Feb 6, 2013

ಕಾಡತೊರೆಯ ಜಾಡಿನಲ್ಲಿ ಜೀವನ ಪ್ರೀತಿಯ ಚಿಲುಮೆ…

ಡಾ ಅಶೋಕ್ ಕೆ ಆರ್
ಕಡಿದಾಳು ಶಾಮಣ್ಣನವರ ಬಗ್ಗೆ ತೇಜಸ್ವಿಯವರ ಪುಸ್ತಕಗಳಲ್ಲಿ, ಆವಾಗಿವಾಗ ಪತ್ರಿಕೆಗಳಲ್ಲಿ ಓದಿದ್ದೆನಷ್ಟೇ. ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಮಯೂರ ಮಾಸಪತ್ರಿಕೆಯಲ್ಲಿ ಓದಿ ಆಸಕ್ತಗೊಂಡಿದ್ದೆನಾದರೂ ಪುಸ್ತಕ ಖರೀದಿಸಿರಲಿಲ್ಲ. ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ಸಂವಾದಗೋಷ್ಠಿಯಲ್ಲಿ ಕಡಿದಾಳು ಶಾಮಣ್ಣನವರನ್ನು ಮುಖತಃ ಭೇಟಿಯಾದಾಗ ಅವರಲ್ಲಿದ್ದ ಲವಲವಿಕೆ, ಉತ್ಸಾಹ ಕಂಡು ಅಚ್ಚರಿಪಟ್ಟಿದ್ದೆ. ಚಳುವಳಿಗಳ ಬಗ್ಗೆ ಬಹುತೇಕರಲ್ಲಿ ಸಿನಿಕತೆಯ ಭಾವವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಯಾವ ನ್ಯಾಯಯುತ ಹೋರಾಟವೂ ವ್ಯರ್ಥವಾಗುವುದಿಲ್ಲ ಎಂಬ ಶಾಮಣ್ಣನವರ ಮನಸ್ಥಿತಿ ಮೆಚ್ಚುಗೆಯಾಗಿತ್ತು. ಅವರ ಜೀವನಗಾಥೆಯನ್ನು ಸಂಪೂರ್ಣ ಓದುವಂತೆಯೂ ಪ್ರೇರೇಪಿಸಿತು.