Aug 13, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 36

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 35 ಓದಲು ಇಲ್ಲಿ ಕ್ಲಿಕ್ಕಿಸಿ


“ಏನ್ರೀ ಕೀರ್ತನ, ನೀವೂ ನನ್ನ ಜಾತೀನೇ” ಮನೆಯ ಹೊರಗಡೆ ಮುಖ ತೊಳೆಯುತ್ತ ನಿಂತ ಕೀರ್ತನಾಳ ಬಳಿ ಬಂದು ಕೇಳಿದ ಅರುಣ್.

“ನನ್ನ ಜಾತಿ ಯಾವುದು ಅಂತ ನಿಮಗ್ಯಾವಾಗ ತಿಳಿಸಿದೆ”

“ಅಯ್ಯಯ್ಯೋ ಜಾತಿ ಅಂದ್ರೆ ಹುಟ್ಟಿನಿಂದ ಬಂದಿದ್ದಲ್ಲ. ನಾವು ಸೇರಿದ ವೃತ್ತಿಯಿಂದ ಬಂದಿದ್ದು”

“ಅಂದ್ರೆ ನೀವೂ ಎಂ.ಬಿ.ಬಿ.ಎಸ್ ಓದ್ತಿದ್ದೀರ?”
“ಓದ್ತಿಲ್ಲ, ಓದಿ ಮುಗಿಸಿ ಡಾಕ್ಟರಾಗಿ ಕೆಲಸದಲ್ಲಿದ್ದೆ”
“ಹೌದಾ” ಎಂದಳು ಕೀರ್ತನ. ಕೈ ಕಾಲು ತೊಳೆದುಕೊಳ್ಳುವಾಗ ಹತ್ತಿರದಲ್ಲೆಲ್ಲೋ ಯಾರೋ ಓಡಾಡುತ್ತಿರುವ ಶಬ್ದವಾಯಿತು. ಬರಬರುತ್ತ ಆ ಶಬ್ದ ಹೆಚ್ಚಾಯಿತು.
“ಏನ್ ಅದು ಶಬ್ದ?” ಅರುಣನನ್ನುದ್ದೇಶಿಸಿ ಕೇಳಿದಳು.ಅರುಣ್ ಉತ್ತರಿಸುವಷ್ಟರಲ್ಲಿ ಶಬ್ದ ಬರುತ್ತಿದ್ದ ಪೊದೆಗಳಿಂದ ಹದಿನೈದು ಜನರು ಹೊರಬಂದರು. ಎಲ್ಲರೂ ಗಾಢ ಹಸಿರು ಬಣ್ಣದ ಪೋಷಾಕಿನಲ್ಲಿದ್ದರು. ಬೆನ್ನಿನಲ್ಲೊಂದು ಬ್ಯಾಗ್, ಕೈಯಲ್ಲೊಂದು ಬಂದೂಕು. ಕೆಲವರ ಕೈಯಲ್ಲಿ ಅಡುಗೆ ಮಾಡಲುಪಯೋಗಿಸುವ ಪಾತ್ರೆಗಳಿದ್ದವು. ಮುಂದಾಳತ್ವವನ್ನು ಕಾ ಪ್ರೇಮ್ ವಹಿಸಿದ್ದ. ಅದು ತುಂಗಾ ಸ್ಕ್ವಾಡ್. ಅವರು ಮನೆಯ ಬಳಿ ಬರುತ್ತಿದ್ದಂತೆ ಅರುಣ್ ಪ್ರೇಮ್ ಗೆ ಸೆಲ್ಯೂಟ್ ಮಾಡಿದ. ಏನು ಮಾಡಬೇಕೆಂದು ತಿಳಿಯದ ಕೀರ್ತನಾ ನಮಸ್ಕರಿಸಿದಳು. ಕೀರ್ತನಾಳಿಗೆ ಪ್ರತಿನಮಸ್ಕಾರ ಮಾಡಿ ‘ಯಾರೀಕೆ?’ ಎಂಬಂತೆ ಅರುಣ್ ಕಡೆ ನೋಡಿ ಮನೆಯೊಳಗ್ಹೋದ. ಸ್ಕ್ವಾಡಿನ ಉಳಿದ ಸದಸ್ಯರು ತಮ್ಮ ಬ್ಯಾಗುಗಳನ್ನೆಲ್ಲಾ ಮನೆಯೊಳಗಿಟ್ಟು ಹೊರಬಂದು ನಿಂತರು; ಮೆಲ್ಲಗಿನ ದನಿಯಲ್ಲಿ ಮಾತನಾಡಲಾರಂಭಿಸಿದರು. ಮನೆಯ ಒಳಗೆ ಲೋಕಿ ಪಾಟೀಲರೊಂದಿಗೆ ಮಾತನಾಡುತ್ತ ಕುಳಿತಿದ್ದ. ಪ್ರೇಮ್ ಮತ್ತವನ ಸಂಗಡಿಗರು ಒಳಬಂದಾಗ ಎದ್ದು ನಿಂತ. ಪ್ರೇಮ್ ನನ್ನು ಬಿಟ್ಟು ಉಳಿದವರೆಲ್ಲಾ ಹೊರಹೋದರು. ಪಾಟೀಲರು ಲೋಕಿಯನ್ನುದ್ದೇಶಿಸಿ ಕೀರ್ತನಾಳನ್ನು ಕರೆತರುವಂತೆ ಲೋಕಿಗೆ ಹೇಳಿದರು.
“ಆರೋಗ್ಯ ಹೇಗಿದೆ ಕಾಮ್ರೇಡ್” ಪ್ರೇಮ್ ಕೇಳಿದ.
“ಈಗ ಪರವಾಗಿಲ್ಲ. ನಾಳೆಯಿಂದ ಓಡಾಡಬಹುದು ಅಂದುಕೊಂಡಿದ್ದೇನೆ” ಕೀರ್ತನ ಮತ್ತು ಲೋಕಿ ಒಳಬಂದರು. ಅವರ ಕಡೆಗೆ ನೋಡುತ್ತ “ಇವರ್ಯಾರು?” ಎಂದು ಕೇಳಿದ ಪ್ರೇಮ್.
“ಇವರನ್ನು ನಿನಗೆ ಪರಿಚಯಮಾಡಿಸಬೇಕು ಅಂತಾನೇ ನಿನ್ನನ್ನು ಇವತ್ತಿಲ್ಲಿಗೆ ಕರೆಸಿದ್ದು. ಇವನ ಹೆಸರು ಲೋಕೇಶ್, ಬಿಎ ಓದ್ತಾ ಇದ್ದ. ಇವಳು ಕೀರ್ತನ, ಕೊನೆಯ ವರ್ಷದ ಎಂಬಿಬಿಎಸ್ ಮಾಡ್ತಿದ್ದಳು” ಲೋಕಿ ಮತ್ತು ಕೀರ್ತನ ಪ್ರೇಮ್ ಗೆ ನಮಸ್ಕಾರ ಮಾಡಿದರು. ಪ್ರೇಮ್ ಅವರೆಡೆಗೆ ಕೈಚಾಚಿ “ಹಲೋ ಫ್ರೆಂಡ್ಸ್. ನನ್ನ ಹೆಸರು ಪ್ರೇಮ್. ನಕ್ಸಲ್ ಸಂಘಟನೆಯ ಕರ್ನಾಟಕದ ಕಾರ್ಯದರ್ಶಿ. ನೀವಿಬ್ಬರೂ ಇಲ್ಲಿಗೆ ಬಂದಿರುವ ಉದ್ದೇಶ”
“ಅದನ್ನು ಹೇಳೋದಿಕ್ಕೆ ನಿನ್ನನ್ನು ಕರೆಸಿದ್ದು ಪ್ರೇಮ್. ಈ ಲೋಕಿ ನಾನು ISRA ಶುರುಮಾಡಬೇಕೆಂದುಕೊಂಡಿದ್ದಾಗಲೇ ಪರಿಚಯವಾಗಿದ್ದ. ISRAಗೆ ಸೇರಬೇಕೆಂದುಕೊಂಡಿದ್ದ. ಆದರದು ಶುರುವೇ ಆಗಲಿಲ್ಲ. ಅದಿಕ್ಕೆ ನಕ್ಸಲ್ ಚಳುವಳಿಯ ಭಾಗವಾಗಬೇಕೆಂದುಕೊಂಡಿದ್ದ ಕೀರ್ತನಾಳನ್ನು ಕರೆದುಕೊಂಡು ಇಲ್ಲಿಗೆ ಬಂದಿದ್ದಾನೆ”
“ನೀವಿಲ್ಲಿದ್ದೀರಾ ಅಂತ ಹೇಗೆ ತಿಳಿಯಿತು ಕಾಮ್ರೇಡ್. ನೀವು ಸತ್ತೇ ಹೋಗಿದ್ದೀರಾ ಅಂತ ಹೊರಗಿನ ಪ್ರಪಂಚ ತಿಳಿದುಕೊಂಡಿದೆಯಲ್ವಾ?”
“ನನ್ನನ್ನು ಹುಡುಕಿಕೊಂಡು ಬಂದಿಲ್ಲ! ಚಿನ್ನಪ್ಪಣ್ಣ ನಕ್ಸಲನೆಂಬುದು ಇವರಿಗೆ ತಿಳಿದುಹೋಗಿದೆ. ಅವನ ಮುಖಾಂತರ ನಾನಿಲ್ಲೇ ಇದ್ದೀನಿ ಅನ್ನೋದು ಗೊತ್ತಾಗಿ ಆತನನ್ನು ಬಲವಂತಪಡಿಸಿ ನನ್ನ ಬಳಿ ಬಂದಿದ್ದಾರೆ” ಪ್ರೇಮ್ ಮತ್ತೆ ಲೋಕಿಯೆಡೆಗೆ ಕೈಚಾಚಿ “ಟೀ ಅಂಗಡಿ, ಪಾರ್ಕುಗಳಲ್ಲಿ ಕೂತು ಕ್ರಾಂತಿಯ ಬಗ್ಗೆ ಒಣಮಾತುಗಳನ್ನಾಡುವುದಕ್ಕಿಂತ ಇದು ಉತ್ತಮವಾದ ದಾರಿ ಎಂದು ನಿರ್ಧರಿಸಿ ಬಂದಿದ್ದೀರ. ಇಬ್ಬರಿಗೂ ನಮ್ಮ ಸಂಘಟನೆಗೆ ಸ್ವಾಗತ” ಎಂದ್ಹೇಳಿ “ಶ್ವೇತಾ” ಎಂದು ಕೂಗಿದ. ಹೊರಗೆ ನಿಂತಿದ್ದ ಶ್ವೇತ ಒಳಬಂದು “ಕಾಮ್ರೇಡ್?” ಎಂದಳು. ಕೀರ್ತನ ಮತ್ತು ಲೋಕಿಯನ್ನು ತೋರಿಸಿ “ಇವರಿಬ್ಬರೂ ಇಂದಿನಿಂದ ನಮ್ಮ ಚಳುವಳಿಗೆ ಹೊಸದಾಗಿ ಸೇರುತ್ತಿದ್ದಾರೆ. ಮುಖ್ಯ ನಿಯಮಗಳನ್ನು ತಿಳಿಸೋ ಕರಪತ್ರವನ್ನು ಇವರಿಗೆ ಕೊಡು. ಯೂನಿಫಾರ್ಮ್ ಬಟ್ಟೆಗಳು extra ಇದೆಯಾ?”
“ಪ್ಯಾಂಟು ಶರ್ಟುಗಳಿವೆ ಕಾಮ್ರೇಡ್. ಚೂಡಿದಾರಗಳು ಭದ್ರಾ ಸ್ಕ್ವಾಡಿನ ಬಳಿ ಇದೆ”
“ನಿನಗೆ ಪ್ಯಾಂಟು ಶರ್ಟುಗಳನ್ನು ತೊಟ್ಟು ಅಭ್ಯಾಸವಿದೆಯಾ?”
“ಇಲ್ಲ ಕಾಮ್ರೇಡ್. ತೊಂದರೆಯಿಲ್ಲಾ ಇವತ್ತಿನಿಂದ ಅಭ್ಯಾಸ ಮಾಡಿಕೊಳ್ತೀನಿ”
“ಅಭ್ಯಾಸ ಮಾಡಿಕೊಳ್ಳೋ ಅವಶ್ಯಕತೆಯಿಲ್ಲ. ಇನ್ನೆರಡು ದಿನದ ನಂತರ ಭದ್ರಾ ಸ್ಕ್ವಾಡ್ ಸಿಗುತ್ತೆ. ಅಲ್ಲಿಯವರೆಗೂ ನೀನು ತಂದಿರೋ ಬಟ್ಟೆಗಳನ್ನೇ ಧರಿಸು” ಎಂದು ಹೇಳಿದ. ಲೋಕಿ ಶ್ವೇತ ಬಳಿ ಹಸಿರು ಬಣ್ಣದ ಯೂನಿಫಾರ್ಮನ್ನು ತೆಗೆದುಕೊಂಡು ಮರವೊಂದರ ಮರೆಗೆ ಹೋಗಿ ಹಾಕಿಕೊಂಡು ಬಂದ. ಅವರೀರ್ವರಿಗೂ ಕರಪತ್ರವನ್ನು ಕೊಟ್ಟಳು ಶ್ವೇತ. ‘ಇದನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಿ. ಅದರಲ್ಲಿ ಮಾಡಬಾರದೆಂದಿರೋ ಕೆಲಸಗಳನ್ನು ಮಾಡಲೇಬೇಕೆಂಬ ಆಸೆ ಮನದಲ್ಲಿ ಮೂಡಿದಾಗಲೆಲ್ಲಾ ಕರಪತ್ರವನ್ನು ತೆಗೆದುಕೊಂಡು ಓದಿ. ನಿಮ್ಮ ಮನದ ಆಸೆಯನ್ನು ಹತ್ತಿಕ್ಕಿಕೊಳ್ಳಬೇಕು” ಎಂದು ತಿಳಿಸಿದಳು. ಆ ಕರಪತ್ರದಲ್ಲಿದ್ದಿದ್ದು ಸಾಮಾನ್ಯವೆನ್ನಿಸುವಂತಹ ಆದೇಶಗಳು – ಯಾವುದೇ ಕಾರಣಕ್ಕೂ ಕಾಡಿನೊಳಗಿದ್ದಾಗ ಧೂಮಪಾನ ಮಾಡಬಾರದು, ಗುಟ್ಕಾ ಅಥವಾ ಎಲೆಅಡಿಕೆ ತಿನ್ನುವಂತಿಲ್ಲ; ಯಾವುದೇ ಕಸವನ್ನು ಅದರಲ್ಲೂ ಪ್ಲಾಸ್ಟಿಕ್ ಅನ್ನು ಕಾಡಿನಲ್ಲೆಲ್ಲೂ ಬಿಸಾಡಬಾರದು. ಕಸವನ್ನು ತುಂಬಲೆಂದೇ ಇರುವ ಬ್ಯಾಗಿಗೆ ಅದನ್ನು ತುಂಬಿಕೊಂಡು ಊರಿನೊಳಗೆ ಹೋಗಿದ್ದಾಗ ಅಲ್ಲಿ ಅದನ್ನು ಸುರಿಯತಕ್ಕದ್ದು. ಮಾಂಸಾಹಾರ ನಕ್ಸಲರಿಗೆ ವರ್ಜ್ಯವಲ್ಲ. ಆದರೆ ಕಾಡಿನ ಪ್ರಾಣಿಗಳನ್ನು ಸಾಯಿಸಿ ಆಹಾರಕ್ಕೆ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಜನರು ನೀಡಿದ ಮಾಂಸಾಹಾರವನ್ನು ತಮಗಿಚ್ಛೆಯಿದ್ದಲ್ಲಿ ಸ್ವೀಕರಿಸಬಹುದು; ದಳದಲ್ಲಿರುವ ಪ್ರತಿಯೊಬ್ಬರಿಗೂ ಸಮಾನ ಗೌರವ ನೀಡತಕ್ಕದ್ದು.
ಓದಿ ಮುಗಿಸುವಷ್ಟರಲ್ಲಿ ಕಾ.ಪ್ರೇಮ್ ಮತ್ತು ಕಾ. ಪಾಟೀಲರು ಹೊರಬಂದರು. ಪ್ರೇಮ್ ಲೋಕಿಯೆಡೆಗೆ ಕೈತೋರಿಸಿ “ನೀನು ಇವತ್ತಿನಿಂದ ತುಂಗಾ ಸ್ಕ್ವಾಡ್ ಅಂದ್ರೆ ನನ್ನ ಜೊತೆ ಇರ್ತೀಯ”. “ನೀನು ಸದ್ಯಕ್ಕೆ ನಮ್ಮ ಜೊತೆಯೇ ಬಾ. ನಂತರ ಭದ್ರಾ ಸ್ಕ್ವಾಡನ್ನು ಸೇರಿಕೊಳ್ಳುವೆಯಂತೆ” ಕೀರ್ತನಾಳನ್ನುದ್ದೇಶಿಸಿ ಹೇಳಿದ. ಸರಿಯೆಂಬಂತೆ ಇಬ್ಬರೂ ತಲೆಯಾಡಿಸಿದರು.
“ಅರುಣ್. ನೀನೂ ಹೊರಡು. ಕಾಮ್ರೇಡ್ ಜೊತೆ ಇವತ್ತು ಶ್ವೇತಾ ಇರ್ತಾಳೆ” ಎಂದು ತಿಳಿಸಿ ಎಲ್ಲರೂ ಹೊರಡಿ ಎಂಬಂತೆ ತನ್ನ ಬ್ಯಾಗನ್ನು ಬೆನ್ನಿಗಾಗಿಕೊಂಡು ಎಡಗೈಯಲ್ಲಿ ಬಂದೂಕನ್ನೆತ್ತಿಕೊಂಡ.
ಲೋಕಿ ಮತ್ತು ಕೀರ್ತನ ಕೂಡ ತಮ್ಮ ಬ್ಯಾಗುಗಳನ್ನೆತ್ತಿಕೊಂಡರು. ಶ್ವೇತ ತನ್ನ ಬಳಿಯಿದ್ದ ಬಂದೂಕನ್ನು ಕೀರ್ತನಾಳಿಗೆ ಕೊಟ್ಟಳು. ಅರುಣ್ ಮತ್ತು ಲೋಕಿ ಪಾತ್ರೆಗಳನ್ನು ತೆಗೆದುಕೊಂಡು ಹೊರಟರು. ಎಲ್ಲರೂ ಹೋದ ಮೇಲೆ ಶ್ವೇತ ಪಾಟೀಲರನ್ನುದ್ದೇಶಿಸಿ “ನೀವು ಒಳಗ್ಹೋಗಿ ರೆಸ್ಟ್ ತೆಗೆದುಕೊಳ್ಳಿ. ನಾನಿಲ್ಲೇ ಬಾಗಿಲ ಬಳಿ ಕಾವಲು ಕಾಯ್ತಾ ಇರ್ತೀನಿ” ಎಂದಳು. ಪಾಟೀಲರು ಮಲಗಿಕೊಂಡರು. ಶ್ವೇತ ಅಡುಗೆಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಬಂದು ಮಗ್ಗುಲಲ್ಲಿಟ್ಟುಕೊಂಡು ತನ್ನ ಬ್ಯಾಗಿನಿಂದ ಅರ್ಥಶಾಸ್ತ್ರದ ಪುಸ್ತಕವನ್ನು ತೆಗೆದು ಓದಲಾರಂಭಿಸಿದಳು.
* * *
ಕೀರ್ತನ ಬಂದೂಕಿಡಿದು ಪ್ರೇಮ್ ಹಿಂದೆ ಹೆಜ್ಜೆ ಹಾಕುತ್ತಿದ್ದ ಸಮಯದಲ್ಲಿ ಕೀರ್ತನಾಳ ಅಣ್ಣ ಶ್ರವಣ್ ತನ್ನ ಆಫೀಸಿನ ಮೇಜಿನ ಮೇಲೆ ತಲೆಯಿಟ್ಟು ಅಳುತ್ತಿದ್ದ. ಕಣ್ಣೀರ ಹನಿಗಳು ತೊಡೆಯ ಮೇಲಿದ್ದ ಕೀರ್ತನ ಬರೆದ ಪತ್ರದ ಮೇಲೆ ಬೀಳುತ್ತಿದ್ದವು. ಮತ್ಯಾವತ್ತೂ ಹಿಂದಿರುಗುವುದಿಲ್ಲವೆಂದು ತಿಳಿಸಿದ್ದ ತಂಗಿಯ ಕುರಿತಾಗಿ ಅಳುವುದನ್ನು ಬಿಟ್ಟು ಆತ ಮತ್ತೇನೂ ಮಾಡುವ ಹಾಗಿರಲಿಲ್ಲ.
ಮುಂದುವರೆಯುವುದು ....

No comments:

Post a Comment