Aug 6, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 35

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ


“ನಿಮ್ಮ ಹೆಸರು ಏನಾದ್ರೆ ನನಗೇನು? ನನ್ನಿಂದ ನಿಮಗೇನಾಗಬೇಕು?”
“ನಮ್ಮಿಬ್ಬರನ್ನೂ ನಕ್ಸಲ್ ಸಂಘಟನೆಗೆ ಸೇರಿಸಲು ನೀವು ಸಹಾಯ ಮಾಡಬೇಕು” ಕೀರ್ತನಾ ಕೂಡ ಮೇಲೆದ್ದು ಕೇಳಿದಳು.
“ನನಗೂ ನಕ್ಸಲ್ ಸಂಘಟನೆಗೂ ಏನು ಸಂಬಂಧ? ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಜೊತೆಗೆ ನಂಟುಂಟೆಂದು. ನಕ್ಸಲರ ಬಗ್ಗೆ ಮಾತನಾಡ್ತ ಇದ್ದೀವೆಂದೇ ಪೋಲೀಸರು ಬಂಧಿಸೋ ಸಾಧ್ಯತೆಗಳಿವೆ. ಮೊದಲು ಇಲ್ಲಿಂದ ಹೊರಡಿ” ‘ನಾನು ನಕ್ಸಲರ ಬೆಂಬಲಿಗ, ಅವರಿಗೆ ದಿನಸಿ ಕಳುಹಿಸ್ತೀನಿ ಅನ್ನೋದು ನನ್ನ ಮನೆಯವರಿಗೇ ಗೊತ್ತಿಲ್ಲ. ದೂರದ ಮೈಸೂರಿನವರಿಗೆ ಹೇಗೆ ತಿಳಿಯಿತು’ ಎಂದು ಮತ್ತಷ್ಟು ಗಾಬರಿಗೊಳ್ಳುತ್ತಾ ಹೇಳಿದ.

“ನೀವು ಗಾಬರಿಯಾಗ್ತಿರೋದೆ ಹೇಳ್ತಿದೆ ಚಿನ್ನಪ್ಪಣ್ಣ, ನಿಮಗೆ ನಕ್ಸಲರೊಂದಿಗೆ ನಂಟಿದೆಯೆಂದು. ನಮ್ಮ ಬಗ್ಗೆ ಅನುಮಾನ ಪಡಬೇಡಿ. ನಾವೇನೂ ಪೋಲೀಸರು ಕಳುಹಿಸಿರುವ ಬೇಹುಗಾರರಲ್ಲ. ಇಗೋ ನೋಡಿ ನನ್ನ ಐಡಿ ಕಾರ್ಡ್” ಎನ್ನುತ್ತಾ ಕೀರ್ತನಾ ಬ್ಯಾಗಿನಲ್ಲಿದ್ದ ತನ್ನ ಐಡೆಂಟಿಟಿ ಕಾರ್ಡನ್ನು ತೆಗೆದು ತೋರಿಸಿದಳು. ಈಕೆ ವೈದ್ಯಕೀಯ ವಿದ್ಯಾರ್ಥಿ ಎಂದು ತಿಳಿಯುತ್ತಿದ್ದಂತೆ ಕೊಂಚ ಸಮಾಧಾನವಾಯಿತು ಚಿನ್ನಪ್ಪಣ್ಣನಿಗೆ. ಲೋಕಿಯ ಕಡೆಗೆ ತಿರುಗಿ “ನೀನು?” ಎಂದು ಕೇಳಿದ. “ನಾನು ಬಿ.ಎ ವಿದ್ಯಾರ್ಥಿ” ಎಂದ್ಹೇಳಿ ಲೋಕಿಯೂ ಬ್ಯಾಗಿನ ಮೂಲೆಯಲ್ಲಿ ಸೇರಿಕೊಂಡಿದ್ದ ಐಡಿ ಕಾರ್ಡ್ ತೋರಿಸಿದ.
“ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಪರಿಚಯವಿದೆಯೆಂದು?” ಮುಖದ ಮೇಲೆ ನಗು ತಂದುಕೊಳ್ಳುತ್ತಾ ಕೇಳಿದ.
“ಸುಳ್ಳು ಹೇಳೋದನ್ನ ನಿಲ್ಲಿಸಿ ಚಿನ್ನಪ್ಪಣ್ಣ. ಕೆಲವು ದಿನಗಳ ಹಿಂದೆ ನಕ್ಸಲರು ಪತ್ರಕರ್ತರನ್ನ ಕಾಡಿನೊಳಗೆ ಕರೆಸಿಕೊಂಡಾಗ ನೀವು ಅಲ್ಲಿಗೆ ಹೋಗಿ ದಿನಸಿ ಕೊಟ್ಟು ಬಂದಿರಲಿಲ್ಲವಾ? ಅವತ್ತು ಬಂದಿದ್ದ ಪತ್ರಕರ್ತರಲ್ಲಿ ನನ್ನ ಪರಿಚಯದವನೊಬ್ಬನಿದ್ದ. ಆತನೇ ನಿಮ್ಮ ವಿಷಯ ತಿಳಿಸಿದ್ದು” ಲೋಕಿ ಹೇಳಿದ. ನನ್ನ ವಿಷಯ ಇವರಿಗೆ ಗೊತ್ತು, ಇನ್ನು ಸುಳ್ಳು ಹೇಳಿ ಪ್ರಯೋಜನವಿಲ್ಲವೆಂದರಿತು “ಈಗ ನನ್ನಿಂದ ನಿಮಗೇನಾಗಬೇಕು?”
“ನಕ್ಸಲರಲ್ಲಿ ನಮ್ಮನೊಬ್ಬರನ್ನಾಗಿಸಬೇಕು”
“ಅದು ನನ್ನಿಂದ ಸಾಧ್ಯವಾಗದಿರೋ ಕೆಲಸ”
“ದಯವಿಟ್ಟು ಆಗಲ್ಲ ಅನ್ನಬೇಡಿ ಚಿನ್ನಪ್ಪಣ್ಣ. ನೀವು ಸಹಾಯ ಮಾಡೇ ಮಾಡುತ್ತೀರೆಂದು ನಂಬಿಕೊಂಡು ಮನೆಯವರಿಗೆ ವಿದಾಯದ ಪತ್ರವನ್ನು ಬರೆದು ಎಲ್ಲಾ ಸಂಬಂಧವನ್ನೂ ತೊಡೆದುಕೊಂಡು ಬಂದಿದ್ದೀವಿ. ನೀವೂ ನಮ್ಮ ಕೈಬಿಟ್ಟರೆ ಅತಂತ್ರರಾಗಿಬಿಡ್ತೀವಿ” ಎಂದು ಹೇಳುವಷ್ಟರಲ್ಲಿ ಕೀರ್ತನಾಳ ಕಣ್ಣು ತುಂಬಿಬಂದಿತ್ತು.
“ಅಳುತ್ತಾ ನಿಲ್ಲಬೇಡಮ್ಮ ಇಲ್ಲಿ. ಇಬ್ಬರಿಗೂ ಚಿಕ್ಕವಯಸ್ಸು. ಏನೋ ಆತುರದಿಂದ ಇಲ್ಲಿಗೆ ಬಂದುಬಿಟ್ಟಿದ್ದೀರ ಅನ್ನಿಸುತ್ತೆ. ಮತ್ತೆ ಮನೆಗೆ ಹೋಗಿ”
“ಚಿಕ್ಕವಯಸ್ಸು. ಒಪ್ತೀನಿ. ಆದರೆ ಆತುರಾತುರದ ನಿರ್ಧಾರವಂತೂ ಖಂಡಿತ ಅಲ್ಲ” ರೇಗುವ ದನಿಯಲ್ಲಿ ಹೇಳಿದ ಲೋಕಿ. ನಂತರ ISRA ಎಂಬ ಸಂಘಟನೆಗೆ ಸೇರಲು ಮಾಡಿದ ಪ್ರಯತ್ನವನ್ನು, ಆ ಸಂಘಟನೆಯೇ ಪ್ರಾರಂಭವಾಗದಿದ್ದುದನ್ನು ಚುಟುಕಾಗಿ ಹೇಳಿ ಮುಗಿಸಿದ.
“ISRAದ ಸದಸ್ಯನಾಗೋ ಪ್ರಯತ್ನದಲ್ಲಿದ್ದದೆಯಾ ನೀನು?”
“ಹೌದು”
“ಹಾಗಾದ್ರೆ ಕಾ.ಬಸನಗೌಡ ಪಾಟೀಲರ ಹೆಸರು ಕೇಳಿರಬೇಕಲ್ಲ?” ಆ ಹೆಸರು ಕೇಳುತ್ತಿದ್ದಂತೆ ನಿಧಿ ಸಿಕ್ಕಷ್ಟು ಖುಷಿಯಾಯಿತು ಲೋಕಿಗೆ. ಕಾಮ್ರೇಡ್ ಬಸನಗೌಡ ಪಾಟೀಲರು ತಾನು ಲೈಬ್ರರಿಯಲ್ಲಿ ನೋಡುತ್ತಿದ್ದ – ಹುಚ್ಚ.
“ಅವರು ನನಗೆ ಗೊತ್ತು. ಮೈಸೂರಿನ ಗೃಂಥಾಲಯದಲ್ಲಿ ಒಮ್ಮೆ ಅವರನ್ನು ಭೇಟಿಯಾಗಿದ್ದೆ. ಆಗ ಅವರು ISRAದ ಕಾರ್ಯವೈಖರಿಗಳು ಹೇಗಿರಬೇಕು ಎಂಬುದರ ಬಗ್ಗೆ ಪುಸ್ತಕ ಬರೆಯಲು ಇತಿಹಾಸ, ರಾಜಕೀಯ, ಆರ್ಥಿಕತೆಯ ಬಗೆಗಿನ ಪುಸ್ತಕಗಳನ್ನೆಲ್ಲ ತಿರುವಿ ಹಾಕುತ್ತಿದ್ದರು. ಅವರೊಡನೆ ಸೇರಿ ISRAದ ಸ್ಥಾಪನೆಮಾಡಬೇಕೆಂದಿದ್ದ ಗಣೇಶನ ಬಂಧನದ ನಂತರ ಮತ್ತೆ ನಕ್ಸಲ್ ಸಂಘಟನೆಗೆ ಸೇರುತ್ತಾರೆಂದು ISRAದ ಸದಸ್ಯೆಯೊಬ್ಬಳು ಹೇಳಿದ್ದಳು.
“ಅವರೀಗ ಇಲ್ಲೇ ಇದ್ದಾರೆ”
“ಹೌದಾ! ನಿಮಗೆ ನನ್ನ ಮೇಲಿನ ಅನುಮಾನ ಇನ್ನೂ ಹೋಗಿಲ್ಲವಾದರೆ ನಮ್ಮನ್ನು ಕಾ.ಪಾಟೀಲರೊಂದಿಗೆ ಒಮ್ಮೆ ಭೇಟಿ ಮಾಡಿಸಿ. ಅವರು ಖಂಡಿತ ನನ್ನನ್ನು ಗುರುತು ಹಿಡಿಯುತ್ತಾರೆ” ಬಂದ ಕೆಲಸ ಖಂಡಿತವಾಗಿಯೂ ನೆರವೇರುತ್ತೆ ಎಂಬ ಸಮಾಧಾನದ ಛಾಯೆ ಕಾಣಿಸಿಕೊಂಡಿತು ಲೋಕಿಯ ಮುಖದಲ್ಲಿ.
ಅಂಗಡಿ ಬಾಗಿಲನ್ನು ಮುಚ್ಚಿ ಕೀರ್ತನಾ ಮತ್ತು ಲೋಕಿಯನ್ನು ಕರೆದುಕೊಂಡು ಹೊರಟ ಚಿನ್ನಪ್ಪಣ್ಣ. ಕಿಗ್ಗಾದ ದೇವಸ್ಥಾನದೆಡೆಗೆ ಹೋಗುವ ಟಾರು ರಸ್ತೆಯಲ್ಲಿ ಐದು ನಿಮಿಷ ಪಯಣಿಸಿದ ನಂತರ ಸಿಗುವ ಬಲಭಾಗದ ತಿರುವೊಂದರಲ್ಲಿ ನಡೆಯಲಾರಂಭಿಸಿದರು. ಇಬ್ಬರು ಮನುಷ್ಯರು ಅಕ್ಕಪಕ್ಕದಲ್ಲಿ ನಡೆಯಬಹುದಾದಂತಹ ಪುಟ್ಟ ಮಣ್ಣಿನ ರಸ್ತೆಯದು. ಹಿಂದಿನ ದಿನ ಸುರಿದಿದ್ದ ಮಳೆಯ ಕಾರಣ ಮಣ್ಣಿನ ಮಧ್ಯದಲ್ಲಲ್ಲಿ ಕೆಸರಿನ ಗುಂಡಿಗಳಾಗಿದ್ದವು. ಚಿನ್ನಪ್ಪಣ್ಣ ಸರಾಗವಾಗಿ ನಡೆಯುತ್ತಿದ್ದ. ಲೋಕಿ ಮತ್ತು ಕೀರ್ತನ ಎಡವುತ್ತಾ ಕೆಸರಿನೊಳಗಲ್ಲಲ್ಲಿ ಕಾಲಿಟ್ಟು ಚಪ್ಪಲಿಯನ್ನು ಪಕ್ಕದಲ್ಲಿದ್ದ ಹುಲ್ಲಿನ ಮೇಲೆ ಸವರಿ ಕೆಸರನ್ನು ತೆಗೆದು ಆತನ ಹಿಂದೆ ನಿಧಾನವಾಗಿ ನಡೆಯುತ್ತಿದ್ದರು. ಮುಂದೆ ಮುಂದೆ ಹೋಗುತ್ತಿದ್ದಂತೆ ರಸ್ತೆ ಕಿರಿದಾಗುತ್ತಾ ಕೊನೆಗೆ ಕಣ್ಮರೆಯಾಯಿತು. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿ ನಡೆಯಲಾರಂಭಿಸಿದರು. ಬಯಲುಸೀಮೆಯಲ್ಲಿ ದೂರದಲ್ಲೊಂದು ಮರಗಿಡ ನೋಡಿದ್ದವರಿಗೆ ಪಶ್ಚಿಮಘಟ್ಟದ ದಟ್ಟ ಕಾಡುಗಳು ಭಯಮಿಶ್ರಿತ ಅಚ್ಚರಿಯನ್ನುಂಟುಮಾಡಿದವು. ನಲವತ್ತು ನಿಮಿಷದ ಸತತ ನಡಿಗೆಯ ನಂತರ ಸುತ್ತಮುತ್ತ ದಟ್ಟ ಮರಗಳಿಂದ ಆವೃತ್ತವಾಗಿದ್ದ ಪುಟ್ಟ ಮನೆಯೊಂದು ಕಾಣಿಸಿತು. ತೀರ ಹತ್ತಿರಕ್ಕೆ ಬರುವವರೆಗೂ ಅಲ್ಲೊಂದು ಮನೆಯಿದೆ ಎಂದು ತಿಳಿಯುತ್ತಿರಲಿಲ್ಲ. ಮನೆಯ ಬಳಿಗೆ ಹೋಗುವವರೆಗೂ ಮಾತನಾಡದಿದ್ದ ಚಿನ್ನಪ್ಪಣ್ಣ ಮನೆಯ ಬಾಗಿಲ ಮುಂದೆ ಬಂದು ನಿಂತಾಗ “ನೀವಿಬ್ಬರೂ ಇಲ್ಲೇ ಇರಿ. ನಾನು ಒಳಗೆ ಹೋಗಿ ಬರ್ತೀನಿ” ಎಂದು ತಿಳಿಸಿ ಬಾಗಿಲು ತಳ್ಳಿಕೊಂಡು ಒಳ ಹೋದ.
ಹಳೆಯ ಕಾಲದ ಮನೆ ಅದು. ಮಣ್ಣಿನಿಂದ ಕಟ್ಟಿದ್ದ ಗೋಡೆ. ಸತತ ಮಳೆಯಿಂದಾಗಿ ಗೋಡೆಯ ತುಂಬಾ ಹಸಿರು ಪಾಚಿ ಕಟ್ಟಿತ್ತು. ಕಾಡಿನ ಮರಗಳಲ್ಲೊಂದಾಗಿಬಿಟ್ಟಿತ್ತು ಆ ಮನೆ. ಮಂಗಳೂರು ಹೆಂಚನ್ನು ಹಾಕಿದ್ದರು. ಸುತ್ತಲ ಪೊದೆಗಳಿಂದ ಹಬ್ಬಿದ್ದ ಬಳ್ಳಿಗಳು ಹೆಂಚನ್ನು ಆವರಿಸಿಕೊಂಡಿದ್ದವು. ಮನೆಯೊಳಗಿದ್ದಿದ್ದು ಒಂದೇ ಅಂಗಳ. ಅದರಲ್ಲೇ ಒಂದು ಪುಟ್ಟ ಗೋಡೆಯನ್ನು ಕಟ್ಟಿದ್ದರು. ಅಡುಗೆಮನೆಯಿಂದ ಮಲಗುವ ಜಾಗವನ್ನು ಬೇರೆ ಮಾಡಲು. ಮಣ್ಣಿನಿಂದ ಮಾಡಿದ್ದ ನೆಲವನ್ನು ಸೆಗಣಿ ನೀರಿನಿಂದ ತಾರಿಸಿದ್ದರು. ಅಡುಗೆಮನೆಯಲ್ಲಿ ನಾಲ್ಕೈದು ಮಸಿಗಟ್ಟಿದ್ದ ಪಾತ್ರೆಗಳಿದ್ದವು. ಹಳೆಯ ಕಾಲದ ಬಿರುಕು ಬಿಟ್ಟ ಒಲೆಯೊಂದಿತ್ತು. ಒಂದು ಚಾಪೆಯ ಮೇಲೆ ಮಲಗಿದ್ದರು ಜ್ವರದಿಂದ ಬಳಲುತ್ತಿದ್ದ ಕಾ.ಬಸನಗೌಡ ಪಾಟೀಲ್. ಅವರ ಪಕ್ಕದಲ್ಲಿ ಆರು ತಿಂಗಳ ಹಿಂದೆ ಚಳುವಳಿಗೆ ಸೇರಿದ್ದ ಶಿವಮೊಗ್ಗದ ಅರುಣ್ ಕುಳಿತಿದ್ದ. ಒಳಗೆ ಬಂದ ಚಿನ್ನಪ್ಪಣ್ಣ ಪಾಟೀಲರಿಗೊಂದು ಸಲಾಮ್ ಮಾಡಿದ. ಮಲಗಿದ್ದಲ್ಲಿಂದಲೇ ಆತನಿಗೆ ಪ್ರತಿವಂದಿಸಿದರು. ಚಿನ್ನಪ್ಪಣ್ಣ ಬಂದಿದ್ದು ನೋಡಿ ಅರುಣ್ ಮೇಲೆದ್ದ. ಆತನಿಗೆ ಕುಳಿತುಕೊಳ್ಳುವಂತೆ ತಿಳಿಸಿ ತಾನೂ ಕುಳಿತುಕೊಂಡ.
“ಜ್ವರ ಕಡಿಮೆಯಾಗಿದೆಯಾ ಕಾಮ್ರೇಡ್”
“ಮಲೇರಿಯಾ ಅಂದ್ರೆ ಗೊತ್ತಲ್ಲ. ಬಿಟ್ಟು ಬಿಟ್ಟು ಬರ್ತಾಯಿದೆ. ನಿನ್ನೆಯಿಂದ ಮಾತ್ರೆ ತೆಗೆದುಕೊಳ್ತಾ ಇದ್ದೀನಿ. ಈಗ ಸ್ವಲ್ಪ ಪರವಾಯಿಲ್ಲ. ನೀನೇನು ಈ ಸಮಯದಲ್ಲಿ ಬಂದುಬಿಟ್ಟಿದ್ದೀಯಲ್ಲಾ? ಏನಾದ್ರೂ ವಿಶೇಷವಿದೆಯಾ?”
“ಹೌದು ಕಾಮ್ರೇಡ್. ಒಂದು ಮುಖ್ಯವಾದ ವಿಷಯವಿದೆ. ನೀವು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಮೈಸೂರಿನಲ್ಲಿ ISRAದ ರೂಪುರೇಷೆಗಳನ್ನು ರೂಪಿಸುವುದರಲ್ಲಿ ನಿರತರಾಗಿದ್ದಿರಿ ಅಲ್ವಾ?”
“ಹ್ಞೂ”
“ಮೈಸೂರಿನಲ್ಲಿ ನಿಮಗೆ ಬಿ.ಎ ವಿದ್ಯಾರ್ಥಿ ಲೋಕೇಶ್ ಎಂಬುವವನ ಪರಿಚಯವಿತ್ತಾ?”
“ಇತ್ತು. ಅವನೂ ISRA ಸೇರಬೇಕೆಂದು ಬಹಳ ಆಸೆ ಇಟ್ಟುಕೊಂಡಿದ್ದ. ಅವನ ವಿಷಯ ಯಾಕೆ ಬಂತು ಈಗ? ಪೋಲೀಸಿನರಿಗೆ ಸಿಕ್ಕಿಹಾಕಿಕೊಂಡು ನಾನು ಬದುಕಿರೋ ವಿಷಯ ತಿಳಿಸಿಬಿಟ್ಟನಾ ಹೇಗೆ?”
“ಛೇ ಛೇ ... ಹಾಗೇನೂ ಇಲ್ಲ ಕಾಮ್ರೇಡ್. ನಕ್ಸಲ್ ಸಂಘಟನೆಗೆ ಸೇರಬೇಕೆಂದು ಒಂದು ಹುಡುಗಿಯ ಜೊತೆಗೆ ಇವತ್ತು ನನ್ನ ಅಂಗಡಿಯ ಬಳಿಗೆ ಬಂದಿದ್ದ. ನನಗೆ ನಕ್ಸಲರ ಸಂಪರ್ಕವಿದೆಯೆಂದು ಹೋದ ಬಾರಿ ಬಂದಿದ್ದ ಆತನ ಪತ್ರಕರ್ತ ಮಿತ್ರನೊಬ್ಬ ತಿಳಿಸಿದ್ದನಂತೆ. ISRAದ ಬಗ್ಗೆ ಹೇಳಿದ, ನಿಮ್ಮ ಪರಿಚಯವಿದೆ ಎಂದು ಹೇಳಿದ.....”
“ಹೌದಾ! ಅವನನ್ನು ವಾಪಸ್ ಕಳುಹಿಸಿಬಿಟ್ಟಾ ಹೇಗೆ?”
“ಇಲ್ಲ ಕಾಮ್ರೇಡ್. ನಿಮ್ಮೊಂದಿಗೆ ಮಾತನಾಡಿದ್ದೆ ಎಂದಾತ ಹೇಳಿದ ಮೇಲೆ ನನಗೂ ಅವನ ಮೇಲೆ ನಂಬಿಕೆ ಬಂತು. ಅವರೀರ್ವರನ್ನೂ ಜೊತೆಯಲ್ಲೇ ಕರೆದುಕೊಂಡು ಬಂದಿದ್ದೀನಿ. ಇಲ್ಲೇ ಹೊರಗೆ ನಿಂತಿದ್ದಾರೆ”
“ಅರುಣ ಮೊದಲು ಅವರನ್ನು ಒಳಗೆ ಕರೆದು ತಾ”
ಅರುಣ್ ಹೊರಗೆ ಬಂದು “ನಿಮ್ಮಿಬ್ಬರ ಬ್ಯಾಗ್ ಕೊಡಿ ಇಲ್ಲಿ” ಎಂದು ಹೇಳಿ ಅವರ ಬ್ಯಾಗು ತೆಗೆದುಕೊಂಡು “ಇಬ್ಬರೂ ಒಳಗೆ ಬನ್ನಿ” ಎಂದವನು ಸೆಂಟ್ರಿಯ ಜವಾಬ್ದಾರಿ ನೆನಪಾಗಿ “ಒಂದ್ನಿಮಿಷ ಇರಿ” ಎಂದ್ಹೇಳಿ ಬ್ಯಾಗನ್ನು ಅಲ್ಲೇ ನೆಲದ ಮೇಲಿಟ್ಟು ಲೋಕಿಯ ಬಳಿ ಬಂದು ಮೇಲಿನಿಂದ ಕೆಳಗಿನವರೆಗೆ ಅವನ ಮೈಮುಟ್ಟಿ ಆಯುಧಗಳನ್ನು ಹುಡುಕಿದ. ಕೀರ್ತನಾಳೆಡೆಗೆ ನೋಡಿ “ನಿಮ್ಮ ಬಳಿ ಯಾವುದೇ ಹತ್ಯಾರುಗಳಿಲ್ಲ ತಾನೇ?” ಎಂದು ಕೇಳಿದ. ಇಲ್ಲವೆಂಬಂತೆ ತಲೆಯಾಡಿಸಿದಳು. “ಯಾಕೋ ಅರುಣ ಲೇಟು. ಅವರನ್ನು ಕರೆದುಕೊಂಡು ಬಾ” ಒಳಗಿನಿಂದ ಕೂಗಿದರು ಕಾ.ಪಾಟೀಲರು.
“ಚೆಕ್ ಮಾಡ್ತಾ ಇದ್ದೆ ಕಾಮ್ರೇಡ್”
“ಅದೇನೂ ಬೇಡ”
ಕೀರ್ತನಾ ಮತ್ತು ಲೋಕಿ ಅರುಣನ ಹಿಂದೆಯೇ ಆ ಪುಟ್ಟ ಮನೆಯೊಳಗೆ ಹೋದರು. ಮೈಸೂರಿನಲ್ಲಿ ಕೆದರಿದ ಕೂದಲು ಹರಿದ ಬಟ್ಟೆಯನ್ನುಟ್ಟು ಓಡಾಡುತ್ತಿದ್ದವರನ್ನು ಇಂದಿನ ವೇಷದಲ್ಲಿ ನೋಡಿದಾಗ ಗುರಿತಿಸುವುದು ಕಷ್ಟವಾಯಿತು. ಪಾಟೀಲರು ಲೋಕಿಯ ಮುಖವನ್ನು ಮರೆತಿರಲಿಲ್ಲ.
“ಬಾರಪ್ಪ ಲೋಕೇಶ್ ಬಾ. ಕುಳಿತುಕೊಳ್ಳಿ. ಪ್ರಜಾಪ್ರಭುತ್ವ ಇಷ್ಟು ಬೇಗ ಬೇಸರ ಮೂಡಿಸಿತಾ?”
“ನಿಮಗೇ ಗೊತ್ತಲ್ಲ ಸರ್. ಆ ವ್ಯವಸ್ಥೆ ನನ್ನೊಳಗೆ ಯಾವತ್ತೋ ಬೇಸರ ತರಿಸಿತ್ತು. ಅದರ ವಿರುದ್ಧ ನಿಲ್ಲೋ ಅವಕಾಶ ಅಂದು ತಪ್ಪಿಹೋಗಿತ್ತು. ಇವತ್ತದು ಸಾಧ್ಯವಾಗಿದೆ” ವಿನಯದಿಂದ ಹೇಳಿದ ಲೋಕಿ. ಲೋಕಿಯ ಪಕ್ಕ ಕುಳಿತಿದ್ದ ಕೀರ್ತನಾಳನ್ನು ನೋಡಿ “ನಿನ್ನ ಜೊತೆ ಬಂದಿರೋ ಹುಡುಗಿ ಪೂರ್ಣಿಮಾ ಎಂದುಕೊಂಡಿದ್ದೆ. ಇವಳು ಪೂರ್ಣಿಮಾ ಅಲ್ಲ ಅಲ್ವಾ?”
“ಹೌದು ಸರ್. ಈಕೆ ಹೆಸರು ಕೀರ್ತನಾ ಅಂತ. ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯ ವರ್ಷದಲ್ಲಿ ಓದುತ್ತಿದ್ದಳು” ಎಂದ್ಹೇಳಿ ಕಿರ್ತನಾ ಕಡೆಗೆ ತಿರುಗಿ “ನಾನು ಹೇಳಿರಲಿಲ್ಲವಾ ಕೀರ್ತನಾ ಗೃಂಥಾಲಯಕ್ಕೊಬ್ಬ ‘ಹುಚ್ಚನ’ ವೇಷದಲ್ಲಿ ಬರ್ತಾ ಇದ್ದರು. ಅವರ ಮುಖಾಂತರ ISRAಗೆ ಸೇರಬೇಕೆಂದಿದ್ದೆ ಎಂದು. ಇವರೇ ಅವರು” ಎಂದನು.
ಕೀರ್ತನ ಪಾಟೀಲರಿಗೆ ವಂದಿಸಿದಳು. ಅವಳಿಗೆ ಪ್ರತಿವಂದಿಸಿ “ಇವನು ಪತ್ರಿಕೋದ್ಯಮದ ವಿದ್ಯಾರ್ಥಿ. ನೀನು ವೈದ್ಯಕೀಯ ಕ್ಷೇತ್ರದವಳು. ನಿಮ್ಮಿಬ್ಬರಿಗೂ ಯಾವಾಗ ಪರಿಚಯವಾಯಿತು”
ಕೀರ್ತನಾ ಮಾತನಾಡುವಷ್ಟರಲ್ಲಿ ಚಿನ್ನಪ್ಪಣ್ಣ “ಕಾಮ್ರೇಡ್ ನಾನಿನ್ನು ಹೊರಡ್ತೀನಿ. ತುಂಬಾ ಸಮಯ ಅಂಗಡಿಯ ಬಾಗಿಲನ್ನು ಹಾಕೋದು ಅಷ್ಟು ಕ್ಷೇಮವಲ್ಲ”. “ಸರಿ ಚಿನ್ನಪ್ಪಣ್ಣ. ನೀನಿನ್ನು ಹೊರಡು. ನಿನ್ನ ದೆಸೆಯಿಂದಾಗಿ ನಮ್ಮ ಸಂಘಟನೆಗೆ ಎರಡು ಹೊಸ ಮುಖಗಳು ಪ್ರವೇಶ ಮಾಡ್ತಿವೆ”. ಚಿನ್ನಪ್ಪಣ್ಣ ಅಂಗಡಿಯ ಕಡೆಗೆ ತೆರಳಿದ.
ಕೀರ್ತನಾ, ತನ್ನ ಮತ್ತು ಲೋಕಿಯ ಭೇಟಿಯ ವಿವರಗಳನ್ನು ತಿಳಿಸಿದಳು.
“ಮನೆಯಲ್ಲಿ ಏನೆಂದು ಹೇಳಿ ಬಂದಿದ್ದೀರಾ?”
“ಇಬ್ಬರೂ ಮನೆಗಳಿಗೆ ವಿದಾಯದ ಪತ್ರ ಬರೆದಿದ್ದೀವಿ. ನಮ್ಮ ಮನೆಗೆ ಪತ್ರ ನಾಳೆ ತಲುಪಬಹುದು. ಲೋಕಿಯ ಮನೆಗೆ ಇಂದೇ ತಲುಪಿರುತ್ತೆ”
“ಸಂಘಟನೆಗೆ ಸೇರಲೇಬೇಕೆಂದು ಧೃಡ ನಿರ್ಧಾರ ಮಾಡಿ ಬಂದಿದ್ದೀರಾ?”
“ಅನುಮಾನವೇ ಬೇಡ”
“ಸರಿ. ನನಗೆ ಅನ್ನಿಸುವಂತೆ ನೀನೂ ಮಧ್ಯಮ ವರ್ಗದವಳಿರಬೇಕು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯದಿದ್ದರೂ ಕಷ್ಟವನ್ನಂತೂ ನೋಡಿರಲಿಕ್ಕಿಲ್ಲ. ಈ ಕಾಡಿನಲ್ಲಿನ ವಾಸ ನಿಜಕ್ಕೂ ಕಷ್ಟಕರ ಎನ್ನುವುದು ನಿನಗೆ ತಿಳಿದಿದೆಯೆಂದು ಭಾವಿಸುತ್ತೀನಿ” ಕೀರ್ತನಾಳನ್ನುದ್ದೇಶಿಸಿ ಕೇಳಿದರು. ಹೌದೆಂದಳು.
“ಪೂರ್ಣಿಮಾಗೆ ಏನು ಹೇಳಿಬಂದೆ ಲೋಕಿ?”
“ಅವಳಿಗೂ ಒಂದು ಪತ್ರ ಬರೆದಿದ್ದೀನಿ”
“ನಕ್ಸಲೀಯನಾಗಲು ಹೊರಟಿದ್ದೇನೆಂದು ಬರೆದಿದ್ದೀಯಾ?”
“ಇಲ್ಲ ಸರ್. ನಕ್ಸಲ್ ಅನ್ನೋ ಪದವನ್ನು ಪತ್ರದಲ್ಲೆಲ್ಲೂ ಬಳಸಿಲ್ಲ. ಆದರೆ ಪೂರ್ಣಿಗೆ ನನಗೆ ನಕ್ಸಲ್ ವಿಚಾರಧಾರೆಯಲ್ಲಿ ನಂಬಿಕೆಯಿದೆ ಎಂದು ತಿಳಿದುಹೋಗಿತ್ತು. ಬಹುಶಃ ನಾನು ನಕ್ಸಲೀಯನಾಗಿದ್ದೀನಿ ಎಂದು ಆಕೆ ಊಹಿಸಿರುತ್ತಾಳೆ” ಎಷ್ಟು ತಡೆದರೂ ದುಃಖ ಒತ್ತರಿಸಿಕೊಂಡು ಬರುತ್ತಿತ್ತು.
“ಹಳೆ ವಿಷಯಗಳನ್ನು ಜಾಸ್ತಿಯೇ ಕೆದಕಿಬಿಟ್ಟೆ ಅನ್ನಿಸುತ್ತೆ. ನಿಮ್ಮ ಹಿಂದಿನ ಜೀವನದ ಬಗ್ಗೆ ಯಾರೂ ಹೆಚ್ಚಿಗೆ ಇಲ್ಲಿ ಕೇಳುವುದಿಲ್ಲ. ಹಳೆಯ ಘಟನೆಗಳನ್ನು ಮರೆಯೋದಿಕ್ಕಂತೂ ಆಗೊಲ್ಲ. ಸಾಧ್ಯವಾದಷ್ಟು ಮಟ್ಟಿಗೆ ನೆನಪುಗಳನ್ನು ತಡೆಹಿಡಿಯಿರಿ” ಎಂದು ಹೇಳಿದರು. ಅರುಣ್ ಕಡೆಗೆ ತಿರುಗಿ ನಾಲ್ಕೂ ಜನಕ್ಕೆ ಅಡುಗೆ ಸಿದ್ಧಪಡಿಸಲು ತಿಳಿಸಿದರು.
“ಇವತ್ತು ವಿಶ್ರಾಂತಿ ತೆಗೆದುಕೊಳ್ಳಿ. ನಾಳೆಯಿಂದ ನಿಮ್ಮ ಕೆಲಸಗಳೇನು ಎಂದು ತಿಳಿಸುತ್ತೇವೆ” ಎಂದರು. 
ಮುಂದುವರೆಯುವುದು

No comments:

Post a Comment