Jul 30, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 34ಡಾ ಅಶೋಕ್ ಕೆ ಆರ್  
ಆದರ್ಶವೇ ಬೆನ್ನು ಹತ್ತಿ ಭಾಗ 33 ಓದಲು ಇಲ್ಲಿ ಕ್ಲಿಕ್ಕಿಸಿ
ಸ್ನೇಹಾಳಿಗೆ ಬಂದಿದ್ದ ಪತ್ರವನ್ನು ಓದಿದಳು ಪೂರ್ಣಿಮಾ. ಸಿಂಚನಾ ಕೂಡ ಓದಿದಳು. ಲೋಕಿ ಹೋಗಿದ್ದೆಲ್ಲಿಗೆ ಎಂದು ಈಗ ತಿಳಿಯಿತು. ಸ್ನೇಹ ಪೂರ್ಣಿಮಾಳ ಹೆಗಲನ್ನು ಆಸರೆಯಾಗಿಸಿಕೊಂಡು ಕುಳಿತಿದ್ದಳು. ಯಾರಿಗ್ಯಾರು ಸಮಾಧಾನಿಸಬೇಕೆಂದು ತಿಳಿಯಲಿಲ್ಲ.
“ನಿನಗೆ ಪತ್ರ ಯಾವಾಗ ತಲುಪಿತು ಸ್ನೇಹಾ?”
“ಈಗ ಒಂದರ್ಧ ಘಂಟೆಯಾಯಿತು. ನಿಮಗೆ?”

“ಬೆಳಿಗ್ಗೆ ಬಂತು ಪತ್ರ. ನಿನ್ನೆ ಮನೆಯಲ್ಲಿ ಏನೆಂದು ಹೇಳಿ ಹೊರಟ”
“ಮನೆಯಲ್ಯಾರೂ ಇರಲಿಲ್ಲ. ಅಂಗಡಿಗೆ ಫೋನ್ ಮಾಡಿ ಸ್ನೇಹಿತನ ರೂಮಿಗೆ ಓದಿಕೊಳ್ಳಲು ಹೋಗ್ತಾ ಇದ್ದೀನಿ ಅಂತ ತಂದೆಯ ಬಳಿ ಹೇಳಿದನಂತೆ. ಈಗ ನೋಡಿದರೆ ಹೀಗೆ”
“ಸಮಾಧಾನ ಮಾಡಿಕೋ ಸ್ನೇಹ. ನಿನ್ನಣ್ಣ ಏನೇ ಮಾಡಿದ್ರೂ ದೇಶಕ್ಕೋಸ್ಕರವೇ ಎಂಬುದೀ ಪತ್ರದಿಂದ ತಿಳಿಯುತ್ತದಲ್ಲ. ದೇಶಸೇವೆಗೆ ಹೊರಟವನನ್ನು ತಡೆಯೋ ಶಕ್ತಿ ನಮಗೆಲ್ಲಿದೆ” ಸಿಂಚನ ಹೇಳಿದಳು.
“ಸುಮ್ಮನಿರು ಸಿಂಚು. ಯಾವ ದೇಶಸೇವೆ? ನಕ್ಸಲೈಟಾಗೋದು ದೇಶಸೇವೇನಾ?”
“ನಕ್ಸಲೈಟಾ?!!” ಪೂರ್ಣಿಮಾ ಹೇಳಿದ್ದನ್ನು ಕೇಳಿ ಸಿಂಚನಾ ಮತ್ತು ಸ್ನೇಹಾ ಕೂಗಿ ಕೇಳಿದರು ಅಚ್ಚರಿ ವ್ಯಕ್ತಪಡಿಸುತ್ತ
“ಹೌದು. ನನಗನ್ನಿಸೋ ಮಟ್ಟಿಗೆ ಅವನು ನಕ್ಸಲೈಟೇ ಆಗ್ತಾನೆ”
“ನಿಮಗೇಗೆ ಗೊತ್ತು ಅತ್ತಿಗೆ. ನಿಮಗೆ ತಿಳಿಸಿದ್ನಾ?”
“ಅವನಾಗೇ ತಿಳಿಸಿರಲಿಲ್ಲ. ನಾನೇ ಅವನ ಬಾಯಿ ಬಿಡಿಸಿದ್ದೆ” ISRAದ ಬಗ್ಗೆ, ನಕ್ಸಲಿಸಂನಲ್ಲಿ ಆತನಿಗೆ ಇದ್ದ ಆಸಕ್ತಿಯ ಬಗ್ಗೆ ವಿವರವಾಗಿ ತಿಳಿಸಿದಳು ಪೂರ್ಣಿಮಾ.
“ಮಗ ನಕ್ಸಲೈಟಾಗಿದ್ದಾನೆ ಅನ್ನೋದನ್ನ ಅಪ್ಪ ಹೇಗೆ ತಡೆದುಕೊಳ್ತಾರೋ ಏನೋ?”
“ಅವರಿಗಿನ್ನೂ ಈ ವಿಷಯ ತಿಳಿದಿಲ್ವಾ?” ಸಿಂಚನಾ ಕೇಳಿದಳು.
“ಇನ್ನೂ ಇಲ್ಲ. ಅವರು ಅಂಗಡಿಯ ಕಡೆಗೆ ಹೋದ ಮೇಲೆ ಈ ಪತ್ರ ಬಂತು”
“ಮಧ್ಯಾಹ್ನ ಊಟಕ್ಕೆ ಬರ್ತಾರಾ?” ಪೂರ್ಣಿಮಾ ಕೇಳಿದಳು.
“ಹ್ಞೂ”
“ಸರಿ. ಹಾಗಿದ್ದರೆ ಅವರಿಗೆ ಮಧ್ಯಾಹ್ನ ವಿಷಯ ತಿಳಿಸಿದರಾಯಿತು. ಅಲ್ಲಿಯವರೆಗಾದ್ರೂ ಅವರು ನೆಮ್ಮದಿಯಾಗಿರಲಿ”
“ಮಧ್ಯಾಹ್ನದವರೆಗೆ ದಯವಿಟ್ಟು ಇಲ್ಲೇ ಇರಿ ಅತ್ತಿಗೆ. ನನಗೊಬ್ಬಳಿಗೇ ತಂದೆಗೆ ವಿಷಯ ತಿಳಿಸುವ ಧೈರ್ಯವಿಲ್ಲ”
“ಈ ಪರಿಸ್ಥಿತಿಯಲ್ಲಿ ನಿನ್ನನ್ನು ಒಬ್ಬಳೇ ಬಿಟ್ಟು ಹೋಗ್ತೀವಾ.”ಸ್ನೇಹಳ ಬೆನ್ನು ಸವರುತ್ತಾ ಹೇಳಿದಳು ಪೂರ್ಣಿಮಾ.
ಮಧ್ಯಾಹ್ನ ಶಿವಶಂಕರ್ ಬರುವವರೆಗೂ ಮನೆಯಲ್ಲಿ ಸ್ಮಶಾನ ಮೌನ ನೆಲೆಸಿತ್ತು. ಬಾಗಿಲು ತೆರೆದಿದ್ದನ್ನು ನೋಡಿ ಲೋಕಿ ಬಂದಿರಬೇಕೆಂದುಕೊಂಡು ಒಳಬಂದರು. ಹಾಲಿನಲ್ಲಿ ಸ್ನೇಹಳ ಜೊತೆ ಇಬ್ಬರು ಹುಡುಗಿಯರು ಕುಳಿತಿದ್ದರು. ಎಲ್ಲರ ಮುಖದಲ್ಲೂ ಪ್ರೇತಕಳೆ. ಅತ್ತೂ ಅತ್ತೂ ಕೆಂಪಗಾಗಿದ್ದ ಸ್ನೇಹಳ ಕಣ್ಣುಗಳನ್ನು ನೋಡಿ ಏನೋ ಅನಾಹುತವಾಗಿದೆ ಎಂಬುದನ್ನು ಅರಿತರು. ಗಾಬರಿಯಿಂದ “ಏನಾಯ್ತಮ್ಮ ಸ್ನೇಹ?” ಎಂದು ಕೇಳಿದರು.
ಸ್ನೇಹಾ ಮಾತನಾಡದೆ ಮೇಜಿನ ಮೇಲಿಟ್ಟಿದ್ದ ಪತ್ರದ ಕಡೆಗೆ ನೋಡಿದಳು. ಪತ್ರವನ್ನು ದೂರದಿಂದ ನೋಡುತ್ತಿದ್ದಂತೆ ಶಿವಶಂಕರ್ ಮನದಲ್ಲಿ ವಿಜಿ ಏನೋ ಅನಾಹುತ ಮಾಡಿಕೊಂಡು ಬಿಟ್ಟಿರಬೇಕೆಂಬ ಭಾವ ಸುಳಿಯಿತು.
“ವಿಜಿ..... ಏನಾ.....ದ್ರೂ .... ಮಾಡಿ......ಕೊಂ....ಡನೇ.....ನಮ್ಮ?” ನಡುಗುವ ಕೈಯಲ್ಲಿ ಪತ್ರವನ್ನು ಎತ್ತಿಕೊಂಡರು. ಕಣ್ಣಾಗಲೇ ತುಂಬಿತ್ತು. ಪತ್ರ ಬರೆದಿರುವುದು ವಿಜಿಯಲ್ಲ ಲೋಕಿ. ಪತ್ರ ಓದಿ ಮುಗಿಸಿದ ನಂತರ ಕಣ್ಣ ನೀರು ಇಂಗಿಹೋಗಿತ್ತು. ಪತ್ರವನ್ನು ಮತ್ತೆ ಮೇಜಿನ ಮೇಲಿಟ್ಟು ಯಾರೊಡನೆಯೂ ಮಾತನಾಡದೆ ರೂಮಿಗ್ಹೋಗಿ ಹಾಸಿಗೆಯ ಮೇಲೆ ಕುಳಿತರು.
ಮಗೆ ಹೊರಟುಹೋಗಿದ್ದಾನೆ ಅನ್ನೋ ದುಃಖಕ್ಕಿಂತ ಹೆಚ್ಚಾಗಿ ನಾ ನಡೆದುಕೊಂಡ ಕಾರಣದಿಂದಾಗಿಯೇ ಆತ ಹೋಗಿದ್ದಾನೆ ಎಂಬ ಭಾವನೆ ಮನಸ್ಸನ್ನು ಇರಿಯಲಾರಂಭಿಸಿತು. ‘ಅಪ್ಪನ ಬಲವಂತದಿಂದ ನನ್ನ ಆದರ್ಶಗಳ ವಿರುದ್ಧ ನಡೆದುಕೊಂಡೆ’ ‘ಸಂಸಾರದ ಒಳಗಿದ್ದುಕೊಂಡು ಅನ್ಯಾಯದ ವಿರುದ್ಧ ಹೋರಾಡುವುದಕ್ಕಾಗುವುದಿಲ್ಲ’ ಈ ಎರಡು ಸಾಲುಗಳೇ ಕಣ್ಣ ಮುಂದೆ ಬರುತ್ತಿತ್ತು. ನನ್ನ ಬಲವಂತದ ಮಾತುಗಳು ಆತನ ಆದರ್ಶಗಳನ್ನು ಕಟ್ಟುಹಾಕಿದಂತೆ ಆತನಿಗನ್ನಿಸಿರಬೇಕು. ಅದಿಕ್ಕೆ ಈ ಬಂಧನದಿಂದ ಹೊರಗೆ ಹೋಗಿದ್ದಾನೆ. ವಿಜಿ ವಿಷಯದಲ್ಲಿ ಅವನು ಹೇಳಿದಂತೆ ಕೇಳಿದ್ದರೆ ಬಹುಶಃ ಇವತ್ತವನು ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗಿದ್ದು ಹೋರಾಟ ಮಾಡಬಹುದು ಎಂಬ ಭಾವನೆ ಆತನ ಮನದಲ್ಲಿ ಮೂಡಿರುತ್ತಿತ್ತಲ್ವಾ? ಈಗ ಯೋಚಿಸಿ ಏನು ಉಪಯೋಗ.ಸ್ನೇಹಾಳಿಗೆ ಒಂದು ಸಮಾಧಾನದ ಮಾತನ್ನೂ ಹೇಳದೆ ಬಂದುಬಿಟ್ಟೆನಲ್ಲಾ; ಅಣ್ಣ ಅಂದ್ರೆ ಜೀವ ಬಿಡ್ತಿತ್ತು ಹುಡುಗಿ ಎಂದುಕೊಳ್ಳುತ್ತಾ ಹಾಲಿಗೆ ಬಂದರು ಶಿವಶಂಕರ್.
“ಸಮಾಧಾನ ಮಾಡಿಕೋ ಸ್ನೇಹ. ಆಗೋದನ್ನ ತಪ್ಪಿಸಲು ಯಾರಿಂದಾನೂ ಸಾಧ್ಯವಿಲ್ಲ. ಅವನು ಮನೆ ಬಿಟ್ಟು ಹೋಗೋದಿಕ್ಕೆ ವಿಜಿ ವಿಷಯದಲ್ಲಿ ನಾ ಮಾಡಿದ ತಪ್ಪೇ ಕಾರಣವಿರಬೇಕು. ಇಷ್ಟು ದಿನದ ಮೇಲೆ ನಾ ಮಾಡಿದ್ದು ತಪ್ಪು ಎಂದನಿಸುತ್ತಿದೆ”
ಸ್ನೇಹ ಉತ್ತರಿಸಲಿಲ್ಲ. ಕುಳಿತಿದ್ದ ಇಬ್ಬರು ಅಪರಿಚಿತ ಹುಡುಗಿಯರನ್ನು ನೋಡಿದರು ಶಿವಶಂಕರ್. “ನೀವು” ಎಂದರು.
“ನಾವು ಲೋಕಿಯ ಕ್ಲಾಸ್ ಮೇಟ್ಸ್. ಇವಳು ಪೂರ್ಣಿಮಾ, ನಾನು ಸಿಂಚನಾ ಅಂತ”
“ಓ! ಪತ್ರದಲ್ಲಿ ಬರೆದಿರೋದು ನಿನ್ನ ಬಗ್ಗೆಯೇ ಏನಮ್ಮಾ ಪೂರ್ಣಿಮಾ. ನನ್ನ ಮಗನ ತಪ್ಪನ್ನು ಕ್ಷಮಿಸಿಬಿಡಮ್ಮಾ. ವಿನಾಕಾರಣ ಯಾರಿಗೂ ನೋವುಂಟು ಮಾಡೋ ಉದ್ದೇಶ ಅವನಿಗಿರಲಿಕ್ಕಿಲ್ಲ” ಪೂರ್ಣಿಮಾಳನ್ನು ನೋಡುತ್ತಾ ಹೇಳಿದರು.
ಪೂರ್ಣಿಮಾಳಿಗೂ ಮೌನದಿಂದಾಚೆ ಬರುವ ಇರಾದೆಯಿರಲಿಲ್ಲ.
* * *
ಬೆಳಗಿನ ಜಾವ ಐದು ಘಂಟೆಗೆ ಶೃಂಗೇರಿಗೆ ತಲುಪಿದರು ಕೀರ್ತನಾ ಮತ್ತು ಲೋಕಿ. ಇಬ್ಬರೂ ದೇವಸ್ಥಾನದ ಬಳಿ ಇಳಿದಿದ್ದರು. ಶೃಂಗೇರಿ ಮಂಜಿನಿಂದಾವೃತವಾಗಿತ್ತು. ಆ ಚಳಿಯಲ್ಲೊಂದು ಸಿಗರೇಟು ಸೇದುವ ಮನಸ್ಸಾಯಿತು ಲೋಕಿಗೆ. ಕೀರ್ತನಾ ಏನು ತಿಳಿದುಕೊಳ್ಳುತ್ತಾಳೋ ಎಂದನ್ನಿಸಿತು.
“ಕೀರ್ತನಾ if you don’t mind ಒಂದು ಸಿಗರೇಟು ಸೇದ್ಲಾ?” ಚಳಿಗೆ ಕೈಯುಜ್ಜಿಕೊಳ್ಳುತ್ತಾ ಕೇಳಿದ.
“ಚಳಿಗೆ ಮೈಬೆಚ್ಚಗೆ ಮಾಡಿಕೊಳ್ಳಬೇಕೇನೋ ಸಾಹೇಬ್ರು” ಎಂದು ರೇಗಿಸುತ್ತ “ಸರಿ ನಡಿ. ನಾನೂ ಒಂದು ಕಪ್ ಕಾಫಿ ಕುಡೀಬೇಕು” ಎನ್ನುತ್ತಾ ಅಲ್ಲೇ ಇದ್ದ ಒಂದು ಟೀ ಸೆಂಟರ್ ಕಡೆ ಹೆಜ್ಜೆ ಹಾಕಿದರು. ಇಬ್ಬರ ಮನದಲ್ಲೂ ಹಿಂದಿನ ದಿನವಿದ್ದ ದುಗುಡ ಕಡಿಮೆಯಾಗಿತ್ತು. ಮುಂದೆ ಏನಾಗುತ್ತೋ ಎಂಬ ಕಾತುರತೆಯಿತ್ತು.
ಟೀ ಅಂಗಡಿಯವನ ಬಳಿ ಕೀರ್ತನಾ “ದೇವಸ್ಥಾನದ ಬಾಗಿಲು ಎಷ್ಟೊತ್ತಿಗೆ ತೆರೆಯುತ್ತೆ?” ಎಂದು ಕೇಳಿದಳು. ಆರು ಘಂಟೆಗೆ ಎಂದಾತ ತಿಳಿಸಿದ. ಟೀ ಅಂಗಡಿಯಿಂದ ಹೊರಬರುತ್ತ “ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದುಕೊಳ್ಳೋಣ ಲೋಕಿ” ಎಂದಳು. ದೇವಸ್ಥಾನದ ಬಳಿಯೇ ಇದ್ದ ಸ್ನಾನಗೃಹಕ್ಕೆ ಹೋಗಿ ಸ್ನಾನ ಮಾಡಿ ಮುಗಿಸಿದರು. ನಂತರ ದೇವಸ್ಥಾನಕ್ಕೆ ಹೊರಟರು. ದೇವಸ್ಥಾನದ ಬಾಗಿಲು ತೆರೆಯಲು ಇನ್ನೂ ಅರ್ಧ ಘಂಟೆಯ ಸಮಯವಿತ್ತು. ದೇವಸ್ಥಾನದ ಬಲಭಾಗದಲ್ಲಿದ್ದ ಮೆಟ್ಟಿಲಿಳಿದು ನದಿಯ ಬಳಿಗೆ ಹೋದರು. ಜನಸಂಚಾರ ಕಡಿಮೆಯಿತ್ತು. ಅಲ್ಲೇ ಮೆಟ್ಟಿಲ ಮೇಲೆ ಕುಳಿತರು.
“ದರ್ಶನ ಮುಗಿದ ನಂತರ ಎಲ್ಲಿಗೆ ಹೋಗೋದು ಲೋಕಿ?”
“ಬಸ್ ನಿಲ್ದಾಣಕ್ಕೆ ಹೋಗಿ ಕಿಗ್ಗಾ ಎಂಬ ಊರಿಗೆ ಹೋಗೋಣ. ಆ ಊರಿನಲ್ಲಿ ಚಿನ್ನಪ್ಪಣ್ಣನ ಅಂಗಡಿ ಸರ್ಕಲ್ ಅಂತ ಒಂದಿದೆ. ಆ ಸರ್ಕಲ್ಲಿನಲ್ಲಿ ಚಿನ್ನಪ್ಪಣ್ಣನ ಅಂಗಡಿಯಿದೆ. ಆ ಚಿನ್ನಪ್ಪಣ್ಣನೇ ನಾವು ನಮ್ಮವರನ್ನು ಸೇರಲು ಸಹಾಯ ಮಾಡಬೇಕು”
“ನಿನಗೆ ಚಿನ್ನಪ್ಪಣ್ಣನ ಪರಿಚಯವಿದೆಯಾ?”
“ಉಹ್ಞೂ ಇಲ್ಲ”
“ಮತ್ತೆ ಆತ ನಮ್ಮನ್ನು ನಕ್ಸಲರ ಬಳಿಗೆ ಕರೆದುಕೊಂಡು ಹೋಗುತ್ತಾನೆ ಅನ್ನೋ ಖಾತರಿ ಏನು? ಆತನೂ ನಕ್ಸಲೈಟಾ?”
“ಇರಬೇಕು”
“ಇರಬೇಕು? ಇದೇನ್ ಲೋಕಿ ಹೀಗೆ ಹೇಳ್ತಿ. ಆತ ಯಾರು ಅನ್ನೋದೂ ಗೊತ್ತಿಲ್ಲ. ಆತ ನಕ್ಸಲೈಟ್ ಹೌದೋ ಅಲ್ಲವೋ ಅನ್ನೋದು ನಿನಗೆ ತಿಳಿದಿಲ್ಲ. ಆತ ನಮಗೆ ಸಹಾಯ ಮಾಡ್ತಾನೇ ಅನ್ನೋದು ಹೇಗೆ ತಿಳೀತು” ಲೋಕಿ ಸಯ್ಯದ್ ತನಗೆ ಹೇಳಿದ್ದ ಚಿನ್ನಪ್ಪಣ್ಣನ ವಿಷಯವನ್ನು ತಿಳಿಸಿ ಆತ ನಮಗೆ ಸಹಾಯ ಮಾಡಬಹುದು ಎಂಬ ಅಂದಾಜಿನಿಂದ ಅಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿದ.
“ಒಂದು ವೇಳೆ ಚಿನ್ನಪ್ಪಣ್ಣ ಈಗಲ್ಲಿ ಇಲ್ಲದೇ ಇದ್ರೆ ಅಥವಾ ಆತ ನಮಗೆ ಸಹಾಯ ಮಾಡದಿದ್ದರೆ?” ಅನುಮಾನದಿಂದ ಕೇಳಿದಳು.
“ಆ ರೀತಿಯಾದರೆ ಏನು ಮಾಡಬೇಕೆಂಬುದನ್ನು ನಾನೂ ಯೋಚಿಸಿಲ್ಲ. ನಂತರ ಅದರ ಬಗ್ಗೆ ಯೋಚಿಸಿದರಾಯಿತು” ಚಿನ್ನಪ್ಪಣ್ಣ ತಮಗೆ ಸಹಾಯ ಮಾಡೇ ಮಾಡುತ್ತಾರೆಂಬ ನಂಬುಗೆ ಬಂದುಬಿಟ್ಟಿತ್ತು ಲೋಕಿಗೆ.
ಆರು ಘಂಟೆಗೆ ಇಬ್ಬರೂ ದೇವಸ್ಥಾನದೊಳಕ್ಕೆ ಹೋದರು. ಲೋಕಿ ದೇವರಿಗೆ ಕೈಮುಗಿಯದಿದ್ದನ್ನು ನೋಡಿ ಅಚ್ಚರಿಯಾಯ್ತು. ದೇವಸ್ಥಾನದಿಂದ ಹೊರಬಂದಾಗ “ನೀನು ನಾಸ್ತಿಕನಾ?” ಎಂದು ಕೇಳಿದಳು.
“ಹೌದು”
ಆಗ ತಾನೇ ಬಾಗಿಲು ತೆರೆಯುತ್ತಿದ್ದ ಅಂಗಡಿಯವನಿಂದ ಬಸ್ ನಿಲ್ದಾಣಕ್ಕೆ ಹೋಗುವ ದಾರಿ ತಿಳಿದುಕೊಂಡು ಅತ್ತ ನಡೆಯಲಾರಂಭಿಸಿದರು. ಹತ್ತು ನಿಮಿಷದ ನಡಿಗೆಯ ನಂತರ ನಿಲ್ದಾಣ ತಲುಪಿದರು. ಇಬ್ಬರಿಗೂ ಅಚ್ಚರಿಯಾಯ್ತು ಅಲ್ಲಿನ ವ್ಯವಸ್ಥೆ ಕಂಡು. ಸಹಕಾರ ಸಾರಿಗೆಯ ಹೆಸರಿನಲ್ಲಿ ಖಾಸಗಿ ಬಸ್ಸುಗಳೂ ಅಲ್ಲೇ ಬಂದು ನಿಂತು ಅಲ್ಲಿಂದಲೇ ಹೊರಡುತ್ತಿತ್ತು. ಕಿಗ್ಗಾದ ಕಡೆಗೆ ಬಸ್ಸಿದ್ದಿದ್ದು ಏಳೂ ಮುಕ್ಕಾಲಿಗೆ. ಇನ್ನೂ ಒಂದು ಘಂಟೆಯ ಸಮಯವಿತ್ತು. ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲವೆಂಬುದು ನೆನಪಾಗಿ ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದು ಮುಗಿಸಿದರು.
ಕಿಗ್ಗಾದೆಡೆಗೆ ಹೋಗುವ ಬಸ್ಸನ್ನು ಹತ್ತಿ ಕುಳಿತರು. ಕಂಡಕ್ಟರ್ ಬಳಿ ಬಂದಾಗ “ಎರಡು ಕಿಗ್ಗಾಗೆ” ಎಂದ ಲೋಕಿ ಹಣ ಕೊಡುತ್ತಾ.
“ದೇವಸ್ಥಾನದ ಬಳಿ ಇಳಿಯುತ್ತೀರಾ ಅಥವಾ ಚಿನ್ನಪ್ಪಣ್ಣ ಸರ್ಕಲ್ಲಾ?”
“ಸರ್ಕಲ್” ಎರಡು ಟಿಕೆಟ್ ಹರಿದುಕೊಟ್ಟು ಚಿಲ್ಲರೆಯನ್ನು ಕೊಟ್ಟ ಕಂಡಕ್ಟರ್. ಆತ ಮುಂದಕ್ಕೆ ಹೋಗುವಾಗ “ಸ್ಟಾಪ್ ಬಂದಾಗ ಸ್ವಲ್ಪ ತಿಳಿಸಿಬಿಡಿ ಸರ್” ಎಂದಳು ಕೀರ್ತನ. ಆಯ್ತೆಂಬಂತೆ ತಲೆಯಾಡಿಸಿದ. ಅಂಗಡಿ ಸರ್ಕಲ್ ಬಂದಾಗ ಕಂಡಕ್ಟರ್ ಕೂಗಿ ಹೇಳಿದ. ಇಬ್ಬರೂ ಕೆಳಗಿಳಿದರು. ಆ ಸರ್ಕಲ್ಲಿನಲ್ಲಿ ಇದ್ದಿದ್ದು ಅದೊಂದೇ ಅಂಗಡಿ. ಬಹುಶಃ ಅದೇ ಅಂಗಡಿಯಿರಬೇಕೆಂದುಕೊಂಡ ಲೋಕಿ. ಅಂಗಡಿ ಬಳಿ ಜನರ ಗುಂಪಿತ್ತು. ಬಹುಶಃ ಶೃಂಗೇರಿಯ ಕಡೆಗೆ ಹೋಗುವ ಬಸ್ಸಿಗೆ ಕಾಯುತ್ತಿರಬೇಕು. ಆ ಗುಂಪಿನಿಂದ ಕೊಂಚ ದೂರದಲ್ಲಿ ನಿಂತರು. ಹತ್ತು ನಿಮಿಷದ ನಂತರ ಶೃಂಗೇರಿಯ ಬಸ್ಸು ಬಂತು. ನಿಂತಿದ್ದ ಜನರೆಲ್ಲಾ ಬಸ್ ಹತ್ತಿ ಹೊರಟುಹೋದರು. ದಿನಸಿ ಸಾಮಾನನ್ನು ತೆಗೆದುಕೊಳ್ಳಲು ಒಂದು ಹುಡುಗಿ ನಿಂತಿತ್ತು. ಅವಳು ಸಾಮಾನನ್ನು ತೆಗೆದುಕೊಂಡು ಹೋದ ಮೇಲೆ ಕೀರ್ತನಾ ಮತ್ತು ಲೋಕಿ ಅಂಗಡಿಯ ಬಳಿಗೆ ಬಂದರು.
ಚಿನ್ನಪ್ಪಣ್ಣ ಮೂವತ್ತೈದು ವರುಷದವನು. ಮಾಸಿದ ಪಂಚೆಯುಟ್ಟು ಮೇಲೊಂದು ಬಣ್ಣಗೆಟ್ಟಿದ್ದ ಬನೀನನ್ನು ತೊಟ್ಟಿದ್ದ. ಹುರಿಗೊಂಡಿದ್ದ ತೋಳಿನ ಮಾಂಸಖಂಡಗಳು ಆತನ ಶ್ರಮವನ್ನು ತಿಳಿಸುತ್ತಿತ್ತು. ಪೊದೆ ಮೀಸೆಯ ಕೆಳಗಿದ್ದ ತುಟಿಯಲ್ಲಿ ಉರಿಯುತ್ತಿದ್ದ ಬೀಡಿ ತುಂಡೊಂದನ್ನು ಇರಿಸಿಕೊಂಡಿದ್ದ. ಎರಡು ಮೂರು ದಿನದ ಕುರುಚಲು ಗಡ್ಡ. ಅಂಗಡಿ ಬಳಿ ಬಂದ ಲೋಕಿ ಮತ್ತು ಕೀರ್ತನಾಳನ್ನು ‘ಏನು ಬೇಕು?’ ಎಂಬಂತೆ ನೋಡಿದ.
‘ನಿಮ್ಮನ್ನೇ ಕಾಣಬೇಕಿತ್ತು’ ಎಂದ್ಹೇಳಬೇಕೆಂದಿದ್ದವನು ಅಂಗಡಿಯ ಬಳಿಗೆ ಒಬ್ಬ ಚಿಕ್ಕ ಹುಡುಗ ಬರುತ್ತಿದ್ದುದನ್ನು ನೋಡಿ “ಒಂದು ಕಿಂಗ್ ಸಿಗರೇಟು. ಎರಡು ಬಾಳೆಹಣ್ಣು” ಎಂದ. ಚಿನ್ನಪ್ಪಣ್ಣ ಕೊಟ್ಟ ಸಿಗರೇಟನ್ನು ಹಚ್ಚಿಕೊಂಡು ಒಂದು ಬಾಳೆಹಣ್ಣನ್ನು ಕೀರ್ತನಾಳಿಗೆ ಕೊಟ್ಟು ಅಲ್ಲೇ ಇದ್ದ ಕಲ್ಲುಬೆಂಚಿನ ಮೇಲೆ ಕುಳಿತ. ಬಂದಿದ್ದ ಚಿಕ್ಕ ಹುಡುಗ ಅರ್ಧ ಕೆ.ಜಿ ಅಕ್ಕಿ ತೆಗೆದುಕೊಂಡು “ದುಡ್ಡು ಅಪ್ಪಯ್ಯ ಕೊಡ್ತಾನಂತೆ” ಎಂದ್ಹೇಳಿದ.
“ನಿನ್ನಪ್ಪಂದು ಇದೇ ಕತೆಯಾಯ್ತಲ್ಲ. ದಿನಾ ರಾತ್ರಿ ಶೇಂದಿ ಏರಿಸೋಕೆ ದುಡ್ಡಿರುತ್ತೆ. ತಿನ್ನೋ ಅನ್ನಕ್ಕೆ ಸಾಲ ಹೇಳ್ತಾನೆ. ಸರಿ ಸರಿ ನೀನು ಹೊರಡು” ರೇಗಿ ಆ ಹುಡುಗನನ್ನು ಕಳುಹಿಸಿದ. ಲೋಕಿಯ ಸಿಗರೇಟು ಮುಕ್ಕಾಲು ಮುಗಿದಿತ್ತು. ಕೀರ್ತನ ಬಾಳೆಹಣ್ಣನ್ನು ತಿಂದು ಮುಗಿಸಿ ಸಿಪ್ಪೆಯನ್ನು ಕೈಯಲ್ಲಿಟ್ಟುಕೊಂಡು ಜಿಗುಟುತ್ತಿದ್ದಳು. ಚಿನ್ನಪ್ಪಣ್ಣನ ಬಳಿ ಹೇಗೆ ಮಾತನ್ನಾರಂಭಿಸಬೇಕೆಂದು ತಿಳಿಯಲಿಲ್ಲ. ಅಂಗಡಿಯೊಳಗೆ ಕುಳಿತು ಬೀಡಿ ಸೇದುತ್ತಿದ್ದ ಚಿನ್ನಪ್ಪಣ್ಣನಿಗೆ ಒಬ್ಬನೇ ಕುಳಿತು ಬೇಸರವಾಗಿ ಅಂಗಡಿಗೆ ಬಂದಿದ್ದ ಹೊಸಬರನ್ನು ಮಾತಿಗೆಳೆಯೋಣ ಎಂದುಕೊಂಡು “ನಿಮ್ಮದು ಯಾವ ಊರು?” ಎಂದ. “ಮೈಸೂರು” ಎಂದುತ್ತರಿಸಿದ ಲೋಕಿ.
“ಇಲ್ಲಿ ಯಾರನ್ನು ನೋಡಬೇಕಿತ್ತು?”
ಲೋಕಿ ಉತ್ತರಿಸುವ ಮೊದಲೇ ಕೀರ್ತನ “ನಿಮ್ಮನ್ನೇ ಕಾಣಬೇಕಿತ್ತು ಚಿನ್ನಪ್ಪಣ್ಣ” ಎಂದಳು ದೀನಸ್ವರದಲ್ಲಿ. “ನನ್ನನ್ನು ನೋಡಬೇಕಿತ್ತಾ?!!” ಸೇದುತ್ತಿದ್ದ ಬೀಡಿಯನ್ನು ಎಸೆದು ಮೇಲೆದ್ದು “ಯಾರು ನೀವು? ನನ್ನನ್ಯಾಕೆ ಭೇಟಿಯಾಗಬೇಕು?” ಎಂದು ಕೇಳಿದ ಗಾಬರಿಯಿಂದ. ಚಿನ್ನಪ್ಪಣ್ಣ ಮೇಲೆದ್ದಿದ್ದನ್ನು ನೋಡಿ ಲೋಕಿಯೂ ಮೇಲೆದ್ದು “ಗಾಬರಿಯಾಗಬೇಡಿ ಚಿನ್ನಪ್ಪಣ್ಣ. ನನ್ನ ಹೆಸ್ರು ಲೋಕೇಶ್. ಇವಳು ಕೀರ್ತನಾ”
ಮುಂದುವರೆಯುವುದು...

No comments:

Post a Comment