್ಧೆಯ ಲಿಸ್ಟಿನಲ್ಲೇ ಇರಲಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ, ಹಾಗಾಗಿ ಕೇಂದ್ರಸ್ಥಾನ ದೆಹಲಿಯಲ್ಲಿ ಬಿಜೆಪಿ ಸರಳ ಬಹುಮತದಿಂದ ಆರಿಸಿ ಬರುತ್ತದೆ ಎನ್ನುವುದೇ ಎಲ್ಲರ ನಿರೀಕ್ಷೆಯಾಗಿತ್ತು. ಚುನಾವಣಾ ಸಮೀಕ್ಷೆಗಳಲ್ಲಿ ಬಹಳಷ್ಟು ಬಿಜೆಪಿಗೆ ಬಹುಮತವೆಂದಿದ್ದರೆ, ಕೆಲವು ಆಮ್ ಆದ್ಮಿಗೆ ಸರಳ ಬಹುಮತ ಸಿಗುತ್ತದೆ ಎಂದು ತಿಳಿಸಿದ್ದವು. ಪ್ರಚಾರದ ಅಬ್ಬರವೂ ಬಿಜೆಪಯದ್ದೇ ಹೆಚ್ಚಿತ್ತು. ಮಾಧ್ಯಮಗಳ ಪ್ರಚಾರದ ಬಗ್ಗೆ ಹೆಚ್ಚು ಗಮನ ಕೊಡದ ಆಮ್ ಆದ್ಮಿ ಪಕ್ಷ ಸದ್ದೇ ಇಲ್ಲದೆ ಮನೆ ಮನೆಯನ್ನೂ ತಲುಪುವ ಕೆಲಸ ಮಾಡಿತ್ತು. ಇದರ ಫಲ ಗೊತ್ತಾಗಿದ್ದು ಫಲಿತಾಂಶ ಹೊರಬಂದಾಗ. ಎಪ್ಪತ್ತು ಸ್ಥಾನಗಳಲ್ಲಿ ಅರವತ್ತೇಳು ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷ ತನ್ನ ಗೆಲುವಿಗೆ ತಾನೇ ಅಚ್ಚರಿಪಟ್ಟಿತು. ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆಯ ಸಾಧನೆಯೊಂದಿಗೆ ಬೀಗಿತು! ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಧಾನ ಮಂತ್ರಿಯನ್ನೂ ಸೇರಿಸಿ ಕೇಂದ್ರ ಸಚಿವರೇ ಹೆಚ್ಚು ಪ್ರಚಾರ ಮಾಡಿದ್ದರು. ಸ್ಥಳೀಯ ನಾಯಕರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ ಎಂಬ ಅಪಸ್ವರ ಕ್ಷೀಣ ದನಿಯಲ್ಲಿ ಕೇಳಿಬಂತಷ್ಟೇ. ಆಗಿನ್ನೂ ಮೋದಿ ಅಲೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿತ್ತು. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯ ಗೆಲುವಿನ ಮಾನದಂಡಗಳು ಬೇರೆ ಬೇರೆ ಎಂದು ಮರೆಯಲಾಗಿತ್ತು. ಜೊತೆಗೆ ದೆಹಲಿಯೆಂಬುದು ಪೂರ್ಣ ರಾಜ್ಯವೇನಲ್ಲವಲ್ಲ ಎಂಬ ಅಸಡ್ಡೆಯೂ ಸೇರಿತ್ತೇನೋ. ಇನ್ನು ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಸತತವಾಗಿ ಕೇಂದ್ರದೊಡನೆ, ಲೆಫ್ಟಿನೆಂಟ್ ಗವರ್ನರೊಡನೆ ಸಂಘರ್ಷಕ್ಕಿಳಿದರು. ಆಸ್ಪತ್ರೆ, ಶಿಕ್ಷಣಕ್ಕೆ ಅವರು ಕೊಟ್ಟ ಮಹತ್ವ ಪ್ರಶಂಸಾರ್ಹವಾದರೂ ಅವರ ರಾಜಕೀಯ ನಡೆಗಳು ಮತ್ತೊಬ್ಬ ರಾಜಕಾರಣಿಯ ಜನನವಾಗಿದೆಯಷ್ಟೇ ಎಂದು ಸಾಬೀತುಪಡಿಸಿದವು. ದೆಹಲಿಯಲ್ಲಿ ಮಾಡಿದ ತಪ್ಪುಗಳೇ ಬಿಹಾರದಲ್ಲೂ ಪುನರಾವರ್ತನೆಯಾದವು.

ಬಿಹಾರ ಚುನಾವಣೆಯ ಸಮಯದಲ್ಲೇ ದಾದ್ರಿಯಲ್ಲಿ ಇಖ್ಲಾಕನ ಹತ್ಯೆಯ ಘಟನೆಯೂ ನಡೆದುಹೋಯಿತು. ಮನೆಯಲ್ಲಿ ದನದ ಮಾಂಸವನ್ನಿಟ್ಟುಕೊಂಡಿದ್ದಾನೆ ಎಂಬ ‘ವದಂತಿಯೇ’ ಆತನ ಹತ್ಯೆಗೆ ಕಾರಣವಾಗಿಬಿಟ್ಟಿತು. ಇವತ್ತಿಗೂ ನಮ್ಮ ಮುಖ್ಯವಾಹಿನಿಯ ಕಾರ್ಯಕ್ರಮಗಳಲ್ಲಿ ‘ಅದು ದನದ ಮಾಂಸವಲ್ಲವಂತೆ ಕಣ್ರೀ’ ಎನ್ನುವ ಧಾಟಿಯ ಹೆಡ್ಡಿಂಗುಗಳು, ಚರ್ಚೆಗಳು ಚಾಲ್ತಿಯಲ್ಲಿವೆ. ದನದ ಮಾಂಸವೇ ಆಗಿದ್ದರೆ ಹತ್ಯೆ ಸಮರ್ಥನೀಯವಾಗುತ್ತಿತ್ತಾ? ದಾದ್ರಿಯ ಘಟನೆ ಹಿಂದುತ್ವದ ಅಪಾಯಕಾರಿ ಶಕ್ತಿಗಳ ಹೆಚ್ಚಳದ ಬಗ್ಗೆ ತಿಳಿಸಿ ಹೇಳಿತ್ತು. ತುಂಬಾನೇ ಮಾತನಾಡುವ ಪ್ರಧಾನಿ ಅನೇಕ ವಿಷಯಗಳಲ್ಲಿ ಜಾಣ ಮೌನ ವಹಿಸಿಬಿಡುವಂತೆ ಈ ವಿಷಯದಲ್ಲೂ ಮೌನ ವಹಿಸಿಬಿಟ್ಟರು. ಆದರಿದು ಬಿಹಾರ ಚುನಾವಣೆಯ ಮೇಲೆ ಪರಿಣಾಮ ಬೀರಿತು. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ‘ಬಿಹಾರದಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹೊಡೆಯುತ್ತಾರೆ’ ಎಂದು ಹೇಳಿದ್ದು, ಆರ್.ಎಸ್.ಎಸ್ ಮೀಸಲಾತಿಯನ್ನು ತೆಗೆದುಬಿಡಬೇಕು ಎಂಬರ್ಥದಲ್ಲಿ ಮಾತನಾಡಿದ್ದು, ನರೇಂದ್ರ ಮೋದಿ ನಿತೀಶ್ ಕುಮಾರರ ಡಿ.ಎನ್.ಎ ಸರಿಯಿಲ್ಲ ಎಂದು ಹೇಳಿದ್ದನ್ನು ನಿತೀಶ್ ಕುಮಾರ್ ಬುದ್ಧಿವಂತಿಕೆಯಿಂದ ಬಿಹಾರದ ಅಸ್ಮಿತೆಯ ಪ್ರಶ್ನೆಯನ್ನಾಗಿ ಮಾಡಿದ್ದೆಲ್ಲವೂ ಬಿಜೆಪಿಯ ಸೋಲಿಗೆ ಕಾರಣವಾಯಿತು. ಜೊತೆಗೆ ದೆಹಲಿಯಲ್ಲಾದಂತೆ ಬಿಹಾರದಲ್ಲೂ ಬಿಜೆಪಿ ಸ್ಥಳೀಯ ನಾಯಕರಿಗಿಂತ ಕೇಂದ್ರ ನಾಯಕರ ಮೇಲೆ ಹೆಚ್ಚಿನ ನಂಬುಗೆ ಇಟ್ಟಿತು, ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಿಲ್ಲ. ಎದುರಾಳಿಗಳು ಅಭಿವೃದ್ಧಿಯ ಹರಿಕಾರನೆಂದು ಪ್ರಸಿದ್ಧಿಯಾದ ನಿತೀಶ್ ಕುಮಾರರ ಹೆಸರನ್ನು ಘೋಷಿಸಿದ್ದಾಗಲೂ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ. ಇವೆಲ್ಲಕ್ಕಿಂತಲೂ ಬಿಜೆಪಿಯ ಸೋಲಿಗೆ ಬಹುಮುಖ್ಯವಾದ ಕಾರಣ ಮಹಾಘಟಬಂಧನದ ಹೆಸರಿನಲ್ಲಿ ಜೆಡಿಯು, ಆರ್.ಜೆ.ಡಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿದ್ದು. ತಮ್ಮೊಳಗೆ ಹಂಚಿಹೋಗಬಹುದಿದ್ದ ಮತಗಳ ಕ್ರೋಡಿಕರಣವಾಗುತ್ತದೆಂಬ ಅವರ ನಂಬಿಕೆ ಹುಸಿಯಾಗಲಿಲ್ಲ. ಬಿಜೆಪಿ ಇದನ್ನು ಅರಿಯುವಲ್ಲಿ ವಿಫಲವಾಯಿತೆಂದೇ ಹೇಳಬಹುದು. ಜೊತೆಗೆ ಬಿಹಾರದ ಚುನಾವಣೆ ಭಾರತದಲ್ಯಾವ ಚುನಾವಣೆಯನ್ನೂ ಜಾತಿಯ ಬೆಂಬಲವಿಲ್ಲದೆ ಗೆಲ್ಲುವುದು ಕಷ್ಟ ಎನ್ನುವುದನ್ನೂ ತೋರಿಸಿಕೊಟ್ಟಿತು. ಬಿಜೆಪಿ ಸೋತಿತು ಎನ್ನುವುದರ ಜೊತೆಜೊತೆಗೇ ಈ ಚುನಾವಣೆ ಜನರ ಮರೆವನ್ನು ಸ್ಪಷ್ಟವಾಗಿ ತೋರಿಸಿತು. ಇಲ್ಲವಾದರೆ ಹಲವು ಹಗರಣಗಳ ಸರದಾರ, ಕುಟುಂಬಕ್ಕೆ ಪಕ್ಷವನ್ನು ಜೀತವನ್ನಾಗಿಸಿದ ಲಾಲೂ ಪ್ರಸಾದ್ ಯಾದವರ ಆರ್.ಜೆ.ಡಿ ಪಕ್ಷ ಮತ್ತೆ ಗೆಲ್ಲುವುದೇಗೆ ಸಾಧ್ಯವಿತ್ತು?

ಇನ್ನು ಕರ್ನಾಟಕದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಕೊಟ್ಟ ಗಮನವನ್ನು ಆಡಳಿತದ ಕಡೆಗೂ ಕೊಟ್ಟಿದ್ದರೆ ಮತ್ತಷ್ಟು ಹೆಸರು ಮಾಡುತ್ತಿದ್ದರು. ‘ಭಾಗ್ಯ’ ಹೆಸರಿನ ಯೋಜನೆಗಳು ಮಾತ್ರ ಹೆಸರು ತಂದುಕೊಡುತ್ತವೆ ಎಂಬವರ ನಂಬಿಕೆ ಈ ವರ್ಷವೂ ಮುಂದುವರೆಯಿತು. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಇಳಿಸುತ್ತಲೇ ಇರುವ ಸರಕಾರ ಶೂ ಭಾಗ್ಯದಂತಹ ಹೊಸ ಹೊಸ ಯೋಜನೆಗಳನ್ನು ಘೋಷಿಸುವುದ್ಯಾಕೆ? ಹಳೆಯ ಯೋಜನೆಯನ್ನೇ ಸರಿಯಾಗಿ ನಿಭಾಯಿಸಲಾಗದೆ ಹೊಸ ಯೋಜನೆಗಳನ್ನು ಘೋಷಿಸುವುದು ಪ್ರಚಾರಕ್ಕಾಗಿಯಷ್ಟೇ ಎಂದು ಕಾಣುತ್ತದೆ. ಡಿ.ಕೆ.ರವಿಯವರ ಸಾವಿನ ಪ್ರಕರಣದಲ್ಲಿ ಅತ್ಯಂತ ಅಸಮರ್ಥವಾಗಿ ಕಾರ್ಯನಿರ್ವಹಿಸಿತು. ತನ್ನ ತಪ್ಪಿಲ್ಲದಿದ್ದರೂ ಕಾರಣವಿಲ್ಲದೆ ಹೆಸರನ್ನೆಲ್ಲಾ ಹಾಳುಮಾಡಿಕೊಂಡ ಮೇಲೆ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿತು. ಸಿಬಿಐ ಕೂಡ ನಮ್ಮ ಪೋಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದ ಅಂಶಗಳನ್ನೇ ಹೇಳಿದರು. ಡಿ.ಕೆ.ರವಿಯವರದ್ದು ಕೊಲೆ ಕೊಲೆ ಎಂದು ಅಬ್ಬರಿಸಿದ್ದ ಮಾಧ್ಯಮಗಳು ಕೊನೆಗದು ಆತ್ಮಹತ್ಯೆ ಎಂದು ತನಿಖಾ ವರದಿ ಬಂದ ಮೇಲಾದರೂ ಒಂದು ಕ್ಷಮಾಪಣೆ ಕೇಳುವ ನೈತಿಕತೆ ಪ್ರದರ್ಶಿಸಲಿಲ್ಲ. ಕರ್ನಾಟಕ ಮತ್ತು ದೇಶದ ಸಾಹಿತ್ಯಕ ವಲಯವನ್ನು ಬೆಚ್ಚಿ ಬೀಳಿಸಿದ್ದು ಎಂ.ಎಂ.ಕಲಬುರ್ಗಿಯವರ ಹತ್ಯೆ. ವೈಚಾರಿಕ ಸಂಘರ್ಷವನ್ನು ಬಂದೂಕಿನಿಂದ ಎದುರಿಸಬೇಕು ಎಂಬಂತಹ ಸಂಸ್ಕೃತಿ ಹೆಚ್ಚುತ್ತಿರುವುದು ಗೋವಿಂದ ಪನ್ಸಾರೆ, ದಾಬೋಲ್ಕರ್ ರವರ ಹತ್ಯೆಯ ಸಂದರ್ಭದಲ್ಲೇ ಬೆಳಕಿಗೆ ಬಂದಿತ್ತು. ಕಲಬುರ್ಗಿಯವರಿಗೂ ಬೆದರಿಕೆಯಿತ್ತು. ರಕ್ಷಣೆಯನ್ನೂ ನೀಡಲಾಗಿತ್ತು. ಕಲಬುರ್ಗಿಯವರೇ ಹತ್ಯೆಯ ಕೆಲವು ದಿನಗಳ ಮೊದಲು ಪೋಲೀಸ್ ರಕ್ಷಣೆಯನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ರಕ್ಷಣೆ ಹಿಂದೆಗೆದುಕೊಂಡಮೇಲೂ ಪೋಲೀಸರು ಒಂದಷ್ಟು ನಿಗಾ ವಹಿಸಿದ್ದರೆ ಹಿರಿಯ ಸಂಶೋಧಕರೊಬ್ಬರು ಗುಂಡಿಗೆ ತಲೆಯೊಡ್ಡುವ ದುರಂತ ಸಂಭವಿಸುತ್ತಿರಲಿಲ್ಲ. ಹತ್ಯೆ ನಡೆದು ಹಲವು ತಿಂಗಳು ಕಳೆದುಹೋಗಿದ್ದರೂ ಹಂತಕರ ಪತ್ತೆಯಾಗಿಲ್ಲದಿರುವುದು ಸಿದ್ಧರಾಮಯ್ಯ ಸರಕಾರದ ವೈಫಲ್ಯ. ಕಲಬುರ್ಗಿಯವರ ಹತ್ಯೆ ದೇಶದಲ್ಲಿ ಸಹಿಷ್ಣುತೆ – ಅಸಹಿಷ್ಣುತೆಯ ಬಗೆಗಿನ ಚರ್ಚೆಯನ್ನು ತೀರ್ವಗೊಳಿಸಿತು, ಪ್ರಶಸ್ತಿ ವಾಪಸ್ ಚಳುವಳಿ ನಡೆದು ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿತು.

ಭ್ರಷ್ಟತೆಯ ವಿಷಯದಲ್ಲಿ ಸಿದ್ಧು ಸರಕಾರ ತುಂಬಾ ಹೆಸರು ಕೆಡಿಸಿಕೊಂಡಿಲ್ಲ ಎನ್ನುವುದು ಸತ್ಯ. ಮಂತ್ರಿ ಆಂಜನೇಯರವರ ಪತ್ನಿ ಲಕ್ಷ ಲಕ್ಷ ರುಪಾಯಿಗಳನ್ನು ತೆಗೆದುಕೊಳ್ಳುವುದು ದೃಶ್ಯಮಾಧ್ಯಮದ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಯಿತಾದರೂ ಅದು ತನಿಖೆಯ ಹಂತದಲ್ಲಿದೆ ಎಂದು ಸರಕಾರ ಮೌನವಾಗಿಬಿಟ್ಟಿತು. ಯಾಕೋ ವಿರೋಧ ಪಕ್ಷಗಳೂ ಇದರ ಬಗ್ಗೆ ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ. ಸಿದ್ಧರಾಮಯ್ಯನವರ ಖುರ್ಚಿ ಅಲುಗಾಡಿದಂತೆ ಕಾಣಿಸಿದ್ದು, ಮೂಲ ಕಾಂಗ್ರೆಸ್ಸಿನ ಹಿರಿಯರು ಸಿದ್ಧರಾಮಯ್ಯನವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಬಿಬಿಎಂಪಿ ಚುನಾವಣೆಯ ನಂತರ ಕಾಂಗ್ರೆಸ್ಸಿನಲ್ಲಿ ದೊಡ್ಡ ಬದಲಾವಣೆ ನಡೆದುಬಿಡುತ್ತದೆ ಎಂದು ನಂಬಿದ್ದವರೆಲ್ಲರಿಗೂ ನಿರಾಸೆಯಾಯಿತು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟು, ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೆ ಜೆಡಿಎಸ್ ಎಂದಿನಂತೆ ಮೂರನೇ ಸ್ಥಾನದಲ್ಲಿತ್ತು. ನೈತಿಕವಾಗಿ ನೋಡಿದರೆ ಬಿಜೆಪಿ ಅಧಿಕಾರವಿಡಿಯಬೇಕಿತ್ತು. ಅಧಿಕರಾವಿಡಿಯುವ ಖುಷಿಯಲ್ಲಿ ಬಿಜೆಪಿ ಬಿಬಿಎಂಪಿಯ ಗೆಲುವನ್ನು ಸಂಭ್ರಮಿಸಿತ್ತು. ತೆರೆಯ ಹಿಂದೆ ನಡೆದ ಹೀನ ರಾಜಕೀಯದ ಸುಳಿವು ಬಿಜೆಪಿಗೆ ಸಿಗುವಷ್ಟರಲ್ಲಿ ಕಾಲ ಮಿಂಚಿತ್ತು. ಶರಂಪರ ಕಿತ್ತಾಡುತ್ತಿದ್ದ ಸಿದ್ಧರಾಮಯ್ಯ ಮತ್ತು ಜೆ.ಡಿ.ಎಸ್ ನಡುವೆ ಮೈತ್ರಿ ನಡೆದುಬಿಟ್ಟಿತ್ತು. ಯಾವ ಸಂಧಾನದ ಮಾತುಕತೆಯಲ್ಲೂ ಸಿದ್ಧರಾಮಯ್ಯ ನೇರವಾಗಿ ಪಾಲ್ಗೊಳ್ಳದಿರುವ ಬುದ್ಧಿವಂತಿಕೆಯನ್ನು ತೋರಿಸಿದ್ದರೂ ಹೀಗೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಮೂಲಕ ಅವರು ಸಾಧಿಸಿದ್ದೇನು? ಹಿಂಬಾಗಿಲ ಮೂಲಕ ಅಧಿಕಾರವಿಡಿಯುವ ಮೂಲಕ ರಾಜಕೀಯ ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ಎಂದವರು ತೋರಿಸಿದರು. ಆಪರೇಷನ್ ಕಮಲವನ್ನು ವಿರೋಧಿಸಿದ್ದ ಸಿದ್ಧರಾಮಯ್ಯ ಇಲ್ಲಿ ಮಾಡಿದ್ದೇನನ್ನು? ಅನೈತಿಕತೆಯೆಂಬುದು ರಾಜಕೀಯದ ಬಿಡಿಸಲಾಗದ ಭಾಗವಾಗಿಬಿಟ್ಟಿದೆಯಾ? 

ವರುಷದ ಕೊನೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ಸಿನ ಸ್ಥಾನ ಕರ್ನಾಟಕದಲ್ಲಿ ಇನ್ನು ಭದ್ರವಾಗಿದೆ ಎಂದು ತೋರಿಸಿಕೊಟ್ಟಿತು. ಇಪ್ಪತ್ತೈದು ಸ್ಥಾನಗಳಲ್ಲಿ ಹದಿಮೂರರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಈ ಚುನಾವಣೆಯಲ್ಲಿ ಯಾರು ಗೆದ್ದರೋ ಬಿಟ್ಟರೋ ಸೋತಿದ್ದು ಮಾತ್ರ ವಿಧಾನ ಪರಿಷತ್. ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ ಮುಖ್ಯ ಕಾರಣ ವಿಧಾನಸಭೆಯ ಚುನಾವಣಾ ರಾಜಕೀಯದಲ್ಲಿ ಗೆಲ್ಲಲಾಗದ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಪರಿಷತ್ತಿಗೆ ಆಯ್ಕೆ ಆಗಿ ರಾಜ್ಯದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂಬ ಸದುದ್ದೇಶದಿಂದ. ಆದರೆ ಈಗ ಆಗುತ್ತಿರುವುದೇನು? ಕೋಟಿ ಕೋಟಿ ಹಣ ಚೆಲ್ಲುವವರಿಗೆ ಮಾತ್ರ ಪರಿಷತ್ ಸ್ಥಾನ ಎನ್ನುವಂತಾಗಿದೆ. ಅಲ್ಲಿಗೆ ವಿಧಾನಸಭೆಗೂ ಪರಿಷತ್ತಿಗೂ ಏನು ವ್ಯತ್ಯಾಸ ಉಳಿಯಿತು? ಇಂತಹುದೊಂದು ಸಂಭ್ರಮಕ್ಕೆ ಪರಿಷತ್ತಿನ ಅವಶ್ಯಕತೆಯಾದರೂ ಏನಿದೆ? 

ಅಧಿಕಾರದಲ್ಲಿದ್ದವರು ಒಂದಷ್ಟು ಒಳ್ಳೆಯ ಕೆಲಸ ಮಾಡಿ ಒಂದಷ್ಟು ಕೆಟ್ಟ ಕೆಲಸ ಮಾಡಿ ಬಹಳಷ್ಟು ಬಾರಿ ಏನೂ ಮಾಡದೆ ಉಳಿದುಬಿಟ್ಟರು. ಅಧಿಕಾರಸ್ಥರಿಗಿಂತ ಹೆಚ್ಚು ವೈಫಲ್ಯಕಂಡಿದ್ದು ವಿರೋಧ ಪಕ್ಷಗಳು. ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ವಿರೋಧ ಪಕ್ಷವೊಂದು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದರ ಅರಿವೇ ಇಲ್ಲವೇನೋ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದೇ ವಿರೋಧ ಪಕ್ಷದ ಕೆಲಸ ಎಂದು ನಂಬಿದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾಪ ನಡೆಯದಂತೆ ಮಾಡುವುದೂ ಕೂಡ ಪ್ರಜಾಪ್ರಭುತ್ವದ ಒಂದು ಲಕ್ಷಣವೇ ಆದರೂ ಯಾವುದೂ ಅತಿಯಾಗಬಾರದಲ್ಲವೇ? ಹೋಗಲಿ ಇವರು ಕಲಾಪಕ್ಕೆ ಅಡ್ಡಿಪಡಿಸುವುದಕ್ಕೆ ಸರಿಯಾದ ಕಾರಣವಾದರೂ ಇದೆಯಾ? ತಮ್ಮ ಕೊರಳಿನ ಹಾರವಾದ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ ಕಲಾಪವನ್ಯಾಕೆ ಅಡ್ಡಿಪಡಿಸಬೇಕು? ಇನ್ನು ಜಿ.ಎಸ್.ಟಿ ಜಾರಿಯಾಗಲು ಬಿಡದಿರುವುದಕ್ಕೆ ರಾಜಕೀಯವನ್ನೊರತುಪಡಿಸಿದ ಕಾರಣಗಳಿವೆಯಾ ಕಾಂಗ್ರೆಸ್ಸಿಗೆ? ಜಿ.ಎಸ್.ಟಿ ಜಾರಿಯಾಗಬೇಕೆಂದು ಕನಸಿದ್ದೇ ಅವರ ಯು.ಪಿ.ಎ ಸರಕಾರ. ಆಗ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ. ಈಗ ಸ್ಥಾನಪಲ್ಲಟವಾಗಿರುವುದರಿಂದ ಬಿಜೆಪಿ ಜಿ.ಎಸ್.ಟಿ ಪರವಾಗಿ ಮಾತನಾಡುತ್ತಿದ್ದರೆ, ಕಾಂಗ್ರೆಸ್ ನೇರ ವಿರೋಧ ವ್ಯಕ್ತಪಡಿಸದಿದ್ದರೂ ಅದು ಜಾರಿಯಾಗಲು ಅವಕಾಶ ನೀಡಲಿಲ್ಲ. ರಾಜಕೀಯ ಪಕ್ಷದವರ ಮಾತುಗಳು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿದ್ದಾಗ ಹೇಗೆಲ್ಲಾ ಬದಲಾಗುತ್ತವೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ. ಹೆಚ್ಚುತ್ತಿರುವ ಬೇಳೆ ತರಕಾರಿಗಳ ಬೆಲೆಗಿಂತ ಒಳ್ಳೆಯ ವಿಷಯ ಬೇಕಿತ್ತೇ ಕಾಂಗ್ರೆಸ್ಸಿಗೆ ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯ ತೋರಿಸಲು? ಇದೇ ರೀತಿಯ ನಿಷ್ಕ್ರಿಯತೆ ಕರ್ನಾಟಕದ ವಿರೋಧ ಪಕ್ಷಗಳಲ್ಲೂ ಕಂಡು ಬಂತು. ಧಾರ್ಮಿಕ ವಿಚಾರಗಳನ್ನೊರತುಪಡಿಸಿ ಮತ್ಯಾವ ವಿಷಯದಲ್ಲೂ ಬಿಜೆಪಿ ಶಕ್ತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸದಿರುವುದು ಕರ್ನಾಟಕದ ದುರಂತ. ಟಿಪ್ಪು ಜಯಂತಿಯನ್ನು ಸರಕಾರ ಘೋಷಿಸಿದಾಗ ಅದನ್ನವರು ವಿರೋಧಿಸಿದ ರೀತಿಯಿಂದ ಸರಿಯಾದ ಕಾರಣಕ್ಕೆ ವಿರೋಧಿಸಿದ್ದರೆ ಒಂದು ಗೌರವವನ್ನಾದರೂ ಗಳಿಸುತ್ತಿತ್ತು. ಟಿಪ್ಪು ಜಯಂತಿಯ ಹೆಸರಿನಲ್ಲಿ ವಿನಾಕಾರಣದ ರಾಜಕೀಯ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಮೂರು ಜನರ ಹತ್ಯೆ ಮಾಡಿದವು. ಬಿಜೆಪಿಯ ಆಡಳಿತಾವಧಿಯಲ್ಲಿ ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದ ಜೆ.ಡಿ.ಎಸ್ಸಿನ ಕುಮಾರಸ್ವಾಮಿಯವರ್ಯಾಕೋ ಈಗ ಸುಮ್ಮನಾಗಿಹೋಗಿದ್ದಾರೆ. ಒಂದು ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ಮತ್ತೊಂದು ಕಡೆ ಕಾಂಗ್ರೆಸ್ಸಿನ ಚುಂಗು ಹಿಡಿಯುವುದು, ಜೆ.ಡಿ.ಎಸ್ ತನ್ನ ಸಾವನ್ನು ತಾನೇ ತೋಡಿಕೊಳ್ಳುತ್ತಿದೆ. ಪಕ್ಷವನ್ನು ಬಲಪಡಿಸುವ ಉದ್ದೇಶ ಯಾರಿಗೂ ಇದ್ದಂತಿಲ್ಲ. ಇಪ್ಪತ್ತು ತಿಂಗಳಿನ ಮುಖ್ಯಮಂತ್ರಿಯ ಅವಧಿಯಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಜನರು ಮರೆತಿದ್ದಾರೆ ಎನ್ನುವುದರ ಅರಿವು ಕುಮಾರಸ್ವಾಮಿಯವರಿಗಾಗಬೇಕು ಮತ್ತು ದೇವೇಗೌಡರ ಕುಟುಂಬದ ಬಿಗಿಹಿಡಿತದಿಂದ ಪಕ್ಷವನ್ನು ಬಿಡಿಸದೆ ಇದ್ದರೆ ಭವಿಷ್ಯತ್ತಿನಲ್ಲಿ ಕಷ್ಟವಿದೆ ಎನ್ನುವುದನ್ನು ತಿಳಿಯಬೇಕು. ಸದ್ಯಕ್ಕಂತೂ ಅದನ್ನೆಲ್ಲ ತಿಳಿಯುವ ಸಾಧ್ಯತೆ ಕಾಣುತ್ತಿಲ್ಲ.

ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ನಡೆಸುವುದನ್ನು ನಖಶಿಖಾಂತ ವಿರೋಧಿಸುತ್ತಿದ್ದ ಬಿಜೆಪಿ ಮತ್ತದರ ಬೆಂಬಲಿಗರಿಗೆ ವರುಷದ ಕೊನೆಯಲ್ಲಿ ಬಹುದೊಡ್ಡ ಆಘಾತ ಕೊಟ್ಟಿದ್ದು ಇದ್ದಕ್ಕಿದ್ದಂತೆ ದಾರಿ ಮಧ್ಯೆ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ ನರೇಂದ್ರ ಮೋದಿ. ಇದು ನರೇಂದ್ರ ಮೋದಿಯವರ ಚಾಣಾಕ್ಷ ನಡೆಯಾಗಿತ್ತು ಮತ್ತು ಸರಿಯಾದ ಹೆಜ್ಜೆಯಾಗಿತ್ತು. ನೆರೆಹೊರೆಯೊಂದಿಗೆ ಎಷ್ಟೇ ಕಷ್ಟನಷ್ಟವಾದರೂ ಸಹಬಾಳ್ವೆ ನಡೆಸುವ ಪ್ರಯತ್ನವನ್ನಾದರೂ ಮಾಡಬೇಕು. ಪಾಕಿಸ್ತಾನದೆಡೆಗೆ ಸ್ನೇಹದ ಹಸ್ತ ಚಾಚುತ್ತಲೇ ಅವರ ಕುತಂತ್ರಗಳ ಬಗ್ಗೆ ಎಚ್ಚರಿಕೆಯೂ ಇರಬೇಕು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಸ್ನೇಹದಿಂದಿರಬಾರದು ಎಂದು ಬಯಸುವವರ ಸಂಖೈ ಎರಡೂ ದೇಶಗಳಲ್ಲಿ ದಂಡಿಯಾಗಿದೆ. ಅಂತವರ ಕಿತಾಪತಿಯನ್ನು ತಡೆಯುವ ಪ್ರಯತ್ನವನ್ನು ನಿಲ್ಲಿಸಲೇಬಾರದು. ಪ್ರಧಾನಿಯವರ ಬಹಳಷ್ಟು ವಿದೇಶಿ ಪ್ರವಾಸಗಳಿಂದ ಆ ದೇಶಗಳ ಬಂಡವಾಳಶಾಹಿಗಳಿಗೆ ನೇರ ಅನುಕೂಲವಿದೆ. ಮೇಕ್ ಇನ್ ಇಂಡಿಯಾ ಎಂಬುದು ಭಾರತವನ್ನು ಮತ್ತೊಂದು ಚೀನಾವಾಗಿ ಪರಿವರ್ತಿಸುವ, ಉಸಿರಾಡಲೂ ಆಗದಷ್ಟು ಪರಿಸರವನ್ನು ಮಲಿನಗೊಳಿಸುವ ಯೋಜನೆ. ಕೇಂದ್ರ ಸರಕಾರದ ಹನಿಮೂನ್ ಸಮಯ ಮುಗಿದಿದೆ. ನೀಡಿದ ಭರವಸೆಗಳಲ್ಲಿ ಕೆಲವನ್ನಾದರೂ ಈಡೇರಿಸುವ ಜವಾಬ್ದಾರಿಯಿದೆ. ಕಾಂಗ್ರೆಸ್ ಪಕ್ಷವನ್ನು, ಹಿಂದಿನ ಸರಕಾರಗಳನ್ನು ಟೀಕಿಸುತ್ತ ಇನ್ನೂ ಸ್ವಲ್ಪ ಸಮಯ ಕೊಡಿ ಸಮಯ ಕೊಡಿ ಎಂದು ಹೇಳುವುದು ಇನ್ನು ಕರ್ಣಾನಂದಕರವಾಗಿರದು. ಬಂಡವಾಳಶಾಹಿತನಕ್ಕೆ ಕೆಂಪು ಹಾಸು ಹಾಕುವ ಸರಕಾರದ ನಿರ್ಧಾರಗಳು ಎಷ್ಟರಮಟ್ಟಿಗೆ ಎಲ್ಲರ ಅಭಿವೃದ್ಧಿಗೆ ಪೂರಕವಾಗುತ್ತವೆ? ಭಾರತವನ್ನು ಚೀನಾದ ರೀತಿ ಅಮೆರಿಕಾದ ರೀತಿ ಬೆಳೆಸುವ ಬದಲು ಭಾರತದ ರೀತಿಯಲ್ಲೇ ಉತ್ತಮಗೊಳಿಸಬಹುದಿತ್ತಾ? ಭವಿಷ್ಯವೇ ಉತ್ತರ ಹೇಳಬೇಕು. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ ಈಗ ಕೆಲಸ ಮಾಡುತ್ತಿರುವ ರೀತಿಯಲ್ಲೇ ಕೆಲಸ ಮಾಡಿದರೆ ಸಾಕು, ಮುಂದಿನ ಚುನಾವಣೆಯನ್ನು ಸಲೀಸಾಗಿ ಸೋತುಬಿಡಬಹುದು…. ಕ್ಯಾಲೆಂಡರ್ ಬದಲಾದರೆ ಭವಿಷ್ಯ ಬದಲಾಗುವುದಿಲ್ಲ, ಇರಲಿ, ಹೊಸ ವರುಷದ ಶುಭಾಷಯಗಳು.

Dec 26, 2015

'ಹಿಂದೂ ಹೃದಯ ಸಾಮ್ರಾಟ್' ಮೋದಿ ಇಂತ ಕೆಲ್ಸ ಮಾಡ್ಬೋದಾ?!

modi shariff
ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ದೊಡ್ಡ ಅಚ್ಚರಿಯನ್ನು ಭಾರತೀಯರೆಲ್ಲರಿಗೂ ನೀಡಿಬಿಟ್ಟಿದ್ದಾರೆ. ಯಾವೊಂದು ಸುಳಿವೂ ನೀಡದೆ ಪಾಕಿಸ್ತಾನಕ್ಕೆ ಒಂದು ಚಿಕ್ಕ ಭೇಟಿ ಕೊಟ್ಟು ಬಂದಿದ್ದಾರೆ. ಕಾಬೂಲಿನಿಂದ ಬರುವ ದಾರಿಯಲ್ಲಿ ಲಾಹೋರಿಗೂ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫರೊಡನೆ ಒಂದು ಚಿಕ್ಕ ಚರ್ಚೆ ನಡೆಸಿ ಬಂದಿದ್ದಾರೆ. ಕೊನೆಯ ಕ್ಷಣದಲ್ಲಿ ನಿರ್ಧಾರ ಮಾಡಲಾಗಿತ್ತಂತೆ. ಪ್ರಧಾನಿಯವರ ಈ ದಿಡೀರ್ ಭೇಟಿ ಹಲವರಿಗೆ ನುಂಗಲಾರದ ತುತ್ತಾಗಿಬಿಟ್ಟಿದೆ! ಅದರಲ್ಲೂ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಅಖಂಡ ಭಾರತದ ಪುನರ್ ನಿರ್ಮಾತೃರು ಎಂದು ನಂಬಿಕೊಂಡಿದ್ದವರಿಗೆ ಆಘಾತ ಸಹಿಸಿಕೊಳ್ಳಲಾಗುತ್ತಿಲ್ಲ! ಆಘಾತ ಮೂಡಿಸಿದ ಕೋಪದಿಂದ ಮೋದಿಯವರಿಗೆ ಬಯ್ಯುವಂತೆಯೂ ಇಲ್ಲ, ಕಾರಣ ಮೋದಿ 'ಹಿಂದೂ ಹೃದಯ ಸಾಮ್ರಾಟ್' ಎಂದೇ ಮೆಚ್ಚಿದ್ದರವರು! ಅವರಿವರು ಬಿಡಿ ಸ್ವತಃ ಮೋದಿ ಮತ್ತು ಬಿಜೆಪಿಯೇ ಹಿಂದಿನ ಸರಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದನ್ನು ಶತಾಯಗತಾಯ ವಿರೋಧಿಸುತ್ತಿತ್ತು. ಕುಹಕವಾಡುತ್ತಿತ್ತು. ಇನ್ನವರ ಬೆಂಬಲಿಗರೋ ಉಗ್ರರನ್ನು ಕಳುಹಿಸುವ ಶತ್ರುದೇಶದೊಂದಿಗೆ ಎಂತಹ ಮಾತುಕತೆ? ಯುದ್ಧ ಮಾಡಿ ಅವರನ್ನು ತರಿದು ಬಿಸಾಕಬೇಕು ಎಂದು ಅಬ್ಬರಿಸಿದ್ದೋ ಅಬ್ಬರಿಸಿದ್ದು. ಒಂದು ತಲೆಗೆ ಎರಡು ತಲೆ ತರಬೇಕೆಂದು ಅರಚಿದ ಕೂಗುಮಾರಿಗಳಿಗೂ ಬರವಿರಲಿಲ್ಲ. ಇನ್ನೇನು ಮೋದಿ ಪ್ರಧಾನಿಯಾದರು, ಪಾಕಿಸ್ತಾನದ ಕತೆ ಮುಗಿಯಿತು ಎಂದು ನಂಬಿಕೊಂಡಿದ್ದವರಿಗೆಲ್ಲ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದೇ ತಳಮಳ ಶುರುವಾಗಿಬಿಟ್ಟಿತು. ಮುಂಚೆ ಏನೋ ಕಾಂಗ್ರೆಸ್ ಸರಕಾರವಿತ್ತು. ಅವರನ್ನು ಖಾನ್ ಗ್ರೇಸ್ ಎಂದು ಟೀಕಿಸಿ, ಮನಮೋಹನಸಿಂಗರನ್ನು ಮೌನಮೋಹನಸಿಂಗ್ ಎಂದು ಜರೆದು, ಸೋನಿಯಾರನ್ನು ಇಟಲಿಯ ಏಜೆಂಟ್ ಎಂದು ಕರೆದು 'ದೇಶಭಕ್ತಿ'ಯ ಪ್ರದರ್ಶನ ಮಾಡಿದವರಿಗೆಲ್ಲ ಅಪ್ಪಟ ಭಾರತೀಯ ಸಂಸ್ಕೃತಿಯ ಹೆಣ್ಣುಮಗಳಾದ ಸುಷ್ಮಾ ಸ್ವರಾಜರನ್ನು ಟೀಕಿಸುವುದು ಹೇಗೆ ಎಂದೇ ತಿಳಿಯಲಿಲ್ಲ! 
ಸುಷ್ಮಾ ಸ್ವರಾಜರನ್ನು ಟೀಕಿಸುವುದಕ್ಕೆ ಪದಗಳನ್ನು ಹುಡುಕುತ್ತಿದ್ದವರಿಗೆ ಈಗ ಮೋದಿ ಅತಿ ದೊಡ್ಡ ಅಚ್ಚರಿ ನೀಡಿಬಿಟ್ಟಿದ್ದಾರೆ. ಹೋಗುವ ಕ್ಷಣಗಳ ಮುಂಚೆ ಟ್ವಿಟರಿನಲ್ಲಿ ಬರೆದುಕೊಂಡಾಗಷ್ಟೇ ಮೋದಿಯವರ ಪಾಕಿಸ್ತಾನ ಭೇಟಿ ಎಲ್ಲರಿಗೂ ತಿಳಿದಿದ್ದು. ಯುದ್ಧೋತ್ಸಾಹದಲ್ಲಿದ್ದವರಿಗೆ ನಿರಾಸೆಯಾಗಿರಬೇಕು! ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ನಡೆಯಬಾರದೆಂದವರು, ಪಾಕಿಸ್ತಾನಿ ಕಲಾವಿದರ, ಲೇಖಕರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರಿಗೆಲ್ಲ ಈ ಭೇಟಿಯಿಂದ ಎಷ್ಟೆಲ್ಲ ತಳಮಳಗಳು ಸೃಷ್ಟಿಯಾಗಿರಬಹುದು! ಮೋದಿ ವಿರುದ್ಧ, ಬಿಜೆಪಿಯ ವಿರುದ್ಧ ಮಾತನಾಡಿದವರನ್ನೆಲ್ಲ ಪಾಕಿಸ್ತಾನಕ್ಕೆ ಹೋಗಿ, ಪಾಕಿಸ್ತಾನದ ಟಿಕೆಟ್ ಕೊಡಿ ಎಂದು ಅಬ್ಬರಿಸಿದವರಿಗೆ ಸ್ವತಃ ಮೋದಿಯೇ ಪಾಕಿಸ್ತಾನಕ್ಕೆ ಹೋಗಿಬಿಟ್ಟಿರುವುದು ಎಷ್ಟೆಲ್ಲ ಯಾತನೆ ಕೊಟ್ಟಿರಬಹುದು. ಸುಳ್ಸುದ್ದಿ ಮೂಲದ ಪ್ರಕಾರ ತನ್ನ ಭಕ್ತರು ಅಸಂಖ್ಯಾತ ಜನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿರುವುದರಿಂದ 'ಹಾಗೆ ಯಾರಾದರೂ ಬಂದುಬಿಟ್ಟರೆ ಅವರ ಬಗ್ಗೆ ಎಚ್ಚರಿಕೆಯಿಂದಿರಿ. ಆಡಳಿತದಲ್ಲಿನ ಹುಳುಕುಗಳನ್ನೆಲ್ಲ ಎತ್ತಿ ತೋರಿಸುವ ಡೇಂಜರಸ್ ಗ್ಯಾಂಗ್ ಅದು' ಎಂದು ಹೇಳಲೆಂದೇ ಹೋಗಿದ್ದರಂತೆ.
ಭಕ್ತರ ಸುದ್ದಿ ಅತ್ಲಾಗಿರಲಿ, ಪ್ರಧಾನಿಯಾಗುವುದಕ್ಕೆ ಮುಂಚೆ ಸ್ವತಃ ಮೋದಿಯೇ ಇಂತಹುದ್ದನ್ನು ವಿರೋಧಿಸುತ್ತಿದ್ದರೇನೋ. ಈಗ ಕಾಂಗ್ರೆಸ್ ಅಪಸ್ವರ ಎತ್ತುತ್ತಿರುವಂತೆ. ಅದೆಲ್ಲ ದೇಶದೊಳಗಡೆ ಮತವನ್ನರಸುವ ರಾಜಕೀಯ. ಪ್ರಧಾನಿ ಸ್ಥಾನಕ್ಕೆ ಬಂದ ಮೇಲೆ ಈ ಆಧುನಿಕ ಕಾಲದಲ್ಲಿ ಯಾವ ಯುದ್ಧಗಳನ್ನೂ ಗೆಲ್ಲಲಾಗುವುದಿಲ್ಲ, ಶಾಂತಿ ಉಳಿಸಿಕೊಳ್ಳಲು ಸಾಧ್ಯವಾಗುವುದು ಮಾತುಕತೆಯಿಂದಲೇ ಹೊರತು ಯುದ್ಧದಿಂದಲ್ಲ ಎನ್ನುವುದರ ಅರಿವೂ ಆಗಲೇಬೇಕು. ಸುಷ್ಮಾ ಸ್ವರಾಜರ ಪಾಕಿಸ್ತಾನ ಭೇಟಿ, ಈಗ ಮೋದಿಯವರ ಪಾಕಿಸ್ತಾನ ಭೇಟಿಯೆಲ್ಲವೂ ಇದಕ್ಕೆ ಪೂರಕವಾಗಿಯೇ ಇದೆ. ಈ ಭೇಟಿಯಿಂದ ಪಾಕಿಸ್ತಾನ ಶಾಂತಿ ಪ್ರೇಮ ರಾಷ್ಟ್ರವಾಗಿಬಿಡುತ್ತದೆ ಎಂದೆಲ್ಲ ನಂಬಿಬಿಟ್ಟರೆ ವಾಜಪೇಯಿ ಪಾಕಿಗೆ ಭೇಟಿ ಕೊಟ್ಟ ನಂತರ ಪಾಕಿಗಳು ಉಡುಗೊರೆಯಾಗಿ ಕೊಟ್ಟ ಕಾರ್ಗಿಲ್ ಯುದ್ಧದ ಮರುಕಳಿಸಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸದಾ ಕಾಲ ದ್ವೇಷವಷ್ಟೇ ಇರಬೇಕು ಎಂದು ಬಯಸುವವರ ಸಂಖೈ ಎರಡೂ ದೇಶದಲ್ಲಿ ದೊಡ್ಡದಿದೆ. ಒಂದಷ್ಟು ಶಾಂತಿಯ ಕೆಲಸ ನಡೆಯುತ್ತಿರುವಂತೆಯೇ ಆ ಶಾಂತಿ ಕದಡಲು ನಡೆಯುವ ಪ್ರಯತ್ನಗಳು ಹೆಚ್ಚಾಗುವ ಅಪಾಯವನ್ನು ಎರಡೂ ದೇಶದವರು ಗ್ರಹಿಸಿದರಷ್ಟೇ ಇಂತಹ ಸೌಹಾರ್ದಯುತ ಭೇಟಿಗಳಿಗೆ ಮಹತ್ವ.

Dec 25, 2015

ಧರ್ಮ ರಕ್ಷಕರ ಅಮೋಘ 'ಸಂಸ್ಕ್ರತಿ'!

ಈ ಯಮ್ಮನ ಫೋಟೋ ಎರಡು ಮೂರು ದಿನದಿಂದ ಫೇಸ್ ಬುಕ್ಕಿನ ಸ್ನೇಹಿತರ ಗೋಡೆಯಲ್ಲೆಲ್ಲಾ ಕಾಣಿಸಿಕೊಂಡಾಗ ಎಲ್ಲೋ ನೋಡಿದ ನೆನಪು ಕಾಡುತ್ತಿತ್ತು. ಕೊನೆಗೆ ಹೊಳೆಯಿತು. ಪತ್ರಕರ್ತ ನವೀನ್ ಸೂರಿಂಜೆ ಬಂಧನವಾಗಿದ್ದಾಗ ಮಂಗಳೂರು ನ್ಯಾಯಾಲಯದ ಬಳಿ ವಕೀಲರೊಂದಿಗೆ ಕೇಸಿನ ಬಗ್ಗೆ ಚರ್ಚಿಸುತ್ತ ಲವಲವಿಕೆಯಿಂದ ಓಡಾಡುತ್ತಿದ್ದರು ವಿದ್ಯಾ ದಿನಕರ್. ಫೇಸ್ ಬುಕ್ಕಿನಲ್ಲಿ ಹಲವು ಜನರ ಅವಹೇಳನಕಾರಿ ಹೇಳಿಕೆಗಳಿಗೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗೆ ಒಳಗಾಗಿದ್ದಾರೆ ವಿದ್ಯಾ ದಿನಕರ್. ಕಾರಣ? ದಿಲ್ವಾಲೆ ಸಿನಿಮಾದ ಪ್ರದರ್ಶನಕ್ಕೆ ಮಂಗಳೂರಿನ 'ದೇಶಪ್ರೇಮಿ'ಗಳು ಅಡ್ಡಿಪಡಿಸಿದ್ದರ ಬಗ್ಗೆ ದೂರು ದಾಖಲಿಸಿದ್ದು. ವಿದ್ಯಾ ದಿನಕರ್ ಹಿನ್ನೆಲೆಯೇನು, ಅವರ ಹೋರಾಟದ ಹಾದಿಯೇನು ಎನ್ನುವುದರ ಬಗ್ಗೆ ಕಿಂಚಿತ್ತೂ ಗೊತ್ತಿರದ (ಅಥವಾ ಗೊತ್ತಿದ್ದರೂ ಮಾಡುತ್ತಾರೋ?) ವೀರ ಕೇಸರಿ ಎಂಬ ಫೇಸ್ ಬುಕ್ ಗೋಡೆಯಲ್ಲಿ ವಿದ್ಯಾ ದಿನಕರ್ ರನ್ನು ಟೀಕಿಸಿ ಒಂದು ಪೋಸ್ಟ್ ಹಾಕಲಾಗುತ್ತದೆ. (ಚಿತ್ರ ನೋಡಿ) ಆ ಪೋಸ್ಟಿನಲ್ಲಿ ಟೀಕೆಯಿತ್ತು, ಅದು ಸತ್ಯವೋ ಅಸತ್ಯವೋ ಬಿಟ್ಟು ಬಿಡಿ ಟೀಕಿಸುವ ಹಕ್ಕು ಎಲ್ಲರಿಗೂ ಇರುತ್ತದೆ. 'ದೇಶಪ್ರೇಮಿ' ಭಜರಂಗದಳದವರ ಘನಂದಾರಿ ಕೆಲಸದ ಬಗ್ಗೆ ದೂರು ನೀಡಿದ ಕಾರಣಕ್ಕೆ ಪಾಕಿಸ್ತಾನದವಳು ಎಂದೆಲ್ಲ ಟೀಕಿಸುವುದು ಯಾವ ಕಾರಣಕ್ಕೋ? ಅದಕ್ಕೆ ಬಂದ ಕಮೆಂಟುಗಳು ನಾಗರೀಕವೆನ್ನಿಸಿಕೊಳ್ಳುವ ಸಮಾಜ ಬೆಚ್ಚಿ ಬೀಳುವಂತಿತ್ತು. ಕಮೆಂಟುಗಳನ್ನು ನೋಡಿದ ಮೇಲೆ ಹೋಗ್ಲಿ ಬಿಡಿ ಪೋಸ್ಟೇ ವಾಸಿ ಎನ್ನಿಸಿದರೆ ಸುಳ್ಳಲ್ಲ!
ಬೇವರ್ಸಿ, ನಾಯಿ, ಪಾಕಿಸ್ತಾನದವರಿಗೆ ಹುಟ್ಟಿದೋಳು, ಬಿಚ್ ತರಹದ ಸಾಮನ್ಯ ಪದಪುಂಜಗಳು 'ದೇಶಪ್ರೇಮಿ'ಗಳ ಕಮೆಂಟುಗಳಲ್ಲಿ ಎದ್ದು ಕಾಣಿಸುವುದು ಅಚ್ಚರಿಯ ವಿಷಯವೇನಲ್ಲ. ಈ ಕಮೆಂಟುಗಳ ನಡುವೆ ಮಧುಪ್ರಸಾದ್ ಎಂಬ ವ್ಯಕ್ತಿ 'ಇಂತವಳನ್ನು ರೇಪ್ ಮಾಡಿ ಕೊಲೆ ಮಾಡಬೇಕು' ಎಂದು ಉದ್ಗರಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟಿಸುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಏನೋ ಹುಡುಗ ಬಾಯಿಗೆ ಬಂದಂತೆ ಬೊಗಳುತ್ತಿದ್ದಾನೆ ಎಂದು ಸುಮ್ಮನಿದ್ದುಬಿಡಬಹುದಿತ್ತೋ ಏನೋ. ಆದರೆ ಇತ್ತೀಚಿನ ವಿದ್ಯಮಾನಗಳು ಸುಮ್ಮನಿರುವುದು ಎಷ್ಟರಮಟ್ಟಿಗೆ ಅಪಾಯಕಾರಿ ಎಂದು ತಿಳಿಸಿ ಹೇಳುತ್ತಿವೆ. ಕಲಬುರ್ಗಿಯವರ ಹತ್ಯೆಯಾದಾಗ ಭುವಿತ್ ಶೆಟ್ಟಿ ಎಂಬ ಯುವಕ ಹತ್ಯೆಯನ್ನು ಸಂಭ್ರಮಿಸುವ ಪೋಸ್ಟ್ ಹಾಕಿ ಮುಂದಿನ ಸರದಿ ನಿನ್ನದೇ ಕಣೋ ಭಗವಾನ್ ಎಂದು ಬರೆದುಕೊಂಡಿದ್ದ. ದೂರು ದಾಖಲಾಗಿ ಅವನನ್ನು ಬಂಧಿಸಲಾಯಿತು. ಏನೋ ಬಾಯಿಗೆ ಬಂದಿದ್ದು ಬರ್ಕೊಂಡಿದ್ದಾನೆ ಎಂದು ಪೋಲೀಸರು ಅವನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಲಿಲ್ಲವಾ? ಬಂಧನವಾದಷ್ಟೇ ವೇಗದಲ್ಲಿ ಬಿಡುಗಡೆಯೂ ಆಯಿತು. ಕೆಲವು ದಿನಗಳ ನಂತರ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಸೃಷ್ಟಿಸಲಾದ ಕೋಮು ಗಲಭೆಯ ಸಂದರ್ಭದಲ್ಲಿ ಹರೀಶ್ ಎಂಬ ಯುವಕನ ಹತ್ಯೆಗೆ ಸಂಬಂಧಪಟ್ಟಂತೆ ಭುವಿತ್ ಶೆಟ್ಟಿ ಬಂಧಿತನಾದ. ಮುಸ್ಲಿಮನನ್ನು ಕೊಲ್ಲಲು ಹೋಗಿ 'ಮಿಸ್ಟೇಕಿ'ನಿಂದ ಹರೀಶನನ್ನು ಕೊಂದುಹಾಕಿದ್ದರು ಭುವಿತ್ ಮತ್ತು ಗೆಳೆಯರು. ಸಾಮಾಜಿಕ ಜಾಲತಾಣದ ಬೆದರಿಕೆಗಳು ನಿಜವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾ ದಿನಕರ್ ರವರನ್ನು ರೇಪ್ ಮಾಡಿ ಕೊಲೆ ಮಾಡಬೇಕು ಎಂಬ ಕಮೆಂಟಿನ ಬಗ್ಗೆ ನಕ್ಕು ಸುಮ್ಮನಾಗುವುದು ಸಾಧ್ಯವೇ? 
ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲಿನ ಎದುರು ವಿದ್ಯಾ ದಿನಕರ್ ರವರಿಗೆ ಬೆಂಬಲ ಸೂಚಿಸುತ್ತ ಬೆದರಿಕೆ ಹಾಕಿದವರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆಯಿದೆ.

ಅಬ್ಬರದ ವೈಭವಕ್ಕೆ ಬೆದರಿದ ಕತೆ

ಯಶ್ ಅಭಿನಯದ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ‘ಮಾಸ್ಟರ್ ಪೀಸ್’ ಚಿತ್ರ ಇಂದು ತೆರೆಕಂಡಿದೆ. ಬುಕ್ ಮೈ ಶೋನಲ್ಲಿ ಒಂದು ದಿನ ಮೊದಲೇ ಏಳು ಸಾವಿರ ಟಿಕೇಟುಗಳು ಮಾರಾಟವಾದ ದಾಖಲೆ, ಕರ್ನಾಟಕದಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ, ಸಂಭಾಷಣೆಕಾರನಾಗಿ ಖ್ಯಾತಿ ಪಡೆದಿದ್ದ ಮಂಜು ಮಾಂಡವ್ಯ ನಿರ್ದೇಶನದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಮಾಸ್ಟರ್ ಪೀಸ್ ಹೇಗಿದೆ? ಚಿತ್ರದ ನಿರೀಕ್ಷೆ ಹೆಚ್ಚಲು ಯಶ್ ಅಭಿನಯದ ಚಿತ್ರಗಳು ಸಾಲು ಸಾಲು ಗೆದ್ದಿದ್ದು, ಮಾಸ್ಟರ್ ಪೀಸ್ ಚಿತ್ರದ ಮೊದಲ ಟ್ರೇಲರಿನಲ್ಲಿ ಭಗತ್ ಸಿಂಗ್ ವೇಷದಲ್ಲಿ ಯಶ್ ಮಿಂಚಿದ್ದು, ಮಾಸ್ಟರ್ ಪೀಸ್ ಚಿತ್ರದ ಅಣ್ಣಂಗೇ ಲವ್ ಆಗಿದೆ ಹಾಡಿನ ಯಶಸ್ಸು ಕಾರಣ. ಚಿತ್ರ ನಿರೀಕ್ಷಿತ ಮಟ್ಟ ಮುಟ್ಟುತ್ತದೆಯಾ?

ಹೊಸ ನಿರ್ದೇಶಕನ ಮೊದಲ ಸಿನಿಮಾದಲ್ಲಿ ಕತೆಯಲ್ಲಿ ಹೊಸತನವನ್ನು ನಿರೀಕ್ಷಿಸುವುದು ಸಹಜ. ತುಂಬ ಹೊಸತನವಿಲ್ಲದ ಕತೆಯನ್ನು ಆಯ್ದುಕೊಂಡಿದ್ದಾರೆ ನಿರ್ದೇಶಕರು. ಒಬ್ಬ ಉಡಾಳ ಹುಡುಗ, ರೌಡಿ ಎಲಿಮೆಂಟೆಂದು ಕರೆಸಿಕೊಳ್ಳಬೇಕೆಂಬ ಹಪಾಹಪಿ ಇರುವಾತ. ಬಹಳಷ್ಟು ಹುಡುಗರಿಗೆ ಒಂದು ಹಂತದಲ್ಲಿ ರೌಡಿ ಎಲಿಮೆಂಟು, ಅಣ್ಣ, ಭಾಯ್ ಅಂತೆಲ್ಲ ಕರೆಸಿಕೊಳ್ಳುವ ಚಟವಿರುತ್ತದೆ. ಕೆಲವರಿಗೆ ಆ ಚಟ ಶಾಲೆ ಮುಗಿಸುವಷ್ಟರಲ್ಲಿ ಮುಗಿದರೆ ಹಲವರಿಗೆ ಪಿಯುಸಿಯಲ್ಲಿ ಮುಗಿಯುತ್ತದೆ. ಎಲ್ಲೋ ಕೆಲವರಿಗೆ ಡಿಗ್ರಿಗೆ ಸೇರಿದರೂ ರೌಡಿಯಾಗುವ ಆಸೆ ಬತ್ತಿರುವುದಿಲ್ಲ. ಅಂತಹ ವ್ಯಕ್ತಿತ್ವ ಚಿತ್ರದ ನಾಯಕ ‘ಯುವ’ನದ್ದು. ಅಣ್ಣನೆನ್ನಿಸಿಕೊಳ್ಳುವ ಭರದಲ್ಲಿ ನಾಯಕನೆದುರಿಸುವ ಸವಾಲುಗಳು, ಮಗನನ್ನು ದೇಶಪ್ರೇಮಿ ಮಾಡಬೇಕೆನ್ನುವ ನ್ಯಾಯಾಲಯದಲ್ಲಿ ಕೆಲಸ ಮಾಡುವ ತಾಯಿ (ಸುಹಾಸಿನಿ) ರೌಡಿ ಮಗನ ಬಗ್ಗೆ ಬೆಳೆಸಿಕೊಳ್ಳುವ ದ್ವೇಷ ಮತ್ತು ಆ ದ್ವೇಷ ಹೇಗೆ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಹಲವು ಸಾಧ್ಯತೆಗಳಿದ್ದ ಕತೆ ಹೀರೋಯಿಸಮ್ಮಿನ ಸೂತ್ರಕ್ಕೆ ಸಿಲುಕಿ ನಲುಗಿ ಹೋಗಿದೆ. ಒಂದು ಲವ್ ಸ್ಟೋರಿ ಇಲ್ಲದಿದ್ದರೆ ಸಿನಿಮಾ ಪೂರ್ಣವಾಗುವುದಿಲ್ಲ ಎನ್ನುವ ಕಾರಣಕ್ಕೆ ಹೀರೋಯಿನ್ ಇದ್ದಾಳೆ, ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿ ಮನಗೆಲ್ಲುತ್ತಾಳೆ ನಾಯಕಿ ಶಾನ್ವಿ ಶ್ರೀವಾಸ್ತವ್. ಯಶ್ ನ ಪ್ರಭಾವಳಿಯನ್ನು ಮೀರಿ ಬೆಳೆವ ಪಾತ್ರದಲ್ಲಿ ಚಿಕ್ಕಣ್ಣ. ರೌಡಿ ಎಲಿಮೆಂಟಿನ ಸಹಾಯದಿಂದ ಗೆಲ್ಲುವ ನೂರ್ ಅಹಮದ್ ಪಾತ್ರದಲ್ಲಿ ಅಚ್ಯುತ್; ಅಚ್ಯುತ್ ಅಭಿನಯದ ಬಗ್ಗೆ ಕಮೆಂಟಿಸುವ ಅಗತ್ಯವಿಲ್ಲ. ಮೊದಲಾರ್ಧವಿಡೀ ನಾಯಕನೊಳಗಿನ ರೌಡಿ ಎಲಿಮೆಂಟನ್ನು ವಿಜ್ರಂಭಿಸುವ ಕೆಲಸ. ನನ್ನ ಫೋಟೋ ದೊಡ್ಡದಾಗಿ ಹಾಕಿಲ್ಲ ಎಂದು ಸಂಪಾದಕನ ಕೈಚುಚ್ಚುವ ನಾಯಕ, ರಾಜಕಾರಣಿಯೊಬ್ಬನ ಗೆಲುವಿಗೆ ಹಣ ಹಂಚುವ ಐಡಿಯಾ ಕೊಡವ ನಾಯಕ, ಹಣ ಮಾಡಲು ಶಾರ್ಟು ಕಟ್ಟುಗಳನ್ನುಡುಕುವ ನಾಯಕ – ಒಟ್ಟಾರೆ ಮೊದಲಾರ್ಧದಲ್ಲಿ ಯಶ್ ನೇ ಖಳನಾಯಕ! ಮೊದಲಾರ್ಧದ ಖಳನಾಯಕನನ್ನು ಎರಡನೇ ಅರ್ಧದಲ್ಲಿ ನಾಯಕನನ್ನಾಗಿ ಮಾಡಲು ಡ್ರಗ್ ಮಾಫಿಯಾದ ಬಾಸ್ ರವಿಶಂಕರ್ ಪ್ರವೇಶವಾಗುತ್ತದೆ. 

ರವಿಶಂಕರನ ಸಾಮ್ರಾಜ್ಯವನ್ನು ಮಟ್ಟ ಹಾಕಲು ನಂತರದ ಚಿತ್ರ ಮೀಸಲು. ಮಾಸ್ ಪಿಚ್ಚರುಗಳಲ್ಲೂ ಮೊದಲರ್ಧ ಬಿಲ್ಡಪ್ಪು ನಂತರ ಕತೆ ಎನ್ನುವ ಸೂತ್ರವಿರುತ್ತದೆ. ಇಲ್ಲಿ ಎರಡನೇ ಅರ್ಧವೂ ಬಿಲ್ಡಪ್ಪುಗಳಿಂದಲೇ ತುಂಬಿ ಹೋಗಿದೆ. ಫೈಟಿನ ಮೇಲೆ ಫೈಟುಗಳಿವೆ, ಒಂದೆರಡು ವಿಭಿನ್ನವಾಗಿವೆ. ಆದರೂ ಎಷ್ಟೂಂತ ಬಿಲ್ಡಪ್ಪುಗಳನ್ನು ನೋಡುವುದು. ಚಿಕ್ಕಣ್ಣ ಇಲ್ಲದಿದ್ದರೆ ಯಶ್ ನನ್ನು ತಡೆದುಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು! ರೌಡಿ ಎಲಿಮೆಂಟು ಬದಲಾಗುವುದಿಲ್ಲ, ತನ್ನ ರೌಡಿ ಎಲಿಮೆಂಟಿನಿಂದಲೇ ಒಳ್ಳೆಯವನೆಂಬ ಹೆಸರು ಗಳಿಸಿಬಿಡುತ್ತಾನೆ! ರೌಡಿಯ ಬೆಂಬಲಿಗರನ್ನು ಕಂಡ ತಾಯಿ ಅದನ್ನು ಭಗತ್ ಸಿಂಗ್ ಗೆ ಸಿಕ್ಕ ಬೆಂಬಲ ಎಂಬಂತೆ ಕಲ್ಪಿಸಿಕೊಳ್ಳುವುದು ಕಾಮಿಡಿಯಾ ಟ್ರ್ಯಾಜಿಡಿಯಾ ಗೊತ್ತಾಗುವುದಿಲ್ಲ. ಹಾಡುಗಳು ಚಿತ್ರದ ವೇಗಕ್ಕೆ ಪೂರಕವಾಗಿವೆ, ಮೂರು ತಿಂಗಳುಗಳಿಗಿಂತ ಹೆಚ್ಚಾಗಿ ತಲೆಯಲ್ಲುಳಿಯುವುದಿಲ್ಲ. ಚಿತ್ರದ ವೈಭವಕ್ಕೆ ಯಾವುದೇ ಕೊರತೆಯುಂಟುಮಾಡಿಲ್ಲ ನಿರ್ಮಾಪಕರಾದ ವಿಜಯ್ ಕಿರಗಂದೂರು. ಸಂಭಾಷಣೆಕಾರ ನಿರ್ದೇಶಕನಾಗಿರುವುದರಿಂದ ಪಂಚಿಂಗ್ ಡೈಲಾಗುಗಳು ಬಹಳಷ್ಟಿವೆ, ಕೆಲವೊಂದೆಡೆ ಮೌನದ ಜಾಗವನ್ನೂ ಮಾತು ಆವರಿಸಿಕೊಂಡುಬಿಟ್ಟಿದೆ. ಮೌನಕ್ಕಿರುವ ಬೆಲೆ ಚಿತ್ರದ ಪ್ರಾರಂಭದಲ್ಲಿ ಒಂದು ಪುಟ್ಟ ತುಣುಕಾಗಿ ಬರುವ ಭಗತ್ ಸಿಂಗ್ ನ ಕತೆಯಲ್ಲಿ ಗೋಚರವಾಗುತ್ತದೆ. ನಂತರ ಮಾತಿನದ್ದೇ ಅಬ್ಬರ.

ಚಿತ್ರದ ಬಹುಮುಖ್ಯ ಕೊರತೆಯೆಂದರೆ ಬಿಲ್ಡಪ್ಪುಗಳು! ಚಿತ್ರಕ್ಕೆ ಸಂಬಂಧಪಟ್ಟಂತ ಅನೇಕ ಸಂದರ್ಶನಗಳಲ್ಲಿ ಯಶ್ ಪದೇ ಪದೇ Involvementನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ನ ‘ಇನ್ವಾಲ್ವ್ ಮೆಂಟ್’ ಎದ್ದು ಕಾಣುತ್ತದೆ. ಮೊದಲರ್ಧದ ಅನೇಕ ದೃಶ್ಯಗಳು ಅವರ ಹಿಂದಿನ ಚಿತ್ರ ರಾಮಾಚಾರಿಯನ್ನು ನೆನಪಿಸುತ್ತದೆ! ಮಾಧ್ಯಮವನ್ನು ಅವಹೇಳನ ಮಾಡಲು ಆ ಚಿತ್ರದಲ್ಲಿ ಕಾವೇರಿ – ಸುವರ್ಣ ಎಂಬ ಪಾತ್ರವಿತ್ತು. ಈ ಚಿತ್ರದಲ್ಲಿ ಮಾಧ್ಯಮವನ್ನು ಹೀಗಳೆಯುವ ಹತ್ತಲವು ಡೈಲಾಗುಗಳು ಬಂದು ಹೋಗುತ್ತವೆ. ಇಡೀ ಚಿತ್ರವನ್ನು ಯಶ್ ಆವರಿಸಿಕೊಂಡುಬಿಟ್ಟಿರುವುದೇ ಚಿತ್ರಕ್ಕೆ ದೊಡ್ಡ ಶಾಪ. ಬಹುಶಃ ಇದು ಅವರ ಇನ್ವಾಲ್ವ್ ಮೆಂಟಿನ ಕಾರಣಕ್ಕಾಯಿತಾ? ನಟನ ಇನ್ವಾಲ್ವ್ ಮೆಂಟ್ ನಟನೆಯಲ್ಲಿರಬೇಕು, ನೃತ್ಯ ನಿರ್ದೇಶಕನ ಇನ್ವಾಲ್ವ್ ಮೆಂಟ್ ನೃತ್ಯದಲ್ಲಿರಬೇಕು, ಎಲ್ಲದರಲ್ಲೂ ಇನ್ವಾಲ್ವ್ ಆಗುವ ಹಕ್ಕಿರುವುದು ನಿರ್ದೇಶಕರಿಗೆ ಮಾತ್ರ ಎನ್ನುವ ಅಂಶ ಯಶ್ ನ ನೆನಪಿನಲ್ಲಿರದಿದ್ದರೆ ಮುಂದೆ ಅವರು ನಟಿಸುವ ಚಿತ್ರಗಳನ್ನು ನೋಡುವ ಪ್ರೇಕ್ಷಕರಲ್ಲಿ ಅವರ ಅಭಿಮಾನಿಗಳು ಮಾತ್ರ ಇರುತ್ತಾರೆ. ಉಳಿದ ಪ್ರೇಕ್ಷಕರು ಇನ್ ವಾಲ್ವ್ ಆಗುವುದಿಲ್ಲ!
Masterpiece (Kannada movie)
Direction: Manju Mandavya
Starcast: Yash, Shanvi srivastav, chikkanna, suhasini, achyut, avinash, ravishankar
Producer: Vijay kiragandur

Dec 22, 2015

ಪ್ರಭುತ್ವದ ಅಸಹಿಷ್ಣುತೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಈ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ದ ದಿನೇದಿನೇ ಪ್ರತಿಭಟನೆ ಹೆಚ್ಚಾಗುತ್ತಿದೆ. ಸಾಹಿತಿಗಳು,ಕಲಾವಿದರು,ವಿಜ್ಞಾನಿಗಳು ಮತ್ತು ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅಸಹಿಷ್ಣುತೆಯ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿ ತಮ್ಮ ಪ್ರತಿಭಟನೆಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂತಹ ಪ್ರತಿಭಟನೆಗೆ ಎರಡು ನೆಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿವೆ. ಮೊದಲನೆಯದರ ಪ್ರಕಾರ ಇಂಡಿಯಾದಲ್ಲಿ ಅಸಹಿಷ್ಣುತೆಯೆನ್ನುವುದೇ ಇಲ್ಲ, ಇದ್ದರೂ ಅದು ಹಿಂದೂ ಧರ್ಮದ ವಿರುದ್ದ ಇತರೇ ಧರ್ಮದವರ ಮತ್ತು ಪ್ರಗತಿಪರರ ಅನಗತ್ಯ ಅಹನೆಯಷ್ಟೆ ಅನ್ನುವುದಾಗಿದೆ. ಇನ್ನು ಎರಡನೇಯದರ ಪ್ರಕಾರ ಇಂಡಿಯಾದಲ್ಲಿ ಅಸಹನೆಯಿರುವುದು ಹೊಸದೇನಲ್ಲ. ಸಾವಿರಾರು ವರ್ಷಗಳಿಂದಲೂ ಇಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಆದರೆ ಇಷ್ಟು ವರ್ಷಗಳÀ ಕಾಲ ಅದನ್ನು ವಿರೋಧಿಸದೇ ಸುಮ್ಮನಿದ್ದವರು ಈಗ ಬಾಜಪ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ವಿರೋಧಿಸುವುದು ಬಾಜಪದ ಬಗ್ಗೆ ಮತ್ತು ಅದರ ನೀತಿಗಳ ಬಗ್ಗೆ ಅವರಿಗಿರುವ ಅಸಹನೆಯನ್ನು ತೋರುತ್ತದೆ ಅನ್ನುವುದಾಗಿದೆ!

ಈ ಎರಡೂ ವಾದಗಳನ್ನು ಆಲಿಸಿದಾಗ ಒಂದಂತು ಸ್ಪಷ್ಟವಾಗುತ್ತದೆ. ಅದು ಅಸಹಿಷ್ಣುತೆಯ ವಿರುದ್ದದ ಪ್ರತಿಭಟನೆ ಎಂದಾಕ್ಷಣ ಯಾರು ಹೇಳದಿದ್ದರೂ ಅದು ತನ್ನ ವಿರುದ್ದವೇ ಎಂದು ಬಾಜಪ ಮತ್ತದರ ಸಂಘಪರಿವಾರ ಅರ್ಥಮಾಡಿಕೊಳ್ಳುವ ಮಟ್ಟಿಗಾದರು ಅದಕ್ಕೆ ತನ್ನ ಅಸಹನೆಯ ಬಗ್ಗೆ ಅರಿವಿದೆಯೆನ್ನುವುದು. 

ನಾನು ಎರಡನೆಯ ವಾದವನ್ನು ಭಾಗಶ: ಒಪ್ಪುತ್ತೇನೆ: ಯಾಕೆಂದರೆ ಐದು ಸಾವಿರ ವರ್ಷಗಳ ಇತಿಹಾಸವಿರುವ ಈ ನಾಡಿಗೆ ಅಸಹಿಷ್ಣುತೆ ಹೊಸತೇನಲ್ಲ! ಆದರದು ಸಾಂಪ್ರದಾಯಿಕ ಭಾರತೀಯ ಸಮಾಜದ ಕೊಡುಗೆಯಾಗಿತ್ತು. ಸನಾತನವೇ ಶ್ರೇಷ್ಠವೆಂದು ನಂಬಿಕೊಂಡು ಬಂದ ಸಮಾಜವೊಂದು ಅದೇ ಸಮಾಜದ ಕೆಳಸ್ತರದ ಜಾತಿ-ಜನಾಂಗಗಳ ಮೇಲೆ ತೋರಿಸುತ್ತಲೇ ಬಂದ ಅಸಹನೆಯದು. ಭಾರತೀಯ ಸಮಾಜದ ನ್ಯಾಯದ ಪರಿಕಲ್ಪನೆಯಲ್ಲೇ ಇದ್ದ ತಾರತಮ್ಯಗಳು, ಮೇಲುಕೀಳುಗಳು ಸಮಾಜದೊಳಗಿನ ಅಸಹಿಷ್ಣುತೆಗೆ ಕಾರಣವಾಗಿದ್ದವು. ಸನಾತನ ಸಮಾಜ ಒಪ್ಪಿಕೊಂಡ ಮೌಲ್ಯಗಳೇ ಶ್ರೇಷ್ಠವೆಂದು ಬಾವಿಸಿದಾಗ ಅದನ್ನು ಮೀರಲು ಯಾರೂ ಪ್ರಯತ್ನಿಸಬಾರದೆಂಬ ದೂರಾಲೋಚನೆಯಿಂದ ಹುಟ್ಟಿಕೊಂಡ ಅಸಹನೆ ಹಾಗೆ ಮೀರಬಹುದೆಂದು ಬಾವಿಸಿದ ವರ್ಗಗಳ ಮೇಲೆ ಮೇಲು ವರ್ಗಗಳು ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗಳನ್ನು ಹೇರತೊಡಗಿದ್ದವು. ಜೊತೆಗೆ ದೈಹಿಕವಾಗಿ ಹಲ್ಲೆಗಳೂ ನಡೆಯುತ್ತಿದ್ದವು. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ನ್ಯಾಯದ ಕಲ್ಪನೆಯೆನ್ನುವದು ಯಾವತ್ತಿಗೂ ಮೇಲ್ವರ್ಗಗಳ ಸ್ವತ್ತಾಗಿತ್ತು. ಹಾಗಾಗಿ ಮೇಲ್ಜಾತಿಗಳು ಸದಾ ದಲಿತರ ವಿರುದ್ದ ಒಂದು ಅಸಹನೆಯನ್ನು ತೋರುತ್ತಲೇ ಬಂದಿದ್ದವು. ಭಾರತೀಯ ಸಮಾಜ ಒಪ್ಪಿಕೊಂಡ ನ್ಯಾಯವ್ಯವಸ್ಥೆಯಲ್ಲಿ ಈ ನೆಲದ ಕೆಳಜಾತಿÀಗಳಿಗೆ ಯಾವುದೇ ಹಕ್ಕಾಗಲಿ ಅವಕಾಶವಾಗಲಿ ಇರಲಿಲ್ಲ. ಆದರೆ ಇಂತಹ ಅಸಹನೆಯಿಂದಾಗುತ್ತಿದ್ದ ಹಲ್ಲೆಗಳು ತೀರಾ ವೈಯುಕ್ತಿಕ ನಲೆಗಟ್ಟಿನಲ್ಲಿ ನಡೆಯುತ್ತಿದ್ದವು.

ಹೀಗಾಗಿಯೇ ಸಾಂಪ್ರದಾಯಿಕ ಭಾರತೀಯ ಸಮಾಜ ಒಪ್ಪಿಕೊಂಡ ಮೌಲ್ಯಗಳು ಯಾವತ್ತಿಗೂ ಕೆಳಜಾತಿಗಳ ಮತ್ತು ಅಲ್ಪಸಂಖ್ಯಾತರ ಮಟ್ಟಿಗೆ ಅನ್ಯವಾಗಿದ್ದವು ಮತ್ತು ಅವು ಅಂತಹ ಅಸಹಿಷ್ಣುತೆಯನ್ನು ವ್ಯಕ್ತಿಗತವಾಗಿಯೇ ಎದುರಿಸಬೇಕಾಗಿತ್ತು. ಎಲ್ಲಿಯವರೆಗು ಅಸಹಿಷ್ಣುತೆಯೆನ್ನುವುದು ವೈಯುಕ್ತಿಕ ನೆಲೆಯಲ್ಲಿ ನಡೆಯುತ್ತಿತ್ತೋ ಅಲ್ಲಿಯವರೆಗು ಅದನ್ನು ವೈಯಕ್ತಿಕ ನೆಲೆಗಟ್ಟಿಲ್ಲಿಯೇ ವಿರೋಧಿಸಲಾಗುತ್ತಿತ್ತು. ಹಾಗಾಗಿಯೇ ಬಲಪಂಥೀಯರು ಹೇಳುವಂತೆ ಹಿಂದೆಯೂ ಅಸಹಿಷ್ಣುತೆ ಇದ್ದರೂ ಜನರು ವೈಯುಕ್ತಿಕ ಮಟ್ಟದಲ್ಲಿ ಮಾತ್ರ ತೆಗೆದುಕೊಳ್ಳುತ್ತಿದ್ದರು ಅನಿಸುತ್ತೆ. ಹಾಗಾಗಿಯೇ ವೈಯುಕ್ತಿಕ ನೆಲೆಯಲ್ಲಿನ ಹಲ್ಲೆ ಅವಮಾನಗಳನ್ನು ನಾವಗಳು ಕೂಡ ವೈಯುಕ್ತಿಕವಾಗಿಯೇ ತೆಗೆದುಕೊಂಡು ಸಹಿಸಿಕೊಳ್ಳುತ್ತಿದ್ದೆವು.

ಆದರೆ ಇವತ್ತಿನ ಅಸಹಿಷ್ಣುತೆಯ ಬಗೆಯಗಲಿ ಹಗೆಯಾಗಲಿ ಬೇರೆ ತೆರನಾದ್ದು. ಸಾಂಪ್ರದಾಯಿಕ ಸಮಾಜದ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಧರ್ಮವೊಂದು ಹೇಗೆಲ್ಲ ತನ್ನ ಅಸಹನೆ ತೋರಬಹುದೊ ಅಂತಹದೊಂದು ಅಸಹಿಷ್ಣುತೆ ಇವತ್ತು ಇಂಡಿಯಾದಲ್ಲಿ ಗೋಚರಿಸುತ್ತಿದೆ. ಜೊತೆಗೆ ತನ್ನ ಮೂಲ ಸಿದ್ದಾಂತಗಳನ್ನು ಮತ್ತು ತಾನು ಯಾವುದನ್ನು ಶ್ರದ್ದೆ ಎನ್ನುತ್ತೇನೆಯೊ ಅದನ್ನು ಮೂಢನಂಬಿಕೆಯೆಂದು ಪ್ರತಿರೋಧಿಸುವ ಮನಸುಗಳ ವಿರುದ್ದವೂ ಅದು ಇನ್ನಿಲ್ಲದ ಅಸಹಿಷ್ಣುತೆ ಹೊರಹಾಕುತ್ತಿದೆ. ಧರ್ಮವೊಂದು ಪ್ರಭುತ್ವವಾಗುವಾಗ ತನ್ನ ಹಾದಿಗೆ ಅಡ್ಡಬಂದವರನ್ನು ಇನ್ನಿಲ್ಲವಾಗಿಸಿ ಭಯವನ್ನು ಸೃಷ್ಠಿಸುವ ರೀತಿ ಇದಾಗಿದೆ. ತಾನು ಪ್ರಭುತ್ವವಾಗದಿದ್ದರೂ ತನ್ನ ಹಿತ ಕಾಯುವ ಪ್ರಭುತ್ವವೊಂದು ಇದೆಯೆಂಬ ಅದರ ನಂಬಿಕೆಯೇ ಇವತ್ತು ಇಂಂಡಿಯಾದಲ್ಲಿ ಇಷ್ಟೊಂದು ಅಸಹಿಷ್ಣುತೆ ಹುಟ್ಟು ಹಾಕಲು ಕಾರಣವಾಗಿದೆ

ಪ್ರಭುತ್ವದ ಬೆಂಬಲವಿದ್ದಾಗ ನಡೆಯುವ ಹಲ್ಲೆಗಳು ಮಾರಣಾಂತಿಕವಾಗಿರುತ್ತವೆ. ಹೀಗಾಗಿಯೇ ದಾಬೋಲ್ಕರ್ ಮತ್ತು ಕಲಬುರ್ಗಿಯವರ ಹತ್ಯೆಗಳು ಬಹಳ ಸುಲಭವಾಗಿ ನಡೆದು ಹೋಗುತ್ತವೆ. ಯಾವಾಗ ಪ್ರಭುತ್ವದ ಪ್ರಾಯೋಜಿತ ಅಹಿಷ್ಣುತೆ ಜಾಸ್ತಿಯಗುತ್ತದೆಯೊ ಆಗದನ್ನು ವಿರೋಧಿಸುವುದು ಸಾಮೂಹಿಕವಾಗಿಯೇ ಅನಿವಾರ್ಯವಾಗುತ್ತದೆ. ಮತ್ತು ಇಂತಹ ವಿರೋಧ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡು ತೀವ್ರವಾಗುತ್ತದೆ. ಇವತ್ತು ಇಂಡಿಯಾದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆಯ ವಿರುದ್ದದ ಹೋರಾಟ ತೀವ್ರವಾಗಿರುವುದು ಈ ಕಾರಣಕ್ಕೇನೆ. ಹಿಂದೆ ಇದ್ದ ಅಸಹಿಷ್ಣುತೆಯ ವಿರುದ್ದ ಯಾಕೆ ಪ್ರತಿಭಟಿಸಲಿಲ್ಲ ಎಂದು ಕೇಳುವವರಿಗೆ ಇದು ಸಮಂಜಸ ಉತ್ತರವೆಂದು ನಾನಂತು ಬಾವಿಸುತ್ತೇನೆ.

Dec 21, 2015

ಮಹಾದೇವರು ಹೇಳಿದ ಮೇಕೆಯ ಕತೆ

devanooru mahadeva
ಜನನುಡಿ 2015ರ ಮೊದಲ ದಿನ ರಾತ್ರಿ ಊಟವಾದ ಮೇಲೆ ‘ಅಭಿಮತ’ ತಂಡದ ದಿಡೀರ್ ವಿಮರ್ಶಾತ್ಮಕ ಸಭೆ ನಡೆಯುತ್ತಿದ್ದಾಗ ಅವತ್ತು ರಾತ್ರಿಯೇ ಮೈಸೂರಿಗೆ ಹೊರಟಿದ್ದ ದೇವನೂರು ಮಹಾದೇವರವರು ಬಂದರು. ಜನನುಡಿಯನ್ನು ವ್ಯವಸ್ಥಿತವಾಗಿ ಆಯೋಜಿಸಿದ ಕಿರಿಯರನ್ನುದ್ದೇಶಿಸಿ ನೀವೆರಡು ಮಾತುಗಳನ್ನಾಡಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದಾಗ ‘ಓ ಮತ್ತೆ ಮತ್ತೆ ನನ್ನನ್ನು ನೀವು ಹಿರಿಯರು ಮಾಡಿಬಿಡ್ತಿದ್ದೀರಿ’ ಎಂದು ನಗುತ್ತ ಮಾತುಗಳನ್ನಾರಂಭಿಸಿದ ದೇವನೂರು ‘ಇಲ್ಲಿ ನಿಮಗೆಲ್ಲ ಧನ್ಯವಾದ ಹೇಳೋ ಅವಶ್ಯಕತೆಯೆಲ್ಲಾ ಇಲ್ಲವೇ ಇಲ್ಲ. ಇದನ್ನು ನೀವು ನಿಮಗಾಗಿ ಮಾಡಿದ್ದೀರಿ. ಯಾವಾಗಲೂ ನಾನು ನನಗಾಗಿ ಈ ಕೆಲಸ ಮಾಡ್ತಿದ್ದೀನಿ ಅಂದ್ಕೊಂಡೇ ಮಾಡಬೇಕು. ಸಮಾಜಕ್ಕಾಗಿ, ಉದ್ಧಾರಕ್ಕಾಗಿ ಮಾಡ್ತಿದ್ದೀನಿ ಅನ್ನೋ ಮಾತುಗಳನ್ನೆಲ್ಲಾ ಮರೆತು ನನಗಾಗಿ ಮಾಡ್ತಿದ್ದೀನಿ ಅಂದ್ಕೊಂಡು ಮಾಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಒಂದು ಮೇಕೆಯ ಕತೆ ಹೇಳ್ತೀನಿ ಕೇಳಿ. ಅಬ್ರಹಾಂ ಲಿಂಕನ್ ತನ್ನ ಗೆಳೆಯ ಸಚಿವನೊಂದಿಗೆ ಪಯಣಿಸುತ್ತಿರುತ್ತಾನೆ. ಜೋರು ಮಳೆ ಬರುತ್ತಿರುತ್ತೆ. ಚರ್ಚೆಯ ಸಂದರ್ಭದಲ್ಲಿ ಗೆಳೆಯನಿಗೆ ‘ನಾನು ಎಲ್ಲಾ ಕೆಲಸವನ್ನೂ ನನಗಾಗಿ ನನ್ನ ನೆಮ್ಮದಿ ಸುಖಕ್ಕಾಗಿಯಷ್ಟೇ ಮಾಡ್ತೇನೆ’ ಎನ್ನುತ್ತಾರೆ. ಇವರ ಮಾತುಗಳನ್ನು ಒಪ್ಪದ ಗೆಳೆಯ ಬಹಳಷ್ಟು ಕೆಲಸಗಳನ್ನು ನಾವು ಇತರರ ಖುಷಿಗಾಗಿ ಮಾಡುತ್ತೇವೆ ಎಂದೇ ವಾದಿಸುತ್ತಾರೆ. ದಾರಿಯಲ್ಲಿ ಮೇಕೆಯೊಂದು ಕೆಸರಿನ ಹಳ್ಳದಲ್ಲಿ ಸಿಲುಕಿ ಹೊರಬರಲಾರದೆ ಮ್ಯಾ ಮ್ಯಾ ಎಂದು ಕಿರುಚಾಡುತ್ತಿರುತ್ತದೆ. ಇದನ್ನು ನೋಡಿದ ಲಿಂಕನ್ನರು ಮತ್ತೊಂದು ಕ್ಷಣ ಯೋಚಿಸದೆ ಬಿರುಸು ಮಳೆಯಲ್ಲಿ ನಡೆದು ಹೋಗಿ ಕೆಸರಿನಲ್ಲಿ ಸಿಲುಕಿದ್ದ ಮೇಕೆಯನ್ನು ಎತ್ತಿ ತಮ್ಮ ಎದೆಗೆ ಒತ್ತಿ ಹಿಡಿದು ಮೂತಿ ಮೇಲಿನ ಕೆಸರು ಒರೆಸಿ ನೆಲಕ್ಕೆ ಬಿಟ್ಟು ಅಂಡಿನ ಮೇಲೊಂದು ಒಡೆದು ಕಳುಹಿಸುತ್ತಾರೆ. ಲಿಂಕನ್ನರ ಶರ್ಟು ಸೂಟುಗಳೆಲ್ಲ ಕೆಸರುಮಯ. ಪಯಣ ಮತ್ತೆ ಪ್ರಾರಂಭವಾದಾಗ ಗೆಳೆಯ ನಗುತ್ತಿರುತ್ತಾನೆ. ‘ನೋಡಿದ್ರಾ ನನ್ನ ವಾದವೇ ಗೆದ್ದಿತು. ಮೇಕೆಯನ್ನು ನೀವು ಬದುಕಿಸಿಬಿಟ್ಟಿರಿ. ಇದನ್ನು ನೀವು ಮೇಕೆಗಾಗಿ ಮಾಡಿದಿರೇ ಹೊರತು ನಿಮಗಾಗಿ ಅಲ್ಲ’. ಲಿಂಕನ್ ‘ಖಂಡಿತವಾಗಿ ಈ ಕಾರ್ಯವನ್ನು ನಾನು ಮಾಡಿದ್ದು ನನಗಾಗಿ, ಮೇಕೆಗಾಗಿ ಅಲ್ಲ’ ಎಂದ್ಹೇಳಿ ಮುಗುಳ್ನಗುತ್ತಾರೆ. ಅದು ಹೇಗೆ ಎಂಬ ಪ್ರಶ್ನೆಗೆ ‘ನೋಡಿ ನಾನದನ್ನು ಬದುಕಿಸದಿದ್ದರೆ ಅದರ ಮ್ಯಾ ಮ್ಯಾ ಎಂಬ ಕೂಗು ನನ್ನ ಕಿವಿಯಲ್ಲಿ, ತಲೆಯಲ್ಲಿ ಉಳಿದುಹೋಗುತ್ತಿತ್ತು. ಆ ಕೂಗಿನ ನೆನಪಿನಿಂದ ನನಗೆ ಹತ್ತಲವು ರಾತ್ರಿಗಳು ನಿದ್ರೆ ಬರುತ್ತಿರಲಿಲ್ಲ. ನನ್ನ ನೆಮ್ಮದಿಯ ನಿದ್ರೆಗಾಗಿ ಅದನ್ನು ಬದುಕಿಸಿದೆ. ನನಗಾಗಿ ಅದನ್ನು ಬದುಕಿಸಿದೆ’!
ನಿರೂಪಣೆ: ಡಾ. ಅಶೋಕ್. ಕೆ. ಆರ್

Dec 17, 2015

ಈಗ ಗಾಳಿಗೂ ಭರ್ಜರಿ ಬೆಲೆ!

vitality air
ಚೀನಾದ ಬೀಜಿಂಗಿನಲ್ಲಿ ಈ ಬಾರಿಯೂ 'ರೆಡ್ ಅಲರ್ಟ್' ಘೋಷಿಸಲಾಗಿತ್ತು. ಕಾರಣ ಹೊಗೆ ಮತ್ತು ಮಂಜು (ಹೊಂಜು) ವಿಪರೀತವೆನ್ನಿಸುವಷ್ಟು ಜಾಸ್ತಿಯಾಗಿ ಜನರ ಉಸಿರಾಟಕ್ಕೆ ಓಡಾಟಕ್ಕೆ ತೊಂದರೆಯುಂಟುಮಾಡಿತ್ತು. ಮಂಜು ಪ್ರಾಕೃತಿಕವಾದರೆ ಹೊಂಜು ಮನುಷ್ಯ ನಿರ್ಮಿತ. ಇಡೀ ಪರಿಸರದ ಉಸಿರುಗಟ್ಟಿಸುವಲ್ಲಿ ಮನುಷ್ಯ ಹೆಸರುವಾಸಿಯಲ್ಲವೇ. ಬರ ಇರಲಿ ನೆರೆ ಬರಲಿ ಹೊಂಜು ಮುಸುಕಲಿ ಹಣ ಮಾಡುವ ನವನವೀನ ವಿಧಾನಗಳ ಆವಿಷ್ಕಾರ ಮಾಡುವುದು ವ್ಯಾಪಾರಿಗಳು. ಕೆನಡಾದ ವ್ಯಾಪಾರಿಗಳು ಮತ್ತು ಚೀನಾದ ವ್ಯಾಪಾರಿಗಳು ಈ ಹೊಂಜಿನ ನಡುವೆ ಯಾವ ವ್ಯಾಪಾರ ಮಾಡುವುದೆಂದು ತಲೆಕೆರೆದುಕೊಂಡಾಗ ಹೊಳೆದಿದ್ದು ಶುದ್ಧ ಗಾಳಿ! ಹೌದು ಹೊಂಜಿನ ವಾತಾವರಣದಲ್ಲಿ ಉಸಿರಾಡುವುದೇ ಕಷ್ಟಕರವಾದಾಗ ಒಂದಷ್ಟು ಶುದ್ಧ ಗಾಳಿ ನೀಡುವ ಕಂಪನಿಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಇದೆ.

ಗಾಳಿ ಮಾರುವ ಕಂಪನಿಗಳು ಹೇಳಿಕೊಳ್ಳುವ ಪ್ರಕಾರ ಶಿಖರ ಪರ್ವತಗಳನ್ನು ಏರಿ ಶುದ್ಧ ಗಾಳಿಯನ್ನು ತುಂಬಿಸಿಕೊಂಡು ಬಂದು ಚಿಕ್ಕ ಚಿಕ್ಕ ಕ್ಯಾನುಗಳೊಳಗೆ ತುಂಬಿ ಮಾರಲಾಗುತ್ತಿದೆ. ಗಾಳಿಯ ಪರಿಶುದ್ಧತೆಯ ಲೆಕ್ಕಾಚಾರದಲ್ಲಿ ಒಂದು ಕ್ಯಾನಿಗೆ 19ರಿಂದ 32 ಕೆನಡಾ ಡಾಲರ್ರುಗಳವರೆಗೆ ಬೆಲೆಯಿದೆ (ಅಂದಾಜು 750 ರಿಂದ 1500 ರುಪಾಯಿ!). ಎರಡೆರಡು ಬಾಟಲುಗಳನ್ನು ಜೊತೆಗೆ ಖರೀದಿಸಿದರೆ ಡಿಸ್ಕೌಂಟ್ ಕೂಡ ಸಿಗುತ್ತೆ! ಚೀನಾದಲ್ಲೀಗ ಇಂತಹ ಕ್ಯಾನುಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಸೃಷ್ಟಿಯಾಗಿದೆ. ಇದರ ಜೊತೆಗೆ ಕೆಲವು ಹೋಟೆಲ್ಲುಗಳಲ್ಲಿ 'ಗಾಳಿ ಶುದ್ಧಗೊಳಿಸಲು' ತೆರಿಗೆ ವಿಧಿಸಲು ಪ್ರಾರಂಭಿಸಿದ್ದಾರಂತೆ! ಒಟ್ಟಿನಲ್ಲಿ ಮನುಷ್ಯನ 'ಅಭಿವೃದ್ಧಿ' ಮಾದರಿಯಿಂದ ಶೇಖರಣೆಗೊಂಡ ಹಣವನ್ನು ವ್ಯಯಿಸಲು ನಾನಾ ರೀತಿಯ ದಾರಿಗಳು ಸೃಷ್ಟಿಯಾಗುತ್ತಿವೆ. ಭಾರತ 'ಅಭಿವೃದ್ಧಿ'ಯ ಪಥದಲ್ಲಿ ಮುನ್ನುಗ್ಗಿ ನುಗ್ಗುವ ಬಗ್ಗೆಯೇ ನಮ್ಮ ನಾಯಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿರುವ ಈ ದಿನಗಳಲ್ಲಿ ಚೀನಾದ 'ಅಭಿವೃದ್ಧಿ' ಮಾದರಿ ನಮಗೆ ಪಾಠವಾಗಬೇಕಲ್ಲವೇ? ಅಯ್ಯೋ ಚೀನಾದಲ್ಲಾಗಿದೆ ಅಷ್ಟೇ, ನಾವು ಇನ್ನೂ ಸೇಫು ಬುಡ್ರಿ ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆಯೇ?

ದೆಹಲಿಯಲ್ಲಾಗಲೇ ಹೊಂಜಿನ ಅಟ್ಟಹಾಸ ಶುರುವಾಗಿದೆ. ದೆಹಲಿ ಸರಕಾರ ಜನವರಿ ಒಂದರಿಂದ ಸಮ - ಬೆಸ ಸಂಖೈಯ ವಾಹನಗಳು ದಿನ ಬಿಟ್ಟು ದಿನ ರೋಡಿಗಿಳಿಯುವಂತೆ ಮಾಡುವಲ್ಲಿ ಉತ್ಸುಕವಾಗಿದೆ. ಟೀಕೆಗಳೇನೇ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಉತ್ತಮ ನಡೆಯೇ ಹೌದು. ಅನುಷ್ಟಾನ ಕಷ್ಟವೆಂಬುದೂ ಸತ್ಯ. ನ್ಯಾಯಾಲಯ ಇನ್ನೂ ಮೂರು ತಿಂಗಳವರೆಗೆ 2000 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ನೋಂದಾಯಿಸುವಂತಿಲ್ಲ ಎಂದು ಆದೇಶಿಸಿದೆ. ಈ ನಿರ್ಧಾರಗಳೆಲ್ಲವೂ ಭಾರತದ ದೆಹಲಿ ಕೂಡ ಬೀಜಿಂಗ್ ಆಗುವತ್ತ ಸಾಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಎರಡು ಮೂರು ಕಿಲೋಮೀಟರ್ ಮೈಲೇಜು ಕೊಡುವ ಕಾರಿನಲ್ಲಿ ದಿನವಿಡೀ ತಿರುಗಿ ಹೊಗೆಯುಗುಳುವವರೇನೋ ಮನೆಯಲ್ಲಿ 'ಗಾಳಿ ಶುದ್ಧ'ಗೊಳಿಸುವ ಮಿಷೀನನ್ನು ಖರೀದಿಸಿಬಿಡಬಹುದು ಕಾರೂ ಇಡದೆ ಬೈಕೂ ತೆಗೆದುಕೊಳ್ಳದೆ ಸಾರ್ವಜನಿಕ ಸಾರಿಗೆಯನ್ನಷ್ಟೇ ಉಪಯೋಗಿಸುವವರ್ಯಾಕೆ ವಿಷಗಾಳಿಯನ್ನು ಸೇವಿಸಬೇಕು? ಹತ್ತಕ್ಕಿಂತ, ಹದಿನೈದಕ್ಕಿಂತ ಕಡಿಮೆ ಮೈಲೇಜ್ ಕೊಡುವ ಕಾರುಗಳನ್ನು, ನಲವತ್ತಕ್ಕಿಂತ ಕಡಿಮೆ ಮೈಲೇಜು ಕೊಡುವ ಬೈಕು - ಸ್ಕೂಟರುಗಳನ್ನು ಭಾರತದಲ್ಲಿ ಉತ್ಪಾದಿಸಬಾರದು, ಮಾರಬಾರದು ಎಂದೊಂದು ನಿರ್ಣಯ ತೆಗೆದುಕೊಳ್ಳುವುದು ಅಷ್ಟೊಂದು ಕಷ್ಟವೇ? ಅಭಿವೃದ್ಧಿಯ ವೇಗದ ಭರದಲ್ಲಿ ಪರಿಸರಕ್ಕೇನಾದರೇನು ಬಿಡಿ.

ಹೆಚ್ಚೇನಲ್ಲ ಹತ್ತು ವರುಷದ ಹಿಂದೆ ಹೋಟೆಲ್ಲಿಗೋ ಡಾಬಾಗೋ ಹೋದಾಗ ಗೆಳೆಯರ್ಯಾರಾದೂ ಬಾಟಲ್ ನೀರು ಕೇಳಿದರೆ ಆಡಿಕೊಳ್ಳುತ್ತಿದ್ದೋ. 'ನೋಡ್ದಾ ಇವನ ಕೊಬ್ಬಾ. ಮಿನರಲ್ ವಾಟರ್ ಬೇಕಂತೆ' ಎಂದು ರೇಗಿಸುತ್ತಿದ್ದೊ. ನೀರಿಗೆ ದುಡ್ಡು ಕೊಟ್ಟು ಖರೀದಿಸಿ ಕುಡಿಯುವುದು ನಗೆಪಾಟಲಿನ ಸಂಗತಿಯಾಗಿತ್ತು. ಈಗ? ಬಾಟಲ್ ನೀರು ಖರೀದಿಸುವುದು ಸಹಜವಾಗಿಬಿಟ್ಟಿದೆ. ಭಾರತದ ಅತ್ಯುತ್ತಮ ಬ್ಯುಸಿನೆಸ್ಸುಗಳಲ್ಲಿ ಅದೂ ಒಂದು. ಇನ್ನತ್ತು ವರುಷದಲ್ಲಿ ಭಾರತದ ಮುಖ್ಯ ನಗರಗಳಲ್ಲಿ ಚೀನಾದ ಬೀಜಿಂಗಿನಲ್ಲಾದಂತೆಯೇ ಗಾಳಿಯ ಬ್ಯುಸಿನೆಸ್ಸು ಪ್ರಾರಂಭವಾದರೆ ಅಚ್ಚರಿಯಿಲ್ಲ. ನಮ್ಮ ಅಭಿವೃದ್ಧಿಯ ಮಾದರಿಗಳು ಹೇಗಿರುತ್ತವೋ ನೋಡಿ. ಶುದ್ಧ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ, ಶುದ್ಧ ಗಾಳಿಯನ್ನು ಮೆಟಲ್ ಕ್ಯಾನುಗಳಲ್ಲಿ ತುಂಬಿಸುತ್ತೇವೆ. ಪ್ಲಾಸ್ಟಿಕ್ ಬಾಟಲುಗಳನ್ನು ಮೆಟಲ್ ಕ್ಯಾನುಗಳನ್ನು ತಯಾರಿಸಲು ಮತ್ತಷ್ಟು ಪರಿಸರ ನಾಶವಾಗುತ್ತದೆ, ಆ ನಾಶದ ಪರಿಣಾಮಗಳಿಂದ ಜನರನ್ನು - ಹಣವಂತ ಜನರನ್ನು 'ರಕ್ಷಿಸಲು' ಮತ್ತೊಂದು ಹೊಸ ವ್ಯಾಪಾರ ಶುರುವಾಗುತ್ತದೆ, ಆ ವ್ಯಾಪಾರದಿಂದ ಉಂಟಾಗುವ ಪರಿಸರ ನಾಶದಿಂದ........ ಅಭಿವೃದ್ಧಿಯ ಸಮಯದಲ್ಲಿ ಪರಿಸರದ ಬಗ್ಗೆ ಮಾತನಾಡುವುದೇ ಪಾಪ.

Dec 16, 2015

ಹೊಸ ವರ್ಷದಿಂದ ಸ್ನ್ಯಾಪ್ ಡೀಲಿನಲ್ಲಿ ಕನ್ನಡದಲ್ಲೇ ವ್ಯವಹರಿಸಿ!

snapdeal in 12 languages
ಭಾರತದ ಭಾಷಾ ವೈವಿಧ್ಯತೆಯನ್ನು ಕಡೆಗಣಿಸುವ ಕಂಪನಿಗಳೇ ಅಧಿಕ. ಕಂಪನಿಗಳ ಲೆಕ್ಕದಲ್ಲಿ ಭಾರತವೆಂದರೆ ಇಂಗ್ಲೀಷ್ ತಪ್ಪಿದರೆ ಹಿಂದಿ. ಬೆಂಗಳೂರಲ್ಲೇ ನೆಲೆಯೂರಿರುವ ಫ್ಲಿಪ್ ಕಾರ್ಟಿನಂತಹ ಸಂಸ್ಥೆ ಕೂಡ ಬೆಂಗಳೂರಿನಲ್ಲಿ ಹಾಕುವ ಬ್ಯಾನರುಗಳಲ್ಲಿ ಹಿಂದಿ ಬಳಸಿಬಿಡುತ್ತದೆ. ತೆಗೆದುಕೊಂಡಿರುವ ವಸ್ತುವಿನಲ್ಲಿ ಏನಾದರೂ ದೋಷವಿದ್ದು ಇ-ಕಾಮರ್ಸ್ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿದಾಗಲೂ ಇಂಗ್ಲೀಷ್ ಅಥವಾ ಹಿಂದಿಯಲ್ಲೇ ಮಾತನಾಡಬೇಕಾದ ಕರ್ಮ. ಇನ್ನು ಅಂತರ್ಜಾಲ ಪುಟಗಳಂತೂ ಸಂಪೂರ್ಣ ಆಂಗ್ಲಮಯವೇ ಆಗಿರುತ್ತದೆ. ಅಂತರ್ಜಾಲದಲ್ಲಿ ಇಂಗ್ಲೀಷ್ ಅನಿವಾರ್ಯವೆಂಬುದು ಎಷ್ಟು ಸತ್ಯವೋ ಗೂಗಲ್, ಫೇಸ್ ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ಭಾರತದ ವಿವಿಧ ಭಾಷೆಗಳಲ್ಲಿ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಮರೆಯಬಾರದು. ಇ-ಕಾಮರ್ಸ್ ಕಂಪನಿಗಳು ನಿಧಾನಕ್ಕಾದರೂ ವಿವಿಧ ಭಾರತೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಸದ್ಯಕ್ಕೆ ಸ್ನ್ಯಾಪ್ ಡೀಲ್ ತನ್ನ ಮೊಬೈಲ್ ಆ್ಯಪ್ ಗಳನ್ನು ಬಹುಭಾಷೆಯಲ್ಲಿ ನೀಡಲು ತೀರ್ಮಾನಿಸಿದೆ. 
ಸದ್ಯಕ್ಕೆ ಸ್ನ್ಯಾಪ್ ಡೀಲನ್ನು ಇಂಗ್ಲೀಷಿನ ಜೊತೆಗೆ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನೀಡಲಾರಂಭಿಸಿದೆ. 2016ರ ಜನವರಿ 26ರಿಂದ ಕನ್ನಡ, ತಮಿಳು, ಗುಜರಾತಿ, ಮರಾಠಿ, ಬೆಂಗಾಲಿ, ಮಲಯಾಳಂ, ಒರಿಯಾ, ಅಸ್ಸಾಮಿ ಮತ್ತು ಪಂಜಾಬಿ ಭಾಷೆಯಲ್ಲಿ ಸ್ನ್ಯಾಪ್ ಡೀಲ್ ಲಭ್ಯವಿರುತ್ತದೆ. ಮಾರಾಟಗಾರರು ಮತ್ತು ಗ್ರಾಹಕರ ನಿರಂತರ ಒತ್ತಾಯದ ಕಾರಣದಿಂದ ಮತ್ತು ಸ್ಥಳೀಯ ಭಾಷೆ ಉಪಯೋಗಿಸುವವರಿಗೆ ಮತ್ತಷ್ಟು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಂತಹ ನಿರ್ಧಾರವನ್ನು ಕೈಗೊಂಡಿರುವುದಾಗಿ ಸ್ನ್ಯಾಪ್ ಡೀಲ್ ತಿಳಿಸಿದೆ. ಕನ್ನಡದಲ್ಲಿ ಸೇವೆ ಕೊಡಿ ಎಂದು ನಿರಂತರವಾಗಿ ಒತ್ತಾಯಿಸುವುದರಿಂದ ಖಂಡಿತವಾಗಿಯೂ ಉಳಿದ ಕಂಪನಿಗಳೂ ಸ್ನ್ಯಾಪ್ ಡೀಲ್ ನ ಹಾದಿ ಹಿಡಿದು ಭಾರತದ ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ಕೊಡುವ ದಿನಗಳು ದೂರವಿಲ್ಲ.

ಈ ನಿಯತ್ತಿಗೆ ಮೂವತ್ತು ಸಾವಿರ ವರ್ಷ!

ನಿಯತ್ತಿಗೆ ಮತ್ತೊಂದು ಹೆಸರು ನಾಯಿ! ತೋಳಗಳ ಪ್ರಪಂಚದಿಂದ ಹೊರಜಿಗಿದು ಮನುಷ್ಯನ ಸಹವಾಸಕ್ಕೆ ನಾಯಿಗಳು ಬಿದ್ದು ಎಷ್ಟು ವರುಷಗಳಾಗಿರಬಹುದು, ನಾಯಿಗಳ ಜನನ ಮೊದಲು ಪ್ರಾರಂಭವಾದದ್ದೆಲ್ಲಿ ಎನ್ನುವುದನ್ನು ತಿಳಿಯಲು ಚೀನಾದ ವಿಜ್ಞಾನಿಗಳು ಶ್ರಮಿಸಿದ್ದಾರೆ. ಇದಮಿತ್ಥಮಂ ಇಂತಹ ಜಾಗವೇ ನಾಯಿಗಳ ಉಗಮಸ್ಥಾನ ಎಂದು ಹೇಳಲು ಸಂಪೂರ್ಣ ಸಾಧ್ಯವಾಗಿಲ್ಲವಾದರೂ ತಳಿಶಾಸ್ತ್ರದ ಅಧ್ಯಯನದ ಮೂಲಕ ದಕ್ಷಿಣ ಏಷ್ಯಾ ಖಂಡದಲ್ಲಿ ಮನುಷ್ಯ ಮತ್ತು ನಾಯಿಯ ಸಹಬಾಳ್ವೆ ಪ್ರಾರಂಭವಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹನ್ನೆರಡು ತೋಳ, ಏಷ್ಯಾ ಮತ್ತು ಆಫ್ರಿಕಾದ ಇಪ್ಪತ್ತೇಳು ಪುರಾತನ ನಾಯಿಗಳು, ಈಗ ಪ್ರಸ್ತುತದಲ್ಲಿ ಇರುವ ಹತ್ತೊಂಭತ್ತು ವಿವಿಧ ತಳಿಯ ನಾಯಿಗಳ ತಳಿ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಮೂವತ್ತು ಸಾವಿರ ವರುಷಗಳ ಹಿಂದೆ ತೋಳದಿಂದ ನಾಯಿ ಬೇರ್ಪಟ್ಟಿತು.

ಈ ನಾಯಿಯ ಉಗಮದ ಹಿಂದಿನ ಸ್ವಾರಸ್ಯಕರ ಕತೆಯನ್ನು ಡಿಸ್ಕವರಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತೋರಿಸಿದ್ದರು. ಬೇಟೆಯಾಡಲು ಶಕ್ತವಲ್ಲದ ಕೆಲವು ತೋಳಗಳು ಮನುಷ್ಯ ವಾಸವಿದ್ದ ಜಾಗದ ಸುತ್ತಮುತ್ತ ತಿರುಗುತ್ತಿದ್ದವಂತೆ. ಮನುಷ್ಯ ಎಸೆದಿದ್ದ ಆಹಾರ ಪದಾರ್ಥವನ್ನು ತಿನ್ನುತ್ತ ಜೀವ ಉಳಿಸಿಕೊಳ್ಳುತ್ತಿದ್ದವಂತೆ. ದಿನವಿಡೀ ತಮ್ಮ ಸುತ್ತಲೇ ಸುತ್ತುತ್ತಿದ್ದ ನಿರುಪದ್ರವಿ ತೋಳಗಳ ಬಗ್ಗೆ ಮನುಷ್ಯನಿಗೂ ಅನುಕಂಪ ಮೂಡಿರಬೇಕು. ತಾನು ತಿನ್ನುತ್ತಿದ್ದ ಆಹಾರದಲ್ಲೇ ಒಂದು ತುಣುಕನ್ನು ನಾಯಿಯ ಕಡೆಗೆ ಎಸೆಯುತ್ತಿದ್ದ. ಸೌಮ್ಯ ತೋಳಗಳಿಗೆ ಒರಟು ತೋಳಗಳಿಗಿಂತ ಹೆಚ್ಚಿನ ಆಹಾರ ಸಿಗುತ್ತಿತ್ತು. ಆಹಾರಕ್ಕೋಸ್ಕರ ತೋಳಗಳು ಸೌಮ್ಯವಾದವು. ನೋಡಲು ಮುದ್ದುಮುದ್ದಾಗಿದ್ದ ತೋಳಗಳಿಗೆ ಹೆಚ್ಚು ಆಹಾರ ದಕ್ಕುತ್ತಿತ್ತು. ಮುದ್ದುಮುದ್ದಾಗಿದ್ದ ತೋಳಗಳು ಪುಷ್ಕಳ ಭೋಜನದ ಪ್ರಭಾವದಿಂದ ಚೆನ್ನಾಗಿ ಬೆಳೆದು ನಿಂತವು. ಉಳಿದ ತೋಳಗಳು ಅಪೌಷ್ಟಿಕತೆಯಿಂದ ಬಳಲಿದವು. ಪರಿಸರ ಕೂಡ ತಳಿಯ ಮೇಲೆ ಪ್ರಭಾವ ಬೀರುವುದರಿಂದ ಸಹಜವಾಗಿ ಮುಂದಿನ ತಲೆಮಾರಿನ ತೋಳಗಳು ಮತ್ತಷ್ಟು ಸೌಮ್ಯವಾಗಿ ಸುಂದರವಾಗಿ ನಾಯಿಗಳಾಗಿ ಪರಿವರ್ತನೆಗೊಂಡವು! 

ಚೀನಾದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ದಕ್ಷಿಣ ಏಷ್ಯಾದ ಪುರಾತನ ನಾಯಿಗಳ ತಳಿ ತೋಳಕ್ಕೆ ಅತ್ಯಂತ ಸಮೀಪದಲ್ಲಿದೆ, ಸಾಮ್ಯತೆಗಳು ಹೆಚ್ಚಿವೆ. ಇವುಗಳ ಆಧಾರದ ಮೇಲೆ ಪ್ರಪಂಚದ ಮೊದಲ ನಾಯಿಗಳ ಉಗಮ ಮೂವತ್ತು ವರುಷಗಳ ಹಿಂದೆ ನಡೆದಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹದಿನೈದು ಸಾವಿರ ವರುಷಗಳ ತನಕ ದಕ್ಷಿಣ ಏಷ್ಯಾದಲ್ಲೇ ಮೊಕ್ಕಾಮು ಹೂಡಿದ್ದ ನಾಯಿಗಳು ನಂತರದಲ್ಲಿ ಮಧ್ಯ ಪ್ರಾಚ್ಯ ಏಷ್ಯಾದ ಕಡೆಗೆ ಹೆಜ್ಜೆ ಹಾಕಿದವು. ಜನರ ವಲಸೆಯ ಜೊತೆಗೆ ನಾಯಿಗಳೂ ವಲಸೆ ಪ್ರಾರಂಭಿಸಿದವು. ಹತ್ತು ಸಾವಿರ ವರುಷಗಳ ಕೆಳಗೆ ಯುರೋಪು ಖಂಡಕ್ಕೆ ಭೇಟಿ ನೀಡಿ ಮತ್ತಷ್ಟು ತಳಿ ಸಂಕರವಾಗಿ ಮತ್ತೆ ಉತ್ತರ ಚೀನಾದ ಕಡೆಗೆ ನಡೆದವು ಎನ್ನುತ್ತದೆ ಈ ಸಂಶೋಧನೆ. ನೇಚರ್ ಜರ್ನಲ್ಲಿನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯ ಲೇಖನವು ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯದ ಇತಿಹಾಸವನ್ನು ಅರಿಯಲು ಸಹಕಾರಿಯಾಗಿದೆ.

ನಮ್ಮ ಮೆಟ್ರೋಗೆ ವ್ಯಕ್ತಿಯ ಹೆಸರೇಕೆ?

ನಾಯಂಡನಹಳ್ಳಿ ಮತ್ತು ಮಾಗಡಿ ರಸ್ತೆಯ ಮಧ್ಯದ ಮೆಟ್ರೋ ರೈಲಿನ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೆಟ್ರೋಗೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ಮೆಟ್ರೋಗೆ ವಿಶ್ವೇಶ್ವರಯ್ಯನವರ ಹೆಸರನ್ಯಾಕೆ ಇಡಬಾರದು ಎಂಬ ಚರ್ಚೆಯಾಯಿತು. ಲಿಂಗಾಯತ ಸಂಘಟನೆಗಳು ಬಸವಣ್ಣನ ಹೆಸರನ್ನು ಮೆಟ್ರೋಗೆ ಇಡಬೇಕು ಎಂದು ಮನವಿ ಸಲ್ಲಿಸಿದರು. ಇವುಗಳ ಮಧ್ಯೆ ಮೆಟ್ರೋ ಯೋಜನೆಯ ಬಗ್ಗೆ ದಶಕಗಳ ಹಿಂದೆ ರೂಪುರೇಷೆ ನಿರ್ಮಿಸಿ ಕನಸು ಕಂಡಿದ್ದು ಶಂಕರ್ ನಾಗ್ ಆದ್ದರಿಂದ ಬೆಂಗಳೂರು ಮೆಟ್ರೋಗೆ ಶಂಕರನಾಗರ ಹೆಸರನ್ಯಾಕೆ ಇಡಬಾರದು ಎಂಬ ಪ್ರಶ್ನೆಯೂ ಕೇಳಿಬಂತು. ಇಂತಹುದೊಂದು ಅನವಶ್ಯಕ ಚರ್ಚೆಯನ್ನು ಹುಟ್ಟುಹಾಕಿದ ಸಿದ್ಧರಾಮಯ್ಯನವರು ನಂತರ ಮೌನವಾಗಿದ್ದುಬಿಟ್ಟರು. 
ಸಿದ್ಧರಾಮಯ್ಯ ಮೆಟ್ರೋಗೆ ಕೆಂಪೇಗೌಡರ ಹೆಸರನ್ನಿಡುವ ಬಗ್ಗೆ ಯೋಚಿಸುತ್ತಿದ್ದೀವಿ ಎಂದು ಹೇಳಿದ್ದಕ್ಕೂ ಕಾರಣವಿತ್ತು. ಕೆಲವು ದಿನಗಳ ಹಿಂದೆ ಸರಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನ ಬದಲು ಟಿಪ್ಪುವಿನ ಹೆಸರನ್ನಿಡಬಹುದಿತ್ತು ಎಂದಿದ್ದು ವಿವಾದವಾಗಿ ಒಕ್ಕಲಿಗರ ಸಂಘಟನೆಗಳು ಕೆಂಪೇಗೌಡರಿಗೆ ಮಹಾನ್ ಅವಮಾನವಾದವರಂತೆ ಬೀದಿಗಿಳಿದು ಪ್ರತಿಭಟಿಸಿದ್ದರು. ಸಿದ್ಧರಾಮಯ್ಯನವರನ್ನು ಕಂಡರೆ ಒಕ್ಕಲಿಗರಿಗೆ ಮೊದಲೇ ಆಗುವುದಿಲ್ಲ, ಅಂತಹದ್ದರಲ್ಲಿ ಗಿರೀಶ್ ಕಾರ್ನಾಡರ ಹೇಳಿಕೆ ಒಕ್ಕಲಿಗರಲ್ಲಿ ಸಿದ್ಧು ಬಗ್ಗೆ ಇರುವ ಅಸಹನೆಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿರಲಿಲ್ಲ. ಮೂರು ದಿನದ ನಂತರ ಸಿದ್ಧು ಏನೋ ಸಮಜಾಯಿಷಿ ಕೊಟ್ಟರಾದರೂ ಅದು ಸಾಕಾಗಲಿಲ್ಲ. ಈ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಕೆಂಪೇಗೌಡ ಮೆಟ್ರೋ ಎಂಬ ಹೆಸರನ್ನು ತೇಲಿಬಿಟ್ಟರು. ಬೇರೆ ಹೆಸರುಗಳ ಚರ್ಚೆಯನ್ನು ಪ್ರಾರಂಭಿಸಿಬಿಟ್ಟರು!
ಅವರಿವರ ಹೆಸರ್ಯಾಕೆ ಬೇಕು? ಸದ್ಯಕ್ಕೆ ಅದಕ್ಕೆ 'ನಮ್ಮ ಮೆಟ್ರೋ' ಎಂದು ಹೆಸರಿಸಲಾಗಿದೆ. ನಮ್ಮದು ಅಂದರೆ ಎಲ್ಲರದೂ ಆಯಿತಲ್ಲ? ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಎಂದು ಹೆಸರಿಸಿದಂತೆ ಬೆಂಗಳೂರು ಮೆಟ್ರೋ ಅಂದಿದ್ದರೂ ಸಾಕಾಗಿತ್ತು. ಯಾವುದೋ ಸಮುದಾಯವನ್ನು 'ತೃಪ್ತಿ'ಪಡಿಸುವ ಸಲುವಾಗಿ ಒಂದು ಹೆಸರಿಡುವುದು, ಮತ್ತೊಂದು ಸಮುದಾಯ ನಮ್ಮ ನಾಯಕನ ಹೆಸರನ್ಯಾಕೆ ಇಡಲಿಲ್ಲ ಎಂದು ಮುನಿಸಿಕೊಳ್ಳುವುದು ಹೆಸರಿಟ್ಟು ವರುಷಗಳು ಕಳೆದ ನಂತರ 'ಈ ಹೆಸರು ಬದಲು ಆ ಹೆಸರು ಇಡಬಹುದಿತ್ತು ಕಣ್ರೀ' ಎಂದು ಪ್ರಚಾರಪ್ರಿಯರು ವಿನಾಕಾರಣ ವಿವಾದವೆಬ್ಬಿಸುವುದು. ಇವೆಲ್ಲ ಬೇಕಾ? ತೆವಳುತ್ತ ಸಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ಚುರುಕುಗೊಳಿಸಿದ್ದರೆ ಜನರಿಗಾದರೂ ಅನುಕೂಲವಾಗುತ್ತಿತ್ತು. ಒಂದೇ ಪುಣ್ಯ ಅಂದರೆ ಇಂದಿರಾ ಹೆಸರನ್ನೋ ರಾಜೀವ್ ಹೆಸರನ್ನೋ ಇಡುವ ಬಗ್ಗೆ ಸಿದ್ಧು ಹೇಳಲಿಲ್ಲ! ಓಹ್, ಅವರು ವಲಸಿಗರಲ್ಲವೇ!