ಆಗ 26, 2015

ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?

TS Vivekananda
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.

ಕಳೆದ ವಾರದ ಮನವಿಯಂತೆ ನೀವು ಅಶುತೋಷ್ ಗೌರೀಕರ್‌ರ ಮಹತ್ವದ ಚಿತ್ರಗಳಾದ ಲಗಾನ್ ಮತ್ತು ಸ್ವದೇಶ್ ಚಿತ್ರಗಳನ್ನು ನೋಡಿದ್ದರೆ ಈ ನಮ್ಮ ಚರ್ಚೆ ಸ್ವದೇಶ್ ಚಿತ್ರದ ನಾಯಕ ಮೋಹನ್ ಭಾರ್ಗವನ ಗ್ರಾಮೀಣಾಭಿವೃದ್ದಿ ಕಲ್ಪನೆಯಷ್ಟೇ ಸಲೀಸಾಗಿರುತ್ತದೆ. ಇಲ್ಲದಿದ್ದರೂ ಆತಂಕವೇನಿಲ್ಲ ನೀವು ಡಾ. ರಾಜ್‌ರ ಬಂಗಾರದ ಮನುಷ್ಯ ಸಿನೆಮಾ ನೋಡಿದ್ದರೂ ಸಾಕು. ಅದರ ಶಾರುಖ್ ಖಾನ್ ವಿಸ್ತರಣೆ ಈ ಸ್ವದೇಶ್. ಬಹುಶಃ ೫೦-೬೦ರ ದಶಕದಲ್ಲಿ ಮಂಡಿಸಬಹುದಾಗಿದ್ದ ಮೇಲ್ನೋಟದ ಹಳ್ಳಿಗಳ ಅಭಿವೃದ್ಧಿಯ ಹುಮ್ಮಸ್ಸನ್ನು ಹುಟ್ಟಿಸುವ ‘ಉಪ್ಪರಿಗೆ ದೃಷ್ಟಿಕೋನ’ದ ಸೆಲ್ಯುಲಾಯ್ಡ್ ರೂಪ.

ಈ ಜಗತ್ತಿನ ಪ್ರತಿಯೊಂದು ಜೀವಿಯೂ ಗ್ರಹಿಸುವುದು ತನ್ನ ನೆಲೆಯಿಂದ. ಕೆಲವರು ಕೆಳಗೆ ನಿಂತು ಮೇಲಕ್ಕೆ ನೋಡುತ್ತಾರೆ. ಬಹುತೇಕರು ಮೇಲಿನಿಂದ ಕೆಳಕ್ಕೆ ನೋಡುತ್ತಾರೆ. ಎತ್ತರದ ಕಟ್ಟಡದ ಮೇಲೆ ನಿಂತು ಮಾರುತಿ ಕಾರನ್ನು ನೋಡಿ, ಅದು ಬೆಂಝ್ ಕಾರಿನಷ್ಟು ಉದ್ದಕ್ಕೆ ಕಾಣುತ್ತದೆ. ಬೆಂಝ್ ಏರ್ ಬಸ್ಸಿನಷ್ಟು ದೊಡ್ಡದಾಗಿ. ಹಾಗೇ ಒಂದು ಗುಡಿಸಲುಗಳ ಸಮೂಹವನ್ನು ನೋಡಿ..., ಎಷ್ಟು ಕಲಾತ್ಮಕವಾಗಿ ಕಾಣುತ್ತವೆಂದರೆ, ಇದರಿಂದಲೇ ಅನೇಕ ‘ಉಪ್ಪರಿಗೆ ಕಲಾವಿದರು’ ಸ್ಫೂರ್ತಿವಂತರಾಗಿ ಅನೇಕ ಅಭಿಜಾತ ಕಲಾಕೃತಿಗಳನ್ನು ರಚಿಸಿ ಧನ್ಯರಾಗಿದ್ದಾರೆ. ವಿಮಾನದಲ್ಲಿ ಕುಳಿತು ರಾಗಿ, ಬತ್ತ, ಜೋಳದ ಹೊಲಗಳನ್ನು ಕಂಡು ವಿಶ್ವದ ವಿಸ್ಮಯಗಳಲ್ಲಿ ಒಂದನ್ನು ಕಂಡಷ್ಟು ಮೂಕ ವಿಸ್ಮಿತರಾಗಿದ್ದಾರೆ.

ಮೋಹನ್ ಭಾರ್ಗವ ಅಮೆರಿಕೆಯ ಮಹೋನ್ನತ ಅಂತರಿಕ್ಷ ಸಂಸ್ಥೆಯಾದ ನಾಸಾದಲ್ಲಿ ಒಬ್ಬ ವಿಜ್ಞಾನಿ. ಇವನು ಅಮೆರಿಕನ್ನರಿಗಿಂತ ಹೆಚ್ಚು ಬ್ರಿಲಿಯಂಟ್. ಇವನಿಗೆ ಹಿಂದಿಲ್ಲ ಮುಂದಿಲ್ಲ. ಮೀನ್ಸ್... ಇವನೊಬ್ಬ ಅನಾಥ. ಬಹುಶಃ ವಾರಾನ್ನ ತಿಂದು ಓದಿದ್ದರೂ ಇರಬಹುದು. ಇವನು ಅಷ್ಟು ಕಷ್ಟಪಟ್ಟು ಓದಿ, ತನ್ನ ಪ್ರತಿಭೆಯ ಮೂಲಕವೇ ನಾಸಾ ತಲುಪಿದವನು. ಇವನಿಗೆ ಸ್ವದೇಶದಲ್ಲಿ ಇರುವ ಏಕೈಕ ಸಂಬಂಧವೆಂದರೆ ಇವನನ್ನು ಸಾಕಿದ ಒಬ್ಬ ತಾಯಿ. ನಿಜಾರ್ಥದಲ್ಲಿ ಈಕೆ ಒಬ್ಬ ಆಯಾ. ಆಕೆಯೊಂದಿಗೆ ಇವನ ಸಂಬಂಧ- ನೆನಪುಗಳು ಅತ್ಯಂತ ಗಾಢವಾದವು. ಈಕೆಯನ್ನು ನೋಡುವುದು ಒಂದು ಹಂಬಲವಾಗಿ, ಕೊನೆಗೆ ಗೀಳಾಗಿ ಅವನು ತಾನು ಒಪ್ಪಿಕೊಂಡಿದ್ದ ಯೋಜನೆಯ ಪ್ರಕಾರ ಅತ್ತ ಉಪಗ್ರಹವನ್ನು ಆಕಾಶಕ್ಕೆ ಹಾರಿಸಿ ಇತ್ತ ಭಾರತಕ್ಕೆ ವಿಮಾನ ಏರುತ್ತಾನೆ. ಈತ ನಗರಕ್ಕೆ ಬಂದಾಗ ಆ ಅಮ್ಮ ಗುಜರಾತಿನ ಯಾವುದೋ ಒಂದು ಹಳ್ಳಿಯಲ್ಲಿರುವುದಾಗಿ ತಿಳಿಯುತ್ತದೆ. ಇದನ್ನು ಈತನಿಗೆ ಹೇಳಿದವಳು ಒಬ್ಬ ಹುಡುಗಿ. 

ಈತ ಆಧುನಿಕ ಸೌಲಭ್ಯಗಳಿಂದ ಇಡಿಕಿರಿದಿದ್ದ ಒಂದು ಕಾರವಾನನ್ನು ಬಾಡಿಗೆ ಪಡೆದು ಆ ಹಳ್ಳಿಗೆ ಬರುತ್ತಾನೆ. ಯಥಾರೀತಿ ಅಲ್ಲಿನ ಅನಕ್ಷರತೆ, ಅಸ್ಪೃಶ್ಯತೆ, ಮೂಲಭೂತ ಸೌಕರ್ಯಗಳ ಕೊರತೆ, ಬಡತನ ಇದಕ್ಕೆಲ್ಲಾ ಕಾರಣವಾದ ಅಜ್ಞಾನ ಇವನನ್ನು ಕಾಡುತ್ತವೆ. ಈತ ತನ್ನ ದೇಶಕ್ಕಾಗಿ ಮರುಗಲು ಆರಂಭಿಸುತ್ತಾನೆ. ಮೊದಲು ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತದೆ. ಕೇರಿ ಕೇರಿ-ಮನೆಮನೆಗೆ ಹೋಗಿ ಮಕ್ಕಳನ್ನು ಕಳಿಸುವಂತೆ ಕೇಳುತ್ತಾನೆ. ಅನೇಕರು ಅನೇಕ ಕಾರಣ ಹೇಳುತ್ತಾರೆ. ಆದರೆ ಕೆಲವರು ತಮ್ಮ ಅಸ್ಪೃಶ್ಯತೆಯ ಕಾರಣ ನಾವು ಮಕ್ಕಳನ್ನು ಶಾಲೆಗೆ ಕಳಿಸಲಾಗದು ಎಂದು ಹೇಳುತ್ತಾರೆ. ಕೊನೆಗೂ ಅವರೆಲ್ಲಾ ಶಾಲೆಗೆ ಬರುವಂತೆ ಮಾಡುತ್ತಾನೆ. ಈ ನಡುವೆ ಹಳ್ಳಿಯ ಮುಖಂಡರು ಇವನ ಕಾರ್ಯಕ್ಕೆ ಕ್ರಿಯಾಲೋಪ ಎತ್ತುತ್ತಾರೆ. ಅಸ್ಪೃಶ್ಯರನ್ನು ಸ್ಪೃಶ್ಯರ ನಡುವೆ ಕೂಡಿಸಿ ಅಕ್ಷರ ಕಲಿಸುವುದನ್ನು ವಿರೋಧಿಸುತ್ತಾರೆ. ಈ ನಡುವೆ ಊರಿನ ಮುಖಂಡರು ಇವನನ್ನು ಒಂದು ಪ್ರಶ್ನೆ ಕೇಳುತ್ತಾರೆ. ನೀನು ಯಾವ ಜಾತಿಯವನು?
ಪುಸ್ತಕ ಬಿಡುಗಡೆ ಸಮಾರಂಭದ ವಿವರ
ಇಲ್ಲಿನವರೆಗೂ ಸಿನೆಮಾ ಓಕೆ. ಹೆಸರಿನ ಮೂಲಕ ಜಾತಿಯನ್ನು ಗುರುತಿಸಲಾಗದ ಜನಕ್ಕೆ ಅದರಲ್ಲೂ ಆ ಪಾತ್ರ ಮಾಡಿರುವ ವ್ಯಕ್ತಿ ಶಾರುಖ್ ಖಾನ್ ಆದ್ದರಿಂದ ಈ ದೇಶದ ಜನ ಸಾಮಾನ್ಯ ಎಲ್ಲೂ ತಪ್ಪು ಭಾವಿಸುವ ಸಂದರ್ಭ ಬಂದಿರುವುದಿಲ್ಲ. ಆದರೆ ಈ ಭಾರ್ಗವ ಉತ್ತರಿಸುತ್ತಾನೆ. ನಾನು ಬ್ರಾಹ್ಮಣ!!. ಈ ಭಾರ್ಗವ ಅವರ ಅಜ್ಞಾನ, ಅಸ್ಪೃಶ್ಯತೆಯ ಆಚರಣೆಯ ಬಗ್ಗೆ ಕಿಡಿಗಾರುತ್ತಾನೆ. ಭಾಷಣ ಮಾಡುತ್ತಾನೆ. ಅಂತೂ ಊರವರಿಗೆ ಜ್ಞಾನೋದಯ ವಾಗುವಂತೆ ಮಾಡುತ್ತಾನೆ. 

ನಿಜಕ್ಕೂ ಇದೊಂದು ಆದರ್ಶ. ಒಬ್ಬ ಬ್ರಾಹ್ಮಣನೇ ಬಂದು ಅಸ್ಪೃಶ್ಯತೆಯನ್ನು ವಿರೋಧಿಸಿ ಮಾತನಾಡುವುದು, ಅವರನ್ನೂ ಮುಖ್ಯವಾಹಿನಿ ಎಂದು ಇದೇ ಸ್ಪೃಶ್ಯರು ಹೇಳುವಂಥ ಜೀವನಧಾರೆಗೆ ಆಹ್ವಾನಿಸುವುದು... ಎಲ್ಲವೂ ಅಮೋಘಾದ್ಭುತವಾಗಿ ಕಾಣುತ್ತವೆ. ಆದರೆ ಇಡಿಯಾಗಿ ಭಾರತದ ವರ್ಣಾಶ್ರಮ ಧರ್ಮದ ಇತಿಹಾಸವನ್ನು ನೋಡಿದರೆ ಈ ಚಿತ್ರದ ಆದರ್ಶ ಸಹ ಅದರ ವಿಸ್ತರಣೆಯಾಗಿ ಕಾಣುತ್ತದೆ. ನಿಜವಾದ ಸತ್ಯು, ನಿಜವಾದ ಗೌರೀಕರ್ ಬಿಚ್ಚಿಕೊಳ್ಳುವುದು ಇಲ್ಲೇ!! ಇದನ್ನೇನು ಅವರು ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ ಎಂದರೂ....!? ಇದೇ ಮೋಹನ ಭಾರ್ಗವನ ಜಾಗದಲ್ಲಿ ಒಬ್ಬ ಆದಿವಾಸಿ, ಒಬ್ಬ ದಲಿತ, ಒಬ್ಬ ಅಗಸ, ಒಬ್ಬ ಹಜಾಮ, ಒಬ್ಬ ಮೇದ, ಒಬ್ಬ ಲಂಬಾಣಿ... ಇವರೇ ಏಕೆ ಅದೇ ಚಿತ್ರದ ನಿಜ ನಾಯಕ ಶಾರುಖ್ ಖಾನನಂಥಾ ಒಬ್ಬ ಮುಸ್ಲೀಂ, ಒಬ್ಬ ಕ್ರಿಶ್ಚಿಯನ್‌ನನ್ನು ಏಕೆ ಈ ಮನಸ್ಸುಗಳು ಕಲ್ಪಿಸಿಕೊಳ್ಳುವುದಿಲ್ಲ? ಆ ಭಾರ್ಗವ ಮಾಡಿದ ಕೆಲಸವನ್ನು, ತೋರಿದ ದೇಶಪ್ರೇಮವನ್ನು ಒಬ್ಬ ದಲಿತ ಯಾ ಮುಸ್ಲಿಮನಲ್ಲಿ ಕಾಣಲು ಇವರಿಗೆ ಏಕೆ ಸಾಧ್ಯವಾಗುವುದಿಲ್ಲ? ಆ ಚಿತ್ರದ ನಾಯಕ ಸ್ವತಃ ಒಬ್ಬ ಮುಸ್ಲೀಂ ಆಗಿದ್ದಾಗ ಸಹ!! 

ಇರಲಿ..., ಯಾರನ್ನೂ ದೂಷಿಸುವುದಾಗಲೀ, ಕಟಕಟೆಯಲ್ಲಿ ನಿಲ್ಲಿಸುವುದಾಗಲೀ ಇಲ್ಲಿನ ಉದ್ದೇಶವಲ್ಲ. ಬದಲಾಗಿ ಹೇಗೆ ‘ಉಪ್ಪರಿಗೆ ದೃಷ್ಟಿಕೋನ’ವೊಂದು ತನ್ನ ಗ್ರಹಿಕೆಯ ಮಿತಿಯಲ್ಲಿಯೇ ಇಡೀ ಜನ ಮಾನಸದ ಹೃದಯಗಳಲ್ಲಿ ತಪ್ಪುಗಳನ್ನು ತುಂಬುತ್ತದೆ ಎಂಬುದನ್ನು ಕಂಡುಕೊಳ್ಳಲು ಅಥವಾ... ಲಗಾನ್ ಚಿತ್ರದಲ್ಲಿ ‘ಕಚರಾ’ ನನ್ನು ಸಿಕ್ಸರ್‌ನಿಂದ ವಂಚಿಸುತ್ತದೆ ಎಂದು ಹೇಳಲು.

ಬಹುಶಃ ಇದು ಎಲ್ಲರಿಗೂ ಗೊತ್ತಿರುವ ಚಿತ್ರ. ತೆರಿಗೆಯಿಂದ ರಿಯಾಯತಿ ಪಡೆಯಲು ಒಂದು ಹಳ್ಳಿಯ ಜನ ಒಟ್ಟಾಗಿ ಒಂದು ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದನ್ನು ಹೇಳುವ ಕತೆ. ಈ ಸಿನೆಮಾದ ವಿಶೇಷವೆಂದರೆ ಇಲ್ಲಿನ ಹೋರಾಟದಲ್ಲಿ ಸೈನ್ಯಗಳಿಲ್ಲ, ಮದ್ದುಗುಂಡುಗಳಿಲ್ಲ, ಸಾವು ನೋವುಗಳಿಲ್ಲ ಇರುವುದೆಲ್ಲಾ ಬರೀ ಮರದ ಬ್ಯಾಟು ಮತ್ತು ಚರ್ಮದ ಚೆಂಡು. ಶ್ರೇಷ್ಟತೆಯ ತೆವಲು ಹತ್ತಿದ ದುಡುಕು ಸ್ವಭಾವದ ಒಬ್ಬ ಕಮ್ಯಾಂಡರನ ಕಾರಣದಿಂದ ತಮಗೆ ಗೊತ್ತಿಲ್ಲದ, ಸಾಮ್ರಾಜ್ಯಶಾಹಿ ಹಿರಿಮೆಯ ಆಟವಾದ ಕ್ರಿಕೆಟ್ಟನ್ನು ಒಂದು ನುರಿತ ತಂಡದ ಮೇಲೆ ಹಳ್ಳಿಗರು ಆಡಬೇಕಾಗಿ ಬಂದ ಸಂದರ್ಭವನ್ನು ಹೇಳುವ ಕತೆ.

ಸಿನೆಮಾದ ಕತೆ ಸರಳವಾಗಿದೆ. ಮಂಡನೆ ಮನೋಹರವಾಗಿದೆ. ಸ್ಕ್ರೀನ್ ಪ್ಲೇ, ಕ್ಯಾಮೆರಾ, ಸಂಗೀತ, ನಿರ್ದೇಶನ ಎಲ್ಲಾ ಚೆನ್ನಾಗಿದೆ. ಅದಕ್ಕಾಗಿಯೇ ಈ ಚಿತ್ರ ಆಸ್ಕರ್ ಮಟ್ಟಕ್ಕೆ ಹೋಗಿದ್ದು. ಅನಕ್ಷರಸ್ಥರ ಗುಂಪೊಂದು ತಮ್ಮ ಉಳಿವಿನ ದಾರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮ್ರಾಜ್ಯಶಾಹಿ ಮನಸ್ಥಿತಿಯ ವಿರುದ್ದ ಹೋರಾಡುವ ಪಣ ತೊಟ್ಟು, ಅದನ್ನು ಗೆಲ್ಲುವುದನ್ನು ಸಾಂಕೇತಿಕವಾಗಿ ಇದು ಹೇಳುತ್ತದೆ. ಈ ಚಿತ್ರಕ್ಕೆ ಆಸ್ಕರ್‌ನಲ್ಲಿ ಎದುರಾಗಿದ್ದು ಇಡೀ ಮನುಕುಲದ ಇಂದಿನ ದುರಂತವನ್ನು ಲಗಾನ್‌ಗಿಂತಲೂ ಸರಳವಾದ ಘಟನೆಯೊಂದರ ಮೂಲಕ ನಿರೂಪಿಸುತ್ತಾ ಸಾಗುವ ಚಿತ್ರ ‘ನೋ ಮ್ಯಾನ್ಸ್ ಲ್ಯಾಂಡ್’. ಲಗಾನ್ ಈ ಚಿತ್ರದ ಮಂದೆ ಸೋಲಲು ಅನೇಕ ಕಾರಣಗಳಿದ್ದವು. ಸ್ವತಃ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಅಮೀರ್‌ಖಾನ್ ಇದನ್ನು ಒಪ್ಪಿಕೊಂಡಿದ್ದರು.

ಆದರೆ ಈ ಚಿತ್ರಕ್ಕೆ ಆಸ್ಕರ್ ನಿರೀಕ್ಷಿಸಿದ್ದ ಜನ ಗಮನಿಸದೇ ಹೋದ ಒಂದು ಮುಖ್ಯವಾದ ಸಂಗತಿ ಇತ್ತು. ನನಗನ್ನಿಸಿದಂತೆ ಈ ಸಂಗತಿಯನ್ನು ಆಸ್ಕರ್ ಜ್ಯೂರಿಗಳು ಖಂಡಿತ ಗಮನಿಸಿರುತ್ತಾರೆ. ಇಲ್ಲದಿದ್ದರೆ ಅವರು ನೋಮ್ಯಾನ್ಸ್ ಲ್ಯಾಂಡಿನ ಮಹತ್ವವನ್ನೂ ಸಹ ಗುರುತಿಸಲಾಗುತ್ತಿರಲಿಲ್ಲ. ಒಂದು ಪಕ್ಷ ಲಗಾನ್ ಈ ಸಂಗತಿಯಲ್ಲಿ ಒಂದಿಷ್ಟು ಉದಾತ್ತವಾಗಿದ್ದರೆ.....! ಇಂದಿನ ಜಾಗತಿಕ ಸಂದರ್ಭದಲ್ಲಿ ಅದು ನೋಮ್ಯಾನ್ಸ್ ಲ್ಯಾಂಡಿನ ಉದ್ದೇಶದಷ್ಟೇ ಉದಾತ್ತವಾಗುತ್ತಿತ್ತು. ಭಾರತದ ಸಂದರ್ಭದಲ್ಲಂತೂ ಬಹುದೊಡ್ಡ ಸಂದೇಶವನ್ನು ನೀಡುತ್ತಿತ್ತು. 

ಅಲ್ಲಿ ಏನಾಗುತ್ತದೆ ಎಂದರೆ.....,

ತೆರಿಗೆ ನೆಪವಾಗಿ ಆರಂಭವಾಗುವ ಈ ವಿವಾದ ಬ್ರಿಟಿಷ್ ಕಮ್ಯಾಂಡನೊಬ್ಬನ ಹಠಮಾರಿ ನಡೆವಳಿಕೆಯ ಮೂಲಕ ಒಂದು ಮೂರ್ತರೂಪ ಪಡೆಯುತ್ತದೆ. ಭುವನ್ ಎಂಬ ಸ್ಥಳೀಯ ಯುವಕ ಒಂದೆರಡು ಸಾರಿ ಈ ಕಮ್ಯಾಂಡರನಿಗೆ ಕಿರಿಕಿರಿಯಾಗುವಂತೆ ಮಾಡಿರುತ್ತಾನೆ. ಇವನನ್ನೇ ಗುರಿಯಾಗಿಟ್ಟುಕೊಂಡು ಕ್ರಿಕೆಟ್‌ನಲ್ಲಿ ನಮ್ಮನ್ನು ಸೋಲಿಸಿದರೆ ನೀವು ಸಧ್ಯಕ್ಕೆ ರಿಯಾಯತಿ ಕೇಳಲು ಬಂದಿರುವ ತೆರಿಗೆಯಲ್ಲಿ ಒಂದಲ್ಲ, ಎರಡಲ್ಲ ಮೂರು ವರ್ಷ ರಿಯಾಯತಿ ಕೊಡುವುದಾಗಿ ಆ ಸಿಡುಕು ಮೂತಿಯ ಕಮ್ಯಾಂಡರ್ ಷರತ್ತು ಹಾಕುತ್ತಾನೆ. ಮೀನಮೇಷ ಎಣಿಸಿ ಅಂತೂ ಭುವನ್ ಅವನ ಪಂಥಾಹ್ವಾನವನ್ನು ಅಂಗೀಕರಿಸುತ್ತಾನೆ. ಊರವರ ಸಹಕಾರದ ನಡುವೆಯೂ ಭುವನನ ತಂಡಕಟ್ಟುವ ಪ್ರಯತ್ನ ಸಾಗುತ್ತಿರುತ್ತದೆ. ಈ ನಡುವೆ ಆ ಕಮ್ಯಾಂಡರನ ತಂಗಿಯೇ ಇವರಿಗೆ ಸಹಾಯಮಾಡಲು ಬರುತ್ತಾಳೆ. ಇಲ್ಲಿ ಈ ಭುವನನಿಗೆ ಈಗಾಗಲೇ ಇದ್ದ ಒಬ್ಬ ಪ್ರಿಯತಮೆಯ ಜೊತೆಗೆ ಈ ಕೆಂಪು ಹುಡುಗಿಯೂ ಕೂಡಿಕೊಳ್ಳುವ ಕಾರಣದಿಂದ ತ್ರಿಕೋನ ಪ್ರೇಮ ಆರಂಭವಾಗುವುದರೊಂದಿಗೆ ಚಿತ್ರಕ್ಕೊಂದು ಹೊಸ ಓಘ ಸೃಷ್ಟಿಯಾಗುತ್ತದೆ. 

ಭುವನ ಒಬ್ಬೊಬ್ಬರದೇ ಮನಒಲಿಸಿ, ಪ್ರಚೋದಿಸಿ ತಂಡ ನಿರ್ಮಾದಲ್ಲಿ ತೊಡಗಿದ್ದಾಗ ಈ ಕೆಂಪು ಹುಡುಗಿಯ ಆಗಮನದಿಂದ ಊರವರಿಗೆ ಹೊಸ ಹುಮ್ಮಸ್ಸು ಬಂದು, ತಂಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿರುತ್ತದೆ. ಈಗ ಪ್ರಾಕ್ಟೀಸ್ ನಡೆದಿರುತ್ತದೆ. ಒಬ್ಬ ಬ್ಯಾಟ್ ಮಾಡುತ್ತಾನೆ. ಚೆಂಡು ದೂರದ ಮೂಲೆಯಲ್ಲಿ ಕುಳಿತಿದ್ದ ಒಬ್ಬನ ಮುಂದೆ ಬೀಳುತ್ತದೆ. ಭುವನ ಚೆಂಡನ್ನು ಎಸೆಯುವಂತೆ ಹೇಳುತ್ತಾನೆ. ಅವನು ಹಿಂಜರಿಯುತ್ತಾನೆ. ಕೊನೆಗೆ ಎಸೆಯುತ್ತಾನೆ. ಭುವನ್ ಚಕಿತನಾಗಿ ‘ಕಚರಾ ಬಾ ಇಲ್ಲಿ, ಇನ್ನೊಮ್ಮೆ ಚೆಂಡು ಎಸಿ’ ಎನ್ನುತ್ತಾನೆ. ಕಚರಾ ಗಾಬರಿಯಾಗುತ್ತಾನೆ. ಆಗ ಭುವನನೇ ಅವನ್ನು ಕರೆತಂದು ಫೀಲ್ಡಿನ ಮಧ್ಯೆ ನಿಲ್ಲಿಸಿ ‘ಇವನದು ಸ್ಪಿನ್ ಬೌಲಿಂಗ್, ನೋಡಿ ಹೇಗೆ ಬಾಲು ಸುತ್ತಿ ತಿರುಗಿ ಪುಟಿಯುತ್ತದೆ!!’ ಎಂದು ಎಲ್ಲರಿಗೂ ಹೇಳುತ್ತಾನೆ. 

ಅಷ್ಟರಲ್ಲಿ ಊರವರು ಈ ಕಚರನ ಸೇರ್ಪಡೆಯನ್ನು ವಿರೋಧಿಸುತ್ತಾರೆ. ಕಾರಣ ಅವನು ಅಸ್ಪೃಶ್ಯ ಎಂದು. ಆಗ ಭುವನ ಉದಾತ್ತ-ಧೀರೋದ್ಧಾತವಾದ ಒಂದು ಭಾಷಣ ಮಾಡುತ್ತಾನೆ. ಊರ ಜನ ಭುವನನ ಮಾನವೀಯ ಮಾತುಗಳನ್ನು ಒಪ್ಪುತ್ತಾರೆ. ಕಚರಾ ತಂಡಕ್ಕೆ ಸ್ಪಿನ್ ಬೌಲರ್ ಆಗಿ ಸೇರ್ಪಡೆಯಾಗುತ್ತಾನೆ. ಈತ ಒಬ್ಬ ಹೆಳವ. ಇವನ ಬಲಗೈ ಪೋಲಿಯೋ ಪೀಡಿತವಾದಂತೆ, ದುರ್ಬಲವಾಗಿ ಮುರುಟಿಕೊಂಡಿರುತ್ತದೆ. 

ಇಂದಿನ ಸ್ಪಿನ್ ಬೌಲರ್‌ಗಳ ಬಗೆಗಿನ ಪ್ರಚಾರವನ್ನು ಕಂಡ ಯಾರಾದರೂ ಒಂದು ಕ್ಷಣ ರೋಮಾಂಚನಗೊಳ್ಳುವ ಸಂದರ್ಭ ಇದು. ಸ್ಪಿನ್ ಬೌಲರ್ ಎಂದರೆ ಅಂತಾ ಶ್ರೇಷ್ಠ...., ಇಂಥಾ ಶ್ರೇಷ್ಠ..., ಅದೂ ಇದೂ... ಲೊಟ್ಟೆ ಲೊಸ್ಗ.... ಎಂದೆಲ್ಲಾ ನಮ್ಮ ಮಾಧ್ಯಮಗಳು ಚಕ್ಕೆ ಕಟ್ಟುತ್ತಿರುವ ಹೊತ್ತಿನಲ್ಲಿ ಒಬ್ಬ ಹೆಳವನನ್ನು ಸ್ಪಿನ್ ಬೌಲರ್ ಎಂದು ಹೇಳುವ ಮೂಲಕ ಸ್ಪಿನ್ ಬೌಲಿಂಗಿನ ಚಕ್ಕೆಗಳನ್ನೆಲ್ಲಾ ಕಿತ್ತು ಬಿಸಾಕಿ, ಅದನ್ನು ಲೇವಡಿ ಮಾಡಿ ಸ್ಪಿನ್ ಬೌಲ್ ಮಾಡುವವರು ಹೆಳವರು ಎಂಬ ಅರ್ಥ ಬರುವಂಥ ಇಂಥಾ ದೃಶ್ಯವೊಂದನ್ನು ಕಟ್ಟಿಕೊಡುವುದು ನಿರ್ದೇಶಕನ ಮೆಚ್ಯೂರಿಟಿಯನ್ನು ಹೇಳುತ್ತದೆ ಎಂದು ಭಾವಿಸುವ ಸಂದರ್ಭ ಅದು. ಒಂದು ಸರಳ ಮಾದರಿಯ ಮೂಲಕ ಒಂದು ಬಹುದೊಡ್ಡ ಭ್ರಮೆಯನ್ನು ಒಡೆದು ಬಿಸಾಕುವಂತಹ ಎದೆಗಾರಿಕೆ ಅದು. 

ಅಂತಿಮವಾಗಿ ತಂಡ ಸಿದ್ದವಾಗುತ್ತದೆ. ಮೂರು ದಿನಗಳ ಮ್ಯಾಚ್ ನಿರ್ಧಾರವಾಗುತ್ತದೆ. ಮೊದಲ ಒಂದೂವರೆ ದಿನ ಬ್ರಿಟಿಶ್ ತಂಡ ಬ್ಯಾಟ್ ಮಾಡುತ್ತದೆ. ಅಷ್ಟರಲ್ಲಿ ಗೌರವಾರ್ಹ ಮೊತ್ತವನ್ನು ಪೇರಿಸುತ್ತದೆ. ನಂತರದ ಬ್ಯಾಟಿಂಗ್ ಭುವನನ ತಂಡದ್ದು. ಹಾಗೂ ಹೀಗೂ ಈ ತಂಡ ಅಂತಿಮ ಹಂತಕ್ಕೆ ಬರುತ್ತದೆ. ಎಲ್ಲಾ ಆಟಗಾರರೂ ಪೆವಿಲಿಯನ್‌ಗೆ ಮರಳಿದ್ದಾರೆ. ನಾಯಕ ಭುವನ್ ಮಾತ್ರ ನಿನ್ನೆಯಿಂದಲೂ ಫೀಲ್ಡಿನಲ್ಲೇ ಉಳಿದಿದ್ದಾನೆ. ಕೊನೆಯ ಆಟಗಾರನಾಗಿ ಕಚರಾ ಬರುತ್ತಾನೆ. ಈಗ ಕೇವಲ ೧೧ ಬಾಲ್‌ಗಳಿವೆ, ೧೨ ರನ್ ಬೇಕು.

ಕೊನೆಗೆ ಒಂದೇ ಒಂದು ಬಾಲು ಉಳಿಯುತ್ತದೆ, ಬೇಕಿರುವುದು ೬ ರನ್. ನಾಯಕ ಆತಂಕದಿಂದ ಕಚರಾನ ಸಮೀಪಕ್ಕೆ ಬಂದು.... “ಕಚರಾ ಇದು ಕೊನೆಯ ಬಾಲು, ನಮಗೆ ೬ ರನ್ ಬೇಕು. ಈ ಬಾರಿ ನೀನು ಬಾಲು ಗಡಿಯಾಚೆಗೆ ಹೋಗುವಂತೆ ಹೊಡೆಯಲೇ ಬೇಕು. ಇಲ್ಲದಿದ್ದರೆ ಊರವರೆಲ್ಲಾ ಮೂರು ಪಟ್ಟು ತೆರಿಗೆ ಕೊಡಬೇಕಾಗುತ್ತದೆ. ಮೊದಲೇ ಬರಗಾಲ, ನಾವು ಎಲ್ಲಿಂದ ತರುವುದು. ಇದರ ಜೊತೆಗೆ ಸೋಲಿನ ಅಪಮಾನವನ್ನೂ ಸಹಿಸಬೇಕಾಗುತ್ತದೆ... ಏನಾದರೂ ಮಾಡು ಕಚರಾ.... ಏನಾದರೂ ಮಾಡು...." ಎಂದೆಲ್ಲಾ ಹೇಳುತ್ತಾನೆ.

ಕೊನೆಯ ಬಾಲು ಬರುತ್ತದೆ. ಕಚರಾ ಬ್ಯಾಟ್ ಬೀಸುತ್ತಾನೆ. ಬ್ಯಾಟು ಗಾಳಿಯಲ್ಲಿ ತೇಲಿ ಹಿಂತಿರುಗುತ್ತದೆ. ಬಾಲು ಎತ್ತ ಹೋಯಿತು? ಎಂದು ಇವರು ಗೊಂದಲಲ್ಲಿದ್ದಾಗಲೇ ಅವರು ವಿಜಯೋತ್ಸವ ಆಚರಿಸಲು ಆರಂಭಿಸುತ್ತಾರೆ. ನಾಯಕ ವಿಷಣ್ಣನಾಗುತ್ತಾನೆ. ಜನ ಗರಬಡಿದಂತಾಗುತ್ತಾರೆ. ಆದರೆ ಅಷ್ಟರಲ್ಲಿ ಒಂದು ಚಮತ್ಕಾರ ನಡೆಯುತ್ತದೆ. ಅಂಪೈರ್ ‘ನೋ ಬಾಲ್’ ಕೊಡುತ್ತಾನೆ. ಕ್ಯಾಮರಾ ಮತ್ತೆ ತಿರುಗಿದಾಗ ನಾಯಕ ಬ್ಯಾಟಿಂಗ್‌ನಲ್ಲಿರುತ್ತಾನೆ. ಬಾಲು ಬರುತ್ತದೆ. ನಾಯಕ ಘಟ್ಟಿಸುತ್ತಾನೆ. ಬಾಲು ದಿಗಂತದಲ್ಲಿ ಹಾರುತ್ತಿರುತ್ತದೆ. ಎದುರಾಳಿ ತಂಡದ ನಾಯಕ ಬಾಲನ್ನು ಕ್ಯಾಚ್ ಮಾಡುತ್ತಾನೆ. ಪರಿಸ್ಥಿತಿ ಗೊಂದಲದಲ್ಲಿದ್ದಾಗ ಅಂಪೈರ್ ತನ್ನ ನೊಟದಲ್ಲಿಯೇ ಅವನು ಬೌಂಡರಿಯ ಆಚೆ ಇರುವುದನ್ನು ಸೂಚಿಸುತ್ತಾನೆ. ಭುವನನ ತಂಡ ಗೆದ್ದಿರುತ್ತದೆ. ತೆರಿಗೆ ತಪ್ಪಿರುತ್ತದೆ.

ನಿರ್ದೇಶನ, ಕ್ಲೈಮ್ಯಾಕ್ಸ್ ಎಲ್ಲಾ ಸುಂದರವಾಗಿದೆ. ಸಿನೆಮಾದಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಕಥೆಯ ಒಂದು ಸಮಸ್ಯೆ ಹಾಗೇ ಉಳಿಯುತ್ತದೆ. ಕಚರಾನೇ ಸಿಕ್ಸರ್ ಹೊಡೆದಿದ್ದರೆ ಏನಾಗುತ್ತಿತ್ತು? ಅಲ್ಲಿಗೆ ನೋ ಬಾಲಿನ ನೆಪದಲ್ಲಿ ನಾಯಕನೇ ಏಕೆ ಬರಬೇಕಿತ್ತು? ನೋ ಬಾಲ್ ಕೊಟ್ಟ ಮೇಲೂ ಅದೇ ಬ್ಯಾಟ್ಸ್‌ಮನ್ ಮತ್ತೆ ಹೊಡೆಯಬಹುದಿತ್ತಲ್ಲವೇ? ಈ ಗೆಲುವಿನ ಅವಕಾಶವನ್ನು ಕಚರಾನಿಗೇಕೆ ಕೊಡಲಿಲ್ಲ? ಅವನು ಅಸ್ಪೃಶ್ಯನೆಂದೇ? ಅಥವಾ....

ನೋಡಿ..., ಇವರಿಗೆ ತಂಡದಲ್ಲಿ ಸ್ಥಳ ಕೊಟ್ಟೆವು, ಊರಿಗಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟೆವು. ಜಾತೀಯತೆಯನ್ನೆಲ್ಲಾ ಮರೆತು, ಸ್ಪೃಶ್ಯ-ಅಸ್ಪೃಶ್ಯಗಳನ್ನೆಲ್ಲಾ ಬದಿಗಿಟ್ಟು ಆಟದಲ್ಲಿ ಒಂದಾಗಿ ದುಡಿದೆವು. ಆದರೆ ನಿಜವಾದ ಪ್ರತಿಭೆ ತೋರುವಂತ ಅವಕಾಶ ಸಿಕ್ಕಿದಾಗ ಅವರು ಅಸಮರ್ಥರಾದರು. ಅವರಿಗೆ ಅಂಥಾ ಇಚ್ಛಾಶಕ್ತಿ-ಸಾಮರ್ಥ್ಯಗಳಿಲ್ಲ ಎಂದು ಈ ಜಗತ್ತಿಗೆ ಸಾರ್ವತ್ರಿಕ ಸಂದೇಶ ಕೊಡಲೆಂದೇ? 

ಈ ‘ಉಪ್ಪರಿಗೆ ದೃಷ್ಟಿಕೋನ’ ಹೇಳಿದ್ದು, ಅನಿಸಿದ್ದು, ಗ್ರಹಿಸಿದ್ದು ಮಾತ್ರ ಕಲೆಯಾಗುವುದಾದರೆ.....! ಜಾಗತಿಕವಾದ ಮಾನವೀಯ ಮೌಲ್ಯ, ಉದಾತ್ತತೆಯ ಅರ್ಥವೇನು? ಇವನ್ನು ಹೊರತು ಪಡಿಸಿದ ಕಲೆ ಸುಂದರವಾಗಿದ್ದ ಮಾತ್ರಕ್ಕೆ ಕಲೆಯಾಗಬಲ್ಲದೇ. ಬಹುಶಃ ಆಸ್ಕರ್ ಜ್ಯೂರಿಗಳು ಕಲೆಯನ್ನು ಮಾನವೀಯ ಮೌಲ್ಯದಡಿಯಲ್ಲಿ ವಿಮರ್ಶಿಸುತ್ತಾರೆ ಎನಿಸುತ್ತದೆ. ಹಾಗಾಗಿಯೇ ಲಗಾನ್ ಸೋತಿತು, ನೋಮ್ಯಾನ್ಸ್ ಲ್ಯಾಂಡ್ ಗೆದ್ದಿತು ಅನಿಸುತ್ತದೆ.

ಇದು ಕಲೆಯ ಬಗ್ಗೆ ಮಾತನಾಡುವ ಎಲ್ಲರಿಗೂ ಅರ್ಥವಾಗಬೇಕು. ಅಶುತೋಷ್ ಗೌರೀಕರ್‌ಗೆ, ಇವರ ಯಶಸ್ವೀ ನಟರಾದ ಅಮೀರ್ ಖಾನ್ ಮತ್ತು ಶಾರುಖ್ ಖಾನ್‌ಗೆ. ಹೀಗಾಗಿಯೇ ಎಂ.ಎಸ್. ಸತ್ಯು ಮನಸ್ಸಿಗೆ ಬಂದಂತೆ ಮಾತನಾಡಿದಾಗ ಅದಕ್ಕೆ ಬೇರೊಂದು ಪ್ರಭಾವಳಿ ಸೃಷ್ಠಿಯಾಗುವುದು. ಮಾನವಂತರಾದರೆ ಇದನ್ನು ಸತ್ಯು ಸಹ ಅರಿಯಬೇಕು ಜೊತೆಗೆ ಇವರನ್ನು ಸಮರ್ಥಿಸುತ್ತಿರುವ ಮತ್ತು ವಿರೋಧಿಸುತ್ತಿರುವ ಜನಕ್ಕೆ ಸಹ.

ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ.

TS Vivekananda
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.

ಕೇರಳದ ಕಾಡುಭಾಗದ ಹಳ್ಳಿಗಳ ಪೈಕಿ ಇದೊಂದು ಸಣ್ಣ ಹಳ್ಳಿ, ಹೆಸರು ಪ್ಲಾಚಿಮಡ. ಕೇರಳ-ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನಲ್ಲಿದೆ. ಎಲ್ಲರಿಗೂ ತಿಳಿದಂತೆ ಚಿತ್ತೂರು ಭತ್ತ/ಅಕ್ಕಿಗೆಪ್ರಸಿದ್ದಿ ಪಡೆದ ಪ್ರದೇಶ. ಈ ಪಾಲಕ್ಕಾಡಿನ ಸುತ್ತಮತ್ತ ಪಟ್ಟಂಚೇರಿ ಮತ್ತು ಮತ್ತಲಮಡ ಗ್ರಾಮ ಪಂಚಾಯ್ತಿಗಳಿವೆ. ಈ ಒಟ್ಟೂ ಪ್ರದೇಶ ಪಶ್ಚಿಮಘಟ್ಟ ಶ್ರೇಣಿಯು ಒಂದೆಡೆ ಸ್ವಲ್ಪ ತೆರವಾಗಿರುವ ಜಾಗದಲ್ಲಿದೆ. ಇಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಕೇರಳದ ವಾರ್ಷಿಕ ಸರಾಸರಿ ಮಳೆಯಲ್ಲಿ ಅರ್ಧದಷ್ಟು ಮಳೆ ಬಂದರೆ ಹೆಚ್ಚು. ಹಾಗಾಗಿ ಇಲ್ಲಿನ ಎಲ್ಲ ಜೀವರಾಶಿ ಅಂತರ್ಜಲವನ್ನು ಆಧರಿಸಿದೆ. ಇಲ್ಲಿನ ಅಂತರ್ಜಲ ಸಮೃದ್ದವಾಗಿದ್ದು, ಇಲ್ಲಿನ ಜೀವಜಾಲದ ಪೋಷಣೆಗೆ ಅಗತ್ಯವಾದಷ್ಟಿದೆ. ಅಲ್ಲದೆ ಅಂತರ್ಜಲ ಪ್ರತಿವರ್ಷ ತಂತಾನೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಕಾರಣ ಈ ಪ್ರದೇಶದಿಂದ ದೂರದಲ್ಲಿ ಎರಡು ಜಲಾಶಯಗಳಿವೆ. ಹೀಗಾಗಿ ಇಲ್ಲಿನ ಮುಖ್ಯ ಕಸುಬು ಬೇಸಾಯ ಮತ್ತು ಬೇಸಾಯ ಆಧಾರಿತ ಕೂಲಿ. 

ಹೀಗೆ ನೂರಾರು ವರ್ಷಗಳಿಂದ ಬದುಕುತ್ತಾ ಬಂದ ಈ ಪಂಚಾಯತಿಗಳ ಪ್ರದೇಶಕ್ಕೆ ಒಮ್ಮೆ ಕೆಲವು ಜನ ಬಂದು ಸುಮಾರು ೩೬ ಎಕರೆ ಕೃಷಿ ಜಮೀನನ್ನು ಕೊಳ್ಳುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಅಲ್ಲಿಗೆ ಹಿಂದೂಸ್ತಾನ್ ಕೊಕೋ ಕೋಲಾ ಬೇವರೇಜಸ್ ಲಿ. ಎಂಬ ಕಂಪನಿ ಬರುವುದಾಗಿ ಜನಕ್ಕೆ ತಿಳಿಯುತ್ತದೆ. ಜನ ಪ್ರತಿರೋಧಿಸುತ್ತಾರೆ. ಇದಾದ ಕೆಲವು ದಿನಗಳಲ್ಲಿ ಕಂಪನಿಯ ಮಂದಿ ಬರುತ್ತಾರೆ, ಬಂದವರು “ನೀವು ಏಕೆ ಮನೆ ಬಾಗಿಲಿಗೆ ಬಂದ ಅದೃಷ್ಟವನ್ನು ಕಾಲಲ್ಲಿ ದೂಡುತ್ತಿದ್ದೀರಿ?! ನಾವು ಇಲ್ಲಿಗೆ ಬರುತ್ತಿದ್ದಂತೆ ನಿಮ್ಮೆಲ್ಲರ ಮನೆಯವರಿಗೆ ಕೆಲಸ ಕೊಡುತ್ತೇವೆ. ಕೈತುಂಬಾ ಸಂಬಳ ಕೊಡುತ್ತೇವೆ, ಇಲ್ಲಿನ ಎಲ್ಲಾ ಹಳ್ಳಿಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲ್ಮಟ್ಟಕ್ಕೆ ಎತ್ತುತ್ತೇವೆ, ನಾವು ಸದಾ ನಿಮ್ಮ ಹಳ್ಳಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ..." ಎಂದೆಲ್ಲಾ ಕನಸುಗಳ ಹೂ ಮಾಲೆ ಹಾಕುತ್ತಾರೆ. ಜನ ಅವರ ಮಾತುಗಳನ್ನು ನಂಬುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಕಾರ್ಖಾನೆ ಕೆಲಸ ಆರಂಭಿಸುತ್ತದೆ. ಸುತ್ತಮುತ್ತ ಒಟ್ಟು ಎರಡು ಲಕ್ಷಕ್ಕೂ ಮಿಗಿಲಾದ ಜನಸಂಖ್ಯೆಯಲ್ಲಿ ಸುಮಾರು ೨೦೦ ಜನಕ್ಕೆ ದಿನಗೂಲಿ ಕೆಲಸ ಸಿಗುತ್ತದೆ. ೧೭೦ ಮಂದಿ ಹೊರಗಿನವರಿಗೆ ಶಾಶ್ವತ ಉದ್ಯೋಗ ದೊರೆಯುತ್ತದೆ. 

TS Vivekananda books
ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳು
ಇಲ್ಲಿಂದ ಪ್ರತಿದಿನ ೮೫ ಲಾರಿಗಳು ಕುತ್ತಿಗೆಮಟ್ಟ ಲೋಡನ್ನು ತುಂಬಿಕೊಂಡು ಕೇರಳದ ನಗರಗಳತ್ತ ಸಾಗುತ್ತವೆ. ಪ್ರತಿಯೊಂದು ಲಾರಿಯಲ್ಲಿ ೫೫೦-೬೦೦ ಕೇಸುಗಳಿರುತ್ತವೆ. ಇಂಥಾ ಪ್ರತಿಯೊಂದು ಕೇಸಿನಲ್ಲಿ ೨೪ ಬಾಟಲಿಗಳು ತುಂಬಿರುತ್ತವೆ. ಈ ಲೆಕ್ಕದಲ್ಲಿ ದಿನಕ್ಕೆ ಇಂಥಾ ೧೨ ಲಕ್ಷ ಬಾಟಲಿ ಕೊಕೋ ಕೋಲಾ ನೀರು ಪ್ಲಾಚಿಮಡಾದಿಂದ ಹೊರಹೋಗಲಾರಂಭಿಸುತ್ತದೆ. 

ಅತ್ತ ಅವರ ಲಾರಿಗಳ ಓಡಾಟ ಜಾಸ್ತಿಯಾದಂತೆ ಇತ್ತ ಸುತ್ತಮುತ್ತಲ ಮೂರೂ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಹತ್ತಾರು ಹಳ್ಳಿಗಳ ಬಾವಿಗಳು ನಿಧಾನಕ್ಕೆ ತಳ ಕಾಣಲಾರಂಭಿಸುತ್ತವೆ. ಅಲ್ಲಲ್ಲಿ ಕೆಲವು ಬಾವಿಗಳಲ್ಲಿ ತಳದಲ್ಲಿ ಅಲ್ಪಸ್ವಲ್ಪ ನೀರಿದ್ದರೂ ಆ ನೀರು ಮೊದಲಿನಂತೆ ಕಾಣುವುದಿಲ್ಲ. ಕುಡಿಯಲು ಸಾಧ್ಯವಾಗುತ್ತಿಲ್ಲ. ಬಟ್ಟೆ ತೊಳೆಯಲು ಸಾಧ್ಯವಾಗುತ್ತಿಲ್ಲ. ಇದಾದ ಕೆಲವೇ ದಿನಗಳಲ್ಲಿ ಆ ವರ್ಷದ ಮೊದಲ ಬೆಳೆ ಬರುತ್ತದೆ. ಯಾರಿಗೂ ಸರಿಯಾದ ಇಳುವರಿಯಿಲ್ಲ. ಈ ನಡುವೆ ಕಾರ್ಖಾನೆಯು ಉಚಿತವಾಗಿ ಕೊಟ್ಟಿದ್ದ ಮಂದ ದ್ರವರೂಪದ ತ್ಯಾಜ್ಯವನ್ನು ಉತ್ತಮ ಗೊಬ್ಬರವೆಂದು ಹೇಳಿ ರೈತರ ಹೊಲಗಳಿಗೆ ಸಾಗಿಸಿದ್ದ ಕಂಪನಿಯ ಉದ್ದೇಶದ ಬಗ್ಗೆ ಜನಕ್ಕೆ ಗುಮಾನಿ ಆರಂಭವಾಗುತ್ತದೆ. ನೀರು ನಿಧಾನವಾಗಿ ಪಾತಾಳ ಸೇರುತ್ತಿರುತ್ತದೆ. ಬೇಸಾಯ ಅಸಾಧ್ಯವಾಗುತ್ತದೆ. ಅಲ್ಲಿನ ಬಾವಿ, ಕೆರೆ, ಹೊಂಡಗಳಲ್ಲಿ ನೀರಲ್ಲಿ ಸ್ನಾನ ಮಾಡಿದ ಜನ-ಜಾನುವಾರುಗಳ ಮೈಯಲ್ಲಿ ನಿಧಾನವಾಗಿ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಸಾವಿರಾರು ಜನ ಜೀವನೋಪಾಯಕ್ಕಾಗಿ ವಲಸೆ ಹೋಗಲು ಆರಂಭಿಸುತ್ತಾರೆ. 

ಜನಕ್ಕೆ ತಮ್ಮ ಸಮಸ್ಯೆಗಳ ಮೂಲವನ್ನು ಹುಡುಕುವುದು ಅನಿವಾರ್ಯವಾಗುತ್ತದೆ. ನಿಜಸ್ಥಿತಿ ಅವರ ಗಮನಕ್ಕೆ ಬಂದಾಗ ಜನ ಬೆಚ್ಚಿಬೀಳುತ್ತಾರೆ. ಆ ಕಂಪನಿಯ ಆವರಣದಲ್ಲಿ ಯಮ ಸಾಮರ್ಥ್ಯದ ಆರು ಬೋರ್‌ವೆಲ್‌ಗಳಿರುತ್ತವೆ. ಇವುಗಳಿಂದ ಕಾರ್ಖಾನೆ ಪ್ರತಿನಿತ್ಯ ೧೫ ಲಕ್ಷ ಲೀ. ನೀರನ್ನು ನೆಲದಿಂದ ಹೀರಿ, ಅದಕ್ಕೆ ಪರಿಮಳ ಹಾಕಿ ರವಾನಿಸುತ್ತಿರುತ್ತದೆ. ಜನರ ಗಮನಕ್ಕೆ ಇದು ಬರುವ ಹೊತ್ತಿಗೆ ಕಂಪನಿಯ ಬೋರುಗಳೂ ಮುಷ್ಕರ ಹೂಡಿರುತ್ತವೆ. ಆಗ ಅವುಗಳಿಂದ ನಿತ್ಯ ಕೇವಲ ೮ ಲಕ್ಷ ಲೀ. ನೀರು ಮಾತ್ರ ಹೊರಬರುತ್ತಿರುತ್ತದೆ. ಈ ಕೊರತೆಯನ್ನು ಹೊಂದಿಸಿಕೊಳ್ಳಲು ಕಂಪನಿ ದೂರದೂರದ ರೈತರ ಹೊಲಗಳಿಂದ ನೀರನ್ನು ಖರೀದಿ ಮಾಡುತ್ತಿರುತ್ತದೆ. ಈ ನಡುವೆ ರೈತರು ಅವರ ಉಚಿತ ಗೊಬ್ಬರವನ್ನು ನಿರಾಕರಿಸಲಾರಂಭಿಸಿದ ಮೇಲೆ ಬೇಕಾಬಿಟ್ಟಿ ಸಿಕ್ಕಿದ ಕಡೆ ಎಸೆದ ಅಪಾಯಕಾರಿ ತ್ಯಾಜ್ಯದಿಂದ ಹೊರಬಿದ್ದ ಗಬ್ಬುನಾತ ಇಡೀ ಪ್ರದೇಶಕ್ಕೊಂದು ಹೊಸ ಹೆಸರನ್ನಿಡುವಂತೆ ಮಾಡುತ್ತದೆ. 

ಜನ ಪ್ರತಿರೋಧಿಸುತ್ತಾರೆ, ಕಂಪನಿ ಕೇರೇ ಮಾಡುವುದಿಲ್ಲ. ಅವರ ಬಾವಿಗಳು ಪೂರ್ತಿ ಬತ್ತಿಹೋಗುತ್ತವೆ. ಸುತ್ತಮುತ್ತಲ ಜಮೀನುಗಳು ಸವುಳು ನೆಲಗಳಾಗಿ, ಕೃಷಿಗೆ ಅಯೋಗ್ಯವಾಗುತ್ತವೆ. ಸುತ್ತಮುತ್ತಲ ಹಳ್ಳಿಗಳ ಮಕ್ಕಳು ಮುದುಕರಾದಿಯಾಗಿ ಎಲ್ಲರಿಗೂ ಅನೇಕ ಖಾಯಿಲೆಗಳು ಸಾಮಾನ್ಯವೆಂಬಂತೆ ಕಾಡತೊಡಗುತ್ತವೆ. ಒಂದೆಡೆ ನಿಂತುಹೋಗಿರುವ ಕೃಷಿ, ಮತ್ತೊಂದೆಡೆ ಬೀದಿ ಪಾಲಾದ ಕೃಷಿ ಕಾರ್ಮಿಕರು, ಈ ನಡುವೆ ಕಂಡು ಕೇಳರಿಯದ ರೋಗಗಳು, ಔಷಧ ವೆಚ್ಚ , ಜೊತೆಗೆ ಗಬ್ಬು ವಾಸನೆ. ರೋಸಿಹೋದ ಜನ ಸರ್ಕಾರದ ಮೊರೆ ಹೋಗುತ್ತಾರೆ. ಸರ್ಕಾರ ಕಂಪನಿಯ ಪರವಾಗಿ ನಿಲ್ಲುತ್ತದೆ. ಜನ ಕಾರ್ಖಾನೆಯ ಮುಂದೆ ಪ್ರದರ್ಶನ ಪ್ರತಿಭಟನೆಗಿಳಿಯುತ್ತಾರೆ, ಪಿಕೆಟಿಂಗ್ ಮಾಡುತ್ತಾರೆ. ಪೋಲೀಸರು ನಿರ್ದಾಕ್ಷಿಣ್ಯವಾಗಿ ಲಾಠಿಬೀಸಿ ಜನರನ್ನು ಮಗ್ಗ ಮಲಗಿಸುತ್ತಾರೆ. ಪ್ರತಿಯೊಬ್ಬರ ಮೇಲೆ ಅಸಂಖ್ಯಾತ ಐಪಿಸಿ ಕೋಡುಗಳ ಮೂಲಕ ಸಾಧ್ಯವಾದ ಎಲ್ಲಾ ಮೊಕದ್ದಮೆಗಳನ್ನು ಹೂಡುತ್ತಾರೆ. ಕಾರ್ಖಾನೆಯ ಕಾವಲಿಗೆ ಪೋಲೀಸ್ ತುಕಡಿ ಬರುತ್ತದೆ. ಅನಿವಾರ್ಯವಾಗಿ ಸ್ಥಳೀಯರು ಬೀದಿಗಳಿಯುತ್ತಾರೆ. 

ಈ ಹೋರಾಟ ಆರಂಭವಾಗಿದ್ದು ೨೨ ನೇ ಏಪ್ರಿಲ್ ೨೦೦೨ ರಂದು, ಉದ್ಘಾಟಿಸಿದ್ದು ಆದಿವಾಸಿ ಗೋತ್ರ ಮಹಾಸಭಾದ ನಾಯಕಿ ಸಿ.ಕೆ.ಜಾನು. ಈ ದುರಂತದ ಹೆಚ್ಚು ಬಲಿಪಶುಗಳು ಆದಿವಾಸಿಗಳು ಮತ್ತು ದಲಿತರು. ಈ ಹೋರಾಟಕ್ಕೆ ನಾಡಿದ್ದು ೧೫ ತಾರೀಖಿಗೆ ಒಂದು ಸಾವಿರ ದಿನಗಳು ತುಂಬಲಿವೆ. 

ಈ ನಡುವೆ ಆ ಪ್ರದೇಶದ ಮಿಲಿಯಾನು ಲೀಟರ್ ನೀರು ಭೂಮಿಯಿಂದ ಹೊರಬಂದು ನಗರವಾಸಿ ಶೋಕಿಲಾಲರ ಹೊಟ್ಟೆಸೇರಿ, ಮೂತ್ರವಾಗಿ ಕೇರಳದ ಉದ್ದಗಲಕ್ಕೂ ಹರಿದಾಡುತ್ತಿದೆ. ಅಲ್ಲಿನ ಸಾವಿರಾರು ಆದಿವಾಸಿಗಳು, ದಲಿತರು ಹಸಿವು ಅಪಮಾನಗಳಿಂದ ಕಂಗೆಟ್ಟಿದ್ದಾರೆ. ಸರ್ಕಾರ ಕಂಪನಿಯ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಇವುಗಳ ನಡುವೆ ಸ್ಥಳೀಯ ಗ್ರಾಮ ಪಂಚಾಯ್ತಿಗಳು ಕಾರ್ಖಾನೆಯ ಪರವಾನಗಿಯನ್ನು ರದ್ದುಪಡಿಸಿವೆ. ಇದನ್ನು ಪ್ರಶ್ನಿಸಿ ಕಂಪನಿ ಕೇರಳ ಹೈಕೋರ್ಟಿನ ಮೆಟ್ಟಿಲು ಹತ್ತಿದೆ. ಕೋರ್ಟು ಪಂಚಾಯತಿಯ ಆದೇಶಕ್ಕೆ ತಡೆಯಾಜ್ಞೆ ನೀಡಿ, ಇದಕ್ಕೆ ಸಂಬಂಧಿಸಿದ ಅಧಿಕಾರದ ಮುಂದೆ ಮನವಿ ಸಲ್ಲಿಸುವಂತೆ ಸೂಚಿಸಿದೆ. ಇದನ್ನು ಆಧರಿಸಿ ಕಂಪನಿ ರಾಜ್ಯದ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಮುಂದೆ ಮನವಿ ಸಲ್ಲಿಸಿದೆ. ಆ ಆಡಳಿತವು ತನ್ನ ಮಧ್ಯಂತರ ಆದೇಶದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳೂ ಮಾಡುವಂತೆ ಈ ತೀರ್ಮಾನಕ್ಕೆ ಬರುವುದಕ್ಕೆ ಮುಂಚೆ ‘ತಜ್ಞರ ಸಮಿತಿಯನ್ನು’ ನೇಮಿಸಿ ಅದರಿಂದ ವರದಿ ಪಡೆಯಿರಿ ಎಂದು ಹೇಳಿದೆ. ಈ ಮಧ್ಯಂತರ ಆದೇಶವನ್ನು ಪ್ರಶ್ನಿಸುತ್ತಾ ಪಂಚಾಯ್ತಿಯು ಈ ರೀತಿ ತಜ್ಞರ ಸಮಿತಿಯನ್ನು ನೇಮಿಸುವುದಕ್ಕೆ ಮುಂಚೆ ಕಾರ್ಖಾನೆಯು ನಾವು ಈ ಕೆಳಗೆ ಮಂಡಿಸಿರುವ ೧೬ ಪ್ರಶ್ನೆಗಳಿಗೆ ಪಂಚಾಯ್ತಿಗೆ ಬಂದ ಉತ್ತರಿಸಲಿ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಂಚಾಯ್ತಿಗೆ ಹೋದ ಕಂಪನಿಯ ಅಧಿಕಾರಿ ಬರಿಗೈಯಲ್ಲಿ ಹೋಗಿದ್ದಾನೆ. ಪ್ರಶ್ನೆಗಳಿಗೆ ಉತ್ತರಿಸಲು ಅವನಿಂದ ಸಾಧ್ಯವಾಗಿಲ್ಲ. 

ಇದಾಗುವಷ್ಟರಲ್ಲಿ ಪೆರುಮಟ್ಟಿ ಗ್ರಾಮ ಪಂಚಾಯ್ತಿಯು ತನ್ನ ಪರವಾನಗಿ ರದ್ದು ಆದೇಶಕ್ಕೆ ಸರ್ಕಾರವು ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದು, ಹೈಕೋರ್ಟು ಒಂದು ತಿಂಗಳೊಳಗೆ ಕಾರ್ಖಾನೆಯು ಬೋರಿನ ನೀರಿಗೆ ಬದಲಾಗಿ ಬೇರೊಂದು ಮಾರ್ಗವನ್ನು ಕಲ್ಪಿಸಿಕೊಳ್ಳುವಂತೆ ಸೂಚಿಸಿದೆ. ಹಾಗೊಂದು ಪಕ್ಷ ಕಾರ್ಖಾನೆ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಕಾರ್ಖಾನೆಯ ವ್ಯವಹಾರದಲ್ಲಿ ಪಂಚಾಯ್ತಿಯು ಮಧ್ಯಪ್ರವೇಶಿಸಬಾರದೆಂದೂ, ಅಲ್ಲಿಯವರೆಗೆ ಕಾರ್ಖಾನೆಯು ತನ್ನ ೩೬ ಎಕರೆ ಪ್ರದೇಶಕ್ಕೆ ಅನುಗುಣವಾಗಿ ಕೃಷಿಗೆ ಹಾಗೂ ದಿನಬಳಕೆಗೆ ಒಬ್ಬ ರೈತ ಎಷ್ಟು ನೀರನ್ನು ಬಳಸುತ್ತಾನೋ ಅಷ್ಟು ನೀರನ್ನು ಅಂತರ್ಜಲದಿಂದ ಎತ್ತಿ ಬಳಸಬಹುದೆಂದೂ, ಒಂದು ತಿಂಗಳ ನಂತರ ಅವರ ಕೊಳವೆ ಬಾವಿಗಳ ಬಳಕೆಯನ್ನು ನಿಲ್ಲಿಸಿರುವುದನ್ನು ಖಚಿತಪಡಿಸಬೇಕೆಂದೂ ಹೇಳಿದೆ. ಮುಂದುವರಿದು ಈ ರೀತಿ ಸರ್ಕಾರವು ಒಂದು ಕಂಪನಿಗೆ ಇಷ್ಟೊಂದು ಅಗಾಧ ಪ್ರಮಾಣದ ಅಂತರ್ಜಲವನ್ನು ಬಳಸಲು ಅನುಮತಿ ನೀಡಲು ಬರುವುದಿಲ್ಲ. ಹಾಗೊಂದು ಪಕ್ಷ ಇದೇ ಆಧಾರದ ಮೇಲೆ ಎಲ್ಲಾ ರೈತರೂ ಇದೇ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸಲು ಕೋರಿದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕಾಗುತ್ತದೆ, ಆಗ ಅಂತರ್ಜಲದ ಕಥೆ ಏನಾಗುತ್ತದೆ? ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ. 

ಏಕ ಪೀಠದ ಈ ಮೇಲಿನ ತೀರ್ಪನ್ನು ಪ್ರಶ್ನಿಸಿ ಡಿವಿಷನಲ್ ಬೆಂಚಿನ ಮುಂದೆ ಕಂಪನಿ ಮೇಲ್ಮನವಿಯನ್ನು ಸಲ್ಲಿಸಿದೆ. ಇದರಲ್ಲಿ ಕಂಪನಿ ‘ಒಂದು ಪಂಚಾಯ್ತಿಗೆ ಇಂಥಾ ಒಂದು ಕಂಪನಿಯ ಪರವಾನಗಿಯನ್ನು ರದ್ದುಪಡಿಸುವ ಅಥವಾ ಪ್ರಶ್ನಿಸುವ ಅಧಿಕಾರವಿಲ್ಲ’ ಎಂದು ಹೇಳಿದೆ. ವಿಚಾರಣೆ ಇನ್ನೂ ಬಾಕಿ ಇದೆ. ಈ ನಡುವೆ ನಡೆದಿರುವ ಎಲ್ಲಾ ಸಂಶೋದನೆಗಳೂ ಕಂಪನಿಯ ವಿರುದ್ದವಾಗಿವೆ. ಮನುಷ್ಯನ ಕೇಂದ್ರ ನರವ್ಯೂಹ, ಮೂತ್ರಕೋಶ ಹಾಗೂ ಮಿದುಳಿನ ಕ್ರಿಯೆಗಳ ಮೇಲೆ ಅಗಾಧ ಪರಿಣಾವನ್ನುಂಟುಮಾಡಿ, ಜೀವ ತಗೆಯಬಲ್ಲ ಕ್ಯಾಡ್ಮಿಯಂ ಮತ್ತು ಸೀಸದ ಧಾತುಗಳು ಅಲ್ಲಿನ ತ್ಯಾಜ್ಯದಲ್ಲಿ ನಿಗಧಿತ ಮಿತಿಗಿಂತ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಸಂಶೋಧನೆಗಳು ಸ್ಥಿರಪಡಿಸಿವೆ. 

ಈ ಹಿನ್ನೆಲೆಯಲ್ಲಿ ಭವಿಷ್ಯದ ವಿಚಾರಣೆ ಕೇವಲ ನೀರನ್ನು ಮಾತ್ರ ಕುರಿತು ಯೋಚಿಸುತ್ತದೋ ಇಲ್ಲಾ ಸಮಗ್ರವಾಗಿ ಹಳ್ಳಿಯ ವಿನಾಶವನ್ನು ಗಮನಿಸುತ್ತದೋ ಕಾದು ನೋಡಬೇಕಾಗಿದೆ. ಇದಕ್ಕಾಗಿ ಈ ಹೋರಾಟದ ಮುಂಚೂಣಿಯಲ್ಲಿರುವ ‘ಕೊಕೋ ಕೋಲಾ ವಿರುದ್ಧ ಸಮರ ಸಮಿತಿ’ ಹಾಗೂ ಇದನ್ನು ಬೆಂಬಲಿಸುತ್ತಿರುವ ಹಲವು ಜನಪರ ಸಂಘಟನೆಗಳು ಹಾಗೂ ವ್ಯಕ್ತಿಗಳು ಕುತೂಹಲದಿಂದ ಕಾದಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿರುವುದರಿಂದ ಅಂಥಾ ಮಾಧ್ಯಮಗಳೂ ಈ ನಿರೀಕ್ಷೆಯಲ್ಲಿವೆ. 

ಈ ನಡುವೆ ಪಾಕಿಸ್ತಾನ ಸಿಂಧ್ ಪ್ರಾಂತ್ಯ ಹೈಕೋರ್ಟ್ ಇಂಥದ್ದೇ ಒಂದು ತಾಪತ್ರಯದಲ್ಲಿ ಸಿಕ್ಕಿಕೊಂಡು ಹೊರಬಂದ ಘಟನೆಯೊಂದು ವರದಿಯಾಗಿದೆ. ಕರಾಚಿಯ ಹೊರವಲಯದಲ್ಲಿ ಸಿಂಧ್ ಸರ್ಕಾರ ಒಂದೆಡೆ “ಶಿಕ್ಷಣ ನಗರ"ವನ್ನು ಸೃಷ್ಠಿಸಲು ಜಮೀನನ್ನು ಮಂಜೂರು ಮಾಡಿತ್ತು.ಇಲ್ಲಿ ಜಮೀನು ಪಡೆದ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಖ್ಯಾತ ‘ಸಿಂಧ್ ಇನ್ಸ್‌ಟಿಟ್ಯೂಟ್ ಆಫ್ ಯೂರಾಜಲಿ’, ಹಾಗೂ ‘ಜುಲ್ಫಿಕರ್ ಆಲಿ ಬುಟ್ಟೋ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ ಸಂಸ್ಥೆಗಳು ಸೇರಿದ್ದವು. ಈ ನಡುವೆ ಸಿಂಧ್ ಸರ್ಕಾರ ಅದೇ ಪ್ರದೇಶದಲ್ಲಿ ಇದೇ ಕೊಕೋ ಕೋಲಾ ಕಂಪನಿಯ ಸೋದರನಾದ ನೆಸ್ಲೆ ಕಂಪನಿಗೆ ಬಾಟಲಿ ನೀರನ್ನು ಉತ್ಪಾದಿಸುವ ಕಾರ್ಖಾನೆಗೆ ಸುಮಾರು ೮.೫ ಹೆಕ್ಟೇರ್ ನೆಲವನ್ನು ಕೊಟ್ಟಿತ್ತು. 

ಈ ಕಾರ್ಖಾನೆಯು ಇಲ್ಲಿಂದ ಪ್ರತಿದಿನ ೩೦ ಕೋಟಿ ಲೀಟರ್ ನೀರನ್ನು ಭೂಮಿಯಿಂದ ತಗೆದು, ಅದನ್ನು ಸಂಸ್ಕರಿಸಿ, ಬಾಟಲಿಮಾಡಿ, ಸಧ್ಯಕ್ಕೆ ಅಮೆರಿಕಾದ ಸೇನೆಗಳು ಕಾರ್ಯಾಚರಣೆಯಲ್ಲಿರುವ ಅಪ್ಘಾನಿಸ್ಥಾನ ಮತ್ತು ಕೆಲವು ಅರಬ್ ದೇಶಗಳಿಗೆ ಸರಬರಾಜು ಮಾಡುವ ಯೋಜನೆ ಹೊಂದಿತ್ತು. ಇದಕ್ಕಾಗಿ ಹತ್ತು ಮಿಲಿಯಾನು ಡಾಲರ್‌ಗಳಷ್ಟು ಬಂಡವಾಳ ಹೂಡಲು ತೀರ್ಮಾನಿಸಿತ್ತು. ಆದರೆ ಈ ಕಾರ್ಖಾನೆ ಆರಂಭವಾಗುವುದಕ್ಕೆ ಮುಂಚೆಯೇ ಅಲ್ಲಿ ಜಾಗ ಪಡೆದಿದ್ದ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ಪ್ರದೇಶವು ಅಂತರ್ಜಲದ ದೃಷ್ಟಿಯಿಂದ ತೀರಾ ನಾಜೂಕಿನದಾಗಿದ್ದು. ಪ್ರತಿದಿನ ಇಷ್ಟೋಂದು ಅಗಾಧ ಪ್ರಮಾಣದ ನೀರನ್ನು ಹೊರತಗೆಯುವುದರಿಂದ ನಾಳೆ ಅಲ್ಲಿ ವಾಸಿಸುವ ಯಾರಿಗೂ ನೀರೇ ಇಲ್ಲದಂತಾಗುತ್ತದೆ. ಆದರೆ ಅಲ್ಲಿನ ಅಂತರ್ಜಲ ಮುಗಿದ ತಕ್ಷಣ ಈ ಕಾರ್ಖಾನೆ ಬೇರೊಂದು ನೀರು ಸಿಗುವ ಜಾಗಕ್ಕೆ ತನ್ನ ಟೆಂಟನ್ನು ಬದಲಾಯಿಸುತ್ತದೆ. ಆದರೆ ನಾವು ಹಾಗೆ ಮಾಡಲು ಬರುವುದಿಲ್ಲ. ಆದ್ದರಿಂದ ಈ ಕಾರ್ಖಾನೆಯು ಇಲ್ಲಿ ಸ್ಥಾಪನೆಯಾಗದಂತೆ ತಡೆಯಬೇಕು ಎಂದು ಕೋರಲಾಗಿತ್ತು. 

ವಾದವಿವಾದಗಳು ನಡೆದವು ಶಿಕ್ಷಣ ಸಂಸ್ಥೆಗಳ ಪರವಾಗಿ ವಾದಿಸುತ್ತಿದ್ದ ವಕೀಲರು ಕಂಪನಿಯು ಹೂಡಿದ ಅನೇಕ ಕುತಂತ್ರಗಳನ್ನು ಬಯಲಿಗೆಳೆದರು ಅದರಲ್ಲಿ ಮುಖ್ಯವಾದದದ್ದು... “ಕಂಪನಿಯು ಸಲ್ಲಿಸಿರುವ ತನ್ನ ‘ಪರಿಸರ ಪರಿಣಾಮ ಅಧ್ಯಯನ’ವು ಅದರ ನಿಜವಾದ ಹೆಸರಿನಲ್ಲಿಲ್ಲ. ಆಧ್ಯಯನ ವರದಿ ಒಂದು ಪಕ್ಷ ಸತ್ಯವಾದದ್ದೇ ಆದರೆ ಅದು ಏಕೆ ಸುಳ್ಳು ಹೆಸರಿನಲ್ಲಿ ವರದಿಯನ್ನು ಮಂಡಿಸಿದೆ" ಎಂದರು. ಇದಕ್ಕೆ ಕಂಪನಿಯ ಬಳಿ ಉತ್ತರವಿರಲಿಲ್ಲ. ಈ ಕಂಪನಿಗಳು ಸ್ಥಳೀಯ ಆಡಳಿತಗಳ ಕಣ್ಣಿಗೆ ಮಣ್ಣೆರಚಲು ಇಂಥಾ ಆಟಗಳನ್ನು ವ್ಯವಸ್ಥಿತವಾಗಿ ಆಡುತ್ತವೆ ಎಂಬುದನ್ನು ಸಾಬೀತು ಪಡಿಸಿದರು. 

ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಪ್ಲಾಚಿಮಡದ ಕೊಕೋ ಕೋಲಾ ಕಂಪನಿ ಜಮೀನುಗಳನ್ನು ಬೇರೆಯವರ ಹೆಸರಿನಲ್ಲಿ ಖರೀದಿಸಿತ್ತು. ತನ್ನ ಅಗತ್ಯಕ್ಕೆ ಮೀರಿದ ಅಥವಾ ತನಗೆ ಮಂಜೂರಾದ ಭೂಮಿಗಿಂತ ಹೆಚ್ಚು ಭೂಮಿಯನ್ನು ಖರೀದಿಸುವುದು ಇವುಗಳ ಇನ್ನೊಂದು ಕುತಂತ್ರವಾಗಿರುತ್ತದೆ. 

ಈ ನಡುವೆ ಕಂಪನಿ ಸಾವಿರಾರು ನೆಪಗಳನ್ನು ಹೇಳಿತು. ಆದರೆ ಶಿಕ್ಷಣ ಸಂಸ್ಥೆಗಳ ವಕೀಲರು ವೈeನಿಕವಾಗಿ ಮಂಡಿಸಿದ ವಾದದ ಮುಂದೆ ಕಂಪನಿಗೆ ಉತ್ತರವಿರಲಿಲ್ಲ. ಕೊನೆಗೆ ಶಿಕ್ಷಣ ಸಂಸ್ಥೆಗಳ ವಕೀಲರು “ಈ ವರೆಗೂ ನಾನು ಹೇಳಿದ್ದು ವೈಜ್ಞಾನಿಕ ವಿವರಗಳನ್ನು ಆದರೆ ಈ ಕಂಪನಿಯು ಇಸ್ಲಾಮಿನ ಮೂಲಭೂತ ಸಿದ್ದಾಂತಗಳನ್ನೇ ಉಲ್ಲಂಘಿಸುತ್ತಿದೆ. ಇಸ್ಲಾಂ ಧರ್ಮದ ನೀತಿಯ ಪ್ರಕಾರ ಪರಿಸರ ಹಾಗೂ ಅದರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮನುಷ್ಯ ಹೊಣೆ. ಹಾಗೂ ನೀರು ಸಾರ್ವಜನಿಕ ಸಂಪನ್ಮೂಲ ಇದನ್ನು ಹಂಚಿಕೊಂಡು ಬದುಕಬೇಕು. ಈ ನೀರಿನ ಮೇಲೆ ಹೀಗೆ ಯಾರೊಬ್ಬರೂ ಅಧಿಕಾರ ಹೊಂದಬಾರದು, ಹೀಗೆ ಹೊಂದಲು ಪ್ರಭುತ್ವಗಳು ಅನುಮತಿಯನ್ನೂ ನೀಡಬಾರದು, ಇದು ಇಸ್ಲಾಂ ತತ್ವಕ್ಕೆ ವಿರುದ್ಧ" ಎಂದು ಹೇಳಿದರು. 

ಇದಕ್ಕೆ ಪ್ರತಿಯಾಗಿ ನೆಸ್ಲೆ ವಕೀಲರು “ ಆ ಪ್ರದೇಶದಲ್ಲಿ ಸಿಗುವ ನೀರು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ. ಆದರೂ ನಾವು ಅದನ್ನು ಸಂಸ್ಕರಿಸಿ ನೀಡುವ ಶ್ರಮವಹಿಸುತ್ತೇವೆ" ಎಂದರು. ಆದರೆ ನ್ಯಾಯಾಧೀಶರು “ಈ ಕಂಪನಿ ಅಲ್ಲಿ ಯಾವುದೇ ಕಾರಣದಿಂದ ನೀರನ್ನು ತಗೆಯುವ ಪ್ರಯತ್ನಕ್ಕೆ ನೆರವಾಗುವಂತಹ ಯಾವ ಘಟಕಗಳನ್ನೂ ಸ್ಥಾಪಿಸಕೂಡದು. ಮತ್ತು ಆ ಜಾಗವನ್ನು ಸರ್ಕಾರ ವಹಿಸಿಕೊಂಡು ಶಿಕ್ಷಣ ಕಾರಣಗಳಿಗೆ ನೀಡಬೇಕು" ಎಂದು ಎಂದಿತು. ನೆಸ್ಲೆ ಬಾಲಮುದುರಿಕೊಂಡಿತು. 

ಇದು ನೆರೆ ರಾಜ್ಯದ, ನೆರೆ ದೇಶದ ಕತೆಯಾಯಿತು. ಇನ್ನು ನಮ್ಮ ರಾಜ್ಯದ ಕತೆ? ನಮ್ಮಲ್ಲೂ ಇಂತಾ ಹಲವು ಕಂಪನಿಗಳು ಕಾರ್ಯಪ್ರವೃತ್ತವಾಗಿವೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಬಿಡದಿ ಬಳಿಯ ಕೊಕೋ ಕೋಲಾ ಕಾರ್ಖಾನೆ ಈಗಾಗಲೇ ಪ್ಲಾಚಿಮಡದ ದಾಖಲೆಗಳನ್ನೆಲ್ಲಾ ಮುರಿದು ಹಾಕಿದೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ಪೆಪ್ಸಿ ಕಂಪನಿ ಯಾವ ಪ್ರತಿಭಟನೆಯೂ ಇಲ್ಲದೆ ತಣ್ಣಗೆ ಸಾಗುತ್ತಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರನ್ನು ಕೇಳುವ ಮಂದಿಯೇ ಇಲ್ಲದಂತಾಗಿದ್ದಾರೆ. ಅಂತಾ ಪ್ರಯತ್ನಕ್ಕೆ ಪ್ಲಾಚಿಮಡ ಮತ್ತು ಕರಾಚಿ ಸ್ಫೂರ್ತಿಯಾದರೆ ಅವರ ಹೋರಾಟಗಳು ಸಾರ್ಥಕವಾದಂತೆ. 
೧೫ನೇ ಜುಲೈ-೨೦೦೫

ಆಗ 24, 2015

ಆಗಸ್ಟ್ 30ರಂದು ಟಿ.ಎಸ್.ವಿವೇಕಾನಂದರ ಪುಸ್ತಕಗಳ ಬಿಡುಗಡೆ

ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ. ಅಗ್ರಹಾರ ಕೃಷ್ಣಮೂರ್ತಿ, ದಿನೇಶ್ ಅಮೀನ್ ಮಟ್ಟು ಮತ್ತು ಕೋಟಗಾನಹಳ್ಳಿ ರಾಮಯ್ಯ ಮುಖ್ಯ ಅತಿಥಿಗಳಾಗಿರುವ ಸಮಾರಂಭದ ಅಧ್ಯಕ್ಷತೆ ಡಾ.ಎಲ್.ಹನುಮಂತಯ್ಯರವರದು.

ಆಗ 10, 2015

ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಿಗೊಂದು ಬಹಿರಂಗ ಪತ್ರ!

ಸನ್ಮಾನ್ಯ ಅಧ್ಯಕ್ಷರಿಗೆ ನಮಸ್ಕಾರಗಳು,
ಮೊದಲಿಗೆ ನಿಮ್ಮ ಕ್ಷಮೆ ಕೋರುತ್ತೇನೆ: ಹೀಗೊಂದು ಬಹಿರಂಗ ಪತ್ರ ಬರೆದು ಬಿಡುವಿರದ ತಮ್ಮ ಸಮಯವನ್ನು ಹಾಳು ಮಾಡುತ್ತಿರುವುದಕ್ಕೆ.

ವಿಷಯ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ! ನಮ್ಮ ಅರ್ಧ ನಾಡು ಮಳೆಯಿರದೆ ಬರದಿಂದ ತತ್ತರಿಸುತ್ತಿದೆ. ಈಗಾಗಲೇ ತಮಗಾದ ಬೆಳೆನಷ್ಟ ಮತ್ತು ತೀರಿಸಲಾಗದ ಸಾಲಭಾದೆಯಿಂದ ಬಹಳಷ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿದು ನಡೆದು ಹೋಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದುವರೆಗು ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಅಂಕಿ ಅಂಶಗಳ ಒಣಪಾಠವನ್ನು ನಾನಿಲ್ಲಿ ಒಪ್ಪಿಸಹೋಗುವುದಿಲ್ಲ ಮತ್ತು ಅದು ನನ್ನ ಉದ್ದೇಶವೂ ಅಲ್ಲ. 

ಇರಲಿ ವಿಷಯಕ್ಕೆ ಬರುತ್ತೇನೆ: ಈಗಾಗಲೇ ಕೆಲವು ಜನಪರ ಸಂಘಟನೆಗಳು ಅಕ್ಟೋಬರಿನಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕೆಂಬ ಬೇಡಿಕೆ ಇಟ್ಟಿರುವುದು ತಮಗೆ ತಿಳಿದ ವಿಚಾರವಾಗಿದೆ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವರ್ಷದ ಸಮ್ಮೇಳನವನ್ನೇ ರದ್ದು ಮಾಡಬೇಕೆಂದು ಕೋರುತ್ತೇನೆ. ಕ್ಷಮಿಸಿ, ಹೀಗೆ ಹೇಳದೆ ವಿಧಿಯಿಲ್ಲ. ಯಾಕೆಂದರೆ ಬರಗಾಲದ ಇಂತಹ ಸನ್ನಿವೇಶದಲ್ಲಿ, ಜೊತೆಗೆ ಸಾಲು ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ನಾವುಗಳು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರದ ಹಣವನ್ನು ಖರ್ಚು ಮಾಡಿ ಹಬ್ಬದ ಸಡಗರವನ್ನು ಆಚರಿಸುವುದು ಸೂಕ್ತವಲ್ಲವೆಂದು ನನ್ನ ಅನಿಸಿಕೆಯಾಗಿದೆ. ಇದರಲ್ಲಿ ಹಣದ ವಿಷಯ ಮಾತ್ರ ಅಡಕವಾಗಿಲ್ಲ. ಬದಲಿಗೆ ಸೂಕ್ಷ್ಮ ಮನಸ್ಸಿನವರೆನಿಸಿಕೊಂಡ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ನೈತಿಕ ಹೊಣೆಗಾರಿಕೆಯಾಗಿದೆ. ಸಾಹಿತಿಯಾದವನು ಕೊನೆಗೂ ಹೊಣೆಗಾರನಾಗುವುದು ತಾನು ಬದುಕುವ, ಬರೆಯುವ ಸಮಾಜಕ್ಕೆ ತಾನೆ? ಈ ವಿಚಾರವನ್ನು ನಾನು ಬಹಳಷ್ಟು ಜನರ ಜೊತೆ ಚರ್ಚಿಸಿದಾಗ ಕೇಳಿಬಂದ ಅಭಿಪ್ರಾಯಗಳು ಆಘಾತಕಾರಿಯಾಗಿದ್ದವು. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಹೇಳಬಯಸುತ್ತೇನೆ: ಮೊದಲ ಅನಿಸಿಕೆ ಒಂದು ಊರಲ್ಲಿ ಯಾರಾದರು ಸತ್ತರೆ ಆ ಊರಿನವರೇನು ಉಪವಾಸ ಇರುವುದಿಲ್ಲ. ಹೌದು ನಾನು ಒಪ್ಪುತ್ತೇನೆ, ಊರವರಿರಲಿ ಆ ಮನೆಯವರೆ ಯಾರೂ ಉಪವಾಸ ಇರುವುದಿಲ್ಲ. ಮಣ್ಣು ಮುಗಿದ ಮೇಲೆ ಅವರೂ ಉಣ್ಣುತ್ತಾರೆ, ಯಥಾ ಪ್ರಕಾರ ಜೀವನ ಸಾಗುತ್ತದೆ. ಆದರೆ ಸತ್ತವರ ಸೂತಕದ ಮನೆಯಲ್ಯಾರು ಹಬ್ಬದ ಅಡುಗೆ ಮಾಡಿ ಚಪ್ಪರ ಹಾಕಿ ಉಂಡು ನಲಿಯುವುದಿಲ್ಲ. ಇನ್ನೊಂದು ಅನಿಸಿಕೆ: ಸಮ್ಮೇಳನ ರದ್ದು ಮಾಡಿದರೆ ರಾಯಚೂರು ಭಾಗದ ಜನರ ಬಾವನೆಗಳಿಗೆ ಧಕ್ಕೆ ಯಾಗುತ್ತದೆ. ಇದನ್ನು ಖಂಡಿತಾ ಒಪ್ಪಲು ಸಾದ್ಯವಿಲ್ಲ .ಸಮ್ಮೇಳನದಿಂದ ಲಾಭ ಮಾಡಿಕೊಳ್ಳುವ ಕೆಲವರಿಗೆ ಬೇಸರವಾಗಬಹುದೇನೊ ಆದರೆ ತಮ್ಮ ರೈತ ಬಂದುಗಳನ್ನು ಕಳೆದುಕೊಂಡು ಬರದಿಂದ ತತ್ತರಿಸುತ್ತಿರುವ ಆ ಭಾಗದ ಜನರು ಇದನ್ನವರು ಮನಪೂರ್ವಕವಾಗಿಯೇ ಸ್ವಾಗತಿಸುತ್ತಾರೆ. ನನಗೆ ಅರಿವಿರುವಂತೆ ನಮ್ಮ ಜನ ಸಾವಿನ ಮನೆಯಲ್ಲಿ ಸಂಭ್ರಮ ಆಚರಿಸುವವರಲ್ಲ. ಇನ್ನು ಕೆಲವರ ಪ್ರಶ್ನೆ ರಾಜಕಾರಣಿಗಳು ಯಾವುದನ್ನು ನಿಲ್ಲಿಸಿದ್ದಾರೆಂಬುದು? ಇದು ಎಲ್ಲದಕ್ಕೂ ರಾಜಕಾರಣವನ್ನು ಹೊಣೆ ಮಾಡುವ ಪ್ರಶ್ನೆ. ಒಂದು ಸಾಹಿತ್ಯ ಸಮ್ಮೇಳನ ನಡೆಸುವುದು ಬಿಡುವುದು ಪರಿಷತ್ತು ಮತ್ತು ಸಾಹಿತ್ಯಾಸಕ್ತರ ಕೆಲಸವೇ ಹೊರತು ರಾಜಕಾರಣಿಗಳದ್ದಲ್ಲ. ಹಾಗಾಗಿ ನಾವು ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು ತರವಲ್ಲ. ಸಾಹಿತ್ಯ ಸಮ್ಮೇಳನವೆನ್ನುವುದು ಕನ್ನಡಿಗರ ಕೆಲಸ. ಅದನ್ನು ಮಾಡುವುದು ಬೇಡವೆನ್ನುವುದು ಅವರದೇ ನಿರ್ಧಾರ. ಇನ್ನು ಕನ್ನಡಿಗರ ಅಭಿಮಾನಕ್ಕೆ ಬರಬಂದಿಲ್ಲ. ದುಡ್ಡು ಕೊಡುವವರು ಇದ್ದಾರೆ . ಸಮ್ಮೇಳನ ನಡೆಯಲಿ. ಎನ್ನುವವರೂ ಇದ್ದಾರೆ. ಹೌದು ಕನ್ನಡಿಗರ ಅಭಿಮಾನವಿರಬೇಕಾಗಿದ್ದು: ಮೊದಲು ಅನ್ನ ಕೊಡುವ ಮಣ್ಣಿನ ಮಕ್ಕಳ ಬಗ್ಗೆ. ಅದರ ತರುವಾಯವೇ ಸಾಹಿತ್ಯ ಕಲೆಗಳೆಲ್ಲ. ಹೀಗೆ ವಾದ ಮಾಡುತ್ತಾ ಹೋದರೆ ಮಾಡುತ್ತಲೇ ಹೋಗಬಹುದು. ಆದರೆ ನನ್ನ ವಿಚಾರ ಅದಲ್ಲ. ಒಂದು ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡುವುದರಿಂದ ಕನ್ನಡ ಸಾಹಿತ್ಯವೇನೂ ಸತ್ತು ಹೋಗುವುದಿಲ್ಲ. ಹಾಗೆಯೇ ರದ್ದು ಮಾಡುವುದರಿಂದ ಸತ್ತವರೂ ಎದ್ದು ಬರುವುದಿಲ್ಲ. ಹಾಗಾಗಿ ಸಮ್ಮೇಳನವನ್ನು ರದ್ದು ಮಾಡಬೇಕೆನ್ನುವ ನನ್ನ ಉದ್ದೇಶ: ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ದು:ಖದಲ್ಲಿ ನಾವುಗಳು ಪಾಲುದಾರರು ಎಂಬ ಭಾವನೆ ಮೂಡಿಸಿ, ಆತ್ಮಹತ್ಯೆಯಂತಹ ವಿಚಾರಗಳಿಂದ ಅವರುಗಳನ್ನು ಹೊರತರುವ ಮಾನವೀಯ ಕಾಳಜಿಮಾತ್ರವಾಗಿದೆ. ಇಂತಹದೊಂದು ಕನಿಷ್ಠ ಸೌಜನ್ಯವನ್ನೂ ನಾವು ತೋರಿಸದೇ ಹೋದಲ್ಲಿ ನಾವು ರಚಿಸುವ ಸಾಹಿತ್ಯಕ್ಕೆ ಅರ್ಥವಿರುವುದಿಲ್ಲ.

ಅದರ ಬದಲಿಗೆ ಅದೇ ಅಕ್ಟೋಬರ್ ತಿಂಗಳಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ, ಏಕಕಾಲಕ್ಕೆ ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಹುಡುಕಾಟ ಎಂಬ ವಿಚಾರವನ್ನಿಟ್ಟುಕೊಂಡು ಹೆಚ್ಚು ಖರ್ಚಿಲ್ಲದೆ ವಿಚಾರಸಂಕಿರಣಗಳನ್ನು ನಡೆಸಬಹುದಾಗಿದೆ. ಇಂತಹ ಸಂಕಿರಣಗಳಲ್ಲಿ ಆಯಾ ಜಿಲ್ಲೆಯ ಸಾಹಿತಿಗಳು ಕೃಷಿ ತಜ್ಞರು, ಪ್ರಗತಿಪರರು ಬಾಗವಹಿಸುವಂತೆ ನೋಡಿಕೊಳ್ಳಬಹುದಾಗಿದೆ. ತದನಂತರ ಸಂಕಿರಣದಲ್ಲಿ ಹೊರಹೊಮ್ಮಿದ ಮುಖ್ಯ ಅಂಶಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು. ಇದು ನನ್ನ ವಿನಮ್ರ ಸಲಹೆ ಮಾತ್ರ.

ಇದರೊಂದಿಗೆ ಸರಕಾರ ಕೊಡುವ ಒಂದೆರಡು ಕೋಟಿ ಅನುದಾನವನ್ನು ರೈತರಿಗೆ ನಿಜಕ್ಕೂ ಅನುಕೂಲವಾಗುವ ಯಾವುದಾದರು ಯೋಜನೆಗೆ ಬಳಸಲು,ಪರಿಷತ್ತು ಸರಕಾರಕ್ಕೆ ಒತ್ತಾಯಿಸಬೇಕು.

ಆದ್ದರಿಂದ ಸಾಹಿತ್ಯಪರಿಷತ್ತಿನ ಅದ್ಯಕ್ಷರಿಗೆ ನಾನು ಮನವಿ ಮಾಡಿಕೊಳ್ಳುವುದೇನೆಂದರೆ ದಯಮಾಡಿ ಸಾಹಿತ್ಯ ಸಮ್ಮೇಳವನ್ನು ಈವರ್ಷ ರದ್ದು ಮಾಡಿ. ನಿಮ್ಮ ಅವಧಿ ಮುಗಿದ ನಂತರ- ಬರವಿದ್ದರೂ ಸಮ್ಮೇಳನ ನಡೆಸಿದವರು ಅನಿಸಿಕೊಳ್ಳುವುದಕ್ಕಿಂತ ಬರದ ಕಾರಣದಿಂದ ಸಮ್ಮೇಳನವನ್ನು ರದ್ದು ಮಾಡಿ ರೈತಪರ ಕಾಳಜಿಯನ್ನು ಮೆರೆದವರೆಂದು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯವೆಂದು ನನಗನ್ನಿಸುತ್ತದೆ. ಇತಿಹಾಸದ ಪುಟಗಳನ್ನು ಸೇರುವುದು ಮುಖ್ಯವಲ್ಲ, ಯಾಕೆ ಸೇರಲಾಯಿತು ಅನ್ನುವುದೇ ಮುಖ್ಯವಲ್ಲವೇ ಸರ್. ದಯಮಾಡಿ ಯೋಚಿಸಿ , ನಿಮ್ಮ ಪದಾಧಿಕಾರಿಗಳನ್ನು ನನಗಿಂತ ಹಿರಿಯರಾದ ಸಾಹಿತಿಗಳನ್ನು, ಬುದ್ದಿಜೀವಿಗಳನ್ನು ಸಂಪರ್ಕಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.

ಕು.ಸ.ಮಧುಸೂದನ್ ನಾಯರ್

ನವೆಂ 21, 2014

ವಾಡಿ ಜಂಕ್ಷನ್ .... ಭಾಗ 7

wadi junction
Dr Ashok K R
ಎಂಟು ಘಂಟೆಯ ಸುಮಾರಿಗೆ ಕ್ರಾಂತಿ ರೂಮಿಗೆ ಬಂದ. ಬನ್ನಿಮಂಟಪದಲ್ಲಿ ಟೆಂಪೋ ಹಿಡಿದು ಕಳಸ್ತವಾಡಿಯಲ್ಲಿ ಇಳಿದುಕೊಂಡು ಚಕ್ರೇಶ್ವರಿ ಬಾರಿನಲ್ಲಿ ಎರಡು ಬಿಯರ್ ಬಾಟಲ್ ಖರೀದಿಸಿ ಪಕ್ಕದ ರಾಜಹಂಸ ಡಾಬಾಕ್ಕೆ ಕಾಲಿಟ್ಟಾಗ ಸಮಯ ಒಂಭತ್ತಾಗಿತ್ತು. ಕ್ರಾಂತಿ ಯೋಚನಾಲಹರಿಯಲ್ಲಿ ತೇಲುತ್ತಾ ಮೌನವಾಗುಳಿದಿದ್ದ. ಉಳಿದ ಮೂವರೂ ಕ್ರಾಂತಿಯನ್ನು ಯಾವ ರೀತಿಯಿಂದ ಮಾತಿಗೆ ಹಚ್ಚಬೇಕು ಎಂಬುದನ್ನು ಚಿಂತಿಸುತ್ತಾ ಕುಳಿತಿದ್ದರು. ‘ನಿಮ್ಮಿಬ್ಬರಲ್ಲೊಬ್ಬರು ಮೊದಲು ಮಾತನಾಡಬೇಕು ನಂತರವಷ್ಟೇ ನಾನು ಆ ವಿಷಯವನ್ನು ಚರ್ಚಿಸೋದು’ ಎಂದು ತುಷಿನ್ ಮೊದಲೇ ಹೇಳಿಬಿಟ್ಟಿದ್ದ. 
Also Read: ವಾಡಿ ಜಂಕ್ಷನ್ ಭಾಗ 6

ನವೆಂ 11, 2014

ಇಂತಿ ನಮಸ್ಕಾರಗಳು

inthi namaskaragalu
ಇಂತಿ ನಮಸ್ಕಾರಗಳು
ಬಹುಶಃ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಅರ್ಥವಾಗದ, ಅರ್ಥವಾಗದಿದ್ದರೂ ಓದಿಸಿಕೊಂಡ ಪುಸ್ತಕವೆಂದರೆ ನಟರಾಜ್ ಹುಳಿಯಾರರು ಪಿ.ಲಂಕೇಶ್ ಮತ್ತು ಡಿ.ಆರ್.ನಾಗರಾಜರ ಕುರಿತು ಬರೆದಿರುವ ನೆನಪಿನ ಸಂಚಿಕೆ 'ಇಂತಿ ನಮಸ್ಕಾರಗಳು'. ಈ ಪುಸ್ತಕ ಅರ್ಥವಾಗದ್ದಕ್ಕೆ ಮುಖ್ಯ ಕಾರಣ ನಟರಾಜ್ ಹುಳಿಯಾರರು ಬರೆದಿರುವ ಇಬ್ಬರ ಬರವಣಿಗೆ, ಬದುಕಿನ ಬಗೆಗೆನ ಅಷ್ಟೇನೂ ತಿಳಿಯದಿರುವುದು.

ನವೆಂ 9, 2014

ವಾಡಿ ಜಂಕ್ಷನ್ .... ಭಾಗ 6



wadi junctionDr Ashok K R
ಅವರು ನಾಲ್ವರು ಇದ್ದಿದ್ದೇ ಹಾಗೆ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಒಬ್ಬೊಬ್ಬರಲ್ಲೂ ಬಹಳಷ್ಟು ವ್ಯತ್ಯಾಸಗಳಿದ್ದುವಾದರೂ ಹೊರಗಿನಿಂದ ನೋಡುವವರಿಗೆ ಒಬ್ಬನಿಗೇ ನಾಲ್ಕು ಅಂಗಿ ತೊಡಿಸಿದಂತೆ ಕಾಣಿಸುತ್ತಿದ್ದರು. ಎಲ್ಲರಿಗಿಂತ ಕೊನೆಯಲ್ಲಿ ಬಂದು ತರಗತಿಯ ಒಂದು ಮೂಲೆಯಲ್ಲಿ ಕುಳಿತು ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲು ಹೊರಟು ಕಾಲೇಜಿನ ಎದುರಿಗಿದ್ದ ಅಫ್ರೋಜ್ ಭಾಯ್ ಅಂಗಡಿಯಲ್ಲಿ ಸಿಗರೇಟಿಡಿದು ಕುಳಿತು ಬಿಡುತ್ತಿದ್ದರು. ಮೊದಲ ವರ್ಷದ ಮೊದಲ internals ಮುಗಿಯುವವರೆಗೂ ಬಹುತೇಕ ಮಂದಿ ಇವರು ನಾಲ್ವರು ದುಡ್ಡು ಕೊಟ್ಟು ಓದಲು ಬಂದಿರೋ ದಡ್ಡ ಶಿಖಾಮಣಿಗಳೆಂದೇ ತಿಳಿದಿದ್ದರು.

ಅಕ್ಟೋ 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

ಅಕ್ಟೋ 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

ಅಕ್ಟೋ 21, 2014

ಚೌಕಟ್ಟು ಮೀರಿದ ಬದುಕಿನ ಬಿಳಿ ಸಾಹೇಬನ ಕಥನ



jim corbet
ಬಿಳಿ ಸಾಹೇಬನ ಭಾರತ
Dr Ashok K R
ಇತಿಹಾಸ ನಿರ್ಮಿಸಿ ಬದುಕಿದವರನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವುದಕ್ಕೆ ಆ ವ್ಯಕ್ತಿಯ ಬದುಕಿನ ಬಗ್ಗೆ ಪುಸ್ತಕ ಬರೆಯುವವರು ಎಷ್ಟು ಕಾರಣರೋ ಕೆಲವೊಮ್ಮೆ ಚೌಕಟ್ಟಿನೊಳಗಡೆಯೇ ಸೇರಿ ಹೋಗುವ ವ್ಯಕ್ತಿಯ ವ್ಯಕ್ತಿತ್ವವೂ ಕಾರಣ. ನಮ್ಮ ಇಷ್ಟಾನಿಷ್ಟಗಳ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇತಿಹಾಸದಿಂದ ತೆಗೆದುಕೊಳ್ಳುವುದು ಸಂಪೂರ್ಣ ತಪ್ಪೇನೂ ಅಲ್ಲ! ಇದರಿಂದಾಗುವ ಅನಾನುಕೂಲವೆಂದರೆ ವ್ಯಕ್ತಿಯ ನೈಜ ವ್ಯಕ್ತಿತ್ವ ಅರಿಯದೆ ಹೋಗುವುದು. ಕನ್ನಡದ ಮಟ್ಟಿಗೆ ಚೌಕಟ್ಟಿನೊಳಗಡೆ ಬಂಧಿಯಾಗಿಬಿಟ್ಟಿದ್ದ ‘ಜಿಮ್ ಕಾರ್ಬೆಟ್ ನ’ ವ್ಯಕ್ತಿತ್ವವನ್ನು ಬಿಡುಗಡೆಗೊಳಿಸಿದ ಕೀರ್ತಿ ಡಾ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ” ಪುಸ್ತಕದ್ದು.
Also Read

ಅಕ್ಟೋ 16, 2014

ವಾಡಿ ಜಂಕ್ಷನ್ .... ಭಾಗ 3

Dr Ashok K R
“ಭಯ್ಯಾ ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು. ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ ಪ್ರಶ್ನೆಯೇ ನನ್ನ ಉತ್ತರ”
Also read

ಅಕ್ಟೋ 12, 2014

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ ಪುಸ್ತಕ ಬಿಡುಗಡೆ ಸಮಾರಂಭ

jim corbet kannada book
ದೀಪ ಬೆಳಗಿದ ನಾರಾಯಣಗೌಡರು
Dr Ashok K R


ಡಾ ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಲ್ಲವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಡಾ.ಎನ್ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” ಪುಸ್ತಕ ಶನಿವಾರ (10/10/2014) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪಲ್ಲವ ಪ್ರಕಾಶನದ ಡಾ ವೆಂಕಟೇಶ್, ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಡಾ. ನಲ್ಲೂರು ಪ್ರಸಾದ್, ಪ್ರೊ. ಹಂಪನಾ, ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್, ಡಾ. ಎನ್. ಜಗದೀಶ್ ಕೊಪ್ಪ, ವಿಜಯ ಕರ್ನಾಟಕದ ಪತ್ರಕರ್ತ ಮತ್ತು ಕವಿ ಎಸ್. ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
Also Read

ಅಕ್ಟೋ 10, 2014

ವಾಡಿ ಜಂಕ್ಷನ್ .... ಭಾಗ 2

hingyake
Dr Ashok K R
ಪ್ಲಾಟ್‍ಫಾರಂ ನಂ 1
ನಿಲ್ದಾಣ 1
“ನನ್ನ ತಾತ ತಲೆಯಲ್ಲಿ ಯಾವ ಭಾವನೆ ಇಟ್ಟುಕೊಂಡು ನನಗೀ ಹೆಸರು ಇಟ್ಟರೋ? ತೀರ ಮೊನ್ನೆ ಮೊನ್ನೆ ಎನ್‍ಡಿಟಿವಿ ಇಂಡಿಯಾದಲ್ಲಿ ಕಾರು ಮತ್ತು ಬೈಕುಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುವವನ ಹೆಸರೂ ಕ್ರಾಂತಿ ಸಂಭವ್ ಎಂದು ನೋಡಿದಾಗ ಮನ ನಿರಾಳವಾಯಿತು. ನನ್ನಿಂದ ಯಾವುದಾದರೂ ಕ್ರಾಂತಿ ಸಂಭವಿಸುತ್ತದೆ ಎಂದು ಭಾವಿಸಿದರೋ ಅಥವಾ ನನ್ನ ಕಾಲಘಟ್ಟದಲ್ಲಿ ದೇಶದಲ್ಲೊಂದು ಮಹತ್ತರ ಬದಲಾವಣೆಯಾಗುತ್ತೆ ಎಂದು ಕನಸಿದ್ದರೋ ಗೊತ್ತಿಲ್ಲ. ಮದ್ದೂರಿನ ಬೆಸಗರಹಳ್ಳಿಯಲ್ಲಿ ಹುಟ್ಟಿದ ಹೈದನಿಗೆ ಕ್ರಾಂತಿ ಸಂಭವ್ ಎಂದು ಹೆಸರಿಟ್ಟುಬಿಟ್ಟರು. ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ನನ್ನ ತಪ್ಪಿಗೆ ದಂಡಿಸುವುದನ್ನು ಬಿಟ್ಟು ನನ್ನ ಹೆಸರಿಡಿದುಕೊಂಡು ವ್ಯಂಗ್ಯವಾಡುತ್ತಿದ್ದರು. ‘ಏನಪ್ಪಾ ಕ್ರಾಂತಿ ಮಾಡೋನು ಈ ರೀತಿ ಮಾಡ್ತೀಯಲ್ಲ’ ಎನ್ನುವವರ ಮಾತಲ್ಲಿ ಲೇವಡಿ ಎದ್ದು ಕಾಣುತ್ತಿತ್ತು. ಅವತ್ತು ಮನೆಗೆ ಹಿಂದಿರುಗಿದ ತಕ್ಷಣ ತಾತನ – ಅಜ್ಜ ಅಷ್ಟೊತ್ತಿಗಾಗಲೇ ತೀರಿಕೊಂಡಿದ್ದರು – ಫೋಟೋ ತೆಗೆದುಕೊಂಡು ಅಟ್ಟ ಸೇರಿ ಮನಸಾರೆ ಮನಸ್ಸಿನಲ್ಲೇ ಬಯ್ಯುತ್ತಿದ್ದೆ. ನೀತಿ ಕಥೆಗಳನ್ನು ಹೇಳಿ ಹೇಳಿ ನನ್ನಲ್ಲೊಂದು ಸ್ಥೈರ್ಯ ಉತ್ಸಾಹ ಮೂಡಿಸಿದ್ದ ಅದೇ ತಾತ ಕ್ರಾಂತಿ ಸಂಭವ್ ಎಂದು ಹೆಸರಿಟ್ಟು ಜನ್ಮ ಜನ್ಮಕ್ಕೂ ಸಾಕಾಗುವಷ್ಟು ಕೀಳರಿಮೆ ಮೂಡಲು ಕಾರಣವಾಗಿಬಿಟ್ಟ”
Also Readವಾಡಿ ಜಂಕ್ಷನ್ .... ಭಾಗ 1

ಅಕ್ಟೋ 2, 2014

ವಾಡಿ ಜಂಕ್ಷನ್ .... ಭಾಗ 1


wadi junction


Dr Ashok K R
ಕ್ರಾಸಿಂಗ್
“A patient by name Mr Basavaraju aged 22 years”
‘ಒಂದು ಹಂತದವರೆಗೆ ಹೆಸರು, ದುಡ್ಡು ಎಲ್ಲಾ ನೋಡಿದ ಮೇಲೆ ಮನುಷ್ಯ ಹೊಸತೇನನ್ನೋ ಹುಡುಕಬಯಸೋದು ಸಹಜ’
“comes from a middle class family. He is from”
‘ನಿಮಗೆ ಈ ಸಧ್ಯ ದೇವರು ಎಲ್ಲದರಲ್ಲೂ ಯಶಸ್ಸು ಕೊಟ್ಟಿದ್ದಾನೆ”
“village Hanoor of Gundlupet Taluk. He is an agricultuist by occupation”
‘ಈಗ ಮಾಡಿರೋ ಹೆಸರು ಸಾಲದು, ಮತ್ತಷ್ಟು ಹೆಸರು ಮಾಡಬೇಕೆನ್ನಿಸಿದರೆ ದಾನ ಧರ್ಮ ಮಾಡಿ’
“He presents with compaint of swelling in the right groin region from past 20”
‘ಮಠಕ್ಕೆ ಸೇರಿ ಸನ್ಯಾಸಿ ಜೀವನ ಮಾಡಬೇಕೆನ್ನೋದೂ ನಿಮಗೆ ಹೆಸರು ಮಾಡುವ ಒಂದು’
“years and pain in the swelling from past 7 days”
‘ವಿಧಾನ ಅಲ್ವಾ ಡಾಕ್ಟ್ರೇ! ನಿಮಗೆಷ್ಟೇ ಒಳ್ಳೇ ಸರ್ಜನ್ ಎಂಬ ಹೆಸರಿದ್ದರೂ ಅಂತರಂಗದಲ್ಲಿ ನೀವೇನು ಅನ್ನೋದು ನಿಮಗಿಂತ ಚೆನ್ನಾಗಿ ತಿಳಿದಿರೋರು ಬೇರೆಯವರಿರಲಿಕ್ಕಿಲ್ಲ. ನನ್ನ ಧ್ಯಾನದ ಸಮಯ ಈಗ. ನೀವಿನ್ನು....’
“ಮುಂಡಾಮೋಚ್ತು” ತನಗೇ ಎಂಬಂತೆ ಶ್ರವಣ್ ಹೇಳಿಕೊಂಡನಾದರೂ ಎದುರಿಗಿದ್ದ ಹತ್ತು ಜನ ವಿದ್ಯಾರ್ಥಿಗಳಿಗದು ಕೇಳಿಸಿತ್ತು. Case present ಮಾಡುತ್ತಿದ್ದ ವಿದ್ಯಾರ್ಥಿನಿ ಗಾಬರಿಯಾಗಿ “ಸರ್” ಎಂದಳು. ಉಳಿದವರು ಒಬ್ಬರೊಬ್ಬರ ಮುಖ ನೋಡಿದರು. ಹಿಂದೆ ನಿಂತವರು ನಕ್ಕರೇನೋ ಎನ್ನಿಸಿತು ಶ್ರವಂತ್‍ಗೆ.

ಸೆಪ್ಟೆಂ 30, 2014

ಡಾ ಎನ್ ಜಗದೀಶ್ ಕೊಪ್ಪ: ಬಿಳಿ ಸಾಹೇಬನ ಭಾರತ - ಜಿಮ್ ಕಾರ್ಬೆಟ್ ನ ಮಾನವೀಯ ಮುಖ


jim corbet kannada book
ಬಿಳಿ ಸಾಹೇಬನ ಭಾರತ - ಡಾ ಎನ್ ಜಗದೀಶ್ ಕೊಪ್ಪ
ನಾನು ಇತ್ತೀಚಿನ ದಿನಗಳಲ್ಲಿ ಇಷ್ಟಪಡುವ ಲೇಖಕರಲ್ಲೊಬ್ಬರು ಜಗದೀಶ್ ಕೊಪ್ಪ. ಅವರ ಲೇಖನಗಳನ್ನು ಮೊದಲು ಓದಿದ್ದು ವರ್ತಮಾನದಲ್ಲಿ. ಅವರ ಅನುವಾದಿತ ಕೃತಿಗಳಿರಬಹುದು, ವಿಶ್ಲೇಷಣಾತ್ಮಕ ಲೇಖನಗಳಿರಬಹುದು ಹೊಸತೇನನ್ನೋ ಓದುಗರಿಗೆ ತಿಳಿಸುವ ಹಂಬಲವಿರುವಂತಹ ಬರಹಗಳವು. ಅವರ ಹೊಸ ಪುಸ್ತಕ - ಬಿಳಿ ಸಾಹೇಬನ ಭಾರತ, ಜಿಮ್ ಕಾರ್ಬೆಟ್  ಜೀವನಗಾಥೆ. ಜಿಮ್ ಕಾರ್ಬೆಟ್ ಎಂದರೆ ನನಗೆ ಗೊತ್ತಿರುವಂತೆ ಬೇಟೆಗಾರ ಮತ್ತು ಇಂಗ್ಲೀಷ್ ಆಫೀಸರ್. ಆತನ ಮಾನವೀಯ ಮುಖಗಳು ಮತ್ತು ನಿಸರ್ಗದೊಂದಿಗಿನ ಸಂಬಂಧಗಳ ಬಗೆಗಿನ ಪುಸ್ತಕವಿದು. ಅಕ್ಟೋಬರ್ ಹನ್ನೊಂದರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. 
ಬಿಳಿ ಸಾಹೇಬನ ಭಾರತದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ.


ಜಿಮ್ ಕಾರ್ಬೆಟ್ ಮೊಕಮೆಘಾಟ್ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳಾದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆಯ ವಿಷಯದಲ್ಲಿ ಶಿಸ್ತು ಕಾಣತೊಡಗಿತು. ಆರಂಭದಲ್ಲಿ ಕಾರ್ಬೆಟ್ಗೆ ಇದ್ದ ಒತ್ತಡಗಳು ಮರೆಯಾಗತೊಡಗಿದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನೊಳಗೆ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸಂಬರ್ ತಿಂಗಳ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯಲ್ಲಿದ್ದ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತ್ತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ.

ಸೆಪ್ಟೆಂ 12, 2014

ಕನ್ನಡ ಇ ಪುಸ್ತಕ ಲೋಕಕ್ಕೆ ಸ್ವಾಗತ!

ಕೆಲವು ದಿನಗಳ ಹಿಂದೆ ಕನ್ನಡ ಪುಸ್ತಕಗಳ ಇ - ಆವೃತ್ತಿಯನ್ನು ಪ್ರಾರಂಭಿಸುವ ಬಗ್ಗೆ ಲೇಖನವೊಂದನ್ನು ಬರೆದಿದ್ದೆ. ಅನೇಕರು ಪ್ರತಿಕ್ರಿಯಿಸಿದ್ದರು, ಕೆಲವರು ಮೇಲ್ ಕೂಡ ಮಾಡಿದ್ದರು. ಮೊದಲ ಹಂತದಲ್ಲಿ ನನ್ನ ಎರಡು ಪುಸ್ತಕಗಳನ್ನು ಈಗ ಇ - ಆವೃತ್ತಿಯ ರೂಪದಲ್ಲಿ ಸಿದ್ಧಪಡಿಸಿದ್ದೇನೆ. ಅಂತರ್ಜಾಲದಲ್ಲಿ ಲಭ್ಯವಿದೆ.
ಮೊದಲ ಪುಸ್ತಕ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನನ್ನ ಕಥೆಗಳ ಸಂಕಲನ. "ಸಮಾಧಿ ಹೋಟ್ಲು ಮತ್ತು ಇತರ ಕಥೆಗಳು" ಹೆಸರಿನ ಈ ಕಥಾ ಸಂಕಲನ ಗೂಗಲ್ ಪ್ಲೇ ಬುಕ್ಸಿನಲ್ಲಿ 30 ರುಪಾಯಿಗಳಿಗೆ ಲಭ್ಯ. Smashwordsನಲ್ಲಿ ರುಪಾಯಿಯಲ್ಲಿ ಮಾರಲು ಸಾಧ್ಯವಿಲ್ಲವಾದ ಕಾರಣ ಒಂದು ಡಾಲರ್ರಿಗೆ ಲಭ್ಯವಿದೆ.

"ಸಮಾಧಿ ಹೋಟ್ಲು ಮತ್ತು ಇತರ ಕಥೆಗಳ"ನ್ನು ಗೂಗಲ್ ಪ್ಲೇನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ
"ಸಮಾಧಿ ಹೋಟ್ಲು ಮತ್ತು ಇತರ ಕಥೆಗಳ"ನ್ನು Smashwordsನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ
ಇನ್ನು ಎಂ.ಬಿ.ಬಿ.ಎಸ್ ಓದುವ ಸಮಯದಲ್ಲಿ ಬರೆದ ಕಾದಂಬರಿ "ಆದರ್ಶವೇ ಬೆನ್ನು ಹತ್ತಿ"ಯ ಕೆಲವು ಭಾಗಗಳು ಆಗ 'ಮಾರ್ಗದರ್ಶಿ' ಎಂಬ ಪಾಕ್ಷಿಕದಲ್ಲಿ "ಇರುವುದೆಲ್ಲವ ಬಿಟ್ಟು" ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. ಆ ಪತ್ರಿಕೆಯೇ ಮುಚ್ಚಿಹೋದ ತರುವಾಯ ಆ ಕಾದಂಬರಿಯೂ ಧೂಳು ಹಿಡಿದಿತ್ತು. ನಂತರದಲ್ಲಿ 'ಹಿಂಗ್ಯಾಕೆ?'ಯನ್ನು ಪ್ರಾರಂಭಿಸಿದಾಗ ಕಾದಂಬರಿಯನ್ನು ಪ್ರಕಟಿಸಲು ಶುರುಮಾಡಿದೆ. ಕಾದಂಬರಿಯ ಓದುಗರ ಸಂಖ್ಯೆಯೂ ಕಡಿಮೆಯೇ ಇತ್ತು. ಯಾರು ಓದ್ತಾರೆ ಇದನ್ನ ಎಂದು ಪ್ರಕಟಿಸುವುದನ್ನು ಕೊಂಚ ತಡಮಾಡಿದಾಗ ಕೆಲವು ಓದುಗರು 'ಇದ್ಯಾಕೆ ನಿಲ್ಲಿಸೇಬಿಟ್ರಿ?' ಎಂದು ಕೇಳಿದಾಗ, ಓಹೋ ಇದನ್ನೂ ಸೀರಿಯಸ್ಸಾಗಿ ಓದುವವರು ಕೆಲವರಿದ್ದಾರೆ ಎಂದರಿವಾಯಿತು! ಈಗ ಈ ಕಾದಂಬರಿ ಸಂಪೂರ್ಣವಾಗಿ ಗೂಗಲ್ ಪ್ಲೇ ಬುಕ್ಸಿನಲ್ಲಿ ಮತ್ತು Smashwordsನಲ್ಲಿ ಲಭ್ಯ ಸಂಪೂರ್ಣ ಉಚಿತವಾಗಿ.
ಆದರ್ಶವೇ ಬೆನ್ನು ಹತ್ತಿ ಕಾದಂಬರಿಯನ್ನು ಗೂಗಲ್ ಪ್ಲೇನಲ್ಲಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ನಿಮ್ಮ ಬಳಿ ಆಂಡ್ರಾಯ್ಡ್ ಹೊರತುಪಡಿಸಿ ಬೇರೆ ಉಪಕರಣವಿದ್ದರೆ ಸ್ಮಾಶ್ ವರ್ಡ್ಸಿನಲ್ಲಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಮುಂದಿನ ದಿನಗಳಲ್ಲಿ ಇ - ಪುಸ್ತಕಗಳನ್ನು ಮತ್ತಷ್ಟು ಹೆಚ್ಚಿಸುವ ಕಾರ್ಯಕ್ಕೆ ನಿಮ್ಮದೂ ಸಲಹೆ ಸೂಚನೆಗಳಿರಲಿ.
Summary - Samadhihotlu mattu itara kathegalu - collection of stories and adarshave bennu hatti novel written by Dr Ashok K R are now available in Google play books and Smashwords

ಆಗ 27, 2014

ಆದರ್ಶವೇ ಬೆನ್ನು ಹತ್ತಿ .... ಕೊನೆಯ ಕಂತು.



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 37 ಓದಲು ಇಲ್ಲಿ ಕ್ಲಿಕ್ಕಿಸಿ
ಉಳಿದ ಸದಸ್ಯರು ಪೋಲೀಸರು ಅಲ್ಲಿ ಕುಳಿತು ತಮ್ಮ ಪೊಸಿಷನ್ ತೆಗೆದುಕೊಳ್ಳುವಷ್ಟರಲ್ಲಿ ಹೊರಟು ಹೋಗಿದ್ದರು. ಕೈಯಲ್ಲಿಡಿದಿದ್ದ ಟಾರ್ಚಿನ ಬೆಳಕೇ ನಮಗೆ ಶತ್ರುವಾಗಿತ್ತು. ಅವರಿಗೆ ತೀರ ಸಮೀಪಕ್ಕೆ ಬರುವವರೆಗೂ ಸುಮ್ಮನಿದ್ದರು. ಅವರ ಹತ್ತಿರಕ್ಕೆ ಬರುತ್ತಿದ್ದಂತೆ ಪೋಲೀಸರಿಗೆ ಪ್ರೇಮ್ ನ ಹೆಗಲಿನಲ್ಲಿದ್ದ ಎ.ಕೆ.47 ಬಂದೂಕು ಕಾಣಿಸಿತು. “ಫೈರ್” ಪೋಲೀಸನೊಬ್ಬ ಕೂಗಿ ಮುಗಿಸುವಷ್ಟರಲ್ಲಿ ಪೋಲೀಸರು ಹಾರಿಸಿದ ಗುಂಡು ಪ್ರೇಮ್ ನ ಹಣೆ ಹೊಕ್ಕಿತು. ಒಂದು ಸಣ್ಣ ಕಿರುಚಾಟವನ್ನು ಮಾಡಿ ನೆಲಕ್ಕುರುಳಿದರು ಕಾ.ಪ್ರೇಮ್.

ಆಗ 22, 2014

ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿದ ಅನಂತಮೂರ್ತಿ



ಡಾ ಅಶೋಕ್ ಕೆ ಆರ್. 
ಜಾತ್ಯತೀತವಾಗಿಯೇ ಬದುಕಿ ಬರೆದು ಬೆಳೆದ ಅವರು ಕುಮಾರಸ್ವಾಮಿ, ದೇವೇಗೌಡರನ್ನು ಇದ್ದಕ್ಕಿದ್ದಂತೆ ಬೆಂಬಲಿಸಿಬಿಡುತ್ತಾರೆ, ಕೆಲವೇ ವರುಷಗಳಲ್ಲಿ ಜೀವನಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸನ್ನು ಸಿದ್ಧರಾಮಯ್ಯನವರ ಮೇಲಿನ ನಂಬುಗೆಯಿಂದ ಗೆಲ್ಲಿಸಿ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಅದರಷ್ಟೇ ಅಪಾಯಕಾರಿ ಎಂಬ ಅರಿವಿದ್ದೂ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಹೇಳಿಬಿಡುತ್ತಾರೆ. ಇನ್ನೊಂದೈದು ವರುಷಗಳು ಅವರು ಬದುಕಿದ್ದರೆ ಮೋದಿ ಸಂಪೂರ್ಣ ಸರಿಯಿಲ್ಲದಿದ್ದರೂ ಪರ್ಯಾಯಗಳಿಲ್ಲದ ಕಾರಣ, ಇರುವ ಪರ್ಯಾಯಗಳು ಮೋದಿಗಿಂತ ಅಪಾಯಕಾರಿಯಾಗಿರುವ ಕಾರಣ ಮೋದಿಯನ್ನೇ ಗೆಲ್ಲಿಸಿದರೆ ಒಳ್ಳೆಯದೇನೋ ಎಂದು ಹೇಳಿಕೆ ನೀಡಿದ್ದರೂ ಅನಂತಮೂರ್ತಿಯವರ ಬಗೆಗೆ ಅಚ್ಚರಿಯಾಗುತ್ತಿರಲಿಲ್ಲ. ಇದು ಅವಕಾಶವಾದಿತನ, ಸ್ವಾರ್ಥಕ್ಕಾಗಿ ಕ್ಷಣಕ್ಕೊಂದು ಬಣ್ಣ ಬದಲಿಸುವ ನೀಚತನ – ಇನ್ನು ಅನೇಕಾನೇಕ ರೀತಿಯಲ್ಲಿ ಅವರನ್ನು ಟೀಕಿಸಿದ್ದರೂ ಅವರದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತಿರಲಿಲ್ಲವೇನೋ. ಯಾಕೆಂದರೆ ಅನಂತಮೂರ್ತಿ (ನಾನವರನ್ನು ಅವರ ಬರಹಗಳ ಮೂಲಕ ತಿಳಿದುಕೊಂಡಂತೆ) ಇದ್ದಿದ್ದೇ ಹಾಗೆ. ಸತ್ಯವೆಂಬುದು ಅವತ್ತಿನ ಆ ಮಟ್ಟಿಗಿನ ವಾಸ್ತವವೇ ಹೊರತು ಅದು ಸರ್ವಕಾಲಿಕ ಸತ್ಯವಾಗಲು ಸಾಧ್ಯವೇ ಇಲ್ಲ ಎಂಬುದು ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.

ಆಗ 20, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 37

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 36 ಓದಲು ಇಲ್ಲಿ ಕ್ಲಿಕ್ಕಿಸಿ


‘ಆತ್ಮ’ – ಕಥೆ
ಏನೆಂದರೆ ಏನೂ ಕೆಲಸ ಮಾಡದೆ ಸತ್ತು ಹೋಗ್ತೀನಿ ಅಂತ ಕನಸುಮನಸಿನಲ್ಲೂ ನಾನು ಎಣಿಸಿರಲಿಲ್ಲ. ನಮ್ಮ ಸಾವಿನಿಂದ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ ಎಂಬುದೇನೋ ನಿಜ. ಆದರೆ..... ನಾ ಕಂಡ ಕನಸುಗಳಲ್ಲಿ ಕೊಂಚವನ್ನೂ ಸಾಧಿಸಲಾಗದೆ ಸತ್ತು ಹೋದೆನಲ್ಲಾ ಎಂಬುದನ್ನು ನೆನೆಸಿಕೊಂಡಾಗಲೆಲ್ಲಾ ಬೇಸರವಾಗುತ್ತದೆ. ಈ ಕಾಡಿಗೆ ಬರದೇ ಇದ್ದಲ್ಲಿ ಏನನ್ನಾದರೂ ಮಾಡಬಹುದಿತ್ತೇನೋ ಎಂದೊಮ್ಮೆಮ್ಮೆ ಅನ್ನಿಸುತ್ತದೆ. ನಾಡಿನಲ್ಲಿ ನಾ ನಡೆದುಕೊಂಡಿದ್ದ ರೀತಿಯಿಂದ ಅದೂ ಸಾಧ್ಯವಾಗುತ್ತಿರಲಿಲ್ಲವೇನೋ?

ಆಗ 18, 2014

ಕನ್ನಡ ಇ-ಪುಸ್ತಕಗಳ ಸಂಖೈ ಹೆಚ್ಚಿಸುವಲ್ಲಿ ನಿಮ್ಮದೂ ಪಾತ್ರವಿರಲಿ.



hingyake
ಡಾ ಅಶೋಕ್ ಕೆ ಆರ್
ನಮಗಿಷ್ಟವಿದೆಯೋ ಇಲ್ಲವೋ, ನಮಗೆ ಬೇಕೋ ಬೇಡವೋ ತಂತ್ರಜ್ಞಾನವೆಂಬುದು ಇವತ್ತು ಎಲ್ಲ ಕ್ಷೇತ್ರಗಳನ್ನೂ ಹಾಸು ಹೊಕ್ಕಾಗಿದೆ. ಪುಸ್ತಕಗಳನ್ನು ಮುದ್ರಣ ರೂಪದಲ್ಲಿಯೇ ಖರೀದಿಸಿ ಹೊಚ್ಚ ಹೊಸ ಪುಟಗಳ ಸ್ವಾದವನ್ನಾಸ್ವಾದಿಸಿ ಒಳಪುಟದಲ್ಲಿ ಹೆಸರು ಬರೆದು ಪುಟ ತಿರುವುತ್ತಾ ಓದುವ ಸಂತಸವನ್ನು ಯಾವ ಫೋನುಗಳಾಗಲೀ ಟ್ಯಾಬ್ಲೆಟ್ಟುಗಳಾಗಲೀ ಮತ್ತಿತರ ಗ್ಯಾಡ್ಜೆಟ್ಟುಗಳಾಗಲೀ ಕೊಡಲು ಸಾಧ್ಯವೇ ಇಲ್ಲ. ಗ್ಯಾಡ್ಜೆಟ್ಟುಗಳಲ್ಲಿ ಓದುವುದು ಕಣ್ಣಿಗೆ ಅಷ್ಟು ಹಿತಕರವೆಲ್ಲವೆಂಬುದು ಸತ್ಯವಾದರೂ ಗ್ಯಾಡ್ಜೆಟ್ಟುಗಳ ಮೇಲಿನ ನಮ್ಮ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂಬುದು ವಾಸ್ತವ. ದಿನಪತ್ರಿಕೆಗಳನ್ನು ಓದುವುದಕ್ಕೆ ಫ್ಯಾಬ್ಲೆಟ್ಟುಗಳ ಉಪಯೋಗ ಹೆಚ್ಚುತ್ತಿದೆ. ಕಷ್ಟವಾದರೂ, ಸಮಾಧಾನವಾಗದಿದ್ದರೂ ಮುದ್ರಣ ಆವೃತ್ತಿಯನ್ನು ಮರೆತು ಇ-ಆವೃತ್ತಿಯ ಪುಸ್ತಕಗಳನ್ನು ಓದುವವರ ಸಂಖೈ ಕ್ರಮೇಣ ಹೆಚ್ಚಾಗುವುದರಲ್ಲಿ ಸಂಶಯವಿರಲಾರದು. ಮೇಲಾಗಿ ಈ ಇ-ಆವೃತ್ತಿಗಳು ವಿಶ್ವಾದ್ಯಂತ ಕ್ಷಣಮಾತ್ರದಲ್ಲಿ ದೊರಕುವ ಸಾಧ್ಯತೆಗಳು ಕೂಡ ಕನ್ನಡ ಪುಸ್ತಕಗಳ ಇ-ಆವೃತ್ತಿ ಹೆಚ್ಚಬೇಕೆಂಬ ಆಶಯಕ್ಕೆ ಪೂರಕವಾಗುತ್ತದೆ.