Jan 29, 2020

ಒಂದು ಬೊಗಸೆ ಪ್ರೀತಿ - 50

ಡಾ. ಅಶೋಕ್.‌ ಕೆ. ಆರ್.‌
ಓಪಿಡಿಯಲ್ಲಿ ಬಿಡುವಿನ ವೇಳೆಯಲ್ಲಿ ಓದುತ್ತಾ ಕುಳಿತಿದ್ದಾಗ ರಾಮ್‌ಪ್ರಸಾದ್‌ ಒಳಬರುವುದು ಕಾಣಿಸಿತು. ರಿತಿಕಾಳನ್ನು ವಾರ್ಡಿನಲ್ಲಿ ನೋಡಲೋಗುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಎದುರಿಗೆ ಸಿಕ್ಕು ಹಾಯ್‌ ಬಾಯ್‌ ಹೇಳಿದ್ದರು. ಇವತ್ತೇನು ಓಪಿಡೀಗೆ? ಅದೂ ನಿನ್ನೆ ರಿತಿಕಾ ಡಿಸ್ಚಾರ್ಜ್‌ ಆಗಿದ್ದಳಲ್ಲ? ಅವರ ಬೆನ್ನ ಹಿಂದೆಯೇ ರಿತಿಕಾ ಅಮ್ಮನ ಜೊತೆ ಪುಟ್ಟ ಪುಟ್ಟ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದರು. ಹೆಜ್ಜೆ ಎತ್ತಿಡುವುದರಲ್ಲಿ ಸುಸ್ತಿರುವುದು ಎದ್ದು ಕಾಣಿಸುತ್ತಿತ್ತಾದರೂ ಮುಖದಲ್ಲಿ ಉತ್ಸಾಹದ ಲೇಪನವಿತ್ತು, ಹತ್ತು ದಿನದ ಆಸ್ಪತ್ರೆವಾಸ ಮೂಡಿಸಿದ ಬೇಸರದ ಮೇಲೆ. ಎರಡ್ಮೂರು ದಿನ ಅಥವಾ ನಾಲ್ಕೈದು ದಿನಕ್ಕೆ ಡಿಸ್ಚಾರ್ಜ್‌ ಮಾಡುವ ಎಂದಿದ್ದರು ಮೋಹನ್‌ ಸರ್.‌ ಆದರೆ ಹೊಟ್ಟೆ ನೋವು ಕಡಿಮೆಯಾಗುವುದಕ್ಕೇ ವಾರ ತೆಗೆದುಕೊಂಡಿತ್ತು. ಪುಣ್ಯಕ್ಕೆ ಕಿಡ್ನಿಗೇನೂ ಹಾನಿಯಾಗಿರಲಿಲ್ಲ. ಹೆಚ್ಚೇ ರಿಸ್ಕಿದೆ ಅನ್ನಿಸಿದರೂ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್‌ ಮಾತ್ರೆಗಳನ್ನು ಕೊಡಲಾರಂಭಿಸಿದ ಮೇಲಷ್ಟೇ ಹೊಟ್ಟೆ ನೋವು ಕಡಿಮೆಯಾಗಿದ್ದು. ರಕ್ತ ಪರೀಕ್ಷೆಗೆ ಬ್ಲಡ್‌ ತೆಗೆದುಕೊಳ್ಳಲು ಚುಚ್ಚುವ ಸೂಜಿ, ಡ್ರಿಪ್‌ಗಾಗಿ ಹಾಕಲಾದ ವ್ಯಾಸೋಫಿಕ್ಸ್‌ ಮೂರು ದಿನಕ್ಕೊಮ್ಮೆ ಬ್ಲಾಕ್‌ ಆಗುತ್ತಿತ್ತು, ಹೊಸ ವ್ಯಾಸೋಫಿಕ್ಸ್‌ ಹಾಕುವಾಗಾಗುತ್ತಿದ್ದ ನೋವೇ ಮಕ್ಕಳಿಗೆ ಆಸ್ಪತ್ರೆಯೆಂದರೆ ಭಯ.…… ಭಯಕ್ಕಿಂತ ಹೆಚ್ಚಾಗಿ ವಾಕರಿಕೆ ಮೂಡಿಸಿಬಿಡುತ್ತದೆ. ನೋವಾಗದಂತೆ ವ್ಯಾಸೋಫಿಕ್ಸ್‌ ಹಾಕುವಂತ, ಸೂಚಿ ಚುಚ್ಚುವಂತ ಔಷಧವ್ಯಾಕಿನ್ನೂ ಕಂಡುಹಿಡಿದಿಲ್ಲವೋ? 

ಫಾಲೋ ಅಪ್‌ಗೆ ಬಂದಿರಬೇಕೇನೋ, ಮೋಹನ್‌ ಸರ್‌ ಬರ ಹೇಳಿರಬೇಕೇನೋ ಅಂದುಕೊಂಡು ಪುಸ್ತಕದಲ್ಲಿ ತಲೆತಗ್ಗಿಸಿದೆ. ಉಹ್ಞೂ.. ಅವರು ನಾನಿದ್ದ ಕೊಠಡಿಗೇ ಬಂದರು. ನೋಡಿ ನಕ್ಕು ಮೇಲೆದ್ದೆ. ಎಷ್ಟೇ ಆಗ್ಲಿ ಹೆಚ್.ಆರ್‌ ಮ್ಯಾನೇಜರ್ರು. ಮುಂದೆ ನಾ ಡಿ.ಎನ್.ಬಿ ಮುಗಿಸಿ ಕೆಲಸಕ್ಕೆ ಸೇರಿದಾಗ ಇವರ ಸಹಾಯವೆಲ್ಲ ಆಗೀಗ ಬೇಕೇ ಆಗ್ತದಲ್ಲ ಅಂತ ನಿಂತೆನೋ ಏನೋ. 

“ಹಲೋ ಡಾಕ್ಟರ್‌ ಡಿಸ್ಟರ್ಬ್‌ ಮಾಡಿದ್ನಾ.…” 

ʼಹಂಗೇನಿಲ್ಲ ಸರ್.‌ ಓಪಿಡಿ ಬಿಡುವಾಗಿತ್ತಲ್ಲ. ಓದ್ತಿದ್ದೆʼ 

ಓದ್ತಿರೋದು ನನ್ನ ಕಣ್ಣಿಗೂ ಕಾಣಿಸಿತ್ತಲ್ಲ ಎನ್ನುವಂತೆ ನಕ್ಕು ರಿತಿಕಾ ಕಡೆಗೆ ನೋಡಿದರು. ರಿತಿಕಾ ತನ್ನ ಕೈಯಲ್ಲಿದ್ದ ಕವರನ್ನು ತಂದು ನನ್ನ ಕೈಗಿತ್ತಳು. ಕವರ್‌ ತೆಗೆದುಕೊಳ್ಳುತ್ತಾ ʼಏನಿದು?ʼ ಎಂದು ರಾಮ್‌ಪ್ರಸಾದ್‌ ಕಡೆಗೆ ನೋಡಿದೆ. 

"ನಮ್ಮಕ್ಕ ನಿಮಗೊಂದು ಬಾಕ್ಸ್‌ ಸ್ವೀಟ್‌ ಕೊಡಲೇಬೇಕೆಂದು ಹೇಳಿದರು. ನಿನ್ನೆ ಡಿಸ್ಚಾರ್ಜ್‌ ಆಗೋದು ತಡವಾಯ್ತು. ಇನ್ಶೂರೆನ್ಸ್‌ ಇತ್ತಲ್ಲ. ಹಾಗಾಗಿ ತಡವಾಯ್ತು. ಆಗಲೇ ನೀವಿದ್ದೀರ ಹೆಂಗೆ ಅಂತ ವಿಚಾರಿಸಿದೆ. ಹೊರಟೋಗಿದ್ರಿ ಮನೆಗೆ” 

ʼಅಯ್ಯೋ ಸ್ವೀಟೆಲ್ಲ ಯಾಕ್‌ ತರೋಕೋದ್ರಿʼ ರಿತಿಕಾಳ ಅಮ್ಮನ ಕಡೆಗೆ ನೋಡುತ್ತಾ ಕೇಳಿದೆ. ಮೇಲ್ಮೇಲ್‌ ಹಂಗ್‌ ಹೇಳಿದ್ರೂ ಒಳಗೊಳಗೇ ಖುಷಿಯಾಗಿತ್ತು. ಏನೋ ಸ್ವಲ್ಪ ಅಪರೂಪದ ರೋಗವನ್ನು ಶೀಘ್ರವಾಗಿ ಕಂಡುಹಿಡಿದದ್ದಕ್ಕೆ ಇಷ್ಟಾದರೂ ಪುರಸ್ಕಾರ ಸಿಕ್ಕಿತಲ್ಲ ಎಂದು. ಅದನ್ನೆಲ್ಲಾ ತೋರಿಸಿಕೊಳ್ಳಲಾದೀತೇ. ʼತಗೊಳಿ ತಗೊಳಿ. ಮಗಳಿಗೇ ಕೊಡಿʼ ಎಂದು ವಾಪಸ್ಸು ರಿತಿಕಾಳ ಕೈಗೇ ಕವರನ್ನು ಕೊಡಲೆತ್ನಿಸಿದೆ. ತನ್ನೆರಡೂ ಕೈಗಳನ್ನು ತಟ್ಟಂತ ಬೆನ್ನಹಿಂದೆ ಕಟ್ಟಿಕೊಂಡ ರಿತಿಕಾ “ಇಲ್ಲ ಆಂಟಿ. ಇದು ನಿಮಗೇಂತಲೇ ತಂದಿದ್ದು. ನೀವೇ ತಿನ್ನಬೇಕು. ಮೇಲಾಗಿ ನೀವ್‌ ನಂಗ್‌ ವಾಪಸ್‌ ಕೊಟ್ರೂ ನಾನಿದನ್ನ ತಿನ್ನೋ ಹಂಗಿಲ್ಲ" ಎಲಾ ಚುರುಕ್‌ ಮೆಣಸಿನಕಾಯಿ ಅಂದ್ಕೋತಾ ʼಯಾಕ್‌ ತಿನ್ನಂಗಿಲ್ವೋ ಮೇಡಮ್ಮೋರುʼ ಎಂದಾಕೆಯ ಕೆನ್ನೆ ಚಿಗುಟಿದೆ. ಹತ್ತು ದಿನದ ಖಾಯಿಲೆಯಿಂದ ಪಾಪ ಕೆನ್ನೆಯೆಲ್ಲ ಒಳಗೋಗಿಬಿಟ್ಟಿತ್ತು. 

“ಬೇಕರಿ ಐಟಮ್ಸು, ಐಸ್‌ಕ್ರೀಮು, ತುಪ್ಪ, ಬೆಣ್ಣೆ – ಎಣ್ಣೆ, ಮೊಟ್ಟೆ – ಮೀನು – ಮಾಂಸ ಏನೂ ತಿನ್ನಬಾರದು ಅಂತ ಹೇಳಿದ್ದಾರಲ್ಲ. ತಿಂದ್ರೆ ಮತ್ತೆ ಹುಷಾರು ತಪ್ತೀನಂತಲ್ಲ. ಮತ್ತೆ ಹುಷಾರು ತಪ್ಪಿ ಅಷ್ಟೆಲ್ಲ ಹೊಟ್ಟೆ ನೋವಾಗೋದಕ್ಕಿಂತ ತಿನ್ನದೇ ಇರೋದೇ ಗುಡ್‌ ಅಲ್ವ ಅಮ್ಮ”. ಹು ಮಗಳೆ ಅಂತ ಅವರಮ್ಮ ತಲೆಯಾಡಿಸಿದರು. 

ಅಮ್ಮನ ಕಡೆಗೆ ತಿರುಗಿದವಳ ತಲೆ ಸವರುತ್ತಾ ʼಸರಿ ಪುಟ್ಟ. ನಾನೇ ತಕೋತೀನಿ. ನೀ ಪೂರ್ತಿ ಹುಷಾರಾದ ಮೇಲೊಂದು ದಿನ ಬರ್ಬೇಕು. ಆಗ ನೀ ಹೇಳಿದ್ದೆಲ್ಲ ಕೊಡಿಸ್ತೀನಿʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jan 20, 2020

ಒಂದು ಬೊಗಸೆ ಪ್ರೀತಿ - 49

ಡಾ. ಅಶೋಕ್.‌ ಕೆ. ಆರ್.‌
ಮದುವೆಯಾದ ಮೇಲೆ ಲವ್ವಾಗಲ್ವ ಅಂತ ಸುಮ ಕೇಳಿದ ಪ್ರಶ್ನೆಯಿಂದ ಸಾಗರನ ನೆನಪು ಬಹಳ ದಿನಗಳ ನಂತರ ಕಾಡುತ್ತಿತ್ತು. ಮನೆಗೆ ಹೊರಡುವ ಮುನ್ನ ʼಹೇಗಿದ್ದೀಯೋʼ ಅಂತೊಂದು ಮೆಸೇಜು ಹಾಕಿದೆ. ಇನ್ನೇನು, ಇಷ್ಟು ದಿನದ ನಂತರ ಮೆಸೇಜು ಮಾಡಿದ್ದಕ್ಕೆ ವಿಪರೀತದಷ್ಟು ವ್ಯಂಗ್ಯ ಮಾಡಿ ನನಗೆ ಬಯ್ದು ಅವನನ್ನೂ ಬಯ್ದುಕೊಂಡು ಇಬ್ಬರಿಗೂ ನೋವುಂಟುಮಾಡುವಂತಹ ಕೆಟ್ಟ ಕೆಟ್ಟ ಪದಗಳನ್ನು ಬಳಸಿಯೇ ಬಳಸುತ್ತಾನೆ. ಮೆಸೇಜೇ ಮಾಡ್ಬಾರ್ದಿತ್ತೋ ಏನೋ ಅಂತಂದುಕೊಳ್ಳುತ್ತಾ ಮನೆ ತಲುಪಿದೆ. 

ಅಮ್ಮ ಮತ್ತೊಂದು ಸುತ್ತು ಸುಸ್ತಾಗಿ ಕುಳಿತಿದ್ದಳು. ರಾಧಳಿಗಲ್ಲ, ಅಮ್ಮನಿಗೇ ಈಗ ಆರೈಕೆಯ ಅಗತ್ಯವಿದೆ. ಮಲಗೋಗಿ ಅಂತವರಿಗೆ ಹೇಳಿ ಮಗಳನ್ನೂ ಮಲಗಿಸಿ ಅಡುಗೆ ಕೆಲಸ ಮಾಡಿ ಮುಗಿಸಿದೆ. ಒಂದಾದರೂ ಅಮ್ಮ ಎದ್ದೇಳಲಿಲ್ಲ. ಎದ್ದಾಗ ಊಟ ಮಾಡ್ತಾರೆ ಬಿಡು ಅಂದ್ಕೊಂಡು ನಾ ಒಂದಷ್ಟು ತಿಂದು ರೂಮಿಗೆ ಬಂದು ಅಡ್ಡಾದೆ. ರಾತ್ರಿ ಸರಿ ನಿದ್ರೆ ಮಾಡಿರಲಿಲ್ಲವೋ ಏನೋ ರಾಧ ಅತ್ತಿತ್ತ ಮಿಸುಕಾಡದಂತೆ ನಿದ್ರೆ ಹೋಗಿದ್ದಳು. ನಿನ್ನೆ ಆಸ್ಪತ್ರೆಯಲ್ಲಿ ಎಚ್ಚರವಿಲ್ಲದೆ ಮಲಗಿದ್ದಕ್ಕೊ ಏನೋ ನನಗೆ ನಿದ್ರೆ ಹತ್ತಲಿಲ್ಲ. ಫೋನೆಲ್ಲ ನೋಡಿ ಎಷ್ಟು ದಿನಗಳಾಗಿ ಹೋಯ್ತಲ್ಲ ಅಂತ ಫೋನೆತ್ತಿಕೊಂಡು ಎಫ್.ಬಿ ತೆರೆದೆ. ಒಂದೈವತ್ತು ಫ್ರೆಂಡ್‌ ರಿಕ್ವೆಷ್ಟ್‌ಗಳಿದ್ದವು. ಅದರಲ್ಲಿ ಗೊತ್ತಿರೋರನ್ನ ಒಪ್ಪಿಕೊಳ್ತಿರಬೇಕಾದರೆ ಮತ್ತೊಂದು ರಿಕ್ವೆಷ್ಟ್‌ ಬಂತು. ರಾಮ್‌ಪ್ರಸಾದ್‌ದು. ʼಓಯ್!‌ ಆಗ್ಲೇ ನನ್ನೆಸ್ರು ಹುಡುಕಿ ರಿಕ್ವೆಷ್ಟ್‌ ಕಳಿಸಿಬಿಟ್ರಾ? ಅಥವಾ ಫ್ರೆಂಡ್‌ ಸಜೆಷನ್ಸ್‌ ಅಲ್ಲಿ ತೋರಿಸಿರಬೇಕು. ಅಥವಾ ಸುಮ ಹೇಳಿದಂಗೆ ನನ್‌ ಫ್ಯಾನೇ ಇರಬಹುದೇನೋಪʼ ಅಂತಂದುಕೊಂಡು ಒಪ್ಪಿಕೊಂಡೆ. ಎಫ್.ಬಿ ಸ್ಕ್ರಾಲ್‌ ಮಾಡ್ತಾ ಒಂದಷ್ಟು ಲೈಕುಗಳನ್ನೊತ್ತುತ್ತಿರಬೇಕಾದರೆ ಸಾಗರನ ಮೆಸೇಜು ಬಂದ ನೋಟಿಫೀಕೇಷನ್‌ ಕಾಣಿಸಿತು. ಒಟ್ಟೊಟ್ಟಿಗೇ ಮೂರು ಮೆಸೇಜು ಕಳಿಸಿದ್ದ. ತೆರೆಯಲು ಕೌತುಕ, ಜೊತೆಗೊಂದಷ್ಟು ಭಯ. ತೆರೆಯದೇ ಇರಲಾದೀತೆ! ತೆರೆದೆ. 

“ನಂದೇನಿದೆಯೇ. ಮಾಮೂಲಿ ನಡೀತಿದೆ” 

“ನೀ ಹೇಗಿದ್ದಿ” 

“ಮಗಳೇಗಿದ್ದಾಳೆ” 

ಕುಹಕವಿಲ್ಲದೆ, ವ್ಯಂಗ್ಯವಿಲ್ಲದೆ ಸಾಗರ ಮೆಸೇಜು ಮಾಡಬಲ್ಲ ಎನ್ನುವುದೇ ಮರೆತು ಹೋಗಿತ್ತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jan 14, 2020

ಒಂದು ಬೊಗಸೆ ಪ್ರೀತಿ - 48

ಡಾ. ಅಶೋಕ್.‌ ಕೆ. ಆರ್.‌
ಪುಣ್ಯಕ್ಕೆ ಬೆಳಗಿನವರೆಗೂ ವಾರ್ಡಿನಿಂದಾಗಲೀ ಕ್ಯಾಷುಯಾಲ್ಟಿಯಿಂದಾಗಲೀ ಯಾವುದೇ ಕರೆ ಬರಲಿಲ್ಲ. ಮಗಳು ಹುಟ್ಟಿದ ಮೇಲೆ ಎಚ್ಚರವಿಲ್ಲದಂತೆ ನಿದ್ರೆ ಮಾಡಿದ್ದಿವತ್ತೇ! ಬೆಳಿಗ್ಗೆ ಐದೂವರೆಗೆ ಎಚ್ಚರವಾಗಿತ್ತು, ಅಲಾರಾಂ ಇಲ್ಲದೆ ಎಚ್ಚರವಾಗಿತ್ತು. ಸೊಂಪಾದ ನಿದ್ರೆ ಹೊಡೆದು ಎದ್ದ ಕಾರಣ ಮನಸ್ಸೂ ಉತ್ಸಾಹದಿಂದಿತ್ತು. ಅಭ್ಯಾಸಬಲವೆಂಬಂತೆ ಬಲಕ್ಕೆ ಕೈ ಹಾಕಿ ಮಗಳನ್ನು ಮುಟ್ಟಿ ನೋಡಿದ್ದೆ. ಮಗಳಿರಲಿಲ್ಲ. ಅರೆಕ್ಷಣ ಗಾಬರಿಯಾಗಿ ಡ್ಯೂಟಿ ಡಾಕ್ಟರ್‌ ರೂಮಲಲ್ಲವಾ ನಾ ಇರೋದು ಅಂತ ನೆನಪಾಗಿ ನಕ್ಕೆ. ಮಗಳು ರಾತ್ರಿ ಮಲಗಿದ್ಲೋ ಇಲ್ವೋ? ಅಮ್ಮನಿಗೆ ನಿದ್ರೆ ಆಯ್ತೋ ಇಲ್ವೋ? ಇಷ್ಟೊತ್ತಿಗೆ ಮಗಳು ಎದ್ದುಬಿಟ್ಟಿರುತ್ತಾಳೋ ಏನೋ? ಸಾಮಾನ್ಯ ಅವಳು ಬೆಳಿಗ್ಗೆ ಏಳೋದು ಆರೂವರೆ ಏಳರ ನಂತರವೇ. ಹಂಗಾಗಿ ಪರವಾಗಿಲ್ಲ. 

ನೈಟ್‌ ಡ್ಯೂಟಿ ಇದ್ದಾಗ ಮಾರನೇ ಬೇಳಿಗ್ಗೆ ರೌಂಡ್ಸ್‌ ಮುಗಿಯುವವರೆಗೆ ಇರಬೇಕಾಗ್ತದೆ. ಅಂದಾಜು ಹನ್ನೊಂದು ಹನ್ನೆರಡರವರೆಗೆ. ಇನ್ನೂ ಹೆಚ್ಚೇ ಸಮಯವಾದರೂ ಅಚ್ಚರಿಯೇನಿಲ್ಲ. ಅಲ್ಲಿವರೆಗೂ ಇಲ್ಲೇ ಇದ್ದುಬಿಟ್ಟರೆ ಮಗಳಿಗೆ ಹಾಲುಣಿಸೋದೇಗೆ? ಹಂಗಾಗಿ ಸುಮಾಳಿಗೆ ಆರೂವರೆಯಷ್ಟೊತ್ತಿಗೆ ಬರುವಂತೆ ಕೇಳಿಕೊಂಡಿದ್ದೆ. ಹೋಗಿ ರಾಧಳಿಗಾಲು ಕುಡಿಸಿ ರೆಡಿಯಾಗಿ ಎಂಟರ ಮೇಲೆ ಬಂದರೆ ಸಾಕಿತ್ತು. “ಅದಕ್ಕೇನ್‌ ಅಷ್ಟೊಂದ್‌ ಕೇಳ್ಕೋತಿ? ಬರ್ತೀನಿ ಬಿಡು" ಅಂದಿದ್ದಳು ಸುಮ. 

ಆರುಮುಕ್ಕಾಲಷ್ಟೊತ್ತಿಗೆ ಸುಮ ಬಂದಳು. “ಸಾರಿ ಧರಣಿ. ಎಚ್ಚರವಾಗೋದೊಂದಷ್ಟು ತಡವಾಯ್ತು” 

ʼಅಯ್ಯೋ ಅದಕ್ಯಾಕ್‌ ಸಾರಿ ಕೇಳ್ತಿ. ಲೆಕ್ಕ ನೋಡೋದಾದ್ರೆ ನಾ ಸಾರಿ ಕೇಳ್ಬೇಕು. ನಿನಗೆ ಇಷ್ಟೆಲ್ಲ ತೊಂದರೆ ಕೊಡ್ತಿರೋದಿಕ್ಕೆʼ 

“ಓಹೋ! ಬಹಳ ದೊಡ್‌ ತೊಂದರೆ ಕೊಡ್ತಿದ್ದಿ ಬಿಡಪ್ಪ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jan 6, 2020

ಒಂದು ಬೊಗಸೆ ಪ್ರೀತಿ - 47

ಡಾ. ಅಶೋಕ್.‌ ಕೆ. ಆರ್.‌
ಆಸ್ಪತ್ರೆಗೋಗಲಾರಂಭಿಸಿ ಎರಡು ತಿಂಗಳು ಕಳೆದಿತ್ತು. ಈ ತಿಂಗಳಿಂದ ನೈಟ್‌ ಡ್ಯೂಟಿ ಹಾಕೋದೇನಮ್ಮ ಅಂತ ಕೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದಲೇ ಹ್ಞೂಗುಟ್ಟಿದ್ದೆ. ಹೂ ಎನ್ನದೆ ಬೇರೆ ದಾರಿಯೂ ಇರಲಿಲ್ಲವಲ್ಲ. ಎರಡು ತಿಂಗಳಿಂದ ನನ್ನ ಎಂಟು ನೈಟ್‌ ಡ್ಯೂಟಿಗಳನ್ನು ಪಾಪ ನನ್ನ ಜೊತೆಗಿದ್ದ ಪಿ.ಜಿಗಳೇ ಮಾಡಿದ್ದರು. ಎಷ್ಟೂಂತ ಅವರ ಸಹಾಯ ಬಯಸುವುದು, ಎಷ್ಟಂತ ಮಾಡುವುದಿವಳಿಗೆ ಅಂತ ಅವರು ಗೊಣಗುವುದಕ್ಕೆ ಮುಂಚಿತವಾಗಿಯೇ ನೈಟ್‌ ಡ್ಯೂಟಿ ಒಪ್ಪಿಕೊಳ್ಳುವುದು ಸೂಕ್ತವೆಂದು ನನಗೂ ಅನಿಸಿತು. ಐದಕ್ಕೆ ಮನೆಗೆ ಹೋಗಿ ಮತ್ತೆ ಏಳೂವರೆಯ ಸುಮಾರಿಗೆ ಹೊರಟುಬರ್ತೀನಿ, ಅಲ್ಲಿಯವರೆಗೂ ಸ್ವಲ್ಪ ನೋಡ್ಕೊ ಪ್ಲೀಸ್‌ ಎಂದು ಗೆಳತಿ ಸುಮಾಳಿಗೇಳಿದ್ದೆ. "ಏಳೂವರೆ ಇಲ್ಲದೇ ಹೋದರೆ ಎಂಟೂವರೆಗೇ ಬಾ. ತೊಂದರೆಯೇನಿಲ್ಲ” ಎಂದ್ಹೇಳಿ ಕಳುಹಿಸಿಕೊಟ್ಟಿದ್ದಳು. ಉತ್ತಮ ಸಹೋದ್ಯೋಗಿಗಳು ದೊರಕೋದು ಸಹಿತ ಒಂದು ಅದೃಷ್ಟವೇ ಸರಿ. ಅವಳ ಒಳ್ಳೇತನವನ್ನು ದುರುಪಯೋಗಪಡಿಸಿಕೊಳ್ಳುವುದು ತಪ್ಪಾಗ್ತದಲ್ಲ, ಏಳೂವರೆಗೆ ಐದು ನಿಮಿಷವಿರುವಂತೆಯೇ ಆಸ್ಪತ್ರೆ ತಲುಪಿ ಅವಳನ್ನು ಕಳುಹಿಸಿಕೊಟ್ಟೆ. 

ರಾತ್ರಿ ಹೊತ್ತು ಆಸ್ಪತ್ರೆಯಲ್ಲಿ ವೈದ್ಯರು ಸಿಕ್ತಾರೆ ಅನ್ನೋ ಕಾರಣಕ್ಕೆ ಬಿಡುವಾಗಿದ್ದರೂ ಬೆಳಗಿನ ಸಮಯ ಬಾರದೆ ಈಗ ಬರುವವರ ಸಂಖೈ ದಿನೇ ದಿನೇ ಹೆಚ್ತಿದೆ. ಬೆಳಿಗ್ಗೆ ಬಂದ್ರೆ ಓಪಿಡಿಯಲ್ಲಿ ಜನ ಜಾಸ್ತಿಯಿದ್ದರೆ ಕಾಯಬೇಕು, ಸೀದಾ ಕ್ಯಾಷುಯಾಲ್ಟಿಗೆ ಬಂದರೆ ಕೆಲಸ ಸಲೀಸು ಎಂಬ ಭಾವನೆ ಹಲವರಿಗೆ. ನಾಲ್ಕು ದಿನದಿಂದ ಇರುವ ಹೊಟ್ಟೆ ನೋವಿಗೆ, ಮೈಕೈ ನೋವಿಗೆ, ಕಿವಿನೋವಿಗೆ, ಜ್ವರಕ್ಕೆ ಮಧ್ಯರಾತ್ರಿ ಬಂದು ಆಸ್ಪತ್ರೆಯ ಕದ ಬಡಿಯುತ್ತಾರೆ. ಆಸ್ಪತ್ರೆ ಅಂದ ಮೇಲೆ ಜನ ಎಷ್ಟೊತ್ತಿಗಾದರೂ ಬರಬಹುದು ಎನ್ನುವುದೇನೋ ಸತ್ಯವೇ ಆದರೂ ಬೆಳಿಗ್ಗೆ ಬಂದು ತೋರಿಸುವಂತಹ ಖಾಯಿಲೆಗಳಿಗೆ ರಾತ್ರಿ ಬಂದು ನಿಜಕ್ಕೂ ತುರ್ತು ಗಮನ ಅಗತ್ಯವಿರುವವರಿಗೆ ಅನ್ಯಾಯ ಮಾಡುತ್ತಾರೆ. ಬಹಳ ತಿಂಗಳುಗಳ ನಂತರ ನಾ ಮಾಡ್ತಿದ್ದ ನೈಟ್‌ ಡ್ಯೂಟಿಯಿದು. ಎನ್.ಐ.ಸಿ.ಯುನಲ್ಲಿದ್ದ ರೋಗಿಗಳನ್ನು ನೋಡುವಾಗಲೂ ಮನಸ್ಸೆಲ್ಲ ರಾಧಳ ಬಗ್ಗೆಯೇ ಯೋಚಿಸುತ್ತಿತ್ತು. ಮಧ್ಯರಾತ್ರೀಲಿ ಎಚ್ಚರವಾದಾಗ ಕುಡಿಸಿ ಅಂತ ಹಾಲು ತೆಗೆದಿಟ್ಟು ಬಂದಿದ್ದೆ. “ಮಗಳಿಗೆ ಐದು ತಿಂಗಳು ತುಂಬ್ತಲ್ಲ. ಸೆರೆಲ್ಯಾಕೋ ಮೇಲ್‌ ಹಾಲೋ ಕೊಡೋಣ ಬಿಡು” ಅಂತ ಅಮ್ಮ ಹೇಳುತ್ತಲೇ ಇದ್ದಳು. ಇಲ್ಲಿ ಆಸ್ಪತ್ರೆಯಲ್ಲಿ ದಿನಂಪ್ರತಿ ʼಆರು ತಿಂಗಳವರೆಗೆ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೇನನ್ನೂ ಕೊಡಬೇಡಿʼ ಅಂತ ಮಗುವಿನ ತಾಯಿಗೆ ಬೇಸರವಾಗುವಷ್ಟು ಸಲ ಹೇಳಿ ನನ್ನ ಮಗುವಿಗೇ ಮೇಲ್‌ ಆಹಾರ ಕೊಡಲು ಹೇಗೆ ಒಪ್ಪಲಿ? ʼಇನ್ನೊಂದು ತಿಂಗಳು ತಡ್ಕೋ. ಆಮೇಲೆ ನಿನ್ನಿಷ್ಟದಂತೆ ಮಾಡುವೆಯಂತೆʼ ಎಂದು ಸುಮ್ಮನಾಗಿಸುತ್ತಿದ್ದೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.