Aug 18, 2014

ಕನ್ನಡ ಇ-ಪುಸ್ತಕಗಳ ಸಂಖೈ ಹೆಚ್ಚಿಸುವಲ್ಲಿ ನಿಮ್ಮದೂ ಪಾತ್ರವಿರಲಿ.hingyake
ಡಾ ಅಶೋಕ್ ಕೆ ಆರ್
ನಮಗಿಷ್ಟವಿದೆಯೋ ಇಲ್ಲವೋ, ನಮಗೆ ಬೇಕೋ ಬೇಡವೋ ತಂತ್ರಜ್ಞಾನವೆಂಬುದು ಇವತ್ತು ಎಲ್ಲ ಕ್ಷೇತ್ರಗಳನ್ನೂ ಹಾಸು ಹೊಕ್ಕಾಗಿದೆ. ಪುಸ್ತಕಗಳನ್ನು ಮುದ್ರಣ ರೂಪದಲ್ಲಿಯೇ ಖರೀದಿಸಿ ಹೊಚ್ಚ ಹೊಸ ಪುಟಗಳ ಸ್ವಾದವನ್ನಾಸ್ವಾದಿಸಿ ಒಳಪುಟದಲ್ಲಿ ಹೆಸರು ಬರೆದು ಪುಟ ತಿರುವುತ್ತಾ ಓದುವ ಸಂತಸವನ್ನು ಯಾವ ಫೋನುಗಳಾಗಲೀ ಟ್ಯಾಬ್ಲೆಟ್ಟುಗಳಾಗಲೀ ಮತ್ತಿತರ ಗ್ಯಾಡ್ಜೆಟ್ಟುಗಳಾಗಲೀ ಕೊಡಲು ಸಾಧ್ಯವೇ ಇಲ್ಲ. ಗ್ಯಾಡ್ಜೆಟ್ಟುಗಳಲ್ಲಿ ಓದುವುದು ಕಣ್ಣಿಗೆ ಅಷ್ಟು ಹಿತಕರವೆಲ್ಲವೆಂಬುದು ಸತ್ಯವಾದರೂ ಗ್ಯಾಡ್ಜೆಟ್ಟುಗಳ ಮೇಲಿನ ನಮ್ಮ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂಬುದು ವಾಸ್ತವ. ದಿನಪತ್ರಿಕೆಗಳನ್ನು ಓದುವುದಕ್ಕೆ ಫ್ಯಾಬ್ಲೆಟ್ಟುಗಳ ಉಪಯೋಗ ಹೆಚ್ಚುತ್ತಿದೆ. ಕಷ್ಟವಾದರೂ, ಸಮಾಧಾನವಾಗದಿದ್ದರೂ ಮುದ್ರಣ ಆವೃತ್ತಿಯನ್ನು ಮರೆತು ಇ-ಆವೃತ್ತಿಯ ಪುಸ್ತಕಗಳನ್ನು ಓದುವವರ ಸಂಖೈ ಕ್ರಮೇಣ ಹೆಚ್ಚಾಗುವುದರಲ್ಲಿ ಸಂಶಯವಿರಲಾರದು. ಮೇಲಾಗಿ ಈ ಇ-ಆವೃತ್ತಿಗಳು ವಿಶ್ವಾದ್ಯಂತ ಕ್ಷಣಮಾತ್ರದಲ್ಲಿ ದೊರಕುವ ಸಾಧ್ಯತೆಗಳು ಕೂಡ ಕನ್ನಡ ಪುಸ್ತಕಗಳ ಇ-ಆವೃತ್ತಿ ಹೆಚ್ಚಬೇಕೆಂಬ ಆಶಯಕ್ಕೆ ಪೂರಕವಾಗುತ್ತದೆ.

screenshot
ಗೂಗಲ್ ಪ್ಲೇನಲ್ಲಿ ಹಿಂದಿ ಪುಸ್ತಕಗಳು
ಕೆಲವೇ ದಿನಗಳ ಹಿಂದೆ ಪಠ್ಯಕ್ಕೆ ಸಂಬಂಧಪಟ್ಟ ಆಂಗ್ಲ ಪುಸ್ತಕದ ಇ-ಆವೃತ್ತಿಯನ್ನು ಗೂಗಲ್ ಪ್ಲೇ ಬುಕ್ಕಿನ ಮುಖಾಂತರ ಮಾರುವುದು ಹೇಗೆ ಎಂಬುದನ್ನರಿಯುತ್ತಿದ್ದಾಗ ಗೂಗಲ್ ಪ್ಲೇನ ಮೊದಲ ಪುಟವನ್ನು ನೋಡಿದಾಗ (ಮೊಬೈಲಿನಲ್ಲಿ) ಅಚ್ಚರಿಯಾಯಿತು, ಜೊತೆಗೊಂದಷ್ಟು ಅಸೂಯೆ! ಆಂಗ್ಲ ಪುಸ್ತಕಗಳು ಸಿಗ್ತವೆ ಅಷ್ಟೇ ಎಂಬ ತಾತ್ಸಾರದಿಂದ ನೋಡಿದವನಿಗೆ ಜನಪ್ರಿಯ ಹಿಂದಿ ಪುಸ್ತಕಗಳು ಮತ್ತು ನಮ್ಮದೇ ನೆರೆರಾಜ್ಯದ ತಮಿಳು ಪುಸ್ತಕಗಳೂ ಕೂಡ ಮೊದಲ ಪುಟದಲ್ಲೇ ಕಂಡು ಕನ್ನಡವಿಲ್ಲವಲ್ಲ ಎಂದು ಬೇಸರವಾಯಿತು. ಬೇಸರಪಟ್ಟುಕೊಂಡರೆ ಸಾರ್ಥಕ್ಯವೇನು ಎಂಬ ಭಾವ ಮೂಡಿ ಕಳೆದ ವರ್ಷ ಮದುವೆಯ ಸಂದರ್ಭದಲ್ಲಿ ಮುದ್ರಿಸಿದ್ದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನನ್ನ ಕಥೆಗಳ ಸಂಕಲನವನ್ನು ಇ-ಆವೃತ್ತಿಗೆ ಪರಿವರ್ತಿಸಿ ಗೂಗಲ್ ಪ್ಲೇಗೆ ಅಪ್ಲೋಡ್ ಮಾಡಿದೆ (ಖರೀದಿಸಲು ಇಲ್ಲಿ ಕ್ಲಿಕ್ಕಿಸಿ). ದಶಕದ ಹಿಂದೆ ಬರೆದಿದ್ದ ಕಾದಂಬರಿಯ ರೂಪದ (!) ಕಾದಂಬರಿಯನ್ನು ಕೂಡ ಇನ್ನೊಂದು ವಾರದಲ್ಲಿ ಇ-ಆವೃತ್ತಿಗೆ ಪರಿವರ್ತಿಸಿ ಗೂಗಲ್ ಪ್ಲೇನಲ್ಲಿ ಉಚಿತವಾಗಿ ಬಿಡಬೇಕೆಂದು ತೀರ್ಮಾನಿಸಿದ್ದೇನೆ.
ಗೂಗಲ್ ಪ್ಲೇನಲ್ಲಿ ತಮಿಳು ಪುಸ್ತಕಗಳು
ಪುಸ್ತಕ ಪ್ರಕಟಿಸಿರುವ, ಪುಸ್ತಕ ಪ್ರಕಟಿಸಬೇಕೆಂದಿರುವ ಹಿರಿ-ಕಿರಿ-ಹೊಸ-ಹಳೆ ಲೇಖಕರು, ಪ್ರಕಾಶಕರಿಗೆಲ್ಲರಿಗೂ ಈ ಮೂಲಕ ನಿಮ್ಮ ಪುಸ್ತಕವನ್ನೂ ಇ-ಆವೃತ್ತಿಯನ್ನಾಗಿ ಮಾರ್ಪಡಿಸಬೇಕೆಂಬ ಮನಸ್ಸು ಮಾಡಿ ಎಂಬುದು ಹಿಂಗ್ಯಾಕೆಯ ವಿನಂತಿ. ಪುಸ್ತಕ ಮುದ್ರಣವೆಂದರೆ ಹೆಚ್ಚೇನೂ ಹೆಸರು ಮಾಡದವರಿಗೆ, ಅತ್ಯದ್ಭುತವಾಗಿ ಬರೆಯಲಾಗದವರಿಗೆಲ್ಲ ನಷ್ಟದ ಬಾಬತ್ತೇ!. ಇ-ಆವೃತ್ತಿಗೆ ಮತ್ತಷ್ಟು ಹಣವನ್ನು ದುಂದು ವೆಚ್ಚಮಾಡುವುದೇಕೆ ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ಆ ಅಭಿಪ್ರಾಯವನ್ನು ಖಂಡಿತ ಬದಲಿಸಿಕೊಳ್ಳಿ! ನಿಮ್ಮ ಪುಸ್ತಕದ ಟೈಪಿಸಿದ ಪ್ರತಿಯನ್ನು ನಮಗೆ ಇಮೇಲ್ ಮುಖಾಂತರ ಕಳಿಸಿ, ಅದು ಇ-ಆವೃತ್ತಿಯಾಗಿ ಪ್ರಕಟವಾಗಿಸುವ ಜವಾಬ್ದಾರಿ ನಮ್ಮದು! ಭಾನುವಾರದ (17/08/2014) ಪ್ರಜಾವಾಣಿ ಪತ್ರಿಕೆಯಲ್ಲಿ quillbooks ಸಂಸ್ಥೆಯವರು ಇ-ಆವೃತ್ತಿ ಪ್ರಕಟಿಸುವ ಬಗ್ಗೆ ಪ್ರಕಟವಾಗಿದೆ. ಅವರನ್ನೂ ಸಂಪರ್ಕಿಸಿ -ನಿಮ್ಮ ಪುಸ್ತಕಗಳು ಅಂತರ್ಜಾಲದ ಅನೇಕ ಕಡೆ ಪ್ರಕಟವಾಗಲಿ- ಎಂಬುದು ನಮ್ಮ ಕಳಕಳಿಯ ಮನವಿ! hingyake@gmail.com ಗೆ ಇ-ಮೇಲ್ ಕಳುಹಿಸುವ ಮುಂಚೆ ಕೆಳಗಿನ ವಿಷಯಗಳನ್ನು ಒಂದಷ್ಟು ಓದಿಕೊಳ್ಳಿ –
  1. ನಿಮ್ಮ ಪುಸ್ತಕದ ಟೈಪಿಸಿದ ಡಾಕ್ಯುಮೆಂಟನ್ನು ನಮಗೆ ಇ-ಮೇಲ್ ಮಾಡಿ. ಸಾಧ್ಯವಾದಷ್ಟೂ ಅದು ಯುನಿಕೋಡಿನಲ್ಲಿರಲಿ. ಯುನಿಕೋಡಿನಲ್ಲಿರದಿದ್ದರೂ ಇ-ಪುಸ್ತಕವನ್ನು ತಯಾರಿಸಬಹುದಾದರೂ ಯುನಿಕೋಡಿನಲ್ಲಿದ್ದರೆ ಓದುವವರಿಗೆ ಸುಲಭ. ಕನ್ನಡ ರೆಂಡರಿಂಗ್ ಇರುವ ಎಲ್ಲಾ ಆ್ಯಂಡ್ರಾಯ್ಡ್ ಫೋನುಗಳಲ್ಲೂ ಯುನಿಕೋಡಿನಲ್ಲಿನ ಕನ್ನಡ ಓದಬಹುದು. ಯುನಿಕೋಡಿನಲ್ಲಿರದಿದ್ದರೆ ಪಿಡಿಎಫ್ ಫಾರ್ಮಾಟಿನಲ್ಲಿ ಪುಸ್ತಕ ತಯ್ಯಾರಿಸಬೇಕಾಗುತ್ತದೆ. ಓದುವ ಸುಖ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
  2. ಮುಖಪುಟವನ್ನು jpeg ಅಥವಾ png ರೂಪದಲ್ಲಿ ಕಳಿಸಿ. (ಹಿಂಬದಿಯ ಪುಟದ ಅವಶ್ಯಕತೆಯಿಲ್ಲ)
  3. ಬೆಲೆ ಎಷ್ಟಿರಬೇಕೆಂಬುದನ್ನು ತಿಳಿಸುವುದನ್ನು ಮರೆಯಬೇಡಿ! ಮುದ್ರಿತ ಪ್ರತಿಗಳಿಗಿಂತ ಬೆಲೆ ಕಡಿಮೆಯಿದ್ದರೆ ಒಳ್ಳೆಯದು. ನೀವು ಬಹಳಷ್ಟು ಪುಸ್ತಕಗಳನ್ನು ಕಳುಹಿಸುತ್ತಿದ್ದರೆ ಒಂದೆರಡು ಪುಸ್ತಕಗಳನ್ನಾದರೂ ಉಚಿತವಾಗಿಡಿಲು ಪ್ರಯತ್ನಿಸಿ. (ಬೆಲೆ ನಿಗದಿಪಡಿಸಿದ ಪುಸ್ತಕಗಳ ಶೇ 5 ರಿಂದ ಶೇ ಹತ್ತರಷ್ಟು ಓದುಗರಿಗೆ ಉಚಿತವಾಗಿಯೇ ಲಭ್ಯವಿರುತ್ತದೆ).
  4. ನೀವು ಲೇಖಕರಾಗಿದ್ದರೆ ಪ್ರಕಾಶಕರೊಡನೆ, ಪ್ರಕಾಶಕರಾಗಿದ್ದರೆ ಲೇಖಕರೊಡನೆ ಚರ್ಚಿಸಲು ಮರೆಯಬೇಡಿ. ಹಕ್ಕುಗಳ ವಿಚಾರದಲ್ಲಿ ಅಥವಾ ಇ-ಆವೃತ್ತಿಯಿಂದ ಬರುವ ಆದಾಯದ ಹಂಚಿಕೆಯ ವಿಚಾರದಲ್ಲಿ ನಂತರದ ದಿನಗಳಲ್ಲಿ ಯಾವುದೇ ರೀತಿಯ ಗೊಂದಲಗಳು ಬೇಡ. ಇ-ಆವೃತ್ತಿಯನ್ನು ತಯ್ಯಾರಿಸುವುದು ನಾನಾದರೂ ಮೂಲ ಪ್ರಕಾಶಕರ ಹೆಸರನ್ನೇ ಇ-ಆವೃತ್ತಿಯಲ್ಲೂ ಉಳಿಸಿಕೊಳ್ಳಲಾಗುವುದು.
  5. ನಿಮ್ಮ ಕೆಲಸವಷ್ಟೇ. hingyake@gmail.com  ಗೆ ಇಮೇಲ್ ಮಾಡಿ, ಮಿಕ್ಕಿದ್ದನ್ನು ನಮಗೆ ಬಿಡಿ! ಪುಸ್ತಕವನ್ನು ಫಾರ್ಮಾಟ್ ಮಾಡಿ ಪ್ರಕಟಿಸಿ ‘ಹಿಂಗ್ಯಾಕ್?’ಯಲ್ಲಿ ಕೆಲವು ದಿನಗಳ ಮಟ್ಟಿಗೆ ಜಾಹೀರಾತು ನೀಡುವುದು ನಮ್ಮ ಕೆಲಸ.  ಪುಸ್ತಕದ ಇ-ಆವೃತ್ತಿ ಹೊರಬಂದ ನಂತರ ಜಿಮೇಲ್ ಮುಖಾಂತರ, ಸಾಮಾಜಿಕ ತಾಣಗಳ ಮುಖಾಂತರ ಗೆಳೆಯರೊಡನೆ ಹಂಚಿಕೊಳ್ಳುವುದರಲ್ಲಿ ನಿಮ್ಮದೂ ಹೊಣೆಗಾರಿಕೆಯಿರಲಿ.
ನಿಮಗೀಗಾಗಲೇ ಅನುಮಾನ ಮೂಡಿರಬೇಕು, ಈ ತಲೆನೋವನ್ನೆಲ್ಲ ಅನುಭವಿಸಿ ಇವನಿಗೇನು ಲಾಭ ಎಂದು? ಸಂಪೂರ್ಣ ಲಾಭಕ್ಕಾಗಿ ಇದನ್ನು ಮಾಡುತ್ತಿಲ್ಲವಾದರೂ ಲಾಭವಿಲ್ಲದೆಯೂ ಮಾಡುತ್ತಿಲ್ಲ! ಮಾರಾಟವಾದ ಪ್ರತೀ ಪುಸ್ತಕಕ್ಕೆ ಒಂದು ರುಪಾಯಿ ‘ಹಿಂಗ್ಯಾಕೆ?’ ಪುಟದ ಅಭಿವೃದ್ಧಿಗೆ ಮೀಸಲಿರಿಸಲಾಗುವುದು (ofcourse ಉಚಿತ ಪುಸ್ತಕಗಳ ನಿರ್ವಹಣೆಯನ್ನು ಉಚಿತವಾಗಿಯೇ ಮಾಡಲಾಗುವುದು). ವೈಯಕ್ತಿಕವಾಗಿ ನನಗಾಗುವ ಲಾಭ ನಿಮ್ಮ ಪುಸ್ತಕವನ್ನು ಓದುವುದು! ಓದುವ ಸುಖಕ್ಕಾಗಿ ಮತ್ತು ಫಾರ್ಮಾಟ್ ಮಾಡುವ ಸಲುವಾಗಿ!.
ಕೊನೆಯದಾಗಿ ಈ ರೀತಿಯ ಇ-ಆವೃತ್ತಿಗಳನ್ನು ನೀವೇ ಕೊಂಚ ಸಮಯ ವ್ಯಯಿಸಿ ತಯಾರಿಸಿ ನಿಮ್ಮ ಜಿಮೇಲ್ ಮುಖಾಂತರವೇ ಪ್ರಕಟಿಸಬಹುದು. ನಮಗೆ ಒಂದು ರುಪಾಯಿಯನ್ನೂ ನೀಡದೆ ಸಂಪೂರ್ಣ ಹಣವನ್ನು ನೀವೇ ಪಡೆಯಬಹುದು. ಹಾಗೆ ಮಾಡಿದರೂ ಬೇಸರವೇನಿಲ್ಲ. ಅದರಲ್ಲಿರುವ ಒಂದೇ ಸಮಸ್ಯೆಯೆಂದರೆ ಗೂಗಲ್ ಒಟ್ಟು ಹಣ ನೂರು ಡಾಲರ್ ತಲುಪಿದ ನಂತರವಷ್ಟೇ ಹಣವನ್ನು ಸಂದಾಯ ಮಾಡುತ್ತದೆ. ಐವತ್ತು ರುಪಾಯಿ ಮುಖಬೆಲೆಯ ಪುಸ್ತಕದಿಂದ ಗೂಗಲ್ ತನ್ನ ಕಮಿಷನ್ ತೆಗೆದುಕೊಂಡು (ಹತ್ತಿರತ್ತಿರ ಐವತ್ತು ಪರ್ಸೆಂಟ್ ಅವರ ಕಮಿಷನ್ನಿಗೇ ಹೋಗುತ್ತದೆ!) ನಂತರ ನೂರು ಡಾಲರ್ ತಲುಪಿ ನಮಗೆ ಹಣ ಸಂದಾಯವಾಗಬೇಕಿದ್ದರೆ ಎಷ್ಟು ಪುಸ್ತಕಗಳು ಮಾರಾಟವಾಗಬೇಕೆಂದು ಯೋಚಿಸಿ? ಹೆಚ್ಚಿನ ಜನರು ಒಂದೇ ಅಕೌಂಟಿನ ಮೂಲಕ ವ್ಯವಹರಿಸಿದರೆ ಚಿಕ್ಕ ಮೊತ್ತವಾದರೂ ಬೇಗ ಬರುವುದು ನಿಶ್ಚಿತ.
ಇನ್ನು ಪುಸ್ತಕ ದುರುಪಯೋಗವಾಗಬಹುದೆಂಬ ಭಯ ಕೂಡ ಕೆಲವರಲ್ಲಿರಬಹುದು. ನನ್ನೊಬ್ಬನನ್ನು ಬಿಟ್ಟು ಇ-ಆವೃತ್ತಿಯ ಪುಸ್ತಕಗಳನ್ನು ಯಾರಿಗೂ ನೀಡಲಾಗುವುದಿಲ್ಲ. ಇ-ಪುಸ್ತಕ ಅಂತರ್ಜಾಲದಲ್ಲಿ ಬಂದ ನಂತರ ಪುಸ್ತಕಕ್ಕೆ ಸಂಬಂಧಪಟ್ಟ ಎಲ್ಲ ಫೈಲುಗಳನ್ನೂ ಡಿಲೀಟ್ ಮಾಡಿಬಿಡಲಾಗುವುದು. ಇಷ್ಟರ ಮೇಲೂ ನಿಮಗೆ ನಿಮ್ಮ ಕೃತಿ ದುರುಪಯೋಗವಾಗಿಬಿಡಬಹುದೆಂಬ ಅನುಮಾನವಿದ್ದರೆ ದಯವಿಟ್ಟು ಮೇಲ್ ಕಳುಹಿಸಬೇಡಿ.
ಇಂತಿ,
ಡಾ ಅಶೋಕ್ ಕೆ ಆರ್
(ಮತ್ತಷ್ಟು ಪ್ರಶ್ನೆಗಳಿದ್ದರೆ ಮೇಲ್ ಮಾಡಿ ಅಥವಾ ಸಂಪರ್ಕಿಸಿ 9743006759)


No comments:

Post a Comment